29.9 C
Karnataka
Friday, May 22, 2026
    Home Blog Page 57

    ರಾಷ್ಟ್ರ ನಿರ್ಮಾಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ; ಸಲ್ಲದ ಸಂಶಯ ಬೇಡವೆಂದ ಉನ್ನತ ಶಿಕ್ಷಣ ಸಚಿವ

    BENGALURU SEPT 8

    ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆ ರಾಜ್ಯಾದ್ಯಂತ ಬಿಡುವಿಲ್ಲದ ಕಾರ್ಯಕ್ರಮ, ವಿಚಾರ ಸಂಕಿರಣ, ಚರ್ಚೆ, ಸಂವಾದದಲ್ಲಿ ಪಾಲ್ಗೊಳ್ಳುತ್ತಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಬೆಂಗಳೂರಿನಲ್ಲಿ ಎರಡು ಪ್ರಮುಖ ಸಭೆಗಳಲ್ಲಿ ಪಾಲ್ಗೊಂಡು ಶಿಕ್ಷಣ ನೀತಿ ಜಾರಿ ಬಗ್ಗೆ ಚರ್ಚಿಸಿದರು.

    ನಗರದ ಟಿ.ಜಾನ್ ಕಾಲೇಜು ಹಾಗೂ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವರು; ಮುಖ್ಯವಾಗಿ ಶಿಕ್ಷಣ ತಜ್ಞರು, ಅಧ್ಯಾಪಕರು, ವಿದ್ಯಾರ್ಥಿಗಳ ಜತೆ ಸಂವಾದ, ಚರ್ಚೆ ನಡೆಸಿದರು.

    ಶಿಕ್ಷಣ ನೀತಿ ಏತಕ್ಕೆ? ಇದರ ಪರಿಣಾಮಗಳೇನು? ದೇಶಕ್ಕೆ ಇದರ ಉಪಯೋಗ ಹೇಗೆ? ಇತ್ಯಾದಿ ಅಂಶಗಳ ಬಗ್ಗೆ ವಿವರಣಾತ್ಮಕವಾಗಿ ಮಾತನಾಡಿದರಲ್ಲದೆ, ನೀತಿಯ ಬಗ್ಗೆ ಇದ್ದ ಅನುಮಾನ, ಸಂಶಯಗಳನ್ನು ತೊಡೆದು ಹಾಕುವ ಪ್ರಯತ್ನ ಮಾಡಿದರು.

    ಯಾರ ವಿರುದ್ಧವೂ ಅಲ್ಲ, ಯಾವ ಸಂಶಯಕ್ಕೂ ಎಡೆಮಾಡಿ ಕೊಡದ, ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತವಾದದ್ದೇ ನೂತನ ಶಿಕ್ಷಣ ನೀತಿ. ಇಂಥ ನೀತಿಯ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡಿ ಯಾರೂ ಹಳಿತಪ್ಪಿಸಬಾರದು. ʼಇದು ರಾಷ್ಟ್ರ ನಿರ್ಮಾಣಕ್ಕಾಗಿ ರೂಪಿತವಾದ ರಾಷ್ಟ್ರೀಯ ಶಿಕ್ಷಣ ನೀತಿʼ ಎಂದು ಸಚಿವರು ಮನವಿ ಮಾಡಿದರು.

    ಅಭಿವೃದ್ಧಿಯ ದಿಕ್ಸೂಚಿ:

    ಬೆಂಗಳೂರಿನ ಟಿ.ಜಾನ್ ಕಾಲೇಜ್ʼನಲ್ಲಿಂದು ಹಮಿಕೊಳ್ಳಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ತಜ್ಞರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು; “ರಾಷ್ಟ್ರೀಯ ಶಿಕ್ಷಣ ನೀತಿಯು ಕರ್ನಾಟಕವಷ್ಟೇ ಅಲ್ಲ, ಇಡೀ ದೇಶದ ಸಮಗ್ರ ಅಭಿವೃದ್ಧಿಗೆ ಸ್ಪಷ್ಟ ದಿಕ್ಸೂಚಿ ಆಗಿದೆ” ಎಂದು ಪ್ರತಿಪಾದಿಸಿದರು.

    ಹೊಸ ಶಿಕ್ಷಣ ನೀತಿ ಭಾರತದ ಮುನ್ನಡೆಯ ದಿಕ್ಸೂಚಿ. ಶಿಕ್ಷಣ ನೀತಿಯ ಭವಿಷ್ಯದ ಭಾರತದ ಅಡಿಪಾಯ. ಹೀಗಾಗಿ ಶಿಕ್ಷಣ ನೀತಿ ಜಾರಿಯ ಪ್ರಕ್ರಿಯೆ ರಾಜ್ಯ ಸರಕಾರ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಂಡಿದೆ ಎಂದು ಅವರು ನುಡಿದರು.

    ರಾಷ್ಟ್ರೀಯ ಶಿಕ್ಷಣ ನೀತಿ ರಾಷ್ಟ್ರೀಯ ಅಗತ್ಯ, ನಮ್ಮ ರಾಜ್ಯದ ಅಗತ್ಯ ಮತ್ತು ಸಮಾಜದ ಅಗತ್ಯ ಎಂಬುದರಲ್ಲಿ ಎರಡು ಮಾತೇ ಇಲ್ಲ. ಭಾರತ ಈಗ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಹಾಗಾದರೆ, ಅಭಿವೃದ್ಧಿ ಹೊಂದಿದ ದೇಶ ಆಗುವುದು ಯಾವಾಗ? ಅದಕ್ಕೆ ಉತ್ತರ ಈ ಶಿಕ್ಷಣ ನೀತಿಯಲ್ಲಿದೆ” ಎಂದು ಸಚಿವರು ಹೇಳಿದರು.

    ಉತ್ಪಾದನೆ, ಕೈಗಾರಿಕೆ, ಕೃಷಿ, ತಂತ್ರಜ್ಞಾನ, ಆವಿಷ್ಕಾರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕ ಬಹುದೊಡ್ಡ ಬದಲಾವಣೆ ಕಾಣುತ್ತಿದೆ. ಒಮ್ಮೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದರೆ, ಇದರ ವೇಗ ಮತ್ತಷ್ಟು ಹೆಚ್ಚಿ ಆಮೂಲಾಗ್ರ ಬದಲಾವಣೆ, ಅಭಿವೃದ್ಧಿಗೆ ಬೃಹತ್ ಬದಲಾವಣೆ ಕಂಡು ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

    ವೃತ್ತಿಪರ ಮತ್ತು ಕೌಶಲ್ಯಪರ ಶಿಕ್ಷಣ ನೀತಿ

    ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಏರ್ಪಡಿಸಿದ್ದ ಎನ್ಇಪಿ ಜಾರಿ ಕಾರ್ಯಾಗಾರದಲ್ಲಿ ಮಾತನಾಡಿದ ಡಾ.ಅಶ್ವತ್ಥನಾರಾಯಣ ಅವರು; ಎಲ್ಲ ಕ್ಷೇತ್ರಗಳಲ್ಲೂ ಈಗ ವೃತ್ತಿಪರತೆ ಇರುವ ಕುಶಲ ಮಾನವ ಸಂಪನ್ಮೂಲದ ಅಗತ್ಯವಿದೆ. ಈ ಬೇಡಿಕೆಗೆ ತಕ್ಕಂತೆ ಹೊಸ ಶಿಕ್ಷಣ ನೀತಿ ಅಪಾರ ಕೊಡುಗೆ ನೀಡಲಿದೆ ಎಂದರು.

    ಶಿಕ್ಷಣ ನೀತಿ ಜಾರಿ ಪ್ರಕ್ರಿಯೆಯಲ್ಲಿ ಶಿಕ್ಷಕರು, ಅಧ್ಯಾಪಕರ ಪಾತ್ರ ಬಹಳ ದೊಡ್ಡದು. ಎಲ್ಲಿಯೂ ನೀತಿ ಉದ್ದೇಶಕ್ಕೆ ಭಂಗ ಬಾರದಂತೆ ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಇಡೀ ನೀತಿಯನ್ನು ಎಲ್ಲರೂ ಸಮಗ್ರವಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.

    ಟಿ ಜಾನ್ ಕಾಲೇಜು ಕಾರ್ಯಕ್ರಮದಲ್ಲಿ ಟಿ ಜಾನ್ ಕಾಲೇಜಿನ ಅಧ್ಯಕ್ಷ ಡಾ.ಥಾಮಸ್ ಟಿ.ಜಾನ್, ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶ್ರೀನಿವಾಸಯ್ಯ ಹಾಗೂ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣ ತಲವಾರ್, ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲಾ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಾ.ರಘು ಅಕಮಂಚಿ ಹಾಜರಿದ್ದರು

    13ರಿಂದ 24 ರವರೆಗೆ ವಿಧಾನಸಭೆ ಅಧಿವೇಶನ; ಶಾಸಕರು ಮತ್ತು ಸಚಿವರಿಗೆ ರಜೆ ಇಲ್ಲ

    BENGALURU SEPT 8

    ಇದೇ 13ರಿಂದ 24 ರವರೆಗೆ ವಿಧಾನಸಭೆ ಅಧಿವೇಶನ ನಡೆಯಲಿದ್ದು,ಶಾಸಕರು ಮತ್ತು ಸಚಿವರಿಗೆ ರಜೆ ಇಲ್ಲ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.

    ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, 24ರಂದು ಶುಕ್ರವಾರ ಮಧ್ಯಾಹ್ನ ಜಂಟಿ ಅಧಿವೇಶನ ನಡೆಯುತ್ತದೆ ಎಂದು ಮಾಹಿತಿ ನೀಡಿದರು.

    ಜಂಟಿ ಅಧಿವೇಶನದಲ್ಲಿ ಸಂಸದೀಯ ಮೌಲ್ಯಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಅಧಿವೇಶನಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಆಹ್ವಾನಿಸುತ್ತೇವೆ. ಈ ಬಗ್ಗೆ ಈಗಾಗಲೇ ಸಿಎಂ ಹಾಗೂ ವಿಧಾನ ಪರಿಷತ್ ಸಭಾಪತಿಯವರ ಜತೆ ಚರ್ಚೆ ನಡೆಸಲಗಿದೆ ಎಂದು ಅವರು ತಿಳಿಸಿದರು.

    ಇದು ಅತ್ಯಂತ ಮಹತ್ವದ ಅಧಿವೇಶನ. ಅನೇಕ ಮಸೂದೆ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಕಲಾಪದ ವೇಳೆ ಸದಸ್ಯರು ರಜೆ ಕೇಳಬಾರದು. ಎಲ್ಲರೂ ಕಡ್ಡಾಯವಾಗಿ ಹಾಜರಾಗಲೇಬೇಕು ಎಂದ ಸ್ಪೀಕರ್‌ ಅವರು; ಕೋರಂ ಕೊರತೆ ಕಾಣಿಸಿಕೊಳ್ಳಬಾರದು. ಪ್ರಶ್ನೆ ಕೇಳುವವರು ಹಾಗೂ ಉತ್ತರ ಹೇಳುವವರು ಇಲ್ಲ ಎನ್ನುವಂಥ ಪರಿಸ್ಥಿತಿ ಉಂಟಾಗಬಾರದು. ಕಲಾಪದಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು ಹಾಗೂ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.

