25.8 C
Karnataka
Wednesday, May 20, 2026
    Home Blog Page 9

    DEEPAVALI: ದೀಪದಿಂದ ದೀಪ ಬೆಳಗುವ ದೀಪಾವಳಿ

    ಎಂ.ವಿ.ಶಂಕರಾನಂದ

    ಪಾವಳಿ- ಶಬ್ದವು ದೀಪ ಮತ್ತು ಅವಳಿ ಹೀಗೆ ರೂಪಿತಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗುತ್ತದೆ. ಮನೆಯ ತುಂಬಾ ದೀಪಗಳನ್ನು ಹಚ್ಚಿ, ಅದರ ನಗುವಿನ ಬೆಳಕಲ್ಲಿ ನಾವು ನಗುತ್ತಾ ಸಂಭ್ರಮಿಸುವುದೇ ದೀಪಾವಳಿ ಹಬ್ಬ.

    ದೀಪಯತಿ ಸ್ವಯಂ ಪರ ಚ ಇತಿ ದೀಪಃ’’ ಅಂದರೆ ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ.ತಮಸೋಮಾ ಜ್ಯೋತಿರ್ಗಮಯ’’ ಎಂಬ ಮಾತಿನಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪ. ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಹಣತೆಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯ ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ.

    ಈ ದೀಪಗಳನ್ನು ಬೆಳಗಿಸುವುದರಿಂದ ಮಾನವನ ಪಾಪಗಳು ದೂರವಾಗಿ ಆತನಿಗೆ ವಿಶೇಷವಾದ ಪುಣ್ಯ ಸಿಗುತ್ತದೆ ಎಂಬುದಾಗಿ ಶಾಸ್ತ್ರಗಳು ಹೇಳುತ್ತವೆ. ಯಾವ ಮನೆಯಲ್ಲಿ ಪ್ರತಿನಿತ್ಯವೂ ಸೂರ್ಯಾಸ್ತದಿಂದ ಸೂರ್ಯೋದಯದವರೆಗೂ ದೀಪ ಬೆಳಗುತ್ತದೆಯೋ ಆ ಮನೆಯಲ್ಲಿ ಸುಖಸಂಪತ್ತು ಸಮೃದ್ಧವಾಗಿರುತ್ತದೆ. ಮತ್ತೆ ಅಂತಹ ಮನೆಗಳಲ್ಲಿ ದಾರಿದ್ರ್ಯ ಸುಳಿಯುವುದಿಲ್ಲ. ಹಾಗಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ವಿಶೇಷ ಮಹತ್ವವಿದೆ.

    ದೀಪೇನ ಲೋಕಾನ್ ಯಜತಿ ದೀಪಸ್ತೇಜೋಮಯಃ ಸ್ಮೃತಃI
    ಚರುರ್ವರ್ಗಪ್ರದೋ ದೀಪಸ್ತಸ್ಮಾದ್ ದೀಪೈರ್ಯಜೇತ್ ಪ್ರಿಯೇII

    ತೇಜೋಮಯವಾದ ದೀಪವು ಧರ್ಮ, ಅರ್ಥ, ಕಾಮ, ಮೋಕ್ಷ ರೂಪವಾದ ನಾಲ್ಕು ವರ್ಗಪ್ರದವಾಗಿದೆ. ಅಂತಹ ದೀಪವನ್ನು ಬೆಳಗಿಸು ಎಂದು ಈ ಶ್ಲೋಕವು ತಿಳಿಸುತ್ತದೆ.

    ದೀಪಾವಳಿ ಆರಂಭ ಎಂದಿನಿಂದ ?

    ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಶ್ರೀರಾಮಚಂದ್ರನು ಅಯೋಧ್ಯೆಗೆ ಹಿಂತಿರುಗಿದಾಗ ಪ್ರಜೆಗಳು ಬಂಗಾರದ ಕಲಶವನ್ನು ಮಣಿರತ್ನಗಳಿಂದ ಅಲಂಕರಿಸಿ, ಮನೆಯೆದುರು ಹೊಸ್ತಿಲಿನ ಮೇಲಿಟ್ಟರು, ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಹಬ್ಬದ ಆಚರಣೆ ಪ್ರಾರಂಭವಾಯಿತು ಎನ್ನುತ್ತಾರೆ.

    ದೀಪಾವಳಿಯನ್ನು ಭಾರತದಲ್ಲಷ್ಟೇ ಅಲ್ಲದೆ, ಶ್ರೀಲಂಕಾ, ಮಲೇಷ್ಯಾ, ಸಿಂಗಾಪುರ, ಆಸ್ಟ್ರೇಲಿಯಾ, ಥಾಯ್ಲೆಂಡ್‌ಗಳಲ್ಲಿ ಸಹ ಆಚರಿಸುತ್ತಾರೆ. ಇದು ಜೈನರ 24ನೇ ತೀರ್ಥಂಕರರಾದ ಮಹಾವೀರರು ನಿರ್ವಾಣ ಹೊಂದಿದ ದಿನವಾದ್ದರಿಂದ ಜೈನರು ಇದರ ಅಮಾವಾಸ್ಯೆಯನ್ನು ಹೊಸವರ್ಷದ ಆರಂಭವಾಗಿ ಆಚರಿಸುತ್ತಾರೆ. ಈ ದಿನದಂದೇ ಅಶೋಕ ಚಕ್ರವರ್ತಿ ಬೌದ್ದ ಧರ್ಮಕ್ಕೆ ಪರಿವರ್ತನೆಯಾದನು ಎಂಬ ಪ್ರತೀತಿ ಬೌದ್ಧರಲ್ಲಿದೆ. ಹೀಗಾಗಿ ಅವರು ದೀಪಾವಳಿಯನ್ನು ಅಶೋಕ ವಿಜಯದಶಮಿಯಾಗಿ ಆಚರಿಸುತ್ತಾರೆ. ಸಿಖ್ಖರ ೬ನೇ ಗುರು ಹರಗೋವಿಂದ ಸಿಂಗ್ ೧೬೧೯ರಂದು ಗ್ವಾಲೀಯಾರ್ ಕೋಟೆಯ ಸೆರೆಮನೆಯಿಂದ ಈ ದಿನವೇ ಬಿಡುಗಡೆ ಹೊಂದಿದ್ದರು. ಆದ್ದರಿಂದ ಗುರು ತಮ್ಮ ಬಾಳಿಗೆ ಬೆಳಕು ತಂದುದಕ್ಕಾಗಿ ಸಿಖ್ಖರು ದೀಪಾವಳಿಯನ್ನು ಬಂದಿಚಾರ್ ದಿನವಾಗಿ ಆಚರಿಸುತ್ತಾರೆ.

    ದೀಪಾವಳಿಯನ್ನು ಆಶ್ವಯುಜದ ಕೊನೆಯಲ್ಲಿನ ಕೃಷ್ಣ ತ್ರಯೋದಶಿ(ಧನ ತ್ರಯೋದಶಿ), ಕೃಷ್ಣ ಚತುರ್ದಶಿ(ನರಕ ಚತುರ್ದಶಿ), ಅಮಾವಾಸ್ಯೆ(ಲಕ್ಷ್ಮೀಪೂಜೆ) ಮತ್ತು ಕಾರ್ತೀಕ ಮಾಸದ ಆರಂಭದ ಶುಕ್ಲ ಪಾಡ್ಯ(ಬಲಿ ಪಾಡ್ಯಮಿ), ಯಮ ದ್ವಿತೀಯಗಳಂದು ಅದ್ಧೂರಿಯಾಗಿ ಐದು ದಿನಗಳ ಹಬ್ಬವನ್ನಾಗಿ, ಸಾಂಪ್ರದಾಯಕವಾಗಿ ಆಚರಿಸುತ್ತೇವೆ.

    ಹಬ್ಬದ ಆಚರಣೆ

    ಆಶ್ವಯುಜ ಬಹುಳ ತ್ರಯೋದಶಿಯಂದು ದೀಪಾವಳಿ ಹಬ್ಬವು ಆರಂಭವಾಗುತ್ತದೆ. ಆ ದಿನ ರಾತ್ರಿ ಎಳ್ಳೆಣ್ಣೆ ದೀಪ ಹಚ್ಚಿ, ಮನೆ ಮುಂದಿರುವ ಬಹು ಎತ್ತರವಾದ ಜಾಗದಲ್ಲಿ ದೀಪ ಇಡುವುದರಿಂದ ಅಪಮೃತ್ಯು’ ನಿವಾರಣೆಯಾಗುತ್ತದೆ. ಈ ದೀಪವನ್ನು ಯಮದೇವರ ಪ್ರೀತಿಗಾಗಿ, ಮೃತ್ಯು ನಿವಾರಣೆಗಾಗಿ ಇಡುತ್ತೇವೆ. ಹಾಗಾಗಿ ಈ ದೀಪವನ್ನುಯಮದೀಪ’ ಎನ್ನುತ್ತೇವೆ. ಅದೇ ದಿನದ ಸಂಜೆ ಹಂಡೆಯಲ್ಲಿ ನೀರು ತುಂಬಿಸುವ ಹಬ್ಬ ಎನ್ನುತ್ತೇವೆ. ಹಂಡೆಯನ್ನು ವಿವಿಧ ಹೂಗಳಿಂದ ಅಲಂಕಾರ ಮಾಡಿ, ಸುಣ್ಣ ಮತ್ತು ಕೆಮ್ಮಣ್ಣಿನಿಂದ ರಂಗೋಲಿ ಬಿಡಿಸುತ್ತಾರೆ. ಹಂಡೆಗೆ ನೀರು ತುಂಬಿಸಿ ಎಲೆ ಅಡಿಕೆ, ಹೂವು, ನಾಣ್ಯ ಹಾಕಿ ಪೂಜಿಸುತ್ತಾರೆ. ಈ ದಿನವನ್ನು ಧನತ್ರಯೋದಶಿ ಎಂದೂ ಕರೆಯುತ್ತಾರೆ. ಈ ದಿನ ಹೊಸ ಬಂಗಾರವನ್ನು ಖರೀದಿ ಮಾಡುವುದರಿಂದ ಮನೆಯಲ್ಲಿ ವರ್ಷವಿಡೀ ಧನಲಕ್ಷ್ಮಿಯು ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ.

