28.8 C
Karnataka
Friday, May 22, 2026
    Home Blog Page 51

    ಕೌಶಲ ಕಲಿಕೆಗೆ ಒತ್ತು ಸೇರಿದಂತೆ ಎನ್ಇಪಿ ಆಶಯಗಳ ಅನುಷ್ಠಾನ ಇನ್ಫೊಸಿಸ್ ಜೊತೆ ಸದ್ಯದಲ್ಲೇ 3 ಒಡಂಬಡಿಕೆ

    BENGALURU SEP 24

    ವಿದ್ಯಾರ್ಥಿಗಳ ಕೌಶಲ ಕಲಿಕೆಗೆ ಒತ್ತು ನೀಡುವುದು ಸೇರಿದಂತೆ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ-2020) ಆಶಯಗಳನ್ನು ಅನುಷ್ಠಾನಗೊಳಿಸುವುದಕ್ಕೆ ಪೂರಕವಾಗಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಐಟಿ ದಿಗ್ಗಜ ಇನ್ಫೊಸಿಸ್ ಕಂಪನಿ ಸದ್ಯದಲ್ಲೇ 3 ಮಹತ್ವದ ಒಡಂಬಡಿಕೆಗಳಿಗೆ ಸಹಿ ಹಾಕಲಿವೆ.

    ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ವಿಕಾಸಸೌಧದಲ್ಲಿ‌ ನಡೆದ ಇನ್ಫೋಸಿಸ್  ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಕಾಲೇಜು‌ ವಿದ್ಯಾರ್ಥಿಗಳಿಗೆ ಕೌಶಲ‌ ಕಲಿಸುವ ಮೂರು ಸಾವಿರಕ್ಕೂ ಹೆಚ್ಚು ಕೋರ್ಸ್ ಗಳಿರುವ  ‘ಇನ್ಫೊಸಿಸ್ ಸ್ಪ್ರಿಂಗ್ ಬೋರ್ಡ್’ ಬಳಕೆ, ಕಾಲೇಜು ಉಪನ್ಯಾಸಕರಿಗೆ‌ ಡಿಜಿಟಲ್ ತರಬೇತಿ, ಉದ್ಯೋಗ ಸಂಬಂಧಿ ಮಾರ್ಗದರ್ಶನಕ್ಕಾಗಿ ‘ಕ್ಯಾಂಪಸ್ ಕನೆಕ್ಟ್’ ಹಾಗೂ ಉನ್ನತ ಶಿಕ್ಷಣ ಕಾಲೇಜುಗಳಿಗೆ ಇನ್ಫೊಸಿಸ್ ವತಿಯಿಂದ 15,000 ಡಿಬಾಂಡೆಡ್ ಕಂಪ್ಯೂಟರುಗಳ ಕೊಡುಗೆ, ಇವು ಒಡಂಬಡಿಕೆಗಳಾಗಿರುತ್ತವೆ ಎಂದು ಸಚಿವರು ವಿವರಿಸಿದರು.

    ‘ಇನ್ಫೊಸಿಸ್ ಸ್ಪ್ರಿಂಗ್ ಬೋರ್ಡ್’ ಎಂಬುದು ಸಮಗ್ರ ಡಿಜಿಟಲ್ ಸಾಕ್ಷರತಾ ವೇದಿಕೆಯಾಗಿದ್ದು ಪರಿಣಾಮಕಾರಿ ಡಿಜಿಟಲ್ ಕಲಿಕೆ, ತಾಂತ್ರಿಕತೆ ಆಧಾರಿತ ಜೀವನ ಕೌಶಲ ಕೋರ್ಸ್ ಗಳು, ಗೇಮಿಫಿಕೇಷನ್, ಪ್ರತ್ಯಕ್ಷ ತರಗತಿಗಳು, ಉದ್ಯಮ ಪ್ರಮಾಣಪತ್ರೀಕರಣ (ಇಂಡಸ್ಟ್ರಿ ಸರ್ಟಿಫಿಕೇಷನ್), ಮೇಕರ್ಸ್ ಲ್ಯಾಬ್, ವೃತ್ತಿ ಮಾರ್ಗದರ್ಶನ (ಉನ್ನತ ಶಿಕ್ಷಣ)ವನ್ನು ಒಳಗೊಂಡಿರುತ್ತದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

    ಸ್ಮಾರ್ಟ್ ಕ್ಲ್ಯಾಸ್ ರೂಮ್ ಗಳಿಗೆ ಗೆಸ್ಚರ್ ಕಂಪ್ಯೂಟಿಂಗ್, ಬಯೋಮೆಟ್ರಿಕ್ಸ್ ತಂತ್ರಜ್ಞಾನ ಅಳವಡಿಕೆ, ತರಬೇತಿಗಾಗಿ ವರ್ಚ್ಯುಯಲ್ ರಿಯಾಲಿಟಿ, ಆಗ್ಮೆಂಟೆಡ್ ರಿಯಾಲಿಟಿ ತಾಂತ್ರಿಕತೆ ಬಳಕೆ, ಕಲಿಕಾ ದತ್ತಾಂಶವನ್ನು ಸಾಧನೆಯ ಫಲಿತಾಂಶದ ಸಂಯೋಜನೆ, ಆರೋಗ್ಯಕರ ಸ್ಪರ್ಧಾ ಮನೋಭಾವ ಮೂಡಿಸಲು ಗೇಮಿಫಿಕೇಷನ್ ಮತ್ತು ಡಿಜೈನ್ ತತ್ವಗಳ ಬಳಕೆ, ಪಠ್ಯಸಾಮಗ್ರಿ ರೂಪಿಸಲು ಆಟೋಮೇಷನ್ ಹಾಗೂ ರೊಬೋಟಿಕ್ ಉಪಕರಣಗಳ ಬಳಕೆ ಇವು ಇದರ ಭಾಗವಾಗಿರುತ್ತವೆ ಎಂದರು.

    ಈ ಒಡಂಬಡಿಕೆಗಳ ಭಾಗವಾಗಿ ಸಂಸ್ಥೆಗಳ ನಡುವೆ ಉತ್ಕೃಷ್ಠ ಕ್ರಮಗಳ ವಿನಿಮಯಕ್ಕಾಗಿ ‘ಎನ್ಇಪಿ ಕಮ್ಯುನಿಟಿ’ಯನ್ನು ಸ್ಥಾಪಿಸಲಾಗುತ್ತದೆ. ಈ ಮೂಲಕ ಎನ್.ಇ.ಪಿ. ರೂಪುರೇಷೆಗಳನ್ನು ಅನುಷ್ಠಾನಗೊಳಿಸಲು ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಪ್ರತಿಭಾವಂತರನ್ನು ಉತ್ತೇಜಿಸುವುದಕ್ಕಾಗಿ ಕೆಡಿಇಎಂ (ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್) ಹಾಗೂ ಇನ್ಫೊಸಿಸ್ ನಡುವೆ ಸಹಭಾಗಿತ್ವ ಏರ್ಪಡಲಿದೆ ಎಂದು ಸಚಿವರು ಹೇಳಿದರು.

    ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಷಿ, ಇನ್ಫೊಸಿಸ್ ಕಂಪನಿಯ ಹಿರಿಯ ಉಪಾಧ್ಯಕ್ಷರಾದ ತಿರುಮಲ ಆರೋಹಿ, ಗುರುರಾಜ್ ದೇಶಪಾಂಡೆ, ಉಪಾಧ್ಯಕ್ಷ ಸತೀಶ್ ನಂಜಪ್ಪ, ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥ ಸಂತೋಷ್ ಅನಂತಪುರ, ಇನ್ಫೋಸಿಸ್ ತರಬೇತಿ ಪ್ರಿನ್ಸಿಪಲ್ ಕಿರಣ್ ಎನ್.ಜಿ. ಮತ್ತು ಸೀನಿಯರ್ ಲೀಡ್ ಪ್ರಿನ್ಸಿಪಲ್ ವಿಕ್ಟರ್ ಸುನರಾಜ್ ಅವರು ಇದ್ದರು.

    2023 ವಿಧಾನಸಭೆ ಚುನಾವಣೆ: ಸಂಕ್ರಾಂತಿಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

    BIDADI SEP 28

    ಜನವರಿ ತಿಂಗಳ ಸಂಕ್ರಾಂತಿ ದಿನವೇ  2023ರ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಪ್ರಕಟಿಸಿದರು.

    ಜನತಾ ಪರ್ವ 1.O ಹಾಗೂ ಮಿಷನ್ 123 ಗುರಿಯೊಂದಿಗೆ ಬಿಡದಿಯ ತಮ್ಮ ತೋಟದಲ್ಲಿ ಹಮ್ಮಿಕೊಂಡಿದ್ದ 4 ದಿನಗಳ ಕಾರ್ಯಗಾರದ 2ನೇ ದಿನದ ಕೊನೆಯಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

    ಇಂದಿನ ಕಾರ್ಯಾಗಾರದಲ್ಲಿ ಮುಂದಿನ ಅಭ್ಯರ್ಥಿಗಳಿಗೆ  30 ಅಂಶಗಳ ಅಜೆಂಡಾ ನೀಡಿದ್ದೇವೆ. ಆ ಅಜೆಂಡಾ ಪ್ರಕಾರ ಅವರು ಕೆಲಸ ಮಾಡಿ ತೋರಿಸಬೇಕು. ಅವರೆಲ್ಲರೂ 3 ತಿಂಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನ ಮಾಡಬೇಕು‌. ಯಶಸ್ವಿಯಾಗಿ ಅನುಷ್ಠಾನ ಮಾಡುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲಾಗುವುದು ಎಂದರು ಅವರು.

    ನಿಗದಿತ ಅವಧಿಯೊಳಗೆ ಈ ಅಜೆಂಡಾವನ್ನು  ಗ್ರಾಮ ಪಂಚಾಯ್ತಿ ಮಟ್ಟಕ್ಕೆ ಅನುಷ್ಠಾನ ಮಾಡಲೆಬೇಕು ಹಾಗೂ ಇದನ್ನು ಪರಿವೇಕ್ಷಣೆ ಮಾಡಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಪ್ರತಿನಿತ್ಯ ಇದರ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಅವರು ಮಾಹಿತಿ ನೀಡಿದರು.

