28.2 C
Karnataka
Saturday, August 22, 2026
    Home Blog Page 74

    ಗುರುತ್ವವನ್ನು ಅಡಗಿಸಿಕೊಂಡಿರುವ ಲಘು ಬರೆಹಗಳು


    ಇಲ್ಲಿಯ ಬರೆಹಗಳು ಪ್ರಸ್ತಾಪಿಸಲ್ಪಟ್ಟ ವ್ಯಕ್ತಿಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಈ ವ್ಯಕ್ತಿಗಳು, ಅವರ ಸ್ವಭಾವಗಳು ಕೆ.ಸತ್ಯನಾರಾಯಣ ಎಂಬ ವ್ಯಕ್ತಿಯ ಒಳಗಿದ್ದ ಒಬ್ಬ ಲೇಖಕನನ್ನು ಹೇಗೆ ರೂಪಿಸಿದವು, ಮಾಗಿಸಿದವು ಎಂಬುದನ್ನೂ ನಾವು ಕಂಡುಕೊಳ್ಳಬಹುದು. ಇತರರ ಸ್ವಭಾವಚಿತ್ರಗಳನ್ನು ಬರೆಯುತ್ತ ಲೇಖಕರು ತಮ್ಮ ಸ್ವಭಾವಚಿತ್ರವನ್ನೂ ಈ ಕೃತಿಯ ಒಡಲಲ್ಲಿ ಅಯಾಚಿತವಾಗಿ ನಮಗೆ ಒದಗಿಸಿದ್ದಾರೆ.


    ತಮ್ಮ ನಿರಂತರ ಬರೆಹಗಳಿಂದ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಶ್ರೀಮಂತಗೊಳಿಸುತ್ತಿರುವ ಕೆ.ಸತ್ಯನಾರಾಯಣ ಅವರು ಇದೀಗ `ಕಪಾಳಮೋಕ್ಷ ಪ್ರವೀಣ’ ಎಂಬ ನೂತನ  ಕೃತಿಯಲ್ಲಿ ಕೆಲವು ಸ್ವಭಾವ  ಚಿತ್ರಗಳನ್ನು ನೀಡಿದ್ದಾರೆ. ತಮ್ಮ ಈ  ಬರೆಹಗಳ ಹೊಳಹು ಹೊಳೆದದ್ದು ಡಿವಿಜಿಯವರ `ಜ್ಞಾಪಕ ಚಿತ್ರಶಾಲೆ’ ಎಂಬ ಕೃತಿಯಿಂದ ಎಂದು ಲೇಖಕರು ಹೇಳಿಕೊಂಡಿದ್ದಾರೆ. ಹಾಗೆಯೇ ಜಾರ್ಜ್‌ ಆರ್ವೆಲ್ಲರ ಬರೆಹಗಳೂ ಅವರ ಮೇಲೆ ಪ್ರಭಾವ ಬೀರಿರಬಹುದು. `ತುದಿವಾದಿಗಳು’ ಬರೆಹದಲ್ಲಿ ಅವರು ಆರ್ವೆಲ್‌ರ, `ಒಬ್ಬ ಮನುಷ್ಯ ನಮಗೆ ವೈಯಕ್ತಿಕ ಸ್ತರದಲ್ಲಿ ಪರಿಚಯವಾದಮೇಲೆ, ಆತ್ಮೀಯತೆ ಮೂಡಿದ ಮೇಲೆ, ಅವನ ವಿಚಾರಗಳನ್ನು ಕಟ್ಟಿಕೊಂಡು ಏನಾಗಬೇಕು? ಮನುಷ್ಯರನ್ನು ನಾವು ಪ್ರೀತಿಸುವುದು ಅವರ ಓರೆ ಕೋರೆಗಳಿಗೆ, ವಕ್ರತೆಗೆ, ವಿಶಿಷ್ಟತೆಗೆ, ನಿರ್ದಿಷ್ಟ ಸ್ವಭಾವಕ್ಕೇ ಹೊರತು ಕೇವಲ ವಿಚಾರಗಳಿಗಲ್ಲ’ ಎಂಬ ಮಾತನ್ನು ಉಲ್ಲೇಖಿಸುತ್ತಾರೆ. ಸ್ವಭಾವಚಿತ್ರಗಳನ್ನು ರೇಖಿಸುವ ಸೃಷ್ಟಿಕ್ರಿಯೆಯ ಹಿಂದೆ ಈ ವಿಚಾರ ತಳಹದಿಯಾಗಿರುವುದನ್ನು ಇಲ್ಲಿ ನಾವು ಗುರುತಿಸ ಬಹುದಾಗಿದೆ.`ಯಾವ ಮನುಷ್ಯನಿಗೂ ಅವನ ಸ್ವಭಾವದಿಂದ ಎಂದೂ ಬಿಡುಗಡೆಯಾಗುವುದಿಲ್ಲ. ಕೊನೆಗೂ ಈ ಭೀತಿಯಿಂದ ವಿಸರ್ಜನೆಗೆ ಒಳಗಾಗುವುದು ಮನುಷ್ಯನೇ ಹೊರತು, ಮನುಷ್ಯನ ಸ್ವಭಾವವಲ್ಲ ಎಂಬ ತಿಳಿವಳಿಕೆ’ಯ ಸಹಜ ಅರಿವಿನೊಂದಿಗೆ ಬರೆದಿರುವ ಕೃತಿ ಇದು.

    ಸ್ವಭಾವ ಚಿತ್ರಗಳಂಥ ಬರೆಹಗಳನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರರೂ ಬರೆದಿದ್ದರು. `ನಮ್ಮ ಹಳ್ಳಿಯ ಚಿತ್ರಗಳು’ ಅವರ ಅಂಥ ಒಂದು ಕೃತಿ. ಅದರಲ್ಲಿಯ `ಸಾಲು ಸಾಬಿ’ ಎಂಬ ಒಂದು ಪಾಠ ನಮಗೆ ಹೈಸ್ಕೂಲಿನಲ್ಲಿ ಇತ್ತು. ಹಾಗೆಯೇ ಎಚ್‌.ಎಲ್‌.ನಾಗೇಗೌಡರ `ನನ್ನೂರು’ ಕೃತಿಯಲ್ಲೂ ಇಂಥ ವ್ಯಕ್ತಿಗಳ ಪರಿಚಯ ನಮಗಾಗುತ್ತದೆ. ಆದರೆ ಸತ್ಯನಾರಾಯಣ ಅವರ ಈ ಕೃತಿಯ ವಿಶೇಷವೆಂದರೆ ಅವರು ಇಂಥ ಸ್ವಭಾವಗಳ ಮೀಮಾಂಸೆಯನ್ನು ನಡೆಸುವುದು.

    ಅದಕ್ಕೊಂದು ಉದಾಹರಣೆ ಇಲ್ಲಿದೆ. `ಮಿತಿ ಮೀರಿದವರು’ ಎಂಬ ಬರೆಹದಲ್ಲಿ ಮಿತಿ ಮೀರುವಿಕೆಯನ್ನು ಅವರು ಹೀಗೆ ಹಿಂಜಿ ನೋಡುತ್ತಾರೆ. `ಯವ್ವನದಲ್ಲಿ ಉಕ್ಕುವ ಚೈತನ್ಯ ಕಾಣಿಸಿಕೊಳ್ಳುವ ಒಂದು ಬಗೆಯೆಂದರೆ ಮಿತಿಯನ್ನು ಮೀರಿ ಮಾತನಾಡುವುದು. ಮಾತನಾಡುವುದು ಮಾತ್ರವಲ್ಲ, ಕೃತಿಯಲ್ಲಿ, ಕ್ರಿಯೆಯಯಲ್ಲಿ ಕೂಡ ಮಿತಿಯನ್ನು ಮೀರುವುದು, ದಾಟುವುದು. ಆದರೆ ಉಕ್ಕುವ ಚೈತನ್ಯವನ್ನು ಪಳಗಿಸಬೇಕಕಾಗುತ್ತದೆ, ಮಾಗಿಸಬೇಕಾಗುತ್ತದೆ. ಒಂದು ಹದಕ್ಕೆ ತರಬೇಕಾಗುತ್ತದೆ’ ಎಂದು ಈ ವಿದ್ಯಮಾನಕ್ಕೆ ಮನಶ್ಶಾಸ್ತ್ರೀಯವಾದ ಆಯಾಮವನ್ನು ಗುರುತಿಸುತ್ತ ಅದನ್ನು ಸಾಹಿತ್ಯದ ಪರಿಭಾಷೆಯಲ್ಲಿ ಅರ್ಥೈಸಲು ಯತ್ನಿಸುತ್ತಾರೆ. `ಕಲೆ, ಸಾಹಿತ್ಯದಲ್ಲಿ ಪಳಗುವುದು, ಮಾಗುವುದು ಎಂದರೆ, ಮಿತಿ ಮೀರಿ ಉಕ್ಕುತ್ತಿರುವ ಚೈತನ್ಯದ ರಭಸವನ್ನು ಒಂದು ಪ್ರಶಾಂತಿಯ, ಅರ್ಥವಂತಿಕೆ ನೆಲೆಗೆ ತರುವುದೇ ಆಗಿರುತ್ತದೆ’ ಎಂದು ಹೇಳುತ್ತಾರೆ. ಇದಕ್ಕೆ ಉದಾಹರಣೆಯಾಗಿ ಬೇಂದ್ರೆಯವರು ಅಡಿಗರ ಮೊದಲ ಕವನ ಸಂಕಲನಕ್ಕೆ ಬರೆದ ಮುನ್ನುಡಿ ಮತ್ತು ಸ್ವತಃ ಅಡಿಗರು ಲಂಕೇಶರ ಕಥಾ ಸಂಕಲನಕ್ಕೆ ಬರೆದ ಮುನ್ನುಡಿಗಳನ್ನು ಉದಾಹರಿಸುತ್ತಾರೆ. ಈ ಮಿತಿಮೀರುವಿಕೆಯನ್ನು ಸ್ತ್ರೀವಾದಿ ನೆಲೆಯಲ್ಲಿ ನೋಡುತ್ತ ಲಕ್ಷ್ಮಣ ರೇಖೆ ಎಂಬ ಪದ ಹುಟ್ಟಿದ್ದೇ ಹೆಂಗಸಾದ ಸೀತಾ ಮಾತೆಯ ಸಂದರ್ಭದಲ್ಲಿ. ದ್ರೌಪದಿಯೇ ವಾಸಿ. ಗಂಡಸರ  ಮಿತಿಯನ್ನು ಆಗಾಗ್ಗೆ ಪ್ರಶ್ನಿಸುತ್ತಿದ್ದಳು. ತನ್ನ ಮಿತಿಗಳನು ಮೀರುತ್ತಿದ್ದಳು. ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದಳು ಎಂದು ವ್ಯಾಖ್ಯಾನಿಸುತ್ತ ನಮ್ಮ ಮಹಾಕಾವ್ಯಗಳನ್ನು ನೋಡುವುದಕ್ಕೆ ಒಂದು ಹೊಸ ದೃಷ್ಟಿಕೋನವನ್ನು ಒದಗಿಸಿದ್ದಾರೆ. ಈ ಕಾರಣಕ್ಕಾಗಿಯೇ ಇವು ಲಘು ಬರೆಹಗಳು ಎನಿಸಿಕೊಂಡೂ ಓದುಗರನ್ನು ಗಾಢವಾದ ಚಿಂತನೆಗೆ ದೂಡುತ್ತವೆ. ಅದು ಇಲ್ಲಿಯ ಬರೆಹಗಳ ಗುರುತ್ವದ ಲಕ್ಷಣವಾಗಿದೆ.

