25.2 C
Karnataka
Friday, May 22, 2026
    Home Blog Page 50

    ವೃದ್ದಾಶ್ರಮಗಳ ನಿರ್ವಹಣೆಗೆ ರಾಜ್ಯ ಸರ್ಕಾರದ ಅನುದಾನ 15 ಲಕ್ಷ ರೂ.ಗಳಿಗೆ ಹೆಚ್ಚಳ

    BENGALURU OCT 1

    ವೃದ್ಧಾಶ್ರಮಗಳ ನಿರ್ವಹಣೆಗೆ ಕೇಂದ್ರ ಸರ್ಕಾರದ ಅನುದಾನವನ್ನು 25 ಲಕ್ಷ ರೂ.ಗಳಿಗೆ ನಿಗದಿಪಡಿಸಿದ್ದು, ಈ ಯೋಜನೆಗೆ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದ್ದ 8 ಲಕ್ಷ ರೂ.ಗಳ ಅನುದಾನವನ್ನು 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದರು.

    ಅವರು ಇಂದು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

    ಸರ್ಕಾರ ಬಹಳ ಸಂವೇದನಾಶೀಲವಾಗಿ ಹಿರಿಯರಿಗೆ ಸ್ಪಂದಿಸುತ್ತದೆ. ಅವರ ವೈಯಕ್ತಿಕ ಬದುಕಿಗೆ ಆತ್ಮಸ್ಥೈರ್ಯ, ಲವಲವಿಕೆ, ಜೀವಂತಿಕೆಯನ್ನು ತುಂಬುವ ಕೆಲಸ ಮಾಡಿ, ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಸರ್ಕಾರ ನಿಮಗೆ ಆಶ್ರಯಗೋಲಾಗುತ್ತದೆ. ಆಧಾರವಾಗುತ್ತದೆ ಎಂಬ ಭರವಸೆಯನ್ನಿತ್ತರು.
    ಹಿರಿತನ ಒಂದು ಸ್ಥಿತಿ. ವಯಸ್ಸು, ಅನುಭವ ಹಾಗೂ ನಮ್ಮ ನಡವಳಿಕೆಯಿಂದ ಹಿರಿತನ ತೀರ್ಮಾನವಾಗುತ್ತದೆ. ಮಾನಸಿಕವಾಗಿ ನಾವು ಗಟ್ಟಿ ಇದ್ದು, ಸಮಾಜಕ್ಕೆ ಕೊಡುಗೆ ನೀಡಬಹುದು ಎಂಬ ಮನಸ್ಥಿತಿ ಇದ್ದರೆ, ಹಿರಿತನವನ್ನು ಅರ್ಥಪೂರ್ಣವಾಗಿ ಕಳೆಯಬಹುದು. ಈ ಮನೋಸ್ಥಿತಿ ಪಡೆಯಲು ದೈಹಿಕ ಆರೋಗ್ಯ, ಕುಟುಂಬದ ವಾತಾವರಣ, ಸಮಾಜದ ಸಹಾಯ ಅಗತ್ಯ. ಹಿರಿಯರು ಸಂತೋಷವಾಗಿ, ಸುರಕ್ಷಿತವಾಗಿ ಹಾಗೂ ಆರೋಗ್ಯವಂತರಾಗಿ ಬದುಕಲು ಸಾಧ್ಯ. ಸರ್ಕಾರ, ವ್ಯವಸ್ಥೆ, ಕುಟುಂಬ ಮತ್ತು ಸಮಾಜ ಎಂಬ ನಾಲ್ಕು ಕಂಬಗಳು ಹಿರಿಯ ಜೀವಿಗಳಿಗೆ ಆಶ್ರಯ ಕೊಡುತ್ತವೆ. ಈ ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಸ್ಥಿತಪ್ರಜ್ಞತೆಯಿಂದ ಬದುಕನ್ನು ಎದುರಿಸಿ:

    ಹಿರಿಯರ ಬದುಕಿನಲ್ಲಿ ಹಾಸ್ಯ ಟಾನಿಕ್ ಇದ್ದಂತೆ. ನಮ್ಮ ಬದುಕಿನಲ್ಲಿ ಎಲ್ಲವನ್ನೂ ನಿಯಂತ್ರಣ ಮಾಡುತ್ತೇವೆ ಎನ್ನುವುದು ತಪ್ಪು. ಅತ್ಯಂತ ಸ್ಥಿತಪ್ರಜ್ಞರಾಗಿ ಬದುಕನ್ನು ಎದುರಿಸಬೇಕಾಗುತ್ತದೆ ಎಂದ ಮುಖ್ಯಮಂತ್ರಿಗಳು, ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಅಗತ್ಯ. ಮಾಡಿದ್ದನ್ನು ಸರಿಯಾಗಿ ಮಾಡಿದ್ದೇನೆ ಸಂತೃಪ್ತಿಯ ಭಾವ ಇರಬೇಕು. ಆತ್ಮಚೈತನ್ಯವನ್ನು ಸದಾಕಾಲ ಜೀವಂತವಾಗಿಡಬೇಕು. ಕರ್ನಾಟಕದಲ್ಲಿನ 54 ಲಕ್ಷ ಹಿರಿಯರು ಸಂತೋಷದಿಂದಿರಬೇಕು ಎನ್ನುವುದು ನನ್ನ ಆಶಯ ಎಂದರು.

    ಹಿರಿಯರು ಅನುಭವದ ಭಂಡಾರ:

    ಹಿರಿಯರು ಅನುಭವದ ಭಂಡಾರ, ಸಂಪತ್ತು ಇದ್ದಂತೆ. ಈ ಸಂಪತ್ತು ನಾಡು ಕಟ್ಟುವುದರಲ್ಲಿ, ಸಮಾಜ ಕಟ್ಟಲು, ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಲು ಹಿರಿಯರ ಅನುಭವ ಬಳಕೆಯಾಗಬೇಕು. ಯಾವ ಸಮಾಜದಲ್ಲಿ ಯುವಕರು ಹಿರಿಯರನ್ನು ಗೌರವಿಸಿ ಆಧಾರವಾಗುತ್ತಾರೋ, ಆಶ್ರಯಗೋಲಾಗುತ್ತಾರೋ ಆ ಸಮಾಜ ಅತ್ಯಂತ ಧನ್ಯತಾಪೂರ್ಣ ಸಮಾಜವಾಗುತ್ತದೆ ಎಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿಗಳು, ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಹಿಂದಿರುಗಿಸಬೇಕು. ಮನೆಯಲ್ಲಿ ಹಿರಿಯರನ್ನು ಇಟ್ಟುಕೊಂಡು ಗೌರವಿಸುವುದು ಭಾರತೀಯರ ಸಂಸ್ಕೃತಿ ಎಂದರು.

    ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿ, ಹಿರಿಯ ನಾಗರಿಕರನ್ನು ಸನ್ಮಾನಿಸಿದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಹಿರಿಯ ನಾಗರಿಕರ ಸಬಲೀಕರಣ ಸಚಿವ ಹಾಲಪ್ಪ ಆಚಾರ್, ಕೇಂದ್ರ ಸಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಶಾಸಕರಾದ ಉದಯ್ ಗರುಡಾಚಾರ್, ಪೂರ್ಣಿಮಾ ಶ್ರೀನಿವಾಸ್ ಉಪಸ್ಥಿತರಿದ್ದರು.

    ಮರದ ಅಂಬಾರಿ ಹೊತ್ತ ಅಭಿಮನ್ಯುಗೆ ಸಚಿವರಿಂದ ಪೂಜೆ

    MYSORE OCT 1

    ಸಹಕಾರ ಸಚಿವ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಬೆಳಗ್ಗೆ ಮರದ ಅಂಬಾರಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.

    ಅರಮನೆ ಆವರಣದಲ್ಲಿ ಅಭಿಮನ್ಯು ಆನೆಗೆ ಮರಳು ಮೂಟೆ ಹೊರಿಸಿ ಅದರ ಮೇಲೆ ಕಟ್ಟಿದ್ದ ಮರದ ಅಂಬಾರಿಗೆ ಪೂಜೆ ಸಲ್ಲಿಸಿದ ಬಳಿಕ ಅಂತಿಮ ಹಂತದ ತಾಲೀಮು ಆರಂಭವಾಯಿತು.

    ಅಭಿಮನ್ಯು ಜೊತೆ ಕಾವೇರಿ, ಲಕ್ಷ್ಮಿ, ಚೈತ್ರಾ, ಗೋಪಾಲಸ್ವಾಮಿ, ಧನಂಜಯ, ವಿಕ್ರಮ, ಅಶ್ವತ್ಥಾಮ ಆನೆಗಳು ಹೆಜ್ಜೆ ಹಾಕಿದವು.

    ಅ. 7 ರಿಂದ13ರವರೆಗೆ ನಿತ್ಯ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

    ಕೋವಿಡ್ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುವುದು. ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾವಿದರಿಗೆ ಹೆಚ್ಚು ಅವಕಾಶ ನೀಡುವಂತೆ ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

    ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುದಾನ ಕಡಿತ ಮಾಡಬೇಡಿ. ಪ್ರತಿನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿ ಎಂದರು.

    ಅ.7ರಿಂದ 13ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸಂಜೆ 6 ರಿಂದ 9ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮೈಸೂರು ನಗರದ ಎಲ್ಲಾ ಪ್ರವೇಶದ್ವಾರಗಳಲ್ಲಿ ದೀಪಾಲಂಕಾರ ಮಾಡಲಾಗುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

    ಪರಿಸರ ಸ್ನೇಹಿ ಎಲ್ ಇಡಿ ಬಳಕೆ ಮಾಡಲಾಗುತ್ತದೆ. 100 ಕಿ.ಮೀ.ನಷ್ಟು ದೀಪಾಲಂಕಾರ ಮಾಡಲಾಗುವುದು. 41 ಸರ್ಕಲ್‌ ಗಳಲ್ಲಿ ಅಂಬಾರಿ, ವಿಧಾನಸೌಧ, ಕೆಆರ್ ಎಸ್ ಪ್ರತಿಕೃತಿಗಳ ದೀಪಾಲಂಕಾರ ಮಾಡಲಾಗುತ್ತದೆ. ಇನ್ನೆರಡು ದಿನದಲ್ಲಿ ದೀಪಾಲಂಕಾರ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.

    ಅ.6ರಂದು ಸಂಜೆ 6 ಗಂಟೆಗೆ ದೀಪಾಲಂಕಾರಗಳ ಉದ್ಘಾಟನೆಯಾಗಲಿ. ಅಂದು ಮಾನ್ಯ ಮುಖ್ಯಮಂತ್ರಿಗಳು ಆಗಮಿಸಲಿದ್ದು ದೀಪಾಲಂಕಾರಗಳನ್ನು ವೀಕ್ಷಿಸಲಿದ್ದಾರೆ. ರಾತ್ರಿ 10 ಗಂಟೆಯವರೆಗೆ ದೀಪಾಲಂಕಾರ ಇರಲಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

    ಸಭೆಗೆ ಆಗಮಿಸಿದ ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಸಚಿವ ಸೋಮಶೇಖರ್ ಅವರು ಧನ್ಯವಾದ ತಿಳಿಸಿದರು. ಸಭೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳಾಪಟ್ಟಿಯ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.

    ಸಭೆಯಲ್ಲಿ ಶಾಸಕ ಹರ್ಷವರ್ಧನ್, ಸಂಸದ ಪ್ರತಾಪ್ ಸಿಂಹ, ಮೂಡಾ ಅಧ್ಯಕ್ಷ ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪಂಚಾಯತ್ ಸಿಇಒ ಎ.ಎಂ.ಯೋಗೀಶ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು

    ಡಿಪ್ಲೊಮಾ ಶಿಕ್ಷಣ ಪಿಯುಸಿಗೆ ಸಮ

    BENGALURU SEP 30

    ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್ ಅನ್ನು ಪಿಯುಸಿ ವಿದ್ಯಾರ್ಹತೆಗೆ ತತ್ಸಮಾನವೆಂದು ಸರ್ಕಾರ ಘೋಷಿಸಿದೆ.

