24.1 C
Karnataka
Saturday, May 23, 2026
    Home Blog Page 64

    ಬಿಎಸ್ ವೈ ಮಹಾ ಮೌನದ ಹಿಂದಿನ ಲೆಕ್ಕಾಚಾರವೇನು?

    ಸಿ ರುದ್ರಪ್ಪ

    ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ಬಗ್ಗೆ ಅಪಾರವಾದ ನಿರೀಕ್ಷೆ ಹೊಂದಿರುವ ಬಿ ಎಸ್ ಯಡಿಯೂರಪ್ಪನವರು ಇತ್ತೀಚಿನ ಕೆಲವು ವಿದ್ಯಮಾನಗಳಿಂದಾಗಿ ಆತಂಕಗೊಂಡಿದ್ದಾರೆ ಎನ್ನಲಾಗಿದೆ.

    “ಯಡಿಯೂರಪ್ಪನವರು ಉಮ್ಮಳಿಸಿ ಬರುತ್ತಿದ್ದ ದುಃಖದ ನಡುವೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದರು.ನಂತರ ಪ್ರಧಾನಿ ನರೇಂದ್ರ ಮೋದಿ,ಅಮಿತ್ ಶಾ ಮೊದಲಾದ ವರಿಷ್ಠರು ಯಡಿಯೂರಪ್ಪನವರು ಒಬ್ಬ ಸರ್ವೋಚ್ಛ ನಾಯಕ.ಬಿಜೆಪಿಯ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ ಎಂದು ಟ್ವೀಟ್ ಮೂಲಕ ಕೊಂಡಾಡಿದ್ದರು.ಈ ಪ್ರಸಂಶೆಯಿಂದ ಸಂತೃಪ್ತರಾಗಿದ್ದ ಯಡಿಯೂರಪ್ಪನವರು ಎಲ್ಲಾ ನೋವುಗಳನ್ನು ಮರೆತು ನೂತನ ಮುಖ್ಯಮಂತ್ರಿ ಮತ್ತು ಮಂತ್ರಿಗಳ ಪ್ರಮಾಣ ವಚನ ಸಮಾರಂಭಗಳಲ್ಲಿ ಸಂಭ್ರಮದಿಂದಲೇ ಭಾಗವಹಿಸಿದ್ದರು.ನಂತರ ಪಕ್ಷವನ್ನು ಬಲ ಪಡಿಸುವ ತಮ್ಮ ರಾಜ್ಯ ಪ್ರವಾಸದ ರೂಪು ರೇಷೆಗಳನ್ನು ಕೆಲವು ಆಪ್ತರೊಂದಿಗೆ ಉತ್ಸಾಹದಿಂದಲೇ ಚರ್ಚಿಸಿದ್ದರು.ಆದರೆ ಇತ್ತೀಚಿಗೆ ಏಕೋ ಏನೋ ಅವರು ಸ್ವಲ್ಪ ಅನ್ಯ ಮನಸ್ಕರಾದಂತೆ ಕಂಡು ಬರುತ್ತಿದ್ದಾರೆ.ಅವರ ಮನೋಸ್ಥಿತಿ ಕ್ಷಣ ಕ್ಷಣಕ್ಕೂ ಚಂಚಲವಾಗುತ್ತಿದೆ”ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

    ತಾಜಾ ಆಡಳಿತ ಶೈಲಿಯ ಮೂಲಕ ಬಿಜೆಪಿಯನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ನಡೆಯನ್ನು ಅರ್ಥ ಮಾಡಿಕೊಳ್ಳಲು ಯಡಿಯೂರಪ್ಪನವರಿಗೆ ಸಾಧ್ಯವಾಗುತ್ತಿಲ್ಲ.ರಾಜಕೀಯ ಬಿಕ್ಕಟ್ಟು ಎದುರಾದಾಗ ಬೊಮ್ಮಾಯಿ ಖಾಸಗಿಯಾಗಿ ಯಡಿಯೂರಪ್ಪನವರನ್ನು ಭೇಟಿಯಾಗುತ್ತಾರೆ.ಆದರೆ ನೂತನ ಮಂತ್ರಿಗಳ ಪ್ರಮಾಣ ವಚನ ಮುಂತಾದ ಅಧಿಕಾರ ಹಂಚಿಕೆ ಸಂದರ್ಭದಲ್ಲಿ ಹಿರಿಯ ಶಾಸಕರೊಂದಿಗೆ ಯಡಿಯೂರಪ್ಪನವರ ಬಳಿ ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ.ಅವರ ನಡವಳಿಕೆ ಯಡಿಯೂರಪ್ಪನವರ ಯಾವ ಅಂದಾಜಿಗೂ ಸಿಗುತ್ತಿಲ್ಲ ಎಂದು ಅವರ ಆಪ್ತರೊಬ್ಬರು ತಿಳಿಸಿದರು.

    ಇದಕ್ಕೆ ಇಂಬು ನೀಡುವಂತೆ ಅವರ ಕೆಲವು ಆಪ್ತರು”ಸಾರ್,ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರ್ತಿಸಬಹುದು.ಆದರೆ ಬೊಮ್ಮಾಯಿಯವರ ರಾಜಕೀಯ ನಡೆಯನ್ನು ಅರ್ಥ ಮಾಡಿಕೊಳ್ಳುವುದು ಮಾತ್ರ ಕಷ್ಟ.ನೀವು ಕೆಜೆಪಿ ಸ್ಥಾಪಿಸಿದಾಗ ಕಡೇ ಕ್ಷಣದಲ್ಲಿ ಬೊಮ್ಮಾಯಿಯವರು ನಿಮಗೆ ವಿಶ್ವಾಸಘಾತಕತನ ಮಾಡಿರಲಿಲ್ಲವೇ”ಎಂದು ಯಡಿಯೂರಪ್ಪನವರ ಹಳೇ ಗಾಯಗಳನ್ನು ಕೆದಕಲು ಪ್ರಯತ್ನಿಸಿದ್ದಾರೆ.

    “ನೀವು ಆದಷ್ಟು ಬೇಗ ಯಡಿಯೂರಪ್ಪನವರ ನೆರಳಿನಿಂದ ಹೊರಗೆ ಬನ್ನಿ”ಎಂದು ವರಿಷ್ಠರು ಬೊಮ್ಮಾಯಿಯವರಿಗೆ ಕಿವಿ ಮಾತು ಹೇಳಿ ಕಳುಹಿಸಿದ್ದಾರೆ ಎಂಬ ಸಂಗತಿಯನ್ನೂ ಯಡಿಯೂರಪ್ಪನವರ ಗಮನಕ್ಕೆ ಅವರ ಆಪ್ತರು ತಂದಿದ್ದಾರೆ ಎನ್ನಲಾಗಿದೆ.ಅವರ ಬೆಂಬಲಿಗರು ಯಾವ ವಿಚಾರವನ್ನು ಪ್ರಸ್ತಾಪಿಸಿದರೂ ಯಡಿಯೂರಪ್ಪನವರು ಮಾತ್ರ ಯಾವುದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಿಲ್ಲ.

    ಸ್ವಾತಂತ್ರೋತ್ಸವದ ದಿನ ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ.ಸುಧಾಕರ್”ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುತ್ತೇವೆ.ಮುಂದಿನ ಮುಖ್ಯಮಂತ್ರಿಗಳು ಕೂಡ ಬೊಮ್ಮಾಯಿಯವರೇ”ಎಂದು ಹೇಳಿಕೆ ನೀಡಿದ್ದರು.ಅದನ್ನು ಯಡಿಯೂರಪ್ಪನವರ ಗಮನಕ್ಕೆ ಅವರ ಆಪ್ತರು ತಂದಿದ್ದರು.ಆಗಲೂ ಕೂಡ ಯಡಿಯೂರಪ್ಪನವರು ಯಾವುದೇ ಭಾವನೆ ವ್ಯಕ್ತಪಡಿಸಲಿಲ್ಲ.ಅವರ ಮುಖ ಗೋಡೆಯಂತೆ ನಿರ್ವಿಕಾರವಾಗಿತ್ತು ಎಂದು ಮೂಲಗಳು ತಿಳಿಸಿವೆ.

    ಇತ್ತೀಚಿಗೆ ಒಂದು ಅವರು ಸಾರಿ ಮೌನ ಮುರಿದಿದ್ದರಂತೆ.ಹಿರಿಯ ಸಚಿವ ಕೆ ಎಸ್ ಈಶ್ವರಪ್ಪನವರು”ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು.ಆದರೆ ಅವರ ಅವಧಿಯಲ್ಲಿ ಯಾವಾಗಲೂ ಬಿಜೆಪಿಗೆ ಸಂಪೂರ್ಣ ಬಹುಮತ ಬರಲಿಲ್ಲ.ಮುಂದಿನ ಚುನಾವಣೆಯನ್ನು ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿಯೇ ಎದುರಿಸುತ್ತೇವೆ “ಎಂಬ ಹೇಳಿಕೆ ನೀಡಿದ್ದರು. ಇದನ್ನು ಯಡಿಯೂರಪ್ಪನವರ ಗಮನಕ್ಕೆ ತಂದಾಗ ಅವರು ಸ್ವಲ್ಪ ಹೊತ್ತು ಬಿಗುಮಾನದಿಂದಲೇ ಕುಳಿತುಕೊಂಡಿದ್ದರು.ಆದರೆ ನಂತರ ಅವರು”ನಾನು ಕೆಜೆಪಿ ಸ್ಥಾಪಿಸಿದಾಗ 2013 ರಲ್ಲಿ ಅವರೇ ಚುನಾವಣೆ ನಡೆಸಿದ್ದರಲ್ಲಾ.ಆಗ ಏಕೆ ಹೀನಾಯವಾಗಿ ಸೋತರಂತೆ?”ಎಂದು ಕೇಳಿದರು ಎಂದು ಮೂಲಗಳು ತಿಳಿಸಿವೆ .

