29.6 C
Karnataka
Sunday, May 24, 2026
    Home Blog Page 79

    ಅಕ್ರಮ ವಿದೇಶ ಪ್ರಜೆಗಳ ಪತ್ತೆ ಹಚ್ಚಿ ಗಡಿಪಾರು ಮಾಡಲು ಉನ್ನತ ಮಟ್ಟದ ಸಮಿತಿ ರಚನೆ

    ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ ಅವರನ್ನು ಅವರ ದೇಶಕ್ಕೆ ಗಡಿಪಾರು ಮಾಡುವ ಉದ್ದೇಶದೊಂದಿಗೆ ಒಳಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.

    ರಾಜ್ಯದಲ್ಲಿ ನಾಪತ್ತೆಯಾಗಿರುವ ಹಾಗೂ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಈ ಸಮಿತಿ ಕಾರ್ಯೋನ್ಮುಖವಾಗಲಿದೆ. ಪತ್ತೆಯಾಗುವ ಅಕ್ರಮ ವಿದೇಶಿಗರು ಯಾವ ದೇಶದವರು ಎಂಬು ಪತ್ತೆ ಮಾಡಿ ಆ ದೇಶಕ್ಕೆ ಅವರನ್ನು ಗಡಿಪಾರು ಮಾಡಲು ಕ್ರಮವಹಿಸಲಾಗುವುದು. ಈ ಪತ್ತೆ ಕಾರ್ಯಕ್ಕೆ ವಿದೇಶಿ ನೋಂದಣಾಧಿಕಾರಿಗಳ ಸಹಾಯ ಪಡೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಎಲ್ಲ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂದೇಶ ರವಾನಿಸಲಾಗುವುದು ಎಂದು ಗೃಹ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಪ್ರತಿ ತಿಂಗಳು ಪತ್ತೆಯಾದ ಮತ್ತು ಗಡಿಪಾರು ಮಾಡಲಾಗಿರುವ ವಿದೇಶಿ ಪ್ರಜೆಗಳ ಕುರಿತು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಲಾಗುವುದು.

    ಒಳಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಪ್ರಾದೇಶಿಕ ವಿದೇಶಿ ನೊಂದಣಾಧಿಕಾರಿ, ರಾಜ್ಯ ಗುಪ್ತವಾರ್ತೆ ಪೊಲೀಸ್ ಅಧೀಕ್ಷಕರು, ಸಂಬಂಧಪಟ್ಟ ಜಿಲ್ಲಾ ಪೊಲೀಸ್ ಅಧೀಕ್ಷಕರು, ಎನ್ಐಸಿ ಸಮಿತಿಯ ಸದಸ್ಯರಾಗಿರುತ್ತಾರೆ.

    ಬಾಕಿ ಇರುವ ಡಿಗ್ರಿ, ಡಿಪ್ಲೊಮೊ ಪರೀಕ್ಷೆಗಳನ್ನು ಬೇಗ ಮುಗಿಸಲು ಸೂಚನೆ

    ಪದವಿ ಮತ್ತು ಡಿಪ್ಲೊಮೊ ಸೆಮಿಸ್ಟರ್‌ಗಳ ಬಾಕಿ ಉಳಿದಿರುವ ಪರೀಕ್ಷೆಗಳನ್ನು ಬಹು ಬೇಗನೆ ಮುಗಿಸಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಎಲ್ಲ ವಿಶ್ವವಿದ್ಯಾಲಯ ಹಾಗೂ ಪಾಲಿಟೆಕ್ನಿಕ್‌ಗಳಿಗೆ ಸೂಚನೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಶುಕ್ರವಾರದಂದು ಪರೀಕ್ಷೆಗಳು ಹಾಗೂ ಕಾಲೇಜುಗಳನ್ನು ತೆರೆಯುವ ಬಗ್ಗೆ ಉನ್ನತ ಅಧಿಕಾರಿಗಳು ಹಾಗೂ ಉನ್ನತ ಶಿಕ್ಷಣ ಮಂಡಳಿ ಸದಸ್ಯರ ಜತೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.

    ಡಿಪ್ಲೊಮಾ ಪರೀಕ್ಷೆ

    ಬೆಸ ಸೆಮಿಸ್ಟರ್‌ಗಳ (1, 3 & 5) ಡಿಪ್ಲೊಮಾ ಪ್ರಾಯೋಗಿಕ ಪರೀಕ್ಷೆಗಳು ಜುಲೈ 26ರಿಂದ 28 ಮತ್ತು ಇವೇ ಸೆಮಿಸ್ಟರ್‌ಗಳ ಉಳಿದ ವಿಷಯಗಳ ಥಿಯರಿ ಪರೀಕ್ಷೆಗಳು ಮತ್ತಿತರೆ ಸೆಮಿಸ್ಟರ್‌ಗಳ ಪರೀಕ್ಷೆಗಳು ಆಗಸ್ಟ್ 2ರಿಂದ 21ರವರೆಗೆ ನಡೆಸಲು ಸೂಚಿಸಲಾಗಿದೆ.

    ಇನ್ನು ಸಮ ಸೆಮಿಸ್ಟರ್‌ಗಳಾದ 2, 4 & 6ರ ಡಿಪ್ಲೊಮಾ ಪ್ರಾಯೋಗಿಕ ಪರೀಕ್ಷೆಗಳನ್ನು ನವೆಂಬರ್‌ 2ರಿಂದ 12ರವರೆಗೆ ಹಾಗೂ ಇವೇ ಸೆಮಿಸ್ಟರ್‌ಗಳ ಥಿಯರಿ ಪರೀಕ್ಷೆಗಳನ್ನು ನವೆಂಬರ್ 17ರಿಂದ ಡಿಸೆಂಬರ್‌ 6ರವರೆಗೆ ನಡೆಸಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

    ಪದವಿ ಪರೀಕ್ಷೆ

    ಬಹುತೇಕ ಎಲ್ಲ ವಿವಿಗಳು ಪರೀಕ್ಷೆಗಳನ್ನು ಮುಗಿಸಿದ್ದು, ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ಕರ್ನಾಟಕ ವಿವಿ, ಕಲಬುರಗಿ ವಿವಿ, ಬೆಂಗಳೂರು ವಿವಿ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಇದರಲ್ಲಿ ಬಾಕಿ ಇರುವ ಬೆಸ ಸೆಮಿಸ್ಟರ್ ಗಳ ಪರೀಕ್ಷೆಯನ್ನು ಆಗಸ್ಟ್ 15ರೊಳಗೆ ಹಾಗೂ ಸಮ ಸೆಮಿಸ್ಟರ್ ಗಳ ಪರೀಕ್ಷೆಯನ್ನು ಅಕ್ಟೋಬರ್ ಒಳಗೆ ಮುಗಿಸುವಂತೆ ಸೂಚಿಸಲಾಗಿದೆ.

    ಎಲ್ಲ ಪರೀಕ್ಷೆಗಳಲ್ಲೂ ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ. ದೈಹಿಕ ಅಂತರ, ಮಾಸ್ಕ್‌ ಧರಿಸುವುದನ್ನು ತಪ್ಪಿಸುವಂತಿಲ್ಲ. ಒಂದು ವೇಳೆ ಯಾವುದೇ ವಿದ್ಯಾರ್ಥಿಗೆ ಪಾಸಿಟೀವ್‌ ಬಂದಿದ್ದರೆ ಅಂಥರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಆದೇಶಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    ಕಾಲೇಜು ಆರಂಭ; ಇನ್ನೆರಡು ದಿನದಲ್ಲಿ ನಿರ್ಧಾರ:

    ಉನ್ನತ ಶಿಕ್ಷಣ ವಿಭಾಗದ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.

    ಈಗಾಗಲೇ ಶೇ.65ರಷ್ಟು ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲಾಗಿದೆ. ಸರಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳ ಸರಕಾರಿ ತೆಗೆದುಕೊಂಡರೆ ಶೇ.75ರಷ್ಟು ವಿದ್ಯಾರ್ಥಿಗಳು ವ್ಯಾಕ್ಸಿನ್‌ ಪಡೆದಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೆ ಶೀಘ್ರವೇ ನೀಡಲಾಗುವುದು. ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಲಸಿಕೀಕರಣ ಭರದಿಂದ ಸಾಗುತ್ತಿದೆ ಎಂದರು ಅವರು.

    ಆಫ್‌ಲೈನ್‌ ಕ್ಲಾಸ್‌ ಕಡ್ಡಾಯ ಅಲ್ಲ. ಇಷ್ಟ ಇದ್ದವರು ಲಸಿಕೆ ಪಡೆದು ಬರಬಹುದು, ಇಲ್ಲದವರು ಆನ್‌ಲೈನ್‌ ಕ್ಲಾಸ್‌ನಲ್ಲಿ ಪಾಠ ಕೇಳಬಹುದು. ಆದರೆ, ಹಾಜರಿ ಮಾತ್ರ ಕಡ್ಡಾಯ. ಮೇ ತಿಂಗಳಿಂದಲೇ ಆನ್‌ಲೈನ್ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಜತೆಗೆ, ಸಂಪರ್ಕ ತರಗತಿಗಳೂ ನಡೆಯುತ್ತಿವೆ. ಆಗಸ್ಟ್‌ 15ರಿಂದ ಬರುವ ವಿದ್ಯಾರ್ಥಿಗಳಿಗೂ ಸಂಪರ್ಕ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

    ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್‌, ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ಮುಂತಾದವರು ಭಾಗಿಯಾಗಿದ್ದರು.

