26.8 C
Karnataka
Wednesday, May 20, 2026
    Home Blog Page 6

    ಅಪಾತ್ರರಿಗೆ ದಾನ ಮಾಡುವುದಕ್ಕಿಂತ  ನಿಜಕ್ಕೂ ಅವಶ್ಯಕತೆ ಇರುವವರಿಗೆ ದಾನ ಮಾಡಬೇಕು

    ಸುಮಾವೀಣಾ

    ಸೊಡರೆಣ್ಣೆ ತೀರಿದರೆ ಕೊಡನೆತ್ತಿ  ಹೊಯ್ಯುವರೆ-  ನೀಡುವ ದಾನ ಹೇಗಿರಬೇಕು?ಉಚಿತವಾಗಿರಬೇಕು! ನಮ್ಮಳತೆಯನ್ನು ಮೀರಬಾರದು!   ಎಂದು ಹೇಳುವಾಗ ಸರ್ವಜ್ಞ ಕೊಡುವ   ಅನನ್ಯ ರೂಪಕವನ್ನು  ಇಲ್ಲಿ ಗಮನಿಸಬಹುದು.  ಆ ವಚನದ ಪೂರ್ಣ ಪಾಠ ಹೀಗಿದೆ…..

     ಸೊಡರೆಣ್ಣೆ ತೀರಿದರೆ ಕೊಡನೆತ್ತಿ ಹೊಯ್ಯುವರೆ?

    ಕೊಡಬೇಡ,ಕೊಡದೆ ಇರಬೇಡ ಧರ್ಮವನು

    ಬಿಡಬೇಡವೆಂದ ಸರ್ವಜ್ಞ

     ದೀಪದ  ತೈಲ ತೀರಿದರೆ ದೀಪವೆಷ್ಟು ಹಿಡಿಸುತ್ತದೆಯೋ ಅದಷ್ಟೇ ತೈಲವನ್ನು ಹಾಕಲು ಸಾಧ್ಯ.   ಅದನ್ನು ಬಿಟ್ಟು ತೈಲ ತುಂಬಿದ  ಪಾತ್ರೆಯನ್ನೆ ಯಾರೂ ತೆಗೆದು ಹಾಕುವುದಿಲ್ಲ.  ಅಂತೆಯೇ  ನೀಡುವ ದಾನವೂ ನಮ್ಮ ಆಯದ ಚೌಕಟ್ಟಿನಲ್ಲಿ ಇರಬೇಕು.

    ಪ್ರಸ್ತುತ ವಚನದಲ್ಲಿ  ಕೊಡಬೇಡ, ಕೊಡದಿರಬೇಡ ಎನ್ನುವುದನ್ನು ಏಕಕಾಲಕ್ಕೆ ಹೇಳಿರುವುದು ವಚನದ ಸೊಗಸನ್ನು ಇಮ್ಮಡಿಸಿದೆ. ಅಪಾತ್ರರಿಗೆ ದಾನ ಮಾಡುವುದಕ್ಕಿಂತ  ನಿಜಕ್ಕೂ ಅವಶ್ಯಕತೆ ಇರುವವರಿಗೆ ದಾನ ಮಾಡಬೇಕೆಂಬ  ತಿಳಿವಿನ ಸಂಗಡ ನಿರಂತರ ಧರ್ಮ ಮಾರ್ಗವನ್ನೆ  ಅನುಸರಿಸಬೇಕು ಎನ್ನುವ  ವಿವೇಕವನ್ನೂ ಈ ವಚನ ಮನದಟ್ಟು  ಮಾಡಿಸುತ್ತದೆ.

    ನಾವು ಮಾಡುವ ಯಾವುದೇ ಕೆಲಸವೇ  ಆಗಿರಲಿ  ಅರ್ಥಬದ್ಧವಾಗಿರಬೇಕು ಹಾಕಿದ ಶ್ರಮ ಉಪಯೋಗಿಸಿಕೊಂಡ ಸಮಯ  ಪೋಲಾಗಬಾರದೆಂಬ ನಿಲುವನ್ನು ಇಲ್ಲಿ ಕಾಣಬಹುದಾಗಿದೆ. ಮುಗಿಲನ್ನು ಮುಟ್ಟಲು ಸಾಮಾನ್ಯನಿಗೆ ಸಾಧ್ಯವಿಲ್ಲ ತನ್ನ ಎಟುಕಿಗೆ ಎಷ್ಟು ಸಿಗುತ್ತದೆ ಅಷ್ಟನ್ನು ಮಾತ್ರ ಮುಟ್ಟಲು ಪ್ರಯತ್ನಿಸಬಹುದು.  ಅಂತೆಯೇ ಬೇಡಿಕೆ ಇರುವವರು ಬೇಡಿದಷ್ಟನ್ನು ನೀಡುವ  ಸಾಮರ್ಥ್ಯ  ಶ್ರೀಸಾಮಾನ್ಯನಿಗೆ ಇರಲು ಸಾಧ್ಯವೆ? ಖಂಡಿತಾ ಇಲ್ಲ . 

    ಅಂತೆಯೇ  ಇರುವಷ್ಟು ಮಿತಿಯಲ್ಲಿಯೇ ಉದಾರಿಯಾಗಬೇಕು.  ಮೊದಲು  ತಾನು, ತನ್ನ ಮನೆ  ನಂತರ ನೆರೆಹೊರೆಯವರ ಬಗ್ಗೆ ಯೋಚನೆ ಮಾಡುವುದು. ಇದನ್ನೆ ಹಿರಿಯರು ಮನೆಗೆದ್ದು ಮಾರುಗೆಲ್ಲು ಎನ್ನುವುದು. ತಮ್ಮ ಮಿತಿಯನ್ನು ದಾಟಿ ಮಾಡಿದ  ದಾನವನ್ನು ಸಾಮಾಜಿಕರು ನೆನಪಿನಲ್ಲಿಡುವುದೂ ಇಲ್ಲ   ಇದೇ ಕಾರಣಕ್ಕೆ  ಊರು ಉಪಕಾರವರಿಯದು ಹೆಣ ಶೃಂಗಾರವರಿಯದು ಎನ್ನುವ ಗಾದೆ  ರಚಿತವಾಗಿರುವುದು. ಅಂತೂ ದೀಪಕ್ಕೆ ಉಚಿತಕ್ಕೆ ತಕ್ಕಷ್ಟು ತೈಲವನ್ನು ಭರಿಸಬೇಕು ಎನ್ನಲು ಹೊರಟು ಧರ್ಮಮಾರ್ಗಿಯಾಗಬೇಕು ಎನ್ನುವಲ್ಲಿಯವರೆಗೆ ಅಲ್ಪದಕ್ಕಿಯೇ ಮಹತ್ಕೃತಿಯನ್ನು ವಿವರಿಸುವ  ಸರ್ವಜ್ಞನ ರೀತಿ   ಇಲ್ಲಿ ಶ್ಲಾಘನೀಯ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    CHITRASANTHE-2023; ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರ ಚಿತ್ತಾರದ ವೈಭವ – ಮತ್ತೆ ಬಂತು ಚಿತ್ರ ಸಂತೆ@20

    ಬಳಕೂರು ವಿ ಎಸ್ ನಾಯಕ

    ಬೆಂಗಳೂರಿನಲ್ಲಿ ಸಂತೆ ಗಳೆಂದರೆ ಏನೋ ಆಕರ್ಷಣೆ ಜನರು ಹೊಸತನ್ನು ಬಯಸಿ ಆ ಕಡೆಗೆ ಹೋಗಿ ಬರೋಣವೆಂದು ಸಾಗುವುದು ಸಹಜ. ಅದರಲ್ಲಿಯೂ ನವನವೀನ ಚಿತ್ರಗಳನ್ನು ಬಿಂಬಿಸುವ ಚಿತ್ರಸಂತೆಯ ಸೌಂದರ್ಯವನ್ನು ಸವಿಯಲು ವಾರದ ಕೊನೆಯ ದಿನದ ತಮ್ಮ ಹಾಜರಿಯನ್ನು ಅಲ್ಲಿ ಹಾಕಿಬಿಡುತ್ತಾರೆ. ಏಕೆಂದರೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ 20ನೆಯ ಚಿತ್ರಸಂತೆಗೆ ಇನ್ನೂ ಬೆರಳೆಣಿಕೆಯಷ್ಟು ದಿನ ಇರುವುದು ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಮ್ಮಿಕೊಂಡಿರುವ ವಾರ್ಷಿಕ ಚಿತ್ರಸಂತೆಗೆ ಹಲವಾರು ಕಲಾವಿದರು ಕಲಾಸಕ್ತರು ಕಾಯುತ್ತಿರುವುದು ವಿಶೇಷವಲ್ಲ.

    ಚಿತ್ರ ಸಂತೆಯ ಕಲ್ಪನೆಯೂ ಹುಟ್ಟಿದ್ದು ಹೇಗೆ?

    ನಮ್ಮಲ್ಲಿ ಬಹಳಷ್ಟು ಕಲಾವಿದರು ಇದ್ದಾರೆ ಅವರಿಗೆ ತಾವು ರಚಿಸಿದ ಕಲಾಕೃತಿಗಳನ್ನು ಪ್ರದರ್ಶಿಸಲು ಅಥವಾ ಮಾರಾಟ ಮಾಡಲು ಯಾವುದೇ ಸರಿಯಾದ ವೇದಿಕೆ ಸಿಗುವುದಿಲ್ಲ. ಗ್ಯಾಲರಿಗಳಲ್ಲಿ ಹಣಕೊಟ್ಟು ಪ್ರದರ್ಶನ ಮಾಡಲು ಸಾಮರ್ಥ್ಯವಿಲ್ಲದೆ ಇರಬಹುದು. ಅದಕ್ಕಾಗಿ ಅಂತಹ ಕಲಾವಿದರಿಗೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಚಿತ್ರಸಂತೆಯ ಮೂಲಕ ಕರ್ನಾಟಕ ಚಿತ್ರಕಲಾ ಪರಿಷತ್ತು ಅವಕಾಶ ಮಾಡಿಕೊಡುತ್ತಿರುವುದು ಶ್ಲಾಘನೀಯ. ಈ ಸಂದರ್ಭದಲ್ಲಿ ಹಲವಾರು ಕಲಾವಿದರಿಗೆ ಮತ್ತು ಕಲಾಸಕ್ತರಿಗೆ ಉತ್ತಮ ಬಾಂಧವ್ಯ ಮೂಡುತ್ತದೆ.

    ಸಾಮಾನ್ಯವಾಗಿ ಸಂತೆಯ ಮಾದರಿಯಲ್ಲಿಯೇ ಚಿತ್ರಸಂತೆಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ತು ಕುಮಾರಕೃಪಾ ರಸ್ತೆಯಲ್ಲಿ ಆಯೋಜನೆ ಮಾಡುತ್ತಿರುವುದು ವಿಶೇಷವಾಗಿದೆ. ಚಿತ್ರ ಕಲಾವಿದರಿಗೆ ಸಹಾಯ ಮಾಡುವ ದೃಷ್ಟಿಯಿಂದ ಮತ್ತು ಕಲಾವಿದರು ತಾವು ರಚಿಸಿದ ಶಿಲ್ಪಗಳು ಚಿತ್ರಗಳು ಅದರಲ್ಲಿ ವಿಭಿನ್ನ ರೀತಿಯ ಕಲಾತ್ಮಕ ಚಿತ್ರಗಳು ಕೂಡ ಈ ಸಂತೆಯಲ್ಲಿ ನಮಗೆ ನೋಡಲು ಸಿಗುತ್ತದೆ.

