26.8 C
Karnataka
Monday, August 24, 2026
    Home Blog Page 81

    ಕೊರೋನಾದಿಂದ ಮೃತಪಟ್ಟ 10187 ರೈತರ 79.47 ಕೋಟಿ ರೂ. ಸಾಲ ಮನ್ನಾಕ್ಕೆ ಚಿಂತನೆ

    ಅಪೆಕ್ಸ್, ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳಲ್ಲಿ ಸಾಲ ಪಡೆದಿದ್ದ, ಕೊರೋನಾದಿಂದ ಮೃತಪಟ್ಟಿರುವ 10187 ರೈತರ 79.47 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಹೇಳಿದರು.

    ಇನ್ನು ಮೂರರಿಂದ ನಾಲ್ಕು ದಿನದಲ್ಲಿ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಸಭೆ ಸೇರಿ ತೀರ್ಮಾನವನ್ನು ತೆಗೆದುಕೊಳ್ಳಲಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ರೈತರ ಸಹಾಯಕ್ಕೆ ಬರಲು ಮುಖ್ಯಮಂತ್ರಿಗಳು ಹಾಗೂ ನಮ್ಮ ಸರ್ಕಾರವು ಸದಾ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಇನ್ನು ಮುಂದೂ ಸಹ ಸಾಲ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

    ಕಳೆದ ಸಾಲಿನಲ್ಲಿ ಸಾಲ ಪಡೆದವರ ಮಾಹಿತಿ

    ಕಳೆದ ವರ್ಷ ಅಂದರೆ, 2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಬೆಳೆ ಸಾಲ ನೀಡುವ ಗುರಿಯನ್ನು ಹೊಂದಲಾಗಿತ್ತು. ಈ ನಿಟ್ಟಿನಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದು, 25.67 ಲಕ್ಷ ರೈತರಿಗೆ 17,108 ಕೋಟಿ ರೂಪಾಯಿ ಸಾಲ ನೀಡುವ ಮೂಲಕ ಶೇ.114 ಗುರಿ ಸಾಧನೆಯನ್ನು ಮಾಡಲಾಗಿತ್ತು. ಈಗ 25.67 ಲಕ್ಷ ರೈತರಲ್ಲಿ ಕೋವಿಡ್ ನಿಂದ ಮೃತಪಟ್ಟಿರುವ 10187 ರೈತರ 79.47 ಕೋಟಿ ರೂಪಾಯಿ ಸಾಲ ಮನ್ನಾ ಮಾಡುವ ಸಂಬಂಧ ಮುಖ್ಯಮಂತ್ರಿಗಳು ಚಿಂತನೆಯನ್ನು ನಡೆಸಿದ್ದಾರೆ.

    ಯಾವ ಜಿಲ್ಲೆಯ ಡಿಸಿಸಿ ಬ್ಯಾಂಕ್ ಗಳಲ್ಲಿ ಎಷ್ಟು ರೈತರು, ಎಷ್ಟು ಸಾಲ ಮನ್ನಾ ಎಂಬ ಮಾಹಿತಿ ಈ ಕೆಳಗಿನಂತಿದೆ.

    1. ಬಾಗಲಕೋಟೆ – 672 ರೈತರ 54226261 ರೂಪಾಯಿ ಸಾಲ
    2. ಬೆಳಗಾವಿ – 3334 ರೈತರ 23,84,51,700 ರೂಪಾಯಿ ಸಾಲ
    3. ಬಳ್ಳಾರಿ – 357 ರೈತರ 36598411 ರೂಪಾಯಿ ಸಾಲ
    4. ಬೆಂಗಳೂರು – 381 ರೈತರ 23672500 ರೂಪಾಯಿ ಸಾಲ
    5. ಬೀದರ್ – 824 ರೈತರ 54768271 ರೂಪಾಯಿ ಸಾಲ
    6. ಚಿಕ್ಕಮಗಳೂರು – 113 ರೈತರ 20386020 ರೂಪಾಯಿ ಸಾಲ
    7. ಚಿತ್ರದುರ್ಗ – 156 ರೈತರ 16371000 ರುಪಾಯಿ ಸಾಲ
    8. ದಾವಣಗೆರೆ – 402 ರೈತರ 26622071 ರುಪಾಯಿ ಸಾಲ
    9. ಹಾಸನ – 454 ರೈತರ 28642000 ರುಪಾಯಿ ಸಾಲ
    10. ಕಲಬುರಗಿ – 224 ರೈತರ 8738776.43 ರೂಪಾಯಿ ಸಾಲ
    11. ಕೆನರಾ ಶಿರಸಿ (ಉತ್ತರ ಕನ್ನಡ)- 186 ರೈತರ 17098364 ರೂಪಾಯಿ ಸಾಲ
    12. ಕೆಸಿಸಿ ಬ್ಯಾಂಕ್ ಧಾರವಾಡ – 376 ರೈತರ 20710455 ರೂಪಾಯಿ ಸಾಲ
    13. ಕೊಡಗು – 113 ರೈತರ 18299040 ರೂಪಾಯಿ ಸಾಲ
    14. ಕೋಲಾರ – 147 ರೈತರ 25409639 ರೂಪಾಯಿ ಸಾಲ
    15. ಮಂಡ್ಯ – 410 ರೈತರ 27328268 ರೂಪಾಯಿ ಸಾಲ
    16. ಮೈಸೂರು – 281 ರೈತರ 31399000 ರೂಪಾಯಿ ಸಾಲ
    17. ರಾಯಚೂರು- 237 ರೈತರ 19203700 ರೂಪಾಯಿ ಸಾಲ
    18. ಶಿವಮೊಗ್ಗ – 307 ರೈತರ 32701000 ರೂಪಾಯಿ ಸಾಲ
    19. ದಕ್ಷಿಣ ಕನ್ನಡ – 152 ರೈತರ 24063450 ರೂಪಾಯಿ ಸಾಲ
    20. ತುಮಕೂರು – 307 ರೈತರ 18722000 ರೂಪಾಯಿ ಸಾಲ
    21. ವಿಜಯಪುರ – 754 ರೈತರ 51340000 ರೂಪಾಯಿ ಸಾಲ

    ಒಟ್ಟಾರೆಯಾಗಿ 10187 ರೈತರ 794751926.43 ರೂಪಾಯಿ ಸಾಲ ಮನ್ನಾ ಪ್ರಕ್ರಿಯೆ ಪಟ್ಟಿ ಸಿದ್ಧವಾಗಿದೆ.

    ದಿನದಿಂದ ದಿನಕ್ಕೆ ಲಸಿಕೆ ನೀಡಿಕೆಯ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾದರೆ ಮುಂದೇನು? -ಸಿದ್ಧರಾಮಯ್ಯ ಪ್ರಶ್ನೆ

    ಲಸಿಕೆ ಕೊರತೆಯಿಂದಾಗಿ ರಾಜ್ಯದ ಶೇಕಡಾ 50ರಷ್ಟು ಲಸಿಕೆ ಕೇಂದ್ರಗಳು ಸ್ಥಗಿತಗೊಂಡಿವೆ  ಕಳೆದ 14 ದಿನಗಳಲ್ಲಿ ಸರಾಸರಿ 2.56 ಲಕ್ಷ ಲಸಿಕೆಗಳನ್ನು ಮಾತ್ರ ನೀಡಲಾಗುತ್ತಿದೆ ಎಂಬ ವರದಿ ಕಳವಳಕಾರಿಯಾದುದು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ರಾಜ್ಯದ ಲಸಿಕಾ ಕೇಂದ್ರಕ್ಕೆ ಬರುತ್ತಿರುವ ನೂರು ಮಂದಿಯಲ್ಲಿ20 ಮಂದಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಬೇಡಿಕೆಯ ಶೇಕಡಾ 20ರಷ್ಟು ಲಸಿಕೆಗಳೂ ಪೂರೈಕೆಯಾಗುತ್ತಿಲ್ಲ ಎಂದು ಆರೋಗ್ಯ ಇಲಾಖೆಯ ವೈದ್ಯರು ಹೇಳುತ್ತಿದ್ದಾರೆ.

    ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಸುವಂತೆ ಹತ್ತಕ್ಕಿಂತ ಹೆಚ್ಚು ಪತ್ರಗಳನ್ನು ರಾಜ್ಯ ಸರ್ಕಾರ ಬರೆದಿದ್ದರೂ ಕೇಂದ್ರ ಸರ್ಕಾರದಿಂದ ಯಾವದೇ ಸ್ಪಂದನೆ ಇಲ್ಲ.ಲಸಿಕೆ ನೀಡಿಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳುತ್ತಾ ಬಂದಿರುವ ಕೇಂದ್ರ ಸರ್ಕಾರ ತನ್ನ ವೈಫಲ್ಯತೆಯನ್ನು ಒಪ್ಪಲಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

    ರಾಜ್ಯದಲ್ಲಿ ತಿಂಗಳಿಗೆ 60 ಲಕ್ಷ ಜನರಿಗೆ ಲಸಿಕೆ

    ಲಸಿಕೆ ಲಭ್ಯತೆಯ ಮುಂಗಡ ಮಾಹಿತಿ ಇದ್ದರೂ ಸರಿಯಾಗಿ ಪ್ಲಾನ್ ಮಾಡದೆ ಇದ್ದುದು ಯಾರ ತಪ್ಪು?

