22.3 C
Karnataka
Tuesday, July 7, 2026
    Home Blog Page 52

    ಹಳೆ ಕಂಪನಿ, ಹೊಸ ಹೆಸರು;ಪೂರ್ವಪರ ಅರಿತು ಹೂಡಿಕೆ ಮಾಡುವುದು ಲೇಸು

    ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್‌ ಶುಕ್ರವಾರದಂದು ಸರ್ವಕಾಲೀನ ಗರಿಷ್ಠದ ದಾಖಲೆಯಿಂದ ಮುನ್ನುಗ್ಗುತ್ತಿರುವ ವೇಗ ಎಲ್ಲೆಡೆ ಹರ್ಷವನ್ನು ತುಂಬಿದೆ. ಕೇವಲ ಎಂಟು ತಿಂಗಳಲ್ಲಿ ಹತ್ತು ಸಾವಿರ ಪಾಯಿಂಟುಗಳ ಏರಿಕೆಯನ್ನು ಪ್ರದರ್ಶಿಸಿದೆ. ಕೇವಲ ಸೆನ್ಸೆಕ್ಸ್‌ ಒಂದೇ ಅಲ್ಲ ಜೊತೆಗೆ ಮಧ್ಯಮ, ಕೆಳ ಮಧ್ಯಮ ಶ್ರೇಣಿಗಳ ಕಂಪನಿಗಳು, ವಿವಿಧ ವಲಯಗಳ ಸೂಚ್ಯಂಕಗಳೂ ಗಮನಾರ್ಹ ದಾಖಲೆಯನ್ನು ನಿರ್ಮಿಸಿವೆ.

    ಈ ರೀತಿಯ ಏರಿಕೆಯ ಹಿಂದೆ ಅಡಕವಾಗಿರುವ ಕಾರಣಗಳು ಅನೇಕವಿವೆ. ಇದೇ ರೀತಿಯ ಏರಿಕೆಯ ಪ್ರವೃತ್ತಿಯು ಮುಂದುವರೆಯುತ್ತದೆಯೇ ಎಂಬುದನ್ನು ಕಾದುನೋಡಬೇಕಾಗಿದೆ. ಸೆನ್ಸೆಕ್ಸ್‌ 60 ಸಾವಿರ ಪಾಯಿಂಟುಗಳನ್ನು ತಲುಪಿದ್ದಕ್ಕೇ ಅದು ಸೀನಿಯರ್‌ ಸಿಟಿಜನ್‌ ಎಂದು ಗುರುತಿಸಲಾಗುತ್ತಿರುವುದು, ನಿವೃತ್ತಿಯಾಗುತ್ತಿದೆ ಎಂದು ತನ್ನ ಚಲನೆಯ ದಿಶೆ ಬದಲಾಗದಿದ್ದರೆ ಸಾಕು.

    ಪ್ರತಿಯೊಂದು ಏರಿಕೆಯ ವಿಜೃಂಭಣೆಯ ಸಮಯದಲ್ಲಿ ಕಾರ್ಪೊರೇಟ್‌ ವಲಯದಲ್ಲಿ ತಮ್ಮ ವಿವಿಧ ಯೋಜನೆಗಳಿಗೆ ಸಂಪನ್ಮೂಲ ಸಂಗ್ರಹಣೆಯ ಕಾರ್ಯವೂ ಚುರುಕಾಗುತ್ತದೆ. ಅದರಂತೆ ಸಂಪನ್ಮೂಲ ಸಂಗ್ರಹಣೆಯ ಕಾರ್ಯವು ಸಾಂಗವಾಗಿ ನೆರವೇರುತ್ತಿದೆ. ಅಲ್ಲದೆ ಅನೇಕ ಕಂಪನಿಗಳು ಆರಂಭಿಕ ವಿತರಣೆಗಳ ಮೂಲಕವೂ ಪೇಟೆಯಲ್ಲಿ ವಹಿವಾಟಿಗೆ ನೋಂದಾಯಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಕೆಲವು ಯಶಸ್ವಿಯಾಗಿಯೂ ಇವೆ.

    ಹೊಸ ನಾಮಕರಣ

    ಈ ಮಧ್ಯೆ ಹಲವಾರು ಕಂಪನಿಗಳು ತಮ್ಮ ಹಿಂದಿನ ಹೆಸರನ್ನು ಬದಲಿಸಿಕೊಂಡು ಹೊಸ ನಾಮಕರಣದೊಂದಿಗೆ ಪೇಟೆಯಲ್ಲಿ ತಮ್ಮ ಗುರುತನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಲಿವೆ. ಹೂಡಿಕೆದಾರರು ತಮ್ಮ ಚಟುವಟಿಕೆಗೆ ಮುಂಚೆ ಈ ವಿಚಾರದಲ್ಲಿ ಗಮನಹರಿಸಿಕೊಂಡು ಕಂಪನಿಗಳ ಅಸಲಿಯತ್ತನ್ನು ಗುರುತಿಸುವುದು ಒಳಿತು. 2020ರಿಂದ ಹೆಸರು ಬದಲಿಸಿಕೊಂಡಿರುವ ಕೆಲವು ಕಂಪನಿಗಳ ಪಟ್ಟಿಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಕೊಟ್ಟಿರುವ ಕಂಪನಿಗಳೆಲ್ಲಾ ಕಳಪೆ ಎಂದಲ್ಲ, ಆದರೆ ಹೂಡಿಕೆಗೆ ಮುಂಚೆ ಕಂಪನಿಗಳ ಬಗ್ಗೆ ಅರಿತು ನಿರ್ಧರಿಸಿರಿ.

    ಆಧುನಿಕ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಹೆಸರನ್ನು ಇನ್‌ ಕ್ರೆಡಿಬಲ್‌ ಇಂಡಸ್ಟ್ರೀಸ್‌ ಎಂದು ಬದಲಿಸಿಕೊಂಡಿದೆ 2021 ರಲ್ಲಿ.

    ಆಡ್‌ ಲ್ಯಾಬ್‌ ಎಂಟರ್‌ ಟೇನ್ಮೆಂಟ್‌ ಲಿಮಿಟೆಡ್‌ ಕಂಪನಿ ಹೆಸರನ್ನು ಇಮ್ಯಾಜಿಕಾ ವರ್ಲ್ಡ್‌ ಎಂಟರ್‌ ಟೇನ್ಮೆಂಟ್‌ ಲಿಮಿಟೆಡ್‌ ಎಂದು 2020 ರಲ್ಲಿ ಬದಲಿಸಿಕೊಂಡಿದೆ.

    ಐಶ್ವರ್ಯ ಟೆಲಿಕಾಂ ಲಿಮಿಟೆಡ್‌ ತನ್ನ ಹೆಸರನ್ನು ಐಶ್ವರ್ಯ ಟೆಕ್ನಾಲಜೀಸ್‌ ಅಂಡ್‌ ಟೆಲಿಕಾಂ ಎಂದು 2020 ರಲ್ಲಿ ಬದಲಿಸಿಕೊಂಡಿದೆ.

    ಆಕ್ಮೆ ಸ್ಟಾರ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ ಹೆಸರನ್ನು ಸ್ಟಾರ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ ಎಂದು 2021 ರಲ್ಲಿ ಬದಲಿಸಿಕೊಂಡಿದೆ.

    ಅನಿಶಾ ಇಂಪೆಕ್ಸ್‌ ಲಿಮಿಟೆಡ್‌ ಕಂಪನಿಯ ಹೆಸರು ರೇಸ್‌ ಎಕೊ ಚೈನ್‌ ಲಿಮಿಟೆಡ್‌ ಎಂದು ಬದಲಾಗಿದೆ 2021 ರಲ್ಲಿ.

    ಆಪಲ್‌ ಫೈನಾನ್ಸ್‌ ಲಿಮಿಟೆಡ್‌ ತನ್ನ ಹೆಸರನ್ನು ಯುಟಿಕ್‌ ಎಂಟರ್‌ ಪ್ರೈಸಸ್‌ ಲಿಮಿಟೆಡ್‌ ಎಂದು 2020 ರಲ್ಲಿ ಬದಲಾಗಿದೆ.

    ಅಪ್ಪು ಇಂಡಸ್ಟ್ರೀಸ್‌ ಲಿಮಿಟೆಡ್‌ ತನ್ನ ಹೆಸರನ್ನು ಬ್ರೆಲ್ಸ್‌ ಇನ್ಫೋಟೆಕ್‌ ಲಿಮಿಟೆಡ್‌ ಎಂದು 2020 ರಲ್ಲಿ ಬದಲಿಸಿಕೊಂಡಿದೆ.

    ಎ ಒನ್‌ ಲೈಫ್‌ ಸೈನ್ಸಸ್‌ ಲಿಮಿಟೆಡ್‌ ಕಂಪನಿ ತನ್ನ ಹೆಸರನ್ನು 2020 ರಲ್ಲಿ ಕೊಬೊ ಬಯೋಟೆಕ್‌ ಲಿಮಿಟೆಡ್‌ ಎಂದು ಬದಲಿಸಕೊಂಡಿದೆ.

    8 ಕೆ ಮೈಲ್ಸ್‌ ಸಾಫ್ಟ್‌ ವೇರ್‌ ಸರ್ವಿಸಸ್‌ ಲಿಮಿಟೆಡ್‌ ಕಂಪನಿಯ ಹೆಸರು 2021 ರಲ್ಲಿ ಸೆಕ್ಯೂರ್‌ ಕ್ಲೌಡ್‌ ಟೆಕ್ನಾಲಾಜೀಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಹೊಂಡ ಸಿಯೆಲ್‌ ಪವರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ 2020 ರಲ್ಲಿ ಹೊಂಡ ಇಂಡಿಯಾ ಪವರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಇಂಡಿಯಾ ಬುಲ್ಸ್‌ ವೆಂಚರ್ಸ್‌ ಲಿಮಿಟೆಡ್‌ ಕಂಪನಿ 2020 ರಲ್ಲಿ ಧನಿ ಸರ್ವಿಸಸ್‌ ಲಿಮಿಟೆಡ್‌ ಎಂದು ಬದಲಾಗಿದೆ.

    ಇಂಟರ್‌ ನ್ಯಾಶನಲ್‌ ಪೇಪರ್‌ ಎಪಿಪಿಎಂ ಲಿಮಿಟೆಡ್‌ ಕಂಪನಿ ಹೆಸರು ಆಂದ್ರ ಪೇಪರ್‌ ಲಿಮಿಟೆಡ್‌ ಎಂದು ಬದಲಿಸಲಾಗಿದೆ.

    ಜುಬಿಲೆಂಟ್‌ ಲೈಫ್‌ ಸೈನ್ಸಸ್‌ ಲಿಮಿಟೆಡ್‌ ಕಂಪನಿಯ ಹೆಸರು 2021 ರಲ್ಲಿ ಜುಬಿಲಂಟ್‌ ಫಾರ್ಮೊವ ಲಿಮಿಟೆಡ್‌ ಎಂದು ಬದಲಿಸಲಾಗಿದೆ.