    ಇಂದು ವೇಳೆ ಈ 30 ಅಂಶಗಳ ಕಾರ್ಯಕ್ರಮ ಅನುಷ್ಠಾನ ಮಾಡದಿದ್ದರೆ ಅಂತಹ ಅಭ್ಯರ್ಥಿಗಳ ಹೆಸರುಗಳನ್ನು ತಡೆ ಹಿಡಿಯುತ್ತೇವೆ. ಅಲ್ಲಿ ಮತ್ತೊಬ್ಬರನ್ನು ಹಾಕುತ್ತೇವೆ. ಇದರಲ್ಲಿ ಯಾವುದೇ ರಾಜಿ ಪ್ರಶ್ನೆ ಇಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

    ನೀರಾವರಿ ಬಗ್ಗೆ ಬಿಜೆಪಿಗೆ ಬದ್ದತೆ ಇಲ್ಲ:

    ಮೇಕೆದಾಟು ಸೇರಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ರಾಜ್ಯ ಸರಕಾರಕ್ಕೆ ಹಾಗೂ ಬಿಜೆಪಿಗೆ ಯಾವ ಬದ್ಧತೆಯೂ ಇಲ್ಲ. ಹೊಸ ಮುಖ್ಯಮಂತ್ರಿಗೆ ಕೂಡ ಬದ್ಧತೆ ಇಲ್ಲ. ಮೇಕೆದಾಟು ಯೋಜನೆ ಕೇಂದ್ರ ಸರಕಾರದ ಮುಂದೆಯೇ ಇಲ್ಲ. ರಾಜ್ಯ ರಾಜ್ಯಗಳ ನಡುವೆ ಬಿಕ್ಕಟ್ಟಿದೆ ಎನ್ನುವ ಕಾರಣಕ್ಕೆ ಕೇಂದ್ರ ಹಿಂಜರಿಯುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.

    ಹೀಗಾಗಿ. ನೀರಾವರಿ ಯೋಜನೆಗಳ ಬಗ್ಗೆ ಜೆಡಿಎಸ್ ಹೋರಾಟ ಮಾಡಲಿದೆ. ಮುಂಬರುವ ದಿನಗಳಲ್ಲಿ ದೊಡ್ಡ ಹೋರಾಟ ರೂಪಿಸುತ್ತೇವೆ. ಕೇಂದ್ರ ಸರ್ಕಾರದ ವಿರುದ್ದವೂ ಹೋರಾಟ ಮಾಡುತ್ತೇವೆ. ಭಾಷೆ, ನೆಲ, ನೀರಿನ ವಿಚಾರದಲ್ಲಿ ನಾಡಿನ ಹಿತ ಕಾಪಾಡಲು ಜೆಡಿಎಸ್ ಕೆಲಸ ಮಾಡುತ್ತದೆ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

    ರಾಜ್ಯದಲ್ಲಿ ಜನರು ಎರಡು ರಾಷ್ಟ್ರೀಯ ಪಕ್ಷಗಳನ್ನು  ‌ನೋಡಿದ್ದಾರೆ. ಹೀಗಾಗಿ ಅವರ ವರ್ತನೆಗಳು ಏನು ಅನ್ನುವುದು ಗೊತ್ತಿದೆ. ಹೀಗಾಗಿ ಈ ಬಾರಿ ಜನ ನಮ್ಮ ಜತೆ ಇಇರುತ್ತಾರೆ ಅನ್ನೋ ವಿಶ್ವಾಸ ಇದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು ಎಚ್ಡಿಕೆ ಅವರು.

    ಪಂಚರತ್ನ ಯೋಜನೆ ಘೋಷಣೆ:

    ಪಂಚರತ್ನ ಯೋಜನೆಗಳಾದ ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿಗೆ ವಿಶೇಷ ಯೋಜನೆ ನೀಡುತ್ತೇವೆ. ಈ ಬಗ್ಗೆ ನನ್ನ ಪರಿಕಲ್ಪನೆಯ ಕಾರ್ಯಕ್ರಮಗಳು ಜಾರಿ ಆಗುತ್ತವೆ. ಈ ಎಲ್ಲ ಸಂಗತಿಗಳನ್ನು ಜನರಿಗೆ ಮನದಟ್ಟು ಮಾಡಲಾಗುವುದು.

    ಅಲ್ಲದೆ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು, ಸಮಸ್ಯೆ ಪರಿಹಾರ ನೀಡುವ ಕೆಲಸ ಮಾದುತ್ತೇವೆ. ವಿಧವಾ ವೇತನಾ, ಹಿರಿಯ ನಾಗರೀಕರು, ಯುವಕ ಸಮಸ್ಯೆಗೆ ಬೇಕಾದ ಹಲವು ಯೋಜನೆ ಪ್ರಾರಂಭಿಸುತ್ತೇವೆ. ಮುಂದಿನ 17 ತಿಂಗಳು ಈ ಕಾರ್ಯಕ್ರಮಗಳನ್ನ ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದು ಅವರು ಮಾಹಿತಿ ನೀಡಿದರು.

    ಏನಿದು ಪಂಚರತ್ನ ಯೋಜನೆ?

    1.ವಸತಿ ಇಲ್ಲದ ಪ್ರತಿ ಕುಟುಂಬಕ್ಕೆ ಸರ್ಕಾರದಿಂದ ಉಚಿತವಾಗಿ ವಸತಿ ನೀಡುವುದು ವಸತಿ ಆಸರೆ.

    2.ಉತ್ತಮ ಗುಣಮಟ್ಟದ ಹಾಗೂ ವ್ಯವಸ್ಥಿತ ಶಿಕ್ಷಣವನ್ನು ಉಚಿತವಾಗಿ ನೀಡುವ ಯೋಜನೆ ಶಿಕ್ಷಣವೇ ಆಧುನಿಕ ಶಕ್ತಿ.

    3.ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 24×7 ಕಾರ್ಯ ನಿರ್ವಹಿಸುವ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣ ಆರೋಗ್ಯ ಸಂಪತ್ತು.

    4.ಆಧುನಿಕ ತಂತ್ರಜ್ಞಾನದ ಕೃಷಿ ಪದ್ದತಿ ಅಳವಡಿಕೆ, ಸರಿಯಾದ ಬೆಳೆ ಶೇಖರಣಾ ವ್ಯವಸ್ಥೆ ಹಾಗೂ ಲಾಭದಾಯಕವಾದ ಮಾರುಕಟ್ಟೆ ವ್ಯವಸ್ಥೆ ರೈತ ಚೈತನ್ಯ.

    5.ಯುವ ಜನತೆ ಹಾಗೂ ಮಹಿಳೆಯರಿಗೆ ಉದ್ಯೋಗ ಪಡೆಯಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ಯುವ ನವ ಮಾರ್ಗ ಹಾಗೂ ಮಹಿಳಾ ಸಬಲೀಕರಣ.

    ಜನತಾ ಪರ್ವ ಮಾಸ್ಟರ್ ಮೈಂಡ್ ನಾನೇ ಎಂದ ಕುಮಾರಸ್ವಾಮಿ

    ಇವತ್ತು ನಾನು ನಮ್ಮ ಪಕ್ಷಕ್ಕಾಗಿ ಶಿಕ್ಷಕ ಆಗಿದ್ದೆ. ನಮ್ಮ ಶಾಸಕರು, ಮುಂದಿನ ಚುನಾವಣೆಯ ಅಭ್ಯರ್ಥಿಗಳಿಗೆ ಪಾಠ ಮಾಡಿದ್ದು ವಿಶೇಷ ಅನುಭವ. ಅಲ್ಲದೆ, ಇಂದಿನ ಪಿಪಿಟಿ ಪ್ಲ್ಯಾನ್ ಕೂಡಾ ನನ್ನದೆ. ಕಂಟೆಂಟ್ ಕೂಡ ನನ್ನದೇ ಎಂದು ಹೆಚ್ಡಿಕೆ ಅವರು ಹೇಳಿದರು.

    ಕಾಲೇಜು ದಿನಗಳಲ್ಲಿ ನಾನು ಕೊನೆ ಬೇಂಚ್ ವಿದ್ಯಾರ್ಥಿ ಆಗಿದ್ದೆ. ಇಂದು ಅಭ್ಯರ್ಥಿಗಳಿಗೆ ಪಕ್ಷದ ವಿಚಾರಗಳು ತಿಳಿಸಲು ವಿದ್ಯಾರ್ಥಿ ಆಗೋಕ್ಕಿಂತ ಶಿಕ್ಷಕನಂತೆ ಆಗಿ ಶಾಸಕರಿಗೆ ತಿಳಿ ಹೇಳಿದ್ದೇನೆ. ಅಭ್ಯರ್ಥಿಗಳು ಶಿಸ್ತಿನ ವಿಧ್ಯಾರ್ಥಿಗಳಾಗಿ ಕುಳಿತು ಕೇಳಿದ್ದಾರೆ. ಇಡೀ ಕಾರ್ಯಾಗಾರದ ಸಂಪೂರ್ಣ ಪರಿಕಲ್ಪನೆ ನನ್ನದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

    ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರು ಉಪಸ್ಥಿತರಿದ್ದರು.

    ಅಕ್ಟೋಬರ್ 30- ಸಿಂಧಗಿ,ಹಾನಗಲ್ ಉಪಚುನಾವಣೆ

    NEW DELHI SEP 28

    ಬಿಜೆಪಿ ಹಿರಿಯ ನಾಯಕ ಸಿ.ಎಂ ಉದಾಸಿ ಹಾಗೂ ಜೆಡಿಎಸ್ ಹಿರಿಯ ಶಾಸಕ ಎಂ.ಸಿ ಮುನಗೋಳಿ ಅವರ ನಿಧನದಿಂದ ತೆರವಾಗಿದ್ದ ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕವನ್ನು ಚುನಾವಣೆ ಆಯೋಗ ಘೋಷಣೆ ಮಾಡಿದೆ. ಎರಡೂ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಉಪಚುನಾವಣೆ ನಡೆಯಲಿದ್ದು ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ.

    ಅಕ್ಟೋಬರ್ 1 ರಂದು ಅಧಿಸೂಚನೆ ಪ್ರಕಟವಾಗಲಿದೆ. ಅಕ್ಟೋಬರ್ 8ರಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದೆ.

    ದೇಶಾದ್ಯಂತ ಒಟ್ಟು 3 ಲೋಕಸಭೆ ಮತ್ತು ನಾನಾ ರಾಜ್ಯಗಳ 30 ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.

    ವಿವರಗಳು ಇಲ್ಲಿದೆ. ಸ್ಕ್ರಾಲ್ ಮಾಡಿ ಓದಿ.

