29.9 C
Karnataka
Friday, May 22, 2026
    Home Blog Page 59

    ಪಾಲಿಟೆಕ್ನಿಕ್ ಪ್ರವೇಶ; ಸೆ.20ರವರೆಗೆ ಕಾಲಾವಕಾಶ

    BENGALURU SEPT 2
    2021-22ನೇ ಸಾಲಿನ ಡಿಪ್ಲೊಮಾ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಮೊದಲ ಬಂದವರಿಗೆ ಆದ್ಯತೆ ನೀಡಲಾಗುತ್ತಿದ್ದು, ಈ ತಿಂಗಳ 20ರವರೆಗೆ ಪ್ರವೇಶಾವಕಾಶ ವಿಸ್ತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

    ಈ ಬಗ್ಗೆ ಹೇಳಿಕೆ ನೀಡಿರುವ ಅವರು, ರಾಜ್ಯದ 62 ಸರಕಾರಿ, 34 ಅನುದಾನಿತ ಪಾಲಿಟೆಕ್ನಿಕ್ʼಗಳಲ್ಲಿ ಪ್ರವೇಶಾವಕಾಶವನ್ನು ಸೆ. 20ರ ಸಂಜೆ ಕಚೇರಿ ಅವಧಿವರೆಗೂ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ಈ ಅವಕಾಶ ಪಡೆದುಕೊಂಡು ದಾಖಲಾಗಬೇಕು ಎಂದು ಸಚಿವರು ತಿಳಿಸಿದ್ದಾರೆ.

    ಪ್ರವೇಶಾವಧಿಯನ್ನಿ ವಿಸ್ತರಣೆ ಮಾಡುವಂತೆ ಎಲ್ಲ ಪಾಲಿಟೆಕ್ನಿಕ್ʼಗಳ ಪ್ರಾಂಶುಪಾಲರು ಕೋರಿಕೆ ಸಲ್ಲಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

    ಕುಮಟಾ-ತಡಸ ಹೆದ್ದಾರಿ ಸುಧಾರಣೆ ಕಾಮಗಾರಿಗೆ ಚಾಲನೆ

    SHIGGAOV, SEPT 1

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಕ್ಷೇತ್ರ ಶಿಗ್ಗಾಂವ ತಾಲೂಕಿನ ತಡಸ ಗ್ರಾಮದಲ್ಲಿ ಬುಧವಾರ ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ನೂತನ ಪ್ರವಾಸಿ ಮಂದಿರ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.

    ರೂ.3.30ಕೋಟಿ ವೆಚ್ಚದ ಕುಮಟಾ-ತಡಸ ಹೆದ್ದಾರಿ ಸುಧಾರಣೆ, ರೂ.2 ಕೋಟಿ ವೆಚ್ಚದ ಪಡುಬಿದ್ರಿ-ಚಿಕ್ಕಲಗುಡ್ಡ ಹೆದ್ದಾರಿ ಸುಧಾರಣಾ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ರೂ.2 ಕೋಟಿ ವೆಚ್ಚದಲ್ಲಿ ನಿರ್ಮಾಣ ಉದ್ದೇಶಿತ ನೂತನ ಪ್ರವಾಸಿ ಮಂದಿರ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.


    ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಲೋಕೋಪಯೋಗಿ ಖಾತೆ ಸಚಿವರಾದ ಸಿ.ಸಿ ಪಾಟೀಲ, ಉಪಸ್ಥಿತರಿದ್ದರು.
    ಸಿ.ಸಿ. ಪಾಟೀಲರ ಹೇಳಿಕೆ: ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವಾಗ ನಿಗದಿತ ತಾಂತ್ರಿಕ ಗುಣಮಟ್ಟಗಳನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದರಿಂದ ರಸ್ತೆಗಳ ತಾಳಿಕೆ ಮತ್ತು ಬಾಳಿಕೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಿ.ಸಿ. ಪಾಟೀಲರು ವಿವರಿಸಿದರು.

    ವಿದ್ಯಾರ್ಥಿಗಳ ಜತೆ ಸಿಎಂ ಮಾತು ಕಥೆ

    TADASA SEPT 1

    ಯಾವ ಕ್ಲಾಸಲ್ಲಿ ಓದ್ತಾ ಇದಿಯಮಾ? ಕ್ಲಾಸ್ ಶುರು ಆಗಿವೆಯಾ? ಸರಿಯಾಗಿ ಓದಮಾ!

    ಇವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಇಂದು ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಅರಟಾಳ ದುಂಡಸಿ ಗ್ರಾಮದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಮಕ್ಕಳೊಂದಿಗೆ ನಡೆಸಿದ ಸಂಭಾಷಣೆಯ ಮಾತುಗಳು.

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ ಮುಖ್ಯಮಂತ್ರಿಗಳು ತಡಸ್ ಗ್ರಾಮದಿಂದ ಹೊರಟ ನಂತರ ಮಾರ್ಗಮಧ್ಯದ ಅರಟಾಳ- ದುಂಡಸಿ ಗ್ರಾಮಕ್ಕೆ
    ಆಗಮಿಸಿದರು. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ವಿದ್ಯಾರ್ಥಿಗಳು ಸಿಎಂ ಅವರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳೊಂದಿಗೆ ಕೆಲ ಸಮಯ ಮುಖ್ಯಮಂತ್ರಿಗಳು ಮಾತನಾಡಿದರು. ವಿದ್ಯಾರ್ಥಿನಿಯೊಬ್ಬಳನ್ನು ಕರೆದು ಮಾತನಾಡಿಸಿದ ಸಿಎಂ, ಯಾವ ಕ್ಲಾಸಲ್ಲಿ ಓದ್ತಾ ಇದ್ದೀಯಾ? ಕ್ಲಾಸುಗಳು ಆರಂಭವಾಗಿವೆಯಾ? ಏನಾದರೂ ಸಮಸ್ಯೆ ಇದೆಯಾ ಎಂದು ಪ್ರಶ್ನಿಸಿದರು.

