25.8 C
Karnataka
Friday, May 22, 2026
    Home Blog Page 61

    ನಾಳೆಯಿಂದ 3 ದಿನ ಸಿಇಟಿ ಪರೀಕ್ಷೆ ;ಸಿದ್ಧತೆ ಪರಿಶೀಲಿಸಿದ ಉನ್ನತ ಶಿಕ್ಷಣ ಸಚಿವ

    *ಕೋವಿಡ್ ಪಾಸಿಟಿವ್ ಬಂದಿರುವ 12 ವಿದ್ಯಾರ್ಥಿಗಳಿಗೆ ಅವಕಾಶ

    *ಪರೀಕ್ಷೆಗೆ 2,01,816 ವಿದ್ಯಾರ್ಥಿಗಳ ನೋಂದಣಿ

    * ಕೋವಿಡ್ ನಡುವೆ ಪರೀಕ್ಷೆ, ಎಲ್ಲ ಮುನ್ನೆಚ್ಚರಿಕೆ

    * ರಾಜ್ಯದಲ್ಲಿ 530, ಬೆಂಗಳೂರಿನಲ್ಲಿ 86 ಪರೀಕ್ಷಾ ಕೇಂದ್ರ

    * ಸಿಇಟಿ ಅಂಕ ಆಧಾರದ ಮೇಲೆ Rank

    * ಈ ವರ್ಷವೂ ಆನ್ ಲೈನ್ ನಲ್ಲಿ ದಾಖಲಾತಿ ಸ್ವೀಕಾರ, ಪರಿಶೀಲನೆ & ಕೌನ್ಸೆಲಿಂಗ್

    * ಗಡಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ

    * ಪ್ರತಿ ಕೊಠಡಿಯಲ್ಲಿ 24 ಅಭ್ಯರ್ಥಿಗಳು, ಒಂದು ಡೆಸ್ಕಿಗೆ ಇಬ್ಬರು

    BENGALURU AUG 27

    2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಾಳೆಯಿಂದ, ಅಂದರೆ; ಅಗಸ್ಟ್ 28- 29 ಮತ್ತು 30ರಂದು ರಾಜ್ಯದಲ್ಲೆಡೆ ನಡೆಯಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಶುಕ್ರವಾರ ಎಲ್ಲ ಸಿದ್ಧತೆಗಳನ್ನು ಖುದ್ದು ಪರಿಶೀಲಿಸಿದರು.

    ಈ ಸಂಬಂಧ ಬೆಂಗಳೂರಿನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಉನ್ನತ ಅಧಿಕಾರಿಗಳ ಸಭೆ ನಡೆಸಿದ ನಂತರ ಅವರು, ಮಲ್ಲೇಶ್ವರದ 18ನೇ ಕ್ರಾಸ್ ನಲ್ಲಿರುವ ಸರಕಾರಿ ಪಿಯು ಕಾಲೇಜಿಗೆ ತೆರಳಿ ಪರೀಕ್ಷಾ ಸಿದ್ಧತೆಗಳನ್ನು ನೇರವಾಗಿ ವೀಕ್ಷಿಸಿದರು.

    ಕಳೆದ ವರ್ಷದಂತೆ ಈ ವರ್ಷವೂ ಕೋವಿಡ್ ಸವಾಲಿನ ನಡುವೆಯೇ ಸಿಇಟಿ ನಡೆಯುತ್ತಿದ್ದು, ಸರಕಾರದ ಮಾರ್ಗಸೂಚಿಯಂತೆ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕೆಗಳನ್ನು ಸಚಿವರು ಪರಿಶೀಲನೆ ಮಾಡಿದರು.

    ಬಳಿಕ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಡಾ.ಅಶ್ವತ್ಥನಾರಾಯಣ ಅವರು, ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ ನಡೆಯುತ್ತಿದ್ದು, ಕೋವಿಡ್ ಒತ್ತಡವನ್ನು ಮನಸ್ಸಿನಿಂದ ತೆಗೆದು ಹಾಕಿ ವಿದ್ಯಾರ್ಥಿಗಳು ಧೈರ್ಯ, ಸಂತೋಷದಿಂದ ಬರೆಯಬೇಕು. ಇದನ್ನು ನಾನು ʼಸಿಇಟಿ ಪರೀಕ್ಷೋತ್ಸವʼ ಎಂದು ಕರೆಯಲು ಬಯಸುತ್ತೇನೆ ಎಂದರು.

    ಮಹತ್ವದ ಅಂಶವೆಂದರೆ, ಕೋವಿಡ್ ಕಾರಣದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದ್ದು. ಸಿಇಟಿ ಅಂಕದ ಆಧಾರದ ಮೇಲೆಯೇ Rank ನಿರ್ಧಾರ ಮಾಡಲಾಗುವುದು ಎಂದು ಸಚಿವರು ಪ್ರಕಟಿಸಿದರು.

    ಸಚಿವರು ಹೇಳಿದ್ದಿಷ್ಟು;

    ರಾಜ್ಯದಲ್ಲಿ ಒಟ್ಟು 2,01,816 ಅಭ್ಯರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದು, ಈ ಪೈಕಿ ಕೋವಿಡ್ ಪಾಸಿಟಿವ್ ಇರುವ 12 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

    12 ಸೋಂಕಿತ ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಹಾಗೂ ಕೋಲಾರ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ತಲಾ ಒಬ್ಬ ವಿದ್ಯಾರ್ಥಿ ಸಿಇಟಿ ಬರೆಲಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

