ರಾಜ್ಯ ಸರಕಾರಿ ನೌಕರರಿಗೆ ಬಾಕಿ ಉಳಿದ ತುಟ್ಟಿ ಭತ್ಯೆಯ ಕಂತುಗಳನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಗಳವಾರ ಆದೇಶ ನೀಡಿದ್ದಾರೆ.
ಹಣಕಾಸು ಇಲಾಖೆಯ ಅಪರ ಕಾರ್ಯದರ್ಶಿಗಳಿಗೆ ಈ ಸಂಬಂಧದ ಕಡತ ಮಂಗಳವಾರ ಸಂಜೆ ರವಾನೆಯಾಗಿದೆ. ಈ ಹಿಂದೆ ಇದಕ್ಕೆ ಒಪ್ಪಿಗೆ ನೀಡದ ಮುಖ್ಯಮಂತ್ರಿಗಳು ದೇಶದ ಹಲ ರಾಜ್ಯಗಳಲ್ಲಿ ಸರ್ಕಾರಿ ನೌಕರರ ವೇತನದಲ್ಲೇ ಕಡಿತ ಮಾಡಲಾಗಿದೆ.ಆದರೆ ನಾವು ಕಡಿತ ಮಾಡಿಲ್ಲ ಎಂದು ಈ ಬಗ್ಗೆ ಸಲ್ಲಿಸಿದ್ದ ಮನವಿಗೆ ಮಾರ್ಮಿಕ ಸಂದೇಶ ನೀಡಿದ್ದರು ಎಂದು ಮೂಲಗಳು ಹೇಳಿವೆ.
ಆದರೆ, ಇಂದು ವಿಧಾನಸೌಧಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು ತುಟ್ಟಿಭತ್ಯೆ ಸಂಬಂಧದ ಕಡತವನ್ನು ತರಿಸಿಕೊಂಡು ಅದಕ್ಕೆ ಸಹಿ ಹಾಕಿದರು. ಸರಕಾರಿ ನೌಕರರಿಗೆ ನೀಡಬೇಕಿರುವ ಬಾಕಿ ತುಟ್ಟಿ ಭತ್ಯೆಯನ್ನು ಮಂಜೂರು ಮಾಡುವಂತೆ ಷರಾ ಬರೆದರು ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರಿ ನೌಕರರಿಗೆ ಶೇ.11 % ತುಟ್ಟಿಭತ್ಯೆ ಬಿಡುಗಡೆ- ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಸಿಎಂಗೆ ಅಭಿನಂದನೆ
ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1, 2021 ರಿಂದ ಶೇ.11% ತುಟ್ಟಿಭತ್ಯೆ ಬಿಡುಗಡೆಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಆದೇಶ ಹೊರಡಿಸಿದ್ದಾರೆ. ಇದರಿಂದ 6.00 ಲಕ್ಷ ರಾಜ್ಯ ಸರ್ಕಾರಿ ನೌಕರರು, 4.50 ಲಕ್ಷ ಪಿಂಚಣಿದಾರರು, 3.00 ಲಕ್ಷ ನಿಗಮ – ಮಂಡಳಿಗಳ ನೌಕರರು ಆರ್ಥಿಕ ಸೌಲಭ್ಯ ಪಡೆಯಲಿದ್ದಾರೆ. ಹಣಕಾಸು ಇಲಾಖೆ ಇನ್ನು 2-3 ದಿನಗಳಲ್ಲಿ ಆದೇಶ ಹೊರಡಿಸಲಿದ್ದು, ರಾಜ್ಯದ ಎಲ್ಲಾ ನೌಕರರಿಗೆ ಜುಲೈ 1, 2021 ರಿಂದ ಮಂಜೂರಾಗುವ ತುಟ್ಟಿಭತ್ಯೆಯು ಮೂಲ ವೇತನದಲ್ಲಿ ಸೇರ್ಪಡೆಗೊಳ್ಳಲಿದೆ. ಈ ಆದೇಶ ನೀಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅಭಿನಂದಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಜನವರಿ 1, 2020 ರಿಂದ ತಡೆಹಿಡಿಯಲಾಗಿದ್ದ ಮೂರು ಕಂತುಗಳ ತುಟ್ಟಿಭತ್ಯೆಯನ್ನು ಮಂಜೂರು ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತ್ತು.
ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಜುಲೈ 1, 2021 ರಿಂದ ಅನ್ವಯವಾಗುವಂತೆ ಶೇ. 11% ತುಟ್ಟಿಭತ್ಯೆ ಮಂಜೂರು ಮಾಡಿದೆ. ಅದೇ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ಸಹ ಶೇ. 11% ತುಟ್ಟಿಭತ್ಯೆ ಮಂಜೂರು ಮಾಡಲು ಸಂಘವು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಜುಲೈ 1, 2021 ರಿಂದ ಅನ್ವಯಗೊಳ್ಳುವಂತೆ ಬಾಕಿ ಇರುವ ಶೇ.11% ರಷ್ಟು ತುಟ್ಟಿಭತ್ಯೆ ಮಂಜೂರು ಮಾಡಲು ಆರ್ಥಿಕ ಇಲಾಖೆಗೆ ಆದೇಶಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸಂಪುಟದ ಎಲ್ಲಾ ಸಚಿವರು, ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘವು ಧನ್ಯವಾದ ಸಲ್ಲಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿ ಹಿಂದಿನ ಶೈಕ್ಷಣಿಕ ಸಾಧನೆಗಳನ್ನು ಆಧರಿಸಿ ಫಲಿತಾಂಶ ಘೋಷಿಸಿ ಎಲ್ಲರನ್ನು ಉತ್ತೀರ್ಣಗೊಳಿಸಿರುವುದರಿಂದ ಎಲ್ಲರಿಗೂ ಪದವಿ ತರಗತಿಗಳಲ್ಲಿ ಸೀಟುಗಳು ದೊರೆಯುವ ಅವಕಾಶ ಕಲ್ಪಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
ಮಂಗಳವಾರ ಪಿಯುಸಿ ಫಲಿತಾಂಶಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿ ಮಾತನಾಡಿದ ಅವರು, ಪದವಿ ಕಾಲೇಜುಗಳಿಗೆ ಸೇರಲಿಚ್ಛಿಸುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಬಾರಿಯ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಪಿಯುಸಿ ಉತ್ತೀರ್ಣರಾಗುವ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಪದವಿ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಲು ಕಾಲೇಜು ಶಿಕ್ಷಣ ಇಲಾಖೆ ಪದವಿ ಕಾಲೇಜುಗಳಲ್ಲಿ ಹೆಚ್ಚಿನ ಸೀಟುಗಳಿಗೆ ಅವಕಾಶ ಕಲ್ಪಿಸಲಿದೆ. ಈ ಕುರಿತು ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ ಅವರೂ ಸಹ ಭರವಸೆ ನೀಡಿದ್ದಾರೆ ಎಂದು ಸಚಿವರು ಹೇಳಿದರು.
ವೈಜ್ಞಾನಿಕ ಆಧಾರದಲ್ಲಿ ಫಲಿತಾಂಶ ಘೋಷಣೆ: ಈಗ ಪಾಸಾಗುತ್ತಿರುವ ಎಲ್ಲ ಮಕ್ಕಳು ಕಳೆದ ವರ್ಷ ಮೊದಲ ಪಿಯುಸಿ ತರಗತಿಗಳನ್ನು ಪರೀಕ್ಷೆಯ ಮೂಲಕ ಉತ್ತೀರ್ಣರಾಗಿದ್ದು, ಆ ಅಂಕಗಳು ಮತ್ತು ಅವರ 10ನೇ ತರಗತಿ ಅಂಕಗಳನ್ನು ಆಧರಿಸಿ ದ್ವಿತೀಯ ಪಿಯು ಫಲಿತಾಂಶಗಳನ್ನು ಘೋಷಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
2019-20ನೇ ಸಾಲಿನಲ್ಲಿ ನಡೆದ ಮೊದಲ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಅವರ ಎಸ್ಸೆಸ್ಸೆಲ್ಸಿ ಅಂಕಗಳ ಆಧಾರದ ಮೇಲೆ ಈ ಬಾರಿಯ ದ್ವಿತೀಯ ಪಿಯುಸಿ ಅಂಕಗಳನ್ನು ನಿರ್ಧರಿಸಲಾಯಿತು. ಆ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಫಲಿತಾಂಶ ಪ್ರಕಟಣೆ ಮಾಡಲಾಗುತ್ತಿದೆ. ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಎಸ್ ಎಸ್ ಎಲ್ ಸಿಯಲ್ಲಿ ಪಡೆದ ಅಂಕಗಳು, ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿದ ಅಂಕಗಳು ಮತ್ತು ಕೃಪಾಂಕಗಳ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಕುರಿತಂತೆ ಅಧಿಕೃತ ಸರ್ಕಾರದ ಆದೇಶ ಪ್ರಕಟಣೆ ಮೂಲಕ ಕ್ರಮ ವಹಿಸಲಾಗಿದೆ ಎಂದು ಸಚಿವರು ಹೇಳಿದರು.
ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಮಾರ್ಗದರ್ಶಿ ಸೂತ್ರಗಳನ್ನು ರಚಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಗೆ ಅನುಗುಣವಾಗಿ ಫಲಿತಾಂಶಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದೂ ಸಚಿವರು ಹೇಳಿದರು.
ಎಸ್ಸೆಸ್ಸೆಲ್ಸಿ ಅಥವಾ ಇತರೆ ಮಂಡಳಿಗಳ 10ನೇ ತರಗತಿಯಲ್ಲಿ ಪಡೆದ ವಿಷಯವಾರು ಅಂಕಗಳಲ್ಲಿ ಶೇ. 45ರಷ್ಟು ಅಂಕಗಳು, ಪ್ರಥಮ ಪಿಯುಸಿಯಲ್ಲಿ ಪಡೆದಿರುವ ಶೇ. 45ರಷ್ಟು ಅಂಕಗಳು, ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಚುಟುವಟಿಕೆಗಳಿಗೆ ಶೇ. 10ರಷ್ಟು ಅಂಕಗಳು ಮತ್ತು ಪ್ರಥಮ ಪಿಯುಸಿ ಪಡೆದ ಅಂಕಗಳಿಗೆ ಶೇ. 5 ಅಂಕಗಳನ್ನು ಸಿದ್ಧಪಡಿಸಿ ಫಲಿತಾಂಶವನ್ನು ನಿರ್ಣಯಿಸಲಾಗಿದೆ ಎಂದು ಸುರೇಶ್ ಕುಮಾರ್ ಫಲಿತಾಂಶ ಘೋಷಣೆಯ ವಿವರಗಳನ್ನು ನೀಡಿದರು.
ಒಂದು ವೇಳೆ ಘೋಷಿತ ಫಲಿತಾಂಶದಿಂದ ಪಡೆದ ಅಂಕಗಳು ತೃಪ್ತಿಕರವೆನಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳೂ ಮುಂದಿನ ದಿನಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ. ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಳ್ಳುವ ಖಾಸಗಿ ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ಒದಗಿಸಲಾಗುತ್ತದೆ ಎಂದು ಅವರು ಹೇಳಿದರು.
