23.5 C
Karnataka
Saturday, May 23, 2026
    Home Blog Page 65

    ಮಲ್ಲೇಪುರಂ ಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ

    BENGALURU AUG 18

    2021 ನೇ ಸಾಲಿನ ಬಿಎಂಟಿಸಿಯ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಖ್ಯಾತ ವಿಮರ್ಶಕ ಮಲ್ಲೇಪುರಂ ವೆಂಕಟೇಶ ಭಾಜನರಾಗಿದ್ದಾರೆ. ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆ ಈ ಆಯ್ಕೆಯನ್ನು ಮಾಡಿದೆ.

    ಪ್ರಶಸ್ತಿಯು 7 ಲಕ್ಷದ 1ರು. ನಗದು, ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದೂವರೆ ಕೋಟಿ ರು. ದತ್ತಿನಿಧಿಯನ್ನು ಸ್ಥಾಪಿಸಿದೆ. ಅದರಿಂದ ಬರುವ ಬಡ್ಡಿ ಹಣದಲ್ಲಿ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ ನೀಡಲಾಗುತ್ತದೆ.

    45 ವರ್ಷ ವಯಸ್ಸಿನ ಯುವ ಸಾಹಿತಿಗಳಿಗೆ ನೀಡುವ ಪ್ರಶಸ್ತಿಗೆ ಟಿ ಜಿ ಶ್ರೀನಿಧಿ, ಮಮತಾ ಅರಸೀಕೆರೆ, ಕ್ಯಾತ್ಯಾಯಿನಿ ಕುಂಜಿಬೆಟ್ಟು,ಬಸವರಾಜ ಭಜಂತ್ರಿ ಮತ್ತು ಜಗದೀಶ ಲಿಂಗನಾಯಕ ಅವರನ್ನು ಆಯ್ಕೆ ಮಾಡಲಾಗಿದೆ, ಈ ಪ್ರಶಸ್ತಿ ತಲಾ 25 ಸಾವಿರ ರೂ .ನಗದನ್ನು ಒಳಗೊಂಡಿದೆ ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.

    ಲಸಿಕೆಯಲ್ಲಿ ಪ್ರಗತಿ : ದೇಶದಲ್ಲಿ ಕಡಿಮೆಯಾಗುತ್ತಿರುವ ಸೋಂಕು

    *ಮಾರ್ಚ್ 2020ರ ನಂತರ ಅತ್ಯಧಿಕ ಚೇತರಿಕೆ ದರ (97.51%) ಸಾಧಿಸಿದೆ

    *ಕಳೆದ 24 ಗಂಟೆಗಳಲ್ಲಿ 25,166 ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ

    *ಭಾರತದ ಸಕ್ರಿಯ ಪ್ರಕರಣಗಳ ಹೊರೆ (3,69,846) 146 ದಿನಗಳಲ್ಲೇ ಅತ್ಯಂತ ಕಡಿಮೆಯಾಗಿದೆ

    *ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.15% ಇದ್ದು, ಇದು 2020ರ ಮಾರ್ಚ್‌ ನಂತರ ಅತ್ಯಂತ ಕಡಿಮೆ ಎನಿಸಿದೆ

    *ದೈನಂದಿನ ಪಾಸಿಟಿವಿಟಿ ದರ (1.61%) ಕಳೆದ 22 ದಿನಗಳಿಂದ 3% ಕ್ಕಿಂತ ಕಡಿಮೆ ಮಟ್ಟದಲ್ಲಿದೆ

    ಭಾರತವು ತನ್ನ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನ ಅಡಿಯಲ್ಲಿ ಕಳೆದ 24 ಗಂಟೆಗಳಲ್ಲಿ 88.13 ಲಕ್ಷಕ್ಕೂ ಅಧಿಕ ಡೋಸ್ ಗಳನ್ನು ನೀಡಿದೆ. ಲಸಿಕೆ ಅಭಿಯಾನ ಪ್ರಾರಂಭವಾದ ನಂತರ ಒಂದೇ ದಿನದಲ್ಲಿ ಅತ್ಯಧಿಕ ಲಸಿಕೆ ನೀಡಿಕೆ ಸಾಧನೆ ಇದಾಗಿದೆ. ಇದರೊಂದಿಗೆ ಭಾರತದ ಕೋವಿಡ್-19 ಲಸಿಕೆ ವ್ಯಾಪ್ತಿ ನಿನ್ನೆ 55 ಕೋಟಿ ಮೈಲಿಗಲ್ಲು ಸಾಧಿಸಿದೆ. ಒಟ್ಟಾರೆಯಾಗಿ, ಇಂದು ಬೆಳಿಗ್ಗೆ 7 ಗಂಟೆಯವರೆಗೆ ತಾತ್ಕಾಲಿಕ ವರದಿಯ ಪ್ರಕಾರ, 62,12,108 ಸೆಷನ್‌ಗಳ ಮೂಲಕ 55,47,30,609 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

    ಭಾರತದ ಚೇತರಿಕೆ ದರವು 97.51%ರಷ್ಟಿದ್ದು, ಇದು ಮಾರ್ಚ್2020ರ ನಂತರ ಅತ್ಯಧಿಕವಾಗಿದೆ.ಕೋವಿಡ್-19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತವು 2021ರ ಜೂನ್ 21 ರಿಂದ ಪ್ರಾರಂಭವಾಗಿದೆ.

    ಸಾಂಕ್ರಾಮಿಕದ ಆರಂಭದಿಂದ ಸೋಂಕಿಗೆ ಒಳಗಾದವರಲ್ಲಿ ಈಗಾಗಲೇ 3,14,48,754 ಜನರು ಕೋವಿಡ್-19 ನಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 36,830 ರೋಗಿಗಳು ಚೇತರಿಸಿಕೊಂಡಿದ್ದಾರೆ.

