26.4 C
Karnataka
Saturday, May 11, 2024

    ಅಮ್ಮನ ನೆನಪು

    Must read

    ಒಂದು ದಿನವೂ ತನ್ನ ಇಷ್ಟಾನಿಷ್ಟಗಳನ್ನು ಹೇಳಿಕೊಳ್ಳಲಿಲ್ಲ. ತಾನಾಯಿತು ತನ್ನ ಜೀವನವಾಯಿತು , ದೇವರ ಪೂಜೆಯಾಯಿತು, ತನ್ನ ಕೆಲಸವಾಯಿತು ಎಂದು ಬಾಳಿ ಬದುಕಿದ ನನ್ನ ಅಮ್ಮ ರಮಾ ಬಾಯಿ ನಾಡಿಗ್ ಇವತ್ತಿಗೆ ಒಂದು ವಾರದ ಹಿಂದೆ ಅಂದರೆ ಡಿಸೆಂಬರ್ 13 , 2022 ರ ಮಂಗಳವಾರ ಹೇಳದೆ ಕೇಳದೆ ಹೊರಟು ಹೋಗಿಬಿಟ್ಟಳು. ತನ್ನ ಜೀವನ ಯಾತ್ರೆ ಮುಗಿಯೆತೆಂದು ಆಕೆಗೂ ಅರಿವಾಗಲಿಲ್ಲ. ನಮಗೂ ಗೊತ್ತಾಗಲಿಲ್ಲ. ಸದ್ದಿಲ್ಲದೆ ನಡೆದೇ ಬಿಟ್ಟಳು. ಪತಿಯೇ ಪರದೈವ ಎಂದು ನಂಬಿ ಬದುಕಿದ ಅಮ್ಮ ತನ್ನ 62 ವರ್ಷದ ಜೀವನದ ಸಂಗಾತಿ ಅಣ್ಣನಿಗೂ ಒಂದು ಮಾತು ಹೇಳದೆ ಹೊರಟು ಹೋದಳು.

    ಅಮ್ಮನೊಂದಿಗೆ ನಾನು

    ನನ್ನ ಅಮ್ಮ ಬೆಂಗಳೂರಿನಂಥ ಪಟ್ಟಣದಲ್ಲಿ ಬೆಳೆದಾಕೆ. ಆಗಿನ ಮಹಾರಾಣಿ ಕಾಲೇಜಿನಲ್ಲಿ ಹೋಂ ಸೈನ್ಸ್ ಓದಿದಾಕೆ. ಮದುವೆ ಆಗಿ ಸಂತೇಬೆನ್ನೂರಿನಂಥ ಪುಟ್ಟ ಊರಿನ ಗಂಡನ ಮನೆಗೆ ಬಂದಾಗ ಅದಕ್ಕೆ ಹೊಂದಿಕೊಂಡಂಥ ಪರಿಯೇ ಅನನ್ಯ. ನಮ್ಮದು ತುಂಬು ಕುಟುಂಬ. ದೊಡ್ಡ ಮನೆ. ಆ ಮನೆ ತುಂಬ ಜನ. ಒಬ್ಬೊಬ್ಬರಿಗೆ ಒಂದೊಂದು ಕೆಲಸದ ಹೊಣೆ. ಅದಕ್ಕೆಲ್ಲವೂ ಹೊಂದಿಕೊಂಡು ಜೀವನ ಸಾಗಿಸಿದ ಪರಿ ಭಾರತೀಯ ಕುಟುಂಬ ಪದ್ಧತಿಯ ಹಿರಿಮೆಗೊಂದು ಸಾಕ್ಷಿ. ಮನೆಯೆಂದ ಮೇಲೆ ಬರುವ ಸಣ್ಣ ಪುಟ್ಟ ವೈಮನಸ್ಯಗಳನ್ನು ದೊಡ್ಡದು ಮಾಡಿಕೊಂಡು ಹೋಗದೆ ಬಾಳಿದ ಜೀವ ನನ್ನಮ್ಮ.

