21.9 C
Karnataka
Tuesday, July 7, 2026
    Home Blog Page 49

    DASARA- ನವರಾತ್ರಿ ಹಬ್ಬ

    ಎಂ.ವಿ.ಶಂಕರಾನಂದ

    ನಮ್ಮ ಭಾರತೀಯ ಪರಂಪರೆಯಲ್ಲಿ ಮಹಿಷಾಸುರನ ನಾಶಕ್ಕಾಗಿ ಅವತಾರ ತಾಳಿದ ಶ್ರೀದೇವಿಯ ಉತ್ಸವವೇ ನವರಾತ್ರಿ ಎಂದು ಹೆಸರಾಗಿದೆ.ನವರಾತ್ರಿಯಲ್ಲಿ ಶ್ರೀದೇವಿಯ ಉಪಾಸನೆಯನ್ನು ಭಕ್ತಿ ಶ್ರದ್ಧೆಯಿಟ್ಟು ಮಾಡುವುದರಿಂದ ದೇವಿತತ್ತ್ವದ ಲಾಭವಾಗುತ್ತದೆ ಎಂಬ ನಂಬಿಕೆಯಿದೆ.ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾತ್ರಿ ಈ ಎರಡು ಸಮಯದಲ್ಲಿ ಮಾಡುತ್ತಾರೆ.

    ಶರದ ಋತುವಿನಲ್ಲಿನ ಪೂಜೆಗೆ ಅಕಾಲ ಪೂಜೆ ಮತ್ತು ವಾಸಂತಿಕ ಪೂಜೆಗೆ ಸಕಾಲ ಪೂಜೆಯೆಂದು ಹೇಳುತ್ತಾರೆ. ಶರದ ಋತುವಿನಲ್ಲಿ ‘ದೇವರಾತ್ರಿ’ಗಳಿರುತ್ತವೆ; ಆದುದರಿಂದ ಈ ಕಾಲದಲ್ಲಿನ ಪೂಜೆಗೆ ಅಕಾಲ ಪೂಜೆಯೆಂದು ಹೇಳುತ್ತಾರೆ. ತಾಂತ್ರಿಕ ಸಾಧಕರ ದೃಷ್ಟಿಯಲ್ಲಿ ಈ ‘ರಾತ್ರಿ’ಗಳು ಮಹತ್ವಪೂರ್ಣವಾಗಿರುತ್ತವೆ. ಹೀಗೆ ಬಹಳಷ್ಟು ರೀತಿಯ ರಾತ್ರಿಗಳಿರುತ್ತವೆ, ಉದಾ. ಕಾಲರಾತ್ರಿ, ಶಿವರಾತ್ರಿ, ಮೋಹರಾತ್ರಿ, ವೀರರಾತ್ರಿ, ದಿವ್ಯರಾತ್ರಿ, ದೇವರಾತ್ರಿ ಇತ್ಯಾದಿ. ಇವುಗಳಲ್ಲಿ ಭಗವತಿಯನ್ನು ಜಾಗೃತಗೊಳಿಸಬೇಕಾಗುತ್ತದೆ; ಆದರೆ ವಾಸಂತಿಕ ಪೂಜೆಯಲ್ಲಿ ಜಾಗೃತಗೊಳಿಸುವ ಆವಶ್ಯಕತೆಯಿರುವುದಿಲ್ಲ.’

    ಒಂದು ಅಭಿಮತಕ್ಕನುಸಾರ ನವರಾತ್ರಿಯಲ್ಲಿನ ಮೊದಲ ಮೂರು ದಿನಗಳಂದು ತಮೋಗುಣವನ್ನು ಕಡಿಮೆ ಮಾಡಲು ತಮೋಗುಣಿ ಮಹಾಕಾಳಿಯ, ನಂತರದ ಮೂರು ದಿನಗಳಂದು ರಜೋಗುಣವನ್ನು ವೃದ್ಧಿಸಲು ಮಹಾಲಕ್ಷ್ಮೀಯ ಮತ್ತು ಕೊನೆಯ ಮೂರು ದಿನಗಳಂದು ಸಾಧನೆಯನ್ನು ತೀವ್ರವಾಗಿ ಮಾಡಲು ಸತ್ತ್ವಗುಣಿ ಮಹಾಸರಸ್ವತಿಯ ಪೂಜೆಯನ್ನು ಮಾಡುತ್ತಾರೆ.

    ನವರಾತ್ರಿಯ ಬಗ್ಗೆ ಧರ್ಮಶಾಸ್ತ್ರದ ಅಭಿಮತ:-

    ‘ರಾತ್ರಿ’ ಎಂದರೆ ಆಗುತ್ತಿರುವ ಬದಲಾವಣೆ. ದೇವಿಯ ಒಂದು ಹೆಸರು ‘ಕಾಲರಾತ್ರಿ’ ಎಂದಾಗಿದೆ. ‘ಕಾಲರಾತ್ರಿ’ ಎಂದರೆ ಕಾಲಪುರುಷನಲ್ಲಿ ಬದಲಾವಣೆ ಮಾಡುವವಳು ಎಂದರ್ಥ.
    ತಿರುಗುವುದು ಪೃಥ್ವಿಯ ಗುಣಧರ್ಮವಾಗಿದೆ. ಪೃಥ್ವಿಯು ತಿರುಗುತ್ತಿರುವುದರಿಂದ ಬದಲಾವಣೆಗಳು ಆಗುತ್ತಿರುತ್ತವೆ, ಅಂದರೆ ರಾತ್ರಿ ಮತ್ತು ಹಗಲು ಆಗುತ್ತವೆ. ಇಂತಹ ಬದಲಾವಣೆಗಳನ್ನು ಸಹಿಸುವ ಶಕ್ತಿಯು ಶರೀರದಲ್ಲಿರಬೇಕೆಂದು ವ್ರತ-ವೈಕಲ್ಯಗಳನ್ನು ಮಾಡುತ್ತಾರೆ.

    ನವರಾತ್ರಿಯ ಹಿನ್ನೆಲೆ:

    ರಾಮಾಯಣದಲ್ಲಿ ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು.

       ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿಂದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು.

    ನವರಾತ್ರಿಯ ಆಚರಣೆಯ ಮಹತ್ವ:

    ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ. ಇದು ಆ ದೇವಿಯ ವ್ರತವಾಗಿದೆ.
    ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ1000 ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ|’ ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

    ನವರಾತ್ರಿ ವ್ರತವನ್ನು ಆಚರಿಸುವ ಪದ್ಧತಿ :

    ಅಖಂಡ ದೀಪಪ್ರಜ್ವಲನೆ ಅಂದರೆ ನವರಾತ್ರಿಯ 9 ದಿನಗಳಲ್ಲಿಯೂ ಸತತವಾಗಿ ದೀಪವನ್ನು ಉರಿಸುವುದು, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತ ಶತಿಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿಸಾಮರ್ಥ್ಯಕ್ಕನುಸಾರವಾಗಿ ನವರಾತ್ರಿ ಮಹೋತ್ಸವವನ್ನು ಆಚರಿಸುತ್ತಾರೆ.

    ನವದುರ್ಗೆಯರು:
    ಮಾರ್ಕಂಡೇಯ ಋಷಿಗಳು ಬರೆದಿರುವ ದುರ್ಗಾಸಪ್ತಶತಿ ಎಂಬ ಗ್ರಂಥವು ತಂತ್ರ ಮತ್ತು ಮಂತ್ರ ಈ ಎರಡೂ ಮಾರ್ಗಗಳಲ್ಲಿ ಪ್ರಸಿದ್ಧವಾಗಿದ್ದು ಭಾರತದಲ್ಲಿ ಇಂದು ಲಕ್ಷಾಂತರ ಜನರು ಸಪ್ತಶತಿಯ ಪಠಣ ಮಾಡುತ್ತಿರುವುದು ಕಂಡುಬರುತ್ತದೆ. ಭಗವಾನ ಹಿರಣ್ಯಗರ್ಭ ಮುನಿಗಳು ಮಂತ್ರಯೋಗ ಸಮೀಕ್ಷೆಯಲ್ಲಿ ಹೇಳಿರುವ ಶ್ರೀ ದುರ್ಗಾಸಪ್ತಶತಿಯಲ್ಲಿನ ದೇವಿಯ ಹೆಸರುಗಳ ಶಾಸ್ತ್ರೀಯ ಅರ್ಥ ಮತ್ತು ಇಂದಿನ ಭೌತಿಕ ವಿಜ್ಞಾನವು ಮಾಡಿರುವ ಪ್ರಗತಿಯ ಬಗ್ಗೆ ಇಲ್ಲಿ ನಾವು ವಿಚಾರ ಮಾಡೋಣ.

    1. ಶೈಲಪುತ್ರಿ:- ‘ಶೈಲಮ್’ ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನ ಮತ್ತಿತರ ಅತ್ಯಮೂಲ್ಯ ವಸ್ತುಗಳ ಸಂಗ್ರಹವಿದೆಯೋ, ಅಂತಹ ಪರ್ವತ. ಈ ಅತ್ಯಮೂಲ್ಯ ವಸ್ತುಗಳ ಸಂಗ್ರಹವನ್ನು ನೋಡಿಯೂ ಭೌತಿಕ ಸುಖದೆಡೆಗೆ ಆಕರ್ಷಿತಗೊಳ್ಳದೆ, ಭೌತಿಕತೆಯ ತ್ಯಾಗವನ್ನು ಮಾಡಿ ಆತ್ಮಜ್ಞಾನವನ್ನು ಪಡೆಯಲು ಪ್ರವೃತ್ತವಾಗುವವಳೆಂದರೆ ಶೈಲಪುತ್ರಿ.

    2. ಬ್ರಹ್ಮಚಾರಿಣಿ:- ‘ಬ್ರಹ್ಮಚಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣಿ|’ ಅಂದರೆ ಬ್ರಹ್ಮರೂಪವಾಗುವುದು ಯಾರ ಶೀಲವಾಗಿದೆಯೋ ಮತ್ತು ಯಾರ ಆಚಾರಗಳು ಅದರಂತಿವೆಯೋ ಅವಳೇ ಬ್ರಹ್ಮಚಾರಿಣಿ.

    3.ಚಂದ್ರಘಂಟಾ:- ‘ಚಂದ್ರಃ ಘಂಟಾಯಾಂ ಯಸ್ಯಾ ಸಾ ಚಂದ್ರಘಂಟಾ| ಆಹ್ಲಾದಯತಿ ಇತಿ ಚಂದ್ರಃ|’ ಅಂದರೆ ಆಹ್ಲಾದಕಾರಕ ಚಂದ್ರನು ಯಾರ ದ್ವಾರದಲ್ಲಿ ಸ್ಥಿರವಾಗಿದ್ದಾನೆಯೋ ಅವಳೇ ಚಂದ್ರಘಂಟಾ. ಆಹ್ಲಾದವೆಂದರೆ ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ ಈ ಮೂರೂ ಗುಣಗಳ ಸಮ್ಮಿಲಿತ ಸ್ಥಿತಿ.

    4 ಕೂಷ್ಮಾಂಡಾ:- ‘ಕುತ್ಸಿತಃ ಉಷ್ಮಾಃ ಕೂಷ್ಮಾಃ|’ ಕುತ್ಸಿತಃ ಅಂದರೆ ಸಹಿಸಲು ಕಠಿಣ ವಾದುದು. ಉಷ್ಮಾ ಎಂದರೆ ಸೂಕ್ಷ್ಮ ಲಹರಿಗಳ ಗೊಂದಲ (ಧ್ವನಿ). ‘ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ|’ ಇದರ ಅರ್ಥವು ಹೀಗಿದೆ ? ತ್ರಿವಿಧತಾಪಗಳೆಂದರೆ ಉತ್ಪತ್ತಿ (ಜನ್ಮ), ಸ್ಥಿತಿ (ಬೆಳವಣಿಗೆ) ಮತ್ತು ಲಯ (ಮೃತ್ಯು). ‘ಮೃತ್ಯು (ಮೋಕ್ಷ) ಅಂದರೆ ಅನಿಶ್ಚಿತ ಕಾಲಾವಧಿಯ ವರೆಗೆ ವಿಶಿಷ್ಟ ಪದ್ಧತಿಯಿಂದ ನಾಶವಾಗುವುದು’. ‘ಸಂಸಾರ’ವೆಂದರೆ ‘ಪುನಃಪುನಃ’ ಮತ್ತು ‘ಅಂಡಃ’ ಅಂದರೆ ‘ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ.’ ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧ ತಾಪಗಳ ಪುನರಾವೃತ್ತಿಯ ಅವಸ್ಥೆಯಿಂದ ಪುನಃಪುನಃ ಹೋಗುತ್ತಾರೆ. ಈ ಪ್ರಕ್ರಿಯೆಯಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಆವಶ್ಯಕತೆಯಿದೆಯೋ ಅವಳೇ ಕೂಷ್ಮಾಂಡಾ.

    5. ಸ್ಕಂದಮಾತಾ:- ‘ಭಗಃ’ ಎಂದರೆ ತೇಜಸ್ಸು. ‘ಭಗವತಿ’ ಎಂದರೆ ‘ವಿಶಿಷ್ಟ ಯೋಗ್ಯತೆ ಯುಳ್ಳ ಸ್ಪಂದನ ಲಹರಿಗಳಿಂದ ಯುಕ್ತವಾದಂತಹ ತೇಜಸ್ಸು’. ಬ್ರಹ್ಮದೇವ ಮತ್ತು ಭಗವತಿ ದೇವಿಯ ಸಮ್ಮಿಲಿತ ಅವಸ್ಥೆಯಿಂದ ಸನತ್ಕುಮಾರ ಅಥವಾ ಸ್ಕಂದ ಎಂಬ ಹೆಸರಿನ ವಿಶಿಷ್ಟ ರಚನೆಯ ಕಿರಣ ಸಮೂಹವು ಉತ್ಪನ್ನವಾಯಿತು. ಭೂಲೋಕದಿಂದ ಸತ್ಯಲೋಕದ ವರೆಗಿನ ಲೋಕಗಳನ್ನು ‘ಸ್ಕಂದರೇಷೆ’ ಎನ್ನುತ್ತಾರೆ. ಭೂಲೋಕದಿಂದ ಸತ್ಯಲೋಕದವರೆಗಿನ ವ್ಯಾಹ್ಯತಿಗಳ ಮೇಲೆ ಸ್ಕಂದರೇಷೆಯ ನಿಯಂತ್ರಣವಿದೆ. ವ್ಯಾಹ್ಯತಿ ಅಂದರೆ ಗೂಢ ಸ್ವರ ಅಥವಾ ಮಂತ್ರ. ಸಪ್ತಲೋಕಗಳ ಹೆಸರುಗಳಂತೆ ಅನುಕ್ರಮವಾಗಿ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯ ಇವು ಏಳು ವ್ಯಾಹ್ಯತಿಗಳಾಗಿವೆ. ಈ ಏಳೂ ಲೋಕಗಳ ನಿಯಂತ್ರಕರ ಮಾತೆಯೇ ಸ್ಕಂದಮಾತೆ. ಈ ಏಳೂ ಲೋಕಗಳಿಂದ ಪಾರಾಗಿ ಹೋಗಲು ಯಾರ ಸಹಾಯ ಬೇಕಾಗುತ್ತದೆಯೋ ಅವಳಿಗೆ ಸ್ಕಂದಮಾತೆ ಎನ್ನುತ್ತಾರೆ.