    ಭಾರತದಲ್ಲಿ 154 ದಿನಗಳಲ್ಲೇ ಅತ್ಯಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು (25,166) ವರದಿಯಾಗಿವೆ.

    ಸತತ ಐವತ್ತೊಂದು ದಿನಗಳಿಂದ 50,000ಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇದು ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಸಹಯೋಗದ ಪ್ರಯತ್ನಗಳ ಫಲವಾಗಿದೆ.

    ಭಾರತದಲ್ಲಿ 3,69,846 ಸಕ್ರಿಯ ಪ್ರಕರಣಗಳ ಹೊರೆ ಇದ್ದು, ಇದು 146 ದಿನಗಳಲ್ಲಿ ಅತ್ಯಂತ ಕಡಿಮೆ ಎನಿಸಿದೆ. ಸಕ್ರಿಯ ಪ್ರಕರಣಗಳು ಈಗದೇಶದ ಒಟ್ಟು ಪಾಸಿಟಿವ್‌ ಪ್ರಕರಣಗಳಲ್ಲಿ ಕೇವಲ 1.15% ರಷ್ಟಿವೆ, ಇದು ಮಾರ್ಚ್ 2020ರ ನಂತರ ಅತ್ಯಂತ ಕಡಿಮೆ ಪ್ರಮಾಣವೆನಿಸಿದೆ.

    ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 15,63,985 ಪರೀಕ್ಷೆಗಳನ್ನು ನಡೆಸಲಾಯಿತು. ಒಟ್ಟಾರೆಯಾಗಿ, ಭಾರತವು ಇಲ್ಲಿಯವರೆಗೆ 49.66 ಕೋಟಿ (49,66,29,524)ಪರೀಕ್ಷೆಗಳನ್ನು ನಡೆಸಿದೆ.

    ಒಂದೆಡೆ ಪರೀಕ್ಷಾ ಸಾಮರ್ಥ್ಯವನ್ನು ದೇಶಾದ್ಯಂತ ಗಣನೀಯವಾಗಿ ಹೆಚ್ಚಿಸಲಾಗಿದ್ದರೂ ಸಾಪ್ತಾಹಿಕ ಪಾಸಿಟಿವಿಟಿ ದರವು 1.98% ರಷ್ಟಿದ್ದು, ಇದು ಸತತ 53 ದಿನಗಳಿಂದ 3% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ. ದೈನಂದಿನ ಪಾಸಿಟಿವಿಟಿ ದರವೂ 1.61% ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಸತತ 22 ದಿನಗಳಿಂದ 3% ಕ್ಕಿಂತ ಕೆಳಗಿನ ಮಟ್ಟದಲ್ಲಿ ಹಾಗೂ ಸತತ 71 ದಿನಗಳಿಂದ 5% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ. (ಪಿಐಬಿ ವರದಿ)

    ರಾಷ್ಟ್ರೀಯ ಶಿಕ್ಷಣ ನೀತಿ : ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ಪಡೆದು ಅನುಷ್ಠಾನ ತರಲು ಮುಖ್ಯಮಂತ್ರಿ ಸಲಹೆ

    BENGALURU AUG 17

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.

    ಈ ಬಗ್ಗೆ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುತ್ತಿರುವ ಮೊದಲ ರಾಜ್ಯ ಕರ್ನಾಟಕ. ಆದ್ದರಿಂದ ಶಿಕ್ಷಣ ನೀತಿ ಅನುಷ್ಠಾನದ ಕುರಿತಂತೆ ರಾಜ್ಯದಾದ್ಯಂತ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಯೋಗಿಕವಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸುವಂತೆ ಸಲಹೆ ನೀಡಲಾಯಿತು.

    ಈ ನೀತಿ ಜಾರಿಗೆ ಕರ್ನಾಟಕ ರಾಜ್ಯ ಶಿಕ್ಷಣ ಆಯೋಗ ಮತ್ತು ಇತರ ಸಾಂಸ್ಥಿಕ ವ್ಯವಸ್ಥೆಯನ್ನು ಸ್ಥಾಪಿಸುವ ಕುರಿತೂ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಸೂಚಿಸಲಾಯಿತು. ಖಾಸಗಿಯವರ ಸಹಯೋಗ ಪಡೆದುಕೊಳ್ಳಲೂ ಸಹ ಸಲಹೆ ನೀಡಲಾಯಿತು.

    ರಾಜ್ಯದ ಜಿ ಇ ಆರ್ (Gross Enrollment Ratio) ಶೇ. 32 ರಷ್ಟು ಇದ್ದು, ಮುಂದಿನ ದಿನಗಳಲ್ಲಿ ಇದನ್ನು ಶೇ. 50 ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಪೂರಕವಾಗಿ ಬಿ.ಎಡ್., ಡಿ.ಎಡ್. ಪಠ್ಯ ವಿಷಯವನ್ನು ಇನ್ನಷ್ಟು ಪರಿಣಾಮಕಾರಿಯಾಗುವಂತೆ ಪರಿಷ್ಕರಿಸಲು ಮುಖ್ಯಮಂತ್ರಿಗಳು ಸೂಚಿಸಿದರು.ಯುವಕರು ಉದ್ಯೋಗ ಪಡೆದುಕೊಳ್ಳಲು ಅನುವಾಗುವಂತೆ ಜಿಲ್ಲೆಗೊಂದು ತಾಂತ್ರಿಕ ಶಿಕ್ಷಣ ಶಾಲೆಯನ್ನು ಪ್ರಾರಂಭಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

    ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯ್ಕ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು

    ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ಡಾ. ರಾಜ್ ಕುಮಾರ್ ಶೈಕ್ಷಣಿಕ ಆ್ಯಪ್

