23.7 C
Karnataka
Tuesday, July 7, 2026
    Home Blog Page 53

    ಅಕ್ಟೋಬರ್ 1 ರಿಂದ ಸಿನಿಮಾ ಟಾಕೀಸ್ ಶೇಕಡ 100 ಭರ್ತಿಗೆ ಅವಕಾಶ; ರಾತ್ರಿ ಕರ್ಫ್ಯೂ ಮತ್ತಷ್ಟು ಸಡಿಲ

    BENGALURU SEP 24

    ಅಕ್ಟೋಬರ್ 1 ರಿಂದ ಕೋವಿಡ್ ಪಾಸಿಟಿವಿಟಿ ದರ ಶೇ 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ನೀಡುವ ನಿರ್ಧಾರವನ್ನು ರಾಜ್ಯದಲ್ಲಿನ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ತಜ್ಞರ ಸಮಿತಿ ಸಭೆ ತೆಗೆದುಕೊಂಡಿದೆ.

    ಸಭೆಯಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ, ಕಂದಾಯ ಸಚಿವ ಆರ್ ಅಶೋಕ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಪಾಸಿಟಿವಿಟಿ ದರ ಶೇಕಡ 1ಕ್ಕಿಂತ ಹೆಚ್ಚಾದರೆ ಶೇ. 50 ರಷ್ಟು ಭರ್ತಿಗೆ ಹಾಗೂ ಶೇ. 2 ಕ್ಕಿಂತ ಹೆಚ್ಚಾದರೆ ಚಿತ್ರಮಂದಿರ ಬಂದ್ ಮಾಡಲಾಗುವುದು. ರಾಜ್ಯದಲ್ಲಿ ಪ್ರಸ್ತುತ ಸರಾಸರಿ ವಾಸಿಟಿವಿಟಿ ದರ 0.66 % ಇದೆ.

    ಆದರೆ ಸಿನಿಮಾ ನೋಡಲು ಹೋಗುವವರು ಕನಿಷ್ಠ ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು. ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳಿಗೆ ಪ್ರವೇಶ ಅವಕಾಶ ಇರುವುದಿಲ್ಲ.

    ರಾತ್ರಿ ಕರ್ಪ್ಯೂವನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ರ ವರೆಗೆ ನಿಗದಿ ಪಡಿಸಲಾಗುವುದು. 6ರಿಂದ 12ನೇ ತರಗತಿ ವರೆಗೆ ಶೇ 100 ರಷ್ಟು ಹಾಜರಾತಿಗೆ ಅವಕಾಶ ಕಲ್ಪಿಸಲಾಗುವುದು. ವಾರದಲ್ಲಿ ಐದು ದಿನ ಶಾಲಾ ಕಾಲೇಜುಗಳನ್ನು ನಡೆಸಲು ನಿರ್ಧರಿಸಲಾಯಿತು. ದಸರಾ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲು ಸಭೆ ನಿರ್ಧರಿಸಿತು.

    ಯಾದಗಿರಿ, ರಾಯಚೂರು, ಕಲಬುರಗಿ, ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ತೀವ್ರಗೊಳಿಸಲು, ಜನರಲ್ಲಿ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಲಾಯಿತು.

    ನಿಖಿಲ್ ಕುಮಾರಸ್ವಾಮಿ ದಂಪತಿಗೆ ಪುತ್ರನ ಆಗಮನ;ತಾತನಾದ ಸಂಭ್ರಮದಲ್ಲಿ ಎಚ್ ಡಿ ಕೆ

    BENGALURU SEP 24

    ಮಾಜಿ ಮುಖ್ಯಮಂತ್ರಿ ಎಚ್ . ಡಿ.ಕುಮಾರಸ್ವಾಮಿ ಪುತ್ರ, ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಗಂಡು ಮಗುವಿನ ತಂದೆಯಾದ ಸಂಭ್ರಮದಲ್ಲಿದ್ದಾರೆ.

    ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಮುದ್ದಾದ ಮಗುವನ್ನು ಎತ್ತಿಕೊಂಡು ನಿಖಿಲ್ ಕುಮಾರಸ್ವಾಮಿ ಫೋಟೋಗೆ ಪೋಸ್ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮೊಮ್ಮಗನಿಗೆ ಮಗುವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

    ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ನಿಂದ ಟಾಂಗಾ ಪ್ರತಿಭಟನೆ

    BENGALURU SEP 24

    ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದರೂ ಅದಕ್ಕೆ ಸ್ಪಂದಿಸದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಟಾಂಗಾ ಜಾಥಾ ನಡೆಸುವ ಮೂಲಕ ಶುಕ್ರವಾರ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ನೇತೃತ್ವದಲ್ಲಿ ಹಿಂದೆ ಎತ್ತಿನ ಗಾಡಿ, ಸೈಕಲ್ ಜಾಥಾ ನಡೆಸಿದ್ದ ಕಾಂಗ್ರೆಸ್ ಇಂದು ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಟಾಂಗಾ ಜಾಥಾ ನಡೆಸಿತು.

    ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ‘ಬೆಲೆ ಏರಿಕೆ ಮಾಡುವ ಮೂಲಕ ಬಿಜೆಪಿ ಸರ್ಕಾರಗಳು ಜನರನ್ನು ಪಿಕ್ ಪಾಕೆಟ್ ಮಾಡುತ್ತಿವೆ. ಇದು ದಪ್ಪ ಚರ್ಮದ ಸರ್ಕಾರ. ಅವರಿಗೆ ಜನರ ನೋವು, ಭಾವನೆ ಅರ್ಥವಾಗುತ್ತಿಲ್ಲ. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಯಾವುದೂ ಇಲ್ಲ. ಹೀಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಹೋರಾಟವಲ್ಲ. ಇದು ಜನರ ಹೋರಾಟ, ಎಲ್ಲ ವರ್ಗದ ಜನರ ನೋವಿನ ಪ್ರತಿಧ್ವನಿ. ಇದನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.

    ಅಕ್ಟೋಬರ್ ತಿಂಗಳಲ್ಲಿ ಪ್ರತಿ ಪಂಚಾಯ್ತಿ ಹಾಗೂ ವಾರ್ಡ್ ನಲ್ಲೂ ನಮ್ಮ ಕಾರ್ಯಕರ್ತರು ಬೆಲೆ ಏರಿಕೆ ವಿಚಾರದಲ್ಲಿ ಜನರ ಧ್ವನಿಯಾಗಲು ಕಾರ್ಯಕ್ರಮ ರೂಪಿಸಲಾಗಿದೆ. ಮಾನ ಮರ್ಯಾದೆ ಇಲ್ಲದ ಈ ಸರ್ಕಾರ ಜನರೇ ತೆಗೆಯಬೇಕು. ರಾಜ್ಯದಲ್ಲಿ ಕೋವಿಡ್ ನಿಂದ ಲಕ್ಷಾಂತರ ಮಂದಿ ಸತ್ತಿರುವುದನ್ನು ನೋಡಿದ್ದೇವೆ. ಯಾರಿಗೂ ಈ ಸರ್ಕಾರ ಸಹಾಯ ಮಾಡಿಲ್ಲ. 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಿದರೂ ಒಬ್ಬರಿಗೂ ಸಹಾಯವಾಗಿಲ್ಲ. ಚಾಲಕರು, ಸವಿತಾ ಸಮಾಜದವರು ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವವರು, ರೈತರು ಸೇರಿದಂತೆ ಯಾರಿಗೂ ಸಹಾಯ ಮಾಡಿಲ್ಲ. ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಕೆಲಸ ಸಿಗುವಂತೆ ಮಾಡಬೇಕು. ಸರಕಾರ ತೆರಿಗೆ ಹಾಕಿ ಜನರನ್ನು ಹಿಂಡುತ್ತಿದ್ದು, ಅವರ ರಕ್ಷಣೆಗೆ ಹೋರಾಟ ಮಾಡುತ್ತೇವೆ. ಜನ ಈ ಸರ್ಕಾರವನ್ನು ಕಿತ್ತೊಗೆಯುವವರೆಗೂ ನಾವು ಈ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.

