25.8 C
Karnataka
Friday, May 22, 2026
    Home Blog Page 60

    ಶಾಲೆ ಆರಂಭ ಮುಖ್ಯಮಂತ್ರಿಗಳ ನಿರ್ಧಾರದ ಮೇಲೆ ಅವಲಂಬಿತ ಎಂದ ಶಿಕ್ಷಣ ಸಚಿವ

    BENGALURU AUG 30

    ರಾಜ್ಯದಲ್ಲಿ ಶಾಲೆಗಳ ಆರಂಭದ ಕುರಿತು ಮುಖ್ಯಮಂತ್ರಿಗಳು ತಾಂತ್ರಿಕ ಶಿಕ್ಷಣ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ. ನಾಗೇಶ್ ಅವರು ಇಂದು ತಿಳಿಸಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಭೇಟಿ ನೀಡಿ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

    ಒಂದನೇ ತರಗತಿಯಿಂದ ಶಾಲೆಗಳನ್ನು ಆರಂಭಿಸಬೇಕೇ ಎಂಬ ಬಗ್ಗೆ ತಾಂತ್ರಿಕ ಶಿಕ್ಷಣ ಸಮಿತಿ ನಿರ್ಧಾರದಡಿ ನಿರ್ಣಯಿಸಬೇಕಾಗಿದೆ ಎಂದರು.
    ತಾಂತ್ರಿಕ ಸಲಹಾ ಸಮಿತಿ ಜೊತೆ ಮುಖ್ಯಮಂತ್ರಿಗಳ ಸಭೆಯ ಬಳಿಕ ಶಾಲಾ ತರಗತಿಗಳ ಕುರಿತು ನಿರ್ಧರಿಸಲಿದ್ದೇವೆ. ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ. ಶಿಕ್ಷಕರೂ ಶಾಲೆಗಳ ಆರಂಭಕ್ಕೆ ಉತ್ಸುಕರಾಗಿ ಕಾಯುತ್ತಿದ್ದಾರೆ ಎಂದರು. ಯಾಕೆ ಶಾಲೆಗಳನ್ನು ಆರಂಭಿಸುತ್ತಿಲ್ಲ ಎಂದು ಪೋಷಕರೂ ಶಾಲೆಗಳಿಗೆ ಬಂದು ಪ್ರಶ್ನಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದು ತಿಳಿಸಿದರು.

    ಮುಖ್ಯಮಂತ್ರಿಗಳು ಮತ್ತು ಶಾಸಕರ ಇಚ್ಛಾಶಕ್ತಿಯ ಪರಿಣಾಮವಾಗಿ ರಾಜ್ಯದಲ್ಲಿ ದೊಡ್ಡ ತರಗತಿಗಳು ಆರಂಭಗೊಂಡಿವೆ. ಮಕ್ಕಳ ಸಹಭಾಗಿತ್ವ ಮತ್ತು ಪೋಷಕರ ಸಹಕಾರ ಪೂರ್ಣವಾಗಿ ಲಭಿಸಿದೆ. ಬಹುತೇಕ ಶೇ 70ರಷ್ಟು ಮಕ್ಕಳು ಶಾಲೆಗಳಿಗೆ ಬರುತ್ತಿದ್ದಾರೆ ಎಂದು ವಿವರಿಸಿದರು.
    ಮುಖ್ಯಮಂತ್ರಿಗಳು ಮಕ್ಕಳ ಜೊತೆ ಸಂವಾದ ನಡೆಸಿದಾಗ ಆನ್‍ಲೈನ್ ತರಗತಿಗಳಿಂದ ಹೆಚ್ಚಿನ ಪ್ರಯೋಜನ ಆಗುತ್ತಿಲ್ಲ ಎಂಬುದು ಗೊತ್ತಾಗಿದೆ. ಅನೇಕ ಮಕ್ಕಳು ಇಡೀ ದಿನ ಶಾಲಾ ತರಗತಿ ನಡೆಸಲು ಮತ್ತು ಕುಡಿಯುವ ನೀರು ಹಾಗೂ ಬುತ್ತಿ ತರಲು ಅವಕಾಶ ಕೊಡುವಂತೆ ಸಿಎಂ ಅವರಲ್ಲಿ ಮನವಿ ಮಾಡಿದ್ದಾರೆ ಎಂದರು.

    ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಮೂಲಸೌಕರ್ಯ ಚೆನ್ನಾಗಿದ್ದು, ಕೋವಿಡ್ ಮಾರ್ಗಸೂಚಿ ಪಾಲನೆ ಕಷ್ಟವಾಗಲಾರದು. ಶಾಲೆಗಳ ಆರಂಭದ ಬಳಿಕ ಕೋವಿಡ್ ಸಂಖ್ಯೆಯಲ್ಲಿ ಹೆಚ್ಚಳ ಆಗಿಲ್ಲ ಎಂದೂ ಅವರು ಪ್ರಶ್ನೆಗೆ ಉತ್ತರ ನೀಡಿದರು.


    ಕೃಷ್ಣನೆಂದರೆ ‘ಪ್ರೀತಿ’ ರಾಧೆಗಷ್ಟೇ ಅಲ್ಲ

    ಭಗವಾನ್ ವಿಷ್ಣುವಿನ ಎಂಟನೇ ಅವತಾರ ಶ್ರೀಕೃಷ್ಣ ಪರಮಾತ್ಮ. ಧರ್ಮ ಸಂಸ್ಥಾಪನೆಗಾಗಿ ಜನ್ಮವೆತ್ತಿದ್ದು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು. ಶ್ರೀಕೃಷ್ಣ ಜನ್ಮಾಷ್ಟಮಿ ಹಿಂದೂ ಹಬ್ಬಗಳಲ್ಲಿ ಅತ್ಯಂತ ವಿಶಿಷ್ಟವಾದ ಹಬ್ಬ. ಕೃಷ್ಣನ ಜನ್ಮದಿನವನ್ನು ದೇಶಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಮಥುರಾ ಶ್ರೀಕೃಷ್ಣನ ಜನ್ಮಭೂಮಿ. ಇಲ್ಲಿ ಬಹಳ ಸಂಭ್ರಮದಿಂದ ಅಷ್ಟಮಿಯನ್ನು ಆಚರಿಸುತ್ತಾರೆ. ತನ್ನ ಬಾಲಲೀಲೆಗಳನ್ನು ತೋರಿದ ಬೃಂದಾವನದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಇರುತ್ತದೆ.

    ಆಡಿಸಿದಳೆಶೋಧೆ…

    ಮುದ್ದು ಕೃಷ್ಣ, ಬಾಲಕೃಷ್ಣ, ಗೋಪಕೃಷ್ಣ ಎಂದೆಲ್ಲಾ ಕರೆಸಿಕೊಳ್ಳುವ ದೇವಕಿ ನಂದ ಶ್ರೀಕೃಷ್ಣ ಎಂದರೆ ಎಲ್ಲರಿಗೂ ಪ್ರೀತಿಯ ಭಾವ. ಹಾಗೆಯೇ ಶ್ರೀಕೃಷ್ಣನ ಬಾಲಲೀಲೆಗಳು ಇಂದಿಗೂ ಪ್ರಸ್ತುತ. ಜನ್ಮಾಷ್ಟಮಿಯಂದು ಮಕ್ಕಳು ಶ್ರೀಕೃಷ್ಣನ ವೇಷ ಹಾಕಿ ಸಂಭ್ರಮಿಸುವ ಪರಿ ಇದಕ್ಕೆ ಸಾಕ್ಷಿ. ಮನೆಯಲ್ಲಿ ತೊಟ್ಟಿಲಲ್ಲಿ ತೂಗುವ, ಇನ್ನೂ ಅಂಬೆಗಾಲಿಡುವ ಮುದ್ದುಮೊಗದ ಮಗುವಿಗೂ ನಂದಕಿಶೋರನ ವೇಷ ಹಾಕಿ, ತಾನೇ ಯಶೋಧೆಯಾಗಿ ತನ್ನ ಕಂದನನ್ನು ಮುದ್ದುಕೃಷ್ಣನನ್ನಾಗಿ ಕಾಣುವ ಸಂಭ್ರಮ ಎಲ್ಲ ಅಮ್ಮಂದಿರಿಗೆ. ಮಗುವಿದ್ದಾಗ ಒಮ್ಮೆಯಾದರೂ ತನ್ನ ಕಂದನಿಗೆ ಶ್ರೀಕೃಷ್ಣನ ವೇಷ ಹಾಕಿ ಸಂಭ್ರಮಿಸದೇ ಇರುವವರು ಸಿಗುವುದು ವಿರಳ.

