26.8 C
Karnataka
Wednesday, May 20, 2026
    Home Blog Page 5

    ಅಡ್ಡ ದಾರಿಯ ಫಲ  ನೆಮ್ಮದಿ ತರುವುದಿಲ್ಲ


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ಎನ್ನೆವರಂ ಜೀವಿಸುವುದು ಅನ್ನೆವರಂ  ಸುಖಂಬಡೆವುದು– ದುರ್ಗಸಿಂಹನ ‘ಪಂಚತಂತ್ರ’ದಲ್ಲಿ ಬರುವ   ಸಾರ್ವಕಾಲಿಕ ತಾತ್ವಿಕ ಮಾತಿದು. ಜೀವಿಸುವುದಕ್ಕೆ ಬಂದಿರುವ  ಈ ಶರೀರ  ಸಂತಸದಿಂದ ಜೀವಿಸಬೇಕು ಅದನ್ನು ಹೊರತು ಪಡಿಸಿ  ನಮಗೆ ನಾವೆ ಸಂಚನೆಯ ಹೊದರಲ್ಲಿ ಸಿಲುಕಬಾರದು ಎನ್ನುವುದನ್ನು ಈ ಮಾತು ಶೃತಪಡಿಸುತ್ತದೆ.

    ವೃಥಾ ಅನ್ಯಪೀಡಕರಾಗದೆ,ವಂಚಕರಾಗದೆ,ಲೋಭಿಗಳಾಗದೆ ತಮ್ಮ  ಆಯವನ್ನು ನೋಡಿಕೊಂಡು ದಾನ-ಧರ್ಮಗಳನ್ನೂ  ಮಾಡುತ್ತಾ ಕುಟುಂಬದವರೊಂದಿಗೆ ಒಲುಮೆಯಿಂದ ಬಾಳಬೇಕು. ಮನುಷ್ಯ  ಬರಬರುತ್ತಾ ಲೌಖಿಕ ವ್ಯಾಮೋಹಗಳಿಗೆ ಅತೀ ಮಾರುಗೋಗಿ  ಆ ಮಾಯಾಜಿಂಕೆಯನ್ನೆ ಬೆನ್ನಟ್ಟುತ್ತಿದ್ದಾನೆ  ಹಾಗೆ ಬೆನ್ನಟ್ಟುವಾಗ ಅದನ್ನು ಪಡೆದೇ ತೀರುವೆ ಎಂಬ  ಹಠದಿಂದ  ಅಡ್ಡದಾರಿಗಳನ್ನೂ ಕ್ರಮಿಸಬೇಕಾಗುತ್ತದೆ.  ‘ಹಾಲು ಕುಡಿದ ಮಕ್ಕಳೆ ಬದುಕವು ವಿಷ ಕುಡಿದವು ಬದುಕುತ್ತವೆಯೇ?’ ಎಂಬ ಮಾತಿನಂತೆ   ಅಡ್ಡ ದಾರಿಯ ಫಲ  ನೆಮ್ಮದಿ ತರುವುದಿಲ್ಲ. 

    ಎಲ್ಲರಂತೆ  ಬದುಕಬೇಕು ಎಂಬುದು ಸರಿ ಆದರೆ ಎಲ್ಲರಂತೆ ನಾನೂ  ಎನ್ನುವ ಹೋಲಿಕೆ ಉದ್ಧಟತನದ್ದು .  ನಮ್ಮ ಅಭಿರುಚಿಗೆ ತಕ್ಕಂತೆ  ನಾವು ಬದುಕಬೇಕಾಗುತ್ತದೆ. ಹೊರಲಾರದ ಹೊರೆಯನ್ನು  ಒಮ್ಮೆಗೆ  ಹೊತ್ತು ಸೋತು ಶಾಂತಿಯನ್ನು ಕಳೆದುಕೊಳ್ಳುವುದರ ಬದಲು ಅದನ್ನೆ ನಿಧಾನವಾಗಿ ಹೊರಬಹುದು, ಇಲ್ಲವೆ ನಮಗಾಗುವಷ್ಟನ್ನು ಹೊರಬಹುದು ಆಗ ಬಾಧೆಗಳು ಬಾಧಿಸವು . 

    ಆಧುನಿಕ ಸೌಲಭ್ಯಗಳೆಲ್ಲಾ ನಮ್ಮೆಟುಕಿನಲ್ಲಿಯೇ ಇರಬೇಕು ಎಂದು ಬಯಸುವ ಬದಲು ಪ್ರೀತಿ, ಕರುಣೆ,ದಯೆ,ಅನುಕಂಪ, ಶಾಂತಿ,ಕ್ಷಮೆ  ಮೊದಲಾದವುಗಳ ಸಂಗಡ ಬದುಕಬೇಕು.   ಕನಿಷ್ಟ ಜೀವಿತದ ಅವಧಿ ನಮಗೆ ಇರುವುದು   ಒಂದಲ್ಲ  ಒಂದು ದಿನ ನಿರ್ಗಮಿಸಬೇಕು ಖಂಡಿತಾ ಎಂದು ತಿಳಿದೂ ಮೈಮೇಲೆ ಸಂಕಟಗಳನ್ನು ಎಳೆದುಕೊಳ್ಳುವುದು ಮೂರ್ಖತನ.

      ಇರುವುದನ್ನೆ  ಸಂತೋಷದಿಂದ  ಅನುಭವಿಸುತ್ತಾ  ಸುಖಪಡುವುದು ಜಾಣತನ ಅಲ್ಲದೆ ನಾವು ಈ  ಬದುಕಿನ ರೀತಿಗೆ ಕೊಡುವ ಗೌರವ .  ನಮಗೆ ಎಲ್ಲಿವರೆಗೆ ಬದುಕಲು ಅವಕಾಶವಿರುತ್ತದೆಯೋ ಅಲ್ಲಿಯವರೆಗೂ ಏನೇ ಬಂದರೂ ಚಿತ್ತಸಮಾಧಾನದಿಂದ ಸ್ವೀಕರಿಸಬೇಕು ಅದರಲ್ಲೆ ಸುಖಿಸಬೇಕು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಇಂದಿನ ಮಹಿಳೆಯರ ಬದುಕಿಗೂ ಆದರ್ಶಪ್ರಾಯ

    ರತ್ನಾ ಶ್ರೀನಿವಾಸ

    ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರೀ.ಈಕೆಯನ್ನು ಶರಣ ಚಳವಳಿಯ ಪ್ರಮುಖರಾಗಿ,ಸ್ವಾಭಿಮಾನದ ಪ್ರತೀಕವಾಗಿ,ಸ್ತ್ರೀ ವಾದಿ ಚಳುವಳಿಯ ಪ್ರತಿಪಾದಕಿಯಾಗಿ ಅಕ್ಕರೆಯ ಅಕ್ಕನಾಗಿ ಗುರುತಿಸಬಹುದು.

    ಕನ್ನಡ ಸಾಹಿತ್ಯದಮೊದಲ ಬಂಡಾಯ ಕವಿಯತ್ರೀ ಮತ್ತು ವಚನಗಾರ್ತಿ ಮಹಿಳೆಯ ಪ್ರತಿನಿಧಿಯಾಗಿ ಅಭಿವ್ಯಕ್ತಿಯಲ್ಲಿ ಪುರುಷ ಸಮಾಜವನ್ನು ಪ್ರತಿಭಟಿಸಿದವರು.ಸಾಮಾಜಿಕ ಬದಲಾವನೆಗಾಗಿ ಶ್ರಮಿಸಿದರು.

    ತಂದೆ ನಿರ್ಮಲ ಶೆಟ್ಟಿ ತಾಯಿ ಸುಮತಿಯ ಮಗಳಾಗಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಚೈತ್ರ ಮಾಸದ ಹುಣ್ಣಿಮೆಯಂದು ಜನಿಸಿದರು.ಈ ಹುಣ್ಣಿ ಮೆಯನ್ನು ಧವನ ಹುಣ್ಣಿಮೆ ಎಂದು ಕರೆಯಲಾಗಿದೆ.

    ಅಕ್ಕ ಪರಮ ವೈರಾಗ್ಯ ಮೂರುತಿಯಾಕೆ.ಲೌಕಿಕ ಪ್ರಪಂಚದ ಲೋಲುಪತೆಗಳನ್ನೆಲ್ಲಾ ಲುಪ್ತವಾಗಿಸಿ ನಿರ್ಲಿಪ್ತವಾಗಿ ನಡೆದು ಹೋದಾಕೆ.ಭೌತಿಕವಾದುದೆಲ್ಲವನ್ನು ತ್ಯಜಿಸಿ,ಬಟ್ಟೆ ಬರೆ ವರ್ಜಿಸಿ,ಕೇಶವನ್ನೇ ಉಡುಪು ಮಾದಿಕೊಂಡಾಕೆ.ಭವಿತನವನ್ನು ತೊರೆದು ಅನುಭಾವಿತನವನ್ನು ಮೆರೆದು ಶರಣ ಚಳವಳಿಯ ಮಂಚೂಣಿಯಲ್ಲಿ ಕಲ್ಯಾ ಣ ಕ್ರಾಂತಿಯನ್ನು ನಡೆಸಿದಾಕೆ.

    ಅಲ್ಲಮಪ್ರಭು, ಬಸವಣ್ಣ, ಚನ್ನಬಸವ ಣ್ಣ ಅಂಥವರ ಶರಣ ಶ್ರೇಷ್ಠರ ಸಮಕಾಲೀನಳಾಗಿ ಅವರುಗಳ ಸಮಕ್ಕೆ ನಿಂತು ಶ್ರೇಷ್ಠ ವಚನಗಳ ನ್ನು ರಚಿಸಿದ ಕನ್ನಡದ ಪ್ರಥಮ ಕವಿಯತ್ರೀ ಅಕ್ಕಮಹಾದೇವಿ. ಶಿವನನ್ನೇ ಪತಿಯೆಂದು ಪರಿಭಾವಿಸಿ ಚೆನ್ನ ಮಲ್ಲಿಕಾರ್ಜುನನನ್ನೆ ವರಿಸಿದಾಕೆ..ಚೆನ್ನಮಲ್ಲಿಕಾರ್ಜುನ ಅಂಕಿತ ನಾಮದಲ್ಲಿ ವಚನಗಳನ್ನ ರಚಿಸಿದರು.
    ಶರಣ ಚಳವಳಿಯಲ್ಲಿಎತ್ತರದ ಚೇತನವಾಗಿ ಮೂಡಿಬಂದ ವ್ಯಕ್ತಿತ್ವ ಅಕ್ಕಮಹಾದೇವಿಯದು.

    ಅವರ ಇಡೀ ಜೀವನ ಕಥನ,ಐತಿಹ್ಯ,ವಿಸ್ಮಯ,ಪ್ರಭಾವಗಳಿಂದ ತುಂಬಿವೆ. ಹರಿಹರ ಮಹಾಕವಿ ರಚಿಸಿರುವ ಮಹಾದೆಯಕ್ಕನ ರಗಳೆ,ಸ್ವತಃ ಅಕ್ಕನೇ ರಚಿಸಿರುವ ವಚನಗಳು ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಮಹತ್ತರ ಪಾತ್ರವನ್ನುವಹಿಸುತ್ತವೆ.
    ಅಕ್ಕನ ವಚನಗಳು ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಾಗಿವೆ.ವಚನಕಾರರಲ್ಲಿ ಕಿರಿಯರಾಗಿದ್ದರೂ ವಿಶಿಷ್ಟ ಜೀವನಾನುಭವವನ್ನು ಹೊಂದಿರುವ ಕಾರಣದಿಂದಾಗಿ ಅವರ ವಚನಗಳು ಗಮನಾರ್ಹವಾಗಿವೆ.

    ಸಮಾಜದಲ್ಲಿಪುರುಷರಷ್ಟೇ ಸರಿಸಮಾನ ಸ್ಥಾನ ಮಾನ ಮಹಿಳೆಯಾರಿಗೂ ಕಲ್ಪಿಸಬೇಕೆಂದು 12 ನೇ ಶತಮಾನದಲ್ಲಿಯೆ ಹೋರಾಟ ಮಾಡಿದ ಅಕ್ಕಮಹಾದೇವಿ ಇಂದಿನ ಮಹಿಳೆಯರ ಬದುಕಿಗೆ ಆದರ್ಶಪ್ರಾಯ.ಅಂದು ಸಮಾಜದಲ್ಲಿ ಇದ್ದಂತಹ ಅಂಕುಡೊಂಕುಗ ಳನ್ನು ತಿದ್ದಿ ಸಾಮರಸ್ಯ ಮೂಡಿಸಲು ಶ್ರಮಿಸಿದ ಅಕ್ಕ ಮಹಾದೇ ವಿಯ ಹೆಸರುಇತಿಹಾಸದ ಪುಟದಲ್ಲಿ ಉಳಿದುಕೊಂಡಿ ದ್ದು,ಅವರ ಆದ್ರಶಗ ಳು ಇಂದಿನ ಮಹಿಳೆಯರಿಗೆ ದಾರಿದೀಪವಾಗಿದೆ.

    ” ಯೋಗಾಂಗ ತ್ರೀವಿಧಿ” ಅಕ್ಕನ ಪ್ರಮುಖ ಕೃತಿ.ಇದು 67 ತ್ರಿಪದಿ ಗಳಲ್ಲಿ ರಚಿತ ವಾಗಿದೆ.ಈಕೆ ಶಿವಭಕ್ತೆ.ಕೈ ಹಿಡಿದ ಗಂಡ ಅದರಲ್ಲೂ ರಾಜನಾಗಿದ್ದವನನ್ನು ತಿರಸ್ಕರಿಸಿ, ಸಾಂಪ್ರದಾಯಿಕ ಸಮಾಜದ ವಿವಾಹದ ನಿಯಮಗಳನ್ನು ಗಾಳಿಗೆ ತೂರಿ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿ ಗೆ ದೊರೆತಿದ್ದ ಕೀಳರಿಮೆ ಸ್ಥಾನ ವನ್ನುಪ್ರತಿಭ ಟಿ ಸಿಯಶಸ್ವಿಯಾದದ್ದು ಒಂದು ದೊಡ್ಡ ಸಾಧನೆಯೇ.

