28.4 C
Karnataka
Sunday, May 24, 2026
    Home Blog Page 78

    ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರ ಪರಿಶೀಲಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

    ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಹಾಗೂ ಸಕಾಲ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಇಂದು ಬಿಡದಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಸವೇಶ್ವರ ಪ್ರೌಢಶಾಲೆ, ರಾಮನಗರದ ಶಾಂತಿನಿಕೇತನ ಶಾಲೆ, ಭಾರತೀಯ ಸಾಂಸ್ಕೃತಿ ವಿದ್ಯಾಪೀಠ, ಸರ್ಕಾರಿ ಪದವಿ ಪೂರ್ವ ಕಾಲೇಜು, ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೆಂಟ್ ಆನ್ಸ್ ಪ್ರೌಢಶಾಲೆ ಹಾಗೂ ಚನ್ನಪಟ್ಟಣದ ಚೆಕ್ಕೆರೆಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಪರೀಕ್ಷಾ ಕೇಂದ್ರಗಳ ಪರಿಶೀಲನೆ ನಡೆಸಿದರು.

    ಪರಿಶೀಲನೆಯ ಸಂದಭ೯ದಲ್ಲಿ ಸಾವ೯ಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಮಕ್ಕಳಿಗೆ ಪರೀಕ್ಷೆ ಬರೆಯಲು ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಯಾಗಬೇಕು. ಪರೀಕ್ಷಾ ನೋಂದಣಿ ಸಂಖ್ಯೆ ವಿದ್ಯಾಥಿ೯ಗಳಿಗೆ ಗೋಚರವಾಗುವ ರೀತಿ ಪ್ರದಶ೯ನ ವಾಗಬೇಕು. ಈ ಬಾರಿ ಪರೀಕ್ಷೆ ಒ.ಎಮ್.ಆರ್ ಶೀಟ್ ನಲ್ಲಿ ಇರುವ ಹಿನ್ನೆಲೆಯಲ್ಲಿ ಪರೀಕ್ಷಾ ನೋಂದಣಿ ಸಂಖ್ಯೆ ಸರಿಯಾಗಿ ವಿದ್ಯಾಥಿ೯ಗಳು ನಮೂದಿಸಿರುವ ಬಗ್ಗೆ ಪರೀಕ್ಷಾ ಮೇಲ್ವಿಚಾರಕರು ಪರಿಶೀಲಿಸುವಂತೆ ತಿಳಿಸಿದರು.

    ಮಳೆ ಇರುವ ಹಿನ್ನೆಲೆಯಲ್ಲಿ ವಿದ್ಯಾಥಿ೯ ಗಳು ಪರೀಕ್ಷಾ ಕೇಂದ್ರ ಗಳಿಗೆ ಬೇಗ ಆಗಮಿಸಿದರೆ ಅವರಿಗೆ ಪರೀಕ್ಷಾ ಕೇಂದ್ರದ ಒಳಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು.ಪರೀಕ್ಷೆ ಬರೆಯಲು ಡೆಸ್ಕ್ ಗಳು ಉತ್ತಮ ವಾಗಿರಬೇಕು ಈ ಬಗ್ಗೆ ಪರೀಕ್ಷಾ ಕೇಂದ್ರಗಳಲ್ಲಿ ಪರಿಶೀಲಿಸಿಕೊಳ್ಳುವಂತೆ ತಿಳಿಸಿದರು.

    ಕಳೆದ ಬಾರಿ 6 ದಿನಗಳು 10 ನೇ ತರಗತಿ ಪರೀಕ್ಷೆ ಮಾಡಿದ ಅನುಭವವಿದೆ. ಈ ಬಾರಿ ಕೋವಿಡ್ ಕಾರಣದಿಂದ 2 ದಿನಗಳ ಕಾಲ ಪರೀಕ್ಷೆ ಮಾಡುತ್ತಿರುವುದರಿಂದ ಕಳೆದ ಬಾರಿಗಿಂತ ಉತ್ತಮವಾಗಿ ಈ ಬಾರಿ ಇಲಾಖೆಯಿಂದ ಪರೀಕ್ಷೆ ನಡೆಸಲಾಗುವುದು ಎಂದರು.

    ಕೋವಿಡ್ ಪಾಸಿಟೀವ್ ಇರುವ ವಿದ್ಯಾರ್ಥಿಗಳಿಗೆ ಹತ್ತಿರದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಜ್ವರ ಕೆಮ್ಮು ನೆಗಡಿ ಅಂತಹ ಲಕ್ಷಣ ಕಂಡುಬಂದ ವಿದ್ಯಾಥಿ೯ ಗಳಿಗೆ
    ಪರೀಕ್ಷಾ ಕೇಂದ್ರಗಳಲ್ಲೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಹಾಗೂ ಅವರಿಗೆ ಎನ್ 95 ಮಾಸ್ಕ್ ನೀಡಲಾಗುವುದು. ಮಾಸ್ಕ್ ಮರೆತು ಬಂದ ವಿದ್ಯಾಥಿ೯ ಗಳಿಗೂ ಸಹ ಮಾಸ್ಕ್ ಕೊಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

    ಪ್ರತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾಥಿ೯ ಗಳಿಗೆ ಸ್ಯಾನಿಟೈಜರ್, ಕುಡಿಯುವ ನೀರು, ಶೌಚಾಲಯ ಹಾಗೂ ಇನ್ನಿತರ ಮೂಲಭೂತ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

    ಮುಂದಿನ ವರ್ಷದ ಶೈಕ್ಷಣಿಕ ಸಾಲು ಆರಂಭಿಸುವ ಬಗ್ಗೆ ಸಾವ೯ಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಕಾಯ೯ಪಡೆ ರಚಿಸಲಾಗಿದ್ದು , ಕಾಯ೯ಪಡೆಯಲ್ಲಿ ಶಾಲೆಗಳ ಪ್ರತಿನಿಧಿಗಳು, ಶಿಕ್ಷಣ ಕ್ಷೇತ್ರದಲ್ಲಿ ಕಾಯ೯ ನಿವ೯ಹಸುತ್ತಿರುವ ಸಂಘ ಸಂಸ್ಥೆಗಳು, ನಿಮ್ಹಾನ್ಸ್ ವೈದ್ಯರು, ಜಯದೇವ ಆಸ್ಪತ್ರೆಯ ವೈದ್ಯರು, ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ಪ್ರತಿನಿಧಿಗಳು ಸಭೆ ನಡೆಸಿದ್ದು, ಯಾವ ತರಗತಿಗಳನ್ನು ಮೊದಲು ಪ್ರಾರಂಭಿಸಬೇಕು, ಯಾವಾಗ ಪ್ರಾರಂಭಿಸಬೇಕು, ಯಾವ ರೀತಿ ಪ್ರಾರಂಭಿಸಬೇಕೆಂಬುದನ್ನು ಈ ತಿಂಗಳ ಅಂತ್ಯದಲ್ಲಿ ವರದಿ ನೀಡಲಿದ್ದಾರೆ ಎಂದು ತಿಳಿಸಿದರು.