    ರಾಜ್ಯಾದ್ಯಂತ 530 ಪರೀಕ್ಷಾ ಕೇಂದ್ರಗಳ ಪೈಕಿ 86 ಕೇಂದ್ರಗಳು ಬೆಂಗಳೂರಿನಲ್ಲೇ ಇವೆ. ಉಳಿದ ಜಿಲ್ಲೆಗಳಲ್ಲಿ ಒಟ್ಟು 444 ಕೇಂದ್ರಗಳಿವೆ. ಹೊರನಾಡು & ಗಡಿನಾಡು ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ಅಗಸ್ಟ್ 30ರಂದು ಬೆಂಗಳೂರು, ಬೀದರ್, ವಿಜಯಪುರ, ಬಳ್ಳಾರಿ, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುವುದು. ಈ ಕೇಂದ್ರಗಳಲ್ಲಿ 1682 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

    ಪ್ರತಿ ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಯಲ್ಲಿ 24 ಅಭ್ಯರ್ಥಿಗಳು ಪರೀಕ್ಷೆ ಬರೆಯುವಂತೆ ಹಾಗೂ ಪ್ರತಿ ಒಂದು ಬೆಂಚಿನಲ್ಲಿ ಇಬ್ಬರು ಅಭ್ಯರ್ಥಿಗಳು ಕುಳಿತುಕೊಳ್ಳುವಂತೆ ಹಾಗೂ ಎರಡು ಬೆಂಚ್ ನಡುವೆ ಮೂರು ಅಡಿ ಅಂತರ ಕಾಪಾಡಿಕೊಳ್ಳಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕ್ರಮ ವಹಿಲಾಗಿದೆ.

    ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನರ್, ಹ್ಯಾಂಡ್ ಸ್ಯಾನಿಟೈಸರ್ ಅಳವಡಿಸಲಾಗಿದೆ. ಬೆಂಗಳೂರಿನಲ್ಲಿರುವ ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಬಿಬಿಎಂಪಿ ವತಿಯಿಂದ ಸ್ಯಾನಿಟೈಸ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ಪ್ರತಿ ಪರೀಕ್ಷಾ ಕೇಂದ್ರಕ್ಕೆ 100 ಮಾಸ್ಕ್‌ʼಗಳನ್ನು ಸ್ವಯಂ ಸೇವಾ ಸಂಸ್ಥೆಯಿಂದ ಪರೀಕ್ಷೆ ನಡೆಯುವ ಎರಡು ದಿನಗಳಂದು ಪರೀಕ್ಷಾ ಕೇಂದ್ರಕ್ಕೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

    ವಾರಾಂತ್ಯದ ಕರ್ಫ್ಯೂ ಇರುವ ಗಡಿ ಜಿಲ್ಲೆಗಳಲ್ಲಿ ಅಭ್ಯರ್ಥಿಗಳು ಮತ್ತು ಪೋಷಕರು ಸಿಇಟಿ ಪರೀಕ್ಷಾ ಕೇಂದ್ರಕ್ಕೆ ತಲುಪಲು ಅನುಕೂಲವಾಗಲು ಸಿಇಟಿ ಪರೀಕ್ಷೆಯ ಪ್ರವೇಶ ಪತ್ರವನ್ನು ಪರಿಗಣಿಸಿ ಅವಕಾಶ ನೀಡಲು ಎಲ್ಲ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ. ಮುಖ್ಯವಾಗಿ ಕೇರಳ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಲಾಗಿದೆ.

    ಉಳಿದಂತೆ ಪರೀಕ್ಷೆಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನೂ ಸಮರ್ಪಕವಾಗಿ ಮಾಡಲಾಗಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಮಾಡಿದೆ.

    ರೀಕ್ಷೆ ವೇಳಾಪಟ್ಟಿ ಹೀಗಿದೆ:

    28ರಂದು ಶನಿವಾರ ಬೆಳಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತದ ಪರೀಕ್ಷೆ ಇರುತ್ತದೆ.

    29ರಂದು ಭಾನುವಾರ ಬೆಳಗ್ಗೆ 10.30ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ.

    30ರಂದು ಭಾನುವಾರ ಬೆಳಗ್ಗೆ 11.30ರಿಂದ 12.50 ರವರೆಗೆ ಹೊರನಾಡು, ಗಡಿನಾಡ ಕನ್ನಡಿಗ ಹಾಗೂ ಕನ್ನಡಿಗ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯುತ್ತದೆ.

    ಅಭ್ಯರ್ಥಿಗಳು http://kea.kar.nic.in ನಲ್ಲಿ ತಮ್ಮ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಬೇಕು ಹಾಗೂ ಅದರಲ್ಲಿ ಮುದ್ರಿತವಾಗಿರುವ ಸೂಚನೆಗಳನ್ನು ಪಾಲಿಸಿ, ಅದರಲ್ಲಿ ನಮೂದಿಸಲಾದ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕು.

    ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳು/ಉತ್ತರಗಳು ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ಮುದ್ರಿತವಾಗಿರುತ್ತವೆ. ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕು.


    ಸೋಂಕಿತರಿಗೆ ಪ್ರತ್ಯೇಕ ವ್ಯವಸ್ಥೆ

    ಕಳೆದ ವರ್ಷದಂತೆ ಈ ವರ್ಷವೂ ಕೋವಿಡ್ ಸೋಂಕಿತ ವಿದ್ಯಾರ್ಥಿಗಳಿದ್ದರೆ, ಅಂಥವರಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಎಸ್ಒಪಿ ಪ್ರಕಾರ ಅವರಿಗೆ ಪ್ರತಿ ಜಿಲ್ಲೆಯಲ್ಲೂ ಇವರಿಂದ ಪರೀಕ್ಷೆ ಬರೆಸಲಾಗುವುದು. ಯಾರೇ ವಿದ್ಯಾರ್ಥಿಗಳು ಸೋಂಕಿತರಿದ್ದರೆ ಧೈರ್ಯವಾಗಿ ಪರೀಕ್ಷೆ ಬರೆಯಲು ಅವಕಾಶ ಇದೆ. ಅವರಿಗೆ ಅಗತ್ಯವಾದ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ಅರೆವೈದ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಭದ್ರತೆಗೆ ಹೆಚ್ಚು ಒತ್ತು