    ಅಕ್ಕನ ಕಾವ್ಯದ ಗುಣಗಳು ಒಂದು ವೇದನೆ ಇನ್ನೊದು ನಿವೇದನೆ

    ತಿ.ನಂ.ಶ್ರೀ. ಅವರು ಹೇಳಿರುವಂತೆ ಅಕ್ಕನ “ವಚನಗಳ ಬಹುಭಾಗ ನಿಜವಾಗಿಯೂ ರಸಾರ್ದ್ರ ವಾದದ್ದು, ಉಪಮಾನಗಳಿಂದ ಚಿತ್ರ ಕಲ್ಪನೆಗಳಿಂದ ಮನೊಹರವಾಗಿರತಕ್ಕದ್ದು.ಆಕೆಯದು ಕವಿ ಹೃದಯಕವಿಯ ಕಣ್ಣು ಎಂಬುದನ್ನು ಸಾರತಕ್ಕದ್ದು” ಎಂಬ ಮಾತು ನಿಜಕ್ಕೂ ಪ್ರಶಂ ಸ ನೀಯವಾದುದು.
    ಶೂನ್ಯ ಸಂಪಾದನೆಕಾರರು ಮಹಾದೇವಿ ಅಕ್ಕನ ಸಂಪಾದನೆ ಎಂಬ ಒಂದು ಅಧ್ಯಾಯವನ್ನೆ ರಚಿಸಿ ಅವರ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.ಹರಿಹರ ಕವಿಯ ಮಹಾದೆವಿಯಕ್ಕನ ರಗಳೆ, ಎಚ್.ತಿಪ್ಪೇರುದ್ರಸ್ವಾಮಿ ಅವರ ಕದಳಿಯಾ ಕರ್ಪೂರ ಅಕ್ಕನವರ ವ್ಯಕ್ತಿತ್ತ್ವ ವನ್ನು ಕಟ್ಟಿ ಕೊಡುವ ಸಮರ್ಥ ಬರಹಗಳಾಗಿವೆ.
    ವಚನ ಸಾಹಿತ್ಯಾಕಾಶದ ಉಜ್ವಲ ನಕ್ಷತ್ರ ವಾಗಿ,ಆದರ್ಶ ಮಹಿಳೆ ಯಾಗಿ ಕಂಡು ಬರುವ ಅಕ್ಕನ ವಚನಗಳು ಕನ್ನಡದ ಸ್ತ್ರೀ ಸಂ ವೇದ ನಾ ಅಭಿವ್ಯಕ್ತಿಯ ಮೊದಲ ದಾಖಲೆ ಗಳಾಗಿ ಅಚ್ಚರಿಯನ್ನು ಉಂಟುಮಾಡಿವೆ.

    ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.


    ಯುವಜನಾಂಗ, ಸಾಮಾಜಿಕ ಜಾಲತಾಣಗಳು ಮತ್ತು ನೈತಿಕತೆ

    ಸ್ವಾಮಿ ವಿವೇಕಾನಂದರು ಪ್ರಪಂಚ ಕಂಡ, ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ಆಧ್ಯಾತ್ಮಿಕ ಚಿಂತಕರು, ಭೋದಕರು, ತತ್ವಜ್ಞಾನಿಗಳು ಮತ್ತು ಯುವಕರಿಗೆ ಸ್ಪೂರ್ತಿದಾಯಕ ವ್ಯಕ್ತಿತ್ವವನ್ನು ಹೊಂದಿದ್ದ ದೇಶಭಕ್ತ ಮತ್ತು ಸಂತ. ವಿವೇಕಾನಂದರಿಗೆ ಯುವಜನಾಂಗದ ಮೇಲೆ ಅಪಾರವಾದ ವಿಶ್ವಾಸ. ಅವರ ಪ್ರಕಾರ, ಯುವ ಜನಾಂಗದ ಪ್ರಮುಖ ಲಕ್ಷಣ ಆಶಾಭಾವ. ವಿವೇಕಾನಂದರ ಮಾತಿನಲ್ಲೇ ಹೇಳುವುದಾದರೆ- “ಯುವ ಮತ್ತು ಆಧುನಿಕ ಜನಾಂಗದಲ್ಲಿದೆ ನನ್ನ ವಿಶ್ವಾಸ. ನನ್ನ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವರು ಯುವ ಮತ್ತು ಆಧುನಿಕ ಯುವಕ/ಯುವತಿಯರು. ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾಳಜಿವಹಿಸಿ, ಸಿಂಹದಂತೆ ಧೈರ್ಯದಿಂದ ಮುನ್ನುಗ್ಗುತ್ತಾರೆ.” ಉಜ್ವಲ ಭವಿಷ್ಯದ ಭಾರತದ ಸ್ಪಷ್ಟ ಕಲ್ಪನೆ ವಿವೇಕಾನಂದರಿಗಿತ್ತು. ಅವರಲ್ಲಿದ್ದ ಶಕ್ತಿ, ಉತ್ಸಾಹ, ಪ್ರಗತಿಪರ ಚಿಂತನೆಗಳನ್ನು ಮನನ ಮಾಡಿ, ಉಪಯೋಗಿಸಿಕೊಂಡು ಭವ್ಯ ಭಾರತವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ.

    ಮಹಾತ್ಮ ಗಾಂಧೀಜಿಯವರು, ಯುವಕರನ್ನು ಕುರಿತು ಹೀಗೆ ಹೇಳಿದ್ದಾರೆ, “ಯುವಕ/ಯುವತಿಯರು ಸಾಮಾಜಿಕ ಬದಲಾವಣೆಗಳನ್ನು ತರಬಲ್ಲ ಸಾಧನಗಳಿದ್ದ ಹಾಗೆ ( Youth are the instruments of social change )”. ಮಹಾತ್ಮ ಗಾಂಧೀಜಿಯವರು ಸತ್ಯ, ಅಹಿಂಸೆ, ಸರಳತೆ, ಸಹಿಷ್ಣುತೆ, ದಯೆ ಮತ್ತು ಸರ್ವೋದಯಕ್ಕೆ ಹೆಚ್ಚು ಒತ್ತು ಕೊಟ್ಟವರು ಹಾಗೂ ಯುವಜನಾಂಗ ಈ ಗುಣಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಹಾಸು ಹೊಕ್ಕಾಗಬೇಕೆಂದು ಬಯಸಿದವರು. ಭಾರತ ದೇಶದ ಸಾಮಾಜಿಕ ಸುಧಾರಕರು, ತತ್ವಜ್ಞಾನಿಗಳು ನೀಡಿದಂತ ಕರೆಗಳು ಭೌಗೋಳಿಕ ಮತ್ತು ಸಾಮಾಜಿಕ ಕಟ್ಟಳೆಗಳನ್ನು ಮೀರಿ, ಎಂದೆಂದಿಗೂ ಪ್ರಸ್ತುತ ಎಂದು ಹೇಳಬಹುದಾಗಿದೆ.

    ಆದರೆ, ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ, ಸಮಾಜದಲ್ಲಿ ನೈತಿಕತೆ ಅಧೋಗತಿಗೆ ಜಾರಿ, ಭಯಂಕರವಾದ ವಾತಾವರಣ ಸೃಷ್ಟಿಯಾಗಿದೆ. ಇದು ನಿಜವಾಗಿಯೂ ದುರದುಷ್ಟಕರ ಸಂಗತಿ. ಈ ಸಮಸ್ಯೆಗೆ ಪರಿಹಾರ ಸೂಚಿಸುವುದಾದರೆ, ಯುವ ಶಕ್ತಿಯಲ್ಲಿ ಹೆಚ್ಚಿನ ವಿಶ್ವಾಸವಿಟ್ಟು ಯುವ ಶಕ್ತಿಯ ಸದುಪಯೋಗಕ್ಕೆ ಸೂಕ್ತ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇತ್ತೀಚಿಗೆ ನಡೆಸಿದ ಸಮೀಕ್ಷೆಗಳ ಪ್ರಕಾರ, ಮುಂದಿನ ಹತ್ತು ವರ್ಷಗಳಲ್ಲಿ ನಮ್ಮ ದೇಶ ಪ್ರಪಂಚದಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಯುವ ಜನಾಂಗವಿರುವ ದೇಶ ಎಂಬ ಹೆಗ್ಗಳಿಕೆಯನ್ನು ಪಡೆಯಲಿದೆ. ಆದ್ದರಿಂದ ಯುವ ಶಕ್ತಿಯನ್ನು ರಾಷ್ಟ್ರವನ್ನು ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳ ಬೇಕಾಗಿರುತ್ತದೆ.

    ಆದರೆ ಇತ್ತೀಚಿನ ದಿನಗಳಲ್ಲಿ ಕಂಡು ಬರುವ ಅಂಶವೆಂದರೆ, ಯುವ ಜನಾಂಗ ಫೇಸ್ ಬುಕ್ಕ್, ಇನ್ಸ್ಟಗ್ರಾಮ್, ಟ್ವಿಟರ್ ಮುಂತಾದ ಜಾಲತಾಣಗಳಲ್ಲಿ ತಲ್ಲೀನರಾಗಿ, ಬೇರೆ ರಚನಾತ್ಮಕ ಅಂಶಗಳ ಕಡೆಗೆ ಗಮನಕೊಡುತ್ತಿಲ್ಲ. ಜಾಲತಾಣಗಳು ಯುವಜನಾಂಗದ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರುತ್ತಿವೆ. ಸಾಮಾಜಿಕ ಜಾಲತಾಣಗಳು ಯುವ ಜನಾಂಗದ ಜೀವನದ ಅವಿಭಾಜ್ಯ ಅಂಗವಾಗಿವೆ ಎಂದರೆ ತಪ್ಪಾಗಲಾರದು. ಶೇಕಡಾ 33ರಷ್ಟು ಯುವಕರು ಮತ್ತು ಯುವತಿಯರು, ದಿನನಿತ್ಯ ಎರಡರಿಂದ ಮೂರು ಗಂಟೆಗಳ ಕಾಲ ಜಾಲತಾಣಗಳಲ್ಲಿ ಅನವಶ್ಯಕವಾದ ಹಾಗೂ ಅಶ್ಲೀಲ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ನೋಡುತ್ತಾ ಕಾಲ ಕಳೆಯುತ್ತಾರೆ ಎಂಬ ಆತಂಕಕಾರಿ ಸಂಗತಿಯನ್ನು ಇತ್ತೀಚೆಗೆ ನಡೆಸಿದ ಸಮೀಕ್ಷೆ ಬಹಿರಂಗ ಪಡಿಸಿದೆ. ಇನ್ನೂ ಕೆಲವರು ಬೆಳಗಿನಿಂದ, ರಾತ್ರಿಯವರೆವಿಗೂ ಜಾಲತಾಣಗಳಲ್ಲಿ ಮಗ್ನರಾಗಿರುತ್ತಾರೆ. ದುರದುಷ್ಟಕರ ವಿಷಯವೆಂದರೆ ಜಾಲತಾಣಗಳಲ್ಲಿ ಅನವಶ್ಯಕವಾದ, ಪ್ರಚೋದನಕಾರಿ, ಅಪಾಯಕಾರಿ, ಅಶ್ಲೀಲವಾದ ವಿಷಯಗಳನ್ನು ಭಿತ್ತರಿಸಲಾಗುತ್ತಿದೆ. ಇವುಗಳಿಂದ ಆಕರ್ಷಣೆಗೊಂಡ ಯುವಕ, ಯುವತಿಯರು ವಿದ್ಯಾಭ್ಯಾಸ, ವೃತ್ತಿ ಜೀವನದ ಧ್ಯೇಯಗಳನ್ನು ಮರೆತು ಕೆಟ್ಟ ಹವ್ಯಾಸಗಳಿಗೆ ಗುಲಾಮರಾಗಿರುವ ಉದಾಹರಣೆಗಳು ಹಲವಾರು.

    ಪೋಷಕರ ಮತ್ತು ಮಕ್ಕಳ ನಡುವೆ ಜಗಳಗಳು ಉಂಟಾಗಿ ಮನೆಗಳ ವಾತಾವರಣ ಕೆಟ್ಟಿರುವ ಉದಾಹರಣೆಗಳಿವೆ. ಕೆಲವೊಂದು ಸಂದರ್ಭಗಳಲ್ಲಿ ಆತ್ಮಹತ್ಯೆ, ಸಾವುಗಳು ಸಹ ಉಂಟಾಗಿವೆ. ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುವುದಾದರೂ ಏನು, ಹೇಗೆ ಸಮಯ ಕಳೆಯುತ್ತಿದ್ದಾರೆ ಎಂಬ ಅಂಶಗಳ ಬಗ್ಗೆ ಪೋಷಕರಿಗೆ ಮಾಹಿತಿಯಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಚಾಲ್ತಿಯಲ್ಲಿರುವ ವಿಭಕ್ತ ಕುಟುಂಬಗಳಲ್ಲಿ ಈ ಸಮಸ್ಯೆ ಹೆಚ್ಚು. ಹಿಂದಿನ ಪೀಳಿಗೆಯಲ್ಲಿ, ಒಂದು ಸಂಸಾರದಲ್ಲಿ, ಸಾಮಾನ್ಯವಾಗಿ ಐದಾರು ಮಕ್ಕಳಿರುತ್ತಿದ್ದರು. ಮಕ್ಕಳಿಗೆ ಪ್ರತ್ಯೇಕ ಕೋಣೆಗಳಿರಲಿಲ್ಲ. ಎಲ್ಲರೂ ಒಟ್ಟಿಗೆ, ದೊಡ್ಡ ಹಾಲ್ ನಲ್ಲಿ ಓದುತ್ತಿದ್ದರು ಮತ್ತು ಮಲಗುತ್ತಿದ್ದರು. ಆದರೆ ಈಗಿನ ವಿಭಕ್ತ ಕುಟುಂಬಗಳಲ್ಲಿ ಒಂದು ಅಥವಾ ಎರಡು ಮಕ್ಕಳಿದ್ದು, ಮಕ್ಕಳಿಗೆ ಪ್ರತ್ಯೇಕ ಕೋಣೆಗಳಿರುತ್ತವೆ. ಹಾಗಾಗಿ, ಕೊಠಡಿಯಲ್ಲಿ ಬಾಗಿಲು ಮುಚ್ಚಿಕೊಂಡು, ಮಕ್ಕಳು ಏನು ಮಾಡುತ್ತಿದ್ದಾರೆ ಎಂಬ ಅಂಶದ ಬಗ್ಗೆ ಪೋಷಕರಿಗೆ ಅರಿವು ಇರುವುದಿಲ್ಲ. ಕೆಲವರು ಮಧ್ಯ ರಾತ್ರಿಯವರೆವಿಗೂ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗಿರುತ್ತಾರೆ. ಹೀಗೆ ನಿದ್ದೆ ಕೆಡುವುದರಿಂದ ಆರೋಗ್ಯಕ್ಕೂ ಹಾನಿಯಾಗಿ, ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಕಾಲೇಜು ಅಥವಾ ಶಾಲೆಗಳ ತರಗತಿಗಳಲ್ಲಿ ತೂಕಡಿಸುತ್ತಾ, ಪಾಠ, ಪ್ರವಚನಗಳು ಅರ್ಥವಾಗದೆ ವಿದ್ಯಾಭ್ಯಾಸ ಕುಂಠಿತವಾಗುತ್ತಿದೆ.