    ರಾಜ್ಯದಲ್ಲಿರುವ 8500 ಲಸಿಕಾ ಕೇಂದ್ರಗಳಲ್ಲಿ ಬಹುಪಾಲು ಕೇಂದ್ರಗಳು ಗ್ರಾಮೀಣ ಪ್ರದೇಶದಲ್ಲಿವೆ. ಅಲ್ಲಿ ಲಭ್ಯ ಇರುವ ಲಸಿಕೆಗಳನ್ನು ಕೂಡಾ ರಾಜಕಾರಣಿಗಳು ಮತ್ತು ಪ್ರಭಾವಿಗಳ ಶಿಫಾರಸಿನ ಮೇರೆಗೆ ನೀಡಲಾಗುತ್ತಿರುವ ದೂರುಗಳಿವೆ.ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳ ಮುಂಭಾಗದಲ್ಲಿ ಲಸಿಕಾ ಆಕಾಂಕ್ಷಿಗಳು ಬೆಳಿಗ್ಗೆಯಿಂದ ಸಾಲಲ್ಲಿ ನಿಂತು ಬರಿಗೈಯಲ್ಲಿ ಹಿಂದಿರುಗುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

    ಈಗಿನ ಅಂದಾಜಿನಂತೆ ರಾಜ್ಯದಲ್ಲಿ 4.97 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಎರಡು ಡೋಸ್ ಗಳಂತೆ ಒಟ್ಟು 9.6 ಕೋಟಿ ಲಸಿಕೆಗಳು ಬೇಕಾಗಿದೆ. ಆದರೆ ಕೇಂದ್ರ ಸರ್ಕಾರ ಇಲ್ಲಿಯ ವರೆಗೆ ಪೂರೈಸಿರುವುದು 2.6 ಕೋಟಿ ಲಸಿಕೆ ಮಾತ್ರ ಎಂದು ಆರೋಗ್ಯ ಇಲಾಖೆ ಹೇಳುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ.

    ಒಂದೆಡೆ ಯುವಜನರನ್ನು ಗುರಿಯಾಗಿಟ್ಟುಕೊಂಡಿದೆಯೆನ್ನಲಾದ ಕೊರೊನಾ ಮೂರನೇ ಅಲೆಯ ಭೀತಿ, ಇನ್ನೊಂದೆಡೆ ಎಸ್ ಎಸ್ ಎಲ್ ಸಿ ಪರೀಕ್ಷೆ ಮತ್ತು ಕಾಲೇಜುಗಳನ್ನು ತೆರೆಯಲು ಸರ್ಕಾರದ ಪ್ರಯತ್ನ.ಈ ಪರಿಸ್ಥಿತಿಯಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಪೂರ್ವ ಸಿದ್ದತೆ ನಡೆಸಬೇಕಾಗಿದ್ದ ರಾಜ್ಯ ಸರ್ಕಾರ ಕೈಕಟ್ಟಿ ಕೂತಿದೆ.
     
    ಜುಲೈ ಅಂತ್ಯದೊಳಗೆ ದೇಶಾದ್ಯಂತ 51.6 ಕೋಟಿ ಕೊರೊನಾ ಲಸಿಕೆಗಳನ್ನು ನೀಡುವುದಾಗಿ ಕೇಂದ್ರ ಸರ್ಕಾರ ಆಶ್ವಾಸನೆ ನೀಡಿತ್ತು. ಈ ಗುರಿ ಸಾಧನೆಗಾಗಿ ಪ್ರತಿದಿನ 70 ಲಕ್ಷ ಲಸಿಕೆ ನೀಡಬೇಕಾಗಿದ್ದರೂ ಈಗ 40 ಲಕ್ಷ ಲಸಿಕೆ ಮಾತ್ರ ನೀಡಲಾಗುತ್ತಿದೆ.ಇಲ್ಲಿಯ ವರೆಗೆ 38.5 ಕೋಟಿ ಲಸಿಕೆಗಳನ್ನಷ್ಟೇ ನೀಡಲಾಗಿದೆ. ದಿನದಿಂದ ದಿನಕ್ಕೆ ಲಸಿಕೆ ನೀಡಿಕೆಯ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾದರೆ ಮುಂದೇನು? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

    ರಾಜ್ಯದಲ್ಲಿ ತಿಂಗಳಿಗೆ 60 ಲಕ್ಷ ಜನರಿಗೆ ಲಸಿಕೆ

    ರಾಜ್ಯ ತಿಂಗಳಿಗೆ 60 ಲಕ್ಷ ಜನರಿಗೆ ಕೋವಿಡ್‌ ಲಸಿಕೆ ನೀಡಲಾಗುತ್ತಿದೆ ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಶೇಷಾದ್ರಿಪುರದ ಮಾರುತಿ ಆಸ್ಪತ್ರೆಯಲ್ಲಿಂದು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮತ್ತು ನೂತನ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅವರು, ಪ್ರತೀ ತಿಂಗಳೂ ಹಂಚಿಕೆಯಾಗುವ ವ್ಯಾಕ್ಸಿನ್‌ ಕೋಟಾದ ಆಧಾರದಂತೆ ರಾಜ್ಯದಲ್ಲಿ ಲಸಿಕೀಕರಣ ನಡೆಯುತ್ತಿದೆ. ಕೇಂದ್ರ ಸರಕಾರದಿಂದ ಮಾಸಿಕ 60 ಲಕ್ಷ ಲಸಿಕೆ ಹಂಚಿಕೆಯಾಗುತ್ತಿದೆ ಎಂದರು.

    ಈ ಹಂಚಿಕೆ ಆಧಾರದಲ್ಲಿಯೇ ರಾಜ್ಯ ಸರಕಾರ ತಿಂಗಳಿಗೆ ರಾಜ್ಯಾದ್ಯಂತ 60 ಲಕ್ಷ ಜನರಿಗೆ ಲಸಿಕೆ ನೀಡುತ್ತಿದೆ. ಕಳೆದ ಜೂನ್‌ ತಿಂಗಳಲ್ಲಿ 60 ಲಕ್ಷ ಜನರಿಗೆ ಲಸಿಕೆ ಕೊಡಲಾಗಿತ್ತು. ಈ ತಿಂಗಳಲ್ಲೂ ಅಷ್ಟೇ ಪ್ರಮಾಣದ ಜನರಿಗೆ ವ್ಯಾಕ್ಸಿನ್‌ ಕೊಡಲಾಗುವುದು. ಇನ್ನೂ ಹೆಚ್ಚು ಪ್ರಮಾಣದಲ್ಲಿ ಲಸಿಕೀಕರಣ ಮಾಡಲು ಸರಕಾರ ಪ್ರಯತ್ನ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.

    ಮೂರನೇ ಅಲೆ ಬಗ್ಗೆ ಆತಂಕ ಬೇಡ:

    ಮೂರನೇ ಅಲೆಯ ಬಗ್ಗೆ ಎಲ್ಲರಿಗೂ ಆತಂಕ ಇರುವುದು ನಿಜ. ಹಾಗಂತ ಹೆದರಬೇಕಿಲ್ಲ. ಈಗಾಗಲೇ ಕೇಂದ್ರದ ನೆರವಿನಿಂದ ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಆಕ್ಸಿಜನ್‌ ಉತ್ಪಾದನೆ ಮತ್ತು ಸಂಗ್ರಹ, ಐಸಿಯು ಬೆಡ್‌ಗಳ ಸಂಖ್ಯೆ ಹೆಚ್ಚಿಸುವುದು, ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು ಸೇರಿ ಎಲ್ಲ ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಡಿಸಿಎಂ ತಿಳಿಸಿದರು.

    ಇದರ ಜತೆಯಲ್ಲೇ ಲಸಿಕೀಕರಣವನ್ನೂ ಹೆಚ್ಚಿಸಲಾಗುತ್ತಿದೆ. ರಾಜ್ಯದಲ್ಲಿ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆಗಳನ್ನು ಕೊಡಲಾಗುತ್ತಿದೆ. ಕೇಂದ್ರ ಸರಕಾರಕ್ಕೆ ಇನ್ನೂ ಹೆಚ್ಚಿನ ಲಸಿಕೆಗಾಗಿ ಮನವಿ ಸಲ್ಲಿಸಲಾಗಿದೆ. ಅಲ್ಲದೇ, ಲಸಿಕೆ ಕಂಪನಿಗಳಿಗೆ ಉತ್ಪಾದನೆ ಹೆಚ್ಚಿಸುವಂತೆ ಕೋರಲಾಗಿದೆ. ಜತೆಗೆ, ಲಭ್ಯವಾಗುತ್ತಿರುವ ಲಸಿಕೆಯನ್ನೂ ಕ್ಷಮತೆಯಿಂದ ಬಳಸಲಾಗುತ್ತಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    SSLC ಪರೀಕ್ಷೆ: ಎಲ್ಲಾ ಸಿದ್ಧತೆಗಳು ಪೂರ್ಣ

    ಜುಲೈ 19 ಮತ್ತು 22ರಂದು ನಿಗದಿಯಾಗಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈಗಾಗಲೇ ಸಿದ್ಧತೆಗಳ ಕುರಿತಂತೆ ಪರಿಶೀಲನೆ ನಡೆಸಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

    ಬುಧವಾರ ವಿಧಾನಸೌಧದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಸಿದ್ಧತೆ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕರ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾರ್ಗದರ್ಶನ ನೀಡಿದ ಸಚಿವರು, ಯಾವುದೇ ಒಂದು ಮಗುವಿಗೂ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ಸಲಹೆ ನೀಡಿದರು.

    ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷಾ ಸಿದ್ಧತೆ ಕುರಿತು ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಗಳು ನಡೆದಿವೆ. ಡಿಸಿಗಳ ನೇತೃತ್ವದಲ್ಲಿ ಸಿಇಒ, ಎಸ್.ಪಿ ,ಡಿಎಚ್ಒ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆಗಳು ನಡೆದಿದ್ದು, ಪರೀಕ್ಷಾ ಸಿದ್ಧತೆ ಮತ್ತು ಎಸ್ಒಪಿ ಪಾಲನೆ ಕುರಿತಂತೆ ನಿರ್ದೇಶನ ನೀಡಿದ್ದು, ಆಯಾ ಮಟ್ಟದ ಅಧಿಕಾರಿಗಳು ಕ್ರಮ ವಹಿಸಿದ್ದಾರೆಂದು ಸಚಿವರು ಹೇಳಿದರು.

