ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದು ಖ್ಯಾತಿ ಗಳಿಸಿದ್ದ ನಟಿ ಜಯಂತಿ ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ನಿಧನರಾದರು. ಕೆಲಕಾಲದದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 76 ವರ್ಷ ವಯಸ್ಸಾಗಿತ್ತು.
1968ರಲ್ಲಿ ತೆರೆ ಕಂಡ ವೈ.ಅರ್. ಸ್ವಾಮಿ ನಿರ್ದೇಶನದ ಜೇನು ಗೂಡು ಚಿತ್ರದ ಮೂಲಕ ಚಿತ್ರ ರಂಗ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು ಕಮಲ ಕುಮಾರಿ. ಅದಕ್ಕಿಂತ ಮುನ್ನ ಜಗದೇಕ ವೀರನ ಕಥೆ ಚಿತ್ರದಲ್ಲಿ ಸಣ್ಣ ಪಾತ್ರ ವೊಂದರಲ್ಲಿ ಅಭಿನಯಿಸಿದ್ದರು. ಒಟ್ಟು ಆರು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಜಯಂತಿ ಕನ್ನಡದ 190 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ನಿರ್ಮಾಪಕಿ , ನಿರ್ದೇಶಕಿಯೂ ಆಗಿದ್ದ ಜಯಂತಿ ಅವರಿಗೆ 1965ರ ಮಿಸ್ ಲೀಲಾವತಿ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ.ಎರಡು ಮುಖ(1969),ಮನಸ್ಸಿನಂತೆ ಮಾಂಗಲ್ಯ(1976),ಧರ್ಮ ದಾರಿ ತಪ್ಪಿತು(1981),ಮಸಣದ ಹೂವು (1985),ಆನಂದ್ (1986) ಚಿತ್ರಗಳ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ.
ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿಯವರು ಕಾಮತೃಷೆಯಿಂದ ಬಳಲುವ ಹೆಣ್ಣಾಗಿ ಮೊದಲ ಭಾರಿಗೆ ವಿಶಿಷ್ಟ ಅಭಿನಯ ನೀಡಿದ್ದಾರೆ.
ಅವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದದ್ದು ಕನ್ನಡ ಚಿತ್ರರಂಗ ಒಬ್ಬ ಪ್ರತಿಭಾವಂತ ಕಲಾವಿದೆಯನ್ನು ಕಳೆದುಕೊಂಡಂತಾಗಿದೆ ಎಂದು ದುಃಖಿಸಿದ್ದಾರೆ.
ಪ್ರಖ್ಯಾತ ಹಿರಿಯ ಕಲಾವಿದೆ, ಅಭಿನಯ ಶಾರದೆ ಜಯಂತಿ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬ, ಅಪಾರ ಅಭಿಮಾನಿ ಬಳಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/JuGWeyX4Ce
ಗುರುಜನರಲಿ ಮಾಡಧಿಕಭಕ್ತಿಯನು-ಪ್ರಜ್ವಾಲಿತೇ ಜ್ಞಾನಮಯೀ ದಿಲೀಪಃ ಎಂಬ ಪದಪುಂಜದನ್ವಯ ‘ಗುರು’ ಎಂದರೆ ಸ್ವಯಂಶಕ್ತಿಯಿಂದ ತಾನೂ ಬೆಳಗುವುದರೊಂದಿಗೆ ಇತರ ಹಣತೆಗಳಿಗೂ ಜ್ಞಾನ ಎಂಬ ಕಿರಣವನ್ನು ವರ್ಗಾಯಿಸುವನು ಎಂದರ್ಥ.ನಾಗವರ್ಮನ ಕರ್ಣಾಟಕ ಕಾದಂಬರಿಯ ಎರಡನೆಯ ಭಾಗ ಚಂದ್ರಾಪೀಡನ ಚೈತ್ರಯಾತ್ರೆ ಅಧ್ಯಾಯದ 10ನೆ ಪದ್ಯದಲ್ಲಿ ಉಲ್ಲೇಖವಾಗಿರುವ ಮಾತು. ಸಾಹಿತ್ಯದ ವಿದ್ಯಾರ್ಥಿಳಿಗೆ ಶುಕನಾಸೋಪಖ್ಯಾನ ಎಂದೇ ಪರಿಚಿತವಾಗಿರುವ ಈ ಭಾಗದಲ್ಲಿ ರಾಜ ತಾರಾಪೀಡ ತನ್ನ ಮಗನಿಗೆ ಮಂತ್ರಿ ಶುಕನಾಸನ ಮೂಲಕ ಉಪದೇಶಿಸುವಂತೆ ನಾಗವರ್ಮ ಗುರು ಭಕ್ತಿ ಎಂಬ ಮೌಲ್ಯವನ್ನು ಬಿತ್ತುವ ಪ್ರಯತ್ನ ಮಾಡಿದ್ದಾನೆ.
ಹಡಗಿಗೊಬ್ಬ ನಾವಿಕ,ಗುಂಪಿಗೊಬ್ಬ ನಾಯಕ, ಆನೆಗೊಬ್ಬ ಅಂಕುಶ ಹಿಡಿದ ಮಾವುತ ಇರುವಂತೆ ಪಡ್ಡೆ ಹುಡುಗರನ್ನು ನೈತಿಕತೆ, ಸಾಮಾಜಿಕ ಜವಾಬ್ದಾರಿ, ಉತ್ತರದಾಯಿತ್ವ ಎಂಬ ಸೂತ್ರದಲ್ಲಿ ಬಂಧಿಸಲು, ಗುರುಗಳು, ಮಾರ್ಗದರ್ಶಕರು, ಹಿತೈಷಿಗಳು, ಸ್ನೇಹಿತರು ಬೇಕು ಇಲ್ಲವೆಂದರೆ ಯುವಜನತೆಯ ಬದುಕು ಸೂತ್ರ ಹರಿದ ಗಾಳಿ ಪಠದಂತೆ ಆಗುತ್ತದೆ.
ಹರ ಮುನಿದರೂ ಗುರು ಕಾಯ್ವನ್ ಎಂಬ ಉಕ್ತಿಯಂತೆ ಸಾಕ್ಷಾತ್ ಹರನೇ ಮುನಿದರೂ ಗುರು ಕಾರುಣ್ಯವೊಂದಿದ್ದರೆ ಸಕಲವೂ ಸಿದ್ಧಿಸಿದಂತೆ. ಗುರುಗಳು ಯಾವತ್ತಿಗೂ ಶಿಷ್ಯರ ಏಳಿಗೆಯನ್ನೇ ಬಯಸುವವನು ಹಾಗಾಗಿ ಗುರುವಿನ ಸ್ಥಾನ ಹಿರಿದು. ಅಂಥ ಗುರುವಿನಲ್ಲಿ ಶಿಷ್ಯರಾದವರು ಭಕ್ತಿಯನ್ನು ಹೊಂದಿರಬೇಕು ಅವರಿಗೆ ಅದುವೇ ರಕ್ಷಾಕವಚ ಎನ್ನುವುದನ್ನು ನಾಗವರ್ಮ ತನ್ನ ಕೃತಿಯಲ್ಲಿ ಶುಕನಾಸನ ಮೂಲಕ ಉಪದೇಶಿಸುವ ಪ್ರಯತ್ನ ಮಾಡಿದ್ದಾನೆ.
ಗುರುಗಳು ಹೇಳುವ ಬುದ್ಧಿಮಾತು ಇವತ್ತಿಗೆ ತಾಜಾತನ ಕಳೆದುಕೊಂಡ ಹಣ್ಣಿನಂತಾಗಿದೆ. ಶೈಕ್ಷಣಿಕವಾಗಿ ಅವಲೋಕಿಸಿದರೆ ನಮ್ಮ ಪಠ್ಯಗಳು ಸಾಮಾಜಿಕ ಜವಾಬ್ದಾರಿಯ ಕುರಿತು ಹೆಚ್ಚು ಮಾತನಾಡದೆ ಇರುವುದು , ಕೇವಲ ಅಂಕಗಳಗಾಗಿ ಮೀಸಲಾಗಿರುವುದೂ ಸಮಾಜವನ್ನು ವಿಕೃತಗೊಳಿಸುತ್ತಿದೆ ಎನ್ನಬಹುದು. ಇಂಥ ದುರಿತದ ಕಾಲದಲ್ಲಿ “ಗುರು ಜನರಲಿ ಮಾಡಧಿಕಭಕ್ತಿಯನು “ಎಂಬ ಮಾತು ಸರ್ವಕಾಲಕ್ಕೂ ಅನ್ವಯವಾಗುವಂಥದ್ದು.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ.ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಕೋವಿಡ್-19 ಎರಡನೇ ಅಲೆಯ ಲಾಕ್ ಡೌನ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಸೋಮವಾರದಿಂದ (ಜು.26) ಪದವಿ ಕಾಲೇಜುಗಳ ಭೌತಿಕ ತರಗತಿಗಳು ಆರಂಭವಾಗುತ್ತಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸೂಚಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ನೇರ ತರಗತಿಗಳಿಗೆ ಹಾಜರಾಗಲಿಚ್ಛಿಸುವ ಪ್ರತಿ ವಿದ್ಯಾರ್ಥಿಯೂ ಮೊದಲ ಡೋಸ್ ಲಸಿಕೆ ಪಡೆಯುವುದು ಕಡ್ಡಾಯ. ಈಗಾಗಲೇ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (UGC) ಸ್ಪಷ್ಟ ಮಾರ್ಗಸೂಚಿ ಜಾರಿ ಮಾಡಿದ್ದು, ಅದನ್ನು ಎಲ್ಲ ವಿಶ್ವವಿದ್ಯಾಲಯಗಳ ಅಡಿಯಲ್ಲಿರುವ ಕಾಲೇಜುಗಳು ಚಾಚೂತಪ್ಪದೇ ಪಾಲಿಸಬೇಕು. ಈ ಬಗ್ಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ.
ಕೋವಿಡ್ ಮಾರ್ಗಸೂಚಿಯ ಪ್ರಾಥಮಿಕ ಶಿಷ್ಠಾಚಾರದಂತೆ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯವಾಗಿ ಮಾಡಲೇಬೇಕು. ನಿತ್ಯವೂ ತರಗತಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು. ಅಲ್ಲದೆ, ವಿದ್ಯಾರ್ಥಿಗಳ ಲಸೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದು ಆದಷ್ಟು ಬೇಗ ಎಲ್ಲರಿಗೂ ಲಸಿಕೆ ಸಿಗುವಂತೆ ಕ್ರಮ ವಹಿಸಬೇಕು ಎಂದು ಎಲ್ಲ ಕುಲಪತಿಗಳಿಗೆ ಸೂಚನೆ ಕೊಡಲಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.
