27 C
Karnataka
Monday, May 13, 2024

    MONEY ವಿಕಾಸದೊಂದಿಗೆ ಮನೋವಿಕಾಸ

    Must read

    ಬಾಂಬೆ ಷೇರು ವಿನಿಮಯ ಕೇಂದ್ರದ ಹೆಗ್ಗುರುತಾದ ಸೆನ್ಸೆಕ್ಸ್‌ 60 ಸಾವಿರದ ಗಡಿ ದಾಟಿ ಸರ್ವಕಾಲೀನ ದಾಖಲೆ ಸೃಷ್ಠಿಸಿದ ಸಂದರ್ಭದಲ್ಲಿ ಸೆನ್ಸೆಕ್ಸ್‌ ಸೀನಿಯರ್‌ ಸಿಟಿಜನ್‌ ಸ್ಟೇಟಸ್ ಗೆ ತಲುಪಿದೆ ಎಂದು ವಿಜೃಂಭಿಸಿದರು. ಆದರೆ ತದ ನಂತರದಲ್ಲಿ ಸತತವಾದ ಇಳಿಕೆಯತ್ತ ಸಾಗುತ್ತಿರುವ ಸೆನ್ಸೆಕ್ಸ್‌ ನಿವೃತ್ತಿಯಾಯಿತೇ ಎಂಬ ಸಂಶಯವನ್ನು ಮೂಡಿಸುತ್ತದೆ.

    ಹಾಸಿಗೆ ಇದ್ದಷ್ಠು ಕಾಲು ಚಾಚು ಎಂಬ ನಾಣ್ಣುಡಿಯು ಮರೆಯಾಗುತ್ತಿದ್ದು ಷೇರುಪೇಟೆಯಲ್ಲಿ ಹೊಸ ವಿಧದ ಚಟುವಟಿಕೆಯು ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿದ್ದು, ಸ್ವಲ್ಪ ಬಂಡವಾಳದಿಂದ ಅಗಾಧವಾದ ವಹಿವಾಟು ನಡೆಸಲು ಅನುವುಮಾಡಿಕೊಡುತ್ತಿರುವ ಈ ವಿಧವನ್ನು ಲೀವರೇಜ್‌ ಟ್ರೇಡಿಂಗ್‌ ಎನ್ನುವರು. ಇಲ್ಲಿ ವಹಿವಾಟು ನಡೆಸಲು ಪೇಟೆಯಲ್ಲುಂಟಾಗುವ ಏರಿಳಿತಗಳ ಮೇಲೆ ಸತತವಾದ ಗಮನ ಹರಿಸಬೇಕಾಗುತ್ತದೆ.

    ವಹಿವಾಟು ನಡೆಸುವ ಅವಕಾಶಕ್ಕಾಗಿ ನಿರಂತರವಾಗಿ ʼ ಟರ್ಮಿನಲ್‌ʼ ಮುಂದೆ ಕುಳಿತುಕೊಂಡಿರುವ ದೃಶ್ಯಗಳು ಸಾಮಾನ್ಯವಾಗಿವೆ. ಪೇಟೆಗಳು ಏರಿಕೆಯಲ್ಲಿರುವಾಗ ಇದು ಹೆಚ್ಚು ಆಕರ್ಷಿತವಾಗಿ, ಉಲ್ಲಾಸಮಯವಾಗಿರುತ್ತದೆ. ಅದೇ ಪೇಟೆಯು ಕುಸಿತದ ಕಡೆ ತಿರುಗಿದಲ್ಲಿ ಉಂಟಾಗಬಹುದಾದ ಬಂಡವಾಳ ಕೊರೆತವು ಮನಸ್ಸಿನ ಮೇಲೆ ಎಂತಹ ದುಷ್ಫರಿಣಾಮ ಬೀರಬಹುದೆಂದು ಕಲ್ಪಿಸಲು ಅಸಾಧ್ಯ. ಕಾರಣ ಬಂಡವಾಳವು ಕಣ್ಣು ಮುಂದೆಯೇ ಕರಗುತ್ತಿರುವುದು ನೇರವಾಗಿ ಮನಸ್ಸಿಗೆ ನಾಟುತ್ತದೆ. ಇಂತಹ ಪರಿಸ್ಥಿತಿಯು ದೇಹದ ಆರೋಗ್ಯದ ಮೇಲೂ ನಕಾರಾತ್ಮಕ ಪ್ರಭಾವ ಬೀರುವುದು ನಿಸ್ಸಂದೇಹ.

