25.4 C
Karnataka
Wednesday, May 20, 2026
    Home Blog Page 10

    ಉ.ಪ್ರ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ನಿಧನ

    LUCKNOW OCT 10

    ಹಿರಿಯ ರಾಜಕಾರಣಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ -Mulayam Singh Yadav- ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಅವರಿಗೆ 82 ವರ್ಷ ವಯಸ್ಸಾಗಿತ್ತು.

    ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವರು ಕೇಂದ್ರ ರಕ್ಷಣಾ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಮುಲಾಯಂ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ

    ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ನಿಧನಕ್ಕೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ರಾಮ್ ಮನೋಹರ್ ಲೋಹಿಯಾ, ರಾಜ್ ನಾರಾಯಣ್ ಅವರಂಥ ನಾಯಕರ ಮಾರ್ಗದರ್ಶನದಲ್ಲಿ ಮುನ್ನೆಲೆಗೆ ಬಂದ ಮುಲಾಯಂ ಸಿಂಗ್ ಅವರು ತುರ್ತು ಪರಿಸ್ಥಿತಿ ವಿರೋಧಿಸಿ ಸೆರೆವಾಸ ಅನುಭವಿಸಿದ್ದರು. ಸಮಾಜವಾದಿ ಪಕ್ಷವನ್ನು ಸ್ಥಾಪಿಸಿ, ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಮುಲಾಯಂ ಸಿಂಗ್ ಅವರು ಕೇಂದ್ರ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ನಿಧನದಿಂದ ರಾಷ್ಟ್ರವು ಮುತ್ಸದ್ದಿ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ.

    ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಭಗವಂತ ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    Dasara Doll Festival: ಪದ್ಮಶ್ರೀ ಅರವಿಂದ ಅವರ ಮನೆಯ ದಸರಾ ಗೊಂಬೆ ನೋಟ

    ಕನ್ನಡಪ್ರೆಸ್ .ಕಾಮ್ ನ ದಸರಾ ಗೊಂಬೆ ಹಬ್ಬಕ್ಕೆ ಅತ್ಯತ್ತುಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು ವಿಜಯದಶಮಿ. ಗೊಂಬೆ ಹಬ್ಬ ಇಂದು ಮಕ್ತಾಯವಾಗುತ್ತಿದೆ. ಭಾಗವಹಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದ . ಇಂದಿನ ಕೊನೆಯ ಕಂತಿನಲ್ಲಿ ಬೆಂಗಳೂರು ವಿದ್ಯಾರಣ್ಯಪುರದ ಪದ್ಮಶ್ರೀ ಅರವಿಂದ ಅವರ ಮನೆಯ ಗೊಂಬೆ ಲೋಕವನ್ನು ಪ್ರಸ್ತುತ ಪಡಿಸುತ್ತಿದ್ದೇವೆ.

    Dasara Doll Festival:ಎಂಥ ಅಂದ ಎಂಥ ಚಂದ ದಸರಾ ಗೊಂಬೆ ನೋಟ

    ದಸರಾ ಗೊಂಬೆ ಹಬ್ಬಕ್ಕೆ ಫೋಟೋಗಳು ಹರಿದು ಬರುತ್ತಲೆ ಇವೆ. ಇಂದು ಕೆಲವು ಆಕರ್ಷಕ ಗೊಂಬೆ ಮನೆಗಳ ಫೋಟೋಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

    MYSURU DASARA: ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದ ಮುಖ್ಯಮಂತ್ರಿ

    MYSURU OCT 4

    ಕನ್ನಡ ನಾಡಿನ ಜನತೆಗೆ ತಾಯಿ ಚಾಮುಂಡೇಶ್ವರಿ ಸಕಲ ಮಂಗಳವನ್ನುಂಟು ಮಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

    ಇಂದು ಬಸವರಾಜ ಬೊಮ್ಮಾಯಿ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

    ಮೈಸೂರು ದಸರಾ ಈ ಬಾರಿ ಅದ್ದೂರಿ, ಅರ್ಥಪೂರ್ಣವಾಗಿ ಯಶಸ್ವಿಯಾಗಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ಜನರು ಸೇರಿ ದಸರಾ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸತ್ ಸದಸ್ಯರು ಯೋಜನಾಬದ್ಧವಾಗಿ ಹಬ್ಬವನ್ನು ಅತ್ಯಂತ ಯಶಸ್ವಿಯಾಗಿ ಆಚರಣೆ ಮಾಡಿದ್ದಾರೆ. ಅವರಿಗೆ ಮತ್ತು ನಾಡಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

    ನಾಳೆ ಆಯುಧ ಪೂಜೆ, ಜಂಬೂ ಸವಾರಿ ನಡೆಯಲಿದೆ. ಕೋವಿಡ್ ಕಾರಣದಿಂದಾಗಿ ನಮ್ಮ ಗೌರವಾನ್ವಿತ ರಾಜ್ಯಪಾಲರು ಭಾಗವಹಿಸುತ್ತಿಲ್ಲ ಎಂದು ತಿಳಿಸಿದರು.

    ಸರ್ಕಾರಿ ನೌಕರರಿಗೆ ಏಳನೇ ಆಯೋಗದ ವೇತನ ಸೇರಿದಂತೆ ಯಾವುದೇ ವಿಚಾರಗಳ ಬಗ್ಗೆ ಇವತ್ತು ಮಾತನಾಡುವುದಿಲ್ಲ. ಇವತ್ತು ಹಬ್ಬದ ವಾತಾವರಣವಿದೆ. ನಾಡಿನ ಜನರು ಆನಂದದಿಂದ ದಸರಾ ಹಬ್ಬವನ್ನು ಆಚರಣೆ ಮಾಡಲಿ ಎಂದು ಸಿಎಂ ಬೊಮ್ಮಾಯಿ‌ ಕೋರಿದರು.

    MYSURU DASARA:ಮೈಸೂರು ವಿಶ್ವ ವಿಖ್ಯಾತ ಜಂಬೂಸವಾರಿಗೆ ಸಕಲ ಸಿದ್ಧತೆ

    MYSURU OCT 4

    ಎರಡು ವರ್ಷ ಸರಳ ದಸರಾ ಆಚರಣೆ ಮಾಡಲಾಗಿದ್ದು ಈ ಬಾರಿ ಅದ್ದೂರಿಯಾಗಿ ದಸರಾ ಆಯೋಜಿಸಲಾಗುತ್ತಿದೆ. ಜಂಬೂಸವಾರಿಗೆ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ‌.ಸೋಮಶೇಖರ್ ಅವರು ಹೇಳಿದರು.