    ಆರೋಗ್ಯ ಇಲಾಖೆ ನೀಡಿರುವ ಎಸ್.ಒ.ಪಿಯನ್ನು ಪಾಲಿಸಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ‌ಸರಳೀಕೃತ ಮಾಡಿ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.ಶಿಕ್ಷಣ ಇಲಾಖೆ ನಾಳೆ ಪರೀಕ್ಷೆ ನಡೆಸಲು ಪೂರ್ಣವಾಗಿ ಸಜ್ಜಾಗಿದೆ ಎಂದರು.

    ಸುರಕ್ಷಾ ಕೇಂದ್ರ: ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಶಿಕ್ಷಣ ಯಾವುದೇ ರೀತಿ ತೊಂದರೆಯಾಗದಂತೆ ಸುರಕ್ಷತೆ ನೀಡಿ ಪರೀಕ್ಷೆ ನಡೆಸಲಾಗುವುದು.ಈ ಬಾರಿ ಪರೀಕ್ಷಾ ಕೇಂದ್ರ, ಕೊಠಡಿ ಹಾಗೂ ಸಿಬ್ಬಂದಿ ಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ.ಮಕ್ಕಳು ಮತ್ತು ಪೋಷಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ಪರೀಕ್ಷೆಯ ನಂತರ ವಿದ್ಯಾರ್ಥಿಗಳು ಪರೀಕ್ಷೆಯ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಲಿದ್ದಾರೆ ಎಂದರು.

    ಗ್ರಾಮೀಣ ಭಾಗದಿಂದ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಯಾವ ರೀತಿಯ ವಾಹನದ ವ್ಯವಸ್ಥೆ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಬರಲಿದ್ದಾರೆ ಎಂಬ ಮಾಹಿತಿಯನ್ನು ಮುಖ್ಯ ಶಿಕ್ಷಕರಿಂದ ಸಂಗ್ರಹಿಸಲಾಗಿದೆ. ಬೇಕಿರುವ ಕಡೆ ಹೆಚ್ಚಿನ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅವಶ್ಯಕವಿದ್ದಲ್ಲಿ ಸರ್ಕಾರಿ ವಾಹನ, ಎಸ್.ಡಿ.ಎಂ.ಸಿ ಅವರ ವಾಹನ ಸಹ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ‌ ಎಂದರು.

    ಕಳೆದ ಬಾರಿ 3310 ಇದ್ದ ಪರೀಕ್ಷಾ ಕೇಂದ್ರಗಳನ್ನು 4885 ಹಾಗೂ 48000 ಪರೀಕ್ಷಾ ಕೊಠಡಿಗಳನ್ನು 73064 ಕ್ಕೆ ಹೆಚ್ಚಳ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಆದಷ್ಟು ಅವರಿಗೆ ಹತ್ತಿರವಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿದೆ ಎಂದರು.

    ಪರೀಕ್ಷಾ‌ ಪ್ರವೇಶ ಪತ್ರ ಸಿಗಲಿಲ್ಲ ಎಂದು ಬಂದಿರುವ ದೂರುಗಳನ್ನು ಬಿ.ಇ.ಒ ಹಂತದಲ್ಲೇ ಪರಿಹರಿಸಲಾಗಿದೆ ಬಂದಿರುವ ಎಲ್ಲಾ ದೂರುಗಳನ್ನು ಪರಿಹರಿಸಲಾಗಿದೆ.

    ಗ್ರೀಷ್ಮ ಎಂಬ ಬಾಲಕಿಗೆ ಸಂಬಂಧಿಸಿದಂತೆ ಇದ್ದ ದೂರಿನಲ್ಲಿ ತಾಂತ್ರಿಕಾ ಸಮಸ್ಯೆ ಇದ್ದು, ಬಾಲಕಿ 10 ನೇ ತರಗತಿ ಪರೀಕ್ಷೆಗೆ ಅರ್ಜಿ ಸಹ ಸಲ್ಲಿಕೆಯಾಗಿರಲಿಲ್ಲ. ಬಾಲಕಿಗೆ ಧೈರ್ಯ ತುಂಬಿ ಆಗಸ್ಟ್ ನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಮೊದಲ ಬಾರಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ ಪರಿಗಣಿಸಿ ಪರೀಕ್ಷೆ ನೀಡಲಾಗುವುದು ಎಂದರು.

    ಹಾವೇರಿಲ್ಲಿ 30 ಬಾಲಕರು ಪರೀಕ್ಷಾ ಶುಲ್ಕ ಪಾವತಿಸಿದ್ದು, ಶಿಕ್ಷಕ ದುರುಪಯೋಗ ಪಡಿಸಿಕೊಂಡಿರುತ್ತಾರೆ, ಶಿಕ್ಷಕನನ್ನು ಅಮಾನತ್ತು ಮಾಡಿ, ಆಗಸ್ಟ್ ನಲ್ಲಿ ನಡೆಯುವ ಪರೀಕ್ಷೆ ಯಲ್ಲಿ ಈ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು‌ ಅವಕಾಶ ನೀಡಲಾಗಿದೆ ಎಂದರು.

    ಈ ಸಂದಭ೯ದಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿವಾ೯ಹಣಾಧಿಕಾರಿ ಇಕ್ರಂ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

    ಜುಲೈ 26ರಿಂದ ಪದವಿ ಕಾಲೇಜು ಆರಂಭಕ್ಕೆ ಅಸ್ತು; ಚಿತ್ರಮಂದಿರ ಶೇ.50 ಭರ್ತಿಗೆ ಅವಕಾಶ

    ಇದೇ ಜುಲೈ 26ರಿಂದ ಭೌತಿಕ ಪದವಿ ತರಗತಿಗಳನ್ನು ಆರಂಭಿಸಲು ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ 19 ರ ನಿರ್ವಹಣೆಗೆ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.

    ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ವಾಣಿಜ್ಯ ವ್ಯವಹಾರಕ್ಕೆ ಮತ್ತಷ್ಟು ಸಡಿಲಕೆ ಮಾಡಲಾಗಿದ್ದು, ರಾಜ್ಯದಲ್ಲಿ ಕೋವಿಡ್ ಅನ್ಲಾಕ್ 4.O ಮಾರ್ಗಸೂಚಿಯನ್ನು ಭಾನುವಾರ ಹೊರಡಿಸಲಾಗಿದೆ.

    ಹೊಸ ಮಾರ್ಗಸೂಚಿ ಸೋಮವಾರದಿಂದ ಜಾರಿಗೆ ಬರಲಿದ್ದು, ಅರ್ಧ ಪ್ರಮಾಣದಲ್ಲಿ ಚಲನ ಚಿತ್ರಮಂದಿರಗಳು ತೆರೆದುಕೊಳ್ಳಲಿವೆ. ಮುಖ್ಯವಾಗಿ ಜುಲೈ 26ರಿಂದ ಪದವಿ ಕಾಲೇಜುಗಳು ಆರಂಭವಾಗಲಿವೆ.

    ಈಗಾಗಲೇ ಆನ್ಲೈನ್ ಮೂಲಕ ನಡೆಯುತ್ತಿರುವ ಪದವಿ ತರಗತಿಗಳನ್ನು ಭೌತಿಕವಾಗಿ ಆರಂಭಿಸಲು ಸರಕಾರ ನಿರ್ಧರಿಸಿದ್ದು, ಜುಲೈ 26ರಿಂದ ನೇರ ಅಥವಾ ಆಫ್ಲೈನ್ ತರಗತಿಗಳು ಶುರುವಾಗಲಿವೆ. ತರಗತಿಗಳಿಗೆ ಹಾಜರಾಗಲಿಚ್ಛಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿರಲೇಬೇಕು.

    ಭಾನುವಾರ ತಮ್ಮ ನಿವಾಸದಲ್ಲಿ ಹಿರಿಯ ಸಚಿವರು, ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕೋವಿಡ್ ಸೋಂಕು ಇಳಿಮುಖ ಆಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಮತ್ತಷ್ಟು ರಿಯಾಯಿತಿ ನೀಡುವ ನಿರ್ಧಾರ ಕೈಗೊಂಡರು. ಜತೆಗೆ, ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಅವಧಿಯಲ್ಲೂ ಒಂದು ಗಂಟೆ ಕಡಿತಗೊಳಿಸಿ, ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೆ ಮಾತ್ರ ರಾತ್ರಿ ಕರ್ಫ್ಯೂ ವಿಧಿಸಿ ನಿರ್ಣಯ ಕೈಗೊಂಡಿದ್ದಾರೆ.

    ಉಳಿದಂತೆ ಬಾರ್ ಗಳಲ್ಲಿ ಮದ್ಯ ಸೇವನೆಗೆ ಈವರೆಗೆ ವಿಧಿಸಲಾಗಿದ್ದ ಶೇ.50 ರಷ್ಟು ಮಿತಿ ಮುಂದುವರಿಸಲಾಗಿದೆ. ರಾತ್ರಿ ಕರ್ಫ್ಯೂ ಅವಧಿಯಲ್ಲಿ ಒಂದು ಗಂಟೆ ಕಡಿತ ಮಾಡಿದ ಕಾರಣಕ್ಕೆ ಬಾರ್ ಗಳಲ್ಲಿ ಮುಂದಿನ ದಿನಗಳಲ್ಲಿ ರಾತ್ರಿ 10 ಗಂಟೆ ತನಕ ಮದ್ಯ ಸೇವನೆಗೆ ಅವಕಾಶ ಕೊಡಲಾಗಿದೆ. ಆದರೆ, ಪಬ್ ನಲ್ಲಿ ಮದ್ಯ ಸೇವನೆ, ರಾತ್ರಿ ಪಾರ್ಟಿಗಳಿಗೆ ಅವಕಾಶ ಇಲ್ಲ. ಹಾಗೆಯೇ ಒಳಾಂಗಣ ಚಿತ್ರೀಕರಣ, ಕ್ರೀಡಾಂಗಣಗಳಿಗೂ ಅವಕಾಶ ನೀಡಲಾಗಿಲ್ಲ. ಮದುವೆಗೆ 100 ಜನರ ಮಿತಿ ಇದ್ದು, ಅಂತ್ಯಕ್ರಿಯೆಯಲ್ಲಿ 20 ಜನರಷ್ಟೇ ಪಾಲ್ಗೊಳ್ಳುವ ನಿಯಮವನ್ನು ಮುಂದುವರಿಸಲಾಗಿದೆ.

    ಡಾ.ಸುಧಾಕರ್ ಇರಲಿಲ್ಲ

    ಅತ್ಯಂತ ಮಹತ್ವದ ಈ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭಾಗಿಯಾಗಿರಲಿಲ್ಲ. ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಡಿಸಿಎಂ ಅಶ್ವತ್ಥನಾರಾಯಣ, ಸಚಿವರಾದ ಅಶೋಕ್, ಅರವಿಂದ ಲಿಂಬಾವಳಿ ಮಾತ್ರ ಭಾಗಿಯಾಗಿದ್ದರು. ಮುಖ್ಯ ಕಾರ್ಯದರ್ಶಿ ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ಎಸ್. ರಮಣರೆಡ್ಡಿ ಮುಂತಾದವರು ಉಪಸ್ಥಿತರಿದ್ದರು. ಸುಧಾಕರ್ ಗೈರಿಗೆ ಕಾರಣ ಗೊತ್ತಾಗಿಲ್ಲ.

    ರೈತ ನಾಯಕ ಜಿ.ಮಾದೇಗೌಡ ನಿಧನ

    ಮಾಜಿ ಸಚಿವ, ಮಂಡ್ಯದ ಮಾಜಿ ಸಂಸದ, ರೈತ ನಾಯಕ ಜಿ.ಮಾದೇಗೌಡ ಅವರು ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ನಿಧನರಾದರು. 92 ವರ್ಷ ವಯಸ್ಸಿನ ಅವರು ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

    ಆರು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ,ಒಂದು ಬಾರಿ ರಾಜ್ಯದ ಸಚಿವರಾಗಿ ಕೆಲಸ ನಿರ್ವಹಿಸಿದ್ದ ಮಾದೇಗೌಡ ಅವರು ಕಾವೇರಿ ನೀರಿನ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ್ದರು.

    ಮಂಡ್ಯದ ಬಂಧೀಗೌಡ ಬಡಾವಣೆ ನಿವಾಸಿಯಾಗಿದ್ದ ಮಾದೇಗೌಡರು, ಮದ್ದೂರು ತಾಲೂಕಿನ ಗುರುದೇವರ ಹಳ್ಳಿ ಗ್ರಾಮದವರು.

    ಮಾದೇಗೌಡರು, ಪತ್ನಿ , ಡಾ.‌ ಪ್ರಕಾಶ್, ಮಧು ಮಾದೇಗೌಡ ಸೇರಿದಂತೆ ನಾಲ್ವರು ಪುತ್ರರು, ಪುತ್ರಿ ಹಾಗೂ ಅಪಾರ ಬಂಧುಗಳು ಅಭಿಮಾನಿಗಳನ್ನು ಅಗಲಿದ್ದಾರೆ.

    ಒಂಭತ್ತು ದಶಕಗಳ ನಿರಂತರ ಹೋರಾಟ, ಅಭಿವೃದ್ಧಿ ಬಗ್ಗೆ ಸದಾ ಚಿಂತನೆ ಇಟ್ಟು ಬದುಕು ಸವೆಸಿದ ಗೌಡರು, ಬದುಕಿನಲ್ಲಿ ಗಾಂಧೀವಾದವನ್ನು ಅಳವಡಿಸಿಕೊಂಡರು. ಮಂಡ್ಯದಲ್ಲಿ ಹಾಗೂ ಭಾರತೀನಗರದಲ್ಲಿ ಗಾಂಧೀಭವನ, ಗಾಂಧೀಗ್ರಾಮ, ಗುಡಿ ಕೈಗಾರಿಕೆ, ವಾಚನಾಲಯ ಹೀಗೆ ಹಲವು ಗಾಂಧೀ ಮಾರ್ಗ ಅನುಸರಿಸಿ , ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಕೀರ್ತಿ ಗೌಡರದು.

    ಮದ್ದೂರು ತಾಲೂಕಿನ ಕಾಳಮುದ್ದನದೊಡ್ಡಿ ಗ್ರಾಮ ಎಂದರೆ ಗೌಡರಿಗೆ ಅಚ್ಚುಮೆಚ್ಚು. ಈ ಗ್ರಾಮಕ್ಕೆ ಪಟ್ಟಣದ ಸ್ವರೂಪ ತಂದು ಕೊಟ್ಟು , ಭಾರತೀನಗರ ಎಂದು ಹೊಸ ಹೆಸರನ್ನು ಖ್ಯಾತಿಗೊಳಿಸಿದರು.

    ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಮಾದೇಗೌಡರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

    ಮೈಸೂರು: 700 ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಾಣ

    ಇಲವಾಲ ಹೋಬಳಿಯ ಕಮರಹಳ್ಳಿ ಭಾಗದಲ್ಲಿ ರೈತರ ಸಹಕಾರ ಪಡೆದು 50:50ರ ಅನುಪಾತದ 700ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಬಡಾವಣೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಹೇಳಿದರು.

    ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರ ಉಪಸ್ಥಿತಿಯಲ್ಲಿ ಶನಿವಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಈಗಾಗಲೇ 374ಎಕರೆಯ ಭೂಮಿಯನ್ನು ಪಡೆದುಕೊಂಡಿದ್ದು, ಉಳಿದಿದ್ದನ್ನು ಶೀಘ್ರವಾಗಿ ಪಡೆದುಕೊಳ್ಳಲು ಕ್ರಮವಹಿಸಲಾಗಿದೆ. 15 ದಿನದಲ್ಲಿ ಮತ್ತೆ ಮೈಸೂರಿಗೆ ಭೇಟಿ ನೀಡಿ ಪ್ರತಿಯೊಬ್ಬರ ಸಲಹೆಯನ್ನು ಆಲಿಸಿದ ನಂತರ ತೀರ್ಮಾನವನ್ನು ಕೈಗೊಳ್ಳಲಿದ್ದೆವೆ ಎಂದರು.

    ನಗರಾಭಿವೃದ್ಧಿ ಪ್ರಾಧಿಕಾರದ ಮೇಲೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿಯೇ ರೈತರ ಸಹಕಾರದೊಂದಿಗೆ .50:50ರ ಅನುಪಾತದಲ್ಲಿ ಬಡಾವಣೆ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

    ಕಬಿನಿಯಿಂದ ಪ್ರಸ್ತುತ 60ಎಂ.ಎಲ್‌.ಡಿ ನೀರನ್ನು ಮಾತ್ರ ಪಡೆದುಕೊಳ್ಳಲಾಗುತ್ತಿದೆ. ಇನ್ನೂ 90 ಎಂ.ಎಲ್.ಡಿ. ನೀರು ಪಡೆದುಕೊಳ್ಳಲು ಅವಕಾಶವಿದೆ. ಈ ನಿಟ್ಟಿನಲ್ಲಿ 95 ಕೋಟಿ ರೂ. ವೆಚ್ಚದ ಯೋಜನೆ ಜಾರಿಗೆ ಇಂದಿನ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿದೆ ಎಂದು ತಿಳಿಸಿದರು.

    ವಿಜಯಪುರ ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಮುಂದಾದ ಟರ್ಬೋ ಏರ್‌ಲೈನ್

    ವಿಜಯಪುರ ವಿಮಾನ ನಿಲ್ದಾಣ ಕಾರ್ಯಾಚರಣೆ ನಡೆಸಲು ಮೆ.ಟರ್ಬೋ ಏರ್ ಲೈನ್ ಕಂಪನಿಯವರು ಮುಂದೆ ಬಂದಿದ್ದಾರೆ ಎಂದು ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ.

    ವಿಜಯಪುರ ವಿಮಾನ ನಿಲ್ದಾಣದಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿದಿನ ಎಟಿಆರ್ 72 ವಿಮಾನವನ್ನು ಹಾರಾಟ ನಡೆಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ಹೊಂದಿವೆ. ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯು ತ್ವರಿತಗತಿಯಿಂದ ನಡೆಯುತ್ತಿದ್ದು, ಈ ಕಾಮಗಾರಿಯನ್ನು 2022ರ ಮಾರ್ಚ್ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ಕಾಮಗಾರಿಯು ತ್ವರಿತಗತಿಯಾಗಿ ಗುರಿಮೀರಿ ನಡೆಯುತ್ತಿದೆ. ಉತ್ತರಕರ್ನಾಟಕದ ಅದರಲ್ಲೂ ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಗಳ ಜನತೆಗೆ ವಿಮಾನಯಾನ ಕೈಗೊಳ್ಳಲು ಅನುವಾಗಲಿದೆ ಎಂದು ಗೋವಿಂದ ಕಾರಜೋಳ ತಿಳಿಸಿದ್ದಾರೆ.

    ಸೋಮವಾರ SSLC ಪರೀಕ್ಷೆ; ಪ್ರವೇಶ ಪತ್ರ ಪಡೆದು ಪರೀಕ್ಷೆಗೆ ಸಿದ್ಧರಾದ ಮಕ್ಕಳು

    ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಈಗಾಗಲೇ ಮಕ್ಕಳು ತಮ್ಮ ಶಾಲೆಗಳಿಂದ ಪರೀಕ್ಷಾ ಪ್ರವೇಶಪತ್ರಗಳನ್ನು ಪಡೆದುಕೊಂಡಿದ್ದು, ಪರೀಕ್ಷೆಗೆ ಹಾಜರಾಗಲು ಉತ್ಸುಕರಾಗಿದ್ದಾರೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

    ಸೋಮವಾರದಿಂದ ಆರಂಭವಾಗಲಿರುವ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆಗಳನ್ನು ಮತ್ತು ಅಣಕು ಪರೀಕ್ಷೆಗಳನ್ನು ಪರಿಶೀಲಿಸಲು ಶನಿವಾರ ಬೆಂಗಳೂರು ನಗರದ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಈ ಬಾರಿಯ ಪರೀಕ್ಷೆಗೆ ಕಳೆದ ಬಾರಿಗಿಂತ ಹೆಚ್ಚಿನ ಸಿದ್ಧತೆಗಳನ್ನು ಮಾಡಲಾಗಿದೆ ಎಂದರು.

    ರಾಜ್ಯದ 14929 ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೊಂದಾಯಿಸಿದ ವಿದ್ಯಾರ್ಥಿಗಳ ಪ್ರವೇಶಪತ್ರಗಳನ್ನು ಆಯಾ ಮುಖ್ಯೋಪಾಧ್ಯಾಯರು ಮಂಡಳಿಯ ಜಾಲತಾಣದ ಮೂಲಕ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಈಗಾಗಲೇ ಬಹುತೇಕ ವಿದ್ಯಾರ್ಥಿಗಳು ಪ್ರವೇಶ ಪತ್ರ ಪಡೆದಿದ್ದಾರೆ. ಇಂದು ಶಾಲಾವಧಿಯೊಳಗೆ ಉಳಿದ ಮಕ್ಕಳು ಪ್ರವೇಶ ಪತ್ರ ಪಡೆದು ನಿಗದಿತ ಪರೀಕ್ಷಾ ಕೇಂದ್ರಗಳಿಗೆ ಸೋಮವಾರ ಪರೀಕ್ಷೆಗೆ ಹಾಜರಾಗಲಿದ್ದಾರೆಂದು ಸಚಿವರು ತಿಳಿಸಿದರು. ಪರೀಕ್ಷೆಗೆ ನೊಂದಾಯಿಸಿದ ಯಾವುದೇ ವಿದ್ಯಾರ್ಥಿ ಪ್ರವೇಶ ಪತ್ರ ಪಡೆಯಲು ಸಾಧ್ಯವಾಗದಿದ್ದಲ್ಲಿ ಸಂಬಂಧಿಸಿದ ಬಿಇಒ/ಡಿಡಿಪಿಐಗಳನ್ನು ಸಂಪರ್ಕಿಸಿ ಪಡೆಯಬಹುದು. ಇದರ ಸಮನ್ವಯಕ್ಕಾಗಿ ಜಿಲ್ಲಾ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

    ಮಲ್ಲೇಶ್ವರಂ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ, ಎಂಇಎ ಪ್ರೌಢಶಾಲೆ, ಸದಾಶಿವನಗರದ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆ, ದಾಸರಹಳ್ಳಿ, ಪೀಣ್ಯದ ಸರ್ಕಾರಿ ಪ್ರೌಢಶಾಲಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಕೊನೆ ಹಂತದ ಸಿದ್ಧತೆಗಳನ್ನು ಗಮನಿಸಿದರು.

