27.7 C
Karnataka
Thursday, May 16, 2024

    ಬಿಆರ್ ಎಲ್ ಗೆ 75, ಗೋಪಿಗೆ 50

    Must read

    ಇಂದು 75 ನೇ ವಸಂತಕ್ಕೆ ಕಾಲಿಡುತ್ತಿರುವ ಕನ್ನಡದ ಪ್ರಮುಖ ಕವಿ ಬಿ ಆರ್ ಲಕ್ಷ್ಮಣ ರಾವ್ ಅವರ ಚೊಚ್ಚಲ ಜಗತ್ಪ್ರಸಿದ್ಧ ಕವನ ಸಂಕಲನ” ಗೋಪಿ ಮತ್ತು ಗಾಂಡಲೀನ” ಕ್ಕೆ ಈಗ ಬರೋಬ್ಬರಿ ಐವತ್ತು ವರ್ಷಗಳು.

    ಆ ಸಂಕಲನದ ಪದ್ಯಗಳ ಮೇಲೊಮ್ಮೆ ಕಣ್ಣಾಡಿಸಿದರೆ ಐವತ್ತು ವರ್ಷಗಳ ಹಿಂದೆಯೇ ನಮ್ಮ ಕವಿಗಳು ಇಂತಹಾ ಕವನಗಳನ್ನು ಬರೆದಿದ್ದಾರಲ್ಲಾ ಎಂದು ಬೆರಗು ಮೂಡುತ್ತದೆ. ಆಗ ಅವರ ಮೇಲೆ ಪ್ರಭಾವ ಬೀರಿದ್ದ ಲಂಕೇಶರ ಮುನ್ನುಡಿಯೂ ಸಂಕಲನದಷ್ಟೇ ಸೊಗಸಾಗಿದೆ. ಅಲ್ಲಿ ಲಂಕೇಶರಿಗೆ ಕವಿಯ ಬಗ್ಗೆ ಹೇಳುವ ಉತ್ಸಾಹವೇ ಹೆಚ್ಚು. ಅದಕ್ಕೆ ಕಾರಣ ಕವಿಯ ಬಗೆಗಿನ ಪ್ರೀತಿಯ ಜೊತೆ, ಅದಷ್ಟನ್ನೂ ಹೇಳದೆ ಪದ್ಯಗಳ ಕುರಿತು ಹೇಳಲಾಗುವುದಿಲ್ಲ ಎಂಬ ಲಂಕೇಶರ ನಂಬಿಕೆ. ತಮ್ಮ ಬಗ್ಗೆಯಾಗಲೀ , ತಮ್ಮ ಕವಿತೆಗಳ ಕುರಿತಾಗಲೀ ಲಕ್ಷ್ಮಣ ರಾವ್ ಆ ಸಂಕಲನದಲ್ಲಿ ಏನನ್ನೂ ಹೇಳಿಕೊಂಡಿಲ್ಲ. ಹೇಳಬೇಕಾದ್ದೆಲ್ಲವನ್ನೂ ಪದ್ಯಗಳ ಮೂಲಕವೇ ಹೇಳಿದ್ದಾರೆ.

    ಮೊಟ್ಟ ಮೊದಲನೆಯ ಪದ್ಯವನ್ನೇ ನೋಡಿ. .
    ನಾನು ಕ್ರಮ
    ವಾಗಿ ಪಂಚೇಂದ್ರಿಯ
    ಹೃದಯ ಮಿದುಳು
    ಗಳ ದಾಸ .
    ಈ ವ್ಯಾಸ
    ದಲ್ಲೇ ನನ್ನ
    ಭಾರತ , ಕುರುಕ್ಷೇತ್ರ,
    ಕರ್ಮಯೋಗ,
    ವಿಶ್ವರೂಪ ದರ್ಶನ ,
    ಮುಕ್ತಿ .