    ಜಂಕ್ಷನ್‌ ಫ್ಯಾಬ್ರಿಕ್ಸ್‌ ಅಂಡ್‌ ಅಪರಲ್ಸ್‌ ಲಿಮಿಟೆಡ್‌ ಕಂಪನಿಯು 2020 ರಲ್ಲಿ ಗಾರ್ಮೆಂಟ್‌ ಮಂತ್ರ ಲೈಫ್‌ ಸ್ಟೈಲ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಕಾಶಿರಾಂ ಜೈನ್‌ ಅಂಡ್‌ ಕಂಪನಿ ಲಿಮಿಟೆಡ್‌ ಕಂಪನಿಯ ಹೆಸರು 2020 ರಲ್ಲಿ ಎಲೈಟ್‌ ಕಾನ್‌ ಇಂಟರ್‌ ನ್ಯಾಶನಲ್‌ ಲಿಮಿಟೆಡ್‌ ಎಂದು ಬದಲಾಗಿದೆ.

    ಕವಿತಾ ಫ್ಯಾಬ್ರಿಕ್ಸ್‌ ಲಿಮಿಟೆಡ್‌ ಕಂಪನಿ 2020 ರಲ್ಲಿ ತನ್ನ ಹೆಸರನ್ನು ನಿಬೆ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಮಹಾನ್‌ ಇಂಪೆಕ್ಸ್‌ ಲಿಮಿಟೆಡ್‌ ಕಂಪನಿ 2020 ರಲ್ಲಿ ಸೀಕೋಸ್ಟ್‌ ಶಿಪ್ಪಿಂಗ್‌ ಸರ್ವಿಸಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಮನ್ವಿಜಯ್‌ ಡೆವೆಲಪ್‌ ಮೆಂಟ್‌ ಕಂಪನಿ ಲಿಮಿಟೆಡ್‌ ಕಂಪನಿ 2020 ರಲ್ಲಿ ವಾರ್ಡ್‌ ವಿಝರ್ಡ್‌ ಇನ್ನೋವೇಶನ್ಸ್‌ ಅಂಡ್‌ ಮೊಬಿಲಿಟಿ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಮೊನ್ನೆಟ್‌ ಇಸ್ಪಾಟ್‌ ಅಂಡ್‌ ಎನರ್ಜಿ ಲಿಮಿಟೆಡ್‌ ಕಂಪನಿ 2020 ರಲ್ಲಿ ಜೆ ಎಸ್‌ ಡಬ್ಲು ಇಸ್ಪಾಟ್‌ ಸ್ಪೆಷಲ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ನರೇಂದ್ರ ಇನ್ವೆಸ್ಟ್‌ ಮೆಂಟ್ಸ್‌ (ದೆಹಲಿ) ಲಿಮಿಟೆಡ್‌ ಕಂಪನಿ 2020 ರಲ್ಲಿ ಐಕೊ ಲೈಫ್‌ ಸೈನ್ಸಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಓಂ ಮೆಟಲ್ಸ್‌ ಲಿಮಿಟೆಡ್‌ ಲಿಮಿಟೆಡ್‌ ಕಂಪನಿ 2020 ರಲ್ಲಿ ಓಂ ಇನ್ಫ್ರಾ ಲಿಮಿಟೆಡ್‌ ಎಂದು ಬದಲಿಸಲಾಗಿದೆ.

    ಪ್ರೈಮ್‌ ಕಸ್ಟಮರ್ಸ್‌ ಸರ್ವಿಸಸ್ ಲಿಮಿಟೆಡ್‌ ಕಂಪನಿಯ ಹೆಸರನ್ನು 2020‌ ರಲ್ಲಿ ಪ್ರೈಮ್‌ ಅರ್ಬನ್‌ ಡೆವೆಲಪ್‌ ಮೆಂಟ್‌ ಇಂಡಿಯಾ ಲಿಮಿಟೆಡ್‌ ಎಂದು ಬದಲಾಗಿದೆ.

    ರೊಕ್ಸಿ ಎಕ್ಸ್ ಪೋರ್ಟ್ಸ್‌ ಲಿಮಿಟೆಡ್‌ ಕಂಪನಿಯು 2020 ರಲ್ಲಿ ರೆಮಿಡಿಯಮ್‌ ಲೈಫ್‌ ಕೇರ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಸ್ವೋರ್ಡ್‌ ಅಂಡ್‌ ಶೀಲ್ಡ್‌ ಫಾರ್ಮ ಲಿಮಿಟೆಡ್‌ ಕಂಪನಿ 2020 ರಲ್ಲಿ ಪ್ರವೇಗ್‌ ಕಮ್ಯುನಿಕೇಷನ್ಸ್‌ (ಇಂಡಿಯಾ) ಲಿಮಿಟೆಡ್‌ ಎಂದು ಬದಲಾಗಿದೆ.

    ಟಾಟಾ ಗ್ಲೋಬಲ್‌ ಬೆವರೇಜಸ್‌ ಲಿಮಿಟೆಡ್‌ ಕಂಪನಿಯ ಹೆಸರನ್ನು 2020 ರಲ್ಲಿ ಟಾಟಾ ಕನ್ಸೂಮರ್ಸ್‌ ಲಿಮಿಟೆಡ್‌ ಎಂದು ಬದಲಿಸಲಾಗಿದೆ.

    ಅರ್ಬಕ್‌ ನಿಟ್‌ ಫ್ಯಾಬ್ಸ್‌ ಲಿಮಿಟೆಡ್‌ ಕಂಪನಿಯ ಹೆಸರು 2020 ರಲ್ಲಿ ಸಿಡಿಜಿ ಪೆಟ್‌ ಕೆಂ ಲಿಮಿಟೆಡ್‌ ಎಂದು ಬದಲಾಗಿದೆ.

    ಬಗಾಡಿಯಾ ಕಲರ್‌ ಕೆಂ ಲಿಮಿಟೆಡ್‌ 2020 ರಲ್ಲಿ ಫಂಡ್‌ ವೈಸರ್‌ ಕ್ಯಾಪಿಟಲ್‌ ( ಇಂಡಿಯಾ) ಲಿಮಿಟೆಡ್‌ ಎಂದು ಬದಲಾಗಿದೆ.

    ಭಾರತಿ ಇನ್ಫ್ರಾಟೆಲ್‌ ಲಿಮಿಟೆಡ್‌ ಕಂಪನಿ 2020 ರಲ್ಲಿ ಇಂಡಸ್‌ ಟವರ್ಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಸಿ ಇ ಎಸ್‌ ಇ ವೆಂಚರ್ಸ್‌ ಲಿಮಿಟೆಡ್‌ 2021 ರಲ್ಲಿ ಆರ್‌ ಪಿ ಎಸ್‌ ಜಿ ವೆಂಚರ್ಸ್‌ ಲಿಮಿಟೆಡ್‌ ಎಂದು ಬದಲಾಗಿದೆ.

    ಸಿಎಂಐ ಎಫ್‌ ಪಿ ಐ ಲಿಮಿಟೆಡ್‌ ಕಂಪನಿ ತನ್ನ ಹೆಸರನ್ನು 2020 ರಲ್ಲಿ ಜಾನ್‌ ಕಾಕ್ರೈಲ್‌ ಇಂಡಿಯಾ ಲಿಮಿಟೆಡ್‌ ಎಂದು ಬದಲಾಗಿದೆ.

    ಸೈಬರ್‌ ಮೇಟ್‌ ಇನ್ಫೋ ಟೆಕ್‌ ಲಿಮಿಟೆಡ್‌ 2021 ರಲ್ಲಿ ಆರ್ಚಾಸ್ಪ್‌ ಲಿಮಿಟೆಡ್‌ ಎಂದು ಬದಲಾಗಿದೆ.

    ದೀಪ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ 2020 ರಲ್ಲಿ ದೀಪ್‌ ಎನರ್ಜಿ ರಿಸೋರ್ಸಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಎಬಿಕ್ಸ್‌ ಕ್ಯಾಶ್‌ ವರ್ಲ್ಡ್‌ ಮನಿ ಇಂಡಿಯಾ ಲಿಮಿಟೆಡ್‌ 2021 ರಲ್ಲಿ ಡೆಲ್ಫಿ ವರ್ಲ್ಡ್‌ ಮನಿ ಲಿಮಿಟೆಡ್‌ ಎಂದು ಬದಲಿಸಲಾಗಿದೆ.

    ಎಸ್ಸೆಲ್‌ ಪ್ರೊಪ್ಯಾಕ್‌ ಲಿಮಿಟೆಡ್‌ ಕಂಪನಿ 2020 ರಲ್ಲಿ ಇಪಿಎಲ್‌ ಲಿಮಿಟೆಡ್‌ ಎಂದು ಬದಲಾಗಿದೆ.

    ಫೆರ್‌ ಕೆಂ ಸ್ಪೆಷಾಲಿಟೀಸ್‌ ಲಿಮಿಟೆಡ್‌ 2020 ರಲ್ಲಿ ಪ್ರಿವಿ ಸೆಷಾಲಿಟಿ ಕೆಮಿಕಲ್ಸ್‌ ಲಿಮಿಟೆಡ್‌ ಎಂದು ಬದಲಾಗಿದೆ.

    ಗ್ಯಾಮನ್‌ ಇನ್ಫ್ರಾಸ್ಟ್ರಕ್ಚರ್‌ ಪ್ರಾಜೆಕ್ಟ್ಸ್‌ ಲಿಮಿಟೆಡ್‌ 2021 ರಲ್ಲಿ ಎ ಜೆ ಆರ್‌ ಇನ್ಫ್ರಾ ಅಂಡ್‌ ಟೋಲಿಂಗ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಗಾರ್ವ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ 2020 ರಲ್ಲಿ ಹಾರ್ಡ್ ವಿನ್‌ ಇಂಡಿಯಾ ಲಿಮಿಟೆಡ್‌ ಎಂದು ಬದಲಾಗಿದೆ.

    ಗೌರವ್‌ ಮರ್ಕಂಟೈಲ್‌ ಲಿಮಿಟೆಡ್‌ ಕಂಪನಿಯ ಹೆಸರನ್ನು ಕ್ವಿಂಟ್‌ ಡಿಜಿಟಲ್‌ ಮೀಡಿಯಾ ಲಿಮಿಟೆಡ್‌ ಎಂದು 2020ರಲ್ಲಿ ಬದಲಾಗಿದೆ.

    ಗ್ರೆಸೆಲ್ಸ್ ಎಜುಕೇಷನ್ ಲಿಮಿಟೆಡ್‌ 2021 ರಲ್ಲಿ ಐರನ್‌ ವುಡ್‌ ಎಜುಕೇಷನ್‌ ಲಿಮಿಟೆಡ್‌ ಎಂದು ಬದಲಾಗಿದೆ.

    ಗ್ರೊಮೊ ಟ್ರೇಡ್‌ ಅಂಡ್‌ ಕನ್ಸಲ್ಟನ್ಸಿ ಲಿಮಿಟೆಡ್‌ 2020 ರಲ್ಲಿ ತನ್ನ ಹೆಸರನ್ನು ಪ್ರಿಸ್ಮ್ ಕ್ಸ್‌ ಗ್ಲೋಬಲ್‌ ವೆಂಚರ್ಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ವೈಜ್ಮನ್‌ ಫಾರೆಕ್ಸ್‌ ಲಿಮಿಟೆಡ್‌ ಕಂಪನಿ 2020 ರಲ್ಲಿ ಎಬಿಕ್ಸ್‌ ಕ್ಯಾಶ್‌ ವರ್ಲ್ಡ್‌ ಮನಿ ಇಂಡಿಯಾ ಲಿಮಿಟೆಡ್‌ ಎಂದು ಬದಲಿಸಲಾಗಿದೆ.

