33.4 C
Karnataka
Thursday, May 16, 2024

    ನಂದಿನಿ ಹೆದ್ದುರ್ಗ ಅವರ ರತಿಯ ಕಂಬನಿ ಕವನ ಸಂಕಲನ ಭಾನುವಾರ ಲೋಕಾರ್ಪಣೆ

    Must read

    BENGALURY SEP 18

    ಹೆಸರಾಂತ ಕವಯತ್ರಿ ಹಾಗೂ ಕನ್ನಡಪ್ರೆಸ್.ಕಾಮ್ ನ ಲೇಖಕ ಬಳಗದಲ್ಲಿ ಒಬ್ಬರಾಗಿರುವ ನಂದಿನಿ ಹೆದ್ದುರ್ಗ ಅವರ ಮೂರನೇ ಕವನ ಸಂಕಲನ ‘ರತಿಯ ಕಂಬನಿ’ ನಾಳೆ ಭಾನುವಾರ ಸೆಪ್ಬೆಂಬರ್ 19ರಂದು ಬೆಂಗಳೂರಿನ ಎನ್ ಆರ್ ಕಾಲೋನಿಯಲ್ಲಿರುವ ಬಿ ಎಮ್ ಶ್ರೀ ಸಭಾಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ.

    ಹಿರಿಯ ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಅಧ್ಯಕ್ಷತೆಯ ವೇದಿಕೆ ಕಾರ್ಯಕ್ರಮದಲ್ಲಿ ಕವಯಿತ್ರಿ ಎಚ್ ಎಲ್ ಪುಷ್ಪ ಅವರು ಕೃತಿ ಬಿಡುಗಡೆ ಮಾಡಲಿದ್ದು ಕೃತಿಯ ಕುರಿತು ಕವಿ ಹಾಗು ಕಥೆಗಾರರಾದ ಬಿ ಎಮ್ ಹನೀಫ್ ಅವರು ಮಾತಾನಾಡುತ್ತಾರೆ. ಕಾರ್ಯಕ್ರಮ ಬೆಳಿಗ್ಗೆ 10.30 ರಿಂದ ಆರಂಭವಾಗುತ್ತದೆ.

    ವಾಗೀಶ್ ಹೆಗಡೆಯವರ ಅಂದದ ಮುಖಪುಟವಿರುವ ಸಂಕಲನವನ್ನು ಹಿರಿಯ ಪತ್ರಕರ್ತರಾದ ಆರ್ ಪೂರ್ಣಿಮಾ ಅವರ ವಿಕಾಸ ಪ್ರಕಾಶನ ಹೊರತರುತ್ತಿದ್ದು ಪುಸ್ತಕದ ಮುಖಬೆಲೆ ನೂರೈವತ್ತು ರೂಪಾಯಿಗಳು.

    ಹೆಸರಾಂತ ಬರಹಗಾರ ಮತ್ತು ಹಿರಿಯ ಪತ್ರಕರ್ತ ಜೋಗಿ ಈ ಕವನ ಸಂಕಲನಕ್ಕೆ ಬರೆದಿರುವ ಬೆನ್ನುಡಿ ಹೀಗಿದೆ :

    ಪ್ರೇಮ, ವಿರಹ, ವ್ಯಾಮೋಹ ಮತ್ತು ಕಾಮದ ಕುರಿತು ಬರೆಯುವುದು ಸಾಧ್ಯವೇ ಇಲ್ಲ ಎಂಬಂಥ ಕಾವ್ಯಪರಿಸರದಲ್ಲಿ, ನಂದಿನಿ ಹೆದ್ದುರ್ಗ ಬರೆದಿರುವ ಕವಿತೆಗಳು ಗಂಡುಹೆಣ್ಣಿನ ಸಂಬಂಧದ ಸಂಕೀರ್ಣತೆಯನ್ನು ಕಟ್ಟಿಕೊಡುತ್ತವೆ. ಕನ್ನಡದ ಮಟ್ಟಿಗೆ ಪ್ರೇಮವನ್ನು ಮತ್ತೊಂದು ಎತ್ತರಕ್ಕೆ ಒಯ್ದಿರುವ ಕವಿತೆಗಳು ಈ ಸಂಕಲನದಲ್ಲಿವೆ.