    ಮಾರನೇ ದಿನವೇ ನರಕ ಚತುರ್ದರ್ಶಿ. ದೀಪಾವಳಿಯ ಪ್ರಮುಖ ದಿನ. ನರಕ ಎಂಬುವುದಕ್ಕೆ ಅಜ್ಞಾನ ಎಂದರ್ಥ. ಈ ಅಜ್ಞಾನವು ಚತುರ್ದಶಿಯ ದಿನವೇ ನಾಶವಾಗಿ ಜ್ಞಾನವು ದೊರೆಯಲಿ ಎಂದು ಈ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಚತುರ್ದಶಿ ಎಂದರೆ ೧೪ ವಿದ್ಯೆ ಎಂದರ್ಥ. ಜ್ಞಾನವನ್ನು ಪಡೆಯಲು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದ, ಕಲ್ಪ, ಸಂಹಿತೆ, ಜ್ಯೋತಿಷ್ಯ, ಪುರಾಣ, ಸ್ಮೃತಿ, ವ್ಯಾಕರಣ, ಶೀಕ್ಷಾ, ನ್ಯಾಯ, ಛಂದಸ್ಸು, ಮೀಮಾಂಸೆ ಎಂಬ ೧೪ ವಿದ್ಯೆಗಳನ್ನು ಕಲಿಯಬೇಕೆಂದು ಶಾಸ್ತ್ರವು ತಿಳಿಸುತ್ತದೆ. ಅಂದು ವಿಶೇಷವಾಗಿ ಅಭ್ಯಂಜನ ಮಾಡುವುದನ್ನು ನಮ್ಮ ಧರ್ಮಶಾಸ್ತ್ರ ಹೇಳುತ್ತದೆ.

    ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಲ್ಯಾಂ ಚತುದರ್ಶಿ
    ಪ್ರಾತಃ ಸ್ನಾನಂ ತು ಯಃ ಕುರ್ಯಾದ್ಯಮಲೋಕಂ ನ ಪಶ್ಯತಿ


    ಎಣ್ಣೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯೂ, ನೀರಿನಲ್ಲಿ ಗಂಗೆಯೂ ನೆಲೆಸಿರುತ್ತಾರೆ. ಎಣ್ಣೆ ಹಚ್ಚಿಸಿಕೊಂಡು ಹದವಾದ ಬಿಸಿನೀರಿನಲ್ಲಿ ಮಾಡುವ ಅಭ್ಯಂಗ ಸ್ನಾನದಿಂದ ಗಂಗಾ-ಲಕ್ಷ್ಮಿಯರ ಅನುಗ್ರಹವಾಗಿ ಆಯುರಾರೋಗ್ಯ ಭಾಗ್ಯವುಂಟಾಗಿ ನವಚೈತನ್ಯ ಮೂಡುತ್ತದೆ. ಹಾಗೆಯೇ ಅಜ್ಞಾನವೆಂಬ ಕತ್ತಲೆ ದೂರವಾಗಿ ಸುಜ್ಞಾನವೆಂಬ ಬೆಳಕು ಮಾನವನಿಗೆ ಲಭಿಸುತ್ತದೆ.

    ಪೌರಾಣಿಕ ಹಿನ್ನಲೆ

    ನರಕ ಚತುರ್ದಶಿಯ ಬಗ್ಗೆ ಒಂದು ಪೌರಾಣಿಕ ಹಿನ್ನಲೆಯಿದೆ. ಇಂದಿನ ಅಸ್ಸಾಂ ಹಿಂದೆ ಕಾಮರೂಪವೆಂಬ ಹೆಸರಿನ ರಾಜ್ಯವಾಗಿತ್ತು. ನರಕಾಸುರನೆಂಬ ರಾಕ್ಷಸರಾಜ ಅದನ್ನು ಆಳುತ್ತಿದ್ದ. ಅವನು ಭೂದೇವಿಯ ಮಗನಾಗಿದ್ದು, ಬಹಳ ದೊಡ್ಡ ತಪಸ್ಸು ಮಾಡಿ ಬ್ರಹ್ಮನಿಂದ ವರವನ್ನು ಪಡೆದಿದ್ದ. ಎಲ್ಲ ದೇವತೆಗಳು, ಯಕ್ಷರನ್ನು, ಭೂಲೋಕದ ರಾಜರನ್ನು ಸೋಲಿಸಿ ಅಜೇಯನಾಗಿ, ಹದಿನಾರು ಸಾವಿರ ಕನ್ಯೆಯರನ್ನು ಸೆರೆಮನೆಯಲ್ಲಿ ಬಂದಿಸಿದ್ದ. ದೇವತೆಗಳ ಮಾತೆಯಾದ ಅದಿತಿಯ ಕರ್ಣಕುಂಡಲಗಳನ್ನು ಕಿತ್ತು ತಂದಿದ್ದ ಕ್ರೂರಿಯಾಗಿದ್ದ. ಎಲ್ಲಾ ದೇವತೆಗಳು ಸೇರಿ ಶ್ರೀಕೃಷ್ಣನನ್ನು ಪ್ರಾರ್ಥಿಸಿದಾಗ, ಶ್ರೀಕೃಷ್ಣನು ಭೂದೇವಿ ಸ್ವರೂಪಿಯಾದ ಸತ್ಯಭಾಮೆಯೊಂದಿಗೆ ಆಶ್ವಯುಜ ಕೃಷ್ಣ ಚತುರ್ದಶಿಯ ಮಧ್ಯರಾತ್ರಿ ಸರಕಾಸುರನನ್ನು ಕೊಂದು ಹಾಕಿದ. ಆ ದಿನವನ್ನೇ ನರಕ ಚತುರ್ದಶಿಯೆಂದು ಲೋಕಾದ್ಯಂತ ಹಬ್ಬವಾಗಿ ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ ಅಂದು ನರಕಾಸುರನ ಸಂಹಾರ ಮಾಡಿ ಬಂದ ಕೃಷ್ಣನಿಗೆ ಸುಮಂಗಲೆಯರು ಆರತಿ ಬೆಳಗುತ್ತಾರೆ. ಆ ಪದ್ಧತಿಯಂತೆ ಇಂದಿಗೂ ಮನೆಯಲ್ಲಿನ ಮಕ್ಕಳಿಗೆ ಆರತಿ ಮಾಡುವುದು ಸಂಪ್ರದಾಯದಂತೆ ಬೆಳೆದು ಬಂದಿದೆ.


    ಮೂರನೆಯ ದಿನ ಸಾಯಂಕಾಲ ಅಮಾವಾಸ್ಯೆಯ ರಾತ್ರಿ ಮನೆಯಲ್ಲಿನ ಅಲಕ್ಷ್ಮಿಯನ್ನು ಹೊರಹಾಕುವ ಉದ್ದೇಶದಿಂದ ಲಕ್ಷ್ಮಿಪೂಜೆಯನ್ನು ಮಾಡಿ ಮನೆಯ ತುಂಬಾ ದೀಪವನ್ನು ಬೆಳಗಬೇಕೆಂದು ಕೂಡ ಶಾಸ್ತ್ರ ತಿಳಿಸುತ್ತದೆ. ಈ ದಿನ ಲಕ್ಷ್ಮಿ ಪೂಜೆಗೆ ತುಂಬಾ ಪ್ರಶಸ್ತವಾದ ದಿನ. ಹಿರಣ್ಮಯಿ, ತೇಜಸ್ವಿ, ಜೀವನಪೋಷಕ ಹಾಗೂ ಚೈತನ್ಯಮಯಿಯಾದ ಲಕ್ಷ್ಮಿಯನ್ನು ವಾದ್ಯಘೋಷಗಳ ಸಹಿತ ಪ್ರವೇಶದ್ವಾರದಿಂದ ಮನೆಯೊಳಗೆ ಕರೆತಂದು ಅವಳ ವಾಸ್ತವ್ಯಕ್ಕೆ ಸ್ಥಾನ ನೀಡಿ ಪೂಜೆ ಮಾಡುವುದೇ-ಲಕ್ಷ್ಮೀಪೂಜೆ. ಈ ಅಮಾವಾಸ್ಯೆಯು ಕಲ್ಯಾಣಸ್ವರೂಪಿಯಾಗಿರುತ್ತದೆ. ಈ ಸಮಯದಲ್ಲಿ ರೈತರು ಬೆಳೆದ ದವಸ ಧಾನ್ಯಗಳು ಮನೆಗೆ ಬಂದಿರುತ್ತವೆ. ಮನೆಯಲ್ಲಿ ಆನಂದವಿರುತ್ತದೆ. ತಾವು ಪಟ್ಟ ಪರಿಶ್ರಮದ ಫಲವು ಭಗವಂತನ ಕೃಪೆಯಿಂದ ಅವರಿಗೆ ದೊರಕಿರುತ್ತದೆ. ಕೃಷಿಯಿಂದ ಉತ್ಪನ್ನವಾದ ಬೆಳೆಯೇ ನಿಜವಾದ ಲಕ್ಷ್ಮಿಯಾಗಿರುತ್ತದೆ. ಇಂದು ಮಹಾವಿಷ್ಣು ಮಹಾಲಕ್ಷ್ಮಿಯರ ವಾಷಿಕ ಪುನರ್ಮಿಲನ ದಿನ ಎನ್ನುತ್ತಾರೆ. ಅಮಾವಾಸ್ಯೆ ಕಗ್ಗತ್ತಲಾಗಿರುತ್ತದೆ. ದೀಪ ಬೆಳಗಿಸಿ ಕತ್ತಲನ್ನು ಓಡಿಸುವುದು ಜ್ಯೋತಿ ಸ್ವರೂಪಿಣಿಯಾದ ಮಹಾಲಕ್ಷ್ಮಿ. ಹಾಗಾಗಿ ಈ ದಿನ ಸಂಜೆ ಪ್ರಾಜ್ಞರಿಗೆ ದೀಪ ದಾನ ಮಾಡಿದರೆ ಸರ್ವ ಇಷ್ಟಾರ್ಥ ನೆರವೇರಿ, ಸಕಲ ಸಂಪತ್ತು ವೃದ್ಧಿಸುತ್ತದೆ. ಹಾಗೆಯೇ ಇದು ಶ್ರೀಕೃಷ್ಣನು ದೇಹತ್ಯಾಗ ಮಾಡಿದ ದಿನವೆಂದೂ, ನಚಿಕೇತನಿಗೆ ಆತ್ಮ ಸಾಕ್ಷಾತ್ಕಾರವಾದ ದಿನವೆಂದೂ ಹೇಳುತ್ತಾರೆ.

