28.4 C
Karnataka
Sunday, May 24, 2026
    Home Blog Page 76

    ಸುರಕ್ಷಿತ ವಾತಾವರಣ ಮಕ್ಕಳನ್ನು ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತದೆ


    ಸಾಂಕ್ರಾಮಿಕದಿಂದ ಮಕ್ಕಳ ಆರೋಗ್ಯದ ಮೇಲೆ ಆಗುವ ಪ್ರಭಾವ ಮತ್ತು ಅದನ್ನು ಹೇಗೆ ಪರಿಹರಿಸಬಹುದು ಎನ್ನುವ ಕುರಿತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ [ಏಮ್ಸ್] ಯ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಕೇಂದ್ರೀಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಸದಸ್ಯ ಡಾ. ರಾಜೇಶ್ ಸಾಗರ್ ವಿವರಿಸಿದ್ದಾರೆ.


    ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಸಾಂಕ್ರಾಮಿಕ ಹೇಗೆ ಪರಿಣಾಮ ಬೀರುತ್ತದೆ?

    ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸೂಕ್ಷ್ಮವಾಗಿರುತ್ತಾರೆ. ಯಾವುದೇ ರೀತಿಯ ಒತ್ತಡ, ಚಿಂತೆ, ಆಘಾತ ಅವರ ಮೇಲೆ ಆಳವಾಗಿ ಪರಿಣಾಮ ಉಂಟು ಮಾಡುತ್ತದೆ ಮತ್ತು ದೀರ್ಘಕಾಲೀನ ಪರಿಣಾಮಗಳಿಗೆ ಕಾರಣವಾಗಬಹುದು. ಸಾಂಕ್ರಾಮಿಕ ಸಾಮಾನ್ಯ ಚಟುವಟಿಕೆಗಳನ್ನು ಬದಲಾಯಿಸಿದೆ. ಅವರ ಶಾಲೆಗಳು ಮುಚ್ಚಿವೆ, ಶಿಕ್ಷಣ ಆನ್ ಲೈನ್ ಗೆ ಬದಲಾವಣೆಯಾಗಿದೆ ಮತ್ತು ಗೆಳೆಯರ ಜತೆ ಸಂವಾದ ಸೀಮಿತ ಮತ್ತು ನಿಯಂತ್ರಣಗೊಂಡಿದೆ. ಇದಲ್ಲದೇ ಒಬ್ಬರು ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವವರು ಸಹ ಕೆಲವರಿದ್ದಾರೆ.

    ಈ ಎಲ್ಲಾ ವಿಷಯಗಳು ಮಕ್ಕಳ ಮಾನಸಿಕ ಯೋಗ ಕ್ಷೇಮದ ಮೇಲೆ ಪರಿಣಾಮ ಬೀರಿದ್ದು, ಅವರ ಸಾಮಾನ್ಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮುಖ್ಯವಾಗಿ ಭಾವನಾತ್ಮಕ ವಲಯದ ಉತ್ತಮ ವಾತಾವರಣದಿಂದ ಅವರನ್ನು ವಂಚಿತರನ್ನಾಗಿ ಮಾಡಿದೆ.

    ತೊಂದರೆಗೀಡಾದ ಮಕ್ಕಳೊಂದಿಗೆ ವ್ಯವಹರಿಸುವಾಗ ನೀವು ಎದುರಿಸುತ್ತಿರುವ ದೊಡ್ಡ ಸವಾಲು ಯಾವುದು ?

    ವಯಸ್ಕರಿಗಿಂತ ಮಕ್ಕಳು ಒತ್ತಡದ ಸಂದರ್ಭದಲ್ಲಿ ವಿಭಿನ್ನವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಕೆಲವು ಮಕ್ಕಳಲ್ಲಿ ಅಂಜಿಕೆ ಇರುತ್ತದೆ, ಕೆಲವರು ಹಿಂಜರಿದರೆ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ. ಹೀಗಾಗಿ ಮಕ್ಕಳ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಸುತ್ತಮುತ್ತಲಿನ ಪರಿಸರ ಮಕ್ಕಳ ಭಾವನೆ ಅಥವಾ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಮಗೆ ತಿಳಿದಿದೆ. ಕೆಲವೊಮ್ಮೆ ಮಕ್ಕಳು ಆಂತರಿಕ ಪರಿಸ್ಥಿತಿಗೆ ಸಿಲುಕುತ್ತಾರೆ. ಗಾಬರಿ, ಅನಾರೋಗ್ಯ ಅಥವಾ ಸಮೀಪದ ಮತ್ತು ಆಪ್ತರ ಸಾವು ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು. ಅಂತಹ ಸಂದರ್ಭದಲ್ಲಿ ತಮ್ಮ ಭಯ, ಆತಂಕ ಅಥವಾ ಚಿಂತೆಯನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ವಯಸ್ಕರು ಮಕ್ಕಳ ವರ್ತನೆಯ ಬಗ್ಗೆ ನಿಗಾವಹಿಸುವುದು ಮಹತ್ವದ್ದಾಗಿದೆ. ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಮಕ್ಕಳು ತಮ್ಮ ಅಭಿಪ್ರಾಯಗಳನ್ನು ಮತ್ತು ಅವರಿಗೆ ಸಂಬಂಧಿಸಿದ ವಿವಿಧ ವಿಷಯಗಳ ದೃಷ್ಟಿಕೋನವನ್ನು ವ್ಯಕ್ತಪಡಿಸಲು ಉತ್ತೇಜನ ನೀಡುವುದು ಅತ್ಯಂತ ಮಹತ್ವದ್ದಾಗಿದೆ. ತಮ್ಮ ನಿಲುವುಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಮಕ್ಕಳಿಗೆ ಸೂಕ್ತ ವಾತಾವರಣ ನಿರ್ಮಿಸಬೇಕು. ಅವರು ಮಾತನಾಡಲು ಸಾಧ್ಯವಾಗದಿದ್ದರೆ ಚಿತ್ರಕಲೆ, ವರ್ಣ ಚಿತ್ರಗಳು ಇತರೆ ಮಾಧ್ಯಮಗಳ ಮೂಲಕವೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಉತ್ತೇಜಿಸಬೇಕು. ಸಾಂಕ್ರಾಮಿಕದಿಂದ ಮಕ್ಕಳ ಮೇಲೆ ಆಗಿರುವ ಪರಿಣಾಮಗಳನ್ನು ನೇರ ಪ್ರಶ್ನೆಗಳ ಮೂಲಕ ಬಗೆಹರಿಸಲಾಗದು. ಮಕ್ಕಳೊಂದಿಗೆ ಸಂವಾದಿಸುವಾಗ ಆರೈಕೆ ಮಾಡುವರು ಸೌಮ್ಯವಾಗಿರಬೇಕು, ಏಕೆಂದರೆ ಆಂತರಿಕವಾಗಿ ಏನಾಗುತ್ತಿದೆ ಎಂಬುದರ ಅರಿವು ಅವರಿಗೆ ಇರುವುದಿಲ್ಲ. ಹೀಗಾಗಿ ಮಕ್ಕಳನ್ನು ಅರ್ಥಮಾಡಿಕೊಳ್ಳುವಾಗ ಸೃಜನಶೀಲ ಮಾರ್ಗಗಳ ಬಳಕೆಯನ್ನು ಪ್ರೋತ್ಸಾಹಿಸುವುದು ಮುಖ್ಯವಾಗಿದೆ. ಕಷ್ಟಕರವಾದ ಸೋಂಕು, ಸಾವು ಇನ್ನಿತರ ವಿಷಯಗಳ ಬಗ್ಗೆ ನೇರವಾಗಿ ಸಂವಹನ ನಡೆಸಬೇಕು.

    ಮೊದಲ ಐದರಿಂದ ಆರು ವರ್ಷಗಳ ಮಕ್ಕಳ ಜೀವನ ಅಡಿಪಾಯದ ವರ್ಷಗಳಾಗಿದ್ದು, ಸಾಮಾನ್ಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹಲವಾರು ಉತ್ತೇಜನದ ಅಗತ್ಯವಿರುತ್ತದೆ. ಕಿರಿಯ ಮಕ್ಕಳ ಮೇಲೆ ಸಾಂಕ್ರಾಮಿಕ ಹೇಗೆ ಪರಿಣಾಮ ಬೀರುತ್ತಿದೆ ಮತ್ತು ಪರಿಣಾಮವನ್ನು ಹೇಗೆ ಕಡಿಮೆ ಮಾಡಬಹುದು ಎಂದು ನೀವು ಭಾವಿಸುತ್ತೀರಿ?

    ಮಗುವಿನ ವಿಷಯದಲ್ಲಿ ಮೊದಲ ಐದು ವರ್ಷ ಅತ್ಯಂತ ನಿರ್ಣಾಯಕ ಮತ್ತು ಮಕ್ಕಳಿಗೆ ನಾವು ಬಹುಹಂತದ ಉತ್ತೇಜನ ಒದಗಿಸಬೇಕು. ಸಾಕಾರಾತ್ಮಕ ಪರಿಸರದ ಕೊರತೆ, ಉತ್ತೇಜನ ಅಥವಾ ಸಾಮಾಜಿಕ ಸಂವಾದದ ಕೊರತೆಯಿಂದ ಪ್ರತಿಕೂಲ ಪರಿಣಾಮ ಬೀರಬಹುದು.

    ಆದರೂ ನಾವು ಮಕ್ಕಳು ಸೋಂಕಿನ ಅಪಾಯಕ್ಕೆ ಸಿಲುಕುವುದಕ್ಕೆ ಅವಕಾಶ ನೀಡಬಾರದು. ನಾವು ಮಕ್ಕಳಿಗೆ ವಿನೋದದಿಂದ ತುಂಬಿದ ಪರಿಸರ ವ್ಯವಸ್ಥೆಯನ್ನು ಕಲ್ಪಿಸಿ ಹಲವಾರು ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಬೇಕು. ಆನ್ ಲೈನ್ ಶಿಕ್ಷಣ ಸಹ ಚಟುವಟಿಕೆ ಆಧರಿತ ಕಲಿಕೆಯತ್ತ ಆಸಕ್ತಿ ತೋರುವಂತಿರಬೇಕು. ಮಕ್ಕಳ ಮೇಲೆ ಸಾಂಕ್ರಾಮಿಕದ ಪರಿಣಾಮ ಕಡಿಮೆ ಮಾಡಲು ನಾವು ಆಹ್ಲಾದಿಸಬಹುದಾದ ಮತ್ತು ಸುರಕ್ಷಿತ ವಿಧಾನಗಳನ್ನು ರೂಪಿಸಬೇಕಾಗಿದೆ ಎಂದು ನಾನು ಬಲವಾಗಿ ಪ್ರತಿಪಾದಿಸುತ್ತೇನೆ.

    ಹಿರಿಯ ಮಕ್ಕಳು ಸಹ ಶೈಕ್ಷಣಿಕ ವಿಚಾರದಲ್ಲಿ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಇದಕ್ಕಾಗಿ ನಿಮ್ಮ ಸಲಹೆ ಏನು?

    ಅವರು ಅನಿಶ್ಚಿತತೆಯನ್ನು ಎದುರಿಸುವುದು ಸಾಮಾನ್ಯವಾಗಿದೆ. ಸಾಂಕ್ರಾಮಿಕ ಅವರ ಶಿಕ್ಷಣ ಮತ್ತು ವೃತ್ತಿ ಯೋಜನೆಗಳಿಗೆ ಅಡ್ಡಿಪಡಿಸಿದೆ. ಇಲ್ಲಿ ಪೋಷಕರು, ಪಾಲಕರು ಅಥವಾ ಶಿಕ್ಷಕರ ಪಾತ್ರ ಅತ್ಯಂತ ನಿರ್ಣಾಯಕವಾಗುತ್ತದೆ. ಪರಿಸ್ಥಿತಿಯ ಬಗ್ಗೆ ನಾವೇನು ಹೆಚ್ಚು ಮಾಡಲು ಸಾಧ್ಯವಿಲ್ಲ ಎಂಬ ಬಗ್ಗೆ ಮಾರ್ಗದರ್ಶನ ನೀಡಬೇಕಾಗಿದೆ ಮತ್ತು ನೀವೊಬ್ಬರೇ ಇಲ್ಲಿ ಒಂಟಿಯಲ್ಲ. ಜಗತ್ತಿನಾದ್ಯಂತ ಇತರೆ ಮಕ್ಕಳು ಸಹ ಸಂದಿಗ್ದತೆಗೆ ಸಿಲುಕಿಕೊಂಡಿದ್ದಾರೆ ಎಂಬುದನ್ನು ಅರ್ಥಮಾಡಿಸಬೇಕು. ವಾಸ್ತವಿಕತೆಯನ್ನು ಪಾಲಕರು ಸಹ ಅರ್ಥಮಾಡಿಕೊಳ್ಳಬೇಕು ಮತ್ತು ಈ ಎಲ್ಲಾ ಒಟ್ಟಾರೆ ಪ್ರಕ್ರಿಯೆಯಲ್ಲಿ ನಾವು ನಿಮ್ಮೊಂದಿಗೆ ಇರುತ್ತೇವೆ ಎಂಬ ಬೆಂಬಲವನ್ನು ಮಕ್ಕಳಿಗೆ ನೀಡಬೇಕು. ಶಿಕ್ಷಣ ಮಂಡಳಿಗಳು ಪರೀಕ್ಷೆ ನಡೆಸುವ ವಿಚಾರದಲ್ಲಿ ಹೊಂದಿಕೊಂಡು ಕಾರ್ಯನಿರ್ವಹಿಸುತ್ತಿವೆ ಮತ್ತು ಹೀಗಾಗಿ ಒಂದು ಹಂತಕ್ಕೆ ಶಿಕ್ಷಣ ತಲುಪುತ್ತಿರುವುದರಿಂದ ಶಿಕ್ಷಣದಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಿಲ್ಲ, ವೃತ್ತಿ ಆಯ್ಕೆಗೂ ಅವಕಾಶವಿದೆ.

