29.9 C
Karnataka
Friday, May 22, 2026
    Home Blog Page 58

    ಐಐಟಿ ಮಾದರಿಯಲ್ಲಿ ಸ್ವಾಯತ್ತ ಕಾಲೇಜ್ ಆಗಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್ ಅಭಿವೃದ್ಧಿ

    BENGALURU SEP 4

    ಐಐಟಿ ಮಾದರಿಯಲ್ಲಿ ನಗರದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್ʼಗೆ (ಯುವಿಸಿಇ) ಸ್ವಾಯತ್ತತೆ ನೀಡುವ ಮಸೂದೆಯನ್ನು ಈ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನ ಬ್ರಿಗೇಡ್ ಗೇಟ್‌ವೇ ಕ್ಯಾಂಪಸ್ʼನಲ್ಲಿ ಸ್ಥಾಪಿಸಲಾಗಿರುವ 11.6 ಅಡಿ ಎತ್ತರದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಲೋಹದ ಪ್ರತಿಮೆಯನ್ನು ಶನಿವಾರ ಲೋಕಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು.

    ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡುವುದು ಸರಕಾರದ ಮುಖ್ಯ ಉದ್ದೇಶ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಇದಕ್ಕೆ ಹೆಚ್ಚಿನ ಮಹತ್ವ ಇದೆ. ಸರ್ ಎಂ.ವಿಶ್ವೇಶ್ವರಯ್ಯ ಅವರ ಕನಸುಗಳನ್ನು ಸಾಕಾರ ಮಾಡಲು ಸರಕಾರ ಎಲ್ಲ ಕ್ರಮಗಳನ್ನು ವಹಿಸಿದೆ ಎಂದು ಸಚಿವರು ನುಡಿದರು.

    ಯುವಿಸಿಇಗೆ ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾಯತ್ತತೆ ನೀಡಲು ಸರಕಾರ ನಿರ್ಧರಿಸಿದೆ. ಈಗಾಗಲೇ ಐಐಐಟಿ-ಬಿ ನಿರ್ದೇಶಕ ಡಾ. ಎಸ್.ಸಡಗೋಪನ್ ಅವರ ನೇತೃತ್ವದ ಸಮಿತಿ ನೀಡಿರುವ ವರದಿ ಮತ್ತು ಶಿಫಾರಸುಗಳನ್ನು ಸರಕಾರ ಅಂಗೀಕರಿಸಿದೆ ಎಂದು ಸಚಿವರು ಹೇಳಿದರು.

    ಸರ್ ಎಂವಿ ಸಮಾಧಿ ಅಭಿವೃದ್ಧಿಗೆ ಟ್ರಸ್ಟ್:

    ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮದಲ್ಲಿರುವ ಸರ್ ಎಂವಿ ಅವರ ಸಮಾಧಿ ಅಭಿವೃದ್ಧಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ ಅಧ್ಯಕ್ಷತೆಯಲ್ಲಿ ಟ್ರಸ್ಟ್ ರಚನೆ ಮಾಡುವುದಾಗಿ ಇದೇ ಸಂದರ್ಭದಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ ಘೋಷಣೆ ಮಾಡಿದರು.

    ಸರ್ ಎಂವಿ ಅವರು ನಮ್ಮ ದೇಶ ಮಾತ್ರವಲ್ಲದೆ ಜಗತ್ತು ಕಂಡ ಶ್ರೇಷ್ಟ ಎಂಜಿನಿಯರ್. ಆಧುನಿಕ ಭಾರತದ ನಿರ್ಮಾಣಕ್ಕೆ ಅವರ ಕೊಡುಗೆ ಅನನ್ಯ. ಈ ನಿಟ್ಟಿನಲ್ಲಿ ಅವರ ಸಾಧನೆಯನ್ನು ಸ್ಮರಿಸುವುದು ಮಾತ್ರವಲ್ಲದೆ ಅವರ ನೆನಪನ್ನು ಸದಾ ಉಳಿಸುವ ಕುರುಹುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.

    ಪ್ರತಿಮೆ ಹೇಗಿದೆ?

    ಬ್ರಿಗೇಡ್ ಸಮೂಹವು ತನ್ನ ಗೇಟ್ ವೇ ಕ್ಯಾಂಪಸ್ʼನಲ್ಲಿ ಸ್ಥಾಪಿಸಿರುವ ಸರ್ ಎಂವಿ ಪ್ರತಿಮೆ 11.6 ಅಡಿ ಎತ್ತರವಿದೆ. 6 ಅಡಿ ಎತ್ತರದ ಕಾಂಕ್ರೀಟ್ ಮತ್ತು ಗ್ರಾನೈಟ್ ಬೇಸ್ ಮೇಲೆ ಪ್ರತಿಮೆಯನ್ನು ನಿಲ್ಲಿಸಲಾಗಿದ್ದು, ಭೂ ಮಟ್ಟದಿಂದ ಪ್ರತಿಮೆ 19 ಅಡಿ ಎತ್ತರದಲ್ಲಿದೆ. ಪ್ರತಿಮೆ ಒಟ್ಟು 1300 ಕೆಜಿ ತೂಕವಿದ್ದು, 1000 ಕೆಜಿ ತಾಮ್ರ, 300 ಕೆಜಿಯಷ್ಟು ಇತರೆ ಮಿಶ್ರಲೋಹಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಖ್ಯಾತ ಶಿಲ್ಪಿ ಮಾಯನ್ ಎನ್.ಬಡಿಗೇರ್ ಮತ್ತವರ ತಂಡ ಪ್ರತಿಮೆಯನ್ನು ತಯಾರಿಸಿದೆ.

    ಬೃಹತ್ ಕೈಗಾರಿಕೆ ಖಾತೆ ಸಚಿವ ಮುರುಗೇಶ್ ನಿರಾಣಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕರಿಸಿದ್ದಪ್ಪ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಸತೀಶ್ ಮೋಕ್ಷಗುಂಡಂ, ಬ್ರಿಗೇಡ್ ಸಮೂಹದ ಅಧ್ಯಕ್ಷ ಎಂ.ಆರ್.ಜೈಶಂಕರ್, ಶಿಲ್ಪಿ ಮಾಯನ್ ಎನ್.ಬಡಿಗೇರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    NEP ಎಂದರೆ ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲ, ನಾಗ್ಪುರ ಶಿಕ್ಷಣ ನೀತಿ: ಡಿ.ಕೆ. ಶಿವಕುಮಾರ್ ಆಕ್ರೋಶ

    BENGALURU SEPT 4

    ‘ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜಾರಿಗೆ ತರಲು ಮುಂದಾಗಿರುವ NEP ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲ, ಅದು ನಾಗ್ಪುರ ಶಿಕ್ಷಣ ನೀತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಂಸತ್ತಿನಲ್ಲಿ ಚರ್ಚೆ ಆಗದೇ ಇರುವ ನೀತಿಯನ್ನು ರಾಜ್ಯದಲ್ಲಿ ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವುದರ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟ ಮಾಡಲಿದೆ. ನೀವು ಏನೇ ತಿಪ್ಪರಲಾಗ ಹಾಕಿದರೂ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಯಾಗದೇ ಇದನ್ನು ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ’ ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಜಿಲ್ಲಾವಾರು ಮುಖಂಡರ ಸಭೆ ನಡೆಸಿದ ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರವಾಗಿ ಪಕ್ಷದ ನಿಲುವು ಹಾಗೂ ಪಕ್ಷದ ಸಂಘಟನೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;

    ‘ರಾಷ್ಟ್ರೀಯ ಶಿಕ್ಷಣ ನೀತಿ ಎಂದರೆ ಅದರ ಬಗ್ಗೆ ರಾಷ್ಟ್ರಾದ್ಯಂತ ವ್ಯಾಪಕ ಚರ್ಚೆ ಆಗಬೇಕು. ಸಂಸತ್ತು, ವಿಧಾನಸಭೆ, ವಿಧಾನ ಪರಿಷತ್ ನಲ್ಲಿ ಚರ್ಚಿಸಬೇಕು. ಆದರೆ ಅದ್ಯಾವುದು ನಡೆದಿಲ್ಲ. ಸದನ ಸಮಿತಿ ರಚಿಸಿ, ರಾಜ್ಯದುದ್ದಗಲಕ್ಕೂ ಜನರ ಜತೆ ಚರ್ಚಿಸಿ, ಅಭಿಪ್ರಾಯ ಪಡೆಯುವವರೆಗೂ ರಾಜ್ಯದಲ್ಲಿ ಇದರ ಜಾರಿಗೆ ನಾವು ಅವಕಾಶ ನೀಡುವುದಿಲ್ಲ.

    ನಾನು ಕೂಡ ಶಿಕ್ಷಣ ಕ್ಷೇತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದು, ವಿದ್ಯಾಸಂಸ್ಥೆಗಳನ್ನು ನಡೆಸುತ್ತಾ ಬಂದಿದ್ದೇನೆ. ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಟ್ರಸ್ಟಿಯಾಗಿದ್ದೇನೆ. ಈ ನೂತನ ಶಿಕ್ಷಣ ನೀತಿ ಏನು, ಅದರಿಂದ ಆಗುವ ಪ್ರಯೋಜನೆಗಳೇನು? ಎಂಬುದನ್ನು ಅರ್ಥ ಮಾಡಿಕೊಳ್ಳಲು ನನ್ನಿಂದಲೇ ಸಾಧ್ಯವಾಗುತ್ತಿಲ್ಲ.

    ಇದನ್ನು ಅರ್ಥ ಮಾಡಿಕೊಳ್ಳಲು ಹಲವು ಬಾರಿ ವಿದ್ಯಾರ್ಥಿಗಳು, ಶಿಕ್ಷಕರು, ತಜ್ಞರ ಜತೆ ಚರ್ಚೆ ಮಾಡಿ ಪ್ರಯತ್ನಪಟ್ಟರೂ ಇದರ ಒಳಗುಟ್ಟು ಏನು ಎಂಬುದೇ ಅರ್ಥವಾಗುತ್ತಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಯಾಕಿಷ್ಟು ಆತುರದಲ್ಲಿ ಇದನ್ನು ಜಾರಿ ತರಲು ಮುಂದಾಗಿದೆಯೋ ತಿಳಿಯುತ್ತಿಲ್ಲ. ಶಿಕ್ಷಕರು ಇಲ್ಲ, ವಿದ್ಯಾರ್ಥಿಗಳು ಶಾಲೆ ಸೇರಲು ಸಾಧ್ಯವಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟ ಯಾರ ಜತೆಗೂ ಸರ್ಕಾರ ಈ ನೂತನ ಶಿಕ್ಷಣ ನೀತಿ ಬಗ್ಗೆ ಚರ್ಚೆ ಮಾಡಿಲ್ಲ. ಸಂಸತ್ತಿನಿಂದ ಹಿಡಿದು, ವಿಧಾನ ಮಂಡಲದ ಉಭಯ ಸದನಗಳವರೆಗೂ ಎಲ್ಲೂ ಚರ್ಚೆ ಆಗಿಲ್ಲ.

    ಶಿಕ್ಷಣ ರಾಜ್ಯಗಳಿಗೆ ಸಂಬಂಧಿಸಿದ ವಿಚಾರ. ರಾಷ್ಟ್ರ ಮಟ್ಟದಲ್ಲಿ ನೀತಿ ನಿರೂಪಿಸಬೇಕು ನಿಜ. ಆದರೆ ಅದರ ಬಗ್ಗೆ ಎಲ್ಲ ಕಡೆಗಳಲ್ಲೂ ವ್ಯಾಪಕ ಚರ್ಚೆ ಆಗಬೇಕಲ್ಲವೇ? ಚರ್ಚೆಯೇ ನಡೆಯದೇ, ಏಕಾಏಕಿ ಈ ನೀತಿ ಜಾರಿಗೊಳಿಸುತ್ತೇವೆ ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡಿರುವುದರಿಂದ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಎಲ್ಲರೂ ಗಾಬರಿ ಬಿದ್ದಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಈ ನೀತಿ ಬಗ್ಗೆ ವಿಧಾನಸಭೆ, ವಿಧಾನ ಪರಿಷತ್, ಶಿಕ್ಷಣ ಸಂಸ್ಥೆಗಳು, ಪೋಷಕರು, ಶಿಕ್ಷಕರ ಮಟ್ಟದಲ್ಲಿ ಸಂಪೂರ್ಣವಾಗಿ ಚರ್ಚೆಯಾಗುವವರೆಗೂ ಈ ನೀತಿ ಜಾರಿಯನ್ನು ತಡೆ ಹಿಡಿಯಬೇಕು. ಅಲ್ಲಿಯವರೆಗೂ ನಾವು ಕೂಡ ಇದನ್ನು ವಿರೋಧಿಸುತ್ತೇವೆ.

