29.2 C
Karnataka
Friday, May 22, 2026
    Home Blog Page 56

    ಮಾತಪಿತರನು ದೇವರೆಂದ ದೇವರದೇವ!

    ಶಿವಪ್ರಸಾದ್ ಬೋಳಂತೂರು

    ಪ್ರಸನ್ನ ವದನ ಗಣೇಶ ಸರಳತೆಯ ಪ್ರತೀಕವೂ ಹೌದು. ಅನೇಕ ಹೆಸರುಗಳಿಂದ ಪೂಜಿಸಲ್ಪಡುವ ಗಣಪ, ಮುಕ್ಕೋಟಿ ದೇವತೆಗಳ ದೇವರದೇವ, ಮಾತಾಪಿತರನ್ನೇ “ತ್ವಮೇವ ಸರ್ವಂ ಮಮ ದೇವದೇವ” ಎಂದು ಪೂಜಿಸುವವನೆಂದು ಪುರಾಣಗಳು ಹೇಳುತ್ತವೆ.

    ಆಹಾ…! ಲಂಬೋದರನದು ಎಂತಹಾ ವ್ಯಕ್ತಿತ್ವ , ಅಗಣಿತ ದೈವೀ ಶಕ್ತಿಗಳು ಆತನಲ್ಲಿವೆ… ಬ್ರಹ್ಮಚರ್ಯ ಪರಿಪಾಲನಾ ಏಕಾಗ್ರತೆಯ ಶಿಖರವೂ ಆಗಿರುವನು, ಲೋಕಾಟ್ಟಹಾಸಗೈಯುತ್ತಿದ್ದ ಮೂಷಿಕಾಸುರನೇ ಸ್ವಯಂ ಗಣಪನ ವಾಹನವಾಗಿರುವನು… ಲೋಕದಲಿ ಉದರ ತುಂಬಲು ಖಾದ್ಯ ಬಹಳಷ್ಟಿದ್ದರೂ ಮೋದಕವನ್ನೇ ಭೋಗಿಸುವನು…ವ್ಯಾಸರಿಗೆ ಮಹಾಭಾರತವನೇ ಬರೆದು ಕೊಟ್ಟವನು.. ಎಂಬೆಲ್ಲಾ ಕಥೆಗಳ ಕಥಾನಾಯಕನಾಗಿದ್ದರೂ ಆತ ಒಮ್ಮೆಯೂ ಗರ್ವದಿಂದ ವರ್ತಿಸಿದ್ದೇ ಇಲ್ಲ!

    ಜಗಜ್ಜನರ ಮೊದಲ ಪೂಜಿತ ದೇವನಾದರೂ, ಮದತುಂಬಿ ಮೆರೆದಾಡದೆ ಶಿವಪಾರ್ವತಿಯರನ್ನೇ ಮೆರೆಯಿಸಲಿಲ್ಲವೇ … ಜಗಬೆಳಗೋ ಚಂದ್ರನ ಜರೆಯಲಿಲ್ಲವೇ…ತಾಯಿಗೆ ಕೊಟ್ಟ ಮಾತನ್ನು ಉಳಿಸಿ ಗಜಮುಖನಾದವನು….ಜಗವನ್ನು ಪ್ರದಕ್ಷಿಣೆ ಹಾಕಿ ಮೊದಲಾರು ಬರುವರೆಂದು ಸ್ಪರ್ಧೆ ಏರ್ಪಟ್ಟು ಸುಬ್ರಮಣ್ಯ ನವಿಲೇರಿ ಹೊರಟಾಗ ಇಲಿಯೇರದೆ ಮಾತಾಪಿತರೇ ತನ್ನ ಜಗವೆಂದು ಪ್ರದಕ್ಷಿಣೆ ಹಾಕಿ ಜಯಿಸಿದವನು ..ಹಾಗಾಗಿಯೇ ಬಾಲ ಗಣೇಶ ಮುಕ್ಕೋಟಿ ದೇವತೆಗಳ ಪ್ರೀತಿಯನ್ನು ಪಡೆದಿದ್ದ ..ಆತನ ವ್ಯಕ್ತಿತ್ವ ಆತನನ್ನು ದೇವರನ್ನಾಗಿಸಿತು ಹೊರತು ಬಿರುದುಗಳಲ್ಲ.

    ಇಂದು ಗಣೇಶನ ಹಬ್ಬ, ಆತನ ಕತೆಗಳನ್ನು ಹಾಡು ಕಟ್ಟಿ ಹೇಳುವವರು ನಾವು. ವಿಧವಿಧವಾಗಿ ಪೂಜಿಸುವವರು ನಾವು, ವೈವಿಧ್ಯ ಖಾದ್ಯಗಳನ್ನು ಅರ್ಪಿಸಿ ಸೇವಿಸುವವರು ನಾವು. ಆದರೆ ಗಣೇಶನ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳದೆ ಲೌಕಿಕ ಹಿತದೊಳಗೆ ಮೋಹಿತರಾಗಿ ಬದುಕುತ್ತಿದ್ದೇವೆ, ಇದೆಂತಹ ವಿಪರ್ಯಾಸ ! ಗಣಪನ ಹೆಸರು ಹೇಳಿ ಹಣವನ್ನು ಅದೆಷ್ಟೋ ಬಾರಿ ದುರ್ಬಳಕೆ ಮಾಡಿದ್ದೇವೆ. ಅದನ್ನು ತೊರೆದು ಆತನ ವ್ಯಕ್ತಿತ್ವವನ್ನೆ ನಾವು ಅಳವಡಿಸಿಕೊಳ್ಳಬಹುದಲ್ಲವೇ. ಗಣೇಶ ತನ್ನ ತಾಯಿಗೆ ಕೊಟ್ಟ ಮಾತನ್ನು ತಪ್ಪಿ ನಡೆಯದಂತೆ ನಾವೂ ಕೂಡ ನಮ್ಮ ಜೀವನದಲ್ಲಿ ತಂದೆ ತಾಯಿಯರನ್ನು ಅವರ ಇಚ್ಛೆಗೆ ಒಡಕು ಬರದಂತೆ ಜೀವನ ನಡೆಸಬಹುದಲ್ಲವೇ…ಕ್ಷಣಿಕ ಸುಖದ ಆಸೆಗೆ ಮರುಳಾಗಿ ನಮ್ಮ ಹೆತ್ತವರನ್ನು ದೂಷಿಸುವ ನಾವುಗಳು, ಗಣಪನನ್ನು ಆರಾಧಿಸುವ ಜೊತೆಗೆ ಮಾತಾಪಿತರನ್ನೆ ದೇವರನ್ನ ಬಹುದಲ್ಲವೆ?


    ಶಿವಪ್ರಸಾದ್ ಬೋಳಂತೂರು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇಲ್ಲಿ ಪ್ರಥಮ ಬಿ.ಎ.ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ

    ಅಕ್ಷರ ಗಣಪ – ಗಣಪನಿಗೊಂದು ಕಲಾ ನಮನ

    ಬಳಕೂರು ವಿ ಎಸ್ ನಾಯಕ

    ಭಾದ್ರಪದ ಮಾಸ ಬಂತೆಂದರೆ ನಮಗೆ ನೆನಪಾಗುವುದು ಗಣಪತಿ ಹಬ್ಬ. ಪ್ರಥಮ ಪೂಜಿತ ಲಂಬೋದರ ಗಜಾನನ ಮೂಶಿಕವಾಹನ ಎಂದು ಕರೆಯಲ್ಪಡುವ ಗಣಪನಿಗೆ ಎಲ್ಲರೂ ಕೂಡ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡುವುದು ಸಾಮಾನ್ಯ. ಆದರೆ ಗೌರಿ ಗಣೇಶ ಹಬ್ಬ ಹತ್ತಿರ ಬರುತ್ತಿದ್ದಂತೆ ಗಣಪತಿಗೆ ರೂಪವನ್ನು ನೀಡಲು ಅದರಲ್ಲಿಯೂ ಕಲಾವಿದರು ತಮ್ಮ ಕಲಾ ನೈಪುಣ್ಯತೆ ಇಂದ ಒಂದಲ್ಲ ಒಂದು ರೀತಿಯ ವಿಭಿನ್ನ ಪ್ರಯತ್ನವನ್ನು ಮಾಡುತ್ತಿರುತ್ತಾರೆ.

    ನೀವು ಸಾಮಾನ್ಯವಾಗಿ ಮಣ್ಣಿನ ಗಣಪ ಕಲ್ಲಿನಿಂದ ಮಾಡಿದ ಗಣಪ. ಮರದ ಗಣಪ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಬಿನ್ನ ಬಿನ್ನ ಗಣಪನ ವಿಗ್ರಹವನ್ನು ನೋಡಿದ್ದೇವೆ. ಆದರೆ ಇಲ್ಲಿ ಅಚ್ಚರಿಪಡುವಂತೆ ಇವೆಲ್ಲಕ್ಕಿಂತ ವಿಭಿನ್ನವಾದ ಗಣಪನನ್ನು ನಾವು ಕಾಣಬಹುದು. ಹಾಗಾದ್ರೆ ತಾವೆಲ್ಲರೂ ಯಾವರೀತಿಯ ಗಣಪ ಎಂಬ ಆಲೋಚನೆ ತಮ್ಮಲ್ಲಿ ಮೂಡಬಹುದು. ಅಚ್ಚರಿ ಆಗಬಹುದು. ಅದೇನೆಂದರೆ ಇಲ್ಲಿ ನಿರ್ಮಾಣವಾಗುವ ಗಣಪ ಅಕ್ಷರದಲ್ಲಿ. ನೀವು ಯಾವುದೇ ಒಂದು ಪದ ಅಥವಾ ಅಕ್ಷರ ಹೆಸರು ನೀಡಿದರೆ ಸಾಕು ನಮ್ಮ ಕಣ್ಣ ಮುಂದೆ ಒಂದು ನಿಮಿಷದಲ್ಲಿ ಗಣಪತಿ ಸಿದ್ಧವಾಗುತ್ತದೆ. ಈ ರೀತಿಯಾಗಿ ಅಕ್ಷರಗಳ ಮೂಲಕ ಗಣಪನನ್ನು ರಚಿಸಿ ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾದವರು ಬೆಂಗಳೂರಿನ ಆರ್ ಟಿ ನಗರದ ನಿವಾಸಿ ವೆಂಕಟೇಶ ಎಲ್ಲೂರ್.

    ವೃತ್ತಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿರುವ ವೆಂಕಟೇಶ್ ಇವರ ಕೈಯಲ್ಲಿ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು ವಿವಿಧ ಭಂಗಿಯ ಅಕ್ಷರ ಗಣಪನನ್ನು ರಚಿಸಿ ಎಲ್ಲರ ಮನ ಸೆಳೆದಿದ್ದಾರೆ. ಇವರು ಒಂದು ಕ್ಷಣ ಚಿತ್ರ ಬಿಡಿಸಲು ಆರಂಭಿಸಿದರೆ ಸಾಕು ಬೇರೆ ಬೇರೆ ರೀತಿಯ ಗಣಪನ ಚಿತ್ರಗಳು ಒಂದರ ಹಿಂದೊಂದರಂತೆ ಸೃಷ್ಟಿಯಾಗುತ್ತವೆ. ಸಾಮಾನ್ಯವಾಗಿ ಇವರು ತಾಮ್ರ ಕಂಚು ಸ್ಟೀಲ್ ಬಂಗಾರ ಕಲ್ಲು ಇವುಗಳಿಂದ ಚಿತ್ರಿಸಿರುವ ಅಕ್ಷರ ಗಣಪ ಒಂದಕ್ಕಿಂತ ಒಂದು ಆಕರ್ಷಣೀಯವಾಗಿವೆ.

    ಚಿಕ್ಕವಯಸ್ಸಿನಲ್ಲಿ ಕಲಾಸಕ್ತಿಯನ್ನು ಬೆಳೆಸಿಕೊಂಡಿರುವ ವೆಂಕಟೇಶ್ ನಂತರ 2004 ರಿಂದ ಅಕ್ಷರ ಗಣಪನನ್ನು ಮಾಡಲು ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ನಾಡಿನ ಪ್ರಸಿದ್ಧ ಆಟಗಾರರು. ರಾಜಕಾರಣಿಗಳು ಸಂಗೀತಕಾರರು ಪಂಡಿತರು ಅದರ ಜೊತೆಗೆ ಎಲ್ಲಾ ಕ್ಷೇತ್ರದ ಗಣ್ಯಾತಿಗಣ್ಯರ ಹೆಸರುಗಳಲ್ಲಿ ಹಲವಾರು ಅಕ್ಷರ ಗಣಪನನ್ನು ರಚಿಸಿ ಅವರವರ ಅಭಿಮಾನಿಗಳಿಗೆ ನೀಡಿರುವುದು ವಿಶೇಷ. ಇಂತಹ ಉತ್ತಮ ವಿಶೇಷ ಕಲಾವಿದರ ಕಲಾ ಪ್ರಯತ್ನಕ್ಕೆ ನಮ್ಮದೊಂದು ನಮನ.

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಹಬ್ಬದ ಸಂಭ್ರಮದಲ್ಲೊಂದು ಬೆಕ್ಕಿನ ಕಥೆ

    ಗೌರಿ ಗಣೇಶನ ಹಬ್ಬವೆಂದರೆ ಮನೆಯವರೆಲ್ಲ ಸಡಗರದಿಂದ ಸಂಭ್ರಮಿಸುವುದು ಸಾಮಾನ್ಯ. ಹಬ್ಬದ ಹಿಂದಿನ ದಿನ ಸಂಜೆ ಆರತಿ ಮಾಡಿ ಗೌರಿ-ಗಣೇಶ ರನ್ನು ಬರ ಮಾಡಿಕೊಳ್ಳುವುದು ಸಂಪ್ರದಾಯ.ಆಮೇಲೆ ದೇವರ ಮನೆಗೆ ತಂದು ಅಕ್ಕಿ ತುಂಬಿದ ತಟ್ಟೆಯಲ್ಲಿ ಭಕ್ತಿ ಇಂದ ದೇವರನ್ನು ಕೂಡಿಸಿ ಪೂಜೆಯನ್ನು ನಿರಾತಂಕವಾಗಿ ನೆರವೇರಿಸು ಎಂದು ಬೇಡುವುದು. ಮಂಟಪಕ್ಕೆ ಹೂವಿನ ಅಲಂಕಾರ ಎಲ್ಇಡಿ ದೀಪಗಳ ರಂಗುರಂಗಿನ ಬಣ್ಣದ ಸರಮಾಲೆ.ಆಕಡೆ ಈ ಕಡೆ ಬಾಳೆ ಕಂಬಗಳನ್ನು ಕಟ್ಟಿ ಅದಕ್ಕೆ ಅಲ್ಲಲ್ಲಿ ಚಿಕ್ಕ ಶೇವಂತಿ ಹೂಗಳನ್ನು ಸಿಕ್ಕಿಸಿ ಹಿಂದೆ ಸರಿದು ಸರಿಯಾಗಿ ಕಾಣುತ್ತಿದೆ ಇಲ್ಲವೋ ಎಂದು ನೋಡುವುದು, ಮಕ್ಕಳು ಸರಿಯಾಗಿದೆ ಎಂದರೆ ಮುಂದಿನ ಕೆಲಸ.

    ಗಣಪನಿಗೆ ಮಲ್ಲಿಗೆಯ ಹಾರ ಕನಕಾಂಬರ ಹಾರ ಹಾಕಿ ಚಿಣಿ ಮಣಿ ಬಣ್ಣದ ವಸ್ತ್ರಗಳು ಒಂದೇ ಎರಡೇ ಸರ್ವಾಲಂಕಾರ ನಡೆಯುತ್ತದೆ. ಮನೆತುಂಬಾ ಮಲ್ಲಿಗೆ ಸುಗಂಧರಾಜ ಹೂಗಳ ಸುವಾಸನೆ. ಒಬ್ಬಟ್ಟು ಹಿಂದಿನ ದಿನವೇ ಮಾಡಿ ಯಾರೂ ಮುಟ್ಟದಂತೆ ಜೋಪಾನವಾಗಿ ಮಾಡುವುದು,ಹಬ್ಬ-ಹರಿದಿನಗಳಲ್ಲಿ ಹುಮ್ಮಸ್ಸು ಶಕ್ತಿ ಆವಾಹನೆಯಾಗಿ ಎಲ್ಲ ಕೆಲಸಗಳು ಸುಗಮವಾಗಿ ನಡೆದುಹೋಗುತ್ತೆ. ಮನೆಯವರೆಲ್ಲರೂ ಒಟ್ಟಿಗೆ ಕೂತು ನಗುನಗುತ ಮಾಡುತ್ತಿದ್ದರೆ ಬಹಳ ಸಂತೋಷವಾಗುತ್ತದೆ.

    ಇಷ್ಟೆಲ್ಲಾ ಸಂಭ್ರಮದಲ್ಲಿ ಒಂದು ವಿಷಯ ನನ್ನ ಮನಸ್ಸಿನಲ್ಲಿ ಪ್ರತಿ ಗಣಪತಿಯ ಹಬ್ಬದಂದು ನೋವುಂಟಾಗುತ್ತದೆ.ಕಾರಣ ಕೇಳಿದರೆ ನೀವು ನಗುತ್ತೀರೊಏನು!

    ಒಂದು ಚಿಕ್ಕ ಬೆಕ್ಕಿನ ಮರಿ ಮಿಯಾವ್ ಮಿಯಾವ್ ಎಂದು ಆರ್ತನಾದ ಮಾಡುತ್ತಿತ್ತು. ಶ್ರಾವಣದ ಮಳೆ ಬೇರೆ ನೋಡಲು ಬಹಳ ಮುದ್ದಾಗಿದೆ. ಬಿಳಿ ಮೈಯಲ್ಲಿ ಅಲ್ಲೊಂದು-ಇಲ್ಲೊಂದು ಎಳೆದಂತೆ ಬ್ರೌನ್ ಕಲರ್ ಸ್ಟ್ರಿಪ್ಸ್ ಇದೆ.ಪಿಂಕ್ ಬಣ್ಣದ ತುಟಿ ಬೇರೆ ಮುದ್ದಾದ ಮೀಸೆಗಳು.ಒಳಗೆ ತಂದು ಬೆಚ್ಚನೆಯ ಶಾಲಿನಲ್ಲಿ ಸುತ್ತಿ ಹಾಲು ಕುಡಿಸಿ ಮಲಗು ಮುದ್ದು ಚಿನ್ನು ಎಂದು ಹೇಳಿ ಉಯ್ಯಾಲೆಯಲ್ಲಿ ಕೂಡಿಸಿ ಮಲಗಿಸಿದೆವು.ನನ್ನ ಮಕ್ಕಳಿಗೆ ಖುಷಿಯೋ ಖುಷಿ. ಆದರೆ ರಾತ್ರಿಪೂರ್ತಿ ಮಿಯಾವ್ ಮಿಯಾವ್ ಎಂದು ಅರಚುತ್ತಲೇ ಇತ್ತು.ಯಾರಿಗೂ ರಾತ್ರಿ ನಿದ್ರೆ ಇಲ್ಲ!

