ಷೇರುಪೇಟೆಯಲ್ಲಿ Money allways flows from active TRADER to passive INVESTOR ಎಂಬುದು ಈ ಹಿಂದೆ ಅನ್ವಯವಾಗುವ ನಾಣ್ಣುಡಿಯಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಇದು ಪಲ್ಲಟಗೊಂಡಂತಿದೆ. ಈಗಿನ ಸಂದರ್ಭಕ್ಕೆ ಅದು Money flowing from active INVESTOR to passive TRADER ಎಂದು ಬದಲಾಗಿದಂತಿದೆ. ಅಂದರೆ ಈಗಿನ ಗರಿಷ್ಠದಲ್ಲಿರುವ ಷೇರಿನ ಬೆಲೆಗಳು ದಣಿದಂತಿದೆ. ಹಾಗಾಗಿ ಅಸ್ಥಿರತೆಯ ಪ್ರಮಾಣ ಹೆಚ್ಚಿದೆ. ಆನೆ ನಡೆದದ್ದೇ ದಾರಿ- ಸೆನ್ಸೆಕ್ಸ್, ನಿಫ್ಟಿ ಚಲಿಸಿದ್ದೇ ಗುರಿ ಎಂಬಂತಾಗಿರುವ ಈಗಿನ ವಾತಾವರಣದಲ್ಲಿ ಸೆನ್ಸೆಕ್ಸ್, ನಿಫ್ಟಿಯಲ್ಲಿರುವ ಅಗ್ರಮಾನ್ಯ ಕಂಪನಿಗಳು ಯಾವ ರೀತಿ ಮ್ಯುಜಿಕಲ್ ಚೇರ್ ಆಟ ಆಡುತ್ತಿವೆ ಎಂಬುದನ್ನು ಕೆಲವು ನಿದರ್ಶನಗಳಿಂದ ತಿಳಿಯಬಹುದು.

ಇದುವರೆಗೂ ಸತತವಾಗಿ ವೈವಿಧ್ಯಮಯವಾದ ನಕಾರಾತ್ಮಕ ಸುದ್ಧಿಗಳಿಂದ ವಹಿವಾಟುದಾರರ ನಿರ್ಲಕ್ಷಕ್ಕೆ ಗುರಿಯಾಗಿದ್ದ ಬ್ಯಾಂಕಿಂಗ್ ವಲಯವು ದಿಢೀರನೆ ಬೆಳಕಿಗೆ ಬಂದು ವಿಜೃಂಭಿಸಿದ ರೀತಿಯು ಹಿಂದಿನ ದಿನದವರೆಗಿನ ವಿವಿಧ ವಿಶ್ಲೇಷಣೆಗಳನ್ನು ಸುಳ್ಳಾಗಿಸಿತು. ಉದಾಹರಣೆಗಳು ಇಂತಿವೆ.
ಹೆಚ್ ಡಿ ಎಫ್ ಸಿ ಬ್ಯಾಂಕ್ :ಹೆಚ್ ಡಿ ಎಫ್ ಸಿ ಬ್ಯಾಂಕ್ ಷೇರಿನ ಬೆಲೆ ಜುಲೈ ತಿಂಗಳ ಮಧ್ಯೆಯಲ್ಲಿ ರೂ.1,520/30 ರ ಸಮೀಪವಿತ್ತು. ನಂತರದ ದಿನಗಳಲ್ಲಿ ಷೇರಿನ ಬೆಲೆ ಕರಗುತ್ತಾ 26 ರಂದು ಶೇ.93 ರಷ್ಟರ ವಹಿವಾಟು delivery based ಆಗಿತ್ತು. ಇದು ಆಗಷ್ಟ್ 3 ರವರೆಗೂ ನಡೆದು ಅಂದು ರೂ.1,428 ರ ಸಮೀಪವಿದ್ದ ಷೇರಿನ ಬೆಲೆ 4 ರಂದು ರೂ.1,464 ಕ್ಕೂ, 5 ರಂದು ರೂ.1,482 ಕ್ಕೂ, 6 ರಂದು ರೂ.1,489 ರವರೆಗೂ ಏರಿಕೆ ಕಂಡಿವೆ. ಅಂದರೆ ಷೇರಿನ ಬೆಲೆಗಳು ಹೆಚ್ಚಿನ ಕುಸಿತಕ್ಕೊಳಗಾಗಿದ್ದ ಕಾರಣ ಅಲ್ಪ ಕಾಲೀನ ಹೂಡಿಕೆಯಾಗಿ ಮೌಲ್ಯಾಧಾರಿತ ಕೊಳ್ಳುವಿಕೆಗೆ ದಾರಿಯಾಗಿದೆ. ಅಲ್ಲದೆ ಗುರುವಾರ ಚುಕ್ತಾ ಚಕ್ರದ ಕೊನೆಯದಿನವಾಗಿದ್ದುದು ಸಹ ಈ ಏರಿಕೆಗೆ ಪೂರಕ ಅಂಶವಾಗಿದೆ.