    ನಾಲ್ಕನೇಯ ದಿನವನ್ನು ಬಲಿಪಾಡ್ಯಮಿ ಎಂದು ಕರೆಯುತ್ತಾರೆ. ಮಹಾವಿಷ್ಣುವು ವಾಮನಾವತಾರದಿಂದ ಬಲಿಚಕ್ರವರ್ತಿಯ ಅಹಂಕಾರವನ್ನು ತೊಲಗಿಸಿ, ಆತನನ್ನು ಪಾತಾಳಕ್ಕೆ ನೂಕಿದ ದಿನ. ಪ್ರತಿವರ್ಷ ಕಾರ್ತೀಕ ಮಾಸದ ಮೊದಲ ದಿನವಾದ ಇಂದು ಸಂಜೆ ಬಲಿ ಚಕ್ರವರ್ತಿಯು ತನ್ನ ಸಾಮ್ರಾಜ್ಯವನ್ನು ನೋಡಲೆಂದು ಭೂಮಿಗೆ ಬಂದು ಮೂರೂಮುಕ್ಕಾಲು ಘಳಿಗೆ ಇರುತ್ತಾನೆಂದೂ ನಂಬಿಕೆಯಿದೆ. ಹೀಗಾಗಿಯೇ ಅಂದು ಸಂಜೆ ಬಲೀಂದ್ರನ ಪೂಜೆ ಮಾಡಲಾಗುತ್ತದೆ. ಹೊಲ ಗದ್ದೆ, ಮನೆಗಳಲ್ಲಿ ಬಲೀಂದ್ರನ ಸ್ವಾಗತಿಸಲೆಂದು ಸಾಲು ದೀಪಗಳನ್ನು ಹಚ್ಚಿಡುತ್ತಾರೆ. ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿದ್ದು ಇದೇ ದಿನವಂತೆ. ಆದ್ದರಿಂದ ಈ ದಿನ ಗೋಪೂಜೆ ಹಾಗೂ ಗೋವರ್ಧನನ ಪೂಜೆಗೆ ಮಹತ್ವ. ಈ ದಿನ ಗೋವಿನ ಪೂಜೆ ಮಾಡಿ ಅದಕ್ಕೆ ಅಕ್ಕಿ, ಬೆಲ್ಲ ನೀಡಿ ಪ್ರಾರ್ಥಿಸುವುದರಿಂದ ಮಾನವನಿಗೆ ಇಹದಲ್ಲಿ ಸೌಖ್ಯ, ಪರದಲ್ಲಿ ಮುಕ್ತಿವುಂಟಾಗುತ್ತದೆ ಎನ್ನುತ್ತಾರೆ.

    ಐದನೇಯ ದಿನವನ್ನು ಯಮ ದ್ವಿತೀಯ ಅಥವಾ ಭ್ರಾತೃ ದ್ವಿತೀಯ ಎಂದು ಆಚರಿಸುತ್ತಾರೆ. ಈ ದಿನ ಯಮ ತನ್ನ ತಂಗಿ ಯಮಿಯ ಮನೆಗೆ ಭೇಟಿ ಕೊಡುತ್ತಾನೆಂಬ ನಂಬಿಕೆ ಇದೆ. ತಂಗಿ ಅಣ್ಣನಿಗೆ ತಿಲಕವಿಟ್ಟು, ಸಿಹಿ ತಿನ್ನಿಸಿ, ಆರತಿ ಎತ್ತುತ್ತಾಳೆಂಬ ಪ್ರತೀತಿ. ಕಾರ್ತೀಕ ಪಾಡ್ಯದಿಂದ ಮನೆಬಾಗಿಲಲ್ಲಿ ಮತ್ತು ತುಳಸಿ ಕಟ್ಟೆಯ ಎದುರು ಒಂದು ತಿಂಗಳು ಪೂರ್ತಿ ದೀಪವನ್ನು ಹಚ್ಚಿಡುತ್ತಾರೆ. ಕೆಲವರು ಮನೆಯೆದುರು ಆಕಾಶಬುಟ್ಟಿಗಳನ್ನು ಕಟ್ಟುತ್ತಾರೆ. ಈ ರೀತಿ ದೀಪವನ್ನು ಹಚ್ಚಿಡುವ ದೀಪದ ಜ್ಯೋತಿಯು ಸತ್ತ ನಂತರ ಆತ್ಮ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವಾಗ ಬೆಳಕು ತೋರುತ್ತದೆ ಎಂಬುದು ನಂಬಿಕೆ.

    Indian Stock Market: ಹೊಸ ಸಂವತ್ಸರದಲ್ಲಿ ಅವಕಾಶದ ಲಾಭ ಪಡೆಯುವದೇ ಜಾಣತನ

    ನಾಳೆ 6.15 ರಿಂದ 7.15 ಮುಹೂರ್ತ ಟ್ರೇಡಿಂಗ್ -MUHURTH TRADING

    ಭೂಮಿ ಗುಂಡಾಗಿದೆ. ಚಕ್ರಾಕಾರದಲಿ ತಿರುಗುತ್ತಿದೆ ಎಂಬುದು ನಿರ್ವಿವಾದಿತ ಸತ್ಯ. ಹಾಗೆಯೇ ಇಂದಿನ ಚಟುವಟಿಕೆಗಳು, ವಿಶೇಷವಾಗಿ ಷೇರುಪೇಟೆಯಲ್ಲಿನ ವಹಿವಾಟು ಸಹ ಚಕ್ರಾಕಾರದಲ್ಲಿ ನಡೆಯುತ್ತಿದೆ. ಅಂದರೆ ಷೇರುವಿನಿಮಯ ಕೇಂದ್ರಗಳಲ್ಲಿ ಚಟುವಟಿಕೆಯು ಒಂದು ರೀತಿ ಮಂಡೂಕ ಚಲನೆ ತರಹ ಒಂದು ಕಂಪನಿಯಿಂದ ಒಂದು ಕಂಪನಿಗೆ ಜಿಗಿಯುತ್ತಿರುವಂತೆ ಕಾಣುತ್ತದೆ. ಹಾಗಾಗಿ ಈಚಿನ ದಿನಗಳಲ್ಲಿ ಕೇವಲ ಕೆಲವೇ ದಿನಗಳಲ್ಲಿ ಅಗ್ರಮಾನ್ಯ ಕಂಪನಿಯ ಷೇರುಗಳು ಭಾರಿ ಏರಿಳಿಕೆಯನ್ನು ಪ್ರದರ್ಶಿಸುತ್ತಿದ್ದು, ಅಲ್ಪಕಾಲೀನ ಹೂಡಿಕೆಯು ಆಕರ್ಷಣೀಯವಾದ ಲಾಭವನ್ನು ಒದಗಿಸುತ್ತಿದೆ.

    ಸಾಮಾನ್ಯವಾಗಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಕಂಪನಿಗಳ ಏರಿಳಿತಗಳು ರಭಸವಾಗಿದ್ದು ಅವು ಡೆರಿವೇಟಿವ್ಸ್‌ ವಿಭಾಗದ ಮೇಲೆ ಪ್ರಭಾವಿಯಾಗಿರುತ್ತವೆ. ಉ ಳಿದಂತೆ ಇತರೆ ಕಂಪನಿ ಷೇರುಗಳು ದೀರ್ಘಕಾಲೀನ ಹೂಡಿಕೆಗೆ ಸೂಕ್ತ ಎಂಬ ಭಾವನೆ ಹೆಚ್ಚಿನವರಲ್ಲಿದೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಏರಿಳಿತಗಳನ್ನುಂಟುಮಾಡಿದದಲ್ಲಿ ಮಾತ್ರ ಷೇರುಪೇಟೆಯಲ್ಲಿ ಲಾಭ ಗಳಿಕೆ ಸಾಧ್ಯ ಎನ್ನುವ ಹಂತದಲ್ಲಿ ಸಧ್ಯದ ಪೇಟೆಗಳಿವೆ.

