29.2 C
Karnataka
Friday, May 22, 2026
    Home Blog Page 54

    ಅಧಿವೇಶನದ ಬಳಿಕ ರಾಜ್ಯ ಪ್ರವಾಸ,ಆಡಳಿತಕ್ಕೆ ಚುರುಕು: ಬಸವರಾಜ ಬೊಮ್ಮಾಯಿ

    DAVANGERE SEP 19

    ವಿಧಾನಮಂಡಲ ಅಧಿವೇಶನದ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ಆಡಳಿತಕ್ಕೆ ಚುರುಕು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಭಾನುವಾರ ದಾವಣಗೆರೆಯಲ್ಲಿ‌ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಈ ವಿಷಯ ತಿಳಿಸಿದರು.‌

    ರಾಜ್ಯ ಬಿಜೆಪಿ ಕಾರ್ಯಕಾರಣಿ ಅತ್ಯಂತ ಯಶಸ್ವಿಯಾಗಿದೆ. ಹಲವಾರು ವಿಚಾರಗಳ ಬಗ್ಗೆ ಇಲ್ಲಿ ಚರ್ಚೆಗಳು ನಡೆದಿವೆ ಎಂದರು.

    ಹಿಂದುಳಿದ ವರ್ಗಗಳ ಜಾತಿ ಪಟ್ಟಿಗೆ ಹೊಸ ಜಾತಿಗಳನ್ನು ಸೇರ್ಪಡೆ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ನೀಡಿರುವುದನ್ನು ಕಾರ್ಯಕಾರಣಿ ಸಭೆ ಸ್ವಾಗತಿಸಿತು.

    ಅಧಿವೇಶನದ ನಂತರ ರಾಜ್ಯಾದ್ಯಂತ ಸಂಚಾರ ಮಾಡಿ ಆಡಳಿತಕ್ಕೆ ಚುರುಕು ನೀಡಲಾಗುವುದು ಎಂದು ಅವರು ಹೇಳಿದರು.

    ದಾವಣಗೆರೆಯ ರಾಜ್ಯ ಕಾರ್ಯಕಾರಣಿ ಸಭೆ ಯಶಸ್ವಿಯಾಗಲು ಕಾರಣೀಭೂತರಾದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್ , ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ , ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಸಿಎಂ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು.


    ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಯಶಸ್ವಿಯಾಗಿದೆ.‌ ಇದರ ಯಶಸ್ಸು ಪಕ್ಷದ ಪ್ರತಿಯೊಬ್ಬ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಲ್ಲುತ್ತದೆ.

    ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು

    ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು

    ಸುಮಾ ವೀಣಾ

    ಕಣ್ಮಲರರಿಯದೆ ಮನಂ ಅರಿದುದು-ನೇಮಿಚಂದ್ರ   ಕವಿಯ ‘ಲೀಲಾವತಿ ಪ್ರಬಂಧ’ದಲ್ಲಿ ಉಲ್ಲೇಖವಾಗಿರುವ ಮಾತಿದು. ಕಣ್ಣರಿಯದಿದ್ದರೂ  ಮನಸ್ಸು,ಕರುಳು ಅರಿವುದು ಎಂಬ ಮಾತು   ಎಲ್ಲರಿಗು ತಿಳಿದಿರುವಂಥದ್ದೆ.  ಪ್ರತಿಭೆ ಎಂಬುದು ದೃಗ್ಗೋಚರವಲ್ಲ  ಹೃದ್ಗೋಚರ  ಎಂಬಂತೆ ಹೃದಯಕ್ಕೆ ತಿಳಿಯುವಂತಹ ಮಾತನ್ನು ಕುರಿತು ಈ ಮಾತಿದೆ.

    ಕಂಡದ್ದೆಲ್ಲವನ್ನು ಸಾಕ್ಷಿಯ ಹಿನ್ನೆಲೆಯಿಂದಲೇ ವಿವೇಚಿಸುತ್ತೇವೆ ಎಂದು ತೀರ್ಮಾನಕ್ಕೆ ಬರಲಾಗದು. ಮನಸ್ಸಿನ ಸೂಕ್ಷ್ಮ  ಸಂವೇದನೆಯ ಹಿನ್ನೆಲೆಯಿಂದಲೂ ಅವಲೋಕಿಸಬಹುದು.

    ಬುದ್ಧಿಯ ಮಾತು ಎಲ್ಲಾ ಸಂದರ್ಭಕ್ಕೂ ಹೊಂದಿಕೆ ಯಾಗುವುದಿಲ್ಲ.ಹೃದಯದಿಂದ  ಮನಸ್ಸಿನ ಸಂಚಲನಕ್ಕೆ ಆ ಭಾವಕ್ಕೆ ಸ್ಪಂದಿಸಲೇಬೇಕಾಗುತ್ತದೆ. ಸಂಬಂಧಗಳು ತಮಗೆ ತಿಳಿಯದಂತೆ ಅವಿನಾಭಾವ ಬಂಧವನ್ನು ಹೊಂದಿರುತ್ತದೆ.  ಮನುಷ್ಯ ಸಮಾಜ ಸುಸ್ಥಿತಿಯಲ್ಲಿ ಇರಬೇಕೆಂದರೆ  ಆತನ ಸಂಬಂಧದಲ್ಲಿಯೂ ಅನ್ಯೋನ್ಯತೆ ಇರಬೇಕು.

    ಕಣ್ಣಿಗೆ ಕಂಡಿದ್ದು ಸತ್ಯವಲ್ಲ. ಪರೀಕ್ಷಕ  ದೃಷ್ಟಿಯಿಂದ ವೀಕ್ಷಿಸಿದರೆ ಸತ್ಯಾಸತ್ಯತೆಗಳ ಅರಿವಾಗುತ್ತದೆ.  ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತನ್ನು ಇಲ್ಲಿ ಸಂವಾದಿಯಾಗಿ ನೋಡಬಹುದು. ಕಣ್ಣಿಗೆ ಕಂಡದ್ದೆಲ್ಲ ಸತ್ಯವೆಂದು  ಭಾವಿಸಲಾಗದು ಮೇಲ್ನೋಟಕ್ಕೆ ಸತ್ಯದ ಛಾಯೆ ಹೊಂದಿದ್ದರೂ  ಅದು ಸುಳ್ಳಾಗಬಹುದು ಹಾಗಾಗಿ ಯಾವುದೇ ವಿಚಾರದಲ್ಲಿ ಆತುರದ  ತೀರ್ಮಾನಕ್ಕೆ ಬಾರದೆ   ಸಂದರ್ಭವನ್ನು ಕೂಲಂಕಷವಾಗಿ  ಪರಿಶೀಲಿಸಬೇಕಾಗುತ್ತದೆ. ಯಾವುದೇ ತೀರ್ಮಾನಕ್ಕೆ ಬರಬೇಕಾದರೂ ಜಾಗೃತೆಯ ಎಚ್ಚರ ಬೇಕೆಂಬುದನ್ನು ಪ್ರಸ್ತುತ ಮಾತು ಹೇಳುತ್ತದೆ.

    ಯಾರೇ ಆಗಲಿ ವಿವೇಚನಾಯುಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ತಿಳಿವಿಗಿಂತ ತಾಳುವಿಕೆಗಿಂತ ಹೆಚ್ಚಿನದಿಲ್ಲ  ಅಲ್ವ!

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ನಾಳೆ ಸಂಜೆ 4ಗಂಟೆಗೆ ಸಿಇಟಿ ಫಲಿತಾಂಶ ಪ್ರಕಟ

    BENGALURU SEP 19

    ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಅಗಸ್ಟ್ 28, 29 & 30ರಂದು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ನಾಳೆ (ಸೋಮವಾರ) ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

    ಈ ಬಗ್ಗೆ ಹೇಳಿಕೆ ನೀಡಿರುವ ಅವರು; “ದಾಖಲೆಯ ಕಡಿಮೆ ಕಾಲಾವಧಿಯಲ್ಲೇ ಫಲಿತಾಂಶ ಪ್ರಕಟವಾಗುತ್ತದೆ. ಇದಕ್ಕಾಗಿ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದಾರೆ” ಎಂದು ಸಚಿವರು ಹೇಳಿದ್ದಾರೆ.

    ಫಲಿತಾಂಶವು ನಾಳೆ ಸಂಜೆ 4 ಗಂಟೆ ನಂತರ ಈ ಕೆಳಕಂಡ ಲಿಂಕ್ ನಲ್ಲಿ ಪ್ರಕಟವಾಗಲಿದೆ.

    https://cetonline.karnataka.gov.in/kea/

    ಚಳ್ಳಕೆರೆಯಲ್ಲಿ ಎಂಜಿನಿಯರಿಂಗ್ ಕಾಲೇಜು, ಜಿಟಿಟಿಸಿ ಕೇಂದ್ರಗಳ ಲೋಕಾರ್ಪಣೆ

    CHALLAKERE SEP 19

    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಅತ್ಯಾಧುನಿಕವಾಗಿ ನಿರ್ಮಾಣವಾಗಿರುವ ಎಂಜಿನಿಯರಿಂಗ್ ಕಾಲೇಜು ಹಾಗೂ ಸರಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC)ವನ್ನು ಶನಿವಾರ ಲೋಕಾರ್ಪಣೆ ಮಾಡಲಾಯಿತು.

    ಜತೆಗೆ, ಚಿತ್ರದುರ್ಗದ ಕಂಚಿಗನಾಳು ಗ್ರಾಮದಲ್ಲಿ 9.98 ಕೋಟಿ ರೂ. ನಿರ್ಮಿಸಲಾಗಿರುವ ನೂತನ ಜಿಟಿಟಿಸಿ ಕಟ್ಟಡವನ್ನೂ ಇಂದೇ ಉದ್ಘಾಟನೆ ಮಾಡಲಾಯಿತು.

    62.80 ಕೋಟಿ ರೂ. ವೆಚ್ಚದಲ್ಲಿ ತಾಂತ್ರಿಕ ಮಹಾ ವಿದ್ಯಾಲಯವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದ್ದು, ಈ ವರ್ಷದಿಂದಲೇ ಕಾರ್ಯಾರಂಭ ಮಾಡಲಾಗುವುದು. ಆರಂಭದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) & ಮಷಿನ್ ಲರ್ನಿಂಗ್ ಹಾಗೂ ಆಟೋಮೊಬೈಲ್ ಎಂಜಿನಿಯರಿಂಗ್ ಕೋರ್ಸ್ʼಗಳನ್ನು ಬೋಧಿಸಲಾಗುವುದು. ಈ ಎರಡೂ ಕೋರ್ಸುಗಳಿಗೆ 21ನೇ ಶತಮಾನದಲ್ಲಿ ಅಪಾರ ಬೇಡಿಕೆ ಇದೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದರು.

    ಹಾಗೆಯೇ, 25.64 ಕೋಟಿ ರೂ. ವೆಚ್ಚದಲ್ಲಿ ಜಿಟಿಟಿಸಿ ಕಟ್ಟಡ ವನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಮೊದಲ ವರ್ಷ ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಹಾಗೂ ಡಿಪ್ಲೊಮಾ ಇನ್ ಮೆಕ್ಯಾಟ್ರಾನಿಕ್ಸ್ ಕೋರ್ಸುಗಳು ಇರುತ್ತವೆ. ಮೂರು ವರ್ಷದ ಕಲಿಕೆ, ಒಂದು ವರ್ಷದ ಕೈಗಾರಿಕಾ ಇಂಟರ್ನಶಿಪ್ ಇರುತ್ತದೆ, ಈ ಇಂಟರ್ನಶಿಫ್ ವೇಳೆ 10ರಿಂದ 15 ಸಾವಿರ ವೇತನವೂ ಸಿಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

    ಆಟೋಮೊಬೈಲ್‌ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಆಗುತ್ತಿದ್ದು, ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರ ಉತ್ಪಾದನಾ ಪೂರಕ ಪ್ರೋತ್ಸಾಹಕ ಯೋಜನೆ ಅಡಿಯಲ್ಲಿ 26,000 ಕೋಟಿ ರೂ. ನೆರವು ನೀಡುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ತಾಂತ್ರಿಕ ಶಿಕ್ಷಣ ಭಾರೀ ಒತ್ತು ಸಿಗುತ್ತಿದೆ ಎಂದು ಸಚಿವರು ಹೇಳಿದರು.

    ಭವಿಷ್ಯದಲ್ಲಿ ಇಂಧನದಿಂದ ನಡೆಯುವ ವಾಹನಗಳು ಮರೆಯಾಗಿ ವಿದ್ಯುತ್‌ ಚಾಲಿತ ವಾಹನಗಳು ರಸ್ತೆಗಿಳಿಯುತ್ತವೆ. ಎಲೆಕ್ಟ್ರಿಕ್‌ ಬ್ಯಾಟರಿ, ವಾಹನದ ಬಿಡಿಭಾಗ ತಯಾರಿಕೆ ಕ್ಷೇತ್ರದಲ್ಲಿ ಅಪಾರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಆರಂಭಕ್ಕೆ ಮೊದಲೇ ಸೀಟು ಭರ್ತಿ:

    ಇಲ್ಲಿ ಈ ವರ್ಷದಿಂದಲೇ ಎರಡೂ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ನಡೆಯಲಿದೆ ಎಂದ ಸಚಿವರು, ಚಳ್ಳಕೆರೆ ಜಿಟಿಟಿಸಿಯಲ್ಲಿ 120 ಸೀಟುಗಳಿದ್ದು, 116 ಸೀಟುಗಳು ಭರ್ತಿಯಾಗಿವೆ ಎಂದು ನುಡಿದರು.

    ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡಬೇಕೆನ್ನುವ ಏಕೈಕ ಉದ್ದೇಶದಿಂದ ಜಾಗತಿಕ ಗುಣಮಟ್ಟಕ್ಕೆ ಒತ್ತು ನೀಡಲಾಗುತ್ತಿದೆ. ಚಳ್ಳಕೆರೆಯಲ್ಲಿ ಇಂದು ಆರಂಭವಾಗಿರುವ ಸಂಸ್ಥೆಗಳು ಸಾಮಾನು ಸಂಸ್ಥೆಗಳಲ್ಲ. ಇಲ್ಲಿ ಓದಿದವರಿಗೆ ಕೆಲಸ ಗ್ಯಾರಂಟಿ ಎಂದು ಅವರು ಹೇಳಿದರು.

    ಉಳಿದಂತೆ, ಇಲ್ಲಿನ ಜಿಟಿಟಿಸಿಯಲ್ಲಿ ೪೫೦ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಅಲ್ಪಾವಧಿ ತರಬೇತಿ ನೀಡುವ ಅವಕಾಶ ಇದೆ. ಈ ವಿಭಾಗದಲ್ಲಿ ತರಬೇತಿ ಪಡೆದರೂ ತಪ್ಪದೇ ಕೆಲಸ ಸಿಗುತ್ತದೆ. ಹೀಗಾಗಿ ಇಂಥ ಸಂಸ್ಥೆಗಳನ್ನು ಹೆಚ್ಚು ಹೆಚ್ಚಾಗಿ ಸ್ಥಾಪಿಸುವ ಉದ್ದೇಶ ಸರಕಾರದ್ದು ಎಂದು ಡಾ.ಅಶ್ವತ್ಥನಾರಾಯಣ ನುಡಿದರು.

    ಕೌಶಲ್ಯ ಮತ್ತು ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ ಅವರು ತರುತ್ತಿರುವ ಸುಧಾರಣೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಹಾಗೂ ಕೇಂದ್ರ ಸಾಮಾಜಿಕ ನ್ಯಾಯ & ಸಾಮಾಜಿಕ ಸಬಲೀಕರಣ ಖಾತೆ ಸಚಿವ ನಾರಾಯಣಸ್ವಾಮಿ ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ಕೋವಿಡ್ ಸಂದರ್ಭದಲ್ಲಿಯೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆಂದು ನುಡಿದರು.

    ಚಳ್ಳಕೆರೆಯಲ್ಲಿ ಹಬ್ಬದ ವಾತಾವರಣ:

    ತಾಂತ್ರಿಕ ಮಹಾವಿದ್ಯಾಲಯ ಹಾಗೂ ಜಿಟಿಟಿಸಿ ಉದ್ಘಾಟನೆ ವೇಳೆ ಇಡೀ ಚಳ್ಳಕೆರೆ ಪಟ್ಟಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಸಚಿವರಾದ ಡಾ.ಅಶ್ವತ್ಥನಾರಾಯಣ, ಶ್ರೀರಾಮಮುಲು, ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರನ್ನು ಬೃಹತ್ ಸೇಬಿನ ಹಾರ ಹಾಕುವುದರ ಮೂಲಕ ಪಟ್ಟಣದ ಜನರು ಬರ ಮಾಡಿಕೊಂಡರು. ಅಲ್ಲದೆ, ಅವರ ಮೇಲೆ ಪುಷ್ಪವೃಷ್ಟಿ ಮಾಡಿದರು.

    ಈ ಸಂದರ್ಭದಲ್ಲಿ ಚಳ್ಳಕೆರೆ ಶಾಸಕ ರಘುಮೂರ್ತಿ, ಹಿರಿಯೂರು ಶಾಸಕಿ ಪೂರ್ಣಿಮಾ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದ, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಸೇರಿದಂತೆ ಅನೇಕ ಗಣ್ಯರು ಇದ್ದರು.

    ಕಂಚಿಗನಾಳು ಜಿಟಿಟಿಸಿ ಕೂಡ ಆರಂಭ

    ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಂಚಿಗನಾಳು ಗ್ರಾಮದ ಜಿಟಿಟಿಸಿಯಲ್ಲೂ ಈ ವರ್ಷವೇ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲಾಗುತ್ತಿದ್ದು, ಮೊದಲ ವರ್ಷದಲ್ಲಿ ವರ್ಷ ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಹಾಗೂ ಡಿಪ್ಲೊಮಾ ಇನ್ ಮೆಕ್ಯಾಟ್ರಾನಿಕ್ಸ್ ಕೋರ್ಸುಗಳು ಇರುತ್ತವೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದರು.

    ಸಮಾಜದಲ್ಲಿ ವೈಟ್ ಕಾಲರ್ ಜಾಬ್ಗಳಂತೆ ಬ್ಲೂ ಕಾಲರ್ ಉದ್ಯೋಗಗಳು ಕೂಡ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಜಿಟಿಟಿಸಿಗಳಲ್ಲಿ ಅತ್ಯುತ್ತಮ ಕುಶಲತೆಯುಳ್ಳ ಬ್ಲೂ ಕಾಲರ್ ಮಾನವ ಸಂಪನ್ಮೂಲವನ್ನು ತಯಾರು ಮಾಡಲಾಗುವುದು ಎಂದು ಅವರು ವಿವರಿಸಿದರು.

    ಈ ಜಿಟಿಟಿಸಿಯನ್ನು ಕೇಂದ್ರ ಸಚಿವರಾದ ನಾರಾಯಣ ಸ್ವಾಮಿ ಅವರು ಲೋಕಾರ್ಪಣೆ ಮಾಡಿದರು. ಚಳ್ಳಕೆರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ನಿನ್ನೆ ಪ್ರತಿ ಗಂಟೆಗೆ 15 ಲಕ್ಷಕ್ಕೂ ಹೆಚ್ಚು ಡೋಸ್ ಗಳನ್ನು, ಪ್ರತಿ ನಿಮಿಷಕ್ಕೆ 26 ಸಾವಿರಕ್ಕೂ ಹೆಚ್ಚು ಡೋಸ್‌ಗಳನ್ನು ಮತ್ತು ಪ್ರತಿ ಸೆಕೆಂಡಿಗೆ 425 ಕ್ಕೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ: ಪ್ರಧಾನಿ

    NEW DELHI SEP 18

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೋವಾದ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಲಸಿಕೆ ಕಾರ್ಯಕ್ರಮದ ಫಲಾನುಭವಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು. ರಾಜ್ಯದ ಎಲ್ಲಾ ಅರ್ಹ ವಯಸ್ಕ ಜನತೆಗೆ ಮೊದಲ ಡೋಸ್ ಲಸಿಕೆ ನೀಡಿಕೆಯನ್ನು ಶೇ.100ರಷ್ಟು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಈ ಸಂವಾದ ಏರ್ಪಡಿಸಲಾಗಿತ್ತು.

    ಆರೋಗ್ಯ ಕಾರ್ಯಕರ್ತರು ಮತ್ತು ಫಲಾನುಭವಿಗಳೊಂದಿಗೆ ಸಂವಾದದ ವೇಳೆ ಪ್ರಧಾನಮಂತ್ರಿಯವರು ಗೋವಾ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ನಿತಿನ್ ಧುಪ್ದೇಲ್‌ ಅವರೊಂದಿಗೆ ಮಾತನಾಡಿ, ಕೋವಿಡ್ ಲಸಿಕೆಗಳನ್ನು ಪಡೆಯುವಂತೆ ಜನರನ್ನು ಮನವೊಲಿಸಿದ ಪರಿಯ ಬಗ್ಗೆ ವಿಚಾರಿಸಿದರು. ಕೋವಿಡ್ ಲಸಿಕೆ ಅಭಿಯಾನ ಮತ್ತು ಹಿಂದಿನ ಅಭಿಯಾನಗಳ ನಡುವಿನ ವ್ಯತ್ಯಾಸದ ಬಗ್ಗೆಯೂ ಅವರು ಚರ್ಚಿಸಿದರು. ಡಾ. ಧುಪ್ದೇಲ್‌ ಅವರು ಈ ನಿರ್ದಿಷ್ಟ ಅಭಿಯಾನದ ಸಮರೋಪಾದಿ ಕಾರ್ಯವಿಧಾನವನ್ನು ಶ್ಲಾಘಿಸಿದರು.

    ಈ ವೇಳೆ ವಿರೋಧ ಪಕ್ಷವನ್ನು ಟೀಕಿಸಿದ ಪ್ರಧಾನಿಯವರು 2.5 ಕೋಟಿ ಜನರಿಗೆ ಲಸಿಕೆ ನೀಡಿದ ಬಳಿಕ, ಲಸಿಕೆ ಪಡೆದವರ ಬದಲಿಗೆ ವಿರೋಧ ಪಕ್ಷದವರಲ್ಲಿ ಅಡ್ಡ ಪರಿಣಾಮಗಳು ಕಾಣಿಸಿಕೊಂಡದ್ದು ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿದರು. ಗೋವಾದಲ್ಲಿ ಅರ್ಹ ವಯಸ್ಕ ಜನರಿಗೆ ಶೇ.100ರಷ್ಟು ಮೊದಲ ಡೋಸ್ ಲಸಿಕೆ ನೀಡಿಕೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ವೈದ್ಯರು ಮತ್ತು ಇತರ ಕೊರೊನಾ ಯೋಧರನ್ನು ಪ್ರಧಾನಿ ಶ್ಲಾಘಿಸಿದರು. ಇದು ಇಡೀ ವಿಶ್ವಕ್ಕೆ ಸ್ಫೂರ್ತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕೋವಿಡ್ ಲಸಿಕೆ ಫಲಾನುಭವಿ ಮತ್ತು ಕಾರ್ಯಕರ್ತ ನಜೀರ್ ಶೇಖ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ಲಸಿಕೆಗಳನ್ನು ಪಡೆಯುವಂತೆ ಇತರರನ್ನು ಮನವೊಲಿಸಲು ತಾವು ನಿರ್ಧರಿಸಿದ್ದು ಹೇಗೆ ಎಂದು ವಿಚಾರಿಸಿದರು. ಲಸಿಕೆ ಕೇಂದ್ರಗಳಿಗೆ ಜನರನ್ನು ಕರೆದೊಯ್ಯುವಲ್ಲಿ ಎದುರಾಗಿರುವ ತೊಂದರೆಗಳ ಬಗ್ಗೆ ಅವರು ನಜೀರ್ ಅವರನ್ನು ಕೇಳಿದರು. ಲಸಿಕೆ ಅಭಿಯಾನದಲ್ಲಿ ನಜೀರ್ ಅವರ ಅನುಭವದ ಬಗ್ಗೆಯೂ ಪ್ರಧಾನಿ ಕೇಳಿದರು. ನಜೀರ್ ಶೇಖ್ ಅವರ ಪ್ರಯತ್ನದ ಮಾದರಿಯಲ್ಲೇ ‘ಸಬ್ ಕಾ ಪ್ರಯಾಸ್‌’ (ಸರ್ವರ ಶ್ರಮ) ಇಂತಹ ಅತ್ಯಂತ ಮಹತ್ವದ ಅಭಿಯಾನ ಯಶಸ್ವಿಯಾಗಲು ಪ್ರಮುಖ ಕಾರಣವಾಗಿದೆ ಎಂದು ಪ್ರಧಾನಿ ಹೇಳಿದರು. ದೇಶಾದ್ಯಂತ ಸಾಮಾಜಿಕ ಪ್ರಜ್ಞೆಯುಳ್ಳ ಕಾರ್ಯಕರ್ತರನ್ನು ಪ್ರಧಾನಿ ಶ್ಲಾಘಿಸಿದರು.

    ಸ್ವೀಮಾ ಫರ್ನಾಂಡಿಸ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಜನರು ಲಸಿಕೆಗಾಗಿ ತಮ್ಮ ಬಳಿ ಬಂದಾಗ ಅವರನ್ನು ಹೇಗೆ ವಿಚಾರಿಸಿದಿರಿ, ಏನೆಲ್ಲಾ ಪ್ರಶ್ನೆಗಳನ್ನು ಹಾಕಿದಿರಿ ಎಂದು ಕೇಳಿದರು. ಇದೇ ವೇಳೆ ಸ್ವೀಮಾ ಅವರು, ಲಸಿಕೆ ಸಂಗ್ರಹಕ್ಕೆ ಶೀತಲ ಸರಪಳಿಯನ್ನು ನಿರ್ವಹಿಸುವ ಹಂತಗಳನ್ನು ವಿವರಿಸಿದರು. ಲಸಿಕೆಗಳಿಗಾಗಿ ಅವರು ಶೀತಲ ಸರಪಳಿಯನ್ನು ಹೇಗೆ ನಿರ್ವಹಿಸುತ್ತಾರೆ ಎಂದು ಅವರು ವಿಚಾರಿಸಿದರು. ಒಂದೇ ಒಂದು ಲಸಿಕೆಯೂ ವ್ಯರ್ಥವಾಗದಂತೆ ಖಾತರಿಪಡಿಸಲು ಅವರು ಕೈಗೊಂಡ ಕ್ರಮಗಳ ಬಗ್ಗೆ ಪ್ರಧಾನಿ ವಿಚಾರಿಸಿದರು. ಕೌಟುಂಬಿಕ ಹೊಣೆಗಾರಿಕೆಗಳ ಹೊರತಾಗಿಯೂ ಆರೋಗ್ಯ ಕಾರ್ಯಕರ್ತರ ಕರ್ತವ್ಯ ನಿರ್ವಹಣೆ ಪರಿಯ ಬಗ್ಗೆ ಶ್ಲಾಘಿಸಿದ ಪ್ರಧಾನಿ, ಈ ನಿಟ್ಟಿನಲ್ಲಿ ಕೊರೊನಾ ಯೋಧರ ಎಲ್ಲಾ ಕುಟುಂಬಗಳು ಮಾಡಿದ ಪ್ರಯತ್ನಗಳಿಗಾಗಿ ಧನ್ಯವಾದ ಅರ್ಪಿಸಿದರು.