    BENGALURU AUG 16

    ಡಾ: ರಾಜ್ ಕುಮಾರ್ ಲರ್ನಿಂಗ್ ಆ್ಯಪ್ ಮೂಲಕ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಸರಸ್ವತಿಯ ಪಾವಿತ್ರ್ಯತೆಯನ್ನು ಹೊಂದಿ ಪರಮಹಂಸದಂತೆ ಬಹಳ ಎತ್ತರಕ್ಕೆ ಏರಬಹುದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

    ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ರೂಪಿಸಲಾಗಿರುವ ಡಾ. ರಾಜ್ ಕುಮಾರ್ ಶೈಕ್ಷಣಿಕ ಆ್ಯಪ್ ನ್ನು ಇಂದು ಅವರು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

    21 ನೇ ಶತಮಾನ ಜ್ಞಾನವಂತರಿಗೆ ಸೇರಿದ್ದು. ಜ್ಞಾನಕ್ಕೆ ಬೆಲೆ ಹಾಗೂ ಬಲ ಬಂದಿದೆ. ಜ್ಞಾನದ ಕ್ಷೇತ್ರಕ್ಕೆ ಡಾ:ರಾಜ್ ಕುಮಾರ್ ಅವರ ಆಪ್ ದೊಡ್ಡ ಕೊಡುಗೆ ನೀಡಿದೆ ಎಂದ ಅವರು ಮಕ್ಕಳಿಗೆ ತರ್ಕಬದ್ಧವಾಗಿ ಚಿಂತನೆ ಮಾಡಲು ಪ್ರೇರೇಪಿಸಬೇಕು. ಆಗ ಸಹಜವಾಗಿ ಅವರ ಸ್ಮೃತಿ ಪಟಲದಲ್ಲಿ ಉಳಿಯುತ್ತದೆ ಎಂದರು.

    ಆಪ್ ಗಳ ಮೂಲಕ ಜಗತ್ತನ್ನು ತಲುಪಲು ಸಾಧ್ಯ. ನೂತನ ಶಿಕ್ಷಣ ನೀತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದು, ಈ ಆಪ್ ಶಿಕ್ಷಣ ನೀತಿಗೆ ಉಪಯುಕ್ತವಾಗಲಿದೆ. ಭಾರತದಲ್ಲಿಯೇ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

    ಡಾ: ರಾಜ್ ಕುಮಾರ್ ಅಂದರೆ ಒಬ್ಬ ಸಾಧಕ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧಕ ಸಾವಿನ ನಂತರವೂ ಬದುಕಬಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಶ್ರೀಮಂತ, ಮೌಲಿಕ ಬದುಕನ್ನು ಬದುಕಿದರೆ ಸಾವಿನ ನಂತರವೂ ಜನ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಕರ್ನಾಟಕದ ಅಂಥ ಏಕಮೇವ ತಾರೆ ಅಂದರೆ ಡಾ: ರಾಜ್ ಕುಮಾರ್. ಅವರ ಸರಳತೆ, ನಡೆ, ನುಡಿ , ಮೌಲ್ಯಗಳನ್ನು ವಿಶೇಷವಾಗಿ ಅಧಿಕಾರ, ಜನಪ್ರಿಯ ವ್ಯಕ್ತಿಗಳು ಕಲಿಯಬೇಕು ಎಂದರು. ಈಗಷ್ಟೇ ಹುಟ್ಟಿರುವ ಮಗುವಿನ ಮುಗ್ಧತೆ ಅವರಲ್ಲಿತ್ತು ಎಂದು ಹೇಳಿದರು.

    ಮಗುವಿನಲ್ಲಿರುವ ಕುತೂಹಲಕ್ಕೆ ಜ್ಞಾನ, ಅರ್ಥವನ್ನು ಕೊಡಬೇಕು. ಡಾ: ರಾಜ್ ಕುಮಾರ್ ನಿರಂತರ ವಿದ್ಯಾರ್ಥಿಯಾಗಿದ್ದರೂ, ಮುಗ್ಧತೆ ಸದಾ ಕಾಲ ಇತ್ತು. ನಟನೆ ಅವರ ವ್ಯಕ್ತಿತ್ವದ ಒಂದು ಸಣ್ಣ ಭಾಗವಷ್ಟೆ. ಆತ್ಮಶುದ್ಧಿ ಇದ್ದಾಗ ಮಾತ್ರ ರಾಜ್ ಕುಮಾರ್ ಅವರಿಗಿದ್ದ ಮುಗ್ಧತೆ ಮತ್ತು ಕುತೂಹಲದ ಸಮ್ಮಿಲನ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ, ಪುನೀತ್ ರಾಜ್‍ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು. ‌

    ಸ್ವಯಂ ಘೋಷಿತ ಆಸ್ತಿ ತೆರಿಗೆ: ವಲಯ ವರ್ಗೀಕರಣ ತಪ್ಪಿನಿಂದ ದಂಡ-ಬಡ್ಡಿ

    BENGALURU AUG 16

    ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ  ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿಕೊಂಡು ದಂಡ ಮತ್ತು ದಂಡದ ಬಡ್ಡಿ ಸುಳಿಗೆ ಸಿಲುಕಿರುವ ಆಸ್ತಿ ಮಾಲೀಕರಿಗೆ ವಿನಾಯಿತಿ ನೀಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸುವುದಾಗಿ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದರು.

    ಈ ವಿಷಯಕ್ಕೆ ಸಂಬಂಧಿಸಿ ಸೋಮವಾರದಂದು ಬಿಬಿಎಂಪಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರ ಈ ವಿಷಯ ತಿಳಿಸಿದರು.