    ನಮ್ಮ ಭಾರತೀಯ ಸಂಸ್ಕೃತಿಯೂ ಸಹ ಯುವಕರಲ್ಲಿ ಕಾಣೆಯಾಗುತ್ತಿದೆ. ಈಗಿನ ವಿದ್ಯಾರ್ಥಿ/ ನಿಯರಲ್ಲಿ ಗುರು ಹಿರಿಯರಿಗೆ, ತಂದೆ ತಾಯಿಗಳಿಗೆ ಗೌರವ ಸೂಚಿಸ ಬೇಕೆಂಬ ಪರಿಪಾಠವು ಇರುವುದಿಲ್ಲ. ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ, ಶಿಕ್ಷಕರು ಜಾಲತಾಣಗಳಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ ಬುದ್ಧಿವಾದ ಹೇಳುತ್ತಿದ್ದರೂ ಸಹ ಸರಿಯಾಗಿ ಫಲಕಾರಿಯಾಗುತ್ತಿಲ್ಲ. ಮಕ್ಕಳನ್ನು ನಿಯಂತ್ರಿಸಲು ಸಾಧ್ಯವಾಗದೆ, ಪೋಷಕರು ವಿಫಲವಾಗಿರುವ ಸಂದರ್ಭಗಳಿವೆ. ಇತ್ತೀಚಿನ ದಿನಗಳಲ್ಲಿ ಬದಲಾಗಿರುವ ಮತ್ತು ಬದಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆಯೂ ಸಹ ಕಾರಣ. ಉದಾಹರಣಗೆ ಹೇಳುವುದಾದರೆ, ಪೋಷಕರ ಪ್ರೀತಿಯ ಕೊರತೆ, ಏಕ ಪೋಷಕ ಸಂಸಾರಗಳು ( Single parent ), ಏಕ ಪುತ್ರ/ ಪುತ್ರಿ, ಅತೀವ ಮುದ್ದು ಮಾಡುವಿಕೆ, ಮಕ್ಕಳಿಗೆ ನೀಡಿರುವ ಸ್ವಾತಂತ್ರ್ಯ ಇವೆಲ್ಲವೂ ಸಹ ಹೆಚ್ಚಿನ ಮಟ್ಟದಲ್ಲಿ ಯುವಕ/ಯುವತಿಯರ ವಿಲಕ್ಷಣ ವರ್ತನೆಗೆ ಕಾರಣಗಳಾಗಿವೆ.  

    ಮೇಲೆ ತಿಳಿಸಿರುವ ಅಂಶಗಳಿಂದ ಜಾಲತಾಣಗಳು ಭಯವನ್ನುಂಟು ಮಾಡಿದರು ಸಹ, ಜಾಲತಾಣಗಳಿಂದ ಬಹಳಷ್ಟು ಉಪಯೋಗಗಳು ಸಹ ಇವೆ. ಆದರೆ, ಜಾಲತಾಣಗಳನ್ನು ಸರಿಯಾದ ರೀತಿಯಲ್ಲಿ ಧನಾತ್ಮಕವಾಗಿ ಬಳಸುವ ಅವಶ್ಯಕತೆಯಿದೆ. ಶೈಕ್ಷಣಿಕವಾಗಿ ಅಭಿವೃ‍ದ‍್ಧಿ ಹೊಂದಲು ಉಪಯೋಗಿಸಬಹುದಾಂತಹ ಹಲವಾರು ಜಾಲತಾಣಗಳಿವೆ. ಈ ಪೀಳಿಗೆಯ ವಿದ್ಯಾ‍ರ್ಥಿ/ನಿಯರು ಹಲವಾರು ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದಿದ್ದಾರೆ.

    ಸಾಮಾಜಿಕ ಜಾಲತಾಣಗಳಿಂದ, ಆರೋಗ್ಯಕರ ರೀತಿಯಲ್ಲಿ ನೆಟ್ವರ್ಕಿಂಗ್ ಬೆಳೆಸಲು, ದೂರದ ಊರಗಳಲ್ಲಿರುವವರು ಪೋಷಕರ ಜೊತೆಯಲ್ಲಿ ಸಂಪ‍ರ್ಕದಲ್ಲಿರಲು ಹೆಚ್ಚು ಉಪಯೋಗವಾಗುತ್ತಿವೆ. ಕೋವಿಡ್ ಸಮಯದಲ್ಲಿ, ಶಿಕ್ಷಣ ಸಂಸ‍್ಥೆಗಳನ್ನು ಮುಚ್ಚಲ್ಪಟ್ಟಾಗ, ಆನ್ ಲೈನ್ ಮೂಲಕ  ಶಿಕ್ಷಣವನ್ನು ನೀಡಲಾಯಿತು. ಈ ರೀತಿಯಾಗಿ ಜಾಲತಾಣಗಳಿಂದ ಅನುಕೂಲಗಳು ಮತ್ತು ಅನಾನುಕೂಲಗಳು ಎರಡು ಇವೆ. ಆದರೆ ಇಂದಿನ ಯುವ ಜನಾಂಗ, ಆರೋಗ್ಯ ಮತ್ತು ವ್ಯಕ್ತಿತ್ವದ ಮೇಲೆ ಋಣಾ‍ತ್ಮಕ ಪರಿಣಾಮಗಳನ್ನು ಬೀರುವ ಅಂಶಗಳ ಕಡೆಗೆ ಹೆಚ್ಚಿನ ಒಲವು ಮತ್ತು ಆಕರ್ಷಣೆ ತೋರುತ್ತಿದ್ದಾರೆ. ತಂತ್ರಜ್ಞಾನ ಮತ್ತು ಸಂಹವನ ಕ್ಷೇತ್ರದಲ್ಲಿ ಅಪಾರವಾದ ಬೆಳವಣಿಯನ್ನು ಕಂಡರು ಸಹ, ಜಾಲತಾಣಗಳ ಬಗ್ಗೆ ಹೇಳುವುದಾದರೆ, ಅನಪೇಕ್ಷಿತ ಸ್ಥಳದಲ್ಲಿದ್ದೇವೆ. ಆದ್ದರಿಂದ ಕೂಡಲೇ ಜಾಗೃತರಾಗಿ, ಈ ಸಮಸ್ಯೆಯ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ, ಪರಿಹಾರ ಕಂಡು ಕೊಳ‍್ಳಬೇಕಾಗಿದೆ.

    ಇಂದಿನ ಯುವ ಜನಾಂಗಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳು.

    • ಅಸಹಿಷ‍್ಣುತೆ ಮತ್ತು ಕೈಗೆ ಎಟಕದಷ್ಟು ನಿರೀಕ್ಷಣೆ.
    • ಹಣ ಮತ್ತು ಭೌತಿಕ ವಸ್ತುಗಳಿಗಾಗಿ ಅತೀವ ದಾಹ.
    • ಹಿಂಸಾತ್ಮಕ ನಡತೆ.
    • ಜೀವನ ಮತ್ತು ಜೀವನ ವೃತ್ತಿಯಲ್ಲಿರಬೇಕಾದ ಧ್ಯೇಯಗಳ ಅಸ್ಪಷ್ಟತೆ.
    • ಸಾಮಾಜಿಕ ಜಾಲತಾಣಗಳ ಬಗ್ಗೆ ದುರಾಸಕ್ತಿ.  
    • ಭಾರತ ದೇಶದ ಮೌಲ್ಯಗಳು ಮತ್ತು ಸಂಸ್ಕೃತಿಯ ಬಗ್ಗೆ ಅಸಡ್ಡೆ.
    • ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ.
    • ಆದ‍ರ್ಶ ವ್ಯಕ್ತಿಗಳನ್ನು ಆರಿಸುವ ವಿಷಯದಲ್ಲಿ ತಪ್ಪು ಆಯ್ಕೆ.
    • ಅನಾರೋಗ್ಯಕರ ಸಂಬಂಧಗಳು.
    • ಪ್ರತಿಭಾವಂತ ವಿದ್ಯಾರ್ಥಿಗಳು ಬೇರೆ ವಿದ್ಯಾರ್ಥಿಗಳಿಂದ ಪ್ರತ್ಯೇಕತೆಯನ್ನು ಪಾಲಿಸುವುದು. ( Exclusivity )

    ನಾವು ಎಲ್ಲಿ ಎಡವಿದ್ದೇವೆ.

    • ಶಾಲಾ ಕಾಲೇಜುಗಳಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸುವ ಮೌಲ್ಯಾಧಾರಿತ ಶಿಕ್ಷಣವಿಲ್ಲದಿರುವುದು, ಇದ್ದರೂ ಹೆಚ್ಚು ಪ್ರಾಮುಖ್ಯತೆಯನ್ನು ಕೊಡದಿರುವುದು.
    • ಅನೈತಿಕ ಪದ್ದತಿಗಳನ್ನು ಅನುಸರಿಸುತ್ತಿರುವ ಶಿಕ್ಷಣ ಸಂಸ‍್ಥೆಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳದಿರುವುದು.
    • ನೈತಿಕತೆ ಮತ್ತು ಭಾರತೀಯ ಸಂಸ್ಕೃತಿಯ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಸಂಸ‍್ಥೆಗಳ ಗೋಚರತೆ ಅಲ್ಪ ಪ್ರಮಾಣದಲ್ಲಿರುವುದು. ಇಂತಹ ಸಂಸ‍್ಥೆಗಳಲ್ಲಿ ಯುವಜನಾಂಗದ ಪ್ರತಿನಿಧಿತ್ವ ಕಡಿಮೆ ಸಂಖ್ಯೆಯಲ್ಲಿರುವುದು.

    ಕಾರ್ಯ ತಂತ್ರ.

    • ಶಿಕ್ಷಣದ ಎಲ್ಲಾ ಹಂತಗಳಲ್ಲೂ ಮೌಲ್ಯಾಧಾರಿತ ಶಿಕ್ಷಣವನ್ನು ಪಠ್ಯಕ್ರಮದ ಒಂದು ಭಾಗವನ್ನಾಗಿ ರಚಿಸಿ, ಕಡ್ಡಾಯ ಮಾಡಿ, ಸರ್ಕಾರ ಸೂಕ್ತ ಕ್ರಮ ತೆಗೆದು ಕೊಳ‍್ಳುವುದು.
    • ಶಾಲಾ ಕಾಲೇಜುಗಳಲ್ಲಿ ಮಹಾತ್ಮ ಗಾಂಧೀ, ಸ್ವಾಮಿ ವಿವೇಕಾನಂದ, ಬಸವಣ‍್ಣ, ಬುದ‍್ಧ, ಡಾ. ಅಂಬೇಡ್ಕರ್ ಮುಂತಾದ ಮಹನೀಯರುಗಳ ಹೆಸರಿನಲ್ಲಿ ನೈತಿಕ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ, ಅವರ ಉಪದೇಶಗಳನ್ನು ಪ್ರಚಾರ ಮಾಡಿ ವಿದ್ಯಾರ್ಥಿ/ನಿಯರಿಗೆ ಮನದಟ್ಟು ಮಾಡುವ ಕ್ರಮಗಳನ್ನು ಜಾರಿಗೊಳಿಸುವುದು. ಈ ದಿಶೆಯಲ್ಲಿ, ನಿರಂತರ ಹಾಗೂ ಹೆಚ್ಚು ಅವಧಿಯ ಪ್ರೋತ್ಸಾಹ ಮತ್ತು ತರಬೇತಿಯ ಅವಶ್ಯಕತೆ ಇರುತ್ತದೆ. ಗಾಂಧೀ ಭವನ, ರಾಮಕೃಷ‍್ಣ ಆಶ್ರಮ ಮುಂತಾದ ಆಧ್ಯಾತ್ಮಿಕ ಸಂಸ‍್ಥೆಗಳೊಡನೆ ಭಾಗಿಯಾಗಿ, ಜಂಟಿ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬಹುದು.
    • ಶಾಲಾ ಕಾಲೇಜುಗಳಲ್ಲಿ ಹೆಚ್ಚು ಹೆಚ್ಚು ವಿದಾರ್ಥಿ/ನಿಯರಿಗೆ ಎನ್. ಎಸ್. ಎಸ್. ಯೋಜನೆಗೆ ಪ್ರವೇಶ ನೀಡುವುದು.
    • ಪ್ರಖ್ಯಾತ ವ್ಯಕ್ತಿಗಳ ಜನ್ಮ ದಿನಗಳಂದು ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು, ಉದಾಹರಣೆಗೆ ರಕ್ತದಾನ, ನೇತ್ರದಾನ, ಆಯೋಜಿಸುವುದು.
    • ಪೋಷಕರಿಗೂ ಸಹ, ಉತ್ತಮ ಪೋಷಕತ್ವದ ( Good parenting ) ಬಗ್ಗೆ ಕೌನ್ಸೆಲಿಂಗ್ ಷೆಸನ್ ಗಳನ್ನು ಏರ್ಪಡಿಸುವುದು.
    • ಶಿಕ್ಷಕರಿಗೆ ನೈತಿಕತೆ, ನೀತಿಶಾಸ್ತ್ರ ಮತ್ತು ಶಿಕ್ಷಕ ವೃತ್ತಿಯ ಪವಿತ್ರತೆ ಇವುಗಳ ಬಗ್ಗೆ ಸಮಾಲೋಚನಾ ಸಭೆಗಳನ್ನು ಏರ್ಪಡಿಸುವುದು.
    • ಅಂತಿಮ ಫಲಿತಾಂಶಕ್ಕಿಂತ, ಅನುಸರಿಸುವ ಮಾರ್ಗ ಬಹಳ ಮುಖ್ಯ ಎಂಬ ಅಂಶವನ್ನು ಯುವ ಜನಾಂಗಕ್ಕೆ ಅರ್ಥವಾಗುವಂತೆ ತಿಳಿ ಹೇಳುವುದು.