    ಹೀಗೆ ಕವಿತೆಯ ಮೂಲಕ ತಾನೇನೆಂದು ಹೇಳುತ್ತಾ , ಪದ್ಯಗಳು ಹೇಗಿರಬಹುದೆಂಬ ಕಲ್ಪನೆಯನ್ನು ಓದುಗನೊಳಗೆ ಮೂಡಿಸುವ ಅಪ್ಪಟ ಸೆಲ್ಫಿ ಕವಿತೆ ಇದು .. ಬಹಳ ವಿಶಿಷ್ಟ ಪ್ರಯೋಗ ಕೂಡಾ ಹೌದು. ಈ ಮೂರರಲ್ಲೇ ಎಲ್ಲರಿಗೂ ಇವೆಲ್ಲವೂ ಆಗುವುದಾದರೂ ಆದ್ಯತೆಗಳ ಪಟ್ಟಿಯನ್ನು ಗಮನಿಸಿದರೆ ಇಂತಹಾ ಪಟ್ಟಿಯನ್ನು ಕೊಡಬಲ್ಲ ಕವಿಯ ಈ ನಿರ್ಭೀಡ ನಡೆ ಕನ್ನಡದ ಮಟ್ಟಿಗೆ ಆಗ ಅಪರೂಪವಾಗಿತ್ತು. ಆ ದಿಟ್ಟತನ ಲಂಕೇಶರನ್ನು ನೋಡಿ ಕಲಿತದ್ದಾಗಿರಬಹುದಾಗಿದ್ದರೂ ಆ ಲವಲವಿಕೆ , ಜೀವನ ಪ್ರೀತಿ ಸಹಜವಾಗಿಯೇ ಪದ್ಯಗಳಲ್ಲಿ ಎದ್ದುಬಂದಂತಿದೆ. ಮತ್ತು ಆ ವೈನೋದಿಕ ದೃಷ್ಟಿಕೋನ ಅವರಿಗೆ ಮತ್ತೂ ಸಹಜವಾಗಿ ಸಿದ್ಧಿಸಿದೆ. ಸಂಕಲನದಲ್ಲಿ ಕ್ರಮವಾಗಿ ಕವಿಯ ಅಸ್ತಿತ್ವದ ಕುರುಹುಗಳಿವೆ .. ಮೊದಲು ನಾನು, ನಂತರ ಅಪ್ಪ, ಅಮ್ಮ, ವಾಸಂತಿ, ಪ್ರೇಮ ಗೀಮ, ಗೆಳೆಯರು ನಂತರವೇ ಪ್ರಕೃತಿ, ಎಲ್ಲೆಲ್ಲೂ ಪಂಚೇಂದ್ರಿಯಗಳ ಅಬ್ಬರ .. ಅವರ ಸುಪ್ರಸಿದ್ಧ ಗೋಪಿ ಮತ್ತು ಗಾಂಡಲೀನ ಪದ್ಯವನ್ನೊಮ್ಮೆ ನೋಡಿದಾಗ ಆ ಪದ್ಯದಲ್ಲಿ ಲಂಕೇಶರು ಗುರುತಿಸುವಂತೆ ಗೋಪಿ ನಿಜಕ್ಕೂ ಮುಗ್ಧ .