    ಐ.ಐ.ಟಿ./ಎನ್.ಐ.ಟಿ. ಸರಿಸಮಾನವಾಗಿ ಬಿ.ಇ.ಕೋರ್ಸ್, ಐ.ಐ.ಎಸ್.ಸಿ. ಮಾದರಿ ಬಿ.ಎಸ್ಸಿ. ಕೋರ್ಸ್

    BENGALURU SEP 27

    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಸಾಲಿನಿಂದಲೇ ಅನುಷ್ಠಾನಗೊಳಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು) ತಯಾರಿ ಮಾಡಿಕೊಂಡಿದ್ದು, ಐಐಟಿ ಮತ್ತು ಎನ್ಐಟಿ ಗೆ ಸರಿಸಮಾನವಾದ ಎಂಜಿನಿಯರಿಂಗ್ ಕೋರ್ಸ್ ಗಳನ್ನು ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಪಠ್ಯಕ್ರಮಕ್ಕೆ ಸರಿಹೊಂದುವ ಬಿ.ಎಸ್ಸಿ. ಕೋರ್ಸ್ ಗಳನ್ನು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

    ಎನ್ಇಪಿ ಅನುಷ್ಠಾನಕ್ಕಾಗಿ ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಚರ್ಚಿಸಲು ಸೋಮವಾರ ಕರೆದಿದ್ದ ವರ್ಚುವಲ್ ಸಭೆಯಲ್ಲಿ ಸಚಿವರು ಈ ಸಲಹೆಗಳನ್ನು ನೀಡಿದ್ದು, ಅವುಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ವಿಟಿಯು ಕುಲಪತಿ ಪ್ರೊ.ಕರಿಸಿದ್ಧಪ್ಪ ಅವರು ಸಭೆಗೆ ತಿಳಿಸಿದರು.

    ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದ ಮೇಲೆ ಎಂಜಿನಿಯರಿಂಗ್ ಆವಿಷ್ಕಾರಗಳು ಹೆಚ್ಚಿನ ಪ್ರಭಾವ ಬೀರುತ್ತಿವೆ. ಇದನ್ನು ಗಮನಿಸಿ, ‘ಬಯಾಲಜಿ ಫಾರ್ ಎಂಜಿನಿಯರ್ಸ್’ ಎಂಬ ಕೋರ್ಸ್ ಅನ್ನು 4ನೇ ಸೆಮಿಸ್ಟರ್ ನಲ್ಲಿ ಅಳವಡಿಸುವುದು ಸೂಕ್ತ. ಸುಸ್ಥಿರ ಪರಿಸರದ ಬಗ್ಗೆ ಒತ್ತು ನೀಡುವುದಕ್ಕಾಗಿ ‘ಎನ್ವಿರಾನ್ ಮೆಂಟಲ್ ಸ್ಟಡೀಸ್’ ಅನ್ನು ಸೇರಿಸಬೇಕು. ಪಠ್ಯಕ್ರಮ ಮತ್ತು ಪ್ರಾಯೋಗಿಕ ಕಲಿಕೆ ಎರಡಕ್ಕೂ ಸಮಾನ ಪ್ರಾಮುಖ್ಯ ಕೊಡಬೇಕು. ಹಾಗೆಯೇ ಸಂಗೀತದ ಬಗ್ಗೆ ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ ‘ಮ್ಯೂಸಿಕ್ ಅಂಡ್ ಮೆಕ್ಯಾನಿಕಲ್ ವೈಬ್ರೇಷನ್ಸ್’ ಎಂಬ ವಿಷಯ ಸೇರಿಸಬೇಕು ಎಂದು ಸಚಿವರೊಂದಿಗಿನ ಸಭೆಯಲ್ಲಿ ನಿರ್ಧರಿಸಲಾಯಿತು.

    “ವಿದ್ಯಾರ್ಥಿಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸಲು ಸಾಮರ್ಥ್ಯ ಸಂವಧರ್ನಾ ಕೋರ್ಸ್ ಗಳನ್ನು ಸೇರಿಸಲಾಗುತ್ತದೆ. ಆರೋಗ್ಯ-ಸ್ವಾಸ್ಥ್ಯದ ಬಗ್ಗೆ ಜಾಗೃತಿ ಮೂಡಿಸಲು ‘ಸೈಂಟಿಫಿಕ್ ಫೌಂಡೇಷನ್ಸ್ ಆಫ್ ಹೆಲ್ತ್’ ಎಂಬ ವಿಷಯವನ್ನು, ಸಾಮಾಜಿಕ ಜವಾಬ್ದಾರಿಯ ಅರಿವು ಬೆಳೆಸಲು ‘ಸೋಷಿಯಲ್ ಕನೆಕ್ಟ್ ಅಂಡ್ ರೆಸ್ಪಾನ್ಸಿಬಿಲಿಟಿ’ ಎಂಬ ವಿಷಯವನ್ನು ಪಠ್ಯಕ್ರಮದ ಭಾಗವನ್ನಾಗಿಸಲು ಸಭೆ ತೀರ್ಮಾನಿಸಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

    ‘ಓಪನ್ ಎಲೆಕ್ಟ್ರೀವ್ಸ್ ನಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆಗಳು ಸಿಗುವಂತೆ ಮಾಡಲಾಗುತ್ತದೆ. ಕೆಲವು ಡಿಜೈನ್ ಕೋರ್ಸ್ ಗಳಲ್ಲಿ ತೆರೆದ ಪುಸ್ತಕ ಮಾದರಿಯ ಪರೀಕ್ಷಾ ಪದ್ಧತಿ ಜಾರಿಗೊಳಿಸಲಾಗುತ್ತದೆ. ಅಧ್ಯಯನ ಮಂಡಳಿಗಳಿಗೆ (ಬಿಒಎಸ್)ಗೆ ಇರುವ ಕಟ್ಟುಪಾಡುಗಳನ್ನು ಸಡಿಲಿಸಿ ‘ಓಪನ್ ಎಲೆಕ್ಟ್ರೀವ್’ ಗಳನ್ನು ಹೆಚ್ಚು ಚಲನಶೀಲಗೊಳಿಸಲಾಗುತ್ತದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಚಿವರು ಹೇಳಿದರು.

    24 ವಾರಗಳ ಇಂಟರ್ನ್ ಷಿಪ್ ಕಡ್ಡಾಯಗೊಳಿಸಲಾಗುತ್ತದೆ. ಪಠ್ಯಕ್ರಮವನ್ನು ರಾಷ್ಟ್ರೀಯ ಕೌಶಲ ರೂಪುರೇಷೆಗೆ ಅನುಗುಣವಾಗಿ ರಚಿಸಲಾಗುತ್ತದೆ ಎಂದೂ ಅವರು ತಿಳಿಸಿದರು.

    ರಾಜ್ಯ ಉನ್ನತ ಶಿಕ್ಷಣ ಪರಿಷತ್ ನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಷಿ, ವಿ.ಟಿ.ಯು. ದ ದೇಶಪಾಂಡೆ, ಪ್ರೊ.ಹಾಲಬಾವಿ, ಹರೀಶ್ ಮತ್ತಿತರರು ಇದ್ದರು.

    ರಾಜ್ಯದ ಆರು ನಗರಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ

    HUBBALLI SEP 27

    ಪೊಲೀಸ್ ಅಪರಾಧ ಪ್ರಕರಣಗಳ ತ್ವರಿತ ಪತ್ತೆ ಮತ್ತು ತನಿಖೆಯ ವೇಗ ಹೆಚ್ಚಿಸಲು ರಾಜ್ಯದ ಕಲಬುರ್ಗಿ,ಹುಬ್ಬಳ್ಳಿ-ಧಾರವಾಡ ,ಮೈಸೂರು ಹಾಗೂ ಇತರ ಪ್ರಮುಖ ನಗರಗಳಲ್ಲಿ ಒಟ್ಟು ಆರು ವಿಧಿವಿಜ್ಞಾನ (ಎಫ್ ಎಸ್ ಎಲ್) ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

    ಅವರು ಇಂದು ಹುಬ್ಬಳ್ಳಿಯ ಬಾಣತಿಕಟ್ಟೆಯಲ್ಲಿ ಕಸಬಾ ಪೇಟೆ ಪೊಲೀಸ್ ಠಾಣೆ , ದಕ್ಷಿಣ ಸಂಚಾರಿ ಠಾಣೆ, ಆಳ್ನಾವರ ಪೊಲೀಸ್ ಠಾಣೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಡಳಿತ ಕಛೇರಿ ಮತ್ತು 36 ಪೊಲೀಸ್ ವಸತಿ ಗೃಹಗಳ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.

    .ಈ ಕುರಿತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು. ಪುಣೆಯ ಕಡಕ್‌ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್.ಡಿ.ಎ) ತರಬೇತಿ ಕೇಂದ್ರದ ಮಾದರಿಯಲ್ಲಿ ರಾಜ್ಯದ ಮಧ್ಯಮ ಹಂತದ ಪೊಲೀಸ್ ಅಧಿಕಾರಿಗಳ ತರಬೇತಿಗಾಗಿ ಪ್ರತ್ಯೇಕ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

    ಆಫೀಸರ್ ಆನ್ ಕ್ರೈಂ ಸೀನ್ ಎನ್ನುವ ಕಲ್ಪನೆ ಆಧಾರದ ಮೇಲೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ.‌16 ಸಾವಿರ ಪೊಲೀಸ್ ಪೇದೆ ಹಾಗೂ ಸಬ್ ಇನ್ಸ್‌ಪೆಕ್ಟರುಗಳ ನೇಮಕಾತಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು

    ಡಿವೈ‌ಎಸ್‌ಪಿ ಹಾಗೂ ಮೇಲಿನ ಹಂತದ ಅಧಿಕಾರಿಗಳು ಕೇವಲ ಕಚೇರಿ ,ಆಡಳಿತ ಕೆಲಸಗಳಿಗೆ ಮಹತ್ವ ನೀಡದೆ ಪ್ರತಿಯೊಂದು ಠಾಣೆಗೆ ಭೇಟಿ ನೀಡಿ ಮೂಲ ಪೊಲೀಸ್ ವೃತ್ತಿ ನಿರ್ವಹಿಸಬೇಕು. ಎಲ್ಲರೂ ಕ್ಷೇತ್ರಕ್ಕೆ ಇಳಿದು ಕರ್ತವ್ಯ ಮಾಡಬೇಕು ಎಂದು ಸಲಹೆ ನೀಡಿದರು.

    ಹುಬ್ಬಳ್ಳಿ ಧಾರವಾಡ ಅವಳಿ ನಗರದ ಕಾನೂನು ಸುವ್ಯವಸ್ಥೆ ಮುಖ್ಯ. ಇಲ್ಲಿನ ಜನ ಶಾಂತಿ ಪ್ರಿಯರು ಕೆಲವು ಕಿಡಗೇಡಿಗಳಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನವಾಗುತ್ತಿದೆ. ಅವುಗಳನ್ನು ನಿಯಂತ್ರಿಸುವುದು ಅಧಿಕಾರಿಗಳಿಂದ ಸಾಧ್ಯವಿದೆ. ಪೊಲೀಸ್ ಆಯುಕ್ತರು ಠಾಣೆಗಳಿಗೆ ತೆರಳಿ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು .

    ಠಾಣೆಗಳಿಗೆ ಮೂಲಭೂತ ಸೌಕರ್ಯ ನೀಡಿ ಸುಧಾರಣೆ ಮಾಡಬೇಕು. ಪ್ರತಿ ವರ್ಷ ನೂರು ಠಾಣೆಗಳಂತೆ ಮುಂದಿನ ಐದು ವರ್ಷದಲ್ಲಿ 500 ಪೊಲೀಸ್ ಠಾಣೆ ನಿರ್ಮಿಸುವ ಗುರಿ ಇದೆ.10 ಸಾವಿರ ಪೊಲೀಸ್ ವಸತಿ ಗೃಹ ನಿರ್ಮಿಸಲಾಗುವುದು. ಶ್ವಾನಗಳ ತರಬೇತಿಗೆ ಡಾಗ್ ಕ್ಯಾನಲ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದರು.

    ಗೃಹ ಸಚಿವರಾದ ಅರಗ ಜ್ಞಾನೇಂದ್ರ ಮಾತನಾಡಿ ,ಜಿಲ್ಲೆಯಲ್ಲಿ 21 ಕೋಟಿ ರೂ‌.ವೆಚ್ಚದಲ್ಲಿ ಪೋಲಿಸ್ ಠಾಣೆ, ಸಂಚಾರಿ ಠಾಣೆ, ವಸತಿ ಗೃಹಗಳನ್ನು ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಗಿದೆ.

    ಆನ್ ಲೈನ್ ಲಾಟರಿ ಹಾಗೂ ಜೂಜಿಗೆ ಇತಿಶ್ರೀ ಹಾಡಲು ಶಾಸನ ಸಭೆಯಲ್ಲಿ ಮಸೂದೆ ಅನುಮೋದನೆ ಆಗಿದೆ. ಕಾಗ್ನಿಜಿಬಲ್ ಪ್ರಕರಣ ಎಂದು ದಾಖಲಿಸಿಕೊಂಡು. ಜಾಮೀನು ರಹಿತವಾಗಿ ತನಿಖೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.ಜೂಜಾಟ, ಆನ್ ಲೈನ್ ಜೂಜುಕಾರನ್ನು ಜೈಲಿಗೆ ತಳ್ಳಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲಿಯೇ ಇದು ಕಾಯ್ದೆಯಾಗಿ ಜಾರಿಗೆ ಬರಲಿದೆ ಎಂದು ತಿಳಿಸಿದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ,2015 ರಿಂದ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ಇಂದು ಕಸಬಾಪೇಟ ಹಾಗೂ ದಕ್ಷಿಣ ಸಂಚಾರ ಪೊಲೀಸ್ ಠಾಣೆಗಳ ನೂತನ ಕಟ್ಟಡಗಳಿಗೆ ಇಂದು ಭೂಮಿಪೂಜೆಯನ್ನು ಮುಖ್ಯಮಂತ್ರಿಯವರು ನೆರವೇರಿಸಿರುವುದು ಸಂತಸ ತಂದಿದೆ ಎಂದರು.

    ಕೈಮಗ್ಗ,ಜವಳಿ,ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ,ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ,ಸಿ.ಎಂ.ನಿಂಬಣ್ಣವರ,ಕುಸುಮಾವತಿ ಶಿವಳ್ಳಿ,ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ , ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣ ಹಾಗೂ ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡ್ರ,ರಾಜ್ಯ ರೇಷ್ಮೇ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟೀಲ,ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಉತ್ತರ ವಲಯ ಐಜಿಪಿ ಎನ್.ಸತೀಶಕುಮಾರ, ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ,ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ಮತ್ತಿತರರು ಉಪಸ್ಥಿತರಿದ್ದರು.

    ಪಕ್ಷದಿಂದ ಹೊರಗೆ ಕಾಲಿಟ್ಟವರ ಬಗ್ಗೆ ಚಿಂತೆ ಇಲ್ಲಎಂದ ಕುಮಾರಸ್ವಾಮಿ

    BENGALURU SEP 27

    ಪಕ್ಷದಿಂದ ಹೊರಗೆ ಕಾಲಿಟ್ಟಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳುವ ಪ್ರಶ್ನೆ ಇಲ್ಲ. ಹೋಗಬೇಕು ಎಂದುಕೊಂಡವರು ಹೋಗಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದರು.

    ಅಲ್ಲದೆ, ಕಳೆದ ಬಾರಿಯ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಸೆಳೆಯುವ ಕೆಲಸ ಕೆಲವರಿಂದ ಆಗುತ್ತಿದೆ. ಹೀಗಾಗಿ ನಾನು ಅಂತ ಕೆಲ ಅಭ್ಯರ್ಥಿಗಳನ್ನು ಕಾರ್ಯಾಗಾರಕ್ಕೆ ಕರೆದಿಲ್ಲ. ಅಂಥ ಕಡೆಯಲ್ಲ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.

    ಬಿಡದಿ ಫಾರ್ಮ್ ಹೌಸ್ ನಲ್ಲಿ ಆಯೋಜಿಸಲಾಗಿದ್ದ ಜನತಾ ಪರ್ವ 1.O ಹಾಗೂ ಮಿಷನ್ 123ಗಾಗಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಕಾರ್ಯಾಗಾರದ ಮೊದಲ ದಿನದ ಅಂತ್ಯದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದರು.

    ಪಕ್ಷ ಬಿಡಬೇಕು ಅಂದುಕೊಂಡವರಿಗೆ ಅದೊಂದು ನೆಪ ಅಷ್ಟೇ. ನಾನು ಯಾರನ್ನೂ ಕಡೆಗಣಿಸಿಲ್ಲ. ಜನ ಸಾಮಾನ್ಯರ ಕಷ್ಟವನ್ನೇ ಕೇಳುವವನು ನಾನು. ನಮ್ಮ ಶಾಸಕರ ಕಷ್ಟ ಕೇಳಲ್ವಾ..? ಪಕ್ಷ ಬಿಡಬೇಕು ಅಂದುಕೊಂಡವರು ನೀಡುವ ಸಬೂಬು ಇದು ಅಷ್ಟೆ ಎಂದು ಅವರು ನೇರ ಮಾತುಗಳಲ್ಲಿ ಹೇಳಿದರು.

    ಪಕ್ಷ ಬಲವಾಗುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಇಂಥ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಸಮಯ ಇದಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    ನಾಲ್ಕು ದಿನಗಳ ಕಾರ್ಯಗಾರದಲ್ಲಿ ಪಕ್ಷದ ಸಂಘಟನೆ ಹಾಗೂ ಬೆಳವಣಿಗೆ ಬಗ್ಗೆ ಚಿಂತನ ಮಂಥನ ನಡೆಯುತ್ತಿದೆ. ಹಲವಾರು ಆಯಾಮಗಳಲ್ಲಿ ತರಬೇತಿ ಕೊಡುವ ಕಾರ್ಯಕ್ರಮ ಇದಾಗಿದೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಸರ್ಕಾರ ತರಬೇಕಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

    ಕಾರ್ಯಗಾರದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ  ದೇವೇಗೌಡರು ತಮ್ಮ ಸುಧೀರ್ಘ ರಾಜಕೀಯದ ದಾರಿಯ ಬಗ್ಗೆಯೂ ಮಾತನಾಡಿದ್ದಾರೆ. ಇದು ಮುಂದಿನ ಚುನಾವಣೆ ಅಭ್ಯರ್ಥಿಗಳಿಗೆ ದಾರಿದೀಪವಾಗಲಿದೆ. ಅವರು ನಡೆದು ಬಂದ ದಾರಿ ಬಗ್ಗೆ ಹೇಳಿದ್ದಾರೆ ಇಂದು ಅವರು ತಿಳಿಸಿದರು.

    ದೇಶದಲ್ಲಿ ಇರುವ ಚುನಾವಣೆ ಪದ್ದತಿ ಬದಲಾಗಿದ್ದು, ಜಾತ್ಯತೀತ ಜನತಾದಳಕ್ಕೆ ಇರುವ ಅವಕಾಶಗಳನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳ ನಡವಳಿಕೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

    ಪಕ್ಷದ ಸಂಘಟನೆಗೆ ಹೊಸ ರೀತಿಯಾಗಿ ಸಜ್ಜಾಗುತ್ತಿದ್ದೇವೆ. ಆಧುನಿಕ ಟೆಕ್ನಾಲಜಿಯನ್ನು ಬಳಸಿಕೊಳ್ಳುತ್ತಿದೆ. ಮುಂದಿನ ಚುನಾವಣೆಗೆ ಸಕಲ ರೀತಿಯ ಸಿದ್ದತೆಗಳು ಆಗಿವೆ ಎಂದರು ಹೆಚ್.ಡಿ.ಕುಮಾರಸ್ವಾಮಿ ಅವರು.

    ಅಭ್ಯರ್ಥಿಗಳಿಗೆ ಪ್ರಶ್ನಾವಳಿ:

    ಮೊದಲ ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ  ಅಭ್ಯರ್ಥಿಗಳೆಲ್ಲರಿಗೂ ಪ್ರಶ್ನಾವಳಿಯ ಕಿರು ಹೊತ್ತಿಗೆ ನೀಡಲಾಗಿತ್ತು. ಪ್ರತಿಯೊಬ್ಬರು ಆಸಕ್ತಿಯಿಂದ ಬರೆದಿದ್ದಾರೆ. ಅವರವರ ಕ್ಷೇತ್ರಗಳಿಗೆ ಯಾವ ರೀತಿ ಹೊತ್ತು ಕೊಟ್ಟಿದ್ದಾರೆ. ಅವರಿಗಿರುವ ಅಡೆತಡೆಗಳು ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಉತ್ತರ ನೀಡಿದ್ದಾರೆ. ಒಟ್ಟು 61 ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅಭ್ಯರ್ಥಿಗಳಾಗಿ ಏನು ಸಿದ್ದತೆ ಮಾಡಿಕೊಂಡಿದ್ದಾರೆ ಅನ್ನೋದನ್ನು ಅವರು ಬರೆದಿದ್ದಾರೆ ಎಂದು ಕುಮಾರಸ್ವಾಮಿ ಅವರು ವಿವರಿಸಿದರು.

