22.5 C
Karnataka
Wednesday, June 10, 2026
    Home Blog Page 123

    ಷೇರುಪೇಟೆಯೆಂಬ ಚಕ್ರವ್ಯೂಹದಲ್ಲಿ ಅಭಿಮನ್ಯುವಾಗದೆ ಅರ್ಜುನನಾಗುವುದೆ ಜಾಣತನ

    ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್‌ ಸರ್ವಕಾಲೀನ ಗರಿಷ್ಠ ಮಟ್ಟಕ್ಕೆ ಜಿಗಿದು ವಿಶ್ವದಾದ್ಯಂತ ಸರ್ವರ ಗಮನವನ್ನು ಸೆಳೆದಿದೆ. ಇದಲ್ಲದೆ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.200 ಲಕ್ಷಕೋಟಿ ದಾಟಿದೆ. ಈಗ ಮುಂದಿನ ಗುರಿ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ ಚೇಂಜ್‌ ನ ನಿಫ್ಟಿ 15 ಸಾವಿರದ ಗಡಿ ದಾಟುವುದಾಗಿದೆ. ಇಂತಹ ಪೇಟೆಯಲ್ಲಿ ಸಣ್ಣ ಹೂಡಿಕೆದಾರರು ಚಟುವಟಿಕೆ ನಡೆಸಲು ಸಾಧ್ಯವೇ? ಎಂಬುದು ಬಹು ಜನರ ಅನಿಸಿಕೆಯಾಗಿರುತ್ತದೆ. ಇದಕ್ಕೆ ಉತ್ತರವಾಗಿ ಕೆಳಗಿನ ಕೆಲವು ಕಂಪನಿ ಷೇರುಗಳು ಪ್ರದರ್ಶಿಸಿದ ವ್ಯಾಲ್ಯು ಪಿಕ್‌ ಅವಕಾಶಗಳನ್ನು ಗಮನಿಸಬಹುದಾಗಿದೆ.

    ಡಾಕ್ಟರ್‌ ರೆಡ್ಡಿ ಲ್ಯಾಬೊರೇಟರೀಸ್:ಸೋಮವಾರ ಮತ್ತು ಮಂಗಳವಾರ ರೂ.4,400 ರ ಹಂತಕ್ಕೆ ಕುಸಿದಿದ್ದ ಷೇರಿನ ಬೆಲೆ, ಶುಕ್ರವಾರದಂದು ಈ ಷೇರಿನ ಬೆಲೆ ರೂ.4,830 ಕ್ಕೆ ಜಿಗಿತ ಕಂಡು ಕೇವಲ ನಾಲೈದು ದಿನಗಳಲ್ಲಿ ಶೇ.10% ರಷ್ಟು ಗಳಿಕೆಯ ಅವಕಾಶ ಕಲ್ಪಿಸಿಕೊಟ್ಟಿದೆ. ಕಾರಣವೇನೇ ಇರಲಿ ಅವಕಾಶ ಕಲ್ಪಿತವಂತೂ ಸಹಜವಲ್ಲವೇ?

    ಟಾಟಾ ಮೋಟಾರ್ಸ್‌ : ಸೋಮವಾರದಂದು ರೂ.258 ರ ಸಮೀಪದಲ್ಲಿದ್ದು ಮಂಗಳವಾರ ರೂ.330 ನ್ನು ದಾಟಿತು. ಬುಧವಾರದಂದು ರೂ.340 ನ್ನು ತಲುಪಿ ಗುರುವಾರ ರೂ.322 ಕ್ಕೆ ಕುಸಿಯಿತು. ಶುಕ್ರವಾರದಂದು ರೂ.316 ರವರೆಗೂ ಜಾರಿಕೊಂಡಿತು. ಅಂದರೆ ಸುಮಾರು ರೂ.80 ಕ್ಕೂ ಹೆಚ್ಚಿನ ಏರಿಳಿತ ಪ್ರದರ್ಶಿಸಿದೆ. ಪ್ರತಿ ವಾರವೂ ಇದೇ ರೀತಿಯ ವಾತಾವರಣ ಸೃಷ್ಠಿಯಾಗದು. ಆದರೆ ಅಂತಹ ಅವಕಾಶಗಳನ್ನು ಬಳಸಿಕೊಳ್ಳುವ ಕೌಶಲ್ಯವನ್ನು ಅಳವಡಿಸಿಕೊಂಡಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.

    ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್ :ಈ ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಯು ಪ್ರತಿ ಷೇರಿಗೆ ರೂ.7.50ಯಂತೆ ಡಿವಿಡೆಂಡ್‌ ಪ್ರಕಟಿಸಿದೆ. ಈ ಕಾರಣವು ಷೇರಿನ ಬೆಲೆಯಲ್ಲಿ ಬಹಳಷ್ಠು ಚೇತರಿಕೆ ಮೂಡಲು ಕಾರಣವಾಯಿತು. ಸೋಮವಾರದಂದು ರೂ.94 ರ ಸಮೀಪವಿದ್ದ ಈ ಷೇರು ಮಂಗಳವಾರ ರೂ.99 ರವರೆಗೂ ಜಿಗಿಯಿತು, ಬುಧವಾರ ರೂ.102 ರವರೆಗೂ ತಲುಪಿ ಗುರುವಾರ ಮತ್ತು ಶುಕ್ರವಾರ ರೂ.104 ನ್ನು ದಾಟಿ ರೂ.102 ರ ಸಮೀಪ ವಾರಾಂತ್ಯ ಕಂಡಿದೆ. ಅಂದರೆ ಕಂಪನಿ ಘೋಷಿಸಿದ ರೂ.7.50 ಡಿವಿಡೆಂಡ್‌ ಗೆ ಷೇರಿನ ಬೆಲೆ ರೂ.10 ಕ್ಕೂ ಹೆಚ್ಚಿನ ಏರಿಕೆಯನ್ನು ಒಂದೇ ವಾರದಲ್ಲಿ ಪ್ರದರ್ಶಿಸಿದೆ. 9 ನೇ ಮಂಗಳವಾರದಿಂದ ಈ ಷೇರು ಎಕ್ಸ್-ಡಿವಿಡೆಂಡ್‌ ವಹಿವಾಟಾಗಲಿದೆ. ಅಂದರೆ ಸೋಮವಾರದ ವಹಿವಾಟು ಕಂ-ಡಿವಿಡೆಂಡ್‌ ಅಧಾರದಲ್ಲಿರುತ್ತದೆ.

    ಐ ಟಿ ಸಿ:ಸೋಮವಾರದಂದು ಈ ಷೇರಿನ ಬೆಲೆ ರೂ.202 ರ ಸಮೀಪದಲ್ಲಿತ್ತು. ಈ ನೀರಸ ವಾತಾವರಣಕ್ಕೆ ಬಜೆಟ್‌ ನಲ್ಲಿ ಸಿಗರೇಟ್‌ ಗಳ ಮೇಲೆ ಹೆಚ್ಚಿನ ಹೊರೆ ಬೀಳಬಹುದೇನೋ ಎಂಬ ಚಿಂತನೆಯಾಗಿತ್ತು. ಆದರೆ ಯಾವುದೇ ಬದಲಾವಣೆವಿಲ್ಲದ ಕಾರಣ ಅಂದೇ ರೂ.210 ನ್ನು ದಾಟಿತು. ನಂತರದ ದಿನಗಳಲ್ಲಿ ಬಹು ಬೇಡಿಕೆಯಿಂದ ರೂ.238 ರವರೆಗೂ ಜಿಗಿತ ಕಂಡು ರೂ.234 ರ ಸಮೀಪ ವಾರಾಂತ್ಯ ಕಂಡಿದೆ. ಈ ಕಂಪನಿಯ ಆಡಳಿತ ಮಂಡಳಿಯು ಈ ತಿಂಗಳ 11 ರಂದು ತನ್ನ ತ್ರೈಮಾಸಿಕ ಫಲಿತಾಂಶದೊಂದಿಗೆ ಮಧ್ಯಂತರ ಲಾಭಾಂಶ ಪ್ರಕಟಿಸುವುದಾಗಿ ತಿಳಿಸಿದೆ. ಈ ಅಂಶವು ಕಂಪನಿಯ ಷೇರಿನಲ್ಲಿ ಹೆಚ್ಚಿನ ಚಟುವಟಿಕೆಯನ್ನು ತುಂಬಬಹುದು.

    ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ:ಈ ಷೇರಿನ ಬೆಲೆ ಸೋಮವಾರದಂದು ರೂ.282 ರಲ್ಲಿತ್ತು. ಆದರೆ ವಾರಾಂತ್ಯದಲ್ಲಿ ರೂ.408 ರವರೆಗೂ ಜಿಗಿತ ಕಂಡು ರೂ.398 ರ ಸಮೀಪ ಕೊನೆಗೊಂಡಿತು. ಮಂಗಳವಾರ ರೂ.337 ರವರೆಗೂ, ಬುಧವಾರ ರೂ.340 ರವರೆಗೂ, ಗುರುವಾರ ಕಂಪನಿಯ ಫಲಿತಾಂಶ ಪ್ರಕಟಣೆಯದಿನವಾದ್ದರಿಂದ ರೂ.331 ರಿಂದ ರೂ.358 ರವರೆಗೂ ಏರಿಳಿತ ಪ್ರದರ್ಶಿಸಿ ಶುಕ್ರವಾರ ರೂ.408 ರ ವಾರ್ಷಿಕ ಗರಿಷ್ಠ ದಾಖಲಿಸಿ ರೂ.398 ರಲ್ಲಿ ಕೊನೆಗೊಂಡಿತು. ಈ ರೀತಿಯ ಏರಿಕೆಯ ಹಿಂದೆ ಫಲಿತಾಂಶಗಳ ವಿಶ್ಲೇಷಣೆಗಳಲ್ಲದೆ, ಈ ಬ್ಯಾಂಕ್‌ ಸೆನ್ಸೆಕ್ಸ್‌ ನ ಅಂಗವಾಗಿದ್ದು ಇತ್ತೀಚಿನ ದಿನಗಳಲ್ಲಿ ಸೆನ್ಸೆಕ್ಸ್‌ ನ ಪ್ರಮುಖ ಕಂಪನಿಗಳಾದ ಹೆಚ್‌ ಡಿ ಎಫ್‌ ಸಿ, ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌, ಬಜಾಜ್‌ ಫಿನ್ಸರ್ವ್‌, ಬಜಾಜ್‌ ಫೈನಾನ್ಸ್‌, ಇಂಡಸ್ ಇಂಡ್‌ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಭಾರಿ ಏರಿಕೆ ಕಂಡಿದ್ದು ದಣಿದಿದ್ದ ಕಾರಣ ಅವಕ್ಕೆ ಸುಧಾರಿಸಿಕೊಳ್ಳುವ ಅವಕಾಶ ನೀಡಿ ಸೆನ್ಸೆಕ್ಸ್‌ ಏರಿಕೆಗೆ ಪೂರಕವಾಗಿ ಈ ಬ್ಯಾಂಕ್‌ ನ ಫಲಿತಾಂಶವು ಸಹಕಾರಿಯಾಗಿದೆ.

    ಇಂಡಿಯನ್‌ ರೇಲ್ವೆ ಕ್ಯಾಟರಿಂಗ್‌ ಅಂಡ್‌ ಟೂರಿಸಂ ಕಾರ್ಪೊರೇಷನ್ (ಐ ಆರ್‌ ಸಿ ಟಿ ಸಿ ):ಈ ಕಂಪನಿಯ ಶೇ.15 ರಷ್ಟನ್ನು ಕೇಂದ್ರ ಸರ್ಕಾರವು ತನ್ನ ಬಂಡವಾಳ ಹಿಂತೆಗೆತ (Disinvestment) ಯೋಜನೆಯಡಿ ಪ್ರತಿ ಷೇರಿಗೆ ರೂ.1,367 ರ ಬೇಸ್‌ ಪ್ರೈಸ್‌ ನಲ್ಲಿ ಡಿಸೆಂಬರ್‌ ತಿಂಗಳಲ್ಲಿ ಮಾರಾಟಮಾಡಿತು. ಈ ಪ್ರಕ್ರಿಯೆಗೆ ಮೊದಲು ಷೇರಿನ ಬೆಲೆ ರೂ.1,700 ಕ್ಕೂ ಹೆಚ್ಚಿತ್ತು. ಈ ವಾರ ಈ ಕಂಪನಿ ಷೇರಿಗೆ ಶುಕ್ರದೆಶೆ ಬಂದಿದೆ. ರೂ.1,451 ರ ಕನಿಷ್ಠ ಬೆಲೆಯಿಂದ ಶುಕ್ರವಾರ ರೂ.1,580 ರವರೆಗೂ ಜಿಗಿತ ಕಂಡು ಉತ್ತಮ ಚಟುವಟಿಕೆ ಪ್ರದರ್ಶಿಸಿದೆ.

    ಇವುಗಳಲ್ಲದೆ ಕಂಪನಿಗಳಾದ ಡಿ ಎಲ್‌ ಎಫ್‌, ಸ್ಟೀಲ್‌ ಅಥಾರಿಟೀಸ್‌ ಆಫ್‌ ಇಂಡಿಯಾ, ಇಂಡಸ್‌ ಇಂಡ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಟಾಟಾ ಕೆಂ, ಮಹೀಂದ್ರ ಅಂಡ್‌ ಮಹೀಂದ್ರ, ಬಯೋಕಾನ್‌, ಬಿ ಪಿ ಸಿ ಎಲ್‌, ಬ್ರಿಟಾನಿಯಾ, ಆಸ್ಟ್ರಾಜನಿಕ, ಸಿಪ್ಲಾ, ಯುಪಿಎಲ್‌, ಕೋಲ್‌ ಇಂಡಿಯಾ, ಲಾರ್ಸನ್‌ ಅಂಡ್‌ ಟೋಬ್ರೋ, ಹೆಚ್‌ ಐ ಎಲ್‌, ರಾಂಕೋ ಸೀಮೆಂಟ್‌, ಇಂಡಿಯನ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ಕರ್ನಾಟಕ ಬ್ಯಾಂಕ್‌, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ , ಕಲ್ಪತರು ಪವರ್‌, ಬಜಜ್‌ ಎಲೆಕ್ಟ್ರಿಕಲ್‌ ನಂತಹ ಅನೇಕ ಕಂಪನಿಗಳು ಏರಿಳಿತಗಳೊಂದಿಗೆ ಏರಿಕೆ ಕಂಡಿವೆ. ಹಾಗೆಂದ ಮಾತ್ರಕ್ಕೆ ಏಲ್ಲಾ ಕಂಪನಿಗಳು ಏರಿಕೆ ಕಂಡು ಖರೀದಿಸಲು ಅವಕಾಶವಿಲ್ಲವೆಂದಲ್ಲ. ಈ ವಾತಾವರಣದಲ್ಲೂ ಕಂಪನಿಗಳಾದ ಸಿ ಇ ಎಸ್‌ ಸಿ, ಕೋರಮಂಡಲ್‌ ಇಂಟರ್‌ ನ್ಯಾಶನಲ್‌, ಚಂಬಲ್‌ ಫರ್ಟಿಲೈಸರ್ಸ್‌, ಝೀ ಎಂಟರ್ ಟೇನ್ಮೆಂಟ್‌, ನಂತಹ ಕಂಪನಿಗಳು ಇಳಿಕೆಯಲ್ಲಿವೆ. ಹಾಗೆಯೇ ಇತ್ತೀಚೆಗೆ ಏರಿಕೆ ಪ್ರದರ್ಶಿಸಿ ಇಳಿಕೆ ಕಂಡ ಯು ಪಿ ಎಲ್‌, ಬಂದನ್‌ ಬ್ಯಾಂಕ್‌, ಎಲ್‌ ಐ ಸಿ ಹೌಸಿಂಗ್‌ ಫೈನಾನ್ಸ್‌ ಗಳಂತಹವು ಮತ್ತೊಮ್ಮೆ ಪುಟಿದೇಳಲೂಬಹುದು.ಇಲ್ಲದೆಯೂ ಇರಬಹುದು. ಷೇರು ಪೇಟೆ ಹೀಗೆ ವರ್ತಿಸುತ್ತದೆ ಎಂದು ಹೇಳುವುದು ಎಂಥವರಿಗೂ ಕಷ್ಟ. ಓಟ್ಟಾರೆ ವಿದೇಶಿ ವಿತ್ತೀಯ ಸಂಸ್ಥೆಗಳ ಒಳಹರಿವಿನ ಪ್ರಮಾಣವು ಪೇಟೆಯ ವಾತಾವರಣವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ.

    ಹಿತವಾದ, ಮಿತವಾದ ಸಂಖ್ಯೆಯ ಷೇರುಗಳಲ್ಲಿ ವಹಿವಾಟು ನಡೆಸಿದಲ್ಲಿ, ಒಂದು ವೇಳೆ ಖರೀದಿಸಿದ ಷೇರಿನ ಬೆಲೆ ಇಳಿಕೆ ಕಂಡರೂ, ಹೂಡಿಕೆಯಾಗಿ ಮುಂದುವರೆಸಿಕೊಂಡುಹೋಗುವ ಭಾವನೆಯಿಂದ ಉತ್ತಮ ಕಂಪನಿಗಳನ್ನು ಮಾತ್ರ ಆಯ್ಕೆಮಾಡಿಕೊಳ್ಳಬೇಕು. ಈಗಿನ ಷೇರುಪೇಟೆ ಎಂಬ ಚಕ್ರವ್ಯೂಹದಲ್ಲಿ ಯಶಸ್ಸು ಕಾಣಬೇಕಾದರೆ – ಬೇಕಾದಾಗ ಒಳಹೊಕ್ಕುವ, ಅಗತ್ಯವಿದ್ದಾಗ ಹೊರಬರುವ ಗುಣ ಹೊಂದಿರುವ ಅರ್ಜುನನ ರೀತಿಯಿದ್ದಲ್ಲಿ ಮಾತ್ರ ಸಾಧ್ಯ. ಕೇವಲ ಖರೀದಿಸಿ ಸುಮ್ಮನಾದಲ್ಲಿ ಅಭಿಮನ್ಯುವಿನಂತಾಗಬಹುದು. Markets have reached trading zone from holding zone. ಹಾಗಾಗಿ ಭಾವನಾತ್ಮಕ ಚಿಂತನೆಯಿಂದ ಹೊರಬಂದು ಲಾಭ ಗಳಿಕೆಯ ಚಿಂತನೆ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ.

