ಸೋದರರೊಳ್ ಸೋದರಂ ಕಾದಿಸುವುದು – ‘ಆದಿಕವಿ’ ಪಂಪನ ‘ಆದಿಪುರಾಣ’ ಕಾವ್ಯದಲ್ಲಿ ಈ ಸಾಲು ಉಲ್ಲೇಖವಾಗಿದೆ. ಪಂಪ ಬಾಹುಬಲಿಯಿಂದ ಈ ಮಾತುಗಳನ್ನಾಡಿಸಿದ್ದಾನೆ.
ಭರತನ ಚಕ್ರವರ್ತಿ ಪ್ರಯೋಗಿಸಿದ ಚಕ್ರರತ್ನವು ಬಾಹುಬಲಿಯನ್ನು ಏನೂ ಮಾಡದೆ ಆತನನ್ನು ಪ್ರದಕ್ಷಿಣೆ ಹಾಕಿ ಆತನ ಬಲಭಾಗದಲ್ಲಿ ಬಂದು ನಿಲ್ಲುತ್ತದೆ. ಆ ಸಂದರ್ಭದಲ್ಲಿ ಭರತನನ್ನು ಸೋಲಿಸಬೇಕೆಂದು ಆತನನ್ನು ಗಿರಗಿರನೆ ತಿರುಗಿಸಿ ಎಸೆಯಬೇಕು ಎನ್ನುವಷ್ಟರಲ್ಲಿ ಬಾಹುಬಲಿಗೆ ಜ್ಷಾನೋದಯವಾಗುತ್ತದೆ.
ಆ ಸಂದರ್ಭದಲ್ಲಿ ಬಾಹುಬಲಿ ಅಣ್ಣನ ಪರಿಸ್ಥಿತಿಯನ್ನು ನೋಡಿ ಛೆ! ನನ್ನಿಂದ ಈ ತಪ್ಪು ಆಗಬಾರದಿತ್ತು ಎಂದು ಭಾವಿಸುತ್ತಾನೆ. ರಾಜ್ಯವ್ಯಾಮೋಹ ಅರ್ಥಾತ್ ಲಕ್ಷ್ಮಿಯ ಮೇಲಿನ ವ್ಯಾಮೋಹ ಏನೆಲ್ಲಾ ಕೆಡುಕುಗಳನ್ನು ಮಾಡಿಸುತ್ತದೆ. ತಂದೆ ಮಕ್ಕಳ ನಡುವೆ ಅಣ್ಣ ತಮ್ಮಂದಿರ ನಡುವೆ ಭಿನ್ನಾಭಿಪ್ರಾಯವನ್ನು ಮೂಡಿಸುತ್ತದೆ. ಈಕೆ ಚಂಚಲೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಸದಾ ವಿಭ್ರಮಿಸುತ್ತಿರುತ್ತಾಳೆ ಒಂದು ವೇಳೆ ನಾನು ಸಿಂಹಾಸನವನ್ನು ಸ್ವೀಕರಿಸಿ ಇಂಥ ಚಂಚಲೆಯೊಂದಿಗೆ ಅದು ಹೇಗೆ ರಾಜ್ಯಭಾರ ಮಾಡಲು ಸಾಧ್ಯ ಎಂದು ಲಕ್ಷ್ಮಿಯ ಚಂಚಲತೆಯ ಬಗ್ಗೆಅಸಮಾಧಾನ ವ್ಯಕ್ತಪಡಿಸುತ್ತಾನೆ.
ಹಣ ಪ್ರತಿಯೊಬ್ಬರ ಆವಶ್ಯಕತೆ ಆದರೆ ಮೀತಿ ಮೀರಿ ಲಕ್ಷ್ಮಿಗಾಗಿ ಆಸೆ ಪಡುವುದು ತಪ್ಪು . ಮಿತಿಮೀರಿದ ಸಂಪತ್ತು ನೆಮ್ಮದಿಗೆ ಭಂಗವನ್ನು , ಬಂಧುತ್ತವಕ್ಕೆ ತೊಡಕನ್ನು ಮಿಗಿಲಾಗಿ ನಮ್ಮ ಮನಃಶಾಂತಿಯನ್ನು ಅಪಹರಿಸುತ್ತದೆ. ಹಾಗಾಗಿ ಲಕ್ಷ್ಮಿಯ ಬಗ್ಗೆ ಲಕ್ಷ್ಯ ವಹಿಸುವುದಕ್ಕಿಂತ ಇತರ ಕಾರ್ಯಗಳಲ್ಲಿ ಮಗ್ನವಾಗುವುದು ಉತ್ತಮ. ಲಕ್ಷ್ಮಿ ಸಮಯಕ್ಕೆ ಒದಗಿ ಹೇಗೆ ಬಂಧುವಾಗುತ್ತಾಳೋ ಹಾಗೆ ಆಕೆಯ ಮೇಲಿನ ಅತೀವ್ಯಾಮೋಹ ಮಗ್ಗುಲ ಮುಳ್ಳೂ ಹೌದು. ವಾಸ್ತವ ಲೋಕನೀತಿಯನ್ನು ಪಂಪ ಹತ್ತನೆ ಶತಮಾನದಲ್ಲಿಯೇ “ಸೋದರರೊಳ್ ಸೋದರಂ ಕಾದಿಸುವುದು “ ಎಂಬ ಮಾತಿನ ಮೂಲಕ ಹೇಳಿರುವುದು ಸಾರ್ವಕಾಲಿಕವಾಗಿದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ.ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
*ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಸಿಎಂ ಬೊಮ್ಮಾಯಿ ಅವರಿಂದ ಅಡ್ಮಿಷನ್ ಪ್ರಕ್ರಿಯೆಗೆ ಚಾಲನೆ
*ಸೋಮವಾರ ಬೆಳಗ್ಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ʼನಲ್ಲಿ ಕಾರ್ಯಕ್ರಮ
*ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಕೂಡ ಉದ್ಘಾಟನೆ *
*ಯುಜಿಸಿ ಮಾರ್ಗಸೂಚಿಯಂತೆ ಅಕ್ಟೋಬರ್ʼನಿಂದ ತರಗತಿ
*ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಯಾವ ಧಕ್ಕೆಯೂ ಆಗದು
*ಅತಿಥಿ ಉಪನ್ಯಾಸಕರ ಕೆಲಸಕ್ಕೆ ತೊಂದರೆ ಇಲ್ಲ
BENGALURU AUG 21
ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಕಲಿಕೆಗೆ ನಾಳೆಯಿಂದಲೇ (ಅಗಸ್ಟ್ 23) ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು. ಅಕ್ಟೋಬರ್ 1ರಿಂದಲೇ ಈ ತರಗತಿಗಳು ಆರಂಭವಾಗುತ್ತವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದರು.
ಇಡೀ ದೇಶದಲ್ಲಿಯೇ ಶಿಕ್ಷಣ ನೀತಿಯನ್ನು ಎಲ್ಲರಿಗಿಂತ ಮೊದಲೇ ಜಾರಿ ಮಾಡುತ್ತಿರುವ ರಾಜ್ಯವೂ, ನೂತನ ಶಿಕ್ಷಣದ ನೀತಿಯ ಕಲಿಕೆಗೂ ಇತರೆ ರಾಜ್ಯಗಳಿಗಿಂತ ಮೊದಲೇ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುತ್ತಿದೆ ಎಂದರು ಅವರು.
ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯ ಬಗ್ಗೆ ಬಿಜೆಪಿಯ ರಾಜ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠವು ಬೆಂಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ವರ್ಚುವಲ್ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಸಚಿವರು; “ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವರ್ಚುವಲ್ ವೇದಿಕೆ ಮೂಲಕ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ” ಎಂದರು.
ಅಧಿಕೃತವಾಗಿ ನಾಳೆಯಿಂದಲೇ ಉನ್ನತ ಶಿಕ್ಷಣ ವಿಭಾಗಕ್ಕೆ ಸಂಬಂಧಿಸಿದ ಎಲ್ಲ ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆರಂಭವಾಗುತ್ತದೆ. ಈ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲೇ ತಮ್ಮ ಆಯ್ಕೆಯ ಪಠ್ಯವನ್ನು ವ್ಯಾಸಂಗ ಮಾಡುವರು. ಅಕ್ಟೋಬರ್ ನಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬೇಕಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದರು.
ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ
ಇದರ ಜತೆಯಲ್ಲಿಯೇ ನಾಳೆ ದಿನವೇ ರಾಜ್ಯ ಸರಕಾರ ಮಹತ್ವಾಕಾಂಕ್ಷಿ ಯೋಜನೆಯಾದ ʼಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆʼ ಎಂಬ ವಿದ್ಯಾರ್ಥಿಗಳ ದಾಖಲಾತಿ ವ್ಯವಸ್ಥೆಯೂ ಲೋಕಾರ್ಪಣೆಯಾಗುತ್ತಿದೆ. ಸರಕಾರಿ ಕಾಲೇಜು ಮಾತ್ರವಲ್ಲ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲೂ ಈ ವ್ಯವಸ್ಥೆಯಲ್ಲೇ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಇದು ಸಂಪೂರ್ಣವಾಗಿ ವೆಬ್ ಆಧಾರಿತವಾಗಿ ಆನ್ ಲೈನ್ ನಲ್ಲಿಯೇ ಅಡ್ಮಿಷನ್ ನಡೆಯುತ್ತದೆ. ಯಾವ ವಿದ್ಯಾರ್ಥಿ ಯಾವ ಕಾಲೇಜಿನಲ್ಲಿ ದಾಖಲಾಗಿದ್ದಾರೆ? ಯಾವ ಕೋರ್ಸು ತೆಗೆದುಕೊಂಡಿದ್ದಾರೆ? ಇತ್ಯಾದಿ ವಿಷಯಗಳ ಮಾಹಿತಿ ಸಂಪೂರ್ಣವಾಗಿ ಆಯಾ ವಿವಿ ಬಳಿ ಇರುತ್ತದೆ ಎಂದ ಅವರು, ಅದೇ ವಿದ್ಯಾರ್ಥಿಗಳೂ ಎಲ್ಲ ಮಾಹಿತಿಯನ್ನು ವೆಬ್ ಮೂಲಕವೇ ಪಡೆಯಬಹುದು ಎಂದರು ಅವರು.
ಯುಜಿಸಿ ಮಾರ್ಗಸೂಚಿ ಪ್ರಕಾರ ತರಗತಿ
ಕೇಂದ್ರದ ಧನ ಸಹಾಯ ಆಯೋಗ (ಯುಜಿಸಿ) ಮಾರ್ಗಸೂಚಿ ಪ್ರಕಾರವೇ ಅಕ್ಟೋಬರ್ 1ರಿಂದಲೇ ತರಗತಿಗಳನ್ನು ಆರಂಭ ಮಾಡಲು ಸರಕಾರ ನಿರ್ಧರಿಸಿದೆ. ಎಲ್ಲ ವಿವಿಗಳಿಗೂ ಇದು ಅನ್ವಯ ಆಗುತ್ತದೆ. ಅಷ್ಟರೊಳಗೆ ವಿದ್ಯಾರ್ಥಿಗಳು ಆಯಾ ಶಿಕ್ಷಣ ಸಂಸ್ಥೆಯಲ್ಲಿ ದಾಖಲಾತಿ ಮುಗಿಸಿಕೊಂಡು ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಮಾಡಬೇಕು. ಎಲ್ಲವನ್ನೂ ತಂತ್ರಜ್ಞಾನದ ನೆರವಿನಿಂದಲೇ ಮಾಡುತ್ತಿರುವುದರಿಂದ ವಿಳಂಬ ಆಗುವುದಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಶಿಕ್ಷಣ ನೀತಿಯಲ್ಲಿ ಕನ್ನಡ ಬೋಧನೆ ಮತ್ತು ಕಲಿಕೆಗೆ ಧಕ್ಕೆ ಉಂಟಾಗುತ್ತದೆ ಎಂದು ಕೆಲವರು ಹುಯಿಲೆಬ್ಬಿಸುತ್ತಿದ್ದಾರೆ. ಅಂಥದ್ದೇನೂ ಆಗುತ್ತಿಲ್ಲ. ಮೊದಲು ಒಂದು ವರ್ಷ ಮಾತೃಭಾಷೆ ಕಲಿಸುವ ಅಂಶವಿತ್ತು. ರಾಜ್ಯ ಸರಕಾರ ಅದನ್ನು ಎರಡು ವರ್ಷಗಳಿಗೆ ವಿಸ್ತರಿಸಿದೆ. ಎರಡು ವರ್ಷ ವಿದ್ಯಾರ್ಥಿ ಕಡ್ಡಾಯವಾಗಿ ತನ್ನ ಮಾತೃಭಾಷೆಯನ್ನು ವ್ಯಾಸಂಗ ಮಾಡಬೇಕಾಗುತ್ತದೆ. ಕನ್ನಡದ ವಿದ್ಯಾರ್ಥಿಗಳಿಗೂ ಇದು ಅನ್ವಯ ಆಗುತ್ತದೆ ಎಂದು ಅವರು ಹೇಳಿದರು.
ಅತಿಥಿ ಉಪನ್ಯಾಸಕರಿಗೆ ಸಮಸ್ಯೆ ಇಲ್ಲ
ಶಿಕ್ಷಣ ನೀತಿ ಜಾರಿ ನಂತರ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಯಾರನ್ನೂ ತೆಗದು ಹಾಕುವ ಪ್ರಮೇಯ ಇಲ್ಲ. ಬದಲಿಗೆ ಇನ್ನೂ ಹೆಚ್ಚಿನ ಪ್ರಮಾಣದ ಬೋಧಕರು ಅಗತ್ಯವಿದ್ದಾರೆ. ಈ ಅಂಶವನ್ನು ಎಲ್ಲರೂ ಮನಗಾಣಬೇಕು ಎಂದು ಸಚಿವರು ಹೇಳಿದರು.
ಗೊಂದಲ ನಿರ್ಮಾಣ ಮಾಡುವುದು ಬೇಡ
ಕೆಲ ರಾಜಕೀಯ ಪಕ್ಷಗಳು ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಅನಗತ್ಯ ಗೊಂದಲ ಉಂಟು ಮಾಡುವ ಕೆಲಸ ಮಾಡುತ್ತಿವೆ. ವಿರೋಧಿಗಳೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಮಾದರಿಯಲ್ಲಿ ನೀತಿಯನ್ನು ವ್ಯವಸ್ಥಿತವಾಗಿ ಜಾರಿಗೆ ತರುವ ಕೆಲಸ ಆಗುತ್ತಿದೆ. ನರೇಂದ್ರ ಮೋದಿ ಅವರ ದೂರದೃಷ್ಟಿ ಫಲವಾಗಿ ಈ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಭಾರತ ವಿಶ್ವಗುರುವಾಗುವತ್ತ ಭಾರತದ ದಾಪುಗಾಲಿಟ್ಟಿದ್ದು, ಅದಕ್ಕೆ ಪೂರಕವಾಗಿ ಶಿಕ್ಷಣ ನೀತಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಸಮಾಜದ ದೃಷ್ಟಿಯಿಂದ ಮಾತ್ರವಲ್ಲದೆ, ವೈಯಕ್ತಿಕ ನೆಲೆಗಟ್ಟಿನಲ್ಲೂ ನಾವು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಶಿಕ್ಷಣದಲ್ಲೇ ಉತ್ತರವಿದೆ. ಶಿಕ್ಷಣ ಮತ್ತು ಕೌಶಲ್ಯತೆ ಒಟ್ಟಿಗಿದ್ದರೆ ಅದ್ಭುತಗಳನ್ನೇ ಸೃಷ್ಟಿ ಮಾಡಬಹುದು. ನಮ್ಮ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಸರಿ ಇಲ್ಲ ಅಂತಲ್ಲ. ಆದರೆ, ಅದರಲ್ಲಿನ ನ್ಯೂನತೆಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ನಡೆದಿರಲಿಲ್ಲ. ಆ ನ್ಯೂನತೆಗಳನ್ನು ಹೋಗಲಾಡಿಸಿ ನೀತಿ ನಿಯಮಗಳಿಗೆ ಒಳಪಟ್ಟು ಶಿಕ್ಷಣವನ್ನು ಕಲಿಸಲಾಗುವುದು. ಈ ಎಲ್ಲ ವಿಷಯಗಳನ್ನು ನಾವು ಜನರಿಗೆ ಮುಟ್ಟಿಸಬೇಕಾಗಿದೆ ಎಂದು ಸಚಿವರು ಹೇಳಿದರು.
ಶ್ರಾವಣ ಮಾಸದ ಹುಣ್ಣಿಮೆಯ ದಿನವನ್ನು ಭಾರತೀಯ ಸಂಸ್ಕೃತಿಯಲ್ಲಿ ನೂಲು ಹುಣ್ಣಿಮೆ ಅಥವಾ ರಕ್ಷಾಬಂಧನದ ದಿನ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ.
ಈ ದಿನ ಪ್ರತಿಯೊಬ್ಬ ಸಹೋದರಿಯೂ ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಕೈಗೆ ರಾಖಿಯನ್ನು ಕಟ್ಟುತ್ತಾಳೆ. ಹಾಗೆ ಕಟ್ಟುವಾಗ ಆಕೆ ಈ ಶ್ಲೋಕವನ್ನು ಪಠಿಸುತ್ತಾಳೆ; ಏನ ಬದ್ಧೋ ಬಲಿರಾಜಾ ದಾನವೇಂದ್ರೋ ಮಹಾಬಲಃ, ತೇನ ತ್ವಾಮಪಿ ಬಧ್ನಾಮಿ ರಕ್ಷೆ ಮಾ ಚಲ ಮಾ ಚಲ’’. ಅಂದರೆ,ಮಹಾಬಲಿ ಮತ್ತು ಮಹಾದಾನಿಯಾದ ಬಲಿರಾಜನು ಯಾವುದರಿಂದ ಬಂಧಿತನಾದನೋ, ಅದೇ ರಕ್ಷೆಯನ್ನು ನಾನು ನಿನಗೆ ಕಟ್ಟುತ್ತಿದ್ದೇನೆ. ಹೇ ರಾಖಿಯೇ ನೀನು ವಿಚಲಿತಳಾಗಬೇಡ’’ ಎಂದರ್ಥ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತೃತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾ ಬಂಧನ ಹಬ್ಬದ ನೀತಿಯಾಗಿದೆ.