ಕೋಟಕ್ ಮಹೀಂದ್ರ ಬ್ಯಾಂಕ್ : ಕೋಟಕ್ ಮಹೀಂದ್ರ ಬ್ಯಾಂಕ್ ಷೇರಿನ ಚಲನಾ ವಿಧವೂ ಇದೇ ರೀತಿಯಲ್ಲಿತ್ತು. ಜುಲೈ ಮಧ್ಯಂತರದಲ್ಲಿ ರೂ.1,750 ರ ಸಮೀಪವಿದ್ದ ಷೇರಿನ ಬೆಲೆ ಮಾಸಾಂತ್ಯದಲ್ಲಿ ರೂ.1,648 ರವರೆಗೂ ಕುಸಿದು ನಂತರ ಆರೋಹಣ ಕಂಡು ರೂ.1,776 ರಲ್ಲಿ ಆಗಷ್ಟ್ 6 ರಂದು ವಾರಾಂತ್ಯ ಕಂಡಿದೆ.
ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ : ಜುಲೈ ಮೊದಲವಾರದಲ್ಲಿ, ಕೊರೊನ ಲಸಿಕೆಯ ಉತ್ಪಾದನೆಗೆ ಅನುಮತಿ ಪಡೆದ ಕಾರಣ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಕಂಪನಿ ಷೇರಿನ ಬೆಲೆ ರೂ.5,600 ನ್ನು ದಾಟಿತ್ತು. ಮಾರ್ಚ್ ನಲ್ಲಿ ವಾರ್ಷಿಕ ಕನಿಷ್ಠದಲ್ಲಿದ್ದ ಈ ಕಂಪನಿ ಷೇರಿನ ಬೆಲೆ ನಿರಂತರವಾಗಿ ಏರಿಕೆ ಕಂಡು ಜುಲೈ 7 ರಂದು ರೂ.5,613 ರ ವಾರ್ಷಿಕ ಗರಿಷ್ಠ ದಾಖಲಿಸಿತು. ಕಂಪನಿಯ ತ್ರೈಮಾಸಿಕ ಫಲಿತಾಂಶ ಪ್ರಕಟಣೆಯ ನಂತರದಲ್ಲಿ ಹೆಚ್ಚಿನ ಮಾರಾಟದ ಒತ್ತಡ ಉಂಟಾಗಿ ರೂ.4,660 ರ ಸಮೀಪಕ್ಕೆ ಕುಸಿದು ವಾರಾಂತ್ಯದಲ್ಲಿ ರೂ.4,785 ಕ್ಕೆ ಚೇತರಿಸಿಕೊಂಡಿದೆ.

ಸೋಜಿಗ ಅಂಶವೆಂದರೆ ರೂ.4,745 ರಲ್ಲಿ ಶೇ.25 ರಷ್ಟು ವಹಿವಾಟು ವಿಲೇವಾರಿಯುತವಾಗಿದ್ದರೆ, ಮತ್ತೊಮ್ಮೆ ರೂ.4,690 / 4,720 ರಲ್ಲಿ ಆಗಷ್ಟ್ 3 ರಂದು ಶೇ.77 ಕ್ಕೂ ಹೆಚ್ಚಿನ ವಹಿವಾಟು ವಿಲೇವಾರಿಯಾಗಿ( Delivery based) ಚುಕ್ತಾ ಆಗಿದೆ. ಈ ವಿಲೇವಾರಿ ಸಂಖ್ಯೆ ಹೆಚ್ಚಾದ ಮೇಲೆ ಷೇರಿನ ಬೆಲೆ ಏರಿಕೆ ಕಂಡು ರೂ.4,785 ಕ್ಕೆ ತಲುಪಿದೆ. ವಿಲೇವಾರಿಯಾದ ಷೇರುಗಳ ಸಂಖ್ಯೆ ಹೆಚ್ಚಾದಾಗ ಪೇಟೆಯ ದಿಶೆ ತಿರುವು ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಷೇರಿನ ಬೆಲೆ ಪುಟಿದೆದ್ದು ಪುನ: ರೂ.5,000 ದ ಗಡಿ ದಾಟಬಹುದಾಗಿದೆ.
