26.6 C
Karnataka
Saturday, May 11, 2024

    ಷೇರುದಾರರ ಹಿತ ಕಾಯ್ದಾಗ ಪೇಟೆ ಸರ್ವರಿಗೂ ಹಿತದಾಯಕ

    Must read

    ಷೇರುಪೇಟೆಯ ಚಟುವಟಿಕೆಯ ಶೈಲಿಯು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದು,  ನಿಖರವಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲದ ಮಟ್ಟದಲ್ಲಿ ಬದಲಾವಣೆಗಳನ್ನು ಕಾಣುತ್ತಿವೆ. ಈ ಹಿಂದೆ  ಐ ಪಿ ಒ ಎಂದರೆ ಇನ್ಫೋಸಿಸ್‌ ಎನ್ನುವ ಮಟ್ಟಕ್ಕೆ ಷೇರುಪೇಟೆಗೆ ಒಂದು ರೀತಿಯ ಮನ್ನಣೆಯನ್ನು ತಂದುಕೊಟ್ಟ ಇನ್ಫೋಸಿಸ್‌ ಸಹಜವಾಗಿಯೇ ತನ್ನ ಹೂಡಿಕೆದಾರರಿಗೆ ಅನಿರೀಕ್ಷಿತ ಮಟ್ಟದ ಸಂಪತ್‌ ನ್ನು ವೃದ್ಧಿಸಿಕೊಟ್ಟಿದೆ.  1993 ರ ಐ ಪಿ ಒ ನಲ್ಲಿ ಹೂಡಿಕೆ ಮಾಡಿದವರ  100 ಷೇರುಗಳ ಬಂಡವಾಳ ರೂ.9,500 ಯಾವ ರೀತಿ ಬೆಳೆದಿದೆ ಎಂದರೆ ಇಂದಿಗೆ ಸರಿ ಸುಮಾರು  55 ಸಾವಿರ ಷೇರುಗಳಾಗಿ ಅದಕ್ಕೆ ಪ್ರತಿ ವರ್ಷ ಸುಮಾರು ರೂ.20 ಲಕ್ಷದಷ್ಟು ಲಾಭಾಂಶವನ್ನು ವಿತರಿಸಿದೆ.

    ಅದಕ್ಕೂ ಹಿಂದಿನ ಹೂಡಿಕೆ ಶೈಲಿ ಪರಿಶೀಲಿಸಿದಾಗ  ಹೂಡಿಕೆ ಎಂದರೆ ಕಾಲ್ಗೇಟ್‌ ಪಾಲ್ಮೊಲಿವ್‌ ಎಂದು ಗುರುತಿಸಲ್ಪಡಲಾಗುತ್ತಿತ್ತು.  ಇದಕ್ಕೆ ಕಾರಣ ಕಾಲ್ಗೇಟ್‌ ಕಂಪನಿಯು 1978 ರಲ್ಲಿ ಪ್ರತಿ ರೂ.10 ರ ಮುಖಬೆಲೆಯ ಷೇರನ್ನು ರೂ.15 ರಂತೆ ವಿತರಿಸಿ 1994 ರ ವೇಳೆಗೆ ಅದನ್ನು 50 ಪಟ್ಟು ಬೆಳೆಸುವಷ್ಟು ಸಾಧನೆ ಮಾಡಿ.  ಹೂಡಿಕೆಯ ಮಹತ್ವವನ್ನು ಸಾರಿದೆ.