    6, ಕಾತ್ಯಾಯನಿ:- ‘ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ|’ (ಕಾತ್ಯಾಯನನ ಮಗಳು ಕಾತ್ಯಾಯನಿ) ‘ಅಯನ’ ಎಂದರೆ ‘ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗ’. ಕಾತ್ಯಾಯನ ಋಷಿಗಳು ಇಂತಹ ಒಂದು ಅಯನದ ಪಾಲಕರಾಗಿದ್ದರು. ಒಮ್ಮೆ ಕಾತ್ಯಾಯನರ ಅಯನಗಳಲ್ಲಿನ ದೇವತೆಗಳ ಮೇಲೆ (ತೇಜಸ್ಸಿನ ಮೇಲೆ) ಅವರದ್ದೇ ಅಯನದಲ್ಲಿನ ಅಯೋಗ್ಯ ಸ್ಪಂದನಲಹರಿಗಳ ಒಂದು ಶಕ್ತಿಯುತ ಸಮೂಹವು ಆಕ್ರಮಣ ಮಾಡಿತು. ಘರ್ಷಣೆಯಿಂದ ಬಹುದೊಡ್ಡ ಉತ್ಪಾತವಾಗುವ ಸಮಯ ಬಂದಿತು. ಆಗ ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಶಕ್ತಿಲಹರಿಗಳ ಒಂದು ಅಂಶವು ಒಬ್ಬ ಚಿಕ್ಕ ಬಾಲಕಿಯ ಆಕಾರದಲ್ಲಿ ಪ್ರವೇಶಿಸಿತು. ಈ ಬಾಲಕಿಯನ್ನು ಕಾತ್ಯಾಯನ ಋಷಿಗಳು ತಮ್ಮ ಸಂತಾನವೆಂದು ಪರಿಗಣಿಸಿದರು; ಆದುದರಿಂದ ಅವಳು ‘ಕಾತ್ಯಾಯನಿ’ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದಳು. ಕಾತ್ಯಾಯನಿಯು ಶಕ್ತಿಯುತ ಅಯೋಗ್ಯ ಸ್ಪಂದನಲಹರಿಗಳನ್ನು ಯೋಗ್ಯ ಸ್ಪಂದನಲಹರಿಗಳನ್ನಾಗಿ ಪರಿವರ್ತಿಸಿ ದೇವತೆಗಳಿಗೆ (ತೇಜಸ್ಸಿಗೆ) ಸಹಾಯ ಮಾಡಿದಳು.

    7. ಕಾಳರಾತ್ರಿ:- ಹಲವಾರು ಅಯೋಗ್ಯ ಸ್ಪಂದನಲಹರಿಗಳು ಒಟ್ಟು ಸೇರಿ ಸಿದ್ಧವಾಗುವ ಶಕ್ತಿಯೆಂದರೆ ‘ಕಾಲ’. ವ್ಯಕ್ತಿಯ (ಅಥವಾ ಪ್ರಾಣಿಗಳ) ಅಯೋಗ್ಯ ಸ್ಪಂದನಲಹರಿಗಳು ಆ ವ್ಯಕ್ತಿಯಲ್ಲಿ ಭಯವನ್ನುಂಟು ಮಾಡುತ್ತವೆ. ಆ ಸ್ಪಂದನಲಹರಿಗಳಲ್ಲಿ ವಿಶಿಷ್ಟ ಕ್ಷಮತೆ ಉಂಟಾಯಿತೆಂದರೆ ವಾತಾವರಣದಲ್ಲಿನ ಇದೇ ಜಾತಿಯ ಇತರ ಸ್ಪಂದನಗಳನ್ನು ವ್ಯಕ್ತಿಯ (ಅಥವಾ ಆ ಪ್ರಾಣಿಯ) ಶರೀರದೆಡೆ ಆಕರ್ಷಿಸುತ್ತವೆ. ಈ ರೀತಿ ಅಯೋಗ್ಯ ಸ್ಪಂದನಲಹರಿಗಳ ಶಕ್ತಿಯು ಹೆಚ್ಚಾಯಿತೆಂದರೆ ಆಗಬಾರದಂತಹ ಘಟನೆಗಳು ಮತ್ತು ಕೃತಿಗಳು ಆ ವ್ಯಕ್ತಿಯಿಂದ ಆಗುತ್ತವೆ. ಅವುಗಳ ಪ್ರತಿಕ್ರಿಯೆಗಳನ್ನು ನಾವು ಆಪತ್ತು ಅಥವಾ ಸಂಕಟ ಎನ್ನುತ್ತೇವೆ. ಇಂತಹ ಆಪತ್ತನ್ನು ಅಥವಾ ಸಂಕಟವನ್ನು ತರುವ ಅಯೋಗ್ಯ ಸ್ಪಂದನಲಹರಿಗಳ ಸಾಮೂಹಿಕ ಶಕ್ತಿಯ, ಅಂದರೆ ಕಾಲದ ರಾತ್ರಿಯೇ (ಅಂದರೆ ವಿನಾಶಿಕಾ ಅರ್ಥಾತ್ ವಿನಾಶ ಮಾಡುವವಳು) ‘ಕಾಳರಾತ್ರಿ’. ‘ವಿನಾಶಿಕಾ’ ಅಂದರೆ ‘ವಿಶೇಷೇಣ ನಾಶಯತಿ ಇತಿ|’ (ಸಂಪೂರ್ಣವಾಗಿ ನಾಶ ಮಾಡುವವಳು). ‘ವಿಶೇಷ’ ಎಂದರೆ ‘ವಿಗತಃ ಶೇಷಃ ಯಸ್ಮಾತ್|’ (ವಿಶಿಷ್ಟ) ಶೇಷವೂ ಇಲ್ಲದಂತೆ ನಾಶ ಮಾಡುವುದು.

    8.ಮಹಾಗೌರಿ :-ತಪಸ್ಯೇನೆ ಮಹಾನ್ ‘ಗೌರಃ’, ಅಂದರೆ ‘ತೇಜಸ್ಸ’ನ್ನು ಪ್ರಾಪ್ತಮಾಡಿ ಕೊಂಡವಳೇ ಮಹಾಗೌರಿ’. ಮಂತ್ರಯೋಗಸಮಿಕ್ಷೆಯಲ್ಲಿ ‘ಸಮಾಧಿ’ ಎಂಬ ಪದದ ವ್ಯುತ್ಪತ್ತಿಯನ್ನು ‘ಸಮ್ + ಆ + ಅಧಿ’ ಎಂದು ಹೇಳಲಾಗಿದೆ. ‘ಸಮ್’ ಅಂದರೆ ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳ ಸಮ್ಯಕ್, ‘ಆ’ ಅಂದರೆ ‘ವರೆಗೆ’ ಮತ್ತು ‘ಧಿ’ ಅಂದರೆ ‘ಮಾನವನ ಶರೀರದಿಂದ ನಿರಂತರವಾಗಿ ಉತ್ಸರ್ಜಿತಗೊಳ್ಳುವ ಸ್ಪಂದನಲಹರಿಗಳು’. ಧೀ ಎಂಬ ಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮಶಕ್ತಿ ಲಹರಿಗಳ ಸಮ್ಯಕ್ ಅವಸ್ಥೆಯ ತನಕ ಕೊಂಡೊಯ್ಯುವ ಪ್ರಕ್ರಿಯೆಯನ್ನು ಸಮಾಧಿ ಎನ್ನುತ್ತಾರೆ. ಈ ರೀತಿ ಪುನಃ ಪುನಃ ಸಮಾಧಿಯನ್ನು ಸಾಧಿಸುವುದಕ್ಕೆ ‘ತಪಸ್ಯಾ’ ಎನ್ನುತ್ತಾರೆ. ಇಂತಹ ತಪಸ್ಸನ್ನು ವಿಶಿಷ್ಟ ಕಾಲಾವಧಿಯ ತನಕ ಮಾಡುವುದರಿಂದ ‘ಗೌರ’ ಅಥವಾ ‘ತೇಜಸ್ಸು’ ಪ್ರಾಪ್ತವಾಗುತ್ತದೆ. ಇಂತಹ ತೇಜಸ್ಸಿನ ಅತ್ಯುಚ್ಚ ತೇಜಸ್ಸನ್ನು ಅಂದರೆ ಮಹಾನ್ ಗೌರವನ್ನು ಯಾವಳು ಪಡೆದುಕೊಂಡಿದ್ದಾಳೆಯೋ ಅವಳು ಮತ್ತು ಯಾರ ಪ್ರಸಾದದಿಂದ ಸಮಾಧಿಯನ್ನು ಸಾಧಿಸಬಹುದೋ ಅವಳೇ ‘ಮಹಾಗೌರಿ’.

    9.ಸಿದ್ಧಿದಾತ್ರಿ:- ಸಾಮಾನ್ಯ ಸ್ಪಂದನಲಹರಿಗಳನ್ನು ಸೂಕ್ಷ್ಮಾತಿಸೂಕ್ಷ್ಮ ಶಕ್ತಿತರಂಗಗಳಲ್ಲಿ ಶಾಶ್ವತವಾಗಿ ಸೇರಿಸುವುದಕ್ಕೆ ‘ಮೋಕ್ಷ ಅಥವಾ ಸಿದ್ಧಿ’ ಎನ್ನುತ್ತಾರೆ. ಸಿದ್ಧಿಯನ್ನು ನೀಡುವವಳು ಸಿದ್ಧಿದಾತ್ರಿ.’

    ದಸರಾ ಹಬ್ಬದ ಮಹತ್ವ:
    ಮಹಿಷಾಸುರನ ಮಾಯೆಯನ್ನು ಗುರುತಿಸಿ ಅವನ ಅಸುರೀ ಪಾಶದಿಂದ ಮುಕ್ತರಾಗಲು ಶಕ್ತಿ ಉಪಾಸನೆಯ ಆವಶ್ಯಕತೆಯಿದೆ. ಇದಕ್ಕಾಗಿ ನವರಾತ್ರಿಯ ಒಂಭತ್ತು ದಿನ ಶಕ್ತಿಯ ಉಪಾಸನೆಯನ್ನು ಮಾಡಬೇಕು. ದಶಮಿಯಂದು ವಿಜಯೋತ್ಸವವನ್ನು ಆಚರಿಸಬೇಕು. ಇದನ್ನೇ ದಸರಾ (ದಶಹರಾ)/ವಿಜಯದಶಮಿ ಎನ್ನುತ್ತಾರೆ.

    ದಸರಾ ಶಬ್ದದ ಉತ್ಪತ್ತಿ :
    ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಗಳಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣರು ಮುಂತಾದವರ ಮೇಲೆ ನಿಯಂತ್ರಣವಿರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈ ದಿನಕ್ಕೆ ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿವೆ

    ಆಯುಧಪೂಜೆ (ಶಸ್ತ್ರಪೂಜೆ) ಅಂದರೆ ಏನು?:
    ಈ ದಿನ ರಾಜರು, ಸಾಮಂತರು, ಸರದಾರರು ತಮ್ಮತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ.

    ರಾಜವಿಧಾನ: ‘ದಸರಾ’ ವಿಜಯದ ಹಬ್ಬವಾಗಿರುವುದರಿಂದ ಈ ದಿನ ರಾಜರಿಗೆ ವಿಶೇಷ ವಿಧಿಯನ್ನು ಹೇಳಲಾಗಿದೆ. ಇದು ವಿಜಯದ, ಪರಾಕ್ರಮದ ಹಬ್ಬವಾಗಿದೆ. ಅರ್ಜುನನು ಅಜ್ಞಾತವಾಸದಲ್ಲಿ ಶಮಿಯ ಉಡಿಯಲ್ಲಿ ಇಟ್ಟ ಶಸ್ತ್ರಗಳನ್ನು ತೆಗೆದು, ವಿರಾಟನ ಗೋವುಗಳನ್ನು ಸೆರೆ ಹಿಡಿದ ಕೌರವಸೈನ್ಯದ ಮೇಲೆ ಆಕ್ರಮಣ ಮಾಡಿ ಇದೇ ದಿನ ವಿಜಯವನ್ನು ಸಂಪಾದಿ ಸಿದ್ದನು. ಈ ದಿನದಂದೇ ಶ್ರೀರಾಮಚಂದ್ರನು ರಾವಣನ ಮೇಲೆ ವಿಜಯ ಪಡೆದು ಆತನನ್ನು ವಧಿಸಿದ್ದನು ಎಂದು ನಂಬಲಾಗುತ್ತದೆ. ಈ ಘಟನೆಗಳ ಸಂಕೇತವಾಗಿ ಈ ದಿನಕ್ಕೆ ವಿಜಯದಶಮಿ ಎಂದು ಹೆಸರು ಬಂದಿದೆ. ಹಾಗೆ ನೋಡಿದರೆ ಈ ಹಬ್ಬವು ಬಹಳ ಪ್ರಾಚೀನ ಕಾಲದಿಂದ ನಡೆದು ಬಂದಂತಿದೆ. ಪ್ರಾರಂಭದ ಕಾಲದಲ್ಲಿ ಇದು ಕೃಷಿಗೆ ಸಂಬಂಧಪಟ್ಟ ಒಂದು ಲೋಕೋತ್ಸವವಾಗಿತ್ತು. ಮಳೆಗಾಲದಲ್ಲಿ ಬಿತ್ತಿದ ಪ್ರಥಮ ಪೈರು ಮನೆಗೆ ಬಂದಾಗ ರೈತರು ಈ ಉತ್ಸವವನ್ನು ಆಚರಿಸುತ್ತಿದ್ದರು. ಕಲಶ ಸ್ಥಾಪನೆಯ ದಿನ ಕಲಶದ ಕೆಳಗಿನ ಪೀಠದಲ್ಲಿ ಒಂಭತ್ತು ಧಾನ್ಯಗಳನ್ನು ಬಿತ್ತುತ್ತಾರೆ. ದಸರಾದಂದು ಈ ಧಾನ್ಯದ ಮೊಳಕೆಗಳನ್ನು ತೆಗೆದು ದೇವರಿಗೆ ಅರ್ಪಿಸುತ್ತಾರೆ. ಅನೇಕ ಕಡೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ತಂದು ಅವುಗಳನ್ನು ಮನೆಯ ಪ್ರವೇಶದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ. ಈ ಪದ್ಧತಿಯಿಂದ ಕೃಷಿಗೆ ಸಂಬಂಧಪಟ್ಟ ಈ ಹಬ್ಬದ ಸ್ವರೂಪ ಸ್ಪಷ್ಟವಾಗುತ್ತದೆ. ಮುಂದೆ ಈ ಹಬ್ಬಕ್ಕೆ ಧಾರ್ಮಿಕ ಸ್ವರೂಪವನ್ನು ಕೊಡಲಾಯಿತು ಮತ್ತು ಇತಿಹಾಸ ಕಾಲದಲ್ಲಿ ಇದು ರಾಜಕೀಯ ಸ್ವರೂಪದ ಹಬ್ಬವಾಯಿತು.