    ಜನಿವಾರವನ್ನು ಕಿವಿಗೆ ಸಿಕ್ಕಿಸಿಕೊಂಡು ಶೌಚಾಲಯಕ್ಕೆ ಹೋಗಿ ಬರುವ, ಕಾಪಿ ಮಾತ್ರ ಕುಡಿಯುವ ಗೋಪಿ, ಗಾಂಡಲೀನಳನ್ನು ಎವೆ ಇಕ್ಕದೇ ನೋಡುತ್ತಾ ನಿಲ್ಲುತ್ತಾನೆ .. ಹಾಗೆ ನೋಡುತ್ತಾ ನಿಂತ ಅವನ ಮುಂದೆ ವೆಂಕಟಲಕ್ಷ್ಮಿ ಬಂದಂತಾಗಿ ಅವನು ಗಾಂಡಲೀನಾಳ ಪಾದಪದ್ಮಗಳ ಮೇಲೆ ಬಿದ್ದಾಗ ( ಅವರು ಮೊದಲು ಬರೆದ ಈ ಸೆಲ್ಫಿ ಕವಿತೆಯ ಪ್ರಕಾರ ) ಓದುಗನ ತುಂಟ ಮನಸ್ಸು ಜಾರಿಬಿದ್ದನೋ , ಅಡ್ಡಬಿದ್ದನೋ ಎಂಬ ಸಾಲನ್ನು ಬೇರೆಬೇರೆ ರೀತಿಗಳಲ್ಲಿ ಓದಿಕೊಳ್ಳಲಾರಂಭಿಸುತ್ತದೆ. ಪರನಾರಿ ಸಹೋದರ ಗೋಪಿ ಎಂಬ ವಿಶೇಷಣದಲ್ಲಿಯೂ ತುಂಟತನವನ್ನೂ , ಬೆವರಿ ನೀರಾಗಿ ನೆಂದು ನೊಂದೂ ಅಡ್ಡಬಿದ್ದ..ನೋ ಎಂದೂ , ಜಾರಿಬಿದ್ದ ಎನ್ನುವಲ್ಲಿ ಮತ್ತೊಂದು ಅರ್ಥವನ್ನೂ ಹುಡುಕುತ್ತದೆ . ವೆಂಕಟಲಕ್ಷ್ಮಿಯ ನೆನಪು ಮಿದುಳು , ಗಾಂಡಲೀನ ಪಂಚೇಂದ್ರಿಯ .. ಅವರೇ ಹೇಳಿಕೊಂಡ ಪ್ರಕಾರ ಪಂಚೇಂದ್ರಿಯವೇ ಮೊದಲು .. ಪಂಚೇಂದ್ರಿಯಕ್ಕೇ ಪ್ರಾಮುಖ್ಯತೆ .. ಆದರೆ ಜಾರಿ ಬಿದ್ದ ಗಾಂಡಲೀನಾಳಿಗೆ ಎನ್ನುವಲ್ಲಿ ಗೆಲ್ಲುವುದು ಮಿದುಳೇ .. ( ವಿವೇಕ ಎಂದಿಟ್ಟುಕೊಳ್ಳೋಣ ಬೇಕಾದರೆ ) .

    ಈ ಪರನಾರಿಯನ್ನು ಗೆದ್ದ ಸಹೋದರನ ಕಥೆ ನಮ್ಮಲ್ಲೇನೂ ಹೊಸತಲ್ಲ . ಆದರೆ ಅಲ್ಲಿ ಗಾಂಡಲೀನಳನ್ನೂ , ಗೋಪಿಯನ್ನೂ ಅವರಿಬ್ಬರ ವರ್ತನೆಗಳನ್ನೂ ವರ್ಣಿಸುವ ಲಕ್ಷ್ಮಣ ರಾವ್ ನನಗೆ ಲಾರೆನ್ಸ್ ನೆನಪು ತಂದುಕೊಡುತ್ತಾರೆ . ಲಾರೆನ್ಸ್ ದೈಹಿಕ ವಿವರಗಳನ್ನು ಕಟ್ಟಿಕೊಡುವುದರಲ್ಲಿ ಅಪ್ರತಿಮ ಬರಹಗಾರ . ಉದಾಹರಣೆಗೆ ಅವನ ಸ್ನೇಕ್ ಪದ್ಯವನ್ನು ನೋಡಿ. ಅದು ಹರಿಯುವ ರೀತಿಯನ್ನು , ಅದರ ದೈಹಿಕ ಸೌಂದರ್ಯವನ್ನು ಅದೆಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾನೆ ಆತ. ಅವನೂ ಪಂಚೇಂದ್ರಿಯಗಳಿಗೇ ಮೊದಲ ಒತ್ತು ಕೊಟ್ಟವ. ಲೇಡಿ ಚಾಟರ್ಲೀಸ್ ಲವರ್ ನ ಅವಳ ಪ್ರಿಯತಮ ಸ್ನಾನ ಮಾಡುತ್ತಿರುವ ದೃಶ್ಯವನ್ನು ಅವನು ವರ್ಣಿಸುವ, ದೈಹಿಕ ಅಸಾಮರ್ಥ್ಯದ ಕಾರಣಕ್ಕೆ ಗಂಡನನ್ನು ತೊರೆದು ಗೆಳೆಯನ ಜೊತೆ ಹೋಗುವ , ಬ್ಲೈಂಡ್ ಮ್ಯಾನ್ ಕಾದಂಬರಿಯಲ್ಲಿ ಗಂಡ ಕುರುಡನಾದರೂ ದೈಹಿಕ ಸಾಮರ್ಥ್ಯ ಹೊಂದಿದವನೆಂಬ ಕಾರಣಕ್ಕೆ ಅವಳು ಪೀಚಲು ದೇಹದ ಗೆಳೆಯನನ್ನು ಬಿಟ್ಟು ಗಂಡನ ಜೊತೆಯೇ ಉಳಿಯುವ ವಿವರಗಳನ್ನು ಅವನು ಕಟ್ಟಿಕೊಡುವ ರೀತಿ ಅಸಾದೃಶ.