    ಮಕ್ಕಳಿಗೆ ಪರೀಕ್ಷಾಂಗಣ ಸುರಕ್ಷತೆ ಮತ್ತು ಆತ್ಮವಿಶ್ವಾಸದ ಭಾವಗಳನ್ನು ಮೂಡಿಸುವಂತೆ ಕ್ರಮ ವಹಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಈಗಾಗಲೇ ಒಎಂಆರ್ ಶೀಟ್ ಕುರಿತು ಹತ್ತಾರು ಬಾರಿ ತಿಳಿವಳಿಕೆ ಮೂಡಿಸಲಾಗಿದೆ. ಪರೀಕ್ಷಾ ಕೊಠಡಿಯಲ್ಲೂ ಪ್ರತಿ ವಿದ್ಯಾರ್ಥಿಗೂ ಕೊಠಡಿ ಮೇಲ್ವಿಚಾರಕರು ಈ ಕುರಿತು ಸೂಕ್ತ ಮಾರ್ಗದರ್ಶನ ನೀಡಲು ಸೂಚನೆ ನೀಡಲಾಗಿದೆ. ಯಾವುದೇ ರೀತಿಯಲ್ಲೂ ಗೊಂದಲವಾಗದಂತೆ ಗಮನ ಹರಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಪರೀಕ್ಷೆಗೂ ಎರಡು ದಿನಗಳ ಮೊದಲು ಪರೀಕ್ಷಾ ಪ್ರಕ್ರಿಯೆಗೆ ನೇಮಕವಾಗಿರುವ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ, ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಪರೀಕ್ಷಾ ಕೇಂದ್ರದಲ್ಲಿ ಅಣಕು ಪರೀಕ್ಷಾ ಪ್ರಕ್ರಿಯೆ ನಡೆಸಲಿದ್ದಾರೆ. ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನರ್ ಪೂರೈಕೆ ಸೇರಿದಂತೆ ಎಲ್ಲ ಕೇಂದ್ರಗಳಿಗೆ ಆರೋಗ್ಯ ಸಿಬ್ಬಂದಿ, ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು, ಕೊಠಡಿ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರದ ಅಧೀಕ್ಷಕರು ಸೇರಿದಂತೆ ಅಗತ್ಯವಿರುವ ಎಲ್ಲ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿದ್ದು, ಅವರೆಲ್ಲರಿಗೂ ತಂತಮ್ಮ ಕರ್ತವ್ಯದ ಪಟ್ಟಿಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

    ಕಳೆದ ಬಾರಿಗಿಂತ ಹೆಚ್ಚಿನ ಸುರಕ್ಷಾ ವಾತಾವರಣದಲ್ಲಿ ಪರೀಕ್ಷೆಗಳು ನಡೆಯಲಿವೆ. ಪೋಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಸಂಪರ್ಕದಲ್ಲಿದ್ದು, ಪರೀಕ್ಷೆಗೆ ಸರ್ಕಾರ ಕೈಗೊಂಡಿರುವ ಎಲ್ಲ ಕ್ರಮಗಳನ್ನು ವಿವರಿಸಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಧೈರ್ಯವಾಗಿ ಪರೀಕ್ಷೆಗೆ ಕಳಿಸಲು ಉತ್ಸುಕರಾಗಿದ್ದಾರೆಂದು ಸಚಿವರು ತಿಳಿಸಿದರು. ಈಗಾಗಲೇ ತಾನು ಎಲ್ಲ ಡಿಡಿಪಿಐಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದೇನೆ. ಎಲ್ಲರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿ ಕೊನೆ ಕ್ಷಣದ ಸೂಚನೆಗಳನ್ನು ನೀಡಿದ್ದೇನೆ. ಪ್ರತಿಯೊಬ್ಬ ಅಧಿಕಾರಿಗಳು ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿದ್ದಾರೆ. ಯಾವುದೇ ಒಂದು ಮಗುವೂ ಸಹ ವಾಹನ ಸೌಲಭ್ಯವಿಲ್ಲದೇ ಪರೀಕ್ಷೆಗೆ ಗೈರು ಹಾಜರಾಗದಂತೆ ಗಮನಹರಿಸಲು ಕ್ರಮ ವಹಿಸಬೇಕೆಂದು ಸೂಚನೆಗಳನ್ನು ನೀಡಲಾಗಿದೆ. ಮಕ್ಕಳ ಪರೀಕ್ಷಾ ಪ್ರವೇಶ ಪತ್ರ ಪ್ರದರ್ಶಿಸಿ ಮಕ್ಕಳು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಿ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ ಎಂದೂ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಅನೇಕ ಸಂಸ್ಥೆಗಳು, ಆಯಾ ಶಾಸಕರು, ಜನಪ್ರತಿನಿಧಿಗಳು ಆಯಾ ಭಾಗದ ಮಕ್ಕಳಿಗೆ ಪರೀಕ್ಷಾವಧಿ ನಂತರ ಅಲ್ಲಲ್ಲಿ ನೀರಿನ ಬಾಟಲ್ ಮತ್ತು ಬಿಸ್ಕತ್, ಬ್ರೆಡ್ ಸೇರಿದಂತೆ ಸಿದ್ದಪಡಿಸಿದ ಅಹಾರಗಳಂತಹ ಲುಘು ಉಪಹಾರ ವ್ಯವಸ್ಥೆ ಸಹ ಮಾಡಿದ್ದು, ಪರೀಕ್ಷೆಗೆ ಎಲ್ಲರ ಸಹಾಯ ಸಹಕಾರದ ಹಸ್ತ ಚಾಚಿದ್ದಾರೆ. ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷಾ ಕೇಂದ್ರವಾಗಿರಲಿವೆ. ಪರೀಕ್ಷೆಯು ಮಕ್ಕಳಿಗೆ ಸಂಭ್ರಮದ ಹಬ್ಬವಾಗಿರಲಿದೆ. ಪರೀಕ್ಷಾಂಗಣವನ್ನು ಕ್ರೀಡಾಂಗಣವೆಂದು ಭಾವಿಸಿ ಖುಷಿಯ ವಾತಾವರಣದಲ್ಲಿ ಪರೀಕ್ಷೆ ಬರೆಯಬೇಕೆಂದು ಸಚಿವರು ಮನವಿ ಮಾಡಿದ್ದಾರೆ.

    ಎಸ್ಒಪಿ ಪಾಲನೆಯೊಂದಿಗೆ ಪರೀಕ್ಷೆಗೆ ಮೊದಲು ಮತ್ತು ನಂತರ ಪರೀಕ್ಷಾ ಕೇಂದ್ರದ ಆವರಣ ಮತ್ತು ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲು ಸಂಬಂಧಿಸಿದ ಅಧಿಕಾರಿಗಳು ಆಯಾ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ. ಡಿಡಿಪಿಐ ಮತ್ತು ಬಿಇಒಗಳು ತಮ್ಮ ವ್ಯಾಪ್ತಿಯ ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈಗಾಗಲೇ ಶೇ. 100ರಷ್ಟು ಪರೀಕ್ಷಾ ಸಿಬ್ಬಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆದವರಷ್ಟೇ ಪರೀಕ್ಷಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆಂದು ಸಚಿವರು ತಿಳಿಸಿದರು.

    ಹಾಲ್ ಟಿಕೆಟ್-ಬಿಇಒಗಳಿಗೆ ಸೂಚನೆ:
    ಪೂರ್ಣ ಶುಲ್ಕ ಪಾವತಿಸದೇ ಇರುವುದರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಪ್ರವೇಶ ಪತ್ರ ನೀಡಲು ನಿರಾಕರಿಸಿರುವಂತಹ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ರೀತಿಯಲ್ಲೂ ಮಕ್ಕಳಿಗೆ ತೊಂದರೆಯಾಗದಂತೆ ಬಿಇಒಗಳು ಸೂಕ್ತ ಕ್ರಮ ವಹಿಸಲಿದ್ದಾರೆ. ಈ ಕುರಿತು ಯಾವುದೇ ಶಾಲೆಯೂ ಶುಲ್ಕ ಸಂಬಂಧದಲ್ಲಿ ಮಂಡಳಿ ಪರೀಕ್ಷೆಗೆ ಮಕ್ಕಳಿಗೆ ಪ್ರವೇಶ ಪತ್ರ ನಿರಾಕರಿಸದಂತೆ ಪರೀಕ್ಷಾ ಮಂಡಳಿ ಇಂದು ಅಗತ್ಯ ಸುತ್ತೋಲೆ ಹೊರಡಿಸಿದೆ ಎಂದು ಹೇಳಿದ್ದಾರೆ.

    ಸುಧಾಕರ ದರ್ಬೆ ಸೇರಿದಂತೆ ಹಲವರಿಗೆ ಪುಸ್ತಕ ಸೊಗಸು ಪ್ರಶಸ್ತಿ

    ಕನ್ನಡ ಪುಸ್ತಕ ಪ್ರಾಧಿಕಾರ ಈ ಸಾಲಿನ ಪುಸ್ತಕ ಮತ್ತು ಮುದ್ರಣ ಸೊಗಸು ಪ್ರಶಸ್ತಿಗಳನ್ನು ಪ್ರಕಟಿಸಿದೆ. ಡಾ.ಎಸ್ ಗುರುಮೂರ್ತಿ ಅವರ ಕಂದಂಬರು ಸಮಗ್ರ ಅವಲೋಕನ ಕೃತಿ ಪುಸ್ತಕ ಸೊಗಸು ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದೆ.

    ಹೆಣ್ಣೊಳ ನೋಟ ಕೃತಿಯ ಮುಖ ಪುಟ ಚಿತ್ರಕ್ಕಾಗಿ ಖ್ಯಾತ ಕಲಾವಿದ ಸುಧಾಕರ ದರ್ಬೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುದ್ರಣ ಸೊಗಸು ವಿಭಾಗದಲ್ಲಿ ರಂಗಕೈರಳಿ ಕೃತಿಗೆ ರೀಗಲ್ ಪ್ರಿಂಟ್ಸ್ ಪ್ರಶಸ್ತಿ ಪಡೆದಿದೆ. ಮುಖ ಪುಟ ವಿನ್ಯಾಸಕ್ಕಾಗಿ ಬಯಲೊಳು ಬಯಲಾಗಿ ಕೃತಿಯ ವಿನ್ಯಾಸ ಮಾಡಿದ ಮೈಸೂರಿನ ಟಿ ಎಫ್ ಹಾದಿಮನಿ ಪ್ರಶಸ್ತಿ ಪಡೆದಿದ್ದಾರೆ.