    ಕೊರೊನಾ ಇನ್ನೂ ಮುಗಿದಿಲ್ಲ, ನಿರ್ಬಂಧ ತೆರವಿನ ನಂತರದ ಚಿತ್ರಣ ಆತಂಕಕಾರಿ: ಪ್ರಧಾನಿ ಕಳವಳ

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ ಸಂಬಂಧಿತ ಪರಿಸ್ಥಿತಿಯ ಕುರಿತು ಚರ್ಚಿಸಲು ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರ ಗೃಹ ಸಚಿವರು, ಆರೋಗ್ಯ ಸಚಿವರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಕೋವಿಡ್ ಎದುರಿಸಲು ಎಲ್ಲ ಸಾಧ್ಯ ನೆರವು ಒದಗಿಸಿದ ಪ್ರಧಾನಮಂತ್ರಿಯವರಿಗೆ ಮುಖ್ಯಮಂತ್ರಿಗಳು ಧನ್ಯವಾದ ಅರ್ಪಿಸಿದರು. ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಸೋಂಕು ತಡೆಯಲು ಕೈಗೊಂಡಿರುವ ಕ್ರಮಗಳು ಮತ್ತು ಲಸಿಕಾ ಕಾರ್ಯಕ್ರಮದ ಪ್ರಗತಿಯ ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಲಸಿಕಾ ಕಾರ್ಯತಂತ್ರದ ಕುರಿತಂತೆ ತಮ್ಮ ಪ್ರತಿಕ್ರಿಯೆಯನ್ನೂ ನೀಡಿದರು.

    ಮುಖ್ಯಮಂತ್ರಿಗಳು ವೈದ್ಯಕೀಯ ಮೂಲಸೌಕರ್ಯ ಹೆಚ್ಚಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾತನಾಡಿದರು ಮತ್ತು ಭವಿಷ್ಯದಲ್ಲಿ ಸಂಭಾವ್ಯ ಪ್ರಕರಣಗಳ ಹೆಚ್ಚಳದ ನಿರ್ವಹಣೆಯ ಕುರಿತಂತೆ ಸಲಹೆ ನೀಡಿದರು. ಕೋವಿಡ್ ನಂತರ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅಂತಹ ಪ್ರಕರಣಗಳಲ್ಲಿ ನೆರವು ಒದಗಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅವರು ಚರ್ಚಿಸಿದರು. ಸೋಂಕು ಹೆಚ್ಚಳವಾಗದಂತೆ ನಿಯಂತ್ರಿಸಲು ತಾವು ಎಲ್ಲ ಸಾಧ್ಯ ಕಾರ್ಯ ಮಾಡುವ ಭರವಸೆಯನ್ನು ನೀಡಿದರು.

    ಕೇಂದ್ರ ಗೃಹ ಸಚಿವರು ಈ ಆರು ರಾಜ್ಯಗಳು ಜುಲೈ ತಿಂಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಶೇಕಡ 80ಕ್ಕಿಂತ ಹೆಚ್ಚು ಪ್ರಕರಣಗಳನ್ನು ಹೊಂದಿದ್ದು, ಕೆಲವು ರಾಜ್ಯಗಳು ಅತಿ ಹೆಚ್ಚು ಪಾಸಿಟಿವಿಟಿ ದರವನ್ನೂ ಹೊಂದಿವೆ ಎಂದು ಉಲ್ಲೇಖಿಸಿದರು. ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ, ದೇಶದಲ್ಲಿ ಕೋವಿಡ್ ಪ್ರಕರಣಗಳ ಕುರಿತು ಚರ್ಚಿಸಿದರು ಮತ್ತು ಕೋವಿಡ್ ಸೂಕ್ತ ನಡವಳಿಕೆ ಮತ್ತು ನಿಗ್ರಹ ಕ್ರಮಗಳನ್ನು ಅತಿ ಹೆಚ್ಚು ಪ್ರಕರಣ ಇರುವ ಜಿಲ್ಲೆಗಳಲ್ಲಿ ಮರು ಜಾರಿ ಮಾಡುವ ಅಗತ್ಯ ಕುರಿತಂತೆ ಮಾತನಾಡಿದರು. ಈ ಜಿಲ್ಲೆಗಳಲ್ಲಿ ಕಾರ್ಯಚಟುವಟಿಕೆ ಮುಕ್ತಗೊಳಿಸುವುದನ್ನು ಹಂತಹಂತವಾಗಿ ಮತ್ತು ಕ್ರಮೇಣ ಮಾಡುವ ಕುರಿತು ಸಲಹೆ ಮಾಡಿದರು.

    ತಮ್ಮ ಸಮಾರೋಪ ನುಡಿಗಳಲ್ಲಿ ಪ್ರಧಾನಮಂತ್ರಿಯವರು ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ರಾಜ್ಯ ಸರ್ಕಾರಗಳ ಪರಸ್ಪರ ಸಹಕಾರ ಮತ್ತು ಅರಿವನ್ನು ಶ್ಲಾಘಿಸಿದರು. ಮೂರನೇ ಅಲೆಯ ಬಗ್ಗೆ ನಿರಂತರವಾಗಿ ಹೇಳಲಾಗುತ್ತಿರುವ ಆತಂಕದ ಸನ್ನಿವೇಶದಲ್ಲಿ ನಾವಿದ್ದೇವೆ ಎಂದೂ ತಿಳಿಸಿದರು. ಇಳಿಕೆಯಾಗುತ್ತಿರುವ ಪ್ರಕರಣಗಳ ಸಂಖ್ಯೆಯಿಂದಾಗಿ ತಜ್ಞರು ಸಕಾರಾತ್ಮಕ ಸಂಕೇತಗಳನ್ನು ನೀಡುತ್ತಿದ್ದರೂ, ಕೆಲವು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳು ಇನ್ನೂ ಆತಂಕ ಒಡ್ಡಿವೆ. ಕಳೆದ ವಾರದಲ್ಲಿ ಶೇ. 80ರಷ್ಟು ಪ್ರಕರಣಗಳು ಮತ್ತು ಶೇ.84ರಷ್ಟು ದುರದೃಷ್ಟಕರ ಸಾವುಗಳು ಈ ಸಭೆಯಲ್ಲಿ ಹಾಜರಿರುವ ರಾಜ್ಯಗಳಿಂದಲೇ ಬಂದಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಎರಡನೆಯ ಅಲೆ ಬಂದಿದ್ದ ರಾಜ್ಯಗಳಲ್ಲಿ ಮೊದಲಿಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತದೆ ಎಂದು ಆರಂಭದಲ್ಲಿ ತಜ್ಞರು ನಂಬಿದ್ದರು. ಆದರೆ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಸಂಖ್ಯೆಯು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

    ಇದೇ ರೀತಿಯ ಪ್ರವೃತ್ತಿ ಎರಡನೇ ಅಲೆಗೂ ಮುನ್ನ ಜನವರಿ – ಫೆಬ್ರವರಿಯಲ್ಲಿ ಕಾಣಿಸಿಕೊಂಡಿತ್ತು ಎಂದು ಪ್ರಧಾನಮಂತ್ರಿ ಎಚ್ಚರಿಸಿದರು. ಹೀಗಾಗಿಯೇ ಪ್ರಕರಣಗಳು ಹೆಚ್ಚಳವಾಗುತ್ತಿರುವ ರಾಜ್ಯಗಳಲ್ಲಿ ನಾವು ಸಕಾರಾತ್ಮಕ ಕ್ರಮಗಳನ್ನು ಕೈಗೊಂಡು 3ನೇ ಅಲೆಯನ್ನು ತಡೆಯಬೇಕಾಗಿದೆ ಎಂದು ಪ್ರಧಾನಮಂತ್ರಿ ಸೂಚಿಸಿದರು.

    ದೀರ್ಘ ಸಮಯದವರೆಗೆ ಪ್ರಕರಣಗಳು ಹೆಚ್ಚುತ್ತಲೇ ಇದ್ದರೆ ಕೊರೊನಾ ವೈರಾಣುವಿನ ರೂಪಾಂತರದ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಮತ್ತು ಹೊಸ ರೂಪಾಂತರಿಗಳ ಅಪಾಯವೂ ಹೆಚ್ಚಾಗುತ್ತದೆ ಎಂಬ ತಜ್ಞರ ಅಭಿಪ್ರಾಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಆದ್ದರಿಂದ, ಸೂಕ್ಷ್ಮ ಕಂಟೈನ್ಮೆಂಟ್ ವಲಯಗಳ ಜೊತೆಗೆ ನಾವು ಪರೀಕ್ಷೆ, ಪತ್ತೆ, ಚಿಕಿತ್ರೆ ಮತ್ತು ಲಸಿಕೆ ಕಾರ್ಯತಂತ್ರ ಮುಂದುವರಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೆಚ್ಚಿನ ಸಂಖ್ಯೆಯ ಪ್ರಕರಣ ಇರುವ ಜಿಲ್ಲೆಗಳ ಬಗ್ಗೆ ಗಮನ ಹರಿಸಬೇಕು. ಇಡೀ ರಾಜ್ಯಗಳಲ್ಲಿ ಪರೀಕ್ಷೆಯನ್ನು ಹೆಚ್ಚಿಸಬೇಕು ಎಂದು ಮೋದಿ ಒತ್ತಿ ಹೇಳಿದರು. ಅತಿ ಹೆಚ್ಚಿನ ಸೋಂಕಿನ ಪ್ರದೇಶಗಳಲ್ಲಿ ಲಸಿಕೆ ಒಂದು ವ್ಯೂಹಾತ್ಮಕ ಸಾಧನ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಲಸಿಕೆಯ ಸಮರ್ಥ ಬಳಕೆಯ ಬಗ್ಗೆ ಪ್ರತಿಪಾದಿಸಿದರು. ಆರ್.ಟಿ.ಪಿ.ಸಿ.ಆರ್. ಪರೀಕ್ಷಾ ಸಾಮರ್ಥ್ಯ ಸುಧಾರಣೆಗೆ ಈ ಸಮಯ ಬಳಸಿಕೊಳ್ಳುತ್ತಿರುವ ರಾಜ್ಯಗಳನ್ನು ಪ್ರಧಾನಮಂತ್ರಿ ಪ್ರಶಂಸಿಸಿದರು.