    ಬಿಎಸ್ ವೈ ಗೆ ಅತ್ಯುತ್ತಮ ಶಾಸಕ ಪ್ರಶಸ್ತಿ

    BENGALURU SEP 24

    2021ನೇ ಸಾಲಿನಿಂದ ರಾಜ್ಯದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡುವ ಯೋಜನೆ ಹಾಕಿಕೊಳ್ಳಲಾಗಿದ್ದು, ಮೊದಲ ಪ್ರಶಸ್ತಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಲಭಿಸಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಇಂದು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಜಂಟಿ ಅಧಿವೇಶನದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

    ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ , ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಪ್ರಶಸ್ತಿ ಸ್ವೀಕರಿಸಿದ ನಂತರ ಟ್ವೀಟ್ ಮಾಡಿರುವ ಬಿ ಎಸ್ ಯಡಿಯೂರಪ್ಪ ಜನಪ್ರತಿನಿಧಿಯಾಗಿ, ಪ್ರಜಾಪ್ರಭುತ್ವದ ದೇಗುಲದಲ್ಲಿ ಜನರ ಆಶೋತ್ತರಗಳ ಈಡೇರಿಕೆಯ ದೊಡ್ಡ ಜವಾಬ್ದಾರಿಯ ಅರಿವಿನೊಂದಿಗೆ, ಶಾಸಕಾಂಗದ ಕರ್ತವ್ಯಗಳನ್ನು ನಿರ್ವಹಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ರಾಜ್ಯದ ವಿಧಾನಮಂಡಲದ ಇತಿಹಾಸದಲ್ಲಿ ಪ್ರಥಮ ಬಾರಿಗೆ ನೀಡಲಾದ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಅತ್ಯಂತ ವಿನೀತ ಭಾವದಿಂದ ಸ್ವೀಕರಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಈ ಪ್ರಶಸ್ತಿಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರ ಆಯ್ಕೆ ನಿಜಕ್ಕೂ ಅತ್ಯಂತ ಸೂಕ್ತವಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ ಅವರು ತಿಳಿಸಿ ಬಿಎಸ್ ವೈ ಅವರನ್ನು ಅಭಿನಂದಿಸಿದ್ದಾರೆ.

    ಊಂಜಲ್ ಸಂಗೀತೋತ್ಸವ

    BENGALURU SEPT 24

    ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ನಾಳೆ ಸೆಪ್ಟೆಂಬರ್ 25ರ ಶನಿವಾರ ಸಂಜೆ 6 ಗಂಟೆಗೆ ಬೆಂಗಳೂರಿನ ವಯ್ಯಾಲಿಕಾವಲ್ ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (TTD)ದಲ್ಲಿ ಕು|| ಅಮೋಘ ಶಾಸ್ತ್ರಿ ಮತ್ತು ಕು||  ಆಗಮ ಶಾಸ್ತ್ರಿ (ಶಾಸ್ತ್ರಿ ಸಿಸ್ಟರ್ಸ್) ಇವರಿಂದ “ಊಂಜಲ್ ಸಂಗೀತೋತ್ಸವ” ಕಾರ್ಯಕ್ರಮ ಏರ್ಪಡಿಸಿದೆ.

    ವಾದ್ಯ ಸಹಕಾರ :ವಿ|| ಶ್ರೀ ಶಶಿಧರ್ (ಪಿಟೀಲು)ವಿ|| ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ) ಅವರದ್ದಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

    25ರವರೆಗೆ ಪ್ರಧಾನಿ ಅಮೆರಿಕಾ ಪ್ರವಾಸ

    NEW DELHI SEP 22
    ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಅವರ ಆಹ್ವಾನದ ಮೇರೆಗೆ 2021ರ ಸೆಪ್ಟಂಬರ್ 22ರಿಂದ 25ರವರೆಗೆ ಅಮೆರಿಕಾಕ್ಕೆ ಭೇಟಿ ನೀಡುತ್ತಿದ್ದೇನೆ.ನನ್ನ ಈ ಭೇಟಿಯ ವೇಳೆ ಅಧ್ಯಕ್ಷ ಬೈಡೆನ್ ಅವರೊಂದಿಗೆ ಭಾರತ-ಅಮೆರಿಕಾ ಜಾಗತಿಕ ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಪರಾಮರ್ಶೆ ಮತ್ತು ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

    ಎರಡೂ ರಾಷ್ಟ್ರಗಳ ನಡುವೆ ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರದ ಅವಕಾಶಗಳನ್ನು ಅನ್ವೇಷಿಸುವ ಕುರಿತು ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅವರೊಂದಿಗಿನ ಭೇಟಿಯನ್ನು ಎದುರು ನೋಡುತ್ತಿದ್ದೇನೆ.ನಾನು ಅಧ್ಯಕ್ಷ ಬೈಡನ್, ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಮಂತ್ರಿ ಯೋಶಿಹೈದ್ ಸುಗಾ ಅವರೊಂದಿಗೆ ಮೊದಲ ಭೌತಿಕ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗಹಿಸಲಿದ್ದೇನೆ. ಶೃಂಗಸಭೆಯು ಈ ವರ್ಷ ಮಾರ್ಚ್ ನಲ್ಲಿ ನಡೆದ ವರ್ಚುವಲ್ ಶೃಂಗಸಭೆಯ ಫಲಿತಾಂಶಗಳ ಪ್ರಗತಿಯನ್ನು ಪರಾಮರ್ಶಿಸಲು ಅವಕಾಶ ಒದಗಿಸಲಿದೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ನಮ್ಮ ಸಮಾನ ಹಂಚಿಕೆಯ ದೃಷ್ಟಿಕೋನದ ಆಧಾರದ ಮೇಲೆ ಭವಿಷ್ಯದ ಸಹಭಾಗಿತ್ವದ ಆದ್ಯತೆಗಳನ್ನು ಗುರುತಿಸಲು ನೆರವಾಗಲಿದೆ ಎಂದು ಪ್ರವಾಸ ಹೊರಡುವ ಮುನ್ನ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಪ್ರಧಾನಮಂತ್ರಿಗಳು ತಿಳಿಸಿದ್ದಾರೆ.