    ಪ್ರೀತಿಯ ಕಣ್ಣುಭಗವಾನ್ ಶ್ರೀಕೃಷ್ಣ ಪ್ರೀತಿಯ ದ್ಯೋತಕವಾಗಿ ಕಾಣಿಸುತ್ತಾನೆ.  ಕೃಷ್ಣನಿಲ್ಲದೆ ರಾಧೆ ಅಪೂರ್ಣ, ರಾಧೆಯಿಲ್ಲದೆ ಕೃಷ್ಣ ಪೂರ್ಣವಾಗುವುದೆಂಟೇನೋ? ಎರಡು ದೇಹ ಒಂದೇ ಉಸಿರಿನಂತಿದ್ದವರು ಅವರು. ನಿಷ್ಕಲ್ಮಶ ಪ್ರೀತಿಯದು.ರುಕ್ಮಿಣಿ, ರಾಧೆ ಎಲ್ಲರೂ ಶ್ರೀಕೃಷ್ಣನ ಲೀಲೆಗೆ ಒಳಗಾದವರೇ. ಅವನೇ ನನ್ನ ಸರ್ವಸ್ವ ಎಂದು ಭಾವಿಸಿ ತನ್ನೊಳಗೊಬ್ಬ ಸಖನನ್ನು ಕಂಡವರೂ ಇದ್ದಾರೆ.

    ಶ್ರೀಕೃಷ್ಣನನ್ನೇ ಧ್ಯಾನಿಸಿ ಅಮರಳಾದ ರಾಜಕುವರಿ ಮೀರಾ ಇದಕ್ಕೊಂದು ನಿದರ್ಶನ.  ಆಕೆ ಕೃಷ್ಣನೆಡೆಗೆ ತೋರಿದ ಭಕ್ತಿಯ ಪ್ರೀತಿಯದು. ಅದು ದೇವಪ್ರೀತಿ. ಶ್ರೀಕೃಷ್ಣನಿಗೆ ಹದಿನಾರು ಸಾವಿರ ಮಡದಿಯರು ಎಂಬುದಾಗಿಯೂ ಪುರಾಣ ಕಥೆಗಳಿಂದ ತಿಳಿದು ಬರುತ್ತದೆ. ಶ್ರೀಕೃಷ್ಣನ ಕುರಿತಾದ ಕಥೆಗಳನ್ನು ಕೇಳಿದರೆ ಜಗದೋದ್ಧಾರ ಇಡೀ ಜಗತ್ತಿಗೇ ಪ್ರೀತಿಯ ದ್ಯೋತಕ ಎಂಬುದು ಅರಿವಾಗುತ್ತದೆ. ಹೆಚ್.ಎಸ್. ವೆಂಕಟೇಶ ಮೂರ್ತಿ ಅವರು ಬರೆದ ಈ ಹಾಡು ಪ್ರಸಿದ್ಧಿ. “ಲೋಕದ ಕಣ್ಣಿಗೆ ರಾಧೆಯು ಕೂಡಾ ಎಲ್ಲರಂತೆ ಒಂದು ಹೆಣ್ಣು, ನನಗೂ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು’.

    ಜಗತ್ತಿಗೆ ಸಾರಿದ ಸಂದೇಶ

    ಭಗವಾನ್ ಶ್ರೀಕೃಷ್ಣ ಹುಟ್ಟಿದ್ದು ದೇವಕಿ ಹಾಗೂ ವಾಸುದೇವನ ಕಂದನಾಗಿ, ಬೆಳೆದದ್ದು ಯಶೋಧೆಯ ಮಡಿಲಲ್ಲಿ. ಹೆತ್ತವರು, ಪೋಷಕರು, ಸ್ನೇಹಿತ, ಎಲ್ಲರೆಡೆಗೂ ವಿಶೇಷ ಗೌರವ ಆದರಗಳನ್ನು ಹೊಂದಿದ್ದ ಶ್ರೀಕೃಷ್ಣ ದೈವತ್ವಕ್ಕೇರಿದ್ದು ತನ್ನ ಗುಣಗಳಿಂದಲೇ. ತನ್ನ ಹೆತ್ತವರು, ಪೋಷಕರೆಡೆಗೂ ತನ್ನ ಕರ್ತವ್ಯಗಳನ್ನು ಮಾಡುವ ಮೂಲಕ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ. ಎಂದಿಗೂ ಫಲದ ನಿರೀಕ್ಷೆ ಹೊಂದಿರಲಿಲ್ಲ. ಭಗವದ್ಗೀತೆಯಲ್ಲಿ ಹೇಳಿದಂತೆ “ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶು ಕದಾಚನ, ಮಾ ಕರ್ಮಫಲ ಹೇತುರ್ಭೂಮಾ ತೇ ಸಂಗೋಸ್ತ್ವ ಕರ್ಮಣಿ// ಫಲದ ಚಿಂತೆ ಬಿಟ್ಟು ನಿನ್ನ ಕರ್ತವ್ಯವನ್ನು ಮನಸ್ಸಿಟ್ಟು ಮಾಡು. ಕರ್ತವ್ಯವನ್ನು ಮಾಡದೆ ತಪ್ಪಿಸಿಕೊಳ್ಳುವ ವಿಚಾರ ನಿನ್ನಲ್ಲಿ ಮೂಡದಿರಲಿ ಎಂದು.

    ಶ್ರೀಕೃಷ್ಣ ಎಂದಿಗೂ ಪ್ರೀತಿ ಮತ್ತು ನ್ಯಾಯದ ಪರವಾಗಿದ್ದ. ಹಾಗಾಗಿಯೇ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರ ವಹಿಸುತ್ತಾನೆ. ಧರ್ಮ ಸಂಸ್ಥಾಪನೆಗಾಗಿ ತನ್ನವರ ವಿರುದ್ಧವೇ ಹೋರಾಟ ನಡೆಸುತ್ತಾನೆ. ಇದರರ್ಥ ಮನುಷ್ಯ ತನ್ನವರೆಂಬ ಬಂಧಗಳನ್ನು ಕಳಚಿಕೊಂಡು ಕಾಲದೊಂದಿಗೆ ಹೆಜ್ಜೆಹಾಕಬೇಕು.ಈ ಕ್ಷಣದಲ್ಲಿ ಬದುಕುವುದು ಎಷ್ಟು ಮುಖ್ಯ ಎಂಬುದನ್ನು ಸಾರಿದ್ದಾನೆ. ಈ ಕ್ಷಣ ಅನ್ನುವುದು ನಿನ್ನದು, ಹಿಂದೆ ಕಳೆದ ಹೋದ ಸಮಯ ಮತ್ತೆಂದೂ ಬಾರದು. ಕಳೆದುಹೋದುದರ ಬಗ್ಗೆ ಚಿಂತಿಸುವುದು ಅನಗತ್ಯ. ನಿನ್ನೆ ಎಂಬುದು ಇಂದು ಇಲ್ಲ, ನಾಳೆ ಏನಿರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ, ಹಾಗಾಗಿ ಈ ಕ್ಷಣಕ್ಕೆ ಮಹತ್ವ ನೀಡಬೇಕು ಎಂದು.

    ಭಗವಾನ್ ಶ್ರೀಕೃಷ್ಣನ ಪ್ರಸಿದ್ಧ ಸಂದೇಶಗಳಲ್ಲಿ ಒಂದು  ‘ಬದಲಾವಣೆ ಜಗದ ನಿಯಮ’. ಆದುದೆಲ್ಲಾ ಒಳ್ಳೆಯದಕ್ಕಾಗಿ, ಆಗುವುದೆಲ್ಲವೂ ಒಳ್ಳೆಯದಕ್ಕಾಗಿ. ಕಳೆದುಕೊಂಡುದುದರ ಬಗ್ಗೆ ದುಃಖಿಸಲು ನೀನು ಪಡೆದುಕೊಂಡು ಬಂದುದಾದರೂ ಏನನ್ನು. ಏನೇ ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ, ಇಂದು ನಿನ್ನಲ್ಲಿರುವುದು ನಿನ್ನೆ ಮತ್ಯಾರದೋ ಆಗಿತ್ತು, ನಾಳೆ ಇನ್ಯಾರದ್ದೋ ಆಗಲಿದೆ. ಹೀಗೆ ಭಗವಾನ್ ಶ್ರೀಕೃಷ್ಣ ಮನುಕುಲಕ್ಕೆ ಸಾರಿದ ಸಂದೇಶಗಳು ಅನೇಕ. ಅದರಂತೆ ನಡೆದರೆ ಬಾಳು ಬಹುತೇಕ ಸುಂದರ.ಭಗವಾನ್ ಶ್ರೀಕೃಷ್ಣ ಇಡೀ ವಿಶ್ವಕ್ಕೆ ಸಾರಿದ ಸಂದೇಶ ನಂಬಿಕೆ ಇರುವವರಿಗೆ ದಾರಿದೀಪದಂತೆ ತೋರುತ್ತಿದೆ, ಕಾಲಕಾಲಕ್ಕೆ ಮನುಕುಲಕ್ಕೆ ಎಚ್ಚರಿಕೆಯನ್ನೂ ನೀಡುತ್ತಿದೆ.

    ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.

