29.2 C
Karnataka
Friday, May 22, 2026
    Home Blog Page 55

    ಎನ್.ಇ.ಪಿ ಬಗ್ಗೆ ಮುಕ್ತವಾಗಿ ಚರ್ಚಿಸಲು ಸರ್ಕಾರ ಸಿದ್ಧ ಎಂದ ಸಿಎಂ

    BENGALURU SEP 15

    ಎನ್.ಇ.ಪಿ ( ನ್ಯೂ ಎಜುಕೇಶನ್ ಪಾಲಿಸಿ) ಬಗ್ಗೆ ಮುಕ್ತವಾಗಿ ಚರ್ಚಿಸಲು ಸರ್ಕಾರ ಸಿದ್ಧವಿದ್ದು, ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಬಿ.ಬಿ.ಎಂ.ಪಿ ಆಯೋಜಿಸಿದ್ದ ಭಾರತದ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ 161 ನೇ ಜಯಂತಿ ಅಂಗವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ನೆರವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

    ಇಂದಿನ ಕಾಲಕ್ಕೆ ತಕ್ಕ ಹಾಗೆ ಪ್ರಸ್ತುತವಾಗುವಂತೆ, ಯುವಕರಿಗೆ ಉತ್ತಮ ಭವಿಷ್ಯ ನೀಡುವಂತೆ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಸದುದ್ದೇಶವಿದೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗುವುದು.
    ಮತ್ತು ಪ್ರೌಢಶಿಕ್ಷಣದ ಬಗ್ಗೆ ಸಮಿತಿ ರಚಿಸಿ ಅನುಷ್ಠಾನದ ಬಗ್ಗೆ ತೀರ್ಮಾನಿಸಲಾಗುವುದು. ಯಾರೂ ಕೂಡ ಆತಂಕ ಪಡುವ ಅಗತ್ಯ ಇಲ್ಲ ಎಂದು ಅವರು ಹೇಳಿದರು.

    ವಿಧಾನಸಭೆ ಅಧಿವೇಶನ ನೇರ ಪ್ರಸಾರ

    BENGALURU SEP 15

    ವಿಧಾನಸಭೆ ಅಧಿವೇಶನದ ಮೂರನೇ ದಿನದ ಕಾರ್ಯ ಕಲಾಪಗಳು ಆರಂಭವಾಗಿದ್ದು ಅದರ ನೇರ ಪ್ರಸಾರದ ಲಿಂಕ್ ಇಲ್ಲಿದೆ.

    ಐ.ಟಿ.ಐ.ಗೆ 6 ಹೊಸ ಸಂಯೋಜನೆ ಸೇರ್ಪಡೆ

    ಟಾಟಾ ಕಂಪನಿಯ ಸಹಯೋಗದಲ್ಲಿ ರಾಜ್ಯದ 150 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸುವ ಕಾರ್ಯಕ್ರಮದಡಿ ಈಗಿನ ಬೇಡಿಕೆಗಳನ್ನು ಗಮನದಲ್ಲಿರಿಸಿಕೊಂಡು 6 ಹೊಸ ಕೋರ್ಸ್ ಗಳಿಗೆ ರಾಜ್ಯ ವೃತ್ತಿಶಿಕ್ಷಣ ಪರಿಷತ್ (ಎಸ್.ವಿ.ಸಿ.ಟಿ.) ಅನುಮೋದನೆ ನೀಡಿದೆ.

    ಉನ್ನತ ಶಿಕ್ಷಣ ಸಚಿವ ಹಾಗೂ ಕೌಶಾಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯಗಳ ಇಲಾಖೆ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಈ ನಿರ್ಣಯವು ಎಲ್ಲಾ 150 ಐ.ಟಿ.ಐ.ಗಳಿಗೆ ಅನ್ವಯವಾಗುತ್ತದೆ. ಈ ಸಾಲಿನಿಂದಲೇ ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

    ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (2 ವರ್ಷ), ಬೇಸಿಕ್ಸ್ ಆಫ್ ಡಿಜೈನ್ ಅಂಡ್ ವರ್ಚ್ಯುಯಲ್ ವೆರಿಫಿಕೇಷನ್ (2 ವರ್ಷ), ಅಡ್ವಾನ್ಸ್ಡ್ ಮ್ಯಾನಫ್ಯಾಕ್ಚರಿಂಗ್ (1 ವರ್ಷ), ಆರ್ಟಿಸಾನ್ ಯೂಸಿಂಗ್ ಅಡ್ವಾನ್ಸ್ಡ್ ಟೂಲ್ಸ್ (1 ವರ್ಷ), ಇಂಡಸ್ಟ್ರಿಯಲ್ ರೊಬೊಟಿಕ್ಸ್ ಅಂಡ್ ಡಿಜಿಟಲ್ ಮ್ಯಾನಫ್ಯಾಕ್ಚರ್ (1 ವರ್ಷ), ಮ್ಯಾನಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಆಟೊಮೇಷನ್ (1 ವರ್ಷ), ಈ 6 ಸಂಯೋಜನೆಗಳು ಐ.ಟಿ.ಐ.ಗೆ ಸೇರ್ಪಡೆಯಾಗುತ್ತವೆ ಎಂದು ಸಚಿವರು ವಿವರಿಸಿದರು.

    ಅಂತಿಮವಾಗಿ ಈ ಸಂಯೋಜನೆಗಳಿಗೆ ರಾಷ್ಟ್ರೀಯ ವೃತ್ತಿಶಿಕ್ಷಣ ತರಬೇತಿ ಪರಿಷತ್ (ಎನ್.ಸಿ.ವಿ.ಇ.ಟಿ.) ಮಾನ್ಯತೆ ಕೊಡಬೇಕು. ಅದಕ್ಕೆ ಪೂರಕವಾಗಿ ಈ 6 ಸಂಯೋಜನೆಗಳಿಗಾಗಿ ಸಿದ್ಧಪಡಿಸಲಾಗಿರುವ ಪಠ್ಯಕ್ರಮಕ್ಕೆ ನವದೆಹಲಿಯ ತರಬೇತಿ ಮಹಾನಿರ್ದೇಶನಾಲಯದಿಂದ (ಡಿ.ಜಿ.ಟಿ.) ಅನುಮೋದನೆ ಪಡೆಯಬೇಕಾಗಿರುತ್ತದೆ. ಈಗ ರಾಜ್ಯ ಸರ್ಕಾರವು ಈ ಸಂಯೋಜನೆಗಳ ಪಠ್ಯಕ್ರಮವನ್ನು ಡಿ.ಜಿ.ಟಿ.ಗೆ ಸಲ್ಲಿಸಿದ್ದು, ಅದು ಪ್ರಕ್ರಿಯೆಯಲ್ಲಿದೆ. ಆದರೆ, ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಎನ್.ಸಿ.ವಿ.ಇ,ಟಿ.ಯಿಂದ ಈ 6 ಸಂಯೋಜನೆಗಳಿಗೆ ಮಾನ್ಯತೆ ಪಡೆಯುವ ಷರತ್ತಿಗೊಳಪಟ್ಟು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದೂ ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ.

    ಇದೇ ಸಭೆಯಲ್ಲಿ, 3 ತಿಂಗಳ ಅವಧಿಯ 23 ಅಲ್ಪಾವಧಿ ಸರ್ಟಿಫೈಡ್ಝ ಕೋರ್ಸ್ ಗಳಿಗೆ  ಕೂಡ ಎಸ್.ವಿ.ಸಿ.ಟಿ.ಯು ಅನುಮೋದನೆ ನೀಡಿದೆ ಎಂದು ಸಚಿವರು ಹೇಳಿದ್ದಾರೆ.

    ಕೌಶಲಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತ ಡಾ.ಹರೀಶ್ ಕುಮಾರ್ ಕೆ. ಮತ್ತಿತರರು ಇದ್ದರು

    ಹರಿದಾಸ ಪರಂಪರೆಯ ಕೊನೆಯ ಕೊಂಡಿ ಜಗನ್ನಾಥದಾಸರು


    ಇಂದು ಭಾದ್ರಪದ ಶುದ್ಧ ನವಮಿ ಬುಧವಾರ. ಪರಮಪೂಜ್ಯ ಜಗನ್ನಾಥದಾಸರ ಆರಾಧನೆ. ತನ್ನಿಮ್ಮಿತ್ತ ಆ ಮಹನೀಯರ ಬಗ್ಗೆ ಈ ಲೇಖನ.


    ಹೇಮ ಶ್ರೀಧರಾಚಾರ್

    ಶ್ರೀಮಧ್ವಾಚಾರ್ಯರು ವೇದೋಪನಿಷತ್ತುಗಳು ಭಗವದ್ಗೀತೆ ಬ್ರಹ್ಮಸೂತ್ರಗಳು ಮೊದಲಾದ ಸಕಲ ಮೂಲ ಗ್ರಂಥಗಳ ಭಾವವನ್ನು ಹಾಗೂ ಅವರು ಪ್ರತಿಪಾದಿಸಿದ ಗ್ರಂಥರಾಶಿಗಳು ಸರ್ವಮೂಲ ಎಂಬುದಾಗಿ ಮಾನ್ಯವಾಗಿದೆ. ಅದರ ಭಾವವನ್ನು ಶ್ರೀ ಜಯತೀರ್ಥರು ಮೊದಲಾದವರು ತಮ್ಮ ಟೀಕಾ ಗ್ರಂಥಗಳಲ್ಲಿ ಅನುಪಮ ಟೀಕೆಗಳನ್ನು ರಚಿಸಿದ್ದಾರೆ. ತದನಂತರ ಶ್ರೀ ವ್ಯಾಸರಾಜ ತೀರ್ಥರು ಶ್ರೀ ವಾದಿರಾಜ ತೀರ್ಥರು ಶ್ರಿ ರಘುತ್ತಮ ತಿರ್ಥರು ಶ್ರೀರಾಘವೇಂದ್ರತೀರ್ಥರು ಮೊದಲಾದವರಿಂದ ಸಾಹಿತ್ಯ ಅಪಾರವಾಗಿ ಬೆಳೆಯಿತು. ಸ್ವಮತ ಸ್ಥಾಪನೆ ಮತ್ತು ಪರಮತ ವಿಮರ್ಶೆಗಳ ಪರಿಜ್ಞಾನಕ್ಕೆ ಈ ವ್ಯಾಸ ಸಾಹಿತ್ಯದ ಅಧ್ಯಯನ ‌ ಅನಿವಾರ್ಯವಾಗಿದೆ. ಆದರೆ ಭಾಷೆ ಮತ್ತು ಅಲ್ಪಮತಿಯಿಂದ ಎಲ್ಲರಿಗೂ ದಾಸಸಾಹಿತ್ಯ ಸುಲಭವಾಗಿ ಅರ್ಥವಾಗುವುದಿಲ್ಲ. ಆದಕಾರಣ ಶ್ರೀ ಸಾಮಾನ್ಯರಾದ ಜಿಜ್ಞಾಸುಗಳಿಗೆ ಅರ್ಥವಾಗುವಂತೆ ಬೆಳಕಿಗೆ ಬಂದಿದ್ದೇ ದಾಸ ಸಾಹಿತ್ಯ.