    ನಾನು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮಾರಿಸನ್ ಮತ್ತು ಜಪಾನ್ ನ ಪ್ರಧಾನಮಂತ್ರಿ ಸುಗಾ ಅವರನ್ನು ಭೇಟಿ ಮಾಡಿ ತಮ್ಮ ದೇಶಗಳೊಂದಿಗಿನ ಬಲವಾದ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿಗತಿ ಪರಾಮರ್ಶೆ ನಡೆಸಲಾಗುವುದು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ನಮ್ಮ ಉಪಯುಕ್ತ ವಿನಿಮಯವನ್ನು ಮುಂದುವರಿಸುತ್ತೇನೆ.

    ಕೋವಿಡ್-19 ಸಾಂಕ್ರಾಮಿಕ, ಭಯೋತ್ಪಾದನೆಯನ್ನು ಎದುರಿಸುವ ಅಗತ್ಯತೆ, ಹವಾಮಾನ ವೈಪರೀತ್ಯ ಮತ್ತು ಇತರೆ ಪ್ರಮುಖ ಸಮಸ್ಯೆಗಳನ್ನು ಒಳಗೊಂಡಂತೆ ಜಾಗತಿಕ ಸವಾಲುಗಳನ್ನು ಕೇಂದ್ರೀಕರಿಸುವ ವಿಶ್ವಸಂಸ್ಥೆಯ ಮಹಾಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ನಾನು ನನ್ನ ಪ್ರವಾಸವನ್ನು ಮುಕ್ತಾಯಗೊಳಿಸಲಿದ್ದೇನೆ.

    ನನ್ನ ಈ ಅಮೆರಿಕಾ ಭೇಟಿ, ಅಮೆರಿಕಾದೊಂದಿಗಿನ ಸಮಗ್ರ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆಯ ಬಲವರ್ಧನೆಗೆ ಮತ್ತು ನಮ್ಮ ಕಾರ್ಯತಂತ್ರ ಪಾಲುದಾರರಾದ ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗಿನ ಸಂಬಂಧ ಬಲಪಡಿಸಲು ಮತ್ತು ಪ್ರಮುಖ ಜಾಗತಿಕ ಸಮಸ್ಯೆಗಳ ಕುರಿತು ನಮ್ಮ ಸಹಯೋಗವನ್ನು ಮುಂದುವರಿಸಲು ಒಂದು ಸುಸಂದರ್ಭವಾಗಿದೆ ಎಂದು ಅವರು ತಿಳಿಸಿದ್ದಾರೆ.

    ದೇವನಹಳ್ಳಿವರೆಗೆ ಮೆಟ್ರೋ ವಿಸ್ತರಣೆ

    ಮೆಟ್ರೋ 3ನೇ ಹಂತಕ್ಕೆ ಶೀಘ್ರ ಚಾಲನೆ: ಮುಖ್ಯಮಂತ್ರಿ ಸೂಚನೆ

    BENGALURU SEP 21

    ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲು ನೀಡಲಾಗಿದ್ದ 2025ರ ಗಡುವನ್ನು ಮಾರ್ಪಡಿಸಿ, 2024 ಕ್ಕೆ ನಿಗದಿ ಪಡಿಸುವಂತೆ ಹಾಗೂ ಇದಕ್ಕೆ ತಕ್ಕ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದು ಪೂರ್ಣಗೊಳ್ಳುತ್ತಿದ್ದಂತೆಯೇ ಮೂರನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಅವರು ಇಂದು ಮೆಟ್ರೋ 2ನೇ ಹಂತದ ಯೋಜನೆಯಡಿ ಕಂಟೋನ್ಮೆಂಟ್ ನಿಂದ ಶಿವಾಜಿನಗರ ನಿಲ್ದಾಣದ ವರೆಗೆ ಸುರಂಗ ಮಾರ್ಗ ಕೊರೆದ ಟಿಬಿಎಂ ಊರ್ಜಾ ಯಂತ್ರವು ಹೊರಗೆ ಬರುವುದನ್ನು ವೀಕ್ಷಿಸಿದ ನಂತರ ಮಾತನಾಡುತ್ತಿದ್ದರು.

    ಎರಡನೇ ಹಂತ 2024ಕ್ಕೇ ಮುಗಿಸಲು, ಯೋಜನೆ ರೂಪಿಸಿ, ಹೆಚ್ಚುವರಿ ಮಾನವಸಂಪನ್ಮೂಲ ಬಳಸಿಕೊಂಡು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಇನ್ನು 21 ಕಿ.ಮೀ. ಆಗಬೇಕಾಗಿದೆ. ಇದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆಮೇಲೆ ಮೂರನೇ ಹಂತ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

    ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಮೆಟ್ರೋ ಯೋಜನೆ ತ್ವರಿತವಾಗಿ ಪೂರ್ಣಗೊಳಿಸ ಬೇಕಾಗಿದೆ. ಮೆಟ್ರೋ 2ನೇಹಂತ ಪೂರ್ಣಗೊಂಡಾಗ 56 ಕಿ.ಮೀ. ಮಾರ್ಗ ಪೂರ್ಣಗೊಳ್ಳುವುದು. ಇದರೊಂದಿಗೆ 3ನೇ ಹಂತ ಕೈಗೆತ್ತಿಕೊಳ್ಳುತ್ತಿದ್ದೇವೆ. ಮೂರೂ ಹಂತಗಳು ಪೂರ್ಣಗೊಂಡಾಗ ಮೆಟ್ರೋ ರೈಲು ಬೆಂಗಳೂರಿನ ಜೀವನಾಡಿಯಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಮೆಟ್ರೋ ಕಾಮಗಾರಿಯನ್ನು ಹಲವು ಸವಾಲುಗಳ ನಡುವೆಯೂ ವೈಜ್ಞಾನಿಕವಾಗಿ, ಸುರಕ್ಷತೆಗೆ ಆದ್ಯತೆ ನೀಡಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮೊದಲ ಹಂತದಲ್ಲಿ ಹಲವು ಸವಾಲುಗಳು ಎದುರಾಗಿದ್ದವು. ಮೆಜೆಸ್ಟಿಕ ಬಳಿ ಟನೆಲ್ ಬೋರಿಂಗ್ ಮಷಿನ್ ಸಿಲುಕಿಕೊಂಡಿತ್ತು ಎಂದು ಅವರು ಸ್ಮರಿಸಿಕೊಂಡರು. ಇಂದು ಅತ್ಯುತ್ತಮ ಟಿಬಿಎಂ ಊರ್ಜಾ ಮೂಲಕ ಕಾರ್ಯ ನಿರ್ವಹಿಸಲಾಗುತ್ತಿದೆ. 855 ಮೀಟರ್ ಸುರಂಗ ಕೊರೆಯಲಾಗಿದೆ.