    ಕೋವಿಡ್‌ ಮಹಾಮಾರಿ ಹಾಗೂ ಲಾಕ್‌ಡೌನ್‌ ಕಾರಣಕ್ಕೆ ಆಸ್ತಿ ಮಾಲೀಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು, ಇದೇ ವೇಳೆ ದಂಡ ಮತ್ತು ಬಡ್ಡಿಗೆ ಗುರಿಯಾಗಿದ್ದಾರೆ. ಹೀಗಾಗಿ ಕಷ್ಟದಲ್ಲಿರುವ  ಆಸ್ತಿ ಮಾಲೀಕರಿಗೆ ರಿಯಾಯಿತಿ ನೀಡುವ ಬಗ್ಗೆ ಪರಿಶೀಲನೆ ಮಾಡುವಂತೆ ಈ ಹಿಂದೆಯೇ ಅಧಿಕಾರಿಗಳಿಗೆ ಸೂಚಿಸಿದ್ದೆ. ಆ ಬಗ್ಗೆ ಮುಖ್ಯಮಂತ್ರಿಗಳ ಒಪ್ಪಿಗೆ ಅಗತ್ಯವಿದೆ ಎಂದು ಅವರು ಹೇಳಿದರು.

    ಈಗಾಗಲೇ ಮಲ್ಲೇಶ್ವರ ಮಾತ್ರವಲ್ಲದೆ, ನಗರದ ವಿವಿಧ ವಲಯಗಳ ಜನರು ತಮಗೆ ಮನವಿ ಕೊಟ್ಟಿದ್ದು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕಷ್ಟದಿಂದ ತಮ್ಮನ್ನು ಪಾರು ಮಾಡಬೇಕೆಂದು ಕೋರಿದ್ದಾರೆ. ಈ ಎಲ್ಲ ಅಂಶಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸಚಿವರು ತಿಳಿಸಿದರು.

    ಬಿಬಿಎಂಪಿಯು ಆರು ವರ್ಷಗಳಿಂದ ಸಮರ್ಪಕವಾಗಿ ತೆರಿಗೆ ವಸೂಲಿ ಮಾಡದೇ ಬಿಟ್ಟಿದ್ದು ಲೋಪ ಎಂದ ಅವರು, ಈಗ ನೋಡಿದರೆ ಏಕಾಏಕಿ ದಂಡ- ಬಡ್ಡಿ ಒಟ್ಟಿಗೆ ವಿಧಿಸಿದರೆ ಜನರಿಗೆ  ಕಷ್ಟವಾಗುತ್ತದೆ ಎಂದು ಸಚಿವರು ಹೇಳಿದರು.

    ಈ ಸಭೆಯಲ್ಲಿ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಬಸವರಾಜ ಹಾಗೂ ಕಂದಾಯ ವಿಭಾಗದ ಜಂಟಿ ಆಯುಕ್ತ ವೆಂಕಟಾಚಲಪತಿ ಮುಂತಾದ ಅಧಿಕಾರಿಗಳು ಇದ್ದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ತಾವು ಬರೆದ ಪುಸ್ತಕ ಕಳುಹಿಸಿದ ಸಿದ್ಧರಾಮಯ್ಯ

    BENGALURU AUG 16

    ಬಿಜೆಪಿ ಎಂಬ ಸುಳ್ಳಿನ ಫ್ಯಾಕ್ಟರಿಯು ಉತ್ಪಾದಿಸಿ ಹಂಚುತ್ತಿರುವ ಸುಳ್ಳುಗಳ ಕುರಿತು ಜನರಿಗೆ ಸತ್ಯ ಹೇಳುವುದರ ಜೊತೆಗೆ ಆ ಬಗ್ಗೆ ಅರಿವು ಮೂಡಿಸುವಂತೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.

    ರಚನಾತ್ಮಕ ಹೋರಾಟದ ಮೂಲಕ ಮನುಷ್ಯ ವಿರೋಧಿಯಾದ ಬಿಜೆಪಿಯ ಕ್ರೂರ ಹುನ್ನಾರಗಳನ್ನು ಬಯಲಿಗೆಳೆದು ಸೋಲಿಸುವುದೆ ಇಂದಿನ ಎಲ್ಲ ಸಮಸ್ಯೆಗಳಿಗೆ ಇರುವ ನಿಜವಾದ ಪರಿಹಾರ. ಹಾಗೆ ಮಾಡಬೇಕೆಂದರೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಿಷಯಗಳನ್ನು ಅಧ್ಯಯನ ಮಾಡಿ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಜಿಲ್ಲಾ ಅಧ್ಯಕ್ಷರಿಗೆ ಪತ್ರ ಬರೆದು ಸಿದ್ದರಾಯ್ಯ ಅವರು ಮನವಿ ಮಾಡಿದ್ದಾರೆ.

    ನಾನು ಬರೆದಿರುವ ‘ಜನಪೀಡಕ ಸರ್ಕಾರ’, ‘ ಐದು ಕಾಯ್ದೆಗಳು- ಅಸಂಖ್ಯಾತ ಸುಳ್ಳುಗಳು’ ಮತ್ತು ‘ಪೆಟ್ರೋಲ್, ಡೀಸೆಲ್ ನೂರು –ಜನರ ಬದುಕು ನುಚ್ಚು ನೂರು’ ಎಂಬ ಕಿರು ಪುಸ್ತಕಗಳನ್ನು ತಮ್ಮ ಓದಿಗಾಗಿ ಕಳಿಸುತ್ತಿದ್ದೇನೆ. ತಾವುಗಳು ಈ ವಿಚಾರಗಳನ್ನು ಓದಿ, ಕಿರು ಪುಸ್ತಕಗಳ ಕೊರತೆಯಾದರೆ ಪಕ್ಷದ ಶಿಷ್ಟಾಚಾರದಂತೆ ಮುದ್ರಿಸಿಕೊಂಡು ಎಲ್ಲ ಬೂತು ಮಟ್ಟದ ಕಾರ್ಯಕರ್ತರೂ ಓದುವಂತೆ ಮಾಡಿ ಜನರನ್ನು ನಿಜದ ಬೆಳಕಿನ ಕಡೆಗೆ ಮುನ್ನಡೆಸಬೇಕೆಂದು ಅವರು ಕೋರಿದ್ದಾರೆ.