    ಸಾಂಕ್ರಾಮಿಕವು ಪೋಷಕರತ್ತಲೂ ವಿಶೇಷ ಗಮನಹರಿಸಿದೆ. ನೀವು ಪೋಷಕರಿಗೆ ಹೇಗೆ ಸಲಹೆ ನೀಡುತ್ತೀರಿ?

    ವೈಯಕ್ತಿಕ ಬದುಕು ಮತ್ತು ಕಾರ್ಯಸ್ಥಳ ಮುಸುಕಾಗುವಿಕೆಯ ನಡುವೆ ಅನೇಕ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವ ಹೆಚ್ಚುವರಿ ಜವಾಬ್ದಾರಿ ನಿಭಾಯಿಸುವುದು ಸಹ ಕಷ್ಟಕರವಾಗಿದೆ. ಪ್ರತಿಯೊಂದು ವಯೋಮಿತಿಯ ಮಕ್ಕಳಿಗೂ ವಿಭಿನ್ನ ಅಗತ್ಯಗಳಿವೆ, ಅವರಿಗೆ ಸಮಯ, ಗಮನಕೊಡುವ, ಮಕ್ಕಳೊಂದಿಗೆ ಬೆರೆಯುವ, ಸಂಪನ್ಮೂಲ ಮತ್ತು ಸಂತಸ ವಾತಾವರಣ ಬೇಕಾಗುತ್ತದೆ. ಮನೆಯಲ್ಲಿ ಒತ್ತಡದ ವಾತಾವರಣ ಮಾನಸಿಕ ಆರೋಗ್ಯ ಸ್ಥಿತಿ ಹೆಚ್ಚಾಗಲು ಕಾರಣವಾಗಬಹುದು. ಸುರಕ್ಷಿತ ವಾತಾವರಣ ಮಾನಸಿಕ ಆರೋಗ್ಯ ಕಳವಳದಿಂದ ರಕ್ಷಿಸುತ್ತದೆ.

    ಪಾಲಕರು ಮಕ್ಕಳನ್ನು ತಮ್ಮೊಂದಿಗೆ ತೊಡಗಿಸಿಕೊಳ್ಳಬೇಕು. ಇದರಿಂದ ಅವರ ನಡುವೆ ಸಕಾರಾತ್ಮಕ ಚೌಕಟ್ಟು ನಿರ್ಮಾಣವಾಗಲಿದೆ. ಪೋಷಕರು ಸಹ ತಮ್ಮನ್ನು ಶಾಂತಗೊಳಿಸಿಕೊಳ್ಳಲು ಮಾರ್ಗಗಳನ್ನು ಹುಡುಕಿಕೊಳ್ಳಬೇಕು. ಅವರು ತಮ್ಮ ದೈನಂದಿನ ಚಟುವಟಿಕೆಗಳನ್ನು ಸುಗಮಗೊಳಿಸಿಕೊಂಡರೆ ಮಕ್ಕಳಿಗೆ ಸಮಯ ನೀಡಬಹುದು. ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದವರು ಕುಟುಂಬ, ಸ್ನೇಹಿತರು ಅಥವಾ ವೃತ್ತಿಪರರ ಬೆಂಬಲ ಪಡೆಯಬೇಕು.(PIB)

    ಕರ್ನಾಟಕ ಚಿತ್ರಕಲಾ ಪರಿಷತ್ತಿನ ರೂವಾರಿ ಪ್ರೊ. ಎಂ ಎಸ್ ನಂಜುಂಡರಾವ್ ನೆನಪಿನ ಕಲಾ ಪ್ರದರ್ಶನ


    ಡಾ. ಆರ್.ಎಚ್.ಕುಲಕರ್ಣಿ

    ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಂಸ್ಥಾಪಕ ಕಾರ್ಯದರ್ಶಿಗಳು ಹಾಗೂ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರೂಆಗಿದ್ದ ದಿ.ಪ್ರೊ. ಎಂ ಎಸ್ ನಂಜುಂಡರಾಯರದು ಚಿತ್ರಕಲಾ ಲೋಕಕ್ಕೆ ಅಪೂರ್ವವಾದಕೊಡುಗೆಇದೆ. ಒಂದು ಸಾಮನ್ಯವಾದ ಕಲಾ ಸಂಸ್ಥೆಯನ್ನುರಾಜ್ಯದ ಮತ್ತುದೇಶದ ಮುಂಚೂಣಿ ಕಲಾ ಸಂಸ್ಥೆಯನ್ನಾಗಿರೂಪಿಸುವಲ್ಲಿ ಮತ್ತು ಬೆಳೆಸುವಲ್ಲಿ ಅವರ ಪಾತ್ರ ಬಹು ದೊಡ್ಡದು.

    ಪ್ರಸ್ತುತ ಜುಲೈ ತಿಂಗಳ 5 ನೆಯ ತಾರೀಖು ಅವರ 90ನೆಯ ಜನ್ಮದಿನವನ್ನು ವಾರ್ಷಿಕವಾಗಿ ಆಚರಿಸಲಾಯಿತು. ಅವರ 90 ನೆ ವರ್ಷದ ಸವಿ ನೆನಪಿನಲ್ಲಿ ಚಿತ್ರಕಲಾ ಪರಿಷತ್ತು ಒಂದುಅಪೂರ್ವವಾದ ಚಿತ್ರಕಲಾ ಪ್ರದರ್ಶನವನ್ನು ಚಿತ್ರಕಲಾ ರಸಿಕರಿಗೆ ರಸದೌತಣವೆಂಬಂತೆ ಏರ್ಪಡಿಸಿದೆ.ಪರಿಷತ್ತಿನ ಸಂಗ್ರಹದಲ್ಲಿರುವ ಇದುವರೆಗೂ ಪ್ರದರ್ಶನಗೊಳ್ಳದ ರಾಜ್ಯದ ಮತ್ತು ರಾಷ್ಟ್ರದ ಖ್ಯಾತ ಕಲಾವಿದರ ಕಲಾಕೃತಿಗಳನ್ನು ನಾಲ್ಕೂ ಗ್ಯಾಲರಿಗಳಲ್ಲಿ ಪ್ರದರ್ಶನವನ್ನು ಅಣಿಗೊಳಿಸಲಾಗಿದೆ. 90 ಕ್ಕೂ ಅಧಿಕ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.

    ನಂಜುಂಡರಾಯರ ದೂರದೃಷ್ಟಿ

    ಕರ್ನಾಟಕಚಿತ್ರಕಲಾ ಪರಿಷತ್ತುಇಂದುರಾಷ್ಟ್ರದ ಮುಂಚೂಣಿ ಚಿತ್ರಕಲಾ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿ ಬೆಳೆಯುವಲ್ಲಿ ದಿ. ನಂಜುಂಡರಾಯರ ದೂರದೃಷ್ಟಿ ಮುಖ್ಯವಾಗಿತ್ತು.ಯಾವುದೇ ಹಣಕಾಸಿನ ಬೆಂಬಲವಿಲ್ಲದೇ, ಒಂದು ಸಂಸ್ಥೆಯನ್ನು ಕಲಾ ಸಮುದಾಯದ ಅಭಿವೃದ್ಧಿಗಾಗಿ ಕಲಾಸಂಕುಲವನ್ನೆ ಪ್ರಾರಂಭಿಸಿದರು. ಚಿತ್ರಕಲಾ ಶಿಕ್ಷಣದಲ್ಲಿ ಪ್ರಾಯಶಃ ಕರ್ನಾಟಕದಲ್ಲಿ ಮೊದಲು ಬಾರಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಕಲ್ಪನೆಗಳನ್ನು ಸಾಕಾರಗೊಳಿಸಿದ್ದು ನಂಜುಂಡರಾಯರೆ.ಚಿತ್ರಕಲಾ ಶಿಕ್ಷಣದ ಜೊತೆಯಲ್ಲಿ ಗ್ಯಾಲರಿಗಳು ಕಾಯಂ ಆಗಿ ಪ್ರದರ್ಶನಗೊಳ್ಳುವ ವಸ್ತುಸಂಗ್ರಹಾಲಯ ಮಾದರಿಯ 13 ಗ್ಯಾಲರಿಗಳು ಅಭಿವೃದ್ಧಿಗೊಂಡವು.

    ಕರ್ನಾಟಕದ ಪ್ರಾಚೀನ ಸಂಸ್ಕೃತಿಯ ಕುರುಹುಗಳಾಗಿರುವ ಮೈಸೂರು ಪಾರಂಪರಿಕ ಚಿತ್ರಕಲೆ ಮತ್ತು ಕಲಾಕೃಗಳ ಸಂಗ್ರಹ, ತೊಗಲು ಗೊಂಬೆಗಳ ಸಂಗ್ರಹ ಅಲ್ಲದೇ ಸಮಕಾಲೀನ ಹಾಗೂ ಭಾರತದ ಆಧುನಿಕ ಕಲಾಕೃತಿಗಳನ್ನು ಸಂಗ್ರಹಿಸಿ ಪರಿಷತ್ತಿನ ಗ್ಯಾಲರಿಗಳಲ್ಲಿ ಕಾಯಂ ಆಗಿ ಪ್ರದರ್ಶಿಸಲಾಗಿದೆ. ವಿಶೇಷವಾಗಿ ರಷ್ಯಾದೇಶದ ಕಲಾವಿದರಾಗಿದ್ದ ನಿಕೋಲಸ್ ರೋರಿಚ್ ಮತ್ತು ಸ್ವೆತಾಸ್ಲೋವ್‌ ರೋರಿಚ್ ಅವರುಗಳ ಕಲಾಕೃತಿಗಳನ್ನು ಪರಿಷತ್ತಿನ ಸಂಗ್ರಹಾಲಯಕ್ಕೆ ಸೇರಿಸಿದ್ದಲ್ಲದೇ ಅವುಗಳಗಾಗಿ ಕಾಯಂಆದಂತಹ ಗ್ಯಾಲರಿಗಳನ್ನು ರೂಪಿಸಿ ಪ್ರದರ್ಶಿಸಲಾಗಿದೆ.

    ಅಂತಾರಾಷ್ಟ್ರೀಯ ಖ್ಯಾತಿಯ ಗ್ರಾಫಿಕ್ ಕಲಾವಿದರಾಗಿದ್ದ ದಿ.ಪ್ರೊ.ಕೃಷ್ಣಾರೆಡ್ಡಿಯವರ ಕಲಾಕೃತಿಗಳೂ ಗ್ಯಾಲರಿಗಳಲ್ಲಿ ಸೇರಿವೆ. ಒಟ್ಟಾರೆಯಾಗಿ ಇಂದು ಇಡೀ ದಕ್ಷಿಣ ಭಾರತದಲ್ಲಿ ಚಿತ್ರಕಲಾ ಪರಿಷತ್ತು ಕಲಾಕೃತಿಗಳ ಸಂಗ್ರಹ ಹೊಂದಿರುವ ಅಪೂರ್ವ ತಾಣವಾಗಿದೆ. ನಂಜುಂಡರಾಯರಿಗೆ ಇದ್ದಂತಹ ದೊಡ್ದ ಕನಸು ಎಂದರೆ, ಚಿತ್ರಕಲಾ ಪರಿಷತ್ತು ಕಲಾವಿದರಿಗೆ ಆಶ್ರಯ ತಾಣವಾಗಬೇಕು, ಕರ್ನಾಟಕದ ಕಲೆ ಬೆಳೆಯಬೇಕು. ವಿಶೇಷವಾಗಿ ಕಲಾಶಿಕ್ಷಣಕ್ಕೊಂದು ಸ್ಪಷ್ಟವಾದ ಸಂಮಾನ ದೊರೆಯಬೇಕೆಂಬುದು.ಅವರ ಆಸೆಯಂತೆ, ಕರ್ನಾಟಕ ದೃಶ್ಯಕಲಾ ಶಿಕ್ಷಣದ ಅತ್ಯುನ್ನತ ಸಂಸ್ಥೆಯಾಗಿ ಇಂದು ಚಿತ್ರಕಲಾ ಮಹಾವಿದ್ಯಾಲಯ ಬೆಳೆದಿದೆ.

    ಕಲಾ ಶಿಕ್ಷಣದ ಮೇರು ಸಂಸ್ಥೆ

    ದೃಶ್ಯಕಲಾ ಶಿಕ್ಷಣದಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿ ಎಚ್ ಡಿ ಗಳವರೆಗೂ ಇಂದು ಇಲ್ಲಿ ಅಧ್ಯಯನಕ್ಕೆ ಅನುಕೂಲವಿದೆ. ಹೊರ ರಾಜ್ಯದ ಮತ್ತು ವಿದೇಶಿ ವಿದ್ಯಾರ್ಥಿಗಳು ನಮ್ಮರಾಜ್ಯದ ವಿದ್ಯಾರ್ಥಿಗಳೊಡನೆ ಅಧ್ಯಯನಕ್ಕೆಇಲ್ಲಿಗೆ ಬರುತ್ತಾರೆ. ಅಂದರೆ ಒಂದುಕಾಲದಲ್ಲಿ ಗುಜರಾತ್ ನ ಬರೋಡಾದ ಎಂ.ಎಸ್. ವಿಶ್ವವಿದ್ಯಾಲಯ, ಶಾಂತಿನಿಕೇತನಗಳ ಪ್ರಸಿದ್ಧಿಯಂತೆ ಇಂದುಚಿತ್ರಕಲಾಪರಿಷತ್ತು ವಿದ್ಯಾರ್ಥಿಗಳ ಶಿಕ್ಷಣದ ಉನ್ನತ ಸಂಸ್ಥೆಯಾಗಿದೆ.