    ಈ ನಡುವೆ ಬಿಜೆಪಿ ಉಪಾಧ್ಯಕ್ಷರೊಬ್ಬರು ನಿಗಮ ಮತ್ತು ಮಂಡಳಿಗಳಿಗೆ ನೇಮಕಗೊಂಡಿರುವ ಯಡಿಯೂರಪ್ಪ ಬೆಂಬಲಿಗರನ್ನು ಬದಲಾಯಿಸಬೇಕು ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಲು ಮನವಿ ಪತ್ರ ಸಿದ್ಧಪಡಿಸುತ್ತಿದ್ದಾರೆ ಎಂಬ ಸಂಗತಿಯನ್ನೂ ಯಡಿಯೂರಪ್ಪನವವರ ಗಮನಕ್ಕೆ ತಂದಿದ್ದಾರೆ.”ಪಕ್ಷದ ಕಚೇರಿಗೆ ಹೋದರೆ ನಮ್ಮನ್ನು ಅಸ್ಪೃಶ್ಯರಂತೆ ನೋಡುತ್ತಾರೆ”ಎಂದೂ ಅವರ ಬೆಂಬಲಿಗರು ದೂರಿದ್ದಾರೆ.

    ಈ ಎಲ್ಲಾ ಬಿಡಿ ಬಿಡಿ ಘಟನೆಗಳನ್ನು ಯಡಿಯೂರಪ್ಪ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.ಬೊಮ್ಮಾಯಿಯವರು ರಾಜಕೀಯವಾಗಿ ದೀರ್ಘಾವಧಿ ಮ್ಯಾರಥಾನ್ ಓಟಕ್ಕೆ ಸಿದ್ಧರಾಗುತ್ತಿರುವಂತೆ ಯಡಿಯೂರಪ್ಪನವರಿಗೆ ಭಾಸವಾಗ ತೊಡಗಿದೆ. ಜೊತೆಗೆ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಯಾವುದೇ ಅಧಿಕಾರದ ಸ್ಥಾನ ಮಾನ ವನ್ನು ವರಿಷ್ಠರು ನೀಡುವ ಲಕ್ಷಣಗಳು ಕಾಣಿಸುತ್ತಿಲ್ಲ.ಇದರಿಂದಾಗಿ ಅವರ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಆಗುತ್ತಿರಬಹುದು.ಏನೇ ಆದರೂ ಮುಂದಿನ ಚುನಾವಣೆ ವೇಳೆಗೆ ಬೊಮ್ಮಾಯಿ vs ವಿಜಯೇಂದ್ರ ಎಂಬ ಸ್ಥಿತಿ ನಿರ್ಮಾಣವಾಗದಿರಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಅವರ ಆಪ್ತರೊಬ್ಬರು ತಿಳಿಸಿದರು.


    ಸಿ ರುದ್ರಪ್ಪ ನಾಡಿನ ಹಿರಿಯ ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರು.

    ರಾಷ್ಟ್ರೀಯ ಶಿಕ್ಷಣ ನೀತಿ ರಾಷ್ಟ್ರೀಯ ಅಗತ್ಯ ಎಂದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

    BENGALURU AUG 19
    ರಾಷ್ಟ್ರೀಯ ಶಿಕ್ಷಣ ನೀತಿಯಿಂದ ನಮ್ಮ ದೇಶದ ಬೆಳವಣಿಗೆಯ ಸ್ವರೂಪವೇ ಬದಲಾಗಲಿದ್ದು, ವಿನಾಕಾರಣ ಈ ನೀತಿಯ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿ ಗುರುವಾರದಂದು ಬಿಜೆಪಿ ಹಮ್ಮಿಕೊಂಡಿದ್ದ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ ನಿಮಿತ್ತ ನಡೆದ ಬುದ್ಧಿಜೀವಿಗಳು ಮತ್ತು  ವಿವಿಧ ಕ್ಷೇತ್ರಗಳ ವೃತ್ತಿಪರರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು ಸಚಿವರು.

    ಶಿಕ್ಷಣ ನೀತಿ ರಚನೆಯ ಹಿಂದೆ ಅನೇಕ ಶ್ರೇಷ್ಠ ಮಿದುಳುಗಳು ಕೆಲಸ ಮಾಡಿವೆ. ಕನ್ನಡಿಗರೇ ಆದ ಡಾ.ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ನಮ್ಮ ನಾಡಿನ ಹೆಸರಾಂತ ತಜ್ಞರು, ವಿಜ್ಞಾನಿಗಳು, ಶಿಕ್ಷಣ ಕ್ಷೇತ್ರದ ನಿಪುಣರು ಅಹರ್ನಿಷಿ ದುಡಿದಿದ್ದಾರೆ. ಐದೂವರೆ ವರ್ಷ ಕಾಲ ನಿರಂತರ ಅಧ್ಯಯನ, ಸಂವಾದದಿಂದ ಈ ನೀತಿ ರೂಪಿತವಾಗಿದೆ ಎಂದರು ಡಾ.ಅಶ್ವತ್ಥನಾರಾಯಣ.

    ಸುಮಾರು 35 ವರ್ಷಗಳ ನಂತರ ನಮ್ಮ ದೇಶದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ರೂಪಿತವಾಗಿದೆ. ಈ ಶಿಕ್ಷಣ ನೀತಿಯು ʼರಾಷ್ಟ್ರೀಯ ಅಗತ್ಯʼವೇ  ಆಗಿತ್ತು ಎಂದು ನಿರ್ವಿವಾದವಾಗಿ ನಾನು ಹೇಳಬಲ್ಲೆ. ಸಾಂಪ್ರದಾಯಿಕವಾದ ಶಿಕ್ಷಣ ಪದ್ಧತಿಯಿಂದ ಕುಶಲತೆ ಹಾಗೂ ಜ್ಞಾನಕ್ಕೆ ಬರ ಉಂಟಾಗಿತ್ತು. ಅಂಥ ಕೊರತೆಯನ್ನು ಶಿಕ್ಷಣ ನೀತಿ ನೀಗಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು.

    ಕೆಲವರಿಗೆ ಇದು ಅರ್ಥವಾಗುತ್ತಿಲ್ಲ. ಇಡೀ ದೇಶಕ್ಕೆ ಹೊಸ ತಿರುವು, ವೇಗ ನೀಡಬಲ್ಲ ಶಿಕ್ಷಣ ನೀತಿಯ ಬಗ್ಗೆ ತಿಳಿಯುತ್ತಿಲ್ಲ. ಅಂಥವರು ಮೊದಲು ನೀತಿಯನ್ನು ಆಳವಾಗಿ ಅಧ್ಯಯನ ಮಾಡಿ ಮಾತನಾಡಲಿ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದರು.

    ಇದುವರೆಗಿನ ಶಿಕ್ಷಣ ಪದ್ಧತಿ ಹೇಗಿತ್ತೆಂದರೆ, ನಾವು ಹೇಳಿದ್ದನ್ನು ಮಕ್ಕಳು ಕಲಿಯುತ್ತಿದ್ದರು. ಈ ಸಾಂಪ್ರದಾಯಿಕ ಪದ್ಧತಿಗೆ ರಾಷ್ಟ್ರೀಯ ಶಿಕ್ಷಣ ನೀತಿ ತಿಲಾಂಜಲಿ ಇಡುತ್ತಿದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಸಣಪೂರ್ಣ ಸ್ವಾತಂತ್ರ್ಯವಿದೆ. ಬಹು ಶಿಸ್ತೀಯ, ಬಹ ಆಯ್ಕೆಯ ವಿಷಯಾಧಾರಿತ ಕಲಿಕೆಯೇ ಈ ಶಿಕ್ಷಣ ನೀತಿಯ ಆತ್ಮ ಎಂದ ಅವರು, ಮಾತೃಭಾ಼ಷೆ ಕಲಿಕೆಗೂ ಇಲ್ಲಿ ಅಗ್ರ ಮಾನ್ಯತೆ ಕೊಡಲಾಗಿದೆ ಎಂದು ಹೇಳಿದರು.

    ಸಂವಾದದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಅವರು ಮಾತನಾಡಿದರು. ಜತೆಗೆ, ವಿವಿಧ ಕ್ಷೇತ್ರಗಳ ಗಣ್ಯರು, ತಂತ್ರಜ್ಞರು, ಶಿಕ್ಷಣ ತಜ್ಞರ ಜತೆ ಸಂವಾದ ನಡೆಸಿದರು.

    ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ

    ಇಂದು ನಾಡಿನಾದ್ಯಂತ ಶ್ರೀವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ನೆರೆ ಹೊರೆಯವರೆಲ್ಲಾ ಸಂಭ್ರಮದಿಂದ ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಸಡಗರದಿಂದ ಆಚರಿಸುತ್ತಿದ್ದ ಈ ಹಬ್ಬ ಕಳೆದ ಬಾರಿ ಕೋವಿಡ್ ಕಾರಣದಿಂದ ಅವರವರ ಮನೆಗೆ ಸೀಮಿತವಾಗಿತ್ತು. ಈ ಬಾರಿ ಹಬ್ಬದ ಸಂಭ್ರಮ ಮತ್ತೆ ಕಂಡಿದೆ.