    `ಸದಾ ಸರಿಯಪ್ಪಂದಿರು’ ಬರೆಹದಲ್ಲಿ, … ತಪ್ಪು ಮಾಡಬಾರದು ಎಂಬ ಆರೋಗ್ಯಕರವಾದ ಧೋರಣೆ, ತಪ್ಪು ಮಾಡಲೇ ಬಾರದು ಎಂಬ ಹಠವಾಗಿ, ನಂತರ ತಪ್ಪು ಮಾಡುವುದೇ ಇಲ್ಲ ಎಂಬ ನೈತಿಕ ಗರ್ವವಾಗಿ ಪರಿವರ್ತನೆ ಹೊಂದುತ್ತದೆ. ನೈತಿಕ ಗರ್ವದ ಚೂಪಾದ ಮೊನೆಯಿಂದ ಸದಾ ನಮ್ಮನ್ನು ತಿವಿಯುತ್ತಲೇ ಇರುತ್ತಾರೆ ಎಂದು ಹೇಳುತ್ತ ಸದಾ ಸರಿಯಪ್ಪಂದಿರುಗಳಿಲ್ಲದ ನೆರೆ ಹೊರೆಗೆ, ಕಛೇರಿ, ಕಾರ್ಖಾನೆಗಳಿಗೆ, ನೃತ್ಯಶಾಲೆ, ಕ್ರೀಡಾಂಗಣಗಳಿಗೆ, ಸಮಾಜ ದೇಶಗಳಿಗೆ ಹಾತೊರೆಯುತ್ತೇನೆ ಎಂದು ಹೇಳುತ್ತ ಮುಗಿಸುತ್ತಾರೆ. ಇದನ್ನು ಓದುತ್ತ ಹೋದ ಹಾಗೆ ನಮ್ಮ ಬದುಕಿನಲ್ಲೂ ಎದುರಾದ ಇಂಥ ಸರಿಯಪ್ಪಂದಿರುಗಳು ನೆನಪಾಗುತ್ತಾರೆ. ಈ ಕಾರಣಕ್ಕೆ ಬರೆಹದೊಂದಿದೆ ಓದುಗನಿಗೆ ತಾದಾತ್ಮ್ಯ ಸಾಧ್ಯವಾಗುತ್ತದೆ. ಉತ್ತಮ ಬರೆಹವೊಂದರ ಮೂಲ ಲಕ್ಷಣಗಳಲ್ಲಿ ಇದೂ ಒಂದು. `ನಾವು ಕಾಣುವುದು ಕೂಡ ಬಯಸಿದ್ದನ್ನು ಮಾತ್ರವೋ? ಗೊತ್ತಿಲ್ಲ!’ (ಪುಟ148) ಎಂಬ ಮಾತು ಇಲ್ಲಿಯ ಬರೆಹಗಳ ಮಿತಿಯನ್ನೂ ಹೇಳುತ್ತದೆ.

    ಇಲ್ಲಿಯ ಬರೆಹಗಳು ಪ್ರಸ್ತಾಪಿಸಲ್ಪಟ್ಟ ವ್ಯಕ್ತಿಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಈ ವ್ಯಕ್ತಿಗಳು, ಅವರ ಸ್ವಭಾವಗಳು ಕೆ.ಸತ್ಯನಾರಾಯಣ ಎಂಬ ವ್ಯಕ್ತಿಯ ಒಳಗಿದ್ದ ಒಬ್ಬ ಲೇಖಕನನ್ನು ಹೇಗೆ ರೂಪಿಸಿದವು, ಮಾಗಿಸಿದವು ಎಂಬುದನ್ನೂ ನಾವು ಕಂಡುಕೊಳ್ಳಬಹುದು. ಇತರರ ಸ್ವಭಾವಚಿತ್ರಗಳನ್ನು ಬರೆಯುತ್ತ ಲೇಖಕರು ತಮ್ಮ ಸ್ವಭಾವಚಿತ್ರವನ್ನೂ ಈ ಕೃತಿಯ ಒಡಲಲ್ಲಿ ಅಯಾಚಿತವಾಗಿ ನಮಗೆ ಒದಗಿಸಿದ್ದಾರೆ. ಕಸ್ತೂರಿ ಸುಬ್ಬರಾಯರ ಕುರಿತ ಬರೆಹದಲ್ಲಿ, ಶಾಲೆಯ ದಿನಗಳಲ್ಲಿ ಶಿಕ್ಷಕ ಸುಬ್ಬರಾಯರು ಕಸ್ತೂರಿ ಪತ್ರಿಕೆಯನ್ನು ಓದಿಸುತ್ತಿದ್ದ ರೀತಿ, ಆ ಮೂಲಕ ಓದಿನ ಗೀಳನ್ನು ಹಚ್ಚಿದ್ದು ಎಲ್ಲವನ್ನೂ ಹೇಳುತ್ತ, `ಮುಂದೆ ನನ್ನ ಬದುಕಿನಲ್ಲಿ ಯಾವ ರೂಪದಲ್ಲಿ ಎಲ್ಲಿ ಪ್ರಕಟವಾಗಬಲ್ಲರು ಎಂದು ನಾನಾದರೂ ಹೇಗೆ ಹೇಳಲಿ, ಅವರು ಯಾವಾಗಲೂ ಒಳಗೇ ಇದ್ದಾರೆ, ಇರುತ್ತಾರೆ. ಸಮಯ ಸಂದರ್ಭ ನೋಡಿ ಮುನ್ನೆಲೆಗೆ ಬಂದು ಪ್ರಕಟವಾಗಿ ಆಶೀರ್ವದಿಸುತ್ತಾರೆ’ ಎಂದು ಹೇಳಿದ್ದಾರೆ. `ತುದಿವಾದಿಗಳು’ ಬರೆಹದಲ್ಲಿ ಬರುವ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಜವಾನರಾಗಿದ್ದ ಚೌಡಪ್ಪನವರು ಅಲ್ಲಿಗೆ ಓದಲು ಬರುತ್ತಿದ್ದ ಲೇಖಕರಿಗೆ ಪತ್ರಿಕೆಗಳನ್ನು, ಸರ್ಕಾರಿ ಪುಸ್ತಕಗಳನ್ನು ತಂದು ಮುಂದಿಡುತ್ತಿದ್ದರು. ಈ ಕುರಿತು ಲೇಖಕರು ಹೇಳುವುದು ಹೀಗೆ.. `ಒಂದೇ ಸಂಗತಿಯನ್ನು ಒಂದೇ ಕಾಲದಲ್ಲಿ ಬೇರೆಬೇರೆ ರೀತಿಯಲ್ಲಿ ಬರೆಯುತ್ತಿದ್ದರು.. ಒಂದೇ ಸಂಗತಿಯನ್ನು ಒಂದೇ ಕಾಲದಲ್ಲಿ ಬೇರೆಬೇರೆ ರೀತಿಯಲ್ಲಿ ನೋಡಬಹುದು ಎಂಬ ಮುಖ್ಯವಾದ ಪಾಠವನ್ನು ತಮಗೆ ಗೊತ್ತಿಲ್ಲದೆಯೇ ಮಾನ್ಯರು ನನಗೆ ಹೇಳಿಕೊಟ್ಟಿದ್ದರು.’ ನಿಜ, ಈ ನಿಟ್ಟಿನಲ್ಲಿ ನೋಡಿದಾಗ ಇದು ಲೇಖಕರ ಆತ್ಮಕಥನದ ಮುಂದುವರಿದ ಭಾಗವಾಗಿಯೂ ಭಾಸವಾಗುವುದು.

    `ಶನಿವಾರದ ಸ್ವರ್ಣಾಂಬ’ ಗ್ರಾಮೀಣ ಭಾಗದ ಒಂದು ವಿಫಲ ದಾಂಪತ್ಯವನ್ನು ಹೃದಯ ಮಿಡಿಯುವ ಹಾಗೆ ಹೇಳುತ್ತದೆ. ಒಂದು ಕತೆ ಎಂಬಷ್ಟು ಇದು ಸಶಕ್ತವಾಗಿದೆ. `ಶನಿವಾರದ ಸ್ವರ್ಣಾಂಬ, ಬಂದನೇನಮ್ಮ ಬಸಪ್ಪ, ಬಂದನೇನಮ್ಮ ಸರದಾರ ಅಂತ ರಾಗವಾಗಿ ಕಿರುಚಿ, ಕಿಚಾಯಿಸಿ, ಓಡಿಹೋಗುತ್ತಿದ್ದೆವು. ನಮ್ಮ ಕಿಚಾಯಿಸುವಿಕೆ ಕೂಡ ದಣಿಯಿತು, ಕ್ರಮೇಣ ನಿಂತುಹೋಯಿತು’ ಎನ್ನುವ ಸಾಲುಗಳು ಎದೆಯ ಮೇಲೆ ಮಂಜುಗಡ್ಡೆಯನ್ನು ಇರಿಸಿದಹಾಗೆ ಆಗುತ್ತದೆ. ಕೆಲವು ಬರೆಹಗಳು ಇನ್ನೂ ಇದೆಯೇನೋ ಎನ್ನುವಾಗಲೇ ಮುಗಿದುಬಿಟ್ಟಿವೆ. ಲೇಖಕರು ಈ ಕೃತಿಯ ಕುರಿತು, `ಈ ಬರವಣಿಗೆಗಳು ವ್ಯಕ್ತಿಚಿತ್ರಗಳಲ್ಲ, ಪಾತ್ರಗಳಿದ್ದರೂ ಕತೆಯಲ್ಲ. ನೆನಪಿನ ಲಹರಿ, ಸನ್ನಿವೇಶಗಳಿದ್ದರೂ ಪ್ರಬಂಧವಲ್ಲ. ಆದರೆ ಬೇಡವೆಂದರೂ ಕತೆ ಮತ್ತು ಪ್ರಬಂಧದ ಅಂಶಗಳು ನನ್ನ ಎಲ್ಲ ಬರವಣಿಗೆಯಲ್ಲೂ ಬಂದೇ ಬರುತ್ತದೆ’ ಎಂದು ಸ್ಪಷ್ಟತೆಯನ್ನು ನೀಡಿದ್ದಾರೆ.

    ಇಲ್ಲಿಯ ಬರೆಹಗಳಲ್ಲಿರುವ ವ್ಯಕ್ತಿಗಳು ನಿಮಗೂ ಎದುರಾಗಬಹುದು. ನೀವು ನೋಡಿರಲೂ ಬಹುದು. ಇಲ್ಲಿಯ ಪಾತ್ರಗಳು ಯಾವುದೂ ಅಸಂಗತ ಎಂದು ತೋರುವುದಿಲ್ಲ. ನಮ್ಮ ಅಕ್ಕಪಕ್ಕದಲ್ಲಿ ಅಡ್ಡಾಡುತ್ತಿದ್ದವರನ್ನು ಪುಟ್ಟದೊಂದು ಟಿಪ್ಪಣಿಯೊಂದಿಗೆ ಸತ್ಯನಾರಾಯಣ ಅವರು ನಮ್ಮ ಮುಂದೆ ನಿಲ್ಲಿಸಿದ್ದಾರೆ. ಆ ಕಾರಣಕ್ಕೆ ಪುಟಪುಟಗಳಲ್ಲಿಯೂ ಜೀವಂತಿಕೆಯನ್ನು ನಾವು ಗುರುತಿಸಬಹುದು. ಇದೇ ಹುಮ್ಮಸ್ಸಿನಲ್ಲಿ ಅವರು ಇನ್ನಷ್ಟು ವೈವಿಧ್ಯಮಯ ಕೃತಿಗಳನ್ನು ನೀಡಲಿ ಎಂದು ಹಾರೈಸೋಣ.

    ಇದನ್ನೂ ಓದಿ :ಶಾಸಕರ ಸ್ವಭಾವ


    ಕನ್ನಡದ ಪ್ರಮುಖ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ 1954ರ ಏಪ್ರಿಲ್‌ 21ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸುವರ್ಣ ಪದಕದೊಂದಿಗೆ ಪದವಿ ಪಡೆದು, ಅಲ್ಲಿಯೇ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್‌ ರೆವಿನ್ಯೂ ಸರ್ವಿಸ್‌ಗೆ ಸೇರಿದ ಅವರು ಆದಾಯ ತೆರಿಗೆ ಇಲಾಖೆಯಿಂದ ನಿವೃತ್ತರಾಗುವಾಗ ಕರ್ನಾಟಕ ಮತ್ತು ಗೋವಾ ವಲಯದ ಮುಖ್ಯ ಆಯುಕ್ತರಾಗಿದ್ದರು. ಸಣ್ಣಕತೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣ ಬರೆಹ, ವಿಮರ್ಶೆ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಬಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯ ಅವರಿಗೆ 2013ರಲ್ಲಿ ಗೌರವ ಡಾಕ್ಟರೇಟ್‌ ನೀಡಿದೆ.