    ಸಾಮಾಜಿಕ ಪರಿವರ್ತನೆ ಮತ್ತು ಮಕ್ಕಳಲ್ಲಿ ನೈತಿಕತೆಯನ್ನು ಬೆಳೆಸಲು ಶಿಕ್ಷಣದ ಮೂಲಕವೇ ಸಾಧ್ಯ. ಸಮಾಜದ ಅಸ್ಪಸ‍್ಥತೆಯನ್ನು ಹೋಗಲಾಡಿಸಲು ಶಿಕ್ಷಣ ರಾಮಬಾಣ ‍ಔಷಧವಿದ್ದಂತೆ. ( Education is the panacea for ills in the society ). ದಕ್ಷಿಣ ಆಫ್ರಿಕಾದ ವಿಶ್ವ ವಿದ್ಯಾಲಯದ ಉಪನ್ಯಾಸಕ, ಕಾಲೇಜಿನ ಪ್ರವೇಶ ದ್ವಾರದಲ್ಲಿ ಕೆಳಗಿನ ಸಂದೇಶದ ಪಲಕವನ್ನು ತಗಲುಹಾಕಿದ್ದರು. ಪಲಕದ ಸಂದೇಶ ಹೀಗಿತ್ತು. ”ಒಂದು ರಾಷ್ಟ್ರವನ್ನು ಧ್ವಂಸ ಮಾಡಲು ಅಣುಬಾಂಬ್ ಗಳ ಅಥವಾ ಬಹುದೂರ ಚಲಿಸುವ ಕ್ಷಿಪಣಿಗಳ ಅವಶ್ಯಕತೆಯಿಲ್ಲ. ಬದಲಾಗಿ, ಶಿಕ್ಷಣದ ಗುಣಮಟ್ಟವನ್ನು ಕೆಳಗಿಳಿಸಿ, ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡುವ ಅವಕಾಶ ಕಲ್ಪಿಸಿದರೆ ಸಾಕು”. ಸ್ವಾಮಿ ವಿವೇಕಾನಂದರು ಹೇಳಿರುವಂತೆ, ಮಾನವನನ್ನು ತಯಾರು ಮಾಡುವ, ಒಳ‍್ಳೆಯ ನಡತೆಯಿರುವ ವ್ಯಕ್ತಿಯನ್ನು ತಯಾರು ಮಾಡುವ ಶಿಕ್ಷಣದ ಅಗತ್ಯವಿದೆಯೇ ಹೊರತು ಕೇವಲ ಅಕ್ಷರಸ‍್ಥರನ್ನು ತಯಾರು ಮಾಡುವ ಶಿಕ್ಷಣದ ಅಗತ್ಯವಿಲ್ಲ.

    ಶಿಕ್ಷಣ ಕ್ಷೇತ್ರದ ದಿಗ್ಗಜರು, ಪೋಷಕರು, ಶಿಕ್ಷಣ ಆಡಳಿತಗಾರರು, ನೀತಿ ನಿರೂಪಕರು, ಹೆಚ್ಚಿನ ಜವಾಬ್ದಾರಿ ವಹಿಸಿ ಯುವ ಜನಾಂಗದಲ್ಲಿ ನೈತಿಕತೆಯನ್ನು ಮೈಗೂಡಿಸುವುದು ಬಹಳ ಮುಖ್ಯ. ಇಲ್ಲದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಅತಿದೊಡ್ಡ ಅಪಾಯವನ್ನು ನಾವು ಕಾಣ ಬೇಕಾಗಿರುತ್ತದೆ.

    ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…

    ಎಂ.ವಿ. ಶಂಕರಾನಂದ

    ನಾವೆಲ್ಲ ಚಿಕ್ಕ ಹುಡುಗರಾಗಿದ್ದಾಗ ನಮಗೆ ತಿಳಿದಿದ್ದ ಕೆಲವೇ ದೊಡ್ಡ ಹಬ್ಬಗಳಲ್ಲಿ ಯುಗಾದಿಯೂ ಒಂದು. ಯುಗಾದಿ ಇನ್ನೂ ಒಂದು ವಾರವಿದೆ ಎಂದಾಗ ಮನೆಯನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸಿ, ಒಪ್ಪ ಓರಣಗೊಳಿಸಿಡಲಾಗುತ್ತಿತ್ತು. ಆಗ ಯುಗಾದಿ ಹಬ್ಬಕ್ಕೆ ಮಾತ್ರ ನಮಗೆ ಹೊಸಬಟ್ಟೆಯ ದರ್ಶನವಾಗುತ್ತಿತ್ತು. ಆಗ ನಮ್ಮ್ಮೂರಿನಲ್ಲಿದ್ದದು ವೆಂಕಟಾಚಲ ಶೆಟ್ಟಿ, ರತ್ನಯ್ಯ ಶೆಟ್ಟಿಯರ ಬಟ್ಟೆ ಅಂಗಡಿ ಮಾತ್ರ. ಜನರು ಅವರ ಅಂಗಡಿಯಲ್ಲಿ ಹಿಂದಿನ ವರ್ಷದ ಬಾಕಿ ಸಲ್ಲಿಸಿ, ಮತ್ತೆ ಹೊಸವರ್ಷಕ್ಕೆ ಬಟ್ಟೆಯನ್ನು ಖರೀದಿಸಿ, ಹೊಸ ಸಾಲವನ್ನು ಮಾಡುತ್ತಿದ್ದರು. ಆಗ ನಮ್ಮ ಸುತ್ತಮುತ್ತಲೆಲ್ಲಾ ಬಡತನವೇ ಇದ್ದುದರಿಂದ ನಮಗೆ ಅದೇನು ಹೊಸದೆಂದು ಅನಿಸುತ್ತಿರಲಿಲ್ಲ. ನಮ್ಮ ಜಮೀನಿನಲ್ಲೇ ಬೆಳೆದ ತೊಗರಿಕಾಳು ಒಬ್ಬಟ್ಟು ಮಾಡಲು ಬಳಕೆಯಾಗಿರುತ್ತಿತ್ತು. ಮಾಮೂಲಿ ಸೊಸೈಟಿ ಅಕ್ಕಿಯ ಅನ್ನ. ಕೆಲವರು ಹುರಳಿಕಾಳಿನ ಒಬ್ಬಟ್ಟು ಮಾಡುತ್ತಿದ್ದುದೂ ಉಂಟು. ಹಬ್ಬದ ದಿನ ಮೈಗೆಲ್ಲಾ ಎಣ್ಣೆಯನ್ನು ಹಚ್ಚಿಕೊಂಡು ಬಿಸಿಲಿನಲ್ಲಿ ಮೈಯೊಡ್ಡಿ ನಿಂತಾಗ, ಆಗ ರೇಡಿಯೋದಿಂದ ಈ ಕೆಳಗಿನ ಸುಶ್ರಾವ್ಯ ಗೀತೆ ಕೇಳಿಬರುತ್ತಿತ್ತು.

    “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
    ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ…’’

    ಆಗೆಲ್ಲಾ ಈಗಿನಂತೆ ಕೇಬಲ್, ಡಿಜಿಟಲ್‌ಡಿಷ್‌ಗಳು ಇದ್ದ ಕಾಲವಲ್ಲ. ಇಡೀ ಊರಿನಲ್ಲೆಲ್ಲಾ ಹುಡುಕಿದರೆ ಕೇವಲ ಒಂದೋ, ಎರಡೋ ಮನೆಗಳಲ್ಲಿ ಮಾತ್ರ ಅದೂ ಕಪ್ಪುಬಿಳುಪಿನ ಟಿ.ವಿ. ಇರುತ್ತಿತ್ತು. ಹೀಗಾಗಿ ನಮ್ಮಂತಹ ಮಧ್ಯಮವರ್ಗದವರ ಪಾಲಿಗೇ ರೇಡಿಯೊನೇ ಸರ್ವಸ್ವವಾಗಿತ್ತು. ನಮಗೆಲ್ಲಾ ಆ ಹಾಡು ಯಾರು ಹಾಡುತ್ತಿದ್ದರೆ, ಯಾರು ಅದನ್ನು ಬರೆದಿದ್ದಾರೆ ಎಂಬುದು ಗೊತ್ತಿರುತ್ತಿರಲಿಲ್ಲ. ಶುದ್ಧ ಸಂಗೀತ ರಸಿಕರಂತೆ ಆ ಗೀತೆಯನ್ನೇ ಆಸ್ವಾದಿಸುತ್ತಿದ್ದವು.

    ಮುಂದೆ ನಾವು ಬೆಳೆಯುತ್ತಾ ಹೋದಂತೆ ಈ ಹಾಡು ನಮ್ಮ ವರಕವಿ ಬೇಂದ್ರೆಯವರು ಬರೆದದ್ದು, ಅದನ್ನು ಕುಲವಧು ಚಿತ್ರದಲ್ಲಿ ಎಸ್. ಜಾನಕಿಯವರ ಕಂಠಸಿರಿಯಲ್ಲಿ ಅಳವಡಿಸಿಕೊಂಡಿದ್ದು ಎಂದು ತಿಳಿದು ಬಂತು. ಯುಗಾದಿಯ ಸಂಭ್ರಮವನ್ನು ಹಿಡಿದಿಡುವ ಬಹಳ ಅಪರೂಪದ ಸಾರ್ವಕಾಲಿಕ ಗೀತೆಯಿದು. ಬೇಂದ್ರೆಯವರು ಯುಗಾದಿಯ ಮಹತ್ವ ಮತ್ತು ಉದ್ದೇಶವನ್ನು ಅತ್ಯದ್ಭುತವಾಗಿ ತಮ್ಮ ಈ ಕವನದ ಮೂಲಕ ವಿವರಿಸಿದ್ದಾರೆ.

    ಎಲ್ಲ ಜೀವಸೆಲೆಯೊಡನೆ ಆಗಮಿಸಿದ ವಸಂತ, ಅರಳಿ ನಿಂತ ಪ್ರಕೃತಿ, ಇಂಥ ವಸಂತದಲ್ಲಿ ಬಂದ ಯುಗಾದಿ ಸಂಭ್ರಮದ ಸಂವೇದನೆಯೊಡನೆ ಆರಂಭವಾಗುವ ಗೀತೆಯಲ್ಲಿ ಕಾಲ ಮತ್ತೆ ಮತ್ತೆ ಪ್ರಕೃತಿಯನ್ನು ಹೊಸದಾಗಿಸುತ್ತದೆ ಎನ್ನುವ ಕವಿ, ದೇವರ ಸೃಷ್ಟಿಯಾದ ಈ ಪ್ರಕೃತಿಗೆ ವರ್ಷಕ್ಕೊಂದು ಹೊಸ ಜನ್ಮವಾದರೆ ಅವನ ಸೃಷ್ಟಿಯೇ ಆದ ನಮಗೆ ಮಾತ್ರ ಒಂದೇ ಬಾಲ್ಯ, ಒಂದೇ ಹರೆಯ ಏಕೆ ಎಂದು ಪ್ರಶ್ನಿಸುತ್ತಾರೆ. ಕಾಲ ಪ್ರಕೃತಿಗೆ ಎಲ್ಲ ರೀತಿಯ ನವಚೈತನ್ಯವನ್ನು ತಂದಿದೆ, ಆದರೆ ನಮ್ಮನ್ನಷ್ಟೇ ಮರೆತಿದೆ ಎನ್ನುತ್ತಾರೆ.
    ಆದರೆ ನಾವು ಸಹ ನಮಗೆ ದೊರೆಯುವ ಪ್ರತಿ ಯುಗಾದಿಯನ್ನೂ ನಮಗೆ ಮೂಡಿ ಬಂದ ಪುರ್ನಜನ್ಮವೆಂದು ಭಾವಿಸಿ, ಅಪ್ರಿಯವಾದ ಸಾವಿನ ಬಗ್ಗೆ ಚಿಂತಿಸದೇ ಜೀವನದಲ್ಲಿ ಕಷ್ಟಸುಖಗಳನ್ನು ಸಮಚಿತ್ತದಿಂದ ಸ್ವೀಕರಿಸಿ ಮುನ್ನಡೆಯೋಣ ಅಲ್ಲವೇ?

    ಚಂದ್ರಮಾನ ಪಂಚಾಂಗದ ಶಿಶಿರ ಋತುವಿನ ಮಾರ್ಗಶಿರ ಮಾಸದ ಹೋಳಿ ಹುಣ್ಣಿಮೆ ನಂತರದ ಹದಿನೈದು ದಿನಗಳಿಗೆ ಬರುವ ವಸಂತ ಋತುವಿನ ಚೈತ್ರಮಾಸದ ಶುದ್ಧ ಮೊದಲನೆಯ ದಿನವೇ ಯುಗಾದಿ. ಇದನ್ನು ಹಿಂದೂ ಪಂಚಾಂಗದ ಪ್ರಕಾರ ಹೊಸವರ್ಷ ಎಂದು ಪರಿಗಣಿಸಲಾಗುತ್ತದೆ. ಅಂದಿನ ದಿನದಿಂದ ವಸಂತ ಮಾಸವು ಆರಂಭವಾಗುವುದರಿಂದ ಗಿಡ ಮರ ಬಳ್ಳಿಗಳು ಚಿಗುರೊಡೆಯುತ್ತವೆ. ಹೊಸ ಹೊಸ ಹೂಗಳ ಕಂಪನ್ನು ಬೀರುತ್ತವೆ. ಹಳೆಯ ತರಗೆಲೆಗಳು ಉದುರಿದ ಮರಗಿಡಗಳು ಮತ್ತೆ ಹೊಸ ಚೈತನ್ಯವನ್ನು ಪಡೆಯುತ್ತವೆ. ಈ ದಿನ ಜೀವನದಲ್ಲಿ ಒಂದು ವರ್ಷದಲ್ಲಿ ಕಂಡ ಸುಖ ದುಃಖಗಳನ್ನು ಮರೆತು, ಹೊಸಬಾಳನ್ನು ಪ್ರಾರಂಭಿಸುವ ಮುನ್ಸೂಚನೆಯಾಗಿ ಬೇವು ಬೆಲ್ಲವನ್ನು ಸವಿಯುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.

    ಯುಗ ಎಂದರೆ ಕಾಲಗಣನೆ ಎಂದೂ ಆದಿ ಎಂದರೆ ಆರಂಭ ಎಂದೂ ಅರ್ಥ. ಒಟ್ಟಾರೆ ಯುಗಾದಿ ಎಂದರೆ ಹೊಸ ಕಾಲಗಣನೆಯ ಆರಂಭ ಎಂದು ಅರ್ಥ. ಈ ದಿನ ಶ್ರೀರಾಮನು ರಾವಣನ್ನು ಸಂಹರಿಸಿ ಮರಳಿ ಅಯೋಧ್ಯೆಗೆ ಬಂದು ರಾಜ್ಯಭಾರ ಮಾಡಿದನೆಂದು ಪ್ರತೀತಿ ಇದೆ. ಈ ದಿನವೇ ವಿಷ್ಣುವು ಮತ್ಸಾವತಾರವನ್ನು ತಾಳಿದನೆಂದೂ, ಶಾಲಿವಾಹನನು ವಿಕ್ರಮಾದಿತ್ಯನನ್ನು ಸೋಲಿಸಿ ಶಾಲಿವಾಹನ ಶಕೆ ಎಂಬ ಹೊಸ ಕಾಲಮಾನವನ್ನು ಆರಂಭಿಸಿದನೆಂದೂ ಹೇಳುವರು.