    ಈ ಕೇಂದ್ರಗಳಲ್ಲಿ ಪರೀಕ್ಷಾ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಸ್ಕೌಟ್ಸ್-ಗೈಡ್ಸ್ ಸ್ವಯಂ ಸೇವಕರು, ಸಹಾಯಕರು ಸೇರಿದಂತೆ ಪರೀಕ್ಷಾ ಪ್ರಕ್ರಿಯೆಗೆ ನಿಯುಕ್ತಿಯಾಗಿರುವ ಅಧಿಕಾರಿಗಳು ರಾಜ್ಯದ ಆರೋಗ್ಯ ಇಲಾಖೆ ಸಿದ್ಧಪಡಿಸಿದ ಎಸ್‍ಒಪಿ ಪ್ರಕಾರ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹಾಜರುಪಡಿಸುವ ಎಲ್ಲ ಪ್ರಕ್ರಿಯೆಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ಅಗತ್ಯ ಮಾರ್ಗದರ್ಶನ ನೀಡಿದ ಸಚಿವರು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕೆಂದರು.

    ಸೋಮವಾರ ಪರೀಕ್ಷೆ ಆರಂಭವಾಗುವ ಹಿನ್ನೆಲೆಯಲ್ಲಿ ಭಾನುವಾರ ಪರೀಕ್ಷಾ ಕೇಂದ್ರ ಮತ್ತು ಪರೀಕ್ಷಾ ಆವರಣವನ್ನು ಸ್ಯಾನಿಟೈಜ್ ಮಾಡಲಾಗುತ್ತದೆ ಮತ್ತು ಪರೀಕ್ಷೆ ಮುಗಿದ ನಂತರವೂ ಸ್ಯಾನಿಟೈಜ್ ಮಾಡಲಾಗುತ್ತದೆ ಎಂದು ಅವರು ಹೇಳಿದರು. ಜುಲೈ 19ರಂದು ಕೋರ್ ವಿಷಯಗಳಿಗೆ ಮತ್ತು 22ರಂದು ಭಾಷಾ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭಗೊಳ್ಳಲಿವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಪರೀಕ್ಷಾ ಪ್ರಕ್ರಿಯೆಯಲ್ಲಿ ನಿಯೋಜಿತರಾಗುವ 1,19,469 ಮಂದಿ ಎಲ್ಲ ಸ್ತರದ ಸಿಬ್ಬಂದಿ ಈಗಾಗಲೇ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದವರನ್ನಷ್ಟೇ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ 12 ಮಕ್ಕಳಿರಬೇಕು. ಒಂದು ಡೆಸ್ಕ್ಗೆ ಒಬ್ಬ ಪರೀಕ್ಷಾರ್ಥಿ ಮಾತ್ರವೇ ಇರಲಿದ್ದಾರೆ. ಕಳೆದ ವರ್ಷದ ಅನುಭವದ ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷಾ ಕೇಂದ್ರಗಳನ್ನು ದ್ವಿಗುಣಗೊಳಿಸಲಾಗಿದೆ. ಪರೀಕ್ಷಾ ಕೊಠಡಿಗಳನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಈ ಬಾರಿ ಪರೀಕ್ಷೆ ಸರಳೀಕೃತವಾಗಿರಲಿದೆ ಎಂದು ಸಚಿವರು ಹೇಳಿದರು.

    ವಿಶೇಷ ಕೊಠಡಿ:ಕೆಮ್ಮು, ನೆಗಡಿ, ಜ್ವರ ಮೊದಲಾದುವುಗಳಿಂದ ಬಳಲುತ್ತಿರುವ ಇಲ್ಲವೇ ಈ ಲಕ್ಷಣಗಳಿರುವ ಅಭ್ಯರ್ಥಿಗಳಿಗಾಗಿ ಕನಿಷ್ಠ 2 ಕೊಠಡಿಗಳನ್ನು ವಿಶೇಷ ಕೊಠಡಿಗಳನ್ನಾಗಿ ಕಾಯ್ದಿರಿಸಲಾಗಿದೆ. ಸಿಬ್ಬಂದಿ ಮತ್ತು ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದ ಪ್ರವೇಶವಾದೊಡನೆ ನೇರವಾಗಿ ಆರೋಗ್ಯ ತಪಾಸಣಾ ಕೌಂಟರ್‌ ಪ್ರವೇಶಿಸುವರು. ಆರೋಗ್ಯ ಕೌಂಟರ್‌ ಗಳು ಬೆಳಗ್ಗೆ 8.30ಕ್ಕೆ ಅರಂಭವಾಗಿ ಪರೀಕ್ಷಾ ಪ್ರಕ್ರಿಯೆ ಮುಗಿಯುವ ತನಕ ತೆರದಿರಲಿವೆ. ಥರ್ಮಲ್ ಸ್ಯಾನರ್, ಪಲ್ಸ್‌ ಆಕ್ಸಿಮೀಟರ್‌, ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಿರಲಿವೆ. ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಆರೋಗ್ಯ ಕೌಂಟರ್‌ ಗಳಲ್ಲೇ ಮಾಸ್ಕ್‌ ನೀಡಲಾಗುತ್ತದೆ ಎಂದು ಸೂರೇಶ್‌ ಕುಮಾರ್‌ ತಿಳಿಸಿದ್ದಾರೆ.

    ತುರ್ತು ಚಿಕಿತ್ಸಾ ವಾಹನ:ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಪ್ರತಿ ತಾಲೂಕಿಗೊಂದು ತುರ್ತು ಚಿಕಿತ್ಸಾ ವಾಹನವನ್ನುಮೀಸಲಿಡುವುದು. ಪರೀಕ್ಷಾ ಸಿಬ್ಬಂದಿಯೂ ಯಾವುದೇ ಸಂದರ್ಭದಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಅಗತ್ಯ ಬಿದ್ದರೆ ಸಿಬ್ಬಂದಿ ಫೇಸ್‌ ಶೀಲ್ಡ್‌ ಬಳಸುವುದು. ಗಡಿ ಭಾಗದ ಪರೀಕ್ಷಾ ಕೇಂದ್ರಗಳಿಗೆ ಹೊರ ರಾಜ್ಯದಿಂದ ಬರುವ ಪರೀಕ್ಷಾರ್ಥಿಗಳಿಗೆ ಅನುವಾಗುವಂತೆ ಪರೀಕ್ಷೆಗಳ ದಿವಸದಂದು ರಾಜ್ಯದ ಗಡಿ ಪ್ರವೇಶಕ್ಕೆ ಆಯಾ ಜಿಲ್ಲಾಧಿಕಾರಿಗಳು ಗಡಿ ಜಿಲ್ಲೆಯ ಅಧಿಕಾರಿಗಳೊಂದಿಗೆ ವ್ಯವಹರಿಸಿ ಕ್ರಮ ವಹಿಸಲಾಗಿದೆ ಎಂದು ಎಂದು ಸಚಿವರು ತಿಳಿಸಿದರು.