    ಪ್ರಧಾನ ಮಂತ್ರಿ ಅವರ ಸ್ವಾತಂತ್ರ್ಯೋತ್ಸವ ದಿನ ಭಾಷಣದಲ್ಲಿ ಸೇರಿಸಲು ನಿಮ್ಮ ಚಿಂತನೆಯನ್ನು ಹಂಚಿಕೊಳ್ಳಿ

    NEW DELHI JULY 30

    ಬರಲಿರುವ ಸ್ವಾತಂತ್ರ್ಯೋತ್ಸವ ದಿನದಂದು ಪ್ರಧಾನ ಮಂತ್ರಿ ಅವರು ಮಾಡಲಿರುವ ಭಾಷಣದಲ್ಲಿ ಅಳವಡಿಸಿಕೊಳ್ಳಲು MyGov (@mygovindia) ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳ ಕಾರ್ಯಲಯ -ನಿಮ್ಮ ಚಿಂತನೆಗಳು ಕೆಂಪು ಕೋಟೆಯ ಮೇಲಿನಿಂದ ಪ್ರತಿಧ್ವನಿಸಲ್ಪಡಲಿವೆ.ಪ್ರಧಾನ ಮಂತ್ರಿ ಅವರ ಆಗಸ್ಟ್ 15ರ ಭಾಷಣಕ್ಕೆ ನಿಮ್ಮ ಚಿಂತನೆ, ಅಭಿಪ್ರಾಯಗಳು ಏನು? ಅವುಗಳನ್ನು @mygovindiaರಲ್ಲಿ ಹಂಚಿಕೊಳ್ಳಿ- ಎಂದು ತಿಳಿಸಿದೆ.

    ಬೊಮ್ಮಾಯಿ ತಾವು ರಬ್ಬರ್ ಸ್ಟ್ಯಾಂಪ್ ಸಿಎಂ ಅಲ್ಲ ಎಂದು ಪದೇ ಪದೇ ಹೇಳೋದು ಯಾಕೆ?- ಸಿದ್ದರಾಮಯ್ಯ ಪ್ರಶ್ನೆ

    HUBBALLI JULY 30

    ಕೊರೊನಾ, ಪ್ರವಾಹದಿಂದ ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ, ಅವರ ಸಮಸ್ಯೆಗಳನ್ನು ಆಲಿಸಿ, ಕಷ್ಟಕಾಲದಲ್ಲಿ ಅವರ ಜೊತೆ ನಿಲ್ಲಬೇಕಿದ್ದ ಬಿಜೆಪಿ ನಾಯಕರು ಅಧಿಕಾರದ ಆಸೆಗೆ ದೆಹಲಿಗೆ ಹೋಗಿ ಕೂತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ,ಕಾಟಾಚಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕನ್ನಡ ಜಿಲ್ಲೆಗೆ ಭೇಟಿನೀಡಿದರು. ಬಾಗಲಕೋಟೆ, ಬೆಳಗಾವಿ, ಕೊಡುಗು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಬೊಮ್ಮಾಯಿ ಅವರು ಬರೀ ಉತ್ತರ ಕನ್ನಡಕ್ಕೆ ಹೋಗಿ ಪರಿಹಾರ ಕಾರ್ಯಕ್ಕೆ ಹಣ ಕೊಡ್ತೀನಿ ಅಂತ ಹೇಳಿ ಅಲ್ಲಿಂದ ದೆಹಲಿಗೆ ಹೋಗಿದ್ದಾರೆ.
    ರಾಜ್ಯದಲ್ಲಿ ಸಚಿವ ಸಂಪುಟವೂ ಇಲ್ಲದಿರುವಾಗ ಜನರ ಕಷ್ಟಗಳನ್ನು ಕೇಳಿ, ಸ್ಪಂದಿಸುವ ಕೆಲಸ ಮಾಡಬೇಕಿದ್ದ ಶಾಸಕರು ಮುಖ್ಯಮಂತ್ರಿ ಬದಲಾವಣೆ, ಮಂತ್ರಿ ಪದವಿಯ ಲಾಬಿಯಲ್ಲಿ ಮುಳುಗಿದ್ದಾರೆ ಎಂದು ದೂರಿದರು.

    ಮುಖ್ಯಮಂತ್ರಿ ಬೊಮ್ಮಾಯಿಯವರು ತಾವು ರಬ್ಬರ್ ಸ್ಟ್ಯಾಂಪ್ ಸಿಎಂ ಅಲ್ಲ ಎಂದು ಪದೇ ಪದೇ ಹೇಳೋದು ಯಾಕೆ? ಅವರು ರಬ್ಬರ್ ಸ್ಟ್ಯಾಂಪ್ ಎಂದು ನಾವೇನಾದರೂ ಹೇಳಿದ್ವಾ? ಇದರರ್ಥ ಅವರು ರಬ್ಬರ್ ಸ್ಟ್ಯಾಂಪ್ ನಂತೆ ಅನ್ನೋದನ್ನು ಒಪ್ಪಿಕೊಂಡ ಹಾಗೆ ಅಲ್ವಾ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

    ರಾಜ್ಯದಲ್ಲಿ ಬದಲಾವಣೆಯಾಗಿರುವುದು ಮುಖ್ಯಮಂತ್ರಿಯೇ ಹೊರತು ಆಡಳಿತ ಪಕ್ಷವಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬೊಮ್ಮಾಯಿ ಅವರು ಸಚಿವರಾಗಿದ್ದರು, ಅಂದರೆ ಭ್ರಷ್ಟ ಸರ್ಕಾರದಲ್ಲಿ ಇವರೂ ಕೆಲಸ ಮಾಡಿದ್ದರು. ಹೀಗಿರುವಾಗ ಈ ಸರ್ಕಾರದಲ್ಲಿ ಪಾರದರ್ಶಕತೆ ಬರಲು ಸಾಧ್ಯವೇ?

    ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತೇವೆ, ವೃದ್ಧಾಪ್ಯ ವೇತನ ಹೆಚ್ಚು ಮಾಡ್ತೀವಿ ಎಂದು ಬೊಮ್ಮಾಯಿಯವರು ಹೇಳಿದರು, ಇವುಗಳಿಗೆ ಅನುದಾನ ನೀಡಲು ಸರ್ಕಾರದ ಬಳಿ ದುಡ್ಡೆಲ್ಲಿದೆ? ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿದ್ದ ನ್ಯಾಯಯುತ ತೆರಿಗೆ ಪಾಲು, ಅನುದಾನಗಳು ಬಂದಿಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದೆ. ಬೊಮ್ಮಾಯಿಯವರಿಗೆ ಇದನ್ನೆಲ್ಲ ನಿಭಾಯಿಸುವುದು ತುಂಬ ಕಷ್ಟವಾಗಲಿದೆ.

    ಸಿದ್ದರಾಮಯ್ಯನವರಿಗೆ ಸಂಯಮ ಕಡಿಮೆಯಾಗಿದೆ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಉತ್ತರಿಸಿದ ಅವರು “ನನಗೆ ಯಡಿಯೂರಪ್ಪನವರಷ್ಟು ವಯಸ್ಸಾಗದೇ ಇದ್ದರೂ ಶಾಂತವಾಗಿ, ಸಹನೆಯಿಂದ, ಸಂಯಮದಿಂದ ಇದ್ದೀನಿ” ಎಂದರು.

    ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಪ್ರಧಾನಿಗೆ ಸಿಎಂ ಮನವಿ

    NEW DELHI, JULY 30

    ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

    ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಹಾಗೂ ರಾಯಚೂರಿಗೆ ಏಮ್ಸ್ ಮಾದರಿಯ ವೈದ್ಯಕೀಯ ಸಂಸ್ಥೆ ಮಂಜೂರು ಮಾಡುವಂತೆ ಮನವಿ ಮಾಡಿದರು. ಜೊತೆಗೆ ಕಲಬುರಗಿಯ ಇಎಸ್ಐ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಪ್ರಾದೇಶಿಕ ಏಮ್ಸ್ ಮಾದರಿಯ ಸಂಸ್ಥೆಯನ್ನಾಗಿ ಉನ್ನತೀಕರಿಸುವಂತೆ ಕೋರಿದರು.

    ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರಿಗೆ ಶುಭಕೋರಿದ ಪ್ರಧಾನಿಯವರು, ಈ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸುವಂತೆ ಸಲಹೆ ಮಾಡಿದರು. ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

    ಇದಕ್ಕೂ ಮುನ್ನ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಹೊಸದಾಗಿ ಸೃಜನೆಯಾದ ಸಹಕಾರ ಸಚಿವಾಲಯದ ಹೊಣೆ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಜೊತೆಗೆ ರಾಜ್ಯದ ಪ್ರವಾಹ ಪರಿಸ್ಥಿತಿ, ಕೋವಿಡ್ 19 ನಿರ್ವಹಣೆ ಮೊದಲಾದ ವಿಷಯಗಳ ಕುರಿತು ಮಾಹಿತಿ ನೀಡಿದರು. ಇದು ಪರೀಕ್ಷೆಯ ಸಮಯವೆಂದ ಗೃಹ ಸಚಿವರಿಗೆ ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

    ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾದ ಮುಖ್ಯಮಂತ್ರಿಯವರು ಮೇಕೆದಾಟು ಯೋಜನೆಗೆ ಅನುಮೋದನೆ ನೀಡುವಂತೆ ಹಾಗೂ ಕೃಷ್ಣಾ ಮೇಲ್ದಂಡೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಕುರಿತು ಸಹ ಚರ್ಚೆ ನಡೆಸಲಾಯಿತು.

    ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಷಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಅನುರಾಗ್ ಠಾಕುರ್ ಮೊದಲಾದವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನೂತನ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ಈ ಗಣ್ಯರು, ರಾಜ್ಯದ ಅಭಿವೃದ್ದಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

    ಮಧ್ಯಾಹ್ನ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಸಂಸತ್ ಸದಸ್ಯರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಯವರು ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ನೆರವು ಪಡೆಯಲು ಹಾಗೂ ಕೇಂದ್ರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಸಹಕಾರ ನೀಡುವಂತೆ ಕೋರಿದರು. ಈ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸಂಸದರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ತಿಳಿಸಿದರು. ನಾಡಿನ ನೆಲ, ಜಲದ ರಕ್ಷಣೆಯಲ್ಲಿ ಸಂಸದರು ಸಹಕರಿಸುವಂತೆ ಮನವಿ ಮಾಡಿದರು.

    ತಮ್ಮ ದೆಹಲಿ ಭೇಟಿಯ ವಿವರಗಳನ್ನು ಮಾಧ್ಯಮದವರಿಗೆ ನೀಡಿದ ಮುಖ್ಯಮಂತ್ರಿಯವರು, ರಾಜ್ಯದಲ್ಲಿ ಆರ್ಥಿಕ ಸುಸ್ಥಿರತೆ ಕಾಪಾಡುವುದು, ಪ್ರವಾಹ ಹಾಗೂ ಕೋವಿಡ್ ನಿಯಂತ್ರಣ ಆದ್ಯತೆಯ ವಿಷಯಗಳು ಎಂದು ತಿಳಿಸಿದರು.

    ಅಖಿಲ ಭಾರತ ಕೋಟಾದಲ್ಲಿ ಎಂಬಿಬಿಎಸ್ ಸೇರಿದಂತೆ ವೈದ್ಯಕೀಯ ಸೀಟುಗಳಲ್ಲಿ OBC ಗೆ ಶೇಕಡ 27, EWS ಗೆ ಶೇಕಡ 10 ಮೀಸಲು


    2021-22 ರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಅಖಿಲ ಭಾರತ ಕೋಟಾದಡಿ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ/ ದಂತ ವೈದ್ಯಕೀಯ [ಎಂ.ಬಿ.ಬಿ.ಎಸ್/ ಎಂಡಿ/ ಡಿಪ್ಲೊಮ/ ಬಿಡಿಎಸ್/ ಎಂ.ಡಿ.ಎಸ್] ಕೋರ್ಸ್ ಗಳಲ್ಲಿ ಒಬಿಸಿ ವರ್ಗಕ್ಕೆ ಶೇಕಡ 27ರಷ್ಟು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ 10 ರಷ್ಟು ಮೀಸಲಾತಿ ಕಲ್ಪಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೆಗ್ಗುರುತಿನ ನಿರ್ಧಾರ ಕೈಗೊಂಡಿದೆ.