    ಅಮ್ಮ ಮಾತ್ರವಲ್ಲ ನಮ್ಮ ಮನೆಯ ಎಲ್ಲರದೂ ಅದೇ ಗುಣ. ಅದೇ ಅಲ್ಲವೇ ಅವಿಭಕ್ತ ಕುಟುಂಬದ ಹಿರಿಮೆ. ನಾಡಿಗರ ಮನೆಯ ಅತ್ತೆ ಸೊಸೆಯಂದಿರು ಎಷ್ಟು ಚೆನ್ನಾಗಿ ಹೊಂದಿಕೊಂಡು ಬಾಳುತ್ತಿದ್ದರಲ್ಲಾ ಎಂದು ಸುತ್ತಲಿನ ಹೆಣ್ಣು ಮಕ್ಕಳು ಮಾತಾಡಿಕೊಳ್ಳುವಂತೆ ತುಂಬು ಕುಟುಂಬವಾಗಿ ಅನೇಕ ವರ್ಷ ಬದುಕು ಸಾಗಿಸಿದ್ದು ಸಂತೇಬೆನ್ನೂರು ನಾಡಿಗರ ಪೇಟೆ ಮನೆಯ ಹಿರಿಮೆ.

    ಸತ್ಯನಾರಾಯಣ ನಾಡಿಗ್ ಮತ್ತು ರಮಾ ನಾಡಿಗ್

    ನಮ್ಮ ಅಣ್ಣ ಸತ್ಯನಾರಾಯಣ ನಾಡಿಗರು ಮಲ್ಲಾಡಿಹಳ್ಳಿಯಲ್ಲಿದ್ದ ಪೋಸ್ಟ್ ಮಾಸ್ಟರಿಕೆ ಬಿಟ್ಟು ಊರಿಗೆ ಬಂದ ಮೇಲೆ ಅಲ್ಲಿನ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಸೇವೆಯಿಂದ ಸ್ಪೂರ್ತಿಗೊಂಡು ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು. ವಿಜಯ ಯುವಕ ಸಂಘ ಎಂಬ ಸಂಸ್ಥೆಗೆ ಅಸ್ತಿಬಾರಿ ಹಾಕಿ ತಮ್ಮ ಜೀವನವನ್ನೇ ಆ ಸಂಸ್ಥೆಗೆ ಧಾರೆ ಎರೆದರು. ನನ್ನ ಅಣ್ಣನ ಈ ಸೇವಾ ಕಾರ್ಯಕ್ಕೆ ನನ್ನಮ್ಮ ಯಾವತ್ತೂ ಅಡ್ಡಿ ಬರಲಿಲ್ಲ. ಅಮ್ಮ ಏನಾದರು ಅಂದು ಅಡ್ಡಿ ಮಾಡಿದ್ದರೆ ನಮ್ಮ ಅಣ್ಣ ವಿಜಯ ಯುವಕ ಸಂಘದ ಮೂಲಕ ಇಷ್ಟೊಂದು ಸಾಧನೆ ಮಾಡಲು ಆಗುತ್ತಲೇ ಇರಲಿಲ್ಲ. ಅಮ್ಮ ತನಗಾಗಿ ಏನನ್ನು ಕೇಳಲಿಲ್ಲ. ಹೆಣ್ಣಿಗೆ ಸಹಜವಾಗಿ ಇರುವ ಒಡವೆ ಬಂಗಾರ ವಸ್ತ್ರಕ್ಕೆ ಆಸೆ ಪಡಲಿಲ್ಲ. ನನ್ನ ಅಣ್ಣ ತನ್ನ ದುಡಿಮೆಯ ಹೆಚ್ಚು ಹಣವನ್ನು ಸಂಘಕ್ಕೇ ಹಾಕಿದ್ದೇ ಹೆಚ್ಚು.

    ನಾನು ಪತ್ರಕರ್ತನಾಗಿ ಬೆಂಗಳೂರು ಸೇರಿದ ನಂತರ ಅಮ್ಮ ನನ್ನ ಜೊತೆಯೆ ಇರತೊಡಗಿದರು. ಮಗನಿಂದಲೂ ಆಕೆ ಏನನ್ನು ಕೇಳಲಿಲ್ಲ. ಆಕೆ ಕೇಳುತ್ತಿದ್ದುದು ಎರಡೇ ತನ್ನ ಶುಕ್ರವಾರದ ಪೂಜೆಗೆ ಒಂದು ಮೊಳ ಹೂವು . ದೇವರ ನೈವೇದ್ಯಕ್ಕೆ ಎರಡು ಬಾಳೆ ಹಣ್ಣು. ಟೀವಿಯ ರಿಮೋಟ್ ವರ್ಕ್ ಆಗದಿದ್ದರೆ ಅದಕ್ಕೆ ಸೆಲ್ಲು.