    ಪ್ರೇಮದ ಕುರಿತು ಹೇಳುತ್ತಲೇ ಅದನ್ನು ಕಾವ್ಯಕ್ಕೆ, ಬದುಕಿಗೆ ಮತ್ತು ನಶ್ವರತೆಗೆ ಒಗ್ಗಿಸುವಂಥ ರೂಪಕಗಳು ಮತ್ತೆ ಮತ್ತೆ ಎದುರಾಗುವುದನ್ನು ಈ ಪದ್ಯಗಳಲ್ಲಿ ಕಾಣಬಹುದು. ಬೊಗಸೆ ನೋವನ್ನು ಕಡ ಕೇಳುವ ಆತ್ಮವಿಶ್ವಾಸ , ಉಮೆಯನ್ನೂ ಉಮರನನ್ನೂ ಅಮರರನ್ನಾಗಿಸುವ ರೀತಿ, ಕವಿತೆಯ ಜೊತೆ ಸಫಲ ಪ್ರೇಮದ ನಿಟ್ಟುಸಿರನ್ನೂ ಅಘಟಿತ ಪ್ರಣಯದ ಚೀತ್ಕಾರವನ್ನೂ ತಳುಕುಹಾಕುವ ರೀತಿ- ಈ ಕವಿತೆಗಳನ್ನು ಮಧುರಗೊಳಿಸುತ್ತಲೇ ಹುರಿಗೊಳಿಸಿದೆ.

    ಪ್ರತಿಭಟನೆ, ನೋವು, ಸಮಾನತೆ, ಅಸಹಾಯಕತೆ. ಶೋಷಣೆ ಮತ್ತು ಅಧ್ಯಾತ್ಮಿಕತೆಯೇ ಕಾವ್ಯದ ವಸ್ತುವಾಗುತ್ತಿರುವ ಈ ದಿನಮಾನದಲ್ಲಿ ನಂದಿನಿ ಹೆದ್ದುರ್ಗ ಕವಿತೆಗಳು ತಮ್ಮ ಅಭಿವ್ಯಕ್ತಿಯ ವೈಶಿಷ್ಟ್ಯದಿಂದ ಬೇರೆಯಾಗಿ ನಿಲ್ಲುತ್ತವೆ. ಅವರು ಬೇಂದ್ರೆಯವರ ಜೋಗಿ ಕವಿತೆಯ ನಾಯಕಿಯಂತೆ, ಕಿನ್ನರಿ ನುಡಿಸುವ ಮರುಳಸಿದ್ಧನ ರಾಣಿಯಂತೆ ಈ ಕವಿತೆಗಳ ಕನ್ನಡಿಯಲ್ಲಿ ನನಗೆ ಕಾಣಿಸುತ್ತಾರೆ. ಕಾವ್ಯದ ಮರುಳುತನ, ಉತ್ಕಟತೆ, ಮುಕ್ತತೆ- ಮೂರೂ ಬೆರೆತ ಈ ಪದ್ಯಗಳ ಓದು ನನ್ನನ್ನು ಆಕಸ್ಮಿಕ ಪ್ರೇಮದಂತೆ ಮುದಗೊಳಿಸಿದೆ.

    ಎಲ್ಲೆಲ್ಲಿ ಸಿಗುತ್ತದೆ ?

    ನವಕರ್ನಾಟಕ ,ಅಂಕಿತ ಮತ್ತು ಇತರ ಪುಸ್ತಕ ಮಳಿಗೆಗಳಲ್ಲಿ ಸಂಕಲನ ಲಭ್ಯವಿರುತ್ತದೆ.ಆನ್ ಲೈನ್ ಖರೀದಿಗಾಗಿ navakanataka.com, booksloka.com,bookmaadi.com,rutumana.com ಇಲ್ಲಿ ಸಂಪರ್ಕಿಸಬಹುದು ಎಂದು ಪ್ರಕಾಶಕರು ತಿಳಿಸಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!