    ಶಶಿಕಾಂತ್ ಭಗತ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ನಿನ್ನೆ ತಮ್ಮ ಜನ್ಮದಿನದಂದು ತಮ್ಮ ಹಳೆಯ ಪರಿಚಯಸ್ಥರೊಬ್ಬರೊಂದಿಗೆ ಹೇಗೆ ಸಂವಾದ ನಡೆಸಿದರು ಎಂಬುದನ್ನು ಸ್ಮರಿಸಿದರು. ಆ ವ್ಯಕ್ತಿಯನ್ನು ಅವರ ವಯಸ್ಸಿನ ಬಗ್ಗೆ ಕೇಳಿದಾಗ, ‘ಅಭಿ 30 ಬಾಕಿ ಹೈನ್’ (ಇನ್ನೂ 30 ಬಾಕಿ ಇದೆ) ಎಂದು ಅವರು ಹೇಳಿದ್ದಾಗಿ ಪ್ರಧಾನಮಂತ್ರಿಯವರು ವಿವರಿಸಿದರು. 75 ವರ್ಷದ ಭಗತ್ ಅವರು ಕಳೆದುಹೋದ 75 ವರ್ಷಗಳ ಕಾಲ ಯೋಚಿಸಬಾರದು, ಆದರೆ ಮುಂಬರುವ 25 ವರ್ಷಗಳತ್ತ ಗಮನ ಹರಿಸಬೇಕು ಎಂದು ಮೋದಿ ಸಲಹೆ ನೀಡಿದರು. ಲಸಿಕೆ ಪಡೆಯುವ ಸಮಯದಲ್ಲಿ ಅವರು ಏನಾದರೂ ತೊಂದರೆಗಳನ್ನು ಎದುರಿಸಿದರೇ ಎಂದು ವಿಚಾರಿಸಿದರು.

    ಹಿರಿಯ ನಾಗರಿಕರಿಗೆ ಸರಕಾರ ನೀಡಿದ ಆದ್ಯತೆಯ ಬಗ್ಗೆ ಭಗತ್ ತೃಪ್ತಿ ವ್ಯಕ್ತಪಡಿಸಿದರು. ಅವರು ಮಧುಮೇಹಿಯಾಗಿದ್ದರೂ ಯಾವುದೇ ಅಡ್ಡ ಪರಿಣಾಮಗಳನ್ನು ಎದುರಿಸದ ಕಾರಣ, ಲಸಿಕೆಗಳ ಅಡ್ಡ ಪರಿಣಾಮಗಳ ಭಯವನ್ನು ಸಹ ಅವರು ತಳ್ಳಿಹಾಕಿದರು. ನಿವೃತ್ತ ಮಾರಾಟ ತೆರಿಗೆ ಅಧಿಕಾರಿ ಭಗತ್ ಅವರ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ತೆರಿಗೆ ಕ್ಷೇತ್ರ ಸೇರಿದಂತೆ ಜನರ ಜೀವನ ಸುಗಮತೆಯನ್ನು ಹೆಚ್ಚಿಸಲು ಸರಕಾರ ಬದ್ಧವಾಗಿದೆ ಎಂದರು.

    ಸ್ವೀಟಿ ಎಸ್.ಎಂ. ವೆಂಗೂರ್ಲೆಕರ್‌ ಅವರೊಂದಿಗೆ ಮಾತನಾಡಿದ ಪ್ರಧಾನಿ ದೂರದ ಪ್ರದೇಶಗಳಲ್ಲಿ ʻಲಸಿಕೆ ಉತ್ಸವʼವನ್ನು ಆಯೋಜಿಸಿದ್ದು ಹೇಗೆಂದು ವಿಚಾರಿಸಿದರು. ಲಸಿಕೆ ಉತ್ಸವ ಆಯೋಜಿಸಲು ಕಾರಣವಾದ ಅಂಶದ ಬಗ್ಗೆ ಅವರು ಕೇಳಿದರು. ಸಾಂಕ್ರಾಮಿಕದ ಸಮಯದಲ್ಲಿ ನಾಗರಿಕರಿಗೆ ಸಾಧ್ಯವಾದಷ್ಟು ಲಸಿಕೆ ಲಭ್ಯತೆಯನ್ನು ಸುಲಭಗೊಳಿಸುವತ್ತ ಗಮನ ಹರಿಸಲಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಅಂತಹ ಬೃಹತ್ ಅಭಿಯಾನದಲ್ಲಿ ಅಗತ್ಯ ದಾಖಲೀಕರಣ ಮತ್ತು ವಸ್ತುಗಳ ಸೂಕ್ತ ಸಾಗಣೆ, ನಿರ್ವಹಣೆಗೆ ಗಮನ ಹರಿಸಲು ಪ್ರಧಾನಿ ಸೂಚಿಸಿದರು.

    ದೃಷ್ಟಿ ವಿಕಲಚೇತನ ಫಲಾನುಭವಿ ಸುಮೇರಾ ಖಾನ್ ಅವರ ಲಸಿಕೆಯ ಅನುಭವದ ಬಗ್ಗೆ ಪ್ರಧಾನಿ ವಿಚಾರಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಶ್ರೀಮತಿ ಖಾನ್ ಅವರ ಸಾಧನೆಗಳನ್ನು ಶ್ಲಾಘಿಸಿದ ಪ್ರಧಾನಿ, ಐಎಎಸ್ ಅಧಿಕಾರಿಯಾಗುವ ಅವರ ಆಕಾಂಕ್ಷೆಗೆ ಶುಭ ಹಾರೈಸಿದರು. ದೇಶದ ದಿವ್ಯಾಂಗ ನಾಗರಿಕರು ನಡೆಸುತ್ತಿರುವ ಸ್ಫೂರ್ತಿದಾಯಕ ಜೀವನದ ಬಗ್ಗೆ ಶ್ರೀ ಮೋದಿ ಶ್ಲಾಘಿಸಿದರು.

    ಪ್ರಧಾನಮಂತ್ರಿಯವರ ಭಾಷಣ

    ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಗಣೇಶ ಹಬ್ಬದ ಶುಭ ಋತುವಿನಲ್ಲಿ ʻಅನಂತ ಸುತ್ರ್ʼ (ರಕ್ಷಣೆ) ಸಾಧಿಸಿದ್ದಕ್ಕಾಗಿ ಗೋವಾದ ಜನರನ್ನು ಶ್ಲಾಘಿಸಿದರು. ಗೋವಾದ ಪ್ರತಿಯೊಬ್ಬ ಅರ್ಹ ವ್ಯಕ್ತಿಯೂ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿರುವ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು. “ಕೊರೊನಾ ವಿರುದ್ಧದ ಹೋರಾಟದಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ. ʻಎಕ್‌ ಭಾರತ್ -ಶ್ರೇಷ್ಠ್ ಭಾರತ್ʼ ಪರಿಕಲ್ಪನೆಯನ್ನು ಪ್ರತಿಬಿಂಬಿಸುವ ಗೋವಾದ ಪ್ರತಿಯೊಂದು ಸಾಧನೆಯೂ ನನಗೆ ಬಹಳ ಸಂತೋಷವನ್ನು ಉಂಟುಮಾಡುತ್ತದೆ”, ಎಂದು ಪ್ರಧಾನಿ ಹೇಳಿದರು.

    ಈ ಮಹತ್ವದ ಸಾಧನೆಯ ದಿನದಂದು ಮನೋಹರ್ ಪರಿಕ್ಕರ್ ಅವರ ಸೇವೆಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು.

    ಕಳೆದ ಕೆಲವು ತಿಂಗಳಲ್ಲಿ ಭಾರಿ ಮಳೆ, ಚಂಡಮಾರುತ, ಪ್ರವಾಹದಂತಹ ನೈಸರ್ಗಿಕ ವಿಪತ್ತುಗಳೊಂದಿಗೆ ಗೋವಾ ದಿಟ್ಟವಾಗಿ ಹೋರಾಡಿದೆ ಎಂದು ಪ್ರಧಾನಿ ಹೇಳಿದರು. ಈ ನೈಸರ್ಗಿಕ ವಿಪತ್ತುಗಳ ನಡುವೆ ಕೊರೊನಾ ಲಸಿಕೆಯ ವೇಗವನ್ನು ಕಾಯ್ದುಕೊಂಡಿದ್ದಕ್ಕಾಗಿ ಎಲ್ಲಾ ಕೊರೊನಾ ಯೋಧರು, ಆರೋಗ್ಯ ಕಾರ್ಯಕರ್ತರು ಮತ್ತು ಗೋವಾ ತಂಡವನ್ನು ಅವರು ಶ್ಲಾಘಿಸಿದರು.

    ಸಾಮಾಜಿಕ ಮತ್ತು ಭೌಗೋಳಿಕ ಸವಾಲುಗಳನ್ನು ಎದುರಿಸುವಲ್ಲಿ ಗೋವಾ ತೋರಿದ ಸಮನ್ವಯದ ಪರಿಯ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ಸದೂರ ಪ್ರದೇಶವಾದ ಕ್ಯಾನಕೋನಾ ಉಪ ವಿಭಾಗದಲ್ಲಿ ಕಂಡುಬಂದ ಲಸಿಕೀಕರಣದ ವೇಗವು ರಾಜ್ಯದ ಉಳಿದ ಭಾಗಗಳಿಗೆ ಮಾದರಿಯಾಗಿದೆ. “ಗೋವಾ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ, ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್‌’ನ ಶ್ರೇಷ್ಠ ಫಲಿತಾಂಶಗಳನ್ನು ಪ್ರದರ್ಶಿಸಿದೆ” ಎಂದು ಅವರು ಹೇಳಿದರು.

    ಈ ವೇಳೆ ಕೊಂಚ ಭಾವುಕರಾದ ಪ್ರಧಾನಮಂತ್ರಿಯವರು “ನಾನು ಅನೇಕ ಜನ್ಮದಿನಗಳನ್ನು ನೋಡಿದ್ದೇನೆ ಮತ್ತು ಅವುಗಳ ಬಗ್ಗೆ ಸದಾ ನನಗೆ ನಿರಾಸಕ್ತಿ. ಆದರೆ ನನ್ನ ಇದುವರೆಗಿನ ಎಲ್ಲಾ ಜನ್ಮದಿನಗಳ ಪೈಕಿ, ನಿನ್ನೆ ನನ್ನನ್ನು ತೀವ್ರ ಭಾವುಕಗೊಳಿಸಿದ ದಿನವಾಗಿತ್ತು,” ಎಂದು ಹೇಳಿದರು. ದೇಶ ಮತ್ತು ಕೊರೊನಾ ಯೋಧರ ಪ್ರಯತ್ನಗಳು ನಿನ್ನೆಯ ಜನ್ಮದಿನವನ್ನು ಮತ್ತಷ್ಟು ವಿಶೇಷವಾಗಿಸಿದವು ಎಂದರು. 2.5 ಕೋಟಿ ಜನರಿಗೆ ಲಸಿಕೆ ಹಾಕಿದ ತಂಡದ ಸಹಾನುಭೂತಿ, ಸೇವೆ ಮತ್ತು ಕರ್ತವ್ಯ ಪ್ರಜ್ಞೆಯನ್ನು ಅವರು ಶ್ಲಾಘಿಸಿದರು. “ಪ್ರತಿಯೊಬ್ಬರೂ ಸಂಪೂರ್ಣವಾಗಿ ಸಹಕರಿಸಿದರು, ಇದನ್ನು ತಾವು ಮಾಡುವ ಸೇವೆ ಎಂದು ತಿಳಿದರು. ಅವರ ಸಹಾನುಭೂತಿ ಮತ್ತು ಕರ್ತವ್ಯ ನಿಷ್ಠೆಯೇ ಒಂದೇ ದಿನದಲ್ಲಿ 2.5 ಕೋಟಿ ಲಸಿಕೆಯ ಈ ಮಹಾನ್‌ ಸಾಧನೆಯನ್ನು ಸಾಧ್ಯವಾಗಿಸಿತು” ಎಂದು ಭಾವುಕ ದನಿಯಲ್ಲೇ ಪ್ರಧಾನಿ ಹೇಳಿದರು.

    ವೈದ್ಯಕೀಯ ಕ್ಷೇತ್ರದ ಜನರ ಕೊಡುಗೆಯನ್ನು ಪ್ರಧಾನಿ ಶ್ಲಾಘಿಸಿದರು. ಕಳೆದ ಎರಡು ವರ್ಷಗಳಿಂದ ತಮ್ಮ ಜೀವಗಳನ್ನು ಲೆಕ್ಕಿಸದೆ ಕೊರೊನಾ ವಿರುದ್ಧ ಹೋರಾಡಲು ದೇಶವಾಸಿಗಳಿಗೆ ಸಹಾಯ ಮಾಡುತ್ತಿರುವುದಕ್ಕಾಗಿ ಹಾಗೂ ನಿನ್ನೆಯ ದಾಖಲೆಯ ಲಸಿಕೆಗಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕ್ಷೇತ್ರದ ಜನರು ಇದನ್ನು ತಮ್ಮ ಸೇವೆ ಎಂದು ಭಾವಿಸಿದರು. ಅವರ ಸಹಾನುಭೂತಿ ಮತ್ತು ಕರ್ತವ್ಯ ನಿಷ್ಠೆಯಿಂದಲೇ ಒಂದೇ ದಿನ 2.5 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲು ಸಾಧ್ಯವಾಗಿದೆ ಎಂದರು. ಹಿಮಾಚಲ ಪ್ರದೇಶ, ಗೋವಾ, ಚಂಡೀಗಢ ಮತ್ತು ಲಕ್ಷದ್ವೀಪಗಳು ಅರ್ಹ ಜನಸಂಖ್ಯೆಗೆ ಮೊದಲ ಡೋಸ್ ಪೂರ್ಣಗೊಳಿಸಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಸಿಕ್ಕಿಂ, ಅಂಡಮಾನ್ ನಿಕೋಬಾರ್, ಕೇರಳ, ಲಡಾಖ್, ಉತ್ತರಾಖಂಡ್ ಮತ್ತು ದಾದ್ರಾ ನಾಗರ್‌ಹವೇಲಿ ಸಹ ಈ ನಿಟ್ಟಿನಲ್ಲಿ ಸಾಕಷ್ಟು ಸಾಧನೆ ಮಾಡಿವೆ ಎಂದರು.