    ಐಸಿಯು ಹಾಸಿಗೆಗಳು ಮತ್ತು ಪರೀಕ್ಷಾ ಸಾಮರ್ಥ್ಯದಂತಹ ವೈದ್ಯಕೀಯ ಮೂಲಸೌಕರ್ಯ ಹೆಚ್ಚಳಕ್ಕೆ ಒದಗಿಸಲಾಗುತ್ತಿರುವ ಆರ್ಥಿಕ ನೆರವಿನ ಬಗ್ಗೆಯೂ ಪ್ರಧಾನಮಂತ್ರಿ ಮಾತನಾಡಿದರು. ಇತ್ತೀಚಿಗೆ ಅನುಮೋದಿಸಲಾದ 23,000 ತುರ್ತು ಕೋವಿಡ್ ಸ್ಪಂದನಾ ಪ್ಯಾಕೇಜ್ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ವೈದ್ಯಕೀಯ ಮೂಲಸೌಕರ್ಯವರ್ಧನೆಗೆ ಈ ನಿಧಿ ಬಳಸುವಂತೆ ತಿಳಿಸಿದರು.

    ರಾಜ್ಯಗಳು ಮೂಲಸೌಕರ್ಯದ ಕಂದಕ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ಸರಿದೂಗಿಸಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಐಟಿ ವ್ಯವಸ್ಥೆ, ನಿಯಂತ್ರಣ ಕೊಠಡಿ ಮತ್ತು ಕಾಲ್ ಸೆಂಟರ್ ಗಳನ್ನು ಬಲಪಡಿಸುವಂತೆ ತಿಳಿಸಿದ ಅವರು, ಇದರಿಂದ ನಾಗರಿಕರು ಸಂಪನ್ಮೂಲಗಳು ಮತ್ತು ದತ್ತಾಂಶವನ್ನು ಪಾರದರ್ಶಕ ರೀತಿಯಲ್ಲಿ ಪಡೆಯುತ್ತಾರೆ ಮತ್ತು ರೋಗಿಗಳು ತೊಂದರೆಯಿಂದ ದೂರವಾಗುತ್ತಾರೆ ಎಂದರು. ಸಭೆಯಲ್ಲಿ ಹಾಜರಿರುವ ರಾಜ್ಯಗಳಿಗೆ 332 ಪಿ.ಎಸ್.ಎ. ಸ್ಥಾವರಗಳನ್ನು ಹಂಚಿಕೆ ಮಾಡಲಾಗಿದ್ದು, ಇದರಲ್ಲಿ 53 ಕಾರ್ಯಾರಂಭ ಮಾಡಿವೆ ಎಂದು ಮೋದಿ ಹೇಳಿದರು. ಸ್ಥಾವರಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಧಾನಮಂತ್ರಿ ತಿಳಿಸಿದರು. ಮಕ್ಕಳು ಸೋಂಕಿತರಾಗದಂತೆ ತಡೆಯುವ ಅಗತ್ಯವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿಯವರು, ಈ ಸಂಬಂಧ ಎಲ್ಲ ಸಾಧ್ಯ ಸಿದ್ಧತೆ ಮಾಡುವಂತೆ ತಿಳಿಸಿದರು.

    ಯುರೋಪ್, ಅಮೆರಿಕಾ ಮತ್ತು ಬಾಂಗ್ಲಾದೇಶ, ಇಂಡೋನೇಷಿಯಾ, ಥೈಲ್ಯಾಂಡ್ ಮತ್ತು ಇತರ ಹಲವು ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಬಗ್ಗೆ ಪ್ರಧಾನಮಂತ್ರಿಯವರು ಕಳವಳ ವ್ಯಕ್ತಪಡಿಸಿದರು. ಇದು ನಮ್ಮನ್ನು ಮತ್ತು ವಿಶ್ವವನ್ನು ಎಚ್ಚರಿಸಬೇಕು ಎಂದು ಪ್ರಧಾನಮಂತ್ರಿ ತಿಳಿಸಿದರು.

    ಕೊರೊನಾ ಇನ್ನೂ ಮುಗಿದಿಲ್ಲ ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಲಾಕ್ ಡೌನ್ ನಂತರ ಬರುತ್ತಿರುವ ಚಿತ್ರಣದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಕೋವಿಡ್ ಶಿಷ್ಟಾಚಾರ ಪಾಲನೆಯ ಅಗತ್ಯ ಪ್ರತಿಪಾದಿಸಿದ ಅವರು, ಸಭೆಯಲ್ಲಿರುವ ಅನೇಕ ರಾಜ್ಯಗಳು ಜನದಟ್ಟಣೆಯ ಮಹಾನಗರಗಳನ್ನು ಹೊಂದಿರುವುದರಿಂದ ಜನಜಂಗುಳಿಯನ್ನು ತಪ್ಪಿಸುವಂತೆ ತಿಳಿಸಿದರು. ಜನರಲ್ಲಿ ಜಾಗೃತಿ ಮೂಡಿಸುವಂತೆ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಸ್ಥೆಗಳು ಮತ್ತು ಎನ್‌.ಜಿ.ಒ.ಗಳಿಗೆ ಪ್ರಧಾನಮಂತ್ರಿ ಕರೆ ನೀಡಿದರು. (PIB ವರದಿ)


    .

    .

    ಹೆದರದೆ ಎದುರಿಸಿದೆ, ಈಗ ನವಚೇತನ ತುಂಬಿದೆ


    ಕೋವಿಡ್ ಎರಡನೇ ಅಲೆ ಕಡಿಮೆಯಾಗಿದೆ. ಹಾಗೆಂದು ಮೈ ಮರೆಯುವಂತೆ ಇಲ್ಲ. ಈ ಅಲೆಯನ್ನು ಅನೇಕರು ಮೆಟ್ಟಿನಿಂತು ಎದುರಿಸಿ ಬಂದಿದ್ದಾರೆ. ಗೆದ್ದವರ ಪಾಸಿಟಿವ್ ಕಥೆಗಳನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ. ಈ ಗೆಲವು ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ. ಕರೋನಾ ಒಂದೇ ಅಲ್ಲ ಯಾವ ರೋಗ ಬಂದರು ಧೈರ್ಯದಿಂದ ಎದುರಿಸಿದಾಗ ಜಯಿಸಲು ಸಾಧ್ಯ.


    ಕೊರೊನಾದಿಂದ ಸುಧಾರಿಸಿದ ಆರೋಗ್ಯ

    ಆಗುವುದೆಲ್ಲಾ ಒಳ್ಳೆಯದಕ್ಕೆ ಮುಂದೆ ಆಗುವುದು ಒಳ್ಳೆಯದಕ್ಕೆ ಎಂಬ ನಾಣ್ಣುಡಿಯಂತೆ, ಇಂದಿಗೆ 25 ದಿನಗಳ ಹಿಂದೆ ನನಗೆ ಕೊರೊನಾ ಅವರಿಸಿತು. ಅದಕ್ಕೆ ಮುನ್ನ ನನ್ನ ತಾಯಿಗೆ ಕೊರೊನಾ ಬಂದಿತ್ತು.ಅವರ ಆರೈಕೆಗೆ ಆಗಾಗ ಅವರ ಕೊಣೆಗೆ ಹೋಗುತ್ತಿದ್ದೆ, ಮತ್ತು ಔಷಧ ಮಾತ್ರೆಗಳನ್ನು ನೀಡುತ್ತಿದ್ದೆ, ಮತ್ತು ಹಾಸನ ಜಿಲ್ಲೆ ಅರಕಲಗೂಡಿನ ಆಸ್ಪತ್ರಗೆ ನನ್ನ ಕಾರ್‌ನಲ್ಲೇ ಕರೆದುಕೊಂಡು ಹೋಗಿದ್ದೆ, ಅರಕಲಗೂಡು ಗೂಡಿಗೆ ಸಮೀಪವಿರುವ ನಮ್ಮದೊಂದು ಪುಟ್ಟ ಹಳ್ಳಿ. ಆ ಹಳ್ಳಿಗೆ ಕೊರೋನಾ ಆವರಿಸುತ್ತದೆ ಎಂಬ ಯಾವ ನಂಬಿಕೆಯೂ ಇರಲಿಲ್ಲ. ಸಂಜೆ ಆಗಿದ್ದರಿಂದ ಅರಕಲಗೂಡಿನ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ತೆಗೆದುಕೊಳ್ಳಲಿಲ್ಲ, ಹಿಂದಿರುಗಿ ಮಾಮೂಲಿ ಜ್ವರದ ಔಷಧಿ ಮಾತ್ರಗಳನ್ನು ನೀಡಿದರೂ ಅವರಿಗೆ ಜ್ವರ, ಬಳಲಿಕೆ ಹೆಚ್ಚಾಯಿತು.