    ಈ ನೀತಿಯಲ್ಲಿ ಕೆಲವು ಉತ್ತಮ ಅಂಶಗಳು ಇರಬಹುದು. ಇದು ಮಕ್ಕಳು, ರಾಜ್ಯ, ದೇಶದ ಭವಿಷ್ಯದ ವಿಚಾರ. ಈ ನೀತಿಯಲ್ಲಿ ತ್ರಿಭಾಷಾ ಸೂತ್ರ ಪರಿಚಯಿಸುವ ಮೂಲಕ ಹಿಂಬಾಗಿಲಿನಿಂದ ಹಿಂದಿ ಭಾಷೆ ಹೇರಿಕೆಗೆ ಪ್ರಯತ್ನಿಸಲಾಗುತ್ತಿದೆ. ಈ ವಿಚಾರವಾಗಿ ಕನ್ನಡಪರ ಸಂಘಟನೆಗಳು ನನ್ನನ್ನು ಸಂಪರ್ಕಿಸುತ್ತಿದ್ದಾರೆ. ಇದೇ ನೀತಿಯನ್ನು ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ನಲ್ಲಿ ಯಾಕೆ ಜಾರಿತರಲು ಪ್ರಯತ್ನಿಸುತ್ತಿಲ್ಲ. ಕೇರಳ ಹಾಗೂ ತಮಿಳುನಾಡಿನಲ್ಲಿ ಇದರ ವಿಚಾರದಲ್ಲಿ ಮಾತು ಕೂಡ ಆಡುವ ಸ್ಥಿತಿ ಇಲ್ಲ. ಮಾತನಾಡಿದರೆ, ಅಲ್ಲಿನ ಜನ ಬಡಿಯುತ್ತಾರೆ.

    ಶಿಕ್ಷಣ ಸಚಿವರಿಗೆ ಸಾಮಾನ್ಯ ಪ್ರಜ್ಞೆಯೇ ಇಲ್ಲ ಎಂದು ಕಾಣುತ್ತದೆ. ಮುಖ್ಯಮಂತ್ರಿಗಳು ಅವರದೇ ಜಂಜಾಟದಲ್ಲಿ ಮುಳುಗಿರಬೇಕು! ಹೀಗಾಗಿ ಸಭೆಗಳ ಮೇಲೆ ಸಭೆ ನಡೆಯುತ್ತಿದ್ದರೂ ಈ ಬಗ್ಗೆ ಅವರು ಗಮನ ಹರಿಸಿಲ್ಲ. ಈ ನೀತಿಯಲ್ಲಿ ವಿದ್ಯಾರ್ಥಿ ಪದವಿ ಅವಧಿಯಲ್ಲಿ ಎರಡು ಮೂರು ವಿಷಯಗಳನ್ನು ವಿದ್ಯಾಭ್ಯಾಸ ಮಾಡಬಹುದಂತೆ. ಇದು ಹೇಗೆ ಸಾಧ್ಯ? ಇದಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆಯೇ? ಸರ್ಕಾರ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಟ್ಯಾಬ್ ಒದಗಿಸಿದೆಯೇ? ಆನ್ಲೈನ್ ಶಿಕ್ಷಣಕ್ಕೆ ಒತ್ತು ನೀಡಲು ರಾಜ್ಯಾದ್ಯಂತ ಇಂಟರ್ ನೆಟ್ ವ್ಯವಸ್ಥೆ ಕಲ್ಪಿಸಿದೆಯೇ? ಈ ಶಿಕ್ಷಣ ನೀತಿ ಕೇವಲ ನಗರದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆಯೇ ಹೊರತು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಯಾವುದೇ ಲಾಭವಿಲ್ಲ, ಅನುಕೂಲವೂ ಇಲ್ಲ.

    ನಮ್ಮಲ್ಲಿ ಎಲ್ಲ ವರ್ಗದ ಜನ ಆತಂಕಕ್ಕೆ ಒಳಗಾಗಿದ್ದು, ಈ ನೀತಿ ಜಾರಿಗೊಳಿಸುವುದನ್ನು ನಿಲ್ಲಿಸಬೇಕು. ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತಿದ್ದೇನೆ. ಈ ವಿಚಾರವಾಗಿ ನಾವು ಶಿಕ್ಷಣ ತಜ್ಞರ ಜತೆ ಚರ್ಚೆ ಮಾಡಿ ಅಧಿವೇಶನದಲ್ಲಿ ನಮ್ಮ ಪಕ್ಷದ ಅಭಿಪ್ರಾಯ ಮಂಡಿಸುತ್ತೇವೆ.

    ಪಕ್ಷ ಸಂಘಟನೆಗೆ ಜಿಲ್ಲಾವಾರು ಮುಖಂಡರ ಸಭೆ:

    ಇಂದು ಮತ್ತು ನಾಳೆ ಕಾಂಗ್ರೆಸ್ ಪಕ್ಷದ ಜಿಲ್ಲಾವಾರು ಅಧ್ಯಕ್ಷರುಗಳು, ಶಾಸಕರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳನ್ನು ಕರೆದು ಪಕ್ಷದ ಸಂಘಟನೆ, ಮುಂಬರುವ ಜಿಲ್ಲಾ ಹಾಗೂ ತಾಲೂಕೂ ಪಂಚಾಯ್ತಿ, ವಿಧಾನ ಪರಿಷತ್ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಮುಂದೆ ಯಾವ ರೀತಿ ಸಜ್ಜಾಗಬೇಕು ಎಂಬುದರ ಬಗ್ಗೆ ಅವರ ಅಭಿಪ್ರಾಯ ಪಡೆದು, ಮಾರ್ಗದರ್ಶನ ನೀಡಲಾಗುತ್ತಿದೆ.

    ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಪ್ರತಿ ಗ್ರಾಮಪಂಚಾಯ್ತಿಯಲ್ಲೂ ‘ಗಾಂಧೀಜಿ ಗ್ರಾಮ ಸ್ವರಾಜ್ಯ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ನಮ್ಮೆಲ್ಲ ನಾಯಕರು ಅಕ್ಟೋಬರ್ ತಿಂಗಳಲ್ಲಿ ದಿನಕ್ಕೆ 2 ಗ್ರಾಮ ಪಂಚಾಯ್ತಿಯಲ್ಲಿ ಪಕ್ಷದ ಸಭೆ ನಡೆಸಬೇಕು. ಅಲ್ಲಿ ಪ್ರತಿಭಟನೆ ಅಥವಾ ಕಾರ್ಯಕರ್ತರ ಸಭೆ ಮಾಡಬಹುದು. ಕಡ್ಡಾಯವಾಗಿ ತಿಂಗಳಲ್ಲಿ ನಿತ್ಯ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಭೆಗಳನ್ನು ಮಾಡಬೇಕು.

    ಈ ಸಭೆಯಲ್ಲಿ ಎಲ್ಲ ನಾಯಕರು ಪಾಲ್ಗೊಳ್ಳಬೇಕು ಎಂದು ಸೂಚನೆ ನೀಡಿದ್ದೇವೆ. ಪಕ್ಷದ ಸಂಘಟನೆ ದೃಷ್ಟಿಯಿಂದ, ಎಲ್ಲೆಲ್ಲಿ ಸಮಿತಿ ರಚನೆ ಆಗಬೇಕು, ಯಾವ ವಿಭಾಗಗಳಲ್ಲಿ ಪದಾಧಿಕಾರಿಗಳ ನೇಮಕವಾಗಬೇಕು ಎಂಬುದರ ಬಗ್ಗೆ ಗಮನ ಹರಿಸಬೇಕು. ಈ ತಿಂಗಳಲ್ಲೇ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಆಯಾ ಘಟಕಗಳ ಸಮಿತಿ ಮಾಡಬೇಕು. ಅವರ ಸಭೆಗಳು ಕೂಡ ಆರಂಭವಾಗಬೇಕು.

    ಈ ನಿಟ್ಟಿನಲ್ಲಿ ಇಂದು ಹಾಗೂ ನಾಳೆ ಸಂಜೆವರೆಗೂ ಈ ಸಭೆಗಳು ನಡೆಯಲಿವೆ. ಈಗಾಗಲೇ ನಾವು ಪಕ್ಷದಲ್ಲಿ ಸಹಕಾರ, ಸಂಚಾರ, ಸಾಂಸ್ಕೃತಿಕ ಘಟಕಗಳ ನೇಮಕ ಮಾಡುತ್ತಿದ್ದು, ಎಲ್ಲ ಘಟಕಗಳಲ್ಲೂ ಬ್ಲಾಕ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಸಮಿತಿ ರಚಿಸುತ್ತಿದ್ದೇವೆ.

    ಕರ್ನಾಟಕದ ಉಸ್ತುವಾರಿ ವಹಿಸಿರುವ ರಣದೀಪ್ ಸಿಂಗ್ ಸುರ್ಜೆವಾಲ ಅವರು ವಿಭಾಗೀಯ ಮಟ್ಟದ ಸಭೆ ಮಾಡಿದ್ದರು. ಅಲ್ಲಿ ಎಲ್ಲರ ಅಭಿಪ್ರಾಯ ಪಡೆದು, ಪಕ್ಷದ ಸಂಘಟನೆ ವಿಚಾರವಾಗಿ ಕೆಲವು ಸಲಹೆಗಳನ್ನು ನೀಡಿದ್ದು, ಅವುಗಳನ್ನು ಜಾರಿಗೊಳಿಸಲು ನಾವು ಕ್ರಮಕೈಗೊಳ್ಳುತ್ತಿದ್ದೇವೆ.

    ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ:

    ವಿಧಾನ ಪರಿಷತ್ ಸೇರಿದಂತೆ ಮುಂಬರುವ ಮುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅರ್ಜಿ ಆಹ್ವಾನಿಸಿದ್ದು, 10 ದಿನಗಳ ಕಾಲಾವಕಾಶ ನೀಡಿದ್ದೇವೆ. ಈಗಾಗಲೇ ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಅರ್ಜಿ ಕರೆಯಲಾಗಿದೆ. ಬೇರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಅಭ್ಯರ್ಥಿಗಳ ಅರ್ಜಿಯನ್ನು ಸದ್ಯದಲ್ಲೇ ಕರೆಯಲಾಗುವುದು. ಆ ಬಗ್ಗೆ ಅಲ್ಲಿನ ನಾಯಕರ ಜತೆ ಚರ್ಚೆ ಮಾಡಿ ವಾಸ್ತವಾಂಶ ಹಾಗೂ ಅಭಿಪ್ರಾಯ ಪಡೆಯುತ್ತಿದ್ದೇನೆ. ಈ ತಿಂಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತೇವೆ.’ ಎಂದು ಡಿ ಕೆ ಶಿವಕುಮಾರ್ ಹೇಳಿದರು.

    ಈ ಬಾರಿಯೂ ಸರಳ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನ

    BENGALURU SEPT 3

    ಕೋವಿಡ್ 19 ಹಿನ್ನೆಲೆಯಲ್ಲಿ ಈ ವರ್ಷವೂ ಸರಳವಾಗಿ, ಸಾಂಪ್ರದಾಯಿಕವಾಗಿ ದಸರಾ ಆಚರಿಸಲು ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2021 ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

    ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಹಾಗೂ ಮೈಸೂರು ಅರಮನೆ ಆವರಣದಲ್ಲಿ ಜಂಬೂ ಸವಾರಿ, ಹತ್ತು ದಿನಗಳ ದೀಪಾಲಂಕಾರ ಮೊದಲಾದ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಯಿತು. ಮೈಸೂರು, ಚಾಮರಾಜನಗರ ಹಾಗೂ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆ ನಡೆಸಲು ಆರು ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.ದಸರಾ ಉತ್ಸವ ಉದ್ಘಾಟಕರನ್ನು ಆಯ್ಕೆ ಮಾಡುವ ಅಧಿಕಾರವನ್ನು ಸಮಿತಿಯು ಮುಖ್ಯಮಂತ್ರಿಗಳಿಗೇ ನೀಡಿತು.