    ಒಟ್ಟು 530 ವೀಕ್ಷಕರು, 1060 ವಿಶೇಷ ಜಾಗೃತ ದಳದ ಸದಸ್ಯರು, 530 ಪ್ರಶ್ನೆ ಪತ್ರಿಕೆ ಪಾಲಕರು, ಸುಮಾರು 8409 ಕೊಠಡಿ ಮೇಲ್ವಿಚಾರಕರು ಹಾಗೂ ಒಟ್ಟಾರೆ 20415 ಅಧಿಕಾರಿ/ಸಿಬ್ಬಂದಿ ಪರೀಕ್ಷ ಕರ್ತವ್ಯ ನಿರ್ವಹಿಸಲಿದ್ದಾರೆ. ಪರೀಕ್ಷಾ ದಿನಗಳಂದು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ/ಖಜಾನೆಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗಿದೆ.

    ಆನ್ ಲೈನ್ ಮೂಲಕ ದಾಖಲೆಗಳ ಸಲ್ಲಿಕೆ:

    ಕಳೆದ ವರ್ಷದಂತೆ ಈ ವರ್ಷವೂ ಪರೀಕ್ಷೆ ಮುಗಿದ ನಂತರದ ದಿನಗಳಲ್ಲಿ ಅಭ್ಯರ್ಥಿಗಳು ಸಿಇಟಿ ಅರ್ಜಿಯಲ್ಲಿ ಕೋರಿರುವ ಮೀಸಲಾತಿಗೆ ಅಗತ್ಯ ದಾಖಲೆಗಳನ್ನು ಆನ್ ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಹೀಗೆ ಆನ್ ಲೈನ್ ಮೂಲಕ ಸಲ್ಲಿಸಿರುವ ದಾಖಲೆಗಳನ್ನು ಆನ್ ಲೈನ್ ಮೂಲಕವೇ ಪರಿಶೀಲನೆ ಮಾಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ವಿವರವಾದ ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್‌ʼನಲ್ಲಿ ಪ್ರಕಟಿಸಲಾಗುವುದು.

    ಜತೆಗೆ, ವಿಶೇಷ ವರ್ಗದ ಅಭ್ಯರ್ಥಿಗಳಿಗೆ ದಾಖಲಾತಿ ಸಲ್ಲಿಸಲು ಮತ್ತೊಮ್ಮೆ ಅವಕಾಶವನ್ನು ನೀಡಲಾಗುವುದು ಎಂದ ಅವರು, ಎಲ್ಲ ಅಭ್ಯರ್ಥಿಗಳಿಗೆ ಅರ್ಜಿಯಲ್ಲಿರುವ ಮಾಹಿತಿಯನ್ನು ತಿದ್ದುಪಡಿ ಮಾಡಿಕೊಳ್ಳಲೂ ಸಹ ಅಂತಿಮ ಅವಕಾಶವನ್ನು ನೀಡಲಾಗುತ್ತಿದ್ದು, ಅದಕ್ಕಾಗಿ ಒಂದು ವಾರ ಕಾಲಾವಕಾಶ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

    ಇಸ್ಕಾನ್: ಈ ಬಾರಿಯೂ ಆನ್ ಲೈನ್ ಜನ್ಮಾಷ್ಟಮಿ

    BENGALURU AUG 27

    ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯೂ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತರು ಆನ್ ಲೈನ್ ನಲ್ಲೇ ವೀಕ್ಷಿಸಬೇಕೆಂದು ಬೆಂಗಳೂರಿನ ಇಸ್ಕಾನ್ ವಿನಂತಿಸಿದೆ. ಆಗಸ್ಟ್ 29 ಮತ್ತು 30ರಂದು ದೇವಸ್ಥಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದೂ ಇಸ್ಕಾನ್ ಪ್ರಕಟಿಸಿದೆ.

    ಹಬ್ಬದ ವೇಳಾಪಟ್ಟಿಯ ಪ್ರಕಾರ ಎಲ್ಲ ಸೇವೆಗಳನ್ನೂ ದೇವರಿಗೆ ಅರ್ಪಿಸಲಾಗುವುದು. ಆದರೆ ಭಕ್ತರು ಭೌತಿಕವಾಗಿ ಮಂದಿರಕ್ಕೆ ಆಗಮಿಸದೆ ಆನ್ ಲೈನ್‌ ನಲ್ಲಿ ಭಾಗವಹಿಸಬೇಕೆಂದು ಇಸ್ಕಾನ್ ನ ಸಾರ್ವಜನಿಕ ಸಂಪರ್ಕ ಮತ್ತು ಯೋಜನೆಗಳ ಮುಖ್ಯಸ್ಥ ನವೀನ ನೀರದ ದಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. www.iskconbangalore.org ಈ ಜಾಲ ತಾಣದಲ್ಲಿ ನೇರ ಪ್ರಸಾರ ಇರುತ್ತದೆ.

    ರಸ್ತೆ ಸಂಪರ್ಕದಲ್ಲಿ ಕರ್ನಾಟಕವು ಮಾದರಿ: ಬಿಹಾರ ಸಚಿವರ ಪ್ರಶಂಸೆ

    BENGALURU AUG 27

    ಕರ್ನಾಟಕವು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಅಭಿವೃದ್ಧಿಗೆ ಇಲ್ಲಿಯ ಸುಸಜ್ಜಿತ ಹೆದ್ದಾರಿಗಳು ಮತ್ತು ಹೆಚ್ಚಿನ ಮೂಲಸೌಲಭ್ಯಗಳು ಕಾರಣ ಎಂದು ಬಿಹಾರದ ರಸ್ತೆ ನಿರ್ಮಾಣ ಇಲಾಖೆಯ ಸಚಿವರಾದ ನಿತಿನ್ ನಬಿನ್ ಅವರು ಪ್ರಶಂಸಿಸಿದರು.