    ಕೋವಿಡ್‌ ಕೇರ್‌ ಸೆಂಟರ್ ಸ್ಥಾಪನೆ: ಪರೀಕ್ಷಾರ್ಥಿಗಳಿಗೆ ಕೋವಿಡ್‌ ಪಾಸಿಟೀವ್ ಕಂಡು ಬಂದಿದ್ದರೆ ಅಂತಹ ಪರೀಕ್ಷಾರ್ಥಿಗೆ ತಾಲೂಕಿಗೊಂದು ಕೋವಿಡ್‌ ಕೇರ್‌ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿಯೇ ಅವರಿಗೆ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಸೋಂದು ತಗುಲಿದ್ದು, ಪರೀಕ್ಷಾರ್ಥಿ ಐಸೋಲೇಷನ್‌ ನಲ್ಲಿದ್ದರೆ ಅವರನ್ನು ತಪಾಸಣೆ ನಡೆಸಿ ಆರೋಗ್ಯವಾಗಿರುವುದು ಕಂಡುಬಂದರೆ ಸಮೀಪದ ವಿದ್ಯಾರ್ಥಿ ಕೋವಿಡ್‌ ಕೇರ್‌ ಸೆಂಟರ್‌ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಕೋವಿಡ್‌ ಕೇರ್‌ ಕೇಂದ್ರದಲ್ಲಿ ಒಂದು ಅಂಬುಲೆನ್ಸ್‌ ವಾಹನ ಕಾಯ್ದಿರಿಸಲಾಗಿದೆ ಎಂದು ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

    ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ರವಾನೆ, ಪರೀಕ್ಷೆ ನಂತರ ಒಎಂಆರ್ ಶೇಟ್‌ ಗಳ ರವಾನೆ ಕುರಿತು ನಿಗದಿತ ಸೂಚನೆಗಳನ್ನು ನೀಡಲಾಗಿದೆ. ಆರೋಗ್ಯಕರ ವಾತಾವರಣದಲ್ಲಿ ಪರೀಕ್ಷೆ ಯಶಸ್ಸಿಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

    ಯಾವುದೇ ಪ್ರಕರಣಗಳಿಗೆ ಅವಕಾಶವಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಆಯಾ ಜಿಲ್ಲಾಧಿಕಾರಿಗಳು ಪರೀಕ್ಷಾ ಕೇಂದ್ರದ ಸುತ್ತಮುತ್ತ ಜೆರಾಕ್ಸ್ ಸೆಂಟರ್‌ ಗಳನ್ನು ಮುಚ್ಚಿಸಲು ಮತ್ತು ಸೆಕ್ಷನ್-144 ಜಾರಿಗೊಳಿಸಲು ಕ್ರಮ ವಹಿಸಿದ್ದಾರೆ. ಪರೀಕ್ಷಾ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ರವಾನೆ ಸಮಯದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸರು ಪರೀಕ್ಷಾ ಕೇಂದ್ರದ ಬಳಿ ಸಂಚಾರ ಒತ್ತಡವಾದಂತೆ ಕ್ರಮ ವಹಿಸುವರು ಎಂದೂ ಸುರೇಶ್ ಕುಮಾರ್ ವಿವರಿಸಿದರು.

    ಸೆಪ್ಟೆಂಬರ್ 30 ರೊಳಗೆ ಅಡ್ಮಿಷನ್ ಮುಗಿಸಲು ಯುಜಿಸಿ ಸೂಚನೆ

    ಅಕ್ಟೋಬರ್ 1 ರಿಂದ ಮೊದಲ ಸೆಮಿಸ್ಟರ್ ತರಗತಿ ಆರಂಭ

    ಕೋವಿಡ್ 19 ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ವ್ಯತ್ಯಯ ಗೊಂಡಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ-UGC- ಉನ್ನತ ಶಿಕ್ಷಣಕ್ಕೆ ಸಂಬಂಧಿಸಿಂತೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಕೂಡ ಯುಜಿಸಿ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿತ್ತು.

    ಇದೀಗ ಪ್ರಸಕ್ತ ಸ್ಥಿತಿಗಳನ್ನು ಗಮನಿಸಿ ನಿನ್ನೆ ಅಂದರೆ ಜುಲೈ 16ರಂದು ಮತ್ತೊಂದು ಸುತ್ತಿನ ಗೈಡ್ ಲೈನ್ಸ್ ಪ್ರಕಟಿಸಿದೆ. ಆ ಗೈಡ್ ಲೈನ್ಸ್ ನಲ್ಲಿ 2021-22 ನೇ ಸಾಲಿನ ಪರೀಕ್ಷೆಗಳು ಮತ್ತು ಪ್ರವೇಶ ವೇಳಾ ಪಟ್ಟಿಯನ್ನು ಅದು ಪ್ರಕಟಿಸಿದೆ.

    ಈ ಮಾರ್ಗದರ್ಶಿ ಸೂತ್ರಗಳನ್ನು ವಿವಿ ಗಳ ಕುಲಪತಿಗಳು ಮತ್ತು ಕಾಲೇಜು ಪ್ರಿನ್ಸಿಪಾಲರುಗಳಿಗೆ ಯುಜಿಸಿಯ ಕಾರ್ಯದರ್ಶಿ ಪ್ರೊ. ರಜನೀಶ್ ಜೈನ್ ರವಾನಿಸಿದ್ದು ಅದರ ಪ್ರತಿ ಕನ್ನಡಪ್ರೆಸ್.ಕಾಮ್ ಗೆ ಲಭ್ಯವಾಗಿದೆ. ಈ ಮಾರ್ಗದರ್ಶಿ ಸೂತ್ರದಂತೆ ಶಿಕ್ಷಣ ಸಂಸ್ಥೆಗಳು ಸಿದ್ಧವಾಗುವಂತೆಯೂ ಅಂತಿಮವಾಗಿ ಸ್ಥಳೀಯ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸರಕಾರಗಳು ಹೊರಡಿಸುವ ಅಗತ್ಯ ನಿರ್ದೇಶನಗಳಂತೆ ತಮ್ಮ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸಿಕೊಳ್ಳಲು ಸಲಹೆ ಮಾಡಿದೆ.

    ಈ ಗೈಡ್ ಲೈನ್ಸ್ ಪ್ರಕಾರ ಸೆಪ್ಟೆಂಬರ್ 30 ರೊಳಗೆ ಅಡ್ಮಿಷನ್ ಪ್ರಕ್ರಿಯೆಗಳನ್ನು ಮುಗಿಸಿ ಅಕ್ಟೋಬರ್ 1 ರವೇಳೆಗೆ ಮೊದಲ ಸೆಮಿಸ್ಟರ್ ತರಗತಿಗಳನ್ನು ಆಫ್ ಲೈನ್ ಅಥವಾ ಆನ್ ಲೈನ್ ಪದ್ದತಿಯಲ್ಲಿ ಆರಂಭಿಸಲು ಸೂಚಿಸಿದೆ. ಭೌತಿಕ ತರಗತಿಗಳ ಆರಂಭ ಸ್ಥಳೀಯ ಸರಕಾರದ ನಿರ್ಧಾರವನ್ನು ಅವಲಂಬಿಸಿರುತ್ತದೆ.