ನಾವು ಘೋಷಿಸಿದಂತೆ ನಿಗದಿತ ಅವಧಿಯಲ್ಲೇ ಫಲಿತಾಂಶ ಪ್ರಕಟಿಸಿದ್ದೇವೆ. ಸಿಬಿಎಸ್‍ಇನವರಿಗಿಂತ ಫಲಿತಾಂಶ ಘೋಷಿಸಬೇಕೆಂಬುದು ನಮ್ಮ ಮಕ್ಕಳ ಇಚ್ಛೆಯಾಗಿತ್ತು ಎಂದು ಸಚಿವರು ಹೇಳಿದರು.
ಪುನರಾವರ್ತಿತ ಅಭ್ಯರ್ಥಿಗಳ ತೇರ್ಗಡೆ: ಕೋವಿಡ್-19 ಸೋಂಕು ಪ್ರಸರಣದ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದು, ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದ ಪುನರಾವರ್ತಿತ ಅಭ್ಯರ್ಥಿಗಳನ್ನು ಉತ್ತೀರ್ಣಗೊಳಿಸಲಾಗುತ್ತಿದೆ. ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕನಿಷ್ಠ ಉತ್ತೀರ್ಣ ಅಂಕಗಳನ್ನು ಮತ್ತು ಶೇ. 5ರಷ್ಟು ಕೃಪಾಂಕಗಳನ್ನು ನೀಡಿ ಫಲಿತಾಂಶ ಘೋಷಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ವರ್ಷದ ಪಿಯುಸಿ ಪರೀಕ್ಷಾ ಫಲಿತಾಂಶ ವಿವರ:
ಒಟ್ಟು ವಿದ್ಯಾರ್ಥಿಗಳು 666497, ಬಾಲಕರು – 335138, ಬಾಲಕಿಯರು- 331359. ಹೊಸ ವಿದ್ಯಾರ್ಥಿಗಳು – 590153, ಪುನರಾವರ್ತಿತ ವಿದ್ಯಾರ್ಥಿಗಳು- 76344. ವಾಣಿಜ್ಯ ವಿಭಾಗ- 251686, ವಿಜ್ಞಾನ ವಿಭಾಗ- 219777, ಕಲಾ ವಿಭಾಗ- 195034 ವಿದ್ಯಾರ್ಥಿಗಳಿದ್ದಾರೆ.
5,18,903 ನಗರ ಅಭ್ಯರ್ಥಿಗಳಿದ್ದರೆ, 1,47,594 ಗ್ರಾಮೀಣ ಅಭ್ಯರ್ಥಿಗಳಿದ್ದಾರೆ. ಒಟ್ಟು ಅಭ್ಯಥಿಗಳಲ್ಲಿ 4,50,706 ವಿದ್ಯಾರ್ಥಿಗಳು ಮೊದಲ ಶ್ರೇಣಿ ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದರೆ, 1,47,055 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 68,729 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
1428 ವಿಕಲಚೇತನ ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, ಅದರಲ್ಲಿ 84 ಮಂದಿ ಉನ್ನತ ಶ್ರೇಣಿ, 603 ಪ್ರಥಮ ಶ್ರೇಣಿ, 459 ಮಂದಿ ದ್ವಿತೀಯ ಶ್ರೇಣಿ ಮತ್ತು 310 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ ಕನ್ನಡ ಮಾಧ್ಯಮದ 2,75,599 ಮಕ್ಕಳು ಕನ್ನಡ ಮಾಧ್ಯಮ ಮತ್ತು 3,90,898 ಅಭ್ಯರ್ಥಿಗಳು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿದವರು.
600ಕ್ಕೆ 600 ಅಂಕಗಳ ಫಲಿತಾಂಶ ಪಡೆದ ಮಕ್ಕಳು: ರಾಜ್ಯದ ಎಲ್ಲ 32 ಶೈಕ್ಷಣಿಕ ಜಿಲ್ಲೆಗಳ ಹಲವಾರು ಪದವಿ ಪೂರ್ವ ಕಾಲೇಜುಗಳ ಮಕ್ಕಳು 600ಕ್ಕೆ 600 ಅಂಕಗಳನ್ನು ಪಡೆದಿದ್ದಾರೆ. ಒಟ್ಟು 2239 ಫ್ರೆಶ್ ವಿದ್ಯಾರ್ಥಿಗಳು ಪೂರ್ಣ ಅಂಕ ದಾಖಲಿಸಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ 445, ಬೆಂಗಳೂರು ದಕ್ಷಿಣ-302, ಬೆಂಗಳೂರು ಉತ್ತರ-261, ಉಡುಪಿ-149, ಕೊಡಗು-04, ರಾಯಚೂರು/ಚಿಕ್ಕೋಡಿ-07, ಚಾಮರಾಜನಗರ-03, ಯಾದಗಿರಿ ಜಿಲ್ಲೆ-02 ಮಕ್ಕಳು ಪೂರ್ಣ ಅಂಕಗಳನ್ನು ಗಳಿಸಿದ್ದಾರೆ.
ಆಗಸ್ಟ್ ನಲ್ಲಿ ವಾರ್ಷಿಕ ಪರೀಕ್ಷೆ: ಈ ಬಾರಿಯ ದ್ವಿತೀಯ ಪಿಯು ಫಲಿತಾಂಶವನ್ನು ಒಪ್ಪಿಕೊಳ್ಳಲು ಇಲ್ಲವೇ ತಿರಸ್ಕರಿಸಲು ಈ ಬಾರಿಯ ಪರೀಕ್ಷೆಗೆ ನೊಂದಾಯಿಸಿದ್ದ ಫ್ರೆಷರ್ಸ್ ಮತ್ತು ರಿಪೀಟರ್ಸ್ ಅಭ್ಯರ್ಥಿಗಳಿಗೆ ಅವಕಾಶವಿದ್ದು, ವಾರ್ಷಿಕ ಪರೀಕ್ಷೆಗೆ ಹಾಜರಾಗಲು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದರು.
ಅದರಂತೆ ಈ ಬಾರಿಯ ಪರೀಕ್ಷೆಗೆ ನೊಂದಾಯಿಸಿ ಪರೀಕ್ಷೆಗೆ ಹಾಜರಾಗಿ ಈ ಫಲಿತಾಂಶ ತಿರಸ್ಕರಿಸುವ ಹೊಸ ವಿದ್ಯಾರ್ಥಿಗಳಿಗೆ (ಫ್ರೆಷರ್ಸ್) ಮತ್ತು ಪುನರಾವರ್ತಿತ (ರಿಪೀಟರ್ಸ್) ಅಭ್ಯರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯಲಿದೆ.
ಈ ಎರಡು ವರ್ಗದ ಅಭ್ಯರ್ಥಿಗಳು ಫಲಿತಾಂಶ ತಿರಸ್ಕರಿಸಿ ಪರೀಕ್ಷೆಗೆ ನೊಂದಾಯಿಸಿಕೊಳ್ಳಲು ಜುಲೈ 30ರಂದು ಕೊನೆಯ ದಿನವಾಗಿದೆ.
ಹಾಗೆಯೇ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದ ಖಾಸಗಿ (ಪ್ರೈವೇಟ್) ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಬೇಕಿದೆ. ಈ ಖಾಸಗಿ ಅಭ್ಯರ್ಥಿಗಳು ಈಗಾಗಲೇ ಪರೀಕ್ಷೆಗೆ ನೊಂದಾಯಿಸಿಕೊಂಡಿರುವುದರಿಂದ ಅವರು ಮತ್ತೆ ಪರೀಕ್ಷೆಗೆ ನೊಂದಾಯಿಸಬೇಕಾದ ಅಗತ್ಯವಿಲ್ಲ.
ಈ ಮೂರು ವರ್ಗದ ಅಭ್ಯರ್ಥಿಗಳಿಗೆ ಆಗಸ್ಟ್ ತಿಂಗಳ ಉತ್ತರಾರ್ಧದಲ್ಲಿ ಪರೀಕ್ಷೆ ನಡೆಸಲಾಗುವುದು.ಆಗಸ್ಟ್ ನಲ್ಲಿ ನಡೆಯುವ ಪರೀಕ್ಷೆ ಸಹ ವಾರ್ಷಿಕ ಪರೀಕ್ಷೆಯೇ ಆಗಿರುತ್ತದೆ. ಈ ಬಾರಿಯ ಫಲಿತಾಂಶ ತಿರಸ್ಕರಿಸಿ ಆಗಸ್ಟ್ ನಲ್ಲಿ ಪರೀಕ್ಷೆಗೆ ಹಾಜರಾಗುವ ಫ್ರೆಷರ್ ಅಭ್ಯರ್ಥಿಗಳನ್ನು ಫ್ರೆಷರ್ ಎಂದೇ ಪರಿಗಣಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆಗಸ್ಟ್ 19ರಿಂದ ಸೆಪ್ಟೆಂಬರ್ 3ರವರೆಗೆ ನಡೆಯಲಿವೆ ಎಂದು ಸಚಿವರು ಪರೀಕ್ಷೆಯ ವಿವರಗಳನ್ನು ಒದಗಿಸಿದರು.
ಯಾರೂ ಅಧೀರರಾಗಬಾರದು: ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಬಂದ ನಂತರ ತನಗೆ ಕಡಿಮೆ ಅಂಕಗಳು ಬರಬಹುದೆಂದು ಹೊಸನಗರ ಜಿಲ್ಲೆಯ ರಿಪ್ಪನ್‍ಪೇಟೆಯ ವಿದ್ಯಾರ್ಥಿನಿ ಕೆಂಚನಾಲ ಚೇತನ ಆತ್ಮಹತ್ಯೆಗೆ ಯತ್ನ ಮಾಡಿದ್ದನ್ನು ಪ್ರಸ್ತಾಪಿಸಿದ ಸಚಿವರು, ಯಾರೂ ಅಧೀರರಾಗಬಾರದು. ಜೀವನದಲ್ಲಿ ಇದೇ ಮೊದಲ ಪರೀಕ್ಷೆಯಲ್ಲ, ಅನೇಕ ಕಷ್ಟನಷ್ಟಗಳು, ಪರೀಕ್ಷೆಗಳು ಎದುರಾಗಲಿವೆ. ಎಲ್ಲದನ್ನೂ ಧೈರ್ಯದಿಂದ ಎದುರಿಸಬೇಕು. ಹಾಗಾಗಿ ಯಾವೊಬ್ಬ ಮಕ್ಕಳು ಪರೀಕ್ಷಾ ಫಲಿತಾಂಶದಿಂದ ಎದೆಗುಂದಬಾರದು. ಪೋಷಕರೂ ಸಹ ಮಕ್ಕಳಿಗೆ ಧೈರ್ಯ ಹೇಳಲು ಮುಂದಾಗಬೇಕು ಎಂದು ಎಂದು ಸುರೇಶ್ ಕುಮಾರ್ ಮನವಿ ಮಾಡಿದರು. ಚೇತಾನ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಗುರುವಾರದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿ ಚೆನ್ನಾಗಿ ಬರೆಯಬೇಕೆಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಸಚಿವರು ಅಭಿನಂದಿಸಿದರು.
ಸಚಿವರು ಫಲಿತಾಂಶ ಘೋಷಿಸಲು ಆರಂಭಿಸುತ್ತಿದ್ದಂತೆಯೇ ಪಿಯು ಮಂಡಳಿಯ ಸ್ಯಾಟ್ಸ್ ಪೋರ್ಟ್ ಲ್ಲಿ ನೊಂದಾಯಿಸಿದ್ದ ಎಲ್ಲ ಅಭ್ಯರ್ಥಿಗಳಿಗೂ ಅವರ ನೊಂದಾಯಿತ ದೂರವಾಣಿ ಸಂಖ್ಯೆಗೆ ಫಲಿತಾಂಶಗಳು ರವಾನೆಯಾದವು.