    ಮಾವುತ ಮತ್ತು ಕಾವಾಡಿಗರು ಮತ್ತವರ ಕುಟುಂಬದವರಿಗೆ ಅರಮನೆ ಆವರಣದಲ್ಲಿ ಉಪಹಾರ ಬಡಿಸಿ ಯೋಗಕ್ಷೇಮ ವಿಚಾರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

    ಜಂಬೂಸವಾರಿ ಸಾಗುವ ರಸ್ತೆಯಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆನೆಗಳಿಗೆ ಒಂದು ತಿಂಗಳಿಂದ ತರಬೇತಿ ನೀಡಲಾಗಿದೆ. ನಾಳೆ ಸಂಜೆ ಜಂಬೂಸವಾರಿ ಸಾಗಲಿದೆ, ಇದರ ಜೊತೆಗೆ 40 ಸ್ತಬ್ಧಚಿತ್ರಗಳು, ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ ಎಂದು ಹೇಳಿದರು.

    ಬಂದೋಬಸ್ತ್ ಗಾಗಿ ಸುಮಾರು 4 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯಪಾಲರು, ಮುಖ್ಯಮಂತ್ರಿಗಳು, ಹೈಕೋರ್ಟ್ ನ್ಯಾಯಾಧೀಶರು ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು.

    ಪಾಸ್ ವಿತರಣೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಎಷ್ಟು ಸ್ಥಳಾವಕಾಶ ಇದೆಯೋ ಅಷ್ಟು ವ್ಯವಸ್ಥೆ ಮಾಡಲಾಗಿದೆ. ದಸರಾ ಎಂದರೆ ಕೇವಲ ಪಾಸ್ ಅಲ್ಲ. ಒಂದು ವಾರಗಳ ನಡೆದ ಯುವ ದಸರಾ, ಯುವ ಸಂಭ್ರಮ, ರೈತ ದಸರಾ, ಕುಸ್ತಿ ಇದ್ಯಾವುದಕ್ಕೂ ಪಾಸ್ ಇರಲಿಲ್ಲ. 15-20 ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದು ಹೇಳಿದರು.

    ದಸರಾ ಉಪಸಮಿತಿ ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಅಪ್ಪು ನಮನ, ಯುವ ದಸರಾ, ರೈತ ದಸರಾ, ಕವಿಗೋಷ್ಠಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು. ಮಹಾರಾಣಿ ಅವರು ಕೂಡ ಎಲ್ಲಾ ರೀತಿಯ ಸಹಕಾರ ನೀಡಿದರು. ಅಧಿಕಾರಿಗಳು, ಮೈಸೂರು ಜನತೆಯ ಸಂಪೂರ್ಣ ಸಹಕಾರದಿಂದ ಎಲ್ಲವೂ ಸುಸೂತ್ರವಾಗಿ ಸಾಗಿದೆ ಎಂದು ಹೇಳಿದರು.

    DASARA DOLL FESTIVAL:ಶೀಲಾ ಭಾರದ್ವಾಜ್ ಅವರ ಮನೆಯಲ್ಲಿನ ದಸರಾ ಗೊಂಬೆಗಳ ಸುಂದರ ಲೋಕ

    ಕನ್ನಡಪ್ರೆಸ್.ಕಾಮ್ ನ ದಸರಾ ಗೊಂಬೆ ಹಬ್ಬಕ್ಕೆ ಅಭೂತಪೀರಿಲ ಸ್ಪಂದನೆ ವ್ಯಕ್ತವಾಗಿದೆ. ಇಂದು ಬೆಂಗಳೂರು ಚಾಮರಾಜಪೇಟೆಯ ಶೀಲಾ ಭಾರದ್ವಾಜ್ ಅವರ ಮನೆಯಲ್ಲಿ ಸುಂದರವಾಗಿ ಜೋಡಿಸಿರುವ ಗೊಂಬೆಗಳ ಸ್ಲೈಡ್ ಶೋವನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ

    DASARA DOLL FESTIVAL :ಗೊಂಬೆಗಳು ಹೇಳುತಿವೆ ನೂರಾರು ಕಥೆಯ

    ತಮ್ಮ ಮನೆಯಲ್ಲಿನ ದಸರಾ ಗೊಂಬೆಗಳ ಫೋಟೋಗಳನ್ನು ಕಳುಹಿಸಿಕೊಉವುದರ ಮೂಲಕ ಅನೇಕ ಓದುಗರು ನಮ್ಮ ದಸರಾ ಗೊಂಬೆ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಇಂಥ ಹಲವು ದಸರಾ ಗೊಂಬೆಗಳ ನೋಟ ಇಲ್ಲಿದೆ.