    ಚಿತ್ರಕಲಾ ಪರಿಷತ್ತು ಉತ್ತರಹಳ್ಳಿಯ ಡಾ ವಿಷ್ಣುವರ್ಧನರಸ್ತೆಯಲ್ಲಿ 14 ಎಕರೆ ನಿವೇಶನದಲ್ಲಿ ಬೃಹತ್ತಾದ ಕಾಲೇಜು ಕಟ್ಟಡವನ್ನು ನಿರ್ಮಿಸಿದೆ. ವಿಶ್ವದರ್ಜೆಯ ಶಿಕ್ಷಣ ಮತ್ತು ಸೌಲಭ್ಯ ಸಿಗಬೆಂಕೆಂಬುದು ಪ್ರಸ್ತುತ ಆಡಳಿತ ಮಂಡಳಿಯ ಡಾ. ಬಿ.ಎಲ್.ಶಂಕರ್ ಮತ್ತುಅವರಕಾರ್ಯಾಕಾರಿ ಸಮಿತಿಯಆಶಯವಾಗಿದೆ. ಹೊಸ ವಿಚಾರ ಹಾಗೂ ದೃಶ್ಯಕಲಾ ಶಿಕ್ಷಣದ ಆವಶ್ಯಕತೆಗಳನ್ನು ಮನಗಂಡು, ಚಿತ್ರಕಲಾ ಸಂಜೆಕಾಲೇಜನ್ನು ಪ್ರಾರಂಭಿಸಲಾಗಿದೆ. ಇದು ಪ್ರಾಯಶಃ ಇಡೀ ಭಾರತದಲ್ಲಿಯೇ ಮೊಟ್ತಮೊದಲ ಸಂಜೆ ದೃಶ್ಯಕಲಾ ಕಾಲೇಜಾಗಿದೆ.

    ಕರ್ನಾಟಕ ಚಿತ್ರಕಲಾ ಪರಿಷತ್ತು ಅವಿರತವಾಗಿ ಕ್ಷೇತ್ರದ ಅಭ್ಯುದಯಕ್ಕೆ ಮತ್ತು ಕಲಾವಿದರ ಬೆಳವಣಿಗೆ ಪೂರಕವಾದ ಕಲಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತ ಬಂದಿದೆ.ಚಿತ್ರ ಸಂತೆಯಂತಹ ಅಭೂತಪೂರ್ವ ಕಾರ್ಯಕ್ರಮ ದೇಶದೆಲ್ಲಡೆ ಇಂದು ಮನೆಮಾತಾಗಿದೆ.

    ಚಿತ್ರಕಲಾ ಪ್ರದರ್ಶನ


    ದಿ. ಪ್ರೊ. ನಂಜುಂಡರಾವ್‌ಅವರ 90 ನೆಯಜನ್ಮದಿನದ ಪೂರಕವಾಗಿ ಏರ್ಪಡಿಸಲಾಗಿರುವ ಚಿತ್ರಕಲಾ ಪ್ರದರ್ಶನ ಚಿತ್ರಕಲಾ ಪರಿಷತ್ತಿನ ಅಪೂರ್ವ ಸಂಗ್ರದಿಂದ ಆಯ್ಕೆ ಮಾಡಾಲಾದ ಖ್ಯಾತ ಕಲಾವಿದರ ಕಲಾಕೃತಿಗಳವೆ. ಈ ಪ್ರದರ್ಶನದಲ್ಲಿ ದಿ. ಕೆ.ಕೆ ಹೆಬ್ಬಾರ್, ಪ್ರೊ.ಅಲ್ಫನ್ಸೋ, ಪ್ರೊ.ಆರ್.ಬಿ. ಭಾಸ್ಕರನ್. ಪ್ರೊ.ವಿ.ಜಿ ಅಂದಾನಿ, ಬಿ.ಕೆ.ಎಸ್.ವರ್ಮ, ಬಾದ್ರಿ ನಾರಾಯಣ, ವಿ ಸಂತಾನಮ್, ಆರ್ ಎಂ ಹಡಪದ್, ಪ್ರೊ.ಜೆ.ಎಸ್.ಖಂಡೇರಾವ್, ಆರ್ ವರದರಾಜ್, ಪ್ರೊ.ವಿದ್ಯಾಭೂಷಣ್, ಡಾ.ಪುಷ್ಪಾದ್ರಾವಿಡ್, ಯುಸೂಫ್‌ಅರಕ್ಕಾಲ್, ಜಿ.ಎಸ್.ಶೆಣೈ, ಜೆ.ಎಂ.ಎಸ್. ಮಣಿ, ಇನ್ನೂ ಹಲವಾರು ಖ್ಯಾತನಾಮರಾದ ಕಲಾವಿದರ ಕಲಾಕೃತಿಗಳಿವೆ. ಎಲ್ಲ ಕಲಾಕೃತಿಗಳನ್ನು ವಿವರವಾಗಿ ಗಮನಿಸಿದಾಗ- ಭಾರತೀಯಆಧುನಿಕಕಲೆಯ ವಿವಿಧ ಹಂತಗಳನ್ನು ಈ ಕಲಾಕೃತಿಗಳು ಅನಾವರಣ ಮಾಡುತ್ತವೆ. (ಮೇಲಿನ ಸ್ಲೈಡ್ ಶೋ ನೋಡಿ)

    ಪ್ರೊ. ವಿ.ಜಿ ಅಂದಾನಿಯವರ ಕಲಾಕೃತಿಗಳಲ್ಲಿ ಕೃಷ್ಣ ಕಥೆಯ ದೃಶ್ಯಗಳ ಅನಾವರಣಗೊಂದಿವೆ. ಕೆ ಕೆ ಹೆಬ್ಬರರು ರಚಿಸಿದ್ದ ದಿ. ನಂಜುಂಡರಾಯರ ಭಾವಚಿತ್ರವು ಪ್ರಾಯಶಃ ನಂಜುಂಡರಾಯರ ವಯಕ್ತಿಕ ಅಂತಃ ಸತ್ವವನ್ನು ಮುಖಭಾವನೆಯಲ್ಲಿ ಪ್ರದರ್ಶಿಸುವಂತಿದೆ. ಯುಸುಫ್‌ ಅರಕ್ಕಾಲ್‌ರ ಸಮಾಜಮುಖಿ ದೃಶ್ಯಾವತರಣಿಕೆಗಳು ನೆಳಲು ಬೆಳಕಿನ ಸೋಜಿಗವೆಂಬಂತಹದೃಶ್ಯಭಾಷೆಯನ್ನು ಬಿಂಬಿಸುತ್ತವೆ. ಕಲಾವಿದ ಪ್ರಾಧ್ಯಾಪಕ ಆರ್ ಬಿ, ಭಾಸ್ಕರನ್‌ ಅವರು ತಮ್ಮ ಕಲಾಕೃತಿಗಳಲ್ಲಿ ಬೆಕ್ಕನ್ನು ಸಾಂಕೇತಿಕವಾಗಿ ಮಾನವ ಸಹಜ ವಾಂಛೆಗಳ ಭಾಗವಾಗಿ ಬಳಸುತ್ತಾರೆ. ಬೆಕ್ಕು, ಸಾಂಕೇತಿಕವಾಗಿ ಬಹು ಶ್ರುತ ಭಾಷೆಯನ್ನು ಪ್ರತಿನಿಧಿಸುತ್ತದೆ.

    ಪ್ರಸ್ತುತ ಕಲಾ ಪ್ರದರ್ಶನದಲ್ಲಿ ತೊಂಭತ್ತಕ್ಕೂಅಧಿಕ ಕಲಾಕೃತಿಗಳು ಕಲಾಸಕ್ತರನ್ನು ಮತ್ತುಚಿಂತಕರನ್ನು ಕ್ರಿಯಾತ್ಮಕವಾದ ಚಿಂತನೆಗೆ ಹಚ್ಚುತ್ತವೆ. ಕರ್ನಾಟಕ ಚಿತ್ರಕಲಾಪರಿಷತ್ತು ತನ್ನಅಗಾಧವಾದ ಸಂಗ್ರಹದಿಂದ ಅನಾವರಣಮಾಡಿದ ಪ್ರಸ್ತುತ ಕಲಾಕೃತಿಗಳ ಪ್ರದರ್ಶನ ಇಂದಿನ ಕೋವಿಡ್ ಸಂದರ್ಭವನ್ನು ಮೀರಿಕಲಾಸಕ್ತರನ್ನು ಆಕರ್ಷಿಸುತ್ತಿದೆ.ಆಗಸ್ಟ್ ಮೊದಲ ವಾರದವರೆಗೆ ಆ ಪ್ರದರ್ಶನವಿದ್ದು ಕುಮಾರಕೃಪ ರಸ್ತೆಯಲ್ಲಿರುವ ಚಿತ್ರಕಲಾಪರಿಷತ್ತಿನಲ್ಲಿ ಈ ಪ್ರದರ್ಶನ ವೀಕ್ಷಿಸಬಹುದಾಗಿದೆ.


    ಡಾ. ಆರ್.ಎಚ್.ಕುಲಕರ್ಣಿ ಅವರು ಚಿತ್ರಕಲಾಪರಿಷತ್ತಿನಲ್ಲಿ ಪ್ರಾಧ್ಯಾಪಕ. ಕಲಾ ಇತಿಹಾಸ ಮತ್ತು ಕಲಾ ಲೇಖಕ

    ನಾವು ಪರೀಕ್ಷೆ ಬರೆದಿದ್ದೆವು. ಈಗ ರಿಸಲ್ಟ್‌ ಬಂದಿದೆ ಎಂದ ಸಿ ಪಿ ಯೋಗೇಶ್ವರ

    ನಾವು ಪರೀಕ್ಷೆ ಬರೆದಿದ್ದೆವು. ಈಗ ರಿಸಲ್ಟ್‌ ಬಂದಿದೆ. ನಾವೆಲ್ಲರೂ ಪಾಸಾಗಿದ್ದೇವೆ ಎಂದು ಪ್ರವಾಸೋದ್ಯಮ ಖಾತೆ ಸಚಿವ ಸಿ.ಪಿ.ಯೋಗೇಶ್ವರ ಮಾರ್ಮಿಕವಾಗಿ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ರೋಪ್‌ ವೇ ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಶುಕ್ರವಾರ ಬೆಳಗ್ಗೆ ಗಿರಿಧಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದರು.

    ನಾವು ಪರೀಕ್ಷೆ ಪಾಸಾಗಿದ್ದೇವೆ.‌ ಫಲಿತಾಂಶ ಬಂದಾಯಿತು ಎಂದ ಅವರು, ಸುದ್ದಿಗಾರರು ಕೇಳಿದ ಪ್ರತಿಯೊಂದು ಪ್ರಶ್ನೆಗೂ ಮಾರ್ಮಿಕವಾಗಿ ಉತ್ತರ ನೀಡಿದರು.

    ಮುಂದುವರಿದು ಅವರು ಹೇಳಿದ್ದಿಷ್ಟು;