    ವ್ಯವಹಾರವಾದ ಹೂಡಿಕೆ

    ಇಲ್ಲಿ ಹೂಡಿಕೆಯು ಹೂಡಿಕೆಯಾಗದೆ ಕೇವಲ ವ್ಯವಹಾರಮಯವಾಗಿದೆ. ಲೀವರೇಜ್‌ ಟ್ರೇಡಿಂಗ್‌ ಆಗಲಿ ಫ್ಯೂಚರ್‌ ಅಂಡ್‌ ಆಪ್ಶನ್ಸ್‌ ವಿಧವಾಗಲಿ ಚಟುವಟಿಕೆ ನಡೆಸುವ ಇಚ್ಚೆ ಇದ್ದಲ್ಲಿ ಸಾಕಷ್ಟು ತಜ್ಞತೆಯ ಅವಶ್ಯಕತೆ ಇದೆ. ವಿವಿಧ ರೀತಿಯ ಚಾರ್ಟ್‌, ಗ್ರಾಫ್‌ ಗಳನ್ನು ಅಳವಡಿಸಿಕೊಳ್ಳುವ ಕೌಶಲ್ಯದ ಪರಿಣತಿ ಬೇಕು.

    ಆದರೆ ಸಾಂಪ್ರದಾಯಿಕ ಹೂಡಿಕೆಯ ವಿಧವಾದ ʼಹೂಡು- ಹೊಂದು – ಹೊರಡುʼ ( Invest- hold- sell for profit) ರೀತಿಯಲ್ಲಿ ಚಟುವಟಿಕೆಯು ನಿರಾಳ, ನಿರಾಯಾಸ, ಸಮಾಧಾನಕರ. ಕಾರಣ ಒಮ್ಮೆ ಆಯ್ಕೆ ಮಾಡಿಕೊಂಡು ಖರೀದಿಸಿದ ಷೇರಿಗೆ ಸಂಪರ್ಣ ಹಣ ಪಾವತಿಸಿರುವುದರಿಂದ ಡಿ ಮ್ಯಾಟ್‌ ಖಾತೆಯಲ್ಲಿರುತ್ತದೆ. ಆ ಷೇರಿನ ಬೆಲೆ ಗಮನಾರ್ಹ ಏರಿಕೆ ಕಂಡಾಗ ಮಾತ್ರ ನಗದೀಕರಿಸಿಕೊಳ್ಳಲು ಅಥವಾ ಹಣದ ಅಗತ್ಯತೆ ಇದ್ದಾಗ ಮಾರಾಟಮಾಡುವವರೆಗೂ ಹೂಡಿಕೆ ಮುಂದುವರೆಸುವುದರಿಂದ ಮನಸ್ಸು ನೆಮ್ಮದಿಯನ್ನು ಕಂಡು ಒತ್ತಡಗಳಿಂದ ಮುಕ್ತವಾಗಿರುತ್ತದೆ. ಆರೋಗ್ಯದ ಮೇಲೆ ಒತ್ತಡ ಬೀಳದೆ ಇರುವ ಕಾರಣ ಸುಧಾರಣೆಯೂ ಆಗುವುದು. ಇದರಿಂದ ಹೂಡಿಕೆಯು ಮನಿ ವಿಕಾಸದೊಂದಿಗೆ ಮನೋವಿಕಾಸಕ್ಕೂ ಕಾರಣವಾಗುತ್ತದೆ.