ನೇರ ತರಗತಿಗಳಿಗೆ ಹಾಜರಾಗುವ ಆಯ್ಕೆ ವಿದ್ಯಾರ್ಥಿಗಳಿಗೇ ಬಿಡಲಾಗಿದೆ. ಅವರು ಇಚ್ಛೆ ಇದ್ದರೆ ಭೌತಿಕ ತರಗತಿಗಳಿಗೆ ಹಾಜರಾಗಬಹುದು, ಇಲ್ಲವೇ ಆನ್‌ಲೈನ್ ಮೂಲಕವೂ ಕಲಿಯಬಹುದು. ಆದರೆ, ಯಾವುದಾದರೂ ಒಂದರಲ್ಲಿ ಹಾಜರಾತಿ ಕಡ್ಡಾಯ ಎಂದು ಅವರು ತಿಳಿಸಿದ್ದಾರೆ.
74% ವಿದ್ಯಾರ್ಥಿಗಳಿಗೆ ಲಸಿಕೆ:
ರಾಜ್ಯದ ಎಲ್ಲ ವಿವಿಗಳ ವ್ಯಾಪ್ತಿಗಳಲ್ಲೂ ಲಸಿಕೀಕರಣ ವೇಗವಾಗಿ ನಡೆಯುತ್ತಿದ್ದು, ಈವರೆಗೆ 74% ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಇನ್ನು ಕೆಲ ದಿನಗಳಲ್ಲೇ ಉಳಿದ ಎಲ್ಲ ವಿದ್ಯಾರ್ಥಿಗಳಿಗೂ ಆದ್ಯತೆಯ ಮೇರೆಗೆ ವ್ಯಾಕ್ಸಿನ್ ಕೊಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.
ಕೆಲ ವಿಶ್ವವಿದ್ಯಾಲಯಗಳಲ್ಲಿ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಲಸಿಕೀಕರಣ ನಡೆದಿದೆ. ಇನ್ನು ಕೆಲ ವಿವಿಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಈ ಬಗ್ಗೆ ಕ್ರಮ ವಹಿಸಲು ಆಯಾ ವಿವಿಗಳ ಕುಲಪತಿಗಳಿಗೆ ತಿಳಿಸಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.
‘ರಾಜ್ಯದ ಜನ ನೆರೆ, ಕೋವಿಡ್ ನಿಂದ ತತ್ತರಿಸಿ ಜೀವ ಹಾಗೂ ಜೀವನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ರಕ್ಷಣೆ ಮಾಡಲು ಸರ್ಕಾರ ವಿಫಲವಾಗಿದೆ. ಹೀಗಾಗಿ ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ, ಅವರ ತೀರ್ಪಿನ ಪ್ರಕಾರ ಹೊಸ ಆಡಳಿತ ಬರಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಸರಕಾರಕ್ಕೆ ಸವಾಲೆಸೆದಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಭಾನುವಾರ ಕೋವಿಡ್ 19 ರಾಜ್ಯಮಟ್ಟದ ಕಾಂಗ್ರೆಸ್ ಮೇಲ್ವಿಚಾರಣಾ ಸಮಿತಿ ವರದಿಯನ್ನು ಸ್ವೀಕರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು:
‘ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸೋಣ. ಜನರ ಬಳಿ ಹೋಗೋಣ. ಅವರು ಯಾವ ತೀರ್ಮಾನ ಮಾಡುತ್ತಾರೋ ಅದರ ಆಧಾರದ ಮೇಲೆ ಹೊಸ ಆಡಳಿತ ನೀಡೋಣ.
ಇನ್ನು ಪ್ರಕೃತಿ ವಿಕೋಪ ವಿಚಾರ. ಮುಖ್ಯಮಂತ್ರಿಗಳು ನೆರೆ ಪರಿಶೀಲನೆಗೆ ಇಂದು ಪ್ರವಾಸ ಮಾಡುತ್ತಿದ್ದಾರೆ. ಅವರ ಸ್ಥಾನ ಏನಾಗುತ್ತದೋ ಆ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಕಳೆದ ಮೂರು ವರ್ಷಗಳಿಂದ ಈ ರೀತಿ ಮಳೆ-ನೆರೆ ಬರುತ್ತಿದೆ. ನಮ್ಮ ಪಕ್ಷದಿಂದ ಆರ್.ವಿ. ದೇಶಪಾಂಡೆ ಹಾಗೂ ಸತೀಶ್ ಜಾರಕಿಹೊಳಿ ಅವರ ನೇತೃತ್ವದ ತಂಡಗಳು ನೆರೆ ಪರಿಶೀಲನೆಗೆ ತೆರಳಿವೆ. ಬೆಳಗಾವಿಯಲ್ಲಿ ನಿಮ್ಮದೇ ಪಕ್ಷದ 10 ಕ್ಕೂ ಹೆಚ್ಚು ಶಾಸಕರಿದ್ದಾರೆ. ಸರ್ಕಾರವೂ ನಿಮ್ಮದೇ ಇದೆ. ಆದರೂ ಕಳೆದ ವರ್ಷದ ನೆರೆಗೆ ಪರಿಹಾರ ನೀಡಲು ನಿಮಗೆ ಸಾಧ್ಯವಾಗಿಲ್ಲ ಏಕೆ? ಮನೆ ಕಟ್ಟಿಕೊಡಲು ಆಗಿಲ್ಲ ಯಾಕೆ? ಈ ವರ್ಷದ ನೆರೆ ಪಕ್ಕಕ್ಕಿಡಿ, ಒಂದೇ ದಿನದಲ್ಲಿ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ. ಕಳೆದ ಎರಡು ವರ್ಷಗಳ ನೆರೆ ಸಂತ್ರಸ್ತರಿಗೆ ಪರಿಹಾರ ಕೊಟ್ಟಿಲ್ಲ ಯಾಕೆ? ಇದನ್ನು ಕೊಡಲು ಆಗಿಲ್ಲ ಎಂದರೆ ಈ ಸರ್ಕಾರ ಯಾಕಿರಬೇಕು? ಯಾವ ಕಾರಣಕ್ಕೆ ನಿಮಗೆ ಅಧಿಕಾರ ಬೇಕು?
ಈ ಹಿಂದೆ ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಲ್ಲಿ ನೆರೆ ಬಂದಾಗ ಪ್ರಧಾನ ಮಂತ್ರಿಗಳು ಅಲ್ಲಿಗೆ ಭೇಟಿ ನೀಡಿದ್ದರು. ಆದರೆ ಕರ್ನಾಟಕಕ್ಕೆ ಯಾಕೆ ಬರಲಿಲ್ಲ?ನಮ್ಮ ರಾಜ್ಯಕ್ಕೆ ಯಾಕೆ ಸೂಕ್ತ ಪರಿಹಾರ ನೀಡಲಿಲ್ಲ? ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ? ಆದರೂ ಬಿಜೆಪಿ ಸಂಸದರು ಯಾಕೆ ಒತ್ತಡ ತರಲಿಲ್ಲ? ಲಸಿಕೆ ವಿಚಾರದಲ್ಲಿ ಗುಜರಾತಿಗೆಷ್ಟು ಕೊಟ್ಟಿದ್ದಾರೆ? ನಮ್ಮ ರಾಜ್ಯಕ್ಕೆಷ್ಟು ಕೊಟ್ಟಿದ್ದಾರೆ? ರಾಜ್ಯದಿಂದ 25 ಸಂಸದರನ್ನು ಗೆಲ್ಲಿಸಿ ಕಳುಹಿಸಿಲ್ಲವೇ? ಇದೇನಾ ಬಿಜೆಪಿ, ಎನ್ ಡಿಎ ಸಂಸ್ಕೃತಿ?
ಬಿಜೆಪಿಗೆ ಅಧಿಕಾರ ನಡೆಸಲು, ಜನರ ಸೇವೆ ಮಾಡಲು ಅರ್ಹತೆ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಅಭಿವೃದ್ಧಿ ವಿಚಾರ ಪಕ್ಕಕ್ಕಿಡಿ. ಜನ ಕಷ್ಟದಲ್ಲಿರುವಾಗ, ಆಸ್ತಿ, ಜೀವ ಹಾಗೂ ಜೀವನ ಕಳೆದುಕೊಳ್ಳುತ್ತಿರುವಾಗ ಈ ಸರಕಾರ ಸ್ಪಂದಿಸಲಿಲ್ಲ. ಸಂಪೂರ್ಣ ವಿಫಲವಾಗಿದೆ.
ಯಡಿಯೂರಪ್ಪ ಅವರು ಅಧಿಕಾರ ತೆಗೆದುಕೊಂಡ ದಿನದಿಂದ ರಾಜಕೀಯ ಅನಿಶ್ಚಿತತೆ ಇದೆ ಎಂದು ಅವರೇ ಹೇಳಿದ್ದಾರೆ. ಅದೇ ಅವರ ಆಡಳಿತ. ಅದೇ ಜನರಿಗೆ ಕೊಟ್ಟಿರುವ ಕೊಡುಗೆ.
ಸರ್ಕಾರ ಮಾಡಲಾಗದ್ದನ್ನು ಕಾಂಗ್ರೆಸ್ ಮಾಡಿದೆ:
ಕೋವಿಡ್ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯವನ್ನು ಎಲ್ಲರೂ ಗಮನಿಸಿದ್ದಾರೆ. ಕೋವಿಡ್ ಆರಂಭವಾದಾಗ ಪಕ್ಷದ ಜವಾಬ್ದಾರಿ ಹೊತ್ತೆ. ಜನರ ಸೇವೆ ಮಾಡಲು ಅವಕಾಶ ಸಿಕ್ಕಿತು. ಮೊದಲ ಅಲೆಯಲ್ಲಿ ನಾವು ಅತ್ಯುತ್ತಮ ನಿಲುವು ತೆಗೆದುಕೊಂಡೆವು. ವಲಸೆ ಕಾರ್ಮಿಕರಿಗೆ ಕೊಟ್ಟ ರಕ್ಷಣೆ, ಅವರಿಗೆ ತುಂಬಿದ ಧೈರ್ಯ, ರೈತರಿಗೆ ಬೆಂಬಲವಾಗಿ ನಿಂತದ್ದು, ಅವರ ಬೆಳೆ ಖರೀದಿ ಮಾಡಿದ್ದನ್ನು ಎಲ್ಲರೂ ಗಮನಿಸಿದ್ದಾರೆ.
ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಈ ಕೆಲಸ ಮಾಡಿದ್ದಾರೆ. ಬಿಜೆಪಿಯವರು ಸರ್ಕಾರದ ದುಡ್ಡಲ್ಲಿ ತಮ್ಮ ಫೋಟೋ ಹಾಕಿಕೊಂಡು ಆಹಾರ ಕಿಟ್ ಕೊಟ್ಟರೆ, ನಮ್ಮ ನಾಯಕರು ತಮ್ಮ ಸ್ವಂತ ದುಡ್ಡಿನಲ್ಲಿ ಆಹಾರ ಕಿಟ್, ಆಕ್ಸಿಜನ್, ದಿನಸಿ ಕಿಟ್, ಸ್ಯಾನಿಟೈಸರ್ ಕೊಟ್ಟಿದ್ದಾರೆ. ನಾವು ಸರ್ಕಾರಕ್ಕೆ ಪರ್ಯಾಯವಾಗಿ ಜನರಿಗೆ 1225 ಆಂಬುಲೆನ್ಸ್ ಸೇವೆ ಒದಗಿಸಿದ್ದೇವೆ. 12,53,000 ಮೆಡಿಕಲ್ ಕಿಟ್ ಹಂಚಿದ್ದೇವೆ. 93,47,867 ಆಹಾರ ಕಿಟ್ ನೀಡಿದ್ದೇವೆ. 24,654 ಆಕ್ಸಿಜನ್ ಸಿಲಿಂಡರ್ ನೀಡಿದ್ದೇವೆ. ಇದಕ್ಕೆ ದಾಖಲೆಗಳಿವೆ.
ಒತ್ತಡ ಹಾಕಿ ಸರಕಾರ ಸರ್ವಪಕ್ಷ ಸಭೆ ಕರೆಯುವಂತೆ ಮಾಡಿದೆವು. ವೃತ್ತಿ ಕಳೆದುಕೊಂಡವರಿಗೆ ಪರಿಹಾರಕ್ಕೆ ಆಗ್ರಹಿಸಿ ಹೋರಾಟ ಮಾಡಿದೆವು.ಮತಕ್ಕಾಗಿ ನಾವು ಈ ಕೆಲಸ ಮಾಡಲಿಲ್ಲ. ವಿರೋಧ ಪಕ್ಷವಾಗಿ ಇದು ನಮ್ಮ ಜವಾಬ್ದಾರಿ. ಜನರ ಸಮಸ್ಯೆ ಮಧ್ಯೆ ಇರಬೇಕು ಎಂಬುದು ನಮ್ಮ ಬದ್ಧತೆ.
10 ಸಾವಿರ ಹಾಸಿಗೆ, ಕೋವಿಡ್ ಔಷಧದಲ್ಲಿ ಅವ್ಯವಹಾರ ಬಯಲಿಗೆಳೆದೆವು. ಕೋವಿಡ್ ನಿಂದ ಸತ್ತವರನ್ನು ಸರಕಾರ ಹೇಗೆ ನಡೆಸಿಕೊಂಡಿತು ಎಂಬುದನ್ನು ನಾನು ಹೇಳಬೇಕಿಲ್ಲ. ಎಲ್ಲರೂ ನೋಡಿದ್ದಾರೆ. 2ನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದರೂ ಸರ್ಕಾರ ಜಾಗೃತವಾಗಲಿಲ್ಲ. ಸರ್ಕಾರ ಕೆಲಸ ಮಾಡುತ್ತದೋ, ಇಲ್ಲವೋ ಲೆಕ್ಕಿಸದೇ ನಮ್ಮ ಜವಾಬ್ದಾರಿ ನಾವು ನಿಭಾಯಿಸಿದೆವು. ಅಂದಿನಿಂದ ಇಂದಿನವರೆಗೂ ನಾವು ಕೆಲಸ ಮಾಡಿಕೊಂಡು ಬಂದಿದ್ದೇವೆ. ಇಂದಿಗೂ ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಅವರಿಗೆ ನೆರವು, ಸಾಂತ್ವನ ನೀಡುತ್ತಿದ್ದಾರೆ.
ಮುಖ್ಯಮಂತ್ರಿಗಳೇ ಆಕ್ಸಿಜನ್ ಇಲ್ಲದೆ ಯಾರೂ ಸತ್ತಿಲ್ಲ ಎಂದು ಕೇಂದ್ರ ಸರ್ಕಾರದ ಸಚಿವಾಲಯಕ್ಕೆ ಮಾಹಿತಿ ನೀಡಿದ ಮೇಲೆ ಚಾಮರಾಜನಗರದಲ್ಲಿ ಸತ್ತ 24 ಜನರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ನೀಡಿರುವುದೇಕೇ..? 36 ಜನ ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ ಎಂದು ಹೈಕೋರ್ಟ್ ನೇಮಕ ಮಾಡಿದ ಸಮಿತಿ ವರದಿ ತಿಳಿಸಿದೆ.
ಅವರಿಗೆ ಕೋವಿಡ್ ನಿಂದ ಸತ್ತಿದ್ದಾರೆ ಎಂಬ ಪ್ರಮಾಣ ಪತ್ರವನ್ನೂ ನೀಡಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಮನೆ ಮನೆಗೂ ತೆರಳಿ ಅವರ ಕುಟುಂಬದವರ ರಕ್ಷಣೆಗೆ ನಿಲ್ಲಲಿದೆ ಎಂದರು.
ಕಳೆದು ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಪ್ರವಾಹದಿಂದ ಬಾಧಿತಗೊಂಡಿರುವ ಹಿರಣ್ಯಕೇಶಿ ನದಿಪಾತ್ರದ ವಿವಿಧ ಸ್ಥಳಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದರು.
ನೆರೆಯ ಮಹಾರಾಷ್ಟ್ರ ರಾಜ್ಯ ಹಾಗೂ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವ್ಯಾಪಕ ಮಳೆಯಾದ ಪರಿಣಾಮ ಹಿರಣ್ಯಕೇಶಿ, ಕೃಷ್ಣಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ ಸೇರಿದಂತೆ ಜಿಲ್ಲೆಯ ಸಪ್ತ ನದಿಗಳಲ್ಲಿ ಹಾಗೂ ಬೆಳಗಾವಿ ಸಮೀಪದ ಬಳ್ಳಾರಿ ನಾಲಾಗಳಲ್ಲಿ ನೀರಿನ ಹರಿವು ಹೆಚ್ಚಳಗೊಂಡು ಅಕ್ಕಪಕ್ಕದ ಕೆಲ ಗ್ರಾಮಗಳು ಜಲಾವೃತಗೊಂಡಿರುತ್ತವೆ.
ಹಿರಣ್ಯಕೇಶಿ ನದಿತೀರದಲ್ಲಿರುವ ಸಂಕೇಶ್ವರ ಪಟ್ಟಣದ ಮಠಗಲ್ಲಿ, ಕುಂಬಾರ ಓಣಿ ಹಾಗೂ ನದಿಗಲ್ಲಿಯ ಬಳಿಯ ಮುಳುಗಡೆ ಪ್ರದೇಶಗಳನ್ನು ಮುಖ್ಯಮಂತ್ರಿಗಳು ವೀಕ್ಷಿಸಿದರು.
ಇದಾದ ಬಳಿಕ ಶಂಕರಲಿಂಗ ಕಾರ್ಯಾಲಯದಲ್ಲಿ ಆರಂಭಿಸಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಂತ್ರಸ್ತರ ಜತೆ ಮಾತನಾಡಿದ ಅವರು, ಸಂಕೇಶ್ವರ ಪಟ್ಟಣದಲ್ಲಿ ಪ್ರತಿವರ್ಷ ಪ್ರವಾಹದಿಂದ ಬಾಧಿತಗೊಳ್ಳುವ ಮನೆಗಳ ಶಾಶ್ವತ ಸ್ಥಳಾಂತರಕ್ಕೆ ಐವತ್ತು ಎಕರೆ ಭೂಮಿ ಲಭ್ಯವಿದೆ. ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಂತ್ರಸ್ತರು ಸಹಕರಿಸಿದರೆ ಐವತ್ತು ಎಕರೆ ಜಾಗೆಯಲ್ಲಿ ಮನೆಗಳನ್ನು ಒದಗಿಸಲಾಗುತ್ತದೆ.ಮೂರ್ನಾಲ್ಕು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದು ಜನರಿಗೆ ಸಂಕಷ್ಟ. ಸಂಕಷ್ಟಕ್ಕೆ ಒಳಗಾದ ಜನರಿಗೆ ಸೂಕ್ತ ಪರಿಹಾರ ವ್ಯವಸ್ಥೆ ಮಾಡಲಾಗುವುದು.
ಮಳೆಹಾನಿ ಸಮೀಕ್ಷೆ ಬಳಿಕ ಪರಿಹಾರ:
ಮಳೆ ನಿಂತ ಬಳಿಕ ಮನೆ ಮನೆ ಸಮೀಕ್ಷೆ ಕೈಗೊಂಡು ನಂತರ ಸೂಕ್ತ ಪರಿಹಾರವನ್ನು ನೀಡಲಾಗುವುದು.
ತಾತ್ಕಾಲಿಕವಾಗಿ ಆರಂಭಿಸಲಾಗಿರುವ ಕಾಳಜಿ ಕೇಂದ್ರಗಳಲ್ಲಿ ಊಟೋಪಹಾರ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಜನರು ಭಯ ಪಡುವ ಅಗತ್ಯವಿಲ್ಲ; ಸರ್ಕಾರ ನಿಮ್ಮ ಜತೆಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ ಅವರು, ಸಂತ್ರಸ್ತರಿಗೆ ಎನ್.ಡಿ.ಆರ್.ಎಫ್.ಅಡಿ ಪರಿಹಾರ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಎಲ್ಲರಿಗೂ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಇದಾದ ಬಳಿಕ ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿ ಗ್ರಾಮದ ಬಳಿ ಅತಿವೃಷ್ಟಿಯಿಂದ ಮುಳುಗಡೆಯಾಗಿರುವ ರಾಷ್ಟ್ರೀಯ ಹೆದ್ದಾರಿ-4 ಅನ್ನು ಸಿಎಂ ಪರಿಶೀಲಿಸಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, 630 ಕುಟುಂಬಗಳಿಗೆ ತೊಂದರೆಯಾಗಿದ್ದು, ಐದು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಊಟೋಪಹಾರ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಹುಕ್ಕೇರಿ ಮತಕ್ಷೇತ್ರದ ಶಾಸಕರೂ ಆಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ್ ಕತ್ತಿ ಮತ್ತಿತರರು ಉಪಸ್ಥಿತರಿದ್ದರು.
