ಸ್ಮಾರ್ಟ್ ಫೋನಿನ ಸಹಾಯವಿಲ್ಲದೆ ನೇರವಾಗಿ ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಗಳಲ್ಲಿ ವಾಟ್ಸ್ಯಾಪ್ ಬಳಸುವ ಅವಕಾಶ ಸಧ್ಯದಲ್ಲೇ ಲಭ್ಯವಾಗಲಿದೆ. ಮೊಬೈಲ್ ಫೋನಿನ ಜೊತೆಗೆ ಇನ್ನು ನಾಲ್ಕು ಸಾಧನಗಳಲ್ಲಿ ವಾಟ್ಸ್ಯಾಪ್ ಅನ್ನು ಬಳಸುವ ಸೌಲಭ್ಯವನ್ನು ನೀಡಲಾಗವುದೆಂದು ಫೇಸ್ ಬುಕ್ ಒಡೆತನದ ಮೆಸೆಂಜರ್ ಆಪ್ ವಾಟ್ಸ್ಯಾಪ್ ಪ್ರಕಟಿಸಿದೆ. ಮೊದಲ ಹಂತದಲ್ಲಿ ಸಾರ್ವಜನಿಕ ಬಳಕೆಗೆ ಮುನ್ನ ಪ್ರಾಥಮಿಕ ಹಂತವಾದ beta testers* ಪರಿವೀಕ್ಷಣೆಗೆ ಈ ಸೌಲಭ್ಯ ಲಭ್ಯವಾಗುತ್ತದೆ.
( * Beta testing is an opportunity for real users to use a product in a production environment to uncover any bugs or issues before a general release)
ಈಗ ಫೋನ್ ಹೊರತು ಪಡಿಸಿ ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟ್ಯಾಪ್ ಗಳಲ್ಲಿ ವಾಟ್ಸ್ಯಾಪ್ ಬಳಸುವ ಅವಕಾಶ ಇದ್ದರೂ ಅದಕ್ಕೆ ಫೋನ್ ಸಂಪರ್ಕ ಬೇಕಾಗಿತ್ತು. ವಾಟ್ಸ್ಯಾಪ್ ವೆಬ್- WhatsApp Web-ಸೌಲಭ್ಯದ ಮೂಲಕ ನೀವು ನಿಮ್ಮ ಫೋನನ್ನು ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟ್ಯಾಪ್ ಗೆ ಸಂಪರ್ಕಿಸಿ ಆ ಆಪ್ ಬಳಸಬೇಕಿತ್ತು. ಇನ್ನು ಮುಂದೆ ನಿಮ್ಮ ಫೋನ್ ನಿಮ್ಮ ಬಳಿ ಇಲ್ಲದಿದ್ದರೂ ಅಥವಾ ಅದು ಸ್ವಿಚ್ ಆಫ್ ಆಗಿದ್ದರೂ ಕೂಡ ನೀವು ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ನಲ್ಲಿ ವಾಟ್ಸ್ಯಾಪ್ ಗೆ ಲಾಗಿನ್ ಆಗಬಹುದು. ನಿಮ್ಮ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ಇಂಟರ್ ನೆಟ್ ಗೆ ಕನೆಕ್ಟ್ ಆಗಿರಬೇಕು ಅಷ್ಟೆ.
ಈ ಸೌಲಭ್ಯ ಮತ್ತೊಂದು ಲ್ಯಾಪ್ ಟಾಪ್ , ಡೆಸ್ಕ್ ಟಾಪ್ ಅಥವಾ ಟಾಬ್ ನಂಥ ಸಾಧನಗಳಿಗೆ ಸಿಗುತ್ತದೆ ವಿನಾ ಮತ್ತೊಂದು ಸ್ಮಾರ್ಟ್ ಫೋನಿನಲ್ಲಿ ಡಬಲ್ ವಾಟ್ಸಪ್ ಪಡೆಯಲು ಆಗುವುದಿಲ್ಲ.
ರಾಜ್ಯ ಯುವಶಕ್ತಿಯ ಕೌಶಲ್ಯ ಅಭಿವೃದ್ಧಿಯಿಂದ ‘ಕೌಶಲ್ಯ ಕರ್ನಾಟಕದ’ ನಿರ್ಮಾಣವು ಸಾಧ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿಪ್ರಾಯ ಪಟ್ಟರು.
ಇಂದು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಆಯೋಜಿಸಿರುವ ‘ವಿಶ್ವ ಯುವ ಕೌಶಲ್ಯ’ ದಿನಾಚರಣೆಯನ್ನು ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿನ ಅವರು ದೇಶವೊಂದರ ಅಭಿವೃದ್ಧಿಯು ಯುವ ಜನರ ಕೌಶಲ್ಯದ ಮಟ್ಟವನ್ನು ಆಧರಿಸಿದೆ. ಕರ್ನಾಟಕ ಸರ್ಕಾರವು ಯುವಕರ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ 2 ವರ್ಷಗಳಲ್ಲಿ ಹಲವು ಪ್ರಮುಖ ಯೋಜನೆಗಳನ್ನು ಹಮ್ಮಿಕೊಂಡಿದೆ. ರಾಜ್ಯದ 150 ಸರಕಾರಿ ಐ.ಟಿ ಐ ಗಳನ್ನು ಉನ್ನತೀಕರಿಸಿ Industrial Automation, Robotics, Industry 4.0 ನಂತಹ ಅತ್ಯಾಧುನಿಕ ಲ್ಯಾಬ್‍ಗಳನ್ನು ಸ್ಥಾಪಿಸಲು 4,636.50 ಕೋಟಿ ರೂಪಾಯಿಗಳ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಈ ಉನ್ನತೀಕರಣದ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಿ ಇದೇ ಸೆಪ್ಟೆಂಬರ್ ನಲ್ಲಿ ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೋವಿಡ್-19 ಸಾಂಕ್ರಾಮಿಕದ ಹಿನ್ನಲೆ ಇತರೆ ರಾಜ್ಯಗಳಿಂದ ಮರಳಿದ ವಲಸೆ ಕಾರ್ಮಿಕರ ತರಬೇತಿ ಮತ್ತು ಕೆಲಸ ದೊರಕಿಸಲು ಸರ್ಕಾರವು ಕೌಶಲ್‍ಕರ್-ಡಾಟ್-ಕಾo ವೆಬ್ ಪೋರ್ಟಲ್‍ನ್ನು ಅಭಿವೃದ್ಧಿಪಡಿಸಿದೆ. ಕೈಗಾರಿಕೆಗಳಲ್ಲಿರುವ ಉದ್ಯೋಗ ಅವಕಾಶಗಳಿಗೆ ಅನುಸಾರವಾಗಿ ಕುಶಲ ಯುವಕರಿಗೆ ಉದ್ಯೋಗ ಒದಗಿಸಲು Skill Connect ವೆಬಿ ಪೋರ್ಟಲ್ ಮೂಲಕ ವರ್ಚುಯಲ್ ಉದ್ಯೋಗ ಮೇಳಗಳನ್ನು ನಡೆಸಲಾಗುತ್ತಿದೆ.
ವಿದೇಶದಲ್ಲಿರುವ ನುರಿತ ಮಾನವ ಸಂಪನ್ಮೂಲದ ಬೇಡಿಕೆಯನ್ನು ಪೂರೈಸಿ ರಾಜ್ಯದ ಯುವಕರು ವಿದೇಶಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ನೆರವಾಗಲು ‘ಅಂತಾರಾಷ್ಟ್ರೀಯ ವಲಸೆ ಕೇಂದ್ರ’ ವನ್ನು ಸ್ಥಾಪಿಸಿದೆ.
ಈಗಾಗಲೇ ಬ್ರಿಟನ್ನಿನ National Health Services ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಕರ್ನಾಟಕದಿಂದ ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸುವ ಕಾರ್ಯಪ್ರಗತಿಯಲ್ಲಿದೆ . ಸರ್ಕಾರಿ ಸಂಸ್ಥೆಗಳ ಮೂಲಕ ಉನ್ನತ ಮಟ್ಟದ ತಾಂತ್ರಿಕ ಕೌಶಲ್ಯವನ್ನು ನೀಡಿ ರಾಜ್ಯದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಕೌಶಲ್ಯಯುಕ್ತ ಮಾನವ ಸಂಪನ್ಮೂಲವನ್ನು ಒದಗಿಸಲು ಯುವಕರಿಗೆ ತಾಂತ್ರಿಕ ಕೌಶಲ್ಯ ತರಬೇತಿ ಗಾಗಿ ಪ್ರಸಕ್ತ ಸಾಲಿನಲ್ಲಿ 4 ಹೊಸ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC) ಡಿಪ್ಲೊಮಾ ಕಾಲೇಜುಗಳನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿವರಿಸಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ರಾಜ್ಯದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಗ್ರಾಮ ಮಟ್ಟದ ಒಕ್ಕೂಟದ ಮುಖಾಂತರ ಸಮುದಾಯ ಹೂಡಿಕೆ ನಿಧಿಯಾಗಿ 400 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದ್ದು, 2021-22ನೇ ಸಾಲಿನಲ್ಲಿ ಈಗಾಗಲೇ 17,121 ಸ್ವ-ಸಹಾಯ ಗುಂಪುಗಳಿಗೆ ರೂ. 149.03 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ.