    ಇಂತಹ ಸಂದರ್ಭದಲ್ಲಿ ಪ್ರಮುಖ ಕಂಪನಿಗಳಾದ ಕಾಲ್ಗೇಟ್‌ ಪಾಲ್ಮೊಲೀವ್‌, ವೇದಾಂತ, ಇಂಡಿಯಾ ಸೀಮೆಂಟ್‌, ಡಾ.ಲಾಲ್‌ ಪತ್‌ ಲ್ಯಾಬ್‌, ಗ್ರೇಟ್‌ ಈಸ್ಟರ್ನ್‌ ಶಿಪ್ಪಿಂಗ್‌, ಹೈಡಲ್‌ ಬರ್ಗ್‌ ಸೀಮೆಂಟ್‌, ಹಿಂದೂಸ್ಥಾನ್‌ ಏರೋನಾಟಿಕ್ಸ್‌, ಗುಜರಾತ್‌ ಗ್ಯಾಸ್‌, ರಾಜೇಶ್‌ ಎಕ್ಸ್‌ ಪೋರ್ಟ್ಸ್‌, ಕರ್ನಾಟಕ ಬ್ಯಾಂಕ್‌, ಕೆನರಾ ಬ್ಯಾಂಕ್‌, ಬರ್ಜರ್‌ ಪೇಂಟ್ಸ್‌, ಗ್ಲೆನ್‌ ಮಾರ್ಕ್‌ ಫಾರ್ಮ, ಇ ಕೆ ಐ ಎನರ್ಜಿ, ಕ್ಯಾನ್‌ ಫಿನ್‌ ಹೋಮ್ಸ್‌, ಟ್ರಾನ್ಸ್‌ ಪೋರ್ಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ, ಎಂ ಅಂಡ್‌ ಎಂ ಫೈನಾನ್ಸ್‌, ಬಂದನ್‌ ಬ್ಯಾಂಕ್‌, ಲೌರಸ್‌ ಲ್ಯಾಬ್‌, ಟಾಟಾ ಎಲ್ಯಾಕ್ಸಿ, ಝೀ ಎಂಟರ್‌ ಟೇನ್‌ ಮೆಂಟ್‌ ನಂತಹ ಅನೇಕ ಕಂಪನಿಗಳು ಕೇವಲ ಕೆಲವೇ ದಿನಗಳಲ್ಲಿ ಅನಿರೀಕ್ಷಿತ ಮಟ್ಟದ ಏರಿಳಿತಗಳನ್ನು ಪ್ರದರ್ಶಿಸಿವೆ. ಏರಿಕೆ ಕಂಡರೆ ಮಾರಾಟದ ಒತ್ತಡದಿಂದ ಕುಸಿಯುವುದು, ಇಳಿಕೆ ಕಂಡಲ್ಲಿ ರಭಸದಿಂದ ಪುಟಿದೇಳುವುದು ಸಹಜ ಚಟುವಟಿಕೆಯಾಗಿದೆ. ಏಕೆ ಈ ರೀತಿಯ ಏರಿಳಿತಗಳು ಎಂದರೆ ಮುಖ್ಯವಾಗಿ ಪೇಟೆಗಳು ಗರಿಷ್ಠ ಮಟ್ಟದಲ್ಲಿ ತೇಲಾಡುತ್ತಿವೆ. ಮತ್ತೆ ಹೂಡಿಕೆದಾರರು, ಅವರು ರೀಟೇಲ್‌ ಹೂಡಿಕೆದಾರರಾಗಲಿ, ಸಾಹುಕಾರಿ ಹೂಡಿಕೆದಾರರಾಗಲಿ, ಮ್ಯುಚುಯಲ್‌ ಫಂಡ್‌ ಹೌಸ್‌ ಗಳಾಗಲಿ, ಇತರೆ ಸಾಂಸ್ಥಿಕ ಹೂಡಿಕೆದಾರರಾಗಲಿ ಹೆಚ್ಚು ಲಾಭ ಗಳಿಕೆಯತ್ತಲೇ ಗಮನಹರಿಸುವ ಶೈಲಿಯ ವಿಶ್ಲೇಷಣೆಗಳೇ ಹೆಚ್ಚು ಹೆಚ್ಚು ಪ್ರಚಾರದಲ್ಲಿವೆ.

    ಕಾಲ್ಗೇಟ್‌ ಪಾಲ್ಮೊಲೀವ್‌ ಕಂಪನಿ ಷೇರಿನ ಬೆಲೆಯು ಈ ತಿಂಗಳ ಆರಂಭದಲ್ಲಿ ರೂ.1,635 ರ ಸಮೀಪವಿತ್ತು. ನಂತರ ಈ ತಿಂಗಳ ಎರಡನೇ ವಾರದಲ್ಲಿ ರೂ.1,535 ರವರೆಗೂ ಕುಸಿಯಿತು. ಶುಕ್ರವಾರದಂದು ರೂ.1,625 ರವರೆಗೂ ಜಿಗಿಯಿತು. ಈ ಏರಿಕೆಗೆ ಕಂಪನಿಯು ಪ್ರಕಟಿಸಿದ ರೂ.18 ರ ಲಾಭಾಂಶ ಕಾರಣವಿರಬಹುದಾದರೂ ಪ್ರದರ್ಶಿಸಿದ ಏರಿಳಿತಗಳ ಪ್ರಮಾಣವು ಲಾಭಾಂಶಕ್ಕಿಂತ ಅತಿ ಹೆಚ್ಚಿರುವುದು ಗಮನಾರ್ಹ.

    ವೇದಾಂತ ಕಂಪನಿಯು ಸಹ ಏರಿಳಿತ ಪ್ರದರ್ಶಿಸಿದೆ. ಅಕ್ಟೋಬರ್‌ ತಿಂಗಳ ಆರಂಭದಲ್ಲಿ ರೂ.272 ರಲ್ಲಿದ್ದ ಷೇರಿನ ಬೆಲೆ, 11 ರಂದು ಸೋಮವಾರ ದಿನದ ಆರಂಭದಲ್ಲಿ ರೂ.305 ರವರೆಗೂ ಏರಿಕೆ ಕಂಡಿತು. ನಂತರ ಅಂದೇ ರೂ.286 ಕ್ಕೆ ಕುಸಿದು, 17 ರಂದು ರೂ.277 ಕ್ಕೆ ಹಿಂದಿರುಗಿದೆ.

    ಇಂಡಿಯಾ ಸೀಮೆಂಟ್‌ ಷೇರಿನ ಬೆಲೆ ಜೂನ್‌ 20 ರಂದು ರೂ.145 ರಲ್ಲಿತ್ತು, ಸೆಪ್ಟೆಂಬರ್‌ 20 ರಂದು ವಾರ್ಷಿಕ ಗರಿಷ್ಟ ರೂ.298 ಕ್ಕೆ ತಲುಪಿ ಈ ತಿಂಗಳ 17 ರಂದು ರೂ.226 ತಲುಪಿದೆ. ಈಗ ರೂ.236 ರ ಸಮೀಪದಲ್ಲಿದೆ.

    ಡಾಕ್ಟರ್‌ ಲಾಲ್‌ ಪತ್‌ ಲ್ಯಾಬ್‌ ಷೇರಿನ ಬೆಲೆ ಸೆಪ್ಟೆಂಬರ್‌ 29 ರಂದು ರೂ.2,719 ರಲ್ಲಿತ್ತು. ಈ ತಿಂಗಳ 11 ರಂದು ರೂ.2,260 ಕ್ಕೆ ಕುಸಿಯಿತು. 21 ಕ್ಕೆ ರೂ.2,575 ರವರೆಗೂ ಚೇತರಿಸಿಕೊಂಡಿತು.

    ಗ್ರೇಟ್‌ ಈಸ್ಟರ್ನ್‌ ಶಿಪ್ಪಿಂಗ್‌ ಷೇರಿನ ಬೆಲೆ ಆಗಷ್ಟ್‌ ಅಂತ್ಯದಲ್ಲಿ ರೂ.585 ರ ವಾರ್ಷಿಕ ಗರಿಷ್ಢ ತಲುಪಿತು. ನಂತರ ಸೆಪ್ಟೆಂಬರ್‌ 26 ರ ಸಮಯದಲ್ಲಿ ರೂ.478 ರ ವರೆಗೂ ಜಾರಿತು. ಅಲ್ಲಿಂದ ಈ ತಿಂಗಳ 7 ರಂದು ರೂ.562 ರವರೆಗೂ ಪುಟಿದೆದ್ದಿತು. 12 ರಂದು ರೂ.499 ರ ಸಮೀಪಕ್ಕೆ ಹಿಂದಿರುಗಿತು. ಸಧ್ಯ ರೂ.517 ರ ಸಮೀಪ ವಹಿವಾಟಾಗುತ್ತಿದೆ.

    ಹೈಡಲ್‌ ಬರ್ಗ್‌ ಸೀಮೆಂಟ್‌ ಕಂಪನಿಯ ಷೇರಿನ ಬೆಲೆ ಸೆಪ್ಟೆಂಬರ್‌ 28 ರಂದು ರೂ.183 ರಲ್ಲಿದ್ದು ಅಕ್ಟೋಬರ್‌ 11 ಕ್ಕೆ ರೂ.214 ಕ್ಕೆ ಜಿಗಿಯಿತು. ಶುಕ್ರವಾರ 21 ರಂದು ರೂ.184 ರ ಸಮೀಪ ಕೊನೆಗೊಂಡಿದೆ.

    ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಸೆಪ್ಟೆಂಬರ್‌ 28 ರಂದು ರೂ.2,245 ರಲ್ಲಿದ್ದು ಈ ತಿಂಗಳ 7 ರಂದು ರೂ.2,499 ರವರೆಗೂ ಚೇತರಿಸಿಕೊಂಡಿತು. ನಂತರ 14 ರಂದು ರೂ.2,332 ರವರೆಗೂ ಕುಸಿದು, 19 ರಂದು ರೂ.2,555 ರವರೆಗೂ ಪುಟಿದೆದ್ದಿತು, ಶುಕ್ರವಾರ 2,401 ರ ಸಮೀಪ ಕೊನೆಗೊಂಡಿದೆ.

    ಇ ಕೆ ಐ ಎನರ್ಜಿ ಕಂಪನಿ ಷೇರಿನ ಬೆಲೆ ಸೆಪ್ಟೆಂಬರ್‌ 15 ರಂದು ರೂ.1,720 ರ ಸಮೀಪವಿತ್ತು, ನಂತರ ಈ ತಿಂಗಳ 3 ರಂದು ರೂ.1,300 ರವರೆಗೂ ಕುಸಿಯಿತು. 11 ರಂದು ರೂ.2,100 ಕ್ಕೆ ಪುಟಿದೆದ್ದಿತು. ಶುಕ್ರವಾರ 21 ರಂದು ರೂ.1,676 ರವರೆಗೂ ತಲುಪಿ ರೂ.1,722 ರ ಸಮೀಪ ಕೊನೆಗೊಂಡಿದೆ.