    ಉಲ್ಲಾಸಮಯ ಮನಸ್ಸು ಮುಖ್ಯ

    ಮನಿ ವಿಕಾಸಗೊಳ್ಳಲು ಪೂರಕ ಅಂಶ ಉಲ್ಲಾಸಮಯ ಮನಸ್ಸು. ಮನಿ ಮನಸ್ಸು ಉತ್ತಮವಾಗಿದ್ದಲ್ಲಿ ಬೆಳೆಯಬಹುದಾದ ಅಂಶ ಎಂದರೆ ನಿ಼ಷ್ಠೆ, ನಿಯತ್ತುಗಳು ತಾಂಡವವಾಡುವುದರಿಂದ ಹೂಡಿಕೆಯು ದೀರ್ಘಕಾಲೀನ ಬಾಂಧವ್ಯವನ್ನು ಬೆಳೆಸುವುದು. ಈ ರೀತಿಯ ನಿಷ್ಠೆಯ ಫಲವೇ ನಾವು ಹಿಂದೆ ಕಾಲ್ಗೇಟ್‌ ಪಾಲ್ಮೊಲಿವ್‌ 1978 ರಿಂದ 1994 ರ ಅವಧಿಯಲ್ಲಿ ಹೂಡಿಕೆದಾರರ ಬಂಡವಾಳವನ್ನು ಸುಮಾರು 50 ಪಟ್ಟು ವೃದ್ಧಿಸುವಂತೆ ಮಾಡಿದೆ. ಹೂಡಿಕೆಯ ಶೈಲಿ ಹೇಗಿರಬೇಕೆಂದರೆ ನಾವು ಹೂಡಿಕೆ ಮಾಡಿದ ಕಂಪನಿಯ ಘನತೆ, ಗೌರವ, ಪ್ರತಿಷ್ಠೆಯ ಮಟ್ಟ ಸಂಪೂರ್ಣ ನಂಬಿಕೆಗೆ ಅರ್ಹವಾದ ಮಟ್ಟದಲ್ಲಿರಬೇಕು. ಕಾರ್ಪೊರೇಟ್‌ಗಳ ಮೇಲೆ ಸೆಬಿ ನಿಯಂತ್ರಣ ಜಾರಿಯಾಗುವುದಕ್ಕಿಂತ ಮುಂಚಿನದಿನಗಳಲ್ಲಿ ಕಾರ್ಪೊರೇಟ್‌ಗಳು ಎಂತಹ ರೀತಿಯ ಬದ್ಧತೆ, ಭಾದ್ಯತೆಗಳನ್ನು ಹೊಂದಿದ್ದವು ಎಂಬುದಕ್ಕೆ ಕಾಲ್ಗೇಟ್‌ಪಾಲ್ಮೊಲಿವ್‌, ಹೌಸಿಂಗ್‌ಡೆವೆಲಪ್ಮೆಂಟ್‌ಫೈನಾನ್ಸ್‌ಕಾರ್ಪೊರೇಷನ್‌ಗಳಂತಹ ಕಂಪನಿಗಳು ಉತ್ತಮ ಉದಾಹರಣೆಯಾಗಿವೆ.