762 ಮಕ್ಕಳು ಈ ಬಾರಿ ಪರೀಕ್ಷೆಗೆ ಹಾಜರಾಗಬಹುದು: ಈ ಬಾರಿಯ ದ್ವಿತೀಯ ಪಿಯುಸಿ ತರಗತಿಗಳಿಗೆ ನೊಂದಾಯಿಸಿದ್ದರೂ ಪಿಯುಸಿ ಪರೀಕ್ಷೆಗೆ ನೊಂದಾಯಿಸದೇ ಇದ್ದ 762 ಮಕ್ಕಳು ಆಗಸ್ಟ್ ನಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆಗೆ ನೊಂದಾಯಿಸಿಕೊಂಡು ಹಾಜರಾಗಬಹುದು ಎಂದು ಸುರೇಶ್ ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಮತ್ತು ಪಿಯು ಇಲಾಖೆ ನಿರ್ದೇಶಕಿ ಆರ್. ಸ್ನೇಹಲ್ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯು ಬಹು ಕಾಳಜಿಯಿಂದ ಇತಿಹಾಸದ ದಾಖಲೆಗಳನ್ನು ಆಧರಿಸಿ ರೂಪಿಸಿದ ತುಳು ಲಿಪಿಯನ್ನು ಸೂಕ್ತವಾಗಿ ಯುನಿಕೋಡ್ ನಕಾಶೆ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲು ಅಕಾಡೆಮಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಈ ಕ್ರಮದಿಂದಾಗಿ ತುಳು ಲಿಪಿಯು ಯುನಿಕೋಡ್ ನಕಾಶೆಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗುವ ಕಾರ್ಯವು ವೇಗ ಪಡೆಯಲಿದೆ ಎಂದು ಹೇಳಿರುವ ಅವರು ಸುಮಾರು ಹತ್ತು ವರ್ಷಗಳಿಂದ ತುಳು ಲಿಪಿಯನ್ನು ರೂಪಿಸುವ ಬಗ್ಗೆ ಹಲವು ಚರ್ಚೆಗಳು ನಡೆದಿದ್ದವು. ಅಂತಿಮವಾಗಿ ತುಳು ಭಾಷಾ ಮತ್ತು ಲಿಪಿ ತಜ್ಞರು ಸರ್ವಾನುಮತಿಯಿಂದ ರೂಪಿಸಿದ ತುಳು ಲಿಪಿ ಪಟ್ಟಿಯನ್ನು ಅಕಾಡೆಮಿಯು ಅಂಗೀಕರಿಸಿ ಯುನಿಕೋಡ್ ನಕಾಶೆಗೆ ಸೇರಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತುಳು ಲಿಪಿ ಪಟ್ಟಿಯನ್ನು ಪರಾಮರ್ಶಿಸಿ ಅನುಮೋದಿಸಲು ಮೈಸೂರಿನಲ್ಲಿರುವ ಕೇಂದ್ರ ಸರ್ಕಾರದ ಭಾರತೀಯ ಭಾಷಾ ಸಂಸ್ಥಾನಕ್ಕೆ ಕರ್ನಾಟಕ ಸರ್ಕಾರದಿಂದ ಕೋರಲಾಗಿತ್ತು. ಭಾಭಾ ಸಂಸ್ಥಾನವು ಇದಕ್ಕಾಗಿ ಭಾಷಾ ತಜ್ಞರ ಸಮಿತಿಯನ್ನು ರಚಿಸಿ, ಚರ್ಚಿಸಿ ಲಿಪಿ ಪಟ್ಟಿಯನ್ನು ಅನುಮೋದಿಸಿ, ಯುನಿಕೋಡ್ ಕನ್ಸಾರ್ಶಿಯಂಗೆ ಸಲ್ಲಿಸಲು ಶಿಫಾರಸು ಮಾಡಿತು. ಅದರಂತೆ ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತುಳು ಅಕಾಡೆಮಿಗೆ ಪತ್ರ ಬರೆಯಲಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಅಲ್ಲದೆ ಯುನಿಕೋಡ್ ನಕಾಶೆಗೆ ಸೇರಿಸಲು ಅಗತ್ಯವಿರುವ ಇನ್ನಿತರೆ ತಾಂತ್ರಿಕ ಅಂಶಗಳ ಬಗ್ಗೆಯೂ ಗಮನ ಕೊಡುವಂತೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.
ತುಳು ಲಿಪಿಯನ್ನು ಯುನಿಕೋಡ್ ನಕಾಶೆಗೆ ತಕ್ಕಂತೆ ರೂಪಿಸುವಲ್ಲಿ ಶ್ರಮವಹಿಸಿದ ಎಲ್ಲ ತಜ್ಞರಿಗೂ ಸಚಿವ ಅರವಿಂದ ಲಿಂಬಾವಳಿ ಅಭಿನಂದನೆ ಸಲ್ಲಿಸಿದ್ದಾರೆ.
ಡಿಜಿಟಲ್ ವೇದಿಕೆಗಳಲ್ಲಿ, ಮುದ್ರಿತ ಸಾಹಿತ್ಯದಲ್ಲಿ, ಪ್ರಚಾರ ಸಾಹಿತ್ಯದಲ್ಲಿ – ಹೀಗೆ ತುಳು ಲಿಪಿಯು ಹೆಚ್ಚು ಹೆಚ್ಚು ಬಳಕೆಗೆ ಬಂದರೆ ಲಿಪಿಯನ್ನು ರೂಪಿಸಿದ್ದಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ ಎಂದಿರುವ ಅವರು ಕರ್ನಾಟಕದ ಇತಿಹಾಸದಲ್ಲಿ ಒಂಬತ್ತು ಶತಮಾನಗಳ ಅತಿದೀರ್ಘವಾದ ಆಡಳಿತವನ್ನು ನಡೆಸಿದ ಖ್ಯಾತಿಯನ್ನು ಹೊಂದಿದ ತುಳು ಸಂಸ್ಕೃತಿಯ ಪ್ರತೀಕವಾದ ತುಳು ಲಿಪಿಯು ಯುನಿಕೋಡ್‌ಗೆ ಸೇರುತ್ತಿರುವುದಕ್ಕೆ ಲಕ್ಷಾಂತರ ತುಳು ಭಾಷಿಗರು ತೋರಿದ ಸಂಭ್ರಮದಲ್ಲಿ ಭಾಗಿಯಾಗಲು ನನಗೂ ಹರ್ಷವಾಗುತ್ತಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಕನ್ನಡ ನಾಡಿನ ಉಳಿದೆಲ್ಲ ಭಾಷೆಗಳಂತೆಯೇ ತುಳು ಭಾಷೆ, ಸಂಸ್ಕೃತಿಯ ಉಳಿವು, ಬೆಳವಣಿಗೆಗಾಗಿ ನಮ್ಮ ಸರ್ಕಾರದ ಪ್ರಯತ್ನವು ನಿರಂತರವಾಗಿ ನಡೆಯುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಫಲಿತಾಂಶ ತಿರಸ್ಕರಿಸುವ ವಿದ್ಯಾರ್ಥಿಗಳಿಗೆ ಹೊಸದಾಗಿ ಪರೀಕ್ಷೆಗೆ ಅವಕಾಶ
ಇತಿಹಾಸಲ್ಲಿ ಇದೇ ಮೊದಲ ಬಾರಿಗೆ ಪರೀಕ್ಷೆ ಇಲ್ಲದೆ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ.
ಫಲಿತಾಂಶವನ್ನು ಪ್ರಕಟಿಸಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು, ಎಸ್‌ಎಸ್‌ಎಲ್‌ಸಿ ಅಂಕಗಳಲ್ಲಿ ಶೇಕಡಾ 45 ಹಾಗೂ ಪ್ರಥಮ ಪಿಯುಸಿ ಪರೀಕ್ಷೆಯ ಶೇಕಡಾ 45 ಹಾಗೂ ಆಂತರಿಕ ಮೌಲ್ಯಮಾಪನದ ಶೇಕಡಾ 10ರಷ್ಟು ಅಂಕಗಳನ್ನು ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ. ಈ ಬಾರಿ ದ್ವಿತೀಯ ಪಿಯುಸಿಯಲ್ಲಿ 6,66,497 ವಿದ್ಯಾರ್ಥಿಗಳಿದ್ದರು. ಗ್ರೇಡ್ ಆಧಾರದಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 4,50,706 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ಡಿಸ್ಟಿಂಕ್ಷನ್ʼನಲ್ಲಿ ಉತ್ತೀರ್ಣರಾಗಿದ್ದಾರೆ. 1,47,056 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 68,729 ವಿದ್ಯಾರ್ಥಿಗಳು ಜಸ್ಟ್ ಪಾಸಾಗಿದ್ದಾರೆ ಎಂದು ಸಚಿವರು ತಿಳಿಸಿದರು.
ವಿದ್ಯಾರ್ಥಿಗಳಿಗೆ ಎಸ್ಎಂಎಸ್ ಮೂಲಕ ಫಲಿತಾಂಶ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದ ಸಚಿವರು,ಲಿತಾಂಶ ತಿರಸ್ಕರಿಸುವ ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆಯಲು ಅವಕಾಶವಿದೆ. ಪರೀಕ್ಷೆ ಬರೆಯಲು ಬಯಸುವ ವಿದ್ಯಾರ್ಥಿಗಳು ಜುಲೈ 30ರೊಳಗೆ ಹೆಸರು ನೋಂದಾಯಿಸಿಕೊಳಳಬೇಕು. ಈ ವಿದ್ಯಾರ್ಥಿಗಳಿಗೆ ಆಗಸ್ಟ್ 19ರಿಂದ ಸೆಪ್ಟೆಂಬರ್ 3ರೊಳಗೆ ಪರೀಕ್ಷೆ ನಡೆಸಲಾಗುವುದು ಎಂದರು.
ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಬಿರುಕು, ಭಿನ್ನಾಭಿಪ್ರಾಯ ಇಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ದೆಹಲಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಒಡಕು ಇದೆ ಎಂಬ ಮಾತುಗಳು ಸತ್ಯಕ್ಕೆ ದೂರ ಎಂದರು.
ನಾವೀಗ ಪ್ರತಿಪಕ್ಷದಲ್ಲಿ ಇದ್ದೇವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ಹೀಗಿರುವಾಗ ಒಡಕಿನ ಮಾತೇಕೆ ಬರುತ್ತದೆ ಎಂದರು.
ರಾಜ್ಯ ಕಾಂಗ್ರೆಸ್ ಪ್ರಸ್ತುತ ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದೆ.
ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ಈ ಸರ್ಕಾರವನ್ನು ಕಿತ್ತೊಗೆಯಲು ಎಲ್ಲರೂ ಸೇರಿ ಹೋರಾಟ ಮಾಡುತ್ತಿದ್ದೇವೆ.
ಮುಂದಿನ ಮುಖ್ಯಮಂತ್ರಿ ವಿಷಯದ ಬಗ್ಗೆ ಚರ್ಚೆ ಅಪ್ರಸ್ತುತ. ಚುನಾವಣೆ ಬಳಿಕ ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ವರಿಷ್ಠರ ತೀರ್ಮಾನವೇ ಅಂತಿಮ. ಅವರ ನಿರ್ಧಾರಕ್ಕೆ ಎಲ್ಲರೂ ಬದ್ಧ.