    ಚಿತ್ರಕಲಾ ಪರಿಷತ್ತಿನಲ್ಲಿ ಆ ದಿನವಿಡೀ ಕಲಾ ಲೋಕವೇ ಧರೆಗಿಳಿದುಬಂದಂತೆ ಗೋಚರವಾಗುತ್ತದೆ. ಚಿತ್ರಕಲಾ ಪರಿಷತ್ತಿನ ರಸ್ತೆಯ ತುಂಬಾ ಚಿತ್ರ ಚಿತ್ತಾರದ ವೈಭವ ಒಂದುಕ್ಷಣ ದಾರಿಯಲ್ಲಿ ಸಾಗುತ್ತಿದ್ದ ವರಿಗೆ ಕಲಾವಿದನ ಕೈಚಳಕದಲ್ಲಿ ರಚಿಸಿದ ಚಿತ್ರ ಚಿತ್ತಾರಗಳು ಕಲಾ ಔತಣವನ್ನು ಉಣಬಡಿಸುವುದು ಸತ್ಯ. ಅಚ್ಚರಿಯ ಕಲಾ ತಾಣವೇ ಧರೆಗಿಳಿದು ಬಂದ ಅನುಭವ ಒಂದು ಕ್ಷಣ ಬದುಕಿನ ಜಂಜಾಟ ಮರೆತು ಇಲ್ಲಿಯೇ ಒಂದು ಕ್ಷಣ ವಿಹರಿಸಿ ಬಿಡೋಣ ಎನ್ನುವಷ್ಟು ಸಂಭ್ರಮ ತುಂಬಿ ತುಳುಕುತ್ತಿರುತ್ತದೆ

    ಈ ಚಿತ್ರಸಂತೆ ಚಿತ್ರ ಕಲಾವಿದರಿಗೆ ಅರ್ಪಣೆ

    ಪ್ರತಿವರ್ಷ ನಡೆಯುವ ಚಿತ್ರಸಂತೆಯಲ್ಲಿ ಬೇರೆ ಬೇರೆ ರೀತಿಯ ಮಾದರಿಯಲ್ಲಿ ಆಯೋಜನೆ ಮಾಡಲಾಗುತ್ತದೆ. ಆದರೆ ಈ ವರ್ಷನಮ್ಮ ನಾಡಿನ ಎಲ್ಲಾ ಕಲಾವಿದ ರಿಗೆ ಅರ್ಪಣೆ ಮಾಡಲಾಗುತ್ತದೆ

    ಒಂದೇ ದಿನದ ವಾರ್ಷಿಕ ಕಲಾ ಸಂತೆ

    ಎಲ್ಲರಿಗಾಗಿ ಕಲೆ ಕಲಾ ಸಂತೆಯ ಮುಖ್ಯ ವೇದವಾಕ್ಯ ವಾಗಿದ್ದು ಸರ್ವರಿಗೂ ಕಲಾಕೃತಿ ದೊರೆಯುವಂತಾಗಬೇಕು ಕಲಾಸಕ್ತರು ಬಂಧು ಕಲಾವಿದರ ಕಲಾಕೃತಿಗಳನ್ನು ಕೊಂಡು ಅವರನ್ನು ಪ್ರೋತ್ಸಾಹಿಸಬೇಕು ಅದರ ಜೊತೆಗೆ ಎಲ್ಲರಿಗೂ ಕಲೆ ತಲುಪುವಂತಾಗಬೇಕು ಎಂಬ ಉದ್ದೇಶದಿಂದ ಈ ಚಿತ್ರಸಂತೆಯನ್ನು ಆಯೋಜಿಸಲಾಗಿದೆ

    ರಾಜ್ಯ ದೇಶ ವಿದೇಶಗಳಿಂದ ಚಿತ್ರಸಂತೆಗೆ ಕಲಾವಿದರು

    ನಮ್ಮ ನಾಡಿನ ಈ ಚಿತ್ರಸಂತೆಗೆ ಬೇರೆ ಬೇರೆ ಕಡೆಯಿಂದ ಕಲಾವಿದರು ಬರುವುದು ವಿಶೇಷ. ಒಂದೇ ಸೂರಿನಲ್ಲಿ ವಿಭಿನ್ನ ಕಲಾವಿದರನ್ನು ನೋಡುವ ಅವಕಾಶ, ಕಲಾತ್ಮಕ ವಿಷಯಗಳನ್ನು ಚರ್ಚೆ ಮಾಡುವ ಅವಕಾಶ, ವಿಚಾರವಿನಿಮಯ ಎಲ್ಲವೂ ಕೂಡ ಇಲ್ಲಿ ನಡೆಯುತ್ತದೆ . ನಮಗೆ ಗೊತ್ತಿರದ ಹಲವಾರು ಕಲೆಗಳನ್ನು, ಕಲಾಪ್ರಕಾರಗಳನ್ನು ಇಲ್ಲಿ ಬರುವ ಕಲಾವಿದರು ಪರಿಚಯ ಮಾಡಿಕೊಡುತ್ತಾರೆ ಈ ವಿಶೇಷವಾದ ಅವಕಾಶವನ್ನು ಎಲ್ಲರೂ ಪಡೆದುಕೊಳ್ಳುವರು.

    ಕಲಾವಿದರಿಗೆ ಊಟ ವಸತಿ ವ್ಯವಸ್ಥೆ

    ಚಿತ್ರಸಂತೆಗೆ ಬರುವ ಕಲಾವಿದರಿಗೆ ಚಿತ್ರಕಲಾ ಪರಿಷತ್ ಉಚಿತವಾಗಿ ಊಟ ಮತ್ತು ವಸತಿ ವ್ಯವಸ್ಥೆ ಮಾಡಿಕೊಡುತ್ತದೆ. ಒಟ್ಟಾರೆ ಕಲಾವಿದರನ್ನು ಬೆಳೆಸುವುದು ಕಲೆಯನ್ನು ಉಳಿಸುವುದು ಇದರ ಉದ್ದೇಶವಾಗಿದೆ. ಸಾಮಾನ್ಯವಾಗಿ ಚಿತ್ರಸಂತೆಗೆ ಬರುವ ಕಲಾವಿದರು ಬೇರೆ ಕಡೆಗೆ ಹೋಗಿ ವಸತಿ ಮಾಡಿಕೊಂಡು ಅದರ ವೆಚ್ಚವನ್ನು ಭರಿಸಲು ಕಷ್ಟವಾಗುತ್ತದೆ ಅದಕ್ಕಾಗಿ ಕಲಾವಿದರ ಕ್ಷೇಮಕ್ಕಾಗಿ ಚಿತ್ರಕಲಾ ಪರಿಷತ್ ವ್ಯವಸ್ಥೆ ಮಾಡುತ್ತಿದೆ

    ವಿದ್ಯಾರ್ಥಿ ಸ್ವಯಂಸೇವಕರು

    ಚಿತ್ರಸಂತೆಯ ದಿನ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಾರೆ. ಚಿತ್ರಕಲಾವಿದರಿಗೆ ಬೇಕಾಗುವ ಊಟ ನೀರು ಇನ್ನಿತರ ವಸ್ತುಗಳನ್ನು ಸ್ಥಳದಲ್ಲಿಯೇ ಅವರಿಗೆ ಪೂರೈಕೆ ಮಾಡುವುದು ಮತ್ತು ಅಗತ್ಯ ಸಹಾಯವನ್ನು ಮಾಡುವ ಕೆಲಸ ನೋಡಿಕೊಳ್ಳುತ್ತಾರೆ.

    ಅಂಗವಿಕಲ ಮತ್ತು ವಯಸ್ಸಾದ ಕಲಾವಿದರಿಗೆ ಪರಿಷತ್ತಿನ ಆವರಣದಲ್ಲಿ ಸ್ಟಾಲ್ ಗಳು

    ಚಿತ್ರಸಂತೆಗೆ ಸಾಮಾನ್ಯವಾಗಿ ಪ್ರತಿಭಾವಂತ ಅಂಗವಿಕಲ ಕಲಾವಿದರು ಮತ್ತು ವಯಸ್ಸಾದ ಚಿತ್ರಕಲಾವಿದರು ಬರುವುದರಿಂದ ಅವರ ಹಿತದೃಷ್ಟಿಯಿಂದ ಚಿತ್ರಕಲಾ ಪರಿಷತ್ತಿನ ಆವರಣದ ಒಳಗೆ ಅವರಿಗೆ ಅಂಗಡಿಗಳನ್ನು ಹಾಕಿ ಕಲಾಕೃತಿಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಇಂತಹ ಕಲಾವಿದರಿಗೆ ಪ್ರೋತ್ಸಾಹಿಸುವ ಕೆಲಸ ಚಿತ್ರಕಲಾ ಪರಿಷತ್ತು ಮಾಡುತ್ತಿದೆ.

    ಈ ಚಿತ್ರಸಂತೆಯಲ್ಲಿ ನೂರು ರೂಪಾಯಿಯಿಂದ ಚಿತ್ರಗಳು ಮಾರಾಟವಾಗುತ್ತದೆ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಕಲಾಕೃತಿಗಳು ಸಿಗುವಂತಾಗಬೇಕು ಎಲ್ಲರ ಮನೆ ಮನೆಗೆ ಒಂದೊಂದು ಕಲಾಕೃತಿಗಳನ್ನು ತೆಗೆದುಕೊಂಡು ಹೋಗಬೇಕು ಎಲ್ಲರ ಮನೆಗೆ ಒಂದೊಂದು ಕಲಾಕೃತಿಗಳನ್ನು ಒಯ್ಯಬೇಕು ಎಂಬ ಉದ್ದೇಶದಿಂದ ಆಯೋಜಿಸಲಾಗಿದೆ ಚಿತ್ರಸಂತೆಯ ದಿನ ಚಿತ್ರಕಲೆ. ಶಿಲ್ಪಕಲೆ ಗ್ರಾಫಿಕ್ ಅಲ್ಲದೆ ಮಧುಬನಿ ವಿವಿಧ ಶೈಲಿಯ ಸಾಂಪ್ರದಾಯಿಕ ಚಿತ್ರಗಳನ್ನು ನೋಡಬಹುದು.

    ಚಿತ್ರಕಲಾ ಸಮ್ಮಾನ್ ಮತ್ತು ಪ್ರೊ. ಎಂ. ಎಸ್. ನಂಜುಂಡರಾವ್ ಪ್ರಶಸ್ತಿ ಪ್ರದಾನ

    ಪ್ರತಿವರ್ಷ ಕರ್ನಾಟಕ ಚಿತ್ರಕಲಾ ಪರಿಷತ್ ನಾಡಿನ ಹಿರಿಯ ಪ್ರಸಿದ್ಧ ಕಲಾವಿದರನ್ನು ಗುರುತಿಸಿ ಚಿತ್ರಕಲಾ ಸಮ್ಮಾನ್ ಮತ್ತು ಎಂಎಸ್ ನಂಜುಂಡರಾವ್ ಪ್ರಶಸ್ತಿ ಪ್ರಧಾನ ಮಾಡುತ್ತಿದೆ ಈ ಪ್ರಶಸ್ತಿ ಗಳನ್ನು ಚಿತ್ರಸಂತೆಯ ಹಿಂದಿನ ದಿನ ಪ್ರದಾನ ಮಾಡಲಾಗುತ್ತದೆ. ಈ ರೀತಿ ಮಾಡುವದರಿಂದ ಕಲಾವಿದ ರಿಗೆ ಪ್ರೋತ್ಸಾಹ ಮತ್ತು ಗೌರವಿಸಿದ ಹಾಗೆ ಆಗುತ್ತದೆ.

    ಸಾಮಾನ್ಯವಾಗಿ ಚಿತ್ರಸಂತೆಗೆ ಸುಮಾರು ಮೂರು ಲಕ್ಷಕ್ಕಿಂತ ಹೆಚ್ಚು ಜನ ಬರುವ ನಿರೀಕ್ಷೆ ಇದೆ ಇದರ ಜೊತೆಗೆ ಬಹಳಷ್ಟು ಕಲಾವಿದರು ಬಂದು ತಮ್ಮ ಕಲಾಪ್ರಕಾರದ ಪರಿಚಯ ಮತ್ತು ವಿಭಿನ್ನ ಕಲಾಕೃತಿಗಳನ್ನು ಪರಿಚಯಿಸುವುದು ಕಲಾ ವಿನಿಮಯ ಚರ್ಚೆ ಇಲ್ಲಿ ಒಂದೇ ಸೂರಿನಲ್ಲಿ ನಡೆಯಲಿದೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ಆ ದಿನ ಹಲವಾರು ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಇದಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಜನವರಿ 8 ಭಾನುವಾರದಂದು ನಡೆಯುವ ಚಿತ್ರಸಂತೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿಎಲ್ ಶಂಕರ್ ಅವರು ವಹಿಸಲಿದ್ದಾರೆ


    ಚಿತ್ರ ಸಂತೆ ನಡೆಯುವ ದಿನ
    ಜನವರಿ 8 ಭಾನುವಾರ

    ಸ್ಥಳ:ಕರ್ನಾಟಕ ಚಿತ್ರಕಲಾ ಪರಿಷತ್ತು
    ಕುಮಾರಕೃಪಾ ರಸ್ತೆ ಬೆಂಗಳೂರು


    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.