ಕಳೆದ ಸಾಲಿನಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಒಂದು ಲಕ್ಷದ ಹತ್ತು ಸಾವಿರ ಬೀದಿ-ಬದಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿಗಳ ‘ಸ್ವ-ನಿಧಿ’ ಯೋಜನೆಯಡಿಯಲ್ಲಿ 10,000 ರೂ.ಗಳ ಹೂಡಿಕೆ ಬಂಡವಾಳವನ್ನು ಸಾಲದ ರೂಪದಲ್ಲಿ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 20,000 ರೂ.ಗಳನ್ನು ಹೆಚ್ಚುವರಿ ಹೂಡಿಕೆ ಬಂಡವಾಳವನ್ನು ಸಾಲದ ರೂಪದಲ್ಲಿ ವಿತರಿಸಲು ಉದ್ದೇಶಿಸಲಾಗಿದೆ ಎಂದರು.ರಾಜ್ಯದಲ್ಲಿ ಮುಂದಿನ 5 ವರ್ಷಗಳಲ್ಲಿ ಹತ್ತು ಮಿಲಿಯನ್ ಉದ್ಯೋಗ ಅವಕಾಶಗಳನ್ನು ಸೃಷ್ಠಿಸಲು ಕರ್ನಾಟಕ ಕೌಶಲ್ಯ ಮತ್ತು ಉದ್ಯಮಶೀಲತಾ ಕಾರ್ಯಪಡೆಯನ್ನು ರಚಿಸಿದೆ. ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಕ್ರಿಯ ಮುಂದಾಳತ್ವದಲ್ಲಿ ರಾಜ್ಯದ ಯುವಕರಿಗೆ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಗಳನ್ನು ಇಟ್ಟಿದೆ.
‘ಸ್ಕಿಲ್ ಇಂಡಿಯಾ ಮಿಷನ್’ ಹಾಗೂ ‘ಆತ್ಮನಿರ್ಭರ ಭಾರತ ಯೋಜನೆ’ಗಳು ಯುವಜನರ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಗಮನಾರ್ಹ ಸಾಧನೆ ಮಾಡಲಿದೆ ಎಂಬ ಆಶಯವನ್ನು ಮುಖ್ಯಮಂತ್ರಿ ಗಳು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲಾಭಿವೃದ್ಧಿ ಸಚಿವರಾದ ಡಾ: ಅಶ್ವತ್ಥ್ ನಾರಾಯಣ, ಇಲಾಖೆಯ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಹಾಗೂ ಮತ್ತಿತರರು ಹಾಜರಿದ್ದರು.
ಇಂದು ಪ್ಲಾಸ್ಟಿಕ್ ಮಾನವ ಜೀವನದ ಅವಿಭಾಜ್ಯ ನಿರ್ವಹಣೆಯಾಗಿದೆ. ಪ್ಲಾಸ್ಟಿಕ್ ಇಲ್ಲದೇ ಜೀವನ ಸಾಧ್ಯವಿಲ್ಲ ಎನ್ನುವಂತಾಗಿದೆ. ಲೋಹದ ಬೆಲೆ ಮತ್ತು ಕೊರತೆ ಹೆಚ್ಚಿದಂತೆಲ್ಲಾ ಪ್ರತಿ ಕ್ಷೇತ್ರದಲ್ಲೂ ಪ್ಲಾಸ್ಟಿಕ್ ನ ಬಳಕೆ ದಿನೇ ದಿನೇ ಅಧಿಕಗೊಳ್ಳುತ್ತಿದೆ. ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಯಿಂದ ತೊಂದರೆಗಳಿಲ್ಲ. ಈ ಹಿನ್ನಲೆಯಲ್ಲಿ ಇಂದು ಅನೇಕ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಾಣುತ್ತಿದ್ದೇವೆ. ಆಟೋಮೊಬೈಲ್, ಕೃಷಿ, ಆರೋಗ್ಯ, ಶಿಕ್ಷಣ , ಸಾರಿಗೆ, ವಿದ್ಯುನ್ಮಾನ ಮುಂತಾದ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ಅಧಿಕವಾಗಿದೆ. ಹಾಗಾಗಿಪ್ಲಾಸ್ಟಿಕ್ ಆಧಾರಿತ ಕೋರ್ಸ್ ಗಳಿವೆ ಎಂಬುದು ಎಷ್ಟು ಆಶ್ಚರ್ಯವೋ , ಇಂತಹ ಕೋರ್ಸ್ ಗಳು ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಿಂದಲೇ ನಡೆಯುತ್ತಿವೆ ಎಂಬುದೂ ಸಂತಸದ ಸಂಗತಿ. ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯು ಇಂತಹ ಅನೇಕ ಕೋರ್ಸ್ ಗಳನ್ನು ನೀಡುವ ಮೂಲಕ ಯುವಕರಲ್ಲಿ ವೃತ್ತಿ ಕೌಶಲ ಹೆಚ್ಚಿಸಿ ಸ್ವಾಲಂಬಿಗಳನ್ನಾಗಿ ಮಾಡುವ ಉದ್ದೇಶ ಹೊಂದಿದೆ.
ಸಿಪೆಟ್: ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆ (ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ ) ಸಿಪೆಟ್ ಸಂಸ್ಥೆಯು ಭಾರತ ಸರ್ಕಾರದ ರಸಾಯನ ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ. ಪ್ಲಾಸ್ಟಿಕ್ ಉತ್ಪನ್ನಗಳು ದೇಶದ ಪ್ರಗತಿಗೂ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಹಾಗಾಗಿ ಇವುಗಳ ಉತ್ಪನ್ನಗಳ ತಯಾರಿ ಉತ್ತೇಜಿಸಲು ಕೇಂದ್ರ ಸರ್ಕಾರವು ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯನ್ನು (CIPET) ಸ್ಥಾಪಿಸಿದೆ.1968 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ಈಗ 53 ರ ಹರೆಯ.ನಮ್ಮ ರಾಜ್ಯದಲ್ಲಿ ಕರ್ನಾಟಕದಲ್ಲಿ 1991 ರಲ್ಲಿ ಮೈಸೂರಲ್ಲಿ ಆರಂಭವಾಯಿತು. ಪಾಲಿಮರ್/ ಪ್ಲಾಸ್ಟಿಕ್ ಕೈಗಾರಿಕೆ ಕುರಿತ ಕೋರ್ಸ್ ಗಳನ್ನು ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆ ಇದು. ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸ್ಥಾಪಿಸಿದ ದೇಶದ 40 ಸಂಸ್ಥೆಗಳಲ್ಲಿ ಇದು ಕೂಡ ಒಂದು. ಆದರೂ ಕರ್ನಾಟಕದ ಯುವಕರಿಗೆ ಇದರ ಅರಿವೇ ಇಲ್ಲ ಆದ್ದರಿಂದ ಹೊರ ರಾಜ್ಯಗಳಿಂದ ಬರುವವರೇ ಹೆಚ್ಚು. ವಿವಿಧ ಪರಿಕರಗಳ ಉತ್ಪಾದನೆ ಹಾಗೂ ಸಂರಕ್ಷಣಾ ಘಟಕಗಳಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಿಪೆಟ್ ಸ್ವಾಯತ್ತ ಸಂಸ್ಥೆಯಾಗಿ ಬೆಳೆದಿದೆ.
