21.9 C
Karnataka
Tuesday, July 7, 2026
    Home Blog Page 48

    DASARA: ಮಂಜುಳಾ ಅವರ ಮನೆಯ ಚಿತ್ತಾಕರ್ಷಕ ಗೊಂಬೆ ಸಂಗ್ರಹ

    ಬೆಂಗಳೂರು ಚಾಮರಾಜಪೇಟೆಯ ಮಂಜುಳಾ ಅವರ ಮನೆಯಲ್ಲಿನ ದಸರಾ ಗೊಂಬೆಗಳನ್ನು ನೋಡುವುದೇ ಹಬ್ಬ. ಇನ್ನೂರು ವರುಷಗಳ ಪಟ್ಟದ ಗೊಂಬೆ ಇವರ ಮನೆಯ ವಿಶೇಷ. ಗೊಂಬೆ ಇಡುವ ಸಂಪ್ರದಾಯವನ್ನು ಅನೂಚೂನವಾಗಿ ನಡೆಸುಕೊಂಡು ಬರುತ್ತಿರುವ ಹಿರಿಮೆ ಅವರದ್ದು.

    This image has an empty alt attribute; its file name is manjula.jpg

    ಕಿಲ್ಲಾರ ಗೊಂಬೆಗಳು, ಚಾಮುಂಡೇಶ್ವರಿ, ಮೈಸೂರು ಅರಮನೆ ಅಲ್ಲದೆ ನೂರಾರು ವರುಷಗಳಿಂದ ಜತನವಾಗಿ ಕಾಯ್ದುಕೊಂಡು ಬಂದಿರುವ ಗೊಂಬೆ ಸಂಗ್ರವೂ ಇದೆ.

    ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸುವುದು ಮಾತ್ರವಲ್ಲ ಅದಕ್ಕೆ ಕಲಾತ್ಮಕ ಸ್ಪರ್ಶ ನೀಡಿರುವುದು ಈ ಬಾರಿ ವೈಶಿಷ್ಟ್ಯ. ಇವರ ಮನೆಯ ಗೊಂಬೆ ಸಂಗ್ರಹ ನೋಡಲು ನೂರು ಕಣ್ಣೂ ಸಾಲದು.

    ಅವರ ಮನೆಯ ದಸರಾ ಗೊಂಬೆ ಸಂಗ್ರಹದ ಸೈಡ್ ಶೋ ಇಲ್ಲಿದೆ.

    DASARA: ದಸರಾ ಇತಿಹಾಸ ನಿಮಗೆ ಗೊತ್ತಿರಲಿ

    ನಾಡಿನೆಲ್ಲೆಡೆ ದಸರಾ ಸಂಭ್ರಮ. ಕನ್ನಡಪ್ರೆಸ್.ಕಾಮ್ ತನ್ನ ದಸರಾ ಸಂಗೀತೋತ್ಸವದ ಮೂರನೇ ದಿನವಾದ ಇಂದು ದಸರಾ ಆಚರಣೆಯ ಹಿಂದಿನ ಉದ್ದೇಶ ಮತ್ತುಇತಿಹಾಸವನ್ನು ತನ್ನ ಓದುಗರಿಗೆ ಪರಿಚಯಿಸುತ್ತದೆ.

    ಮೈಸೂರು ದಸರಾ-mysuru dasara- ವಿಶ್ವ ಪ್ರಸಿದ್ಧಿ ಹಾಗೆಯೇ ದೇಶದೆಲ್ಲೆಡೆಯೂ ದಸರಾ ಆಯಾ ಪ್ರದೇಶವಾರು ಆಚರಣೆಯನ್ನು ಹೊಂದಿದೆ. ಇಂದಿನ ಸಂಚಿಕೆಯಲ್ಲಿ ನವರಾತ್ರಿಯ ಆಚರಣೆ ಸಮಗ್ರ ವಿವರವನ್ನು ಉಪನ್ಯಾಸಕಿಯರಾದ ರತ್ನಾ ಶ್ರೀನಿವಾಸ್ ಮತ್ತು ಡಾ. ಚಂದ್ರಾ ಮುತಾಲಿಕ್ ಸೊಗಸಾಗಿ ವಿವರಿಸಿದ್ದಾರೆ,

    ಮುಂಬೈ ವಿವಿಯಿಂದ ಎಂ. ಫಿಲ್ ಮಾಡಿರುವ ರತ್ನಾ ಶ್ರೀನಿವಾಸ್ ಅವರು ಯಲಹಂಕದಲ್ಲಿರುವ ಆದಿತ್ಯ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಮಂಬೈ ವಿವಿಯಲ್ಲಿ ಪಿಎಚ್ .ಡಿ ಮಾಡಿರುವ ಡಾ. ಚಂದ್ರಾ ಮುತಾಲಿಕ್ ಎಂ ಎನ್ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ.

    ದಸರಾ ಇತಿಹಾಸವನ್ನು ಈ ವಿಡಿಯೋ ಮೂಲಕ ಅರಿಯಿರಿ.

    NAVARAATRI: ನವರಾತ್ರಿ ದೇವಿಸ್ತುತಿ

    ಕನ್ನಡಪ್ರೆಸ್ .ಕಾಮ್ ನ ದಸರಾ ಸಂಗೀತೋತ್ಸವದ ಇಂದಿನ ಮುಂಜಾನೆಯ ಕಾರ್ಯಕ್ರಮದಲ್ಲಿ ಬೆಂಗಳೂರು ಶ್ರೀನನಗರ ಶ್ರೀ ವೆಂಕಟರಮಣ ಮಹಿಳಾ ಸಂಘದ ಸದಸ್ಯೆಯರು ದೇವಿ ಸ್ತುತಿಯನ್ನು ಪ್ರಸ್ತುತ ಪಡಸಿದ್ದಾರೆ.

    ಕಳೆದ ಎರಡು ದಶಕಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಈ ಸಂಘ ವಿಜಯಲಕ್ಷ್ಮಿ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ನವರಾತ್ರಿಯ ಈ ಒಂಭತ್ತು ದಿನಗಳಿಗೂ ದೇವಿಯನ್ನು ಆಹ್ವಾನಿಸಿ ಸಂಘದ ಸದಸ್ಯರೆಯರು ಭಕ್ತಿ ಪೂರ್ವಕವಾಗಿ ದೇವಿಯನ್ನು ಸ್ತುತಿಸಿದ್ದಾರೆ.