ಪುರಾಣ ಕಥೆ:ವಿಷ್ಣು ಭಾಗವತದಲ್ಲಿನ ವಾಮನ ಪುರಾಣ ವಿಭಾಗದಲ್ಲಿ ಈ ರಕ್ಷಾ ಬಂಧನಕ್ಕೆ ಸಂಬಂಧಿಸಿದ ಕಥೆಯೊಂದು ಕಂಡು ಬರುತ್ತದೆ. ಅಸುರ ಚಕ್ರವರ್ತಿ ಮಹಾಬಲಿ ವಿಷ್ಣುವಿನ ಪರಮ ಭಕ್ತ. ಆತನ ಮಹಾಭಕ್ತಿಗೆ ಪರವಶನಾಗಿದ್ದ ವಿಷ್ಣು ಬಲಿಯ ಸಾಮ್ರಾಜ್ಯವನ್ನು ರಕ್ಷಿಸುವುದಕ್ಕಾಗಿ ತನ್ನ ವೈಕುಂಠವನ್ನೇ ತೊರೆದು ಪಾತಾಳಕ್ಕೆ ಬರುತ್ತಾನೆ. ಇದರಿಂದ ವಿಷ್ಣುವಿನ ಪತ್ನಿ ಲಕ್ಷ್ಮಿದೇವಿಗೆ ಬಹಳ ಬೇಸರ ಉಂಟಾಯಿತು. ವಿಷ್ಣು ಸದಾ ತನ್ನ ಜೊತೆಗೆ ಇರಬೇಕೆಂದು ಲಕ್ಷ್ಮಿದೇವಿ ಬಯಸಿದಳು. ಆದ್ದರಿಂದ ಆಕೆ ಬ್ರಾಹ್ಮಣ ಸ್ತ್ರೀಯ ವೇಷ ಧರಿಸಿ ಬಲಿಯ ಅರಮನೆಯನ್ನು ಪ್ರವೇಶಿಸಿ, ಅಲ್ಲಿ ಆಶ್ರಯ ಪಡೆದಳು.
ಶ್ರಾವಣ ಪೂರ್ಣಿಮೆಯಂದು ಆಕೆ ಬಲಿಯ ಕೈಗೆ ರಾಖಿಯನ್ನು ಕಟ್ಟಿದಳು. ತಾನು ಯಾರು ಮತ್ತು ಯಾಕಾಗಿ ಅಲ್ಲಿದ್ದೇನೆ ಎಂದು ಬಲಿಗೆ ವಿವರಿಸಿದಳು. ಬಲಿಗೆ ವಿಷ್ಣು, ಲಕ್ಷ್ಮಿ ದಂಪತಿಗಳು ತನ್ನ ಮೇಲಿಟ್ಟಿರುವ ಅಭಿಮಾನವನ್ನು ಕಂಡು ಮನತುಂಬಿ ಬಂತು. ಲಕ್ಷ್ಮಿದೇವಿಯ ಜೊತೆ ವೈಕುಂಠಕ್ಕೆ ಹೋಗುವಂತೆ ಬಲಿ ವಿಷ್ಣುವನ್ನು ವಿನಂತಿಸಿದನು. ಸಹೋದರಿಯರನ್ನು ಶ್ರಾವಣ ಪೂರ್ಣಿಮೆಯ ದಿನ ಆಹ್ವಾನಿಸಿ, ರಾಖಿ ಕಟ್ಟುವ ಸಂಪ್ರದಾಯ ಅಂದಿನಿಂದ ಆರಂಭವಾಯಿತೆಂದು ಹೇಳುತ್ತಾರೆ.
ದ್ವಾಪರ ಯುಗದಲ್ಲಿ ಇಂದ್ರಪ್ರಸ್ಥದಲ್ಲಿ ರಾಜಸೂಯ ಯಾಗ ನಡೆಯುವಾಗ ದುಷ್ಟನಾದ ಶಿಶುಪಾಲನು ಶ್ರೀಕೃಷ್ಣನನ್ನು ನಿಂದಿಸಿದಾಗ ಕೃಷ್ಣನು ಅವನನ್ನು ಕೊಂದು ಹಾಕಿದನು. ಆಗ ಕೃಷ್ಣನ ಬೆರಳಿಗೆ ಚಕ್ರಾಯುಧದಿಂದ ಗಾಯವಾಗಿ ರಕ್ತ ಸುರಿಯತೊಡಗಿತು. ಕೃಷ್ಣನ ಪತ್ನಿಯರ ಸಹಿತ ಎಲ್ಲರೂ ಗಾಭರಿಯಿಂದ ಸುಮ್ಮನೇ ನೋಡುತ್ತಿರುವಾಗ, ಕೂಡಲೇ ದ್ರೌಪದಿಯು ತನ್ನ ಸೀರೆಯ ಸೆರಗನ್ನು ಹರಿದು ಅದನ್ನು ಕೃಷ್ಣನ ಬೆರಳಿಗೆ ಸುತ್ತಿ ಸುರಿಯುತ್ತಿದ್ದ ರಕ್ತವನ್ನು ನಿಲ್ಲಿಸಿದಳು. ಆಕೆಯು ತನ್ನ ಮೇಲಿರುವ ಗೌರವ ಮತ್ತು ಸೋದರ ಪ್ರೀತಿಯನ್ನು ಮನಗಂಡ ಕೃಷ್ಣ ಆಕೆಯನ್ನು ತನ್ನ ಸೋದರಿಯಾಗಿ ಸ್ವೀಕರಿಸಿದ. ಭವಿಷ್ಯದಲ್ಲಿ ಆಕೆಯ ಕಷ್ಟಕಾಲದಲ್ಲಿ ತಾನು ಈ ಋಣವನ್ನು ತೀರಿಸುವುದಾಗಿ ಆಕೆಗೆ ಮಾತು ಕೊಟ್ಟ. ಮುಂದೆ ಪಾಂಡವರು ಜೂಜಿನಲ್ಲಿ ಸೋತು, ದುಷ್ಟನಾದ ದುಶ್ಯಾಸನನು ದ್ರೌಪದಿಯ ಸೀರೆಯನ್ನು ಎಳೆಯುವಾಗ ಕೃಷ್ಣನು ದ್ರೌಪದಿಯ ಸೀರೆಯನ್ನು ಅಕ್ಷಯವಾಗಿಸಿ, ಆಕೆಯ ಮಾನವನ್ನು ರಕ್ಷಿಸಿದ ಎಂದು ಹೇಳುತ್ತಾರೆ.
ಇತಿಹಾಸದ ಪುಟಗಳಲ್ಲಿ:ಭಾರತದ ಇತಿಹಾಸದಲ್ಲಿನ ಕೆಲವು ಚಾರಿತ್ರಿಕ ಘಟನೆಗಳನ್ನು ನೋಡೋಣ. ಸಿಂಧೂ ಕಣಿವೆಯಲ್ಲಿ ಆರ್ಯನ್ನರ ಪ್ರಥಮ ನಾಗರಿಕತೆಯು ಆರಂಭವಾದಾಗ ಅಂದರೆ ಸುಮಾರು ಆರು ಸಾವಿರ ವರ್ಷಗಳಿಗೂ ಹಿಂದೆಯೇ ಈ ರಕ್ಷಾಬಂಧನ ಆಚರಣೆ ಚಾಲ್ತಿಗೆ ಬಂದಿತ್ತು. ಬಹು ಭಾಷೆ ಮತ್ತು ಸಂಸ್ಕೃತಿಗಳೊಂದಿಗೆ ನಮ್ಮ ದೇಶದ ವಿವಿಧೆಡೆ ರಕ್ಷಾಬಂಧನದ ಆಚರಣೆಯಲ್ಲಿ ವಿಭಿನ್ನತೆಯನ್ನು ಕಾಣಬಹುದು.
ಕ್ರಿ.ಪೂ.300ರಲ್ಲಿ ಗ್ರೀಸ್‌ನ ರಾಜ ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಾಗ ಆತ ಪುರೂರವನ ಸಾಹಸವನ್ನು ಕಂಡು ಬೆರಗಾಗಿಬಿಟ್ಟನು. ಒಂದು ಹಂತದಲ್ಲಿ ಆತ ಯುದ್ಧದಲ್ಲಿ ಸೋಲುವ ಸಂದರ್ಭವೇ ಬಂದಿತು. ಇದರಿಂದ ವಿಚಲಿತಳಾದ ರಾಖಿ ಹಬ್ಬದ ಬಗ್ಗೆ ತಿಳಿದುಕೊಂಡಿದ್ದ ಅಲೆಗ್ಸಾಂಡರನ ಹೆಂಡತಿ ಪುರೂರವನಿಗೆ ರಾಖಿಯನ್ನು ಕಳಿಸಿಕೊಟ್ಟಳು. ಅದನ್ನು ಸ್ವೀಕರಿಸಿದ ಪುರೂರವ ಆಕೆಯನ್ನು ಸೋದರಿ ಎಂದು ಪರಿಗಣಿಸಿದ. ಯುದ್ಧದಲ್ಲಿ ಅಲೆಕ್ಸಾಂಡರನನ್ನು ಕೊಲ್ಲುವ ಸಂದರ್ಭ ಬಂದಾಗಲೂ ಆತ ಅವನನ್ನು ಕೊಲ್ಲಲಿಲ್ಲ ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ.
ಮಧ್ಯಯುಗದ ಕಾಲದಲ್ಲಿ ರಜಪೂತರು ಮುಸ್ಲಿಂ ಆಕ್ರಮಣಕಾರರ ವಿರುದ್ಧ ಹೋರಾಡುತ್ತಿದ್ದರು. ಆ ಕಾಲದಲ್ಲಿ ರಾಖಿ ಸಹೋದರಿಯರ ರಕ್ಷಣೆಗಾಗಿ ಮತ್ತು ಆಧ್ಯಾತ್ಮ ಪಾವಿತ್ರತೆಯ ಸಂಕೇತವಾಗಿ ಪರಿಗಣಿತವಾಗಿತ್ತು. ಚಿತ್ತೂರಿನ ರಾಣಿ ಕರ್ಣಾವತಿಗೆ ತನ್ನ ರಾಜ್ಯವನ್ನು ಗುಜರಾತಿನ ಸುಲ್ತಾನ ಬಹುದ್ದೂರ್ ಶಾನ ಆಕ್ರಮಣದಿಂದ ರಕ್ಷಿಸಿಕೊಳ್ಳುವ ಅನಿವಾರ್ಯತೆ ಉಂಟಾಯಿತು. ಆದರೆ ಆ ಯುದ್ಧದಲ್ಲಿ ಆಕೆಯು ಸೋಲಿನ ದವಡೆಗೆ ಸಿಲುಕಿದಾಗ ಆಕೆಯು ಆಗಿನ ಮೊಘಲ್ ಚಕ್ರವರ್ತಿ ಹುಮಾಯೂನನಿಗೆ ತನ್ನನ್ನು ಸೋದರಿಯಾಗಿ ಪರಿಗಣಿಸಿ ರಕ್ಷಿಸುವಂತೆ ರಾಖಿಯನ್ನು ಕಳುಹಿಸಿಕೊಟ್ಟಳು. ಹುಮಾಯೂನನ ಹೃದಯಕ್ಕೆ ಇದು ನಾಟಿತು. ಕೂಡಲೇ ಆತ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ತನ್ನ ಸೈನ್ಯದೊಂದಿಗೆ ಆಕೆಯ ರಕ್ಷಣೆಗೆ ಧಾವಿಸಿ ಬಂದು ಬಹದ್ದೂರ್ ಶಾನನ್ನು ಸೋಲಿಸಿ ಓಡಿಸಿ, ಚಿತ್ತೂರನ್ನು ರಕ್ಷಿಸಿಕೊಟ್ಟನು ಎಂದು ಇತಿಹಾಸ ತಿಳಿಸುತ್ತದೆ.
ಆಚರಣೆ:
ಹಿಂದಿನ ಕಾಲದಲ್ಲಿ ಈ ದಿನದಂದು ಅಕ್ಕಿ, ಚಿನ್ನದ ಶುಭ್ರ ನಾಣ್ಯವನ್ನು ಸೆರಗಿನ ಗಂಟಿನಲ್ಲಿ ಕಟ್ಟಿ, ರಕ್ಷೆ ಅಂದರೆ ರಾಖಿಯನ್ನು ತಯಾರಿಸುತ್ತಿದ್ದರು. ಚಿತ್ರ ವಿಚಿತ್ರ ರಾಖಿಗಳನ್ನು ಉಪಯೋಗಿಸುವುದಕ್ಕಿಂತ ಸಾತ್ವಿಕ ಮತ್ತು ಮನಸ್ಸಿಗೆ ಆಹ್ಲಾದಕರ ರಾಖಿಗಳನ್ನು ಉಪಯೋಗಿಸಬೇಕು. ಇಲ್ಲದಿದ್ದರೆ ಆ ರಾಖಿಯ ಸತ್ವ, ರಜ, ತಮೋ ಗುಣಗಳು ಧರಿಸಿದವರ ಜೀವನದ ಮೇಲೆ ಪರಿಣಾಮ ಬೀರುತ್ತವೆ.
ರಾಖಿಯನ್ನು ಕಟ್ಟಿಸಿಕೊಳ್ಳುವಾಗ ಸಹೋದರನು ಕುಳಿತುಕೊಳ್ಳುವ ಮಣೆಯ ಸುತ್ತಲೂ ಸಾತ್ವಿಕ ರಂಗೋಲಿಯನ್ನು ಬಿಡಿಸಬೇಕು. ಸಾತ್ವಿಕ ರಂಗೋಲಿಯಿಂದ ಸಾತ್ವಿಕ ಸ್ಪಂದನೆಗಳು ಪ್ರಕ್ಷೇಪಿತವಾಗುತ್ತವೆ. ಅದರಿಂದ ವಾತಾವರಣವು ಪ್ರಶಾಂತವಾಗುತ್ತದೆ. ರಾಖಿಯನ್ನು ಕಟ್ಟಿದ ನಂತರ ತುಪ್ಪದ ನೀಲಾಂಜನದಿಂದ ಆರತಿಯನ್ನು ಬೆಳಗುತ್ತಾರೆ. ತುಪ್ಪದ ದೀಪವು ಶಾಂತ ರೀತಿಯಲ್ಲಿ ಉರಿಯುತ್ತದೆ. ಆದ್ದರಿಂದ ಸಹೋದರನಲ್ಲಿ ಶಾಂತರೀತಿಯಿಂದ ವಿಚಾರ ಮಾಡುವ ಬುದ್ಧಿಯು ವೃದ್ಧಿಯಾಗುತ್ತದೆ.
ಈ ದಿನವನ್ನು ಉಪಾಕರ್ಮ ಆರಂಭ ಎಂದೂ ಕರೆಯುತ್ತಾರೆ. ಇದೊಂದು ಬ್ರಾಹ್ಮಣ ವರ್ಗವು ಆಚರಿಸುವ ವೈದಿಕ ಕ್ರಿಯಾವಿಧಿ. ಈ ಕ್ರಿಯಾವಿಧಿಯನ್ನು ದೈನಂದಿನ ಸಂಧ್ಯಾವಂದನೆಯನ್ನು ಮಾಡುವ ಆರ್ಯ ವೈಶ್ಯ ಸಮುದಾಯದವರೂ ಆಚರಿಸುತ್ತಾರೆ. ಉಪಾಕರ್ಮವನ್ನು ವರ್ಷಕ್ಕೆ ಒಂದು ಸಾರಿ ಶ್ರವಣ ನಕ್ಷತ್ರ ಅಥವಾ ಧನಿಷ್ಠಾ ನಕ್ಷತ್ರದಲ್ಲಿ ನಡೆಸಲಾಗುತ್ತದೆ. ಇದರಲ್ಲಿ ಬ್ರಾಹ್ಮಣರು ಶಾಸ್ತ್ರೋಕ್ತವಾಗಿ ತಮ್ಮ ಜನಿವಾರವನ್ನು ಬದಲಾಯಿಸುತ್ತಾರೆ. ಜೊತೆಗೆ ಸಂಬಂಧಿತ ಶ್ರೌತ ಕ್ರಿಯಾ ವಿಧಿಗಳು ಇರುತ್ತವೆ. ಹಾಗೂ ವೈದಿಕ ಶ್ಲೋಕಗಳನ್ನು ರಚಿಸಿದ ಋಷಿಗಳಿಗೆ ಶ್ರಾದ್ಧ ತರ್ಪಣಗಳನ್ನು ಕೊಡುತ್ತಾರೆ.
ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.
ದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಕಲ್ಯಾಣ್ ಸಿಂಗ್ ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಕಲ್ಯಾಣ್ ಸಿಂಗ್ ನಿಧನದ ಸುದ್ದಿ ತಿಳಿಯುತ್ತಲೇ ತಮ್ಮ ಗೋರಕ್ ಪುರ್ ಪ್ರವಾಸವನ್ನು ರದ್ದುಗೊಳಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಖನೌದ ಸಂಜಯ್ ಗಾಂಧಿ ಆಸ್ಪತ್ರೆಗೆ ಭೇಟಿ ನೀಡಿ ಕಲ್ಯಾಣ್ ಸಿಂಗ್ ಅವರ ಅಂತಿನ ದರ್ಶನ ಪಡೆದರು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಕಲ್ಯಾಣ್ ಸಿಂಗ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
I am saddened beyond words. Kalyan Singh Ji…statesman, veteran administrator, grassroots level leader and great human. He leaves behind an indelible contribution towards the development of Uttar Pradesh. Spoke to his son Shri Rajveer Singh and expressed condolences. Om Shanti. pic.twitter.com/ANOU2AJIpS
ಕೋವಿಡ್ 19 ಮೂರನೇ ಅಲೆಯ ಅಪಾಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಕೇರಳ ಭಾಗಗಳಿಂದ ಬರುವವರ ಮೇಲೆ ತೀವ್ರ ನಿಗಾ ಇಡಲು ಚಕ್ ಪೋಸ್ಟ್ ಗಳಿಗೆ ನಿರಂತರ ಭೇಟಿ ನೀಡಿ ಪರಿಶೀಲಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೋಮ್ಮಾಯಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಆಲಮಟ್ಟಿ ಕೃಷ್ಣ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿಂದು ವಿಜಯಪುರ ಬಾಗಲಕೋಟೆ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೋವಿಡ್ 19 ಮೂರನೇ ಅಲೆಯ ಬಗ್ಗೆ ತಜ್ಞರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕು. ಚೆಕ್ ಪೋಸ್ಟ್ ಗಳಲ್ಲಿ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಂದ ಆಗಮಿಸುವ ನಾಗರಿಕರ ಬಗ್ಗೆ ತೀವ್ರ ನಿಗಾ ಇಟ್ಟು ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ನಿರಂತರ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ನಿಗಾ ಇಡುವಂತೆ ಸೂಚನೆ ನೀಡಿದರು.
ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳಿಗೆ ಕೋವಿಡ್ 19 ಲಸಿಕೆಗಳ ಸರಬರಾಜು ಹೆಚ್ಚಿಸಲು ಪ್ರಯತ್ನಿಸಲಾಗುವುದು. ವಿಶೇಷವಾಗಿ ಈ ಎರಡೂ ಜಿಲ್ಲೆಗಳಿಗೆ ಮುಂದಿನ ದಿನಗಳಲ್ಲಿ ಪ್ರತಿ ದಿನಕ್ಕೆ ತಲಾ 25000 ಸಾವಿರ ಲಸಿಕೆಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಕೋವಿಡ್ 19 ಮೂರನೇ ಅಲೆಯ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ವಿಶೇಷ ಗಮನ ನೀಡಬೇಕು. ಮಕ್ಕಳಿಗಾಗಿ ಜಿಲ್ಲಾ ಆಸ್ಪತ್ರೆ ಗಳಲ್ಲಿ ಹೆಚ್ಚಿನ ಐಸಿಯು ಬೆಡ್ ಗಳನ್ನು ಮೀಸಲಿಡಬೇಕು. ಮಕ್ಕಳ ಬೆಳವಣಿಗೆ ಸೇರಿದಂತೆ ಅಪೌಷ್ಟಿಕತೆ ನಿವಾರಣೆಗೆ ಗಮನ ಇಟ್ಟು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರಗಳ ವಾರ್ಡ್ ವ್ಯಾಪ್ತಿಯಲ್ಲಿ ಮಕ್ಕಳ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಬೇಕು. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಸಹಯೋಗದೊಂದಿಗೆ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಹಾಗೂ ಅಪೌಷ್ಟಿಕತೆ ಕೊರತೆ ನೀಗಿಸಲು ಗಮನ ನೀಡಲು ಸೂಚಿಸಿದರು.
ಬ್ಲಾಕ್ ಫಂಗಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ರೋಗಿಗಳ ಚಿಕಿತ್ಸೆ ವೆಚ್ಚ ಹೆಚ್ಚಿನ ರೀತಿಯಲ್ಲಿ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಪಡೆಯುವ ರೋಗಿಗಳ ಚಿಕಿತ್ಸೆ ಔಷಧಿ ವೆಚ್ಚ ಸರ್ಕಾರದಿಂದ ಭರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಕೋವಿಡ್ 19 ಮೊದಲ ಹಾಗೂ 2ನೇ ಅಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸವಾಲನ್ನು ಎದುರಿಸಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಾರೆ. ಇದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು 3ನೇ ಅಲೆ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳೊಂದಿಗೆ ಸಜ್ಜುಗೊಳ್ಳುವಂತೆ ಅವರು ಸೂಚನೆ ನೀಡಿದರು.
ಮಧ್ಯಮ ಹಾಗೂ ಬೃಹತ್ ಉದ್ಯಮಿದಾರರು ತಮ್ಮ ಸಿಬ್ಬಂದಿಗಳಿಗೆ ಅವರೇ ಪ್ರಥಮ ಹಾಗೂ 2ನೇ ಲಸಿಕೆ ದೊರಕಿಸಬೇಕು. ವಿಜಯಪುರದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಉನ್ನತೀಕರಣಕ್ಕಾಗಿ 22 ಕೋಟಿ ರೂ. ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅವರು ಇಂದು ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ ಈ ಹಿಂದೆ 100 ಕೋಟಿ ರೂ.ಗಳ ಅನುದಾನವನ್ನು ನೀಡಲಾಗಿತ್ತು. ಇತ್ತೀಚೆಗೆ 197 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಇನ್ನೂ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.
ಸಿಬ್ಬಂದಿ ಕೊರತೆ ನೀಗಿಸುವುದರಿಂದ ಹಿಡಿದು ಪುನರ್ವಸತಿಗೆ ದೊಡ್ಡ ಪ್ರಮಾಣದ ಅನುದಾನದ ಅವಶ್ಯಕತೆ ಇದೆ. ವಸತಿ, ಮೂಲಭೂತ ಸೌಕರ್ಯ ನಿರ್ಮಾಣ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ವಿವಿಧ ಅಂತರರಾಷ್ಟ್ರೀಯ ಮಟ್ಟದ ಏಜೆನ್ಸಿಗಳಿಂದ ಸಾಲ ಪಡೆಯಲು ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು. 8 ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕೇಂದ್ರಗಳಿಗೆ ಅಗತ್ಯವಿರುವ ಭೂ ಸ್ವಾಧೀನ ಮಾಡಲಾಗಿದೆ. ಶೀಘ್ರವಾಗಿ ಅಂತಿಮ ದಿಕ್ಸೂಚಿಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬಾಗಿನ ಅರ್ಪಣೆ: ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ ಇಂದು ಭಕ್ತಿಯಿಂದ ಗಂಗೆ ಪೂಜೆಯನ್ನು ನೆರವೇರಿಸಿದ್ದೇನೆ ಎಂದ ಮುಖ್ಯಮಂತ್ರಿಗಳು ರೈತರು ಆರ್ಥಿಕವಾಗಿ ಮುಂದುವರೆಯಬೇಕಾದರೆ ಮನೆಯಲ್ಲಿ ಯಾರಾದರೂ ಬೇರೆಡೆ ನೌಕರಿ ಮಾಡಬೇಕಾದ ಅನಿವಾರ್ಯತೆ ಇದೆ. ರೈತರು ಹವಾಮಾನ ವೈಪರೀತ್ಯದ ನಡುವೆ ಬದುಕುತ್ತಿದ್ದಾರೆ.
ನಮ್ಮ ರೈತಾಪಿ ವರ್ಗ ಕಾಲಕಾಲಕ್ಕೆ ಮಳೆಯಾಗಿ ಬೆಳೆ ತೆಗೆದರೆ ರಾಜ್ಯವೂ ಸುಭಿಕ್ಷವಾಗಿರುತ್ತೆ. ಬಂಗಾರದ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಆಗಸ್ಟ್ 23 ರಿಂದ ಶಾಲೆಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಆತಂಕಕ್ಕೆ ಒಳಗಾಗದೇ ಶಾಲೆಗಳಿಗೆ ಹಾಜರಾಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು.
ಶಾಲೆ ಆರಂಭಕ್ಕೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರ ಅನುಮತಿ, ಕೋವಿಡ್ ಸುರಕ್ಷತೆಯೊಂದಿಗೆ ಶಾಲೆಗಳಲ್ಲಿ ಕಲಿಕೆ, ಶಾಲೆಗಳನ್ನು ಸ್ಯಾನಿಟೈಸ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪರ್ಯಾಯ ದಿನಗಳಲ್ಲಿ ಅಥವಾ ಶಿಫ್ಟ್ನಲ್ಲಿ ತರಗತಿಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಆಗಸ್ಟ್ 23 ರಂದು ಬೆಳಿಗ್ಗೆ ಶಿಕ್ಷಣ ಸಚಿವರೊಂದಿಗೆ ಕೆಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶಾಲೆಗಳನ್ನು ಪ್ರಾರಂಭಿಸುವಲ್ಲಿ ಅತ್ಯಂತ ಕಾಳಜಿಯನ್ನು ವಹಿಸಲಾಗುವುದು. ಮಕ್ಕಳು ಶಾಲೆಗೆ ಬರಬೇಕು, ಕಲಿಕೆ ಆಗಬೇಕು. ಅದರ ಜೊತೆಗೆ ಕೋವಿಡ್ ಸುರಕ್ಷತೆಯೂ ಆಗಬೇಕು. ಪಾಲಕರು ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಶಾಲೆಗೆ ಆಗಮಿಸುವ ಮಕ್ಕಳಿಗೆ ಧೈರ್ಯ ತುಂಬಿ, ಮಕ್ಕಳ ಆರೋಗ್ಯದ ಬಗ್ಗೆ ಗಮನ ವಹಿಸಿ. ಶಾಲೆಗಳಲ್ಲಿ ಹಂತಹಂತವಾಗಿ ಮಕ್ಕಳ ಹಾಜರಾತಿ ಹೆಚ್ಚಬೇಕು ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಶನಿವಾರ ಧಾರವಾಡದ ಸಾಹಿತ್ಯ ವಲಯದ ಪ್ರಮುಖರ ಜತೆ ಮಹತ್ವದ ಸಂವಾದ ನಡೆಸಿದರು.
ಶಿಕ್ಷಣ ನೀತಿಯಲ್ಲಿ ಅಡಕವಾಗಿರುವ ಅಂಶಗಳ ಬಗ್ಗೆ ಸಾಹಿತಿಗಳಿಗೆ ವಿವರಿಸಿದ ಸಚಿವರು, ಅವರಲ್ಲಿದ್ದ ಸಂಶಯಗಳನ್ನು ನಿವಾರಿಸಿದರು. ಅಲ್ಲದೆ, ಶಿಕ್ಷಣ ನೀತಿಯಲ್ಲಿರುವ ಕ್ರಾಂತಿಕಾರಕ ಅಂಶಗಳ ಬಗ್ಗೆ ಇದೇ ವೇಳೆ ಸಾಹಿತಿಗಳು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ವರ್ಷದಿಂದಲೇ ಜಾರಿ ಆಗುತ್ತಿರುವ ಈ ನೀತಿಯಲ್ಲಿ ಮಾತೃಭಾಷಾ ಕಲಿಕೆಗೆ ಇರುವ ಮಹತ್ವವನ್ನು ಸಾಹಿತಿಗಳಿಗೆ ಮನವರಿಕೆ ಮಾಡಿಕೊಟ್ಟ ಸಚಿವರು; ಬಹುಶಿಸ್ತೀಯ ಹಾಗೂ ಬಹು ಆಯ್ಕೆಯ ಕಲಿಕೆಯಿಂದ ಆಗುವ ಬದಲಾವಣೆಗಳ ಬಗ್ಗೆಯೂ ವಿವರವಾಗಿ ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶೈಕ್ಷಣಿಕ ವ್ಯವಸ್ಥೆ ಉನ್ನತೀಕರಿಸುವ ಹಾಗೂ ವಿದ್ಯಾರ್ಥಿಗಳ ಹಿತವನ್ನು ಎತ್ತಿಹಿಡಿಯುವ ಧ್ಯೇಯವೊಂದನ್ನು ಹೊರತುಪಡಿಸಿ ಬೇರಾವ ಅಜೆಂಡಾವು ಇಲ್ಲವೆಂದು ಸ್ಪಷ್ಟವಾಗಿ ತಿಳಿಸಿದ ಸಚಿವರು, ಸಂವಾದದಲ್ಲಿ ಪಾಲ್ಗೊಂಡಿದ್ದ ಪ್ರತಿ ಸಾಹಿತಿ ಅಭಿಪ್ರಾಯವನ್ನು ಆಲಿಸಿದರು.
ಎರಡು ವರ್ಷ ಮಾತೃಭಾಷೆ ಕಲಿಕೆ
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತಿ ವಿದ್ಯಾರ್ಥಿ ಒಂದಲ್ಲ ಎರಡು ವರ್ಷ ತನ್ನ ಮಾತೃಭಾಷೆಯಲ್ಲಿ ಕಡ್ಡಾಯವಾಗಿ ಕಲಿಯಬೇಕು. ಈ ಮೂಲಕ ಮಾತೃಭಾಷಾ ಕಲಿಕೆಗೆ ಅತ್ಯುನ್ನತ ಮಹತ್ವ ಕೊಡಲಾಗುತ್ತದೆ. ಇಷ್ಟೇ ಅಲ್ಲದೆ, ಕನ್ನಡ ಭಾಷೆಯಲ್ಲೇ ತಾಂತ್ರಿಕ ಶಿಕ್ಷಣ ನೀಡುತ್ತಿದ್ದೇವೆ. ಇದರಲ್ಲಿ ಕಲಿತವರಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣ ನೀಡುವಲ್ಲಿ ರಿಯಾಯಿತಿ ಇಲ್ಲವೇ ಮೀಸಲು ಕೊಡಲಾಗುವುದು ಎಂದು ಸಚಿವರು ಹೇಳಿದರು.
ಸ್ಥಳೀಯ ಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ಕೊಡಬೇಕಾದರೆ ಬಂಡವಾಳ ಹೆಚ್ಚು ಹೂಡಬೇಕು. ಇದಕ್ಕೆ ತಂತ್ರಜ್ಞಾನದ ನೆರವು ಬೇಕು. ಕೋಡಿಂಗ್ ಮತ್ತಿತರರ ಕೆಲಸ ಆಗಬೇಕಾಗುತ್ತದೆ. ಇದಕ್ಕೂ ಅವಕಾಶ ಕಲ್ಪಿಸುವ ವ್ಯವಸ್ಥೆ ಆಗಲಿದೆ ಎಂದರು.
ಹತ್ತು ವರ್ಷಕ್ಕೊಮ್ಮೆ ಶಿಕ್ಷಣ ನೀತಿ ಬದಲಾಗಲಿ:
ಸಂವಾದದಲ್ಲಿ ಮಾತನಾಡಿ ಲೇಖಕಿ ಮಾಲತಿ ಪಟ್ಟಣಶೆಟ್ಟಿ ಅವರು, ಶಿಕ್ಷಣ ನೀತಿ ಕನಿಷ್ಠ ಹತ್ತು ವರ್ಷಕ್ಕಾದರೂ ಬದಲಾಗಬೇಕು. 35 ವರ್ಷದವರೆಗೂ ನೀತಿ ಬದಲಾಗಿಲ್ಲ ಎನ್ನುವ ಊಹೆ ಮಾಡಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಆಗಾಗ್ಗೆ ಆಗಬೇಕು ಎಂದರು.
ಮಾಲತಿ ಪಟ್ಟಣಶೆಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಬದಲಾವಣೆಯ ತಳಹದಿಯ ಮೇಲೆಯೇ ಹೊಸ ಶಿಕ್ಷಣ ನೀತಿಯನ್ನು ತರಲಾಗಿದೆ. ಅಗತ್ಯಬಿದ್ದಾಗ ಬದಲಾವಣೆ ಮಾಡಿಕೊಳ್ಳುವ ಎಲ್ಲ ಸಾಧ್ಯತೆಗಳನ್ನು ಮುಕ್ತವಾಗಿ ಇರಿಸಲಾಗಿದೆ. ಇನ್ನು ಮುಂದೆ ಶಿಕ್ಷಣ ನೀತಿ ಬದಲಾವಣೆಗೆ ದಶಕಗಳ ಕಾಲ ಕಾಯುತ್ತಾ ಕೂರಬೇಕಿಲ್ಲ ಎಂದರು.
ಮುಖ್ಯವಾಗಿ ಈ ಶಿಕ್ಷಣ ನೀತಿಯಲ್ಲಿ ಉದ್ಯೋಗ ಕೌಶಲ್ಯದ ತರಬೇತಿ ಪಠ್ಯದ ಕ್ರಮ ಅಳವಡಿಸಲಾಗಿದೆ. ಅಧ್ಯಯನ ಮತ್ತು ಸಂಶೋಧನೆಗೆ ಬಹಳ ಅವಕಾಶ ಇದೆ. ಭವಿಷ್ಯದ ದಿನಗಳಲ್ಲಿ ಉನ್ನತ ಶಿಕ್ಷಣ ಹಾಗೂ ಸಂಶೋಧನೆಗಾಗಿ ವಿದೇಶಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗಲಿದೆ. ಮುಖ್ಯವಾಗಿ ಪದವಿ, ಪಿಜಿ ಮಟ್ಟದಲ್ಲೇ ಸಂಶೋಧನೆಗೆ ಒತ್ತು ಕೊಡಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಮೌಲ್ಯಮಾಪನ, ಸಾಮರ್ಥ್ಯದ ಬಗ್ಗೆ ನಿಗಾ
ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಾಹಿತಿ ಪ್ರೊ ಹರ್ಷ ಡಂಬಳ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ಬೋಧಕರ ಸಾಮರ್ಥ್ಯ ಮತ್ತು ಮೌಲ್ಯಮಾಪನದ ಬಗ್ಗೆ ನಿರಂತರ ನಿಗಾ ಇಡುವ ವ್ಯವಸ್ಥೆ ಸಾಧ್ಯವೇ ಎಂದು ಡಂಬಳ ಅವರು ಪ್ರಶ್ನೆ ಮಾಡಿದರು.
ಈ ಬಗ್ಗೆ ಉತ್ತರ ನೀಡಿದ ಸಚಿವರು; ಬೋಧಕರ ಮೌಲ್ಯಮಾಪನ ಎನ್ನುವುದು ನಿರಂತರವಾಗಿ ಆಗುತ್ತದೆ. ಗುಣಮಟ್ಟಕ್ಕೆ ತಕ್ಕಂತೆ ಅವರು ಅಪ್ಡೇಟ್ ಆಗಲೇಬೇಕು. ಜತೆಗೆ, ಅವರು ಶಿಕ್ಷಣ ನೀತಿಯಲ್ಲಿ ನಿಗಧಿ ಮಾಡಿರುವ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಈ ಬಗ್ಗೆ ಯಾವುದೇ ರಾಜಿ ಇಲ್ಲ. ಇದಲ್ಲದೆ, ಶಿಕ್ಷಣ ವ್ಯವಸ್ಥೆಯ ನಿರ್ವಹಣೆ ಹಾಗೂ ಸರಕಾರಿ ವ್ಯವಸ್ಥೆಯಲೂ ಆಮೂಲಾಗ್ರ ಸುಧಾರಣೆ ತರಲಾಗುತ್ತಿದೆ ಎಂದರು.