ತ್ಯಾಜ್ಯ ಸಂಸ್ಕರಣೆಗೆ ಹೊಸ ತಂತ್ರಜ್ಞಾನ ಅಭಿವೃದ್ದಿಪಡಿಸಿರುವ ಹೆಗ್ಗಳಿಕೆ ಸಿಪೆಟ್ ನದ್ದು. ವೇಸ್ಟ್ ಸಂಸ್ಕರಣಾ ಘಟಕ ಇದಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಸಂಪೂರ್ಣ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಮಾದರಿಯಲ್ಲಿ ತ್ಯಾಜ್ಯ ಸಂಸ್ಕರಿಸುವ ಮತ್ತು ಮರುಬಳಕೆ ಮಾಡುವ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ. ಉದಾಹರಣೆಗೆ ಹೇಳುವುದಾದರೆ ನಾವು ದಿನನಿತ್ಯ ಉಪಯೋಗಿಸುವ ಬಿಸ್ಕೆಟ್, ಚಾಕಲೇಟ್, ಹಾಲು, ಮೊಸರು, ತುಪ್ಪ, ಎಣ್ಣೆ ಇನ್ನು ಅನೇಕ ಸೌಂದರ್ಯ ವರ್ಧಕ ಗಳ ಪ್ಯಾಕಿಂಗ್ ಗಳಿಗೆ ಪ್ಲಾಸ್ಟಿಕ್ ಬೇಕೇ ಬೇಕು. ಈ ಎಲ್ಲಾ ಪದಾರ್ಥ ಗಳನ್ನೂ ಉಪಯೋಗಿಸಿದ ನಂತರ ಅಲ್ಲಲಿ ಬಿಸಾಡದೆ ಒಂದು ಕಡೆ ಸಂಸ್ಕರಿಸಿ ಮರುಬಳಕೆ ಮಾಡಬಹುದು.
ನಿತ್ಯೋಪಯೋಗಿ ವಸ್ತುಗಳಾದ ಮೊಬೈಲ್ ಫೋನ್, ಫ್ರಿಡ್ಜ್, ಕಂಪ್ಯೂಟರ್ , ಟಿ.ವಿ. ವೈದ್ಯಕೀಯ ಕ್ಷೇತ್ರದಲ್ಲಿ ಟ್ಯಾಬ್ಲೆಟ್ , ಸಿರಿಂಜ್, ಸೆಂಟ್, ಕ್ರೀಮ್ ಮುಂತಾದವುಗಳ ತಯಾರಿಕೆಗೆ ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಸುವ ಯಂತ್ರೋಪಕರಣಗಳಿಗೆ ಆಹಾರ ಪದಾರ್ಥ ಗಳಾದ ಬಿಸ್ಕೆಟ್, ಚಾಕಲೇಟ್, ಹಾಲು, ತುಪ್ಪ ಪ್ಯಾಕಿಂಗ್ ಗಳಿಗೆ… ಎಲ್ಲದರಲ್ಲೂ ಪ್ಲಾಸ್ಟಿಕ್ ಬೇಕೇ ಬೇಕು.ಆದರೆ ಎಲ್ಲಿ ಎಷ್ಟು ಉಪಯೋಗಿಸಬೇಕು, ಹೇಗೆ ಮರುಬಳಕೆ ಮಾಡಬೇಕು ಅದರ ಉದ್ಯಮ ಸ್ಥಾಪಿಸಿ ಉದ್ಯೋಗ ಸೃಷ್ಟಿ ಮಾಡುವುದು ಹೇಗೆ ಎಂಬುದರ ಅರಿವು ನಮಗಿರಬೇಕು. ಇವೆಲ್ಲವನ್ನೂ ಕಲಿಸಿಕೊಡಲಿದೆ ‘ಸಿಪೆಟ್ ‘.
ಮುಂದೇನು ?
ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆ ಮುಗಿದ ನಂತರ ಬಹುದೇಕ ವಿದ್ಯಾರ್ಥಿಗಳದ್ದು ಒಂದೇ ಪ್ರಶ್ನೆ ಮುಂದೇನು ? ಎಲ್ಲರ ಚಿತ್ತವೂ ಒಳ್ಳೆಯ ಉದ್ಯೋಗ ಮಾಡುವುದೇ ಆಗಿದ್ದರೂ, ಕಣ್ಣೆದುರು ಬಂದು ನಿಲ್ಲುವುದು ಮಾತ್ರ ಪ್ರಚಲಿತದಲ್ಲಿರುವ ಕೆಲವೇ ಕೆಲವು ಕೋರ್ಸುಗಳು ಆದರೆ ನಮ್ಮ ನಡುವೆಯೇ ಇರುವ, ಬೇಗನೆ ಉದ್ಯೋಗ ದೊರಕಿಸುವ ಹಲವು ಕೋರ್ಸುಗಳು ಗಮನಕ್ಕೆ ಬಾರದೆ ಹೋಗುತ್ತಿವೆ.ಅಂಥ ಕೋರ್ಸುಗಳಲ್ಲಿ ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಪೆಟ್)ನೀಡುತ್ತಿರುವ ಡಿಪ್ಲೋಮ ಕೂಡ ಒಂದು.ಶೈಕ್ಷಣಿಕ, ತಂತ್ರಜ್ಞಾನ ಮತ್ತು ಸಂಶೋಧನೆ ವ್ಯವಸ್ಥೆಯಲ್ಲಿ ಸ್ನಾತಕ ಡಿಪ್ಲೋಮಾ ಮತ್ತು ಡಿಪ್ಲೋಮಾ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ಅಖಿಲ ಭಾರತ ತಾಂತ್ರಿಕ ಮಂಡಳಿಯಿಂದ ಮಂಜೂರಾತಿ ದೊರೆತ ಈ ಕೆಳಗಿನ ವಿಭಾಗಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ.ಈ ವೃತ್ತಿಪರ ಶಿಕ್ಷಣದ ನಂತರ ಉದ್ಯೋಗಕ್ಕೆ ವಿಪುಲ ಅವಕಾಶಗಳು ದೊರೆಯುತ್ತವೆ.
ಪ್ರಸ್ತುತಕೇಂದ್ರದಲ್ಲಿದೊರೆಯುವಕೋರ್ಸ್ಗಳುಕೆಳಗಿನಂತಿವೆ .
ಡಿಪ್ಲೋಮಾ ಕೋರ್ಸ್ ನ ಹೆಸರು
ಪ್ರವೇಶಕ್ಕಾಗಿ ಅರ್ಹತೆ
ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಪ್ರೊಸೆಸಿಂಗ್ & ಟೆಸ್ಟಿಂಗ್ (PGD-PPT) – 2 year
ಬಿ.ಎಸ್ಸಿ
ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (DPT) – 3 year
10ನೇ ತರಗತಿ ಪಾಸ್
ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (DPMT)- 3 year
10ನೇ ತರಗತಿ ಪಾಸ್
ಎಸ್.ಎಸ್.ಎಲ್.ಸಿ , ಪಿ.ಯು.ಸಿ (ವಿಜ್ಞಾನ) ಮತ್ತು ಬಿ.ಎಸ್.ಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರು/ಹಾಜರಾದವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ www.cipet.gov.in
ಡಿಪ್ಲೋಮಾ2 ನೇ ವರ್ಷಕ್ಕೆ ನೇರ ಪ್ರವೇಶ (Lateral Entry for Direct 2nd year Diploma)
ಡಿಪ್ಲೋಮಾ ಕೋರ್ಸ್ ನ ಹೆಸರು
ಪ್ರವೇಶಕ್ಕಾಗಿ ಅರ್ಹತೆ
ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (DPT) – 2 year
P.U.C (PCM), ITI(Fitter,Machinist/Turner)
ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (DPMT)- 2 year
ಪ್ರವೇಶಹೇಗೆ?
ಈ ಕೋರ್ಸ್ ಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಪ್ರವೇಶ ಪರೀಕ್ಷೆ (ಸಿಪೆಟ್) ನಡೆಯುತ್ತದೆ. 2021 -2022 ಸಾಲಿನ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.
ಎಸ್ ಎಸ್ ಎಲ್ ಸಿ ನಂತರ ಮೂರು ವರ್ಷಗಳ ಡಿಪ್ಲೋಮೋ Diploma in Plastics Mould Technology (DPMT) Diploma in Plastics Technology (DPT) Last date for online application 20.07.2021 Entrance exam 29.07.2021 www.cipet.gov.in Contact nos. 9141075968, 9480253024
ಪಿಯುಸಿ ವಿಜ್ಞಾನ ಐಟಿಐ ನಂತರ ಎರಡನೇ ವರ್ಷದ ಡಿಪ್ಲೋಮೋ ನೇರಪ್ರವೇಶ (Lateral Entry)
ಕೊನೆ ದಿನ : 31.07.2021
ಮೈಸೂರಿನ ಸಿಪೆಟ್ ನ ಕೋರ್ಸ್ ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಕರ್ನಾಟಕ ದವರಿಗೆ ಆದ್ಯತೆ ನೀಡಲಾಗುತ್ತದೆ.