    ಈ ದಾಸ ಸಾಹಿತ್ಯವೆಲ್ಲ ವ್ಯಾಸ ಸಾಹಿತ್ಯದ ಕನ್ನಡೀಕರಣ ವೇ ಆಗಿದೆ. ನಿತ್ಯ ಜೀವನದಲ್ಲಿ ಇದನ್ನು ಅಳವಡಿಸಿಕೊಂಡು ನಾವುಗಳು ಮುಕ್ತಿ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಇದರ ಮಹತ್ವವನ್ನು ಗುರುತಿಸಿ ಕನ್ನಡ ಭಾಷೆಯಲ್ಲಿ ಮಧ್ವ ಸಿದ್ಧಾಂತದ ಪ್ರಚಾರಕ್ಕೆ ಚಾಲನೆ ಇತ್ತವರು ಆನಂದತೀರ್ಥರ ಸಾಕ್ಷಾತ್ ಶಿಷ್ಯರಾದ ಶ್ರೀ ನರಹರಿ ತೀರ್ಥರು. ಅವರು ಆರಂಭಿಸಿದ ದಾಸಸಾಹಿತ್ಯ ಶ್ರೀಪಾದರಾಜರ ಕಾಲದಲ್ಲಿ ವ್ಯಾಪಕವಾಗಿ ಬೆಳೆಯಿತು. ಅವರ ಶಿಷ್ಯರಾದ ವ್ಯಾಸರಾಯರಂತೂ ಕನ್ನಡ ಕೃತಿಗಳ ಜೊತೆಗೆ ಹರಿದಾಸ ಪಂಥವನ್ನು ನಿರ್ಮಿಸಿ ಪುರಂದರದಾಸರನ್ನು ಅದರ ಅಧ್ಯಕ್ಷರನ್ನಾಗಿಸಿದರು. ಪುರಂದರದಾಸರಿಂದ ಮುಂದುವರೆದ ದಾಸಸಾಹಿತ್ಯದ ಬೆಳಕಿನಲ್ಲಿ ದಾಸ ಚತುಷ್ಟಯರೆಂದರೆ ಬೆಳಕಿಗೆ ಬಂದವರು ಪುರಂದರದಾಸರು ವಿಜಯದಾಸರು ಗೋಪಾಲದಾಸರು ಜಗನ್ನಾಥದಾಸರು. ಶ್ರೀವಿಜಯದಾಸರು ಮತ್ತು ಗೋಪಾಲದಾಸರ ಕರುಣೆಯ ಕೂಸೇ ಶ್ರೀ ಜಗನ್ನಾಥದಾಸರು.

    ಶ್ರೀ ಜಗನ್ನಾಥದಾಸರು ಪ್ರಸಿದ್ಧ ಹರಿದಾಸರಲ್ಲಿ ಕೊನೆಯವರು. ಕರ್ನಾಟಕದ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬ್ಯಾಗವಾಟ ಎಂಬ ಗ್ರಾಮ ಇವರ ಜನ್ಮಸ್ಥಳ. ತಂದೆ ನರಸಿಂಹದಾಸರು ಎಂದು ಪ್ರಸಿದ್ಧರಾದ ನರಸಪ್ಪ. ತಾಯಿ ಲಕ್ಷಮ್ಮ ಗೋತ್ರ ಹರಿತಸ . ಯಜುರ್ವೇದ ಶಾಖೆಯ ಮನೆತನ. ಬಹುಕಾಲ ತಿರುಪತಿಯ ಶ್ರೀನಿವಾಸನನ್ನು ಸೇವಿಸಿದ ಫಲವಾಗಿ ಜನಿಸಿದ ಇವರಿಗೆ ತಂದೆ-ತಾಯಿಗಳು ಇಟ್ಟ ಹೆಸರು ಶ್ರೀನಿವಾಸ. ಶ್ರೀನಿವಾಸ ಆಶುಕವಿಯೂ ಆಗಿದ್ದ. ಯೌವನದಲ್ಲಿ ವಿವಿಧ ಶಾಸ್ತ್ರಗಳಲ್ಲಿ ಪಾಂಡಿತ್ಯ ಗಳಿಸಿ ಶ್ರೀನಿವಾಸಾಚಾರ್ಯರಾದರು.

    ಶ್ರೀ ರಾಘವೇಂದ್ರ ಮಠದ ಪರಂಪರೆಗೆ ಸೇರಿದ ವರದೇಂದ್ರ ತೀರ್ಥರು ಇವರ ವಿದ್ಯಾಗುರುಗಳು. ಆಗ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಬೋಧ ತೀರ್ಥರಿಗೂ ತುಂಬಾ ಪ್ರಿಯರಾಗಿದ್ದರು. ತುಂಬು ತಾರುಣ್ಯದಲ್ಲಿ ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ. ಕನ್ನಡ ಸಾಹಿತ್ಯವೆಂದರೆ ಇವರಿಗೆ ಅಷ್ಟು ಸೇರುತ್ತಿರಲಿಲ್ಲ. ಆ ಪಾಂಡಿತ್ಯದ ಬೆಳಕಿನಲ್ಲಿ ಇದ್ದ ಇವರಿಗೆ ಪ್ರಾರಬ್ಧವಶಾತ್ ಶ್ರೀ ವಿಜಯದಾಸರಿಗೆ ಮಾಡಿದ ಅಪಚಾರದ ಫಲವಾಗಿ ಭಯಂಕರ ಉದರಶೂಲೆ ಉಂಟಾಯಿತು. ಸ್ವೋತ್ತಮರಿಗೆ ಅಪಚಾರ ಮಾಡಿದ ಫಲವಾಗಿ ಭಯಂಕರವಾಗಿ ವ್ಯಾಧಿ ಉಲ್ಬಣಿಸಿತು. ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ನಿರಂತರ ಸೇವೆ ಮಾಡಿದ ಇವರಿಗೆ ರಾಯರು ಸ್ವಪ್ನದಲ್ಲಿ ಬಂದು ನಿನ್ನಿಂದ ಸ್ವೊತ್ತಮರ ದ್ರೋಹ ಆಗಿದೆ. ಅದರ ಫಲವಾಗಿ ನಿನಗೆ ಈ ರೋಗ ಬಂದಿದೆ. ನೀನು ಅವರನ್ನೇ ಶರಣು ಹೋಗಬೇಕು. ಅದು ಬಿಟ್ಟು ಬೇರೆ ಯಾವ ಮಾರ್ಗವೂ ಇಲ್ಲ ಎಂದು ಸೂಚಿಸಿದಾಗ ವಿಜಯರಾಯರ ಕ್ಷಮಾಯಾಚನೆ ಮಾಡಿದರು. ಅಲ್ಪಾಯುಷ್ಯರಾದ ಇವರಿಗೆ ವಿಜಯರಾಯರು ಅವರ ಶಿಷ್ಯರಾದ ಶ್ರೀ ಗೋಪಾಲದಾಸರಿಂದ 40ವರ್ಷ ಆಯುರ್ ದಾನ ಮಾಡಿಸಿದರು. ಅವರು ನೀಡಿದ ಅರ್ಧಾಯುಷ್ಯ ದಿಂದ ಪೂರ್ಣ ಆಯುಸ್ಸು ಪ್ರಾಪ್ತಿಯಾಯಿತು.

    ಮುಂದೆ ತಾವು ಹರಿದಾಸರಾಗುವ ಬಯಕೆ ಹೊಂದಿ ಗುರುಗಳ ಆದೇಶದಂತೆ ಪಂಡರಾಪುರಕ್ಕೆ ಪ್ರಯಾಣ ಮಾಡಿ ಅಲ್ಲಿ ಚಂದ್ರಭಾಗ ನದಿಯಲ್ಲಿ ಮೀಯುವಾಗ ಜಗನ್ನಾಥ ವಿಠ್ಠಲ ಎಂಬ ಅಂಕಿತ ಪ್ರಾಪ್ತಿಯಾಯಿತು. ಅಂದಿನಿಂದ ಜಗನ್ನಾಥದಾಸರು ಎಂದೇ ಖ್ಯಾತಿಯಾದರು. ಮುಂದಿನ ಜೀವನವೆಲ್ಲ ಪಾಠ-ಪ್ರವಚನ ಕೃತಿರಚನೆ ತೀರ್ಥಯಾತ್ರೆ ಅರ್ತ ಜನರ ಉದ್ದಾರದ ಮೂಲಕ ತತ್ವ ಪ್ರಸಾರಕ್ಕೆ ಜೀವನವನ್ನು ಮುಡಿಪಾಗಿಟ್ಟರು. ರಂಗೋಲಿಯಲ್ಲಿ ಚಿತ್ರ ರಚಿಸುವ ಕೌಶಲದಿಂದ ರಂಗನನ್ನು ಒಲಿಸಿಕೊಂಡು ರಂಗೋಲಿ ದಾಸರೆಂದು ಪ್ರಸಿದ್ಧಿ ಪಡೆದರು. ಇವರ ಸಮಕಾಲೀನರನ್ನು ನೋಡಿದರೆ ಇವರ ಜೀವನ ಎಷ್ಟು ಮಹತ್ವದಿಂದ ಕೂಡಿದೆ ಎಂದು ಅರ್ಥವಾಗುತ್ತದೆ.