    ಕಾಲ್ಗೇಟ್‌ ಪಾಲ್ಮೊಲಿವ್‌ (ಇಂಡಿಯಾ) ಲಿಮಿಟೆಡ್:‌

    ಕಾಲ್ಗೇಟ್ ಕಂಪನಿಯ ಇತಿಹಾಸವನ್ನರಿತಾಗ ಸಮಾಧಾನದ ಉತ್ತರ ಸಿಗಬಹುದು. ಈ ಕಂಪನಿಯು ಭಾರತದಲ್ಲಿ 1978 ರಲ್ಲಿ ಅಂದಿನ ಫೆರಾ ನಿಯಮದಡಿ 11.79 ಷೇರುಗಳನ್ನು ಪ್ರತಿ ಷೇರಿಗೆ ರೂ.15 ರಂತೆ ವಿತರಿಸಿತು. ನಂತರದಲ್ಲಿ ಕಂಪನಿಯು 1982 ರಲ್ಲಿ,1985 ರಲ್ಲಿ, 1987 ರಲ್ಲಿ, 1989 ರಲ್ಲಿ, 1994 ರಲ್ಲಿ 1:1 ರ ಅನುಪಾತದ ಬೋನಸ್ ಷೇರು ವಿತರಿಸಿ ಹೂಡಿಕೆದಾರರ ಮೆಚ್ಚುಗೆಗೆ ಪಾತ್ರವಾಯಿತು.1991 ರಲ್ಲಿ 3:5 ಅನುಪಾತದ ಬೋನಸ್ ಷೇರು ವಿತರಿಸಿತು. ಅಂದರೆ ಮೊದಲ ವಿತರಣೆಯಲ್ಲಿ, 1978 ರಲ್ಲಿ 100 ಷೇರು ಪಡೆದವರ ಹೂಡಿಕೆ 1994 ರವರೆಗೆ ಐವತ್ತು ಪಟ್ಟು ಬೆಳೆದಿದೆ. ಇದರೊಂದಿಗೆ ಅಧಿಕ ಲಾಭಾಂಶವನ್ನು ನೀಡಿದೆ.

    ಈ ಕಂಪನಿಯ ಷೇರು ಬಂಡವಾಳವು ಆರಂಭದ ರೂ.2 ಕೋಟಿಯಿಂದ ರೂ.136 ಕೋಟಿಗೆ ಈ ಅವಧಿಯಲ್ಲಿ ತಲುಪಿದ್ದು, ಇದರಲ್ಲಿ ಸಿಂಹ ಪಾಲು ಬೋನಸ್ ಷೇರುಗಳದ್ದಾಗಿದೆ. ಹಾಗಾಗಿ,ಸಣ್ಣ ಹೂಡಿಕೆದಾರರ ಅಭಿಮಾನಿ ಷೇರಾಗಿದೆ. ಕಂಪನಿಯ ಷೇರು ಬಂಡವಾಳವು ಗಜಗಾತ್ರಕ್ಕೆ ಬೆಳೆದ ಕಾರಣ ಮತ್ತೊಮ್ಮೆ ಬೋನಸ್‌ ಷೇರು ವಿತರಿಸಿದರೆ ಹೆಚ್ಚಾಗುವ ಬಂಡವಾಳದ ಅಗತ್ಯತೆ ಇಲ್ಲದ ಕಾರಣ ಮತ್ತು ಕಂಪನಿಯು ಹೊಂದಿರುವ ಮೀಸಲು ನಿಧಿಯನ್ನು ಸದುಪಯೋಗ ಪಡಿಸಲು ಈ ಕಂಪನಿಯು 2007 ರಲ್ಲಿ ತನ್ನ ಷೇರುದಾರರ ಹೂಡಿಕೆಯಾದ ಪ್ರತಿ ಷೇರಿನ ರೂ.10 ರಲ್ಲಿ ರೂ.9ನ್ನು ಹಿಂದಿರುಗಿಸಿತು. ಈ ಮೂಲಕ ರೂ.122 ಕೋಟಿ ಹಣವನ್ನು ಹೂಡಿಕೆದಾರರಿಗೆ ಹಿಂದಿರುಗಿಸಿದೆ ಇಂತಕ ಕ್ರಮಕೈಗೊಂಡ ಪ್ರಥಮ ಕಂಪನಿಯಾಯಿತು. ಸೆಪ್ಟೆಂಬರ್ 2015 ರಲ್ಲಿ 1:1 ರ ಅನುಪಾತದ ಬೋನಸ್ ಷೇರು ವಿತರಿಸಿದೆ. ಇದರಿಂದ ಕಂಪನಿಯ ಷೇರುಬಂಡವಾಳವು ರೂ.27.20 ಕೋಟಿಗೆ ತಲುಪಿದೆ. ಇಷ್ಟೆಲ್ಲಾ ಬೋನಸ್‌ ವಿತರಣೆಗಳ ಜೊತೆಗೆ ಆಕರ್ಷಕವಾದ ಲಾಭಾಂಶಗಳನ್ನೂ ಸಹ ವಿತರಿಸಿದೆ. ಆದಾಗ್ಯೂ ಸಹ ರೂ.1 ರ ಮುಖಬೆಲೆಯ ಷೇರಿನ ಬೆಲೆ ರೂ.1,680 ರ ಸಮೀಪವಿದೆ.

    ಹೆಚ್‌ ಡಿ ಎಫ್‌ ಸಿ ಲಿಮಿಟೆಡ್:

    ಕಾರ್ಪೊರೇಟ್‌ ನೀತಿಪಾಲನೆಗೆ ಹೆಚ್ಚು ಆದ್ಯತೆಯು ಈಗಿನ ದಿನಗಳಲ್ಲಿ ನೀಡಲಾಗುತ್ತಿದ್ದು ಇದಕ್ಕೆ ಶಾಸನಬದ್ಧ ನಿಯಮಗಳನ್ನೂ ಸಹ ರೂಪಿಸಲಾಗಿದೆ.

    ಈ ನಿಯಮಗಳು ಜಾರಿಯಾಗುವ ಮುಂಚಿನ ವರ್ಷಗಳಲ್ಲಿ ಅಳವಡಿಸಿಕೊಂಡು ಬಂದಿರುವ ಕಂಪನಿ ಎಂದರೆ ಹೆಚ್‌ ಡಿ ಎಫ್‌ ಸಿ ಲಿಮಿಟೆಡ್‌. ಕಂಪನಿಯ ಚಟುವಟಿಕೆ, ಆಡಳಿತ ಮಂಡಳಿಯ ಹೂಡಿಕೆದಾರರ ಸ್ನೇಹಮಯಿ ಮನೋಧರ್ಮಗಳೊಂದಿಗೆ ಉತ್ತಮ ನೀತಿಪಾಲನಾ ಗುಣವು ಈ ಕಂಪನಿಯ ಘನತೆಗೆ ಕಳಸಪ್ರಯಾವಾಗಿವೆ.

    ಇವೆಲ್ಲಾ ಸಕಾರಾತ್ಮಕಗಳನ್ನು ಮೈಗೂಡಿಸಿಕೊಂಡಿರುವ ಎಚ್ ಡಿಎಫ್ ಸಿ ಆರಂಭವಾದುದು 1977ರಲ್ಲಿ. ಈ ಕಂಪೆನಿ 1981-82ರಲ್ಲಿ ರು.100ರ ಮುಖಬೆಲೆ ಷೇರಿಗೆ ಶೇ.5 ರಷ್ಟು ಆರಂಭಿಕ ಲಾಭಾಂಶ ನೀಡಿ, ತದನಂತರ ಶೇ.7.5, ಶೇ.10 ಹೀಗೆ ವರ್ಷದಿಂದ ವರ್ಷಕ್ಕೆ ಲಾಭಾಂಶ ಹೆಚ್ಚಿಸಿಕೊಂಡು ಹೋಯಿತು. ರು.100ರ ಮುಖಬೆಲೆಯ ಷೇರು ಸುಮಾರು 2000ನೇ ಇಸವಿಯವರೆಗೂ ಪೇಟೆಯಲ್ಲಿ ನೂರರ ಒಳಗಿತ್ತು. ಉತ್ತಮ ಲಾಭಾಂಶದ ಕಾರಣ ಒಂದು ರೀತಿಯ ಫಿಕ್ಸೆಡ್ ಡೆಪಾಸಿಟ್ ತರಹ ಈ ಷೇರು ಕೊಂಡವರು ಮುಂದೆ ಉತ್ತಮ ಲಾಭವನ್ನು ಪಡೆದುಕೊಂಡರು.