    2019ರ ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಪಾವತಿಗೆ ಬಾಕಿ ಇರುವ 8.09 ಕೋಟಿ ರೂ. ಅನುದಾನ ಒದಗಿಸಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಈ ವರ್ಷದಿಂದ ಸರ್ಕಾರ ಒದಗಿಸಿದ ಮೊತ್ತದಲ್ಲಿಯೇ ದಸರಾ ನಡೆಸಲು ಹಾಗೂ ದಸರಾ ಉತ್ಸವದ ಖರ್ಚುವೆಚ್ಚದಲ್ಲಿ ಶಿಸ್ತು ಪಾಲಿಸಿ, ಲೆಕ್ಕಪತ್ರವನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಜನಪ್ರತಿನಿಧಿಗಳು ಪ್ರವಾಸೋದ್ಯಮ ಉತ್ತೇಜನ ನೀಡಲು ಪ್ರವಾಸೋದ್ಯಮ ಸರ್ಕ್ಯುಟ್ ಮಾಡುವಂತೆ ಕೋರಿದ್ದಾರೆ. ರಾಜ್ಯದಲ್ಲಿ ಹಂಪಿ, ಬದಾಮಿ, ವಿಜಯಪುರ ಹೀಗೆ ವಿವಿಧ ಪ್ರವಾಸೋದ್ಯಮ ಸರ್ಕ್ಯುಟ್ ಗಳು ಇವೆ. ಪ್ರಸ್ತುತ ಜಾರಿಯಲ್ಲಿರುವ ಪ್ರವಾಸೋದ್ಯಮ ನೀತಿಯಡಿ ಲಭ್ಯವಿರುವ ಅವಕಾಶಗಳು ಹಾಗೂ ಇತರ ಕ್ರಮಗಳು ಕೈಗೊಳ್ಳುವ ಬಗ್ಗೆ ಪ್ರವಾಸೋದ್ಯಮ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಮೈಸೂರು ದಸರಾ ಮತ್ತು ಪ್ರವಾಸೋದ್ಯಮದಿಂದ ನಡೆಯುತ್ತಿದ್ದ ಆರ್ಥಿಕ ಚಟುವಟಿಕೆಗಳು ಕೋವಿಡ್ ನಿಂದಾಗಿ ಕುಂಠಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಉತ್ತೇಜನ ನೀಡುವ ಕುರಿತು ಚಿಂತನೆ ನಡೆಸಲಾಗುವುದು.

    ದಸರಾ ಹಿನ್ನೆಲೆಯಲ್ಲಿ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಅಗತ್ಯವಿರುವ ಮೂಲಸೌಲಭ್ಯ ಅಭಿವೃದ್ಧಿ ಕುರಿತಂತೆ ಅಂದಾಜು ಪಟ್ಟಿಯೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.

    ಸಭೆಯಲ್ಲಿ ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಸರ್ಕಾರದ ಮುಖ್ಯ ಪಿ. ರವಿಕುಮಾರ್, ಸಂಸದರು, ಶಾಸಕರು ಮತ್ತಿತರ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ರಾಷ್ಟ್ರೀಯ ಶಿಕ್ಷಣ ನೀತಿ :ಆದೇಶ ವಾಪಸ್ ಪಡೆಯಲು ಸಿದ್ಧರಾಮಯ್ಯ ಒತ್ತಾಯ

    BENGALURU SEPT 3

    ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಹೊರಡಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯುವಂತೆ ವಿಧಾನಸಭೆ ಪ್ರತಿಪಕ್ಷ ನಾಯಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರಿಗೆ ಪತ್ರ ಬರೆದಿರುವ ಅವರು, ಹೊಸ ಶಿಕ್ಷಣ ನೀತಿ ಕುರಿತಾದ ಚರ್ಚೆಯಲ್ಲಿ ತಾವು ಭಾಗವಹಿಸುವುದಿಲ್ಲ ಎಂದಿದ್ದಾರೆ.

    ಪತ್ರದ ಪೂರ್ಣ ವಿವರ ಹೀಗಿದೆ :

    ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಅನುಷ್ಠಾನಗೊಳಿಸಲು ಚಾಲನೆ ನೀಡಲಾಗಿದೆಯೆಂದು ಹಾಗೂ ಈ ಕುರಿತು ಚರ್ಚಿಸಲು ದಿನಾಂಕವನ್ನು ನೀಡುವಂತೆ ತಮ್ಮ ಕಚೇರಿಯಿಂದ ಪತ್ರ ಬರೆದು ಕೋರಲಾಗಿದೆ. ಕರ್ನಾಟಕದಲ್ಲಿ ಈಗಾಗಲೆ ತರಾತುರಿಯಲ್ಲಿ ವಿದ್ಯಾರ್ಥಿಗಳು, ತಜ್ಞರು, ಪ್ರಾಧ್ಯಾಪಕರು, ಪೋಷಕರುಗಳ ಜೊತೆ ಚರ್ಚಿಸದೆ, ಸಾಧಕ-ಬಾಧಕಗಳನ್ನು ಪರಿಶೀಲಿಸದೆ ಈ ಶೈಕ್ಷಣಿಕ ವರ್ಷದಿಂದಲೆ ಅನುಷ್ಠಾನ ಮಾಡುವುದಾಗಿ ಹೇಳಿ ಉದ್ಘಾಟನೆಯನ್ನೂ ಮಾಡಲಾಗಿದೆ. ಉದ್ಘಾಟನೆಯನ್ನೂ ಮುಗಿಸಿ ಚರ್ಚೆ ಮಾಡಬೇಕು ಎಂದು ಕರೆಯುವುದು ಸಂಸದೀಯವಾಗಿ ಸರಿಯಲ್ಲ.

    ಒಂದು ಶಿಕ್ಷಣ ನೀತಿಯ ಅನುಷ್ಠಾನವೆಂದರೆ ಸಣ್ಣ ಸಂಗತಿಯೆ? ತಾವೂ ಕೂಡ ಬೆವರಿನ ಸಂಸ್ಕೃತಿಯ ಹಿನ್ನೆಲೆಯ ಸಮುದಾಯದಿಂದ ಬಂದಿದ್ದೀರಿ. ರಾಷ್ಟçಕವಿ ಕುವೆಂಪು ಅವರು ಶಿಕ್ಷಣ, ಅದರ ಗುಣಮಟ್ಟವನ್ನು ಸುಧಾರಣೆ, ಕಲಿಕೆಯ ಮಾಧ್ಯಮ ಹಾಗೂ ಸರ್ಕಾರದ ಜವಾಬ್ಧಾರಿಗಳ ಬಗ್ಗೆ ಮಾತನಾಡಿದ್ದಾರೆ. ಶಿಕ್ಷಣದ ಕುರಿತಂತೆ ಕೆಲಸ ಮಾಡುತ್ತಿರುವವರೆಲ್ಲರೂ ಕುವೆಂಪು ಅವರ ವಿಚಾರಗಳನ್ನು ಓದಿ, ಅದರಂತೆ ನಡೆದುಕೊಳ್ಳಬೇಕಾಗಿದೆ.

    ಮುಂದುವರೆದ ದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಸರ್ಕಾರಗಳೆ ನಿರ್ವಹಿಸುತ್ತವೆ. ಯಾವುದೇ ನಾಡಿನಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ ಸಮರ್ಪಕವಾಗಿದ್ದರೆ ಆ ನಾಡಿನ ಸಮಸ್ತ ಆರೋಗ್ಯವೂ ಸರಿಯಾಗಿರುತ್ತದೆ. ಇಂದು ಭಾರತದ ಸಮಾಜಗಳು ತೀವ್ರ ರೂಪದ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಅದಕ್ಕೆ ಕಾರಣಗಳು ಹಲವಿವೆ.

    ಮೊದಲನೆಯದಾಗಿ ವಿದ್ಯಾರ್ಥಿ ಶಿಕ್ಷಕ ಪ್ರಮಾಣ ವಿಪರೀತ ಹೆಚ್ಚಾಗಿದೆ, ಅದು ಕಡಿಮೆಯಾಗಬೇಕು. ಶಿಕ್ಷಣ ಕ್ಷೇತ್ರಕ್ಕೆ ಅತಿ ಕಡಿಮೆ ಅನುದಾನ ನೀಡಲಾಗುತ್ತಿದೆ. ಈ ನೀತಿಯ ಶಿಫಾರಸ್ಸುಗಳ ಪ್ರಕಾರ ಜಿಡಿಪಿಯಲ್ಲಿ ಕನಿಷ್ಠ ಶೇ 6 ರಷ್ಟು ಮೀಸಲಿರಿಸಬೇಕು. ಇದಾಗಬೇಕೆಂದರೆ ಕರ್ನಾಟಕದಲ್ಲಿ ಕನಿಷ್ಠ 1.08 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿರಿಸಬೇಕಾಗುತ್ತದೆ.

    ಹೊಸ ಶಿಕ್ಷಣ ನೀತಿಯ ಹೇರಿಕೆಯು ಹಲವು ಸಮಸ್ಯೆಗಳನ್ನು ಒಳಗೊಂಡಿದೆ ಎಂದು ಹೇಳುತ್ತಿದೆ. ಒಕ್ಕೂಟ ವ್ಯವಸ್ಥೆಯ ಮೂಲ ಸ್ಫೂರ್ತಿಯ ನಿರಾಕರಣೆ, ಖಾಸಗೀಕರಣ, ತರಗತಿಗಳನ್ನು ನಿರಾಕರಿಸಿ ಕಾಲೇಜು, ವಿಶ್ವ ವಿದ್ಯಾಲಯಗಳ ಪಾವಿತ್ರ್ಯದ ನಿರಾಕರಣೆ, ಬಡವರು, ಹಿಂದುಳಿದವರು, ದಮನಿತರ ಸಿಗಬಹುದಾದ ಸುಲಭ ಶಿಕ್ಷ,ಣದ ನಿರಾಕರಣೆ, ಕೋಮು ಅಜೆಂಡಾಗಳನ್ನು ತಂದು ಅವೈಜ್ಞಾನಿಕತೆಯನ್ನು, ದ್ವೇಷವನ್ನು ತುಂಬಿ ಭಾರತವನ್ನು ಶಾಶ್ವತ ಅಂಧಕಾರಕ್ಕೆ ತಳ್ಳಲಾಗುತ್ತಿದೆ ಮುಂತಾದ ಗಂಭೀರ ಆರೋಪಗಳಿವೆ.

    ಸರ್ಕಾರ ಈ ಎಲ್ಲದರ ಕುರಿತು ಚರ್ಚೆ ನಡೆಸಬೇಕಾಗಿತ್ತು. ಇದೇನನ್ನೂ ನೀವು ಮಾಡಿಲ್ಲ. ನನ್ನ, ನಿಮ್ಮ ಆಯಸ್ಸು, ರಾಜಕೀಯ ವೃತ್ತಿ ಎಲ್ಲವೂ ಮುಂದೆಂದೊ ಒಂದು ದಿನ ಮುಗಿಯುತ್ತದೆ. ಆದರೆ ಶಿಕ್ಷಣ ನೀತಿಯ ಹೆಸರಲ್ಲಿ ಬಲಿಪಶುಗಳಾಗುವ ಮಕ್ಕಳ ಮುಂದೆ 70- 80 ವರ್ಷಗಳ ಭವಿಷ್ಯವಿದೆ. ಶಿಕ್ಷಣದ ಹಂತದಲ್ಲಿ ಅವರ ಭವಿಷ್ಯ ಅಲ್ಲೋಲ, ಕಲ್ಲೋಲವಾದರೆ ಅದರ ಶಾಪವನ್ನು ಹೊರುವವರು ಯಾರು? ಈ ನಾಡಿನ , ರೈತರ, ಪಶುಪಾಲಕರ, ಕುಶಲಕರ್ಮಿಗಳ, ಸಣ್ಣ ಪುಟ್ಟ ವ್ಯಾಪಾರಿಗಳ, ಕಾರ್ಮಿಕರ ಮನೆಗಳಿಂದ ಬಂದ ಮಕ್ಕಳು ಗುಣ ಮಟ್ಟದ ಶಿಕ್ಷಣ ಪಡೆದು ಜಾಗತಿಕ ಮಟ್ಟದ ಉದಾರ ಮಾನವತಾವಾದಿ, ವೈಜ್ಞಾನಿಕ ಶಿಕ್ಷಣ ಪಡೆಯಬಾರದೆ?