    ಮೆಟ್ರೋ ಯೋಜನೆಗೆ ಜನರು ಸಹಕಾರ ನೀಡಿದ್ದಾರೆ. ಬೆಂಗಳೂರು ನಗರದ ಎಲ್ಲ ದಿಕ್ಕಿನಲ್ಲಿ ಮೆಟ್ರೋ ವಿಸ್ತರಿಸಲು ಸಹಕಾರ ನೀಡಿದ ಜನತೆಗೆ ಧನ್ಯವಾದ ಸಲ್ಲಿಸಿದ ಮುಖ್ಯಮಂತ್ರಿಗಳು. ವಿಮಾನ ನಿಲ್ದಾಣದ ವರೆಗೆ ಮೆಟ್ರೋ ವಿಸ್ತರಣೆಗೆ ಶೀಘ್ರವೇ ಚಾಲನೆ ನೀಡಲಾಗುವುದು. ಕೇಂದ್ರದಿಂದ ಉತ್ತಮ ಸಹಕಾರ ಹಾಗೂ ಹಣಕಾಸಿನ ನೆರವು ದೊರೆಯುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಈ ಸಂದರ್ಭದಲ್ಲಿ ಸಚಿವರಾದ ಉಮೇಶ ಕತ್ತಿ, ಎಸ್ ಟಿ ಸೋಮಶೇಖರ್, ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ, ಸಂಸದ ಪಿ ಸಿ ಮೋಹನ್, ಶಾಸಕರಾದ ರಿಜ್ವಾನ್ ಅರ್ಷದ್, ಲೆಹರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು

    ಆರಂಭದಲ್ಲಿ ವಿಜೃಂಭಣೆ ನಂತರ ಕಣ್ಮರೆ; ಹೂಡುವ ಮುನ್ನ ಇರಲಿ ಎಚ್ಚರ

    1980 ರ ದಶಕದಿಂದಲೂ ವಿವಿಧ ವಲಯಗಳ ಕಂಪನಿಗಳು ಐ ಪಿ ಒ ಮೂಲಕ ಪೇಟೆ ಪ್ರವೇಶಿಸಿ, ಆರಂಭಿಕ ದಿನಗಳಲ್ಲಿ ಉತ್ತಮ ಏರಿಕೆಯಿಂದ ವಿಜೃಂಭಿಸಿ ನಂತರದ ವರ್ಷಗಳಲ್ಲಿ ಕಣ್ಮರೆಯಾಗಿವೆ. ಅನೇಕ ಲೀಸಿಂಗ್‌ ವಲಯದ ಕಂಪನಿಗಳು ಸಹ ಕಣ್ಮರೆಯಾಗಿವೆ.

    ನಾಗಾರ್ಜುನ ಫೈನಾನ್ಸ್‌ ಲಿ, ಇಂಡಿಯನ್‌ ಸೀಮ್‌ ಲೆಸ್‌ ಫೈನಾನ್ಶಿಯಲ್‌ ಸರ್ವಿಸಸ್‌ ಲಿ, ಆಪಲ್‌ ಕ್ರೆಡಿಟ್‌ ಕಾರ್ಪೊರೇಷನ್‌ ಲಿ, ರಾಕ್‌ ಲ್ಯಾಂಡ್‌ ಲೀಸಿಂಗ್‌, ಜಾಲಿ ಮರ್ಚಂಡೈಸಿಂಗ್‌, ವತ್ಸ ಕಾರ್ಪೊರೇಷನ್‌, ಫಸ್ಟ್‌ ಫೈನಾನ್ಶಿಯಲ್‌ ಸರ್ವಿಸಸ್‌, ಕರಣ್‌ ಫೈನಾನ್ಸ್‌, ಮೌಲಿಕ್‌ ಫೈನಾನ್ಸ್‌ & ರೆಸಾರ್ಟ್ಸ್, ಸ್ಯಾಮ್‌ ಲೀಸ್‌ ಕೊ, ಅಪೆಕ್ಸ್‌ ಕ್ಯಾಪಿಟಲ್‌ ಮಾರ್ಕೆಟ್ಸ್ ಲಿ, ತಿಲಕ್‌ ಫೈನಾನ್ಸ್‌, ಇನ್‌ ಕ್ಯಾಪ್‌ ಫೈನಾನ್ಶಿಯಲ್‌ ಸರ್ವಿಸಸ್‌, ರಿಯಲ್‌ ಟೈಮ್‌ ಫಿನ್ಲೀಸ್‌, ಎಂ ಎಸ್‌ ಸೆಕ್ಯುರಿಟೀಸ್‌, ಪ್ರಮಾದ ಫಿನ್‌ ಇನ್ವೆಸ್ಟ್‌, ಫ್ರಂಟ್‌ ಲೈನ್‌ ಫೈನಾನ್ಶಿಯಲ್‌ ಸರ್ವಿಸಸ್‌, ಕುಬೇರ್‌ ಆಟೋ ಫೈನಾನ್ಸ್‌ & ಲೀಸಿಂಗ್‌, ಹೀಗೆ ಅನೇಕ ಲೀಸಿಂಗ್‌, ಫೈನಾನ್ಸ್‌ ವಲಯದ ಕಂಪನಿಗಳು ಒಂದು ಸಮಯದಲ್ಲಿ ವಿಜೃಂಭಿಸಿ, ಚುರುಕಾದ ಚಟುವಟಿಕೆಯಲ್ಲಿದ್ದು, ಸಣ್ಣ ಹೂಡಿಕೆದಾರರನ್ನು ಸೆಳೆದು, ಅವರಿಗರಿವಿಲ್ಲದೆಯೇ ಕಣ್ಮರೆಯಾಗಿ ಅಪಾರವಾದ ಹಾನಿಗೊಳಪಡಿಸಿದವು. ಅಮಾನತುಗೊಂಡಿರುವ ಕಂಪನಿಗಳ ಈ ಪಟ್ಟಿಯು ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಕಂಪನಿಗಳನ್ನು ಹೊಂದಿದೆ.

    ಎಫ್‌ ಸಿ ಸಿ ಬಿ ಪ್ರಮಾದ :ಹತ್ತು ವರ್ಷಗಳ ಹಿಂದೆ ಪೇಟೆಯು ಚುರುಕಾದ ವಾತಾವರಣದಲ್ಲಿದ್ದು ವಿಜೃಂಭಿಸುತ್ತಿದ್ದಾಗ ಅನೇಕ ಕಂಪನಿಗಳು ಫಾರಿನ್‌ ಕರೆನ್ಸಿ ಕನ್ವರ್ಟಬಲ್‌ ಬಾಂಡ್ಸ್‌ ಗಳನ್ನು, ಕೆಲವು ವರ್ಷಗಳ ನಂತರ ಪೂರ್ವ ನಿಗದಿತ ಬೆಲೆಯಲ್ಲಿ ಷೇರಾಗಿ ಪರಿವರ್ತಿಸುವ ಒಪ್ಪಂದದೊಂದಿಗೆ ವಿತರಿಸಿದವು. ಆ ಬೆಲೆಗಳು ಯಾವ ರೀತಿ ಇದ್ದವೆಂದರೆ ಅವು ಕಾರ್ಪೊರೇಟ್‌ ಗಳ ದುರಾಸೆಯ ಮಟ್ಟಕ್ಕೆ ಹಿಡಿದ ಕನ್ನಡಿಯಾಗಿತ್ತು.

