25.8 C
Karnataka
Friday, May 22, 2026
    Home Blog Page 62

    ಭೈರಪ್ಪ ಹುಟ್ಟೂರು ಅಭಿವೃದ್ಧಿಗೆ ಸರ್ಕಾರ ಬದ್ಧ -ಸಚಿವ ಸುನಿಲ್ ಕುಮಾರ್

    MYSORE AUG 25

    ಡಾ. ಎಸ್ ಎಲ್ ಭೈರಪ್ಪ ಅವರ ಹುಟ್ಟೂರಿನ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಇಂಧನ ಹಾಗು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಹೇಳಿದ್ದಾರೆ.ಅವರು ಇಂದು ಮೈಸೂರಿನಲ್ಲಿ ಡಾ.ಎಲ್ ಎಲ್ ಭೈರಪ್ಪ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದರು.

    ಎಸ್ಎಲ್ ಭೈರಪ್ಪ ಅವರ ಜೊತೆ ಸೌಹಾರ್ದಯುತ ಮಾತುಕತೆ ನಡೆಸಿದ ಸಚಿವ ಸುನಿಲ್ ಕುಮಾರ್ ನಾಡಿನ ಕಲೆ ಸಾಹಿತ್ಯ ಹಾಗೂ ಸಂಸ್ಕೃತಿ ಕುರಿತಂತೆ ವಿಚಾರ ವಿನಿಮಯ ಮಾಡಿಕೊಂಡರು.

    ಈ ಸಂದರ್ಭದಲ್ಲಿ ಭೈರಪ್ಪ ಅವರು ತಮ್ಮ ಹುಟ್ಟೂರಾದ ಸಂತೆ ಶಿವರ ಗ್ರಾಮದ ಅಭಿವೃದ್ಧಿಗಾಗಿ ಸರ್ಕಾರ 5 ಕೋಟಿ ಬಿಡುಗಡೆ ಮಾಡಿದೆ, ಆದರೆ ಕಾಮಗಾರಿ ವಿಳಂಬವಾಗುತ್ತಿದೆ ಎಂಬ ಅಂಶವನ್ನು ಸಚಿವರ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುನಿಲ್ ಕುಮಾರ್ ಈ ಬಗ್ಗೆ ಕೂಡಲೇ ಸಂಬಂಧಪಟ್ಟವರ ಜೊತೆ ಮಾತನಾಡಿ ಕಾಮಗಾರಿಗಳ ಸಮರ್ಪಕ ಅನುಷ್ಠಾನಕ್ಕೆ ಸೂಚಿಸುವುದಾಗಿ ತಿಳಿಸಿದರು.

    ಕರುಣಾಸಾಗರ ಶ್ರೀ ರಾಘವೇಂದ್ರರು

    ಹೇಮಾ ಶ್ರೀಧರ್

    ಪರಮಾತ್ಮನ ಪ್ರಸಾದದಿಂದಲೇ ಸಕಲ ಜೀವನ ಉದ್ದಾರ. ಆ ಪರಮಾತ್ಮನ ಅನುಗ್ರಹ ವಾಗಬೇಕಾದರೆ, ಅವನು ಒಲಿಯಬೇಕಾದರೆ ಅವನಲ್ಲಿ ಪ್ರೇಮ ಅಂದರೆ ಭಕ್ತಿಯನ್ನು ಮಾಡಬೇಕು. ಸರ್ವ ಜೀವರ ಮುಖ್ಯ ಗುರಿಯಾದ ಶಾಶ್ವತ ಸುಖ ದೊರೆಯಬೇಕಾದರೆ ಅವನನ್ನು ಭಕ್ತಿಯಿಂದ ಅರ್ಚಿಸಬೇಕು ಅವನ ಗುಣಗಳನ್ನು ಸದಾಕಾಲ ಚಿಂತಿಸುತ್ತಾ ಇರಬೇಕು. ಇಂಥ ಶ್ರೀಹರಿಯ ಅಚಿಂತ್ಯಾತ್ಮಕ ಗುಣಗಳನ್ನು, ಅವನ ಜ್ಞಾನವನ್ನು ಬೋಧಿಸುವ ಗುರುಗಳಲ್ಲಿಯೂ ಶ್ರೀಹರಿಯಲ್ಲಿ ಮಾಡುವಂತೆಯೇ ಭಕ್ತಿ ಮಾಡಬೇಕು. ಗು ಅಂದರೆ ಶಿಷ್ಯರ ಅಜ್ಞಾನವೆಂಬ ಅಂಧಕಾರ ರು ಅಂದರೆ ಅದನ್ನು ಪರಿಹರಿಸುವ‌ವರು. ಶಿಷ್ಯರ ಅಜ್ಞಾನವನ್ನು ಪರಿಹರಿಸಿ ಜ್ಞಾನೋಪದೇಶ ಮಾಡುವವರೇ ನಿಜವಾದ ಗುರುಗಳು. ತಾರತಮ್ಯಾನುಸಾರವಾಗಿ ಇಂತಹ ಎಲ್ಲಾ ಗುರು ಗಳಲ್ಲಿಯೂ ಭಕ್ತಿಯನ್ನು ಮಾಡಲೇಬೇಕು.ಜಗತ್ ಪೂಜ್ಯರಾಗಿ ಜಗತ್ತನ್ನು ಉಧ್ಧರಿಸುತ್ತಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರಲ್ಲಿ ಭಕ್ತಿಯನ್ನು ಮಾಡಬೇಕೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಂತಹ ಗುರು ರಾಯರಲ್ಲಿ ಭಕ್ತಿ ಉಂಟಾಗಬೇಕಾದರೆ ಅವರು ಯಾರು, ಅವರ ಮೂಲ ರೂಪ ಯಾವುದು, ಅವರು ಮಾಡಿದ ಮಹತ್ಕಾರ್ಯಗಳು, ಪರಮಾತ್ಮನನ್ನು ಅವರು ಒಲಿಸಿಕೊಂಡ ಬಗೆ ಅವರು ತೋರಿದ ಮಹಿಮೆಗಳು ಅವರಿಗೆ ಪರಮಾತ್ಮ ಅನುಗ್ರಹಿಸಿದ ಬಗ್ಗೆ ಮುಂತಾದುವನ್ನು ಅವಶ್ಯವಾಗಿ ತಿಳಿಯಬೇಕು.


    ಶಂಕುಕರ್ಣ :
    ನರಸಿಂಹ ಪುರಾಣದ ವಾಕ್ಯದಂತೆ ಶ್ರೀಗುರುರಾಜರ ಮೂಲರೂಪ ಕರ್ಮಜ ದೇವತೆಯಾದ ಶಂಕುಕರ್ಣ. ಚತುರ್ಮುಖಬ್ರಹ್ಮ ದೇವರು ಪ್ರತಿದಿನವೂ ಭಗವಂತನ ನಾನಾ ರೂಪಗಳನ್ನು ಪೂಜಿಸುವುದು ವಾಡಿಕೆ. ಆ ಪೂಜೆಗಾಗಿ ಶಂಕುಕರ್ಣರು ವಿವಿಧ ಪುಷ್ಪಗಳನ್ನು ತುಳಸಿಯನ್ನು ತರುವ ಹೊಣೆಯನ್ನು ಹೊತ್ತಿದ್ದರು. ಒಂದು ದಿನ ಸರಸ್ವತಿಯ ವೀಣಾವಾದನದಲ್ಲಿ ತಲ್ಲೀನರಾಗಿ ಬ್ರಹ್ಮದೇವರ ಪೂಜೆಗೆ ಹೂವನ್ನು ತಡವಾಗಿ ತಂದಿದ್ದರಿಂದ ಬ್ರಹ್ಮ ದೇವರ ಕೋಪಕ್ಕೆ ಗುರಿಯಾಗಿ ದೈತ್ಯ ಯೋನಿಯಲ್ಲಿ ಜನಿಸು ಎಂದು ಬ್ರಹ್ಮದೇವರಿಂದ ಶಪಿಸಲ್ಪಟ್ಟರು. ಈ ಶಾಪವನ್ನು ಪರಮಾತ್ಮನು ಲೋಕದ ಉದ್ಧಾರಕ್ಕಾಗಿ ಬ್ರಹ್ಮ ದೇವರಲ್ಲಿ ನಿಂತು ಕೊಡಿಸಿದರು.

    ಮೊದಲನೇ ಅವತಾರ ಪ್ರಹ್ಲಾದ ರಾಜರು : ಹಿರಣ್ಯಕಶಿಪು ಮತ್ತು ಕಯಾದುವಿನಲ್ಲಿ ಪ್ರಲ್ಹಾದನಾಗಿ ಜನಿಸಿದರು. ಧೈತ್ಯ ಯೋನಿಯಲ್ಲಿ ಜನಿಸಿದರೂ ದೈತ್ಯ ಸ್ವಭಾವ ಬಾರದಿರಲಿ ಎಂದು ಬ್ರಹ್ಮದೇವರು ಅನುಗ್ರಹಿಸಿದ ಕಾರಣ ಮತ್ತು ನಾರದರ ಉಪದೇಶದ ಕಾರಣದಿಂದ ಅವರು ಪರಮ ಭಾಗವಾಗತೋತ್ತಮರಾಗಿದ್ದರು. ಅವರ ರಕ್ಷಣೆಗೆಂದೇ ಪರಮಾತ್ಮ ಒಂದು ಲೋಕ ವಿಲಕ್ಷಣವಾದ ನರಸಿಂಹ ರೂಪ ಧರಿಸಿ ಉದ್ದಾರ ಮಾಡಿದರು. ಶ್ರೀರಮಾಪತಿಯಾದ ನಾರಾಯಣನನ್ನು ಪೂರ್ಣವಾಗಿ ತಿಳಿಯಲು ವರ್ಣಿಸಲು ಬ್ರಹ್ಮಾದಿ ದೇವತೆಗಳಿಗೂ ಸಾಧ್ಯವಿಲ್ಲ. ಆದರೆ ಪ್ರಹ್ಲಾದ ರಾಜನಂತೆ ಭಕ್ತಿ ಮತ್ತು ವಿರಕ್ತಿಯಿಂದ ಪರಮಾತ್ಮನನ್ನು ಅರ್ಚಿಸಿದರೆ ಶ್ರೀಹರಿ ಪ್ರಸನ್ನನಾಗಿ ಅನುಗ್ರಹಿಸುವನೆಂಬ ವಿಚಾರವು ಪ್ರಹ್ಲಾದನ ಚರಿತ್ರೆಯಿಂದ ದೃಢವಾಗುತ್ತದೆ.

    ಎರಡನೇ ಜನ್ಮ : ಪ್ರತೀಪ ರಾಜನ ಮಗ ಮಗನಾಗಿ ಬಾಹ್ಲೀಕ ಎಂಬ ಹೆಸರಿನಿಂದ ಅವತಾರ ಮಾಡಿದರು. ಬಾಹ್ಲೀಕ ರಾಜರು ಪರಮಭಾಗವತೋತ್ತಮರು. ಅವರು ಮಹಾಭಾರತ ಯುದ್ಧ ಸಮಯದಲ್ಲಿ ಇದ್ದರು ಅವರು ಒಮ್ಮೆ ಶ್ರೀಕೃಷ್ಣ ಮತ್ತು ಭೀಮಸೇನ ದೇವರಿಗೆ ಕನಕರಥ ಸಮರ್ಪಣೆ ಮಾಡಿ ಉತ್ಸವ ಮಾಡಿದರು. ಆಗ ಶ್ರೀಕೃಷ್ಣ ಪರಮಾತ್ಮನು ಭೀಮಸೇನ ದೇವರಿಂದ ಅವರಿಗೆ ನೀವು ಯತಿ😭ಚಕ್ರವರ್ತಿಗಳಾಗಿ ಭಕ್ತರು ಅರ್ಪಿಸುವ ಸ್ವರ್ಣ ರಥದಲ್ಲಿ ಮೆರೆಯುವಂತೆ ಆಗಲಿ ಎಂದು ವರವನ್ನು ಕೊಡಿಸಿದನು.