    ನನ್ನ ಸಹೋದರ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರಿಗೆ ತಾಯಿಗೆ ಜ್ವರದಿಂದ ಬಳಲುತ್ತಿರುವುದನ್ನು ತಿಳಿಸಿದೆ. ಅದಕ್ಕೆ ಆಕ್ಸಿಮೀಟರ್ ತಂದು ಪರೀಕ್ಷಿಸು, ಆಕ್ಸಿಮೀಟರ್‌ನಿಂದ ಎಲ್ಲವು ಗೊತ್ತಾಗುತ್ತದೆ ಎಂದರು. ಆಕ್ಸಿಮೀಟರ್‌ನಲ್ಲಿ ಪರೀಕ್ಷಿಸಿದಾಗ 99 ಆಮ್ಲಜನಕದ ಮಟ್ಟವಿತ್ತು. ಆದರೆ ನಮ್ಮ ತಾಯಿಗೆ ನಿರಂತರವಾಗಿ ಜ್ವರ ಮತ್ತು ಆಯಾಸ ಹೆಚ್ಚಾಗತೊಡಗಿತು. ಅವರ ನಿರಂತರ ಸಂಪರ್ಕದಿಂದ ಅಂದರೆ ನಾಲ್ಕು ದಿನ ಕಳೆದರೂ ನನಗೆ ಜ್ವರ ಬಂದಿರಲಿಲ್ಲ. ಈ ಕಾರಣದಿಂದ ತಾಯಿಗೆ ಬಂದಿರುವುದು ಕೊರೋನಾ ಅಲ್ಲ ಎಂದು ಭಾವಿಸಿದ್ದೆ. ನನ್ನ ಸಹೋದರನನ್ನು ಪುನಃ ಸಂಪರ್ಕಿಸಿ ಅಮ್ಮನಿಗೆ ತೀವ್ರ ಜ್ವರವಿದೆ ಹಾಸನದ ಆಸ್ಪತ್ರೆಗೆ ಕರೆದು ಕೊಂಡು ಹೋಗುತ್ತೇನೆ ಎಂದು ತಿಳಿಸಿದೆ. ಹಾಸನದ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಸೌಲಭ್ಯದ ಕೊರತೆಯಿದೆ ನೇರವಾಗಿ ಬೆಂಗಳೂರಿಗೆ ಕರೆದುಕೊಂಡು ಬಾ ಎಂದರು. ಹಾಗೆಯೇ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸೋಣ ಎಂದರು. ನಾನು ಹಾಗೆಯೇ ಅಲ್ಲಿಗೆ ನೇರವಾಗಿ ನನ್ನ ವಾಹನದಲ್ಲಿ ಕರೆದು ಕೊಂಡು ಹೋದೆ ನನ್ನ ಜೊತೆಯಲ್ಲಿ ನಮ್ಮ ಊರಿನಲ್ಲಿ ನುರಿತ ಡೈವರ್ ಯೋಗೇಶ(ಬಂಗಾರಪ್ಪ) ಎಂಬವರನ್ನು ಕರೆದು ಕೊಂಡು ಹೋದೆ.ಬಿಪಿ, ಇಸಿಜಿ, ಶುಗರ್ ಮತ್ತು ಕೊರೊನಾ ಪರೀಕ್ಷೆಗೆ ಒಳಪಡಿದರು. ಈ ಪರೀಕ್ಷೆಗಳನ್ನು ನನಗೂ ಒಳಪಡಿಸಿದರು. ನನಗೆ ಹೈ ಬಿಪಿ ಬಾರ್ಡರ್ ಲೈನಲ್ಲಿತ್ತು. ನಮ್ಮ, ತಾಯಿ ಬೀಪಿ ಶುಗರ್‌ಗೆ ಬೆಳಿಗ್ಗೆ, ಸಂಜೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಸಕ್ಕರೆ ಅಂಶ ಸಹಜವಾಗಿರಲಿಲ್ಲ. ಸೋಮವಾರ, ಮೇ 31 ರಂದು ಅದೇ ದಿನ ಕೊರೊನಾ ಪರೀಕ್ಷಾ ಫಲಿತಾಂಶ ನನ್ನ ಮೊಬೈಲ್‌ನಲ್ಲಿ ಪ್ರಕಟವಾಯಿತು. ನನಗೆ ಕೊರನಾ ಪಾಸಿಟಿವ್ ನನ್ನ ತಾಯಿಗೆ ನೆಗಟೀವ್!

    ನೆಗೆಟೀವ್ ಬಂದಿದ್ದರಿಂದ ಮತ್ತೆ ಎಕ್ಸ್ರೇ ಮತ್ತು ಸ್ಕಾನಿಂಗ್‌ ಗೆ ಒಳಪಡಿಸಿದರು. ಎಕ್ಸ್ರೇ ಮತ್ತು ಸ್ಕಾನಿಂಗ್‌ನಲ್ಲಿ ನನ್ನ ತಾಯಿಗೆ ಶ್ವಾಶಕೋಶದಲ್ಲಿ ಶೇಕಡ 10 ರಷ್ಟು ಸೋಂಕು ಆಗಿರುವುದು ಕಂಡು ಬಂದಿತು. ಇದಕ್ಕಿಂತ ಹೆಚ್ಚಾದಲ್ಲಿ ಅವರು ಬದುಕುವ ಸಂಭವ ಕಡಿಮೆ ಇತ್ತು.

    ಇಲ್ಲಿ ನಾವು ಮುಖ್ಯವಾಗಿ ತಿಳಿಯಬೇಕಾಗಿರುವುದು ಕೋರೋನಾ ರೋಗಾಣುವಿನಿಂದ ಜ್ವರ ಕಾಣಿಸಿಕೊಂಡರೆ ತತ್‌ಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವುದು ಅಥವಾ ವೈದ್ಯರ ಸಲಹೆ ಪಡೆದು ಮಾತ್ರೆ ಮತ್ತು ಔಷಧಗಳನ್ನು ತತ್‌ಕ್ಷಣ ಆರಂಭಿಸುವುದು. ಇಲ್ಲವೆಂದರೆ ನಮ್ಮ ಶ್ಶಾಶಕೋಶ ಮತ್ತು ಹೃದಯದಲ್ಲಿ ಆಕ್ಸಿಜನ್ ಸರಬರಾಜಾಗುವುದು ಕಡಿಮೆಯಾಗುತ್ತದೆ ಇಲ್ಲವೆಂದರೆ ಆಕ್ಸಿಜನ್ ಸರಬರಾಜು ನಿಂತು ಉಸಿರು ಚೆಲ್ಲಬಹುದು, ಗಂಭೀರವಾದರೆ ವೆಂಟಿಲೇಟರ್ ಅಗತ್ಯವಾಗುತ್ತದೆ. ಆರಂಭದಲ್ಲಿ ಚಿಕಿತ್ಸೆ ಪಡೆದಲ್ಲಿ ಕೊರೊನಾ ಮನೆಯಲ್ಲಿ ವಾಸಿ ಮಾಡಿಕೊಳ್ಳಬಹುದು.

    ನನ್ನ ತಾಯಿಯ ನಿರಂತರ ಸಂಪರ್ಕದಿಂದ ನನಗೆ ಕೊನೆಯ ಐದನೆಯ ದಿನಕ್ಕೆ ಜ್ವರ ಆರಂಭವಾಯಿತು. ಪಾಸಿಟಿವ್ ಬಂದ ತಕ್ಷಣ ನಾನು ನನ್ನ ಸೋದರ ಹಾಗೂ ಬಂಗಾರಪ್ಪ ಅವರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹಾಸನದ ಕಡೆ ಕಾರ್ ಚಲಾಯಿಸಿಕೊಂಡು ಹೊರಟೆ. ಏಕೆಂದರೆ ನನ್ನ ಮಗ ಮತ್ತು ಪತ್ನಿಗೆ ಕೊರೊನಾ ಪರೀಕ್ಷಿಸಿ ಚಿಕಿತ್ಸೆ ಕೊಡಿಸಬೇಕಿತ್ತು. ಮನೆಯಲ್ಲಿ ನಾನು ಐಸೋಲೇಟ್ ಆದೆ.

    ನಾನು ಜ್ವರ ಬಂದಿನಿಂದ ತಕ್ಷಣ ಮನೆಯಲ್ಲಿ ಅಂದರೆ ಹೋಮ್, ಕ್ವಾರೈಂಟೈನ್ ಆಗಿ ಚಿಕಿತ್ಸೆ ಆರಂಭಿಸಿದೆ.ನನಗೆ ವಿಪರೀತ ಜ್ವರ, ಬೆವರುವಿಕೆ ಆಗುತ್ತಿತ್ತು, ಈ ಜ್ವರದಲ್ಲಿ ನನಗೆ ಮದ್ಯದ ಅಮಲೇರಿದಂತೆ ಅನುಭವವಾಗುತ್ತಿತ್ತು, ವಿಪರೀತ ಕೋಪ ಬರುತಿತ್ತು, ಐದು ದಿನಗಳ ನಂತರ ಸುಸ್ತಾಗುತ್ತಿತ್ತು. ಜ್ವರ ವಾಸಿಯಾದ 10 ದಿನಗಳ ನಂತರ ಸಹಜ ಸ್ಥಿತಿಗೆ ಬಂದೆ.