    ಆ ಸಮಯದಲ್ಲಿ ತುಲಿಪ್‌ ಟೆಲಿ ಕಂಪನಿಯು ಕನ್ವರ್ಷನ್‌ ದರ ಪ್ರತಿ ಷೇರಿಗೆ ರೂ.2,274 ಎಂದು ನಿಗದಿಪಡಿಸಿತು. ಈ ಕಂಪನಿ 2005 ರಲ್ಲಿ ಪ್ರತಿ ಷೇರಿಗೆ ರೂ.120 ರಂತೆ ಐ ಪಿ ಒ ಮೂಲಕ ವಿತರಣೆ ಮಾಡಿತ್ತು. 2012 ರಲ್ಲಿ ಎಫ್‌ ಸಿ ಸಿ ಬಿ ಗಳ ಬಾಕಿ 140 ದಶ ಲಕ್ಷ ಅಮೇರಿಕನ್‌ ಡಾಲರ್‌ ಮೌಲ್ಯ ಮೊತ್ತವನ್ನು ಹಿಂದಿರುಗಿಸಲು ವಿಫಲವಾಯಿತು. 2014 ರ ವೇಳೆಗೆ ಸುಮಾರು ರೂ.85 ಕೋಟಿ ಹಾನಿಗೊಳಗಾಗಿ, ನಂತರ ತನ್ನ ಅಸ್ಥಿತ್ವವನ್ನೇ ಉಳಿಸಿಕೊಳ್ಳಲು ವಿಫಲವಾಗಿ ಪೇಟೆಯಿಂದ ನಿರ್ಗಮಿಸಿತು.

    ರೋಲ್ಟಾ ಇಂಡಿಯಾ ಸಹ 2012 ರ ಸಮಯದಲ್ಲಿ ಎಫ್‌ ಸಿ ಸಿ ಬಿ ಮೂಲಕ ಪ್ರತಿ ಷೇರಿನ ಪರಿವರ್ತನೆಯ ದರವನ್ನು ರೂ.368.50 ಯಂತೆ ನಿಗದಿಪಡಿಸಿತಾದರೂ, ಷೇರಿನ ದರದಲ್ಲಿ ಉಂಟಾದ ಭಾರಿ ಕುಸಿತದ ಕಾರಣ ಬಾಂಡ್‌ ಗಳ ಮೊತ್ತವನ್ನು ಹಿಂದಿರುಗಿಸಬೇಕಾಯಿತು. ಆ ಸಮಯದಲ್ಲಿ ಸುಮಾರು ರೂ.765 ಕೋಟಿ ಹಣವನ್ನು ಹಿಂದಿರುಗಿಸಲು ಯಶಸ್ವಿಯಾಯಿತು. ಆದರೆ ಈ ಆಘಾತದಿಂದ ಚೇತರಿಕೆ ಕಾಣಲು ಸಾಧ್ಯವಾಗಲಿಲ್ಲ.

    ಬಜಾಜ್‌ ಹಿಂದೂಸ್ಥಾನ್‌ ಶುಗರ್ಸ್‌ ಲಿ ಕಂಪನಿ ಫೆಬ್ರವರಿ 2011 ತಿಂಗಳಲ್ಲಿ ಪ್ರತಿ ಷೇರಿಗೆ ರೂ.465 ರಂತೆ ಪರಿವರ್ತನಾ ಬೆಲೆಯನ್ನಾಗಿ ನಿಗಧಿಪಡಿಸಿತ್ತು.ನಂತರ ಪೇಟೆಯಲ್ಲಿ ಷೇರಿನ ಬೆಲೆ ಕುಸಿತಕ್ಕೊಳಗಾಗಿ ಷೇರಿನ 2014 ರಲ್ಲಿ ಬೆಲೆ ರೂ.12 ರವರೆಗೂ ಕುಸಿಯಿತು. ಆದರೂ ಕಂಪನಿಯು ಪ್ರೀಮಿಯಂನೊಂದಿಗೆ ಹಿಂದಿರುಗಿಸಿತು. ಆದರೆ ಷೇರಿನ ಬೆಲೆಯ ಮೇಲೆ ಹೆಚ್ಚಿನ ಒತ್ತಡ ಬಿದ್ದು 2018, 2019 ರಲ್ಲಿ ರೂ.5 ರವರೆಗೂ ಕುಸಿಯಿತು, 2020 ರಲ್ಲಿ ರೂ.2.35 ರವರೆಗೂ ಕುಸಿದು ಈ ವರ್ಷ ಚೇತರಿಸಿಕೊಂಡು ಜುಲೈನಲ್ಲಿ ರೂ.24 ರವರೆಗೂ ಜಿಗಿದು ಸಧ್ಯ ರೂ.14 ರ ಸಮೀಪವಿದೆ. ಪೇಟೆಯಲ್ಲಿ ರೂ.300 / 400 ರಲ್ಲಿ ಖರೀದಿಸಿದವರ ಪರಿಸ್ಥಿತಿ ಕಲ್ಪನಾತೀತವಾಗಿದೆ.

    ರಿಲಯನ್ಸ್ ಕಮ್ಯುನಿಕೇಶನ್‌ ಕಂಪನಿಯು ತಾನು ವಿತರಿಸಿದ ಎಫ್‌ ಸಿ ಸಿ ಬಿ ಗಳನ್ನು 2012 ರ ಮಾರ್ಚ್ ನಲ್ಲಿ ಪರಿವರ್ತನಾ ಬೆಲೆಯನ್ನು ರೂ.661 ರಂತೆ ನಿಗದಿಪಡಿಸಿತ್ತು. 2008 ರಲ್ಲಿ ರೂ.840 ರ ಸಮೀಪವಿದ್ದ ಷೇರಿನ ಬೆಲೆ ನಿರಂತರವಾದ ಕುಸಿತ ಕಂಡಿತು. 2019 ರಲ್ಲಿ ಷೇರಿನ ಬೆಲೆ 55 ಪೈಸೆಗಳಿಗೆ ಜಾರಿ ಈಗ ರೂ.3.15 ರ ಸಮೀಪವಿದೆ.

    ಇದೇ ರೀತಿ ಈಗ ವಹಿವಾಟಿನಿಂದ ಅಮಾನತುಗೊಂಡಿರುವ ಆಮ್‌ ಟೆಕ್‌ ಆಟೋ ರೂ.210 ರಂತೆ, ಭಾರತಿ ಶಿಪ್‌ ಯಾರ್ಡ್‌ ಪ್ರತಿ ಷೇರಿಗೆ ರೂ.498 ರಂತೆ ಪರಿವರ್ತಿಸುವ ಬೆಲೆಯನ್ನು ನಿಗದಿಪಡಿಸಿದ್ದವು. ಈಗ ರೂ.45 ರ ಸಮೀಪ ವಹಿವಾಟಾಗುತ್ತಿರುವ ಅಬ್ಬಾನ್‌ ಆಫ್‌ ಷೋರ್‌ ಪ್ರತಿ ಷೇರಿಗೆ ರೂ.2,789 ರಂತೆ ಪರಿವರ್ತನೆಯ ಬೆಲೆ ನಿಗದಿಪಡಿಸಿ ಅನಿವಾರ್ಯವಾಗಿ 2011 ರಲ್ಲಿ ಹಿಂದಿರುಗಿಸಿತಾದರೂ, ಮತ್ತೆ 2013 ರಲ್ಲಿ ರೂ.2,200 ಕೋಟಿ ಮೌಲ್ಯದ ಎಫ್‌ ಸಿ ಸಿ ಬಿ ವಿತರಿಸಲು ಪ್ರಯತ್ನಿಸಿತು.