    2ನೇ ದಿನ ಸಿಇಟಿ ಸುಸೂತ್ರ : ಭೌತಶಾಸ್ತ್ರಕ್ಕೆ 95.91%, ರಸಾಯನಶಾಸ್ತ್ರಕ್ಕೆ 95.88% ಅಭ್ಯರ್ಥಿಗಳು ಹಾಜರಿ

    BENGALURU AUG 29

    ರಾಜ್ಯಾದ್ಯಂತ ಭಾನುವಾರ ನಡೆದ ವೃತ್ತಿಶಿಕ್ಷಣ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಎರಡನೇ ದಿನವೂ ಸುಸೂತ್ರವಾಗಿ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲಾಗಿದೆ. ನೊಂದಣಿ ಮಾಡಿಸಿದ್ದ ಒಟ್ಟು 2,01,834 ಅಭ್ಯರ್ಥಿಗಳಲ್ಲಿ, 1,93,588 (95.91%) ಅಭ್ಯರ್ಥಿಗಳು ಭೌತಶಾಸ್ತ್ರ ವಿಷಯಕ್ಕೆ ಮತ್ತು 1,93,522 (95.88%) ಅಭ್ಯರ್ಥಿಗಳು ರಸಾಯನಶಾಸ್ತ್ರ ವಿಷಯಕ್ಕೆ ಹಾಜರಾಗಿದ್ದರು” ಎಂದು ಮಾಹಿತಿ ನೀಡಿದ್ದಾರೆ.

    ರಾಜ್ಯಾದ್ಯಂತ 530 ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಎಸ್‌ಓಪಿ ಅನುಸಾರ ಎಲ್ಲಾ ಸುರಕ್ಷತೆಯ ಕ್ರಮವನ್ನು ಖಾತರಿಪಡಿಸಿಕೊಂಡು ಪಾರದರ್ಶಕತೆಯಿಂದ ಪರೀಕ್ಷೆ ನಡೆಸಲಾಗಿದೆ. ಕೋವಿಡ್ ಪಾಸಿಟಿವ್ ಇದ್ದ 12 ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಅವರು ಹೇಳಿದ್ದಾರೆ.

    ನಾಳೆ (ಅಗಸ್ಟ್ 30) ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ನಿಗದಿತ ವೇಳಾಪಟ್ಟಿಯಂತೆ ನಡೆಸಲಾಗುವುದು. ಒಟ್ಟು 1,682 ಅಭ್ಯರ್ಥಿಗಳು ಈ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಕಂಡದ್ದನ್ನು ಕಂಡಂತೆ  ಹೇಳಿದರೆ ಬೆಟ್ಟದಷ್ಟು ಕೋಪ

    ಸುಮಾವೀಣಾ

    ಕಂಡುದನು  ಆಡೆ ಭೂಮಂಡಲವು ಮುನಿವುದು ಸರ್ವಜ್ಞನ  ತ್ರಿಪದಿಗಳಲ್ಲಿ   ಉಲ್ಲೇಖವಾಗಿರುವ  ಸರ್ವಜ್ಞನ  ಈ  ಮಾತು ಅಕ್ಷರಷಃ ಸತ್ಯ.  ಅಪಾರ ಲೋಕಾನುಭವ,ವಿಡಂಬನೆ,   ತನಗನ್ನಿಸಿದ್ದನ್ನು ನೇರ ನಿಷ್ಟುರವಾಗಿ ಹೇಳುವ  ಈ ಮಾತು  ಲೋಕದ ಜನರ ನಡವಳಿಕೆಗೆ ಕೈಗನ್ನಡಿ ಹಿಡಿದಂತಿದೆ.

    ಸತ್ಯ ಯಾವಾಗಲು ಕಟುವಾಗಿಯೇ ಇರುವುದು.  ಇರುವ ವಾಸ್ತವನ್ನು  ಯಾರೂ ಒಪ್ಪಿಕೊಳ್ಳಲು ತಯಾರಿರುವುದಿಲ್ಲ “ಕಂಡದ್ದನ್ನು ಕಂಡಂತೆ  ಹೇಳಿದರೆ ಬೆಟ್ಟದಷ್ಟು ಕೋಪ”  ಎಂಬ ಗಾದೆಯನ್ನೂ ಇಲ್ಲಿ ಸಂವಾದಿಯಾಗಿ ಹೇಳಬಹುದು. ಜನರು ಇಲ್ಲಿ ತಮ್ಮನ್ನು ತಾವು ತಿದ್ದಿಕೊಳ್ಳಲು ಇಚ್ಛಿಸಲಾರರು ಎಂಬ  ವಿಚಾರವೂ ಇಲ್ಲಿ ವಿದಿಧವಾಗುತ್ತದೆ.

    ನಾವು ಕಣ್ಣಿಂದ ಕಂಡ ಸತ್ಯವನ್ನು ಆಡಿದರೆ ಅದು ಯಾರಿಗೂ ಇಷ್ಟವಾಗುವುದಿಲ್ಲ. ಹಾಗೆ ಸತ್ಯ ತೋರಿಸಿಕೊಡುವವರನ್ನು ಜನರು ಕೆಂಗಣ್ಣಿನಿಂದಲೇ ನೋಡುತ್ತಾರೆ.   ಸತ್ಯವನ್ನು ಸಿಹಿಲೇಪಿತ ಗುಳಿಗೆಗೂ ಸುಳ್ಳನ್ನು ಸಿಹಿಯಾದ ನಿಧಾನ ವಿಷಕ್ಕೂ ಹೋಲಿಸುವುದಿದೆ. 

    ಪುಣ್ಯಕೋಟಿಯ ಕತೆಯಲ್ಲಿ ಬರುವ ಸತ್ಯವೇ “ನಮ ತಂದೆ-ತಾಯಿ ಸತ್ಯವೇ ನಮ ಬಂಧು ಬಳಗ  ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು”  ಎಂದು ಪುಣ್ಯಕೋಟಿ ಗೋವು ಆಡುವ  ಮಾತಿನಲ್ಲಿ ಎಷ್ಟು ಅರ್ಥವಿದೆ ? ಅದೆಷ್ಟುನೈತಿಕತೆಯ   ಎಚ್ಚರ ಇದೆ? ಆದರೆ ಆ ಮಾತು ಪಠ್ಯದಲ್ಲಿ ಅಕ್ಷರರೂಪಿಯಾಗಿದೆಯೇ ಹೊರತು  ಅನುಷ್ಟಾನದಲ್ಲಿ ಇಲ್ಲ! ಅದನ್ನು ಅನುಸರಿಸುವವರು ಎಲ್ಲಿದ್ದಾರೆ?

    ‘ಸತ್ಯವೇ ಸರ್ವಸ್ವ’  ಎಂಬ ಮಾತು ‘ಅಸತ್ಯವೇ ಸರ್ವಸ್ವ’ ಎಂದು ಹೀನಾರ್ಥವನ್ನು ಪಡೆದುಕೊಂಡಿದೆ. “ಕಂಡುದನು  ಆಡೆ ಭೂಮಂಡಲವು ಮುನಿವುದು”  ಈ   ಮಾತು  ಭ್ರಷ್ಟಾಚಾರ ತುಂಬಿದ  ಜನರ  ಮುಖವಾಣಿ ಎನ್ನಬಹುದು.   ಸತ್ಯದ ದಾರಿ ದೂರದ್ದು ಸುಳ್ಳಿನ ದಾರಿ ಹತ್ತಿರದ್ದು ಎನ್ನುವಂತೆ  ಸುಭಗತೆಯನ್ನು ಬಯಸುವ ಮಾನವ ಸಮಾಜ ನಿಜದ ಹಾದಿಯನ್ನು ಮರೆತಿದ್ದಾರೆಯೇ ಅನ್ನಿಸುತ್ತದೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಹೂಡಿಕೆದಾರರೊರಂದಿಗೆ ಸಕಾರಾತ್ಮಕ ನಂಟನ್ನು ಹೊಂದಿರುವ ಕಂಪೆನಿಗಳೆಷ್ಟು?

    ಹೂಡಿಕೆಯ ಶೈಲಿ ಹೇಗಿರಬೇಕೆಂದರೆ ನಾವು ಹೂಡಿಕೆ ಮಾಡಿದ ಕಂಪನಿಯ ಘನತೆ, ಗೌರವ, ಪ್ರತಿಷ್ಠೆಯ ಮಟ್ಟ ಸಂಪೂರ್ಣ ನಂಬಿಕೆಗೆ ಅರ್ಹವಾದ ಮಟ್ಟದಲ್ಲಿರಬೇಕು. ಕಾರ್ಪೊರೇಟ್‌ ಗಳ ಮೇಲೆ ಸೆಬಿ ನಿಯಂತ್ರಣ ಜಾರಿಯಾಗುವುದಕ್ಕಿಂತ ಮುಂಚಿನ ದಿನಗಳಲ್ಲಿ ಕಾರ್ಪೊರೇಟ್‌ ಗಳು ಎಂತಹ ರೀತಿಯ ಬದ್ಧತೆ, ಭಾದ್ಯತೆಗಳನ್ನು ಹೊಂದಿದ್ದವು ಎಂಬುದಕ್ಕೆ ಕಾಲ್ಗೇಟ್‌ ಪಾಲ್ಮೊಲಿವ್‌, ಹೌಸಿಂಗ್‌ ಡೆವೆಲಪ್ಮೆಂಟ್‌ ಫೈನಾನ್ಸ್‌ ಕಾರ್ಪೊರೇಷನ್‌ ಗಳಂತಹ ಕಂಪನಿಗಳು ಉತ್ತಮ ಉದಾಹರಣೆಯಾಗಿವೆ.