    ನಾವೆಲ್ಲಾ ಭಕ್ತಿ ಶ್ರದ್ಧೆಯಿಂದ ಶ್ರೀ ದುರ್ಗಾದೇವಿಯ ಉಪಾಸನೆಯನ್ನು ಮಾಡಿ ಶ್ರೀ ದೇವಿಯ ಕೃಪೆಯನ್ನು ಪಡೆಯೋಣ.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    Sarva Pitru Amavasya- ಪಿತೃಗಳ ಸ್ಮರಣೆಯ ಮಹಾಲಯ ಅಮಾವಾಸ್ಯೆ

    ಎಂ.ವಿ.ಶಂಕರಾನಂದ

    ನಮ್ಮ ಭಾರತೀಯ ಪರಂಪರೆಯಲ್ಲಿ ದೇವರು ಹಿರಿಯರ ಮೂಲಕ,
    ಪಿತೃವರ್ಗದ ಮೂಲಕ ಹರಸುತ್ತಾನೆ ಎಂಬ ಪ್ರತೀತಿ ಇದೆ.
    ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಮಹಾಲಯ ಅಮಾವಾಸ್ಯೆ-Sarva Pitru Amavasya – ಎಂದೂ, ಇದು ಪಿತೃ ಪಕ್ಷದ ಕೊನೆಯಲ್ಲಿ ಬರುವುದರಿಂದ
    ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ.

    ಈ ದಿನದಂದು ನಮ್ಮನ್ನು ಅಗಲಿದ ಹಿರಿಯರಿಗೆ ವಂದಿಸಿ, ಅವರಿಗೆ ಇಷ್ಟವಾದ ಪದಾರ್ಥಗಳನ್ನು ಮಾಡಿ ತಿಲ ತರ್ಪಣವನ್ನು,
    ಜಲ ತರ್ಪಣವನ್ನು ಹಾಗೂ ಪಿಂಡವನ್ನು ನೀಡಲಾಗುವುದು.

    ಇದರಿಂದ ನಮ್ಮ ಪಿತೃಗಳು ತೃಪ್ತರಾಗಿ ಮುಂದಿನ ಪೀಳಿಗೆಗೆ
    ಹೆಚ್ಚಿನ ಸುಖ ಸಂತೋಷಗಳನ್ನು ನೀಡುತ್ತಾರೆ ಎಂಬುವುದು ನಂಬಿಕೆ.

    ಆಧುನಿಕ ಯುಗದ ಭರಾಟೆಯಲ್ಲಿ ನಮ್ಮ ಶಾಸ್ತ್ರ , ಆಚರಣೆ, ಸಂಪ್ರದಾಯ, ರೀತಿ, ನೀತಿಗಳ ಸರಿಯಾದ ಅರಿವೂ ಇಲ್ಲದೇ ಮುಖ್ಯವಾಗಿ ಯುವಜನತೆ ಸಂದಿಗ್ಧದಲ್ಲಿದ್ದಾರೆ.

    ಮಹಾಲಯ ಅಥವಾ ಪಿತೃಪಕ್ಷದಂತಹ ಆಚರಣೆ
    ಗಳನ್ನು ನಮ್ಮ ಪೂರ್ವಜರನ್ನು ಹಿರಿಯರನ್ನು ಕೃತಜ್ಞತೆಯಿಂದ
    ನಾವು ಸ್ಮರಿಸುವ ಸಮಯ ಎಂಬ ಅರಿವು ಯುವಜನತೆಗೆ ಉಂಟಾದರೆ ಆಚರಣೆ, ಸಂಪ್ರದಾಯಗಳಲ್ಲಿ ಶ್ರದ್ಧೆ , ಭಕ್ತಿ, ಆನಂದ ಹೆಚ್ಚುತ್ತದೆ.

    ಪಿತೃಗಳಿಗೆ ತಿಲವೇಕೆ ?

    ಪಿತೃಗಳ ಲೋಕ ಚಂದ್ರಲೋಕದ ಮೇಲ್ಭಾಗದಲ್ಲಿದೆ ಎಂಬ ನಂಬಿಕೆ ಇದೆ. ‘ತಿಲ'(ಎಳ್ಳು) ಇದರ ಅಭಿಮಾನಿ ಗ್ರಹ ಸೋಮ (ಚಂದ್ರ). ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲುಗಳಾಗುವಂತೆ ಪಿತೃಲೋಕದ ಸೂರ್ಯನ ಚಲನೆಯೇ ರಾತ್ರಿ ಹಗಲುಗಳಿಗೆ ಕಾರಣವಾಗಿದೆ ಎನ್ನುತ್ತಾರೆ.

    ಭೂಮಿಯಲ್ಲಿ 24 ಗಂಟೆಗೆ ಒಂದು ದಿನವಾಗುವಂತೆ, ಚಂದ್ರನಲ್ಲಿ 15 ದಿನ ಹಾಗೂ 15 ರಾತ್ರಿಯಾದರೆ 1 ದಿನವಾಗುವುದು. ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುವುದು. ಬಿಸಿಲಿನ ತಾಪ ಹೆಚ್ಚಾಗಿರುತ್ತದೆ.

    ಪಿತೃಗಳಿಗೆ ಎಳ್ಳು ಬಹು ಪ್ರೀತಿಕರವಾದ ಆಹಾರ. ಹೇಗೆಂದರೆ ಎಳ್ಳು ಗರ್ಭಕೋಶದ ಶುದ್ಧಿಗೆ – ರಕ್ತ ಶುದ್ಧಿಗೆ ಅತ್ಯುತ್ತಮ ಪದಾರ್ಥ. ಸ್ತ್ರೀಯು ಪ್ರಥಮ ಬಾರಿ ರಜಸ್ವಲೆಯಾದಾಗ ಆಕೆಗೆ ಎಳ್ಳಿನ ಚಿಗಳಿ ತಿನ್ನಿಸುವುದು ಶುದ್ಧಿಗಾಗಿಯೇ. ತನ್ನ ವಂಶ ಸದ್ವಂಶವಾಗಬೇಕೆಂದು ಪಿತೃಗಳ ಹಿರಿಯಾಸೆ. ಆದ್ದರಿಂದ ತಿಲತರ್ಪಣ ಪಿತೃಗಳಿಗೆ ಅತ್ಯಂತ ಪ್ರಿಯ.

    ಮಹಾಲಯ ಅಮಾವಾಸ್ಯೆ ಕತ್ತಲೆಯ ಸಂಕೇತವಾದರೆ , ಅದರ ಮರುದಿನ ಕತ್ತಲನ್ನು ಹರಿಸುವ ನವರಾತ್ರಿ ಆರಂಭವಾಗುತ್ತದೆ. ಮನೆ, ಕರ್ಮಭೂಮಿ, ನದಿತೀರದಲ್ಲಿ ಮಾಡುವದಕ್ಕಿಂತ ಸಂಗಮಗಳಲ್ಲಿ ಮಾಡುವ ಪಿತೃಕಾರ್ಯ ಶ್ರೇಷ್ಠವಾಗಿರುತ್ತದೆ.

    ಪಿತೃಶಾಪಕ್ಕೆ ಗುರಿಯಾದರೆ ಕಷ್ಟತಪ್ಪಿದಲ್ಲ ದೈವಶಾಪವನ್ನಾದರು ತಡೆದುಕೊಳ್ಳಬಹುದು , ಆದರೆ ಪಿತೃಶಾಪಕ್ಕೆ ಗುರಿಯಾದರೆ ಕಷ್ಟತಪ್ಪಿದಲ್ಲ , ಆವರ ಒಲುಮೆ ಸದಾ ನಮ್ಮ ಮೇಲಿರಬೇಕು ಎನ್ನುವುದು ಶಾಸ್ತ್ರವಚನ.

    ನಮ್ಮ ಬಾಳನ್ನು ರೂಪಿಸುವಲ್ಲಿ ಪೂರ್ವಜರು ಮಾಡಿದ ತ್ಯಾಗ ಅಪಾರ. ಅವರಿಂದು ಸ್ಥೂಲ ಶರೀರ ರೂಪದಲ್ಲಿ ನಮ್ಮ ಕಣ್ಣ ಮುಂದೆ ಇಲ್ಲವಾದರೂ ಸೂಕ್ಷ್ಮ ಶರೀರದಿಂದ ಪರೋಕ್ಷವಾಗಿ ನಮ್ಮ ಕರ್ತವ್ಯ ಕರ್ಮಗಳನ್ನು ವೀಕ್ಷಿಸುತ್ತ ಇರುತ್ತಾರೆ.

    ಪಿತೃದೇವತೆಗಳ ಆರ್ಶೀವಾದದಿಂದಲೇ ಸಂತಾನ , ಸುಖ , ಧನಲಾಭಗಳು ಉಂಟಾಗುತ್ತದೆ. ಅವರಿಗೆ ನೀಡುವ ತರ್ಪಣದಿಂದ ಸಂತೃಪ್ತರಾಗಿ ನಮ್ಮನು ಹರಸುತ್ತಾರೆ. ಮಾತೃದೇವೋಭವ , ಪಿತೃದೇವೋಭವ ಎಂದು ಪಠಿಸದರಷ್ಟೇ ಸಾಲದು , ಆ ಭಾವವು ನಮ್ಮೊಳಗೆ ಹಾಸುಹೊಕ್ಕಾಗಬೇಕು, ಪಿತೃದೇವತೆಗಳ ಋಣ ತೀರಿಸುವ ಪರ್ವವೇ ಮಹಾಲಯ.

    ಪಿತೃಕ್ರಿಯೆಗಳಿಗೆ ಅಮಾವಾಸ್ಯೆ ಪ್ರಶಸ್ತ

    ಇದು ವೈಜ್ಞಾನಿಕತೆಯ ಆಧಾರದಲ್ಲಿ ನೆಲೆನಿಂತಿದೆ. ಪಿತೃಲೋಕವು ಚಂದ್ರನ ಮೇಲ್ಭಾಗದಲ್ಲಿದೆ. ಶುಕ್ಲ ಪಕ್ಷದಲ್ಲಿ ಚಂದ್ರನು ಸೂರ್ಯನಿಂದ ದೂರಸರಿಯುತ್ತಾನೆ. ಆಗ ಪಿತೃಗಳಿಗೆ ರಾತ್ರಿ, ಕೃಷ್ಣಪಕ್ಷದಲ್ಲಿ ಸೂರ್ಯನು ದಿನದಿಂದ ದಿನಕ್ಕೆ ಚಂದ್ರಗೋಳದ ಹತ್ತಿರ ಬಂದು ಅಮಾವಾಸ್ಯೆಯಂದು ಒಂದೇ ಕಕ್ಷೆಯಲ್ಲಿ( ಸರಳ ರೇಖೆಯಲ್ಲಿ) ಸೇರಿದಾಗ ಪಿತೃಗಳಿಗೆ ಮಧ್ಯಾಹ್ನ ಕಾಲ ,ಆಗ ಪಿತೃಗಳಿಗೆ ತೈಲ ಧಾನ್ಯವಾದ ಎಳ್ಳಿನಿಂದ ತರ್ಪಣ ಕೊಡುವುದರಿಂದ ವಸು ರುದ್ರ ಆದಿತ್ಯ ರೂಪದ ಪಿತೃಗಳು ಕೃತಕೃತ್ಯರಾಗುವ ಮಹತ್ವಪೂರ್ಣ ಪಕ್ಷವಾಗಿ ಆಚರಿಸಲಾಗುತ್ತದೆ.

    ಪ್ರತಿ ದಿನ ಪ್ರಾತಃಕಾಲದಲ್ಲಿ ದೇವತಾ ಸ್ಮರಣೆ, ಪೂಜೆ , ಮಧ್ಯಾಹ್ನ ಅತಿಥಿ ಅಭ್ಯಾಗತ ಸತ್ಕಾರ , ಅಪರಾಹ್ನದಲ್ಲಿ ಪಿತೃಗಳ ಆರಾಧನೆ ಮಾಡಬೇಕು . ಮಕ್ಕಳಿಗಾಗಿ ಮಾತಾಪಿತೃಗಳು ಮಾಡಿದ ತ್ಯಾಗ , ಕರ್ತವ್ಯಗಳ ಋಣದ ಭಾರವನ್ನು ಹಗುರ ಮಾಡಿಕೊಳ್ಳಲು ಮನುಷ್ಯ ಕಂಡು ಕೊಂಡ ಸುಲಭ ಮಾರ್ಗವೇ ಈ ಪಿತೃಕಾರ್ಯವೆಂದರೂ ತಪ್ಪಲ್ಲ .

    ಪಿತೃಕಾರ್ಯಗಳು ಪುನರ್ ಜನ್ಮಸಿದ್ದಾಂತ ವನ್ನು ಸಮರ್ಥಿಸುತ್ತದೆ. ಅಲ್ಲದೆ ಜನ್ಮಾಂತರ ಶರೀರ ನಿರ್ಮಾಣಕಾರ್ಯಕ್ಕೆ ಸಹಕಾರಿಯಾಗಿದೆ. ಅದಕ್ಕಾಗಿಯೇ ಪಿತೃಕಾರ್ಯಗಳನ್ನು ಶ್ರದ್ಧೆಯಿಂದ ನಿಯಮಾನುಸಾರವಾಗಿ ಶಾಸ್ರ್ತಬಧ್ದವಾಗಿ ಮಾಡಬೇಕು ಎನ್ನಲಾಗುತ್ತದೆ.

    ಪಿತೃ ಪಕ್ಷ ಪೂಜೆಯ ಮಹತ್ವ:

    ಪುರಾತನ ಸಂಪ್ರದಾಯದ ಪ್ರಕಾರ ಕುಟುಂಬದ ಸದಸ್ಯರು ಎಳ್ಳು ಮತ್ತು ಅಕ್ಕಿಯನ್ನು ತೆಗೆದುಕೊಂಡು ತಮ್ಮ ಪೂರ್ವಜರನ್ನು ಪ್ರಾರ್ಥಿಸುತ್ತಾ ‘ನೀವು ತೃಪ್ತರಾಗಿರಬಹುದು, ನೀವು ತೃಪ್ತರಾಗಿರಬಹುದು, ನೀವು ತೃಪ್ತರಾಗಬಹುದು’. ಇದನ್ನು ಮೂರು ಬಾರಿ ಹೇಳಿ ಮತ್ತು ನಂತರ ಅವರು ಸ್ವಲ್ಪ ಎಳ್ಳಿನ ಕಾಳುಗಳನ್ನು ನೀರಿನಲ್ಲಿ ಬಿಡುತ್ತಾರೆ.

    ಈ ಆಚರಣೆಯ ಮಹತ್ವವೆಂದರೆ ಅಗಲಿದವರಿಗೆ ಹೇಳುವುದು – ನಿಮ್ಮ ಮನಸ್ಸಿನಲ್ಲಿ ಇನ್ನೂ ಕೆಲವು ಆಸೆಗಳಿದ್ದರೆ, ಅವು ಎಳ್ಳಿನಂತೆ ಎಂದು ತಿಳಿಯಿರಿ. ಅವು ಗಮನಾರ್ಹವಲ್ಲ, ಅವುಗಳನ್ನು ಬಿಡಿ. ನಾವು ನಿಮಗಾಗಿ ಅವುಗಳನ್ನು ನೋಡಿಕೊಳ್ಳುತ್ತೇವೆ. ನೀವು ಮುಕ್ತ, ಸಂತೋಷ ಮತ್ತು ತೃಪ್ತರಾಗಿರುತ್ತೀರಿ ಎಂದು ಹೇಳುವ ಪದ್ಧತಿ ಇದೆ. ತರ್ಪಣ ಎಂದರೆ ಅಗಲಿದವರಿಗೆ ತೃಪ್ತಿಯನ್ನು ತರುವುದು. ಅವರಿಗೆ ತೃಪ್ತಿ ಮತ್ತು ಮುಂದೆ ಸಾಗುವಂತೆ ಹೇಳಲು ಇದನ್ನು ಮಾಡಲಾಗುತ್ತದೆ. ನೀರು ಪ್ರೀತಿಯ ಸಂಕೇತ. ಯಾರಿಗಾದರೂ ನೀರು ಕೊಡುವುದು ಎಂದರೆ ಪ್ರೀತಿಯನ್ನು ನೀಡುವುದು.