    ಮೂರನೇ ಅವತಾರ :ಮೂರನೇ ಜನ್ಮದಲ್ಲಿ ವ್ಯಾಸರಾಯರಾಗಿ ವೇದಾಂತ ಸಾಮ್ರಾಜ್ಯದ ಅಧಿಪತಿಗಳಾಗಿ ಮೆರೆದರು. ಬ್ರಹ್ಮಣ್ಯತೀರ್ಥ ರಿಗೆ ಬದರಿಯಲ್ಲಿ ಬದರಿನಾಥನು ಅನುಗ್ರಹ ಮಾಡಿ ಪ್ರಹ್ಲಾದ ರಾಜರೇ ಅವತಾರ ಮಾಡಿ ನಿಮ್ಮ ಶಿಷ್ಯರಾಗುತ್ತಾರೆ ಎಂದು ಅಭಯವನ್ನು ಇತ್ತರು.
    ರಾಮಾಚಾರ್ಯರ ದಂಪತಿಗಳಲ್ಲಿ ಜನಸಿ ಭೂಸ್ಪರ್ಶ ವಾಗದೆ ಬ್ರಹ್ಮಣ್ಯತೀರ್ಥರಲ್ಲಿ ಬೆಳೆದು ಶ್ರೀಪಾದರಾಜರಲ್ಲಿ ಅಧ್ಯಯನವನ್ನು ಮಾಡಿದರು. ಒಮ್ಮೆ ಕಂಚಿಯಲ್ಲಿ ಪ್ರತಿವಾದಿಗಳು ವಿಷಪ್ರಾಶನ ಮಾಡಿಸಿದಾಗ ಔಷಧಿಯನ್ನು ಸೇವಿಸದೆ ಕೇವಲ ಭಗವಂತನ ಅನುಗ್ರಹದಿಂದ ಪಾರು ಮಾಡಿಕೊಂಡರು.

    ಶ್ರೀ ವ್ಯಾಸರಾಜ ಗುರುಸಾರ್ವಭೌಮರು ವ್ಯಾಸ ಸಾಹಿತ್ಯ ಮತ್ತು ದಾಸ ಸಾಹಿತ್ಯ ಎರಡನ್ನೂ ಅಭಿವೃದ್ಧಿ ಮಾಡಿದರು. ವ್ಯಾಸ ಸಾಹಿತ್ಯಕ್ಕೆ ವ್ಯಾಸ ತ್ರಯ ಎಂಬ ಉದ್ಗ್ರಂಥಗಳನ್ನು ಕೊಡುಗೆಯಾಗಿ ಕೊಟ್ಟರು. ಅದೇ ನ್ಯಾಯಾಮೃತ, ತರ್ಕತಾಂಡವ ಮತ್ತು ತಾತ್ಪರ್ಯ ಚಂದ್ರಿಕ. ದಾಸ ಸಾಹಿತ್ಯದಲ್ಲಿ ಅನೇಕ ಸುಳಾದಿ ಉಗಾಭೋಗ ಮತ್ತು ದೇವರನಾಮಗಳನ್ನು ರಚಿಸಿ ಶ್ರೀಸಾಮಾನ್ಯರನ್ನು ಉದ್ಧಾರ ಮಾಡಿದರು. ಶ್ರೀಕೃಷ್ಣದೇವರಾಯನ ಕುಹಯೋಗವನ್ನು ಪರಿಹಾರ ಮಾಡಿ ಸಿಂಹಾಸನದಲ್ಲಿ ಮೆರೆದರು. ಮರಳಿ ಸಿಂಹಾಸನವನ್ನು ರಾಜನಿಗೆ ಬಿಟ್ಟುಕೊಟ್ಟರು ಇದರ ದ್ಯೋತಕವಾಗಿ ಇಂದಿಗೂ ವ್ಯಾಸರಾಜ ಮಠದಲ್ಲಿ ಸಂಜೆ ವೇಳೆ ದರ್ಬಾರು ನಡೆಯುತ್ತದೆ. ಪುರಂದರದಾಸರನ್ನು ಮತ್ತು ಕನಕದಾಸರನ್ನು ದಾಸಶ್ರೇಷ್ಠರು ಎಂದು ಸತ್ಕರಿಸಿದರು. ಪುರಂದರದಾಸರ ದೇವರನಾಮ ಗಳನ್ನು ವ್ಯಾಸಪೀಠದ ಇರಿಸಿ ಮಂಗಳಾರತಿ ಮಾಡಿ ಪುರಂದರೋಪನಿಷತ್ ಎಂದು ಕೊಂಡಾಡಿದರು. ವಿಳಂಬಿ ನಾಮ ಸಂವತ್ಸರ ಪಾಲ್ಗುಣ ಕೃಷ್ಣ ಪಕ್ಷ ಚತುರ್ಥಿ ಶನಿವಾರದಂದು ಬೃಂದಾವನಸ್ಥರಾದರು. ಅವರು ಇಂದಿಗೂ ತುಂಗಾ ತೀರದಲ್ಲಿರುವ ಆನೆಗೊಂದಿ ನಡುಗಡ್ಡೆಯಲ್ಲಿ ವಿರಾಜಮಾನರಾಗಿ ಭಕ್ತರನ್ನು ಉದ್ದಾರ ಮಾಡುತ್ತಿದ್ದಾರೆ.

    ನಾಲ್ಕನೇ ಅವತಾರ :ಭಾರತದಲ್ಲಿ ಸಕಲ ವಿದ್ಯೆಗಳಿಗೆ ಪಾಷ್ಟೀಕ ವಂಶ ತವರುಮನೆ ಎನಿಸಿದೆ. ಈ ಪಾಷ್ಟೀಕ ವಂಶದ ಗೌತಮ ಗೊತ್ರ ಬೀಗಮುದ್ರೆ ಮನೆತನದಲ್ಲಿ ಇಂದಿನ ಕಥಾ ನಾಯಕರಾದ ಶ್ರೀ ರಾಯರು ಅವತರಿಸಿದರು. ಅವರ ಪೂರ್ವಾಶ್ರಮದ ತಂದೆ ತಾಯಿಗಳು ತಿಮ್ಮಣ್ಣ ಭಟ್ಟರು ಗೋಪಿಕಾಂಬ ದಂಪತಿಗಳಿಗೆ ಗುರುರಾಜ ಮತ್ತು ವೆಂಕಟಾಂಬ ಎಂಬ ಇನ್ನಿಬ್ಬರು ಮಕ್ಕಳು ಇದ್ದರು. ಆದರೂ ಅವರಿಗೆ ಮತ್ತೊಂದು ಪುತ್ರರತ್ನ ಬೇಕೆಂಬ ಹಂಬಲವಾಯಿತು. ವಂಶದ ಕೀರ್ತಿ ಬೆಳಗಿಸಿ ಲೋಕಮಾನ್ಯ ರಾಗಿ ವಿರಾಜಿಸುವ ಮತ್ತೊಬ್ಬ ಪುತ್ರನನ್ನು ಪಡೆಯಲು ಕುಲದೇವರಾದ ಶ್ರೀನಿವಾಸ ನಲ್ಲಿ ಸಂಕಲ್ಪ ಪೂರ್ವಕವಾಗಿ ಸೇವೆಯನ್ನು ಪ್ರಾರಂಭಿಸಿದರು. ಅವರ ಸೇವೆಗೆ ಮೆಚ್ಚಿ ಶ್ರೀನಿವಾಸನು ಅವರಿಗೆ ಪುತ್ರನನ್ನು ಅನುಗ್ರಹಿಸಿದನು.

    ಮನ್ಮಥನಾಮ ಸಂವತ್ಸರ ಫಾಲ್ಗುಣ ಶುದ್ಧ ಸಪ್ತಮಿ ಗುರುವಾರ ಮೃಗಶಿರ ನಕ್ಷತ್ರದಲ್ಲಿ ರಾಯರ ಅವತಾರ ಆಯಿತು . ಮಗನಿಗೆ ವೆಂಕಟನಾಥ ಎಂದು ನಾಮಕರಣ ಮಾಡಿದರು. ಪ್ರಾಥಮಿಕ ವಿದ್ಯೆಯನ್ನು ಭಾವನವರಾದ ಲಕ್ಷ್ಮೀನಾರಾಯಣ ರಲ್ಲಿ , ನಂತರ ಕುಂಭಕೋಣದಲ್ಲಿ ಶ್ರೀವಿಜಯೇಂದ್ರ ತೀರ್ಥಶ್ರೀಪಾದಂಗಳವರ ಶಿಷ್ಯರಾದ ಶ್ರೀಸುಧೀಂದ್ರ ತೀರ್ಥಶ್ರೀಪಾದರಲ್ಲಿ ಆಯಿತು. ಕಡುಬಡತನ ಇದ್ದರೂ ಯಾರಲ್ಲೂ ಏನನ್ನೂ ಯಾಚಿಸದೆ ಪರಮಾತ್ಮನ ಪ್ರೀತಿಗಾಗಿ ಜೀವನ ನಡೆಸಿದರು ಯೋಗ್ಯಳಾದ ಸರಸ್ವತಿಬಾಯಿ ಎಂಬ ಕನ್ಯೆಯೊಡನೆ ವಿವಾಹವಾಯಿತು. ಅವರಿಗೆ ಪುತ್ರ ಜನನವಾಯಿತು.

    ನಂತರ ವಾಗ್ದೇವಿಯ ಆಜ್ಞೆಯಂತೆ ಯತ್ಯಾಶ್ರಮವನ್ನು ಸ್ವೀಕರಿಸಲು ನಿರ್ಧಾರ ಮಾಡಿದರು. ಸುಧೀಂದ್ರ ತೀರ್ಥ ರಿಂದ ಆಶ್ರಮವನ್ನು ಸ್ವೀಕಾರ ಮಾಡಿದರು. ರಾಘವೇಂದ್ರ ತೀರ್ಥರೆಂಬ ನಾಮಕರಣ ಆಯಿತು ಇವೆಲ್ಲವೂ ಅವರ ಜೀವನ ಚರಿತ್ರೆ ಆದರೆ ಅವರ ಮಹಿಮೆಗಳು ಅಪಾರ. ಅವರು ಸಾಕ್ಷಾತ್ ಪರಮಾತ್ಮನ ಸಾಕ್ಷಾತ್ಕಾರ ಪಡೆದು ಅನುಗ್ರಹೀತರಾದವರು ಅಪಾರ ಪುಣ್ಯ ಗಳಿಸಿದವರು. ಆ ಪುಣ್ಯವನ್ನು ಇಂದಿಗೂ ಸಕಲ ಭಕ್ತ ಜನರಿಗೆ ಹಂಚಿ ಉದ್ದಾರ ಮಾಡುತ್ತಿದ್ದಾರೆ.

    ಮಹಿಮೆಗಳು :ವಿಜಯರಾಘವ ನಾಯಕನ ರಾಜ್ಯದಲ್ಲಿ ಭೀಕರ ಕ್ಷಾಮ ಉಂಟಾದಾಗ ರಾಯರು ಮೂರು ದಿನ ಉಪವಾಸ ಕುಳಿತು ಧ್ಯಾನ ಮಾಡಿ ಧಾನ್ಯ ಗಾರದಲ್ಲಿ ಇದ್ದ ಸ್ವಲ್ಪ ಧಾನ್ಯಗಳ ಮೇಲೆ ಬೀಜಾಕ್ಷರ ಗಳನ್ನು ಬರೆದರು. ಮಾರನೇ ದಿನ ಪರಮಾತ್ಮನ ಅನುಗ್ರಹದಿಂದ ಧಾನ್ಯಗಳು ತುಂಬಿ ತುಳುಕುತ್ತಿತ್ತು. ಇದು ಅದ್ಭುತವಾದ ರಾಯರ ಪವಾಡ.
    ಶ್ರೀ ಪಾಂಡುರಂಗನ ದರ್ಶನಕ್ಕೆಂದು ಒಂದು ಬೆಂಗಾಡಿನಲ್ಲಿ ಹೊರಟಾಗ ನೀರು-ನೆರಳು ಇರಲಿಲ್ಲ. ಅಲ್ಲಿ ಪ್ರಸವವೇದನೆ ಪಡುತ್ತಿದ್ದ ಗರ್ಭಿಣಿ ಸ್ತ್ರೀಗೆ ಅಂಬರಕ್ಕೆ ಶಾಟಿ ಬಿಸಿ ನೆರಳು ಕಲ್ಪಿಸಿ, ಕಮಂಡಲವನ್ನು ಸ್ಪರ್ಶಿಸಿದಾಗ ನೀರು ಧಾರಾಕಾರವಾಗಿ ಪ್ರವಹಿಸಿ ಸುಖ ಪ್ರಸವವಾಗುವಂತೆ ಅನುಗ್ರಹಿಸಿದರು.