    ಪ್ರಶಸ್ತಿ ಪಡೆದವರ ಪೂರ್ಣ ವಿವರ ಇಲ್ಲಿದೆ.

    ಮಂಚನಬೆಲೆ ಜಲಾಶಯದ ಹತ್ತಿರ ಜಂಗಲ್ ಲಾಡ್ಜ್ :ಕಣ್ವ ಜಲಾಶಯದಲ್ಲಿ ವಾಟರ್ ಸ್ಪೋರ್ಟ್ಸ್

    ಮಂಚನಬೆಲೆ ಜಲಾಶಯದ ಸುತ್ತಮುತ್ತ ಸರ್ಕಾರಕ್ಕೆ ಸೇರಿರುವ 200 ಎಕರೆಗೂ ಹೆಚ್ಚಿನ ಸ್ಥಳವಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಜಂಗಲ್ ಲಾಡ್ಜ್ ರೆಸಾರ್ಟ್‌ ಪ್ರಾರಂಭಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ತಿಳಿಸಿದರು.

    ಅವರು ಇಂದು ಜಿಲ್ಲೆಯಲ್ಲಿ ವಿವಿಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ಸಂಬಂಧ ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ರಾಮನಗರ ಜಿಲ್ಲೆಗೆ ನಿಸರ್ಗದ ಕೊಡುಗೆಯಿದ್ದು,‌ ಪ್ರವಾಸಿ ತಾಣಗಳಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು ರಾಮನಗರ ಜಿಲ್ಲೆಗೆ ಪ್ರವಾಸಿ ಸರ್ಕೊಟ್ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

    ಮೂಲಭೂತ ಸೌಕರ್ಯಗಳಾದ ವಾಹನ ನಿಲುಗಡೆ, ಶೌಚಾಲಯ, ತಂಗಲು ಕೊಠಡಿಗಳನ್ನು ಮೊದಲು ಯೋಜನೆ ರೂಪಿಸಲಾಗುವುದು. ಇದಕ್ಕೆ ಹೆಚ್ಚಿನ ಅನುದಾನದ ಅವಶ್ಯಕತೆ ಇಲ್ಲ. ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.

    ಎಕೋ ಟೂರಿಸ್ಂ : ಜಿಲ್ಲೆಯಲ್ಲಿ ಅರಣ್ಯ ಪ್ರದೇಶಕ್ಕೆ ದಕ್ಕೆ ಉಂಟುಮಾಡದೇ ಸಾವನದುರ್ಗದಲ್ಲಿ ಮೌಂಟ್ ಕ್ಲಂಬಿಂಗ್, ರೋಪ್ ವೇ ಮಾಡಲು ಚಿಂತಿಸಲಾಗುತ್ತಿದೆ. ಸಾವನದುರ್ಗದಲ್ಲಿ ಬರುವ ಪ್ರವಾಸಿಗರಿಗೆ ಸುರಕ್ಷತೆ ನೀಡುವ ಬಗ್ಗೆ ಬರುವ ಪ್ರವಾಸಿಗರನ್ನು ಮೌಂಟ್ ಕ್ಲಂಬಿಂಗ್ ಮಾಡಲು ಮಾರ್ಗದರ್ಶಕರನ್ನು ನೀಡುವುದು ಸೇರಿದಂತೆ ಇನ್ನಿತರ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದರು.

    ಮಂಚನಬಲೆ ನೀರನ್ನು ಕುಡಿಯುವ ನೀರಿಗೆ ಬಳಸಲಾಗುವುದು ಆದರಿಂದ ವಾಟರ್ ಸ್ಪೋರ್ಟ್ಸ್ ಮಾಡಲು ಪರಿಶೀಲಿಸಬೇಕಿದೆ. ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಬೆಟ್ಟಕ್ಕೆ ರೋಪ್ ವೇ ಮಾಡುವಂತೆ ಸ್ಥಳೀಯರು ಮಾನವಿ ನೀಡಿದ್ದಾರೆ. ಈ ಬಗ್ಗೆ ಸಹ ಚಿಂತಿಸಲಾಗುವುದು ಎಂದರು.

    ಕಣ್ವ ಜಲಾಶಯದಲ್ಲಿ ವಾಟರ್ ಸ್ಪೋರ್ಟ್ಸ್

    ಕಣ್ವ ಜಲಾಶಯದಲ್ಲಿ ಈಗಾಗಲೇ ಕಾಮಗಾರಿಗಳು‌ ಪ್ರಗತಿಯಲ್ಲಿದೆ. ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಹತ್ತಿರವಿರುವ ಹಿನ್ನಲೆಯಲ್ಲಿ ವಾಟರ್ ಸ್ಪೋರ್ಟ್ಸ್ ಪ್ರಾರಂಭಿಸಿದರೆ ಹೆಚ್ಚಿನ ಜನರು ಬರಲಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸಿಗರು ಭೇಟಿ ನೀಡಿದರೆ ಎರಡು ಮೂರು ದಿನ ತಂಗಿ ಪ್ರವಾಸಿ ಸ್ಥಳ ವೀಕ್ಷಿಸುವ ರೀತಿ ಮಾಡಲಾಗುವುದು ಎಂದರು.

    ಶಾಲಾ ಮಕ್ಕಳ ಪ್ರವಾಸ: ಶಾಲೆಯಲ್ಲಿ‌ಮಕ್ಕಳು ಐತಿಹಾಸಿಕ ಸ್ಥಳಗಳ ಬಗ್ಗೆ ಪುಸ್ತಕದಲ್ಲಿ ಮಾತ್ರ ಓದುತ್ತಾರೆ ಅವುಗಳನ್ನು ಜೀವನ ಪರ್ಯಂತ ನೋಡುವುದೇ ಇಲ್ಲ. ಮಕ್ಕಳು ಪ್ರವಾಸ ಕೈಗೊಳ್ಳಲು ಮುಂದಿನ ದಿನಗಳಲ್ಲಿ ಪ್ರೋತ್ಸಹಿಸಲಾಗುವುದು. ಮುಖ್ಯ ಪ್ರವಾಸಿ ಸ್ಥಳಗಲ್ಲಿ ಹೆಚ್ಚಿನ ಮಕ್ಕಳು ತಂಗಲು ತಂಗುದಾಣ ನಿರ್ಮಿಸಲಾಗುವುದು. ಮಕ್ಕಳು ವಾಸ್ತವ್ಯ ಮಾಡಿ ಎರಡು ಮೂರು ದಿನ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದು ಎಂದರು.

    ಕೆಂಪಾಪುರ, ಸಾವನದುರ್ಗ, ಮಂಚನಬೆಲೆ ಜಲಾಶಯ ಪರಿಶೀಲನೆ ವೇಳೆ ಮಾಗಡಿ ಶಾಸಕ ಮಂಜುನಾಥ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಸಿಂಧು ಬಿ. ರೂಪೇಶ್, ಜಂಗಲ್ ಲಾಡ್ಜ್ ಮತ್ತು ರೆಸಾಟ್೯ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಕೆ.ಎಸ್.ಟಿ.ಡಿ.ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮ, ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

    ಸ್ಥಳೀಯ ಭಾಷೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆ ; ಪರಿಶೀಲನಾ ಸಮಿತಿ ವರದಿ ನೀಡುವವರಗೆ ಪರೀಕ್ಷಾ ಪ್ರಕ್ರಿಯೆ ಸ್ಥಗಿತ

    ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್ ಬಿಗಳ) ಗುಮಾಸ್ತರ ವೃಂದದ ನೇಮಕಾತಿಗೆ ಸ್ಥಳೀಯ/ಪ್ರಾದೇಶಿಕ ಭಾಷೆಗಳಲ್ಲೇ ಪರೀಕ್ಷೆಗಳನ್ನು ನಡೆಸಬೇಕೆಂಬ ಬೇಡಿಕೆಯ ಬಗ್ಗೆ ಸಮಗ್ರವಾಗಿ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಆ ಸಮಿತಿ 15 ದಿನಗಳೊಳಗೆ ತನ್ನ ಶಿಫಾರಸ್ಸುಗಳನ್ನು ಸಲ್ಲಿಸಲಿದೆ. ಹಾಗಾಗಿ ಪ್ರಸ್ತುತ ಐಬಿಪಿಎಸ್ ಆರಂಭಿಸಿದ್ದ ಪರೀಕ್ಷಾ ಪ್ರಕ್ರಿಯೆಯನ್ನು ಸಮಿತಿ ಶಿಫಾರಸ್ಸು ನೀಡುವವರೆಗೆ ತಡೆಹಿಡಿಯಲಾಗುವುದು ಎಂದು ಹಣಕಾಸು ಇಲಾಖೆ ತಿಳಿಸಿದೆ.

    ಇತ್ತೀಚೆಗೆ ಮಾಧ್ಯಮದ ಕೆಲವು ವಿಭಾಗಗಳಲ್ಲಿ, ಭಾರತೀಯ ಸಂವಿಧಾನದಲ್ಲಿ 22 ಭಾಷೆಗಳಿಗೆ ಮಾನ್ಯತೆ ನೀಡಿದ್ದರೂ ಸಹ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್), ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್ ಬಿ) ಗುಮಾಸ್ತರ ವೃಂದ(ಕ್ಲರಿಕಲ್ ಕೇಡರ್) ನೇಮಕಕ್ಕೆ ಕೇವಲ ಎರಡು ಭಾಷೆಗಳಲ್ಲಿ ಅಂದರೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ನಡೆಸಲಾಗುತ್ತಿದೆ ಎಂದು ವ್ಯಾಪಕವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಈ ಕ್ರಮ ಕೈಗೊಂಡಿದೆ.