    ಮಹಾಲಯ ಅಮಾವಾಸ್ಯೆಯ ಮಹತ್ವ:
    ಮಹಾಲಯ ಅಮವಾಸ್ಯೆಯು ಪಿತೃ ಪಕ್ಷದ ಅಂತ್ಯ ಎನ್ನಲಾಗುತ್ತದೆ. ಇದು ಸರ್ವಪತ್ರಿ ಅಮಾವಾಸ್ಯೆ ಅಥವಾ ಸರ್ವಪಿತೃ ಮೋಕ್ಷ ಅಮವಾಸ್ಯೆ ಎಂದೂ ಕರೆಯಲ್ಪಡುವ ಪ್ರಮುಖ ದಿನವಾಗಿದೆ. ಈ ದಿನದಂದು ದುರ್ಗಾ ದೇವಿಯು ಭೂಮಿಗೆ ಇಳಿಯುತ್ತಾಳೆ ಎಂದು ನಂಬಲಾಗಿದೆ. ಪೂರ್ವಜರ ಸಾವಿನ ಸಮಯ, ದಿನಾಂಕ ಮತ್ತು ಸ್ವಭಾವವನ್ನು ಲೆಕ್ಕಿಸದೆ ಶ್ರಾದ್ಧವನ್ನು ಮಾಡುವ ಮೂಲಕ ಒಬ್ಬನು ತನ್ನ ಪೂರ್ವಜರಿಗೆ ಕರ್ತವ್ಯವನ್ನು ಪೂರೈಸುವ ದಿನ ಇದು.

    ಇದು ಒಂದು ರೀತಿಯ ಪರ್ವಾಣ ಶ್ರಾದ್ಧ. ಈ ದಿನ ಶ್ರಾದ್ಧ, ತರ್ಪಣವನ್ನು ಮಾಡಲಾಗುತ್ತದೆ. ಈ ದಿನವು ಎಲ್ಲಾ ಪೂರ್ವಜರು ಅಥವಾ ಕುಟುಂಬದ ಸದಸ್ಯರಿಗೆ ಅಪರಾ ಕರ್ಮವನ್ನು ಮಾಡಲು ಸೂಕ್ತವಾಗಿದೆ. ಒಂದು ವೇಳೆ ಪಿತೃಪಕ್ಷದ ಇತರ ಎಲ್ಲ ದಿನಗಳಲ್ಲಿ ಆಚರಣೆಗಳನ್ನು ಮಾಡಲು ಸಾಧ್ಯವಾಗದಿದ್ದರೆ, ಮಹಾಲಯ ಅಮಾವಾಸ್ಯೆಯಂದು ಇದನ್ನು ಮಾಡಬಹುದು. ಕೆಲವರು ಕುಟುಂಬ ಸದಸ್ಯರು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅದನ್ನು ಸ್ವಚ್ಛಗೊಳಿಸುವುದು ಮತ್ತು ಪಿತೃ ಪಕ್ಷ ಪೂಜೆ ಮಾಡುವುದು ಮತ್ತು ಆ ದಿನ ಮೃತರನ್ನು ಸಮಾಧಾನಪಡಿಸಲು ವಿವಿಧ ಆಹಾರ ಪದಾರ್ಥಗಳನ್ನು ನೀಡುವುದು ಸಾಮಾನ್ಯವಾಗಿದೆ.
    ಈ ಮಹಾಲಯ ಅಮಾವಾಸ್ಯೆ ದಿನ ನಿಮ್ಮ ಅಗಲಿದ ಹಿರಿಯರ ನೆನೆಪು ಮಾಡಿಕೊಂಡು, ಅವರಿಗೆ ತರ್ಪಣ ನೀಡಿ, ಅವರ ಆಶೀರ್ವಾದಗಳಿಗೆ ಪಾತ್ರರಾಗಿ.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    ಸೆಂಚುರಿ ಕ್ಲಬ್ ನಲ್ಲಿ ಸಿಎಂ

    BENGALURU OCT 5
    ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಎಲ್ಲರ ಅನುಭವ, ಸಲಹೆ ಹಾಗೂ ಮಾರ್ಗದರ್ಶನದ ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ-Basavaraja Bommai- ಅವರು ತಿಳಿಸಿದರು.

    ಇಂದು ಸೆಂಚುರಿ ಕ್ಲಬ್ – century club bengaluru -ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.

    ರಾಜ್ಯದ ಮುಖ್ಯಮಂತ್ರಿಯಾಗಿ ನನಗೆ ನನ್ನದೇ ಜವಾಬ್ದಾರಿಗಳಿವೆ. ನಾನು ಅನೇಕ ಸವಾಲುಗಳನ್ನು ಎದುರಿಸುತ್ತಲೇ ರಾಜ್ಯವನ್ನು ಕಟ್ಟಬೇಕು. ಸರತಿಯ ಕೊನೆಯಲ್ಲಿ ನಿಂತಿರುವ ವ್ಯಕ್ತಿಗೂ ತನ್ನ ಅಹವಾಲುಗಳನ್ನು ಆಲಿಸುವ ಸರ್ಕಾರ ಇದೆ ಎನಿಸುವಂತೆ ಕೆಲಸ ಮಾಡಬೇಕು ಎನ್ನುವ ಆಶಯ ನಮ್ಮ ಸರ್ಕಾರದ್ದು ಎಂದರು.

    ರಾಜ್ಯದ ಆರ್ಥಿಕತೆ ಬೆಳೆಯಲು ಎಲ್ಲಾ ಕ್ಷೇತ್ರದ ಜನ ಬೆಳೆದು, ಅಭಿವೃದ್ಧಿ ಹೊಂದಬೇಕು. ಜನರ ಶ್ರಮದಿಂದಲೇ ಆರ್ಥಿಕತೆ ನಿಜವಾಗಿಯೂ ಅಭಿವೃದ್ಧಿಯಾಗುವುದು ಎಂದು ಅವರು ಅಭಿಪ್ರಾಯಪಟ್ಟರು.

    ಸೆಂಚುರಿ ಕ್ಲಬ್ ನಲ್ಲಿ-century club bengaluru- ತಾವು ಕಳೆದ ಸಮಯವನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಸೆಂಚುರಿ ಕ್ಲಬ್ ಗೆ ತನ್ನದೇ ಸುದೀರ್ಘ ಇತಿಹಾಸವಿದೆ. ಸರ್ ಎಂ.ವಿಶ್ವೇಶ್ವರಯ್ಯ-sir m visvesvaraya- ಅವರಿದ್ದ ವ್ಯಕ್ತಿತ್ವ ಅಪರೂಪದ್ದು. ಅವರಿಂದ ಪ್ರಾರಂಭಗೊಂಡ ಈ ಕ್ಲಬ್ ಅತ್ಯಂತ ವೈಶಿಷ್ಟ್ಯಪೂರ್ಣ ಎಂದರಲ್ಲದೆ ಈ ಪರಂಪರೆಯನ್ನು ನಾವು ಮುಂದುವರಿಸಬೇಕು. ಬೆಂಗಳೂರು ಮಾತ್ರವಲ್ಲ ದೇಶದಲ್ಲಿಯೇ ಇದು ಅತ್ಯುತ್ತಮ ಕ್ಲಬ್ ಎಂದರು.

    ಇಕೋ- ಇಕಾಲಜಿ

    ಸೆಂಚುರಿ ಕ್ಲಬ್ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಮುಖ್ಯಮಂತ್ರಿಗಳು ಅತ್ಯಂತ ಯೋಜಿತವಾಗಿ ಅಭಿವೃದ್ಧಿಯಾಗಬೇಕು. ಇಕೋ- ಎಕಾನಮಿ-eco- economy- ಎನ್ನುವ ಹೊಸ ಪದ ಹುಟ್ಟಿಕೊಂಡಿದ್ದು, ಆರ್ಥಿಕತೆ ಮತ್ತು ಪರಿಸರದ ಸಮತೋಲನ ಸಾಧಿಸಬೇಕು. ಇದನ್ನು ಸಾಧಿಸಲು ವೇಗದ ಅಭಿವೃದ್ಧಿ ಹಾಗೂ ಪರಿಸರದ ಮಧ್ಯೆ ಆಯ್ಕೆ ಮಾಡಿಕೊಳ್ಳಬೇಕು.
    ಮುಂದಿನ ಆಯವ್ಯಯದಲ್ಲಿ ಪರಿಸರದ ಕೊರತೆಗಳನ್ನು ಪಟ್ಟಿ ಮಾಡಿ, ಈ ಕೊರತೆಯನ್ನು ತುಂಬಲು ಮೊದಲ ಬಾರಿಗೆ ಪರಿಸರ ಆಯವ್ಯಯವನ್ನು ಮಂಡಿಸಲಾಗುವುದು ಎಂದರು.

    ಈ ಸಂದರ್ಭದಲ್ಲಿ ಶಾಸಕ ಉದಯ್ ಗರುಡಾಚಾರ್, ಸೆಂಚುರಿ ಕ್ಲಬ್ ಅಧ್ಯಕ್ಷ ಸುರೇಶ್ ನಾಯ್ಡು ಉಪಸ್ಥಿತರಿದ್ದರು.

    ಶಾಲಾ ಹಂತದಲ್ಲಿಯೇ ತಂತ್ರಜ್ಞಾನ ಶಿಕ್ಷಣ: ಮುಖ್ಯಮಂತ್ರಿ ಸಲಹೆ


    BENGALURU OCT 5

    ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಶಿಕ್ಷಣದ-Technical Education- ಒಲವು ಮೂಡಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ-Basavaraja Bommai- ಅವರು ಅಭಿಪ್ರಾಯ ಪಟ್ಟರು.

    ಅವರು ಇಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಹುಬ್ಬಳ್ಳಿಯಲ್ಲಿ-HUBBALLI_ ನಾವಿನ್ಯತೆ ಮತ್ತು ಪರಿಣಾಮಗಳು ಎಂಬ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸಿ ಮಾತನಾಡುತ್ತಿದ್ದರು.

    ಶಾಲಾ ಮಕ್ಕಳ ಗ್ರಹಣ ಸಾಮರ್ಥ್ಯ ಅತಿ ಹೆಚ್ಚಾಗಿರುವುದರಿಂದ ಪ್ರೌಢಶಾಲೆಯ ಮಟ್ಟದಲ್ಲಿಯೇ ಸರಳ ತಂತ್ರಜ್ಞಾನಗಳನ್ನು ಪರಿಚಯಿಸಬೇಕು. ಇದಕ್ಕಾಗಿ ಅಟಲ್ ಟಿಂಕರಿಂಗ್ ಲ್ಯಾಬ್ – Atal Tinkering Labs -ಗಳನ್ನು ಉನ್ನತೀಕರಿಸಿ, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಪರಿಚಯಿಸಬೇಕು ಎಂದು ಸಲಹೆ ನೀಡಿದರು.

    ರಾಜ್ಯದಲ್ಲಿ 150 ಐಟಿಐ-ITI-ಗಳ ಉನ್ನತೀಕರಣವಾಗುತ್ತಿದೆ. ಪಾಲಿಟೆಕ್ನಿಕ್ ಗಳನ್ನೂ ಆದ್ಯತೆಯ ಮೇರೆಗೆ ಉನ್ನತೀಕರಿಸಬೇಕಾಗಿದೆ. ಇದರಿಂದ ತಂತ್ರಜ್ಞಾನ ಆಧಾರಿತ ಉದ್ಯಮಗಳಲ್ಲಿ ಬಹುವಾಗಿ ಬೇಡಿಕೆಯಿರುವ ಕುಶಲ ಮಾನವ ಸಂಪನ್ಮೂಲ-skilled Man power- ಒದಗಿಸಲು ಸಾಧ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಬುದ್ಧಿವಂತರಿದ್ದಾರೆ. ಅವರಿಗೆ ಅವಕಾಶ ಬೇಕಾಗಿದೆ. ಈಗಾಗಲೇ ಅವಕಾಶ ಪಡೆದವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿರುವ ನಿದರ್ಶನ‌ ನಮ್ಮ ಮುಂದೆ ಇದೆ ಎಂದು ಸಿಎಂ ಹೇಳಿದರು.

    ಉತ್ತರ ಕರ್ನಾಟಕದಲ್ಲಿ ತಂತ್ರಜ್ಞಾನ ಆಧಾರಿತ ಉದ್ಯಮಗಳ ಅಭಿವೃದ್ಧಿಯಾಗಬೇಕು. ಈ ಭಾಗದಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ನಾವೀನ್ಯತೆಗೂ ಕೊರತೆಯಿಲ್ಲ. ಅದಕ್ಕೆ ತಕ್ಕಂತೆ ಅವಕಾಶ ಸೃಷ್ಟಿಯಾಗಬೇಕು. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಐಟಿ ಉದ್ದಿಮೆದಾರರಿಗೆ ಮುಖ್ಯಮಂತ್ರಿಗಳು ಕರೆ ನೀಡಿದರು.

    ಇಂದಿನ ಸಮಾವೇಶದಲ್ಲಿ ಹುಬ್ಬಳ್ಳಿ ಹಾಗೂ ಕಲಬುರಗಿಯಲ್ಲಿ ತಂತ್ರಜ್ಞಾನಾಧಾರಿತ ಉದ್ಯಮಗಳ ಸ್ಥಾಪನೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರವಾದ ಚರ್ಚೆಯಾಗಲಿ. ಇದನ್ನು ಆಧರಿಸಿ ನಿಗದಿತ ಕಾಲಮಿತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ತಿಳಿಸಿದರು.

    ಹುಬ್ಬಳ್ಳಿಯಲ್ಲಿ ಕೆ ಎಲ್ ಇ ತಾಂತ್ರಿಕ ವಿವಿ ಸಹಯೋಗದೊಂದಿಗೆ ನಾವಿನ್ಯತಾ ಕೇಂದ್ರ ಪ್ರಾರಂಭಿಸುವ ಕುರಿತೂ ಸಹ ಮುಖ್ಯಮಂತ್ರಿಗಳು ಸಲಹೆ ನೀಡಿದರು. ನಾವೀನ್ಯತೆಯು ಪ್ರಯೋಗಶಾಲೆಯಲ್ಲಿ ಉಳಿಯಬಾರದು. ನೂತನ ತಂತ್ರಜ್ಞಾನಗಳು ಜನೋಪಯೋಗಿಯಾಗಿರಬೇಕು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಿರಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಕೆ.ಎಲ್.ಇ ತಾಂತ್ರಿಕ ವಿವಿಯ ಕುಲಪತಿ ಪ್ರೊ. ಅಶೋಕ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಕಾರ್ಯಪಡೆ ರಚಿಸಲಾಗುತ್ತಿದ್ದು, ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಪ್ರತಿನಿಧಿಗಳನ್ನು ನೇಮಕ ಮಾಡಲಾಗುವುದು. ಈ ಕಾರ್ಯಪಡೆಯು ಸಂಶೋಧನೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ವಿದ್ಯಾರ್ಥಿಗಳ ಸಮನ್ವಯದ ಕುರಿತು ಸಲಹೆ ನೀಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಸಮಾರಂಭದಲ್ಲಿ ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಕೆ ಎಲ್ ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ್ ಶೆಟ್ಟರ್, ಏಕಸ್ ಕಂಪೆನಿಯ ಅರವಿಂದ್ ಮೆಳ್ಳಿಗೇರಿ ಮತ್ತಿತರರು ಉಪಸ್ಥಿತರಿದ್ದರು.