ದೀರ್ಘಾವಧಿ ತರಬೇತಿಯ ಜೊತೆಗೆ ಅಲ್ಪಾವಧಿ ಪ್ರಾಯೋಜಿತ ತರಬೇತಿಯನ್ನೂ ನೀಡುವುದು ಸಿಪೆಟ್ ನ ವಿಶೇಷ. ಇಲ್ಲಿ ವ್ಯಾಸಂಗ ಮಾಡಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ಯೋಗ ದೊರಕಿದೆ. ಅನೇಕರು ಸ್ವಉದ್ಯೋಗ ಆರಂಭಿಸಿದ್ದಾರೆ. ಇಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯಿದೆ. ವಿದ್ಯಾರ್ಥಿ ವೇತನ ಸೌಲಭ್ಯವು ಇದೆ. ಪ್ರತಿ ಸೆಮಿಸ್ಟರ್ ಗೆ ರೂ.20 ಸಾವಿರದಷ್ಟು ಖರ್ಚು ಬರುತ್ತದೆ
ಕೋರ್ಸ್ನಲ್ಲಿಏನುಕಲಿಸುತ್ತಾರೆ?
ಪ್ಲಾಸ್ಟಿಕ್ ವೈವಿದ್ಯಮಯ ಬಳಕೆ, ಪ್ಲಾಸ್ಟಿಕ್ ಮೌಲ್ದಿಂಗ್, ಪ್ಲಾಸ್ಟಿಕ್ ಸಂಸ್ಕರಣೆ, ಪ್ಲಾಸ್ಟಿಕ್ ನ ಗುಣಮಟ್ಟ ಪರಿಶೀಲನೆ, ಆಧುನಿಕ ವಿನ್ಯಾಸದಲ್ಲಿ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಪ್ಲಾಸ್ಟಿಕ್ ಮರುಬಳಕೆ ವಿಧಾನ , ಪ್ಲಾಸ್ಟಿಕ್ ಪೈಪ್ ಗಳು ಮತ್ತು ಇನ್ನಿತರೆ ವಸ್ತುಗಳ ತಯಾರಿಕೆ, ಮಾರುಕಟ್ಟೆ ಹಾಗೂ ದರ ಪರಿಷ್ಕರಣೆ.
ಉದ್ಯೋಗಾವಕಾಶಗಳು:
ಆಟೋಮೊಬೈಲ್ಸ್ ಕೈಗಾರಿಕೆಗಳು
ವಾಹನದ ಬಿಡಿ ಭಾಗಗಳನ್ನು ತಯಾರಿಸುವ ಉದ್ಯಮಗಳು
ಪಿ.ವಿ.ಸಿ ಪೈಪ್ ತಯಾರಿಕಾ ಕಂಪೆನಿಗಳು ಮತ್ತು ವಿದ್ಯುನ್ಮಾನ
ಪ್ಲಾಸ್ಟಿಕ್ ವಸ್ತು ಉತ್ಪಾದನಾ ಕಂಪೆನಿಗಳಲ್ಲಿ
ಆಹಾರೋದ್ಯಮ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ
ಆಗ್ರೋ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ ಕ್ಷೇತ್ರ
ಎಲೆಕ್ಟ್ರಿಕಲ್ಸ್ ,ಎಲೆಕ್ಟ್ರಾನಿಕ್ಸ್ಕ್ಷೇತ್ರ
ಆಹಾರೋದ್ಯಮ
ಸಿಪೆಟ್ ಸಂಸ್ಥೆ ನಡೆಸುವ 3 ವರ್ಷಗಳ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (DPT) ಮತ್ತು ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (DPMT) ಕೋರ್ಸ್ ನ ವಿದ್ಯಾರ್ಥಿಗಳು 3,4,5 ಮತ್ತು 6 ನೇ ಸೆಮಿಸ್ಟರ್ಗಳಲ್ಲಿ ಬ್ರಿಡ್ಜ್ ಕೋರ್ಸ್ ಗಳನ್ನು ಬಾಹ್ಯ ವಿಷಯವನ್ನಾಗಿ ಅಭ್ಯಾಸ ಮಾಡಿದರೆ ಕರ್ನಾಟಕ ತಾಂತ್ರಿಕ ಮಂಡಳಿಯು ನಡೆಸುವ ಡಿಪ್ಲೋಮಾ ಇನ್ ಪಾಲಿಮರ್ ಟೆಕ್ನಾಲಜಿ ಕೋರ್ಸ್ ಗೆ ತತ್ಸಮಾನವಾಗಿ ಮತ್ತು ಲ್ಯಾಟರಲ್ ಎಂಟ್ರಿ ಮೂಲಕ ಬಿ.ಇ. ವ್ಯಾಸಾಂಗ ಮಾಡಬಹುದಾಗಿದೆ. ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಗಳನ್ನು ಅಭ್ಯಸಿಸಲು ವಿಶೇಷ ತರಬೇತಿಯನ್ನು ನೀಡಲಾಗುತ್ತದೆ.
2022ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ (ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ) ಗಳಿಗೆ ಸಾಧಕರ ಹೆಸರುಗಳ ಆನ್ ಲೈನ್ ನಾಮನಿರ್ದೇಶನ / ಶಿಫಾರಸು ಮಾಡಲು 2021 ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಆಯ್ಕೆಯಾದ ಸಾಧಕರ ಹೆಸರನ್ನು 2022ರ ಗಣರಾಜ್ಯೋತ್ಸವ ದಿನದಂದು ಪ್ರಕಟಿಸಲಾಗುತ್ತದೆ. ಈ ಪದ್ಮ ಪ್ರಶಸ್ತಿಗಳಿಗೆ ಮಾಡುವ ಸಾಧಕರ ಹೆಸರುಗಳ ನಾಮನಿರ್ದೇಶನ/ ಶಿಫಾರಸುಗಳನ್ನು ಆನ್ಲೈನ್ ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ಆನ್|ಲೈನ್|ನಲ್ಲಿ ಹೆಸರು ಕಳಿಸಲು ಪೋರ್ಟಲ್ https://padmaawards.gov.in ಸಂಪರ್ಕಿಸಬಹುದು.
1954ರಲ್ಲಿ ಸ್ಥಾಪನೆಯಾದ ಪದ್ಮ ಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ಪ್ರಕಟಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ, ಗೌರವಿಸುವ ಹಾಗೂ ಅವರನ್ನು ಸಮಾಜಕ್ಕೆ ಪರಿಚಯಿಸುವ ಘನ ಉದ್ದೇಶದಿಂದ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡುತ್ತಾ ಬರಲಾಗಿದೆ. ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಕಾರ್ಯ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರ, ನಾಗರಿಕ ಸೇವೆಗಳು, ವ್ಯಾಪಾರ, ಉದ್ಯಮ ಮತ್ತು ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ವಿಶಿಷ್ಟ ಮತ್ತು ಅನನ್ಯ ಸಾಧನೆ ಮತ್ತು ಸೇವೆ ನೀಡಿರುವ ಗಣ್ಯರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗುತ್ತದೆ.
ಜಾತಿ, ಜನಾಂಗ,ಸಮುದಾಯ, ಉದ್ಯೋಗ, ಸ್ಥಾನ ಅಥವಾ ಲಿಂಗ ಭೇದವಿಲ್ಲದೆ ಎಲ್ಲ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ. ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ, ಸಾರ್ವಜನಿಕ ವಲಯದ ಘಟಕಗಳಲ್ಲಿ ಕೆಲಸ ಮಾಡುವ ನೌಕರರು ಸೇರಿದಂತೆ ಎಲ್ಲಾ ಸರ್ಕಾರಿ ನೌಕರರು ಪದ್ಮ ಪ್ರಶಸ್ತಿಗಳಿಗೆ ಅರ್ಹರಾಗಿರುವುದಿಲ್ಲ.
ಪದ್ಮ ಪ್ರಶಸ್ತಿಗಳನ್ನು ‘ಜನತೆಯ ಪದ್ಮ’ವಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಆದ್ದರಿಂದ ದೇಶದ ನಾಗರೀಕರು ಸ್ವಯಂ-ನಾಮನಿರ್ದೇಶನದ ಜತೆಗೆ, ಸಾಧಕರ ನಾಮನಿರ್ದೇಶನ/ ಶಿಫಾರಸು ಮಾಡಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ಸಮಾಜದ ಒಳಿತಿಗಾಗಿ ಬದುಕನ್ನೇ ಮುಡಿಪಾಗಿಟ್ಟಿರುವ ಮಹಿಳೆಯರು, ದುರ್ಬಲ ವರ್ಗಗಳು, ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಸಾಧಕರು, ವಿಶೇಷ ಚೇತನರು, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಶ್ರೇಷ್ಠತೆ ಗಳಿಸಿರುವ ನೈಜ ಸಾಧಕರು ಮತ್ತು ಸಮಾಜದಲ್ಲಿ ಗುರುತಿಸಿಕೊಳ್ಳಲು ಅರ್ಹರಾದ ಎಲ್ಲಾ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸಲು ಕೇಂದ್ರ ಸರ್ಕಾರ ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದೆ.