    ಅದು ನನಗೆ ಲಕ್ಷ್ಮಣರಾಯರ ಸಾಹಿತ್ಯದಲ್ಲೂ ಎದ್ದು ಕಾಣುತ್ತದೆ ಎಂದರೆ ಕೇಳುಗರಿಗೆ ತುಸು ಉತ್ಪ್ರೇಕ್ಷೆಯಂತೆ ಅನ್ನಿಸಬಹುದು . ಆದರೆ ಲಸ್ಟ್ ಎಂಬುದು ಈ ಇಬ್ಬರ ಸಾಹಿತ್ಯದ ಸ್ಥಾಯೀ ಭಾವವೂ ಹೌದು. ಜೊತೆಗೆ ಅವರ ಗಾಂಡಲೀನ ಗೋಪಿಯ ಜೊತೆ ನಡೆದುಕೊಳ್ಳುವ ರೀತಿಯನ್ನು ವರ್ಣಿಸುವಾಗ ಆ ವಿವರಗಳ ಶಕ್ತಿಗೆ ಓದುಗನಿಗೆ ತಾನೇ ಗೋಪಿಯಾದಂತೆ ಭಾಸವಾದರೆ ಆಶ್ಚರ್ಯವಿಲ್ಲ . ಆದರೆ ಅವರು ತಮ್ಮ ವೈನೋದಿಕ ದೃಷ್ಟಿಕೋನದ ಮೂಲಕ ಆ ವಿವರಗಳನ್ನು ಅಶ್ಲೀಲದಿಂದ ತುಂಟತನಕ್ಕೆ ತಿರುಗಿಸುತ್ತಾರೆ . ಲಕ್ಷ್ಮಣ ರಾಯರ ಕಾವ್ಯದ ಪ್ರಮುಖ ಗುಣ ಅದೇ. ಯಾರೂ ಹೇಳಲು ಹಿಂಜರಿಯುವ ವಿಷಯಗಳನ್ನು ಲೀಲಾಜಾಲವಾಗಿ ಹೇಳುತ್ತಾ ತನ್ಮೂಲಕ ಓದುಗನ ಮುಂದೊಂದು ಕನ್ನಡಿಯನ್ನು ಹಿಡಿಯುತ್ತಾರೆ . ( ಅವರೊಬ್ಬ ಒಳ್ಳೆಯ ಫೋಟೋಗ್ರಾಫರ್ ಎಂದು ಲಂಕೇಶ್ ಮುನ್ನುಡಿಯಲ್ಲಿ ಬರೆದಿದ್ದನ್ನು ಓದಿದಾಗ ನನಗೆ ಆ ಸೂಕ್ಷ್ಮ ವಿವರಗಳನ್ನು ಹೇಗೆ ಗ್ರಹಿಸುತ್ತಾರೆ ಎಂದು ಹೊಳೆಯಿತು ). .