    ಚಾಂದ್ರಮಾನ ಯುಗಾದಿಯನ್ನು ಹೆಚ್ಚಾಗಿ, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ಆಚರಿಸುತ್ತಾರೆ. ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಇದನ್ನು ಯುಗಾದಿಯೆಂದು, ಮಹಾರಾಷ್ಟ್ರದಲ್ಲಿ ಗುಡಿಪಡ್ವ ಎಂದೂ ಕರೆಯುತ್ತಾರೆ. ಪಾಡ್ಯಮಿಯ ದಿನ ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ, ಗುಡಿ ಎಂದು ಮೂಲೆಯಲ್ಲಿರಿಸುವರು. ಇದು ಹೊಸವರ್ಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಆಂಧ್ರಪ್ರದೇಶದಲ್ಲಿ ಈ ದಿನ ಹುಣಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವುಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಪದಾಥವನ್ನು ತಯಾರಿಸಿ ಸೇವಿಸುವರು.

    ಯುಗಾದಿ ದಿನ ಬೆಳಿಗ್ಗೆ ಪ್ರಾತಃಕಾಲದಲ್ಲಿಯೇ ಎದ್ದು, ನಿತ್ಯ ಕರ್ಮಗಳನ್ನು ಮುಗಿಸಿ, ದೇವರ ಮನೆ, ಮನೆಯ ಮುಖ್ಯ ದ್ವಾರಗಳನ್ನು ರಂಗೋಲಿ, ತೋರಣಾದಿಗಳಿಂದ ಸಿಂಗರಿಸಿ, ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡಿ, ಹೊಸ ವರ್ಷದ ಪಂಚಾಂಗವನ್ನು ದೇವರ ಸಮೀಪವಿಟ್ಟು, ಪೂಜಾ ಸಲಕರಣೆಗಳನ್ನು ಸಿದ್ದಪಡಿಸಿಕೊಂಡು ಗಣಪತಿ ಪೂಜೆಯನ್ನು ಮಾಡಿ, ಕುಲದೇವತೆ ಪೂಜೆ ಮಾಡಿ, ತೀರ್ಥ ಪ್ರಸಾದ ಸ್ವೀಕರಿಸಿದ ನಂತರ ಈ ಕೆಳಗಿನ ಶ್ಲೋಕವನ್ನು ಹೇಳುತ್ತಾ ಬೇವು ಬೆಲ್ಲವನ್ನು ತಿನ್ನುತ್ತಾರೆ.
    “ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ
    ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಂ’’

    (ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿ, ಸಕಲ ಅರಿಷ್ಟ ನಿವಾರಣೆಗಾಗಿ ಬೇವು ಬೆಲ್ಲವನ್ನು ಸೇವಿಸುತ್ತೇನೆ.)

    ನಂತರ ಮಿತ್ರರು, ಸಜ್ಜನರು, ಬಂಧುಗಳನ್ನು ಕೂರಿಸಿಕೊಂಡು ಪಂಚಾಂಗ ಪಠಣೆಯನ್ನು ಮಾಡುತ್ತಾರೆ ಇಲ್ಲವೇ ಕೇಳುತ್ತಾರೆ. ನಂತರ ಯುಗಾದಿ ಹಬ್ಬದ ವಿಶಿಷ್ಟ ಖಾದ್ಯವಾದ ಒಬ್ಬಟ್ಟನ್ನು ತಿನ್ನುವುದೆಂದರೆ ಸ್ವರ್ಗವೇ ಧರೆಗಿಳಿದು ಬಂದಂತೆ!
    ನೂತನ ಶುಭಕೃತ್ ನಾಮ ಸಂವತ್ಸರ ನವೋಲ್ಲಾಸದೊಂದಿಗೆ ಚೈತ್ರಮಾಸದ ಶುಕ್ಲಪಕ್ಷದಂದು ಮತ್ತೆ ಪಾದಾರ್ಪಣೆ ಮಾಡುತ್ತಿದೆ. ಎಲ್ಲೆಡೆ ಸಂಭ್ರಮದ ವಾತಾವರಣ, ಪ್ರತಿ ಮನೆಯಲ್ಲೂ ಒಬ್ಬಟ್ಟು, ಹೋಳಿಗೆಗಳ ವಿವಿಧ ಖಾದ್ಯಗಳ ಕಮ್ಮನೆಯ ವಾಸನೆ. ಹೊಸ ಬಟ್ಟೆ ಧರಿಸಿ ದೇವರಿಗೆ ಕೈ ಮುಗಿದು ಹಿರಿಯರು ಚಿಣ್ಣರು ಸಂಭ್ರಮದಿಂದ ನಲಿಯುತ್ತಾರೆ. ಯುಗಾದಿಯ ದಿನ ಬಹಳಷ್ಟು ಕಡೆ ಜೂಜಾಡುವುದೂ ಸಂಪ್ರದಾಯವಾಗಿ ಬೆಳೆದು ಬಂದಿದೆ. ಯುಗಾದಿಯ ಮಾರನೇಯ ದಿನವನ್ನು ವರ್ಷ ತೊಡಕು ಎಂದು ಕರೆಯುತ್ತಾರೆ. ಅಂದು ಮಾಂಸಾಹಾರಿಗಳು ಕಡ್ಡಾಯವಾಗಿ ಮಾಂಸ ಸೇವನೆ ಮಾಡುತ್ತಾರೆ. ಕೆಲವೆಡೆ ಮದ್ಯದ ಆರಾಧನೆಯೂ ಇರುತ್ತದೆ.

    ಈಗ ಕಾಲ ಬದಲಾದಂತೆ ಆಚರಣೆಗಳೂ ಬದಲಾದರೂ ಅವು ಸಾರಾಸಗಟಾಗಿ ಪೂರ್ತಿಯಾಗಿ ಬದಲಾಗಿಲ್ಲ. ಹಳ್ಳಿಗಳಲ್ಲಿ ಹಿಂದಿನ ಸಡಗರ ಸಂಭ್ರಮಗಳಿಲ್ಲದಿದ್ದರೂ ಹಿಂದಿನ ಆಚರಣೆಗಳು ಮಾಸಿಲ್ಲ..

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    ಜನಾನುರಾಗಿ ಪ್ರಾಧ್ಯಾಪಕ ಡಾ. ಜಯಪ್ಪ ಅವರಿಗೆ ಅಭಿನಂದನೆ ಮತ್ತು ಜಯಪಥ ಗ್ರಂಥ ಲೋಕಾರ್ಪಣೆ

    BENGALURU MAR 5

    ಜನಾನುರಾಗಿ ಪ್ರಾಧ್ಯಾಪಕ , ಶಿಕ್ಷಣ ತಜ್ಞ, ಕರ್ನಾಟಕ ಶಿಕ್ಷಣ ಪರಿಷತ್ತಿನ ವಿಶೇಷಾಧಿಕಾರಿ  ಡಾ. ಎಂ. ಜಯಪ್ಪನವರನ್ನು  ಸೇವಾ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಅವರ ಅಭಿಮಾನಿ ಬಳಗ ಮತ್ತು ಶಿಷ್ಯ ವೃಂದ ಶನಿವಾರ ಬೆಂಗಳೂರಿನಲ್ಲಿ ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಿತು. ಇದೇ  ಸಂದರ್ಭದಲ್ಲಿ ಜಯಪಥ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಯಿತು.

    ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಂ. ರಾಮಚಂದ್ರಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ  ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಬಿ . ತಿಮ್ಮೇಗೌಡ ಅವರು ಜಯಪಥ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಅವರು ವಾಣಿಜ್ಯ ಶಿಕ್ಷಣ ಕ್ಷೇತ್ರಕ್ಕೆ ಡಾ. ಜಯಪ್ಪನವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.

    ಬೆಂಗಳೂರು ಉತ್ತರ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಕೆಂಪರಾಜು, ಬೆಂಗಳೂರು ವಿವಿಯ  ವಿಶ್ರಾಂತ ವಾಣಿಜ್ಯ ಪ್ರಾಧ್ಯಾಪಕ ಪ್ರೊ. ಕೆ. ಈರೇಶಿ, ಸಂತೇಬೆನ್ನೂರಿನ ಹಿರಿಯ ಪತ್ರಕರ್ತ ಮತ್ತು ವಿಜಯ ಯುವಕ ಸಂಘದ ಅಧ್ಯಕ್ಷ ಸತ್ಯನಾರಾಯಣ ನಾಡಿಗ್,ಮಲ್ಲೇಶ್ವರಂ ಲೇಡಿಸ್ ಅಸೋಸಿಯೇಶನ್ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ವಿ. ಲಕ್ಷ್ಮಿ ಮತ್ತು ಕರ್ನಾಟಕ ರಾಜ್ಯ ವಾಣಿಜ್ಯ ಹಾಗೂ ನಿರ್ವಹಣಾ ಅಧ್ಯಾಪಕರುಗಳ ಪರಿಷತ್ತಿನ ಅಧ್ಯಕ್ಷ ಡಾ. ಚಂದ್ರಶೇಖರ ಗುಡುಸಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

    ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ. ಆರ್ ಕೆ ರಮೇಶ್ ಬಾಬು,  ಮೌಂಟ್ ಕಾರ್ಮಲ್ ಕಾಲೇಜಿನ ಡೀನ್ ಡಾ. ಎಸ್ ರಮೇಶ್, ಬೆಂಗಳೂರು  ನಗರ ವಿವಿ ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಡಾ. ಆರ್ ಪಾರ್ವತಿ, ಗುಲ್ಬರ್ಗಾ ಕರ್ನಾಟಕ  ಪೀಪಲ್ ಎಜುಕೇಶನ್ ಸೊಸೈಟಿಯ  ಆಡಳಿತಾಧಿಕಾರಿ  ಡಾ. ಚಂದ್ರಶೇಖರ ಶೀಲವಂತ್, ಉಜಿರೆ ಎಸ್ ಡಿ ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸಿ ಎನ್ ಉದಯಚಂದ್ರ, ಬೆಂಗಳೂರಿನ ಕಮ್ಯುನಿಟಿ  ಇನ್ಸ್ ಟಿಟ್ಯೂಟ್ ಆಫ್  ಮ್ಯಾನೇಜ್ ಮೆಂಟ್ ಸ್ಟಡೀಸ್ ನ ಗೌರವ ಕಾರ್ಯದರ್ಶಿ ಚಿಕ್ಕಣ್ಣ, ಭಾರತೀಯ ಸಂಸ್ಕೃತಿ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಕೆ ಎನ್ ಪುಷ್ಪಲತಾ,ಬುಕ್ಟಾದ ಮಾಜಿ ಅಧ್ಯಕ್ಷ ಕೆ ಎಂ ನಾಗರಾಜ್, ಮಹಾರಾಣಿ ವಾಣಿಜ್ಯ ಕಾಲೇಜಿನ ಪ್ರಿನ್ಸಿಪಾಲ್ ಡಾ. ಕೆ ರಾಮಚಂದ್ರ, ಮೈಸೂರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಬಸವಂತ ಗುದಗತ್ತಿರ್, ಎಂ ಎಲ್ ಎ ಕಾಲೇಜಿನ ಪ್ರಿನ್ಸಿಪಾಲ್ ಡಾ ಪಿ ಪಿ ಪದ್ಮಜಾ ಅವರು  ವಿಶೇಷ ಆಹ್ವಾನಿತರಾಗಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ಜಯಪಥ ಅಭಿನಂದನಾ ಗ್ರಂಥದ ಸಂಪಾದಕ ಬೆಳಗಾವಿಯ ಡಾ. ಎಚ್ ಬಿ ಕೋಲ್ಕಾರ ಅವರು ಅಭಿನಂದನಾ ಪತ್ರ ವಾಚಿಸಿದರು. ಸಂಪಾದಕ ಮಂಡಳಿಯ ಡಾ.ಸಾವುಕಾರ ಎಸ್ ಕಾಂಬಳೆ, ಡಾ. ಎಸ್ ಎಸ್ ತೇರದಾಳ ಮತ್ತು ಕುಸುಮಾ ಜಯಪ್ಪ ಸೇರಿದಂತೆ ಅಸಂಖ್ಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಸಿಂಧಿ ಕಾಲೇಜಿನ ನಿರ್ದೇಶಕ ಡಾ. ಬಿ ಎಸ್ ಶ್ರೀಕಂಠ ಸ್ವಾಗತಿಸಿ ಜಯಪ್ಪನವರ ವ್ಯಕ್ತಿತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪತ್ರಕರ್ತ ಶ್ರೀವತ್ಸ ನಾಡಿಗ್ ವಂದಿಸಿದರು.

    ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು

    SHIVAMOGGA FEB 12

    ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ. ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಅವರು ಈ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಬೇಕು. ಈ ಕುರಿತು ಸದನದಲ್ಲಿ ವಿಷಯ ಮಂಡಿಸುತ್ತೇನೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ವಸುದೈವ ಕುಟುಂಬಕಂ ತತ್ವ ಸಾರುವತ್ತ ಕೆಲಸ ಮಾಡುತ್ತಿದ್ದಾರೆ. ಕುವೆಂಪು ಅವರು ವಿಶ್ವಮಾನವ ಸಂದೇಶವನ್ನು ಬರವಣಿಗೆ ಮೂಲಕ ಸಾರಿದ್ದರು. ಅದನ್ನು ಕಾರ್ಯರೂಪಕ್ಕೆ ತರಲು ಪ್ರಧಾನಿ ಮೋದಿ ಅವರು ಶ್ರಮಿಸುತ್ತಿದ್ದಾರೆ. ಕುವೆಂಪು ಅವರ ಹೆಸರನ್ನು ಇಡಬೇಕು ಎಂದು ಅಧಿವೇಶನದಲ್ಲಿ ತಾವೆ ಪ್ರಸ್ತಾಪಿಸುವುದಾಗಿ ಯಡಿಯೂರಪ್ಪ ತಿಳಿಸಿದರು.

    ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸುವುದು ಖಚಿತವಾಗಿದೆ. ಕುವೆಂಪು ಅವರ ಹೆಸರನ್ನು ಮೋದಿ ಅವರೆೇ ಘೋಷಣೆ ಮಾಡಬೇಕು ಎಂಬುದು ತಮ್ಮ ಅಪೇಕ್ಷೆ ಎಂದರು.

    .