    ನಾಳೆಯ ದಿನದ ಕಾರ್ಯಗಾರದಲ್ಲಿ ಪಂಚರತ್ನ  ಕಾರ್ಯಕ್ರಮದ ಬಗ್ಗೆ ಜನತೆ ಮುಂದೆ ತೆಗೆದುಕೊಂಡು ಹೋಗುವುದು ಹೇಗೆ? ಮಿಷನ್ 123 ಪ್ಲಸ್ ಗೆ ಏನು ಮಾಡಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ಕಾರ್ಯಕ್ರಮ ಇರಲಿದೆ ಎಂದು ಅವರು ಹೇಳಿದರು.

    ಚುನಾವಣೆಗೆ 18 ತಿಂಗಳು ಬಾಕಿ ಇದೆ. ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪಕ್ಷ ಸಂಘಟನೆಗೆ ಕ್ರಮ ವಹಿಸಲಾಗಿದೆ. ಈ ಸಮಯದಲ್ಲಿ ಹೋಬಳಿ ಮಟ್ಟದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡುವೆ ಎಂದು ಎಚ್ ಡಿಕೆ ತಿಳಿಸಿದರು.

    ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಅವರಿಂದ ಸಾಧ್ಯವಿಲ್ಲ: ದೇವೇಗೌಡರ ಗುಡುಗು

    BIDADI SEP 27

    ರಾಜ್ಯದ ಜನರ ಉಸಿರಿನಲ್ಲಿ ಉಸಿರಾಗಿರುವ ಜೆಡಿಎಸ್ ಪಕ್ಷವನ್ನು ಮುಗಿಸಲು ಸಿದ್ದರಾಮಯ್ಯ ಅವರಿಂದ ಮಾತ್ರವಲ್ಲ ಯಾರಿಂದಲೂ ಸಾಧ್ಯವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಹಾಗೂ ಮಾಜಿ ಪ್ರಧಾನಮಂತ್ರಿಗಳ ಎಚ್.ಡಿ.ದೇವೇಗೌಡರು ಹೇಳಿದರು.

    2023ಕ್ಕೆ ಜಾತ್ಯತೀತ ಜನತಾದಳದ ಹಾಗೂ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದ ಜನತಾ ಸರಕಾರ ರಚನೆ ಮಾಡುವ ಗುರಿಯೊಂದಿಗೆ ಬಿಡದಿ ಫಾರ್ಮ್ ಹೌಸ್ ನಲ್ಲಿ ಆರಂಭವಾದ 4 ದಿನಗಳ ‘ಜನತಾ ಪರ್ವ 1.O’ ಕಾರ್ಯಗಾರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

    ಅಪಪ್ರಚಾರ ಮಾಡುವುದಕ್ಕೂ ಒಂದು ಮಿತಿ ಬೇಡವೇ. ತಾವು ನಾಯಕರಾಗಿ ಬಂದಿದ್ದು ಎಲ್ಲಿಂದ, ಬೆಳೆದದ್ದು ಎಲ್ಲಿ? ಎಂಬುದನ್ನು ಅರಿತು ಮಾತನಾಡಬೇಕು. ಅವರ ಜತೆ ಇವರ ಜತೆ ಹೋಗುವ ಪಕ್ಷ ಎಂದು ದೂರುವ ಮುನ್ನ ಸಮ್ಮಿಶ್ರ ಸರಕಾರ ರಚನೆ ಮಾಡುವುದಕ್ಕೆ ಯಾರು ಯಾರ ನಮ್ಮ ಮನೆ ಬಾಗಿಲಿಗೆ ಬಂದರು ಎನ್ನುವುದು ನನಗೆ, ನಿಮಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ-ದೇಶಕ್ಕೆ ಗೊತ್ತಿದೆ ಎಂದು ಹೇಳಿದರು.

    ಅಪಮಾನಗಳನ್ನು ಸಹಿಸಿದ್ದೇನೆ, ಎದುರಿಸಿದ್ದೇನೆ. ಅಪಾರ ಕಾರ್ಯಕರ್ತರ ಜತೆ ಅಂತ ಎಲ್ಲ ನೋವುಗಳನ್ನು ನುಂಗಿದ್ದೇನೆ ಎಂದ ಗೌಡರು, ನಮ್ಮನ್ನು ನೋಡಿ ಅಪಹಾಸ್ಯ ಮಾಡುವವರಿಗೆ 2023 ರಲ್ಲೀ ಉತ್ತರ ನೀಡೋಣ ಎಂದರು.

    ಹೈಟೆಕ್ ಕಾರ್ಯಗಾರ , ಹೊಸತನಕ್ಕೆ ಮುನ್ನುಡಿ: 

    ಇರುವುದು ಒಂದೇ ಪರಿಹಾರ, ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ಎನ್ನುವ ಘೋಷವಾಕ್ಯ ಹಾಗೂ 2023ಕ್ಕೇ ಜೆಡಿಎಸ್ ಎನ್ನುವ ಗುರಿಯೊಂದಿಗೆ ಆರಂಭವಾದ ಕಾರ್ಯಾಗಾರವೂ ಕರ್ನಾಟಕ ರಾಜಕೀಯದಲ್ಲಿ ಅತ್ಯಂತ ವಿಶೇಷ. ಪಕ್ಷದ ಗುರಿ ಮತ್ತು ದಾರಿಯ ಬಗ್ಗೆ ಸ್ಪಷ್ಟತೆ ಮೂಡಿಸುವುದರ ಜತೆಗೆ, ಮುಂದಿನ ಚುನಾವಣೆಯಲ್ಲಿ ಕಣ್ಣಕ್ಕೆ ಇಳಿಯಲಿರುವ ಅಭ್ಯರ್ಥಿಗಳಿಗೆ ನಿರ್ದಿಷ್ಟ ಗುರಿಗಳನ್ನು ನಿಗದಿ ಮಾಡಲಾಗುವುದು. ಅದಕ್ಕೆ ಅಗತ್ಯವಾದ ತರಬೇತಿಯನ್ನು ಕೊಡಲಾಗುವುದು  ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.


    • ಪಕ್ಷದ ದ್ವಜಾರೋಹಣ ನೆರವೇರಿಸಿದ ದೇವೇಗೌಡರು
    • ಸಾಮಾನ್ಯ ಕಾರ್ಯಕರ್ತರ ಹಾಗೆ ನೋಂದಣಿ ಮಾಡಿಕೊಂಡ ಎಚ್.ಡಿ. ಕುಮಾರಸ್ವಾಮಿ
    • ನಾಯಕನ ಹಾದಿಯಲ್ಲೇ ನೊಂದಣಿ ಮಾಡಿಕೊಂಡ ಶಾಸಕರು
    • ಹಸಿರುಮಯ ವೇದಿಕೆಗೆ ಹೈಟೆಕ್ ಸ್ಪರ್ಶ
    • ಹಿನ್ನೆಲೆಯಲ್ಲಿ ಜನತಾ ಪರಿವಾರದ ಇತಿಹಾಸ ಹೇಳುವ ಚಿತ್ರಗಳ ಅನಾವರಣ
    • ಪಕ್ಷದ ಟವೆಲ್ ಧರಿಸಿದ ಮುಖಂಡರಿಂದ ಸಕ್ರಿಯ ಭಾಗಿ

    ಮಿಷನ್ 123 ಎಂಬ ಗುರಿಯೊಂದಿಗೆ ನಾವು ತಯಾರಿ ಆರಂಭ ಮಾಡಿದ್ದೇವೆ. ಈ ಗುರಿ ತಲುಪಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಸಮರ್ಥರಾದ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕೆ ಇಳಿಸುತ್ತೇವೆ. ನಮ್ಮನ್ನು ಹಗುರವಾಗಿ ಕಾಣುವ ಕೆಲವರಿಗೆ ತಕ್ಕ ಉತ್ತರ ನೀಡುತ್ತೇವೆ. 30 ಸೀಟುಗಳ ಪಕ್ಷ ಎಂದು ಜೆಡಿಎಸ್ ಪಕ್ಷವನ್ನು ಲಘುವಾಗಿ ಪರಿಗಣಿಸುವವರಿಗೆ ಮುಂದೆ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಗುಡುಗಿದರು.

    ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ವೇದಿಕೆಯಲ್ಲಿದ್ದರು. ಇಡೀ ವೇಳೆ ಮಾಜಿ ಶಾಸಕ ವೈಎಸ್ವಿ ದತ್ತ ಅವರು ‘ ಪಕ್ಷ ಸಂಘಟನೆ ಹಾಗೂ ಪಕ್ಷದ ಪರಂಪರೆ ‘ ಎಂಬ ವಿಷಯದ ಬಗ್ಗೆ ಮಾತನಾಡಿದರು. 

    ಪಕ್ಷದ ಹಾಲಿ ಶಾಸಕರು, ಮಾಜಿ ಶಾಸಕರು, ಹಿಂದಿನ ಚುನಾವಣೆಯಲ್ಲಿ ಪರಾಜಿತರಾಗಿದ್ದ ಅಭ್ಯರ್ಥಿಗಳು, ಮಾಜಿ ಸಚಿವರು ಸೇರಿದಂತೆ 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿದ್ದರು.

    ಜನಪರ ಬಂದ್-ಪ್ರತಿಭಟನೆಗೆ ಜೆಡಿಎಸ್ ಬೆಂಬಲ ಎಂದ ಕುಮಾರಸ್ವಾಮಿ

    BENGALURU SEP 26

    ಜನಪರ, ರೈತ ಮತ್ತು ಶ್ರಮಿಕರ ಪರವಾದ ಯಾವುದೇ ಪ್ರತಿಭಟನೆ ಮತ್ತು ಬಂದ್ಗೆ ಜೆಡಿಎಸ್ ಬೆಂಬಲ ಸದಾ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

    ನಾಳೆ (ಸೋಮವಾರ) ಕರೆ ನೀಡಲಾಗಿರುವ ʼಭಾರತ್ ಬಂದ್ʼಗೆ ಜೆಡಿಎಸ್ ಬೆಂಬಲ ಇರುತ್ತದೆಯೇ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು; “ಜನಹಿತದಲ್ಲಿ ನಂಬಿಕೆ ಇಟ್ಟು ನಮ್ಮ ಪಕ್ಷ ಕೆಲಸ ಮಾಡುತ್ತದೆ. ಅವರ ಹಿತಕ್ಕೆ ಧಕ್ಕೆ ಎದುರಾದರೆ ಎಲ್ಲ ವೇದಿಕೆಗಳಲ್ಲೂ ದನಿ ಎತ್ತುತ್ತದೆ. ಇದರಲ್ಲಿ ಯಾವುದೇ ಮುಲಾಜಿಲ್ಲ” ಎಂದರು.

