35.8 C
Karnataka
Sunday, May 12, 2024

    ಆಪ್ಘಾನಿಸ್ತಾನ: ಭಾರತದ ಮುಂದಿನ ಹೆಜ್ಜೆ ಏನು ?

    Must read

    ತಾಲಿಬಾನ್‌ಗಳ ಎಂಟ್ರಿಯೊಂದಿಗೆ ದಿಕ್ಕೆಟ್ಟಿರುವ ಆಪ್ಘಾನಿಸ್ತಾನದಿಂದ ಭಾರತೀಯ ರಾಯಭಾರ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಅಷ್ಟೇ ಅಲ್ಲದೆ, ರಾಯಭಾರಿಯನ್ನೂ ವಾಪಸ್‌ ಕರೆಸಿಕೊಂಡಿದೆ. ಹಾಗಾದರೆ, ಭಾರತದ ಮುಂದಿನ ಹೆಜ್ಜೆ ಏನು?ಎಲ್ಲ ಸಿಬ್ಬಂದಿಯನ್ನು ಸುರಕ್ಷಿತವಾಗಿ ಏರ್‌ಲಿಫ್ಟ್‌ ಮಾಡಲಾಗಿದ್ದು, 120ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊತ್ತ ಭಾರತೀಯ ಯುದ್ಧ ವಿಮಾನ ಗುಜರಾತ್‌ನ ಜಾಮ್‌ ನಗರದ ವಾಯುನೆಲೆಯಲ್ಲಿ ಲ್ಯಾಂಡ್ ಆಗಿದೆ.

    ಕಾಬೂಲ್ ನಗರವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಕೂಡಲೇ ಎಚ್ಚೆತ್ತ ಕೇಂದ್ರ ಸರಕಾರವು ಕೂಡಲೇ ಕಾಬೂಲ್‌, ಕಂದಹಾರ್‌, ಜಲಲಾಬಾದ್‌ ಮುಂತಾದ ಕಡೆ ಇದ್ದ ರಾಯಭಾರ ಸಿಬ್ಬಂದಿಯನ್ನು ತೆರವು ಮಾಡಲಾಗಿದ್ದು, ಅವರೆಲ್ಲರೂ ಈಗ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.

    ಭಾರತೀಯ ವಾಯುಪಡೆಯ ಸಿ-17ವಿಮಾನ ಜಾಮ್‌ ನಗರದ ವಾಯುನೆಲೆಗೆ ಬಂದಿಳಿಯುತ್ತಿದ್ದಂತೆಯೇ ಎಲ್ಲ ಸಿಬ್ಬಂದಿ ರೋಮಾಂಚನಗೊಂಡರು. ವಿಮಾನದಿಂದ ಇಳಿದು ಹೊರ ಬರುತ್ತಿದ್ದಂತೆಯೇ ಭಾರತ್‌ ಮಾತಾಕೀ ಜೈ, ವಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗಿದರು. ವಾಯುನೆಲೆಯಲ್ಲೇ ಎಲ್ಲ ರಾಯಭಾರ ಸಿಬ್ಬಂದಿಯ ಆರೋಗ್ಯವನ್ನೂ ತಪಾಸಣೆ ಮಾಡಲಾಗಿದೆ.

    ಆಪ್ಘಾನಿಸ್ತಾನದಿಂದ ಎರಡು ವಿಮಾನಗಳಲ್ಲಿ ಭಾರತೀಯ ಅಧಿಕಾರಿಗಳು ವಾಪಸ್‌ ಆಗಿದ್ದು, ಅಲ್ಲಿಗೆ ಆ ದೇಶದಲ್ಲಿದ್ದ ಎಲ್ಲ ಅಧಿಕಾರಿಗಳು ತಾಯ್ನಾಡಿಗೆ ಮರಳಿದ್ದಾರೆಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದನ್ ಬಗ್ಚಿ ಅವರು ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದು, ಸದ್ಯದ ಅಪ್ಘಾನಿಸ್ತಾನದ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲವನ್ನೂ ಅವಲೋಕನ ಮಾಡಿ ರಾಯಭಾರಿಯನ್ನೂ ಭಾರತ ವಾಪಸ್‌ ಕರೆಸಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