    ಕಾಲ್ಗೇಟ್ ಪಾಲ್ಮೋಲಿವ್:ಕಾಲ್ಗೇಟ್ ಕಂಪನಿಯ ಇತಿಹಾಸವನ್ನರಿತಾಗ ಸಮಾಧಾನದ ಉತ್ತರ ಸಿಗಬಹುದು. ಈ ಕಂಪನಿಯು ಭಾರತದಲ್ಲಿ 1978 ರಲ್ಲಿ ಅಂದಿನ ಫೆರಾ ನಿಯಮದಡಿ 11.79 ಷೇರುಗಳನ್ನು ಪ್ರತಿ ಷೇರಿಗೆ ರೂ.15 ರಂತೆ ವಿತರಿಸಿತು. ನಂತರದಲ್ಲಿ ಕಂಪನಿಯು 1982 ರಲ್ಲಿ,1985 ರಲ್ಲಿ, 1987 ರಲ್ಲಿ, 1989 ರಲ್ಲಿ, 1994 ರಲ್ಲಿ 1:1 ರ ಅನುಪಾತದ ಬೋನಸ್ ಷೇರು ವಿತರಿಸಿ ಹೂಡಿಕೆದಾರರ ಮೆಚ್ಚುಗೆಗೆ ಪಾತ್ರವಾಯಿತು.1991 ರಲ್ಲಿ 3:5 ಅನುಪಾತದ ಬೋನಸ್ ಷೇರು ವಿತರಿಸಿತು. ಅಂದರೆ ಮೊದಲ ವಿತರಣೆಯಲ್ಲಿ, 1978 ರಲ್ಲಿ 100 ಷೇರು ಪಡೆದವರ ಹೂಡಿಕೆ 1994 ರವರೆಗೆ ಐವತ್ತು ಪಟ್ಟು ಬೆಳೆದಿದೆ. ಇದರೊಂದಿಗೆ ಅಧಿಕ ಲಾಭಾಂಶವನ್ನು ನೀಡಿದೆ. ಈ ಕಂಪನಿಯ ಷೇರು ಬಂಡವಾಳವು ಆರಂಭದ ರೂ.2 ಕೋಟಿಯಿಂದ ರೂ.136 ಕೋಟಿಗೆ ಈ ಅವಧಿಯಲ್ಲಿ ತಲುಪಿದ್ದು, ಇದರಲ್ಲಿ ಸಿಂಹ ಪಾಲು ಬೋನಸ್ ಷೇರುಗಳದ್ದಾಗಿದೆ. ಹಾಗಾಗಿ,ಸಣ್ಣ ಹೂಡಿಕೆದಾರರ ಅಭಿಮಾನಿ ಷೇರಾಗಿದೆ.

    The Colgate-Palmolive Building at 300 Park Avenue between East 49th and 50th Streets in Midtown Manhattan, New York City was completed in 1955 and was designed by Emery Roth & Sons in the International style. The building has 25 stories and is 328 feet tall |Wikipedia

    ಷೇರಿನ ಹಣವನ್ನು ಷೇರುದಾರರಿಗೆ ಹಿಂದಿರುಗಿಸಿದ ಪ್ರಪ್ರಥಮ ಕಂಪನಿ:

    ಕಂಪನಿಯ ಷೇರು ಬಂಡವಾಳವು ಗಜಗಾತ್ರಕ್ಕೆ ಬೆಳೆದ ಕಾರಣ ಮತ್ತೊಮ್ಮೆ ಬೋನಸ್‌ ಷೇರು ವಿತರಿಸಿದರೆ ಹೆಚ್ಚಾಗುವ ಬಂಡವಾಳದ ಅಗತ್ಯತೆ ಇಲ್ಲದ ಕಾರಣ ಮತ್ತು ಕಂಪನಿಯು ಹೊಂದಿರುವ ಮೀಸಲು ನಿಧಿಯನ್ನು ಸದುಪಯೋಗ ಪಡಿಸಲು ಈ ಕಂಪನಿಯು 2007 ರಲ್ಲಿ ತನ್ನ ಷೇರುದಾರರ ಹೂಡಿಕೆಯಾದ ಪ್ರತಿ ಷೇರಿನ ರೂ.10 ರಲ್ಲಿ ರೂ.9ನ್ನು ಹಿಂದಿರುಗಿಸಿತು. ಈ ಮೂಲಕ ರೂ.122 ಕೋಟಿ ಹಣವನ್ನು ಹೂಡಿಕೆದಾರರಿಗೆ ಹಿಂದಿರುಗಿಸಿದೆ ಇಂತಕ ಕ್ರಮ ಕೈಗೊಂಡ ಪ್ರಥಮ ಕಂಪನಿಯಾಯಿತು. ಸೆಪ್ಟೆಂಬರ್ 2015 ರಲ್ಲಿ 1:1 ರ ಅನುಪಾತದ ಬೋನಸ್ ಷೇರು ವಿತರಿಸಿದೆ. ಇದರಿಂದ ಕಂಪನಿಯ ಷೇರುಬಂಡವಾಳವು ರೂ.27.20 ಕೋಟಿಗೆ ತಲುಪಿದೆ. ಇಷ್ಟೆಲ್ಲಾ ಬೋನಸ್‌ ವಿತರಣೆಗಳ ಜೊತೆಗೆ ಆಕರ್ಷಕವಾದ ಲಾಭಾಂಶಗಳನ್ನೂ ಸಹ ವಿತರಿಸಿದೆ. ಆದಾಗ್ಯೂ ಸಹ ರೂ.1 ರ ಮುಖಬೆಲೆಯ ಷೇರಿನ ಬೆಲೆ ರೂ.1,650 ರ ಸಮೀಪವಿದೆ.

    ಎಚ್‌ ಡಿ ಎಫ್‌ ಸಿ ಲಿಮಿಟೆಡ್:ಕಾರ್ಪೊರೇಟ್‌ ನೀತಿಪಾಲನೆಗೆ ಹೆಚ್ಚು ಆದ್ಯತೆಯು ಈಗಿನ ದಿನಗಳಲ್ಲಿ ನೀಡಲಾಗುತ್ತಿದ್ದು ಇದಕ್ಕೆ ಶಾಸನಬದ್ಧ ನಿಯಮಗಳನ್ನೂ ಸಹ ರೂಪಿಸಲಾಗಿದೆ. ಈ ನಿಯಮಗಳು ಜಾರಿಯಾಗುವ ಮುಂಚಿನ ವರ್ಷಗಳಲ್ಲಿ ಅಳವಡಿಸಿಕೊಂಡು ಬಂದಿರುವ ಕಂಪನಿ ಎಂದರೆ ಹೆಚ್‌ ಡಿ ಎಫ್‌ ಸಿ ಲಿಮಿಟೆಡ್‌. ಕಂಪನಿಯ ಚಟುವಟಿಕೆ, ಆಡಳಿತ ಮಂಡಳಿಯ ಹೂಡಿಕೆದಾರರ ಸ್ನೇಹಮಯಿ ಮನೋಧರ್ಮಗಳೊಂದಿಗೆ ಉತ್ತಮ ನೀತಿಪಾಲನಾ ಗುಣವು ಈ ಕಂಪನಿಯ ಘನತೆಗೆ ಕಳಸಪ್ರಯಾವಾಗಿವೆ.

    ಇವೆಲ್ಲಾ ಸಕಾರಾತ್ಮಕಗಳನ್ನು ಮೈಗೂಡಿಸಿಕೊಂಡಿರುವ ಎಚ್ ಡಿಎಫ್ ಸಿ ಆರಂಭವಾದುದು 1977ರಲ್ಲಿ. ಈ ಕಂಪೆನಿ 1981-82ರಲ್ಲಿ ರು.100ರ ಮುಖಬೆಲೆ ಷೇರಿಗೆ ಶೇ.5 ರಷ್ಟು ಆರಂಭಿಕ ಲಾಭಾಂಶ ನೀಡಿ, ತದನಂತರ ಶೇ.7.5, ಶೇ.10 ಹೀಗೆ ವರ್ಷದಿಂದ ವರ್ಷಕ್ಕೆ ಲಾಭಾಂಶ ಹೆಚ್ಚಿಸಿಕೊಂಡು ಹೋಯಿತು. ರು.100ರ ಮುಖಬೆಲೆಯ ಷೇರು ಸುಮಾರು 2000ನೇ ಇಸವಿಯವರೆಗೂ ಪೇಟೆಯಲ್ಲಿ ನೂರರ ಒಳಗಿತ್ತು. ಉತ್ತಮ ಲಾಭಾಂಶದ ಕಾರಣ ಒಂದು ರೀತಿಯ ಫಿಕ್ಸೆಡ್ ಡೆಪಾಸಿಟ್ ತರಹ ಈ ಷೇರು ಕೊಂಡವರು ಮುಂದೆ ಉತ್ತಮ ಲಾಭವನ್ನು ಪಡೆದುಕೊಂಡರು.