    ನಂತರ ಚೆನ್ನಾಗಿ ಓದಮ್ಮಾ ಅಂತ ಸಲಹೆ ನೀಡಿದರು‌ ಈ ಸಂದರ್ಭದಲ್ಲಿ ಗ್ರಾಮಸ್ಥರು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು.

    ಸಂಪುಟ ಸಹೋದ್ಯೋಗಿಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ‌ ಮೆಚ್ಚುಗೆಯ ಮಾತು

    TADASA SEPT 1
    ತಮ್ಮ ಸಚಿವ ಸಂಪುಟದಲ್ಲಿನ ಸಹೋದ್ಯೋಗಿಗಳ ಕಾರ್ಯಕ್ಷಮತೆ ದಕ್ಷತೆ, ಪ್ರತಿಭೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಮೆಚ್ಚುಗೆಯ ಮಾತುಗಳನ್ನಾಡಿದರು.

    ಬುಧವಾರ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ತಡಸ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗಳಿಗೆ ಶಂಕುಸ್ಥಾಪನೆ ನೆರವೇರಿಸುವುದಕ್ಕೂ ಮುನ್ನ ಅವರು ತಡಸ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.

    ನನ್ನ ಸಚಿವ ಸಂಪುಟದಲ್ಲಿರು ಸಚಿವರು ಪ್ರತಿಭಾವಂತರಿದ್ದಾರೆ. ಕಾರ್ಯಕ್ಷಮತೆಯಿಂದ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ರಾಜ್ಯದ ಜನತೆಗೆ ಉತ್ತಮ ಕಾರ್ಯಕ್ರಮಗಳನ್ನು ಕೊಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

    ತಡಸ ಗ್ರಾಮ ಮುಂದಿನ ದಿನಗಳಲ್ಲಿ ಪಟ್ಟಣ, ನಗರವಾಗಿ ಪರಿವರ್ತನೆಯಾಗಲಿದೆ. ಗ್ರಾಮಕ್ಲೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಈಗಾಗಲೇ ಗ್ರಾಮದಲ್ಲಿ ಪದವಿಪೂರ್ವ ಕಾಲೇಜು ಇದೆ. ಮುಂದಿನ ಇಲ್ಲಿ ಪದವಿ ಕಾಲೇಜು ಸ್ಥಾಪಿಸಲಾಗುವುದು. ಹೆಣ್ಣು ಮಕ್ಕಳಿಗಾಗಿ ವಿಶೇಷ ಹೈಸ್ಕೂಲನ್ನು ತೆರೆಯಲಾಗುವುದು. ಗ್ರಾಮದ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಶಾಲೆಯನ್ನು ಆರಂಭಿಸಲು ಉದ್ದೇಶಿಸಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

    ಇದಕ್ಕೂ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅದರ ವಿವರ ಈ ವಿಡಿಯೋದಲ್ಲಿದೆ.

    ಹಳ್ಳಿಗಳತ್ತ ಸಾಗಲು ಇಲಾಖೆ ಕಾರ್ಯದರ್ಶಿಗಳಿಗೆ ಸಿಎಂ ಸೂಚನೆ

    BENGALURU AUG 31

    ಸರ್ಕಾರದ ಕಾರ್ಯದರ್ಶಿಗಳು ಜಿಲ್ಲೆ, ತಾಲ್ಲೂಕು, ಹಳ್ಳಿಗಳಿಗೆ ಭೇಟಿ ನೀಡಬೇಕು. ತಮ್ಮ ಇಲಾಖೆಯ ಕಾರ್ಯಕ್ರಮ ಅನುಷ್ಠಾನವನ್ನು ಖುದ್ದಾಗಿ ಪರಿಶೀಲನೆ ನಡೆಸಬೇಕು. ತೊಡಕುಗಳಿದ್ದಲ್ಲಿ, ಸ್ಥಳದಲ್ಲಿಯೇ ಬಗೆಹರಿಸಬೇಕು. ಆಗ ಜನರ ಬಳಿಗೆ ಸರ್ಕಾರ ಹೋದಂತಾಗುತ್ತದೆ. ಜನ ಇದ್ದಲ್ಲಿ ಅಭಿವೃದ್ದಿಯಾಗಲು ಸಾಧ್ಯ.

    ಇದು ಇಂದು ವಿಕಾಸಸೌಧ ದಲ್ಲಿ ಮುಖ್ಯ ಕಾರ್ಯದರ್ಶಿಗಳ ಆಹ್ವಾನದ ಮೇರೆಗೆ ಸರ್ಕಾರದ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿ ಗಳೊಂದಿಗೆ ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅಧಿಕಾರಿಗಳಿಗೆ ನೀಡಿದ ಸೂಚನೆ.