    ಹಾಗಾದರೆ, ಆಫ್ಘಾನಿಸ್ತಾನದ ಬಗ್ಗೆ ಭಾರತದ ಮುಂದಿನ ಹೆಜ್ಜೆ ಏನು? ಎಂಬುದೇ ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

    ರಾಯಭಾರ ಕಚೇರಿಯನ್ನು ಮುಚ್ಚಿದ ಮಾತ್ರಕ್ಕೆ ಆ ದೇಶದ ಜತೆ ಎಲ್ಲವನ್ನೂ ಕಡಿದುಕೊಂಡ ಹಾಗಲ್ಲ ಎಂದು ಕಾಬೂಲ್‌ನಲ್ಲಿದ್ದ ಭಾರತದ ರಾಯಭಾರಿ ರುದ್ರೇಂದ್ರ ಟಂಡನ್ ಹೇಳಿದ್ದು, ಹೊಸ ಆಡಳಿತದ ಜತೆ ನಮ್ಮ ಮಾತುಕತೆಯನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಇಡೀ ಜಾಗತಿಕ ಸಮುದಾಯ ತಾಲಿಬಾಣಿಗಳನ್ನು ಸಂಶಯದ ದೃಷ್ಟಿಯಲ್ಲಿ ನೋಡುತ್ತಿದ್ದರೆ, ಚೀನಾ, ರಷ್ಯ, ಇರಾನ್ ಮತ್ತು ಪಾಕಿಸ್ತಾನದಂಥ ಕೆಲ ದೇಶಗಳು ವಿರುದ್ಧ ದಿಕ್ಕಿನಲ್ಲಿವೆ. ಇದು ಭಾರತದ ಕಳವಳಕ್ಕೆ ಕಾರಣವಾಗಿದೆ. ಸದ್ಯದ ಆಫ್ಘಾನಿಸ್ತಾನದ ಸ್ಥಿತಿಯಲ್ಲಿ ಅಮೆರಿಕ ಪರವಾಗಿ ನಿಲ್ಲಬೇಕೋ ಅಥವಾ ರಷ್ಯ-ಚೀನಾದ ನಿಲುವಿಗೆ ಹೊಂದಿಕೊಳ್ಳಬೇಕೋ ಎಂಬ ಸಂದಿಗ್ಧದಲ್ಲಿದೆ. ಬಹುಶಃ ಒಂದು ವಾರದವರೆಗೆ ಪರಿಸ್ಥಿತಿಯನ್ನು ಅವಲೋಕನ ಮಾಡಿ ಕೇಂದ್ರ ಸರಕಾರ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

    ವರದಿ ನೀಡಿದ್ದ ರಾಯಭಾರಿ

    ನಿನ್ನೆ ಬೆಳಗ್ಗೆಯಿಂದಲೇ ಕಾಬೂಲ್‌ನಲ್ಲಿ ನಡೆದ ಘಟನಾವಳಿಗಳ ಬಗ್ಗೆ ಭಾರತಕ್ಕೆ ಸಮಗ್ರ ಮಾಹಿತಿ ನೀಡಿದ್ದ ಅಲ್ಲಿನ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್, ಆ ದೇಶದ ಅಧ್ಯಕ್ಷ ಅಶ್ರಫ್‌ ಘನಿ ದೇಶದಿಂದ ಪಲಾಯನ ಮಾಡಿದ ನಂತರ ಉಂಟಾದ ಕ್ಷೋಭೆಯ ಬಗ್ಗೆಯೂ ವರದಿ ನೀಡಿದರು. ಇದಲ್ಲದೆ, ಪಾಕಿಸ್ತಾನ, ಚೀನಾ ಮತ್ತು ಇರಾನ್‌ ಕುಮ್ಮಕ್ಕಿನಿಂದ ದೇಶದ ವಿವಿಧ ಜೈಲುಗಳಲ್ಲಿ ಇದ್ದ ಉಗ್ರರನ್ನು ಬಿಡುಗಡೆ ಮಾಡಿದ ಮೇಲೆ ಉಂಟಾಗಿರುವ ಆತಂಕದ ಬಗ್ಗೆಯೂ ಅವರು ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿದ್ದರು.