    ಈ ಸಂಕಲವನ್ನು ಓದುವಾಗ ನನಗೆ ಎದ್ದು ಕಾಣಿಸಿದ ಮತ್ತೊಂದು ವಿಷಯವೆಂದರೆ ಅವರಿಗೆ ಆ ವಯಸ್ಸಿನಲ್ಲಿಯೇ ಸಿಕ್ಕ ಲಯಪ್ರಜ್ಞೆ, ಛಂದಸ್ಸಿನ ಹಿಡಿತ , ತಾನು ಹೊಸದೇನು ಹೇಳಬಹುದೆಂಬ ಉಳಿದವರಿಗಿಂತ ಭಿನ್ನವಾಗಿ ನಿಲ್ಲುವ ಕಲ್ಪನೆ ಇವೆಲ್ಲವೂ ಅವರಿಗೆ ಬಹಳ ಬೇಗನೆ ಸಿದ್ಧಿಸಿಬಿಟ್ಟಿತ್ತು. ಸ್ವತಃ ಹಾಡುಗಾರರಾದ ಅವರಿಗೆ ಆ ಗೇಯ ಸಹಜವಾಗಿಯೇ ಒಲಿದಿದೆ. ಅವರು ಆ ಕಾಲಕ್ಕೆ ಅತ್ಯಂತ ಆಧುನಿಕ ವಿಷಯಗಳನ್ನೇ ಬರೆದರೂ ಅವೆಲ್ಲವನ್ನೂ ಯಾವ ಛಂದಸ್ಸನ್ನೂ ಮುರಿದು ಕಟ್ಟುವ ಗೋಜಿಗೆ ಹೋಗದೆ ಇದ್ದಲ್ಲಿಯೇ ಸಾಧಿಸಿದರು. ಮುರಿದು ಕಟ್ಟಲಾಗದ ಅಸಾಮರ್ಥ್ಯವನ್ನು ಮುಚ್ಚಿಟ್ಟು ನಾವು ಮುರಿದು ಕಟ್ಟುತ್ತೇವೆ ಎಂದು ಸೋಗು ಹಾಕುವವರು ಇವರ ಪದ್ಯಗಳನ್ನು ಓದಬೇಕು.. ಅವರ ಪದ್ಯಗಳನ್ನು ಗಟ್ಟಿಯಾಗಿ ಓದಿನೋಡಿ .. ಆ ಹಿಡಿತ ತಾನೇ ತಾನಾಗಿ ಅರಿವಾಗುತ್ತದೆ.

    ದೇಹವನು ಹೀಗಳೆಯಬೇಡ ಎಂಬಂಥ ಪದ್ಯಗಳನ್ನು ಬರೆದ ಇವರು ಈ ಸಂಕಲನದ ” ನಾನು” ಎಂಬ ಪದ್ಯದಲ್ಲಿ ಹೇಳಿಕೊಂಡ ಹಾಗೆ ಆ ವ್ಯಾಸ ಬಿಟ್ಟು ಕದಲಲೇ ಇಲ್ಲ. ಹಾಗಾಗಿಯೇ ಈ ಪುಟ್ಟ ಪದ್ಯವನ್ನು ನಾನು ಅವರ ಕಾವ್ಯದ ಮ್ಯಾನಿಫೆಸ್ಟೋ ಎನ್ನುತ್ತೇನೆ . ಅನೇಕರು ಅಧ್ಯಾತ್ಮವನ್ನು ಧ್ಯಾನಿಸುತ್ತಾ , ಹುಡುಕುತ್ತಾ ಅಂಡಲೆಯುವಾಗ ಅದಕ್ಕಿಂತ ಭಿನ್ನವಾಗಿ ಇದು ಬಹಳ ಮುಖ್ಯವಾದುದು ಎಂದು ಲೌಕಿಕವನ್ನು ಕಂಡುಕೊಂಡರು.ಅಲೌಕಿಕದ ಕುರಿತು ಯಾವ ಆಸಕ್ತಿಯನ್ನೂ ತೋರದ , ಕನ್ನಡ ಕಾವ್ಯಪ್ರಪಂಚದಲ್ಲಿ ಲೌಕಿಕಕ್ಕೇ ನಿಷ್ಠರಾದ ,ಅದನ್ನು ಇಂದಿನವರೆಗೂ ಬಿಟ್ಟು ಅತ್ತಿತ್ತ ಸರಿಯದ ಕವಿ ಅವರೊಬ್ಬರೇ .. ಮತ್ತು ತನ್ನ ದಾರಿ ಇದೇ ಎಂಬುದು ಅವರ ನಂಬಿಕೆ ಕೂಡಾ . ಹಾಗೆಂದ ಮಾತ್ರಕ್ಕೆ ಅದನ್ನು ಅವರ ಕವನಗಳ ಗುಣ ಎಂದು ಪರಿಗಣಿಸಬೇಕೇ ಹೊರತು ದೋಷವೆಂದಲ್ಲ .