    ಒಬ್ಬ ಮೂಕ ನಿಂದ ಸಂಗೀತ ಕಾರ್ಯಕ್ರಮವನ್ನು ಕೊಡಿಸಿದರು. ಪರಿಚಾರಕ ರಲ್ಲಿ ವೆಂಕಣ್ಣನ ಎಂಬಾತನು ಗುರುಗಳನ್ನು ಶ್ರದ್ಧಾಭಕ್ತಿಗಳಿಂದ ಸೇವಿಸುತ್ತಿದ್ದನು. ಅವನ ಸೇವೆಗೆ ಮೆಚ್ಚಿದ ರಾಯರು ನಿನಗೆ ಏನು ಬೇಕು ಎಂದು ಕೇಳಿದಾಗ ನನಗೆ ಮೋಕ್ಷ ಬೇಕು ಎಂದು ಕೇಳುತ್ತಿದ್ದನು. ಎಷ್ಟು ಸಲ ಕೇಳಿದರೂ ಅದನ್ನೇ ಹೇಳುತ್ತಿದ್ದನು. ತ್ರಿಕಾಲ ಜ್ಞಾನಿಗಳಾದ ರಾಯರು ವೆಂಕಣ್ಣನು ಮುಕ್ತಿಯೋಗ್ಯನಾದ ಸುಜೀವಿ ಎಂದು ತಿಳಿದು ಅವನಿಗೆ ಮೋಕ್ಷವನ್ನು ಕೊಡಿಸಿದರು. ಇಂದಿಗೂ ಚಿತ್ರದುರ್ಗದಲ್ಲಿ ವೆಂಕಣ್ಣನಿಗೆ ಮೋಕ್ಷ ಕೊಡಿಸಿದ ಜಾಗವನ್ನು ತೋರಿಸಿ ಗುರುರಾಜರ ಅಗಮ್ಯ ಮಹಿಮೆಯನ್ನು ಕೊಂಡಾಡುತ್ತಾರೆ. ದೇಸಾಯಿಯವರ ಮಗ ಮಾವಿನ ರಸದಲ್ಲಿ ಬಿದ್ದಾಗ ಅವನಿಗೆ ಬಂದ ಅಪಮೃತ್ಯುವನ್ನು ಪರಿಹಾರ ಮಾಡಿದರು. ನವಾಬನು ನಿಷಿದ್ಧ ಪದಾರ್ಥಗಳು ತುಂಬಿದ ತಟ್ಟೆಯನ್ನು ರಾಯರಿಗೆ ಸಮರ್ಪಿಸಿದಾಗ ಶಂಖ ತೀರ್ಥವನ್ನು ಪ್ರೋಕ್ಷಿಸಿ ಫಲಪುಷ್ಪಗಳನ್ನು ಪರಿವರ್ತಿಸಿದರು. ರಾಯರ ಮಹಿಮೆಗಳು ಸಾವಿರಾರು.

    ರಾಯರ ಕೃತಿಗಳು : ಇಡೀ ರಾಮಾಯಣವನ್ನು ಹತ್ತು ಶ್ಲೋಕಗಳಲ್ಲಿ ರಾಮಚಾರಿತ್ರ ಮಂಜರೀ ಎಂದೂ ,ಇಡೀ ದಶಮಸ್ಕಂದ ವನ್ನು ಶ್ರೀ ಕೃಷ್ಣ ಚಾರಿತ್ರ ಮಂಜರೀ ಎಂದು ರಚಿಸಿ ನಮ್ಮನ್ನು ಉದ್ಧಾರ ಮಾಡಿದ್ದಾರೆ. ಮುಖ್ಯವಾಗಿ ಶ್ರೀಮನ್ಯಾಯಸುಧಾ ಗ್ರಂಥಕ್ಕೆ ಪರಿಮಳ ಎಂಬ ಟಿಪ್ಪಣಿ ಬರೆದು ಪರಿಮಳಾಚಾರ್ಯ ಎಂದು ಪ್ರಸಿದ್ಧರಾಗಿದ್ದಾರೆ. ತಾತ್ಪರ್ಯ ನಿರ್ಣಯಕ್ಕೆ ಭಾವ ಸಂಗ್ರಹ, ಭಗವದ್ಗೀತೆಗೆ ಗೀತಾ ನಿವೃತ್ತಿ ಎಂಬ ಟಿಪ್ಪಣಿಗಳನ್ನು ಬರೆದಿದ್ದಾರೆ.

    ಇಡೀ ಭಾರತ ದೇಶವನ್ನು ಸಂಚಾರ ಮಾಡಿ ಜನರ ಅಪೇಕ್ಷೆಗಳನ್ನು ಪೂರೈಸಿ ತಮ್ಮ ಕಾರ್ಯಕ್ಷೇತ್ರಕ್ಕೆ ಮಂಚಾಲೆ ಗ್ರಾಮವನ್ನು ಆರಿಸಿಕೊಂಡರು. ಏಕೆಂದರೆ ಕೃತಯುಗದಲ್ಲಿ ಶ್ರೀ ಪ್ರಹ್ಲಾದ ರಾಜರು ಈ ಸ್ಥಳದಲ್ಲಿ ಶ್ರೀಹರಿ ಪ್ರೀತಿಗಾಗಿ ಅನೇಕ ಯಜ್ಞಯಾಗಾದಿಗಳನ್ನು ನೆರವೇರಿಸಿದ್ದರು. ಶ್ರೀಹರಿ ಸಂಕಲ್ಪದಂತೆ ಅವರ ಅವತಾರ ಕಾರ್ಯಗಳನ್ನು ಪರಿಸಮಾಪ್ತಿ ಗೊಳಿಸಿ ಸಶರೀರವಾಗಿ ಬೃಂದಾವನ ಪ್ರವೇಶ ಮಾಡಲು ನಿರ್ಧರಿಸಿದರು. ಶ್ರೀ ಗುರುಸಾರ್ವಭೌಮರು ಒಂದು ಶುಭ ಮುಹೂರ್ತದಲ್ಲಿ ತಮ್ಮ ಪೂರ್ವಾಶ್ರಮದ ಅಣ್ಣಂದಿರಾದ ಗುರುರಾಜಾಚಾರ್ಯ ಪೌತ್ರರೂ ತಮ್ಮಲ್ಲಿಯೇ ಸಕಲ ಶಾಸ್ತ್ರಗಳನ್ನು ಅಧ್ಯಯನ ಮಾಡಿದ ಪ್ರಿಯ ಶಿಷ್ಯ ಶ್ರೀ ವೆಂಕಣ್ಣಾಚಾರ್ಯರಿಗೆ ಮಂತ್ರಾಕ್ಷತೆ ಕೊಟ್ಟು ಯೋಗೀಂದ್ರತಿರ್ಥರೆಂದು ನಾಮಕರಣ ಮಾಡಿದರು. ಶ್ರೀಗುರುರಾಜರು ಶ್ರಾವಣ ಕೃಷ್ಣಪಕ್ಷ ಬಿದಿಗೆಯಂದು ಸಶರೀರವಾಗಿ ಬೃಂದಾವನ ಪ್ರವೇಶ ಮಾಡುವುದನ್ನು ಕಣ್ಣಾರೆ ಕಂಡು ಸಾಕ್ಷಿ ಆಗುವುದಕ್ಕೆ ಸಹಸ್ರ ಸಂಖ್ಯೆಯಲ್ಲಿ ಜನ ಸೇರಿದ್ದರು. ಗುರುಗಳಾದ ರಾಯರ ಬೃಂದಾವನ ಪ್ರವೇಶವಾಯಿತು.

    ಶ್ರೀ ಮಧ್ವಾಚಾರ್ಯರ ಸನ್ಮತದಲ್ಲಿ ವ್ಯಾಸರಾಜರಾಗಿ, ರಾಯರಾಗಿ ಬಂದು 700 ವರ್ಷಗಳ ಕಾಲ ತಾವು ಬೃಂದಾವನದಲ್ಲಿದ್ದು ಲೋಕ ಜನರನ್ನು ಉದ್ಧಾರ ಮಾಡಿ ಸಮಸ್ತ ಇಷ್ಟಾರ್ಥಗಳನ್ನು ಕರುಣಿಸಿವುದಾಗಿ ಭರವಸೆ ನೀಡಿದರು.ಇಂತಹ ಲೋಕ ಗುರುಗಳನ್ನು ಕಲಿಯುಗ ಕಲ್ಪತರಾಗಿ ಪಡೆದ ನಾವೇ ಧನ್ಯರು ಹಾಗೂ ಭಾಗ್ಯಶಾಲಿಗಳು.ಇಂತು ನಮ್ಮನ್ನು ಸದಾ ಕರುಣೆಯಿಂದ ಪಡೆಯುತ್ತಿರುವ ಆ ತಪೋ ಮೂರ್ತಿಗಳಿಗೆ ನಾವೇನು ಕೊಡಬಲ್ಲೆವು. ಭೂಯಿಷ್ಟಾಂತೇ ನಮ ಉಕ್ತಿಂ ವಿಧೇಯ ಎಂಬ ಪ್ರಮಾಣದಂತೆ ಅವರಿಗೆ ನಮ್ಮ ಭಕ್ತಿಪೂರ್ವಕ ನಮನಗಳು ಅರ್ಪಿಸುತ್ತ ಪ್ರಾರ್ಥಿಸೋಣ.

    ಮೈಸೂರಿನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಬಿಜೆಪಿಗೆ ಮೇಯರ್ ಪಟ್ಟ

    • ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ತಂತ್ರಗಾರಿಕೆಗೆ ಸಿಕ್ಕ ಫಲ
    • 38 ವರ್ಷಗಳ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಯವರು ಮೇಯರ್
    • ರಾಜಕೀಯ ಹಗ್ಗಜಗ್ಗಾಟದ ನಡುವೆಯೂ ಬಿಜೆಪಿಗೆ ಒಲಿದ ಮೇಯರ್‌ ಗಿರಿ

    MYSORE AUG 25

    ಮೈಸೂರಿನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಭಾರತೀಯ ಜನತಾ ಪಕ್ಷ ಮೇಯರ್ ಹುದ್ದೆಯನ್ನು ಪಡೆದಿದೆ. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್ ಅವರ ತಂತ್ರಗಾರಿಕೆ ಕೊನೆಗೂ ಫಲಿಸಿದೆ.

    ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ರಾಜಕೀಯ ಹಗ್ಗಜಗ್ಗಾಟದಲ್ಲಿ ಕೊನೆಗೂ ಮೇಯರ್ ಹುದ್ದೆ ಪಡೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಮೂಲಕ ಬಿಜೆಪಿಯ ಸುನಂದಾ ಪಾಲನೇತ್ರ ಅವರು ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಜೆಪಿಗೆ ಮೇಯರ್ ಪಟ್ಟ ಒಲಿಯಲಿದೆ ಎಂದು ಹೇಳುತ್ತಲೇ ಬಂದಿದ್ದ ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರ ಕಾರ್ಯತಂತ್ರ ಕೊನೆಗೂ ಯಶಸ್ವಿಯಾಗಿದೆ.

    ಯಶಸ್ವಿಯಾದ ಸಚಿವ ಸೋಮಶೇಖರ್

    ಕಳೆದ ವಾರ ಹಿಂದಷ್ಟೆ ಜೆಡಿಎಸ್ ಮುಖಂಡರಾದ ಹಾಗೂ ಶಾಸಕರಾದ ಸಾ.ರಾ. ಮಹೇಶ್ ಅವರ ಜತೆ ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರು ಸಂಸದರು, ಶಾಸಕರು, ಬಿಜೆಪಿ ನಗರಾಧ್ಯಕ್ಷರು, ಮುಡಾ ಅಧ್ಯಕ್ಷರ ಜೊತೆಗೂಡಿ ಭೇಟಿಯಾಗಿ ಮೇಯರ್ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದನ್ನು ಸ್ಮರಿಸಬಹುದು. ಕೊನೆಗೂ ಮೈಸೂರಿನಲ್ಲಿ ಬಿಜೆಪಿಗೆ ಮೇಯರ್ ಹುದ್ದೆ ಲಭಿಸುವಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರು ಯಶಸ್ವಿಯಾಗಿದ್ದಾರೆ.