    ವೆಲ್‌ ಕಾನ್‌ ಇಂಟರ್‌ ನ್ಯಾಶನಲ್‌ ಲಿಮಿಟೆಡ್‌ ಕಂಪನಿಯು ಮುಜಲಿ ಆರ್ಟ್ಸ್‌ ಲಿಮಿಟೆಡ್‌ ಎಂದು 2020 ರಲ್ಲಿ ಬದಲಿಸಿಕೊಂಡಿದೆ.

    ಹೀಗೆ ಬದಲಾದ ಕಂಪನಿಗಳಲ್ಲಿ ಉತ್ತಮವಾದ ಕಂಪನಿಗಳಿದ್ದರೂ ಹೆಚ್ಚಿನವು ಮಧ್ಯಮ ಮತ್ತು ಕೆಳಮಧ್ಯಮ ಕಂಪನಿಗಳಿವೆ. ಅಲ್ಲದೆ ಕೆಲವು ಕಳಪೆ ಕಂಪನಿಗಳೂ ಇವೆ. ಈ ಪಟ್ಟಿಯು ಪೂರ್ಣವಾದುದಲ್ಲ. ಹೂಡಿಕೆಗೆ, ವಹಿವಾಟಿಗೆ ಆಯ್ಕೆ ಮಾಡಿಕೊಳ್ಳುವಾಗ ಕಂಪನಿಗಳ ಹಿಂದಿನ ಬೆಳವಣಿಗೆಗಳನ್ನು/ ಹೆಸರಿನ ಬದಲಾವಣೆಗಳನ್ನೂ ಅರಿತಿದ್ದರೆ ನಿರ್ಧಾರ ಸುಗಮವಾಗಿರಲು ಸಾಧ್ಯ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಡಿಸೆಂಬರ್ ವೇಳೆಗೆ ಬೆಳಗಾವಿಗೆ ಸರ್ಕಾರಿ ಕಚೇರಿಗಳ ಸ್ಥಳಾಂತರ

    BELAGAVI SEP 26

    ಅಕ್ಟೋಬರ್ 3 ರಿಂದ ಸಕ್ಕರೆ ನಿರ್ದೇಶನಾಲಯ ಬೆಳಗಾವಿಯಲ್ಲಿ ಕಾರ್ಯಾರಂಭ ಮಾಡಲಿದೆ. ಡಿಸೆಂಬರ್ ನಲ್ಲಿ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲಾಗುವುದು. ಆ ವೇಳೆಗೆ ಸಾಧ್ಯವಿರುವಷ್ಟು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

    2019- 20 ನೇ ಸಾಲಿನಲಿ ಬೆಳಗಾವಿಯಲ್ಲಿ ಅತ್ಯಧಿಕ ಮಳೆಯಾಗಿ ಮನೆಗಳು ಹಾಗೂ ಬೆಳೆಗಳು ಹಾನಿಗೊಳಗಾಗಿವೆ. ಆ ಸಂದರ್ಭದಲ್ಲಿ ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಹಲವು ಸೌಲಭ್ಯಗಳನ್ನು ಪ್ರಕಟಿಸಿದ್ದರು. ಒಟ್ಟು 44205 ಮನೆಗಳಿಗೆ ಪರಿಹಾರ ನೀಡುವ ಕಾರ್ಯ ಪ್ರಾರಂಭವಾಗಿದೆ.ಎ ಮತ್ತು ಬಿ ಕೆಟಗೆರಿ ಮನೆಗಳಿಗೆ 718 ಕೋಟಿ ರೂ. , ಬಿ ಕೆಟಗರಿಗೆ 9.64 ಸಿ ಕೆಟಗರಿಗೆ 132 ಕೋಟಿ ರೂ.ಗಳು ಸೇರಿದಂತೆ ಒಟ್ಟು 1864 ಕೋಟಿ ರೂ.ಗಳನ್ನು ನೀಡಲಾಗಿದ್ದು, ಬೆಳೆ ಹಾನಿಗೆ 263 ಕೋಟಿ ರೂ.ಗಳ ಪರಿಹಾರವನ್ನು 1.56 ಲಕ್ಷ ರೈತರಿಗೆ ಈಗಾಗಲೇ ನೀಡಿದೆ ಎಂದು ತಿಳಿಸಿದರು.

    ಪರಿಹಾರ ಪಾವತಿಗೆ ತೊಡಕಿರುವ ಅಂಶಗಳ ಬಗ್ಗೆ ಕಳೆದ ಬಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕಂದಾಯ ಇಲಾಖೆ ಕೋರಿರುವ ವಿವರಗಳನ್ನು ಒದಗಿಸಿ ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ಮಾಡಿ ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು.

    ಕಬ್ಬು ಬೆಳೆಗಾರರಿಗೆ ಬಾಕಿ ಹಣ:ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಗೆ ಸಂಬಂಧಪಟ್ಟಂತೆ ಈಗಾಗಲೇ ಮಾತುಕತೆ ನಡೆದಿದೆ. ಬಾಕಿ ಹಣವನ್ನು ನೀಡದಿದ್ದರೆ ಕಾನೂನಾತ್ಮಕವಾಗಿ ಕ್ರಮ ಜರುಗಿಸಲಾಗುವುದು. ಈ ಮಧ್ಯೆ ಸಕ್ಕರೆ ಕಾರ್ಖಾನೆಗಳು, ಸಕ್ಕರೆ ನಿರ್ದೇಶನಾಲಯ ಹಾಗೂ ಅಪೆಕ್ಸ್ ಬ್ಯಾಂಕ್ ಅವರೊಟ್ಟಿಗೆ ಮಾತುಕತೆ ನಡೆಸಿ ಹಣ ಪಾವತಿಗೆ ಕ್ರಮವಹಿಸಲಾಗುವದು ಎಂದು ಹೇಳಿದರು.

    ಭಾರತ್ ಬಂದ್ ಬೇಡ:ಭಾರತ್ ಬಂದ್ ನಡೆಸುವುದು ಸೂಕ್ತವಲ್ಲ. ಕೋವಿಡ್ ನಿಂದ ಈಗ ತಾನೇ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಆರ್ಥಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಡಬೇಕು. ಹೀಗಾಗಿ ಭಾರತ್ ಬಂದ್ ಬೇಡ ಎಂಬ ಸಲಹೆ ನೀಡಿದರು.

    ವೈರಲ್ ಜ್ವರ : ರಾಜ್ಯದಲ್ಲಿ ವೈರಲ್ ಜ್ವರದ ಬಗ್ಗೆ ಸಂಪೂರ್ಣ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು. ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ, ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲು ಸೂಚಿಸಲಾಗಿದೆ ಎಂದರು.

    ಸೋಮವಾರದ ಬಂದ್ ಕರೆಗೆ ಕಾಂಗ್ರೆಸ್ ಬೆಂಬಲ

    BENGALURU SEP 26

    ದೇಶದ ರೈತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ (ಸೆ.27) ನಡೆಯುತ್ತಿರುವ ”ಭಾರತ್ ಬಂದ್” ಕರೆಗೆ ರಾಜ್ಯ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ.

    ”ರೈತರ ಹಕ್ಕೊತ್ತಾಯದ ಶಾಂತಿಯುತ ಬಂದ್ ಕರೆಗೆ ಪಕ್ಷದ ಬೆಂಬಲವಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ರೈತ ವಿರೋಧಿ ಧೋರಣೆಯಿಂದಾಗಿ ದೇಶದ ಬಹುಸಂಖ್ಯಾತ ಅನ್ನದಾತ ಸಮುದಾಯ ತೀವ್ರ ವಿಷಮ ಪರಿಸ್ಥಿತಿ ಎದುರಿಸುತ್ತಿದೆ. ಕೆಲವೇ ಮಂದಿ ಉದ್ಯಮಿಗಳ ಬೆಂಬಲಕ್ಕೆ ನಿಂತಿರುವ ಬಿಜೆಪಿ ಇಡೀ ಶ್ರಮಿಕ ಜನಸಮುದಾಯವನ್ನು ವಂಚಿಸುತ್ತಿದೆ.

    ಪ್ರಧಾನಿ ಮೋದಿ ಸರ್ಕಾರದ ಕರಾಳ ಶಾಸನ, ನೀತಿ ಹಾಗೂ ಧೋರಣೆ ವಿರುದ್ಧ ರೈತರು ದಿಲ್ಲಿಯ ರಸ್ತೆಗಳಲ್ಲಿ ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ರೈತರ ಹೋರಾಟವನ್ನು ಹತ್ತಿಕ್ಕುವ ನಿರಂತರ ಪ್ರಯತ್ನ ನಡೆಸಿದ ಬಿಜೆಪಿ ಸರ್ಕಾರಕ್ಕೆ, ಅವರ ನ್ಯಾಯಯುತ ಬೇಡಿಕೆಗಳನ್ನು ಕೇಳುವ ಕನಿಷ್ಟ ಸೌಜನ್ಯ ತೋರಿಲ್ಲ. ಇದು ಬಿಜೆಪಿಯ ಅಮಾನವೀಯ ಮನಃಸ್ಥಿತಿಗೆ ನಿದರ್ಶನ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

    ರೈತರ ಹಿತರಕ್ಷಣೆಗಾಗಿ ದಶಕದ ಹಿಂದೆಯೇ ಭೂಸ್ವಾಧೀನ ಕಾಯ್ದೆಯನ್ನು ಕಾಂಗ್ರೆಸ್ ನೇತ್ರತ್ವದ ಯುಪಿಎ ಸರ್ಕಾರ ಜಾರಿ ಮಾಡಿತ್ತು. ಆದರೆ, ಅದಕ್ಕೆ ವಿರುದ್ದವಾದ ದಿಕ್ಕಿನಲ್ಲಿ ಸಾಗಿದ ಮೋದಿ ಸರ್ಕಾರವು, ಕಳೆದ 7 ವರ್ಷಗಳಲ್ಲಿ ದೇಶದ ರೈತರ ಬದುಕನ್ನು ಅಸಹನೀಯಗೊಳಿಸಿದೆ. ಇದರ ವಿರುದ್ದ ರೈತರು ನಡೆಸುತ್ತಿರುವ ಹೋರಾಟವನ್ನು ಒಬ್ಬ ರೈತನ ಮಗನಾಗಿ ಬೆಂಬಲಿಸುತ್ತೇನೆ. ನಮ್ಮ ಕಾಂಗ್ರೆಸ್ ಪಕ್ಷದ ನೈತಿಕ ಬೆಂಬಲವೂ ಇದೆ. ಹೋರಾಟ ಶಾಂತಿಯುತವಾಗಿರಲಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

    ಆತ್ಮಚರಿತ್ರೆಯ ಮೀಮಾಂಸೆ- ಅವರವರ ಭವಕ್ಕೆ ಓದುಗರ ಭಕುತಿಗೆ

    ಕನ್ನಡದ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಕೆ.ಸತ್ಯನಾರಾಯಯಣ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದವರು. ಸೃಜನ ಶಕ್ತಿಯ ಜೊತೆಯಲ್ಲಿ ವಿಮರ್ಶನ ಶಕ್ತಿಯನ್ನೂ ಮೇಳೈಸಿಕೊಂಡವರು.