    ಉತ್ತರಾದಿ ಮಠದ ಶ್ರೀ ಸತ್ಯಬೋಧ ತೀರ್ಥರು ಶ್ರೀಸತ್ಯಸಂಧತೀರ್ಥರು ಶ್ರೀ ಸತ್ಯವರ ತಿರ್ಥರು ಮತ್ತು ಶ್ರೀ ಸತ್ಯಧರ್ಮ ತೀರ್ಥರು ಶ್ರೀ ರಾಘವೇಂದ್ರ ಮಠದ ಶ್ರೀ ವರದೇಂದ್ರ ತೀರ್ಥರು ವಾಸುದೇವ ವಿಠಲಾಂಕಿತ ಶ್ರೀ ವ್ಯಾಸ ತತ್ವಜ್ಞ ತೀರ್ಥರು ಭಾಗವತ ಸಾರೋದ್ಧಾರ ರಚಿಸಿದ ಶ್ರೀ ಮಾದನೂರು ವಿಷ್ಣುತೀರ್ಥರು ಮೊದಲಾದ ಸಮಕಾಲಿಕ ಮಹನೀಯರ ಪ್ರೀತಿ ಮತ್ತು ಆದರಗಳಿಗೆ ಪಾತ್ರರಾದ ದಿವ್ಯಜೀವನ ಇವರದು. ತಿಮ್ಮಣ್ಣ ದಾಸರು ಮತ್ತು ದಾಮೋದರ ದಾಸರು ಎಂಬ ಪುತ್ರರು ಇವರಿಗೆ ಇದ್ದು ಅವರಿಬ್ಬರೂ ತಾರುಣ್ಯದಲ್ಲಿಯೇ ವಿಧಿವಶರಾದರು ಎಂದು ಪ್ರತೀತಿ. ಮಾನವಿ ಯಲ್ಲಿನ ದಾಸರ ಗೃಹವೇ ಇಂದಿನ ದಾಸರ ಗುಡಿ.

    ಮಹಿಮೆಗಳು:ಒಬ್ಬ ಬಡ ಬ್ರಾಹ್ಮಣ ನಿತ್ಯ ಇವರನ್ನು ಸೇವಿಸುತ್ತಿದ್ದನು ಆದರೆ ಅವನು ಹಿಂದಿನ ಜನ್ಮದಲ್ಲಿ ಏನೂ ದಾನ ಮಾಡದ ಫಲವಾಗಿ ದರಿದ್ರನಾಗಿ ಜನಿಸಿದನು. ಇದನ್ನು ಅರಿತ ದಾಸರು ಅವನಲ್ಲಿದ್ದ ಒಂದು ತಂಬಿಗೆಯಲ್ಲಿ ಭಗವಂತನಿಗೆ ಪಾನಕ ಸಮರ್ಪಣೆ ಮಾಡಿಸಿ ಆ ತಂಬಿಗೆಯನ್ನು ದಾನವಾಗಿ ಕೊಡಿಸಿದರು. ದುರಿತವನ ಕುಠಾರಿ ದುರ್ಜನ ಕುಲವೈರಿ ಎಂಬ ನರಸಿಂಹ ಸುಳಾದಿ ಯನ್ನು ರಚಿಸಿ ಅದರ ಪಾರಾಯಣ ಮಾಡಿಸಿ ಅವನನ್ನು ಶ್ರೀಮಂತನನ್ನಾಗಿಸಿದರು. ಉಡುಪಿಯಲ್ಲಿ ಮೂಕನಿಗೆ ಮಾತು ಬರಿಸಿ ಅದನ್ನು ಪರೀಕ್ಷಿಸಲು ಯತ್ನಿಸಿದ ವಾಗ್ಮಿಯನ್ನು ಮೂಕನನ್ನಾಗಿಸಿದರು. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ನೇರ ಸಂಭಾಷಣೆಯ ಭಾಗ್ಯವನ್ನು ಹೊಂದಿದ್ದರು. ರಾಯರು ಪ್ರಹಲ್ಲಾದ ರಾಜ ರಾಗಿದ್ದಾಗ ಇವರು ಅವರ ತಮ್ಮನಾಗಿದ್ದರು.

    ಕೃತಿಗಳು :ಹರಿಕಥಾಮೃತಸಾರ ನೂರಾರು ತತ್ವಸುವ್ವಾಲಿ ಗಳು ಇನ್ನೂರಕ್ಕೂ ಹೆಚ್ಚು ಕೀರ್ತನೆಗಳು ಉಗಾಭೋಗಗಳು ನೂರಾರು ಸುಳಾದಿಗಳು ಶ್ರೀಪಾದರಾಜ ಮಧ್ವನಾಮ ಹಾಗೂ ವರದೇಂದ್ರ ತೀರ್ಥ ವಿರಚಿತ ಕನ್ನಡ ತಂತ್ರಸಾರಗಳಿಗೆ ಫಲಶೃತಿಯನ್ನು ರಚಿಸಿದ್ದಾರೆ. ನಾವು ಹೇಗೆ ಜೀವಿಸಬೇಕೆಂಬ ವಿಷಯವನ್ನು ಫಲವಿದು ಬಾಳ್ದುದಕೆ ಎಂಬ ಪದದಲ್ಲಿ ತಿಳಿಸಿದ್ದಾರೆ ಇದನ್ನು ಅಣು ಹರಿಕಥಾಮೃತಸಾರ ಎಂದು ಕೂಡ ಕರೆಯಲಾಗುತ್ತದೆ.

    ಹರಿಕಥಾಮೃತಸಾರ :ಶ್ರೀಹರಿಕಥಾಮೃತಸಾರ ಇವರ ಮೇರುಕೃತಿ ಆಗಿದೆ ಇದು ಅಣು ಸುಧಾ ಎಂದೇ ಪ್ರಸಿದ್ಧವಾಗಿದೆ. ಇದು ಭಾಮಿನಿ ಷಟ್ಪದಿಯ ಕೃತಿ. ಇದರಲ್ಲಿ 32 ಸಂದಿಗಳು 986 ಪದ್ಯಗಳು ಇದೆ. ಹರಿಕಥಾಮೃತಸಾರ ಎಂಬ ಹೆಸರೇ ಸೂಚಿಸುವಂತೆ ಇದು ಭಗವಂತನಾದ ಶ್ರೀಹರಿಯ ಅನಂತ ಕಲ್ಯಾಣ ಗುಣಗಳು, ಗುಣ ಪೂರ್ಣತ್ವ, ಸಕಲ ದೋಷದೂರ ತ್ವ ಪ್ರಧಾನವಾಗಿ ನಿರೂಪಿಸುತ್ತಾ ಅದರ ಅಂಗವಾಗಿ ಜಗತ್ ಸತ್ವ ಪಂಚಭೇದ ದೇವರ ತಾರತಮ್ಯ ಮೋಕ್ಷ ಸಾಧನೆಗಳ ವಿವರ ಉಪಾಸನೆಯ ರೀತಿ ಭಕ್ತಿಯ ಮಹತ್ವ ಮೊದಲಾದ ತತ್ವಗಳನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ.

    ಐದು ಪದ್ಯಗಳ ಅನುಕ್ರಮಣಿಕ ತಾರತಮ್ಯ ಸಂಧಿ ಅತಿ ಚಿಕ್ಕ ಸಂಧಿಯಾದರೆ 63 ಪದ್ಯಗಳ ಕಲ್ಪ ಸಾಧನ ಸಂಧಿ ಅತಿ ದೊಡ್ಡ ಸಂಧಿ ಆಗಿದೆ. ಪ್ರತಿ ಪದದಲ್ಲೂ ಭಗವಂತನ ಬಗ್ಗೆ ಭಕ್ತಿ ತುಂಬಿ ತುಳುಕುತ್ತದೆ. ಭಗವಂತನ ಕಾರುಣ್ಯವನ್ನು ಪರಿಪರಿಯಾಗಿ ನಿರೂಪಿಸಿದ್ದಾರೆ. ಭಗವಂತನ ಮಹಿಮೆಯನ್ನು ಭಕ್ತರಿಗೆ ತಲುಪಿಸುವ ಕಳಕಳಿಯಂತೂ ಎಂಥವನಿಗೂ ಇವರ ಬಗ್ಗೆ ಆತ್ಮೀಯ ಭಾವ ಮೂಡಿಸುತ್ತದೆ. ಅಲ್ಲಲ್ಲಿ ಸಂಸ್ಕೃತಭೂಯಿಷ್ಠ ಶೈಲಿ ಇದ್ದರೂ ಅದು ಕನ್ನಡಕ್ಕೆ ಹೊಂದಿಕೊಳ್ಳುವಂತೆ ಎಚ್ಚರ ವಹಿಸಿದ್ದಾರೆ. ಇದು ಅವರ ಅದ್ಭುತ ಕೌಶಲ್ಯಕ್ಕೆ ಉದಾಹರಣೆಯಾಗಿದೆ. ಇದು ದ್ವೈತ ವೇದಾಂತದ ಪ್ರಮೇಯ ಕೋಶವಾಗಿದೆ. ವಿದ್ವಾಂಸರಿಗೂ ಉಪಕಾರಕವಾದ ವೇದಾಂತದ ಕೈಪಿಡಿ.
    ದಾಸಸಾಹಿತ್ಯ ವ್ಯಾಸ ಸಾಹಿತ್ಯದ ಕನ್ನಡ ಆವಿಷ್ಕಾರವಾದ ಹರಿಕಥಾಮೃತಸಾರ ಅದರ ಸಾರಸರ್ವಸ್ವ. ಅದಕ್ಕೆಂದೇ ಇದು ಹರಿದಾಸ ಸಾಹಿತ್ಯದ ನ್ಯಾಯಸುಧಾ ಎಂದು ಪರಿಗಣಿಸಲಾಗಿದೆ.
    ಹರಿಕಥಾಮೃತಸಾರ ಕೃತಿಯ ಕೆಲವು ಪದ್ಯಗಳು ಅವಲೋಕನೆ.