    ಯುಜಿಸಿ ಸೂಚಿಸಿರುವ ಶೈಕ್ಷಣಿಕ ವೇಳಾಪಟ್ಟಿ

    ಯುಜಿಸಿ ಮಾರ್ಗದರ್ಶಿ ಸೂತ್ರದ ಪೂರ್ಣಪಾಠದ ಪಿಡಿಎಫ್. ಸ್ಕ್ರಾಲ್ ಮಾಡಿ ಓದಿ.

    ಎಲ್ಲಿದೆ ಗುಜರಾತ್ ಮಾಡೆಲ್? ಅಲ್ಲಿಗೆ ಸಿಕ್ಕಷ್ಟು ಲಸಿಕೆ ರಾಜ್ಯಕ್ಕೆ ಸಿಕ್ಕಿದೆಯಾ?- ಡಿಕೆಶಿ ಪ್ರಶ್ನೆ

    ಎಲ್ಲದಕ್ಕೂ ಗುಜರಾತ್ ಮಾಡೆಲ್ ಎನ್ನುವ ಬಿಜೆಪಿ ಸರ್ಕಾರ, ಕೋವಿಡ್ ಲಸಿಕೆ ವಿಚಾರದಲ್ಲಿ ತಾರತಮ್ಯ ಮಾಡಿರುವುದು ಏಕೆ? ಗುಜರಾತಿಗೆಷ್ಟು ಲಸಿಕೆ ಪೂರೈಸಿದೆ? ಕರ್ನಾಟಕಕ್ಕೆಷ್ಟು ಪೂರೈಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

    ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು:

    ‘ಗುಜರಾತ್ ಮಾಡೆಲ್ ಎಲ್ಲಿದೆ? ರಾಜ್ಯದಲ್ಲಿ ಲಾಕ್ ಡೌನ್, ಸೀಲ್ ಡೌನ್ ಎಲ್ಲ ಮಾಡಲಾಯ್ತು. ವ್ಯಾಪಾರಿಗಳು ಉದ್ಯಮಿಗಳ ಪರ ಅಂತಾ ಬಿಂಬಿಸಿಕೊಂಡ ಬಿಜೆಪಿ ಲಾಕ್ ಡೌನ್ ಹಿನ್ನೆಲೆಯಲ್ಲಿ ತೆರಿಗೆ ಮನ್ನಾ ಮಾಡಲಿಲ್ಲಾ ಯಾಕೆ? ನಿರುದ್ಯೋಗ ಸೃಷ್ಟಿಸಿದ್ದೇ ಗುಜರಾತ್ ಮಾಡೆಲ್ಲಾ..? ಸರ್ಕಾರದವರು ಅಧ್ಯಯನ ಮಾಡಲು ಗುಜರಾತಿಗೆ ಹೋಗಲಿ, ನಮ್ಮ ಅಭ್ಯಂತರವಿಲ್ಲ. ಅವರು ಯಾವ ಮಾಡೆಲ್ ಆದರೂ ನೀಡಲಿ. ಆದರೆ ನಮ್ಮ ಜನರಿಗೆ ನ್ಯಾಯ ಒದಗಿಸಲಿ, ಸರಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಲಿ.

    ಗುಜರಾತಿಗೆ ಎಷ್ಟು ಲಸಿಕೆ ನೀಡಿದ್ದಾರೆ? ಗುಜರಾತಿಗೆ ನೀಡಿರುವುದರಲ್ಲಿ ಶೇ.50 ರಷ್ಟಾದರೂ ನಮ್ಮ ರಾಜ್ಯಕ್ಕೆ ನೀಡಲಿಲ್ಲ. ಬಿಜೆಪಿಗೆ ಗುಜರಾತ್ ಮಾತ್ರ ಆದ್ಯತೆ. ಅವರು ಗುಜರಾತ್ ಉದ್ಧಾರ ಮಾಡಲಿ ಬೇಡ ಅನ್ನುವುದಿಲ್ಲ. ಆದರೆ ಲಸಿಕೆ ವಿಚಾರದಲ್ಲಿ ಗುಜರಾತಿಗೆ ಎಷ್ಟು ಲಸಿಕೆ ನೀಡಿದ್ದಾರೋ ಅಷ್ಟನ್ನೇ ರಾಜ್ಯಕ್ಕೂ ನೀಡಲಿ ಎಂದು ಮುಖ್ಯಮಂತ್ರಿಗಳು ಧ್ವನಿ ಎತ್ತಬೇಕು. ಈ ಬಗ್ಗೆ ಎಲ್ಲ ಸಂಸದರು ಮಾತನಾಡಬೇಕು.

    ಸರ್ಕಾರದಿಂದ ಶ್ರಮಿಕರಿಗೆ ಸಿಗಲಿ ಪರಿಹಾರ;

    ಕೋವಿಡ್ ನಿಂದ ಮೃತಪಟ್ಟವರಿಗೆ ಸಹಜ ಸಾವು ಎಂದು ಮರಣ ಪ್ರಮಾಣ ಪತ್ರ ನೀಡಲಾಗಿದೆ. ಇವರ ಮರಣ ಪ್ರಮಾಣ ಪತ್ರವನ್ನು ಹೇಗೆ ಮಾರ್ಪಾಡು ಮಾಡಲು ಆಗುತ್ತದೆ? ಕೋವಿಡ್ ನಿಂದ ತೊಂದರೆಗೆ ಒಳಗಾದವರಿಗೆ, ಸಾಂಪ್ರಾದಾಯಿಕ ವೃತ್ತಿ ಉಳಿಸಿಕೊಂಡು ಬಂದವರಿಗೆ, ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ ಪರಿಹಾರ ಸಿಗುವ ಬಗ್ಗೆ ಯಾವುದೇ ಸ್ಪಷ್ಟತೆ, ಭರವಸೆ ಇಲ್ಲ.

    ಆನ್ಲೈನ್ ನೋಂದಣಿ ಮಾಡಲು ಅವರಿಗೆ ಗೊತ್ತಿದ್ದರೆ, ಅವರು ಯಾಕೆ ಇವರ ಮುಂದೆ ಕೈಚಾಚುತ್ತಿದ್ದರು? ಒಬ್ಬನೇ ಒಬ್ಬ ರೈತ, ಕಾರ್ಮಿಕ, ವೃತ್ತಿದಾರ ನೋಂದಣಿ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಆರಂಭದಲ್ಲಿ 25 ಲಕ್ಷ ಚಾಲಕರಿಗೆ ಪರಿಹಾರ ಕೊಡುತ್ತೇವೆ ಅಂದರು. ನಂತರ ಅದನ್ನು ಏಳೂವರೇ ಲಕ್ಷಕ್ಕೆ ಇಳಿಸಿದರು. ಈಗ ನೋಂದಣಿ ಸಮಸ್ಯೆಯಿಂದ ಕೇವಲ ಎರಡೂವರೆ ಲಕ್ಷ ಚಾಲಕರಿಗೆ ಮಾತ್ರ ಪರಿಹಾರ ನೀಡಿದ್ದಾರೆ.