    ಬೆಳಗಾದೊಡನೆ ಆಪ್ಷನ್ ಬಿ ಪ್ಲಾನನ್ನು ಮಕ್ಕಳು ಹೇಳಿದರು.ಇದರ ಅಮ್ಮನನ್ನು ಹುಡುಕಿ ಹೇಗಾದರೂ ಮಾಡಿ ಅಮ್ಮನಿಗೇ ಕೊಟ್ಟುಬಿಡೋಣ ಎಂದರು !!

    ಸರಿ ಅಮ್ಮನ ಹುಡುಕಾಟ ಶುರುವಾಯಿತು. ಸ್ವಲ್ಪ ಹೊತ್ತು ಮನೆ ಮುಂಭಾಗದಲ್ಲಿ ಹಿಂಭಾಗದಲ್ಲಿ ತಾರಸಿಯ ಮೇಲಿಟ್ಟು ಸ್ವಲ್ಪ ಕಾದು ನೋಡಿದೆವು.ಕಂಡ ಕಂಡ ಬಿಳಿ ಬೆಕ್ಕಿನ ಹಿಂದೆ ಮರಿಯನ್ನು ತೋರಿಸಿದೆವು.ಆದರೆ ಯಾವ ಅಮ್ಮನು ಬರಲಿಲ್ಲ!!

    ದಿನ ಕಳೆಯುತ್ತ ಬೆಕ್ಕಿನ ಹೆಸರು ಚಿನ್ನು ವಾಗಿ ಮನೆಮಂದಿಗೂ ಪ್ರಿಯವಾಯಿತು. ಎಲ್ಲರಿಗೂ ಚಿನ್ನು ಭಾಷೆ ಅರ್ಥವಾಗುತ್ತಾ ಬಂತು. ಕಾಲುಗಳ ಬಳಿ ಸುತ್ತುತ್ತ ಮಿಯಾವ್ ಅಂದರೆ ಸಾಕು ಎಲ್ಲರೂ ಎತ್ತಿಕೊಂಡು ಮುದ್ದಾಡುತ್ತಿದ್ದರು.

    ಸ್ವಲ್ಪ ದೊಡ್ಡದಾದ ಮೇಲೆ,ಸ್ವಲ್ಪಹೊತ್ತು ಹೊರಗಡೆ ಸ್ವತಂತ್ರವಾಗಿ ಓಡಾಡಿಕೊಂಡು ಬರುತ್ತಿತ್ತು.ಬೇಕಾದರೆ ಹಾಲು ಕುಡಿಯುತ್ತಿತ್ತು. ಇಲ್ಲದಿದ್ದರೆ ಜಂಭ ದಿಂದ ಮುಖವನ್ನ ಕಾಲುಗಳ ಮೇಲೆ ಇಟ್ಟು ಆಗಾಗ ಸ್ವಲ್ಪ ಕಣ್ಣುತೆಗೆಯವುದು ಸುತ್ತ ಇರುವವರನ್ನು ನೋಡುವುದು,
    ಕಿವಿಯನ್ನು ಆಂಟನ ತರಹ ನೇರಮಾಡಿ ನಮ್ಮ ಮಾತುಗಳನ್ನು ಆಲಿಸುತಿತ್ತು.ನಮ್ಮ ಮನೆಯ ಸಮಾಚಾರ ಗಳನ್ನು ಇದೇನಾದರು ಬ್ರಾಡ್ ಕಾಸ್ಟ್ ಮಾಡುತ್ತಿದೆಯೋಎಂದು ಅನುಮಾನ ಬರುತ್ತಿತ್ತು! ಮುಖದಲ್ಲಿ ಏನೋ ಒಂದು ತರಹ ಜಂಭ.ಯೌವನದ ಮದ ಬೇರೆ. ನಾನು ಈಗ ಮಗು ಅಲ್ಲ ಎಂದು ತೋರಿಸುತ್ತಿತ್ತು. ನಮ್ಮಎಲ್ಲರಿಗೂ ಚಿನ್ನುವಿನ ಭಾಷೆ ಅರ್ಥವಾಗುತ್ತಿತ್ತು.

    ಗಣೇಶನ ನೇವೇದ್ಯ ಎಂದು ಮಡಿಯಲ್ಲಿ ಕಡುಬು ಮಾಡುತ್ತಿದ್ದೆ.ನಮ್ಮ ಚಿನ್ನು ಮೆಲ್ಲಗೆ ಬಂದು ಇಲಿಯನ್ನು ಕಚ್ಚಿಕೊಂಡು ತನ್ನ ರಕ್ತಸಿಕ್ತ ಮುಖವನ್ನು ತೋರಿಸಿತು.ನನಗೆ ಭಯಂಕರ ಕೋಪ ಬಂತು.ಗೆಟಾವ್ಟ ಟ್ ಎಂದು ಜೋರಾಗಿ ಬೈದು ಬಿಟ್ಟೆ.ಚಿನ್ನು ಇಲಿಯನ್ನು ಅಲ್ಲೇ ಬಿಟ್ಟು ಕೋಪದಿಂದ ಹೊರಟುಹೋಯಿತು.ಆಮೇಲೆ ಮತ್ತೆ ಮನೆಗೆ ಬರಲೇಇಲ್ಲ.ಬಿಳಿ ಬೆಕ್ಕುಗಳನ್ನು ಬಹಳ ದಿನ ಹುಡುಕುತ್ತಲೇ ಇದ್ದೆ.ನನ್ನ ಚಿನ್ನು ಸಿಗಬಹುದೆಂದು ಈಗಲೂ ಹುಡುಕುತ್ತಿದ್ದೇನೆ.

    ಎಷ್ಟು ವರ್ಷಗಳು ಕಳೆದೆವು.ಆದರೆ ನಾನು ಚಿನ್ನವನ್ನು ಅಷ್ಟೊಂದು ಜೋರಾಗಿ ಬೈ ಬಾರದಿತ್ತು.

    ಪ್ರತಿವರ್ಷ ನನ್ನ ಪಾಪ ಪ್ರಜ್ಞೆ ಕಾಡುತ್ತಲೇ ಇದೆ.

    ಗಣೇಶ ಚತುರ್ಥಿ: ನಿಮಗಿದು ಗೊತ್ತಿರಲಿ

    ಎಂ.ವಿ. ಶಂಕರಾನಂದ

    ಗಣೇಶ ಚತುರ್ಥಿಯನ್ನು ಕುಟುಂಬದಲ್ಲಿ ಯಾರು ಆಚರಿಸಬೇಕು, ಗಣೇಶ ಚತುರ್ಥಿಯನ್ನು ಆಚರಿಸುವುದರ ಮಹತ್ವವೇನು, ಗಣೇಶ ಚತುರ್ಥಿಯಂದು ನೂತನ ಮೂರ್ತಿಯನ್ನು ಏಕೆ ತರಬೇಕು, ಗಣೇಶ ಮೂರ್ತಿಯು ಭಂಗವಾದರೆ ಅದರ ಪರಿಹಾರಗಳೇನು ಈ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

    ಕುಟುಂಬದಲ್ಲಿ ಯಾರು ಆಚರಿಸಬೇಕು?

    ಗಣೇಶ ಚತುರ್ಥಿಯಂದು ಆಚರಿಸಲಾಗುವ ವ್ರತವನ್ನು ‘ಸಿದ್ಧಿವಿನಾಯಕ ವ್ರತ’ ಎನ್ನುತ್ತಾರೆ. ವಾಸ್ತವದಲ್ಲಿ ಇದನ್ನು ಎಲ್ಲ ಕುಟುಂಬಗಳೂ ಆಚರಿಸಬೇಕು. ಅಣ್ಣ ತಮ್ಮಂದಿರೆಲ್ಲರೂ ಒಟ್ಟಿಗೆ ಇದ್ದರೆ, ಅಂದರೆ ಅವರ ದ್ರವ್ಯಕೋಶ ಮತ್ತು ಪಾಕನಿಷ್ಪತ್ತಿ (ಒಲೆ) ಒಟ್ಟಿಗೆ ಇದ್ದರೆ ಎಲ್ಲರೂ ಸೇರಿ ಒಂದೇ ಮೂರ್ತಿಯ ಪೂಜೆಯನ್ನು ಮಾಡಬೇಕು; ಆದರೆ ದ್ರವ್ಯಕೋಶ ಮತ್ತು ಪಾಕನಿಷ್ಪತ್ತಿಯು ಕಾರಣಾಂತರದಿಂದ ವಿಭಕ್ತವಾಗಿದ್ದರೆ (ಬೇರೆ ಬೇರೆ) ಪ್ರತಿಯೊಬ್ಬರೂ ಅವರವರ ಮನೆಗಳಲ್ಲಿ ಸ್ವತಂತ್ರವಾಗಿ ಗಣೇಶವ್ರತವನ್ನು ಆಚರಿಸಬೇಕು.

    ಗಣೇಶಚತುರ್ಥಿಯ ಮಹತ್ವವೇನು?
    ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ 120 ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಈ ಸಮಯದಲ್ಲಿ ಅವುಗಳ ತೀವ್ರತೆಯೂ ಹೆಚ್ಚಿಗೆ ಇರುತ್ತದೆ. ಈ ಕಾಲಾವಧಿಯಲ್ಲಿ, ಅಂದರೆ ಭಾದ್ರಪದ ಶುಕ್ಲ ಚತುರ್ಥಿಯಿಂದ ಅನಂತ ಚತುರ್ದಶಿಯ ವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಯಮಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ.
    (ಈ ಲಹರಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ‘ಹಬ್ಬ,ಧಾರ್ಮಿಕ ಉತ್ಸವ ಮತ್ತು ವ್ರತಗಳು’ ಈ ಗ್ರಂಥದಲ್ಲಿ ಕೊಡಲಾಗಿದೆ.)

    ಗಣೇಶ ಚತುರ್ಥಿಯಂದು ನೂತನ ಶ್ರೀ ಗಣೇಶ ಮೂರ್ತಿಯನ್ನು ತರುವ ಹಿಂದಿನ ಉದ್ದೇಶವೇನು?
    ಮನೆಯಲ್ಲಿ ಪೂಜೆಗಾಗಿ ಗಣಪತಿಯನ್ನು ಇಟ್ಟಿರುವಾಗಲೂ ನೂತನ ಮೂರ್ತಿಯನ್ನು ತರುವ ಉದ್ದೇಶವು ಮುಂದಿನಂತಿದೆ. ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶ ಲಹರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರುತ್ತವೆ. ನಿತ್ಯದ ಪೂಜೆಯಲ್ಲಿರುವ ಮೂರ್ತಿಯಲ್ಲಿ ಅವುಗಳ ಆವಾಹನೆ ಮಾಡಿದರೆ ಅದರಲ್ಲಿ ಬಹಳಷ್ಟು ಶಕ್ತಿ ಬರಬಹುದು. ಇಂತಹ ಹೆಚ್ಚು ಶಕ್ತಿ ಇರುವ ಮೂರ್ತಿಯ ಎಲ್ಲ ಬಗೆಯ ಪೂಜೆ-ಅರ್ಚನೆಗಳನ್ನು ವರ್ಷಪೂರ್ತಿ ಸರಿಯಾಗಿ ಮಾಡುವುದು ಕಠಿಣವಾಗಿರುತ್ತದೆ; ಏಕೆಂದರೆ ಅದಕ್ಕೆ ಕರ್ಮಕಾಂಡದ ಬಹಳಷ್ಟು ಬಂಧನಗಳನ್ನು ಪಾಲಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಗಣೇಶ ಲಹರಿಗಳನ್ನು ಆವಾಹನೆ ಮಾಡಲು ನೂತನ ಮೂರ್ತಿಯನ್ನು ಉಪಯೋಗಿಸಿ ನಂತರ ಅದನ್ನು ವಿಸರ್ಜನೆ ಮಾಡುತ್ತಾರೆ. ಗಣೇಶ ಲಹರಿಗಳಲ್ಲಿನ ಸತ್ತ್ವ, ರಜ ಮತ್ತು ತಮದ ಪ್ರಮಾಣವು ೫:೫:೫ ಹೀಗಿದ್ದರೆ ಸರ್ವಸಾಧಾರಣ ವ್ಯಕ್ತಿಯಲ್ಲಿ ಅದರ ಪ್ರಮಾಣವು ೧:೩:೫ ಹೀಗೆ ಇರುತ್ತದೆ; ಆದ್ದರಿಂದ ಸರ್ವಸಾಧಾರಣ ವ್ಯಕ್ತಿಯು ಗಣೇಶ ಲಹರಿಗಳನ್ನು ಹೆಚ್ಚು ಸಮಯದ ವರೆಗೆ ಗ್ರಹಣ ಮಾಡಲಾರನು.

    (ಗಣಪತಿಯ ಮೂರ್ತಿಯನ್ನು ಅಧ್ಯಾತ್ಮಶಾಸ್ತ್ರಕ್ಕನುಸಾರವಾಗಿ ತಯಾರಿಸಿದರೆ ಅದರಲ್ಲಿ ಗಣೇಶತತ್ತ್ವವು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲ್ಪಡುತ್ತದೆ. ಗಣೇಶ ಚತುರ್ಥಿಯಂದು ಪೂಜಿಸಬೇಕಾದ ಗಣಪತಿಯ ಮೂರ್ತಿಯನ್ನು ಅಧ್ಯಾತ್ಮಶಾಸ್ತ್ರದಂತೆ ಹೇಗೆ ತಯಾರಿಸಬೇಕು ಎಂಬುದರ ಮಾಹಿತಿಯನ್ನು ಇಲ್ಲಿ ಓದಿ.)

    ಶಾಸ್ತ್ರೋಕ್ತ ವಿಧಿ ಮತ್ತು ರೂಢಿ ಇವುಗಳ ಅವಧಿ

    ‘ಭಾದ್ರಪದ ಶುಕ್ಲ ಚತುರ್ಥಿಯ ದಿನ ಮಣ್ಣಿನ ಗಣಪತಿಯನ್ನು ತಯಾರಿಸಿ, ಅದನ್ನು ಎಡಗೈ ಮೇಲಿಟ್ಟು ಅಲ್ಲಿಯೇ ಸಿದ್ಧಿವಿನಾಯಕ ಹೆಸರಿನಿಂದ ಪ್ರಾಣಪ್ರತಿಷ್ಠೆ ಮತ್ತು ಪೂಜೆಯನ್ನು ಮಾಡಿ ಕೂಡಲೇ ವಿಸರ್ಜನೆ ಮಾಡಬೇಕು ಎಂಬ ಶಾಸ್ತ್ರವಿದೆ. ಆದರೆ ಮಾನವರು ಉತ್ಸವಪ್ರಿಯರಾಗಿರುವುದರಿಂದ ಇಷ್ಟರಿಂದಲೇ ಅವರಿಗೆ ಸಮಾಧಾನವಾಗಲಿಲ್ಲ. ಆದುದರಿಂದ ಒಂದೂವರೆ, ಐದು, ಏಳು ಅಥವಾ ಹತ್ತು ದಿನ ಗಣಪತಿಯ ಮೂರ್ತಿಯನ್ನು ಇಟ್ಟು ಉತ್ಸವ ಮಾಡತೊಡಗಿದರು. ಕೆಲವರು ಗಣಪತಿಯ ವಿಸರ್ಜನೆಯನ್ನು ಗೌರಿಯ ಜೊತೆಗೆ ಮಾಡುತ್ತಾರೆ. ಯಾರಾದರೊಬ್ಬರ ಕುಲದಲ್ಲಿ ಗಣಪತಿಯನ್ನು ಐದು ದಿನ ಇಡುವ ಪದ್ಧತಿ ಇದ್ದು ಅವರು ಅದನ್ನು ಒಂದೂವರೆ ಅಥವಾ ಏಳು ದಿನ ಇಡಬೇಕಾಗಿದ್ದರೆ ಅವರು ಹಾಗೆ ಮಾಡಬಹುದು. ಇದಕ್ಕೆ ಯಾವುದೇ ಅಧಿಕಾರಯುತ ವ್ಯಕ್ತಿಯನ್ನು ಕೇಳುವ ಆವಶ್ಯಕತೆಯಿಲ್ಲ. ತಮ್ಮ ತಮ್ಮ ರೂಢಿಗನುಸಾರ ಮೊದಲನೆಯ, ಎರಡನೆಯ, ಮೂರನೆಯ, ಆರನೆಯ, ಏಳನೆಯ ಅಥವಾ ಹತ್ತನೆಯ ದಿನ ಗಣೇಶಮೂರ್ತಿಯ ವಿಸರ್ಜನೆಯನ್ನು ಮಾಡಬೇಕು.

    ಮೂರ್ತಿಯು ಭಗ್ನವಾದರೆ ಏನು ಮಾಡಬೇಕು?
    ಮೂರ್ತಿಯ ಪ್ರಾಣಪ್ರತಿಷ್ಠೆಯನ್ನು ಮಾಡುವುದಕ್ಕಿಂತ ಮೊದಲು ಯಾವುದಾದರೊಂದು ಅವಯವಕ್ಕೆ ಏಟಾದರೆ ಅಥವಾ ಭಿನ್ನವಾದರೆ ಚಿಂತಿಸುವ ಕಾರಣವಿಲ್ಲ, ಅದರ ಬದಲು ಬೇರೆ ಮೂರ್ತಿಯನ್ನು ತಂದು ಪೂಜಿಸಬೇಕು. ವಿಸರ್ಜನೆಗಾಗಿ ಅಕ್ಷತೆ ಹಾಕಿದ ನಂತರ (ದೈವತ್ತ್ವವು ಹೋದ ನಂತರ) ಅವಯವಗಳಿಗೆ ಏಟಾದರೆ ಅಥವಾ ಭಿನ್ನವಾದರೆ ಆ ಮೂರ್ತಿಯನ್ನು ನಿತ್ಯದಂತೆ ವಿಸರ್ಜನೆ ಮಾಡಬೇಕು. ಪ್ರಾಣ ಪ್ರತಿಷ್ಠೆಯಾದ ನಂತರ ಅವಯವಕ್ಕೆ ಏಟಾದರೆ ಅಥವಾ ಮುರಿದರೆ ಆ ಮೂರ್ತಿಗೆ ಅಕ್ಷತೆಯನ್ನು ಅರ್ಪಿಸಿ ವಿಸರ್ಜಿಸಬೇಕು. ಈ ಘಟನೆಯು ಗಣೇಶ ಚತುರ್ಥಿಯ ದಿನವೇ ನಡೆದರೆ ಬೇರೆ ಮೂರ್ತಿಯನ್ನು ತಂದು ಪೂಜಿಸಬೇಕು. ಎರಡನೆಯ ಅಥವಾ ಮೂರನೆಯ ದಿನ ನಡೆದರೆ ಹೊಸ ಮೂರ್ತಿಯನ್ನು ತಂದು ಪೂಜಿಸಬೇಕಾಗಿಲ್ಲ. ಮೂರ್ತಿಯು ಸಂಪೂರ್ಣ ಭಗ್ನವಾದರೆ ಕುಲಪುರೋಹಿತರ ಸಲಹೆಯಂತೆ ಯಥಾವಕಾಶ ‘ಅದ್ಭುತ ದರ್ಶನ ಶಾಂತಿ’ಯನ್ನು ಮಾಡಿಸಬೇಕು. ಗಣೇಶ ಚತುರ್ಥಿಯಂದು ದೀಪಪತನ (ದೀಪ ಆರಿ ಹೋಗುವುದು), ಅರೆಯುವ ಕಲ್ಲು, ಬೀಸುವ ಕಲ್ಲು ಅಥವಾ ಸಾಣೆಕಲ್ಲು ಒಡೆದು ಹೋಗುವುದು, ಕೆಸುವಿನ ಎಲೆಗೆ ಹೂವು ಬರುವುದು, ಮೂರ್ತಿಭಗ್ನ ಇತ್ಯಾದಿ ಘಟನೆಗಳಾದರೆ ಆ ಕುಟುಂಬದಲ್ಲಿ ದ್ರವ್ಯ ಹಾನಿ, ಗಂಭೀರ ರೋಗ ಅಥವಾ ಅಪಮೃತ್ಯು ಆಗುವ ಸಾಧ್ಯತೆಯಿರುತ್ತದೆ; ಅದಕ್ಕಾಗಿ ಮೇಲೆ ಕೊಟ್ಟಿರುವ ಪರಿಹಾರಗಳನ್ನು ಶ್ರದ್ಧೆಯಿಂದ ಮಾಡಬೇಕು.