    ಭಾರತವು ಮೊದಲೇ ಚರ್ಚಿಸಿ ಪೂರ್ವಯೋಜನೆ ಮಾಡದಿದ್ದರೂ ತನ್ನ ಲಸಿಕೆ ಪ್ರಯತ್ನಗಳಲ್ಲಿ ಪ್ರವಾಸಿ ತಾಣಗಳಿಗೆ ಆದ್ಯತೆ ನೀಡಿದೆ ಎಂದು ಪ್ರಧಾನಿ ಹೇಳಿದರು. ಏಕೆಂದರೆ ನಮ್ಮ ಪ್ರವಾಸೋದ್ಯಮ ತಾಣಗಳು ತೆರೆಯುವುದು ಮುಖ್ಯವಾಗಿತ್ತು. ವಿದೇಶಿ ಪ್ರವಾಸಿಗರನ್ನು ಪ್ರೋತ್ಸಾಹಿಸಲು ಕೇಂದ್ರ ಸರಕಾರ ಇತ್ತೀಚೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಭಾರತಕ್ಕೆ ಭೇಟಿ ನೀಡುವ 5 ಲಕ್ಷ ಪ್ರವಾಸಿಗರಿಗೆ ಉಚಿತ ವೀಸಾ ನೀಡಲು ನಿರ್ಧರಿಸಲಾಗಿದೆ. ಪ್ರವಾಸೋದ್ಯಮ ವಲಯದಲ್ಲಿನ ವ್ಯಕ್ತಿಗಳಿಗೆ ಸರಕಾರದ ಖಾತರಿಯೊಂದಿಗೆ 10 ಲಕ್ಷದವರೆಗೆ ಸಾಲ ನೀಡಲು ಮತ್ತು ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳಿಗೆ 1 ಲಕ್ಷದವರೆಗೆ ಸಾಲ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

    ಗೋವಾ ಪ್ರವಾಸೋದ್ಯಮ ಕ್ಷೇತ್ರವನ್ನು ಹೆಚ್ಚು ಆಕರ್ಷಕಗೊಳಿಸುವ ಮತ್ತು ರಾಜ್ಯದ ರೈತರು ಮತ್ತು ಮೀನುಗಾರರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಪ್ರಯತ್ನಗಳಿಗೆ ‘ಡಬಲ್ ಎಂಜಿನ್ ಸರಕಾರ’ ಶಕ್ತಿ ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು. ʻಮೋಪಾ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣʼ ಮತ್ತು 12 ಸಾವಿರ ಕೋಟಿ ಹಂಚಿಕೆಯೊಂದಿಗೆ 6 ಲೇನ್ ಹೆದ್ದಾರಿ, ಉತ್ತರ ಮತ್ತು ದಕ್ಷಿಣ ಗೋವಾವನ್ನು ಸಂಪರ್ಕಿಸುವ ಜುವಾರಿ ಸೇತುವೆ ಕೆಲವೇ ತಿಂಗಳುಗಳಲ್ಲಿ ಉದ್ಘಾಟನೆಯಾಗಲಿದೆ, ಇದು ರಾಜ್ಯದಲ್ಲಿ ಸಂಪರ್ಕವನ್ನು ಹೆಚ್ಚಿಸುತ್ತಿದೆ ಎಂದರು.

    ʻಸ್ವಾತಂತ್ರ್ಯದ ಅಮೃತ ಕಾಲʼದಲ್ಲಿ ʻಆತ್ಮನಿರ್ಭರತೆʼ ಸಾಧಿಸಲು ಗೋವಾ ರಾಜ್ಯವು ʻಸ್ವಯಂ ಪೂರ್ಣ ಗೋವಾʼ ಸಂಕಲ್ಪವನ್ನು ಕೈಗೊಂಡಿದ್ದು, 50ಕ್ಕೂ ಹೆಚ್ಚು ಉತ್ಪನ್ನಗಳನ್ನು ಸ್ಥಳೀಯವಾಗಿ ತಯಾರಿಸಲು ಶುರು ಮಾಡಿದೆ ಎಂದು ಶ್ರೀ ಮೋದಿ ಹೇಳಿದರು. ರಾಜ್ಯಾದ್ಯಂತ ಸರ್ವರಿಗೂ ಶೌಚಾಲಯ, ನೂರಕ್ಕೆ ನೂರು ಪ್ರತಿಷತ ವಿದ್ಯುದೀಕರಣದ ಸಾಧನೆಯನ್ನು ಮತ್ತು ‘ಹರ್ ಘರ್ ಜಲ್’ ಅಭಿಯಾನದ ಮಹಾನ್ ಪ್ರಯತ್ನವನ್ನು ಅವರು ಒತ್ತಿ ಹೇಳಿದರು. ದೇಶವು 2 ವರ್ಷಗಳಲ್ಲಿ 5 ಕೋಟಿ ಕುಟುಂಬಗಳಿಗೆ ಕೊಳವೆ ನೀರಿನ ಸಂಪರ್ಕ ನೀಡಿದೆ. ಈ ನಿಟ್ಟಿನಲ್ಲಿ ಗೋವಾದ ಪ್ರಯತ್ನಗಳು ಉತ್ತಮ ಆಡಳಿತ ಮತ್ತು ಸುಗಮ ಜನಜೀವನಕ್ಕೆ ರಾಜ್ಯದ ಆದ್ಯತೆಯನ್ನು ಸ್ಪಷ್ಟಪಡಿಸುತ್ತವೆ ಎಂದರು. ಬಡ ಕುಟುಂಬಗಳಿಗೆ ಪಡಿತರ, ಉಚಿತ ಅನಿಲ ಸಿಲಿಂಡರ್, ʻಪಿಎಂ ಕಿಸಾನ್ ಸಮ್ಮಾನ್ ನಿಧಿʼ ವಿತರಣೆ, ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಮರೋಪಾದಿಯಲ್ಲಿ ʻಕಿಸಾನ್ ಕ್ರೆಡಿಟ್ ಕಾರ್ಡ್‌ʼಗಳ ವಿಸ್ತರಣೆ ಮತ್ತು ಬೀದಿ ವ್ಯಾಪಾರಿಗಳಿಗೆ ಸ್ವಾನಿಧಿ ಯೋಜನೆಯ ಪ್ರಯೋಜನಗಳನ್ನು ಒದಗಿಸುವಲ್ಲಿ ಗೋವಾದ ಪ್ರಯತ್ನಗಳನ್ನು ಪ್ರಧಾನಿ ವಿವರಿಸಿದರು. ಗೋವಾವನ್ನು ಅಪರಿಮಿತ ಸಾಧ್ಯತೆಗಳ ರಾಜ್ಯ ಎಂದು ಬಣ್ಣಿಸಿದ ಪ್ರಧಾನಿ, “ಗೋವಾ ಕೇವಲ ದೇಶದ ಒಂದು ರಾಜ್ಯವಲ್ಲ, ಅದೊಂದು ಬ್ರಾಂಡ್ ಇಂಡಿಯಾದ ಬಲವಾದ ಹೆಗ್ಗುರುತಾಗಿದೆ, ” ಎಂದರು.

    ನಂದಿನಿ ಹೆದ್ದುರ್ಗ ಅವರ ರತಿಯ ಕಂಬನಿ ಕವನ ಸಂಕಲನ ಭಾನುವಾರ ಲೋಕಾರ್ಪಣೆ

    BENGALURY SEP 18

    ಹೆಸರಾಂತ ಕವಯತ್ರಿ ಹಾಗೂ ಕನ್ನಡಪ್ರೆಸ್.ಕಾಮ್ ನ ಲೇಖಕ ಬಳಗದಲ್ಲಿ ಒಬ್ಬರಾಗಿರುವ ನಂದಿನಿ ಹೆದ್ದುರ್ಗ ಅವರ ಮೂರನೇ ಕವನ ಸಂಕಲನ ‘ರತಿಯ ಕಂಬನಿ’ ನಾಳೆ ಭಾನುವಾರ ಸೆಪ್ಬೆಂಬರ್ 19ರಂದು ಬೆಂಗಳೂರಿನ ಎನ್ ಆರ್ ಕಾಲೋನಿಯಲ್ಲಿರುವ ಬಿ ಎಮ್ ಶ್ರೀ ಸಭಾಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ.

    ಹಿರಿಯ ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಅಧ್ಯಕ್ಷತೆಯ ವೇದಿಕೆ ಕಾರ್ಯಕ್ರಮದಲ್ಲಿ ಕವಯಿತ್ರಿ ಎಚ್ ಎಲ್ ಪುಷ್ಪ ಅವರು ಕೃತಿ ಬಿಡುಗಡೆ ಮಾಡಲಿದ್ದು ಕೃತಿಯ ಕುರಿತು ಕವಿ ಹಾಗು ಕಥೆಗಾರರಾದ ಬಿ ಎಮ್ ಹನೀಫ್ ಅವರು ಮಾತಾನಾಡುತ್ತಾರೆ. ಕಾರ್ಯಕ್ರಮ ಬೆಳಿಗ್ಗೆ 10.30 ರಿಂದ ಆರಂಭವಾಗುತ್ತದೆ.

    ವಾಗೀಶ್ ಹೆಗಡೆಯವರ ಅಂದದ ಮುಖಪುಟವಿರುವ ಸಂಕಲನವನ್ನು ಹಿರಿಯ ಪತ್ರಕರ್ತರಾದ ಆರ್ ಪೂರ್ಣಿಮಾ ಅವರ ವಿಕಾಸ ಪ್ರಕಾಶನ ಹೊರತರುತ್ತಿದ್ದು ಪುಸ್ತಕದ ಮುಖಬೆಲೆ ನೂರೈವತ್ತು ರೂಪಾಯಿಗಳು.

    ಹೆಸರಾಂತ ಬರಹಗಾರ ಮತ್ತು ಹಿರಿಯ ಪತ್ರಕರ್ತ ಜೋಗಿ ಈ ಕವನ ಸಂಕಲನಕ್ಕೆ ಬರೆದಿರುವ ಬೆನ್ನುಡಿ ಹೀಗಿದೆ :

    ಪ್ರೇಮ, ವಿರಹ, ವ್ಯಾಮೋಹ ಮತ್ತು ಕಾಮದ ಕುರಿತು ಬರೆಯುವುದು ಸಾಧ್ಯವೇ ಇಲ್ಲ ಎಂಬಂಥ ಕಾವ್ಯಪರಿಸರದಲ್ಲಿ, ನಂದಿನಿ ಹೆದ್ದುರ್ಗ ಬರೆದಿರುವ ಕವಿತೆಗಳು ಗಂಡುಹೆಣ್ಣಿನ ಸಂಬಂಧದ ಸಂಕೀರ್ಣತೆಯನ್ನು ಕಟ್ಟಿಕೊಡುತ್ತವೆ. ಕನ್ನಡದ ಮಟ್ಟಿಗೆ ಪ್ರೇಮವನ್ನು ಮತ್ತೊಂದು ಎತ್ತರಕ್ಕೆ ಒಯ್ದಿರುವ ಕವಿತೆಗಳು ಈ ಸಂಕಲನದಲ್ಲಿವೆ.

    ಪ್ರೇಮದ ಕುರಿತು ಹೇಳುತ್ತಲೇ ಅದನ್ನು ಕಾವ್ಯಕ್ಕೆ, ಬದುಕಿಗೆ ಮತ್ತು ನಶ್ವರತೆಗೆ ಒಗ್ಗಿಸುವಂಥ ರೂಪಕಗಳು ಮತ್ತೆ ಮತ್ತೆ ಎದುರಾಗುವುದನ್ನು ಈ ಪದ್ಯಗಳಲ್ಲಿ ಕಾಣಬಹುದು. ಬೊಗಸೆ ನೋವನ್ನು ಕಡ ಕೇಳುವ ಆತ್ಮವಿಶ್ವಾಸ , ಉಮೆಯನ್ನೂ ಉಮರನನ್ನೂ ಅಮರರನ್ನಾಗಿಸುವ ರೀತಿ, ಕವಿತೆಯ ಜೊತೆ ಸಫಲ ಪ್ರೇಮದ ನಿಟ್ಟುಸಿರನ್ನೂ ಅಘಟಿತ ಪ್ರಣಯದ ಚೀತ್ಕಾರವನ್ನೂ ತಳುಕುಹಾಕುವ ರೀತಿ- ಈ ಕವಿತೆಗಳನ್ನು ಮಧುರಗೊಳಿಸುತ್ತಲೇ ಹುರಿಗೊಳಿಸಿದೆ.