    ಕೊರೊನಾದಿಂದ ನನಗೆ ಆರೋಗ್ಯಸುಧಾರಿಸಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನನಗೆ ಕೋರೋನಾ ವೈರಸ್ ಆವರಿಸುವುದಕ್ಕೆ ಮುಂಚೆ ಸುಮಾರು ಒಂದು ವರ್ಷದಿಂದ ನನ್ನ ಕಾಲಿನ ಹಿಮ್ಮಡಿಗಳು ಮಲಗಿ ಎದ್ದರೆ, ಕುಳಿತು ಎದ್ದರೆ ನಾಲ್ಕೈದು ಹೆಜ್ಜೆ ಹಾಕಲು ಕಡು ಕಷ್ಟವಾಗುತಿತ್ತು. ಮೈಕೈ ನೋವಾಗುತಿತ್ತು, ಕಾಫಿ ಕುಡಿದರೆ ನನಗೆ ತಲೆ ಸುತ್ತು ಮತ್ತು ಉಷ್ಣ ಬರುತಿತ್ತು. ವೈದ್ಯರು ಇದಕ್ಕೆ ಕೆಫಿನ್ ನಿಮಗೆ ಆಗುವುದಿಲ್ಲ. ಕಾಫಿ, ಕುಡಿಯಬೇಡಿ ಎಂದು ಹೇಳಿದ್ದರು. ನನಗೆ ಮೂಲವ್ಯಾಧಿ ಇರುವದರಿಂದ ಬೇಯಿಸಿದ ಮೊಟ್ಟೆ, ಮೀನು ಸೇವಿಸಿದರೆ ಮೂಲವ್ಯಾಧಿ ಉಲ್ಬಣವಾಗುತ್ತಿತ್ತು. ಈ ಕೋರೋನ ಆವರಿಸಿ ಇಲ್ಲಿಗೆ 25ದಿನಗಳು ಕಳೆದವು ಇಂದು ನನಗೆ ಹಿಂಬಡಿ ನೋವು ಮೈ, ಕೈ ನೋವುಗಳು ಮಾಯವಾಗಿವೆ, ಬೇಯಿಸಿದ ಮೊಟ್ಟಿ, ಮೀನು, ಕೋಳಿ ಮಾಂಸ ಎಷ್ಟು ಸೇವಿಸಿದರೂ ಉಷ್ಣವಾಗುವುದಿಲ್ಲ. ಶೀತ, ಕೆಮ್ಮು, ಗಂಟಲು ನೋವು, ಕಫ ಇಲ್ಲ. ನನಗೆ ಕೊರೊನಾ ಆವರಿಸಿ ಚೇತರಿಕೆ ಆದನಂತರ ನವಚೇತನ ಬಂದಂತಾಗಿ ನನಗೆ ಆರೋಗ್ಯ ಸುಧಾರಣೆಯಾಗಿ ಒಳ್ಳೆಯದೇ ಆಗಿದೆ. ಬಹುಶಃ ಕೊರೋನಾ ಕಾರಣದಿಂದ ಸೇವಿಸಿದ ಔಷಧಿಯ ಮಹಾತ್ಮೆ ಇರಬೇಕು.

    ಕೊರೊನಾ ಪೀಡಿತರಿಗೆ ಟಿ.ವಿ.ಗಳು, ನೆಂಟರಿಸ್ಟರು, ತಿಳಿವಳಿಕೆ ಇಲ್ಲದ ವೈದ್ಯರು ಅಪಾರ ಹೆದರಿಕೆ ಹುಟ್ಟಿಸುತ್ತಿದ್ದಾರೆ. ಮುಖ್ಯವಾಗಿ ಧೈರ್ಯ ತುಂಬಬೇಕಾದ ಬಂಧುಮಿತ್ರರು ಫೋನ್ ಮಾಡಿ ನೀನು ಹೊರಟು ಹೋಗುತ್ತೀಯಾ ಎಂದು ಹೆದರಿಸುತ್ತಿದ್ದರು. ಈ ಬಗೆಯ ಹೆದರಿಕೆ ಸಾಕಷ್ಟು ಜನರನ್ನು ನುಂಗಿ ನೆಣೆದಿದೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆದರಿಕೆಯನ್ನು ಹಿಮ್ಮೆಟ್ಟಿಸಲೆಂದು ಈ ಬರಹ.
    ವಾಹನಗಳಿಗೆ ಓರಾಯಿಲ್(ದೇಹ) ಮಾಡಿದಂತೆ ಪ್ರಕೃತಿ ನಮ್ಮ ದೇಹವನ್ನು 100 ವರ್ಷಗಳಿಗೊಮ್ಮೆ ರಿಪೇರಿ ಮಾಡುತ್ತಿರಬಹುದು. ನೂರು ವರ್ಷಗಳ ಹಿಂದೆ 1918ರಲ್ಲಿ ಬೆಂಕಿ ಜ್ವರ ಎಂದು ಕರೆಯುತ್ತಿದ್ದ ಇನ್ ಫ್ಲುಯೆಂಜಾ ಕಾಣಿಸಿತ್ತು. ಆ ಸಂದರ್ಭದಲ್ಲೂ ಜನರು ಬಾಯಿ ಮತ್ತು ಮೂಗಿಗೆ ಬಟ್ಟೆ ಕಟ್ಟಿಕೊಂಡು ಓಡಾಡಿರುವ ದೃಶ್ಯಾವಳಿಗಳನ್ನು ನೋಡಿದ್ದೇವೆ. ಆ ನೂರು ವರ್ಷದಲ್ಲಿ ಕಾಣಿಸಿಕೊಂಡ ಜ್ವರ ಇಂದು ಕಾಣಿಸಿರಬಹುದು. ಅಲ್ಲದೆ ಈ ಬೆಂಕಿ ಜ್ವರದಿಂದ ಬುದಕುಳಿದವರು ನೂರು ವರ್ಷ ದೀರ್ಘವಾಗಿ ಬದುಕಿದ್ದಾರೆ.


    ಕೊರೋನಾ ಗೆದ್ದವರು ತಮ್ಮ ಅನುಭವದ ಕಥೆಯನ್ನು [email protected] ಗೆ ಇ ಮೇಲ್ ಮಾಡಿ. ಸೂಕ್ತವಾದುವನ್ನು ಪ್ರಕಟಿಸಲಾಗುವುದು

    ಕೊಡಗಿನಲ್ಲಿ ಮಳೆ: ಹಾರಂಗಿ ಜಲಾಶಯ ಭರ್ತಿ

    ಕೊಡಗಿನಲ್ಲಿ ಮುಂಗಾರು ಅಬ್ಬರಿಸುತ್ತಿದ್ದು ಕಾವೇರಿ ಕಣಿವೆಯ ಪ್ರಸಿದ್ಧ ಜಲಾಶಯಗಳಲ್ಲಿ ಒಂದಾದ ಹಾರಂಗಿ ಜಲಾಶಯ ಭತಿ೯ಯಾಗಿದೆ. ಇಂದು ಜಲಾಶಯಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪ್ರಥಮವಾಗಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನಂತರ ಜಲಾಶಯಕ್ಕೆ ಬಾಗಿನ ಅಪಿ೯ಸಿದರು.

    ಈ ಸಂದಭ೯ದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು 1859 ಅಡಿಗಳ ಸಾಮಥ್ಯ೯ ಹೊಂದಿರುವ ಈ ಜಲಾಶಯ 1857 ಅಡಿಗಳಷ್ಟು ಭತಿ೯ ಯಾಗಿದ್ದು, ಈ ದಿನ 16000 ಕ್ಕೂ ಅಧಿಕ ಕ್ಯೂಸೆಕ್ಸ್ ಒಳ ಹರಿವಿದೆ. ಹಾಗಾಗಿ ಇಂದು ನೀರಾವರಿ ಸಲಹಾ ಸಮಿತಿಯ ತೀಮಾ೯ನದಂತೆ 2021-22 ನೇ ಸಾಲಿನ ಖಾರೀಫ್ ಬೆಳೆಗಳು ಮತ್ತು ಕೆರೆ ಕಟ್ಟೆಗಳಿಗೆ ಹರಿಸುವ ಕಾಯ೯ಕ್ಕೆ ಚಾಲನೆ ನೀಡಿದರು. ಈ ಮೂಲಕ ಕೊಡಗು ಜಿಲ್ಲೆಯ ಸೋಮವಾರಪೇಟೆ, ಮೈಸೂರಿನ ಪಿರಿಯಾಪಟ್ಟಣ, ಕೆ ಆರ್. ನಗರ, ಹುಣಸೂರು ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ವ್ಯಾಪ್ತಿಯ ಸುಮಾರು 1. 60 ಲಕ್ಷ ಎಕರೆಗೆ ನೀರಿನ ಸೌಲಭ್ಯ ಸಿಗಲಿದೆ ಎಂದರು.

    ರಾಜ್ಯದ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ ಕುಶಲತೆ ವೃದ್ಧಿ: ಬೆಂಗಳೂರು ಕೈಗಾರಿಕೆ ಸಂಸ್ಥೆ ಜತೆ ಒಪ್ಪಂದ

    ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಲ್ಲಿ ಕುಶಲತೆ ಹೆಚ್ಚಿಸುವ ದೃಷ್ಟಿಯಿಂದ ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆ (ಬಿಸಿಐಸಿ) ನಡುವೆ ಶುಕ್ರವಾರ ಮಹತ್ವದ ಒಪ್ಪಂದ ಆಗಿದೆ.

    ಬೆಂಗಳೂರಿನಲ್ಲಿ ಶುಕ್ರವಾರ ರಾಜ್ಯ ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್‌ ಮತ್ತು ಬಿಸಿಐಸಿ ಅಧ್ಯಕ್ಷ ಟಿ.ಆರ್.‌ಪರಶುರಾಮನ್‌ ಅವರುಗಳು ಒಪ್ಪಂದಕ್ಕೆ ಸಹಿ ಹಾಕಿದರು.