    ಈ ಹತ್ತನೇ ಅಧಿವೇಶನವನ್ನು ಗಂಭೀರವಾಗಿ ನಡೆಸಲು ನಿರ್ಧರಿಸಿದ್ಧೇವೆ. ಯಾರೂ ಗೈರಾಗಬಾರದು. ಮಂತ್ರಿಗಳು ಯಾವುದೋ ನೆಪವೊಡ್ಡಿ ರಜೆ ಕೇಳಬೇಡಿ. ಅಗತ್ಯವಿದ್ದಲ್ಲಿ ಸಹಕಾರ ನೀಡಲಾಗುವುದು. ಕಡ್ಡಾಯ ಹಾಜರಾತಿ ಖಚಿತಪಡಿಸುವಂತೆ ಈಗಾಗಲೇ ಎಲ್ಲ ಪಕ್ಷಗಳ ವಿಪ್​ಗಳಿಗೂ ತಿಳಿಸಲಾಗಿದೆ ಎಂದು ಸಭಾಧ್ಯಕ್ಷರು ವಿವರಿಸಿದರು.

    ಅತ್ಯುತ್ತಮ ಶಾಸಕ ಪ್ರಶಸ್ತಿ

    ರಾಜ್ಯ ಸರ್ಕಾರದಿಂದ ನಮಗೆ 18 ಬಿಲ್‌ಗಳು ಬಂದಿವೆ. ಮೊದಲೇ‌ ಬಿಲ್ ಬರಬೇಕೆಂದು ಸರ್ಕಾರಕ್ಕೆ ತಿಳಿಸಿದ್ದೆ. ಹಲವಾರು ಪ್ರಮುಖ ವಿಧೇಯಕಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕಿದೆ. ಹೀಗಾಗಿ ಎಲ್ಲರೂ ಹಾಜರಿದ್ದು ಅರ್ಥಪೂರ್ಣವಾಗಿ ಚರ್ಚೆ ನಡೆಸಬೇಕು. ಹೀಗಾಗಿ ಅಧಿವೇಶನದ ವೇಳೆ ಯಾರೂ ರಜೆ ಕೇಳದಂತೆ ತಿಳಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವರ ಗಮನಕ್ಕೆ ಈ ವಿಷಯ ತರಲಾಗಿದೆ ಎಂದು ಅವರು ವಿವರಗಳನ್ನು ನೀಡಿದರು.

    ಸೆ.24ರಂದು ವಿಶೇಷ ಜಂಟಿ ಅಧಿವೇಶನ ಕರೆಯಲಾಗುತ್ತದೆ. ಅಲ್ಲಿ ಸಂಸದೀಯ ಮೌಲ್ಯಗಳ ಬಗ್ಗೆ ಚರ್ಚೆ ಮಾಡಲಾಗುವುದು. ಬಹುಮುಖ್ಯವಾಗಿ ಅಧಿವೇಶನದ ಕೊನೆಯ ಭಾಗದಲ್ಲಿ ಪ್ರಶಸ್ತಿ ಕೊಡುವ ಬಗ್ಗೆ ಮಾತನಾಡಿದ್ದು, ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಡುವ ಬಗ್ಗೆ ಚರ್ಚೆ ನಿರ್ಧರಿಸಲಾಗಿದೆ ಸ್ಪೀಕರ್‌ ಅವರು ತಿಳಿಸಿದರು.

    ನೀತಿ ನಿರೂಪಣಾ ಸಮಿತಿಯ ವಿಚಾರಗಳನ್ನು ಅಧಿವೇಶನದ ವೇಳೆ ಅಂತಿಮಗೊಳಿಸುತ್ತೇವೆ. ಕಾನ್ಸ್ಟಿಟ್ಯೂಷನಲ್ ಕ್ಲಬ್ ವಿಚಾರವನ್ನು ಕೂಡಾ ಚರ್ಚೆ ಮಾಡುತ್ತೇವೆ. ಈ ಬಾರಿ ಅಧಿವೇಶನದಲ್ಲಿ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಇದೆ. ಆದರೆ, ಹಾಗೆಂದ ಮಾತ್ರಕ್ಕೆ ಅಧಿವೇಶನದ ವೇಳೆ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಬರುವುದು ಬೇಡ ಎಂದು ಸ್ಪೀಕರ್‌ ಹೇಳಿದರು.

    ವಿಧಾನ ಪರಿಷತ್ ಸಭಾಪತಿಗೆ ಸರಕಾರಿ ಮನೆ ನೀಡದೇ ಇರುವ ಬಗ್ಗೆ ಮಾತನಾಡಿದ ಕಾಗೇರಿ ಅವರು, ಶಾಸಕಾಂಗಕ್ಕೆ ಸರಕಾರಿ ‌ಮನೆಗಳ ಕೊರತೆ ಇದೆ. ನ್ಯಾಯಾಂಗಕ್ಕೆ ನಾವು ಕೆಲ ಮನೆಗಳನ್ನು ಬಿಟ್ಟುಕೊಟ್ಟಿದ್ದೇವೆ. ಸಿಎಂ, ಸಚಿವರು, ಶಾಸಕಾಂಗದವರಿಗೆ ನಿಗದಿತ ಮನೆಗಳನ್ನು ನಿಗದಿಪಡಿಸುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಸಿಎಂ ಅವರು ಈ ಬಗ್ಗೆ ಗಮನ ಹರಿಸುತ್ತಾರೆ ಎಂದು ತಿಳಿಸಿದರು.

    ಶಿಕ್ಷಣ ಕ್ಷೇತ್ರಕ್ಕೆ ರಾಷ್ಟ್ರೋತ್ಥಾನ ಪರಿಷತ್ ಮಹತ್ತರ ಕೊಡುಗೆ

    MYSURU SEPT 8

    ಶಿಕ್ಷಣ ಕ್ಷೇತ್ರಕ್ಕೆ ರಾಷ್ಟ್ರೋತ್ಥಾನ ಪರಿಷತ್ ಮಹತ್ತರ ಕೊಡುಗೆ ನೀಡುತ್ತಾ ಬಂದಿದೆ. ಸಂಘದ ಸೇವೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಹರಡಿದೆ ಎಂದು ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬಣ್ಣಿಸಿದರು.

    ವಿಜಯನಗರ 4ನೇ ಹಂತದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲಾ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸಮಾಜದ ಎಲ್ಲಾ ವರ್ಗದವರಿಗೆ ಶಿಕ್ಷಣ ನೀಡುತ್ತಿರುವ ರಾಷ್ಟ್ರೋತ್ಥಾನದ ಕಾರ್ಯವನ್ನು ಎಷ್ಟು ಬಣ್ಣಿಸಿದರು ಸಾಲದು. ಶಿಕ್ಷಣದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಕೂಡ ಸಂಘ ತೊಡಗಿಕೊಂಡಿದೆ ಎಂದು ಹೇಳಿದರು.

    ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿರುವ ಇಂದಿನ ಪೀಳಿಗೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿತ್ತುವ ಕೆಲಸವನ್ನು ರಾಷ್ಟ್ರೋತ್ಥಾನ ಪರಿಷತ್ ತಮ್ಮ ವಿದ್ಯಾಕೇಂದ್ರಗಳ ಮೂಲಕ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

    ಇಂದಿನ ದಿನಗಳಲ್ಲಿ ಶಿಕ್ಷಣ ಎಂದರೆ ಕೇವಲ ಸರ್ಟಿಫಿಕೇಟ್ ಕೋರ್ಸ್ ಎಂಬಂತಾಗಿದೆ. ‌ಮಾರ್ಕ್ಸ್ ಗಷ್ಟೇ ಸೀಮಿತವಾಗುತ್ತಿರುವ ಇಂದಿನ ಶೈಕ್ಷಣಿಕ ಪದ್ಧತಿಯಲ್ಲಿ ಭಾರತೀಯ ಪರಂಪರೆ ಮಾಯವಾಗುತ್ತಿದ್ದು ವಿದೇಶಿ ಸಂಸ್ಕೃತಿ ಮೈಗೂಡುತ್ತಿದೆ. ಇಂತಹ ಸಂಧರ್ಭದಲ್ಲಿ ನಮ್ಮ ಮಕ್ಕಳಲ್ಲಿ ಭಾರತೀಯ ಸಂಸ್ಕಾರ ಬೆಳೆಸುವ ಕಾಯಕದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳು ಮುಂದಾಗುತ್ತಿದ್ದು ಈ ರೀತಿಯ ಕಾರ್ಯಗಳು ಹೆಚ್ಚು ಹೆಚ್ಚು ನಡೆಯಲಿ ಎಂದು ನಾನು ಈ ಸಂದರ್ಭದಲ್ಲಿ ಆಶಿಸುತ್ತೇನೆ.

    ಮನುಷ್ಯನಿಗೆ ಕೊಡುವಂತಹ ಸಂಸ್ಕಾರಗಳಲ್ಲಿ ಅಕ್ಷರಾಭ್ಯಾಸ ಕೂಡ ಒಂದು ಸಂಸ್ಕಾರ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದರೆ ಅದಕ್ಕೆ ಅಕ್ಷರಾಭ್ಯಾಸವೇ ಮೊದಲ ಮೆಟ್ಟಿಲು. ಹಿಂದೆ ಗುರುಕುಲದಲ್ಲಿ ಅಕ್ಷರಾಭ್ಯಾಸ ಮಾಡಿಸಲಾಗುತ್ತಿತ್ತು.‌ ಆದರೆ ‌ಬದಲಾದ ಶೈಕ್ಷಣಿಕ ಜಗತ್ತಿನಲ್ಲಿ ಗುರುಕುಲ ಹೋಗಿ ಕಾನ್ವೆಂಟ್ ಗಳು ಕಾಲಿಟ್ಟಿವೆ. ಸ್ಕೂಲ್ ಗೆ ಮಕ್ಕಳನ್ನು ಸೇರಿಸುತ್ತಿದ್ದಂತೆ ಅವರಿಗೆ ಟೈ, ಬೆಲ್ಟ್ ಹಾಕಿಸಿ, ಬ್ಯಾಗ್ ತಗಲಾಕಿಸಿ ಶಾಲೆಗೆ ಕಳುಹಿಸಲಾಗುತ್ತದೆ. ಕ್ಲಾಸ್ ನಲ್ಲಿ ಟೀಚರ್ ಸಹ ಎಬಿಸಿಡಿಯಿಂದ ಅಕ್ಷರ ಶುರು ಮಾಡುತ್ತಾರೆ.‌ ಆದರೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಸೇರುವ ಮಕ್ಕಳಿಗೆ ಕನ್ನಡದಲ್ಲಿ ಅಕ್ಷರಾಭ್ಯಾಸ ಮಾಡುವ ಮೂಲಕ ಶಿಕ್ಷಣದ ಜೊತೆಗೆ ಈ ನೆಲದ ಸಂಸ್ಕಾರವನ್ನು ಎಳೆಯ ಮನಸಿನಲ್ಲಿ ಬಿತ್ತುವ ಕೆಲಸವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳು ಮಾಡುತ್ತಿವೆ.

    ಜನಜಾಗೃತಿ, ಜನಶಿಕ್ಷಣ, ಜನಸೇವೆ ಉದ್ದೇಶದಿಂದ ಆರಂಭಗೊಂಡ ರಾಷ್ಟ್ರೋತ್ಥಾನ ಪರಿಷತ್, ಇಂದಿನ ಯುವಪೀಳಿಗೆಯಲ್ಲಿ ರಾಷ್ಟ್ರೀಯ ವಿಚಾರಧಾರೆಗಳನ್ನು ತುಂಬುವ ಕೆಲಸ ಮಾಡುತ್ತಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಶಿಕ್ಷಿತ ಸಮಾಜದ ನಿರ್ಮಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಂಡು ಬರುತ್ತಿದೆ.

    ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳಿದ್ದಾರೆ. ಆದರೆ ಅವರಿಗೆ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಒಂದು ವೇಳೆ ಅವಕಾಶ ಸಿಕ್ಕರೂ ಮುಂದೇನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಆದರೆ ರಾಷ್ಟ್ರೋತ್ಥಾನ ಪರಿಷತ್ ಅಂತಹವರಿಗೆ ಮಾರ್ಗದರ್ಶನ ನೀಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೆಲಸವನ್ನು ಈ ಸಂಘಸಂಸ್ಥೆ ಮಾಡುತ್ತಿದೆ.

    ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆದುಕೊಳ್ಳುವುದು ಬಡ ಮಕ್ಕಳಿಗೆ ಅಸಾಧ್ಯ ಎಂಬುದನ್ನು ರಾಷ್ಟ್ರೋತ್ಥಾನ ಪರಿಷತ್ ಹೋಗಲಾಡಿಸಿದೆ. ಆರ್ಥಿಕವಾಗಿ ಹಿಂದುಳಿದ ಅದರಲ್ಲೂ ಗ್ರಾಮೀಣ ಮಕ್ಕಳಿಗೆ ಐಐಟಿ, ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಮೂಲಕ ಗ್ರಾಮೀಣ ಪ್ರತಿಭೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುತ್ತಿರುವ ಈ ಪುಣ್ಯದ ಕಾರ್ಯವನ್ನು ಎಷ್ಟು ಕೊಂಡಾಡಿದರೂ ಸಾಲದು.‌

    ಈಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೂತನ ವಿದ್ಯಾಕೇಂದ್ರ ಆರಂಭಿಸುವ ಮೂಲಕ ಇಲ್ಲಿನ ಮಕ್ಕಳಿಗೂ ಭಾರತೀಯ ಸಂಸ್ಕಾರವನ್ನು ಧಾರೆಯೆರುವ ಈ ಪವಿತ್ರ ಕಾರ್ಯ ಯಶಸ್ವಿಯಾಗಿ ಈ ಸೇವೆ ಮತ್ತಷ್ಟು ವಿಸ್ತಾರಗೊಳ್ಳಲಿ ಎಂದು ನಾನು ಈ ಸುಸಂದರ್ಭದಲ್ಲಿ ಆಶಿಸುತ್ತೇನೆ ಎಂದು ಹೇಳಿದರು.

    ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ನಿಯಂತ್ರಣದಲ್ಲಿ ಯಾವುದೇ ರಾಜಿ ಇಲ್ಲ-ಮುಖ್ಯಮಂತ್ರಿ

    BENGALURU SEP 6

    ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ನಿಯಂತ್ರಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

    ರಾಜ್ಯದ ಪೊಲೀಸ್ ಇಲಾಖೆ ಅತ್ಯಂತ ದಕ್ಷ, ನಿಷ್ಪಕ್ಷಪಾತ ಹಾಗೂ ನಿಷ್ಠುರವಾಗಿದ್ದು, ಈ ಪರಂಪರೆಯನ್ನು ಮುಂದುವರೆಸಬೇಕು. ಆಗ ಮಾತ್ರ ಜನಸಾಮಾನ್ಯರಿಗೆ ಸುರಕ್ಷತೆ ಹಾಗೂ ಆತ್ಮಸ್ಥೈರ್ಯ ನೀಡಲು ಸಾಧ್ಯ. ಕಾನೂನು ಸುವ್ಯವಸ್ಥೆಯ ಜೊತೆಗೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಜನರ ಸೇವೆ ಮಾಡಲು ಪೊಲೀಸರಿಗೆ ಅಧಿಕಾರವನ್ನು ನೀಡಲಾಗಿದೆ. ಈ ಅಧಿಕಾರವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡುವ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ತಿಳಿಸಿದರು.

    ಬಹಳ ವರ್ಷಗಳ ನಂತರ ಮೊದಲ ಬಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ವಿಧಿವಿಜ್ಞಾನ ಪ್ರಯೋಗಾಲಯಗಳು, ನೇಮಕಾತಿ ಹಾಗೂ ವಸತಿ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

    ಅಪರಾಧಿಗಳೊಂದಿಗೆ ಪೊಲೀಸರು ಶಾಮೀಲಾಗಬಾರದು, ನಗರ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ಪೊಲೀಸರು ಕೈಜೋಡಿಸದೇ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಜನಸಾಮಾನ್ಯರೊಂದಿಗೆ ಹಾಗೂ ತಮ್ಮ ಅಧೀನದಲ್ಲಿ ಕೆಲಸ ಮಾಡುವ ಪೇದೆಗಳನ್ನೂ ಸಹ ಗೌರವದಿಂದ ನಡೆಸಿಕೊಳ್ಳಬೇಕು. ಅವರೊಂದಿಗೆ ವ್ಯವಹರಿಸುವಾಗ ಭಾಷೆ ನಿಯಂತ್ರಣದಲ್ಲಿರಲಿ ಎಂದು ಸಲಹೆ ನೀಡಿದರು.

    ಇಲಾಖೆಯ ಎಲ್ಲ ಹಂತಗಳಲ್ಲಿಯೂ ವರದಿ ಮಾಡುವ ವ್ಯವಸ್ಥೆ ಉತ್ತಮವಾಗಿರಬೇಕು. ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ಹಿರಿಯ ಅಧಿಕಾರಿಗಳು ಸುದೀರ್ಘವಾಗಿ ಪರಿಶೀಲಿಸಬೇಕು. ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಿ ಅಪರಾಧಿಗಳಲ್ಲಿ ಭಯವುಂಟು ಮಾಡಬೇಕು. ಇಲಾಖೆಯ ಆಂತರಿಕ ಭದ್ರತಾ ವಿಭಾಗವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ತನ್ನ ಬಾಹುಗಳನ್ನು ಇನ್ನಷ್ಟು ವಿಸ್ತರಿಸಬೇಕಿದೆ ಎಂದರು.

    ಡ್ಯಾಶ್ ಬೋರ್ಡ್ :ಪೊಲೀಸ್ ಮಹಾ ನಿರ್ದೇಶಕರಿಂದ ಹಿಡಿದು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮದೇ ಡ್ಯಾಶ್ ಬೋರ್ಡ್ ಗಳನ್ನು ಹೊಂದಿರಬೇಕು. ಎಲ್ಲ ಮಾದರಿಯ ಅಪರಾಧಗಳ ಪಟ್ಟಿ ಪತ್ತೆಯಾಗಿರುವ ಪ್ರಕರಣಗಳು, ದಸ್ತಗಿರಿ ಆಗಿರುವ ಸಂಖ್ಯೆ ಮತ್ತು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸುವ ವ್ಯವಸ್ಥೆಯನ್ನು ಡ್ಯಾಶ್ ಬೋರ್ಡ್ ಮೂಲಕ ಮಾಹಿತಿ ಲಭ್ಯವಿರಬೇಕು.

    ಇಲಾಖೆಯ ಆಧುನೀಕರಣ :ಆರ್ಥಿಕ ಮತ್ತು ಸೈಬರ್ ಕ್ರೈಂ ನಿಯಂತ್ರಣಕ್ಕೆ ಪ್ರತ್ಯೇಕ ತಾಂತ್ರಿಕ ವಿಭಾಗವನ್ನು ರಚಿಸುವಂತೆ ಸೂಚಿಸಿದರು. ಐಎಸ್ ಡಿಯ ಬಲವರ್ಧನೆ, ಕರಾವಳಿಯಲ್ಲಿ ನಿಗಾ ವಹಿಸಲು ಹೈಸ್ಪೀಡ್ ಬೋಟುಗಳ ಖರೀದಿ, ಮಧ್ಯಮ ಮಟ್ಟದ ಅಧಿಕಾರಿಗಳಿಗೆ ಎನ್ ಡಿ ಎ ಮಟ್ಟದ ತರಬೇತಿ ಕೇಂದ್ರ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಬಂಧೀಖಾನೆ, ಅಗ್ನಿಶಾಮಕ ದಳದ ಸುಧಾರಣೆಯಾಗಬೇಕಲ್ಲದೆ ಗುಪ್ತಚರ ವಿಭಾಗ ಮತ್ತು ಸಿಓಡಿ ವಿಭಾಗದ ಪುನರ್ ರಚನೆ ಹಾಗೂ ತಾಂತ್ರಿಕವಾಗಿ ಮೇಲ್ದರ್ಜೆಗೇರಿಸುವುದು ಅಗತ್ಯವಿದೆ ಎಂದರು.

    ಡ್ರಗ್ಸ್ ಮಾಫಿಯಾ :ಕಳೆದ ಎರಡು ವರ್ಷಗಳಲ್ಲಿ ಮಾದಕ ವಸ್ತು ಮಾಫಿಯಾವನ್ನು ನಿಯಂತ್ರಣಕ್ಕೆ ತರಲಾಗಿದೆ. ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೆಂದೂ ಡ್ರಗ್ಸ್ ಪತ್ತೆಯಾಗಿರಲಿಲ್ಲ. ಇದನ್ನು ಮುಂದುವರೆಸಬೇಕು. ಕ್ಲಬ್ ಗಳಲ್ಲಿ ಜೂಜಾಟ, ಜಿಲ್ಲೆಗಳಲ್ಲಿ ಮರಳು ಮಾಫಿಯಾವನ್ನು ಪೊಲೀಸರು ನಿಗ್ರಹಿಸಬೇಕು. ಈ ಬಗ್ಗೆ ಸರ್ಕಾರ ಝೀರೋ ಟಾಲರೆನ್ಸ್ ಇರುವುದಾಗಿ ಈ ಹಿಂದೆಯೇ ಸ್ಪಷ್ಟಪಡಿಸಲಾಗಿದೆ.

    ಅಪರಾಧ ನಿಯಂತ್ರಣ ಮತ್ತು ಸಾಮಾಜಿಕ – ಕಾನೂನು ವ್ಯವಸ್ಥೆಗೆ ನೇರ ಸಂಪರ್ಕವಿದ್ದು , ಅಪರಾಧಗಳನ್ನು ನಿಯಂತ್ರಿಸಿದಾಗ ಮಾತ್ರ ಕಾನೂನು ವ್ಯವಸ್ಥೆ ಸುಸ್ಥಿತಿಗೆ ಬರುತ್ತದೆ. ಪೊಲೀಸ್ ಇಲಾಖೆಯಲ್ಲಿ ವ್ಯವಸ್ಥೆಯ ಸುಧಾರಣೆಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ.

    ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ ದೇಶ ವಿದ್ರೋಹಿ ಚಟುವಟಿಕೆಗಳ ನಿಗ್ರಹ, ಜಿಲ್ಲಾ ಮಟ್ಟದಲ್ಲಿ ಅಪರಾಧಗಳ ಕುರಿತ ಸಭೆ ನಡೆಸಬೇಕು, ಪೊಲೀಸ್ ಇಲಾಖೆ ಸರ್ಕಾರಕ್ಕೆ ಗೌರವ ತರುವಂತೆ ನಡೆದುಕೊಳ್ಳಬೇಕು ಎಂದರು.

    ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಕಾಫಿ ಟೇಬಲ್ ಬುಕ್, ಸೇವೆಯಲ್ಲಿದ್ದಾಗ ಮರಣ ಹೊಂದಿದ ಇಲಾಖೆಯ ನೌಕರರಿಗೆ ಒದಗಿಸಿರುವ ಪರಿಹಾರದ ಕುರಿತ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದರು ಹಾಗೂ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಮುಖ ಗುರುತಿಸುವ ವ್ಯವಸ್ಥೆಗೆ (ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್) ಚಾಲನೆ ನೀಡಿದರು.

    ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಕೋವಿಡ್ ಹಿನ್ನೆಲೆ : ಷರತ್ತುಬದ್ಧ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಿದ ಸರಕಾರ

    BENGALURU SEP 5
    ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯ ಸರಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಕೊನೆಗೂ ಷರತ್ತುಬದ್ಧ ಅನುಮತಿ ನೀಡಿದೆ.

    ಐದು ದಿನಗಳ ಗಣೇಶೋತ್ಸವಕ್ಕೆ ಮಾತ್ರ ಅನುಮತಿ ನೀಡಿರುವ ಸರಕಾರವು, ಕೋವಿಡ್‌ ಸೋಂಕು ಇರುವ ಜಿಲ್ಲೆಗಳಲ್ಲೂ ಸಾರ್ವಜನಿಕ ಉತ್ಸವಕ್ಕೆ ಅನುಮತಿ ನೀಡಿದೆ.

    ಭಾನುವಾರ ಸಂಜೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಬ್ಬದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕೋವಿಡ್‌ ನಿಯಮಗಳನ್ನು ಉಲ್ಲಂಘನೆ ಮಾಡುವಂತಿಲ್ಲ ಎಂದು ಕಂದಾಯ ಸಚಿವ ಆರ್.‌ಅಶೋಕ್‌ ಸಭೆಯ ಬಳಿಕ ತಿಳಿಸಿದರು.

    ಐದು ದಿನ ಮಾತ್ರ ಗಣೇಶೋತ್ಸವಕ್ಕೆ ಅವಕಾಶ ನೀಡಿರುವ ಸರಕಾರವು, ಸ್ಥಳೀಯ ಪೊಲೀಸ್ ಇಲಾಖೆ & ಸ್ಥಳೀಯ ಆಡಳಿತ ಸಂಸ್ಥೆಗಳು ಹೇಳುವ ಎಲ್ಲ ನಿಯಮ, ಷರತ್ತುಗಳನ್ನು ಕಡ್ಡಾಯವಾಗಿ ಪಾಳಿಸಬೇಕು. ಆದರೆ, ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿಷೇಧ ವಿಧಿಸಲಾಗಿದೆ.

    ವಿದ್ಯೆಗೆ ವಿನಯವೆ ಭೂಷಣ

    ಸುಮಾ ವೀಣಾ

    “ಎಲ್ಲಾನು ಬಲ್ಲೆ ಎಂಬುವಿರಲ್ಲಾ ಅವಗುಣ ಬಿಡಲಿಲ್ಲ …” ಇದು ಪುರಂದರದಾಸರ ಕೀರ್ತನೆಯ ಸಾಲು. ಈ ಸಾಲಿನ ಜೊತೆಗೆ ಶ್ವೇತಕೇತು ಎಂಬ ಹೆಸರು ನೆನಪಾಗುತ್ತದೆ. ಈತ ಒಬ್ಬ ಋಷಿ. ಗೌತಮ ವಂಶದ ಉದ್ಧಾಲಕನ ಮಗ ಈತನಿಗೆ ಅರುಣಿಯೆಂಬ ಹೆಸರೂ ಇದೆ.ಗುರುಕುಲದಿಂದ ಶಿಕ್ಷಣ ಮುಗಿಸಿ ಬರುವಾಗ ಅಹಂಭಾವದ ಮೂರ್ತಿಯಾಗಿರುತ್ತಾನೆ. ಸ್ವತಃ ತಂದೆಗೇ  ನಮಸ್ಕರಿಸದೆ ಅವಿನಯ ತೋರಿಸುತ್ತಾನೆ.  ತಂದೆ ಶ್ವೇತಕೇತುನ್ನು ಕುರಿತು “ಎಲ್ಲಾ ವಿದ್ಯೆಗಳನ್ನು ಕಲಿತಿರುವೆಯಾ” ಎಂದರೆ ಅಹಂಕಾರದಿದ  ಹ್ಞೂಂಕರಿಸುತ್ತಾನೆ. 

    ಆದರೂ ತಂದೆ “ತಾಳ್ಮೆಯಿಂದ ಏನನ್ನು ಸಂಪೂರ್ಣವಾಗಿ ತಿಳಿದ ಮೇಲೆ ಇನ್ನೇನನ್ನೂ ತಿಳಿಯುವುದರ ಆವಶ್ಯಕತೆಯಿರುವುದಿಲ”ಇಲ್ಲ ಎಂದಾಗ ಶ್ವೇತಕೇತು ತಬ್ಬಿಬ್ಬಾಗುತ್ತಾನೆ. ಉತ್ತರ ಹೊಳೆಯದೆ ಬೆವರಿ ತಲೆತಗ್ಗಿಸಿ ತಂದೆಯಲ್ಲಿ ಕ್ಷಮೆ ಕೇಳುತ್ತಾನೆ. ತಂದೆ ಬೇಸರಿಸದೆ “ ನಿನ್ನನ್ನು ನೀನು ತಿಳಿದ ನಂತರ ಇನ್ನೇನನ್ನೂ ತಿಳಿಯುವುದರ ಆವಶ್ಯಕತೆಯಿಲ್ಲ” ಎನ್ನುತ್ತಾನೆ. 

    ಎಲ್ಲವೂ ತಿಳಿದಿದೆ ಎಂಬುದು ಕೇವಲ ಭ್ರಮೆ. ಕೆಲವರಲ್ಲಿ  ಇಂತಹದೊಂದು  ಹೆಚ್ಚುಗಾರಿಕೆ  ಆವರಿಸಿ ಗರ್ವಿಗಳಾಗಿ   ಮರೆದಾಡುತ್ತಾರೆ.  ಯಾರೂ ಇಂಥ ಗರ್ವಕ್ಕೆ ಸಿಲುಕಬಾರದು  ಇವರು ಅರ್ಧಂಬರ್ಧ ತುಂಬಿದ ತಂಬಿಗೆಗೆ ಸಮ ಎನ್ನಬಹುದು ಎಲ್ಲಾ ತಿಳಿದು ನಿರಹಂಕಾರಿಗಳಾಗಿ  ಕಲಿಯ ಬೇಕಾಗಿರುವ ಜ್ಞಾನಶಾಖೆಗಳತ್ತ ಮುಖ ಮಾಡುವವರನ್ನು  ತುಮಬಿದ ತಂಬಿಗೆಗೆ ಹೋಲಿಸಬಹುದು.

    ‘ಜ್ಞಾನ’ ಎಂಬ ಸಾಗರದ ಅಂತರಾಳವನ್ನು ಹೊಕ್ಕವರಿಲ್ಲ ಅದು ಎಲ್ಲರಿಗೂ ಧಕ್ಕುವುದೂ ಇಲ್ಲ.ಹೊಳೆಗೆ ನೀರು ತರಹೋದವರು ತೆಗೆದುಕೊಂಡು ಹೋದ ಬಿಂದಿಗೆಯಲ್ಲಿ ಮಾತ್ರ ನೀರು ತರಲು ಸಾಧ್ಯ.ಸಂಪೂರ್ಣ ಹೊಳೆ ನೀರನ್ನು ತರಲು ಸಾಧ್ಯವಿಲ್ಲ.  ಹೊಟ್ಟೆ ಹಸಿದಿದೆ ಎಂದು ಮಾಡಿಟ್ಟ ಅಡುಗೆಯೆಲ್ಲವನ್ನು ಊಟ ಮಾಡಲು ಸಾಧ್ಯವೇ? ಇಲ್ಲ. ಹಾಗೆ ಕಲಿಕೆಯೂ.  ಸಾಗರ ಹಿರಿದು ಬೊಗಸೆ ಕಿರಿದು ಎಂಬಂತೆ ಜ್ಞಾನ ಸಾಗರದಲ್ಲಿ ನಮ್ಮ   ಬೊಗಸೆಗೆ ಸಿಗುವುದು  ಅಲ್ಪವೇ ಅಲ್ವ!

    ಅಲ್ಪ ವಿದ್ಯೆ ಕಲಿತು ಎಲ್ಲವೂ  ತಿಳಿದಿದೆ ಎಂದರೆ ‘ಅಲ್ಪವಿದ್ಯೆ ಮಹಾಗರ್ವಿ’ ಎನ್ನಿಸಿಕೊಳ್ಳಬೇಕಾಗುತ್ತದೆ. ಜೀವನ  ಎಂದರೆ ಕಲಿಕೆ, ಜೀವನ ಪಯಣ ಅರ್ಥಾತ್  ಕಲಿಕಾ ಪಯಣ.  ಕಲಿಕೆ ಅಕ್ಷಯವಾದದ್ದು  ಇದಿಷ್ಟೇ ಎನ್ನಲಾಗದು.ಕಲಿಕೆಯಲ್ಲಿ ವಿನಯ ಇರಬೇಕಾಗುತ್ತದೆ.  “ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ ಎಂಬ ಸರ್ವಜ್ಞನ ಮಾತು ಅಕ್ಷರಶಃ ಸತ್ಯ. “ಎಲ್ಲಾ ಗೊತ್ತು” ಎಂಬ ಸ್ವಹಂ ಬಿಟ್ಟು ಗೊತ್ತಿರುವುದರಲ್ಲಿ ಇನ್ನಷ್ಟು ಪರಿಪಕ್ವವಾಗುವುದು ಜಾಣತನ.  ದಡ್ಡತನವಿದ್ದರೂ ನಮ್ಮಲ್ಲಿ ಕ್ಷಮೆಯಿದೆ ಆದರೆ ಉದ್ಧಟತನವಿದ್ದರೆ ನಮ್ಮಲ್ಲಿ ಕ್ಷಮೆ ಇಲ್ಲ  ಅದೂ  ಅರೆಬರೆ ಜ್ಞಾನದಿಂದ  ಸಮಾಜದಲ್ಲಿ  ಬೀಗುತ್ತಾ ಹೋದರೆ ಅದುವೆ ಅವನ ಘನತೆಗೆ   ಚ್ಯುತಿ ತರಬಹುದು .

     ‘ಅಲ್ಪ ವಿದ್ಯೆಯ ಅಹಂ ‘  ಎಂದಿಗೂ ಸಲ್ಲದು. ಇನ್ನೂ ಇನ್ನೂ ಕಲಿಯಬೇಕೆಂಬ ಜ್ಞಾನದಾಹದಲ್ಲಿ  ನಮ್ಮ ಮಹತ್ ಅಡಗಿದೆ. ಈ ಜ್ಞಾನ ಸುಲಭಕ್ಕೆ ಸಿಗುವುದಲ್ಲ ಅದಕ್ಕಾಗಿ ಪರಿಶ್ರಮ ಪಡಬೇಕಾಗುತ್ತದೆ.ಜ್ಞಾನ ಎನ್ನುವುದು ಭೌತಿಕ ಸ್ವತ್ತಲ್ಲ   ಯಾರೂ ಅಪಹರಿಸಲಾರದ  ಮಾನಸಿಕ ಸ್ವತ್ತು.  ಪಡೆದುಕೊಂಡ ಜ್ಞಾನ ಪರ್ದರ್ಶನಕ್ಕೆ ಇಡುವಂಥದಲ್ಲ ಬದಲಾಗಿ ಅದು  ಮುಂದಿನ ಜ್ಞಾನವಿಸ್ತಾರಕ್ಕೆ ನಾಂದಿಯಾಗಬೇಕು. ವಿದ್ಯೆಗೆ ವಿನಯವೇ ಭೂಷಣ  ಎನ್ನುವಂತೆ   ನಿರಹಂಕಾರಿಗಳಾಗಿ  ಇದ್ದುಬಿಡಬೇಕು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ರೈತರ ಶ್ರಮಕ್ಕೆ ಬೆಲೆ ನೀಡಲು ಒತ್ತು: ಮುಖ್ಯಮಂತ್ರಿ ಬೊಮ್ಮಾಯಿ

    BENGALURU SEPT 5

    ಕೃಷಿ ಕ್ಷೇತ್ರ ಬೆಳೆದರೂ, ಕೃಷಿ ಬೆಳೆಸಿದ ರೈತ ಇಂದಿಗೂ ಸಂಕಷ್ಟದಲ್ಲಿದ್ದಾನೆ. ರೈತರ ಶ್ರಮಕ್ಕೆ ಸಂಪೂರ್ಣ ಬೆಲೆ ನೀಡುವ ಕಾಲ ಸನ್ನಿಹಿತವಾಗಿದ್ದು, ಇದಕ್ಕಾಗಿ ಸಮಗ್ರ ಕೃಷಿ ನೀತಿಯಡಿ ಕೊಯ್ಲಿನ ನಂತರದ ನಿರ್ವಹಣೆಗೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು.

    ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ‘ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಕೃಷಿ ಉತ್ಪನ್ನಗಳ ವೈಜ್ಞಾನಿಕ ಸಂಗ್ರಹ, ಸಾಗಾಣಿಕೆ, ಮಾರುಕಟ್ಟೆ ಸೌಲಭ್ಯ ಮತ್ತಿತರ ಸವಲತ್ತುಗಳ ಮೂಲಕ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

    ಕೃಷಿ ವಿಶ್ವವಿದ್ಯಾನಿಲಯಗಳು ತಾವು ಸಂಶೋಧನೆ ಮಾಡಿದ ತಳಿಗಳನ್ನು ರೈತರ ಹೊಲದಲ್ಲಿ ಯಶಸ್ವಿಯಾಗಿ ಬೆಳೆಯಬೇಕು. ವಿಶ್ವವಿದ್ಯಾಲಯಗಳು ತಮ್ಮ ಆವರಣದಿಂದ ಹೊರಬಂದು ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.

    ರೈತರ ಬೆವರು, ಕೂಲಿಕಾರನ ಶ್ರಮದಲ್ಲಿ ದೇವರು ಇದ್ದಾನೆ ಎಂದು ನುಡಿದ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿಯವರು ಹಿಂದೆ ಯಾವುದೇ ಸರ್ಕಾರ, ಪ್ರಧಾನ ಮಂತ್ರಿಗಳು, ಜನನಾಯಕರು, ಹೋರಾಟಗಾರರು ಯೋಚಿಸದಿರುವ ‘ರೈತರ ಆದಾಯ ದ್ವಿಗುಣಗೊಳಿಸುವ ಸಂಕಲ್ಪವನ್ನು ಮಾಡಿದ್ದಾರೆ. ಇದು ಅತ್ಯಂತ ಕಠಿಣ ಸವಾಲಿನ ಹಾದಿಯಾಗಿದ್ದರೂ, ಸವಾಲನ್ನು ಸ್ವೀಕರಿಸಿ ಯೋಜನೆ ರೂಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ರೈತರ ಬದುಕಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನಿಯವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಿ ವರ್ಷಕ್ಕೆ 6 ಸಾವಿರ ರೂ ನೆರವು ನೀಡಿದರು. ರಾಜ್ಯದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಕೂಡಲೇ ಇದಕ್ಕೆ ಹೆಚ್ಚುವರಿಯಾಗಿ ನಾಲ್ಕು ಸಾವಿರ ರೂ. ನೆರವು ಘೋಷಿಸಿದರು.

    ರಾಜ್ಯದಲ್ಲಿಯೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದರು. ಕೃಷಿ ನೀರಾವರಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಜೊತೆಗೆ ಭೂಚೇತನ, ಸುವರ್ಣ ಭೂಮಿ, ಸಾವಯವಕೃಷಿ ಉತ್ತೇಜನ ಮೊದಲಾದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರು. ರೈತನಾಯಕರಾಗಿ ಯಾವ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಿದರೋ, ಮುಖ್ಯಮಂತ್ರಿಯಾಗಿ ಅವುಗಳನ್ನು ಬಗೆಹರಿಸಲು ಪ್ರಯತ್ನಿಸಿದರು. ಪ್ರಧಾನಿಯವರ ನಾಯಕತ್ವದಲ್ಲಿ, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ತಾವೂ ರೈತರ ಹಿತಕ್ಕಾಗಿ ಕಾರ್ಯನಿರ್ವಹಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

    ಈ ವಿದ್ಯಾರ್ಥಿ ವೇತನ ಯೋಜನೆಯ ಹಿನ್ನೆಲೆಯನ್ನು ವಿವರಿಸಿದ ಮುಖ್ಯಮಂತ್ರಿಗಳು ತಾವು ಹಳ್ಳಿಗಳಿಗೆ ಭೇಟಿ ನೀಡಿದಾಗ ರೈತರ ಮಕ್ಕಳು ಹಣಕಾಸಿನ ಕೊರತೆಯ ಕಾರಣ ಎಸ್.ಎಸ್.ಎಲ್.ಸಿ. , ಪಿ.ಯು.ಸಿ.ಗೇ ಓದು ನಿಲ್ಲಿಸಿರುವ ಹಲವಾರು ಪ್ರಕರಣಗಳು ಗಮನಕ್ಕೆ ಬಂದಿತ್ತು. ಈ ಮಕ್ಕಳೂ ವಿದ್ಯಾವಂತರಾದರೆ, ಆ ರೈತರ ಸ್ಥಿತಿಯಲ್ಲೂ ಸುಧಾರಣೆಯಾಗಲು ಸಾಧ್ಯ ಎಂಬ ಚಿಂತನೆಯೊಂದಿಗೆ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಎಸ್ ಎಸ್ ಎಲ್ ಸಿ ನಂತರ ವಿವಿಧ ಕೋರ್ಸ್ ಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಸುಮಾರು 17 ಲಕ್ಷ ವಿದ್ಯಾರ್ಥಿಗಳಿಗೆ ಡಿಬಿಟಿ ಮೂಲಕ ವರ್ಗಾಯಿಸಲಾಗುವುದು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿರುವ ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆಯನ್ನು ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ರೈತರು ಜೊತೆಯಾಗಿ ಸಾಕಾರಗೊಳಿಸುತ್ತಿದ್ದಾರೆ.

    ಕೇಂದ್ರ ಸರ್ಕಾರ ರೈತರ ಸಬಲೀಕರಣಕ್ಕೆ ರೈತರ ಉತ್ಪಾದಕರ ಸಂಘಗಳ ಸ್ಥಾಪನೆ ಮತ್ತು ಚಟುವಟಿಕೆಗಳಿಗೆ 6850 ಕೋಟಿ ರೂ. ಒದಗಿಸಲಾಗಿದೆ. ಮೂಲಸೌಕರ್ಯ ಕೊರತೆಯಿಂದ ಕೃಷಿ ಉತ್ಪನ್ನಗಳು ಹಾಳಾಗಿ ವ್ಯರ್ಥವಾಗುವುದನ್ನು ತಡೆಗಟ್ಟಲು ಆತ್ಮನಿರ್ಭರ್ ಯೋಜನೆಯಡಿ 1.5 ಲಕ್ಷ ಕೋಟಿ ರೂ. ಒದಗಿಸಲಾಗಿದೆ ಎಂದು ವಿವರಿಸಿದರು.

    ಕರ್ನಾಟಕ ಪ್ರಗತಿಪರ ರಾಜ್ಯವಾಗಿದ್ದು, ಕೃಷಿ ವಲಯದಲ್ಲಿಯೂ ಸರ್ಕಾರ ಕೈಗೊಂಡಿರುವ ಹಲವು ಯೋಜನೆಗಳು ಇತರರಿಗೆ ಮಾದರಿಯಾಗಿವೆ. ವಿಶೇಷವಾಗಿ ಡಿಜಿಟಲ್ ಮಾದರಿಗಳನ್ನು ನಾಳೆ, ನಾಡಿದ್ದು ನಡೆಯಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೃಷಿ ಸಚಿವರ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಲಾಗುವುದು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು, ಕರ್ನಾಟಕ ಯಾವುದೇ ಯೋಜನೆಯ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ರಾಜ್ಯದಲ್ಲಿ 750 ರೈತ ಉತ್ಪಾದಕ ಸಂಘಗಳನ್ನು ಸ್ಥಾಪಿಸುವ ಮೂಲಕ ಸಣ್ಣ ರೈತರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

    ಕೇಂದ್ರ ಸರ್ಕಾರವು ಕೃಷಿ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಒಂದು ಜಿಲ್ಲೆ, ಒಂದು ಉತ್ಪನ್ನ ಕಾರ್ಯಕ್ರಮ ರೂಪಿಸಿದೆ. ಇದಲ್ಲದೆ, ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ ಆಯವ್ಯಯದ ಕಾರ್ಯಕ್ರಮಗಳನ್ನು ಹೊರತುಪಡಿಸಿ 1 ಲಕ್ಷ ಕೋಟಿ ರೂ. ಗಳನ್ನು ನಿಗದಿ ಪಡಿಸಿದೆ ಎಂದು ತಿಳಿಸಿದರು.

    ಕೃಷಿ ಸಚಿವ ಬಿ.ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್, ತೋಟಗಾರಿಕಾ ಸಚಿವ ಎಂ. ಮುನಿರತ್ನ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಾವಯವ ಕೃಷಿ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಎ.ಎಸ್. ಆನಂದ್, ಸಂಸದರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಆತುರವಾಗಿ ಶಿಕ್ಷಣ ನೀತಿ ಜಾರಿ ಮಾಡಿಲ್ಲ: ರಾಜಕೀಯ ಪ್ರೇರಿತ ಟೀಕೆ ಸರಿಯಲ್ಲ ಎಂದ ಉನ್ನತ ಶಿಕ್ಷಣ ಸಚಿವರು

    BENGALURU SEPT 5
    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಪ್ರತಿಪಕ್ಷಗಳು ಮಾಡುತ್ತಿರುವ ಆರೋಪವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸಾರಾಸಗಟಾಗಿ ತಳ್ಳಿಹಾಕಿದಲ್ಲದೆ, ಇದು ಅರ್ಥರಹಿತ ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದ ಟೀಕೆ ಎಂದು ಹೇಳಿದರು.

    ಬೆಂಗಳೂರಿನಲ್ಲಿ ಭಾನುವಾರ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಹೊಸ ಶಿಕ್ಷಣ ನೀತಿಯನ್ನು ಕೆಲವರು ಆತುರಾತುರವಾಗಿ ಜಾರಿ ಮಾಡಲಾಗಿದೆ ಎಂದು ಹೇಳುತ್ತಿರುವ ಮಾತಿನಲ್ಲಿ ಲವಲೇಶವೂ ಸತ್ಯಾಂಶವಿಲ್ಲ. ದೇಶದ ಶ್ರೇಷ್ಟ ತಜ್ಞರು, ವಿದ್ವಾಂಸರು, ವಿವಿಧ ಕ್ಷೇತ್ರಗಳ ಸಾಧಕರು ಅವಿರತವಾಗಿ ಐದೂವರೆ ವರ್ಷ ಕಾಲ ಸಮಗ್ರ ಅಧ್ಯಯನ, ಮಾಹಿತಿ ಸಂಗ್ರಹ, ಚರ್ಚೆ, ಸಂವಾದ, ಟೀಕೆ-ಟಿಪ್ಪಣಿಗಳೆಲ್ಲವನ್ನೂ ಮಾಡಿಕೊಂಡು, ಐದೂವರೆ ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ರೂಪಿಸಿದ ನೀತಿ ಇದು ಎಂದರು.

    ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ವಿಧ್ಯುಕ್ತ ಜಾರಿಯು ಅಗಸ್ಟ್‌ 23ರಂದು ಆಗಿದೆ ನಿಜ. ಆದರೆ, ಒಂದೇ ವರ್ಷದಲ್ಲಿ ಇಡೀ ನೀತಿಯನ್ನು ಜಾರಿ ಮಾಡಲು ಸಾಧ್ಯವಿಲ್ಲ. ಈ ನೀತಿಯನ್ನು ಹಂತ ಹಂತವಾಗಿ ಜಾರಿ ಮಾಡಲಾಗುತ್ತಿದ್ದು, ಒಟ್ಟಾರೆ ಜಾರಿಗೆ 15 ವರ್ಷಗಳ ಕಾಲಾವಕಾಶ ಇದೆ. ಆದರೆ, ರಾಜ್ಯ ಸರಕಾರ 10 ವರ್ಷಗಳಲ್ಲಿಯೇ ಪೂರ್ಣವಾಗಿ ಅನುಷ್ಠಾನಕ್ಕೆ ತರಲು ನಿರ್ಧರಿಸಿದೆ. 2030ರ ಹೊತ್ತಿಗೆ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಆಮೂಲಾಗ್ರವಾಗಿ ಜಾರಿಗೆ ತರಲಾಗುವುದು ಎಂದು ಸಚಿವರು ಹೇಳಿದರು.

    ಶಿಕ್ಷಣ ನೀತಿ ಜಾರಿಯಲ್ಲಿ ದೇಶದಲ್ಲೇ ಮೊದಲಿಗರಾಗಬೇಕು ಎಂಬ ಹಠವೇನೂ ಸರಕಾರಕ್ಕಿಲ್ಲ. ಎಲ್ಲರಿಗಿಂತ ಮೊದಲು ಜಾರಿ ಮಾಡುತ್ತಿರುವುದು ನಮ್ಮ ರಾಜ್ಯವೇ ಎನ್ನುವುದು ಕಾಕತಾಳೀಯ ಅಷ್ಟೇ. ಶಿಕ್ಷಣ ನೀತಿ ಕರಡು ಸಮಿತಿಯಲ್ಲಿ ಅಧ್ಯಕ್ಷರಾಗಿ ಡಾ.ಕೆ.ಕಸ್ತೂರಿರಂಗನ್, ಸದಸ್ಯರಾಗಿ ಪ್ರೊ.ಎಂ.ಕೆ.ಶ್ರೀಧರ್‌, ಪ್ರೊ.ಟಿ.ವಿ.ಕಟ್ಟೀಮನಿ, ಡಾ.ಅನುರಾಗ್‌ ಬೇಹರ್‌ ಅವರು ಇದ್ದರು. ಇವರೆಲ್ಲರೂ ಕನ್ನಡಿಗರು. ಈ ಕಾರಣಕ್ಕಾಗಿ ನಮಗೆ ಪ್ರೋತ್ಸಾಹ, ಉತ್ಸಾಹ ಇದ್ದದ್ದು ನಿಜ. ಹಾಗೆಂದು ಶಿಕ್ಷಣ ನೀತಿಯನ್ನು ಒಂದೇ ವರ್ಷವೇ ಆತುರಕ್ಕೆ ಬಿದ್ದು ಜಾರಿ ಮಾಡುತ್ತಿದ್ದೇವೆ ಎಂದರ್ಥವಲ್ಲ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ನೀತಿಯಲ್ಲಿ ವಿದ್ಯಾರ್ಥಿಯೇ ಕೇಂದ್ರಬಿಂದು

    ರಾಷ್ಟ್ರೀಯ ಶಿಕ್ಷಣ ನೀತಿ ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ. ಇಡೀ ನೀತಿಯಲ್ಲಿಯೇ ಎಲ್ಲಿಯೇ ಆದರೂ ವಿದ್ಯಾರ್ಥಿಯ ವಿರುದ್ಧ ಒಂದಂಶವೂ ಇಲ್ಲ. ಇಡೀ ನೀತಿಗೆ ವಿದ್ಯಾರ್ಥಿಯೇ ಹಕ್ಕುದಾರ, ವಿದ್ಯಾರ್ಥಿಯೇ ಮಾಲೀಕ ಎಂದ ಸಚಿವರು; ಕಲಿಕೆ  ಮತ್ತು ಆಯ್ಕೆಯಲ್ಲಿ ವಿದ್ಯಾರ್ಥಿಗೆ ಮುಕ್ತ ಸ್ವಾತಂತ್ರ್ಯವಿದೆ ಎನ್ನುವ ಅಂಶವಿದೆ ಬಿಟ್ಟರೆ ಒಟ್ಟಾರೆ ಶಿಕ್ಷಣ ನೀತಿಯಲ್ಲಿ ಯಾರ ವಿರುದ್ಧವೂ ಏನೂ ಇಲ್ಲವೇ ಇಲ್ಲ ಎಂದರು.

    ಶಿಕ್ಷಣ ನೀತಿಯಿಂದ 100% ಅನುಕೂಲ ಆಗುವುದು ವಿದ್ಯಾರ್ಥಿಗೆ ಮಾತ್ರ. ಆದರೆ, ಶ್ರಮ ಹಾಕಬೇಕಾಗಿರುವುದು ಅಧ್ಯಾಪಕರು, ವಿಶ್ವವಿದ್ಯಾಲಯಗಳು. ಈ ಸವಾಲನ್ನು ನಾವೆಲ್ಲರೂ ಸ್ವೀಕಾರ ಮಾಡಿದ್ದೇವೆ. ಈ ಬಗ್ಗೆ ಸರಕಾರ ಅತ್ಯಂತ ಮುಕ್ತ ಮನಸ್ಸು ಹೊಂದಿದೆ ಎಂದು ಸ್ಪಷ್ಟಪಡಿಸಿದರು ಸಚಿವರು.

    ಸ್ವಾತಂತ್ರ್ಯ ಇರಲಿಲ್ಲ

    ಈವರೆಗಿನ ಶಿಕ್ಷಣದಲ್ಲಿ ವಿದ್ಯಾರ್ಥಿ ಅಥವಾ ಶೈಕ್ಷಣಿಕ ಸಂಸ್ಥೆಗಳಿಗೆ ಸ್ವಾತಂತ್ರ್ಯ ಎಂಬುದು ಇರಲಿಲ್ಲ. ಮುಕ್ತ ಅವಕಾಶಗಳಿಗಂತೂ ಅವಕಾಶವೇ ಇರಲಿಲ್ಲ. ಅಸಹಾಯಕತೆಯಿಂದ ಸಧೃಢತೆಯತ್ತ ಸಾಗುವುದೇ ದೊಡ್ಡ ಪ್ರಶ್ನೆಯಾಗಿತ್ತು. ಈ ವ್ಯವಸ್ಥೆ ಬದಲಾಗಲಿದೆ. ವಿದ್ಯಾರ್ಥಿಗೆ ಕಲಿಯಲು ಅದೆಷ್ಟು ಸ್ವಾತಂತ್ರ್ಯ ಸಿಗುತ್ತದೆಯೋ ಅದೇ ರೀತಿ ಶಿಕ್ಷಣ ಸಂಸ್ಥೆಗೂ ಸ್ವಾಯತ್ತತೆ ನೀಡಲಾಗುವುದು. ಆರ್ಥಿಕ, ಆಡಳಿತ ಹಾಗೂ ಶೈಕ್ಷಣಿಕ ವಿಚಾರಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಅಧಿಕಾರ ಕೊಡಲಾಗುವುದು ಎಂದು ಸಚಿವರು ಪ್ರಕಟಿಸಿದರು.

    ಯಾರೋ ಎಲ್ಲೋ ಕೂತು ನಿಯಂತ್ರಣ ಮಾಡುವ ವ್ಯವಸ್ಥೆ ತೊಲಗಿ ಹೋಗಲಿದೆ. ಅಧಿಕಾರ ದುರ್ಬಳಕೆ, ಸ್ವಜನ ಪಕ್ಷಪಾತ, ಅನಗತ್ಯ ಹಸ್ತಕ್ಷೇಪ ಇತ್ಯಾದಿಗಳಿಗೆ ಕಡಿವಾಣ ಬೀಳಲಿದೆ ಎಂದು ಸಚಿವರು ಒತ್ತಿ ಹೇಳಿದರು.

    ಪಾರದರ್ಶಕತೆ ನಮ್ಮ ನೀತಿ

    ಸಮಾಜದ ಪ್ರತಿ ಸಮಸ್ಯೆಗೂ ಶಿಕ್ಷಣವೇ ಏಕೈಕ ಪರಿಹಾರ ಎಂದು ನಂಬಿದೆ ಸರಕಾರ. ಇದೇ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಲೇ ಶಿಕ್ಷಕರ ಗೌರವ-ಘನತೆ ಹೆಚ್ಚಿಸುವ ಎಲ್ಲ ಕ್ರಮಗಳನ್ನೂ ವಹಿಸಲಾಗುತ್ತಿದೆ. ಬೋಧಕರ ವರ್ಗಾವಣೆ, ನೇಮಕಾತಿ, ಆಡಳಿತ ಯಾವುದರಲ್ಲೂ ಪಾರದರ್ಶಕತೆಯನ್ನು ಬಿಟ್ಟಿಲ್ಲ. ಪಾರದರ್ಶಕತೆಯೇ ನಮ್ಮ ನೀತಿ ಎಂದು ಸಚಿವರು ಹೇಳಿದರು.

    ಬೋಧಕರು, ಪ್ರಾಂಶುಪಾಲರ ನೇಮಕಾತಿ ಪಾರದರ್ಶಕವಾಗಿದೆ. ಅರ್ಹತೆ ಮಾತ್ರ ಆಯ್ಕೆಗಿರುವ ಏಕೈಕ ಮಾನದಂಡ. ರಾಜಕೀಯ, ಸ್ವಜನ ಪಕ್ಷಪಾತ, ಹಸ್ತಕ್ಷೇಪ ಯಾವುದಕ್ಕೂ ಅವಕಾಶವೇ ಇಲ್ಲ. ಇಂಥ ಎಲ್ಲ ಅಂಶಗಳನ್ನು ಶೂನ್ಯಕ್ಕೆ ತರಲಾಗಿದೆ ಎಂದು ಸಚಿವರು ನುಡಿದರು.

    ರಾಷ್ಟ್ರೀಯ ಶಿಕ್ಷಣ ನೀತಿಯಿಂದ ರಾಷ್ಟ್ರಕ್ಕೆ ಒಳ್ಳೆಯದು: ಶ್ರೀಗಳು

    ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶಯ ನುಡಿಗಳನ್ನಾಡಿದ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ವೀರೇಶಾನಂದ ಸರಸ್ವತಿ ಅವರು, “ರಾಷ್ಟ್ರೀಯ ಶಿಕ್ಷಣ ನೀತಿ-2020 ದೇಶಕ್ಕೆ ಅಗತ್ಯವಾಗಿದೆ. ರಾಷ್ಟ್ರದ ಮರು ನಿರ್ಮಾಣಕ್ಕೆ ಈ ನೀತಿಯನ್ನು ಯಾವ ಭಿನ್ನಮತಕ್ಕೂ ಅವಕಾಶ ಇಲ್ಲದೆ ಜಾರಿ ಮಾಡಬೇಕು” ಎಂದು ಪ್ರತಿಪಾದಿಸಿದರು.