    ಚಂದ್ರ, ಮನಸ್ಸು ಮತ್ತು ಗಣೇಶ ಚತುರ್ಥಿ ಇವುಗಳ ಸಂಬಂಧ
    1. ಸೌರಮಂಡಲದಲ್ಲಿನ ಎಲ್ಲ ಗ್ರಹಗಳಲ್ಲಿ ಚಂದ್ರಗ್ರಹವು ಅತ್ಯಂತ ಚಂಚಲವಾಗಿದೆ. ಆದುದರಿಂದ ಚಂಚಲ ಸ್ವಭಾವವಿರುವವರ ಮನಸ್ಸಿನ ಮೇಲೆ ಚಂದ್ರನ ಸ್ಪಂದನಗಳು ಹೆಚ್ಚು ಕಾರ್ಯ ಮಾಡುತ್ತವೆ.


    3. ಪೃಥ್ವಿಯಿಂದ ಚಂದ್ರಗ್ರಹದ ದರ್ಶನವನ್ನು ನಾವು ಸಹಜವಾಗಿ ಪಡೆದುಕೊಳ್ಳಬಹುದು ಮತ್ತು ಅದನ್ನು ನಾವು ಮನಸ್ಸಿನಲ್ಲಿ ಅತ್ಯಂತ ಸಹಜವಾಗಿ ಯಾವಾಗ ಬೇಕಾದರೂ ನೋಡಬಹುದು.


    3. ಪರಿಣಾಮ: ಗಣೇಶ ಚತುರ್ಥಿಯ ದಿನ ಬ್ರಹ್ಮಾಂಡದಲ್ಲಿ ನಿರ್ಮಾಣವಾಗುವ ರಜೋಗುಣದ ಸ್ಪಂದನಗಳು ಚಂದ್ರನ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತವಾಗಿ ಚಂಚಲ ಮನಸ್ಸಿರುವ ಮನುಷ್ಯರ ಕಡೆಗೆ ಆಕರ್ಷಿಸಲ್ಪಡುತ್ತವೆ.

    ಗಣೇಶ ಚತುರ್ಥಿಯ ವೈಶಿಷ್ಟ್ಯಗಳು
    ಈ ದಿನ ರಜೋಗುಣದಿಂದಾಗಿ ಚಂದ್ರನ ಸುತ್ತಲಿರುವ ಪ್ರಭಾವಲಯವು ಬಹಳ ತೇಜಸ್ವಿಯಾಗಿ ಕಾಣಿಸುತ್ತದೆ ಮತ್ತು ಅದು ಚಂಚಲ ಮನಸ್ಸನ್ನು ಸಹಜವಾಗಿ ಆಕರ್ಷಿಸಿಕೊಳ್ಳುತ್ತದೆ. ಈ ದಿನ ಚಂದ್ರದರ್ಶನವನ್ನು ಪಡೆದುಕೊಂಡರೆ, ಚಂದ್ರನು ತನ್ನ ಪ್ರಚಂಡ ರಜೋಗುಣದೊಂದಿಗೆ ಮನಸ್ಸಿನಲ್ಲಿ ಬೇರೂರುತ್ತಾನೆ. ಮನಸ್ಸಿನ ಮೇಲೆ ಮೂಡುವ ಅವನ ಚಿತ್ರವೂ ಅಷ್ಟೇ ಚಂಚಲವಾಗಿರುತ್ತದೆ. ಆದುದರಿಂದ ಅದು ಯಾವ ಕಾರಣಗಳು ಇಲ್ಲದಿರುವಾಗಲೂ ಮತ್ತು ಯಾವುದೇ ಸಮಯದಲ್ಲಿ ಮನಸ್ಸಿನ ಮೇಲೆ ಮೂಡುತ್ತದೆ. ಚಂದ್ರನನ್ನು ನೋಡಿದ ಸಮಯದಲ್ಲಿನ ದೃಶ್ಯವನ್ನು ನೆನಪಿಸಿಕೊಂಡರೂ ಮನಸ್ಸು ಚಂಚಲವಾಗುತ್ತದೆ.

    ಗಣೇಶ ಚತುರ್ಥಿಯ ದಿನ ಚಂದ್ರನ ದರ್ಶನವನ್ನು ಪಡೆದುಕೊಳ್ಳದಿರುವುದು

    ಮನಸ್ಸಿನ ಚಂಚಲತೆಯು ಸುಮಾರು ಒಂದು ವರ್ಷದವರೆಗೆ ಉಳಿಯುತ್ತದೆ. ಮನಸ್ಸಿನ ಚಂಚಲತೆಯ ಪ್ರಚಂಡ ಪ್ರಭಾವದಿಂದಾಗಿ ಯಾವುದಾದರೊಂದು ಘಟನೆಯು ಘಟಿಸುವ ಮೊದಲೇ ಅದು ಘಟಿಸಿ ಹೋಗಿದೆ ಎಂಬ ತಪ್ಪುತಿಳುವಳಿಕೆ ಅಥವಾ ಗಾಳಿ ಸುದ್ದಿ ಹರಡುವ ಸಾಧ್ಯತೆ ಇರುತ್ತದೆ. ಇದನ್ನೇ ಯಾವುದಾದರೊಂದು ಅಡಚಣೆಯನ್ನು ಮೈಮೇಲೆ ಎಳೆದುಕೊಳ್ಳುವುದು ಎಂದು ಹೇಳುತ್ತಾರೆ. ಈ ಕಾರಣಕ್ಕಾಗಿ ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡುವುದು ಅಶುಭವೆಂದು ತಿಳಿದುಕೊಳ್ಳುತ್ತಾರೆ.

    ಶ್ರೀ ಗಣೇಶ ಚತುರ್ಥಿಯಂದು ಬಿಡಿಸಬೇಕಾದ ಗಣೇಶತತ್ತ್ವವನ್ನು ಆಕರ್ಷಿಸುವ ರಂಗೋಲಿಗಳು

    ಗಣೇಶೋತ್ಸವದ ಸಮಯದಲ್ಲಿ ಮಾಡಬೇಕಾದ ಪ್ರಾರ್ಥನೆ
    ಹೇ ಶ್ರೀ ಗಣೇಶಾ, ಗಣೇಶೋತ್ಸವದ ಸಮಯದಲ್ಲಿ ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುವ ನಿನ್ನ ತತ್ತ್ವದ ಲಾಭವು ನನಗೆ ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸುವಂತಾಗಲಿ.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    ಬಿಆರ್ ಎಲ್ ಗೆ 75, ಗೋಪಿಗೆ 50

    ಇಂದು 75 ನೇ ವಸಂತಕ್ಕೆ ಕಾಲಿಡುತ್ತಿರುವ ಕನ್ನಡದ ಪ್ರಮುಖ ಕವಿ ಬಿ ಆರ್ ಲಕ್ಷ್ಮಣ ರಾವ್ ಅವರ ಚೊಚ್ಚಲ ಜಗತ್ಪ್ರಸಿದ್ಧ ಕವನ ಸಂಕಲನ” ಗೋಪಿ ಮತ್ತು ಗಾಂಡಲೀನ” ಕ್ಕೆ ಈಗ ಬರೋಬ್ಬರಿ ಐವತ್ತು ವರ್ಷಗಳು.

    ಆ ಸಂಕಲನದ ಪದ್ಯಗಳ ಮೇಲೊಮ್ಮೆ ಕಣ್ಣಾಡಿಸಿದರೆ ಐವತ್ತು ವರ್ಷಗಳ ಹಿಂದೆಯೇ ನಮ್ಮ ಕವಿಗಳು ಇಂತಹಾ ಕವನಗಳನ್ನು ಬರೆದಿದ್ದಾರಲ್ಲಾ ಎಂದು ಬೆರಗು ಮೂಡುತ್ತದೆ. ಆಗ ಅವರ ಮೇಲೆ ಪ್ರಭಾವ ಬೀರಿದ್ದ ಲಂಕೇಶರ ಮುನ್ನುಡಿಯೂ ಸಂಕಲನದಷ್ಟೇ ಸೊಗಸಾಗಿದೆ. ಅಲ್ಲಿ ಲಂಕೇಶರಿಗೆ ಕವಿಯ ಬಗ್ಗೆ ಹೇಳುವ ಉತ್ಸಾಹವೇ ಹೆಚ್ಚು. ಅದಕ್ಕೆ ಕಾರಣ ಕವಿಯ ಬಗೆಗಿನ ಪ್ರೀತಿಯ ಜೊತೆ, ಅದಷ್ಟನ್ನೂ ಹೇಳದೆ ಪದ್ಯಗಳ ಕುರಿತು ಹೇಳಲಾಗುವುದಿಲ್ಲ ಎಂಬ ಲಂಕೇಶರ ನಂಬಿಕೆ. ತಮ್ಮ ಬಗ್ಗೆಯಾಗಲೀ , ತಮ್ಮ ಕವಿತೆಗಳ ಕುರಿತಾಗಲೀ ಲಕ್ಷ್ಮಣ ರಾವ್ ಆ ಸಂಕಲನದಲ್ಲಿ ಏನನ್ನೂ ಹೇಳಿಕೊಂಡಿಲ್ಲ. ಹೇಳಬೇಕಾದ್ದೆಲ್ಲವನ್ನೂ ಪದ್ಯಗಳ ಮೂಲಕವೇ ಹೇಳಿದ್ದಾರೆ.

    ಮೊಟ್ಟ ಮೊದಲನೆಯ ಪದ್ಯವನ್ನೇ ನೋಡಿ. .
    ನಾನು ಕ್ರಮ
    ವಾಗಿ ಪಂಚೇಂದ್ರಿಯ
    ಹೃದಯ ಮಿದುಳು
    ಗಳ ದಾಸ .
    ಈ ವ್ಯಾಸ
    ದಲ್ಲೇ ನನ್ನ
    ಭಾರತ , ಕುರುಕ್ಷೇತ್ರ,
    ಕರ್ಮಯೋಗ,
    ವಿಶ್ವರೂಪ ದರ್ಶನ ,
    ಮುಕ್ತಿ .

    ಹೀಗೆ ಕವಿತೆಯ ಮೂಲಕ ತಾನೇನೆಂದು ಹೇಳುತ್ತಾ , ಪದ್ಯಗಳು ಹೇಗಿರಬಹುದೆಂಬ ಕಲ್ಪನೆಯನ್ನು ಓದುಗನೊಳಗೆ ಮೂಡಿಸುವ ಅಪ್ಪಟ ಸೆಲ್ಫಿ ಕವಿತೆ ಇದು .. ಬಹಳ ವಿಶಿಷ್ಟ ಪ್ರಯೋಗ ಕೂಡಾ ಹೌದು. ಈ ಮೂರರಲ್ಲೇ ಎಲ್ಲರಿಗೂ ಇವೆಲ್ಲವೂ ಆಗುವುದಾದರೂ ಆದ್ಯತೆಗಳ ಪಟ್ಟಿಯನ್ನು ಗಮನಿಸಿದರೆ ಇಂತಹಾ ಪಟ್ಟಿಯನ್ನು ಕೊಡಬಲ್ಲ ಕವಿಯ ಈ ನಿರ್ಭೀಡ ನಡೆ ಕನ್ನಡದ ಮಟ್ಟಿಗೆ ಆಗ ಅಪರೂಪವಾಗಿತ್ತು. ಆ ದಿಟ್ಟತನ ಲಂಕೇಶರನ್ನು ನೋಡಿ ಕಲಿತದ್ದಾಗಿರಬಹುದಾಗಿದ್ದರೂ ಆ ಲವಲವಿಕೆ , ಜೀವನ ಪ್ರೀತಿ ಸಹಜವಾಗಿಯೇ ಪದ್ಯಗಳಲ್ಲಿ ಎದ್ದುಬಂದಂತಿದೆ. ಮತ್ತು ಆ ವೈನೋದಿಕ ದೃಷ್ಟಿಕೋನ ಅವರಿಗೆ ಮತ್ತೂ ಸಹಜವಾಗಿ ಸಿದ್ಧಿಸಿದೆ. ಸಂಕಲನದಲ್ಲಿ ಕ್ರಮವಾಗಿ ಕವಿಯ ಅಸ್ತಿತ್ವದ ಕುರುಹುಗಳಿವೆ .. ಮೊದಲು ನಾನು, ನಂತರ ಅಪ್ಪ, ಅಮ್ಮ, ವಾಸಂತಿ, ಪ್ರೇಮ ಗೀಮ, ಗೆಳೆಯರು ನಂತರವೇ ಪ್ರಕೃತಿ, ಎಲ್ಲೆಲ್ಲೂ ಪಂಚೇಂದ್ರಿಯಗಳ ಅಬ್ಬರ .. ಅವರ ಸುಪ್ರಸಿದ್ಧ ಗೋಪಿ ಮತ್ತು ಗಾಂಡಲೀನ ಪದ್ಯವನ್ನೊಮ್ಮೆ ನೋಡಿದಾಗ ಆ ಪದ್ಯದಲ್ಲಿ ಲಂಕೇಶರು ಗುರುತಿಸುವಂತೆ ಗೋಪಿ ನಿಜಕ್ಕೂ ಮುಗ್ಧ .

    ಜನಿವಾರವನ್ನು ಕಿವಿಗೆ ಸಿಕ್ಕಿಸಿಕೊಂಡು ಶೌಚಾಲಯಕ್ಕೆ ಹೋಗಿ ಬರುವ, ಕಾಪಿ ಮಾತ್ರ ಕುಡಿಯುವ ಗೋಪಿ, ಗಾಂಡಲೀನಳನ್ನು ಎವೆ ಇಕ್ಕದೇ ನೋಡುತ್ತಾ ನಿಲ್ಲುತ್ತಾನೆ .. ಹಾಗೆ ನೋಡುತ್ತಾ ನಿಂತ ಅವನ ಮುಂದೆ ವೆಂಕಟಲಕ್ಷ್ಮಿ ಬಂದಂತಾಗಿ ಅವನು ಗಾಂಡಲೀನಾಳ ಪಾದಪದ್ಮಗಳ ಮೇಲೆ ಬಿದ್ದಾಗ ( ಅವರು ಮೊದಲು ಬರೆದ ಈ ಸೆಲ್ಫಿ ಕವಿತೆಯ ಪ್ರಕಾರ ) ಓದುಗನ ತುಂಟ ಮನಸ್ಸು ಜಾರಿಬಿದ್ದನೋ , ಅಡ್ಡಬಿದ್ದನೋ ಎಂಬ ಸಾಲನ್ನು ಬೇರೆಬೇರೆ ರೀತಿಗಳಲ್ಲಿ ಓದಿಕೊಳ್ಳಲಾರಂಭಿಸುತ್ತದೆ. ಪರನಾರಿ ಸಹೋದರ ಗೋಪಿ ಎಂಬ ವಿಶೇಷಣದಲ್ಲಿಯೂ ತುಂಟತನವನ್ನೂ , ಬೆವರಿ ನೀರಾಗಿ ನೆಂದು ನೊಂದೂ ಅಡ್ಡಬಿದ್ದ..ನೋ ಎಂದೂ , ಜಾರಿಬಿದ್ದ ಎನ್ನುವಲ್ಲಿ ಮತ್ತೊಂದು ಅರ್ಥವನ್ನೂ ಹುಡುಕುತ್ತದೆ . ವೆಂಕಟಲಕ್ಷ್ಮಿಯ ನೆನಪು ಮಿದುಳು , ಗಾಂಡಲೀನ ಪಂಚೇಂದ್ರಿಯ .. ಅವರೇ ಹೇಳಿಕೊಂಡ ಪ್ರಕಾರ ಪಂಚೇಂದ್ರಿಯವೇ ಮೊದಲು .. ಪಂಚೇಂದ್ರಿಯಕ್ಕೇ ಪ್ರಾಮುಖ್ಯತೆ .. ಆದರೆ ಜಾರಿ ಬಿದ್ದ ಗಾಂಡಲೀನಾಳಿಗೆ ಎನ್ನುವಲ್ಲಿ ಗೆಲ್ಲುವುದು ಮಿದುಳೇ .. ( ವಿವೇಕ ಎಂದಿಟ್ಟುಕೊಳ್ಳೋಣ ಬೇಕಾದರೆ ) .

    ಈ ಪರನಾರಿಯನ್ನು ಗೆದ್ದ ಸಹೋದರನ ಕಥೆ ನಮ್ಮಲ್ಲೇನೂ ಹೊಸತಲ್ಲ . ಆದರೆ ಅಲ್ಲಿ ಗಾಂಡಲೀನಳನ್ನೂ , ಗೋಪಿಯನ್ನೂ ಅವರಿಬ್ಬರ ವರ್ತನೆಗಳನ್ನೂ ವರ್ಣಿಸುವ ಲಕ್ಷ್ಮಣ ರಾವ್ ನನಗೆ ಲಾರೆನ್ಸ್ ನೆನಪು ತಂದುಕೊಡುತ್ತಾರೆ . ಲಾರೆನ್ಸ್ ದೈಹಿಕ ವಿವರಗಳನ್ನು ಕಟ್ಟಿಕೊಡುವುದರಲ್ಲಿ ಅಪ್ರತಿಮ ಬರಹಗಾರ . ಉದಾಹರಣೆಗೆ ಅವನ ಸ್ನೇಕ್ ಪದ್ಯವನ್ನು ನೋಡಿ. ಅದು ಹರಿಯುವ ರೀತಿಯನ್ನು , ಅದರ ದೈಹಿಕ ಸೌಂದರ್ಯವನ್ನು ಅದೆಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾನೆ ಆತ. ಅವನೂ ಪಂಚೇಂದ್ರಿಯಗಳಿಗೇ ಮೊದಲ ಒತ್ತು ಕೊಟ್ಟವ. ಲೇಡಿ ಚಾಟರ್ಲೀಸ್ ಲವರ್ ನ ಅವಳ ಪ್ರಿಯತಮ ಸ್ನಾನ ಮಾಡುತ್ತಿರುವ ದೃಶ್ಯವನ್ನು ಅವನು ವರ್ಣಿಸುವ, ದೈಹಿಕ ಅಸಾಮರ್ಥ್ಯದ ಕಾರಣಕ್ಕೆ ಗಂಡನನ್ನು ತೊರೆದು ಗೆಳೆಯನ ಜೊತೆ ಹೋಗುವ , ಬ್ಲೈಂಡ್ ಮ್ಯಾನ್ ಕಾದಂಬರಿಯಲ್ಲಿ ಗಂಡ ಕುರುಡನಾದರೂ ದೈಹಿಕ ಸಾಮರ್ಥ್ಯ ಹೊಂದಿದವನೆಂಬ ಕಾರಣಕ್ಕೆ ಅವಳು ಪೀಚಲು ದೇಹದ ಗೆಳೆಯನನ್ನು ಬಿಟ್ಟು ಗಂಡನ ಜೊತೆಯೇ ಉಳಿಯುವ ವಿವರಗಳನ್ನು ಅವನು ಕಟ್ಟಿಕೊಡುವ ರೀತಿ ಅಸಾದೃಶ.