ಪ್ರೊ ಪ್ರಕಾಶ ಗರೂಡ ಅವರು ಮಾತನಾಡಿ, ಶಿಕ್ಷಣಕ್ಕೆ ರಾಜ್ಯದ ಒಟ್ಟು ದೇಶಿಯ ಉತ್ಪನ್ನದಲ್ಲಿ 6% ಮೀಸಲಿಡಬೇಕು ಎಂದು ಶಿಕ್ಷಣ ನೀತಿ ಹೇಳುತ್ತದೆ. ಆದರೆ, ಅಷ್ಟು ಮೊತ್ತದ ಹಣಕಾಸು ಮೀಸಲಿಡಲು ಸಾಧ್ಯವೇ? ಈಗ ತುಂಬಾ ಕಡಿಮೆ ಹಣವನ್ನು ಶಿಕ್ಷಣಕ್ಕೆ ಒದಗಿಸಲಾಗುತ್ತಿದೆ ಎಂದರು.
ಈ ಪ್ರಶ್ನೆಗೆ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವರು; ಈಗಾಗಲೇ ಈ ವಿಷಯವನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಬಜೆಟ್ ಸಭೆಗಳಲ್ಲೂ ಚರ್ಚೆ ನಡೆಸಲಾಗಿ ಹೆಚ್ಚು ಅನುದಾನ ಕೇಳಲಾಗಿದೆ. ಹೊಸ ಶಿಕ್ಷಣ ನೀತಿ ಜಾರಿ ನಂತರ ಸಂಪನ್ಮೂಲದ ಅಗತ್ಯ ಹೆಚ್ಚಿರುತ್ತದೆ. ಈ ಬಗ್ಗೆ ನಾನು ಮತ್ತೊಮ್ಮೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಮಾತನಾಡುತ್ತೇನೆ ಎಂದರು.
ಸಮುದಾಯದ ಸಹಭಾಗಿತ್ವಬೇಕೆಂದ ಸಚಿವರು:
ಸಾಮಾನ್ಯವಾಗಿ ಒಮ್ಮೆ ಶಿಕ್ಷಣ ನೀತಿ ಬದಲಾಗುತ್ತದೆ ಎಂದರೆ ಅದಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಹಕಾರ ಬೇಕಾಗುತ್ತದೆ. ಉತ್ತಮ ಶಿಕ್ಷಣ ಎನ್ನುವುದು ವೈಯಕ್ತಿಕವಾಗಿ ಎಲ್ಲರಿಗೂ ಬೇಕು. ಅದೇ ಇಡೀ ಸಮಾಜದ ದೃಷ್ಟಿಕೋನ ಬಂದಾಗ ಅನೇಕರು ನಿಂತ ಜಾಗದಲ್ಲೇ ನಿಂತುಬಿಡುತ್ತಾರೆ. ಯಾಕೆಂದರೆ ಸದ್ಯದ ಸ್ಥಿತಿಯಲ್ಲಿ ಗುಣಮಟ್ಟದ ಶಿಕ್ಷಣ ಎನ್ನುವುದು ಹಣವಂತರ ಮಕ್ಕಳಿಗೆ ಮಾತ್ರ ಸಿಗುತ್ತಿದೆ. ಬಡವರ ಮಕ್ಕಳು ಕಲಿಯುವ ಸರಕಾರಿ ಶಾಲೆಗಳಲ್ಲಿ ಸೌಲಭ್ಯಗಳಿಲ್ಲ, ಅಗತ್ಯ ಮೂಲಸೌಕರ್ಯಗಳೇ ಇಲ್ಲ ಎಂದರು ಸಚಿವ ಡಾ.ಅಶ್ವತ್ಥನಾರಾಯಣ.
ಶಿಕ್ಷಣದಲ್ಲಿ ಸಮಾನತೆ ತರುವ ಉದ್ದೇಶದಿಂದ ರೂಪಿತವಾದುದೇ ಶಿಕ್ಷಣ. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಒಂದೇ ರಾಜಮಾರ್ಗ. ಇದುವರೆಗೂ ಅನೇಕರು ಶಿಕ್ಷಣ ಹಾಗಿರಬೇಕು, ಹೀಗಿರಬೇಕು ಎಂದು ಹೇಳುತ್ತಲೇ ಇದ್ದಾರೆ. ಅವರು ಹೇಳಿದ್ದೆಲ್ಲ ಈ ಶಿಕ್ಷಣ ನೀತಿಯಲ್ಲಿದೆ ಎಂದು ಸಚಿವರು ಹೇಳಿದರು.
ಎಲ್ಲ ಸಾಹಿತಿಗಳು ಶಿಕ್ಷಣ ನೀತಿಯ ಬಗ್ಗೆ ಮುಕ್ತಕಂಠದ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಈ ಬಗ್ಗೆ ತಾವೂ ಸಮಾಜದಲ್ಲಿ ಮಾತನಾಡುವುದಾಗಿ ಸಚಿವರಿಗೆ ಭರವಸೆ ನೀಡಿದರು.
ಸಂವಾದದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಸದಸ್ಯರಾದ ಪ್ರೊ.ತೇಜಸ್ವಿ ಕಟ್ಟೀಮನಿ, ಪ್ರೊ.ಮಾಲತಿ ಪಟ್ಟಣಶೆಟ್ಟಿ, ಡಾ.ಡಿ.ಎಂ.ಹಿರೇಮಠ, ಡಾ.ಶಾಂತಿನಾಥ ದಿಬ್ಬದ, ಡಾ.ಜೆ.ಎಂ.ನಾಗಯ್ಯ, ಡಾ.ಎಂ.ಎಸ್.ಶಿವಪ್ರಸಾದ್, ಡಾ.ಬಾಲಣ್ಣ ಶೀಗೀಹಳ್ಳಿ, ಡಾ.ಪ್ರಜ್ಞಾ ಮತ್ತಿಹಳ್ಳಿ, ಡಾ.ಜಿನದತ್ತ ಹಡಗಲಿ, ಡಾ.ಚಿದಾನಂದ ರೆಡ್ಡಿ ಪಾಟೀಲ, ಪ್ರೊ.ಹರ್ಷ ಡಂಬಳ, ಡಾ.ಪ್ರಕಾಶ ಗರುಡ, ನಾರಾಯಣ ಪಾಂಡುರಂಗಿ, ವಿಜಯಕುಮಾರ ದಿಡ್ನವರ, ಸದಾನಂದ ಶಿವಳ್ಳಿ, ಶಂಕರ ತುಂಬಿ, ಆರ್.ಬಿ.ಚಿಲುಮಿ ಸೇರಿದಂತೆ ಅನೇಕ ಸಾಹಿತಿಗಳು ಭಾಗಿಯಾಗಿದ್ದರು
ಒಂದು ಕಾಲದಲ್ಲಿ ಕರ್ನಾಟಕದ ಜನಪ್ರಿಯ ಪತ್ರಿಕೆಯೆಂದರೆ ತಾಯಿನಾಡು. ಅದನ್ನು ಸ್ಥಾಪಿಸಿದ್ದು ಪಿ. ಆರ್. ರಾಮಯ್ಯ. ಅವರ ಪುತ್ರ ಪಾಲಹಳ್ಳಿ ಆರ್ ವಿಶ್ವನಾಥ್ ಕೂಡ ಕನ್ನಡದ ಬಹು ದೊಡ್ಡ ಲೇಖಕರು. ಇತ್ತೀಚೆಗೆ ಅವರು ಹೀಗೊಂದು ಕುಟುಂಬದ ಕಥೆ ಹೆಸರಿನಲ್ಲಿ ಬಹು ಮುಖ್ಯವಾದ ಕೃತಿಯೊಂದನ್ನು ಹೊರ ತಂದಿದ್ದಾರೆ. ಒಂದು ಕುಟುಂಬದ ಕಥೆ ಹೇಳುತ್ತಲೆ ಆ ಕಾಲದ ಎಲ್ಲಾ ಘಟನೆಗಳನ್ನು ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಒಂದು ಅಕಾಡೆಮಿ ಮಾಡಬೇಕಿದ್ದ ಕೆಲಸನ್ನು ವಿಶ್ವನಾಥ್ ಅವರು ವ್ಯಕ್ತಿಯಾಗಿ ಮಾಡಿದ್ದಾರೆ. ಅವರ ಈ ಕೃತಿಯನ್ನು ಗಮನಿಸಿದಾಗ ಅವರ ಶ್ರಮದ ಅರಿವಾಗುತ್ತದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಂತೂ ಈ ಕೃತಿಯನ್ನು ಓದಲೇ ಬೇಕು. ಕನ್ನಡದ ಮತ್ತೊಬ್ಬ ಹಿರಿಯ ಲೇಖಕ ಕೆ. ಸತ್ಯನಾರಾಯಣ ಈ ಕೃತಿಗೆ ಮುನ್ನಡಿ ಬರೆದು ಅದಕ್ಕೊಂದು ಪ್ರವೇಶ ನೀಡಿದ್ದಾರೆ. ಆ ಮುನ್ನುಡಿಯನ್ನು ಇಲ್ಲಿ ಯಥವತ್ತಾಗಿ ಸಾದರ ಪಡಿಸುತ್ತಿದ್ದೇವೆ. ಈ ಮುನ್ನುಡಿ ಓದಿದ ಮೇಲೆ ನೀವು ಕೃತಿಯನ್ನು ಓದಲೇ ಬೇಕೆಂಬ ಪ್ರೇರಣೆ ಆಗುವುದರಲ್ಲಿ ಸಂದೇಹವೇ ಇಲ್ಲ. ಬೆಂಗಳೂರಿನ ವಸಂತ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ.
ಕೆ. ಸತ್ಯನಾರಾಯಣ
ಹಿರಿಯರಾದ ಪಿ. ಆರ್. ವಿಶ್ವನಾಥರು ಈ ಕೃತಿಯನ್ನು ಒಂದು ಕುಟುಂಬದ ಕಥೆಯೆಂದು ಕರೆದಿದ್ದರೂ, ಮುಖ್ಯವಾಗಿ ಈ ಕತೆ ತಾಯಿನಾಡು ಪಿ. ಆರ್. ರಾಮಯ್ಯನರದು ಎಂದು ಸೂಚಿಸಿದ್ದರೂ ಇಲ್ಲಿ ಹಲವು ಕತೆಗಳಿವೆ.
ನಿಜ, ತಾಯಿನಾಡು ರಾಮಯ್ಯನವರು ಈ ಕೃತಿಯ ಮುಖ್ಯಭಾಗವನ್ನು ಆಕ್ರಮಿಸಿದ್ದಾರೆ. ಆದರೆ ಅವರ ತಾಯಿನಾಡುವಿನ ಕತೆಗೆ ಪರಿಪ್ರೇಕ್ಷ್ಯವಾಗಿ, ಸ್ವಾತಂತ್ರ್ಯ ಚಳವಳಿಯ ಕತೆ, ಗಾಂಧಿ-ಮಾಲವೀಯ ವ್ಯಕ್ತಿತ್ವದ ಪ್ರಭಾವ, ಮೈಸೂರಿನ ಮಹಾರಾಜರಿಗೆ, ಮಿರ್ಜಾ ಇಸ್ಮಾಯಿಲ್‌ರಿಗೆ ಮತ್ತು ಬಹುಪಾಲು ಮೈಸೂರು ದಿವಾನರುಗಳಿಗೆ ಬ್ರಿಟಿಷರನ್ನು ಕುರಿತು ಒಳಗೊಳಗೇ ಇದ್ದ ಭಯ, ಗೌರವ, ಹಾಗಾಗಿ ಹಳೆ ಮೈಸೂರು ಭಾಗದಲ್ಲಿ ಸ್ವಾತಂತ್ರ್ಯ ಚಳವಳಿಯ ಕಾವು ನಿಧಾನವಾಗಿ ಜಾಗೃತವಾದದ್ದು, ಪ್ರಗತಿಪರ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಕಗಳನ್ನು ಜಾರಿಗೆ ತರುತ್ತಿದ್ದ ಮೈಸೂರು ಸಂಸ್ಥಾನದ ಆಡಳಿತವೇ (ರಾಜಮನೆತನ + ದಿವಾನರು) ಮಾಧ್ಯಮದ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರತಿನಿಧಿಗಳ ಸ್ವಾತಂತ್ರ್ಯ, ಇಂತಹ ಸಂಗತಿಗಳನ್ನು ಕುರಿತು ತಳೆಯುತ್ತಿದ್ದ ದಮನಕಾರಿ ನಿಲುವು, ಇದರ ವಿವರಗಳ, ನೋಟಗಳ ವಸ್ತುನಿಷ್ಠ ಮಂಡನೆ ಕೂಡ ಇಲ್ಲಿದೆ.
ಹಾಗೆಯೇ, ರಾಮಯ್ಯನವರ ಕುಟುಂಬ ಜೀವನದ ವಿವರಗಳು, ಬೆಂಗಳೂರಿನ ಬಸವನಗುಡಿಯಲ್ಲಿ ರೂಪುಗೊಳ್ಳುತ್ತಿದ್ದ ಮಧ್ಯಮವರ್ಗದ ಬ್ರಾಹ್ಮಣ ಕುಟುಂಬಗಳ ಜೀವನ ಶೈಲಿ, ವಿದ್ಯಾವಂತ, ಸುಸಂಸ್ಕೃತ ಕುಟುಂಬಗಳಲ್ಲೂ ಹೆಂಗಸರು ಅನುಭವಿಸುತ್ತಿದ್ದ ಪಡಿಪಾಟಲುಗಳು, ಗಂಡಸರ ಅಸೂಕ್ಷ್ಮತೆ, ಇಂತಹ ಹಿನ್ನೆಲೆಯಲ್ಲೂ ಅರಳಿದ ಜಯಲಕ್ಷ್ಮಮ್ಮನವರ ವ್ಯಕ್ತಿತ್ವ, ಈ ಬಗ್ಗೆ ಕೂಡ ನೋಟಗಳು ಸಿಗುತ್ತವೆ. ವಿಶ್ವನಾಥರ ಅದೃಷ್ಟವೆಂದರೆ, ಪಲ್ಲಟಗಳು, ಪರಿವರ್ತನೆ ಜರುಗುತ್ತಿದ್ದ ಕಾಲದಲ್ಲಿ ಎಲ್ಲವನ್ನೂ ಬಿಡುಗಣ್ಣಿನಿಂದ ನೋಡುವಂತ ವಯಸ್ಸಿನಲ್ಲಿ ಅವರಿದ್ದುದು. ಮುಂಬೈನಲ್ಲಿ ಸಂಶೋಧಕನ ವೃತ್ತಿ, ನಂತರ ಅಮೆರಿಕಾದಲ್ಲಿ ವೃತ್ತಿ, ಸಂಶೋಧನೆಗಳಿಂದಾಗಿ ಮೂಡಿದ ವಿಶಾಲ ಜೀವನ ದೃಷ್ಟಿ, ಇವುಗಳ ಹಿನ್ನೆಲೆಯಲ್ಲಿ ಸುಮಾರು 50-60 ವರ್ಷಗಳ ನಂತರ ಒಂದು ರೀತಿಯ “ಮಾನಸಿಕ ದೂರ”ದಿಂದ ಈ ಕತೆ ಬರೆಯುತ್ತಿರುವುದು, ತಂದೆ-ತಾಯಿ-ಪತ್ರಿಕೆಗಳ ಬಗ್ಗೆ ಮಾತ್ರವಲ್ಲ, ಸೋದರ ಬ್ರಹ್ಮಾನಂದ, ಕುಟುಂಬಕ್ಕೆ ಆಪ್ತರಾಗಿದ್ದವರ ವ್ಯಕ್ತಿ-ಕುಟುಂಬದ ಚಿತ್ರಗಳನ್ನು ಕೊಡುವುದನ್ನು ಕೂಡ ಪುಸ್ತಕ ರಚನೆಯ ಒಂದು ಉದ್ದೇಶವನ್ನಾಗಿ ವಿಶ್ವನಾಥರು ಇಟ್ಟುಕೊಂಡಿದ್ದಾರೆ.
ಹಲವು ಕತೆಗಳನ್ನು ಅಡಕಗೊಳಿಸಿಕೊಂಡಿರುವ ಈ ಕೃತಿ ಸಂಪನ್ಮೂಲವಾಗಿ ಬಳಸಿಕೊಂಡಿರುವ ಬರವಣಿಗೆ, ದಾಖಲೆಗಳಲ್ಲೂ ಒಂದು ವಿಶಿಷ್ಟತೆಯಿದೆ. ಈ ವಿಶಷ್ಟತೆಯೆ ಈ ಕೃತಿಯನ್ನು ಕನ್ನಡದಲ್ಲಿ ಈಗ ಪುಂಖಾನುಪುಂಖವಾಗಿ ಬರುತ್ತಿರುವ ಜೀವನ ಚರಿತ್ರೆ, ಆತ್ಮಚರಿತ್ರೆಗಳಿಗಿಂತ ಭಿನ್ನವಾಗಿಸಿದೆ. ನಂಜನಗೂಡಿನ ಹಿನ್ನೆಲೆಯ ವಿಜ್ಞಾನಿ ಪ್ರೊ. ಬಿ. ವಿ. ಶ್ರೀಕಂಠನ್ ಬಗ್ಗೆ ಒಂದು ಪ್ರಬುದ್ಧ ಜೀವನ ಚರಿತ್ರೆಯನ್ನು ಈಚೆಗೆ ವಿಶ್ವನಾಥರು ಪ್ರಕಟಿಸಿದರು. ಬರವಣಿಗೆಯ ರೀತಿ, ವಿಜ್ಞಾನಿಯ ವೃತ್ತಿ ಜೀವನದ ಬಗ್ಗೆ ಕೊಡುವ ವಿವರಗಳು, ವೈಜ್ಞಾನಿಕ ಸಂಗತಿಗಳನ್ನು ಸಾಮಾನ್ಯ ಓದುಗರಿಗೆ ಕೂಡ ಅರ್ಥವಾಗುವ ಹಾಗೆ ವಿವರಿಸುವ ನುಡಿಗಟ್ಟು, ಇವುಗಳಿಂದಾಗಿ ಆ ಜೀವನ ಚರಿತ್ರೆ ವಿಶಿಷ್ಟವಾಗಿತ್ತು.