    ಬಳಿಕ ಮಾಧ್ಯಮಗಳಿಗೆ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಮಾಹಿತಿ ನೀಡಿದರು.

    “ರಾಜ್ಯದ ಯುವಜನರಲ್ಲಿ ಕುಶಲತೆ ಹೆಚ್ಚಿಸಿ ಉತ್ತಮ ರೀತಿಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಸರಕಾರ ಈಗಾಗಲೇ ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದು, ಅದಕ್ಕೆ ಪೂರಕವಾಗಿ ಹೊಸದಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದರು.

    ಉದ್ಯೋಗ, ಉದ್ಯಮಶೀಲತೆ, ಸಂಶೋಧನೆ ಹಾಗೂ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಕೈಗಾರಿಕೆಗಳಿಗೆ ಹಾಗೂ ಉದ್ಯೋಗ ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಹೊಸ ಪಠ್ಯಕ್ರಮ ರಚನೆ ಮಾಡಲು ಈ ಒಪ್ಪಂದ ಬಹಳ ಸಹಕಾರಿ ಆಗಲಿದೆ. ಈ ಬಗ್ಗೆ ಈಗಾಗಲೇ ಸರಕಾರ ಮತ್ತು ಬಿಸಿಐಸಿ ನಡುವೆ ಕೆಲ ಸುತ್ತಿನ ಮಾತುಕತೆ ನಡೆದಿದೆ. ಕೈಗಾರಿಕೆಗಳ ನೆರವಿನಿಂದಲೇ ವಿದ್ಯಾರ್ಥಿಗಳನ್ನು ನುರಿತ ತಂತ್ರಜ್ಞರನ್ನಾಗಿ ರೂಪಿಸಲು ಇದೊಂದು ಮಹತ್ವದ ಕ್ರಮ ಎಂದು ಅವರು ತಿಳಿಸಿದರು.

    ತಾಂತ್ರಿಕ ಶಿಕ್ಷಣ ಇಲ್ಲದೆ ಕೈಗಾರಿಕಾಭಿವೃದ್ಧಿ ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಈ ಒಪ್ಪಂದಕ್ಕೆ ಬಹಳ ಪ್ರಾಮುಖ್ಯತೆ ಇದೆ ಎಂದು ಡಿಸಿಎಂ ಪ್ರತಿಪಾದಿಸಿದರು.

    ಒಪ್ಪಂದದಲ್ಲಿ ಇನ್ನೇನಿದೆ?

    ಈ ಒಪ್ಪಂದದಲ್ಲಿ ಇನ್ನಷ್ಟು ಮಹತ್ವದ ಅಂಶಗಳಿದ್ದು, ಆ ಬಗ್ಗೆ ಡಿಸಿಎಂ ಅವರು ನೀಡಿದ ಮಾಹಿತಿ ಹೀಗಿದೆ:

    • ವರ್ತಮಾನದ ಜಾಗತಿಕ ಕೈಗಾರಿಕಾ ವ್ಯವಸ್ಥೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಬಿಸಿಐಸಿ ಮತ್ತು ತಾಂತ್ರಿಕ ಶಿಕ್ಷಣ ಸಹಯೋಗದಲ್ಲಿ ಬಿಸಿಐಸಿ- ಡಿಟಿಇ ಕೇಸ್ ಸೆಂಟರ್‌ ಸ್ಥಾಪನೆಯಾಗಲಿದೆ.
    • ಕೈಗಾರಿಕೆಗಳು ಆರು ತಿಂಗಳ ಇಂಟರ್ನ್‌ಶಿಪ್‌ ವ್ಯವಸ್ಥೆ ಹಾಗೂ ಉದ್ಯೋಗಾವಕಾಶ ಕಲ್ಪಿಸಲು ವಿದ್ಯಾರ್ಥಿಗಳ ವ್ಯಕ್ತಿಚಿತ್ರಣವನ್ನು ಆನ್‌ಲೈನ್‌ ಮೂಲಕ ನೋಡಿ ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
    • ತಾಂತ್ರಿಕ ಶಿಕ್ಷಣ ಇಲಾಖೆಗೆ ಅಗತ್ಯವಿರುವ ಮೂಲಸೌಕರ್ಯವನ್ನು ಒದಗಿಸಲು ನೆರವಾಗುವುದು, ಅಧ್ಯಾಪಕರ ಜ್ಞಾನಾಭಿವೃದ್ಧಿಗೆ ನುರಿತ ತಜ್ಞರಿಂದ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವುದು.
    • ವಿದ್ಯಾರ್ಥಿಗಳು ಪಠ್ಯದ ಬಗ್ಗೆ ಇನ್ನಷ್ಟು ಆಳವಾಗಿ ತಿಳಿಯಲು ಸಮಕಾಲೀನ ವಿಷಯಗಳ ಬಗ್ಗೆ ಅಧ್ಯಯನಕ್ಕೆ ಅವಕಾಶ ನೀಡುವುದು.
    • ಈ ಒಪ್ಪಂದದ ಅಂಶಗಳನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲು ಹಾಗೂ ಎಂಜಿನಿಯರಿಂಗ್‌ ಮತ್ತು ಡಿಪ್ಲೊಮೋ ವ್ಯಾಸಂಗ, ಭವಿಷ್ಯದಲ್ಲಿ ಕಾರ್ಯಪಡೆ ರಚನೆ ಮಾಡುವುದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ರೂಪುಗೊಳ್ಳಲಿರುವ ಪಠ್ಯಕ್ರಮ ನೆರವಾಗಲಿದೆ.

    ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು

    ರಾಜ್ಯದ ಸರಕಾರ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದು; ಅದಕ್ಕೆ ಪೂರಕವಾಗಿ ಕೈಗಾರಿಕೆಗಳು ಮತ್ತು ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಸರಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗುಣಮಟ್ಟದ ಕೌಶಲ್ಯತೆಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ಅತ್ಯಗತ್ಯವಾಗಿರುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಈ ಸಂದರ್ಭದಲ್ಲಿ ತಿಳಿಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿಯೂ ಜಾರಿಯಾಗುತ್ತಿದ್ದು, ಅದರಲ್ಲಿಯೂ ತಾಂತ್ರಿಕ ಶಿಕ್ಷಣಕ್ಕೆ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಈ ಎಲ್ಲ ಅಂಶಗಳನ್ನು ಸರಕಾರ ಪರಿಗಣಿಸಿದೆ. ಸರಿಯಾದ ಸಂದರ್ಭದಲ್ಲಿಯೇ ಆ ನೀತಿ ಜಾರಿಯಾಗುತ್ತಿದೆ. ಈ ಮೂಲಕ ರಾಜ್ಯದ ಪ್ರತಿಯೊಂದು ಸರಕಾರಿ ಶಿಕ್ಷಣ ಸಂಸ್ಥೆಗೆ ಕಾಯಕಲ್ಪ ಸಿಗಲಿದೆ ಎಂದು ಅವರು ತಿಳಿಸಿದರು.

    ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್‌, ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಆರ್.‌ಮಂಜುನಾಥ್‌, ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಟಿ.ಆರ್.‌ಪರಶುರಾಮನ್‌, ತಾಂತ್ರಿಕ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಜಿ.ಪದ್ಮಿನಿ ಮುಂತಾದವರು ಹಾಜರಿದ್ದರು.

    ಜಕ್ಕೂರ್ ಏರೋಡ್ರಮ್ ವ್ಯಾಪ್ತಿಯಲ್ಲಿ ನಿಯಮ ಮೀರಿ ನಿರ್ಮಿಸಿರುವ ಕಟ್ಟಡಗಳ ತೆರವಿಗೆ ಸೂಚನೆ

    ಜಕ್ಕೂರು ಏರೋ ಡ್ರಮ್ ನ 5 ಕಿಮೀ ವ್ಯಾಪ್ತಿಯಲ್ಲಿ ನಿಯಮ ಮೀರಿ 45 ಮೀಟರ್ ಗಿಂತಲೂ ಎತ್ತರ ಕಟ್ಟಿರುವ ಕಟ್ಟಡಗಳನ್ನು ತಕ್ಷಣವೆ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳಿಗೆ, ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ‌. ನಾರಾಯಣಗೌಡ ಆದೇಶಿಸಿದರು.

    ವಿಕಾಸ ಸೌಧದಲ್ಲಿ ಇಂದು ನಡೆದ ಸಭೆಯಲ್ಲಿ, ಜಕ್ಕೂರು ಏರೋಡ್ರಮ್ ನ 5ಕಿಮೀ ವ್ಯಾಪ್ತಿಯಲ್ಲಿ, 45 ಮೀಟರ್ ಗಿಂತ ಎತ್ತರದ ಕಟ್ಟಡ ಕಟ್ಟುವಂತಿಲ್ಲ. ಆದಾಗ್ಯೂ ಡಿಜಿಸಿಎ ನಿಯಮ ಮೀರಿ, ಪರವಾನಿಗೆ ಇಲ್ಲದೆ ಕಟ್ಟಡಗಳನ್ನು ಕಟ್ಟಿದ್ದಾರೆ. ಸಚಿವರ ಸೂಚನೆ ಮೇರೆಗೆ ಸರ್ವೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಪ್ರಾಥಮಿಕ ಸಮೀಕ್ಷೆಯಲ್ಲಿ 15 ಕಟ್ಟಡಗಳು ನಿಯಮ ಉಲ್ಲಂಘಿಸಿ 45 ಮೀಟರ್ ಗಿಂತ ಹೆಚ್ಚು ಎತ್ತರದ ಕಟ್ಟಡಗಳನ್ನು ನಿರ್ಮಿಸಿರುವುದು ಪತ್ತೆ ಹಚ್ಚಲಾಗಿದೆ. ಆದ್ದರಿಂದ ಅಕ್ರಮ ಕಟ್ಟಡಗಳನ್ನು ತಕ್ಷಣವೆ ತೆರವು ಮಾಡಬೇಕು. ನಿಯಮ ಮೀರಿ 5ಕಿಮೀ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸಿರುವ ಪತ್ತೆ ಹಚ್ಚಲು ಡ್ರೋಣ್ ಸರ್ವೆ ನಡೆಸಿ 15 ದಿನಗಳಲ್ಲಿ ವರದಿ ನೀಡುವಂತೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಇಲಾಖೆ ಅಧಿಕಾರಿಗಳಿಗೆ ಜಂಟಿ ಸರ್ವೆ ನಡೆಸುವಂತೆ ಸಚಿವರು ಸೂಚಿಸಿದರು.