    ದಸರಾ ಮಹೋತ್ಸವಕ್ಕೆ ರಾಜಮಾತೆ ಪ್ರಮೋದಾದೇವಿ ಅವರಿಗೆ ಆಹ್ವಾನ

    ಜಂಬೂ ಸವಾರಿ ವೀಕ್ಷಣೆಗೆ 500 ಮಂದಿಗೆ ಮಾತ್ರ ಅವಕಾಶ

    MYSURU OCT 5

    ನಾಡಹಬ್ಬ ದಸರಾ-Mysuru Dasara- ಮಹೋತ್ಸವಕ್ಕೆ ರಾಜಮಾತೆ ಪ್ರಮೋದಾದೇವಿ -.Pramoda devi- ಅವರನ್ನು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ -S T Somashekara ಅವರು ಮಂಗಳವಾರ ಅಧಿಕೃತವಾಗಿ ಆಹ್ವಾನಿಸಿದರು.

    ರಾಜಮಾತೆಗೆ ಫಲಪುಷ್ಪ ತಾಂಬೂಲ ನೀಡಿ ಗೌರವಿಸಿ ಆಹ್ವಾನ ನೀಡಲಾಯಿತು. ಸಚಿವರ ಆಹ್ವಾನ ಸ್ವೀಕರಿಸಿದ ಪ್ರಮೋದಾದೇವಿ ಅವರು ದಸರಾ ಆಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಪ್ರತಿವರ್ಷದ ಪದ್ಧತಿಯಂತೆ ದಸರಾ ಮಹೋತ್ಸವಕ್ಕೆ ರಾಜಮಾತೆಯವರನ್ನು ಆಹ್ವಾನಿಸಲಾಯಿತು. ದಸರಾಗೆ ಪೂರ್ಣ ಸಹಕಾರ ನೀಡುವಂತೆ ಕೋರಲಾಯಿತು. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಅರಮನೆಯ ಕಾರ್ಯಕ್ರಮಗಳಿಗೂ ಯಾವುದೇ ಅಡಚಣೆಯಾಗದ ರೀತಿಯಲ್ಲಿ ಸಹಕಾರ ನೀಡುವಂತೆ ಅವರೂ ಕೋರಿದರು. ಅದಕ್ಕೆ ಸಂಪೂರ್ಣ ಸಹಕಾರ ಕೊಡುವುದಾಗಿ ತಿಳಿಸಲಾಗಿದೆ ಎಂದರು.

    ಅ.7ರಿಂದ 15 ರವರೆಗೆ ದಸರಾ ನಡೆಯಲಿದೆ. ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ 400 ಜನರಿಗೆ ಅವಕಾಶ ನೀಡಲಾಗಿದೆ. ಚಾಮುಂಡಿಬೆಟ್ಟದಲ್ಲಿ ಯಾವುದೇ ನಿರ್ಬಂಧ ಇಲ್ಲ. ದೇವರ ದರ್ಶನ ಮಾಡುವವರು ಮಾಡಬಹುದು ಎಂದು ಹೇಳಿದರು.

    ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ, ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಂಬೂ ಸವಾರಿ-Jamboo savari- ನಡೆಯಲಿದೆ. ಇದರ ಹೊರತು ಬೇರೆ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಜಂಬೂ ಸವಾರಿ ವೀಕ್ಷಣೆಗೆ 500 ಜನರಿಗೆ ಅವಕಾಶವಿದ್ದು, ಯಾವರೀತಿ ಅವಕಾಶ ಕಲ್ಪಿಸಬೇಕು ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

    ರಾಜಮಾತೆಗೆ ಆಹ್ವಾನ ನೀಡುವ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ-Pratap Simha- ಶಾಸಕ ಎಲ್.ನಾಗೇಂದ್ರ, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಮೂಡಾ ಅಧ್ಯಕ್ಷ ರಾಜೀವ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್.ಮಂಜುನಾಥಸ್ವಾಮಿ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಪಾಲಿಕೆ ಆಯುಕ್ತರಾದ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಮೈಸೂರು ನಗರ ಬಿಜೆಪಿ ಅಧ್ಯಕ್ಷರಾದ ಶ್ರೀವತ್ಸ ಸೇರಿದಂತೆ ಇತರೆ ಗಣ್ಯರು ಹಾಗೂ ಅಧಿಕಾರಿವರ್ಗದವರು ಉಪಸ್ಥಿತರಿದ್ದರು.

    75 ಮನಸ್ಸುಗಳ ಏಕ ಅಭಿವ್ಯಕ್ತಿ

    ಬೆಂಗಳೂರು ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿ ಈ ವಾರ ಅಭೂತಪೂರ್ವ ಕಲಾ ಪ್ರದರ್ಶನವೊಂದಕ್ಕೆ ಸಾಕ್ಷಿ ಆಯಿತು. ನಾಡಿನ ಹೆಸರಾಂತ 75 ಕಲಾವಿದರು ಒಂದೆಡೆ ಸೇರಿ ಅನಿಶ್ಚತತೆ – ವುಡ್ ಕಟ್ ಪ್ರಿಂಟ್ ಶೀರ್ಷಿಕೆ ಅಡಿ ಒಂದೇ ಅಳತೆಯಲ್ಲಿ ರಚಿಸಿದ ಬೃಹತ್ ಕಲಾ ಪ್ರದರ್ಶನ ನಾಡಿನ ಕಲಾಸಕ್ತರನ್ನು ರಂಜಿಸಿತು. ಇಡೀ ಭಾರತದಲ್ಲಿ ಇಂಥ ಪ್ರದರ್ಶನ ನಡೆದಿದ್ದು ಇದೇ ಮೊದಲು.

    ಕರ್ನಾಟಕದ 75 ಕಲಾವಿದರು ಒಂದೇ ವಸ್ತು ವಿಷಯದಲ್ಲಿ , ಒಂದೇ ಬೃಹತ್ ಅಳತೆಯಲ್ಲಿ , ಒಂದೇ ಗ್ಯಾಲರಿಯಲ್ಲಿ ತಮ್ಮ ಕಲಾಕೃತಿಗಳನ್ನು ಪ್ರಸ್ತುತ ಪಡಿಸಿದ ರೀತಿ ಕಲಾ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿ ಆಯಿತು.

    ಈ ಕಲಾ ಪ್ರದರ್ಶನಕ್ಕೆ ಅನಿಶ್ಚತತೆ ಎಂದು ಹೆಸರಿಟ್ಟಿರುವುದರ ಹಿನ್ನಲೆ ಅರಿತಾಗ ಈ ಕಲಾ ಪ್ರದರ್ಶನದ ಸ್ವಾರಸ್ಯ ಮತ್ತಷ್ಟು ಹೆಚ್ಚುತ್ತದೆ. ಕ್ರಿಯಾತ್ಮಕವಾಗಿ ಬದುಕು ಕಟ್ಟಿಕೊಳ್ಳುವ ಮಾನವರಾದ ನಾವು ನಿಶ್ಚಿತ ಜೀವನವನ್ನು ಬಯಸುತ್ತೇವೆ.ನಮ್ಮದೇ ಶಿಸ್ತಿನ ಜೀವನ ಕ್ರಮದ ಮೂಲಕ ಪ್ರಪಂಚದ ಕ್ರಮದ ಮೇಲೆ ಹಿಡಿತ ಸಾಧಿಸಿ ನಮಗೆ ಬೇಕಾದ ರೀತಿಯ ಜೀವನ ವಿನ್ಯಾಸ ಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಚಲನ ಶೀಲ ಪ್ರಪಂಚದ ಕ್ರಮ ಅನಿಶ್ಚತತೆಯಿಂದ ಕೂಡಿರುತ್ತದೆ.ಹೀಗಾಗಿ ಪ್ರಪಂಚದ ಆರ್ಥಿಕ,ಸಾಮಾಜಿಕ, ರಾಜಕೀಯ, ಖಾಸಗಿ ಸಂಗತಿಗಳ ಪ್ರಭಾವ ಭಿನ್ನ ವಯಸ್ಸಿನ ಕಲಾವಿದರಲ್ಲಿ ಭಿನ್ನ ಆಲೋಚನೆಯನ್ನು ಹುಟ್ಟು ಹಾಕುತ್ತದೆ. ಅದು ಇಲ್ಲಿ ಅಭಿವ್ಯಕ್ತಿಗೊಂಡಿದೆ.

    75 ಕಲಾವಿದರು ಒಂದೇ ವಸ್ತು ವಿಷಯದಡಿ ಅಭಿ್ವ್ಯಕ್ತಿಸಿದ 75 ಸೃಜನಾತ್ಮಕತೆಯನ್ನು,75 ಯೋಚನಾ ಲಹರಿಯನ್ನು,75 ಅಭಿವ್ಯಕ್ತಿಯನ್ನು, 75 ಮನಸ್ಥಿತಿಯನ್ನು ಅರಿಯುವ ಅವಕಾಶವನ್ನು ಈ ಪ್ರದರ್ಶನ ಮಾಡಿಕೊಟ್ಟಿತು.ಕಲಾ ವಿದ್ಯಾರ್ಥಿಗಳಿಗಂತೂ ಈ ಪ್ರದರ್ಶನ ಒಂದು ಕಲಾ ಪಾಠವಾಯಿತು. ಇಲ್ಲಿ ಪ್ರದರ್ಶನಗೊಂಡು ಗ್ರಾಫಿಕ್ ಪ್ರಿಂಟ್ ಗಳು ನೈಜ ಮತ್ತು ಅಮೂರ್ತ ಆಕಾರಗಳನ್ನು ಬಳಸಿಕೊಂಡು ರೂಪಿಸಿರುವ ಕಲಾಕೃತಿಗಳಾಗಿವೆ. ಮುಕ್ಕಾಲು ಪ್ರಿಂಟ್ ಗಳು ಕಪ್ಪು ಬಿಳಪು ನೆಲೆಯಲ್ಲಿದ್ದರೂ ಆಕರ್ಷಣೆಗೇನೂ ಕೊರತೆ ಇರಲಿಲ್ಲ.

    ಪ್ರದರ್ಶನದಲ್ಲಿ ಭಾಗವಹಿಸಿರುವ ಬಹುತೇಕ ಕಲಾವಿದರು ಹೇಳುವಂತೆ ಈ ಬೃಹತ್ ಅಳತೆಯಲ್ಲಿ ಗ್ರಾಫಿಕ್ಸ್ ಪ್ರಿಂಟ್ ಮಾಡಿರುವುದು ಇದೇ ಮೊದಲ ಬಾರಿ . ಆದರೆ ಅದರ ಅನುಭವ ವೀಕ್ಷಕರ ಅರಿವಿಗೆ ಬಾರದಂತೆ ಕಲಾವಿದರು ತಮ್ಮ ಕಲಾಕೃತಿಗಳನ್ನು ಉತ್ತಮ ನೆಲೆಯಲ್ಲಿ ಅಭಿವ್ಯಕ್ತಿಸಿದ್ದಾರೆ . ಎಲ್ಲಾ ಕಲಾಕೃತಿಗಳು ಸುಂದರವಾಗಿದ್ದರೂ ಕೆ ಆರ್ ಸತೀಶ್ , ಶಿವಶಂಕರ ಐ ಸುತರ್, ವಿ ಜಿ ವೇಣುಗೋಪಾಲ್,ಕೆ ಎಸ್. ಬಸವರಾಜ್, ಕೆ ಆರ್ ಬಸವರಾಜಚಾರ್,ಎಚ್ ಕೆ ಆರತಿ , ವಿ ಎನ್ ಕೃಷ್ಣಪ್ಪ. ಡಿ ಜಗದೀಶ, ಸುಬ್ರಯ್ ಎನ್ ಸಿದ್ಧಿ, ಕೆ ಟಿ ಶಿವಪ್ರಸಾದ್, ವಸುಧಾ ಭಟ್, ಪಿ ಅಲಕಾರಾವ್, ಚಂದ್ರಹಾಸ್ ವೈ ಜಾಲಿಹಾಳ್, ರಾಯಲ್ ಕ್ರಿಷ್ ಮತ್ತು ಜೆ. ಪವನಕುಮಾರ್ ಅವರ ಕಲಾಕೃತಿಗಳು ಗಮನ ಸೆಳೆದವು.

    ‘ಒಮ್ಮೆ ಬಂದವರು ಮತ್ತೆ ಮತ್ತೆ ಬಂದು ವೀಕ್ಷಿಸುತ್ತಿದ್ದಾರೆ.ಕಲಾವಿದರ ಜೊತೆ ವಿಚಾರವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇದು ಕಲಾ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ’ ಎಂದು ಆಯೋಜಕರಲ್ಲಿ ಒಬ್ಬರಾದ ಮನು ಚಕ್ರವರ್ತಿ ಕನ್ನಡಪ್ರೆಸ್.ಕಾಮ್ ಗೆ ತಿಳಿಸಿದ್ದಾರೆ,

    ಈ ಕೋವಿಡ್ ಸಂಕಟದಲ್ಲಿ ಕಲಾ ಪ್ರದರ್ಶನಗಳು ಏರ್ಪಾಡು ಆಗುವುದೇ ವಿರಳ ವಾಗಿರುವ ಸಂದರ್ಭದಲ್ಲಿ 75 ಕಲಾವಿದರನ್ನು ಒಂದೆಡೆ ಸೇರಿಸಿ ಬೃಹತ್ ಕಲಾ ಪ್ರದರ್ಶನಕ್ಕೆ ಕಾರಣೀಕರ್ತರಾದ ಚಿತ್ರಕಲಾ ಪರಿಷತ್ ಮತ್ತು ಆಯೋಜಕರಾದ ಅರ್ಪಿತಾ, ಅನಿತಾ ಮತ್ತು ಮನು ಚಕ್ರವರ್ತಿ ಅವರ ಶ್ರಮ ಸಾರ್ಥಕವಾಗಿದೆ.

    ಗೆದ್ದು ಸೋಲುವುದಕ್ಕಿಂತ ಸೋತು ಗೆಲ್ಲಿ

     ಸುಮಾವೀಣಾ

    ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು-ದೇವೇಂದ್ರನ ಸಭೆಯಲ್ಲಿ ವಿಶ್ವಾಮಿತ್ರ ಮತ್ತು ವಸಿಷ್ಠರೆಂಬ  ನಡುವೆ  ನಡೆದ ಕಲಹ ಹರಿಶ್ಚಂದ್ರನ  ಪಾಲಿಗೆ ಸಂಕಟದ ಬಿರುಗಾಳಿಯಾಗುತ್ತದೆ . “ಹರಿಶ್ಚಂದ್ರ ಭೂನಾಥನೊಳಗ ಸತ್ಯವನು  ಕಾಣಿಸಲು  ಬಲ್ಲರು ಧಾತ್ರಿಯೊಳು ಮುನ್ನ ಹುಟ್ಟಿದವರಿಲ್ಲ” ಎಂಬ ವಸಿಷ್ಠರ ಮಾತು ವಿಶ್ವಾಮಿತ್ರರನ್ನು ಕೆರಳಿಸಿ ಹರಿಶ್ಚಂದ್ರನನ್ನು  ಅಸತ್ಯನನ್ನಾಗಿ ಮಾಡುವೆನೆಂಬ ಪ್ರತಿಜ್ಞೆಯನ್ನು ಮಾಡುವಷ್ಟು ವಿಕಟ ಹಠವನ್ನು ಹುಟ್ಟಿಸುತ್ತದೆ.