    ಬ್ಯಾಂಕಿಂಗ್ ಕೆಲಸಕ್ಕೆ ಅರ್ಜಿ ಆಹ್ವಾನ: ಅರ್ಹತೆ ಏನು? ಪರೀಕ್ಷೆ ಬರೆಯುವುದು ಹೇಗೆ?

    ಬ್ಯಾಂಕಿಂಗ್ ಪರೀಕ್ಷೆ ಕನ್ನಡದಲ್ಲಿ ನಡೆಸಲು ಸಿದ್ಧರಾಮಯ್ಯ ಆಗ್ರಹ

    ಈ ಹಿಂದೆ ಹಣಕಾಸು ಸಚಿವರು ನೀಡಿದ್ದ ಹೇಳಿಕೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (ಆರ್ ಆರ್ ಬಿ)ಗಳಿಗೆ ಮಾತ್ರ ಅನ್ವಯಿಸುತ್ತದೆ . ಸ್ಥಳೀಯ ಯುವಕರಿಗೆ ಸಮಾನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಸರ್ಕಾರ 2019ರಲ್ಲಿ ಆರ್ ಆರ್ ಬಿಗಳ ಕಚೇರಿ ಸಹಾಯಕ ಮತ್ತು ಅಧಿಕಾರಿ ವೃಂದ-1 ಇವುಗಳ ನೇಮಕಾತಿಗೆ ಹಿಂದಿ ಮತ್ತು ಇಂಗ್ಲಿಷ್ ಮಾತ್ರವಲ್ಲದೆ, ಕೊಂಕಣಿ ಮತ್ತು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿತ್ತು. ಅದರನ್ವಯ ಈ ನೇಮಕಾತಿಗಳಿಗೆ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲೂ ಸಹ ನಡೆಸಲಾಗುತ್ತಿದೆ ಎಂದು ಹೇಳಿಕೆ ಹೇಳಿದೆ.

    ಐಬಿಪಿಎಸ್ ಪರೀಕ್ಷೆಗೆ ಸಂಬಂಧಿಸಿದಂತೆ ಈಗ ಸಮಿತಿ ರಚಿಸಿದ್ದು 15 ದಿನದಲ್ಲಿ ಅದು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗವುದು ಎಂದು ತಿಳಿಸಲಾಗಿದೆ.

    ಪದ್ಮ ಪ್ರಶಸ್ತಿಗಳಿಗೆ ನೀವೇ ನಾಮ ನಿರ್ದೇಶನ ಮಾಡಬಹುದು

    ಪದ್ಮ ಪ್ರಶಸ್ತಿಗಳ ಆಯ್ಕೆಯಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಬಯಸಿರುವ ಕೇಂದ್ರ ಸರಕಾರ ಈ ಬಾರಿ ಸಾರ್ವಜನಿಕರೇ ಈ ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಮಾಡುವ ಅವಕಾಶವನ್ನು ಕಲ್ಪಿಸಿದೆ.

    “ಭಾರತದಲ್ಲಿ ಹಲವು ಪ್ರತಿಭಾವಂತ ಜನರಿದ್ದಾರೆ. ಅನೇಕರು ಬೇರುಮಟ್ಟದಲ್ಲಿ ಅಸಾಧಾರಣ ಕಾರ್ಯ ಮಾಡುತ್ತಿದ್ದಾರೆ. ಅಂಥವರು ಒಮ್ಮೊಮ್ಮೆ ಗಮನಕ್ಕೆ ಬರುವುದಿಲ್ಲ. ನಿಮಗೆ ಇಂಥ ಸ್ಫೂರ್ತಿದಾಯಕ ವ್ಯಕ್ತಿಗಳ ಬಗ್ಗೆ ತಿಳಿದಿದೆಯೇ? ನೀವು ಅವರನ್ನು ಪದ್ಮಪ್ರಶಸ್ತಿಗಳಿಗೆ – #PeoplesPadma- ನಾಮನಿರ್ದೇಶನ ಮಾಡಬಹುದು. ನಾಮನಿರ್ದೇಶನ ಸೆಪ್ಟೆಂಬರ್ 15ರವರೆಗೆ ತೆರೆದಿರುತ್ತದೆ.” ಎಂದು ಪ್ರಧಾನಮಂತ್ರಿ ನರೇದ್ರ ಮೋದಿ ಟ್ವೀಟ್ ಮಾಡಿದ್ದಾರೆ.

    padmaawards.gov.in ಜಾಲ ತಾಣದ ಮೂಲಕ ನಾಮ ನಿರ್ದೇಶನ ಮಾಡಬಹುದಾಗಿದೆ.

    ಬ್ಯಾಂಕಿಂಗ್ ಪರೀಕ್ಷೆ ಕನ್ನಡದಲ್ಲಿ ನಡೆಸಲು ಸಿದ್ಧರಾಮಯ್ಯ ಆಗ್ರಹ

    ರಾಷ್ಟ್ರೀಕೃತ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳಲ್ಲಿ ರಾಜ್ಯದ ಯುವಜನರಿಗೆ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿಯ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದೆ ಕೇಂದ್ರ ಸರ್ಕಾರ ಕನ್ನಡಿಗರಿಗೆ ದ್ರೋಹ ಬಗೆಯುತ್ತಾ ಬಂದಿದೆ. ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್)ಯ ಇತ್ತೀಚಿನ ಸುತ್ತೋಲೆ ಈ ದ್ರೋಹಕ್ಕೆ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರ ತಕ್ಷಣ ಗಮನಹರಿಸಿ ಈ ಅನ್ಯಾಯವನ್ನು ಸರಿಪಡಿಸಿ ಕನ್ನಡಿಗರಿಗೆ ನ್ಯಾಯದೊರಕಿಸಿಕೊಡಬೇಕು ಎಂದೂ ಸಿದ್ಧರಾಮಯ್ಯ ಆಗ್ರಹಪಡಿಸಿದ್ದಾರೆ.

    ಐಬಿಪಿಎಸ್ ಇದೀಗ ಹನ್ನೊಂದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 3,300 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಇವುಗಳಲ್ಲಿ 407 ಹುದ್ದೆಗಳು ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಕನ್ನಡಕ್ಕೆ ಆಗಿರುವ ಅನ್ಯಾಯದಿಂದಾಗಿ ತೀವ್ರ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗ ಯುವಜನರು ಉದ್ಯೋಗದ ಅವಕಾಶದಿಂದ ವಂಚಿತರಾಗಲಿದ್ದಾರೆ.

    2014ಕ್ಕಿಂತ ಮೊದಲು ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ರಾಜ್ಯಭಾಷೆಗಳಲ್ಲಿಯೂ ಬರೆಯುವ ಅವಕಾಶ ಇತ್ತು. 2014ರಲ್ಲಿ ಕೇಂದ್ರ ಸರ್ಕಾರ ನಿಯಮಾವಳಿಗೆ ತಿದ್ದುಪಡಿ ಮಾಡಿ ಇಂಗ್ಲೀಷ್ ಮತ್ತು ಹಿಂದಿಯೇತರ ಭಾಷಿಕ ಯುವಜನರಿಗೆ ಅನ್ಯಾಯವೆಸಗಿದೆ. ಈ ಅನ್ಯಾಯವನ್ನು ಪ್ರತಿಭಟಿಸಿ ಹಿಂದಿನ ನಮ್ಮ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಪತ್ರವನ್ನೂ ಬರೆದಿತ್ತು ಎಂಬುದನ್ನು ಸಿದ್ಧರಾಮಯ್ಯ ನೆನಪಿಸಿದ್ದಾರೆ.

    ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಗಮನಸೆಳೆದ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸುವ ಭರವಸೆಯನ್ನು ಲೋಕಸಭೆಯಲ್ಲಿ ನೀಡಿದ್ದರೂ ಆ ಭರವಸೆಯನ್ನು ಇಂದಿಗೂ ಈಡೇರಿಸಿಲ್ಲ.

    ಬ್ಯಾಂಕಿಂಗ್ ಕೆಲಸಕ್ಕೆ ಅರ್ಜಿ ಆಹ್ವಾನ: ಅರ್ಹತೆ ಏನು? ಪರೀಕ್ಷೆ ಬರೆಯುವುದು ಹೇಗೆ?

    ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಹುತೇಕ ಯೋಜನೆಗಳ ಅನುಷ್ಠಾನ ಬ್ಯಾಂಕ್ ಗಳ ಮೂಲಕವೇ ನಡೆಯುವುದರಿಂದ ರೈತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿನ ಜನತೆ ಹೆಚ್ಚುಹೆಚ್ಚು ಬ್ಯಾಂಕುಗಳನ್ನು ಅವಲಂಬಿಸಿದ್ದಾರೆ. ಕನ್ನಡ ಬಾರದ ಸಿಬ್ಬಂದಿಯಿಂದಾಗಿ ಈ ಜನಸಮುದಾಯ ಪ್ರತಿನಿತ್ಯ ಕಿರುಕುಳ ಅನುಭವಿಸುತ್ತಿದ್ದಾರೆ.

    ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಸೌಲಭ್ಯಗಳ ಸುನಾಮಿ ಬರಲಿದೆ ಎಂದು ಲೋಕಸಭಾ ಚುನಾವಣೆಯ ಕಾಲದಲ್ಲಿ ಬುರುಡೆಬಿಟ್ಟ ಬಿಜೆಪಿಯಿಂದ ಆಯ್ಕೆಯಾದ 25 ಸಂಸದರು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ಸರಮಾಲೆಯ ಬಗ್ಗೆ ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ.

    ತಮ್ಮನ್ನು ರಾಜ್ಯದ ಹುಲಿ-ಸಿಂಹಗಳೆಂದು ವಂದಿ-ಮಾಗದರಿಂದ ಘೋಷಣೆ ಕೂಗಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವಾಗ ಮಾತ್ರ ಬೆದರಿದ ಇಲಿಯಾಗುತ್ತಾರೆ. ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಈ ಅನ್ಯಾಯದ ಬಗ್ಗೆ ಯಡಿಯೂರಪ್ಪನವರು ತಕ್ಷಣ ಪ್ರಧಾನಮಂತ್ರಿಯವರ ಗಮನಸೆಳೆದು ಕನ್ನಡಿಗ ಯುವಜನರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

    ಬ್ಯಾಂಕಿಂಗ್ ಕೆಲಸಕ್ಕೆ ಅರ್ಜಿ ಆಹ್ವಾನ: ಅರ್ಹತೆ ಏನು? ಪರೀಕ್ಷೆ ಬರೆಯುವುದು ಹೇಗೆ?

    ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 11 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಹುದ್ದೆ ಗಳಿಗೆ ಅರ್ಜಿ ಆಹ್ವಾನಿಸಿದ್ದು, ಸರಿ ಸುಮಾರು 3,300 ಹುದ್ದೆಗಳಿಗೆ ಪೂರ್ವ ಭಾವಿ ಹಾಗೂ ಮುಖ್ಯ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.ನಮ್ಮ ರಾಜ್ಯದಲ್ಲಿ ವಿವಿಧ ಬ್ಯಾಂಕುಗಳಲ್ಲಿ ಖಾಲಿ ಇರುವ 407 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆ ಮತ್ತು 3 ಜಿಲ್ಲಾ ಕೇಂದ್ರಗಳಲ್ಲಿ ಮುಖ್ಯ ಪರೀಕ್ಷೆ ಆನ್ ಲೈನ್ ನಲ್ಲಿ ನಡೆಯಲಿದೆ.ಇದರ ಬೆನ್ನಲ್ಲೇ ಸಾಲು-ಸಾಲಾಗಿ ಬ್ಯಾಂಕ್ ನೇಮಕಾತಿ ಪರೀಕ್ಷೆ ಗಳಿಗೆ ಅಧಿಸೂಚನೆ ಪ್ರಕಟವಾಗಲಿದೆ.

    ಸಾಮಾನ್ಯವಾಗಿ ಪದವಿ ಮುಗಿಸಿದ ಅಭ್ಯರ್ಥಿಗಳು ಮೊದಲ ಬಾರಿಗೆ ಈ ಪರೀಕ್ಷೆಗಳನ್ನು ಎದುರಿಸುವಾಗ ಸಹಜವಾಗಿಯೇ ಆತಂಕಗಳು ಎದುರಾಗುತ್ತವೆ. ಇರುವ 407 ಹುದ್ದೆಗಳಿಗೆ ಲಕ್ಷಗಟ್ಟಲೆ ಅಭ್ಯರ್ಥಿಗಳು ಅರ್ಜಿ ಹಾಕಿರುತ್ತಾರೆ.ಹೀಗಿರುವಾಗ ನನಗೆ ಈ ಹುದ್ದೆಯನ್ನ ಪಡೆಯಲು ಸಾಧ್ಯವೇ….? ಎಂಬ ಪ್ರಶ್ನೆ ಪ್ರತಿಯೊಬ್ಬರನ್ನು ಕಾಡುತ್ತಿರುತ್ತದೆ.ಇದು ಪ್ರತಿ ಸ್ಪರ್ಧಾತ್ಮಕ ಪರೀಕ್ಷೆಯನ್ನ ಮೊದಲ ಬಾರಿಗೆ ಬರೆಯುವವರಿಗೆ ಕಾಡುವ ಮಿಲಿಯನ್ ಡಾಲರ್ ಪ್ರಶ್ನೆ. ಇದು ಸಹಜ, ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳಿಗೂ ಹೀಗೆ ಅನ್ನಿಸಿದ್ದರೆ ಆಶ್ಚರ್ಯವೇನಿಲ್ಲ. ಬ್ಯಾಂಕ್ ಕೆಲಸವೆಂದರೆ ಅತ್ಯಂತ ಪ್ರತಿಷ್ಠಿತ ಕೆಲಸವೆಂದೇ ಜನಜನಿತ. ಹೀಗಾಗಿಯೇ ಒಂದು ಹುದ್ದೆ ಖಾಲಿ ಇದ್ದರೂ ಸಾವಿರಾರು ಮಂದಿ ಅರ್ಜಿ ಸಲ್ಲಿಸುತ್ತಾರೆ. ಯಾವುದೇ ಅಧಿಸೂಚನೆ ಪ್ರಕಟವಾದಾಗ ಅರ್ಜಿ ಸಲ್ಲಿಸಿದ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಕೆಲವೇ ಕೆಲವು ಸಾವಿರ ಜನ ಮಾತ್ರ ಅಂತಿಮ ಸುತ್ತಿಗೆ ಆಯ್ಕೆಯಾಗುತ್ತಾರೆ

    ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಪರೀಕ್ಷೆ ಬರೆಯಬಹುದು, ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿಗೆ ಸರಿಸಮನಾದ ಕೋಸ್೯ ಮಾಡಿದವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಯು ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರುವುದು ಕಡ್ಡಾಯ, ಹೀಗಾಗಿ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನು ಕೂಡ ಅಭ್ಯರ್ಥಿಯು ಹೊಂದಿರಬೇಕಾಗುತ್ತದೆ. (ಕಂಪ್ಯೂಟರ್ ಗೆ ಸಂಬಂಧಿಸಿದ ವಿಷಯದಲ್ಲಿ ಸರ್ಟಿಫಿಕೇಟ್/ ಡಿಪ್ಲೊಮಾ ಅಥವಾ ಡಿಗ್ರಿ ಪಡೆದಿರುವುದು ಅಥವಾ ಶಾಲೆ ಅಥವಾ ಕಾಲೇಜಿನಲ್ಲಿ ಕಂಪ್ಯೂಟರ್ ಅಥವಾ ಐಟಿ(information technology) ಯನ್ನು ಒಂದು ವಿಷಯವಾಗಿ ಓದಿರಬೇಕು. ಅಲ್ಲದೆ, ರಾಜ್ಯದ ಅಧಿಕೃತ ಭಾಷೆಯಲ್ಲಿ ಮಾತನಾಡುವ, ಬರೆಯುವ ಸಾಮರ್ಥ್ಯ ಹೊಂದಿರಬೇಕು.

    ಗಮನಿಸಿ, ಪದವಿ ಪೂರ್ಣಗೊಳಿಸಿ ದವರು ಮಾತ್ರ ಅರ್ಜಿ ಸಲ್ಲಿಸಬಹುದು. ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ. 20 ವರ್ಷದಿಂದ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹ ರಾಗಿರುತ್ತಾರೆ.(ಎಸ್ಸಿ/ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.)

    ಆನ್ಲೈನ್ ಅರ್ಜಿ ಸಲ್ಲಿಸುವ ದಿನಾಂಕ:
    12-07-2021ರಿಂದ 01-08-2021

    ಪ್ರಿಲಿಮ್ಸ್ ನಡೆಯುವ ದಿನಾಂಕ : 28-08-2021, 29-08-2021, 04-09-2021

    ಪ್ರಿಲಿಮ್ಸ್ ಫಲಿತಾಂಶ: ಸೆಪ್ಟೆಂಬರ್/ಅಕ್ಟೋಬರ್, 2021
    ಮುಖ್ಯ ಪರೀಕ್ಷೆ ನಡೆಯುವ ದಿನಾಂಕ: 31-10-2021,
    ಪ್ರಿಲಿಮ್ಸ್ ನಡೆಯುವ ಕೇಂದ್ರಗಳು :
    ಬೆಳಗಾವಿ, ಬೆಂಗಳೂರು, ಬೀದರ್, ಕಲಬುರಗಿ, ದಾವಣಗೆರೆ,ಧಾರವಾಡ, ಹುಬ್ಬಳ್ಳಿ,ಹಾಸನ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.

    ಮೇನ್ಸ್ ನಡೆಯುವ ಕೇಂದ್ರ ಗಳು: ಬೆಂಗಳೂರು ಹುಬ್ಬಳ್ಳಿ ಹಾಗೂ ಮಂಗಳೂರು

    ಅರ್ಜಿ ಶುಲ್ಕ: 850 ರೂ. ಉಳಿದೆಲ್ಲ ಅಭ್ಯರ್ಥಿಗಳಿಗೆ (inclusive of GST) (ಎಸ್ಸಿ/ಎಸ್ಟಿ/PWBD/EXSM ಅಭ್ಯರ್ಥಿಗಳಿಗೆ 175 ರೂ.[inclusive of GST]

    ಆನ್ಲೈನ್ನಲ್ಲಿಯೇ ಅರ್ಜಿ ಶುಲ್ಕವನ್ನೂ ಪಾವತಿಸಬೇಕಿರುತ್ತದೆ.
    ಅಧಿಸೂಚನೆಯ ಲಿಂಕ್: https://www.ibps.in/wp-content/uploads/Advt-_CRP-Xl
    ಹೆಚ್ಚಿನ ಮಾಹಿತಿಗೆ ವೆಬ್: https://www.ibps.in/

    ರಾಜ್ಯದ ಯಾವ ಬ್ಯಾಂಕಿನಲ್ಲಿ ಎಷ್ಟು ಹುದ್ದೆ?
    ಬ್ಯಾಂಕ್ ಆಫ್ ಇಂಡಿಯಾ 12
    ಕೆನರಾ ಬ್ಯಾಂಕ್ -140
    ಸೆಂಟ್ರಲ್ ಬ್ಯಾಂಕ್ ಆಫ್
    ಇಂಡಿಯಾ- 05
    ಇಂಡಿಯನ್ ಓವರ್ಸೀಸ್ ಬ್ಯಾಂಕ್-28
    ಪಂಜಾಬ್ ಎಂಡ್ ಸಿಂಧ ಬ್ಯಾಂಕ್-೦3
    ಯುಕೋ ಬ್ಯಾಂಕ್ 1೦
    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ -209
    ಒಟ್ಟಾರೆ 407 ಹುದ್ದೆಗಳು

    ಬ್ಯಾಂಕಿಂಗ್ ಪರೀಕ್ಷೆಗಳು IAS ಹಾಗೂ KAS ಮಾದರಿಯಲ್ಲಿ ಎರಡು ಹಂತಗಳಲ್ಲಿ ನಡೆಯಲಿವೆ. ಪೂರ್ವಭಾವಿ (prelims), ಮುಖ್ಯ ಪರೀಕ್ಷೆ (mains). ಐಬಿಪಿಎಸ್ ನ ಗುಮಾಸ್ತ ಹುದ್ದೆಗೆ ಸಂದರ್ಶನ ಇರುವುದಿಲ್ಲ. ಪೂರ್ವಭಾವಿ ಪರೀಕ್ಷೆ ಮೊದಲ ಹಂತದ ಅರ್ಹತಾ ಪರೀಕ್ಷೆಯಾಗಿದ್ದು, ಇದರಲ್ಲಿ ಅಭ್ಯರ್ಥಿಗಳನ್ನು 1:20 ರಂತೆ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಪೂರ್ವಭಾವಿಯಲ್ಲಿ ಪಡೆದ ಅಂಕಗಳು ಅರ್ಹತಾ ಪಟ್ಟಿಗೆ ಮಾತ್ರ ಮೀಸಲಾಗಿದ್ದು ಅದರಲ್ಲಿ ಪಡೆದ ಅಂಕಗಳನ್ನು ಮುಂದೆ ಪರಿಗಣಿಸಲಾಗುವುದಿಲ್ಲ. ಎರಡೂ ಪರೀಕ್ಷೆಗೂ ಅಷ್ಟೆ ಮಹತ್ವ ನೀಡಬೇಕು ಎಂಬುದನ್ನು ಖಂಡಿತಾ ಮರೆಯದಿರಿ.