    ಅದು ನನಗೆ ಲಕ್ಷ್ಮಣರಾಯರ ಸಾಹಿತ್ಯದಲ್ಲೂ ಎದ್ದು ಕಾಣುತ್ತದೆ ಎಂದರೆ ಕೇಳುಗರಿಗೆ ತುಸು ಉತ್ಪ್ರೇಕ್ಷೆಯಂತೆ ಅನ್ನಿಸಬಹುದು . ಆದರೆ ಲಸ್ಟ್ ಎಂಬುದು ಈ ಇಬ್ಬರ ಸಾಹಿತ್ಯದ ಸ್ಥಾಯೀ ಭಾವವೂ ಹೌದು. ಜೊತೆಗೆ ಅವರ ಗಾಂಡಲೀನ ಗೋಪಿಯ ಜೊತೆ ನಡೆದುಕೊಳ್ಳುವ ರೀತಿಯನ್ನು ವರ್ಣಿಸುವಾಗ ಆ ವಿವರಗಳ ಶಕ್ತಿಗೆ ಓದುಗನಿಗೆ ತಾನೇ ಗೋಪಿಯಾದಂತೆ ಭಾಸವಾದರೆ ಆಶ್ಚರ್ಯವಿಲ್ಲ . ಆದರೆ ಅವರು ತಮ್ಮ ವೈನೋದಿಕ ದೃಷ್ಟಿಕೋನದ ಮೂಲಕ ಆ ವಿವರಗಳನ್ನು ಅಶ್ಲೀಲದಿಂದ ತುಂಟತನಕ್ಕೆ ತಿರುಗಿಸುತ್ತಾರೆ . ಲಕ್ಷ್ಮಣ ರಾಯರ ಕಾವ್ಯದ ಪ್ರಮುಖ ಗುಣ ಅದೇ. ಯಾರೂ ಹೇಳಲು ಹಿಂಜರಿಯುವ ವಿಷಯಗಳನ್ನು ಲೀಲಾಜಾಲವಾಗಿ ಹೇಳುತ್ತಾ ತನ್ಮೂಲಕ ಓದುಗನ ಮುಂದೊಂದು ಕನ್ನಡಿಯನ್ನು ಹಿಡಿಯುತ್ತಾರೆ . ( ಅವರೊಬ್ಬ ಒಳ್ಳೆಯ ಫೋಟೋಗ್ರಾಫರ್ ಎಂದು ಲಂಕೇಶ್ ಮುನ್ನುಡಿಯಲ್ಲಿ ಬರೆದಿದ್ದನ್ನು ಓದಿದಾಗ ನನಗೆ ಆ ಸೂಕ್ಷ್ಮ ವಿವರಗಳನ್ನು ಹೇಗೆ ಗ್ರಹಿಸುತ್ತಾರೆ ಎಂದು ಹೊಳೆಯಿತು ). .

    ಈ ಸಂಕಲವನ್ನು ಓದುವಾಗ ನನಗೆ ಎದ್ದು ಕಾಣಿಸಿದ ಮತ್ತೊಂದು ವಿಷಯವೆಂದರೆ ಅವರಿಗೆ ಆ ವಯಸ್ಸಿನಲ್ಲಿಯೇ ಸಿಕ್ಕ ಲಯಪ್ರಜ್ಞೆ, ಛಂದಸ್ಸಿನ ಹಿಡಿತ , ತಾನು ಹೊಸದೇನು ಹೇಳಬಹುದೆಂಬ ಉಳಿದವರಿಗಿಂತ ಭಿನ್ನವಾಗಿ ನಿಲ್ಲುವ ಕಲ್ಪನೆ ಇವೆಲ್ಲವೂ ಅವರಿಗೆ ಬಹಳ ಬೇಗನೆ ಸಿದ್ಧಿಸಿಬಿಟ್ಟಿತ್ತು. ಸ್ವತಃ ಹಾಡುಗಾರರಾದ ಅವರಿಗೆ ಆ ಗೇಯ ಸಹಜವಾಗಿಯೇ ಒಲಿದಿದೆ. ಅವರು ಆ ಕಾಲಕ್ಕೆ ಅತ್ಯಂತ ಆಧುನಿಕ ವಿಷಯಗಳನ್ನೇ ಬರೆದರೂ ಅವೆಲ್ಲವನ್ನೂ ಯಾವ ಛಂದಸ್ಸನ್ನೂ ಮುರಿದು ಕಟ್ಟುವ ಗೋಜಿಗೆ ಹೋಗದೆ ಇದ್ದಲ್ಲಿಯೇ ಸಾಧಿಸಿದರು. ಮುರಿದು ಕಟ್ಟಲಾಗದ ಅಸಾಮರ್ಥ್ಯವನ್ನು ಮುಚ್ಚಿಟ್ಟು ನಾವು ಮುರಿದು ಕಟ್ಟುತ್ತೇವೆ ಎಂದು ಸೋಗು ಹಾಕುವವರು ಇವರ ಪದ್ಯಗಳನ್ನು ಓದಬೇಕು.. ಅವರ ಪದ್ಯಗಳನ್ನು ಗಟ್ಟಿಯಾಗಿ ಓದಿನೋಡಿ .. ಆ ಹಿಡಿತ ತಾನೇ ತಾನಾಗಿ ಅರಿವಾಗುತ್ತದೆ.

    ದೇಹವನು ಹೀಗಳೆಯಬೇಡ ಎಂಬಂಥ ಪದ್ಯಗಳನ್ನು ಬರೆದ ಇವರು ಈ ಸಂಕಲನದ ” ನಾನು” ಎಂಬ ಪದ್ಯದಲ್ಲಿ ಹೇಳಿಕೊಂಡ ಹಾಗೆ ಆ ವ್ಯಾಸ ಬಿಟ್ಟು ಕದಲಲೇ ಇಲ್ಲ. ಹಾಗಾಗಿಯೇ ಈ ಪುಟ್ಟ ಪದ್ಯವನ್ನು ನಾನು ಅವರ ಕಾವ್ಯದ ಮ್ಯಾನಿಫೆಸ್ಟೋ ಎನ್ನುತ್ತೇನೆ . ಅನೇಕರು ಅಧ್ಯಾತ್ಮವನ್ನು ಧ್ಯಾನಿಸುತ್ತಾ , ಹುಡುಕುತ್ತಾ ಅಂಡಲೆಯುವಾಗ ಅದಕ್ಕಿಂತ ಭಿನ್ನವಾಗಿ ಇದು ಬಹಳ ಮುಖ್ಯವಾದುದು ಎಂದು ಲೌಕಿಕವನ್ನು ಕಂಡುಕೊಂಡರು.ಅಲೌಕಿಕದ ಕುರಿತು ಯಾವ ಆಸಕ್ತಿಯನ್ನೂ ತೋರದ , ಕನ್ನಡ ಕಾವ್ಯಪ್ರಪಂಚದಲ್ಲಿ ಲೌಕಿಕಕ್ಕೇ ನಿಷ್ಠರಾದ ,ಅದನ್ನು ಇಂದಿನವರೆಗೂ ಬಿಟ್ಟು ಅತ್ತಿತ್ತ ಸರಿಯದ ಕವಿ ಅವರೊಬ್ಬರೇ .. ಮತ್ತು ತನ್ನ ದಾರಿ ಇದೇ ಎಂಬುದು ಅವರ ನಂಬಿಕೆ ಕೂಡಾ . ಹಾಗೆಂದ ಮಾತ್ರಕ್ಕೆ ಅದನ್ನು ಅವರ ಕವನಗಳ ಗುಣ ಎಂದು ಪರಿಗಣಿಸಬೇಕೇ ಹೊರತು ದೋಷವೆಂದಲ್ಲ .

    ಜೀವಮಾನವಿಡೀ ಹೆಣ್ಣಿನ ಬಗ್ಗೆ ಯೋಚಿಸಿದವರು, ಅವಳ ಬಗ್ಗೆ ಪದ್ಯ ಬರೆದವರು ಕನ್ನಡದ ಮಟ್ಟಿಗೆ ಕೆ ಎಸ್ ನ.. ಅಕ್ಕಿಯಾರಿಸುವಾಗ ಚಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು, ಕರಿಮಣಿ ತುಂಬಿದ ಕೊರಳನ್ನು ಕಂಡವರು ಅವರು. ಅವರ ಪದ್ಯಗಳಲ್ಲಿ ಹೆಣ್ಣಿನ ಕುರಿತಲ್ಲದ್ದು ಎಣಿಸಬಹುದಾದಷ್ಟು ಮಾತ್ರ. ಮನೆಯಲ್ಲಿ ಹೆಂಡತಿಯನ್ನು ದೂರವಿಡುವವರೂ , ಹೆಣ್ಣನ್ನು ಎಂದೂ ಆರಾಧಿಸದವರೂ ಒಮ್ಮೆ ತಲೆದೂಗಿ ಆಹಾ ಎನ್ನುವಂತೆ, ಪದ್ಯವನ್ನು ಗುನುಗುವಂತೆ ಭಾವಸಾಮ್ರಾಜ್ಯ ಕಟ್ಟಿಕೊಟ್ಟವರು ಅವರು. ಅದಕ್ಕಿಂತ ಭಿನ್ನವಾಗಿ ಅವರ ಸಮಕಾಲೀನ ಕಿರಿಯ ಕವಿಯಾಗಿ ಹೆಣ್ಣನ್ನು ಇನ್ನೊಂದು ದೃಷ್ಟಿಕೋನದಿಂದ ಧ್ಯಾನಿಸಿದವರು ಲಕ್ಷ್ಮಣ ರಾವ್ .

    ಯಾವ ಯಾವ ಸಂಗತಿಗಳನ್ನು ಹೇಳಲು ಕವಿಗಳು ಹಿಂಜರಿದಿದ್ದರೋ , ಹೇಳಲು ಮನ ಮಾಡಿರಲಿಲ್ಲವೋ ಅಲ್ಲಿಯವರೆಗೂ ಇದ್ದ ಮಡಿವಂತಿಕೆಯನ್ನು ಮೀರಿ, ಯಾರೂ ಹೇಳದ ಸೂಕ್ಷ್ಮಗಳನ್ನು ಬರೆಯುತ್ತಾ ಹೋದರು. ಅಲ್ಲಿಯವರೆಗೂ ಇದ್ದ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಅಡಿಗರು, ಜೊತೆಗಿದ್ದವಳು ಕೋಟಿ ರುಪಾಯಿಗೆ ಸರಿಸಮಾನಳು ಎಂದು ಹಾಡಿದ ಕೆ ಎಸ್ ನ ಇವರೆಲ್ಲರಿಗಿಂತ ಭಿನ್ನವಾಗಿ ಬರೆದರು. . ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅಡಿಗರಂಥಾ ಕವಿಗಳೂ ಅವರನ್ನು ಮೆಚ್ಚುಗೆಯಿಂದ ನೋಡುವಂತೆ ತಮ್ಮ ರೀತಿಯಲ್ಲೇ ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಬರೆದವರು ಬಿ ಆರ್ ಎಲ್ . ಆ ಮೆಚ್ಚುಗೆ ಭಾವಕ್ಕೆ? ಭಾಷೆಗೆ? ಆ ವಯಸ್ಸಿನ ಕಸುವಿಗೆ? ದಿಟ್ಟ ಅಕ್ಷರಗಳಿಗೆ? .ಸ್ವಂತಿಕೆಗೆ? … ಈ ಎಲ್ಲಕ್ಕೂ !!!!

    ನಾವು ಒಮ್ಮೆ ಕಾವ್ಯಕೇಳಿ ಗುಂಪಿನಲ್ಲಿ ಲಕ್ಷ್ಮಣರಾಯರ ಕವನಗಳ ಬಗ್ಗೆ ಚರ್ಚಿಸುವಾಗ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರು ಹೇಳಿದ ಈ ಮಾತುಗಳನ್ನು ಬೇಷರತ್ತಾಗಿ ಒಪ್ಪುತ್ತೇನೆ .

    ” ಅರುವತ್ತು ಎಪ್ಪತ್ತರ ದಶಕದಲ್ಲಿ ನಾವು ಯುವಕವಿಗಳೆಲ್ಲಾ ಅಡಿಗರ ಪ್ರಭಾವದಿಂದ ಹೊರಬರಲು ತಡಕಾಡುತ್ತಿದ್ದರೆ ಗೆಳೆಯ ಲಕ್ಷ್ಮಣ ತಮ್ಮ ಕ್ಯಾಟ್ ಕಾಲ್ ಮಾದರಿಯ ಬಿಸಿ ಕವಿತೆಗಳ ಮೂಲಕ ಅಡಿಗರ ಮಾದರಿಗಿಂತ ಭಿನ್ನವಾಗಿ ಬರೆಯಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು.ಹಾಡುಗಳನ್ನು ಬರೆಯುವುದೇ ಅಪರಾಧ ಎನ್ನುವ ಭಾವ ಆಗ ಚಾಲ್ತಿಯಲ್ಲಿದ್ದಾಗ ಚೆಲುವಾದ ಹಾಡುಗಳನ್ನು ಬರೆದು ನನ್ನಂಥವರ ಹಿಂಜರಿಕೆಯನ್ನೂ ಹೋಗಲಾಡಿಸಿದರು.ಅವರ ಪ್ರೀತಿಯ ನವಿರು ಸ್ಪರ್ಷದ,ತಮಾಷೆಯ,ಒಂಚುರು ಪೋಲಿ ಎನಿಸುವ ತುಂಟತನದ ಲಯಬದ್ಧ ಮಾದಕ ಸಾಲುಗಳು ಯುವ ಪೀಳಿಗೆಯಲ್ಲಿ ರೋಮಾಂಚನ ಉಂಟುಮಾಡಿದವು.ಲಕ್ಷ್ಮಣರ ಕಾವ್ಯನಾಯಕ ಗೋಪಿ ವರ್ತಮಾನದ ಬದುಕಿನ ಇಕ್ಕಟ್ಟಿನಲ್ಲೇ ದಾರಿ ಮಾಡಿಕೊಂಡು ಬದುಕನ್ನು ಪೂರ್ಣವಾಗಿ ಅನುಭವಿಸುವ ಹಂಬಲದವನು.ಅವನು ಅಡಿಗ ಅಥವಾ ಇತರ ಕವಿಗಳಂತೆಇರದುದರೆಡೆಗೆ ತುಡಿಯದೆ,ಇರುವ ಬದುಕನ್ನೇ ತನ್ನ ಸಾಧ್ಯ ವಿಶಾಲ ತೋಳುಗಳಲ್ಲಿ ಬಾಚಿಕೊಳ್ಳಲು ಹಂಬಲಿಸುವವನು.ಲಕ್ಷ್ಮಣರಿಗೆ ತತ್ವ ,ಸಿದ್ಧಾಂತಗಳ ಹಂಗಿಲ್ಲ.ಹುಸಿ ಅಧ್ಯಾತ್ಮದ ಮುಗಿಲ ಮಲ್ಲಿಗೆಯತ್ತ ಅವರು ಮೂಗೆತ್ತರಿಸಲೂ ಇಲ್ಲ. “ನಾನು ಕ್ರಮವಾಗಿ,ಪಂಚೇಂದ್ರಿಯ,ಹೃದಯ,ಮಿದುಳುಗಳ ದಾಸ.ದೇಹವನು ಹೀಗಳೆಯಬೇಡ”ಎಂದು ಘೋಷಿಸಿಕೊಂಡವರು.ಗೋಪಿ ಬೇರಲ್ಲ,ಲಕ್ಷ್ಮಣ ಬೇರಲ್ಲ.ವ್ಯಕ್ತಿ ಹಾಗೂ ಕಾವ್ಯ ಎರಡೂ ಒಂದೇ ಎನ್ನುವ ನಿಲುವಿನಲ್ಲಿ ಬರೆದವರು;ಬದುಕಿದವರು.”

    ಕೊನೆಗೂ ನರಹಳ್ಳಿಯವರು ಹೇಳಿದಂತೆ ಲಕ್ಷ್ಮಣರ ಕಾವ್ಯ ಬೇಂದ್ರೆ ಕಾವ್ಯದಂತೆ ಅಮೃತಕ್ಕೆ ಹಾರುವ ಗರುಡ ಅಲ್ಲ.ಬದಲಾಗಿ ಮನೆಗಳಲ್ಲಿ ಎಡೆಯನ್ನು ಸ್ವೀಕರಿಸುವ ಮುದ್ದು ಗುಬ್ಬಚ್ಚಿ..
    ಅವರ ಕಾವ್ಯಕೃಷಿ ಮುಂದುವರಿಯಲಿ… ಐವತ್ತು ತುಂಬಿದ ” ಗೋಪಿ ಮತ್ತು ಗಾಂಡಲೀನ ” ಶತಕ ಹೊಡೆದಾಗಲೂ ಇಷ್ಟೇ ಜನಪ್ರಿಯವಾಗಿರುತ್ತದೆ ಎಂಬ ಆಶಯ .. ಶುಭಾಶಯ

    ಬಾಗಿನದ ಮಹತ್ವ ಹಾಗೂ ನೀಡುವ ವಿಧಾನ ‌

    ಎಂ.ವಿ. ಶಂಕರಾನಂದ

    ಶ್ರಾವಣ ಮತ್ತು ಭಾದ್ರಪದ ಮಾಸದಲ್ಲಿ ಬರುವ ಹಬ್ಬಗಳಲ್ಲಿ ದೇವರನ್ನು ಪೂಜಿಸಿ ಐದು ಜನ ಮುತ್ತೈದೆಯರಿಗೆ ಬಾಗಿನ ಕೊಡುವುದು ವಾಡಿಕೆ. ಗೌರಿಯನ್ನು ಪೂಜಿಸುವ ಪ್ರತಿಯೊಬ್ಬರು ಬಾಗಿನವನ್ನು ಕೊಡುತ್ತಾರೆ. ಐದು ಜನಕ್ಕೆ ನೀಡದೆ ಇದ್ದರೂ ಸಹ ತಾವು ಪೂಜಿಸುವ ಗೌರಮ್ಮ ಹಾಗೂ ಇನ್ನೊಬ್ಬ ಹಿರಿಯ ಮುತ್ತೈದೆಯನ್ನು ಕರೆದು ಊಟ ಹಾಕಿ, ಕೈ ಕಾಲಿಗೆ ಅರಿಶಿಣ ಹಚ್ಚಿ, ಗಂಧ ಅಕ್ಷತೆ ಹಾಕಿ 3 ಬಾರಿ ನಿವಾಳಿಸಿ ಬಾಗಿನ ಕೊಡಲಾಗುತ್ತದೆ. ಮದುವೆಯಾಗಿ ಮೊದಲ ಬಾರಿಗೆ ಮನೆಗೆ ಬರುವ ಹೆಣ್ಣುಮಕ್ಕಳಿಗೆ, ಅತ್ತೆಯಂದಿರಿಗೆ ಹಾಗೂ ಇನ್ನಿಬ್ಬರು ಮುತ್ತೈದೆಯರು ಚಿಕ್ಕಮಕ್ಕಳು ಅಥವಾ ಹಿರಿಯ ಮುತ್ತೈದೆ ಹಾಗೂ ಸ್ವರ್ಣಗೌರಿಗೆ ಸೇರಿ 5 ಜನರಿಗೆ ಬಾಗಿನ ನೀಡಲಾಗುತ್ತದೆ.