    ಈ ಎಫ್‌ ಸಿ ಸಿ ಬಿ ಗೊಂದಲದಲ್ಲಿ ಹೆಚ್ಚು ತೊಂದರೆಗೊಳಗಾದವೆಂದರೆ ಮಧ್ಯಮ ಮತ್ತು ಕೆಳಮಧ್ಯಮ ವಲಯದ ಕಂಪನಿಗಳೆಂಬುದು ಗಮನಾರ್ಹ. ಹಾಗೆಂದು ಎಲ್ಲಾ ಎಫ್‌ ಸಿ ಸಿ ಬಿ ವಿತರಿಸಿದ ಎಲ್ಲಾ ಕಂಪನಿಗಳೂ ವಿಫಲವಾಗಿವೆ ಎಂದಲ್ಲ. ಯಶಸ್ಸು ಕಂಡ ಕಂಪನಿಗಳು ಇವೆ. ಒಟ್ಟಿನಲ್ಲಿ ಅಯಾ ಸಂದರ್ಭದಲ್ಲಿರುವ ಪರಿಸ್ಥಿತಿಯನ್ನಾಧರಿಸಿ ವಿಶ್ಲೇಷಿಸಲಾಗುವುದು. ಹೂಡಿಕೆ ನಿರ್ಧಾರ ಮಾಡುವಾಗ ನಮ್ಮ ಸ್ವಂತ ತೀರ್ಮಾನ ಅತ್ಯವಶ್ಯಕ.

    ಸಧ್ಯ ಹೆಚ್ಚಿನ ಕಂಪನಿಗಳು ಫಂಡ್‌ ರೈಸಿಂಗ್‌ ನ್ನು ವಿದೇಶಿ ವಿನಿಮಯದ ಮೂಲಕ ಸಂಪನ್ಮೂಲ ಸಂಗ್ರಹಣೆ ಮಾಡಿರುವುದು ಮುಳುವಾಗದಿರಲಿ ಎಂದು ಬಯಸೋಣ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಮೈಸೂರು ದಸರಾ ಜಂಬೂಸವಾರಿ: ಗಜಪಡೆಗೆ ತಾಲೀಮು

    MYSURU SEP 20

    ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜ ಪಡೆಗೆ ಸೋಮಾವಾರ ಭಾರ ಹೊರಿಸಿ ತಾಲೀಮು ನಡೆಸಲಾಯಿತು.

    ದಸರಾದ ಆಕರ್ಷಣೆ ಬಿಂದು ಜಂಬೂ ಸವಾರಿ. ಆದಿನ ಗಜರಾಜ ಅಭಿಮನ್ಯು 750 ಕೆಜಿ ಯೂಕದ ಚಿನ್ನದ ಅಂಬಾರಿಯಲ್ಲಿ ದೇವಿ ಚಾಮುಂಡೇಶ್ವರಿಯ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಗಜಪಡೆಗೆ ಭಾರ ಹೊರಿಸುವ ತಾಲೀಮು ಆರಂಭಿಸಲಾಯಿತು.

    ಮೈಸೂರು ಅರಮನೆ ಆವರಣದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಿ, ನಂತರ ಅಭಿಮನ್ಯು ನೇತೃತ್ವದ ಆನೆಗಳಿಗೆ ಮರಳಿನ ಮೂಟೆ ಹೊರಿಸಿ ತಾಲೀಮು ನಡೆಸಲಾಯಿತು.ಮೊದಲ ದಿನವಾದ ಸೋಮವಾರ 300 ಕೆಜಿ ತೂಕದ ಮರಣಿನ ಮೂಟೆ ಹುರಿಸಿ ತಾಲೀಮು ನಡೆಸಲಾಯಿತು.

    ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ ವಿಕ್ರಮ ಆನೆಗಳಿಗೆ ಮರಳಿನ ಮೂಟೆ ಹೊರಿಸಿ ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಯಿತು.ಡಿಸಿಎಫ್ ಕರಿಕಾಳನ್, ವೈದ್ಯ ರಮೇಶ್ ಅರಮನೆ, ಎಸಿಪಿ ಚಂದ್ರಶೇಖರ್ ಸೇರಿ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಅರಮನೆ ಆವರಣದಲ್ಲಿ ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಿ ಪೂರ್ವಾಭ್ಯಾಸಕ್ಕೆ ಚಾಲನೆ

    ಇನ್ನು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂಭ್ರಮ ಕಳೆಗಟ್ಟುತ್ತಿದ್ದು, ಅರಮನೆ ಆವರಣದಲ್ಲಿ ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಿ ಪೂರ್ವಾಭ್ಯಾಸಕ್ಕೆ ಚಾಲನೆ ನೀಡಲಾಯಿತು. ಅರಮನೆಯ ಆನೆ ಬಾಗಿಲ ಬಳಿ ಫಿರಂಗಿ ಗಾಡಿಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಕೆ ಮಾಡಲಾಯಿತು. ಚಾಮುಂಡೇಶ್ವರಿ ದೇವಿಯ ಭಾವಚಿತ್ರ ಇರಿಸಿ ಅರ್ಚಕ ಪ್ರಹ್ಲಾದ್ ಪೂಜೆ ನೆರವೇರಿಸಿದರು. ಮೈಸೂರು ನಗರ ಪೆÇಲೀಸ್ ಆಯುಕ್ತ ಚಂದ್ರಗುಪ್ತ, ಅರಣ್ಯಾಧಿಕಾರಿ ಕರಿಕಾಳನ್ ಸೇರಿದಂತೆ ಇತರ ಅಧಿಕಾರಿಗಳು ಪೂಜೆಯಲ್ಲಿ ಭಾಗಿಯಾಗಿದ್ದರು.

