23.5 C
Karnataka
Monday, May 20, 2024

    ಕೆಲವರು ಗಳಿಸಿದರೆ ಕೆಲವರು ಸುಖಿಸುತ್ತಾರೆ!

    Must read

     ಸುಮಾವೀಣಾ  

     ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು– ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಕುಮಾರವ್ಯಾಸನ ‘ಗದುಗಿನ  ಭಾರತ’ದ ‘ವಿರಾಟಪರ್ವದ’  ಮೂರನೆಯ ಸಂಧಿಯಲ್ಲಿ ಬರುವ ಮಾತಿದು.ಕರ್ತವ್ಯ ಪ್ರಜ್ಞೆ ಜವಾಬ್ದಾರಿ ಇಲ್ಲದೆ ಇರುವ ಜನರಿಗೆ ಅನ್ವಯವಾಗುವ ಮಾತಿದು .

    ಬಾಯಿಮಾತಿನಲ್ಲಿ ನಾನಿದ್ದೇನೆ ಎನ್ನುವ   ಹುಂಬರಿಗೆ ಈ ಮಾತು ಅನ್ವಯ. ಅಜ್ಞಾತವಾಸದ ಕಾರಣ ವಿರಾಟರಾಜನ  ಅರಮನೆಯಲ್ಲಿ  ಪಾಂಡವರು ದ್ರೌಪದಿ ಸಹಿತ ವೇಷ ಮರೆಸಿಕೊಂಡು ಇರುತ್ತಾರೆ. ಸುದೇಷ್ಣೆಯ  ಸಖಿಯಾಗಿ ದ್ರೌಪದಿ ಸೈರಂಧ್ರಿ ವೇಷದಲ್ಲಿದ್ದಾಗ ಕೀಚಕನ ಕಣ್ಣಿಗೆ ಬೀಳುವ   ದ್ರೌಪದಿ ಸಭಾಮಧ್ಯದಲ್ಲಿ  ಅವಮಾನಿತಳಾಗುತ್ತಾಳೆ ಆದಕಾರಣ ಘೋರತರವಾದ ವಿಷ ಕುಡಿಯಲು ಅವಳ ಮನಸು ಎಣಿಸುತ್ತದೆ.

    ಕವಿ ಕುಮಾರವ್ಯಾಸ

    ಆದರೂ ಕಡೆಯ ಪ್ರಯತ್ನವೆಂಬಂತೆ ಭೀಮನ ಬಳಿ ತನ್ನ ಅಳಲನ್ನು  ತೋಡಿಕೊಳ್ಳುವಾಗ ಭೀಮ “ಮಾನಾಪಮಾನದ ವಿಷಯ ಬಂದಾಗ ನಾನು ನಿನ್ನ ಬೆನ್ನಿಗೆ ನಿಲ್ಲುವೆ ನೀನು ಸಂತೋಷದಲ್ಲಿದ್ದಾಗ  ನನ್ನ ವಂದಿಗರು ನಿನ್ನೊಂದಿಗೆ ಇರುತ್ತಾರೆ ಕಷ್ಟ ಬಂದಾಗ  ತಲೆಕಡಸಿಕೊಳ್ಳುವುದಿಲ್ಲ”  ಎಂದು ಹೇಳುವ ಸಂದರ್ಭದಲ್ಲಿ  ಕೆಲಬರು ಗಳಿಸಿದರೆ ಕೆಲರುಂಡು ಜಾರುವರು  ಎಂಬ ಮಾತನ್ನು ಕುಮಾರವ್ಯಾಸ ಭೀಮನಿಂದ ಆಡಿಸಿದ್ದಾನೆ.

     ಎಷ್ಟೋ ಸಂದರ್ಭದಲ್ಲಿ ಹೀಗಾಗುತ್ತದೆ ಮನೆಯ ಜವಾಬ್ದಾರಿಯನ್ನು ಇಲ್ಲವೆ ಒಂದು ಸಂಸ್ಥೆಯನ್ನು ಕಷ್ಟಪಟ್ಟು ನಿರ್ವಹಿಸುವವರು   ಅಹರ್ನಿಶಿ ಶ್ರಮಿಸುತ್ತಿರುತ್ತಾರೆ. ಆ ಶ್ರಮವನ್ನು ಕವಡೆಕಾಸಿಗೆ  ಕಿಮ್ಮತ್ತಿಲ್ಲದಂತೆ ಕೆಲವರು  ಅನುಭವಿಸಿ ಕಡೆಯ ದಾಗಿ ಕೃತಜ್ಞತಾ ಪ್ರಜ್ಞೆ ಇಲ್ಲದೆ ಇದ್ದುಬಿಡುತ್ತಾರೆ. ಇಂಥವರನ್ನು   ಹೊಣೆಗೇಡಿತನದ ಪರಮಾವದಿಯವರು ಎಂದೇ ತಿಳಿಯಬಹುದು.

    ಸಾಮಾಯಿಕವಾಗಿ ಕಷ್ಟ- ಸುಖ ಎರಡೂ ಸಂದರ್ಭದಲ್ಲಿ ಜೊತೆಯಾಗಿರಬೇಕು  ಲಾಭ- ನಷ್ಟ, ಅವಮಾನ- ಬಿಗುಮಾನ  ಎಲ್ಲಲ್ಲಿಯೂ ಹೆಗೆಲೆಣೆಯಾಗಿರಬೇಕು. ಒಂದರ್ಥದಲ್ಲಿ ಸಮಾಜವಾದದ ಪ್ರಕಲ್ಪನೆಯನ್ನು ಇಲ್ಲಿ ನೋಡಬಹುದು.  

    ಇನ್ನೂ  ಪ್ರಸ್ತುತ   ರೈತರ ಪರಿಪ್ರೇಕ್ಷವನ್ನು ಮುಂದಿಟ್ಟು ನೋಡುವುದಾದರೆ ರೈತರು ಕಷ್ಟ ಪಟ್ಟು ಬೆಳೆಯುತ್ತಾರೆ ಲಾಭವನ್ನು ಮದ್ಯವರ್ತಿಗಳಿಂದ ಚಿಲ್ಲರೆ ವ್ಯಾಪರಸ್ಥರವರೆಗೆ  ಪಡೆಯುತ್ತಾರೆ. ಚಿನ್ನದಂಥ ಬೆಳೆಯನ್ನು ಬೆಳೆದರೂ ರೈತರ ಪಾಲಿಗೆ ಅದರ ಸುಖ ಸಿಗುವುದಿಲ್ಲ ಆದರೆ ವ್ಯಾಪರಸ್ಥರು ಲಾಭವನ್ನು ಪಡೆಯುತ್ತಾರೆ.  ಇದಕ್ಕೂ   ವಿಡಂಬನಾತ್ಮಕವಾಗಿ ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು ಎಂಬ ಮಾತನ್ನು ಅನ್ವಯಿಸಬಹುದು. ಕೆಲವರು ಗಳಿಸಿದರೆ ಕೆಲವರು ಸುಖಿಸುತ್ತಾರೆ!

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!