    ಬಾಗಿನ ಕೊಡುವ ಸಂಪ್ರದಾಯ ‌ ‌ ‌ ಬಾಗಿನಕೊಟ್ಟು ತೆಗೆದುಕೊಳ್ಳುವ ಈ ಸಂಪ್ರದಾಯಕ್ಕೂ ಹಿನ್ನೆಲೆಯಿದೆ. ನಾಗರಪಂಚಮಿಯ ಹಬ್ಬದಂದು ಸಹೋದರಿಯರು ತಮ್ಮಅಣ್ಣ-ತಮ್ಮಂದಿರಿಗೆ ಭಂಡಾರ ಕೂರಿಸಿ, ಪೂಜೆ ಮಾಡಿರುತ್ತಾರೆ. ಆ ಸಂದರ್ಭದಲ್ಲಿ ದಕ್ಷಿಣೆ ಪಡೆದು ಹೋದ ಸಹೋದರರು ತಮ್ಮ ತವರಿನ ಕುಡಿಗಳಾದ ಸೋದರಿಯರಿಗೆ ಮತ್ತೆ ಏನನ್ನಾದರೂ ನೀಡಿ ಬಾಂಧವ್ಯ ವೃದ್ಧಿಸಿಕೊಳ್ಳಲು ಕಾದಿರುತ್ತಾರೆ. ಗೌರಿಹಬ್ಬದ ಈ ಸಂದರ್ಭವೇ ಅವರಿಗೆ ಪ್ರಶಸ್ತ. ಆದ್ದರಿಂದಲೇ ಬಿದಿರಿನ ಮೊರದಲ್ಲಿ ಮಂಗಲದ್ರವ್ಯಗಳನ್ನಿಟ್ಟು ತವರಿನಿಂದ ನೀಡಿ ಆಶೀರ್ವದಿಸುತ್ತಾರೆ. ಇದನ್ನು ಪಡೆದ ಸ್ತ್ರೀಯರು ತಮ್ಮ ಅಮ್ಮಂದಿರ ಹೆಸರಿನಲ್ಲಿ ‘ತಾಯಿ ಬಾಗಿನ’ವನ್ನು ತೆಗೆದಿಟ್ಟುಕೊಳ್ಳುತ್ತಾರೆ.

    ಬಾಗಿನದಲ್ಲಿ ಇರುವ ವಸ್ತುಗಳು ಹಾಗೂ ಅವುಗಳ ಅಧಿದೇವತೆ –
    ೧. ಅರಿಶಿನ – ಗೌರೀ ದೇವಿ
    ೨‌. ಕುಂಕುಮ – ಮಹಾಲಕ್ಷ್ಮೀ
    ೩. ಸಿಂಧೂರ – ಸರಸ್ವತೀ
    ೪. ಕನ್ನಡಿ – ರೂಪಲಕ್ಷ್ಮೀ
    ೫. ಬಾಚಣಿಗೆ – ಶೃಂಗಾರಲಕ್ಷ್ಮೀ
    ೬. ಕಾಡಿಗೆ – ಲಜ್ಜಾಲಕ್ಷ್ಮೀ
    ೭. ಅಕ್ಕಿ – ಶ್ರೀ ಲಕ್ಷ್ಮೀ
    ೮. ತೊಗರಿಬೇಳೆ – ವರಲಕ್ಷ್ಮೀ
    ೯. ಉದ್ದಿನಬೇಳೆ – ಸಿದ್ದಲಕ್ಷ್ಮೀ
    ೧೦. ತೆಂಗಿನಕಾಯಿ – ಸಂತಾನಲಕ್ಷ್ಮೀ
    ೧೧. ವೀಳ್ಯದ ಎಲೆ – ಧನಲಕ್ಷ್ಮೀ
    ೧೨. ಅಡಿಕೆ – ಇಷ್ಟಲಕ್ಷ್ಮೀ
    ೧೩. ಫಲ(ಹಣ್ಣುಗಳು) – ಜ್ಞಾನಲಕ್ಷ್ಮೀ
    ೧೪. ಬೆಲ್ಲ – ರಸಲಕ್ಷ್ಮೀ
    ೧೫. ವಸ್ತ್ರ – ವಸ್ತ್ರಲಕ್ಷ್ಮೀ
    ೧೬. ಹೆಸರುಬೇಳೆ – ವಿದ್ಯಾಲಕ್ಷ್ಮೀ ಎಂಬ ವಾಡಿಕೆಯಿದೆ.

    ಬಾಗಿನ ತಯಾರಿಸುವ ವಿಧಾನ :

    ಸ್ವರ್ಣಗೌರಿ ವ್ರತದಂದು ಕೊಡುವ ಬಾಗಿನವನ್ನು ತಯಾರಿಸುವುದೇ ಹೆಣ್ಣುಮಕ್ಕಳಿಗೆ ಬಲು ಪ್ರಮುಖ ಕೆಲಸ. ಇದನ್ನು ತಯಾರಿಸುವುದರಲ್ಲೂ ವಿಧಾನಗಳಿವೆ. ಸ್ವರ್ಣಗೌರಿ ಹಬ್ಬದ ಬಾಗಿನಕ್ಕೆ ಹೊಸ ಮೊರಗಳನ್ನು ಹಬ್ಬಕ್ಕೆ ಮುಂಚಿನ ಅಮಾವಾಸ್ಯೆಗೆ ಮೊದಲೇ ತೊಳೆದು ಒಣಗಿಸಿ ಮೊರಗಳಿಗೆ ಅರಿಶಿನ ಹಚ್ಚಬೇಕು.

    ದೊಡ್ಡವರಿಗೆ ಎರಡು ಜೊತೆ ದೊಡ್ಡ ಮೊರ, ಚಿಕ್ಕವರಿಗೆ ಒಂದು ಜೊತೆ ಸಣ್ಣಮೊರಕ್ಕೆ ಮಧ್ಯದಲ್ಲಿ ಕುಂಕುಮ ಇಟ್ಟುಕೆಳಗೆ ಮೇಲೆ ಚಂದ್ರ (ಕೇಸರಿ ಬಣ್ಣವಿರುತ್ತದೆ.) ಮತ್ತು ಕಾಡಿಗೆ ಚುಕ್ಕೆಗಳನ್ನು ಇಡಬೇಕು. ಐದು ಎಳೆ ಅರಿಶಿನ ದಾರಕ್ಕೆ ಒಂದು ಅರಿಶಿನದ ಕೊನೆಕಟ್ಟಿ ಮೇಲೆ ಮುಚ್ಚುವ ಮೊರಕ್ಕೆ ಕಟ್ಟಬೇಕು.

    ಬಾಗಿನದ ಈ ಮೊರಗಳಿಗೆ 16 ಬಟ್ಟಲಡಿಕೆ, 16 ಅರಿಶಿನ ಕೊನೆ, 16 ವೀಳ್ಯದೆಲೆ, ನಾಲ್ಕು ಕಪ್ಪು ಬಣ್ಣದ ಚಿಕ್ಕ ಗೌರಿ ಬಳೆ, ಎರಡು ಬಿಚ್ಚೋಲೆ, ಕರಿಮಣಿ, ಅರಿಶಿನ ಕುಂಕುಮದ ತಲಾ ಎರಡೆರಡು ಡಬ್ಬಿಗಳು, ಗೌರಿದಾರ, ಒಂದು ಕಾಡಿಗೆ ಡಬ್ಬಿ, ಒಂದು ಕನ್ನಡಿ, ಒಂದು ಬಾಚಣಿಗೆ, ಗಾಜಿನ ಬಳೆಗಳು ಒಂದು ಡಜನ್‌ ಬೆಳ್ಳಿಯ ಅಥವ ವೈಟ್‌ ಮೆಟಲ್‌ನ ಕಾಲುಂಗುರಗಳು ಒಂದು ಜೊತೆ, ಎರಡು ಹವಳದ ಮಣಿ, ಎರಡು ಮುತ್ತಿನ ಮಣಿ, ಒಂದು ಗ್ರಾಂ ಚಿನ್ನದ ತಾಳಿ ಬೊಟ್ಟು ಒಂದು, ದುಂಡನೆಯ ಕುಂಕುಮವಿಡಲು ವೈಟ್‌ ಮೆಟಲ್‌/ಬೆಳ್ಳಿಯ ಒಂದು ಬೊಟ್ಟಿನ ಕಡ್ಡಿ (ಮೊಳೆತರಹ ಇರುತ್ತದೆ.)

    16 ಎಳೆ ಹಸಿದಾರಕ್ಕೆ ಅರಿಶಿನ ನೀರು ಹಚ್ಚಿ 16 ಗಂಟು ಹಾಕಿ ಅದರಲ್ಲಿ ಒಂದು ಗಂಟಿಗೆ ಹೂವು ಮತ್ತು ಪತ್ರೆ ಸೇರಿಸಿ ಕಟ್ಟಬೇಕು. ಗೌರಿಗೆ ಪೂಜೆಯ ನಂತರ ಮುತ್ತೈದೆಯರನ್ನು ಪೂರ್ವ ಅಥವಾ ಉತ್ತರದ ಕಡೆಗೆ ಮುಖ ಮಾಡಿ ಕುಳ್ಳಿರಿಸಿ ಅವರ ಅಂಗೈ, ಅಂಗಾಲುಗಳಿಗೆ ಅರಿಶಿನದ ನೀರು ಹಚ್ಚಿ, ಕುಂಕುಮ ಹೂವು ಕೊಟ್ಟು ಬಾಗಿನ ಮುಚ್ಚಿ ಒಂದು ಉದ್ದರಣೆ ನೀರು, ಅಕ್ಷತೆ ಹಾಕಿ ನಮ್ಮ ಸೆರಗನ್ನು ಅದರ ಮೇಲಿಟ್ಟು ಕೊಡಬೇಕು.

    ಬಾಗಿನ ತೆಗೆದುಕೊಳ್ಳುವ ಮುತ್ತೈದೆ ಸಹ ತಮ್ಮ ಸೀರೆಯ ಸೆರಗನ್ನು ಭುಜದ ಮೇಲಿಂದ ಮುಂದಕ್ಕೆ ತಂದು ಎರಡೂ ಕೈಗಳಿಂದ ಬಾಗಿನವನ್ನು ಹಿಡಿದುಕೊಂಡು ಅಡ್ಡಡ್ಡ ಉದ್ದುದ್ದ ಅಲ್ಲಾಡಿಸಬೇಕು. ಮೇಲಿನ ಮುಚ್ಚಳವಿರುವ ಮೊರವನ್ನು ತುಂಬಿರುವ ಮೊರದ ಕೆಳಕ್ಕೆ ಇಟ್ಟು ಎರಡೂ ಮೊರಗಳನ್ನು ಮತ್ತೆ ಅಡ್ಡ ಉದ್ದ ಅಲ್ಲಾಡಿಸಿ ಕೊಡಬೇಕು.

    1) ಮದುವೆಯಾದ ಹೆಣ್ಣು ಮಕ್ಕಳಿಗೆ ಮೊದಲ ವರ್ಷದ ಗೌರಿ ಹಬ್ಬ ತುಂಬಾ ವಿಜೃಂಭಣೆಯಿಂದ ಮಾಡುತ್ತಾರೆ. 16 ಮೊರದ ಬಾಗಿನಗಳನ್ನು ಮೇಲೆ ಹೇಳಿದ ರೀತಿಯಲ್ಲಿ ತಯಾರಿಸಿ ಗೌರಿಗೆ ಎಲ್ಲಾ ಬಾಗಿನಗಳನ್ನು ತೋರಿಸಿ ನಂತರ 15 ಮುತ್ತೈದೆಯರಿಗೆ ಬಾಗಿನ ಕೊಡುತ್ತಾರೆ. ಒಂದು ಬಾಗಿನವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು.

    2) ಬಾಗಿನದಲ್ಲಿ ಅವರ ಶಕ್ತಿಗೆ ಅನುಸಾರವಾಗಿ ಬೆಳ್ಳಿ, ಬಂಗಾರದ ಸಣ್ಣ ವಸ್ತುಗಳನ್ನು ಹಾಕಿ ಕೊಡುತ್ತಾರೆ. ಮೊರದ ಬಾಗಿನದ ಮೇಲೆ ಇತ್ತೀಚೆಗೆ ಕುಂದನ್‌ ಅಥವಾ ಚಮಕಿ ಗೋಲ್ಡನ್‌ ರಿಬ್ಬನ್‌ಗಳಿಂದ ಅಲಂಕರಿಸಿ ಕೊಡುತ್ತಾರೆ. ಮುತ್ತೈದೆಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ತೆಗೆದುಕೊಳ್ಳಬೇಕು.

    3) ಅವರಿಗೆ ಪಾನಕ ಕೋಸಂಬರಿ ಸಹ ಕೊಟ್ಟು ಕೈ ದಾರ ಕಟ್ಟಿಸಿಕೊಳ್ಳಬೇಕು. ಸ್ವರ್ಣಗೌರಿಗೆ ಷೋಡಶೋಪಚಾರ ಸೇವೆ ಮಾಡಿ ಸಂತೃಪ್ತಿಪಡಿಸುವಂತೆ ಷೋಡಶ ಮಂಗಳದ್ರವ್ಯ ಗಳನ್ನು ಮೊರದ ಬಾಗಿನಕ್ಕೆ ಹಾಕಿ ಮುತ್ತೈದೆಗೆ ಕೊಟ್ಟು ಆಧರಿಸಬೇಕು.

    4) ಸೀರೆಯ ಸೆರಗಿನಲ್ಲಿ ಮಹಾಲಕ್ಷ್ಮಿ ಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿನ ಕೊಡುತ್ತಾರೆ.

    5) ಮೊರದ ಬಾಗಿನದಲ್ಲಿ ನಾರಾಯಣನ ಅಂಶ ಇರುತ್ತದೆ. ಮೊರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರ ತರಹ ಜೊತೆಯಲ್ಲಿ, ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಎನ್ನುವ ಕಾರಣಕ್ಕೆ ಮತ್ತು ಸುಮಂಗಲಿತನ ಯಾವಾಗಲೂ ಇರಲಿ ಎನ್ನುವ ಕಾರಣಕ್ಕೆ 16 ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿನ ಕೊಡುತ್ತಾರೆ.

    6) ಬಾಗಿನವನ್ನು ಹೊತ್ತು ಸಂಭ್ರಮದಿಂದ ಓಡಾಡುವ ಸುಮಂಗಲಿಯರನ್ನು ಅಂದಿನಿಂದ ಒಂದು ವಾರಗಳ ಕಾಲ ನೋಡಬಹುದು. ಶ್ರಾವಣ ಮಾಸದಲ್ಲಿ ಪ್ರತಿ ಮಂಗಳವಾರವೂ ಕಲಶದಲ್ಲಿ ಮಂಗಳಗೌರಿಯನ್ನು ಆವಾಹನ ಮಾಡಿ ಸ್ತ್ರೀಯರು ಷೋಡಶೋಪಚಾರಗಳಿಂದ ಪೂಜೆ ಮಾಡುತ್ತಾರೆ.

    ಮಕ್ಕಳ ಬಾಗಿನ

    1) ಮಕ್ಕಳ ಬಾಗಿನಕ್ಕೆ ಕಾಲಕ್ಕೆ ತಕ್ಕಂತೆ ಬರುವ ಫ್ಯಾಷನಬಲ್‌ ಶೃಂಗಾರ ಸಾಧನಗಳು (ಬಳೆ, ಬಿಂದಿ, ಹೇರ್‌ ಕ್ಲಿಪ್‌, ನೈಲ್‌ ಪಾಲಿಶ್‌, ಸರ, ಓಲೆ ಮತ್ತು ರುಮಾಲು ಇತ್ಯಾದಿ)ಹಾಕಿ ಜೊತೆಗೆ ಹಣ್ಣುಗಳು ಸಣ್ಣ ತೆಂಗಿನಕಾಯಿ ವಿಳ್ಳೇದೆಲೆ ಅಡಿಕೆ, ಸಹ ಸೇರಿಸುತ್ತಾರೆ. ಈ ಬಾಗಿನವನ್ನು ಸಮವಯಸ್ಕ ಕನ್ನಿಕೆಗೆ ಕೊಡಿಸುತ್ತಾರೆ. ಒಟ್ಟಿನಲ್ಲಿ ಈ ಹಬ್ಬ ಹೆಣ್ಣು ಮಕ್ಕಳಿಗೆ ತುಂಬಾ ಖುಷಿ ಮತ್ತು ಸಂಭ್ರಮವನ್ನು ತರುತ್ತದೆ.

    2) ಮೊರದ ಬಾಗಿನದ ಬದಲು ಉಪಯೋಗವಾಗುವಂತಹ ಫ್ರೂಟ್‌ ಬಾಕ್ಸ್‌ಗಳನ್ನು ಸಹ ಕೊಡುವುದು ರೂಢಿಯಿದೆ. ಕುಂಕುಮ ಇಡುವ ಮುಂಚೆ ಬೊಟ್ಟಿನ ಪೇಸ್ಟ್‌ನ ಒಂದು ಚಿಕ್ಕ ಡಬ್ಬಿ. ಒಂದು ತೆಂಗಿನಕಾಯಿ, ಒಂದು ಸೌತೇಕಾಯಿ, ಒಂದು ಮುಸುಕಿನ ಜೋಳ, ಐದು ತರಹದ ಹಣ್ಣುಗಳು, ಒಂದು ರವಿಕೆ ಪೀಸ್‌, ಅಕ್ಕಿ, ತೊಗರಿಬೇಳೆ, ಬೆಲ್ಲ, ಕಡ್ಲೆಬೇಳೆ, ಹೆಸರುಬೇಳೆ, ರವೆ, ಎಲ್ಲವನ್ನು ಒಂದೊಂದು ಪ್ರತ್ಯೇಕವಾಗಿ ಕವರಿಗೆ ಹಾಕಿ, ಮುಚ್ಚಿ ದೊಡ್ಡವರ ಮತ್ತು ಮಕ್ಕಳ ಬಾಗಿನದ ಮೊರಗಳಿಗೆ ಹಾಕಬೇಕು. ಐದು ರೂ. ದಕ್ಷಿಣೆ ಹಾಕಿಡಬೇಕು.

