31.2 C
Karnataka
Sunday, May 12, 2024

    ದುಷ್ಟರನ್ನು ಕಂಡರೆ ದೂರ ಇರುವುದು ಲೇಸು

    Must read

    ಸುಮಾ ವೀಣಾ

    ಕರುಬರಿದ್ದೂರಿಂದೆ   ಕಾಡೊಳ್ಳಿತು- ಉಪಮಾಲೋಲ ಲಕ್ಷ್ಮೀಶನ  ‘ಜೈಮಿನಿ ಭಾರತದ’  ‘ಚಂದ್ರಹಾಸನ ಬಾಲ್ಯ’ದಲ್ಲಿ ಬರುವ    ನೀತಿಯುಕ್ತ ಮಾತಿದು.

    ರಾಜನಾಗಬಹುದು ಎನ್ನುವ ಉದ್ದೇಶದಿಂದ  ಚಂದ್ರಹಾಸನ ಮೇಲೆ ಇನ್ನಿಲ್ಲದ ಹಾಗೆ ಸಾಧಿಸಿದವನು ದುಷ್ಟಬುದ್ಧಿ ಎಂಬ ಮಂತ್ರಿ.  ಆ ಬಾಲಕನನ್ನು ಕೊಂದು ಗುರುತು ತೋರಿಸುವಂತೆ   ತನ್ನ ಭಟರಿಗೆ ಆಜ್ಞಾಪಿಸಿರುತ್ತಾನೆ.  ಚಂದ್ರಹಾಸನ ಮುಗ್ಧ ರೂಪವನ್ನು ಕಂಡು ಕೊಲ್ಲಲು ಮನಸ್ಸು ಬಾರದೆ   ಬಾಲಕನ ಕಾಲಿನ ಕಿರುಬೆರಳನ್ನು ಕತ್ತರಿಸಿ  ಕೊಂದೆವೆಂದು ಸುಳ್ಳು ಹೇಳುತ್ತಾರೆ.

    ಚಿತ್ರ ಸೌಜನ್ಯ ವಿಕಿಪಿಡಿಯಾ

    ರಕ್ತ ಒಸರಿಸಿಕೊಂಡು  ಚೀತ್ಕರಿಸುತ್ತಿದ್ದ ಬಾಲಕ ಚಂದ್ರಹಾಸನನ್ನು  ಕಂಡು  ಕಾಡಿನ ಮೃಗಾದಿ ಪಕ್ಷಿಗಳು  ಮರುಗುತ್ತವೆ,ಸಂತೈಸುತ್ತವೆ . ಆದರೆ ದುಷ್ಟಬುದ್ಧಿ  ಮತ್ಸರದಿಂದ ಮಗುವಿನ ಮೇಲೆ ಮಾಡಬಾರದ್ದನ್ನು ಮಾಡಿಸುತ್ತಾನೆ. ಆ ಸಂದರ್ಭದಲ್ಲಿ ಕವಿ ಇಂಥ ಮನುಷ್ಯರೊಂದಿಗೆ ಇರುವುದಕ್ಕಿಂತ  ಕಾಡಿನ ಜೀವನ ಮೇಲು ಎಡನ್ನುತ್ತಾನೆ. 