    ಜೀವಮಾನವಿಡೀ ಹೆಣ್ಣಿನ ಬಗ್ಗೆ ಯೋಚಿಸಿದವರು, ಅವಳ ಬಗ್ಗೆ ಪದ್ಯ ಬರೆದವರು ಕನ್ನಡದ ಮಟ್ಟಿಗೆ ಕೆ ಎಸ್ ನ.. ಅಕ್ಕಿಯಾರಿಸುವಾಗ ಚಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು, ಕರಿಮಣಿ ತುಂಬಿದ ಕೊರಳನ್ನು ಕಂಡವರು ಅವರು. ಅವರ ಪದ್ಯಗಳಲ್ಲಿ ಹೆಣ್ಣಿನ ಕುರಿತಲ್ಲದ್ದು ಎಣಿಸಬಹುದಾದಷ್ಟು ಮಾತ್ರ. ಮನೆಯಲ್ಲಿ ಹೆಂಡತಿಯನ್ನು ದೂರವಿಡುವವರೂ , ಹೆಣ್ಣನ್ನು ಎಂದೂ ಆರಾಧಿಸದವರೂ ಒಮ್ಮೆ ತಲೆದೂಗಿ ಆಹಾ ಎನ್ನುವಂತೆ, ಪದ್ಯವನ್ನು ಗುನುಗುವಂತೆ ಭಾವಸಾಮ್ರಾಜ್ಯ ಕಟ್ಟಿಕೊಟ್ಟವರು ಅವರು. ಅದಕ್ಕಿಂತ ಭಿನ್ನವಾಗಿ ಅವರ ಸಮಕಾಲೀನ ಕಿರಿಯ ಕವಿಯಾಗಿ ಹೆಣ್ಣನ್ನು ಇನ್ನೊಂದು ದೃಷ್ಟಿಕೋನದಿಂದ ಧ್ಯಾನಿಸಿದವರು ಲಕ್ಷ್ಮಣ ರಾವ್ .

    ಯಾವ ಯಾವ ಸಂಗತಿಗಳನ್ನು ಹೇಳಲು ಕವಿಗಳು ಹಿಂಜರಿದಿದ್ದರೋ , ಹೇಳಲು ಮನ ಮಾಡಿರಲಿಲ್ಲವೋ ಅಲ್ಲಿಯವರೆಗೂ ಇದ್ದ ಮಡಿವಂತಿಕೆಯನ್ನು ಮೀರಿ, ಯಾರೂ ಹೇಳದ ಸೂಕ್ಷ್ಮಗಳನ್ನು ಬರೆಯುತ್ತಾ ಹೋದರು. ಅಲ್ಲಿಯವರೆಗೂ ಇದ್ದ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಅಡಿಗರು, ಜೊತೆಗಿದ್ದವಳು ಕೋಟಿ ರುಪಾಯಿಗೆ ಸರಿಸಮಾನಳು ಎಂದು ಹಾಡಿದ ಕೆ ಎಸ್ ನ ಇವರೆಲ್ಲರಿಗಿಂತ ಭಿನ್ನವಾಗಿ ಬರೆದರು. . ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅಡಿಗರಂಥಾ ಕವಿಗಳೂ ಅವರನ್ನು ಮೆಚ್ಚುಗೆಯಿಂದ ನೋಡುವಂತೆ ತಮ್ಮ ರೀತಿಯಲ್ಲೇ ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಬರೆದವರು ಬಿ ಆರ್ ಎಲ್ . ಆ ಮೆಚ್ಚುಗೆ ಭಾವಕ್ಕೆ? ಭಾಷೆಗೆ? ಆ ವಯಸ್ಸಿನ ಕಸುವಿಗೆ? ದಿಟ್ಟ ಅಕ್ಷರಗಳಿಗೆ? .ಸ್ವಂತಿಕೆಗೆ? … ಈ ಎಲ್ಲಕ್ಕೂ !!!!