    ಅವರ ಹೊಸ ಕೃತಿಅವರವರ ಭವಕ್ಕೆ ಓದುಗರ ಭಕುತಿಗೆ' ಅವರ ಸೃಷ್ಟಿಕ್ರಿಯೆಯ ಹೊಸ ಸಾಮರ್ಥ್ಯದ ಕಡೆಗೆ ಬೆರಳು ತೋರಿಸುತ್ತದೆ. ಈ ಕೃತಿಯಲ್ಲಿ ಅವರು ಕನ್ನಡದ ಏಳು ಜನ ಹೆಸರಾಂತ ಸಾಹಿತಿಗಳು ರಚಿಸಿರುವ ಆತ್ಮಚರಿತ್ರೆಗಳನ್ನು ಪರಿಶೀಲನೆಗೆ ಎತ್ತಿಕೊಂಡಿದ್ದಾರೆ. ಅದರ ಮೂಲಕ ಅವರು ಆತ್ಮಚರಿತ್ರೆ ಪ್ರಕಾರಕ್ಕೆ ಒಂದು ವ್ಯಾಖ್ಯೆಯನ್ನು ನೀಡುವ ಪ್ರಯತ್ನ ಮಾಡಿರುವುದನ್ನು ಗಮನಿಸಬಹುದು.

    ಈ ಕೃತಿಗೆ ಬಸವರಾಜ ಕಲ್ಗುಡಿಯವರು ಪಾಂಡಿತ್ಯಪೂರ್ಣವಾಗ ಮುನ್ನುಡಿಯನ್ನು ಬರೆದಿರುವರು. ಈ ಕೃತಿಯನ್ನು ಹಲವು ರೀತಿಯಲ್ಲಿ ಅನುಸಂಧಾನ ಮಾಡಿರುವ ಅವರು ಕೃತಿಯ ಆಚೆಗಿನ ಸಾಧ್ಯತೆಗಳ ಕುರಿತೂ ಬೆಲೆಯುಳ್ಳ ಮಾತುಗಳನ್ನು ಬರೆದಿರುವರು. ಅದನ್ನು ಓದಿದ ಮೇಲೆ ಬೇರೇನೂ ಹೇಳುವುದಕ್ಕೆ ಇಲ್ಲ ಅನಿಸಿತು. ಕೆ.ಸತ್ಯನಾರಾಯಣ ಅವರು ಈ ಕೃತಿಯಲ್ಲಿ ಆತ್ಮಕಥನದ ಮೀಮಾಂಸೆಯನ್ನು ಮಾಡಿರುವ ಕುರಿತು ಕೆಲವು ಮಾತುಗಳನ್ನು ದಾಖಲಿಸುವ ಪ್ರಯತ್ನ ಇಲ್ಲಿ ನಾನು ಮಾಡಿದ್ದೇನೆ.

    ಸ್ವತಃ ನಾಲ್ಕು ಸಂಪುಟಗಳಲ್ಲಿ ಹೊಸದೆನ್ನುವ ರೀತಿಯಲ್ಲಿ ಆತ್ಮಚರಿತ್ರೆಗಳನ್ನು ಬರೆದಿರುವ ಸತ್ಯನಾರಾಯಣ ಅವರು ಇಲ್ಲಿ ಸಮೀಕ್ಷೆಗೆ ಆರಿಸಿಕೊಂಡಿರುವ ಲೇಖಕರು ಗೋಪಾಲಕೃಷ್ಣ ಅಡಿಗ, ಪಿ.ಲಂಕೇಶ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಯು.ಆರ್‌.ಅನಂತಮೂರ್ತಿ, ಎಸ್‌.ಎಲ್‌. ಭೈರಪ್ಪ, ಡಿ.ಸಿದ್ದಲಿಂಗಯ್ಯ ಮತ್ತು ಗಿರೀಶ ಕಾರ್ನಾಡರು. ಇವರಲ್ಲಿ ಅನಂತಮೂರ್ತಿ ಮತ್ತು ಕಾರ್ನಾಡರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಅಡಿಗರು ಕಬೀರ ಸಮ್ಮಾನ ಪಡೆದವರು ಮತ್ತು ಭೈರಪ್ಪ ಸರಸ್ವತಿ ಸಮ್ಮಾನ ಪುರಸ್ಕೃತರು. ಇವರ ಆತ್ಮಚರಿತ್ರೆಗಳನ್ನೇ ಇಲ್ಲಿ ಸಮೀಕ್ಷೆಗೆ ಏಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬುದಕ್ಕೆ ಲೇಖಕರು ನೀಡುವ ಕಾರಣ, ಇವರೆಲ್ಲ ಸಾರ್ವಜನಿಕ ಜೀವನದಲ್ಲಿರುವವರು, ಬೇರೆಬೇರೆ ಸ್ತರಗಳಲ್ಲಿ ಆ್ಯಕ್ಟಿವಿಸ್ಟ್‌ ಪಾತ್ರವನ್ನೂ ನಿರ್ವಹಿಸಿದವರು ಎಂಬುದು. ಇನ್ನೂ ಹೆಚ್ಚಿನ ಕಾರಣವೆಂದರೆ ಇವರೆಲ್ಲ ನಮ್ಮ ಕಾಲದಲ್ಲಿಯೇ ಬದುಕಿದವರು, ನಮ್ಮನ್ನು ರೂಪಿಸಿದವರು ಮಾತ್ರವಲ್ಲ, ನಮ್ಮಿಂದ ರೂಪುಗೊಂಡವರೂ ಕೂಡ. ಇವರೆಲ್ಲ ನಮ್ಮ ಕಾಲವನ್ನು ಹೇಗೆ ನೋಡಿದರು, ಯಾವ ಅಂಶಗಳನ್ನು ಗಮನಿಸಿದರು, ಗಮನಿಸಲಿಲ್ಲ, ಇವರ ಬರವಣಿಗೆಯ ಪ್ರೇರಣೆಗಳೇನು, ಕಾರಣಗಳೇನು, ಇದನ್ನೆಲ್ಲ ಗಮನಿಸುವುದು, ನಮ್ಮ ಕಾಲವನ್ನು, ಈ ಪ್ರಕಾರದ ಬರಹಗಾರರನ್ನು, ಹಾಗೆಯೇ ಅವರ ಬರವಣಿಗೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ನೆರವಾಗಬಹುದು ಎಂಬ ಭಾವನೆ.

    ಈ ಎಲ್ಲ ಆತ್ಮಚರಿತ್ರೆಗಳನ್ನು ಪರಿಶೀಲನೆಗೆ ಎತ್ತಿಕೊಳ್ಳುವಾಗ ಲೇಖಕರಲ್ಲಿ ಒಂದು ಮಾತು ಸ್ಪಷ್ಟವಾಗಿದೆ, ಆತ್ಮಚರಿತ್ರೆಗಳನ್ನು ಯಾರೇ ಬರೆಯಲಿ, ನಮ್ಮೊಳಗೆ ಇರುವ ಅನೇಕ ಆತ್ಮಚರಿತ್ರೆಗಳಲ್ಲಿ ಒಂದನ್ನು ಅಥವಾ ಒಂದು ಆತ್ಮಚರಿತ್ರೆಯ ಕೆಲವು ಭಾಗಗಳನ್ನು ನಾವು/ನಾನು ಬರೆದಿರುತ್ತೇವೆ. ಅಸಲಿಗೆ ಆತ್ಮಚರಿತ್ರೆಯು ಸೃಜನಶೀಲ ಸಾಹಿತ್ಯದ ಸ್ಥಾನವನ್ನು ಪಡೆಯುವುದಕ್ಕೆ ಅರ್ಹವಾಗಿದೆಯೇ ಎನ್ನುವ ಕುರಿತೇ ಲೇಖಕರಿಗೆ ಅನುಮಾನಗಳಿವೆ. ನಿರ್ದಿಷ್ಟ ಉದ್ದೇಶದ, ನಿರ್ದಿಷ್ಟ ಓದುಗರಿಗಾಗಿ, ನಿರ್ದಿಷ್ಟ ಪರಿಣಾಮಕ್ಕಾಗಿ ಮಾಡಿದ ಬರವಣಿಗೆಯು ಆತ್ಮಚರಿತ್ರೆಯಾದರೂ ಸಾಹಿತ್ಯದ ಪ್ರಕಾರವಲ್ಲ, ಕೇವಲ ಅದೊಂದು ಬರವಣಿಗೆಯ ಕ್ರಮ ಎಂಬ ಮಾತನ್ನು ಉಲ್ಲೇಖಿಸುತ್ತಾರೆ. ಆತ್ಮಚರಿತ್ರೆಗಳನ್ನು ಮೊದಲು ಬರೆಯಲು ಆರಂಭಿಸಿದವರು ಗಂಡಸರು ಎಂಬ ಮಾತನ್ನು ಲೇಖಕರು ಹೇಳುತ್ತಾರೆ. ಮನುಷ್ಯ ತನ್ನನ್ನು ತಾನೇ ನೋಡಿಕೊಳ್ಳುವ, ಕಟ್ಟಿಕೊಳ್ಳುವ ಬರವಣಿಗೆ ಪ್ರಾರಂಭವಾಯಿತು. ಈ ರೀತಿಯ ಬರವಣಿಗೆ ಕೂಡ ಮೊದಲು ಆಕರ್ಷಿಸಿದ್ದು ಗಂಡಸರದ್ದು ಎಂಬ ಹೊಸ ಮಾತನ್ನು ಅವರು ಹೇಳುತ್ತಾರೆ, ಆತ್ಮಚರಿತ್ರೆಗೆ ಗದ್ಯವೇ ಸೂಕ್ತ. ಏಕೆಂದರೆ ಗದ್ಯದ ಬರವಣಿಗೆಯಲ್ಲೇ ಒಂದು ರೀತಿಯ ಕಾರ್ಯ- ಕಾರಣ ಸಂಬಂಧವನ್ನು ಅಪೇಕ್ಷಿಸುತ್ತೆ, ಹಾಗಾಗಿ ಗದ್ಯದಲ್ಲಿ ಆತ್ಮಚರಿತ್ರೆ ಬರೆಯುವುದೆಂದರೆ ಒಂದು ರೀತಿಯ ಬರವಣಿಗೆಯನ್ನು ಮಾಡಲು ಒಪ್ಪಿದ ಹಾಗೆ ಎನ್ನುವದು ಅವರ ನಿಲವು. ಬರೆಯಲಿ ಬರೆಯದೇ ಇರಲಿ, ಪ್ರತಿಯೊಬ್ಬ ಮನುಷ್ಯನೂ ತನ್ನ ಬದುಕಿನುದ್ದಕ್ಕೂ ಆತ್ಮಚರಿತ್ರೆಗಳನ್ನು ಹೇಳಿಕೊಳ್ಳುತ್ತಿರುತ್ತಾನೆ, ನಟಿಸುತ್ತಿರುತ್ತಾನೆ, ಸ್ಥಾಪಿಸುತ್ತಿರುತ್ತಾನೆ ಎನ್ನುವ ಲೇಖಕರುನಾವು’ ಮತ್ತು ನಮ್ಮ' ಬರವಣಿಗೆಯ ಸಾಂಸ್ಕೃತಿಕ ಸಂದರ್ಭ, ನಮ್ಮ ಎದುರಿಗಿರುವ ಓದುಗರ ಸ್ವರೂಪವನ್ನು ನಿರ್ಧರಿಸುತ್ತದೆ, ನಿಯಂತ್ರಿಸುತ್ತದೆ ಎನ್ನುವ ಮೂಲಕ ಕೃತಿಯೊಂದರ ಲೇಖಕ ಕೃತಿಯ ಮೂಲಕವೇ ಆವಿರ್ಭವಿಸುತ್ತಾನೆ ಎನ್ನುವ ನಿಲವು ತಳೆಯುತ್ತಾರೆ. ತಾನು ಮಾಡುತ್ತಿರುವ ಬರವಣಿಗೆ ತನಗೋ ಇಲ್ಲ ಓದುಗರಿಗೆ ಮಾತ್ರವೋ ಎಂಬ ಪ್ರಶ್ನೆಯನ್ನು ಆತ್ಮಚರಿತ್ರಕಾರ ಎದುರಿಸಲೇಬೇಕು. ತೀರ ಲೋಕಮುಖವಾಗಿಬಿಟ್ಟರೆ ಆತ್ಮಚರಿತ್ರೆಯ ಬರವಣಿಗೆಯಲ್ಲಿ ಸಾಕ್ಷಾತ್ಕಾರದ ಅಂಶವೇ ಇರುವುದಿಲ್ಲ. ಆತ್ಮಚರಿತ್ರೆ ಮತ್ತು ಜೀವನಚರಿತ್ರೆಗಳನ್ನು ಬರೆಯುವವರ ಒಂದು ಅಘೋಷಿತ ಉದ್ದೇಶವೆಂದರೆ, ಒಂದು ಜೀವನಶೈಲಿಯನ್ನು ಮಾದರಿಯಾಗಿ ಒದಗಿಸಿ ಶಿಫಾರಸ್‌ ಮಾಡುವುದು ಎಂದು ಅವರು ಹೇಳುತ್ತಾರೆ.