    ಕೋವಿಡ್ : BF 7 ಅಲಕ್ಷ್ಯ ಮಾಡದೆ ಸರ್ವ ಮುಂಜಾಗರೂಕತೆಗೆ ಡಾ. ಶ್ವೇತಾ ಮಡಪ್ಪಾಡಿ ಒತ್ತಾಯ

    MYSURU DEC 30

    ಇಡೀ ದೇಶ ಸ್ವಲ್ಪವಾದರೂ ಲವಲವಿಕೆಯನ್ನು ಮರಳಿ ಪಡೆಯುತ್ತಿರುವ ಈ ಹೊತ್ತಿನಲ್ಲಿ ಕೋವಿಡ್‌ನ ಮತ್ತೊಂದು ತಳಿ ಮತ್ತೆ ಸದ್ದು ಮಾಡುತ್ತಿರುವುದು ಆತಂಕಕಾರಿ. ಹೀಗಾಗಿ ಇಡೀ ದೇಶವನ್ನು ಎಲ್ಲಾ ನೆಲೆಗಳಿಂದಲೂ ಕಾಪಾಡಿಕೊಳ್ಳಬೇಕಾದ ಹೊಣೆ ಸರಕಾರದ ಮೇಲಿದೆ. ಎಂದು ಯುವ ಉದ್ಯಮಿ, ಚಿಂತಕಿ ಡಾ. ಶ್ವೇತಾ ಮಡಪ್ಪಾಡಿ ಅಭಿಪ್ರಾಯಪಟ್ಟರು.

    ಡಾ. ಶ್ವೇತಾ ಮಡಪ್ಪಾಡಿ

    ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಗೋಷ್ಠಿಯಲ್ಲಿ ಅವರು ಮಾತನಾಡಿದರು.
    ಓಮೈಕ್ರಾನ್ ನ ಹೊಡೆತದಿಂದ ದೇಶದ ಜನತೆ ಮತ್ತೆ ತತ್ತರಿಸದಂತೆ ಸರಕಾರ ನೋಡಿಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

    ಓಮೈಕ್ರಾನ್ BF 7 ಚೀನಾದಲ್ಲಿ ಸದ್ದು ಮಾಡುತ್ತಿದ್ದಂತೆ ದೇಶದಲ್ಲಿ ಕೆಲವು ಪೂರ್ವನಿಯೋಜಿತಕ್ರಮಗಳ ಬಗೆಗೆ ಸರಕಾರ ಎಚ್ಚೆತ್ತುಕೊಳ್ಳಬೇಕಾಗಿತ್ತು. ಈ ನಿಟ್ಟಿನಲ್ಲಿ ಸರಕಾರದ ಕೆಲವು ನಡೆಗಳು ನಮ್ಮ ಮುಂದಿವೆ. ಆಸ್ಪತ್ರೆಗಳು ತಮ್ಮ ಸೇವೆಗೆ ಸನ್ನದ್ಧಗೊಂಡಿವೆ ಎನ್ನುವುದು ಸಮಾಧಾನಕರ.

    ಆದರೆ “ಏರ್ ಪೋರ್ಟ್‌ಗಳಲ್ಲಿ ಚೈನಾದಂಥ ದೇಶಗಳಿಂದ ಬರುವ ಪ್ರಯಾಣಿಕರಿಗೆ ಏರ್ ಸುವಿಧಾ ಪೋರ್ಟಲ್ ಕಡ್ಡಾಯಗೊಳಿಸುವ ಬಗ್ಗೆ ಸರಕಾರ ಯೋಜನೆ ರೂಪಿಸಿದೆ” ಎಂದು ಇಂದಿನ ಪತ್ರಿಕಾ ವರದಿಯಿದೆ. ಇದು ಸ್ವಾಗತಾರ್ಹ. ಕುರಿತು ಕಡ್ಡಾಯ ನಿಯಮಗಳನ್ನು ಈಗಾಗಲೇ ರೂಪಿಸಿರಬೇಕಿತ್ತು. ಆದರೆ ಇನ್ನೂ ಏರ್ ಸುವಿಧಾ ಪೋರ್ಟಲ್ ಕಡ್ಡಾಯಗೊಳಿಸಿಲ್ಲ. ಹೀಗಾಗಿ ತಕ್ಷಣವೇ ಅಂತರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಿಸಿದಂತೆ ಏರ್ ಸುವಿಧಾ ಪೋರ್ಟಲ್ ನ್ನು ತಕ್ಷಣ ಜಾರಿಗೆ ತರಬೇಕಾಗಿದೆ ಎಂದರು.


    ಕೋವಿಡ್ ನ ಹೊಸ ತಳಿಯ ಕುರಿತಂತೆ ಜನರಲ್ಲಿ ಈಗಿಂದಲೇ ಎಚ್ಚರ ಮೂಡಿಸುವ ಕಾರ್ಯ ಕೈಗೊಳ್ಳಬೇಕು. ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಮಾಸ್ಕ್ ಧರಿಸುವಂತೆ ಅರಿವು ಮೂಡಿಸಬೇಕು. ಯಾವ ಕಾರಣಕ್ಕೂ ರೋಗವು ಅತಿಯಾದ ದುಷ್ಪರಿಣಾಮಗಳನ್ನು ಮೂಡಿಸುವವರೆಗೆ ಕಾಯುತ್ತಾ ಕೂರಬಾರದು. ಎಂದು ಅವರು ಮನವಿ ಮಾಡಿಕೊಂಡರು.
    ಹಿಂದೆ ಸರಕಾರ ಮಾಡಿದ ಅವಾಂತರಗಳನ್ನು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲಿ ಎಂದು ಅವರು ಕೇಳಿಕೊಂಡರು. ಹಿಂದೆ ಮಾಡಿದ ಲಾಕ್ ಡೌನ್ ನ ಪರಿಣಾಮಗಳಿಂದ ಇನ್ನೂ ಜನ ಚೇತರಿಕೊಂಡಿಲ್ಲ. ಇನ್ನೂ ಕೆಲವೆಡೆ ಈಗ ಲವಲವಿಕೆ ಮೂಡುತ್ತಿದೆ. ಆದ ಕಾರಣ ಮುಂದೆ ಎಂಥದ್ದೆ ಪರಿಸ್ಥಿತಿ ಬಂದರೂ ಲಾಕ್‌ಡೌನ್ ಮಾಡುವ ಪ್ರಯತ್ನವನ್ನು ಸರಕಾರ ಮಾಡದಿರಲಿ ಎಂದು ಅಭಿಪ್ರಾಯಿಸಿದರು. ಜನಸಾಮಾನ್ಯರು ಕಳೆದ ಲಾಕ್ಡೌನ್ ನಿಂದ ಬಹಳವಾದ ಆರ್ಥಿಕ ಹೊಡೆತಕ್ಕೆ ಒಳಗಾಗಿದ್ದಾರೆ. ಅದರಲ್ಲೂ ದಿನಾಕೂಲಿಕಾರರು, ಆಟೋ-ಟ್ಯಾಕ್ಸಿ ಚಾಲಕರು, ಹೋಟೇಲ್ ಉದ್ಯಮಿಗಳು, ತರಕಾರಿ ಮಾರುವವರು ಹೀಗೆ ಎಲ್ಲಾ ವರ್ಗದವರಿಗು ಲಾಕ್ಡೌನ್ ಬಹುವಾದ ಹೊಡೆತ ನೀಡಿದೆ. ಆದ ಕಾರಣ ಸರಕಾರ ಇಂಥ ನಿರ್ಧಾರಗಳಿಗೆ ಒತ್ತು ಕೊಡದೇ ರೋಗ ಪರಿಹಾರಕ್ಕೆ ವೈಜ್ಙಾನಿಕ ಮಾರ್ಗಗಳನ್ನು ಕಂಡುಕೊಳ್ಳಲಿ ಎಂದು ಹೇಳಿದರು.
    ಈ ಹೊತ್ತಿನಲ್ಲಿ ಮಾಧ್ಯಮಗಳು ಜನಸಾಮಾನ್ಯರಲ್ಲಿ ಆತಂಕ ಹರಡದಂತೆ ಜವಾಬ್ದಾರಿ ಕಾಯ್ದುಕೊಳ್ಳಬೇಕಾಗಿದೆ. ನಾಗರಿಕರೂ ಕೂಡ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ. ಜನರೂ ರೋಗ ಬರದ ಹಾಗೆ ಮುನ್ನೆಚ್ಚರಿಕೆ ಕಾಯ್ದುಕೊಳ್ಳಲಿ ಎಂದರು.

    ವಿರಾಟಪುರ ವಿರಾಗಿ ಚಲನಚಿತ್ರ ಟ್ರೈಲರ್ ಬಿಡುಗಡೆ

    BELAGAAVI DEC 20

    ಪೂಜ್ಯ ಹಾನಗಲ್ ಶ್ರೀ ಕುಮಾರಸ್ವಾಮಿ ಅವರ ಜೀವನಾದರ್ಶಗಳನ್ನು ಸಾರುವ ಚಲನಚಿತ್ರ ವಿರಾಟಪುರ ವಿರಾಗಿ ಈಗಿನ ಸಮಾಜ ಹಾಗೂ ಯುವಪೀಳಿಗೆಗೆ ಪ್ರೇರಣೆಯಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಪೂಜ್ಯ ಹಾನಗಲ್ ಶ್ರೀ ಕುಮಾರ ಶಿವಯೋಗಿ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಚಿತ್ರದ ಧ್ವನಿ ಸುರುಳಿ, ಟ್ರೈಲರ್ ನ್ನು ಅವರು ಬಿಡುಗಡೆ ಮಾಡಿ ಮಾತನಾಡಿದರು.

    ವೀರಶೈವ ಲಿಂಗಾಯತ ಸಮಾಜವನ್ನು ಎತ್ತಿಹಿಡಿದ ಮಹಾನ್ ಯೋಗಿ :
    ಪೂಜ್ಯ ಹಾನಗಲ್ ಶ್ರೀ ಕುಮಾರ್ ಶಿವಯೋಗಿಗಳು ಮಹಾನ್ ಸಾಧಕರು. ಹಾನಗಲ್ ಕುಮಾರಸ್ವಾಮಿಗಳು 12 ನೇ ಶತಮಾನದ ಸಾಮಾಜಿಕ ಕ್ರಾಂತಿ ತೆರೆಗೆ ಸರಿಯುತ್ತಿರುವ ಸಂದರ್ಭದಲ್ಲಿ ಹಾನಗಲ್ ಕುಮಾರಸ್ವಾಮಿಯವರು ಹೊಸ ರೂಪ ಕೊಟ್ಟರು.ವೀರಶೈವ ಲಿಂಗಾಯತ ಸಮಾಜವನ್ನು ಎತ್ತಿಹಿಡಿದ ಮಹಾನ್ ಯೋಗಿ. ಅವರು ಸ್ಥಾಪನೆ ಮಾಡಿರುವ ಶಿವಯೋಗಿ ಮಂದಿರ ಇಂದಿಗೂ ಕೂಡ ಎಲ್ಲ ಅಧ್ಯಾತ್ಮಿಕ ಚಿಂತನೆಯನ್ನು ಮಾಡುವ ಸಂಸ್ಥೆಯಾಗಿದೆ. ವ್ಯವಸ್ಥಿತವಾದ ಇಂತಹ ಸಂಸ್ಥೆ ಬೇರೆಲ್ಲೂ ಕಾಣಲು ಸಿಗುವುದಿಲ್ಲ. ನಮ್ಮ ಪರಂಪರೆ, ಸಂಸ್ಕೃತಿ, ಸಂಸ್ಕಾರ ಗಳನ್ನು ಶಿವಯೋಗಿ ಮಂದಿರದ ಮೂಲಕ ಕಾಪಾಡಿಕೊಂಡು ಬರಲಾಗಿದೆ. ಇಂತಹ ಸಂಸ್ಥೆಯನ್ನು ಕಟ್ಟಿದ ಹಾನಗಲ್ ಕುಮಾರಸ್ವಾಮಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

    ಚಲನಶೀಲ ಸಮಾಜ :
    ಶಿವಯೋಗಿ ಮಂದಿರ ಜೀರ್ಣೊದ್ದಾರಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹಣ ನೀಡಿ ಜೀರ್ಣೊದ್ದಾರ ಮಾಡಿದ್ದಾರೆ. ವೀರಶೈವ ಲಿಂಗಾಯತ ಸಮಾಜ ಪ್ರಗತಿಪರವಾಗಿದ್ದು, ಈ ಸಮಾಜ ಕಾಲಕ್ಕೆ ತಕ್ಕಂತೆ ಎಲ್ಲವನ್ನು ಒಪ್ಪಿಕೊಳ್ಳುವ ಚಲನಶೀಲ ಸಮಾಜವಾಗಿದೆ. ಈ ಸಮಾಜ ಚಲನಶೀಲವಾಗಿರುವುದರಿಂದ ಈ ಸಮಾಜಕ್ಕೆ ಯಾವುದೇ ಧಕ್ಕೆ ಇಲ್ಲ. ಅವರು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಮಾಡಿದ ಪೂಜ್ಯ ಹಾನಗಲ್ ಕುಮಾರಸ್ವಾಮಿಯವರು, ಪ್ರಥಮ ಅಧ್ಯಕ್ಷರಾಗಿದ್ದರು‌ ಅವರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಅದ್ಯತೆ ನೀಡಿದರು‌.