    ಮಂಗಳಾಚರಣ ಸಂಧಿ ಯಲ್ಲಿ ಅನಿಷ್ಟಗಳ ನಿವೃತ್ತಿ ಪೂರ್ವಕ ಇಷ್ಟ ಪ್ರಾಪ್ತಿಗೆ ಅವರ ಕುಲದೇವರಾದ ನರಸಿಂಹ ದೇವರನ್ನು ಪ್ರಾರ್ಥಿಸಿದ್ದಾರೆ.

    ಶ್ರೀರಮಣಿ ಕರಕಮಲ ಪೂಜಿತ….. ಕೈವಲ್ಯ ದಾಯಕ ನಾರಸಿಂಹನೆ ನಮಿಪೆ ಕರುಣಿಪುಧೆಮಗೆ ಮಂಗಳವ.
    ನವವಿಧ ಭಕ್ತಿಯಲ್ಲಿ ಒಂದಾದ ಹರಿಕಥಾ ಶ್ರವಣ ದಿಂದಲೇ ಮೋಕ್ಷಕ್ಕೆ ದಾರಿ ಎಂದು ಹೇಳಿದ್ದಾರೆ.

    ಶ್ರವಣ ಮನಕಾನಂದ ವಿನುದು ಭವಜನಿತ ದುಃಖಗಳ ಕಳೆವುದು ವಿವಿಧ ಭೋಗಗಳಿಹಪರಂಗಳನಿತ್ತು ಸಲಹುವುದು ಭುವನ ಪಾವನ ನೆನಿಪ ಲಕುಮೀ ಧವನ ಮಂಗಳ ಕಥೆಯ ಪರಮೋತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ.

    ಪರಮಾತ್ಮ ತನಗೆ ಏನೂ ಪ್ರಯೋಜನವಿಲ್ಲದಿದ್ದರೂ ತನ್ನ ನಂಬಿದ ಭಕ್ತರನ್ನು ಕಾದುಕೊಂಡು ರಕ್ಷಿಸುವನು ಇದಕ್ಕೆ ಅದ್ಭುತ ಉದಾಹರಣೆ
    ಧನವ ಸಂರಕ್ಷಿಸುವ ಪಣಿ ತಾನುಣದೆ ಮತ್ತೊಬ್ಬರಿಗೆ ಕೊಡದೆ ದಿನದಿನದಿ ನೋಡುತ ಸುಖಿಸುವಂದದಲಿ ಲಕುಮಿ ವಲ್ಲಭನು ಪ್ರಣತರನು ಕಾಯ್ದಿಹನು.

    ಪರಮಾತ್ಮ ಎಲ್ಲೆಲ್ಲಿಯೂ ಎಲ್ಲರಲ್ಲಿಯೂ ವ್ಯಾಪ್ತನಾಗಿದ್ದರೂ ಸುಖ-ದುಃಖಗಳ ಲೇಪ ಅವನಿಗಿಲ್ಲ. ಇದಕ್ಕೆ ಉದಾಹರಣೆ
    ಕಾದ ಕಬ್ಬಿಣ ಹಿಡಿದು ಬಡಿಯಲು ವೇದನೆಯು ಲೋಹಗಳಿಗೆ ಅಲ್ಲದೆ ಆದುದೇನೈ ಆನಲಗಾ ವ್ಯಥೆ ಏನು ಮಾಡಿದರು
    ಆದಿದೇವನು ಸರ್ವ ಜೀವರ ಕಾದುಕೊಂಡಿಹನೊಳಹೊರಗೆ ದುಃಖಾದಿಗಳು ಸಂಬಂಧವಾಗುವವೇನೋ ಚಿನ್ಮಯಗೆ.
    ನಾವು ಮಾಡುವ ಕಾರ್ಯಗಳೆಲ್ಲವೂ ಪರಮಾತ್ಮನ ಅಧೀನವೆಂದು ತಿಳಿದು ಅವನಿಗೆ ಸಮರ್ಪಣೆ ಮಾಡಬೇಕು.

    ಅಂದರೆ ಸಮರ್ಪಣೆ ಮಾಡುವುದರಲ್ಲಿ ಭೇದ ಉಂಟು. ಪಾಪಕರ್ಮಗಳನ್ನು ಪರಮಾತ್ಮನಿಗೆ ಪಾದುಕೆಗಳನ್ನಾಗಿ ಸಮರ್ಪಿಸಿದರೆ ಪುಣ್ಯ ಕರ್ಮಗಳನ್ನು ದೇವರಿಗೆ ಸುಗಂಧ ಸಮರ್ಪಿಸಿದಂತೆ ಸಮರ್ಪಿಸಬೇಕು. ಪಾಪಕರ್ಮಗಳನ್ನು ಒಪ್ಪಿಸಿದರೆ ದೋಷ ಬಂದಿತೆಂಬ ಸಂಶಯವನ್ನು ಬಿಟ್ಟು ಲಕ್ಷ್ಮೀನಿವಾಸ ನಿಗೆ ಸರ್ವ ಕರ್ಮಗಳು ನಿನ್ನ ಅಧೀನವೆಂದು ಅರ್ಪಿಸಬೇಕು. ಜ್ಞಾನನಿಧಿಯಾದ ದೇವರು ಸರ್ವ ಕರ್ಮಗಳನ್ನು ಅಂಗೀಕರಿಸಿ ಹುಲ್ಲು ನೀರು ಸ್ವೀಕರಿಸಿದ ಗೋವು ಕ್ಷೀರವನ್ನು ಕೊಡುವಂತೆ ನಿರಂತರ ಶರಣಾಗತರಿಗೆ ಪಾಪ ಹೋಗಲಾಡಿಸಿ ಪುಣ್ಯ ಫಲವನ್ನು ಕೊಡುವನು.

    ಏನು ಮಾಡುವ ಕರ್ಮಗಳು ಲಕ್ಷ್ಮೀನಿವಾಸ ನಿಗರ್ಪಿಸು ಅನುಸಂಧಾನ ಪೂರ್ವಕವಾಗಿ ಸಂದೇಹಿಸದೇ ದಿನದಿನದಿ ಮಾನನಿಧಿ ಕೈಕೊಂಡು ಸುಖವಿತ್ತನವರತ ಸಂತೈಪ ತೃಣ ಜಲ ತಾನುಂಡನವರತ ಪಾಲುಗರೆವಂತೆ ಎಂದಿದ್ದಾರೆ.

    ಶರೀರಗತ ನಾಡಿಗಳಲ್ಲಿ ಮುಖ್ಯನಾದ ಸುಷುಮ್ನಾ ನಾಡಿ ಇರುವ ಸ್ಥಳ ಅದರಲ್ಲಿರುವ 6 ಕಮಲಗಳ ವಿಚಾರ ಮೂಲೇಶ ಅಗ್ರೇಶ ಪ್ರಾದೇಶನಾಮಕ ಬಿಂಬ ರೂಪಗಳ ಚಿಂತನ ಪ್ರಕಾರವನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ.ಪರಮಾತ್ಮನ ಧ್ಯಾನ ಅವನ ಉಪಾಸನೆ ಹೇಗೆ ಮಾಡಬೇಕು ಎಂದು ಮುಂದಿನ ಪದ್ಯದಲ್ಲಿ ತಿಳಿಸಿದ್ದಾರೆ.
    ಹಗಲು ನಂದಾದೀಪದಂದದಲಿ ನಿಗಮ ವೇದ್ಯನ ಪೂಜಿಸುತ್ತಾ ಕೈಮುಗಿದು ಒಳಹೊರಗೆ ಒಂದು ಪುರುಷಾರ್ಥವನ್ನು ಬೇಡ ದೆಲೆ ಜಗದೋದ್ಧಾರನು ಕೊಟ್ಟುದನ್ನು ಭುಂಜಿಸಿ ಮಗ ಮಡದಿ ಪ್ರಾಣ ಇಂದ್ರಿಯ ಆತ್ಮಾದಿಗಳು ಭಗವದಧೀನವೆಂದಡಿಗಡಿಗೆ ನೆನೆಯುತಿರು.

    ಈ ನಿಮಿತ್ತ ನಿಷ್ಕಾಮ ಉಪಾಸನೆ ಮಾಡಬೇಕೆಂದು ತಿಳಿಸುತ್ತಾರೆ ನಮ್ಮ ದೇಹದಲ್ಲಿ 72 ಸಾವಿರ ನಾಡಿಗಳು ಇದೆ. ಇದರಲ್ಲಿ 36 ಸಾವಿರ ನಾಡಿಗಳು ಪುರುಷ ನಾಡಿಗಳು 36000 ಸ್ತ್ರೀ ನಾಡಿಗಳು. ಈ ನಾಡಿಗಳನ್ನು ಹಗಲು ಮತ್ತು ರಾತ್ರಿ ನಾಡಿಗಳು ಎಂದು ಕರೆಯುತ್ತಾರೆ. ಈ ನಾಡಿಗಳಲ್ಲಿ ಪರಮಾತ್ಮನ ವ್ಯಾಪಾರವನ್ನು ಹೃದಯಂಗಮವಾಗಿ ವರ್ಣಿಸಿದ್ದಾರೆ. ನಾವು ಪರಮಾತ್ಮನ ಸ್ಮರಣೆಯನ್ನು ಒಂದು ಅರೆಘಳಿಗೆ ಕೂಡ ಬಿಡಬಾರದು ಎಂದು ಮುಂದಿನ ಪದ್ಯದಲ್ಲಿ ತಿಳಿಸಿದ್ದಾರೆ.

    ಮಕ್ಕಳಾಡಿಸುವಾಗ ಮಡದಿಯೊಳಕ್ಕರದಿ ನಲಿವಾಗ ಹಯ ಪಲ್ಲಕ್ಕಿ ಗಜ ಮೊದಲಾದ ವಾಹನವೇರಿ ಮೆರೆವಾಗ ಬಿಕ್ಕುವಾಗಾಕಳಿಸುತಲಿ ದೇವಕ್ಕಿ ತನಯನ ಸ್ಮರಿಸುತಿಹ ನರ ಸಿಕ್ಕನೆಮಧೂತರಿಗಾವಾವಲ್ಲಿ ನೋಡಿದರು.