    ಬೊಂಬೆ ಹಬ್ಬದ ಚಾರಿತ್ರಿಕ ಹಿನ್ನೆಲೆ

    ಲೀಲಾ ವಾಸುದೇವ್

    ಪುರಾಣ ಕಾಲದಿಂದಲೂ ಶಕ್ತಿ ದೇವತೆಗೆ ಪೂಜೆ ಸಲ್ಲಿಸುತ್ತಿದ್ದರು. ಜಗದ ಜನನಿಯ ಆರಾಧನೆಯನ್ನು ಭಾವನಾತ್ಮಕವಾಗಿ ಮಾಡುತ್ತಿದ್ದರು. ಬ್ರಹ್ಮ ವಿಷ್ಣು ಮಹೇಶ್ವರರನ್ನು ಸೃಷ್ಟಿಸಿದ ಆದಿಶಕ್ತಿ ಎಂದು ಪೂಜಿಸಿದರು. ನಂತರ ಕಲ್ಪನಾತ್ಮಕ ರೂಪವನ್ನು ರಚಿಸಿದರು. ಬಿಂದು ಬ್ರಹ್ಮಾಂಡ 7 ತ್ರಿ ಕೋನಾಕಾರದ ನೆಟ್ಟು ಸಪ್ತಮಾತ್ರಿಕೆಯರೆಂದು ಕಲ್ಲಿನಲ್ಲಿಯೇ ರೂಪ ಕೊಟ್ಟು ಜನನಿ ಎಂದು ಪೂಜಿಸತೊಡಗಿದರು. ಮುಂದೆ ಶರನ್ನವರಾತ್ರಿ ಯಲ್ಲಿ ಎರಡು ಕಣ್ಣುಗಳನ್ನು ಬರೆದು ಪೂಜಿಸುತ್ತಿದ್ದರು. ಯುಗಾದಿಯ ನಂತರ ವಸಂತ ನವರಾತ್ರಿಯನ್ನು ಆಚರಿಸುವುದು ವಾಡಿಕೆ. ಶರನ್ನ್ ನವರಾತ್ರಿಯಲ್ಲಿ ನವ ದುರ್ಗಿಯನ್ನು ರೌದ್ರ ರೂಪ ದಲ್ಲಿ ಪೂಜಿಸಿದರೆ ವಸಂತ ನವರಾತ್ರಿಯಲ್ಲಿ ಸೌಮ್ಯ ರೂಪದಲ್ಲಿ ಆರಾಧಿಸುತ್ತಾರೆ.ಲಕ್ಷ್ಮಿ ಗೌರಿಯರು ಮುಂದೆ ಗೊಂಬೆಯ ರೂಪ ತಾಳಿದರು.

    ವಿಜಯನಗರದ ಕಾಲದಲ್ಲಿ ಗೊಂಬೆಗಳ ಪ್ರದರ್ಶನ ಮತ್ತು ಪೂಜೆ ಹೆಚ್ಚಾಗಿತ್ತು ಎಂದು ತಿಳಿದುಬರುತ್ತದೆ. ಅಂದಮೇಲೆ ಇದು ಇನ್ನೂ ಹಳೆಯ ಸಂಪ್ರದಾಯವೇ ಆಗಿರಬಹುದು. ನಂತರ ಸೂತ್ರದ ಗೊಂಬೆಗಳು ಹಾಗೂ ತೊಗಲುಗೊಂಬೆಗಳು ಆರಂಭವಾದವು. ಇವುಗಳನ್ನು ಮನರಂಜನೆಗೆ ಉಪಯೋಗಿಸಲು ಪ್ರಾರಂಭ ಮಾಡಿದರು. ಹೊಂಗೆ ಎಣ್ಣೆಯ ದೀಪ ವಿಟ್ಟು ಮುಂದೆ ಬಿಳಿ ಪರದೆ ಕಟ್ಟಿ ಹಿಂದೆಯಿಂದ ತೊಗಲುಗೊಂಬೆ ಯನ್ನು ಬಟ್ಟೆಯ ಮೇಲೆ ಇಟ್ಟು ಆಡಿಸುತ್ತಿದ್ದರು . ಸಾಮಾನ್ಯವಾಗಿ ತೊಗಲುಗೊಂಬೆ ಯಲ್ಲಿ ರಾಮಾಯಣ ಮತ್ತು ಮಹಾಭಾರತದ ಚಿತ್ರಗಳನ್ನು ಮಾಡಿ ರಾತ್ರಿಯೆಲ್ಲಾ ಕಥೆಗಳನ್ನು ನಿರೂಪಿಸುತ್ತಿದ್ದರು.

    ಪ್ರಕೃತಿ ಮತ್ತು ಪುರುಷ

    ಹಿಂದಿನ ಕಾಲದಲ್ಲಿ ಮದುವೆಯಾದ ಹೆಣ್ಣುಮಗಳಿಗೆ ಒಂದು ಜೊತೆ ಪ್ರಕೃತಿ ಮತ್ತು ಪುರುಷರ ಗೊಂಬೆಗಳನ್ನು ಶ್ರೀಗಂಧದ ಮರದಲ್ಲಿ ಮಾಡಿಸಿ ಕೊಡುತ್ತಿದ್ದರು ಎಂದು ತಿಳಿದು ಬರುತ್ತದೆ . ಇದು ಪರಂಪರೆಯಾಗಿ ನಡೆಯಬೇಕಾದ ಹಬ್ಬ. ನಂತರ ಗೊಂಬೆಗಳನ್ನು ರೋಸ್ ವುಡ್ ನಲ್ಲಿ ಮಾಡುವುದು ಅಧಿಕವಾಯಿತು. ಸಾಮಾನ್ಯವಾಗಿ ಇವು ಪಟ್ಟದ ಗೊಂಬೆಗಳು ಎಂದು ಪ್ರಖ್ಯಾತಿಯನ್ನು ಪಡೆದವು.

    ನವರಾತ್ರಿಯಲ್ಲಿ ನವ ದುರ್ಗಾ ಪೂಜೆ ಬಹಳ ಶ್ರೇಷ್ಠವಾಗಿದೆ.ಬೊಂಬೆ ಇಡಲು ಮೆಟ್ಟಿಲುಗಳಂತೆ ಜೋಡಿಸಿದ ಮರದ ಚೌಕಟ್ಟು ತಯಾರಿಸಿ ಅದರ ಮೇಲೆ ಮೊದಲಿಗೆ ಪಟ್ಟದ ಗೊಂಬೆಗಳನ್ನು ಇಕ್ಕೆಲಗಳಲ್ಲಿ ದೀಪವನ್ನು ಇಟ್ಟು ಮುಂದೆ ಕಲಶ ಪೂಜೆ ಮಾಡುತ್ತಾರೆ. ಇವುಗಳಿಗೆ ,ಆದ್ಯತೆ. ನಂತರದ ಮೆಟ್ಟಿಲ ಮೇಲೆ ದಶಾವತಾರ, ಅನ್ನಪೂರ್ಣೇಶ್ವರಿ, ಕಾಳಿಂಗಮರ್ದನ, ಅನಂತಶಯನ ,ರಾಮ ಲಕ್ಷ್ಮಣ ಸೀತೆ ….ಹೀಗೆ ದೇವತಾ ಪ್ರತೀ ಕ ಗೊಂಬೆಗಳು.