    Aero- India 2023:ಏರೋಸ್ಪೇಸ್ ಅಭಿವೃದ್ಧಿಯ ಶ್ರೇಯಸ್ಸು ಕರ್ನಾಟಕಕ್ಕೆ ಸಲ್ಲಬೇಕು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    BENGALURU FEB 12

    ಏರೋಸ್ಪೇಸ್ ಅಭಿವೃದ್ಧಿಯ ಶ್ರೇಯಸ್ಸು ಕರ್ನಾಟಕಕ್ಕೆ ಸಲ್ಲಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಾಳೆಯಿಂದ ಆರಂಭವಾಗಲಿರುವ ಏರೋ ಇಂಡಿಯಾ 2023 ರ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ಉಪಸ್ಥಿತರಿದ್ದರು.

    ರಾಜ್ಯವು ಏರೊಸ್ಪೇಸ್ ನೀತಿ “ಹಾಗೂ ರಕ್ಷಣಾ ಪಾರ್ಕ್ ನ ಮೊದಲ ಹಂತ ಪೂರ್ಣಗೊಂಡಿದೆ. 2 ನೇ ಹಂತವೂ ಪ್ರಾರಂಭವಾಗುತ್ತಿದೆ. ಬೆಂಗಳೂರು ಏರೋಸ್ಪೇಸ್ ಕೇಂದ್ರವಾಗಿದೆ. ಇದು ಏರ್ ಶೊ ನಡೆಸಲು ಅತ್ಯಂತ ಸೂಕ್ತ ಸ್ಥಳ. ಭಾರತೀಯ ಏರೋಸ್ಪೇಸ್ ತಂತ್ರಜ್ಞಾನವನ್ನು ಇದರಿಂದ ಬಿಂಬಿಸಬಹುದಾಗಿದೆ. ಬೆಂಗಳೂರು ವಾಣಿಜ್ಯ ಮತ್ತು ರಕ್ಷಣಾ ಉತ್ಪಾದನೆ ಕೇಂದ್ರವಾಗಿದೆ. ಬೆಂಗಳೂರಿನಲ್ಲಿ ಸ್ವಂತ ಏರ್ ಕ್ರಾಪ್ಟ್ ತಯಾರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಕಾರ್ಯಸಾಧನೆಗೆ ಜಾಗತಿಕವಾಗಿ ಸಾಕಷ್ಟು ಕ್ರಮ ವಹಿಸಿದ್ದು,ಈ ದೇಶದ ಭವಿಷ್ಯಕ್ಕೆ ನಾವು ಸೂಕ್ತ ಸ್ಥಳ ಮತ್ತು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ ಎಂದರು.

    ಗೌರವದ ಸಂಕೇತ
    ಏರೋ ಇಂಡಿಯಾ ಶೋ ಆತಿಥ್ಯ ವಹಿಸುವುದು ಗೌರವದ ಸಂಕೇತ. ಇದರ ಆಯೋಜಿಸುವುದು ಕರ್ನಾಟಕ ಮತ್ತು ಬೆಂಗಳೂರಿಗೆ ಅಭ್ಯಾಸವಾಗಿದೆ. ಏರೊ ಸ್ಪೇಸ್ ಇಕೋ ಸಿಸ್ಟಮ್ ಅಭಿವೃದ್ಧಿ ಪಡಿಸಿದ ನಮ್ಮ ಹಿರಿಯರಿಗೆ ಅಭಿನಂದಿಸಬೇಕು ಎಂದರು.

    ಏರೋಸ್ಪೇಸ್ ಉದ್ಯಮ ಹಾಗೂ ಸಾಮರ್ಥ್ಯದ ಪ್ರದರ್ಶನ

    ಪ್ರತಿ ಬಾರಿ ಆತಿಥ್ಯ ವಹಿಸಿದಾಗಲೂ ಅತ್ಯಂತ ಯಶಸ್ವಿಯಾಗಿ ರಕ್ಷಣಾ ಹಾಗೂ ಏರೋಸ್ಪೇಸ್ ಉದ್ಯಮ ಹಾಗೂ ಸಾಮರ್ಥ್ಯದ ಪ್ರದರ್ಶನ ಮಾಡಿದ್ದೇವೆ. ಕೋವಿಡ್ ಸಮಯದಲ್ಲಿಯೂ ಕಾರ್ಯಕ್ರಮಗಳು ರದ್ದಾದರೂ ನಾವು ಎರಡು ವರ್ಷಗಳ ಹಿಂದೆ ಏರ್ ಶೊ ಯಶಸ್ವಿಯಾಗಿ ಜರುಗಿತು. ಅದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.ಇದು ಅತ್ಯಂತ ದೊಡ್ಡ ಏರ್‌ ಶೋ ಆಗಿದ್ದು, ಅತಿ ಹೆಚ್ಚು ವಿದೇಶಿ ರಕ್ಷಣಾ ಮಂತ್ರಿಗಳು, ಏರ್ ಪೋರ್ಸ್ ಸಿಇಒ ಗಳು, 35000 ಚದರ ಅಡಿ ವಿಸ್ತೀರ್ಣದ ಪ್ರದರ್ಶನ, 67 ವಸ್ತುಪ್ರದರ್ಶನ , 600 ರಿಂದ 809 ಗೆ ಪ್ರದರ್ಶನಗಳು, 98 ವಿದೇಶಿ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಒಪ್ಪಂದಗಳ ಸಂಖ್ಯೆಯೂ ಹೆಚ್ಚಾಗಲಿದೆ ಎಂದರು.

    ವಾಯುಪಡೆಯ ಬಲವರ್ಧನೆ
    ವಾಯುಪಡೆಯ ತಂತ್ರಜ್ಞಾನ, ಸಾಮರ್ಥ್ಯ, ಮಾನವ ಸಂಪನ್ಮೂಲ ಬಲಪಡಿಸುವುದು ನಿರಂತರ ಪ್ರಕ್ರಿಯೆಯಾಗಿದೆ. ರಾಜ್ ನಾಥ್ ಸಿಂಗ್ ಅವರ ನಾಯಕತ್ವದಲ್ಲಿ ರಕ್ಷಣಾ ಉತ್ಪಾದನೆಯಲ್ಲಿ, ತಂತ್ರಜ್ಞಾನ ಮೇಲ್ದರ್ಜೆಗೆರುವಲ್ಲಿ ಭಾರತ ಆತ್ಮನಿರ್ಭರವಾಗುತ್ತಿದೆ. ನಮ್ಮ ರಕ್ಷಣಾ ಉಪಕರಣಗಳು ಶೇ 75% ರಷ್ಟು ಆಮದು ಮಾಡಿಕೊಳ್ಳುತ್ತಿದ್ದೆವು‌. ಈಗ ರಪ್ತು ಮಾಡುತ್ತಿದ್ದೇವೆ‌.ಏರೊ ಸ್ಪೇಸ್ ಗೆ ಸಂಬಂಧಿಸಿದಂತೆ ಕರ್ನಾಟಕ ಮಹತ್ವದ ಪಾತ್ರ ವಹಿಸುತ್ತದೆ. ಕರ್ನಾಟಕದಲ್ಲಿ 1940 ರಲ್ಲಿ ಎಚ್ ಎ ಎಲ್ ಸ್ಥಾಪನೆಯಾಗಿದ್ದು, ಎನ್ ಎ ಎಲ್ , ಬಿಎಚ್ ಇ ಎಲ್, ಡಿಆರ್ ಡಿಒ ಎಲ್ಲವೂ ಆರ್ ಆಂಡ್ ಡಿ ಸಾಮರ್ಥ್ಯವನ್ನು ಹೆಚ್ಚಿಸಿವೆ.

    1960 ರಲ್ಲಿ ಬೆಂಗಳೂರಿನಲ್ಲಿ ಇಸ್ರೊ ಆರಂಭವಾಯಿತು. ಪ್ರತಿ ದಶಕದಲ್ಲಿ ಏರೊ ಸ್ಪೇಸ್ ಅಭಿವೃದ್ಧಿಯಾಗಿದೆ. ಸ್ಥಳ , ಸಾಮರ್ಥ್ಯ, ವೃದ್ಧಿಯಾಯಿತು. 1960 ಆರ್ಯಭಟ ಉಪಗ್ರಹ ಬೆಂಗಳೂರಿನಿಂದ ಉಡಾವಣೆ ಮಾಡಲಾಯಿತು. ಶೇ 67 % ರಷ್ಟು ಏರೋಸ್ಪೇಸ್ ಉಪಕರಣಗಳು ಕರ್ನಾಟಕದಿಂದ ಉತ್ಪಾದನೆಯಾಗುತ್ತದೆ ಎಂದರು.

    ಏರೋಸ್ಪೇಸ್ ಹಾಗೂ ರಕ್ಷಣಾ ಉದ್ಯಮದ ವಿಸ್ತರಣೆಗೆ ಏರೋಷೋ ಸಹಕಾರಿ
    ಏರೊ ಇಂಡಿಯಾ ಶೊ 2023 ನ್ನು ಜನರು ನೆನಪಿನಲ್ಲಿಡುತ್ತಾರೆ‌. ಹಾಗೂ ಅಲ್ಲದೇ ಇಲ್ಲಿಂದ ಒಳ್ಳೆಯ ನೆನಪುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಈ ಕಾರ್ಯಕ್ರಮ ಯಶಸ್ವಿಯಾಗುವ ವಿಶ್ವಾಸವಿದ್ದು, ಏರೋಸ್ಪೇಸ್ ಹಾಗೂ ರಕ್ಷಣಾ ಉದ್ಯಮದ ವಿಸ್ತರಣೆಗೆ ಇದು ಸಹಕಾರಿಯಾಗಲಿದೆ. ಅರ್ಧ ಜಗತ್ತು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಇಡೀ ವಿಶ್ವವೇ ನಮ್ಮ ಕಡೆ ನೋಡುವಂತಾಗಬೇಕು ಎಂದು ಆಶಿಸಿದರು.

    ಹದಿನಾಲ್ಕನೇ ಬಾರಿ ಏರೋ ಇಂಡಿಯಾ ಶೋ ಆಯೋಜನೆ ಮಾಡಲು ನಮಗೆ ಈ ಅವಕಾಶ ನೀಡಿರುವ ಪ್ರಧಾನಿ ನರೇಂದ್ರ ಮೋದಿ,ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ತಿಳಿಸಿದರು.

    ಕೇಂದ್ರ ರಕ್ಷಣ ಇಲಾಖೆ ರಾಜ್ಯ ಸಚಿವ ಅಜಯ್ ಭಟ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗಿರಿಧರ್ , ಎ. ಸಿ.ಎಸ್ ರಮಣ ರೆಡ್ಡಿ, ನಟರಾಜನ್, ಅನುರಾಗ್ ಬಾಜಪೇಯಿ ಉಪಸ್ಥಿತರಿದ್ದರು.

    ಕೆಲವರು ಗಳಿಸಿದರೆ ಕೆಲವರು ಸುಖಿಸುತ್ತಾರೆ!

     ಸುಮಾವೀಣಾ  

     ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು– ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಕುಮಾರವ್ಯಾಸನ ‘ಗದುಗಿನ  ಭಾರತ’ದ ‘ವಿರಾಟಪರ್ವದ’  ಮೂರನೆಯ ಸಂಧಿಯಲ್ಲಿ ಬರುವ ಮಾತಿದು.ಕರ್ತವ್ಯ ಪ್ರಜ್ಞೆ ಜವಾಬ್ದಾರಿ ಇಲ್ಲದೆ ಇರುವ ಜನರಿಗೆ ಅನ್ವಯವಾಗುವ ಮಾತಿದು .

    ಬಾಯಿಮಾತಿನಲ್ಲಿ ನಾನಿದ್ದೇನೆ ಎನ್ನುವ   ಹುಂಬರಿಗೆ ಈ ಮಾತು ಅನ್ವಯ. ಅಜ್ಞಾತವಾಸದ ಕಾರಣ ವಿರಾಟರಾಜನ  ಅರಮನೆಯಲ್ಲಿ  ಪಾಂಡವರು ದ್ರೌಪದಿ ಸಹಿತ ವೇಷ ಮರೆಸಿಕೊಂಡು ಇರುತ್ತಾರೆ. ಸುದೇಷ್ಣೆಯ  ಸಖಿಯಾಗಿ ದ್ರೌಪದಿ ಸೈರಂಧ್ರಿ ವೇಷದಲ್ಲಿದ್ದಾಗ ಕೀಚಕನ ಕಣ್ಣಿಗೆ ಬೀಳುವ   ದ್ರೌಪದಿ ಸಭಾಮಧ್ಯದಲ್ಲಿ  ಅವಮಾನಿತಳಾಗುತ್ತಾಳೆ ಆದಕಾರಣ ಘೋರತರವಾದ ವಿಷ ಕುಡಿಯಲು ಅವಳ ಮನಸು ಎಣಿಸುತ್ತದೆ.

    ಕವಿ ಕುಮಾರವ್ಯಾಸ

    ಆದರೂ ಕಡೆಯ ಪ್ರಯತ್ನವೆಂಬಂತೆ ಭೀಮನ ಬಳಿ ತನ್ನ ಅಳಲನ್ನು  ತೋಡಿಕೊಳ್ಳುವಾಗ ಭೀಮ “ಮಾನಾಪಮಾನದ ವಿಷಯ ಬಂದಾಗ ನಾನು ನಿನ್ನ ಬೆನ್ನಿಗೆ ನಿಲ್ಲುವೆ ನೀನು ಸಂತೋಷದಲ್ಲಿದ್ದಾಗ  ನನ್ನ ವಂದಿಗರು ನಿನ್ನೊಂದಿಗೆ ಇರುತ್ತಾರೆ ಕಷ್ಟ ಬಂದಾಗ  ತಲೆಕಡಸಿಕೊಳ್ಳುವುದಿಲ್ಲ”  ಎಂದು ಹೇಳುವ ಸಂದರ್ಭದಲ್ಲಿ  ಕೆಲಬರು ಗಳಿಸಿದರೆ ಕೆಲರುಂಡು ಜಾರುವರು  ಎಂಬ ಮಾತನ್ನು ಕುಮಾರವ್ಯಾಸ ಭೀಮನಿಂದ ಆಡಿಸಿದ್ದಾನೆ.