    ಮೈಸೂರು ಪಾಲಿಕೆಯ 38 ವರ್ಷದ ಇತಿಹಾದಲ್ಲೇ ಪ್ರಥಮ
    160ಕ್ಕೂ ಹೆಚ್ಚು ವರ್ಷದ ಇತಿಹಾಸ ಹೊಂದಿರುವ ಮೈಸೂರು ಪೌರ ಸಂಸ್ಥೆಯು 1983ರಲ್ಲಿ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿತು. ಅಲ್ಲಿಂದ ಇಲ್ಲಿಯವರೆಗಿನ 38 ವರ್ಷದ ಅವಧಿಯಲ್ಲಿ ಬಿಜೆಪಿ ಒಂದು ಬಾರಿಯೂ ಮೇಯರ್ ಪಟ್ಟವನ್ನು ಅಲಂಕರಿಸಿರಲಿಲ್ಲ.


    ಲಾಕ್ ಡೌನ್ ನಂತರದ ಷೇರುಪೇಟೆ:ಎಚ್ಚರದ ವಹಿವಾಟು ಇಂದಿನ ಅಗತ್ಯ

    ಸೆನ್ಸೆಕ್ಸ್‌ ಆಗಸ್ಟ್ 18 ರಂದು 56,118 ಪಾಯಿಂಟುಗಳನ್ನು ತಲುಪಿ ಸಾರ್ವಕಾಲೀನ ಗರಿಷ್ಠದ ದಾಖಲೆಯನ್ನು ನಿರ್ಮಿಸಿ ವಿಜೃಂಭಿಸಿತು. ಈ ವಿಜೃಂಭಣೆ ಎಷ್ಟರಮಟ್ಟಿಗೆ ಸಹಜವಾದುದು ಎಂಬುದನ್ನು ಅರಿಯ ಬೇಕಾದರೆ 2020 ರಲ್ಲಿ ಕಂಡಂತಹ ಏರಿಳಿತಗಳತ್ತಲೂ ಗಮನಹರಿಸುವುದು ಅವಶ್ಯ.

    2020 ರ ಫೆಬ್ರವರಿಯ ಮೂರನೇ ವಾರದಲ್ಲಿ 41,170 ರಲ್ಲಿದ್ದಂತಹ ಸೆನ್ಸೆಕ್ಸ್‌ ಕೇವಲ ಒಂದೇ ತಿಂಗಳ ಅಂತರದಲ್ಲಿ ಅಂದರೆ 26 ನೇ ಮಾರ್ಚ್‌ 29,815 ಪಾಯಿಂಟುಗಳಿಗೆ ಜಾರಿತು. ಈ ರೀತಿಯ ಜಾರುವಿಕೆಗೆ ಕಾರಣವಾದುದು ಕೊರೋನ ಮಹಾಮಾರಿಯ ಪ್ರಭಾವದ ಭಯವಾಗಿತ್ತು. ನಂತರದ ದಿನಗಳಲ್ಲಿ ಚಟುವಟಿಕೆ ಚೇತರಿಕೆಯಿಂದ ಮೇಲೇರತೊಡಗಿತು. ಭಯದ ವಾತಾವರಣವು ಪಕಕ್ಕೆ ಸರಿದು ಕೊನೆಗೆ ಕಡೆಗಣಿಸಲಾಯಿತು. ಇದನ್ನು ಡಿಸ್ಕೌಂಟ್‌ ಮಾಡಲಾಗಿದೆ ಎನ್ನಲಾಗುವುದು. ಅಲ್ಲಿಂದ ನಿರಂತರವಾಗಿ ಏರಿಕೆಯತ್ತ ಸಾಗಿದ ಸೆನ್ಸೆಕ್ಸ್‌ ದಾಖಲೆಯನ್ನು ನಿರ್ಮಿಸಿದೆ.

    ಎರಡನೇ ಅಲೆ ಬಂದಾಗ ಮೊದಲನೇ ಅಲೆಯ ಸಮಯದಲ್ಲಿದ್ದ ಭಯದ ವಾತಾವರಣವು ದೂರವಾಗಿ, ಅತಿಯಾದ ಧೈರ್ಯವು ಬಿಂಬಿತವಾಯಿತು. ಈ ಧೈರ್ಯದ ಪ್ರಭಾವದ ಕಾರಣ ನಕಾರಾತ್ಮಕ ಬೆಳವಣಿಗೆಗಳೂ ಸಹ ಕಡೆಗಣಿಸಿ ಕೇವಲ ಏಕಮುಖವಾಗಿ ಏರಿಕೆಯು ಪ್ರದರ್ಶಿತವಾಯಿತು. ಇದು ಷೇರುಪೇಟೆಯ ವಿಸ್ಮಯಕಾರಿ ಗುಣ.ಸುತ್ತಲೂ ನಕಾರಾತ್ಮಕವಾದ ವಾತಾವರಣವಿದ್ದರೂ ಷೇರುಪೇಟೆ ಏರಿಕೆ ಕಾಣಲು ಕಾರಣವೇನು ಎಂಬುದು ಚಿಂತಿಸುವುದು ಸಾಮಾನ್ಯ.

    ಷೇರುಪೇಟೆಯ ವಿಶೇಷತೆ ಎಂದರೆ ಎಲ್ಲಾ ಸಂಪತ್ತುಗಳಲ್ಲಿ ಷೇರುಗಳ ಹೂಡಿಕೆಯನ್ನು ಸುಲಭವಾಗಿ ನಗದೀಕರಿಸಿಕೊಳ್ಳಬಹುದು ಅಂದರೆ ಮಾರಾಟಮಾಡಿದ ಎರಡುದಿನಗಳಲ್ಲಿ ಕೈಗೆ ಹಣ ದಕ್ಕಿಸಿಕೊಳ್ಳಬಹುದು. ಇಷ್ಠು ಸುಲಭವಾಗಿ ನಗದೀಕರಿಸಿಕೊಳ್ಳಬಹುದಾದ ಸಂಪತ್ತಿನ ವಿಧ ಮತ್ತೊಂದಿಲ್ಲ. ಇದು ಷೇರುಪೇಟೆಯ ಮುಖ್ಯ ಆಕರ್ಷಣೀಯ ಗುಣವಾಗಿದೆ. ಈ ಗುಣವು ಲಾಕ್‌ ಡೌನ್‌ ಸಮಯದ ಕಾರಣ ನಿಶ್ಕ್ರಿಯವಾಗಿರುವ ಹೆಚ್ಚುವರಿ ನಗದು ಸುಲಭವಾಗಿ ನಗದೀಕರಿಸಬಹುದಾದ ವಿಶೇಷ ಗುಣವುಳ್ಳ ಷೇರುಪೇಟೆಯತ್ತ ತಿರುಗಿ, ಷೇರುಗಳ ಬೇಡಿಕೆ ಹೆಚ್ಚಿಸಿದ ಕಾರಣ ಷೇರುಗಳ ದರಗಳು ಗಗನದತ್ತ ತಿರುಗಿರುವುದೂ ಕಾರಣವಾಗಿರುತ್ತದೆ. ಇತರೆ ವ್ಯವಹಾರಗಳು ಕ್ಷೀಣಿತಗೊಂಡಿರುವಾಗ ಉತ್ಸಾಹಭರಿತ ವಾತಾವರಣದಲ್ಲಿರುವ ಷೇರುಪೇಟೆ ಆಕರ್ಷಣೀಯವಾಗಿದೆ.

    ಸುಮಾರು ಒಂದು ವರ್ಷದ ಹಿಂದೆ ಅಂದರೆ 21 ನೇ ಆಗಷ್ಟ್‌ 2020 ರಂದು 5.32 ಕೋಟಿ ಗ್ರಾಹಕರು ನೋಂದಾಯಿಸಿಕೊಂಡಿದ್ದರು. ಈ ವರ್ಷದ ಆಗಷ್ಟ್‌ 20 ರಂದು ನೋಂದಾಯಿಸಿಕೊಂಡಿರುವ ಗ್ರಾಹಕರ ಸಂಖ್ಯೆಯು 7.72 ಕೋಟಿಗೆ ಏರಿಕೆಯಾಗಿದ್ದು ಸುಮಾರು ಅರ್ಧದಷ್ಟು ಸಂಖ್ಯೆ ಹೆಚ್ಚಾಗಿದ್ದು ಈ ಹೂಡಿಕೆದಾರರ ಹೂಡಿಕೆ ಹಣವು ಪೇಟೆಯೊಳಗೆ ಹರಿದುಬಂದಿರುವ ಕಾರಣ ಬೇಡಿಕೆಯು ಹೆಚ್ಚಾಗಿದೆ. ಈ ಬೇಡಿಕೆ ಯಾವ ರೀತಿ ಪ್ರಭಾವ ಬೀರಿದೆ ಎಂದರೆ ಕಳೆದ ಕೆಲವು ದಿನಗಳಿಂದ ವಿದೇಶಿ ವಿತ್ತೀಯ ಸಂಸ್ಥೆಗಳು ಮಾರಾಟದ ಹಾದಿಯಲ್ಲಿದ್ದರೂ ಸಹ ಪೇಟೆ ಸ್ಥಿರತೆಯನ್ನು ಕಂಡುಕೊಂಡಿದೆ. ಇದೇ ನಮ್ಮ ಆಂತರಿಕ ಶಕ್ತಿಯಾದ ಜನಸಂಖ್ಯೆಯ ಪ್ರಭಾವ. ಕೇವಲ ಶೇ.5 ರಷ್ಟು ಪೇಟೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗಲೇ ಈ ಪರಿಸ್ಥಿತಿ ಇದ್ದಾಗ ಈ ಗ್ರಾಹಕರ ಸಂಖ್ಯೆ ಶೇ.10. 15, 20 ಕ್ಕೆ ಏರಿಕೆಯಾದಲ್ಲಿ ದೇಶದ ಷೇರುವಿನಿಮಯ ಕೇಂದ್ರಗಳಲ್ಲಿ ಲೀಸ್ಟಿಂಗ್‌ ಆಗಿರುವ ಕಂಪನಿಗಳು ತೀರಾ ಕಡಿಮೆಯಾಗಿವೆ ಎನಿಸುತ್ತದೆಯಲ್ಲವೇ?