    ಬಂದ್ ಶಾಂತಿಯುತವಾಗಿ ನಡೆಯಲಿ ಹಾಗೂ ರೈತರು, ಜನರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ಬಗ್ಗೆ ಸರಕಾರಗಳ ಗಮನ ಸೆಳೆಯಲಿ ಎಂದು ಎಚ್ಡಿಕೆ ಅವರು ಆಶಿಸಿದರು.

    ದುಃಖ ಬಂದಾಗ ಹೊತ್ತು ಹೋಗುವುದಿಲ್ಲ

    ಸುಮಾವೀಣಾ

    ಮನದೊಳಗೆ ಸತ್ತು ಹುಟ್ಟುತ್ತಿರ್ಪಳು-   ಕರುಣಾರಸಕಕ್ಕೆಂದೇ ಮೀಸಲಾಗಿರುವ ಕಾವ್ಯ  ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’.  ರಾಜ್ಯ -ಕೋಶಗಳನ್ನು ಕಳೆದುಕೊಂಡು ಬ್ರಾಹ್ಮಣನ ಮನೆಯ  ಆಳುಗಳಾಗಿ  ಚಂದ್ರಮತಿ ಮತ್ತು ಲೋಹಿತಾಶ್ವರು ಇದ್ದಾಗ ಲೋಹಿತಾಶ್ವ ಹುಲುಹುಳ್ಳಿ ತರಲೆಂದು ಹೋದವನು  ಸಂಜೆಯಾದರೂ, ರಾತ್ರಿಯಾದರೂ ಮನೆಗೆ ಬರುವುದೇ ಇಲ್ಲ. ಮಗ ಇನ್ನು  ಮನೆಗೆ   ಬಂದಿಲ್ಲ ಎಂಬ ಅಳಲಿನಿಂದ  ಬೇರೆ ಯಾರಲ್ಲಿಯೂ ತನ್ನ ಮನದ ಭಾದೆಯನ್ನು ಹೇಳಿಕೊಳ್ಳಲಾಗದೆ   ತೀವ್ರ ದುಃಖವನ್ನು ಅನುಭವಿಸುತ್ತಿದ್ದಳು ಎಂಬಲ್ಲಿ  ಪ್ರಸ್ತುತ  ಮಾತು ಬಂದಿದೆ. ಕರುಳಕುಡಿಯ  ಬರುವಿಕೆಯ ನಿರೀಕ್ಷೆ  ಕುರಿತ ಕನವರಿಕೆಗಳು ತಾಯಿಯಲ್ಲಿ ಹೇಗಿರುತ್ತವೆ   ಎಂಬುದನ್ನು  ರಾಘವಾಂಕ ಮಾರ್ಮಿಕವಾಗಿ ಹೇಳಿದ್ದಾನೆ.

    ತೀವ್ರ  ಆತಂಕ  ಇದ್ದಾಗ ಆಡುವ ಮಾತಿದು. ‘ಸತ್ತು ಸತ್ತು ಹುಟ್ಟಿದೆ’,   ‘ಬಾಲ್ ಬಾಲ್ ಬಚೆ’  ಈ  ಮಾತುಗಳನ್ನು ಇಲ್ಲಿ ತೆಗೆದುಕೊಳ್ಳಬಹುದು.  ಕೊರೊನಾ  ಸಾಂಕ್ರಾಮಿಕದ ಕಾಲದಲ್ಲಿ  ಸೋಂಕಿಗೊಳಗಾಗಿ  ತೀವ್ರತರದ ಅನಾರೋಗ್ಯ ಸಮಸ್ಯೆ ಅನುಭವಿಸಿ ಚೇತರಿಸಿಕೊಂಡವರು ಬಹುಶಃ ಈ  ಮಾತನ್ನು ಹೇಳಿಯೇ ಹೇಳುತ್ತಾರೆ ಎಂದು ನನ್ನನಿಸಿಕೆ .

    ‘ಕುತ್ತಿಗೆಗೆ ಬಂತು’, ‘ಪ್ರಾಣಕ್ಕೆ ಬಂತು’ ಎನ್ನುತ್ತಾರಲ್ಲ  ಹಾಗೆ! ಈ ಮಾತನ್ನು  ಕೇವಲ ಆರೋಗ್ಯ ದೃಷ್ಟಿಯಿಂದ ಹೇಳಲಾಗದು , ಯಾವುದೇ ಸಮಸ್ಯೆಯಲ್ಲಿ ಸಿಲುಕಿ ಅದರಿಂದ ಬಿಡಿಸಿಕೊಂಡ ನಂತರ  ಈ ತೆರನಾದ ಮಾತುಗಳು ಬಂದೇ ಬರುತ್ತವೆ.   ಸುಖ ಬಂದಾಗ ಮನಸ್ಸು ಹಿಗ್ಗುತ್ತದೆ  ಸಮಯ ಕಳೆಯುವುದು ತಿಳಿಯುವುದೇ ಇಲ್ಲ.  ಆದರೆ ದುಃಖ ಬಂದಾಗ   ಹೊತ್ತು ಹೋಗುವುದಿಲ್ಲ ಅನ್ನುವ ಮಾತಿದು ಅಂದರೆ ಅದು ಮನಸ್ಸಿನ ಮೇಲೆ ಗಾಢ ಪ್ರಭಾವವನ್ನು ಬೀರಿರುತ್ತದೆ.  ಒಳ ಮನಸ್ಸಿನ  ಮಡಿಕೆಯೊಳಗೆ ದುಃಖ ಆತಂಕಗಳು ಮನೆ ಮಾಡಿಕೊಂಡು ಮತ್ತೆ ಮತ್ತೆ  ನೆನಪು ತರಿಸಿ  ಕನಲಿಸುತ್ತವೆ.  ಇದು ವ್ಯಕ್ತಿಗಳ ಮಾನಸಿಕ  ತಾಳುವಿಕೆಯ ಕ್ಷಮತೆಯನ್ನು ಆಧರಿಸಿರುತ್ತದೆ.  ಇತರರು ಧೈರ್ಯ -ಸಮಾಧಾನಗಳನ್ನು  ಹೇಳಬಹುದೇ  ವಿನಃ ಆ ನೋವನ್ನು ತೆಗೆದುಕೊಳ್ಳಲಾಗದು.

    ಸವಿದವರಿಗೆ  ಮಾತ್ರ ಬೆಲ್ಲದ ಸವಿ ತಿಳಿಯುವಂತೆ ನೋವು- ಸಂಕಟಗಳ ತೀವ್ರತೆ ಅನುಭವಿಸಿದವರಿಗೆ  ಮಾತ್ರ ತಿಳಿದಿರುತ್ತದೆ.  ನೋವನ್ನು ಅನುಭವಿಸುವ ಮಾನಸಿಕ ತೊಳಲಾಟ- ತಹತಹಗಳನ್ನು  ಪರಿಣಾಮಕಾರಿಯಾಗಿ  ಇತರರಿಗೆ ಅರ್ಥೈಸಲು ‘ಮನದೊಳಗೆ ಸತ್ತು ಹುಟ್ಟುತ್ತಿರ್ಪಳು’ ಎಂಬ ಮಾತನ್ನು ಕವಿ ಇಲ್ಲಿ  ಸಮಯೋಚಿತವಾಗಿ ಬಳಸಿದ್ದಾನೆ ಎನ್ನಬಹುದು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

     

    ಹಳೆ ಕಂಪನಿ, ಹೊಸ ಹೆಸರು;ಪೂರ್ವಪರ ಅರಿತು ಹೂಡಿಕೆ ಮಾಡುವುದು ಲೇಸು

    ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್‌ ಶುಕ್ರವಾರದಂದು ಸರ್ವಕಾಲೀನ ಗರಿಷ್ಠದ ದಾಖಲೆಯಿಂದ ಮುನ್ನುಗ್ಗುತ್ತಿರುವ ವೇಗ ಎಲ್ಲೆಡೆ ಹರ್ಷವನ್ನು ತುಂಬಿದೆ. ಕೇವಲ ಎಂಟು ತಿಂಗಳಲ್ಲಿ ಹತ್ತು ಸಾವಿರ ಪಾಯಿಂಟುಗಳ ಏರಿಕೆಯನ್ನು ಪ್ರದರ್ಶಿಸಿದೆ. ಕೇವಲ ಸೆನ್ಸೆಕ್ಸ್‌ ಒಂದೇ ಅಲ್ಲ ಜೊತೆಗೆ ಮಧ್ಯಮ, ಕೆಳ ಮಧ್ಯಮ ಶ್ರೇಣಿಗಳ ಕಂಪನಿಗಳು, ವಿವಿಧ ವಲಯಗಳ ಸೂಚ್ಯಂಕಗಳೂ ಗಮನಾರ್ಹ ದಾಖಲೆಯನ್ನು ನಿರ್ಮಿಸಿವೆ.

    ಈ ರೀತಿಯ ಏರಿಕೆಯ ಹಿಂದೆ ಅಡಕವಾಗಿರುವ ಕಾರಣಗಳು ಅನೇಕವಿವೆ. ಇದೇ ರೀತಿಯ ಏರಿಕೆಯ ಪ್ರವೃತ್ತಿಯು ಮುಂದುವರೆಯುತ್ತದೆಯೇ ಎಂಬುದನ್ನು ಕಾದುನೋಡಬೇಕಾಗಿದೆ. ಸೆನ್ಸೆಕ್ಸ್‌ 60 ಸಾವಿರ ಪಾಯಿಂಟುಗಳನ್ನು ತಲುಪಿದ್ದಕ್ಕೇ ಅದು ಸೀನಿಯರ್‌ ಸಿಟಿಜನ್‌ ಎಂದು ಗುರುತಿಸಲಾಗುತ್ತಿರುವುದು, ನಿವೃತ್ತಿಯಾಗುತ್ತಿದೆ ಎಂದು ತನ್ನ ಚಲನೆಯ ದಿಶೆ ಬದಲಾಗದಿದ್ದರೆ ಸಾಕು.

    ಪ್ರತಿಯೊಂದು ಏರಿಕೆಯ ವಿಜೃಂಭಣೆಯ ಸಮಯದಲ್ಲಿ ಕಾರ್ಪೊರೇಟ್‌ ವಲಯದಲ್ಲಿ ತಮ್ಮ ವಿವಿಧ ಯೋಜನೆಗಳಿಗೆ ಸಂಪನ್ಮೂಲ ಸಂಗ್ರಹಣೆಯ ಕಾರ್ಯವೂ ಚುರುಕಾಗುತ್ತದೆ. ಅದರಂತೆ ಸಂಪನ್ಮೂಲ ಸಂಗ್ರಹಣೆಯ ಕಾರ್ಯವು ಸಾಂಗವಾಗಿ ನೆರವೇರುತ್ತಿದೆ. ಅಲ್ಲದೆ ಅನೇಕ ಕಂಪನಿಗಳು ಆರಂಭಿಕ ವಿತರಣೆಗಳ ಮೂಲಕವೂ ಪೇಟೆಯಲ್ಲಿ ವಹಿವಾಟಿಗೆ ನೋಂದಾಯಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಕೆಲವು ಯಶಸ್ವಿಯಾಗಿಯೂ ಇವೆ.