    ಹೀಗಾಗಿ ಎಲ್ಲ ಶ್ರಮಿಕ ವರ್ಗದವರಿಗೂ ಸರ್ಕಾರ ಘೋಷಿಸಿರುವ ಪರಿಹಾರ ತಲುಪಿಸಬೇಕು. ಅನ್ಯಾಯ ಆಗಿರುವವರಿಗೆ ನ್ಯಾಯ ಒದಗಿಸಬೇಕಿದೆ. ಬೆಂಗಳೂರು ನಗರದಲ್ಲಿ ಒಂದೂವರೇ ಕೋಟಿ ಜನಸಂಖ್ಯೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರದಲ್ಲಿ ಈ ವರ್ಗದವರ ಲೆಕ್ಕ ಬೇರೆ ಇದೆ. ಹೀಗಾಗಿ ಇವರಿಗೆ ನ್ಯಾಯ ಒದಗಿಸಲು ಏನು ಮಾಡಬೇಕು ಎಂದು ನಮ್ಮ ನಾಯಕರ ಸಲಹೆ ಪಡೆಯಲು ಸಭೆ ಕರೆದಿದ್ದೆ. ಪ್ರತಿ ಕ್ಷೇತ್ರದ ನಾಯಕರ ಅಭಿಪ್ರಾಯ ಪಡೆದು, ನಮ್ಮ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಿದ್ದೇವೆ.’ ಎಂದರು.

    ಬಿಎಸ್ ವೈ – ಮೋದಿ ಭೇಟಿ

    ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಯಡಿಯೂರಪ್ಪನವರ ಹರ್ಷ ಚಿತ್ತ ಮುಖ ರಾಜಕೀಯ ಸಮಸ್ಯೆಗಳು ಬಗೆ ಹರಿದ ಸೂಚನೆಯನ್ನು ತೋರುವಂತಿತ್ತು.

    ಪ್ರಧಾನಿ ಅವರನ್ನು ಭೇಟಿ ಮಾಡಿ ರಾಜ್ಯದ ಯೋಜನೆಗಳ ಬಗ್ಗೆ ಫಲಪ್ರದವಾಗಿ ಮಾತುಕತೆ ನಡೆಸಲಾಯಿತು ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

    ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಮತ್ತು ಬೆಂಗಳೂರು ಫೆರಿಫೆರಲ್ ರಿಂಗ್ ರೋಡ್ ಗೆ 6000 ಕೋಟಿ ರೂಪಾಯಿಗಳ ಹಣಕಾಸು ನೆರವನ್ನು ಮುಖ್ಯಮಂತ್ರಿಗಳು ಕೋರಿದರು ಎಂದು ಉನ್ನತ ಮೂಲಗಳು ತಿಳಿಸಿವೆ. ಇದೇ ಸಂದರ್ಭದಲ್ಲಿ ಮೇಕೆದಾಟು ಯೋಜನೆ ಮತ್ತು ಬೆಂಗಳೂರಲ್ಲಿ ಅಮೆರಿಕ ದೂತವಾಸದ ಕಚೇರಿ ತೆರೆಯುವ ಬಗ್ಗೆಯೂ ಚರ್ಚಿಸಿದ್ದಾರೆ.

    ಪ್ರಧಾನಿ ಭೇಟಿಯ ನಂತರ ಕರ್ನಾಟಕದ ನೂತನ ಸಚಿವರು ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು.

    ಉನ್ನತ ಶಿಕ್ಷಣ: ಬ್ರಿಟಿಷ್‌ ಕೌನ್ಸಿಲ್ ಜತೆ ದುಂಡುಮೇಜಿನ ಸಭೆ

    ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬಹು ಆಯಾಮಗಳ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಬ್ರಿಟಿಷ್ ಕೌನ್ಸಿಲ್ ಸಹಯೋಗದೊಂದಿಗೆ ಎರಡನೇ ದುಂಡುಮೇಜಿನ ನೀತಿ ಸಂವಾದ ನಡೆಯಿತು.

    ಶುಕ್ರವಾರ ನಡೆದ ವರ್ಚುಯಲ್‌ ಸಂವಾದವನ್ನು ಉದ್ಘಾಟಿಸಿ ಮಾತನಾಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ, ಕೋವಿಡ್‌ ಬಿಕ್ಕಿಟ್ಟಿನ ನಂತರ ಶೈಕ್ಷಣಿಕ ಕ್ಷೇತ್ರವು ಬಹುದೊಡ್ಡ ಬದಲಾವಣೆ ಹಂತದಲ್ಲಿದೆ. ಇದಕ್ಕೆ ಪೂರಕವಾಗಿ ರಾಷ್ಡ್ರೀಯ ಶಿಕ್ಷಣ ನೀತಿಯೂ ಜಾರಿ ಆಗುತ್ತಿರುವುದರಿಂದ ಶಿಕ್ಷಣ ಸುಧಾರಣೆಗಳು ವೇಗವಾಗಿ ಕಾರ್ಯರೂಪಕ್ಕೆ ಬರಲಿವೆ ಎಂದರು.

    ಈ ನೀತಿಯೂ ಬಹುಶಿಸ್ತೀಯ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ಕಲಿಕೆ ಮತ್ತು ಬೋಧನೆಯ ಸ್ವರೂಪವೇ ವಿಭಿನ್ನವಾಗಿರುತ್ತದೆ. ವಿದ್ಯಾರ್ಥಿಗಳ ಜ್ಞಾನಾರ್ಜನೆ ವೃದ್ಧಿಸುವುದರ ಜತೆಗೆ, ಅವರ ಕುಶಲತೆಯನ್ನು ಹೆಚ್ಚಿಸಿ ಕೈಗಾರಿಕೆಗಳಿಗೆ ಗುಣಮಟ್ಟದ ಮಾನವ ಸಂಪನ್ಮೂಲ ಸೃಷ್ಟಿಗೆ ಹೆಚ್ಚು ಉಪಯುಕ್ತವಾಗುತ್ತದೆ ಎಂದು ಡಿಸಿಎಂ ಹೇಳಿದರು.

    ದುಂಡುಮೇಜಿನ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಡಾ.ಬಿ.ಆರ್.‌ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕಾಮಿಕ್ಸ್‌ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಭಾನುಮೂರ್ತಿ, ಲಂಡನ್‌ನ ಜೈವಿಕ ತಂತ್ರಜ್ಞಾನ ಎಂಜಿನಿಯರಿಂಗ್‌ ಸಂಸ್ಥೆಯ ಪ್ರೊ.ಪ್ರಶಾಂತ್‌ ಝಾ, ನ್ಯೂ ಕ್ಯಾಸ್ಟಲ್‌ ವಿವಿಯ ಸಂಯೋಜಿತ ಕೇಂದ್ರದ ನಿರ್ದೇಶಕರಾದ ಸಾರಾ ಗ್ರಹಾಂ, ಬ್ರಿಟೀಷ್‌ ಕೌನ್ಸಿಲ್‌ನ ದಕ್ಷಿಣ ಭಾರತೀಯ ನಿರ್ದೇಶಕರಾದ ಜನಕಾ ಪುಷ್ಪನಾಥನ್‌ ಹಾಗೂ ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಷಿ ಮುಂತಾದವರು ಭಾಗಿಯಾಗಿದ್ದರು

    error: Content is protected !!