     ಎಷ್ಟೋ ಸಂದರ್ಭದಲ್ಲಿ ಹೀಗಾಗುತ್ತದೆ ಮನೆಯ ಜವಾಬ್ದಾರಿಯನ್ನು ಇಲ್ಲವೆ ಒಂದು ಸಂಸ್ಥೆಯನ್ನು ಕಷ್ಟಪಟ್ಟು ನಿರ್ವಹಿಸುವವರು   ಅಹರ್ನಿಶಿ ಶ್ರಮಿಸುತ್ತಿರುತ್ತಾರೆ. ಆ ಶ್ರಮವನ್ನು ಕವಡೆಕಾಸಿಗೆ  ಕಿಮ್ಮತ್ತಿಲ್ಲದಂತೆ ಕೆಲವರು  ಅನುಭವಿಸಿ ಕಡೆಯ ದಾಗಿ ಕೃತಜ್ಞತಾ ಪ್ರಜ್ಞೆ ಇಲ್ಲದೆ ಇದ್ದುಬಿಡುತ್ತಾರೆ. ಇಂಥವರನ್ನು   ಹೊಣೆಗೇಡಿತನದ ಪರಮಾವದಿಯವರು ಎಂದೇ ತಿಳಿಯಬಹುದು.

    ಸಾಮಾಯಿಕವಾಗಿ ಕಷ್ಟ- ಸುಖ ಎರಡೂ ಸಂದರ್ಭದಲ್ಲಿ ಜೊತೆಯಾಗಿರಬೇಕು  ಲಾಭ- ನಷ್ಟ, ಅವಮಾನ- ಬಿಗುಮಾನ  ಎಲ್ಲಲ್ಲಿಯೂ ಹೆಗೆಲೆಣೆಯಾಗಿರಬೇಕು. ಒಂದರ್ಥದಲ್ಲಿ ಸಮಾಜವಾದದ ಪ್ರಕಲ್ಪನೆಯನ್ನು ಇಲ್ಲಿ ನೋಡಬಹುದು.  

    ಇನ್ನೂ  ಪ್ರಸ್ತುತ   ರೈತರ ಪರಿಪ್ರೇಕ್ಷವನ್ನು ಮುಂದಿಟ್ಟು ನೋಡುವುದಾದರೆ ರೈತರು ಕಷ್ಟ ಪಟ್ಟು ಬೆಳೆಯುತ್ತಾರೆ ಲಾಭವನ್ನು ಮದ್ಯವರ್ತಿಗಳಿಂದ ಚಿಲ್ಲರೆ ವ್ಯಾಪರಸ್ಥರವರೆಗೆ  ಪಡೆಯುತ್ತಾರೆ. ಚಿನ್ನದಂಥ ಬೆಳೆಯನ್ನು ಬೆಳೆದರೂ ರೈತರ ಪಾಲಿಗೆ ಅದರ ಸುಖ ಸಿಗುವುದಿಲ್ಲ ಆದರೆ ವ್ಯಾಪರಸ್ಥರು ಲಾಭವನ್ನು ಪಡೆಯುತ್ತಾರೆ.  ಇದಕ್ಕೂ   ವಿಡಂಬನಾತ್ಮಕವಾಗಿ ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು ಎಂಬ ಮಾತನ್ನು ಅನ್ವಯಿಸಬಹುದು. ಕೆಲವರು ಗಳಿಸಿದರೆ ಕೆಲವರು ಸುಖಿಸುತ್ತಾರೆ!

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ತಿರುಮಲೇಶರ  ಅಕ್ಷರ ಲೋಕದ ಅಂಚಿನಲ್ಲಿ 


    ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಕನ್ನಡದ ಹೆಸರಾಂತ ಲೇಖಕ ಕೆ ವಿ ತಿರುಮಲೇಶ್‌(82) ಇಂದು ಮುಂಜಾನೆ ಹೈದರಾಬಾದಿನ ತಮ್ಮ ಮಗಳ ನಿವಾಸದಲ್ಲಿ ವಿಧಿವಶರಾಗಿದ್ದಾರೆ.ಇತ್ತೀಚೆಗೆ ತಿರುಮಲೇಶ್ ಅವರಿಗೆ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕಳೆದ ವಾರದವರೆಗೂ ಆಸ್ಪತ್ರೆಯಲ್ಲಿದ್ದ ಅವರು ಭಾನುವಾರ ಡಿಸ್ಚಾರ್ಜ್‌ ಆಗಿ ಮನೆಗೆ ಬಂದಿದ್ದರು. ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ತಿರುಮಲೇಶ್‌ ಅಗಲಿದ್ದಾರೆ. ತಿರುಮಲೇಶರ ಅಕ್ಷರ ಲೋಕದ ಅಂಚಿನಲ್ಲಿ ಕೃತಿಯ ಪರಿಚಯ ಇಲ್ಲಿದೆ.


    ಸುಮಾ ವೀಣಾ 

    ಕನ್ನಡ ಭಾಷೆಯ ಮತ್ತು ಕಾವ್ಯದ ಮರ್ಮ ಬಲ್ಲ ಕವಿ-ಭಾಷಾವಿಜ್ಞಾನಿ ತಿರುಮಲೇಶ. ತಿರುಮಲೇಶರ ಹುಟ್ಟೂರು  ಕಾಸರಗೋಡಿನ ಕಾರಡ್ಕ .   ಕಾರಡ್ಕವೆಂಬುದು ಗ್ರಾಮದ ಹೆಸರು  ಮಲೆಯಾಲದಲ್ಲಿ  ‘ಕಾಡಗಂ’  ಎಂಬ ಹೆಸರಿನಿಂದ ಕರೆಯುತ್ತಾರೆ. ಪೂರ್ವಕ್ಕೆ ಪಶ್ಚಿಮ ಘಟ್ಟದ ಪರ್ವತ ಶ್ರೇಣಿ, ಪಶ್ಚಿಮಕ್ಕೆ  ಅರಬ್ಬಿ ಸಮುದ್ರ   ಇವೆರಡರ ನಡುವಿನ   ಭೂಭಾಗ ಕಾಸರಗೋಡು ಅಲ್ಲಿನ ಕಾರಡ್ಕದ ಪರಿಸರದಿಂದ  ವೃತ್ತಿಬದುಕಿಗಾಗಿ ತಿರುವನಂತಪುರ ನಂತರ ಅದರೆದೇ ಭಾಗವಾಗಿ  ಹೈದರಬಾದನ್ನು  ಸೇರಿ ಅಲ್ಲಿಯೂ ತಮ್ಮ ಸೇವೆಯನ್ನು ಮುಂದುವರೆಸುತ್ತಾರೆ. 

    ವೃತ್ತಿಬದುಕನ್ನು ಅನ್ಯಭಾಷೆಯ ನೆಲದಲ್ಲಿ  ಕಳೆದರೂ  ಇವರ ನಿತ್ಯ  ಸಾಹಿತ್ಯ ಸೇವೆ ಸಂದಾಯವಾದದ್ದು  ಕನ್ನಡಕ್ಕೆ .  ಕಾರಡ್ಕ ನೆಲದ   ಅಪ್ಪಟ ಕನ್ನಡಿಗ ತಿರುಮಲೇಶರು  ಕನ್ನಡ ತುಳು ಮತ್ತು ಮಲೆಯಾಳಂ ಭಾಷೆಗಳೊಂದಿಗೆ ಕಲೆತು ಬೆಳೆದವರು.   ಭಾರತಕ್ಕೆ ಸ್ವಾತಂತ್ರ್ಯ  ಬರುವ ಕಾಲಘಟ್ಟದಲ್ಲಿ ಹುಟ್ಟಿದ ಇವರು ಭಾರತ ಸಾಮಾಜಿಕ,  ಆರ್ಥಿಕ,  ರಾಜಕೀಯ ವ್ಯವಸ್ಥೆಯ  ಬೆಳವಣಿಗೆಯೊಂದಿಗೆ ತಾವೂ ಬೆಳೆದವರಾಗಿ  ಆ ಕಾಲಘಟ್ಟದ ಘಟನೆಗಳನ್ನು ತಮ್ಮ ಅಂಕಣ ಬರೆಹದಲ್ಲಿ ಬಿಡಿಸಿಡುತ್ತಾರೆ.

    ತಿರುಮಲೇಶರ ಒಂದು ಕಥೆ

    ಇಂಥ  ಕೆ.ವಿ ತಿರುಮಲೇಶರ ಅಂಕಣ  ಬರೆಹಗಳು ಕನ್ನಡದ ಕನವರಿಕೆಗಳನ್ನು  ದೇಶ ಭಾಷೆಗಳಾಚೆಗೆ  ತಲುಪಿಸಿವೆ.  ಇವರ ಅಂಕಣ ಬರಹಗಳು  ರಾಜಕೀಯ,  ಸಾಂಸ್ಕೃತಿಕ, ದೈನಂದಿನ ವಿದ್ಯಾಮಾನಗಳಿಗೆ  ಸಂಬಂಧಿಸಿದವಾಗಿರುತ್ತವೆ.  ಅರ್ಥಾನುಸಾರಿ, ಸ್ವಭಾವಾನುಸಾರಿ ಅನ್ನುತ್ತಾರಲ್ಲ  ಹಾಗೆ ಒಂದು  ವಿಷಯವನ್ನು ಆರಿಸಿಕೊಂಡರೆ   ಆ ವಸ್ತುವನ್ನು ಏಕಸ್ಥಗೊಳಿಸದೆ ಅದಕ್ಕೆ  ತಕ್ಕುದಾದ ಅನೇಕ ಪರಿಪ್ರೇಕ್ಷಗಳನ್ನು ಅನ್ವಯಿಸಿ ಸಾಧಿಸಿ ಮತ್ತದೇ ಆರಿಸಿಕೊಂಡ ವಿಷಯಕ್ಕೆ ಓದುಗರನ್ನು   ತಂದು ನಿಲ್ಲಿಸುವ ಅವರ ಶೈಲಿ ಅನನ್ಯವಾದುದು.

    ಅಂಕಣ ಬರೆಹಗಳ  ಒಟ್ಟು  ಸಂಗ್ರಹ “ಅಕ್ಷರ ಲೋಕದ  ಅಂಚಿನಲ್ಲಿ” ಕೃತಿ  “ಮರೆತ ಮಾತು ಮರೆಯಾಗದ ನೆನಪು” ಎಂಬ ಉಪ ಶೀರ್ಷಿಕೆಯೊಡನೆ     ಇದೀಗ ಅಭಿನವದ  ಮೂಲಕ ಓದುಗರ ಕೈಸೇರಿದೆ  ತನ್ನಿಮಿತ್ತ ಕೃತಿಯ ಕಡೆಯಲ್ಲಿ   ಅವರನ್ನೂ ಸ್ಮರಿಸಿದ್ದಾರೆ.  ತಮ್ಮ  ಸುದೀರ್ಘ ಜೀವನಾನುಭವ,  ಸಾಹಿತ್ಯದ ಬದುಕು , ಅಧ್ಯಾಪನ, ಭಾಷಾಸಂಶೋಧನೆಯ   ವಿಚಾರಧಾರೆ ಇಲ್ಲಿ ಸಂಕಲಿತವಾಗಿದೆ.  ಹೈದರಾಬಾದಿನ ‘ಪರಿಚಯ’, ಆನ್ಲೈನ್ ಪತ್ರಿಕೆ ‘ಕೆಂಡಸಂಪಿಗೆ’, ಮೈಸೂರಿನ ‘ಆಂದೋಲನ’  ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದ ಬರೆಹಗಳ ಕಟ್ಟು ಇಲ್ಲಿದೆ. ಒಂದು ಕಾಲದಲ್ಲಿ ದೈವವಿಶ್ವಾಸಿಯಾಗಿ ಕ್ರಮೇಣ ಚಿಂತನಾಶೀಲನಾದ  ಬಗೆಯನ್ನು ಡಾರ್ವಿನ್ನ ಜೀವ ವಿಕಸನದ ಸಿದ್ಧಾಂತದ ಮೂಲಕ   ಮಂಢಿಸುತ್ತಾರೆ.ಇವುಗಳು ಪದಗಳಷ್ಟೇ ಇದರಾಚೆಗೂ ತಿರುಮಲೇಶರ ಕುರಿತಾದ ಚಿಂತನೆ  ಅಧ್ಯಾಹಾರ ಮಾಡಿಕೊಂಡಷ್ಟೂ ಧಕ್ಕುತ್ತದೆ.

    ಕೆಂಡ  ಸಂಪಿಗೆ ಆನ್ಲೈನ್ ಪತ್ರಿಕೆಯ   ಒಂದೊಂದು ಅಧ್ಯಾಯದಲ್ಲೂ  ಒಂದೊಂದು ವಿಚಾರದ ಬಗ್ಗೆ ಸುದೀರ್ಘ  ಚರ್ಚೆ ನಡೆಸಿದ್ದಾರೆ.  ಕೆಲವೊಂದು ಅಧ್ಯಾಯದ ಕಡೆಯಲ್ಲಿ ಇಂಗ್ಲಿಷಿನ ನುಡಿಗಳನ್ನು ,ಕವಿಮಾತುಗಳನ್ನು ಸೇರಿಸಿರುವುದು ಬರೆಹಗಳ ಸೊಬಗನ್ನು ಹೆಚ್ಚಿಸಿದೆ. ಪರಂಪರೆ ಮತ್ತು ಆಧುನಿಕತೆ ಇವುಗಳ ನಡುವಿನ ಹಾದಿಯ ಚರಿತ್ರೆ ಜೀವನ ಪಲ್ಲಟದ ಹಾದಿಯನ್ನು ಸಮಗ್ರವಾಗಿ ವಿಶ್ಲೇಶಿಸುವ ಪ್ರಯತ್ನ ಇಲ್ಲಿ ನಡೆದಿದೆ.  ನಡುವೆ ನಡುವೆ ಅವರು ವಿದೇಶದಲ್ಲಿದ್ದಾಗ ನಡೆದ ಘಟನೆಗಳನ್ನು , ನೆನಪುಗಳನ್ನೂ ಇಲ್ಲಿ  ಓದುಗರೊಂದಿಗೂ ಹಂಚಿಕೊಂಡಿದ್ದಾರೆ.   