    • ಯಾರಿಗೆ ಆಗಲಿ ಮಂತ್ರಿ ಸ್ಥಾನ ಸೇರಿ ಯಾವ ಸ್ಥಾನಮಾನವೂ ಶಾಶ್ವತವಲ್ಲ. ಇದನ್ನೇ ನಾನು ಅನೇಕ ಸಲ ಹೇಳಿದ್ದೇನೆ. ಕೆಲವರು ಅರ್ಥ ಮಾಡಿಕೊಂಡರು, ಇನ್ನು ಕೆಲವರಿಗೆ ಅರ್ಥವಾಗಲಿಲ್ಲ.
    • ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ಸಂಬಂಧಿಸಿದಂತೆ ಸ್ವತಃ ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿಕೆ ನೀಡುತ್ತಿದ್ದಾರೆ. ನಿನ್ನೆ ಹಾಗೂ ಮೊನ್ನೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಅವರೇ ಮಾತನಾಡಿದ್ದಾರೆ. ಯಡಿಯೂರಪ್ಪ ಅವರು ಹಿರಿಯರಿದ್ದಾರೆ. ಈ ನಿಟ್ಟಿನಲ್ಲಿ ನನಗೆ ಹೆಚ್ಚಿನ ಮಾಹಿತಿಯಿಲ್ಲ.
    • ರಾಜೀನಾಮೆಗೂ ಮುನ್ನ ಸಾವಿರಾರು ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಮುಖ್ಯಮಂತ್ರಿ ಸಹಿ ಮಾಡುತ್ತಿದ್ದಾರೆ ಎಂದು ಎಚ್‌.ಡಿ.ಕುಮಾರಸ್ವಾಮಿ ಮಾಡಿರುವ ಅರೋಪವನ್ನು ನಾನೂ ಮಾಧ್ಯಮಗಳ ಮೂಲಕ ಗಮನಿಸಿದೆ. ಅವರಿಗೆ ಬೇಕಾದಾಗ ಸಿಎಂ ಮನೆಗೆ ಹೋಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಈಗ ಹೀಗೆ ಮಾತನಾಡುತ್ತಿದ್ದಾರೆ. ಅವರ ರಾಜಕಾರಣವೇ ಹಾಗೆ.
    • ರಾಜ್ಯದಲ್ಲಿ ಇನ್ನು ಮುಂದೆ ಒಂದೇ ಪಕ್ಷದ ಸರಕಾರ ಅಸ್ತಿತ್ವದಲ್ಲಿ ಇರುತ್ತದೆ. ಬಿಜೆಪಿ ನೇತೃತ್ವದ ಸರಕಾರ ಒಂದೇ ಇರುತ್ತದೆ.
    • ಕುಮಾರಸ್ವಾಮಿ ನನಗೆ, ನಮ್ಮ ಪಕ್ಷಕ್ಕೆ ರಾಜಕೀಯ ಎದುರಾಳಿ. ಅವರು ದ್ವಂದ್ವ ನಿಲುವಿನ ರಾಜಕಾರಣಿ. ಕೆಲಸ ಇದ್ದಾಗ ಸಿಎಂ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.‌ ಈಗ ಸಿಎಂ ಅವರನ್ನೇ ದೂಷಿಸುತ್ತಾರೆ. ಅವಕಾಶವಾದಿ ರಾಜಕಾರಣ ಮಾಡುವ ಕಾರಣಕ್ಕೆ ಕುಮಾರಸ್ವಾಮಿ ಬಗ್ಗೆ ನಮ್ಮ ವಿರೋಧವಿದೆ.
    • ನನ್ನ ಹಾಗೂ ನನ್ನ ಜಿಲ್ಲೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಾಗೂ ನನಗೆ ಇತರೆ ಪಕ್ಷಗಳು ನೀಡಿರುವ ತೊಂದರೆ ಬಗ್ಗೆ ಮಾತನಾಡಿದ್ದೇನೆ ವಿನಾ ಬೇರೆ ವಿಚಾರಗಳ ಬಗ್ಗೆ ಎಲ್ಲೂ ಮಾತನಾಡಿಲ್ಲ. ನಮ್ಮ ವರಿಷ್ಠರು ಹಾಗೂ ಹಿರಿಯರು ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ.
    • ನಾಯಕತ್ವ ಬದಲಾವಣೆ ಆದ ಮೇಲೆ ಕಾಂಗ್ರೆಸ್ʼನಿಂದ ಬಂದಿರುವ ಹತ್ತಕ್ಕೂ ಹೆಚ್ಚು ಶಾಸಕರಿಗೆ ಹೊಸ ಸರಕಾರದಲ್ಲಿ ಮತ್ತೆ ಸಚಿವ ಸ್ಥಾನ ಕೊಡುವುದಿಲ್ಲ ಎಂಬ ಮಾಹಿತಿ ಬಗ್ಗೆ ನನಗೆ ಗೊತ್ತಿಲ್ಲ. ಊಹಾಪೋಹಗಳಿಗೆ ಉತ್ತರ ನೀಡುವ ಹಕ್ಕು ನನಗಿಲ್ಲ.
    • ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿರುವ ಬಗ್ಗೆ ನಾನು ಮಾತನಾಡುವುದಿಲ್ಲ. ಮಠಾಧೀಶರು ತುಂಬಾ ದೊಡ್ಡವರು. ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಈ ನಿಟ್ಟಿನಲ್ಲಿ ಮಾತನಾಡುವುದಿಲ್ಲ.

    ಬಿಎಸ್ ವೈ ರಾಜಿನಾಮೆ ನೀಡಿದ ನಂತರ ದಲಿತರನ್ನೇ ಸಿಎಂ ಮಾಡಲು ಸಿದ್ಧರಾಮಯ್ಯ ಆಗ್ರಹ

    ದಲಿತರ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇದ್ದರೆ ಯಡಿಯೂರಪ್ಪ ರಾಜಿನಾಮೆ ನೀಡಿದ ಬಳಿಕ ದಲಿತರನ್ನೇ ಮುಖ್ಯಮಂತ್ರಿ ಮಾಡಲಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ಹೇಳಿದ್ದಾರೆ..

    ಈ ವಿಷಯದಲ್ಲಿ ನಾನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸವಾಲು ಹಾಕುವೆ ಎಂದಿದ್ದಾರೆ.ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ದಲಿತರನ್ನು ಸಿಎಂ ಮಾಡುವ ಅವಕಾಶ ಈಗ ಬಿಜೆಪಿಗೆ ಬಂದಿದೆ ಎಂದರು.

    ಸಿದ್ದರಾಮಯ್ಯ ದಲಿತರನ್ನ ಸಿಎಂ ಮಾಡಲಿ ಅಂತ ಕಟೀಲ್ ಅವರು ನನಗೆ ಹೇಳಿದ್ದರು.ನಮ್ಮಲ್ಲಿ ದಲಿತರು ಸಿಎಂ ಆಗಿದ್ದಾರೆ.‌ ಹೀಗಾಗಿ ಸದ್ಯ ಅವರಿಗೆ ಆ ಅವಕಾಶ ಇದೆ, ಕಟೀಲ್ ದಲಿತರನ್ನ ಸಿಎಂ ಮಾಡಲಿ.

    ಯಡಿಯೂರಪ್ಪರನ್ನ ಹೇಗಿದ್ದರೂ ತೆಗೀತಾರೆ, ಈಗ ದಲಿತರನ್ನ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಲಿ. ದಲಿತರ ಬಗ್ಗೆ ಕಟೀಲ್ ಗೆ ಪ್ರೀತಿ ಇದೆ ಅಲ್ವಾ, ಹಾಗಾದ್ರೆ ಸಿಎಂ ಮಾಡಲಿ ಎಂದರು ಸಿದ್ಧರಾಮಯ್ಯ.

    ಜನಗಳ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ, ಹಿಂದೆಯೂ ಇರಲಿಲ್ಲ, ಈಗ ಬರೋಕೂ ಸಾಧ್ಯ ಇಲ್ಲ.2019ರಲ್ಲಿ ಬಂದ ಪ್ರವಾಹದಿಂದ ಸಂತ್ರಸ್ತರಾದವರಿಗೇ ಇನ್ನೂ ಯಡಿಯೂರಪ್ಪ ಪರಿಹಾರ ಕೊಟ್ಟಿಲ್ಲ.ಈಗ ಎಲ್ಲಾ ಕಡೆ ಮಳೆ ಬಂದು ಜನ, ಜಾನುವಾರು ಕೊಚ್ಚಿ ಹೋಗಿವೆ. ಮನೆಗಳು ಬಿದ್ದಿವೆ.ಈಗ ಸರ್ಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡೋ ಬದಲು ಸಿಎಂ ಬದಲಾವಣೆ ಮಾಡುವ ಪ್ರಯತ್ನದಲ್ಲಿ ಇದ್ದಾರೆ ಎಂದು ಸಿದ್ಧರಾಮಯ್ಯ ಹೇಳಿದರು.

    ವಲಸಿಗ ಸಚಿವರನ್ನ ಮತ್ತೆ ಕಾಂಗ್ರೆಸ್ ಗೆ ಪಡೆದುಕೊಳ್ಳೋ ವಿಚಾರ, ಅವರು ನಮ್ಮ‌ಪಕ್ಷಕ್ಕೆ ಬರ್ತಾರೆ ಅನ್ನೋದು ನನಗಂತೂ ಗೊತ್ತಿಲ್ಲ. ಪಕ್ಕಕ್ಕೆ ಅವರನ್ನ ವಾಪಾಸ್ ಸೇರಿಸಿಕೊಳ್ಳುವುದಿಲ್ಲ ಎಂದು ಸದನದಲ್ಲೇ ಹೇಳಿದ್ದೇನೆ. ಅದಕ್ಕೆ ಈಗಲೂ ಬದ್ಧ ಎಂದರು.

    ಆಗಸ್ಟ್ 10ರ ವೇಳೆಗೆ SSLC ಫಲಿತಾಂಶ: ಎಲ್ಲ ಅಭ್ಯರ್ಥಿಗಳಿಗೂ ಪಿಯು ಪ್ರವೇಶ ಲಭ್ಯ

    ಈ ಬಾರಿ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗುತ್ತಿರುವುದರಿಂದ ಪಿಯುಸಿ ಸೇರಬಯಸುವ ಎಲ್ಲರಿಗೂ ಪ್ರವೇಶಾವಕಾಶ ಕಲ್ಪಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಗುರುವಾರ ಕೊನೆದಿನದ ಪರೀಕ್ಷೆ ಯ ನಂತರ ನಗರದ ಹಲವಾರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಕೊನೆದಿನ ದಿನದ ಪರೀಕ್ಷೆಗೆ ಸಂಬಂಧಿಸಿದ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅವರು, ಯಾವುದೇ ವಿದ್ಯಾರ್ಥಿಗೂ ತೊಂದರೆಯಾಗದಂತೆ ಎಲ್ಲರಿಗೂ ಪ್ರಥಮ ಪಿಯುಸಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.

    ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪಿಯು ಕಾಲೇಜುಗಳಲ್ಲಿ ಒಟ್ಟಾರೆ 12 ಲಕ್ಷ ಸೀಟುಗಳು ಲಭ್ಯವಿವೆ. ಜಿಲ್ಲಾವಾರು ಅಂಕಿಅಂಶಗಳನ್ನು ಸಂಗ್ರಹಿಸಿದ್ದು ಅದಕ್ಕಾಗಿ ಅಧಿಕಾರಿಗಳ ಸಮನ್ವಯ ವ್ಯವಸ್ಥೆ ರೂಪಿಸಲಾಗುತ್ತಿದೆ. ಯಾವುದೇ ವಿದ್ಯಾರ್ಥಿಗೂ ಪಿಯು ಪ್ರವೇಶಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ. ಯಾವುದೇ ಸಂಸ್ಥೆಗಳು ಸೀಟು ಹೆಚ್ಚಳದ ಪ್ರಸ್ತಾವನೆಯನ್ನು ಸಲ್ಲಿಸಿದರೆ, ಅವರ ಬೇಡಿಕೆಯನ್ನು ಪುರಸ್ಕರಿಸಲಾಗುವುದು ಎಂದು ಅವರು ಹೇಳಿದರು.

    ಆಗಸ್ಟ್ 10ರ ವೇಳೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು. ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಪ್ರಶಾಂತ ವಾತಾವರಣದಲ್ಲಿ ನಡೆದವು. ಇಂದು ಬೆಂಗಳೂರಿನ ದೂರವಾಣಿನಗರದ ಐಟಿಐ ವಿದ್ಯಾಮಂದಿರ ಪ್ರೌಢಶಾಲೆ, ವಿದ್ಯಾಮಂದಿರ ಸೆಂಟ್ರಲ್ ಶಾಲೆ, ಕೆ.ಆರ್.ಪುರಂ ಕರ್ನಾಟಕ ಪಬ್ಲಿಕ್ ಶಾಲೆ, ವೆಂಕಟೇಶ್ವರ ಪ್ರೌಢಶಾಲೆ, ದೇವಸಂದ್ರದ ಭಾರತೀಯ ವಿದ್ಯಾನಿಕೇತನ ಪ್ರೌಢಶಾಲೆ, ಅವಲಹಳ್ಳಿಯ ಗ್ರೇಟ್ ಇಂಟರ್ನ್ಯಾಷನಲ್ ಸ್ಕೂಲ್, ವಿದ್ಯಾನಿಕೇತನ ಆಂಗ್ಲಪ್ರೌಢಶಾಲೆ, ಕಾಡುಗೋಡಿಯ ಶಾರದಾ ವಿದ್ಯಾಮಂದಿರ ಪ್ರೌಢಶಾಲೆ, ವೈಟ್ಫೀಲ್ಡ್ ನ ಉಜ್ವಲ ವಿದ್ಯಾಲಯ ಪ್ರೌಢಶಾಲೆ ಸೇರಿದಂತೆ ಹಲವಾರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಎಲ್ಲ ಕಡೆಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಮಕ್ಕಳು ಅತ್ಯಂತ ಶಿಸ್ತಿನಿಂದ ಪರೀಕ್ಷೆಗೆ ಹಾಜರಾಗಿದ್ದರು. ನಮ್ಮ ವಿದ್ಯಾರ್ಥಿಗಳ ಶಿಸ್ತು ನನ್ನ ಮನಸೂರೆಗೊಂಡಿತು. ಮಕ್ಕಳ ಶಿಸ್ತು ಮತ್ತು ಧೈರ್ಯ ಪರೀಕ್ಷೆಯ ಯಶಸ್ಸಿನ ಪ್ರಮುಖ ಕಾರಣವಾಗಿದೆ ಎಂದು ಅವರು ತಿಳಿಸಿದರು.

    ಇಂದೂ ಸಹ ಕೆಲವೆಡೆ ಶಾಸಕರು ಮತ್ತು ಸಚಿವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಖುದ್ದಾಗಿ ಭೇಟಿ ನೀಡಿದ್ದಾರೆ ಮಕ್ಕಳನ್ನು ಹುರಿದುಂಬಿಸಿದ್ದಾರೆ. ಹಲವಾರು ಕಡೆಗಳಲ್ಲಿ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮಕ್ಕಳಿಗೆ ಉಪಹಾರ ವ್ಯವಸ್ಥೆ ಮಾಡಿದ್ದರು ಎಂದು ಹೇಳಿದ ಸಚಿವರು ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

    ಕಳೆದ ಬಾರಿಯ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದ ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಹಾಜರಾಗಿದ್ದಾರೆ. ಮಕ್ಕಳ ಶೇ. ಹಾಜರಾತಿಯೂ ಸಹ ಈ ಬಾರಿ ಹೆಚ್ಚಾಗಿದೆ ಎಂದು ಅವರು ಹೇಳಿದರು.

    ಭಾಷಾ-1 ವಿಷಯಕ್ಕೆ 8,19,694 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,16,544 ಅಭ್ಯರ್ಥಿಗಳು ಹಾಜರಾಗಿ 3150 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.62 ಹಾಜರಾತಿ ಇದೆ. ಕಳೆದ ವರ್ಷ ಇದು 98.41 ಇತ್ತು.