    ಷೇರುಪೇಟೆಯಲ್ಲಿ ಹಣ ಹೇಗೆ ಬೆಳೆಯುತ್ತದೆ ಎಂಬುದಕ್ಕೆ ಸಾಮಾನ್ಯವಾಗಿ ವಿಶ್ಲೇಷಕರು ಇನ್ಫೋಸಿಸ್ ನ ಉದಾಹರಣೆ ನೀಡುವರು. ಆದರೆ ವಸತಿ ವಲಯದ ಎಚ್ ಡಿಎಫ್ ಸಿ ಕಂಪೆನಿ 1986 ರಲ್ಲಿ 1:2ರ ಅನುಪಾತದ ಹಕ್ಕಿನ ಷೇರನ್ನು ಮುಖಬೆಲೆಯಲ್ಲೇ ವಿತರಿಸಿತು. ಮತ್ತೊಮ್ಮೆ 1:2ರ ಅನುಪಾತದ ಹಕ್ಕಿನ ಷೇರು ವಿತರಿಸಿತು. 1992ರಲ್ಲಿ ರೂ.400ರ ಮುಖಬೆಲೆಯ ಪೂರ್ಣವಾಗಿ ಇಕ್ವಿಟಿಯಾಗಿ ಪರಿವರ್ತನೆಯಾಗುವ ಡಿಬೆಂಚರ್ ವಿತರಿಸಿತು. 1:1ರ ಅನುಪಾತದ ಬೋನಸ್ ಷೇರನ್ನು ಸಹ ವಿತರಿಸಿದೆ. 2002 ರಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಲಾಯಿತು.

    ಹೆಚ್ಚಿನ ಕಂಪನಿಗಳು ಜನಾನುರಾಗಿಯಾಗಿ ಷೇರುದಾರರ ಬಂಡವಾಳವನ್ನು ಬಹುಪಟ್ಟು ಹೆಚ್ಚಿಸಿ ಹರ್ಷಿತಗೊಳಿಸಿದ ಕೀರ್ತಿ ಪಡೆದಿವೆ. ಈ ರೀತಿಯ ಸಾಮಾನ್ಯ ಹೂಡಿಕೆದಾರರ ಅಭಿಮಾನಕ್ಕೆ ಪ್ರೀತಿಪಾತ್ರರಾಗುವುದಕ್ಕೆ ಆ ಕಾರ್ಪೊರೇಟ್‌ ಆಡಳಿತಮಂಡಳಿಗಳ ಹೂಡಿಕೆದಾರ ಸ್ನೇಹಿ ಗುಣವಾಗಿದೆ. ಈ ಕಂಪನಿಗಳು ನಿರಂತರವಾಗಿ ಷೇರುದಾರರಿಗೆ ವಿತರಿಸಿದ ಬೋನಸ್‌ ಷೇರುಗಳು ಬಂಡವಾಳ ಅಭಿವೃದ್ಧಿಗೆ ಕಾರಣವಾದರೆ, ಆ ಕಂಪನಿಗಳು ವಿತರಿಸಿದ ಲಾಭಾಂಶಗಳು ನೇರವಾಗಿ ಷೇರುದಾರರಿಗೆ ತಲುಪಿ ಅವರ ಅಗತ್ಯಗಳನ್ನು ಪೂರೈಸಿಕೊಳ್ಳಲು ಬೆಂಬಲವಾಗಿ ಅವರಲ್ಲಿ ಭಾವನಾತ್ಮಕ, ಸಕಾರತ್ಮಕ ಬಾಂಧವ್ಯದ ನಂ ಟನ್ನು ಬೆಳೆಸಿದೆ. ಇಂತಹ ಗುಣಗಳನ್ನು ಈಗಿನ ಕಾರ್ಪೊರೇಟ್‌ ಗಳು ಹೊಂದಿವೆಯೇ?

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಹೆಗಡೆಯನ್ನು ಸ್ಮರಿಸಿದ ಬೊಮ್ಮಾಯಿ

    BENGALURU AUG 29

    ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸಿದ ಮತ್ತು ಆಚರಣೆಯಲ್ಲಿ ತಂದ ದಿವಂಗತ ರಾಮಕೃಷ್ಣ ಹೆಗಡೆಯವರ 95 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೃದಯಪೂರ್ವಕ ಗೌರವ ಸಲ್ಲಿಸುವುದಾಗಿ ತಿಳಿಸಿದ್ದಾರೆ.

    “ಕರ್ನಾಟಕದ ಪ್ರಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಜನತಾಪರಿವಾರದ ಬೇರು ಮತ್ತು ಬಿಳಲುಗಳು ಆಳವಾಗಿ ಬೇರೂರಲು ಕಾರಣರಾದರು. ಹೆಗಡೆಯವರು, ಎಸ್.ಆರ್.ಬೊಮ್ಮಾಯಿ ಅವರು ಮತ್ತು ಎಚ್.ಡಿ.ದೇವೇಗೌಡರು ಜನತಾ ಪರಿವಾರದ ತ್ರಿಮೂರ್ತಿಗಳೆಂದೇ ಪ್ರಸಿದ್ಧರು. ರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ನಾಂದಿ ಹಾಡಿ ಅಗತ್ಯ ಕಾನೂನುಗಳನ್ನು ರೂಪಿಸಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇಡೀ ರಾಷ್ಟ್ರಕ್ಕೆ ಮಾದರಿಯಾಗುವಂತೆ ರೂಪಿಸಿದ ಹೆಗ್ಗಳಿಕೆ ಹೆಗಡೆಯವರದ್ದು ಎಂದು ಮುಖ್ಯಮಂತ್ರಿಯವರು ಸ್ಮರಿಸಿದ್ದಾರೆ.

    “ ನಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರು ಮತ್ತು ರಾಮಕೃಷ್ಣ ಹೆಗಡೆಯವರು ಅತ್ಯಂತ ಆತ್ಮೀಯರಾಗಿದ್ದರು. ಈ ಇಬ್ಬರೂ ನಾಯಕರು ಯುವ ನಾಯಕರಿಗೆ ಸ್ಪೂರ್ತಿಯಾಗಿದ್ದರಲ್ಲದೆ, ಆದರ್ಶಪ್ರಾಯರಾಗಿದ್ದರು, ಮಾರ್ಗದರ್ಶಕರಾಗಿದ್ದರು. ಮತ್ತು ಹಲವು ಯುವ ನಾಯಕರು ಸಾರ್ವಜನಿಕ ಜೀವನದಲ್ಲಿ ಉನ್ನತ ಸ್ಥಾನಗಳಿಗೇರಲು ಪ್ರೇರಕರಾಗಿದ್ದರು” ಎಂದು ಅವರು ತಿಳಿಸಿದ್ದಾರೆ.

    “ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ಸಂಬಂಧ ಮತ್ತು ಅಧಿಕಾರಗಳ ಬಗ್ಗೆ ಸ್ಪಷ್ಟತೆ ತರಲು ಶ್ರಮಿಸಿದ ಅವರ ಕಾರಣದಿಂದಲೇ ಸರ್ಕಾರಿಯಾ ಆಯೋಗ ಸ್ಥಾಪನೆಯಾಗಿತ್ತು. ರಾಜ್ಯದಲ್ಲಿ ಲೋಕಾಯುಕ್ತ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಅವರದ್ದು. ಸಾರ್ವಜನಿಕ ಜೀವನವನ್ನು ಶುದ್ಧೀಕರಿಸಿ, ವಿಶ್ವಾಸಾರ್ಹತೆ ಮೂಡಿಸಲು ಕಾರಣರಾಗಿದ್ದರು. ತಮ್ಮ ಜೀವನವಿಡೀ ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸಿದ್ದರು”.

    “ಕೇವಲ ರಾಜಕಾರಣಕ್ಕಷ್ಟೇ ಸೀಮಿತರಾಗದೆ ಕಲೆ ಸಂಸ್ಕೃತಿ, ಸಾಹಿತ್ಯ, ಸಿನಿಮಾ, ಇತ್ಯಾದಿ ಲಲಿತ ಕಲೆಗಳಲ್ಲಿ ತೀವ್ರವಾದ ಆಸಕ್ತಿ ಹೊಂದಿದ್ದ ಹೆಗಡೆಯವರು ಉತ್ತಮ ವಾಗ್ಮಿಗಳು ಹಾಗೂ ಚಿಂತಕರೂ ಆಗಿದ್ದ ಸುಸಂಸ್ಕೃತ ವ್ಯಕ್ತಿ. ಕಾಂಗ್ರೆಸ್ ಸರ್ಕಾರಗಳು ರಾಜ್ಯದಲ್ಲಿ ಮೌಲ್ಯಗಳ ಕುಸಿತಕ್ಕೆ ಕಾರಣರಾಗಿ ಜನತೆ ರಾಜಕಾರಣಿಗಳ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದ ಸಂದರ್ಭದಲ್ಲಿ ಹೊಸತನ ಮತ್ತು ಸುಸಂಸ್ಕೃತ ನಡೆ, ನೀತಿ, ಕಾರ್ಯಕ್ರಮಗಳ ಮೂಲಕ ರಾಜಕೀಯ ಚಟುವಟಿಕೆಗಳಲ್ಲಿ ಒಂದು ರೀತಿಯ ಚೇತೋಹಾರಿ ಬದಲಾವಣೆ ತರಲು ಹೆಗಡೆಯವರು ಸ್ಪೂರ್ತಿಯಾಗಿದ್ದರು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆನಪಿಸಿಕೊಂಡಿದ್ದಾರೆ.

