ಬಳಕೂರು ವಿ ಎಸ್ ನಾಯಕ
ಭಾದ್ರಪದ ಮಾಸ ಬಂತೆಂದರೆ ಸಾಕು. ಸಾಲು ಸಾಲು ಹಬ್ಬಗಳು ಈ ಮಾಸದಲ್ಲಿ ವಿಶೇಷವಾಗಿ ಆಚರಿಸುವ ಸ್ವರ್ಣಗೌರಿ ವ್ರತ ಮತ್ತು ಗಣಪತಿ ಹಬ್ಬ ಸಾಮಾನ್ಯವಾಗಿ ಎಲ್ಲರೂ ಕೂಡ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಕರಾವಳಿಯ ಕೊಂಕಣಿಗರು ಸ್ವರ್ಣಗೌರಿ ವ್ರತವನ್ನು ವಿಶೇಷವಾಗಿ ಆಚರಿಸುವುದು ವಾಡಿಕೆ.
ಸಾಮಾನ್ಯವಾಗಿ ಸ್ವರ್ಣಗೌರಿ ವ್ರತವನ್ನು ಇವರು ವಾಯಣ ಪೂಜಾ ಎಂಬ ವಿಶೇಷ ಪೂಜಾ ವಿಧಾನವನ್ನು ಅನುಸರಿಸಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಸ್ವರ್ಣಗೌರಿ ವ್ರತವನ್ನು ಗೌರಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆಚರಿಸುವುದು ವಾಡಿಕೆ. ಆದರೆ ಇಲ್ಲಿ ವಾಯಣ ಪೂಜಾ ಆಚರಣೆ ಸಂಪೂರ್ಣ ವಿಭಿನ್ನ. ಭಾದ್ರಪದ ಮಾಸದ ತೃತೀಯ ದಿನದಂದು ಆಚರಿಸುವ ಹಬ್ಬಗಳಲ್ಲಿ ಒಂದು ಗೌರಿಪೂಜೆ ಅಥವಾ ವಾಯಣ ಪೂಜಾ.









ಸಾಮಾನ್ಯವಾಗಿ ಗಣೇಶ ಚತುರ್ಥಿಯ ಮೊದಲದಿನ ಗೌರಿ ಪೂಜೆಯನ್ನು ಆಚರಿಸುತ್ತಾರೆ. ವಾಯಣ ಪೂಜಾ ಇದು ವಿಭಿನ್ನ ರೀತಿಯ ಸಂದೇಶವನ್ನು ಕೊಡುವ ಪೂಜಾ ವಿಧಾನ. ವಾಯಣ ಎಂದರೆ ತೆಂಗಿನ ಕಾಯಿಗಳು ತಾಯಿ ಗೌರಿಯನ್ನು ಪ್ರತಿಪಾದಿಸುತ್ತದೆ.ಮದುವೆಯಾದ ಸುಮಂಗಲಿಯರು ಸಾಮಾನ್ಯವಾಗಿ ಪೂಜೆ ಮಾಡುವುದು ವಾಡಿಕೆ. ವಾಯಣ ಪೂಜೆಯ ಹತ್ತಿರ ಬರುತ್ತಿದ್ದಂತೆ ಮನೆಯಲ್ಲಿರುವ ಸುಮಂಗಲಿಯರು ಮೊದಲು ಉತ್ತಮವಾದ ತೆಂಗಿನಕಾಯಿಗಳನ್ನು ತೆಗೆದುಕೊಂಡು ಅದನ್ನು ಮಾಡಿ ನಂತರ ಹರಿಶಿಣ ನೀರಿನಿಂದ ತೊಳೆದು ಶುದ್ಧೀಕರಿಸುತ್ತಾರೆ.