    ಮುಖ್ಯಪ್ರಾಣ ದೇವರ ಮಹಿಮೆ ಮತ್ತು ಅವರು ಮಾಡುವ ಹಂಸ ಜಪಗಳ ವಿವರಣೆಯನ್ನು ನೀಡಿದ್ದಾರೆ. ಜೀವರಿಗೆ ಸ್ವತಂತ್ರ ಕರ್ತೃತ್ವ ಭೋಕ್ತೃತ್ವರೂಪ ಶಕ್ತಿ ಇಲ್ಲದಿದ್ದರೂ ದತ್ತ ಸ್ವಾತಂತ್ರ ಅಭಿಮಾನ ಮೂಲಕ ಜೀವರಿಗೆ ಪಾಪ-ಪುಣ್ಯ ಲೇಪವಾಗುವುದೆಂದು ತಿಳಿಸುತ್ತಾರೆ. ಪರಮಾತ್ಮನಿಗೆ ಪ್ರಾಕೃತ ರಸ ಭೋಜನ ಹೇಗೆಂಬ ಆಕ್ಷೇಪ ಪರಿಹಾರಾರ್ಥವಾಗಿ ಈಶ ಜೀವರ ಭೋಗ ದೃಷ್ಟಾಂತ ತಿಳಿಸುತ್ತಾರೆ
    ಗರ್ಭಿಣಿ ಸ್ತ್ರೀ ಉಂಡ ಭೋಜನ ಗರ್ಭಗತ ಶಿಶು ಉಂಬ ತೆರದಿ ನಿರ್ಭಯನು ತಾನುಂಡುಣಿಸುವನು ಸರ್ವ ಜೀವರಿಗೆ.
    ಪರಮಾತ್ಮನು ಅಪಾರ ಕರುಣಾ ಸಮುದ್ರ ಅವನನ್ನು ಯಾವ ರೀತಿಯಲ್ಲಾದರೂ ಸ್ಮರಣೆ ಮಾಡಿದರೂ ಕಾಪಾಡುತ್ತಾನೆ

    ಭಿಟ್ಟಿಗಳ ನೆವದಿಂದಾಗಲಿ ಹೊಟ್ಟೆಗೂಸುಗವಾಗಲಿ ಕೆಟ್ಟ ರೋಗ ಪ್ರಯುಕ್ತದಿಂದಾಗಲಿ ನಿಟ್ಟುಸಿರಿನಿಂಬಾಯ್ತೆರೆದು ಹರಿ ವಿಠಲ ಸಲಹೆಂದೆನಲು ಕೈಕೊಟ್ಟು ಕಾವ ಕೃಪಾಳು ಸಂತತ ತನ್ನ ಭಕುತರನು.

    ಶ್ರೀಹರಿಕಥಾಮೃತಸಾರ ವು ಅತ್ಯುತ್ತಮವಾದ ರತ್ನ ವಾಗಿರುತ್ತದೆ ಇದರಲ್ಲಿ ಮುಮುಕ್ಷುಗಳು ತಿಳಿದುಕೊಳ್ಳಬೇಕಾದ ಅನೇಕ ಪ್ರಮೇಯಗಳು ಅಡಗಿರುತ್ತವೆ.ಮೂರು ಕಾಲಗಳಲ್ಲಿ ಪಠಿಸೆ ಶರೀರ ವಾಂಙ್ಮನ ಶುದ್ದಿ ಮಾಳ್ಪುದು ದೂರಗೈಸುವುದ ಅಖಿಲ ಪಾಪ ಸಮೂಹ ಪ್ರತಿದಿನದಿ
    ಚೋರಭಯ ರಾಜಭಯ ನಕ್ರ ಚಮೂರು ಶಸ್ತ್ರಜಲ ಅಗ್ನಿ ಭೂತ ಮಹೋರಗ ಜ್ವರ ನರಕ ಭಯ ಸಂಭವಿಸದೆಂದೆಂದು.

    ಈ ಹರಿಕಥಾಮೃತಸಾರಕ್ಕೆ ಜಮಖಂಡಿ ವಾದಿರಾಜಾಚಾರ್ಯರು ಸಂಸ್ಕೃತದಲ್ಲಿ ವ್ಯಾಖ್ಯಾನವನ್ನು ಬರೆದಿದ್ದಾರೆ ಅಂದರೆ ಇದರ ಮಹತ್ವವನ್ನು ಎಷ್ಟು ಎಂದು ನಾವು ತಿಳಿಯಬೇಕು.

    ಇವರ ಪ್ರಮುಖ ಶಿಷ್ಯರು ಶ್ರೀ ಪ್ರಾಣೇಶ ದಾಸರು ಶ್ರೀ ಶ್ರೀದವಿಠ್ಠಲದಾಸರು ಶ್ರೀ ಗುರು ಶ್ರೀಶ ವಿಠ್ಠಲ ದಾಸರು ಶ್ರೀವಿಜಯ ಹಯಗ್ರೀವ ದಾಸರು ಶ್ರೀ ಗುರು ಜಗನ್ನಾಥ ವಿಠ್ಠಲರು ಮುಂತಾದವರು ಇದಕ್ಕೆ ಫಲಶೃತಿಯನ್ನು ಬರೆದಿದ್ದಾರೆ. ಸಂಕರ್ಷಣ ಒಡೆಯರ ವ್ಯಾಖ್ಯಾನ ತುಂಬಾ ಪ್ರಸಿದ್ಧವಾಗಿದೆ.

    ಈ ಹರಿಕಥಾಮೃತಸಾರವನ್ನು ಭಕ್ತಿಪೂರ್ವಕ ಪಠಿಸುವವರಿಗೆ ಶ್ರೀ ಹರಿ ಗುರು ದೇವತಾನುಗ್ರಹ ವಾಗುತ್ತದೆ.ರಮಾರಮಣ ನಾದ ಶ್ರೀಹರಿ ಈ ಪದ್ಯಗಳನ್ನು ಪಠಿಸುವ ಭಕ್ತಜನರಿಗೆ ಸದಾ ಬೇಡಿದ ಇಷ್ಟಾರ್ಥವನ್ನು ಕೊಟ್ಟು ಜ್ಞಾನ ಭಕ್ತಿ ವೈರಾಗ್ಯ ಗಳನ್ನು ಕರುಣಿಸುತ್ತಾನೆ.
    ಜಗನ್ನಾಥದಾಸರು ಭಾದ್ರಪದ ಶುದ್ಧ ನವಮಿಯಂದು ಮಾನವಿಯಲ್ಲಿ ಒಂದು ಕಂಬಕ್ಕೆ ಒರಗಿಕೊಂಡು ಅವರ ಪ್ರಾಕೃತ ದೇಹವನ್ನು ತ್ಯಜಿಸಿದ್ದಾರೆ. ಈ ಕಂಬಕ್ಕೆ ಎಲ್ಲಾ ಪೂಜೆ-ಪುನಸ್ಕಾರ ಆರಾಧನಾದಿಗಳು ನಡೆಯುತ್ತವೆ.

    ಈ ಗ್ರಂಥದ ಮುಖ್ಯ ಸಾರಾಂಶವೇನೆಂದರೆ ನಾ ನಾ ಎನ್ನುವುದು ಬಿಟ್ಟು ನೀನೀ ಎಂದರೆ ಜನ್ಮ ಸಾರ್ಥಕವಾಗುತ್ತದೆ.ನಾನು ಮಾಡಿದೆ ಎನ್ನುವುದು ಸಂಸಾರಕ್ಕೆ ಭಂಧಕ . ನೀನು ಮಾಡಿಸಿದೆ ಎಂದರೆ ಸಂಸಾರದಿಂದ ಮೋಚಕ.

    ವಿಧಾನಸಭೆ ಅಧಿವೇಶನ ನೇರ ಪ್ರಸಾರ

    BENGALURU SEPT 14

    ವಿಧಾನಸಭೆ ಅಧಿವೇಶನದ ಎರಡನೇ ದಿನದ ಕಾರ್ಯ ಕಲಾಪಗಳು ಪಟ್ಟಿ ಇಂತಿದೆ.

    ಅದರ ನೇರ ಪ್ರಸಾರದ ಲಿಂಕ್ ಇಲ್ಲಿದೆ.

    ವಿಧಾನಸಭೆ ಅಧಿವೇಶನ ನೇರ ಪ್ರಸಾರ

    BENGALURU SEP 13

    ವಿಧಾನಸಭೆಯ ಅಧಿವೇಶನ ಆರಂಭವಾಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ನಂತರ ನಡೆಯುತ್ತಿರುವ ಪ್ರಥಮ ಅಧಿವೇಶನ ಇದು. ಸದನಕ್ಕೆ ಹೊರಗೆ ಪ್ರತಿಪಕ್ಷ ತೀವ್ರ ಹೋರಾಟವನ್ನೇ ನಡೆಸಿದ್ದು ಎತ್ತಿನಗಾಡಿಯಲ್ಲಿ ಆಗಮಿಸುವ ಮೂಲಕ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ವಿಧಾನ ಸೌಧ ಪ್ರವೇಶಿಸಿದ್ದಾರೆ.

    ಸದನಕಲಾಪಗಳ ನೇರ ಪ್ರಸಾರದ ಲಿಂಕ್ ಈ ಕೆಳಗಿದೆ.

    ವಿಧಾನ ಮಂಡಲ ಅಧಿವೇಶನ;ಜಾತಿ ಗಣತಿ ವರದಿ, ಶಿಕ್ಷಣ ನೀತಿ ಬಗ್ಗೆ ಚಕಮಕಿ ನಿರೀಕ್ಷೆ

    BENGALURU SEPT 11

    ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ನಡೆಯುತ್ತಿರವ ಮೊದಲ ವಿಧಾನ ಮಂಡಲ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಸರಕಾರವನ್ನು ವಿವಿಧ ವಿಷಯಗಳ ಸುಳಿಗೆ ಸಿಕ್ಕಿಸಲು ಪ್ರತಿಪಕ್ಷಗಳು ರೆಡಿಯಾಗಿವೆ.