    ನೇರ ನೇಮಕಾತಿ ಅಥವಾ ಅನುಕಂಪದ ಆಧಾರದ ಮೇಲೆ ನೇಮಕಾತಿ ‌ಹೊಂದಲು ಮತ್ತು ಉನ್ನತ ಶಿಕ್ಷಣ ಪಡೆಯಲು ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣ ವನ್ನು ಪಿಯುಸಿಗೆ ಸಮ ಎಂದು ಘೋಷಿಸಲಾಗಿದೆ.

    ಈ‌ ವಿಷಯದಲ್ಲಿ‌ ಗೊಂದಲ ಇದ್ದ ಕಾರಣ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಹಲವು ಸಭೆಗಳನ್ನು‌ ಮಾಡಿದ್ದರು. ಅವರ ಸಲಹೆ‌ ಮೇರೆಗೆ ಈ ತೀರ್ಮಾನ ಮಾಡಲಾಗಿದೆ.

    2015ಕ್ಕಿಂತ ಹಿಂದಿನ‌ ವರ್ಷ ಗಳಲ್ಲಿ ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಕೆಪಿಎಸ್ ಸಿ‌ ನಡೆಸುವ ಇಲಾಖಾ‌ ಪರೀಕ್ಷೆ ಗಳ‌ ಜತೆಗೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದನ್ನು ಕಡ್ಡಾಯ‌ ಮಾಡಲಾಗಿದೆ.ಇದನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

    ಕೋವಿಡ್ ಮರಣ: ಪ್ರತಿ ವಾರಸುದಾರರಿಗೂ 5 ಲಕ್ಷ ಪರಿಹಾರಕ್ಕೆ ಸಿದ್ಧರಾಮಯ್ಯ ಒತ್ತಾಯ

    BENGALURU SEP 29

    ವಿಕೋಪಗಳಿಂದ ಮರಣ ಹೊಂದಿದ ಪ್ರತಿಯೊಬ್ಬರಿಗೂ ಪರಿಹಾರ ನೀಡಬೇಕು ಎಂಬ ಪ್ರಕೃತಿ ವಿಕೋಪ ನಿಯಮಗಳನ್ನು ತಿರುಚಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ರಾಜ್ಯ ಸರ್ಕಾರವು ಷರತ್ತು ರಹಿತವಾಗಿ ಪ್ರಕೃತಿ ವಿಕೋಪ ನಿಯಮಗಳಡಿ ನೀಡುವ ಪರಿಹಾರದಂತೆಯೆ, ಕೋವಿಡ್‌ನಿಂದ ಮೃತಪಟ್ಟ ಎಲ್ಲರ ವಾರಸುದಾರರಿಗೂ 5 ಲಕ್ಷ ರೂಪಾಯಿಗಳನ್ನು ಕಡ್ಡಾಯವಾಗಿ ನೀಡಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.

    ರಾಜ್ಯದಲ್ಲಿ ಕೋವಿಡ್-19ನ ಎರಡೂ ಅಲೆಗಳಿಂದ ಕನಿಷ್ಠವೆಂದರೂ ೪ ಲಕ್ಷ ಜನ ಮರಣ ಹೊಂದಿದ್ದಾರೆ. ಹಾಗಾಗಿ ಕುಟುಂಬಗಳಲ್ಲಿ ದುಡಿಯುವ ಸದಸ್ಯರುಗಳನ್ನು ಕಳೆದುಕೊಂಡು ಈ ಕುಟುಂಬಗಳು ಅನಾಥವಾಗಿವೆ.

    ಅಸಂಖ್ಯಾತ ಕುಟುಂಬಗಳಲ್ಲಿ ತಂದೆ ತಾಯಿಯರಿಬ್ಬರನ್ನೂ ಕಳೆದುಕೊಂಡ  ಮಕ್ಕಳು ದಿಕ್ಕು ತೋಚದೆ ಕೂತಿದ್ದಾರೆ. ದುಡಿವ ಮಕ್ಕಳನ್ನು ಕಳೆದುಕೊಂಡ ವೃದ್ಧ ತಂದೆ ತಾಯಿಗಳು ತಬ್ಬಲಿಗಳಾಗಿದ್ದಾರೆ.ಹಾಗಾಗಿ ಅಸಹಾಯಕರು ಸಣ್ಣ ಮಟ್ಟದ ಬದುಕು ಕಟ್ಟಿಕೊಳ್ಳಬೇಕಾದರೆ ನಾಗರಿಕವೆನ್ನಿಸಿಕೊಂಡ ಸರ್ಕಾರಗಳು ನೊಂದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಈ ಹಿನ್ನೆಲೆಯಲ್ಲಿ ನಾವು ರಾಷ್ಟ್ರೀಯ ವಿಪತ್ತು ನಿಧಿಯ ನಿಯಮಗಳ ಪ್ರಕಾರ ಪ್ರತಿ ಕುಟುಂಬಕ್ಕೆ ೫ ಲಕ್ಷ ರೂಪಾಯಿಗಳನ್ನಾದರೂ ಕೊಡಬೇಕು ಎಂದು ಒತ್ತಾಯಿಸಿದ್ದೆವು.

    ಕೇಂದ್ರ ಸರ್ಕಾರ ದಿನಾಂಕ 14-3-2020 ರಂದು ಕೋವಿಡ್‌ನಿಂದ ಮರಣ ಹೊಂದಿದ ಪ್ರತಿ ವ್ಯಕ್ತಿಗೆ 4 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಬೇಕು ಎಂದು  ಆದೇಶ ಹೊರಡಿಸಿ ಅದೇ ದಿನ ಮಾರ್ಪಡಿಸಿಕೊಂಡಿದೆ.

    ಸರ್ಕಾರಗಳು ಪ್ರಕೃತಿ ವಿಕೋಪದ ನಿಯಮಗಳಡಿ ಕೋವಿಡ್-೧೯ ಸಾಂಕ್ರಾಮಿಕವನ್ನು ನಿರ್ವಹಿಸುತ್ತಿವೆ. ಪ್ರಕೃತಿ ವಿಕೋಪಗಳಾದ ಮಳೆ, ಗಾಳಿ, ಸಿಡಿಲು, ಗುಡುಗು, ಭೂ ಕುಸಿತ, ಭೂಕಂಪ ಮುಂತಾದವುಗಳಿಂದ  ಮರಣ ಹೊಂದಿದವರಿಗೆ ತಲಾ 5 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗುತ್ತದೆ [ಕೇಂದ್ರ 4 ಲಕ್ಷ, ರಾಜ್ಯ ಸರ್ಕಾರ-1ಲಕ್ಷ]. ಹಾಗಾಗಿ ಕೋವಿಡ್-19 ನಿಂದ ಮರಣ ಹೊಂದಿದವರಿಗೆ ತಲಾ ೫ ಲಕ್ಷ ರೂಪಾಯಿಗಳನ್ನು ಕೊಡಲೇಬೇಕೆಂದು ಒತ್ತಾಯಿಸಿದ್ದೆವು.