ಇಂದು ಸಂಜೆ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿಯವರನ್ನು ಭೇಟಿಯಾಗಲಿದ್ದೇನೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
‘ರಾಜ್ಯದ ಜನ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ, ಕಾಂಗ್ರೆಸ್ ಅನ್ನು ಕೂರಿಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಬಿಜೆಪಿಯವರು ಏನೇ ಸರ್ಕಸ್ ಮಾಡಿದರೂ ಪ್ರಯೋಜನವಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಅವರು ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ವೈರಲ್ ಆಗಿರುವ ಆಡಿಯೋ ತಮ್ಮದಲ್ಲ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, “ಯಾರಿಗೂ ಗೊತ್ತಿಲ್ಲದ ಹಳ್ಳಿ ಜನ ಮಾತನಾಡಿದ್ದರೆ ಅದು ಬೇರೆ ವಿಚಾರ ಆಗುತ್ತಿತ್ತು. ಆಡಿಯೋ, ವಿಡಿಯೋ ಯಾರ್ಯಾರದು ಅನ್ನುವುದು ಬಗ್ಗೆ ಮಾಧ್ಯಮಗಳಿಗೆ ಚೆನ್ನಾಗಿ ಗೊತ್ತಿದೆ. ಯಾರ ಧ್ವನಿ ಯಾರ ದೇಹ ಎಂಬುದು ಎಲ್ಲರಿಗೂ ತಿಳಿದಿದೆ. ನನ್ನ ಧ್ವನಿ ಯಾವುದು, ಸಿದ್ದರಾಮಯ್ಯನವರದು, ಕುಮಾರಸ್ವಾಮಿಯವರದು, ದೇವೇಗೌಡರದು, ಯಡಿಯೂರಪ್ಪನವರದು, ಕಟೀಲ್ ಅವರ ಧ್ವನಿ ಏನು, ಹೇಗೆ ಅಂತಾ ಎಲ್ಲರಿಗೂ ಗೊತ್ತಿದೆ. ಅದನ್ನು ನಕಲು ಮಾಡಲು ಸಾಧ್ಯವೇ?” ಎಂದು ಮರುಪ್ರಶ್ನಿಸಿದರು.
“ಇದು ಬಿಜೆಪಿಯ ಆಂತರಿಕ ವಿಚಾರ. ಅವರು ಬೇಕಾದ್ದನ್ನು ಅವರು ಹೇಳಿಕೊಳ್ಳಬಹುದು. ಸತ್ಯ ಎಲ್ಲರಿಗೂ ಗೊತ್ತಿದೆ. ನಾವ್ಯಾಕೆ ಅದರ ಬಗ್ಗೆ ಮಾತನಾಡಬೇಕು? ನಮಗೂ ಅದಕ್ಕೂ ಸಂಬಂಧ ಇಲ್ಲ” ಎಂದೂ ಹೇಳಿದರು.
ನಾವು ಇದರ ಬಗ್ಗೆ ಮಾತನಾಡಿದರೆ, ಇದರ ಬಗ್ಗೆ ನಿಮಗೇನು ಗೊತ್ತು ಎಂದು ಕೇಳುತ್ತಾರೆ. ಯಾವುದೋ ಅಧಿಕಾರಿಯಿಂದ ಇದನ್ನು ನಕಲಿ ಎಂದು ಹೇಳಿಸುತ್ತಾರೆ. ಹಿಂದೆ ಯಡಿಯೂರಪ್ಪ ಅವರ ಆಡಿಯೋದಿಂದ ಮೊನ್ನೆ ನಡೆದ ವಿಡಿಯೋ ಪ್ರಕರಣದವರೆಗೂ ಆಗಿದ್ದು ಇದೇ. ಆಮೇಲೆ ಏನಾಯ್ತು? ನನ್ನದಲ್ಲ ಎಂದವರೆಲ್ಲ ಆಮೇಲೆ ಏನು ಹೇಳಿದರು? ಹೀಗಾಗಿ ಈ ವಿಚಾರವಾಗಿ ನಾನು ಮಾತನಾಡಿ ನನ್ನ ಬಾಯಿ ಹೊಲಸು ಮಾಡಿಕೊಳ್ಳಲು ಇಷ್ಟವಿಲ್ಲ ಎಂದು ಶಿವಕುಮಾರ್ ಸ್ಪಷ್ಟವಾಗಿ ಹೇಳಿದರು.
ಬಿಜೆಪಿಯವರು ಏನೇ ಮಾಡಿದರೂ ರಾಜ್ಯದಲ್ಲಿ ಅವರ ಸರ್ಕಾರ ತೆಗೆಯಲು ಜನ ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದು, ನಾವು ಜನರಿಗೆ ಸಾಧ್ಯವಾದಷ್ಟು ನೆರವಾಗಲು ಸರಿಯಾದ ಕಾರ್ಯಕ್ರಮ ರೂಪಿಸುವತ್ತ ಗಮನ ಹರಿಸಿದ್ದೇವೆ’ ಎಂದು ತಿಳಿಸಿದರು
ಸಂಸತ್ತಿನ 2021ರ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಸತ್ ಆವರಣದಲ್ಲಿ ಮಾತನಾಡಿದರು. ಅವರು ಹಿಂದಿಯಲ್ಲಿ ಮಾಡಿದ ಭಾಷಣದ ಭಾವಾನುವಾದ.
ಮಿತ್ರರೇ ಸ್ವಾಗತ ಮತ್ತು ನೀವೆಲ್ಲರೂ ಕನಿಷ್ಠ ಒಂದು ಡೋಸ್ ಲಸಿಕೆಯನ್ನಾದರೂ ಸಹ ಪಡೆದಿದ್ದೀರೆಂದು ಭಾವಿಸಿದ್ದೇನೆ. ಆದರೂ ಸಹ, ನಾನು ನಿಮ್ಮೆಲ್ಲರನ್ನೂ ಮತ್ತು ಸದನದ ನನ್ನೆಲ್ಲ ಸಹೋದ್ಯೋಗಿಗಳಿಗೆ ಕೋವಿಡ್ ಶಿಷ್ಟಾಚಾರ ಪಾಲನೆಗೆ ಸಹಕಾರ ನೀಡಬೇಕೆಂದು ಕೋರುತ್ತೇನೆ. ಲಸಿಕೆ ‘ಬಾಹು’ (ತೋಳುಗಳಿಗೆ) ನೀಡಲಾಗಿದೆ ಮತ್ತು ಅದನ್ನು ಪಡೆದವರು “ಬಾಹುಬಲಿ’ಗಳಾಗಿದ್ದಾರೆ. ಕೊರೊನಾ ವಿರುದ್ಧ ಹೋರಾಟಕ್ಕೆ ಬಾಹುಬಲಿಗಳಾಗಲು ಇರುವ ಏಕೈಕ ಮಾರ್ಗವೆಂದರೆ ಲಸಿಕೆಯನ್ನು ಪಡೆಯುವುದು.
ಕೊರೊನಾ ವಿರುದ್ಧದ ಹೋರಾಟದಲ್ಲಿ ಸುಮಾರು 40 ಕೋಟಿ ಜನರು “ಬಾಹುಬಲಿ”ಗಳಾಗಿದ್ದಾರೆ. ಲಸಿಕೆ ನೀಡುವುದನ್ನು ಕ್ಷಿಪ್ರವಾಗಿ ಕೈಗೊಳ್ಳಲಾಗುತ್ತಿದೆ. ಸಾಂಕ್ರಾಮಿಕದಿಂದ ಇಡೀ ಜಗತ್ತು, ಇಡೀ ಮನುಕುಲ ತತ್ತರಿಸಿದೆ. ಆದ್ದರಿಂದ ನಾವು ಸಾಂಕ್ರಾಮಿಕದ ಬಗ್ಗೆ ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕೆಂದು ಬಯಸಿದ್ದೇವೆ. ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಸಾಕಷ್ಟು ಹೊಸತನಗಳನ್ನು ಕಂಡುಕೊಳ್ಳಲು ಗೌರವಾನ್ವಿತ ಸದಸ್ಯರಿಂದ ಎಲ್ಲ ಪ್ರಾಯೋಗಿಕ ಸಲಹೆಗಳನ್ನು ಪಡೆದುಕೊಳ್ಳಲು ನಾವು ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇವೆ. ಕೆಲವು ನೂನ್ಯತೆಗಳಿದ್ದರೆ, ಅವುಗಳನ್ನು ಸರಿಪಡಿಸಿಕೊಳ್ಳಬಹುದು ಮತ್ತು ನಾವೆಲ್ಲರೂ ಒಟ್ಟಾರೆ ಹೋರಾಟವನ್ನು ಮುಂದುವರಿಸಬಹುದು.
ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆ ವಿಸ್ತೃತವಾದ ಪ್ರಾತ್ಯಕ್ಷಿಕೆ ನೀಡಲು ಬಯಸುತ್ತೇನೆ, ಅದಕ್ಕಾಗಿ ನಾಳೆ ಸಂಜೆ ಸದನದ ಎಲ್ಲ ನಾಯಕರಿಗೆ ಸಮಯ ನೀಡುವಂತೆ ಮನವಿ ಮಾಡಿದ್ದೇನೆ. ಸದನದ ಒಳಗೆ ಮತ್ತು ಹೊರಗೆ ನಾನು ಸದನಗಳ ನಾಯಕರೊಂದಿಗೆ ಚರ್ಚೆ ಮಾಡಲು ಬಯಸುತ್ತೇನೆ ಏಕೆಂದರೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಾವು ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇನೆ. ನಾನಾ ವೇದಿಕೆಗಳಲ್ಲಿ ಚರ್ಚೆ ನಡೆಯುತ್ತಿವೆ. ಸದನದಲ್ಲಿ ಚರ್ಚೆ ನಡೆಯುವ ಜೊತೆಗೆ ಸದನಗಳ ನಾಯಕರ ಜೊತೆ ಚರ್ಚೆ ನಡೆದರೆ ಅದು ಹೆಚ್ಚು ಸೂಕ್ತವಾಗಿರುತ್ತದೆ.
ಈ ಅಧಿವೇಶನದಲ್ಲಿ ಪರಿಣಾಮಕಾರಿ ಚರ್ಚೆಗಳ ಮೂಲಕ ಫಲಿತಾಂಶ ಆಧರಿತವಾಗಿರಲಿ, ಆ ಮೂಲಕ ಜನರು ಕೇಳಿದ ಪ್ರಶ್ನೆಗಳಿಗೆ ಸರ್ಕಾರ ಉತ್ತರವನ್ನು ನೀಡುತ್ತದೆ. ಎಲ್ಲ ಗೌರವಾನ್ವಿತ ಸಂಸದರು ಮತ್ತು ಎಲ್ಲ ರಾಜಕೀಯ ಪಕ್ಷಗಳು ಸದನಗಳಲ್ಲಿ ಕಠಿಣ ಮತ್ತು ತೀಕ್ಷ್ಣ ಪ್ರಶ್ನೆಗಳನ್ನು ಕೇಳಬೇಕೆಂದು ನಾನು ಮನವಿ ಮಾಡುತ್ತೇನೆ, ಆದರೆ ಶಾಂತಿಯುತ ವಾತಾವರಣದಲ್ಲಿ ಉತ್ತರ ನೀಡಲು ಸರ್ಕಾರಕ್ಕೆ ಅವಕಾಶ ನೀಡಬೇಕು. ಸತ್ಯ ಜನರನ್ನು ತಲುಪಿದಾಗ ಪ್ರಜಾಪ್ರಭುತ್ವವು ಬಲಗೊಳ್ಳುತ್ತದೆ. ಇದು ಜನರ ನಂಬಿಕೆಯನ್ನು ಬಲವರ್ಧನೆಗೊಳಿಸುವ ಜೊತೆಗೆ ಅಭಿವೃದ್ಧಿಯ ವೇಗವನ್ನು ಸುಧಾರಿಸುತ್ತದೆ.