    ಮಖ್ಯವಾಗಿ ಕಾಂಗ್ರೆಸ್ ಪಕ್ಷವು ಕಲಾಪದಲ್ಲಿ ಸರಕಾರದ ಚಳಿ ಬಿಡಿಸಲು ನಿರ್ಧರಿಸಿದೆ. ಅಧಿವೇಶನ ಸೆಪ್ಟೆಂಬರ್ 24ರವರೆಗೆ ನಡೆಯಲಿದ್ದು, ಹತ್ತು ಹಲವುಗಳ ಬಗ್ಗೆ ಬಿಸಿಬಿಸಿಯಾಗಿ ಚರ್ಚೆ ನಡೆಯುವುದು ಖಚಿತ.

    ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ, ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ, ಬೆಲೆ ಏರಿಕೆ, ಆರ್ಥಿಕತೆಯ ಕುಸಿತ, ಸಚಿವರ ಮೇಲಿನ ಭ್ರಷ್ಟಾಚಾರ ಪ್ರಕರಣ, ಕೋವಿಡ್, ರಾಷ್ಟ್ರೀಯ ಶಿಕ್ಷಣ ನೀತಿ ಸೇರಿ ಹತ್ತು ಹಲವು ವಿಚಾರಗಳನ್ನು ಮುಂದಿಟ್ಟುಕೊಡಂಡು ಸರಕಾರದ ಮೇಲೆ ಮುಗಿಬೀಳಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಈಗಾಗಲೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಸಿರುವ ಕೈಪಾಳೆಯ ಸದನದಲ್ಲಿ ಪ್ರಸ್ತಾಪ ಮಾಡಬೇಕಿರುವ ವಿಷಯಗಳನ್ನು ಪಟ್ಟಿ ಮಾಡಿಕೊಂಡಿದೆ.

    ಇನ್ನು; ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಗಳ ಫಲಿತಾಂಶ. ಬೊಮ್ಮಾಯಿ ಅಧಿಕಾರಕ್ಕೆ ಬಂದ ಬಳಿಕ ಜಾರಿಯಾದ ಜನಪರ ಕಾರ್ಯಕ್ರಮಗಳು, ಅಮೃತೋತ್ಸವ ಕಾರ್ಯಕ್ರಮಗಳು ಸೇರಿ ಅಂಕಿ ಅಂಶಗಳ ಸಹಿತ ಪ್ರತಿಪಕ್ಷ ನಾಯಕರಿಗೆ ತಿರುಗೇಟು ನೀಡಲು ಆಡಳಿತ ಪಕ್ಷವೂ ಸಿದ್ದತೆ ಮಾಡಿಕೊಂಡಿದೆ.

    ಜಾತಿ ಗಣತಿ ವರದಿ ತಿಕ್ಕಾಟ:

    ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರದ ಮೇಲೆ ವಾಗ್ದಾಳಿ ಮಾಡುವುದು ಖಚಿತ. ಈ ವಿಷಯದಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್ ಜತೆ ನಿಲ್ಲುವುದು ಅನುಮಾನ. ಈ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ನಡೆಯುವುದು ಗ್ಯಾರಂಟಿ.

    ಸಮ್ಮಿಶ್ರ ಸರಕಾರ ಇದ್ದಾಗ ಈ ವರದಿಯನ್ನು ಅಂಗೀಕಾರ ಮಾಡಲು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮತಿಸಲಿಲ್ಲ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದರು. ಇದರಿಂದ ಕೆಂಡಾಮಡಲರಾಗಿದ್ದ ಎಚ್ಡಿಕೆ, ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯ ಹೆಸರೇಳದೇ ತೀವ್ರ ವಾಗ್ದಾಳಿ ನಡೆಸಿದ್ದರು.

    ಸಿದ್ದರಾಮಯ್ಯ ಅವರೇ ಅಧಿಕಾರದಲ್ಲಿದ್ದಾಗ ವರದಿಯನ್ನು ಸಲ್ಲಿಸಲಾಗಿತ್ತು. ಆಗ ಅಂಗೀಕಾರ ಮಾಡದೇ ಈಗ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಸರಿಯೇ ಎಂದು ಪ್ರಶ್ನಿಸಿದ್ದ ಎಚ್ಡಿಕೆ, ‘ಎಲೆಕ್ಷನ್’ ಬಂದಾಗ ಯಾವುದೋ ಒಂದು ವಿಷಯದ ಆಯ್ಕೆ ಮಾಡಿಕೊಂಡು ಪ್ರಚಾರ ಗಿಟ್ಟಿಸುವುದು ಸರಿಯಲ್ಲ. ಅಧಿಕಾರ ಇದ್ದಾಗಲೇ ಸಲ್ಲಿಕೆಯಾಗಿದ್ದ ಈ ವರದಿಯನ್ನು ಬಿಡುಗಡೆ ಮಾಡಲು ನಿರ್ಲಕ್ಷ್ಯ ತೋರಿದ್ದು ಯಾಕೆ? ಕುದುರೆ ಇದ್ದಾಗಲೇ ಏರಲಿಲ್ಲ, ಇನ್ನೊಬ್ಬರು ಕುದುರೆ ಮೇಲಿದ್ದಾಗ ಅವರನ್ನು ಕೆಳಕ್ಕೆ ಕೆಡವಲು ಏಕೀ ಕೆಟ್ಟ ಉತ್ಸಾಹ? ಎಂದು ತರಾಟೆಗೆ ತೆಗೆದುಕೊಂಡಿದ್ದರು.

    ಅಲ್ಲದೆ; ಎಲ್ಲದರಲ್ಲೂ ಸಿದ್ಧಹಸ್ತರಾದರೆ ಉಪಯೋಗವೇನು? ಸತ್ಯ ಹೇಳುವುದಕ್ಕೂ ಗುಂಡಿಗೆ ಬೇಕು. ಇನ್ನೊಬ್ಬರ ಎದೆಗಾರಿಕೆ ಪ್ರಶ್ನಿಸುವ ಮಹಾನುಭಾವರು, ತಮ್ಮ ಅವಧಿಯಲ್ಲಿ ಈ ವರದಿನ್ನೇಕೆ ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದರು ಎಂಬುದಕ್ಕೆ ಉತ್ತರ ನೀಡಲಿ. ಸಹಿ ಇಲ್ಲದ ಕಾಗದ ಪತ್ರಕ್ಕೆ ಬೆಲೆ ಇಲ್ಲ. ಅಪ್ಪ ಅಮ್ಮನಿಲ್ಲದ ಕೂಸು ಅನಾಥ. ಹಾಗಾದರೆ, ಸಹಿ ಇಲ್ಲದ ವರದಿ ಸ್ವೀಕಾರ ಮಾಡಿ, ಆಗ ಸುಮ್ಮನಿದ್ದು, ಈಗ ಹಾಹಾಕಾರ ಮಾಡಿದರೇನು ಪ್ರಯೋಜನ? ಊಸರವಳ್ಳಿ ಉಸಾಬರಿ ಎಂದರೆ ಇದೇ ಇರಬೇಕು ಎಂದು ದೂರಿದ್ದರು.

    ಜಾತಿ ಜನಗಣತಿ ವಿಚಾರದಲ್ಲಿ ಒಡೆದ ಮನೆಯಾದ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ತಾರಕಕ್ಕೇರಿದೆ. ಡಿಕೆಶಿ ಬಣದಿಂದ ಜನಗಣತಿ ವಿಚಾರ ಪ್ರಸ್ತಾಪಕ್ಕೆ ವಿರೋಧವಿದ್ದು, ಸಿದ್ದರಾಮಯ್ಯ ಇದನ್ನೇ ಮುಂದಿಟ್ಟುಕೊಂಡು ಸರಕಾರಕ್ಕೆ ಬಿಸಿ ಮುಟ್ಟಿಸಲು ಉದ್ದೇಶಿಸಿದ್ದಾರೆ.

    ಜಾತಿ ಜನಗಣತಿ ಪ್ರಸ್ತಾಪ ಮಾಡಿದರೆ ಜೆಡಿಎಸ್, ಕಾಂಗ್ರೆಸ್ ನಾಯಕರ ವಿರುದ್ದ ವಾಗ್ಯುದ್ದ ನಡೆಯುವುದು ಖಚಿತ. ಹೀಗಾಗಿ ಈ ಬಗ್ಗೆ ಪ್ರಸ್ತಾಪ ಮಾಡುವುದೇ ಬೇಡ ಎಂಬ ಅಭಿಪ್ರಾಯಕ್ಕೆ ಬಂದಿರುವ ಕಾಂಗ್ರೆಸ್ ನ ಕೆಲ ನಾಯಕರು, ಸುಮ್ಮನಿರಿ ಎಂದು ಸಿದ್ದರಾಮಯ್ಯ ಅವರಿಗೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.

    ಮಸೂದೆಗಳ ಮಂಡನೆ:

    ಇದೇ ಅಧಿವೇಶನದಲ್ಲಿ ಕೊಳಚೆ ಪ್ರದೇಶ ಕಬಳಿಕೆ ವಿರುದ್ದ ಕ್ರಮಕ್ಕೆ ತಿದ್ದುಪಡಿ ವಿಧೇಯಕ, ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ತಿದ್ದುಪಡಿ, ಪೌರಸಭೆ, ಶಿಕ್ಷಕರ ವರ್ಗಾವಣೆ ನಿಯಮ ವಿಧೇಯಕ ಹಾಗೂ ನಾಲ್ಕು ಸುಗ್ರೀವಾಜ್ಞೆ ಸೇರಿ ೧೮ ವಿಧೇಯಕಗಳನ್ನು ಮಂಡನೆ ಮಾಡಲು ಸರಕಾರ ಸಿದ್ಧತೆ ಮಾಡಿಕೊಂಡಿದೆ.