     ಆದರೆ ಸೆ.28 ರಂದು ಹೊರಡಿಸಿರುವ ಆದೇಶದಲ್ಲಿ ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಗಳ ದುಡಿಯುವ ವ್ಯಕ್ತಿ ಕೋವಿಡ್-19 ರಿಂದ ಮೃತ ಪಟ್ಟರೆ ರಾಜ್ಯದ ಸಂಧ್ಯಾ ಸುರಕ್ಷಾ ಯೋಜನೆಯಡಿ 1 ಲಕ್ಷ ರೂಪಾಯಿಗಳನ್ನು, ಕೇಂದ್ರ ಸರ್ಕಾರದಿಂದ 50 ಸಾವಿರ ರೂಪಾಯಿಗಳನ್ನು [ಬಿಪಿಎಲ್ ಅಲ್ಲದ ಕುಟುಂಬಗಳೂ ಸೇರಿದಂತೆ ಯಾರೆ ವ್ಯಕ್ತಿಯು ಕೋವಿಡ್ ನಿಂದ ಮೃತಪಟ್ಟರೆ] ನೀಡುವುದಾಗಿ ಆದೇಶ ಹೊರಡಿಸಲಾಗಿದೆ.

    ಕೇಂದ್ರ, ರಾಜ್ಯ ಸರ್ಕಾರಗಳೆರಡೂ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವುದರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೆ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಾಮಾನ್ಯ ನಿಯಮಗಳನ್ನು ತಮಗೆ ಬೇಕಾದಂತೆ ತಿರುಚಿಕೊಂಡು ನೊಂದ ಜನರಿಗೆ ದ್ರೋಹವೆಸಗಲಾಗುತ್ತಿದೆ.

    ಪ್ರಕೃತಿ ವಿಕೋಪ ನಿಯಮಗಳಲ್ಲಿ ಬಿಪಿಎಲ್ ಕುಟುಂಬಗಳ ದುಡಿಯುವ ವ್ಯಕ್ತಿಗಳು ಮೃತಪಟ್ಟರೆ ಮಾತ್ರ ಪರಿಹಾರ ನೀಡಬೇಕು ಎಂಬ ಷರತ್ತು ಎಲ್ಲೂ ಇರುವುದಿಲ್ಲ, ಹಾಗಾಗಿ ಕೋವಿಡ್- 19 ಸಾಂಕ್ರಾಮಿಕದಿಂದ ಯಾರೇ ವ್ಯಕ್ತಿ ಮೃತಪಟ್ಟರೂ ಸಹ ಅವರ ಕುಟುಂಬಗಳಿಗೆ ತಲಾ 5ಲಕ್ಷ ರೂಪಾಯಿಗಳನ್ನು ನೀಡಬೇಕು ಎಂದು ಸಿದ್ಧರಾಮಯ್ಯ ಒತ್ತಾಯಪಡಿಸಿದ್ದಾರೆ.

    4 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡ ಬೋಧನೆ

    BENGALURU SEP 29

    ರಾಜ್ಯದ 4 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಸಾಲಿನಿಂದಲೇ ಕನ್ನಡದಲ್ಲಿ ಬೋಧನೆ- ಕಲಿಕೆ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

    ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕದ ವಿಚಾರವಾಗಿ ವಿಕಾಸಸೌಧದಲ್ಲಿ ಬುಧವಾರ ಸಭೆ ನಡೆಸಿದ ಮೇಲೆ ಸುದ್ದಿಗಾರರ ಜೊತೆ ಮಾತನಾಡಿದ ಸಂದರ್ಭದಲ್ಲಿ ಅವರು ಇದನ್ನು ಹೇಳಿದರು.

    ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ (ಸಿವಿಲ್), ಚಿಕ್ಕಬಳ್ಳಾಪುರದ ಎಸ್.ಜೆ.ಸಿ. ತಾಂತ್ರಿಕ ಮಹಾವಿದ್ಯಾಲಯ (ಸಿವಿಲ್), ಮೈಸೂರಿನ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ (ಮೆಕ್ಯಾನಿಕಲ್) ಮತ್ತು  ವಿಜಯಪುರದ ಬಿ.ಎಲ್.ಡಿ.ಇ.ಎ. ವಿ.ಪಿ.ಡಾ.ಪಿ.ಜಿ.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು (ಮೆಕ್ಯಾನಿಕಲ್)ಗಳಲ್ಲಿ ಕನ್ನಡದಲ್ಲಿ ಎಂಜಿನಿಯರಿಂಗ್ ಬೋಧನೆಗೆ ತಯಾರಿ ನಡೆದಿದೆ. ಈ ಕಾಲೇಜುಗಳಲ್ಲಿ ತಲಾ 30 ವಿದ್ಯಾರ್ಥಿಗಳನ್ನು ಈ ಕೋರ್ಸ್ ಗಳಿಗೆ ತೆಗೆದುಕೊಳ್ಳಬಹುದು ಎಂದು ಸಚಿವರು ಹೇಳಿದರು.

    ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್.ಬಿ.ಎ.) ಮಾನ್ಯತೆ ಪಡೆದಿರುವ ಕಾಲೇಜುಗಳಿಗೆ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಬೋಧಿಸಲು ಅವಕಾಶ ನೀಡಲಾಗಿದೆ ಎಂದರು.