    ಹಿರಿಯ ಅಧಿಕಾರಿಗಳ ಈ ಕ್ರಮದಿಂದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತವೆ. ಜನರು ಅಭಿವೃದ್ಧಿ ಸುತ್ತ ಸುತ್ತುವುದಲ್ಲ, ಅಭಿವೃದ್ಧಿ ಜನರಿದ್ದ ಕಡೆ ಆಗಬೇಕು. ಆದ್ದರಿಂದ ಇಲಾಖೆ ಮುಖ್ಯಸ್ಥರು ಜಿಲ್ಲಾ ಮತ್ತು ತಾಲ್ಲೂಕುಗಳಿಗೆ ಭೇಟಿ ನೀಡಬೇಕು ಎಂದರು.‌

    ಆಡಳಿತದಲ್ಲಿ ಪಾರದರ್ಶಕತೆ ಇರಬೇಕು. ಇಲಾಖೆಗಳಲ್ಲಿ ಭ್ರಷ್ಟಾಚಾರ ನಿಯಂತ್ರಿಸಿ, ಕಡತ ವಿಲೇವಾರಿಯನ್ನು ವಿಳಂಬ ಮಾಡಬೇಡಿ. ಜನಸಾಮಾನ್ಯರ ಕೆಲಸಗಳಲ್ಲಿ ವಿಳಂಬ ಮಾಡಬಾರದು. ಅವರು ಕಚೇರಿಗಳಿಗೆ ಭೇಟಿ ನೀಡಿದಾಗ ಗೌರವ, ಸೌಜನ್ಯದಿಂದ ನಡೆಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ನುಡಿದರು.

    ಈ ಜಡತ್ವ ಒಂದೇ ದಿನದಲ್ಲಿ ಬದಲಾಗಲು ಸಾಧ್ಯವಿಲ್ಲ. ಆದರೆ ಈ ಬದಲಾವಣೆ ತರುವಲ್ಲಿ ನಿಮ್ಮ ಪಾತ್ರ ಬಹುಮುಖ್ಯವಾದುದು. ನಾವೆಲ್ಲರೂ ಸೇರಿ ಮಾಡೋಣ. ಧೈರ್ಯವಾಗಿ ಜನಪರ ಕೆಲಸ ಮಾಡಬೇಕು.ಆಡಳಿತದಲ್ಲಿ ಬದಲಾವಣೆ ಬಂದರೆ, ಜನರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯ. ಸಕಾರಾತ್ಮಕ ಚಿಂತನೆಯೊಂದಿಗೆ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

    ಆಡಳಿತ ಸುಧಾರಣೆಗೆ ಕ್ರಮ

    ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳಲ್ಲಿ ಆಡಳಿತಾತ್ಮಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಶೀಲಿಸಲು ಸಲಹಾ ಸಮಿತಿಯನ್ನು ರಚಿಸಲಾಗುತ್ತಿದ್ದು, ನವೆಂಬರ್ 1 ರಿಂದ ಹಲವು ಆಡಳಿತ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಅವರು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು..

    ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಒತ್ತು ನೀಡಿ

    ಸ್ವಚ್ಛ ಭಾರತ ಯೋಜನೆ ಬಹಳ ಮಹತ್ವದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ. ಹೀಗಾಗಿ ಯೋಜನೆಯ‌ ಅನುಷ್ಠಾನದಲ್ಲಿ ನಾವು ಹಿಂದೆ ಬಿಡಬಾರದು. ಕೇಂದ್ರ ಸರ್ಕಾರದ ಯೋಜನೆಗಳು ಪರಿಣಾಮವಾಗಿ ಕಾರಿಯಾಗಿ ಅನುಷ್ಠಾನಗಳ್ಳುವಂತೆ ನೋಡಿಕೊಳ್ಳಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

    ಸಿಎಂ ಭೇಟಿಯಾದ ಕಿಚ್ಚ ಸುದೀಪ

    BENGALURU AUG 31

    ಕನ್ನಡ ಚಿತ್ರರಂಗದ ಹೆಸರಾಂತ ನಟ ಕಿಚ್ಚ ಸುದೀಪ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ಮಾಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾ್ಡಿರುವ ಮುಖ್ಯಮಂತ್ರಿಗಳು . ಕಿಚ್ಚ ಸುದೀಪ ಗೆ ಶುಭವನ್ನು ಹಾರೈಸಿದ್ದಾರೆ

    ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸರ್ವಋತು ರಸ್ತೆ ನಿರ್ಮಾಣಕ್ಕೆ ಯತ್ನ

    YALLAPURA AUG 31

    ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸರ್ವಋತು ರಸ್ತೆಗಳ ಪುನರ್ನಿರ್ಮಾಣಕ್ಕೆ ಮತ್ತು ಇತರ ಕಾಮಗಾರಿಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲರು ಹೇಳಿದರು.

    ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್‌ ಅವರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮಕ್ಕೆ ಭೇಟಿ ನೀಡಿದ ಅವರು ಅತಿವೃಷ್ಟಿಯಿಂದ ಭೂ ಕುಸಿತವಾದ ಪ್ರದೇಶಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು.