    ಹೊಸ ನಾಮಕರಣ

    ಈ ಮಧ್ಯೆ ಹಲವಾರು ಕಂಪನಿಗಳು ತಮ್ಮ ಹಿಂದಿನ ಹೆಸರನ್ನು ಬದಲಿಸಿಕೊಂಡು ಹೊಸ ನಾಮಕರಣದೊಂದಿಗೆ ಪೇಟೆಯಲ್ಲಿ ತಮ್ಮ ಗುರುತನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಲಿವೆ. ಹೂಡಿಕೆದಾರರು ತಮ್ಮ ಚಟುವಟಿಕೆಗೆ ಮುಂಚೆ ಈ ವಿಚಾರದಲ್ಲಿ ಗಮನಹರಿಸಿಕೊಂಡು ಕಂಪನಿಗಳ ಅಸಲಿಯತ್ತನ್ನು ಗುರುತಿಸುವುದು ಒಳಿತು. 2020ರಿಂದ ಹೆಸರು ಬದಲಿಸಿಕೊಂಡಿರುವ ಕೆಲವು ಕಂಪನಿಗಳ ಪಟ್ಟಿಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಕೊಟ್ಟಿರುವ ಕಂಪನಿಗಳೆಲ್ಲಾ ಕಳಪೆ ಎಂದಲ್ಲ, ಆದರೆ ಹೂಡಿಕೆಗೆ ಮುಂಚೆ ಕಂಪನಿಗಳ ಬಗ್ಗೆ ಅರಿತು ನಿರ್ಧರಿಸಿರಿ.

    ಆಧುನಿಕ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಹೆಸರನ್ನು ಇನ್‌ ಕ್ರೆಡಿಬಲ್‌ ಇಂಡಸ್ಟ್ರೀಸ್‌ ಎಂದು ಬದಲಿಸಿಕೊಂಡಿದೆ 2021 ರಲ್ಲಿ.

    ಆಡ್‌ ಲ್ಯಾಬ್‌ ಎಂಟರ್‌ ಟೇನ್ಮೆಂಟ್‌ ಲಿಮಿಟೆಡ್‌ ಕಂಪನಿ ಹೆಸರನ್ನು ಇಮ್ಯಾಜಿಕಾ ವರ್ಲ್ಡ್‌ ಎಂಟರ್‌ ಟೇನ್ಮೆಂಟ್‌ ಲಿಮಿಟೆಡ್‌ ಎಂದು 2020 ರಲ್ಲಿ ಬದಲಿಸಿಕೊಂಡಿದೆ.

    ಐಶ್ವರ್ಯ ಟೆಲಿಕಾಂ ಲಿಮಿಟೆಡ್‌ ತನ್ನ ಹೆಸರನ್ನು ಐಶ್ವರ್ಯ ಟೆಕ್ನಾಲಜೀಸ್‌ ಅಂಡ್‌ ಟೆಲಿಕಾಂ ಎಂದು 2020 ರಲ್ಲಿ ಬದಲಿಸಿಕೊಂಡಿದೆ.

    ಆಕ್ಮೆ ಸ್ಟಾರ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ ಹೆಸರನ್ನು ಸ್ಟಾರ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ ಎಂದು 2021 ರಲ್ಲಿ ಬದಲಿಸಿಕೊಂಡಿದೆ.

    ಅನಿಶಾ ಇಂಪೆಕ್ಸ್‌ ಲಿಮಿಟೆಡ್‌ ಕಂಪನಿಯ ಹೆಸರು ರೇಸ್‌ ಎಕೊ ಚೈನ್‌ ಲಿಮಿಟೆಡ್‌ ಎಂದು ಬದಲಾಗಿದೆ 2021 ರಲ್ಲಿ.

    ಆಪಲ್‌ ಫೈನಾನ್ಸ್‌ ಲಿಮಿಟೆಡ್‌ ತನ್ನ ಹೆಸರನ್ನು ಯುಟಿಕ್‌ ಎಂಟರ್‌ ಪ್ರೈಸಸ್‌ ಲಿಮಿಟೆಡ್‌ ಎಂದು 2020 ರಲ್ಲಿ ಬದಲಾಗಿದೆ.

    ಅಪ್ಪು ಇಂಡಸ್ಟ್ರೀಸ್‌ ಲಿಮಿಟೆಡ್‌ ತನ್ನ ಹೆಸರನ್ನು ಬ್ರೆಲ್ಸ್‌ ಇನ್ಫೋಟೆಕ್‌ ಲಿಮಿಟೆಡ್‌ ಎಂದು 2020 ರಲ್ಲಿ ಬದಲಿಸಿಕೊಂಡಿದೆ.

    ಎ ಒನ್‌ ಲೈಫ್‌ ಸೈನ್ಸಸ್‌ ಲಿಮಿಟೆಡ್‌ ಕಂಪನಿ ತನ್ನ ಹೆಸರನ್ನು 2020 ರಲ್ಲಿ ಕೊಬೊ ಬಯೋಟೆಕ್‌ ಲಿಮಿಟೆಡ್‌ ಎಂದು ಬದಲಿಸಕೊಂಡಿದೆ.

    8 ಕೆ ಮೈಲ್ಸ್‌ ಸಾಫ್ಟ್‌ ವೇರ್‌ ಸರ್ವಿಸಸ್‌ ಲಿಮಿಟೆಡ್‌ ಕಂಪನಿಯ ಹೆಸರು 2021 ರಲ್ಲಿ ಸೆಕ್ಯೂರ್‌ ಕ್ಲೌಡ್‌ ಟೆಕ್ನಾಲಾಜೀಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಹೊಂಡ ಸಿಯೆಲ್‌ ಪವರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ 2020 ರಲ್ಲಿ ಹೊಂಡ ಇಂಡಿಯಾ ಪವರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಇಂಡಿಯಾ ಬುಲ್ಸ್‌ ವೆಂಚರ್ಸ್‌ ಲಿಮಿಟೆಡ್‌ ಕಂಪನಿ 2020 ರಲ್ಲಿ ಧನಿ ಸರ್ವಿಸಸ್‌ ಲಿಮಿಟೆಡ್‌ ಎಂದು ಬದಲಾಗಿದೆ.

    ಇಂಟರ್‌ ನ್ಯಾಶನಲ್‌ ಪೇಪರ್‌ ಎಪಿಪಿಎಂ ಲಿಮಿಟೆಡ್‌ ಕಂಪನಿ ಹೆಸರು ಆಂದ್ರ ಪೇಪರ್‌ ಲಿಮಿಟೆಡ್‌ ಎಂದು ಬದಲಿಸಲಾಗಿದೆ.

    ಜುಬಿಲೆಂಟ್‌ ಲೈಫ್‌ ಸೈನ್ಸಸ್‌ ಲಿಮಿಟೆಡ್‌ ಕಂಪನಿಯ ಹೆಸರು 2021 ರಲ್ಲಿ ಜುಬಿಲಂಟ್‌ ಫಾರ್ಮೊವ ಲಿಮಿಟೆಡ್‌ ಎಂದು ಬದಲಿಸಲಾಗಿದೆ.

    ಜಂಕ್ಷನ್‌ ಫ್ಯಾಬ್ರಿಕ್ಸ್‌ ಅಂಡ್‌ ಅಪರಲ್ಸ್‌ ಲಿಮಿಟೆಡ್‌ ಕಂಪನಿಯು 2020 ರಲ್ಲಿ ಗಾರ್ಮೆಂಟ್‌ ಮಂತ್ರ ಲೈಫ್‌ ಸ್ಟೈಲ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಕಾಶಿರಾಂ ಜೈನ್‌ ಅಂಡ್‌ ಕಂಪನಿ ಲಿಮಿಟೆಡ್‌ ಕಂಪನಿಯ ಹೆಸರು 2020 ರಲ್ಲಿ ಎಲೈಟ್‌ ಕಾನ್‌ ಇಂಟರ್‌ ನ್ಯಾಶನಲ್‌ ಲಿಮಿಟೆಡ್‌ ಎಂದು ಬದಲಾಗಿದೆ.

    ಕವಿತಾ ಫ್ಯಾಬ್ರಿಕ್ಸ್‌ ಲಿಮಿಟೆಡ್‌ ಕಂಪನಿ 2020 ರಲ್ಲಿ ತನ್ನ ಹೆಸರನ್ನು ನಿಬೆ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಮಹಾನ್‌ ಇಂಪೆಕ್ಸ್‌ ಲಿಮಿಟೆಡ್‌ ಕಂಪನಿ 2020 ರಲ್ಲಿ ಸೀಕೋಸ್ಟ್‌ ಶಿಪ್ಪಿಂಗ್‌ ಸರ್ವಿಸಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಮನ್ವಿಜಯ್‌ ಡೆವೆಲಪ್‌ ಮೆಂಟ್‌ ಕಂಪನಿ ಲಿಮಿಟೆಡ್‌ ಕಂಪನಿ 2020 ರಲ್ಲಿ ವಾರ್ಡ್‌ ವಿಝರ್ಡ್‌ ಇನ್ನೋವೇಶನ್ಸ್‌ ಅಂಡ್‌ ಮೊಬಿಲಿಟಿ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಮೊನ್ನೆಟ್‌ ಇಸ್ಪಾಟ್‌ ಅಂಡ್‌ ಎನರ್ಜಿ ಲಿಮಿಟೆಡ್‌ ಕಂಪನಿ 2020 ರಲ್ಲಿ ಜೆ ಎಸ್‌ ಡಬ್ಲು ಇಸ್ಪಾಟ್‌ ಸ್ಪೆಷಲ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ನರೇಂದ್ರ ಇನ್ವೆಸ್ಟ್‌ ಮೆಂಟ್ಸ್‌ (ದೆಹಲಿ) ಲಿಮಿಟೆಡ್‌ ಕಂಪನಿ 2020 ರಲ್ಲಿ ಐಕೊ ಲೈಫ್‌ ಸೈನ್ಸಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಓಂ ಮೆಟಲ್ಸ್‌ ಲಿಮಿಟೆಡ್‌ ಲಿಮಿಟೆಡ್‌ ಕಂಪನಿ 2020 ರಲ್ಲಿ ಓಂ ಇನ್ಫ್ರಾ ಲಿಮಿಟೆಡ್‌ ಎಂದು ಬದಲಿಸಲಾಗಿದೆ.