    ಶ್ರಾವಣ ಮಾಸವೇ ಹಾಗೆ. ಹಬ್ಬಗಳ ಸಾಲು. ಈ ಮಾಸದ ಎರಡನೇ ಶುಕ್ರವಾರ ಹೆಂಗಳೆಯರಿಗಂತೂ ಸಂಭ್ರಮದ ದಿನ. ಮನೆಯಲ್ಲಿ ಲಕ್ಶ್ಮಿ ಪೂಜೆಯ ಸಡಗರ. ನಮ್ಮ ದಾಸವರೇಣ್ಯರು ಲಕ್ಷ್ಮಿಯನ್ನು ಸ್ತುತಿಸುವುದನ್ನು ಕೇಳುವುದೇ ಸೊಗಸು. ಅದರ ಜೊತಗೆ ನಮ್ಮಲ್ಲಿ ಸಂಪ್ರದಾಯ ಗೀತೆಗಳು ಅನೇಕ. ಇವುಗಳನ್ನೆಲ್ಲಾ ಒಂದೆಡೆ ಸೇರಿಸಿ ಈ ದಿನ ನಾಡಿನ ಜತೆಗೆ ಈ ವಿಶೇಷ ಪಾಡ್ಕಾಸ್ಟ್ ಅನ್ನು ಕನ್ನಡಪ್ರೆಸ್.ಕಾಮ್ ಅರ್ಪಿಸುತ್ತಿದೆ. ಭಾರತಿ ಅವರು ಪ್ರಸ್ತುತ ಪಡಿಸಿದ ಈ ಪಾಡ್ಕಾಸ್ಚ್ ನಲ್ಲಿ ಪರಿಮಳಾ ನರಹರಿರಾವ್ ತಮ್ಮ ಗಾಯನ ಸುಧೆ ಹರಿಸಿದ್ದಾರೆ.

    ಆಲಿಸಿ ಪ್ರತಿಕ್ರಿಯಿಸಿ.

    ಹಿಂದುಳಿದ ವರ್ಗಗಳ ಆಯೋಗದ ವರದಿ ಸ್ವೀಕಾರಕ್ಕೆ ಹಿಂದೇಟು ಏಕೆ : ಸಿದ್ದರಾಮಯ್ಯ

    BENGALURU AUG 20

    ಯಾವುದೋ ಒಂದು ಜಾತಿ ಅಥವಾ ಜನಾಂಗದ ಪರವಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿಲ್ಲ. ಹೀಗಿರುವಾಗ ವರದಿಯನ್ನು ಸ್ವೀಕರಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

    ಪ್ರದೇಶ ಕಾಂಗ್ರೆಸ್ ಸಮಿತಿ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಇಂದು ಆಯೋಜಿಸಿದ್ದ ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ, ಮಾಜಿ ಮುಖ್ಯಮಂತ್ರಿ, ದಿವಂಗತ ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಅವರು ಮಾತನಾಡಿದರು.

    ವರದಿಯನ್ನು ಸಿದ್ದರಾಮಯ್ಯ ಅವರೇ ಬರೆಯಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಹೇಳಿದ್ದಾರೆ. ಇದು ಅಪ್ಪಟ ಸುಳ್ಳು. ವರದಿ ಇನ್ನೂ ಸರ್ಕಾರದ ಕೈಗೆ ಬಂದಿಲ್ಲ. ಪುಟ್ಟರಂಗ ಶೆಟ್ಟಿಯವರು ಸಮ್ಮಿಶ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಸಚಿವರಾಗಿದ್ದಾಗ ವರದಿ ಅಂಗೀಕಾರ ಮಾಡಿಸಿ ಎಂದು ಸೂಚಿಸಿದ್ದೆ. ಆಗ ಕುಮಾರಸ್ವಾಮಿಯವರು ವರದಿ ಮಂಡಿಸಲು ಪುಟ್ಟರಂಗ ಶೆಟ್ಟಿಯವರಿಗೆ ಅವಕಾಶ ಕೊಡಲಿಲ್ಲ. ನಾನು ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದೆ. ಹೀಗಾಗಿ ಜಗಳ ಬೇಡ ಬಿಡಿ ಎಂದು ಹೇಳಿದ್ದೆ.

    ಸಚಿವ ಈಶ್ವರಪ್ಪ ಅವರು ಹೊರಗಡೆ ಬಂದು ಸರ್ಕಾರ ವರದಿಯನ್ನು ಸ್ವೀಕಾರ ಮಾಡಬೇಕು ಎನ್ನುತ್ತಾರೆ. ಈ ವಿಚಾರದಲ್ಲಿ ಅವರು ಒಂದು ದಿನವಾದರೂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರಯೇ ? ವರದಿಯಲ್ಲಿ ಒಂದು ಜಾತಿಯ ಪರ ಏನಾದರೂ ಶಿಫಾರಸು ಮಾಡಲಾಗಿದೆಯೇ ? ಎಲ್ಲ ಜಾತಿಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲಾಗಿದೆ. ಅದನ್ನು ಸ್ವೀಕರಿಸಲು ಸರ್ಕಾರ ಮೀನಮೇಷ ಎಣಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು.

    ಸರ್ಕಾರಿ ಶಾಲಾ ಶಿಕ್ಷಕರ ನೆರವಿನಿಂದ ತಯಾರಿಸಿದ ವರದಿ ಅದು. ಖಾಸಗಿಯವರು ಮಾಡಿದ್ದಲ್ಲ. ಈ ದೇಶದ ಸಂಪತ್ತು, ಅಧಿಕಾರ ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು. ಅದಕ್ಕೆ ಅಂಕಿ-ಅಂಶ ಅಗತ್ಯ. ಈ ಕಾರಣಕ್ಕಾಗಿಯೇ ವರದಿ ತಯಾರಿಸಲು ನಿರ್ಧರಿಸಲಾಗಿತ್ತು. ಒಲ್ಲದ ಗಂಡ ಮೊಸರಲ್ಲಿ ಕಲ್ಲು ಹುಡುಕಿದಂತೆ ವರದಿ ಬಗ್ಗೆ ಅಪಸ್ವರಗಳು ಬೇಡ.

    ಹಿಂದುಳಿದ ವರ್ಗದವರಿಗೆ ಮೀಸಲು ತಾವೇ ಕೊಟ್ಟಂತೆ ಮಾತನಾಡುತ್ತಿದ್ದಾರೆ ಬಿಜೆಪಿಯವರು. ಎಂಥಹ ನಾಟಕಕಾರರು ಅವರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು, ಅಲ್ಪಸಂಖ್ಯಾತರು, ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗಗಳಿಗೆ ರಾಜೀವ್‍ಗಾಂಧಿಯವರು ಮೀಸಲು ಸೌಲಭ್ಯ ಒದಗಿಸಿದ ಬಳಿಕ ಅಂದಿನ ರಾಜ್ಯಸಭೆ ಸದಸ್ಯ, ದಿವಂಗತ ರಾಮಾಜೋಯಿಸ್ ಅವರು ಅದನ್ನು ವಿರೋಧಿಸಿ ನ್ಯಾಯಾಲಯಕ್ಕೆ ಹೋದರು.

    ಬಿಜೆಪಿಯವರು ಎಂದಾದರೂ ಮಿಸಲು ಸೌಲಭ್ಯದ ಪರವಾಗಿ ಮಾತನಾಡಿದ್ದಾರೆಯೇ ? ಮಂಡಲ್ ಆಯೋಗದ ಜಾರಿಗೆ ತರಲು ಹೊರಟಾಗ ಶಾಲಾ ಮಕ್ಕಳನ್ನು ಎತ್ತಿಕಟ್ಟಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದವರು ಬಿಜೆಪಿ ನಾಯಕರು. ಮೀಸಲು ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ. ಹಾವನೂರು, ಮಂಡಲ್, ಚಿನ್ನಪ್ಪ ರೆಡ್ಡಿ ಆಯೋಗದ ವರದಿಗಳನ್ನು ತೀವ್ರವಾಗಿ ವಿರೋಧಿಸಿದವರು ಅವರು. ಇಡೀ ಸಮಾಜದ ಹಾಗೂ ಎಲ್ಲ ಧರ್ಮದವರು, ಜಾತಿ ಜನಾಂಗದವರನ್ನು ಒಳಗೊಂಡಿರುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಎಂದರು ಸಿದ್ಧರಾಮಯ್ಯ

    ಎಚ್ಚರದಿಂದ ಇರಬೇಕು :
    ಬಿಜೆಪಿಯವರ ಬಗ್ಗೆ ಎಚ್ಚರದಿಂದ ಇರಬೇಕು. ಅವರು ಇತಿಹಾಸ ತಿರುಚಿ ಜನರು ಅದರಲ್ಲಿಯೂ ಯುವಕರನ್ನು ದಾರಿ ತಪ್ಪಿಸುತ್ತಾರೆ. ಕಾಂಗ್ರೆಸ್ ನಲ್ಲಿರುವ ಹಿಂದುಳಿದ ವರ್ಗಗಳವರಿಗೆ ಬದ್ಧತೆ ಇರಬೇಕು. ಬದ್ಧತೆ ಇದ್ದಾಗ ಮಾತ್ರ ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡಲು ಸಾಧ್ಯ. ಇಲ್ಲದಿದ್ದರೆ ಅಧಿಕಾರ ಸಿಗುವ ಕಡೆ ಹೋಗುತ್ತಾರೆ. ಆ ರೀತಿ ಹೋದವರನ್ನು ಬಿಜೆಪಿಗೆ ಹೋಗಿರುವುದೇಕೆ ಎಂದು ಪ್ರಶ್ನಿಸಿದರೆ ಎಲ್ಲಿದ್ದರೂ ನಿಮ್ಮವನೇ ಅಣ್ಣ ಎನ್ನುತ್ತಾರೆ.