    ಮನುಷ್ಯ ಒಳ್ಳೆಯ ಗುಣವನ್ನು ಹೊಂದಿರುವಂತೆ ಕೆಟ್ಟಗುಣಗಳನ್ನು ಹೊಂದಿರುತ್ತಾನೆ. ಅದರಲ್ಲಿ ಈರ್ಷ್ಯೆ ಕೂಡ ಒಂದು. ತನ್ನನ್ನು ಬಿಟ್ಟು  ಯಾರೂ ಏಳಿಗೆ ಹೊಂದಿದರೂ ಸಹಿಸದ  ಮನಸ್ಥಿತಿಗಳು. ಎಷ್ಟು ಎಂದರೆ ಒಡಹುಟ್ಟಿದವರ ಅಭಿವೃದ್ಧಿಯನ್ನೂ ಸಹಿಸದ ಸಂಕುಚಿತ ಮನಸ್ಸುಗಳು  ದಿನೇ ದಿನೇ ಹೆಚ್ಚಾಗುತ್ತಿವೆ. ಇದೊಂದು  ಅನುಭವಿಸಲಾರದ ಇತರರಲ್ಲಿ ಹಂಚಿಕೊಳ್ಳಲಾರದ   ಉಭಯ ಸಂಕಟ.  ಹಿತಶತ್ರುಗಳ ಕಿರಿ ಕಿರಿ  ಸಹಿಸಲಸಾಧ್ಯವಾದಾಗ  ಇಂಥ  ಅಸೂಯಾ ಮನಸ್ಸುಗಳ ನಡುವೆ ಇರುವುದಕ್ಕಿಂತ ಕಾಡಿನ ವಾಸ ಅರ್ಥಾತ್ ಪರಿಚಯವೇ ಇಲ್ಲದವರ  ನಡುವೆ  ಜೀವನ ಸಾಗಿಸುವುದು  ಉತ್ತಮ  ಅನ್ನುವ ಅರ್ಥದಲ್ಲಿ  ದುಷ್ಟರನ್ನು ಕಂಡರೆ ದೂರ ಇರುವುದು ಲೇಸು   ಭಾವನೆಯನ್ನು “ಕರುಬರಿದ್ದೂರಿಂದೆ   ಕಾಡೊಳ್ಳಿತು” ಎಂಬ ಮಾತು ಸಂಕೇತಿಸುತ್ತದೆ.    ಹೊಟ್ಟೆ ಕಿಚ್ಚಿಗೆ ಕಣ್ಣೀರ್ ಸುರಿಸು ಎನ್ನುವಂತೆ ದುಷ್ಟ ಬುದ್ಧಿಗೆ ಕಡೆಗೆ ತನ್ನ ತಪ್ಪಿನ ಅರಿವಾಗುತ್ತದೆ.

    ಮನುಷ್ಯನ ಮಾನಸಿಕ ಸ್ವಾಸ್ಥವನ್ನು ಹಾಳುಮಾಡುವ ಪರಿಭಾಷೆ ಎಂದರೆ    ‘ಅಸೂಯೆ’. ಇನ್ನೊಬ್ಬರ ಏಳಿಗೆಯನ್ನು ಸಹಿಸದೆ ಇರುವುದು. ತನ್ನ ಜೀವನದ ಎಡರು ತೊಡರುಗಳಿಗೆ   ಅಸಂಬಂದ್ಧ ಕಾರಣಗಳನ್ನು   ಇನ್ಯಾರನ್ನೋ  ಆರೋಪಿಸಿ ಬದುಕುವ ಅತೃಪ್ತ ಮನಸ್ಸುಗಳು ಹೀಗೆ  ವರ್ತಿಸುವುದು.    ಕೋಪ ತಾನು ಹುಟ್ಟಿದ ಸ್ಥಳವನ್ನು ಮೊದಲು ನಿರ್ನಾಮ ಮಾಡುವಂತೆ ಅಸೂಯೆ  ವ್ಯಕ್ತಿಯನ್ನು ಹಾಳು ಮಾಡುತ್ತದೆ. ಇದುವೆ  ಇನ್ನೂ ಕೆಟ್ಟಗುಣಗಳನ್ನು ಸಂಚಯಿಸಿಕೊಳ್ಳಲು ಕಾರಣವಾಗಬಹುದು ಮನಸ್ಸಿನ ನೆಮ್ಮದಿಯನ್ನು ಕಸಿಯಬಹುದು. ( ಚಾಡಿ,ಕುತಂತ್ರ,   ಆರೋಪ ಹೊರಿಸುವುದು, ತೇಜೋವಧೆ, ಗುಂಪುಗಾರಿಕೆ….)  ವಿಘ್ನ ಸಂತೋಷಿಯಾಗದೆ ಎಲ್ಲರ  ಏಳಿಗೆಯನ್ನು  ಸಂಭ್ರಮಿಸುವುದು ಒಳ್ಳೆಯದು.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!