    ಖಾಸಗಿ ಎಂಜಿನಿಯರಿಂಗ್ ಶುಲ್ಕ ಹೆಚ್ಚಳ ಇಲ್ಲ, ಇತರೆ ಶುಲ್ಕಕ್ಕೆ ರೂ 20,000 ಮಿತಿ

    ಇನ್ನು ಮುಂದೆ ಎಲ್ಲ ಶುಲ್ಕ  ಕೆಇಎ ಯಲ್ಲೇ ಪಾವತಿ

    BENGALURU SEP 29

    ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್ ಕೋರ್ಸಿನ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡದೇ ಹಿಂದಿನ ದರವನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

    ಕರ್ನಾಟಕ ಅನುದಾನ ರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ (ಕೆಯುಪಿಇಸಿಎ) ಮತ್ತು ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ವೃತ್ತಿ ಪರ ಕಾಲೇಜುಗಳ ಸಂಘದ (ಕೆಆರ್ ಎಲ್ಎಂಪಿಸಿಎ) ಪ್ರತಿನಿಧಿಗಳ ಜತೆ ಬುಧವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

    ಹೀಗಾಗಿ, ಈ ಮುಂಚಿನಂತೆಯೇ ಸರ್ಕಾರಿ ಕೋಟಾದಡಿ ಪ್ರವೇಶಾತಿ ಪಡೆಯುವವರಿಗೆ ರೂ 65,340, ರೂ 58,806 ಈ ಎರಡು ಸ್ಲ್ಯಾಬ್ ಗಳಲ್ಲಿ ಶುಲ್ಕಗಳು ಮುಂದುವರಿಯಲಿವೆ ಎಂದು ಅವರು ಸ್ಪಷ್ಟಪಡಿಸಿದರು.

    ಇದೇ ವೇಳೆ, ಖಾಸಗಿ ಕಾಲೇಜುಗಳು ‘ಇತರೆ ಶುಲ್ಕ’ ನೆಪದಲ್ಲಿ ಮಿತಿಮೀರಿ ಕಟ್ಟಿಸಿಕೊಳ್ಳುವುದಕ್ಕೂ ಕಡಿವಾಣ ಹಾಕಿ, ಗರಿಷ್ಠ ಮಿತಿಯನ್ನು 20 ಸಾವಿರ ರೂಪಾಯಿಕ್ಕೆ ನಿಗದಿಪಡಿಸಲಾಗಿದೆ. ಹಲವು ಕಾಲೇಜುಗಳು ಇತರೆ ಶುಲ್ಕದ ನೆಪದಲ್ಲಿ 70 ಸಾವಿರದವರೆಗೂ ಶುಲ್ಕ ವಸೂಲಿ ಮಾಡುತ್ತಿವೆ ಎನ್ನುವ ಆರೋಪಗಳ ಹಿನ್ನಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಇದಕ್ಕೆ ಕಾಲೇಜು ಸಂಘದ ಪ್ರತಿನಿಧಿಗಳು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಚಿವರು ವಿವರಿಸಿದರು.

    ಇನ್ನು ಮುಂದೆ ಪ್ರವೇಶ ಶುಲ್ಕ, ಇತರೆ ಶುಲ್ಕ, ಕೌಶಲ ಶುಲ್ಕ ಇದ್ಯಾವುದನ್ನೂ ನೇರವಾಗಿ ಕಾಲೇಜಿನಲ್ಲಿ ಕಟ್ಟುವಂತಿಲ್ಲ. ಇವೆಲ್ಲವನ್ನೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಲ್ಲಿಯೇ ಪಾವತಿಸಬೇಕು.

    ಟೂಷನ್ ಶುಲ್ಕ‌ ಸೇರಿದಂತೆ ಇತರೆ ಶುಲ್ಕವನ್ನು ಕಟ್ಟಿಸಿಕೊಳ್ಳುವ ಮುನ್ನ ಪ್ರತಿಯೊಂದು ಕಾಲೇಜೂ ಯಾವ್ಯಾವ ಉದ್ದೇಶಕ್ಕೆ ಇದನ್ನು ಕಟ್ಟಿಸಿಕೊಳ್ಳಲಾಗುತ್ತದೆ ಎಂಬುದನ್ನು ಕೆಎಇ. ತಾಂತ್ರಿಕ ಶಿಕ್ಷಣ ಇಲಾಖೆ, ವಿಟಿಯು ಗಳಿಗೆ ಮಾಹಿತಿ ಕೊಡಬೇಕು. ಇದನ್ನು ಕಾಲೇಜುಗಳಲ್ಲಿ ಕಟ್ಟಲು ಅವಕಾಶ ಇರುವುದಿಲ್ಲ. ಕೆಇಎ ಗೇ ಕಟ್ಟಬೇಕು. ಜೊತೆಗೆ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು ಎಂದು ಅಶ್ವತ್ಥ ನಾರಾಯಣ ಹೇಳಿದರು.

    ವಿಶ್ವವಿದ್ಯಾಲಯ ಶುಲ್ಕವನ್ನು ಈ ಮುಂಚೆ ಆಯಾ ಕಾಲೇಜಿನಲ್ಲಿ ಕಟ್ಟಬಹುದಿತ್ತು. ಆದರೆ, ಇನ್ನು ಮುಂದೆ ಅದನ್ನು ಕೂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲೇ (ಕೆಇಎ) ಕಟ್ಟಬೇಕು. ಈ ಮುಂಚೆ ಈ ಶುಲ್ಕ ಕಟ್ಟಿಸಿಕೊಳ್ಳುವಲ್ಲಿ ಇದ್ದ ಗೊಂದಲವನ್ನು ನಿವಾರಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