    ವಿಜಯಲಕ್ಷ್ಮಿ ಅವರ ಜೊತೆ ಗೀತಾ ಗಣೇಶ್,ಲಕ್ಷ್ಮಿ,ಎಂ. ಎ ಪುಷ್ಪಾ,ಸೀತಾಲಕ್ಷ್ಮಿ ಮತ್ತು ಸಂಘಧ ಕಾರ್ಯದರ್ಶಿ ನಾಗರತ್ನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

    ವೀಕ್ಷಿಸಿ , ಆಲಿಸಿ ಪ್ರತಿಕ್ರಿಯಿಸಿ. ಹಾಗೇಯೆ ನಮ್ಮ ಯೂ ಟ್ಯೂಬ್ ಚಾನಲ್ ಗೂ subscribe ಆಗಿ.

    Services of guest lectures to be continued:ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸಲು ನಿರ್ಧಾರ

    BENGALURU OCT 8

    ಕಳೆದ ಸಾಲಿನಲ್ಲಿ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರ-guest lectures- ಸೇವೆಯನ್ನು 2021-22ನೇ ಸಾಲಿಗೂ‌ ಮುಂದುವರಿಸಲು ಆದೇಶಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಆಶ್ವತ್ಥನಾರಾಯಣ -Dr.C.N.Ashwatha Narayana-ಶುಕ್ರವಾರ ತಿಳಿಸಿದ್ದಾರೆ.

    ಕಳೆದ ಸಾಲಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದವರನ್ನು ಒಂದು ದಿನದ ಮಟ್ಟಿಗೆ ಸೇವೆಯಿಂದ ಬಿಡುಗಡೆಗೊಳಿಸಿ ಪುನಃ ಸೇವೆಗೆ ಸೇರಿಸಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

    ಕೋವಿಡ್ -COVID 19-ವಿಷಮ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡು ಸಾರ್ವಜನಿಕ ಹಾಗೂ ಶೈಕ್ಷಣಿಕ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಶ್ವತ್ಥ ನಾರಾಯಣ ವಿವರಿಸಿದ್ದಾರೆ.

    Dasara Music Fest: ಮರೆಯಬೇಡ ಮನವೆ ನೀನು ಹರಿಯ ಸ್ಮರಣೆಯ

    ಕನ್ನಡಪ್ರೆಸ್.ಕಾಮ್ ನ ನವರಾತ್ರಿ ಸಂಗೀತೋತ್ಸವದ ಎರಡನೇ ದಿನವಾದ ಇಂದಿನ ಸಂಗೀತ ಕಚೇರಿಯನ್ನು ಮೈಸೂರಿನ ಪ್ರಖ್ಯಾತ ವೈದ್ಯ ಡಾ. ಸಿ. ಜಿ ಪ್ರಹ್ಲಾದರಾವ್ ನಡೆಸಿಕೊಡುತ್ತಿದ್ದಾರೆ.

    ವೃತ್ತಿಯಿಂದ ವೈದ್ಯರಾದರು ತಮ್ಮ ಬಿಡುವಿನ ವೇಳೆಯಲ್ಲಿ ಸಂಗೀತ ಅಭ್ಯಾಸ ಮಾಡಿದ್ದಾರೆ. ಶಾಸ್ತ್ರೀಯವಾಗಿ ಸಂಗೀತ ಅಭ್ಯಾಸ ಆಗಿಲ್ಲವಾದರು ಗುರು ಮಡಿಕೇರಿಯ ನಾಗೇಂದ್ರ ಅವರಿಂದ ಸುಗಮ ಸಂಗೀತ ಕಲಿತ್ತಿದ್ದಾರೆ.

    ಗೀತೆಗಳಲ್ಲಿ ಭಾವ ತುಂಬಿ ಹಾಡುವುದು ಇವರ ವೈಶಿಷ್ಟ್ಯ. ಇಂದಿನ ಕಾರ್ಯಕ್ರಮದಲ್ಲಿ ಸತತ ಗಣನಾಥ ಎಂದು ಗಣಪನನ್ನು ಆರಂಭಿಸಿ ಮುಂದೆ ವೀಣಾ ಪಾಣಿ ಬ್ರಹ್ಮಾಣಿ ಎಂದು ಶಾರದೆಯನ್ನು ಸ್ತುತಿಸುತ್ತಾರೆ. ಮುಂದೆ ಮರೆಯಬೇಡ ಮನವೆ ನೀನು ಹರಿಯಾ ಸ್ಮರಣೆಯ ಎಂದು ಹಾಡುತ್ತಾ ಶ್ರೀ ಮಹಾಲಕುಮಿ ದೇವಿಯೇ ಎಂದು ಮಹಾಲಕ್ಷ್ಮಿಯನ್ನು ಕೊಂಡಾಡುತ್ತಾ ಕಾರ್ಯಕ್ರಮ ಮುಗಿಸುತ್ತಾರೆ.

    ಅದನ್ನು ವೀಕ್ಷಿಸಿ ಆಲಸಿ ಪ್ರತಿಕ್ರಿಯಿಸಿ.

    ಸೌಭಾಗ್ಯ ಪಂಚದಶೀ

    ಇದಕ್ಕೂ ಮೊದಲು ಇಂದು ಗಾಯಕಿ ಗೀತಾ ಗಣೇಶ್ ಅವರು ಸೌಭಾಗ್ಯ ಪಂಚದಶೀಯನ್ನು ನಮ್ಮ ವೀಕ್ಷಕರಿಗಾಗಿ ಪ್ರಸ್ತುತ ಪಡಿಸಿದ್ದರು. ಗೀತಾ ಗಣೇಶ್ ಅವರ ಗಾಯನ ಭಕ್ತಿ ಭಾವದಿಂದ ತುಂಬಿತ್ತು. ಅದನ್ನು ಕೂಡ ಆಲಿಸಿ. ವೀಕ್ಷಿಸಿ ಧನ್ಯರಾಗಿ.