    ಭಾಷಾ -2 ವಿಷಯಕ್ಕೆ 8,27,988 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,24,686 ಅಭ್ಯರ್ಥಿಗಳು ಹಾಜರಾಗಿ 3302 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.60 ಹಾಜರಾತಿ ಇದೆ. ಕಳೆದ ವರ್ಷ ಇದು 98.47 ಇತ್ತು.

    ಭಾಷಾ -3 ವಿಷಯಕ್ಕೆ 8,17,640 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,14,538 ಅಭ್ಯರ್ಥಿಗಳು ಹಾಜರಾಗಿ 3102 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.62 ಹಾಜರಾತಿ ಇದೆ. ಕಳೆದ ವರ್ಷ ಇದು 98.47 ಇತ್ತು.

    ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಹಾಜರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಆರೋಗ್ಯ ಇಲಾಖಾ ಸಿಬ್ಬಂದಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಎಲ್ಲ ಅಭ್ಯರ್ಥಿಗಳು ಮಾಸ್ಕ್ ಗಳನ್ನು ಧರಿಸಿದ್ದರು. ಮಾಸ್ಕ್ ಧರಿಸದೇ ಬಂದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್ ನೀಡಲಾಯಿತು ಎಂದು ಅವರು ವಿವರಿಸಿದರು.

    ಒಟ್ಟಾರೆಯಾಗಿ ಪರೀಕ್ಷೆ ಯಾವುದೇ ವಿಘ್ನಗಳಿಲ್ಲದೇ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಕಾರಣೀಭೂತರಾದ ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿ ವೃಂದಕ್ಕೆ ಸುರೇಶ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.

    ಪರೀಕ್ಷಾ ಸಮಯದಲ್ಲಿ ಕಂಡು ಬಂದ ವಿಶೇಷತೆಗಳು

    ⚫ ಮೂಳೆ ಸವೆತ ರೋಗದಿಂದ ಬಳಲುತ್ತಿರುವ ಕುಮಾರಿ ಯಶಸ್ವಿನಿ ಎಂಬ ವಿದ್ಯಾರ್ಥಿನಿ ಬೆಂಗಳೂರಿನ ಕಾವೇರಿಪುರದ ಆರ್ ಎ ಎಸ್ ಕಾನ್ವೆಂಟ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾಳೆ. ಅವರ ಜೀವನೋಲ್ಲಾಸ ಮೆಚ್ಚುವಂತಹುದು.

    ⚫ ಮೊದಲ ದಿನ ಪರೀಕ್ಷೆ ಬರೆದು ಕಡಿಮೆ ಅಂಕಗಳು ಬರಬಹುದೆಂಬ ಭೀತಿಯಿಂದ ತನ್ನ ಅಜ್ಜಿಗೆ ತಂದಿದ್ದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ಶಿವಮೊಗ್ಗ ಜಿಲ್ಲೆಯ ಕೆಂಚನಾಲಾ ಗ್ರಾಮದ ಚೇತನಾ ಆರೋಗ್ಯವಾಗಿದ್ದು, ಇಂದು ಪರೀಕ್ಷೆಗೆ ಹಾಜರಾಗಿದ್ದಾಳೆ. ಇದು ಖುಷಿಯ ಸಂಗತಿಯಾಗಿದೆ.

    ⚫ ಮಳೆ ತೀವ್ರವಾಗಿದ್ದರಿಂದ ಪಾಲಕರ ದ್ವಿಚಕ್ರ ವಾಹನಗಳಲ್ಲಿ ಬರಲು ತೊಂದರೆಯಾದ್ದರಿಂದ ದಾವಣಗೆರೆ ತಾಲೂಕಿನ ಚಿಕ್ಕ ಬಿದರೆ ಗ್ರಾಮದ ಆರು ಮಕ್ಕಳಿಗೆ ಅಧಿಕಾರಿಗಳು ಆಟೋ ಸೌಲಭ್ಯ ಒದಗಿಸಿದರು.

    ⚫ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ತೀವ್ರವಾದ ಮಳೆ ಹಿನ್ನೆಲೆಯಲ್ಲಿ ಕೊಪ್ಪ ಮತ್ತು ಶೃಂಗೇರಿ ತಾಲೂಕಿನ ಕೆಲ ಗ್ರಾಮೀಣ ಪ್ರದೇಶದ ಮಕ್ಕಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಅವರ ವಾಹನದಲ್ಲಿ ಕರೆ ತಂದಿದ್ದಾರೆ. ಶೃಂಗೇರಿ ತಾಲೂಕಿನ ಕಿಕ್ರೆ ಗ್ರಾಮದಲ್ಲಿ ಹಳ್ಳ ತುಂಬಿದ್ದು ಗೊತ್ತಾಗಿ ಮಕ್ಕಳ ಚಲನವಲನಕ್ಕೆ ತೊಂದರೆಯಾಗಿರುವುದು ಇಂಟಲಿಜೆಂಟ್ ನವರಿಂದ ಗೊತ್ತಾಗಿ ನಮ್ಮ ಅಧಿಕಾರಿಗಳು ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಬರಲು ವಾಹನ ವ್ಯವಸ್ಥೆ ಮಾಡಿದರು.

    ⚫ ಅಥಣಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಇಬ್ಬರು ಪರೀಕ್ಷಾರ್ಥಿಗಳು ಬೈಕ್ ಸ್ಕಿಡ್ ಆಗಿ ಬಿದ್ದರು. ಅದರಲ್ಲಿ ಮಲ್ಲಿಕಾರ್ಜುನ ಸದಾಶಿವ ಕವಟಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಆಸ್ಪತ್ರೆಗೆ ದಾಖಲಾದ್ದರಿಂದ ಪರೀಕ್ಷೆಗೆ ಬರಲಾಗಲಿಲ್ಲ. ಅವನೊಂದಿಗೆ ಬರುತ್ತಿದ್ದ ಸಹಪಾಠಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪರೀಕ್ಷೆಗೆ ಹಾಜರಾಗಿದ್ದಾನೆ.

    ⚫ ಇಂದೂ ಸಹ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರಾದ ಕು. ಶಿಲ್ಪಾ ಮತ್ತು ಕು. ಸಂಜನಾ ಅವರಿಗೆ ಪರೀಕ್ಷೆಗೆ ಬಂದು ಹೋಗಲು ದೋಣಿಯ ವ್ಯವಸ್ಥೆ ಮಾಡಲಾಗಿತ್ತು. ತಮ್ಮೂರು ಕುರು ದ್ವೀಪ ಪ್ರದೇಶದ ಮನೆಗಳಿಂದ ಈ ಮಕ್ಕಳು ಬೋಟ್ ಮೂಲಕ ಬಂದು ಪರೀಕ್ಷೆ ಬರೆದು ಬೋಟ್ನಲ್ಲಿಯೇ ಹಿಂದಿರುಗಿದರು.

    ⚫ ಮಳೆಯಿಂದಾಗಿ ಮರ ಬಿದ್ದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶೆಂಡೂರಿನ 44 ಮಕ್ಕಳಿಗೆ ಪರೀಕ್ಷೆಗೆ ಬರಲು ತೊಂದರೆಯಾಗಿತ್ತು. ನಮ್ಮ ಅಧಿಕಾರಿಗಳು ಪೊಲೀಸರ ನೆರವಿನಿಂದ ರಸ್ತೆಯಿಂದ ಮರವು ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿದರು.

    ⚫ ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಅಡಿಕೆಕುಳೀ ಮತ್ತು ಮಜಿರೆ ಗ್ರಾಮದ ಕೆಪಿಎಸ್ ಮಂಕಿ ಪರೀಕ್ಷಾ ಕೇಂದ್ರಕ್ಕೆ ಬರುವ ರಸ್ತೆಯಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು. ಸಿಆರ್ಪಿಗಳು ಮತ್ತು ಶಿಕ್ಷಕರ ವಾಟ್ಸ್ ಆಪ್ ಮೂಲಕ ವಿಷಯ ವಿನಿಮಯವಾಗಿ ನಮ್ಮ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ಎಲ್ಲ 36 ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆ ತಂದರು.

    ⚫ ಶಿರಸಿ ತಾಲೂಕಿನ ಬಸ್ ಸೌಲಭ್ಯವಿಲ್ಲದ ಗ್ರಾಮಗಳ ಮಕ್ಕಳಿಗಾಗಿ ಶಿರಸಿಯ ಮಾರಿಕಾಂಬ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ 25 ಆಟೋ ಮತ್ತು 3 ವ್ಯಾನ್ಗಳ ಉಚಿತ ವ್ಯವಸ್ಥೆ ಮಾಡಿ 109 ವಿದ್ಯಾರ್ಥಿಗಳನ್ನು ಕರೆತಂದು ಮತ್ತು ಮನೆಗೆ ವಾಪಾಸು ಕಳಿಸಿ ಔದಾರ್ಯ ತೋರಿದ್ದಾರೆ.

    ⚫ ಜಾಂಡೀಸ್ನಿಂದಾಗಿ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಶಕ್ತಿವೇಲ್ಗೆ ವೈದ್ಯರ ಸಲಹೆಯಂತೆ ಎರಡೂ ದಿನವೂ ಆಸ್ಪತ್ರೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.

    ⚫ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಬೂರದೂರ ಹುಂಡಿ ಗ್ರಾಮದ ಬುಡಕಟ್ಟು ಜನಾಂಗದ ಪ್ರಿಯಾ ಎಂಬ ವಿದ್ಯಾರ್ಥಿನಿ ಕೆಪಿಎಸ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಬಂದಿರಲಿಲ್ಲ. ಇದನ್ನು ಗಮನಿಸಿದ ಮಾರ್ಗಾಧಿಕಾರಿಗಳು ಕೂಡಲೇ ಗ್ರಾಮಕ್ಕೆ ವಾಹನ ಕಳಿಸಿ ಪರೀಕ್ಷೆಗೆ ಕರೆತಂದರು.

    ⚫ ವಿಭಿನ್ನ ಸಾಮಥ್ರ್ಯದ ವಿದ್ಯಾರ್ಥಿ ಬೆಂಗಳೂರಿನ ಕುಮಾರಪಾರ್ಕ್ ವಿದ್ಯಾನಿಕೇತನ ಪ್ರೌಢಶಾಲೆಯ ಎಸ್. ಭರತ್ಗೆ ಮಲ್ಲೇಶ್ವರಂನ ಸ್ಟೆಲ್ಲಾ ಮೆರಿಸ್ ಬಾಲಕಿಯರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದ ನೆಲಮಹಡಿಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಒದಗಿಸಲಾಯಿತು. ನರ್ಸ್ ಒಬ್ಬರ ಸಹಾಯ ಒದಗಿಸಿ ಒಂದು ಗಂಟೆ ಹೆಚ್ಚಿನ ಸಮಯಾವಕಾಶ ನೀಡಲಾಯಿತು.

    ⚫ ಹೀಗೆ ಹಲವಾರು ವಿಶೇಷ ಪ್ರಕರಣಗಳು ನಡುವೆಯೂ ನಮ್ಮ ವಿದ್ಯಾರ್ಥಿಗಳು ಸೇನಾನಿಗಳಾಗಿ ಯುದ್ಧ ಗೆದ್ದಿದ್ದಾರೆ. ಮಕ್ಕಳು- ಪೋಷಕರು ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.

    ⚫ ರಾಜ್ಯದ ಬಹುತೇಕ ಕಡೆಗಳಲ್ಲಿ ಸಂಘ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ವ್ಯವಸ್ಥೆ ಮಾಡಿದ್ದರು.

    ⚫ ಹಲವಾರು ಕಡೆಗಳಲ್ಲಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ಸೌಲಭ್ಯವಿಲ್ಲದೇ ಯಾವೊಬ್ಬ ಅಭ್ಯಯೂ ಪರೀಕ್ಷೆಗೆ ಗೈರು ಹಾಜರಾಗಿಲ್ಲ.

    ⚫ ಯಾವುದೇ ಅಭ್ಯರ್ಥಿ ಪರೀಕ್ಷಾ ಅವ್ಯವಹಾರದಲ್ಲಿ ತೊಡಗಿಲ್ಲ.

    ⚫ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ ಬರೆದ ಅಭ್ಯರ್ಥಿಗಳು- 152

    ⚫ ಸನಿಹದ ಪರೀಕ್ಷಾ ಕೇಂದ್ರಗಳನ್ನು ಆರಿಸಿಕೊಂಡ ವಲಸೆ ವಿದ್ಯಾರ್ಥಿಗಳು- 10693

    ⚫ ವಸತಿ ನಿಲಯಗಳಲ್ಲಿದ್ದು ಪರೀಕ್ಷೆ ಬರೆದವರು – 2870

    ⚫ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.

    ⚫ ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಹಾಜರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

    ⚫ ಮೊನ್ನೆಯ ರೀತಿಯಲ್ಲಿಯೇ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕೇರಳ ಮತ್ತು ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ರಾಜ್ಯಗಳಿಂದ ದಿಂದ ಒಟ್ಟು 706 ಮಕ್ಕಳು ಬಂದು ಪರೀಕ್ಷೆ ಬರೆದಿದ್ದಾರೆ. ಅವರಿಗೆ ಗಡಿ ಪ್ರದೇಶದಿಂದ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. 4 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು.

    ⚫ ಒಟ್ಟಾರೆಯಾಗಿ ಪರೀಕ್ಷೆ ಯಾವುದೇ ವಿಘ್ನಗಳಿಲ್ಲದೇ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಕಾರಣೀಭೂತರಾದ ನಮ್ಮ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಅಧಿಕಾರಿ ವೃಂದಕ್ಕೆ ಸಚಿವರು ಕೃತಜ್ಞತೆ ಸಲ್ಲಿಸಿದರು.