    ತ್ರಿವಿಧ ದಾಸೋಹದಲ್ಲಿ ತೊಡಗಿರುವ ಮಠ :
    ಕರ್ನಾಟಕದಲ್ಲಿ ಶಿಕ್ಷಣ ಉತ್ತಮಗೊಳ್ಳುವಲ್ಲಿ ಮಠಮಾನ್ಯಗಳು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಕಾರಣವಾಗಿದೆ. ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸುವ ಮೂಲಕ ಸರ್ಕಾರ ಮಾಡುವ ಕೆಲಸವನ್ನು ಮಾಡಿದರು. ಬೆಳಗಾವಿಯ ನಿಪ್ಪಾಣಿಯಿಂದ ಕೊಳ್ಳೆಗಾಲದವರೆಗೆ ಬೀದರ್ ನಿಂದ ಕೊಳ್ಳೆಗಾಲದವರೆಗು ಎಲ್ಲ ಗ್ರಾಮಗಳಲ್ಲಿ ವೀರಶೈವ ಲಿಂಗಾಯತ ಮಠಗಳು ಅಧ್ಯಾತ್ಮದ ಜೊತೆಗೆ ತ್ರಿವಿಧ ದಾಸೋಹದಲ್ಲಿ ತೊಡಗಿಕೊಂಡಿವೆ ಎಂದರು.

    ಈ ಸಮಾರಂಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೊರೆ, ಮಾಜಿ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಹಾಗೂ ಸ್ವಾಮೀಜಿಗಳು ಹಾಜರಿದ್ದರು.

    ಪರಿವರ್ತನೆ ಜಗದ ನಿಯಮ ಅಲ್ಲವೆ

    ಸುಮಾವೀಣಾ

    ಉದಾತ್ತನೊಳ್  ಪುಟ್ಟದಲ್ತೆ ನೀಲಿರಾಗಂ-  ನಾಗಚಂದ್ರ ಕವಿಯ   ‘ರಾಮಚಂದ್ರ ಚರಿತ ಪುರಾಣ’ದ ಹದಿನಾಲ್ಕನೆಯ ಆಶ್ವಾಸದಲ್ಲಿ ರಾವಣನನ್ನು ಉದ್ದೇಶಿಸಿ ಹೇಳಿರುವ ಮಾತಿದು. ಇದು ರಾವಣನೆ ಏಕೆ ಪರಿವರ್ತನೆಗೆ ಒಳಗಾಗಿ  ತನ್ನ ವ್ಯಕ್ತಿತ್ವವನ್ನು  ಹಿಗ್ಗಿಸಿಕೊಳ್ಳುವ  ಪ್ರತಿಯೊಬ್ಬರಿಗೂ ಅನ್ವಯವಾಗುವಂಥ ಮಾತು. 

    ಕಾರಣಾಂತರಗಳಿಂದ  ಪ್ರಮಾದಗಳು ಘಟಿಸಿದಾಗ ಅದನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕಿಂತ  ತಪ್ಪು ಎಂದೊಪ್ಪಿ ಆದ ತಪ್ಪುಗಳನ್ನು ಸರಿ ಮಾಡಬಹುದೆ ನೋಡಬೇಕಾಗುತ್ತದೆ. ಇದು ಮಾನವಂತನ ಲಕ್ಷಣ. ಇಲ್ಲಿ ರಾವಣನಲ್ಲಿ ಈ ಗುಣ ಇರುವುದನ್ನು ಕಾಣಬಹುದು.  ಸೀತೆಯ ಮೇಲಿನ ಕಾಮವ್ಯಾಮೋಹದಿಂದ ಆಕೆಯನ್ನು ಅಪಹರಿಸುತ್ತಾನೆ ಬಂಧಿಯಾಗಿಸುತ್ತಾನೆ. ಆಕೆಯನ್ನು ಎದಿರುಗೊಂಡು ಮಾತನಾಡಲೆಂದು ಹೋದಾಗ  ರಾಮಲಕ್ಷ್ಮಣರ ಪ್ರಾಣದವರೆಗೂ ಬಾರದಿರು ಎಂದು  ಮೂರ್ಛೆಹೋದಾಗ ರಾವಣನ ಮನಸ್ಸು ಮನಸ್ಸು ಕಾರುಣ್ಯದ ಕಡೆಗೆ ತಿರುಗುತ್ತದೆ. ಇಂಥ ಪುಣ್ಯಸತಿಯನ್ನು ನೋಯಿಸಿದೆನಲ್ಲ  ಎಂದು ಪಶ್ಚಾತ್ತಾಪ ಪಡುತ್ತಾನೆ.

    ರಾವಣ ತನ್ನ ಮನಸ್ಸನ್ನು ಎಲ್ಲಾ ಕ್ಷೋಭೆಗಳ ಬಂಧನದಿಂದ  ಬಿಡಿಸಿಕೊಂಡು ಆಕೆಯ ಗುಣಗಾನ ಮಾಡಲು  ಪ್ರಾರಂಭಿಸುತ್ತಾನೆ.  ತನ್ನ ತಪ್ಪಿಗೆ ಹಳಿದುಕೊಳ್ಳುತ್ತಾನೆ. ತಪ್ಪುಗಳನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದೂ ಕೂಡ   ಉದಾತ್ತ ನಾಯಕನ ಲಕ್ಷಣ. ಹಂಸಕ್ಷೀರ ನ್ಯಾಯ ಬಯಸುವ ನೀಡುವ ಪ್ರತಿ  ನಾಯಕನೂ ತನ್ನ ತಪ್ಪುಗಳನ್ನು ತಾನೆ ಹಳಿದುಕೊಂಡು  ತನ್ನಿಂದ ಆಗುತ್ತಿದ್ದ ಪ್ರಮಾದವನ್ನು  ತಡೆದು  ಮಂಗಳ ಬಯಸುವ    ಎಲ್ಲ ಧೀರ ಮತ್ತು ಉದಾತ್ತ ನಾಯಕರನ್ನು ಈ ವಾಕ್ಯ ಸಂಕೇತಿಸುತ್ತದೆ.  ಪರಿವರ್ತನೆ ಜಗದ ನಿಯಮ ಅಲ್ಲವೆ!

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಅಮ್ಮನ ನೆನಪು

    ಒಂದು ದಿನವೂ ತನ್ನ ಇಷ್ಟಾನಿಷ್ಟಗಳನ್ನು ಹೇಳಿಕೊಳ್ಳಲಿಲ್ಲ. ತಾನಾಯಿತು ತನ್ನ ಜೀವನವಾಯಿತು , ದೇವರ ಪೂಜೆಯಾಯಿತು, ತನ್ನ ಕೆಲಸವಾಯಿತು ಎಂದು ಬಾಳಿ ಬದುಕಿದ ನನ್ನ ಅಮ್ಮ ರಮಾ ಬಾಯಿ ನಾಡಿಗ್ ಇವತ್ತಿಗೆ ಒಂದು ವಾರದ ಹಿಂದೆ ಅಂದರೆ ಡಿಸೆಂಬರ್ 13 , 2022 ರ ಮಂಗಳವಾರ ಹೇಳದೆ ಕೇಳದೆ ಹೊರಟು ಹೋಗಿಬಿಟ್ಟಳು. ತನ್ನ ಜೀವನ ಯಾತ್ರೆ ಮುಗಿಯೆತೆಂದು ಆಕೆಗೂ ಅರಿವಾಗಲಿಲ್ಲ. ನಮಗೂ ಗೊತ್ತಾಗಲಿಲ್ಲ. ಸದ್ದಿಲ್ಲದೆ ನಡೆದೇ ಬಿಟ್ಟಳು. ಪತಿಯೇ ಪರದೈವ ಎಂದು ನಂಬಿ ಬದುಕಿದ ಅಮ್ಮ ತನ್ನ 62 ವರ್ಷದ ಜೀವನದ ಸಂಗಾತಿ ಅಣ್ಣನಿಗೂ ಒಂದು ಮಾತು ಹೇಳದೆ ಹೊರಟು ಹೋದಳು.

    ಅಮ್ಮನೊಂದಿಗೆ ನಾನು

    ನನ್ನ ಅಮ್ಮ ಬೆಂಗಳೂರಿನಂಥ ಪಟ್ಟಣದಲ್ಲಿ ಬೆಳೆದಾಕೆ. ಆಗಿನ ಮಹಾರಾಣಿ ಕಾಲೇಜಿನಲ್ಲಿ ಹೋಂ ಸೈನ್ಸ್ ಓದಿದಾಕೆ. ಮದುವೆ ಆಗಿ ಸಂತೇಬೆನ್ನೂರಿನಂಥ ಪುಟ್ಟ ಊರಿನ ಗಂಡನ ಮನೆಗೆ ಬಂದಾಗ ಅದಕ್ಕೆ ಹೊಂದಿಕೊಂಡಂಥ ಪರಿಯೇ ಅನನ್ಯ. ನಮ್ಮದು ತುಂಬು ಕುಟುಂಬ. ದೊಡ್ಡ ಮನೆ. ಆ ಮನೆ ತುಂಬ ಜನ. ಒಬ್ಬೊಬ್ಬರಿಗೆ ಒಂದೊಂದು ಕೆಲಸದ ಹೊಣೆ. ಅದಕ್ಕೆಲ್ಲವೂ ಹೊಂದಿಕೊಂಡು ಜೀವನ ಸಾಗಿಸಿದ ಪರಿ ಭಾರತೀಯ ಕುಟುಂಬ ಪದ್ಧತಿಯ ಹಿರಿಮೆಗೊಂದು ಸಾಕ್ಷಿ. ಮನೆಯೆಂದ ಮೇಲೆ ಬರುವ ಸಣ್ಣ ಪುಟ್ಟ ವೈಮನಸ್ಯಗಳನ್ನು ದೊಡ್ಡದು ಮಾಡಿಕೊಂಡು ಹೋಗದೆ ಬಾಳಿದ ಜೀವ ನನ್ನಮ್ಮ.