    By-election- ಉಪ ಚುನಾವಣೆಯಲ್ಲಿJDS ಸೋಲಿಸಲು ಕಾಂಗ್ರೆಸ್ ಷಡ್ಯಂತ್ರ; ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದ ಕುಮಾರ



    CHANNAPATTANA OCT 10

    ಉಪ ಚುನಾವಣೆಯಲ್ಲಿ ಜೆಡಿಎಸ್-JDS- ಪಕ್ಷವನ್ನು ಸೋಲಿಸಲು ಕಾಂಗ್ರೆಸ್ -congress- ನಾಯಕರು ಅಪಪ್ರಚಾರ ನಡೆಸುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ-H D KUMARA SWAMY_ ಹೇಳಿದರು.ಚನ್ನಪಟ್ಟಣದಲ್ಲಿ ಇಂದು ಬೆಳಗ್ಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ವೇಳೆ ಮಾಧ್ಯಮಗಳ ಜತೆ ಅವರು ಮಾತನಾಡಿದರು.

    ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಬಿಟ್ಟು ಮಾತನಾಡಲು ಬೇರೆ ವಿಷಯ ಇಲ್ಲ. ಅವರ ರಾಜಕೀಯ ನನಗೆ ಬೇಸರ ತರಿಸಿದೆ ಎಂದು ಅವರು ಹೇಳಿದರು.

    ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಂ ಅಂತಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕಿದ್ದಾರೆ ಅಂತಾರೆ. ಆರೋಪಗಳಿಗೂ ಒಂದು ಮಿತಿ ಬೇಡವೇ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

    ಸಿದ್ದರಾಮಯ್ಯ ಅವರು ಪದೇ ಪದೇ ನಿಮ್ಮ ಮೇಲೆ ದೂರುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರ ರೀತಿ ಕುಲಗೆಟ್ಟ ರಾಜಕೀಯ ನಾನು ಮಾಡುವುದಿಲ್ಲ. ಅಲ್ಪಸಂಖ್ಯಾತರು ಜೆಡಿಎಸ್ ಗೆಲ್ಲುವ ಕಡೆ ಜೆಡಿಎಸ್ ಪಕ್ಷಕ್ಕೆ ಮತ ಹಾಕಿ, ಕಾಂಗ್ರೆಸ್ ಗೆಲ್ಲುವ ಕಡೆ ಆ ಪಕ್ಷಕ್ಕೆ ಮತ ಹಾಕಿ ಎಂದು ನಾನು ಹೇಳಿರುವುದು ನಿಜ ಎಂದರು.

    ಜೆಡಿಎಸ್ ಕಾರ್ಯಾಗಾರದಲ್ಲಿ ನಾನೇ ಹೇಳಿದ್ದೆ. ಜೆಡಿಎಸ್ ಪಕ್ಷ ಎಲ್ಲಿ ಸ್ಟ್ರಾಂಗ್ ಇದೆ ಅಲ್ಲಿ ಪಕ್ಷ ಬೆಂಬಲಿಸಿ. ಎಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುಂದೆ ಇದೆ ಅಲ್ಲಿ ಅಲ್ಪಸಂಖ್ಯಾತ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಬೆಂಬಲಿಸಿ ಅಂತಾ ಮುಕ್ತವಾಗಿ ಹೇಳಿದ್ದೇನೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

    ಕಾಂಗ್ರೆಸ್ ಪಕ್ಷದ ನಾಯಕರಿಗೆ ಈ ಹೃದಯ ವೈಶಾಲ್ಯತೆ ಇಲ್ಲ. ಅದರ ಬದಲಿಗೆ ನಮ್ಮ ಪಕ್ಷವನ್ನೇ ಮುಗಿಸುವ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ ಎಂದು ಎಚ್ ಡಿಕೆ ತಿಳಿಸಿದರು.

    ರಾಜ್ಯದಲ್ಲಿ ಜ್ಯಾತ್ಯತೀತ ಶಕ್ತಿಗಳು ಉಳಿಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನಎ ಬೆಂಬಲಿಸಿ ಅಂತಾ ಹೇಳಿದ್ದೇನೆ. ಆದರೆ, ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡಿ ತಮ್ಮ ಕೀಳುಮಟ್ಟದ ರಾಜಕೀಯ ಏನೂ ಎಂಬುದನ್ನು ಪ್ರದರ್ಶನ ಮಾಡುತ್ತಿದ್ದಾರೆ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

    ಆರ್.ಎಸ್.ಎಸ್-RSS_ ಬಗ್ಗೆ ನೀಡಿರುವ ಹೇಳಿಕೆಗೆ ಬದ್ಧ:

    ಆರ್ ಎಸ್ ಎಸ್ ಎಸ್ ಬಗ್ಗೆ ನಾನು ಕೊಟ್ಟಿರುವ ಹೇಳಿಕೆಗೆ ಬದ್ಧನಾಗಿದ್ದೇನೆ. ವಾಸ್ತವ ಸಂಗತಿಗಳನ್ನು ಮಾತ್ರ ಹೇಳಿದ್ದೇನೆ. ಆರ್.ಎಸ್.ಎಸ್ ಪ್ರಚಾರಕರೊಬ್ಬರು ಹೇಳಿರುವ ಮಾತುಗಳನ್ನು ನಾನು ಉಲ್ಲೇಖ ಮಾಡಿದ್ದೇನೆ. ಬೇಕಿದ್ದರೆ ನನ್ನ ಹೇಳಿಕೆ ವಿರೋಧ ಮಾಡುವವರು ಸಾರ್ವಜನಿಕವಾಗಿ ಚರ್ಚೆಗೆ ಬರಲಿ. ನಾನು ಸಿದ್ದನಿದ್ದೇನೆ. ಬಿಜೆಪಿ ಹಾಗೂ ಆರ್.ಎಸ್.ಎಸ್ ನಾಯಕರು ಬರಲಿ ಎಂದು ಎಚ್ ಡಿಕೆ ಅವರು ಹೇಳಿದರು.

    ಸ್ವಾತಂತ್ರ್ಯ ಬಂದಾಗ ಆರ್.ಎಸ್.ಎಸ್ ಇಲ್ಲದಿದ್ದರೆ ಭಾರತವು ಪಾಕಿಸ್ತಾನ ಆಗುತಿತ್ತು ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿರುವ ಬಗ್ಗೆ ಪ್ರಶ್ನಿಸಿದಾಗ, ಸ್ವಾತಂತ್ರ್ಯ ಬಂದಾಗ ಈಶ್ವರಪ್ಪ ಅವರು ಹುಟ್ಟಿದ್ದರಾ? ಯಾರ ಯಾರ ಕೊಡುಗೆ ಏನ್ ಏನೇನು ಇದೆ ಎಂದು ಈಶ್ವರಪ್ಪ ಅವರಿಗೇನು ಗೊತ್ತು? ಎಂದು ಟಾಂಗ್ ಕೊಟ್ಟರು.