    ಆ ಸಂದರ್ಭದಲ್ಲಿ ಹರಿಶ್ಚಂದ್ರನ ಕಷ್ಟ ತಾಪತ್ರಯಗಳಿಗೆ ಮುನ್ನುಡಿಯೆಂಬಂತೆ ರಾಘವಾಂಕ  ತನ್ನ ‘ಹರಿಶ್ಚಂದ್ರ ಕಾವ್ಯ’ದ ‘ಮೃಗಯಾಪ್ರಸಂಗ’ದ ಆರಂಭದಲ್ಲಿಯೇ ‘ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು’ ಎಂಬ ಮಾತನ್ನು ಹೇಳುತ್ತಾನೆ.

    ಬಲಿಷ್ಠ ಕೋಣಗಳೆರಡು  ನಾ ಸೋಲೆನು, ನಾ ಬಿಡೆನು ಎಂದು ಇದ್ದೆಲ್ಲಾ ಶಕ್ತಿ ಸಂಚಯಿಸಿಕೊಂಡು  ಹೋರಾಟ ಮಾಡಿದರೆ ಅವುಗಳಿಗೆ ಪೆಟ್ಟಾಗುವುದಕ್ಕೆ ಮೊದಲು ಅವುಗಳು ಹೋರಾಡುವ ಸ್ಥಳದಲ್ಲಿದ್ದ ಗಿಡಗಳಿಗೆ ಮೊದಲು ಹಾನಿಯಾಗುತ್ತದೆ. ಇನ್ಯಾರದೋ ಸಂಕಟಕ್ಕೆ  ಇನ್ಯಾರೋ ಕಷ್ಟ  ಅನುಭವಿಸಬೇಕಾಗುತ್ತದೆ.

    ಇದೇ ಮಾತನ್ನು ವನಮಾಲಾ  ವಿಶ್ವನಾಥ್ ರವರು  Two mighty bulls lock horns; it spells death to plant”.  ಎಂಬುದಾಗಿ THE LIFE OF HARISHCHANDRA  ಪುಸ್ತಕದಲ್ಲಿ ಅನುವಾದಿಸಿದ್ದಾರೆ.

    ಈ ಸಂದರ್ಭಕ್ಕೆ ಅಪ್ಪ ಅಮ್ಮಂದಿರ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆಯನ್ನು  ಸಂವಾದಿಯಾಗಿ ತೆಗೆದುಕೊಳ್ಳಬಹುದು.  ನಾ ಮೇಲು, ನೀ ಕೀಳು ,ನಾನೆ ಅಂತಿಮ,   ನಾ ಹೇಳಿದಂತೆಯೇ ಎಲ್ಲವೂ ನಡೆಯಬೇಕು,   ಇತ್ಯಾದಿ ನಾನು  ನನ್ನದು  ಎನ್ನುವ ಅಹಮಿಕೆಯ ಮದ ತಲೆಗೇರಿದರೆ, ದರ್ಪದ  ಪೊರೆ ಕಣ್ಣನ್ನು ಆವರಿಸಿದರೆ  ಸಂಸಾರ ಅನ್ನುವುದು ನಿತ್ಯ ನರಕವೇ ಸರಿ! 

    ತಾರ್ಕಿಕತೆ ಸಂಯಮ ಅನ್ನುವ ಬಿಡುಗಣ್ಣುಗಳು  ಇಲ್ಲದೆ ಇದ್ದರೆ     ಮಕ್ಕಳು ಮೊದಲಿಗೆ ಬಲಿಪಶುಗಳಾಗುತ್ತಾರೆ.  ಸಂಕಟ ಅನುಭವಿಸುತ್ತಾರೆ ಯಾರು ಸರಿ  ಯಾರು ತಪ್ಪು ಎಂಬ ತೀರ್ಮಾನಕ್ಕೆ ಬರಲಾರದೆ   ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ.  ‘‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರು’’ ಎಂಬಂತೆ ಪ್ರತಿಷ್ಠೆ , ಹೆಸರಿನ ಹಂಬಲ,  ಸೋಲಿನ ಭೀತಿಯಲ್ಲಿ ತೋರಿಸುವ ದರ್ಪ  ಪರೋಕ್ಷವಾಗಿ ನಿರಪರಾಧಿಗಳನ್ನು ಬಲಿತೆಗೆದುಕೊಳ್ಳುತ್ತದೆ.  ಎದುರಿಗಿರುವವರನ್ನು ಮಣಿಸಿಯೇ ತೀರಬೇಕೆಂಬ ಛಲದ ಬದಲು ಅವರನ್ನು ಒಪ್ಪಿಕೊಳ್ಳುವ, ಶ್ಲಾಘಿಸುವ  ಸಹೃದಯತೆ ಎಲ್ಲರಲ್ಲಿಯೂ ಇರಬೇಕು.  ಮನುಷ್ಯನ ಸಾಂಘಿಕ ಬದುಕಿನ   ಅತ್ಯಗತ್ಯ   ಲಕ್ಷಣ ಇದು.

    ನಮ್ಮ  ಗೆಲುವಿನ ಬರದಲ್ಲಿ  ಅಮಾಯಕರನ್ನು ಬಲಿಪಶುಗಳನ್ನಾಗಿಸುವುದು  ದುರುಳತನ   ಅಲ್ಲವೆ!  ತಿರಸ್ಕೃತಿ ಯಾರಲ್ಲಿಯೂ ಇರಬಾರದು.ಸೋಲು ಗೆಲುವುಗಳು ಒಂದೇ ನಾಣ್ಯದ ಎರಡು ಮುಖಗಳು . ಗೆದ್ದು ಸೋಲುವುದಕ್ಕಿಂತ ಸೋತು ಗೆಲ್ಲುವುದು  ಸೌಧರ್ಮಿಕೆ ಎಂಬ  ಅಂತಃಸತ್ವ   “ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು” ಎಂಬ ಮಾತಿನಲ್ಲಿ ಅಡಕವಾಗಿದೆ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆಇವರನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಆನೆಗಳ ಕುರಿತು ರಮೇಶ್ ಉತ್ತಪ್ಪ ಅವರ ನಾಲ್ಕು ಕೃತಿಗಳು ಅ.4 ರಂದು ಲೋಕಾರ್ಪಣೆ


    MYSURU OCT 3


    ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಆನೆಗಳ ವಿಸ್ಮಯ ಲೋಕದ ಕುರಿತು ರಚಿಸಿರುವ ನಾಲ್ಕು ಕೃತಿಗಳು ವನ್ಯಜೀವಿ ಸಪ್ತಾಹದ ವಿಶೇಷವಾಗಿ ಅಕ್ಟೋಬರ್ 4 ರಂದು ಲೋಕಾರ್ಪಣೆಯಾಗಲಿವೆ.
    ಅಭಿಮನ್ಯು ದಿ ಗ್ರೇಟ್’,ಕುಶಾ ಕೀ ಕಹಾನಿ-ಎ ಟ್ರೂ ಲವ್ ಸ್ಟೋರಿ’, ಆನೆ ಲೋಕದ ವಿಸ್ಮಯ’ ಹಾಗೂ ಇದರ ಇಂಗ್ಲಿಷ್ ಅನುವಾದದಿ ಟಾಕಿಂಗ್ ಎಲಿಫೆಂಟ್’ ಕೃತಿಗಳು ಹೊರಬರುತ್ತಿವೆ.

    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಕರ್ನಾಟಕ ಅರಣ್ಯ ಇಲಾಖೆ, ವೈಲ್ಡ್ಲೈಫ್ ಕನ್ಸರ್‌ವೇಷನ್ ಫೌಂಡೇಷನ್ ಹಾಗೂ ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನದ ಸಹಯೋಗದಲ್ಲಿ ಕಾರ್ಯಕ್ರಮ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

    ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜ್ಯ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಶ್ರೀ ವಿಜಯಕುಮಾರ್ ಗೋಗಿ (ಐಎಫ್‌ಎಸ್) ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಸಂಸದ ಪ್ರತಾಪ್ ಸಿಂಹ, ಮೈಸೂರು ಸಿಸಿಎಫ್ ಹೀರಾಲಾಲ್, ಚಾಮರಾಜನಗರ ಸಿಸಿಎಫ್ ಮನೋಜ್‌ಕುಮಾರ್, ವೈಲ್ಡ್ ಲೈಫ್ ಕನ್ಸರ್‌ವೇಷನ್ ಫೌಂಡೇಷನ್‌ನ ರಾಜ್‌ಕುಮಾರ್ ಅರಸ್ ಕೃತಿ ಬಿಡುಗಡೆ ಮಾಡಲಿದ್ದಾರೆ. ಕೃತಿ ಕುರಿತು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನೋದ್ ಕುಮಾರ್ ನಾಯ್ಕ್ ಮಾತನಾಡಲಿದ್ದಾರೆ. ಈ ಸಂದರ್ಭ ಅಭಿಮನ್ಯು ಮಾವುತ ವಸಂತ್ ಹಾಗೂ ಫೊಟೊ ಜರ್ನಲಿಸ್ಟ್ ನಾಗೇಶ್ ಪಾಣತ್ತಲೆ ಅವರನ್ನು ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್‌ಗೌಡ ಸನ್ಮಾನಿಸಲಿದ್ದಾರೆ.

    ಕೃತಿಯ ಕುರಿತು:
    ಅಭಿಮನ್ಯು ದಿ ಗ್ರೇಟ್’: ಅಭಿಮನ್ಯು ಅರಣ್ಯ ಇಲಾಖೆಯ ಅಷ್ಟೇ ಏಕೆ, ರಾಜ್ಯದ ಆನೆ ರಾಯಭಾರಿ. ದೇಶ ವಿದೇಶದಲ್ಲಿಯೂ ಈತ ಖ್ಯಾತ ಗಳಿಸಿದ್ದಾನೆ. ಯಾವ ಆನೆಗೂ ಇಲ್ಲದ ಗುಣ ವಿಶೇಷತೆಗಳಿವೆ. ಈತನ ಬಗ್ಗೆ ಎಲ್ಲರಿಗೂ ತಣಿಯದ ಕುತೂಹಲ. ಆನೆಯೊಂದು ಈ ಪರಿಯಲ್ಲಿ ಜನರಿಗೆ ಆಪ್ತವಾಗಬಹುದೇ ಎನ್ನುವಷ್ಟು ಅಚ್ಚರಿ ಮೂಡಿಸಿದ್ದಾನೆ.

    ಈತ ಆನೆ, ಹುಲಿ ಕಾರ್ಯಾಚರಣೆ, ಅಂಬಾರಿ ಹೊರುವುದಕ್ಕಷ್ಟೇ ಸೀಮಿತವಾಗಿಲ್ಲ. ಮನುಷ್ಯರ ಭಾವನೆಯನ್ನು ಅರ್ಥ ಮಾಡಿಕೊಳ್ಳಬಲ್ಲದ್ದು. ಅದರಲ್ಲಿಯೂ ಅಭಿಮನ್ಯು ಹಾಗೂ ಮಾವುತ ವಸಂತನ ಸಂಬAಧವಿದೆಯಲ್ಲ; ಅದು ಆನೆ-ಮಾನವ ಎಂಬ ಭೇದವನ್ನೇ ಬದಿಗಿರಿಸಿದೆ. ಇವರಿಬ್ಬರು ಬಾಲ್ಯದ ಗೆಳೆಯರು. ಕಣ್ಣಿನಲ್ಲಿಯೇ ಮಾತನಾಡಿಕೊಳ್ಳುವಷ್ಟು ಆಪ್ತರು. ಇವರಿಬ್ಬರು ಮುಂದಡಿಯಿಟ್ಟರೆ ಎಂತಹ ಕಾರ್ಯಾಚರಣೆಯಲ್ಲಿಯೂ ಹುಲಿ, ಕಾಡಾನೆಗಳ ಹೆಡೆಮುರಿ ಕಟ್ಟಬಲ್ಲರು. ಇವರಿಗೆ ಇವರೇ ಸಾಟಿ. ಈ ಕುರಿತು ಕೃತಿಯಲ್ಲಿ ಸ್ವಾರಸ್ಯಕರ ವಿಷಯಗಳಿವೆ. ಕುಶಾ ಕೀ ಕಹಾನಿ’ : ದುಬಾರೆ ಆನೆ ಶಿಬಿರದ ಸದಸ್ಯನಾಗಿದ್ದ ಕುಶಾ ಆನೆಯ ಲವ್ ಸ್ಟೋರಿಯನ್ನು ಆಧಾರಿಸಿ ರಮೇಶ್ ಉತ್ತಪ್ಪ ಕುಶಾ ಕೀ ಕಹಾನಿ- ಎ ಟ್ರೂ ಲವ್ ಸ್ಟೋರಿ’ ರಚಿಸಿದ್ದಾರೆ. ಇದಕ್ಕೆ ಪ್ರೇಮಕವಿ ಎಂದೇ ಖ್ಯಾತಿ ಗಳಿಸಿರುವ ಸಿನಿಮಾ ಸಾಹಿತಿ ಹಾಗೂ ನಿರ್ದೇಶಕ ಕವಿರಾಜ್ ಆಕರ್ಷಕ ಮುನ್ನುಡಿ ಬರೆದಿದ್ದಾರೆ.ಇಂತಹ ಕೃತಿಯೊಂದು ಬರಬಹುದು ಎಂದು ನಿರೀಕ್ಷಿಸಿರಲಿಲ್ಲ. ಪ್ರಾಣಿಗಳು ಕೂಡ ಪ್ರೀತಿಸುತ್ತವೆ. ಅವುಗಳಿಗೆ ಮನಸ್ಸಿದೆ ಎನ್ನುವುದನ್ನು ಕೃತಿಯಲ್ಲಿ ಆಕರ್ಷಕವಾಗಿ ಚಿತ್ರಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿರುವ ಅವರು, ಕೃತಿಯನ್ನು ಬಹುವಾಗಿ ಮೆಚ್ಚಿದ್ದಾರೆ. ಇದೊಂದು ಥೇಟ್ ಸಿನಿಮಾ ಕಥೆಯಾಗಬಹುದು’ ಎಂದು ಹೇಳಿದ್ದಾರೆ. ಆನೆಲೋಕದ ವಿಸ್ಮಯ’: ನಾವು ಮನುಷ್ಯರ ಸಾಧನೆಗಳನ್ನು ಬಣ್ಣಿಸುತ್ತೇವೆ. ಅವರ ಕುರಿತು ಆತ್ಮಚರಿತ್ರೆ, ಡಾಕ್ಯುಮೆಂಟರಿ, ಸಿನಿಮಾಗಳನ್ನು ಮಾಡುತ್ತೇವೆ. ಆದರೆ, ಆನೆ ಹೀರೋಗಳ ಬಗ್ಗೆ? ಈ ಕಾರಣಕ್ಕೆ ವಿಶ್ವದಲ್ಲಿ ಸಾಧನೆ ಮಾಡಿದ, ಖ್ಯಾತಿಗಳಿಸಿದ ಆನೆಗಳ ವೈಯಕ್ತಿಕ ಸ್ಟೋರಿಗಳಿವೆ. ವಿಭಿನ್ನ ವಸ್ತುವನ್ನು ಹೊಂದಿದೆ.
    `ದಿ ಟಾಕಿಂಗ್ ಎಲಿಫೆಂಟ್’: ಆನೆ ಲೋಕದ ವಿಸ್ಮಯದ ಇಂಗ್ಲಿಷ್ ಅನುವಾದ. ಅತ್ಯುತ್ತಮ ಗುಣಮಟ್ಟದಲ್ಲಿ ಉತ್ತಮ ಚಿತ್ರಗಳೊಂದಿಗೆ ಕೃತಿ ಮುದ್ರಣವಾಗಿದೆ. ಖ್ಯಾತ ಬರಹಗಾರ್ತಿ ಪ್ರೇಮಲತಾ ಕೆ.ಆರ್ ಅವರು ಅನುವಾದಿಸಿದ್ದಾರೆ. ಲೇಖಕರ ಮೊ.ನಂ: 9483049005

    MONEY ವಿಕಾಸದೊಂದಿಗೆ ಮನೋವಿಕಾಸ

    ಬಾಂಬೆ ಷೇರು ವಿನಿಮಯ ಕೇಂದ್ರದ ಹೆಗ್ಗುರುತಾದ ಸೆನ್ಸೆಕ್ಸ್‌ 60 ಸಾವಿರದ ಗಡಿ ದಾಟಿ ಸರ್ವಕಾಲೀನ ದಾಖಲೆ ಸೃಷ್ಠಿಸಿದ ಸಂದರ್ಭದಲ್ಲಿ ಸೆನ್ಸೆಕ್ಸ್‌ ಸೀನಿಯರ್‌ ಸಿಟಿಜನ್‌ ಸ್ಟೇಟಸ್ ಗೆ ತಲುಪಿದೆ ಎಂದು ವಿಜೃಂಭಿಸಿದರು. ಆದರೆ ತದ ನಂತರದಲ್ಲಿ ಸತತವಾದ ಇಳಿಕೆಯತ್ತ ಸಾಗುತ್ತಿರುವ ಸೆನ್ಸೆಕ್ಸ್‌ ನಿವೃತ್ತಿಯಾಯಿತೇ ಎಂಬ ಸಂಶಯವನ್ನು ಮೂಡಿಸುತ್ತದೆ.