ಒಂದೇ ವಾರದಲ್ಲಿ ಅಧಿಕ ಲಾಭ ಒದಗಿಸಿದ ಅಗ್ರಮಾನ್ಯ ಕಂಪನಿಗಳು;
ಲೌರಸ್ ಲ್ಯಾಬ್ಸ್ ಲಿಮಿಟೆಡ್:ಜುಲೈ ಅಂತ್ಯದಲ್ಲಿ ಈ ಕಂಪನಿಯ ಷೇರಿನ ಬೆಲೆ ರೂ.590 ರ ಸಮೀಪವಿತ್ತು, ಆದರೆ ಆಗಷ್ಟ್ 2 ನೇ ಸೋಮವಾರದಂದು ಷೇರಿನ ಬೆಲೆ ದಿಢೀರನೆ ಗಗನಕ್ಕೇರಿ ರೂ.663 ರವರೆಗೂ ತಲುಪಿದೆ. ಕ್ರಮೇಣ ಏರಿಕೆಯಿಂದ ರೂ.686 ರರವರೆಗೂ ಶುಕ್ರವಾರ 6 ರಂದು ಜಿಗಿತ ಕಂಡು ಆಕರ್ಷಣೀಯ ಲಾಭವನ್ನು ಅಲ್ಪಕಾಲೀನದಲ್ಲೇ ಒದಗಿಸಿದೆ. ಈ ಷೇರಿನ ಬೆಲೆ ಜುಲೈ ಮಧ್ಯಂತರದಲ್ಲಿ ರೂ.680 ರ ಸಮೀಪವಿತ್ತು. ಕೇವಲ ಕೆಲವೇ ದಿನಗಳಲ್ಲಿ ಸುಮಾರು ರೂ.100 ರಷ್ಟು ಕುಸಿತ ಕಂಡು ಪುಟಿದೆದ್ದಿದೆ. ಈ ಪ್ರಕರಣವು ಷೇರುಪೇಟೆಯಲ್ಲಿ ಅಗ್ರಮಾನ್ಯ ಕಂಪನಿಗಳು ಅಲ್ಪಕಾಲೀನ ಸಮಯದಲ್ಲಿ ಒದಗಿಸಬಹುದಾದ ಅವಕಾಶಕ್ಕೆ ಹಿಡಿದ ಕನ್ನಡಿಯಾಗಿದೆ.
ಸಿಪ್ಲಾ ಲಿಮಿಟೆಡ್ :ಈ ಕಂಪನಿಯು ಒಂದು ಕಾಲದಲ್ಲಿ ಸೆನ್ಸೆಕ್ಸ್ ನ ಅಂಗವಾಗಿದ್ದ ಅಗ್ರಮಾನ್ಯ ಫಾರ್ಮಾ ವಲಯದ ಕಂಪನಿ. 1992 ರ ಸಮಯದಲ್ಲಿ ರೂ.30 ಸಾವಿರ ರೂಪಾಯಿಗಳನ್ನು ದಾಟಿ ಗಮಾನ ಸೆಳೆದಿದ್ದ ಕಂಪನಿಯಾಗಿದೆ. ಈ ಷೇರು ಜುಲೈ 30 ರಂದು ಶುಕ್ರವಾರ ರೂ.875 ರವರೆಗೂ ಕುಸಿದಿದ್ದು ಅಂದೇ ರೂ.930 ನ್ನು ದಾಖಲಿಸಿ ರೂ.920 ರಸಮೀಪ ಕೊನೆಗೊಂಡಿದೆ. ಸೋಮವಾರ ಆಗಷ್ಟ್ 2 ರಂದು 913 ರ ಸಮೀಪದ ಕನಿಷ್ಠದಿಂದ ಗುರುವಾರ ರೂ.950 ನ್ನು ದಾಟಿತು. ಆದರೆ ಮಾರನೇ ದಿನ ಅಂದರೆ ಶುಕ್ರವಾರ ರೂ.909 ರವರೆಗೂ ಕುಸಿದು ರೂ.917 ರ ಸಮೀಪ ಕೊನೆಗೊಂಡಿದೆ.