    ಪ್ರತಿಭಟನೆ, ನೋವು, ಸಮಾನತೆ, ಅಸಹಾಯಕತೆ. ಶೋಷಣೆ ಮತ್ತು ಅಧ್ಯಾತ್ಮಿಕತೆಯೇ ಕಾವ್ಯದ ವಸ್ತುವಾಗುತ್ತಿರುವ ಈ ದಿನಮಾನದಲ್ಲಿ ನಂದಿನಿ ಹೆದ್ದುರ್ಗ ಕವಿತೆಗಳು ತಮ್ಮ ಅಭಿವ್ಯಕ್ತಿಯ ವೈಶಿಷ್ಟ್ಯದಿಂದ ಬೇರೆಯಾಗಿ ನಿಲ್ಲುತ್ತವೆ. ಅವರು ಬೇಂದ್ರೆಯವರ ಜೋಗಿ ಕವಿತೆಯ ನಾಯಕಿಯಂತೆ, ಕಿನ್ನರಿ ನುಡಿಸುವ ಮರುಳಸಿದ್ಧನ ರಾಣಿಯಂತೆ ಈ ಕವಿತೆಗಳ ಕನ್ನಡಿಯಲ್ಲಿ ನನಗೆ ಕಾಣಿಸುತ್ತಾರೆ. ಕಾವ್ಯದ ಮರುಳುತನ, ಉತ್ಕಟತೆ, ಮುಕ್ತತೆ- ಮೂರೂ ಬೆರೆತ ಈ ಪದ್ಯಗಳ ಓದು ನನ್ನನ್ನು ಆಕಸ್ಮಿಕ ಪ್ರೇಮದಂತೆ ಮುದಗೊಳಿಸಿದೆ.

    ಎಲ್ಲೆಲ್ಲಿ ಸಿಗುತ್ತದೆ ?

    ನವಕರ್ನಾಟಕ ,ಅಂಕಿತ ಮತ್ತು ಇತರ ಪುಸ್ತಕ ಮಳಿಗೆಗಳಲ್ಲಿ ಸಂಕಲನ ಲಭ್ಯವಿರುತ್ತದೆ.ಆನ್ ಲೈನ್ ಖರೀದಿಗಾಗಿ navakanataka.com, booksloka.com,bookmaadi.com,rutumana.com ಇಲ್ಲಿ ಸಂಪರ್ಕಿಸಬಹುದು ಎಂದು ಪ್ರಕಾಶಕರು ತಿಳಿಸಿದ್ದಾರೆ.

    ಐಟಿ ಸಿಟಿಗೆ ಇನ್ನೊಂದು ಖಾಸಗಿ ವಿಶ್ವವಿದ್ಯಾಲಯ


    BENGALURU SEPT 16

    ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಸಬಲೀಕರಣ ಮಾಡುತ್ತಲೇ ಗುಣಮಟ್ಟದ ಶಿಕ್ಷಣಕ್ಕೂ ಸರಕಾರ ಗಣನೀಯ ಪ್ರೋತ್ಸಾಹ ನೀಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿಂದು ರಾಜ್ಯಪಾಲರಾದ ಥಾವರಚಂದ್ ಗೆಹಲೋತ್ ಅವರು ಅವರು ʼವಿದ್ಯಾಶಿಲ್ಪʼ ವಿಶ್ವವಿದ್ಯಾಲಯವನ್ನು ಲೋಕಾರ್ಪಣೆ ಮಾಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಎಲ್ಲೇ ಆಗಲಿ, ಗುಣಮಟ್ಟದ ಶಿಕ್ಷಣಕ್ಕೆ ಸರಕಾರ ಆದ್ಯತೆ ನೀಡಲಿದೆ ಎಂದರು.

    ಇಡೀ ದೇಶದಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವೃತ್ತಿಪರ ಶಿಕ್ಷಣ ಬೋಧನೆ ಮಾಡಲು ಅವಕಾಶ ಮಾಡಿಕೊಟ್ಟ ದೇಶದ ಮೊತ್ತ ಮೊದಲ ರಾಜ್ಯ ಕರ್ನಾಟಕ. ಸರಕಾರಿ ಸಂಸ್ಥೆಗಳ ಜತೆ ಜತೆಯಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಗುಣಮಟ್ಟದ ಶಿಕ್ಷಣಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿವೆ ಎಂದು ಸಚಿವರು ಪ್ರತಿಪಾದಿಸಿದರು.

    ಗುಣಮಟ್ಟದ ಶಿಕ್ಷಣಕ್ಕೆ ಕರ್ನಾಟಕ ಅನ್ವರ್ಥ. ದೇಶದಲ್ಲೇ ಮುಂಚೂಣಿಯಲ್ಲಿರುವ ನಮ್ಮ ರಾಜ್ಯದ ಸಶಕ್ತ ಶೈಕ್ಷಣಿಕ ವ್ಯವಸ್ಥೆಗೆ ಹೊಸ ಸೇರ್ಪಡೆ ವಿದ್ಯಾಶಿಲ್ಪ ವಿವಿ. ಇಡೀ ಬೆಂಗಳೂರು ನಗರವನ್ನೇ ಒಂದು ಕ್ಲಾಸ್ ರೂಂ ನಂತೆ ಸಂಸ್ಥೆ ನೋಡುತ್ತಿದೆ. ಇದು ಅತ್ಯಂತ ಉತ್ತಮ ಪರಿಕಲ್ಪನೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

    ಇಂಥ ದೂರದೃಷ್ಟಿ ಯೋಚನೆಗಳಿಂದ ವಿದ್ಯಾಶಿಲ್ಪ ವಿವಿ ಚೆನ್ನಾಗಿ ಬೆಳೆಯತ್ತದೆ ಎನ್ನುವ ವಿಶ್ವಾಸ ನನಗಿದೆ. ಇಂಥ ಪ್ರಯತ್ನಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಕೂಡ ಪೂರಕವಾಗಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

    ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ವಿವಿಯ ನೂತನ ಲೋಗೋ ಬಿಡುಗಡೆ ಮಾಡಿ ಮಾತನಾಡಿದರು.

    ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ವಿದ್ಯಾಶಿಲ್ಪ ವಿವಿ ಕುಲಪತಿ ಡಾ.ಪಿ.ದಯಾನಂದ ಪೈ, ಸಹ ಕುಲಪತಿ ಡಾ.ಕಿರಣ್ ಪೈ ಹಾಗೂ ಉಪ ಕುಲಪತಿ ಪ್ರೊ.ವಿಜಯನ್ ಇಮ್ಯಾನುಯಲ್ ಮುಂತಾದವರು ಹಾಜರಿದ್ದು ಮಾತನಾಡಿದರು.

    ಮಾನ್ವಿಯ ಮುನಿಪುಂಗವ


    ಸ್ಥಂಭಮಂದಿರವಾಸಿ ಮಾನವಿಯ ಮಾನನೀಯ ಶ್ರೀಜಗನ್ನಾಥದಾಸರ
    ಆರಾಧನಾ ಪ್ರಯುಕ್ತ ಈ ಲೇಖನ


    ವಿದ್ಯಾಶ್ರೀ ಕಟ್ಟಿ

    ಸಂತರ, ಮಹಂತರ, ಭಾಗವತರ, ಸಜ್ಜನರ, ಹರಿದಾಸರ ಒಲವು, ಚೆಲುವು, ಗೆಲುವು, ನಲಿವು, ಸೊಬಗು, ಮನುಷ್ಯ ಜನ್ಮದ ಸಾರ್ಥಕತೆ, ಎಲ್ಲವೂ ಭಗವಂತನ ಸಾಕ್ಷಾತ್ಕಾರದಲ್ಲಿಯೇ ಅವರು ಕಾಣುವುದು. ಇದಕ್ಕೆ ಅಗತ್ಯ ವಾಗಿ ಬೇಕಾದುದು ಭಕ್ತಿ ಮಾರ್ಗ. ಇದೇ ಹರಿದಾಸರ ದಾಸಸಿದ್ಧಾಂತ.

    ಹರಿದಾಸ ಸಾಹಿತ್ಯವು ಆಚಾರ್ಯ ಮಧ್ವರಿಂದ ಪ್ರೇರಣೆಗೊಂಡು, ಶ್ರೀ ನರಹರಿತೀರ್ಥರಿಂದ ಮುದಗೊಂಡು, ಶ್ರೀಪಾದರಾಜರಿಂದ ಸರಳ, ಸುಲಭ ಕನ್ನಡದಲ್ಲಿ ಹದಗೊಂಡು, ಗುರುವ್ಯಾಸರಿಂದ ಶೋಧಿಸಿ, ಪುರಂದರದಾಸರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರಾದಿಯಾಗಿ ಮುಂತಾದ ಅಪರೋಕ್ಷ ಹರಿದಾಸರುಗಳಿಂದ ಪುಂಖಾನುಪುಂಖವಾಗಿ, ಪದಪದ್ಯಗಳಿಂದ ತುಂಬಿ, ಭೋರ್ಗರೆವ ಜಲಪಾತದಂತೆ, ಧುಮ್ಮಿಕ್ಕಿ ಭರದಿಂದ ಬಂದು, ಜನಮನವಷ್ಟೇ ಅಲ್ಲ ಇಡೀ ಮನುಕುಲವೇ ಮಿಂದು ಪವಿತ್ರವಾಗುವ ಪಾವನಗಂಗೆಯಾಗಿ ದಾಸಸಾಹಿತ್ಯವು ಹರಿದು ಬಂತು.

    ಅವನೇ ಸಖ ಅವನೇ ಸುಖ

    ವಿದ್ವನ್ಮಣಿಗಳ ಸೊತ್ತಾಗಿದ್ದ ಸಂಸ್ಕೃತವನ್ನು ಸರಳ ಕನ್ನಡಕ್ಕಿಳಿಸಿ ಜನಸಾಮಾನ್ಯರಿಗೆ ಭಕ್ತಿಸಾಹಿತ್ಯವನ್ನು ತಲುಪಿಸಿದವರು ಹರಿದಾಸರು. ‘ಅವನೇ ಸಖ, ಅವನೇ ಸುಖ’ ಎಂಬುದನ್ನು ಅರಿತಿದ್ದ ಹರಿದಾಸರು ಸಾಧನೆಗೆ ಸಂಸಾರ ಅಡ್ಡಿಯಲ್ಲ ಎಂಬುದನ್ನೂ ನಮಗೆ ತೋರಿಸಿಕೊಟ್ಟರು. ದಾಸರು ನುಡಿದ ಅಣಿಮುತ್ತಿನ ಓಳಗಾಳುಗಳೆಲ್ಲ ಕೀರ್ತನೆಗಳಾದವು.

    ನಡೆದಾಡಿದ ಮಾರ್ಗವು ಸನ್ಮಾರ್ಗಕ್ಕೆ ದಾರಿತೋರಿತು.
    ಅವರು ಕಡುಕಷ್ಟದಿ ಪರದಾಡಿದ ರೀತಿ ಪರಿಪಕ್ವವಾಗಿ ಭಗವಂತನ ನೈವೇದ್ಯಕ್ಕೆ ಪಕ್ವಾನ್ನವಾಯಿತು.ಜನಸಾಮಾನ್ಯರಿಗೆ ಹರಿದಾಸಸಾಹಿತ್ಯ ಮೃಷ್ಟಾನ್ನವಾಯಿತು.ಭಕ್ತಿಸಾಹಿತ್ಯ ಜನಸಾಮಾನ್ಯರಿಗೆ ತಲುಪಲು ಕೀರ್ತನಸಾಹಿತ್ಯ ಸಲಭ ಹಾಗೂ ಶ್ರೇಷ್ಠ ಸಾಧನವಾಯಿತು.

    ರಂಗನೊಲಿದ ರಂಗೋಲಿ ಪ್ರಿಯ ದಾಸರು

    ಭಾಗವತ ಧರ್ಮಕ್ಕೆ ನವಚೈತನ್ಯ ಕೊಟ್ಟ ಶ್ರೀ ಜಗನ್ನಾಥದಾಸರು ಶ್ರೀನಿವಾಸನ ಪರಮಾನುಗ್ರಹದಿಂದ ಹುಟ್ಟಿದವರು. ಬೆಟ್ಟದೊಡೆಯನ ಪರಮ ಭಕ್ತರಾದ ನರಸಿಂಹದಾಸರು ಹಾಗೂ ಲಕ್ಷ್ಮಮ್ಮ ಎಂಬ ಸಾತ್ವಿಕ ದಂಪತಿಗಳಿಗೆ ಜನಿಸಿದರು.ಮಾನವಿಯಿಂದ ಸುಮಾರು ಹದಿನಾಲ್ಕು ಕಿ.ಮಿ.ದೂರವಿರುವ ಬ್ಯಾಗವಾಟ ಗ್ರಾಮ ಶ್ರೀ ಜಗನ್ನಾಥದಾಸರು ಜನಿಸಿದ ಭವ್ಯಸ್ಥಳ. ಅಲ್ಲಿ ದಾಸರು ನಿತ್ಯ ಪೂಜಿಸುತ್ತಿದ್ದ ಹನುಮಂತದೇವರ ಮಹಿಮಾನ್ವಿತ ಸನ್ನಿಧಿಯಿದೆ.(ಇವರ ಕಾಲ 1727-1809) .