    ಕಾಶ್ಮೀರದಲ್ಲಿ ಶಾಲೆಗೆ ನುಗ್ಗಿ ಭಯೋತ್ಪಾದಕರು ಶಿಕ್ಷಕರನ್ನ ಸುಟ್ಟಿದ್ದಾರೆ. ದೇವೇಗೌಡರು ಪ್ರಧಾನಿ ಆಗಿದ್ದ ವೇಳೆ ದೇಶದಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸಿದ ಒಂದೇ ಒಂದು ಘಟನೆ ನಡೆದಿತ್ತಾ? ಕಳೆದ 4 ದಿನಗಳಲ್ಲಿ ಕಾಶ್ಮೀರದಲ್ಲಿ ಪಂಡಿತರು, ಶಿಕ್ಷಕರು, ನಾಗರಿಕರನ್ನು ಭಯೋತ್ಪಾದಕರು ಗುಂಡಿಟ್ಟು ಕೊಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ದೂರಿದರು.

    ಕಾಂಗ್ರೆಸ್ ನಾಯಕರ ಜತೆಗೆ ಬಿಜೆಪಿ ನಾಯಕರು ವಾದ ಮಾಡಿದ ಹಾಗೆ ನನ್ನ ಬಳಿ ಚರ್ಚೆ ಬೇಡ. ನಾನು ದಾಖಲೆ, ಆಧಾರ ಇಟ್ಟುಕೊಂಡು ಮಾತನಾಡಿದ್ದೇನೆ. ಆರ್.ಎಸ್.ಎಸ್ ಹಾಗೂ ಬಿಜೆಪಿ ಸೇರಿಕೊಂಡು ಕಾಶ್ಮೀರವನ್ನ ಹಾಳು ಮಾಡುತ್ತಿದ್ದಾರೆ ಎಂದು ಅವರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

    ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ:

    ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರ ಎರಡು ಕ್ಷೇತ್ರಗಳಲ್ಲಿ ಉತ್ತಮ ವಾತಾವರಣ ಇದೆ. ಸಿಂದಗಿಯಲ್ಲಿ ನಮ್ಮ ಅಭ್ಯರ್ಥಿ ಗೆಳ್ಳುವುದು ಖಚಿತ. ಹಾನಗಲ್ ನಲ್ಲಿ ಗಟ್ಟಿ ಪೈಪೋಟಿ ನೀಡಲಿದ್ದೇವೆ ಹಾಗೂ ಅಲ್ಲಿಯೂ ನಮ್ಮ ಪರವಾಗಿಯೇ ಅಲೆ ಇದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

    ನಮ್ಮ ಪಕ್ಷವನ್ನ 2023ಕ್ಕೆ ಅಧಿಕಾರಕ್ಕೆ ತರಲು ಕಾರ್ಯಾಗಾರಗಳನ್ನ ಮಾಡಿದ್ದೇನೆ. ಇದರ ಭಾಗವಾಗಿ ದೇಶಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ಜನತೆ ಮುಂದೆ ಇಡಲು ಪ್ರಾರಂಭ ಮಾಡಿದ್ದೇನೆ. ಇದು ಇಲ್ಲಿಗೆ ನಿಲ್ಲಿಸುವ ಪ್ರಶ್ನೆ ಇಲ್ಲ. ಕಾರ್ಯಾಗಾರಗಳನ್ನು ಮಾಡುವ ಮೂಲಕ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇನೆ. ಉಪ ಚುನಾವಣೆಯಲ್ಲಿ ಯಾರನ್ನೊ ಓಲೈಸಿಕೊಳ್ಳಲು ಈ ಕಾರ್ಯಾಗಾರ ಮಾಡಿಲ್ಲ. ಓಲೈಸೊ ರಾಜಕಾರಣ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಬಿಟ್ಟಿದ್ದು. ಹಿಂದುತ್ವದ ಹೆಸರಿನಲ್ಲಿ ಸಂದೇಶ ಕೊಡಲು ಬಿಜೆಪಿ ಹೊರಟಿದೆ. ಹಿಂದುತ್ವದ ರಾಜಕಾರಣ ಮಾಡಿಕೊಂಡು ಮತಗಳಿಗೊಸ್ಕರ ನಾನು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿಲ್ಲಾ ಎಂದು ಕುಮಾರಸ್ವಾಮಿ ತಿಳಿಸಿದರು.

    DASARA: ಚಿತ್ರದುರ್ಗದ ಶೋಭಾ-ಸುಮಾ ಅವರ ಮನೆಯ ದಸರಾ ಗೊಂಬೆ ನೋಟ

    ಕಳೆದ ಹತ್ತು ವರ್ಷಗಳಿಂದ ಚಿತ್ರದುರ್ಗದ ಶೋಭಾ ಮಂಜುನಾಥ ತಮ್ಮ ಮನೆಯಲ್ಲಿ ದಸರಾ ಗೊಂಬೆ ಕೂಡಿಸುತ್ತಿದ್ದಾರೆ. ಹಿರಿಯರಿಂದ ಬಂದ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಕೃಷಿ ಅಧಿಕಾರಿಯಾಗಿರುವ ಪತಿ ಹಾಗೂ ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳು ಬೆಂಬಲವಾಗಿ ನಿಂತಿದ್ದಾರೆ.

    ಈ ಬಾರಿ ನೈಜೇರಿಯಾಲಿದ್ದ ವಾರಗಿತ್ತಿ ಸುಮಾ ಮುರುಗೇಂದ್ರ ಅವರು ಜೊತೆಗೂಡಿರುವದರಿಂದ ಬೊಂಬೆ ಹಬ್ಬದ ಸಡಗರ ಮತ್ತಷ್ಟು ಹೆಚ್ಚಿದೆ. ನೈಜೇರಿಯಾದಿಂದ ತಂದ ಬೊಂಬೆಗಳನ್ನು ಪ್ರತ್ಯೇಕವಾಗಿ ಜೋಡಿಸಿರುವುದು ಈ ಸಂಗ್ರಹ ಮತ್ತಷ್ಟು ಆಕರ್ಷಕವಾಗಲು ಕಾರಣವಾಗಿದೆ.

    ಇವರ ಮನೆಯ ಬೊಂಬೆಗಳ ಲೋಕ ಇಲ್ಲಿ ಅನಾವರಣಗೊಂಡಿದೆ.