ಆನ್|ಲೈನ್|ನಲ್ಲಿ ಕಳಿಸುವ ನಾಮನಿರ್ದೇಶನಗಳು/ ಶಿಫಾರಸುಗಳಲ್ಲಿ ಸಂಬಂಧಿತ ಎಲ್ಲಾ ಮಾಹಿತಿಗಳು ಇರಬೇಕು. ಪದ್ಮ ಪೋರ್ಟಲ್ ನಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ಒದಗಿಸಬೇಕು. ಪೋರ್ಟಲ್ ನಲ್ಲಿ ಒದಗಿಸಿರುವ ನಮೂನೆಯಲ್ಲಿ ಗರಿಷ್ಠ 800 ಪದಗಳಲ್ಲಿ ಸಾಧಕರ ಮಾಹಿತಿಯನ್ನು ನಿರೂಪಣೆ ರೂಪದಲ್ಲಿ ಒದಗಿಸಬೇಕು. ಶಿಫಾರಸು ಮಾಡಿದ ಸಾಧಕರ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು ಮತ್ತು ಸೇವೆಯನ್ನು ಸಂಬಂಧಿಸಿದ ಕಾಲಂಗಳಲ್ಲಿ ತುಂಬಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.
ಆಡಳಿತಾತ್ಮಕ ಸುಧಾರಣೆಗೆ ಎಲ್ಲರೂ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ( NDA)ಮಾದರಿಯಲ್ಲಿ ಅತ್ಯುತ್ತಮ ಗುಣಮಟ್ಟದ ತರಬೇತಿ ನೀಡಲು ತೀರ್ಮಾನಿಸಲಾಗಿದೆ ಎಂದು ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಬುಧವಾರ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಆವರಣದಲ್ಲಿ ಏರ್ಪಡಿಸಲಾಗಿದ್ದ 35ನೇ ಪ್ರೊಬೆಷನರಿ ಪೋಲೀಸ್ ಉಪ ಅಧೀಕ್ಷಕರು ಹಾಗೂ ಅಬಕಾರಿ ಉಪ ಅಧೀಕ್ಷಕರು ಮತ್ತು 43 ಮೇ ತಂಡದ ಪ್ರೊಬೇಶನರಿ ಪೊಲೀಸ್ ಉಪ ನಿರೀಕ್ಷಕರ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪೊಲೀಸ್ ಸೇವೆಯಲ್ಲಿ ಇರುವವರಿಗೆ ವಿಶೇಷ ಹಾಗೂ ರೆಫ್ರೇಶರ್ ತರಬೇತಿಯನ್ನು ನೀಡಲಾಗುವುದು. ಬದಲಾದ ಸನ್ನಿವೇಶದಲ್ಲಿ ಪೊಲೀಸ್ ಅಧಿಕಾರಿಗಳು ಉತ್ತಮ ಆಡಳಿತಗಾರ ಆಗಬೇಕು. ಈ ಹಿನ್ನೆಲೆಯಲ್ಲಿ ತರಬೇತಿ ಸ್ವರೂಪ ಬದಲಾಗಬೇಕು. ಹೀಗಾಗಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ನೀಡುವ ತರಬೇತಿಯ ಮಾದರಿಯಲ್ಲಿಯೇ ರಾಜ್ಯದ ಪೊಲೀಸ್ ಅಧಿಕಾರಿಗಳಿಗೂ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.
ತರಬೇತಿ ಪಠ್ಯಕ್ರಮ ಬದಲಾವಣೆಗೆ ಸಮೀತಿ ರಚನೆ
ಇತ್ತೀಚಿಗೆ ಅಪರಾಧ ಕೃತ್ಯಕ್ಕೆ ತಂತ್ರಜ್ಞಾನ ಮತ್ತು ತಂತ್ರಾಂಶ ಬಳಕೆ ಹೆಚ್ಚಾಗುತ್ತಿದೆ. ಸೈಬರ್ ಕ್ರೈಮ್ ಮೂಲಕ ಆರ್ಥಿಕ ಅಪರಾಧಗಳು ಹೆಚ್ಚುತ್ತಿವೆ. ಆಧುನಿಕ ತಂತ್ರಜ್ಞಾನ ದಿಂದ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಹೀಗಾಗಿ ಆಧುನಿಕ ಅಪರಾಧಕ್ಕೆ ನಮ್ಮ ಪೊಲೀಸರು ತಕ್ಕ ಉತ್ತರ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಈಗ ನೀಡಲಾಗುತ್ತಿರುವ ತರಬೇತಿ ಕಾರ್ಯಕ್ರಮ ಮತ್ತು ಪಠ್ಯಕ್ರಮದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಾಗಿದೆ. ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜೊತೆ ಮಾಡಿದ್ದೇನೆ. ಇದಕ್ಕಾಗಿ ತರಬೇತಿ ವಿಭಾಗದ ಎಡಿಜಿಪಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು. ಇದಕ್ಕಾಗಿ ಪರಿಣಿತರನ್ನು ಸಮಿತಿಯೊಂದಿಗೆ ಜೋಡಣೆ ಮಾಡಲಾಗುವುದು. ಮೂರು ತಿಂಗಳಲ್ಲಿ ಸಮಿತಿ ತನ್ನ ವರದಿಯನ್ನು ನೀಡಲಿದೆ. ಆ ವರದಿಯ ಶಿಫಾರಸುಗಳನ್ನು ಆಧಾರವಾಗಿಟ್ಟುಕೊಂಡು ತರಬೇತಿ ಕಾರ್ಯಕ್ರಮಗಳಿಗೆ ಆಧುನಿಕ ಸ್ಪರ್ಶ ನೀಡಲಾಗುವುದು ಬಸವರಾಜ ಬೊಮ್ಮಾಯಿ ವಿವರಿಸಿದರು.
ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಪೊಲೀಸ್ ಇಲಾಖೆಯಲ್ಲಿ ಒಟ್ಟು 27 ಸಾವಿರ ಹುದ್ದೆಗಳು ಖಾಲಿ ಇದ್ದವು. ಕಳೆದ ಎರಡು ವರ್ಷಗಳ ಅವಧಿಯಲ್ಲಿ 14000 ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಖಾಲಿ ಇರುವ ಎಲ್ಲಾ 13000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್, ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಪುಲ್ ಕುಮಾರ್, ತರಬೇತಿ ವಿಭಾಗದ ಪ್ರಭಾರ ಎಡಿಜಿಪಿ ಹರಿಶೇಖರನ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕರ ವರ್ಗಾವಣೆ ಆರಂಭವಾಗಿದ್ದು, ಜುಲೈ 16ರಂದು ಸಾಮಾನ್ಯ ಆಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಪ್ರಕಟವಾಗಲಿದ್ದು, ಜುಲೈ 27ರಿಂದ 3 ದಿನಗಳ ಕಾಲ ಕೌನ್ಸೆಲಿಂಗ್ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು.
ಈ ಬಗ್ಗೆ ಇಂದು ಹೇಳಿಕೆ ನೀಡಿರುವ ಅವರು, ಈ ವರ್ಗಾವಣೆ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿರುತ್ತದೆ. ಯಾವ ಹಸ್ತಕ್ಷೇಪಕ್ಕೂ ಅವಕಾಶ ಇರುವುದಿಲ್ಲ. ಗುಣಮಟ್ಟದ ಶಿಕ್ಷಣ ಕೊಡುವ ಬದ್ಧತೆ ಇಟ್ಟುಕೊಂಡು ಸರಕಾರ ಇಡೀ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಿದೆ. ಬೋಧಕರು ತಮಗೆ ಸೂಕ್ತವೆನಿಸುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಪಾರದರ್ಶಕ ಗಣಕೀಕೃತ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದರು.
ವರ್ಗಾವಣೆ ವೇಳಾಪಟ್ಟಿ:
ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 14 ಆಗಿದ್ದು, ಜುಲೈ 16ರಂದು ಆದ್ಯತಾ ಪಟ್ಟಿ ಪ್ರಕಟಿಸಲಾಗುವುದು. ಜುಲೈ20ರಂದು ವಿಶೇಷ ಪ್ರಕರಣಗಳ ಆದ್ಯತಾ ಪಟ್ಟಿ ಪ್ರಕಟವಾಗಲಿದೆ. ಜುಲೈ 22ರಂದು ವಿಶೇಷ ಪ್ರಕರಣಗಳ ವರ್ಗಾವಣೆ ಕೌನ್ಸಿಲಿಂಗ್ ಹಾಗೂ 27ರಿಂದ 29ರವರೆಗೆ ಸಾಮಾನ್ಯ ಅಭ್ಯರ್ಥಿಗಳ ಕೌನ್ಸಿಲಿಂಗ್ ನಡೆಯಲಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಮಾರ್ಗಸೂಚಿಯಲ್ಲಿ ಏನಿದೆ?