    ನಾವು ಒಮ್ಮೆ ಕಾವ್ಯಕೇಳಿ ಗುಂಪಿನಲ್ಲಿ ಲಕ್ಷ್ಮಣರಾಯರ ಕವನಗಳ ಬಗ್ಗೆ ಚರ್ಚಿಸುವಾಗ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರು ಹೇಳಿದ ಈ ಮಾತುಗಳನ್ನು ಬೇಷರತ್ತಾಗಿ ಒಪ್ಪುತ್ತೇನೆ .

    ” ಅರುವತ್ತು ಎಪ್ಪತ್ತರ ದಶಕದಲ್ಲಿ ನಾವು ಯುವಕವಿಗಳೆಲ್ಲಾ ಅಡಿಗರ ಪ್ರಭಾವದಿಂದ ಹೊರಬರಲು ತಡಕಾಡುತ್ತಿದ್ದರೆ ಗೆಳೆಯ ಲಕ್ಷ್ಮಣ ತಮ್ಮ ಕ್ಯಾಟ್ ಕಾಲ್ ಮಾದರಿಯ ಬಿಸಿ ಕವಿತೆಗಳ ಮೂಲಕ ಅಡಿಗರ ಮಾದರಿಗಿಂತ ಭಿನ್ನವಾಗಿ ಬರೆಯಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು.ಹಾಡುಗಳನ್ನು ಬರೆಯುವುದೇ ಅಪರಾಧ ಎನ್ನುವ ಭಾವ ಆಗ ಚಾಲ್ತಿಯಲ್ಲಿದ್ದಾಗ ಚೆಲುವಾದ ಹಾಡುಗಳನ್ನು ಬರೆದು ನನ್ನಂಥವರ ಹಿಂಜರಿಕೆಯನ್ನೂ ಹೋಗಲಾಡಿಸಿದರು.ಅವರ ಪ್ರೀತಿಯ ನವಿರು ಸ್ಪರ್ಷದ,ತಮಾಷೆಯ,ಒಂಚುರು ಪೋಲಿ ಎನಿಸುವ ತುಂಟತನದ ಲಯಬದ್ಧ ಮಾದಕ ಸಾಲುಗಳು ಯುವ ಪೀಳಿಗೆಯಲ್ಲಿ ರೋಮಾಂಚನ ಉಂಟುಮಾಡಿದವು.ಲಕ್ಷ್ಮಣರ ಕಾವ್ಯನಾಯಕ ಗೋಪಿ ವರ್ತಮಾನದ ಬದುಕಿನ ಇಕ್ಕಟ್ಟಿನಲ್ಲೇ ದಾರಿ ಮಾಡಿಕೊಂಡು ಬದುಕನ್ನು ಪೂರ್ಣವಾಗಿ ಅನುಭವಿಸುವ ಹಂಬಲದವನು.ಅವನು ಅಡಿಗ ಅಥವಾ ಇತರ ಕವಿಗಳಂತೆಇರದುದರೆಡೆಗೆ ತುಡಿಯದೆ,ಇರುವ ಬದುಕನ್ನೇ ತನ್ನ ಸಾಧ್ಯ ವಿಶಾಲ ತೋಳುಗಳಲ್ಲಿ ಬಾಚಿಕೊಳ್ಳಲು ಹಂಬಲಿಸುವವನು.ಲಕ್ಷ್ಮಣರಿಗೆ ತತ್ವ ,ಸಿದ್ಧಾಂತಗಳ ಹಂಗಿಲ್ಲ.ಹುಸಿ ಅಧ್ಯಾತ್ಮದ ಮುಗಿಲ ಮಲ್ಲಿಗೆಯತ್ತ ಅವರು ಮೂಗೆತ್ತರಿಸಲೂ ಇಲ್ಲ. “ನಾನು ಕ್ರಮವಾಗಿ,ಪಂಚೇಂದ್ರಿಯ,ಹೃದಯ,ಮಿದುಳುಗಳ ದಾಸ.ದೇಹವನು ಹೀಗಳೆಯಬೇಡ”ಎಂದು ಘೋಷಿಸಿಕೊಂಡವರು.ಗೋಪಿ ಬೇರಲ್ಲ,ಲಕ್ಷ್ಮಣ ಬೇರಲ್ಲ.ವ್ಯಕ್ತಿ ಹಾಗೂ ಕಾವ್ಯ ಎರಡೂ ಒಂದೇ ಎನ್ನುವ ನಿಲುವಿನಲ್ಲಿ ಬರೆದವರು;ಬದುಕಿದವರು.”