    ಬಲಿಷ್ಠ ಭಾರತ ನಿರ್ಮಾಣಕ್ಕೆ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಎಲ್ಲ ಅಂಶಗಳೂ ಈ ನೀತಿಯಲ್ಲಿವೆ. ಎನ್‌ಇಪಿ ಎಂದರೆ ಭಾರತವನ್ನು ಭಾರತದ ಮೂಲಕವೇ ನೋಡಿಕೊಳ್ಳುವುದು ಹಾಗೂ ಭಾರತದ ಮೂಲಕವೇ ಭಾರತವನ್ನು ಮರು ರೂಪಿಸುವುದು ಎಂದು ಸ್ವಾಮೀಜಿ ಅವರು ಹೇಳಿದರು.

    ಅಷ್ಟೇ ಅಲ್ಲದೆ, ಭಾರತವನ್ನು ಭಾರತೀಯ ಮೌಲ್ಯಗಳು, ಚಿಂತನೆಗಳಿಂದಲೇ ಉಳಿಸಿಕೊಳ್ಳಬೇಕು ಹಾಗೂ ಭಾರತೀಯ ಮೌಲ್ಯಗಳ ಮೂಲಕವೇ ಭಾರತವನ್ನು ಪುನಾ ನಿರ್ಮಾಣ ಮಾಡಬೇಕು ಎಂದು ಪೂಜ್ಯರು ನುಡಿದರು.

    ಅಧ್ಯಕ್ಷತೆ ವಹಿಸಿದ್ದ ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ ಮಾತನಾಡಿ, ಹೊಸ ಶಿಕ್ಷಣ ನೀತಿಗೆ‌ ವಿರೋಧ ಏನೂ ಇಲ್ಲ. ಸಚಿವರ ಬಗ್ಗೆಯೂ ನಮಗೆ ವಿಶ್ವಾಸ ಇದೆ. ಆದರೆ ಒಮ್ಮೆ ಶಾಸನ ಸಭೆಯಲ್ಲಿ ಚರ್ಚೆಯಾಗಬೇಕಿತ್ತು ಎನ್ನುವುದು‌ ಪಕ್ಷದ ನಿಲುವು ಎಂದು‌ ಅಭಿಪ್ರಾಯ ವ್ಯಕ್ತಪಡಿಸಿದರು.

    ಇದೇ ವೇಳೆ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಹಾಗೂ ವಿಜ್ಞಾನಿ, ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ.ಎಸ್.‌ಎಂ.ಶಿವಪ್ರಸಾದ್‌ ಅವರನ್ನು ಗೌರವಿಸಿ ಸತ್ಕರಿಸಲಾಯಿತು.

    ಅಲ್ಲದೆ, ಸಮಗ್ರ ಕಲಿಕಾ ವ್ಯವಸ್ಥೆ (LMS) ಯಲ್ಲಿ ಅತ್ಯುತ್ತಮ ಕಂಟೆಂಟ್‌ ರೂಪಿಸಲು ಕಾರಣಕರ್ತರಾದ ರಾಜ್ಯದ ವಿವಿಧ ಕಾಲೇಜುಗಳ ಅಧ್ಯಾಪಕರು, ಸಹಾಯಕ ಪ್ರಾಧ್ಯಾಪಕರನ್ನು ಕೂಡ ಇದೇ ವೇಳೆ ಸತ್ಕರಿಸಿದರು. ಶಿಕ್ಷಕ ದಿನಾಚರಣೆ ನಿಮಿತ್ತ ಕೆಲ ಬೋಧಕರು, ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

    ವೇದಿಕೆಯ ಮೇಲೆ ಶಾಸಕ ಅ.ದೇವೇಗೌಡ, ಕಾಲೇಜು ಶಿಕ್ಷಣ ಆಯುಕ್ತ ಪಿ.ಪ್ರದೀಪ, ಬೆಂಗಳೂರು ನಗರ ವಿವಿ ಕುಲಪತಿ ಪ್ರೊ.ಲಿಂಗರಾಜು ಗಾಂಧಿ ಉಪಸ್ಥಿತದಿದ್ದರು.

    ಪ್ರಸಕ್ತ ವರ್ಷ 5 ಸಾವಿರ ಶಿಕ್ಷಕರ ನೇಮಕ

    BENGALURU SEPT 5

    ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ 5 ಸಾವಿರ ಶಿಕ್ಷಕರ ನೇಮಕ ಮಾಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಘೋಷಿಸಿದರು.

    ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.

    ಸಮಾರಂಭದಲ್ಲಿ ಶಿಕ್ಷಕರ ಕೊರತೆ ನೀಗಿಸುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು 5 ಸಾವಿರ ಶಿಕ್ಷಕರನ್ನು ನೇಮಕ ಮಾಡುವುದಾಗಿ ತಿಳಿಸಿದರು.

    21ನೇ ಶತಮಾನ ಜ್ಞಾನದ ಶತಮಾನ. ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನದತ್ತ ಮುನ್ನಡೆದಿರುವ ದೇಶ, ಇದೀಗ ತಂತ್ರಜ್ಞಾನದಿಂದ ತಂತ್ರಾಂಶ ಜ್ಞಾನದತ್ತ ವೇಗವಾಗಿ ಸಾಗಿದೆ. ಈ ವೇಗಕ್ಕೆ ಶಿಕ್ಷಕರು ಹೊಂದಿಕೊಳ್ಳುವುದು ಅನಿವಾರ್ಯ. ಉತ್ತಮ ವಿದ್ಯಾರ್ಥಿಗಳಾದಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ವಿದ್ಯಾರ್ಥಿಗಳಿಗೆ ಪ್ರಶ್ನಿಸುವ ಮನೋಭಾರ ಬೆಳೆಸಲು ಪ್ರೇರೇಪಿಸಿ, ತಿಳಿದುಕೊಳ್ಳಲು ಉತ್ತೇಜನ ನೀಡುವವರೇ ನಿಜವಾದ ಗುರುಗಳು. ಮಕ್ಕಳಲ್ಲಿ ಮುಗ್ಧತೆ, ತಿಳಿದುಕೊಳ್ಳುವ ತವಕವನ್ನು ಉಳಿಸುವವರು ಅತ್ಯುತ್ತಮ ಗುರುಗಳು ಎಂದು ಅವರು ಅಭಿಪ್ರಾಯಪಟ್ಟರು.

    ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತಿದ್ದು, ಶಿಕ್ಷಕರು ತಮ್ಮ ಅನಿಸಿಕೆ, ಅನುಮಾನ ವ್ಯಕ್ತಪಡಿಸಿ, ಮುಕ್ತವಾಗಿ ಚರ್ಚಿಸಿ ಮುಂದುವರೆಯೋಣ. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸೋಣ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಮಾಜಿ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಸಾತ್ವಿಕತೆ, ವೈಚಾರಿಕತೆಯನ್ನು ಹೊಂದಿದ ಅಪರೂಪದ ನಾಯಕರಾಗಿದ್ದರು. ನೈತಿಕ ನಡೆಯ ಧೀಮಂತ ನಾಯಕರಾದ ರಾಧಾಕೃಷ್ಣನ್ ಅವರ ಆದರ್ಶದ ಜೀವನ ನಮಗೆ ದಾರಿದೀಪ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ಬುದ್ಧಿ, ಕರುಣೆ, ಕೌಶಲ್ಯ ತರಬೇತಿಯನ್ನು ಮೈಗೂಡಿಸಿಕೊಂಡ ರಾಷ್ಟ್ರೀಯ ಶಿಕ್ಷಣ ನೀತಿ, ಭಾರತಕ್ಕೆ ಸ್ವಾಭಿಮಾನಿ, ಸ್ವಾವಲಂಬಿ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.

    ಕೋವಿಡ್ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಅಡ್ಡಿಯಾಗದಂತೆ ಶ್ರಮಿಸಿದ ಹಾಗೂ ಯಶಸ್ವಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿಕೊಟ್ಟ ಶಿಕ್ಷಕರನ್ನು ಶ್ಲಾಘಿಸಿದ ಸಚಿವರು, ಕೋವಿಡ್ ನಿಂದ ಪ್ರಾಣ ಕೊಟ್ಟ ಶಿಕ್ಷಕರನ್ನು ಸ್ಮರಿಸಿದರು.

    ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಶಾಲೆಗಳ ಅಭಿವೃದ್ಧಿಗೆ ದೇಣಿಗೆ ವರ್ಗಾವಣೆಗಾಗಿ ರೂಪಿಸಲಾದ ‘ನಮ್ಮ ಶಾಲೆ ನನ್ನ ಕೊಡುಗೆ’ ತಂತ್ರಾಂಶವನ್ನು ಉದ್ಘಾಟಿಸಿದರು. ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರದ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು

    ಚಂಚಲಚಿತ್ತ ಪೇಟೆಯಲ್ಲಿ ಹೂಡುವ ಮುನ್ನ ತುಲನಾತ್ಮಕ ಅಧ್ಯಯನ ಇಂದಿನ ಅಗತ್ಯ

    ಕಾರ್ಪೊರೇಟ್‌ ಗಳಲ್ಲಿ ಸಧ್ಯ ನಡೆಯುತ್ತಿರುವುದೆಂದರೆ ಬಲಿಷ್ಠ ಕಂಪನಿಗಳು, ಬಲಿಷ್ಠ ಕಂಪನಿಗಳು ಎಂದರೆ ಆರ್ಥಿಕತೆಯ ದೃಷ್ಟಿ ಯಿಂದಲೂ ಗುಣಮಟ್ಟದ ನೋಟದಲ್ಲೂ, ಸಬಲತೆಯುಳ್ಳವು, ತಮ್ಮಲ್ಲಿರುವ ಸಂಪನ್ಮೂಲವನ್ನು ಬಳಸಿಕೊಂಡು ಸಣ್ಣ ಸಣ್ಣ ಆದರೂ, ಜನಬೆಂಬಲದೊಂದಿಗೆ ಮೆರೆಯುತ್ತಿರುವ ಕಂಪನಿಗಳನ್ನ ಖರೀದಿಸುವ, ಸ್ವಾಧೀನಪಡಿಸಿಕೊಳ್ಳುವ ಮೂಲಕ ತಮ್ಮ ಗ್ರಾಹಕ ಜಾಲವನ್ನು ಬೆಳೆಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಜೊತೆಗೆ ಹಲವಾರು ಸಂಸ್ಥೆಗಳು ತಮ್ಮಲ್ಲಿರುವ ಸಂಪನ್ಮೂಲವನ್ನು ಬಳಸಿಕೊಳ್ಳಲು ಅನ್ಯ ಮಾರ್ಗವಿಲ್ಲದೆ, ಪೇಟೆಗಳು ಉತ್ಕೃಷ್ಠ ಮಟ್ಟದಲ್ಲಿರುವಾಗ ಎ ಎಂ ಸಿ ಗಳನ್ನು ಸ್ಥಾಪಿಸಿ ಮ್ಯುಚುಯಲ್‌ ಫಂಡ್‌ ವಲಯಕ್ಕೆ ಪ್ರವೇಶಿಸಲು ತುದಿಗಾಲಿನಲ್ಲಿ ನಿಂತಿವೆ. ಈ ಪ್ರಯೋಗವು ಎಷ್ಟರಮಟ್ಟಿಗೆ ಯಶಸ್ಸು ಕಾಣಬಹುದೆಂಬುದನ್ನು ಕಾದು ನೋಡಬೇಕಾಗಿದೆ.