ಇದೇ ರೀತಿ ಅಲ್ಪಕಾಲೀನ ಸಮಯದಲ್ಲೇ ಹೆಚ್ಚಿನ ಏರುಪೇರುಗಳನ್ನು ಪ್ರದರ್ಶಿಸುತ್ತಿರುವ ಕಂಪನಿಗಳೆಂದರೆ ಪ್ರತಿ ಷೇರಿಗೆ ರೂ.58 ರಂತೆ ಡಿವಿಡೆಂಡ್ ಪ್ರಕಟಿಸಿರುವ ಸಾರ್ವಜನಿಕ ವಲಯದ ಬಿ ಪಿ ಸಿ ಎಲ್, ಪ್ರತಿ ಷೇರಿಗೆ 1:1 ರಂತೆ ಬೋನಸ್ ಷೇರು ವಿತರಿಸಲಿರುವ ರೆಡಿಂಗ್ ಟನ್ ಗಳಲ್ಲದೆ ಎನ್ ಎಂ ಡಿ ಸಿ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಟಾಟಾ ಪವರ್, ಕ್ಲಾರಿಯಂಟ್ ಕೆಮಿಕಲ್ಸ್, ರೂಪಾ ಕಂಪನಿ ಲಿಮಿಟೆಡ್, ಸ್ಟ್ರೈಡ್ಸ್ ಫಾರ್ಮಾ, ಐಟಿಸಿ, ಗೇಲ್ (ಇಂಡಿಯಾ), ಟಾಟಾ ಸ್ಟೀಲ್, ನಂತಹ ಅನೇಕ ಕಂಪನಿಗಳ ಚಲನೆಯು ಹೂಡಿಕೆಗಿಂತ ಅಲ್ಪಕಾಲೀನ ಅವಕಾಶಗಳ ಆಗರ ಈ ಷೇರುಪೇಟೆ ಎಂದು ಸಾರಿ ಸಾರಿ ಹೇಳುತ್ತವೆ.
ಈಗ ಪೇಟೆಗಳು ಉತ್ತುಂಗದಲ್ಲಿರುವ ಸಂದರ್ಭದಲ್ಲಿ ಸುದ್ಧಿಯೊಂದು ಹೊರಬಿದ್ದಿದೆ ಏನೆಂದರೆ ಷೇರುಪೇಟೆಯಲ್ಲಿ ಭಾಗವಹಿಸುತ್ತಿರುವ ರೀಟೇಲ್ ಹೂಡಿಕೆದಾರರ ಸಂಖ್ಯೆ ದಾಖಲೆಯ ಮಟ್ಟಕ್ಕೆ ಹೆಚ್ಚಿದೆ ಎಂಬುದಾಗಿದೆ. ಇದರಿಂದ ಪ್ರೇರೇಪಿತರಾಗುವ ಅವಶ್ಯಕತೆ ಇಲ್ಲ, ಇದು ಕೇವಲ ಶೇ.7.18 ಅಷ್ಟೆ.
ಭಾರತದ ಷೇರುಪೇಟೆಯಲ್ಲಿ ಭಾಗವಹಿಸುವವರ ಸಂಖ್ಯೆಯು ಕೇವಲ ಶೇ.5 ರಷ್ಟು ಮಾತ್ರ. ಕೇವಲ 7.1% ರಷ್ಟು ಜನ ಭಾಗವಹಿಸುವಾಗ ಈ ಪ್ರಮಾಣದ ಏರಿಕೆಯನ್ನು ನಾವು ಕಾಣುತ್ತಿರುವಾಗ ಈ ಪ್ರಮಾಣವು ಎರಡಂಕಿ ಮೀರಿದಾಗ ಷೇರುಪೇಟೆಯ ಸ್ಥಿತಿ ಏನಾಗಿರಬಹುದೆಂಬುದು ಹಲವರ ಕಲ್ಪನೆ. ಆದರೆ ನಮ್ಮಲ್ಲಿರುವ ಭಾವನಾತ್ಮಕ ಚಿಂತನೆಗಳಿಗೆ ತಿಲಾಂಜಲಿ ನೀಡಿ ಸಹಜತೆಯತ್ತ ಗಮನಹರಿಸಿದಲ್ಲಿ ಮಾತ್ರ ನಮ್ಮ ಹೂಡಿಕೆ ಸುರಕ್ಷತೆಯನ್ನು ಕಾಣಬಹುದಾಗಿದೆ. ಇತ್ತೀಚೆಗೆ ಬರುತ್ತಿರುವ ಐಪಿಒ ಗಳಿಗೆ ದೊರೆಯುತ್ತಿರುವ ಸ್ಪಂಧನೆ ಮಾತ್ರ ಅಮೋಘವಾದುದಾಗಿದೆ.
ಆದರೆ ಇದಕ್ಕೆ ಪ್ರೇರಣೆಯಾಗಿ ಹೆಚ್ಚು ಪ್ರಚಾರ ಪಡೆಯುವ ʼ ಗ್ರೇ ಮಾರ್ಕೆಟ್ ಪ್ರೀಮಿಯಂʼ ನ್ನು ಆಧರಿಸಿ, ಕಂಪನಿಗಳ ಸಾಮರ್ಥ್ಯವನ್ನರಿಯದೆ, ನಿರ್ಧರಿಸಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಸಂದರ್ಭವನ್ನರಿತು ತುಲನಾತ್ಮಕವಾಗಿ ನಿರ್ಧರಿಸಿರಿ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.



Your article is full of wonderful and useful information. Thank you sir