    ತಿರುಮಲೇಶರ ಒಂದು ಕವನ

    ಭಾಷಾ ಶಿಕ್ಷಕರು ಈ ಕೃತಿಯನ್ನು ಅನುಸಂಧಾನಿಸಲೇ ಬೇಕು  ಅಂಕಣ ಬರೆಹಗಳು ಅನುಭವಗಳನ್ನೋ ತತ್ಕಾಲಿನ ವಿಷಯಗಳನ್ನು ಮಾತ್ರ  ಚರ್ಚಿಸಿಲ್ಲ  ಭಾಷಾ ವಿಜ್ಞಾನದ ಬಗ್ಗೆ  ಸಾಹಿತ್ಯ ಸಾಹಿತಿಗಳ ಬಗ್ಗೆ ಜನಸಾಮಾನ್ಯರ ಬಗ್ಗೆ ತಿಳಿಯದ ಅನೇಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ.  ಈ ಕಾರಣದಿಂದಲೆ  “ಗುಂಪಿನ ನಡುವೆಯೂ ಥಟ್ಟನೆ ಏಕಾಂಗಿಯಂತೆ ತೋರುವ ಕವಿ.ಅಭಿಮಾನ ಬಿಟ್ಟು ಕೊಡದ  ಸ್ವಾಂತದ ಆರಾಧಕ. ಗೊತ್ತಿಲ್ಲದ್ದು ಏನೋ ಇದೆ  ಎನ್ನುವ ವಿಶ್ವಾಸದಲ್ಲಿ  ಹೊಸ ದಾರಿ ಮತ್ತು ಹೊಸ ಊರಿನ ಹುಡುಕಾಟದಲ್ಲಿರುತ್ತಾರೆ”  ಎಂದು ಹೆಚ್.ಎಸ್ ವೆಂಕಟೇಶಮೂರ್ತಿಯವರು ಹೇಳಿರುವುದು. 

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

     

    ವೇದಾಂತ ಸಾಮ್ರಾಜ್ಯ ಚಕ್ರವರ್ತಿ ಆಚಾರ್ಯ ಮಧ್ವರು

    ದ್ವೈತ ಸಿದ್ಧಾಂತದ ಪ್ರತಿಪಾದಕ ಆಚಾರ್ಯ ಮಧ್ವರು ಅದೃಶ್ಯರಾಗಿರುವ ದಿನವನ್ನು
    ಮಧ್ವನವಮಿ” ಎಂದು ಆಚರಿಸಲಾಗುತ್ತದೆ.ಶ್ರೀ ಮಧ್ವಾಚಾರ್ಯರು 79 ವರ್ಷಗಳ ಸಾರ್ಥಕ ಬದುಕನ್ನು ಸಮಾಪ್ತಿಗೊ ಳಿ ಸಿದ ಪುಣ್ಯದಿನವೇ ಮಧ್ವನವಮಿ.

    ವೇ ದಾಂತ ದರ್ಶನದ ಪ್ರವರ್ತಕರಲ್ಲಿ ದಕ್ಷಿಣ ಭಾರತದ ಮೂವರು ಯತಿವರೇ ಣ್ಯರು ಪ್ರಮುಖರು. ಆದಿಶಂಕಾರಾಚಾ ರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು.ಈ ಮೂವರು ಯತಿವರೇ ಣ್ಯರ ನ್ನು “ಆಚಾರ್ಯ ತ್ರಯ ರೆಂದು” ಪರಿಗಣಿಸಿ ದ್ದಾರೆ.

    ಈ ಮೂವರು ಯತಿಗಳು ಬ್ರಹ್ಮ ಸೂತ್ರಗಳು,ಉಪನಿಷತ್ ಗಳು ಹಾಗು ಭಗವದ್ಗೀತೆಯೆಂಬ ಪ್ರಸ್ಥಾನತ್ರಯೀಗಳಿಗೆ ತಮ್ಮ ತಮ್ಮ ಸಿದ್ಧಾಂತದ ಅನುಗುಣವಾಗಿ ಭಾಷ್ಯ ಗಳನ್ನು ರಚಿಸಿದ್ದಾರೆ.
    ದ್ವೈತ ಸಿದ್ದಾಂತವೆಂದು ಪ್ರಸಿದ್ಧವಾಗಿರುವ ಮಧ್ವಾಚಾರ್ಯರಿಂದ ಪ್ರತಿಪಾದಿಸಲ್ಪಟ್ಟ ಮಾಧ್ವ ಸಿದ್ದಾಂತದ ಹೆಸರು ಬ್ರಂಹಮೀಮಾಂಸ ಶಾಸ್ತ್ರ ಅಥವಾ ತತ್ತ್ವವಾದ.

    ಕ್ರಿ.ಶ .1238 ರಲ್ಲಿ ಉಡುಪಿಯ ಹತ್ತಿರ ಇರುವ ಪಾಜಕ ಎಂಬಲ್ಲಿ ಮಧ್ಯಗೇ ಹ ಭಟ್ಟರು(ನಾರಾಯಣಾ ಚಾ ರ್ಯರು) ಮತ್ತು ವೇ ದಾವತಿ ದಂಪತಿಗಳಿಗೆ ವಿಜಯದಶಮಿಯಂದು ಜನಿಸಿದರು.ಈ ಗಂಡು ಮಗುವಿಗೆ “ವಾಸುದೇವ ಎಂದು ನಾಮಕರಣ ಮಾಡಿದರು. ತೋಟಿಮ್ ತಿಲ್ಲಾಯ ರ್ ಗುರುಕುಲದಲ್ಲಿ ವೇದ ವಿದ್ಯೆ ಕಲಿತರು. ಗುರುಕುಲಾಭ್ಯಾಸ ಪೂರ್ಣಗೊ ಳಿ ಸಿದ ನಂತರ ಉಡುಪಿಯ ಅಚ್ಯುತ ಪ್ರೇಕ್ಷಾಚಾರ್ಯ ರಿಂದ ಸನ್ಯಾಸ ದೀಕ್ಷೆ ಪಡೆದರು.ಆಗ ಅವರಿಗೆ “ಪೂರ್ಣ ಪ್ರಜ್ಞ “ಎಂದು ಮರುನಾಮಕರಣ ವಾಯಿತು.

    ಸನ್ಯಾಸ ದೀಕ್ಷೆ ಪಡೆದುಕೊಂಡ ನಂತರ ಹಲವಾರು ಪಂಡಿತರನ್ನು ವೇ ದಾಂತ ತರ್ಕದಲ್ಲಿ ಸೋಲಿಸಿದರು.ಇದರಿಂದ ಸಂತೊಷ ಗೊಂಡ ಅಚ್ಯುತ ಪ್ರೇ ಕ್ಷಕರು ಪೂರ್ಣ ಪ್ರಜ್ಞ ರಿಗೆ ” ವೇ ದಾಂತ ಸಾಮ್ರಾಜ್ಯ ಚಕ್ರವರ್ತಿ ” ಎಂಬ ಬಿರುದನ್ನು ಕೊಟ್ಟರು.ಆನಂತರ
    ವೇದದ ಬಲಿಷ್ಠ ಸೂಕ್ತದಲ್ಲಿ ಇರುವ ಮಧ್ವ ಹೆಸರನ್ನು ಆಯ್ದುಕೊಂಡು ಆ ಹೆಸರಿನಲ್ಲಿಯೇ ಗ್ರಂಥ ರಚಿಸಿದ ಕಾರಣ ಅವರು”ಮಧ್ವಾಚಾರ್ಯರೆಂದು”ಪ್ರಸಿದ್ಧ ರಾದರು.
    ಮೊದಲು ತ್ರೇತಾಯುಗ ದಲ್ಲಿ ಹನುಮಂತನಾಗಿ ರಾಮಬಂ ಟ ನೆನಿಸಿ ,ದ್ವಾಪರ ಯುಗದಲ್ಲಿ ಭೀಮಸೇನರಾಗಿ ಈ ಕಲಿಯುಗದಲ್ಲಿ ಪೂರ್ಣ ಪ್ರಜ್ಞ ರೆನಿಸಿ ವೇ ದವ್ಯಾಸರ ಸೇ ವೆಮಾಡಿ ಭಾಗವತ್ ಕಾರ್ಯ ಸಾಧನೆಗಳ ನ್ನು ಮಾಡಿದವರು ಶ್ರೀಮಧ್ವಾಚಾರ್ಯರು.ಇದನ್ನೇ ಪುರಂದರದಾಸರು “ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೊ. ಹನುಮ ನಮ್ಮ ತಾಯಿ-ತಂದೆ, ಭೀಮ ನಮ್ಮ ಬಂಧು ಬಳ ಗ ಆನಂದತೀರ್ಥರೆ ನಮ್ಮ ಗತಿಗೋತ್ರ ವಯ್ಯಾ” ಎಂದು ಹೇಳಿ ದ್ದಾರೆ.

    ಶ್ರೀ ಮಧ್ವಾಚಾರ್ಯರು ತಮ್ಮ ಕೃತಿಗಳನ್ನು ಸಂಸ್ಕೃತ ದಲ್ಲಿ ರಚಿಸಿದ್ದಾರೆ.ಅವರ ಗ್ರಂಥಗಳನ್ನು ಸರ್ವಮೂಲಗ್ರಂಥಗ ಳು ಎಂದು ಕರೆಯಲಾಗಿದೆ.ಗೀತಾಭಾಷ್ಯ,ಗೀತತಾತ್ಪರ್ಯ, ಅನು ವ್ಯಾಖ್ಯಾನ,ನ್ಯಾಯ ವಿವರಣ ,ಅಣು ಭಾಷ್ಯ,ಮಹಾಭಾರತ ತಾತ್ಪರ್ಯ ನಿ ರ್ಣಯ,ತಂತ್ರಸಾರ ಸಂಗ್ರಹ,ಸದಾ ಚಾರ ಸ್ಮೃತಿ ಮುಂತಾದ 38 ಗ್ರಂಥಗಳನ್ನು ರಚಿಸಿದ್ದಾರೆ.

    ದ್ವೈತ ಅಂದರೆ ಎರಡು ಎಂಬುದನ್ನು ತೋರಿಸಿ ಪರಮಾತ್ಮ-ಜೀವಾತ್ಮ ಬೇರೆ ಬೇರೆ ಎಂದು ಸಾರಿದರು.ಹರಿಯೇ ಸರ್ವೋತ್ತಮ ಉಳಿದ ದೇ ವತೆಗಳೆಲ್ಲಾ ಅವನ ಅಧೀನರಾಗಿದ್ದು ಅವರವರ ಜ್ಞಾನಕ್ಕನುಗುಣವಾಗಿ ವಿವಿಧ ಕಕ್ಷೆಯಲ್ಲಿ ಬರುವ ಕಾರಣ ಅದಕ್ಕನುಗುಣ ವಾಗಿ ಅವರ ಉಪಾಸನೆ ಮಾಡಬೇ ಕೆಂಬುದು ಮಧ್ವಾಚಾರ್ಯರ ವಾದವಾಗಿತ್ತು.

    ದೇವರು ಬಿಂಬ ಮತ್ತು ಜೀವ ಅವನ ಪ್ರತಿಬಿಂಬ ಹಾಗಾಗಿ ಆಚಾರ್ಯರು ” ಹರಿ ಸರ್ವೂತ್ತಮ ವಾಯು ಜೀವೋತ್ತಮ ” ಎಂಬ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು.
    ಭಕ್ತಿ ಹಾಗು ದೇ ವರ ಬಗ್ಗೆ ಜ್ಞಾನ ದಿಂದ ಎಲ್ಲರೂ ಮೋ ಕ್ಷ ಹೊಂದ ಬಹುದೆಂದು ಪ್ರತಿಪಾದಿಸಿದರು.

    ಆಚಾರ್ಯ ಮಧ್ವರುದ್ವೈತ ವೇ ದಾಂತ ತತ್ವ ಶಾಸ್ತ್ರವನ್ನು ವಿಕಸನಗೊ ಳಿ ಸಲು ಹಲವಾರು ಬಾರಿ ಭಾರತದಲ್ಲಿ ಸಂಚ ರಿಸಿದರು.ಹಿಂದೂ ಪವಿತ್ರ ಸ್ಥಳಗಳಿಗೆ, ಹಿಂದೂ ಕಲಿಕಾ ಕೇಂದ್ರ ಗಳಿ ಗೆ ಭೇಟಿ ನೀಡಿ ತತ್ತ್ವ ಜ್ಞಾನಿಗಳ ಜೊತೆ ಚರ್ಚೆ ನಡೆಸಿದರು.ಕ್ರಿ.ಶ . 1285 ರಲ್ಲಿ ಶ್ರೀ ಕೃಷ್ಣನ ಮೂರ್ತಿಯನ್ನು ಉಡುಪಿಯಲ್ಲಿ ಪ್ರತಿಷ್ಟಾಪಿಸಿ ಅಷ್ಠ ಮಠ ವನ್ನುಸ್ಥಾಪಿಸಿದರು.

    79 ವರ್ಷಗಳ ಕಾಲ ಸಾರ್ಥಕ ಬದುಕನ್ನುಬಾಳಿ ದರು.ಪಿಂಗಳ ಸಂವತ್ಸರ ಮಾಘ ಶುದ್ಧ ನವಮಿದಿನ ಉಡುಪಿಯ ಅನಂತೇಶ್ವರ ಗುಡಿಯಲ್ಲಿ ಶಿಷ್ಯರಿಗೆ ಪಾಠ ಮಾಡಿದರು.ಪಾಠ ಮುಗಿಯುತ್ತಿದ್ದಂತೆ ಮುಸಲಧಾರೆಯಂತೆ ಪುಷ್ಪವೃಷ್ಟಿ ಯಾಯಿತು.ನಂತರ ಶಿಷ್ಯರಿಗೆ ಗುರುಗಳು ಕಾಣಿ ಸಲಿಲ್ಲ ಅದೃಶ್ಯ ರಾಗಿದ್ದರು. ಇಂದಿಗೂ ಸಹ ಬದರಿಯಲ್ಲಿ ಮಧ್ವಾಚಾರ್ಯರು ವೇದ ವ್ಯಾಸರ ಸೇವೆ ಮಾಡಿ ಕೊಂಡಿದ್ದಾರೆ ಎಂದು ಮಧ್ವಾಚಾರ್ಯರ ಅನುಯಾಯಿಗಳ ನಂಬಿಕೆ.ಹಾಗಾಗಿ ಮಘ ಶುದ್ಧ ನವಮಿಯನ್ನು ಮಧ್ವ ಜಯಂತಿ, ಮಧ್ವ ನವಮಿ ಎಂದು ಆಚರಿಸುತ್ತಾರೆ.

    ಕ್ರಿ.ಶ .1238 ರಲ್ಲಿ ಕರ್ನಾಟಕದಲ್ಲಿ ಅವತರಿಸಿದ ಮಧ್ವಾಚಾರ್ಯರು “ಹರಿ ಸರ್ವೂತ್ತಮ ವಾಯು ಜೀವೂತ್ತಮ” ಎಂಬ ದ್ವೈತ ತತ್ವ ವನ್ನು ಪ್ರತಿಪಾದಿಸುವ ಮೂಲಕ ನಮ್ಮ ದೇ ಶ ದಲ್ಲಿ ಹಿಂದೂ ಧರ್ಮವನ್ನು ಎತ್ತಿ ಹಿಡಿದ ಪ್ರಾಥ:ಸ್ಮರಣೀಯ ಮಹಾನುಭಾವರು.

    ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.

    error: Content is protected !!