    ತಮಿಳುನಾಡು: ಚುನಾವಣೆಯಲ್ಲೂ ಮೆರೆಯುವ ಭಾಷಾಭಿಮಾನ

    ಜನತಂತ್ರದ ಪ್ರಮುಖ ಪ್ರಕ್ರಿಯೆ ಚುನಾವಣೆ. ದೇಶದ ಸುಮಾರು 19 ರಾಜ್ಯಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳನ್ನು ಆಯಾ ರಾಜ್ಯಗಳಿಗೆ ಹೋಗಿ ಸಮೀಕ್ಷಿಸುವುದು ಅತಿ ಪ್ರಯಾಸಕರ. ಬೆಂಗಳೂರಿನ ವರದಿಗಾರರ ತಂಡವೊಂದು ಕಳೆದ 25 ವರುಷಗಳಿಂದ ಚುನಾವಣೆ ಜನಾಭಿಪ್ರಾಯ ಸಮೀಕ್ಷೆ ನಡೆಸುತ್ತಾ ಬಂದಿದೆ. ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕ ಈ ತಂಡದ ನೇತೃತ್ವ ವಹಿಸುತ್ತಾ ಬಂದಿದ್ದಾರೆ. ಇನ್ನೇನು ಎರಡು ತಿಂಗಳಲ್ಲಿ ನಡೆಯುವ ತಮಿಳುನಾಡು ರಾಜ್ಯ ವಿಧಾನಸಭೆಯ ಚುನಾವಣೆಯ ನಾಡಿ ಮಿಡಿತವನ್ನು ಅರಿಯುವ ಯತ್ನವನ್ನು ಈ ತಂಡ ಮಾಡಿದೆ

    ನಮ್ಮ ದೇಶದ ರಾಜಕೀಯ ನಕ್ಷೆಯಲ್ಲಿ ತಮಿಳುನಾಡು ಜನ ನಾಯಕರು, ಪಕ್ಷಗಳು ಮತ್ತು ಮತದಾರರ ನಡೆ ನುಡಿ ಉಳಿದ ಭಾಷೆಯ ಜನರಿಗೆ ವಿಚಿತ್ರ ಹಾಗೂ ವಿಲಕ್ಷಣ ಎಂದು ಕಾಣಿಸಬಹುದು.  ಅನ್ಯ ಪ್ರಾಂತ್ಯದ ಜನಕ್ಕೆ ಅಸಂಗತವೆನ್ನುವಂತಹದು ತಮಿಳು ಮತದಾರನಿಗೆ ಗ್ರಾಹ್ಯ ಇಲ್ಲವೇ ಮುಖ್ಯ ಎನ್ನಿಸಿರುವುದೇ ಇದಕ್ಕೆ ಕಾರಣ.

    ಒಮ್ಮೆ ಆಯ್ಕೆಯಾದ ಸರ್ಕಾರ ಇಲ್ಲವೇ ನಾಯಕನನ್ನು ಮತದಾರ ಮುಂದಿನ ಚುನಾವಣೆಯಲ್ಲಿ ಹೊಸಕಿ ಹಾಕಬಲ್ಲ. ಜನಪ್ರಿಯನಾಗಿದ್ದ ಸಾಹಿತಿ ಮುತ್ತುವೇಲು ಕರುಣಾನಿಧಿಯ ಸುಮಾರು ಎರಡು ದಶಕಗಳ ಆಡಳಿತವನ್ನು ಕಿತ್ತುಹಾಕಿ ಅಮ್ಮ ಜಯಲಲಿತರನ್ನು ಪಟ್ಟಕ್ಕೆ ತಂದದ್ದು ತಮಿಳು ಮತದಾರನ ಇಂಥ ನಿರ್ವಿಕಾರ ಭಾವನೆಗೊಂದು ನಿದರ್ಶನ.

    ಈಗಲೂ ಅಷ್ಟೆ.  ಇವತ್ತಿಗೂ ತಮಿಳುನಾಡು ಮತದಾರನ ಮನಸ್ಸು ಒಂದು ರೀತಿ ಒಗಟು.  ನಾಳೆ ಏಪ್ರಿಲ್ –  ಮೇ ಚುನಾವಣೆಯಲ್ಲಿ ತಮಿಳು ಮತದಾರ ಯಾರನ್ನು  ಕೆಳಗಿಳಿಯುವಂತೆ, ಯಾರನ್ನು ಮೇಲಿರಿಸುವನೋ  ಹೇಳಲಾಗದು.

    ಎಚ್ಚೆತ್ತ ಮತದಾರರ ನಿರೀಕ್ಷೆ

    ಭಾರತದಂತಹ ಅಭಿವೃದ್ಧಿಶೀಲ ಮತ್ತು ವಿಕಸಿತ ಪ್ರಜಾತಂತ್ರದಲ್ಲಿ ಜನಕಲ್ಯಾಣ ಆಗಬೇಕಾದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿ ಗಳು ಜನ ಮನದ ನಾಡಿಯ ಸ್ಪಂದನೆ ತಿಳಿಯಬೇಕೆಂದು ನಮ್ಮ ಸಂವಿಧಾನ ರಚನೆಕಾರರು ನಿರೀಕ್ಷಿಸಿದ್ದರು. ಸಂವಾದ, ಭಾಷಣ, ಸಭೆ ಸಮಾರಂಭ ಇತ್ಯಾದಿ ವೇದಿಕೆಗಳ ಮೂಲಕ ಪರಸ್ಪರ ಸ್ಪರ್ಧಿ ಮತ್ತು ಮತದಾರ ವಿಚಾರವಿನಿಮಯ ನಡೆಸಬೇಕೆಂದು  ಗಾಂಧೀಜಿ, ಅಂಬೇಡ್ಕರ್, ಪಟೇಲ್ ಮೊದಲಾಗಿ ನಮ್ಮ ಹಿರಿಯರು ಆಶಿಸಿದ್ದರು.ಇಂದು ನಡೆಯುವ ಚುನಾವಣೆಗಳಲ್ಲಿ ಸಂವಿಧಾನದ ಆಶೋತ್ತರಗಳನ್ನು ಸುಸ್ಥಿರಗೊಳಿಸುವ ಯಾವ ಪ್ರಯತ್ನವೂ ನಡೆಯುತ್ತಿಲ್ಲ.

    ಬೆಂಗಳೂರಿನ ವರದಿಗಾರರಾದ ನಾವು ಚುನಾವಣೆಯ ಸಮಯದಲ್ಲಿ ಜನಾಭಿಪ್ರಾಯ ಸಮೀಕ್ಷೆ ನಡೆಸುವ ಪ್ರಯತ್ನ ಮಾಡುತ್ತಿದ್ದೇವೆ. ತಮಿಳುನಾಡಿನಲ್ಲಿ ಈಗಾಗಲೇ ಎರಡು ವಿಧಾನಸಭಾ ಚುನಾವಣೆಗಳ ಸಮೀಕ್ಷೆ ನಡೆಸಿದ ಅನುಭವ ನಮ್ಮದು.

    ತಮಿಳರಿಗಿರುವ ಭಾಷೆ ನಂಟು

    ತಮಿಳು ಮತದಾರ ದೇಶದ ಉಳಿದೆಡೆಗಳಲ್ಲಿನ ಮತದಾರರಿಗಿಂತ ಕೊಂಚಮಟ್ಟಿಗೆ ಎಚ್ಚೆತ್ತ ಪ್ರಜೆ. ಪಶ್ಚಿಮ ಬಂಗಾಳ ಮತ್ತು ಕೇರಳ ಸಮಾಜಗಳಲ್ಲಿಯೂ ಇದೇ ವಾತಾವರಣವಿದೆ. ಈ ಮೂರೂ ಸಮಾಜಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ತಮಿಳುನಾಡಿನಲ್ಲಿ ಚುನಾವಣೆ ಸಮಯದಲ್ಲಷ್ಟೇ ಅಲ್ಲ, ಉಳಿದ ಕಾಲದಲ್ಲಿ ಸಹಿತ ತಾಯ್ನುಡಿಯ ಮೂಲಕ ಮತದಾರನ ನಾಡಿಮಿಡಿತ ಮತ್ತು ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡು ಜನಸಾಮಾನ್ಯರ ಸಂಪರ್ಕವನ್ನು ಸಾಧಿಸಿವೆ ಇಲ್ಲಿಯ ರಾಜಕೀಯ ಪಕ್ಷಗಳು.

    ಚುನಾವಣೆ ಸಮಯದಲ್ಲಂತೂ  ತಮಿಳುನಾಡು  ರಾಜಕೀಯ ಪಕ್ಷಗಳಿಗೆ ಜನಮನದ ಒಲವು ಗಳಿಸಿ, ಯಶಸ್ವಿಯಾಗಲು ತಮಿಳು ಸಾಹಿತ್ಯ ಮತ್ತು ಸಂಸ್ಕೃತಿಯೇ ಸಾಧನ ಮತ್ತು ಅಸ್ತ್ರ.ಇಲ್ಲಿ ತಮಿಳೇ ಬಂಡವಾಳ. ತಮಿಳು ಭಾಷಣಗಳೇ ಜೇನುತುಪ್ಪ. 

    ಭಾಷೆ ಮತ್ತು ಸಂಸ್ಕೃತಿಯ ಬಗೆಗಿರುವ ಶುದ್ಧಾಂತ:ಕರಣ, ನಂಟು ಮತ್ತು ದಿನ ಬಳಕೆಯನ್ನು ಕಂಡಿದೆ. ಭಾಷಾವಾರು ಪ್ರಾಂತ್ಯ ವಿಂಗಡಣೆಯ ಪರಿಕಲ್ಪನೆ ಎಲ್ಲಾದರೂ ಸಾಫಲ್ಯ ಗೊಂಡಿದ್ದರೆ ಅದು ತಮಿಳುನಾಡಿನಲ್ಲಿ ಎನಿಸುತ್ತದೆ.

    ಬ್ರಿಟಿಷರು ಮರಳಿ ಹೋಗುವಾಗ ಬಿಟ್ಟುಹೋದ ಬಳುವಳಿ ಇಂಗ್ಲಿಷ್ ಭಾಷೆ. ದುರದೃಷ್ಟವೆಂದರೆ ಇಂಗ್ಲಿಷ್ ಅರಿವಿದ್ದೋ ಇಲ್ಲದೆಯೋ ಪ್ರಾದೇಶಿಕ ಸಂಸ್ಕೃತಿ ಮತ್ತು ಸಾಹಿತ್ಯವನ್ನು ನುಂಗಿ ಹಾಕುತ್ತಿದೆ. ಕನ್ನಡದಂತಹ ಪ್ರಾಚೀನ ಭಾಷೆಯ ದಿನಬಳಕೆ ಮಾತಿನಲ್ಲಿ ಪ್ರತಿ ಎರಡನೆಯ ಪದ ಇಂಗ್ಲಿಷ್ ಆಗದಿರುವುದು ಶೋಚನೀಯ.

    ತಮಿಳು ಸಮಾಜ ಇದಕ್ಕೆ ಹೊರತಾಗಿದೆ ಆರ್ಷೇಯವಾದ ಅಪ್ಪಟ ತಮಿಳಿನ ಮೇಲೆ ಎಳ್ಳಷ್ಟೂ ಪ್ರಭಾವ ಬೀರಿಲ್ಲ. ತಮಿಳು ಸಾಹಿತ್ಯ, ತಮಿಳು ಸಂಗೀತ ,ತಮಿಳು ಸಂಸ್ಕೃತಿ, ತಮಿಳು ವಿಜ್ಞಾನ ಹೀಗೆ ಜನಸಾಮಾನ್ಯರ ಬದುಕಿನ ಎಲ್ಲ ಪ್ರಕಾರಗಳು ಸ್ವಚ್ಛವಾಗಿದೆ ಪರಿಶುದ್ಧವಾಗಿದೆ. ಬದುಕಿನಲ್ಲಿ ಬೆರೆತಿದೆ.  ಹೀಗಾಗಿ ತಮಿಳು ಭಾಷಿಕರು ತಮ್ಮ ಭಾಷೆಯನ್ನು ಮುತ್ತಮಿಳ್,  ಸೆಂದಮಿಳ್ ಎಂದು ಅಭಿಮಾನದಿಂದ ಹೇಳಿಕೊಳ್ಳುವುದರಲ್ಲಿ ಅರ್ಥವಿದೆ.

    ನಾಯಕರುಗಳಲ್ಲಿರುವ ಭಾಷಾಪ್ರಭುತ್ವ

    ನಾವು ಚುನಾವಣೆಯ ಸಂದರ್ಭದಲ್ಲಿ ಕಂಡದ್ದು ತಮಿಳು  ರಾಜಕೀಯ ನಾಯಕರುಗಳಲ್ಲಿರುವ ಭಾಷಾಪ್ರಭುತ್ವ ಮತ್ತು ತಾಯ್ನುಡಿಯಲ್ಲಿ ಮತದಾರರನ್ನು ಸ್ಪರ್ಶಿಸುವ ನುಡಿ ನರ್ತನ.

    ಅಂದಿನ ರಾಜಕಾರಣಿಗಳಾದ ಕಾಮರಾಜ್ ಮತ್ತು ಅಣ್ಣಾದೊರೈ ರವರ  ಮಾತುಗಳಂತೂ ತಮಿಳಿನ ಮುತ್ತು ಮಾಣಿಕ್ಯದಂತಿರುತ್ತಿದ್ದವು. ಕರುಣಾನಿಧಿ, ಎಂಜಿಆರ್, ಜಯಲಲಿತಾ, ಕ್ಯಾಪ್ಟನ್ ವಿಜಯಕಾಂತ್, ಮೈಕೋ ಅನ್ಬಳಗನ್, ಪುನರೂತಿ ರಾಮಚಂದ್ರನ್, ಇವಿಎಸ್ ಅಳಂಗೋವನ್, ತೊಳ್ ತಿರುಮಾಮಲನ್ , ಸಾಹಿತಿ ಮನುಷ್ಯ ಪುತ್ರ ನ್, ಚೋ.ರಾಮಸ್ವಾಮಿ,ಚಾರು ನಿವೇದಿತಾ,  ಎ ದಕ್ಷಿಣಾಮೂರ್ತಿ – ಹೀಗೆ ಜನ ನಾಯಕರು, ಚಿಂತಕರು , ಸಾಹಿತಿಗಳು ಅಚ್ಛ ತಮಿಳಿನಲ್ಲಿ, ಸ್ವಚ್ಛ ತಮಿಳಿನಲ್ಲಿ ಮಾತನಾಡಿ, ಮತದಾರರು ಮತ್ತು ಸಾಮಾನ್ಯ ತಮಿಳಿಗರನ್ನು ತಾಯ್ನುಡಿಯ ಪ್ರೇಮಿಗಳನ್ನಾಗಿ ಮಾಡಿದ್ದನ್ನೂ ತಂದಿದ್ದೇವೆ.

    ಜಯಲಲಿತಾ ಮೊದಮೊದಲು ಮಡಿವಂತಿಕೆ ತೋರಿಸಿ ಚುನಾವಣೆಗಳಲ್ಲಿ ಮಾತನಾಡಲು ಹಿಂಜರಿದಿದ್ದರು. ಆದರೆ ಡಿಎಂಕೆ ನಾಯಕರ ಅಸ್ಖಲಿತ ಮತ್ತು ಲೀಲಾಜಾಲ ಮಾತಿನ ಮೋಡಿಯಲ್ಲಿ ಮತದಾರರು ತೇಲಿಹೋಗುತ್ತಿದ್ದುದನ್ನು ಗುರ್ತಿಸಿದ ‘ಅಮ್ಮ’ ಬೀದಿಗಿಳಿದು, ಜನಭಾಷೆಯಲ್ಲಿ ಇಡೀ ತಮಿಳುನಾಡನ್ನು ಗೆದ್ದದ್ದು ಇತಿಹಾಸ.

    ಎಂ ಕರುಣಾನಿಧಿಯವರಂತೂ ತಮಿಳು ಜನಕ್ಕೆ ಶಬ್ಧಬ್ರಹ್ಮ.  ಇವರ  ಬದುಕು ಆರಂಭವಾದದ್ದೇ ಸಿನಿ ಲೇಖನದಿಂದ. ತಮಿಳು ಇತಿಹಾಸದ ಪುಟಪುಟಗಳನ್ನೂ ಮಧುರಗೀತೆಯಾಗಿ ಮಾಡಿ ತಮಿಳು ಹೃದಯಗಳನ್ನು ಗೆದ್ದ ಮೋಡಿಗಾರ ಕರುಣಾನಿಧಿ.

    ಬಹುತೇಕ ಇವರೆಲ್ಲರ ಚುನಾವಣಾ ಭಾಷಣಗಳಲ್ಲಿ ತಮಿಳು ಸಾಹಿತ್ಯ ಮತ್ತು ತಮಿಳು ಚಿಂತನದ ಮಾತುಗಳೇ ಮತದಾರನಿಗೆ ಹಿತವಾಗಿ ಕಾಣುತ್ತಿದ್ದವು.

    ರಾಜಕೀಯ ಭಾಷಣದಲ್ಲಿ ಸಾಹಿತ್ಯ

    ಸ್ವಾತಂತ್ರ್ಯಾನಂತರದ ಚುನಾವಣಾ ಭಾಷಣಗಳಲ್ಲಿ ಸಾಹಿತ್ಯಕ್ಕೆ ಪ್ರಾಧಾನ್ಯತೆ ನೀಡಿರುವುದು ತಮಿಳರ ವಿಶೇಷ. ಇಂದಿಗೂ ಸ್ವಾತಂತ್ರ್ಯ ಪೂರ್ವದ ಸುಬ್ರಹ್ಮಣ್ಯ ಭಾರತೀಯಾರ್ ರವರನ್ನು ಅಭ್ಯರ್ಥಿ ಗಳು ನೆನೆಯುವುದುಂಟು. ದ್ರಾವಿಡಕಳಗಂ ಪಕ್ಷವನ್ನು ಕಟ್ಟಲು ಪೆರಿಯಾರ್ ಇ.ವಿ. ರಾಮಸ್ವಾಮಿ ನಾಯ್ಕರ್ ತಮಿಳು ಸಾಹಿತ್ಯದ ಶಿಲಪ್ಪಾದಿಕಾರಂ (ಎರಡನೆಯ ಶತಮಾನ) ಮತ್ತು ತಿರುಕ್ಕುರಳ್ ಗಳಂತೆ ಉಲ್ಲೇಖಿಸುತ್ತಿದ್ದರಂತೆ. ಇಂದಿಗೂ ರಾಜಕೀಯ ಭಾಷಣಗಳ ಒಂದು ಭಾಗದಂತಿದೆ ಮುಪ್ಪಾಲ್ ಮತ್ತು ಕುರುಳ್ (ಮಧ್ಯಕಾಲೀನ ಸಾಹಿತ್ಯ) ಹಾಗೂ ಚೆಂಗ ಸಾಹಿತ್ಯದ ಪ್ರಕಾರಗಳು.