    ವಿಜಯದಶಮಿ ಜಂಬೂಸವಾರಿ ಮೆರವಣಿಗೆಯ ದಿನ ಚಿನ್ನದ ಅಂಬಾರಿ ಹೊತ್ತ ಆನೆ ಹೊರಡುವ ವೇಳೆ 21 ಬಾರಿ ಕುಶಾಲತೋಪುಗಳನ್ನು ಸಿಡಿಸಲಾಗುತ್ತದೆ. ಆ ವೇಳೆ ಭಾರೀ ಶಬ್ದ ಹೊರಹೊಮ್ಮುತ್ತದೆ. ಹಾಗಾಗಿ ದಸರಾ ಗಜಪಡೆ ಭಾರೀ ಶಬ್ದಕ್ಕೆ ಹೊಂದಿಕೊಳ್ಳಲೆಂಬ ಉದ್ದೇಶದಿಂದ ಆನೆಗಳು, ಕುದುರೆಗಳ ಸಮ್ಮುಖದಲ್ಲೂ ಕುಶಾಲತೋಪು ಸಿಡಿಸುವ ತಾಲೀಮು ನಡೆಯುತ್ತದೆ. ಅದ್ದರಿಂದ ಕುಶಾಲತೋಪುಗಳನ್ನು ಸಿಡಿಸುವ ಸಲುವಾಗಿ ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯಿಂದ ಕುಶಾಲತೋಪು ತಾಲೀಮು ನಡೆಸಲಾಯಿತು.

    ಅಧಿಕಾರಿಗಳ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

    ಈ ಬಾರಿ ಸರಳ ದಸರಾ ಆಚರಣೆ ಮಾಡಲು ಉನ್ನತಾಧಿಕಾರ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನಿಸಿದಂತೆ ಆಯೋಜಿಸಲು ಅಧಿಕಾರಿಗಳು ಮಾಡಿಕೊಂಡಿರುವ ಪೂರ್ವಸಿದ್ಧತೆಯನ್ನು ಜಿಲ್ಲಾಧಿಕಾರಿಗಳೂ ಆಗಿರುವ ದಸರಾ ವಿಶೇಷಾಧಿಕಾರಿ ಡಾ. ಬಗಾದಿ ಗೌತಮ್ ಅವರು ಸೋಮವಾರ ಪರಿಶೀಲಿಸಿದರು.

    ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ಈಗಾಗಲೇ 6 ಉಪ ಸಮಿತಿಗಳನ್ನು ರಚಿಸಲಾಗಿದೆ. ಈ ಆರು ಸಮಿತಿಗಳು ಕಳೆದ ವರ್ಷ ಮಾಡಿದ ಕಾರ್ಯಗಳ ಬಗ್ಗೆ ಮಾಹಿತಿ ಪಡೆದು, ಈ ವರ್ಷ ಮಾಡಬೇಕಾದ ಕೆಲಸಗಳ ಬಗ್ಗೆ ಸಲಹೆ ಸೂಚನೆ ನೀಡಿದರು.

    ಒಬ್ಬ ಯಡಿಯೂರಪ್ಪ ಅಲ್ಲ, ಯಡಿಯೂರಪ್ಪ ಅವರಂತಹ ನೂರು ಜನ ಬಂದರೂ ಬಿಜೆಪಿಯನ್ನು ಉಳಿಸಲಿಕ್ಕೆ ಸಾಧ್ಯವಿಲ್ಲ: ಸಿದ್ಧರಾಮಯ್ಯ

    BENGALURU SEPT 20

    ಬೆಲೆ ಏರಿಕೆಯಿಂದ ಜನರ ಆಕ್ರೋಶ ಒಳಗೊಳಗೆ ಕುದಿಯುತ್ತಿದೆ. ಈ ಸರ್ಕಾರ ತೊಲಗಿದರೆ ಸಾಕು, ಮತ್ತೆ ಚುನಾವಣೆ ಬಂದರೆ ಸಾಕು ಎಂದು ಕಾಯುತ್ತಿದ್ದಾರೆ. ಒಬ್ಬ ಯಡಿಯೂರಪ್ಪ ಅಲ್ಲ, ಯಡಿಯೂರಪ್ಪ ಅವರಂತಹ ನೂರು ಜನ ಬಂದರೂ ಬಿಜೆಪಿಯನ್ನು ಉಳಿಸಲಿಕ್ಕೆ ಸಾಧ್ಯವಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ಸರ್ಕಾರ ಕೇಸ್ ಹಾಕುತ್ತದೆ ಎಂಬ ಕಾರಣಕ್ಕೆ ಇದನ್ನೆಲ್ಲ ಸಹಿಸಿಕೊಂಡು ಜನ ಸುಮ್ಮನಿದ್ದಾರೆ. ನರೇಂದ್ರ ಮೋದಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಯಾರಿಂದಲೂ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಮನೆಗೆ ಕಳಿಸಿ, ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.

    ಕೇಂದ್ರ ಸರಕಾರದ ನಿರಂತರ ಇಂಧನ ಬೆಲೆ ಹೆಚ್ಚಳ ಹಾಗೂ ತತ್ಪರಿಣಾಮವಾಗಿ ದಿನ ಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ನಡೆದ ಸೈಕಲ್ ಜಾಥಾದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

    ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಮೇಲೆ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಜನರ ಜೇಬಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಹಾಕಿವೆ.ಈ ಹಿಂದೆ ಯು.ಪಿ.ಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 120 ಡಾಲರ್ ಗಿಂತ ಹೆಚ್ಚಿದ್ದರೂ ದೇಶದಲ್ಲಿ ಡೀಸೆಲ್ ಬೆಲೆ ರೂ.47 ಇತ್ತು, ಹಾಗಾಗಿ ಅಗತ್ಯ ವಸ್ತುಗಳ ಬೆಲೆ ಕಡಿಮೆಯಿತ್ತು. ಪೆಟ್ರೋಲ್ ಬೆಲೆ ಕೂಡ ರೂ. 75 ರ ಗಡಿಯೊಳಗೆ ಇತ್ತು.

    ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಕಚ್ಚಾತೈಲ ದರ ಇಳಿಮುಖವಾದರೆ, ಸರ್ಕಾರ ವಿಧಿಸುತ್ತಿದ್ದ ಅಬಕಾರಿ ಸುಂಕ ಏರಿಕೆಯಾಯಿತು ಎಂದು ಸಿದ್ಧರಾಮಯ್ಯ ಆರೋಪಿಸಿದರು.

    2014 ರಿಂದ ಈ ವರೆಗೆ ಕಚ್ಚಾತೈಲ ದರ ಸುಮಾರು 50 ಡಾಲರ್ ಆಸುಪಾಸಿನಲ್ಲಿದ್ದರು ಕೂಡ ಅದರ ಲಾಭ ಗ್ರಾಹಕರಿಗೆ ಸಿಗಲಿಲ್ಲ. ಯು.ಪಿ.ಎ ಸರ್ಕಾರದ ಅವಧಿಯಲ್ಲಿ ಡೀಸೆಲ್ ಮೇಲೆ 3 ರೂಪಾಯಿ 45 ಪೈಸೆ ಹಾಗೂ ಪೆಟ್ರೋಲ್ ಮೇಲೆ 9ರೂಪಾಯಿ 20 ಪೈಸೆ ಅಬಕಾರಿ ಸುಂಕ ಇತ್ತು, ನರೇಂದ್ರ ಮೋದಿ ಅವರ ಏಳು ವರ್ಷಗಳ ಆಡಳಿತದಲ್ಲಿ ಅಬಕಾರಿ ಸುಂಕ ಡೀಸೆಲ್ ಮೇಲೆ 31 ರೂಪಾಯಿ 84 ಪೈಸೆ, ಪೆಟ್ರೋಲ್ ಮೇಲೆ 32 ರೂಪಾಯಿ 98 ಪೈಸೆಗೆ ಏರಿಕೆಯಾಗಿದೆ. ಇದರಲ್ಲಿ ಶೇ. 50 ಕಡಿಮೆ ಮಾಡಲಿ.