    ನಂತರ ಸ್ಥಳೀಯ ಗ್ರಾಮಸ್ಥರ ಮನವಿ ಸ್ವೀಕರಿಸಿದ ಅವರು, ಬೆಂಗಳೂರಿನಿಂದ ನಿರ್ಣಯ ತೆಗೆದುಕೊಳ್ಳುದಕ್ಕೂ ಹಾಗೂ ಸ್ಥಳ ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಈಗಾಗಲೇ ಮುಖ್ಯಮಂತ್ರಿಯವರು ಜಿಲ್ಲೆಯ ನೆರೆ ಪೀಡಿತ ಹಾಗೂ ಭೂ ಕುಸಿತ ಸ್ಥಳಗಳನ್ನು ಪರಿಶೀಲಿಸಿ ಜಿಲ್ಲೆಗೆ 210 ಕೋಟಿ ರೂ. ಅನುದಾನ ನೀಡಿದ್ದಾರೆ. ಸಚಿವ ಶಿವರಾಮ್ ಹೆಬ್ಬಾರ್‌ ಅವರ ನೇತೃತ್ವದಲ್ಲಿ ರಸ್ತೆ ಕುಸಿತದ ತೆರವು ಹಾಗೂ ಭೂಕುಸಿತ ಪ್ರದೇಶಗಳಲ್ಲಿ ಕಾಮಗಾರಿ ಭರದಿಂದ ಸಾಗುತಿದ್ದು, ಪಿ.ಡಬ್ಲ್ಯೂ. ಡಿ.ಇಲಾಖೆಯಿಂದ ಕಳಚೆ ಹಾಗೂ ಹಾನಿಯಾದ ಪ್ರದೇಶದಲ್ಲಿ ಸರ್ವಋತು ರಸ್ತೆ ನಿರ್ಮಾಣ ಮಾಡಲಾಗುವುದು ಹಾಗೂ ಹೆಚ್ಚಿನ ಅನುದಾನಕ್ಕಾಗಿ ಕೂಡಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

    ಸಚಿವ ಶಿವರಾಮ್ ಹೆಬ್ಬಾರ್ ಮಾತನಾಡಿ, ಜನರು ಭಯ ಪಡುವ ಅಗತ್ಯವಿಲ್ಲ. ಆದಷ್ಟು ಬೇಗ ಮೂಲಸೌಕರ್ಯ ಹಾಗೂ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದುಎಂದು ಹೇಳಿದರು. ಜಿಲ್ಲೆಗೆ ಆಗಮಿಸಿದ ಲೋಕೋಪಯೋಗಿ ಸಚಿವರ ಸಹಕಾರದೊಂದಿಗೆ ಜಿಲ್ಲೆಯ ಲೋಕೋಪಯೋಗಿ ಅಧಿಕಾರಿಗಳು ಮತ್ತು ಅರಣ್ಯ ಅಧಿಕಾರಿಗಳು ರಸ್ತೆ ತೆರವು ಕಾರ್ಯದಲ್ಲಿ ಸಾಕಷ್ಟು ಶ್ರಮಿಸಿದ್ದು ಅವರಿಗೆ ಕೃತಜ್ಞತೆ ಸಲ್ಲಿಸಿದರು.

    ಸಚಿವರು ಭೇಟಿ ನೀಡಿದ ಪ್ರದೇಶಗಳಲ್ಲಿ ಶಿರಸಿಯ ಸಹಾಯಕ ಆಯುಕ್ತರಾದ ಆಕೃತಿ ಬನ್ಸಾಲ್, ಯಲ್ಲಾಪುರ ಮತ್ತು ಶಿರಸಿ ತಾಲೂಕಿನ ತಹಶೀಲ್ದಾರ್‌ರು ಹಾಗೂ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದು ಅಗತ್ಯ ಮಾಹಿತಿ ನೀಡಿದರು.

    .

    ದೃಶ್ಯಕಲೆ ವಿಪುಲ ಅವಕಾಶಗಳ ಆಗರ

    ಬಳಕೂರು ವಿ ಎಸ್ ನಾಯಕ

    ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯವು ಕಲಾಲೋಕಕ್ಕೆ ನೀಡಿದ ಸೇವೆ ಅನನ್ಯವಾದದ್ದು. ಹಲವಾರು ರಾಷ್ಟ್ರೀಯ ಅಂತಾರಾಷ್ಟ್ರೀಯ ಕಲಾವಿದರನ್ನು ಕಲಾ ಜಗತ್ತಿಗೆ ನೀಡಿದ ಹೆಮ್ಮೆ ಚಿತ್ರಕಲಾ ಮಹಾವಿದ್ಯಾಲಯಕ್ಕೆ ಸೇರಬೇಕು. ದೃಶ್ಯ ಕಲೆಯ ಮೂಲಕ ಉತ್ತಮ ಕಲಾವಿದರನ್ನು ಕೊಡುಗೆಯನ್ನಾಗಿ ನೀಡಿದ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದ ಸೇವೆ ಅನನ್ಯವಾದದ್ದು.

    ನಮ್ಮ ಸಮಾಜದ ಪ್ರತಿಯೊಂದು ಹಂತದಲ್ಲಿಯೂ ಕಲೆ ಹಾಸು ಹೊಕ್ಕಾಗಿರುವುದರಿಂದ ಪುಸ್ತಕ ವಿನ್ಯಾಸ ವಸ್ತ್ರವಿನ್ಯಾಸ ತಂತ್ರಜ್ಞಾನದಲ್ಲಿ ಯಂತ್ರಗಳ ವಿನ್ಯಾಸ ದಲ್ಲಿ ಕಲಾವಿದ ಪ್ರಮುಖ ರೂವಾರಿಯಾಗಿದ್ದಾನೆ. ಕಲಾಕ್ಷೇತ್ರದ ದೃಶ್ಯಕಲೆಯಲ್ಲಿ ಬಹ ಳಷ್ಟು ಅವಕಾಶಗಳಿದ್ದು ನಮಗೆ ಅರಿವಿಲ್ಲದ ಹಲವು ವಿಷಯಗಳನ್ನು ತಿಳಿಯಬಹುದು.