ಮಿತ್ರರೇ, ಈ ಅಧಿವೇಶನದಲ್ಲಿ ಕಳೆದ ಬಾರಿ ಇದ್ದಂತೆ ಆಂತರಿಕ ವ್ಯವಸ್ಥೆಯಿಲ್ಲ, ಏಕೆಂದರೆ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡಿರುವುದರಿಂದ ಎಲ್ಲರೂ ಒಟ್ಟಾಗಿ ಕುಳಿತು ಕೆಲಸ ಮಾಡೋಣ. ನಾನು ಮತ್ತೊಮ್ಮೆ ಎಲ್ಲರಿಗೂ ತುಂಬಾ ಧನ್ಯವಾದಗಳನ್ನು ಹೇಳಬಯಸುತ್ತೇನೆ ಮತ್ತು ನಿಮ್ಮ ಬಗ್ಗೆ ನೀವು ಎಚ್ಚರಿಕೆಯಿಂದಿರಿ. ದೇಶದ ಆಶಯ ಹಾಗೂ ಆಕಾಂಕ್ಷೆಗಳನ್ನು ಈಡೇರಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ.
ಮೊದಲ ದಿನ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುರಕ್ಷಿತ ವಾತಾವರಣದಲ್ಲಿ ಅತ್ಯಂತ ಉತ್ಸಾಹ ಮತ್ತು ಲವಲವಿಕೆಯಿಂದ ಪರೀಕ್ಷೆ ಬರೆದಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಸೋಮವಾರ ಪರೀಕ್ಷೆಯ ನಂತರ ನಗರದ ಹಲವಾರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮೊದಲ ದಿನದ ಪರೀಕ್ಷೆಗೆ ಸಂಬಂಧಿಸಿದ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅವರು, ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಪ್ರಶಾಂತ ವಾತಾವರಣದಲ್ಲಿ ನಡೆದವು.
ಇಂದು ಮೂರು ಕೋರ್ ವಿಷಯಗಳ ಪರೀಕ್ಷೆಗಳು ನಡೆದವು. ಮಕ್ಕಳು ಹೊಸ ಮಾದರಿ ಪರೀಕ್ಷಾ ಪದ್ಧತಿಯನ್ನು ಸುಲಭವಾಗಿ ಅರ್ಥೈಸಿಕೊಂಡು ಒಎಂಆರ್ ಶೀಟ್‍ಗಳಲ್ಲಿ ಗುರುತು ಮಾಡಿದರು. ಕೊಠಡಿ ಮೇಲ್ವಿಚಾಕರ ಮಾರ್ಗದರ್ಶನದಂತೆ ಒಎಂಆರ್ ಶೀಟ್‍ಗೆ ಮೊದಲು ರಿಜಿಸ್ಟರ್ ನಂಬರ್ ದಾಖಲಿಸಿ ಕೆಳಗಡೆ ಸಹಿ ಮಾಡಿ ನಂತರ ಸರಿಯುತ್ತರಗಳನ್ನು ಗುರುತಿಸಲಾರಂಭಿಸಿದರು.
ಇಂದು ಬೆಂಗಳೂರಿನ ರಾಜಾಜಿನಗರದ ಫ್ಲಾರೆನ್ಸ್, ಕಡಾಂಬಿ, ಜಯನಗರದ ವಿಜಯಾ ಪ್ರೌಢಶಾಲೆ, ಬಿಇಎಸ್ ಪ್ರೌಢಶಾಲೆ, ಕಾರ್ಮಂಟ್ ಕಾನ್ವೆಂಟ್ ಶಾಲೆ, ಉತ್ತರಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆ, ಸಾರಕ್ಕಿ ಪಬ್ಲಿಕ್ ಶಾಲೆ ಕೋಟೆ ಪ್ರದೇಶದ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಎಲ್ಲ ಕಡೆಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಮಕ್ಕಳು ಅತ್ಯಂತ ಶಿಸ್ತಿನಿಂದ ಪರೀಕ್ಷೆಗೆ ಹಾಜರಾಗಿದ್ದರು ಎಂದು ಅವರು ತಿಳಿಸಿದರು.
ಕೆಲವೆಡೆ ಶಾಸಕರು ಮತ್ತು ಸಚಿವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಖುದ್ದಾಗಿ ಭೇಟಿ ನೀಡಿದ್ದಾರೆ ಮಕ್ಕಳನ್ನು ಹುರಿದುಂಬಿಸಿದ್ದಾರೆ. ಹಲವಾರು ಕಡೆಗಳಲ್ಲಿ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮಕ್ಕಳಿಗೆ ಉಪಹಾರ ವ್ಯವಸ್ಥೆ ಮಾಡಿದ್ದರು ಎಂದು ಹೇಳಿದ ಸಚಿವರು ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಮಕ್ಕಳು ಸರತಿ ಸಾಲಿನಲ್ಲಿ ಸಾಮಾಜಿಕ ಅಂತರದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬಂದರು. ನೇರವಾಗಿ ಪರೀಕ್ಷಾ ಕೇಂದ್ರದ ಆರೋಗ್ಯ ತಪಾಸಣಾ ಘಟಕಕ್ಕೆ ಭೇಟಿ ನೀಡಿ ಅಲ್ಲಿ ಜ್ವರ ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಮುಂದೆ ಹಾಕಲಾಗಿದ್ದ ಫಲಕದಲ್ಲಿ ತಮ್ಮ ಕೊಠಡಿ ಸಂಖ್ಯೆಯನ್ನು ನೋಡಿಕೊಂಡು ಪರೀಕ್ಷಾ ಕೊಠಡಿಗಳಿಗೆ ತೆರಳುವ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರದಿಂದ ಹೋಗುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ ಎಂದು ಸಚಿವರು ಹೇಳಿದರು.
ಕಳೆದ ಬಾರಿಯ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದ ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಹಾಜರಾಗಿದ್ದಾರೆ. ಮಕ್ಕಳ ಶೇ. ಹಾಜರಾತಿಯೂ ಸಹ ಈ ಬಾರಿ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಗಣಿತ ವಿಷಯಕ್ಕೆ 8,52,191 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,49,199 ಅಭ್ಯರ್ಥಿಗಳು ಹಾಜರಾಗಿ 2992 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.64 ಹಾಜರಾತಿ ಇದೆ. ಕಳೆದ ವರ್ಷ ಇದು 98.30 ಇತ್ತು.
ವಿಜ್ಞಾನ ವಿಷಯಕ್ಕೆ 8,43,976 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,40,841 ಅಭ್ಯರ್ಥಿಗಳು ಹಾಜರಾಗಿ 3127 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.62 ಹಾಜರಾತಿ ಇದೆ. ಕಳೆದ ವರ್ಷ ಇದು 98.36 ಇತ್ತು.
ಸಮಾಜ ವಿಜ್ಞಾನ ವಿಷಯಕ್ಕೆ 8,24,689 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,21,823 ಅಭ್ಯಥಿಗಳು ಹಾಜರಾಗಿ 2867 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.65 ಹಾಜರಾತಿ ಇದೆ. ಕಳೆದ ವರ್ಷ ಇದು 98.43 ಇತ್ತು.
ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಹಾಜರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಆರೋಗ್ಯ ಇಲಾಖಾ ಸಿಬ್ಬಂದಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಎಲ್ಲ ಅಭ್ಯರ್ಥಿಗಳು ಮಾಸ್ಕ್‍ಗಳನ್ನು ಧರಿಸಿದ್ದರು. ಮಾಸ್ಕ್ ಧರಿಸದೇ ಬಂದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್ ನೀಡಲಾಯಿತು ಎಂದು ಅವರು ವಿವರಿಸಿದರು.
ಒಟ್ಟಾರೆಯಾಗಿ ಪರೀಕ್ಷೆ ಯಾವುದೇ ವಿಘ್ನಗಳಿಲ್ಲದೇ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಕಾರಣೀಭೂತರಾದ ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿ ವೃಂದಕ್ಕೆ ಸುರೇಶ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.
ಪರೀಕ್ಷಾ ಸಮಯದಲ್ಲಿ ಕಂಡು ಬಂದ ವಿಶೇಷತೆಗಳನ್ನು ಸಚಿವರು ಈ ಸಂರ್ಭದಲ್ಲಿ ವಿವರಿಸಿದರು. ⚫ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರಾದ ಕು. ಶಿಲ್ಪಾ ಮತ್ತು ಕಕು. ಸಂಜನಾ ಅವರಿಗೆ ಪರೀಕ್ಷೆಗೆ ಬಂದು ಹೋಗಲು ದೋಣಿಯ ವ್ಯವಸ್ಥೆ ಮಾಡಲಾಗಿತ್ತು. ತಮ್ಮೂರು ಕುರು ದ್ವೀಪ ಪ್ರದೇಶದ ಮನೆಗಳಿಂದ ಈ ಮಕ್ಕಳು ಬೋಟ್ ಮೂಲಕ ಬಂದು ಪರೀಕ್ಷೆ ಬರೆದು ಬೋಟ್‍ನಲ್ಲಿಯೇ ಹಿಂದಿರುಗಿದರು.
⚫ ದಕ್ಷಿಣ ಕನ್ನಡದ ಮಂಗಳೂರು ತಾಲೂಕಿನ ತೊಕ್ಕಟ್ಟು ಗ್ರಾಮದ ಖಾಸಗಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದ ಶಾಲೆಯ ವಿಜ್ಞಾನ ಪ್ರಯೋಗಾಲಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಸ್ವಲ್ಪ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಆ ಪ್ರಯೋಗಾಲಯದ ಅಕ್ಕ ಪಕ್ಕದ ಮೂರು ಕೊಠಡಿಯ 36 ಅಭ್ಯರ್ಥಿಗಳನ್ನು ಅದೇ ಪರಿಸರದಲ್ಲಿರುವ ಅದೇ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ 3 ಕೊಠಡಿಗಳಿಗೆ ಸ್ಥಳಾಂತರಿಸಲಾಯಿತು. ಈ ಸ್ಥಳಾಂತರಕ್ಕೆ ತೆಗೆದುಕೊಂಡ ಸಮಯವನ್ನು ಹೆಚ್ಚುವರಿಯಾಗಿ ಈ 3 ಕೊಠಡಿಯ ಅಭ್ಯರ್ಥಿಗಳಿಗೆ ನೀಡಲಾಯಿತು.
ಬೆಂಕಿ ಪ್ರಕರಣದಿಂದ ಯಾವುದೇ ತೊಂದರೆಯಾಗಲೀ ಹಾನಿಯಾಗಲಿ ಸಂಭವಿಸಿಲ್ಲ. ಸದರಿ ಪರೀಕ್ಷಾ ಕೇಂದ್ರಕ್ಕೆ ಜಿಪಂ ಸಿಇಒ ಅಗ್ನಿಶಾಮಕದಳದ ಅಧಿಕಾರಿಗಳು, ಪೊಲೀಸ್ ಆಯುಕ್ತರು, ಡಿಡಿಪಿಐ ಪರಿಶೀಲಿಸಿದರು.