    2021 ರ ಜುಲೈ 26 ರಂದು ಪ್ರಧಾನಮಂತ್ರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ವಿಷಯಗಳಿಗೆ ಪರಿಣಾಮಕಾರಿಯಾಗಿ ಪರಿಹಾರ ಒದಗಿಸುವಂತೆ ನಿರ್ದೇಶನ ನೀಡಲಾಗಿತ್ತು.

    ಈ ತೀರ್ಮಾನದಿಂದ ಪ್ರತಿವರ್ಷ 1500 ಮಂದಿ ಒಬಿಸಿಗಳಿಗೆ ಎಂ.ಬಿ.ಬಿ.ಎಸ್ ಮತ್ತು 2,500 ಒಬಿಸಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ 550 ಇ.ಡ.ಬ್ಲ್ಯೂಎಸ್ ವಲಯದ ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಮತ್ತು 1000 ಇ.ಡಬ್ಲ್ಯೂ.ಎಸ್ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಅನುಕೂಲವಾಗಲಿದೆ.

    ಅಖಿಲ ಭಾರತ ಕೋಟಾ (AIQ) ವನ್ನು 1986 ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಪರಿಚಯಿಸಲಾಯಿತು. ಯಾವುದೇ ರಾಜ್ಯದ ವಿದ್ಯಾರ್ಥಿಗಳಿಗೆ ಬೇರೆ ರಾಜ್ಯದಲ್ಲಿರುವ ಉತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಆಕಾಂಕ್ಷಿಗಳಿಗೆ ಅರ್ಹತೆ ಆಧಾರದ ಮೇಲೆ ಪ್ರವೇಶದ ಅವಕಾಶಗಳನ್ನು ಇದು ಒದಗಿಸುತ್ತದೆ. ಅಖಿಲ ಭಾರತ ಕೋಟಾದಡಿ ಪದವಿ ಪೂರ್ವ – ಯುಜಿ ಅಡಿ ಶೇ 15 ರಷ್ಟು ಸೀಟುಗಳಿವೆ ಮತ್ತು ಸ್ನಾತಕೋತ್ತರದ ವೈದ್ಯಕೀಯ ವಲಯದಲ್ಲಿ ಶೇ 50 ರಷ್ಟು ಸೀಟುಗಳು ದೊರೆಲಿವೆ.

    ಆರಂಭಿಕವಾಗಿ 2007 ರ ವರೆಗೆ AIQ ವಲಯದಲ್ಲಿ ಮೀಸಲಾತಿ ಇರಲಿಲ್ಲ. 2007 ರಲ್ಲಿ AIQ ಕಾರ್ಯಕ್ರಮದಡಿ ಶೇಕಡ15ರಷ್ಟು ಎಸ್.ಸಿ ಮತ್ತು ಶೇಕಡ 7.5ರಷ್ಟು ಎಸ್.ಟಿ. ಮೀಸಲಾತಿಯನ್ನು ಜಾರಿಗೊಳಿಸುವಂತೆ ಆದೇಶಿಸಿತು. ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಶೇಕಡ 27ಮೀಸಲಾತಿ ಜಾರಿಗೊಳಿಸುವ ಕಾಯ್ದೆ 2007 ರಲ್ಲಿ ಜಾರಿಗೆ ಬಂತು. ಇದು ಸಪ್ದರ್ ಜಂಗ್ ಆಸ್ಪತ್ರೆಗಳು, ಲೇಡಿ ಹಾರ್ಡನಿಂಗ್ ವೈದ್ಯಕೀಯ ಕಾಲೇಜು, ಅಲಿಘರ್ ಮುಸ್ಲೀಂ ವಿಶ‍್ವವಿದ್ಯಾಲಯ ಮತ್ತು ಬನಾರಸ್ ಹಿಂದೂ ಯೂನಿವರ್ಸಿಟಿ ಮತ್ತಿತರೆ ಕಡೆಗಳಲ್ಲಿ ಜಾರಿಗೆ ತರಲಾಯಿತು. ಆದಾಗ್ಯೂ ಇದನ್ನು ರಾಜ್ಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಿಗೆ ವಿಸ್ತರಿಸಿಲ್ಲ.

    ಹಾಲಿ ಸರ್ಕಾರ ಹಿಂದುಳಿದ ವರ್ಗವಷ್ಟೇ ಅಲ್ಲದೇ ಇ.ಡಬ್ಲ್ಯೂ.ಎಸ್ ವಲಯಕ್ಕೆ ಮೀಸಲಾತಿ ಕಲ್ಪಿಸಲು ಬದ್ಧವಾಗಿದೆ. ಇದೀಗ ಕೇಂದ್ರ ಸರ್ಕಾರ AIQ ಕೋಟಾದಡಿ ಇ.ಡಬ್ಲ್ಯೂ.ಎಸ್ ಗೆ ಶೇಕಡ 10 ರಷ್ಟು ಮೀಸಲಾತಿ ಮತ್ತು ಒಬಿಸಿ ವಲಯಕ್ಕೆ ಶೇಕಡ 27 ರಷ್ಟು ಮೀಸಲಾತಿ ಕಲ್ಪಿಸುವ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಎಐಕ್ಯೂ ಕಾರ್ಯಕ್ರಮದಡಿ ಯಾವುದೇ ರಾಜ್ಯದ ಒಬಿಸಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ಸೀಟುಗಳನ್ನು ಪಡೆಯಬಹುದಾಗಿದೆ. ಕೇಂದ್ರೀಯ ಯೋಜನೆಯಡಿ ಕೇಂದ್ರೀಯ ಪಟ್ಟಿಯಲ್ಲಿರುವ ಒಬಿಸಿಗಳು ಈ ಮೀಸಲಾತಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಸುಮಾರು 1,500 ಒಬಿಸಿಗಳು ಎಂ.ಬಿ.ಬಿ.ಎಸ್ ಮತ್ತು 2,500 ಸ್ನಾತಕೋತ್ತರ ಕೋರ್ಸ್ ಗಳ ಸೀಟುಗಳ ಸೌಲಭ್ಯ ಪಡೆಯಬಹುದಾಗಿದೆ.

    ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಪ್ರವೇಶ

    ಎ.ಡಬ್ಲ್ಯೂ.ಎಸ್ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಪ್ರವೇಶ ಪಡೆಯಬಹುದಾಗಿದೆ. ಇದಕ್ಕಾಗಿ 2019 ರಲ್ಲಿ ಸಾಂವಿಧಾನಿಕ ತಿದ್ದುಪಡಿ ಮಾಡಲಾಗಿದ್ದು, ಇ.ಡಬ್ಲ್ಯೂ.ಎಸ್ ವಲಯದಲ್ಲಿ ಶೇಕಡ 10ರಷ್ಟು ಮೀಸಲಾತಿ ಸೌಲಭ್ಯ ದೊರೆಯುತ್ತಿದೆ. ಇದಕ್ಕೆ ಅನುಗುಣವಾಗಿ ವೈದ್ಯಕೀಯ/ ದಂತ ವೈದ್ಯಕೀಯ ವಲಯದಲ್ಲಿ 2019 -20 ಮತ್ತು 2020 – 21 ರಲ್ಲಿ ಎರಡು ವರ್ಷಗಳಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಇ.ಡಬ್ಲ್ಯೂ.ಎಸ್ ವಲಯದಲ್ಲಿ ಶೇಕಡ 10ರಷ್ಟು ಸೀಟುಗಳ ಸಂಖ್ಯೆ ಹೆಚ್ಚಾಗಿದ್ದು, ಮೀಸಲಾತಿ ವ್ಯಾಪ್ತಿಗೆ ಒಳಪಡದ ಸೀಟುಗಳ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ಆದಾಗ್ಯೂ AIQ ಸೀಟುಗಳ ಸೌಲಭ್ಯವನ್ನು ಈ ವರೆಗೆ ವಿಸ್ತರಿಸಲಿಲ್ಲ. ಆದ್ದರಿಂದ 2021 – 22 ರ ಸಾಲಿನಿಂದ ಪದವಿಪೂರ್ವ/ ಸ್ನಾತಕೋತ್ತರ ವೈದ್ಯಕೀಯ/ ದಂತ ವೈದ್ಯಕೀಯ ಕೋರ್ಸ್ ಗಳ ಎಐಕ್ಯೂ ವಲಯದಲ್ಲಿ ಒಬಿಸಿಗಳಿಗೆ ಶೇ 27 ರಷ್ಟು, ಇ.ಡಬ್ಲ್ಯೂ.ಎಸ್ ಗಳಿಗೆ ಶೇ 10 ರಷ್ಟು ಮೀಸಲಾತಿ ಸೌಲಭ್ಯ ದೊರೆಯುತ್ತಿದೆ. ಇದರಿಂದ ಪ್ರತಿವರ್ಷ 550 ಇ.ಡಬ್ಲ್ಯೂ.ಎಸ್ ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಮತ್ತು ಪಿ.ಜಿ. ವೈದ್ಯಕೀಯ ಕೋರ್ಸ್ ಗಳಲ್ಲಿ 1000 ವಿದ್ಯಾರ್ಥಿಗಳಿಗೆ ಲಾಭ ದೊರೆಯಲಿದೆ.

    ಈ ನಿರ್ಧಾರ 2014 ರಿಂದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡ ಮಹತ್ವದ ಸುಧಾರಣೆಗಳೊಂದಿಗೆ ಸಂಪರ್ಕ ಹೊಂದಿದೆ. ಕಳೆದ ಆರು ವರ್ಷಗಳಲ್ಲಿ ಎಂ.ಬಿ.ಬಿ.ಎಸ್ ಸೀಟುಗಳ ಪ್ರಮಾಣ ಶೇಕಡ 56 ರಷ್ಟು ಹೆಚ್ಚಳವಾಗಿದೆ. 2014 ರಲ್ಲಿ 54,348 ರಷ್ಟಿದ್ದ ಸೀಟುಗಳ ಸಂಖ್ಯೆ 2020 ರ ವೇಳೆಗೆ 84,649 ಕ್ಕೆ ಏರಿಕೆಯಾಗಿದೆ. ಪಿಜಿ ಸೀಟುಗಳ ಪ್ರಮಾಣದಲ್ಲಿ 80% ರಷ್ಟು ಏರಿಕೆ ಕಂಡಿದ್ದು, 2014 ರಲ್ಲಿ 30,191 ರಿಂದ 2020 ರ ವೇಳೆಗೆ 54,275 ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 179 ವೈದ್ಯಕೀಯ ಕಾಲೇಜುಗಳಿತ್ತು ಮತ್ತು ಇದೀಗ ದೇಶದಲ್ಲಿ 558 [289 ಸರ್ಕಾರಿ, 269 ಖಾಸಗಿ] ವೈದ್ಯಕೀಯ ಕಾಲೇಜುಗಳಿವೆ.

    ಹುಬ್ಬಳ್ಳಿ ಧಾರವಾಡ ನಗರ ಅಭಿವೃದ್ಧಿಗೆ ಪ್ರಾಶಸ್ತ್ಯ:ಬೊಮ್ಮಾಯಿ

    HUBBALLI JULY 29

    ಹುಬ್ಬಳ್ಳಿ-ಧಾರವಾಡ ರಾಜ್ಯದ ಎರಡನೇ ಅತಿದೊಡ್ಡ ನಗರವಾಗಿದೆ. ಅವಳಿ ನಗರದ ಸಮಸ್ಯೆಗಳನ್ನು ಬಗೆಹರಿಸಿ, ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿರುವ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳುವ ಮುನ್ನ ವಿಮಾನ ನಿಲ್ದಾಣದ‌ ಬಳಿ ಮಾಧ್ಯಮ‌ದವರೊಂದಿಗೆ ಮಾತನಾಡಿದರು.