    ಬೆಂಗಳೂರಿನ ಪ್ರತಿಷ್ಠಿತ ಕರ್ನಾಟಕ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ದೃಶ್ಯಕಲೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ಕುಮಾರಕೃಪ ರಸ್ತೆಯಲ್ಲಿದ್ದ ಚಿತ್ರಕಲಾ ಮಹಾವಿದ್ಯಾಲಯದ ಹೊಸ ಕ್ಯಾಂಪಸ್ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶ್ರೀನಿವಾಸಪುರದಲ್ಲಿ ಸುಂದರವಾದ ವಿಶಾಲವಾದ ಪ್ರಕೃತಿಯ ಮಡಿಲಲ್ಲಿ ತಲೆ ಎತ್ತಿದೆ. ಈಗ ಕಾಲೇಜು ಕಲಾವಿದರಿಗೆ ಸ್ಪೂರ್ತಿನೀಡುವ ಶಾಂತವಾದ ಪರಿಸರದ ನಡುವೆ ನಿರ್ಮಾಣವಾಗಿದೆ.

    ಚಿತ್ರಕಲೆಯಲ್ಲಿ ಅಧ್ಯಯನ ಮಾಡಬೇಕೆಂದರೆ ಕನಿಷ್ಠ ವಿದ್ಯಾರ್ಹತೆ ಪಿಯುಸಿ ಆಗಿರಬೇಕು. ಇಲ್ಲಿ ಶಿಲ್ಪಕಲೆ ,ಅನ್ವಯ ಕಲೆ ,ಗ್ರಾಫಿಕ್ ಚಿತ್ರ ಕಲೆ, ಕಲಾ ಇತಿಹಾಸ ,ಸೆರಾಮಿಕ್ ಆರ್ಟ್ ಮತ್ತು ಅನಿಮೇಷನ್ ವಿಭಾಗದಲ್ಲಿ ಅಧ್ಯಯನ ಮಾಡುವ ಅವಕಾಶ ಸಿಗಲಿದೆ.

    ಬಿವಿಎ ದೃಶ್ಯಕಲೆಯಲ್ಲಿ ಪದವಿ ನಾಲ್ಕು ವರ್ಷಗಳು ಮತ್ತು ಎಂವಿಎ ಎರಡು ವರ್ಷದ ಅವಧಿ ಓದುವ ಅವಕಾಶ ವಿದ್ಯಾರ್ಥಿಗಳಿಗೆ ಸಿಗಲಿದೆ. ಈ ವಿಭಾಗದಲ್ಲಿ ಅಧ್ಯಯನ ಮಾಡಿದವರಿಗೆ ಉದ್ಯೋಗದಲ್ಲಿ ವಿಪುಲ ಅವಕಾಶಗಳು ಸಿಗುವುದರಲ್ಲಿ ಸಂದೇಹವಿಲ್ಲ. ದೃಶ್ಯಕಲೆಯಲ್ಲಿ ಅಧ್ಯಯನ ಮಾಡಿದವರಿಗೆ ಡಿಸೈನರ್ ಆಗಿ ಕಾರ್ಯನಿರ್ವಹಿಸಬಹುದು. ಬೇರೆಬೇರೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಸಿಗುತ್ತದೆ. ಫ್ರೀಲ್ಯಾನ್ಸ್ ಕಲಾವಿದರಾಗಿಯೂ ಕೂಡ ಕಾರ್ಯನಿರ್ವಹಿಸಬಹುದು. ಕಲಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಬಹುದು. ಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಬಹುದು.

    ಸಾಮಾನ್ಯವಾಗಿ ಜನಸಾಮಾನ್ಯರಿಗೆ ದೃಶ್ಯಕಲೆಯಲ್ಲಿ ಅಧ್ಯಯನ ಮಾಡಿದರೆ ಭವಿಷ್ಯವಿಲ್ಲ ಎಂಬ ತಪ್ಪು ತಿಳಿವಳಿಕೆ ಹೊಂದಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಮೆಡಿಕಲ್, ಎಂಜಿನಿಯರಿಂಗ್ ಕೋರ್ಸುಗಳಿಗೆ ಸೇರಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬ ನಂಬಿಕೆಯಲ್ಲಿ ಇರಬಹುದು. ಆದರೆ ದೃಶ್ಯಕಲೆಯಲ್ಲಿ ಮಾಡುವುದರಿಂದ ನಾವು ಎಂದೂ ಕಂಡರಿಯದ ಉತ್ತಮವಾದ ಕೆಲಸವನ್ನು ಕಂಡು ಕೊಳ್ಳುವುದರಲ್ಲಿ ಸಂದೇಹವಿಲ್ಲ ಎಂದು ಇಲ್ಲಿನ ಹಳೆಯ ವಿದ್ಯಾರ್ಥಿಗಳು ಅಭಿಪ್ರಾಯ ಪಡುತ್ತಾರೆ.

    ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಮತ್ತು ಆರು ತಿಂಗಳ ಕಾಲ ಕೋರ್ಸನ್ನು ಸಂಜೆ ಮತ್ತು ವಾರಾಂತ್ಯದಲ್ಲಿ ನಡೆಸಲಾಗುತ್ತದೆ ಈ ಕಲಾ ಕೋರ್ಸುಗಳಿಗೆ ಸಾಮಾನ್ಯವಾಗಿ ಎಂಜಿನಿಯರ್ಗರ್ ಗಳು, ಗೃಹಿಣಿಯರು ಬಂದು ಕಲಾ ತರಬೇತಿ ಪಡೆಯುತ್ತಿರುವುದು ಬಹಳ ವಿಶೇಷ. ಇದರಿಂದ ಇವರಿಗೆ ಒಳ್ಳೆಯ ಕೆಲಸವು ಕೂಡ ಸಿಕ್ಕಿದೆ. ಸರ್ಟಿಫಿಕೇಟ್ ಕೋರ್ಸ್ ಮಾಡಿದೆ ಕಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಕೂಡ ನೀಡಿ ಗೌರವಿಸಲಾಗುತ್ತದೆ.