    ಅಮ್ಮ ಮಾತ್ರವಲ್ಲ ನಮ್ಮ ಮನೆಯ ಎಲ್ಲರದೂ ಅದೇ ಗುಣ. ಅದೇ ಅಲ್ಲವೇ ಅವಿಭಕ್ತ ಕುಟುಂಬದ ಹಿರಿಮೆ. ನಾಡಿಗರ ಮನೆಯ ಅತ್ತೆ ಸೊಸೆಯಂದಿರು ಎಷ್ಟು ಚೆನ್ನಾಗಿ ಹೊಂದಿಕೊಂಡು ಬಾಳುತ್ತಿದ್ದರಲ್ಲಾ ಎಂದು ಸುತ್ತಲಿನ ಹೆಣ್ಣು ಮಕ್ಕಳು ಮಾತಾಡಿಕೊಳ್ಳುವಂತೆ ತುಂಬು ಕುಟುಂಬವಾಗಿ ಅನೇಕ ವರ್ಷ ಬದುಕು ಸಾಗಿಸಿದ್ದು ಸಂತೇಬೆನ್ನೂರು ನಾಡಿಗರ ಪೇಟೆ ಮನೆಯ ಹಿರಿಮೆ.

    ಸತ್ಯನಾರಾಯಣ ನಾಡಿಗ್ ಮತ್ತು ರಮಾ ನಾಡಿಗ್

    ನಮ್ಮ ಅಣ್ಣ ಸತ್ಯನಾರಾಯಣ ನಾಡಿಗರು ಮಲ್ಲಾಡಿಹಳ್ಳಿಯಲ್ಲಿದ್ದ ಪೋಸ್ಟ್ ಮಾಸ್ಟರಿಕೆ ಬಿಟ್ಟು ಊರಿಗೆ ಬಂದ ಮೇಲೆ ಅಲ್ಲಿನ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಸೇವೆಯಿಂದ ಸ್ಪೂರ್ತಿಗೊಂಡು ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು. ವಿಜಯ ಯುವಕ ಸಂಘ ಎಂಬ ಸಂಸ್ಥೆಗೆ ಅಸ್ತಿಬಾರಿ ಹಾಕಿ ತಮ್ಮ ಜೀವನವನ್ನೇ ಆ ಸಂಸ್ಥೆಗೆ ಧಾರೆ ಎರೆದರು. ನನ್ನ ಅಣ್ಣನ ಈ ಸೇವಾ ಕಾರ್ಯಕ್ಕೆ ನನ್ನಮ್ಮ ಯಾವತ್ತೂ ಅಡ್ಡಿ ಬರಲಿಲ್ಲ. ಅಮ್ಮ ಏನಾದರು ಅಂದು ಅಡ್ಡಿ ಮಾಡಿದ್ದರೆ ನಮ್ಮ ಅಣ್ಣ ವಿಜಯ ಯುವಕ ಸಂಘದ ಮೂಲಕ ಇಷ್ಟೊಂದು ಸಾಧನೆ ಮಾಡಲು ಆಗುತ್ತಲೇ ಇರಲಿಲ್ಲ. ಅಮ್ಮ ತನಗಾಗಿ ಏನನ್ನು ಕೇಳಲಿಲ್ಲ. ಹೆಣ್ಣಿಗೆ ಸಹಜವಾಗಿ ಇರುವ ಒಡವೆ ಬಂಗಾರ ವಸ್ತ್ರಕ್ಕೆ ಆಸೆ ಪಡಲಿಲ್ಲ. ನನ್ನ ಅಣ್ಣ ತನ್ನ ದುಡಿಮೆಯ ಹೆಚ್ಚು ಹಣವನ್ನು ಸಂಘಕ್ಕೇ ಹಾಕಿದ್ದೇ ಹೆಚ್ಚು.

    ನಾನು ಪತ್ರಕರ್ತನಾಗಿ ಬೆಂಗಳೂರು ಸೇರಿದ ನಂತರ ಅಮ್ಮ ನನ್ನ ಜೊತೆಯೆ ಇರತೊಡಗಿದರು. ಮಗನಿಂದಲೂ ಆಕೆ ಏನನ್ನು ಕೇಳಲಿಲ್ಲ. ಆಕೆ ಕೇಳುತ್ತಿದ್ದುದು ಎರಡೇ ತನ್ನ ಶುಕ್ರವಾರದ ಪೂಜೆಗೆ ಒಂದು ಮೊಳ ಹೂವು . ದೇವರ ನೈವೇದ್ಯಕ್ಕೆ ಎರಡು ಬಾಳೆ ಹಣ್ಣು. ಟೀವಿಯ ರಿಮೋಟ್ ವರ್ಕ್ ಆಗದಿದ್ದರೆ ಅದಕ್ಕೆ ಸೆಲ್ಲು.

    ಸೊಸೆ ಬಂದ ಮೇಲೆ ಇಬ್ಬರೂ ಹೊಂದಿ ಕೊಂಡ ಪರಿಯೇ ಅನನ್ಯ. ಅಮ್ಮ ತನ್ನ ಅತ್ತೆಯ ದೌಲತ್ತು ತೋರಲಿಲ್ಲ. ನನ್ನ ಪತ್ನಿ ಮಮತಾ ಸೊಸೆಯ ಠೇಂಕಾರ ತೋರಲಿಲ್ಲ. ವಯಸ್ಸಾದ ಮೇಲೆ ಹಿರಿಯರನ್ನು ಚೆನ್ನಾಗಿ ಮಾತಾಡಿಸುತ್ತಾ ಇರಬೇಕಂತೆ. ಆ ಕೆಲಸವನ್ನು ಒಂದು ದಿನವೂ ತಪ್ಪದೇ ಮಾಡಿದ್ದು ನನ್ನಕ್ಕ ಭಾರತಿ. ನಿತ್ಯ ಸಂಜೆ ನಡೆಯುತ್ತಿ ದ್ದ ಅಮ್ಮ ಮಗಳ ಮುಲಾಕತ್ ಅಮ್ಮನ ಜೀವನೋತ್ಸಾಹ ಹೆಚ್ಚಿಸಿ ಚೇತೋಹಾರಿಯಾಗಿಡಲು ಸಹಕಾರಿಯಾಗುತ್ತಿತ್ತು.

    ಒಂದು ವರ್ಷದಲ್ಲಿ ಇಬ್ಬರು ಅಮ್ಮಂದಿರೂ ನನ್ನಿಂದ ದೂರವಾದರು. ಬಾಲ್ಯದಲ್ಲಿ ನನ್ನನ್ನು ಎತ್ತಿ ಆಡಿಸಿದ ದೊಡ್ಡಮ್ಮ ವನಜಮ್ಮ ದೂರವಾದ ವರ್ಷದೊಪ್ಪತ್ತಿನಲ್ಲಿ ಅಮ್ಮ ಕೂಡ ವಾರಗಿತ್ತಿಯನ್ನು ಹಿಂಬಾಲಿಸಿದರು.

    ಅಮ್ಮನಿಲ್ಲದ ಮನೆಯಲ್ಲಿ ಶೂನ್ಯ ಆವರಿಸಿದೆ. ಕನ್ನಡಪ್ರೆಸ್ .ಕಾಮ್ ನ ಪ್ರೇರಕ ಶಕ್ತಿಯಲ್ಲಿ ಅಮ್ಮನೂ ಒಬ್ಬರು. ಅವರನ್ನು ಕಳೆದುಕೊಂಡ ದುಃಖದಲ್ಲಿ ಕನ್ನಡಪ್ರೆಸ್ ಒಂದು ವಾರ ಸ್ಥಗಿತವಾಗಿತ್ತು. ಅದಕ್ಕೆ ತಮ್ಮೆಲ್ಲರ ಕ್ಷಮಾಪಣೆ ಕೇಳುತ್ತಾ ಅಮ್ಮನ ನೆನಪಿನಲ್ಲಿ ಮತ್ತೆ ಕನ್ನಡಪ್ರೆಸ್ ತಮ್ಮನ್ನು ತಲುಪುತ್ತಿದೆ.

    ಬೌಂಡ್ ಲೆಸ್ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

    ವಿ. ಎಸ್ . ನಾಯಕ

    ಕಲಾವಿದನಾದವನಿಗೆ ಕಲೆಯು ಯಾವ ರೀತಿಯಲ್ಲಿ ಆದರೂ ಆಕರ್ಷಿಸಬಹುದು. ತಾನು ನೋಡಿದ್ದನ್ನು ಅನುಭವಿಸಿದ್ದನ್ನು ತಿಳಿದಿದ್ದನ್ನು ತನಗೆ ಅರಿವಿಲ್ಲದೆ ಕುಂಚದಲ್ಲಿ ಚಿತ್ರಿಸಿ ವಿಭಿನ್ನವಾದ ಕಲಾಕೃತಿಗಳನ್ನು ರಚಿಸಿ ಒಂದು ವಿಸ್ಮಯಕಾರಿ ತಾಣಕ್ಕೆ ನಮ್ಮನ್ನು ಕೊಂಡಯ್ಯುತ್ತಾನೆ . ಅದೇ ರೀತಿ ಇಲ್ಲಿ ಒಂದು ಅಚ್ಚರಿಯ ಕಲಾ ಲೋಕವೇ ಧರೆಗಿಳಿದು ಬಂದಂತೆ ಕಾಣುತ್ತಿದೆ.

    ಗಿಳಿಯಾಲ್ ಜಯರಾಮ್ ಭಟ್

    ಪ್ರಖ್ಯಾತ ಕಲಾವಿದರಾದ ಗಿಳಿಯಾಲ್ ಜಯರಾಮ್ ಭಟ್ ರವರ ಕುಂಚದಲ್ಲಿ ಯಾರು ಊಹಿಸಲಾಗದ ಒಂದಕ್ಕಿಂತ ಒಂದು ವಿಭಿನ್ನ ಕಲಾಕೃತಿಗಳು ರಚಿಸಲ್ಪಟ್ಟಿವೆ. ಇವರಿಗೆ ಪ್ರಕೃತಿ ವಿಭಿನ್ನವಾಗಿ ಕಂಡಿದೆ. ಪ್ರಕೃತಿಯ ಬಗ್ಗೆ ಇವರ ಮನಸ್ಸಿನಲ್ಲಿ ಮೂಡಿದ ಹಲವಾರು ವಿಚಾರಧಾರೆಗಳನ್ನು ತಮ್ಮ ಕಲಾಕೃತಿಗಳಲ್ಲಿ ಬಿಂಬಿಸಿದ್ದಾರೆ.

    ಒಂದಕ್ಕಿಂತ ಒಂದು ವಿಭಿನ್ನ ಕಲಾಕೃತಿಗಳು ವಿಶಿಷ್ಟ ಸಂದೇಶವನ್ನು ಕೊಡುತ್ತವೆ. ಇವರ ಕಲಾಕೃತಿಗಳು ನಿಸರ್ಗ ದಲ್ಲಿರುವ ಕಾಡು ಬೆಟ್ಟ ಗುಡ್ಡ ಅಲ್ಲಿಯ ವೈವಿಧ್ಯತೆ ಆನಂದ ಸಂತೋಷ ಸಾಮಾನ್ಯವಾಗಿ ಅಲ್ಲಿಯ ರಮಣೀಯ ದೃಶ್ಯಗಳನ್ನು ತನ್ನ ಮನಸ್ಸಿಗೆ ಬಂದ ಹಾಗೆ ವಿಭಿನ್ನ ರೀತಿಯಲ್ಲಿ ಚಿತ್ರಿಸಿರುವುದು ವಿಶೇಷ. ಕ್ಷಣ ಕಲಾಸಕ್ತರಿಗೆ ಇವರ ಕಲಾಕೃತಿಗಳು ನೋಡಿದಾಗ ವಿನೂತನವಾದ ಒಂದು ಲೋಕಕ್ಕೆ ಅಡಿ ಇಟ್ಟ ಅನುಭವವಾಗುತ್ತದೆ. ಇವರ ಬಣ್ಣಗಳ ಸಂಯೋಜನೆ ಮೆರೆಗು ಬೆಳಕು ನೆರಳಿನ ನಡುವೆ ನೋಡಿದರೆ ಪ್ರಕೃತಿಯ ಜೊತೆಗೆ ಇದ್ದಂತಹ ಅನುಭವವಾಗುತ್ತದೆ.