    ಹುಬ್ಬಳ್ಳಿ ನನಗೆ ಅತ್ಯಂತ ಪ್ರೀತಿಯ ಊರು. ನನ್ನ ಶೈಕ್ಷಣಿಕ ಜೀವನದ ಅಪಾರ ಪ್ರಮಾಣದ ಸ್ನೇಹಿತರ ಬಳಗ ಇಲ್ಲಿದೆ. ಮುಖ್ಯಮಂತ್ರಿಯಾಗಿ ಹುಬ್ಬಳ್ಳಿಗೆ ಆಗಮಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಪಕ್ಷ ಹಾಗೂ ಕೇಂದ್ರದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆರ್ಶೀವಾದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದೇನೆ.‌ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಹಿರಿಯ ನಾಯಕರಾದ ಜಗದೀಶ ಶೆಟ್ಟರ್ ಹಾಗೂ ಅನೇಕ ಶಾಸಕ ಮಿತ್ರರು ಇಲ್ಲಿರುವುದರಿಂದ ಪಕ್ಷ ಇಲ್ಲಿ ಬಲಿಷ್ಠವಾಗಿದೆ. ಪಕ್ಷ ಹಾಗೂ ಪರಿವಾರದ ಹಿರಿಯರೊಂದಿಗೆ ಚರ್ಚೆ ಮಾಡಿ ಅವರ ಸಲಹೆ ಸೂಚನೆಗಳನ್ನು ಅನುಷ್ಠಾನ ಮಾಡಲು ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

    ನಾಳೆ ಬೆಳಗ್ಗೆ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್ ನಾಯಕರು, ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ಮುಂದಿನ ಎರಡು ಮೂರು ದಿನಗಳಲ್ಲಿ ಮತ್ತೆ ದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸುತ್ತೇನೆ.ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಸಚಿವ ಸಂಪುಟ ಸೇರದಿರುವ ಕುರಿತು ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳಿದ್ದಾರೆ. ಅದಾಗ್ಯೂ ಸಹ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಈ ಕುರಿತು ಮಾತನಾಡುತ್ತೇನೆ. ರಾಜಕೀಯಕ್ಕೆ ಬರುವ ಮೊದಲಿನಿಂದಲೇ ನಾವಿಬ್ಬರೂ ಸ್ನೇಹಿತರು. ಅವರ ಬಗ್ಗೆ ಅಪಾರವಾದ ಅಭಿಮಾನ, ಪ್ರೀತಿ – ವಿಶ್ವಾಸ ಇದೆ. ಅವರೊಂದಿಗೆ ಮಾತನಾಡಿ ಅವರ ಬಯಕೆಯನ್ನು ತಿಳಿದುಕೊಂಡು ಪಕ್ಷದೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು.

    ಲಮಟ್ಟಿ ಜಲಾಶಯದ ಎತ್ತರ ಹೆಚ್ಚಳಕ್ಕೆ ಕ್ರಮ

    ಈ ಸಂದರ್ಭದಲ್ಲಿ ಮಾಧ್ಯಮಮಿತರ ಪ್ರಶ್ನೆಗೆ ಉತ್ತರಿಸಿದ ಅವರು ಕೃಷ್ಣಾ ನದಿ ನೀರಿನ ಹಂಚಿಕೆ ಕುರಿತು ಸುಪ್ರೀಂಕೋರ್ಟ್ ಆದೇಶದಂತೆ ಬ್ರಿಜೇಶ್ ಕುಮಾರ್ ಪಟೇಲ್ ಅವರ ನೇತೃತ್ವದಲ್ಲಿ ಟ್ರುಬ್ಯುನಲ್ ರಚಿಸಲಾಯಿತು. ಇದರ ತೀರ್ಪಿನಂತೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸುವ ಹಂತದಲ್ಲಿ ಆಂದ್ರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲು ಏರಿತು. ಮಹಾರಾಷ್ಟ್ರ ಹಾಗೂ ಕರ್ನಾಟಕ ಒಟ್ಟಾಗಿ ಇದನ್ನು ಎದುರಿಸುತ್ತಿದ್ದೇವೆ. ಮುಂದಿನ ಒಂದುವರೆ ತಿಂಗಳ ಒಳಗಾಗಿ ಸುಪ್ರೀಂಕೋರ್ಟ್ ತೀರ್ಪು ಬರಬಹುದು. ನಮ್ಮ ಪಾಲಿನ ನೀರಿನ ಬಳಕೆಗೆ ಅನುಮತಿ ದೊರೆಯುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ತಕ್ಷಣ ಪುನರ್ವಸತಿ ಕಾರ್ಯಕ್ರಮ ರೂಪಿಸಿ, ಆಲಮಟ್ಟಿ ಜಲಾಶಯದ ಎತ್ತರವನ್ನು ಏರಿಸಲಾಗುವುದು. ಈ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆಯಿದೆ. ಜಲಾಶಯದ ಎತ್ತರ ಹೆಚ್ಚಳದಿಂದ 13.50 ಲಕ್ಷ ಚದುರ ಪ್ರದೇಶ ನೀರಾವರಿಗೆ ಒಳಪಡುವುದು. ಇದಕ್ಕೆ ಪ್ರಾಶಸ್ತ್ಯ ನೀಡಿ ಕೆಲಸ ಮಾಡಲಾಗುವುದು ಎಂದರು.

    ತಂದೆ -ತಾಯಿ ಅವರ ಸಮಾಧಿಗೆ ಗೌರವ ಸಮರ್ಪಣೆ

    ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿಸ ಬಸವರಾಜ ಬೊಮ್ಮಾಯಿ ಅವರು , ಹುಬ್ಬಳ್ಳಿ ಧಾರವಾಡ ಅವಳಿನಗರಗಳ ಮಧ್ಯೆ ಅಮರಗೋಳದಲ್ಲಿರುವ ಮಾತೋಶ್ರೀ ಗಂಗಮ್ಮ ಎಸ್ ಬೊಮ್ಮಾಯಿ ಹಾಗೂ ತಂದೆ,ಮಾಜಿಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಸಮಾಧಿಗಳಿಗೆ ಪೂಜೆ ಸಲ್ಲಿಸಿ ,ಗೌರವ ಸಮರ್ಪಿಸಿದರು.

    ತಂದೆ -ತಾಯಿಯ ಸಮಾಧಿಗೆ ಪ್ರದಕ್ಷಿಣೆ ಹಾಕಿ ಕೆಲನಿಮಿಷ ಮೌನವಾಗಿ ಸ್ಮರಣೆ ಮಾಡಿದರು.ಉಭಯ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು

    ಹಸುರಿನಲ್ಲಿ ಉಸಿರಾಡೋ ಜಗತ್ತು


    ಇಂದು ಜುಲೈ 28 ವಿಶ್ವ ಪ್ರಕೃತಿ ಸಂರಕ್ಷಣಾ ದಿನ.   ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರಕೃತಿಯ ಸಂರಕ್ಷಣೆಯ ಮಹತ್ವವನ್ನು ಜನರಿಗೆ ಮನವರಿಕೆ ಮಾಡಲು ಈ  ದಿನವನ್ನು  ಆಚರಿಸಲಾಗುತ್ತದೆ. ಜಾಗತಿಕ ತಾಪಮಾನದ ಏರಿಕೆಯು ಪ್ರಕೃತಿ ಮತ್ತು ಮನುಷ್ಯರ ನಡುವೆ ಅಸಮತೋಲನವನ್ನು ಉಂಟುಮಾಡಿದೆ. ಇದು  ವಿವಿಧ ಕಾಯಿಲೆಗಳಿಗೆ  ಮತ್ತು  ಪ್ರವಾಹದಂತಹ ವಿಪತ್ತುಗಳಿಗೆ ಕಾರಣವಾಗುತ್ತದೆ. ಮಾನವ   ಪ್ರಕೃತಿಯ ಒಂದು ಅಂಶವಾಗಿ ನಿಸರ್ಗವನ್ನು  ಹೇಗೆ ಬಳಸಿಕೊಳ್ಳುತ್ತಿದ್ದಾನೆ  ಎಂಬುದನ್ನು  ಆತ್ಮಾವಲೋಕನ ಮಾಡಿಕೊಳ್ಳಲು ಹಾಗೂ ಭೂಮಿಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುವ ಸಂಪನ್ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ    ವಿಶ್ವ ಪ್ರಕೃತಿ ಸಂರಕ್ಷಣಾ ದಿನವು  ಮಹತ್ವವನ್ನು ಪಡೆದುಕೊಳ್ಳುತ್ತದೆ. ‘ಅರಣ್ಯ ಮತ್ತು ಜೀವನೋಪಾಯ: ಜನರನ್ನು ಮತ್ತು ಗ್ರಹವನ್ನು ಉಳಿಸಿಕೊಳ್ಳುವುದು’  2021 ರ ವಿಶ್ವ ಪ್ರಕೃತಿ ಸಂರಕ್ಷಣಾ ದಿನದ  ಧ್ಯೇಯ ವಾಕ್ಯ. ಈ ವಿಶೇಷ ದಿನದಂದು ‘ಹಸುರಿನಲ್ಲಿ ಉಸಿರಾಡೋ ಜಗತ್ತು’ ಎಂಬುವುದರ ಬಗ್ಗೆ ಅರಿತುಕೊಳ್ಳೋಣ


    ಹಸಿರು, ಗಿಡ-ಮರ, ಬಳ್ಳಿಗಳಿಂದ ತುಂಬಿದಾಗ ಕಾಣುವ ಈ ನೈಸರ್ಗಿಕ ಬಣ್ಣ ನೋಡಲು ಎಷ್ಟೊಂದು ಆಹ್ಲಾದಕರ. ವಸಂತ ಮಾಸದಲ್ಲಿ ಗಿಡ-ಮರಗಳು ತಮ್ಮ ಹಣ್ಣಲೆಗಳನ್ನು ಉದುರಿಸಿಕೊಂಡು ಹೊಸ ಎಲೆಗಳನ್ನು ತುಂಬಿಕೊಂಡಿರುವಾಗ ತಿಳಿಯಾದ  ಹಸಿರಿನ ಆ ಬಣ್ಣ ಜೊತೆಗೆ ಬಗೆಬಗೆಯ ಹಕ್ಕಿಗಳ ಕಲರವದ ಆ ಸೊಬಗು ವರ್ಣಿಸಲು  ಅಸಾಧ್ಯ. ನಿಸರ್ಗದ ಈ ಹಸಿರು ಕೇವಲ ಸೌಂದರ್ಯಕ್ಕೆ ಸೀಮಿತವಲ್ಲ. ಮನುಷ್ಯರು  ಸೇರಿದಂತೆ ಭೂಮಿಯಲ್ಲಿರುವ ಪ್ರತಿಯೊಂದು ಜೀವಿಯ ಉಸಿರಿಗೂ ಈ ಹಸಿರೇ ಮುಖ್ಯ.  ಇನ್ನೊಂದು ರೀತಿಯಲ್ಲಿ ಹೇಳುವುದಿದ್ದರೆ ಜೀವ ಸಂಕುಲದ ಉಸಿರೇ ಈ ಹಸಿರು.  ಹುಣ್ಣಿಮೆಯ ದಿನದಂದು ಸುಂದರವಾಗಿ ಕಾಣುವ ಭೂಮಿಯ ಉಪಗ್ರಹ ಚಂದ್ರ. ಆದರೆ,  ಅಲ್ಲಿ ಯಾವೊಂದು ಗಿಡ-ಮರಗಳಿಲ್ಲದೆ ಹಸಿರಿನ ಪರಿಕಲ್ಪನೆಯೇ ಇಲ್ಲ. ಹಾಗಾಗಿ ಅಲ್ಲಿ  ಯಾವೊಂದು ಉಸಿರು ಇಲ್ಲ. ಅರ್ಥಾತ್ ಅಲ್ಲಿ ಯಾವ ಜೀವಿಯೂ ಇಲ್ಲದ ಬರೇ ಬರಡು  ಪ್ರದೇಶವಾಗಿದೆ. ಒಂದೊಮ್ಮೆ ಭೂಮಿಯಲ್ಲಿ ಹಸಿರು ಇಲ್ಲವಾಗಿದ್ದರೆ ಭೂಮಿಯೂ ಕೂಡ  ಇತರ ಗ್ರಹಗಳಂತೆ ಒಂದು ನಿರ್ಜೀವ ಗ್ರಹವಾಗಿರುತ್ತಿತ್ತು.