    ವಿಕಾಸಸೌಧದಲ್ಲಿ ಇಂದು ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಕೈಗೊಳ್ಳುತ್ತಿರುವ ಹೆದ್ದಾರಿ ಮತ್ತು ರಸ್ತೆ ನಿರ್ಮಾಣಗಳ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡ ಬಳಿಕ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

    ಕರ್ನಾಟಕದಲ್ಲಿ ಮೂಲೆಮೂಲೆಗಳಿಗೂ ಅಳವಡಿಸಿರುವ ರಸ್ತೆ ಸಂಪರ್ಕವು ಇಡೀ ದೇಶದಲ್ಲೇ ಮಾದರಿಯಾಗಿದೆ. ಕರ್ನಾಟಕದ ಸಂಪರ್ಕ ಕ್ರಾಂತಿಯಲ್ಲಿ ಕೈಗೊಳ್ಳಲಾಗಿರುವ ಈ ಉತ್ತಮ ಸಾಧನೆಗಳ ಅಂಶಗಳನ್ನು ಬಿಹಾರವು ಭವಿಷ್ಯದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಲಿದೆ ಎಂದು ಅವರು ತಿಳಿಸಿದರು.

    ಕರ್ನಾಟಕದಲ್ಲಿರುವ ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿ ಮತ್ತು ಇತರ ರಸ್ತೆಗಳ ನಿರ್ವಹಣೆಯ ಕುರಿತು ಲೋಕೋಪಯೋಗಿ ಸಚಿವರಾದ ಸಿ. ಸಿ. ಪಾಟೀಲರು ವಿವರಿಸಿ, ಹೆದ್ದಾರಿ ಮತ್ತು ರಸ್ತೆಗಳ ನಿರ್ಮಾಣದಲ್ಲಿ ಅಳವಡಿಸಿಕೊಳ್ಳಲಾಗುತ್ತಿರುವ ಆಧುನಿಕ ತಂತ್ರಜ್ಞಾನಗಳ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.

    ಕರ್ನಾಟಕದಲ್ಲಿ ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಿಗೆ ಹೆಚ್ಚಿನ ಅನುಕೂಲವಾಗುವಂತೆ ರಸ್ತೆಗಳ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸಲಾಗಿದೆ. ರಸ್ತೆಗಳ ನಿರ್ವಹಣೆಯಲ್ಲಿ ವಾಹನಗಳ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ ಎಂದು ಸಿ.ಸಿ. ಪಾಟೀಲರು ವಿವರಿಸಿದರು.

    ವಿಶ್ವಬ್ಯಾಂಕ್ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ನಮ್ಮ ರಾಜ್ಯ ಸರ್ಕಾರವು ಕೈಗೊಂಡಿರುವ ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ಹಾಗೂ ಕರ್ನಾಟಕದ ರಸ್ತೆ ಮತ್ತು ಹೆದ್ದಾರಿಗಳ ಸಂಪರ್ಕಜಾಲದ ನಿರ್ಮಾಣ ಮತ್ತು ನಿರ್ವಹಣೆಯ ಬಗ್ಗೆ ಬಿಹಾರದ ಸಚಿವರಿಗೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ರೆಡ್ಡಿ ಅವರು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿ ವಿವರಿಸಿದರು.

    ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮುಖ್ಯ ಯೋಜನಾಧಿಕಾರಿ ಶ್ರೀ ಗುರುಪ್ರಸಾದ್, ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನಿಯರ್ ಗೋವಿಂದರಾಜು ಅವರೂ ಸೇರಿದಂತೆ ಉಭಯ ರಾಜ್ಯಗಳ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

    ಸೆಪ್ಟೆಂಬರ್ 1 ರಿಂದ ದಿನಕ್ಕೆ 5 ಲಕ್ಷ ಡೋಸ್ ಲಸಿಕೆ ನೀಡಲು ಸಿದ್ಧತೆ

    BENGALURU AUG 27

    ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರತಿ ದಿನ 5 ಲಕ್ಷ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಇದಕ್ಕೆ ಅಗತ್ಯ ಪ್ರಮಾಣದ ಲಸಿಕೆ ಒದಗಿಸುವುದಾಗಿ ಕೇಂದ್ರ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ತಮ್ಮ ದೆಹಲಿ ಭೇಟಿಯ ವಿವರಗಳನ್ನು ಅವರು ಮಾಧ್ಯಮಗಳಿಗೆ ನೀಡಿದರು.

    ತಮ್ಮ ದೆಹಲಿ ಭೇಟಿಯ ಮುಖ್ಯ ಉದ್ದೇಶ ಹೆಚ್ಚುವರಿ ಲಸಿಕೆ ಪಡೆಯುವುದಾಗಿದ್ದು, ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಅವರ ಭರವಸೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 1 ರಿಂದ ರಾಜ್ಯದಲ್ಲಿ ಪ್ರತಿದಿನ 5 ಲಕ್ಷ ಡೋಸ್ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

    ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಮೊದಲಾದ ಯೋಜನೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು. ಜೊತೆಗೆ ಸುಪ್ರೀಂ ಕೋರ್ಟ್ ಜಲವಿವಾದ ಗಳ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲು ಕಾನೂನು ತಜ್ಞರು ಹಾಗೂ ತಾಂತ್ರಿಕ ತಂಡದವರೊಂದಿಗೆ ಚರ್ಚೆ ನಡೆಸಲಾಯಿತು.