    ನರೇಂದ್ರ ಮೋದಿ ಅವರ ಸರ್ಕಾರ ಡೀಸೆಲ್, ಪೆಟ್ರೋಲ್ ಹಾಗೂ ಗ್ಯಾಸ್ ಮೇಲಿನ ಅಬಕಾರಿ ಸುಂಕದ ಮೂಲಕ ಒಟ್ಟು ರೂ. 23 ಲಕ್ಷ ಕೋಟಿ ತೆರಿಗೆ ಸಂಗ್ರಹ ಮಾಡಿದೆ.2020-21 ರ ಸಾಲಿನಲ್ಲಿ ರೂ. 3 ಲಕ್ಷ 35 ಸಾವಿರ ಕೋಟಿ ಅಬಕಾರಿ ಸುಂಕ ಸಂಗ್ರಹಿಸಲಾಗಿದೆ. ಕಳೆದ ಏಳು ವರ್ಷಗಳಲ್ಲಿ ಕರ್ನಾಟಕ ರಾಜ್ಯವೊಂದರಿಂದಲೇ 1 ಲಕ್ಷದ 20 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದೆ.

    ಮುಖ್ಯಮಂತ್ರಿಗಳು ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಗೆ ತೈಲ ಬಾಂಡ್ ಕಾರಣ ಎಂಬ ಉತ್ತರ ನೀಡಬಹುದು ಆದರೆ 2006 ರಿಂದ 2010 ರವರೆಗೆ ಒಟ್ಟು ರೂ. 1 ಲಕ್ಷದ 40 ಸಾವಿರ ಕೋಟಿ ತೈಲ ಬಾಂಡ್ ಖರೀದಿ ಮಾಡಲಾಗಿದೆ. ಆಮೇಲೆ ತೈಲ ಬಾಂಡ್ ತೆಗೆದುಕೊಳ್ಳುವುದನ್ನು ನಿಲ್ಲಿಸಲಾಯಿತು.

    ಈ ಸರ್ಕಾರ ತೈಲ ಬಾಂಡ್ ಗೆ ಕಟ್ಟಿರುವ ಹಣ ಕೇವಲ ರೂ. 3,500 ಕೋಟಿ. ಪ್ರತೀ ವರ್ಷದ ಬಡ್ಡಿಯಂತೆ ಕಳೆದ ಏಳು ವರ್ಷಗಳಲ್ಲಿ ರೂ.70,000 ಕೋಟಿ ಕೊಟ್ಟಿದ್ದಾರೆ.ಈ ಸರ್ಕಾರ ತೀರಿಸಬೇಕಾದ ಬಾಂಡ್ ಹಣ ರೂ. 1,30,923 ಕೋಟಿ. ರೂ. 5,762 ಕೋಟಿ ತೈಲಬಾಂಡ್ ಮೇಲಿನ ಸಾಲವನ್ನು ಮನಮೋಹನ್ ಸಿಂಗ್ ಅವರ ಸರ್ಕಾರವೇ ತೀರಿಸಿದೆ.

    ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯಲ್ಲಿ ರೂ. 3 ಕಡಿಮೆ ಮಾಡಿದ್ದಾರೆ. ನಮ್ಮ ರಾಜ್ಯ ಸರ್ಕಾರ ಯಾಕೆ ಈ ರೀತಿ ತೆರಿಗೆ ಕಡಿತಗೊಳಿಸಬಾರದು? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

    ಈ ರೀತಿ ತೆರಿಗೆ ಕಡಿತ ಮಾಡಿದರೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುವ ಜೊತೆಗೆ ಕಬ್ಬಿಣ, ಸಿಮೆಂಟ್, ಬಸ್ ಪ್ರಯಾಣದರ, ಅಗತ್ಯ ವಸ್ತುಗಳ ಬೆಲೆ, ಹೋಟೆಲ್ ಬಿಲ್ ಎಲ್ಲವೂ ಕಡಿಮೆಯಾಗುತ್ತದೆ.
    ಬೆಲೆಯೇರಿಕೆ ಇಂದ ಜನರ ಜೇಬು ತೂತಾಗಿದೆ. ಮನೆಯಲ್ಲಿದ್ದ ಬಂಗಾರವನ್ನು ಅಡ ಇಟ್ಟು ಜೀವನ ಸಾಗಿಸಬೇಕಾದ ಪರಿಸ್ಥಿತಿ ಇದೆ.

    ಜಿ.ಎಸ್.ಟಿ ಬಂದಮೇಲೆ ರಾಜ್ಯಗಳಿಗಿದ್ದ ತೆರಿಗೆ ಸಂಗ್ರಹದ ಹಕ್ಕು ಈಗ ಇಲ್ಲವಾಗಿದೆ. ಕೇಂದ್ರ ಸರ್ಕಾರ ಜಿ.ಎಸ್.ಟಿ ಪರಿಹಾರವನ್ನು ಸರಿಯಾಗಿ ಕೊಡದೆ, ಸಾಲ ತಗೊಳ್ಳಿ ಎನ್ನುತ್ತಿದೆ.

    15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ, ರಾಜ್ಯದ ಪಾಲನ್ನು 4.71% ಇಂದ 3.64% ಗೆ ಇಳಿಸಲಾಗಿದೆ. ಹಿಂದೆ ರಾಜ್ಯದ ಪಾಲು, ವಿಶೇಷ ಅನುದಾನ ಸೇರಿ ಒಟ್ಟು ರೂ. 80,000 ಕೋಟಿ ರಾಜ್ಯಕ್ಕೆ ಬರುತ್ತಿತ್ತು, ಆದರೆ ಈಗ ಅದು ರೂ. 38,000 ಮಾತ್ರ ಬರುತ್ತಿದೆ. ಇದಕ್ಕೆ ಯಾರು ಹೊಣೆ?

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುತ್ತಾರೆ ಎಂಬ ನಿರೀಕ್ಷೆ ಇಲ್ಲ. ಭಂಡ ಸರ್ಕಾರ ಇದು. ಇವತ್ತು ಆಟೋ ಚಾಲಕರು, ಕ್ಯಾಬ್ ಚಾಲಕರು, ಟ್ರ್ಯಾಕ್ಟರ್ ಇರುವ ರೈತರು, ಬಸ್ ಮಾಲೀಕರು, ಲಾರಿ ಮಾಲೀಕರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

    ಈ ಬಗ್ಗೆ ಮಾಧ್ಯಮಗಳು ಹೆಚ್ಚಿನ ಒತ್ತು ಕೊಟ್ಟು, ಸುದ್ದಿ ಪ್ರಸಾರ ಮಾಡಬೇಕು‌ ಎಂದು ಸಿದ್ದರಾಮಯ್ಯ ಅವರು ಹೇಳಿದರು

    error: Content is protected !!