    ಹೀಗೆ ಅಸಹಜ ರೀತಿಯ ಏರಿಳಿತಗಳನ್ನು ಪ್ರದರ್ಶಿಸುವ ಷೇರುಪೇಟೆಯ ಚಟುವಟಿಕೆಯು ಹೆಚ್ಚು ವ್ಯವಹಾರಿಕತೆಯಿಂದ ಕೂಡಿದ್ದಾಗಿದೆ. ಈ ಸಂದರ್ಭದಲ್ಲಿ ದೀರ್ಘಕಾಲೀನ ಹೂಡಿಕೆಯ ಚಿಂತನೆಗಿಂತ ಅವಕಾಶದ ಲಾಭ ಪಡೆಯುವುದೇ ಸರಿ ಎನಿಸುತ್ತದೆ. ಈ ಏರಿಳಿತಗಳ ಹಿಂದೆ ಅಡಕವಾಗಿರುವ ಕಾರಣಗಳಿಗಿಂತ ಪೇಟೆಯ ದರಗಳನ್ನಾಧರಿಸಿ ಚಟುವಟಿಕೆಯೇ ಸೂಕ್ತವಲ್ಲವೇ?

    ಮುಹೂರ್ತ್ ಟ್ರೇಡಿಂಗ್

    ನಾಳೆ ದೀಪಾವಳಿಯ ಶುಭ ಅವಸರ. ಷೇರು ಪೇಟೆಯಲ್ಲಿ ಹೊಸ ಸಂವತ್ಸರದ ಆರಂಭ. ಸಂಜೆ 6.15 ರಿಂದ 7.15ರವರೆಗೆ ಮುಹೂರ್ತ ವಹಿವಾಟು. ಈ ದೀಪಾವಳಿ ಎಲ್ಲಾ ಹೂಡಿಕೆದಾರರಿಗೆ ಸಂತಸ ತರಲಿ. ಹೂಡಿಕೆ ಇಮ್ಮಡಿಸಲಿ ಎಂಬ ಶುಭ ಹಾರೈಕೆ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕಲಾವಿದ ಶ್ರೀ ಜಯದೇವ ಕುಂಚದಲ್ಲಿ ಅರಳಿದ ಸೌಂದರ್ಯ ಲಹರಿ ಮತ್ತು ಉಪನಿಷತ್ ದರ್ಶನ

    ಬಳಕೂರು ವಿ ಎಸ್ ನಾಯಕ

    ವೇದ ಪುರಾಣ ಉಪನಿಷತ್ ಗಳಂತಹ ವಿಷಯ ಗಳು ನಮ್ಮನ್ನು ಯಾವುದೋ ಒಂದು ಲೋಕಕ್ಕೆ ಕರೆದೋಯುತ್ತದೆ. ಆಗ ನಮ್ಮ ಮನಸ್ಸು ಶಾಂತತೆ . ನೆಮ್ಮದಿಯಿಂದ ಕೂಡಿರುತ್ತದೆ. ಆ ಸಂದರ್ಭದಲ್ಲಿ ಒಂದು ಕ್ಷಣ ಮನಸ್ಸು ಹಗುರವಾಗಿ ಏನನ್ನೋ ಗಳಿಸಿದ ಅನುಭವ ಅದು ಅವರ್ಣನೀಯ.

    ಅದೇ ರೀತಿ ಒಬ್ಬ ಕಲಾವಿದನ ಕೂಡ ಆಧ್ಯಾತ್ಮಿಕ ಪುಸ್ತಕಗಳನ್ನು ಓದಿದಾಗ ಅದರಲ್ಲಿರುವ ವಿಷಯಗಳನ್ನು ತೆಗೆದುಕೊಂಡಾಗ ಅವನ ಮನಸ್ಸಿನಲ್ಲಿ ಆವಿರ್ಭವಿಸಿದ ವಿಚಾರಗಳನ್ನು ಕಲಾ ಸರಣಿಯ ಮೂಲಕ ಕಲಾಸಕ್ತರ ಮಡಿಲಿಗೆ ಅರ್ಪಿಸುವ ಕೆಲಸ ಮಾಡುತ್ತಾನೆ. ಶ್ರೀ ಶಂಕರಾಚಾರ್ಯರಿಂದ ರಚಿತವಾದ ಸೌಂದರ್ಯ ಲಹರಿ ಹಿಡಿದು ನಂತರ ಉಪನಿಷತ್ತುಗಳಲ್ಲಿ ಇರುವ ಹಲವಾರು ಸಾರವನ್ನು ಚಿತ್ರಗಳ ಮೂಲಕ ಕಲಾ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಮಾಡಿದವರು ಮೈಸೂರಿನ ಪ್ರಖ್ಯಾತ ಕಲಾವಿದ ಜಯದೇವ ಎಸ್.
    ಸಾಮಾನ್ಯವಾಗಿ ಚಿತ್ರಕಲಾವಿದರು ಚಿತ್ರಗಳನ್ನು ರಚಿಸುವಾಗ ಬೇರೆ ಬೇರೆ ವಿಷಯಗಳನ್ನು ಕೇಂದ್ರೀಕರಿಸಿ ಮಾಡುತ್ತಾರೆ. ಆದರೆ ಕಲಾವಿದ ಜಯದೇವ ರವರು ಶಂಕರಾಚಾರ್ಯರ ಸೌಂದರ್ಯ ಲಹರಿ ಪುಸ್ತಕದಿಂದ ಪ್ರೇರೇಪಿತರಾಗಿ ಯಾರು ಊಹಿಸಲಾಗದ ಅದ್ಭುತ ಚಿತ್ರ ಸರಣಿ ಮಾಲಿಕೆಯನ್ನು ವಿಶೇಷವಾಗಿ ತಮ್ಮ ಕುಂಚದಲ್ಲಿ ಚಿತ್ರಿ ಸಿ ಒಂದು ವಿಸ್ಮಯಕಾರಿ ಕಲಾಲೋಕಕ್ಕೆ ನಮ್ಮನ್ನೆಲ್ಲ ಆಹ್ವಾನಿ ಸುತ್ತಿದ್ದಾರೆ.

    ನಗರದ ಉತ್ತರಹಳ್ಳಿ ವಿಷ್ಣುವರ್ಧನ್ ರಸ್ತೆಯಲ್ಲಿರುವ ಶ್ರೀನಿವಾಸಪುರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯ ಕಲಾ ಗ್ಯಾಲರಿಯಲ್ಲಿ ಶನಿವಾರ ಮುಕ್ತಾಯಗೊಂಡ ಆಧ್ಯಾತ್ಮಿಕ ಚಿತ್ರ ಸರಣಿ ಕಲಾಸಕ್ತರ ಮನಸ್ಸನ್ನು ಗೆಲುವಲ್ಲಿ ಯಶಸ್ವಿಯಾಯಿತು. ಜಯದೇವ ರವರು ಕೆಂದ್ರಿಯ ಮಹಾವಿದ್ಯಾಲಯದಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಹಲವಾರು ಮಕ್ಕಳ ಜೀವನದಲ್ಲಿ ಕಲಾ ಶಿಕ್ಷಣವನ್ನು ನೀಡುವುದರ ಮೂಲಕವಾಗಿ ಕಲಾಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಸುಮಾರು ನೂರಕ್ಕಿಂತಲೂ ಹೆಚ್ಚು ಕಲಾಕೃತಿಗಳು ಜನರ ಕಣ್ಮನ ಸೆಳೆಯುವ ಯಶಸ್ವಿಯಾಗುತ್ತದೆ.

    ಕಲಾವಿದ ಜಯದೇವ ರವರ ವರ್ಣಚಿತ್ರಗಳು ಆಧ್ಯಾತ್ಮಿಕ ಭಾಷೆಯ ಸಂಕೇತಗಳಾಗಿ ರೂಪಗೊಂಡಿದೆ. ಒಬ್ಬ ಕಲಾವಿದನಾದವನು ಏನನ್ನು ದ್ರಶ್ಯ ಕರಿಸುತ್ತಾನೆಯೋ, ಕಲ್ಪಿಸಿಕೊಳ್ಳುತ್ತಾನೆ ಅದರ ಮೂಲಕ ಅನುಭವಿಸುತ್ತಾನೆ ಇದರ ಹಿನ್ನೆಲೆಯಲ್ಲಿ ಅದ್ಭುತವಾದ ಚಿತ್ರಗಳು ಹೊರಹೊಮ್ಮುತ್ತವೆ. ಸಾಮಾನ್ಯವಾಗಿ ಇವರ ವರ್ಣಚಿತ್ರಗಳು ಆಧ್ಯಾತ್ಮಿಕ ಸೂಕ್ಷ್ಮ ವ್ಯತ್ಯಾಸಗಳು, ಕಲಾವಿದನ ತಿಳುವಳಿಕೆಯನ್ನು ಪ್ರತಿನಿಧಿಸುತ್ತದೆ.

    ಜಯದೇವ ರವರ ಕಲಾಕೃತಿಗಳಲ್ಲಿ ಉಪನಿಷತ್ತಿನ ಸರಣಿ, ಆನಂದಲಹರಿ ಹೀಗೆ ವಿಭಿನ್ನ ಕಲಾಕೃತಿಗಳನ್ನು ಬೇರೆಬೇರೆ ರೀತಿಯಲ್ಲಿ ವಿಂಗಡಿಸಬಹುದು. ಇವರು ಶ್ರೀ ಚಕ್ರದ ಭಾಗವಾಗಿ ಯೋಗ ಚಕ್ರಗಳ ನಡುವಿನ ಪ್ರಸ್ತುತತೆಯನ್ನು ಹೊರ ತರುವ ಪ್ರಯತ್ನವನ್ನು ಕಲಾಕೃತಿಗಳಲ್ಲಿ ಮಾಡಿದ್ದಾರೆ.