    ಖ್ಯಾತ ಚಿಂತಕರಾದ ಕಂಬಂರ್, ತಿರುವಳ್ಳುವರ್ ,ಕಣ್ಣದಾಸನ್,  ವೈರಮುತ್ತು, ನಾಗೂರ್ ಹನೀಫ, ನಾಮಕ್ಕಲ್ ರಾಮಲಿಂಗಮ್, ಜಯಕಾಂತನ್ ಇವರೇ ಮೊದಲಾದ ತಮಿಳು ಸಾಹಿತ್ಯ ದಿಗ್ಗಜಗಳ ಕೃತಿಗಳನ್ನು ನಿರರ್ಗಳವಾಗಿ ಉಪಯೋಗಿಸಿ ಇಂದಿಗೂ ತಮಿಳು ಜನನಾಯಕರು ಚುನಾವಣೆ ಗೆಲ್ಲುತ್ತಿದ್ದಾರೆ.

    ಮುಂದಿನ ಸಮೀಕ್ಷೆಯಲ್ಲಿ ಇಂದಿನ ತಮಿಳು ಚುನಾವಣೆ ದೃಶ್ಯ ಗಳನ್ನು ಪ್ರಸ್ತುತಪಡಿಸಲಿದ್ದೇವೆ. 


    ಎಸ್ .ಕೆ. ಶೇಷಚಂದ್ರಿಕ ನಾಡಿನ ಹಿರಿಯ ಪತ್ರಕರ್ತರು.  ಭಾರತ ಸರಕಾರದ ಕ್ಷೇತ್ರ ಪ್ರಚಾರಾಧಿಕಾರಿಯಾಗಿ, ದೂರದರ್ಶನ, ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕ, ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯೂ ಆಗಿದ್ದರು.ದಿ ಟ್ರಿಬ್ಯೂನ್ ಪತ್ರಿಕೆಯ ವಿಶೇಷ ವರದಿಗಾರರು ಆಗಿ ಸೇವೆ ಸಲ್ಲಿಸಿದ ಅವರು ಈಗ ಬೆಂಗಳೂರು ನ್ಯೂಸ್ ಬ್ಯೂರೋದ ವಿಶೇಷ ವರದಿಗಾರರು ಹಾಗೂ ಗಾಂಧಿಯನ್ ಥಾಟ್ಸ್ ನ ವಿಸಿಟಿಂಗ್ ಪ್ರೊಫೆಸರ್ ಕೂಡ ಹೌದು.


    pic By L.vivian.richard at English Wikipedia

    ಮಲಗಿದ್ದಾಗ ನಮ್ಮ ‘ಕೆಳಗೆ’ ಹೂವು ಇದ್ರೆ ಪ್ರಥಮ ರಾತ್ರಿ, ನಮ್ಮ ‘ಮೇಲೆ’ ಹೂವಿದ್ದರೆ ಅಂತಿಮ ರಾತ್ರಿ

    ಬಣ್ಣಗಳಿಗೆ ಉದಾಹರಣೆ ಈ ಹೂವು . ಜಗತ್ತಿನಲ್ಲಿ ಲಕ್ಷಾಂತರ ರೀತಿಯ ಹೂವುಗಳಿದ್ದರೂ ಪ್ರತಿಯೊಂದು ಹೂವು ಆಕಾರದಿಂದಲೂ ಪರಿಮಳದಿಂದಲೂ ಬೇರೆ ಬೇರೆ ರೀತಿಯದ್ದಾಗಿರುವುದು ವಿಶೇಷವೇ ಸರಿ .

    ಅದೇನೋ ಗೊತ್ತಿಲ್ಲ ಹೂವು ಅನ್ನೋ ಪದ ಕಿವಿಗೆ ಬಿದ್ದಾಕ್ಷಣ ಮನಸ್ಸು ಪ್ರಶಾಂತವಾಗುತ್ತದೆ . ಹೂವಿಗೆ ಕೈ ಇಟ್ಟ ಎಂತಹ ಒರಟನ ಕೈ ಸಹ ಮೃದುವಾಗುತ್ತದೆ . ಹೂವು ಹಗುರವಾಗಿದ್ದರೂ ಸಹ ತುಂಬಾ ತೂಕದ ಬೆಲೆ ಉಳಿಸಿಕೊಂಡಿದೆ .

    ಘೋರಯುದ್ದವನ್ನು ನಿಲ್ಲಿಸುವ ಶಕ್ತಿ ಹೂವಿಗಿದೆ . ಒಳ್ಳೆಯ ಮನಸ್ಸುಗಳನ್ನು ಹೂವಿಗೆ ಹೋಲಿಸುತ್ತಾರೆ . ಹೆಣ್ಣು ಮಕ್ಕಳಿಗೆ ಹೂವಿನ ಹೆಸರನ್ನೇ ಇಡುತ್ತಾರೆ .

    ಹೂವು ಅಂದರೇನೇ ಶ್ರೇಷ್ಠ . ಧರ್ಮ ಗ್ರಂಥಗಳಲ್ಲಿ ಹೂವಿನ ಬಗ್ಗೆ ಅದ್ಭುತವಾದ ಕತೆಗಳಿವೆ . ಬಿಡಿಯಾಗಿದ್ದಾಗ ಹೂ ಕಟ್ಟಿದಾಗ ಹೂವು . ಮುಳ್ಳಿನ ಮಧ್ಯೆಯೇ ಇರಲಿ ಬೇಲಿಯ ಮಧ್ಯೆಯೇ ಇರಲಿ ಕೆಸರಿನ ನಡುವೆಯೇ ಇರಲಿ ತಲೆಯೆತ್ತಿ ನಿಲ್ಲುತ್ತದೆ .

    ಹೂವಿಲ್ಲದೇ ಜಗತ್ತನ್ನ ಊಹಿಸಿಕೊಳ್ಳಲು ಸಾಧ್ಯವಿಲ್ಲ . ದೇವರನ್ನು ಪೂಜಿಸಲು ,ಕವಿಗಳು ಬರೆಯಲು , ಹೆಂಗಸರು ಮುಡಿಯಲು , ಗಾಯಕರು ಹಾಡುಲು , ರೈತರು ದುಡಿಯಲು ಹೂವು ಬೇಕು . ಇದಕ್ಕೆಂದೇ ಒಂದು ಮಾರುಕಟ್ಟೆ ಇದೆ .

    ಶೃಂಗಾರಕ್ಕೇ, ಸಿಂಗಾರಕ್ಕೇ ,ಸನ್ಮಾನಕ್ಕೆ, ಸಮಾರಂಭಕ್ಕೆ, ಆರಾಧನೆಗೆ ಸಮಾರಾಧನೆಗೆ ಹೂವು ಕಡ್ಡಾಯ .

    ದೇವಸ್ಥಾನದಲ್ಲಿ ಬಲಗಡೆ ದೇವರ ವಿಗ್ರಹಕ್ಕೆ ಸಿಕ್ಕಿಸಿದ್ದ ಹೂವು ಬಿದ್ದರೆ ವರ ಸಿಕ್ಕಿತೆಂಬ ನಂಬಿಕೆ . ಹುಡುಗ ಕೊಟ್ಟ ಹೂವು ಹುಡುಗಿ ಸ್ವೀಕರಿಸಿದರೆ ಪ್ರೀತಿ ಒಪ್ಪಿದಳೆಂಬ ಖಾತ್ರಿ .

    ಕವಿಗಳು ಕತೆಗಾರರು ಸಾಹಿತಿಗಳು ಹೂವು ಮಾತನಾಡುತ್ತದೆ ಎಂದು ಬಣ್ಣಿಸುತ್ತಾರೆ ಆದರೆ ಈ ಹೂವು ಮಾತಾಡೋದು ಹೆಂಗಸರ ಜೊತೆ ಮಾತ್ರ. ಅದು ನಮಗೆ ಹೆಂಗ್ ಗೊತ್ತಾಗುತ್ತೆ ಅಂದ್ರೆ ಅವರು ಪ್ರತೀ ಹಬ್ಬದಲ್ಲೂ ‘ ಹೂವನ್ನ ಮಾತಾಡ್ಸಕ್ಕೇ ಆಗಲ್ಲ ಅಷ್ಟು ರೇಟಾಗೋಗಿದೆ ಅಂತಿರ್ತಾರೆ .

    ಯಾರೊ ಎಷ್ಟು ಚೆನ್ನಾಗಿ ಹೇಳಿದಾರೆ ನೋಡಿ …. ಮಲಗಿದ್ದಾಗ ನಮ್ಮ ‘ ಕೆಳಗೆ ‘ ಹೂವು ಇದ್ರೆ ಪ್ರಥಮ ರಾತ್ರಿಯಂತೆ , ನಮ್ಮ ‘ ಮೇಲೆ ‘ ಹೂವಿದ್ದರೆ ಅಂತಿಮ ರಾತ್ರಿಯಂತೆ .

    ಬಣ್ಣಗಳಿಗೆ ಉದಾಹರಣೆ ಈ ಹೂವು . ಜಗತ್ತಿನಲ್ಲಿ ಲಕ್ಷಾಂತರ ರೀತಿಯ ಹೂವುಗಳಿದ್ದರೂ ಪ್ರತಿಯೊಂದು ಹೂವು ಆಕಾರದಿಂದಲೂ ಪರಿಮಳದಿಂದಲೂ ಬೇರೆ ಬೇರೆ ರೀತಿಯದ್ದಾಗಿರುವುದು ವಿಶೇಷವೇ ಸರಿ .

    ಹೂವಿನ ಆಯಸ್ಸು ತುಂಬಾನೇ ಕಡಿಮೆಯಾದರೂ ಇದ್ದಷ್ಟೂ ಕಾಲ ನಗುನಗುತ್ತಾ ಉಪಯೋಗವಾಗಿಯೇ ಬಾಡುತ್ತದೆ . ಬಿಡಿಸದೇ ಗಿಡದಲ್ಲಿಯೇ ಇದ್ದರೆ ಉದುರಿ ಗೊಬ್ಬರವಾದರೂ ಆಗುತ್ತದೆ . ಹೂವಿಗೂ ಒಂದು ರುಚಿಯಿದೆ ಅದರ ಹೆಸರೇ ಜೇನು .

    Photo by Boris Smokrovic on Unsplash

    ಖಾಸಗಿ ಶಾಲಾ ಕಾಲೇಜುಗಳ ಶುಲ್ಕ ಸಮಸ್ಯೆ ಪರಿಹಾರಕ್ಕೆ ಸಮಿತಿಗಳ ರಚನೆ

    ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳ ಶುಲ್ಕಗಳ ಕುರಿತ ಪೋಷಕರ ತರಕಾರುಗಳ ಪರಿಹಾರಕ್ಕೆ ಅಧಿಕಾರಯುಕ್ತ ಸಮಿತಿಗಳನ್ನು ರಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಕೋವಿಡ್-19ರ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು 2019-20ನೇ ಸಾಲಿನ ಬೋಧನಾ ಶುಲ್ಕದ ಶೇ. 70ರಷ್ಟು ಮೊತ್ತವನ್ನು ಒಟ್ಟಾರೆ ಶುಲ್ಕವನ್ನಾಗಿ ಪಡೆಯಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಜ. 29ರಂದು ಆದೇಶ ಹೊರಡಿಸಿದ್ದು, ಆದೇಶದ ಭಾಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ ಈ ಸಂಬಂಧದ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಯುಕ್ತ ಸಮಿತಿಗಳನ್ನು ರಚಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ 6 ವಲಯಗಳಲ್ಲಿ ಪ್ರತ್ಯೇಕ ಸಮಿತಿಗಳು, ಮೈಸೂರು ಜಿಲ್ಲೆಯಲ್ಲಿ 2 ಸೇರಿದಂತೆ ರಾಜ್ಯದ ಎಲ್ಲ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಂದೊಂದು ಸಮಿತಿಯನ್ನು ರಚಿಸಲಾಗಿದೆ. ಇಲಾಖಾ ನಿರ್ದೇಶಕರು, ಸಹ ನಿರ್ದೇಶಕರು, ಡಿಡಿಪಿಐ, ಡಯಟ್ ಪ್ರಾಚಾರ್ಯರು, ಡಯಟ್‍ನ ಹಿರಿಯ ಉಪನ್ಯಾಸಕರನ್ನೊಳಗೊಂಡ ವಿವಿಧ ಜಿಲ್ಲಾ ಸಮಿತಿಗಳನ್ನು ರಚಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಪೋಷಕರು ಪ್ರಸ್ತುತ ವರ್ಷದ ಶುಲ್ಕ ಪಾವತಿಯ ಸಂಬಂಧದ ಸಮಸ್ಯೆಗಳನ್ನು ಈ ಸಮಿತಿಯ ಮುಂದೆ ಪ್ರಸ್ತಾಪಿಸಿ ಪರಿಹರಿಸಕೊಳ್ಳಬಹುದೆಂದು ಸಚಿವರು ತಿಳಿಸಿದ್ದಾರೆ.

    ಇಂತಹ ಸಮಸ್ಯೆಗಳ ಸಂದರ್ಭದಲ್ಲಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸುವ ಸಂಬಂಧದಲ್ಲಿ ಪೋಷಕರು, ಶಾಲೆಗಳು ಯಾವ ಕ್ರಮಗಳನ್ನು ಅನುಸರಿಸಬೇಕು ಮತ್ತು ಅರ್ಜಿ ಸ್ವೀಕರಿಸುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮಿತಿಗಳ ಕರ್ತವ್ಯಗಳ ಕುರಿತು ಸವಿವರ ಕ್ರಮಗಳನ್ನು ಸುತ್ತೋಲೆಯಲ್ಲಿ ವಿವರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಸುತ್ತೋಲೆಯ ವಿವರ ಇಲ್ಲಿದೆ:

    Photo by Kimberly Farmer on Unsplash

    ‘ಬ್ರೂನೊ’ ನ ಕೈ ಕುಲುಕುವ ಮುನ್ನ…

    ಕನ್ನಡಪ್ರೆಸ್.ಕಾಮ್ ನ ಜನಪ್ರಿಯ ಬರಹಗಾರ್ತಿ ನಂದಿನಿ ಹೆದ್ದುರ್ಗ ಅವರು ಇತ್ತೀಚೆಗೆ ಬರೆದ ಪ್ರಬಂಧಗಳು ಪುಸ್ತಕ ರೂಪ ಪಡೆದಿದೆ.ಗುರುವಾರವಷ್ಟೆ ಮಾರುಕಟ್ಟೆಗೆ ಬಂದಿರುವ ಈ ಪುಸ್ತಕವನ್ನು ತೇಜು ಪ್ರಕಾಶನ ಹೊರ ತಂದಿದೆ. ಖ್ಯಾತ ವಿಮರ್ಶಕ ಕೆ. ಸತ್ಯನಾರಾಯಣ ಮುನ್ನುಡಿ ಬರೆದಿದ್ದಾರೆ. ಪತ್ರಕರ್ತ ಬಿ ಎಂ ಹನೀಫ್ ಬೆನ್ನುಡಿ ಬರೆದಿದ್ದಾರೆ. ಈ ಸಂಕಲನದಲ್ಲಿ ಹದಿನಾರು ಪ್ರಬಂಧಗಳಿದ್ದು ಓದಿಸಿಕೊಂಡು ಹೋಗುತ್ತವೆ. ಲೇಖಕಿ ಬರೆದ ಮಾತುಗಳು ಇಲ್ಲಿವೆ.

    ಬ್ರೂನೋ ದಿ ಡಾರ್ಲಿಂಗ್
    ಬಿಡುವ ಮುನ್ನ…

    ಸಾಹಿತ್ಯದ ಸಾಂಗತ್ಯಕ್ಕೆ ಆತ್ಮೀಯರಾದವರು ಆಗಾಗ ಕೇಳುವ ಪ್ರಶ್ನೆ’ಏನು ಬರೆದ್ರಿ ಹೊಸದು.?’

    ಮೂಲತಃ ಕವಿತಾಪ್ರಿಯಳಾದ ನಾನು ಕವಿತೆ ಹುಟ್ಟದ ಹೊತ್ತಿನಲ್ಲಿ ಇಂತಹ ಪ್ರಶ್ನೆ ಎದುರಾದಾಗೆಲ್ಲ ‘ಕವಿತೆ ಹುಟ್ಟುತ್ತಿಲ್ಲ’ ಅಂತ ಪ್ಯಾಲಿ ನಗು‌ನಕ್ಕು ನನ್ನ ದುಃಖವನ್ನು ಅವರಿಗೂ ಹಂಚಿ ಸಮಾನದುಃಖಿಯಾಗಲು ಸದಾ ಯತ್ನಿಸುತ್ತಿದ್ದೆ.

    ಆದರೆ ಎದುರಿನಿಂದ ಬರುತ್ತಿದ್ದ ಪ್ರತಿಕ್ರಿಯೆಯ ಕಿರಿಕಿರಿ ಎಂಥದ್ದು ಅಂತೀರಾ.?

    ವಾಟ್ಸಪ್ಪಿನ ಉಚಿತ ಈ‌ಮೋಜಿಗಳನ್ನು (ಅದೂ ಗಹಗಹಿಸಿ ನಗ್ತಿರುವುದು)ಕಳಿಸಿ ನನ್ನ ಮುರುಮುರು ಮನಸ್ಸನ್ನು ಮತ್ತಷ್ಟು ಹದಗೆಡಿಸ್ತಿದ್ರು.

    ಇರಲಿ.

    ಕೋಪವೂ ಒಳ್ಳೆಯದೇ.ಹಂಗೆ ವಿನಾಕಾರಣ ಬಂದ ಚಂದದ ಸಿಟ್ಟೇ ಇಲ್ಲಿನ ಅನೇಕ ಲಘುಬರಹಗಳಿಗೆ ಕಾರಣವಾಗಿದೆ.

    ನನ್ನ ಕವಿತೆಗಳನ್ನು ‌ಓದಲು ಯತ್ನಿಸಿ ‘ಏನೋಪಾ..ನಿನ್ನ ಕವಿತೆ ಈ‌ ಮಡ್ಡು ತಲೆಗೆ ಹಿಡಿಯೋದೇ ಇಲ್ಲ’

    ಅಂತಲೋ

    ‘ತಾಯೇ..ಕನ್ನಡದಲ್ಲೇ ಬರೀಬಾರದಾ’ಅಂತಲೋ ಅಂದು ಬೆಚ್ಚಿ‌ಬೀಳಿಸುವ ನನ್ನ ಸಾಹಿತ್ಯಾಭ್ಯಾಸಿಗಳಲ್ಲದ ಆತ್ಮೀಯರು ನನಗೆ ಆಗಾಗ ತಲೆ ಕೆಡಿಸಿದ್ದಿದೆ.