    ಬೆಂಗಳೂರು ನಗರದ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಶ್ರೀನಿವಾಸಪುರ ದಲ್ಲಿ ವಿಶಾಲವಾದ ಜಾಗದಲ್ಲಿ ಚಿತ್ರಕಲಾ ಮಹಾವಿದ್ಯಾಲಯವು ನಿರ್ಮಾಣವಾಗಿರುವುದು ಕಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ತಾಣವಾಗಿ ದೆ. ಇಲ್ಲಿ ಹೊಸದಾಗಿ ಪಿಎಚ್. ಡಿ ಸಂಶೋಧನಾ ಕೇಂದ್ರವು ಆರಂಭವಾಗಿದ್ದು ಹಲವಾರು ಕಲಾ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಶಿಕ್ಷಕರು ಕಲಾ ಅಧ್ಯಯನದ ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವಲ್ಲಿ ವಿಶಿಷ್ಟ ಕಾರ್ಯವನ್ನು ಮಾಡುತ್ತಿದ್ದಾರೆ. ಇಂತಹ ಪ್ರಮುಖ ಕಲಾ ಸಂಸ್ಥೆಗೆ ಬಂದು ಅಧ್ಯಯನ ಮಾಡಿದರೆ ನಿಮ್ಮ ಜೀವನದಲ್ಲಿ ಉತ್ತಮ ಕಲಾವಿದರಾಗಿ ಹೊರಹೊಮ್ಮಬಹುದು.


    ವಿಳಾಸ :ಚಿತ್ರಕಲಾ ಮಹಾವಿದ್ಯಾಲಯ, ಶ್ರೀನಿವಾಸ ಪುರ ,ಉತ್ತರ ಹಳ್ಳಿ ಮುಖ್ಯ ರಸ್ತೆ, ಬೆಂಗಳೂರು.

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.



    ನೂತನ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ವಿರುದ್ಧವಾದ ಒಂದಂಶವೂ ಇಲ್ಲ ಜಾರಿಗೆ ಆತುರ ಇಲ್ಲ; ಸ್ಪಷ್ಟತೆ ಇದೆ: ಡಾ.ಸಿ.ಎನ್.ಅಶ್ವತ್ಥನಾರಾಯಣ

    MANGALURU AUG 30

    ದೂರದೃಷ್ಟಿ ಮತ್ತು ವೈಜ್ಞಾನಿಕವಾಗಿ ರೂಪಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಮಾರಕವಾಗುವ ಒಂದೇ ಒಂದು ಅಂಶವೂ ಇಲ್ಲ. ಒಂದು ವೇಳೆ ಯಾರಿಗಾದರೂ ಗೊತ್ತಿದ್ದರೆ ನನಗೆ ಬಂದು ಹೇಳಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸವಾಲು ಹಾಕಿದರು.

    ಮಂಗಳೂರಿನಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; “ಕೇವಲ ರಾಜಕೀಯ ಕಾರಣಕ್ಕಾಗಿ ಶಿಕ್ಷಣ ನೀತಿಯನ್ನು ವಿರೋಧ ಮಾಡಲಾಗುತ್ತಿದೆ. ಐದೂವರೆ ವರ್ಷಗಳ ನಿರಂತರ ಅಧ್ಯಯನ, ಸಮಾಲೋಚನೆ ಹಾಗೂ ಸುಮಾರು ಮೂರೂವರೆ ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಅವುಗಳ ಬಗ್ಗೆ ಮಂಥನ ಮಾಡಿದ ನಂತರ ಶಿಕ್ಷಣ ನೀತಿ ರೂಪಿತಗೊಂಡಿದೆ ಎಂದರು.

    ವಿದ್ಯಾರ್ಥಿಗಳಿಗೆ ವಿರುದ್ಧವಾಗಿ ಕನಿಷ್ಟ ಒಂದು ಅಂಶವನ್ನಾದರೂ ಟೀಕಾಕಾರರು ತೋರಿಸಲು ಪ್ರಯತ್ನಿಸಲಿ ಎಂದ ಸಚಿವರು, ಕೇವಲ ಬಿಜೆಪಿ ಸರಕಾರ ಜಾರಿ ಮಾಡುತ್ತಿದೆ ಎನ್ನುವ ಕಾರಣಕ್ಕೆ ʼಶಿಕ್ಷಣದ ಕೇಸರಿಕರಣʼ ಮಾಡಲಾಗುತ್ತಿದೆ ಎಂದು ಹುಯಿಲೆಬ್ಬಿಸುವುದು ಬಿಟ್ಟು ನೇರವಾಗಿ ಚರ್ಚೆ ಬರಲಿ ಎಂದರು ಡಾ.ಅಶ್ವತ್ಥನಾರಾಯಣ.