ಕನ್ನಡದಲ್ಲಿ ವಿಜ್ಞಾನ ಬರವಣಿಗೆಯನ್ನು ಪಾಂಡಿತ್ಯಪೂರ್ಣವಾಗಿಯೂ, ಸೂಕ್ತ ಕನ್ನಡ ನುಡಿಗಟ್ಟಿನಲ್ಲಿಯೂ ಬರೆಯಬಲ್ಲ ವಿಶ್ವನಾಥರು ಒಬ್ಬ ಕನ್ನಡಿಗ ವಿಜ್ಞಾನಿಯ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ಮೊದಲು ಬರೆಯಬೇಕಾಗಿತ್ತೆಂದು ನನಗೆ ತುಂಬಾ ಆಸೆಯಾಗಿತ್ತು. ಇರಲಿ, ಅದು ಬೇರೆಯದೇ ಸಂಗತಿ.
ಈ ಕೃತಿಯಲ್ಲಿ ವಿಶ್ವನಾಥರು ಪತ್ರಗಳನ್ನು, ದಿನಚರಿಯ ಭಾಗಗಳನ್ನು, ನಾಯಕರ ಸಾರ್ವಜನಿಕ ಭಾಷಣಗಳ ಉಲ್ಲೇಖಗಳನ್ನು, ವೃತ್ತ ಪತ್ರಿಕೆ, ಸರ್ಕಾರದ ವರದಿಗಳ ಆಯ್ದ ಭಾಗಗಳನ್ನು, ಭಾವಚಿತ್ರಗಳನ್ನು ಬಳಸಿಕೊಂಡಿದ್ದಾರೆ. ಕುಟುಂಬದಲ್ಲಿ ನಾಲ್ಕು ಗೋಡೆಯ ಒಳಗಡೆ ನಡೆಯುವ ಖಾಸಗಿ ಮಾತುಕತೆಗಳನ್ನು ಕೂಡ ಬಳಸಿಕೊಂಡಿದ್ದಾರೆ. ಈ ಕೌಟುಂಬಿಕ, ಸಾರ್ವಜನಿಕ ದಾಖಲೆಗಳನ್ನೆಲ್ಲ ಇಷ್ಟು ಕಾಲ ಜತನವಾಗಿ ಇಟ್ಟುಕೊಂಡು ಬಂದಿರುವ ಕುಟುಂಬದ ಸದಸ್ಯರಿಗೆ ಕೃತಜ್ಞತೆಗಳು. ಮತ್ತೆ ಇದನ್ನೆಲ್ಲ ಕ್ರೋಢೀಕರಿಸಿ, ಸಂಪಾದಿಸಿ, ಸೂಕ್ತವಾಗಿ ಕೃತಿ ರಚನೆಯಲ್ಲಿ ಬಳಸಿಕೊಂಡಿರುವ ವಿಶ್ವನಾಥರಿಗೂ ಅಭಿನಂದನೆಗಳು. ಇಲ್ಲಿ ಇನ್ನೂ ಒಂದು ವಿಷಯವನ್ನು ಕೂಡ ಪ್ರಸ್ತಾಪಿಸಬೇಕು. ಮುಂದೆ ನಮ್ಮ ಕುಟುಂಬದ ಬಗ್ಗೆ ಯಾರಾದರೂ ಜೀವನ ಚರಿತ್ರೆ, ಆತ್ಮಚರಿತ್ರೆ ಬರೆಯುತ್ತಾರೆಂದು ಈ ದಾಖಲೆಗಳನ್ನು ಯಾರೂ ಉಳಿಸಿಕೊಂಡು ಬಂದಿಲ್ಲ. ಕೆಲವು ದಾಖಲೆಗಳು ಹಾಗೆಯೇ ಉಳಿದುಕೊಂಡು ಬಂದಿವೆ ಮತ್ತು ಈಗ ವಿಶ್ವನಾಥರಂತವರ ಕೈ ಸೇರಿವೆ. ಹಾಗಾಗಿ ಈ ಸಂಪನ್ಮೂಲಗಳ ಬಳಕೆಯಲ್ಲಿ ಒಂದು ನಿಸ್ಪೃಹತೆ, ಪ್ರಾಮಾಣಿಕತೆ ಇದೆ. ಈ ಸಾಕ್ಷ್ಯಾಧಾರಗಳನ್ನು ಲೇಖಕರು ನಮ್ಮ ಮೇಲೆ ಹೇರುತ್ತಿದ್ದಾರೆ ಎಂದು ಓದುಗರಿಗೆ ಅನಿಸುವುದಿಲ್ಲ.
ಇತಿಹಾಸವನ್ನು, ಇತಿಹಾಸ ಪುರುಷರನ್ನು, ತೀರಾ ನಿಖರವಾಗಿ ಹೇಳಬೇಕೆಂದರೆ, ಮೈಸೂರು ಸಂಸ್ಥಾನದ ಇತಿಹಾಸ, ರಾಜಮನೆತನ, ಆಯ್ದ ದಿವಾನರುಗಳು ಮನೋಧರ್ಮ, ಗಾಂಧಿಗೆ ರಾಜಮನೆತನದ ಬಗ್ಗೆ ಇದ್ದ ನಿಲುವು ಈವರೆಗೆ ನಾವು ತಿಳಿದಿರುವ ಅಥವಾ ತಿಳಿದಿರುವುದನ್ನು ಸರಿಯಾದ, ನಿಜವಾದ ನೆಲೆ ಎಂದುಕೊಂಡಿರುಂವತವುದನ್ನು ಪ್ರಶ್ನಿಸಲು ಈ ಕೃತಿ ನಮಗೆ ಅನೇಕ ಒಳನೋಟಗಳನ್ನು ನೀಡುತ್ತದೆ. ನಾಲ್ವಡಿಯವರ ಋಜುಸ್ವಭಾವ, ಪ್ರಗತಿಶೀಲತೆ, ಮಿರ್ಜಾರವರ ಆಧುನಿಕತೆ ಇವುಗಳನ್ನು ಒಪ್ಪಿಕೊಳ್ಳುವ ಉತ್ಸಾಹದಲ್ಲಿ ನಾವು ದಿವಾನರುಗಳಿಗೆ, ಆಡಳಿತಕ್ಕೆ ಜನರ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಪತ್ರಿಕಾ ಸ್ವಾತಂತ್ರ್ಯ ಕುರಿತು ಯಾವ ನಿಲುವುಗಳಿದ್ದವು ಎಂಬ ಪ್ರಶ್ನೆಯನ್ನು ಮುಖ್ಯವಾಗಿ ಪರಿಗಣಿಸುವುದಿಲ್ಲ. ಈ ಕುರಿತು ವಿಶ್ವನಾಥರು ಸೂಕ್ತ ದಾಖಲೆಗಳನ್ನು ಉಲ್ಲೇಖಿಸಿ ವಸ್ತುನಿಷ್ಠ ಒಳನೋಟಗಳನ್ನು ನೀಡುತ್ತಾರೆ. ಇತಿಹಾಸದ, ಸಂಸ್ಕೃತಿಯ ವಿದ್ಯಾರ್ಥಿಗಳು ಈ ಉಲ್ಲೇಖಗಳನ್ನು ಗಮನಿಸಲೇಬೇಕು.
“ಬ್ರಿಟಿಷರ ವಿರುದ್ಧ ಯಾವ ಚಳುವಳಿಯೂ ನಡೆಯದಂತೆ ಬ್ರಿಟಿಷ್ ರೆಸಿಡೆಂಟರು ನೋಡಿಕೊಳ್ಳುತ್ತಿದ್ದರು. ಆದ್ದರಿಂದ ಮಹಾರಾಜರು ಸರಕಾರವನ್ನು ನಡೆಸುವಾಗ ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಇದ್ದರು. ಮೈಸೂರು ರಾಜ್ಯ, ಬ್ರಿಟಿಷರಿಗೆ ಅಧೀನವಾಗಿದ್ದರೂ ನೇರವಾದ ಅಧೀನತೆ ಇರಲಿಲ್ಲ. ಮಹಾರಾಜರ ಮೂಲಕ ಅಧೀನತೆ. ಈ ಮಿತಿಯನ್ನು ತಿಳಿದುಕೊಂಡಿದ್ದ ವೆಂಕಟಕೃಷ್ಣಯ್ಯನವರು ತಮ್ಮ ರಾಜಕೀಯ ಹೋರಾಟವನ್ನು, ಮಹಾರಾಜರನ್ನು ಮುಟ್ಟದಂತೆ ನಡೆಸಿದರು.”
“ಶೇಷಾದ್ರಿ ಐಯ್ಯರ್ ಅತ್ಯಂತ ಮೇಧಾವಿಗಳೂ, ಚತುರರೂ, ದಕ್ಷರೂ ಆಗಿದ್ದಲ್ಲದೆ ಬಹಳ ವರ್ಚಸ್ಸಿನಿಂದ ಕೂಡಿದ ಮಹಾನುಭಾವರಾಗಿದ್ದರು. ಆದರೆ ಪ್ರಜೆಗಳ ಹಕ್ಕು-ಬಾದ್ಯತೆಯ ವಿಷಯದಲ್ಲಿ ರಂಗಾಚಾರ್ಲು ಅವರಂತೆ ಉದಾರಿಗಳಾಗಿರಲಿಲ್ಲ. ಪ್ರಜಾ ಪ್ರತಿನಿಧಿ ಸಭೆಯು ತಮ್ಮ ಆಡಳಿತಕ್ಕೆ ಆತಂಕವೆಂಬ ಭಾವನೆಯಿಂದ ಅದನ್ನು ತಿರಸ್ಕಾರ ಮತ್ತು ತಾತ್ಸಾರ ಭಾವನೆಯಿಂದ ನೋಡುತ್ತಿದ್ದರು.”
“ಇಂದಿನ ಕಣ್ಣುಗಳಿಂದ ನೋಡಿದರೆ ಮೈಸೂರು ಸಂಸ್ಥಾನದ ಕೆಲವು ದಿವಾನರು ಬ್ರಿಟಿಷರ ಪರವೇ ಇದ್ದ ಹಾಗೆ ಕಾಣುತ್ತಿತ್ತು.”
“ಬ್ರಿಟಿಷರನ್ನು ಮೆಚ್ಚಿಸಬೇಕೆಂಬ ಮಹಾರಾಜರ ಮತ್ತು ಮೈಸೂರು ಸರ್ಕಾರದ ಮಿತಿಮೀರಿದ ಉತ್ಸಾಹವೇ ಅಪಕೀರ್ತಿಗೆ ಗುರಿಯಾದ ವೃತ್ತಪತ್ರಿಕಾ ಶಾಸನ ಜಾರಿಗೆ ಬರಲು ಬಹುಮಟ್ಟಿಗೆ ಕಾರಣವೆಂದು ಕಂಡು ಬರುತ್ತದೆ.”
“ಸರ್ಕಾರವನ್ನು ಟೀಕಿಸಿ ಪತ್ರಿಕೆಗಳಲ್ಲಿ ಬಂದ ಲೇಖನಗಳು ಮಿರ್ಜಾರಿಗೆ ಸರಿ ಎನಿಸಲಿಲ್ಲ. ಹಿಂದಿನವರಾರೂ ಪ್ರಯೋಗಿಸದೆ ಇದ್ದ ಶಸ್ತ್ರವನ್ನು ಮಿರ್ಜಾರವರು ಉಪಯೋಗಿಸಿದರು. ……. ಒಟ್ಟಿನಲ್ಲಿ ೧೯೨೯ನೇ ಆದಿ ಭಾಗದಲ್ಲಿ ಮಿರ್ಜಾ ಸರ್ಕಾರ ಬಹಳ ಉಗ್ರರೂಪವನ್ನು ತಾಳಿತ್ತು.”
“ಗಾಂಧೀಜಿಯವರು ಮೈಸೂರಿನ ಜನತೆಯ ಪ್ರಜಾಪ್ರಭುತ್ವದ ಆಕಾಂಕ್ಷೆಗಳ ಬಗ್ಗೆ ಅಷ್ಟು ಆಸಕ್ತಿ ವಹಿಸಲಿಲ್ಲವೆಂದು ತೋರುತ್ತದೆ.”
ಈ ಉಲ್ಲೇಖಗಳಷ್ಟೇ ಮುಖ್ಯವಾದ ಸಂಗತಿಯೆಂದರೆ, ವಿಶ್ವನಾಥರು ಮಿರ್ಜಾರವರ ಪ್ರಗತಿಶೀಲತೆಯನ್ನು, ದೂರದರ್ಶಿತ್ವವನ್ನು (ಕೆಲವು ಸಂಗತಿಗಳಲ್ಲಿ) ಮನಸಾರೆ ಮೆಚ್ಚುವುದು, ಲೇಖಕರಿರಲಿ, ಸ್ವತಃ ಪಾಲಹಳ್ಳಿ ರಾಮಯ್ಯನವರೇ ಮಿರ್ಜಾರ ಬಗ್ಗೆ ಕೆಲ ಸಂಗತಿಗಳನ್ನು ಕುರಿತಂತೆ ಸದಭಿಪ್ರಾಯ ಹೊಂದಿದ್ದರು. ದಿವಾನರ ಜೊತೆ ವೈಯಕ್ತಿಕ ಸಂಬಂಧ ಚೆನ್ನಾಗಿಯೇ ಇತ್ತು. ಇದು ಹಾಗಿರಲಿ, ಸ್ವತಃ ಮಿರ್ಜಾರವರೇ ಒಂದು ಸಂದರ್ಭದಲ್ಲಿ ರಾಮಯ್ಯನವರ ಪತ್ರಿಕಾ ಧೋರಣೆಯನ್ನು ಮೆಚ್ಚಿ ಪತ್ರ ಬರೆದಿದ್ದಾರೆ. ವಿಶ್ವನಾಥರು ಬರವಣಿಗೆಯಲ್ಲಿ ತೋರಿಸಿರುವ ಈ ಮನೋಧರ್ಮದ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದ ಬೆಳವಣಿಗೆಗಳನ್ನು ನಾವು ಇನ್ನೂ ಸಮಗ್ರವಾಗಿ ಗಮನಿಸಿಯೇ ಮೌಲ್ಯ ಮಾಪನ ಮಾಡಬೇಕೆನಿಸುತ್ತದೆ. ಹಾಗೆ ಮಾಡಲು ಈ ಕೃತಿ ನೀಡಿರುವ ವಿವರಗಳು ಪ್ರೇರಣೆ ನೀಡುತ್ತವೆ.
ಪತ್ರಿಕೋದ್ಯಮಕ್ಕೆ ಬರುವ ಮುಂಚೆಯೇ ರಾಮಯ್ಯನವರು ಮನೆ ಬಿಟ್ಟು ಓಡಿ ಹೋಗಿ ಕಾಶಿಯಲ್ಲಿ ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಅವರು ತಂದೆಗೆ ಬರೆದ ಪತ್ರ ಸೂಕ್ಷ್ಮವಾಗಿದೆ “ನೀವು ನನ್ನ ಮೇಲೆ ನಿಮ್ಮ ಅಭಿಪ್ರಾಯ, ವ್ಯಕ್ತಿತ್ವವನ್ನು ಹೇರುತ್ತಿದ್ದಿರಿ. ನಾನು ಸ್ವತಂತ್ರವಾಗಿ ಯೋಚಿಸಲು, ಅರಳಲು ಬಿಡುತ್ತಿರಲಿಲ್ಲ. ಎಲ್ಲದರಲ್ಲೂ ನಿಮ್ಮದೇ ಹಟ. ಇದರಿಂದಲೇ ಮನಸ್ತಾಪ. ನನ್ನ ಮದುವೆಯನ್ನು ಕೂಡ ನೀವೇ ನಿರ್ಧರಿಸಿದಿರಿ” ಎಂದೆಲ್ಲಾ ದೂರಿ ರಾಮಯ್ಯ ಬರೆಯುತ್ತಾರೆ. ಈ ಪತ್ರದಿಂದಲೇ ನನಗೆ ನಮ್ಮ ತಂದೆಯ ವ್ಯಕ್ತಿತ್ವದ ಬಗ್ಗೆ ಕುತೂಹಲ ಮೂಡಿತು ಎಂದು ವಿಶ್ವನಾಥ್ ಹೇಳುತ್ತಾರೆ.
ಗಾಂಧಿ-ಮಾಲವೀಯರಿಂದ ಪ್ರೇರಣೆ ಪಡೆದು ದಕ್ಷಿಣ ಭಾರತಕ್ಕೆ ಹಿಂತಿರುಗಿದ ಮೇಲೂ ಪತ್ರಿಕೋದ್ಯಮದ ಬಗ್ಗೆಯೇ ಎನ್ನುವಷ್ಟು ಆಸಕ್ತಿಯಿರಲಿಲ್ಲ. ಮದ್ರಾಸಿನ ಸ್ವರಾಜ್ಯ ಪತ್ರಿಕೆಯಲ್ಲಿ ಕೆಲಸ ಮಾಡುತ್ತಾ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಬೆಳೆಸಿಕೊಂಡಂತೆ ಕಾಣುತ್ತದೆ. ವಿಶ್ವನಾಥರು ನೀಡಿರುವ ವಿವರಗಳ ಪ್ರಕಾರ ರಾಮಯ್ಯನವರಿಗೆ ಸುದ್ದಿ, ಸಮಕಾಲೀನ ಪ್ರಜ್ಞೆ ಇರುವುದರ ಜೊತೆಗೆ, ತಂಡವೊಂದನ್ನು ಕಟ್ಟುವ, ಬೆಳೆಸುವ ಛಾತಿಯೂ ಇತ್ತು. ಇದು ಅವರು ಆಯ್ಕೆ ಮಾಡಿಕೊಳ್ಳುವ ಯಂತ್ರೋಪಕರಣಗಳಿಂದ, ಪತ್ರಿಕೆಯ ಸ್ವರೂಪ ಮತ್ತು ವ್ಯಾಪ್ತಿಯನ್ನು ಕ್ರಮೇಣವಾಗಿ ವಿಸ್ತರಿಸಿದ ರೀತಿಯಿಂದ, ಆ ಕಾಲಕ್ಕೇ ಬೇರೆ ಬೇರೆ ನಗರಗಳಲ್ಲಿ, ರಾಜ್ಯಗಳಲ್ಲಿ ಬಾತ್ಮೀದಾರರನ್ನು ನೇಮಕ ಮಾಡಿಕೊಳ್ಳುವ ದೂರದೃಷ್ಟಿಯಿಂದ ನಮಗೆ ಗೊತ್ತಾಗುತ್ತದೆ. ಸರ್ಕಾರ ಯಾವುದೇ ರೀತಿಯಲ್ಲಿ ಎಷ್ಟೇ ದಮನಕಾರಿಯಾಗಿದ್ದರೂ, ಅದರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳುತ್ತಾ, ಹೊಸ ಹೊಸ ಪತ್ರಿಕೆಗಳನ್ನು, ವೇದಿಕೆಗಳನ್ನು ಸ್ಥಾಪಿಸುತ್ತಾ ಹೋಗುತ್ತಾರೆ.