    MYSURU DASARA ಟೂರಿಸಂ ಪ್ಯಾಕೇಜ್ ಸಲಹೆ ಕೊಟ್ಟ ಕೃಷ್ಣ

    MYSURU OCT 7

    ಮೈಸೂರು ದಸರಾವನ್ನು ಪ್ಯಾಕೇಜ್ ಟೂರಿಸಂಗೋಸ್ಕರ ಸಿದ್ಧ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ-S M KRISHNA _ ಅವರು ರಾಜ್ಯ ಸರಕಾರಕ್ಕೆ ಮಾಡಿದ್ದಾರೆ.

    ಸಾಂಸ್ಕೃತಿಕ ನಗರಿ ಮೈಸೂರಿನ _MYSURU- ಚಾಮುಂಡಿ ಬೆಟ್ಟದಲ್ಲಿ ನೆಲೆ ನಿಂತಿರುವ  ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಗೈದು, ದೀಪಬೆಳಗಿಸುವ ಮೂಲಕ ವಿಶ್ವವಿಖ್ಯಾತ 411ನೇ ಮೈಸೂರು ದಸರಾಕ್ಕೆ ಎಸ್.ಎಂ.ಕೃಷ್ಣ ಅವರು ಗುರುವಾರ ವಿಧ್ಯುಕ್ತ ಚಾಲನೆ ನೀಡಿ, ಅವರು ಮಾತನಾಡಿದರು.

    ಮುಂದಿನ ವರ್ಷಕ್ಕೆ ಒಂದು ಪ್ಯಾಕೇಜ್ ಟೂರ್ಸ್ ಮಾಡುವ ಮೂಲಕ ರೂಪುರೇಷೆಗಳು ಹೇಗಿರಬೇಕೆಂಬುದನ್ನು ಸಿದ್ಧಗೊಳಿಸಿ ನಿರ್ಮಿಸಿದರೆ ಬಹುಶಃ ದಸರಾದಿಂದ ರಾಜ್ಯದ ಅಭಿವೃದ್ಧಿ ಕೂಡ ಸಾಧ್ಯವಿದೆ ಎಂದವರು ಹೇಳಿದರು.

    ಕರ್ನಾಟಕ ರಾಜ್ಯಕ್ಕೆ ಸಹಸ್ರಾರು ಮಂದಿ ಬರುತ್ತಾರೆ. ವಿಜಯಪುರ, ಐಹೊಳೆ ಪಟ್ಟದಕಲ್ಲು ಹಂಪಿ ಇವುಗಳನ್ನು ನೋಡಿ ಹೋಗಲು ಅವಕಾಶ ಮಾಡಿದಲ್ಲಿ ಪ್ರವಾಸೋದ್ಯಕ್ಕೆ ಸಂಪನ್ಮೂಲ ಕ್ಷೇತ್ರವನ್ನಾಗಿ ಮಾಡಿಕೊಳ್ಳಬಹುದು. ಉದಾಹರಣೆಗೆ ಸಿಂಗಾಪುರ ಮೈಸೂರಿಗಿಂತ ಸಣ್ಣದು ಮೂಲಭೂತವಾದ ಬಂಡವಾಳದಿಂದಲೇ ಲಕ್ಷಾಂತರ ಜನ ನೋಡಲು ಬರುತ್ತಾರೆ. ಸ್ವಚ್ಛವಾಗಿ ಆ ಪಟ್ಟಣವನ್ನು ರಕ್ಷಣೆ ಮಾಡಿದ್ದಾರೆ ಎಂದರು.

    ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿ ಮನುಕುಲಕ್ಕೆ ಬಂದಿರತಕ್ಕಂತಹ ಬಹಳ ದೊಡ್ಡ ಗಂಡಾಂತರ ಈ ಕೊರೊನಾ ಪಿಡುಗಿನಿಂದ ಮನುಕುಲವನ್ನು ರಕ್ಷಣೆ ಮಾಡುವಂತೆ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.

    ಮೈಸೂರು ನೆನಪು

    ನನ್ನ ತಂದೆ ಹತ್ತು ಹನ್ನೆರಡು ವರ್ಷಗಳ ಪ್ರಾಯದಲ್ಲಿ ಮೈಸೂರಿಗೆ ಓದಲು ಕಳಿಸಿದರು. ಒಂಟಿಕೊಪ್ಪಲ್ ಮಿಡ್ಲ್ ಸ್ಕೂಲ್ ನಲ್ಲಿ ಕಲಿತೆ, ಆ ನಂತರ ಮಹಾರಾಜ ಹೈಸ್ಕೂಲ್ʼನಲ್ಲಿ ಮೂರು ವರ್ಷ ಕಳೆದೆ. ಆ ನಂತರ ಯುವರಾಜ ಕಾಲೇಜು, ಆ ನಂತರ ಮಹಾರಾಜ ಕಾಲೇಜಿನಲ್ಲಿ ಅಭ್ಯಾಸ ನಡೆಯಿತು.  ನನ್ನ ವ್ಯಕ್ತಿತ್ವ ವಿಕಸನ ಮೈಸೂರಿಗೆ ಹೊಂದಿಕೊಂಡಂತೆ ನಡೆದಿದೆ. ಪ್ರತಿದಿನ ಚಾಮುಂಡಿಬೆಟ್ಟ ನೋಡುವುದು, ಕೈಮುಗಿದು ಹೋಗುವುದು, ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ದಸರಾ ಮಹಾ ಸಡಗರದಿಂದ ನಡೆಯುತ್ತದ್ದ ಕಾಲ, ಆಗ ಈ ರೀತಿಯ ಪಿಡುಗಿರಲಿಲ್ಲ.  ವಿಜಯದಶಮಿಯ ದಿನ ರಾಜ್ಯದ, ದೇಶದ ವಿದೇಶಗಳಿಂದ ಸಹಸ್ರಾರು ಮಂದಿ ಮೈಸೂರಿಗೆ ಬಂದು ಈ ದಸರಾ ಹಬ್ಬದ ಸೊಗಡನ್ನು ಅನುಭವಿಸಿದ್ದಾರೆ ಎಂದು ಎಸ್. ಎಂ. ಕೃಷ್ಣ ತಿಳಿಸಿದರು.