    ಕೇಂದ್ರ ಸರಕಾರವು ಶಿಕ್ಷಣ ನೀತಿಯನ್ನು ರಾಜ್ಯಗಳ ಮೇಲೆ ಹೇರುತ್ತಿಲ್ಲ. ನೀತಿಯ ಎಲ್ಲ ಹಂತಗಳ ಅಧಿಕಾರವೂ ರಾಜ್ಯದ ಬಳಿಯೇ ಇರುತ್ತದೆ. ಅದೇ ರೀತಿ, ಆತುರಾತುರವಾಗಿ ಈ ನೀತಿಯನ್ನು ಜಾರಿ ಮಾಡಲಾಗುತ್ತಿದೆ ಎಂದು ಕೆಲವರು ಸುಳ್ಳು ಹೇಳುತ್ತಿದ್ದಾರೆ. ಇದೂ ಸರಿಯಲ್ಲ ಎಂದ ಸಚಿವರು, ನೀತಿಯ ಜಾರಿಗೆ ಮುನ್ನ ಸಾಕಷ್ಟು ಪೂರ್ವ ತಯಾರಿ, ಚರ್ಚೆ, ಚಿಂತನ-ಮಂಥನ, ಕಾರ್ಯಪಡೆ ರಚನೆ, ವರದಿ ಪಡೆಯುವುದು, ಅಸೆಂಬ್ಲಿಯಲ್ಲಿ ಚರ್ಚೆ, ವಿಷಯವಾರು ಸಮಿತಿಗಳ ರಚನೆ ಇತ್ಯಾದಿ ಕ್ರಮ ವಹಿಸಲಾಗಿದೆ. ಈ ಬಗ್ಗೆ ಗೊತ್ತಿಲ್ಲದೆ ಮಾತನಾಡುವವರು ವಿಷಯವನ್ನು ಅರಿತು ಮಾತನಾಡಿದರೆ ಉತ್ತಮ ಎಂದು ಡಾ.ಅಶ್ವತ್ಥನಾರಾಯಣ ತರಾಟೆಗೆ ತೆಗೆದುಕೊಂಡರು.

    ಜ್ಞಾನವೆಂಬುದು ಕೂಡ ಇಂದು ದೊಡ್ಡ ಆರ್ಥಿಕತೆ. ಸಮಾಜದ, ದೇಶದ ಎಲ್ಲ ಸಮಸ್ಯೆಗಳಿಗೆ ಶಿಕ್ಷಣದಿಂದಲೇ ಪರಿಹಾರ ಸಾಧ್ಯ. ಶಿಕ್ಷಣ ನೀತಿಯಿಂದಲೇ ದೇಶದ ಎಲ್ಲ ಸವಾಲುಗಳಿಗೂ ಉತ್ತರ ಇದೆ ಎಂದು ಸಚಿವರು ಸ್ಪಷ್ಟವಾಗಿ ಹೇಳಿದರು.

    ವಿದ್ಯಾರ್ಥಿನಿಯರ ಸಂಚಾರಕ್ಕೆ ನಿರ್ಬಂಧ ಇಲ್ಲ:

    ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕ್ಯಾಪಸ್ʼಗಳಲ್ಲಿ ಸಂಚರಿಸಲು ವಿದ್ಯಾರ್ಥಿನಿಯರ ಮೇಲೆ ಯಾವುದೇ ನಿರ್ಬಂಧ ಇಲ್ಲ. ಆದರೆ, ಎಲ್ಲ ಕ್ಯಾಂಪಸ್ʼಗಳನ್ನು ಸುರಕ್ಷಿತವಾಗಿರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕುಲಪತಿಗಳಿಗೆ ಸೂಚಿಸಲಾಗಿದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಮೈಸೂರು ವಿವಿ ಕುಲಸಚಿವರು ಹೊರಡಿಸಿದ್ದ ಸುತ್ತೋಲೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದರಲ್ಲದೆ, ಆ ಸುತ್ತೋಲೆಯನ್ನು ಈಗಾಗಲೇ ವಾಪಸ್ ಪಡೆಯಲಾಗಿದೆ ಹಾಗೂ ಎಲ್ಲ ವಿವಿಗಳ ಕ್ಯಾಂಪಸ್ಸುಗಳಲ್ಲಿ ನಿಗಾ, ಪಹರೆ, ಸಿಸಿ ಕ್ಯಾಮೆರಾಗಳ ಅಳವಡಿಕೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

    ಸಾಮಾನ್ಯವಾಗಿ ಎಲ್ಲ ವಿಶ್ವವಿದ್ಯಾಲಯಗಳ ಕ್ಯಾಂಪಸ್ʼಗಳು ಬಹಳ ದೊಡ್ಡದಾಗಿರುತ್ತವೆ. ಹೀಗಾಗಿ ಭದ್ರತೆ, ಸುರಕ್ಷತೆ ದೃಷ್ಟಿಯಲ್ಲಿ ಬಿಗಿ ಕ್ರಮ ಕೈಗೊಳ್ಳುವುದು ಅಗತ್ಯ. ಆದ್ದರಿಂದ ಅಗತ್ಯ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದರ ಜತೆಗೆ, ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ನಿಗಾ ಇರಿಸಬೇಕು ಎಂದು ಅವರು ಹೇಳಿದರು.

    ಕೂಡಲೇ ಎಲ್ಲ ವಿವಿಗಳು ತಮ್ಮ ಕ್ಯಾಪಸ್ಸುಗಳು ಎಷ್ಟರಮಟ್ಟಿಗೆ ಸುರಕ್ಷಿತವಾಗಿವೆ ಎಂದಬುದನ್ನು ನೋಡಿಕೊಂಡು ವಿಳಂಬವಿಲ್ಲದೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಅವರು ಎಲ್ಲ ಕುಲಪತಿಗಳಿಗೆ ಮಾಧ್ಯಮಗೋಷ್ಠಿಯ ಮೂಲಕ ಸೂಚನೆ ನೀಡಿದರು.