    ಲಾಕ್‌ ಡೌನ್‌ ಸಮಯದಲ್ಲಿ ಎಲ್ಲಾ ವ್ಯವಹಾರಗಳು ನಿಶ್ಕ್ರಿಯಯಾಗಿದ್ದರೂ ಷೇರುಪೇಟೆ ಮಾತ್ರ ಚುರುಕಾಗಿ ನಡೆಯುತ್ತಿತ್ತು, ಕಾರಣ ಈ ವಲಯವನ್ನು ಅವಶ್ಯಕ ವಲಯದ ಚಟುವಟಿಕೆ ಎಂದು ವಿಂಗಡಿಸಲಾಗಿತ್ತು. ಈ ಚಟುವಟಿಕೆಯಿಂದ ದೇಶದ ಖಜಾನೆಗೆ ಜಿ ಎಸ್‌ ಟಿ ಸಂಗ್ರಹಣೆಗೆ ಉತ್ತಮ ಕೊಡುಗೆಯಾಗಿದೆ. ಲಾಕ್‌ ಡೌನ್‌ ತೆರವುಗೊಳಿಸಿದ ನಂತರ ನಿಧಾನವಾಗಿ ವ್ಯವಹಾರಗಳು ಸಹಜತೆಗೆ ಮರಳುತ್ತಿರುವ ಕಾರಣ ಪೇಟೆಯಲ್ಲಿ ಹಿಂದಿನ ದಿನಗಳಲ್ಲಿ, ತಿಂಗಳುಗಳಲ್ಲಿ ಪೇಟೆಗೆ ಹರಿದುಬಂದ ಹೆಚ್ಚುವರಿ ಹಣವು ಪೇಟೆಯಿಂದ ನಿರ್ಗಮಿಸುತ್ತಿರುವುದು ಸಹ ಪೇಟೆಯಲ್ಲಿ ಇಳಿಕೆಗೆ ಕಾರಣವಾಗಬಹುದು. ಅದ್ದರಿಂದ ಎಚ್ಚರಿಕೆಯ ವಹಿವಾಟು ಅಗತ್ಯ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಬಹುಗ್ರಾಮ ಯೋಜನೆಗಳ ಮೇಲ್ವಿಚಾರಣೆಗೆ ಸಮಿತಿ ರಚನೆ: ಮುಖ್ಯಮಂತ್ರಿ ಸೂಚನೆ

    BENGALURU AUG 23
    ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನ ಚುರುಕುಗೊಳಿಸುವ ಉದ್ದೇಶದಿಂದ ಈ ಯೋಜನೆಯಡಿ ಕೈಗೆತ್ತಿಕೊಂಡಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಮೇಲ್ವಿಚಾರಣೆಗೆ ಸಮಿತಿ ರಚನೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಲಜೀವನ್ ಮಿಷನ್ ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಪ್ರತಿ 15 ದಿನಕ್ಕೊಮ್ಮೆ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಕಾಲ ಕಾಲಕ್ಕೆ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದ ಮುಖ್ಯಮಂತ್ರಿಗಳು, ಪ್ರತಿ ತಿಂಗಳು ತಾವು ಖುದ್ದು ಪ್ರಗತಿ ಪರಿಶೀಲನೆ ಮಾಡುವುದಾಗಿ ತಿಳಿಸಿದರು.ಮೇಲ್ಮೈ ಜಲ ಮೂಲ ಇಲ್ಲದ ಜಿಲ್ಲೆಗಳಿಗೆ ನೀರು ಒದಗಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

    2022-23ರ ಸಾಲಿಗೆ ಯೋಜನೆ ರೂಪಿಸಿ, ಅನುಮೋದನೆ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಪ್ರಸಕ್ತ ಸಾಲಿನ ಎಲ್ಲ ಡಿಪಿಆರ್ ಗಳ ಅನುಮೋದನಾ ಪ್ರಕ್ರಿಯೆ ಅಕ್ಟೋಬರ್ ಒಳಗೆ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಅನುಮೋದನೆಯಲ್ಲಿನ ತೊಡಕುಗಳ ನಿವಾರಣೆಗೆ ತಾವೇ ಖುದ್ದು ಕ್ರಮ ವಹಿಸುವ ಭರವಸೆ ನೀಡಿದರು.ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

    ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು

    ವ್ಯಾಕ್ಸಿನೇಟ್ ಇಂಡಿಯಾ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿಗಳಿಂದ ಚಾಲನೆ

    BENGALURU AUG 24

    ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಸುಸ್ಥಿರ ಗುರಿಗಳ ಸಹಕಾರ ಕೇಂದ್ರ ಹಾಗೂ ಗಿವ್ ಇಂಡಿಯಾ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ವ್ಯಾಕ್ಸಿನೇಟ್ ಇಂಡಿಯಾ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ರಾಜಭವನದಲ್ಲಿ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿಗಳು,
    ಸಾರ್ವಜನಿಕರು ಮೈ ಮರೆಯಬಾರದು, ಕಡ್ಡಾಯವಾಗಿ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸುವುದು, ಕೈ ತೊಳೆಯುಯುವುದನ್ನು ಕಡ್ಡಾಯವಾಗಿ ಪಾಲಿಸಬೇಕೆಂದರು.

    ವ್ಯಾಕ್ಸಿನ್ ಹಾಕಿಸಿಕೊಳ್ಳುವುದು ಕಡ್ಡಾಯ.ವ್ಯಾಕ್ಸಿನ್ ಗೆ ಪರ್ಯಾಯ ಯಾವುದೂ ಇಲ್ಲ ಸಾಧ್ಯವಾದಷ್ಟು ಜಂಕ್ ಫುಡ್ ಸೇವಿಸದೆ, ಭಾರತೀಯ ಸಾಂಪ್ರದಾಯಕ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.

    ಅಂತರರಾಜ್ಯ ಜಲವಿವಾದ;ದೆಹಲಿಯಲ್ಲಿ ಕಾನೂನು ತಜ್ಞರೊಂದಿಗೆ ಸಭೆ

    BENGALURU AUG 24

    ಅಂತರರಾಜ್ಯ ಜಲ ವಿವಾದಗಳ ಬಗ್ಗೆ ನವದೆಹಲಿಯಲ್ಲಿ ಕಾನೂನು ತಜ್ಞರ ಜತೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.ಬೆಂಗಳೂರಿನ ತಮ್ಮ ನಿವಾಸದ ಬಳಿ ಅವರು ಮಾದ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

    ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್, ರಾಜ್ಯದ ಹಿರಿಯ ವಕೀಲರು, ಕಾನೂನು ತಜ್ಞರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ನೀರಾವರಿ ವಿವಾದದ ಬಗ್ಗೆ ರಾಜ್ಯದ ಮುಂದಿನ ನಡೆಯ ಬಗ್ಗೆ ಈ ಸಭೆಯಲ್ಲಿ ತೀರ್ಮಾನಿಸಲಾಗುವುದು.ಕರ್ನಾಟಕದ ನೆಲ, ಜಲ, ಭಾಷೆಯ ಹಿತರಕ್ಷಣೆ ಗೆ ಸರ್ವ ಪ್ರಯತ್ನ ಮಾಡಲಾಗುವುದು, ಈ ವಿಷಯದಲ್ಲಿ ಯಾವುದೇ ರೀತಿಯ ಆತಂಕ ಬೇಡ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

    ಇದೆ ತಿಂಗಳ 25 ನೇ ತಾರೀಖಿನಂದು ನವದೆಹಲಿಗೆ ತೆರಳಿ 26 ರಂದು ಎಲ್ಲ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

    ಕೇಂದ್ರ ಆರೋಗ್ಯ, ಹಣಕಾಸು, ಜಲಶಕ್ತಿ , ಕೃಷಿ ಹಾಗೂ ರಕ್ಷಣಾ ಸಚಿವರ ಸಮಯ ಕೇಳಿದ್ದು, ಅವರನ್ನು ನವದೆಹಲಿಯಲ್ಲಿ ಭೇಟಿಯಾಗಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇರುವ ತಜ್ಞರ ಸಮಿತಿ ಮುಂದುವರೆಯಲಿದೆ. ಕೇಂದ್ರ ವಿಪತ್ತು ನಿರ್ವಹಣಾ ಸಮಿತಿ ಆಕ್ಟೊಬರ್ ಮಾಹೆಯಲ್ಲಿ ರಾಜ್ಯಕ್ಕೆ ಬರಬಹುದು. ಕೋವಿಡ್ ಮೂರನೇ ಅಲೆಯ ನಿಯಂತ್ರಣ ಕ್ಕೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಕೋವಿಡ್ ತಜ್ಞರ ಸಮಿತಿ ಹಾಗೂ ಸಂಬಂಧ ಪಟ್ಟ ಸಚಿವರೊಂದಿಗೆ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಗಳು ತಿಳಿಸಿದರು.

    ಮಂತ್ರಾಲಯದಲ್ಲಿ ರಾಯರ ಆರಾಧನೆ

    ಮಂತ್ರಾಲಯದಲ್ಲಿ ಗುರುರಾಯರ 350 ನೇ ಆರಾಧನೆ ಸಡಗರದಿಂದ ನೆರವೇರುತ್ತಿದೆ. ಕಳೆದ ಬಾರಿ ಕೋವಿಡ್ ಕಾರಣದಿಂದ ಸಡಗರ ಅಷ್ಟಾಗಿ ಇರಲಿಲ್ಲ. ಈ ಬಾರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಶ್ರೀ ಸುಬುದೇಂದ್ರ ತೀರ್ಥರ ನೇತೃತ್ವದಲ್ಲಿ ವಿಧಿ ವಿಧಾನಗಳು ನೆರವೇರುತ್ತಿವೆ. ಆರಾಧನಾ ಮಹೋತ್ಸವದ ಇತ್ತೀಚಿನ ದೃಶ್ಯಗಳನ್ನು ನೋಡಲು ಈ ಕೇಳಗಿನ ಲಿಂಕ್ ಕ್ಲಿಕ್ ಮಾಡಿ. ( ಕೃಪೆ: ಮಂತ್ರಾಲಯ ವಾಹಿನಿ )

    ಕಲಿಯುಗದ ಕಾಮಧೇನು ಗುರುರಾಯರು

    ಗುರುರಾಜ್ ಪಂಘ್ರಿ

    ಕಲಿಯುಗದ ಕಲ್ಪವೃಕ್ಷ ಕಾಮಧೇನು ಪರಮ ಕರುಣಾಸಾಗರರಾದ ಶ್ರೀರಾಘವೇಂದ್ರ ತೀರ್ಥರ ನಾಮ ಸ್ಮರಣೆಯೇ ಪರಮ ಮಂಗಳಕರ.
    ಶ್ರೀಮನ್ಮಂತ್ರಾಲಯ ಕ್ಷೇತ್ರದ ತುಂಗಾತೀರ ನರಹರಿ ರಾಮಕೃಷ್ಣ ವೇದವ್ಯಾಸ ವಿಶೇಷ ಸನ್ನಿಧಾನ, ಅಲವಬೋಧರ ಸಕಲ ದೇವತೆಗಳ, ರಾಯರ ಪೂರ್ವಿಕ ಗುರುಗಳ ಸನ್ನಿಧಾನವೇ ತುಂಬಿ ಇರುವ ಪರಮ ಸುಂದರ ಮಂಗಳಕರ ಪಾವನ ವೃಂದಾವನದಲ್ಲಿ ವಿರಾಜಮಾನರಾಗಿರುವ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರು, ಶ್ರೀಗುರುರಾಯರು, ರಾಯರು, ರಾಘಪ್ಪನೆಂದೇ ವಿಶ್ವವಿಖ್ಯಾತರು.

    ಮೂಲ ರೂಪ

    ಮೂಲರೂಪ ಶಂಕುಕರ್ಣ ಆಗಿದ್ದು ಕೃತಯುಗದಲ್ಲಿ ಶ್ರೀ ನರಸಿಂಹದೇವರ ಪರಮ ಕರುಣಾಪಾತ್ರ ಪ್ರಹ್ಲಾದರಾಜರು ನಂತರ ದ್ವಾಪರಯುಗದಲ್ಲಿ ಶ್ರೀ ಕೃಷ್ಣ ಶ್ರೀ ಭೀಮಸೇನದೇವರು ಕೃಪಾಪಾತ್ರ ಬಾಹ್ಲೀಕರಾಜರು.ಕಲಿಯುಗದಲ್ಲಿ ಶ್ರೀವ್ಯಾಸರಾಜ ಗುರುಸಾರ್ವಭೌಮರು ನಂತರದ ಅವತಾರವೇ ಶ್ರೀರಾಘವೇಂದ್ರ ಸ್ವಾಮಿಗಳು.

    ಶ್ರೀ ಗುರುಸಾರ್ವಭೌಮರು ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ. (ವೆಂಕಣ್ಣಭಟ್ಟ, ವೆಂಕಟಾಚಾರ್ಯ ಎಂದೂ ಕರೆಯುವರು) ಇವರ ತಂದೆಯ ಹೆಸರು ತಿಮ್ಮಣ್ಣ ಭಟ್ಟ. ತಾಯಿಯ ಹೆಸರು ಗೋಪಿಕಾಂಬ. ತಿಮ್ಮಣ್ಣ ಭಟ್ಟರ ತಾತನ ಹೆಸರು ಕೃಷ್ಣ ಭಟ್ಟ. ಕೃಷ್ಣ ಭಟ್ಟರು ವೀಣೆಯಲ್ಲಿ ಪಂಡಿತರು. ವಿಜಯನಗರದ ರಾಜನಾದ ಕೃಷ್ಣದೇವರಾಯನಿಗೆ ವೀಣೆ ಕಲಿಸಿದ ಗುರುಗಳು. ತಿಮ್ಮಣ್ಣ ಭಟ್ಟರಿಗೆ ವೆಂಕಟನಾಥನನ್ನು ಬಿಟ್ಟು ಇನ್ನೂ ಇಬ್ಬರು ಮಕ್ಕಳು. ಗುರುರಾಜ ಮತ್ತು ವೆಂಕಟಾಂಬ ಅವರ ಹೆಸರು. ವೆಂಕಟನಾಥನು ಈಗಿನ ತಮಿಳುನಾಡುವಿನ ಭುವನಗಿರಿ ಎಂಬಲ್ಲಿ ಜನಿಸಿದನು.