    ನೀವು ನಿಮ್ಮ ಜೀವನದ ಯಾವ ಘಟ್ಟದಲ್ಲಿ ಯಾವ ಸಂದರ್ಭದಲ್ಲಿ ಬರೆಯುತ್ತೀರಿ ಎನ್ನುವುದರ ಮೇಲೆ ನಿಮ್ಮ ಆತ್ಮಚರಿತ್ರೆಯ ವಿವರಗಳು ನಿರ್ಧಾರವಾಗುತ್ತವೆ ಎನ್ನುವುದು ಅವರ ಇನ್ನೊಂದು ಮಾತು. ದಲಿತ ಆತ್ಮಚರಿತ್ರೆಗಳಲ್ಲಿ ನಾನು’ ಎಂಬ ಪದವನ್ನು ಬಳಸಿ ಲೇಖಕ ಬರೆಯುತ್ತಿದ್ದರೂ, ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ದಲಿತರ ನಾನು ನಾವೇ’ ಆಗಿರುತ್ತದೆ. ಸಮುದಾಯದ ಧ್ವನಿಯೇ ಆಗಿರುತ್ತದೆ ಎನ್ನುವುದನ್ನು ಅವರು ಗುರುತಿಸುತ್ತಾರೆ.ತಾನು ಬರೆಯುತ್ತಿರುವ ಚರಿತ್ರೆಯಲ್ಲಿ ಎಲ್ಲ ಕಾಲದ ಮನುಷ್ಯರಿಗೂ ಅನ್ವಯವಾಗುವಂತಹ ಸಂಗತಿಗಳು ಪ್ರಶ್ನೆಗಳು ಇವೆಯೇ ಎಂಬುದು ಚರಿತ್ರೆಕಾರನ ಗಮನದಲ್ಲಿದ್ದರೆ, ಬರವಣಿಗೆಗೆ ಇನ್ನೊಂದು ಮಜಲು ಸಿಗುತ್ತದೆ, ಇಲ್ಲದಿದ್ದರೆ ಇಲ್ಲ.

    ಆತ್ಮ ಚರಿತ್ರೆಗಳನ್ನು ಬರೆಯುವವರು ವ್ಯಕ್ತಿ ಕೇಂದ್ರಿತವಾಗಿ ಪ್ರಾರಂಭಿಸಿ, ಸಮಾಜಕೇಂದ್ರೀತವಾಗಿ ಬಲವಂತದಿಂದ ವಿಸ್ತರಿಸಿಕೊಳ್ಳುತ್ತಾರೆ. ಹಾಗಾಗಿ ಪ್ರಕೃತಿಯ ದಿನನಿತ್ಯದ, ಕ್ಷಣಕ್ಷಣದ ಪಲ್ಲಟಗಳನ್ನು ಆತ್ಮಚರಿತ್ರೆಕಾರರು ಗಮನಿಸುವುದಿಲ್ಲ ಎನ್ನವ ಲೇಖಕರು ಪ್ರಕೃತಿ ಎಂದರೆ ಕಾಡು, ಕಡಲು, ನದಿ ಮಾತ್ರವಲ್ಲ. ಸ್ಥೂಲವಾಗಿ ಈ ಪರಿಕಲ್ಪನೆ ಸರಿ. ಗಾಳಿ ಬೀಸುವ ರೀತಿ. ಮೋಡ ಚಲಿಸುವ ವಿಧಾನ, ಸೂರ್ಯೋದಯದ ಸೌಂದರ್ಯ, ಸೂರ್ಯಾಸ್ತದ ಘನತೆ, ಋತುಗಳ ಬದಲಾವಣೆ, ಹವಾಮಾನದ ಸ್ಥಿತ್ಯಂತರ ಎಲ್ಲವೂ ಸೇರಿಕೊಳ್ಳುತ್ತದೆ. ಇವೆಲ್ಲವೂ ಮನುಷ್ಯನ ಪ್ರತಿನಿತ್ಯದ ಜೀವನವನ್ನು ಪ್ರಭಾವಿಸುತ್ತಿರುತ್ತವೆ ಎನ್ನುವ ಮೂಲಕ ಆತ್ಮಚರಿತ್ರಕಾರರಿಗೆ ಒಂದು ಚೌಕಟ್ಟನ್ನು ಒದಗಿಸಲು ಯತ್ನಿಸುತ್ತಾರೆ. ಹಾಗೆಯೇ ಆತ್ಮಚರಿತ್ರಕಾರರು ತಾವು ಪ್ರಸ್ತಾಪಿಸುವ ವ್ಯಕ್ತಿಗಳ ಘನತೆಯ ಕಡೆಗೆ ಗೌರವದ ದೃಷ್ಟಿಯನ್ನು ಇಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ.

    ಇದರಲ್ಲಿ ಗಂಡು ಹೆಣ್ಣುಗಳ ಸಂಬಂಧವನ್ನು ಈ ಲೇಖಕರು ಹೇಗೆ ನೋಡಿದ್ದಾರೆ ಎಂಬುದನ್ನೂ ವಿಶ್ಲೇಷಿಸಿದ್ದಾರೆ. ಆತ್ಮಚರಿತ್ರೆಕಾರರು ತಮಗೆ ಇಷ್ಟವಿಲ್ಲದ ಸಂಗತಿಗಳನ್ನು ಸರಿಯಾಗಿ ನೆನಪಿಗೆ ಬರುತ್ತಿಲ್ಲ, ಎಲ್ಲವೂ ಅಸ್ಪಷ್ಟವಾಗಿದೆ, ಹಾ ಮರೆತಿದ್ದೆ ಎಂದು ನಾನಾ ರೀತಿಯ ಭಂಗಿಗಳನ್ನು ಹೂಡುತ್ತಾರೆ ಎನ್ನುವ ಅವರು, ಓದುಗರಿಗೆ ಇದು ಗೊತ್ತಾಗಿಬಿಡುತ್ತದೆ. ಆದರೆ ಇದು ಆತ್ಮಚರಿತ್ರೆ ಬರೆದುಕೊಳ್ಳುವವರ ತಂತ್ರಗಾರಿಕೆ ಎನ್ನುತ್ತಾರೆ. ಈ ಸ್ಮೃತಿನಾಶದ ತಂತ್ರವನ್ನು ಪ್ರಭುತ್ವ ಕೂಡ ಚೆನ್ನಾಗಿ ಬಳಸಿಕೊಳ್ಳುತ್ತವೆ ಎಂದು ಹೇಳುತ್ತಾರೆ. ಬೇರೆಬೇರೆ ಪ್ರಭುತ್ವಗಳು ಇತಿಹಾಸದ ಪಠ್ಯಗಳನ್ನು ಏಕೆ ಬದಲಿಸಲು ಮುಂದಾಗುತ್ತವೆ ಎನ್ನುವುದರ ವಿಶ್ಲೇಷಣೆಗೆ ಇದನ್ನು ನಾವು ವಿಸ್ತರಿಸಿಕೊಳ್ಳಬಹುದು.

    ಆತ್ಮಚರಿತ್ರೆಗಳ ಕುರಿತು ಸತ್ಯನಾರಾಯಣ ಅವರು ಬೀಜರೂಪದ ಒಂದು ಮಾತನ್ನು ಹೇಳುತ್ತಾರೆ- “ಆತ್ಮಚರಿತ್ರೆ ಬರೆದುಕೊಳ್ಳುವವನು ಕೃತಿಯ ಕೇಂದ್ರದಲ್ಲಿ ಸದಾ ಇರುತ್ತಾನೆ. ಏಕೆಂದರೆ ಅದು ಅವನ ಜೀವನ ಪ್ರವಾಹದ ಕತೆಯೇ… ಇಲ್ಲಿ ಲೇಖಕನೇ ದೂರು ಕೊಡುವವನು, ತನಿಖೆ ಮಾಡುವವನು ಮತ್ತು ನ್ಯಾಯಾಧೀಶನೂ ಕೂಡ ಆಗಿರುತ್ತಾನೆ. ಅವನು ನೀಡುವ ನಿರ್ಣಯಗಳಿಗೆ ಮೇಲ್ಮನಿ ಕೂಡ ಇರುವುದಿಲ್ಲ.”

    ಸತ್ಯನಾರಾಯಣ ಅವರು ಇಲ್ಲಿ ತಾವು ಆಯ್ದುಕೊಂಡ ಲೇಖಕರು ತಮ್ಮ ಸಮಕಾಲೀನ ಸಂದರ್ಭದ ತಲ್ಲಣಗೊಳಿಸುವ ಪರಿಸ್ಥಿತಿಗಳಲ್ಲಿ ಹೇಗೆ ಪ್ರತಿಕ್ರಿಯಿಸಿದರು ಎಂಬುದರ ಕಡೆ ಸೂಕ್ಷ್ಮ ನೋಟವನ್ನು ಹರಿಸುತ್ತಾರೆ. ಇದಕ್ಕಾಗಿ ಅವರು ಬಸವಲಿಂಗಪ್ಪನವರ ಬೂಸಾ ಪ್ರಕರಣ, ಬರಹಗಾರರ ಒಕ್ಕೂಟ, ತುರ್ತುಪರಿಸ್ಥಿತಿ ಮೊದಲಾದವುಗಳನ್ನು ಆಯ್ದುಕೊಂಡಿದ್ದಾರೆ. ಹಾಗೆಯೇ ಬಾಬ್ರಿ ಮಸೀದಿಯ ಧ್ವಂಸ ಪ್ರಕರಣವನ್ನೂ ಸೇರಿಸಿಕೊಳ್ಳಬಹುದಿತ್ತು. ಬಹುಶಃ ಅಡಿಗರು ಮತ್ತು ಭೈರಪ್ಪನವರ ಆತ್ಮಚರಿತ್ರೆಯ ಬರವಣಿಗೆ ಅದಕ್ಕೂ ಮೊದಲಿನದು ಎನ್ನುವ ಕಾರಣಕ್ಕೆ ಬಿಟ್ಟಿರಬಹುದೇನೋ.