    ಪ್ರಜಾಪ್ರತಿನಿಧಿ ಸಭೆ ಜಗನ್ ಮೋಹನ ಅರಮನೆಯಲ್ಲಿ  ನಡೆಯುತ್ತಿತ್ತು. ಮರಿಮಲ್ಲಪ್ಪದಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿದ್ದರು. ಪ್ರಾತಃ ಸ್ಮರಣಿಯ ಪಿಟೀಲು ಚೌಡಯ್ಯ ಸೇರಿದಂತೆ ಹಲವರು ಪ್ರತಿರಾತ್ರಿ ಸಂಗೀತ ಕಛೇರಿ ಏರ್ಪಾಡು  ಮಾಡುತ್ತಿದ್ದರು. ಮೈಸೂರು ಕುಸ್ತಿಗೆ ಹೆಸರಾಂತ ಪಟ್ಟಣವಾಗಿತ್ತು. ಸಾಹುಕಾರ್ ಚನ್ನಯ್ಯನಂತವರು ಕುಸ್ತಿಗೆ ವಿಶೇಷ ಸೌಲತ್ತು ಒದಗಿಸುತ್ತಿದ್ದರು. ದಸರಾದಷ್ಟೇ  ಖ್ಯಾತವಾಗಿದ್ದ ವಸ್ತುಪ್ರದರ್ಶನ ನೋಡಲು ಸಹಸ್ರಾರು ಮಂದಿ ಬರುತ್ತಿದ್ದರು. ಅದನ್ನು ಅನುಭವಿಸುತ್ತಿದ್ದರು. ಇಂತಹ ಅತ್ಯಂತ ರೋಚಕವಾದಂತಹ ಮತ್ತು ನಮ್ಮನ್ನು ಪುಳಕಿತಗೊಳಿಸತಕ್ಕಂತಹ ಹಲವಾರು ಘಟನೆಗಳು ನಡೆಯುತ್ತಿತ್ತು ಎಂದು ಎಸ್. ಎಂ.ಕೃಷ್ಣ ಅವರು ಗತ ವೈಭವದ ಮೆಲುಕು ಹಾಕಿದರು.

    ಯದುಕುಲದ ಅರಸರು ದಸರಾವನ್ನು ನಾಡಹಬ್ಬವನ್ನಾಗಿ ಪರಿವರ್ತಿಸಲು ಶ್ರಮಪಟ್ಟಿದ್ದಾರೆ. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್, ಆ ನಂತರ ಬಂದಂತಹ ಅನುವಂಶಿಕರು ದಸರಾ ಉತ್ಸವಕ್ಕೆ ಸಾಕಷ್ಟು ಮೆರಗನ್ನು ತಂದುಕೊಟ್ಟಿದ್ದಾರೆಂದು ಸ್ಮರಿಸಿದರು.

    ಸರ್ ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ದಸರಾ ಮಹೋತ್ಸವಕ್ಕೆ ವಿಶೇಷ ಅರ್ಥ ಕಲ್ಪಿಸಿಕೊಟ್ಟವರು. ರಾಮಕೃಷ್ಣಾಶ್ರಮದಿಂದ ಪ್ರತಿ ತಿಂಗಳು ಬೆಟ್ಟಕ್ಕೆ ನಡೆದುಕೊಂಡು ಹೋಗುತ್ತಿದ್ದೆವು ಅಲ್ಲಿ ತಾಯಿಗೆ ನಮಸ್ಕಾರ ಸಲ್ಲಿಸುತ್ತಿದ್ದೆವು. ಇವೆಲ್ಲವನ್ನು ಸ್ಮರಿಸಿದಾಗ ಓ ದೇವರೇ! ಮತ್ತೆ ಆ ಗಳಿಗೆ ಬಂದೀತೆ ಎಂಬ ಉದ್ಘಾರ ಹೊರಡುತ್ತೆ ಎಂದು ಎಸ್. ಎಂ. ಕೃಷ್ಣ ಉದ್ಘರಿಸಿದರು.

    800 ವರ್ಷಗಳ ಇತಿಹಾಸ

    ದಸರಾ ಉತ್ಸವಕ್ಕೆ 800 ವರ್ಷಗಳ ಇತಿಹಾಸವಿದೆ. ವಿಜಯನಗರ ಅರಸರು ಶಕ್ತಿ ಪ್ರದರ್ಶನಕ್ಕೆ ದಿಗ್ವಿಜಯಕ್ಕೆ ಹೋಗಲು ಉಪಯೋಗಿಸಿಕೊಳ್ಳುತ್ತಿದ್ದರು. ವಿಜಯನಗರ ಅರಸ ಕೃಷ್ಣದೇವರಾಯನ ಕಾಲದಲ್ಲಿ ಹಂಪಿಯಲ್ಲಿ ಮಹಾನವಿಮ ದಿಬ್ಬ ನಿರ್ಮಿಸಲಾಗಿತ್ತು. ಕ್ರೀಡೆ, ಸಾಹಸಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತಿತ್ತು. ವಿಜಯ ನಗರ ಸಾಮ್ರಾಜ್ಯದ ದಸರಾ ಪ್ರದರ್ಶನವನ್ನು ಮುಂದುವರಿಸಿಕೊಂಡು ಬಂದವರು ಮೈಸೂರು ಒಡೆಯರ ಸಂತತಿಯವರು. 1610 ಮೈಸೂರು ಒಡೆಯರ್  ಶ್ರೀರಂಗಪಟ್ಟಣದಲ್ಲಿ ದಸರಾ ಪ್ರಾರಂಭಿಸಿದರು. ಅಂಬಾರಿ ಕೂಡ ವಿಜಯ ನಗರದವರಿಂದಲೇ ಪಡೆದಿದ್ದರು. ಮಹಾರಾಷ್ಟ್ರದ ದೇವಿಗಿರಿಯಿಂದ ವಿಜಯನಗರದವರೆಗೂ ಬಂದಿತ್ತು. ಅಂಬಾರಿಗೆ 8 ಶತಮಾನಗಳ ಇತಿಹಾಸವಿದೆ. 750 ಕೆಜಿ ತೂಕವಿರುವ ಸ್ವರ್ಣ ಅಂಬಾರಿಯಲ್ಲೇ ವಿಜಯ ದಸರಾ ಮೆರವಣಿಗೆ ಹೋಗುತ್ತಿದೆ ಎಂದು ಸ್ಮರಿಸಿದರು.