    ಇನ್ನು 80 ರ ದಶಕಗಳಿಂದೀಚೆಗೆ,  ಉಳಿತಾಯದ ರೀತಿ ನಾವು ಷೇರುಗಳಲ್ಲಿ ಹಣ ಹೂಡಿದಲ್ಲಿ ಹೂಡಿಕೆದಾರರಿಗೆ ನಿಯತಕಾಲಿಕವಾಗಿ ಮಾಸಾಶನದ ರೀತಿ ಲಾಭಾಂಶವನ್ನು ನೀಡಿ, ಹೂಡಿಕೆ ಮಾಡಿದ ಷೇರುಗಳ ದರಗಳು ಏರಿಕೆ ಕಾಣುವಂತಹ ಸಾಧನೆಯನ್ನು ಪ್ರದರ್ಶಿಸಿದ ಕಂಪನಿಗಳಲ್ಲಿ ಹೆಚ್‌ ಡಿ ಎಫ್‌ ಸಿ,  ಟಾಟಾ ಪವರ್‌ ( 2000 ದಲ್ಲಿ ಟಾಟಾ ಸಮೂಹದ ಟಾಟಾ ಹೈಡ್ರೋ ಮತ್ತು ಆಂದ್ರ ವ್ಯಾಲಿ ಕಂಪನಿಗಳನ್ನು 4:5 ರ ಅನುಪಾದತಲ್ಲಿ ಟಾಟಾ ಪವರ್‌ ನಲ್ಲಿ ವಿಲೀನಗೊಳಿಸಲಾಯಿತು) , ಐ ಟಿ ಸಿ, ಹಿಂದೂಸ್ಥಾನ್‌ ಲೀವರ್‌, ಈಸ್ಟ್‌ ಇಂಡಿಯಾ ಹೋಟೆಲ್ಸ್‌, ಬ್ರೂಕ್‌ ಬಾಂಡ್‌,  ಪಾಂಡ್ಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ವೈಶ್ಯ ಬ್ಯಾಂಕ್ ನಂತಹವು  ಮುಖ್ಯವಾದವು.  ಆಗ   ಷೇರುಗಳಲ್ಲಿ ಹೂಡಿಕೆಯನ್ನು ಹೆಚ್ಚಾಗಿ ಕಾರ್ಪರೇಟ್‌ ಫಲಗಳಾದ ಲಾಭಾಂಶ, ಬೋನಸ್‌ ಮತ್ತು ಹಕ್ಕಿನ ಷೇರುಗಳ ಮುಲಕ ಪಡೆಯಬಹುದಾದ ಅಂಶಗಳನ್ನಾಧರಿಸಿ, ಕಂಪನಿಗಳ ಆಂತರಿಕ ಸಾಮರ್ಥ್ಯವನ್ನಾಧರಿಸಿ ನಿರ್ಧರಿಸಲಾಗುತ್ತಿತ್ತು.  ಯಾರಿಗೂ ತಾತ್ಕಾಲಿಕ ಅಥವಾ ಅಲ್ಪಾವಧಿ  ಹೂಡಿಕೆಯ ಭಾವನೆ ಇರುತ್ತಿರಲಿಲ್ಲ.  

     ಇತ್ತೀಚಿನವರೆಗೂ ಅಂದರೆ 2020ರಲ್ಲಿ ತೇಲಿಬಿಟ್ಟ ಐ ಪಿ ಒ ಗಳು ಸ್ವಲ್ಪಮಟ್ಟಿನ ಪ್ರೀಮಿಯಂ ಹೆಚ್ಚು ಎನಿಸಿದರೂ ಅಲಾಟ್‌ ಆದವರಿಗೆ  ಆಕರ್ಷಣೀಯ ಲಾಭವನ್ನು ತಂದು ಕೊಟ್ಟಿವೆ.   ಮಾರ್ಚ್‌ ನಲ್ಲಿ ಬಂದ ಎಸ್‌ ಬಿ ಐ ಕಾರ್ಡ್ಸ್‌ ಅಂಡ್‌ ಪೇಮೆಂಟ್ ಸರ್ವಿಸಸ್‌  ಷೇರಿನ ಬೆಲೆ ಲೀಸ್ಟಿಂಗ್‌ ದಿನ ಸ್ವಲ್ಪ ಕುಸಿತ ಕಂಡರೂ ನಂತರ ಚೇತರಿಕೆ ಕಂಡಿದೆ.  ವಿತರಣೆ ಬೆಲೆ ರೂ.755 ಆದರೆ ಲಿಸ್ಟಿಂಗ್‌ ಬೆಲೆ ರೂ.684 ರ ಸಮೀಪವಿತ್ತು. ಈಗ ರೂ.900 ರ ಗಡಿ ದಾಟಿದೆ.

    ಅಕ್ಟೋಬರ್‌ 2020 ರಲ್ಲಿ ತೇಲಿಬಿಟ್ಟ ಯು ಟಿ ಐ ಅಸ್ಸೆಟ್‌ ಮ್ಯಾನೇಜ್‌ ಮೆಂಟ್‌ ಕಂಪನಿ ಷೇರು ರೂ.554 ರಲ್ಲಿ ವಿತರಿಸಿದರೂ ಲೀಸ್ಟಿಂಗ್‌ ದಿನ ರೂ.477 ರ ಸಮೀಪವಿದ್ದು ನಂತರ ಚೇತರಿಕೆ ಕಂಡಿದೆ.  ಈಗ ಅದರ ಬೆಲೆ ರೂ.720 ನ್ನು ದಾಟಿದೆ.

    ಅದರಂತೆ ಅಕ್ಟೋಬರ್‌ ತಿಂಗಳಲ್ಲಿ ವಿತರಣೆಯಾದ ಏಂಜೆಲ್‌ ಒನ್‌ ಕಂಪನಿಯ ಐ ಪಿ ಒ ಬೆಲೆ ರೂ.306 ಆದರೆ ಲೀಸ್ಟಿಂಗ್‌ ದಿನದ ಬೆಲೆ ರೂ.276 ರಲ್ಲಿತ್ತು.  ನಂತರ ಚೇತರಿಕೆ ಕಂಡು ಈಗ 1,360 ರ ಸಮೀಪವಿದೆ.

    ನವೆಂಬರ್‌ ನಲ್ಲಿ ತೇಲಿಬಿಟ್ಟ ಈಕ್ವಿಟಾಸ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ವಿತರಿಸಿದ್ದು ರೂ.33 ರಲ್ಲಿಯಾದರೂ ಲಿಸ್ಟಿಂಗ್‌ ರೂ.32.75, ನಂತರ ಚೇತರಿಕೆ ಕಂಡಿದೆ.  ಈಗ ರೂ.51 ನ್ನು ದಾಟಿದೆ.  

    ಮೇಲೆ ತಿಳಿಸಿದ ಈ ಕಂಪನಿಗಳನ್ನು ಹೊರತುಪಡಿಸಿದಲ್ಲಿ ಉಳಿದಂತೆ ಎಲ್ಲಾ ಕಂಪನಿಗಳು  ವಿತರಣೆ ಬೆಲೆಗಿಂತ ಹೆಚ್ಚಿನ ಆಕರ್ಷಣೀಯ ಬೆಲೆಯಲ್ಲಿ ವಹಿವಾಟಾಗುತ್ತಿವೆ.  ಕೆಲವು ಕಂಪನಿಗಳು ವಿತರಣೆ ಬೆಲೆಗಿಂತ ಕಡಿಮೆಯಾದಲ್ಲಿ ಚೇತರಿಕೆಯಿಂದ ಪುಟಿದೆದ್ದಿವೆ.  ಅಂದರೆ ವಿತರಣೆ ಬೆಲೆಗಳು ಸ್ವಲ್ಪಮಟ್ಟಿನ ನ್ಯಾಯಸಮ್ಮತವಾಗಿದ್ದವು ಎನ್ನಬಹುದು.

    2021 ರ ಐ ಪಿ ಒ ಗಳು

    ಆರಂಭಿಕ ಷೇರು ವಿತರಣೆಗಳು 2021 ರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದವು.  ಅವುಗಳಲ್ಲಿ ಸೇವಾ ವಲಯದ, ಸ್ಟಾರ್ಟ್‌ ಅಪ್‌ ಗಳು, ಪ್ಲಾಟ್ ಫಾರಂ ಕಂಪನಿಗಳೇ ಹೆಚ್ಚಿದ್ದವು.    ಆ ವರ್ಷ ತೇಲಿಬಿಟ್ಟ ಸುಮಾರು 60 ಕ್ಕೂ ಹೆಚ್ಚಿನ ಕಂಪನಿಗಳಲ್ಲಿ  25 ಕ್ಕೂ ಹೆಚ್ಚಿನ ಕಂಪನಿಗಳು ವಿತರಣೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿವೆ.  ಅತಿ ಹೆಚ್ಚು ಹಾನಿಯುಂಟುಮಾಡಿದ ಕಂಪನಿಗಳೆಂದರೆ

    • ಒನ್‌ 97 ಕಮ್ಯುನಿಕೇಷನ್ಸ್‌ ; ವಿತರಿಸಿದ ಬೆಲೆ ರೂ.2,150:  2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.637
    • ಕಾರ್‌ ಟ್ರೇಡ್‌ ಟೆಕ್‌            : ವಿತರಿಸಿದ ಬೆಲೆ ರೂ.1,600  :  2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.610
    • ಸೂರ್ಯೋದಯ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ : ವಿತರಿಸಿದ ಬೆಲೆ ರೂ.305 : 2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.99
    • ಫಿನೋ ಪೇಮೆಂಟ್ಸ್‌ ಬ್ಯಾಂಕ್‌ : ವಿತರಿಸಿದ ಬೆಲೆ ರೂ.577  : 2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.225
    • ಪಿ ಬಿ ಫಿನ್ ಟೆಕ್‌ ‌        : ವಿತರಿಸಿದ ಬೆಲೆ ರೂ.980  :  2022 ರ ಸೆಪ್ಟೆಂಬರ್‌  ಅಂತ್ಯದ ಬೆಲೆ ರೂ.473
    • ರೇಟ್‌ ಗೇನ್‌ ಟ್ರಾವಲ್‌ ಟೆಕ್ನಾಲಜೀಸ್‌ : ವಿತರಿಸಿದ ಬೆಲೆ ರೂ.425 ; 2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.270
    • ಶ್ರೀರಾಮ್‌ ಪ್ರಾಪರ್ಟೀಸ್‌  :  ವಿತರಿಸಿದ ಬೆಲೆ ರೂ.118 : 2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.75
    • ಆದಿತ್ಯ ಬಿರ್ಲಾ ಸನ್‌ ಲೈಫ್‌ ಎ ಎಂ ಸಿ : ವಿತರಿಸಿದ ಬೆಲೆ ರೂ.712  : 2022 ರ ಸೆಪ್ಟೆಂಬರ್‌  ಅಂತ್ಯದ ಬೆಲೆ ರೂ.455
    • ವಿಂಡ್ಲಾಸ್‌ ಬಯೋಟೆಕ್‌  ವಿತರಿಸಿದ ಬೆಲೆ ರೂ.460 : 2022 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.234
    • ಗ್ಲೆನ್‌ ಮಾರ್ಕ್‌ ಲೈಫ್‌ ಸೈನ್ಸಸ್‌  ವಿತರಿಸಿದ ಬೆಲೆ ರೂ.720  : 2020 ರ ಸೆಪ್ಟೆಂಬರ್‌ ಅಂತ್ಯದ ಬೆಲೆ ರೂ.386

    ಹಾಗೆಯೇ ಮೆಡ್‌ ಪ್ಲಸ್‌ ಹೆಲ್ತ್‌ ಸರ್ವಿಸಸ್‌,  ಸ್ಟಾರ್‌ ಹೆಲ್ತ ಅಂಡ್‌ ಅಲೈಡ್‌ ಇನ್ಷೂರನ್ಸ್‌ ಕಂಪನಿ, ಎಸ್‌ ಜೆ ಎಸ್‌ ಎಂಟರ್ಪ್ರೈಸಸ್‌, ವಿಜಯ್‌ ಡಯಾಗ್ನಾಸ್ಟಿಕ್ ಸೆಂಟರ್‌,  ನುವೊಕೋ ವಿಸ್ಟಾಸ್‌ ಕಾರ್ಪೊರೇಷನ್‌, ಎಕ್ಸಾರೋ ಟೈಲ್ಸ್‌,  ಝೊಮೆಟೋ, ಶ್ಯಾಂ ಮೆಟಲಿಕ್ಸ್‌, ಇಂಡಿಯಾ ಪೆಸ್ಟಿಸೈಡ್ಸ್‌, ಇಂಡಿಯನ್‌ ರೈಲ್ವೇ ಫೈನಾನ್ಸ್‌ ಕಾರ್ಪೊರೇಷನ್‌ ಗಳು ಸಹ ಸೆಪ್ಟೆಂಬರ್‌ ಅಂತ್ಯದಲ್ಲಿ ವಿತರಣೆ ಬೆಲೆಗಳಿಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿವೆ.

    ಅಂದರೆ ಎಲ್ಲಾ  ಐ ಪಿ ಒ  ಕಂಪನಿಗಳು ಹಾನಿಗೊಳಪಡಿಸಿವೆ ಎಂದಲ್ಲ, ಕಂಪನಿಗಳಾದ  ಪಾರಸ್‌ ಡಿಫೆನ್ಸ್‌ ಅಂಡ್‌ ಸ್ಪೇಸ್  ಟೆಕ್ನಾಲಜೀಸ್‌ ‌, ದೇವಿಯಾನಿ ಇಂಟರ್‌ ನ್ಯಾಶನಲ್‌,  ತತ್ವ ಚಿಂತನ್‌ ಫಾರ್ಮ ಕೆಂ,  ಕೃಷ್ಣ ಇನ್ಸ್ ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌, ಬಾರ್ಬೆಕ್‌ ನ್ಯಾಶನ್‌ ಹಾಸ್ಪಿಟಾಲಿಟಿ,  ಸ್ಟೋವ್‌ ಕ್ರಾಫ್ಟ್‌,  ಹೋಂ ಫಸ್ಟ್‌ ಫೈನಾನ್ಸ್ ಕಂಪನಿ, ನ್ಯೂರೇಕಾ , ಲಕ್ಷ್ಮಿ ಆರ್ಗಾನಿಕ್‌ ಇಂಡಸ್ಟ್ರೀಸ್‌,  ಅನುಪಮ್‌ ರಸಾಯನ್‌ ಇಂಡಿಯಾ, ಮ್ಯಾಕ್ರೋಟೆಕ್‌ ಡೆವಲಪರ್ಸ್‌ , ರೋಲೆಕ್ಸ್‌ ರಿಂಗ್ಸ್‌,  ಅಮಿ ಆರ್ಗಾನಿಕ್ಸ್‌,  ಸಿಗಾಚಿ ಇಂಡಸ್ಟ್ರೀಸ್‌, ಗೋ ಫ್ಯಾಶನ್ಸ್( ಇಂಡಿಯಾ),  ಮೆಟ್ರೋಡ್ಸ್‌,  ಡಟಾ ಪ್ಯಾಟರ್ನ್ಸ್‌ ( ಇಂಡಿಯಾ), ಹೆಚ್‌ ಪಿ ಅಡ್ಹೆಸಿವ್ಸ್‌ , ಕ್ಲೀನ್‌ ಸೈನ್ಸ್‌ ಅಂಡ್ ಟೆಕ್ನಾಲಜೀಸ್‌,   ನಂತಹ ಕಂಪನಿಗಳು ಲಾಭದಾಯಕವಾಗಿವೆ.ನಝಾರಾ ಟೆಕ್ನಾಲಜೀಸ್‌, ಈಸಿ ಟ್ರಿಪ್‌ ಪ್ಲಾನರ್ಸ್‌ ಕಂಪನಿಗಳು ಆಕರ್ಷಣೀಯ ಬೋನಸ್‌ ಷೇರುಗಳನ್ನೂ ವಿತರಿಸಿವೆ.

    ಆದರೆ ಅತ್ಯಧಿಕ ಪ್ರೀಮಿಯಂನಲ್ಲಿ ವಿತರಿಸಿದ ಕೆಲವು ಕಂಪನಿಗಳು ವಿತರಣೆಗೂ ಮುಂಚಿನ ಮೂರು ವರ್ಷಗಳು ನಿರಂತರವಾಗಿ ಹಾನಿಗೊಳಗಾಗಿರುವಾಗ ವಿತರಿಸಿದ ಬೆಲೆ ಮಾತ್ರ ಬೆರಗಾಗಿಸುವಂತಿದ್ದು, ಜನಸಾಮಾನ್ಯರನ್ನು ತಮ್ಮ ಬ್ರಾಂಡ್‌ ಆಧಾರದ ಮೇಲೆ ಆಕರ್ಷಿಸಿ, ಹಾನಿಗೊಳಪಡಿಸಿವೆ.

    ಆರೋಗ್ಯಕರ ಬೆಳವಣಿಗೆ:


    ಐ ಪಿ ಒ ಗಳ ಪರಿಸ್ಥಿತಿ ಈ ಮಟ್ಟಕ್ಕೆ ಕುಸಿದಿರುವ ಈ ಹಂತದಲ್ಲಿ ಕಂಪನಿಗಳು ತಮ್ಮ ಚಿಂತನೆಯನ್ನು ಷೇರುದಾರರ ಪರವಾಗಿ ತೆಗೆದುಕೊಂಡಿರುವುದೂ ಸಹ ಇದೆ.   ಕರ್ನಾಟಕದ ಕಂಪನಿ ಸಂಡೂರ್‌ ಮ್ಯಾಂಗನೀಸ್‌ ಅಂಡ್‌ ಐರನ್‌ ಓರ್ಸ್‌ ಕಂಪನಿಯು ಆಗಸ್ಟ್‌ ನಲ್ಲಿ ಪ್ರತಿ ಷೇರಿಗೆ ಒಂದರಂತೆ ಹಕ್ಕಿನ ಷೇರನ್ನು ಮುಖಬೆಲೆಯಲ್ಲೇ ವಿತರಿಸಿದೆ.  ಪೇಟೆಯಲ್ಲಿ ಷೇರಿನ ಬೆಲೆ ರೂ.2,000 ದಿಂದ ರೂ.3,000 ದಲ್ಲಿರುವಾಗ ಮುಖಬೆಲೆಯಲ್ಲೇ ವಿತರಣೆ ಮಾಡಿ ಹೂಡಿಕೆದಾರರ ಸ್ನೇಹಿತ್ವದಿಂದ ಮೆರೆದಿದೆ.

    ಅದೇ ರೀತಿ  ಡೈರಿ ವಲಯದ ಕಂಪನಿ ಹೆರಿಟೇಜ್‌ ಫುಡ್ಸ್‌  ಕಂಪನಿ ಪ್ರತಿ ಒಂದು ಷೇರಿಗೆ ಒಂದರಂತೆ ಮುಖಬೆಲೆಯಾದ ರೂ.5 ರಂತೆ ಹಕ್ಕಿನ ಷೇರು ವಿತರಿಸುವುದಾಗಿ ಪ್ರಕಟಿಸಿದೆ. ಇದು ಉತ್ತಮ ಬೆಳವಣಿಗೆ.  

    ಕಾರ್ಪೊರೇಟ್‌ ಪಿತಾಮಹರಾದ ಧೀರೂಭಾಯಿ ಅಂಬಾನಿಯವರು ತಮ್ಮ ಕಂಪನಿಯನ್ನು ಬೆಳೆಸುವುದಕ್ಕೆ ಅನುಸರಿಸಿದ ಹಾದಿ ಎಂದರೆ ಷೇರುದಾರರನ್ನು ಪೋಷಿಸಿಕೊಂಡು, ಅವರನ್ನು ಹರ್ಷಚಿತ್ತರನ್ನಾಗಿಸಿ, ಪ್ರತಿಯೊಂದು ವಿತರಣೆಯಲ್ಲಿ ಉತ್ತಮ ಬೆಂಬಲ ಪಡೆದುಕೊಂಡು ಕಾರ್ಪೊರೇಟ್‌ ಕಲ್ಪನೆಯನ್ನು ಸಾಕಾರಗೊಳಿಸಿದರು.  ಮುಂದಿನ ದಿನಗಳಲ್ಲಿ ಕಂಪನಿಗಳಾದ ಸಂಡೂರ್‌ ಮ್ಯಾಂಗನೀಸ್‌ ಅಂಡ್‌ ಐರನ್‌ ಓರ್ಸ್‌ ಮತ್ತು ಹೆರಿಟೇಜ್‌ ಫುಡ್‌ ಗಳು ತೆಗೆದುಕೊಂಡ ಹೂಡಿಕೆದಾರ ಸ್ನೇಹಿ, ಷೇರುದಾರರ ಪರವಾದ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಹೆಚ್ಚು ಹೆಚ್ಚು ಹೂಡಿಕೆದಾರರು ಪೇಟೆ ಪ್ರವೇಶಿಸುತ್ತಿರುವ ವಾತಾವರಣಕ್ಕೆ ಪುಷ್ಠಿದಾಯಕವಾಗಿಸುತ್ತಾರೆ ಎಂದು ಆಶಿಸೋಣ. 

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!