    ವೆಂಕಟನಾಥನು ಬಾಲ್ಯದಲ್ಲಿಯೇ ತುಂಬಾ ಬುದ್ಧಿವಂತ ಬಾಲಕನಾಗಿದ್ದನು. ಇವರ ತಂದೆ ಚಿಕ್ಕ ವಯಸ್ಸಿನಲ್ಲೆ ವಿಧಿವಶರಾಗಿದ್ದರಿಂದ ಸಂಸಾರದ ಜವಾಬ್ದಾರಿ ಎಲ್ಲ ಅಣ್ಣ ಗುರುರಾಜನ ಮೇಲೆ ಇತ್ತು. ಇವರ ಪ್ರಾರಂಭಿಕ ವಿದ್ಯಾಭ್ಯಾಸ ಇವರ ಸೋದರಮಾವನಾದ ಮಧುರೈನ ಲಕ್ಷ್ಮಿ ನರಸಿಂಹಾಚಾರ್ಯರಲ್ಲಿ ಆಯಿತು. ಮಧುರೈನಿಂದ ಹಿಂತಿರುಗಿದ ಮೇಲೆ ಇವರ ವಿವಾಹವು ಸರಸ್ವತಿ ಎಂಬ ಕನ್ಯೆಯೊಡನೆ ಆಯಿತು. ವಿವಾಹಾನಂತರ ಇವರು ಕುಂಭಕೋಣಕ್ಕೆ ಬಂದು ಶ್ರೀ ಸುಧೀಂದ್ರ ತೀರ್ಥರಲ್ಲಿ ದ್ವೈತ ವೇದಾಂತ ವ್ಯಾಸಂಗ ಮಾಡತೊಡಗಿದರು. ಅಲ್ಲಿಯೇ ಮಕ್ಕಳಿಗೆ ಸಂಸ್ಕೃತ ಮತ್ತು ವೇದಗಳನ್ನು ಕಲಿಸುತ್ತಿದ್ದರು. ಯಾರಿಂದಲೂ ಫಲಾಪೇಕ್ಷೆ ಇಲ್ಲದೇ ಎಲ್ಲರಿಗೂ ವಿದ್ಯಾದಾನ ಮಾಡುತ್ತಿದ್ದರು.ಅವರ ಆರ್ಥಿಕ ಸ್ಥಿತಿ ಆಗ ಚೆನ್ನಾಗಿರಲಿಲ್ಲ. ಎಷ್ಟೋ ಸಲ ತಮ್ಮ ಹೆಂಡತಿ ಮಕ್ಕಳೊಂದಿಗೆ ಉಪವಾಸ ಇರಬೇಕಾದ ಪರಿಸ್ಥಿತಿಯಲ್ಲಿಯೂ ಸಹ ದೇವರಲ್ಲಿ ನಂಬಿಕೆ ಕಳೆದುಕೊಳ್ಳಲಿಲ್ಲ ಹಾಗೂ ದೇವರ ನಾಮಸ್ಮರಣೆ ಬಿಡಲಿಲ್ಲ.

    ಶ್ರೀ ಸುಧೀಂದ್ರ ತೀರ್ಥರ ಸಮ್ಮುಖದಲ್ಲಿ ಸನ್ಯಾಸಾಶ್ರಮ

    ಶ್ರೀ ಸುಧೀಂದ್ರ ತೀರ್ಥರು ತಮ್ಮ ಉತ್ತರಾಧಿಕಾರಿಯನ್ನು ಹುಡುಕುತ್ತಿರುವಾಗ, ಅವರ ಕನಸಿನಲ್ಲಿ ದೇವರೇ ಬಂದು ವೆಂಕಟನಾಥನನ್ನು ಸೂಚಿಸಿದರು. ಈ ವಿಷಯವನ್ನು ಶ್ರೀ ಸುಧೀಂದ್ರ ತೀರ್ಥರು ವೆಂಕಟನಾಥನಿಗೆ ತಿಳಿಸಿದಾಗ, ವೆಂಕಟನಾಥನು, ಪತ್ನಿ ಮತ್ತು ಮಗನನ್ನು ನೆನಸಿ ನಕಾರತ್ಮಕ ಉತ್ತರ ಕೊಟ್ಟರು. ಅದರೆ ಮನೆಯಲ್ಲಿ, ಸಾಕ್ಷಾತ್ ವಾಗ್ದೇವಿಯೇ ಸ್ವಪ್ನದಲ್ಲಿ ಕಂಡು ಸನ್ಯಾಸಾಶ್ರಮ ಸ್ವೀಕರಿಸಲು ಆಜ್ಞಾ ಇತ್ತಾಗ ಇದರಿಂದ ಮನಸ್ಸನ್ನು ಬದಲಿಸಿದ ವೆಂಕಟನಾಥಾಚಾರ್ಯರು ಫಾಲ್ಗುಣ ಶುದ್ಧ ಬಿದಿಗೆ ಯಂದು ತಂಜಾವೂರಿನಲ್ಲಿ ತನ್ನ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರ ಸಮ್ಮುಖದಲ್ಲಿ ಸನ್ಯಾಸಾಶ್ರಮ ವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳೆಂದು ನಾಮಾಂಕಿತರಾದರು.

    ಸನ್ಯಾಸಾಶ್ರಮದ ಸುದ್ದಿ ತಿಳಿಯುತ್ತಲೇ ಮನನೊಂದ ಪತ್ನಿ ಸರಸ್ವತಿಯು ಭಾವಿಯಲ್ಲಿ ಬಿದ್ದು ಆತ್ಮಹತ್ತೆ ಮಾಡಿಕೊಂಡು ಪಿಶಾಚಿ ಜನ್ಮ ತಾಳಿ ಶ್ರೀ ರಾಘವೇಂದ್ರ ಸ್ವಾಮಿಗಳಿದ್ದಲ್ಲಿಗೆ ಬಂದಳು. ತಮ್ಮ ಪೂರ್ವಾಶ್ರಮದ ಪತ್ನಿಯನ್ನು ಈ ಅವತಾರದಲ್ಲಿ ನೋಡಿ ತೀರ್ಥವನ್ನು ಆಕೆಯ ಮೇಲೆ ಸಂಪ್ರೋಕ್ಷಿಸಿ ಆಕೆಗೆ ಮೋಕ್ಷ ದೊರೆಯುವಂತೆ ಮಾಡಿಕೊಟ್ಟರು.

    ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಅನೇಕ ವಿದ್ದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅವರಲ್ಲೊಬ್ಬ ಬಡ ವಿದ್ದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮುಗಿಸಿ ಹೊರಡುವಾಗ ರಾಯರಲ್ಲಿ ಬಂದು, ತನ್ನ ಬಡತನದ ಕಷ್ಟವನ್ನು ಅವರ ಬಳಿ ತೋಡಿಕೊಂಡು ತನ್ನನ್ನು ಅನುಗ್ರಹಿಸಬೇಕೆಂದು ಕೇಳಿಕೊಂಡನು. ಸ್ನಾನದ ಸಮಯದಲ್ಲಿದ್ದ ರಾಯರು ತಮ್ಮ ಬಳಿ ಕೊಡಲು ಏನೂ ಇಲ್ಲವೆಂದರು. ಆಗ ತಾವು ಏನು ಕೊಟ್ಟರು ನನಗೆ ಮಹಾ ಪ್ರಸಾದವೆಂದು ಒಂದು ಹಿಡಿ ಮಂತ್ರಾಕ್ಷತೆಯನ್ನದರು ತಮ್ಮ ಕೈಯಿಂದ ದಯಪಾಲಿಸಬೇಕೆಂದು ಭಕ್ತಿಯಿಂದ ಬೇಡಿದನು. ಅದಕ್ಕವರು ಅವನಿಗೆ ಮಂತ್ರಾಕ್ಷತೆ ಕೊಟ್ಟರು. ಮಂತ್ರಾಕ್ಷತೆಯನ್ನೆ ವಿದ್ದ್ಯಾರ್ಥಿಯು ಮಹಾ ಪ್ರಸಾದ ವೆಂದು ಸ್ವೀಕರಿಸಿ ತನ್ನ ಊರಿನ ಕಡೆಗೆ ಹೊರಟನು.

    ದಾರಿಯಲ್ಲಿ ಕತ್ತಲಾಗಿದ್ದರಿಂದ ಒಂದು ಮನೆಯ ಜಗಲಿಯ ಮೇಲೆ ಮನೆಮಾಲಿಕರಲ್ಲಿ ಅಪ್ಪಣೆ ಪಡೆದು ಮಲಗಿದನು. ಆ ಸಮಯದಲ್ಲಿ ಮನೆಯ ಮಾಲಿಕನ ಹೆಂಡತಿ ಗರ್ಭಿಣಿಯಾಗಿದ್ದಳು. ಮಧ್ಯರಾತ್ರಿಯಲ್ಲಿ ಒಂದು ದುಷ್ಟ ಶಕ್ತಿಯು ಆ ಮನೆಯೊಳಗೆ ಹೋಗಿ, ಹುಟ್ಟಲಿರುವ ಮಗುವನ್ನು ಕೊಲ್ಲಬೇಕೆಂದು ಅಲ್ಲಿಗೆ ಬಂದಿತು. ಆದರೆ ಜಗಲಿಯಲ್ಲಿ ಮಲಗಿದ ಭಕ್ತನ ಬಳಿಯಿರುವ ಮಂತ್ರಾಕ್ಷತೆ ದಾಟಲು ಪ್ರಯತ್ನಿಸಿದಾಗ ಮಂತ್ರಾಕ್ಷತೆ ಬೆಂಕಿಯಂತೆ ಕಂಡು ಬಂದಿತು. ಇದರಿಂದ ಗಾಬರಿಗೊಂಡ ದುಷ್ಟಶಕ್ತಿಯು ಭಕ್ತನನ್ನು ನೋಡಿ ಮಂತ್ರಾಕ್ಷತೆ ದೂರ ಎಸೆಯಲು ಹೇಳಿತು. ಇದನ್ನು ನೋಡಿ ಹೆದರಿದ ಭಕ್ತನು ಮಂತ್ರಾಕ್ಷತೆಯನ್ನು ಅದರ ಮೇಲೆ ಎಸೆದನು. ಮಂತ್ರಾಕ್ಷತೆಯ ಪ್ರಭಾವದಿಂದ ಆ ದುಷ್ಟ ಶಕ್ತಿಯು ಚೀರುತ್ತಾ ಅಲ್ಲೆ ಸುಟ್ಟು ಬೂದಿಯಾಯಿತು. ಅದರ ಚೀತ್ಕಾರವನ್ನು ಕೇಳಿದ ಮನೆ ಮಂದಿಯಲ್ಲ ಹೊರಗೆ ಬಂದು ಅವಕ್ಕಾದರು. ಅಷ್ಟರಲ್ಲೆ ಮನೆಯೊಡತಿಗೆ ಮಗುವಾದ ಸಂತಸದ ಸುದ್ದಿ ತಿಳಿಯಿತು. ರಾಯರು ಕೊಟ್ಟ ಮಂತ್ರಾಕ್ಷತೆಯ ಶಕ್ತಿಯಿಂದ ದುಷ್ಟ ಶಕ್ತಿಯ ನಾಶವಾಯಿತು.

    ಕಿರೀಟಗಿರಿಯಲ್ಲಿ ಸಂಚಾರತ್ವೇನ ಬಂದಾಗ ಸೀಕರಣೆಯಲ್ಲಿ ಬಿದ್ದು ಮೃತನಾದ ಬಾಲಕನ ಅಪಮೃತ್ಯುವನ್ನು ಶ್ರೀರಾಮಚಂದ್ರ ದೇವರ ಅನುಗ್ರಹದಿಂದ ಪರಿಹರಿಸಿದರು.