    ನಂತರ ಮಾನವರು, ಅಂಬಾರಿ ಮಹಾರಾಜರು, ವಿವಿಧ ಪುಸ್ತಕಗಳು, ವಾದ್ಯದ ಸಮೇತ ಸಂಗೀತಗಾರರು ,ಮುಂತಾದ ಬಹಳ ಆಕರ್ಷಕವಾದ ಗೊಂಬೆಗಳು ಬಂದವು. ಅಗತ್ಯ ವಸ್ತುಗಳು, ಹಣ್ಣುಗಳು ,ಬ್ಯಾಂಡ್ ಸೆಟ್ ,ಪಕ್ಕದ ಖಾಲಿ ಸ್ಥಳದಲ್ಲಿ ಉದ್ಯಾನವನ, ರೈತ ನೆಲ ಉಳುವುದು, ಮೃಗಾಲಯ ಗಳು ಗೊಂಬೆ ರೂಪ ಪಡೆದವು.

    ಇವುಗಳ ಮುಂದೆ ರಂಗೋಲಿ ಹಾಕುವುದು ಕಡ್ಡಾಯವಾಗಿದೆ. ಸಾಮಾನ್ಯವಾಗಿ ಅಕ್ಕಿಹಿಟ್ಟಿನ ರಂಗೋಲಿ. ಎಳೆ ರಂಗೋಲಿ ಚುಕ್ಕಿ ರಂಗೋಲಿ ( ಗೋಪಿಕಾಸ್ತ್ರೀಯರು ತುದಿಗಾಲಿನಲ್ಲಿ ನಿಂತು ನೃತ್ಯ ಮಾಡುತ್ತಿದ್ದು ಅದರ ಸಂಕೇತ ಚುಕ್ಕಿ ರಂಗೋಲಿ) ದೇವಿಯ ಸ್ತುತಿಯನ್ನು ಮಾಡಿ ಷೋಡಶೋಪಚಾರದಿಂದ ಪೂಜೆ ಮಾಡಿ ಒಂದು ಕಾಳು ಒಂದು ಅನ್ನದ ನೈವೇದ್ಯ ಆಗಬೇಕು ಆದರೆ ಪ್ರತಿಸಂಜೆ ಆರತಿ ಮಾಡುವುದು ಅಷ್ಟೇ ಮುಖ್ಯ ವಾಗಿರುತ್ತದೆ . ಇದೇ ಸಂದರ್ಭದಲ್ಲಿ ಮಕ್ಕಳಿಗೆ ತಿಂಡಿಯನ್ನು ಕೊಡುವುದುಬಹಳ ಮುಖ್ಯ.


    ಆಶ್ವಯುಜ ಮಾಸದಲ್ಲಿ ಆಚರಿಸಲ್ಪಡುವ ಸೌಹಾರ್ದತೆಯನ್ನು ಕಾಪಾಡುವ ಶರನ್ನವರಾತ್ರಿ ಭಾರತ ದೇಶದ ಎಲ್ಲಾ ಭಾಗಗಳಲ್ಲಿಯೂ ವಿಶೇಷವಾಗಿ ಆಚರಿಸಲ್ಪಡುತ್ತದೆ. ಹಳೆಯ ಕಾಲದ ಸಂಪ್ರದಾಯಸ್ಥರ ಮನೆಗಳಲ್ಲಿ ನೀಲು ಗೌರಿ ಇಡುತ್ತಾರೆ (3-4 ಅಡಿಯ ಗೊಂಬೆಗಳು ) ಪ್ರತಿದಿನ ರೂಪ ಬದಲಾಯಿಸಬೇಕು ಸಪ್ತಮಿಯ ದಿನ ಸರಸ್ವತಿ, ಅಷ್ಟಮಿಯ ದಿನ ದುರ್ಗಿ, ದಶಮಿಯಂದು ವಿಷ್ಣುರೂಪ ನಂತರ ವಿವಿಧ ಆಭರಣಗಳನ್ನು ಹಾಕಿ ಬಂಗಾರ ಮಾಡುತ್ತಾರೆ. ಇದು ನೋಡುವವರ ಕಣ್ಮನವನ್ನು ತಣಿಸುತ್ತದೆ.


    ಲೀಲಾ ವಾಸುದೇವ್ ಎಂ. ಎ. ಬಿ ಎಡ್ ಪದವೀಧರರು . ಇವರು ಮಲ್ಲೇಶ್ವರದ ದಿ ಬೆಂಗಳೂರು ಎಜುಕೇಶನ್ ಸೊಸೈಟಿ ಪದವಿಪೂರ್ವ ಕಾಲೇಜು ಮಲ್ಲೇಶ್ವರಂ ಪ್ರಾಂಶುಪಾಲರಾಗಿ ಇಲ್ಲಿ ಸುಮಾರು 40 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ. ಇವರು ಗಾಂಧಿ ಸಾಹಿತ್ಯ ಸಂಘ ಮತ್ತು ಸಿದ್ಧವನಹಳ್ಳಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಇದರಲ್ಲಿ ಟ್ರಸ್ಟಿ ಯಾಗಿದ್ದಾರೆ. ಇವರು ಹಲವಾರು ಕೃತಿಗಳನ್ನು ಬರೆದಿದ್ದಾರೆ ಅದರಲ್ಲಿ ಪ್ರಕಟಗೊಂಡ ಕೃತಿಗಳು ಯಾವುದೆಂದರೆ ಧರ್ಮಜ್ಯೋತಿ, ಭಾವನಾ ಬಿಂದು, ಮಕ್ಕಳ ಕಸ್ತೂರ್ಬಾ, ಭಾವನ ತುಂತುರು , ಕರ್ನಾಟಕದ ಕಸ್ತೂರ್ಬಾ ಯಶೋಧರಮ್ಮ ದಾಸಪ್ಪ, ಮಲ್ಲೇಶ್ವರದ ದೇವಸ್ಥಾನಗಳ ಕಿರುಪರಿಚಯ, ಶ್ಲೋಕ ರತ್ನಗಳು ಇವರ ಸಾಹಿತ್ಯ ಸೇವೆಗೆ ಮೆಚ್ಚಿ ಹಲವಾರು ಸಂಘ-ಸಂಸ್ಥೆಗಳು ಪುರಸ್ಕರಿಸಿದ್ದಾರೆ.