    ಸೊಸೆ ಬಂದ ಮೇಲೆ ಇಬ್ಬರೂ ಹೊಂದಿ ಕೊಂಡ ಪರಿಯೇ ಅನನ್ಯ. ಅಮ್ಮ ತನ್ನ ಅತ್ತೆಯ ದೌಲತ್ತು ತೋರಲಿಲ್ಲ. ನನ್ನ ಪತ್ನಿ ಮಮತಾ ಸೊಸೆಯ ಠೇಂಕಾರ ತೋರಲಿಲ್ಲ. ವಯಸ್ಸಾದ ಮೇಲೆ ಹಿರಿಯರನ್ನು ಚೆನ್ನಾಗಿ ಮಾತಾಡಿಸುತ್ತಾ ಇರಬೇಕಂತೆ. ಆ ಕೆಲಸವನ್ನು ಒಂದು ದಿನವೂ ತಪ್ಪದೇ ಮಾಡಿದ್ದು ನನ್ನಕ್ಕ ಭಾರತಿ. ನಿತ್ಯ ಸಂಜೆ ನಡೆಯುತ್ತಿ ದ್ದ ಅಮ್ಮ ಮಗಳ ಮುಲಾಕತ್ ಅಮ್ಮನ ಜೀವನೋತ್ಸಾಹ ಹೆಚ್ಚಿಸಿ ಚೇತೋಹಾರಿಯಾಗಿಡಲು ಸಹಕಾರಿಯಾಗುತ್ತಿತ್ತು.

    ಒಂದು ವರ್ಷದಲ್ಲಿ ಇಬ್ಬರು ಅಮ್ಮಂದಿರೂ ನನ್ನಿಂದ ದೂರವಾದರು. ಬಾಲ್ಯದಲ್ಲಿ ನನ್ನನ್ನು ಎತ್ತಿ ಆಡಿಸಿದ ದೊಡ್ಡಮ್ಮ ವನಜಮ್ಮ ದೂರವಾದ ವರ್ಷದೊಪ್ಪತ್ತಿನಲ್ಲಿ ಅಮ್ಮ ಕೂಡ ವಾರಗಿತ್ತಿಯನ್ನು ಹಿಂಬಾಲಿಸಿದರು.

    ಅಮ್ಮನಿಲ್ಲದ ಮನೆಯಲ್ಲಿ ಶೂನ್ಯ ಆವರಿಸಿದೆ. ಕನ್ನಡಪ್ರೆಸ್ .ಕಾಮ್ ನ ಪ್ರೇರಕ ಶಕ್ತಿಯಲ್ಲಿ ಅಮ್ಮನೂ ಒಬ್ಬರು. ಅವರನ್ನು ಕಳೆದುಕೊಂಡ ದುಃಖದಲ್ಲಿ ಕನ್ನಡಪ್ರೆಸ್ ಒಂದು ವಾರ ಸ್ಥಗಿತವಾಗಿತ್ತು. ಅದಕ್ಕೆ ತಮ್ಮೆಲ್ಲರ ಕ್ಷಮಾಪಣೆ ಕೇಳುತ್ತಾ ಅಮ್ಮನ ನೆನಪಿನಲ್ಲಿ ಮತ್ತೆ ಕನ್ನಡಪ್ರೆಸ್ ತಮ್ಮನ್ನು ತಲುಪುತ್ತಿದೆ.

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    46 COMMENTS

    1. ಮಾತೃವಿಯೋಗದ ಈ ಹೊತ್ತಿನಲ್ಲೂ ಅಕ್ಕ-ತಮ್ಮರ ಕರ್ತವ್ಯ ಬದ್ಧತೆ ನಮ್ಮನ್ನು ಮೌನಿಗಳಾಗಿಸಿದೆ

    2. ಅಮ್ಮ ಎನ್ನುವವಳು ಮನೆತನ ಎನ್ನುವ ದೊಡ್ಡ ಮರದ ಕಾಣದ ಬೇರು. ಹಸಿರಾದ ಎಲೆ,ಬಣ್ಣದ ಹೂ, ರುಚಿಯಾದ ಹಣ್ಣುಗಳಿಗೆ ಕಾರಣಳಾದರೂ ಕೆಸರು ಕೈಯಲ್ಲೇ ನೋಡಿ ಖುಷಿ ಪಡುವವಳು.

      ಸಾರ್ಥಕ ಬದುಕಿಗೆ ಅನ್ವರ್ಥಕವಾಗಿ ಬದುಕಿದ ಆತ್ಮಕ್ಕೆ ಭಗವಂತ ಸದ್ಗತಿ ಕೊಡಲಿ. ಅವರ ನೆನಪು ನಿಮಗೆ ಸದಾ ಸ್ಫೂರ್ತಿಯಾಗಲಿ.