    “ರಾಜ್ಯದಲ್ಲಿ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಗಳಾಗಿ, ರಾಜ್ಯ ಸಭಾ ಸದಸ್ಯರಾಗಿ, ಕೇಂದ್ರದ ವಾಣಿಜ್ಯ ಖಾತೆ ಸಚಿವರಾಗಿ ಮತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಅತ್ಯಂತ ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸಿ ರಾಷ್ಟ್ರೀಯ ಮಟ್ಟದ ನಾಯಕ ಎಂದು ಹೆಸರಾಗಿದ್ದರು.ರಾಜ್ಯದಲ್ಲಿ ಹಣಕಾಸು ಸಚಿವರು ಮತ್ತು ಮುಖ್ಯಮಂತ್ರಿಗಳಾಗಿ ದಾಖಲೆಯ 13 ಮುಂಗಡ ಪತ್ರಗಳನ್ನು ಮಂಡಿಸಿದ್ದ ಹೆಗಡೆಯವರು ಜಾತ್ಯಾತೀತತೆ ಮತ್ತು ಸಮಸಮಾಜ ನಿರ್ಮಾಣಕ್ಕೆ ಬದ್ಧರಾಗಿದ್ದರು. ರಾಮಕೃಷ್ಣ ಹೆಗಡೆ ಅವರ ಆಡಳಿತ ಶೈಲಿ, ವಾಕ್ಪಟುತ್ವ, ನೇರ ಮತ್ತು ನಿಷ್ಠುರ ನಡೆಯಿಂದ ನಮ್ಮದೊಂದು ಪೀಳಿಗೆಯೇ ಪ್ರಭಾವಿತವಾಗಿತ್ತು. ಅಂತಹ ಮುತ್ಸದ್ದಿ ಮತ್ತು ಸುಸಂಸ್ಕೃತ ನಾಯಕನ ಒಡನಾಟ ನಮಗೆ ದೊರೆತದ್ದು ನಮ್ಮ ಸುದೈವ ಎಂದೇ ಭಾವಿಸುತ್ತೇನೆ. ಅವರ 95 ನೇ ಜನ್ಮದಿನದ ಸಂದರ್ಭದಲ್ಲಿ ಮತ್ತೊಮ್ಮೆ ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ” ಎಂದು ಮುಖ್ಯಮಂತ್ರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇನ್ನುಕೆಂಗೇರಿವರೆಗೂ ಮೆಟ್ರೋದಲ್ಲಿ ಹೋಗಿ ಬರಬಹುದು

    BENGALURU AUG 29

    ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದ ವರೆಗಿನ 7.5 ,ಕಿ ಮೀ ಮೆಟ್ರೋ ನೇರಳೆ ಮಾರ್ಗವನ್ನು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹಾಗೂ ಕೇಂದ್ರ ವಸತಿ, ನಗರ ವ್ಯವಹಾರ, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವರಾದ ಹರ್ದಿಪ್ ಸಿಂಗ್ ಪುರಿ ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಸಚಿವರಾದ ಆರ್. ಅಶೋಕ್ , ವಿ ಸೋಮಣ್ಣ, ಎಸ್ ಟಿ ಸೋಮಶೇಖರ, ಕೆ. ಗೋಪಾಲಯ್ಯ, ಮುನಿರತ್ನ , ಸಂಸದರಾದ ಪಿ ಸಿ ಮೂಹನ್, ತೇಜಸ್ವಿ ಸೂರ್ಯ, ಶಾಸಕ ಮುನಿರಾಜುಗೌಡ ಉಪಸ್ಥಿತರಿದ್ದರು

    ಮೈಸೂರು ವಿವಿ ವಿದ್ಯಾರ್ಥಿನಿಯರ ಸಂಚಾರಕ್ಕೆ ನಿರ್ಬಂಧ;.ಕುಲಪತಿ ಸುತ್ತೋಲೆ ವಾಪಸ್ ಪಡೆಯಲು ಸೂಚನೆ

    BENGALURU AUG 28

    ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಸಂಜೆ 6.30ರ ನಂತರ ವಿವಿ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿನಿಯರ ಓಡಾಟವನ್ನು ನಿಷೇಧಿಸಿ ಮೈಸೂರು ವಿಶ್ವವಿದ್ಯಾಲಯ ಹೊರಡಿಸಿದ್ದ ಸುತ್ತೋಲೆಯನ್ನು ವಾಪಸ್ ಪಡೆಯಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು. ಬೆಂಗಳೂರಿನಲ್ಲಿ ಶನಿವಾರ ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈಗಾಗಲೇ ಆ ಸುತ್ತೋಲೆಯನ್ನು ವಾಪಸ್ ಪಡೆಯುವಂತೆ ಕುಲಪತಿ ಪ್ರೊ.ಹೇಮಂತ ಕುಮಾರ್ ಅವರಿಗೆ ಸೂಚನೆ ನೀಡಿದ್ದೇನೆ ಎಂದರು.

    ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಗಳು ಬಹಳ ವಿಶಾಲವಾಗಿರುತ್ತವೆ ಎಂಬುದೇನೋ ನಿಜ. ಹಾಗಂತ ವಿದ್ಯಾರ್ಥಿನಿಯರು ಓಡಾದಂತೆ ನಿರ್ಬಂಧ ಹೇರುವುದು ಸರಿಯಲ್ಲ. ಅದರ ಬದಲಿಗೆ ರಕ್ಷಣಾ ಕ್ರಮಗಳನ್ನು ಕೈಗೊಂಡು ಸುರಕ್ಷಿತವಾದ ವಿವಿ ಕ್ಯಾಂಪಸ್ ಗಳನ್ನು ರೂಪಿಸಬೇಕೆಂದು ಎಲ್ಲ ವಿವಿ ಕುಲಪತಿಗಳಿಗೂ ಸಚಿವರು ಸೂಚಿಸಿದರು.

    ಅತ್ಯಾಚಾರ ಘಟನೆ ಖಂಡನೀಯ. ಈ ಘಟನೆ ನಡೆಯಿತು ಎನ್ನುವ ಕಾರಣಕ್ಕೆ ಹೆಣ್ಣುಮಕ್ಕಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು ಬೇಡ. ಅವರ ಸ್ವಾತಂತ್ರ್ಯಕ್ಕೆ ಚ್ಯುತಿಯಾಗದಂತೆ ಅವರಿಗೆ ರಕ್ಷಣೆ ನೀಡುವ ಜವಾಬ್ದಾರಿ ನಮ್ಮದು. ವಿಶ್ವವಿದ್ಯಾಲಯಗಳ ಕ್ಯಾಂಪಸ್ ಗಳಲ್ಲಿ ಹೆಚ್ಚು ನಿಗಾ ವಹಿಸುವ  ಕೆಲಸ ಆಗಬೇಕು. ಈಗಾಗಲೇ ಆ ಬಗ್ಗೆ ಸರಕಾರದಿಂದ ಕ್ರಮ ವಹಿಸಲಾಗಿದೆ. ತಂತ್ರಜ್ಞಾನ ಬಳಕೆ ಮಾಡಿಕೊಂಡು ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

    ವ್ಯಾಪಕ ನಿಗಾ ಇರಿಸುವುದರ ಜತೆಗೆ, ಭದ್ರತಾ ಸಿಬ್ಬಂದಿಯಿಂದ ಪೆಟ್ರೋಲಿಂಗ್ ಮಾಡಬೇಕು. ಅಗತ್ಯವಾದ ಎಲ್ಲ ಕಡೆಗಳಲ್ಲೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕಾನೂನು-ಸುವವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ದಿಕ್ಕಿನಲ್ಲೂ ತೀವ್ರ ನಿಗಾ ಇಟ್ಟಿರಬೇಕು. ಈ ಬಗ್ಗೆ ಎಲ್ಲ ಕುಲಪತಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು ಸಚಿವರು.