    ‘ಹಾಗಿದ್ದರೆ ನನ್ನ ಕವಿತೆಗಳು ಓದಿದವರೆದೆಯ ರಸೋತ್ಪತ್ತಿಗೆ ಕಾರಣವಾಗಿಲ್ಲವೇ’

    ಇಂತಹದೊಂದು‌ ಮೂಲಭೂತ ಪ್ರಶ್ನೆ ನನ್ನನ್ನು ಇನ್ನಿಲ್ಲದಂತೆ ಕಾಡಿದ್ದೂ ಇದೆ.ಅಚ್ಚರಿಯೆಂಬಂತೆ ಆಗೀಗ ಬರೆದು ಪ್ರಕಟಿಸಿದ ಈ ಲೈಟ್ ರೀಡಿಂಗು ಬರಹಗಳು ಎಲ್ಲರನ್ನೂ ಮುಟ್ಟಿ ‘ಅಯ್ಯೋ..ನಂಗೂ ಹಂಗೇಯಾ..ನಮ್ಮನೆಲೂ ಅದೇಯಾ,ನಮ್ ಪಾರಿ ಮಾರುವಾಗಲೂ ಹಿಂಗೇ ಅತ್ತಿದ್ದೆ ,ನಮ್ ಜಾನಿನೂ ಹೀಗೇ…’ಎನ್ನುವ ಮುದ್ದಾದ ಪ್ರತಿಕ್ರಿಯೆಗಳು ಬಂದು ನನ್ನ ವಿಶ್ವಾಸವನ್ನು ಹೆಚ್ಚಿಸಿವೆ.

    ಕತೆ ಕವಿತೆಯ ಓದು ಹೃದಯಕ್ಕೆ ಘನಭಾರ ಎನ್ನುವ ಲೋಕವೂ ಇದೆ ಎನ್ನುವುದು ನನಗೆ ತಿಳಿದಿದ್ದೇ ಈ ಬರಹಗಳಿಗೆ ಬಂದ ಪ್ರತಿಕ್ರಿಯೆಯಿಂದ.

    ಇಂತಹ ಲೈಟ್ ರೈಟಿಂಗ್ ಬರಹಕ್ಕೆ ‘ತಲೆ ಒಂದಿಟ್ಟು ಓದಿದ್ರೆ ಉಳ್ಳಾಡಕೊಂಡು ನಗಬಹುದು.’ ಎನ್ನುವ ಮಾತು ಖುಷಿ ಕೊಡದಾ ಹೇಳಿ.?…

    ಇಲ್ಲಿನ ಕೊರೊನಾ ಋತುವಿನ ಬರಹಗಳಿಗೆ ಆಗಿನ ತತ್ತರದ ,ತತ್ವಾರದ ಪರಿಸರದಲ್ಲಿ ಪರಿಸ್ಥಿತಿಯಲ್ಲಿ ಲಘು ಧಾಟಿಯನ್ನು ಒದಗಿಸಲಾಗಿಲ್ಲ.

    ಆದಾಗ್ಯೂ ಅವುಗಳನ್ನೂ ಇಲ್ಲಿ ಒಳಗೊಂಡಿದ್ದೇನೆ.

    ಮುಂದೊಂದು ಕಾಲಕ್ಕೆ ಈ ಸಂಕಲನವನ್ನು ಮರುಓದಿಗೆ ಯಾರಾದರೂ ಎತ್ತಿಕೊಂಡರೆ ‘ಓಹ್ ಇದು ಕೊರೊನಾ ಕಾಲದ ಫಸಲು’ ಎಂದು ಕೊಳ್ಳಬಹುದು.

    ಬಂದ ಭಾವಗಳಿಗೆ ಕಾಲಕ್ಕೆ ತಕ್ಕಂತೆ ಕೊಂಚ ಲಘುತನವನ್ನೂ ಕೊಂಚ ಘನವನ್ನೂ ಪ್ರಾಮಾಣಿಕವಾಗಿ ಒದಗಿಸಿದ್ದೇನೆ ಅಂದುಕೊಂಡಿರುವೆ.

    ಬರೆಯುವವರು ಹೆಚ್ಚು ಹೆಚ್ಚು ಭೂತವನ್ನು ಧೇನಿಸುತ್ತಾ ನಾಸ್ಟಾಲ್ಜಿಕ್ ಆಗಬಾರದು ಎನ್ನುವ ಮಾತಿದೆ. ವರ್ತಮಾನದ ಯಾವ ಸಂಗತಿಯ ದಾಖಾಲಾತಿಗೆ ಹೊರಟರೂ ಅದು ಭೂತಕ್ಕೆ ಜಾರಿ ಮತ್ತೆ ವರ್ತಮಾನದಲ್ಲಿ ವಿರಮಿಸಿ ಭವಿಷ್ಯಕ್ಕೆ ಹೊರಳಿಕೊಳ್ಳುವುದು ನನಗೆ ಚಾಳಿಯಾಗಿದೆ.

    ಅಂತಹುದೇ ಹೆಚ್ಚುಹೆಚ್ಚು ನೆನಪುಗಳು ನನ್ನ ಈ ಬರಹಗಳಲ್ಲಿ ಕಂಡರೆ ಕೊಸರದಿರಿ.

    ಇಲ್ಲಿನ ಬ್ರೂನೋ ನಿಮ್ಮನೆಗೂ ಬಂದು ಬಿಸ್ಕತ್ತು ಕೇಳಿದರೆ,ನಮ್ ಗೌರಿ ನಿಮ್ಮ ಹೂದೋಟದ ದಾಸವಾಳ ಮುರಿದು ಹಾಕಿದರೆ, ನಾಮ ಪುರಾಣದ ಸಣ್ಣ ನಿರವಾಣಿ ನಿಮ್ಮೂರಲ್ಲೂ ಇದ್ದರೆ, ಇಲ್ಲಿನ ಉಗುಳುವೀರನ ಎಂಜಲು ನಿಮ್ಮ ಕಿರುಬೆರಳಿಗೂ ಹಾರಿದರೆ,ದೀಪಾವಳಿಗೆ ನೀವೂ ಪಟಾಕಿ ಬ್ಯಾಡಂತ ನಿರ್ಧರಿಸಿ ಬಿಟ್ಟರೆ ಆ ಮಟ್ಟಿಗೆ ಖುಷಿ ನನಗೆ.

    ನನ್ನ ಸೈನ್ ಥೀಟಾ ಓದಿದ ಗೆಳತಿಯೊಬ್ವಳು ‘ಆ ಥೀಟಾ ಮನೆಗೆ ‌ಬೆಂಕಿ ಬೀಳಲಿ ಮಾರಾಯ್ತಿ.ಅದರಿಂದಲೇ ನನ್ ಕತೆನೂ ಹೀಗಾದದ್ದು’ಅಂತ ಹಿಡಿ ಶಾಪ ಹಾಕಿದ್ದು ಕೇಳಿ ಸಮಾನ ಸುಖಿಗಳು ಬಾಳಾ ಇದಾರೆ ಲೋಕದಲ್ಲಿ ಅನಿಸಿ ಸಮಾಧಾನ ಪಟ್ಕೊಂಡಿದ್ದಿದೆ.

    ನನ್ನ ದಂತಕತೆಗೆ ‘ನಾವೆಲ್ಲಾ ಹಲ್ ಕಟ್ ಪುರಾಣದವರೇ’ಅಂದ ಗೆಳೆಯರು ಅದನ್ನು ಮತ್ತೆಮತ್ತೆ ಶೇರ್ ಮಾಡಿ ಬಂದ ಪ್ರತಿಕ್ರಿಯೆಯನ್ನು ನನಗೆ ಓದಿಸಿ ಸಂಭ್ರಮಿಸಿದ್ದಾರೆ.

    ‘ಕೊರೊನಾ ಹೇರಕಟ್ಟು’ ಕೊರೊನಾ ಋತುಮಾನ ಕಲಿಸಿದ ವಿಶೇಷ ಕೌಶಲ್ಯ ಎನ್ನುವುದನ್ನೂ ಇಲ್ಲಿ ಮರೆಯುವಂತಿಲ್ಲ ನೀವು.

    9449255628 ಈ ನಂಬರ್ ಗೆ ಫೋನ್ ಮಾಡಿದರೆ ಪುಸ್ತಕ ಪಡೆಯುವ ವಿವರ ದೊರೆಯುತ್ತದೆ.

    ಉತ್ತಮ ಆರೋಗ್ಯದ ಆಗರ ನಮ್ಮಕರ್ನಾಟಕದ ಹೆಮ್ಮೆಯ ಹಳ್ಳಿಕಾರ

    ಭಾರತವು 35ಕ್ಕೂ ಹೆಚ್ಚು ಸ್ಥಳೀಯ ಜಾತಿಯ ಗೋವುಗಳನ್ನು ಮತ್ತು ಏಳು ರೀತಿಯ ತಳಿಗಳ ಎಮ್ಮೆಗಳನ್ನು ಹೊಂದಿದೆ. ಭಾರತೀಯ ಜಾನುವಾರುಗಳನ್ನು ಗಿರ್, ರೆಡ್ ಸಿಂಧಿ, ಸಾಹಿವಾಲ್, ಡಿಯೋನಿ ಮತ್ತು ಹರಿಯಾನಾ, ಒಂಗೋಲ್, ಗಾವೊಲೊ, ರತಿ, ಕೃಷ್ಣ ಕಣಿವೆ, ಥಾರ್ಪಾರ್ಕರ್, ಕಾಂಕ್ರಾಜ್. ನಾಗೌರಿ, ಬಚೌರ್, ಖೇರಿಗಾರ್ . ಹಳ್ಳಿಕರ, ಖಿಲ್ಲಾರಿ, ಕಂಗಾಯಂ, ಅಮೃತಮಹಲ್ ಎದು ವರ್ಗೀಕರಿಸಲಾಗಿದೆ. ಜರ್ಸಿ, ಹಾಲ್ಸ್ಟೈನ್-ಫ್ರೈಷಿಯನ್, ಸ್ವಿಸ್-ಬ್ರೌನ್, ಗುರ್ನಸಿ, ಜರ್ಮನ್ ಫ್ಲೆಕ್ವಿಚ್, ಐರೆಶೈರ್ ಮತ್ತು ಕ್ರಾಸ್-ಬ್ರೀಡ್ಸ್ ಆಫ್ ಕರಣ್ ಸ್ವಿಸ್ ಮತ್ತು ಕರಣ್ ಫ್ರೀಸ್ ಭಾರತದಲ್ಲಿ ಗುರುತಿಸಲ್ಪಟ್ಟ ವಿದೇಶಿ ಜಾನುವಾರುಗಳಾಗಿವೆ.

    1970 ರ ದಶಕದಲ್ಲಿ ವಿದೇಶಿ ಗೋವುಗಳ ಮುಕ್ತ ಪ್ರವಾಹವಿತ್ತು. ಅಡ್ಡ ತಳಿ ಹಸುಗಳು ಹೆಚ್ಚಿನ ಹಾಲಿನ ಇಳುವರಿಗಾಗಿ ಪ್ರಚಲಿತದಲ್ಲಿದ್ದವು. ಆದರೆ, ಹಾಲಿನ ಗುಣಮಟ್ಟ ಅಷ್ಟಕಷ್ಟೆ. ಈ ಹಸುಗಳು ರೋಗಗಳಿಗೆ ಹೆಚ್ಚು ಒಳಗಾಗುತ್ತವೆ. ಭಾರತದ ಬಿಸಿ, ಉಷ್ಣವಲಯದ ಹವಾಮಾನ ಅವುಗಳಿಗೆ ಸರಿಹೊಂದುವುದಿಲ್ಲ. ಆಹಾರವು ಹೊಂದಿಕೆಯಾಗುವುದಿಲ್ಲ. ಜರ್ಸಿ ಮತ್ತು ಇತರ ಅಡ್ಡ ತಳಿಗಳು ಅನಿಲ ಮತ್ತು ಅತಿಸಾರದಿಂದ ಬಳಲುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಮೇವನ್ನು ಸೇವಿಸುತ್ತವೆ. ಪರಿಣಾಮವಾಗಿ ಅವು ನಿರ್ವಹಿಸಲು ಹೆಚ್ಚು ದುಬಾರಿ. ಇದಲ್ಲದೆ, ಅವುಗಳು ಕಡಿಮೆ ಹಾಲುಣಿಸುವ ಅವಧಿಯನ್ನು ಹೊಂದಿರುತ್ತವೆ.

    ದೇಸಿ ಗೋವುಗಳು

    ದೇಸಿ ಗೋವುಗಳು ಎಂದರೆ ಮೂಲತಃ ನಮ್ಮ ಸ್ಥಳೀಯ ಗೋವು ತಳಿಗಳು. ಕೆಲವು ಅಂತರ್ಗತ ದೈವಿಕ ಸದ್ಗುಣಗಳನ್ನು ಹೊಂದಿರುವ ರಾಸುಗಳು. ಭಾರತೀಯ ಹಸುಗಳು “ಬೋಸ್ ಇಂಡಿಕಸ್” ಪ್ರಭೇದಕ್ಕೆ ಸೇರಿರುವವು. . ಇವುಗಳ ಹಾಲು ಮಾತ್ರವಲ್ಲ ಮೂತ್ರ ಮತ್ತು ಸಗಣಿ ಕೂಡ ಉಪಯುಕ್ತ. ದೇಸಿ ಗೋವುಗಳು ರೋಗನಿರೋಧಕ ಶಕ್ತಿಯೊಂದಿಗೆ ಜನಿಸುತ್ತವೆ. ಈ ಕಾರಣದಿಂದಾಗಿ, ಅಮೆರಿಕ ಮತ್ತು ಯುರೋಪ್ ಭಾರತೀಯ ಹಸುಗಳನ್ನು ಆಮದು ಮಾಡಿಕೊಳ್ಳುತ್ತವೆ. ಅವುಗಳ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸ್ಥಳೀಯ ಪ್ರಭೇದಗಳೊಂದಿಗೆ ಅಡ್ಡ-ತಳಿ ಮಾಡುತ್ತಾರೆ.

    ದೇಸಿ ಹಸುವಿನ ಹಾಲಿನಲ್ಲಿ ಅಮೈನೋ ಆಮ್ಲಗಳಿದ್ದು, ಅದರ ಪ್ರೋಟೀನ್ ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ.ದೇಸಿ ಹಸುವಿನ ಹಾಲು ಮೂತ್ರಪಿಂಡಕ್ಕೆ ತುಂಬಾ ಒಳ್ಳೆಯದು. ಇದು ಬಿ 2, ಬಿ 3 ಮತ್ತು ಎ ಯಂತಹ ವಿಟಮಿನ್ ಗಳ ಸಮೃದ್ಧ ಮೂಲವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಸುವಿನ ಹಾಲು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಕಿಬ್ಬೊಟ್ಟೆಯ ಹುಣ್ಣಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದು ಗುದನಾಳ, ಸ್ತನ ಮತ್ತು ಚರ್ಮದ ಕ್ಯಾನ್ಸರ್ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ದೇಸಿ ಹಸುವಿನ ಹಾಲು ಸೀರಮ್ ಕೊಲೆಸ್ಟ್ರಾಲ್ ರಚನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಅತ್ಯುತ್ತಮ ನೈಸರ್ಗಿಕ ಆಂಟಿ-ಆಕ್ಸಿಡಾಂಟ್ಸ್ಗಳಲ್ಲಿ ಒಂದಾಗಿದೆ.

    ಮೈಸೂರು, ಹಳ್ಳಿಕಾರ್ ಎಂತಲೂ ಎಂದೂ ಕರೆಯಲ್ಪಡುವ ಈ ದೇಶಿ ತಳಿ ದಕ್ಷಿಣ ಭಾರತದ ಅತ್ಯುತ್ತಮ ಶ್ರಮಿಕ ತಳಿ ಎಂದು ಪರಿಗಣಿಸಲಾಗಿದೆ. ಸತತ 24 ಗಂಟೆ 10-14 ಟನ್ ಭಾರ ಎಳೆಯಬಲ್ಲ ಅಸದೃಶ ಶಕ್ತಿ ಸಾಮರ್ಥ್ಯ, ಅದ್ಭುತ ವೇಗ ಹೊಂದಿರುವ ಅಪರೂಪದ ತಳಿ. ದಿನಕ್ಕೆ 40-50 ಮೈಲಿ ದೂರವನ್ನು ಯಾವ ವಿಶ್ರಾಂತಿಯ ಅಗತ್ಯವಿಲ್ಲದೆ ಕ್ರಮಿಸಬಲ್ಲ ಹಳ್ಳಿಕಾರ್ ಕರ್ನಾಟಕದ, ಅಷ್ಟೇಕೆ ಇಡೀ ಭಾರತದ ಹೆಮ್ಮೆಯ ತಳಿ. ಈ ತಳಿಯ ಸಂತಾನೋತ್ಪತ್ತಿ ಪ್ರದೇಶವು ಮೈಸೂರು, ಮಂಡ್ಯ, ಬೆಂಗಳೂರು, ಕೋಲಾರ, ತುಮಕೂರು, ಹಾಸನ ಮತ್ತು ಕರ್ನಾಟಕದ ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡಿದೆ.

    ಉದ್ದ, ಲಂಬ ಮತ್ತು ಹಿಂದೆ ಬಾಗುವ ಕೊಂಬುಗಳು ಇವುಗಳ ವೈಶಿಷ್ಟ್ಯ. ಎತ್ತುಗಳಲ್ಲಿ ದೊಡ್ಡ ಬೆನ್ನಿನ ಉಬ್ಬು ಇರುತ್ತದೆ. ಬಿಳಿ ಬಣ್ಣದಿಂದ ಬೂದು ಮತ್ತು ಸಾಂದರ್ಭಿಕವಾಗಿ ಕಪ್ಪು ಮೈಬಣ್ಣಗಳು ತಳಿಯ ಗುಣಲಕ್ಷಣಗಳಾಗಿವೆ. ಕಣ್ಣುಗಳು, ಕೆನ್ನೆ, ಕುತ್ತಿಗೆ ಅಥವಾ ಭುಜದ ಪ್ರದೇಶದ ಸುತ್ತಲೂ ಬಿಳಿ ಗುರುತುಗಳು ಕಂಡುಬರುತ್ತವೆ. ಹಾಲಿನ ಇಳುವರಿಯ ಸರಾಸರಿ 222 – 542 ಕೆ.ಜಿ ಯಿಂದ 1134 ಕೆ.ಜಿ.ಗಳಾಗಿದ್ದು, ಸರಾಸರಿ ಹಾಲಿನ ಕೊಬ್ಬು 5.7%.