    ದೇವರಾಜ ಅರಸು ಅವರು ಭೂ ಸುಧಾರಣೆ, ಜೀತ ವಿಮುಕ್ತಿ, ಋಣಮುಕ್ತ ಯೋಜನೆ ಸೇರಿದಂತೆ ಕಾಂಗ್ರೆಸ್‍ನ ಎಲ್ಲ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಜಾರಿಗೆ ತಂದು ಜನರಿಗೆ ತಲುಪಿಸಿದವರು. ಕನಸಿನಲ್ಲಿಯೂ ವಿಧಾನಸೌಧ ನೋಡದವರನ್ನು, ವಿಧಾನಸೌಧದ ಮೆಟ್ಟಿಲು ಹತ್ತುತ್ತೇವೆ ಎಂದು ನಿರೀಕ್ಷೆ ಮಾಡದವರನ್ನು ಕರೆ ತಂದು ಶಾಸಕ, ಮಂತ್ರಿಗಳನ್ನಾಗಿ ಮಾಡಿದರು. ಹಿಂದುಳಿದವರಿಗೆ ನಿಜವಾದ ಮೀಸಲು ಸೌಲಭ್ಯ ಕೊಟ್ಟವರು ದೇವರಾಜ ಅರಸು ರವರು. ಭಾರಿ ವಿರೋಧ ವ್ಯಕ್ತವಾದರೂ ಎದೆಗುಂದದೆ ನಿರ್ಣಯ ಮಾಡಿದರು.

    ನಾನು ವರುಣಾ ನಾಲೆಗೆ ಆಗ್ರಹಿಸಿ ಚಳವಳಿ ಮಾಡುತ್ತಿದ್ದೆ. ಆಗ ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದರು. ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಸ್ಥಳಕ್ಕೆ ಅರಸು ಅವರು ಬಂದಿದ್ದರು. ಆಗ ಮೊದಲ ಬಾರಿಗೆ ನಾನು ಅವರನ್ನು ನೋಡಿದ್ದು. ರಾಜ್ಯ ರಾಜಕಾರಣದಲ್ಲಿ ಅರಸು ಅವರು ಧೀಮಂತ ನಾಯಕ. ಅವರು ಮಾಡಿರುವ ಕೆಲಸಗಳೇ ನಮಗೆ ಸ್ಫೂರ್ತಿ. ರಾಜೀವ್ ಗಾಂಧಿ ಹಾಗೂ ಅರಸು ಅವರು ಮಾಡಿರುವ ಜನಪರ ಕಾರ್ಯಗಳನ್ನು ನೆನಪು ಮಾಡಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಸಿದ್ದರಾಮಯ್ಯ ಅವರು ಹೇಳಿದರು.

    ವ್ರತ ಮಾಡುವ ಮುನ್ನ ಅದರ ಹಿನ್ನೆಲೆ ಅರಿಯಬೇಕು

    ಹೇಮ ಶ್ರೀಧರ

    ಇಂದು ವರಮಹಾಲಕ್ಷ್ಮಿ ವ್ರತ. ಯಾವುದಾದರೂ ವ್ರತ ಮಾಡುತ್ತೇವೆ ಎಂದರೆ ಮೊದಲು ಆ ದೇವತೆಗಳ ಮಹಿಮೆಗಳನ್ನು ತಿಳಿದುಕೊಂಡು ಸ್ವಲ್ಪ ಮಟ್ಟಿಗಾದರೂ ಅರ್ಥೈಸಿಕೊಂಡು ಮಾಡಬೇಕು. ವರ ಮಹಾಲಕ್ಷ್ಮಿಯ ವ್ರತವೆಂದರೆ ಜಗಜ್ಜನನಿ ಯಾದ ಆಕೆಯ ಬಗ್ಗೆ ಎಷ್ಟು ಹೇಳಿದರೂ ಅದು ಸ್ವಲ್ಪಮಾತ್ರವೇ ಆಗುತ್ತದೆ.

    ಪರಮಾತ್ಮ ಮತ್ತು ಲಕ್ಷ್ಮೀದೇವಿ ಇಬ್ಬರು ಅಕ್ಷರ ಪುರುಷರು. ಜಗಜ್ಜನನಿಯಾದ ಮಹಾಲಕ್ಷ್ಮಿ ದೇವಿಗೆ ದೇಹ ನಾಶವಿಲ್ಲ ಆದ್ದರಿಂದ ಮಹಾಲಕ್ಷ್ಮಿಗೆ ಸಮನ ಎಂದೂ ಹೆಸರು. ದೇಶತ: ಕಾಲತ: ಪರಮಾತ್ಮನಿಗೆ ಸಮ. ಗುಣದಲ್ಲಿ ಪರಮಾತ್ಮನ ಅಧೀನಳು. ಆದ್ದರಿಂದ ಅವಳು ಪರಮಾತ್ಮನಿಗೆ ಸಮ. ಅಚಿಂತ್ಯಾತ್ಮಕ ಗುಣವುಳ್ಳ ಪರಮಾತ್ಮನ ಸೇವೆಯನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ. ಛತ್ರ ಚಾಮರ ವ್ಯಜನ ಪರಿಯಂಕ ಎಲ್ಲವೂ ತಾನೇ ಆಗಿ ಪರಮಾತ್ಮನ ಸೇವೆಯನ್ನು ಪೂರ್ಣವಾಗಿ ಮಾಡಿ ಆನಂದ ಹೊಂದುತ್ತಾಳೆ. ಪ್ರಳಯಕಾಲದಲ್ಲಿ ಎಲ್ಲವೂ ನಾಶವಾದರೂ ಲಕ್ಷ್ಮಿ ದೇವಿಯು ಮಾತ್ರ ಜಲವಾಗಿ ಆಲದೆಲೆಯಾಗಿ ಕತ್ತಲಾಗಿ ಹಲವು ಆಭರಣಗಳು ಆಗಿ ಪರಮಾತ್ಮನ ಜೊತೆಯಲ್ಲೇ ಇರುತ್ತಾಳೆ ಎಂದು ಪುರಾಣದಲ್ಲಿ ಹೇಳಿದೆ. ಶ್ರೀ, ಭೂ, ಮತ್ತು ದುರ್ಗಾ ಎಂಬ ಮೂರು ರೂಪದಿಂದ ಪರಮಾತ್ಮನ ಸೇವೆಯನ್ನು ಮಾಡುತ್ತಾಳೆ. ಜಗಜ್ಜನನಿಯಾದ ಮಹಾಲಕ್ಷ್ಮಿ ಪೂಜೆ ಮಾಡಬೇಕಾದರೆ ನಮಗೆ ಇವೆಲ್ಲದರ ಬಗ್ಗೆ ಕಿಂಚಿತ್ತಾದರೂ ಜ್ಞಾನವಿರಬೇಕು .

    ವರಮಹಾಲಕ್ಷ್ಮಿ ವ್ರತದ ಮಹತ್ವ :

    ಶ್ರಾವಣ ಮಾಸದ ಶುಕ್ಲಪಕ್ಷದ ಎರಡನೇ ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ವ್ರತವಾಗಿರುತ್ತದೆ. ಈ ವ್ರತ ಮಾಡಬೇಕಾದರೆ ತುಳಸಿ ಬೃಂದಾವನದ ಹತ್ತಿರ ಯಮನಾ ಪೂಜೆಯನ್ನು ಮಾಡಬೇಕು.
    ಯಾವುದೇ ವ್ರತವನ್ನು ನದಿ ತೀರದಲ್ಲಿಯೇ ಆಚರಿಸುವುದು ಉತ್ತಮ. ಆದರೆ ಈಗಿನ ದೇಶ ಕಾಲ ಪರಿಸ್ಥಿತಿಯಲ್ಲಿ ನದಿ ತೀರದಲ್ಲಿ ಮಾಡುವುದು ಅಸಾಧ್ಯವೆಂದು ತಿಳಿದು ಎನ್ಮೂಲೇ ಸರ್ವ ತೀರ್ಥಾನಿ ಎನ್ಮದ್ಯೇ ಸರ್ವದೇವತಾ ಎಂಬಂತೆ ಸಕಲ ತೀರ್ಥಗಳ ಸನ್ನಿಧಾನ ಉಳ್ಳ ತುಳಸಿ ಬೃಂದಾವನದ ಸಮೀಪ ಯಮುನಾ ಕಲಶವನ್ನು ಸ್ಥಾಪಿಸಿ ಗಂಗಾ ಯಮುನಾ ಗೋದಾವರಿ ಮೊದಲಾದ ನದಿ ದೇವತೆಗಳನ್ನು ಆವಾಹಿಸಿ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ನಂತರ ಆ ಕಲಶವನ್ನು ತೆಗೆದುಕೊಂಡುಬಂದು ಮನೆಯ ಬಾಗಿಲಲ್ಲಿ ‌ ಪಡಿಯನ್ನು(ಅಕ್ಕಿ ಬೆಲ್ಲ) ಕಲಶದಿಂದ ಮುಂದಕ್ಕೆ ತಳ್ಳಿ ಬಲಗಾಲು ಮುಂದಿಟ್ಟು ಕೊಂಡು ಮನೆಯೊಳಗೆ ಪ್ರವೇಶಿಸಬೇಕು.