    ನಿಗದಿತ ದಿನದಂದು ಆನ್ ಲೈನ್ನಲ್ಲಿಯೇ ಎರಡೂ ಲಿಖಿತ ಪರೀಕ್ಷೆಗಳು ನಡೆಯಲಿವೆ. ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು,(ಪ್ರತಿ ಪತ್ರಿಕೆಗೂ 20 ನಿಮಿಷಗಳಂತೆ ಒಟ್ಟಾರೆ 60 ನಿಮಿಷಗಳು) 100 ಅಂಕಗಳಿಗೆ ನೂರು ಪ್ರಶ್ನೆಗಳನ್ನು ಕೇಳಲಾಗುತ್ತದೆ. (ಅಂದರೆ ಪ್ರತಿ ಪ್ರಶ್ನೆಗೆ ಒಂದೊಂದು ಅಂಕ ನಿಗದಿಯಾಗಿರುತ್ತದೆ ) ಇದರಲ್ಲಿ ಇಂಗ್ಲೀಷ್ ಲಾಂಗ್ವೇಜಗೆ 30, ನ್ಯೂಮರಿಕಲ್ ಎಬಿಲಿಟಿಯ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಪ್ರತಿ ಪರೀಕ್ಷೆ ಯಲ್ಲೂ ಕನಿಷ್ಟ ಅಂಕ ಗಳಿಸೋದರ ಜೊತೆಗೆ ಒಟ್ಟಾರೆ ಅಂಕ ಗಳಿಸುವುದು ಮುಖ್ಯ.

    ಮುಖ್ಯ ಪರೀಕ್ಷೆಯು ಎರಡು ಗಂಟೆ 40 ನಿಮಿಷಗಳ ಕಾಲ ನಡೆಯಲಿದ್ದು, 190 ಪ್ರಶ್ನೆಗಳನ್ನು 200 ಅಂಕಗಳಿಗೆ ಲಿಖಿತ ಪರೀಕ್ಷೆಗಳು ನಡೆಯಲಿವೆ.

    1 General/ Financial Awareness 50 ಪ್ರಶ್ನೆ 50 ಅಂಕಗಳು 35 ನಿಮಿಷಗಳು
    2 General English 40 ಪ್ರಶ್ನೆ 40 ಅಂಕಗಳು 35 ನಿಮಿಷಗಳು.
    3 Reasoning Ability & Computer Aptitude 50 ಪ್ರಶ್ನೆ 60 ಅಂಕಗಳು 45 ನಿಮಿಷಗಳು
    4 Quantitative Aptitude 50ಪ್ರಶ್ನೆ 50 ಅಂಕಗಳು45 ನಿಮಿಷಗಳು..ಹೀಗೆ ಒಟ್ಟಾರೆ
    190 ಪ್ರಶ್ನೆಗಳಿದ್ದು 200 ಅಂಕಗಳು ಹಾಗೂ 160 ನಿಮಿಷದ ಪರೀಕ್ಷೆ ಯಾಗಿದೆ.

    ಇಂಗ್ಲೀಷ್ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇರುತ್ತದೆ. ಆದರೆ ಬ್ಯಾಂಕ್ ಪರೀಕ್ಷೆ ಅತಿ ಕಡಿಮೆ ಅವಧಿ ಯಲ್ಲಿ ಹೆಚ್ಚು ಪ್ರಶ್ನೆಗಳಿಗೆ ಉತ್ತರ ಗುರುತಿಸಬೇಕಿರುತ್ತದೆ. ಅಲ್ಲದೆ ಬಿಡಿಸಿದ ಪ್ರಶ್ನೆಗಳಿಗೆ ಉತ್ತರ ಸರಿಯಾಗಿರಲೇಬೆಕಾದುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಬ್ಯಾಂಕ್ ಪರೀಕ್ಷೆಗಳಲ್ಲಿ ನೆಗೆಟಿವ್ ಮಾಕ್ಸ್ (ಋಣಾತ್ಮಕ ಮೌಲ್ಯಮಾಪನ) ಇರುತ್ತದೆ. ಪದವಿ ಪರೀಕ್ಷೆಗಳಲ್ಲಿ ಇ ರೀತಿಯಾಗಿ ಇರೋದಿಲ್ಲ. ಹಾಗಾಗಿ ಋಣಾತ್ಮಕ ಮೌಲ್ಯಮಾಪನದ ಕುರಿತಂತೆ ಧನಾತ್ಮಕ ಚಿಂತನೆ ಇರಬೇಕಾದುದು ಮೊದಲ ಆದ್ಯತೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆ ಗಳಲ್ಲಿ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು (ಋಣಾತ್ಮಕ ಅಂಕ) ಕಳೆಯಲಾಗುತ್ತದೆ

    ಪರೀಕ್ಷೆಯಲ್ಲಿ ನೀವು ಯಶಸ್ವಿಯಾಗಬೇಕಾದರೆ ಎಲ್ಲವನ್ನೂ ಉತ್ತರಿಸುವ ಗೋಜಿಗೆ ಹೋಗದೆ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರವನ್ನು ಮಾತ್ರ ಗುರುತಿಸಿದರೆ ಸಾಕು, ಅತ್ಯಂತ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ನಿಖರವಾಗಿ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕಾದದು ಅಗತ್ಯ.

    ಈ ಬಾರಿಯ ಬದಲಾವಣೆಗಳೇನು?:
    ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಕೆಲವು ಬದಲಾವಣೆಗಳು ಸಾಮಾನ್ಯ. ಹಾಗೆಯೇ ಈ ಬಾರಿಯ ಬದಲಾವಣೆಗಳು ಕೆಳಗಿನಂತಿವೆ:
    ಈ ಬಾರಿ ಅರ್ಜಿ ಸಲ್ಲಿಸುವಾಗ ಪರೀಕ್ಷೆಗೆ ನೀವು ತರುವ ಐಡಿ ಪ್ರೂಫ್ನ ಸಂಖ್ಯೆ ನೀಡುವುದು ಕಡ್ಡಾಯ ಹಾಗೂ ಅದು ನೀವು ಅರ್ಜಿ ಸಲ್ಲಿಸಿದ ಹೆಸರಿನೊಂದಿಗೆ ಹೊಂದಾಣಿಕೆಯಾಗಬೇಕು. ಈ ಬಾರಿ ಪ್ರಿಲಿಮ್ಸ್ ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷಾ ಸ್ಥಳದಲ್ಲಿ ಸಂಗ್ರಹಿಸಲಾಗುವುದಿಲ್ಲ. ಬದಲಾಗಿ ಇದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಧೃಡಪಡಿಸಿಕೊಳ್ಳುವ ಆಗತ್ಯವಿದೆ. ಮೇನ್ಸ್ ಪರೀಕ್ಷೆಗೆ ಅರ್ಹಗೊಂಡ ಅಭ್ಯರ್ಥಿಗಳು ಮೇನ್ಸ್ ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ದೃಢೀಕರಣಗೊಂಡ ಪ್ರವೇಶ ಪತ್ರವನ್ನು ಕೂಡ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಬಹುದು.

    ಗಮನಿಸಿ: ಈ ಹಿಂದಿನ ಪರೀಕ್ಷೆ ಯಲ್ಲಿ ಕೇಳಿರೋದರ ಆಧಾರದ ಮೇಲೆ ಇದನ್ನು ನೀಡಲಾಗಿದೆ.ಪ್ರತಿವರ್ಷವೂ ಸಿಲೇಬಸ್ ಬದಲಾಗುವುದರಿಂದ ಆಗಾಗ ವೆಬ್ ಸೈಟ್ ನ್ನು ಗಮನಿಸುತ್ತಿರಿ.

    ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ(ಐ ಬಿ ಪಿ ಎಸ್) ಬ್ಯಾಂಕುಗಳಲ್ಲಿನ ಕ್ಲರಿಕಲ್ ಕೇಡರ್ ಹುದ್ದೆಗಳ ನೇಮಕಾತಿಗಾಗಿ ನಡೆಸಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವವರು ಗಮನಿಸಲೇಬೇಕಾದ ವಿಷಯಗಳ ಮಾಹಿತಿ ಇಲ್ಲಿದೆ:

    A ಐಬಿಪಿಎಸ್ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಇದನ್ನು ಬಿಟ್ಟು ಬೇರೆ ವಿಧಾನದಲ್ಲಿ ಅರ್ಜಿ ಸಲ್ಲಿಸಿದರೆ ಸ್ವೀಕರಿಸಲಾಗುವುದಿಲ್ಲ.