    ಆತ್ಮಚರಿತ್ರಕಾರ ಯಾವಾಗ ತನ್ನ ಆತ್ಮಚರಿತ್ರೆಯನ್ನು ಬರೆಯಲು ಆರಂಭಿಸಿದ ಎನ್ನುವುದ ಮೇಲೆ ಆತ್ಮಚರಿತ್ರೆಯ ಶೈಲಿ ನಿರ್ಧಾರವಾಗುತ್ತದೆ ಎನ್ನುವ ಲೇಖಕರು, ಬರಹಗಾರನ ಆರೋಗ್ಯ, ಕೌಟುಂಬಿಕ ಸ್ಥಿತಿ-ಗತಿಗಳನ್ನು ಕೂಡ ಗಣನೆಗೆ ತೆಗೆದುಕೊಂಡು ಓದುಗ ಗಮನಿಸಬೇಕಾದ ಅಂಶವೆಂದರೆ ಸಾವಿನ ತಿಳಿವಳಿಕೆ, ಆತ್ಮಚರಿತ್ರೆಯ ಅಂತ್ಯದಲ್ಲಿ ಬರವಣಿಗೆಯನ್ನು ಹೇಗೆ ಪ್ರಭಾವಿಸಿದೆ ಎಂಬುದು ಎಂದು ಹೇಳುತ್ತಾರೆ.
    ಆತ್ಮಚರಿತ್ರೆಗಳನ್ನು ಬರೆದುಕೊಳ್ಳುವವರೆಲ್ಲ ತಮ್ಮ ಸಮಕಾಲೀನ ಇತಿಹಾಸದ ಭಾಗವಾಗಿರುತ್ತಾರೆ. ಇವರು ಉಲ್ಲೇಖಿಸುವ ಮತ್ತು ಇವರ ಬದುಕನ್ನೂ ಒಳಗೊಂಡ ಘಟನೆಗಳ ಕುರಿತು ಇನ್ನೂ ಯಾರುಯಾರೋ ಬರೆದಿರುತ್ತಾರೆ. ಅವೆಲ್ಲ ತೌಲನಿಕ ಅಧ್ಯಯನಕ್ಕೆ ಒಳಪಟ್ಟು ಜರಡಿ ಹಿಡಿಯುವ ಕೆಲಸವಾಗಬೇಕು, ಅದು ಆ ಆತ್ಮಚರಿತ್ರೆಕಾರ ಮಹತ್ವದ ವ್ಯಕ್ತಿಯಾಗಿದ್ದಾಗ ಮಾತ್ರ.

    ಒಟ್ಟಾರೆ ಈ ಕೃತಿಯಲ್ಲಿ ಸತ್ಯನಾರಾಯಣ ಅವರ ತೌಲನಿಕ ದೃಷ್ಟಿಕೋನ, ವಿಮರ್ಶನ ಪ್ರಜ್ಞೆ, ಅವರ ವ್ಯಾಪಕ ಓದನ್ನು ನಾವು ಗುರುತಿಸಬಹುದು.

    ರಾಜ್ಯೋತ್ಸವ ಪ್ರಶಸ್ತಿ:ಸಾರ್ವಜನಿಕರೇ ಸಾಧಕರನ್ನು ಶಿಫಾರಸು ಮಾಡಬಹುದು

    BENGALURU SEP 25

    ವೆಂಬರ್ ಒಂದರಂದು 66ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು, ಈ ಬಾರಿಯ ವಿಶೇಷವೆಂದರೆ, ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಗುರುತಿಸಿ ಆನ್ಲೈನ್ ಮೂಲಕ ಅವರ ಹೆಸರು ಶಿಫಾರಸು ಮಾಡಲು ಸಾರ್ವಜನಿಕರಿಗೇ ಅವಕಾಶ ಕಲ್ಪಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

    ಈ ವರ್ಷ 66 ಅರ್ಹ ಸಾಧಕರನ್ನು ಗುರುತಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ, ಸಾರ್ವಜನಿಕರು ಯಾರೇ ಆಗಲಿ ಅವರು ಸೇವಾ ಸಿಂಧು ಪೋರ್ಟಲ್ ಮೂಲಕ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಿದ್ಧಪಡಿಸಲಾಗಿರುವ ವಿಶೇಷ ನಮೂನೆಯ ಅರ್ಜಿಯಲ್ಲಿ ಮೂರು ಹೆಸರುಗಳನ್ನು ಶಿಫಾರಸು ಮಾಡಬಹುದಾಗಿದೆ. ಈ ಮೂವರು ಸಾಧ ಕರುಗಳ ಹೆಸರು, ಅವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ, ಅವರ ಊರು , ವಿಳಾಸ, ಸಂಪರ್ಕ ಸಂಖ್ಯೆಇತ್ಯಾದಿ ವಿವರಗಳನ್ನು ಒದಗಿಸಲು ಈ ಅರ್ಜಿ ನಮೂನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

    ರಾಜ್ಯದ ಮೂಲೆ ಮೂಲೆಯಲ್ಲಿ ವಾಸಮಾಡುತ್ತಿರುವ ಹಾಗೂ ಎಲೆಮರೆ ಕಾಯಿಯಂತೆ ತಮ್ಮ, ತಮ್ಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ, ಮಾಡುತ್ತಿರುವ ವ್ಯಕ್ತಿಗಳನ್ನು ಅವರ ಸುತ್ತ ಮುತ್ತಲೂ ಇರುವವರು ಗುರುತಿಸಿ ಅವರ ಸಾಧನೆಯನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ನಮಗೆ ತಲುಪಿಸಿದರೆ, ಅದನ್ನು ತಜ್ಞರ ಸಮಿತಿಗೆ ನೀಡಲಾಗುತ್ತದೆ, ಅದನ್ನು ಅವರು ಪರಿಶೀಲನೆ ಮಾಡಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಎಂದು ಪರಿಗಣಿಸಿದರೆ ಖಂಡಿತ ಅವರಿಗೆ ಪ್ರಶಸ್ತಿ ಸಿಗುವಂತಾಗುತ್ತದೆ. ಅದರ ಜೊತೆಗೆ ಈ ಪ್ರತಿಷ್ಠಿತ ಪ್ರಶಸ್ತಿಗೆ ನೇರವಾಗಿ ಸಾರ್ವಜನಿಕರೇ ಸಾಧಕರನ್ನು ಆಯ್ಕೆ ಮಾಡಿದಂತಾಗುತ್ತದೆ, ಕ್ರೀಡೆ ಹೊರತುಪಡಿಸಿದರೆ ಉಳಿದ ಸಾಧಕರು ಕನಿಷ್ಠ 60 ವರ್ಷ ಮೇಲ್ಪಟ್ಟವರಾಗಿರಬೇಕು ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

    ಇಂತಹ ಪ್ರಯೋಗ ಇದೇ ಮೊದಲ ಬಾರಿಗೆ ಮಾಡಲಾಗುತ್ತಿದ್ದು, ಇದು ಅತ್ಯಂತ ಪಾರದರ್ಶಕ ಹಾಗೂ ಪ್ರಜಾಪ್ರಭುತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ನಡೆಯುತ್ತಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದ್ದಾರೆ. ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೂ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶಿಸಬಹುದಾಗಿದೆ, ತಾವು ಪ್ರಶಸ್ತಿಗೆ ಶಿಫಾರಸು ಮಾಡುವ ವ್ಯಕ್ತಿಗಳ ಹೆಸರನ್ನು ಕಳುಹಿಸಲು ಅಕ್ಟೋಬರ್ 15 ನೇ ತಾರೀಖಿನವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

    ನೂತನ ಲೋಕಸಭಾ ಕಟ್ಟಡಕ್ಕೆ ಅನುಭವ ಮಂಟಪದ ಹೆಸರಿಡಲು ಸಭಾಪತಿ ಬಸವರಾಜ ಹೊರಟ್ಟಿ ಮನವಿ

    BENGALURU SEP 25
    ನವದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಮಹತ್ವಾಕಾಂಕ್ಷೆಯ ಲೋಕಸಭಾ ನೂತನ ಸಂಕೀರ್ಣದ ಕಟ್ಟಡವೊಂದಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡುವಂತೆ ವಿಧಾನ ಪರಿಷತ್ ಸಭಾಪತಿ ಮಾನ್ಯ ಬಸವರಾಜ ಹೊರಟ್ಟಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಆದ್ಯತಾಪೂರ್ವಕ ಮನವಿ ಮಾಡಿದ್ದಾರೆ.