    ಸೌಂದರ್ಯಲಹರಿಯ ಪ್ರಥಮ ಖಂಡ ಮತ್ತು ಆನಂದಲಹರಿ ಸ್ತೋತ್ರದ 41 ಶ್ಲೋಕಗಳನ್ನು ಆಧರಿಸಿದ ಚಿತ್ರ ಸರಣಿ ನಿಜವಾಗಿಯೂ ಕೂಡ ಕಲಾಸಕ್ತರ ಗಮನಸೆಳೆಯುತ್ತದೆ ವಿಶೇಷವೇನೆಂದರೆ ಪ್ರತಿಯೊಂದು ಶ್ಲೋಕಕ್ಕೂ ಒಂದು ವರ್ಣ ಚಿತ್ರ ರಚನೆ ಅದರ ವಿವರಣೆ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇರುವುದು ಬಹಳ ಸೂಕ್ತ ಎನಿಸುತ್ತದೆ. ಹೀಗೆ ಒಂದಕ್ಕೊಂದು ವಿಭಿನ್ನ ಚಿತ್ರಗಳ ಕಲಾ ಸರಣಿಯ ಈ ಪ್ರದರ್ಶನ ವಿನೂತನ ಅನುಭವವನ್ನು ನೀಡಿತು.

    ಸಚಿವ ಸಂಪುಟ ವಿಸ್ತರಣೆ- ಸಧ್ಯದಲ್ಲಿಯೇ ನವದೆಹಲಿಗೆ ಭೇಟಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    BELAGAAVI OCT 15

    ಜನಸಂಕಲ್ಪ ಯಾತ್ರೆಯ ಸಂದರ್ಭದಲ್ಲಿಯೇ ನವದೆಹಲಿಗೆ ಭೇಟಿ ನೀಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಾಗುವುದು ಎಂದರು.

    ಅವರು ಇಂದು ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

    ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬೆಳಗಾವಿಗೆ ಶುಭ ಸುದ್ದಿ ಇದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ನಿರ್ಣಯ ಕೈಗೊಂಡಾಗ ಎಲ್ಲರಿಗೂ ತಿಳಿಸಲಾಗುವುದು ಎಂದು ತಿಳಿಸಿದರು.

    ರಾಜ್ಯ ಹಾಗೂ ಭಾಷೆಗಳು ಅಡಚಣೆ ಆಗಬಾರದು :

    ಕೊಲ್ಲಾಪುರದ ಕನೇರಿ ಮಠದಲ್ಲಿ ಕನ್ನಡ ಭವನ ಕಟ್ಟಲು ಶಿವಸೇನೆಯವರು ವಿರೋಧಿಸುತ್ತಿರುವ ಬಗ್ಗೆ ಪ್ರತಿಕ್ರಯಿಸಿ, ಈಗಾಗಲೇ ಮಹಾರಾಷ್ಟ್ರದಲ್ಲಿ ಹತ್ತು ಹಲವಾರು ಸಂಘಗಳ ಕನ್ನಡ ಭವನಗಳು ಇವೆ.ಹಲವಾರು ದೇವಸ್ಥಾನಗಳು, ಯಾತ್ರಿನಿವಾಸಗಳೂ ಇವೆ. ಈ ವಿಚಾರದಲ್ಲಿ ರಾಜ್ಯ ಹಾಗೂ ಭಾಷೆಗಳು ಅಡಚಣೆ ಆಗಬಾರದು ಎಂಬುದು ನನ್ನ ಅನಿಸಿಕೆ ಎಂದರು.

    Art Across Times: ಚಿತ್ರಕಲಾ ಪರಿಷತ್ತಿನ ಹಳೆಯ ವಿದ್ಯಾರ್ಥಿಗಳ ವಿಶಿಷ್ಟ ಕಲಾ ಪ್ರದರ್ಶನ

    ಬಳಕೂರು ವಿ ಎಸ್ ನಾಯಕ

    ಬೆಂಗಳೂರಿನ ಕುಮಾರ ಕೃಪ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ ನ ಕಲಾಗ್ಯಾಲರಿ ಗೆ ಅಡಿ ಇಟ್ಟವರಿಗೆ ಒಂದು ವಿಸ್ಮಯಕಾರಿ ಕಲಾ ತಾಣಕ್ಕೆ ಹೋದಂತ ಅನುಭವ ಆಗಿತ್ತು. ಇಲ್ಲಿ ಪ್ರದರ್ಶನಗೊಂಡ ಕಲಾಕೃತಿಗಳು ಒಂದಕ್ಕಿಂದ ಒಂದು ವಿಭಿನ್ನವಾಗಿದ್ದು ವಿಶೇಷ ವಿನೂತನವಾದ ಅನುಭವ ನೀಡುವಂತಿತ್ತು. ಇದಕ್ಕೆಲ್ಲ ಕಾರಣ ಚಿತ್ರಕಲಾ ಮಹಾವಿದ್ಯಾಲಯದ ಹಳೆ ಕಲಾ ವಿದ್ಯಾರ್ಥಿಗಳ ಸಂಘದವರು ಹಮ್ಮಿಕೊಂಡಿರುವ ಆರ್ಟ್ ಅಕ್ರಾಸ್ ಟೈಮ್ ಎಂಬ ಕಲಾಪ್ರದರ್ಶನ.

    ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಸುಮಾರು 60 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ಸಂಸ್ಥೆಯಲ್ಲಿ ಬಹಳಷ್ಟುಉನ್ನತ ಕಲಾವಿದರು ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಎಲ್ಲಾ ಹಳೆಯ ಕಲಾ ವಿದ್ಯಾರ್ಥಿಗಳು ಸೇರಿ ತಾವು ರಚಿಸಿರುವ ವಿಭಿನ್ನ ಕಲಾಕೃತಿಗಳ ಸರಣಿಯನ್ನು ಕಲಾಸಕ್ತರ ಮಡಲಿಗೆ ಅರ್ಪಿಸಲು ಹೊರಟಿದ್ದಾರೆ. ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ವಿಭಿನ್ನ ಕಲಾಕೃತಿಗಳು ವಿಸ್ಮಯಕಾರಿ ನೋಟಕ್ಕೆ ಸಾಕ್ಷಿಯಂತಿದೆ.

    ಕಲಾ ಪ್ರದರ್ಶನದ ವಿಶೇಷತೆ
    ಚಿತ್ರಕಲಾ ಮಹಾವಿದ್ಯಾಲಯದ ಹಳೆವಿದ್ಯಾರ್ಥಿಗಳ ಕಲಾ ಪ್ರದರ್ಶನ ವಿಶೇಷವಾದ ಮೆರಗನ್ನು ನೀಡುವಂತಿದೆ. ರಾಜ್ಯ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನದಲ್ಲಿರುವ ಹಲವಾರು ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುವುದು ವಿಶೇಷ. ಒಂದೇ ಸೂರಿನಡಿ ವಿವಿಧ ಪ್ರಕಾರದ ಕಲಾಕೃತಿಗಳು ವಿಶೇಷ ಹಿನ್ನೆಲೆಯನ್ನು ಹೊಂದಿ ಪ್ರದರ್ಶನ ಮಾಡಿದ್ದಾರೆ.

    ವಿಭಿನ್ನ ಕಲಾಕೃತಿಗಳ ಸರಣಿ

    ಈಗ ಕಲಾಪ್ರದರ್ಶನದಲ್ಲಿ 60ಕ್ಕಿಂತ ಹಳೆಯ ಚಿತ್ರಕಲಾವಿದರು ಅದರಲ್ಲೂ ಚಿತ್ರಕಲೆ ಗ್ರಾಫಿಕ್ ಫೋಟೋಗ್ರಫಿ ಪ್ರತಿಷ್ಠಾಪನಾ ಕಲೆ. ಶಿಲ್ಪಕಲೆ ಎಲ್ಲವೂ ಕೂಡ ಒಂದೇ ಕಡೆಗೆ ಇರುವುದರಿಂದ ಕಲಾಸಕ್ತರಿಗೆ ವಿಭಿನ್ನ ಅನುಭವ ಸಿಗುತ್ತದೆ. ಇಲ್ಲಿ ಓದಿ ಸಾಧನೆಯನ್ನು ಮಾಡಿದ ಹಲವಾರು ಕಲಾವಿದರು ಇಡೀ ಭಾರತದಲ್ಲಿ ಕಾರ್ಯನಿರತ ರಾದ ಎಲ್ಲಾ ಕಲಾವಿದರ ಚಿತ್ರಗಳು ನೋಡಲು ಸಿಗುತ್ತದೆ

    ಉದ್ದೇಶ

    ಇಲ್ಲಿ ಪ್ರದರ್ಶನ ಗೊಳ್ಳುವ ಕಲಾಕೃತಿಗಳು ಕಲಾ ವಿದ್ಯಾರ್ಥಿಗಳಿಗೆ ಕಲಿಕೆ ಮಾಡಲು ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಇಂದಿನ ಆಧುನಿಕ ತಂತ್ರಜ್ಞಾನ ಬಗ್ಗೆ ವಿವರಣೆ. ವಿಚಾರವಿನಿಮಯ. ಮತ್ತು ತಾವು ಕಲಿತದ್ದನ್ನು ಬೇರೆಯವರಿಗೆ ಯಾವ ರೀತಿಯಾಗಿ ತಿಳಿಸಿ ಕೊಡಬಹುದು ಎಂಬ ವಿಚಾರವೂ ಕೂಡ ಇಲ್ಲಿ ಕಾರ್ಯಾಗಾರಗಳ ಮೂಲಕ ಎಲ್ಲಾ ಕಲಾವಿದರು ವಿವರಿಸಿ ಹೇಳುತ್ತಾರೆ ಸಾಂಪ್ರದಾಯಿಕ ಚಿತ್ರಕಲೆಯಿಂದ ಹಿಡಿದು ಎಲ್ಲಾ ಪ್ರಕಾರದ ಮಾಧ್ಯಮದ ಚಿತ್ರಕಲೆಯ ಪ್ರದರ್ಶನ ಇದಾಗಿದ್ದು ತಮ್ಮ ಬಿಡುವಿನ ಸಮಯದಲ್ಲಿ ಚಿತ್ರಕಲಾ ಪರಿಷತ್ತಿನ ಆವರಣಕ್ಕೆ ಬಂದು ಕಣ್ಣುತುಂಬಿಕೊಳ್ಳಬಹುದು

    ಚಿತ್ರಕಲಾ ಪ್ರದರ್ಶನ ನಡೆಯುವ ಸ್ಥಳ
    ಕರ್ನಾಟಕ ಚಿತ್ರಕಲಾ ಪರಿಷತ್ತಿನ ಏಳನೇ ಕಲಾಗ್ಯಾಲರಿ
    ಕುಮಾರಕೃಪಾ ರಸ್ತೆ ಬೆಂಗಳೂರು
    ಪ್ರವೇಶ ಉಚಿತ
    ಸಮಯ 11.00 ಗಂಟೆಯಿಂದ ಸಂಜೆ 6ರವರೆಗೆ
    ಈ ಪ್ರದರ್ಶನವು ಅಕ್ಟೋಬರ್ 18 ರವರೆಗೆ ನಡೆಯಲಿದೆ.