    ಶಾಲಾರಂಭ : ಮಾರ್ಗ ಸೂಚಿ ಬಿಡುಗಡೆ

    BENGALURU AUG 16

    ಇದೇ ಆಗಸ್ಟ್ 23ರಿಂದ ಅಂದರೆ ಬರುವ ಸೋಮವಾರದಿಂದ ಶಾಲೆಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಕೊರೊನಾ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆ ಆರಂಭವಾಗಲಿದೆ.

    23ರಿಂದ ತರಗತಿ ಆರಂಭ; ಆನ್‌ಲೈನ್‌ or ಆಫ್‌ಲೈನ್‌ ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದು

    9 ಹಾಗೂ 10ನೇ ತರಗತಿಗಳ ಆರಂಭಕ್ಕೆ ಮಾರ್ಗಸೂಚಿ ಮತ್ತು ಸುತ್ತೋಲೆಯನ್ನು ಬಿಡುಗಡೆ ಮಾಡಿದ್ದು ಅದರ ಪ್ರತಿ ಇಲ್ಲಿದೆ. ಸ್ಕ್ರಾಲ್ ಮಾೇಡುವ ಮೂಲಕ ಓದಿ.

    ಪ್ಯಾರಾ ಒಲಂಪಿಕ್ ನಲ್ಲಿ ಚಿನ್ನ ಗೆದ್ದರೆ 5 ಕೋಟಿ ಬಹುಮಾನ

    BENGALURU AUG 16

    ಜಪಾನ್‍ನ ಟೋಕಿಯೊದಲ್ಲಿ ನಡೆಯಲಿರುವ ಪ್ಯಾರಾ ಒಲಂಪಿಕ್‍ಗೆ ರಾಜ್ಯದಿಂದ ಇಬ್ಬರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಅವರಿಗೆ ಪ್ರೋತ್ಸಾಹಧನವಾಗಿ ತಲಾ ರೂ. 10 ಲಕ್ಷ ನೀಡಲಾಗಿದೆ. ಪ್ಯಾರಾ ಪವರ್ ಲಿಪ್ಟಿಂಗ್‍ನಲ್ಲಿ ಶಕೀನ್ ಖಾತುನ್ ಹಾಗೂ ಪ್ಯಾರಾ ಈಜಿನಲ್ಲಿ ನಿರಂಜನ್ ಮುಕುಂದನ್ ಪಾಲ್ಗೊಳ್ಳುತ್ತಿದ್ದಾರೆ. ಇಬ್ಬರೂ ಕ್ರೀಡಾಪಟುಗಳು ರಾಜ್ಯದ, ದೇಶದ ಕೀರ್ತಿಪತಾಕೆ ಹಾರಿಸುತ್ತಾರೆ ಎಂಬ ನಂಬಿಕೆ ಇದೆ. ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರೆ ರಾಜ್ಯ ಸರ್ಕಾರದಿಂದ ರೂ. 5 ಕೋಟಿ , ಬೆಳ್ಳಿ ಗೆದ್ದರೆ ರೂ. 3 ಕೋಟಿ ಹಾಗೂ ಕಂಚಿನ ಪದಕ ಗೆದ್ದರೆ ರೂ. 2 ಕೋಟಿ ಬಹುಮಾನ ನೀಡಲಾಗುವುದು ಎಂದು ಸಚಿವ ಡಾ. ನಾರಾಯಣಗೌಡ ಹೇಳಿದರು.

    ವಿಧಾನ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಇಬ್ಬರೂ ಕ್ರೀಡಾಪಟುಗಳಿಗೆ ಶುಭ ಹಾರೈಸಿ, ಪ್ರೋತ್ಸಾಹಧನವಾಗಿ ತಲಾ ರೂ. 10 ಲಕ್ಷದ ಚೆಕ್ ವಿತರಿಸಿದರು. ಇದೇ ವೇಳೆ ಶಿಖರದಿಂದ ಸಾಗರ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಸಾಹಸ ಯಾತ್ರೆಗೆ ಸಚಿವರು ಹಸಿರು ನಿಶಾನೆ ತೋರಿಸಿದರು.

    ಇದೇ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರತಿ ದಿನ ಒಂದು ಗಂಟೆ ದೈಹಿಕ ಶಿಕ್ಷಣಕ್ಕೆ ಸಮಯ ಮೀಸಲಿಡಬೇಕು. ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು. ಅಲ್ಲದೆ ಪ್ರತಿಯೊಂದು ಶಾಲೆಗೂ ಕಡ್ಡಾಯವಾಗಿ ಮೈದಾನ ಇರಬೇಕು. ಒಂದು ವೇಳೆ ಮೈದಾನ ಇಲ್ಲದಿದ್ದಲ್ಲಿ ಬಾಡಿಗೆ ಆಧಾರದಲ್ಲಾದರೂ ಮೈದಾನ ಪಡೆದು, ಮಕ್ಕಳಿಗೆ ದೈಹಿಕ ಶಿಕ್ಷಣ ನೀಡಬೇಕು. ವ್ಯಾಯಾಮ, ಕ್ರೀಡೆ ಮಕ್ಕಳಿಗೆ ಅತ್ಯವಶ್ಯಕ. ಈ ಬಗ್ಗೆ ಪತ್ರದಲ್ಲಿ ಮನವಿ ಮಾಡಿದ್ದೇನೆ. ಶಾಲೆಗಳು ಸರ್ಕಾರದ ಆದೇಶ ಪಾಲಿಸದಿದ್ದಲ್ಲಿ ಪರವಾನಿಗೆಯನ್ನೇ ರದ್ದು ಮಾಡುವಂತೆಯೂ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿರುವುದಾಗಿ ಸಚಿವ ಡಾ. ನಾರಾಯಣಗೌಡ ಹೇಳಿದರು.

    ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ “ಶಿಖರದಿಂದ ಸಾಗರ” ಅಭಿಯಾನವನ್ನು ಹಮ್ಮಿಕೊಳ್ಳುತ್ತಿದ್ದು, ಇದು ಒಂದು ಐತಿಹಾಸಿಕ ಯಾನವಾಗಿದ್ದು, ಕರ್ನಾಟಕಕ್ಕೆ ಸೇರಿದ 5 ಯುವತಿಯರು ಕಾಶ್ಮೀರದಲ್ಲಿ kolhoi (5425 ಮೀ) ಶಿಖರವನ್ನು ಏರುವ ಮೂಲಕ ಶುರುವಾಗಿ, ತದನಂತರ 3,000 ಕಿ.ಮೀ ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿ, ಕಾರವಾರದಿಂದ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ 300 ಕಿ.ಮೀ ಸಮುದ್ರದಲ್ಲಿ ಕಯಾಕಿಂಗ್ ಯಾನ ಮಾಡುತ್ತಾ ಮಂಗಳೂರು ತಲುಪಿ ಈ ಯಾನವನ್ನು ಮುಕ್ತಾಯಗೊಳಿಸಲಾಗುವುದು. ಇದು ಸುಮಾರು 45 ದಿನಗಳ ಅಭಿಯಾನ ಆಗಿದ್ದು, ಸ್ತ್ರೀ ಶಕ್ತಿ ಸಾಹಸ, ಧೈರ್ಯ, ನಾರಿಯ ಸುರುಷರ ವಿಕಾಸ ಎನ್ನುವಂತಹ ತತ್ವವನ್ನು ಬಿಂಬಿಸುವಂತಹ ವಿಭಿನ್ನವಾದ ಒಂದು ಕಾರ್ಯಕ್ರಮವಾಗಿರುತ್ತದೆ.

    ಜನಾಶೀರ್ವಾದ ಯಾತ್ರೆಯಲ್ಲಿ ಗದ್ದೆ ನಾಟಿ ಮಾಡಿದ ಸಚಿವೆ ಶೋಭಾ ಕರಂದ್ಲಾಜೆ

    MANDYA AUG 16
    ರೈತರ ಆದಾಯ ದ್ವಿಗುಣಗೊಳಿಸಲು ಪ್ರಧಾನಿಯವರು ಶ್ರಮಿಸುತ್ತಿದ್ದು, ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆ ಯೋಜನೆಗಳನ್ನು ಕೊನೆಯ ರೈತರ ತನಕ ತಲುಪಿಸಲು ಸಚಿವ ನರೇಂದ್ರ ಸಿಂಗ್ ತೋಮರ್ ಅವರ ನೇತೃತ್ವದಲ್ಲಿ ಶ್ರಮಿಸುವುದಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

    ಮಂಡ್ಯದಲ್ಲಿ ಇಂದು ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಖಾದ್ಯ ತೈಲ, ಎಣ್ಣೆಯಲ್ಲಿ ನಾವು ಸ್ವಾವಲಂಬನೆ ಸಾಧಿಸಬೇಕಿದೆ. ಶೇ 70 ಖಾದ್ಯ ತೈಲ ಬೇರೆ ದೇಶಗಳಿಂದ ಬರುತ್ತಿದೆ. ಟ್ರ್ಯಾಕ್ಟರ್, ಟಿಲ್ಲರ್ ಸಬ್ಸಿಡಿಯಲ್ಲಿ ನೀಡುವುದು, ಬಾಡಿಗೆಯಲ್ಲಿ ಯಂತ್ರೋಪಕರಣ ಒದಗಿಸುವುದು, ಕೃಷಿ ಸಿಂಚಾಯಿ ಯೋಜನೆಗೆ ವಿಶೇಷವಾದ ಅನುಕೂಲತೆ, ರಸಗೊಬ್ಬರಕ್ಕೆ ಸಬ್ಸಿಡಿ, ಖಾದ್ಯ ತೈಲವನ್ನು ಉಚಿತವಾಗಿ ನೀಡಲು ಉದ್ದೇಶಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಮೂಲಕ ಸ್ವಾವಲಂಬಿತನ ಸಾಧಿಸಲಾಗುವುದು ಎಂದು ನುಡಿದರು.

    ರಾಜ್ಯದಲ್ಲಿ ನಾಲ್ಕು ಸಚಿವರು ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಹಳ ಅದ್ಭುತವಾದ ಸ್ವಾಗತವನ್ನು ಮಂಡ್ಯ ಮತ್ತು ಮದ್ದೂರಿನ ಜನರು ನನಗೆ ನೀಡಿದ್ದಾರೆ ಎಂದು ವಿವರಿಸಿದರು.
    ದೇಶದಾದ್ಯಂತ ನೂತನ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ ಆರಂಭವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಸಮುದಾಯ, ಮಹಿಳೆಯರಿಗೆ ಶ್ರೀ ನರೇಂದ್ರ ಮೋದಿ ಅವರ ಕೇಂದ್ರ ಸಚಿವ ಸಂಪುಟದಲ್ಲಿ ಆದ್ಯತೆ ಕೊಡಲಾಗಿದೆ ಎಂದು ತಿಳಿಸಿದರು. ಅತ್ಯಂತ ಹಿಂದುಳಿದ ಪ್ರದೇಶದ ರೈತನ ಮಗಳಾದ ತಮಗೆ ಸಚಿವ ಸ್ಥಾನ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದರು.