    ಇಂದಿನ ದಿನಗಳಲ್ಲಿ ಹೂಡಿಕೆಯ ಚಿಂತನೆ ಹೇಗೆ ಸಾಗಿದೆ ಎಂದರೆ ಊದಿನ ಕಡ್ಡಿಗಿಂತ ಬೆಂಕಿ ಕಡ್ಡಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ವಾತಾವರಣ ನಿರ್ಮಾಣವಾಗಿದೆ. ಹೇಗೆಂದರೆ ಇಂಡಿಯನ್‌ ಹೋಟೆಲ್ಸ್‌ ಷೇರಿನ ಮುಖಬೆಲೆ ರೂ.1 ಆಗಿದ್ದು ಟಾಟಾ ಸಮೂಹದ ಕಂಪನಿಯಲ್ಲದೆ ತನ್ನ ಸಾಧನೆಯ ಚರಿತ್ರೆಯನ್ನು ಹೊಂದಿದೆ. ಸಧ್ಯ ರೂ.146 ರ ಸಮೀಪ ವಹಿವಾಟಾಗುತಿದೆ. ಇ ಐ ಹೆಚ್‌ ಲಿಮಿಟೆಡ್‌ ಕಂಪನಿಯ (ಹಿಂದಿನ ಹೆಸರು ಈಸ್ಟ್‌ ಇಂಡಿಯಾ ಹೋಟೆಲ್ಸ್) ‌ಓಬೆರಾಯ್‌ ಸಮೂಹದ ಕಂಪನಿ, ಈ ಷೇರಿನ ಮುಖಬೆಲೆ ರೂ.2 ಆಗಿದ್ದು ಸಧ್ಯ ರೂ.106 ರ ಸಮೀಪ ವಹಿವಾಟಾಗುತ್ತಿದೆ. ಈ ಕಂಪನಿಯೂ ಸಹ ತನ್ನದೇ ಆದ ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿದೆ.

    ಈ ರೀತಿಯ ಹಿನ್ನೆಲೆಯ ಕಂಪನಿಗಳು ಒಂದೆಡೆಯಾದರೆ ಮತ್ತೊಂದೆಡೆ ಇತ್ತೀಚೆಗೆ ಪೇಟೆ ಪ್ರವೇಶಿಸಿದ ಈ ಹೋಟೆಲ್‌ ಗಳು ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ತಲುಪಿಸುವ ಕಂಪನಿಯ ಷೇರಿನ ಬೆಲೆ ರೂ.149 ರ ಸಮೀಪ ವಹಿವಾಟಾಗುತ್ತಿದೆ. ಈ ಕಂಪನಿಯು ಇತ್ತೀಚೆಗೆ ಸುಮಾರು ರೂ.9 ಸಾವಿರಕೋಟಿ ರೂಪಾಯಿಗಳಿಗೂ ಹೆಚ್ಚಿನ ಸಂಪನ್ಮೂಲ ಸಂಗ್ರಹಣೆಯನ್ನು ಆರಂಭಿಕ ಷೇರು ವಿತರಣೆ ಮಾಡುವ ಮೂಲಕ ಸಂಗ್ರಹಿಸಿದೆ.

    ಷೇರುಪೇಟೆಯು ಅತ್ಯಂತ ಗರಿಷ್ಠದಲ್ಲಿದೆ ಎಂಬುದು ನಿರ್ವಿವಾದ ಅಂಶವಾದರೂ ಅವಕಾಶಗಳು ಅಲ್ಪಕಾಲೀನವಾಗಿ ಸೃಷ್ಠಿಯಾಗಿ ಮಾಯವಾಗುತ್ತಿರುತ್ತದೆ. ಷೇರುಗಳ ಬೆಲೆಗಳು ಹೆಚ್ಚಾದಾಗ ಈ ಅಸ್ಥಿರತೆಗಳು ಸಹಾ ಹೆಚ್ಚಾಗುತ್ತದೆ. ಅಲ್ಲದೆ ಪೇಟೆಯಲ್ಲಿ ಭಾಗಿಯಾಗುವ ವಹಿವಾಟುದಾರರ ಗಾತ್ರ, ಅವರಿಂದಾಗುವ ನಗದಿನ ಒಳಹರಿವು ಸಹ ಅತಿ ಹೆಚ್ಚಾಗುತ್ತದೆ. ಇದರಿಂದ ಬೇಡಿಕೆ- ಪೂರೈಕೆಗಳಲ್ಲುಂಟಾಗುವ ಏರಿಳಿತಗಳೂ ಸಹ ಹೆಚ್ಚಾಗುವುದರಿಂದ ರಭಸದ ಏರಿಳಿತಗಳೂ ಸಹ ಹೆಚ್ಚಾಗುವುದು.

    ಈ ಸಂದರ್ಭದಲ್ಲಿ ಎಲ್‌ ಐ ಸಿ ಆಫ್‌ ಇಂಡಿಯಾದ ಒಂದು ಜಾಹಿರಾತಿನ ತರಹ, ಅಂದರೆ ಜಿಂದಗಿ ಕೆ ಸಾಥ್‌ ಭಿ- ಜಿಂದಗಿ ಕೆ ಬಾದ್‌ ಭಿ ಎಂಬಂತೆ ಕಂಪನಿಗಳು ಘೋಷಿಸುವ ಕಾರ್ಪೊರೇಟ್‌ ಫಲಗಳಾದ ಬೋನಸ್‌ ಷೇರು, ಲಾಭಾಂಶ ಗಳೂ ಸಹ ಷೇರಿನ ಬೆಲೆಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು, ಅವಕಾಶಗಳನ್ನು ಸೃಷ್ಠಿಸಬಹುದು ಎಂಬುದನ್ನು ಅರಿತು ಚಟುವಟಿಕೆ ನಡೆಸಿದಲ್ಲಿ ಅಲ್ಪಕಾಲೀನ ಲಾಭಕ್ಕೆ ಅವಕಾಶವಾಗಿರುತ್ತದೆ.

    ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್ ಲಿ:

    ಈ ಕಂಪನಿಯು ಪ್ರತಿ ಷೇರಿಗೆ ರೂ.58 ( ವಿಶೇಷ ಲಾಭಾಂಶವೂ ಸೇರಿ) ರಂತೆ ಲಾಭಾಂಶವನ್ನು ಘೋಷಿಸಿತು. ಈ ಘೋಷಣೆಯ ನಂತರ ಷೇರಿನ ಬೆಲೆ ರೂ.490 ರ ಸಮೀಪವಿತ್ತು. ನಂತರದಲ್ಲಿ ಷೇರಿನ ಬೆಲೆಯು ಇಳಿಯುತ್ತಾ ಸುಮಾರು ರೂ.448 ರ ಸಮೀಪಕ್ಕೆ ತಲುಪಿ ನಂತರದ ಹತ್ತು ದಿನಗಳಲ್ಲಿ ರೂ.494 ಕ್ಕೆ ಹಿಂದಿರುಗಿ ವಾರ್ಷಿಕ ಗರಿಷ್ಠತಲುಪಿ ವಿಜೃಂಭಿಸಿದೆ. ಇದರ ಹಿಂದೆ ಅಡಕವಾಗಿರುವ ಅಂಶ ಎಂದರೆ ಲಾಭಾಂಶ ವಿತರಣೆಗೆ ಈ ತಿಂಗಳ 15 ರವರೆಗೂ ಸಮಯವಿರುವುದರಿಂದ ರೂ.58 ರ ಆದಾಯವೇ ಆಕರ್ಷಣೆಯಾಗಿದೆ. ಒಂದು ವೇಳೆ 15 ರೊಳಗೆ ಷೇರಿನ ಬೆಲೆ ಕುಸಿತ ಕಂಡಲ್ಲಿ ಹೂಡಿಕೆಗೆ ಆಕರ್ಷಣೀಯವಾಗಲೂಬಹುದು. ಕಾರಣ ಈ ಕಂಪನಿಯಿಂದ ಕೇಂದ್ರ ಸರ್ಕಾರ ಹೊರಬರಲಿಚ್ಚಿಸಿರುವುದೂ ಆಗಿದೆ. ಇದು ಲಾಭಾಂಶದ ಸಾತ್‌ ಗೆ ಉದಾಹರಣೆಯಾಗಿದೆ.

    ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿ:

    ಜುಲೈ ತಿಂಗಳಲ್ಲಿ ಈ ಕಂಪನಿಯ ಷೇರು ಪ್ರತಿ ಷೇರಿಗೆ ರೂ.22.75 ರಂತೆ ಲಾಭಾಂಶವನ್ನು ವಿತರಿಸಲು ನಿಗದಿತ ದಿನವನ್ನಾಗಿಸಿದೆ. ಜುಲೈ ತಿಂಗಳಲ್ಲಿ ರೂ.300 ರಲ್ಲಿದ್ದ ಷೇರಿನ ಬೆಲೆ ಆಗಷ್ಟ್‌ ತಿಂಗಳಲ್ಲಿ ರೂ.245 ರ ಸಮೀಪಕ್ಕೆ ಕುಸಿಯಿತು. ಕಂಪನಿ ವಿತರಿಸಲಿರುವ ಲಾಭಾಂಶದ ಪ್ರಮಾಣಕ್ಕಿಂತ ಹೆಚ್ಚಿನ ಕುಸಿತ ಕಂಡಿತು. ಆದರೆ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯು ಈ ತಿಂಗಳಲ್ಲಿರುವ ಕಾರಣ ನಂತರ ಅದನ್ನು ವಿತರಿಸಲಾಗುವುದು. ಆದರೆ ಲಾಭಾಂಶ ವಿತರಣೆಯ ದಿನ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಷೇರಿನ ಬೆಲೆ ಮತ್ತೊಮ್ಮೆ ಜಿಗಿತ ಕಂಡು ರೂ.276 ರ ಸಮೀಪದಲ್ಲಿದೆ. ಇದನ್ನು ಲಾಭಾಂಶದ ಬಾದ್‌ ಭಿ ಅವಕಾಶ ಕಲ್ಪಿಸಿದ ರೀತಿಗೆ ಉದಾಹರಣೆಯಾಗಿದೆ.

    ಹೀಗೆ ಪೇಟೆಗಳು, ಸೂಚ್ಯಂಕಗಳು ಉತ್ತುಂಗದಲ್ಲಿ, ಸರ್ವಕಾಲೀನ ಗರಿಷ್ಠದಲ್ಲಿರುವಾಗಲೂ ಲಾಭಗಳಿಕೆಗೆ ಮಧ್ಯಂತರ, ಅಲ್ಪಕಾಲೀನ ಅವಕಾಶಗಳನ್ನು ಸೃಷ್ಠಿಸಿಕೊಡುತ್ತಿವೆ. ಆದರೆ ಬದಲಾವಣೆಗಳು ಮುನ್ಸೂಚನೆಯಿಲ್ಲದ ರೀತಿಯಲ್ಲಿ ದಿಶೆಬದಲಿಸುವ ಪೇಟೆಗಳಲ್ಲಿ ಚಟುವಟಿಕೆಗೆ ಮುಂಚೆ ಅತ್ಯಂತ ತುಲನಾತ್ಮಕ ನಿರ್ಧಾರಗಳು ಅಗತ್ಯ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    error: Content is protected !!