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಬೆಂಗಳೂರಿಗೆ ಬಂದ ವಿಶ್ವದ ಅತಿದೊಡ್ಡ ಏರ್‌ಬಸ್ A380

    BENGALURU OCT 14

    ವಿಶ್ವದ ಅತಿದೊಡ್ಡ ಏರ್‌ಬಸ್ A380 ಡಬಲ್ ಡೆಕ್ಕರ್ ವಿಮಾನ ಇಂದು ಮೊದಲಬಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಸಾಕ್ಷಿಯಾದರು.

    ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಮಾತನಾಡಿದ ಸಚಿವರು, ವಿಶ್ವದ ಅತಿ ದೊಡ್ಡ ನಾಗರಿಕ ವಿಮಾನಯಾನ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಎಮಿರೇಟ್ಸ್ ಏರ್‌ಲೈನ್ಸ್‌ ಗೆ ಅನಂತ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

    A380 ವಿಮಾನವು ಮುಂಬೈ ನಂತರ ಹಾರಾಟ ನಡೆಸುತ್ತಿರುವ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ ಎಂದು ಹೇಳಿದರು.

    ಯುನೈಟೆಡ್ ಅರಬ್ ಎಮಿರೇಟ್ಸ್ ಜೊತೆಗೆ ಭಾರತವು ಸಾಂಸ್ಕೃತಿಕ, ಆರ್ಥಿಕ ಮತ್ತು ಧಾರ್ಮಿಕವಾಗಿ ಸಾಕಷ್ಟು ಸ್ನೇಹಬಾಂದವ್ಯ ಹೊಂದಿದೆ. ಎಮಿರೇಟ್ಸ್‌ ವಿಮಾನ ಹಾರಾಟದಿಂದ ಎರಡು ದೇಶಗಳ ನಡುವಿನ ಬಾಂದವ್ಯ ಮತ್ತಷ್ಟು ಗಟ್ಟಿಯಾಗಲಿದೆ ಎಂದರು.

    ಮಂತ್ರಾಲಯಕ್ಕೆ ಮುಖ್ಯಮಂತ್ರಿಗಳ ಭೇಟಿ

    MANTRALAYAM OCT 10

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಬಿ‌. ಶ್ರೀರಾಮುಲು, ಶಂಕರ ಪಾಟೀಲ ಮುನೇನಕೊಪ್ಪ ಹಾಜರಿದ್ದರು. ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು ರಾಜ್ಯದಿಂದ ಆಗಮಿಸುವ ಭಕ್ತರಿಗೆ ಅನುಕೂಲತೆಗಳನ್ನು ಕಲ್ಪಿಸುವಂತೆ ಕೋರಿದರು.

    ರಾಯಚೂರಿಗೆ ಏಮ್ಸ್, ಮಂತ್ರಾಲಯ ಸೇತುವೆಗೆ ಮಾಜಿ ಸಿಎಂ ಬಿಎಸ್ ವೈ ಹೆಸರು

    RAICHUR OCT 11

    ಬಹುದಿನಗಳ ಬೇಡಿಕೆಯಾದ ಏಮ್ಸ್ ಸಂಸ್ಥೆಯನ್ನು ರಾಯಚೂರಿಗೆ ತರಲು ಎಲ್ಲಾ ಪ್ರಯತ್ನಗಳು ನಡೆದಿದೆ. ಕೇಂದ್ರ ಆರೋಗ್ಯ ಸಚಿವರ ಬಳಿ ಮಾತನಾಡಿದ್ದೇನೆ. ಮುಂದಿನ ವಾರ ದೆಹಲಿಗೆ ಹೋಗಿ ಮಾತನಾಡಲಿದ್ದೇನೆ. ನರೇಂದ್ರ ಮೋದಿಯವರ ಆಶೀರ್ವಾದದಿಂದ ಏಮ್ಸ್ ರಾಯಚೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. .ಮಂತ್ರಾಲಯದ ಸೇತುವೆಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನರ ಹೆಸರು ಇಡಲು ಸಧ್ಯದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

    ಅವರು ಇಂದು ರಾಯಚೂರು ತಾಲ್ಲೂಕಿನ ಗಿಲ್ಲೆಸಗೂರು ಗ್ರಾಮದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ರಾಯಚೂರಿನ ರಾಜಕಾರಣದಲ್ಲಿ ಬಹಳ ದೊಡ್ಡ ಬದಲಾವಣೆ ಆಗಲಿದೆ. ನಾವು ರಾಯಚೂರಿಗೆ ಮಾಡಿರುವ ಕೆಲಸಗಳ ರಿಪೋರ್ಟ್ ಕಾರ್ಡ್ ಇಟ್ಟು, ನಿಮ್ಮ ಬೆಂಬಲವನ್ನು ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂಬ ಸಂಕಲ್ಪವನ್ನು ಮಾಡಿದ್ದೇವೆ ಎಂದು ತಿಳಿಸಿದರು.

    ರಾಯಚೂರಿನ ಗ್ರಾಮೀಣ ಭಾಗದಲ್ಲಿ 23 ಕೆರೆ ತುಂಬಿಸುವ ಯೋಜನೆಯನ್ನು ಖಂಡಿತವಾಗಿಯೂ ಜಾರಿ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿ ಕಟ್ಟಕಡೆಯಲ್ಲಿರುವವ ಜಮೀನಿಗೂ ನೀರು ತಲುಪಿಸಲಾಗುವುದು. ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಭಾಜಪ ಸರ್ಕಾರ ಕಂಕಣಬದ್ಧವಾಗಿದೆ ಎಂದರು.

    ರಾಯಚೂರು ಜಿಲ್ಲೆಗೆ ವಿಶೇಷವಾದ ಕೈಗಾರಿಕಾ ಯೋಜನೆ :

    ರಾಯಚೂರು ಕರ್ನಾಟಕದ ಹೃದಯ ಭಾಗ. ವಿದ್ಯುತ್ ಕೊಡುವ ಮಹತ್ವದ ಕೇಂದ್ರ. ಈ ಭಾಗದಲ್ಲಿ ಔದ್ಯೋಗೀಕರಣವಾಗಬೇಕು, ಯುವಕರಿಗೆ ಉದ್ಯೋಗ ಸಿಗಬೇಕು. ರಾಯಚೂರು ಜಿಲ್ಲೆಗೆ ವಿಶೇಷವಾದ ಕೈಗಾರಿಕಾ ಯೋಜನೆಗಳನ್ನು ಬರುವ ತಿಂಗಳಲ್ಲಿ ಘೋಷಣೆ ಮಾಡಲಾಗುವುದು. ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುದಾನ, ರಾಯಚೂರು ಜಿಲ್ಲೆಯ ಮಕ್ಕಳ ಪೌಷ್ಟಿಕ ಆಹಾರಕ್ಕೆ ವಿಶೇಷ ಅನುದಾನ ನೀಡಲಾಗುವುದು ಎಂದರು.

    ಕಲ್ಯಾಣ ಕರ್ನಾಟಕ ಅಭಿವೃದ್ದಿ :

    ಕಲ್ಯಾಣ ಕರ್ನಾಟದಲ್ಲಿ 1101 ಶಾಲಾ ಕೊಠಡಿಗಳನ್ನು ಕಟ್ಟಲು ವಿಶೇಷ ಅನುದಾನ, 64 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪ್ರಾರಂಭ, ಪ್ರತಿ ಕ್ಷೇತ್ರಕ್ಕೆ, ರಸ್ತೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಬರುವ ದಿನಗಳಲ್ಲಿ ಈ ಭಾಗಕ್ಕೆ 5000 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ನೀಡಲಾಗುವುದು., ಇದನ್ನು ಮಾಡೇ ತೀರುತ್ತೇನೆ ಎಂದರು. ಕಲ್ಯಾಣ ಕರ್ನಾಟಕಕ್ಕೆ, ದೀನದಲಿತರಿಗೆ, ರಾಯಚೂರಿಗೆ ಕೈಕೊಟ್ಟು, ಇಡೀ ಕರ್ನಾಟಕದ ಜನತೆಗೆ ಸುಳ್ಳು ಹೇಳಿದ್ದಾರೆ. ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿದರೆ ಸತ್ಯವಾಗುತ್ತದೆ ಎಂದುಕೊಂಡಿದ್ದಾರೆ. ಜನಮನ್ನಣೆ ಕೊಡುತ್ತಾರೆ ಎಂದು ಕಾಂಗ್ರೆಸ್ ನವರು ತಿಳಿದಿದ್ದಾರೆ ಎಂದರು.