    ಅಗಮ್ಯ ಮಹಿಮರಾದ ಶ್ರೀರಾಘವೇಂದ್ರ ತೀರ್ಥರ ಮಹಿಮೆಗಳು ಅನಂತಾನಂತ. ಇಷ್ಟೇ ಅಂತ ಹೇಳಲಾಗದು. ಅವರ ಅಂತರ್ಗತ ಶ್ರೀಹನುಮ ಭೀಮ ಮಧ್ವಾತ್ಮಕ ಮುಖ್ಯ ಪ್ರಾಣ ಅಂತರ್ಗತ ಶ್ರೀ ರಾಮಚಂದ್ರ ದೇವರ ಶ್ರೀ ವೇಣುಗೋಪಾಲ ನ ಅನುಗ್ರಹ. ತಾನು ಮಾಡಿ ಇವರಿಗೆ ಕೀರ್ತಿಯ ತರುವ.

    ರಾಯರ ಕೃತಿಗಳು ಕೆಳಕಂಡಂತಿವೆ :
    ಶ್ರುತಿ ಪ್ರಸ್ಥಾನ

    ೧)ಋಗ್ವೇದವಿವೃತಿಃ
    ೨)ಯಜುರ್ವೇದವಿವೃತಿಃ ೩) ಸಾಮವೇದವಿವೃತಿಃ
    ೪) ಮಂತ್ರಾರ್ಥಮಂಜರೀ
    ೫) ಪುರುಷಸೂಕ್ತಮಂತ್ರಾರ್ಥಃ
    ೬) ಶ್ರೀಸೂಕ್ತಮಂತ್ರಾರ್ಥಃ
    ೭) ಮನ್ಯುಸೂಕ್ತಮಂತ್ರಾರ್ಥಃ ೮)ಅಂಭೃಣೀಸೂಕ್ತಮಂತ್ರಾರ್ಥಃ *

    ೯) ಬಳಿತ್ಥಾಸೂಕ್ತಮಂತ್ರಾರ್ಥಃ
    ೧೦) ಹಿರಣ್ಯಗರ್ಭಸೂಕ್ತ ವ್ಯಾಖ್ಯಾನಮ್

    ಉಪನಿಷತ್ ಪ್ರಸ್ಥಾನ

    ೧೧) ಈಶಾವಾಸ್ಯೋಪನಿಷತ್ ಖಂಡಾರ್ಥಃ
    ೧೨) ತಲವಕಾರೋಪನಿಷತ್ ಖಂಡಾರ್ಥಃ
    ೧೩) ಕಾಠಕೋಪನಿಷತ್ ಖಂಡಾರ್ಥಃ
    ೧೪) ಷಟ್ಪ್ರಶ್ನೋಪನಿಷತ್ ಖಂಡಾರ್ಥಃ
    ೧೫) ತೈತ್ತಿರಿಯೋಪನಿಷತ್ ಖಂಡಾರ್ಥಃ
    ೧೬) ಆಥರ್ವಣೋಪನಿಷತ್ ಖಂಡಾರ್ಥಃ
    ೧೭) ಮಾಂಡೋಕ್ಯೋಪನಿಷತ್ ಖಂಡಾರ್ಥಃ
    ೧೮) ಶ್ರೀಮನ್ಮಹೈತರೇಯೋಪನಿಷನ್ಮಂತ್ರಾರ್ಥಃ
    ೧೯) ಛಾಂದೋಗ್ಯೋಪನಿಷತ್ ಖಂಡಾರ್ಥಃ
    ೨೦) ಬೃಹದಾರಣ್ಯಕೋಪನಿಷತ್ ಖಂಡಾರ್ಥಃ

    ಸೂತ್ರಪ್ರಸ್ಥಾನ

    ೨೧. ಶ್ರೀಮನ್ನ್ಯಾಯಸುಧಾಪರಿಮಳಃ ಇದು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಅನುವ್ಯಾಖ್ಯಾನ ಗ್ರಂಥಕ್ಕೆ ಶ್ರೀಜಯತೀರ್ಥರ ಶ್ರೀಮನ್ನ್ಯಾಯ ಸುಧಾ ಗ್ರಂಥಕ್ಕೆ ರಚಿಸಿದ ವ್ಯಾಖ್ಯಾನ. ಈ ಗ್ರಂಥದ ವಿಶಿಷ್ಟತೆಯಿಂದಲೇ ಪರಿಮಳಾಚಾರ್ಯರು ಅಂತ ಪ್ರಸಿದ್ಧರು.
    ೨೨) ಅಣುಭಾಷ್ಯ ವಾಖ್ಯಾ ತತ್ವಮಂಜರೀ
    ೨೩) ತತ್ತ್ವಪ್ರಕಾಶಿಕಾ ಭಾವದೀಪಃ
    ೨೪) ತಾತ್ಪರ್ಯಚಂದ್ರಿಕಾಪ್ರಕಾಶಃ
    ೨೫) ತಂತ್ರದೀಪಿಕಾ
    ೨೬) ನ್ಯಾಯಮುಕ್ತಾವಳಿಃ

    ಮೀಮಾಂಸಾಶಾಸ್ತ್ರ ಗ್ರಂಥ

    ೨೭. ಭಾಟ್ಟಸಂಗ್ರಹಃ

    ಪುರಾಣಪ್ರಸ್ಥಾನ

    ೨೮. ಶ್ರೀಕೃಷ್ಣಚಾರಿತ್ರ್ಯ ಮಂಜರೀ

    ಗೀತಾ ಪ್ರಸ್ಥಾನ

    ೨೯) ಶ್ರೀಮದ್ಭಗವದ್ಗೀತಾಭಾಷ್ಯ ಪ್ರಮೇಯದೀಪಿಕಾ ಭಾವದೀಪಃ

    ೩೦) ಗೀತಾತಾತ್ಪರ್ಯನ್ಯಾಯದೀಪಿಕಾ ಭಾವದೀಪಃ

    ೩೧. ಗೀತಾರ್ಥಸಂಗ್ರಹಃ (ಗೀತಾವಿವೃತಿಃ)

    ಪ್ರಕರಣ ಗ್ರಂಥಗಳು

    ೩೨. ಮಾಯಾವಾದ ಖಂಡನ ಟೀಕಾಟಿಪ್ಪಣೀ *

    ೩೩. ಮಿಥ್ಯಾತ್ವಾನುಮಾನ ಖಂಡನ ಟೀಕಾಟಿಪ್ಪಣೀ *

    ೩೪. ಉಪಾಖಂಡನ ಟೀಕಾ ಟಿಪ್ಪಣೀ *

    ೩೫. ಶ್ರೀವಿಷ್ಣುತತ್ತ್ವವಿನಿರ್ಣಯ ಟೀಕಾ ಭಾವದೀಪಃ

    ೩೬. ತತ್ವೋದ್ಯೋತ ಟೀಕಾಟಿಪ್ಪಣೀ *

    ೩೭. ತತ್ತ್ವಸಂಖ್ಯಾನಂ ಟೀಕಾ ಭಾವದೀಪಃ *

    ೩೮. ತತ್ತ್ವವಿವೇಕ ಟೀಕಾ ಭಾವದೀಪಃ

    ೩೯. ಕಥಾಲಕ್ಷಣ ಟೀಕಾ ಭಾವದೀಪಃ

    ೪೦. ಕರ್ಮನಿರ್ಣಯ ಟೀಕಾ ಭಾವದೀಪಃ

    ೪೧. ಪ್ರಮಾಣಲಕ್ಷಣ ಟೀಕಾ ಭಾವದೀಪಃ

    ಇತರ ಗ್ರಂಥಗಳ ಟಿಪ್ಪಣಿಗಳು

    ೪೨. ಪ್ರಮಾಣ ಪದ್ಧತಿ ಟಿಪ್ಪಣಿ ಭಾವದೀಪಃ

    ೪೩. ತರ್ಕತಾಂಡವ ಟೀಕಾ ನ್ಯಾಯದೀಪಃ

    ೪೪. ವಾದಾವಳೀ ಟಿಪ್ಪಣೀ

    ೪೫. ಪ್ರಮೇಯ ಸಂಗ್ರಹಃ

    ಇತಿಹಾಸ ಪ್ರಸ್ಥಾನ

    ೪೬. ಶ್ರೀರಾಮಚಾರಿತ್ರ್ಯ ಮಂಜರೀ

    ೪೭. ಶ್ರೀಮನ್ಮಹಾಭಾರತತಾತ್ಪರ್ಯ ನಿರ್ಣಯ ಭಾವಸಂಗ್ರಹಃ

    ೪೮. ಪ್ರಮೇಯನವಮಾಲಿಕೆಯ ಗೂಢಭಾವಪ್ರಕಾಶಿಕಾ (ಅಣುಮಧ್ವವಿಜಯಃ)

    ಸದಾಚಾರ ಪ್ರಸ್ಥಾನ

    ೪೯. ಪ್ರಾತಃ ಸಂಕಲ್ಪಗದ್ಯಮ್

    ೫೦. ಸರ್ವಸಮರ್ಪಣಗದ್ಯಮ್

    ೫೧. ಭಗವದ್ಧ್ಯಾನಮ್

    ೫೨. ತಿಥಿನಿರ್ಣಯಃ

    ೫೩. ತಂತ್ರಸಾರ ಮಂತ್ರೋದ್ಧಾರಃ

    ಸ್ತೋತ್ರ ಪ್ರಸ್ಥಾನ

    ೫೪. ರಾಜಗೋಪಾಲಸ್ತುತಿಃ

    ೫೫. ನದೀತಾರತಮ್ಯ ಸ್ತೋತ್ರಮ್

    ೫೬. ದಶಾವತಾರಸ್ತುತಿಃ

    ಸುಳಾದಿ ಮತ್ತು ಗೀತೆಗಳು

    ೫೭. ಇಂದು ಎನಗೆ ಗೋವಿಂದ

    ೫೮. ಮರುತ ನಿನ್ನಯ ಮಹಿಮೆ – ಸುಳಾದಿ

    ಹರಿದಾಸರು ಕಂಡ ಗುರುರಾಯರು

    ರಾಘವೇಂದ್ರತೀರ್ಥರ ಈ ಮೂರು ಅವತಾರಗಳ ಹಿರಿಮೆಯನ್ನು ಹರಿದಾಸರು ಮನಸಾರ ಹಾಡಿ ಹೊಗಳಿದ್ದಾರೆ.

    ವಿಜಯದಾಸರು ತಮ್ಮ ಒಂದು ಕೃತಿಯಲ್ಲಿ;

    “ನಮೋ ನಮೋ ಯತಿರಾಜ
    ಮಮತೆ ರಚಿತ ಅನುಪಮ ಚರಿತ ಚಾರುಹಾಸನೆನಿಪ ನಿನ್ನ |
    ಹೆಮ್ಮೆಯಿಂದಲಿಪ್ಪ ಪರಬೊಮ್ಮ ವಿಜಯವಿಠಲನಾ
    ತುಮದೊಳರ್ಚಿಪ ಜ್ಞಾನೋತ್ತಮ ತುಂಗಭದ್ರವಾಸ.
    ಎಂದು ಹೇಳಿದರೆ,

    ಗೋಪಾಲದಾಸರು

    “ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿರಾಘವೇಂದ್ರ
    ಪತಿತರನುದ ರಿಪ ಪಾವನಕಾರಿಯೆ ಕೈಮುಗಿವೆನು ದೊರೆಯೆ
    ಕ್ಷಿತಿಯೊಳು ಗೋಪಾಲವಿಠಲನ ನೆನೆಯುತ ವರ
    ಮಂತ್ರಾಲಯದೊಳು ಶುಭವೀಯುತ”
    ಎಂದು ಹಾಡಿದ್ದಾರೆ.