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಜಿ.ಎಸ್.ಟಿ. ಪರಿಹಾರ 2022ಕ್ಕೆ ಅಂತ್ಯಗೊಳ್ಳಲಿದ್ದು, ಇದನ್ನು ಮುಂದುವರೆಸುವಂತೆ ಮನವಿ ಮಾಡಲಾಯಿತು. ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚಿಸುವುದಾಗಿ ಸಚಿವರು ತಿಳಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

    ಪಿಯೂಷ್ ಗೋಯಲ್ ಅವರು ಕರ್ನಾಟಕದಲ್ಲಿ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ಕಂಪೆನಿಗಳ ಜೊತೆ ಸಂಪರ್ಕ ಒದಗಿಸುವುದಾಗಿ ತಿಳಿದ್ದಾರೆ. ಇದು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ದೊರೆಯಲು ಸಾಧ್ಯವಾಗುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

    ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ ತನಿಖೆಗೆ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ. ನನಗೇ ನೇರವಾಗಿ ವರದಿ ಮಾಡಿ ಎಂದು ತಿಳಿಸಿದ್ದೇನೆ. ಡಿಜಿಪಿ ಅವರು ಇಂದು ಸ್ವತಃ ಮೈಸೂರಿಗೆ ಭೇಟಿ ನೀಡಿದ್ದಾರೆ. ಡಿಜಿಪಿ ಅವರೇ ಖುದ್ದು ಈ ಪ್ರಕರಣದ ತನಿಖೆಯ ಮೇಲ್ವಿಚಾರಣೆ ವಹಿಸುವಂತೆ ತಿಳಿಸಿದ್ದೇನೆ. ಶೀಘ್ರದಲ್ಲೇ ಪ್ರಕರಣ ಭೇದಿಸುವಂತೆ ಸೂಚಿಸಿದ್ದೇನೆ ಎಂದು ಬೊಮ್ಮಾಯಿ ನುಡಿದರು.

    ಕೋವಿಡ್ 3ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಗೌರಿ-ಗಣೇಶ ಹಬ್ಬ ಆಚರಣೆಗೆ ಮಾರ್ಗಸೂಚಿಗಳನ್ನು ರೂಪಿಸುವ ಕುರಿತು ಆಗಸ್ಟ್ 30 ರಂದು ನಡೆಯಲಿರುವ ತಜ್ಞರ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.

    ಸಚಿವ ಸಂಪುಟದಲ್ಲಿನ ಖಾಲಿ ಸ್ಥಾನ‌ ಭರ್ತಿ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ, ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರನ್ನು ಬೇರೆ ಬೇರೆ ಕಾರಣಗಳಿಂದ ಭೇಟಿ ಮಾಡಲು ಆಗಲಿಲ್ಲ. ಮುಂದಿನ‌ ಬಾರಿ ನವದೆಹಲಿಗೆ ತೆರಳಿದಾಗ ಆ ಬಗ್ಗೆ ಅವರೊಂದಿಗೆ ಚರ್ಚೆ ಮಾಡಿತ್ತೇನೆ ಎಂದು ಸಿಎಂ ಹೇಳಿದರು.

    28 ರಿಂದ 30ರವರೆಗೆ ಸಿ.ಇ.ಟಿ. ಪರೀಕ್ಷೆ: 530 ಕೇಂದ್ರಗಳಲ್ಲಿ ನಡೆಸಲು ಸಕಲ ಸಿದ್ಧತೆ

    BENGALURU AUG 26

    ರಾಜ್ಯದಲ್ಲಿ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಒಟ್ಟು 530 ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿ.ಇ.ಟಿ.-2021) ನಡೆಸಲು ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

    ಒಟ್ಟು 2,01,816 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಸಿದ್ದು, ಕೋವಿಡ್ ಅನ್ನು ಗಮನದಲ್ಲಿರಿಸಿಕೊಂಡು ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ ಪರೀಕ್ಷೆ ನಡೆಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

    ಆ.28ರಂದು ಜೀವಶಾಸ್ತ್ರ ಮತ್ತು ಗಣಿತ ವಿಷಯಗಳಿಗೆ ಪರೀಕ್ಷೆ ನಡೆದರೆ, ಆ.29ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಹೊರನಾಡು ಹಾಗೂ ಗಡಿಭಾಗದ ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆಯು ಆ.30ರಂದು ನಿಗದಿಯಾಗಿದೆ.

    530 ಪರೀಕ್ಷಾ ಕೇಂದ್ರಗಳ ಪೈಕಿ 86 ಕೇಂದ್ರಗಳು ಬೆಂಗಳೂರಿನಲ್ಲಿದ್ದರೆ, ಉಳಿದ 444 ಕೇಂದ್ರಗಳು ಇನ್ನುಳಿದ ಜಿಲ್ಲೆಗಳಲ್ಲಿವೆ. ಆಯಾ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸಹಾಯಕ ಆಯುಕ್ತರ ಮಟ್ಟದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನಾಗಿ ನೇಮಕ ಮಾಡಿದ್ದಾರೆ ಎಂದು ಅಶ್ವತ್ಥ ನಾರಾಯಣ ಅವರು ತಿಳಿಸಿದ್ದಾರೆ.