    ಕುಲಪತಿಗಳ ಜತೆ‌ ಚರ್ಚೆ:

    ರಾಜ್ಯದಲ್ಲಿ ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಒಟ್ಟು 32ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿದ್ದು, ಎಲ್ಲಡೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲ ಕಡೆ ಭದ್ರತಾ ವ್ಯವಸ್ಥೆ ಉತ್ತಮವಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ಲಭ್ಯವಿರುವ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಭದ್ರತೆ ಮತ್ತು ನಿಗಾ ಹೆಚ್ಚಿಸುವ ನಿಟ್ಟಿನಲ್ಲಿ ಏನೇನು ಮಾಡಬಹುದು ಎಂಬ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯುತ್ತೇನೆ. ಸಂಬಂಧಿತ ಇಲಾಖೆ ಹಾಗೂ ಎಲ್ಲ ಕುಲಪತಿಗಳ ಜತೆ ಚರ್ಚೆ ನಡೆಸುತ್ತೇನೆ ಎಂದು ಸಚಿವರು ತಿಳಿಸಿದರು.

    ದುಷ್ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಅಭಿನಂದನೆಗಳು. ಪಾತಕಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.

    ಇಪ್ಪತ್ತೇ ದಿನದಲ್ಲಿ ಸಿಇಟಿ ಫಲಿತಾಂಶ

    BENGALURU AUG 28
    ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದ್ದು 20 ದಿನದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿ ಶನಿವಾರ ಅವರು ಶೇಷಾದ್ರಿಪುರಂ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿ, ಈ ತಿಂಗಳ 30ಕ್ಕೆ ಪರೀಕ್ಷೆ ಮುಗಿಯುತ್ತದೆ. ಹೀಗಾಗಿ ಕ್ಷಿಪ್ರಗತಿಯಲ್ಲಿ ಫಲಿತಾಂಶ ನೀಡಲು ಕ್ರಮ ವಹಿಸಲಾಗಿದೆ. 20 ದಿನಗಳಲ್ಲಿ ರಿಸಲ್ಟ್ ಪ್ರಕಟಿಸಲಾಗುವುದು, ತದ ನಂತರ ಅಕ್ಟೋಬರ್ ನಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು  ನಡೆಸಲಾಗುವುದು ಎಂದರು.

    ರಾಜ್ಯದ 530 ಕೇಂದ್ರ ಸೇರಿ ಬೆಂಗಳೂರಿನ 86 ಕೇಂದ್ರಗಳಲ್ಲೂ ಪರೀಕ್ಷೆ ಉತ್ತಮವಾಗಿ ನಡೆಯುತ್ತಿದೆ. ಎಲ್ಲೂ ಯಾವುದೇ ಸಮಸ್ಯೆ ಇಲ್ಲ. ಕೋವಿಡ್ ನಿಯಮಗಳಿಗೊಳಪಟ್ಟೇ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಗೆ 2,01,816 ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ ಕೋವಿಡ್ ಪಾಸಿಟಿವ್ ಇರುವ 12 ವಿದ್ಯಾರ್ಥಿಗಳ ಪೈಕಿ 4 ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿ ಬಂದಿದೆ. ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

    ಜಿಲ್ಲಾ ಕೇಂದ್ರಗಳಿಂದ ಮಾಹಿತಿ ಬಂದಿದ್ದು, ಎಲ್ಲೂ ಯಾವುದೇ ಸಮಸ್ಯೆ ಆಗಿಲ್ಲ. ಕೇರಳದ ಗಡಿ ಜಿಲ್ಲೆಗಳಲ್ಲಿ ಲಾಕ್ ಡೌನ್ ಮತ್ತು ವೀಕೆಂಡ್ ಕರ್ಫ್ಯೂ ಇದ್ದರೂ ಆ ಜಿಲ್ಲೆಗಳಲ್ಲೂ ತೊಂದರೆ ಉಂಟಾಗಿಲ್ಲ. ಮುಖ್ಯವಾಗಿ ಮಂಗಳೂರು, ಉಡುಪಿ, ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ಸಾಗಿದೆ ಎಂದು ಅವರು ಮಾಹಿತಿ ನೀಡಿದರು.

    ಯಡಿಯೂರಪ್ಪ ಪ್ರವಾಸ:ಬಿಜೆಪಿಯಲ್ಲಿ ಅಪಸ್ವರ ‘ರಾಜ್ಯಪಾಲರಾಗಲಿ’ಎಂಬ ಒತ್ತಡ ಸಾಧ್ಯತೆ

     

    ಸಿ.ರುದ್ರಪ್ಪ 

    ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ರಾಜ್ಯ ಪ್ರವಾಸಕ್ಕೆ ಬಿಜೆಪಿ ಯಲ್ಲಿ ವಿರೋಧ ವ್ಯಕ್ತವಾಗಿದೆ.

    ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿಯೇ ತಾವು ಪಕ್ಷವನ್ನು ಬಲಪಡಿಸಲು ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಪ್ರಕಟಿಸಿದ್ದರು.ನಂತರ ಸ್ವಲ್ಪ ಕಾಲ ಮೌನಕ್ಕೆ ಶರಣಾಗಿದ್ದ ಅವರು ಇತ್ತೀಚೆಗೆ ಮಾಲ್ಡೀವ್ಸ್ ಗೆ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದರು.ನಾಲ್ಕು ದಿನಗಳ ಹಿಂದೆ ಬೆಂಗಳೂರಿಗೆ ಮರಳುತ್ತಿದ್ದಂತೆ ರಾಜ್ಯ ಪ್ರವಾಸದ ಕಾರ್ಯಕ್ರಮವನ್ನು ಮತ್ತೊಮ್ಮೆ ಪ್ರಕಟಿಸಿದ್ದರು.ಅವರ ಪ್ರವಾಸಕ್ಕಾಗಿ ವಿಶೇಷವಾಗಿ ಸಜ್ಜುಗೊಂಡಿರುವ ಐಷಾರಾಮಿ ಕಾರಿನಲ್ಲಿಯೇ ಬೆಂಗಳೂರು ವಿಮಾನ ನಿಲ್ದಾಣದಿಂದ ತಮ್ಮ ನಿವಾಸ ಕಾವೇರಿಗೆ ಆಗಮಿಸಿದ್ದರು.

     ಅವರ ಪ್ರವಾಸಕ್ಕೆ ಬಿಜೆಪಿಯಲ್ಲಿರುವ ಯಡಿಯೂರಪ್ಪ ವಿರೋಧಿ ಗುಂಪು ಅಪಸ್ವರ ಎತ್ತಿದೆ.”ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಸುಸೂತ್ರವಾಗಿ ನಡೆಯುತ್ತಿದೆ.ಪಕ್ಷದ ವರ್ಚಸ್ಸು ಕೂಡ ನಿಧಾನವಾಗಿ ವೃದ್ಧಿಯಾಗುತ್ತಿದೆ.ಇಂತಹ ಸಂದರ್ಭದಲ್ಲಿ ಯಡಿಯೂರಪ್ಪನವರು  ಜಿಲ್ಲಾ ಪ್ರವಾಸ ಆರಂಭಿಸಿದರೆ ರಾಜಕೀಯವಾಗಿ ಅನಾವಶ್ಯಕ ಗೊಂದಲ ನಿರ್ಮಾಣವಾಗುತ್ತದೆ.ಯಡಿಯೂರಪ್ಪನವರು ಏಕಾಏಕಿ ಪ್ರವಾಸ ಕಾರ್ಯಕ್ರಮವನ್ನು ಪ್ರಕಟಿಸಿದ್ದಾರೆ.ಅವರಿಗೆ ಹೈ ಕಮಾಂಡ್ ಅನುಮತಿ ನೀಡಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.ಇನ್ನೊಮ್ಮೆ ವರಿಷ್ಠರ ಸ್ಪಷ್ಟ ಸೂಚನೆಯ ಅಗತ್ಯವಿದೆ.ಜೊತೆಗೆ ಪಕ್ಷದ ರಾಜ್ಯ ಘಟಕವೇ ಅವರ ಪ್ರವಾಸ ಕಾರ್ಯಕ್ರಮದ ವಿವರಗಳನ್ನು ಅಧಿಕೃತವಾಗಿ ಸಿದ್ಧಪಡಿಸಬೇಕು”ಎಂದು ಅವರು ಪಟ್ಟು ಹಿಡಿದಿದ್ದಾರೆ.