    ಷೇರುದಾರರ ಹಿತ ಕಾಯ್ದಾಗ ಪೇಟೆ ಸರ್ವರಿಗೂ ಹಿತದಾಯಕ

    ಷೇರುಪೇಟೆಯ ಚಟುವಟಿಕೆಯ ಶೈಲಿಯು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದು,  ನಿಖರವಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲದ ಮಟ್ಟದಲ್ಲಿ ಬದಲಾವಣೆಗಳನ್ನು ಕಾಣುತ್ತಿವೆ. ಈ ಹಿಂದೆ  ಐ ಪಿ ಒ ಎಂದರೆ ಇನ್ಫೋಸಿಸ್‌ ಎನ್ನುವ ಮಟ್ಟಕ್ಕೆ ಷೇರುಪೇಟೆಗೆ ಒಂದು ರೀತಿಯ ಮನ್ನಣೆಯನ್ನು ತಂದುಕೊಟ್ಟ ಇನ್ಫೋಸಿಸ್‌ ಸಹಜವಾಗಿಯೇ ತನ್ನ ಹೂಡಿಕೆದಾರರಿಗೆ ಅನಿರೀಕ್ಷಿತ ಮಟ್ಟದ ಸಂಪತ್‌ ನ್ನು ವೃದ್ಧಿಸಿಕೊಟ್ಟಿದೆ.  1993 ರ ಐ ಪಿ ಒ ನಲ್ಲಿ ಹೂಡಿಕೆ ಮಾಡಿದವರ  100 ಷೇರುಗಳ ಬಂಡವಾಳ ರೂ.9,500 ಯಾವ ರೀತಿ ಬೆಳೆದಿದೆ ಎಂದರೆ ಇಂದಿಗೆ ಸರಿ ಸುಮಾರು  55 ಸಾವಿರ ಷೇರುಗಳಾಗಿ ಅದಕ್ಕೆ ಪ್ರತಿ ವರ್ಷ ಸುಮಾರು ರೂ.20 ಲಕ್ಷದಷ್ಟು ಲಾಭಾಂಶವನ್ನು ವಿತರಿಸಿದೆ.

    ಅದಕ್ಕೂ ಹಿಂದಿನ ಹೂಡಿಕೆ ಶೈಲಿ ಪರಿಶೀಲಿಸಿದಾಗ  ಹೂಡಿಕೆ ಎಂದರೆ ಕಾಲ್ಗೇಟ್‌ ಪಾಲ್ಮೊಲಿವ್‌ ಎಂದು ಗುರುತಿಸಲ್ಪಡಲಾಗುತ್ತಿತ್ತು.  ಇದಕ್ಕೆ ಕಾರಣ ಕಾಲ್ಗೇಟ್‌ ಕಂಪನಿಯು 1978 ರಲ್ಲಿ ಪ್ರತಿ ರೂ.10 ರ ಮುಖಬೆಲೆಯ ಷೇರನ್ನು ರೂ.15 ರಂತೆ ವಿತರಿಸಿ 1994 ರ ವೇಳೆಗೆ ಅದನ್ನು 50 ಪಟ್ಟು ಬೆಳೆಸುವಷ್ಟು ಸಾಧನೆ ಮಾಡಿ.  ಹೂಡಿಕೆಯ ಮಹತ್ವವನ್ನು ಸಾರಿದೆ.

    ಇನ್ನು 80 ರ ದಶಕಗಳಿಂದೀಚೆಗೆ,  ಉಳಿತಾಯದ ರೀತಿ ನಾವು ಷೇರುಗಳಲ್ಲಿ ಹಣ ಹೂಡಿದಲ್ಲಿ ಹೂಡಿಕೆದಾರರಿಗೆ ನಿಯತಕಾಲಿಕವಾಗಿ ಮಾಸಾಶನದ ರೀತಿ ಲಾಭಾಂಶವನ್ನು ನೀಡಿ, ಹೂಡಿಕೆ ಮಾಡಿದ ಷೇರುಗಳ ದರಗಳು ಏರಿಕೆ ಕಾಣುವಂತಹ ಸಾಧನೆಯನ್ನು ಪ್ರದರ್ಶಿಸಿದ ಕಂಪನಿಗಳಲ್ಲಿ ಹೆಚ್‌ ಡಿ ಎಫ್‌ ಸಿ,  ಟಾಟಾ ಪವರ್‌ ( 2000 ದಲ್ಲಿ ಟಾಟಾ ಸಮೂಹದ ಟಾಟಾ ಹೈಡ್ರೋ ಮತ್ತು ಆಂದ್ರ ವ್ಯಾಲಿ ಕಂಪನಿಗಳನ್ನು 4:5 ರ ಅನುಪಾದತಲ್ಲಿ ಟಾಟಾ ಪವರ್‌ ನಲ್ಲಿ ವಿಲೀನಗೊಳಿಸಲಾಯಿತು) , ಐ ಟಿ ಸಿ, ಹಿಂದೂಸ್ಥಾನ್‌ ಲೀವರ್‌, ಈಸ್ಟ್‌ ಇಂಡಿಯಾ ಹೋಟೆಲ್ಸ್‌, ಬ್ರೂಕ್‌ ಬಾಂಡ್‌,  ಪಾಂಡ್ಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ವೈಶ್ಯ ಬ್ಯಾಂಕ್ ನಂತಹವು  ಮುಖ್ಯವಾದವು.  ಆಗ   ಷೇರುಗಳಲ್ಲಿ ಹೂಡಿಕೆಯನ್ನು ಹೆಚ್ಚಾಗಿ ಕಾರ್ಪರೇಟ್‌ ಫಲಗಳಾದ ಲಾಭಾಂಶ, ಬೋನಸ್‌ ಮತ್ತು ಹಕ್ಕಿನ ಷೇರುಗಳ ಮುಲಕ ಪಡೆಯಬಹುದಾದ ಅಂಶಗಳನ್ನಾಧರಿಸಿ, ಕಂಪನಿಗಳ ಆಂತರಿಕ ಸಾಮರ್ಥ್ಯವನ್ನಾಧರಿಸಿ ನಿರ್ಧರಿಸಲಾಗುತ್ತಿತ್ತು.  ಯಾರಿಗೂ ತಾತ್ಕಾಲಿಕ ಅಥವಾ ಅಲ್ಪಾವಧಿ  ಹೂಡಿಕೆಯ ಭಾವನೆ ಇರುತ್ತಿರಲಿಲ್ಲ.  