    ತಾವು ನಿಜವಾಗಿಯೂ ನೈಜ ಸ್ಫೂರ್ತಿಯಲ್ಲಿ ಚರ್ಚೆಮಾಡಬಯಸಿದರೆ, ಕೂಡಲೆ ಈ ಹೊಸ ಶಿಕ್ಷಣ ನೀತಿಯನ್ನು ಹಿಂದಕ್ಕೆ ಪಡೆಯಿರಿ. ಚರ್ಚೆ ನಡೆಸಿದ ಮೇಲೆ ನಿಜವಾಗಿಯೂ ಈ ನೀತಿ ಆರೋಗ್ಯಕರವೆನ್ನಿಸಿ ಅನುಷ್ಠಾನ ಸೂಕ್ತವೆನ್ನಿಸಿದರೆ, ಈ ಶತಮಾನಕ್ಕೆ ಅತ್ಯಗತ್ಯ ಎನ್ನಿಸಿದರೆ ನಾವೆ ನಿಂತು ಅನುಷ್ಠಾನ ಮಾಡಲು ಬೆಂಬಲಿಸುತ್ತೇವೆ. ಇಲ್ಲದಿದ್ದರೆ ಮಕ್ಕಳ ಭವಿಷ್ಯದ ಕುತ್ತಿಗೆ ಕೊಯ್ಯುವಂಥ ಪಾಪದ ಕೆಲಸದಲ್ಲಿ ಭಾಗಿಯಾದೆವು ಎಂಬ ಪಶ್ಚಾತ್ತಾಪವನ್ನು ಹೊರಬೇಕಾಗುತ್ತದೆ ಎಂಬುದನ್ನು ತಮಗೆ ತಿಳಿಸಬಯಸುತ್ತೇನೆ.

    ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ ; 42 ಕಂಪನಿಗಳಿಂದ ನೇರ ನೇಮಕಾತಿ

    BENGALURU SEPT 3
    ಉದ್ಯೋಗ ಮಾಡುವ ಮನಸ್ಸಿರುವ ಯುವಜನರಿಗೆ ಸರಕಾರವೇ ಕೌಶಲ್ಯ ತರಬೇತಿ ನೀಡಿ ಉದ್ಯೋಗವೂ ಸಿಗುವ ಹಾಗೆ ಮಾಡುತ್ತಿದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನ ಮಲ್ಲೇಶ್ವದಲ್ಲಿ ಶುಕ್ರವಾರ ಬೆಳಗ್ಗೆ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಬೆಂಗಳೂರು ಮಹಾನಗರ ಹಾಗೂ ಕರ್ನಾಟಕದಲ್ಲಿ ಉದ್ಯೋಗಗಳಿಗೆ ಕೊರತೆ ಇಲ್ಲ. ವಿಪುಲ ಉದ್ಯೋಗಾವಕಾಶಗಳು ಲಭ್ಯವಿದ್ದು, ಕೆಲಸ ಮಾಡಲು ಯುವಜನರು ಮುಂದೆ ಬರಬೇಕು ಎಂದು ಕರೆ ನೀಡಿದರು.

    ರಾಜ್ಯದಲ್ಲಿ ಕೈಗಾರಿಕೆಗಳ ಬೇಡಿಕೆಗೆ ತಕ್ಕಂತೆ ಕುಶಲ ಸಂಪನ್ಮೂಲ ಒದಗಿಸುವುದು ಸರಕಾರದ ಉದ್ದೇಶ. ಈ ನಿಟ್ಟಿನಲ್ಲಿ ಎಷ್ಟೇ ಪ್ರಮಾಣದ ಉದ್ಯೋಗಾಂಕ್ಷಿಗಳು ಬಂದರೂ ಸೂಕ್ತ ತರಬೇತಿ, ಭಾಷಾ ಜ್ಞಾನ, ಕೌಶಲ್ಯ ಕಲಿಸಿ ಕೆಲಸ ಕೊಡಿಸಲಾಗುವುದು. ಕುಶಲತೆಯನ್ನು ರೂಢಿಸಿಕೊಳ್ಳದ ಹೊರತು ಉದ್ಯೋಗದ ಪ್ರಶ್ನೆ ಬರುವುದಿಲ್ಲ ಎಂದು ಅವರು ಹೇಳಿದರು.

    ವಿದೇಶಗಳಲ್ಲಿ ಕೆಲಸ ಮಾಡುತ್ತೇವೆ ಎಂದರೂ ಅದಕ್ಕೂ ನಮ್ಮಲ್ಲಿ ಅವಕಾಶವಿದೆ. ಸರಕಾರ ಅಂತರರಾಷ್ಟ್ರೀಯ ವಲಸೆ ಕೇಂದ್ರವನ್ನು ಸ್ಥಾಪನೆ ಮಾಡಿದ್ದು, ಅದರ ಮೂಲಕ ರಾಜ್ಯದ ಕುಶಲ ಯುವಜನರಿಗೆ ಹೊರ ದೇಶಗಳಲ್ಲೂ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಅನೇಕರು ಉದ್ಯೋಗ ಪಡೆದುಕೊಂಡು ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆಂದು ಸಚಿವರು ಹೇಳಿದರು.

    ಬೃಹತ್ ಜಾಬ್ ಮೇಳ:ಈ ಉದ್ಯೋಗ ಮೇಳದಲ್ಲಿ 2,000ಕ್ಕೂ ಹೆಚ್ಚು ಉದ್ಯೋಗಗಳು ಲಭ್ಯ ಇವೆ. ಆದರೆ ನೋಂದಣಿ ಮಾಡಿಕೊಂಡಿರುವುದು 1300 ಜನ. 30 ಕಂಪನಿಗಳು ನೇರವಾಗಿ, ಅಂದರೆ ಭೌತಿಕವಾಗಿ ಅಭ್ಯರ್ಥಿಗಳನ್ನು ಸ್ಥಳದಲ್ಲಿಯೇ ಆಯ್ಕೆ ಮಾಡಿಕೊಳ್ಳುತ್ತಿವೆ. ಇನ್ನೂ 12 ಕಂಪನಿಗಳು ಆನ್ ಲೈನ್ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿವೆ. ಒಟ್ಟು 42 ಕಂಪನಿಗಳು ಈ ಮೇಳದಲ್ಲಿ ಭಾಗಿಯಾಗಿವೆ ಎಂದು ಸಚಿವರು ಹೇಳಿದರು.

    ಇವೆಲ್ಲ ದೇಶದ ಪ್ರತಿಷ್ಟಿತ ಕಂಪನಿಗಳಾಗಿದ್ದು, ನಮ್ಮ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿವೆ. ಇಂಥ ಕಂಪನಿಗಳಲ್ಲಿ ಅವಕಾಶ ಸಿಕ್ಕಿದ ಮೇಲೆ ಉತ್ತಮವಾಗಿ ಕೆಲಸ ಮಾಡಿ ಹಾಗೂ ನೀವು ಬೆಳೆಯುವುದರ ಜತೆಗೆ ಕಂಪನಿಯನ್ನೂ ಬೆಳೆಸಿ ಆ ಮೂಲಕ ಆರ್ಥಿಕ ವೃದ್ಧಿಗೆ ಕಾಣಿಕೆ ನೀಡಿ ಎಂದು ಸಚಿವರು ಉದ್ಯೋಗಾಂಕ್ಷಿಗಳಿಗೆ ಕರೆ ನೀಡಿದರು.

    ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಅನೇಕ ಅಧಿಕಾರಿಗಳು, ವಿವಿಧ ಕಂಪನಿಗಳ ಅಧಿಕಾರಿಗಳು ಹಾಜರಿದ್ದರು.

    ಸೆಪ್ಟೆಂಬರ್ 20ಕ್ಕೆ ಸಿಇಟಿ ಫಲಿತಾಂಶ ನಿಗದಿಯಂತೆ ಎಲ್ಲ ಪ್ರಕ್ರಿಯೆ ಎಂದ ಸಚಿವ

    • ಹೆಚ್ಚು ಶುಲ್ಕ ವಸೂಲಿ ಮಾಡಿದರೆ ಖಾಸಗಿ ಪದವಿ ಕಾಲೇಜುಗಳ ವಿರುದ್ಧ ಕ್ರಮ
    • ಅಕ್ಟೋಬರ್ 1ರವರೆಗೂ ಪದವಿಗೆ ಪ್ರವೇಶಾವಕಾಶ
    • ಎನ್ಇಪಿ ಬಗ್ಗೆ ಅಪಪ್ರಚಾರ; ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

    BENGALURU AUG 3

    ಇದೇ ಸೆಪ್ಟೆಂಬರ್ 20ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (CET) ಫಲಿತಾಂಶ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಳೆದ ಅಗಸ್ಟ್ 28-29 ಮತ್ತು 30ರಂದು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ ಪ್ರಕ್ರಿಯೆಯನ್ನು ಯಾವುದೇ ಗೊಂದಲ-ಸಮಸ್ಯೆ ಇಲ್ಲದೆ ಪೂರ್ಣಗೊಳಿಸಲಾಗುವುದು ಎಂದರು.

    ಸಕಾಲಕ್ಕೆ ಫಲಿತಾಂಶ ನೀಡುವುದೂ ಸೇರಿ ನಿಗದಿತ ವೇಳಾಪಟ್ಟಿಯಂತೆ ಕೌನ್ಸಿಲಿಂಗ್ ಮುಗಿಸಲಾಗುವುದು. ಯಾವುದೇ ಕಾರಣಕ್ಕೂ ಶೈಕ್ಷಣಿಕ ವರ್ಷ ಹಳಿತಪ್ಪಲು ಬಿಡುವುದಿಲ್ಲ ಎಂದರು ಸಚಿವರು.

    ಶುಲ್ಕದ ಬಗ್ಗೆ ಮುಂದಿನ ವಾರ ಸಭೆ:

    ಎಂಜಿನಿಯರಿಂಗ್ ಕಾಲೇಜು ಶುಲ್ಕ ಹೆಚ್ಚಳ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು; ಈ ಬಗ್ಗೆ ಮುಂದಿನ ವಾರ ಸಭೆ ಇದೆ. ಅದರಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಲ್ಲಿಟ್ಟುಕೊಂಡು ಎಲ್ಲ ಅಂಶಗಳ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

    ಹೆಚ್ಚು ಶುಲ್ಕ ವಸೂಲಿ ಮಾಡಿದರೆ ಕ್ರಮ:

    ಖಾಸಗಿ ಪದವಿ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳ ಮಾಡುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ ಉತ್ತರಿಸಿದ ಸಚಿವರು, “ರಾಷ್ಟ್ರೀಯ ಶಿಕ್ಷಣ ನೀತಿ ನೆಪದಲ್ಲಿ ಶುಲ್ಕ ಹೆಚ್ಚಳಕ್ಕೆ ಅವಕಾಶವೇ ಇಲ್ಲ. ವಿದ್ಯಾರ್ಥಿಗಳಿಗೆ ದುಬಾರಿ ಶುಲ್ಕ ವಿಧಿಸಿ ಕಾಲೇಜು ನಡೆಸುವುದು ಸರಿಯಲ್ಲ, ಗುಣಮಟ್ಟದ ಶಿಕ್ಷಣ ಕೊಡುವುದಷ್ಟೇ ಸರಕಾರದ ಉದ್ದೇಶ. ಈ ಬಗ್ಗೆ ದೂರುಗಳು ಬಂದರೆ ಗಮನ ಹರಿಸಿ ಆಯಾ ಕಾಲೇಜುಗಳ ವಿರುದ್ಧ ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

    ವಿದ್ಯಾರ್ಥಿಗಳು ಸರಕಾರೀ ಕಾಲೇಜುಗಳಲ್ಲೇ ದಾಖಲಾಗಬೇಕು. ಅಲ್ಲಿ ಕಡಿಮೆ ಶುಲ್ಕದಲ್ಲಿ ಪದವಿ ನೀಡಲಾಗುವುದು. ಅದರಲ್ಲೂ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಸೌಲಭ್ಯವಿದೆ. ಕೆಲ ಖಾಸಗಿ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿವೆ. ಆ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

    ಪದವಿ ಕಾಲೇಜುಗಳಿಗೆ ಶುಲ್ಕ ನಿಗದಿ ಮಾಡಲು ಸರಕಾರದ ಮಟ್ಟದಲ್ಲಿ ಸಮಿತಿ ಇಲ್ಲ. ಹೀಗಾಗಿ, ಕೆಲ ಕಾಲೇಜುಗಳು ಇದನ್ನೇ ದುರುಪಯೋಗ ಮಾಡಿಕೊಳ್ಳುತ್ತಿವೆ. ಸಮಿತಿ ಇಲ್ಲ ಎಂದ ಮಾತ್ರಕ್ಕೆ ದುಬಾರಿ ಶುಲ್ಕ ವಿಧಿಸುವ ಹಾಗಿಲ್ಲ ಎಂದ ಸಚಿವರು, ಪದವಿ ಕಾಲೇಜುಗಳಿಗೆ ಅಕ್ಟೋಬರ್ 1 ರವರೆಗೂ ದಾಖಲು ಆಗಬಹುದು. ಅದಕ್ಕೆ ಅವಕಾಶ ನೀಡಲಾಗಿದೆ ಎಂದರು.