    “ಯಡಿಯೂರಪ್ಪನವರು ಪ್ರವಾಸದ ವೇಳೆ ಯಾವ ವಿಚಾರವನ್ನು ಪ್ರಸ್ತಾಪಿಸುತ್ತಾರೆ?ಬೊಮ್ಮಾಯಿ ಆಡಳಿತದ ಬಗ್ಗೆ ಮಾತನಾಡಲು ಇನ್ನೂ ಕಾಲ ಕೂಡಿ ಬಂದಿಲ್ಲ.ಯಡಿಯೂರಪ್ಪನವರು ಒಂದು ವೇಳೆ ತಮ್ಮ ಅವಧಿಯ ಆಡಳಿತದ ಸಾಧನೆಗಳನ್ನು ಹೇಳಲು ಹೊರಟರೆ ಪಕ್ಷಕ್ಕೆ ಮುಜುಗರವಾಗುತ್ತದೆ.”ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

    ಪಕ್ಷದೊಳಗಿನ ಈ ಬೆಳವಣಿಗೆಗೆ ಯಡಿಯೂರಪ್ಪ ಆಪ್ತರು ತೀವ್ರವಾದ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.”ಇದೆಲ್ಲಾ ರಾಷ್ಟ್ರೀಯ ಬಿಜೆಪಿಯಲ್ಲಿ ಪ್ರಭಾವಿ ಹುದ್ದೆಯಲ್ಲಿರುವ ರಾಜ್ಯದ ನಾಯಕರೊಬ್ಬರ ಚಿತಾವಣೆ.ರಾಜ್ಯ ಉಪಾಧ್ಯಕ್ಷರೊಬ್ಬರ ಮೂಲಕ ಕರ್ನಾಟಕದಲ್ಲಿ ಅವರು ಬಿಜೆಪಿಯನ್ನು ನಿಯಂತ್ರಿಸುತ್ತಿದ್ದಾರೆ.ಅವರಿಗೆ ಪಕ್ಷವನ್ನು ಬಲಪಡಿಸಲು ಯಡಿಯೂರಪ್ಪನವರ ಹೆಸರು ಬೇಕು.ಆದರೆ ಯಡಿಯೂರಪ್ಪನವರ ನಾಯಕತ್ವ ಬೇಡ”ಎಂದು ಅವರು ಟೀಕಿಸಿದ್ದಾರೆ.

    “ಯಡಿಯೂರಪ್ಪನವರಿಗೆ,ಜಿಲ್ಲಾ ಪ್ರವಾಸ ಮತ್ತಿತರ ಸಕ್ರಿಯ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಲು ಮುಂದಿನ ವಿಧಾನ ಸಭೆ ಚುನಾವಣೆವರೆಗೆ ಅವಕಾಶ ನೀಡಿದರೆ ಅವರು ತಮ್ಮ  ಪುತ್ರ ವಿಜಯೇಂದ್ರ ಅಥವಾ ಬೇರೆ ಯಾರಾದರೂ ತಮ್ಮ ನಿಷ್ಠಾವಂತರೇ ಮುಖ್ಯಮಂತ್ರಿಯಾಗಲೀ ಎಂದು ಪಟ್ಟು ಹಿಡಿಯಬಹುದು.ಹೀಗಾಗಿ ಯಡಿಯೂರಪ್ಪ factor ಮುನ್ನೆಲೆಗೆ ಬರಲೇಬಾರದು ಎಂದು ಅವರ ವಿರೋಧಿ ಬಣ ಪ್ರಯತ್ನಿಸುತ್ತಿದೆ.ಈ ಷಡ್ಯಂತ್ರದಲ್ಲಿ ರಾಷ್ಟ್ರೀಯ ಪದಾಧಿಕಾರಿಯಾಗಿರುವ ರಾಜ್ಯದ ಯುವ ನಾಯಕರೊಬ್ಬರು ಭಾಗಿಯಾಗಿದ್ದಾರೆ”ಎಂದು ಮೂಲಗಳು ತಿಳಿಸಿವೆ.

    “ಯಡಿಯೂರಪ್ಪ ಒಬ್ಬ ಸರ್ವೋಚ್ಛ ನಾಯಕ.ಅವರಿಗೆ ಯಾರ ಅಪ್ಪಣೆಯೂ ಅಗತ್ಯವಿಲ್ಲ.ತಮಗೆ ಅಡ್ಡಗಾಲು ಹಾಕುವ ಇಂತಹ ಷಡ್ಯಂತ್ರಗಳಿಗೆ ಅವರು ಕೇರ್ ಮಾಡುವುದೂ ಇಲ್ಲ.ಅವರಿಗೆ ಅಡ್ಡಿಪಡಿಸಿದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆಯೇ ವಿನಃ ಯಡಿಯೂರಪ್ಪನವರು ಕಳೆದುಕೊಳ್ಳುವುದು ಏನೂ ಇಲ್ಲ”ಎಂದು ಮುಖಂಡರೊಬ್ಬರು ತಿಳಿಸಿದರು.

    ಕೆಲವು ರಾಜಕೀಯ ವಿಶ್ಲೇಷಕರ ಪ್ರಕಾರ ಸುಮಾರು 17 ವರ್ಷಗಳ ಹಿಂದೆ ರಾಜ್ಯದಲ್ಲಿ ಇಂತಹದೇ ಒಂದು ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿತ್ತು.2004 ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು.ಮುಖ್ಯಮಂತ್ರಿ ಧರ್ಮ ಸಿಂಗ್ ಮತ್ತು ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಜಬರ್ದಸ್ತ್ ನಿಂದಲೇ ಆಡಳಿತ ಆರಂಭಿಸಿದ್ದರು.ಸಮಾಧಾನ ಪ್ರವೃತ್ತಿಯ ಧರ್ಮ ಸಿಂಗ್ ಅವರಿಗಿಂತ ಖಡಕ್ ವ್ಯಕ್ತಿತ್ವದ ಸಿದ್ದರಾಮಯ್ಯ ಅವರಿಂದಾಗಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರು.ಉದಾಹರಣೆಗೆ,ವಿಧಾನ ಸೌಧದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒ ಗಳ ಪ್ರಗತಿ ಪರಿಶೀಲನೆ ಸಭೆ ನಡೆದಿತ್ತು .ಜಿಲ್ಲಾ ಪಂಚಾಯತ್ ಸಿಇಒ ಒಬ್ಬರು”ನಮ್ಮ ಜಿಲ್ಲೆಯಲ್ಲಿ ಜಿಡಿಪಿ ವೃದ್ಧಿಯಾಗಿದೆ.”ಎಂದರು.ಆಗ ಸಿದ್ದರಾಮಯ್ಯನವರ ಸಿಟ್ಟು ನೆತ್ತಿಗೇರಿತು.”ಏಯ್..ನಿಮ್ಮ ಜಿಲ್ಲೆಯಲ್ಲಿ ಕುಡಿಯುವ ನೀರು,ಆಹಾರ ಧಾನ್ಯ ಪೂರೈಕೆ,ಗೊಬ್ಬರ,ಬೀಜ ವಿತರಣೆ,ಮಳೆ-ಬೆಳೆ,ಜನ ಜೀವನ ಹೇಗಿದೆ ಹೇಳಪ್ಪಾ..ದೊಡ್ಡ ಎಕಾನಾಮಿಸ್ಟ್ ಥರ ಜಿಡಿಪಿ-ಜಿಡಿಪಿ ಅಂತ ಯಾಕಯ್ಯಾ ಮಾತಾಡ್ತೀಯಾ”ಎಂದು ಗದರಿಸಿದ್ದರು.ಒಟ್ಟಿನಲ್ಲಿ ಸರ್ಕಾರದ ಆಡಳಿತ ಬಿಗಿಯಾಗಿ ನಡೆಯುತ್ತಿತ್ತು.ಆದರೆ ಈ ನಡುವೆ ಒಂದು ದಿನ,ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ಮೌನಕ್ಕೆ ಶರಣಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಏಕಾಏಕಿ ತಾವು ರಾಜ್ಯ ಪ್ರವಾಸ ಮಾಡುವುದಾಗಿ ಪ್ರಕಟಿಸಿಬಿಟ್ಟರು.ಇದಾಗಿ ಸುಮಾರು ಒಂದು ವಾರದಲ್ಲಿ ಕೃಷ್ಣ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಕ ಮಾಡುವ ಆದೇಶ ದೆಹಲಿಯಿಂದ ಹೊರ ಬಿದ್ದಿತು.

    “ಸರ್ಕಾರ ಚೆನ್ನಾಗಿ ನಡೆಯುತ್ತಿರುವಾಗ ಕೃಷ್ಣ ಅವರು ರಾಜ್ಯ ಪ್ರವಾಸ ಕೈಗೊಂಡರೆ ರಾಜಕೀಯವಾಗಿ ಗೊಂದಲವಾಗುತ್ತದೆ”ಎಂಬ ಸಂಗತಿಯನ್ನು ಜೆಡಿಎಸ್ ಸರ್ವೋಚ್ಛ ನಾಯಕ ಎಚ್ ಡಿ ದೇವೇಗೌಡರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದರಂತೆ.ಆದ್ದರಿಂದ ಕೃಷ್ಣ ಅವರನ್ನು ಕೂಡಲೇ ರಾಜ್ಯದಿಂದ ಹೊರಗೆ ಕಳುಹಿಸಲಾಗಿತ್ತು.

    ಈಗ ಯಡಿಯೂರಪ್ಪನವರನ್ನು ಕೂಡ ರಾಜ್ಯಪಾಲರನ್ನಾಗಿ ಮಾಡುವಂತೆ ಹೈ ಕಮಾಂಡ್ ಮೇಲೆ ರಾಜ್ಯದ ಕೆಲವು ನಾಯಕರು ಒತ್ತಡ ಹೇರಿದರೂ ಆಶ್ಚರ್ಯಪಡಬೇಕಿಲ್ಲ.


    ಸಿ ರುದ್ರಪ್ಪ ನಾಡಿನ ಹಿರಿಯ ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರು.

    error: Content is protected !!