     ಇತ್ತೀಚಿನವರೆಗೂ ಅಂದರೆ 2020ರಲ್ಲಿ ತೇಲಿಬಿಟ್ಟ ಐ ಪಿ ಒ ಗಳು ಸ್ವಲ್ಪಮಟ್ಟಿನ ಪ್ರೀಮಿಯಂ ಹೆಚ್ಚು ಎನಿಸಿದರೂ ಅಲಾಟ್‌ ಆದವರಿಗೆ  ಆಕರ್ಷಣೀಯ ಲಾಭವನ್ನು ತಂದು ಕೊಟ್ಟಿವೆ.   ಮಾರ್ಚ್‌ ನಲ್ಲಿ ಬಂದ ಎಸ್‌ ಬಿ ಐ ಕಾರ್ಡ್ಸ್‌ ಅಂಡ್‌ ಪೇಮೆಂಟ್ ಸರ್ವಿಸಸ್‌  ಷೇರಿನ ಬೆಲೆ ಲೀಸ್ಟಿಂಗ್‌ ದಿನ ಸ್ವಲ್ಪ ಕುಸಿತ ಕಂಡರೂ ನಂತರ ಚೇತರಿಕೆ ಕಂಡಿದೆ.  ವಿತರಣೆ ಬೆಲೆ ರೂ.755 ಆದರೆ ಲಿಸ್ಟಿಂಗ್‌ ಬೆಲೆ ರೂ.684 ರ ಸಮೀಪವಿತ್ತು. ಈಗ ರೂ.900 ರ ಗಡಿ ದಾಟಿದೆ.

    ಅಕ್ಟೋಬರ್‌ 2020 ರಲ್ಲಿ ತೇಲಿಬಿಟ್ಟ ಯು ಟಿ ಐ ಅಸ್ಸೆಟ್‌ ಮ್ಯಾನೇಜ್‌ ಮೆಂಟ್‌ ಕಂಪನಿ ಷೇರು ರೂ.554 ರಲ್ಲಿ ವಿತರಿಸಿದರೂ ಲೀಸ್ಟಿಂಗ್‌ ದಿನ ರೂ.477 ರ ಸಮೀಪವಿದ್ದು ನಂತರ ಚೇತರಿಕೆ ಕಂಡಿದೆ.  ಈಗ ಅದರ ಬೆಲೆ ರೂ.720 ನ್ನು ದಾಟಿದೆ.

    ಅದರಂತೆ ಅಕ್ಟೋಬರ್‌ ತಿಂಗಳಲ್ಲಿ ವಿತರಣೆಯಾದ ಏಂಜೆಲ್‌ ಒನ್‌ ಕಂಪನಿಯ ಐ ಪಿ ಒ ಬೆಲೆ ರೂ.306 ಆದರೆ ಲೀಸ್ಟಿಂಗ್‌ ದಿನದ ಬೆಲೆ ರೂ.276 ರಲ್ಲಿತ್ತು.  ನಂತರ ಚೇತರಿಕೆ ಕಂಡು ಈಗ 1,360 ರ ಸಮೀಪವಿದೆ.

    ನವೆಂಬರ್‌ ನಲ್ಲಿ ತೇಲಿಬಿಟ್ಟ ಈಕ್ವಿಟಾಸ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ವಿತರಿಸಿದ್ದು ರೂ.33 ರಲ್ಲಿಯಾದರೂ ಲಿಸ್ಟಿಂಗ್‌ ರೂ.32.75, ನಂತರ ಚೇತರಿಕೆ ಕಂಡಿದೆ.  ಈಗ ರೂ.51 ನ್ನು ದಾಟಿದೆ.  

    ಮೇಲೆ ತಿಳಿಸಿದ ಈ ಕಂಪನಿಗಳನ್ನು ಹೊರತುಪಡಿಸಿದಲ್ಲಿ ಉಳಿದಂತೆ ಎಲ್ಲಾ ಕಂಪನಿಗಳು  ವಿತರಣೆ ಬೆಲೆಗಿಂತ ಹೆಚ್ಚಿನ ಆಕರ್ಷಣೀಯ ಬೆಲೆಯಲ್ಲಿ ವಹಿವಾಟಾಗುತ್ತಿವೆ.  ಕೆಲವು ಕಂಪನಿಗಳು ವಿತರಣೆ ಬೆಲೆಗಿಂತ ಕಡಿಮೆಯಾದಲ್ಲಿ ಚೇತರಿಕೆಯಿಂದ ಪುಟಿದೆದ್ದಿವೆ.  ಅಂದರೆ ವಿತರಣೆ ಬೆಲೆಗಳು ಸ್ವಲ್ಪಮಟ್ಟಿನ ನ್ಯಾಯಸಮ್ಮತವಾಗಿದ್ದವು ಎನ್ನಬಹುದು.

    2021 ರ ಐ ಪಿ ಒ ಗಳು

    ಆರಂಭಿಕ ಷೇರು ವಿತರಣೆಗಳು 2021 ರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದವು.  ಅವುಗಳಲ್ಲಿ ಸೇವಾ ವಲಯದ, ಸ್ಟಾರ್ಟ್‌ ಅಪ್‌ ಗಳು, ಪ್ಲಾಟ್ ಫಾರಂ ಕಂಪನಿಗಳೇ ಹೆಚ್ಚಿದ್ದವು.    ಆ ವರ್ಷ ತೇಲಿಬಿಟ್ಟ ಸುಮಾರು 60 ಕ್ಕೂ ಹೆಚ್ಚಿನ ಕಂಪನಿಗಳಲ್ಲಿ  25 ಕ್ಕೂ ಹೆಚ್ಚಿನ ಕಂಪನಿಗಳು ವಿತರಣೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿವೆ.  ಅತಿ ಹೆಚ್ಚು ಹಾನಿಯುಂಟುಮಾಡಿದ ಕಂಪನಿಗಳೆಂದರೆ