    ಸಿದ್ದರಾಮಯ್ಯ ಅವರಿಗೆ ಅಧಿವೇಶನದಲ್ಲಿ ಉತ್ತರ:

    ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮಾಧ್ಯಮಗಳ ಮೂಲಕ, ವಿವಿಧ ವೇದಿಕೆಗಳಲ್ಲಿ ಉತ್ತರ ನೀಡಲಾಗಿದೆ. ಇದರ ಜತೆಗೆ ಅವರಿಗೆ ವಿಧಾನಮಂಡಲ ಅಧಿವೇಶನದಲ್ಲೂ ಸಮಗ್ರವಾಗಿ ಉತ್ತರ ಕೊಡಲಾಗುವುದು ಎಂದು ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದರು.

    ಕೇವಲ ರಾಜಕೀಯದ ಉದ್ದೇಶ ಇಟ್ಟುಕೊಂಡು ವಿರೋಧ ಮಾಡುವವರಿಗೆ ಏನೂ ಮಾಡಲಾಗದು. ನೀತಿಯ ಬಗ್ಗೆ ಸಮಾಜದಲ್ಲಿ ಅಪನಂಬಿಕೆ ಮೂಡಿಸಲು ವಿರೋಧ ಪಕ್ಷಗಳು ಹೀಗೆ ಆರೋಪ ಮಾಡುತ್ತಿವೆ. ಇದು ಕೇವಲ ಒಂದು ಒಳ್ಳೆಯ ಕಾರ್ಯಕ್ರಮದ ವಿರುದ್ಧ ಅಪಪ್ರಚಾರ ಮಾಡುವ ಹುನ್ನಾರವಷ್ಟೇ ಎಂದು ದೂರಿದರು.

    ಹೊಸ ಶಿಕ್ಷಣ ನೀತಿಯ ಪ್ರಕ್ರಿಯೆಗಳು ಪ್ರಾರಂಭವಾಗಿ 7 ವರ್ಷಗಳೇ ಆಗಿದ್ದು, ಪ್ರಸಕ್ತ ವರ್ಷದಿಂದ ಜಾರಿ ಮಾಡಲಾಗುತ್ತಿದೆ. ಶಿಕ್ಷಣದ ವ್ಯವಸ್ಥೆಯಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಲು ಇದನ್ನು ತರಲಾಗಿದೆ. ಸಾಕಷ್ಟು ಪೂರ್ವಸಿದ್ಧತೆ, ಚರ್ಚೆ, ತಯಾರಿ ಮಾಡಿಕೊಂಡೇ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗುತ್ತಿದೆಯೇ ಹೊರತು ಆತುರಾತುರವಾಗಿ ತರುತ್ತಿರುವುದಲ್ಲ ಎಂದು ಡಾ.ಅಶ್ವತ್ಥನಾರಾಯಣ ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.

    ಸಿದ್ದರಾಮಯ್ಯ ಅವರು ಓರ್ವ ಹಿರಿಯ ರಾಜಕಾರಣಿ. ಇಂಥ ಪ್ರಕ್ರಿಯೆಗಳೆಲ್ಲ ಹೇಗೆ ನಡೆಯುತ್ತವೆ ಎನ್ನುವುದು ಅವರಿಗೆ ಗೊತ್ತಿಲ್ಲದೆ ಇಲ್ಲ. ಕೇವಲ ಅವರು ರಾಜಕಾರಣ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ ಬಳಿಕ ಅನುಷ್ಠಾನ ಮಾಡಲಾಗುತ್ತಿದೆ. ಸಂಪುಟದಲ್ಲೂ ಚರ್ಚಿಸಿ ಒಪ್ಪಿಗೆ ಪಡೆಯಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಸಂಪೂರ್ಣವಾಗಿ ವಿದ್ಯಾರ್ಥಿ ಕೇಂದ್ರಿತ. ಮಕ್ಕಳ ಅಭಿವೃದ್ಧಿಗೆ ಪೂರಕವಾಗಿದೆ. ಈ ಬಗ್ಗೆ ಎಲ್ಲಿ ಬೇಕಾದರೂ ಚರ್ಚೆ ಮಾಡಲು ನಾವು ತಯಾರಿದ್ದೇವೆ ಎಂದು ಸಚಿವರು ತಿಳಿಸಿದರು.

    ಕೊರೊನಾ ವಿರುದ್ಧ ಹೋರಾಟ-ಕರ್ನಾಟಕದ ಕ್ರಮಗಳ ಬಗ್ಗೆ ಅಮಿತ್ ಷಾ ಮೆಚ್ಚುಗೆ

    DAVANAGERE SEP 2

    ದೇಶ ಮತ್ತು ಜಗತ್ತು ಹಿಂದೆಂದೂ ಕಂಡಿರದ, ಮಾನವಕುಲಕ್ಕೇ ಸವಾಲಾಗಿದ್ದ ಕೊರೊನಾ ಮಹಾಮಾರಿಯನ್ನು ಕರ್ನಾಟಕ ಸರ್ಕಾರ ಅತ್ಯುತ್ತಮವಾಗಿ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಸರ್ಕಾರವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

    ಅವರು ದಾವಣಗೆರೆಯ ಜಿ.ಎಂ.ಐ.ಟಿ ಆವರಣದಲ್ಲಿ ಗಾಂಧಿ ಭವನ, ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ಜಿ.ಎಂ.ಐ.ಟಿ ಕೇಂದ್ರ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.

    ಕರ್ನಾಟಕ ರಾಜ್ಯ ಮೊದಲಿಗೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಾಗೂ ಈಗ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೊರೊನಾ ವಿರುದ್ಧ ಸಮರ್ಥವಾಗಿ ಹೋರಾಡಿದೆ. ಈ ವರೆಗೆ ಸುಮಾರು 5.2 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಆ ಪೈಕಿ 4 ಕೋಟಿ ಜನರಿಗೆ ಮೊದಲ ಡೋಸ್ ನೀಡಲಾಗಿದ್ದು, 1.16 ಲಕ್ಷ ಜನರಿಗೆ ಎರಡನೇ ಡೋಸ್ ಲಸಿಕೆಯನ್ನೂ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ. 90ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡುವ ವಿಶ್ವಾಸ ನನಗಿದೆ. ಒಟ್ಟಾರೆ ಕೊರೊನಾ ವಿರುದ್ಧ ರಾಜ್ಯ ಸರ್ಕಾರ ಅತ್ಯುತ್ತಮವಾಗಿ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ವಿಶ್ವದಾದ್ಯಂತ ಸರ್ಕಾರಗಳು ಕೋರೊನಾ ವಿರುದ್ಧ ಹೋರಾಡುತ್ತಿದ್ದರೆ, ಭಾರತದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಜೊತೆಗೆ ದೇಶದ 130 ಕೋಟಿ ಜನತೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದರು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೋವಿಡ್ ವಾರಿಯರ್ ಗಳು, ರಕ್ಷಣಾ ಸಿಬ್ಬಂದಿ ಹಾಗೂ ಸಫಾಯಿ ಕರ್ಮಚಾರಿಗಳು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಠಿಣ ನಿರ್ಬಂಧಗಳನ್ನು ಪಾಲಿಸಿದೆವು. ನಂತರ ಜಗತ್ತಿನ ಅತಿ ದೊಡ್ಡ ಲಸಿಕಾ ಅಭಿಯಾನ ನಮ್ಮ ದೇಶದಲ್ಲಿ ಪ್ರಾರಂಭವಾಯಿತು. ಇಂದು ನಾವು ವಿಶ್ವದಲ್ಲಿಯೇ ಅತಿ ಹೆಚ್ಚು ಲಸಿಕೆ ನೀಡಿದ ದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದು ಅವರು ನುಡಿದರು.

    ದೇಶದಲ್ಲಿ ಲಸಿಕೆ ಅಭಿಯಾನವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿದ್ದು, ಎರಡು ದಿನಗಳ ಹಿಂದೆ ಒಂದೇ ದಿನದಲ್ಲಿ 1.36 ಕೋಟಿ ಗೂ ಹೆಚ್ಚು ಡೋಸ್ ಲಸಿಕೆ ನೀಡುವ ಮೂಲಕ ನಮ್ಮ ದೇಶದ ದಾಖಲೆಯನ್ನೇ ಮುರಿದು ಹೊಸ ದಾಖಲೆ ನಿರ್ಮಿಸಿದ್ದೇವೆ.

    ನರೇಂದ್ರ ಮೋದಿ ಸರ್ಕಾರ ಸದಾ ಹಿಂದುಳಿದ ವರ್ಗಗಳು, ದಲಿತರು, ಬುಡಕಟ್ಟು ಜನರ ಹಿತ ಚಿಂತನೆ ಮಾಡುತ್ತದೆ. ಕೋವಿಡ್ 19 ಸಂಕಷ್ಟದ ಹೆಚ್ಚಿನ ಹೊರೆ ಬಡವರ ಮೇಲೆ ಬಿದ್ದಿದೆ. ದಿನ ದಿನ ದುಡಿದು ತಿನ್ನುವವರು ಊಟಕ್ಕಿಲ್ಲದ ಸ್ಥಿತಿ ಎದುರಾಗಿತ್ತು. ಆದರೆ ಮೊದಲನೇ ಅಲೆ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಮೇ ತಿಂಗಳಿನಿಂದ ನವೆಂಬರ್ ತಿಂಗಳ ವರೆಗೆ ತಲಾ 5 ಕೆಜಿ ಧಾನ್ಯ ಉಚಿತವಾಗಿ ವಿತರಿಸುವ ಕೆಲಸವನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ. 80 ಕೋಟಿ ಜನರಿಗೆ 10 ತಿಂಗಳ ಕಾಲ ಆಹಾರ ಧಾನ್ಯ ಉಚಿತವಾಗಿ ವಿತರಿಸಲಾಗಿದೆ ಎಂದು ಅವರು ಹೇಳಿದರು.

    ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯ ಸಮಸ್ಯೆ ದೇಶದೆಲ್ಲೆಡೆ ತಲೆದೋರಿತು. ಆಗ ಸಾವಿರಾರು ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಯಿತು. ಮುಂದೆ ಎದುರಾಗ ಬಹುದಾದ ಆಕ್ಸಿಜನ್ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಭಾರತ ಆತ್ಮ ನಿರ್ಭರತೆಯನ್ನು ಸಾಧಿಸಲಿದೆ ಎಂಬುದನ್ನು ಅತ್ಯಂತ ವಿಶ್ವಾಸದಿಂದ ಹೇಳಬಲ್ಲೆ ಎಂದು ಅವರು ನುಡಿದರು.