    ಆ ಕಲಶವನ್ನು ಅಲಂಕೃತವಾದ ಮಂಟಪದಲ್ಲಿ ಇಟ್ಟು ಅದರ ಪಕ್ಕದಲ್ಲಿ ಮತ್ತೊಂದು ಕಲಶವನ್ನು ಇಟ್ಟು ಪೀಠ ಪೂಜೆ ಮಾಡಿ ಅದರಲ್ಲಿ ಲಕ್ಷ್ಮೀನಾರಾಯಣರನ್ನು ಪ್ರತಿಷ್ಠ ಸೂಕ್ತದಿಂದ ಆವಾಹಿಸಿಬೇಕು. ನಂತರ ನವ ದೊರ ಸ್ಥಾಪನೆ ಮಾಡಬೇಕು. ದಾರದಲ್ಲಿ 9 ಅಥವಾ ಹನ್ನೆರಡು ಗ್ರಂಥಿಗಳು ಮಾಡಿ, ಆ ಗ್ರಂಥಿಗಳಲ್ಲಿ ಲಕ್ಷ್ಮೀನಾರಾಯಣರ ನಾಮಗಳಿಂದ ಪೂಜಿಸಬೇಕು. ನಂತರ ದೇವಿಗೆ ಒಂದು ದಾರವನ್ನು ಅರ್ಪಿಸಬೇಕು. ಷೋಡಶೋಪಚಾರ ಪೂಜೆಯನ್ನು ಮಾಡಿ ಪರಿಮಳ ಪತ್ರ-ಪುಷ್ಪಗಳಿಂದ ಅರ್ಚನೆಯನ್ನು ಮಾಡಿ ಲಕ್ಷ್ಮೀನಾರಾಯಣರ ಕಲಾಪಕ್ಕೆ ಅರಿಶಿನ ಕುಂಕುಮ ಗಂಧ ಅಕ್ಷತೆಗಳಿಂದ ಪೂಜಿಸಿ ಸೌಭಾಗ್ಯ ದ್ರವ್ಯಗಳನ್ನು ಅರ್ಪಿಸಿ ಕುಂಕುಮಾರ್ಚನೆಯನ್ನು ಮಾಡಿ ಧೂಪ ದೀಪ ಮಾಡಿ ಪಂಚ ಭಕ್ಷಗಳನ್ನು (ಯಥಾಶಕ್ತಿ) ನೈವೇದ್ಯ ಮಾಡಬೇಕು. ಮಂಗಳಾರತಿ ಯನ್ನು
    ಮಾಡಿ ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ ಪೂಜೆಯನ್ನು ಭಗವಂತನಿಗೆ ಸಮರ್ಥಿಸಬೇಕು. ಹಾಡುಗಳನ್ನು ಹೇಳಿ ಆರತಿಯನ್ನು ಮಾಡಬೇಕು. ವಾಯನ ದಾನ ಮತ್ತು ಮೊರದ ಬಾಗಿನ ಕೊಟ್ಟು ವ್ರತ ಸಮರ್ಪಣೆ ಮಾಡಬೇಕು.

    ಕಲಶದ ವಿಚಾರ :

    ಕಲಶದ ತಂಬಿಗೆಯಲ್ಲಿ ಪಂಚ ಫಲ ಗಳನ್ನು ಮತ್ತು ಮಂಗಳ ದ್ರವ್ಯಗಳನ್ನುಹಾಕಿ , ಅದರ ಮೇಲೆ ಅಲಂಕರಿಸಿದ ತೆಂಗಿನಕಾಯಿಯನ್ನು ಇಡಬೇಕು. ಕೆಲವರು ತೆಂಗಿನಕಾಯಿಗೆ ಮುಖವಾಡ ಇರಿಸಿ ಅಲಂಕಾರ ಮಾಡುತ್ತಾರೆ. ಮತ್ತೆ ಕೆಲವರು ತೆಂಗಿನಕಾಯಿಗೆ ಅರಿಶಿಣ ಹಚ್ಚಿ ಕುಂಕುಮದ ತಿಲಕವಿಟ್ಟು ಪೂಜಿಸುತ್ತಾರೆ. ಇದು ಅವರವರ ಸಂಪ್ರದಾಯದಂತೆ ಅವರಿಗೆ ಬಿಟ್ಟದ್ದು.

    ನಾವು ಏನೇ ಪೂಜೆ ಮಾಡಿದರೂ ಪರಮಾತ್ಮ ಲಕ್ಷ್ಮಿ ವಾಯುದೇವರು ಮತ್ತು ತತ್ವಾಭಿಮಾನಿ ದೇವತೆಗಳ ದ್ವಾರ ಮಾಡಿಸುತ್ತಾನೆ. ನಾನು ಮಾಡಿದೆ ಎನ್ನದೇ ನಿನ್ನ ಪೂಜೆ ನೀನೇ ಮಾಡಿಸಿದೆ ಎಂಬ ಭಾವದಿಂದ ಮಾಡಿದರೆ ಪರಮಾತ್ಮನ ಅನುಗ್ರಹವಾಗಿ ಮೋಕ್ಷಕ್ಕೆ ಕಾರಣೀಭೂತವಾಗುತ್ತದೆ.

    ಆಫ್ಘನ್ ಬಿಕ್ಕಟ್ಟು: ಕನ್ನಡಿಗರ ನೆರವಿಗೆ ನೋಡಲ್ ಅಧಿಕಾರಿ ನೇಮಕ

    BENGALURU AUG 18

    ಸಂಘರ್ಷಭರಿತ ಪರಿಸ್ಥಿತಿ ಇರುವ ಆಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವ ಸಲುವಾಗಿ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಮಾಡಲು ಸಿಐಡಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಉಮೇಶ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಇದರ ಜೊತಗೆ ನೆರವಿಗಾಗಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದ್ದು . 080-22094498 080-22942628, 9480800187 ಈ ಸಂಖ್ಯೆ ಗಳನ್ನು ಸಂಪರ್ಕಿಸಬಹುದೆಂದು ಹಾಗೂ ಇ ಮೇಲ್ ವಿಳಾಸ [email protected] ಆಗಿದೆ ಎಂದು ಪ್ರಕಟಣೆ ತಿಳಿಸಿದೆ.

    ಸರ್ ಎಂ.ವಿಶ್ವೇಶ್ವರಯ್ಯ ಯುವ ಪೀಳಿಗೆಗೆ ಪ್ರೇರಣೆ- ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

    BENGALURU AUG 18

    ಭಾರತ ಮಾತೆಯ ಶ್ರೇಷ್ಠ ಪುತ್ರ ಸರ್ ಎಂ. ವಿಶ್ವೇಶ್ವರಯ್ಯ ಅವರು ದೇಶಕ್ಕೆ ನೀಡಿದ ಕೊಡುಗೆ ಅತ್ಯಮೂಲ್ಯವಾದುದು. ಅವರ ಹೆಸರಿನ ಪ್ರಶಸ್ತಿ ಯುವ ಪೀಳಿಗೆಗೆ ಉನ್ನತಿಯನ್ನು ಸಾಧಿಸಲು ಪ್ರೇರಣೆಯಾಗಬೇಕು ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಆಶಿಸಿದರು.

    ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಎಫ್.ಕೆ.ಸಿ.ಸಿ.ಐ ವತಿಯಿಂದ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಎಂ.ಎಸ್. ರಾಮಯ್ಯ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಆರ್. ಜಯರಾಂ ಅವರಿಗೆ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

    ಕನ್ನಡದಲ್ಲಿಯೇ ತಮ್ಮ ಭಾಷಣವನ್ನು ಪ್ರಾರಂಭಿಸಿದ ಉಪರಾಷ್ಟ್ರಪತಿಗಳು, ದೇಶ ಕಂಡ ಬಹುಮುಖ ಪ್ರತಿಭೆಯ ಅಪರೂಪದ ಮೇಧಾವಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ. ಆಧುನಿಕ ಮೈಸೂರು ನಿರ್ಮಾತೃ, ದೇಶದಲ್ಲಿ ಆಣೆಕಟ್ಟುಗಳನ್ನು ನಿರ್ಮಿಸಿ, ಜಲಸಂಪನ್ಮೂಲದ ಸದ್ಬಳಕೆಯ ಹಾದಿ ತೋರಿದರು. ದೇಶ ಅವರಿಗೆ ಕೃತಜ್ಞವಾಗಿರುತ್ತದೆ ಎಂದು ತಿಳಿಸಿದರು.

    ಭಾರತದ ಯುವ ಜನರು ಅವರಿಂದ ಪ್ರೇರಿತರಾಗಿ, ದೇಶದ ಪ್ರಗತಿಯ ವೇಗ ಹೆಚ್ಚಿಸುವ ಮೂಲಕ ಆತ್ಮ ನಿರ್ಭರ್ ಭಾರತ್ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ಅಭಿವೃದ್ಧಿ ಎಂದರೆ ಕೇವಲ ಸಂಪತ್ತಿನ ಸೃಷ್ಟಿ ಅಲ್ಲ; ಜನರು ಸಂತೋಷದಿಂದ ಬದುಕುವ ವಾತಾವರಣ ನಿರ್ಮಿಸುವುದೂ ಸೇರಿದೆ ಎಂದು ತಿಳಿಸಿದರು.

    ಸರ್ ಎಂ. ವಿಶ್ವೇಶ್ವರಯ್ಯ ನವರ ಸಾಧನೆಗಳು ಮುಂದಿನ ಪೀಳಿಗೆಗೆ ದಾರಿ ದೀಪವಾಗಿದ್ದು, ಪ್ರತಿಯೊಬ್ಬರೂ ಸ್ವತಃ ತಮ್ಮ ಉನ್ನತಿಯೊಂದಿಗೆ ದೇಶದ ಉನ್ನತಿಗಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಸರ್ ಎಂ. ವಿಶ್ವೇಶ್ವರಯ್ಯ ಒಬ್ಬ ಪ್ರತಿಭಾವಂತ ಎಂಜಿನಿಯರ್, ದಕ್ಷ ಆಡಳಿತಗಾರ ಹಾಗೂ ಶ್ರೇಷ್ಠ ದಾರ್ಶನಿಕರಾಗಿದ್ದರು ಎಂದು ಸ್ಮರಿಸಿದರು.