    3. ಓದಿದೆ. ಚೆನ್ನಾಗಿ ಬರೆದಿದ್ದೀರಿ . ಅಮ್ಮ ಎಂಬುದು ಹಾಗೆಯೇ. ಅಮ್ಮನ ನೆನಪು ಸದಾ ಜೀವಂತ🙏

    4. ಅಮ್ಮನ ನೆರಳಿನ ಬದುಕು
      ಶಾಶ್ವತ ಮೌಲ್ಯದ ನೆನಪು
      ಮನದಂಗಳದಿ ಒನಪು
      ನಿಮ್ಮ ಹಾದಿಗೆ ಬೆನ್ನೆಲುಬು.

    5. the sentimental and touching article which makes your eyes wet on reading each and every word I am associated with the family as the first member for the last three decades as a son-in-law. Great lady for ever in my life.

    6. ಮನಮುಟ್ಟುವ ಲೇಖನ. ಬಹಳ ಮಾರ್ಮಿಕವಾಗಿ ಬರೆದಿದ್ದೀರಿ.ನನಗೂ ಸಹ ಬಹಳ ಸಣ್ಣ ಹುಡುಗಿಯಾಗಿ ಅವರ ಜೊತೆ ಕಳೆದ ವರ್ಷಗಳು ಮನಸ್ಸಿನಲ್ಲಿ ಮರುಕಳಿಸಿತು. ನಮ್ಮ ಅಮ್ಮ ಯಾವಾಗಲೂ ತಮ್ಮ ತಂಗಿಯ ಬಗ್ಗೆ ಮಾತಾಡುವಾಗ, ನನ್ನ ತಂಗಿ ಏನೂ ತಿಳಿಯದಂತೆ ತನ್ನ ಪಾಡಿಗೆ ತಾನು ಸಂಸಾರ ಮಾಡುತ್ತಿದ್ದಾಳೆ ಎಂದು ಹೇಳುತ್ತಿದ್ದರು. ಹಾಗೆಯೇ ಅವರು ಸುಧೀರ್ಘ ವಾದ ಸಾಂಸಾರಿಕ ಜೀವನ ನಡೆಸಿ ಎದುರಿಗೆ ಇದ್ದವರಿಗೂ ತಿಳಿಯದಂತೆ ಅವರ ಜೀವನವನ್ನು ಮುಗಿಸಿದ್ದಾರೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.🙏🙏

    7. ಅತ್ತೆಯ ದೌಲತ್ತು, ಸೊಸೆಯ ಠೇಂಕಾರ ಇಲ್ಲದ ಕುಟುಂಬದಲ್ಲಿ ಇರುವ ನೆಮ್ಮದಿ ನಿಜಕ್ಕೂ ಅನುಕರಣೀ ಯ .ಪಟ್ಟಣದಲ್ಲಿ ಬೆಳೆದು ಹಳ್ಳಿಯಲ್ಲಿ ಬದುಕಿ ಬಾಳು ವುದು ಅದರಲ್ಲೂ ಕೂಡು ಕುಟುಂಬದಲ್ಲಿ ಅಮ್ಮ ಸಾಗಿಸಿದ್ದ ಜೀವನ ಎಲ್ಲರಿಗೂ ಮಾದರಿ, ಸ್ಪೂರ್ತಿ.ಇಂತಹ ಮಹಾ ಚೇತನಕ್ಕೆ ನನ್ನ ನಮನಗಳು.🙏🙏

    8. ಅಮ್ಮ ಎಂಬ ಪದದ ಚುಂಬಕ ಶಕ್ತಿ ಯೇ ಅಂಥದ್ದು. ನೆನಪುಗಳ ಸಾಗರ. ಲೇಖನ ಓದಿ ತುಂಬಾ ಭಾವುಕ ಳಾ ದೆ.

    9. ಹೌದು, ರತ್ನ ಆಗ ನಮ್ಮ ಮನೆ ಹಾಗೆ ಇತ್ತು. ಆ ವಾತಾವರಣ ದಲ್ಲಿ ನಾವು ಬೆಳೆದೆ ವು..ಅನ್ನೊ ಹೆಮ್ಮೆ ಖಂಡಿತಾ ಇದೆ. ಅದನ್ನು ನೆನಪಿಸುವ ವತ್ಸನ ಬರವಣಿಗೆ ಆಮೊಘ ವಾಗಿದೆ.ಚಿಕ್ಕಮ್ಮ ನನ್ನು ಕಳೆ ದು ಕೊಂಡದ್ದು ಮತ್ತೊಮ್ಮೆ ಅಮ್ಮನನ್ನು ಕಳೆದುಕೊಂಡ ಹಾಗೆ ಆಯಿತು.