    ಪ್ರೈಮ್‌ ಕಸ್ಟಮರ್ಸ್‌ ಸರ್ವಿಸಸ್ ಲಿಮಿಟೆಡ್‌ ಕಂಪನಿಯ ಹೆಸರನ್ನು 2020‌ ರಲ್ಲಿ ಪ್ರೈಮ್‌ ಅರ್ಬನ್‌ ಡೆವೆಲಪ್‌ ಮೆಂಟ್‌ ಇಂಡಿಯಾ ಲಿಮಿಟೆಡ್‌ ಎಂದು ಬದಲಾಗಿದೆ.

    ರೊಕ್ಸಿ ಎಕ್ಸ್ ಪೋರ್ಟ್ಸ್‌ ಲಿಮಿಟೆಡ್‌ ಕಂಪನಿಯು 2020 ರಲ್ಲಿ ರೆಮಿಡಿಯಮ್‌ ಲೈಫ್‌ ಕೇರ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಸ್ವೋರ್ಡ್‌ ಅಂಡ್‌ ಶೀಲ್ಡ್‌ ಫಾರ್ಮ ಲಿಮಿಟೆಡ್‌ ಕಂಪನಿ 2020 ರಲ್ಲಿ ಪ್ರವೇಗ್‌ ಕಮ್ಯುನಿಕೇಷನ್ಸ್‌ (ಇಂಡಿಯಾ) ಲಿಮಿಟೆಡ್‌ ಎಂದು ಬದಲಾಗಿದೆ.

    ಟಾಟಾ ಗ್ಲೋಬಲ್‌ ಬೆವರೇಜಸ್‌ ಲಿಮಿಟೆಡ್‌ ಕಂಪನಿಯ ಹೆಸರನ್ನು 2020 ರಲ್ಲಿ ಟಾಟಾ ಕನ್ಸೂಮರ್ಸ್‌ ಲಿಮಿಟೆಡ್‌ ಎಂದು ಬದಲಿಸಲಾಗಿದೆ.

    ಅರ್ಬಕ್‌ ನಿಟ್‌ ಫ್ಯಾಬ್ಸ್‌ ಲಿಮಿಟೆಡ್‌ ಕಂಪನಿಯ ಹೆಸರು 2020 ರಲ್ಲಿ ಸಿಡಿಜಿ ಪೆಟ್‌ ಕೆಂ ಲಿಮಿಟೆಡ್‌ ಎಂದು ಬದಲಾಗಿದೆ.

    ಬಗಾಡಿಯಾ ಕಲರ್‌ ಕೆಂ ಲಿಮಿಟೆಡ್‌ 2020 ರಲ್ಲಿ ಫಂಡ್‌ ವೈಸರ್‌ ಕ್ಯಾಪಿಟಲ್‌ ( ಇಂಡಿಯಾ) ಲಿಮಿಟೆಡ್‌ ಎಂದು ಬದಲಾಗಿದೆ.

    ಭಾರತಿ ಇನ್ಫ್ರಾಟೆಲ್‌ ಲಿಮಿಟೆಡ್‌ ಕಂಪನಿ 2020 ರಲ್ಲಿ ಇಂಡಸ್‌ ಟವರ್ಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಸಿ ಇ ಎಸ್‌ ಇ ವೆಂಚರ್ಸ್‌ ಲಿಮಿಟೆಡ್‌ 2021 ರಲ್ಲಿ ಆರ್‌ ಪಿ ಎಸ್‌ ಜಿ ವೆಂಚರ್ಸ್‌ ಲಿಮಿಟೆಡ್‌ ಎಂದು ಬದಲಾಗಿದೆ.

    ಸಿಎಂಐ ಎಫ್‌ ಪಿ ಐ ಲಿಮಿಟೆಡ್‌ ಕಂಪನಿ ತನ್ನ ಹೆಸರನ್ನು 2020 ರಲ್ಲಿ ಜಾನ್‌ ಕಾಕ್ರೈಲ್‌ ಇಂಡಿಯಾ ಲಿಮಿಟೆಡ್‌ ಎಂದು ಬದಲಾಗಿದೆ.

    ಸೈಬರ್‌ ಮೇಟ್‌ ಇನ್ಫೋ ಟೆಕ್‌ ಲಿಮಿಟೆಡ್‌ 2021 ರಲ್ಲಿ ಆರ್ಚಾಸ್ಪ್‌ ಲಿಮಿಟೆಡ್‌ ಎಂದು ಬದಲಾಗಿದೆ.

    ದೀಪ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ 2020 ರಲ್ಲಿ ದೀಪ್‌ ಎನರ್ಜಿ ರಿಸೋರ್ಸಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಎಬಿಕ್ಸ್‌ ಕ್ಯಾಶ್‌ ವರ್ಲ್ಡ್‌ ಮನಿ ಇಂಡಿಯಾ ಲಿಮಿಟೆಡ್‌ 2021 ರಲ್ಲಿ ಡೆಲ್ಫಿ ವರ್ಲ್ಡ್‌ ಮನಿ ಲಿಮಿಟೆಡ್‌ ಎಂದು ಬದಲಿಸಲಾಗಿದೆ.

    ಎಸ್ಸೆಲ್‌ ಪ್ರೊಪ್ಯಾಕ್‌ ಲಿಮಿಟೆಡ್‌ ಕಂಪನಿ 2020 ರಲ್ಲಿ ಇಪಿಎಲ್‌ ಲಿಮಿಟೆಡ್‌ ಎಂದು ಬದಲಾಗಿದೆ.

    ಫೆರ್‌ ಕೆಂ ಸ್ಪೆಷಾಲಿಟೀಸ್‌ ಲಿಮಿಟೆಡ್‌ 2020 ರಲ್ಲಿ ಪ್ರಿವಿ ಸೆಷಾಲಿಟಿ ಕೆಮಿಕಲ್ಸ್‌ ಲಿಮಿಟೆಡ್‌ ಎಂದು ಬದಲಾಗಿದೆ.

    ಗ್ಯಾಮನ್‌ ಇನ್ಫ್ರಾಸ್ಟ್ರಕ್ಚರ್‌ ಪ್ರಾಜೆಕ್ಟ್ಸ್‌ ಲಿಮಿಟೆಡ್‌ 2021 ರಲ್ಲಿ ಎ ಜೆ ಆರ್‌ ಇನ್ಫ್ರಾ ಅಂಡ್‌ ಟೋಲಿಂಗ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ಗಾರ್ವ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ 2020 ರಲ್ಲಿ ಹಾರ್ಡ್ ವಿನ್‌ ಇಂಡಿಯಾ ಲಿಮಿಟೆಡ್‌ ಎಂದು ಬದಲಾಗಿದೆ.

    ಗೌರವ್‌ ಮರ್ಕಂಟೈಲ್‌ ಲಿಮಿಟೆಡ್‌ ಕಂಪನಿಯ ಹೆಸರನ್ನು ಕ್ವಿಂಟ್‌ ಡಿಜಿಟಲ್‌ ಮೀಡಿಯಾ ಲಿಮಿಟೆಡ್‌ ಎಂದು 2020ರಲ್ಲಿ ಬದಲಾಗಿದೆ.

    ಗ್ರೆಸೆಲ್ಸ್ ಎಜುಕೇಷನ್ ಲಿಮಿಟೆಡ್‌ 2021 ರಲ್ಲಿ ಐರನ್‌ ವುಡ್‌ ಎಜುಕೇಷನ್‌ ಲಿಮಿಟೆಡ್‌ ಎಂದು ಬದಲಾಗಿದೆ.

    ಗ್ರೊಮೊ ಟ್ರೇಡ್‌ ಅಂಡ್‌ ಕನ್ಸಲ್ಟನ್ಸಿ ಲಿಮಿಟೆಡ್‌ 2020 ರಲ್ಲಿ ತನ್ನ ಹೆಸರನ್ನು ಪ್ರಿಸ್ಮ್ ಕ್ಸ್‌ ಗ್ಲೋಬಲ್‌ ವೆಂಚರ್ಸ್‌ ಲಿಮಿಟೆಡ್‌ ಎಂದು ಬದಲಿಸಿಕೊಂಡಿದೆ.

    ವೈಜ್ಮನ್‌ ಫಾರೆಕ್ಸ್‌ ಲಿಮಿಟೆಡ್‌ ಕಂಪನಿ 2020 ರಲ್ಲಿ ಎಬಿಕ್ಸ್‌ ಕ್ಯಾಶ್‌ ವರ್ಲ್ಡ್‌ ಮನಿ ಇಂಡಿಯಾ ಲಿಮಿಟೆಡ್‌ ಎಂದು ಬದಲಿಸಲಾಗಿದೆ.

    ವೆಲ್‌ ಕಾನ್‌ ಇಂಟರ್‌ ನ್ಯಾಶನಲ್‌ ಲಿಮಿಟೆಡ್‌ ಕಂಪನಿಯು ಮುಜಲಿ ಆರ್ಟ್ಸ್‌ ಲಿಮಿಟೆಡ್‌ ಎಂದು 2020 ರಲ್ಲಿ ಬದಲಿಸಿಕೊಂಡಿದೆ.

    ಹೀಗೆ ಬದಲಾದ ಕಂಪನಿಗಳಲ್ಲಿ ಉತ್ತಮವಾದ ಕಂಪನಿಗಳಿದ್ದರೂ ಹೆಚ್ಚಿನವು ಮಧ್ಯಮ ಮತ್ತು ಕೆಳಮಧ್ಯಮ ಕಂಪನಿಗಳಿವೆ. ಅಲ್ಲದೆ ಕೆಲವು ಕಳಪೆ ಕಂಪನಿಗಳೂ ಇವೆ. ಈ ಪಟ್ಟಿಯು ಪೂರ್ಣವಾದುದಲ್ಲ. ಹೂಡಿಕೆಗೆ, ವಹಿವಾಟಿಗೆ ಆಯ್ಕೆ ಮಾಡಿಕೊಳ್ಳುವಾಗ ಕಂಪನಿಗಳ ಹಿಂದಿನ ಬೆಳವಣಿಗೆಗಳನ್ನು/ ಹೆಸರಿನ ಬದಲಾವಣೆಗಳನ್ನೂ ಅರಿತಿದ್ದರೆ ನಿರ್ಧಾರ ಸುಗಮವಾಗಿರಲು ಸಾಧ್ಯ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    error: Content is protected !!