    ಈ ಜಾತಿಯ ದನಗಳು ಅವುಗಳ ಶಕ್ತಿ ಮತ್ತು ಸಹನೆಗೆ ಹೆಸರುವಾಸಿಯಾಗಿದೆ. ಮುಖ್ಯವಾಗಿ ಶ್ರಮಿಕ ಕೆಲಸದ ಉದ್ದೇಶಗಳಿಗಾಗಿ ಬಳಸಲಾಗುತ್ತಿದ್ದು ಇದನ್ನು ಭಾರತದಲ್ಲಿ ಶ್ರಮಿಕ ತಳಿ ಎಂದು ವರ್ಗೀಕರಿಸಲಾಗಿದೆ. ಸಂರಕ್ಷಣೆ ಮತ್ತು ಅಭಿವೃದ್ಧಿಯ ಮೂಲಕ ಮೈಸೂರು ರಾಜ್ಯದ ಹಿಂದಿನ ಮಹಾರಾಜರಿಂದ ಪ್ರೋತ್ಸಾಹ ಮತ್ತು ಕಾಳಜಿಯನ್ನು ಪಡೆದಿದೆ. ಈ ತಳಿ ಅಮೃತ್ ಮಹಲ್ ಜಾನುವಾರುಗಳ ಮೂಲ ಎಂದು ಹೇಳಲಾಗುತ್ತದೆ.

    ಹಳ್ಳಿಕಾರ್ ತಳಿಯ ಲಕ್ಷಣಗಳು:
    • ಕೌಟುಂಬಿಕತೆ: ದಕ್ಷಿಣ ಭಾರತದ ಅತ್ಯುತ್ತಮ ಶ್ರಮಿಕ ತಳಿ. ದಕ್ಷಿಣ ಭಾರತದ ಹೆಚ್ಚಿನ ತಳಿಗಳು ಈ ತಳಿಯಿಂದ ಹುಟ್ಟಿಕೊಂಡಿವೆ.
    • ಚರ್ಮ: ಮುಂಭಾಗ ಮತ್ತು ಹಿಂಭಾಗದ ಭಾಗಗಳಲ್ಲಿ ಬೂದು ಬಣ್ಣ, ಮುಖದ ಮೇಲೆ ತಿಳಿ ಬೂದು ಗುರುತು, ಕುತ್ತಿಗೆ ಮತ್ತು ದೇಹದ ಕೆಳಗೆ ಮಡಿಕೆಯುಳ್ಳ ಚರ್ಮ.
    • ಕಿವಿಗಳು: ಸಣ್ಣ ಹಾಗೂ ಕಿರಿದಾಗುತ್ತಾ ಹೋಗುವ ಕಿವಿಗಳು.
    • ಹಣೆ: ಪ್ರಮುಖ, ಸ್ವಲ್ಪ ಉಬ್ಬಿರುವ ನೋಟ, ಮಧ್ಯದಲ್ಲಿ ಉಬ್ಬು, ಉದ್ದನೆಯ ಮುಖ.
    • ಕೊಂಬುಗಳು: ಉದ್ದ, ಲಂಬ ಮತ್ತು ಹಿಂದೆ ಬಾಗುತ್ತವೆ. ಕಪ್ಪು ಮತ್ತು ತೀಕ್ಷ್ಣವಾಗಿರುತ್ತವೆ.
    • ಬಾಲ: ಕಪ್ಪು ತುದಿ.
    • ಮೂತಿ: ಬೂದು ಬಣ್ಣದಿಂದ ಕಪ್ಪು.

    (ಮುಂದಿನ ಲೇಖನದಲ್ಲಿ : ಹಸುವಿನ ಉತ್ಪನ್ನಗಳು ಮತ್ತು ಅದರಿಂದ ಆಗುವ ಆರೋಗ್ಯ ಲಾಭಗಳು)

    ದೇವರು ಬಂದಂತೆ ಬಂದು ಕಾಪಾಡಿದ ಎಂದು ಹೇಳುವುದು ಇದಕ್ಕೆ ಇರಬೇಕು

    ಕೆಲವೊಮ್ಮೆ ದೇವರು ಬಂದಂತೆ ಬಂದು ಕಾಪಾಡಿದ ಎಂಬ ಮಾತಿದೆಯಲ್ಲ . ಅಂತಹ ಅನುಭವ ನಿಮಗಾಗಿದೆಯೇ ? ಅದೂ ಹೆಸರು ಹೇಳಲೂ ಬರದಂಥ ದೇಶದಲ್ಲಿ ಹೋಗಿ ಸಿಕ್ಕಿಕೊಂಡಾಗ ಇಂತಹದೊಂದು ಅನುಭವ ಎಂದರೆ ನಿಜಕ್ಕೂ ಅದ್ಭುತ ಅನುಭವವೇ ಸರಿ .

    ಈಗ ಮೂರು  ವರ್ಷದ ಹಿಂದಿನ ಕಾಲ . ಆಗ ಹೀಗೆಲ್ಲ ಕರೋನ ಎಂಬ ಭಯವಿರಲಿಲ್ಲ . ಸಿಕ್ಕ ಸಿಕ್ಕವರನ್ನೆಲ್ಲ ಮಾತನಾಡಿಸಬಹುದಿತ್ತು . ಅದಲ್ಲದಿದ್ದರೆ ಕೊನೆ ಪಕ್ಷ ಒಂದು ನಗು ಆದರೂ ಕಾಣಿಸುತಿತ್ತು . ಈಗ ಹಾಗಿಲ್ಲ ಹೊರಗೆ ಹೋಗುವಂತಿಲ್ಲ . ಹೋದರೂ ಯಾರನೂ ಮಾತನಾಡಿಸುವಂತಿಲ್ಲ . ಟ್ರಿಪ್ ಹೋಗಬೇಕೆಂದರೆ ಮಾಸ್ಕ್ ನಿಂದ ಹಿಡಿದು ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡೆ ಹೋಗಬೇಕು .

    ಹೀಗೆ ಮೂರು  ವರ್ಷದ ಹಿಂದೆ ಕೆನರಿ ಐಲ್ಯಾಂಡ್ ಎಂಬಲ್ಲಿಗೆ ಪ್ರವಾಸ ಹೋಗಿದ್ದೆವು . ಹೊಸ ಪ್ರದೇಶಕ್ಕೆ ಪ್ರವಾಸಕ್ಕೆ ಹೋದಾಗ ಪ್ರವಾಸದ ಮಜಾದ ಜೊತೆಗೆ ಕೆಲವೊಮ್ಮೆ ಫಜೀತಿ ಆಗುವುದೂ ಕೂಡ ಉಂಟು . ಹಾಗೆ ಸುತ್ತಲು ಹೋದಾಗ ಕೈಯಲ್ಲಿದ್ದ ಮಗನಿಗಿನ್ನೂ ಎರಡು ವರ್ಷವಾಗಿತ್ತು . ಬೆಳಗ್ಗೆ ಸುಮಾರು ಹತ್ತುಗಂಟೆಗೆಲ್ಲ ನಾವಿದ್ದ ಕಾಟೇಜ್ ನಿಂದ ಹೊರಟು ಸುತ್ತಲಿನ ಪ್ರವಾಸಿ ತಾಣಗಳನ್ನು ನೋಡಲು ಹೊರಟೆವು . ನಾವಿದ್ದ ಕಾಟೇಜಿನಿಂದ ಸುಮಾರು ನಾಲ್ಕು ತಾಸು ಪ್ರಯಾಣ ಮಾಡಿ ಅಲ್ಲಿನ ಬೀಚ್ ಮತ್ತಿತರ ತಾಣಗಳನ್ನು ನೋಡಿ ಬಸ್ ನಲ್ಲಿ ಹಿಂತಿರುಗುತ್ತಿದ್ದೆವು. ಇನ್ನೂ ಸಂಜೆಯ ನಾಲ್ಕು ಗಂಟೆಯಾಗಿದ್ದರಿಂದ ಅಲ್ಲೇ ಇರುವ ಪಾಪಾಸು ಕಳ್ಳಿಯ ಗಾರ್ಡನ್ ನೋಡಿಕೊಂಡು ಹೋಗಬಹುದು ಎಂದು ಒಂದು ಹೆಸರು ಗೊತ್ತಿಲ್ಲದ ಕಡೆ ಇಳಿದುಕೊಂಡು ಹೋಗಿ ನೋಡಿದರೆ ಗಾರ್ಡನ್ ಕ್ಲೋಸ್ ಆಗಿತ್ತು . ಅಲ್ಲೇ ಸುತ್ತಲೂ ತಿರುಗಿ ಹೇಗೆ ಒಂದು ಗಂಟೆ ಕಳೆದವು . ನಂತರ ಬಸ್ಸನ್ನು ಹತ್ತಿ ಮತ್ತೆ ನಾವಿರುವಲ್ಲಿಗೆ ಹೋಗೋಣ ಎಂದು ಬಸ್ ಗಾಗಿ ಕಾಯುತ್ತಾ ನಿಂತೆವು .

    ಹಾಗೆ ನಾವು ನಿಂತು ಸುಮಾರು ಒಂದು ತಾಸಾಯಿತು ಕತ್ತಲೂ ಆವರಿಸುತ್ತಲೇ ಇತ್ತು . ಕತ್ತಲಾಗುತ್ತಿದ್ದಂತೆ ತಣ್ಣಗೆ ಕೊರೆಯುವ ಚಳಿ . ತಡೆಯಲಾಗದಂತೆ ನಡುಗುತ್ತ ಬಸ್ಸಿಗಾಗಿ ಕಾಯುತ್ತಾ ಬೇಸತ್ತಿದ್ದೆವು . ಹತ್ತಿರದಲ್ಲೆಲ್ಲಾದರೂ ಕ್ಯಾಬ್ ಸಿಗಬಹುದೇನೋ ಎಂದು ಕೇಳೋಣವೆಂದರೆ ಯಾರಿಗೂ ಇಂಗ್ಲಿಷ್ ಬರುತ್ತಿರಲಿಲ್ಲ . ಸ್ಪ್ಯಾನಿಷ್ ಭಾಷೆಯ ಒಂದೆರಡು ಶಬ್ದ ಬಿಟ್ಟರೆ ನಮಗೆ ಬೇರೆ ಸಂವಹನೆ ಗೊತ್ತಿರಲಿಲ್ಲ .  ಹಾಗೆ ಬೀಸುತ್ತಿದ್ದ ತಣ್ಣನೆಯ ಕೊರೆಯುವ ಚಳಿಗೆ ಮಗನಿಗೆ ಮೈ ಸುಡಲು ಪ್ರಾರಂಭವಾಗಿತ್ತು . ಒಂದೇ ಸಮನೆ ಅಳಲು ಪ್ರಾರಂಭಿಸಿದ್ದ . ನಮ್ಮ ಹತ್ತಿರ ಕೈಯಲ್ಲಿ ಹೊಚ್ಚಲು ಒಂದು ಹೊದಿಕೆ ಅಥವಾ ಸ್ವೇಟರ್ ಏನೂ ಇಲ್ಲದ ಪರಿಸ್ಥಿತಿ .

    ಹಾಗೆ ಕ್ಯಾಬ್ ಕೂಡ ಇಲ್ಲದೆ ಕಾಯುತ್ತಾ ಕುಳಿತುಕೊಳ್ಳಲು ಸ್ಥಳವೂ ಇಲ್ಲದ ಪರಿಸ್ಥಿತಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಅಲ್ಲಿಗೊಂದು ಅಜ್ಜಿ ಬಂದರು . ಆಕೆಗೆ ಏನಿಲ್ಲವೆಂದರೂ ಎಪ್ಪತ್ತರ ಮೇಲೆ ವಯಸ್ಸಾಗಿತ್ತು. ನಮ್ಮಂತೆ ಇನ್ನೂ ಎರೆಡು ಮೂರೂ  ಜನ ಅಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು . ಆ ಅಜ್ಜಿ ಅಲ್ಲಿ ಬಂದವರೇ ನಮ್ಮ ಪರದಾಟ ನೋಡಿ ತಮ್ಮ ಕೈಯಲ್ಲಿದ್ದ ಶಾಲ್ ಒಂದನ್ನು ತೆಗೆದು ಬೇಡವೆಂದರೂ ಕೇಳದೆ ಮಗನಿಗೆ ಹೊಚ್ಚಿಸಿಕೊಳ್ಳಲು ಕೊಟ್ಟರು . ಹಾಗೆಯೇ ಬಸ್ ನಿಲ್ದಾಣದ ಹಿಂದೆಯೇ ಇದ್ದ ಪಾಪಾಸು ಕಳ್ಳಿಗಳ ಗಿಡಗಳ ನಡುವೆ ನಿಲ್ಲುವಂತೆಯೂ ಹಾಗೆ ನಿಂತಲ್ಲಿ ಸ್ವಲ್ಪ ಬೆಚ್ಚಗಾಗುತ್ತದೆ ಎಂದು ತಮ್ಮ ಸ್ಪ್ಯಾನಿಷ್ ಭಾಷೆಯಲ್ಲಿ ಹೇಳಿ, ನಿಂತು ಹೀಗೆ ಇಲ್ಲಿ ಬನ್ನಿ ಎಂದು ತೋರಿಸಿದರು . ಅವರು ಹೇಳಿದಂತೆ ಹೋಗಿ ನಿಂತಾಗ ಕೊರೆಯುವ ಚಳಿ ಮೈಗೆ ಅಟ್ಟುವುದು ತಪ್ಪಿತು . ಹೀಗೆ ಆಪದ್ಭಾಂಧವರಂತೆ ಆ ದಿನ ಬಂದು ನಮಗೆ ಸಹಾಯ ಮಾಡಿದ ಆ ಅಜ್ಜಿ ಭಾಷೆಯ ಕೊರತೆಯ ನಡುವೆಯೂ ನಮಗೆ ದೇವರಂತೆ ಕಂಡಿದ್ದು ನಿಜ .

    ಹಾಗೆ ಕಾಯುತ್ತಾ ಸುಮಾರು ನಾಲ್ಕು ತಾಸಿನ ನಂತರ ಬಸ್ ಬಂತು . ನಾವು ಕಾಟೇಜ್ ಸೇರಿದೆವು ಎಂಬುದನ್ನು ಮರೆಯಲೂ ಸಾಧ್ಯವಿಲ್ಲ . ನಾವು ಬಂದ ಬಸ್ಸಿಗೆ ನಮ್ಮೊಡನೆ ಬಂದ ಅಜ್ಜಿ ಹಸನ್ಮುಖಿಯಾಗಿ ನಮ್ಮ ಮುಂದಿನ ಪ್ರಯಾಣ ಶುಭಕರವಾಗಿರಲೆಂದು ಕೈ ಮಾಡಿ ಹೇಳಿದರು . ಭಾಷೆ ಗೊತ್ತಿಲ್ಲದಿದ್ದರೂ ಅವರು ಹೇಳಿದ ರೀತಿಯಿಂದ ಅವರ ಹಾರೈಕೆಯ ಅರಿವಾಗಿತ್ತು . ಗುರುತು ಪರಿಚಯವೇ ಇಲ್ಲದ ಇಂತಹ ಸಂದರ್ಭದಲ್ಲಿ ನಮ್ಮ ನೆರೆವಿಗೆ ಬಂದ  ಅಜ್ಜಿ ಪ್ರತಿದಿನ ನೆನಪಿನಲ್ಲಿರುತ್ತಾರೆ.

    ಚಿತ್ರ ಕೃಪೆ : David Broad, via Wikimedia Commons

    ಮೌಢ್ಯಕ್ಕೆ ಬಲಿ-ನ್ಯಾಯವೇ ?


    ಹರೋನಹಳ್ಳಿ ಸ್ವಾಮಿ

    “ಧರೆಯ ಬದುಕೇನದರ ಗುರಿಯೇನು ಸ್ಥಲವೇನು?
    ಬರಿಬಳಸು ಬಡಿದಾಟ ಬರಿ ಪರಿಭ್ರಮಣೆ
    ತಿರುತಿರುಗಿ ಹೊಟ್ಟೆ ಹೊರಕೊಳ್ಳುವ ಮೃಗಖಗಕಿಂತ
    ನರನು ಸಾದ್ದಿಪುದೇನು ? ಮಂಕುತಿಮ್ಮ

    ಈ ಭೂಮಿಯ ಮೇಲೆ ಮಾನವರಾಗಿ ಜನಿಸಿರುವುದೇ ನಮ್ಮ ಭಾಗ್ಯವಲ್ಲವೇ ? ಈ ವಿಶ್ವದ ಹುಟ್ಟು, ಬದುಕು, ಸಾವುಗಳೂ ನಿಯಮಬದ್ಧವಾದ ವೈಜ್ಞಾನಿಕ ಪ್ರಕೃತಿ ನಿಯಮಗಳ ಅಣತಿಗೊಳಪಟ್ಟು ನಡೆಯುತ್ತಿವೆ. ಸುಮಾರು 12 ರಿಂದ 15 ಬಿಲಿಯನ್ ವರ್ಷಗಳ ಹಿಂದೆ ಹುಟ್ಟಿರುವ ವಿಶ್ವ, ಸೂರ್ಯನಿಂದಲೇ ಸು.460 ಕೋಟಿ ವರ್ಷಗಳ ಹಿಂದೆ ಸೃಷ್ಟಿಯಾಗಿರುವ ನಮ್ಮ ಭೂಮಿ, ನಂತರದ ವಿಕಾಸದ ಹಾದಿಗಳೆಲ್ಲಕ್ಕೂ ಕಾರಣಗಳಿವೆ.

    ಈ ಗಾಳಿ, ಶಾಖ, ನೀರು, ಮರ, ಗಿಡ, ಬಳ್ಳಿಗಳು ಹಕ್ಕಿ ಪಕ್ಕಿ ಕ್ರಿಮಿ, ಕೀಟ ಇತ್ಯಾದಿ ಜೀವಿ ನಿರ್ಜೀವಿಗಳೆಲ್ಲದರ ಬದುಕು ನಿಸರ್ಗದ ನಿಯಮಕ್ಕೊಳಪಟ್ಟಿವೆ. ಗಾಳಿ ಬೀಸಲು, ಹಗಲು, ಇರುಳು, ನೆರಳು, ಬಿಸಿಲು, ಮಳೆ ಮಂಜು, ಜೊತೆಗೆ ಬೆಂಕಿ, ಬಿರುಗಾಳಿ, ಮಿಂಚು ಗುಡುಗು, ಭೂಕಂಪ, ಜ್ವಾಲಾಮುಖಿ, ಚಂಡಮಾರುತ ಹೀಗೆ ನಾವು ನೋಡುವ ಅನುಭವಿಸುತ್ತಿರುವ ಎಲ್ಲಾ ಆಗುಹೋಗುಗಳೂ ಸಂಭವಿಸಲೂ ವೈಜ್ಞಾನಿಕ ಕಾರ್ಯಕಾರಣ ಸಂಬಂಧಗಳೂ ನಿಯಮಬದ್ಧವಾಗಿಯೇ ನಡೆಯುತ್ತಿವೆ. ಆದರೆ ಯಾವ ನಿಯಮಕ್ಕೂ, ಇತಿ ಮಿತಿಗಳಿಗೂ ಒಳಪಡದೆ ಸ್ವೇಚ್ಛೆಯಾಗಿ, ತನಗೆ ತಿಳಿದಂತೆ, ಗೊತ್ತು ಗುರಿಗಳಿಲ್ಲದೆ ಬದುಕು ನಡೆಸುವವನೇ ಈ ಬುದ್ಧಿಜೀವಿ ಎಂದು ಕರೆಸಿಕೊಳ್ಳುವ ಆಧುನಿಕ ಮಾನವ.

    ಇಷ್ಟೆಲ್ಲಾ ಪೀಠಿಕೆಗಳಿಗೆ ಕಾರಣ, ನಮ್ಮ ವಿದ್ಯೆ, ನಮ್ಮ ಚಿಂತನೆಗಳು, ನಮ್ಮ ನಡೆ ನುಡಿಗಳು ಎತ್ತ ಸಾಗುತ್ತಿವೆ ಎಂದು ಅವಲೋಕಿಸಿದಾಗ ಆಗುವ ನೋವುಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಚ್ಛಿಸುವೆನು.

    ಕೆಲದಿನಗಳ ಹಿಂದೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಎಂಬಲ್ಲಿ “ಕ್ಷುದ್ರಶಕ್ತಿ” ನಂಬಿ ಪುತ್ರಿಯರನ್ನು ಕೊಂದ ಪೋಷಕರ ಕರಾಳ ದುಷ್ಕೃತ್ಯವು ಪ್ರತಿಕ್ಷಣವೂ ಮನ ಕಲಕುತ್ತಿದೆ. ಹೆತ್ತ ತಾಯಿಯೇ ತನ್ನ ಕರುಳಬಳ್ಳಿಗಳನ್ನು ಮೂಢನಂಬಿಕೆಯಿಂದ ಕೈಯಾರೆ ಮಾಡಿರುವ ಅಮಾನುಷ ಹತ್ಯೆಯಿಂದ ಮಡಿದ ಆ ಹೆಣ್ಣುಮಕ್ಕಳ ನೆನೆದು ಹೃದಯ ಹಿಂಸಿಸುತ್ತಿದೆ.

    ಎಂ.ಎಸ್ಸಿ, ಪಿ.ಎಚ್ಡಿ ಓದಿ ಸಹಾಯಕ ಪ್ರಾಧ್ಯಾಪಕರಾದ ತಂದೆ, ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದು ಪ್ರಾಂಶುಪಾಲೆಯಾಗಿ ಕೆಲಸ ಮಾಡುತ್ತಿರುವ ತಾಯಿ, ಇಂತಹ ಉನ್ನತ ಪದವಿ ಪಡೆದು, ಉದ್ಯೋಗದಲ್ಲಿರುವ ಪೋಷಕರು, ತಮ್ಮ ಒಡಲ ಕುಡಿಗಳಾದ ವಿದ್ಯಾವಂತ ಹೆಣ್ಣುಮಕ್ಕಳ ಹತ್ಯೆ ಮಾಡಿದ ಕಾರಣ ಕೂಡ ವಿಲಕ್ಷಣವಾಗಿದೆ, ಅವೈಜ್ಞಾನಿಕವಾಗಿದೆ ಮತ್ತು ಬಾಲಿಶವಾಗಿದೆ.

    ಅದೇನೆಂದರೆ “ಕಲಿಯುಗ ಮುಗಿದು ಸತ್ಯಯುಗ ಆರಂಭವಾಗುತ್ತದೆ. ಕ್ಷುದ್ರಶಕ್ತಿಯಿಂದ ಸತ್ತವರು ಕೆಲವೇ ಗಂಟೆಗಳಲ್ಲಿ ಮತ್ತೆ ಹುಟ್ಟಿಬರುತ್ತಾರೆ” ಎಂಬ ಜ್ಯೋತಿಷಿಯೊಬ್ಬನ ಮಾತನ್ನು ನಂಬಿ ಮಾಡಿರುವ ಕೊಲೆಗಳಿವು.
    ನನಗೆ ಚಿಂತನೆಗೆ ಹಚ್ಚಿರುವುದು, ಖಂಡಿತಾ ಜ್ಯೋತಿಷಿಯ ಮಾತಲ್ಲ, ಕಾರಣ ಇಂತಹ ಮೂಢನಂಬಿಕೆಗಳನ್ನೇ ಬಿತ್ತಿ, ಬೆಳೆದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಡೋಂಗಿ ಬಾಬಾಗಳು, ಜ್ಯೋತಿಷಿಗಳ ಹೇಳಿಕೆಗಳನ್ನು ದಿನವೂ ಕಂಡು ಕೇಳುತ್ತೇವೆ. ಆದರೆ ಇಂತಹ ಸುಳ್ಳರ ಮಾತನ್ನು ನಂಬಿ ತಮ್ಮ ಮಕ್ಕಳನ್ನು ಕೊಂದ ಪೋಷಕರು ಅವಿದ್ಯಾವಂತರಲ್ಲ, ನಿರುದ್ಯೋಗಿಗಳಲ್ಲ, ಸಾಮಾಜಿಕವಾಗಿ ತುಳಿತ, ಅವಮಾನಕ್ಕೊಳಪಟ್ಟವರಲ್ಲ, ಬದಲಾಗಿ ಉನ್ನತ ವಿದ್ಯೆ ಮತ್ತು ಸ್ಥಾನಮಾನ ಪಡೆದವರಾಗಿರುವುದು ಪ್ರತಿಭಾವಂತ ವಯಸ್ಕ ಹೆಣ್ಣುಮಕ್ಕಳಿಬ್ಬರೂ ತಾಯಿ ತಂದೆಯರಿಂದಲೇ ಡಂಬೆಲ್‌ಗಳಿಂದ ಹೊಡೆಸಿಕೊಂಡು, ತ್ರಿಶೂಲದಿಂದ ಚುಚ್ಚಿಸಿಕೊಂಡು, ನೋವಿನಿಂದ ಒದ್ದಾಡಿ, ಒದ್ದಾಡಿ ಪ್ರಾಣ ಬಿಡುವಾಗ ಅನುಭವಿಸಿರುವ ನೋವು ಸಂಕಟಗಳನ್ನು ನೆನೆದರೆ ತುಂಬಾ ಕಸಿವಿಸಿಯಾಗುತ್ತದೆ.

    ಮಂಕುತಿಮ್ಮನ ಮೂಲಕ ಡಿ.ವಿ.ಜಿ.ಯವರು… ‘ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ ನರನು ಸಾಧಿಪುದೇನು?” ಎಂಬ ಸಾಲುಗಳು ಚಿಂತನಾರ್ಹವಾಗಿವೆ. ಕ್ರೂರ ಮೃಗಗಳೂ ಕೂಡ, ತಮ್ಮ ಸಂತಾನಗಳನ್ನು ವೈರಿಗಳಿಂದ ರಕ್ಷಿಸಲು ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತವೆ. ಆದರೆ ಈ ಘಟನೆ 21ನೇ ಶತಮಾನದಲ್ಲಿನ ಅತ್ಯಂತ ಅಮಾನವೀಯ, ಅಕ್ಷಮ್ಯ ಅಪರಾಧವಾಗಿದೆ.

    ನಾವು ಕಲಿತ ವಿದ್ಯೆಗೂ (ಅದರಲ್ಲೂ ವಿಜ್ಞಾನ ಪದವಿ ಪಡೆದ ಪೋಷಕರು) ನಮ್ಮ ಚಿಂತನೆ, ನಂಬಿಕೆ, ಆಚರಣೆಗಳಿಗೂ ಸಂಬಂಧಗಳೇ ಇಲ್ಲದಂತಾಗಿದೆ.ಕಲಿತವರೇ ಇಂತಹ ಮೂಢನಂಬಿಕೆಗಳನ್ನು ನಂಬಿ, ಮಕ್ಕಳನ್ನೇ ಬಲಿ ಪಡೆದರೆ ಇನ್ನು ಅವಿದ್ಯಾವಂತ ಅಮಾಯಕ ಮುಗ್ಧರು ಇಂತಹವರ ಮಾತಿಗೆ ಬಲಿಯಾಗುವುದರಲ್ಲಿ ಆಶ್ಚರ್ಯವಿಲ್ಲವೆನಿಸುತ್ತಿದೆ.

    “ಕ್ಷುದ್ರ ಶಕ್ತಿಯಿಂದ ಸತ್ತವರು ಕೆಲವೇ ಗಂಟೆಗಳಲ್ಲಿ ಮತ್ತೆ ಹುಟ್ಟಿ ಬರುತ್ತಾರೆ” ಎಂಬ ನಂಬಿಕೆ ಹುಟ್ಟಿಸಿದ ಆ ಮಹಾಪುರುಷ, ಇನ್ನೆಷ್ಟು ಬಲಿ ಪಡೆದಿರಬಹುದೆಂದು ನೆನೆದರ ಗಾಬರಿಯಾಗುತ್ತದೆ. ವಿದ್ಯಾವಂತರೇ ಇಂತಹ ಮೂಢನಂಬಿಕೆಗಳಿಗೆ ಬಲಿಯಾಗುತ್ತಿರುವುದು ಹೆಚ್ಚಾಗುತ್ತಿರುವುದನ್ನು ನೋಡಿದರೆ, ನಮ್ಮ ವಿದ್ಯೆ ವೈಚಾರಿಕ ಚಿಂತನೆಯನ್ನು ಬೆಳೆಸುತ್ತಿಲ್ಲವೆಂದೇ ಹೇಳಬೇಕು.

    ಅಲ್ಲದೇ ವಿದ್ಯೆಗೂ ವೈಜ್ಞಾನಿಕ ಮನೋಭಾವಕ್ಕೂ ಸಂಬಂಧವಿಲ್ಲದಂತಾಗಿದೆ.ಚಂದ್ರಲೋಕಕ್ಕೆ ಮಾನವ ಸುರಕ್ಷಿತವಾಗಿ ಹೋಗಿಬಂದು, ಈಗ ಮಂಗಳಯಾನಕ್ಕೆ ಸಿದ್ಧತೆ ನಡೆಸುತ್ತಿದ್ದರೂ ಗ್ರಹಗಳ ಚಲನೆ, ಹಸ್ತರೇಖೆ, ಅಲ್ಲದೆ ಮನುಷ್ಯನ ಹೆಸರಿನಲ್ಲಿರುವ ಅಕ್ಷರಗಳ ಸಂಖ್ಯೆ ಕೂಡ ಭವಿಷ್ಯವನ್ನು ನಿರ್ಧರಿಸಬಲ್ಲವೆಂಬ ಜ್ಯೋತಿಷಿಗಳನ್ನು ನಂಬುತ್ತಿರುವ ಜನರು ಹೆಚ್ಚುತ್ತಿದ್ದಾರೆ. ಇದರಲ್ಲಿ ಅಕ್ಷರಸ್ಥ ವಿದ್ಯಾವಂತರ ಸಂಖ್ಯೆಯೂ ಹೆಚ್ಚಾಗಿರುವುದು ಚಿಂತೆಗೀಡುಮಾಡುತ್ತಿವೆ. ಆಹಾರದ ಮತ್ತು ಉಡುವ ತೊಡುವ ಪೋಷಾಕುಗಳಿಂದಿಡಿದು, ಮನೆಯ ಮೂಲೆ ಮೂಲೆಯ ವಾಸ್ತುಗಳ ಕುರಿತು, ಮೂಢನಂಬಿಕೆಗಳು ಹೆಚ್ಚಾಗುತ್ತಿವೆ. ಕೋಟ್ಯಂತರ ಜನರು ಬಡತನ ರೇಖೆಯ ಕೆಳಗಿದ್ದು, ಹಸಿವಿನಿಂದ ನರಳುತ್ತಿರುವಾಗ ಹೋಮ, ಹವನ, ಯಜ್ಞ, ಯಾಗಾದಿಗಳಲ್ಲಿ ಅಮೂಲ್ಯ ಸಂಪತ್ತನ್ನು ಸುಟ್ಟು ಬೂದಿ ಮಾಡುವ ಮಂದಿಯೂ ಅನೇಕರಿರುತ್ತಾರೆ.
    ಮೌಢ್ಯಕ್ಕೆ ಪ್ರಚೋದಿಸುವ ಮತ್ತು ಮೌಢ್ಯವನ್ನು ಆಚರಿಸುವ ಜನರ ವಿರುದ್ಧ ಕಠಿಣ ಶಿಕ್ಷೆಯ ಕಾನೂನುಗಳು ರೂಪಗೊಂಡು ಅನುಷ್ಠಾನಕ್ಕೆ ತರಬೇಕಾದುದು ಇಂದಿನ ಅವಶ್ಯವಾಗಿದೆ.ಮೌಢ್ಯ ನಿಷೇಧ ಕಾನೂನು ಅನೇಕ ರಾಜ್ಯಗಳಲ್ಲಿ ಜಾರಿ ಇದ್ದರೂ ರಾಷ್ಟ್ರಮಟ್ಟದಲ್ಲಿ ಇಂತಹ ಕಾನೂನುಗಳು ರಚಿತಗೊಂಡು ಜಾರಿಯಾಗಬೇಕಾಗಿದೆ.

    ವೈಚಾರಿಕತೆಯನ್ನು, ವೈಜ್ಞಾನಿಕ ಮನೋಭಾವವನ್ನು ಸಾರಿದ ಬುದ್ಧ, ಬಸವ, ಅಂಬೇಡ್ಕರರ ನಾಡಿದು.ದೃಶ್ಯ ಮಾಧ್ಯಮಗಳೂ ಅವೈಜ್ಞಾನಿಕ ಧಾರಾವಾಹಿಗಳು, ಜ್ಯೋತಿಷಿಗಳ ಪ್ರವಚನಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿ ಜನರ ಚಿಂತನೆಗಳನ್ನು ಕೆಳಮಟ್ಟಕ್ಕೆ ಕೊಂಡೊಯ್ಯುತ್ತಿರುವುದೂ ದಿನನಿತ್ಯದ ಸಂಗತಿಯಾಗಿದೆ.

    “ತಮಗೆ ಮುಂಬಹ ಸುಖ ದುಃಖಗಳ ನರಿಯದವರು
    ಮತ್ತೊಬ್ಬರ ಸುಖದುಃಖಂಗಳ ಮೊದಲೇ ಅರಿಯರು” ಎಂಬ ಶರಣ ಚನ್ನಬಸವಣ್ಣನವರ ಮಾತು ಈ ಜ್ಯೋತಿಷಿಗಳೂ ಮತ್ತು ಅವರನ್ನು ನಂಬುವ ಜನರಿಬ್ಬರೂ ಅರಿಯಬೇಕಲ್ಲವೇ ? ಗ್ರಹಣಗಳಿಂದಾಗಿ ಹೆದರುವ ಮತ್ತು ಹೆದರಿಸುವ ಜನರಿಂದ ಅನೇಕ ಅಂಧಾಚರಣೆಗಳನ್ನು ನೋಡಿದ್ದೇವೆ. ವೈಕುಂಠ ಏಕಾದಶಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆಂದು ನಂಬಿ ಆತ್ಮಹತ್ಯೆ ಮಾಡಿಕೊಂಡವರುಂಟು, ಸ್ವರ್ಗಪ್ರಾಪ್ತಿ ಎಂದು ಸಾಮೂಹಿಕ ಆತ್ಮಹತ್ಯೆಗಳಾಗಿರುವುದನ್ನು ಕಂಡಿದ್ದೇವೆ. ಧನಪ್ರಾಪ್ತಿಗಾಗಿ ಮಕ್ಕಳ ಬಲಿ ನೀಡುವುದನ್ನು ಕಾಣುತ್ತಿದ್ದೇವೆ. ಮಾಡಿದ ಪಾಪಕೃತ್ಯಗಳಿಗಾಗ ಪ್ರಾಯಶ್ಚಿತ್ತವೆಂಬಂತೆ ಪ್ರಸಿದ್ಧ ದೇವಸ್ಥಾನಗಳಿಗೆ ಹೋಗಿ ಕೋಟಿ ಕೋಟಿ ಹಣ, ವಜ್ರ ವೈಢೂರ್ಯಗಳನ್ನು ಹುಂಡಿಗಳಿಗೆ ಹಾಕುವ ಜನರನ್ನು ಕಂಡಿದ್ದೇವೆ. ಜೊತೆಗೆ ಅಂತಹವರ ಅಧಃಪತನವನ್ನು ಕಂಡಿದ್ದೇವೆ.

    ಆದರೆ ವಿಜ್ಞಾನ ತಂತ್ರಜ್ಞಾನಗಳು ಬೆಳೆದಂತೆ ನಾಗರಿಕತೆ ಮುಂದುವರಿದಂತೆ ಆಂಧ್ರಪ್ರದೇಶಗಳು, ಮೌಢ್ಯಾಚರಣೆಗಳು ಹೆಚ್ಚತ್ತಿವೆ. ಇದು ಒಂದು ದೇಶಕ್ಕೆ, ಜನಾಂಗಕ್ಕೆ ಸೀಮಿತವಾಗಿಲ್ಲ, ಜಗತ್ತಿನಾದ್ಯಂತ ನಾನಾ ಕಡೆಗಳಲ್ಲಿ ವಿವಿಧ ರೂಪಗಳಲ್ಲಿ ಕಂಡುಬರುತ್ತಿದೆ.
    ಜ್ಞಾನ ವಿಜ್ಞಾನದ ಬಲದಿಂದ ಅಜ್ಞಾನದ ಕೇಡನ್ನು ಅರಿತು ಬದುಕಬೇಕಾಗಿದೆ. ವೈಚಾರಿಕತೆಯಿಂದ ಮನುಷ್ಯನ ಎಷ್ಟೋ ಸಂಕಷ್ಟಗಳನ್ನು ಬಗೆಹರಿಸಲು ಸಾಧ್ಯವಿದೆ ಎಂಬುದನ್ನು ತಿಳಿಯಬೇಕಾಗಿದೆ.