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮ-2021 ಅನ್ನು ರೂಪಿಸಿ ಜಾರಿಗೊಳಿಸಲಾಗುತ್ತಿದೆ. ಪ್ರಸ್ತುತ ರೂಪಿಸಿರುವ ವರ್ಗಾವಣೆ ನಿಯಮಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಐದು ವಲಯಗಳಲ್ಲಿ ವಿಂಗಡಿಸಿ ವಲಯಮುಕ್ತ ವರ್ಗಾವಣೆಗೆ ಅವಕಾಶ ನೀಡಲಾಗಿದೆ.
ಬೆಂಗಳೂರು ಮಹಾನಗರ-ವಲಯ ಎ, ಎಲ್ಲಾ ಮಹಾನಗರ ಪಾಲಿಕೆಗಳನ್ನು ಹೊಂದಿರುವ ನಗರಗಳು (ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ವಿಜಯಪುರ, ಕಲಬುರಗಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಮತ್ತು ತುಮಕೂರು)-ವಲಯ ಬಿ, ಜಿಲ್ಲಾ ಕೇಂದ್ರಗಳು ಹಾಗೂ ನಗರಸಭೆಗಳನ್ನು ಹೊಂದಿರುವ ನಗರಗಳು-ವಲಯ ಸಿ, ಎಲ್ಲಾ ತಾಲೂಕು ಕೇಂದ್ರಗಳು ಹಾಗೂ ಪುರಸಭೆಗಳನ್ನು ಹೊಂದಿರುವ ಪಟ್ಟಣಗಳು-ವಲಯ ಡಿ, ಹಾಗೂ ಉಳಿದ ಎಲ್ಲಾ ಪ್ರದೇಶಗಳು-ವಲಯ ಇ ಎಂದು ವಿಂಗಡಿಸಲಾಗಿದೆ.
ಪ್ರಸ್ತುತ ರೂಪಿಸಿರುವ ನಿಯಮಗಳಲ್ಲಿ ಬೋಧಕರ ಕಡ್ಡಾಯ ವರ್ಗಾವಣೆ ಪ್ರಮುಖ ಅಂಶವಾಗಿದ್ದು, ಒಂದೇ ವಲಯದ ಹಲವು ಕಾಲೇಜುಗಳಲ್ಲಿ ಕರ್ತವ್ಯ ಬೋಧಕರು ವಲಯದ ಜೇಷ್ಠತೆಯಲ್ಲಿ ಪದೇಪದೆ ವರ್ಗಾವಣೆಗೆ ಒಳಪಡುವುದನ್ನು ತಪ್ಪಿಸಲು, ಒಂದು ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿರುವ ಅವಧಿಯನ್ನು ಪರಿಗಣಿಸಿ, ಹೆಚ್ಚಿನ ಸೇವೆಯನ್ನು ಸಲ್ಲಿಸಿರುವ ಬೋಧಕರ ವಲಯವಾರು ಜೇಷ್ಠತಾ ಪಟ್ಟಿಯನ್ನು ಸಿದ್ದಪಡಿಸಿ ವೇಳಾಪಟ್ಟಿಯೊಂದಿಗೆ ವರ್ಗಾವಣೆ ಬಯಸುವ ಬೋಧಕರು ಮಾಹಿತಿಗಾಗಿ ಇಲಾಖೆ ವೆಬ್‌ಸೈಟ್ ನೋಡಬಹುದು.
15% ಮಾತ್ರ ವರ್ಗಾವಣೆ:
ವರ್ಗಾವಣೆ ನಿಯಮದ ಮತ್ತೊಂದು ಪ್ರಮುಖ ಅಂಶ ಎಂದರೆ; ಒಟ್ಟು ಬೋಧಕ ಹುದ್ದೆಗಳ ಪೈಕಿ ಶೇ.15ರಷ್ಟು ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಅದರಲ್ಲಿ ಶೇ.9ರಷ್ಟು ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆ ಹಾಗೂ ಶೇ.6ರಷ್ಟು ವಿಶೇಷ ಪ್ರಕರಣಗಳಿಗೆ ಅಂದರೆ; ವಿಕಲಚೇತನರು, ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರು, ವಿಧವೆಯರು, ಏಕ ಪೋಷಕರು, ವಿಚ್ಛೇಧಿತ ಮಹಿಳೆಯರು, ಪತಿ-ಪತ್ನಿ ಪ್ರಕರಣಗಳಿಗೆ ವಿಶೇಷ ಅವಕಾಶ ನಿಗದಿಪಡಿಸಲಾಗಿದೆ. ಅಲ್ಲದೆ, ಕೌನ್ಸೆಲಿಂಗ್‌ನಲ್ಲೂ ಇವರಿಗೆ ಆದ್ಯತೆ ನೀಡಲಾಗುವುದು.
ವಿಶೇಷ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಹ ಬೋಧಕರಿಂದ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು, ನಿಯಮಾನುಸಾರ ದಾಖಲಾತಿಗಳ ಪರಿಶೀಲನೆಯ ನಂತರ ವರ್ಗಾವಣೆಯಲ್ಲಿ ನಿಯಮಗಳಲ್ಲಿ ನಿರ್ಬಂಧಿಸಿರುವ ಶೇ.6 ಮಿತಿಯೊಳಗೆ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು 2 ಹಂತಗಳಲ್ಲಿ ಕೈಗೊಳ್ಳಲಾಗುತ್ತದೆ.
ಎಲ್ಲಾ ವಲಯಗಳ ಬೋಧಕರಿಗೆ ಸಮಾನ ಅವಕಾಶ ನೀಡುವ ಸಲುವಾಗಿ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಕ್ರಮವಾಗಿ ವಲಯ-ಬಿ ಯಿಂದ ಪ್ರಾರಂಭಿಸಿ, ನಂತರದಲ್ಲಿ ವಲಯ-ಸಿ, ವಲಯ-ಡಿ, ವಲಯ-ಇ ಮತ್ತು ವಲಯ-ಎ ಯಿಂದ ನಡೆಸಲಾಗುವುದು ಮತ್ತು ವಲಯ ಮುಕ್ತ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ ಹಾಗೂ ಉಳಿಕೆ ರಾಜ್ಯ ವೃಂದದ ಬೋಧಕರ ಪ್ರತ್ಯೇಕ ವಲಯವಾರು ಪಟ್ಟಿಗಳನ್ನು ಪ್ರಕಟಿಸಿ, ಪಟ್ಟಿಗೆ ಸಂಬಂಧಿಸಿದಂತೆ ಬೋಧಕರಿಂದ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯವಿದ್ದಲ್ಲಿ ಆದ್ಯತಾ ಪಟ್ಟಿಯನ್ನು ಪರಿಷ್ಕರಿಸಿ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ
ದೇಶದಲ್ಲಿ ಕೋವಿಡ್ ಲಸಿಕೆಗಳ ಕೊರತೆ ಮತ್ತು ಲಭ್ಯತೆಯು ನಿಧಾನವಾಗುತ್ತಿರುವ ಬಗ್ಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಕೆಲವು ರಾಜ್ಯಗಳು ಮತ್ತು ರಾಜಕೀಯ ಪ್ರತಿನಿಧಿಗಳಿಂದ ಹಲವಾರು ಹೇಳಿಕೆಗಳು ಬಂದಿವೆ. ಇಂದು ಮಾಡಿದ ಸರಣಿ ಟ್ವೀಟ್‌ಗಳಲ್ಲಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ, ಇಂತಹ ಹೇಳಿಕೆಗಳು ಸತ್ಯಾಂಶವನ್ನು ಆಧರಿಸಿಲ್ಲ ಮತ್ತು ಜನರಲ್ಲಿ ಭೀತಿ ಉಂಟುಮಾಡುವ ಉದ್ದೇಶವನ್ನು ಹೊಂದಿವೆ ಎಂದು ಹೇಳಿದ್ದಾರೆ.
ಸಾಕ್ಷ್ಯಾಧಾರಗಳು ಮತ್ತು ವಾಸ್ತವದ ಆಧಾರದ ಮೇಲೆ ಪ್ರಸ್ತುತ ಪರಿಸ್ಥಿತಿಯ ವಿಶ್ಲೇಷಣೆಯಿಂದ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಮೂಲಕ ಲಸಿಕಾಕಾರ್ಯಕ್ರಮವನ್ನು ಸಕ್ರಿಯಗೊಳಿಸಲು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜೂನ್ 2021 ರಲ್ಲಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 11.46 ಕೋಟಿ ಲಸಿಕೆ ಡೋಸ್ ಗಳನ್ನು ಲಭ್ಯಗೊಳಿಸಿತ್ತು. ಜುಲೈ ತಿಂಗಳಲ್ಲಿ ಪ್ರಮಾಣವನ್ನು 13.50 ಕೋಟಿ ಡೋಸ್‌ಗೆ ಹೆಚ್ಚಿಸಲಾಗಿದೆ ಎಂದರು.