    ಅಂತೆಯೇ ರಾಜ್ಯದ ಕೈಗಾರಿಕೋದ್ಯಮ ಅಭಿವೃದ್ಧಿಗೆ ಎಫ್ ಕೆ ಸಿ ಸಿ ಐ ನೀಡುತ್ತಿರುವ ಕೊಡುಗೆ ಅಪೂರ್ವವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ನಮಗೆ ಮತ್ತೊಬ್ಬ ವಿಶ್ವೇಶ್ವರಯ್ಯ ಬೇಕು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಚಿಂತನೆಗಳು ಇಂದಿಗೂ ಪ್ರಸ್ತುತ. ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಬೆಂಗಳೂರಿನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಖಾನೆಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಮುಂದಾಯಿತು. ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವಾಗಿ ಕರ್ನಾಟಕದಲ್ಲಿ ಕಬ್ಬಿಣ ಮತ್ತು ಉಕ್ಕು, ಸಿಮೆಂಟ್, ಸಾಬೂನು ಹೀಗೆ ಎಲ್ಲ ವಲಯಗಳ ಕೈಗಾರಿಕೆಗಳು ಪ್ರಾರಂಭವಾದವು. ಬ್ಯಾಂಕಿಂಗ್, ಶಿಕ್ಷಣ ಕ್ಷೇತ್ರಗಳಿಗೂ ಅವರ ಕೊಡುಗೆ ಅವಿಸ್ಮರಣೀಯ. ಅವರೊಬ್ಬ ಯುಗಪುರುಷ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.

    ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕವನ್ನು ನಂ. 1 ಸ್ಥಾನಕ್ಕೆ ತರಲು ಇನ್ನಷ್ಟು ಶ್ರಮಿಸುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು ನಮ್ಮ ರಾಜ್ಯಕ್ಕೆ ಇನ್ನೊಬ್ಬ ವಿಶ್ವೇಶ್ವರಯ್ಯನವರ ಅಗತ್ಯವಿದೆ. ಅಂತಹ ಪ್ರತಿಭಾವಂತ ಯುವಕರಿಗೆ ಸರ್ಕಾರ ಅವಕಾಶ ನೀಡುವುದು ಎಂದು ನುಡಿದರು. ಪ್ರಶಸ್ತಿ ಪುರಸ್ಕೃತ ಡಾ. ಎಂ. ಆರ್. ಜಯರಾಂ ಅವರ ಮಾದರಿ ವ್ಯಕ್ತಿತ್ವವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಮುಖ್ಯಮಂತ್ರಿಗಳು, ಎಂ.ಆರ್. ಜಯರಾಂ ಅವರು 1972ರಲ್ಲಿ ಶಾಸಕರಾಗಿದ್ದರು. ತುರ್ತುಪರಿಸ್ಥಿತಿಯ ಹಿನ್ನೆಲೆಯಲ್ಲಿ ಶಾಸಕರ ಅಧಿಕಾರಾವಧಿ ವಿಸ್ತರಿಸಿದಾಗ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇತರರಿಗೆ ಮಾದರಿಯಾದವರು ಎಂದು ಸ್ಮರಿಸಿದರು. ಕೋವಿಡ್ 19 ನಿರ್ವಹಣೆಯ ಸಂದರ್ಭದಲ್ಲಿ ಎಂ.ಆರ್. ಜಯರಾಂ ಅವರು ಸರ್ಕಾರದೊಂದಿಗೆ ಕೈಜೋಡಿಸಿ, ಸಹಕರಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎಂ.ಆರ್. ಜಯರಾಂ, ಈ ಪ್ರಶಸ್ತಿ ತಮಗೆ ಗೌರವ ನೀಡಿರುವುದರೊಂದಿಗೆ ಜವಾಬ್ದಾರಿಯನ್ನು ಹೆಚ್ಚಿಸಿದೆ. ತಮ್ಮೊಂದಿಗೆ ಕೆಲಸ ನಿರ್ವಹಿಸಿ, ಬೆಂಬಲ ನೀಡಿದ ಎಲ್ಲರಿಗೂ ಈ ಸಾಧನೆಯ ಶ್ರೇಯ ಸಲ್ಲಬೇಕು ಎಂದು ನುಡಿದರು.

    ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿಯವರ ಭಾಗವಹಿಸುವಿಕೆ ಕಡಿಮೆ ಇದ್ದ ಸಂದರ್ಭದಲ್ಲಿ ತಾವು ಶಿಕ್ಷಣ ಸಂಸ್ಥೆ ಸ್ಥಾಪಿಸಲು ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಇಂದು 20 ಸಾವಿರ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

    ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಮುಂದಾಗಿರುವುದನ್ನು ಸ್ವಾಗತಿಸಿದ ಅವರು, 2030ರ ವೇಳೆಗೆ ಕರ್ನಾಟಕದ ಒಟ್ಟಾರೆ ದಾಖಲಾತಿ ಅನುಪಾತ ಶೇ. 50ಕ್ಕೇರಿಸಬೇಕಾಗಿದೆ ಎಂದರು.ಮುಖ್ಯಮಂತ್ರಿಯವರು ಘೋಷಿಸಿದ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯ ಕುರಿತು ಸಹ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

    ಕೋವಿಡ್ 19 ಸಂದರ್ಭದಲ್ಲಿ ಎಂ.ಎಸ್ ರಾಮಯ್ಯ ಸಂಸ್ಥೆಯಲ್ಲಿ ಶೇ. 75 ರಷ್ಟು ಬೆಡ್ ಗಳನ್ನು ಕೋವಿಡ್ ಸೋಂಕಿತರಿಗಾಗಿ ಮೀಸಲಿರಿಸಿದ್ದು, ಅದರಲ್ಲಿ ಬಹುಪಾಲು ಸರ್ಕಾರದ ಶಿಫಾರಸಿನ ಮೇರೆಗೆ ದಾಖಲಾದ ರೋಗಿಗಳಿಗೆ ಒದಗಿಸಲಾಗಿತ್ತು ಎಂದು ತಿಳಿಸಿದರು.

    ಸಮಾರಂಭದಲ್ಲಿ ಎಫ್ ಕೆ ಸಿ ಸಿ ಐ ಅಧ್ಯಕ್ಷ ಪೆರಿಕಲ್ ಸುಂದರ್, ಸಂಸದ ಪಿ.ಸಿ. ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

    ಶಾಸಕ ಹರ್ಷವರ್ಧನ್ ಮಾನವೀಯ ಕಾರ್ಯಕ್ಕೆ ಸಿಎಂ ಮೆಚ್ಚುಗೆ

    BENGALURU AUG 18

    ನಂಜನಗೂಡು ಕ್ಷೇತ್ರದ ಶಾಸಕರಾದ ಹರ್ಷವರ್ಧನ ಅವರು ತಮ್ಮ ಕ್ಷೇತ್ರದಲ್ಲಿ ಕೈಗೊಂಡಿರುವ ಮಾನವೀಯ ಕಾರ್ಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಂಸೆ ವ್ಯಕ್ತಪಡಿಸಿದರು‌.

    ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಾಸಕ ಹರ್ಷವರ್ಧನ್ ತಮ್ಮ ಕ್ಷೇತ್ರದ ಕೆಆರ್ ಪುರದಲ್ಲಿ ಜನರು ಕೈಯಿಂದಲೇ ಚರಂಡಿಗಳಲ್ಲಿನ ಹೊಲಸನ್ನು ಹೊತ್ತು ಹಾಕುವ ಅಮಾನವೀಯ ಪದ್ಧತಿ ಕೊನೆಗೊಂಡಿರುವ ಕುರಿತು ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿ ಈ ಕುರಿತು ಮಾಹಿತಿ ಫಲಕವನ್ನು ಮುಖ್ಯಮಂತ್ರಿಗಳಿಗೆ ನೀಡಿದರು. ಶಾಸಕ ಬಿ ಹರ್ಷವರ್ಧನ್ ಅವರ ಮಾನವೀಯ ಕಾರ್ಯಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಶಂಸೆ ವ್ಯಕ್ತಪಡಿಸಿದರು.

    ತಮ್ಮ ಅಜ್ಜ, ಮಾಜಿ ಸಚಿವ ಬಿ ಬಸವಲಿಂಗಪ್ಪ ಅವರು 50 ವರ್ಷಗಳ ಹಿಂದೆ ಮಲಹೊರುವ ಪದ್ಧತಿಯನ್ನು ಅಂತ್ಯಗೊಳಿಸುವ ಕುರಿತು ವಿಧಾನಸೌಧದಲ್ಲಿ ಘೋಷಣೆ ಮಾಡಿದ್ದರು. ಈಗ ತಾವು ಶಾಸಕರಾದ ನಂತರ ಮೊದಲ ಆದ್ಯತೆಯಾಗಿ ಕೆಆರ್ ಪುರದಲ್ಲಿ ಇಂದಿಗೂ ನಡೆದುಕೊಂಡು ಬಂದಿರುವ ಅಮಾನವೀಯ ಪದ್ಧತಿಗೆ ತಿಲಾಂಜಲಿ ನೀಡಿರುವ ಕುರಿತು ಮುಖ್ಯಮಂತ್ರಿಗಳಿಗೆ ಹರ್ಷವರ್ಧನ್ ಮಾಹಿತಿ ನೀಡಿದರು. ಸಮಸ್ಯೆಗಳನ್ನು ನಿವಾರಿಸಿ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದಾಗಿ ಗ್ರಾಮದ ಜನರು ಈಗ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಆರೋಗ್ಯ ಮತ್ತು ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಗ್ರಾಮದ ಜನರಲ್ಲಿ ಸಂತಸ ಮೂಡಿದೆ ಎಂದು ಮುಖ್ಯಮಂತ್ರಿಗಳಿಗೆ ವಿವರಿಸಿದರು.