    10. Thilidu tumba besara aitu. Devaru avara atmakke shanthi kodali 🙏 nimagu devaru dukkavannu sahisuva shakthi kodali🙏 Amma is always great🙏

    11. ಬರವಣಿಗೆಯಿಂದಲೇ ಮಾತೃ ವಾತ್ಸಲ್ಯ ವನ್ನು ನೀವು ಬಿಂಬಿಸಿರುವ ಸೊಬಗು ಹೇಳಲಸಾಧ್ಯ. ದುಃಖದ ಸನ್ನಿವೇಶವನ್ನು ಅವಡುಗಚ್ಚಿಕೊಂಡು ತಾಯಿಯ ಬಗ್ಗೆ ಹಾಗೂ ಕೂಡು ಕುಟುಂಬದಲ್ಲಿ ನಿಮ್ಮ ತಾಯಿಯವರು ಜೀವನ ನಡೆಸಿರುವ ಜಾಣ್ಮೆ ಯ ಪರಿ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಭಾವುಕತೆಯ ಈ ಸನ್ನಿವೇಶದಲ್ಲಿ ಪರಮಾತ್ಮನ ಕರುಣೆ ಸದಾ ನಿಮ್ಮ ಕುಟುಂಬದವರ ಮೇಲೆ ಇರಲಿ.
      ಅಮ್ಮ ಕೇವಲ ಇನ್ನು ನೆನಪು ಮಾತ್ರ. 😥

    12. ಮನ ಮುಟ್ಟುವಂತಿದೆ ಲೇಖನ

    13. Suuper vatsa.ondu lota coffee saha namma amma mattu chikkamma ibru hanchikondu kudita idru.obbaranna bittu innobbaru iruttiralilla.aa taraha oggattu inmunde kanodu aparupavagutteno.Devaru avarugalige olleya mukti kodali.Navugalu saha avara haage badukalu prayatnisona .

    14. ಆತ್ಮೀಯ ಬರಹ 🙏ಅವರ ಆಶೀರ್ವಾದ ನಿಮ್ಮೆಲ್ಲರ ಮೇಲೆ ಯಾವಾಗಲೂ ಇರುತ್ತದೆ. ಪ್ರೇರಕ ಶಕ್ತಿ ನಿರಂತರ…
      ನಾನು ಚಿಕ್ಕೋನಿದ್ದಾಗ ಸ್ವಾಮೀಜಿಯವರನ್ನು ನೋಡಲು ಮಲ್ಲಾಡಿಹಳ್ಳಿಗೆ ಹೋಗಿದ್ದು ನೆನಪಾಯಿತು. ಅವರಿಂದ ಸ್ಪೂರ್ತಿ ಪಡೆದ ನಿಮ್ಮ ತಂದೆಯವರ ಸಮಾಜಮುಖಿ ಕಾರ್ಯಗಳ ಬಗ್ಗೆ ತಿಳಿದು ಅಭಿಮಾನ ಮೂಡಿತು 🙏

    15. ಊರಿಗೆ ಅರಸನಾದರೂ ತಾಯಿಗೆ ಮಗ ಎಂದು ಅಕ್ಷರಾಭ್ಯಾಸ ಮಾಡಲು ಮಾಸ್ಟ್ರು ಕೊಟ್ಟಿದ್ದ ವಾಕ್ಯವನ್ನು ನಾನು ಖುಷಿಯಿಂದ ಮನ:ಪೂರ್ತಿ ತುಂಬಿಕೊಂಡು ಹತ್ತು ಸಲ ಕಾಪಿ ಬರೆದದ್ದು ಹಠಾತ್ತನೆ ಅದೆಷ್ಟೋ ವರ್ಷಗಳಾಚೆಯ ನೆನಪಿನಾಳದಿಂದ ಈಗ ಹೊರಚಿಮ್ಮಿ ಬಂತೆಂಬೊಂದು ಅಚ್ಚರಿ.

    16. ಸಜ್ಜನಿಕೆಗೆ ಪರ್ಯಾಯ ಹೆಸರು
      ಸೌ. ರಮಾಬಾಯಿ ನಾಡಿಗರು.
      ಈ ಮಾತನ್ನು ನನ್ನ ಹಿರಿಯಕ್ಕ
      ತಾರಾಬಾಯಿ(ಚನ್ನಗಿರಿ ಶಾನುಭೋಗ್
      ವೆಂಕಟರಾಯರ ಪತ್ನಿ)ಹೇಳುತ್ತಿದ್ದುದು
      ಇಂದಿಗೂ ನೆನಪಿದೆ.
      ಶೇಷಣ್ಣ.