    ಇನ್ನು ಕೆಲವು ಕಾಲೇಜುಗಳು ವಿದ್ಯಾರ್ಥಿಗಳನ್ನು ಉದ್ಯಮಗಳಿಗೆ ಸಜ್ಜುಗೊಳಿಸಿ ಅವರ ನೇಮಕಾತಿ ಸಾಧ್ಯತೆ ಹೆಚ್ಚಿಸುವುದಕ್ಕಾಗಿ ನೀಡುತ್ತಿದ್ದ ಹೆಚ್ಚುವರಿ ತರಬೇತಿಗಾಗಿ ‘ಕೌಶಲ ಶುಲ್ಕ’ (ಸ್ಕಿಲ್ ಫೀಸ್) ಕಟ್ಟಿಸಿಕೊಳ್ಳುತ್ತಿದ್ದವು. ಇದು ಐಚ್ಛಿಕವಾಗಿದ್ದು, ಒಂದೊಂದು ಕಾಲೇಜಿನಲ್ಲಿ ಒಂದೊಂದು ರೀತಿ ಶುಲ್ಕ ಇರುತ್ತಿತ್ತು. ಈಗ ಇದಕ್ಕೆ ಕೂಡ ಗರಿಷ್ಠ ರೂ 20,000 ಮಿತಿ ನಿಗದಿಗೊಳಿಸಲಾಗಿದೆ. ಇದರಲ್ಲಿ 10,000 ರೂ, 15,000 ರೂ ಹಾಗೂ 20,000 ರೂ, ಹೀಗೆ ಮೂರು ಹಂತಗಳಿರುತ್ತವೆ. ವಿ.ಟಿ.ಯು. ತಂಡವು ಕಾಲೇಜುಗಳ ಪರಿಶೀಲನೆ ನಡೆಸಿ ಯಾವ ಕಾಲೇಜಿನಲ್ಲಿ ಎಷ್ಟು ಕಟ್ಟಿಸಿಕೊಳ್ಳಬೇಕು ಎಂದು ನಿಗದಿಗೊಳಿಸಲಿದೆ. ಅದರಂತೆ ಈ ಶುಲ್ಕವನ್ನು ಕೆಇಎ ಗೆ ಕಟ್ಟಬೇಕಾಗುತ್ತದೆ ಎಂದು ವಿವರಿಸಿದರು.

    ಎಂಜಿನಿಯರಿಂಗ್ ಕೋರ್ಸ್ ಶುಲ್ಕವನ್ನು 30% ಹೆಚ್ಚಿಸಲು ಖಾಸಗಿ ಕಾಲೇಜುಗಳು ಸರ್ಕಾರಕ್ಕೆ ಬೇಡಿಕೆ ಮುಂದಿಟ್ಟಿದ್ದವು. ವಿಟಿಯು ಕುಲಪತಿ ಕರಿಸಿದ್ದಪ್ಪ ನೇತೃತ್ವದ ಸಮಿತಿಯು ಶೇ 15ರಿಂದ ಶೇ 20ರವರೆಗೆ ಹೆಚ್ಚಳ ಮಾಡಬಹುದೆಂದು ವರದಿಯಲ್ಲಿ ಅಭಿಪ್ರಾಯಪಟ್ಟಿತ್ತು. ಆದರೆ, ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ವರ್ಷ ಶುಲ್ಕ ಹೆಚ್ಚಳ ಮಾಡದಿರಲು ಖಾಸಗಿ ಕಾಲೇಜುಗಳ ಒಕ್ಕೂಟಗಳ ಮನವೊಲಿಸಲಾಯಿತು ಎಂದರು.

    ಕುಪೇಕಾ ದ ತಾಂತ್ರಿಕ ಸಮಿತಿಯ ಅಧ್ಯಕ್ಷ ಮಂಜುನಾಥ ಭಂಡಾರಿ, ಸದಸ್ಯರಾದ ಚಂದ್ರಶೇಖರ್ ರಾಜು, ರಮೇಶ್ ರಾಜು, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಗಣೇಶ್ ಕಾರ್ಣಿಕ್ ಮತ್ತಿತರರು ಇದ್ದರು

    ಇಂದಿನಿಂದ ಸಿಎಂ ಮಾಡ್ತಾರೆ ತಪ್ಪದೇ ವಾಕಿಂಗ್

    BENGALURU SEP 29:
    ಶಕ್ತಿಯುತ ದೇಹ ಹಾಗೂ ಮನಸ್ಸು ಆರೋಗ್ಯಕರ ಜೀವನಕ್ಕೆ ಸಹಕಾರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

    ವಿಶ್ವ ಹೃದಯ ದಿನಾಚರಣೆ ಅಂಗವಾಗಿ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ಇಂದು ಆಯೋಜಿಸಿದ್ದ ಹೃದಯದಿಂದ ಬಾಂಧವ್ಯ ಬೆಳೆಸೋಣ : ವಾಕಥಾನ್ ಗೆ ಅವರು ಚಾಲನೆ ನೀಡಿ ಮಾತನಾಡಿದರು.

    ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಹೃದಯ ಸ್ನೇಹಿ ಚಟುವಟಿಕೆಯಾದ ಬಿರುಸಿನ ನಡಿಗೆಗೆ ಚಾಲನೆ ನೀಡಲಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ಬಿರುಸಿನ ನಡಿಗೆ ಸಹಾಯಕ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಹೃದಯ ಮನುಷ್ಯನ ಅಂಗಗಳ ಪೈಕಿ ಅತ್ಯಂತ ಪ್ರಮುಖ ಅಂಗ ಎಂದ ಅವರು ಹೃದಯಾಘಾತ ಆದಾಗ ಪ್ರಾಥಮಿಕ ಚಿಕಿತ್ಸೆ ಕುರಿತಂತೆ ಮಾಹಿತಿ ಪ್ರತಿಯೊಬ್ಬರಿಗೂ ಅತ್ಯಗತ್ಯ ಎಂದರು.

    ಶೇ 60 ರಷ್ಟು ಸಂಭವಿಸುವ ಅಕಾಲಿಕ ಮರಣಗಳಲ್ಲಿ ಶೇ 25 ರಷ್ಟು ಸಾವುಗಳು ಹೃದಯರೋಗದಿಂದ ಸಂಭವಿಸುತ್ತಿದೆ. ಇದನ್ನು ತಡೆಗಟ್ಟಲು ಬಿರುಸಿನ ನಡಿಗೆ ಅತ್ಯುತ್ತಮ ವ್ಯಾಯಾಮವಾಗಿದೆ. ರಾಜ್ಯದ ಜನತೆ ಪ್ರತಿದಿನ ಶ್ರಮಜೀವನಕ್ಕೆ ಬದ್ಧರಾಗಿರಬೇಕು. ಕನಿಷ್ಠ ಅರ್ಧ ಗಂಟೆಯಾದರೂ ಬಿರುಸಿನ ನಡಿಗೆ ಮಾಡಬೇಕು ಎಂದು ಸಲಹೆ ನೀಡಿದರು.