    3) ಇನ್ನು ಹಬ್ಬದ ದಿನ ಮನೆಯಲ್ಲಿ ಚಿಕ್ಕ ಹೆಣ್ಣು ಮಕ್ಕಳು (ಕನ್ನಿಕೆಯರು) ಇದ್ದರೆ ಅವರಿಗಾಗಿ ಚಿಕ್ಕ ಗೌರಿ ತಂದು ಸ್ಥಾಪಿಸಿ ಚಿಕ್ಕ ಚಿಕ್ಕ ಪೂಜೆ ಸಾಮಾನುಗಳನ್ನು ತಟ್ಟೆಯಲ್ಲಿ ಜೋಡಿಸಿಕೊಂಡು ಪೂಜೆ ಮಾಡಿಸುತ್ತಾರೆ.

    ಮೊರದ ಬಾಗಿನಕ್ಕೆ ಅಣಿಯಾದ ಮೊರವನ್ನು ಶುಭ್ರಗೊಳಿಸಿ ಅದಕ್ಕೆ ಅರಿಶಿನ, ಕುಂಕುಮ ಹಚ್ಚಿ ಚೆನ್ನಾಗಿ ಆರಿಸಿ ನಂತರ ಧಾನ್ಯಗಳು, ತೆಂಗಿನಕಾಯಿ, ಬಳೆ-ಬಿಚ್ಚೋಲೆ, ಕನ್ನಡಿ, ಬಳೆಗಳು, 5 ಬಗೆಯ ಹಣ್ಣುಗಳು, ರವಿಕೆ ಕಣ, ತಾಯಿಗೆ ಹಾಗೆ ಅತ್ತಿಗೆ, ನಾದಿನಿಯರಿಗೆ ಸೀರೆಯನ್ನು ಹಾಕಿ, ಸುಮಂಗಲಿಯರು ಉಪಯೋಗಿಸುವ ವಸ್ತುಗಳು, ಭಕ್ಷ್ಯಗಳು ಹಾಕಿ ಮೊರದ ಬಾಗಿನ ಸಿದ್ಧ ಪಡಿಸಬೇಕು.

    ದೇವಿಯನ್ನು ಸ್ಥಾಪನೆ ಮಾಡುವ ಸ್ಥಳವನ್ನು ಶುಭ್ರವಾಗಿ ಅಲಂಕರಿಸಿ, ಗೌರಿ ಮೂರ್ತಿಯನ್ನು ಶೃಂಗರಿಸಿ, ತೋರಣದಿಂದ ಮಂಟಪವನ್ನು ಹಾಗೆ ಮನೆಯ ಮುಂಬಾಗಿಲನ್ನು ಅಲಂಕರಿಸಬೇಕು. ಪತ್ರೆಗಳನ್ನು, ಹೂವುಗಳನ್ನು, ಹೂವಿನ ಮಾಲೆಗಳನ್ನು ಕಟ್ಟಿ, 5 ತೆಂಗಿನಕಾಯಿ ಪೂಜೆಗಾಗಿ ಅರಿಶಿನ ಕುಂಕುಮ, ಚಂದ್ರ, ಚಂದನ, ಅಡಿಕೆ, ದಶಾಂಗಂ, 5 ಬಗೆಯ ಹಣ್ಣುಗಳನ್ನು, ದೀಪದ ಕಂಬಕ್ಕೆ ದೀಪದ ಬತ್ತಿಗಳನ್ನು ತುಪ್ಪದಲ್ಲಿ ನೆನಸಿ, ಗೆಜ್ಜೆವಸ್ತ್ರಗಳು, 16 ಎಳೆಯ ಗೆಜ್ಜೆವಸ್ತ್ರ ಹಾಗೆ 16 ಎಳೆ ದೋರ ಗ್ರಂಥಿಗಳನ್ನು ತಯಾರಿಸಬೇಕು. ಅದಕ್ಕೆ 16 ಗಂಟನ್ನು ಹಾಕಿ ದಾರವನ್ನು ಸಿದ್ಧಪಡಿಸಬೇಕು.

    ಪಂಚಾಮೃತ ಅಭಿಷೇಕ ಮಧುಪರ್ಕ, ಮಂಗಳಾರತಿ ಬತ್ತಿಗಳು. ಒಂದು ತಟ್ಟೆಯಲ್ಲಿ ಉಪಾಯನ ದಾನಕ್ಕಾಗಿ 2 ತೆಂಗಿನಕಾಯಿಗಳು ನಾಲ್ಕು ವಿಳ್ಳೆದೆಲೆ, ಅಡಿಕೆಗಳು, ದಕ್ಷಿಣೆ, ಸ್ವಲ್ಪ ಅಕ್ಕಿ ಅದನ್ನು ಮುಚ್ಚಲು ಒಂದು ತಟ್ಟೆ ಅಥವಾ ಬಾಳೆಯೆಲೆ ಉಪಯೋಗಿಸಬೇಕು. ಮೊರದ ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು ಶ್ರದ್ಧಾಪೂರ್ವಕವಾಗಿ ಹೇಳಿ ಬಾಗಿನ ಕೊಟ್ಟರೆ, ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದು.

    ಷೋಡಶಲಕ್ಷ್ಮೀಯರು


    ಮುತ್ತ್ತೈದೆ ದೇವತೆಯರು 16 ಜನರು. ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ.

    ಗೌರಿ,ಪದ್ಮಾ,ಶುಚಿ,ಮೇಧಾ,ಸಾವಿತ್ರಿ,ವಿಜಯಾ,ಜಯಾ,ದೇವಸೇನಾ,ಸಾಹಾ,ಮಾತರಲೋಕಾ,ಮಾತಾರಾ,ಶಾಂತೀ,ಪೃಥ್ವಿ,ಧೃತೀ,ತುಷ್ಟೀ,ಸ್ವಧಾದೇವಿ..

    ಮೊರದ ಬಾಗಿನಕ್ಕೆ ಸಂಸ್ಕೃತದಲ್ಲಿ ವೇಣುಪಾತ್ರ ಎಂದು ಕರೆಯುತ್ತಾರೆ.

    16 ಈ ದೇವತೆಗಳು ನಿತ್ಯಸುಮಂಗಲಿಯರು.
    16 ಈ ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ, ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿನಕೊಡಬೇಕು.
    16 ಈ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ.
    16 ಅರಿಸಿನ ದಾರ, 16 ಗಂಟುಗಳು, 16 ಬಾಗಿನ, 16 ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ.

    ದಾನಗಳು ಮತ್ತು ಫಲಗಳು

    1. ಅರಿಸಿನ ದಾನ :
      ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ.
      ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ. ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ.
    2. ಕುಂಕುಮ ದಾನ :
      ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ.
      ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ. ದೃಷ್ಟಿದೋಷ ನಿವಾರಣೆ ಆಗುತ್ತದೆ. ಕೋಪ, ಹಠ,ಕಮ್ಮಿ ಆಗುತ್ತದೆ.
    3. ಸಿಂಧೂರ ದಾನ :
      ಸತಿ ಪತಿ ಕಲಹ ನಿವಾರಣೆ. ರೋಗಭಾಧೆ, ಋಣಭಾದೆ ನಿವಾರಣೆ. ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ. ಈ ಕಾರಣಕ್ಕೆ ಶ್ರೀ ಆಂಜನೇಯ ಸ್ವಾಮಿಗೆ ಕೇಸರಿ ಅಲಂಕಾರ ಮಾಡುತ್ತಾರೆ.
    4. ಕನ್ನಡಿ ದಾನ :
      ಕನ್ನಡಿಗೆ ಸಂಸ್ಕೃತದಲ್ಲಿ “ದರ್ಪಣ” ಎನ್ನುತ್ತಾರೆ.
      ಇದನ್ನು ಯಾರು ಪ್ರತಿದಿನ ನೋಡುತ್ತಾರೆಯೋ ಅವರಿಗೆ ಅಪಮೃತ್ಯು ಬರುವುದಿಲ್ಲ.
      ಕನ್ನಡಿ ದಾನ ಮಾಡುವುದರಿಂದ ಚರ್ಮವ್ಯಾಧಿ ಬರುವುದಿಲ್ಲ. ದೇವರಿಗೆ, ದೇವಾಲಯಗಳಲ್ಲಿ ದರ್ಪಣ ಸೇವೆ ಮಾಡಿಸಿದರೆ, ನಿಮ್ಮ ಸಮಸ್ತ ಪಾಪಗಳೂ ನಿವಾರಣೆಯಾಗುತ್ತದೆ.
      ರಾತ್ರಿ ಕಾಲ, ಹಾಗೂ ಒಡೆದ ಕನ್ನಡಿಯನ್ನು ಬಳಸಿದರೆ, ದಾರಿದ್ರ್ಯ ಹಾಗೂ ಬಡತನ ಬರುತ್ತದೆ…
    5. ಬಾಚಣಿಗೆ ದಾನ :
      ಬಾಚಣಿಗೆ ದಾನ ಮಾಡುವುದರಿಂದ, ಮುಖದಲ್ಲಿ ತೇಜಸ್ಸು ಹೆಚ್ಚಾಗಿ, ಮನೆಯಲ್ಲಿ ಅಲಂಕಾರದ ವಸ್ತುಗಳು ಜಾಸ್ತಿಯಾಗುತ್ತದೆ…
    6. ಕಾಡಿಗೆ ದಾನ :
      ಕಾಡಿಗೆ ದಾನ ಮಾಡುವುದರಿಂದ ಕಣ್ಣಿಗೆ ಸಂಬಂಧ ಪಟ್ಟ ದೋಷಗಳು ನಿವಾರಣೆಯಾಗುತ್ತದೆ, ಮನೆಯ ಮೇಲೆ ಆಗಿರುವ, ಅಥವಾ ದಂಪತಿಗಳ ಮೇಲೆ ಆಗಿರುವ ದೃಷ್ಟಿ ದೋಷ ನಿವಾರಣೆಯಾಗುತ್ತದೆ.
    7. ಅಕ್ಕಿ ದಾನ :
      ಅಕ್ಕಿ ಎಷ್ಟು ದಾನ ಮಾಡುತ್ತೀರೋ ಅಷ್ಟೂ ಅನ್ನಪೂರ್ಣೇಶ್ವರೀ ದೇವಿ ತೃಪ್ತಳಾಗುತ್ತಾಳೆ. ಧನಲಕ್ಷ್ಮೀ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಮನೆಯಲ್ಲಿ ಶಾಂತ ವಾತಾವರಣ ಇದ್ದು, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ.
    8. ತೊಗರಿಬೇಳೆ ದಾನ:
      ತೊಗರಿಬೇಳೆ ದಾನ ಮಾಡುವುದರಿಂದ ಕುಜದೋಷ ನಿವಾರಣೆಯಾಗುತ್ತದೆ.
      ಪ್ರತಿದಿವಸ ತೊಗರಿಬೇಳೆಯನ್ನು ಯಾರು ತಿನ್ನುತ್ತಾರೋ ಅವರಿಗೆ ಧೈರ್ಯ ಜಾಸ್ತಿ ಇರುತ್ತದೆ. ಈ ಕಾರಣಕ್ಕೆ ಹುಳಿ ಮತ್ತು ಸಾಂಬಾರ್ ನಲ್ಲಿ ತೊಗರಿಬೇಳೆ ಜಾಸ್ತಿ ಉಪಯೋಗಿಸುವುದು. ತೊಗರಿಬೇಳೆ ದಾನದಿಂದ ಸತಿಪತಿ ಕಲಹ ನಿವಾರಣೆಯಾಗುತ್ತದೆ,
    9. ಉದ್ದಿನ ಬೇಳೆ ದಾನ :
      ಪ್ರತೀ ತಿಂಗಳು, ಪ್ರತೀ ವರ್ಷ, ಮಹಾಲಯ ಅಮಾವಾಸ್ಯೆ, ತರ್ಪಣ ಕೊಡದೇ ಇದ್ದರೆ, ವೈಧಿಕ ಮಾಡುವಾಗ ದೋಷಗಳಾಗಿದ್ದರೆ, ಜಾತಕದಲ್ಲಿ ಪಿತೃಶಾಪ ಇದ್ದರೆ, ಮಕ್ಕಳು ಕೆಟ್ಟದಾರಿಯಲ್ಲಿ ನಡೆಯುತ್ತಿದ್ದರೆ, ಶತೃಗಳ ಕಾಟ ಜಾಸ್ತಿ ಆಗಿದ್ದರೆ, ಉದ್ದಿನ ಬೇಳೆ ದಾನ ಮಾಡುವುದರಿಂದ ಈ ದೋಷಗಳೆಲ್ಲಾ ನಿವಾರಣೆಯಾಗುತ್ತದೆ.
    10. ತೆಂಗಿನಕಾಯಿ :
      ತೆಂಗಿನಕಾಯಿಗೆ ಅಧಿದೇವತೆ ಸಂತಾನ ಲಕ್ಷ್ಮಿ, ಇಷ್ಟಾರ್ಥ ಪ್ರದಾಯಿನಿ ಅಂತನೂ ಕರೆಯುತ್ತಾರೆ.

    ಮಕ್ಕಳಾಗಿಲ್ಲ, ಸಂತಾನ ಸಮಸ್ಯೆ ಇರೋವ್ರು ತೆಂಗಿನಕಾಯಿ ದಾನ ಮಾಡುತ್ತಾ ಬಂದರೆ ಸಂತಾನವಾಗುತ್ತದೆ.
    ತಾಂಬೂಲದ ಜೊತೆ ತೆಂಗಿನಕಾಯಿ ದಾನ ಮಾಡೋದ್ರಿಂದ “ಅಶ್ವಮೇಧಯಾಗದ ” ಫಲ ಬರುತ್ತದೆ. ಸಕಲ ಕಷ್ಟಗಳೂ ನಿವಾರಣೆಯಾಗುತ್ತದೆ .

    1. ವೀಳ್ಯದೆಲೆ ದಾನ :
      ವೀಳ್ಯದೆಲೆಗೆ ದೇವತೆ ಧನಲಕ್ಷ್ಮೀ. ವೀಳ್ಯದೆಲೆ ತಾಂಬೂಲ ದಾನ ಮಾಡುವುದರಿಂದ ಅಧಿಕವಾದ ಧನ ಪ್ರಾಪ್ತಿಯಾಗುತ್ತದೆ. ಮಹಾಲಕ್ಷ್ಮಿಯು ಅಂತಹ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾಳೆ. ಗಂಗಾದೇವಿ ಪ್ರಸನ್ನಳಾಗುತ್ತಾಳೆ.
      ಮನೆಯ ಮುಂದೆ ವೀಳ್ಯದೆಲೆ ಬಳ್ಳಿ ಬೆಳೆದರೆ, ಆ ಮನೆಯ ಸರ್ವ ದೋಷವೂ, ವಾಸ್ತು ದೋಷವೂ ನಿವಾರಣೆಯಾಗುತ್ತದೆ.
    2. ಅಡಿಕೆ ದಾನ :
      ಅಡಿಕೆಗೆ ಸಂಸ್ಕೃತದಲ್ಲಿ ಪೂಗೀಫಲ ಎನ್ನುತ್ತಾರೆ. ಯಾರು ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆ.., ಬಹಳ ಬೇಗ ಬಯಕೆಗಳು ಈಡೇರುತ್ತವೆ. ಬರೀ ಅಡಿಕೆಯನ್ನು ತಿಂದರೆ “ಬ್ರಹ್ಮಹತ್ಯಾದೋಷ” ಬರುತ್ತದೆ.
    3. ಫಲದಾನ :
      ಫಲದಾನಕ್ಕೆ ಜ್ಞಾನಲಕ್ಷ್ಮಿ ಅಧಿಪತಿ. ಫಲದಾನ ಮಾಡುವುದರಿಂದ ನಿಮ್ಮ ಕಾರ್ಯಗಳು ಸುಸೂತ್ರವಾಗಿ, ಸುಗಮವಾಗಿ ನಡೆಯುತ್ತದೆ, ಹಾಗೂ ಲಾಭದಾಯಕವಾಗುತ್ತದೆ.
      ಸ್ತ್ರೀ ಶಾಪ ನಿವಾರಣೆಯಾಗುತ್ತದೆ, ಗುರು ಪೂಜೆ ಮಾಡಿ ಹಣ್ಣು ದಾನ ಮಾಡಿದರೆ ಗುರುದೋಷಗಳು ನಿವಾರಣೆಯಾಗುತ್ತದೆ.
      ಅಮಾವಾಸ್ಯೆ ಅಥವ ವೈದಿಕದ ದಿನ ಹಣ್ಣುದಾನ ಮಾಡಿದರೆ ಸಕಲ ಪಿತೃದೋಷ ನಿವಾರಣೆಯಾಗುತ್ತದೆ.
    4. ಬೆಲ್ಲದಾನ :
      ಬೆಲ್ಲದಲ್ಲಿ ಬ್ರಹ್ಮದೇವರು, ಶ್ರೀ ಮಹಾಲಕ್ಷ್ಮಿಯು, ಶ್ರೀ ಮಹಾ ಗಣಪತೀ ದೇವರ ಸಾನಿಧ್ಯ ಇರುತ್ತದೆ.

    ಬೆಲ್ಲವನ್ನು ದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ. ನಿತ್ಯದಾರಿದ್ರ್ಯ ಅನುಭವಿಸುವವರು ಬೆಲ್ಲಕ್ಕೆ ಬಿಲ್ವಪತ್ರೆಯಿಂದ ಪೂಜೆ ಮಾಡುತ್ತಾ ಬಂದರೆ ದಾರಿದ್ರ್ಯ ಹಾಗೂ ಬಡತನ ನಿವಾರಣೆಯಾಗುತ್ತದೆ. ಗಣಪತಿಗೆ ಬೆಲ್ಲ ಮತ್ತು ಮಹಾಲಕ್ಷ್ಮಿಗೆ ಬೆಲ್ಲದನ್ನ ನೈವೇದ್ಯ ಮಾಡಿದರೆ ತುಂಬಾ ವಿಶೇಷ, ಧನ ಧಾನ್ಯ ಸಮೃದ್ಧಿಯಾಗುತ್ತದೆ.

    1. ವಸ್ತ್ರ ದಾನ :
      ವಸ್ತ್ರದಾನ ಮಾಡುವುದರಿಂದ ಕುಲದೇವತೆ ತೃಪ್ತಿಯಾಗುತ್ತಾರೆ, ಸುಮಂಗಲೀ ದೋಷ ನಿವಾರಣೆಯಾಗುತ್ತದೆ.
      ಸ್ತ್ರೀ ದೋಷ ಮತ್ತು ಶಾಪಗಳು ನಿವಾರಣೆಯಾಗುತ್ತದೆ. ಸಕಲ ದೇವತೆಗಳು ತೃಪ್ತರಾಗುತ್ತಾರೆ. ಆರೋಗ್ಯಭಾಗ್ಯವಾಗುತ್ತದೆ.
      ದಾನವನ್ನು ತೆಗೆದುಕೊಂಡ ವಸ್ತ್ರಗಳನ್ನು ದಾನ ಮಾಡಬಾರದು.
    2. ಹೆಸರುಬೇಳೆ :
      ವಿದ್ಯಾಲಕ್ಷ್ಮಿ ಅನುಗ್ರಹವಾಗುತ್ತದೆ, ಮನೆಯಲ್ಲಿ ಎಲ್ಲರೂ ವಿದ್ಯಾವಂತರಾಗುತ್ತಾರೆ.
      ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ. ಹೆಸರುಬೇಳೆ ದಾನದಿಂದ ಸಕಲ ದೇವಿಗಳೂ ತೃಪ್ತರಾಗುತ್ತಾರೆ. ಮಾಟ ಮಂತ್ರ ಮನೆಯ ಮೇಲೆ ಕೆಲಸ ಮಾಡುವುದಿಲ್ಲ. ಹೆಂಗಸರ ಗರ್ಭಕೋಶದ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ನಂಬಿಕೆಯಿದೆ.
    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    ಕೊಂಕಣ ಸೀಮೆಯ ವಿಶಿಷ್ಟ ವಾಯಣ ಪೂಜೆ

    ಬಳಕೂರು ವಿ ಎಸ್ ನಾಯಕ

    ಭಾದ್ರಪದ ಮಾಸ ಬಂತೆಂದರೆ ಸಾಕು. ಸಾಲು ಸಾಲು ಹಬ್ಬಗಳು ಈ ಮಾಸದಲ್ಲಿ ವಿಶೇಷವಾಗಿ ಆಚರಿಸುವ ಸ್ವರ್ಣಗೌರಿ ವ್ರತ ಮತ್ತು ಗಣಪತಿ ಹಬ್ಬ ಸಾಮಾನ್ಯವಾಗಿ ಎಲ್ಲರೂ ಕೂಡ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಕರಾವಳಿಯ ಕೊಂಕಣಿಗರು ಸ್ವರ್ಣಗೌರಿ ವ್ರತವನ್ನು ವಿಶೇಷವಾಗಿ ಆಚರಿಸುವುದು ವಾಡಿಕೆ.