    ಮಂಡ್ಯದ ಸಕ್ಕರೆ- ಬೆಲ್ಲ ರಫ್ತು ಮಾಡಲು ಉತ್ತೇಜನ ಕೊಡಲಾಗುವುದು. ಕೋವಿಡ್ ಸಂದರ್ಭದಲ್ಲಿ ಹಲವಾರು ದೇಶಗಳಲ್ಲಿ ಆಹಾರದ ಕೊರತೆ ಕಾಡಿತ್ತು. ಆದರೆ, ಭಾರತವು ಆಹಾರದ ಸಮಸ್ಯೆ ಎಸುರಿಸಲಿಲ್ಲ. ರೈತರ ಪರಿಶ್ರಮದ ಪರಿಣಾಮವಾಗಿ ಭಾರತದ ಎಲ್ಲರಿಗೂ ಆಹಾರ ಸಮಸ್ಯೆ ಕಾಡಲಿಲ್ಲ. ಎಲ್ಲರಿಗೂ ಆಹಾರ ಲಭಿಸಿದೆ ಎಂದು ವಿಶ್ಲೇಷಿಸಿದರು.
    ರೈತರಿಗೆ ಹೆಚ್ಚು ಅನುಕೂಲ ಮಾಡುವ ಸಂಕಲ್ಪ ಕೇಂದ್ರದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರದ್ದಾಗಿದೆ. 1,23,000 ಕೋಟಿ ರೂಪಾಯಿಯನ್ನು ಕೃಷಿ ಇಲಾಖೆಗೆ ಈ ಸಾಲಿನ ಬಜೆಟ್‍ನಲ್ಲಿ ಮೀಸಲಿಡಲಾಗಿದೆ. ಸಂಶೋಧನೆ ಮತ್ತು ಶಿಕ್ಷಣಕ್ಕೆ 8,500 ಕೋಟಿ ರೂಪಾಯಿ ನೀಡಿದ್ದಾರೆ. ಇದು ರೈತರನ್ನು ಸಮರ್ಪಕವಾಗಿ ತಲುಪಲು ಪ್ರಯತ್ನಿಸುವುದಾಗಿ ತಿಳಿಸಿದರು.

    ರೈತರ ಉನ್ನತಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಜೊತೆಗೂಡಿ ಕೆಲಸ ಮಾಡುವುದಾಗಿ ಅವರು ತಿಳಿಸಿದರು. ಮಹಿಳೆಯರ ಜೊತೆ ಗದ್ದೆ ನಾಟಿ ಮಾಡಿದರು. ಪಡಿತರ ಕೇಂದ್ರಕ್ಕೂ ಭೇಟಿ ನೀಡಿ ಪಡಿತರ ಸಕಾಲದಲ್ಲಿ ಲಭಿಸುತ್ತಿರುವ ಕುರಿತು ಮಾಹಿತಿ ಪಡೆದುಕೊಂಡರು.

    ರಾಜ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ನಾರಾಯಣ ಗೌಡ, ಶಾಸಕರಾದ ಎಲ್.ನಾಗೇಂದ್ರ,. ವಿಭಾಗ ಪ್ರಭಾರಿಗಳಾದ ಮೈ.ವಿ.ರವಿಶಂಕರ್, ಜಿಲ್ಲಾ ಅಧ್ಯಕ್ಷರಾದ ಕೆ. ಜೆ. ವಿಜಯ ಕುಮಾರ್, ಮುಖಂಡರಾದ ಎ. ಮಂಜು. ಡಾ|| ಸಿದ್ದರಾಮಯ್ಯ, ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು

    23ರಿಂದ ತರಗತಿ ಆರಂಭ; ಆನ್‌ಲೈನ್‌ or ಆಫ್‌ಲೈನ್‌ ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದು

    BENGALURU AUG 16

    ಈ ತಿಂಗಳ 23ರಿಂದ ಶಾಲೆ-ಕಾಲೇಜುಗಳ ಭೌತಿಕ ತರಗತಿಗಳನ್ನು ಆರಂಭ ಮಾಡಲು ಸರಕಾರ ನಿರ್ಧರಿಸಿದೆ.

    ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್‌ ಅವರು; 9ರಿಂದ 12ನೇ ತರಗತಿಗಳ ಭೌತಿಕ ಪಾಠಗಳನ್ನು ಆರಂಭ ಮಾಡಲು ನಿರ್ಧರಿಸಲಾಗಿದ್ದು, ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪೋಷಕರನ್ನು ಕೋರಿದರು.

    ರಾಜ್ಯದಲ್ಲಿ ಒಂದನೇ ತರಗತಿಯಿಂದಲೇ ಶಾಲೆ ಆರಂಭಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ಅಗಸ್ಟ್ 30 ರಂದು ತಜ್ಞರ ಸಲಹಾ ಸಮಿತಿ ಜತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

    ಶೇ.2ರಷ್ಟು ಪಾಸಿಟಿವಿಟಿಗಿಂತ ಕೆಳಗಿರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆಗಳನ್ನು ಆರಂಭಿಸಲಾಗುವುದು. ಮಕ್ಕಳಿಗೆ ಹಾಜರಾತಿ ಕಡ್ಡಾಯ ಮಾಡಿಲ್ಲ. ಸೋಂಕು ಪತ್ತೆಯಾದರೆ ಅಂತಹ ಶಾಲೆಗಳನ್ನ ಒಂದು ವಾರ ಕಡ್ಡಾಯವಾಗಿ ಮುಚ್ಚುತ್ತೇವೆ ಎಂದು ಸಚಿವ ನಾಗೇಶ್‌ ತಿಳಿಸಿದರು.