    ಕಾಶಿಕ್ಷೇತ್ರಕೆ ಸಮವೆನಿಸಿದ ಮಾನವಿ ಕ್ಷೇತ್ರ

    ಶ್ರೀಜಗನ್ನಾಥದಾಸರು ಮಾನವಿ ಕ್ಷೇತ್ರ ಇವರಿಂದ ಕಾಶಿಕ್ಷೇತ್ರಕೆ ಸಮವೆನಿಸಿತು.ಶ್ರೀಜಗನ್ನಾಥದಾಸರು ವದ್ದೆ ಮಡಿಯ ಮೇಲೆ ಕುಳಿತು “ಹರಿಕಥಾಮೃತಸಾರ” ರಚಿಸುತ್ತಿರಬೇಕಾದರೆ ಅಕ್ಷರಾಭಿಮಾನಿ ದೇವತೆಗಳು ನಮ್ಮ ಸರದಿ ಯಾವಾಗ ಬರುತ್ತದೆ ಎಂದು ಸರತಿ ಸಾಲಲ್ಲಿ ನಾಮುಂದು ನೀಮುಂದು ಎಂದು ಕಾಯುತ್ತಾ ನಿಲ್ಲುತ್ತಿದ್ದರಂತೆ. ಹಾಗೆ ದೇವತೆಗಳು ಶ್ರೀಹರಿಯ ಸಾಕ್ಷಾತ್ ಸನ್ನಿಧಾನವಿಲ್ಲದೆ ಅವರು ಹೇಗೆ ನಿಲ್ಲಲು ಸಾಧ್ಯ? ಶ್ರೀಲಕ್ಷ್ಮೀನರಸಿಂಹದೇವರ ಅನುಗ್ರಹದ ಸಾಕ್ಷಿಯಾಗಿ ದಾಸರು ಹರಿಕಥಾಮೃತಸಾರ ಬರೆದದ್ದು ಅಲ್ಲವೇ? ಹಾಗೇ ಸಾಕ್ಷಾತ್ ದೇವತೆಗಳು ನಿಂತ ಜಾಗ ಸ್ಥಂಭಮಂದಿರವಾಸಿ ಶ್ರೀಜಗನ್ನಾಥದಾಸರು ಇರುವ ಸ್ಥಳ ಸಾಮಾನ್ಯವಾದುದಲ್ಲ. ಶ್ರೀಜಗನ್ನಾಥದಾಸರು ಅಲ್ಲಿ ನೆಲೆನಿಂತು ನಮ್ಮನ್ನು ಅನುಗ್ರಹಿಸುತ್ತಾ ಮಾನವಿಗೆ ಮನ್ನಣೆ ತಂದುಕೊಟ್ಟವರು.

    ಶ್ರೀ ಸುಮತೀಂದ್ರತೀರ್ಥರು, ಜಗನ್ನಾಥದಾಸರ ತಂದೆಯವರಾದ ಶ್ರೀನರಸಿಂಹದಾಸರ ಪಾಂಡಿತ್ಯ, ಭಕ್ತಿಗೆ ಮೆಚ್ಚಿ ಅತ್ಯಂತ ಸಂತೋಷಭರಿತರಾಗಿ ತಮ್ಮ ಬಳಿಯಿದ್ದ ಶ್ರೀ ನೃಸಿಂಹದೇವರ ವಿಗ್ರಹವನ್ನೂ, ಸಾಲಿಗ್ರಾಮವನ್ನೂ ಕೊಟ್ಟಿದ್ದಾರೆ. ಇಂದಿಗೂ ಶ್ರೀ ಜಗನ್ನಾಥದಾಸರ ಸನ್ನಿಧಾನದಲ್ಲಿ ನಾವು ಕಾಣಬಹುದು. ಲಕ್ಷ್ಮೀನರಸಿಂಹದೇವರ ವಿಶೇಷವಾದ ಸನ್ನಿಧಾನವಿಲ್ಲಿದೆ.

    ಮಾನ್ವಿ ಕ್ಷೇತ್ರದ ಸುತ್ತಮುತ್ತಲೇ ವಿಜಯದಾಸರು,ಶ್ರೀಗೋಪಾಲದಾಸರು, ಶ್ರೀಪುರಂದರದಾಸರು, ಶಾಮಸುಂದರದಾಸರು, ಅಸ್ಕಿಹಾಳ ಗೋವಿಂದದಾಸರು, ಗುರುಜಗನ್ನಾಥದಾಸರು, ಪ್ರಾಣೇಶದಾಸರು ಒಬ್ಬರಾ ಇಬ್ಬರಾ ಹರಿದಾಸರ ತಂಡೋಪತಂಡವೇ ನೆಲೆಸಿದ, ಬದುಕಿ ಬಾಳಿದ, ನಡೆದಾಡಿದ, ಭಗವಂತನ ಮಹಿಮೆಗಳನ್ನು ಜೀವನದ ಮೂಲಕ, ಕೃತಿಗಳ ಮೂಲಕ, ತೋರಿದ ಬಹು ಪುಣ್ಯವಾದ ತಪೋಭೂಮಿ ಈ ಮಾನವಿ. ಹಾಗಾಗಿಯೇ ಇದು ಎಲ್ಲ ಹರಿದಾಸರು ನಲಿದಾಡುವ ಹರಿದಾಸರ ತೊಟ್ಟಿಲು, ಹರಿದಾಸರ ತವರೂರೆಂದೇ ಸಿದ್ಧಪ್ರಸಿದ್ಧ.

    ಮಹಾನ್ ಪಂಡಿತರು

    ಶ್ರೀನಿವಾಸ ನಾಮಾಂಕಿತರಾದ ಇವರು ಸುಮಾರು ಎಂಟನೇ ವಯಸ್ಸಿನಲ್ಲಿಯೇ ‘ ವರದೇಂದ್ರ ಪಂಚರತ್ನ’ ಎಂಬ ಐದು ಶ್ಲೋಕ ರಚಿಸಿ ಅವರ ಮೆಚ್ಚಿನ ಶಿಷ್ಯರಾಗಿದ್ದರು. ಪುಣೆಯಲ್ಲಿ ನಡೆದ ವಿದ್ವತ್ ಸಭೆಯಲ್ಲಿ ಪ್ರತಿವಾದಿಗಳನ್ನು ಜಯಿಸಿ ಆಚಾರ್ಯ ಎಂಬ ಬಿರುದು ಪಡೆದು ಅಂದಿನಿಂದ ಶ್ರೀನಿವಾಸಾಚಾರ್ಯರಾದರು.

    ಕೆಲಸಮಯ ಮಾನವ ಸಹಜವಾದ ಗರ್ವ ಅವರಲ್ಲಿ ಮನೆ ಮಾಡಿತ್ತು. ಎಲ್ಲವೂ ಹರಿಚಿತ್ತ. ಸಂಸ್ಕೃತ ಪಂಡಿತರಾಗಿದ್ದ ಇವರಿಗೆ ಕನ್ನಡ ಪದಪದ್ಯಗಳು ಸರಿಕಾಣುತ್ತಿರಲಿಲ್ಲ. ದಾಸರು ತಾಳತಂಬೂರಿಯೊಂದಿಗೆ ಲಜ್ಜೆ ಬಿಟ್ಟು ಗೆಜ್ಜೆ ಕಟ್ಟಿ, ದೇವರನಾಮಗಳನ್ನು ಹೇಳುತ್ತಾ ಭಕ್ತಿಬಾವಪರವಶರಾಗಿ ಕುಣಿಯುತ್ತಾ ಕೇರಿಯೊಳಗೆ ಬರುವವರನ್ನು ಕಂಡರೆ ತಾತ್ಸಾರ ಮಾಡುತ್ತಿದ್ದರು.

    ಹೀಗಿರುವಾಗ ಒಂದು ದಿನ ಶ್ರೀ ವಿಜಯದಾಸರು, ಶ್ರೀನಿವಾಸಾಚಾರ್ಯರಿಗೆ ಗೌರವಪೂರ್ವಕವಾಗಿ ಭೋಜನಕ್ಕೆ ಆಮಂತ್ರಣವಿತ್ತಿದ್ದರು. ಶ್ರೀವಿಜಯಾಸರ ಪರಮ ಶಿಷ್ಯರಾಗಿದ್ದ ‘ಭಕ್ತಿಯಲಿ ಭಾಗಣ್ಣ’ರೆಂದೇ ಸಿದ್ಧಪ್ರಸಿದ್ಧರಾದ ಶ್ರೀಗೊಪಾಲದಾಸರು ಕರೆಯಲು ಬಂದಿದ್ದರು. ಆಗ ಶ್ರೀನಿವಾಸಾಚಾರ್ಯರು ” ಕೂಸೀಮಗ ದಾಸನೋ, ಅವನ ಕೀರ್ತನೆಯೋ” ಎಂದು ಅವಹೇಳನ‌ಮಾಡಿದ್ದಲ್ಲದೇ ನನಗೆ ಸಮಯಕ್ಕೆ ಸರಿಯಾಗಿ ಭೋಜನ ಮಾಡದಿದ್ದರೆ ಉದರಶೂಲೆ ಬರುತ್ತದೆ, ಬರಲಾಗದು ಎಂದು ಇವರಿಗೆ ಹೇಳಿದಾಗ, ಶ್ರೀಗೋಪಾಲದಾಸರು ‘ಸರಿ ಹಾಗೆಯೇ ಆಗಲಿ’ ಎಂದಿದ್ದರು. ಶ್ರೀನಿವಾಸಾಚಾರ್ಯರ ಈ ನಡುವಳಿಕೆಯಿಂದ ವಿಜಯದಾಸರು ಕಿಂಚಿತ್ತೂ ಬೇಸರ ಮಾಡಿಕೊಂಡಿರಲಿಲ್ಲ. ಆದರೆ ಗುರುಗಳ ಬಗ್ಗೆ ತಾತ್ಸಾರದಿಂದ ಆಡಿದ ಮಾತಿಗೆ ನೊಂದ ಶ್ರೀಗೋಪಾಲದಾಸರು ಉಪವಾಸಗೈದಿದ್ದರು.

    ವಿಜಯದಾಸರನ್ನು ನಿಂದಿಸಿದ ಫಲವೋ, ಹರಿಭಕುತರನ್ನು ಅವಮಾನಿಸಿದ ಫಲವೋ ಎಂಬಂತೆ ನಿಜವಾಗಿಯೂ ಪ್ರಾಣಹಿಂಡುವಂತಹ ಉದರಶೂಲೆ ಶ್ರೀನಿವಾಸಾಚಾರ್ಯರಿಗೆ ಬಂದೇ ಬಿಟ್ಟಿತು. ದಿನದಿಂದ ದಿನಕ್ಕೆ ಉದರಶೂಲೆ ಉಲ್ಬಣಿಸತೊಡಗಿ ಶ್ರೀನಿವಾಸಾಚಾರ್ಯರು ತುತ್ತು ಅನ್ನ ಸೇರದೇ ಕೃಶವಾಗತೊಡಗಿದರು. ಏನು ಮಾಡಿದರೂ ಕಡಿಮೆಯಾಗಲಿಲ್ಲ. ಯಾವ ಪ್ರಾರ್ಥನೆಯು ಫಲಿಸಲಿಲ್ಲ. ಅದಕ್ಕೇ ಹೇಳುವುದು ಸಜ್ಜನರನ್ನು ನಿಂದಿಸಬಾರದು. ಯಾರನ್ನೂ ಅವಹೇಳನ ಮಾಡಬಾರದು, ಅಹಂಕಾರ ಮಾಡಬಾರದು ಎನ್ನುವ ಸಂದೇಶ ನಮಗೆಲ್ಲರಿಗೂ ಪಾಠವಾಗಲೆಂದೇ ಭಗವಂತನ ಈ ಲೀಲೆಯಲ್ಲವೇ?

    ನೋವಿನಿಂದ ಬಳಲುತ್ತ ಕಂಗಾಲಾಗಿದ್ದ ಶ್ರೀನಿವಾಸಾಚಾರ್ಯರು, ರಾಯರಲ್ಲಿ ಪ್ರಾರ್ಥಿಸಿದಾಗ, ಮೊದಲೇ ಕರುಣಾಳುಗಳಾದ ರಾಯರು ಸ್ವಪ್ನದಲ್ಲಿ ಕಾಣಿಸಿಕೊಂಡು, ಶ್ರೀವಿಜಯದಾಸರ ಬಳಿ ಕ್ಷಮೆ ಕೇಳದ ಹೊರತು ವ್ಯಾಧಿ ವಾಸಿಯಾಗಲು ಸಾಧ್ಯವಿಲ್ಲ ಎಂಬಂತೆ ಸೂಚಿಸಿ ಮಂತ್ರಾಕ್ಷತೆಯನ್ನು ನೀಡಿದರು. ಸ್ವಪ್ನದಲ್ಲಿ ನೀಡಿದ ಮಂತ್ರಾಕ್ಷತೆ ನಿಜವಾಗಿಯೂ ತಮ್ಮ ಬಳಿ ಇದ್ದುದ ಕಂಡು, “ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ” ಎನ್ನುವ ಭಾವದಲ್ಲಿ ಚೀಕಲಪರ್ವಿಗೆ ಬರುತ್ತಾರೆ. ಅಷ್ಟೊತ್ತಿಗಾಗಲೇ ಉದರಶೂಲೆಯ ನೋವಿನಿಂದ ಇವರ ಮನಸ್ಸಿನಲ್ಲಿರುವ ಅಹಂಕಾರವೆಲ್ಲವೂ ಕರಗಿತ್ತು.

    ವಿಜಯದಾಸರನ್ನು ಕಂಡೊಡನೆಯೇ ಭಕ್ತಿಯಿಂದ ನಮಸ್ಕರಿಸಿದರು. ಸದಾ ಸಮಾಧಾನಚಿತ್ತರಾಗಿರುತ್ತಿದ್ದ ಶ್ರೀ ವಿಜಯದಾಸರು ಅತ್ಯಂತ ಅಂತಃಕರಣದಿಂದ ಶ್ರೀನಿವಾಸಾಚಾರ್ಯರ ಮೈದಡವಿ ಸಮಾಧಾನ ಮಾಡಿದರು. ಇದು ನನ್ನಿಂದಲೂ ಆಗದ ಕೆಲಸ, ನೀನು ಕೂಡಲೇ ಭಾಗಣ್ಣನಿರುವ ಉತ್ತನೂರಿಗೆ ಹೋಗಿ, ಅಲ್ಲಿ ತಮ್ಮ ಶಿಷ್ಯ ಗೋಪಾಲದಾಸರನ್ನು ಕಾಣುವಂತೆ ಹೇಳಿಕಳಿಸಿದರು.