    ಸಾಮಾನ್ಯವಾಗಿ ಸ್ವರ್ಣಗೌರಿ ವ್ರತವನ್ನು ಇವರು ವಾಯಣ ಪೂಜಾ ಎಂಬ ವಿಶೇಷ ಪೂಜಾ ವಿಧಾನವನ್ನು ಅನುಸರಿಸಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಸ್ವರ್ಣಗೌರಿ ವ್ರತವನ್ನು ಗೌರಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆಚರಿಸುವುದು ವಾಡಿಕೆ. ಆದರೆ ಇಲ್ಲಿ ವಾಯಣ ಪೂಜಾ ಆಚರಣೆ ಸಂಪೂರ್ಣ ವಿಭಿನ್ನ. ಭಾದ್ರಪದ ಮಾಸದ ತೃತೀಯ ದಿನದಂದು ಆಚರಿಸುವ ಹಬ್ಬಗಳಲ್ಲಿ ಒಂದು ಗೌರಿಪೂಜೆ ಅಥವಾ ವಾಯಣ ಪೂಜಾ.

    ಸಾಮಾನ್ಯವಾಗಿ ಗಣೇಶ ಚತುರ್ಥಿಯ ಮೊದಲದಿನ ಗೌರಿ ಪೂಜೆಯನ್ನು ಆಚರಿಸುತ್ತಾರೆ. ವಾಯಣ ಪೂಜಾ ಇದು ವಿಭಿನ್ನ ರೀತಿಯ ಸಂದೇಶವನ್ನು ಕೊಡುವ ಪೂಜಾ ವಿಧಾನ. ವಾಯಣ ಎಂದರೆ ತೆಂಗಿನ ಕಾಯಿಗಳು ತಾಯಿ ಗೌರಿಯನ್ನು ಪ್ರತಿಪಾದಿಸುತ್ತದೆ.ಮದುವೆಯಾದ ಸುಮಂಗಲಿಯರು ಸಾಮಾನ್ಯವಾಗಿ ಪೂಜೆ ಮಾಡುವುದು ವಾಡಿಕೆ. ವಾಯಣ ಪೂಜೆಯ ಹತ್ತಿರ ಬರುತ್ತಿದ್ದಂತೆ ಮನೆಯಲ್ಲಿರುವ ಸುಮಂಗಲಿಯರು ಮೊದಲು ಉತ್ತಮವಾದ ತೆಂಗಿನಕಾಯಿಗಳನ್ನು ತೆಗೆದುಕೊಂಡು ಅದನ್ನು ಮಾಡಿ ನಂತರ ಹರಿಶಿಣ ನೀರಿನಿಂದ ತೊಳೆದು ಶುದ್ಧೀಕರಿಸುತ್ತಾರೆ.

    ಗೌರಿಯನ್ನು ಪ್ರತಿಬಿಂಬಿಸುವ ತೆಂಗಿನಕಾಯಿಗಳನ್ನು ಸಿಂಗರಿಸಲು ಕುಂಕುಮ ಚಂದನ ಸಿಂಧೂರ ಬಳೆಗಳು ಕಪ್ಪು ಕಾಡಿಗೆ ಎಲ್ಲವನ್ನು ಸಿದ್ಧಪಡಿಸುತ್ತಾರೆ. ನಂತರ ಗೌರಿ ದಾರ ಅಥವಾ ವಾ ಯಣ ದಾರವನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಶುದ್ಧೀಕರಿಸಿದ ತೆಂಗಿನಕಾಯಿಗೆ ಬಿಳಿಯ ಬಣ್ಣದ ಶೇಡಿ ಯನ್ನು ಬಳಸಿ ಅಲಂಕರಿಸುತ್ತಾರೆ ನಂತರ ಪವಿತ್ರವಾದ ವಾಯಣ ದಾರವನ್ನು ತೆಂಗಿನಕಾಯಿಗೆ ಕಟ್ಟಿ ಸಿಂಗರಿಸುವುದು ವಾಡಿಕೆ. ಮತ್ತು ಸಿಂಧೂರ ಚಂದನ ಕಪ್ಪು ಕಾಡಿಗೆಯನ್ನು ತೆಂಗಿನಕಾಯಿಗೆ ಅಲಂಕರಿಸುತ್ತಾರೆ. ಕಪ್ಪು ಕಾಡಿಗೆಯನ್ನು ತೆಗೆದುಕೊಂಡು ತೆಂಗಿನಕಾಯಿಗೆ ದೃಷ್ಟಿ ಇಡುತ್ತಾರೆ. ನಂತರ ಶೃಂಗಾರ ಮಾಡಿದ ತೆಂಗಿನಕಾಯಿಗಳನ್ನು ಮಹಾದೇವ ಮತ್ತು ಗೌರಿಯ ಫೋಟೋದ ಮುಂದೆ ಬಾಳೆಯ ಎಲೆಯ ಆಮೇಲೆ ಅಕ್ಕಿಯನ್ನು ಹಾಸಿ ಅದರ ಮೇಲೆ ಸಿಂಗಾರ ಮಾಡಿದ ತೆಂಗಿನ ಕಾಯಿಗಳನ್ನು ಇಟ್ಟು ಅದರ ಮೇಲೆ ದೀಪಗಳಿಂದ ಅಲಂಕರಿಸುತ್ತಾ ಹೂವಿನ ಶೃಂಗಾರ ಮಾಡುವುದನ್ನು ನೋಡಬಹುದು.

    ಗೌರಿ ಹಬ್ಬದ ದಿನ ಮನೆಯ ತುಂಬಾ ಸುಮಂಗಲಿಯರು ವಿಶೇಷವಾದ ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಸಾಮಾನ್ಯವಾಗಿ ಗೌರಿ ಪೂಜೆಯ ದಿನ ದೇವರಿಗೆ ನೈವೇದ್ಯಕ್ಕೆ ಸಿಹಿ ಅವಲಕ್ಕಿ ಪಂಚಕಜ್ಜಾಯ ಮಾಡುವುದು ಬಹಳ ಮುಖ್ಯವಾಗಿದೆ. ವಾಯಣ ಪೂಜೆ ನೆರವೇರಿಸಿದ ಮೇಲೆ ಮೊದಲು ಅವರ ಕುಲದೇವರಿಗೆ ಮತ್ತು ಅವರ ಪೂರ್ವಿಕರ ಎತ್ತಿಕೊಂಡು ಅರ್ಪಿಸಿ ಆಶೀರ್ವಾದವನ್ನು ಪಡೆಯುವುದು ಗಮನಿಸಬಹುದು. ನಂತರ ಮನೆಯ ಹಿರಿಯ ಸುಮಂಗಲಿಯರಿಗೆ ಪಯಣ ಪೂಜೆಮಾಡಿದ ತೆಂಗಿನಕಾಯಿ ನೀಡಿ ಆಶೀರ್ವಾದವನ್ನು ಪಡೆಯುತ್ತಾರೆ.

    ಮನೆಯ ಸುಮಂಗಲಿಯರೆಲ್ಲಾ ಗೌರಿ ಮಂತ್ರವನ್ನು ಉಚ್ಚರಿಸಿ ಗೌರಿ ದಾರವನ್ನು ಕೈಗೆ ಕಟ್ಟಿಕೊಳ್ಳುವುದು ಕಾಣುತ್ತೇವೆ. ಹೆಚ್ಚಾಗಿ ಸುಮಂಗಲಿಯರು ಮಂಗಳಸೂತ್ರಕ್ಕೆ ಈ ಪವಿತ್ರವಾದ ಗೌರಿ ದಾರವನ್ನು ಕಟ್ಟಿ ಪೂಜಿಸುತ್ತಾರೆ. ಭಾದ್ರಪದ ಮಾಸದ ಒಂದು ತಿಂಗಳುಗಳ ಕಾಲ ಸುಮಂಗಲಿಯರಿಗೆ ಅವರ ಮನೆಗೆ ಆಹ್ವಾನಿಸಿ ವಾಯಣ ಪೂಜೆ ಮಾಡಿದ ತೆಂಗಿನಕಾಯಿಯನ್ನು ನೀಡಿ ಆಶೀರ್ವಾದವನ್ನು ಪಡೆಯುವುದು ಸಾಮಾನ್ಯವಾಗಿ ಕಾಣುತ್ತೇವೆ.

    ಈ ವಿಶೇಷವಾದ ಆಚರಣೆ ಬಹಳ ಹಿಂದಿನಿಂದಲೂ ಕೂಡ ಕರಾವಳಿಯ ಕೊಂಕಣಿಗರು ಆಚರಿಸುತ್ತಾ ಬಂದಿದ್ದಾರೆ.

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ

    ಎಂ.ವಿ. ಶಂಕರಾನಂದ

    ಭಾದ್ರಪದ ಮಾಸದ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ. ಗೌರಿ ಹಬ್ಬವನ್ನು ಸ್ವರ್ಣ ಗೌರಿ ವ್ರತದ ಮೂಲಕ ಆಚರಣೆ ಮಾಡಲಾಗುತ್ತದೆ.
    ಸ್ವರ್ಣ ಅಂದರೆ ಬಂಗಾರ, ಬಂಗಾರದ ಬಣ್ಣದಂತೆ ಹೊಳೆಯುವ ಜಗನ್ಮಾತೆಯಾದ ಗೌರಿಯನ್ನು ಈ ದಿನ ಷೋಡಶೋಪಚಾರದಿಂದ ಪೂಜಿಸಲಾಗುತ್ತದೆ.

    ಗೌರಿ ಎಂಬುದು ಪರಮೇಶ್ವರನ ಪತ್ನಿ ಪಾರ್ವತಿಯ ಮತ್ತೊಂದು ಹೆಸರು. ಪಾರ್ವತಿಯ ತಂದೆ ಪರ್ವತರಾಜ. ಅಂದರೆ ಹಿಮಾಲಯವಿರುವ ಭಾರತ (ಭೂಲೋಕ). ಶಿವನನ್ನು ವರಿಸಿ ಕೈಲಾಸದಲ್ಲಿ ನೆಲೆಸಿರುವ ಗೌರಿ ವರ್ಷಕ್ಕೊಮ್ಮೆ ತವರಿಗೆ (ಭೂಮಿಗೆ) ಬಂದು ಪೂಜೆ ಸ್ವೀಕರಿಸಿ, ಹೆಣ್ಣು ಮಕ್ಕಳಿಂದ ಬಾಗಿನ ಪಡೆದು ಸಂತೃಪ್ತಳಾಗಿ ಕೈಲಾಸಕ್ಕೆ ಹೋಗುತ್ತಾಳೆ ಎಂಬ ನಂಬಿಕೆ ಇದೆ.

    ಶ್ರೀ ಸ್ವರ್ಣ ಗೌರಿ ವ್ರತ ಹೆಸರೇ ಸೂಚಿಸುವಂತೆ ಸ್ವರ್ಣ ಅಂದರೆ ಬಂಗಾರ, ಅಂದರೆ ಬಂಗಾರ ಬಣ್ಣದಂತೆ ಹೊಳೆಯುವ ಗೌರಿ ಎಂದು ಅರ್ಥ. ಅಂತಹ ಜಗನ್ಮಾತೆಯಾದ ಗೌರಿಯನ್ನು ಸುಮಂಗಲಿಯರು ಪೂಜಿಸುವ ವಿಧಿ ವಿಧಾನ ಇಲ್ಲಿದೆ.

    ಈ ದಿನ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು ಮಂಗಳ ಸ್ನಾನ ಮಾಡಿ, ಪೂಜಾಗೃಹ ಅಥವಾ ದೇವರು ಇಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸಬೇಕು. ಒಂದು ಮಣೆ ಇಟ್ಟು, ಅದರ ಮೇಲೆ ರವಿಕೆ ಬಟ್ಟೆ ಹಾಸಿ, ಅದರ ಮೇಲೆ ಒಂದು ತಟ್ಟೆಯಲ್ಲಿ ದೇವರನ್ನು ಇಡಬೇಕು.ಗಣಪತಿ, ಗೌರಿ ವಿಗ್ರಹ, ಅರಿಶಿನದ ಗೌರಮ್ಮ(ಸ್ವಲ್ಪ ಅರಿಶಿನಕ್ಕೆ ಚೂರು ಹಾಲು ಹಾಕಿ ಕಲೆಸಿ ಗೋಪುರದ ಆಕರ ಕೊಡಿ), ಕನ್ನಡಿ, ಕಲಶ, ಇವುಗಳನ್ನು ಇಟ್ಟುಕೊಳ್ಳಬೇಕು. 3 ರವಿಕೆ ಬಟ್ಟೆಯನ್ನು ತ್ರಿಕೋಣಾಕಾರದಲ್ಲಿ ಮಡಿಸಿ ಹಿಂದೆ ಇಡಬೇಕು.

    ಬಾಗಿನ ಹೀಗಿರಲಿ: ಮೊರದ ಬಾಗಿನಕ್ಕೆ ಅಣಿಯಾದ ಮೊರವನ್ನು ಶುಭ್ರಗೊಳಿಸಿ ಅದಕ್ಕೆ ಅರಿಶಿನ, ಕುಂಕುಮ ಹಚ್ಚಿ ಚೆನ್ನಾಗಿ ಆರಿಸಿ ನಂತರ ಧಾನ್ಯಗಳು, ತೆಂಗಿನಕಾಯಿ, ಬಳೆಬಿಚ್ಚೋಲೆ, ಕನ್ನಡಿ , ಬಳೆಗಳು, 5 ಬಗೆಯ ಹಣ್ಣುಗಳು, ರವಿಕೆ ಕಣ, ತಾಯಿಗೆ ಹಾಗೆ ಅತ್ತಿಗೆ, ನಾದಿನಿಯರಿಗೆ ಸೀರೆಯನ್ನು ಹಾಕಿ, ಸುಮಂಗಲಿಯರು ಉಪಯೋಗಿಸುವ ವಸ್ತುಗಳು ,ಭಕ್ಷ್ಯಗಳು ಹಾಕಿ ಮೊರದ ಬಾಗಿನ ಸಿದ್ಧ ಪಡಿಸಬೇಕು.

    ದೇವಿಯನ್ನು ಸ್ಥಾಪನೆ ಮಾಡುವ ಸ್ಥಳವನ್ನು ಶುಭ್ರವಾಗಿ ಅಲಂಕರಿಸಿ ,ಗೌರಿ ಮೂರ್ತಿಯನ್ನು ಶೃಂಗರಿಸಿ, ತೋರಣದಿಂದ ಮಂಟಪವನ್ನು ಹಾಗೆ ಮನೆಯ ಮುಂಬಾಗಿಲನ್ನು ಅಲಂಕರಿಸಬೇಕು.

    ಪತ್ರೆಗಳನ್ನು,ಹೂವುಗಳನ್ನು, ಹೂವಿನ ಮಾಲೆಗಳನ್ನು ಕಟ್ಟಿ, 5 ತೆಂಗಿನಕಾಯಿ ಪೂಜೆಗಾಗಿ ಅರಿಶಿನ ಕುಂಕುಮ, ಚಂದ್ರ, ಚಂದನ, ಅಡಿಕೆ, ದಶಾಂಗಂ, ೫ ಬಗೆಯ ಹಣ್ಣುಗಳನ್ನು, ದೀಪದ ಕಂಬಕ್ಕೆ ದೀಪದ ಬತ್ತಿಗಳನ್ನು ತುಪ್ಪದಲ್ಲಿ ನೆನಸಿ, ಗೆಜ್ಜೆವಸ್ತ್ರಗಳು, 16 ಎಳೆಯ ಗೆಜ್ಜೆವಸ್ತ್ರ ಹಾಗೆ 16 ಎಳೆ ದೋರ ಗ್ರಂಥಿಗಳನ್ನು ತಯಾರಿಸಬೇಕು ಅದಕ್ಕೆ 16 ಗಂಟನ್ನು ಹಾಕಿ ದೋರವನ್ನು ಸಿದ್ಧ ಪಡಿಸಬೇಕು. ಪಂಚಾಮೃತ ಅಭಿಷೇಕ ಮಧುಪರ್ಕ,ಮಂಗಳಾರತಿ ಬತ್ತಿಗಳು. ಒಂದು ತಟ್ಟೆಯಲ್ಲಿ ಉಪಾಯನ ದಾನಕ್ಕಾಗಿ 2 ತೆಂಗಿನಕಾಯಿಗಳು ನಾಲ್ಕು ವಿಳ್ಳೆದೆಲೆ, ಅಡಿಕೆಗಳು, ದಕ್ಷಿಣೆ, ಸ್ವಲ್ಪ ಅಕ್ಕಿ ಅದನ್ನು ಮುಚ್ಚಲು ಒಂದು ತಟ್ಟೆ ಅಥವಾ ಬಾಳೆಯೆಲೆ ಉಪಯೋಗಿಸಬೇಕು.