    ಕೊರೊನಾ ವಿರುದ್ಧ ಕೇಂದ್ರ, ರಾಜ್ಯ ಸರ್ಕಾರಗಳು ನಡೆಸುವ ಹೋರಾಟದಲ್ಲಿ ಜನರ ಸಹಯೋಗ ಅತಿ ಅಗತ್ಯ. ಕೆಲವು ವರ್ಗ, ಸಮುದಾಯ, ಕೆಲವು ಜಿಲ್ಲೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಕೆ ಕಂಡು ಬರುತ್ತಿದೆ. ಇದನ್ನು ನಿವಾರಿಸಿ, ನಮ್ಮ ಕುಟುಂಬದವರು, ಬಳಗದವರು, ನೆರೆಹೊರೆಯವರು ಯಾವುದೇ ಅಳುಕಿಲ್ಲದೆ ಲಸಿಕೆ ಪಡೆಯುವ ವಾತಾವರಣ ನಿರ್ಮಿಸುವ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರದೂ ಆಗಿದೆ ಎಂದರು.

    ಶೇಕಡ ನೂರರಷ್ಟು ಲಸಿಕೆ ನೀಡುವುದೇ ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸುವ ಮಾರ್ಗ. ಭಾರತ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಒದಗಿಸುತ್ತಿದೆ. ಲಸಿಕೆ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಿ, ಲಸಿಕೆ ಹಾಕಿಸಿಕೊಳ್ಳುವಂತೆ ಜನರ ಮನವೊಲಿಸಲು ಸಾರ್ವಜನಿಕರು ಹಾಗೂ ವಿಶೇಷವಾಗಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.

    ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟದ ಸದಸ್ಯರು, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರು ಮತ್ತಿತರ ಗಣ್ಯರು ಭಾಗವಹಿಸಿದ್ದರು.

    ರಾಜ್ಯದ ಆಂತರಿಕ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    DAVANAGERE SEPT 2

    ರಾಜ್ಯದ ಆಂತರಿಕ ಸುರಕ್ಷತೆಯನ್ನು ಕಾಪಾಡುವಲ್ಲಿ ಯಾವುದೇ ರಾಜಿ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ದಾವಣಗೆರೆಯ ಜಿ.ಎಂ.ಐ.ಟಿ ಆವರಣದಲ್ಲಿ ಗಾಂಧಿ ಭವನ, ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ಜಿ.ಎಂ.ಐ.ಟಿ ಕೇಂದ್ರ ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಉದ್ಘಾಟನೆ ನೆರವೇರಿಸಿದರು.

    ದೇಶ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಕರ್ನಾಟಕ ತನ್ನ ಪಾತ್ರವನ್ನು ವಹಿಸಬೇಕಾಗಿದೆ. ಭಯೋತ್ಪಾದಕರು ದಕ್ಷಿಣ ಭಾರತದಲ್ಲಿ ತಮ್ಮ ಬೇರುಗಳನ್ನು ಬಿಡಲು ಪ್ರಯತ್ನಿಸಿದಾಗ ನಾವು ಅವರನ್ನು ಸದೆ ಬಡಿದಿದ್ದೇವೆ. ಎನ್.ಐ.ಎ. ಯೊಂದಿಗೆ ಇಲ್ಲಿ ಅಂತಹ ಹಲವಾರು ಸಂಘಟನೆಗಳನ್ನು ಪತ್ತೆ ಹಚ್ಚಿ ಉಗ್ರ ಕ್ರಮ ಕೈಗೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದರು.

    ಕಳೆದ ಬಾರಿ ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೂಚಿಸಿದ್ಪದಂತೆ ಅಪರಾಧ ನಿಯಂತ್ರಣಕ್ಕೆ ಸಂಚಾರಿ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಅಪರಾಧ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ ಹುದ್ದೆಗಳ ಸೃಜನೆಯನ್ನು ಗೃಹ ಇಲಾಖೆ ಕೈಗೊಂಡಿದೆ ಎಂದು ತಿಳಿಸಿದರು.

    ಪೊಲೀಸ್ ಶಾಲೆ:ದಾವಣಗೆರೆಯಲ್ಲಿ ಪೊಲೀಸ್ ಶಾಲೆಯನ್ನು ಕೇಂದ್ರ ಗೃಹ ಸಚಿವರು ಉದ್ಘಾಟಿಸಿದ್ದು ಸಂತಸ ತಂದಿದೆ. ಬೆನೊವೆಲೆಂಟ್ ಫಂಡ್‍ನಿಂದ ನಿರ್ಮಿಸಲಾದ ಪೊಲೀಸ್ ಶಾಲೆಯಲ್ಲಿ ಗುಣಮಟ್ಟದ ಹಾಗೂ ಶಿಸ್ತಿನ ಶಿಕ್ಷಣ ಕೂಡಿದ್ದು, ಭಾರತದಲ್ಲಿನ ಮಿಲಿಟರಿ ಶಾಲೆಗಳ ಮಾದರಿಯಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.

    ಗಾಂಧಿ ಭವನ:ಸ್ವಾತಂತ್ರ್ಯದ ಅಮೃತ ಮಹೋತ್ಸವ ಅರ್ಥಪೂರ್ಣ ಆಚರಣೆಗೆ ಆಗಬೇಕು ಎಂದ ಮುಖ್ಯಮಂತ್ರಿಗಳು, ಭಾರತದ ಸ್ವಾತಂತ್ರ್ಯದ 100 ವರ್ಷಕ್ಕೆ ಭಾರತ ವಿಶ್ವಮಾನ್ಯ ರಾಷ್ಟ್ರವಾಗಬೇಕು. ದೇಶವನ್ನು ಸುರಕ್ಷಿತ ಹಾಗೂ ಅಭಿವೃದ್ಧಿಗೊಳಿಸುವ ಸಂಕಲ್ಪ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಗಾಂಧಿ ಭವನ ಉದ್ಘಾಟನೆ ಮಾಡಲಾಗಿದೆ. ಮಹಾತ್ಮಾ ಗಾಂಧಿಜೀ ಜನಿಸಿದ ಭೂಮಿಯಿಂದ ಬಂದಿರುವ ಶ್ರೀ ಅಮಿತ್ ಶಾ ಅವರಿಂದಲೇ ಗಾಂಧಿ ಭವನ ಉದ್ಘಾಟನೆಗೊಂಡಿರುವುದು ನಮ್ಮ ಸುಯೋಗ ಎಂದರು.

    ಸ್ವಾತಂತ್ರ್ಯ ಹೋರಾಟಗಾರನ್ನು ಈ ಸಂದರ್ಭದಲ್ಲಿ ಗೌರವಿಸುತ್ತಿರುವುದು ಸ್ತುತ್ಯಾರ್ಹ. 75 ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ 14 ಅಮೃತ ಯೋಜನೆಯನ್ನು ಘೋಷಣೆ ಮಾಡಿದ್ದೇನೆ. ಈ ಯೋಜನೆಗಳ ಅನುಷ್ಠಾನಕ್ಕೆ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ ಎಂದರು.

    ನಮ್ಮದು ಮಾತನಾಡುವ ಸರ್ಕಾರವಲ್ಲ. ಕಾರ್ಯ ಮಾಡುವ ಸರ್ಕಾರ. ರೈತರ ಮಕ್ಕಳಿಗೆ ರೈತ ವಿದ್ಯಾ ನಿಧಿ, 1000 ಕೋಟಿ ರೂ. ವೆಚ್ಚದಲ್ಲಿ ರೈತ ಮಕ್ಕಳಿಗೆ ಪಿಯುಸಿಯಿಂದ ಪಿಜಿ ವರೆಗೂ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಕೇಂದ್ರ ಕೃಷಿ ಸಚಿವರು ಉದ್ಘಾಟಿಸಲಿದ್ದಾರೆ. ಕೆಲವೇ ದಿನಗಳಲ್ಲಿ 20 ಲಕ್ಷ ರೈತ ಮಕ್ಕಳಿಗೆ ಈ ಸೌಲಭ್ಯ ದೊರೆಯಲಿದೆ.

    ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ, ವಿಧವಾ ವೇತನ ಮಾಸಾಶನ ಹೆಚ್ಚಿಸುವ ಮೂಲಕ ನಮ್ಮದು ಬಡವರ ಪರವಾದ ಸರ್ಕಾರ ಎಂದು ನಿರೂಪಿಸಲಾಗಿದೆ. ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ಆಯವ್ಯಯದಲ್ಲಿ ಘೋಷಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಅವರ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.

    ಜಿ.ಎಂ.ಐ.ಟಿ ಕೇಂದ್ರ ಗ್ರಂಥಾಲಯ:ಸಂಸದರಾದ ಜಿ.ಎಂ.ಸಿದ್ದೇಶ್ವರ ಅವರು ಪ್ರಗತಿಪರ ನಾಯಕರಾಗಿದ್ದು, ದಾವಣಗೆರೆ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟು ನೀರಾವರಿ ಯೋಜನೆಗಳು, ಕೇಂದ್ರ ಯೋಜನೆಗಳು, ರಸ್ತೆ ,ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಜಿಲ್ಲೆಯಲ್ಲಿ ತರುವ ಮೂಲಕ ಅಭಿವೃದ್ಧಿಯ ಕ್ರಾಂತಿಯನ್ನು ಮಾಡಿದ್ದಾರೆ. ಜಿಎಂಐಟಿ ಆವರಣದಲ್ಲಿ ಇಂದು ಆಧುನಿಕ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿನೆಗೊಂಡಿದೆ. ಜಿಎಂ ಸಿದ್ದೇಶ್ವರ್ ಅವರಂತಹ ಅತ್ಯಂತ ಕ್ರಿಯಾಶೀಲ ವ್ಯಕ್ತಿಯ ನಾಯಕತ್ವದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಾಗುವುದೆಂದು ಮುಖ್ಯಮಂತ್ರಿಗಳು ತಿಳಿಸಿದರು.

    ವಲ್ಲಭಭಾಯಿ ಪಟೇಲರ ದಿಟ್ಟತನ ಅಮಿತ್ ಷಾ ಅವರಲ್ಲಿ ಕಾಣಬಹುದು:

    ಅಮಿತ್ ಷಾ ಅವರು ದೇಶದ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಹೆಸರು ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ. ನಮ್ಮ ದೇಶ ವಲ್ಲಭಬಾಯಿ ಪಟೇಲರಲ್ಲಿ ದೇಶದ ಅಖಂಡತೆ ಮತ್ತು ಏಕತೆಗೆ ಕೆಲಸ ಮಾಡಿದರು. ಅವರಲ್ಲಿ ಕಾಣುತ್ತಿದ್ದ ದಿಟ್ಟತನವನ್ನು ಅಮಿತ್ ಷಾ ಅವರಲ್ಲಿ ಕಾಣಬಹುದಾಗಿದೆ. ನಮ್ಮ ನೆರೆಯ ಆಫ್‍ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳು ಮತ್ತು ಮಕ್ಕಳು ಆತಂಕದಲ್ಲಿದ್ದಾರೆ. ಅಲ್ಲಿ ಉಂಟಾಗಿರುವ ಪರಿಸ್ಥಿತಿ ನಮ್ಮ ದೇಶದಲ್ಲಿ ಆಗಬಾರದು ಎಂದು ಅತ್ಯಂತ ದಿಟ್ಟತನದಿಂದ 370 ವಿಧಿಯನ್ನು ರದ್ದುಗೊಳಿಸಿ ಇಡೀ ರಾಷ್ಟ್ರದ ಅಖಂಡತೆ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದರು.

    ನಗರವಾಸಿಗಳ ಬದುಕು ಹೈರಾಣ ಮಾಡಿದ ಬಿಜೆಪಿ: ಸಿದ್ಧರಾಮಯ್ಯ ಟೀಕೆ

    BENGALURU SEP 2

    ನಗರದ ಮಧ್ಯಮ ವರ್ಗದ ಮಂದಿಗೆ ನಕಲಿ ದೇಶಭಕ್ತಿಯನ್ನು ಹೇಳುತ್ತಿದ್ದ ಬಿಜೆಪಿ ಈಗ ನಗರ ವಾಸಿಗಳ ಮತ್ತು ತೆರಿಗೆದಾರರ ಬದುಕನ್ನೂ ಹೈರಾಣ ಮಾಡಿಟ್ಟಿದೆ ಎಂದು ವಿಧಾನಸಭೆ ಪ್ರತಿ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ವಿಪರೀತ ಬೆಲೆ ಏರಿಕೆ ಮತ್ತು ಪರೋಕ್ಷ ಹಾಗೂ ಪ್ರತ್ಯಕ್ಷ ತೆರಿಗೆಗಳ ಭಾರಕ್ಕೆ ನಗರ ಪ್ರದೇಶಗಳಲ್ಲಿರುವ ಜನರು, ಮಧ್ಯಮ ವರ್ಗದ ಮಂದಿ ಕೂಡ ಇತರೆ ಸಮುದಾಯಗಳ ರೀತಿಯಲ್ಲಿ ಹೈರಾಣಾಗಿ, ಬೇಸತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    ಗುರುವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿದರು.