ಇಲ್ಲಿ ಎರಡು ಅಂಶಗಳನ್ನು ನಮೂದಿಸಬೇಕು. ತಂದೆಯ ವಿರುದ್ಧ ಬಂಡಾಯ, ಪ್ರತಿರೋಧ ತೋರಿದ ಮೇಲೆ ರಾಮಯ್ಯ ಮುಂದೆ ತಮ್ಮ ಜೀವನದಲ್ಲಿ ಗಂಡು ಮಕ್ಕಳ ವಿಷಯದಲ್ಲಾದರೂ ಹೆಚ್ಚಿನ ಸ್ವಾತಂತ್ರ್ಯ ನೀಡುತ್ತಾರೆ. ಮಗಳು ರಾಮೇಶ್ವರಿಗೆ ಈ ಸ್ವಾತಂತ್ರ್ಯ ನೀಡುವ ಹೊತ್ತಿಗೆ ಆಕೆಯ ಜೀವನ ಹಳಿ ತಪ್ಪಿರುತ್ತದೆ. ಮುಂದೆ ರಾಮಯ್ಯ ನಗರಸಭೆ ಸದಸ್ಯರಾಗುತ್ತಾರೆ. ಶಾಸನ ಸಭೆ ಸದಸ್ಯರಾಗುತ್ತಾರೆ. ಆ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಆದರೆ ಅವರ ದೂರದೃಷ್ಟಿ, ಕನಸುಗಾರಿಕೆ, ಚಿಂತನಶೀಲತೆ, ಸಂಘಟನಾಚಾತುರ್ಯ, ಎಲ್ಲವೂ ಸಮರ್ಥವಾಗಿ, ವ್ಯಾಪಕವಾಗಿ ವ್ಯಕ್ತವಾಗುವುದು ಪತ್ರಿಕೋದ್ಯಮದಲ್ಲೇ. ಪತ್ರಿಕೆ ಬೆಳೆಸುವುದೆಂದರೆ ಅದರ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಮತ್ತು ಪ್ರಯೋಗಶೀಲರಾಗಿರುವುದು ಎಂಬ ರಾಮಯ್ಯನವರ ವಿಚಾರ ಇಂದಿಗೂ ಯುಕ್ತವಾಗಿಯೇ ಇದೆ. ಈ ಧೋರಣೆಯ ರಾಮಯ್ಯ, ಕೆಂಗಲ್ ಹನುಮಂತಯ್ಯನವರಿಗೆ ಏಕೆ ವೈಯಕ್ತಿಕವಾಗಿ ಆಪ್ತರಾದರು? ಏಕೆ, ಹೇಗೆ, ಆ ಸಂಬಂಧದಿಂದ ಪತ್ರಿಕೆಯ ಕಾಂತಿ ಮಸುಕಾಯಿತು? ಎಂದು ಓದುಗರಾದ ನಮಗೆ ಮಾತ್ರವಲ್ಲ, ಸ್ವತಃ ವಿಶ್ವನಾಥರಿಗೂ ಕೂಡ ಪ್ರಶ್ನೆಗಳಿವೆ. ಇಂತಹ ಪ್ರಶ್ನೆಗಳು ಏನೇ ಇದ್ದರೂ, ರಾಮಯ್ಯನವರು-ಪತ್ರಿಕೆಯ ಸಂಬಂಧವನ್ನು ವಿಶ್ವನಾಥರು ಕರಾರುವಾಕ್ಕಾಗಿ ಗುರುತಿಸುತ್ತಾರೆ.
“ಒಂದು ಪತ್ರಿಕೆ ಹುಟ್ಟಿ ಬೆಳೆಯಬೇಕಾದರೆ ಹಲವಾರು ವಿಭಿನ್ನ ಕೌಶಲ್ಯ ಮತ್ತು ಸಾಮರ್ಥ್ಯಗಳಿರುವ ವ್ಯಕ್ತಿಗಳು ಕೆಲಸ ಮಾಡಬೇಕಾಗುತ್ತದೆ. ರಾಮಯ್ಯನವರು ತಮ್ಮ ಪತ್ರಿಕೆಯನ್ನು ಬೆಳೆಸುವಾಗ ಎಲ್ಲ ಕೆಲಸಗಳನ್ನೂ ಅವರೇ ಮಾಡಬೇಕಾಯಿತು. ದಿಟ್ಟ ಪತ್ರಕರ್ತ/ಸಂಪಾದಕ ಮತ್ತು ವ್ಯವಸ್ಥಾಪಕ/ಆಡಳಿತಗಾರ, ಉದ್ಯಮಿ, ಈ ಶೀರ್ಷಿಕೆಗಳಡಿಯಲ್ಲಿ ರಾಮಯ್ಯನವರ ವೃತ್ತಿ ಜೀವನದ ಸಾಧನೆಗಳನ್ನು ವಿಶ್ವನಾಥರು ಓದುಗರಿಗೆ ಪರಿಚಯ ಮಾಡಿಕೊಡುತ್ತಾರೆ. ತಾಯಿನಾಡು ಪತ್ರಿಕೆನಿಂತ ಸಂದರ್ಭದ ಚರ್ಚೆ ಕೂಡ ವಸ್ತುನಿಷ್ಠವಾಗಿದೆ. ಒಬ್ಬ ಮಗ ತಂದೆಯ ಉದ್ಯಮದ ಏಳು-ಬೀಳುಗಳ ಬಗ್ಗೆ ಬರೆಯುವ ಕೌಟುಂಬಿಕ ವರದಿಯಂತೆ. ಇಂತಹ ಚರ್ಚೆಗಳೆಲ್ಲ ಎಂಬುದನ್ನು ಗಮನಿಸಬೇಕು. ಕನ್ನಡ ಪತ್ರಿಕೋದ್ಯಮದ ಇತಿಹಾಸವನ್ನು ಕುರಿತು ಅಧ್ಯಯನದ ಮಾಡುವವರಿಗೆ ಇಲ್ಲಿ ವಿಪುಲ ಸಾಮಗ್ರಿಯಿದೆ, ಒಳನೋಟಗಳಿವೆ.
ವಿಶ್ವನಾಥರ ಬರವಣಿಗೆಯ ಇನ್ನೊಂದು ವೈಶಿಷ್ಟ್ಯವೆಂದರೆ, ವೈಯಕ್ತಿಕ ನೆಲೆಯಿಂದ ಕೌಟುಂಬಿಕ ನೆಲೆಗೆ, ನಂತರ ಸಾರ್ವಜನಿಕ ಬದುಕಿನ ನೆಲೆಗೆ ಮತ್ತೆ ವೃತ್ತಿಯ ನೆಲೆಗೆ ಯಾವುದೇ ಬಿರುಕಿಲ್ಲದಂತೆ ಚಲಿಸುತ್ತಾರೆ. ನಿರೂಪಣೆಯನ್ನು ಮುಂದುವರಿಸುತ್ತಾರೆ. ಮೇಲುನೋಟಕ್ಕೆ ಭಿನ್ನ ಭಿನ್ನ ನೆಲೆಗಳು ಎಂದು ಕಾಣುವುದು ಒಂದು ಏಕಸೂತ್ರವನ್ನು ಕೂಡ ಹೊಂದಿದೆ ಎಂಬುದನ್ನು ಕೂಡ ಅವರ ನಿರೂಪಣೆಯ ಕ್ರಮದಿಂದ ಓದುಗರಿಗೆ ವೇದ್ಯವಾಗುತ್ತದೆ.
ಆ ಕಾಲದ ಬೆಂಗಳೂರು, ಬಸವನಗುಡಿ ಬಗ್ಗೆ ಕೂಡ ವಿವರಗಳಿವೆ. ಇದಕ್ಕಿಂತ ಮುಖ್ಯವಾಗಿ, ಈಗಾಗಲೇ ನಗರದಲ್ಲಿ ನೆಲೆ ಊರಿರುವ ಒಂದು ಕುಟುಂಬ ಯಾವುದೇ ಸಂಪ್ರದಾಯವನ್ನು ವಿಶೇಷವಾಗಿ ಅನುಸರಿಸದೆ ಆದರೆ ಪ್ರಶ್ನಿಸದೇ ಕೂಡ ವಿದ್ಯಾಭ್ಯಾಸ, ವೃತ್ತಿಯ ಮೂಲಕ ಹೇಗೆ ಆಧುನಿಕತೆಯತ್ತ ಹೊರಳಿತು ಎನ್ನುವುದನ್ನು ಕೂಡ ವಿಶ್ವನಾಥ್ ಚರ್ಚಿಸುತ್ತಾರೆ. ಅವರು ನೀಡಿರುವ ಕುಟುಂಬದ ಭಾವಚಿತ್ರಗಳು ನಾನಾ ಕತೆಗಳನ್ನು ಹೇಳುತ್ತವೆ. ಆ ಕಾಲದ ಜೀವನ ಶೈಲಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಭಾಗದಲ್ಲಿ ಅವರು ದಾಖಲಿಸಿರುವ ಕೆಲ ಸಂಗತಿಗಳು ತೀರಾ ಖಾಸಗಿಯಾದವು. ಈ ವಿವರಗಳನ್ನೆಲ್ಲ ಅವರು ನಿರೂಪಣೆಯನ್ನು ಆಕರ್ಷಣೀಯವಾಗಿ ಮಾಡಲು ದಾಖಲಿಸುತ್ತಿಲ್ಲ ಎಂಬುದು ಅವರು ಅದನ್ನು ಮಂಡಿಸಿರುವ ಗಾಂಭೀರ್ಯ ಮತ್ತು ಸಂಯಮದ ಧ್ವನಿಯಿಂದಲೇ ಗೊತ್ತಾಗುತ್ತದೆ.
ರಾಮಯ್ಯನವರಿಗೆ ಎರಡು ಮದುವೆ ಆಗಿತ್ತು. 1911ರಲ್ಲಿ, 1920ರಲ್ಲಿ. ಎರಡನೇ ಮದುವೆ ಕುರಿತು, “ಏಕೋ, ಏನೋ ವಿವಾಹ ಮಾಡಿಕೊಳ್ಳುತ್ತಾರೆ” ಎಂದು ಬರೆಯುತ್ತಾರೆ. ಸಾಂಸಾರಿಕ ಜೀವನದ ಬಗ್ಗೆ ಬರೆದಿರುವ ಈ ಮಾತುಗಳನ್ನು ನೋಡಿ, “ಅದಲ್ಲದೆ ಯುವಕ ತನ್ನ ಗುರುಗಳು ಗಾಂಧೀಜಿ ಕಸ್ತೂರಿ ಬಾ ಅವರಿಗೆ ಕೊಟ್ಟಷ್ಟೇ ತೊಂದರೆಯನ್ನು ತನ್ನ ಹೆಂಡತಿಗೆ ಕೊಟ್ಟ.” ಇಬ್ಬರು ಹೆಂಡತಿಯರಿಗೂ ರಾಮಯ್ಯ ಹೊಡೆಯುತ್ತಿದ್ದರಂತೆ. ಇದರ ಬಗ್ಗೆ ಮುಂದೆ ಮಗಳು ರಾಮೇಶ್ವರಿ ಕೇಳಿದಾಗ, “ನನಗೆ ಬುದ್ಧಿ ಇರಲಿಲ್ಲ” ಎಂದರಂತೆ ರಾಮಯ್ಯ. ತಾಯಿಯನ್ನು ಕೇಳಿದಾಗ ಅವರು ನಕ್ಕುಬಿಟಿದ್ದರಂತೆ. ಸೋದರಿ ರಾಮೇಶ್ವರಿಯವರ ಮೊದಲ ಮದುವೆಯನ್ನು ಆತುರಾತುರವಾಗಿ ಮಾಡಿದ್ದು, ಆ ಮದುವೆ ದಡ ಹತ್ತದೆ ಹೋದಾಗ ತಪ್ಪನ್ನು ಒಪ್ಪಿಕೊಳ್ಳುವ ಪ್ರಾಂಜಲತೆ, ನಂತರದ ವಿವಾಹಕ್ಕೆ ಪ್ರೋತ್ಸಾಹಿಸಿದ್ದು, ಅದರಲ್ಲಿ ಭಾಗವಹಿಸಿದ್ದು ಇದೆಲ್ಲದರ ಸಂಯಮಪೂರ್ಣ ನಿರೂಪಣೆಯನ್ನು ಓದುಗರು ಗಮನಿಸಿಯೇ ಗಮನಿಸುತ್ತಾರೆ.
ಕುಟುಂಬ ಎಲ್ಲ ರೀತಿಯಲ್ಲೂ ಆಧುನಿಕತೆಗೆ ತೆರೆದುಕೊಳ್ಳುತ್ತಿತ್ತು. ಎಂತಹ ಆಧುನಿಕ ಕುಟುಂಬಗಳಲ್ಲೂ ಆಗಿನ ಕಾಲದಲ್ಲೂ (ಈಗಿನ ಕಾಲದಲ್ಲೂ) ಹೆಣ್ಣು ಮಕ್ಕಳನ್ನು ಬೆಳೆಸುವ ರೀತಿ, ಮದುವೆ ಮಾಡುವ ರೀತಿ, ಮದುವೆಗಳಿಂದ ನಿರೀಕ್ಷೆ ಇಟ್ಟುಕೊಳ್ಳುವ ರೀತಿ ಗಂಡು ಮಕ್ಕಳದ್ದಕ್ಕಿಂತ ಭಿನ್ನವಾಗಿರುತ್ತದೆ. ಒಂದೇ ವಾಕ್ಯದಲ್ಲಿ ಇದನ್ನು ದಾಖಲಿಸುವ ರೀತಿ ನೋಡಿ: “ನಮ್ಮ ತಾಯಿಯ ಕಡೆ ಗಂಡು ಹುಡುಗರಿಗೆ ಮದ್ರಾಸಿನ ಕಡೆಯ ಅದೂ ಶ್ರೀಮಂತ ಮನೆತನಗಳಿಂದ ಹೆಣ್ಣುಗಳನ್ನು ತಂದರು. ಆದರೆ ಹೆಣ್ಣು ಮಕ್ಕಳನ್ನು ಮೈಸೂರಿನ ಕಡಿಮೆ ಸಾಧಾರಣ ಮನೆತನದ ಹುಡುಗರಿಗೆ ಮದುವೆ ಮಾಡಿಕೊಟ್ಟರು.” ಈ ಕುಟುಂಬದ ಜೀವನ ಶೈಲಿಯ ಇನ್ನೊಂದು ಮುಖ್ಯವಾದ ಸಂಗತಿಯೆಂದರೆ, “ನಮ್ಮ ಮನೆ ಎಂಬ HouseJournal ಪ್ರಕಟಿಸಿ, ಕುಟುಂಬದ ಎಲ್ಲ ಸದಸ್ಯರೂ ಬರೆಯುತ್ತಿದ್ದರು.”
ತಾಯಿ ಜಯಲಕ್ಷ್ಮಮ್ಮನವರ ಬಗ್ಗೆ ಇರುವ ಪ್ರತ್ಯೇಕ ಅಧ್ಯಾಯ ಈ ಕೃತಿಯ ವಿಶಿಷ್ಟ ಮನಕಲಕುವ ಭಾಗ. ಸಾರ್ವಜನಿಕ ಜವಾಬ್ದಾರಿ, ಸಾಮಾಜಿಕ ಕಾಳಜಿಯಿಂದ ಅವರ ವ್ಯಕ್ತಿತ್ವ ವಿಕಾಸಗೊಳ್ಳುವುದು ರಾಮಯ್ಯನವರ ಶಾಸಕತನ, ಸಂಪಾದಕಗಿರಿ ಎಲ್ಲ ಮುಗಿದು, ಅವರು ಆಧ್ಯಾತ್ಮದ ಕಡೆ ಹೊರಳಿದಾಗ. ಇದನ್ನು ಹೋಲಿಸಿ ವಿಶ್ವನಾಥ್ ಹೀಗೆ ಬರೆಯುತ್ತಾರೆ:
“ಅಂತೂ 1957ರಲ್ಲಿ ನಮ್ಮ ತಂದೆ ಮೂವತ್ತು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಪತ್ರಿಕೆಯನ್ನು ಮಾರಿಬಿಟ್ಟು ಸಾರ್ಜನಿಕ ಜೀವನದಿಂದ ದೂರ ಸರಿದರು. ಆದರೆ ಸಾರ್ವಜನಿಕ ಜೀವನ ನಮ್ಮ ಮನೆಯಿಂದ ದೂರ ಸರಿಯಲಿಲ್ಲ. ನಮ್ಮ ತಂದೆ ಹೊರ ಜೀವನದಿಂದ ಮನೆಯ ಒಳಗೆ ಬಂದರು ಮತ್ತು ಸುಮಾರು ಅದೇ ಸಮಯದಲ್ಲಿ ನಮ್ಮ ತಾಯಿ ಒಳಗಿನಿಂದ ಹೊರ ಜೀವನಕ್ಕೆ ದೃಢವಾಗಿ ಕಾಲು ಇಡಲು ಶುರು ಮಾಡಿದರು. ಉಪಮೆ ಕೊಡಬೇಕೆಂದರೆ ನಮ್ಮ ಮನೆಯಲ್ಲಿ ಸೂರ್ಯಾಸ್ತವಾಗಿತ್ತು. ಆದರೆ ನಮ್ಮಗಳ ಅದೃಷ್ಟದಿಂದ ಚಂದ್ರೋದಯವೂ ತಕ್ಷಣವೇ ಶುರುವಾಯಿತು. ಸೂರ್ಯ ಪ್ರಖರ ಶಾಖವಿಲ್ಲದೆ ತಣ್ಣನೆಯ ಹುಣ್ಣಿಮೆಯ ಚಂದ್ರ. ಅದು ನಮ್ಮ ಮನೆಯ ಚಂದ್ರೋದಯ.”