    ಕೆಆರ್ ಎಸ್ ಆಣೆಕಟ್ಟಿನಿಂದ ಮಂಡ್ಯ ಅಭಿವೃದ್ಧಿ ಜಿಲ್ಲೆಯಾಗಿದೆ.  ಅಣೆಕಟ್ಟು ಕಟ್ಟಲು ಮೈಸೂರು ರಾಜರ ಕೊಡುಗೆಯನ್ನು ಸ್ಮರಿಸಿದರು. ಹಿಂದಿನದನ್ನು ನೆನೆಯದೇ ಮುಂದೆ ನಡೆಯಲು ಸಾಧ್ಯವಿಲ್ಲ, ಹಿಂದಿನದನ್ನು ನೆನೆದಾಗ ಮುಂದಿನ ಭವಿಷ್ಯ ಸ್ಪಷ್ಟವಾಗಿ ಕಾಣಿಸುತ್ತದೆ. ದಸರಾ ಪ್ರೇರಕ ಶಕ್ತಿಯಾಗಿದೆ ಎಂದು ತಿಳಿಸಿದರು.

    ಭಾರತ ಅಭಿವೃದ್ಧಿ ಶೀಲ ರಾಷ್ಟ್ರವಾಗಿದೆ. ಚೀನಾ, ಭಾರತದ ಜೊತೆ ಅಭಿವೃದ್ಧಿಯಲ್ಲಿ ಪೈಪೋಟಿ ನಡೆಯುತ್ತಿದೆ. ಮತ್ಸರ ಇಲ್ಲದಿದ್ದಲ್ಲಿ ಸ್ವಾಗತಿಸುವ ಬೆಳವಣಿಗೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ನಮ್ಮ ದೇಶ ಅಭಿವೃದ್ಧಿಪಥದಲ್ಲಿ ಸಾಗುತ್ತಿದ್ದು,  ಬಹಳ ದೊಡ್ಡ ದೊಡ್ಡ ಕನಸುಗಳನ್ನ ಪ್ರಧಾನ ಮಂತ್ರಿ ಕಂಡಿದ್ದು ಅದನ್ನು ನನಸಾಗಿಸಲು ಶ್ರಮಿಸುತ್ತಿದ್ದಾರೆ. ಅವರ ಕನಸು ನನಸಾಗಲಿ. ತಾಯಿ ಚಾಮುಂಡೇಶ್ವರಿ ಆ ಶಕ್ತಿಯನ್ನು ಅವರಿಗೆ ನೀಡಲಿ.  ಸ್ಮೃತಿಪಟದಲ್ಲಿ ಇಷ್ಟು ಕಟ್ಟಪಟ್ಟು ದೇಶದ ಬಗ್ಗೆ ಇಷ್ಟು ಚಿಂತನೆಗಳನ್ನು ಕೈಗೊಂಡು ರೂಪಿಸಲು ಶ್ರಮಿಸಿದವರನ್ನು ನೋಡಿಲ್ಲ, ಅವರಿಗೆ ನಮ್ಮ ಬೆಂಬಲವಿದೆ. ಯುವ ಜನಾಂಗ ದೇಶದ ಆಸ್ತಿ, ಒಂದು ನಿರ್ದಿಷ್ಟವಾದ

    ಕೃತಿದತ್ತವಾಗಿರುವ ಅವಕಾಶವಿರುವಾಗ ಅದನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಿದೆ. ದಸರಾ ಸುಲಲಿತವಾಗಿ ನಡೆಯಲಿ. ಈ ಸುಂದರ ದಸರಾವನ್ನು ಉಲ್ಲಾಸ ಶ್ರದ್ಧೆ ಭಕ್ತಿಯಿಂದ ಆಚರಿಸೋಣ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಮಾಜಿ ಸಿಎಂ ಎಸ್.ಎಂ ಕೃಷ್ಣ, ಸಿಎಂ ಬಸವರಾಜ ಬೊಮ್ಮಾಯಿ ಮತ್ತವರ ಪತ್ನಿ ಚನ್ನಮ್ಮ  ಅವರಿಗೆ ಪುಸ್ತಕ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಜಿ. ಟಿ. ದೇವೇಗೌಡ ವಹಿಸಿದ್ದರು.

    DASARA MUSIC FEST: ಗಜಮುಖನೆ ಸಿದ್ಧಿದಾಯಕನೇ ವಂದಿಪೆ ಶರಣು

    ಇಂದಿನಿಂದ ಎಲ್ಲೆಡೆ ನವರಾತ್ರಿ ಸಂಭ್ರಮ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಕಳೆದ ವರ್ಷದಂತೆ ಈ ವರ್ಷವೂ ನಿಮ್ಮ ನೆಚ್ಚಿನ ಕನ್ನಡ ಪ್ರೆಸ್.ಕಾಮ್ ಇಂದಿನಿಂದ ನವರಾತ್ರಿ ಸಂಗೀತೋತ್ಸವವನ್ನು-Dasara Music Festival- ಸಾದರ ಪಡಿಸುತ್ತಿದೆ.

    ಮೊದಲ ದಿನದ ಸಂಗೀತ ಕಚೇರಿಯನ್ನು ಬೆಂಗಳೂರಿನ ದಂತ ವೈದ್ಯೆ ಡಾ. ಆಶಾ ಜೋಶಿ-Dr Asha Joshi- ನಡೆಸಿಕೊಟ್ಟಿದ್ದಾರೆ. ಇವರ ಸಂಗೀತ ಗುರು ವಿದೂಷಿ ಶಾರದ ಅವರು. ಕರ್ನಾಟಕ ಸಂಗೀತದಲ್ಲಿ ಜ್ಯೂನಿಯರ್ ಪಾಸಾಗಿದ್ದಾರೆ. ದೇವರ ನಾಮ ಮತ್ತು ಭಗವದ್ಗೀತೆಯನ್ನು ಲತಾ ಕುಲಕರ್ಣಿ ಅವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಗುರು ಭಾರತಿ ವಿಠ್ಠಲ್ ಅವರಿಂದ ಇದೀಗ ಕಥಕ್ ಅಭ್ಯಾಸ ಮಾಡುತ್ತಿದ್ದಾರೆ.

    ಗಜಮುಖನೆ ಸಿದ್ಧಿದಾಯಕನೇ ವಂದಿಪೆ ಶರಣು ಎಂದು ವಿನಾಯಕ ಸ್ತುತಿಯಿಂದ ಆರಂಭವಾಗುವ ಈ ಕಚೇರಿ ಮುಂದೆ ನೋಡಿದೆ ವೆಂಕಣರಮಣನ ಎಂದು ತಿಮ್ಮಪ್ಪನನ್ನು ಕೊಂಡಾಡುತ್ತದೆ. ವೇಣಿ ಮಾಧವನ ತೋರಿಸೆ ಎಂದು ಹಾಡುತ್ತಾ ಬಾರಯ್ಯ ಶ್ರೀನಿವಾಸ ಭಕ್ತರ ಮನೆಗೆ ಎಂದು ಭಗವಂತನನ್ನು ಕರೆಯಲಾಗುತ್ತದೆ. ಬಾರೇ ಭಾಗ್ಯದ ನಿಧಿಯೇ ಶ್ರೀಜಾನಕಿಯೇ ಎಂಬ ಹಾಡಿನ ಮೂಲಕ ಮಂಗಳವಾಗುತ್ತದೆ.

    ನಿರೂಪಣೆ ಭಾರತಿ ಶ್ರೀನಿವಾಸ್ ಅವರದ್ದು. ಆಲಿಸಿ, ವೀಕ್ಷಿಸಿ ಪ್ರತಿಕ್ರಿಯಿಸಿ.

    ಮಲ್ಲೇಶ್ವರದಲ್ಲಿ ವೈದ್ಯಕೀಯ ಪರೀಕ್ಷೆಗಳ ಹೈಟೆಕ್ ಲ್ಯಾಬ್: ಬಿಬಿಎಂಪಿ-ಮಣಿಪಾಲ್ ಹೆಲ್ತ್ ಒಡಂಬಡಿಕೆ


    BENGALURU OCT 7

    ಬಡವರಿಗೆ ರಿಯಾಯಾತಿ ದರದಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದಕ್ಕಾಗಿ ಮಲ್ಲೇಶ್ವರಂನಲ್ಲಿ ಹೈಟೆಕ್ ಡಯಾಗ್ನಾಸ್ಟಿಕ್ ಕೇಂದ್ರ ಸ್ಥಾಪಿಸಲು ಬಿಬಿಎಂಪಿ ಮತ್ತು ಮಣಿಪಾಲ್ ಆಸ್ಪತ್ರೆ ನಡುವೆ ಗುರುವಾರ ಒಡಂಬಡಿಕೆಗೆ (ಎಂಒಯು) ಸಹಿ‌ ಹಾಕಲಾಯಿತು.

    ಮಲ್ಲೇಶ್ವರಂ ಶಾಸಕರೂ ಆದ ಐಟಿ/ಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ಗುರುವಾರ ಒಡಂಬಡಿಕೆಗೆ (ಎಂಒಯು) ಸಹಿ ಹಾಕಲಾಯಿತು.

    ಈ ಒಡಂಬಡಿಕೆ ಪ್ರಕಾರ, ಮಲ್ಲೇಶ್ವರಂನ ಚಂದ್ರಶೇಖರ್ ಆಜಾದ್ ಮೈದಾನದ ಬಳಿಯ ಬೆಂಗಳೂರು ಒನ್ ಕಟ್ಟಡದ ಮೊದಲ ಮಹಡಿಯಲ್ಲಿ 45 ದಿನಗಳಲ್ಲಿ ಸ್ಥಾಪನೆಯಾಗಿರುವ ಈ ಲ್ಯಾಬ್ 140 ವಿವಿಧ ವೈದ್ಯಕೀಯ ಪರೀಕ್ಷೆಗಳ ಸೌಲಭ್ಯ ಹೊಂದಿದ್ದು, ದರವು ಬೇರೆ ಕಡೆಗಳಿಗಿಂತ ಶೇ 30ರಷ್ಟು ಕಡಿಮೆ ಇರುತ್ತದೆ. ಇದರ ಜೊತೆಗೆ, ಬಿಪಿಎಲ್ ಕಾರ್ಡುದಾರರಿಗೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ಹಾಗೂ ಎಪಿಎಲ್ ಕಾರ್ಡುದಾರರಿಗೆ ಶೇ 40ರಷ್ಟು ರಿಯಾಯಿತಿ ದರದಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಅಥವಾ ಸರ್ಕಾರಿ ಆಸ್ಪತ್ರೆಯ ಅಧಿಕೃತ ಸಲಹೆ ಪಡೆದು ಬರುವವರಿಗೂ ಈ ರಿಯಾಯಿತಿ ಸಿಗಲಿದೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು.

    ಸರ್ಕಾರಿ- ಖಾಸಗಿ ಸಹಭಾಗಿತ್ವದ (ಪಿಪಿಪಿ) ಈ ಲ್ಯಾಬ್ ನಲ್ಲಿ ಎಕ್ಸ್ ರೇ, ಅಲ್ಟ್ರಾಸೌಂಡ್, ಇಸಿಜಿ, ಪಿ.ಎಫ್.ಟಿ ಸೇರಿದಂತೆ 140 ಬೇರೆ ಬೇರೆ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಈ ಲ್ಯಾಬ್ ಗೆ ಕಟ್ಟಡದ ಜಾಗವನ್ನು ಬಿಬಿಎಂಪಿ ಒದಗಿಸಲಿದ್ದು, ಉಳಿದ ವ್ಯವಸ್ಥೆಗಳನ್ನೆಲ್ಲಾ ಮಣಿಪಾಲ್ ಹೆಲ್ತ್ ಮಾಡಿಕೊಳ್ಳಲಿದೆ. ಈ ಲ್ಯಾಬ್ ನ ಯಶಸ್ಸನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ನಗರದ ಬೇರೆ ಕಡೆಗಳಲ್ಲೂ ಇಂತಹ ಹೈಟೆಕ್ ಲ್ಯಾಬ್ ಗಳನ್ಜು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

    ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ವಿಶೇಷ ಆಯುಕ್ತ ರಣದೀಪ್, ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ, ಮಣಿಪಾಲ್ ಹೆಲ್ತ್ ನ ಪ್ರಾದೇಶಿಕ ಮುಖ್ಯ ನಿರ್ವಹಣಾಧಿಕಾರಿ ದೀಪಕ್ ವೇಣುಗೋಪಾಲನ್, ಕ್ಲಿನಿಕಲ್ ಆಪರೇಷನ್ ಮುಖ್ಯಸ್ಥರಾದ ಡಾ.ಮುರಳಿ ಅವರು ಇದ್ದರು.

    error: Content is protected !!