    ⚫ ಕೋವಿಡ್-19 ಸೋಂಕು ಪ್ರಸರಣದಿಂದಾಗಿ ಎಲ್ಲರ ಸಹಕಾರದೊಂದಿಗೆ ಸರಳೀಕೃತವಾಗಿ ಎರಡು ದಿನಗಳ ಕಾಲ ನಡೆಸಲಾದ 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯಲ್ಲಿ ಕೈಗೊಂಡ ಉಪಕ್ರಮಗಳ ಕುರಿತು ಯಶೋಗಾಥೆ ಪುಸ್ತಿಕೆ ಹೊರತರಲಾಗುವುದು.

    ಶಾಲಾರಂಭ:
    ಶಾಲಾರಂಭದ ಕುರಿತ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವ ಸುರೇಶ್ ಕುಮಾರ್ ಈ ಸಂಬಂಧ ಇಲಾಖೆ ರಚಿಸಿರುವ ಟಾಸ್ಕ್ ಫೋರ್ಸ್ ತನ್ನ ಹಂತದಲ್ಲಿ ಸವಿವರವಾಗಿ ಚರ್ಚಿಸಿದ್ದು, ಈ ಕುರಿತಂತೆ ಮುಂದಿನ ದಿನಗಳಲ್ಲಿ ಸಭೆ ಸೇರಿ ಎಲ್ಲ ಆಯಾಮಗಳನ್ನು ಅವಲೋಕಿಸಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

    ಐಟಿಐ ಪಾಸಾದವರಿಗೆ ಆಕ್ಸಿಜನ್‌ ಘಟಕಗಳ ನಿರ್ವಹಣೆ

    ಜಿಲ್ಲಾ, ತಾಲೂಕು ಆಸ್ಪತ್ರೆಗಳು ಸೇರಿದಂತೆ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಮ್ಲಜನಕ ಉತ್ಪಾದಕ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು, ಅವುಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಐಟಿಐ ವಿದ್ಯಾರ್ಥಿಗಳನ್ನೇ ನೇಮಕ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿ ಗುರುವಾರ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಐಟಿಐನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಕ್ಸಿಜನ್‌ ಘಟಕಗಳ ನಿರ್ವಹಣೆ-ಕಾರ್ಯಾಚರಣೆ ಕುರಿತ ಆನ್‌ಲೈನ್‌ ತರಬೇತಿಗೆ ವರ್ಚುಯಲ್‌ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

    ಈಗಾಗಲೇ ರಾಜ್ಯದ ಪ್ರತಿಯೊಂದು ಆಸ್ಪತ್ರೆಯಲ್ಲೀ ಆಕ್ಸಿಜನ್‌ ಘಟಕಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ. ಇದುವರೆಗೆ 350 ಘಟಕಗಳನ್ನು ಅಳವಡಿಸಲಾಗಿದೆ. ಇವುಗಳ ನಿರ್ವಹಣೆಯ  ಹೊಣೆಯನ್ನು ಐಟಿಐ ವಿದ್ಯಾರ್ಥಿಗಳಿಗೆ ವಹಿಸುವುದು ಉತ್ತಮ ಎಂದರು ಡಿಸಿಎಂ.

    ರಾಜ್ಯದಲ್ಲಿ ಹಳೆಯ ಸ್ಥಿತಿಯಲ್ಲಿರುವ 150 ಐಟಿಐಗಳನ್ನು ಉನ್ನತೀಕರಣ ಮಾಡಲು ಟಾಟಾ ಟೆಕ್ನಾಲಜೀಸ್‌ ಜತೆ ಸರಕಾರ ಒಡಂಬಡಿಕೆ ಮಾಡಿಕೊಂಡಿದೆ. ಹೀಗಾಗಿ ಇನ್ನು ಮುಂದೆ ಐಟಿಐ ವಿದ್ಯಾರ್ಥಿಗಳು ಆಕ್ಸಿಜನ್‌ ಘಟಕಗಳನ್ನು ನಿರ್ವಹಿಸುವುದು ಮಾತ್ರವಲ್ಲ, ಆಕ್ಸಿಜನ್‌ ತಯಾರಿಕಾ ಯಂತ್ರಗಳನ್ನು ತಯಾರಿಸುವ ಕುಶಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಡಿಸಿಎಂ ಸಲಹೆ ಮಾಡಿದರು.

    ಕೇಂದ್ರ ಸರಕಾರದ ತರಬೇತಿ ಮಹಾ ನಿರ್ದೇಶನಾಲಯ ಕೈಗೊಂಡಿರುವ ಈ ತರಬೇತಿ ಕಾರ್ಯಕ್ರಮ ಅತ್ಯುತ್ತಮ ಕ್ರಮವಾಗಿದೆ ಎಂದ ಡಿಸಿಎಂ ಹೇಳಿದರು.

    ಕೋವಿಡ್ : ಮಕ್ಕಳ ಮರಣ ದರ ಅತ್ಯಂತ ಕಡಿಮೆ ಮತ್ತು 2-3 ರೋಗಗಳಿರುವ ಮಕ್ಕಳಲ್ಲಿ ಮಾತ್ರ ಸೋಂಕು ಪತ್ತೆ


    ಮಕ್ಕಳ ಮೇಲೆ ಕೋವಿಡ್-19 ಸೋಂಕಿನ ಪರಿಣಾಮಗಳು, ಮಕ್ಕಳನ್ನು ಸಂರಕ್ಷಿಸುವ ಅಗತ್ಯ, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಲಸಿಕೆ ನೀಡಿಕೆಯ ಅಗತ್ಯ ಸೇರಿದಂತೆ ಹಲವು ವಿಷಯಗಳ ಕುರಿತು ನವದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ಮಕ್ಕಳ ವೈದ್ಯಶಾಸ್ತ್ರ (ಪೀಡಿಯಾಟ್ರಿಕ್ಸ್) ವಿಭಾಗದ ನಿರ್ದೇಶಕ ಡಾ. ಪ್ರವೀಣ್ ಕುಮಾರ್ ಅವರು ಇಲ್ಲಿ ಮಾತನಾಡಿದ್ದಾರೆ.


    ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯದ ಮೇಲೆ ಕೋವಿಡ್-19 ಸಾಂಕ್ರಾಮಿಕ ಸೋಂಕು ಹೇಗೆ ಪರಿಣಾಮ ಬೀರುತ್ತದೆ? ದೀರ್ಘಕಾಲದಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಏನೆಲ್ಲಾ ಮಾಡಬೇಕಿದೆ?

    ಕೋವಿಡ್-19 ಸಾಂಕ್ರಾಮಿಕ ಸೋಂಕು ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು. ಹಾಗಾಗಿ, ಮಕ್ಕಳನ್ನು 1 ವರ್ಷಕ್ಕಿಂತ ಹೆಚ್ಚಿನ ಕಾಲ ಮನೆಯಲ್ಲೇ ಕಾಪಾಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ಕುಟುಂಬದಲ್ಲಿ ಅನಾರೋಗ್ಯ, ಪೋಷಕರಿಗೆ ಆದಾಯ ನಷ್ಟ ಇತ್ಯಾದಿ ವಿಷಯಗಳು ಆರೋಗ್ಯ ಒತ್ತಡವನ್ನು ಹೆಚ್ಚಿಸುತ್ತವೆ. ಮಕ್ಕಳು ಮಾನಸಿಕ ತುಮುಲ ಅಥವಾ ದುಃಖ ಅಥವಾ ಅಸ್ವಸ್ಥತೆ ವ್ಯಕ್ತಪಡಿಸಬಹುದು. ಪ್ರತಿ ಮಗು ವಿಭಿನ್ನವಾಗಿ ವರ್ತಿಸಬಹುದು. ಕೆಲವು ಮಕ್ಕಳು ಅತಿ ಕೋಪ ಹಾಗೂ ಅತಿ ಚುರುಕುತನ ತೋರಿದರೆ, ಮತ್ತೆ ಕೆಲವು ಮೌನಕ್ಕೆ ಶರಣಾಗಬಹುದು.

    ಹಾಗಾಗಿ, ಪೋಷಕರು ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸಬೇಕು, ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳ ಮನಸ್ಥಿತಿಯಲ್ಲಿ ಕಂಡುಬರುವ ಒತ್ತಡ, ಆಲಸ್ಯ ಮತ್ತಿತರ ಸೂಚನೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅತೀವ ಆತಂಕ, ದುಃಖ, ಖಿನ್ನತೆ, ಅನಾರೋಗ್ಯಕರ ಆಹಾರ ಸೇವನೆ ಮತ್ತು ನಿದ್ರೆ ಹವ್ಯಾಸಗಳನ್ನು ಗಮನಿಸುತ್ತಿರಬೇಕು. ಮಕ್ಕಳ ಗಮನ ಮತ್ತು ಏಕಾಗ್ರತೆಯ ತೊಂದರೆಗಳನ್ನು ಗಮನಿಸುತ್ತಿರಬೇಕು. ಮಕ್ಕಳಿಗೆ ಎದುರಾಗುವ ಒತ್ತಡಗಳನ್ನು ನಿಭಾಯಿಸಲು ಮತ್ತು ಆತಂಕಗಳನ್ನು ನಿವಾರಿಸಲು ಕುಟುಂಬ ಸದಸ್ಯರು ಮತ್ತು ಪೋಷಕರು ಬೆಂಬಲ ನೀಡುವ ಅಗತ್ಯವಿದೆ.

    ಭವಿಷ್ಯದ ಕೋವಿಡ್-19 ಅಲೆಗಳು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಎಂದು ನಿಮಗನಿಸುತ್ತಿದೆಯೇ? ಯಾವುದೇ ರೀತಿಯ ಕೋವಿಡ್-19 ಭವಿಷ್ಯದ ಅಲೆಗಳನ್ನು ಸಮರ್ಥವಾಗಿ ಎದುರಿಸಲು ದೇಶ ಹೇಗೆ ಸಜ್ಜಾಗಬೇಕು? ಮಕ್ಕಳು ರೋಗಿಗಳಿಗೆ ಗುಣಮಟ್ಟದ ಸಂರಕ್ಷಣೆ ಒದಗಿಸುವುದು ಹೇಗೆ?

    ನಮಗೆಲ್ಲಾ ಗೊತ್ತಿರುವಂತೆ, ಕೋವಿಡ್-19 ಹೊಸ ಸೋಂಕು, ಅದು ರೂಪಾಂತರವಾಗುವ ಸಾಮರ್ಥ್ಯ ಹೊಂದಿದೆ. ಮಕ್ಕಳ ಆರೋಗ್ಯದ ಮೇಲೆ ಭವಿಷ್ಯದ ಅಲೆಗಳು ವ್ಯತಿರಿಕ್ತ ಪರಿಣಾಮ ಬೀರುತ್ತವೆ ಅಥವಾ ಸೋಂಕಿನ ತೀವ್ರತೆ ಮತ್ತಷ್ಟು ಹಚ್ಚಾಗುತ್ತದೆ ಎಂಬ ವಿಷಯಗಳೆಲ್ಲಾ ಕೇವಲ ವದಂತಿ ಅಥವಾ ಊಹಾಪೋಹದಿಂದ ಕೂಡಿವೆ. ಮುಂದಿನ ಕೆಲವು ತಿಂಗಳುಗಳಲ್ಲಿ ಹೆಚ್ಚಿನ ಪ್ರಮಾಣದ ವಯಸ್ಕರಿಗೆ ಲಸಿಕೆ ನೀಡುವುವುದರಿಂದ ಭವಿಷ್ಯದ ಅಲೆಗಳು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂದು ಜನರು ವದಂತಿಗಳನ್ನು ಹರಡುತ್ತಿದ್ದಾರೆ. ಆದರೆ ಈ ಸಮಕಾಲೀನ ಸಂದರ್ಭದಲ್ಲಿ ಮಕ್ಕಳಿಗೆ ಯಾವುದೇ ಅನುಮೋದಿತ ಲಸಿಕೆ ನಮ್ಮಲ್ಲಿಲ್ಲ ಎಂಬುದು ವಾಸ್ತವ.

    ಕೋವಿಡ್-19 ಸೋಂಕು ಭವಿಷ್ಯದಲ್ಲಿ ನಮ್ಮ ಮಕ್ಕಳ ಮೇಲೆ ಹೇಗೆ ವರ್ತಿಸುತ್ತದೆ ಮತ್ತು ಪರಿಣಾಮ ಬೀರುತ್ತದೆ ಎಂಬುದು ನಮಗಾರಿಗೂ ಗೊತ್ತಿಲ್ಲ. ಆದರೆ ಈ ಸಾಂಕ್ರಾಮಿಕ ಸೋಂಕಿನಿಂದ ನಮ್ಮ ಮಕ್ಕಳನ್ನು ನಾವು ಸಂರಕ್ಷಿಸಿಕೊಳ್ಳಬೇಕು. ವಯಸ್ಕರು ಮನೆಯಲ್ಲಿ ಕೋವಿಡ್-19 ಸೂಕ್ತ ನಡವಳಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಕ್ಕಳಿಗೆ ಬೇಗ ಸೋಂಕು ಹರಡುವ ಲಕ್ಷಣಗಳಿರುವುದರಿಂದ ಹಾಗೂ ಅವರು ಬೇರೆಯವರಿಗೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮಕ್ಕಳನ್ನು ಸಾರ್ವಜನಿಕ ಸಭೆ, ಸಮಾರಂಭ, ಕಾರ್ಯಕ್ರಮದಂತಹ ಸಾಮಾಜಿಕ ತೊಡಗಿಸಿಕೊಳ್ಳುವಿಕೆಯಿಂದ ದೂರವಿಡಬೇಕು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವಂತೆ ವಯಸ್ಕರು ತಿಳಿ ಹೇಳಬೇಕು. ಎಲ್ಲಾ ವಯಸ್ಕರು ಆದಷ್ಟು ಬೇಗ ಕಡ್ಡಾಯವಾಗಿ ಕೋವಿಡ್-19 ಲಸಿಕೆ ತೆಗೆದುಕೊಂಡರೆಸ ಮನೆಯ ಮಕ್ಕಳನ್ನು ದೊಡ್ಡ ಮಟ್ಟದಲ್ಲಿ ಸಂರಕ್ಷಿಸಲು ಸಾಧ್ಯವಾಗಲಿದೆ.

    ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೂ ಇದೀಗ ಲಸಿಕೆ ಲಭ್ಯವಾಗುತ್ತಿದೆ. ಇವರು ಲಸಿಕೆ ಪಡೆಯವುದರಿಂದ ಬೆಳೆಯುತ್ತಿರುವ ಭ್ರೂಣ ಮತ್ತು ನವಜಾತ ಶಿಶುಗಳನ್ನು ಮಾರಣಾಂತಿಕ ಸೋಂಕಿನಿಂದ ಸಂರಕ್ಷಿಸಲು ಸಾಧ್ಯವಾಗಲಿದೆ.

    ಕೋವಿಡ್-19 2ನೇ ಅಲೆಯ ಸೋಂಕು ಮಕ್ಕಳ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ?

    ಕೋವಿಡ್-19 2ನೇ ಲೆಯ ಸೋಂಕು ಮಕ್ಕಳಿಗೂ ಸಮಾನವಾಗಿ ಪರಿಣಾಮ ಬೀರಿದೆ. ಕೋವಿಡ್-19 ಹೊಸ ರೋಗಾಣು. ಹಾಗಾಗಿ, ಇದು ಎಲ್ಲ ವಯಸ್ಸಿನ ಜನರ ಮೇಲೂ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ. ಏಕೆಂದರೆ, ನಮ್ಮೆಲ್ಲರಿಗೆ ಹೊಸ ರೋಗಾಣು ನಿಯಂತ್ರಿಸುವ ಸ್ವಾಭಾವಿಕ ರೋಗ ನಿರೋಧಕ ಶಕ್ತಿ ಇರುವುದಿಲ್ಲ. ಎನ್‌ಸಿಡಿಸಿ / ಐಡಿಎಸ್‌ಪಿ ವರದಿಯ (ಡ್ಯಾಶ್‌ಬೋರ್ಡ್‌) ಪ್ರಕಾರ, 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೋಗಿಗಳಿಂದಲೇ ಸರಿಸುಮಾರು 12% ಜನರಿಗೆ ಕೋವಿಡ್ ಸೋಂಕು ಹರಡಿದೆ.

    ಮಕ್ಕಳು ಮತ್ತು ವಯಸ್ಕರಲ್ಲಿ ಪಾಸಿಟಿವಿಟಿ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದು ಇತ್ತೀಚಿನ ಸಮೀಕ್ಷೆಗಳಿಂದ ತಿಳಿದುಬಂದಿದೆ. ಆದಾಗ್ಯೂ, ಮೊದಲ ಅಲೆಗಿಂತ 2ನೇ ಅಲೆಯಲ್ಲಿ ಹೆಚ್ಚಿನ ಪ್ರಮಾಣದ ಜನರಿಗೆ ಸೋಂಕು ಹರಡಿದ ಪರಿಣಾಮ, ಹೆಚ್ಚಿನ ಸಂಖ್ಯೆಯ ಮಕ್ಕಳಲ್ಲೂ ಕೋವಿಡ್-19 ಸೋಂಕು ಕಾಣಿಸಿಕೊಂಡಿತು. ಆದರೆ ಇದುವರೆಗೆ, ವಯಸ್ಕರಿಗೆ ಹೋಲಿಸಿದರೆ, ಮಕ್ಕಳ ಮರಣ ಪ್ರಮಾಣ ಅತ್ಯಂತ ಕಡಿಮೆ ಮತ್ತು 2-3 ರೋಗಗಳನ್ನು ಹೊಂದಿರುವ ಮಕ್ಕಳೇ ಹೆಚ್ಚಾಗಿ ಕೋವಿಡ್ ಸೋಂಕಿಗೆ ತುತ್ತಾಗುತ್ತಿದ್ದಾರೆ.

    ಮಕ್ಕಳು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ನೀವು ಯಾವೆಲ್ಲಾ ಸವಾಲುಗಳನ್ನು ಎದುರಿಸಿದಿರಿ, ಅದರಲ್ಲೂ ವಿಶೇಷವಾಗಿ ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ ಪಡೆಯುವ ರೋಗಿಗಳು?

    ಕೋವಿಡ್-19 ಸೋಂಕಿತ ಮಕ್ಕಳಿಗಾಗಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಿ, ಮೀಸಲಿರಿಸುವ ಮೂಲಕ ನಾವು ಮಕ್ಕಳ ಆರೋಗ್ಯ ಸಮಸ್ಯೆಯನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಯಿತು. ಆದಾಗ್ಯೂ, ಕೋವಿಡ್-19 2ನೇ ಅಲೆ ದೇಶಾದ್ಯಂತ ವ್ಯಾಪಕವಾದ ಕಾಲಘಟ್ಟದಲ್ಲಿ ನಾವು ಕೆಲವು ಸವಾಲುಗಳನ್ನು ಎದುರಿಸಬೇಕಾಯಿತು. ಆಸ್ಪತ್ರೆಯ ಹಲವು ಹಿರಿಯ ವೈದ್ಯರು, ಸ್ಥಾನಿಕ ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಎಲ್ಲಾ ರೋಗಿಗಳಿಗೆ ವಾಸ್ತವ್ಯ ಕಲ್ಪಿಸಲು ನಾವು ಸವಾಲುಗಳನ್ನು ಎದುರಿಸಬೇಕಾಯಿತು.

    ಎಂಐಎಸ್-ಸಿ ಎಂದರೇನು? ಎಂಐಸ್-ಸಿ ಪ್ರಕರಣಗಳಿಗೆ ಚಿಕಿತ್ಸೆ ನೀಡುವಾಗ ಎದುರಿಸಿದ ಪರಸ್ಥಿತಿ ಮತ್ತು ಸವಾಲುಗಳನ್ನು ವಿಸ್ತಾರವಾಗಿ ವಿವರಿಸಿ? ರೋಗಿಗಳು ಎಂಐಎಸ್-ಸಿ ರೋಗ ಮತ್ತು ಚಿಕಿತ್ಸೆ ಬಗ್ಗೆ ಜಾಗೃತರಾಗಬೇಕು ಎಂದು ನಿಮಗನಿಸುತ್ತಿದೆಯೇ?

    ಬಹು ವ್ಯವಸ್ಥೆಯ ಉರಿಯೂತ ರೋಗ ಲಕ್ಷಣವನ್ನು ಎಂಐಎಸ್-ಸಿ ಎಂದು ಕರೆಯಲಾಗುತ್ತದೆ. ಇದು ಹೊಸ ರೋಗ ಲಕ್ಷಣವಾಗಿದ್ದು, ಮಕ್ಕಳು ಮತ್ತು ಹದಿಹರೆಯದವರಲ್ಲಿ (0-19 ವರ್ಷದವರು) ಕಾಣಿಸಿಕೊಳ್ಳುತ್ತಿದೆ. ಕೋವಿಡ್-19 2ನೇ ಅಲೆಯ ಸೋಂಕು ವ್ಯಾಪಕವಾದಾಗ ಸೋಂಕಿತ ಜನರು ಗುಣಮುಖರಾದ 2-6 ವಾರಗಳ ನಂತರ ಎಂಐಎಸ್-ಸಿ ರೋಗ ಲಕ್ಷಣಗಳು ಪತ್ತೆಯಾಗಿವೆ.

    ಮೂರು ವಿಧದ ಕ್ಲಿನಿಕಲ್ ಕೋರ್ಸ್|ಗಳಲ್ಲಿ ರೋಗ ಲಕ್ಷಣ ವಿವರಿಸಲಾಗಿದೆ: ನಿಲ್ಲದ ಜ್ವರದ ಜತೆಗೆ ಉರಿಯೂತ ಹೆಚ್ಚಳ, ಆಘಾತ, ರಕ್ತನಾಳಗಳ ಊದು, ಎಡ ಕುಹರ(ಲೆಫ್ಟ್ ವೆಂಟ್ರಿಕಲ್)ದಲ್ಲಿ ದೋಷ ಅಥವಾ ಹಾನಿ ಸಮಸ್ಯೆಗಳು ಕಂಡುಬರುತ್ತವೆ. ಎಂಐಎಸ್-ಸಿ ರೋಗ ಲಕ್ಷಣ ಪತ್ತೆ ಮಾಡಲು, ಸುಧಾರಿತ ರೋಗ ಪತ್ತೆ ಅತ್ಯಗತ್ಯ. ಎಲ್ಲಾ ಶಂಕಿತ ಪ್ರಕರಣಗಳನ್ನು ಎಚ್|ಡಿಯು/ಐಸಿಯು ಸೌಲಭ್ಯಗಳಿರುವ ತೃತೀಯ ಆರೈಕೆಯ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುತ್ತದೆ ರೋಗ ಲಕ್ಷಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ, ಚಿಕಿತ್ಸೆ ನೀಡಿ ಗುಣಪಡಿಸಬಹುದು.(PIB)


    ರಾಮನಗರ ಮಾವು ಸಂಸ್ಕರಣಾ ಘಟಕ, ಹೈಟೆಕ್ ರೇಷ್ಮೆ ‌ಮಾರುಕಟ್ಟೆ ಯೋಜನೆಗೆ ಡಿಸೆಂಬರ್‌ನಲ್ಲಿ ಕಾರ್ಯಾದೇಶ

    ರಾಮನಗರ ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಮಾವು ಸಂಸ್ಕರಣಾ ಘಟಕ ಹಾಗೂ ಹೈಟೆಕ್ ರೇಷ್ಮೆ ‌ಮಾರುಕಟ್ಟೆ ನಿರ್ಮಾಣ ಯೋಜನೆಗಳಿಗೆ ಅಕ್ಟೋಬರ್‌ನಲ್ಲಿ ಸಮಗ್ರ ಯೋಜನಾ ವರದಿ (DPR)‌ ಅಂತಿಮಗೊಳಿಸಿ ಡಿಸೆಂಬರ್‌ನಲ್ಲಿ ಟೆಂಡರ್‌ ಕರೆದು ಕಾರ್ಯಾದೇಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಈ ಎರಡೂ ಯೋಜನೆಗಳಿಗೆ ಸಂಬಂಧಿಸಿದಂತೆ ರೇಷ್ಮೆ ಖಾತೆ ಸಚಿವ ಆರ್.‌ಶಂಕರ್‌, ಚನ್ನಪಟ್ಟಣ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಗಡಿ ಶಾಸಕ ಮಂಜುನಾಥ್‌ ಹಾಗೂ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ ನಂತರ ಮಾಧ್ಯಮಗಳ ಜತೆ ಡಿಸಿಎಂ ಮಾತನಾಡಿದರು.

    ರಾಮನಗರ ಜಿಲ್ಲೆಗೆ ಇವೆರಡೂ ಯೋಜನೆಗಳು ಬಹಳ ಉಪಯುಕ್ತವಾಗುತ್ತವೆ. ರೈತರಿಗೆ ಒಳ್ಳೆಯದಾಗಲಿದೆ ಎಂದ ಅವರು, ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಮುಗಿಸಲಾಗುವುದು ಎಂದರು.

    ಮಾವು ಸಂಸ್ಕರಣಾ ಘಟಕ:ಬೈರಾಪಟ್ಟಣದಲ್ಲಿ ಗುರುತಿಸಲಾಗಿರುವ ಒಟ್ಟು 40 ಎಕರೆ ಪ್ರದೇಶವಿದ್ದು, ಮೊದಲ ಹಂತದಲ್ಲಿ 15 ಎಕರೆಯ 4 ಎಕರೆ ಪ್ರದೇಶದಲ್ಲಿ ಸಾಮಾನ್ಯ ಸೌಲಭ್ಯಗಳನ್ನು ಕಲ್ಪಿಸಿ ಉಳಿದ ಜಾಗದಲ್ಲಿ ಆಹಾರ ಸಂಸ್ಕರಣಾ ಕ್ಲಸ್ಟರ್‌ ಮಾಡಲಾಗುವುದು. ಇದರಲ್ಲಿಯೇ ಮಾವು ಸಂಸ್ಕರಣಾ ಘಟಕ ಕೂಡ ಬರುತ್ತದೆ. ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಐದು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

    ರಫ್ತಾರ್‌ ಯೋಜನೆ ಅಡಿಯಲ್ಲಿ 10 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ಕೇಂದ್ರವನ್ನು  ಕೋರಲಾಗಿದೆ. ಈಗಾಗಲೇ ಯೋಜನೆಗೆ ಪ್ರಾಥಮಿಕ ಒಪ್ಪಿಗೆ ಪಡೆಯಲಾಗಿದೆ. ಅಂತಿಮ ಒಪ್ಪಿಗೆಯ ಪ್ರಕ್ರಿಯೆಗಳಷ್ಟೇ ಬಾಕಿ. ಈ ಯೋಜನೆಗೆ ಖಾಸಗಿ ಕ್ಷೇತ್ರದಿಂದ 500 ಕೋಟಿ ರೂ. ಹೂಡಿಕೆ ಅಗತ್ಯವಿದ್ದು, ಹೂಡಿಕೆ ಮಾಡಿದವರಿಗೆ ಶೇ.40ರಷ್ಟು ಸಬ್ಸಿಡಿ ದೊರೆಯುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    20 ಎಕರೆಯಲ್ಲಿ ಹೈಟೆಕ್‌ ರೇಷ್ಮೆ ಮಾರುಕಟ್ಟೆ:ಚನ್ನಪಟ್ಟಣ ಸಮೀಪದ ರೇಷ್ಮೆ ತರಬೇತಿ ಕೇಂದ್ರದಲ್ಲಿರುವ 20 ಎಕರೆ ಜಾಗದಲ್ಲಿ ಹೈಟೆಕ್‌ ರೇಷ್ಮೆ ಮಾರುಕಟ್ಟೆ ನಿರ್ಮಾಣವಾಗಲಿದೆ. ನಬಾರ್ಡ್‌ನಿಂದ 75 ಕೋಟಿ ರೂ. ಆರ್ಥಿಕ ನೆರವು ಸಿಗುತ್ತಿದೆ. ಮುಂಗಡ ಪತ್ರದಲ್ಲಿ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಇವತ್ತಿನ ಸಭೆಯಲ್ಲಿ ನಾಲ್ವರು ಆರ್ಕಿಟೆಕ್ಟ್‌ಗಳು ಯೋಜನೆಯ ಪ್ರಾತ್ಯಕ್ಷಿಕೆ ನೀಡಿದರು ಎಂದು ಡಿಸಿಎಂ ಹೇಳಿದರು. 