    ಬಿರುಸಿನ ನಡಿಗೆಗೆ ಸ್ಫೂರ್ತಿ ತುಂಬಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದಿನಿಂದ ನಿಯಮಿತವಾಗಿ ವಾಕಿಂಗ್ ಮಾಡುವ ಪ್ರತಿಜ್ಞೆಯನ್ನು ಮುಖ್ಯಮಂತ್ರಿಗಳು ಕೈಗೊಂಡರು. ವ್ಯಕ್ತಿ ಹಾಗೂ ಸಮುದಾಯದ ಆರೋಗ್ಯ ಬಹಳ ಮುಖ್ಯ. ಹೃದಯ ಸದಾ ಬಡಿಯುವ ಅಂಗ ಇದನ್ನು ಆರೋಗ್ಯಕರವಾಗಿಡುವ ಮೂಲಕ ಆರೋಗ್ಯವಂತ ರಾಜ್ಯವನ್ನು ಕಟ್ಟೋಣ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಆರೋಗ್ಯ ಸಚಿವ ಡಾ: ಕೆ.ಸುಧಾಕರ್,ಸಂಸದ ಪಿ.ಸಿ ಮೋಹನ್, ಜಿಲ್ಲಾಧಿಕಾರಿ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.

    2023 ಚುನಾವಣೆ ಜೆಡಿಎಸ್ ನಿಂದ 30 ರಿಂದ 35 ಮಹಿಳೆಯರಿಗೆ ಟಿಕೆಟ್: ಎಚ್ ಡಿ ಕೆ ಘೋಷಣೆ

    BENGALURU SEP 29

    2023ರ ಚುನಾವಣೆಯಲ್ಲಿ 30-35 ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ಮೀಸಲು ಇಡುತ್ತೇವೆ ಎಂದು ಜೆಡಿಎಸ್ ಪಕ್ಷದ ವರಿಷ್ಠ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು  ಘೋಷಣೆ ಮಾಡಿದರು.

    ಜನತಾ ಪರ್ವ 1.O ಹಾಗೂ ಮಿಷನ್ 123 ಗುರಿಯೊಂದಿಗೆ ಬಿಡದಿಯ ತೋಟದಲ್ಲಿ ಹಮ್ಮಿಕೊಳ್ಳಲಾಗಿರುವ 3ನೆ ದಿನದ ಸಂಘಟನಾ ಕಾರ್ಯಗಾರ ಆರಂಭವಾಗುವುದಕ್ಕೆ ಮುನ್ನ ಅವರು  ಮಾಧ್ಯಮಗಳ ಜತೆ ಮಾತನಾಡಿದರು.

    ಈಗಾಗಲೇ ಮೊದಲ ಹಂತದಲ್ಲಿ 7-8 ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಮಹಿಳೆಯರಿಗೂ ಹೆಚ್ಚಿನ ಶಕ್ತಿ ತುಂಬಲು ಈ ಬಾರಿ 30-35 ಸೀಟುಗಳನ್ನು  ಮಹಿಳೆಯರಿಗೆ ಕೊಡಲಾಗುವುದು ಎಂದು ಅವರು ತಿಳಿಸಿದರು.

    ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಹೋಲಿಕೆ ಮಾಡಿದರೆ ನಮ್ಮ ಮಹಿಳಾ ಘಟಕ ಸ್ವಲ್ಪ ಹಿಂದೆ ಉಳಿದಿದೆ. ಇದನ್ನು ಸರಿ‌ ಮಾಡುವ ಕೆಲಸ ಮಾಡಲಾಗುವುದು ಎಂದ ಅವರು, ಮಹಿಳಾ ಘಟಕಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಈ ಕಾರ್ಯಾಗಾರದಿಂದ ಪ್ರಾರಂಭ ಮಾಡುತ್ತೇವೆ ಎಂದರು.

    ಮಹಿಳೆಯರಿಗೂ ಟಾಸ್ಕ್:ಬೂತ್ ಮಟ್ಟದಿಂದ ಮಹಿಳಾ ಘಟಕಕ್ಕೆ ಶಕ್ತಿ ತುಂಬುವ ಟಾಸ್ಕ್ ಕೊಡಲಾಗುವುದು. 3ನೇ ದಿನ‌ದ ಇಂದಿನ  ಕಾರ್ಯಾಗಾರದಲ್ಲಿ ಮಹಿಳಾ ಘಟಕದ ಸದಸ್ಯರಿಗೆ ಪಕ್ಷ ಹಾಗೂ ಚುನಾವಣೆಗಾಗಿ ಒಂದು ದಿಕ್ಸೂಚಿ ನಿಗದಿ ಮಾಡಲಾಗುವುದು.30 ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿರುವ ಮಹಿಳಾ ಸದಸ್ಯರು ಕಾರ್ಯಾಗಾರದಲ್ಲಿ ಇದ್ದಾರೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

    ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ ಇಂದು ಚರ್ಚೆ ಮಾಡುವುದರ ಜತೆಗೆ, ಎಲ್ಲ ಮಹಿಳಾ ನಾಯಕಿಯರಿಗೆ ಸೂಕ್ತ ತರಬೇತಿ ಕೊಡಲಾಗುವುದು. ಪ್ರತಿ ಕ್ಷೇತ್ರದಲ್ಲಿ 100 ಕುಟುಂಬಗಳ ಸಮಸ್ಯೆಗೆ ಪರಿಹಾರ ನೀಡುವ ಜವಾಬ್ದಾರಿಯನ್ನ ಪ್ರತಿ ಮಹಿಳಾ ನಾಯಕಿಯರಿಗೆ ನೀಡಲಾಗುತ್ತದೆ.

    ಮಹಿಳೆಯರಿಗೆ 33% ಮೀಸಲು ವಿಧೇಯಕ:ಮಾಜಿ ಪ್ರಧಾನಮಂತ್ರಿಗಳಾದ ದೇವೇಗೌಡರು  ಮಹಿಳೆಯರಿಗೆ ಚುನಾವಣೆಯಲ್ಲಿ 33% ಮೀಸಲಾತಿ ಕೊಡಬೇಕು ಅಂತ ಧ್ವನಿ ಎತ್ತಿದ್ದರು. ಆದರೆ ಕಾಂಗ್ರೆಸ್- ಬಿಜೆಪಿ ಸರ್ಕಾರಗಳು ಮೀಸಲಾತಿ ಜಾರಿ ಮಾಡಲಿಲ್ಲ. ಕರ್ನಾಟಕದಿಂದಲೇ ಮಹಿಳಾ ಮೀಸಲಾತಿಗೆ ಧ್ವನಿ ಎತ್ತುವ ಕೆಲಸ ನಾವು ಮಾಡುತ್ತೇವೆ. 2023 ರಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 33% ಮೀಸಲಾತಿ ವಿಧೇಯಕಕ್ಕೆ ಜೀವ ತುಂಬುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದರು.