    ಶಾಲೆಗಳ ಆರಂಭಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು. ಕೋವಿಡ್‌ ಹಿನ್ನೆಲೆಯಲ್ಲಿ ನೇರ ತರಗತಿಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ವಿವರವಾಗಿ ತಿಳಿಸಲಾಗುವುದು ಎಂದು ಅವರು ಹೇಳಿದರು.

    ಮಾಸ್ಕ್‌ ಕಡ್ಡಾಯ

    ಮಕ್ಕಳು ಮಾಸ್ಕ್‌ ಧರಿಸಿ ಶಾಲೆಗೆ ಬರುವುದು ಕಡ್ಡಾಯ. ಶಾಲೆಗೆ ಬಂದು ಮನೆಗೆ ಹೋಗುವ ತನಕ ಮಾಸ್ಕ್‌ ತೆಗೆಯುವಂತಿಲ್ಲ. ಅವರ ಪೋಷಕರೇ ಕರೆದುಕೊಂಡು ಬಂದು ವಾಪಸ್‌ ಕರೆದುಕೊಂಡು ಹೋಗಬೇಕು ಎಂದು ಅವರು ತಿಳಿಸಿದರು.

    ಇದೇ ವೇಳೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ತರಗತಿಗಳು ಏಕಲಾಲಕ್ಕೆ ನಡೆಯಲಿದ್ದು, ವಿದ್ಯಾರ್ಥಿಗಳು ತಮಗಿಚ್ಛೆ ಬಂದ ಫ್ಲಾಟ್‌ಫಾರಂನಲ್ಲಿ ಕಲಿಯಬಹುದು. ಶಾಲೆಗೆ ಹಾಜರಾಗಲೇ ಬೇಕು ಎಂಬುದು ಕಡ್ಡಾಯ ಅಲ್ಲ ಎಂದರು ಸಚಿವರು.

    ಶಾಲೆಯ ಆವರಣದಲ್ಲಿ ಮಕ್ಕಳು ಕಲಿತರೆ ಜ್ಞಾನ ವಿಕಾಸ ಉತ್ತಮವಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯ ನೀಡಿದ್ದಾರೆ. ಅದನ್ನು ಸರಕಾರ ಪುರಸ್ಕರಿಸಿದೆ ಎಂದು ಶಿಕ್ಷಣ ಸಚಿವರು, ಶಾಲೆ-ಕಾಲೇಜುಗಳ ಸ್ವಚ್ಛತೆ, ನಿರ್ವಹಣೆ, ಮೇಲುಸ್ತುವಾರಿಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾಧಿಕಾರಿಗಳ ಸಹಕಾರ ಪಡೆಯಲಾಗುತ್ತಿದೆ. ಅಲ್ಲದೆ, ಎಲ್ಲ ನಗರಸಭೆ, ಪಟ್ಟಣ ಪಂಚಾಯಿತಿ ಆಡಳಿತಗಳ ನೆರವನ್ನೂ ಪಡೆದುಕೊಳ್ಳಲಾಗುತ್ತಿದೆ ಎಂದು ಸಚಿವ ನಾಗೇಶ್‌ ವಿವರಿಸಿದರು.

    3ನೇ ಅಲೆ ಆತಂಕ: ಶಾಲೆ ಆರಂಭಕ್ಕೆ ವಿರೋಧ

    ಕೊರೋನಾ 3ನೇ ಅಲೆ, ಇನ್ನೊಂದೆಡೆ ಹಲವಾರು ಜಿಲ್ಲೆಗಳಲ್ಲಿ ಸೋಂಕು ಉಲ್ಬಣ ಆಘುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳಿನಿಂದಲೇ ಶಾಲೆ ಆರಂಭ ಮಾಡುವುದು ಬೇಡ ಎಂದು ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್‌ ಹೋಂಗಳ ಒಕ್ಕೂಟದ (Private Hospitals and Nursing Homes Association-PHANA) ಅಧ್ಯಕ್ಷ ಡಾ.ಪ್ರಸನ್ನ ಸರಕಾರಕ್ಕೆ ಸಲಹೆ ಮಾಡಿದ್ದಾರೆ.

    ಈ ಕುರಿತು ಹೇಳಿಕೆ ನೀಡಿರುವ ಅವರು; ಸದ್ಯದ ಸ್ಥಿತಿಯಲ್ಲಿ ಶಾಲೆಗಳ ಆರಂಭ ಒಳ್ಳೆಯದಲ್ಲ. 3ನೇ ಅಲೆ ಭೀತಿ ತೀವ್ರವಾಗಿದೆ. ಕೇರಳ ಮತ್ತು ಮಹಾರಾಷ್ಟ್ರ ಪರಿಸ್ಥಿತಿ ಗಂಭೀರವಾಗಿದೆ. ಎಚ್ಚರ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ೩ನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆ ಆಗುತ್ತದೆ ಎಂದು ಕೆಲ ಅಧ್ಯಯನಗಳು ಹೇಳಿವೆ ಎಂದು ಅವರು ಗಮನ ಸೆಳೆದಿದ್ದಾರೆ.

    ಇನ್ನು, ರಾಜಧಾನಿ ಬೆಂಗಳೂರಿನಲ್ಲಿ ಪರಿಸ್ಥಿತಿ ತೀವ್ರವಾಗಿದೆ. ಕಳೆದ 10 ದಿನಗಳಲ್ಲಿ 500-600 ಜನರಲ್ಲಿ ಸೋಂಕು ಪತ್ತೆಯಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಹೊರತುಪಡಿಸಿ ಕಾಲೇಜುಗಳನ್ನು ಆರಂಭಿಸಬಹುದು ಎಂದು ಪ್ರಸನ್ನ ಹೇಳಿದ್ದಾರೆ.

    error: Content is protected !!