    ಈ ಸಭೆಯಲ್ಲಿ ಶಾಸಕ ಸಾ.ರಾ.ಮಹೇಶ್‌, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ, ಮೂಲಸೌಕರ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪಿಲ್‌ ಮೋಹನ್‌, ಡಿಸಿಎಂ ಅವರ ಕಾರ್ಯದರ್ಶಿ ಪ್ರದೀಪ್‌, ರಾಮನಗರ ಜಿಲ್ಲಾಧಿಕಾರಿ ರಾಕೇಶ್‌ಕುಮಾರ, ಸಿಇಒ ಇಕ್ರಂ ಮುಂತಾದವರು ಭಾಗಿಯಾಗಿದ್ದರು.

    ಮಂಚನಬೆಲೆ ಜಲಾಶಯದ ಬಳಿ ಜಂಗಲ್ ಲಾಡ್ಜ್ ರೆಸಾರ್ಟ್ ನಿರ್ಮಾಣ: 10 ಎಕರೆ ಕಂದಾಯ ಜಮೀನು ಹಸ್ತಾಂತರಿಸಲು ಸೂಚನೆ

    ಮಾಗಡಿಯ ಮಂಚನಬೆಲೆ ಜಲಾಶಯದ ಸಮೀಪ ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸಲು ಅರಣ್ಯ, ವಸತಿ ಮತ್ತು ವಿಹಾರಧಾಮ (ಜೆ.ಎಲ್.ಆರ್.) ವತಿಯಿಂದ ಸುಸಜ್ಜಿತ ರೆಸಾರ್ಟ್ಗಳನ್ನು ನಿರ್ಮಾಣ ಮಾಡುವ ಸಂಬಂಧ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ ಅವರು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಪ್ರವಾಸೋದ್ಯಮ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಗಳ ಜೊತೆ ಸಭೆ ನಡೆಸಿದರು.

    ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾದ ಸಿಂಧು ಬಿ. ರೂಪೇಶ್, ಜೆ.ಎಲ್.ಆರ್. ವ್ಯವಸ್ಥಾಪಕ ನಿರ್ದೇಶಕರಾದ ಕುಮಾರ್ ಪುಷ್ಕರ್, ಕೆ.ಎಸ್.ಟಿ.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕರಾದ ವಿಜಯ್ ಶರ್ಮ, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಂಕರೇಗೌಡರು, ರಾಮನಗರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಹಾಗೂ ಸಿ.ಇ.ಓ. ಇಕ್ರಂ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಮಂಚನಬೆಲೆ ಜಲಾಶಯ ಪ್ರದೇಶವನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಬೆಂಗಳೂರಿಗೆ ಅತ್ಯಂತ ಹತ್ತಿರವಾಗಿರುವ ಈ ಪ್ರವಾಸಿ ತಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸಿ ಸ್ನೇಹಿಯಾಗಿ ಮಾಡಿದರೆ ಜನ ಸಾಮಾನ್ಯರು ಬರುತ್ತಾರೆ ಎಂದು ಸಚಿವರು ಹೇಳಿದರು.

    ಮಂಚನಬೆಲೆ ಜಲಾಶಯದಲ್ಲಿ ನಿರ್ಮಾಣ ಮಾಡುವ ಜಂಗಲ್ ಲಾಡ್ಜ್ ರೆಸಾರ್ಟ್ ಪರಿಸರ ಸ್ನೇಹಿಯಾಗಿರಬೇಕು. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಹಾಗೂ ಜಲಾಶಯಕ್ಕೆ ಯಾವುದೇ ರೀತಿ ಧಕ್ಕೆ ಉಂಟಾಗದಂತೆ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 10 ಎಕರೆ ಕಂದಾಯ ಜಮೀನನ್ನು ಜಂಗಲ್ ಲಾಡ್ಜ್ಸ್ ಗೆ ನೀಡುವಂತೆ ರಾಮನಗರ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು. ಇನ್ನೆರಡು ದಿನಗಳಲ್ಲಿ ಸ್ಥಳಕ್ಕೆ ತೆರಳಿ ಜಮೀನನ್ನು ವರ್ಗಾಯಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

    ಕಳೆದ ವಾರ ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆ ಸಚಿವರಾದ ನಾರಾಯಣಗೌಡರ ಜೊತೆ ಕೆ.ಆರ್.ಎಸ್. ಗೆ ತೆರಳಿದ್ದಾಗ 40 ಕಿ.ಮೀ. ಕೆ.ಆರ್.ಎಸ್. ಹಿನ್ನೀರಿನಲ್ಲಿ ಸ್ಪೀಡ್ ಬೋಟ್ನಲ್ಲಿ ತೆರಳಿದ್ದಾಗಿ ತಿಳಿಸಿದ ಸಚಿವ ಯೋಗೇಶ್ವರ್ ಸುಮಾರು 3 ದ್ವೀಪಗಳನ್ನು ತಾವು ವೀಕ್ಷಿಸಿದ್ದಾಗಿ ಹೇಳಿದರು. ಇಲ್ಲಿ ಜಲ ಕ್ರೀಡೆಗಳನ್ನು ಆರಂಭಿಸಬೇಕೆಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಅವರಿಗೆ ಹೇಳಿದರು.

    ಕೆ.ಆರ್.ಎಸ್. ಹಿನ್ನೀರಿನಲ್ಲಿ 330 ಎಕರೆ ಜಮೀನಿದೆ ಹಾಗೂ ಅತ್ಯಂತ ಪುರಾತನವಾದ ವೇಣುಗೋಪಾಲ ದೇವಾಲಯವಿದೆ. ಕೆ.ಆರ್.ಎಸ್. ಜಲಾಶಯದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದ್ದು, ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಭೆಗಳು ನಡೆಯುತ್ತಿವೆ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ರವರು ತಿಳಿಸಿದರು.

    ಪ್ರವಾಸೋದ್ಯಮ ಇಲಾಖೆಯಿಂದ ಜಲಕ್ರೀಡೆಗಳನ್ನು ಆರಂಭಿಸಲು ಸಹ ಅಗತ್ಯ ಕ್ರಮ ಕೈಗೊಳ್ಳಿ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ರವರಿಗೆ ಇದೇ ವೇಳೆ ತಿಳಿಸಿದರು.

    ರಾಜ್ಯ ಸರಕಾರಿ ನೌಕರರಿಗೆ ಬಾಕಿ ಉಳಿದ ತುಟ್ಟಿ ಭತ್ಯೆಯ ಕಂತುಗಳನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಆದೇಶ

    ರಾಜ್ಯ ಸರಕಾರಿ ನೌಕರರಿಗೆ ಬಾಕಿ ಉಳಿದ ತುಟ್ಟಿ ಭತ್ಯೆಯ ಕಂತುಗಳನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಗಳವಾರ ಆದೇಶ ನೀಡಿದ್ದಾರೆ.

    ಹಣಕಾಸು ಇಲಾಖೆಯ ಅಪರ ಕಾರ್ಯದರ್ಶಿಗಳಿಗೆ ಈ ಸಂಬಂಧದ ಕಡತ ಮಂಗಳವಾರ ಸಂಜೆ ರವಾನೆಯಾಗಿದೆ. ಈ ಹಿಂದೆ ಇದಕ್ಕೆ ಒಪ್ಪಿಗೆ ನೀಡದ ಮುಖ್ಯಮಂತ್ರಿಗಳು ದೇಶದ ಹಲ ರಾಜ್ಯಗಳಲ್ಲಿ ಸರ್ಕಾರಿ ನೌಕರರ ವೇತನದಲ್ಲೇ ಕಡಿತ ಮಾಡಲಾಗಿದೆ.ಆದರೆ ನಾವು ಕಡಿತ ಮಾಡಿಲ್ಲ ಎಂದು ಈ ಬಗ್ಗೆ ಸಲ್ಲಿಸಿದ್ದ ಮನವಿಗೆ ಮಾರ್ಮಿಕ ಸಂದೇಶ ನೀಡಿದ್ದರು ಎಂದು ಮೂಲಗಳು ಹೇಳಿವೆ.

    ಆದರೆ, ಇಂದು ವಿಧಾನಸೌಧಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು ತುಟ್ಟಿಭತ್ಯೆ ಸಂಬಂಧದ ಕಡತವನ್ನು ತರಿಸಿಕೊಂಡು ಅದಕ್ಕೆ ಸಹಿ ಹಾಕಿದರು. ಸರಕಾರಿ ನೌಕರರಿಗೆ ನೀಡಬೇಕಿರುವ ಬಾಕಿ ತುಟ್ಟಿ ಭತ್ಯೆಯನ್ನು ಮಂಜೂರು ಮಾಡುವಂತೆ ಷರಾ ಬರೆದರು ಎಂದು ಮೂಲಗಳು ತಿಳಿಸಿವೆ.

    ರಾಜ್ಯ ಸರ್ಕಾರಿ ನೌಕರರಿಗೆ ಶೇ.11 % ತುಟ್ಟಿಭತ್ಯೆ ಬಿಡುಗಡೆ- ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಸಿಎಂಗೆ ಅಭಿನಂದನೆ

    ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1, 2021 ರಿಂದ ಶೇ.11% ತುಟ್ಟಿಭತ್ಯೆ ಬಿಡುಗಡೆಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಆದೇಶ ಹೊರಡಿಸಿದ್ದಾರೆ. ಇದರಿಂದ 6.00 ಲಕ್ಷ ರಾಜ್ಯ ಸರ್ಕಾರಿ ನೌಕರರು, 4.50 ಲಕ್ಷ ಪಿಂಚಣಿದಾರರು, 3.00 ಲಕ್ಷ ನಿಗಮ – ಮಂಡಳಿಗಳ ನೌಕರರು ಆರ್ಥಿಕ ಸೌಲಭ್ಯ ಪಡೆಯಲಿದ್ದಾರೆ. ಹಣಕಾಸು ಇಲಾಖೆ ಇನ್ನು 2-3 ದಿನಗಳಲ್ಲಿ ಆದೇಶ ಹೊರಡಿಸಲಿದ್ದು, ರಾಜ್ಯದ ಎಲ್ಲಾ ನೌಕರರಿಗೆ ಜುಲೈ 1, 2021 ರಿಂದ ಮಂಜೂರಾಗುವ ತುಟ್ಟಿಭತ್ಯೆಯು ಮೂಲ ವೇತನದಲ್ಲಿ ಸೇರ್ಪಡೆಗೊಳ್ಳಲಿದೆ. ಈ ಆದೇಶ ನೀಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅಭಿನಂದಿಸಿದ್ದಾರೆ.

    ರಾಜ್ಯದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಜನವರಿ 1, 2020 ರಿಂದ ತಡೆಹಿಡಿಯಲಾಗಿದ್ದ ಮೂರು ಕಂತುಗಳ ತುಟ್ಟಿಭತ್ಯೆಯನ್ನು ಮಂಜೂರು ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತ್ತು.

    ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಜುಲೈ 1, 2021 ರಿಂದ ಅನ್ವಯವಾಗುವಂತೆ ಶೇ. 11% ತುಟ್ಟಿಭತ್ಯೆ ಮಂಜೂರು ಮಾಡಿದೆ. ಅದೇ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ಸಹ ಶೇ. 11% ತುಟ್ಟಿಭತ್ಯೆ ಮಂಜೂರು ಮಾಡಲು ಸಂಘವು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಜುಲೈ 1, 2021 ರಿಂದ ಅನ್ವಯಗೊಳ್ಳುವಂತೆ ಬಾಕಿ ಇರುವ ಶೇ.11% ರಷ್ಟು ತುಟ್ಟಿಭತ್ಯೆ ಮಂಜೂರು ಮಾಡಲು ಆರ್ಥಿಕ ಇಲಾಖೆಗೆ ಆದೇಶಿಸಿದ್ದಾರೆ.

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸಂಪುಟದ ಎಲ್ಲಾ ಸಚಿವರು, ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘವು ಧನ್ಯವಾದ ಸಲ್ಲಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    error: Content is protected !!