    ಈ ಎಲ್ಲ ಅಂಶಗಳನ್ನು ಪರಿಶೀಲನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿದೇಶಾಂಗ ಸಚಿವ ಜೈ ಶಂಕರ್‌ ಹಾಗೂ ಗೃಹ ಸಚಿವ ಅಮಿತ್‌ ಶಾ ಜತೆ ಚರ್ಚೆ ನಡೆಸಿ ಆ ದೇಶದಿಂದ ರಾಯಭಾರಿಯನ್ನೇ ವಾಪಸ್‌ ಕಡೆಸಿಕೊಳ್ಳಲು ನಿರ್ಧರಿಸಿದರು ಎಂಬುದಾಗಿ ಉನ್ನತ ಮೂಲಗಳು ತಿಳಿಸಿವೆ.

    ತಾಲಿಬಾನಿಗಳ ಮೇಲೆ ಅಮೆರಿಕ ನಿಗಾ

    ಆಪ್ಘಾನಿಸ್ತಾನದಿಂದ ತನ್ನ ಸೇನಾಪಡೆಯನ್ನು ವಾಪಸ್‌ ಕರೆಸಿಕೊಂಡ ನಂತರ ಆ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತೀವ್ರ ನಿಗಾ ಇಟ್ಟಿರುವ ಅಮರಿಕ, ಕಾಬೂಲ್‌ನಲ್ಲಿ ನಡೆಯುತ್ತಿರುವ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.

    ಅಮೆರಿಕ ಅಧ್ಯಕ್ಷ ಜೋ ಬೈಡನ್‌ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರವೂ ಆಪ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಎಲ್ಲ ಘಟನೆಗಳನ್ನು ಅಮೆರಿಕ ವಿದೇಶಾಂಗ ಇಲಾಖೆ ಹಾಗೂ ರಕ್ಷಣಾ ಕಚೇರಿ ಪೆಂಟಗನ್‌ ಜಂಟಿಯಾಗಿ ಅವಲೋಕನ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸೈನಿಕರನ್ನು ವಾಪಸ್‌ ಕರೆಸಿಕೊಂಡು ಅಮೆರಿಕ ರಕ್ಷಣಾತ್ಮಕ ಆಟವಾಡುತ್ತಿದೆಯಾ ಅಥವಾ ಇನ್ನೇನಾದರೂ ಹೊಸ ತಂತ್ರಗಾರಿಕೆ ಹೂಡಿದೆಯಾ ಎನ್ನುವ ಅನುಮಾನ ಸ್ವತಃ ತಾಲಿಬಾನ್‌ ಹಾಗೂ ಆ ಉಗ್ರ ಸಂಘಟನೆಯನ್ನು ಬೆಂಬಲಿಸುತ್ತಿರುವ ದೇಶಗಳನ್ನು ಕಾಡುತ್ತಿದೆ.

    ದೇಶವನ್ನು ಉದ್ದೇಶಿಸಿ ಮಾತನಾಡಿದ ನಂತರ ಅಧ್ಯಕ್ಷ ಬೈಡನ್‌, ಆಪ್ಘಾನ್‌ ಪರಿಸ್ಥಿತಿಯ ಬಗ್ಗೆ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್, ರಕ್ಷಣಾ ಕಾರ್ಯದರ್ಶಿ ಲಿಯೋಡ್‌ ಆಸ್ಟಿನ್‌, ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್‌ ಜತೆ ಮಹತ್ವದ ಮಾತುಕತೆ ನಡಸಿದ್ದಾರೆ.

    ಚನ್ನಕೃಷ್ಣ ಪಿ ಕೆ
    ಚನ್ನಕೃಷ್ಣ ಪಿ ಕೆhttps://cknewsnow.com/
    ಸಿಕೆ ನ್ಯೂಸ್ ನೌ.ಕಾಮ್ ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!