ಷೇರುಪೇಟೆಯಲ್ಲಿ ಈಗ ಐ ಪಿ ಒ ಗಳದ್ದೇ ದರ್ಬಾರು. ಇತ್ತೀಚೆಗೆ ಲಿಸ್ಟಿಂಗ್ ಆಗುತ್ತಿರುವ ಹೆಚ್ಚಿನ ಕಂಪನಿಗಳು ಆಕರ್ಷಕ ಬೆಲೆಗಳಲ್ಲಿ ವಹಿವಾಟಾಗುತ್ತಿದ್ದು, ಹೂಡಿಕೆದಾರರಿಗೆ ಉತ್ತಮ ಲಾಭವನ್ನು ಗಳಿಸಿಕೊಡುತ್ತಿವೆ. ಈ ರೀತಿಯ ವಾತಾವರಣವು ಶಾಶ್ವತವಲ್ಲ. ಅದು ಈಗಿನ ದಿನಗಳಲ್ಲಿ ಕೇವಲ ಟೆಕ್ನಿಕಲ್ಸ್ ಆಧಾರಿತ ಪೇಟೆಗಳಲ್ಲಿ ಕಂಪನಿಗಳ ಆಂತರಿಕ ಸಾಮರ್ಥ್ಯವನ್ನವಲಂಭಿಸಿದೆ ಕೇವಲ ಬಾಹ್ಯ ಕಾರಣಗಳಿಂದಾಗಿ, ವರ್ಣರಂಜಿತ, ಕರ್ಣಾಕರ್ಷಕ ಶಬ್ದಗಳಿಂದ ಮೋಹಿತಗೊಳಿಸುವ ವಿಧದ ಮೂಲಕ ವಿಜೃಂಭಿಸುತ್ತಿರುವ ಕಾರಣ ಇದು ಅಲ್ಪಕಾಲೀನ ಶೈಲಿಯಾಗಿದೆ.
ಈ ವಾರಂತ್ಯದ ಸೆನ್ಸೆಕ್ಸ್
ಈಗಿನ ಷೇರುಪೇಟೆಗಳಲ್ಲಿ ಅನೇಕ ಪ್ರಮುಖ ಲಿಸ್ಟೆಡ್ ಐಟಿ ಕಂಪನಿಗಳು ವಿಜೃಂಭಿಸುತ್ತಿರುವ ರೀತಿಯು 1999-2000 ದಲ್ಲಿ ಟೆಕ್ನಾಲಜಿ ಕಂಪನಿಗಳು ಪ್ರದರ್ಶಿಸಿದ ರೀತಿಯ ಪುನರಾವರ್ತನೆಯಾಗುತ್ತಿದೆಯೇ? ಎಂಬ ಶಂಕೆ ಮೂಡಿಸುವಂತಿದೆ. 2020 ರ ಸೆಪ್ಟೆಂಬರ್ ನಲ್ಲಿ 36,495 ಪಾಯಿಂಟುಗಳಲ್ಲಿದ್ದ ಸೆನ್ಸೆಕ್ಸ್ ಈ ತಿಂಗಳ ( ಜುಲೈ) 16 ರಂದು 53,290 ಪಾಯಿಂಟುಗಳಿಗೆ ಜಿಗಿತ ಕಂಡಿರುವುದರಿಂದ ಸೆನ್ಸೆಕ್ಸ್ ನಲ್ಲಿರುವ ಕಂಪನಿಗಳು ದಣಿದಿವೆ. ಹಾಗಾಗಿ ಹೆಚ್ಚಿನ ಏರಿಕೆ ಪ್ರದರ್ಶಿಸಲು ಅಸಮರ್ಥವಾಗಿವೆ. ವಿತ್ತೀಯ ಮತ್ತು ಬ್ಯಾಂಕಿಂಗ್ ವಲಯವನ್ನೇ ಹೆಚ್ಚು ಅವಲಂಬಿತವಾದ ಸೆನ್ಸೆಕ್ಸ್ ಹೊರತು ಪಡಿಸಿದಲ್ಲಿ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪನಿಗಳೂ ಸಹ ರಭಸದ ಏರಿಕೆ ಪ್ರದರ್ಶಿಸಿದೆ. ವಾರ್ಷಿಕ ಗರಿಷ್ಠ ತಲುಪಿದ ಕಂಪನಿಗಳ ಪಟ್ಟಿ ಬಹಳ ದೊಡ್ಡದಾಗಿದ್ದು, ವಾರ್ಷಿಕ ಕನಿಷ್ಠಕ್ಕೆ ತಲುಪಿರುವ ಕಂಪನಿಗಳು ಕೇವಲ 23 ಕಂಪನಿಗಳಾಗಿದ್ದು, ಅದರಲ್ಲಿ ನಿನ್ನೆಯ ( 23 ರಂದು) ಲಿಸ್ಟಿಂಗ್ ಆದ ಝೊಮೆಟೋ ಸಹ ಸೇರಿದೆ. ಇವುಗಳಲ್ಲಿ ಅಲ್ಪ ಮೌಲ್ಯದ ಷೇರುಗಳೇ ಹೆಚ್ಚಾಗಿವೆ. ಅಂದರೆ ಈ ಪ್ರಮಾಣದಲ್ಲಿ ಕಂಪನಿಗಳು ಸಾಧನೆಯನ್ನು ತೋರುತ್ತಿವೆಯೇ ಎಂಬ ಅಂಶ ಕಲ್ಪನೆಗೆ ಬಿಟ್ಟದ್ದಾಗಿದೆ. ಸುಮಾರು 3,900 ಕಂಪನಿಗಳು ವಹಿವಾಟಿಗೆ ಅನುಮತಿ ಪಡೆದಿವೆ (ಅಮಾನತುಗೊಂಡಿರುವ 890 ಕಂಪನಿಗಳನ್ನು ಹೊರತುಪಡಿಸಿದ ನಂತರ). ಒಟ್ಟು ಲಿಸ್ಟಿಂಗ್ ಆದ ಸುಮಾರು 5,500 ಕಂಪನಿಗಳ ಪೈಕಿ ಸುಮಾರು 4,300 ಕಂಪನಿಗಳಲ್ಲಿ ಪ್ರವರ್ತಕರು ತಮ್ಮ ಷೇರುಗಳನ್ನು ಒತ್ತೆ ಇಟ್ಟು ಸಾಲ ಪಡೆದಿರುತ್ತಾರೆ. ಹೆಚ್ಚಿನ ಕಂಪನಿಗಳ ಫಲಿತಾಂಶಗಳು ಆಕರ್ಷಣೀಯವಾಗಿದ್ದರೂ ಡಿವಿಡೆಂಡ್ ಘೋಷಣೆ ಮಾಡಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಹೂಡಿಕೆದಾರರು ಷೇರುಪೇಟೆಯಲ್ಲಿ ಲಾಭಗಳಿಸಬೇಕೆಂದರೆ ಷೇರುಗಳನ್ನು ಮಾರಾಟಮಾಡಲೇಬೇಕಾಗಿದೆ. ಕಾರಣ ಕಂಪನಿಗಳು ಘೋಷಿಸುವ ಕಾರ್ಪರೇಟ್ ಫಲಗಳು ವಿರಳವಾಗಿವೆ.
ಪ್ರತಿ ಷೇರಿಗೆ ರೂ.76 ರಂತೆ ವಿತರಣೆ ಮಾಡಿದ ಈ ಕಂಪನಿಯು ಒಟ್ಟು 123.35 ಕೋಟಿ ಷೇರುಗಳನ್ನು ಐಪಿಒ ಮೂಲಕ ವಿತರಿಸಿದೆ. ಇದರಲ್ಲಿ ಕೇವಲ ಶೇ.10 ರಷ್ಟನ್ನು ಮಾತ್ರ ರೀಟೇಲ್ ಹೂಡಿಕೆದಾರರಿಗೆ ಮೀಸಲಿಟ್ಟು ಕೃತಕವಾದ ಡಿಮಾಂಡ್ ಕಲ್ಪಿಸಲಾಗಿದೆ. ಇತ್ತೀಚೆಗೆ ಬರುತ್ತಿರುವ ಕಂಪನಿಗಳು ಅಧಿಕವಾದ ಪ್ರೀಮಿಯಂನಲ್ಲಿರುವುದರಿಂದ, ಒಂದು ಬ್ರಾಂಡೆಡ್ ಕಂಪನಿ ಕೇವಲ 76 ರೂಪಾಯಿಗಳಿಗೆ ವಿತರಿಸುತ್ತಿದೆ ಎಂಬ ಕಾರಣಕ್ಕಾಗಿ ರೀಟೇಲ್ ಹೂಡಿಕೆದಾರರೂ ಹೆಚ್ಚಿನ ಬೇಡಿಕೆ ಇಟ್ಟಿದ್ದರು. ಹಾಗಾಗಿ ದಾಖಲೆಯ ಮಟ್ಟದಲ್ಲಿ ಸಂಗ್ರಹಣೆಯಾಯಿತು.
ಲಿಸ್ಟಿಂಗ್ ದಿನದ ಆರಂಭದಲ್ಲಿ ರೂ.115 ರ ಸಮೀಪದಲ್ಲಿದ್ದ ಷೇರಿನ ಬೆಲೆ ಕ್ರಮೇಣ ಏರಿಕೆ ಕಂಡಿದೆ. ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಆರಂಭಿಕ ಕ್ಷಣದಲ್ಲೇ ರೂ.123.65 ರಂತೆ 39.34 ಲಕ್ಷ ಷೇರುಗಳು, 10.17 ಕ್ಕೆ ರೂ.131.15 ರಂತೆ 41.82 ಲಕ್ಷ ಷೇರುಗಳು, 10.18ಕ್ಕೆ 21.77 ಲಕ್ಷ ಷೇರುಗಳು, 10.20 ಕ್ಕೆ 2.73 ಲಕ್ಷ ಷೇರುಗಳು ವಹಿವಾಟಾದ ನಂತರದಲ್ಲಿ ಚಟುವಟಿಕೆಯ ಸಂಖ್ಯಾಗಾತ್ರವು ಕರಗಿ ನೀರಸಮಯವಾಗಿತ್ತು.
ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ವಹಿವಾಟಾದ ಷೇರುಗಳ ಸಂಖ್ಯೆಯು 4.51 ಕೋಟಿಯಾದರೆ, ಅದರಲ್ಲಿ ವಿಲೇವಾರಿಯಾದ ಪ್ರಮಾಣ ಶೇ.49.9 ಮಾತ್ರ. ಅಂದರೆ ಭಾರಿ ಪ್ರಮಾಣದ ಸ್ಪೆಕ್ಯುಲೇಟಿವ್ ಟ್ರೇಡ್ ಗಳು ನಡೆದಿರುವುದನ್ನು ತಿಳಿಸುತ್ತದೆ. ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ವಹಿವಾಟಾದ ಷೇರುಗಳ ಗಾತ್ರವು ಸುಮಾರು 69.48 ಕೋಟಿ ಷೇರುಗಳು. ಅಂದರೆ ಒಂದೇ ದಿನ ವಿತರಣೆಯ ಸುಮಾರು ಶೇ.65 ರಷ್ಟು ವಹಿವಾಟಾಗಿವೆ. ಇದಕ್ಕೆ ಪೂರಕವಾಗಿಯೋ ಪ್ರೇರಣೆಯಾಗಿಯೋ ಬೆಂಬಲಿಸಿದ ಅಂಶ ಎಂದರೆ ಕಂಪನಿಯ ಬಂಡವಾಳೀಕರಣ ಮೌಲ್ಯವು ರೂ.1 ಲಕ್ಷ ಕೋಟಿ ಮೀರಿದೆ ಎಂಬ ಪದೇ ಪದೇ ಪ್ರಸಾರವಾದ ಸುದ್ಧಿ. ವಾಸ್ತವವಾಗಿ ಈ ಮೈಲಿಗಲ್ಲನ್ನು ತಲುಪಿದ ಒಂದೇ ಒಂದು ಗಂಟೆಯ ಸಮಯದ ನಂತರ ಬಂಡವಾಳೀಕರಣ ಮೌಲ್ಯವು ಸುಮಾರು ರೂ.96,700 ಕೋಟಿಗೆ ಜಾರಿದರೂ, ಕಂಪನಿಯ ಬಂಡವಾಳೀಕರಣ ಮೌಲ್ಯವು ಒಂದು ಲಕ್ಷಕೋಟಿ ದಾಟಿದೆ ಎಂಬ ಸುದ್ಧಿಯು ಹೆಚ್ಚುಹೆಚ್ಚು ಪ್ರಸಾರವಾಗುತ್ತಿತು. ಇಂತಹ ಸುದ್ಧಿಗಳಿಂದ ಪ್ರೇರಿತರಾಗದೆ ಕಂಪನಿಗಳಲ್ಲಿ ಅಂತರ್ಗತವಾಗಿ ಅಡಕವಾಗಿರುವ ಸಾಧನೆಯಾಧಾರಿತ ಅಂಶಗಳಿಗೆ ಹೆಚ್ಚು ಒತ್ತು ಕೊಟ್ಟು ನಿರ್ಧರಿಸುವುದು ಉತ್ತಮ.
ಆರಂಭಿಕ ಹಂತದಿಂದ ವಿವಿಧ ಅವತಾರಗಳನ್ನು ಪ್ರದರ್ಶಿಸಿದ ಕಂಪನಿಗಳು
ಆರಂಭಿಕ ಹಂತದಲ್ಲಿ ವಿಜೃಂಭಿಸಿ, ನಂತರದಲ್ಲಿ ವಿತ್ತೀಯ ವಿಕಲತೆಯನ್ನು ಸೃಷ್ಠಿಸಿದ ವಿಸರ್ಜನೆಗೊಂಡ ಕಂಪನಿಗಳು ಅನೇಕ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಸಹ ಅನೇಕ ಕಂಪನಿಗಳು ಶ್ರಮಪಡುವಂತಾಗಿರುವುದು ಇದೆ. ಕಂಪನಿಗಳು ಗ್ರಾಹಕರನ್ನು ಶತಾಯ ಗತಾಯ ತನ್ನಲ್ಲಿ ಉಳಿಸಿಕೊಳ್ಳಲು ತನ್ನ ಉತ್ಪನ್ನಗಳ, ಸಾಮಾಗ್ರಿಗಳ, ಸೇವೆಗಳ ಬೆಲೆ, ಶುಲ್ಕವನ್ನು ಭಾರಿ ಕಡಿತಗೊಳಿಸುತ್ತಿದ್ದು, ಲಾಭಗಳಿಕೆಗಿಂತ ತಮ್ಮ ಗ್ರಾಹಕ ಜಾಲದ, ವಹಿವಾಟಿನಗಾತ್ರದ ಹೆಚ್ಚಳಕ್ಕೆ ಆದ್ಯತೆ ನೀಡುತ್ತಿವೆ. ಕಾರಣ ಇವುಗಳಿಗೆ ದೊರೆಯುವ ಫಂಡಿಂಗ್. ಈ ಫಂಡಿಂಗ್ ನೀಡಿ ಷೇರುಗಳನ್ನು ಪಡೆದ ಸಂಸ್ಥೆಗಳಿಗೆ ಈಗಿನ ದಿನಗಳಲ್ಲಿ ಆ ಷೇರುಗಳು ಲೀಸ್ಟಿಂಗ್ ಆಗಿ ದೊರಕಿಸಿಕೊಡಬಲ್ಲ ಹೈ ವ್ಯಾಲ್ಯುಯೇಷನ್ ಮತ್ತು ಲಾಭದ ಅವಕಾಶಗಳೇ ಗುರಿಯಾಗಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಐಪಿಒ ಗಳಲ್ಲಿ ಹೂಡಿಕೆ ಮಾಡಿದ ರೀಟೇಲರ್ಸ್ ಗಳು ಉತ್ತಮ ಫಲಿತಾಂಶ ಪಡೆಯಲು ಹೇಗೆ ಸಾಧ್ಯ.
2000 ದ ಆರಂಭಿಕ ದಿನಗಳಲ್ಲಿ ರೂ.3,000 ದಲ್ಲಿದ್ದ ಷೇರುಗಳಾದ ಹಿಮಾಚಲ್ ಫ್ಯೂಚರಿಸ್ಟಿಕ್ (ಈಗ ಎಚ್ ಎಫ್ ಸಿ ಎಲ್ ಎಂದಾಗಿದೆ), ಪೇಂಟಾಮೀಡಿಯಾ ಗ್ರಾಫಿಕ್ಸ್, ಡಿ ಎಸ್ ಕ್ಯು ಸಾಫ್ಟ್ ವೇರ್ ಕಂಪನಿಗಳ ಷೇರಿನ ಬೆಲೆ ಕರಗಿದಷ್ಠು ವೇಗವಾಗಿ ಮತ್ತೇನು ಇರಲಾರದು. ಅದೇ ಸಂದರ್ಭದಲ್ಲಿ ಸಿಲ್ವರ್ ಲೈನಿಂಗ್ ನಂತೆ ಸಿಲ್ವರ್ ಲೈನ್ ಎಂಬ ಕಂಪನಿ ನಾಲ್ಕಂಕಿಯ ದರದಲ್ಲಿ ವಹಿವಾಟಾಗುತ್ತಿದ್ದು, ನಂತರ ಸಿಲ್ವರ್ ಮಾಯವಾಗಿರುವ ಲೈನಾಗಿದೆ. ಆಲ್ಪ್ಸ್ ಇನ್ಫೋಸಿಸ್, ಕಂಪ್ಯೂಡೈನ್ ವಿನ್ಫೋಸಿಸ್ಟಮ್ಸ್, ಐಸಿಇಎಸ್ ಸಾಫ್ಟ್ ವೇರ್, ಇನ್ ಫರ್ಮೇಷನ್ ಟೆಕ್ನಾಲಜೀಸ್ ಇಂಡಿಯಾ, ನೆಕ್ಸಸ್ ಸಾಫ್ಟ್ ವೇರ್, ಪದ್ಮಿನಿ ಟೆಕ್ನಾಲಜೀಸ್, ಶಾಲಿಭದ್ರ ಇನ್ಫೋಸೆಕ್, ಸಾಫ್ಟ್ ಟ್ರಾಕ್ ಟೆಕ್ ಎಕ್ಸ್ಪೋರ್ಟ್ಸ್ ಮುಂತಾದ ಅನೇಕ ಕಂಪನಿಗಳು ಇಂದು ಹೂಡಿಕೆದಾರರನ್ನು ನಿಶ್ಪ್ರಯೋಜಕ ಷೇರುಗಳ ಶಾಶ್ವತ ಹೂಡಿಕೆದಾರರನ್ನಾಗಿಸಿವೆ.
2007-08 ರ ರಿಯಲ್ ಎಸ್ಟೇಟ್ ಬೂಂ ಅವಧಿಯಲ್ಲಿ ಪ್ರಮುಖ ಕಂಪನಿಗಳಾದ ಡಿಎಲ್ ಎಫ್, ಶೋಭಾ ಡೆವೆಲಪರ್ಸ್, ಹೌಸಿಂಗ್ ಡೆವೆಲಪ್ ಮೆಂಟ್ ಅಂಡ್ ಇನ್ ಫ್ರಾಸ್ಟ್ರಕ್ಚರ್ ಕಂಪನಿಗಳು ನಾಲ್ಕು ಅಂಕಿಗಳಲ್ಲಿದ್ದವು. ಆದರೆ ಕ್ರಮೇಣ ಷೇರಿನ ದರಗಳು ಕರಗಿಹೋದವು. ಹೌಸಿಂಗ್ ಡೆವೆಲಪ್ ಮೆಂಟ್ ಅಂಡ್ ಇನ್ ಫ್ರಾಸ್ಟ್ರಕ್ಚರ್ ಕಂಪನಿ ಷೇರಿನ ಬೆಲೆ 2008 ರ ಜನವರಿಯಲ್ಲಿ ಸೆನ್ಸೆಕ್ಸ್ ಅಂದಿನ ಸರ್ವಕಾಲೀನ ಗರಿಷ್ಠದ ಸಮೀಪವಿದ್ದಾಗ ರೂ.1,100 ರಲ್ಲಿದ್ದು ಹತ್ತು ವರ್ಷಗಳ ನಂತರ ಅಂದರೆ 2018 ರಲ್ಲಿ ರೂ.17 ರ ಸಮೀಪಕ್ಕೆ ಕುಸಿದು ಈಗ ರೂ.6 ರ ಸಮೀಪವಿದೆ. ಈ ಷೇರಿನ ಮುಖಬೆಲೆಯು ಅಂದಿಗೂ ಇಂದಿಗೂ ರೂ.10 ಆಗಿದೆ.