    ಕಲಶದ ವಿಧಾನ:ಇನ್ನು ಕೆಲವರು ಮರಳಗೌರಿಯನ್ನು ಕೆಲವರು ಅರಿಶಿನ ಗೌರಿಯನ್ನು ಇಡುವ ಪದ್ಧತಿ ವಾಡಿಕೆಯಲ್ಲಿ ಇರುತ್ತೆ. ಅವರವರ ಸಂಪ್ರದಾಯದಂತೆ ಗೌರಿಯನ್ನು ಪ್ರತಿಸ್ಠಾಪಿಸಿ ಪೂಜೆ ಮಾಡಬೇಕು.ಹಾಗೆಯೇ ಕಲಶದಲ್ಲಿ ಗಂಗೆಯನ್ನು ಅದಕ್ಕೆ 5 ವಿಳ್ಳೆದೆಲೆಯನ್ನು ಇಟ್ಟು ಹಾಗೆ ಯಾವುದಾದರು ಹಣ್ಣನ್ನು ಕಳಸದಲಿ ಇಡಬೇಕು ಕಲಶದ ಸುತ್ತ ಬಿಳಿ ಸುಣ್ಣ ಹಚ್ಚಿ ಅದಕ್ಕೆ ೪ ಕಡೆ ಅರಿಶಿನ ಕುಂಕುಮ ಹಚ್ಚಬೇಕು. ಒಂದು ತಟ್ಟೆಯಲ್ಲಿ ಹಳದಿ (ಅರಿಶಿನ ಹಾಕಿ ವಸ್ತ್ರವನ್ನು ಸಿದ್ಧಪಡಿಸಬಹುದು) ವಸ್ತ್ರವನ್ನು ಹಾಸಿ ಎರೆಡು ವಿಳ್ಳೆದೆಲೆಯ ಜೊತೆ ಎರೆಡು ಬಟ್ಳಡಿಕೆ ಇಟ್ಟು ಗೌರಿಯ ಮೂರ್ತಿ,ಅರಿಶಿನಗೌರಿ ಅಥವಾ ಮರಳ ಗೌರಿಯನ್ನು ಅದರ ಮೇಲೆ ಇಡಬೇಕು ಜೊತೆಯಲ್ಲಿ ಸಿದ್ಧಪಡಿಸಿದ ಕಲಶವನ್ನು ಸ್ಥಾಪನೆ ಮಾಡಬೇಕು.

    ಮೊರದ ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು ಶ್ರದ್ಧಾಪೂರ್ವಕವಾಗಿ ಹೇಳಿ ಬಾಗಿನ ಕೊಟ್ಟರೆ ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದೆಂದು ಹೇಳಿಕೆಯಿದೆ.
    “ರಾಮಪತ್ನಿ ಮಹಾಭಾಗಿ ಪುಣ್ಯಮೂರ್ತಿ ನಿರಾಮುಖಿ ಮಯಾದತ್ತಾಣಿ ಸೂರ್ಪಾಣಿ ಗೃಹಾಣಿ ಮಾನಿ ಜಾನಕಿ “.

    ದೇವರ ವಿಸರ್ಜನೆ: ದೇವರನ್ನು ವಿಸರ್ಜನೆ ಮಾಡುವ ಮುಂಚೆ ದೇವರನ್ನು ಕದಲಿಸಿ ಸೋಬಲಕ್ಕಿ ಇಡಬೇಕು. ಅದಕ್ಕೆ ಬೇಕಾಗುವ ಸಾಮಾಗ್ರಿಗಳು: ತೆಂಗಿನಕಾಯಿ ಅಥವಾ ಒಣಕೊಬ್ಬರಿ ಬಟ್ಟಲನ್ನು ಉಪಯೋಗಿಸಿ, ಬೆಲ್ಲದಚ್ಚು, ಬಳೆ ಬಿಚ್ಚೋಲೆ, ವಿಳ್ಳೆದೆಲೆ, ಅಡಿಕೆ, ದಕ್ಷಿಣೆ, ಸೀರೆ, ಎರೆಡು ರವಿಕೆ ಕಣಗಳು, ಹಣ್ಣುಗಳಾದ ದಾಳಿಂಬೆ, ಸೀಬೆ ಹಣ್ಣು, ಸೀತಾ ಫಲ, ಸಪೋಟ, ಮೂಸಂಬಿ, ಕಿತ್ತಳೆ. ನಂತರ ಮಂಗಳಾರತಿ ಮಾಡಿ ದೇವಿಯ ಜೊತೆ ಗಣೇಶನನ್ನು ವಿಸರ್ಜನೆ ಮಾಡಬೇಕು.

    ಮೊಸರನ್ನವನ್ನು ಮೂರ್ತಿಯ ಜೊತೆ ವಿಸರ್ಜಿಸಿ ಸ್ವಲ್ಪ ಪ್ರಸಾದವಾಗಿ ಮನೆಯವರೆಲ್ಲಾ ಸೇವಿಸಬೇಕು .
    ಸ್ವರ್ಣಗೌರಿ ಹಬ್ಬದ ದಿನ ಈ ಕೆಳಗಿನ ಶ್ಲೋಕವನ್ನು 108 ಬಾರಿ ಶ್ರದ್ಧಾ ಭಕ್ತಿಯಿಂದ ಆಚರಿಸಿದಲ್ಲಿ, ಜಪಿಸಿದಲ್ಲಿ ತಮ್ಮ ಬೇಡಿಕೆಗಳು ಪೂರೈಸುತ್ತವೆ ಎನ್ನುವ ನಂಬಿಕೆ ಇದೆ.
    “ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
    ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    ಎಲ್ಲರೂ ತೇಜಸ್ವಿಯಾಗಲು ಸಾಧ್ಯವಿಲ್ಲ


    ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ತೇಜಸ್ವಿ ಜೀವಲೋಕ ಹಾಗೂ ಕುರಿಂಜಿ ಲೋಕ ಸಾಕ್ಷ್ಯಚಿತ್ರ, ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮಾತುಗಳು.


    ಸಿದ್ದರಾಮಯ್ಯ

    ನಾನು ವಿದ್ಯಾರ್ಥಿಯಾಗಿದ್ದಾಗ ತೇಜಸ್ವಿಯವರ ಪರಿಚಯ ನನಗಿರಲಿಲ್ಲ. ವಾರಕ್ಕೊಮ್ಮೆ ಮೈಸೂರಿಗೆ ಬರುತ್ತಿದ್ದರು, ಮೈಸೂರಿನಲ್ಲಿ ಕೆ. ರಾಮದಾಸ್ ಎನ್ನುವವರು ತೇಜಸ್ವಿಯವರ ಆಪ್ತ ಸ್ನೇಹಿತರಾಗಿದ್ದರು. ಇವರು ಕೂಡ ಶಿವಮೊಗ್ಗ ಜಿಲ್ಲೆಯವರು. ತೇಜಸ್ವಿಯವರಿಗೆ ಶ್ರೀ ರಾಮ್ ಎನ್ನುವ ಇನ್ನೊಬ್ಬ ಸ್ನೇಹಿತರಿದ್ದರು. ನಾನು ಹಲವು ಬಾರಿ ರಾಮದಾಸ್ ಮನೆಗೆ ಹೋಗಿದ್ದೆ, ಅಲ್ಲಿ ನನಗೆ ತೇಜಸ್ವಿಯವರು ಪರಿಚಯವಾಗಿ ನಮ್ಮ‌ ನಡುವೆ ಆತ್ಮೀಯತೆ ಬೆಳೆಯಿತು.

    ತೇಜಸ್ವಿಯವರು ಹಲವು ಬಾರಿ ತಮ್ಮ ಫಾರ್ಮ್ ಹೌಸ್ ಗೆ ಬರುವಂತೆ ನನಗೆ ಆಹ್ವಾನ ನೀಡಿದ್ದರು. ಆದರೆ ಒಮ್ಮೆ ಮಾತ್ರ ಹೋಗಲು ಸಾಧ್ಯವಾಯಿತು. ಒಂದು ಇಡೀ ದಿನ ಅವರ ತೋಟದ ಮನೆಯಲ್ಲಿ ಇದ್ದೆ.

    ತೇಜಸ್ವಿಯವರು ಒಬ್ಬ ಸಾಹಿತಿಯಷ್ಟೇ ಅಲ್ಲ, ಮಹಾನ್ ಪರಿಸರ ಪ್ರೇಮಿ ಜೊತೆಗೆ ಉತ್ತಮ ಛಾಯಾಗ್ರಾಹಕರಾಗಿದ್ದರು. ಅವರಿಗೆ ಮೀನು ಹಿಡಿಯುವ ಹವ್ಯಾಸವಿತ್ತು. ಮೀನು ಸಿಕ್ಕಲಿ, ಸಿಗದಿರಲಿ ಗಂಟೆಗಟ್ಟಲೆ ಕೂತಲ್ಲೇ ಕೂತಿರುತ್ತಿದ್ದರು. ಅವರ ಜೊತೆ ಒಂದೆರಡು ಬಾರಿ ನಾನೂ ಮೀನು ಹಿಡಿಯಲು ಹೋಗಿದ್ದೆ.

    ಪ್ರಕೃತಿಯನ್ನು ತೇಜಸ್ವಿಯವರಷ್ಟು ಪ್ರೀತಿಸಿದವರನ್ನು ನಾನು ನೋಡಿಯೇ ಇಲ್ಲ. ನಾನೂ ಒಬ್ಬ ಸಸ್ಯಶಾಸ್ತ್ರದ ವಿದ್ಯಾರ್ಥಿ. ಬಾಟನಿ ಎಂ.ಎಸ್ಸಿ ಸೀಟ್ ಸಿಗದ ಕಾರಣ ಮುಂದೆ ನಾನು ಕಾನೂನು ಪದವಿ ಓದಿ, ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದೆ.

    ನನಗೆ ಪ್ರ್ರೊ. ನಂಜುಂಡಸ್ವಾಮಿ ಅವರ ಪರಿಚಯವಾಗದೆ ಇದ್ದಿದ್ದರೆ ಬಹುಶಃ ನಾನು ರಾಜಕಾರಣಕ್ಕೂ ಬರುತ್ತಾ ಇರಲಿಲ್ಲ. ತೇಜಸ್ವಿಯವರು ಕನ್ನಡ ಎಂ.ಎ ಓದಿ ಬರವಣಿಗೆ, ಛಾಯಾಗ್ರಹಣ, ಪರಿಸರದ ಬಗ್ಗೆ ಅರಿಯುವ ಕೆಲಸ ಮಾಡಿದರು. ಅವರ ವಿಭಿನ್ನ ಯೋಚನಾಶೈಲಿಯೇ ಅವರ ಹೆಗ್ಗುರುತು.

    ತೇಜಸ್ವಿಯವರು ಎಂದಿಗೂ ತಾನು ಕುವೆಂಪು ಮಗ ಎಂದು ಹೇಳಿ ಅದರಿಂದ ಲಾಭ ಪಡೆಯುವ ಪ್ರಯತ್ನ ಮಾಡಲೇ ಇಲ್ಲ. ಪ್ರಕೃತಿ, ಪರಿಸರದ ಬಗ್ಗೆ ಹಲವು ಲೇಖನ ಬರೆದಿದ್ದಾರೆ. ಪರಿಸರ ಪ್ರೇಮಿಗಳಿಗೆ ಇಂದಿಗೂ ತೇಜಸ್ವಿಯವರು ಸ್ಪೂರ್ತಿಯಾಗಿದ್ದಾರೆ.

    ರಾಜಕಾರಣದ ಬಗ್ಗೆ ಅವರು ಹೆಚ್ಚು ಚರ್ಚೆ ಮಾಡುತ್ತಿರಲಿಲ್ಲ. ರಾಜಕಾರಣಿಗಳ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ ಆದರೆ ಅವರಿಗೆ ನನ್ನ ಬಗ್ಗೆ ವೈಯಕ್ತಿಕವಾಗಿ ಪ್ರೀತಿ, ಅಭಿಮಾನವಿತ್ತು. ಇಂಥವರ ಸಂಪರ್ಕದಿಂದ ನಾನು ಒಳ್ಳೆಯ ಬದುಕು ರೂಪಿಸಿಕೊಳ್ಳಲು ಸಹಾಯವಾಯಿತು.

    ತೇಜಸ್ವಿಯವರಿಂದ ನಾನು ಹಲವು ವಿಚಾರಗಳನ್ನು ಕಲಿತಿದ್ದೇನೆ. ನನ್ನ ಬದುಕು ರೂಪುಗೊಳ್ಳಲು ಅವರ ಒಡನಾಟ ಸಾಕಷ್ಟು ಸಹಕಾರಿಯಾಗಿದೆ. ಹಾಗಾಗಿ ಅವರನ್ನು ಈ ಒಂದು ದಿನ ಮಾತ್ರವಲ್ಲ ನಿತ್ಯವೂ ನೆನೆಯುತ್ತೇನೆ.

    ಪ್ರತೀ ಸೋಮವಾರ ಸಂಜೆ 5 ರಿಂದ 8 ಗಂಟೆ ವರೆಗೆ ತೇಜಸ್ವಿಯವರು, ರಾಮದಾಸ್ ಸೇರಿದಂತೆ ನಾವೆಲ್ಲ ಮೈಸೂರಿನ ಹೊಟೇಲ್ ಒಂದರಲ್ಲಿ ಸೇರುತ್ತಿದ್ದೆವು. ಆಗ ಬರೀ ರಾಜಕೀಯ ವಿಚಾರಗಳಷ್ಟೇ ಅಲ್ಲ ಬದುಕಿಗೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು.

    ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಕುರಿಂಜಿ ಎಂಬ ವಿಶಿಷ್ಟ ಪ್ರಭೇಧದ ಹೂವುಗಳ ರಕ್ಷಣೆ ಇಂದು ಅಗತ್ಯವಾಗಿ ಆಗಬೇಕಿದೆ. ಬೆಂಕಿಯ ಜ್ವಾಲೆಗಿಂತ ಮನುಷ್ಯ ಪರಿಸರಕ್ಕೆ ಮಾರಕ. ಮನುಷ್ಯರಿಂದ ಇವುಗಳ ರಕ್ಷಣೆ ಆಗಬೇಕು.

    ಎಲ್ಲರೂ ತೇಜಸ್ವಿಯಾಗಲು ಸಾಧ್ಯವಿಲ್ಲ, ಆದರೆ ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡುವ ಮೂಲಕ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು. ಪರಿಸರ ರಕ್ಷಣೆಗೆ ತೇಜಸ್ವಿಯವರ ಬದುಕು, ಬರಹ, ಜೀವನ ನಮಗೆ ಪ್ರೇರಣೆ.

    ತೇಜಸ್ವಿಯವರ ಜನ್ಮದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುದ್ರಣವಾದ ನಂತರ ಅತಿಥಿಗಳ ಪಟ್ಟಿಯಲ್ಲಿ ನನ್ನ ಹೆಸರಿದೆ ಎಂಬ ವಿಚಾರ ನನಗೆ ಗೊತ್ತಾಗಿದ್ದು. ತೇಜಸ್ವಿಯವರನ್ನು ನೆನಪು ಮಾಡಿಕೊಳ್ಳುವ ಇಂಥದ್ದೊಂದು ಸುವರ್ಣಾವಕಾಶ ಕಲ್ಪಿಸಿಕೊಟ್ಟಿದ್ದಕ್ಕಾಗಿ ಬಿ.ಎಲ್ ಶಂಕರ್ ಅವರಿಗೆ ಹಾಗೂ ಕಾರ್ಯಕ್ರಮದ ಆಯೋಜಕರಿಗೆ ಧನ್ಯವಾದ

    ಅ.7ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ; ಸೆ.13ರಂದು ಗಜಪಯಣಕ್ಕೆ ಚಾಲನೆ

    MYSURU SEPT 8

    ಸೆಪ್ಟೆಂಬರ್ 13 ರಂದು ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡುವುದರ ಮೂಲಕ ಮೈಸೂರು ದಸರಾ ಚಟುವಟಿಕೆಗಳು ಆರಂಭಗೊಳ್ಳಲಿವೆ. 8 ಆನೆಗಳು ಈ ಬಾರಿ ದಸರೆಗೆ ಬರಲಿವೆ ಎಂದು ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.ಅರಮನೆ ಮಂಡಳಿ ಸಭಾಂಗಣದಲ್ಲಿ ಇಂದು ವಿಶ್ವ ವಿಖ್ಯಾತ ಮೈಸೂರು ದಸರಾ-2021ರ
    ದಸರಾ ಕಾರ್ಯಕಾರಿ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ಸೆ. 16 ರಂದು ಮೈಸೂರು ಅರಮನೆಗೆ ಗಜಪಡೆ ಆಗಮಿಸಲಿದೆ. ಆನೆಗಳ ಪೋಷಣೆಗೆ 50 ಲಕ್ಷ ರೂ. ಮೀಸಲಿಡಲಾಗಿದೆ. ಅರಮನೆ ಆವರಣದಲ್ಲಿ 7 ದಿನವೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

    ಅ. 7 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನಡೆಯಲಿದೆ. ಉದ್ಘಾಟರ ಆಯ್ಕೆಯನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಬಿಡಲಾಗಿದೆ. ಅರಮನೆ ಆವರಣದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 15 ರ ಸಂಜೆ 4.36 ರಿಂದ 4.44ರ ವೇಳೆಗೆ ನಂದಿ ಪೂಜೆ, ಬಳಿಕ ಸಂಜೆ 5 ರಿಂದ 5.36ರ ವರೆಗೆ ಜಂಬೂ ಸವಾರಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

    ಈ ಬಾರಿ ನಗರದ ಒಳಗೆ 100 ಕಿ.ಮೀ. ವಿದ್ಯುತ್ ದೀಪಾಲಂಕಾರ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. 3 ಸ್ಥಬ್ದಚಿತ್ರಗಳಿಗೆ ಈ ಬಾರಿ ಅವಕಾಶ ನೀಡಲಾಗಿದೆ. ಅರಮನೆ ಆವರಣದಲ್ಲಿ ದಸರಾ ವೀಕ್ಷಣೆಗೆ ಎಷ್ಟು ಜನರಿಗೆ ಅವಕಾಶ ನೀಡಬೇಕು ಎಂಬುದನ್ನು ಸೆ.25ರ ಬಳಿಕ‌ ನಿರ್ಧರಿಸಲಾಗುವುದು ಎಂದರು.

    ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ನೋಡಿಕೊಂಡು ಎಷ್ಟು ಜನರಿಗೆ ಅವಕಾಶ ನೀಡಬೇಕು ಎಂದು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು. ಅಕ್ಟೋಬರ್ 17 ರಂದು ಗಜಪಡೆಗೆ ಬೀಳ್ಕೊಡುಗೆ ಎಂದು ವಿವರಿಸಿದರು.

    ಸಭೆಯಲ್ಲಿ ಸಂಸದ ಪ್ರತಾಪ್‌ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೆಗೌಡ, ಕೆ.ಟಿ.ಶ್ರೀಕಂಠೇಗೌಡ, ನಿರಂಜನ್ ಕುಮಾರ್, ಎಲ್.ನಾಗೇಂದ್ರ, ಹರ್ಷವರ್ಧನ್, ಮೇಯರ್ ಸುನಂದಾ ಪಾಲನೇತ್ರ, ವಿವಿಧ ನಿಗಮ ಮಂಡಳಿ ಅಧ್ಯಕ್ಷರುಗಳಾದ ಹೆಚ್.ವಿ‌.ರಾಜೀವ್, ಫಣೀಶ್, ಅಪ್ಪಣ್ಣ, ಎ.ಹೇಮಂತ್ ಕುಮಾರ್ ಗೌಡ, ಮಹದೇವಸ್ವಾಮಿ, ಕೃಷ್ಣಪ್ಪಗೌಡ, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಎಸ್.ಪಿ. ಆರ್. ಚೇತನ್, ಜಿಲ್ಲಾ ಪಂಚಾಯತ್ ಸಿ.ಇ.ಒ. ಎ.ಎಂ.ಯೋಗೀಶ್, ಡಿಸಿಎಫ್ ಕರಿಕಾಳನ್, ಎಡಿಸಿ ಡಾ. ಬಿ‌ಎಸ್. ಮಂಜುನಾಥಸ್ವಾಮಿ, ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

    error: Content is protected !!