⚫ ದಕ್ಷಿಣ ಕನ್ನಡ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಸೇರಿದಂತೆ ಹಲವಾರು ಗಡಿ ಭಾಗದ ಜಿಲ್ಲೆಗಳ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕೇರಳ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಂದ ಒಟ್ಟು 770 ಮಕ್ಕಳು ಬಂದು ಪರೀಕ್ಷೆ ಬರೆದಿದ್ದಾರೆ. ಒಬ್ಬ ನೊಂದಾಯಿತ ಅಭ್ಯರ್ಥಿ ಗೈರು ಹಾಜರಾಗಿದ್ದಾನೆ. ಅವರಿಗೆ ಗಡಿ ಪ್ರದೇಶದಿಂದ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.
⚫ ಕಲಬುರ್ಗಿ ಜಿಲ್ಲೆಯ ಚಿಮ್ಮನಚೋಡ ಗ್ರಾಮದಲ್ಲಿ ರಾತ್ರಿಯಿಡೀ ಸುರಿದ ತೀವ್ರ ಮಳೆಯಿಂದ ಶಾಲೆಗೆ ಹಾದು ಹೋಗುವ ರಸ್ತೆಯಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿ ರಸ್ತೆ ಬಂದ್ ಅಗಿತ್ತು. ಅದನ್ನು ನಿಗದಿತ ಅವಧಿಯಲ್ಲಿ ಸರಿಪಡಿಸಲಾದ ಬಳಿಕ ಎಲ್ಲ ಮಕ್ಕಳು ರಸ್ತೆಯಲ್ಲಿ ಸಾಗಿ ಪರೀಕ್ಷೆ ಬರೆದರು.
⚫ ಕೋಲಾರದ ಕುರುಬರ ಪೇಟೆಯ ನಿವಾಸಿ ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 55 ವರ್ಷ ವಯಸ್ಸಿನ ಪರೀಕ್ಷೆಗೆ ಹಾಜರಾಗಿದ್ದುದು ವಿಶೇಷವಾಗಿತ್ತು. ಖಾಸಗಿ ಅಭ್ಯರ್ಥಿಯಾದ ಅವರು ಕಳೆದ ವರ್ಷ ಪರೀಕ್ಷೆಗೆ ಹಾಜರಾಗಿ ಅನುತ್ತೀರ್ಣರಾಗಿದ್ದರಿಂದ ಈ ಬಾರಿ ಪುನರಾವರ್ತಿತ ಅಭ್ಯರ್ಥಿಯಾಗಿ ಕೋಲಾರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದರು.
⚫ ರಾಜ್ಯದ ಬಹುತೇಕ ಕಡೆಗಳಲ್ಲಿ ಸಂಘ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ವ್ಯವಸ್ಥೆ ಮಾಡಿದ್ದರು.
⚫ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಪರೀಕ್ಷೆ ಬರೆದ ಮಕ್ಕಳ ಉತ್ತರ ಪತ್ರಿಕೆಗಳನ್ನು ಪೊಲೀಸ್ ಕಣ್ಗಾವಲಿನಲ್ಲಿ ನಿಗದಿತ ಪರೀಕ್ಷಾ ಕೇಂದ್ರಕ್ಕೆ ತಂದು ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡಲಾಗಿದೆ.
⚫ ಹಲವಾರು ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಳಿರು ತೋರಣ ಕಟ್ಟಲಾಗಿತ್ತು. ನಂಜನಗೂಡು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಪರೀಕ್ಷಾ ಕೇಂದ್ರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಹಲವಾರು ಕಡೆಗಳಲ್ಲಿ ರಂಗೋಲಿ ಹಾಕಲಾಗಿತ್ತು.
⚫ ಹಲವಾರು ಕಡೆಗಳಲ್ಲಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ಸೌಲಭ್ಯವಿಲ್ಲದೇ ಯಾವೊಬ್ಬ ಅಭ್ಯರ್ಥಿಯೂ ಪರೀಕ್ಷೆಗೆ ಗೈರು ಹಾಜರಾಗಿಲ್ಲ.
⚫ ಪರೀಕ್ಷಾ ಪ್ರಕ್ರಿಯೆಯಲ್ಲಿ ನಿಯೋಜಿತರಾಗುವ 1,19,469 ಮಂದಿ ಎಲ್ಲ ಸ್ತರದ ಸಿಬ್ಬಂದಿ ಲಸಿಕೆ ಪಡೆದಿದ್ದರು.
⚫ ಹಲವಾರು ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಳಿರು ತೋರಣ ಕಟ್ಟಲಾಗಿತ್ತು. ನಂಜನಗೂಡು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಪರೀಕ್ಷಾ ಕೇಂದ್ರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಹಲವಾರು ಕಡೆಗಳಲ್ಲಿ ರಂಗೋಲಿ ಹಾಕಲಾಗಿತ್ತು.
⚫ ಹಲವಾರು ಕಡೆಗಳಲ್ಲಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ಸೌಲಭ್ಯವಿಲ್ಲದೇ ಯಾವೊಬ್ಬ ಅಭ್ಯರ್ಥಿಯೂ ಪರೀಕ್ಷೆಗೆ ಗೈರು ಹಾಜರಾಗಿಲ್ಲ.
⚫ ಯಾವುದೇ ಅಭ್ಯರ್ಥಿ ಪರೀಕ್ಷಾ ಅವ್ಯವಹಾರದಲ್ಲಿ ತೊಡಗಿಲ್ಲ.
⚫ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ ಬರೆದ ಅಭ್ಯರ್ಥಿಗಳು- 111
⚫ ಸನಿಹದ ಪರೀಕ್ಷಾ ಕೇಂದ್ರಗಳನ್ನು ಆರಿಸಿಕೊಂಡ ವಲಸೆ ವಿದ್ಯಾರ್ಥಿಗಳು-10693
⚫ ವಸತಿ ನಿಲಯಗಳಲ್ಲಿದ್ದು ಪರೀಕ್ಷೆ ಬರೆದವರು -2870
⚫ ಮುಖ್ಯೋಪಾಧ್ಯಾಯರ ಲಾಗಿನ್‍ನಿಂದ ಪ್ರವೇಶ ಪತ್ರಗಳನ್ನು ವಿತರಿಸಲಾಗಿದೆ. ಶುಲ್ಕ ಪಾವತಿಸದ ಅಭ್ಯರ್ಥಿಗಳಿಗೂ ಬಿಇಒ ಮತ್ತು ಡಿಡಿಪಿಐ ಹಂತದಲ್ಲಿ ಪ್ರವೇಶ ಪತ್ರ ವಿತರಿಸಲಾಗಿದೆ.
⚫ ಹಾವೇರಿ ಜಿಲ್ಲೆಯ ಚಿಕ್ಕೇರೂರು ಶಾಲೆಯ 30 ವಿದ್ಯಾರ್ಥಿಗಳು ಪರೀಕ್ಷಾ ಅರ್ಜಿ ಭರ್ತಿ ಮಾಡಿ ನಿಗದಿತ ಶುಲ್ಕ ಪಾವತಿಸಿದ್ದರೂ ಶಾಲೆಯ ಶಿಕ್ಷಕರೊಬ್ಬರು ಶುಲ್ಕವನ್ನು ಮಂಡಳಿಗೆ ಪಾವತಿಸದೇ ಇರುವುದರಿಂದ 30 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಾಗಿಲ್ಲ. ಆ 30 ವಿದ್ಯಾರ್ಥಿಗಳು, ಬಾಗಲಕೋಟೆ ಜಿಲ್ಲೆಯ 3 ಮತ್ತು ಕೊರಟಗೆರೆ ವಿದ್ಯಾರ್ಥಿನಿ ಗ್ರೀಷ್ಮಾ ಎನ್. ನಾಯಕ್ ಅವರಿಗೆ ಮುಂದೆ ಆಗಸ್ಟ್‍ನಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು.
⚫ ಮಕ್ಕಳು ಸರತಿ ಸಾಲಿನಲ್ಲಿ ಸಾಮಾಜಿಕ ಅಂತರದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬಂದರು. ನೇರವಾಗಿ ಪರೀಕ್ಷಾ ಕೇಂದ್ರದ ಆರೋಗ್ಯ ತಪಾಸಣಾ ಘಟಕಕ್ಕೆ ಭೇಟಿ ನೀಡಿ ಅಲ್ಲಿ ಜ್ವರ ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಮುಂದೆ ಹಾಕಲಾಗಿದ್ದ ಫಲಕದಲ್ಲಿ ತಮ್ಮ ಕೊಠಡಿ ಸಂಖ್ಯೆಯನ್ನು ನೋಡಿಕೊಂಡು ಪರೀಕ್ಷಾ ಕೊಠಡಿಗಳಿಗೆ ತೆರಳುವ ವ್ಯವಸ್ಥೆ ಮಾಡಲಾಗಿತ್ತು.
⚫ ಪರೀಕ್ಷಾ ಕೇಂದ್ರದಿಂದ ಹೋಗುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.
⚫ ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಹಾಜರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
⚫ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರಾದ ಕು. ಶಿಲ್ಪಾ ಮತ್ತು ಕಕು. ಸಂಜನಾ ಅವರಿಗೆ ಪರೀಕ್ಷೆಗೆ ಬಂದು ಹೋಗಲು ದೋಣಿಯ ವ್ಯವಸ್ಥೆ ಮಾಡಲಾಗಿತ್ತು. ತಮ್ಮೂರು ಕುರು ದ್ವೀಪ ಪ್ರದೇಶದ ಮನೆಗಳಿಂದ ಈ ಮಕ್ಕಳು ಬೋಟ್ ಮೂಲಕ ಬಂದು ಪರೀಕ್ಷೆ ಬರೆದು ಬೋಟ್‍ನಲ್ಲಿಯೇ ಹಿಂದಿರುಗಿದರು.
⚫ ದಕ್ಷಿಣ ಕನ್ನಡದ ಮಂಗಳೂರು ತಾಲೂಕಿನ ತೊಕ್ಕಟ್ಟು ಗ್ರಾಮದ ಖಾಸಗಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದ ಶಾಲೆಯ ವಿಜ್ಞಾನ ಪ್ರಯೋಗಾಲಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಸ್ವಲ್ಪ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಆ ಪ್ರಯೋಗಾಲದಯ ಅಕ್ಕ ಪಕ್ಕದ ಮೂರು ಕೊಠಡಿಯ 36 ಅಭ್ಯರ್ಥಿಗಳನ್ನು ಅದೇ ಪರಿಸರದಲ್ಲಿರುವ ಅದೇ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ 3 ಕೊಠಡಿಗಳಿಗೆ ಸ್ಥಳಾಂತರಿಸಲಾಯಿತು. ಈ ಸ್ಥಳಾಂತರಕ್ಕೆ ತೆಗೆದುಕೊಂಡ ಸಮಯವನ್ನು ಹೆಚ್ಚುವರಿಯಾಗಿ ಈ 3 ಕೊಠಡಿಯ ಅಭ್ಯರ್ಥಿಗಳಿಗೆ ನೀಡಲಾಯಿತು.