    ಪರೀಕ್ಷೆ ನಡೆಯುವ ದಿನಗಳಂದು ಗೃಹ ಇಲಾಖೆಯು ಸೂಕ್ತ ಪೊಲೀಸ್ ವ್ಯವಸ್ಥೆ ಮಾಡಲಿದೆ. ಜೊತೆಗೆ ಒಟ್ಟು 530 ವೀಕ್ಷಕರು, 1060 ವಿಶೇಷ ಜಾಗೃತ ದಳದ ಸದಸ್ಯರು, 530 ಪ್ರಶ್ನೆಪತ್ರಿಕೆ ಪಾಲಕರು, 8409 ಕೊಠಡಿ ಮೇಲ್ವಿಚಾರಕರು ಹಾಗೂ 20,415 ಅಧಿಕಾರಿ ವರ್ಗದ ಸಿಬ್ಬಂದಿಯನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

    ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯು ಇದೇ 30ರಂದು 6 ಸ್ಥಳಗಳಲ್ಲಿ ನಡೆಯಲಿದೆ. ಬೆಂಗಳೂರು, ಬೀದರ್, ವಿಜಯಪುರ, ಬಳ್ಳಾರಿ, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ನಡೆಯುವ ಈ ಪರೀಕ್ಷೆಗೆ 1682 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

    ಪರೀಕ್ಷೆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು:

    •ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಪರೀಕ್ಷೆಗೆ ಹಾಜರಾಗಬೇಕು.

    •ಓಎಂಆರ್ ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಗಳು ತಮ್ಮ ಹೆಸರನ್ನು ಬರೆಯಬೇಕು. ಅಭ್ಯರ್ಥಿಗಳು ಸಿಇಟಿ ಸಂಖ್ಯೆಯನ್ನು, ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಬರೆದು ಅದಕ್ಕೆ ಸಂಬಂಧಿಸಿದ ವೃತ್ತಗಳನ್ನು ಸಂಪೂರ್ಣವಾಗಿ ತುಂಬಬೇಕು.

    •ಒಎಂಆರ್ ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆಯಲ್ಲಿರುವ ಕ್ರಮ ಸಂಖ್ಯೆ ಒಂದೇ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.

    •ಉತ್ತರಗಳನ್ನು OMR ಉತ್ತರ ಪತ್ರಿಕೆಯಲ್ಲಿ ಶೇಡ್ ಮಾಡುವುದರ ಮೂಲಕ ಉತ್ತರಿಸಬೇಕಾಗಿರುವುದರಿಂದ, ಅಭ್ಯರ್ಥಿಗಳು ತಮ್ಮ ಜೊತೆಯಲ್ಲಿ ನೀಲಿ (Blue) ಅಥವಾ ಕಪ್ಪು ಶಾಯಿಯ ಬಾಲ್ ಪಾಯಿಂಟ್ (Black Ink Ball Point) ಪೆನ್ನನ್ನು ತೆಗೆದುಕೊಂಡು ಹೋಗಬೇಕು.

    •ಅಭ್ಯರ್ಥಿಗಳು ಪರೀಕ್ಷಾ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ. ಹಾಗೆಯೇ ಪರೀಕ್ಷೆಯ ಮೊದಲನೆ ಬೆಲ್ ಆಗುವ ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನು ತಲುಪಬೇಕು (ಕೆಇಎ ವೆಬ್‌ಸೈಟ್  http://kea.kar.nic.in ಗೆ ಭೇಟಿ ನೀಡಿ)

    •ಪ್ರವೇಶ ಪತ್ರದ ಜೊತೆಯಲ್ಲಿ ಅಭ್ಯರ್ಥಿಯು ಕಡ್ಡಾಯವಾಗಿ ಮಾನ್ಯತೆ ಇರುವ ಕಾಲೇಜಿನ ಗುರುತಿನ ಚೀಟಿ, 2ನೇ ಪಿಯುಸಿ / 12ನೇ ತರಗತಿಯ ಪ್ರವೇಶಪತ್ರ, ಬಸ್ ಪಾಸ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಇವುಗಳಲ್ಲಿ ಯಾವುದಾದರೂ ಒಂದನ್ನು ತೆಗೆದುಕೊಂಡು ಹೋಗಬೇಕು.

    •ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ರೀತಿಯ ಕೈಗಡಿಯಾರವನ್ನು ಕಟ್ಟಿಕೊಂಡು / ತೆಗೆದುಕೊಂಡು ಹೋಗುವಂತಿಲ್ಲ. ಅಭ್ಯರ್ಥಿಗಳು ಕೊಠಡಿಯ ಒಳಗೆ ಯಾವುದೇ ಟ್ಯಾಬ್ಲೆಟ್ / ಮೊಬೈಲ್ / ಕ್ಯಾಲುಕುಲೇಟರ್‌ಗಳನ್ನು ತರುವಂತಿಲ್ಲ.

    •ಅಭ್ಯರ್ಥಿಗಳು ಓ.ಎಂ.ಆರ್. ಉತ್ತರ ಹಾಳೆಯಲ್ಲಿ ಎಡಗೈ ಹೆಬ್ಬೆರಳ ಗುರುತನ್ನು ಹಾಕುವಂತಿಲ್ಲ.

    ಸೆಪ್ಟೆಂಬರ್ 13ರಿಂದ ವಿಧಾನಸಭೆ ಅಧಿವೇಶನ

    BENGALURU AUG 26

    ಹದಿನೈದನೇ ವಿಧಾನಸಭೆಯ ಹತ್ತನೇ ಅಧಿವೇಶನ ಸೆಪ್ಟೆಂಬರ್ 13ರಂದು ಬೆಳಿಗ್ಗೆ 11ಗಂಟೆಗೆ ವಿಧಾನಸೌಧದಲ್ಲಿ ಸಮಾವೇಶಗೊಳ್ಳಲಿದೆ.

    ರಾಜ್ಯಪಾಲರ ಅದೇಶದ ಅನ್ವಯ ವಿಧಾನಸಭೆಯ ಕಾರ್ಯದರ್ಶಿಗಳು ಈ ಬಗ್ಗೆ ಸದಸ್ಯರಿಗೆ ಆಹ್ವಾನವನ್ನು ರವಾನಿಸಿದ್ದಾರೆ. ತಾತ್ಕಾಲಿಕ ವೇಳಾಪಟ್ಟಿಯಂತೆ ಅಧಿವೇಶನ ಸೆಪ್ಟೆಂಬರ್ 24ರವರೆಗೂ ನಡೆಯಲಿದೆ.