    ದುಡಿಯುವ ವರ್ಗ ಭವಿಷ್ಯ ನಿರ್ಮಾಣ:

    ಸನ್ಮಾನ್ಯ ಯಡಿಯೂರಪ್ಪನವರ ಅವಧಿಯಲ್ಲಿ ರೈತರಿಗೆ 10 ಹೆಚ್ ಪಿ ಉಚಿತ ವಿದ್ಯುತ್, ರೈತ ಸನ್ಮಾನ ಯೋಜನೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ, ರೈತಬಂಧುಗಳ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು 10 ಲಕ್ಷ ರೈತರ ಮಕ್ಕಳಿಗೆ ನೀಡಲಾಗಿದೆ. ರೈತ ಕೂಲಿ ಮಕ್ಕಳಿಗೆ, ನೇಕಾರರು, ಮೀನುಗಾರರು, ಟ್ಯಾಕ್ಸಿ ಡ್ರೈವರ್, ಆಟೋಚಾಲಕರ ಮಕ್ಕಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ದುಡಿಯುವ ವರ್ಗ ಭವಿಷ್ಯ ನಿರ್ಮಾಣಕ್ಕೆ ಸಹಾಯ ಮಾಡುತ್ತಿದ್ದೇವೆ. ನಮ್ಮ ಸರ್ಕಾರ 28 ಸಾವಿರ ಕೋಟಿ ರೂ. ಎಸ್‍ಸಿಪಿ, ಟಿಎಸ್‍ಪಿ ಯೋಜನೆಗಳಿಗೆ ನೀಡಲಾಗಿದೆ. ಎಸ್ ಸಿ ಎಸ್ ಟಿ ಬಡ ಜನರಿಗೆ ವಿದ್ಯುತ್ ಉಚಿತ, 2 ಲಕ್ಷ ಮನೆ ನಿರ್ಮಾಣಕ್ಕೆ, 100 ಯುವಕರಿಗೆ ಉದ್ಯೋಗ ಬಾಬು ಜಗಜೀವನರಾಂ ಅವರ ಹೆಸರಿನಲ್ಲಿ ಸ್ವಯಂಉದ್ಯೋಗ ಕೊಡುವ ಯೋಜನೆ , 100 ಅಂಬೇಡ್ಕರ್ ಹಾಸ್ಟೆಲ್ಗಳು, ಕಲ್ಬುರ್ಗಿ ಸೇರಿದಂತೆ 5 ವಿವಿಧ ಶೈಕ್ಷಣಿಕ ಕೇಂದ್ರಗಳಲ್ಲಿ ಮೆಗಾ ಹಾಸ್ಟೆಲ್‍ಗಳನ್ನು ನಿರ್ಮಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡಿ ಉತ್ಪಾದನೆ ಹಾಗೂ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ನೀಡಲಾಗುತ್ತಿದ್ದು, 5 ಲಕ್ಷ ಮಹಿಳೆಯರಿಗೆ ಹಾಗೂ 5 ಲಕ್ಷ ಯುವಕರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದರು.

    UVCE ಆಡಳಿತ ಮಂಡಳಿಗೆ ಸದಸ್ಯರ ನೇಮಕ; ಸಡಗೋಪನ್, ಬಿ.ವಿ.ಜಗದೀಶ್ ಗೆ ಸ್ಥಾನ

    BENGALURU OCT 11

    ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಯೂನಿವರ್ಸಿಟಿ ಆಫ್ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ (ಯುವಿಸಿಇ)ನ ಪ್ರಥಮ ಆಡಳಿತ ಮಂಡಳಿಗೆ ಸರಕಾರವು ಬೆಂಗಳೂರು ಐಐಐಟಿಯ ಸಂಸ್ಥಾಪಕ ಮತ್ತು ನಿವೃತ್ತ ನಿರ್ದೇಶಕ ಪ್ರೊ.ಎಸ್.ಸಡಗೋಪನ್ ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಬಿ.ವಿ.ಜಗದೀಶ್ ಸೇರಿದಂತೆ ಹಲವರನ್ನು ಸದಸ್ಯರನ್ನಾಗಿ ನೇಮಿಸಿದೆ.

    ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಇದಕ್ಕೆ ತಮ್ಮ ಅನುಮೋದನೆ ನೀಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಮಂಗಳವಾರ ತಿಳಿಸಿದ್ದಾರೆ.

    ಉಳಿದಂತೆ ನೆಕ್ಸ್ಟ್ ವೆಲ್ತ್ ಕಂಪನಿಯ ಸಹ ಸಂಸ್ಥಾಪಕಿ ಮತ್ತು ಸಿಇಒ ಮೈಥಿಲಿ ರಮೇಶ್, ಭಾರತೀಯ ವಿಜ್ಞಾನ ಸಂಸ್ಥೆಯ ಮಿದುಳು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ವೈ. ನರಹರಿ, ಧಾರವಾಡದ ಐಐಟಿ ರಿಜಿಸ್ಟ್ರಾರ್ ಪ್ರೊ ಬಿ. ಬಸವರಾಜಪ್ಪ, ಜೆರೋಡಾ ಕಂಪನಿಯ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಸಂಸ್ಥೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ಏರ್ ವೈಸ್ ಮಾರ್ಷಲ್ ಬಿ.ನರೇಂದ್ರ ಕುಮಾರ್ ಅವರನ್ನು ಆಡಳಿತ ಮಂಡಳಿಯ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಇವರೆಲ್ಲರ ಅಧಿಕಾರಾವಧಿ ಮೂರು ವರ್ಷಗಳಾಗಿವೆ. ಇವರೆಲ್ಲ ಯುವಿಸಿಇಯನ್ನು ಜಾಗತಿಕ ಮಟ್ಟದ ಸಂಸ್ಥೆಯನ್ನಾಗಿ ಬೆಳೆಸಲು ಸೂಕ್ತ ಯೋಜನೆಗಳನ್ನು ರೂಪಿಸಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

    ಎಂಜಿನಿಯರಿಂಗ್ ಶಿಕ್ಷಣದಲ್ಲಿ ಡಿಸೆಂಬರ್ ವೇಳೆಗೆ ಭಾರೀ ಸುಧಾರಣೆ: ಅಶ್ವತ್ಥನಾರಾಯಣ

    BENGALURU OCT 10

    ಡಿಸೆಂಬರ್ ವೇಳೆಗೆ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಸಮಗ್ರ ಸುಧಾರಣೆ ತರಲಾಗುವುದು. ಈ ಪ್ರಕ್ರಿಯೆ ಈಗ ಅಂತಿಮ ರೂಪದಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

    ಮಾಗಡಿ ರಸ್ತೆಯ ಈಸ್ಟ್ ವೆಸ್ಟ್ ಎಂಜಿನಿಯರಿಂಗ್ ಕಾಲೇಜು ಸೋಮವಾರ ಎಥ್ನೋಟೆಕ್ ಅಕಾಡೆಮಿಯ ಜತೆಗೂಡಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ರವಿಶಂಕರ್ ಉತ್ಕೃಷ್ಟತಾ ಕೇಂದ್ರ’ವನ್ನು ಉದ್ಘಾಟಿಸಿ ಮಾತನಾಡಿದರು.

    ಸದ್ಯಕ್ಕೆ ರಾಜ್ಯದಲ್ಲಿ ಸರಕಾರಿ ಕಾಲೇಜುಗಳಲ್ಲಿ ಕಲಿಕೆ ಮತ್ತು ಬೋಧನೆಯ ಡಿಜಿಟಲೀಕರಣ ನಡೆಯುತ್ತಿದೆ. ಇದನ್ನು ಸದ್ಯದಲ್ಲೇ ಖಾಸಗಿ ಕಾಲೇಜುಗಳಿಗೂ ವಿಸ್ತರಿಸಲಾಗುವುದು ಎಂದು ಅವರು ನುಡಿದರು.

    ರಾಜ್ಯದಲ್ಲಿ ಉನ್ನತ ಶಿಕ್ಷಣ ವಲಯದಲ್ಲಿ ಅಭೂತಪೂರ್ವ ಸುಧಾರಣೆಗಳನ್ನು ತರಲಾಗುತ್ತಿದೆ. ಈಗ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಉದ್ಯಮಗಳ ಜತೆ ಬೆಸೆಯಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯನ್ನು ಬೆಳೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

    ಎಂಜಿನಿಯರಿಂಗ್ ಶಿಕ್ಷಣದ ಆಡಳಿತ, ಪಠ್ಯಕ್ರಮ, ಇಂಟರ್ನ್ಶಿಪ್ ಇತ್ಯಾದಿಗಳನ್ನು ಆಮೂಲಾಗ್ರವಾಗಿ ಸುಧಾರಿಸಲಾಗುವುದು. ಇಂಟರ್ನ್ಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವೇತನ ಕೊಡುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಅವರು ಹೇಳಿದರು.

    ಗುಣಮಟ್ಟದ ಶಿಕ್ಷಣ ಮಾತ್ರವೇ ಸಮಾಜದ ಸಬಲೀಕರಣ ಸಾಧ್ಯ. ನಾವು ಸೀಮಿತವಾಗಿ ಯೋಚಿಸದೆ ಜಾಗತಿಕ ಸ್ತರದಲ್ಲಿ ಸ್ಪರ್ಧೆಯನ್ನು ಎದುರಿಸುವಂತಹ ಗುರಿಯನ್ನು ಹೊಂದುವುದು ಅತ್ಯಗತ್ಯವಾಗಿದೆ. ಇಲ್ಲದೆ ಹೋದರೆ ಅವಕಾಶಗಳು ಕೈತಪ್ಪಿ ಹೋಗುತ್ತವೆ ಎಂದು ಸಚಿವರು ಪ್ರತಿಪಾದಿಸಿದರು.

    ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಬಿಜಿಎಸ್ ಮತ್ತು ಎಸ್ ಜೆ ಬಿ ಸಮೂಹ ಸಂಸ್ಥೆಗಳು ಮತ್ತು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶನಾಥ ಸ್ವಾಮೀಜಿ,
    ಈಸ್ಟ್ ವೆಸ್ಟ್ ಶಿಕ್ಷಣ ಸಮೂಹದ ಅಧ್ಯಕ್ಷೆ ರಶ್ಮಿ ರವಿಶಂಕರ್, ನ್ಯಾಕ್ ನಿರ್ದೇಶಕ ಡಾ.ಶಾಮಸುಂದರ್, ಎಥ್ನೋಟೆಕ್ ಅಕಾಡೆಮಿಯ ಮುಖ್ಯಸ್ಥ ಕಿರಣ್ ರಾಜಣ್ಣ, ಈಸ್ಟ್ ವೆಸ್ಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ತೇಜಸ್ ಕಿರಣ ಮುಂತಾದವರು ಉಪಸ್ಥಿತರಿದ್ದರು.

    error: Content is protected !!