    17. ಪ್ರಿಯ ಶ್ರೀವತ್ಸ ಅವರೇ ನಾನು ಬೆಂಗಳೂರಿನಲ್ಲಿದ್ದಾಗ ನಮ್ಮ ಮನೆ ಹತ್ತಿರವೇ ನಿಮ್ಮ ಮನೆ ಆಗಾಗ ನಾನು ನಿಮ್ಮ ತಂದೆಯವರ ಹಾಗೂ ನಿಮ್ಮ ಭೇಟಿಗಾಗಿ ನಿಮ್ಮ ಮನೆಗೆ ಬರುತ್ತಿದ್ದೆ ನಿಮ್ಮ ತಾಯಿಯವರನ್ನು ನೋಡಿದ್ದೆ ಇಷ್ಟು ವರ್ಷಗಳ ಕಾಲ ನಿಮ್ಮ ತಾಯಿ ನಿಮ್ಮ ಜೊತೆಗಿದ್ದರೂ ಆ ಸಂತೋಷ ನಿಮಗಿರಲಿ ಅವರ ಅಗಲಿಕೆಯ ನೋವನ್ನು ಧರಿಸುವ ಶಕ್ತಿಯನ್ನು ದೇವರು ನಿಮ್ಮ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ

    18. What better can any body can give to the departed soul Lady with smile and silence was her adorable she not only showered love to her childrens even to others including me (Palu) she will remain in the heart of all she not only lived in silence even she breather her last with high dignity I remember the Thelagu proverb MANCH VALAKKU MARANE ME SAKSHI may God give you all the strength to over come the sarrow Nadigre your happy married life of ೬೩ years should be the guide line for others take courage you are sorrounded by by your childrens grand childrens and your dear son in law my humble prananum to all

    19. ಅಮ್ಮನ ಅಗಲಿಕೆ ಸಹಿಸುವುದು ತುಂಬಾ ಕಷ್ಟ. ನಿಮ್ಮನ್ನೆಲ್ಲಾ ಸಾಕಿ ಸಲುಹಿದ ಅಮ್ಮನ ಪ್ರೀತಿ ಶ್ರೀರಕ್ಷೆಯಾಗಿ ಕಾಪಾಡಲಿ.

    20. ಅಮ್ಮ ಅಂದರೆ ಉಪಮೆಗೂ ಮೀರಿದ ವ್ಯಕ್ತಿ. ಅವರು ನಿನ್ನ ಮುಂದಿನ ಕೆಲಸಗಳಿಗೂ ಶಕ್ತಿಯಾಗಿ ನಿನ್ನ ಜೊತೆಗೆ ಖಂಡಿತಾ ಇರುವರು. ನಿನ್ನ ಬರಹ ಮನ ಮುಟ್ಟುವಂತೆ ಇದೆ.

    21. 🙏🙏🙏Nicely penned article, Doddamma never asked anything for herself, , she never asked for a Mysore silk saree or Kashi yatra, whatever thing came to her life, she enjoyed it thoroughly….., she enjoyed each and every minute of her life, I want to say Doddamma and Doddappa were like Rama & Sita to our family, their understanding and partnership was like that of Rama & Sita
      Doddamma you are great inspiration to me,forever 🙏🙏🙏🙏🙏

    22. ಅಮ್ಮನ ಅಗಲಿಕೆಯ ನೋವನ್ನು ಹಂಚಿಕೊಂಡಿರುವ ಲೇಖನ ಮನಮುಟ್ಟುವoತಿದೆ. ಮಧುರವಾದ ನೆನಪುಗಳು ಸದಾಇರಲಿ 🙏

    23. ಸಂತೆಬೆನ್ನೂರಿನೊಳಗೆ ಒಂದು ದೊಡ್ಡ ಮನೆ.. ಮನೆಯೊಳಗೆ ಹೆಜ್ಜೆಯಿಟ್ಟು ಕೊಂಚ ಒಳಗೆ ಬಂದರೆ ವಿಶಾಲವಾದ ತೊಟ್ಟಿ ಮನೆಯ ರೀತಿಯ ಪ್ರಾಂಗಣ, ಅಲ್ಲಿಯೇ ಬಾವಿ, ಇತ್ತ ಬದಿ ಉಪ್ಪರಿಗೆ.. ಹಿಂದೆ ತೋಟ..