    ಜಲ ವಿವಾದ ಬಾಕಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಆದ್ಯತೆ

    NEW DELHI AUG 26

    ಸರ್ವೋಚ್ಛ ನ್ಯಾಯಾಲಯದಲ್ಲಿ ಸುದೀರ್ಘ ಕಾಲದಿಂದ ಬಾಕಿ ಉಳಿದಿರುವ ಜಲ ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಇಂದು ಬೆಳಿಗ್ಗೆ ಮಾತನಾಡಿದ ಅವರು, ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕಾನೂನು ಮತ್ತು ತಾಂತ್ರಿಕ ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆದಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆಗಳ ಕುರಿತು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.

    ವಿಶೇಷ ರಜೆ ಅರ್ಜಿಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥ ಮಾಡಲು ತೀರ್ಮಾನಿಸಲಾಗಿದೆ ಎಂದ ಅವರು ತಮಿಳುನಾಡು ನದಿ ಜೋಡಣೆ ಯೋಜನೆಗಳು ಕಾನೂನು ಬಾಹಿರವಾಗಿದ್ದು, ಆ ಬಗ್ಗೆ ಚರ್ಚಿಸಲಾಗಿದೆ. ಮೇಕೆದಾಟು ಯೋಜನೆಯ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ನಮ್ಮ ನಿಲುವನ್ನು ಸ್ಪಷ್ಟಪಡಿಸುವ ಕುರಿತು ಹಾಗೂ ತಮಿಳುನಾಡು ಮಧುರೈ ನ್ಯಾಯಾಲಯದಲ್ಲಿ ಪ್ರಕರಣವೊಂದು ದಾಖಲಾಗಿದೆ. ಪ್ರಕರಣ ಮಧುರೈ ವ್ಯಾಪ್ತಿಗೆ ಒಳಪಡದಿರುವುದರಿಂದ ಪ್ರಕರಣವನ್ನು ಕೈಬಿಡಲು ಕ್ರಮ ವಹಿಸಲಾಗುವುದು ಎಂದರು.

    ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಆರೋಗ್ಯ ಸಚಿವ ಡಾ: ಕೆ.ಸುಧಾಕರ್, ಸಂಸದ ಶಿವಕುಮಾರ್ ಉದಾಸಿ ಉಪಸ್ಥಿತರಿದ್ದರು.

    ಕಾರಾಗೃಹಗಳಲ್ಲಿನ ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಗೃಹ ಸಚಿವ

    BENGALURU AUG 26

    ಕಾರಾಗೃಹಗಳಲ್ಲಿ ಯಾವುದೇ ತರಹದ ಅಕ್ರಮ ಚಟುವಟಿಕೆಗಳು ಹಾಗೂ ಭ್ರಷ್ಟಾಚಾರ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.

    ಕೇಂದ್ರ ಕಾರಾಗೃಹ ಕಚೇರಿಗೆ ಭೇಟಿ ನೀಡಿ ಕಾರಾಗೃಹಗಳ ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾರಾಗೃಹ ಗಳಲ್ಲಿ ಅನಧಿಕೃತವಾಗಿ ಹಾಗೂ ಕಾನೂನುಬಾಹಿರವಾಗಿ ಕೈದಿಗಳು ಮಾದಕ ವಸ್ತುಗಳನ್ನು ಪಡೆದುಕೊಳ್ಳುತ್ತಿರುವ ಹಾಗೂ ಹೊರ ಜಗತ್ತಿನೊಂದಿಗೆ ವ್ಯವಹರಿಸಲು ಫೋನ್ ಸೌಲಭ್ಯ ಮೂಲಕ ಸಂಪರ್ಕ ಸಾಧಿಸಿ ಹಣ ಸುಲಿಗೆ ನಡೆಸುತ್ತಿರುವ ಘಟನೆಗಳನ್ನು ಉದಾಹರಿಸಿ, ಅಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದರು.

    ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಗಳು ಅಧಿಕಾರಿಗಳ ಜೊತೆ ಶಾಮೀಲಾಗಿ ನಡೆಸುವುದು ಕಂಡು ಬಂದರೆ ಇಬ್ಬರ ಮೇಲೂ ಕಠಿಣ ಕ್ರಮ ಜರುಗಿಸಲು ಹಿರಿಯ ಅಧಿಕಾರಿಗಳಿಗೆ ಸೂಚನೆಯನ್ನು ಸಚಿವರು ನೀಡಿದರು.

    ಕಾರಾಗೃಹಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ವೈಖರಿಯನ್ನು ಸ್ವತಃ ಕಣ್ಣಾರೆ ಕಂಡಿದ್ದೇನೆ, ಇದರಿಂದ ಕೈದಿಗಳ ದೃಷ್ಟಿಯಲ್ಲಿ ಚಿಕ್ಕವರಾಗಬೇಡಿ ಎಂದು ತಿಳಿಸಿದರು.ಜೈಲಿನಿಂದ ಹೊರ ಬರುವಾಗ ಕೈದಿ ಪರಿವರ್ತನೆಗೊಂಡು ಸಮಾಜಕ್ಕೆಉತ್ತಮ ಕೊಡುಗೆ ನೀಡುವಂತಾಗೇಕು ಎಂದರು.

    ಕರ್ನಾಟಕ ಕಾರಾಗೃಹ ಇಲಾಖೆ ಮುಖ್ಯಸ್ಥ ಅಲೋಕ್ ಮೋಹನ್ ಒಳಗೊಂಡಂತೆ ಹಿರಿಯ ಅಧಿಕಾರಿಗಳು ಭಾಗಹಿಸಿದ್ದರು.