    ಈ ಕುರಿತು ವಿಧಾನ ಸೌಧದಲ್ಲಿಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಮನವಿಯೊಂದನ್ನು ಸಲ್ಲಿಸಿರುವ ಸಭಾಪತಿ ಬಸವರಾಜ ಹೊರಟ್ಟಿ12ನೇ ಶತಮಾನದಲ್ಲಿ ಅಲ್ಲಮಪ್ರಭು ಮತ್ತು ಬಸವಾದಿ ಶರಣರು ನಿರ್ಮಿಸಿದ ಅನುಭವ ಮಂಟಪ ಇಡೀ ವಿಶ್ವದ ಪ್ರಪ್ರಥಮ ಶಾಸನ ಸಭೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಸಮಾನತೆಯನ್ನು ತೊಡೆದು ಹಾಕಿ “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎಂಬ ಸಂದೇಶ ಸಾರುವ ಸಾರ್ವಕಾಲಿಕ ವಿಚಾರಧಾರೆಯ ಅಡಿಯಲ್ಲಿ ನಿರ್ಮಾಣಗೊಂಡಿದ್ದ ಅನುಭವ ಮಂಟಪ ಪ್ರಜಾಪ್ರಭುತ್ವ ಪರಿಕಲ್ಪನೆಗೆ ಮೂಲ ಅಡಿಪಾಯ ಹಾಗೂ ಆಶಯವಾಗಿದೆ. ಶ್ರೇಷ್ಠ ಸಮಾಜ ಸುಧಾರಕ, ದಾರ್ಶನಿಕ ಹಾಗೂ ಅತ್ಯತ್ತಮ ಆಡಳಿತಗಾರರಾಗಿದ್ದ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಸಬಲೀಕರಣ, ಸೌಹಾರ್ದತೆ, ಸಹೋದರತ್ವ ಹಾಗೂ ಸಮಾನತೆ ಕುರಿತು ಇಡೀ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ತಮ್ಮ ಜೀವನದುದ್ದಕ್ಕೂ ಸಾಮಾಜಿಕ ಒಳಗೊಳ್ಳುವಿಕೆ ಕುರಿತು ಬೋಧಿಸಿರುವ ಬಸವಣ್ಣನವರು ಲಿಂಗ ಸಮಾನತೆ ಬಗ್ಗೆ ೧೨ನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಚಳವಳಿ ಮೂಲಕ ಇಡೀ ಮನುಕುಲಕ್ಕೆ ಮಾನವೀಯತೆಯ ಸಂದೇಶ ಸಾರಿದ್ದಾರೆ. ಅಂತಹ ಮಹಾನ್ ಪುರುಷರು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ನಿರ್ಮಿಸಿದ್ದ ಅನುಭವ ಮಂಟಪ ಸರ್ವ ಜಾತಿ, ಜನಾಂಗ ಸಮುದಾಯ ಹಾಗೂ ಲಿಂಗಗಳಿಗೆ ಪ್ರಾತಿನಿಧ್ಯ ನೀಡಿ ಪ್ರಜಾಸತ್ತಾತ್ಮಕ ಮೌಲ್ಯಗಳ ವರ್ಧನೆಯ ಬೀಜಾಂಕುರ ಮಾಡಿದ್ದಾರೆ. ಬಸವಾದಿ ಶರಣರು ರಚಿಸಿರುವ ಅಸಂಖ್ಯಾತ ವಚನಗಳೇ ಇಂದಿನ ಸಂವಿಧಾನದ ಅನುಚ್ಛೇದಗಳಾಗಿ ರೂಪುಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಇಡೀ ಜಗತ್ತಿಗೇ ಮಾನವೀಯತೆಯ ಹಾಗೂ ಪ್ರಜಾಸತ್ತಾತ್ಮಕ ಸಂದೇಶ ಸಾರುವ ಅನುಭವ ಮಂಟಪದ ಹೆಸರನ್ನು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ನೂತನ ಲೋಕಸಭಾ ಸಂಕೀರ್ಣದ ಕಟ್ಟಡವೊಂದಕ್ಕೆ ನಾಮಕರಣ ಮಾಡುವ ಮೂಲಕ ಕಾಯಕವೇ ಕೈಲಾಸವೆಂದು ಇಡೀ ಜಗತ್ತಿಗೆ ಕಾಯಕನಿಷ್ಠೆಯ ಗೌರವ ಹೆಚ್ಚಿಸಿರುವ ಮಹಾತ್ಮಾ ಬಸವೇಶ್ವರರ ಹೆಸರನ್ನು ಅಜರಾಮರವಾಗಿಸುವ ಮೂಲಕ ಮುಂದಿನ ಪೀಳಿಗೆಗೆ ಜ್ಞಾನದಾಸೋಹಕ್ಕೆ ದೃಢ ಸಂಕಲ್ಪ ಕೈಗೊಳ್ಳಲು ತಾವು ಮುಂದಡಿ ಇಡಬೇಕೆಂದು ಕೋರುವುದಾಗಿ ಮಾನ್ಯ ಸಭಾಪತಿ ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ.

    ಬಿಯಾಂಡ್ ಬಾರ್ಡರ್ಸ್ ನಾಟ್ಯ ಸಂಗೀತದ ನಾಲ್ಕನೇ ಆವೃತ್ತಿ ಇಂದಿನಿಂದ

    ಶಾಸ್ತ್ರೀಯ ನೃತ್ಯ ಮತ್ತು ಸಂಗೀತ -4 ನೇ ಆವೃತ್ತಿಯ ಅಂತಾರಾಷ್ಟ್ರೀಯ ಉತ್ಸವ “ಬಿಯಾಂಡ್ ಬಾರ್ಡರ್ಸ್” ನ ಪ್ರದರ್ಶನ ವರ್ಚುಯಲ್ ಈವೆಂಟ್ ಆಗಿ ಇಂದಿನಿಂದ ಆರಂಭವಾಗಲಿದೆ. ಫೇಸ್ ಬುಕ್ ಮತ್ತು ಯೂ ಟ್ಯೂಬ್ ನಲ್ಲಿ ಇದರ ನೇರ ಪ್ರಸಾರ ನೋಡಬಹುದೆಂದು ಸಿಂಗಾಪುರದ ನಾಟ್ಯರಂಜಿನಿ, ಸೆಂಟರ್ ಫಾರ್ ಡ್ಯಾನ್ಸ್ ಎಕ್ಸಲೆನ್ಸ್ ನ ಸಂಸ್ಥಾಪಕರು ಮತ್ತು ಕಲಾತ್ಮಕ ನಿರ್ದೇಶಕರು ಆದ ವಿದುಷಿ ಡಾ.ಎಂ.ಎಸ್.ಶ್ರೀಲಕ್ಷ್ಮಿ ತಿಳಿಸಿದ್ದಾರೆ.

    ಕಾರ್ಯಕ್ರಮಗಳ ವಿವರ ಈ ರೀತಿ ಇದೆೆ:

    ಸಮಯ: ಸಂಜೆ 5:30 PM( ಸಿಂಗಪೋರ್ ಸಮಯ) / 3:00 ಗಂಟೆ ( ಭಾರತದ ಸಮಯ)

    ಶನಿವಾರ, 25-9-2021

    ಸಿಂಗಾಪುರದಿಂದ ತೋ ಅವರಿಂದ ಪಿಯಾನೋ ವಾದ್ಯ ಮತ್ತು ಲಾಜರ್ ಥುರಕ್ಕಲ್ ಸೆಬಾಸ್ಟಿನ್ ಇವರಿಂದ ಸಿನ್ಛ್ರೋನಿಸಿಟಿ.

    ಮಲೇಷ್ಯಾದಿಂದ ಗಣೇಶನ್ ಅವರಿಂದ ಭರತನಾಟ್ಯ ಮತ್ತು ಭಾರತದಿಂದ ಡಾ.ಜಿ.ಪದ್ಮಜಾ ರೆಡ್ಡಿ ಅವರಿಂದ ಕೂಚಿಪುಡಿ.

    ಮೊದಲ ದಿನದ ಕಾರ್ಯಕ್ರಮಕ್ಕೆ ಆಕಾಶವಾಣಿಯ ಡಾ.ನಿರ್ಮಲಾ ಯಲಿಗರ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.

    ವೀಕ್ಷಣೆಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

    ಭಾನುವಾರ, 26 ನೇ ಸೆಪ್ಟೆಂಬರ್ 2021

    ಭಾರತದಿಂದ, ಡಾ.ಯುಮ್ಲೆಂಬಂ ಗೋಪಿ ದೇವಿ ಅವರಿಂಗ ಮಣಿಪುರಿ ನೃತ್ಯ .ಯುಎಇ ಯಿಂದ ಅಂಜನಾ ಕೆಟ್ಟಿ ಮತ್ತು ಭಾರತದಿಂದ ಡಾ. ರಕ್ಷಾ ಕಾರ್ತಿಕ್ ಅವರಿಂಗ ಭರತನಾಟ್ಯ

    ಎರಡನೇ ನೇ ದಿನದ ಕಾರ್ಯಕ್ರಮಕ್ಕೆ ದೂರದರ್ಶನದ ಆರತಿ ಎಚ್.ಎನ್ ಮುಖ್ಯ ಅತಿಥಿಗಳಾಗಿರುತ್ತಾರೆ.

    ಹಿರಿಯ ಗುರು, ಮಲೇಷ್ಯಾದಿಂದ ಗಣೇಶನ್ ಅವರನ್ನು ಜೀವಮಾನದ ಸಾಧನೆಯೊಂದಿಗೆ ಗೌರವಿಸಲಾಗುವುದು.

    ವೀಕ್ಷಣೆಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

    ನೇರ ಪ್ರದರ್ಶನ ವೀಕ್ಷಿಸಲು ನಾಟ್ಯರಂಜಿನಿ ಯೂಟ್ಯೂಬ್ ಪುಟ: https: //youtube.com/c/ ಮತ್ತು ಫೇಸ್ಬುಕ್ ಪುಟ: NATYARANJINICentreforDanceEcellence: https: //www.facebook.com ಗೆ ಲಾಗಿನ್ ಆಗಬಹುದು ಎಂದು ಪ್ರಕಟಣೆ ತಿಳಿಸಿದೆ.

    ರಾಜ್ಯಕ್ಕೆ ಬಂದ ಲೋಕಸಭೆ ಸಭಾಧ್ಯಕ್ಷರಿಗೆ ಅಗೌರವ ಸಲ್ಲ: ಅದಕ್ಕೆಂದೆ ಅಧಿವೇಶನದಲ್ಲಿ ಭಾಗಿ ಎಂದ ಕುಮಾರಸ್ವಾಮಿ

    BENGALURU SEP 22

    ಲೋಕಸಭೆ ಸಭಾಧ್ಯಕ್ಷರು ಹಾಗೂ ಅವರು ಅಲಂಕರಿಸಿರುವ ಪೀಠಕ್ಕೆ ಅಗೌರವ ತೋರಬಾರದು ಎನ್ನುವ ಒಂದೇ ಕಾರಣಕ್ಕೆ ಇಂದು ನಡೆದ ವಿಧಾನಮಂಡಲ ಜಂಟಿ ಅಧಿವೇಶನ ಕಲಾಪದಲ್ಲಿ ಜೆಡಿಎಸ್ ಪಕ್ಷದ ಶಾಸಕರು ಪಾಲ್ಗೊಂಡಿದ್ದರು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳೂ ಆದ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ಕಲಾಪದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, “ರಾಜ್ಯದ ಸಂಸದೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು ಲೋಕಸಭೆಯ ಸಭಾಧ್ಯಕ್ಷರನ್ನು ಆಹ್ವಾನಿಸಿ ಜಂಟಿ ಅಧಿವೇಶವನ್ನು ಆಯೋಜಿಸಿದ್ದಾರೆ. ಇಂಥ ಅಪರೂಪದ ಸಂದರ್ಭದಲ್ಲಿ ಗೈರು ಹಾಜರಾಗುವುದು ಎಂದರೆ ಲೋಕಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದಂತೆ. ಹೀಗೆ ಆಗುವುದು ಬೇಡ ಹಾಗೂ ಸಂಸದೀಯ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ಏಕೈಕ ಉದ್ದೇಶದಿಂದ ಕಲಾಪದಲ್ಲಿ ನಮ್ಮ ಪಕ್ಷ ಭಾಗವಹಿಸಿತು” ಎಂದರು.

    ಸಂಸದೀಯ ವ್ಯವಸ್ಥೆಯಲ್ಲಿ ಈ ರೀತಿಯಲ್ಲಿ ಲೋಕಸಭೆಯ ಅಧ್ಯಕ್ಷರು ವಿಧಾನ ಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ಅವಕಾಶ ಇಲ್ಲ ಎನ್ನುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಈ ಬಗ್ಗೆ ಸಾಂವಿಧಾನಿಕ ತಜ್ಞರೇ ಉತ್ತರ ನೀಡಲಿ ಎಂದರು.