    ಕೆಲವರು ಎನ್ ಓ ಸಿ ಪಡೆಯದೆ ಕಟ್ಟಡ ನಿರ್ಮಿಸಿದ್ದು, ಮತ್ತೆ ಕೆಲವರು ಎನ್ ಓ ಸಿ ಪಡೆದರೂ ಅನುಮೋದಿತ ಎತ್ತರದ ಮಿತಿ ಉಲ್ಲಂಘಿಸಿದ್ದಾರೆ. ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ನಡೆಸಿದ ಸರ್ವೆಯಲ್ಲಿ 11 ಕಟ್ಟಡಗಳು ಹಾಗೂ ವೈಮಾನಿಕ ತರಬೇತಿ ಶಾಲೆಯಿಂದ ನಡೆಸಿದ ಸರ್ವೆಯಲ್ಲಿ 4 ಕಟ್ಟಡಗಳು ನಿಯಮ ಉಲ್ಲಂಘಿಸಿದ್ದು ಪತ್ತೆಯಾಗಿದೆ. ಕೆಲವರು ಸರ್ವೆ ನಡೆಸಲು ಅಸಹಕಾರ ತೋರಿದ್ದಾರೆ. ಹೀಗಾಗಿ ಮತ್ತೊಮ್ಮೆ ಸರ್ವೆ ನಡೆಸಲು ಸೂಚನೆ ನೀಡಿದರು‌.

    ಬಾಡಿಗೆ ಬಾಕಿ ನೀಡದ ಕಂಪೆನಿ ಆಸ್ತಿ ಜಪ್ತಿ

    ಲ್ಯಾಂಡಿಂಗ್ ಹಾಗೂ ಪಾರ್ಕಿಂಗ್ ಬಾಡಿಗೆ ಬಾಕಿ ನೀಡದ ಕಂಪೆನಿಗಳ ಆಸ್ತಿಯನ್ನು ಸೀಜ್ ಮಾಡಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಎಲ್ಲ ಕಂಪೆನಿಗಳಿಂದ ಸುಮಾರು ರೂ.5 ಕೋಟಿ ಬಾಡಿಗೆ ಹಣ ಬಾಕಿ ಇದೆ. ಬಾಕಿ ಹಣ ಪಾವತಿಸಲು ನೀಡಿರುವ ಕೊನೆಯ ನೋಟಿಸ್ ನ ಅವಧಿ ಮುಗಿದಿದೆ. ಕೆಲವು ಕಂಪೆನಿಗಳು ಸ್ವಲ್ಪ ಪ್ರಮಾಣದಲ್ಲಿ ಬಾಕಿ ಪಾವತಿಸಿದ್ದಾರೆ‌. ಎಲ್ಲ ಕಂಪೆನಿಗಳು ಹಣ ಪಾವತಿಸಬೇಕು. ಅದಕ್ಕಾಗಿ ಕಂಪೆನಿಗಳ ಮುಖ್ಯಸ್ಥರ ಜೊತೆ ಮಾತನಾಡುವಂತೆ ಸಚಿವರು ಸೂಚಿಸಿದರು.

    ಆಗಸ್ಟ್ 20 ರಿಂದ ವೈಮಾನಿಕ‌ ತರಬೇತಿ ಶಾಲೆ ಆರಂಭ

    ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತವಾಗಿದ್ದ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆಗಸ್ಟ್ 20 ರಿಂದ ಆರಂಭಿಸಲಾಗುವುದು. ಮುಖ್ಯ ಬೋಧಕರ ನೇಮಕವಾಗಿದ್ದು, ಸಹಾಯಕ ಬೋಧಕರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಶ್ರೀಘ್ರದಲ್ಲಿ ಎಲ್ಲ ಪ್ರಕ್ರಿಯೆ ಮುಗಿಸಿ, ಮುಖ್ಯಮಂತ್ರಿಗಳಿಂದ ಚಾಲನೆ ಕೊಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

    ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಡಾ. ಗೋಪಾಲಕೃಷ್ಣ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

    ಜರ್ಮನ್ ಬಹುಕೌಶಲ್ಯ ಅಭಿವೃದ್ದಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಸಚಿವಸಂಪುಟ ಅಸ್ತು

    ವಿಶ್ವ ಯುವ ಕೌಶಲ್ಯ ದಿನಾಚರಣೆಯ ದಿನವೂ ಆಗಿರುವ ಇಂದು ವೇಗವಾಗಿ ಬದಲಾಗುತ್ತಿರುವ ತಾಂತ್ರಿಕತೆಯಲ್ಲಿ ಕೌಶಲ್ಯ ವೃದ್ದಿಯ ಪ್ರಾಮುಖ್ಯತೆಗೆ ಅನುಗುಣವಾಗಿ ಬೆಳಗಾವಿಯಲ್ಲಿ ಈಗಾಗಲೇ ಕಾರ್ಯಾರಂಭವಾಗಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಕರ್ನಾಟಕ ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರದ 16.43 ಕೋಟಿ ವೆಚ್ಚದ ಕಟ್ಟಡ ನಿರ್ಮಾಣ ಪ್ರಸ್ತಾವನೆಗೆ ಇಂದು ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ.

    ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಕರ್ನಾಟಕ ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ ಸೊಸೈಟಿ, ಜರ್ಮನಿರವರ ತಾಂತ್ರಿಕ ಸಹಯೋಗದೊಂದಿಗೆ ತಾಂತ್ರಿಕ ಕ್ಷೇತ್ರಗಳಲ್ಲಿ ತರಬೇತಿ ನೀಡಲು ಅಂತರಾಷ್ಟ್ರೀಯ ಗುಣಮಟ್ಟದ 5 ಕರ್ನಾಟಕ ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ರಾಜ್ಯದ ವಿವಿಧ ನಗರಗಳಲ್ಲಿ ಸ್ಥಾಪಿಸಲಾಗಿದೆ.

    ಬೆಳಗಾವಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕರ್ನಾಟಕ ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರವು ನಡೆಯುತ್ತಿದ್ದು, ಸ್ವಂತ ಕಟ್ಟಡ ಹೊಂದಲು ಜಮೀನು ಮಂಜೂರಾಗಿರುತ್ತದೆ. 16.43 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ಕಟ್ಟಡ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಸಂಸ್ಥೆಗೆ ವಹಿಸಲು ಸಚಿವ ಸಂಪುಟ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ. ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದಿಸುವುದಾಗಿ ಡಿಸಿಎಂ ತಿಳಿಸಿದ್ದಾರೆ.

    ಈ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಗಳು ಪ್ರತಿ ವರ್ಷಕ್ಕೆ 4000 ಅಭ್ಯರ್ಥಿಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡುತ್ತದೆ. ಈ ಕಟ್ಟಡ ಕಾಮಗಾರಿಗಳನ್ನು 3 ತಿಂಗಳೊಳಗೆ ಪ್ರಾರಂಭಿಸಲಾಗುವುದು. ಲೋಕೋಪಯೋಗಿ ಇಲಾಖೆಯು ಉತ್ತಮ ಗುಣಮಟ್ಟದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗುವುದು. ಅಲ್ಪಾವಧಿ ಹಾಗೂ ದೀರ್ಘಾವಧಿ ತರಬೇತಿಯಿಂದ ನಿರುದ್ಯೋಗಿ ಯುವಕ ಯುವತಿಯರಿಗೆ ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಸೇರಿದಂತೆ ಎಲ್ಲಾ ಸಮುದಾಯದ ಅಭ್ಯರ್ಥಿಗಳು ತರಬೇತಿ ಪಡೆದು ಸ್ವಾವಲಂಭಿಯಾಗಿ ಜೀವನ ನಡೆಸಲು ಅನುವಾಗಲಿದೆ. ಯುವ ಜನತೆಯು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇಂದಿನ ತಾಂತ್ರಿಕ ಯುಗಕ್ಕೆ ತಕ್ಕಂತೆ ಕಾರ್ಯನಿರ್ವಹಿಸಬೇಕು. ಪರಿಣತಿ ಪಡೆದ ಅಭ್ಯರ್ಥಿಗಳು ಸ್ವಾವಲಂಭಿಗಳಾಗಿ ಜೀವನ ನಡೆಸಲು ವಿಪುಲ ಅವಕಾಶಗಳಿವೆ. ಅದಕ್ಕೆ ಪೂರಕವಾಗಿ ಉತ್ತಮ ಗುಣಮಟ್ಟದ ತರಬೇತಿಯನ್ನು ಈ ಕೇಂದ್ರವು ನೀಡಲಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿಗಳು ತಿಳಿಸಿದ್ದಾರೆ.