    ಹಾಸಿಗೆ ಇದ್ದಷ್ಠು ಕಾಲು ಚಾಚು ಎಂಬ ನಾಣ್ಣುಡಿಯು ಮರೆಯಾಗುತ್ತಿದ್ದು ಷೇರುಪೇಟೆಯಲ್ಲಿ ಹೊಸ ವಿಧದ ಚಟುವಟಿಕೆಯು ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿದ್ದು, ಸ್ವಲ್ಪ ಬಂಡವಾಳದಿಂದ ಅಗಾಧವಾದ ವಹಿವಾಟು ನಡೆಸಲು ಅನುವುಮಾಡಿಕೊಡುತ್ತಿರುವ ಈ ವಿಧವನ್ನು ಲೀವರೇಜ್‌ ಟ್ರೇಡಿಂಗ್‌ ಎನ್ನುವರು. ಇಲ್ಲಿ ವಹಿವಾಟು ನಡೆಸಲು ಪೇಟೆಯಲ್ಲುಂಟಾಗುವ ಏರಿಳಿತಗಳ ಮೇಲೆ ಸತತವಾದ ಗಮನ ಹರಿಸಬೇಕಾಗುತ್ತದೆ.

    ವಹಿವಾಟು ನಡೆಸುವ ಅವಕಾಶಕ್ಕಾಗಿ ನಿರಂತರವಾಗಿ ʼ ಟರ್ಮಿನಲ್‌ʼ ಮುಂದೆ ಕುಳಿತುಕೊಂಡಿರುವ ದೃಶ್ಯಗಳು ಸಾಮಾನ್ಯವಾಗಿವೆ. ಪೇಟೆಗಳು ಏರಿಕೆಯಲ್ಲಿರುವಾಗ ಇದು ಹೆಚ್ಚು ಆಕರ್ಷಿತವಾಗಿ, ಉಲ್ಲಾಸಮಯವಾಗಿರುತ್ತದೆ. ಅದೇ ಪೇಟೆಯು ಕುಸಿತದ ಕಡೆ ತಿರುಗಿದಲ್ಲಿ ಉಂಟಾಗಬಹುದಾದ ಬಂಡವಾಳ ಕೊರೆತವು ಮನಸ್ಸಿನ ಮೇಲೆ ಎಂತಹ ದುಷ್ಫರಿಣಾಮ ಬೀರಬಹುದೆಂದು ಕಲ್ಪಿಸಲು ಅಸಾಧ್ಯ. ಕಾರಣ ಬಂಡವಾಳವು ಕಣ್ಣು ಮುಂದೆಯೇ ಕರಗುತ್ತಿರುವುದು ನೇರವಾಗಿ ಮನಸ್ಸಿಗೆ ನಾಟುತ್ತದೆ. ಇಂತಹ ಪರಿಸ್ಥಿತಿಯು ದೇಹದ ಆರೋಗ್ಯದ ಮೇಲೂ ನಕಾರಾತ್ಮಕ ಪ್ರಭಾವ ಬೀರುವುದು ನಿಸ್ಸಂದೇಹ.

    ವ್ಯವಹಾರವಾದ ಹೂಡಿಕೆ

    ಇಲ್ಲಿ ಹೂಡಿಕೆಯು ಹೂಡಿಕೆಯಾಗದೆ ಕೇವಲ ವ್ಯವಹಾರಮಯವಾಗಿದೆ. ಲೀವರೇಜ್‌ ಟ್ರೇಡಿಂಗ್‌ ಆಗಲಿ ಫ್ಯೂಚರ್‌ ಅಂಡ್‌ ಆಪ್ಶನ್ಸ್‌ ವಿಧವಾಗಲಿ ಚಟುವಟಿಕೆ ನಡೆಸುವ ಇಚ್ಚೆ ಇದ್ದಲ್ಲಿ ಸಾಕಷ್ಟು ತಜ್ಞತೆಯ ಅವಶ್ಯಕತೆ ಇದೆ. ವಿವಿಧ ರೀತಿಯ ಚಾರ್ಟ್‌, ಗ್ರಾಫ್‌ ಗಳನ್ನು ಅಳವಡಿಸಿಕೊಳ್ಳುವ ಕೌಶಲ್ಯದ ಪರಿಣತಿ ಬೇಕು.

    ಆದರೆ ಸಾಂಪ್ರದಾಯಿಕ ಹೂಡಿಕೆಯ ವಿಧವಾದ ʼಹೂಡು- ಹೊಂದು – ಹೊರಡುʼ ( Invest- hold- sell for profit) ರೀತಿಯಲ್ಲಿ ಚಟುವಟಿಕೆಯು ನಿರಾಳ, ನಿರಾಯಾಸ, ಸಮಾಧಾನಕರ. ಕಾರಣ ಒಮ್ಮೆ ಆಯ್ಕೆ ಮಾಡಿಕೊಂಡು ಖರೀದಿಸಿದ ಷೇರಿಗೆ ಸಂಪರ್ಣ ಹಣ ಪಾವತಿಸಿರುವುದರಿಂದ ಡಿ ಮ್ಯಾಟ್‌ ಖಾತೆಯಲ್ಲಿರುತ್ತದೆ. ಆ ಷೇರಿನ ಬೆಲೆ ಗಮನಾರ್ಹ ಏರಿಕೆ ಕಂಡಾಗ ಮಾತ್ರ ನಗದೀಕರಿಸಿಕೊಳ್ಳಲು ಅಥವಾ ಹಣದ ಅಗತ್ಯತೆ ಇದ್ದಾಗ ಮಾರಾಟಮಾಡುವವರೆಗೂ ಹೂಡಿಕೆ ಮುಂದುವರೆಸುವುದರಿಂದ ಮನಸ್ಸು ನೆಮ್ಮದಿಯನ್ನು ಕಂಡು ಒತ್ತಡಗಳಿಂದ ಮುಕ್ತವಾಗಿರುತ್ತದೆ. ಆರೋಗ್ಯದ ಮೇಲೆ ಒತ್ತಡ ಬೀಳದೆ ಇರುವ ಕಾರಣ ಸುಧಾರಣೆಯೂ ಆಗುವುದು. ಇದರಿಂದ ಹೂಡಿಕೆಯು ಮನಿ ವಿಕಾಸದೊಂದಿಗೆ ಮನೋವಿಕಾಸಕ್ಕೂ ಕಾರಣವಾಗುತ್ತದೆ.

    ಉಲ್ಲಾಸಮಯ ಮನಸ್ಸು ಮುಖ್ಯ

    ಮನಿ ವಿಕಾಸಗೊಳ್ಳಲು ಪೂರಕ ಅಂಶ ಉಲ್ಲಾಸಮಯ ಮನಸ್ಸು. ಮನಿ ಮನಸ್ಸು ಉತ್ತಮವಾಗಿದ್ದಲ್ಲಿ ಬೆಳೆಯಬಹುದಾದ ಅಂಶ ಎಂದರೆ ನಿ಼ಷ್ಠೆ, ನಿಯತ್ತುಗಳು ತಾಂಡವವಾಡುವುದರಿಂದ ಹೂಡಿಕೆಯು ದೀರ್ಘಕಾಲೀನ ಬಾಂಧವ್ಯವನ್ನು ಬೆಳೆಸುವುದು. ಈ ರೀತಿಯ ನಿಷ್ಠೆಯ ಫಲವೇ ನಾವು ಹಿಂದೆ ಕಾಲ್ಗೇಟ್‌ ಪಾಲ್ಮೊಲಿವ್‌ 1978 ರಿಂದ 1994 ರ ಅವಧಿಯಲ್ಲಿ ಹೂಡಿಕೆದಾರರ ಬಂಡವಾಳವನ್ನು ಸುಮಾರು 50 ಪಟ್ಟು ವೃದ್ಧಿಸುವಂತೆ ಮಾಡಿದೆ. ಹೂಡಿಕೆಯ ಶೈಲಿ ಹೇಗಿರಬೇಕೆಂದರೆ ನಾವು ಹೂಡಿಕೆ ಮಾಡಿದ ಕಂಪನಿಯ ಘನತೆ, ಗೌರವ, ಪ್ರತಿಷ್ಠೆಯ ಮಟ್ಟ ಸಂಪೂರ್ಣ ನಂಬಿಕೆಗೆ ಅರ್ಹವಾದ ಮಟ್ಟದಲ್ಲಿರಬೇಕು. ಕಾರ್ಪೊರೇಟ್‌ಗಳ ಮೇಲೆ ಸೆಬಿ ನಿಯಂತ್ರಣ ಜಾರಿಯಾಗುವುದಕ್ಕಿಂತ ಮುಂಚಿನದಿನಗಳಲ್ಲಿ ಕಾರ್ಪೊರೇಟ್‌ಗಳು ಎಂತಹ ರೀತಿಯ ಬದ್ಧತೆ, ಭಾದ್ಯತೆಗಳನ್ನು ಹೊಂದಿದ್ದವು ಎಂಬುದಕ್ಕೆ ಕಾಲ್ಗೇಟ್‌ಪಾಲ್ಮೊಲಿವ್‌, ಹೌಸಿಂಗ್‌ಡೆವೆಲಪ್ಮೆಂಟ್‌ಫೈನಾನ್ಸ್‌ಕಾರ್ಪೊರೇಷನ್‌ಗಳಂತಹ ಕಂಪನಿಗಳು ಉತ್ತಮ ಉದಾಹರಣೆಯಾಗಿವೆ.

    ಕಾಲ್ಗೇಟ್‌ ಪಾಲ್ಮೊಲಿವ್‌ (ಇಂಡಿಯಾ) ಲಿಮಿಟೆಡ್:‌

    ಕಾಲ್ಗೇಟ್ ಕಂಪನಿಯ ಇತಿಹಾಸವನ್ನರಿತಾಗ ಸಮಾಧಾನದ ಉತ್ತರ ಸಿಗಬಹುದು. ಈ ಕಂಪನಿಯು ಭಾರತದಲ್ಲಿ 1978 ರಲ್ಲಿ ಅಂದಿನ ಫೆರಾ ನಿಯಮದಡಿ 11.79 ಷೇರುಗಳನ್ನು ಪ್ರತಿ ಷೇರಿಗೆ ರೂ.15 ರಂತೆ ವಿತರಿಸಿತು. ನಂತರದಲ್ಲಿ ಕಂಪನಿಯು 1982 ರಲ್ಲಿ,1985 ರಲ್ಲಿ, 1987 ರಲ್ಲಿ, 1989 ರಲ್ಲಿ, 1994 ರಲ್ಲಿ 1:1 ರ ಅನುಪಾತದ ಬೋನಸ್ ಷೇರು ವಿತರಿಸಿ ಹೂಡಿಕೆದಾರರ ಮೆಚ್ಚುಗೆಗೆ ಪಾತ್ರವಾಯಿತು.1991 ರಲ್ಲಿ 3:5 ಅನುಪಾತದ ಬೋನಸ್ ಷೇರು ವಿತರಿಸಿತು. ಅಂದರೆ ಮೊದಲ ವಿತರಣೆಯಲ್ಲಿ, 1978 ರಲ್ಲಿ 100 ಷೇರು ಪಡೆದವರ ಹೂಡಿಕೆ 1994 ರವರೆಗೆ ಐವತ್ತು ಪಟ್ಟು ಬೆಳೆದಿದೆ. ಇದರೊಂದಿಗೆ ಅಧಿಕ ಲಾಭಾಂಶವನ್ನು ನೀಡಿದೆ.

    ಈ ಕಂಪನಿಯ ಷೇರು ಬಂಡವಾಳವು ಆರಂಭದ ರೂ.2 ಕೋಟಿಯಿಂದ ರೂ.136 ಕೋಟಿಗೆ ಈ ಅವಧಿಯಲ್ಲಿ ತಲುಪಿದ್ದು, ಇದರಲ್ಲಿ ಸಿಂಹ ಪಾಲು ಬೋನಸ್ ಷೇರುಗಳದ್ದಾಗಿದೆ. ಹಾಗಾಗಿ,ಸಣ್ಣ ಹೂಡಿಕೆದಾರರ ಅಭಿಮಾನಿ ಷೇರಾಗಿದೆ. ಕಂಪನಿಯ ಷೇರು ಬಂಡವಾಳವು ಗಜಗಾತ್ರಕ್ಕೆ ಬೆಳೆದ ಕಾರಣ ಮತ್ತೊಮ್ಮೆ ಬೋನಸ್‌ ಷೇರು ವಿತರಿಸಿದರೆ ಹೆಚ್ಚಾಗುವ ಬಂಡವಾಳದ ಅಗತ್ಯತೆ ಇಲ್ಲದ ಕಾರಣ ಮತ್ತು ಕಂಪನಿಯು ಹೊಂದಿರುವ ಮೀಸಲು ನಿಧಿಯನ್ನು ಸದುಪಯೋಗ ಪಡಿಸಲು ಈ ಕಂಪನಿಯು 2007 ರಲ್ಲಿ ತನ್ನ ಷೇರುದಾರರ ಹೂಡಿಕೆಯಾದ ಪ್ರತಿ ಷೇರಿನ ರೂ.10 ರಲ್ಲಿ ರೂ.9ನ್ನು ಹಿಂದಿರುಗಿಸಿತು. ಈ ಮೂಲಕ ರೂ.122 ಕೋಟಿ ಹಣವನ್ನು ಹೂಡಿಕೆದಾರರಿಗೆ ಹಿಂದಿರುಗಿಸಿದೆ ಇಂತಕ ಕ್ರಮಕೈಗೊಂಡ ಪ್ರಥಮ ಕಂಪನಿಯಾಯಿತು. ಸೆಪ್ಟೆಂಬರ್ 2015 ರಲ್ಲಿ 1:1 ರ ಅನುಪಾತದ ಬೋನಸ್ ಷೇರು ವಿತರಿಸಿದೆ. ಇದರಿಂದ ಕಂಪನಿಯ ಷೇರುಬಂಡವಾಳವು ರೂ.27.20 ಕೋಟಿಗೆ ತಲುಪಿದೆ. ಇಷ್ಟೆಲ್ಲಾ ಬೋನಸ್‌ ವಿತರಣೆಗಳ ಜೊತೆಗೆ ಆಕರ್ಷಕವಾದ ಲಾಭಾಂಶಗಳನ್ನೂ ಸಹ ವಿತರಿಸಿದೆ. ಆದಾಗ್ಯೂ ಸಹ ರೂ.1 ರ ಮುಖಬೆಲೆಯ ಷೇರಿನ ಬೆಲೆ ರೂ.1,680 ರ ಸಮೀಪವಿದೆ.