ಶೋಭಾ ಡೆವೆಲಪರ್ಸ್ ಈಗ ಶೋಭಾ ಲಿ ಎಂದಾಗಿರುವ ಕಂಪನಿ 2008 ರಲ್ಲಿ ರೂ.1,040 ರಲ್ಲಿದ್ದ ಷೇರು 2020 ರಲ್ಲಿ ರೂ.118 ರ ಸಮೀಪಕ್ಕೆ ಜಾರಿತ್ತು. ಈ ವರ್ಷ, ಇದೇ ತಿಂಗಳು ರೂ.687 ಕ್ಕೆ ತಲುಪಿ ಈಗ ರೂ.605 ರ ಸಮೀಪವಿದೆ. ಅದೇ ನಿತೇಶ್ ಎಸ್ಟೇಟ್ಸ್, ಜೆಪಿ ಇನ್ ಫ್ರಾಟೆಕ್ ಯಾವ ಮಟ್ಟದಲ್ಲಿವೆ ಎಂಬುದು ಕಲ್ಪನಾತೀತ. 2010 ರಲ್ಲಿ ರೂ.450 ರಂತೆ ವಿತರಣೆ ಮಾಡಿದ್ದ ರಾಮ್ ಕಿ ಇನ್ ಫ್ರಾಸ್ಟ್ರಕ್ಚರ್ ಕಂಪನಿಯ ಷೇರಿನ ಬೆಲೆ ವಿತರಣೆ ಬೆಲೆ ತಲುಪಲಾಗಲಿಲ್ಲ, 2020 ರಲ್ಲಿ ರೂ.15 ರ ಸಮೀಪಕ್ಕೆ ಕುಸಿದು ನಂತರ ಚೇತರಿಕೆಯಿಂದ ಸಧ್ಯ ರೂ.185 ರ ಸಮೀಪಕ್ಕೆ ಚೇತರಿಕೆ ಕಂಡಿದೆ.
ಇತರೆ ವಲಯದ ಕಂಪನಿ ಹೆಚ್ಚಿನ ಪ್ರಾಚಾರದೊಂದಿಗೆ ಪೇಟೆ ಪ್ರವೇಶಿಸಿದ್ದ ಇರೋಸ್ ಇಂಟರ್ನ್ಯಾಶಲ್ ಕಂಪನಿ ಷೇರಿನ ಬೆಲೆ 2015 ಕ್ಕೆ ರೂ.640 ರ ಸಮೀಪವಿದ್ದು ನಂತರದಲ್ಲಿ 2020 ರಲ್ಲಿ ರೂ.7 ರ ಸಮೀಪಕ್ಕೆ ಕುಸಿದು ಈ ವರ್ಷ ಚೇತರಿಕೆಯಿಂದ ರೂ.24 ರ ಸಮೀಪವಿದೆ. ಆದರೂ ವಿತರಣೆಬೆಲೆ ತಲುಪದಾಗಿದೆ.
2014 ರಲ್ಲಿ ಪ್ರತಿ ಷೇರಿಗೆ ರೂ.645 ರಲ್ಲಿ ಐಪಿಒ ಮೂಲಕ ಪೇಟೆ ಪ್ರವೇಶಿಸಿದ ಮೊಂಟಾಕಾರ್ಲೋ ಫ್ಯಾಷನ್ಸ್ ಕಂಪನಿಯ ಷೇರಿನ ಬೆಲೆ ವಿತರಣೆ ಬೆಲೆ ತಲುಪಲು ಅಸಮರ್ಥವಾಯಿತು. 2020 ರಲ್ಲಿ ರೂ.128 ರವರೆಗೂ ಕುಸಿದು ಸಧ್ಯ ರೂ.353 ರ ಸಮೀಪವಿದೆ. ಇಂತಹ ಅನೇಕ ಕಂಪನಿಗಳು ಹೂಡಿಕೆದಾರರ ಬಂಡವಾಳವನ್ನು ಕರಗಿಸಿವೆ. ಹಾಗಾಗಿ ಆರಂಭಿಕ ದಿನಗಳಲ್ಲಿ ಪ್ರದರ್ಶಿಸಿದ ಮತ್ತು ಪ್ರಸ್ತುತ ಪಡಿಸಿದ ಅಂಶಗಳನ್ನಾಧರಿಸಿ ನಿರ್ಧರಿಸುವುದಕ್ಕಿಂತ ಅವುಗಳ ಯೋಗ್ಯತಾನುಸಾರ, ಬೆಲೆಗಳು ಕುಸಿದ ಸಮಯದಲ್ಲಿ ಉತ್ತಮ ಹೂಡಿಕೆಯಾಗುವ ಸಾಧ್ಯವಿದೆ. ಅವುಗಳಲ್ಲಿ ಆಕರ್ಷಕ ಡಿವಿಡೆಂಡ್ ಗಳನ್ನು ವಿತರಿಸುವ ಕಂಪನಿಗಳಾದರೆ ದೀರ್ಘಕಾಲೀನ ಹೂಡಿಕೆಗೂ ಉತ್ತಮ.
ಇತ್ತೀಚೆಗೆ ಪೇಟೆ ಪ್ರವೇಶಿಸಿದ ರೂ.1 ರ ಮುಖಬೆಲೆಯ ಕ್ಲೀನ್ ಸೈನ್ಸ್ ಅಂಡ್ ಟೆಕ್ನಾಲಜಿ, ಇಂಡಿಯಾ ಪೆಸ್ಟಿಸೈಡ್ಸ್, ರೂ.5 ರ ಮುಖಬೆಲೆಯ ಜಿ ಆರ್ ಇನ್ಫ್ರಾ ಪ್ರಾಜೆಕ್ಟ್ಸ್, ರೂ.10 ರ ಮುಖಬೆಲೆಯ ಶ್ಯಾಮ್ ಮೆಟಲಿಕ್ಸ್ ಅಂಡ್ ಎನರ್ಜಿ, ಸೋನಾ ಬಿ ಎಲ್ ಡಬ್ಲು ಪ್ರಿಸಿಶನ್ ಫೋರ್ಜಿಂಗ್ಸ್, ನಂತಹ ಕಂಪನಿಗಳ ಮೇಲೆ ಗಮನವಿಟ್ಟು ಮುಂದಿನ ದಿನಗಳಲ್ಲಿ ಅವು ಪ್ರದರ್ಶಿಸಬಹುದಾದ ಸಾಧನೆಯನ್ನಾಧರಿಸಿ, ಅವುಗಳ ಬೆಲೆ ಕುಸಿತ ಕಂಡಾಗ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
ಈ ಸಂದರ್ಭದಲ್ಲಿ ಗಮನದಲ್ಲಿಡಬೇಕಾದ ಅಂಶ ಎಂದರೆ ಹೂಡಿಕೆಯನ್ನು ಅವಧಿಯಾಧರಿಸಿ ನಿರ್ಧರಿಸದೆ, ಗಳಿಸಿಕೊಟ್ಟ ಲಾಭದ ಮೇಲೆ ನಿರ್ಧರಿಸುವುದು ಕ್ಷೇಮ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
ಗುರು ಪೂರ್ಣಿಮೆ ಅಂಗವಾಗಿ ಬೆಂಗಳೂರು ಜೆಪಿ ನಗರದ ಶ್ರೀಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ 3 ಲಕ್ಷಮಾತ್ರೆ, 10 ಸಾವಿರಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಬಳಸಿ ವಿಶೇಷ ಅಲಂಕಾರಮಾಡಿರುವುದನ್ನು ಕಂಡು ಭಕ್ತಾದಿಗಳು ಪುಳಕಿತರಾದರು
ಕರೋನಾ ಮೂರನೇ ಅಲೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಹಾಗೂ ವಿಶೇಷವಾದ ಆಲಂಕಾರದಿಂದ ಜನರಿಗೆ ಉಪಯೋಗವಾಗಬೇಕು ಎನ್ನುವ ಉದ್ದೇಶದಿಂದ ಮಾತ್ರೆಗಳನ್ನು ಬಳಸಿ ಅಲಂಕಾರ ಮಾಡುವ ಯೋಜನೆಯನ್ನು ಕೈಗೆತ್ತುಕೊಳ್ಳಲಾಯಿತು. 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಸರ್ ಹಾಗೂ ರೇಷನ್ ಕಿಟ್ ಇರುವಂತಹ ಪದಾರ್ಥಗಳಿಂದ ಅಲಂಕಾರಮಾಡಿದ್ದೇವೆ. ಸುಮಾರು 4 ದಿನಗಳಕಾಲ ತಯಾರಿ ನಡೆಸಿದ್ದು, ಒಂದು ವಾರಗಳ ನಂತರ ಇಲ್ಲಿ ಬಳಸಲಾಗಿರುವ ಎಲ್ಲಾ ರೀತಿಯ ವಸ್ತುಗಳನ್ನು ಅಗತ್ಯವಿರುವ ಜನರಿಗೆ ನೀಡಲಿದ್ದೇವೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕರು ಹಾಗೂ ಶ್ರೀಸತ್ಯ ಸಾಯಿಗಣಪತಿ ದೇವಸ್ಥಾನದ ಟ್ರಸ್ಟಿ ರಾಮಮೋಹನ ರಾಜ್ ತಿಳಿಸಿದರು.
ಈ ವಿಶೇಷ ಅಲಂಕಾರವನ್ನು ಕಂಡು ಸಂಸದ ತೇಜಸ್ವೀ ಸೂರ್ಯ ಶ್ಲಾಘಿಸಿದರು. ಲಕ್ಷಾಂತರ ರೂಪಾಯಿಗಳನ್ನು ಖರ್ಚುಗೊಳಿಸಿ ಹಾಳಾಗುವಂತಹ ವಸ್ತುಗಳನ್ನು ಬಳಸಿ ಅಲಂಕಾರ ಮಾಡಿದರೆ ಅದರಿಂದ ಉಪಯೋಗವಾಗುವುದಿಲ್ಲ. ಇಂತಹ ವಿಭಿನ್ನ ಆಲೋಚನೆಯಿಂದಾಗಿ ಆಲಂಕಾರವೂ ಆಗುತ್ತದೆ ಹಾಗೆಯೇ ನಂತರ ಅದರ ಸದುಯೋಗವೂ ಆಗುತ್ತದೆ. ಈ ನಿಟ್ಟಿನಲ್ಲಿ ವಿಭಿನ್ನಆಲೋಚನೆಮಾಡಿರುವ ಮಾಜಿ ಉಪಮಹಾಪೌರರಾದ ರಾಮಮೋಹನರಾಜ್ ಅವರಕಾರ್ಯ ಶ್ಲಾಘನೀಯಎಂದರು.
ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ ಶುರುವಾಗಿದೆ. ವೇಟ್ ಲಿಫ್ಟರ್ ಮೀರಾಬಾಯಿ ಚಾನು ಮಹಿಳೆಯರ 49 ಕೇಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಈ ಪದಕ ಪಡೆಯವ ಮೂಲಕ ಅವರು ಒಲಂಪಿಕ್ ಸ್ಪರ್ಧೆಯ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮೊದಲ ಬೆಳ್ಳಿ ಪದಕ ಪಡೆದ ಕೀರ್ತಿಗೂ ಭಾಜನರಾದರು. ಹಾಗೆಯೇ 2020 ನೇ ಸಾಲಿನ ಪಂದ್ಯದಲ್ಲಿ ಪದಕ ಗೆದ್ದ ಮೊದಲ ಭಾರತೀಯಳು ಎಂಬ ಅಭಿಮಾನಕ್ಕೂ ಪಾತ್ರರಾದರು. ಕರಣಂ ಮಲ್ಲೇಶ್ವರಿಯ ನಂತರ ಒಲಂಪಿಕ್ ಪದಕ ಪಡೆಯುತ್ತಿರುವ ಎರಡನೇ ಮಹಿಳೆ ಎಂಬ ಗೌರವಕ್ಕೂ ಚಾನು ಪಾತ್ರರಾಗಿದ್ದಾರೆ.
ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಸನಾತನ ಗುರು ಪರಂಪರೆಯನ್ನು ಸ್ಮರಿಸಿ ವಂದಿಸುವ ದಿನ ಆಷಾಢ ಮಾಸದ ಪೂರ್ಣಿಮೆ, ಗುರು ಪೂರ್ಣಿಮೆ. ಇದನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಗುರುಪೂರ್ಣಿಮೆಯಂದು ಗುರುವಿಗೆ ವಿಶೇಷ ನಮನ ಸಲ್ಲಿಸುವುದರೊಂದಿಗೆ ಸಾಧಿಸಬೇಕಾಗಿರುವ ಗುರಿಯತ್ತ ಪುನಶ್ಚೇತನಗೊಳ್ಳಬೇಕಾಗಿರುವುದು ಮುಖ್ಯ. ಆದ್ದರಿಂದಲೇ ಸನ್ಯಾಸಿಗಳು ಚಾತುರ್ಮಾಸ ವ್ರತವನ್ನು ಈ ದಿವಸದಿಂದಲೇ ಆರಂಭಿಸುತ್ತಾರೆ.
ಭಾರತದ ಪ್ರಾಚೀನ ಗುರು ಶಿಷ್ಯ ಪರಂಪರೆ ಜಗತ್ತನ್ನು ಸುಶೋಭಿತಗೊಳಿಸುತ್ತಿತ್ತು. ಭೌತಿಕ ವಿಜ್ಞಾನಿಗಳ ನಿಷ್ಕರ್ಷೆಗೆ ಸಿಗದಂಥ ಅದ್ಭುತ ಜ್ಞಾನ, ವಿಜ್ಞಾನದ ಕಿರಣಗಳನ್ನು ಕಂಡುಕೊ0ಡು ವಿಶ್ವಧರ್ಮ, ವಿಶ್ವಬಂಧುತ್ವಗಳನ್ನು ಇವರ ಏಕತ್ವದ ಅನುಭೂತಿಯ ಆಧಾರದ ಮೇಲೆ ಘೋಷಿಸಿದ್ದರು.
ಗುರು ಎಂದರೆ ಯಾರು? ವಿದ್ಯಾದಾನ ಮಾಡುವವನು, ಉಪಾಧ್ಯಾಯ, ಶಿಕ್ಷಕ ಎಂದರ್ಥ. ಶಿಷ್ಯನಾದವನು ಗುರುವಿನಲ್ಲಿ ಇಡಬೇಕಾದ ಪ್ರೀತಿ, ವಿಶ್ವಾಸ, ಗೌರವ, ಶ್ರದ್ಧೆ, ಸಮರ್ಪಣಾ ಮನೋಭಾವ, ನಿಸ್ವಾರ್ಥ ಸೇವಾಪ್ರವೃತ್ತಿ, ನಿಷ್ಕಲ್ಮಶ ಭಾವಗಳಿಗನುಗುಣವಾಗಿ ಗುರು ಕರುಣೆಯಿಂದ ತನ್ನ ಆಧ್ಯಾತ್ಮ ಶಕ್ತಿಯನ್ನು ಶಿಷ್ಯನಿಗೆ ಧಾರೆ ಎರೆಯುತ್ತಾನೆ. ಯಾವ ಗುರು ಶಿಷ್ಯನಿಗೆ ಶುದ್ಧ ಮನಸ್ಸು, ಸದೃಢ ಆರೋಗ್ಯ, ಸುಜ್ಞಾನದ ಉಪಯುಕ್ತತೆ ಪಾರದರ್ಶಕ ಜೀವನ ಪದ್ಧತಿ ಎಂಬ ಉತ್ತಮ ವಿದ್ಯೆ ಕಲಿಸುತ್ತಾ, ದುಷ್ಪರಿಣಾಮ ಎಂಬ ಕೆಟ್ಟ ವಿದ್ಯೆಯನ್ನು ನಾಶಮಾಡುವನೋ ಅವನೇ ನಿಜವಾದ ಗುರು ಎಂದು ಪ್ರಸಿದ್ಧ ಇಂಗ್ಲಿಷ್ ಲೇಖಕ ಜಾರ್ಜ್ ಬರ್ನಾಡ್ ಷಾ ಹೇಳುತ್ತಾನೆ.
ಗುರು ಎಂಬ ಪದದಲ್ಲಿನ ಗು ಎಂಬ ಅಕ್ಷರಕ್ಕೆ ಅಂಧಕಾರವೆದೂ, ರು ಎಂಬ ಅಕ್ಷರಕ್ಕೆ ಅದನ್ನು ತೊಲಗಿಸುವವನೆಂದೂ ಅರ್ಥ. ದೇವರಿಗಿಂತ ಗುರು, ಗುರುವಿಗಿಂತ ಗುರುಕೃಪೆ ದೊಡ್ಡದು. ಶ್ರೀರಾಮ, ಶ್ರೀಕೃಷ್ಣರು ಸಹ ವಶಿಷ್ಠ, ವಿಶ್ವಾಮಿತ್ರ, ಸಾಂದೀಪನಿಯಂತಹ ಗುರುಗಳ ಸೇವೆ ಮಾಡಿ ಫಲ ಪಡೆದವರು. ಗುರು ಪೂಜೆ ಮಾಡದೆ ಯಾವುದೇ ಕಾರ್ಯವನ್ನು ಆರಂಭಿಸಬಾರದು. ತಂದೆಯನ್ನು,ಉಪನಯನ ಮಾಡಿದವನನ್ನು, ವಿದ್ಯಾದಾನ ಮಾಡಿದವನನ್ನು,ಅನ್ನದಾತನನ್ನು, ಭಯದಲ್ಲಿ ರಕ್ಷಿಸಿದವನನ್ನು-ಈ ಐವರನ್ನೂ ಗುರುಗಳೆಂದು ಪರಿಗಣಿಸಲಾಗಿದೆ.
ವ್ಯಾಸರನ್ನು ನಾವು ಆದಿಗುರು ಎಂದು ಪೂಜಿಸುತ್ತೇವೆ. ವ್ಯಾಸ ಮಹರ್ಷಿಗಳು ಪುನಃ ಶಂಕರಾಚಾರ್ಯರ ರೂಪದಲ್ಲಿ ಅವತರಿಸಿದರೆಂದು ನಂಬಿಕೆ ಇದೆ. ಇಂದು ವ್ಯಾಸರನ್ನು ಗುರುವಿನ ನೆನಪಲ್ಲಿ ಸ್ಮರಣೆ ಮಾಡಿ, ಗುರುವಿನ ಪೂಜೆ ಮಾಡಿ ಅವರಿಗೆ ದಕ್ಷಿಣೆಯನ್ನು ಸಮರ್ಪಿಸಬೇಕು. ವ್ಯಾಸರು ಅಭ್ಯಾಸ ಮಾಡದ ವಿಷಯವಿಲ್ಲ. ಬ್ರಹ್ಮನಿಂದ ಉಗಮಿಸಿ, ಮನುಷ್ಯರ ಸಂಪರ್ಕವಿಲ್ಲದ್ದರಿಂದ ವೇದಗಳನ್ನು ಅಪೌರುಷೇಯಗಳೆನ್ನುವರು. ಬ್ರಹ್ಮನು ವಾಚಿಸಿದ್ದೆಲ್ಲಾ ವಿಪರೀತ ರಾಶಿಯಾಯಿತು. ಸಾಮಾನ್ಯರಿಗೆ ಅದನ್ನು ಕಲಿಯಲಾಗಲಿ, ಆಚರಿಸಲಾಗಿ ಅಸಾಧ್ಯವಾಯಿತು. ಇಷ್ಟು ಅಗಾಧವಾದ ವೇದಸಾರವನ್ನು ವರ್ಗೀಕರಿಸಿ, ಸಂಕೀರ್ಣವಾಗಿ ಹೆಣೆದು, ಸಾಮಾನ್ಯರಿಗೂ ಅದರ ಜ್ಞಾನವನ್ನು ತಲುಪಿಸುವ ಸಲುವಾಗಿ ಮಹಾವಿಷ್ಣು ವ್ಯಾಸಮಹರ್ಷಿಗಳ ರೂಪದಲ್ಲಿ ಭೂಮಿಯಲ್ಲಿ ಅವತರಿಸಿದನು.
ವ್ಯಾಸ ಎಂದರೆ ಪ್ರಜ್ಞಾ ವಿಕಾಸಕ್ಕೆ ನೆರವಾಗುವವನು ಎಂದರ್ಥ. ಅವರಿಗೆ ಕಪ್ಪು ಬಣ್ಣವಿದ್ದುದರಿಂದ ಕೃಷ್ಣ ಎಂದೂ, ದ್ವೀಪದಲ್ಲಿ ಹುಟ್ಟಿದ್ದರಿಂದ ದ್ವೆöÊಪಾಯನ ಎಂದೂ, ಪರಾಶರನ ಮಗನಾದ್ದರಿಂದ ಪಾರಶರ್ಯ ಎಂದೂ, ಬದರಿಕಾಶ್ರಮದಲ್ಲಿ ತಪಸ್ಸು ಮಾಡಿದ್ದರಿಂದ ಬಾದರಾಯಣ ಎಂದೂ ಹೆಸರು ಬಂತು ಎನ್ನುತ್ತಾರೆ.