⚫ ಬೆಂಕಿ ಪ್ರಕರಣದಿಂದ ಯಾವುದೇ ತೊಂದರೆಯಾಗಲೀ ಹಾನಿಯಾಗಲಿ ಸಂಭವಿಸಿಲ್ಲ. ಸದರಿ ಪರೀಕ್ಷಾ ಕೇಂದ್ರಕ್ಕೆ ಜಿಪಂ ಸಿಇಒ ಅಗ್ನಿಶಾಮಕದಳದ ಅಧಿಕಾರಿಗಳು, ಪೊಲೀಸ್ ಆಯುಕ್ತರು, ಡಿಡಿಪಿಐ ಪರಿಶೀಲಿಸಿದರು.
⚫ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಮಹಾರಾಷಚವ್ರದ ಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕೇರಳದ 441 ಮಕ್ಕಳು ಬಂದು ಪರೀಕ್ಷೆ ಬರೆದಿದ್ದಾರೆ. ಅವರಿಗೆ ಗಡಿ ಪ್ರದೇಶದಿಂದ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.
⚫ ನಾಲ್ಕು ಪರೀಕ್ಷಾ ಕೇಂದ್ರಗಳಿಗೆ ಮಹಾರಾಷ್ಟ್ರ ಭಾಗದ 152 ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆದರು. ಅವರೆಲ್ಲರಿಗೂ ಗಡಿ ಭಾಗದಿಂದ ವಾಹನ ವ್ಯವಸ್ಥೆ ಮಾಡಲಾಗಿತ್ತು.
⚫ ಒಟ್ಟಾರೆಯಾಗಿ ಪರೀಕ್ಷೆ ಯಾವುದೇ ವಿಘ್ನಗಳಿಲ್ಲದೇ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಕಾರಣೀಭೂತರಾದ ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿ ವೃಂದಕ್ಕೆ ಸಚಿವರು ಕೃತಜ್ಞತೆ ಸಲ್ಲಿಸಿದರು
ಷೇರುಪೇಟೆಯಲ್ಲಿ ಷೇರಿನ ದರಗಳಲ್ಲಿ ರಭಸದ ಏರುಪೇರುಗಳ ಹಿಂದೆ ಅಡಕವಾಗಿರುವ ಪ್ರಮುಖ ಅಂಶ ಎಂದರೆ ಕಾರ್ಪೊರೇಟ್ ಫಲಗಳ ಪ್ರಮಾಣ. ವಹಿವಾಟಾದ ಷೇರಿನ ಪ್ರಮಾಣವು ಸಂಪೂರ್ಣವಾಗಿ ವಿಲೇವಾರಿಯಾಗುತ್ತದೆಂಬ ಭ್ರಮೆ ಬೇಡ. ಹೆಚ್ಚಿನ ಕಂಪನಿಗಳಲ್ಲಿ ಡೇ ಟ್ರೇಡಿಂಗ್ ಪ್ರಮಾಣದ ಭಾಗವೇ ಹೆಚ್ಚಿರುತ್ತದೆ. ಒಂದೊಂದು ಕಂಪನಿಯು ಒಂದೊಂದು ರೀತಿ ಪ್ರದರ್ಶಿಸುತ್ತವೆ. ಕೆಲವು ಕಂಪನಿಗಳ ಬದಲಾವಣೆಗಳು ಇಲ್ಲಿವೆ.
ಷೇರುಪೇಟೆಯಲ್ಲಿನ ಉತ್ಸಾಹವು ಸಂಭ್ರಮೋಲ್ಲಾಸಗಳಿಂದ ತಾಂಡವವಾಡುತ್ತಿದೆ. ಸೂಚ್ಯಂಕಗಳು, ಪೇಟೆಯ ಬಂಡವಾಳೀಕರಣ ಮೌಲ್ಯವು ಸರ್ವಕಾಲೀನ ಗರಿಷ್ಠ ಹಂತದಲ್ಲಿವೆ. ಆದರೂ ಹೂಡಿಕೆದಾರರ ಆಸಕ್ತಿ ಹೆಚ್ಚುತ್ತಿದೆ ಎಂದು ಬಿಂಬಿತವಾಗುತ್ತಿದೆ. ವಾಸ್ತವವಾಗಿ ಹಿಂದಿನ ವಾರದಲ್ಲಿ ಕಂಡ ಟೆಕ್ನಾಲಜಿ ಕಂಪನಿಗಳ ತೇಜಿಯು ಕಲ್ಪನಾತೀತ ಮಟ್ಟದಲ್ಲಿದ್ದು, ಇಸವಿ 2000 ದಲ್ಲಿ ಈ ವಲಯ ಕಂಡ ರಭಸದ ಏರಿಕೆಯ ಪ್ರತಿ ರೂಪವೇನೋ ಎಂಬಂತೆ ಭಾಸವಾಗುತ್ತಿತ್ತು. ಗುರುವಾರದಂದು ಎಲ್ ಅಂಡ್ ಟಿ ಇನ್ಫೋಟೆಕ್ ಷೇರಿನ ಬೆಲೆ ರೂ.4,250 ರಿಂದ ರೂ.4,600 ರವರೆಗೂ ಜಿಗಿತ ಕಂಡಿದೆ. ಆದರೆ ಶುಕ್ರವಾರದಂದು ರೂ.4,253 ರವರೆಗೂ ಹಿಂದಿರುಗಿ ರೂ.4,288 ರಲ್ಲಿ ಕೊನೆಗೊಂಡಿದೆ. ಆದರೆ ವಿಲೇವಾರಿಯಾದ ಷೇರುಗಳ ಪ್ರಮಾಣ ಮಾತ್ರ ಗುರುವಾರ ಶೇ.26.43, ಶುಕ್ರವಾರ ಶೇ.18.26 ಮಾತ್ರ.
ಸೈಯೆಂಟ್ ಕಂಪನಿಯ ಷೇರಿನ ಬೆಲೆ ರೂ.882 ರ ಸಮೀಪದಿಂದ ರೂ.995 ರವರೆಗೂ ಏರಿಕೆ ಕಂಡು ಶುಕ್ರವಾರ ಫಲಿತಾಂಶದ ಕಾರಣ ನೀರಸಮಯವಾಗಿ ಆರಂಭವಾಗಿ ರೂ.910 ರ ಸಮೀಪಕ್ಕೆ ಕುಸಿದು ನಂತರ ಭಾರಿ ಚಟುವಟಿಕೆಯಿಂದ ರೂ.1,091 ರವರೆಗೂ ಏರಿಕೆ ಕಂಡು ರೂ.1,061 ರಲ್ಲಿ ಕೊನೆಗೊಂಡಿದೆ. ಈ ಪ್ರಮಾಣದ ಏರಿಳಿತಗಳು ಪ್ರದರ್ಶನವಾದರೂ ಗುರುವಾರದಂದು ವಿಲೇವಾರಿಯಾದ ಷೇರುಗಳ ಪ್ರಮಾಣ ಶೇ.31 ರಷ್ಠಿದ್ದರೆ, ಶುಕ್ರವಾರ ಶೇ.46 ರಷ್ಟಿತ್ತು.
ಎಚ್ ಸಿ ಎಲ್ ಟೆಕ್ನಾಲಜೀಸ್ ಕಂಪನಿಯ ಷೇರಿನ ಬೆಲೆ ಗುರುವಾರದಂದು ರೂ.991 ರ ಸಮೀಪದಿಂದ ರೂ.1,052 ರವರೆಗೂ ಜಿಗಿತ ಕಂಡಿತು. ಶುಕ್ರವಾರ ರೂ.1,040 ರ ಸಮೀಪ ಆರಂಭವಾಗಿ ರೂ.998 ರವರೆಗೂ ಇಳಿಕೆ ಕಂಡು ರೂ.1,004 ರ ಸಮೀಪ ಕೊನೆಗೊಂಡಿದೆ. ಅಚ್ಚರಿಯ ಅಂಶವೆಂದರೆ ಈ ಕಂಪನಿಯ ಷೇರುಗಳ ವಿಲೇವಾರಿ ಪ್ರಮಾಣವು ಗುರುವಾರದಂದು ಶೇ.53.76 ರಷ್ಟಿದ್ದರೆ ಶುಕ್ರವಾರ ಶೇ 45.71 ರಷ್ಠು ಷೇರುಗಳು ವಿಲೇವಾರಿಗೊಂಡಿವೆ. ಆದರೆ ಸೋಮವಾರದಂದು ವಿಲೇವಾರಿಯಾದ ಪ್ರಮಾಣವು ಶೇ.87.55, ಮಂಗಳವಾರ ಶೇ.79.31 ರಷ್ಠಿದೆ. ಅಂದರೆ ಸೋಮವಾರ ಖರೀದಿಸಿದ ಭಾರಿ ಸಂಖ್ಯೆಯ ಷೇರುಗಳನ್ನು ಗುರುವಾರ ಮತ್ತು ಶುಕ್ರವಾರ ಮಾರಾಟಮಾಡಿರಲೂಬಹುದಲ್ಲವೇ?
ಎಂಫೆಸಿಸ್ ಷೇರು ಪ್ರದರ್ಶಿಸಿದ ಏರುಪೇರು ಈ ಒಂದು ವಾರದಲ್ಲಿ ರೂ.2,193 ರ ಸಮೀಪದಿಂದ ರೂ.2,422 ರವರೆಗಿದ್ದಿತಾದರೂ. ವಿಲೇವಾರಿಯಾದ ಷೇರಿನ ಗಾತ್ರ ಮಾತ್ರ ಶೇ.12 ರಿಂದ ಶೇ 28.05 ಮಾತ್ರ ಅಂದರೆ ಷೇರುಪೇಟೆಯಲ್ಲಿ ನಡೆಯುತ್ತಿರುವ ವ್ಯವಹಾರವು ಹೆಚ್ಚಾಗಿ ಸ್ಪೆಕ್ಯುಲೇಷನ್ ಆಗಿದೆ ಎನ್ನಬಹುದು.
ರೆಡಿಂಗ್ ಟನ್ (ಇಂಡಿಯಾ ) ಲಿ ಕಂಪನಿ ಪ್ರತಿ ಷೇರಿಗೆ ರೂ.11.60 ರಂತೆ ಡಿವಿಡೆಂಡ್ ಪ್ರಕಟಿಸಿ, 16 ರಿಂದ ಎಕ್ಸ್ ಡಿವಿಡೆಂಡ್ ಆಗಿದೆ. ಅಲ್ಲದೆ 1:1 ರ ಅನುಪಾತದ ಬೋನಸ್ ಷೇರು ಸಹ ಪ್ರಕಟಿಸಿದೆ. ಬೋನಸ್ ಷೇರಿಗೆ ಆಗಸ್ಟ್ 18 ರಿಂದ ಎಕ್ಸ್ ಬೋನಸ್ ಆರಂಭವಾಗಲಿದೆ. ಬೋನಸ್ ಷೇರು ಪ್ರಕಟಿಸಿದ ದಿನ ಈ ಷೇರಿನ ಬೆಲೆ ರೂ.301 ರ ಸಮೀಪವಿದ್ದು ವಿಲೇವಾರಿಯಾದ ಷೇರಿನ ಪ್ರಮಾಣ ಶೇ.32 ರ ಸಮೀಪವಿತ್ತು. ಆದರೆ ನಂತರದ ದಿನದಲ್ಲಿ ಶೇ.51 ರ ಸಮೀಪಕ್ಕೆ ಜಿಗಿಯಿತು. ಸೋಮವಾರ 12 ರಂದು ಷೇರಿನ ಬೆಲೆ ರೂ.345 ರ ಗರಿಷ್ಠ ತಲುಪಿದ್ದಲ್ಲದೆ ವಿಲೇವಾರಿ ಷೇರಿನ ಪ್ರಮಾಣ ಶೇ.89.94 ಕ್ಕೆ ಜಿಗಿತ ಕಂಡಿತು. 14 ರಂದು ಶೇ.70 ರಷ್ಟರ ವಿಲೇವಾರಿ ಪ್ರಮಾಣವಾಗಿ, ಗುರುವಾರ ಡಿವಿಡೆಂಡ್ ಗೆ ಕೊನೆಯದಿನವಾದ ಕಾರಣ ಮಾರಾಟದ ಒತ್ತಡಕ್ಕೊಳಗಾಗಿ ಷೇರಿನ ಬೆಲೆ ರೂ.343 ರ ಸಮೀಪದಿಂದ ರೂ.333.95 ಕ್ಕೆ ಕುಸಿಯಿತು. ವಿಲೇವಾರಿಯಾದ ಪ್ರಮಾಣವು ಶೇ.55 ರ ಸಮೀಪಕ್ಕೆ ಕುಸಿಯಿತು.