ಜಯಲಕ್ಷ್ಮಮ್ಮನವರ ಸಾರ್ವಜನಿಕ ವ್ಯಕ್ತಿತ್ವಕ್ಕೆ ಹಲವಾರು ಆಯಾಮಗಳು. ಈ ಎಲ್ಲ ಆಯಾಮಗಳ ಗುರಿ ಒಂದೇ – ಸಾರ್ವಜನಿಕ ಸೇವೆ. “ನಮ್ಮ ಕಣ್ಣುಗಳ ಮುಂದೆಯೇ ನಮ್ಮ ಅಮ್ಮ ಜೀವನದಲ್ಲಿ ಸೋತ ಹೆಣ್ಣುಗಳ ಮತ್ತು ಅನಾಥ ಮಕ್ಕಳ ಅಮ್ಮನಾಗಿ ಪರಿವರ್ತನೆಗೊಳ್ಳುತ್ತಿದ್ದರು. ಹೀಗೆಯೇ ನಾವೆಲ್ಲಾ (ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು) ದೂರದಲ್ಲಿ ಹೋಗಿ ನೆಲಸುತ್ತಿದ್ದಂತೆ ಅಮ್ಮನಿಗೆ ಬೇರೆಯ ಮಕ್ಕಳು ಹುಟ್ಟಿಬಿಟ್ಟಿದ್ದರು.” ವಿಶ್ವನಾಥ್ ತಾಯಿಯ ಬಗ್ಗೆ ನೀಡಿರುವ ಎಷ್ಟೋ ವಿವರಗಳಲ್ಲಿ ನನ್ನ ಮನಸ್ಸನ್ನು ತುಂಬಾ ಕಲಕ್ಕಿದ್ದು ಸ್ವಂತ ಮಗನ (ವಿಶ್ವನಾಥನ) ಮದುವೆ ಸಂದರ್ಭದಲ್ಲಿ ಸೊಸೆಯಾಗುವವಳಿಗೆ ಹೇಳಿದ ಮಾತುಗಳು:
“ನೋಡು ಸರಿಯಾಗಿ ಯೋಚನೆ ಮಾಡು. ಅವಸರ ಬೇಡ. ಅವನು ಬಹಳ ವರ್ಷಗಳಿಂದ ಹೊರಗೆ ಇದ್ದವನು. ಅವನದ್ದೇ ಅಭ್ಯಾಸಗಳು. ಸರಿ ಹೋಗುತ್ತೋ ಇಲ್ಲವೋ ಯೋಚಿಸು.” ಮಗನೂ, ಲೇಖಕನೂ ಆಗಿರುವ ವಿಶ್ವನಾಥರ ವ್ಯಾಖ್ಯಾನ ಹೀಗಿದೆ: “ಇದು ಮಗ ಎಂಬ ಪಕ್ಷಪಾತ ತೋರಿಸದೆ ಮಹಿಳೆಯರ ವಿಷಯದಲ್ಲಿ ಅವರಿಗಿದ್ದ ಉದಾತ್ತ ಮನಸ್ಸನ್ನು ಸೂಚಿಸುತ್ತದೆ.”
ವಿಶ್ವನಾಥರ ಹಿರಿಯ ಸಹೋದರ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಪಿ. ಆರ್. ಬ್ರಹ್ಮಾನಂದರನ್ನು ಕುರಿತ ಪ್ರಸ್ತಾಪ, ವಿಶ್ಲೇಷಣೆ ಈ ಕೃತಿಯ ಭಾಗವಾಗಿಯೂ ಮುಖ್ಯವಾದದ್ದು. ಹಾಗೆಯೇ ಆ ಕಾಲಮಾನದ ಆರ್ಥಿಕ ಚಿಂತನೆಯ ಸ್ವರೂಪವನ್ನು ಗುರುತಿಸುವ ದೃಷ್ಟಿಯಿಂದಲೂ ಮುಖ್ಯವಾದದ್ದು. ವಿಶ್ವನಾಥರು ತಮ್ಮ ಸೋದರನ ಸ್ವಭಾವ, ವೈಚಿತ್ರ್ಯಗಳನ್ನು ಆತ್ಮೀಯವಾಗಿಯೇ ವಿವರಿಸುತ್ತಾರೆ.
ಲೇಖಕರು ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ಹೊರಟು ನಿಂತಾಗ ಬ್ರಹ್ಮಾನಂದರು ತೋರಿಸುವ ಪ್ರತಿರೋಧ ಕುತೂಹಲಕಾರಿಯಾದುದಾಗಿದೆ. ಆದರೆ ಒಂದು ಕಾಲದಲ್ಲಿ ದೇಶಾಂತರ ಹೋಗಿ ತನ್ನ ವ್ಯಕ್ತಿತ್ವ ರೂಪಿಸಿಕೊಂಡ ತಂದೆ ರಾಮಯ್ಯನವರು ವಿಶ್ವನಾಥರನ್ನು ಬೆಂಬಲಿಸುತ್ತಾರೆ. ಬ್ರಹ್ಮಾನಂದ್ ಅರ್ಥಶಾಸ್ತ್ರಜ್ಞರಾಗಿ ಆಗ ಪ್ರಚಲಿತವಿದ್ದ, ಪ್ರಭಾವಿಯಾಗಿದ್ದ ಕೇಂದ್ರೀಕರಣ, ನಗರೀಕರಣ, ಬಂಡವಾಳ ವಸ್ತುಗಳ ಉತ್ಪಾದನೆಗೆ ಪ್ರಾಧಾನ್ಯತೆಯನ್ನು ಆಧರಿಸಿದ ಮಹಾಲನೊಬಿಸ್-ನೆಹರೂ ಪ್ರಣೀತ ಆರ್ಥಿಕ ಬೆಳವಣಿಗೆಯ ಮಾದರಿಗೆ ವಿರೋಧಿಯಾಗಿದ್ದರು. ಸಿ. ಎನ್. ವಕೀಲರ ಜೊತೆ ಪರ್ಯಾಯ Wage-Good Model ಮುಂದಿಟ್ಟವರು. ಹೀಗಾಗಿ ಮುಂಬೈ ಅರ್ಥಶಾಸ್ತ್ರಜ್ಞರದೇ ಒಂದು ಪ್ರತ್ಯೇಕ ಗುಂಪಾಯಿತು. ದೆಲ್ಲಿ ಕೇಂದ್ರಿತ ಅರ್ಥಶಾಸ್ತ್ರಜ್ಞರು ಈ ಗುಂಪು ಮತ್ತು ಚಿಂತನೆಯನ್ನು ವಿರೋಧಿಸಿದರು. ಸಹಜವಾಗಿಯೇ ಸರ್ಕಾರಿ ಹುದ್ದೆ, ಸಮಿತಿಗಳಿಂದ ಈ ಗುಂಪು ದೂರ ಉಳಿಯಬೇಕಾಯಿತು.
ಬ್ರಹ್ಮಾನಂದರಿಗೆ ಅವರ ಪ್ರತಿಭೆಯ ಮಟ್ಟ, ಸ್ವರೂಪಕ್ಕೆ ಸಿಕ್ಕಬೇಕಾದ ಮನ್ನಣೆ ಕರ್ನಾಟಕದಲ್ಲಾಗಲೀ, ಅಖಿಲ ಭಾರತ ಮಟ್ಟದಲ್ಲಾಗಲೀ ಸಿಗಲಿಲ್ಲ. ಆದರೆ ಇದಕ್ಕಿಂತ ಹತ್ತು ಪಟ್ಟು ಹೆಚ್ಚು ವಿದೇಶೀಯ ಅರ್ಥಶಾಸ್ತ್ರಜ್ಞರು, ಅಂತರರಾಷ್ಟ್ರೀಯ ಆರ್ಥಿಕ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿದವು. ಈ ಎಲ್ಲ ಬೆಳವಣಿಗೆಗಳ ಹಿಂದಿನ ಮನೋಧರ್ಮ, ಸೂಕ್ಷ್ಮಗಳನ್ನು ವಿವರಿಸುತ್ತಲೇ ವಿಶ್ವನಾಥ್ ಆಗಿನ ಕಾಲದ ಮುಂಬೈ ನಗರದ ಜೀವನ ಹೇಗಿತ್ತು ಎಂಬುದರ ವಿವರಗಳನ್ನು ಕೂಡ ನೀಡುತ್ತಾರೆ. ಮುಂಬೈ ಕೂಡ ಇನ್ನೂ ಒಂದು ಸಣ್ಣ, ಆತ್ಮೀಯ ಪಟ್ಟಣದಂತೆಯೇ, ಜೀವಂತಿಕೆ ಪುಟಿಯುತ್ತಿರುವ ಕಾರಂಜಿಯಂತೆಯೇ ಕಾಣುತ್ತದೆ. ಇದೇ ಕಾಲದ ಇದೇ ಮುಂಬೈ ಆಗತಾನೇ ಕನ್ನಡದಲ್ಲಿ ಬರೆಯಲು ಶುರುಮಾಡಿಕೊಂಡಿದ್ದ ನಗರ ಪ್ರಜ್ಞೆಯ ಲೇಖಕರಾದ ಬಲ್ಲಾಳ, ದೇಸಾಯಿ ಮತ್ತು ಚಿತ್ತಾಲರಿಗೆ ಬೇರೆ ರೀತಿಯೇ ಕಂಡಿದೆ ಎಂಬುದು ಕುತೂಹಲಕರ. ಗಾಂಧಿವಾದಿ ಹಿನ್ನೆಲೆಯಿಂದ ಬಂದ ಬ್ರಹ್ಮಾನಂದರು ವಿಕೇಂದ್ರೀಕರಣ, ಕೃಷಿ ಪ್ರಾಧಾನ್ಯ ಅರ್ಥವ್ಯವಸ್ಥೆಯ ಪರವಾಗಿ ನಿಂತಿದ್ದು, ಅದಕ್ಕಾಗಿ ಹೋರಾಡಿದ್ದು ಸಹಜವಾಗಿಯೇ ಇದೆ. ಇದನ್ನು ಕುರಿತ ವಿಶ್ವನಾಥರ ಒಂದು ವಾಕ್ಯ ಹೀಗಿದೆ: “ಸರಳ ವಸ್ತ್ರಗಳನ್ನು ಧರಿಸಿಕೊಂಡು ನಯನಾಜೂಕುಗಳಿಗೆ ಹೆಚ್ಚು ಮಹತ್ವ ಕೊಡದ ಖಂಡಿತವಾದಿಯಾದ ಬ್ರಹಾನಂದ ಅಂತವರು ಪಶ್ಚಿಮದ ಗಾಳಿ ಕುಡಿದು ಆಧುನಿಕತೆಯ ಸೋಗಿದ್ದ ನಾಜೂಕು ಸಮಕಾಲೀನರ ಮಧ್ಯೆ ಹೊಂದಿಕೊಂಡು ಹೋಗುವುದು ಕಷ್ಟವಾಗಿದ್ದಿರಬಹುದು.”
ಈ ಕುಟುಂಬ ಕತೆಯ ಇನ್ನೊಂದು ವೈಶಿಷ್ಟ್ಯವೆಂದರೆ, ಬರವಣಿಗೆಯು ಕುಟುಂಬದ ಸದಸ್ಯರಿಂದಲೂ ಆಚೆಗೆ ಹೋಗುವುದು. ಇವರಲ್ಲಿ ಕೆಲವರು ರಕ್ತ ಸಂಬಂಧಿಗಳು, ಕೆಲವರು ಅಲ್ಲ. ಆದರೆ ಇವರ ಚಿತ್ರಗಳು ಕೂಡ ಆತ್ಮೀಯವಾಗಿಯೇ ಇವೆ. ನಮ್ಮ ಕುಟುಂಬದ ಸದಸ್ಯರ ಸಾಧನೆಯ ಮುಂದೆ ಇವರದೇನು ಎಂಬ ಧೋರಣೆಯಿಲ್ಲ. ಅವರ ಜೀವನ ಶೈಲಿ, ಹೆಣಗಾಟದ ಬಗ್ಗೆ ಕೂಡ ಲೇಖಕರಿಗೆ ಗೌರವವಿದೆ, ಆದರವಿದೆ. ಕಸಿನ್ ಸಾಮಿಯ ವ್ಯಕ್ತಿಚಿತ್ರ ನನ್ನನ್ನು ತುಂಬಾ ಕಾಡಿತು. ಈಗಿನ ಕಾಲದ ನಮ್ಮಂತವರಿಗೆ ಸ್ವಲ್ಪ ಅಡ್ಡಾದಿಡ್ಡಿ ಮನುಷ್ಯನಂತೆ ಕಾಣುವ ಸಾಮಿಯ ಜೀವನದ ಏಳು-ಬೀಳುಗಳನ್ನು ವಿವರಿಸಿದ ನಂತರ ವಿಶ್ವನಾಥ್ ಎತ್ತುವ ಒಂದು ಪ್ರಶ್ನೆ ತುಂಬಾ ಮೌಲಿಕವಾದದ್ದು. “ಅವನ ಜೀವನದತ್ತ ನೋಡಿದಾಗ ಒಂದು ಯೋಚನೆ ಬರದಿರುವುದಿಲ್ಲ. ಸಾಮಿ ಬುದ್ಧನೂ ಅಲ್ಲ, ಗಾಂಧಿಯೂ ಅಲ್ಲ. ಆದರೆ ಅವರಂತೆಯೇ ಮನೆಯವರನ್ನು ಕಡೆಗಣಿಸಿ ಹೊರ ಪ್ರಪಂಚಕ್ಕೆ ತನ್ನ ಕೈಲಾದಷ್ಟು ಸಹಾಯ ಮಾಡಿದನು. ನನ್ನ ಹೆಂಡತಿ, ನನ್ನ ಮಕ್ಕಳು ಎನ್ನುತ್ತಲೇ ಇದ್ದರೆ ಪರರು ನಮಗೆ ಹೆಚ್ಚಾಗಿ ಕಾಣುವುದಿಲ್ಲವೋ ಏನೋ! ಮನುಷ್ಯರಲ್ಲಿ ಒಂದಿದ್ದರೆ ಇನ್ನೊಂದಿಲ್ಲದಿರುವುದನ್ನು ಕಂಡರೆ ಮಾನವನ ಹೃದಯ ವೈಶಾಲ್ಯ ಅಷ್ಟೇ ಏನೋ ಎನ್ನಿಸುತ್ತದೆ. ಅಥವಾ ಯಾವ ಯಾವುದೋ ಕಾರಣಗಳಿಗೆ ನಮ್ಮವರನ್ನು ನಾವೇ ಕಡೆಗಣಿಸಿದಾಗ ನಾವು ಪ್ರಾಯಶ್ಚಿತ್ತವಾಗಿ ಪರರಿಗೆ ಉಪಕಾರಿಗಳಾಗಲು ಪ್ರಯತ್ನಿಸುತ್ತೇವೆಯೇ? ಈ ಪ್ರಶ್ನೆಗಳಿಗೆ ಉತ್ತರಗಳಿರಲಿ, ಸ್ಪಷ್ಟವಾದ ಪ್ರಶ್ನೆಗಳನ್ನು ಹೇಳುವುದೂ ಕಷ್ಟ.”
ತಂದೆ ಸ್ವಾತಂತ್ರ್ಯ ಹೋರಾಟಗಾರ, ಧೀಮಂತ ಪತ್ರಕರ್ತ, ಕನ್ನಡ ನಾಡಿನ ಪತ್ರಿಕೋದ್ಯಮದ ಇತಿಹಾಸದ ಮೊದಮೊದಲ ಪುಟಗಳ ಸ್ವರೂಪವನ್ನು ನಿರ್ಧರಿಸಿದವರು, ಸೋದರ ವಿಶ್ವಖ್ಯಾತಿಯ ಅರ್ಥಶಾಸ್ತ್ರಜ್ಞ, ಸೋದರಿ ಪ್ರಸಿದ್ಧ ರಂಗತಜ್ಞೆ, ವಿಶ್ವನಾಥರೇ ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನ ಪ್ರಾಧ್ಯಾಪಕರು, ಪ್ರಸಿದ್ಧ ಕನ್ನಡ ವಿಜ್ಞಾನ ಲೇಖಕರು; ಕುಟುಂಬವೇ ಒಟ್ಟಾರೆಯಾಗಿ ಹಳೆ ಮೈಸೂರು, ಬೆಂಗಳೂರಿನ ಸಾಂಸ್ಕೃತಿಕ ಗುರುತುಗಳನ್ನು ಕಟ್ಟಲು ಗಣನೀಯವಾಗಿ ಕಾಣಿಕೆ ನೀಡಿರುವಂತದ್ದು. ಆದರೆ ಇದ್ಯಾವುದೂ ತಮ್ಮ ಬರವಣಿಗೆಯಲ್ಲಿ ಹೊರೆಯಾಗದಂತೆ ವಿಶ್ವನಾಥರ ನಿರೂಪಣೆಯ ಧ್ವನಿ ಮತ್ತು ವಸ್ತುನಿಷ್ಠತೆಯಿದೆ. ಆ ಕಾಲದಲ್ಲಿ ಬದುಕಿದ, ವಿಕಾಸಗೊಂಡ ಉಳಿದ ಕುಟುಂಬಗಳಂತೆಯೇ ತನ್ಮದೂ ಒಂದು ಎಂಬ ನಿರ್ಮಮ ಭಾವದಲ್ಲೇ ವಿಶ್ವನಾಥ್ ಬರೆದಿದ್ದಾರೆ. ಹೀಗಾಗಿ ಅವರ ಕುಟುಂಬದ, ಮನೆಯ ಒಳಾಂಗಣದ ಸಾಧಾರಣ, ಸಾಮಾನ್ಯ ವಿವರಗಳೂ ಕೂಡ ಈ ಕೃತಿಯಲ್ಲಿ ಪ್ರವೇಶಿಸಿವೆ. ಇನ್ನೂ ಮುಖ್ಯವಾಗಿ ಆ ಕಾಲದ ಹಳೆ ಮೈಸೂರು, ಬೆಂಗಳೂರು-ಮೈಸೂರು ನಗರಗಳ ಜೀವನ ಶೈಲಿ, ವಿವರಗಳನ್ನು ಕುರಿತು ನಮ್ಮ ಜನಪ್ರಿಯ ಕತೆ-ಕಾದಂಬರಿಗಳು ನೀಡಿರುವುದಕ್ಕಿಂತ ಭಿನ್ನವೇ ಆದ ಚಿತ್ರಣವನ್ನು ನೀಡುತ್ತದೆ. ಈ ಕಾರಣಕ್ಕಾಗಿಯೂ ವಿಶ್ವನಾಥರ ಕೃತಿಗೆ ಸಾಂಸ್ಕೃತಿಕ ಮಹತ್ವವಿದೆ.