    ವೈಜ್ಞಾನಿಕ ಮನೋಭಾವದ ಮೂಲ ಲಕ್ಷಣಗಳಾದ-ಸತ್ವಶೀಲ ವೈಚಾರಿಕತೆ, ಪ್ರಶ್ನಿಸುವ ಮತ್ತು ಪ್ರಶ್ನಿಸಿಕೊಳ್ಳುವ ಮನೋಭಾವ-ಇವುಗಳನ್ನು ಶಿಕ್ಷಣದ ಕಲಿಸುವ ಮತ್ತು ಕಲಿಯುವಿಕೆಯ ಭಾಗವಾಗಿಸಿಕೊಂಡು, ವೈಚಾರಿಕ ಜನಾಂಗವನ್ನು ಸೃಷ್ಟಿಸಬೇಕಿದೆ.
    ಭಾರತ ಸರ್ಕಾರವು ೧೯೫೮ ಮಾರ್ಚ್ ೪ ರಂದು ವಿಜ್ಞಾನ ಧೋರಣೆಗೆ ಸಂಬಂಧಿಸಿದಂತೆ ಗೊತ್ತುವಳಿಯೊಂದನ್ನು ಅಂಗೀಕರಿಸಿತು. ಅದರಲ್ಲಿ ವಿಶೇಷ ಅಂಶವೊಂದಿದೆ. ಅದು ಹೀಗಿದೆ. “ಸಮಾಜದ ಪ್ರತಿಯೊಬ್ಬನಿಗೂ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವ ಕೆಲಸ ವೈಜ್ಞಾನಿಕ ದೃಷ್ಟಿಕೋನ ಮತ್ತು ವಿಧಾನದಿಂದ ಮಾತ್ರ ಸಾಧ್ಯ” ಆದರೆ ಇದರ ಮಹತ್ವವನ್ನು ಅರಿತು ನಮ್ಮನ್ನಾಳುವ ಮಂದಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕಾಗಿದೆ.

    ನೆಹರೂರವರ ಮಾತೊಂದು ಅರ್ಥಪೂರ್ಣವೆನಿಸುತ್ತಿದೆ. ಅದು ಹೀಗಿದೆ “ವಿಜ್ಞಾನವೆಂದರೆ ಪರೀಕ್ಷಾ ನಳಿಕೆಗಳ ಸಹಾಯಕದಿಂದ ಒಂದು ವಸ್ತುವಿನಲ್ಲಿ ಇನ್ನೊಂದನ್ನು ಸೇರಿಸಿ ಸಣ್ಣ ದೊಡ್ಡ ವಸ್ತುಗಳನ್ನು ತಯಾರಿಸುವುದಲ್ಲ, ನಮ್ಮ ಇಡೀ ಜೀವನ ಕ್ರಮವು ವೈಜ್ಞಾನಿಕ ವಿಧಾನಗಳಿಗೆ ಅನುಗುಣವಾಗಿರುವಂತೆ ಮನಸ್ಸನ್ನು ತರಬೇತಿಗೊಳಿಸಿವುದೇ ಆಗಿದೆ.” ಈ ಮನಸ್ಸನ್ನು ವೈಜ್ಞಾನಿಕವಾಗಿ ಅಣಿಗೊಳಿಸುವ ಕೆಲಸ ಮನೆ, ಶಾಲೆ, ಸಮಾಜ ಮತ್ತು ಮಾಧ್ಯಮ ಇವೆಲ್ಲವುಗಳೂ ಜವಾಬ್ದಾರಿಯಿಂದ ತಮ್ಮ ಕೆಲಸ ನಿರ್ವಹಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಯಾವುದೇ ದೇಶದ ಅಥವಾ ವ್ಯಕ್ತಿಯ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳ ಪರಿಹಾರಕ್ಕೆ ವೈಜ್ಞಾನಿಕ ಅನ್ವೇಷಣೆಯ ದಾರಿ ಹಿಡಿದು, ಆ ಮೂಲಕ ಸಾಮಾಜಿಕ ಬದಲಾವಣೆಯನ್ನು ವೈಚಾರಿಕತೆಯ ಮಾರ್ಗದಿಂದ ತರಲು ಪ್ರಯತ್ನಿಸಿದಾಗ ಕ್ರಾಂತಿಕಾರಕ ಬದಲಾವಣೆ ಸಾಧ್ಯವಲ್ಲವೇ ?

    ಜೊತೆಗೆ ನಮ್ಮ ಭಾರತದ ಸಂವಿಧಾನ ನೀಡಿರುವ ಮೂಲಭೂತ ಕರ್ತವ್ಯಗಳಲ್ಲಿ 51 (h) ಹೀಗಿದೆ. ಪ್ರತಿಯೊಬ್ಬ ನಾಗರಿಕನಿಗೂ ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಪ್ರವೃತ್ತಿಯನ್ನು ಅಭಿವೃದ್ಧಿಗೊಳಿಸುವುದು ಕರ್ತವ್ಯವಾಗಿರತಕ್ಕದ್ದು. ಎಂದಿದೆ. ಅಂದರೆ ಅವೈಜ್ಞಾನಿಕ ಆಚರಣೆಗಳು ಮತ್ತು ಅವುಗಳ ಪ್ರಚೋದನೆ, ಪ್ರೇರಣೆ ಕೂಡ ನಮ್ಮ ಸಂವಿಧಾನಕ್ಕೆ ವಿರೋಧವಾಗಿದ್ದು, ಮೌಢ್ಯಗಳ ವಿರುದ್ಧದ ಕಾಯಿದೆಗಳು ಬೇಗ ರೂಪುಗೊಂಡು, ತಪ್ಪಿತಸ್ಥರಿಗೆ ಶಿಕ್ಷಿಸುವ ವ್ಯವಸ್ಥೆ ಆಗಬೇಕಾಗಿದೆ.

    ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಹರೋನಹಳ್ಳಿ ಸ್ವಾಮಿ
    ಪ್ರವೃತ್ತಿಯಿಂದ ಹವ್ಯಾಸಿ ಖಗೋಳ ವೀಕ್ಷಕ ಹಾಗೂ ಗಾಯಕ. ಖಗೋಳ ವೀಕ್ಷಣೆ ಬಗ್ಗೆ ಆಗಾಗ್ಗೆ ಕಾರ್ಯಗಾರಗಳನ್ನು ನಡೆಸುತ್ತಾರೆ. ರಾಜ್ಯಾದ್ಯಂತ ಪವಾಡ ಬಯಲು ಕಾರ್ಯಕ್ರಮ ಆಯೋಜಿಸಿ ಜನರಲ್ಲಿ ವೈಜ್ಞಾನಿಕ ತಿಳಿವಳಿಕೆ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮದೆ ಗಾಯನ ತಂಡದೊಂದಿಗೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾರೆ. ಅವರ ಸಂಪರ್ಕ 9880498300 / 7892154695

    ಚಂಚಲಪೇಟೆಯಲ್ಲಿ ಅಚಲ ಹೂಡಿಕೆಗುಚ್ಚ ನಿರ್ಮಾಣ ಹೇಗೆ?

    ಷೇರುಪೇಟೆಯಲ್ಲಾಗುತ್ತಿರುವ ಬದಲಾವಣೆಗಳು, ಬೆಳವಣಿಗೆಗಳು ಎಲ್ಲವೂ ತಾತ್ಕಾಲಿಕ ಅದರಲ್ಲೂ ವಿಶೇಷವಾಗಿ ಎಲ್ಲಾ ಸೂಚ್ಯಂಕಗಳು ಗರಿಷ್ಠದಲ್ಲಿರುವ ಈಗಿನ ಸಂದರ್ಭದಲ್ಲಿ ಹೆಚ್ಚು ಕಾಲ್ಪನಿಕ ಎಂದೆನಿಸುತ್ತದೆ. ಹಿಂದಿನ ಗುರುವಾರ ಅಂದರೆ 21 ನೇ ಜನವರಿಯಂದು ಸೆನ್ಸೆಕ್ಸ್‌ 50,184 ಪಾಯಿಂಟುಗಳನ್ನು ತಲುಪಿ ವಿಜೃಂಭಿಸಿದ ನಂತರ ಸುಮಾರು 3,900 ಪಾಯಿಂಟುಗಳಷ್ಠು ಕುಸಿತ ಕಂಡಿದೆ. ಡಿಸೆಂಬರ್‌ ಅಂತ್ಯದ ತ್ರೈಮಾಸಿಕದಲ್ಲಿ ಹೆಚ್ಚಿನ ಕಂಪನಿಗಳು ಅತ್ಯಂತ ಆಕರ್ಷಕ ಸಾಧನೆಗಳನ್ನು ಪ್ರಕಟಿಸಿವೆ. ಅದರಲ್ಲೂ ಪ್ರಮುಖ ಕಂಪನಿಗಳಾದ ಮಾರುತಿ ಸುಝುಕಿ, ಹಿಂದೂಸ್ಥಾನ್‌ ಲೀವರ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ನಂತಹ ಕಂಪನಿಗಳು ಉತ್ತಮ ಸಾಧನೆಯ ನಂತರವೂ ಕುಸಿತಕ್ಕೊಳಗಾಗಿವೆ. ಮಾರುತಿ ಸುಝುಕಿಯಂತೂ ಒಂದೇ ವಾರದಲ್ಲಿ ರೂ.1,000 ದಷ್ಠು ಕರಗಿಸಿಕೊಂಡಿದೆ. ಶುಕ್ರವಾರ ಒಂದೇ ದಿನ ರೂ.380 ರಷ್ಟು ಹಾನಿಗೊಳಗಾಗಿದೆ.

    ಕಂಪನಿಗಳು ಉತ್ತಮವಾದ ಫಲಿತಾಂಶ ಪ್ರಕಟಿಸಿದರೂ ಏಕೆ ಹೀಗೆ? ಎಂಬುದು ಅನೇಕರ ಚಿಂತನೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಕಂಪನಿಗಳು ಕಳೆದ 8-10 ತಿಂಗಳುಗಳಲ್ಲಿ ಅತಿ ಹೆಚ್ಚಿನ ಏರಿಕೆ ಕಂಡಿವೆ. ಅಲ್ಲದೆ ಈ ಕಂಪನಿಗಳು ಇದೇ ರೀತಿ ಸಾಧನೆ ಪ್ರದರ್ಶಿಸಬಹುದೆಂಬ ಮುಂಚಿತ ಕಲ್ಪನೆಯೂ ಆಗಿದೆ. ಈ ರೀತಿ ಏರಿಕೆ ಕಂಡಾಗ ಲಾಭದ ನಗದೀಕರಣ ಮಾಡಿಕೊಂಡಲ್ಲಿ ಹೂಡಿಕೆ ಮಾಡಿದ ಬಂಡವಾಳ ಫಲಪ್ರಧವಾಗುತ್ತದೆ. ಗರಿಷ್ಠಮಟ್ಟದಲ್ಲಿರುವ ಪೇಟೆಯು ಎಷ್ಠರಮಟ್ಟಿಗೆ ಹರಿತ – ತ್ವರಿತ ಎಂದರೆ, 20 ನೇ ಜನವರಿಯಲ್ಲಿ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.197.70 ಲಕ್ಷ ಕೋಟಿಯಾಗಿದ್ದು 29 ರಂದು ಅದು ರೂ.186.12 ಲಕ್ಷ ಕೋಟಿಗೆ ಇಳಿದಿದೆ.

    ಹಿಂದೂಸ್ಥಾನ್‌ ಯೂನಿ ಲೀವರ್‌ :ಹೂಡಿಕೆದಾರರ ಬಂಡವಾಳವು ಯಾವ ರೀತಿ ವಿಸ್ತಾರವಾಗಿ ಹರಡಬೇಕು. ಅದು ಹೇಗಿರಬೇಕೆಂಬುದನ್ನು ಸೆನ್ಸೆಕ್ಸ್‌ ಕಂಪನಿ ಹಿಂದೂಸ್ಥಾನ್‌ ಯೂನಿಲೀವರ್‌ ಕಂಪನಿಯ ಯಶಸ್ಸಿನಿಂದ ಅರಿಯಬಹುದು.

    ಹಿಂದೂಸ್ಥಾನ್‌ ಯೂನಿಲೀವರ್‌ ಕಂಪನಿಯಲ್ಲಿ ಬ್ರೂಕ್‌ ಬಾಂಡ್‌ ಕಂಪನಿಯು 1996 ರಲ್ಲಿ ವಿಲೀನಗೊಂಡಿತು. ಅದಕ್ಕೂ ಮುಂಚೆ 1994 ರಲ್ಲಿ ಲಿಪ್ಟನ್‌ ಇಂಡಿಯಾ ಕಂಪನಿಯು ಬ್ರೂಕ್‌ ಬಾಂಡ್‌ ಕಂಪನಿಯಲ್ಲಿ ವಿಲೀನಗೊಂಡಿತು. 1993 ರಲ್ಲಿ ಟಾಟಾ ಆಯಿಲ್‌ ಮಿಲ್ಸ್‌, ಸಹ ಈ ಕಂಪನಿಯಲ್ಲಿ ವಿಲೀನಗೊಂಡಿತು. 1998 ರಲ್ಲಿ ಪಾಂಡ್ಸ್‌ ಕಂಪನಿಯನ್ನು ತನ್ನಲ್ಲಿ ವಿಲೀನಗೊಳಿಸಿಕೊಂಡಿದೆ. ನಂತರ ಅಲ್ಲಿಯವರೆಗೂ ಸೋಪು, ಡಿಟರ್ಜೆಂಟ್‌ ವಲಯದಲ್ಲಿ ಕೇಂದ್ರೀಕರಿಸಿಕೊಂಡಿದ್ದ ಕಂಪನಿಯು ಇತರೆ ವಲಯಗಳತ್ತಲೂ ವಿಸ್ತರಿಸಿಕೊಂಡಿತು. ಈತ್ತೀಚಿನ ಬೆಳವಣಿಗೆಯಲ್ಲಿ ಕಂಪನಿಯು ಹಾರ್ಲಿಕ್ಸ್ ನ್ನು ತನ್ನ ಜೋಳಿಗೆಗೆ ಸೇರಿಸಿಕೊಂಡಿದೆ. ಸದ್ಯ ಈ ಕಂಪನಿಯ ಬತ್ತಳಿಕೆಯಲ್ಲಿರುವ ಬ್ರಾಂಡ್‌ ಗಳು ಇಂತಿವೆ. ಈ ಎಲ್ಲಾ ಬ್ರಾಂಡ್‌ ಉತ್ಪನ್ನಗಳು ಎಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ಪ್ರತಿದಿನವೂ ಜಾಹಿರಾತುಗಳ ಮೂಲಕ ಪ್ರಚಾರಪಡೆಯುತ್ತವೆ. ಒಂದು ದಿನದ ಸುಮಾರು ಶೇಕಡ 75 ರಿಂದ 80ರಷ್ಟು ಜಾಹಿರಾತುಗಳು ಈ ಕಂಪನಿಯ ಉತ್ಪನ್ನಗಳದ್ದೇ ಆಗಿರುತ್ತದೆ. ಒಂದೊಂದು ಬ್ರಾಂಡ್‌ ಹೆಸರಿನಲ್ಲಿ ಅನೇಕ ಉಪ ಬ್ರಾಂಡ್‌ ಗಳು ಮಾರಾಟವಾಗುತ್ತಿವೆ.

    ಈ ಕಂಪನಿಯು ಭಾರತದ ಗೃಹಬಳಕೆ, ದಿನಬಳಕೆ ಸಾಮಾಗ್ರಿಗಳ ವಲಯದಲ್ಲಿ ಏಕಚಕ್ರಾಧಿಪತ್ಯವನ್ನುಹೊಂದಿದೆ ಎನ್ನಬಹುದು. ಕೆಇವುಗಳಲ್ಲಿ ಆಹಾರ, ಆರೋಗ್ಯ, ವೈಯಕ್ತಿಕ ರಕ್ಷಣಾ ಸಾಮಾಗ್ರಿ, ಗೃಹಬಳಕೆಪದಾರ್ಥಗಳಿರುವುದರಿಂದ ಯಾವುದನ್ನು ಬಳಸಿದರೂ ಕಂಪನಿಗೆ ಲಾಭಕರ. ದೇಶದ ಖಜಾನೆಗೂ ಕೊಡುಗೆಯಾಗುವುದಲ್ಲದೆ ಷೇರುದಾರರಿಗೆ ಆಕರ್ಷಕ ಕಾರ್ಪೊರೇಟ್‌ ಫಲಗಳೂ ಲಭ್ಯ.ಕೆಲವು ಉತ್ಪನ್ನಗಳ ಪಟ್ಟಿ ಇಂತಿವೆ.

    ಬ್ರೂ, ಬ್ರೂ ಗ್ರೀನ್‌ ಲೇಬಲ್‌ ನೈಸ್‌,ರೆಡ್‌ ಲೇಬಲ್‌, ತಾಜಾ, ತಾಜ್‌ ಮಹಲ್‌, 3 ರೋಸಸ್‌,ಲಕ್ಸ್‌, ಹಮಾಮ್‌, ರೆಕ್ಸೋನ, ಡೋವ್‌, ಪಿಯರ್ಸ್‌, ಲೈಫ್‌ ಬಾಯ್‌, ಲಿರಿಲ್‌, ಟ್ರೆಸಮ್‌,ಕ್ಲಿನಿಕ್‌ ಶಾಂಪೂ, ಲೀವರ್‌ ಆಯುಶ್‌, ಇಂದುಲೇಖ ಆಯುರ್ವೇದಿಕ್‌ ಹೇರ್‌ ಆಯಿಲ್‌,ಲಾಕ್ಮೆ ಐಕೋನಿಕ್‌ ಕಾಜಲ್‌, ಪಾಂಡ್ಸ್‌, ಗ್ಲೋ ಅಂಡ್‌ ಲೌಲಿ, ವ್ಯಾಸಲಿನ್‌,ಅನ್ನಪೂರ್ಣ ಸಾಲ್ಟ್‌, ಅನ್ನಪೂರ್ಣ ಅಟ್ಟಾ,ಕಿಸಾನ್‌ ಕೆಚಪ್‌, ಜ್ಯೂಸ್‌, ಜಾಮ್ಸ್,ಪೆಪ್ಸೋಡೆಂಟ್‌, ಕ್ಲೋಸ್‌ ಅಪ್‌,ಸರ್ಫ್‌ ಎಕ್ಸೆಲ್‌, ರಿನ್‌, ಕಂಫರ್ಟ್‌ ಫ್ಯಾಬ್ರಿಕ್ ಸಾಫ್ಟ್ನರ್‌, ಡೊಮೆಕ್ಸ್‌ ಟಾಯಿಲೆಟ್ ಕ್ಲೀನರ್‌,ವಿಮ್‌,ಹಾರ್ಲಿಕ್ಸ್‌ ವುಮನ್‌ ಪ್ಲಸ್‌,ಹಾರ್ಲಿಕ್ಸ್‌ ಜೂನಿಯರ್ ಹೀಗೆ ಪಟ್ಟಿ ಬೆಳೆಯುತ್ತದೆ.