    ಇನ್ನು, ಕಾಂಗ್ರೆಸ್ ಪಕ್ಷದ ಸದಸ್ಯರು ಜಂಟಿ ಅಧಿವೇಶನವನ್ನು ಬಹಿಷ್ಕರಿಸಿದ್ದರಲ್ಲಾ ಎಂಬ ಪ್ರಶ್ನೆಗೆ, ಅದು ಆ ಪಕ್ಷಕ್ಕೆ ಬಿಟ್ಟ ವಿಚಾರ. ನಮ್ಮ ಪಕ್ಷದ ನಿಲುವನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಉತ್ತರಿಸಿದರು ಎಚ್.ಡಿ.ಕುಮಾರಸ್ವಾಮಿ ಅವರು.

    ಸದನದ ಕಲಾಪದ ಬಗ್ಗೆ ಹೊರಗೆ ಮಾತನಾಡುವುದು ಸರಿಯಲ್ಲ. ಕಲಾಪ ಹೇಗೆ ನಡೆಯುತ್ತಿದೆ ಎಂಬುದು ರಾಜ್ಯ ಜನತೆಗೆ ಚೆನ್ನಾಗಿ ಗೊತ್ತಾಗುತ್ತಿದೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಆದರೆ, ಕಲಾಪದ ಬಗ್ಗೆ ಬಹಿರಂಗವಾಗಿ ಮಾತನಾಡಿ ಸದನಕ್ಕೆ ಅಗೌರವ ತೋರುವ ಅಥವಾ ಸದನ ಪಾವಿತ್ರ್ಯತೆಗೆ ಧಕ್ಕೆ ತರಬಾರದು ಎನ್ನುವುದು ನನ್ನ ನಿಲುವು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿ; ಕಾಂಗ್ರೆಸ್ ವಿರುದ್ಧ ಡಾ.ಅಶ್ವತ್ಥನಾರಾಯಣ ಕಿಡಿ


    BENGALURU SEP 24

    ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಕಾಂಗ್ರೆಸ್ ಪಕ್ಷ ದ್ವಂದ್ವ ನೀತಿ ಅನುಸರಿಸುವ ಮೂಲಕ ರಾಜ್ಯದ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಗಂಭೀರ ಆರೋಪ ಮಾಡಿದರು.

    ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಬೆಂಗಳೂರಿನಲ್ಲಿಂದು ಬಿಜೆಪಿ ಕೇಂದ್ರ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಹಿಂದಿನ ಕಾಂಗ್ರೆಸ್ ಸರಕಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಪ್ರಹಾರ ನಡೆಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆತುರಾತುರವಾಗಿ ಜಾರಿ ಮಾಡಿಲ್ಲ. ಸಾಕಷ್ಟು ಪ್ರಕ್ರಿಯೆ ನಡೆದಿದೆ. ಅಪಾರ ಸಿದ್ಧತೆ ಮಾಡಿಕೊಂಡು ಜಾರಿಗೆ ತರಲಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಹೊಸ ಶಿಕ್ಷಣ ನೀತಿಯ ಬಗ್ಗೆ ಎಲ್ಲ ಪ್ರಕ್ರಿಯೆಗಳು ಶುರುವಾದವು. 2015ರಿಂದ ಶುರುವಾದ ಈ ಪ್ರಕ್ರಿಯೆಗಳ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವ ಪಕ್ಷದ ಸರಕಾರವಿತ್ತು? ಯಾರು ಮುಖ್ಯಮಂತ್ರಿ ಆಗಿದ್ದರು? ಎಂದು ಜನರಿಗೆ ಗೊತ್ತಿದೆ ಎಂದು ಸಚಿವರು ಕುಟುಕಿದರು.

    ಅಂದು ದೇಶದ 2.5 ಲಕ್ಷ ಗ್ರಾಮ ಪಂಚಾಯಿತಿಗಳ ಜತೆ ಸಂವಹನ ನಡೆಸಲಾಯಿತು. ರಾಜ್ಯದಲ್ಲೂ ಈ ಪ್ರಕ್ರಿಯೆ ನಡೆಯಿತು. ಈ ಎಲ್ಲ ಮಹತ್ವದ ಪ್ರಕ್ರಿಯೆಗಳಲ್ಲೂ ಅಂದಿನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸಕ್ರಿಯವಾಗಿ ಭಾಗಿಯಾಗಿದ್ದರು. ಹಾಗಾದರೆ, ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಏನು ಮಾಡುತ್ತಿದ್ದರು? ಇವರಿಗೆ‌ ಈ ವಿಚಾರ ಗೊತ್ತಿರಲಿಲ್ಲವೇ? ಅವರದೇ ಸರ್ಕಾರ ಏನೆಲ್ಲ ಸಲಹೆಗಳನ್ನು ಕೊಟ್ಟಿತ್ತು ಎಂಬುದನ್ನು ಒಮ್ಮೆ ಕಣ್ತೆರೆದು ನೋಡಲಿ ಎಂದು ಉನ್ನತ ಶಿಕ್ಷಣ ಸಚಿವರು ಕಿಡಿ ಕಾರಿದರು.

    ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಬಿಜೆಪಿಗೆ ಇಂಥ ಅಭಿವೃದ್ಧಿಪರ ವಿಚಾರದಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ ಎಂದ ಅವರು, ಪ್ರತಿಪಕ್ಷವಾಗಿ ಕಾಂಗ್ರೆಸ್ ಟೀಕೆ-ಟಿಪ್ಪಣಿ ಮಾಡುವುದು ಬಿಟ್ಟು ಸರಕಾರಕ್ಕೆ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ ಎಂದರು.

    ವಿಚಾರ ಸಂಕಿರಣ ದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ನಾಗೇಶ್, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಸದಸ್ಯ ಪ್ರೊ.ಎಂ.ಕೆ.ಶ್ರೀಧರ್, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ, ಸಂಸದ ಪಿ.ಸಿ.ಮೋಹನ್, ಬಿಜೆಪಿ ಸೆಂಟ್ರಲ್ ಘಟಕದ ಅಧ್ಯಕ್ಷ ಮಂಜುನಾಥ ಹಾಜರಿದ್ದರು

    ಮೋದಿ – ಹ್ಯಾರಿಸ್ ಭೇಟಿ;ಪರಸ್ಪರ ವಿಚಾರ ವಿನಿಮಯ

    WASHINGTON DC SEP 24

    ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಅಮೆರಿಕಾ ಪ್ರವಾಸದ ವೇಳೆ ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅವರನ್ನು ಭೇಟಿ ಮಾಡಿದರು.

    ಮೊದಲ ಮುಖಾಮುಖಿ ಭೇಟಿಗಾಗಿ ಉಭಯ ನಾಯಕರು ಸಂತಸ ವ್ಯಕ್ತಪಡಿಸಿದರು. 2021ರ ಜೂನ್ ತಿಂಗಳಲ್ಲಿ ನಡೆಸಿದ ದೂರವಾಣಿ ಸಮಾಲೋಚನೆಯನ್ನು ನೆನೆಪಿಸಿಕೊಂಡರು. ಆಫ್ಘಾನಿಸ್ತಾನ ಸೇರಿದಂತೆ ಇತ್ತೀಚಿನ ಜಾಗತಿಕ ಬೆಳವಣಿಗೆಗಳ ಕುರಿತು ಉಭಯ ನಾಯಕರು ತಮ್ಮ ಅನಿಸಿಕೆಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಮುಕ್ತ, ಸಮಗ್ರ ಮತ್ತು ಎಲ್ಲವನ್ನೂ ಒಳಗೊಂಡ ಇಂಡೋ-ಪೆಸಿಫಿಕ್ ಪ್ರದೇಶ ಸ್ಥಾಪನೆಯತ್ತ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

    ಅಲ್ಲದೆ, ಇಬ್ಬರೂ ನಾಯಕರು ತಮ್ಮ ತಮ್ಮ ರಾಷ್ಟ್ರಗಳಲ್ಲಿನ ಕೋವಿಡ್-19 ಸ್ಥಿತಿಗತಿ, ಲಸಿಕೆ ನೀಡಿಕೆಯನ್ನು ತೀವ್ರಗೊಳಿಸುವ ಮೂಲಕ ಸಾಂಕ್ರಾಮಿಕವನ್ನು ನಿಯಂತ್ರಿಸಲು ಕೈಗೊಂಡಿರುವ ಪ್ರಯತ್ನಗಳು ಮತ್ತು ಗಂಭೀರ ವೈದ್ಯಕೀಯ ಸಾಧನಗಳು, ಚಿಕಿತ್ಸೆ ಮತ್ತು ಆರೋಗ್ಯ ರಕ್ಷಣಾ ಸಾಧನಗಳ ಪೂರೈಕೆ ಖಾತ್ರಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

    ಹವಾಮಾನ ವೈಪರೀತ್ಯ ತಡೆಗೆ ಸಹಭಾಗಿತ್ವದ ಕ್ರಮದ ಪ್ರಾಮುಖ್ಯವನ್ನು ಉಭಯ ದೇಶಗಳು ಒಪ್ಪಿಕೊಂಡವು. ಪ್ರಧಾನಮಂತ್ರಿ ಅವರು ಭಾರತ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಮತ್ತು ಇತ್ತೀಚೆಗೆ ಆರಂಭಿಸಿರುವ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಕುರಿತು ಮಾತನಾಡಿದರು. ಅಲ್ಲದೆ, ಅವರು ಪರಿಸರ ಸುಸ್ಥಿರತೆಯನ್ನು ಉತ್ತೇಜಿಸಲು ಜೀವನಶೈಲಿ ಬದಲಾವಣೆಗೆ ಒತ್ತು ನೀಡುವ ಅಗತ್ಯತೆಯನ್ನು ಪ್ರತಿಪಾದಿಸಿದರು.

    ಬಾಹ್ಯಾಕಾಶ ಸಹಕಾರ, ಮಾಹಿತಿ ತಂತ್ರಜ್ಞಾನ ವಿಶೇಷವಾಗಿ ಉದಯೋನ್ಮುಖ ಮತ್ತು ನಿರ್ಣಾಯಕ ತಂತ್ರಜ್ಞಾನಗಳು, ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಭವಿಷ್ಯದ ಸಹಭಾಗಿತ್ವದ ಕ್ಷೇತ್ರಗಳ ಕುರಿತು ಅವರು ಚರ್ಚೆ ನಡೆಸಿದರು. ಉತ್ಸಾಹ ಭರಿತ ಜನರಿಂದ ಜನರು ನಡುವಿನ ಸಂಪರ್ಕ ಪರಸ್ಪರ ಶಿಕ್ಷಣ ಸಂಬಂಧಗಳಿಗೆ ಪ್ರಯೋಜನಕಾರಿ ಮತ್ತು ಎರಡೂ ದೇಶಗಳ ನಡುವೆ ಜ್ಞಾನ, ಹೊಸತನದ ಶೋಧ ಮತ್ತು ಪ್ರತಿಭೆಯ ಹರಿವಿಗೆ ಸಹಕಾರಿ ಎಂಬುದನ್ನು ಉಭಯ ನಾಯಕರು ಒಪ್ಪಿಕೊಂಡರು.

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಮತ್ತು ಸೆಕೆಂಡ್ ಜಂಟಲ್ಮನ್ ಡೌಗ್ಲಾಸ್ ಎಮಾಫ್ ಅವರಿಗೆ ಶೀಘ್ರವೇ ಭಾರತ ಭೇಟಿ ಕೈಗೊಳ್ಳಬೇಕೆಂದು ಆಹ್ವಾನ ನೀಡಿದರು.

    error: Content is protected !!