ಕನ್ನಡದಲ್ಲಿ ಜೀವನ ಚರಿತ್ರೆ, ಆತ್ಮಚರಿತ್ರೆಯ ಬರವಣಿಗೆಗೆ ಮಾದರಿಗಳಿವೆ. ಕುಟುಂಬದ ಚರಿತ್ರೆ ಬರೆಯುವುದಕ್ಕೆ ಮಾದರಿಗಳಿಲ್ಲ. ಆ ದಿಕ್ಕಿನಲ್ಲಿ ವಿಶೇಷ ಪ್ರಯತ್ನಗಳೂ ಕೂಡ ನಡೆದಿಲ್ಲ, ನನಗೆ ತಿಳಿದಂತೆ. ವಿಶ್ವನಾಥರ ಕೃತಿ ಬೇರೆ ಬೇರೆ ಪ್ರದೇಶಗಳಿಗೆ ಸೇರಿದ, ಭಿನ್ನ ಸಾಮಾಜಿಕ, ಆರ್ಥಿಕ ಸ್ತರಗಳಿಗೆ ಸೇರಿದವರು ಕುಟುಂಬ ಚರಿತ್ರೆಗಳನ್ನು ಬರೆಯಲು ಖಂಡಿತವಾಗಿ ಪ್ರೇರಣೆ, ಮಾದರಿಗಳನ್ನು ಒದಗಿಸುತ್ತದೆ. ಇಂತಹ ವಿಶಿಷ್ಯ ಕೃತಿಯೊಂದರ ಬರವಣಿಗೆಗಾಗಿ ವಿಶ್ವನಾಥರಿಗೆ ಅಭಿನಂದನೆಗಳು.
ಬ್ರಹ್ಮಾನಂದ ಸ್ಮಾರಕ ಉಪನ್ಯಾಸದ ಸಂದರ್ಭದಲ್ಲಿ ಕೆಲವರ್ಷಗಳ ಹಿಂದೆ ವಿಶ್ವನಾಥರ ಪರಿಚಯವಾಯಿತು. ವಿಜ್ಞಾನ ಬರವಣಿಗೆ, ವಿಜ್ಞಾನಿಗಳ ಜೀವನ ಚರಿತ್ರೆಗಳನ್ನು ಓದಲು ಪ್ರೋತ್ಸಾಹಿಸಿದರು. ನನ್ನ ಕೆಲವು ಬರವಣಿಗೆಗಳನ್ನು ಕೂಡ ಬೇರೊಂದು ದೃಷ್ಟಿಯಲ್ಲಿ ವಿಶ್ಲೇಷಿಸಿ ಪ್ರೋತ್ಸಾಹಿಸಿದರು. ಆ ವೇಳೆಗಾಗಲೇ ಅವರು ಈ ಕೃತಿಯನ್ನು ಬರೆಯಲು ಪ್ರಾರಂಭಿಸಿದ್ದರು. ಹಲವು ರೀತಿಯ ಪರಿಷ್ಕರಣೆ, ಮರುಸಂಯೋಜನೆಗಳನ್ನು ಈ ಕೃತಿ ಹಾದು ಬಂದಿದೆ. ನನ್ನ ಬಗ್ಗೆ ವಿಶ್ವಾಸ ತೋರಿ ಇಂತಹ ಬದಲಾವಣೆ, ಪರಿಷ್ಕರಣೆಗಳನ್ನು ಒಮ್ಮೊಮ್ಮೆ ವಿಶ್ವನಾಥರು ನನ್ನ ಕೂಡ ಪ್ರಸ್ತಾಪಿಸುತ್ತಿದ್ದರು.
ಈಗ ಈ ಕೃತಿಗೆ ಪ್ರವೇಶ ಬರಹವನ್ನು ಬರೆಯುವ ಅಪೂರ್ವ ಅವಕಾಶವನ್ನು ಕೂಡ ನೀಡಿದ್ದಾರೆ. ಅವರಿಗೆ ಕುಟುಂಬದ ಸದಸ್ಯರಿಗೆ, ವಂದನೆಗಳು, ಶುಭಾಶಯಗಳು.
ಕೆ.ಸತ್ಯನಾರಾಯಣ ಕನ್ನಡದ ಪ್ರಮುಖ ಬರೆಹಗಾರರಲ್ಲಿ ಒಬ್ಬರು. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವಿಸ್‌ಗೆ ಸೇರಿದ ಅವರು ಆದಾಯ ತೆರಿಗೆ ಇಲಾಖೆಯಿಂದ ನಿವೃತ್ತರಾಗುವಾಗ ಕರ್ನಾಟಕ ಮತ್ತು ಗೋವಾ ವಲಯದ ಮುಖ್ಯ ಆಯುಕ್ತರಾಗಿದ್ದರು. ಸಣ್ಣಕತೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣ ಬರೆಹ, ವಿಮರ್ಶೆ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಬಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯ ಅವರಿಗೆ 2013ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ.
ಉದ್ಯಮಶೀಲರು ಸೋಲಿನಿಂದ ಧೃತಿಗೆಡದೇ ಸಮರ್ಥ ಮಾರ್ಗದರ್ಶನ ,ಸ್ಪಷ್ಟ ಗುರಿಯೊಂದಿಗೆ ಸತತ ಪ್ರಯತ್ನ ಮಾಡಿದಾಗ ಯಶಸ್ಸು ಸಾಧ್ಯ.ಮುದ್ರಾ,ಜೀವನೋಪಾಯ ಯೋಜನೆಗಳಡಿ ಆರ್ಥಿಕ ನೆರವು ನೀಡಲಾಗುತ್ತಿದೆ.ಕೌಶಲ್ಯಾಭಿವೃದ್ಧಿಪಡಿಸಿಕೊಂಡು ಯಶಸ್ಸು ಸಾಧಿಸಬಹುದು.ದೇಶದಲ್ಲಿ ಕರ್ನಾಟಕವೇ ಮೊದಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಕಲಿಕೆಯೊಂದಿಗೆ ಕೌಶಲ್ಯ ಬೆಳೆಸಲು ಸಂಕಲ್ಪ ಮಾಡಿದೆ ಎಂದು ಉನ್ನತಶಿಕ್ಷಣ,ಐಟಿ-ಬಿಟಿ,ವಿಜ್ಞಾನ ಮತ್ತು ತಂತ್ರಜ್ಞಾನ,ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಕೌಶಲ್ಯಾಭಿವೃದ್ಧಿ,ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆಯು ಬೇಲೂರು ಕೈಗಾರಿಕಾ ಪ್ರದೇಶದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ(ಸಿಡಾಕ್)ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ವಿಶ್ವ ಉದ್ಯಮಶೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ಸರ್ಕಾರ ಇದೇ ಮೊದಲ ಬಾರಿಗೆ ವಿಶ್ವ ಉದ್ಯಮಶೀಲರ ದಿನ ಆಚರಿಸುತ್ತಿದೆ.ಸಮಾಜವನ್ನು ಸದೃಢವಾಗಿ ಕಟ್ಟಲು ಉದ್ಯಮಶೀಲತೆ ಬಹಳ ಮುಖ್ಯ,ಯುವಜನರಲ್ಲಿ ಸಂಚಲನ ಮೂಡಿಸಲು , ಕೌಶಲ್ಯ ಬೆಳಸಲು 30 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಹಾಗೂ ಕೈಗಾರಿಕಾ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅವರು ಧಾರವಾಡದಲ್ಲಿ ಸಿಡಾಕ್ ಸಂಸ್ಥೆ ಸ್ಥಾಪಿಸಿರುವುದು ಪ್ರಶಂಸನೀಯ ಕಾರ್ಯವಾಗಿದೆ. ಯಾವುದೇ ಉದ್ಯಮ ಯಶಸ್ಸಿಗೆ ವ್ಯಾಪಾರದ ಕೌಶಲಗಳು ಅಗತ್ಯ, ಹಾಗಾದಾಗ ಮಾತ್ರ ಫಲ ಕಾಣಲು ಸಾಧ್ಯ. ವಿಜ್ಞಾನ ,ತಂತ್ರಜ್ಞಾನದ ಯುಗದಲ್ಲಿ ಯಾವುದೇ ಹಳ್ಳಿಯಿಂದಲಾದರೂ ಬಂದಿರುವ ವ್ಯಕ್ತಿ ಉದ್ಯಮಶೀಲನಾಗಿ ಬೆಳೆಯಲು ಸಾಧ್ಯವಿದೆ.ಕೃಷಿ ಬೆಳೆ,ಉತ್ಪಾದನೆ ಮಾರುಕಟ್ಟೆ ಪರಸ್ಪರ ಅವಲಂಬಿತವಾಗಿವೆ.ಈಗಿನ ಡಿಜಿಟಲ್ ಮಾರುಕಟ್ಟೆ ತಂತ್ರಜ್ಞಾನ ಬಳಸಿಕೊಂಡು ವ್ಯವಹಾರ ಮಾಡುತ್ತಿರುವ ಸಂಸ್ಥೆಗಳನ್ನೇ ಆಧರಿಸಿ ನಮ್ಮ ಉದ್ಯಮಗಳನ್ನು ಸಶಕ್ತಗೊಳಿಸಬೇಕು.ನಮ್ಮಲ್ಲಿರುವ ಅನೇಕ ಗೃಹ,ಗುಡಿಕೈಗಾರಿಕೆಗಳು ಮಾರುಕಟ್ಟೆ ಕೊರತೆಯನ್ನು ಈ ಮೂಲಕ ನೀಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುವುದು. ಯಶಸ್ವಿ ಉದ್ಯಮಿಗಳ ಸಾಧನೆಯನ್ನು ಗುರುತಿಸಿ,ಅಭಿನಂದಿಸುವ ಹಾಗೂ ಅವರ ಮೂಲಕ ಪ್ರೇರಣೆ ಮಾಡುವ ಉದ್ದೇಶದಿಂದ ವಿಶ್ವ ಉದ್ಯಮಶೀಲರ ದಿನಾಚರಣೆಗೆ ಸರ್ಕಾರ ಮುಂದಾಗಿದೆ.
ಮುದ್ರಾ ಯೋಜನೆ,ಜೀವನೋಪಾಯ ಯೋಜನೆಗಳ ಮೂಲಕ ಆರ್ಥಿಕ ನೆರವು,ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಕಾರ್ಯಕ್ರಮಗಳಿವೆ.ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮೂಲಕ ಕಲಿಕೆಯೊಂದಿಗೆ ಬದುಕಿಗೆ ಅಗತ್ಯವಾಗಿರುವ ಔದ್ಯೋಗಿಕ ಕೌಶಲ್ಯವನ್ನು ಬೆಳೆಸುವ ಕಾರ್ಯವನ್ನು ಕರ್ನಾಟಕದಿಂದಲೇ ಪ್ರಾರಂಭಿಸಲಾಗುತ್ತಿದೆ. ಉದ್ಯಮಶೀಲತೆಯ ಅಭಿವೃದ್ಧಿಗೆ ಸರ್ಕಾರ ,ಸರ್ಕಾರೇತರ ಸಂಸ್ಥೆಗಳ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ.ಶ್ರಮ,ಆಸಕ್ತಿ ಮತ್ತು ಗುಣಮಟ್ಟದ ಸೇವೆಗಳ ಮೂಲದ ಸದೃಢ ಗುಣಮಟ್ಟದ ರಾಷ್ಟ್ರ ನಿರ್ಮಾಣ ಸಾಧ್ಯ .ಬಸವಣ್ಣನವರು ಇದನ್ನೇ ಕಾಯಕವೇ ಕೈಲಾಸ ಎಂದು ವ್ಯಾಖ್ಯಾನಿಸಿದ್ದಾರೆ. ವಿಶ್ವದಲ್ಲಿಯೇ ಕರ್ನಾಟಕ ಉದ್ಯಮಶೀಲತೆಯಲ್ಲಿ ಉನ್ನತ ಸಾಧನೆ ಮಾಡಲು ಸಂಕಲ್ಪ ಮಾಡೋಣ, ಸೋಲಿನಿಂದ ಧೃತಿಗೆಡದೇ ಸಮರ್ಥ ಮಾರ್ಗದರ್ಶನ ,ಸ್ಪಷ್ಟ ಗುರಿಯೊಂದಿಗೆ ಯಶಸ್ಸು ಸಾಧಿಸಬಹುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ವಿಶ್ವ ಉದ್ಯಮಶೀಲರ ದಿನಾಚರಣೆಯ ಮೊದಲ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಧಾರವಾಡದಲ್ಲಿ ಆಯೋಜಿಸಿರುವುದು ಅಭಿನಂದನೀಯ.ಉದ್ಯಮಶೀಲತೆಗೆ ಶಕ್ತಿ ತುಂಬಲು,ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು ಅಗತ್ಯವಿದೆ.ಯಾವುದೇ ದೇಶದ ಸರ್ವಾಂಗೀಣ ಅಭಿವೃದ್ಧಿ,ಆರ್ಥಿಕ ಸಬಲತೆ ಸಾಧಿಸಲು ಉದ್ಯಮಶೀಲತೆ ಮುಖ್ಯ . ಉದ್ಯಮಶೀಲರಿಗೆ ಸ್ನೇಹಿಯಾಗಿರುವ ನೀತಿ ಜಾರಿಗೊಳಿಸುವುದು ಅವಶ್ಯವಾಗಿದೆ . ವೃತ್ತಿಯೊಳಗೆ ಮೇಲು ಕೀಳು ಭಾವ ತೊರೆದು ಕಾಯಕಶ್ರೇಷ್ಟತೆಗೆ 12 ನೇ ಶತಮಾನದಲ್ಲಿ ಬಸವಣ್ಣನವರು ಮನ್ನಣೆ ನೀಡಿದ್ದರು ಎಂದು ಸ್ಮರಿಸಿದರು.
ಕೃಷಿಕಲ್ಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಂ.ಪಾಟೀಲ ತಮ್ಮ ಉದ್ಯಮಶೀಲತೆಯ ವಿಕಸನದ ಹಾದಿ ಕುರಿತು ಆಶಯ ಭಾಷಣ ಮಾತನಾಡಿದರು.
ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಮಾತನಾಡಿ, ಕೃಷಿ ಮತ್ತು ಕೃಷಿಯೇತರ ಕ್ಷೇತ್ರಗಳನ್ನು ಸಮ್ಮಿಳಿತಗೊಳಿಸಿ ಕಾರ್ಯಕ್ರಮ ರೂಪಿಸಿದರೆ ಗ್ರಾಮೀಣ ಭಾಗಗಳಿಗೂ ಉದ್ಯಮಶೀಲತೆ ವಿಸ್ತರಿಸಲು ಸಾಧ್ಯವಾಗುತ್ತದೆ ಎಂದರು.ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಜಯಪ್ರಕಾಶ್ ಟೆಂಗಿನಕಾಯಿ ಮಾತನಾಡಿದರು.
ಸನ್ಮಾನ: ಯಶಸ್ವಿ ಉದ್ಯಮಿಗಳಾದ ಅಲ್ಲಮಪ್ರಭು ಬಿರಾದಾರ,ಲತೀಶಬಾಬು ಪಿಎಸ್,ಬೆಂಗಳೂರಿನ, ಪರಿಮಳಾ ಎನ್, ಬೆಳಗಾವಿಯ ಜ್ಯೋತಿ ಕುಲಕರ್ಣಿ,ಬಳ್ಳಾರಿಯ ಮಧುಸೂಧನ ,ಸಂಜೀವಕುಮಾರ್ ಭಾಸನ್, ಯು.ಟಿ.ಮಾದನಾಯಕ, ಎಂ.ಮಂಗಳ,ಅಂಜನಪ್ಪ ಎಸ್.ಟಿ,ಕ್ಯಾತಣ್ಣ ಎ, ಮೋಹನ್ ಕೆ ಚಿಂಚಲಿ,ಅನೀಲ್ ಎಸ್,ಜಯಶ್ರೀ ಹಿರೇಮಠ,ಶ್ರೀನಿವಾಸ ಎಸ್ ಆರ್,ನಾಗನಗೌಡ ಕರೇಗೌಡ್ರ,ಚಂದ್ರಕಾಂತ ಹಾಗರಗಿ,ಮುದ್ದುಮಹದೇವ, ಸಿಂಪು ದಿನೇಶ್,ಸಿದ್ದಪ್ಪ ಗುಡ್ಡೋಡಗಿ, ಮಂಜುಳ ಜಿ.ವಿ,ರಾಧಾಕೃಷ್ಣ ಇಟ್ಟಿಗುಂಡಿ,ಚಂದ್ರ ಕೆ ಹರ್ಷ,ವಿದ್ಯಾ ಗುಪ್ತಾ,ಶ್ವೇತಾ ಎಸ್,ಮಮತಾಬಾಯಿ,ರಾಜಮ್ಮ,ಸುಬ್ರಮಣ್ಯ ಕುಲಾಲ್,ಪ್ರಭಾಕರ್ ರಾಯ್ಕರ್,ರುಕ್ಮಿಣಿನಾಯಕ,ಮೆಹಬೂಬ್ ದೇಸುಣಗಿ ಹಾಗೂ ವಿಶ್ವನಾಥ ಬಡಿಗೇರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ,ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡ್ರ,ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ,, ಬೇಲೂರು ಗ್ರಾ.ಪಂ.ಅಧ್ಯಕ್ಷೆ ಅಕ್ಕಮಹಾದೇವಿ ಕಲ್ಲಪ್ಪ ಬಡವಣ್ಣವರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉದ್ಯಮಶೀಲರ ಯಶೋಗಾಥೆ, ವ್ಯಕ್ತಿ ಚಿತ್ರಣಗಳ ಕೈಪಿಡಿ “ಸಂಕಲ್ಪ” ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಸಿಡಾಕ್ ನಿರ್ದೇಶಕ ಡಾ.ವೀರಣ್ಣ ಎಸ್.ಎಚ್.ಪ್ರಾಸ್ತಾವಿಕ ಮಾತನಾಡಿದರು.ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿದರು.