25.8 C
Karnataka
Wednesday, May 20, 2026
    Home Blog Page 8

    Statue of Prosperity: ಆಕರ್ಷಕ ಪ್ರವಾಸಿ ತಾಣವಾಗುತ್ತಿರುವ ಕೆಂಪೇಗೌಡರ ಪ್ರತಿಮೆ

    BENGALURU NOV 14

    ಉದ್ಘಾಟನೆಯಾದ ಬೆನ್ನಲ್ಲೇ ಆಕರ್ಷಕ ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ವೀಕ್ಷಿಸಲು ಹೆಚ್ಚಿನ ಜನರು ಬರುತ್ತಿದ್ದು ಅವರಿಗೆ ಸೂಕ್ತ‌ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಖುದ್ದು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧಿಕಾರಿಗಳು ಮತ್ತು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿನಯ್ ದೀಪ್ ಇದ್ದರು.

    ಸದ್ಯಕ್ಕೆ 23 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಐಓಸಿ ಪೆಟ್ರೋಲ್ ಬಂಕ್ ಕಡೆಯಿಂದ ಪ್ರವಾಸಿಗರು ಪ್ರತಿಮೆಯನ್ನು ತಲುಪಿ ವೀಕ್ಷಿಸಲು ಅನುಕೂಲ ಮಾಡಿಕೊಡಲು ಸಚಿವರು ಸೂಚಿಸಿದರು.

    ಇದರ ಜೊತೆಗೆ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಗರಿಷ್ಠ 80 ವಾಹನಗಳಿಗೆ ಪಾರ್ಕಿಂಗ್ ಅವಕಾಶ ಕಲ್ಪಿಸಲಾಗುವುದು. ಈ ಅನುಕೂಲವು ಒಂದು ವಾರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಪ್ರತಿಮೆ ವೀಕ್ಷಣೆಗೆ ಬರುವ ಪ್ರವಾಸಿಗರ ವಾಹನಗಳು ಗರಿಷ್ಠ ಅರ್ಧ ಗಂಟೆ ನಿಲ್ಲಿಸಲು ಅವಕಾಶ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

    ಕಳೆದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ 108 ಅಡಿ ಎತ್ತರದ ಈ ಕಂಚಿನ ಪ್ರತಿಮೆ ಉದ್ಘಾಟಿಸಿದ ನಂತರ ಮಧ್ಯರಾತ್ರಿ ಒಂದು ಗಂಟೆಯಾದರೂ ಸಹಸ್ರಾರು ಆಸಕ್ತರು ತಂಡೋಪತಂಡವಾಗಿ ಆಗಮಿಸುತ್ತಲೇ ಇದ್ದಾರೆ. ಬಂದವರಿಗೆ ನಿರಾಸೆ ಆಗಬಾರದು ಎನ್ನುವುದು ಸರಕಾರದ ಬಯಕೆಯಾಗಿದೆ. ಪ್ರತಿಮೆಯು ಮತ್ತಷ್ಟು ಆಕರ್ಷಕವಾಗಿ ಕಂಗೊಳಿಸುವಂತೆ ಮಾಡಲು ರಾತ್ರಿ ವೇಳೆ ಬೆಳಕಿನ ಅಲಂಕಾರಕ್ಕೂ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

    ಥೀಮ್ ಪಾರ್ಕ್ ಕಾಮಗಾರಿ ಮುಗಿದ ಮೇಲೆ ಪ್ರತಿಮೆ ವೀಕ್ಷಣೆಗೆ ಮತ್ತಷ್ಟು ವ್ಯವಸ್ಥಿತ ಸೌಲಭ್ಯ ಮಾಡಲಾಗುವುದು. ಅಲ್ಲಿಯವರೆಗೆ ಇದು ತಾತ್ಕಾಲಿಕ ವ್ಯವಸ್ಥೆ ಆಗಿರುತ್ತದೆ. ಪ್ರತಿಮೆ ವೀಕ್ಷಣೆ ಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಅವರು ನುಡಿದರು.

    ಅಂಕೆಗಳ  ಅಂಕೆಯನ್ನು ಮೀರಿಸೋಣ

    ಸುಮಾ ವೀಣಾ

    ಮಗುವನ್ನು ಬುದ್ಧಿವಂತ ಎಂದು ತೀರ್ಮಾನಿಸುವ ಮಾನದಂಡ  ಅಂಕಗಳು.  ಮಕ್ಕಳನ್ನು ಅಂಕಗಳು ಅನ್ನುವ ಅಂಕುಶವನ್ನು ಒಡ್ಡಿ ಬಂಧಿಸುವ ಕ್ರಮ  ಸರಿಯೇ ಎನ್ನುವುದೊಂದು ಪ್ರಶ್ನೆ. ಅದಕ್ಕೆ ಗ್ರೇಡ್ ಹಾಕುವ ಪದ್ಧತಿ ಅಲ್ಲಿಯೂ  A+,A++ A1,A2  ಇತ್ಯಾದಿಗಳು ಬಂದಿವೆ.ಪ್ರಾಚೀನ ಗುರುಕುಲ ಪದ್ಧತಿ  ಮೂಲಕ ಗುರುತಿಸಿಕೊಂಡ ನಮ್ಮ ದೇಶದಲ್ಲಿ  ಈ ಮಟ್ಟಿಗಿನ ಅಂಕೆಗಳ ಸವಾಲು ಬೇಕೇ?ಒಂದು ಕಾಲದಲ್ಲಿ ಅಂಕಗಳು ಎಷ್ಟು ಬಂದಿವೆ ಎನ್ನುತ್ತಿದ್ದ ಕಾಲ ಈಗ ಅಂಕಗಳು ಎಲ್ಲಿ  ಕಳೆದು ಹೋಗಿವೆ ಅನ್ನುವ  ಭಾವವಿದೆ.

    ತಕ್ಷಶಿಕ, ನಲಂದ ವಿಶ್ವ ವಿದ್ಯಾಲಯಗಳು  ಇದ್ದ ದೇಶ ನಮ್ಮದು. ನಮ್ಮ  ಗುರುಕುಲಗಳು  ಅಂಕಗಳ ಅಂಕೆಯನ್ನು ಎಂದಿಗೂ ಹಾಕೊಕೊಂಡಿದ್ದಿಲ್ಲ. ವಿದ್ಯಾರ್ಥಿ ಕಲಿಯುವವರೆಗೆ ಕಲಿಸುತ್ತಿದ್ದುರು  ವಿದ್ಯಾರ್ಥಿಗಳ ಆಸಕ್ತಿಗೆ ಪೂರಕವಾಗಿ ಸ್ಪಂದಿಸುತ್ತಿದ್ದರು.  ಮಕ್ಕಳಿಗೆ ಬೌದ್ಧಿಕ ಒತ್ತಡವನ್ನು ಪಾಲಕರು ಗುರುಗಳಾದಿಯಾಗಿ ಹೇರುವ ಮನೋಭಾವ ಅತ್ಯಂತ ಅಪಾಯಕಾರಿ ಅನ್ನಿಸುತ್ತದೆ .ಅಂಕಗಳು ಮುಖ್ಯ ನೀವು ಕಲಿಸುವ ವಿಷಯದಲ್ಲಿ ಎಷ್ಟು ಮಕ್ಕಳಿಗೆ ಪೂರ್ಣಾಂಕಗಳು ಬಂದಿವೆ ಎಂದು ಕೇಳಿದಾಗ  ಶಿಕ್ಷಕರು ಅದೇ ಕಡೆಗೆ ವಾಲುತ್ತಾರೆ. ಅಂಕಗಳನ್ನು ಉತ್ತರ ಬರೆಯುವ ಕ್ರಮಕ್ಕನುಗುಣವಗಿ ವಿಭಾಗಿಸಿಕೊಂಡಂತೆ  ಮಕ್ಕಳ ಮನಸ್ಸನ್ನು    ಭಾಗಗಳನ್ನಾಗಿ ಮಾಡಲು ಸಾಧ್ಯವಿಲ್ಲ.

    ಭಾಷಾವಿಷಯಗಳಿಗೂ ಪೂರ್ಣಾಂಕ ಕೊಡುವ  ಈ ಕಾಲ  ಇದು ಎಷ್ಟು ಸಮಂಜಸ  ಅನ್ನಿಸುತ್ತದೆ.ಪಠ್ಯ ಕ್ರಮವೇ ಬಂದಿರುವುದಿಲ್ಲ  ಪ್ರಶ್ನೆ ಪತ್ರಿಕೆಯ ಬ್ಲೂಪ್ರಿಂಟ್ ಕೊಡಿ ಎನ್ನುವ ಮಕ್ಕಳು ಇದ್ದಾರೆ.  ಕಲಿಕೆ ಎನ್ನುವುದು ಸಹಜವಾಗಿರಬೇಕು ಅಂಕಗಳ ಶಂಕೆಯಲ್ಲಿಯೇ ಕಳೆದು ಹೋಗುವ ವಿದ್ಯಾರ್ಥಿ ಪೀಳಿಗೆ ಇಂದಿನ ದಿನಮಾನದ್ದು.

    ಹರಿಯುವ ನೀರಿಗೆ   ದಾರಿ ಹೇಳಿಕೊಡಬೇಕಿಲ್ಲ ಹಾಗೆ ಹರಿಯುವುದಕ್ಕೆ ಅವಕಾಶ ಕೊಡಬೇಕು ಅಷ್ಟೇ… , ಹಾಗೆ ಮಕ್ಕಳನ್ನು ಕಲಿಕೆಗೆ ಆಸಕ್ತಿಗೆ ಪ್ರೋತ್ಸಾಹ ನೀಡಬೇಕು.  ಕಲಿಕೆಗೆ ಪ್ರಾಯೋಗಿಕ ಹಿನ್ನೆಲೆ ಬೇಕು  ಅನುಭವ ಜನ್ಯ ಪಾಠ ಬೇಕು. ಪೋಷಕರು   ಬರಿಸಿದ ಶಾಲಾ ಶುಲ್ಕವನ್ನೆ ಬಂಡವಾಳ ಎಂದು ತಿಳಿದು  ಅದಕ್ಕೆ ಅಂಕಗಳು ಉತ್ಪತ್ತಿ ಎಂದಾಗಬಾರದು.   ಹೀಗೆ ಅಂಕಗಳ ಮೀತಿ ಹೇರುವುದರಿಂದ  ಮಕ್ಕಳು ಬೌದ್ಧಿಕ ದಾಸ್ಯಕ್ಕೆ ಒಳಗಾಗುತ್ತಾರೆ. ಸ್ವತಂತ್ರವಾಗಿ ಆಲೋಚಿಸಲು ಬಿಡಲಾಗದ ಅಂಕಗಳಲ್ಲೂ ಗ್ರೇಸ್ ಕೃಪಾಂಕ , ಧನಾತ್ಮಕ  ಋಣಾತ್ಮಕ ಅಂಕಗಳು  ಎನ್ನುವ ಪರಿಪ್ರೇಕ್ಷಗಳು  ಮಕ್ಕಳ ಮನೋಸಂಚನೆಗೆ  ಕಾರಣವಾಗಿವೆ. ಅಂಕಗಳ ಗಳಿಕೆ ಅತೀ ಆತ್ಮವಿಶ್ವಾಸಿಗಳನ್ನಾಗಿಸಬಹುದು ಇದು ಮಕ್ಕಳ ಬೆಳವಣಿಗೆಗೆ ಮಾರಕ.

     ಅಂಕ ಅನ್ನುವುದು ಅಖಾಡ ಅನ್ನುವ  ಹಾಗಾಗಿದೆ. .ನೂರು ಅಂಕಗಳಿಗೆ ಪರೀಕ್ಷೆ  ಬರೆಯುವುದಾದರೂ ಪ್ರಶ್ನೆ ಪತ್ರಿಕೆ 155 ಅಂಕಗಳಿಗೆ ರಚನೆಯಾಗಿರುತ್ತದೆ. ಅಂಕಗಳ ಅಣಕವಾಡು ಇದು ಅಂಕಗಳು  ಶಂಕೆ ಮಕ್ಕಳ ಮನೋಬಲವನ್ನು ಕಸಿತುತ್ತದೆ.  ಅಂಕಗಳಷ್ಟೆ ಜೀವನವಲ್ಲ.ಮಕ್ಕಳ ಅರಿವಿನ ಪ್ರಪಂಚವನ್ನು ಹಿಗ್ಗಿಸಬೇಕು. ಕಂಠ  ಪಾಠ ಬೇಡ , ಕಂಠ ಪತ್ರದ ಉಲುಹು ಕೆಟ್ಟರೆ ಹೋಯಿತು ಬರೆದು ಅಭ್ಯಾಸ ಮಾಡಿಸಿ ,  ಮಗುವಿಗೆ ಅರ್ಥವಾಗುವ ಭಾಷೆಯಲ್ಲಿ ಶಿಕ್ಷಣ ನೀಡಿ ಮಕ್ಕಳನ್ನು ಅಂಕಗಳು  ಅನ್ನುವ ಪಾಶದಲ್ಲಿ ಸಿಕ್ಕಿಸುವುದು ಬೇಡ.

     ಶಿಕ್ಕರು ಮೌಲ್ಯಮಾಪನದ ಜೊತೆಗೆ ಸಹ ಮೌಲ್ಯಮಾಪನವನ್ನು ಮಕ್ಕಳಿಗೆ ಬಿಡಬೇಕು  ಆಗ ಮಕ್ಕಳಿಗೆ ತಾವು ಎಡವಿದ ಸ್ಥಳಗಳ ಕುರಿತು ಮಾಹಿತಿ ಇರುತ್ತದೆ.    ದೇಶದ ಬದಲಾವಣೆಗೆ ಅಲ್ಲಿನ ಶಿಕ್ಷಣ ಪದ್ಧತಿ ಕೂಡ ಕಾರಣವಾಗುತ್ತದೆ.  ನಮ್ಮಲ್ಲಿ ಶಾಲೆಗೆ ಹೋಗುವ ವಯಸ್ಸು  ಅತ್ಯಂತ ಬೇಗ ಅನ್ನಿಸುತ್ತಿದೆ . ಕೊಠಡಿಯೊಳಗಿನ ಶಿಕ್ಷಣಕ್ಕೆ ಪ್ರೋತ್ಸಾಹ  ಇದೆ  ಆದರೆ ಬಯಲ ಶಿಕ್ಷಣ ಸಾಮಾಜಿಕ ಶಿಕ್ಷಣಕ್ಕೆ ಆದ್ಯತೆ ಇಲ್ಲ.  ಗ್ರಾಮೀಣ ಭಾಗದಲ್ಲಿ ಅಂಗನವಾಡಿಗೆ ಹೋಗುವ ಮಕ್ಕಳು ಇದ್ದರೆ ನಗರ ಪ್ರದೇಶದಲ್ಲಿ   ಆ್ಯಪ್ ಆಧಾರಿತ ಶಿಕ್ಷಣ ಇದೆ ವಿದ್ಯಾಭ್ಯಾಸದಲ್ಲಿ ಸಮಾನತೆ ಇರಬೇಕು   12 ನೆ ವಯಸ್ಸಿನ ವರೆಗೂ  ಮಾರ್ಕ್ಸ್  ಕಾರ್ಡ್ ಕೊಡುವ ಪದ್ಧತಿ ತೆಗೆಯಬೇಕು. ಹೋಂ ವರ್ಕ್  ಮಕ್ಕಳಿಗೆ ಬೇಕು ಅನ್ನಿಸಿದರೆ ಮಕ್ಕಳಿಗೆ ಇಷ್ಟವಾಗುವ ವಿಷಯದಲ್ಲಿ  ಬರೆಯಲು  ಆದ್ಯತೆ ನೀಡಬೇಕು.ಆದಷ್ಟು ಮಕ್ಕಳನ್ನು ಅಂಕೆಯಲ್ಲಿ ಬಂಧಿಸುವುದಕ್ಕಿಂತ ಸಂತೋಷವಾಗಿಸಿದರೆ ಮಕ್ಕಳ ಬೌದ್ಧಿಕ ವಿಕಾಸವಾಗುತ್ತದೆ.

    ಕುವೆಂಪುರವರು ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕೆ ವಿನಃ ಬತ್ತ ತುಂಬುವ ಚೀಲಗಳಾಗಬಾರದು   ಎಂದಿದ್ದಾರೆ ಆದರೆ ಇಂದಿನ ಮಕ್ಕಳು ಬತ್ತಿ ಬಾಯಾರಿದ  ಹೂಕುಂಡಗಳಂತೆ  ಅಷ್ಟಕ್ಕೇ  ಸೀಮಿತವಾಗಿ ಕುದುರೆಗೆ ಜೀನು ಕಟ್ಟಿದಂತೆ ಆಗಿದ್ದಾರೆ.  ಅಂಕೆಗಳ ಅಂಕೆಯನ್ನು ಮೀರಿ  ಬಹುತ್ವದ ಕಡೆಗೆ  ಅವರ  ಆಲೋಚನಾಲಹರಿ  ಪ್ರವಹಿಸಬೇಕು.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ತನ್ನ ನೋಡಲಿ ಎಂದು ಕನ್ನಡಿ ಕರೆಯುವುದೆ

    ಸುಮಾ ವೀಣಾ

    ತನ್ನ ನೋಡಲಿ ಎಂದು ಕನ್ನಡಿ ಕರೆಯುವುದೆ–  ಇದು ಸರ್ವಜ್ಞನ ವಚನದ ಸಾಲು. ಲೋಕ ನೀತಿಯನ್ನು ಹೇಳುವ ಸಂದರ್ಭದಲ್ಲಿ ಕವಿ ಈ ಮಾತುಗಳನ್ನು ಉದ್ಗರಿಸಿದ್ದಾನೆ. 

    ಸರ್ವಜ್ಞ   ಅರ್ಥವತ್ತಾದ ಹೋಲಿಕೆಗಳನ್ನು ನೀಡುವ ಸಾರ್ವಕಾಲಿಕ   ತ್ರಿಪದಿಗಳಿಂದಲೇ ಹೆಸರಾಗಿರುವವನು.  ಜ್ಞಾನಿ ಎಂದರೆ ಈತನ ಪ್ರಕಾರ ಮಹಾತ್ಮನೇ ಸರಿ ಹಾಗಾಗಿ ಈತ ಲೋಕದ ಪಾಲಿಗೆ ಕನ್ನಡಿಯಂತೆ ಇರುವವನು. 

    ಕನ್ನಡಿಯನ್ನು ನೋಡಿಕೊಂಡು  ನಾವು ಅಲಂಕಾರ ಮಾಡಿಕೊಂಡು ಸುಂದರವಾಗಿ ಕಾಣಿಸುತ್ತೇವೆ. ಕನ್ನಡಿಯನ್ನು ನೋಡಿಕೊಂಡಾಗಲೆ ನಮ್ಮ ಓರೆಕೋರೆಗಳು ತಿಳಿಯುತ್ತವೆ.  ವಿಶಿಷ್ಟ ಮಾರ್ಗದಾಳು ಈ  ಕನ್ನಡಿ. ಹಾಗೆಯೇ ನಮ್ಮ ಮನಸ್ಸಿನ ವ್ಯಕ್ತಿತ್ವದ ಓರೆಕೋರೆಗಳು  ತಿಳಿಯಬೇಕೆಂದರೆ ‘ಜ್ಞಾನಿ’ ಎಂಬ ‘ಕನ್ನಡಿ’ಯ ಬಳಿಗೆ ಹೋಗಬೇಕು ಅವನ ಮಾರ್ಗದರ್ಶನದಲ್ಲಿ  ನಮ್ಮನ್ನು ತಿದ್ದಿಕೊಳ್ಳಬೇಕು ಸದ್ವಿಚಾರಗಳನ್ನು ಅಳವಡಿಸಿಕೊಳ್ಳಬೇಕು.

    ‘ಕನ್ನಡಿ’ ಯಾರ ಬಳಿಗೂ ಹೋಗಿ ‘‘ನಿಮ್ಮಲ್ಲಿ ಲೋಪವಿದೆ ಸರಿಮಾಡಿಕೊಳ್ಳಿ! ಅಲಂಕಾರ ಮಾಡಿಕೊಳ್ಳಿ’’ ಎಂದು  ಬೆನ್ನು ಹತ್ತುವುದಿಲ್ಲ. ಹಾಗೆ ಗುರುವಾದವನು  ಶಿಷ್ಯರನ್ನು ಹುಡುಕಿಕೊಂಡು ಹೋಗುವುದಿಲ್ಲ.  ಶಿಷ್ಯರೆ ಗುರುವಿನ ಬಳಿಗೆ ಹೋಗಬೇಕು.  ನಮ್ಮ ದೈಹಿಕ ಕಲ್ಮಷಗಳನ್ನು ತೊಳೆದುಕೊಳ್ಳಲು  ಸ್ನಾನಕ್ಕೆ ನೀರನ್ನರಸಿ ಹೋಗುವಂತೆ  ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ  ಆವರಿಸಿಕೊಂಡಿರುವ ಸಂಚನೆಗಳನ್ನು ಕಳೆಯಲು   ಸನ್ಮಾರ್ಗದಲ್ಲಿ ನಡೆಯಲು ಜ್ಞಾನಿಗಳ ಹಿರಿಯರ , ಅನುಭವಿಗಳ  ಮಾರ್ಗದರ್ಶನ ಬೇಕು.

    ‘ಜ್ಞಾನಿಯಾದವನು ಅರಿವಿನ ಸಾಗರ’ವಿದ್ದಂತೆ.   ‘ತಿಳಿವಳಿಕೆ ಎಂಬ ಜ್ಞಾನ ಸರೋವರ’ದ  ತಂಪನ್ನು ಕಂಪನ್ನು ಅನುಭವಿಸಬೇಕಾದರೆ ಸರೋವರದ ಬಳಿಗೆ ನಾವು ತೆರಳಲೆಬೇಕು. ಅಲ್ಲಿ  ನಾವುಗಳು ಹಮ್ಮು ಬಿಮ್ಮುಗಳನ್ನು ಪ್ರತಿಷ್ಠೆಗಳನ್ನು ತೊರೆದು ಸ್ವಚ್ಛಂದ ಮನಸ್ಸಿನಲ್ಲಿ ವಿಹರಿಸಬೇಕು.  ಲೋಪಗಳನ್ನು ಅಲ್ಲಿಯೇ ಮೌನವಾಗಿ ವಿಸರ್ಜಿಸಿಬಿಡಬೇಕು ಹಾಗಾದಾಗ  ಯಾವುದೇ ಶೇಷಗಳು ಉಳಿಯದೆ  ನಮ್ಮ ವ್ಯಕ್ತಿತ್ವಕ್ಕೆ ವಿಶೇಷ  ಹೊಳಹು ಲಭ್ಯವಾಗುತ್ತದೆ. 

     ‘ತುಂಬಿದ ಕೊಡ ತುಳುಕುವುದಿಲ್ಲ’  ಎಂಬಂತೆ ಜ್ಞಾನಿಯಾದವನು ತನ್ನ  ತಿಳಿವಿನ ಪ್ರದರ್ಶನ ಮಾಡುವುದಿಲ್ಲ . ನಿಧಿಯನ್ನು ಹುಡುಕಿ ಹೊರಡುವ  ದ್ರವ್ಯ ನಿರೀಕ್ಷರಂತೆ   ಜ್ಞಾನಾಪೇಕ್ಷಿಗಳು  ಜ್ಞಾನವೆಂಬ ಸ್ವಯಂಪ್ರಕಾಶವನ್ನು ಹುಡುಕಿ ಹೊರಟು ಅದರ ಪ್ರಭೆಯಿಂದ  ಅಜ್ಞಾನವನ್ನು ನೀಗಿಕೊಳ್ಳಬೇಕಿದೆ.  ಕನ್ನಡಿ  ದೈಹಿಕ ಸೌಂದರ್ಯವನ್ನು  ಹೆಚ್ಚಿಸಿಕೊಳ್ಳಲು  ಸಹಾಯ ಮಾಡುವಂತೆ   ಜ್ಞಾನಿಯ  ಸಂಗಾತ ನಮ್ಮ   ತಿಳಿವಳಿಕೆಯನ್ನು ಸುಸೂಕ್ಷ್ಮಗೊಳಿಸುತ್ತದೆ ಪರಿಪೂರ್ಣತೆಗೆ ಹಣತೆಯಾಗುತ್ತದೆ.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    ಜಯ ಕರ್ನಾಟಕ, ಜಯ ಕರ್ನಾಟಕ, ಜಯ ಕರ್ನಾಟಕ ಮಾತೆ
    ಹೂಡಿಕೆದಾರರೆಲ್ಲಾ ಕೂಡಿ, ಅಧ್ಯಯನ ಮಾಡಿ, ಪಡೆವೆವು ವಿತ್ತೀಯ  ಸಾಕ್ಷರತೆ.


    ನಾಡಿನೆಲ್ಲೆಡೆ ರಾಜ್ಯೋತ್ಸವ ಮಾಸದ ಸಂಭ್ರಮ. ಈ ಮಾಸದ ಮೆರಗನ್ನು ಹೆಚ್ಚಿಸಲು ಪ್ರತಿವಾರದ ಷೇರು ವಿಶ್ಲೇಷಣೆಯನ್ನು ಹೆಸರಾಂತ ಷೇರು ತಜ್ಞ ಕೆ ಜಿ ಕೃಪಾಲ್ ಇಲ್ಲಿ ಕಾವ್ಯ ರೂಪದಲ್ಲಿ ಪ್ರಸ್ತುತ ಪಡಿಸಿದ್ದಾರೆ.



    ಇಂದಿನ ವ್ಯವಹಾರಗಳ ಶೈಲಿ

    ಅಯೋಮಯವಾಗಿದೆ ಇಂದಿನ ವಹಿವಾಟಿನ ರೀತಿ
    ಪರಿಶೀಲಿಸದಿದ್ದರೆ ಆಗುವುದು ಫಜೀತಿ.
    ಸರ್ಕಾರಿ – ಖಾಸಗಿಗಳು ವ್ಯವಹಾರದಲ್ಲಿ ಎಲ್ಲಾ ಒಂದೇ 
    ಗುರಿಮಾತ್ರ ಲಾಭಗಳಿಕೆಯೊಂದೇ 

    ವ್ಯವಹಾರದ ಯಶಸ್ಸಿಗೆ ಇರಲೇಬೇಕು ಡಿಸ್ಕೌಂಟ್ 
    ಪ್ರಮಾಣ ಹೆಚ್ಚಿದಂತೆ ವೃದ್ಧಿಸುವುದು ವ್ಯವಹಾರ,  ಹೆಚ್ಚು ಪರ್ಸೆಂಟ್
    ಸರಿಯಾಗಿಡದಿದ್ದರೆ ಅಕೌಂಟ್
    ಅಗೋಚರವಾಗಿ ಕರಗುವುದು ಗಂಟು

    ಈಗಿನ ವ್ಯವಹಾರಿಕತೆಯ ಚಲನೆ ಹೇಗಿದೆ ಎಂದರೆ:

    ಚಕ್ರಾಕಾರದಲಿ ಚಲಿಸುತಿದೆ ಚಲಾರ್ಥ,
    ಸರ್ಕಾರಗಳು ಹಂಚುವುವು ಸವಲತ್ತು,
    ಅರಿಯದೆ ದುಡಿಮೆಯ ಕಿಮ್ಮತ್ತು,
    ವ್ಯಯಿಸುವರು ಗುಂಡೇರಿಸಿ ಪಡೆಯಲು ‘ಮತ್ತು’,
    ಗುಂಡು ಖರೀದಿಯಲ್ಲಿ ಕೈಲಿದ್ದ ಹಣ ಸರ್ಕಾರವ ಸೇರಿತು,
    ಎಂಬಲ್ಲಿಗೆ ಕರೆನ್ಸಿಯ ಚಕ್ರಾ ಚಾಲನೆ ಮುಗಿದಿತ್ತು.  
    ( ಚಲಾರ್ಥ =ಕರೆನ್ಸಿ)


    ಆಫರ್ ಡಿಸ್ಕೌಂಟ್  ಬೈ ಬ್ಯಾಕ್ ಕೊಡುಗೆಗಳಿಲ್ಲದ  ವ್ಯವಹಾರವಿಲ್ಲ
    ಗುಣಮಟ್ಟ ಲೆಕ್ಕಿಸದೆ ಕೊಡುಗೆಗಳಿಗೆ  ಹೆಚ್ಚಿನ ಮನ್ನಣೆ ಇದೆಯಲ್ಲಾ
    ಅಸೆ ಆಮಿಷಗಳೊಡ್ಡುವ   ಶೈಲಿಗೆ ಮಿತಿಯಿಲ್ಲ
    ಗ್ರಾಹಕರ ಸೆಳೆಯುವತ್ತಲೇ ಗಮನವೆಲ್ಲಾ


    ಷೇರುಪೇಟೆಯ ಚಟುವಟಿಕೆ ಬದಲಾದ ಪರಿಸ್ಥಿತಿ:

    ಹೋದೆಯ ದೂರ ಓ ಹೂಡಿಕೆದಾರ
    ನೀನೇ ಎನ್ನಯ ಸರದಾರ,
    ತಲ್ಲಣಿಸದೆ, ತಳಮಳಿಸದೆ  ತಗೋ ನಿರ್ಧಾರ
    ತೂಕಡಿಸಿ ತೂರಾಡಿ ತೃಪ್ತಿಪಡುವ ಈಗಿನ ಸಂತೆಗೆ ನೀನೇ  ಆಧಾರ


    ಎನ್ನುವ ದಿನಗಳಿದ್ದವು ಹಿಂದೆ
    ಈಗ ಹೂಡಿಕೆಯಗಿಹುದು ಒಂದು ದಂದೆ
    ಆಗಿರು ತುಂಬಾ ಅಲರ್ಟ್
    ಸಮಯ ಬಂದಾಗ ಕೆಲವು ಷೇರುಗಳಿಂದ ಗೆಟ್ ಔಟ್


    ವಿದೇಶಿ ವಿತ್ತೀಯ ಸಂಸ್ಥೆಗಳ ಕಾರ್ಯ ವಿಧಾನ:

    ವಿದೇಶಿ ಹೂಡಿಕೆದಾರ
    ನೀನೇಕೆ ಇಷ್ಟು ಕ್ರೂರ

    ನೀ ಬಂದೆ ಆಪದ್ಭಾನ್ಧವನಂತೆ
    ನಿನ್ನಯ ವೇಗಕೆ ತತ್ತರಿಸುತ್ತಿದೆ ಈ ಸಂತೆ
    ನೀ ಕೊಂಡ ಷೇರಿಗೆ ಗೋಲ್ಡನ್ ಟಚ್
    ನೀ ಮಾರ ಹತ್ತಿದರೆ ಹಚ್ಚಿದಂತೆ ಟಾರ್ಚ್

    ದಿನೇ ದಿನೇ ಹೆಚ್ಚುತ್ತಿದೆ ನಿನ್ನಯ ಪ್ರಭಾವ
    ನೀನಿಲ್ಲದಿದ್ದರೆ ವಹಿವಾಟಿನ ಅಭಾವ
    ನಿನ್ನಯ ಚಟುವಟಿಕೆಯಿಂದ   ಈ ಸಂತೆ ಅಸ್ಥಿರ
    ಹೂಡಿಕೆದಾರರಿಗಾಗುತ್ತಿರುವ ನಷ್ಟ ಅಪಾರ

    ಮಿತಗೊಳಿಸು ನಿನ್ನಯ ವೇಗ
    ನಡೆಸು ಮೌಲ್ಯಾಧಾರಿತ ವ್ಯವಹಾರದ ಪ್ರಯೋಗ
    ಜನಮಾಡಲಿ ನೀನಾಗಿರುವ ಭಕ್ಷಕ
    ಬದಲಾಯಿಸಿ ನಿನ್ನಯ ಕಾರ್ಯ ವೈಖರಿ ಆಗು ರಕ್ಷಕ

    ನಿಡುವೆವೆ ಹೈ ರೇಟಿಂಗ್ ನಿನ್ನಯ ಚಟುವಟಿಕೆ ಗಮನಿಸಿ
    ಅಳವಡಿಸಿಕೊಂಡರೆ ಲಿವ್ ಅಂಡ್ ಲೆಟ್ ಲಿವ್ ಪಾಲಿಸಿ.

    ಸಧ್ಯದ ಪರಿಸ್ಥಿತಿ ಹೇಗಿದೆ ಎಂದರೆ:

    ಹೆಚ್ಚುತ್ತಿದೆ ಸಾಕ್ಷರತಾ ಸಮೂಹ  
    ಆದರೂ ಕ್ಷೀಣಿಸುತ್ತಿಲ್ಲ  ಡಿಸ್ಕೌಂಟ್ ವ್ಯಾಮೋಹ 
    ಇತ್ತು ಆರ್ಥಿಕ ಸಾಕ್ಷರತಾ ಮಟ್ಟ ಶೇ.35 % ದಶಕದ ಹಿಂದೆ
    ಇಂದು ಶೇ.28% ರಲ್ಲಿ ಉಳಿದಿಹೆವು ಹಿಂದೆ 

    ಬಿ ಎಸ್ ಇ – ಎನ್ ಎಸ್ ಇ ಗಳೆರಡೂ ಪ್ರಮುಖ 
    ಬಿ ಎಸ್ ಇ ಶತಮಾನದ ಮೇಲೆ  ಕಂಡಿದೆ ನಾಲ್ಕುವರೆ ದಶಕ
    ಎನ್ ಎಸ್ ಇ ಗೆ ಈಗ ಮೂರು ದಶಕ
    ಆದರೂ ಸಾಂಸ್ಥಿಕ ಚಟುವಟಿಕೆಯಿಂದ ವಹಿವಾಟು ಗಾತ್ರ  ತಕತಕ 

    ಮೂಡಿಬರುತ್ತಿವೆ ವಿಶ್ಲೇಷಣೆಗಳು ಅಪಾರ
    ಸದಾ ಮನದಲ್ಲಿರಲಿ ಇದೊಂದು ವ್ಯಾಪಾರ
    ಬಂಡವಾಳ ಸುರಕ್ಷತೆಗೆ ಆಧ್ಯತೆ
    ಒದಗಿಸುವುದು ಲಾಭಗಳಿಕೆಯ ಸಾಧ್ಯತೆ.

    ವಾರದ ವರದಿ

    ವಿಶ್ಲೇಷಣೆಗೆ ತುತ್ತಾಗಿ  ಗಾಡ್ರೇಜ್‌ ಪ್ರಾಪರ್ಟೀಸ್ 9 ರಂದು ಕರಗಿ
    ಜಾರಿತು ನೂರಿಪ್ಪತ್ತು ರೂಪಾಯಿಗಳಷ್ಟು ಸುಸ್ತಾಗಿ
    10, 11 ರಂದು ಸಮಜಾಯಿಶಿಯ ನೆಪದಲ್ಲಿ ಪುಟಿದೆದ್ದಿತು ಪಠಿಸುತ್ತಾ ಮಗ್ಗಿ
    ಆದರೂ ಕಲ್ಪಿಸಿತು ಬೇರ್‌ ಮತ್ತು ಬುಲ್‌ ಗಳಿಗೆ ಸುಗ್ಗಿ

    ದೊಪ್ಪನೆ ಕುಸಿಯಿತು ನೈಕಾ ಅನ್‌ ಲಾಕ್‌ ಷೇರುಗಳ ನೆಪದಿಂದ
    ಕಂಪನಿ ಪ್ರಕಟಿಸಿತು ಒಂದಕ್ಕೆ ಐದು ಬೋನಸ್‌ ಷೇರುದಾರರ ಹಿತದಿಂದ
    ಆರಂಭವಾಯಿತು ಎಕ್ಸ್‌ ಬೋನಸ್‌ ಭಾರಿ  ಕುಸಿತದಿಂದ
    ಗಜಗಾತ್ರದ ವಹಿವಾಟು ಪ್ರೇರೇಪಿಸಿತು ಖರೀದಿಸಲು ಸಂತಸದಿಂದ

    ಎಲ್‌ ಐ ಸಿ ಷೇರಿನ ಬೆಲೆ ಸತತ ಜಾರುತಲಿತ್ತು ಆಳದ ಅರಿವಿಲ್ಲದೆ,
    ಸಣ್ಣ ಹೂಡಿಕೆದಾರರು ಹೆದರಿ ಮಾರಾಟ ಮಾಡುತಲಿದ್ದರು ದಾರಿ ಅರಿಯದೆ,
    ಘೋಷಿಸಿದೆ ಎಲ್‌ ಐ ಸಿ ಉತ್ಕೃಷ್ಠ ಸಾಧನೆಯ ಅಂಕಿ ಅಂಶ
    ಪ್ರೇರೇಪಿಸಬಹುದು ಹೆಚ್ಚಿನವರಲಿ ಧೀರ್ಘಕಾಲೀನ ಚಿಂತನೆ, ಈ ಫಲಿತಾಂಶ

    ಆಯಿಲ್‌,  ಕೋಲ್‌, ಹೆಚ್‌ ಎ ಎಲ್‌ , ಇಂಗರ್‌ ಸಾಲ್‌ ಘೋಷಿಸಿದವು ಉತ್ತಮ ಲಾಭಾಂಶ
    ಅಸ್ಟ್ರಾಲ್‌,   ಎಂ ಆರ್‌ ಎಫ್‌ ಪ್ರಕಟಿಸಿದವು ಕಳೆಪೆ ಲಾಭಾಂಶ
    ಬಂದರೂ ಬಲರಾಂಪುರ್‌, ಕೇರ್‌ ರೇಟಿಂಗ್ಸ್‌ ಗಳ ಬೈಬ್ಯಾಕ್
    ನೀರಸಮಯದಲ್ಲಿದ್ದವು ಈ ಸ್ಟಾಕ್


    ನಿಯಂತ್ರಣ ವ್ಯವಸ್ಥೆ:

    ಷೇರುಪೇಟೆ ವಹಿವಾಟು ನಿಯಮ ಬಲು ಬಿಗಿ
    ಆದರೂ ನೈತಿಕಮಟ್ಟ ಕುಗ್ಗಿ
    ಹಿತಾಸಕ್ತರಿಗೆ ಉಂಟಾಗಿ ಸುಗ್ಗಿ
    ನಡೆಯಾದಾಗಬಹುದು ಯಾವುದೇ ಮಗ್ಗಿ

    ಸಧ್ಯದ ಪರಿಸ್ಥಿತಿಗೆ ಪರಿಹಾರವೇನು?
    ಷೇರುಪೇಟೆಯೊಂದೇ ಇಂದಿನ ಉತ್ತಮ ಹೂಡಿಕೆ
    ಅರಿಯದೆ ನಡೆಸಿದರೆ ಚಟುವಟಿಕೆ  ಬಂಡವಾಳ ಹೊಡೆವುದು ಗೊರಕೆ
    ಹೆಚ್ಚಿಸಿ ಕೊಳ್ಳಲು ಸಂಪನ್ಮೂಲ 
    ವ್ಯಾಲ್ಯೂ ಪಿಕ್ ಪ್ರಾಫಿಟ್ ಬುಕ್ ಚಟುವಟಿಕೆಯೇ   ಮೂಲ 


    ಬೇಕೆನಿಸದಾಕ್ಷಣ ಮಾರಾಟ ಮಾಡಿ ಹೊರಬರಬಹುದಾದ ಏಕೈಕ ಸ್ವತ್ತು,
    ಹೆಚ್ಚಿನ ಬಾರಿ ಅನಿರೀಕ್ಷಿತ ಲಾಭವ ತರುವ ಸವಲತ್ತು 
    ಹಿಡಿಯಬೇಕು ಸಿಕ್ಕಾಗ ‘ ಲಾಭ ಮತ್ತು ಕಳ್ಳ’  
    ಬಿಟ್ಟರೆ ಸೇರುವುದು ಹಳ್ಳಸದಾ ಹಸಿರಾದ ಸುರಕ್ಷಿತ ಚಿಂತನೆ:

    ಅಧ್ಯಯನದಿಂದ ಅರಿವು,
    ಅನುಭವದಿಂದ ತಿಳಿವು
    ಚಿಂತನೆಯಿಂದ ಸುಳಿವು
    ಅರಿವು, ತಿಳಿವು ಸುಳಿವುಗಳಿಂದ ಉಳಿವು.

    ದುಷ್ಟರನ್ನು ಕಂಡರೆ ದೂರ ಇರುವುದು ಲೇಸು

    ಸುಮಾ ವೀಣಾ

    ಕರುಬರಿದ್ದೂರಿಂದೆ   ಕಾಡೊಳ್ಳಿತು- ಉಪಮಾಲೋಲ ಲಕ್ಷ್ಮೀಶನ  ‘ಜೈಮಿನಿ ಭಾರತದ’  ‘ಚಂದ್ರಹಾಸನ ಬಾಲ್ಯ’ದಲ್ಲಿ ಬರುವ    ನೀತಿಯುಕ್ತ ಮಾತಿದು.

    ರಾಜನಾಗಬಹುದು ಎನ್ನುವ ಉದ್ದೇಶದಿಂದ  ಚಂದ್ರಹಾಸನ ಮೇಲೆ ಇನ್ನಿಲ್ಲದ ಹಾಗೆ ಸಾಧಿಸಿದವನು ದುಷ್ಟಬುದ್ಧಿ ಎಂಬ ಮಂತ್ರಿ.  ಆ ಬಾಲಕನನ್ನು ಕೊಂದು ಗುರುತು ತೋರಿಸುವಂತೆ   ತನ್ನ ಭಟರಿಗೆ ಆಜ್ಞಾಪಿಸಿರುತ್ತಾನೆ.  ಚಂದ್ರಹಾಸನ ಮುಗ್ಧ ರೂಪವನ್ನು ಕಂಡು ಕೊಲ್ಲಲು ಮನಸ್ಸು ಬಾರದೆ   ಬಾಲಕನ ಕಾಲಿನ ಕಿರುಬೆರಳನ್ನು ಕತ್ತರಿಸಿ  ಕೊಂದೆವೆಂದು ಸುಳ್ಳು ಹೇಳುತ್ತಾರೆ.

    ಚಿತ್ರ ಸೌಜನ್ಯ ವಿಕಿಪಿಡಿಯಾ

    ರಕ್ತ ಒಸರಿಸಿಕೊಂಡು  ಚೀತ್ಕರಿಸುತ್ತಿದ್ದ ಬಾಲಕ ಚಂದ್ರಹಾಸನನ್ನು  ಕಂಡು  ಕಾಡಿನ ಮೃಗಾದಿ ಪಕ್ಷಿಗಳು  ಮರುಗುತ್ತವೆ,ಸಂತೈಸುತ್ತವೆ . ಆದರೆ ದುಷ್ಟಬುದ್ಧಿ  ಮತ್ಸರದಿಂದ ಮಗುವಿನ ಮೇಲೆ ಮಾಡಬಾರದ್ದನ್ನು ಮಾಡಿಸುತ್ತಾನೆ. ಆ ಸಂದರ್ಭದಲ್ಲಿ ಕವಿ ಇಂಥ ಮನುಷ್ಯರೊಂದಿಗೆ ಇರುವುದಕ್ಕಿಂತ  ಕಾಡಿನ ಜೀವನ ಮೇಲು ಎಡನ್ನುತ್ತಾನೆ. 

    ಮನುಷ್ಯ ಒಳ್ಳೆಯ ಗುಣವನ್ನು ಹೊಂದಿರುವಂತೆ ಕೆಟ್ಟಗುಣಗಳನ್ನು ಹೊಂದಿರುತ್ತಾನೆ. ಅದರಲ್ಲಿ ಈರ್ಷ್ಯೆ ಕೂಡ ಒಂದು. ತನ್ನನ್ನು ಬಿಟ್ಟು  ಯಾರೂ ಏಳಿಗೆ ಹೊಂದಿದರೂ ಸಹಿಸದ  ಮನಸ್ಥಿತಿಗಳು. ಎಷ್ಟು ಎಂದರೆ ಒಡಹುಟ್ಟಿದವರ ಅಭಿವೃದ್ಧಿಯನ್ನೂ ಸಹಿಸದ ಸಂಕುಚಿತ ಮನಸ್ಸುಗಳು  ದಿನೇ ದಿನೇ ಹೆಚ್ಚಾಗುತ್ತಿವೆ. ಇದೊಂದು  ಅನುಭವಿಸಲಾರದ ಇತರರಲ್ಲಿ ಹಂಚಿಕೊಳ್ಳಲಾರದ   ಉಭಯ ಸಂಕಟ.  ಹಿತಶತ್ರುಗಳ ಕಿರಿ ಕಿರಿ  ಸಹಿಸಲಸಾಧ್ಯವಾದಾಗ  ಇಂಥ  ಅಸೂಯಾ ಮನಸ್ಸುಗಳ ನಡುವೆ ಇರುವುದಕ್ಕಿಂತ ಕಾಡಿನ ವಾಸ ಅರ್ಥಾತ್ ಪರಿಚಯವೇ ಇಲ್ಲದವರ  ನಡುವೆ  ಜೀವನ ಸಾಗಿಸುವುದು  ಉತ್ತಮ  ಅನ್ನುವ ಅರ್ಥದಲ್ಲಿ  ದುಷ್ಟರನ್ನು ಕಂಡರೆ ದೂರ ಇರುವುದು ಲೇಸು   ಭಾವನೆಯನ್ನು “ಕರುಬರಿದ್ದೂರಿಂದೆ   ಕಾಡೊಳ್ಳಿತು” ಎಂಬ ಮಾತು ಸಂಕೇತಿಸುತ್ತದೆ.    ಹೊಟ್ಟೆ ಕಿಚ್ಚಿಗೆ ಕಣ್ಣೀರ್ ಸುರಿಸು ಎನ್ನುವಂತೆ ದುಷ್ಟ ಬುದ್ಧಿಗೆ ಕಡೆಗೆ ತನ್ನ ತಪ್ಪಿನ ಅರಿವಾಗುತ್ತದೆ.

    ಮನುಷ್ಯನ ಮಾನಸಿಕ ಸ್ವಾಸ್ಥವನ್ನು ಹಾಳುಮಾಡುವ ಪರಿಭಾಷೆ ಎಂದರೆ    ‘ಅಸೂಯೆ’. ಇನ್ನೊಬ್ಬರ ಏಳಿಗೆಯನ್ನು ಸಹಿಸದೆ ಇರುವುದು. ತನ್ನ ಜೀವನದ ಎಡರು ತೊಡರುಗಳಿಗೆ   ಅಸಂಬಂದ್ಧ ಕಾರಣಗಳನ್ನು   ಇನ್ಯಾರನ್ನೋ  ಆರೋಪಿಸಿ ಬದುಕುವ ಅತೃಪ್ತ ಮನಸ್ಸುಗಳು ಹೀಗೆ  ವರ್ತಿಸುವುದು.    ಕೋಪ ತಾನು ಹುಟ್ಟಿದ ಸ್ಥಳವನ್ನು ಮೊದಲು ನಿರ್ನಾಮ ಮಾಡುವಂತೆ ಅಸೂಯೆ  ವ್ಯಕ್ತಿಯನ್ನು ಹಾಳು ಮಾಡುತ್ತದೆ. ಇದುವೆ  ಇನ್ನೂ ಕೆಟ್ಟಗುಣಗಳನ್ನು ಸಂಚಯಿಸಿಕೊಳ್ಳಲು ಕಾರಣವಾಗಬಹುದು ಮನಸ್ಸಿನ ನೆಮ್ಮದಿಯನ್ನು ಕಸಿಯಬಹುದು. ( ಚಾಡಿ,ಕುತಂತ್ರ,   ಆರೋಪ ಹೊರಿಸುವುದು, ತೇಜೋವಧೆ, ಗುಂಪುಗಾರಿಕೆ….)  ವಿಘ್ನ ಸಂತೋಷಿಯಾಗದೆ ಎಲ್ಲರ  ಏಳಿಗೆಯನ್ನು  ಸಂಭ್ರಮಿಸುವುದು ಒಳ್ಳೆಯದು.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    Indian Stock Market:ಬದಲಾದ ಪರಿಸ್ಥಿತಿಯಲ್ಲಿ ಷೇರುಪೇಟೆಯಲ್ಲಿ  ಹೂಡಿಕೆ ಹೇಗೆ?

    ಷೇರುಪೇಟೆಯಲ್ಲಿ ದಿನನಿತ್ಯ ಸುಮಾರು 50 ಸಾವಿರದಿಂದ 80 ಸಾವಿರ ಹೊಸ ಹೂಡಿಕೆದಾರರು ಪ್ರವೇಶಿಸುತ್ತಿದ್ದಾರೆ.   ಈ ವರ್ಷ ಕರ್ನಾಟಕದ ರಾಜ್ಯದಲ್ಲಿ ಸುಮಾರು ಶೇಕಡ 32ರಷ್ಟು ಹೊಸಬರು ಷೇರುಪೇಟೆಯ ಚಟುವಟಿಕೆಗೆ ನೋಂದಾಯಿಸಿಕೊಂಡಿದ್ದಾರೆ.  ಒಂದು ವರ್ಷದ ಹಿಂದೆ ಸುಮಾರು 8.50 ಕೋಟಿ ಹೂಡಿಕೆದಾರರು ನೋಂದಾಯಿಸಿಕೊಂಡಿದ್ದರು,  ಅದು ಈ ವರ್ಷ ದ 31 ನೇ ಅಕ್ಟೋಬರ್‌ನ ಅಂಕಿ ಅಂಶಗಳ ಪ್ರಕಾರ 11.72 ಕೋಟಿಗೆ ಏರಿಕೆಯಾಗಿದೆ.  

    ಅಂದರೆ ಈ ಪ್ರಮಾಣದ ಏರಿಕೆಯ ಹಿಂದೆ ಅನೇಕರ ಭಾವನೆ ಏನೆಂದರೆ ಷೇರುಪೇಟೆಯಲ್ಲಿ ಅತಿ ಸುಲಭವಾಗಿ ಹಣ ಗಳಿಸಬಹುದೆಂಬುದಾಗಿದೆ.   ಪೇಟೆಯಲ್ಲಿ ಷೇರುಗಳ  ಚಲನೆಗೆ ಕಾರಣಗಳ ಅನ್ವೇಷಣೆಗೆ ತೊಡಗುತ್ತಾರೆ, ನಂತರ ಚಟುವಟಿಕೆಗೆ ಮುಂದಾಗುತ್ತಾರೆ,  ಆದರೆ ಆ ಅಂಶಗಳನ್ನು ಪೇಟೆ ಮೊದಲೇ ಪರಿಗಣಿಸಿ ಏರಿಕೆ ಕಾಣುವ ವಿಸ್ಮಯಕಾರಿ ಗುಣಗಳನ್ನು ಅರಿತಿರುವುದಿಲ್ಲ.

    ಷೇರುಪೇಟೆಯ ಹೂಡಿಕೆದಾರರ ಸಂಖ್ಯೆ  ಎರಡು ವರ್ಷಗಳಲ್ಲಿ ದ್ವಿಗುಣವಾಗಿದೆ,  ಸಂವೇದಿ ಸೂಚ್ಯಂಕವೂ ಮಾರ್ಚ್‌2020 ರ ಸಂಖ್ಯೆಗಿಂತ ದ್ವಿಗುಣಗೊಂಡಿದೆ ಹಾಗೆಯೇ ಬಂಡವಾಳೀಕರಣ ಮೌಲ್ಯವೂ ಸಹ ಮಾರ್ಚ್‌2020 ರ ಅಂಕಿ ಅಂಶವೂ ದ್ವಿಗುಣಗೊಂಡಿದೆ.  ಇವೆಲ್ಲಾ ಈ ರೀತಿ ಹೆಚ್ಚಾದರೂ ಅದಕ್ಕನುಗುಣವಾಗಿ ಲಿಸ್ಟಿಂಗ್‌ಆದ ಕಂಪನಿಗಳ ಸಂಖ್ಯೆಯು ಹೆಚ್ಚಾಗಿಲ್ಲ.  ಇದು ಒಂದು ರೀತಿಯ ಹೂಡಿಕೆದಾರರ ದಟ್ಟಣೆಯಾಗಿರುವ ವಾತಾವರಣ ನಿರ್ಮಿತವಾಗಿದೆ.  ಹಾಗಾಗಿ ಷೇರುಪೇಟೆಯಲ್ಲಿ ಹೆಚ್ಚು ಅನಿಶ್ಚಿಯತೆಗೆ ಕಾರಣವಾಗಿದೆ.  ಈ ಸಂದರ್ಭದಲ್ಲಿ ಸುಲಭವಾದ  ಸಮೀಕರಣವೆಂದರೆ ಸೂಕ್ತ ಚಿಂತನೆ, ವಿವೇಚನೆ, ಮಾರ್ಗದರ್ಶನದೊಂದಿಗೆ VALUE PICK – PROFIT BOOK ರೀತಿಯ ಚಟುವಟಿಕೆಯೇ ರಾಮಬಾಣವಾಗಿದೆ ಎನ್ನಬಹುದು.   ಜವಾಬ್ದಾರಿಯುತವಾದ  ಆರ್ಥಿಕ ಸಾಕ್ಷರತೆಯೊಂದಿಗೆ ಆರ್ಥಿಕ ನಿರ್ವಹಣೆಯ ಕೌಶಲ್ಯವನ್ನು  ರೂಢಿಸಿಕೊಳ್ಳುವುದೊಂದೇ ಉತ್ತಮ ದಾರಿಯಾಗಿದೆ.  

    ಹೆಚ್ಚಿನ ಹೊಸ ಹೂಡಿಕೆದಾರರು ಗ್ರಾಮೀಣ ಮತ್ತು ನಗರ ಪ್ರದೇಶದವರಾಗಿರುವ ಕಾರಣ ಅವರ ಅರಿವಿಗೆ ಬರಬಹುದಾದ ರೀತಿಯಲ್ಲಿ, ಕನ್ನಡ ಭಾಷೆಯಲ್ಲಿ ಪೇಟೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನವು ಎಲ್ಲಾ ಮಾಧ್ಯಮಗಳು ಪ್ರಯತ್ನಿಸಿದಲ್ಲಿ, ಉತ್ತಮ ಸ್ಫಂದನೆ ದೊರೆಯಬಹುದಾಗಿದೆ.  ಈ ಹೊಸ ಹೂಡಿಕೆದಾರರಿಗೆ ಅಗತ್ಯವಿರುವ ಸೂಕ್ತ ಮಾರ್ಗದರ್ಶನವನ್ನು ಕನ್ನಡದಲ್ಲಿಯೇ ಒದಗಿಸಿದರೆ, ಅವರ ಪ್ರಯತ್ನಗಳು ಸ್ವಲ್ಪಮಟ್ಟಿಗಾದರೂ ಸುರಕ್ಷತೆ ಕಾಣಬಹುದಾಗಿದೆ ಎಂಬುದು ನನ್ನ ಅನುಭವದ ಅರಿವು.  ಈ ದಿಶೆಯಲ್ಲಿ ಮಾಧ್ಯಮಗಳು, ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ   ತಮ್ಮ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುವುದು ಅತ್ಯಗತ್ಯ.  ಈ ಮೂಲಕ ಆರ್ಥಿಕ ಸಾಕ್ಷರತಾ ಮಟ್ಟವನ್ನು ಸುಧಾರಿಸಲು ಸಾಧ್ಯ.  

    ಷೇರುಪೇಟೆಯ ವಿಸ್ಮಯಕಾರಿ ಗುಣವೆಂದರೆ, ಭವಿಷ್ಯದ ಘಟನೆಗಳನ್ನು  ವರ್ತಮಾನಕ್ಕೆ  ಭಟ್ಟಿ  ಇಳಿಸಿ  ಅದಕ್ಕೆ ಮೌಲೀಕರಣ ಮಾಡುವ ತಾಣವೇ ಷೇರು ವಿನಿಮಯ ಕೇಂದ್ರವೆಂಬುದು.  ಅಂದರೆ ಪ್ರಸ್ತುತ ತೇಲಿ ಬಂದಿರುವ ಸುದ್ಧಿಯನ್ನು ಪೇಟೆ ಆಗಲೇ ಕಡೆಗಣಿಸಿರುತ್ತದೆ.  ಹಾಗಾಗಿ ಒಂದು ಕಂಪನಿಯು ಪ್ರಕಟಿಸಿದ ಅಂಕಿ ಅಂಶಗಳು ಎಷ್ಟೇ ಆಕರ್ಷಣೀಯವಾಗಿದ್ದರೂ ಆ ಷೇರಿನ ಬೆಲೆ ಇಳಿಕೆಯತ್ತ ಸಾಗುತ್ತದೆ, ಎಷ್ಟೇ ಕಳಪೆಯಾಗಿದ್ದರೂ ಷೇರಿನ ಬೆಲೆ ಇಳಿಯುವುದಿಲ್ಲ ಕಾರಣ ಅದು ಆಗಲೇ ಪೇಟೆಯು ನಿರೀಕ್ಷಿಸಿದ್ದುದಾಗಿರುತ್ತದೆ.

    ಹಾಗೆಯೇ ಒಂದು ಷೇರಿನ ಬೆಲೆ ಇಳಿಕೆ ಕಂಡಾಗ ಮೌಲ್ಯಾಧಾರಿತ ಖರೀದಿಗೆ ಯೋಗ್ಯವೇ, ಏರಿಕೆ ಕಂಡಾಗ ಲಾಭದ ನಗದೀಕರಣದ ಸಮಯವೇ ಎಂಬುದನ್ನು ನಿರ್ಧರಿಸುವ ಸಾಮರ್ಥ್ಯವನ್ನು ಸಣ್ಣ ಹೂಡಿಕೆದಾರರಲ್ಲಿ ಬೆಳೆಸುವ ಪ್ರಯತ್ನವನ್ನು ಮಾಧ್ಯಮಗಳು ನಮ್ಮ ಆಡು ಭಾಷೆಯಲ್ಲಿ ತಿಳಿಸಿದರೆ ಭಾಷೆಯೂ ಬೆಳೆಯುತ್ತದೆ, ಭಾಷಾಭಿಮಾನವೂ ಹೆಚ್ಚುತ್ತದೆ ಜೊತೆಗೆ ಮಾಧ್ಯಮದ ಘನತೆಯೂ ಉನ್ನತಿ ಹೊಂದುವುದರಲ್ಲಿ ಸಂಶಯವಿಲ್ಲ. ಎಲ್ಲಕ್ಕೂ ಮಿಗಿಲಾಗಿ ಜನಸಾಮಾನ್ಯರಲ್ಲಿ ಆರ್ಥಿಕ ಸಾಕ್ಷರತಾ ಮಟ್ಟವು ಹೆಚ್ಚಾಗಿ ಅವರ ಬಾಳಲ್ಲಿ ನೆಮ್ಮದಿ ಮೂಡಿಸಿದ ಸಾಮಾಜಿಕ ಬದ್ಧತೆಯನ್ನು ನಿರ್ವಹಿಸಿದಂತಾಗುತ್ತದೆಯಲ್ಲವೇ?

    ಜಾಗೃತ ಹೂಡಿಕೆದಾರ- ಜಾಗತಿಕ ಸರ್ಧಾರ, ಎಂಬಂತೆ ನಮ್ಮ ಅಪಾರ ಜನಸ್ತೋಮವು ಆರ್ಥಿಕ ಸಾಕ್ಷರತೆಯಿಂದ ಜಾಗೃತಗೊಂಡಲ್ಲಿ ನಾವು ಅವಲಂಬಿತರಾಗಿರುವ ವಿದೇಶೀ ವಿತ್ತೀಯ ಸಂಸ್ಥೆಗಳ ಪ್ರಭಾವವನ್ನು ನಿಯಂತ್ರಿಸಬಹುದು. ಒಂದು ರೀತಿ ವ್ಯಾಘ್ರನ ಭೇಟೆಗೆ ಶ್ವಾನ ಬಿಟ್ಟಂತೆ ಎಂಬ ಪರಿಸ್ಥಿತಿಯುಂಟಾಗಿ, ಆಂತರಿಕ ಬಲದಿಂದ ಸದೃಢರಾಗಲೂ ಸಾಧ್ಯವಿದೆಯಲ್ಲವೇ?

    ಅರ್ಥವನ್ನು ಅರ್ಥವತ್ತಾಗಿ ನಿರ್ವಹಿಸದಿದ್ದರೆ ಜೀವನ ಅರ್ಥಹೀನ.  ಎಂಬಂತೆ ಹಣಕಾಸು ಬಳಕೆಯನ್ನು, ನಿರ್ವಹಣೆಯನ್ನು ಸರಿಯಾಗಿ ಮಾಡದಿದ್ದರೆ ಜೀವನವು ಹಳಿತಪ್ಪಿದ ರೈಲಿನ ತರಹ ಕಲ್ಪನಾತೀತ ಹಂತದಲ್ಲಿರುತ್ತದೆ.  ಈಗಿನ ಜೀವನ ಶೈಲಿಯು ಹೆಚ್ಚಾಗಿ ಪಾರ್ಶ್ವ ಚಿಂತನೆಗಳಿಂದ ಕೂಡಿದ್ದು,  ಸಮಯದ ಅಭಾವವೋ, ಚಿಂತನೆಯ ಕೊರತೆಯೋ ಇದಕ್ಕೆ ಪೂರಕವಾಗಿ ಸಾಗುವಂತೆ ಮಾಡುತ್ತಿದೆ.  ಹೆಚ್ಚಿನ ಜಾಹಿರಾತುಗಳು ಇದನ್ನು ದೃಢೀಕರಿಸುತ್ತವೆ.

    ಈಗಿನ ಜೀವನ ಶೈಲಿಗಳು ಎಷ್ಠು ಒತ್ತಡಮಯವಾಗಿರುತ್ತವೆ ಎಂದರೆ ನಾವು ಕೇವಲ ಅಕ್ಷರ ಸಾಕ್ಷರತೆಯ ಕಡೆಯೇ ಹೆಚ್ಚು ಒತ್ತು ನೀಡುತ್ತೇವೆ  ಮತ್ತು ಅತ್ಯವಶ್ಯವಿರುವ ಆರ್ಥಿಕ ಸಾಕ್ಷರತೆಯನ್ನು ಕಡೆಗಣಿಸಿ, ಗುಣಮಟ್ಟ ಲೆಕ್ಕಿಸದೆ ಕೇವಲ ರಿಯಾಯಿತಿ, ಡಿಸ್ಕೌಂಟ್, ಆಫರ್,  ಕ್ಯಾಶ್ ಬ್ಯಾಕ್ ನಂತಹ ತಂತ್ರಗಾರಿಕೆಗೆ ಮರುಳಾಗಿ ಚಿಂತನಾ ಸಾಮರ್ಥ್ಯವನ್ನು ಕ್ಷೀಣಿಸಿಕೊಳ್ಳುತ್ತಿದ್ದೇವೆ.

    ಬ್ಯಾಂಕಿಂಗ್ ಮತ್ತು ನಾನ್‌ಬ್ಯಾಂಕಿಂಗ್  ಸಂಸ್ಥೆಗಳ ವೈಖರಿಯೇ ಬೇರೆ,  ಅವರ ಪ್ರಚಾರ ಹೇಗಿರುತ್ತೆಂದರೆ, ಅಭಿನಂದನೆಗಳು,  ನೀವು 5 ಲಕ್ಷ ರೂಪಾಯಿಗಳ ಪ್ರಿ-ಅಪ್ರೂವ್ಡ್  ಲೋನ್ ಗೆ  ಅರ್ಹರಾಗಿದ್ದೀರಿ, ಎಂದು ಬಹಳಷ್ಟು ಜನರಿಗೆ ಆಸೆಯ ಜಾಲಕ್ಕೆ ತಳ್ಳುತ್ತಾರೆ.  ಸಾಲಕ್ಕೆ ಅರ್ಜಿ ಸಲ್ಲಿಸದೆ, ವಿವಿರಗಳನ್ನೊದಗಿಸದೆ ಸಾಲ ನೀಡಲು ಹೇಗೆ ಸಾಧ್ಯ.   ಕೇವಲ ಪ್ರೇರೇಪಿಸುವ ಕೃತ್ಯವಷ್ಟೆ.  ಈ  ಪ್ರಿಅಪ್ರೂವ್ಡ್  ಆಶ್ವಾಸನೆಯನ್ನು ನಂಬಿ ಅರ್ಜಿ ಸಲ್ಲಿಸಿದ ನಂತರ, ಅದಕ್ಕೆ ಪ್ರೊಸೆಸಿಂಗ್‌ಫೀಸ್ ‌ಕಟ್ಟಿಸಿಕೊಳ್ಳುವರು.  ಫೀಸ್  ಕಟ್ಟಿದ್ದಕ್ಕೆ  ಸಾಲ ಸಿಕ್ಕಿತೆಂಬ ನಂಬಿಕೆ ಬೇಡ.  ಅವರು ನಂತರ ಅರ್ಜಿ ಪರಿಶೀಲಿಸಿ ನೀವು, ನಿಮ್ಮ ಆದಾಯ, ಸಿಬಿಲ್ ಸ್ಕೋರ್, ವೃತ್ತಿಯಾಧರಿಸಿ ಸಾಲ ಪಡೆಯಲು ಅರ್ಹರೇ, ಇಲ್ಲವೇ ಎಂಬದನ್ನು ನಿರ್ಧರಿಸುವರು.  ಒಂದೊಮ್ಮೆ ಅರ್ಹರಲ್ಲವೆಂದರೆ ನೀವು ಕಟ್ಟಿದ ಪ್ರೊಸೆಸಿಂಗ್‌ಫೀಸ್  ಹಿಂದಿರುಗಿಸಲಾಗದು.  ಈ ಪ್ರಿ-ಅಪ್ರೂವ್ಡ್ ಎಂಬುದು ಕೇವಲ ಪ್ರಚಾರಿಕ, ಮೋಹಕ ತಂತ್ರವಷ್ಟೆ.

    ಸಾಕ್ಷರತೆ ಮತ್ತು ಆರ್ಥಿಕ ಸಾಕ್ಷರತೆಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವುದರಿಂದ ನಾವುಗಳು ಹೆಚ್ಚಿನ ಗೊಂದಲಮಯ, ಸಂಕಷ್ಠಮಯ ಪರಿಸ್ಥಿತಿಗೊಳಗಾಗಿದ್ದೇವೆ.   ಹೆಚ್ಚು ಹೆಚ್ಚು ಆದ್ಯತೆಗಳು ಸವಲತ್ತುಗಳನ್ನು ಪಡೆಯುವತ್ತಲೇ  ಗಮನ ಹರಿಸುತ್ತೇವೆ.   ಇದಕ್ಕಾಗಿ ʼ ಇ ಎಂ ಐ ʼ ಮೂಲಕ  ಕಂತಿನಲ್ಲಿ ಹಣಪಾವತಿಯನ್ನು ಆಯ್ಕೆ ಮಾಡಿಕೊಂಡು  ಬಾಧ್ಯತೆಯನ್ನು ಹೆಚ್ಚಿಸಿಕೊಳ್ಳಲು ಮುಂದಾಗುತ್ತೇವೆ.  ಈಗಿನ ಅಸ್ಥಿರತೆಯ ಸನ್ನಿವೇಶದಲ್ಲಿ  ಈ   ʼ ಇ ಎಂ ಐ ʼ ಬಾಧ್ಯತೆಗಳು ಮುಂದಿನ ದಿನಗಳಲ್ಲಿ ಎಂತಹ ತೊಂದರೆಗಳನ್ನು ಉಂಟುಮಾಡಬಹುದು ಎಂಬುದನ್ನು ಆರ್ಥಿಕ  ಹಿಂಜರಿತಗಳ ಸಮಯದಲ್ಲಿ ಕಂಡಿದ್ದೇವೆ.  ಈಗಿನ ಸನ್ನಿವೇಶದಲ್ಲಿ ʼ ಇ ಎಂ ಐ ʼ ಕಡಿಮೆ ಇದ್ದಷ್ಟು ಜೀವನದಲ್ಲಿ ನೆಮ್ಮದಿ, ಸಂತೋಷಗಳನ್ನು ಕಾಣಬಹುದಾಗಿದೆ.

    ಹೂಡಿಕೆಗೆ ನಿರ್ಧರಿಸುವಾಗ ಹೆಚ್ಚಿನವರು, ಪ್ರಚಾರದಲ್ಲಿರುವ ಕಂಪನಿಗಳತ್ತ,  ಆಕರ್ಷಣೀಯ ಮಟ್ಟದ ಫಲಿತಾಂಶ,  ಶೇಕಡಾವಾರು ಲಾಭಾಂಶ, ಮಲ್ಟಿಬ್ಯಾಗರ್‌, ಮಲ್ಟಿ ಇಯರ್‌ ಗ್ರೌತ್‌ ಮುಂತಾದವುಗಳನ್ನಾಧರಿಸಿ ಚಟುವಟಿಕೆ ನಡೆಸುವ ಮುನ್ನ ಆಕಂಪನಿಗಳು ಯಾವ ಶ್ರೇಣಿಯಲ್ಲಿವೆ, ಅಗ್ರಮಾನ್ಯ ಕಂಪನಿಯೇ, ಬೃಹತ್‌ ಬಂಡವಾಳವಿರುವ ಕಂಪನಿಯೇ,  ಎಂಬುದರ ಅರಿವಿನಿಂದ ಅರ್ಹತೆಯನ್ನು ಮಾಪನ ಮಾಡಬೇಕು.  ಅಗ್ರಮಾನ್ಯ ಕಂಪನಿಯಾಗಲಿ, ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಣಿಯ ಕಂಪನಿಯಾಗಲಿ ಅದರ ಹಿಂದಿನ ಸಾಧನೆ, ಭವಿಷ್ಯದಲ್ಲಿ ಆ ಕಂಪನಿಗಿರಬಹುದಾದ ಅವಕಾಶಗಳು,  ಕಂಪನಿಯ ಆಡಳಿತ ಮಂಡಳಿಯವರ ಗೌರವ, ಘನತೆ, ಪ್ರತಿಷ್ಠೆಗಳು ಮತ್ತು ಹೂಡಿಕೆದಾರ ಸ್ನೇಹಿ ಗುಣದ ಬಗ್ಗೆ ಮಾಪನಮಾಡಿ ನಿರ್ಧರಿಸಬೇಕು.  ವಿಶೇಷವಾಗಿ ಹೊಸ ಕಂಪನಿಗಳು ತೇಲಿ ಬಿಟ್ಟಾಗ ಅಂತಹ ಕಂಪನಿಗಳಿಗೆ ಕೆಲವು ವರ್ಷ ತಮ್ಮ ಸಾಮರ್ಥ್ಯವನ್ನು ಪ್ರದರ್ಶೊಸಲು ಸಮಯಾವಕಾಶ ನೀಡಬೇಕು ನಂತರ ಯೋಗ್ಯವೆನಿಸಿದಲ್ಲಿ ಹೂಡಿಕೆಯನ್ನು ಪರಿಶೀಲಿಸಬಹುದು.  ಹೂಡಿಕೆ ಮಾಡಿದ ಷೇರುದಾರರ ಬಂಡವಾಳವನ್ನು ಕರಗಿಸಿದ ಅನೇಕ ಕಂಪನಿಗಳಿವೆ. ಏರಿಳಿತಗಳ ಪ್ರಭಾವವು ಅನೇಕ ಅವಕಾಶಗಳನ್ನು ಸೃಷ್ಠಿಮಾಡಿಕೊಟ್ಟರೂ ಅವು ಕಾಲ್ಪನಿಕವಾಗಿರುತ್ತವೆ.

    1995 ರಲ್ಲಿ  ಬೆಂಗಳೂರು ಷೇರು ವಿನಿಮಯ ಕೇಂದ್ರದಲ್ಲಿ ಉತ್ತಮ ಸಂಖ್ಯಾ ಗಾತ್ರದೊಂದಿಗೆ ವಹಿವಾಟಾಗುತ್ತಿದ್ದ ಷೇರುಗಳು , ಅವುಗಳ ದರಗಳು ಮತ್ತು ವಹಿವಾಟಾಗುತ್ತಿದ್ದ ಸಂಖ್ಯಾಗಾತ್ರದ ಪಟ್ಟಿಯನ್ನು ಓದುಗರ ಅವಗಾಹನೆಗೆ ಇಲ್ಲಿ ನೀಡುತ್ತಿದ್ದೇವೆ.

    ಈ ಪಟ್ಟಿಯಲ್ಲಿ ಆಗ ಮಿಂಚಿನಂತೆ ಬಂದು ಮಾಯಾವಾದ ಅನೇಕ ಷೇರುಗಳಿವೆ. ಅದರ ಜೊತೆಗೆ ಈಗಲೂ ಬಲವಾಗಿ ನಿಂತಿರುವ ಅನೇಕ ಷೇರುಗಳೂ ಇವೆ. ಹೀಗಾಗಿ ವಹಿವಾಟು ಮಾಡುವಾಗ ಎಚ್ಚರದಿಂದ ಮಾಡುವುದು ಉತ್ತಮ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಉತ್ಥಾನದ್ವಾದಶಿ-ತುಳಸಿ ಹಬ್ಬ

    ಎಂ.ವಿ.ಶಂಕರಾನಂದ

    ಕಾರ್ತೀಕ ಶುದ್ಧ ದ್ವಾದಶಿಯಂದು ತುಳಸೀ ಪೂಜೆಯನ್ನು ಸ್ತ್ರೀಯರು ನಿಯಮದಿಂದ ಮಾಡುತ್ತಾರೆ. ದೇವರಿಗೆ ತುಳಸೀ ಅರ್ಚನೆ ಮಾಡಿಸುತ್ತಾರೆ. ಉತ್ಧಾನದ್ವಾದಶಿಯಂದು ವಿಶೇಷ ಪೂಜೆ ನಡೆಸುತ್ತಾರೆ. ವಿಷ್ಣು ಪುರಾಣದ ಪ್ರಕಾರ ಆ ದಿನ ಕ್ಷೀರಪಥದಲ್ಲಿ ಗಗನ ನೀಲಿಮೆಯ ಭಿತ್ತಿಯಲ್ಲಿ ನಕ್ಷತ್ರಗಳ ಚಿತ್ರ ವಿಸ್ತಾರದಲ್ಲಿ ಶಯನ ವಿಷ್ಣುವಿನ ಆಕಾರವನ್ನು ಕಾಣಬಹುದು; ಅನಂತನ ಭೋಗತಲ್ಪದಲ್ಲಿ ಶಯನನಾಗಿದ್ದವನು ಅಂದು ಮೇಲಕ್ಕೇಳುತ್ತಾನೆಂಬ ವಾಡಿಕೆ. ಇದಕ್ಕಾಗಿ ಈ ದಿನವನ್ನು ಉತ್ಥಾನ ದ್ವಾದಶಿಯೆಂದು ಹೇಳುವುದುಂಟು.

    ತುಳಸಿಯ ಮಹಿಮೆ ಹಿರಿದಾಗಿದೆ. ತುಳಸಿಯ ದರ್ಶನದಿಂದ ಪಾಪ ಪರಿಹಾರ, ಸ್ಪರ್ಶದಿಂದ ಪವಿತ್ರತೆ, ನಮಸ್ಕಾರದಿಂದ ರೋಗಪರಿಹಾರ, ಪ್ರೋಕ್ಷಿಸಿಕೊಂಡರೆ ಆಯುರ್ವೃದ್ಧಿ, ಸಸಿ ನೆಡುವುದರಿಂದ ಶ್ರೀಕೃಷ್ಣನ ಸಾನಿಧ್ಯ ಪ್ರಾಪ್ತಿ, ಅರ್ಚಿಸಿದರೆ ಮೋಕ್ಷಪ್ರಾಪ್ತಿಯೆಂಬುದು ಸನಾತನ ಸಂಪ್ರದಾಯ. ಇದು ಕೇವಲ ಮಡಿವಂತರ ಅತ್ಯುಕ್ತಿಮಾತ್ರವಲ್ಲ; ಪುರಾಣಗಳಲ್ಲಿ, ಆಯುರ್ವೇದ ಶಾಸ್ತ್ರಗಳಲ್ಲಿ ತುಳಸಿಯ ಮಹಿಮೆ ಹೇಳಲ್ಪಟ್ಟಿದೆ.

    ವಿಷ್ಣು ಪುರಾಣದ ಪ್ರಕಾರ ಹಿಂದೆ ಜಲಂಧರನೆಂಬ ಪ್ರಬಲ ರಾಕ್ಷಸನಿದ್ದನು. ಆತನ ಹೆಂಡತಿ ವೃಂದೆ. ಈಕೆ ಪರಮ ಪತಿವ್ರತೆ. ಈಕೆಯ ಪಾತಿವ್ರತ್ಯ ಬಲದಿಂದ ಯಾವ ಯುದ್ಧದಲ್ಲಿಯೂ ಪತಿಗೆ ಸೋಲು ಸಂಭವಿಸಿರಲಿಲ್ಲ. ಆದರೆ ಈ ವಿಜಯೋನ್ಮತ್ತತೆಯಲ್ಲಿ ಅವನು ದೇವತೆಗಳನ್ನೂ ಸೋಲಿಸುತ್ತಾ ಬಂದನು. ಆಗ ದೇವಲೋಕದವರೆಲ್ಲ ವಿಷ್ಣುವಿನ ಮೊರೆಹೊಕ್ಕರು.

    ವೃಂದೆಯ ಪಾತಿವ್ರತ್ಯ ಪ್ರಭಾವವನ್ನು ತಿಳಿದಿದ್ದ ವಿಷ್ಣು, ಅದರ ಭಂಗಕ್ಕೆಂದು ಕಪಟೋಪಾಯವನ್ನು ಯತ್ನಿಸಿದನು. ಜಲಂಧರ-ದೇವತೆಗಳೊಂದಿಗೆ ಯುದ್ಧ ಮಾಡುತ್ತಿದ್ದಾಗ ವಿಷ್ಣು ತಾನೇ ಜಲಂಧರನ ವೇಷಧರಿಸಿ, ಬೇರ್ಪಟ್ಟ ರುಂಡ-ಮುಂಡಗಳ ವಿಕೃತ ರೂಪದಲ್ಲಿ ಕಾಣಿಸಿಕೊಂಡನು. ಸತಿ ವೃಂದೆಯು ಪತಿಯನ್ನು ಕಳೆದುಕೊಂಡೆನೆಂದು ಶೋಕಿಸಿದಳು. ಅಷ್ಟರಲ್ಲಿ ವಿಷ್ಣು ಸಾಧುವೇಶದಿಂದ ಪುನಃ ಕಾಣಿಸಿಕೊಂಡು ಸಂಜೀವಿನಿ ವಿದ್ಯೆಯಿಂದ ಆ ಬೇರ್ಪಟ್ಟ ರುಂಡ-ಮುಂಡವನ್ನು ಕೂಡಿಸಿದನು. ವೃಂದೆಯು ಸಂತೋಷದಿಂದ ಪತಿಯನ್ನಪ್ಪಿದಳು! ಆದರೆ ವಾಸ್ತವವಾಗಿ ವ್ರತಭಂಗವಾಯಿತು. ವೃಂದೆ ಮೋಸದಿಂದ ಜಾರಿದಳು. ಅತ್ತ ಜಲಂಧರ ಮೃತನಾದನು. ಸತ್ಯಸಂಗತಿ ತಿಳಿದ ಮೇಲಂತೂ ಉದ್ವೇಗಗೊಂಡ ವೃಂದೆಯು, ವಿಷ್ಣುವಿಗೆ – ʼನಿನಗೆ ಪತ್ನಿ ವಿಯೋಗ ಒದಗಲಿʼ ಎಂದು ಶಪಿಸಿದಳು. ಆನಂತರ ಚಿತೆಯನ್ನೇರಿದಳು. ಇದೇ ತ್ರೇತಾಯುಗದಲ್ಲಿ ಶ್ರೀರಾಮನಿಗೆ ಆದ ಸೀತಾವಿಯೋಗ.
    ಪಾರ್ವತಿಯು ವೃಂದೆಗಾಗಿ ಚಿತೆಯ ಸುತ್ತಲೂ ವೃಂದಾವನ ನಿರ್ಮಿಸಿದಳು. ಅಲ್ಲಿ ಬೆಳೆದ ತುಳಸಿಯನ್ನು ವಿಷ್ಣು ಹೃತ್ಪೂರ್ವಕವಾಗಿ ಸ್ವೀಕರಿಸಿ ಧರಿಸಿದನು. ವೃಂದೆಯ ವನ – ವೃಂದಾವನವಾಯಿತು.

    ಉತ್ಥಾನದ್ವಾದಶಿಯಂದು ತುಳಸೀ ವೃಂದಾವನಕ್ಕೆ ಧೂಪ-ದೀಪ ಗಂಧಾಕ್ಷತೆಗಳಿಂದ ವಿಶೇಷ ಪೂಜೆ ಮಾಡುವರು. ಅಗಸೆ, ನೆಲ್ಲಿ ಮತ್ತು ತುಳಸಿ ಇವು ಮೂರು ಬಹು ಪವಿತ್ರವಾದವುಗಳು. ತ್ರಿಮೂರ್ತ್ಯಾತ್ಮಕವಾದವುಗಳು. ಆದ್ದರಿಂದ ಇವುಗಳನ್ನು ಈ ದಿನ ಪೂಜೆಗೆ ಅಗತ್ಯವಾಗಿ ಉಪಯೋಗಿಸುವರು. ವೃಂದಾದೇವಿಯ ಅನುಗ್ರಹಕ್ಕೆ ಪಾತ್ರರಾಗಲು, ತ್ರಿಮೂರ್ತಿಗಳೂ, ಅವರ ಪತ್ನಿಯರಾದ ಶಕ್ತಿದೇವಿಯರೂ ಮತ್ತು ಇತರ ದೇವತೆಗಳೂ ಅಲ್ಲಿ ಸೇರುತ್ತಾರೆಂದು ʼತುಳಸಿʼ ಮಹಾತ್ಮೆಯಲ್ಲಿ ಹೇಳಿದೆ. ಈ ದಿನ ಕಾರ್ತೀಕ ದಾಮೋದರ ಸ್ವಾಮಿಯನ್ನು ಷೋಡಶೋಪಚಾರಗಳಿಂದ ಪೂಜಿಸಿ, ಶಂಖದಲ್ಲಿ ಹಾಲೆರೆದು ʼಉತ್ತಿಷ್ಠೋತ್ತಿಷ್ಠ ಗೋವಿಂದ, ಉತ್ತಿಷ್ಠ ಗರುಡಧ್ವಜ, ಉತ್ತಿಷ್ಠಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರುʼ ಎಂದು ಪ್ರಾರ್ಥಿಸುವ ಪದ್ಧತಿಯಿದೆ.ತುಳಸಿಪೂಜೆಯಿಂದ ಸಕಲ ಅಭೀಷ್ಠ ಸಿದ್ಧಿಯೆಂದು ಪದ್ಮಪುರಾಣದಲ್ಲಿ ಹೇಳಿದೆ.
    ತುಳಸಿಯು ಮನೆ ಮನೆಯ ಕಲ್ಪವೃಕ್ಷ
    ಶಿವನಿಗೆ ಬಿಲ್ವಪತ್ರೆಯು ಪ್ರಿಯವಾದಂತೆ, ವಿಷ್ಣುವಿಗೆ ತುಳಸಿಯು ಪ್ರಿಯವಾದುದು. ಅನೇಕರು ತುಳಸಿಯ ತೀರ್ಥ ತೆಗೆದುಕೊಳ್ಳದೆ ಊಟಮಾಡುವುದಿಲ್ಲ. ತುಳಸಿಯಲ್ಲಿ ಬಿಳಿ ತುಳಸಿ, ಕಪ್ಪು ತುಳಸಿ, ಅರಣ್ಯ ತುಳಸಿ, ಬಿಲ್ವ-ಗಂಧ ತುಳಸಿ, ವಿಶ್ವಗಂಧ ತುಳಸಿ ಎಂಬ ಅನೇಕ ವಿಧಗಳುಂಟು. ವೈದ್ಯಶಾಸ್ತ್ರದಲ್ಲಿ ತುಳಸಿಗೆ ಹೆಚ್ಚು ಪ್ರಾಧಾನ್ಯತೆಯಿದೆ. ತುಳಸಿಯಿರುವೆಡೆ ಸೊಳ್ಳೆಗಳ ಕಾಟವಿಲ್ಲ. ಅಂಟುರೋಗಗಳ ಬಾಧೆಯಿಲ್ಲ. ಮಕ್ಕಳ ಕೆಮ್ಮು, ನೆಗಡಿಗೆ ಇದು ಹತ್ತಿರ ವೈದ್ಯ. ಚರ್ಮವ್ಯಾಧಿಗಳಿಗೂ ಉತ್ತಮ ಪರಿಹಾರ. ಪಾಶ್ಚಾತ್ಯರೂ ಸಹ ತುಳಸಿಯ ವೈದ್ಯಕೀಯ ಗುಣವನ್ನು ಕಂಡು ಮೆಚ್ಚಿದ್ದಾರೆ. ಜಪಾನ್‌ ನಲ್ಲಿ ಮನೆಗಳ ಮುಂದೆ ತುಳಸೀ ತೋಟಗಳುಂಟು.

    ಈ ಬಾರಿಯ ತುಳಸಿ ಪೂಜೆಯನ್ನು 5ನೇ ನವೆಂಬರ್‌ 2022 ಶನಿವಾರ ಆಚರಿಸಲಾಗುತ್ತದೆ.
    ದ್ವಾದಶಿ ತಿಥಿ ಸಮಯ: ನವೆಂಬರ್ 04, ಸಂಜೆ 6:08 ರಿಂದ ನವೆಂಬರ್ 05, ಸಂಜೆ 5:07 ರವರೆಗೆ.ತುಳಸಿ ಪೂಜೆಯನ್ನು ಭಾರತದಾದ್ಯಂತ ವಿವಾಹಿತ ಮಹಿಳೆಯರು ಕುಟುಂಬದ ಸದಸ್ಯರ ಯೋಗಕ್ಷೇಮಕ್ಕಾಗಿ ಆಚರಿಸುತ್ತಾರೆ.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ. 2022 ನೇ ಸಾಲಿನ ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ

    ಮಳೆ; ಜೆಡಿಎಸ್ ಪಂಚರತ್ನ ರಥಯಾತ್ರೆ ಒಂದು ವಾರ ಮುಂದಕ್ಕೆ

    MULBAGILU NOV 1
    ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಕೋಲಾರ ಜಿಲ್ಲೆಯಲ್ಲಿ ಭಾರೀ ಮಳೆ ಆಗುತ್ತಿದ್ದು, ಇಂದಿನಿಂದ ಆರಂಭವಾದ ಜೆಡಿಎಸ್ ಪಂಚರತ್ನ ಯಾತ್ರೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಲಾಗಿದೆ.

    ಇಂದಿಲ್ಲಿ ಈ ವಿಷಯ ತಿಳಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು; ಮಳೆ ಬಿಡುವು ಕೊಟ್ಟ ಕೂಡಲೇ ರಥಯಾತ್ರೆಯನ್ನು ಕೂಡಲೇ ಆರಂಭ ಮಾಡಲಾಗುವುದು ಎಂದು ಹೇಳಿದ್ದಾರೆ.

    ಬೆಳಗ್ಗೆಯೇ ಇತಿಹಾಸ ಪ್ರಸಿದ್ಧ ಕುರುಡುಮಲೆ ಮಹಾಗಣಪತಿ ದೇವಾಲಯದಲ್ಲಿ ಪೂಜೆ, ಹೋಮ ನೆರವೇರಿಸಿದ ನಂತರ ರಥಯಾತ್ರೆಗೆ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರು ಹಾಗೂ ನಾನು ಚಾಲನೆ ನೀಡಿದೆವು. ಆದರೆ, ಮಳೆ ಹೆಚ್ಚಾದ ಕಾರಣಕ್ಕೆ ಬೃಹತ್ ಸಮಾವೇಶ ರಥಯಾತ್ರೆ ಹಾಗೂ ಗ್ರಾಮ ವಾಸ್ತವ್ಯವನ್ನು ಒಂದು ವಾರ ಮುಂದಕ್ಕೆ ಹಾಕಲಾಗಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

    ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಿಷ್ಟು;

    ಇವತ್ತಿನ ಕಾರ್ಯಕ್ರಮಕ್ಕೆ ವರುಣನ ಸಿಂಚನ ಆಗಿದೆ. ರಭಸವಾಗಿ ಸುರಿದ ಕಾರಣ ಬಹಿರಂಗ ಸಭೆ, ರಥಯಾತ್ರೆ, ಗ್ರಾಮ ವಾಸ್ತವ್ಯವನ್ನು ಮುಂದೂಡಲಾಗಿದೆ.

    ಬೆಳಗ್ಗೆಯಿಂದ ಕುರುಡುಮಲೆ ದೇವಸ್ಥಾನದಲ್ಲಿ ಪೂಜೆ ಆಯಿತು. ದೇವರ ಪ್ರಸಾದ ಕೂಡ ಆಯಿತು. ಆದರೆ ಮಳೆ ಕಾರಣಕ್ಕೆ ಎಲ್ಲರ ಸಲಹೆ ಪಡೆದು ರಥಯಾತ್ರೆ ಮುಂದೂಡಿದ್ದೇವೆ. ಒಂದು ವಾರದ ನಂತರ ಮುಳಬಾಗಿಲು ಪಟ್ಟಣದಿಂದಲೇ ಯಾತ್ರೆ ಶುರು ಮಾಡುತ್ತೇವೆ.

    ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇನ್ನೂ ನಾಲ್ಕೈದು ದಿನಗಳು ಮಳೆ ಬರಲಿದೆ ಎಂದಿದೆ. ಹೀಗಾಗಿ ಜನರಿಗೆ ತೊಂದರೆ ಆಗದಂತೆ ಮುಂದಕ್ಕೆ ಹಾಕಿದ್ದೇವೆ.

    ಇವತ್ತು ಬಹಳ ದೊಡ್ಡ ಮಟ್ಟದಲ್ಲಿ ಜನತೆ ಬೆಂಬಲ ನೀಡಿದ್ದರು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬಂದಿದ್ದರು. ಮಳೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸುವುದು ಕಷ್ಟವಾಗಿದೆ.

    ಮಳೆಯ ಸೂಚನೆ ನೋಡಿಕೊಂಡು ಕಾರ್ಯಕ್ರಮ ಮಾಡಲಾಗುವುದು. ಎರಡು ದಿನಗಳಲ್ಲಿ ದಿನಾಂಕವನ್ನು ತಿಳಿಸಲಾಗುವುದು.

    ಬೃಹತ್ ಸಮಾವೇಶದಲ್ಲಿ ಮುಂದಿನ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಣೆ ಮಾಡಿ, ಅವರಿಗೆ ಪಕ್ಷ ನಿಷ್ಠೆಯ ಪ್ರಮಾಣ ವಚನ ಬೋಧಿಸುವ ಕಾರ್ಯಕ್ರಮ ಇತ್ತು. ಆದರೆ, ವಾರದ ನಂತರದ ಸಮಾವೇಶದಲ್ಲಿ ಪಟ್ಟಿ ಘೋಷಣೆ, ಪ್ರಮಾಣ ವಚನ ಬೋಧನೆ ಎರಡನ್ನೂ ಮಾಡಲಾಗುವುದು.

    ಈಗಾಗಲೇ ಅಭ್ಯರ್ಥಿಗಳಿಗೆ ಸೂಚನೆ ಕೊಡಲಾಗಿದ್ದು, ಅವರೆಲ್ಲರೂ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷವೇ ಅವರಿಗೆ ಸೂಚನೆ ನೀಡಲಾಗಿದೆ ಸಂಭವನೀಯ ಎಲ್ಲಾ ಅಭ್ಯರ್ಥಿಗಳನ್ನು ಮುಳಬಾಗಿಲಿಗೆ ಕರೆಯಲಾಗಿತ್ತು.

    ಕೆಸಿಆರ್ ಅವರ ಪ್ರತಿನಿಧಿ ಹಾಜರು:

    ರಥಯಾತ್ರೆ ಚಾಲನೆ ಹಾಗೂ ಬೃಹತ್ ಸಮಾವೇಶಕ್ಕೇ ತೆಲಂಗಾಣ ಮುಖ್ಯಮಂತ್ರಿ ಹಾಗೂ ಭಾರತ್ ರಾಷ್ಟ್ರ ಸಮಿತಿ ನಾಯಕ ಕೆ.ಚಂದ್ರಶೇಖರ ರಾವ್ ಅವರು ಶಾಸಕ ರಾಜೇಂದರ್ ರೆಡ್ಡಿ ಅವರನ್ನು ಕಳಿಸಿದ್ದಾರೆ. ಅವರ ಆಗಮನ ನಮಗೆ ಬಹಳ ಸಂತೋಷ ಉಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

    ಬಿಜೆಪಿ ವಿರುದ್ಧ ವಾಗ್ದಾಳಿ:

    ರಾಜ್ಯ ಮತ್ತು ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ ಹೇಳುವುದು ಒಂದು ಮಾಡುವುದು ಇನ್ನೊಂದು ಎನ್ನುವಂತೆ ಆಗಿದೆ. ಬಿಜೆಪಿ ನಡವಳಿಕೆಯನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಶಾಸಕರನ್ನು ಖರೀದಿ ಮಾಡಿ ಸರಕಾರ ಮಾಡುತ್ತಿದ್ದಾರೆ. ಇದಕ್ಕೆ ಉತ್ತರ ಕೊಡುವ ಕಾಲ ಹತ್ತಿರದಲ್ಲೇ ಇದೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.

    ಮನುಷ್ಯ ಬದಲಾಗಲೇಬೇಕು…


    ಹೆಸರಾಂತ ಕತೆಗಾರ ಕೆ.ಸತ್ಯನಾರಾಯಣ ಅವರ ಹೊಸ ಕಥಾಸಂಕಲನ ಮನುಷ್ಯರು ಬದಲಾಗುವರೆ?’ ಇತ್ತೀಚೆಗೆ ಬಿಡುಗಡೆಯಾಗಿದೆ. ಇದರಲ್ಲಿರುವ 15 ಕತೆಗಳು ಬದುಕಿನ ಭಿನ್ನ ನೆಲೆಗಳನ್ನು ದರ್ಶಿಸುತ್ತವೆ.


    ಕತೆಯೇನೋ ಯಾವಾಗಲೂ ತನ್ನ ಪಾಡಿಗೆ ತಾನು ತನ್ನದೇ ಜಗತ್ತಿನಲ್ಲಿ ಇರುತ್ತದೆ. ಅದನ್ನು ನೋಡುವುದರಿಂದ, ಹೇಳುವವರಿಂದ, ಬರೆಯುವವರಿಂದ ಕತೆಯ ಒಂದಷ್ಟು ಭಾಗ ಮಾತ್ರ ಈ ಜಗತ್ತಿಗೆ ಬರುತ್ತದಷ್ಟೆ.. (ಒಂದು ಭೋಜನ ಮೀಮಾಂಸೆ) ಎಂಬ ನಂಬಿಕೆಯಿಂದ ಬರೆಯುತ್ತಿರುವ ಕತೆಗಾರ ಕೆ. ಸತ್ಯನಾರಾಯಣ ಅವರಮನುಷ್ಯರು ಬದಲಾಗುವರೆ?’ ಕಥಾಸಂಕಲನ ಮನುಷ್ಯ ಜಗತ್ತಿನ ಹಲವು ಸೂಕ್ಷ್ಮ ಸುಳಿಹುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ನೆರವಾಗುತ್ತದೆ.

    ಕತೆಗಾರನ ಮುಂದೆ ವಿಶಾಲವಾದ, ವಿಚಿತ್ರವಾದ ಜಗತ್ತಿದೆ. ಅವರವರ ನೋಟಕ್ಕೆ ತಕ್ಕಂತೆ ಅದು ಅವರಿಗೆ ದಕ್ಕುತ್ತದೆ. ಹಾಗೆ ದಕ್ಕಿಸಿಕೊಳ್ಳುವಾಗ ಅವರಿಗೆ ಜವಾಬ್ದಾರಿಯೂ ಇರುತ್ತದೆ. ಅದನ್ನೇ ಅವರು ಈ ಮೇಲೆ ಹೇಳಿದ ಕತೆಯ ಒಂದು ಪಾತ್ರ, ಪ್ರಸಿದ್ಧ ವಿಮರ್ಶಕ ರಾಜಶೇಖರ ಅವರ ಮಾತುಗಳಲ್ಲಿ ಹೀಗೆ ಹೇಳಿಸುತ್ತಾರೆ.. “ನಾವೆಲ್ಲರೂ ನಾಡಿನ ಪಳಗಿದ ಕಥನಕಾರರು. ಕತೆಯನ್ನು ಎಲ್ಲಿಂದ ಪ್ರಾರಂಭಿಸಬೇಕು, ಎಲ್ಲಿಗೆ ನಿಲ್ಲಿಸಬೇಕು, ಯಾವ ವಿಚಾರ, ಯಾವ ಭಾವ, ಯಾವ ತಿರುವು, ಯಾವ ಭೇದಭಾವಕ್ಕೆ ಎಷ್ಟೆಷ್ಟು ಪ್ರಾಮುಖ್ಯತೆ ನೀಡಬೇಕು ಎನ್ನುವುದು ನಿಮಗೆ ಬಿಟ್ಟಿದ್ದು. ಆದರೆ ಏನನ್ನೂ ಬಿಡಬೇಡಿ, ಯಾವುದನ್ನೂ ಬಿಡಬೇಡಿ, ಯಾವೊಂದು ನೆಲೆಗೂ ಮೋಸ ಮಾಡಬೇಡಿ ಎಂದು ಮಾತ್ರ ಕೇಳಿಕೊಳ್ಳುತ್ತೇನೆ.”

    ನಿಜ, ಒಂದು ಭೋಜನ ಮೀಮಾಂಸೆ ಎಂಬ ಕತೆಯಲ್ಲಿ ಕಥನ ಸಾಹಿತ್ಯದ, ಒಟ್ಟಾರೆ ಸಾಹಿತ್ಯದ ಮೀಮಾಂಸೆಯೂ ಇದೆ. ಇದು ಕೇವಲ ಇದೊಂದೇ ಕತೆಯಲ್ಲಿ ಅಲ್ಲ, ಇನ್ನೂ ಕೆಲವು ಕತೆಗಳಲ್ಲಿ ಇಂಥ ಕಥನ ಮೀಮಾಂಸೆ ಬರುತ್ತದೆ. ಬರೆದವರೇ ಬರವಣಿಗೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಹೋಗಬಾರದು…. `ಒಂದೇ ಬರವಣಿಗೆ ಬರೆದವರಿಗೂ ಸೇರಿದಂತೆ ಸಕಲರಿಗೂ ಬೇರೆ ಬೇರೆಯಾಗಿ ಕಾಣುತ್ತದೆ. ನಮ್ಮ ಬರವಣಿಗೆ ಹೀಗೇ ಕಾಣುತ್ತಿರಬೇಕು ಎಂದು ನಮ್ಮ ಆಸೆ…” ಎಂಬ ಮಾತುಹನಿ ಟ್ರಾಪ್‌’ ಕತೆಯ ರಾಮ್‌ ಸಿಂಗ್‌ ಮೂಲಕ ಹೇಳಿಸುತ್ತಾರೆ.

    ಹಾಗೆಯೇ ಜೀವನ ಮೀಮಾಂಸೆಯೂ ಇಲ್ಲಿಯ ಕತೆಗಳಲ್ಲಿದೆ. ಮೊದಲನೆಯ ಕತೆ, ವಾಷಿಂಗ್‌ಟನ್‌ ಮೆಮೋರಿಯಲ್‌ ಮುಂದೆ, ಇದರಲ್ಲಿ, ವಕೀಲನಾಗಿ ವಿಫಲನಾದ ವ್ಯಕ್ತಿ ಗುಡಿಬಂಡೆ ದಿವಾಕರ ಅಮೆರಿಕದಲ್ಲಿ ಹೇಗೆ ಫ್ಯಾಮಿಲಿ ಕೌನ್ಸೆಲರ್ ಆಗಿ ಯಶಸ್ವಿಯಾದ ಎಂಬುದನ್ನು ಹೇಳುತ್ತದೆ. ಇವನ ಜೀವನ ಸಿದ್ಧಾಂತ ಹೀಗಿದೆ, ಜೀವನ ನೇರವಾಗಿದೆ, ಸರಳವಾಗಿದೆ, ಅನಗತ್ಯವಾಗಿ ಸಂಕೀರ್ಣ ಮಾಡಿಕೊಳ್ಳಬೇಡಿ. ಜೀವನ ಸಂಕೀರ್ಣವಾಗೋಕ್ಕೆ ಕಾರಣ ಸಮಸ್ಯೆಯ ಸಂಕೀರ್ಣತೆಯಲ್ಲ, ನಮ್ಮ ನಮ್ಮ ಅಹಂಕಾರ. ಇದು ಗಂಡು-ಹೆಣ್ಣಿನ ಸಂಬಂಧಕ್ಕೂ ಅನ್ವಯಿಸುತ್ತದೆ. ದೇಶ-ದೇಶಗಳ ನಡುವಿನ ಸಂಬಂಧಕ್ಕೂ ಕೂಡ ಅನ್ವಯಿಸುತ್ತದೆ…” ಹಾಗೆಯೇ ಇನ್ನೊಂದು ಕಡೆ ಆತನೇ, ಹೇಳುವ ಈ ಮಾತನ್ನು ಗಮನಿಸಿ,ಯಾವ ಮದುವೆನೂ ಶೇಕಡ 51ಕ್ಕಿಂತ ಹೆಚ್ಚು ಯಶಸ್ವಿಯಾಗೋಲ್ಲ. ಎಲ್ಲ ಕಾಲದಲ್ಲೂ, ಎಲ್ಲ ಸಂಸ್ಕೃತಿಯಲ್ಲೂ ದಾಂಪತ್ಯ ಜೀವನದ ಪೀಕ್‌ ಪರ್ಫಾರ್ಮನ್ಸ್ ಅಷ್ಟೇ. ಮನುಷ್ಯನ ಜಾಣತನ ಎಲ್ಲಿದೆ ಅಂದರೆ, ಅದು ಯಾವತ್ತೂ ಶೇಕಡ 49ಕ್ಕಿಂತ ಕಡಿಮೆ ಆಗದಂತೆ ನೋಡಿಕೊಳ್ಳೋದು.” ಇದನ್ನೇ ಆತ ದಾಂಪತ್ಯದ ಆಚೆಗೂ ಗೆಳೆತನಕ್ಕೆ, ಮನುಷ್ಯರ, ದೇಶಗಳ ಎಲ್ಲ ಸಂಬಂಧಕ್ಕೂ ಕೂಡ ಅನ್ವಯಿಸುತ್ತೆ ಎಂದು ಹೇಳುತ್ತಾನೆ.

    `ಹನುಮಂತಾಚಾರ್‌ ಉಯಿಲು’ ಕತೆಯಲ್ಲಿ ಸಾವು ಮತ್ತು ಬದುಕಿನ ಜಿಜ್ಞಾಸೆ ಬರುತ್ತದೆ. “ಬದುಕುವುದು, ನಿತ್ಯವೂ ಬದುಕುವುದು, ಬದುಕುತ್ತಾ ಹೋಗುವುದೇ ಸಹಜವಾದದ್ದು. ಮನುಷ್ಯ ಹುಟ್ಟುವುದೇ ಬದುಕುವುದಕ್ಕೆ, ಬದುಕುತ್ತಾ ಹೋಗುವುದಕ್ಕೆ. ಸಾವೆನ್ನುವುದು Disruption, Source of disturbance. ಬದುಕು ಇಷ್ಟವಾಗದವರು, ಬದುಕಿನ ಬಗ್ಗೆ ಅಸೂಯೆ ಪಡುವವರು ನೀಡುವ ಶಾಪ……” ಎಂದು ಹೇಳುವ ಹನುಮಂತಾಚಾರ್‌ ಸಾವಿನ ಸಂದರ್ಭದಲ್ಲಿ ಊರುಬಿಟ್ಟು ಓಡಿಹೋಗಿ ನಂತರ ಮರಳುವವರು. ಕಾರಣ ಏನೆಂದರೆ, ಸಾವಿನ ಸಂದರ್ಭದಲ್ಲಿ ಬಳಸುವ ಕೃತ ಭಾಷೆ, ಯಾಂತ್ರಿಕವಾದ ಭಾವ ವ್ಯಕ್ತಪಡಿಸಸುವುದು ಇವೆಲ್ಲ ಅವರಿಗೆ ಇಷ್ಟವಾಗದಿರುವುದು. ಇದರಲ್ಲಿ ಮಾಧ್ಯಮದ ನಿವಿರಾದ ಲೇವಡಿಯೂ ಇದೆ.

    ಹಾಗೆಯೇ `ಕಾಮತರ ಪಂಜಾಬಿ ಸೊಸೆ’ ಕತೆಯಲ್ಲಿಯ ಸೊಸೆ ಸ್ವರೂಪ ಧಿಲ್ಲಾನ್‌ ತನ್ನ ಒಳಗುದಿಯನ್ನೆಲ್ಲ ತೋಡಿಕೊಂಡ ಬಳಿಕ ಹೇಳುವ, “ಇದನ್ನೆಲ್ಲ ನಾನು ಹೇಳಿದ್ದು, ಯಾರಲ್ಲಾದರೂ ತೋಡಿಕೊಳ್ಳಬೇಕು ಎಂದಲ್ಲ. ನನ್ನ ನಿರ್ಧಾರ ಗಟ್ಟಿಯಾಗಲೆಂದು. ಒಳ್ಳೆಯ ಮಾತುಗಳನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳುವುದರಿಂದ ನಾವು ಆ ಮಾತುಗಳಿಗೆ ಬದ್ಧರಾಗುತ್ತೇವೆ. ಹಾಗಾಗಿ ಯಾವಾಗಲೂ ಒಳ್ಳೆಯ ಮಾತುಗಳನ್ನು ಆಡುತ್ತಿರಬೇಕು….” ಹೀಗೆ ಬದುಕಿನ ಒಂದು ಗಾಢವಾದ ಸತ್ಯವನ್ನು ಹೃದಯಕ್ಕೆ ತಟ್ಟುವ ಒಂದು ಸನ್ನಿವೇಶವನ್ನು ಸೃಷ್ಟಿಸಿ ಪಾತ್ರವೊಂದರ ಮೂಲಕ ಹೇಳಿಸುವುದು ಸತ್ಯನಾರಾಯಣ ಅವರ ವಿಶಿಷ್ಟ ಕಲೆ.

    ಐಎಎಸ್‌ ಅಧಿಕಾರಿಯಾಗಿದ್ದ ಶಿವಗಾಮಿ ನಂತರ ತನ್ನ ನೌಕರಿಗೆ ರಾಜಿನಾಮೆ ನೀಡಿ, ಚುನಾವಣೆಗೆ ಸ್ಪರ್ಧಿಸಿದ್ದು, ಸೋತಿದ್ದು, ಐಎಎಸ್‌ ಪರೀಕ್ಷೆಗೆ ಕುಳಿತವರಿಗೆ ತರಬೇತಿ ನೀಡುವುದು, ನಂತರ ಸುಪ್ರೀಂ ಕೋರ್ಟಿನ ವಕೀಲೆಯಾಗಿದ್ದು ಇವೆಲ್ಲ ಮನುಷ್ಯನೊಬ್ಬ ಬದುಕಿನಲ್ಲಿ ಬದಲಾದ ಹಂತಗಳನ್ನು ಹೇಳುತ್ತದೆ. ಮನುಷ್ಯ ಬದಲಾಗುವುದು ಒಂದು ಸಹಜ ಪ್ರಕ್ರಿಯೆ. ಆದರೆ ಹೀಗೆ ಬದಲಾಗುವಾಗ ತಮ್ಮ ವ್ಯಕ್ತಿತ್ವದ ಸಮಗ್ರತೆಯನ್ನು ಹೇಗೆ ಶಿವಗಾಮಿ ಕಾಯ್ದುಕೊಂಡಳು ಎಂಬುದನ್ನು `ಶಿವಗಾಮಿ ಬದಲಾದಳೆ(ರೆ)?’ ಕತೆ ಹೇಳುತ್ತದೆ. ವ್ಯಕ್ತಿಯ ಮತ್ತು ಜೊತೆಜೊತೆಗೆ ಸಮಾಜದ ತಂತಿಯ ಮೇಲಿನ ನಡಿಗೆಯನ್ನು ಕತೆ ಸೊಗಸಾಗಿ ನಿರೂಪಿಸುತ್ತದೆ.

    ಸಾರ್ವಜನಿಕ ಬದುಕು ಮತ್ತು ಕೌಟುಂಬಿಕ ಬದುಕಿನ ದ್ವಿಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುವ ಸಂಧ್ಯಾ ಪ್ರಾಶಾಂತರ ಬದುಕು ಕದ್ದು(!) ಕೇಳಿಸಿಕೊಂಡ ಕಥೆ’ಯಲ್ಲಿ ಸರಳವಾಗಿ ಮೂಡಿಬಂದಿದೆ. ಅವರದು ಬೂಟಾಟಿಕೆಯ ಬದುಕು ಎನಿಸಿದರೂ ಈ ಜಗತ್ತು ಇರುವುದೇ ಹೀಗೆ ಅಲ್ಲವೆ ಅನ್ನಿಸಿ ಅವರ ಬಗ್ಗೆ ಸಾಫ್ಟ್‌ಕಾರ್ನ್‌ರ್‌ ತಾಳಿಬಿಡುತ್ತೇವೆ. ಹಾಗೆಯೇನಾಲ್ವಡಿಯವರ ವಿವೇಚನೆ’ ಎಂಬ ಕತೆ ಇತಿಹಾಸದ ಯಾವುದೋ ಕಳೆದುಹೋದ ಪುಟದ ದಾಖಲೆಯಂತಿದೆ. ಒಬ್ಬ ಪ್ರಜಾನುರಾಗಿ ದೊರೆ ತನ್ನ ಅಧಿಕಾರಿಗಳನ್ನು ನೇಮಿಸಿಕೊಳ್ಳುವಾಗ ಎಷ್ಟೊಂದು ಸೂಕ್ಷ್ಮವಾಗಿ ಇರಬಹುದು ಎಂಬುದನ್ನು ಇದು ಹೇಳುತ್ತದೆ.

    ಕತೆಗಾರ ಸತ್ಯನಾರಾಯಣರು ತಮ್ಮ ಮಾಗಿದ ವಯಸ್ಸಿನಲ್ಲಿ ಬರೆದಿರುವ ಇಲ್ಲಿಯ 15 ಕತೆಗಳು ಬದುಕಿನ ಹಲವು ಸಾಧ್ಯತೆಗಳನ್ನು ತೆರೆದಿಡುತ್ತವೆ. ಆ ಮೂಲಕ ತಾವು ಬದುಕಿನ ಅಂಚಿನಲ್ಲಿದ್ದೇವೆ ಎಂಬ ಹತಾಶೆಯಲ್ಲಿದ್ದವರಿಗೆ ಜೀವನೋತ್ಸಾಹವನ್ನು ತುಂಬುತ್ತವೆ. ಮನುಷ್ಯರು ಬದಲಾಗುತ್ತಾರೆ. ಈ ಬದಲಾಗುವಿಕೆಯೇ ನಿಜವಾದ ಜೀವನ. ಬದಲಾಗುವಿಕೆ ಇಲ್ಲದಿದ್ದರೆ ಬದುಕು ಹರಿವ ನೀರಾಗದೆ ಮಲೆತ ಕೊಚ್ಚೆಗುಂಡಿಯಾಗುತ್ತದೆ. ಇದನ್ನು ಸಂವಹನಗೊಳಿಸುವಲ್ಲಿ ಈ ಕತೆಗಳ ಮೂಲಕ ಸತ್ಯನಾರಾಯಣ ಅವರು ಯಶಸ್ವಿಯಾಗಿದ್ದಾರೆ.

    ನಗುವಿನ ಒಡೆಯನಿಗೆ ಕರ್ನಾಟಕ ರತ್ನ; ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ

    Bengaluru Nov 1

    ಕನ್ನಡ ಚಲನಚಿತ್ರ ನಟ ದಿ. ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ರಾಜ್ಯ ಸರ್ಕಾರದ ನೀಡಿರುವ ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿಯನ್ನು ದಿ. ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರದಾನ ಮಾಡಿದರು.

    ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ, ಸುರಿವ ಮಳೆಯ ನಡುವೆಯೇ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ, ದಿ.ಪುನೀತ್ ರಾಜ್ ಕುಮಾರ್ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಮಳೆಯನ್ನೂ ಲೆಕ್ಕಿಸದೇ ಸಹಸ್ರಾರು ಮಂದಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದನ್ನು ಕಣ್ತುಂಬಿಕೊಂಡರು. 

    ಮುಖ್ಯ ಅತಿಥಿಯಾಗಿ ಆಗಮಿಸಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ನಟ ರಜನೀಕಾಂತ್, ಅಪ್ಪು ಸಾಧಾರಣ ವ್ಯಕ್ತಿಯಲ್ಲ, ಆತ ಅಪಾರವಾದದ್ದನ್ನು ಸಾಧಿಸಿದ್ದಾರೆ. ಎನ್ ಟಿಅರ್, ಎಂಜಿಆರ್, ಶಿವಾಜಿಗಣೇಶನ್, ರಾಜ್ ಕುಮಾರ್ ಅವರು 50 ವರ್ಷದಲ್ಲಿ ಸಾಧಿಸಿದ್ದನ್ನು ಅಪ್ಪು 20  ವರ್ಷಗಳಲ್ಲಿ ಸಾಧಿಸಿದ್ದರು. ಅಪ್ಪು ಯಾವಾಗಲೂ ನಮ್ಮೊಂದಿಗೇ ಇರ್ತಾರೆ. ಕೇವಲ ನಟನೆಯಿಂದಷ್ಟೇ ಜನರನ್ನು ಗೆಲ್ಲಲು ಸಾಧ್ಯವಿಲ್ಲ. ಆದರ್ಶಗಳ ಮೂಲಕ ಗೆಲ್ಲಬಹುದು ಅದು ನಮ್ಮ ಅಪ್ಪು ಮಾಡಿದ್ದಾರೆ ಎಂದು ಬಣ್ಣಿಸಿದರು. ಇದೇ ವೇಳೆ 1979 ರಲ್ಲಿ ಶಬರಿ ಮಲೆ ಯಾತ್ರೆ ವೇಳೆ ತಾವು ಪುನೀತ್ ರಾಜ್ ಕುಮಾರ್ ಅವರನ್ನು ಮೊದಲ ಬಾರಿ ನೋಡಿದ್ದನ್ನು ರಜನಿಕಾಂತ್ ಸ್ಮರಿಸಿಕೊಂಡರು. 

    ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜ್ಯೂ. ಎನ್ ಟಿಆರ್, ಒಬ್ಬ ವ್ಯಕ್ತಿಗೆ ಉಪನಾಮ ಎಂಬುದು ಪರಂಪರೆಯಿಂದ ಬರುತ್ತದೆ ಆದರೆ ವ್ಯಕ್ತಿತ್ವ ಸ್ವಂತ ಸಂಪಾದನೆಯಾಗಿರುತ್ತದೆ. ಸ್ವಂತ ವ್ಯಕ್ತಿತ್ವದಿಂದ ನಗುವಿನಿಂದಲೇ ಒಂದು ರಾಜ್ಯ ಗೆದ್ದ ರಾಜ ಪುನೀತ್ ರಾಜ್ ಕುಮಾರ್, ಅವರು ಎಲ್ಲಕ್ಕೂ ಮಿಗಿಲಾಗಿ ಶ್ರೇಷ್ಠ ವ್ಯಕ್ತಿತ್ವದವರಾಗಿದ್ದರು ಎಂದರು. ಸಿಎಂ ಬೊಮ್ಮಾಯಿ, ಪುನೀತ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು “ನನ್ನ ಪುಣ್ಯ ಭಾಗ್ಯ, ಸರ್ಕಾರದ ಪುಣ್ಯಭಾಗ್ಯ, ಸೌಭಾಗ್ಯ ಸಿಕ್ಕಿದೆ ಎಂದು ಹೇಳಿದರು.

    ಮೂರ್ತಿ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ, ಸಚಿವರಾದ ಆರ್. ಅಶೋಕ್, ಸುನಿಲ್ ಕುಮಾರ್,ಡಾ. ಸುಧಾಕರ್, ವಿ. ಸೋಮಣ್ಣ, ಬೈರತಿ ಬಸವರಾಜ್, ಬಿ.ಸಿ. ನಾಗೇಶ್, ಚಲನಚಿತ್ರ ನಟ ಶಿವರಾಜಕುಮಾರ್ ಹಾಗೂ ಮತ್ತಿತರ ಗಣ್ಯರು ಇದ್ದರು.

    ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟ ಜ್ಯೂನಿಯರ್ ಎನ್. ಟಿ. ಆರ್. ಅವರನ್ನು ತಮ್ಮ ರೇಸ್ ಕೋರ್ಸ್ ರಸ್ತೆಯಲ್ಲಿನ ನಿವಾಸದಲ್ಲಿ ಸನ್ಮಾನಿಸಿದರು. ರಜನೀಕಾಂತ್ ಪುತ್ರಿ ಐಶ್ವರ್ಯಾ ಜೊತೆಗಿದ್ದರು.

    error: Content is protected !!