    ಹರ್ಷವರ್ಧನ ಅವರು ನೀಡಿದ ಸಂಪೂರ್ಣ ಮಾಹಿತಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು. ನಿಮ್ಮ ಕಾರ್ಯ ಶ್ಲಾಘನೀಯ. ಇಡೀ ಕ್ಷೇತ್ರದಲ್ಲಿ ಇಂತಹ ಮಾದರಿ ಕೆಲಸಗಳನ್ನು ಮಾಡುವಂತೆ ಸಲಹೆ ನೀಡಿ ಪ್ರೋತ್ಸಾಹಿಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿ ಹಿಂದೆ ವಿದ್ಯಾರ್ಥಿ ಹಿತ ಮಾತ್ರ; ಇದೇ 23ರಿಂದಲೇ ಪ್ರವೇಶ ಪ್ರಕ್ರಿಯೆ ಆರಂಭ

    BENGALURU AUG 18

    ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಹಿಂದೆ ವಿದ್ಯಾರ್ಥಿ ಹಿತಬಿಟ್ಟು ಯಾವುದೇ ದುರುದ್ದೇಶ ಅಥವಾ ಹಿಡೆನ್ ಅಜೆಂಡಾ ಇಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಇದೇ ತಿಂಗಳ 23ರಿಂದ ಹೊಸ ಶಿಕ್ಷಣ ನೀತಿಯಡಿ ಕಲಿಕೆಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದೆಂದು ಪ್ರಕಟಿಸಿದರು.

    ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ಕ್ರಿಸ್ತು ಜಯಂತಿ ಕಾಲೇಜು ಸಹಯೋಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನ ಕುರಿತು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರವೇಶ ಪ್ರಕ್ರಿಯೆಗೆ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡುವರು ಎಂದರು.

    ವಿರೋಧ ಸರಿಯಲ್ಲ:ಶಿಕ್ಷಣ ನೀತಿಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡದೇ ಅಥವಾ ಅದನ್ನು ಸರಿಯಾಗಿ ಗ್ರಹಿಸದೇ ಟೀಕೆ ಮಾಡುವುದು ಸರಿಯಲ್ಲ. ಶಿಕ್ಷಣ ನೀತಿಯನ್ನು ವಿರೋಧ ಮಾಡುವುದೂ ದೇಶದ ಅಭಿವೃದ್ಧಿಯನ್ನು ವಿರೋಧಿಸುವುದು ಎರಡೂ ಒಂದೇ ಎಂದು ಸಚಿವರು ಅಭಿಪ್ರಾಯಪಟ್ಟರು.

    ವಿಶಾಲ ತಳಹದಿ ಹಾಗೂ ವಿಶಾಲ ದೃಷ್ಟಿಕೋನದಿಂದ ರೂಪಿತವಾಗಿರುವ ಶಿಕ್ಷಣ ನೀತಿಯಲ್ಲಿ ಬಹು ಆಯ್ಕೆಯ ಕಲಿಕೆಗೆ ವಿಪುಲ ಅವಕಾಶವಿದೆ. ಇಷ್ಟು ದಿನ ನಾವು ಹೇಳಿದ್ದನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಮಕ್ಕಳ ಪರಿಪೂರ್ಣ ವಿಕಾಸಕ್ಕೆ ಅವಕಾಶ ಇರಲಿಲ್ಲ. ಇನ್ನು ಮುಂದೆ ಅವರ ಇಚ್ಛೆಯ ವಿಷಯವನ್ನು ಕಲಿಯಲಿದ್ದಾರೆಂದ ಅವರು; ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಇತರೆ ಯಾವುದೇ ಕ್ಷೇತ್ರವೇ ಇರಲಿ ದೇಶ ಎದುರಿಸುತ್ತಿರುವ ಪ್ರತಿಯೊಂದು ಸವಾಲಿಗೂ ಶಿಕ್ಷಣ ನೀತಿಯಲ್ಲಿ ಉತ್ತರವಿದೆ ಎಂದರು.

    ಯಾವುದೇ ದೇಶ, ಯಾವುದೇ ಹಂತದಲ್ಲಿ ಹಾಗೂ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಅದನ್ನು ನಿರಾಯಾಸವಾಗಿ ಬಗೆಹರಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರವೇ ಇದೆ ಎಂಬುದು ನನ್ನ ಅಚಲ ನಂಬಿಕೆ. ಶಿಕ್ಷಣ ಇಲ್ಲದೆ ಅಭಿವೃದ್ಧಿ ಎನ್ನುವುದು ಮರೀಚಿಕೆ. ಆಮೂಲಾಗ್ರ ಮತ್ತು ರಚನಾತ್ಮಕ ಪ್ರಗತಿ ಸಾಧಿಸಬೇಕಿದ್ದರೆ ಶಿಕ್ಷಣಕ್ಕೆ ಒತ್ತು ನೀಡಲೇಬೇಕು. ಈ ನಿಟ್ಟಿನಲ್ಲಿ ಜರ್ಮನಿ, ದಕ್ಷಿಣ ಕೊರಿಯಾ, ಜಪಾನ್ ನಂಥ ಚಿಕ್ಕ ಚಿಕ್ಕ ದೇಶಗಳು ಅದ್ಭುತಗಳನ್ನೇ ಸೃಷ್ಟಿ ಮಾಡಿವೆ ಎಂದರು ಸಚಿವರು.

    ಶಿಕ್ಷಣ ಸಂಸ್ಥೆಗಳನ್ನು ಅತ್ಯುತ್ತಮವಾಗಿ ರೂಪಿಸಬೇಕು. ವಿದ್ಯಾರ್ಥಿ ಕೇಂದ್ರಿತ ವ್ಯವಸ್ಥೆ ಅಲ್ಲಿರಬೇಕು. ಮುಂದಿನ ಅನೇಕ ವರ್ಷಗಳ ಮುನ್ನೋಟ ಇಟ್ಟುಕೊಂಡು ಸಂಸ್ಥೆಗಳನ್ನು ಕಟ್ಟಿ ಬೆಳೆಸಬೇಕು. ಅದಕ್ಕಾಗಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಇಂಥ ಸಂಸ್ಥೆಗಳನ್ನು ಆಮೂಲಾಗ್ರವಾಗಿ ಬೆಳೆಸಲು ನೆರವಾಗಬೇಕು. ಯಾವುದೇ ಶಿಕ್ಷಣ ಸಂಸ್ಥೆಯೂ ಲಾಭ ಗಳಿಕೆಗಾಗಿ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಡಾ.ಅಶ್ವತ್ಥನಾರಾಯಣ ನುಡಿದರು.

    ನಮ್ಮ ದೇಶದ ಜನಸಂಖ್ಯೆ ಈಗ 130 ಕೋಟಿ ಮೀರುತ್ತಿದೆ. ಅದೇ ಪ್ರಮಾಣದಲ್ಲಿ ಸವಾಲುಗಳು, ಅಗತ್ಯಗಳು ಹೆಚ್ಚುತ್ತಿವೆ. ಇವೆಲ್ಲವನ್ನೂ ಎದುರಿಸಿ ಗೆಲ್ಲಬೇಕಾದರೆ ನಮಗೆ ಎದುರಿಗಿರುವ ಏಕೈಕ ಸಾಧನವೆಂದರೆ ಶಿಕ್ಷಣ ಮಾತ್ರ ಎಂದು ಸಚಿವರು ಪ್ರತಿಪಾದಿಸಿದರಲ್ಲದೆ, ಶಿಕ್ಷಣ ನೀತಿ ಜಾರಿ ದಿಕ್ಕಿನಲ್ಲಿ ಇಂಥ ಅತ್ಯುತ್ತಮ ವಿಚಾರ ಸಂಕಿರಣವನ್ನು ಮೊತ್ತ ಮೊದಲು ಆಯೋಜಿಸಿದ ಬೆಂಗಳೂರು ಉತ್ತರ ವಿವಿ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

    ಕ್ರಿಸ್ತು ಜಯಂತಿ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಡಾ.ಅಗಸ್ಟೀನ್ ಜಾರ್ಜ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಡಿ.ಕುಮುದಾ, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಮಾತನಾಡಿದರು.
    ಬೆಂಗಳೂರು ಉತ್ತರ ವಿವಿ ರಿಜಿಸ್ಟ್ರಾರ್ ಡಾ.ವಿ.ವೆಂಕಟೇಶ ಮೂರ್ತಿ, ಕ್ರಿಸ್ತು ಜಯಂತಿ ಕಾಲೇಜಿನ ಡೀನ್ ಡಾ.ಜೆ.ಅಲೋಶಿಯಸ್ ಎಡ್ವರ್ಡ್ ಮುಂತಾದವರು ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದರು.

    ಆಪ್ಘಾನಿಸ್ತಾನ: ಭಾರತದ ಮುಂದಿನ ಹೆಜ್ಜೆ ಏನು ?

    ತಾಲಿಬಾನ್‌ಗಳ ಎಂಟ್ರಿಯೊಂದಿಗೆ ದಿಕ್ಕೆಟ್ಟಿರುವ ಆಪ್ಘಾನಿಸ್ತಾನದಿಂದ ಭಾರತೀಯ ರಾಯಭಾರ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಅಷ್ಟೇ ಅಲ್ಲದೆ, ರಾಯಭಾರಿಯನ್ನೂ ವಾಪಸ್‌ ಕರೆಸಿಕೊಂಡಿದೆ. ಹಾಗಾದರೆ, ಭಾರತದ ಮುಂದಿನ ಹೆಜ್ಜೆ ಏನು?ಎಲ್ಲ ಸಿಬ್ಬಂದಿಯನ್ನು ಸುರಕ್ಷಿತವಾಗಿ ಏರ್‌ಲಿಫ್ಟ್‌ ಮಾಡಲಾಗಿದ್ದು, 120ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊತ್ತ ಭಾರತೀಯ ಯುದ್ಧ ವಿಮಾನ ಗುಜರಾತ್‌ನ ಜಾಮ್‌ ನಗರದ ವಾಯುನೆಲೆಯಲ್ಲಿ ಲ್ಯಾಂಡ್ ಆಗಿದೆ.

    ಕಾಬೂಲ್ ನಗರವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಕೂಡಲೇ ಎಚ್ಚೆತ್ತ ಕೇಂದ್ರ ಸರಕಾರವು ಕೂಡಲೇ ಕಾಬೂಲ್‌, ಕಂದಹಾರ್‌, ಜಲಲಾಬಾದ್‌ ಮುಂತಾದ ಕಡೆ ಇದ್ದ ರಾಯಭಾರ ಸಿಬ್ಬಂದಿಯನ್ನು ತೆರವು ಮಾಡಲಾಗಿದ್ದು, ಅವರೆಲ್ಲರೂ ಈಗ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.