    ಸುಮಾರು 50 ಕ್ಕಿಂತಲೂ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಕಲಾವಿದರಾದ ಜಯರಾಮ್ ಭಟ್ ರವರು ಹೇಳುವಂತೆ ಪ್ರಕೃತಿಯಲ್ಲಿ ನಾನು ನೋಡಿದ ಅನುಭವಿಸಿದ ಹಲವಾರು ವಿಚಾರಧಾರೆಗಳನ್ನ ಕಲಾಕೃತಿಗಳ ಮೂಲಕವಾಗಿ ಬಿಂಬಿಸಿದ್ದೇನೆ. ಎಂದು ಹೇಳುತ್ತಾರೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆರಂಭಗೊಂಡಿರುವ ಇವರ ಕಲಾಪ್ರದರ್ಶನವು ಡಿಸೆಂಬರ್ 13ರವರೆಗೆ ನಡೆಯಲಿದ್ದು ಕಲಾ ಸಕ್ತರು ತಮ್ಮ ಬಿಡುವಿನ ಸಮಯದಲ್ಲಿ ಬಂದು ವೀಕ್ಷಿಸಬಹುದು.

    ಕಲಾ ಪ್ರದರ್ಶನದ ಸ್ಥಳ
    ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿ ಒಂದು ಮತ್ತು ಎರಡು
    ಕುಮಾರ ಕೃಪಾರಸ್ತೆ ಬೆಂಗಳೂರು
    ಸಮಯ: ಬೆಳಿಗ್ಗೆ 10 ಗಂಟೆಯಿಂದ ಸಂಜೆ 7:00ವರೆಗೆ
    ಪ್ರವೇಶ ಉಚಿತ

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಅಡ್ಡದಾರಿಗಳು ಬೇಡ, ಜ್ಞಾನಮಾರ್ಗದಲ್ಲಿ ನಡೆಯಲು ಸಚಿವರ ಕರೆ

    BENGALURU DEC 5

    ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಗಳು ಜ್ಞಾನಮಾರ್ಗದಲ್ಲೇ ಬೆಳೆದುಕೊಂಡು ಬಂದಿದ್ದು, ನಮ್ಮ ವಿದ್ಯಾರ್ಥಿ ಸಮುದಾಯ ಕೂಡ ಈ ಉನ್ನತ ಮಾರ್ಗದಲ್ಲೇ ಸಾಗಬೇಕು. ಸುಸ್ಥಿರ ಅಭಿವೃದ್ಧಿಗೆ ಗುಣಮಟ್ಟದ ಶಿಕ್ಷಣವೊಂದೇ ಮಾರ್ಗವಾಗಿದ್ದು, ಇದಕ್ಕೆ ಯಾವುದೇ ಅಡ್ಡಹಾದಿಗಳಿಲ್ಲ ಎನ್ನುವುದನ್ನು ಮನಗಾಣಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

    ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 57ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಚಿತ್ರನಟ ದ್ವಾರಕೀಶ್‌, ಅಮೆರಿಕದ ಕನ್ನಡ ಸಂಘಟನೆಗಳ ಒಕ್ಕೂಟದ ಡಾ.ಅಮರನಾಥ್‌ ಗೌಡ ಮತ್ತು ಕಲಾವಿದ ಟಿ.ಅನಿಲ್‌ಕುಮಾರ್‍‌ ಅವರಿಗೆ ಗೌರವ ಡಾಕ್ಟೊರೇಟ್‌ ಪ್ರದಾನ ಮಾಡಲಾಯಿತು. ಜತೆಗೆ 300 ಚಿನ್ನದ ಪದಕ, 73 ನಗದು ಬಹುಮಾನ ಮತ್ತು 257 ಪಿಎಚ್.ಡಿ. ಪದವಿಗಳನ್ನು ಕೊಡಲಾಯಿತು. ಅಲ್ಲದೆ, 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿಗೆ ಪಾತ್ರರಾದರು.

    21ನೇ ಶತಮಾನವು ಜ್ಞಾನದ ಯುಗವಾಗಿದೆ. 13೦ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಸಮಸ್ಯೆಗಳಾ ಭಾಗವಾಗುವುದು ಮತ್ತು ವ್ಯವಸ್ಥೆಯನ್ನು ದೂಷಿಸುವುದು ಯಾರಿಗೇ ಆದರೂ ತುಂಬಾ ಸುಲಭವಾಗಿದೆ. ಆದರೆ, ವಿದ್ಯಾರ್ಥಿಗಳು ಸಮಸ್ಯೆಯ ಭಾಗವಾಗದೆ ಪರಿಹಾರ ಕ್ರಮಗಳ ಭಾಗವಾಗಬೇಕು. ಆಗಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ಕರೆ ಕೊಟ್ಟರು.

    ಒಳ್ಳೆಯ ಸಮಾಜ ನಿರ್ಮಾಣದ ಹೊಣೆಗಾರಿಕೆಯು ಕಲಿಕೆಯ ಭಾಗವಾಗಬೇಕು ಎಂಬ ಉದ್ದೇಶದಿಂದಲೇ ಎನ್‌ಇಪಿ ಜಾರಿಗೆ ತರಲಾಗಿದೆ. ಇದನ್ನು ಈಗಾಗಲೇ ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದು ಅಂತಿಮವಾಗಿ ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಗಳ ಭಾಗವಾಗಬೇಕು. ಈ ವಿಷಯದಲ್ಲಿ ಸಾಧಿಸಬೇಕಾದ್ದು ಇನ್ನೂ ಬಹಳಷ್ಟಿದೆ ಎಂದು ಅವರು ಎಚ್ಚರಿಸಿದರು.

    ಅಮೆರಿಕದಂತಹ ದೇಶವು ಜಾಗತಿಕ ಮಟ್ಟದಲ್ಲಿ ಬಲಾಢ್ಯವಾಗಲು ಅಲ್ಲಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳೇ ಕಾರಣ. ನಮ್ಮಲ್ಲಿ ಕೇವಲ ವೈಯಕ್ತಿಕ ಸಾಧನೆಯ ಕಡೆಗೆ ಗಮನವಿದೆಯೇ ವಿನಾ ಸಾಂಘಿಕ ಪ್ರಯತ್ನಗಳಿಗೆ ಆದ್ಯತೆ ಕೊಟ್ಟಿಲ್ಲ. ಈ ಕೊರತೆಯನ್ನು ನಿವಾರಿಸುವತ್ತ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ದಾಪುಗಾಲಿಡುತ್ತಿದೆ. ಇದರ ಭಾಗವಾಗಿ ಡಿಜಿಟಲೀಕರಣ ಮತ್ತು ತಂತ್ರಜ್ಞಾನ ಅಳವಡಿಕೆಯ ಕಾರ್ಯಕ್ರಮಗಳು ವ್ಯಾಪಕವಾಗಿ ನಡೆಯುತ್ತಿವೆ ಎಂದು ಅವರು ವಿವರಿಸಿದರು.

    ಉನ್ನತ ಶಿಕ್ಷಣ ವಲಯವು ಸ್ವತಂತ್ರ, ಸ್ವಾವಲಂಬಿ, ಉತ್ತರದಾಯಿ ಮತ್ತು ಪಾರದರ್ಶಕವಾಗಿರಬೇಕು. ಈ ಮಹೋದ್ದೇಶಗಳೊಂದಿಗೆ ಸಾಕಷ್ಟು ಸುಧಾರಣೆಗಳನ್ನು ಕಳೆದ ಮೂರು ವರ್ಷಗಳಲ್ಲಿ ತರಲಾಗಿದೆ. ಈಗ ಮುಂದುವರಿದ ಭಾಗವಾಗಿ ಇಡೀ ತಿಂಗಳು ‘ಸುಶಾಸನ ಮಾಸ’ವನ್ನು ಆಚರಿಸಲಾಗುತ್ತಿದೆ. ನಮ್ಮ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಎಲ್ಲೋ ಪ್ರತ್ಯೇಕವಾಗಿ ಕೆಲಸ ಮಾಡುವುದರ ಬದಲು ಸಮಾಜದಲ್ಲಿರುವ ಪರಿಣತಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡು ರಚನಾತ್ಮಕ ಪ್ರಗತಿಯ ಹಿರಿಮೆಯನ್ನು ಸಾಧಿಸಬೇಕು ಎಂದು ಸಚಿವರು ಪ್ರತಿಪಾದಿಸಿದರು.

    ಸ್ವಾಮಿ ವಿವೇಕಾನಂದರು ಹೇಳಿದಂತೆ ನಾವೇ ನಮ್ಮ ಬದುಕಿನ ಶಿಲ್ಪಿಗಳಾಗಬೇಕು. ಇದು ಸಾಧ್ಯವಾಗಬೇಕೆಂದರೆ ಉನ್ನತಿ ಮತ್ತು ಉತ್ಕೃಷ್ಟತೆಗಳ ಕಡೆಗೆ ವಿದ್ಯಾರ್ಥಿಗಳು ತುಡಿತ ಬೆಳೆಸಿಕೊಳ್ಳಬೇಕು. ಈ ಜ್ಞಾನದ ಯುಗದಲ್ಲಿ ಬೆಂಗಳೂರು ನಗರವು ದೇಶದ ನಂಬರ್‍‌ ಒನ್‌ ನಗರವಾಗಿದ್ದು, ಜಾಗತಿಕ ಸ್ತರದಲ್ಲಿ 24ನೇ ಸ್ಥಾನವನ್ನು ಅಲಂಕರಿಸಿದೆ. ಇಲ್ಲಿರುವ ಉಜ್ವಲ ಅವಕಾಶಗಳನ್ನು ವಿದ್ಯಾರ್ಥಿಗಳು ತಮ್ಮ ಮತ್ತು ಸಮುದಾಯದ ಯಶಸ್ಸಿಗೆ ಬಳಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.

    ಎನ್‌ಇಪಿಯಿಂದ ಭಾರತ ವಿಶ್ವಗುರು
    ಘಟಿಕೋತ್ಸವ ಭಾಷಣ ಮಾಡಿದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಪ್ರೊ.ಜಗದೀಶ್‌ಕುಮಾರ್, “ಲಭ್ಯತೆ, ಕೈಗೆಟುಕುವಿಕೆ, ಗುಣಮಟ್ಟ, ಸಮಾವ ಅವಕಾಶ ಮತ್ತು ಉತ್ತರದಾಯಿತ್ವ ಎನ್ನುವ ಐದು ಅಂಶಗಳೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಆಧಾರಸ್ತಂಭಗಳಾಗಿವೆ. ಇದರ ಆಧಾರದ ಮೇಲೆ ಪ್ರಧಾನಿ ಮೋದಿಯವರ ಆಶಯದಂತೆ ಭಾರತವು ವಿಶ್ವಗುರುವಾಗುತ್ತ ಮುಂದಡಿ ಇಟ್ಟಿದೆ” ಎಂದರು.

    ಆತ್ಮಶೋಧನೆಯೇ ಕಲಿಕೆಯ ಅಂತಿಮ ಗುರಿಯಾಗಿದೆ. ಇದರ ಜತೆಗೆ ನಿರಂತರ ಕಲಿಕೆ ಕೂಡ ಸಾಧ್ಯವಾಗಬೇಕು. ನಮ್ಮಲ್ಲಿ ಉದ್ಭವಿಸುವ ಪ್ರಶ್ನೆ ಮತ್ತು ಜಿಜ್ಞಾಸೆಗಳು ಕೂಡ ಉನ್ನತ ಮಟ್ಟದ್ದಾಗಿದ್ದಾಗ ಮಾತ್ರ ಅದಕ್ಕೆ ತಕ್ಕ ಗುಣಮಟ್ಟದ ಉತ್ತರ ದೊರೆಯುವುದು ಸಾಧ್ಯವಾಗಲಿದೆ ಎಂದು ಅವರು ನುಡಿದರು.

    ನಮ್ಮಲ್ಲಿ ಈಗ ಜನಸಂಖ್ಯೆಯ ಸರಸಾರಿ ವಯಸ್ಸು 29ರಷ್ಟಿದೆ. ಇದು ಸಾಧನೆಗೆ ಹೇಳಿಮಾಡಿಸಿದಂತಹ ವಾತಾವರಣವನ್ನು ಸೃಷ್ಟಿಸಿದೆ. ಭಾರತವು ಜ್ಞಾನಾಧಾರಿತ ಸಮಾಜವಾದರೆ ಮಾತ್ರ ವಿಶ್ವ ಮಟ್ಟದಲ್ಲಿ ಪ್ರತಿಷ್ಠಾಪಿತವಾಗಬಹುದಷ್ಟೆ. ಇದು ಸಾಕಾರಗೊಳ್ಳಬೇಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯ ಆದ್ಯತೆಗಳು ಆಮೂಲಾಗ್ರವಾಗಿ ಬದಲಾವಣೆಗೆ ತೆರೆದುಕೊಳ್ಳಬೇಕಿದೆ ಎಂದು ಅವರು ಪ್ರತಿಪಾದಿಸಿದರು.