    ಬೊಮ್ಮಾಯಿ ಸಂಪುಟದಲ್ಲಿ ಜೆ.ಸಿ.ಮಾಧುಸ್ವಾಮಿ ಅವರ ಮತ್ತೆ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಮಂತ್ರಿ ಆಗುರುವ ಹಿನ್ನೆಲೆಯಲ್ಲಿ ಮಸೂದೆಗಳ ಬಗ್ಗೆ ಭರ್ಜರಿ ಚರ್ಚೆ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

    ಲೋಕಸಭೆ ಸ್ಪೀಕರ್ ಭಾಷಣ:

    ಸೆಪ್ಟೆಂಬರ್ ೨೪ರಂದು ಮಧ್ಯಾಹ್ನ ಜಂಟಿ ಅಧಿವೇಶನ ನಡೆಯಲಿದೆ. ಅಂದು ಜಂಟಿ ಕಲಾಪವನ್ನು ಉದ್ದೇಶಿಸಿ ಲೋಕಸಭಾಧ್ಯಕ್ಷ ಓಂಬಿರ್ಲಾ ಭಾಷಣ ಮಾಡಲಿದ್ದಾರೆ.

    ಇದೇ ಮೊದಲ ಬಾರಿಗೆ ಸದನದ ಕಲಾಪದಲ್ಲಿ ಸಕ್ರಿಯ ಭಾಗಿಯಾಗಿ ಉತ್ತಮ ನಡವಳಿಕೆ ತೋರುವ ಶಾಸಕರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ನಿರ್ಧಾರ ಮಾಡಲಾಗಿದೆ. ಅಲ್ಲಿ ಸಂಸದೀಯ ಮೌಲ್ಯಗಳ ಬಗ್ಗೆ ಚರ್ಚೆ ಮಾಡಲಾಗುವುದು. ಬಹುಮುಖ್ಯವಾಗಿ ಅಧಿವೇಶನದ ಕೊನೆಯ ಭಾಗದಲ್ಲಿ ಪ್ರಶಸ್ತಿ ಕೊಡುವ ಬಗ್ಗೆ ಮಾತನಾಡಿದ್ದು, ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಡಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈಗಾಗಲೇ ತಿಳಿಸಿದ್ದಾರೆ.

    ಅರಣ್ಯ ರಕ್ಷಣೆ ಮಾಡುತ್ತಾ ಜೀವತೆತ್ತವರ ಎದೆಗಾರಿಕೆ ಮುಂದಿನ ಪೀಳಿಗೆಗೆ ಸ್ಪೂರ್ತಿ: ನ್ಯಾ. ರಹಮಾನ್

    BENGALURU SEPT 12

    ಅರಣ್ಯ ಮತ್ತು ವನ್ಯಜೀವಿ ಸಂಪತ್ತಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು ಹುತಾತ್ಮರಾದವರ ಧೈರ್ಯ ಮತ್ತು ಸೇವಾ ಮನೋಭಾವನೆ ಮುಂದಿನ ಪೀಳಿಗೆಗೆ ಸ್ಪೂರ್ತಿ ಎಂದು 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸೈಯದ್ ಬಲೀಗುರ್ ರಹಮಾನ್ ತಿಳಿಸಿದರು.

    ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸುವಾಗ ವನ್ಯಜೀವಿ ದಾಳಿಯಿಂದ ಪ್ರಾಣ ತ್ಯಾಗ ಮಾಡಿದ ದಬ್ಬಣ್ಣ ಮತ್ತು ರಾಮಯ್ಯ ಎಂಬ ದಿನಗೂಲಿ ನೌಕರರ ಸೇವೆಯನ್ನು ಸ್ಮರಿಸುತ್ತಾ ಅವರು ಮಾತಾನಾಡಿದರು.

    ದೇಶಾದ್ಯಂತ ಸೆಪ್ಟೆಂಬರ್ ಮಾಹೆಯಲ್ಲಿ
    ಅರಣ್ಯ ಹುತಾತ್ಮರ ದಿನಾಚರಣೆ ನಡೆಸುತ್ತಿರುವುದು ತುಂಬಾ ಶ್ಲಾಘನೀಯವಾಗಿದ್ದು, ಈ ಸಂದರ್ಭದಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಪ್ರಾಣತ್ಯಾಗ ಮಾಡಿದ ನೌಕರರ ಸ್ಮರಣಾರ್ಥಕ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಮಾತನಾಡುವುದಕ್ಕಿಂತ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ ಎಂದು ಹೇಳಿದರು.‌

    ನಂತರ ಮಾತನಾಡಿದ ಜೆ.ಎಂ.ಎಫ್.ಸಿ ನ್ಯಾಯಾಲಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಚಂದ್ರಶೇಖರ ಅವರು ಆನೇಕಲ್ ತಾಲ್ಲೂಕಿನ ಸುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ವನ್ಯಜೀವಿ ದಾಳಿಯಿಂದ ಹುತಾತ್ಮರಾದ ದಬ್ಬಣ್ಣ ಮತ್ತು ರಾಮಯ್ಯ ದಿನಗೂಲಿ ನೌಕರರು ಶೌರ್ಯ ಅನುಕರಣೀಯ ಎಂದು ಹೇಳಿದರು.‌

    ಅರಣ್ಯ ಸಿಬ್ಬಂದಿಗಳು ಕಾಡಿನಲ್ಲಿ ಕರ್ತವ್ಯ ನಿರ್ವಹಿಸುವಾಗ ಮುನ್ನೆಚ್ಚರಿಕೆ ವಹಿಸಿ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಇಂತಹ ಅನಾಹುತಗಳನ್ನು ತಡೆಯಬಹುದು ಎಂದು ಅಭಿಪ್ರಾಯ ಪಟ್ಟರು.

    ನಂತರ ಮಾತನಾಡಿದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಡಾ ಪಿ ರಮೇಶ್ ಕುಮಾರ್ ಅವರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರತಿ ವರ್ಷ ಅರಣ್ಯ ಹುತಾತ್ಮರ ದಿನಾಚರಣೆ ನಡೆದು ಬಂದ ದಾರಿಯನ್ನು ತಿಳಿಸಿದರು . ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಪ್ರಾಣತ್ಯಾಗ ಮಾಡಿದ ಶ್ರೀನಿವಾಸ್ ಪಿ ಮತ್ತು ಮಣಿಕಂದನ್ ಅವರುಗಳ ಸೇವೆಯನ್ನು ಸ್ಮರಿಸಿದರು.

    ಇದೆ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾದ ಎ.ಡಿ ಪ್ರಕಾಶ್ ಅವರು ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಕರ್ತವ್ಯದಲ್ಲಿದ್ದಾಗ ಅರಣ್ಯ ಇಲಾಖೆಯ ಒಟ್ಟು 53 ಸಿಬ್ಬಂದಿ ಪ್ರಾಣತ್ಯಾಗ ಮಾಡಿದವರ ಹುತಾತ್ಮರ ಹೆಸರುಗಳನ್ನು ಓದಿ ನೆನಪಿಸಿದರು. ದಿವಂಗತ ದಬ್ಬಣ್ಣ ಮತ್ತು ರಾಮಯ್ಯ ಅವರ ಕುಟುಂಬಗಳಿಗೆ ಸಹಾಯ ಧನವನ್ನು ವಿತರಿಸಿದರು.

    ಮಾತುಬೇರೆ ಕೃತಿ ಬೇರೆ

    ಸುಮಾವೀಣಾ

    ಕನ್ನಡದ  ಆದಿಕವಿ ವಿರಚಿತ  ‘ವಿಕ್ರಮಾರ್ಜುನ ವಿಜಯ’ದ  ಹನ್ನರಡನೆ ಆಶ್ವಾಸದಲ್ಲಿ ‘ಸೆಟ್ಟಿಯ ಬಳ್ಳಂ ಕಿರಿದು’ ಎಂಬ ಮಾತು ಉಕ್ತವಾಗಿದೆ. ಮಹಾಭಾರತ ಯುದ್ಧ ಭೂಮಿಯಲ್ಲಿ ಕರ್ಣಾರ್ಜುನರು ಎದುರಾದಾಗಿ ಇನ್ನೇನು ಯುದ್ಧ ಆರಂಭಿಸಬೇಕು  ಅನ್ನುವ ಸಂದರ್ಭದಲ್ಲಿ ಅರ್ಜುನ ತನ್ನ  ಎದುರಾಳಿಯಾಗಿ ನಿಂತಿದ್ದ  ಶಸ್ತ್ರಸಜ್ಜಿತ ಕರ್ಣನಿಗೆ ಹೇಳುತ್ತಾನೆ. ಹಳಗನ್ನಡದಲ್ಲಿ  ಇದೇ ಮಾತನ್ನು “ಸೆಟ್ಟಿಯ ಬಾಯ್ ಒಳ್ಳಿತು, ಬಳ್ಳಂ ಕಿರಿದು” ಎಂದು ಪ್ರಯೋಗವಾಗಿದೆ.  “ಹುಸಿಯದ ಬೇಹಾರಿ ಇಲ್ಲ”  ಎಂಬ ಮಾತೂ ದುರ್ಗಸಿಂಹನ ಪಂಚತಂತ್ರದಲ್ಲಿಯೂ   ಬರುತ್ತದೆ.

    ಅರ್ಜುನ ಹೇಗೂ ಬಿಲ್ವಿದ್ಯೆ ಪ್ರವೀಣ  ಲೋಹದ  ಬಾಣಗಳನ್ನು ಪ್ರಯೋಗಿಸುವ ಮೊದಲು ಮಾತಿನ ಬಾಣವನ್ನು ಪ್ರಯೋಗಿಸುತ್ತಾನೆ. ಅರ್ತಾಥ್ ಅವನನ್ನು   ವ್ಯಂಗ್ಯ ಮಾಡುವಾಗ ಸೆಟ್ಟಿಯ  ಮಾತು ಯಾವಾಗಲೂ ಆಕರ್ಷಣೀಯವಾಗಿರುತ್ತವೆ. ಆದರೆ ಒಬ್ಬ ವ್ಯಾಪಾರಿಯಾಗಿ ಯಾವಾಗಲೂ ಆತ ಲಾಭವನ್ನೇ  ಅಪೇಕ್ಷಿಸುತ್ತಾನೆ.    ಹಾಗೆ ನೀನು  ಈ ಹಿಂದೆ  ಪರಾಕ್ರಮಿಯಾಗಿ ದೊಡ್ಡ ದೊಡ್ಡ ಮಾತುಗಳನ್ನಾಡಿದೆ ಆದರೆ ಯುದ್ಧ  ಮಾಡುವ ಸಂದರ್ಭದಲ್ಲಿ ಹಿಂಜರಿಕೆಯಾಗುತ್ತದೆಯೇ? ಕೈನಡುಗುತ್ತವೆಯೇ ? ಮಾತು ಬೇರೆ ಕೃತಿ ಬೇರೆ ಎಂದು ಛೇಡಿಸುತ್ತಾನೆ. 