    ಗುರುಜಗನ್ನಾಥದಾಸರು ಸಹ;

    “ನೋಡಿದೆ ಗುರುರಾಯರನ್ನು ಈ
    ರೂಢಿಯೊಳಗೆ ಮೆರೆವೋ ಸಾರ್ವಭೌಮನ್ನ
    ದಿನನಾಥ ದೀಪ್ತಿ ಭಾಸಕನ ಭವ
    ನನಧಿ ಸಂತರಣ ಸುಪೋತ ಕೋಪಮನ
    ಮುನಿಜನ ಕುಲದಿ ಶೋಭಿರನ ಸ್ವೀಯ
    ಜನರ ಪಾಲಕ ಮಹರಾಯನೆನಿಪನ”
    ಎಂದು ವರ್ಣಿಸಿ ಗುರುರಾಯರ ಅವತಾರಗಳ ಜೀವನದ ನಿಜತತ್ತ್ವನ್ನು ತಿಳಿಯ ಹೇಳಿರುವರು.


    ಮೂಲತ ಬೆಳಗಾವಿಯವರಾದ ಗುರುರಾಜ್ ಪಂಘ್ರಿ ವೃತ್ತಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರ್. ಆಧ್ಯಾತ್ಮ ಸಂಗತಿಗಳ ಬಗ್ಗೆ ತೀವ್ರ ಆಸಕ್ತಿ ಹಾಗೂ ಅವುಗಳನ್ನು ಬರಹ ರೂಪದಲ್ಲಿ ತರಬೇಕೆಂಬ ಅದಮ್ಯ ಬಯಕೆ ಹೊಂದಿದ್ದಾರೆ.

    ಮತ್ತೆ ಶಾಲೆಯಲ್ಲಿ ಕೇಳುತಿದೆ ಮಕ್ಕಳ ಕಲರವ; 9ರಿಂದ 12 ನೇ ತರಗತಿ ಆರಂಭ

    BENGALURU AUG 23

    ಎರಡನೆಯ ಅಲೆಯ ನಂತರ ಮತ್ತೆ 9ರಿಂದ 12ನೇ ತರಗತಿಗಳ ನೇರ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಲವಲವಿಕೆಯಿಂದ ಶಾಲಾ-ಕಾಲೇಜುಗಳಿಗೆ ಹಾಜರಾದರು.

    ಕೋವಿಡ್ ಪಾಸಿಟಿವಿಟಿ ಶೇ.2ಕ್ಕಿಂತ ದರ ಹೆಚ್ಚಿರುವ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ 26 ಜಿಲ್ಲೆಗಳಲ್ಲಿ ಇಂದು ಬೆಳಗ್ಗೆಯಿಂದಲೇ ಭೌತಿಕ ತರಗತಿಗಳು ಶುರುವಾದವು.

    ಎಲ್ಲ ಕಡೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜತೆಗೆ, ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿ ತರಗತಿಗಳೊಳಕ್ಕೆ ಬಿಡಲಾಯಿತು. ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಅಕ್ಕರೆಯಿಂದ ಬರ ಮಾಡಿಕೊಂಡರು. ಶಾಲೆ-ಕಾಲೇಜುಗಳು ರಂಗೋಲಿ, ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದವು.

    ದಾವಣಗೆರೆ ಜಿಲ್ಲೆ ಸಂತೇಬೆನ್ನೂರು ವಿಜಯ ಪ್ರೌಢಶಾಲೆಯಲ್ಲಿ ಶಾಲೆ ಆರಂಭಕ್ಕೆ ಮುನ್ನ ಪ್ರಾರ್ಥನೆ

    ಬಹುತೇಕ ಕಡೆ ನೇರ ತರಗತಿಗಳ ಆರಂಭಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಸರಕಾರ ಮಾತ್ರ ಶೈಕ್ಷಣಿಕ ಚಟುವಟಿಕೆಗಳು ಹಳಿ ತಪ್ಪಬಾರದು ಎಂದು ಹೇಳಿದೆ.

    ಲಭ್ಯ ಮಾಹಿತಿಯಂತೆ; ರಾಜ್ಯದ 26 ಜಿಲ್ಲೆಗಳಲ್ಲಿ 16,000ಕ್ಕೂ ಹೆಚ್ಚು ಪ್ರೌಢಶಾಲೆಗಳು ಹಾಗೂ 5,000ಕ್ಕೂ ಹೆಚ್ಚು ಪಿಯುಸಿ ಕಾಲೇಜುಗಳಿವೆ. ಈ ಸಂಸ್ಥೆಗಳಲ್ಲಿ 9ರಿಂದ 12ನೇ ತರಗತಿಗಳಲ್ಲಿ 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈಗ ಇವರೆಲ್ಲರೂ ನೇರ ತರಗತಿಗಳಿಗೆ ಹಾಜರಾಗಿದ್ದು, ಮೊದಲನೇ ದಿನ ಎಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆಂಬ ಬಗ್ಗೆ ಮಾಹಿತಿ ಇಲ್ಲ.

    ಬರೋಬ್ಬರಿ ಒಂದೂವರೆ ವರ್ಷದ ಬಳಿಕ ರಾಜ್ಯಾದ್ಯಂತ ಇಂದಿನಿಂದ ಶಾಲಾ ಕಾಲೇಜು ಆರಂಭವಾಗಿದ್ದು, ಮೊದಲ ದಿನ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ. ಕೋವಿಡ್ ಪಾಸಿಟಿವಿಟಿ ದರ ಹೆಚ್ಚಳವಿರುವ ಜಿಲ್ಲೆಗಳಲ್ಲಿ ತರಗತಿಗಳನ್ನು ಆರಂಭ ಮಾಡಿಲ್ಲ. ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆಯಾದರೆ ಅಲ್ಲೂ ಶಾಲೆ ಕಾಲೇಜುಗಳನ್ನು ಆರಂಭ ಮಾಡುತ್ತೇವೆ. ಮಕ್ಕಳ ಶೈಕ್ಷಣಿಕ ಉನ್ನತಿ, ಭವಿಷ್ಯಕ್ಕಾಗಿ, ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ ಶಾಲೆ ಆರಂಭಿಸುತ್ತಿದ್ದೇವೆ. ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

    ಇದೇ ವೇಳೆ ಕೋವಿಡ್ ಮಾರ್ಗಸೂಚಿ ಪಾಲನೆಗೆ ಆದ್ಯತೆ ನೀಡಲಾಗಿದ್ದು, ತರಗತಿಗಳಿಗೆ ಹಾಜರಾಗಲು ಪೋಷಕರ ಅನುಮತಿ ಪತ್ರ ಕಡ್ಡಾಯ ಮಾಡಲಾಗಿದೆ. ಇದೇ ವೇಳೆ ಆನ್ಲೈನ್ ತರಗತಿಗಳು ಮುಂದುವರೆಯಲಿದ್ದು, ನೇರ ತರಗತಿಗಳಿಗೆ ಹಾಜರಾಗಲಿಚ್ಛಿಸದ ವಿದ್ಯಾರ್ಥಿಗಳು ಆನ್ಲೈನ್ ಪಾಠ ಕೇಳಬಹುದು ಎಂದು ಅವರು ತಿಳಿಸಿದ್ದಾರೆ.

    ಮಕ್ಕಳ ಜತೆ ಸಂವಾದ ನಡೆಸಿದ ಸಿಎಂ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾ ಅವರು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಲ್ಲೇಶ್ವರದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ, ಭೌತಿಕ ತರಗತಿಗಳ ಪ್ರಾರಂಭಕ್ಕೆ ಕೈಗೊಂಡಿರುವ ವ್ಯವಸ್ಥೆಗಳ ಕುರಿತು ಪರಿಶೀಲಿಸಿದರು.

    ತರಗತಿಗೇ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಮಾತನಾಡಿದ ಮುಖ್ಯಮಂತ್ರಿಗಳು, ಚೆನ್ನಾಗಿ ವ್ಯಾಸಂಗ ಮಾಡುವಂತೆ ಹುರಿದುಂಬಿಸಿದರು. ವಿವಿಧ ವಿಷಯಗಳ ಬಗ್ಗೆ ಮಕ್ಕಳ ಜತೆ ಸಂವಾದ ನಡೆಸಿದರಲ್ಲದೆ ತರಗತಿಗಳಲ್ಲಿ ಸ್ವಚ್ಛತೆ, ಕೋವಿಡ್ ನಿಯಮಗಳ ಪಾಲನೆಯನ್ನು ಪರಿಶೀಲಿಸಿದರು.

    ಇಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು; ರಾಜ್ಯಾದ್ಯಂತ ಇಂದಿನಿಂದ 9ರಿಂದ 12ನೇ ತರಗತಿಗಳು ಆರಂಭವಾಗಿವೆ. ವಿದ್ಯಾರ್ಥಿಗಳು ಸಂತೋಷದಿಂದ ಶಾಲೆಗೆ ಹಾಜರಾಗಿದ್ದಾರೆ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ತರಗತಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹಲವಾರು ವಿದ್ಯಾರ್ಥಿಗಳು ಮುಕ್ತ ಸಂವಾದ ನಡೆಸಿ ಶಾಲೆಗೆ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಕೋವಿಡ್ ನಿಂದ ಸ್ವತಂ ತ್ರ ಸಿಕ್ಕಿದೆ. ಸರಕಾರ ಈ ಬಗ್ಗೆ ನಿಗಾ ವಹಿಸಲಿದೆ. ಗಡಿ ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣ ಬಂದ ಕೂಡಲೇ ಹಂತ ಹಂತವಾಗಿ ಶಾಲೆ ಆರಂಭಿಸಲಾಗುವುದು ಎಂದು ಹೇಳಿದರು.

    ಹಾಗೆಯೇ, 1ರಿಂದ 8ನೇ ತರಗತಿ ಪ್ರಾರಂಭದ ಸಂಬಂಧ ತಜ್ಞರ ಸಮಿತಿ ಈ ತಿಂಗಳಾಂತ್ಯಕ್ಕೆ ವರದಿ ನೀಡಲಿದ್ದು, ಅದರ ಪ್ರಕಾರ ಮುಂದಿನ ತೀರ್ಮಾನ ಮಾಡಲಾಗುವುದು ಎಂದ ಅವರು, ಯಾವುದೇ ಶಾಲೆಯಲ್ಲಿ ಕೇವಲ ಒಂದೇ ಒಂದು ಪಾಸಿಟಿವ್ ಪ್ರಕರಣ ಕಂಡು ಬಂದರೂ ಆ ಶಾಲೆಯನ್ನು ಒಂದು ವಾರ ಕಡ್ಡಾಯವಾಗಿ ಮುಚ್ಚುತ್ತೇವೆ ಎಂದರು.

    ಉಳಿದಂತೆ ಪಾಸಿಟಿವಿಟಿ ದರ ಶೇ.2ಕ್ಕೂ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಸೋಮಕಿನ ಪ್ರಮಾಣ ಕಡಿಮೆಯಾದರೆ ಅಲ್ಲಿಯೂ ನೇರ ತರಗಗತಿಗಳನ್ನು ಆರಂಭ ಮಾಡುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

    ಮಕ್ಕಳು ಇಂದು ಮಹಾಮಾರಿ ಕೊರೊನಾದಿಂದ ಸ್ವತಂತ್ರಗೊಂಡು ಶಾಲೆ, ಕಾಲೇಜಿಗೆ ಬಂದಿದ್ದಾರೆ. ಮಕ್ಕಳನ್ನು ಕಂಡು ತುಂಬಾ ಸಂತೋಷವಾಯಿತು. ನನಗಷ್ಟೇ ಅಲ್ಲದೆ, ನನ್ನ ಜತೆ ಬಂದಿರುವ ಸಚಿವರಾದ ಡಾ.ಅಶ್ವತ್ಥನಾರಾಯಣ, ಬಿಸಿ ನಾಗೇಶ್ ಅವರಿಗೂ ಆನಂದವಾಗಿದೆ. ಈ ಸಂತೋಷವನ್ನು ಕೋವಿಡ್ ನಿಯಮ ಸರಿಯಾಗಿ ಪಾಲಿಸಿಕೊಂಡು ಹೋಗುವ ಮೂಲಕ ಕಾಪಾಡಿಕೊಳ್ಳೊಣ ಎಂದು ಬೊಮ್ಮಾಯಿ ಅವರು ಹೇಳಿದರು.

    error: Content is protected !!