    ಷೇರುಪೇಟೆಯಲ್ಲಿ ಹಣ ಹೇಗೆ ಬೆಳೆಯುತ್ತದೆ ಎಂಬುದಕ್ಕೆ ಸಾಮಾನ್ಯವಾಗಿ ವಿಶ್ಲೇಷಕರು ಇನ್ಫೋಸಿಸ್ ನ ಉದಾಹರಣೆ ನೀಡುವರು. ಆದರೆ ವಸತಿ ವಲಯದ ಎಚ್ ಡಿಎಫ್ ಸಿ ಕಂಪೆನಿ 1986 ರಲ್ಲಿ 1:2ರ ಅನುಪಾತದ ಹಕ್ಕಿನ ಷೇರನ್ನು ಮುಖಬೆಲೆಯಲ್ಲೇ ವಿತರಿಸಿತು. ಮತ್ತೊಮ್ಮೆ 1:2ರ ಅನುಪಾತದ ಹಕ್ಕಿನ ಷೇರು ವಿತರಿಸಿತು. 1992ರಲ್ಲಿ ರೂ.400ರ ಮುಖಬೆಲೆಯ ಪೂರ್ಣವಾಗಿ ಇಕ್ವಿಟಿಯಾಗಿ ಪರಿವರ್ತನೆಯಾಗುವ ಡಿಬೆಂಚರ್ ವಿತರಿಸಿತು. 1:1ರ ಅನುಪಾತದ ಬೋನಸ್ ಷೇರನ್ನು ಸಹ ವಿತರಿಸಿದೆ. 2002 ರಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಲಾಯಿತು

    ಇನ್ಫೋಸಿಸ್‌ ಲಿಮಿಟೆಡ್:

    1994ರಲ್ಲಿ ಆರಂಭಿಕ ಷೇರು ವಿತರಣೆ ಮಾಡಿದ ನಂತರ ಈ ಕಂಪನಿಯು ಹೂಡಿಕೆದಾರರನ್ನು ಎಷ್ಠರ ಮಟ್ಟಿಗೆ ಹರ್ಷಿತಗೊಳಿಸಿತೆಂದರೆ, ಹೊಸ ಪೀಳಿಗೆಯ ಹೂಡಿಕೆದಾರರಿಗೆ ಷೇರು ಎಂದರೆ ಇನ್ಫೋಸಿಸ್‌ ಎಂಬ ಭಾವನೆ ಮೂಡಿಸಿತು. ಈ ಸದ್ಗುಣವು ಈಗಲೂ ಬಹಳಷ್ಠು ನಿಷ್ಠೆ ಹೊಂದಿರುವ ಹೂಡಿಕೆದಾರರಲ್ಲಿದೆ. ಈಗಲೂ ಕೆಲವು ವಯೋವೃದ್ಧರು ತಮ್ಮ ಇಳಿ ವಯಸ್ಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಅವಶ್ಯವಿರುವ ಆರ್ಥಿಕ ಸಂಪನ್ಮೂಲಕ್ಕಾಗಿ 50 /100 /200 ಷೇರುಗಳನ್ನು ಮಾರಾಟಮಾಡುವರು. ಇದು ಒಂದು ರೀತಿಯ ಆಪದ್ಭಾಂಧವನಂತೆ ಹೂಡಿಕೆದಾರರಿಗೆ ಕಾಮದೇನುವಾಗಿದೆ. ನೀ ನನಗಿದ್ದರೆ- ನಾ ನಿನಗೆ ಎಂಬ ತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಭಾವನೆಯುಳ್ಳ ಆಡಳಿತ ಮಂಡಳಿಗಳು ಮಾತ್ರ ಹೂಡಿಕೆದಾರರ ಬಂಡವಾಳವನ್ನು, ಭಾವನಾತ್ಮಕ ಬಾಂಧವ್ಯವನ್ನು ಬೆಳೆಸಬಲ್ಲದು.

    1994 ರಲ್ಲಿ 1:1 ರ ಅನುಪಾತದ ಬೋನಸ್‌ ಷೇರು ವಿತರಿಸಿದ ನಂತರ, 1997, 1999, 2006, 2014, 2015, 2018 ರಲ್ಲಿಯೂ 1:1 ಅನುಪಾತದ ಬೋನಸ್‌ ಷೇರು ವಿತರಿಸಿದೆ. ಅಲ್ಲದೆ 2004 ರಲ್ಲಿ 3:1 ರ ಅನುಪಾತದ ಬೋನಸ್‌ ಷೇರು ವಿತರಿಸಿದೆ. 2009 ರಲ್ಲಿ ರೂ.10 ರಿಂದ ರೂ.5 ಕ್ಕೆ ಮುಖಬೆಲೆ ಸೀಳಿಕೆಯಿಂದ ಹೂಡಿಕೆದಾರರಲ್ಲಿರುವ ಷೇರುಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದ್ದಲ್ಲದೆ ನಿರಂತರವಾಗಿ ಲಾಭಾಂಶಗಳ ಸುರಿಮಳೆಯನ್ನೇ ಸುರಿಸಿ ಅನೇಕ ಕಂಪನಿಗಳಿಗೆ ಹೂಡಿಕೆದಾರರನ್ನು ಸಂವೃದ್ಧ, ಸಂತುಷ್ಠರನ್ನಾಗಿಸುವ ಬಗ್ಗೆ ಮಾರ್ಗದರ್ಶನವಾಗಿದೆ.

    ತಾಂತ್ರಿಕತೆ ಬೆಳೆದಂತೆಲ್ಲಾ ನಮ್ಮ ಚಿಂತನಾಶೈಲಿಗಳು ಬದಲಾಗಿ ಚಿಂತನಾ ಶಕ್ತಿಗಳು ಕ್ಷೀಣಿತವಾಗುತ್ತಿವೆ. ನಾವು ಕೇವಲ ವಿಶ್ಲೇಷಕರ, ಮಾಧ್ಯಮಗಳಲ್ಲಿನ ಪ್ರಚಾರಗಳಿಗೆ ಆದ್ಯತೆ ನೀಡದೆ ಅಂತರಾಳದಲ್ಲಡಗಿರುವ ಅಂಶಗಳಿಗೂ, ಆಡಳಿತ ಮಂಡಳಿಯ ಮನೋಧರ್ಮ, ಭಾವನೆಗಳಿಗೂ ಮಾನ್ಯತೆ ನೀಡಿದಲ್ಲಿ ಮಾತ್ರ ಹೂಡಿಕೆ ಉತ್ತಮ ಫಲ ನೀಡಬಲ್ಲದು. ಫಂಡಮೆಂಟಲ್ಸ್‌ ಮೂಲಕ ಬಂಡವಾಳ ಅಭಿವೃದ್ಧಿಯಾಗುವುದು, ಟೆಕ್ನಿಕಲ್ಸ್‌ ಬಂಡವಾಳ ಸುರಕ್ಷಿತಗೊಳಿಸಲು ಪೂರಕವಾಗುವುದು. ಇವೆರಡರ ಸಮ್ಮಿಶ್ರಣ ಹೂಡಿಕೆಯನ್ನು ಯಶಸ್ವಿಗೊಳಿಸುವುದು.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.


    ಕ್ಲಬ್ ಹೌಸ್ ನಲ್ಲಿ ಷೇರುಪೇಟೆ ವಿಚಾರ ಮಂಟಪ

    ಇಂದು (ಅಕ್ಟೋಬರ್ 3)ರಾತ್ರಿ IST 8 ಗಂಟೆಗೆ ಷೇರುಪೇಟೆ ವಿಚಾರ ಮಂಟಪ. ಈ ಲಿಂಕ್ ಮೂಲಕ ನೀವು ಜಾಯಿನ್ ಆಗಿ ಪೇಟೆಯ ಆಗು ಹೋಗುಗಳ ಬಗ್ಗೆ ಮತ್ತಷ್ಟು ಅರಿಯಿರಿ.

    https://www.clubhouse.com/event/MEKVlXB2


    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!