    • ಒನ್‌ 97 ಕಮ್ಯುನಿಕೇಷನ್ಸ್‌ ; ವಿತರಿಸಿದ ಬೆಲೆ ರೂ.2,150:  2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.637
    • ಕಾರ್‌ ಟ್ರೇಡ್‌ ಟೆಕ್‌            : ವಿತರಿಸಿದ ಬೆಲೆ ರೂ.1,600  :  2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.610
    • ಸೂರ್ಯೋದಯ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ : ವಿತರಿಸಿದ ಬೆಲೆ ರೂ.305 : 2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.99
    • ಫಿನೋ ಪೇಮೆಂಟ್ಸ್‌ ಬ್ಯಾಂಕ್‌ : ವಿತರಿಸಿದ ಬೆಲೆ ರೂ.577  : 2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.225
    • ಪಿ ಬಿ ಫಿನ್ ಟೆಕ್‌ ‌        : ವಿತರಿಸಿದ ಬೆಲೆ ರೂ.980  :  2022 ರ ಸೆಪ್ಟೆಂಬರ್‌  ಅಂತ್ಯದ ಬೆಲೆ ರೂ.473
    • ರೇಟ್‌ ಗೇನ್‌ ಟ್ರಾವಲ್‌ ಟೆಕ್ನಾಲಜೀಸ್‌ : ವಿತರಿಸಿದ ಬೆಲೆ ರೂ.425 ; 2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.270
    • ಶ್ರೀರಾಮ್‌ ಪ್ರಾಪರ್ಟೀಸ್‌  :  ವಿತರಿಸಿದ ಬೆಲೆ ರೂ.118 : 2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.75
    • ಆದಿತ್ಯ ಬಿರ್ಲಾ ಸನ್‌ ಲೈಫ್‌ ಎ ಎಂ ಸಿ : ವಿತರಿಸಿದ ಬೆಲೆ ರೂ.712  : 2022 ರ ಸೆಪ್ಟೆಂಬರ್‌  ಅಂತ್ಯದ ಬೆಲೆ ರೂ.455
    • ವಿಂಡ್ಲಾಸ್‌ ಬಯೋಟೆಕ್‌  ವಿತರಿಸಿದ ಬೆಲೆ ರೂ.460 : 2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.234
    • ಗ್ಲೆನ್‌ ಮಾರ್ಕ್‌ ಲೈಫ್‌ ಸೈನ್ಸಸ್‌  ವಿತರಿಸಿದ ಬೆಲೆ ರೂ.720  : 2020 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.386

    ಹಾಗೆಯೇ ಮೆಡ್‌ ಪ್ಲಸ್‌ ಹೆಲ್ತ್‌ ಸರ್ವಿಸಸ್‌,  ಸ್ಟಾರ್‌ ಹೆಲ್ತ ಅಂಡ್‌ ಅಲೈಡ್‌ ಇನ್ಷೂರನ್ಸ್‌ ಕಂಪನಿ, ಎಸ್‌ ಜೆ ಎಸ್‌ ಎಂಟರ್ಪ್ರೈಸಸ್‌, ವಿಜಯ್‌ ಡಯಾಗ್ನಾಸ್ಟಿಕ್ ಸೆಂಟರ್‌,  ನುವೊಕೋ ವಿಸ್ಟಾಸ್‌ ಕಾರ್ಪೊರೇಷನ್‌, ಎಕ್ಸಾರೋ ಟೈಲ್ಸ್‌,  ಝೊಮೆಟೋ, ಶ್ಯಾಂ ಮೆಟಲಿಕ್ಸ್‌, ಇಂಡಿಯಾ ಪೆಸ್ಟಿಸೈಡ್ಸ್‌, ಇಂಡಿಯನ್‌ ರೈಲ್ವೇ ಫೈನಾನ್ಸ್‌ ಕಾರ್ಪೊರೇಷನ್‌ ಗಳು ಸಹ ಸೆಪ್ಟೆಂಬರ್‌ ಅಂತ್ಯದಲ್ಲಿ ವಿತರಣೆ ಬೆಲೆಗಳಿಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿವೆ.

    ಅಂದರೆ ಎಲ್ಲಾ  ಐ ಪಿ ಒ  ಕಂಪನಿಗಳು ಹಾನಿಗೊಳಪಡಿಸಿವೆ ಎಂದಲ್ಲ, ಕಂಪನಿಗಳಾದ  ಪಾರಸ್‌ ಡಿಫೆನ್ಸ್‌ ಅಂಡ್‌ ಸ್ಪೇಸ್  ಟೆಕ್ನಾಲಜೀಸ್‌ ‌, ದೇವಿಯಾನಿ ಇಂಟರ್‌ ನ್ಯಾಶನಲ್‌,  ತತ್ವ ಚಿಂತನ್‌ ಫಾರ್ಮ ಕೆಂ,  ಕೃಷ್ಣ ಇನ್ಸ್ ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌, ಬಾರ್ಬೆಕ್‌ ನ್ಯಾಶನ್‌ ಹಾಸ್ಪಿಟಾಲಿಟಿ,  ಸ್ಟೋವ್‌ ಕ್ರಾಫ್ಟ್‌,  ಹೋಂ ಫಸ್ಟ್‌ ಫೈನಾನ್ಸ್ ಕಂಪನಿ, ನ್ಯೂರೇಕಾ , ಲಕ್ಷ್ಮಿ ಆರ್ಗಾನಿಕ್‌ ಇಂಡಸ್ಟ್ರೀಸ್‌,  ಅನುಪಮ್‌ ರಸಾಯನ್‌ ಇಂಡಿಯಾ, ಮ್ಯಾಕ್ರೋಟೆಕ್‌ ಡೆವಲಪರ್ಸ್‌ , ರೋಲೆಕ್ಸ್‌ ರಿಂಗ್ಸ್‌,  ಅಮಿ ಆರ್ಗಾನಿಕ್ಸ್‌,  ಸಿಗಾಚಿ ಇಂಡಸ್ಟ್ರೀಸ್‌, ಗೋ ಫ್ಯಾಶನ್ಸ್( ಇಂಡಿಯಾ),  ಮೆಟ್ರೋಡ್ಸ್‌,  ಡಟಾ ಪ್ಯಾಟರ್ನ್ಸ್‌ ( ಇಂಡಿಯಾ), ಹೆಚ್‌ ಪಿ ಅಡ್ಹೆಸಿವ್ಸ್‌ , ಕ್ಲೀನ್‌ ಸೈನ್ಸ್‌ ಅಂಡ್ ಟೆಕ್ನಾಲಜೀಸ್‌,   ನಂತಹ ಕಂಪನಿಗಳು ಲಾಭದಾಯಕವಾಗಿವೆ.ನಝಾರಾ ಟೆಕ್ನಾಲಜೀಸ್‌, ಈಸಿ ಟ್ರಿಪ್‌ ಪ್ಲಾನರ್ಸ್‌ ಕಂಪನಿಗಳು ಆಕರ್ಷಣೀಯ ಬೋನಸ್‌ ಷೇರುಗಳನ್ನೂ ವಿತರಿಸಿವೆ.