    ಪ್ರಕೃತಿಯ ಹಸಿರು ಜೀವಿಗಳ ಉಸಿರಿಗೆ ಏಕೆ ಮುಖ್ಯ? ಹಸಿರಿಲ್ಲದಿದ್ದರೆ ಜೀವಿಗಳು ಬದುಕಲಾರವೇ? ಜಗತ್ತಿನಲ್ಲಿ ಯಾವುದೇ ಕ್ರಿಯೆ  ನಡೆಯಬೇಕಿದ್ದರೂ, ಒಂದು ಹುಲುಕಡ್ಡಿ ಅಲುಗಾಡಲೂ ಕೂಡ ಯಾವುದಾದರೊಂದು ರೂಪದ ಶಕ್ತಿಯ ನೆರವು ಬೇಕೇ ಬೇಕು. ಹಾಗೆಯೇ ಜೀವಿಗಳ ಬದುಕಿಗೆ, ಬದುಕಿನ ಪ್ರತಿ  ಕ್ರಿಯೆಗೂ ಶಕ್ತಿ ಬೇಕು. ಭೂಮಿಯ ಮೇಲೆ ನಡೆಯುವ ಪ್ರತಿಯೊಂದು ಪ್ರಕ್ರಿಯೆಗೂ ಶಕ್ತಿಯ  ಮೂಲ ಸೌರಶಕ್ತಿ. ಸೂರ್ಯನು ನಿರಂತರವಾಗಿ ಅಗಾಧವಾದ ಶಕ್ತಿಯನ್ನು ರವಾನಿಸುತ್ತಿರುತ್ತಾನೆ. ಆದರೆ ಆ ಶಕ್ತಿಯನ್ನು ಪ್ರಾಣಿಗಳು ನೇರವಾಗಿ ಪಡೆಯುವ  ಸಾಮರ್ಥ್ಯವನ್ನು ಹೊಂದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ನಮಗೆ ಪ್ರಕೃತಿಯು ಹಸಿರನ್ನು ವರವಾಗಿ ನೀಡಿದೆ.

    ಸೌರಶಕ್ತಿಯನ್ನು ಉಪಯೋಗಿಸಿಕೊಂಡು ಆಹಾರ  ರೂಪವಾಗಿ ಪರಿವರ್ತಿಸುವ ಸಾಮರ್ಥ್ಯ ಈ ಹಸಿರಿಗೆ ಮಾತ್ರ ಇರುವುದು. ಸಸ್ಯಗಳು  ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಸೌರಶಕ್ತಿಯನ್ನು ರಾಸಾಯನಿಕ ಶಕ್ತಿಯನ್ನಾಗಿ  ಪರಿವರ್ತಿಸಿ ಆಹಾರವಾಗಿ ನಮಗೆ ನೀಡುತ್ತದೆ. ಸಸ್ಯದ ಬದಲು ಹಸಿರು ಪದವೇ  ಸಮಂಜಸವಾಗಿ ಕಂಡುಬರುವುದಕ್ಕೆ ಪ್ರಾಯಶ: ಎಲೆಗಳ ಹಸಿರು ಬಣ್ಣದ ಕೊಡುಗೆಯೇ ಕಾರಣ ಇರಬೇಕು. ಎಲೆಗಳ ಹಸಿರು ಬಣ್ಣಕ್ಕೆ ಅವುಗಳಲ್ಲಿರುವ ಕ್ಲೋರೋಫಿಲ್ ಎನ್ನುವ  ವರ್ಣತಂತುಗಳೇ ಕಾರಣ. ಈ ವರ್ಣತಂತುಗಳು ಸೂರ್ಯಕಿರಣಗಳನ್ನು ಹೀರಿಕೊಂಡು  ಶರ್ಕರ ಷಿಷ್ಟವನ್ನು ಉತ್ಪತ್ತಿ ಮಾಡುತ್ತವೆ. ಜೀವ-ಪರಿಸರ ಶಾಸ್ತ್ರದ ಪ್ರಕಾರ ಹೇಳುವುದಿದ್ದರೆ, ಸಸ್ಯಗಳು ಉತ್ಪಾದಕರು ಅಥವಾ ಸ್ವಯಂ ಪೋಷಕರು. ನಾವು ಮನುಷ್ಯರು ಸೇರಿದಂತೆ ಈ  ಸಾಮರ್ಥ್ಯ ಹೊಂದಿರದ ಜೀವಿಗಳೆಲ್ಲವೂ ಭಕ್ಷಕರ/ಬಳಕೆದಾರರ ಸ್ಥಾನದಲ್ಲಿ ನಿಲ್ಲುತ್ತವೆ. ಬೇರೆ ಎಲ್ಲ ಪ್ರಾಣಿಗಳು ನೇರವಾಗಿ ಅಥವಾ ಪರೋಕ್ಷವಾಗಿ ಆಹಾರಕ್ಕಾಗಿ ಹಸಿರನ್ನು ಅವಲಂಬಿಸಿಕೊಂಡೇ ಉಸಿರನ್ನು ಉಳಿಸಿಕೊಳ್ಳಬೇಕು.

    ಇನ್ನು ಉಸಿರಿಗೆ ಬರೋಣ. ನಮಗೆ ಉಸಿರಾಡಲು ಆಮ್ಲಜನಕ ಬೇಕಲ್ಲವೇ? ಗಾಳಿಯಿಲ್ಲದ ನಿರ್ವಾತ ಪ್ರದೇಶದಲ್ಲಿ ನಾವು ಕೆಲವು ಕ್ಷಣಗಳು ಕೂಡ  ಜೀವಂತಾಗಿರಲು ಸಾಧ್ಯವಿಲ್ಲ. ಬದುಕಲು  ಆಮ್ಲಜನಕ ಎಷ್ಟು ಮಹತ್ವ ಎನ್ನುವುದನ್ನು ಹೊಸ ತಳಿಯ  ಕೊರೊನಾ ವೈರಸ್   ಎರಡನೇ ಅಲೆಯಲ್ಲಿ  ನಮಗೆ ಇನ್ನಷ್ಟೂ  ಮನದಟ್ಟು ಮಾಡಿಸಿದೆ.  ಪ್ರಾಣವಾಯು ಆಮ್ಲಜನಕವು ಸಹ ನಮಗೆ ಹಸಿರಿನಿಂದ  ದೊರೆಯುತ್ತದೆ ನಿಜ. ಸಸ್ಯಗಳು ಹೀರಿಕೊಂಡ ನೀರು ದ್ಯುತಿ ಸಂಶ್ಲೇಷಣೆಯ ಸಮಯದಲ್ಲಿ  ನೀರಿನಲ್ಲಿರುವ ಅಣುಗಳನ್ನು ವಿಭಜಿಸಿ ಜೀವಿಗಳ ಉಸಿರಾಟಕ್ಕೆ ಬೇಕಾದ ಆಮ್ಲಜನಕವನ್ನು ಯಥೇಚ್ಛವಾಗಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಅಂದೆ ಹಾಗೆ, ಜೀವಿಗಳಿಗೆ  ಆಮ್ಲಜನಕ ಯಾಕೆ ಬೇಕು? ಜೀವಿಗಳ ಬದುಕಿಗೆ ಶಕ್ತಿಯ ರೂಪವಾಗಿ ಆಹಾರವನ್ನು ತೆಗೆದುಕೊಳ್ಳುತ್ತವೆ ಎನ್ನುವುದನ್ನು ಈಗಾಗಲೇ ಅರಿತುಕೊಂಡೆವು. ಆದರೆ ಆಹಾರದಲ್ಲಿರುವ ಶಕ್ತಿಯು ಸುಲಭವಾಗಿ ಹೊರಬಿಡಲ್ಪಡುವುದಿಲ್ಲ. ಆಹಾರವನ್ನು ಇಂಧನವಾಗಿ ಉರಿಸಿದಾಗ  ಮಾತ್ರ ಅದರಲ್ಲಡಕವಾಗಿರುವ ಶಕ್ತಿಯು ಬಿಡುಗಡೆಯಾಗುತ್ತದೆ. ಅಂದರೆ ಆಹಾರವನ್ನು ‘ಉತ್ಕರ್ಷಣ’ ಎನ್ನುವ ರಾಸಾಯನಿಕ ಕ್ರಿಯೆಗೆ ಒಳಪಟ್ಟಾಗ ಶಕ್ತಿಯು ಬಿಡುಗಡೆಯಾಗುತ್ತದೆ. ಈ ಪ್ರಕ್ರಿಯೆಗೆ ಆಮ್ಲಜನಕದ ಅವಶ್ಯಕತೆ ಇದೆ. ಆಹಾರದಲ್ಲಿರುವ ಶಕ್ತಿಯನ್ನು ಉತ್ಕರ್ಷಣ ಕ್ರಿಯೆಯ ಮೂಲಕ ಮುಕ್ತ ಮಾಡುವ ಕ್ರಿಯೆಯೇ ಉಸಿರಾಟ.

    ಒಂದು ವಿಸ್ಮಯಕಾರಿ ಸಂಗತಿಯೆಂದರೆ ಕೆಲವಾರು ಸೂಕ್ಷಮಾಣು ಜೀವಿಗಳು (ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಜೀವಿಗಳು) ಆಮ್ಲಜನಕವಿಲ್ಲದೆಯೂ ಕೂಡ ಬದುಕಬಲ್ಲವು. ಇವುಗಳು ಅನಏರೊಬಿಕ್ ಜೀವಿಗಳು ಎಂದು ಕರೆಯಲ್ಪಡುತ್ತವೆ. ಒಂದೊಮ್ಮೆ ಅಂದರೆ ಸುಮಾರು 2,800 ಮಿಲಿಯನ್  ವರ್ಷಗಳ ಹಿಂದೆ ವಾತಾವರಣವು ಆಪಕರ್ಷಣ (ಆಮ್ಲಜನಕ ರಹಿತವಾದ)  ವಾತಾವರಣವಾಗಿತ್ತು. ಮೊದಲಿಗೆ ಆಮ್ಲಜನಕವಿಲ್ಲದೆ ಬದುಕುವ ಜೀವಿಗಳು ಹುಟ್ಟಿಕೊಂಡವು. ವಿಕಾಸಪಥದಲ್ಲಿ ಕ್ರಮೇಣ ದ್ಯುತಿಸಂಶ್ಲೇಷಣೆ ಕ್ರಿಯೆಯ ಸಾಮರ್ಥ್ಯವಿರುವ ನೀಲಿ ಹಸಿರು ಪಾಚಿಗಳು (ಬ್ಲೂಗ್ರೀನ್ ಆಲ್ಗೆ ) ಹುಟ್ಟಿಕೊಂಡವು. ಈ ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ  ಆಮ್ಲಜನಕ ಉತ್ಪತ್ತಿಯಾಗಿ ವಾತಾವರಣಕ್ಕೆ ಬಿಡುಗಡೆಗೊಂಡು, ಇಂದಿನ ಸ್ನೇಹಮಯ  ಉತ್ಕರ್ಷಣೀಯ ವಾತಾವರಣ ಉಂಟಾಯಿತು. ಹೀಗೆ ಸಾವಿರಾರು ಮಿಲಿಯನ್ ವರ್ಷಗಳ  ಸಸ್ಯಗಳ ದ್ಯುತಿಸಂಶ್ಲೇಷಣೆಯಿಂದ ನಮ್ಮ ಇಂದಿನ ವಾಯುಮಂಡಲ ಉತ್ಪತ್ತಿಯಾಗಿದೆ. 