ತಯಾರಕರೊಂದಿಗಿನ ಚರ್ಚೆಯ ಆಧಾರದ ಮೇಲೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜೂನ್ 19, 2021ರಂದು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಜುಲೈ ತಿಂಗಳಲ್ಲಿ ಲಭ್ಯವಾಗುವ ಲಸಿಕೆ ಡೋಸ್ ಗಳ ಬಗ್ಗೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿತ್ತು. ತರುವಾಯ, ಜೂನ್ 27 ಮತ್ತು ಜುಲೈ 13 ರಂದು, ಜುಲೈ 2021 ರ ಮೊದಲ ಮತ್ತು ಎರಡನೆಯ ಪಾಕ್ಷಿಕದಲ್ಲಿ ಪ್ರತಿದಿನ ಸಿಗುವ ಲಸಿಕೆಗಳ ಬಗ್ಗೆ ರಾಜ್ಯಗಳಿಗೆ ಮುಂಚಿತವಾಗಿ ತಿಳಿಸಲಾಯಿತು. ಲಸಿಕಾ ಅಭಿಯಾನವನ್ನು ರಾಜ್ಯ / ಜಿಲ್ಲಾ ಮಟ್ಟದಲ್ಲಿ ಉತ್ತಮ ಮತ್ತು ಪರಿಣಾಮಕಾರಿ ರೀತಿಯಲ್ಲಿ ಯೋಜಿಸಲು ಈ ಮಾಹಿತಿಯನ್ನು ನೀಡಲಾಗಿತ್ತು. ದೇಶದ ಜನರು ಯಾವುದೇ ಸಮಸ್ಯೆಯನ್ನು ಎದುರಿಸಬಾರದೆಂದು ಕೋವಿಡ್ ಲಸಿಕೆಗಳ ಲಭ್ಯತೆಯ ಆಧಾರದ ಮೇಲೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ತಮ್ಮ ಕೋವಿಡ್ -19 ಲಸಿಕೆ ಕಾರ್ಯಕ್ರಮವನ್ನು ಯೋಜಿಸಲು ಸೂಚಿಸಲಾಗಿದೆ.
ಲಸಿಕೆ ಲಭ್ಯತೆಯ ಬಗ್ಗೆ ರಾಜ್ಯಗಳಿಗೆ ಮುಂಗಡ ಮಾಹಿತಿ ನೀಡಿದ್ದರೂ, ತಪ್ಪಾದ ನಿರ್ವಹಣೆ ಮತ್ತು ಲಸಿಕೆ ಫಲಾನುಭವಿಗಳ ದೀರ್ಘ ಸರತಿ ಸಾಲುಗಳನ್ನು ನೋಡುತ್ತಿದ್ದರೆ, ನಿಜವಾದ ಸಮಸ್ಯೆ ಏನು ಮತ್ತು ಈ ಪರಿಸ್ಥಿತಿಗೆ ಯಾರು ಹೊಣೆಗಾರರಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿ ಕಂಡುಬರುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವರು ತಮ್ಮ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ. ಜನರಲ್ಲಿ ತಪ್ಪು ಮಾಹಿತಿ ಮತ್ತು ಭೀತಿಯನ್ನು ಉಂಟುಮಾಡುವ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ನೀಡುತ್ತಿರುವ ವ್ಯಕ್ತಿಗಳು, ಲಸಿಕೆಗಳ ಲಭ್ಯತೆಗೆ ಸಂಬಂಧಿಸಿದಂತೆ ಸರಿಯಾದ ಮುಂಗಡ ಮಾಹಿತಿಯ ಬಗ್ಗೆ ಅರಿವಿಲ್ಲದೆ, ಆಡಳಿತ ಪ್ರಕ್ರಿಯೆಗಳಿಂದ ಮತ್ತು ಅವರಿಗೆ ನೀಡಲಾಗುತ್ತಿರುವ ಸಂಬಂಧಿತ ಮಾಹಿತಿಯಿಂದ ಅವರು ಅಷ್ಟೊಂದು ವಿಮುಖರಾಗಿದ್ದಾರೆಯೇ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮನ್ಸುಖ್ ಮಾಂಡವಿಯಾ ಸಲಹೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಮಿತಿ ಸಭೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು 01.07.2021 ರಿಂದ ಶೇ 28 ರಷ್ಟು ಹೆಚ್ಚಿಸಲು ಅನುಮೋದನೆ ನೀಡಿದೆ. ಇದು ಪ್ರಸ್ತುತ ಇರುವ ಮೂಲ ವೇತನ/ ಪಿಂಚಣಿಯ ಶೇ 17 ರಷ್ಟರ ಮೇಲೆ ಹೆಚ್ಚುವರಿಯಾಗಿ ಶೇಕಡ 11ರಷ್ಟು ಏರಿಕೆಯಾಗಲಿದೆ.
#Cabinet approves increase in Dearness Allowance and Dearness Relief with effect from 01.07.2021 to 28% representing an increase of 11% over the existing rate of 17% of the Basic Pay/Pension#CabinetDecisions
ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಉದ್ಭವಿಸಿದ ಅಸಾಧಾರಣ ಪರಿಸ್ಥಿತಿಯಿಂದಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಹೆಚ್ಚುವರಿ ಕಂತುಗಳ ತುಟ್ಟಿ ಭತ್ಯೆ [ಡಿಎ] ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು [ಡಿಆರ್] 01.01.2020, 01.07.2020 ಮತ್ತು 01.01.2021, ಸ್ಥಗಿತಗೊಳಿಸಲಾಗಿತ್ತು.
ಇದೀಗ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹಾಗೂ ಪಿಂಚಣಿದಾರರಿಗೆ ತುಟ್ಟಿ ಪರಿಹಾರ 01.07,2021 ರಿಂದ ಶೇ 28 ಕ್ಕೆ ಹೆಚ್ಚಳವಾಗಲಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಹುಟ್ಟು ಹಬ್ಬವನ್ನು ಜುಲೈ 17 ಕ್ಕೆ ಅರ್ಥಪೂರ್ಣವಾಗಿ ಆಚರಿಸಲು ಅವರ ಅಭಿಮಾನಿಗಳು ಹೊರಟಿದ್ದಾರೆ. ಈ ಸಂದರ್ಭದಲ್ಲಿ ಅವರ ಕುರಿತ ಜೀವನ ಕಥನವನ್ನು ಪುಸ್ತಕ ರೂಪದಲ್ಲಿ ಹೊರ ತರಲಾಗುತ್ತಿದೆ.
ವಿಜಯ್ ಅವರು ಸಿನಿಮಾದಷ್ಟೇ ಪುಸ್ತಕವನ್ನು ಪ್ರೀತಿಸುತ್ತಿದ್ದರು. ಆ ಪುಸ್ತಕಗಳ ಕುರಿತು ಇತರರ ಜತೆ ಹಂಚಿಕೊಳ್ಳುತ್ತಿದ್ದರು. ಹಾಗಾಗಿ ಅವರ ಕುರಿತಾದ ಜೀವನ ಕಥನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ಅದನ್ನು ಈ ಬಾರಿಯ ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ನೀಡುತ್ತಿದ್ದೇವೆ ಎಂದು ಈ ಪುಸ್ತಕ ಹೊರತರುತ್ತಿರುವ ಬೆಂಗಳೂರಿನ ಕಾಯಕ ಪ್ರಕಾಶನ ಸಂಸ್ಥೆ ತಿಳಿಸಿದೆ.
ಇದೊಂದು ಬಯೋಗ್ರಫಿ ಮಾದರಿಯಲ್ಲೇ ರೂಪಗೊಂಡ ಪುಸ್ತಕ. ವಿಜಯ್ ಅವರ ಬಾಲ್ಯ ಮತ್ತು ಜೀವನದ ಬಗ್ಗೆ ವಿಜಯ್ ಸಹೋದರರು ಮತ್ತು ಕುಟುಂಬ ಮಾತನಾಡಿದ್ದರೆ, ಅವರ ಬಾಲ್ಯದ ಗೆಳೆಯರು, ಶಾಲಾ ಗೆಳೆಯರು, ಜತೆಗಿದ್ದವರು ನೆನೆಪುಗಳನ್ನು ಹಂಚಿಕೊಂಡಿದ್ದಾರೆ. ರಂಗಭೂಮಿ, ಕಿರುತೆರೆ, ಸಿನಿಮಾ, ಸಂಗೀತ ಹೀಗೆ ವಿಜಯ್ ಅವರು ಸಾಗಿ ಬಂದ ನಾನಾ ಕ್ಷೇತ್ರಗಳ ಬಗ್ಗೆ ಅವರ ಒಡನಾಡಿಗಳು, ಸಿನಿಮಾ ನಿರ್ದೇಶಕರು, ರಂಗಭೂಮಿ ಗೆಳೆಯರು, ಸಂಗೀತದ ಸಹಪಾಠಿಗಳು ನೆನಪಿಸಿಕೊಂಡಿದ್ದಾರೆ. ವಿಜಯ್ ಅವರ ಮೊದಲುಗಳಿಗೆ ಸಾಕ್ಷಿಯಾದವರು ಕೂಡ ಈ ಪುಸ್ತಕದ ಜತೆಗಿರುವುದು ಮತ್ತೊಂದು ವಿಶೇಷ.