ವೇದ ಜ್ಞಾನಕಾಂಡ ಮತ್ತು ಕರ್ಮಕಾಂಡ ಎಂಬ ಎರಡು ಶೀರ್ಷಿಕೆಗಳನ್ನು ಹೊಂದಿದೆ. ಈ ಜ್ಞಾನಕಾಂಡಕ್ಕೆ ಸೇರಿದ ವೇದಗಳ ಅಂತಿಮ ಸಾರಾಂಶವನ್ನು ನಮಗೆ ನೀಡುತ್ತಿರುವುದರಿಂದ ಉಪನಿಷತ್ತುಗಳನ್ನು ವೇದಾಂತ ಎಂದು ಕರೆಯುತ್ತಾರೆ. ಇಷ್ಟು ಕ್ರಮಬದ್ಧ ಕೆಲಸವನ್ನು ಮಾಡಿದ ವ್ಯಾಸರು ದೂರಾಲೋಚನೆಯುಳ್ಳವರಾಗಿ ಒಂದೊಂದು ವೇದಕ್ಕೂ ಒಬ್ಬೊಬ್ಬ ಅಧಿದೇವತೆ, ಋಷಿಯನ್ನು ನೇಮಿಸಿ, ತಮ್ಮ ತಮ್ಮ ವೇದಗಳ ಸಂರಕ್ಷಣೆ ಮಾಡುವಂತೆ ಆದೇಶಿಸಿದರು. ಹಾಗಾಗಿ ಋಗ್ವೇದಕ್ಕೆ ಪೈಲ ಋಷಿ, ಯಜುರ್ವೇದಕ್ಕೆ ವೈಶಂಪಾಯನ, ಸಾಮವೇದಕ್ಕೆ ಜೈಮಿನಿ ಋಷಿಗಳನ್ನು ಮತ್ತು ಅಥರ್ವಣ ವೇದಕ್ಕೆ ಸುಮಂತು ಋಷಿಗಳನ್ನು ಸಂಸ್ಥಾಪಿಸಿದರು. ಇದರಿಂದ ವ್ಯಾಸರನ್ನು ವೇದವ್ಯಾಸರು ಎಂದು ಕರೆಯುತ್ತಾರೆ. ಇವರು ಏಕಮೇವಾದ್ವಿತೀಯರು. ಆದ್ದರಿಂದಲೇ ನಾವು ಗುರುಗಳು ಆಸನದ ಮೇಲೆ ಕುಳಿತುಕೊಂಡಾಗ ಅದಕ್ಕೆ ವ್ಯಾಸಪೀಠವೆಂದು ಕರೆಯುತ್ತೇವೆ. ವ್ಯಾಸಪೀಠ ಸತ್ಯವನ್ನೇ ಮಾತನಾಡುತ್ತದೆ.
ಈ ದಿನದ ಮಹತ್ವ ನಮ್ಮ ಜೀವನವನ್ನು ಸಾರ್ಥಕಗೊಳಿಸಿದ ಗುರುವನ್ನು ಸ್ಮರಿಸುವ ದಿನ. ನಮ್ಮ ವೇದಗಳು ಆಚಾರ್ಯದೇವೋಭವ ಎಂದು ಗುರುಗಳನ್ನು ಮನಸಾರಾ ಗೌರವಿಸಿದ್ದಲ್ಲದೆ, ಅವರಿಗೆ ತಂದೆ ತಾಯಿಗಳಿಗಿಂತ ಮಿಗಿಲಾದ ಸ್ಥಾನವನ್ನೂ ನೀಡಿದೆ. ಗುರು ಹೇಗಿರುವನು ಎಂದು ಈ ಶ್ಲೋಕ ಹೀಗೆ ವಿವರಿಸುತ್ತದೆ: “ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ದೇವ ತಸ್ಮೈಶ್ರೀ ಗುರವೇ ನಮಃ’’ ಶಿಷ್ಯನ ಅಜ್ಞಾನವೆಂಬ ಕುರುಡನ್ನು ಜ್ಞಾನವೆಂಬ ಔಷಧಿಯಿಂದ ಗುಣಪಡಿಸಿ, ಅವನ ಕೀರ್ತಿ ಎಲ್ಲೆಡೆ ಹರಡುವಂತೆ ಮಾಡಿದ ಶ್ರೀ ಗುರುವಿಗೆ ಕೃತಜ್ಞತೆಗಳು- ಎಂಬುದು ಇದರರ್ಥ. ಇಂಥ ಗುರುವಿಗೆ ವಂದಿಸಿ ನಾವು ಕಾರ್ಯೋನ್ಮುಖರಾದಾಗ ಬಾಳಿನಲ್ಲಿ ಸುಖ, ಸಂಪತ್ತು ಖಚಿತ. ಹಿಂದೆ ಗುರು ಮುಂದೆ ಗುರಿ ಇದ್ದಾಗ ಮಾತ್ರ ಕಾರ್ಯಗಳಲ್ಲಿ ಯಶಸ್ಸು ನಿಶ್ಚಿತ.
ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.
ವಿದೇಶಗಳ ಬೇಡಿಕೆಗೆ ಅನುಗುಣವಾಗಿ ಕುಶಲ ಮಾನವ ಸಂಪನ್ಮೂಲವನ್ನು ಒದಗಿಸುವ ಮೊದಲ ಹೆಜ್ಜೆಯಾಗಿ ರಾಜ್ಯದ ಯುವ ತಜ್ಞ ವೈದ್ಯರೊಬ್ಬರಿಗೆ ಅಬುಧಾಬಿಯಲ್ಲಿ ಅತ್ಯುತ್ತಮ ಆಫರ್ ಸಿಕ್ಕಿದೆ ಎಂದು ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಹೊಸದಾಗಿ ಸ್ಥಾಪನೆ ಮಾಡಿರುವ ಅಂತಾರಾಷ್ಟ್ರೀಯ ವಲಸೆ ಕೇಂದ್ರದ ಮೂಲಕ ಶ್ವಾಸಕೋಶ ತಜ್ಞರಾದ ಡಾ.ಗಂಗಿರೆಡ್ಡಿ ಅವರಿಗೆ ಯುಎಇಯಲ್ಲಿರುವ ಪ್ರತಿಷ್ಠಿತ ರೆಸ್ಪಾನ್ಸ್ ಪ್ಲಸ್ ಮೆಡಿಕಲ್ ಆಸ್ಪತ್ರೆ (Response Plus Medical-RPM) ಯಲ್ಲಿ ವಿಶೇಷ ತಜ್ಞವೈದ್ಯರ ಹುದ್ದೆಗೆ ನೇಮಕವಾಗಿದ್ದು, ಅವರಿಗೆ ವಾರ್ಷಿಕ 1 ಕೋಟಿ ರೂ. ಪ್ಯಾಕೇಜ್ ನೀಡಲಾಗಿದೆ. ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದವರು ಎಂದು ಡಿಸಿಎಂ ಮಾಹಿತಿ ನೀಡಿದರು.
ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳನ್ನು ಬೆಂಗಳೂರಿನಲ್ಲಿ ಗುರುವಾರದಂದು ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಅವರಿಂದ ಡಾ.ಗಂಗಿರೆಡ್ಡಿ ಅವರು ಪಡೆದುಕೊಂಡಿದ್ದಾರೆ. ರೆಡ್ಡಿ ಅವರಿಂದ ವೀಸಾ, ವಿಮಾನ ಪ್ರಯಾಣ, ವಿಮೆ, ವಸತಿ ಇತ್ಯಾದಿಗಳ ಯಾವುದೇ ಸೇವಾ ಶುಲ್ಕವನ್ನು ಪಡೆಯದೇ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿಕೊಡಲಾಗಿದೆ. ಈ ನಿಟ್ಟಿನಲ್ಲಿ ಡಾ.ಗಂಗಿರೆಡ್ಡಿ ಅವರಿಗೆ ಅಭಿನಂದನೆಗಳು. ಅವರ ಉತ್ತಮ ಕಾರ್ಯನಿರ್ವಹಣೆಯಿಂದ ರಾಜ್ಯದ ಇನ್ನಷ್ಟು ವೈದ್ಯರಿಗೆ ಆ ದೇಶಗಳಲ್ಲಿ ಉದ್ಯೋಗ ಸಿಗಲಿ ಎಂದು ಡಾ.ಅಶ್ವತ್ಥನಾರಾಯಣ ಹಾರೈಸಿದರು.
ಈಗಷ್ಟೇ ಕೋವಿಡ್-19 ಎರಡನೇ ಅಲೆಯ ಲಾಕ್‌ಡೌನ್ ಮುಗಿದಿದ್ದು, ವಿದೇಶಗಳಿಗೆ ರಾಜ್ಯದ ಕುಶಲ ಮಾನವ ಸಂಪನ್ಮೂಲನವನ್ನು ಒದಗಿಸುವ ಪ್ರಕ್ರಿಯೆಯನ್ನು ಪುನಾ ಆರಂಭಿಸಲಾಗಿದೆ. ಬೇಡಿಕೆಗೆ ತಕ್ಕಂತೆ ವೈದ್ಯರು, ನರ್ಸುಗಳು ಸೇರಿದಂತೆ ಇತರೆ ಯಾವುದೇ ಕ್ಷೇತ್ರಕ್ಕೆ ಸಿಬ್ಬಂದಿ ಇದ್ದರೂ ಕೌಶಲ್ಯಾಭಿವೃದ್ಧಿ ನಿಗಮದ ಅಡಿಯಲ್ಲಿ ಸ್ಥಾಪಿಸಲಾಗಿರುವ ವಲಸೆ ಕೇಂದ್ರದ ಮೂಲಕ ಕಳಿಸಲಾಗುವುದು. ಯಾವುದೇ ಖಾಸಗಿ ಏಜೆನ್ಸಿಗಳನ್ನು ನಂಬಿಕೊಂಡು ಯಾರೂ ಮೋಸ ಹೋಗುವುದು ಬೇಡ ಎಂದು ಡಿಸಿಎಂ ಹೇಳಿದರು.
ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಅವರ ಶ್ರಮದಿಂದಾಗಿ ಈ ಪ್ರಯತ್ನ ಯಶಸ್ವಿಯಾಗಿದ್ದು ಮತ್ತಷ್ಟು ಜನರಿಗೆ ಇದರ ಉಪಯೋಗ ಆಗುವ ಹಾಗೆ ಮಾಡಲಾಗುವುದು ಎಂದರು.