    ಜೀವಿಗಳ ಉಸಿರಾಟ ಕ್ರಿಯೆಯಲ್ಲಿ ವಾತಾವರಣಕ್ಕೆ ಬಿಡುಗಡೆಗೊಂಡ ವಿಷಾನಿಲ ಇಂಗಾಲದ ಡೈಆಕ್ಸೈಡನ್ನು ಹೀರಿಕೊಂಡು ಉಪಯುಕ್ತ ಕಾರ್ಬೋಹೈಡ್ರೇಟ್ (ಶರ್ಕರಪಿಷ್ಠ)  ಆಗಿ ಪರಿವರ್ತಿಸಿ ನಮಗೆ, ಎಲ್ಲಾ ಪ್ರಾಣಿಗಳಿಗೆ ಆಹಾರ ರೂಪದಲ್ಲಿ ಸಿಗುತ್ತದೆ. ಒಂದು ಪ್ರಶ್ನೆ ಮೂಡಬಹುದು? “ಹುಲಿ, ಸಿಂಹ, ತೋಳ, ಚಿರತೆಗಳಂತಹ ವನ್ಯಮೃಗಗಳು ತಮ್ಮ  ಆಹಾರಕ್ಕಾಗಿ ಸಸ್ಯಗಳನ್ನು ಅವಲಂಬಿಸದೇ ಇತರ ಪ್ರಾಣಿಗಳನ್ನು ಬೇಟೆಯಾಡಿ ತಿಂದು  ಬದುಕುವುದಿಲ್ಲವೇ? ಪ್ರಶ್ನೆ ಸರಿಯಾಗಿಯೇ ಇದೆ. ಇದಕ್ಕೆ ಉತ್ತರ ಪ್ರಶ್ನೆಯಲ್ಲಿಯೇ ಇದೆ.  ‘ಇತರ ಪ್ರಾಣಿಗಳು’ ಅವುಗಳಿಗೆ ಆಹಾರವಾಗಬೇಕಿದ್ದಲ್ಲಿ ಆ ಪ್ರಾಣಿಗಳು ಸಹ ತಮ್ಮ ಬದುಕಿಗಾಗಿ ಇನ್ನೊಂದು ಜೀವಿಯನ್ನು ಅವಲಂಬಿಸಬೇಕಲ್ಲವೇ? ಅಂದರೆ ಮಾಂಸ ಭಕ್ಷಕ  ಪ್ರಾಣಿಗಳು ಸಸ್ಯಾಹಾರಿ ಪ್ರಾಣಿಗಳನ್ನು ಹಿಡಿಯುತ್ತವೆ. ಭೂಮಿಯಲ್ಲಿರುವ ಎಲ್ಲಾ  ಜೀವಿಗಳು ಬದುಕಬೇಕಾದರೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಹಾರಕ್ಕಾಗಿ ಒಂದನ್ನೊಂದು  ಅವಲಂಬಿಸಿಕೊಳ್ಳಲೇಬೇಕು.

    ಈ ರೀತಿ ಆಹಾರಕ್ಕಾಗಿ ಪರಸ್ಪರ ಅವಲಂಬಿತವಾಗಿರುವ  ಜೀವಿಗಳ ಸಂಬಂಧದ ಒಂದು ಸಂಕೀರ್ಣ ರಚನೆಯನ್ನು ಆಹಾರ ಸರಪಳಿ ಎನ್ನುತ್ತಾರೆ. ಈ  ಸರಪಳಿಯಲ್ಲಿ ಉತ್ಪಾದಕರ ಸ್ಥಾನದಲ್ಲಿ ಇರುವ ಸಸ್ಯಗಳ ಪಾತ್ರ ಮಹತ್ವವಾದದ್ದು. ಹೀಗೆ  ಜೀವಸಂಕುಲದ ಪ್ರತಿಯೊಂದು ಸದಸ್ಯರುಗಳು ಜೈವಿಕ ಸಮತೋಲನೆಯನ್ನು  ಕಾಪಾಡಿಕೊಂಡು ಬರುತ್ತದೆ. ಆಹಾರ ಸರಪಳಿಯ ಕೇಂದ್ರ ನಿಸರ್ಗದ ಹಸಿರು. ಒಂದೊಮ್ಮೆ ಈ ಹಸಿರು ನಿರ್ನಾಮವಾದರೆ ಸರಪಳಿಯ ಕೋಡಿಯು ಬೇರ್ಪಟ್ಟು ಯಾವ ಜೀವಿಯ ಉಸಿರು ಇನ್ನಿಲ್ಲವಾದಂತಾಗುತ್ತದೆ.

    ಉಸಿರಾಡಲು ಗಾಳಿ ಎಷ್ಟು ಮುಖ್ಯವೋ ಅಂತೆಯೇ ಬದುಕಲು ನೀರು ಅಷ್ಟೇ  ಪ್ರಾಮುಖ್ಯ. ನೀರು ವಸುಂಧರೆಯ ಅನರ್ಘ್ಯ ರತ್ನ. ಜೀವನದ ಸಾರ ಸರ್ವಸ್ವವಾಗಿರುವ ನೀರು  ಸಮಸ್ತ ಜೀವಜಾಲದ ರಾಸಾಯನಿಕ ಕ್ರಿಯೆಗೆ ಮಾಧ್ಯಮ. ಜೀವಿಗಳು ಉಗಮವಾಗಿದ್ದೇ  ನೀರಿನಲ್ಲಿ. ಆದ್ದರಿಂದಲೇ ನೀರನ್ನು ಜೀವಜಲ ಎಂದು ಕರೆಯಲಾಗಿದೆ. ನಮ್ಮ ದೇಹದ  ಶೇ.70ರಷ್ಟು ಭಾಗ ನೀರಿನಿಂದಲೇ ಆಗಿದೆ ಎಂದರೆ ನೀರಿನ ಮಹತ್ವ ತಿಳಿಯುತ್ತದೆ. ಭೂಮಿಯ ಶೇಕಡ 70ರಷ್ಟು ಭಾಗ ನೀರಿನಿಂದ ಅವೃತವಾಗಿದೆ. (ಜಗತ್ತಿನಲ್ಲಿ ದೊರೆಯುವ  ಸುಮಾರು 1.4 ಬಿಲಿಯನ್ ಕ್ಯುಬಿಕ್ ಮೀಟರ್ ನೀರಿನಲ್ಲಿ ಕೇವಲ ಶೇ.3ರಷ್ಟು ಮಾತ್ರ ಶುದ್ಧ  ಮತ್ತು ಮಾನವನ ಉಪಯೋಗಕ್ಕೆ ಯೋಗ್ಯವಾದದ್ದು) ಅದರಲ್ಲಿ ಹೆಚ್ಚಿನ ಭಾಗ ಸುಮುದ್ರಗಳು ಆವರಿಸಿಕೊಂಡಿವೆ. ಆದರೆ ನಾವು ಸಮುದ್ರ ನೀರನ್ನು ಉಪಯೋಗಿಸಲು ಸಾಧ್ಯವಿಲ್ಲ  (ನೀರಿಗಾಗಿ ಹಾಹಾಕಾರ ಅತಿಯಾಗಿ ಮುಂದಿನ ದಿನಗಳಲ್ಲಿ ನಮ್ಮ ದೇಶದಲ್ಲೂ  ಸಮುದ್ರ ದ ನೀರನ್ನೇ  ಭಟ್ಟಿ ಇಳಿಸಿ ಉಪಯೋಗಿಸಬೇಕಾದ ಪ್ರಮೇಯ  ಬರಬಹುದು). ನೀರಿಗಾಗಿ ನಾವು  ಅವಲಂಬಿಸಿರುವುದು ಒಂದು ಮಳೆನೀರು, ಇನ್ನೊಂದು ಅಂತರ್ಜಲ. ಈ ಎರಡು  ಮೂಲಗಳಿಂದ ನೀರು ಸಿಗಬೇಕಿದ್ದರೆ ಜಲಚಕ್ರವು ನಿರಂತರವಾಗಿ, ಸಮರ್ಪಕವಾಗಿ ನಡೆಯಬೇಕು.

    ನದಿ, ಕೆರೆ-ತೊರೆ-ಹಳ್ಳ-ಕೊಳಗಳು ತುಂಬಿ ಹರಿಯಬೇಕಾದರೂ ಮಳೆಯೇ ಮುಖ್ಯ.  ಮಳೆನೀರು ಆಕಾಶದಿಂದ ಬೀಳುವುದೇನೋ ಸರಿ, ಆದರೆ ಆ  ನೀರಿನ ಹನಿಗಳು ಭೂಮಿಯಿಂದಲೇ ವಾತಾವರಣಕ್ಕೆ ಭಾಷ್ಪೀಕರಣಗೊಂಡು ಅಲ್ಲಿ  ಮೋಡಗಳಾಗುತ್ತವೆ. ಕಾಲ ಕಳೆದಂತೆ ವಾತಾವರಣದ ತಾಪಮಾನಕ್ಕೆ ಮೋಡಗಳು ಕರಗಿ ಪುನ: ಹನಿಹನಿಯಾಗಿ ಭೂಮಿಯನ್ನು ಸೇರುತ್ತದೆ. ‘ಹನಿ ಹನಿ ಕೂಡಿದರೆ ಹಳ್ಳ ತೆನೆ ತೆನೆ ಕೂಡಿದರೆ ಬಳ್ಳ ‘ ಎಂಬ ಅರ್ಥಪೂರ್ಣವಾದ  ಗಾದೆ ಮಾತು ಈ ಹಿನ್ನೆಲೆಯಿಂದಲೇ ಬಂದಿರುವುದಲ್ಲವೇ? ನೀರಿನ  ಪರಿಚಲನೆಯನ್ನು ಜಲಚಕ್ರ ಎಂದು ಕರೆಯಲಾಗುತ್ತದೆ. ಉಷ್ಣವಲಯದ ಮಳೆಕಾಡುಗಳು  ಭೂಮೇಲ್ಮೈಯ 1/16 ಭಾಗವಿದ್ದರೂ ಸಹ ಭೂಮಿಗೆ ಬೀಳುವ ಅರ್ಧದಷ್ಟು ಮಳೆಯನ್ನು  ಪಡೆಯುತ್ತವೆ. ಜಗತ್ತಿನಲ್ಲಿ ಜಲಚಕ್ರದ ಸಮತೋಲನವನ್ನು ಕಾಪಾಡುವಲ್ಲಿ ಜೀವವೈಧ್ಯವು, ಅದರಲ್ಲಿಯೂ ಮುಖ್ಯವಾಗಿ ಸಸ್ಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.  ಭೂಮಿಯಿಂದ ಹೀರಿಕೊಂಡ ನೀರನ್ನು ತಮಗೆ ಬೇಕಾದಷ್ಟನ್ನು ಉಪಯೋಗಿಸಿಕೊಂಡು  ಉಳಿದುದನ್ನು ಭಾಷ್ಪವಿಸರ್ಜನೆ ಕ್ರಿಯೆಯ  ಮೂಲಕ ಯಥೇಚ್ಛವಾಗಿ ವಾತಾವರಣಕ್ಕೆ  ರವಾನಿಸುವುದು. ಮಳೆಯ ಹೊಡೆತವನ್ನು ಕಾಡಿನಲ್ಲಿ ದಟ್ಟವಾಗಿ ಹರಡಿರುವ ಮರದ  ಬೇರುಗಳು ಮಳೆನೀರು ಕೊಚ್ಚಿಹೋಗಿ ಸಮುದ್ರವನ್ನು ಸೇರಿ ನಷ್ಟವಾಗುವುದನ್ನು ತಡೆಗಟ್ಟಿ ಅಂತರ್ಜಲ ಮಟ್ಟವನ್ನು ಕಾಪಾಡುತ್ತವೆ.