    ಮಹಿಳಾ ಕಾರ್ಯಾಗಾರಕ್ಕೆ ಚಾಲನೆ:ಇದೇ ವೇಳೆ ಶಾಸಕರಾದ ಅನಿತಾ ಕುಮಾರಸ್ವಾಮಿ ಹಾಗೂ ಮಹಿಳಾ ಜೆಡಿಎಸ್ ರಾಜ್ಯಾಧ್ಯಕ್ಷೆ ಲೀಲಾದೇವಿ ಆರ್ ಪ್ರಸಾದ್ ಅವರು ಕಾರ್ಯಗಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟನೆ ನೆರವೇರಿಸಿದರು

    ಪ್ರಾಸ್ತಾವಿಕವಾಗಿ ಲೀಲಾದೇವಿ ಆರ್ ಪ್ರಸಾದ್ ಅವರು ಮಾತನಾಡಿದರು. ದೇವದುರ್ಗದ ಮುಂದಿನ ಅಭ್ಯರ್ಥಿ ಕರಿಯಮ್ಮ, ಮಹಿಳಾ ಜನತಾದಳದ ಬೆಂಗಳೂರು ಘಟಕದ ಅಧ್ಯಕ್ಷೆ ರುತ್ ಮನೋರಮಾ ವೇದಿಕೆಯ ಮೇಲಿದ್ದರು.

    ಪ್ರತಿ ವಿಧಾನಸಭೆ ಕ್ಷೇತ್ರದಿಂದ ತಲಾ ಇಬ್ಬರಂತೆ ಮಹಿಳಾ ಪ್ರತಿನಿಧಿಗಳು ಕಾರ್ಯಗಾರದಲ್ಲಿ ಭಾಗಿಯಾಗಿದ್ದರು.

    ಎನ್ ಇ ಪಿ ಯಶಸ್ವಿ ಅನುಷ್ಠಾನಕ್ಕೆ ಕ್ರಮ: ಮುಖ್ಯಮಂತ್ರಿ ಸೂಚನೆ


    BENGALURU SEP 28

    ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಲಾಗುವುದು. ಈ ನೀತಿಯ ಯಶಸ್ವಿ ಅನುಷ್ಠಾನಕ್ಕೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

    ಅವರು ಇಂದು ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿ ಭಾರತೀಯರಿಂದ ಭಾರತೀಯರಿಗಾಗಿ ರೂಪಿಸಿದ್ದು, ಅತ್ಯಂತ ಪ್ರಸ್ತುತತೆ ಹೊಂದಿದೆ. ಈ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಯುವ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗುವುದು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

    ಈ ನಿಟ್ಟಿನಲ್ಲಿ ಇಲಾಖೆಯ ಎಲ್ಲ ಭಾಗೀದಾರರಿಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತೂ ಸಹ ಚರ್ಚಿಸಲಾಯಿತು.

    ಆರ್ ಅಂಡ್ ಡಿ ಪಾಲಿಸಿ

    ರಾಜ್ಯ ಸರ್ಕಾರವು ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರತ್ಯೇಕ ನೀತಿ ಜಾರಿಗೊಳಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಕಾರ್ಯಪಡೆ ರಚಿಸಲು ಕ್ರಮ ವಹಿಸುವಂತೆ ಉನ್ನತ ಶಿಕ್ಷಣ, ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ತಿಳಿಸಿದರು. ಈ ಕಾರ್ಯಪಡೆಯಲ್ಲಿ ಐಐಟಿ, ಐಐಎಸ್.ಸಿ., ಸಿ.ಎಫ್.ಟಿ.ಆರ್.ಐ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ವಲಯಗಳ ಪ್ರತಿನಿಧಿಗಳನ್ನು ನೇಮಕ ಮಾಡುವಂತೆ ಸಲಹೆ ನೀಡಿದರು.

    ರಾಜ್ಯದಲ್ಲಿ ವಿಶ್ವವಿದ್ಯಾನಿಲಯಗಳೂ ಸೇರಿದಂತೆ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ, ಉದ್ಯಮಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ. ಇದಕ್ಕೆ ಈ ನೀತಿ ಪೂರಕವಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಸಭೆಯಲ್ಲಿ ಉನ್ನತ ಶಿಕ್ಷಣ, ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯಕ್, ಇಲಾಖೆ ಆಯುಕ್ತ ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು

    ಮೈಸೂರು ದಸರಾ ಉದ್ಘಾಟನೆಗೆ ಎಸ್ ಎಂ ಕೃಷ್ಣ

    BENGALURU SEP 28

    ಈ ಬಾರಿಯ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ, ರಾಜಕೀಯ ಮುತ್ಸುದ್ದಿ ಎಸ್.ಎಂ‌.ಕೃಷ್ಣ ಅವರ ಹೆಸರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಅಂತಿಮಗೊಳಿಸಿ ಪ್ರಕಟಿಸಿದರು.

    ಇಡೀ ವಿಶ್ವವನ್ನೇ ಬೆಂಗಳೂರಿನತ್ತ ತಿರುಗಿ ನೋಡುವಂತೆ ಮಾಡಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಗೆ ಆಯ್ಕೆ ಮಾಡಿರುವ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಅವರ ನಿರ್ಧಾರ ಸ್ವಾಗತಾರ್ಹ ಹಾಗೂ ಹಿರಿಯ ಮುತ್ಸುದ್ಧಿ ಎಸ್. ಎಂ.ಕೃಷ್ಣ ಅವರಿಗೆ ಸಹಕಾರ ಸಚಿವರು ಹಾಗೂ ಮೈಸೂರು-ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

    error: Content is protected !!