    ಕೊನೆಗೂ ನರಹಳ್ಳಿಯವರು ಹೇಳಿದಂತೆ ಲಕ್ಷ್ಮಣರ ಕಾವ್ಯ ಬೇಂದ್ರೆ ಕಾವ್ಯದಂತೆ ಅಮೃತಕ್ಕೆ ಹಾರುವ ಗರುಡ ಅಲ್ಲ.ಬದಲಾಗಿ ಮನೆಗಳಲ್ಲಿ ಎಡೆಯನ್ನು ಸ್ವೀಕರಿಸುವ ಮುದ್ದು ಗುಬ್ಬಚ್ಚಿ..
    ಅವರ ಕಾವ್ಯಕೃಷಿ ಮುಂದುವರಿಯಲಿ… ಐವತ್ತು ತುಂಬಿದ ” ಗೋಪಿ ಮತ್ತು ಗಾಂಡಲೀನ ” ಶತಕ ಹೊಡೆದಾಗಲೂ ಇಷ್ಟೇ ಜನಪ್ರಿಯವಾಗಿರುತ್ತದೆ ಎಂಬ ಆಶಯ .. ಶುಭಾಶಯ

    ಮಾಲಿನಿ ಗುರುಪ್ರಸನ್ನ
    ಮಾಲಿನಿ ಗುರುಪ್ರಸನ್ನ
    ಪಂಪನಿಂದ ಇತ್ತೀಚಿನವರೆಗೂ ಇರುವ ಕಾವ್ಯಗಳನ್ನು ಸಾಹಿತ್ಯ ಪ್ರಕಾರಗಳನ್ನೂ ಓದುವ ಹುಚ್ಚಿರುವ, ಬೇಂದ್ರೆಯವರ ನಾದವೈಭವಕ್ಕೆ ಮನಸೋಲುವ , ಅಡಿಗರೆಂಬ ಕೈದೀಪದ ಬೆಳಕಲ್ಲಿ ಹಾದಿ ಸವೆಸುತ್ತಿರುವ, ನರಸಿಂಹಸ್ವಾಮಿಯವರನ್ನು ಮನೆದೇವರನ್ನಾಗಿಸಿಕೊಂಡ ಕುಮಾರವ್ಯಾಸನ ಮಗಳು ಎಂದು ತಮ್ಮನ್ನು ಕರೆದುಕೊಳ್ಳುವ ಮಾಲಿನಿ ಗುರುಪ್ರಸನ್ನ ಕನ್ನಡದ ಸಾಹಿತ್ಯದ ವಸ್ತು ನಿಷ್ಠ ವಿಮರ್ಶಕಿ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!