ಡೆಲಿವರಿ ಟ್ರೇಡ್ ಮೇಲೆ ಕಾರ್ಪೊರೇಟ್ ಫಲಗಳ ಪ್ರಭಾವ
ಷೇರಿನ ದರಗಳಲ್ಲಿ ಏರಿಳಿತಗಳ ಹಿಂದೆ ಕಂಪನಿಗಳ ಕಾರ್ಪೊರೇಟ್ ಫಲಗಳಾದ ಡಿವಿಡೆಂಡ್, ಬೋನಸ್ ಗಳು ನೇರವಾಗಿ ಪ್ರಭಾವಿಯಾಗುತ್ತವೆ. ಈ ಪ್ರಭಾವವು ವಹಿವಾಟಿನ ಗಾತ್ರದ ಮೇಲೂ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ವಹಿವಾಟಾದ ಎಲ್ಲಾ ಷೇರುಗಳು ವಿಲೇವಾರಿ (delivery)ಯಾಗುತ್ತದೆ ಎಂಬ ಭ್ರಮೆ ಹೆಚ್ಚಿನವರಲ್ಲಿರುತ್ತದೆ. ವಹಿವಾಟಾದ ಹೆಚ್ಚಿನ ಭಾಗವು ಡೇ ಟ್ರೇಡಿಂಗ್ ಕಾರಣ ಅಂದೇ ಚುಕ್ತಾ ಆಗುವುದರಿಂದ ವಿಲೇವಾರಿ ಪ್ರಮಾಣವು ಕಡಿಮೆಯಾಗಿರುತ್ತದೆ. ಕಾರ್ಪೊರೇಟ್ ಫಲಗಳನ್ನು ಘೋಷಿಸಿದಾಗ, ಅದು ಆಕರ್ಷಕವಾಗಿದ್ದಲ್ಲಿ ವಿಲೇವಾರಿ ಪ್ರಮಾಣ ಹೆಚ್ಚಾಗಿರುತ್ತದೆ.
ತೆರಿಗೆ ತಾರಾತಮ್ಯದ ಪ್ರಭಾವ ಡಿವಿಡೆಂಡ್ ಗೆ ನಿಗದಿತ ದಿನ ಸಮೀಪವಿದ್ದಾಗ ಷೇರಿನ ಬೆಲೆಗಳು ಇಳಿಕೆ ಕಾಣಲು ಪ್ರಮುಖ ಕಾರಣವೆಂದರೆ ಷೇರುಗಳ ದರ ಏರಿಕೆಯಾಗಿರುವುದರಿಂದ, ಕಡಿಮೆ ದರದಲ್ಲಿ ಖರೀದಿಸಿದವರು ಮಾರಾಟಕ್ಕೆ ಮುಂದಾಗುತ್ತಾರೆ. ಕಾರಣ ಡಿವಿಡೆಂಡ್ ನ್ನು ಕಂಪನಿಯಿಂದ ಪಡೆದರೆ ಅದು ಪೂರ್ಣಪ್ರಮಾಣದ ಆದಾಯ ತೆರಿಗೆ ಸ್ಲಾಬ್ ಗೆ ಸೇರುತ್ತದೆ. ಆದರೆ ಮುಂಚೆಯೇ ಮಾರಾಟ ಮಾಡಿದಲ್ಲಿ ಅದು ಅಲ್ಪಕಾಲೀನ ಲಾಭ (short term capital gain) ಎಂದು ಶೇ.15 ರಷ್ಟರ ತೆರಿಗೆಯನ್ನು ಲಾಭದ ಮೇಲೆ ಕಟ್ಟಿದರೆ ಸಾಕು. ಈ ತಾರಾತಮ್ಯವು ಷೇರುಪೇಟೆಯಲ್ಲಿ ಕಂ-ಡಿವಿಡೆಂಡ್ ನ ಕೊನೆಯ ದಿನದ ಸಮೀಪ ಒತ್ತಡಕ್ಕೊಳಗಾಗುವಂತೆ ಮಾಡುತ್ತದೆ.
2022-23ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಉನ್ನತ ಶಿಕ್ಷಣ ವಿಭಾಗದಲ್ಲಿ ಎಂಜಿನಿಯರಿಂಗ್ ಸೇರಿ ಎಲ್ಲ ವೃತ್ತಿಪರ ಕೋರ್ಸುಗಳನ್ನು ಕನ್ನಡದಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎಂಜಿನಿಯರಿಂಗ್ ಕೋರ್ಸುಗಳ ಪಠ್ಯವನ್ನು ಕನ್ನಡಕ್ಕೆ ಭಾಷಾಂತರಿಸುವ ಕೆಲಸ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ನಂತರ ಮಾತೃಭಾಷೆಗೆ, ಅಂದರೆ ನಮ್ಮ ಕನ್ನಡಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬರುತ್ತದೆ. ಅದರ ಬಗ್ಗೆ ಯಾವ ಗೊಂದಲ, ಅನುಮಾನವೂ ಬೇಡ ಎಂದು ಇದೇ ಸಂದರ್ಭದಲ್ಲಿ ಅವರು ಒತ್ತಿ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಎಲ್ಲಾ ಭಾಷೆಗಳ ಅಧ್ಯಾಪಕರ ಸಂಘದವರ ವತಿಯಿಂದ ಆಯೋಜಿಸಲಾಗಿದ್ದ ʼಹೊಸ ಶಿಕ್ಷಣ ನೀತಿ; ಭಾರತೀಯ ಭಾಷೆಗಳ ಅಧ್ಯಯನʼ ವಿಷಯದ ಕುರಿತ ವೆಬಿನಾರ್ ನಲ್ಲಿ ಭಾಗವಹಿಸಿ ಡಿಸಿಎಂ ಮಾತನಾಡಿದರು.
ವೃತ್ತಿಪರ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕು ಎಂಬ ಅಂಶವೂ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ. ಹೊಸ ನೀತಿಯ ಪ್ರಮುಖ ಆಶಯವೂ ಇದಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕನ್ನಡದಲ್ಲಿಯೇ ವೃತ್ತಿಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅಗತ್ಯ ಪ್ರೋತ್ಸಾಹ ನೀಡಲಿದೆ. ತಾಂತ್ರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡವನ್ನು ಹೆಚ್ಚೆಚ್ಚು ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.
ಈ ಕಲಿಕೆಯ ಪರಿಕಲ್ಪನೆ ಅದೆಷ್ಟು ಚೆನ್ನಾಗಿದೆ ಎಂದರೆ, ಹೊಸ ತಂತ್ರಜ್ಞಾನವನ್ನು ತಮ್ಮ ಭಾಷೆಯ ಆಧಾರದ ಮೇಲೆಯೇ ರೂಪಿಸಬಹುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಕನ್ನಡವನ್ನು ಬಳಸಬಹುದು. ತಂತ್ರಜ್ಞಾನ ಮತ್ತು ಆವಿಷ್ಕಾರ ಬೆಳೆದಂತೆಲ್ಲ ಅದಕ್ಕೆ ಸಮಾನಾಂತರವಾಗಿ ಕನ್ನಡವೂ ಬೆಳೆಯಬೇಕು. ಮಾತೃಭಾಷೆಯ ಅಸ್ತಿತ್ವ ಎಲ್ಲ ಕಡೆಯೂ ಇರಬೇಕು ಎಂಬುದು ಸರಕಾರದ ಉದ್ದೇಶವಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಶಿಕ್ಷಣ ನೀತಿಯ ಪ್ರಕಾರ ಮಕ್ಕಳು ಎರಡು ದೇಶಿಯ ಭಾಷೆಗಳನ್ನು ಹಾಗೂ ಒಂದು ಅಂತಾರಾಷ್ಟ್ರೀಯ ಭಾಷೆಯನ್ನು ಕಡ್ಡಾಯವಾಗಿ ಕಲಿಯಲೇಬೇಕು. ಅದರಲ್ಲಿ ಮಾತೃಭಾಷೆಗೆ ಮೊದಲ ಪ್ರಾಶಸ್ತ್ಯ ಇರುತ್ತದೆ. ಮೊದಲು ನಮ್ಮ ಭಾಷೆ, ನಂತರ ಅನ್ಯಭಾಷೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಅಲ್ಲದೆ, ಯಾವುದೇ ಕೋರ್ಸುಗಳನ್ನು ಯಾರೋ ರೂಪಿಸಿ ನಮ್ಮ ಮೇಲೆ ಹೇರುತ್ತಾರೆಂಬ ಅನುಮಾನ ಬೇಡ. ಎಲ್ಲವನ್ನೂ ರೂಪಿಸುವುದು ಆಯಾ ವಿಶ್ವವಿದ್ಯಾಲಯಗಳು ಮತ್ತು ಆಯಾ ವಿಷಯಗಳಲ್ಲಿ ತಜ್ಞರಾಗಿರುವ ನಮ್ಮವರೇ ಪ್ರಾಧ್ಯಾಪಕರು ಎಂದು ಡಿಸಿಎಂ ಹೇಳಿದರು.
ಮುಂದಿನ ದಿನಗಳಲ್ಲಿ ಪ್ರತಿಯೊಂದು ಶಿಕ್ಷಣ ಸಂಸ್ಥೆಗೂ ಸ್ವಾಯತ್ತತೆ ಕೊಟ್ಟು ಸಬಲೀಕರಣ ಮಾಡಲಾಗುವುದು. ಆಡಳಿತಾತ್ಮಕ, ಶೈಕ್ಷಣಿಕ, ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವ ಎಲ್ಲ ಅಧಿಕಾರಗಳನ್ನು ಕೂಡ ಶಿಕ್ಷಣ ಸಂಸ್ಥೆಗಳಿಗೇ ಕೊಡಲಾಗುವುದು. ಈ ಮೂಲಕ ಶಿಕ್ಷಣ ಸಾಂಸ್ಥಿಕ ನೆಲೆಗಟ್ಟಿನಲ್ಲಿ ಸ್ಥಿರವಾಗಿ ಬೆಳವಣಿಗೆ ಹೊಂದಲಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.
ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡರು, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಸದಸ್ಯರಾಗಿದ್ದ ಪ್ರೊ.ಟಿ.ವಿ.ಕಟ್ಟಿಮನಿ ಮುಂತಾದವರು ಈ ವೆಬಿನಾರ್ ನಲ್ಲಿ ಭಾಗಿಯಾಗಿದ್ದರು.