    ಲಸಿಕೆ ಪಡೆಯದವರಿಗೆ ನೋ ಎಂಟ್ರಿ:

    18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳು ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆ ಪಡೆದವರು ಭೌತಿಕ ತರಗತಿಗೆ ಹಾಜರಾಗಲು ಅವಕಾಶ ಇದೆ. ಲಸಿಕೆ ಪಡೆಯದವರು ಆನ್ಲೈಬ್ ತರಗತಿಯ ಮೂಲಕ ಕಲಿಕೆ ಮುಂದುವರಿಸಬಹುದು. ಅವರೂ ಕೂಡ ವ್ಯಾಕ್ಸಿನ್ ಪಡೆದು ನೇರ ತರಗತಿಗೆ ಹಾಜರಾಗಲು ಅಡ್ಡಿ ಇಲ್ಲ ಎಂದು ಅವರು ತಿಳಿಸಿದರು.

    ಇನ್ನು, ಲಸಿಕೆ ಪಡೆಯದ ಬೋಧಕರು, ಬೋಧಕೇತರ ಸಿಬ್ಬಂದಿಗೂ ಕಾಲೇಜ್ʼಗೆ ಪ್ರವೇಶ ಇರುವುದಿಲ್ಲ. ಅವರು ಕರ್ತವ್ಯಕ್ಕೆ ಹಾಜರಾಗಬೇಕಾದರೆ ಲಸಿಕೆ ಪಡೆದೇ ಬರಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    ಕೃಷ್ಣಾ ನೀ ಬೇಗನೇ ಬಾರೋ

    ನಮ್ಮ ಕೃಷ್ಣ ಮಕ್ಕಳ ಪ್ರೀತಿಯ ದೇವರು. ಬಾಲ್ಯದಲ್ಲಿ ಎಲ್ಲರೂ ಒಮ್ಮೆಯಾದರು ಕೃಷ್ಣ ರಾಧೆಯಾಗಿ ಶಾಲೆಯ ಕಾರ್ಯಕ್ರಮದಲ್ಲಿ ನಲಿದವರೆ. ಇನ್ನೂ ಶ್ರೀಕೃಷ್ಣನ ಬಾಲ ಲೀಲೆಗಳನ್ನು ಮಕ್ಕಳ ಬಾಯಿಂದ ಕೇಳಿದರಂತೂ ಅದರ ಸೊಗಸೆ ಬೇರೆ. ಹೀಗಾಗಿ ನಮ್ಮಈ ವಿಡಿಯೋದಲ್ಲಿ ನಲ್ಲಿ ಮಕ್ಕಳ ಕಲರವವನ್ನು ಕೇಳಿಸುತ್ತಿದ್ದೇವೆ. ಅವರ ತೊದಲ ನುಡಿಗಳಲ್ಲಿ ಶ್ರೀಕೃಷ್ಣ ಲೀಲಾಮೃತವನ್ನು ಕೇಳಿ ಆನಂದಿಸಿ.ಈ ಬಾರಿ ಮಕ್ಕಳ ಅಮ್ಮಂದಿರು ಅವರೊಂದಿಗೆ ಧ್ವನಿಗೂಡಿಸಿರುವುದು ವಿಶೇಷ.

    ಸಾನಿಕಾ ತೇಜಸ್ವಿ ಮತ್ತು ಅವರ ತಾಯಿ ಡಾ. ಸುಚೇತಾ ಅವರ ಸ್ವಾಗತಂ ಕೃಷ್ಣ ಗೀತೆಯಿಂದ ಆರಂಭವಾಗುವ ಈ ವಿಡಿಯೋ ಮುಂದೆ ಅಮೆರಿಕದಿಂದ ಜೊತೆಗೂಡಿರುವ ಶ್ರೀಯಶ್ ಮತ್ತು ರಮ್ಯಾ ಹರ್ಷ ಅವರು ಕೃಷ್ಣಾ ನೀ ಬೇಗನೇ ಬಾರೋ ಎಂದು ಕರೆಯುವ ಮೂಲಕ ಮುಂದುವರಿಯುತ್ತದೆ. ಮಂದೆ ಶ್ರೀಯಾ ಮತ್ತುಛಾಯಾಶ್ರೀ ಕೃಷ್ಣ ಎನ ಬಾರದೆ ಎಂದು ಭಕ್ತಿಯಿಂದ ಧ್ಯಾನಿಸುತ್ತಿದ್ದಂತೆ ಅವನಿ ಮತ್ತು ರಶ್ಮಿ ಏಕೆ ಮಮತೆ ಕೊಟ್ಟು ಎಂದು ರಂಗನಾಥನನ್ನು ಕೊಂಡಾಡುತ್ತಾರೆ. ಮುಂದೆ ಮಿಹಿರಾ ಮತ್ತು ಪ್ರಿಯಾಂಕ ನಂದ ನಂದನಾ ನೀನು ಶ್ರೀಕೃಷ್ಣ ಎಂದು ಕೃಷ್ಣನನ್ನು ಪ್ರಾರ್ಥಿಸುತ್ತಾರೆ. ಪ್ರತೀಕ್ಷ ಮತ್ತು ಸಂಹಿತ ಸಹೋದರಿಯರು ಕೃಷ್ಣಾ ಬಾರೋ ಎಂದು ಕರೆಯುವ ಮೂಲಕ ವಿಡಿಯೋವನ್ನು ಅಂತ್ಯಗೊಳಿಸಿದ್ದಾರೆ.

    ನಿರೂಪಣೆ ಭಾರತಿ ಅವರದ್ದು. ಆಲಿಸಿ ಪ್ರತಿಕ್ರಿಯಿಸಿ.

    error: Content is protected !!