    ಜಿ.ಎಸ್.ಟಿ. ಪರಿಹಾರ ವಿಸ್ತರಣೆಗೆ ಸಿಎಂ ಮನವಿ

    NEW DELHI AUG 26

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಕೇಂದ್ರ ಸರ್ಕಾರದಿಂದ ಜಿ.ಎಸ್.ಟಿ. ಪರಿಹಾರವನ್ನು ಇನ್ನೂ ಮೂರು ವರ್ಷಗಳಿಗೆ ಮುಂದುವರೆಸುವಂತೆ ಹಾಗೂ 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ಹೆಚ್ಚಿಸುವಂತೆ ಮನವಿ ಮಾಡಿದರು.

    ಕೋವಿಡ್ ಸಾಂಕ್ರಾಮಿಕ ದಿಂದಾಗಿ ರಾಜ್ಯಗಳ ತೆರಿಗೆ ಸಂಗ್ರಹ ಕಡಿಮೆಯಾಗಿದ್ದು, ಸಾಮಾನ್ಯ ಸ್ಥಿತಿಗೆ ಬರಲು ಕೆಲವು ವರ್ಷಗಳೇ ಬೇಕಾಗಬಹುದು. ಕಳೆದ ವರ್ಷ ಜಿ ಎಸ್ ಟಿ ಪರಿಹಾರ ಸಾಲ ಒದಗಿಸಲಾಗಿತ್ತು. ಈ ವರ್ಷವೂ ಈ ಸೌಲಭ್ಯ ವಿಸ್ತರಿಸಲಾಗಿದೆ. ಆದರೆ ರಾಜ್ಯಗಳ ಹಣಕಾಸು ಸ್ಥಿತಿ ಸುಧಾರಿಸುವ ವರೆಗೆ ಕೇಂದ್ರದ ನೆರವು ಅತಿ ಅಗತ್ಯವಾಗಿದ್ದು ಮೂರು ವರ್ಷಗಳ ಅವಧಿಗೆ ಜಿ.ಎಸ್. ಟಿ. ಪರಿಹಾರ ವಿಸ್ತರಿಸುವಂತೆ ಮನವಿ ಮಾಡಿದರು.

    15 ನೆ ಹಣಕಾಸು ಆಯೋಗ: 15ನೆ ಹಣಕಾಸು ಆಯೋಗವು 2021 ರಿಂದ 2026 ರ ಅವಧಿಗೆ ರಾಜ್ಯಗಳಿಗೆ ತೆರಿಗೆ ಹಂಚಿಕೆಗೆ ಮಾಡಿದ ಶಿಫಾರಸಿನ ಅನ್ವಯ ರಾಜ್ಯದ ಹಂಚಿಕೆ 14 ನೆ ಹಣಕಾಸು ಆಯೋಗ ಶಿಫಾರಸು ಮಾಡಿದ ಶೇ. 4.71 ರಿಂದ ಶೇ. 3.647 ಕ್ಕೆ ಇಳಿಕೆಯಾಗಿದೆ. ಇದರಿಂದ ಅನುದಾನ ಹಂಚಿಕೆಯಲ್ಲಿ ತೀವ್ರ ಇಳಿಕೆಯಾಗಿದೆ.
    ಅನುದಾನ ಹಂಚಿಕೆ ಕುರಿತ ಮಾನದಂಡಗಳನ್ನು ಬದಲಿಸುವಂತೆ ರಾಜ್ಯ ಸರ್ಕಾರವು 15ನೇ ಹಣಕಾಸು ಆಯೋಗಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದು ರಾಜ್ಯದ ಮನವಿಯನ್ನು ಆಯೋಗವು ಪರಿಗಣಿಸಿಲ್ಲ. ಇದರಿಂದಾಗಿ ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

    ಮಾಹಿತಿ ತಂತ್ರಜ್ಞಾನ ಹಾಗೂ ಸ್ಟಾರ್ಟ್ ಅಪ್ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರು ದೇಶದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ. ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಯಿಂದ ಹೆಚ್ಚಿನ ಹೂಡಿಕೆ ಆಕರ್ಷಿಸಲು ಸಾಧ್ಯವಾಗುವುದು. ಆದ್ದರಿಂದ 15 ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬೆಂಗಳೂರು ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಮನವಿ ಮಾಡಿದರು.

    ಬೆಂಬಲ ಬೆಲೆಯಲ್ಲಿ ಹೆಸರು, ಉದ್ದು ಖರೀದಿಗೆ ಕೇಂದ್ರದ ಅನುಮತಿ

    NEW DELHI AUG 25

    ಕರ್ನಾಟಕದಲ್ಲಿ 2021-22 ರ ಮುಂಗಾರು ಹಂಗಾಮಿಗೆ ಬೆಂಬಲ ಬೆಲೆ ಯೋಜನೆಯಡಿ ಉದ್ದು ಮತ್ತು ಹೆಸರು ಖರೀದಿಗೆ ಭಾರತ ಸರ್ಕಾರದ ಕೃಷಿ ಸಚಿವಾಲಯ ಅನುಮತಿ ನೀಡಿದೆ.

    ಗರಿಷ್ಠ 30 ಸಾವಿರ ಮೆಟ್ರಿಕ್ ಟನ್ ಹೆಸರು ಹಾಗೂ ಗರಿಷ್ಠ 10 ಸಾವಿರ ಮೆಟ್ರಿಕ್ ಟನ್ ಉದ್ದು ಖರೀದಿಗೆ ಅನುಮತಿ ನೀಡಲಾಗಿದ್ದು, ಕರ್ನಾಟಕ ಸರ್ಕಾರ ನಿಗದಿ ಪಡಿಸುವ ದಿನಾಂಕದಿಂದ 90 ದಿನಗಳ ಅವಧಿಗೆ ಈ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    error: Content is protected !!