      ನಾನು ಚಿಕ್ಕಂದಿನಲ್ಲಿ ನೋಡಿದ ಅತಿ ದೊಡ್ಡ ಮನೆ ಅದು. ಆ ಮನೆಯ ತುಂಬ ಜನ. ಗಲಗಲ ಎನ್ನುತ್ತಿದ್ದ ಮನೆಯಲ್ಲಿ ಬಂದವರಿಗೆ ಉಪಚರಿಸುತ್ತಾ ನಗುತ್ತಾ ಓಡಾಡುತ್ತಿದ್ದ ಗೃಹಿಣಿ ರಮಾ ಅವರು.. ತುಂಬು ಪ್ರೀತಿಯ ಅವಿಭಕ್ತ ಕುಟುಂಬ ಅದು. ಅವರ ಮಕ್ಕಳಿಬ್ಬರೂ ಮಲ್ಲಾಡಿಹಳ್ಳಿಯ ನಮ್ಮ ಪಕ್ಕದ ಮನೆಯಲ್ಲಿದ್ದು ಓದಿದವರು. ಆ ಮನೆಯ ಯಜಮಾನ ನನ್ನ ತಂದೆಯ ಆಪ್ತ ಸ್ನೇಹಿತರು. ತಾವು ಸಮಾಜಸೇವೆಗೆ ಧುಮುಕಿ ಸ್ಕೂಲು ಕಟ್ಟಿದವರು. ಶಿಸ್ತಿಗೆ ಹೆಸರಾದ ಶಾಲೆ ಅದು. ದೃಷ್ಟಿ ತಾಕುವಂತಿದ್ದ ಮನೆ , ಕುಟುಂಬ..

      ಆ ಮನೆಯ ಮುಖ್ಯ ಆಧಾರ ಸ್ಥಂಭವೇ ಕಳಚಿಬಿದ್ದಿದೆ. ಕನ್ನಡಪ್ರೆಸ್ ಸಂಪಾದಕ ಶ್ರೀವತ್ಸ ನಾಡಿಗ್ ಅವರ ತಾಯಿ ನಿಧನರಾಗಿದ್ದಾರೆ. ಮನಸ್ಸಿಗೆ ತುಂಬ ನೋವಾಯ್ತು. ಎಂಥಾ ಅಕ್ಕರೆಯ ಜೀವ.. ಅವರ ಬಗ್ಗೆ ವತ್ಸ ಬರೆದ ಲೇಖನ ಓದಿ ಮನಸ್ಸು ಒದ್ದೆಒದ್ದೆ.. ಕಣ್ಣಲ್ಲಿ ನೀರು.. ವತ್ಸ, ಭಾರತಿ ಅಕ್ಕ ನಿಮಗೆ ಇದು ಎಷ್ಟು ದೊಡ್ಡ ಹೊಡೆತ ಎಂದು ನಾನು ಊಹಿಸಬಲ್ಲೆ.. ನಿಮ್ಮ ತಂದೆಯವರು ಹೇಗೆ ಇದನ್ನು ತಡೆದುಕೊಳ್ಳುತ್ತಾರೋ ಎಂಬ ಆತಂಕ ಈಗ. ನಿಮಗೆಲ್ಲರಿಗೂ ಸಾಂತ್ವಾನ ಹೇಳುವ ಶಕ್ತಿ ನನಗಿಲ್ಲ.. ಭಗವಂತ ಶಕ್ತಿ ಕೊಡಲಿ.. 🙏

    24. ಇಲ್ಲಿಯವರೆಗಿನ ಪತ್ರಿಕಾರಂಗದ ಪಯಣದಲ್ಲಿ ಅಮ್ಮ ಮತ್ತು ಅಣ್ಣರೇ ನಿನಗೆ ಧೈರ್ಯ ಮತ್ತು ವಿಶ್ವಾಸ. ಅಮ್ಮ ಈಗ ಅಂತರ್ಧಾನರು.ಅಷ್ಟೆ‌.
      ಅವರು ನೇವರಿಸಿದ ಕ್ಷಣದಿಂದ ಇಲ್ಲಿಯವರೆಗೂ ಕಾಪಿಡಿದ ಅಮ್ಮ ಎದೆಯೊಳಗೆ ಅಭೇದ್ಯರು. ಮುಂದಿನ ಮಾರ್ಗದರ್ಶಕರು.
      ಅಣ್ಣನಲ್ಲೇ ಈಗ ಅಮ್ಮನನ್ನ ಕಂಡು ಮುಂದುವರೆಯುವ ಸಾದೃಶ್ಯ ನಿನಗೀಗ ಎದುರಾಗಿದೆ. ಮಮತೆಯ ಅಮ್ಮನಿಗೆ ನನ್ನ ನಮನಗಳು.

    25. ತಾಯಿಯವರು ದೈವಾಧೀನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ.. ನಿಮ್ಮೆಲ್ಲರಿಗೂ ದುಃಖ ಭರಿಸುವ ಶಕ್ತಿ ನೀಡಲಿ.ಸದಾ ಸಹನಾ ಮೂತಿ೯ ಹಸನ್ಮುಖಿಯಾದ ನಿಮ್ಮ ತಾಯಿಯ ನೆನಪು ಸದಾ ನಮ್ಮಲ್ಲಿ ಹಸಿರಾಗಿರುತ್ತದೆ.

    26. ಅಮ್ಮನವರ ನಿಧನದ ಸುದ್ದಿ ತಿಳಿದು ವಿಷಾದವಾಗಿದೆ,ಭಗವಂತ ನಿಮಗೂ ನಿಮ್ಮ ಕುಟುಂಬಕ್ಕೂ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ🙏🙏 ಅಮ್ಮನವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ

    27. So well said about mom, very nice & it’s beyond the words can say… no one can fill mom’s place….. God bless.She lived a happiest & ppeaceful life let her soul rest in peace 🙏🏼

    28. ತುಂಬಾ ಬೇಸರ ಅನಿಸಿತು. 2019 ರಲ್ಲಿ ಸಂತೇಬೆನ್ನೂರಿನ ಮನೆಗೆ ಹೋಗಿದ್ದ ನೆನಪು ಇನ್ನು ಹಾಗೆ ಇದೆ.

    29. ತುಂಬ ದುಃಖವಾಯಿತು ಶ್ರೀವತ್ಸ… ನಾಡಿಗರ ದುಃಖದ ಅಪರಿಮಿತೆಯನ್ನು ಅರಿತಿದ್ದೇನೆ. ಅವರ ಬಗ್ಗೆ ಕಾಳಜಿ ವಹಿಸಿರಿ…

    30. ನಿಜವಾಗಿಯೂ ಒಂದು ಪರಿಪೂರ್ಣ ಜೀವನ.
      ಮನಸಿಗೆ ಮುಟ್ಟುವ ಸಾಲುಗಳು. 🙏ಶಾಂತ ಜೀವಿ. 🙏

    31. ಆತ್ಮೀಯ ಶ್ರೀವತ್ಸ ನಾಡಿಗ್ ಅವರೇ, ನಿಮ್ಮ ಮಾತೃಶ್ರೀ ಅವರು ಇತ್ತೀಚಿಗೆ ದೈವಾಧೀನರಾಗಿದ್ದ ವಿಷಯ ತಿಳಿದು ಮನಸ್ಸಿಗೆ ಬಹಳ ಬೇಸರವಾಯಿತು. ನಿಮ್ಮ ಬರಹದ ಮೂಲಕ ಅವರು ನಿಮ್ಮೆಲ್ಲರಿಗೂ ಎಷ್ಟು ಸ್ಪೂರ್ತಿ ಸೆಲೆಯಾಗಿದ್ದರೆಂಬುದನ್ನು ಅರಿಯಬಹುದು.ನಿಮ್ಮ ತಂದೆಯವರಿಗೆ ಸಂಗಾತಿಯಾಗಿ ಬೆನ್ನೆಲುಬಾಗಿ ವಿಜಯ ಯುವಕ ಸಂಘದಂತ ಮಹಾನ್ ಸಂಸ್ಥೆ ಹುಟ್ಟಿಗೆ, ಬೆಳೆಸಿದ ಕೀರ್ತಿಗೆ ಅವರ ಕೊಡುಗೆ ಅನನ್ಯ. ಕಾರಣ ಅವರು ಸದಾ ಭಾಜನರಾಗಿರುತ್ತಾರೆ. ಅವರಿಗೆ ದಯಾಮಯನಾದ ಭಗವಂತನು ಚಿರಶಾಂತಿಯನ್ನು ಹಾಗೂ ಸದ್ಗತಿಯನ್ನು ಮತ್ತು ಅವರ ಅಕಾಲಿಕ ಅಗಲಿಕೆಯಿಂದ ನಿಮ್ಮೆಲ್ಲರಿಗೂ ಆದ ದುಃಖವನ್ನು ಬರಿಸುವ ಶಕ್ತಿಯನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇವೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!