    ಒಂದೇ ಕಂಪನಿಯು ಇಷ್ಟೆಲ್ಲಾ ಬ್ರಾಂಡ್‌ ಗಳ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆ? ಇದರಿಂದಾಗುವ ಪ್ರಯೋಜನವೇನು?

    ಅತ್ಯಧಿಕ ಉತ್ಪನ್ನಗಳ ಮಾರ್ಕೆಟಿಂಗ್‌ ನಲ್ಲಿ ತೊಡಗಿಸಿಕೊಂಡಿರುವುದರಿಂದ ಕಂಪನಿಯ ಗ್ರಾಹಕರ ಸಂಖ್ಯೆ ಅಗಾಧವಾಗಿ ಬೆಳೆದಿದೆ. ಸೋಪ್‌ ಗಳಾಗಲಿ, ಡಿಟರ್ಜೆಂಟ್‌ ಗಳಾಗಲಿ, ಅಥವಾ ಹಾರ್ಲಿಕ್ಸ್‌ ಉತ್ಪನ್ನಗಳಿಗೆ ವಿವಿಧ ಹೆಸರಿನಲ್ಲಿ ಆ ಸಮುದಾಯವನ್ನು ತನ್ನತ್ತ ಸೆಳೆಯುತ್ತದೆ. ಉದಾಹರಣೆಗೆ ಹಾರ್ಲಿಕ್ಸ್‌ ಜೂನಿಯರ್‌, ಎಂದರೆ ಆ ವಯಸ್ಸಿನ ಗ್ರಾಹಕರನ್ನು ತನ್ನತ್ತ ಸೆಳೆಯುತ್ತದೆ. ಹೀಗೆ ವಿವಿಧ ವಯೋಮಾನದ ಗ್ರಾಹಕರನ್ನು ತನ್ನತ್ತ ಆಕರ್ಷಿಸುವುದು. ಮತ್ತೊಂದು ಪ್ರಮುಖ ಅಂಶ ಎಂದರೆ ಸ್ನಾನದ ಸೋಪ್‌ ನ ಅನೇಕ ಪ್ರಮುಖ ಬ್ರಾಂಡ್‌ ಗಳನ್ನು ತೇಲಿಬೆಟ್ಟಿರುವುದರಿಂದ ಗ್ರಾಹಕರು ಒಂದಲ್ಲ ಒಂದು ಬ್ರಾಂಡ್‌ ಗೆ ಅಂಟಿಕೊಳ್ಳಲು ಸಾಧ್ಯ. ಇಷ್ಟೆಲ್ಲಾ ಬ್ರಾಂಡ್‌ ನ ಉತ್ಪನ್ನಗಳಿರುವುದರಿಂದ ಕಂಪನಿಯ ಸಾಧನೆಯು ಬಲಿಷ್ಠವಾಗಿರುವುದು.

    ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಂಪನಿಗಳು ವಿವಿದೋದ್ದೇಶಗಳಿಂದ ಸಾರ್ವಜನಿಕವಾಗಿ ಸಂಪನ್ಮೂಲ ಸಂಗ್ರಹಣೆಗೆ ಪ್ರಯತ್ನಿಸುತ್ತಿವೆ. ಆದರೆ ಈ ಕಂಪನಿಯು ಸಂಪನ್ಮೂಲ ಸಂಗ್ರಹಣೆಯತ್ತ ಕೈ ಹಾಕುವ ಪ್ರಯತ್ನವನ್ನು ಮಾಡಿಲ್ಲ. ಎಫ್‌ ಎಂ ಸಿ ಜಿ ವಲಯದ ಇತರೆ ಕಂಪನಿಗಳಾದ ಕಾಲ್ಗೇಟ್‌ ಪಾಲ್ಮೊಲಿವ್‌, ಐ ಟಿ ಸಿ ಯಂತಹ ಕಂಪನಿಗಳಿಗೆ ಸಂಪನ್ಮೂಲ ಸಂಗ್ರಹಣೆಯ ಆವಶ್ಯಕತೆ ಇಲ್ಲ. ಬದಲಾಗಿ ಕಂಪನಿಗಳೇ ಷೇರುದಾರರಿಗೆ ಆಕರ್ಷಕ ಕಾರ್ಪೊರೇಟ್‌ ಫಲಗಳನ್ನು ನೀಡುತ್ತಾ ಬಂದಿವೆ. ಒಂದು ಸಮಯದಲ್ಲಿ ಸಿಗರೇಟ್‌ ಒಂದೇ ಐಟಿಸಿ ಕಂಪನಿಯ ಉತ್ಪಾದನೆಯಾಗಿತ್ತು. ಕಾಲ್ಗೇಟ್‌ ಎಂದರೆ ಕೇವಲ ದಂತವಲಯಕ್ಕೆ ಸೀಮಿತವಾಗಿದ್ದ ಕಂಪನಿಯಾಗಿತ್ತು. ಆದರೆ ಈಗ ಈ ಕಂಪನಿಗಳೂ ತಮ್ಮ ಚಟುವಟಿಕೆಯನ್ನು ಗೃಹಬಳಕೆ, ದೈನಂದಿನ ಬಳಕೆ ವಲಯಕ್ಕೆ ಪ್ರವೇಶಿಸಿ ಉತ್ತಮ ಜನಸ್ಪಂಧನ ಪಡೆಯುತ್ತಿವೆ.

    ಇದೇ ರೀತಿ ಒಂದು ಬಲಿಷ್ಠ ಹೂಡಿಕೆ ಗುಚ್ಚ ( Portfolio) ಹೊಂದಲು ಕೇವಲ ಕೆಲವೇ ಕಂಪನಿಗಳಿಗೆ ಸೀಮಿತಗೊಳಿಸದೆ ಹೂಡಿಕೆ ಗುಚ್ಚದಲ್ಲಿ ಅನೇಕ, ವೈವಿಧ್ಯಮಯ ಕಂಪನಿಗಳನ್ನು, ಒಂದೇ ವಲಯದ ವಿವಿಧ ಕಂಪನಿಗಳನ್ನು ಸೇರಿಸಿದಲ್ಲಿ ಆ ಹೂಡಿಕೆ ಗುಚ್ಚವು ಸುಭದ್ರವಾಗಿರುವುದಲ್ಲದೆ, ಪೇಟೆಯಲ್ಲಾಗುವ ಉಬ್ಬರ ವಿಳಿತಗಳ ರೀತಿಯ ಏರಿಳಿತಗಳಿಗೂ ಜಗ್ಗದ ಹೂಡಿಕೆಗುಚ್ಚವಾಗುವುದು. ಬ್ರಾಡ್‌ ಬೇಸ್‌ ಇದ್ದಲ್ಲಿ ಅದು ಒಂದು ರೀತಿಯ ಷಾಕ್‌ ಅಬ್ಸಾರ್ಬರ್‌ ರೀತಿ ಕಾರ್ಯನಿರ್ವಹಿಸಿ, ಅಪಾಯದ ಮಟ್ಟವನ್ನು ಮೊಟಕುಗೊಳಿಸುತ್ತದೆ. ಒಂದು ದಿನಸಿ ಅಂಗಡಿಯಂತೆ ಬಹಳಷ್ಠು ಕಂಪನಿಗಳನ್ನು ತಮ್ಮ ಹೂಡಿಕೆ ಗುಚ್ಚದಲ್ಲಿ ಸೇರಿಸಿದ್ದರೆ ಅಪಾಯವು ಕ್ಷೀಣಿತ ಮಟ್ಟದಲ್ಲಿರುತ್ತದೆ. ಎಂತಹ ಏರಿಳಿತಗಳುಂಟಾದರೂ ಒಂದಲ್ಲ ಒಂದು ಕಂಪನಿಯು ಉತ್ತಮ ಅವಕಾಶಗಳನ್ನು ಒದಗಿಸುತ್ತಿರುತ್ತವೆ. ಅಲ್ಲದೆ ಕಾರ್ಪೊರೇಟ್‌ ಫಲಗಳನ್ನು ಸಹ ನೀಡುತ್ತಿರುತ್ತವೆ. ಷೇರುಪೇಟೆಯ ಹೂಡಿಕೆಗೆ ಹಿಂದೂಸ್ಥಾನ್‌ ಲೀವರ್‌ ಶೈಲಿಯು ಮಾರ್ಗದರ್ಶಕ ಎಂದರೆ ತಪ್ಪಾಗಲಾರದು. ಅಲ್ಲವೇ ?

    ಅತಿಥಿ ಎಂದಿಗೂ ಆದರಣೀಯ..!


    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.


    ‘ಬರಹ’ ನಿಘಂಟಿನ ಪ್ರಕಾರ ‘ಅತಿಥಿ’ಎಂದರೆ ಆಮಂತ್ರಣವನ್ನು ಪಡೆದು ಇಲ್ಲವೆ ಪಡೆಯದೆ ಬಂದ ವ್ಯಕ್ತಿ ಅರ್ಥಾತ್ ಮನೆಯ ಸದಸ್ಯರಲ್ಲದವರೆಂದು. ಅತಿಥಿಯೋ ಇಲ್ಲ ಇನ್ನು ಯಾರೇ ಆದರು ಮನೆಯ ಬಾಗಿಲಿಗೆ ಬಂದ ನಂತರ ಅವರಿಗೆ ಪ್ರೀತಿಯ ಸ್ವಾಗತವನ್ನು ಕೋರಬೇಕು. ಮೇಲುಪಚಾರ,ಮಾತಿನುಪಚಾರ ಎರಡನ್ನೂ ಮಾಡದೆ ಹೃದಯಾಂತರಾಳದಿಂದ ಅವರನ್ನು ಸತ್ಕರಿಸಬೇಕು. ಅದನ್ನೇ ಬಸವಣ್ಣನವರು ಪ್ರಸ್ತುತ ವಚನದ ಮೂಲಕ ಸಾಮಾಜಿಕರಿಗೆ ಮನಮುಟ್ಟುವಂತೆ ಹೇಳಿದ್ದಾರೆ.

    ಏನೀ ಬಂದಿರಿ ಹದುಳಿದ್ದಿರೇ ಎಂದಡೆ
    ನಿಮೈಸಿರಿ ಹಾರಿ ಹೋಹುದೇ?
    ಕುಳ್ಳಿರೆಂದರೆ ನೆಲ ಕುಳಿ ಹೋಹುದೇ?
    ಒಡನೆ ನುಡಿದರೆ ಸಿರ ಹೊಟ್ಟೆ ಒಡೆಯವುದೇ?
    ಕೊಡಲಿಲ್ಲದಿದ್ದೊಡೊಂದು ಗುಣವಿಲ್ಲದಿದ್ದಡೆ
    ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ

    ಯಾವಾಗ ಬಂದಿರಿ ಮನೆಯಲ್ಲೆಲ್ಲಾ ಕ್ಷೇಮವಾಗಿದ್ದೀರ? ಎಂದು ಕೇಳಿ ಬಿಟ್ಟರೆ ನಿಮ್ಮ ಐಸಿರಿ ಏನೂ ಹಾರಿಹೋಗುವುದಿಲ್ಲ. ಮಾತನ್ನೇನು ದುಡ್ಡು ತೆತ್ತು ತರಬೇಕೇ? ಮಾತು ಮನುಷ್ಯನ ಬದುಕಿನ ಎಟುಕಿನಲ್ಲೇ ಇರುತ್ತದೆ. ಶತ್ರುಗಳು ಮನೆಯ ಬಾಗಿಲಿಗೆ ಬಂದರೂ ಅವರನ್ನು ತಿರಸ್ಕರಿಸಬಾರದೆಂಬುದಿದೆ. ನೂರು ಭಿನ್ನಾಭಿಪ್ರಾಯದ ತಡಿಕೆಯಿದ್ದರೂ ಮನೆಗೆ ಬಂದವರನ್ನು ಸದ್ಭಾವದಿಂದ ಸ್ವಾಗತಿಸಬೇಕು, ಸತ್ಕರಿಸಬೇಕು. ತಕ್ಷಣಕ್ಕೆ ನುಡಿದರೆ ಅದರಿಂದ ನೀವು ಕಳೆದುಕೊಳ್ಳುವುದೇನೂ ಇಲ್ಲ!

    ಯೋಚನೆ ಮಾಡಿ ಲೆಕ್ಕಾಚಾರ ಮಾಡಿ ಕೊಂಕು ಮಾತುಗಳನ್ನು ಪೋಣಿಸಿಕೊಂಡು ಒಂದಷ್ಟು ತಯಾರಿ ಮಾಡಿಕೊಂಡು ಮಾತನಾಡುವುದಕ್ಕಿಂತ ಒಡನೆ ನುಡಿದರೆ ನಿಮ್ಮ ಶಿರ ಹೊಟ್ಟೆ ಒಡೆಯುವುದೇ? ಅಂದರೆ ನಿಮಗೆ ದೈಹಿಕವಾಗಿ ಯಾವುದಾದರೂ ತೊಂದರೆಯಾಗುತ್ತದೆಯೇ ಎನ್ನುತ್ತಾರೆ. ಬಂದವರನ್ನು ಕುಳಿತುಕೊಳ್ಳಿ ಎಂದರೆ ಅವರು ಆಸೀನರಾದ ಜಾಗವೇನಾದರೂ ಕುಳಿ ಹೊಗುವುದೇ? ಎನ್ನುತ್ತಾರೆ.

    ಬಂದವರು ಬಡವರೋ ಶ್ರೀಮಂತರೋ ತಿಳಿದು ಸೋಫ ಮೇಲೆ, ಇಲ್ಲ ಖಾಲಿ ಕುರ್ಚಿ ಮೇಲೆ ಕೂರಿಸುವುದು, ಶ್ರೀಮಂತರಾದರೆ ಒಳ್ಳೆಯ ಗುಣಮಟ್ಟದ ಬಿಸ್ಕೆಟ್, ಬೆಳ್ಳಿ ಬಟ್ಟಲ ಕುಂಕುಮ, ಬಡವರಾದರೆ ಸಾದಾರಣ ಬಿಸ್ಕೇಟ್ ಸ್ಟೀಲ್ ಬಟ್ಟಲ ಕುಂಕುಮ ಕೊಡುವವರೂ ಇದ್ದಾರೆ. ತನ್ನಕಡೆಯವರು ಬಂದರೆ ಹೊಗೆಯಾಡುವ ಖಾದ್ಯಗಳ ಸಮರ್ಪಣೆ, ತನ್ನವರಲ್ಲ ಎಂಬ ಭಾವನೆಯಿದ್ದರೆ ತಣ್ಣಗೆ ಕೊರೆಯುವ ತಿಂಡಿಯನ್ನು ನೀಡಿ ಅಪಚಾರ ಮಾಡುವವರೂ ಇದ್ದಾರೆ. ಅತಿಥಿಗಳ ನಡುವಣ ಭೇದನ್ನು ಮಾಡುವವರಿಗೆ ಇಂತಹ ಜನರಿಗೆ ಎಂಟುನೂರು ವರ್ಷಗಳ ಹಿಂದೆಯೇ ನಯವಾಗಿ ಬಸವಣ್ಣನವರು ಕಿವಿ ಹಿಂಡಿದ್ದಾರೆ.
    ದಾನ ಮಾಡುವ ಶಕ್ತಿಯನ್ನು ಭಗವಂತ ಕೊಟ್ಟಿದ್ದಾನೆ ಎಂದಮೇಲೆ ಕೊಡಬೇಕು .

    ಆ ಭಗವಂತ ಕೊಟ್ಟಿದ್ದಾನೆ ಎಂದ ಮೇಲೆ ಅದು ಸತ್ಪಾತ್ರಕ್ಕೆ ಸಲ್ಲಬೇಕಲ್ಲವೇ? ಇಳೆ, ಬೆಳೆ, ಸುಳಿದು ಸೂಸುವ ವಾಯು ಎಲ್ಲ ಭಗವಂತನದ್ದೇ ಆದ ಮೇಲೆ ಸುರಿಯುವ ಮಳೆ ಸುರಿಯದಿದ್ದರೆ, ಬೆಳೆಯುವ ಬೆಳೆ ಬೆಳೆಯದೇ ಇದ್ದರೇ ನಮಗೆಲ್ಲಿರುತ್ತಿತ್ತು ಈ ಸಮೃದ್ಧಿ ಎಂದು ಜೇಡರ ದಾಸಿಮಯ್ಯ ಹೇಳಿಲ್ಲವೇ ಹಾಗೆ.

    ಇಲ್ಲದೇ ಇರುವುದನ್ನು ಹೊಂದಿಸಿ ಕೊಡು ಎಂದು ಭಗವಂತ ಹೇಳಿಲ್ಲ ಇರುವುದನ್ನು ಕೊಡು ಎಂದಿರುವುದು ಇದೇ ಅಕ್ಕನ ಪ್ರಕಾರ ಕೈಗೆ ಶೃಂಗಾರವಾಗಿರುವುದು. ನಾನು, ನನ್ನ ಮನೆ, ನನ್ನ ಕುಟುಂಬ, ನನ್ನ ಹೆಂಡತಿ, ನನ್ನ ಮಕ್ಕಳು ಎಂದು “ನಾನು” ಎನ್ನುವುದನ್ನೇ ವಿಜೃಂಭಿಸಿಕೊಳ್ಳುವುದರ ಬದಲು Think out of the box ಎಂಬಂತೆ ಪೂರ್ವಗ್ರಹ ಪೀಡಿತ ಆಲೋಚನೆಗಳಿಂದ ಹೊರಬಂದು ತಾನೂ ಬದುಕಿ ಇತರರನ್ನು ಬದುಕಗೊಡಿ ಇಲ್ಲವಾದರೆ ಶಿಕ್ಷೆ ಖಂಡಿತಾ ಎಂದು ಎಚ್ಚರಿಸುತ್ತಾರೆ. ಹಾಗಾದಾಗ “ವಸುದೈವ ಕುಟುಂಬಕಂ” ಎಂಬ ತತ್ವ ಸಾಕಾರಗೊಳ್ಳುತ್ತದೆ ಎಂಬ ಬಯಕೆಯನ್ನು ವ್ಯಕ್ತಪಡಿಸಿ, ಯಾರಾದರು ಮನೆಗೆ ಬಂದರೆ ಮಂದಸ್ಮಿತ,ಮಧುರವಾಣಿ,ಮನದಾಳದ ಹಾರೈಕೆ ಇದ್ದರೆ ಅದಷ್ಟೇ ಸಾಕು ಎನ್ನುತ್ತಾರೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    error: Content is protected !!