    ಕೆಲವರಿಗೆ ತಮ್ಮಲ್ಲಿ ಯಾವುದರ ಕೊರತೆ ಇರುತ್ತದೋ ಅದರ ಬಗ್ಗೆಯೇ ಹೆಚ್ಚೆಚ್ಚು ಮಾತನಾಡುವ ಚಟ ಇರುತ್ತದೆ. ಬಿಜೆಪಿ ಮತ್ತು ಪರಿವಾರದ ಮಂದಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲ. ಇಡೀ ದೇಶದ ಜನ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದಾಗ ಬಿಜೆಪಿ ಮತ್ತು ಪರಿವಾರ ದೇಶದ ಜನತೆಯ ಜತೆಗೆ ನಿಲ್ಲಲಿಲ್ಲ. ಹೀಗಾಗಿ ಬೆಜೆಪಿಗೆ ಸ್ವತಂತ್ರ ಹೋರಾಟದ ಚರಿತ್ರೆ ಇಲ್ಲ ಮತ್ತು ಬಿಜೆಪಿಯಲ್ಲಿ ಹುತಾತ್ಮರಾದವರು ಯಾರೂ ಇಲ್ಲ. ಅದಕ್ಕೇ ಬಿಜೆಪಿ ಹೆಚ್ಚೆಚ್ಚು ದೇಶಭಕ್ತಿಯ ಬಗ್ಗೆ ಮಾತನಾಡುತ್ತದೆ.

    ವಂದೇ ಮಾತರಂ, ಜೈ ಜವಾನ್-ಜೈ ಕಿಸಾನ್, ಸ್ವದೇಶಿ ಘೋಷಣೆಗಳೆಲ್ಲಾ ಸ್ವಾತಂತ್ರ್ಯ ಹೋರಾಟದ ನಾಯಕರುಗಳು ಕೊಟ್ಟಿದ್ದು. ಈ ಘೋಷಣೆಗಳಿಗೂ ಬಿಜೆಪಿಗೂ ಯಾವ ಸಂಬಂಧವೂ ಇಲ್ಲ. ದೇಶಕ್ಕೆ ಸ್ವಾತಂತ್ರ್ರ್ಯ ತಂದು ಕೊಟ್ಟಿದ್ದು, ದೇಶದ ಜನರ ಹೋರಾಟದ ಜತೆಗೆ ನಿಂತಿದ್ದು ಕಾಂಗ್ರೆಸ್ ಪಕ್ಷ.

    ನಗರವಾಸಿಗಳ ಬದುಕು ನರಕ

    ಬೆಲೆ ಏರಿಕೆ ಮತ್ತು ಹಣದುಬ್ಬರದಿಂದ ನಗರವಾಸಿಗಳ ಬದುಕು ನರಕವಾಗಿದೆ. ವಿದ್ಯುಚ್ಚಕ್ತಿ ಬಿಲ್‌ಗಳು ಶೇ 30 ರಷ್ಟು ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಮೋದಿ ಅವರು ಪ್ರಧಾನಿ ಆಗಿರುವವರೆಗೂ ಇಳಿಯುವಂತೆ ಕಾಣುತ್ತಿಲ್ಲ. ಒಂದು ವಾರದಲ್ಲಿ ಅಡುಗೆ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಾಗಿ ನಗರದಲ್ಲಿ 886 ರೂಪಾಯಿ ಗ್ರಾಮೀಣ ಭಾಗದಲ್ಲಿ 900 ರೂಪಾಯಿ ತಲುಪಿದೆ. ಮನೆಗಳ ಆಸ್ತಿ ತೆರಿಗೆ ವಿಪರೀತ ಹೆಚ್ಚಾಗಿರುವುದು ಮಾತ್ರವಲ್ಲದೆ ಖಾಲಿ ಜಾಗಗಳಿಗೂ ತೆರಿಗೆ ವಿಧಿಸುತ್ತಿದ್ದಾರೆ. ಕಬ್ಬಿಣ, ಸಿಮೆಂಟ್ ಸೇರಿ ದಿನನಿತ್ಯ ಬಳಕೆಯ ಎಲ್ಲಾ ವಸ್ತುಗಳ ಬೆಲೆಯೂ ಆಕಾಶ ಮುಟ್ಟುತ್ತಿದೆ. ಅಚ್ಛೆ ದಿನ್ ಅಂದರೆ ಇದೇನಾ ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

    ಕೇಂದ್ರ ಸರ್ಕಾರ ನಗರ ಪ್ರದೇಶಗಳಿಗೆ ಕೊಡುತ್ತಿದ್ದ ಅನುದಾನ ಕಡಿತಗೊಳಿಸಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್ ಗಾತ್ರ ಕಡಿಮೆ ಇದ್ದಾಗಲೂ 15 ಸಾವಿರ ಕೋಟಿ ಅನುದಾನ ನೀಡಿದ್ದೆ. ಈಗ ಬಜೆಟ್ ಗಾತ್ರ ಹೆಚ್ಚಾಗಿದ್ದರೂ ಬಿಜೆಪಿ ಸರ್ಕಾರ ನೀಡಿರುವುದು 14 ಸಾವಿರ ಕೋಟಿ ಮಾತ್ರ. ಹೀಗಾಗಿ ನಮ್ಮ ಸರ್ಕಾರದ ಅವಧಿಯಲ್ಲೇ ಅತಿ ಹೆಚ್ಚು ಹಣ ನಗರ ಅಭಿವೃದ್ಧಿಗೆ ನೀಡಿದ್ದು ಬಿಟ್ಟರೆ ಬಿಜೆಪಿಯವರು ಮಾಡಿದ್ದು ಬರೀ ಭಜನೆ ಅಷ್ಟೆ.

    ಆಸ್ತಿ ನಗದೀಕರಣ ಹೆಸರಿನಲ್ಲಿ ಭಾರತದ ರಸ್ತೆಗಳು, ಏರ್‌ಪೋರ್ಟ್ಗಳು, ರೈಲು ನಿಲ್ದಾಣಗಳು ಸೇರಿ ಪ್ರತಿಯೊಂದನ್ನೂ ಖಾಸಗಿಯವರಿಗೆ ಒಪ್ಪಿಸಲಾಗುತ್ತಿದೆ.

    ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಮೋದಿ ಅವರು ಈಗ ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದೆಲ್ಲಾ ಯಾರ ಅವಧಿಯಲ್ಲಿ ಆಗಿದ್ದು ? ದೇಶದ ಜನ ಕಳೆದ 70 ವರ್ಷಗಳಲ್ಲಿ ಸೃಷ್ಟಿಸಿದ 6 ಲಕ್ಷ ಕೋಟಿ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಮೋದಿಯವರು ಈ ದೇಶದ ಜನರ ಅನುಮತಿ, ಒಪ್ಪಿಗೆ ಪಡೆದಿದ್ದಾರಾ ? ಎಂದು ಕೇಳಿದರು.

    ಒಂದು ಕಡೆ ತೆರಿಗೆ ಮೂಲಕ ಸುಲಿಗೆ-ಬೆಲೆ ಏರಿಕೆ ಮೂಲಕ ಲೂಟಿ ಮಾಡುತ್ತಿರುವ ಬಿಜೆಪಿ ಸರ್ಕಾರಗಳು ಜನರ ರಕ್ತ ಹೀರುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೂ ಆಕರ್ಷಕ ಘೋಷಣೆಗಳಲ್ಲೇ ಜನರನ್ನು ಮರಳು ಮಾಡಬಹುದು ಎನ್ನುವ ನಂಬಿಕೆ ಬಿಜೆಪಿಯವರದ್ದು.

    “ಮೇಕ್ ಇನ್ ಇಂಡಿಯಾ” ಎನ್ನುವ ಘೋಷಣೆ ನೀಡಿದರು. ಈ ಘೋಷಣೆಯಂತೆ ಭಾರತದ ಉತ್ಪನ್ನಗಳ ರಫ್ತು ಹೆಚ್ಚಾಗಿ, ವಿದೇಶದಿಂದ ಭಾರತಕ್ಕೆ ಬರುವ ಉತ್ಪನ್ನಗಳ ಆಮದು ಪ್ರಮಾಣ ಕಡಿಮೆ ಆಗಬೇಕಿತ್ತು. ಆದರೆ 2013-14 ರಲ್ಲಿ ಭಾರತದ ರಫ್ತು ಆದಾಯ 25.52 ಲಕ್ಷ ಕೋಟಿ ಇದ್ದದ್ದು ಮೋದಿ ಕಾಲದ 2019-2020ರ ವೇಳೆಗೆ 23.02 ಲಕ್ಷ ಕೋಟಿಗೆ ಇಳಿದಿದೆ. ಅಂದರೆ “ಮೇಕ್ ಇನ್ ಇಂಡಿಯಾ” ಎಲ್ಲಿ ಹೋಯ್ತು ? ಎಂದು ಸಿದ್ಧರಾಮಯ್ಯ ಕೇಳಿದರು.

    7 ವರ್ಷಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿ ಜನರಿಂದ ಸುಲಿಗೆ ಮಾಡಿದ ಹಣದ ಪ್ರಮಾಣ 22 ಲಕ್ಷ ಕೋಟಿ. ಇದರಲ್ಲಿ ಕರ್ನಾಟಕವೊಂದರಿಂದಲೇ ಸುಲಿಗೆ ಮಾಡಿದ್ದು 1.20 ಲಕ್ಷ ಕೋಟಿ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ ದೇಶಕ್ಕೆ ಆಹಾರ ಭದ್ರತೆ ಒದಗಿಸಿ, ಸಾರ್ವಜನಿಕ ಉದ್ದಿಮೆಗಳನ್ನು ಸೃಷ್ಟಿಸಿ ಲಕ್ಷಾಂತರ ಕೋಟಿ ಆಸ್ತಿಯನ್ನು ಸೃಷ್ಟಿಸಿದ್ದು ಕಾಂಗ್ರೆಸ್. ಇದನ್ನೆಲ್ಲಾ ಒಂದೊಂದಾಗಿ ಮಾರಾಟ ಮಾಡುತ್ತಾ ಕುಳಿತಿರುವ ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ಸಾವಿರಾರು ಸುಳ್ಳುಗಳನ್ನು ಹಿಂದೆ ಮುಂದೆ ನೋಡದೆ ಹೇಳುತ್ತಲೇ ಹೋಗುತ್ತಿದ್ದಾರೆ.

    ನಾನು ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಕಾಂಗ್ರೆಸ್ ಸರ್ಕಾರ 5 ವರ್ಷದಲ್ಲಿ 15 ಲಕ್ಷ ಮನೆಗಳನ್ನು ನಿರ್ಮಿಸಿತ್ತು. ಈ ಬಿಜೆಪಿ ಸರ್ಕಾರ ಎರಡು ವರ್ಷದಲ್ಲಿ ಒಂದೇ ಒಂದು ಮನೆ ಕಟ್ಟಿಸಿದ್ದರೆ ತೋರಿಸಲಿ. ನಮ್ಮ ಕಾಂಗ್ರೆಸ್ ಅವಧಿಯಲ್ಲಿ ನೀಡಿದ ಬಡವರ ಮನೆಗಳಿಗೆ ಕಟ್ಟಲು ಬಾಕಿ ಇದ್ದ 2786 ಕೋಟಿ ರೂಪಾಯಿಯನ್ನು ಮನ್ನಾ ಮಾಡಿ ಬಡವರಿಗೆ ನೆರವಾದೆವು.