    ‘ಸೆಟ್ಟಿ’ ಎಂಬುದು ಇಲ್ಲಿ ‘ಯುಧ್ಧವೀರ’ರಿಗೆ ಅನ್ವಯವಾದರೆ ‘ಬಳ್ಳ’ ಅವರ ‘ಸಾಮರ್ಥ್ಯ’ಕ್ಕೆ  ಅನ್ವಯವಾಗುತ್ತದೆ.   ‘ಲೋಕದಲ್ಲಿ ವ್ಯಾಪಾರ’ ಅನ್ನುವ ಪರಿಭಾಷೆಗೆ ‘ಸೆಟ್ಟಿಯ ಬಳ್ಳ ಕಿರಿದು’ ಎಂಬ ಮಾತನ್ನು ಅನ್ವಯಿಸಿ  ನೋಡಿದರೆ  ಇಲ್ಲಿ ಮೋಸದ ಸುಳುಹು ಸಿಗುತ್ತದೆ.  ಇದನ್ನು ತಡೆಯಲು ಮಾಪನ ಇಲಾಖೆಯವರು  ಇರುವುದನ್ನು ಇಲ್ಲಿ ಗಮನಿಸಬಹುದು.  ಲೋಕದ ವ್ಯಾಪಾರವೋ? ಇಲ್ಲ ಮಾತಿನ ವ್ಯಾಪಾರವೋ? ಇಲ್ಲಿ ಪಾರದರ್ಶಕವಾಗಿರಬೇಕು ಹಾಗಿಲ್ಲವಾದರೆ ಆತನು ಮೋಸಗಾರನೆ ಸರಿ ಎಂಬ  ಜಿಜ್ಞಾಸೆ ಇಲ್ಲಿದೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಪರಿಸರ ನಷ್ಟವನ್ನು ತುಂಬಲು ಪ್ರತಿ ವರ್ಷ ಪರಿಸರ ಆಯವ್ಯಯ: ಮುಖ್ಯಮಂತ್ರಿಗಳ ಘೋಷಣೆ

    BENGALURU SEPT 11

    ರಾಜ್ಯದಲ್ಲಿನ ಪರಿಸರ ಹಾನಿಯನ್ನು ತುಂಬಲು ಪರಿಸರ ಆಯವ್ಯಯವನ್ನು ಪ್ರಾರಂಭಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

    ಅವರು ಇಂದು ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ಹುತಾತ್ಮರಿಗೆ ನಮನ ಸಲ್ಲಿಸಿ ಮಾತನಾಡುತ್ತಿದ್ದರು.

    ಪ್ರತಿ ವರ್ಷ ರಾಜ್ಯದಲ್ಲಿ ನಾಶವಾಗಿರುವ ಒಟ್ಟು ಹಸಿರು ಪ್ರದೇಶ ಎಷ್ಟು ಎಂಬುದನ್ನು ಅಂದಾಜಿಸುವ ವಿಧಾನ ಪ್ರಾರಂಭಿಸಬೇಕು. ಆಗ ಹಸಿರಿನ ಕೊರತೆ ಎಷ್ಟು ಎಂದೂ ಸಹ ಗೊತ್ತಾಗುತ್ತದೆ. ಪರಿಸರ ಆಯವ್ಯಯವನ್ನು ಪ್ರಾರಂಭಿಸಿದಾಗ ಮಾತ್ರ ಈ ನಷ್ಟವನ್ನು ತುಂಬಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿಗಳು ಹೇಳಿದರು.

    ಅರಣ್ಯ ನಮಗಿಂತ ಮೊದಲು ಅಸ್ತಿತ್ವದಲ್ಲಿದ್ದ ನೈಸರ್ಗಿಕ ಸಂಪತ್ತು. ಅರಣ್ಯ ನಮ್ಮ ಪೂರ್ವಿಕರು ಎಂಬ ಅಭಿಪ್ರಾಯ ನಮ್ಮಲ್ಲಿದೆ. ಪೂರ್ವಿಕರಿಗೆ ಭಕ್ತಿಭಾವದಿಂದ ನಮನ ಸಲ್ಲಿಸುವಂತೆಯೇ ಗಿಡಮರಗಳನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಅರಣ್ಯವಿಲ್ಲದೇ ಮನುಷ್ಯನ ಅಸ್ತಿತ್ವವಿರುತ್ತಿರಲಿಲ್ಲ. ಕಾಡಿಗೆ ನಾವು ಸದಾ ಋಣಿಯಾಗಿರಬೇಕು ಎಂದು ಬೊಮ್ಮಾಯಿ‌ ಹೇಳಿದರು.

    ಮನುಷ್ಯನ ಮೂಲ ಪ್ರಾರಂಭವಾಗಿದ್ದು ಅರಣ್ಯದಲ್ಲಿ.ಈಗ ನಾಗರಿಕತೆ ಬೆಳಿಸಿಕೊಂಡಿದ್ದೇವೆ. ಅರಣ್ಯ ನಾಶಕ್ಕೆ ನಾವು ಎಡೆ ಮಾಡಿಕೊಟ್ಟಿದ್ದೇವೆ. ನೈಸರ್ಗಿಕ ಸಂಪತ್ತಿನ ವಿಚಾರದಲ್ಲಿ ನಮಗೆ ಇರುವ ಮನೋಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಕಾಡಿಲ್ಲದೇ ಮಳೆ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮನುಷ್ಯನ ಅತಿಯಾಸೆಯಿಂದ ನಿಸರ್ಗ ನಾಶವಾಗುತ್ತಿದೆ. 2000 ವರ್ಷಗಳಲ್ಲಿ ನಾಶವಾಗುವಷ್ಟು ಅರಣ್ಯವನ್ನು ಕೇವಲ 20 ವರ್ಷಗಳಲ್ಲಿ ನಾಶ ಮಾಡಿದ್ದೇವೆ. ಪರಿಸರ ಹಾನಿಯ ವೇಗ ಅಷ್ಟು ತೀವ್ರಗೊಂಡಿದೆ. ಇದು ನಿಜಕ್ಕೂ ಭಯಾನಕವಾದ ಸಂಗತಿ ಎಂದರು.

    ಮುಂದಿನ ಜನಾಂಗಕ್ಕಾಗಿ ಅರಣ್ಯ ಸಂರಕ್ಷಿಸುವ ಅಗತ್ಯ ಮತ್ತು ಅನಿವಾರ್ಯತೆ ಇದೆ. ಅವಶ್ಯಕತೆಗಿಂತ ಹೆಚ್ಚು ನಿಸರ್ಗವನ್ನು ನಾಶಪಡಿಸಿದರೆ, ಭವಿಷ್ಯದಿಂದ ಕಳ್ಳತನ ಮಾಡಿದಂತೆ. ನಮ್ಮ ಹಿರಿಯರು ಇದನ್ನು ಉಳಿಸಿದ್ದರಿಂದ ಈ ಸಂಪತ್ತನ್ನು ನಾವು ಅನುಭವಿಸುತ್ತಿದ್ದೇವೆ. ಮುಂದಿನ ಜನಾಂಗದ ಪಾಲನ್ನು ನಾವೇ ಬಳಕೆ ಮಾಡಬಾರದು ಎಂಬ ಅರಿವಿನಿಂದ ಇಲಾಖೆ ಕೆಲಸ ಮಾಡಬೇಕು. ಆಗ ಮಾತ್ರ ಹುತಾತ್ಮರ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.

    ಅರಣ್ಯ ಸಂರಕ್ಷಣೆಯ ಸಲುವಾಗಿ ಅನೇಕರು ಹುತಾತ್ಮರಾಗಿದ್ದಾರೆ. ರಾಜ್ಯದ 43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯವಿದೆ. ಪ್ರಸ್ತುತ ಶೇ 21.5% ರಷ್ಟು ಅರಣ್ಯದ ಕೊರತೆ ಇದೆ. ಕಾಡುಗಳ್ಳರನ್ನು ನಿಯಂತ್ರಿಸಿ, ಕಾಡು, ಉಳಿಸಿ ಬೆಳೆಸುವ ಕ್ರಮಗಳನ್ನು ಕೈಗೊಳ್ಳಬೇಕು. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷವನ್ನು ಕಡಿಮೆ ಮಾಡಬೇಕು. ಗಡಿಗಳಲ್ಲಿ ನಾಗರಿಕರೂ ಸಹ ಪ್ರಾಣ ತೆತ್ತಿದ್ದಾರೆ.ಅವರ ಪ್ರಾಣ ಉಳಿಸುವುದೂ ಮುಖ್ಯ. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ಇಲಾಖೆಯ ಕಾರ್ಯಚಟುವಟಿಕೆ ವಿಸ್ತರಿಸಲಿ. ದಕ್ಷತೆಯಿಂದ ಕಾಡನ್ನು ಉಳಿಸುವ ಕೆಲಸವಾಗಲಿ. ಕರ್ತವ್ಯದಲ್ಲಿರುವವರ ಪ್ರಾಣ ಸಂರಕ್ಷಣೆಗೆ ಅಗತ್ಯ ಪರಿಕರಗಳನ್ನು ಒದಗಿಸಬೇಕೆಂದರು ಮುಖ್ಯಮಂತ್ರಿಗಳು ತಿಳಿಸಿದರು.

    ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಹಾಗೂ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

    error: Content is protected !!