    ಅದೇ ಹೊತ್ತಿನಲ್ಲಿ ತಮ್ಮ ಪ್ರಿಯಶಿಷ್ಯ ಶ್ರೀಗೋಪಾಲದಾಸರಿಗೆ,
    ಈ ಶ್ರೀನಿವಾಸನಿಗೆ ಅಪಮೃತ್ಯು ಕಾದಿದೆ. ನಿನ್ನ ಆಯಸ್ಸಿನಲ್ಲಿ ನಲವತ್ತು ವರುಷ ಆಯುರ್ದಾನ ಮಾಡಿ, ಉಲ್ಬಣಿಸಿರುವ ಉದರ ರೋಗಪರಿಹಾರ ಮಾಡಬೇಕೆನ್ನುವ ಗುರುಗಳ ಸೂಚನೆ ಗೋಪಾಲದಾಸರಿಗಾಗಲೇ ತಿಳಿದಿತ್ತು.

    ತ್ರಿಕಾಲ ಜ್ಞಾನಿಗಳಾದ, ಗಣೇಶಾಂಶ ಸಂಭೂತರಾದ ಶ್ರೀಗೋಪಾಲದಾಸರು, ಶ್ರೀನಿವಾಸಾಚಾರ್ಯರ ಉದರಶೂಲೆ ಪರಿಹಾರವಾಗಲು ಧನ್ವಂತರಿಯಲ್ಲಿ ಪ್ರಾರ್ಥಿಸುತ್ತಾರೆ. “ಎನ್ನ ಬಿನ್ನಪ ಕೇಳೋ ಧನ್ವಂತರಿ ದಯಮಾಡೋ ಸಣ್ಣವನು ಇವ ಕೇವಲ, ಬನ್ನ ಬಡಿಸುವ ರೋಗವನ್ನು ಮೋಚನೆ ಮಾಡಿ ಚೆನ್ನಾಗಿ ಪಾಲಿಸುವುದು” ಎಂದು ಗೋಪಾಲದಾಸರು ಹೇಳುವ ಈ ಸಂದರ್ಭ ಕಣ್ಣೆದುರು ಬಂದಂತಾಗುತ್ತದೆ. ಶ್ರೀನಿವಾಸಾಚಾರ್ಯರ ಮೇಲೆ ಅದೆಷ್ಟು ಅಂತಃಕರಣದಿಂದ “ಸಣ್ಣವನು” ಅನ್ನುವ ಶಬ್ದ ಬಳಸಿದ್ದಾರೆ. ಇದು ಅವರಿಗಿಂತ ಚಿಕ್ಕವನು ಎಂದು ತೋರುವುದರ ಜೊತೆಗೆ ಪುಟ್ಟ ಸಹೋದರನ ಮೇಲಿರುವಂತಹ, ಅಂತಃಕರಣ, ಮಮತೆಯನ್ನೂ ತೋರಿಸುತ್ತದಲ್ಲವೇ?

    ಆಗಿನ ಕಾಲಕ್ಕೇನು ವಾಟ್ಸಪ್, ಫೋನ್, ಮೆಸೆಜು ಏನಾದರೂ ಇತ್ತಾ? ಒಂದೂರಿನಿಂದ ಇನ್ನೊಂದು ಕಡೆ ನಡೆದೇ ಹೋಗಬೇಕು. ಎಲ್ಲವೂ ಬೆರಳ ತುದಿಯಲ್ಲಿರುವ ಈಗಿನ‌ ಕಾಲದಲ್ಲಿ ಇರುವ ಎಲ್ಲ ಸಂಬಂಧಗಳೂ ದೂರವಾಗುತ್ತಿವೆ. ಮಾಡಬೇಕಾದ ಕೆಲಸಗಳನ್ನು ಮರೆತು, ಮಾಡಬಾರದ್ದೆಲ್ಲವನ್ನು ಮಾಡುತ್ತಿರುತ್ತೇವೆ.

    ಗುರುಶಿಷ್ಯರ ಸಂಬಂಧ ಎಂತಹದ್ದು? ಗುರುಗಳು ತಮ್ಮ ಶಿಷ್ಯನಿಗೆ ನಿನ್ನ ಆಯಸ್ಸಿನಲ್ಲಿ ನಲವತ್ತು ವರುಷ ದಾನ ಮಾಡು ಎಂದು ಹೇಳುವುದು ಅಂದರೇನು? ಇವರು ಸಾಕ್ಷಾತ್ ಧನ್ವಂತರಿ ದೇವರನ್ನು ಪ್ರಾರ್ಥಿಸಿ ರೋಗ ಪರಿಹಾರ ಮಾಡುವುದೆಂದರೇನು?

    ಜೋಳದರೊಟ್ಟಿಯಲ್ಲಿ ನಲವತ್ತು ವರುಷ ಆಯಸ್ಸು ಹಾಕಿಕೊಡುವುದೆಂದರೇನು?ಇದೆಲ್ಲ ನೋಡಿದಾಗ ಇವರಾರು ಅವರಿಗಾಗಿ ಪ್ರಾರಬ್ಧದಿಂದ ಜನಿಸಿದವರಲ್ಲ.ನಮ್ಮಂತಹ ಅಸಹಾಯಕರ, ಪಾಮರರ, ಸಜ್ಜನರ, ಉದ್ಧಾರಕ್ಕಾಗಿ‌ ಜನಿಸಿದವರೆಂದು ಸ್ಪಷ್ಟವಾಗಿ ತಿಳಿಯುತ್ತದೆ.ನಾವು ಇರುವಷ್ಟೂ ದಿನ ಭೂಮಿಗೆ ಭಾರವಾಗಿಯೇ ಇರುತ್ತೇವೆ. ಇವರೆಲ್ಲ ನಮ್ಮಂತಹ ಪಾಮರರನ್ನು ಉದ್ಧರಿಸಲು, ಭಕ್ತರನ್ನು ರಕ್ಷಿಸಲು, ಭಗವತ್ಸಂಕಲ್ಪದಂತೆ ಭೂಮಿಗೆ ಬಂದ ದೇವತೆಗಳಲ್ಲದೇ ಮತ್ತೇನು?

    ಒಂದು ಜನ್ಮದಲ್ಲಿ ಹಿರಣ್ಯಕಶಿಪುವಿನ ಪುತ್ರರಾಗಿ ಶ್ರೀಪ್ರಹ್ಲಾದರಾಜರ ಅನುಜರಾಗಿ ಶ್ರೀ ಪ್ರಹ್ಲಾದರಾಜರೇ, ಮುಂದೆ ದ್ವಾಪರಯುಗದಲ್ಲಿ ಶ್ರೀ ಶಲ್ಯರಾಜನಾಗಿ ಅವತಾರ ಮಾಡಿ ದುರ್ಯೋಧನನ ದುಷ್ಟಾನ್ನ ಭುಂಜಿಸಿದ ಫಲವಾಗಿ ಈಗಿನ ಜನುಮದಲ್ಲಿ ಅಹಂಕಾರ ಪ್ರಾಪ್ತಿಯಾಗಿತ್ತೇನೋ, ಹಾಗೇಯೇ ಶಲ್ಯರಾಜರಾಗಿದ್ದಾಗ ಸಾಕ್ಷಾತ್ತಾಗಿ ಶ್ರೀಕೃಷ್ಣನ ದರುಶನ ಮಾಡಿದ ಪುಣ್ಯದಿಂದ ಶ್ರೀಜಗನ್ನಾಥದಾಸರಾಗಿ ಹರಿಕಥಾಮೃತವನ್ನು ಈ ಮನುಕುಲಕ್ಕೆ ಕೊಟ್ಟಿರುವರು.
    ಶ್ರೀನಿವಾಚಾಚಾರ್ಯರ ಸ್ವರೂಪ ಶ್ರೀ ವಿಜಯದಾಸರು, ಗೋಪಾಲದಾಸರು ತಿಳಿದವರೇ ಆಗಿದ್ದರಲ್ಲವೇ, ಶ್ರೀನಿವಾಸಾಚಾರ್ಯರು ಮುಂದೆ ಸಾಧನೆ ಮಾಡುವ ಸಲುವಾಗಿಯೇ ಆಯುರ್ದಾನ ಮಾಡಿಸಿದ , ಶ್ರೀ ಗೋಪಾಲದಾಸರು ಮಾಡಿದ ಪರಿ , ಹುಲುಮಾನವರಾದ ನಾವು ಹೇಗೆ ವರ್ಣಿಸಲು ಸಾಧ್ಯ?

    ಶ್ರೀನಿವಾಸಾಚಾರ್ಯರು ಶ್ರೀಜಗನ್ನಾಥದಾಸರಾದದ್ದು

    ಮುಂದೆ ಶ್ರೀನಿವಾಸಾಚಾರ್ಯರು ಗೋಪಾಲದಾಸರ ಪರಮಾಪ್ತರಾದರು.
    ದಾಸತ್ವ ಮೈತುಂಬಿತು. ಭಗವಂತನ ಕರುಣೆ, ಸ್ಮರಣೆ ಉಸಿರಾಯಿತು.
    ಶ್ರೀಗೋಪಾಲದಾಸರ ಸೂಚನೆಯಂತೆ ಫಂಢರಾಪುರದ ಪಾಂಡುರಂಗನನ್ನು ಕಾಣುವ ತವಕದಿಂದ ‘ಎಂದು ಕಾಂಬೆನೊ ಪಾಂಡುರಂಗ ಮೂರುತಿಯಾ’ ಎಂದು ಭಾವಪರವಶರಾಗಿ ಚಂದ್ರಭಾಗಾ ನದಿಯಲ್ಲಿ ಮಿಂದೇಳುವಾಗ , ‘ಶ್ರೀಜಗನ್ನಾಥವಿಠಲ’ ಎಂಬ ಅಂಕಿತವಿರುವ ಶಿಲಾಫಲಕ ದೊರೆಯಿತು. ಆ ಶಿಲಾಫಲಕವನ್ನು ತಲೆಯ ಮೇಲೆ ಹೊತ್ತು, ಆನಂದಭಾಷ್ಪ ಸುರಿಸುತ್ತಾ, ‘ತಟಿತ್ಕೋಟಿ ನಿಭಕಾಯ ಜಗನ್ನಾಥ ವಿಠಲಯ್ಯ’, ‘ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ’, ಸಂಗಸುಖಕ್ಕಾಗಿ ನಡೆಯುವುದೇ ಹರಿಯಾತ್ರೆ, ನುಡಿವುದೇ ನೈವೇದ್ಯ ಎಂದು ಹರಿಯ ಸಾನ್ನಿಧ್ಯವನ್ನು, ಭಗವಂತನಲುಮೆಯನ್ನು ಕೊಂಡಾಡುತ್ತಾರೆ.

    ಸಾಕ್ಷಾತ್ ಪಾಂಡುರಂಗ ರುಕ್ಮಿಣಿಯಿಂದ ಭೋಜನ ಸ್ವೀಕರಿಸಿದವರು. ಶ್ರೀನಿವಾಸನಿಂದ ಎರಡು ಬಾರಿ ಪ್ರಸಾದದ ಅಮೃತ ಸವಿದವರು. ಮುಂದೆ ಅನೇಕ ಸುಳಾದಿಗಳು, ಪದಪದ್ಯಗಳು, ಕೀರ್ತನೆಗಳು, ಉಗಾಭೋಗಗಳು, ದಶಾವತಾರಸ್ತೋತ್ರ, ರುಕ್ಮಿಣೀವಿಲಾಸ, ಶ್ರೀನಿವಾಸ ಸ್ತೋತ್ರ, ಮುಂತಾದ ಖಂಡಕಾವ್ಯಗಳು, ತತ್ವಸುವ್ವಾಲಿಗಳನ್ನು ರಚಿಸಿದರು.