    B ಅರ್ಜಿ ಸಲ್ಲಿಸುವ ಮುನ್ನ ವಯೋಮಿತಿ ಮತ್ತು ವಿದ್ಯಾರ್ಹತೆಯನ್ನು ಸರಿಯಾಗಿ ಗಮನಿಸಿಕೊಳ್ಳಿ.

    C ಪರೀಕ್ಷಾ ಅಧಿಸೂಚನೆಯ ಮದ ಅನುಬಂಧ-II [Annexure-il]ರಲ್ಲಿ ಹೇಳಿರುವಂತೆ ನಿಮ್ಮ ಭಾವಚಿತ್ರ ಹಾಗೂ ಸಹಿಯನ್ನು ಮೊದಲೇ ಸ್ಕ್ಯಾನ್ ಮಾಡಿ, ಜಿಪಿಜಿ ಫಾರ್ಮೆಟ್ನಲ್ಲಿ ಸೇವ್ ಮಾಡಿಟ್ಟುಕೊಳ್ಳಿ.

    D ನೀವು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕೆಂದಿದ್ದರೆ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ಹೊಂದಿರಬೇಕಾಗಿರುವುದು ಕಡ್ಡಾಯ, ಆದ್ದರಿಂದ ಇ-ಮೇಲ್ ಅಕೌಂಟ್ ಇಲ್ಲದಿದ್ದರೆ ಅರ್ಜಿ ಸಲ್ಲಿಸುವ ಮುನ್ನವೇ ಮಾಡಿಕೊಳ್ಳಿ.

    E ಅರ್ಜಿಯಲ್ಲಿ ನಮೂದಿಸಿದ ಇ-ಮೇಲ್ ಐ.ಡಿ.ಯನ್ನು ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಿ. ಏಕೆಂದರೆ, ಐಬಿಪಿಎಸ್ ಸಂಸ್ಥೆ ಸಂದರ್ಶನ ಪತ್ರ/ಪರೀಕ್ಷಾ ಸೂಚನ ಪತ್ರ ಹಾಗೂ ಇತರೆ ಮಾಹಿತಿಗಳನ್ನು ವಿಶೇಷ ಸಂದರ್ಭಗಳಲ್ಲಿ ಇ-ಮೇಲ್ ಐ.ಡಿ.ಗೆ ಕಳುಹಿಸುತ್ತದೆ.

    F ಐಬಿಪಿಎಸ್ ಸಂಸ್ಥೆಯ ವೇಳಾಪಟ್ಟಿಯನ್ನು ಡೌನ್ಲೋಡ್ ಮಾಡಿಟ್ಟುಕೊಂಡು, ಅದರಂತೆ ಮೇಲ್ ಚೆಕ್ ಮಾಡಲು ಮರೆಯಬೇಡಿ, ಯಾವುದೇ ಕಾರಣಕ್ಕೂ ನಿಮ್ಮ ಇ-ಮೇಲ್ ಐ.ಡಿ.ಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ.

    G ಆನ್ ಲೈನ್ ಅಪ್ಲಿಕೇಷನ್ ಸಲ್ಲಿಸುವಾಗ save and next – ಅಪ್ಪನ್ ಅನ್ನೇ ಬಳಸಿ ಕೊನೆಯಲ್ಲಿ final submit ಬಟನ್ ಒತ್ತುವ ಮುನ್ನ ಏನಾದರೂ ಡೀಟೇಲ್ ಅನ್ನು ಬದಲಿಸಬೇಕಾದರೆ preview ನಲ್ಲಿ ನೋಡಿ ಬದಲಿಸಲು ಅವಕಾಶವಿದೆ. ಆದರೆ ಯಾವುದೇ ಕಾರಣಕ್ಕೂ ಅಭ್ಯರ್ಥಿಯ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್, ಇ-ಮೇಲ್ ಐ.ಡಿ.ಯಂತಹ basic ಮಾಹಿತಿಯನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಮಾಹಿತಿಯನ್ನು ಭರ್ತಿ ಮಾಡುವಾಗ ಎಚ್ಚರಿಕೆಯಿಂದಿರಿ.

    H ನಿಮ್ಮ ಐ.ಡಿ. ಪ್ರೂಫ್ ನಲ್ಲಿ ಹಾಗೂ ಇತರೆ ದಾಖಲೆಗಳಲ್ಲಿ ಇರುವಂತೆಯೇ ನಿಮ್ಮ ಮೊದಲ,ಮಧ್ಯದ ಹಾಗೂ ಕೊನೆಯ ಹೆಸರನ್ನು ಅರ್ಜಿ ಸಲ್ಲಿಸುವಾಗ ಭರ್ತಿ ಮಾಡಿ. ಅರ್ಜಿಯಲ್ಲಿನ ಹೆಸರು ದಾಖಲೆಗೆ ಹೊಂದಾಣಿಕೆ ಯಾಗದಿದ್ದರೆ ನಿಮ್ಮನ್ನು ಅನರ್ಹಗೊಳಿಸಲಾಗುತ್ತದೆ.

    I ಅರ್ಜಿ ಸಲ್ಲಿಸುವಾಗ ಒಂದೇ ಬಾರಿಗೆ ಎಲ್ಲ ಮಾಹಿತಿಯನ್ನು ತುಂಬಬೇಕೆಂಬ ನಿಯಮವೇನಿಲ್ಲ, ಡಾಟಾ ಸೇವ್ ಮಾಡಿ ಎಲ್ಲ ಮಾಹಿತಿಯನ್ನು ತುಂಬಿದ ನಂತರವೇ final submit ಬಟನ್ ಒತ್ತಿ. ಹೀಗೆ ಮಾಡುವಾಗ ನಿಮ್ಮ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ಒಂದು ಕಡೆ ಬರೆದಿಟ್ಟುಕೊಳ್ಳಲು ಮರೆಯಬೇಡಿ.

    J ಆನ್ಲೈನ್ ಅಪ್ಲಿಕೇಷನ್ನಲ್ಲಿ ನಾಲ್ಕು ವಿಭಾಗಗಳಿರುತ್ತವೆ. ಮೊದಲನೆಯದ್ದು, ಬೇಸಿಕ್ ಇನ್ಸಾರ್ಮೆಷನ್, ಎರಡನೆಯದ್ದು ಭಾವಚಿತ್ರ ಹಾಗೂ ಸಹಿ, ಮೂರನೆಯದ್ದರಲ್ಲಿ ಮೂರು ವಿಭಾಗಗಳಿದ್ದು, ಮೊದಲ ವಿಭಾಗದಲ್ಲಿ

    K Category/Date of Birth/Address ಎರಡನೇ ವಿಭಾಗದಲ್ಲಿ ವಿದ್ಯಾರ್ಹತೆ/ಅನುಭವ, ಮೂರನೇ ವಿಭಾಗದಲ್ಲಿ ನೀವು ಆರಿಸಿಕೊಳ್ಳುವ ಬ್ಯಾಂಕನ್ನು ಕ್ರಮವಾಗಿ ಗುರುತಿಸುವುದು ಕಡ್ಡಾಯವಾಗಿರುತ್ತದೆ. ನಿಮಗೆ ಇಷ್ಟವಾದ ಬ್ಯಾಂಕ್ ಅನ್ನು ಮೊದಲು ಗುರುತಿಸಿ, ಏಕೆಂದರೆ ಮುಂದೆ ನೇಮಕಾತಿ ಸಂದರ್ಭದಲ್ಲಿ ನೀವು ಗುರುತಿಸಿದ ಬ್ಯಾಂಕುಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಹಾಗೂ ಕೊನೆಯದ್ದು ಪ್ರಿವ್ಯೂ, ಎಲ್ಲವೂ ಸರಿಯಾಗಿದ್ದರೆ final submit ಬಟನ್ ಒತ್ತಿದ ನಂತರ payment ಡೀಟೇಲ್ಸ್ ನ ಇನ್ನೊಂದು ಅಡಿಷನಲ್ ಪೇಜ್ ಡಿಸ್ಪ್ಲೇ ಆಗುತ್ತದೆ.

    L ಆನ್ಲೈನ್ನಲ್ಲಿ ಶುಲ್ಕ ಭರಿಸಲು ಕ್ರೆಡಿಟ್ / ಡೆಬಿಟ್ ಕಾರ್ಡ್ ಅನ್ನು ಹಾಗೂ ಪಾಸ್ವರ್ಡ್ ಮಾಹಿತಿಯನ್ನು ಮೊದಲೇ ಸಿದ್ಧವಾಗಿಟ್ಟುಕೊಳ್ಳಿ. ನೀಡಲಾಗಿರುವ ಮಾಹಿತಿಯಂತೆ ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.

    M ಆನ್ಲೈನ್ ಪೇಮೆಂಟ್ ಮಾಡುವಾಗ ಪೇಮೆಂಟ್ ಇನ್ವಪಾರ್ಮೇಷನ್ ತುಂಬಿದ ನಂತರ ಸರ್ವ್ರನಿಂದ ಮಾಹಿತಿ ದೊರೆಯುವವರೆಗೆ ಕಾಯಿರಿ. ಈ ಸಂದರ್ಭದಲ್ಲಿ back ಅಥವಾ refresh ಬಟನ್ ಬಳಸಬೇಡಿ, ಒಂದು ವೇಳೆ back ಅಥವಾ refresh ಬಟನ್ ಬಳಸಿದರೆ ಗೊಂದಲವಾಗಿ ಎರಡೆರಡು ಸಲ ಶುಲ್ಕ ಪಾವತಿಯಾಗಬಹುದು.

    ಇದನ್ನೂ ಓದಿ: ಸ್ಥಳೀಯ ಭಾಷೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆ ; ಪರಿಶೀಲನಾ ಸಮಿತಿ ವರದಿ ನೀಡುವವರಗೆ ಪರೀಕ್ಷಾ ಪ್ರಕ್ರಿಯೆ ಸ್ಥಗಿತ

    ಬ್ಯಾಂಕಿಂಗ್ ಪರೀಕ್ಷೆ ಕನ್ನಡದಲ್ಲಿ ನಡೆಸಲು ಸಿದ್ಧರಾಮಯ್ಯ ಆಗ್ರಹ

    error: Content is protected !!