    ಕಾಂಗ್ರೆಸ್ ಸಾಂಸ್ಥಿಕ ರಚನೆಯಲ್ಲಿ ಅಮೂಲಾಗ್ರ ಬದಲಾವಣೆ ಸಂಭವ ; ಕಮಲ್ ನಾಥ್ ಗೆ ಪ್ರಮುಖ ಹುದ್ದೆ ಸಿಗುವ ನಿರೀಕ್ಷೆ

    ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ರಚನೆಯಲ್ಲಿ ಮುಂಬರುವ ದಿನದಲ್ಲಿ ಭಾರೀ ಬದಲಾವಣೆಗಳನ್ನು ನಿರೀಕ್ಷಿಸಲಾಗಿದ್ದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಅತ್ಯಂತ ಪ್ರಮುಖ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆ ರಾಜಧಾನಿಯಲ್ಲಿ ದಟ್ಟವಾಗಿದೆ.

    ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಧ್ಯದಲ್ಲೇ ಸಭೆ ಸೇರಿ ಪಕ್ಷದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂದು ಕಾಂಗ್ರೆಸ್ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೆ ವರದಿ ಮಾಡಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನ ಆಗಸ್ಟ್ ನಲ್ಲಿ ನಡೆಯುವ ನಿರೀಕ್ಷೆ ಇದೆ.

    ಕಮಲ್ ನಾಥ್ ಅವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ಉನ್ನತ ಮುೂಲಗಳು ತಿಳಿಸಿವೆ. ಕಮಲ್ ನಾಥ್ ಗುರುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧೀ ಅವರನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ಪ್ರಿಯಾಂಕ ಗಾಂಧಿ ವಾದ್ರ ಕೂಡ ಇದ್ದರು.

    ಚುನಾವಣೆ ಪರಿಣಿತ ಪ್ರಶಾಂತ್ ಕಿಶೋರ್ ನಿನ್ನೆ ತಾನೆ ರಾಹುಲ್ ಗಾಂಧಿಯವರನ್ನು ಭೇಟಿ ಮಾ್ಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

    ನಂದಿ ಬೆಟ್ಟಕ್ಕೆ ರೋಪ್ ವೇ; ಜುಲೈ 23ರಂದು ಸ್ಥಳ ಪರಿಶೀಲನೆ

    ವಿಶ್ವವಿಖ್ಯಾತ ನಂದಿಬೆಟ್ಟ ಗಿರಿಧಾಮಕ್ಕೆ ರೋಪ್ ವೇ ನಿರ್ಮಾಣ ಮಾಡಲು ಇದೇ ಜುಲೈ 23ಕ್ಕೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ರವರು ಸ್ಥಳ ಪರಿಶೀಲನೆ ಮಾಡಲಿದ್ದಾರೆ.

    ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಸಿ.ಪಿ.ಯೋಗೇಶ್ವರ ಅವರ ನೇತೃತ್ವದಲ್ಲಿ ಬೆಂಗಳೂರಿನ ಕುಮಾರ ಕೃಪ ಅತಿಥಿ ಗೃಹದಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

    ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ, ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕಿ ಸಿಂಧೂ ರೂಪೇಶ್, ಅರಣ್ಯ ಮತ್ತು ವಸತಿ ವಿಹಾರಧಾಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಕೆ.ಎಸ್.ಟಿ.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ನಂದಿ ಗಿರಿಧಾಮ ರೋಪ್ ವೇ ಯೋಜನೆಗೆ ತ್ವರಿತವಾಗಿ ಚಾಲನೆ ನೀಡಬೇಕು. ಜುಲೈ 23ರಂದು ಸ್ಥಳ ಪರಿಶೀಲನೆ ಮಾಡಿ ಅತೀ ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಸಚಿವ ಯೋಗೇಶ್ವರ ಅವರು ಅಧಿಕಾರಿಗಳಿಗೆ ಹೇಳಿದರು.

    AARCON INFRA ಸಂಸ್ಥೆಯವರು ನಂದಿ ಬೆಟ್ಟದ ರೋಪ್ ವೇ ಯೋಜನೆಯ ಪ್ರಾತ್ಯಕ್ಷಿತೆ ಪ್ರದರ್ಶಿಸಿದರು. ರೋಪ್ ವೇ ನಿರ್ಮಾಣದಲ್ಲಿ ಈ ಸಂಸ್ಥೆಗೆ 51 ವರ್ಷಗಳ ಅನುಭವವಿದ್ದು, ದೇಶ ವಿದೇಶ ಹಾಗೂ ನಮ್ಮ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ 64 ರೋಪ್ ವೇ ಗಳನ್ನು ನಿರ್ಮಾಣ ಮಾಡಿದ್ದಾರೆ. ರಾಜ್ಯದ ಪ್ರಪ್ರಥಮ ರೋಪ್ ವೇ ಯನ್ನು ಪ್ರವಾಸಿಗರಿಗೆ ಒದಗಿಸಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಸಭೆಯಲ್ಲಿ ಸೂಚಿಸಿದರು.

    ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕೀಟ್ ನಿರ್ಮಾಣ

    ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಒರಿಸ್ಸಾದಲ್ಲಿ ಕೋನಾರ್ಕ್ ಸೂರ್ಯ ದೇವಾಲಯದ ಇತಿಹಾಸ ಹೇಳುವ ಒಂದು ವಿನೂತನ ಪರಿಕಲ್ಪನೆಯನ್ನು ಪ್ರವಾಸಿಗರಿಗೆ ಒದಗಿಸಿದ್ದಾರೆ. ಪ್ರವಾಸಿಗರು ಸೂರ್ಯ ದೇವಾಲಯವನ್ನು ದರ್ಶನ ಮಾಡುವುದಕ್ಕೆ ಮುಂಚೆ ಅಲ್ಲಿ ನಿರ್ಮಾಣ ಮಾಡಿರುವ ಥಿಯೇಟರ್ ನಲ್ಲಿ ಸೂರ್ಯ ದೇವಾಲಯದ ಇತಿಹಾಸವನ್ನು ಚಲನಚಿತ್ರದ ಮೂಲಕ ತೋರಿಸಲಾಗುತ್ತದೆ. ನಂತರ, ಸೂರ್ಯ ದೇವಾಲಯ ದರ್ಶನ ಮಾಡಲಾಗುತ್ತದೆ. ಜೈನ ಕಾಶಿ ಶ್ರವಣಬೆಳಗೊಳದಲ್ಲಿ ಇದೇ ಮಾದರಿಯಲ್ಲಿ ಬಾಹುಬಲಿಯ ಇತಿಹಾಸವನ್ನು ಹೇಳುವ ಒಂದು ಡಾಕ್ಯುಮೆಂಟರಿಯನ್ನು ನಿರ್ಮಾಣ ಮಾಡಿ ಅದನ್ನು ಥಿಯೇಟರ್‌ನಲ್ಲಿ ಪ್ರದರ್ಶಿಸಲಾಗುವುದು. ನಂತರ ಪ್ರವಾಸಿಗರು ಗೋಮಟೇಶ್ವರ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು. ಈ ಮೂಲಕ ಪ್ರವಾಸಿಗರಿಗೆ ಬಾಹುಬಲಿಯ ಸಂಪೂರ್ಣ ಇತಿಹಾಸದ ಮಾಹಿತಿಯನ್ನು ನೀಡಲಾಗುವುದು.

    ಮೈಸೂರು ವಸ್ತು ಪ್ರದರ್ಶನ ಕೇಂದ್ರದಲ್ಲಿ ಹೈಟೆಕ್ ಹಾಥ್ ವೇ

    ಮೈಸೂರು ವಸ್ತು ಪ್ರದರ್ಶನ ಕೇಂದ್ರದಲ್ಲಿ ಹೈಟೆಕ್ ಹಾಥ್ ವೇ ನಿರ್ಮಾಣ
    ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರದ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಅತ್ಯಾಧುನಿಕವಾದ ಕಲೆ, ಸಂಸ್ಕೃತಿ, ಜಾನಪದ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಾಥ್ವೇ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

    ಮೂರು ಹಂತಗಳಲ್ಲಿ ಈ ಬೃಹತ್ ಹಾಥ್ವೇ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಅತೀ ಶೀಘ್ರದಲ್ಲಿ ಈ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿಗೆ ಚಾಲನೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಂದಾಜು ರೂ.100.00ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

    ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಪಡಿಸಲು ಬಂಡವಾಳ ಆರ್ಕಷಿಸುವ ಸಂಬಂಧ THE INDIA EXPO-2023 ಬೃಹತ್ ಮೇಳವನ್ನು ಆಯೋಜಿಸಲು ಕಾರ್ಯೋನ್ಮಖರಾಗುವಂತೆ ಸಚಿವ ಯೋಗೇಶ್ವರ ರವರು ಅಧಿಕಾರಿಗಳಿಗೆ ಸೂಚಿಸಿದರು.
    ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ವಿಸ್ತರಣೆಗೆ ವಿಫುಲ ಅವಕಾಶಗಳಿವೆ. ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡಿ ದೇಶ ವಿದೇಶಗಳ ಪ್ರವಾಸಿಗರು ಆಗಮಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಪ್ರವಾಸಿ ಮೇಳವನ್ನು ಏರ್ಪಡಿಸುವ ಮೂಲಕ ಬಂಡವಾಳವನ್ನು ಆಕರ್ಷಿಸಬೇಕು ಎಂದರು.

    error: Content is protected !!