ಗೌರಿಯನ್ನು ಪ್ರತಿಬಿಂಬಿಸುವ ತೆಂಗಿನಕಾಯಿಗಳನ್ನು ಸಿಂಗರಿಸಲು ಕುಂಕುಮ ಚಂದನ ಸಿಂಧೂರ ಬಳೆಗಳು ಕಪ್ಪು ಕಾಡಿಗೆ ಎಲ್ಲವನ್ನು ಸಿದ್ಧಪಡಿಸುತ್ತಾರೆ. ನಂತರ ಗೌರಿ ದಾರ ಅಥವಾ ವಾ ಯಣ ದಾರವನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಶುದ್ಧೀಕರಿಸಿದ ತೆಂಗಿನಕಾಯಿಗೆ ಬಿಳಿಯ ಬಣ್ಣದ ಶೇಡಿ ಯನ್ನು ಬಳಸಿ ಅಲಂಕರಿಸುತ್ತಾರೆ ನಂತರ ಪವಿತ್ರವಾದ ವಾಯಣ ದಾರವನ್ನು ತೆಂಗಿನಕಾಯಿಗೆ ಕಟ್ಟಿ ಸಿಂಗರಿಸುವುದು ವಾಡಿಕೆ. ಮತ್ತು ಸಿಂಧೂರ ಚಂದನ ಕಪ್ಪು ಕಾಡಿಗೆಯನ್ನು ತೆಂಗಿನಕಾಯಿಗೆ ಅಲಂಕರಿಸುತ್ತಾರೆ. ಕಪ್ಪು ಕಾಡಿಗೆಯನ್ನು ತೆಗೆದುಕೊಂಡು ತೆಂಗಿನಕಾಯಿಗೆ ದೃಷ್ಟಿ ಇಡುತ್ತಾರೆ. ನಂತರ ಶೃಂಗಾರ ಮಾಡಿದ ತೆಂಗಿನಕಾಯಿಗಳನ್ನು ಮಹಾದೇವ ಮತ್ತು ಗೌರಿಯ ಫೋಟೋದ ಮುಂದೆ ಬಾಳೆಯ ಎಲೆಯ ಆಮೇಲೆ ಅಕ್ಕಿಯನ್ನು ಹಾಸಿ ಅದರ ಮೇಲೆ ಸಿಂಗಾರ ಮಾಡಿದ ತೆಂಗಿನ ಕಾಯಿಗಳನ್ನು ಇಟ್ಟು ಅದರ ಮೇಲೆ ದೀಪಗಳಿಂದ ಅಲಂಕರಿಸುತ್ತಾ ಹೂವಿನ ಶೃಂಗಾರ ಮಾಡುವುದನ್ನು ನೋಡಬಹುದು.
ಗೌರಿ ಹಬ್ಬದ ದಿನ ಮನೆಯ ತುಂಬಾ ಸುಮಂಗಲಿಯರು ವಿಶೇಷವಾದ ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಸಾಮಾನ್ಯವಾಗಿ ಗೌರಿ ಪೂಜೆಯ ದಿನ ದೇವರಿಗೆ ನೈವೇದ್ಯಕ್ಕೆ ಸಿಹಿ ಅವಲಕ್ಕಿ ಪಂಚಕಜ್ಜಾಯ ಮಾಡುವುದು ಬಹಳ ಮುಖ್ಯವಾಗಿದೆ. ವಾಯಣ ಪೂಜೆ ನೆರವೇರಿಸಿದ ಮೇಲೆ ಮೊದಲು ಅವರ ಕುಲದೇವರಿಗೆ ಮತ್ತು ಅವರ ಪೂರ್ವಿಕರ ಎತ್ತಿಕೊಂಡು ಅರ್ಪಿಸಿ ಆಶೀರ್ವಾದವನ್ನು ಪಡೆಯುವುದು ಗಮನಿಸಬಹುದು. ನಂತರ ಮನೆಯ ಹಿರಿಯ ಸುಮಂಗಲಿಯರಿಗೆ ಪಯಣ ಪೂಜೆಮಾಡಿದ ತೆಂಗಿನಕಾಯಿ ನೀಡಿ ಆಶೀರ್ವಾದವನ್ನು ಪಡೆಯುತ್ತಾರೆ.
ಮನೆಯ ಸುಮಂಗಲಿಯರೆಲ್ಲಾ ಗೌರಿ ಮಂತ್ರವನ್ನು ಉಚ್ಚರಿಸಿ ಗೌರಿ ದಾರವನ್ನು ಕೈಗೆ ಕಟ್ಟಿಕೊಳ್ಳುವುದು ಕಾಣುತ್ತೇವೆ. ಹೆಚ್ಚಾಗಿ ಸುಮಂಗಲಿಯರು ಮಂಗಳಸೂತ್ರಕ್ಕೆ ಈ ಪವಿತ್ರವಾದ ಗೌರಿ ದಾರವನ್ನು ಕಟ್ಟಿ ಪೂಜಿಸುತ್ತಾರೆ. ಭಾದ್ರಪದ ಮಾಸದ ಒಂದು ತಿಂಗಳುಗಳ ಕಾಲ ಸುಮಂಗಲಿಯರಿಗೆ ಅವರ ಮನೆಗೆ ಆಹ್ವಾನಿಸಿ ವಾಯಣ ಪೂಜೆ ಮಾಡಿದ ತೆಂಗಿನಕಾಯಿಯನ್ನು ನೀಡಿ ಆಶೀರ್ವಾದವನ್ನು ಪಡೆಯುವುದು ಸಾಮಾನ್ಯವಾಗಿ ಕಾಣುತ್ತೇವೆ.
ಈ ವಿಶೇಷವಾದ ಆಚರಣೆ ಬಹಳ ಹಿಂದಿನಿಂದಲೂ ಕೂಡ ಕರಾವಳಿಯ ಕೊಂಕಣಿಗರು ಆಚರಿಸುತ್ತಾ ಬಂದಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.