    ಎನ್‌ಇಪಿ ಒಂದು ದಿಟ್ಟ ನಿರ್ಧಾರವಾಗಿದೆ. ಅತ್ಯಂತ ಚಾರಿತ್ರಿಕವಾಗಿರುವ ಈ ನೀತಿಯಿಂದಾಗಿ, ದೇಶದ ಶಿಕ್ಷಣ ಕ್ಷೇತ್ರವು ಹೊಸತನಕ್ಕೆ ಮತ್ತು ದೇಶಕ್ಕೆ ಅಗತ್ಯವಾದ ಶೈಕ್ಷಣಿಕ ದೃಷ್ಟಿಕೋನಕ್ಕೆ ಮುಕ್ತವಾಗಿ ತೆರೆದುಕೊಂಡಿದೆ. ಉದ್ಯೋಗಾವಕಾಶಗಳ ಜತೆಗೆ ಸಂಶೋಧನೆ ಮತ್ತು ಜ್ಞಾನದಾಹದ ಸೃಷ್ಟಿ ಇದರಿಂದ ಸಾಧ್ಯವಾಗಲಿದ್ದು, ಎನ್‌ಇಪಿ ಪರಿಪೂರ್ಣ ದೃಷ್ಟಿಕೋನದೊಂದಿಗೆ ಇವೆಲ್ಲವನ್ನೂ ಅಳವಡಿಸಿಕೊಂಡಿದೆ ಎಂದು ಅವರು ಒತ್ತಿ ಹೇಳಿದರು.

    ಕಾರ್ಯಕ್ರಮದಲ್ಲಿ ರಾಜ್ಯಪಾಲ ಮತ್ತು ಕುಲಾಧಿಪತಿಗಳಾದ ಥಾವರಚಂದ್‌ ಗೆಹಲೋಟ್‌, ಬೆಂಗಳೂರು ವಿವಿ ಕುಲಪತಿ ಡಾ.ಎಸ್‌ ಎಂ ಜಯಕರ್‍‌, ಕುಲಸಚಿವರಾದ ಪ್ರೊ.ಜೆ ಟಿ ದೇವರಾಜ್‌ ಮತ್ತು ಎನ್‌ ಮಹೇಶ್‌ ಬಾಬು ಮುಂತಾದವರು ಉಪಸ್ಥಿತರಿದ್ದರು.


    ಬೈದು ಹೇಳುವವರು  ಬದುಕುವುದಕ್ಕೆ ಎಂಬುದು  ಹಳೆಯ ಮಾತಾದರೂ ಸಾರ್ವಕಾಲಿಕ

     ಸುಮಾವೀಣಾ

    ಕವಿ ರನ್ನ

    ಆರಾಧ್ಯಂ ನ ಪ್ರಕೋಪಯೇತ್-ಶಕ್ತಿ ಕವಿ ರನ್ನ ಬರೆದಿರುವ ‘ಗದಾಯುದ್ಧ’ದ  ‘ಸಂಜಯ ವಚನ’ದಿಂದ ಪ್ರಸ್ತುತ ವಾಕ್ಯವನ್ನು ಆರಿಸಿದೆ. ನಾವು ಯಾರನ್ನು ಆರಾಧಿಸುತ್ತೇವೆಯೋ  ಅವರ ಮೇಲೆ ಕೋಪಿಸಿಕೊಳ್ಳಬಾರದು ಅನ್ನುವ  ಅರ್ಥ  ಬರುತ್ತದೆ . ಇದೊಂದು ದಾಕ್ಷಿಣ್ಯದ ಸನ್ನಿವೇಶ .  ನಮ್ಮ ಪ್ರೀತಿ ಪಾತ್ರರ ಮೇಲೆ   ಕೋಪ ಮಾಡಿಕೊಳ್ಳಲು ಏನೋ  ಕಷ್ಟ . ಅದು ಮನಸ್ಸಿಗೆ ಹಿಡಿಸದ ವಿಚಾರ.  ಅವರು ತಪ್ಪು ಮಾಡುತ್ತಿದ್ದಾರೆ ಎಂದು ತಿಳಿದ ಬಳಿಕವೂ ಅವರು ನೊಂದು ಕೊಲ್ಲುತ್ತಾರೆ ಅನ್ನುವ ಕಾರಣಕ್ಕೆ ಆ ತಪ್ಪುಗಳನ್ನು ಮನ್ನಿಸಿಬಿಡುವ ಸನ್ನಿವೇಶ ಎಷ್ಟೋ  ಬಾರಿ ಎದುರಾಗುತ್ತದೆ.  ಇಲ್ಲಿ ಈ ಸನ್ನಿವೇಶದಲ್ಲಿ ಇಂಥ ಇಕ್ಕಟ್ಟಿನ ಪರಿಸ್ಥಿತಿಯನ್ನು ಸಂಜಯ ಎದುರಿಸುತ್ತಾನೆ. ದುರ್ಯೋಧನನ ತಪ್ಪುಗಳನ್ನು ಆದಷ್ಟು ತಿದ್ದುವ ಪ್ರಯತ್ನ ಮಾಡುತ್ತಾನೆ  ಅವನಿಂದ  ಕೋಪದ ಪ್ರತಿಕ್ರಿಯೆ ಬಂದ ಬಳಿಕ “ಆರಾಧ್ಯಂ ನ ಪ್ರಕೋಪಯೇತ್” ಅನ್ನುವ ಮಾತನ್ನು  ತನ್ನಂತರ್ಗತದಲ್ಲಿ ಹೇಳುತ್ತಾನೆ.

     ಅದರೆ ಈ ಮಾತು ಮಕ್ಕಳ ಬೆಳವಣಿಗೆಯ ವಿಚಾರದಲ್ಲಿ ನಿಷಿದ್ಧ ಎಂದೇ ಹೇಳಬಹುದು  . ತೀಕ್ಷ್ಣ ಪ್ರತಿಕ್ರಿಯೆಗಳನ್ನು ಕೊಡಬೇಕಾಗುತ್ತದೆ ಅದರಿಂದ ಮಕ್ಕಳ ಕಲಿಕಾ  ಪ್ರಗತಿಯಾಗುತ್ತದೆ. ಇಲ್ಲವಾದರೆ  ಅವರ ಕಲಿಕೆಗೆ ಮಾರಕವಾಗುತ್ತದೆ.  ಇದೊಂದು ಸಂದಿಗ್ಧತೆಯನ್ನು  ಹೇಳುವ ಮಾತಾಗಿದೆ. ಬೈದು ಹೇಳುವವರು  ಬದುಕುವುದಕ್ಕೆ ಎಂಬುದು  ಹಳೆಯ ಮಾತಾದರೂ ಸಾರ್ವಕಾಲಿಕವಾದದ್ದು.

      ‘ಕಯ್ಪೆ ಸೋರೆಯ ಕುಡಿಯೇಂ ಮಿಡಿಯೇಂ’ ಸಂಜಯ ವಚನದಲ್ಲಿ ಬರುವ ಮಾತು  ತಂದೆಯಂತೆ ಮಗ ಕಹಿ ಸೋರೆಯ  ಕುಡಿಯೇನು?  ಕಾಯೇನು ಎಲ್ಲವೂ ಒಂದೇ ರುಚಿಯನ್ನು ಕೊಡುತ್ತದೆ ಇದರಲ್ಲೇನು ವಿಶೇಷ. ಜನ್ಮತಃ ಬಂದ ಕೆಲವು ಗುಣಗಳನ್ನು ಯಾರಿಂದಲೂ  ಬದಲಾಯಿಸಲು ಸಾದ್ಯವಿಲ್ಲ.    ಹುಟ್ಟು ಗುಣ ಎನ್ನುತ್ತಾರಲ್ಲ ಹಾಗೆ  ಗುಣಾವಗುಣಂಗಳು ಹುಟ್ಟನ್ನೇ ಅವಲಂಬಿಸಿರುತ್ತವೆ ಅದರ ಬದಲಾವಣೆ ಕಷ್ಟ ಎನ್ನುವುದು ಇಲ್ಲಿ ವೇದ್ಯವಾಗುತ್ತದೆ.

     ಹುಟ್ಟಿನಿಂದ ಬಂದ ಗುಣಕ್ಕೆ ತದ್ವಿರುದ್ಧ ಗುಣವನ್ನು ಆಶಿಸುವುದು ತಪ್ಪು ಸ್ವಾಭಾವಿಕ ಗುಣಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಇಲ್ಲಿ ದುರ್ಯೋಧನ ಹತಾಶೆಯಿಂದ   ಈ ಮಾತುಗಳನ್ನು ಹೇಳಿರುವಂತಿದೆ.ಎಲ್ಲರೂ ಸಹಾಯಮಾಡುವರೆಂಬ ನಿರೀಕ್ಷೆಯಲ್ಲಿರುತ್ತಾನೆ  ಆದರೆ ಯಾರೊಬ್ಬರೂ ಪೂರಕವಾಗಿ ಸ್ಪಂದಿಸದೆ ಇದ್ದಾಗ  ಇನ್ನು ಯಾರೂ ಸಹಾಯ ಮಾಡಲಾರರು ಅನ್ನುವ ನಿರಾಶೆ ಇಲ್ಲಿರುವುದನ್ನು ನೋಡಬಹುದು.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಹಾಸ್ಮಾಟ್‌ನಲ್ಲಿ ರೊಬೊಟಿಕ್ ಶಸ್ತ್ರಚಿಕಿತ್ಸಾ ಘಟಕ ; ಕೀಲು ಬದಲಾವಣೆ ಈಗ ಮತ್ತಷ್ಟು ಸರಳ , ನಿಖರ

    BENGALURU NOV 28

    ಮೂಳೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಯಲ್ಲಿ ಹೆಸರು ವಾಸಿಯಾಗಿರುವ ಬೆಂಗಳೂರಿನ ಹಾಸ್ಮಾಟ್ ಆಸ್ಪತ್ರೆ ಇಂದು ತನ್ನ ಮ್ಯಾಗ್ರಾಥ್ ರಸ್ತೆಯ ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೊಬೊಟಿಕ್ ಸರ್ಜರಿ ಘಟಕದ ಸೇರ್ಪಡೆಯನ್ನು ಪ್ರಕಟಿಸಿತು. ಈ ಸೇರ್ಪಡೆಯಿಂದ ಈ ಬಗೆಯ ಅತ್ಯಾಧುನಿಕ ಆಟೊಮೇಟೆಡ್ ರೊಬೊಟಿಕ್ ಸಿಸ್ಟಂ ಅಳವಡಿಸಿದ ಕರ್ನಾಟಕದ 2ನೇ ಆಸ್ಪತ್ರೆಯಾಗಿ ಹಾಸ್ಮಾಟ್ ಹೊರಹೊಮ್ಮಿದೆ.