    ಹೆಚ್‌ ಡಿ ಎಫ್‌ ಸಿ ಲಿಮಿಟೆಡ್:

    ಕಾರ್ಪೊರೇಟ್‌ ನೀತಿಪಾಲನೆಗೆ ಹೆಚ್ಚು ಆದ್ಯತೆಯು ಈಗಿನ ದಿನಗಳಲ್ಲಿ ನೀಡಲಾಗುತ್ತಿದ್ದು ಇದಕ್ಕೆ ಶಾಸನಬದ್ಧ ನಿಯಮಗಳನ್ನೂ ಸಹ ರೂಪಿಸಲಾಗಿದೆ.

    ಈ ನಿಯಮಗಳು ಜಾರಿಯಾಗುವ ಮುಂಚಿನ ವರ್ಷಗಳಲ್ಲಿ ಅಳವಡಿಸಿಕೊಂಡು ಬಂದಿರುವ ಕಂಪನಿ ಎಂದರೆ ಹೆಚ್‌ ಡಿ ಎಫ್‌ ಸಿ ಲಿಮಿಟೆಡ್‌. ಕಂಪನಿಯ ಚಟುವಟಿಕೆ, ಆಡಳಿತ ಮಂಡಳಿಯ ಹೂಡಿಕೆದಾರರ ಸ್ನೇಹಮಯಿ ಮನೋಧರ್ಮಗಳೊಂದಿಗೆ ಉತ್ತಮ ನೀತಿಪಾಲನಾ ಗುಣವು ಈ ಕಂಪನಿಯ ಘನತೆಗೆ ಕಳಸಪ್ರಯಾವಾಗಿವೆ.

    ಇವೆಲ್ಲಾ ಸಕಾರಾತ್ಮಕಗಳನ್ನು ಮೈಗೂಡಿಸಿಕೊಂಡಿರುವ ಎಚ್ ಡಿಎಫ್ ಸಿ ಆರಂಭವಾದುದು 1977ರಲ್ಲಿ. ಈ ಕಂಪೆನಿ 1981-82ರಲ್ಲಿ ರು.100ರ ಮುಖಬೆಲೆ ಷೇರಿಗೆ ಶೇ.5 ರಷ್ಟು ಆರಂಭಿಕ ಲಾಭಾಂಶ ನೀಡಿ, ತದನಂತರ ಶೇ.7.5, ಶೇ.10 ಹೀಗೆ ವರ್ಷದಿಂದ ವರ್ಷಕ್ಕೆ ಲಾಭಾಂಶ ಹೆಚ್ಚಿಸಿಕೊಂಡು ಹೋಯಿತು. ರು.100ರ ಮುಖಬೆಲೆಯ ಷೇರು ಸುಮಾರು 2000ನೇ ಇಸವಿಯವರೆಗೂ ಪೇಟೆಯಲ್ಲಿ ನೂರರ ಒಳಗಿತ್ತು. ಉತ್ತಮ ಲಾಭಾಂಶದ ಕಾರಣ ಒಂದು ರೀತಿಯ ಫಿಕ್ಸೆಡ್ ಡೆಪಾಸಿಟ್ ತರಹ ಈ ಷೇರು ಕೊಂಡವರು ಮುಂದೆ ಉತ್ತಮ ಲಾಭವನ್ನು ಪಡೆದುಕೊಂಡರು.

    ಷೇರುಪೇಟೆಯಲ್ಲಿ ಹಣ ಹೇಗೆ ಬೆಳೆಯುತ್ತದೆ ಎಂಬುದಕ್ಕೆ ಸಾಮಾನ್ಯವಾಗಿ ವಿಶ್ಲೇಷಕರು ಇನ್ಫೋಸಿಸ್ ನ ಉದಾಹರಣೆ ನೀಡುವರು. ಆದರೆ ವಸತಿ ವಲಯದ ಎಚ್ ಡಿಎಫ್ ಸಿ ಕಂಪೆನಿ 1986 ರಲ್ಲಿ 1:2ರ ಅನುಪಾತದ ಹಕ್ಕಿನ ಷೇರನ್ನು ಮುಖಬೆಲೆಯಲ್ಲೇ ವಿತರಿಸಿತು. ಮತ್ತೊಮ್ಮೆ 1:2ರ ಅನುಪಾತದ ಹಕ್ಕಿನ ಷೇರು ವಿತರಿಸಿತು. 1992ರಲ್ಲಿ ರೂ.400ರ ಮುಖಬೆಲೆಯ ಪೂರ್ಣವಾಗಿ ಇಕ್ವಿಟಿಯಾಗಿ ಪರಿವರ್ತನೆಯಾಗುವ ಡಿಬೆಂಚರ್ ವಿತರಿಸಿತು. 1:1ರ ಅನುಪಾತದ ಬೋನಸ್ ಷೇರನ್ನು ಸಹ ವಿತರಿಸಿದೆ. 2002 ರಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಲಾಯಿತು

    ಇನ್ಫೋಸಿಸ್‌ ಲಿಮಿಟೆಡ್:

    1994ರಲ್ಲಿ ಆರಂಭಿಕ ಷೇರು ವಿತರಣೆ ಮಾಡಿದ ನಂತರ ಈ ಕಂಪನಿಯು ಹೂಡಿಕೆದಾರರನ್ನು ಎಷ್ಠರ ಮಟ್ಟಿಗೆ ಹರ್ಷಿತಗೊಳಿಸಿತೆಂದರೆ, ಹೊಸ ಪೀಳಿಗೆಯ ಹೂಡಿಕೆದಾರರಿಗೆ ಷೇರು ಎಂದರೆ ಇನ್ಫೋಸಿಸ್‌ ಎಂಬ ಭಾವನೆ ಮೂಡಿಸಿತು. ಈ ಸದ್ಗುಣವು ಈಗಲೂ ಬಹಳಷ್ಠು ನಿಷ್ಠೆ ಹೊಂದಿರುವ ಹೂಡಿಕೆದಾರರಲ್ಲಿದೆ. ಈಗಲೂ ಕೆಲವು ವಯೋವೃದ್ಧರು ತಮ್ಮ ಇಳಿ ವಯಸ್ಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಅವಶ್ಯವಿರುವ ಆರ್ಥಿಕ ಸಂಪನ್ಮೂಲಕ್ಕಾಗಿ 50 /100 /200 ಷೇರುಗಳನ್ನು ಮಾರಾಟಮಾಡುವರು. ಇದು ಒಂದು ರೀತಿಯ ಆಪದ್ಭಾಂಧವನಂತೆ ಹೂಡಿಕೆದಾರರಿಗೆ ಕಾಮದೇನುವಾಗಿದೆ. ನೀ ನನಗಿದ್ದರೆ- ನಾ ನಿನಗೆ ಎಂಬ ತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಭಾವನೆಯುಳ್ಳ ಆಡಳಿತ ಮಂಡಳಿಗಳು ಮಾತ್ರ ಹೂಡಿಕೆದಾರರ ಬಂಡವಾಳವನ್ನು, ಭಾವನಾತ್ಮಕ ಬಾಂಧವ್ಯವನ್ನು ಬೆಳೆಸಬಲ್ಲದು.

    1994 ರಲ್ಲಿ 1:1 ರ ಅನುಪಾತದ ಬೋನಸ್‌ ಷೇರು ವಿತರಿಸಿದ ನಂತರ, 1997, 1999, 2006, 2014, 2015, 2018 ರಲ್ಲಿಯೂ 1:1 ಅನುಪಾತದ ಬೋನಸ್‌ ಷೇರು ವಿತರಿಸಿದೆ. ಅಲ್ಲದೆ 2004 ರಲ್ಲಿ 3:1 ರ ಅನುಪಾತದ ಬೋನಸ್‌ ಷೇರು ವಿತರಿಸಿದೆ. 2009 ರಲ್ಲಿ ರೂ.10 ರಿಂದ ರೂ.5 ಕ್ಕೆ ಮುಖಬೆಲೆ ಸೀಳಿಕೆಯಿಂದ ಹೂಡಿಕೆದಾರರಲ್ಲಿರುವ ಷೇರುಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದ್ದಲ್ಲದೆ ನಿರಂತರವಾಗಿ ಲಾಭಾಂಶಗಳ ಸುರಿಮಳೆಯನ್ನೇ ಸುರಿಸಿ ಅನೇಕ ಕಂಪನಿಗಳಿಗೆ ಹೂಡಿಕೆದಾರರನ್ನು ಸಂವೃದ್ಧ, ಸಂತುಷ್ಠರನ್ನಾಗಿಸುವ ಬಗ್ಗೆ ಮಾರ್ಗದರ್ಶನವಾಗಿದೆ.

    ತಾಂತ್ರಿಕತೆ ಬೆಳೆದಂತೆಲ್ಲಾ ನಮ್ಮ ಚಿಂತನಾಶೈಲಿಗಳು ಬದಲಾಗಿ ಚಿಂತನಾ ಶಕ್ತಿಗಳು ಕ್ಷೀಣಿತವಾಗುತ್ತಿವೆ. ನಾವು ಕೇವಲ ವಿಶ್ಲೇಷಕರ, ಮಾಧ್ಯಮಗಳಲ್ಲಿನ ಪ್ರಚಾರಗಳಿಗೆ ಆದ್ಯತೆ ನೀಡದೆ ಅಂತರಾಳದಲ್ಲಡಗಿರುವ ಅಂಶಗಳಿಗೂ, ಆಡಳಿತ ಮಂಡಳಿಯ ಮನೋಧರ್ಮ, ಭಾವನೆಗಳಿಗೂ ಮಾನ್ಯತೆ ನೀಡಿದಲ್ಲಿ ಮಾತ್ರ ಹೂಡಿಕೆ ಉತ್ತಮ ಫಲ ನೀಡಬಲ್ಲದು. ಫಂಡಮೆಂಟಲ್ಸ್‌ ಮೂಲಕ ಬಂಡವಾಳ ಅಭಿವೃದ್ಧಿಯಾಗುವುದು, ಟೆಕ್ನಿಕಲ್ಸ್‌ ಬಂಡವಾಳ ಸುರಕ್ಷಿತಗೊಳಿಸಲು ಪೂರಕವಾಗುವುದು. ಇವೆರಡರ ಸಮ್ಮಿಶ್ರಣ ಹೂಡಿಕೆಯನ್ನು ಯಶಸ್ವಿಗೊಳಿಸುವುದು.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.


    ಕ್ಲಬ್ ಹೌಸ್ ನಲ್ಲಿ ಷೇರುಪೇಟೆ ವಿಚಾರ ಮಂಟಪ

    ಇಂದು (ಅಕ್ಟೋಬರ್ 3)ರಾತ್ರಿ IST 8 ಗಂಟೆಗೆ ಷೇರುಪೇಟೆ ವಿಚಾರ ಮಂಟಪ. ಈ ಲಿಂಕ್ ಮೂಲಕ ನೀವು ಜಾಯಿನ್ ಆಗಿ ಪೇಟೆಯ ಆಗು ಹೋಗುಗಳ ಬಗ್ಗೆ ಮತ್ತಷ್ಟು ಅರಿಯಿರಿ.

    https://www.clubhouse.com/event/MEKVlXB2


    ನಾಳೆ ಸೇವಾ ಸದನದಲ್ಲಿ ನೃತ್ಯ ಸಂಹಿತಾ

    BENGALURU OCT 1

    ಬೆಂಗಳೂರಿನ ಪ್ರತಿಷ್ಠಿತ ‘ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾಮಿಂಗ್ ಆರ್ಟ್ಸ್’ ಸಂಸ್ಥೆ ಅಕ್ಟೋಬರ್ 2ರ ಬೆಳಗ್ಗೆ 9ಕ್ಕೆ ಮಲ್ಲೇಶ್ವರದ ಸೇವಾ ಸದನದಲ್ಲಿ ‘ನೃತ್ಯ ಸಂಹಿತಾ’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದೆ.

    ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಭರತನಾಟ್ಯ ವಿದುಷಿ ಮತ್ತು ವಿದ್ವಾಂಸರ ಹಿರಿಯ ಶಿಷ್ಯೆಯರು ಈ ಕಾರ್ಯಕ್ರಮದಲ್ಲಿ ಅಮೋಘ ಕಲಾಪ್ರದರ್ಶನ ನೀಡಲಿರುವುದು ವಿಶೇಷವಾಗಿದೆ.

    ನಾಟ್ಯಾಂಜಲಿ ಸಂಸ್ಥೆಯ ನಿರ್ದೇಶಕ ಮತ್ತು ಮತ್ತು ಕರ್ನಾಟಕ ಕಲಾಶ್ರೀ ಪುರಸ್ಕೃತ ಭರತನಾಟ್ಯ ವಿದ್ವಾಂಸ ಅಶೋಕ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಪ್ರೇಕ್ಷಕರಿಗೆ ಉಚಿತ ಪ್ರವೇಶವಿದೆ.

    ನೃತ್ಯ ಪ್ರಸ್ತುತಿ: ಭರತನಾಟ್ಯ ಕಲಾವಿದರಾದ ರಂಜಿನಿ ಶ್ರೀನಿವಾಸನ್, ಕಾವ್ಯಾ ಕಾಶಿನಾಥನ್, ಬಿ.ಎನ್. ನಿಕಿತಾ, ಕೃಪಾ ರಾಮಚಂದ್ರನ್, ತೇಜಸ್ವಿನಿ-ಯಶಸ್ವಿನಿ, ಪೂಜಾ ಸಾತನೂರು, ಪೂಜಾ ಗೋಪಿ ಮತ್ತು ವರ್ಷಿಣಿ-ಚಂದನಾ ಅವರು ಭರತನಾಟ್ಯ ಪ್ರಸ್ತುತ ಪಡಿಸಲಿದ್ದಾರೆ. ಕೊನೆಯಲ್ಲಿ ನೃತ್ಯ ನೂಪುರ ತಂಡದಿಂದ (ವಿದುಷಿಯರಾದ ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ. ಸಾಧನಾ ಶ್ರೀ ಅವರ ಹಿರಿಯ ಶಿಷ್ಯೆಯರು) ಅಮೋಘ ನೃತ್ಯ ಪ್ರದರ್ಶನವಿದೆ ಎಂದು ಪ್ರಣವಾಂಜಲಿ ಸಂಸ್ಥೆಯ ನೃತ್ಯ ನಿರ್ದೇಶಕರಾದ ವಿದುಷಿ ಪವಿತ್ರಾ ಪ್ರಶಾಂತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    error: Content is protected !!