    ಭಾರತೀಯ ವಾಯುಪಡೆಯ ಸಿ-17ವಿಮಾನ ಜಾಮ್‌ ನಗರದ ವಾಯುನೆಲೆಗೆ ಬಂದಿಳಿಯುತ್ತಿದ್ದಂತೆಯೇ ಎಲ್ಲ ಸಿಬ್ಬಂದಿ ರೋಮಾಂಚನಗೊಂಡರು. ವಿಮಾನದಿಂದ ಇಳಿದು ಹೊರ ಬರುತ್ತಿದ್ದಂತೆಯೇ ಭಾರತ್‌ ಮಾತಾಕೀ ಜೈ, ವಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗಿದರು. ವಾಯುನೆಲೆಯಲ್ಲೇ ಎಲ್ಲ ರಾಯಭಾರ ಸಿಬ್ಬಂದಿಯ ಆರೋಗ್ಯವನ್ನೂ ತಪಾಸಣೆ ಮಾಡಲಾಗಿದೆ.

    ಆಪ್ಘಾನಿಸ್ತಾನದಿಂದ ಎರಡು ವಿಮಾನಗಳಲ್ಲಿ ಭಾರತೀಯ ಅಧಿಕಾರಿಗಳು ವಾಪಸ್‌ ಆಗಿದ್ದು, ಅಲ್ಲಿಗೆ ಆ ದೇಶದಲ್ಲಿದ್ದ ಎಲ್ಲ ಅಧಿಕಾರಿಗಳು ತಾಯ್ನಾಡಿಗೆ ಮರಳಿದ್ದಾರೆಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದನ್ ಬಗ್ಚಿ ಅವರು ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದು, ಸದ್ಯದ ಅಪ್ಘಾನಿಸ್ತಾನದ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲವನ್ನೂ ಅವಲೋಕನ ಮಾಡಿ ರಾಯಭಾರಿಯನ್ನೂ ಭಾರತ ವಾಪಸ್‌ ಕರೆಸಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

    ಹಾಗಾದರೆ, ಆಫ್ಘಾನಿಸ್ತಾನದ ಬಗ್ಗೆ ಭಾರತದ ಮುಂದಿನ ಹೆಜ್ಜೆ ಏನು? ಎಂಬುದೇ ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

    ರಾಯಭಾರ ಕಚೇರಿಯನ್ನು ಮುಚ್ಚಿದ ಮಾತ್ರಕ್ಕೆ ಆ ದೇಶದ ಜತೆ ಎಲ್ಲವನ್ನೂ ಕಡಿದುಕೊಂಡ ಹಾಗಲ್ಲ ಎಂದು ಕಾಬೂಲ್‌ನಲ್ಲಿದ್ದ ಭಾರತದ ರಾಯಭಾರಿ ರುದ್ರೇಂದ್ರ ಟಂಡನ್ ಹೇಳಿದ್ದು, ಹೊಸ ಆಡಳಿತದ ಜತೆ ನಮ್ಮ ಮಾತುಕತೆಯನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಇಡೀ ಜಾಗತಿಕ ಸಮುದಾಯ ತಾಲಿಬಾಣಿಗಳನ್ನು ಸಂಶಯದ ದೃಷ್ಟಿಯಲ್ಲಿ ನೋಡುತ್ತಿದ್ದರೆ, ಚೀನಾ, ರಷ್ಯ, ಇರಾನ್ ಮತ್ತು ಪಾಕಿಸ್ತಾನದಂಥ ಕೆಲ ದೇಶಗಳು ವಿರುದ್ಧ ದಿಕ್ಕಿನಲ್ಲಿವೆ. ಇದು ಭಾರತದ ಕಳವಳಕ್ಕೆ ಕಾರಣವಾಗಿದೆ. ಸದ್ಯದ ಆಫ್ಘಾನಿಸ್ತಾನದ ಸ್ಥಿತಿಯಲ್ಲಿ ಅಮೆರಿಕ ಪರವಾಗಿ ನಿಲ್ಲಬೇಕೋ ಅಥವಾ ರಷ್ಯ-ಚೀನಾದ ನಿಲುವಿಗೆ ಹೊಂದಿಕೊಳ್ಳಬೇಕೋ ಎಂಬ ಸಂದಿಗ್ಧದಲ್ಲಿದೆ. ಬಹುಶಃ ಒಂದು ವಾರದವರೆಗೆ ಪರಿಸ್ಥಿತಿಯನ್ನು ಅವಲೋಕನ ಮಾಡಿ ಕೇಂದ್ರ ಸರಕಾರ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

    ವರದಿ ನೀಡಿದ್ದ ರಾಯಭಾರಿ

    ನಿನ್ನೆ ಬೆಳಗ್ಗೆಯಿಂದಲೇ ಕಾಬೂಲ್‌ನಲ್ಲಿ ನಡೆದ ಘಟನಾವಳಿಗಳ ಬಗ್ಗೆ ಭಾರತಕ್ಕೆ ಸಮಗ್ರ ಮಾಹಿತಿ ನೀಡಿದ್ದ ಅಲ್ಲಿನ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್, ಆ ದೇಶದ ಅಧ್ಯಕ್ಷ ಅಶ್ರಫ್‌ ಘನಿ ದೇಶದಿಂದ ಪಲಾಯನ ಮಾಡಿದ ನಂತರ ಉಂಟಾದ ಕ್ಷೋಭೆಯ ಬಗ್ಗೆಯೂ ವರದಿ ನೀಡಿದರು. ಇದಲ್ಲದೆ, ಪಾಕಿಸ್ತಾನ, ಚೀನಾ ಮತ್ತು ಇರಾನ್‌ ಕುಮ್ಮಕ್ಕಿನಿಂದ ದೇಶದ ವಿವಿಧ ಜೈಲುಗಳಲ್ಲಿ ಇದ್ದ ಉಗ್ರರನ್ನು ಬಿಡುಗಡೆ ಮಾಡಿದ ಮೇಲೆ ಉಂಟಾಗಿರುವ ಆತಂಕದ ಬಗ್ಗೆಯೂ ಅವರು ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿದ್ದರು.

    ಈ ಎಲ್ಲ ಅಂಶಗಳನ್ನು ಪರಿಶೀಲನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿದೇಶಾಂಗ ಸಚಿವ ಜೈ ಶಂಕರ್‌ ಹಾಗೂ ಗೃಹ ಸಚಿವ ಅಮಿತ್‌ ಶಾ ಜತೆ ಚರ್ಚೆ ನಡೆಸಿ ಆ ದೇಶದಿಂದ ರಾಯಭಾರಿಯನ್ನೇ ವಾಪಸ್‌ ಕಡೆಸಿಕೊಳ್ಳಲು ನಿರ್ಧರಿಸಿದರು ಎಂಬುದಾಗಿ ಉನ್ನತ ಮೂಲಗಳು ತಿಳಿಸಿವೆ.

    ತಾಲಿಬಾನಿಗಳ ಮೇಲೆ ಅಮೆರಿಕ ನಿಗಾ

    ಆಪ್ಘಾನಿಸ್ತಾನದಿಂದ ತನ್ನ ಸೇನಾಪಡೆಯನ್ನು ವಾಪಸ್‌ ಕರೆಸಿಕೊಂಡ ನಂತರ ಆ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತೀವ್ರ ನಿಗಾ ಇಟ್ಟಿರುವ ಅಮರಿಕ, ಕಾಬೂಲ್‌ನಲ್ಲಿ ನಡೆಯುತ್ತಿರುವ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.

    ಅಮೆರಿಕ ಅಧ್ಯಕ್ಷ ಜೋ ಬೈಡನ್‌ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರವೂ ಆಪ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಎಲ್ಲ ಘಟನೆಗಳನ್ನು ಅಮೆರಿಕ ವಿದೇಶಾಂಗ ಇಲಾಖೆ ಹಾಗೂ ರಕ್ಷಣಾ ಕಚೇರಿ ಪೆಂಟಗನ್‌ ಜಂಟಿಯಾಗಿ ಅವಲೋಕನ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸೈನಿಕರನ್ನು ವಾಪಸ್‌ ಕರೆಸಿಕೊಂಡು ಅಮೆರಿಕ ರಕ್ಷಣಾತ್ಮಕ ಆಟವಾಡುತ್ತಿದೆಯಾ ಅಥವಾ ಇನ್ನೇನಾದರೂ ಹೊಸ ತಂತ್ರಗಾರಿಕೆ ಹೂಡಿದೆಯಾ ಎನ್ನುವ ಅನುಮಾನ ಸ್ವತಃ ತಾಲಿಬಾನ್‌ ಹಾಗೂ ಆ ಉಗ್ರ ಸಂಘಟನೆಯನ್ನು ಬೆಂಬಲಿಸುತ್ತಿರುವ ದೇಶಗಳನ್ನು ಕಾಡುತ್ತಿದೆ.

    ದೇಶವನ್ನು ಉದ್ದೇಶಿಸಿ ಮಾತನಾಡಿದ ನಂತರ ಅಧ್ಯಕ್ಷ ಬೈಡನ್‌, ಆಪ್ಘಾನ್‌ ಪರಿಸ್ಥಿತಿಯ ಬಗ್ಗೆ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್, ರಕ್ಷಣಾ ಕಾರ್ಯದರ್ಶಿ ಲಿಯೋಡ್‌ ಆಸ್ಟಿನ್‌, ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್‌ ಜತೆ ಮಹತ್ವದ ಮಾತುಕತೆ ನಡಸಿದ್ದಾರೆ.

    error: Content is protected !!