    ಹೊಟ್ಟೆಯ ಮತ್ತು pelvis ಶಸ್ತ್ರಚಿಕಿತ್ಸೆಗಳಲ್ಲಿ ರೊಬೊಟಿಕ್ ತಂತ್ರಜ್ಞಾನದ ಆವಿಷ್ಕಾರದ ನಂತರ, ಕೀಲು ಬದಲಾವಣೆಯಲ್ಲಿ ರೊಬೊಟಿಕ್ ಶಸ್ತ್ರಚಿಕಿತ್ಸೆಯು ತನ್ನ ಅತ್ಯಂತ ನಿಖರತೆ ಮತ್ತು ನಿಷ್ಕೃಷ್ಟತೆಯ ತಂತ್ರಕ್ಕೆ ಅತ್ಯಂತ ಖ್ಯಾತಿ ಪಡೆದಿದೆ. ಈ 3ನೇ ತಲೆಮಾರಿನ CUVIS ರೊಬೊಟಿಕ್ ಘಟಕವು ಕಳೆದ 2ವರ್ಷಗಳಿಂದ ಭಾರತ ಒಳಗೊಂಡು ಅಂತಾರಾಷ್ಟ್ರೀಯವಾಗಿ ಬಳಕೆಯಲ್ಲಿದೆ. ರೊಬೊಟಿಕ್ ಘಟಕವು ಅತ್ಯಂತ ನಿಖರತೆ ನೀಡುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಚೇತರಿಕೆಯೂ ಅತ್ಯಂತ ನೋವು ರಹಿತವಾಗಿರುತ್ತದೆ ಹಾಗೂ ನೀ ಆರ್ಥೊಪ್ಲಾಸ್ಟಿ ಎಂದು ಕರೆಯುವ ಸಾಂಪ್ರದಾಯಿಕ ಮೊಣಕಾಲು ಬದಲಾವಣೆ ಚಿಕಿತ್ಸೆಗಿಂತ ಮೊಣಕಾಲನ್ನು ಈ ಚಿಕಿತ್ಸೆಯ ಮೂಲಕ ಬಗ್ಗಿಸುವುದು ಸುಲಭವಾಗುತ್ತದೆ.

    ಮೊಣಕಾಲಿನ ಮೂಳೆಯ ಮೇಲ್ಮೈಗಳನ್ನು ಹೈ ಡೆನ್ಸಿಟಿ ಪಾಲಿ ಎಥಿಲೀನ್ ಎಂಬ ಬಹಳ ಸದೃಢ ಪ್ಲಾಸ್ಟಿಕ್‌ನಿಂದ ಬದಲಾಯಿಸಲಾಗುತ್ತದೆ, ಅವುಗಳು ಮೊಣಕಾಲಿನ ಮುಚ್ಚಿದ ಮೂಳೆ ಮತ್ತು ಕಾಲಿನ ಮೇಲಿನ ಕೊನೆಯ ಮೂಳೆಯಾಗಿರುತ್ತದೆ, ತೊಡೆಯ ಮೂಳೆಯನ್ನು ವಿಶೇಷವಾದ ಕೋಬಾಲ್ಟ್ ಕ್ರೋಮ್ ಎಂಬ ವಿಶೇಷ ಲೋಹದೊಂದಿಗೆ ಸೇರಿಸಲಾಗುತ್ತದೆ ಅದು ಮ್ಯಾಗ್ನೆಟಿಕ್ ರಹಿತವಾಗಿದ್ದು ಎಂಆರ್‌ಐ ಸುರಕ್ಷಿತವಾಗಿರುತ್ತದೆ.

    ಈ ಮೊಣಕಾಲು ಬದಲಾವಣೆಯನ್ನು ಆರ್ಥೈಟಿಸ್ ಅಥವಾ ಹಳೆಯ ಗಾಯದಿಂದ ಅಥವಾ ವಯಸ್ಸಾಗುವಿಕೆಯಿಂದ ಮೊಣಕಾಲು ಹಾನಿಯುಂಟಾದ, ನಡೆದಾಡುವಾಗ ಅಥವಾ ಮೆಟ್ಟಿಲು ಹತ್ತುವಾಗ ನೋವಿರುವ ಶಸ್ತ್ರಚಿಕಿತ್ಸೆಯ ಹೊರತಾದ ಚಿಕಿತ್ಸೆಯಿಂದ ಯಾವುದೇ ಪ್ರಯೋಜನವಾಗದ ಹಾಗೂ ದೈನಂದಿನ ಚಟುವಟಿಕೆ ಸೀಮಿತವಾದ ರೋಗಿಗಳಿಗೆ ಪರಿಗಣಿಸಬಹುದು.

    ಹಲವು ಬಗೆಯ ಆರ್ಥೈಟಿಸ್ ಮೊಣಕಾಲಿನ ಕೀಲಿಗೆ ಬಾಧಿಸಬಹುದು. ಆಸ್ಟಿಯೊಆರ್ಥೈಟಿಸ್ ಅತ್ಯಂತ ಸಾಮಾನ್ಯ ಡೀಜನರೇಟಿವ್ ಕೀಲು ನೋವಾಗಿದ್ದು ಅದು ಅತಿಯಾದ ತೂಕವಿರುವ ಮಧ್ಯಮ ವಯಸ್ಸಿನ ಜನರಿಗೆ ಕಾಡುತ್ತದೆ ಮತ್ತು ಬಾಗಿದ ಮೊಣಕಾಲು ಉಳ್ಳವರಿಗೆ, 60 ವರ್ಷ ಮೀರಿದವರಿಗೆ, ರ‍್ಹುಮಟಾಯಿಡ್ ಆರ್ಥೈಟಿಸ್ ಉಳ್ಳವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಹಾನಿಯುಂಟು ಮಾಡಬಹುದು. ಹಳೆಯ ಗಾಯದಿಂದ ಉಂಟಾಗುವ ಟ್ರೌಮ್ಯಾಟಿಕ್ ಆರ್ಥೈಟಿಸ್, ಬೀಳುವುದರಿಂದ ಕೀಲು ಹರಿದು ಹೋಗುವುದರಿಂದ ಉಂಟಾಗುವ ಆರ್ಥೈಟಿಸ್ ಮತ್ತು ಮೊಣಕಾಲಿನ ಮೃದ್ವಸ್ಥಿ ಹಾಳಾಗುವುದು ಪ್ರಮುಖ ಕಾರಣಗಳಾಗಿವೆ.

    3ಡಿ ಸಿಟಿ ಸ್ಕ್ಯಾನ್ ಚಿತ್ರಗಳನ್ನು ಶಸ್ತ್ರಚಿಕಿತ್ಸೆಯ ಪೂರ್ವದಲ್ಲಿ ರೊಬೊಟಿಕ್ ಸಿಸ್ಟಂಗೆ ಪೆನ್ ಡ್ರೈವ್ ಮೂಲಕ ನೀಡಲಾಗುತ್ತದೆ. ಇದು ರೋಗಿಯ ಮೊಣಕಾಲಿನ ಕುರಿತು ವಿವರವಾದ ರಿಯಲ್ ಟೈಮ್ ಅಂಗರಚನೆಯನ್ನು ನೀಡುತ್ತದೆ ರೊಬೊಟಿಕ್ ಘಟಕದ ಈ “ಕಣ್ಣುಗಳು” ಮೊಣಕಾಲಿನ ಮೇಲಿದ್ದು ಸತತವಾಗಿ ಶಸ್ತ್ರಚಿಕಿತ್ಸಾ ತಜ್ಞರಿಗೆ ನೆರವಾಗುತ್ತವೆ, ಇದರಿಂದ ಅತ್ಯಂತ ನಿಖರ ಬದಲಾವಣೆ ಶಸ್ತ್ರಚಿಕಿತ್ಸೆ ಸಾಧ್ಯವಾಗುತ್ತದೆ. ಇದು ನಿಮ್ಮ ಮೊಣಕಾಲಿನ ಕುರಿತಾದ ಜಿಪಿಎಸ್ ರೀತಿಯ ಡಿವೈಸ್ ಮೂಲಕ ನಿಖರ ಮಾಹಿತಿಯ ಮೇಲೆ ಆಧಾರಪಡುತ್ತದೆ, ಅದು ರೊಬೊಟಿಕ್ಸ್ ಅಸಿಸ್ಟೆಡ್ ಹ್ಯಾಂಡ್ ಹೆಲ್ಡ್ ಡಿವೈಸ್‌ಗೆ ನಿಮ್ಮ ಮೊಣಕಾಲಿನ ಕುರಿತು ನಿಖರ ಮಾಹಿತಿ ಸಂವಹನ ನಡೆಸುತ್ತದೆ.

    ಶಸ್ತ್ರಚಿಕಿತ್ಸೆಯ ಮುನ್ನವೇ ರೋಗಿಯ ಮೊಣಕಾಲಿನ ಮಾಹಿತಿ ಪಡೆಯುವುದರಿಂದ ಶಸ್ತ್ರಚಿಕಿತ್ಸಾ ತಜ್ಞರು ರೊಬೊಟಿಕ್ಸ್-ಅಸಿಸ್ಟೆಡ್ ಹ್ಯಾಂಡ್ ಡಿವೈಸ್‌ಗೆ ವಿಶೇಷ ಡೇಟಾ ಪಡೆಯುವ ಮೂಲಕ ನಿಮ್ಮ ಮೊಣಕಾಲಿನ ಹಾನಿಯಾದ ಭಾಗ ರಿಪೇರಿ ಮಾಡಲು, ನಿಮ್ಮ ಕೀಲು ಸಮಗೊಳಿಸಲು ಮತ್ತು ಅಳವಡಿಕೆಯನ್ನು ನಿಖರವಾಗಿ ಸೇರಿಸಲು, ಕಾಲುಗಳನ್ನು ಬಾಗಿಸಲು ಮತ್ತು ಬದಿಗೆ ಬಾಗಿದ ಮೊಣಕಾಲುಗಳನ್ನು ನೇರ ಮಾಡಲು ಸಾಧ್ಯವಾಗುತ್ತದೆ.

    ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆಯ ಗುರಿ ನಡೆದಾಡುವ ನೋವು ನಿವಾರಿಸುವುದು ಮತ್ತು ರೋಗಿಯನ್ನು ಹೆಚ್ಚು ಸಕ್ರಿಯವಾಗಿ, ಸುಲಭವಾಗಿ ೨ ಮಹಡಿಗಳನ್ನು ಹತ್ತುವಂತೆ ಮಾಡುವುದು. ರೋಗಿಯು ಅಡುಗೆ ಮಾಡಲು ಒಂದು ಗಂಟೆ ನಿಲ್ಲುವುದು ಮತ್ತು ಕಛೇರಿಗೆ ಹೋಗುವುದನ್ನು ಸಾಧ್ಯವಾಗಿಸುವುದು. ಅತ್ಯಾಧುನಿಕ ಅಮೆರಿಕನ್ ಇಂಪ್ಲಾಂಟ್ಸ್ ಆದ ಮೆರಿಲ್ ಗೋಲ್ಡ್ ಮೂಲಕ ರೋಗಿಯು ಕೆಲ ತಿಂಗಳ ನಂತರ ನೆಲದ ಮೇಲೆ ಕಾಲು ಮಡಚಿ ಹಾಕಿ ಕುಳಿತುಕೊಳ್ಳಬಹುದು ಮತ್ತು ಬದಲಾವಣೆಯ ನಂತರ ದೀರ್ಘ ಜೀವನವಿರುತ್ತದೆ.

    ಈ ಹೊಸ ಆವಿಷ್ಕಾರದ ಕುರಿತು ಆರ್ಥೊಪಿಡಿಕ್ಸ್ ಅಂಡ್ ಆರ್ಥೊಪ್ಲಾಸ್ಟಿಯ ಮುಖ್ಯಸ್ಥ ಹಾಗೂ ಇಂಥ ಚಿಕಿತ್ಸೆಯಲ್ಲಿ 35 ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಡಾ.ಥಾಮಸ್ ಚಾಂಡಿ, ಉತ್ಸಾಹ ವ್ಯಕ್ತಪಡಿಸಿದ್ದಾರೆ. ಅತ್ಯಂತ ನಿಖರತೆ ಮತ್ತು ನಿಷ್ಕೃಷ್ಟತೆ ಟ್ರಿಮ್ ಮಾಡುವಾಗ ಮೊಣಕಾಲಿನ ಕೀಲಿನ ಮೂರು ಮೂಳೆಗಳ ಮೇಲ್ಮೈನ ಮೂಳೆ ನಷ್ಟ ಕಡಿಮೆ ಮಾಡುತ್ತದೆ ಎನ್ನುತ್ತಾರೆ. ಅವರು ಮರುದಿನವೇ ಕಡಿಮೆ ನೋವಿನೊಂದಿಗೆ ನಡೆದಾಡಬಹುದು ಮತ್ತು ವೇಗವಾಗಿ ಮೊಣಕಾಲು ಬಾಗಿಸಬಹುದು ಎನ್ನುವ ಸಾಮರ್ಥ್ಯ ಕುರಿತು ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ.

    error: Content is protected !!