    ವಿಪರೀತ ಬೆಲೆ ಏರಿಕೆ, ತೆರಿಗೆಯ ಸುಲಿಗೆ ನಡೆಯುತ್ತಿದ್ದರೂ ಕಾಂಗ್ರೆಸ್ ವಿರೋಧ ಪಕ್ಷವಾಗಿ ದೊಡ್ಡ ಮಟ್ಟದ ಹೋರಾಟ ಮಾಡುವಲ್ಲಿ ವಿಫಲವಾಗಿದ್ದು ಏಕೆ ಎನ್ನುವ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, “ನಾವೇನು ಬಿಜೆಪಿಯವರ ಕಪಾಳಕ್ಕೆ ಹೊಡೆಯಲು ಸಾಧ್ಯವಾ ?’ ಎಂದು ಪ್ರಶ್ನಿಸಿದ್ದಲ್ಲದೆ, ನಾವು ಬೀದಿಗಿಳಿದು ಹೋರಾಟ ಮಾಡಿದರೆ ಕೋವಿಡ್ ನಿಯಮ ಉಲ್ಲಂಘನೆ ಎಂದು ಕೇಸು ಹಾಕುತ್ತಾರೆ. ಅರೆಸ್ಟ್ ಮಾಡುತ್ತಾರೆ. ಆದರೆ ಬಿಜೆಪಿ ಕೇಂದ್ರ ಮಂತ್ರಿಗಳು ‘ಜನಾಶೀರ್ವಾದ ಯಾತ್ರೆ” ಹೆಸರಿನಲ್ಲಿ ಸಾವಿರಾರು ಮಂದಿಯನ್ನು ಸೇರಿಸಿ ಮೆರವಣಿಗೆ ಮಾಡಬಹುದು. ಅವರಿಗೆ ಮಾತ್ರ ಕೋವಿಡ್ ನಿಮಯ ಅನ್ವಯ ಆಗುವುದಿಲ್ಲ. ಆದರೆ ಬೆಲೆ ಏರಿಕೆ, ತೆರಿಗೆ ಸುಲಿಗೆ ವಿರೋಧಿಸಿ ಜನಪರವಾದ ಪ್ರತಿಭಟನೆ ಮಾಡಲೂ ಅವಕಾಶ ಆಗುತ್ತಿಲ್ಲ ಎಂದರು.

    ರಾಷ್ಟ್ರೀಯ ಶಿಕ್ಷಣ ನೀತಿ: ಶಿಕ್ಷಕ- ಪದವೀಧರ ಕ್ಷೇತ್ರಗಳ ವಿಧಾನ‌ಪರಿಷತ್ ಸದಸ್ಯರ ಜತೆ ಸಚಿವರ ಚರ್ಚೆ


    BENGALURU SEPT 2

    ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಪದವೀಧರ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರ ಜತೆ ಗುರುವಾರ ಸಮಲೋಚನೆ ನಡೆಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಆ ಬಗ್ಗೆ ಅವರಲ್ಲಿದ್ದ ಸಂಶಯ, ಗೊಂದಲಗಳನ್ನು ನಿವಾರಿಸಿದರು.

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪರಿಷತ್ ಸದಸ್ಯರ ಸಭೆಯಲ್ಲಿ ಮಾತನಾಡಿದ ಸಚಿವರು, ಪ್ರತಿಯೊಂದು ಪ್ರಶ್ನೆಗೂ ಉತ್ತರ ನೀಡಿದರಲ್ಲದೆ, ಶಿಕ್ಷಣ ನೀತಿಯಲ್ಲಿ ಅಡಕವಾಗಿರುವ  ಪ್ರತಿ ಅಂಶವನ್ನೂ ಬಿಡಿಸಿಟ್ಟರು.

    ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವುದರ ಜತೆಗೆ, ಬಹು ಶಿಸ್ತೀಯ ಕಲಿಕೆ ಹಾಗೂ ಕಲಿಕೆಯ ಆಯ್ಕೆಯ ಬಗ್ಗೆ ಇರುವ ಮುಕ್ತ ಸ್ವಾತಂತ್ರ್ಯವನ್ನು ಪರಿಷತ್ ಸದಸ್ಯರಿಗೆ ಎಳೆಎಳೆಯಾಗಿ ವಿವರಿಸಿದ ಸಚಿವರು, ಸವಾಲುಗಳಿವೆ ಅಥವಾ ಕಷ್ಟವಿದೆ ಎಂದು ಈಗ ಹಿಂದೆಜ್ಜೆ ಇಟ್ಟರೆ ಮುಂದೆಂದೂ ಜಾರಿ ಮಾಡುವುದು ಕಷ್ಟವಾಗುತ್ತದೆ. ಜ್ಞಾನ ಮತ್ತು ಕೌಶಲ್ಯ ಆಧಾರಿತ ಶಿಕ್ಷಣ ನೀತಿಯನ್ನು ಜಾರಿ ಮಾಡುವುದು ರಾಜ್ಯದ ಪಾಲಿಗೆ ನಿರ್ಣಾಯಕ ಅಂಶವಾಗಿದೆ ಎಂದು ಹೇಳಿದರು.

    ಶಿಕ್ಷಣ ನೀತಿ ಹೇಗೆ ರೂಪಿತವಾಯಿತು? ಅದರ ಹಿಂದೆ ಇರುವ ಎಷ್ಟು ಶ್ರಮದ ಬಗ್ಗೆ, ಪಠ್ಯ ರಚನೆ, ಕಲಿಕೆ, ಬೋಧನೆ, ತರಬೇತಿ ಇತ್ಯಾದಿ ಅಂಶಗಳ ಬಗ್ಗೆ ಸಚಿವರು ನೀಡಿದ ಸಮಗ್ರ ಮಾಹಿತಿ ಬಗ್ಗೆ ಪರಿಷತ್ ಸದಸ್ಯರು ತೃಪ್ತಿ ವ್ಯಕ್ತಪಡಿಸಿದರು.

    ಸಿಬ್ಬಂದಿ, ಬೋಧಕ ಸಿಬ್ಬಂದಿ ನೇಮಕ, ತರಬೇತಿ ಇತ್ಯಾದಿಗಳ ಬಗ್ಗೆ ಕ್ರಮ ವಹಿಸಲಾಗುವುದು. ಮೂಲಸೌಕರ್ಯಗಳನ್ನು ಹೆಚ್ಚಿಸುವ ಸಂಬಂಧ ಹಂತ ಹಂತವಾಗಿ ಕೆಲಸ ಮಾಡಲಾಗುವುದು ಎಂದ ಸಚಿವರು, ಆ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗವುದು ಎಂದರು.

    ಬೋಧಕರಿಗೆ ತರಬೇತಿ:ಈಗಿನ ಅಧ್ಯಾಪಕ ವರ್ಗ ಶಿಕ್ಷಣ ನೀತಿ ಪ್ರಕಾರವೇ ಬೋಧನೆ ಮಾಡುತ್ತಾರಾ? ಕೆಲವರಿಗೆ ಕಂಪೂಟರ್ ಜ್ಞಾನವೇ ಇರುವುದಿಲ್ಲ. ಅವರನ್ನು ಸಜ್ಜುಗೊಳಿಸುವುದು ಹೇಗೆ? ತರಬೇತಿ ಕೊಡುವುದು ಹೇಗೆ? ಎಂದು ಹಿರಿಯ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಎತ್ತಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರತಿ ಹಂತದಲ್ಲಿ ಬೋಧಕರಿಗೆ ವ್ಯವಸ್ಥಿತವಾಗಿ ತರಬೇತಿ ಕೊಡಲಾಗುವುದು. ತಾಂತ್ರಿಕ ನೆರವು, ಅಧ್ಯಯನ ಸಾಮಗ್ರಿ ಸೇರಿ ಪ್ರತಿ ಅಂಶದಲ್ಲೂ ಅವರಿಗೆ ಸಹಕಾರ ನೀಡಲಾಗುವುದು ಎಂದರು.

    ಇನ್ನು, ಪ್ರತಿ ವಿವಿ ವ್ಯಾಪ್ತಿಯಲ್ಲಿ ಶಿಕ್ಷಣ ನೀತಿಯ ಬಗ್ಗೆ ವಿಶಾಲವಾಗಿ ಸಮಾಲೋಚನೆ ನಡೆಸಲಾಗಿದೆ. ವಿವಿ ವ್ಯಾಪ್ತಿಯಲ್ಲಿ ಇನ್ನೂ ಕೆಳ ಹಂತಕ್ಕೂ ಈ ಚರ್ಚೆ ವಿಸ್ತರಣೆಯಾಗಲಿದೆ. ಪ್ರತಿ ಕಾಲೇಜು ಮಟ್ಟದಲ್ಲೂ ಚರ್ಚೆ ನಡೆಯುತ್ತದೆ ಎಂದು ಸಚಿವರು ವಿವರಿಸಿದರು.

    ಇದೇ ವೇಳೆ, ಭಾಷೆ ವಿಷಯದಲ್ಲಿ ಕನ್ನಡವನ್ನು ಕಡ್ಡಾಯ ಮಾಡಿದ್ದಕ್ಕೆ ಸ್ವಾಗತ ಎಂದ ಶ್ರೀಕಂಠೇಗೌಡರು, ಕನ್ನಡದ ಜತೆಗೆ ಇಂಗ್ಲಿಷ್ ಭಾಷೆಯನ್ನೂ ಕಲಿಸಬೇಕು. ವಿದೇಶಗಳಲ್ಲಿ ಬಹಳ ಜನ ಉದ್ಯೋಗ ಸಿಕ್ಕಿರುವುದು ಇಂಗ್ಲಿಷ್ ಕಲಿತ ಕಾರಣಕ್ಕೆ. ಹೀಗಾಗಿ ಆ ಭಾಷೆಗೂ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು, ಕನ್ನಡವನ್ನು ಎರಡು ವರ್ಷ ಕಡ್ಡಾಯವಾಗಿ ಕಲಿಯಲೇಬೇಕು. ಅದರ ಜತೆಗೆ ಇಷ್ಟದ ಇತರ ಭಾಷೆಗಳನ್ನು ಕಲಿಯಲು ಅಕಾಶವಿದೆ ಎಂದರು.

    14 ಸಾವಿರ ಅತಿಥಿ ಉಪನ್ಯಾಸಕರ ಸಮಸ್ಯೆಗೆ ಏನಾದರೊಂದು ಪರಿಹಾರ ಕಂಡು ಕೊಳ್ಳಲೇಬೇಕೆಂದು ಮರಿತಿಬ್ಬೇಗೌಡ ಅವರು ಸಲಹೆ ನೀಡಿದರೆ, ಏನೇ ಬದಲಾವಣೆಗಳನ್ನು ತಂದರೂ ಆ ಮಾಹಿತಿಯನ್ನು ನೇಮಕಾತಿ ಸಂಸ್ಥೆಗಳಿಗೆ ತಿಳಿಸಬೇಕು. ಎಲ್ಲ ಹಂತದಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಪಠ್ಯ ಕ್ರಮ ಬದಲಾಗಬೇಕು ಎಂದು ಸುಶೀಲ ನಮೋಶಿ ಅವರು ಹೇಳಿದರು.

    ಉಳಿದಂತೆ, ಸಭೆಯಲ್ಲಿ ಪಾಲ್ಗೊಂಡಿದ್ದ ಅರುಣ್ ಶಹಾಪುರ, ಚಿದಾನಂದ, ನಾರಾಯಣಸ್ವಾಮಿ ಅವರೂ ಎತ್ತಿದ ಪ್ರಶ್ನೆಗಳಿಗೆ ಡಾ.ಅಶ್ವತ್ಥನಾರಾಯಣ ಉತ್ತರ ನೀಡಿದರಲ್ಲದೆ, ಶಿಕ್ಷಣ ನೀತಿಯ ಜಾರಿಗೆ ಎಲ್ಲರ ಸಹಕಾರ ಕೋರಿದರು.

    ಅರುಣ್ ಶಹಾಪುರ ಅವರು ರಾಜ್ಯ ಸರ್ಕಾರದ ಪ್ರಯತ್ನದ ಬಗ್ಗೆ ಮೆಚ್ವುಗೆ ವ್ಯಕ್ತಪಡಿಸಿದರು.

    ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಅವರು ಎನ್ ಇ ಪಿ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾರ್ಯ ನಿರ್ವಾಹಕ ನಿರ್ದೇಶಕ ಗೋಪಾಲ ಜೋಶಿ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದರು.

    error: Content is protected !!