    ಶ್ರೀಮದ್ ಹರಿಕಥಾಮೃತಸಾರ

    ಅಂದು ಅಮೃತವನ್ನು ಸ್ವೀಕರಿಸಲು ದೇವತೆಗಳು, ದಾನವರು ಇಬ್ಬರೂ ಕಾದಿದ್ದರು. ಆದರೆ ದಾನವರ ಕೈಗೆ ಅಮೃತ ಸಿಕ್ಕರೆ ಇನ್ನಷ್ಟು ಲೋಕಕ್ಕೆ ಕಂಟಕವಾಗುತ್ತದೆಯೇ ಹೊರತು ಒಳ್ಳೆಯದಂತೂ ಆಗುವುದಿಲ್ಲ. ಹಾಗಾಗಿಯೇ ಪರಮಾತ್ಮ ಮೋಹಿನಿ ವೇಷ ಧರಿಸಿದ್ದಾಯ್ತು. ದೇವತೆಗಳ ಸಾಲಲ್ಲಿ ಕದ್ದು ಕುಳಿತ ರಾಹುಕೇತುಗಳ ಕಥೆ ಎಲ್ಲರಿಗೂ ತಿಳಿದದ್ದೇ. ಆದರೆ ಈಗ ಇಲ್ಲಿ ಬರೇ ದಾನವರೇ ತುಂಬಿಕೊಂಡಿದ್ದೇವೆ. ಸಜ್ಜರೆನಿಸಿಕೊಂಡವರು ಯಾವತ್ತೂ ಬಲವಂತದಿಂದ ಒಬ್ಬರ ಮನನೋಯಿಸಿ ಏನನ್ನೂ ಪಡೆಯುವುದಿಲ್ಲ. ಬಲವಂತದಿಂದ ಪಡೆದದ್ದು ದಕ್ಕುವುದಿಲ್ಲ. ಹಾಗಾಗಿ ನಮ್ಮ ಶ್ರೀಜಗನ್ನಾಥದಾಸರು ಸರ್ವರ ಉದ್ಧಾರಕ್ಕಾಗಿ ಹರಿಯ ಮಹಿಮೆ ಸಾರುವ, ಮದ್ವ ಸಿದ್ಧಾಂತವನ್ನು ತಿಳಿಸುವ, ಹರಿರ್ವೋತ್ತಮ, ವಾಯುಜೀವೋತ್ತಮ ತತ್ವವನ್ನು ತುಂಬಿರುವ ಅಮೃತವನ್ನೇ ನಮಗೆ ಕೊಟ್ಟಿದ್ದಾರೆ.
    ಈ ಹರಿಕಥಾಮೃತವನ್ನು ಭಕ್ತಿಯಿಂದ ಪ್ರತೀಕ್ಷಣ ಪಾನ ಮಾಡಿರೆಂದು ಕೊಟ್ಟಿದ್ದಾರೆ. ಈ ಹರಿಕಥಾಮೃತಸಾರವನ್ನು ಪಾನ ಮಾಡುವ ದಾನವರೂ ಮಾನವರಾಗಿ ಮನುಷ್ಯ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುವುದರಲ್ಲಿ ಸಂದೇಹವಿಲ್ಲ.ಭಗವಂತನ ದಿವ್ಯ ಸಾನ್ನಿಧ್ಯವನ್ನು, ಕಾವ್ಯತತ್ವಕ್ಕೆ ಇಳಿಸುವಂತಹ ಅದ್ಭುತ ಕಾವ್ಯಾಮೃತ ಕೃತಿ, ವೇದಶಾಸ್ತ್ರ, ಮೀಮಾಂಏಸಶಾಸ್ತ್ರ, ಧರ್ಮಶಾಸ್ತ್ರ, ಭಾಗವತಾದಿ ಪುರಾಣ, ಮಹಾಭಾರತ, ರಾಮಾಯಣ, ಮಧ್ವಮುನಿಗಳ ನಿರ್ಣಯಾದಿ ಗ್ರಂಥಗಳ ಸಾರವಾದ, ಒಂಭೈನೂರಕ್ಕೂ ಹೆಚ್ಚು ನುಡಿಗಳಿಂದ ಕೂಡಿದ, ಭಾಮಿನಿ ಷಟ್ಪದಿಯಲ್ಲಿ ಮೂವತ್ತೆರಡು ಸಂಧಿಗಳಿರುವ ಬಹುದೊಡ್ಡ , ದಾಸಸಾಹಿತ್ಯದ ಮೇರು ಕೃತಿ ‘ಶ್ರೀಮದ್ ಹರಿಕಥಾಮೃತಸಾರ’.

    ನಾವು ಮಾಡಲೇಬೇಕಾದ್ದು

    ಸಾಧ್ಯವಾದಷ್ಟು ವಾರಕ್ಕೊಮ್ಮೆಯಾದರೂ ಮಕ್ಕಳಿಗೆ ದಾಸರ ಸನ್ನಿಧಾನದಲ್ಲಿ ದಾಸರ ಹರಿಕಥಾಮೃತವನ್ನು, ನುಡಿಗಳನ್ನು, ಸಂಧಿಗಳನ್ನು, ಚಿಕ್ಕಚಿಕ್ಕ ಕೃತಿಗಳನ್ನು ಕಲಿಸುವ, ಕಲಿಯುವ ಪ್ರಯತ್ನ ಸ್ವಯಂಪ್ರೇರಿತರಾಗಿ ಸಂಕೋಚವಿಲ್ಲದೇ ಮಾಡಲು ಪ್ರಯತ್ನಿಸೋಣ. ಇದಕ್ಕೆ ಯಾವ ಸಂಘ-ಸಂಸ್ಥೆಗಳ ಅವಶ್ಯಕತೆಯಿಲ್ಲ. ಯಾರಿಗೂ ಯಾವುದಕ್ಕೂ ಕೈಚಾಚಬೇಕಿಲ್ಲ. ಊರಲ್ಲಿರುವ ಹಿರಿಯರು, ತಿಳಿದವರು ತಿಳಿದಷ್ಟನ್ನು ತಿಳಿಸಿಕೊಡಿ. ಯಾಕೆಂದರೆ ಇವತ್ತು ಹರಿದಾಸರ ಸಾಹಿತ್ಯ ಈ ಕ್ಷಣಕ್ಕೂ ಅಬಾಲವೃದ್ಧರಾದಿಯಾಗಿ ಎಲ್ಲರ ನಾಲಿಗೆಯಲ್ಲಿ ಹರಿದಾಡುತ್ತಿದೆ ಎಂದರೆ ಇದಕ್ಕೆ ಮುಖ್ಯಕಾರಣ ಮನೆಯಲ್ಲಿರುವ ಹಿರಿಯ ಮಹಿಳಾ ಚೇತನಗಳೇ . ಮಕ್ಕಳಿಗೆ ಹೇಳಿಕೊಡುವ , ಕಲಿಸಿಕೊಡುವ ನೆಪದಿಂದಲಾದರೂ ನಾವೂ ಕಲಿಯೋಣ.

    ಅಣುಹರಿಕಥಾಮೃಸಾರವೆಂದೇ ಪ್ರಸಿದ್ಧಿಯಾದ ‘ಫಲವಿದು ಬಾಳ್ದುದಕೆ’ ಹಾಡಿನಲ್ಲಿ ದಾಸರು ಹೇಳ್ತಾರೆ, ” ಸಿರಿನಿಲಯನ ಗುಣಗಳ ತಿಳಿದು ಭಜಿಸುವುದೆ ಫಲವಿದು ಬಾಳ್ದುದಕೆ” ತಿಳಿಯದೇ ಭಜಿಸುವ ಭಕ್ತಿಗೂ ಭಗವಂತ ಒಲಿಯುತ್ತಾನೆ. ತಿಳಿದು ಭಜಿಸಿದರೆ ಇನ್ನೂ ಅನುಗ್ರಹ ಮಾಡುವುದರಲ್ಲಿ ಯಾವ ಸಂಶಯವೂ ಇಲ್ಲ. ಎಲ್ಲರನು ಸಲಹುವನು ಅಂತ ಹೇಳುವ ದಾಸರ ಆರಾಧನೆಯಲ್ಲಿ ಪಾಲ್ಗೊಂಡು , ಅವರ ದರುಶನ ಮಾಡಿ, ಅವರ ಅನುಗ್ರಹಕ್ಕೆ ಪಾತ್ರರಾಗಿ ಕಿಂಚಿತ್ತಾದರೂ ಮಾಡಿದ ಪಾಪಗಳನ್ನು ಕಳೆದುಕೊಂಡು ಮುಂದಿನ ಜೀವನ ಸಾಧನ ಮಾರ್ಗದಲ್ಲಿಡುವಂತೆ ಪ್ರಾರ್ಥಿಸೋಣ.

    ದಿನನಿತ್ಯದಲ್ಲಿ , ಶ್ರೀಹರಿಕಥಾಮೃತಸಾರವನ್ನು ಪಾರಾಯಣ ಮಾಡೋಣ, ಅದೆಷ್ಟೋ ಜನ ಕಂಠಪಾಠಮಾಡಿದವರಿದ್ದಾರೆ. ಮಾಡುತ್ತಿದ್ದಾರೆ. ದಾಸರ ಸನ್ನಿಧಿಯಲ್ಲಿ ಬ್ರಾಹ್ಮಣರ ಜೊತೆಜೊತೆಗೆ ಆರ್ಯವೈಶ್ಯರು ಬಹಳಷ್ಟು ಜನ ನಿತ್ಯ ಪುಸ್ತಕ ನೋಡದೇ ಮಸ್ತಕದಿಂದ ಪಾರಾಯಣ ಮಾಡುತ್ತಿದ್ದಾರೆ. ಅಂಥವರಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸುತ್ತಾ, ಶ್ರೀ ಜಗನ್ನಾಥದಾಸರ ಕುರಿತಾದ ಲೇಖನ ಬರೆಯಲು ಪ್ರೇರಣೆ ನೀಡಿದ ನಿಮ್ಮೆಲ್ಲರಿಗೂ ವಂದಿಸುತ್ತನೆ.

    ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಸ್ವಾಗತ

    MYSURU SEP 16

    ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಯನ್ನು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅರಮನೆಗೆ ಸ್ವಾಗತಿಸಿದರು. ಅರಮನೆ ಆವರಣದ ಜಯಮಾರ್ತಾಂಡ ದ್ವಾರದಲ್ಲಿ ಬೆಳಗ್ಗೆ 8.36 ರಿಂದ 9.11ರ ಶುಭ ಲಗ್ನದಲ್ಲಿ ಗಜಪಡೆಗೆ ಸಚಿವ ಸೋಮಶೇಖರ್ ಅವರು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಡೆಯನ್ನು ಸ್ವಾಗತಿಸಿದರು.

    ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದಲ್ಲಿ ಎಂಟು ಆನೆಗಳು ಅರಮನೆ ಪ್ರವೇಶ ಮಾಡಿದವು. ಮಂಗಳ ವಾದ್ಯ, ಪೂರ್ಣ ಕುಂಭ ಸ್ವಾಗತದ ಮೂಲಕ ಆನೆಗಳನ್ನು ಬರಮಾಡಿಕೊಳ್ಳಲಾಯಿತು.

    ನಂತರ ಮಾತನಾಡಿದ ಸಚಿವರು, ಅ.7ರಂದು ದಸರಾ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ. ಅ.15ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. ಸೆ.23ರವರೆಗೆ ಅಧಿವೇಶನ ಇರುವುದರಿಂದ ದಸರಾ ಉದ್ಘಾಟನೆ ಯಾರಿಂದ ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ ಎಂದರು.

    ಅಧಿವೇಶನ ಮುಗಿದ ಬಳಿಕ ಪ್ರಮುಖರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ದಸರಾ ಉದ್ಘಾಟನೆಗೆ ಇನ್ನೂ ಯಾರ ಹೆಸರು ಅಂತಿಮಗೊಳಿಸಿಲ್ಲ ಎಂದು ಹೇಳಿದರು.

    ದಸರಾ ಉದ್ಘಾಟನೆಗೆ ಗಣ್ಯರ ಆಯ್ಕೆಯನ್ನು ದಸರಾ ಉನ್ನತಾಧಿಕಾರ ಸಮಿತಿಯಲ್ಲಿ ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲಾಗಿದೆ. ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಸಂಬಂಧ ಯಾರಾದರೂ ಸಲಹೆ ಕೊಡಬಹುದು. ಅದನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ಆಯ್ಕೆ ಮುಖ್ಯಮಂತ್ರಿ ಅವರಿಗೆ ಸೇರಿದ್ದು ಎಂದರು.

    ದೇವಸ್ಥಾನ ತೆರವು ವಿಚಾರವಾಗಿ ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶದ ಕುರಿತು ಸಚಿವ ಸಂಪುಟದಲ್ಲಿಟ್ಟು ಸಾಧ್ಯಾಸಾಧ್ಯತೆಗಳ ಕುರಿತು ಚರ್ಚಿಸಿ ಆದೇಶ ಮಾಡಲಾಗುವುದೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ದೇಗುಲ ತೆರವು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

    ಟಿಟಿಡಿ ಸದಸ್ಯರಾಗಿ ಶಾಸಕ ಎಸ್.ಆರ್.ವಿಶ್ವನಾಥ್

    BENGALURU SEPT 15

    ಆಂಧ್ರ ಪ್ರದೇಶದ ಪ್ರತಿಷ್ಠಿತ ತಿರುಮಲ ತಿರುಪತಿ ಟ್ರಸ್ಟ್ʼಗೆ ಎಸ್.ಆರ್.ವಿಶ್ವನಾಥ್ ಅವರನ್ನು ಸದಸ್ಯರನ್ನಾಗಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

    S R Vishwanath.jpg

    ಯಲಹಂಕ ಕ್ಷೇತ್ರದ ಶಾಸಕರು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಎಸ್.ಆರ್. ವಿಶ್ವನಾಥ್ ಅವರನ್ನು ಈ ಉನ್ನತ ಹುದ್ದೆಗೆ ನೇಮಕ ಮಾಡಲಾಗಿದೆ

    ಈ ಹಿಂದೆ ಬೆಂಗಳೂರಿನ ತಿರುಮಲ ತಿರುಪತಿ ಟ್ರಸ್ಟ್‌ʼನ ಸ್ಥಳೀಯ ಸಲಹಾ ಮಂಡಳಿಯ ಉಪಾಧ್ಯಕ್ಷರಾಗಿ ವಿಶ್ವನಾಥ್ ಅವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

    ತಮ್ಮನ್ನು ಈ ಹುದ್ದೆಗೆ ನೇಮಕ ಮಾಡಿರುವುದಕ್ಕೆ ವಿಶ್ವನಾಥ್ ಅವರು ಆಂಧ್ರದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ಮತ್ತು ಆಂಧ್ರ ಪ್ರದೇಶ ಸರ್ಕಾರದ ಪಂಚಾಯತ್ ರಾಜ್ ಮತ್ತು ಗಣಿ ಸಚಿವ ರಾಮಚಂದ್ರ ರೆಡ್ಡಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

    ಈ ಹುದ್ದೆಗೆ ನನ್ನನ್ನು ನೇಮಕ ಮಾಡಿರುವುದಕ್ಕೆ ಹರ್ಷವೆನಿಸಿದೆ. ತಿರುಮಲ ಕ್ಷೇತ್ರಕ್ಕೆ ಭೇಟಿ ನೀಡುವ ಕರ್ನಾಟಕದ ಭಕ್ತಾಧಿಗಳಿಗೆ ಸೇವೆ ಸಲ್ಲಿಸುವ ಅದೃಷ್ಠ ನನ್ನದಾಗಿದೆ ಎಂದು ತಿಳಿಸಿದ್ದಾರೆ.

    error: Content is protected !!