    ಆದರೆ ಅತ್ಯಧಿಕ ಪ್ರೀಮಿಯಂನಲ್ಲಿ ವಿತರಿಸಿದ ಕೆಲವು ಕಂಪನಿಗಳು ವಿತರಣೆಗೂ ಮುಂಚಿನ ಮೂರು ವರ್ಷಗಳು ನಿರಂತರವಾಗಿ ಹಾನಿಗೊಳಗಾಗಿರುವಾಗ ವಿತರಿಸಿದ ಬೆಲೆ ಮಾತ್ರ ಬೆರಗಾಗಿಸುವಂತಿದ್ದು, ಜನಸಾಮಾನ್ಯರನ್ನು ತಮ್ಮ ಬ್ರಾಂಡ್‌ ಆಧಾರದ ಮೇಲೆ ಆಕರ್ಷಿಸಿ, ಹಾನಿಗೊಳಪಡಿಸಿವೆ.

    ಆರೋಗ್ಯಕರ ಬೆಳವಣಿಗೆ:


    ಐ ಪಿ ಒ ಗಳ ಪರಿಸ್ಥಿತಿ ಈ ಮಟ್ಟಕ್ಕೆ ಕುಸಿದಿರುವ ಈ ಹಂತದಲ್ಲಿ ಕಂಪನಿಗಳು ತಮ್ಮ ಚಿಂತನೆಯನ್ನು ಷೇರುದಾರರ ಪರವಾಗಿ ತೆಗೆದುಕೊಂಡಿರುವುದೂ ಸಹ ಇದೆ.   ಕರ್ನಾಟಕದ ಕಂಪನಿ ಸಂಡೂರ್‌ ಮ್ಯಾಂಗನೀಸ್‌ ಅಂಡ್‌ ಐರನ್‌ ಓರ್ಸ್‌ ಕಂಪನಿಯು ಆಗಸ್ಟ್‌ ನಲ್ಲಿ ಪ್ರತಿ ಷೇರಿಗೆ ಒಂದರಂತೆ ಹಕ್ಕಿನ ಷೇರನ್ನು ಮುಖಬೆಲೆಯಲ್ಲೇ ವಿತರಿಸಿದೆ.  ಪೇಟೆಯಲ್ಲಿ ಷೇರಿನ ಬೆಲೆ ರೂ.2,000 ದಿಂದ ರೂ.3,000 ದಲ್ಲಿರುವಾಗ ಮುಖಬೆಲೆಯಲ್ಲೇ ವಿತರಣೆ ಮಾಡಿ ಹೂಡಿಕೆದಾರರ ಸ್ನೇಹಿತ್ವದಿಂದ ಮೆರೆದಿದೆ.

    ಅದೇ ರೀತಿ  ಡೈರಿ ವಲಯದ ಕಂಪನಿ ಹೆರಿಟೇಜ್‌ ಫುಡ್ಸ್‌  ಕಂಪನಿ ಪ್ರತಿ ಒಂದು ಷೇರಿಗೆ ಒಂದರಂತೆ ಮುಖಬೆಲೆಯಾದ ರೂ.5 ರಂತೆ ಹಕ್ಕಿನ ಷೇರು ವಿತರಿಸುವುದಾಗಿ ಪ್ರಕಟಿಸಿದೆ. ಇದು ಉತ್ತಮ ಬೆಳವಣಿಗೆ.  

    ಕಾರ್ಪೊರೇಟ್‌ ಪಿತಾಮಹರಾದ ಧೀರೂಭಾಯಿ ಅಂಬಾನಿಯವರು ತಮ್ಮ ಕಂಪನಿಯನ್ನು ಬೆಳೆಸುವುದಕ್ಕೆ ಅನುಸರಿಸಿದ ಹಾದಿ ಎಂದರೆ ಷೇರುದಾರರನ್ನು ಪೋಷಿಸಿಕೊಂಡು, ಅವರನ್ನು ಹರ್ಷಚಿತ್ತರನ್ನಾಗಿಸಿ, ಪ್ರತಿಯೊಂದು ವಿತರಣೆಯಲ್ಲಿ ಉತ್ತಮ ಬೆಂಬಲ ಪಡೆದುಕೊಂಡು ಕಾರ್ಪೊರೇಟ್‌ ಕಲ್ಪನೆಯನ್ನು ಸಾಕಾರಗೊಳಿಸಿದರು.  ಮುಂದಿನ ದಿನಗಳಲ್ಲಿ ಕಂಪನಿಗಳಾದ ಸಂಡೂರ್‌ ಮ್ಯಾಂಗನೀಸ್‌ ಅಂಡ್‌ ಐರನ್‌ ಓರ್ಸ್‌ ಮತ್ತು ಹೆರಿಟೇಜ್‌ ಫುಡ್‌ ಗಳು ತೆಗೆದುಕೊಂಡ ಹೂಡಿಕೆದಾರ ಸ್ನೇಹಿ, ಷೇರುದಾರರ ಪರವಾದ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಹೆಚ್ಚು ಹೆಚ್ಚು ಹೂಡಿಕೆದಾರರು ಪೇಟೆ ಪ್ರವೇಶಿಸುತ್ತಿರುವ ವಾತಾವರಣಕ್ಕೆ ಪುಷ್ಠಿದಾಯಕವಾಗಿಸುತ್ತಾರೆ ಎಂದು ಆಶಿಸೋಣ. 

    Dasara Doll Festival: ಚಿಕ್ಕಕಲ್ಲಸಂದ್ರದ ಜಯಶ್ರೀ ಅವರ ಮನೆಯ ದಸರಾ ಗೊಂಬೆ ನೋಟ

    ಕನ್ನಡಪ್ರೆಸ್ ಕಾಮ್ ದಸರಾ ಗೊಂಬೆ ಹಬ್ಬಕ್ಕೆ ಪೋಟೋಗಳು ಹರಿದು ಬರುತ್ತಲೇ ಇವೆ. ಆಯ್ದ ಗೊಂಬೆ ಮನೆಯ ಮತ್ತೊಂದು ಕಂತು ಇಲ್ಲಿದೆ.

    error: Content is protected !!