ಅಂಬರೀಶ್, ಸುದೀಪ್ ಅವರ ಬಯೋಗ್ರಫಿ ಬರೆದಿರುವ ಪತ್ರಕರ್ತ ಡಾ.ಶರಣು ಹುಲ್ಲೂರು ಅವರ ಸಂಪಾದಕತ್ವದಲ್ಲಿ ಈ ಕೃತಿ ಬರುತ್ತಿದೆ. ಖ್ಯಾತ ಲೇಖಕರಾದ ವಸುಧೇಂದ್ರ, ಜೋಗಿ, ಸಂಧ್ಯಾರಾಣಿ, ನಿರ್ದೇಶಕರಾದ ಬಿ.ಎಸ್. ಲಿಂಗದೇವರು, ಮಂಸೋರೆ, ಅರವಿಂದ್ ಕುಪ್ಳಿಕರ್, ಎಂ.ಎಸ್ ರಮೇಶ್, ರಂಗ ನಿರ್ದೇಶಕಿ ಮಂಗಳಾ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ರಾಷ್ಟ್ರ ಪ್ರಶಸ್ತಿ ವಿಜೇತ ಲೇಖಕ ಕೆ. ಪುಟ್ಟಸ್ವಾಮಿ ಹೀಗೆ ಸಿನಿಮಾ ರಂಗದ ಹಾಗೂ ವಿಜಯ್ ಅವರನ್ನು ಬಲ್ಲ 32. ಕ್ಕೂ ಹೆಚ್ಚು ಲೇಖಕರು ಬರೆದ ಬರಹಗಳು ಇದರಲ್ಲಿವೆ.
ಜಿ.ಎನ್. ಮೋಹನ್ ಈ ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದಾರೆ.ಜು.17 ರಂದು ಪುಸ್ತಕ ಬಿಡುಗಡೆ ಆಗಲಿದೆ ಎಂದು ಪ್ರಕಾಶಕರು ತಿಳಿಸಿದ್ದಾರೆ.
ಅಪೆಕ್ಸ್, ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳಲ್ಲಿ ಸಾಲ ಪಡೆದಿದ್ದ, ಕೊರೋನಾದಿಂದ ಮೃತಪಟ್ಟಿರುವ 10187 ರೈತರ 79.47 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಹೇಳಿದರು.
ಇನ್ನು ಮೂರರಿಂದ ನಾಲ್ಕು ದಿನದಲ್ಲಿ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಸಭೆ ಸೇರಿ ತೀರ್ಮಾನವನ್ನು ತೆಗೆದುಕೊಳ್ಳಲಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ರೈತರ ಸಹಾಯಕ್ಕೆ ಬರಲು ಮುಖ್ಯಮಂತ್ರಿಗಳು ಹಾಗೂ ನಮ್ಮ ಸರ್ಕಾರವು ಸದಾ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಇನ್ನು ಮುಂದೂ ಸಹ ಸಾಲ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಳೆದ ಸಾಲಿನಲ್ಲಿ ಸಾಲ ಪಡೆದವರ ಮಾಹಿತಿ
ಕಳೆದ ವರ್ಷ ಅಂದರೆ, 2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಬೆಳೆ ಸಾಲ ನೀಡುವ ಗುರಿಯನ್ನು ಹೊಂದಲಾಗಿತ್ತು. ಈ ನಿಟ್ಟಿನಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದು, 25.67 ಲಕ್ಷ ರೈತರಿಗೆ 17,108 ಕೋಟಿ ರೂಪಾಯಿ ಸಾಲ ನೀಡುವ ಮೂಲಕ ಶೇ.114 ಗುರಿ ಸಾಧನೆಯನ್ನು ಮಾಡಲಾಗಿತ್ತು. ಈಗ 25.67 ಲಕ್ಷ ರೈತರಲ್ಲಿ ಕೋವಿಡ್ ನಿಂದ ಮೃತಪಟ್ಟಿರುವ 10187 ರೈತರ 79.47 ಕೋಟಿ ರೂಪಾಯಿ ಸಾಲ ಮನ್ನಾ ಮಾಡುವ ಸಂಬಂಧ ಮುಖ್ಯಮಂತ್ರಿಗಳು ಚಿಂತನೆಯನ್ನು ನಡೆಸಿದ್ದಾರೆ.
ಯಾವ ಜಿಲ್ಲೆಯ ಡಿಸಿಸಿ ಬ್ಯಾಂಕ್ ಗಳಲ್ಲಿ ಎಷ್ಟು ರೈತರು, ಎಷ್ಟು ಸಾಲ ಮನ್ನಾ ಎಂಬ ಮಾಹಿತಿ ಈ ಕೆಳಗಿನಂತಿದೆ.
ಬಾಗಲಕೋಟೆ – 672 ರೈತರ 54226261 ರೂಪಾಯಿ ಸಾಲ
ಬೆಳಗಾವಿ – 3334 ರೈತರ 23,84,51,700 ರೂಪಾಯಿ ಸಾಲ
ಬಳ್ಳಾರಿ – 357 ರೈತರ 36598411 ರೂಪಾಯಿ ಸಾಲ
ಬೆಂಗಳೂರು – 381 ರೈತರ 23672500 ರೂಪಾಯಿ ಸಾಲ
ಬೀದರ್ – 824 ರೈತರ 54768271 ರೂಪಾಯಿ ಸಾಲ
ಚಿಕ್ಕಮಗಳೂರು – 113 ರೈತರ 20386020 ರೂಪಾಯಿ ಸಾಲ
ಚಿತ್ರದುರ್ಗ – 156 ರೈತರ 16371000 ರುಪಾಯಿ ಸಾಲ
ದಾವಣಗೆರೆ – 402 ರೈತರ 26622071 ರುಪಾಯಿ ಸಾಲ
ಹಾಸನ – 454 ರೈತರ 28642000 ರುಪಾಯಿ ಸಾಲ
ಕಲಬುರಗಿ – 224 ರೈತರ 8738776.43 ರೂಪಾಯಿ ಸಾಲ
ಕೆನರಾ ಶಿರಸಿ (ಉತ್ತರ ಕನ್ನಡ)- 186 ರೈತರ 17098364 ರೂಪಾಯಿ ಸಾಲ
ಕೆಸಿಸಿ ಬ್ಯಾಂಕ್ ಧಾರವಾಡ – 376 ರೈತರ 20710455 ರೂಪಾಯಿ ಸಾಲ
ಕೊಡಗು – 113 ರೈತರ 18299040 ರೂಪಾಯಿ ಸಾಲ
ಕೋಲಾರ – 147 ರೈತರ 25409639 ರೂಪಾಯಿ ಸಾಲ
ಮಂಡ್ಯ – 410 ರೈತರ 27328268 ರೂಪಾಯಿ ಸಾಲ
ಮೈಸೂರು – 281 ರೈತರ 31399000 ರೂಪಾಯಿ ಸಾಲ
ರಾಯಚೂರು- 237 ರೈತರ 19203700 ರೂಪಾಯಿ ಸಾಲ
ಶಿವಮೊಗ್ಗ – 307 ರೈತರ 32701000 ರೂಪಾಯಿ ಸಾಲ
ದಕ್ಷಿಣ ಕನ್ನಡ – 152 ರೈತರ 24063450 ರೂಪಾಯಿ ಸಾಲ
ತುಮಕೂರು – 307 ರೈತರ 18722000 ರೂಪಾಯಿ ಸಾಲ
ವಿಜಯಪುರ – 754 ರೈತರ 51340000 ರೂಪಾಯಿ ಸಾಲ
ಒಟ್ಟಾರೆಯಾಗಿ 10187 ರೈತರ 794751926.43 ರೂಪಾಯಿ ಸಾಲ ಮನ್ನಾ ಪ್ರಕ್ರಿಯೆ ಪಟ್ಟಿ ಸಿದ್ಧವಾಗಿದೆ.