    ಉದುರಿದ ಎಲೆಗಳು ಮತ್ತು ಬೇರುಗಳು ಸ್ಪಂಜಿನ  ರೀತಿಯಲ್ಲಿ ನೀರನ್ನು ಹೀರಿಕೊಂಡು ನಿಧಾನವಾಗಿ ಮಣ್ಣಿನ ಒಳಭಾಗಕ್ಕೆ ಬಿಡುತ್ತವೆ. ಆ ಮೂಲಕ ಮಣ್ಣಿನ ಫಲವತ್ತತೆ ಮತ್ತು ಹ್ಯೂಮಸ್‍ನ್ನು ಕಾಪಾಡುವುದು. ಅರಣ್ಯಗಳು  ಇಲ್ಲವಾದರೆ ಜಲಚಕ್ರದಿಂದಾಗುತ್ತಿರುವ ವಾತಾವರಣದಲ್ಲಿ ಉಷ್ಣತೆಯ ನಿಯಂತ್ರಣ ಹಾಗೂ ತೇವಾಂಶಭರಿತ ಗಾಳಿ ಇಲ್ಲವಾಗುತ್ತದೆ. ಅರಣ್ಯನಾಶದಿಂದ ವಾತಾವರಣದಲ್ಲಿ ಅನೇಕ ಅನಪೇಕ್ಷಿತ ಬದಲಾವಣೆಗಳಾಗುತ್ತವೆ  (ಉತ್ತರ  ಭಾರತದಲ್ಲಿ ಬೇಸಿಗೆಯಲ್ಲಿ  ಬಿಸಿಗಾಳಿಯಿಂದಾಗಿ ಇತ್ತೀಚೆಗೆ ಪ್ರತಿವರ್ಷ ನೂರಾರು ಜನರು ದುರ್ಮರಣಕ್ಕೀಡಾಗುತ್ತಿದ್ದಾರೆ. ಇದಕ್ಕೆ ತೇವಾಂಶರಹಿತ ಬಿಸಿಯಾದ ಗಾಳಿಯೇ ಕಾರಣ).

    ಭಾರತವು ಸಸ್ಯ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ದೇಶ. 45,000 ಸಸ್ಯ  ಪ್ರಭೇದಗಳಲ್ಲಿ 15,000 ಹೂಬಿಡುವ ಸಸ್ಯಗಳು, 1,6,76 ಪಾಚಿ, 1,940 ಕಲ್ಲುಹೂವುಗಳಿರುವ, 12,480 ಅಣಬೆ, 64 ಅನಾವೃತ ಬೀಜದ, 2,843 ಯಕೃತ್ತಿನ ಆಕಾರದ ಎಲೆಗಳುಳ್ಳ, 1,012 ಟೆರಿಡೋಫೈಟಸ್, ಇದರಲ್ಲಿ 28 ಜಾತಿಗಳು ಈಗಾಗಲೇ ಕಣ್ಣರೆಯಾಗಿವೆ. 399 ಅಪಾಯಕ್ಕೆ  ಸಿಲುಕಿವೆ. 1,500 ಅಪಾಯಕ್ಕೆ ಸಿಲುಕುವ ಸಾಧ್ಯತೆ ಬಹಳವಾಗಿದೆ. ಕಳೆದ ನೂರೈವತ್ತು  ವರ್ಷಗಳಲ್ಲಿ ಜಗತ್ತಿನಾದ್ಯಂತ ಸುಮಾರು 10,000 ಲಕ್ಪ ಹೆಕ್ಟೇರ್  ಪ್ರದೇಶವನ್ನು ಕೃಷಿಭೂಮಿಯಾಗಿ ಪರಿವರ್ತಿಸಲಾಗಿದೆ. ಅದಕ್ಕಾಗಿ ಅರಣ್ಯಗಳು, ಹುಲ್ಲುಗಾವಲುಗಳು ನಾಶವಾಗಿವೆ. ಉಷ್ಣವಲಯದ ಕಾಡುಗಳು ಜಗತ್ತಿನ ಒಟ್ಟು ಪ್ರಭೇದಗಳ ಅರ್ಧದಷ್ಟಿವೆ.  ಇಂದು ಈ ಕಾಡುಗಳು ಅಭಿವೃದ್ಧಿಯ ಹೆಸರಿನಲ್ಲಿ ಒಂದು ನಿಮಿಷಕ್ಕೆ ಎರಡೂವರೆ  ಹೆಕ್ಟೇರಿನಷ್ಟು ನಾಶವಾಗುತ್ತಿವೆ. ಇದರಿಂದಾಗಿ ಒಂದು ವರ್ಷಕ್ಕೆ 15,000 ದಿಂದ 50,000 ಜೀವಿ  ಪ್ರಬೇಧಗಳು ನಶಿಸಿಹೋಗುತ್ತಿವೆ. ಒಂದು ಮರವನ್ನು ಕಡಿದರೆ ಆ ಮರದಲ್ಲಿ  ಅವಾಸವಾಗಿರುವ ಮತ್ತು ಅವಲಂಬಿಸಿರುವ ಹಲವಾರು ಜೀವಿಗಳ ಬದುಕು ನಾಶವಾಗುತ್ತದೆ. 

    ಮಾನವನ ಉಳಿವು-ಅಳಿವುಗಳನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿರುವ, ಮಣ್ಣಿನ ರಚನೆಯನ್ನು ರೂಪಿಸುವ, ವಾಯುಗುಣವನ್ನು ಸೌಮ್ಯಗೊಳಿಸುವ, ಪ್ರವಾಹಗಳನ್ನು  ನಿಯಂತ್ರಿಸುವ, ನೀರನ್ನು ಶೇಖರಿಸುವ ಇಳಿಜಾರುಗಳಲ್ಲಿ ಮಣ್ಣನ್ನು ಹಿಡಿದಿಟ್ಟು ಭೂಕೊರೆತವನ್ನು ತಡೆಗಟ್ಟುವ, ವಾಯುಗೋಳದಲ್ಲಿ ಇಂಗಾಲದ ಪ್ರಮಾಣವನ್ನು ನಿಯಂತ್ರಿಸಿ ಹಸಿರುಮನೆ ಪರಿಣಾಮವನ್ನು ತಡೆಗಟ್ಟುವ, ಪ್ರಪಂಚದಲ್ಲಿ ಕಾಣಬರುವ ಲಕ್ಷೋಪಲಕ್ಷ ಜೀವ ಪ್ರಭೇದಗಳ ಆವಾಸಸ್ಥಾನವಾಗಿರುವ ಅರಣ್ಯಗಳು ಜೀವವಾಸಗಳ ಪಂಕ್ತಿಯಲ್ಲಿ ಅತ್ಯಂತ ಮುಖ್ಯವಾದ ಸ್ಥಾನವನ್ನು ಅಲಂಕರಿಸಿವೆ. 

     “ಮಾನವನ ನಾಗರಿಕತೆ, ಸಂಸ್ಕೃತಿ ಅರಣ್ಯಗಳ ನೆರಳಲ್ಲಿ ಬೆಳೆದಿವೆಯಾದರೂ, ಮನುಕುಲದ ಒಳಿತಿಗೆ ನೈಸರ್ಗಿಕ ಕೊಡುಗೆಯಾದ ಅರಣ್ಯಗಳ ಮತ್ತು ಅವುಗಳಲ್ಲಿ ವಾಸಿಸುತ್ತಿರುವ ಜೀವಜಾಲದ “ಭವಿಷ್ಯ ಇಂದಿನ ಮಾನವನ ನಡವಳಿಕೆಯಿಂದ ಅತ್ಯಂತ ಕರಾಳವಾದುದಾಗಿದೆ” ಎಂದು ಇಂದಿನ ಪರಿಸರ ಮಾಲಿನ್ಯದ ಭೀಕರತೆಯನ್ನು ಪರಿಸರ ವಿಜ್ಞಾನಿ ಬರ್ಟನ್‍ರವರು ಎಚ್ಚರಿಸಿದ್ದಾರೆ.

    ಜೀವಿ ಪ್ರಭೇಧಗಳ  ಸಾಮೂಹಿಕ ಅಳಿವು  (ಹತ್ಯೆಯನ್ನು) ನಾವು ಹಗುರವಾಗಿ ಪರಿಗಣಿಸುವಂತಿಲ್ಲ. ಭೂಮಿಯ ಮೇಲೆ ಮಾನವ ವಿಕಾಸವಾಗುವ ಪೂರ್ವದಿಂದಲೂ ವೈವಿಧ್ಯಮಯ ಸಸ್ಯರಾಶಿಗಳು, ಜೀವಜಂತುಗಳು ಇಲ್ಲಿ ವಾಸಿಸುತ್ತಿವೆ. ಅವು ವಾಸಿಸುವ ವಿಶಿಷ್ಟ ಪರಿಸರ ತಾಣಗಳು ಭೂಮಿಯಲ್ಲಿವೆ. ಅವುಗಳ ಚಟುವಟಿಕೆ ಹಾಗೂ ಇರುವಿಕೆಯಿಂದ ಜಗತ್ತಿನ ನಿರ್ಜೀವ ಹಾಗೂ ಸಜೀವ ವಸ್ತುಗಳ ನಡುವೆ ಸೂಕ್ಷ್ಮವಾದ ಸಂಬಂಧ, ಸಮತೋಲನ ಹಾಗೂ ಪರಸ್ಪರ ಅವಲಂಬನೆ ಇದೆ. ಮಾನವನ ಅಸ್ತಿತ್ವಕ್ಕೂ  ಎಲ್ಲಾ ಜೀವಿಗಳ ಕೊಡುಗೆ ಇದೆ. ಪ್ರತಿ ಪ್ರಭೇದದ ಕೊಡುಗೆಯೂ ಅನನ್ಯ. ಈ ಹಿನ್ನೆಲೆಯಲ್ಲಿ  ಗೋಪಾಲಕೃಷ್ಣ ಅಡಿಗರು ಹೇಳಿದ ಈ ಮಾತನ್ನು ನೆನಪಿಸಿಕೊಳ್ಳಬಹುದು, “ಪ್ರತಿಯೊಂದು  ಜೀವಕ್ಕೂ ಇನ್ನೊಂದು ಪೂರಕವಯ್ಯ: ಜೀವ ಜೀವದ ನಂಟು ಬ್ರಹ್ಮ ಗಂಟು”.

    ಸಸ್ಯವೆಂದರೆ ವಿಶಿಷ್ಟ ಜೀವಕೋಶ, ಅದು ತನಗಾಗಿ ಏನನ್ನೂ ಬೇಡದೆ, ಬೇಡಿ ಬಂದ ಎಲ್ಲರಿಗೂ ತನ್ನ ಅಸ್ತಿತ್ವವನ್ನೇ ಧಾರಯೆರೆಯುತ್ತದೆ. ಎಲ್ಲಾ ಜೀವಿಗಳಿಗೂ ಆಶ್ರಯ  ನೀಡುತ್ತದೆ. ತನ್ನನ್ನು ಕಡಿಯಲು ಕೊಡಲಿ ತಂದವನಿಗೂ ನೆರಳು ನೀಡುತ್ತದೆ”- ಗೌತಮ ಬುದ್ಧ.


    ವಿಶ್ವ ಪ್ರಕೃತಿ ಸಂರಕ್ಷಣಾ ದಿನದಂದು, ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ನಾವು ನಿರ್ಧರಿಸೋಣ ಮತ್ತು ಹೆಚ್ಚು ಸುಸ್ಥಿರ ಗ್ರಹವನ್ನು ರಚಿಸುವತ್ತ ಕೆಲಸ ಮಾಡೋಣ.  ನಮ್ಮ ಇಂದಿನ  ಸಾಮೂಹಿಕ ಕಾರ್ಯಗಳು ನಮ್ಮ ಭವಿಷ್ಯದ ಪೀಳಿಗೆಗೆ  ಜೀವಂತ ಗ್ರಹವನ್ನು ಹಸ್ತಾಂತರಿಸಲು ಸಹಾಯ ಮಾಡುತ್ತದೆ’  ಈ ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಈ   ಸಂದರ್ಭದಲ್ಲಿ ನಮ್ಮ ಉಪ ರಾಷ್ಟ್ರಪತಿ    ವೆಂಕಯ್ಯ ನಾಯ್ಡು ಅವರು  ಟ್ವೀಟ್ ಮಾಡಿರುವ ಈ  ಮಾತು ಅರ್ಥಪೂರ್ಣವಾದದ್ದು.

    ಸಿಎಂ ಆಗಿ ಬೊಮ್ಮಾಯಿ ಪದಗ್ರಹಣ

    ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಂದು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣ ವಚನ ಬೋಧಿಸಿದರು.

    ನಿರ್ಗಮಿತ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಯ ಅನೇಕ ಮುಖಂಡರು ಸಮಾರಂಭದಲ್ಲಿ ಭಾಗವಹಿಸಿದ್ದರು. ಇಂದು ಮುಖ್ಯಮಂತ್ರಿ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದರು. ಮೂರ್ನಾಲ್ಕು ದಿನಗಳ ಬಳಿಕ ಸಂಪುಟ ವಿಸ್ತರಣೆ ಕೈಗೊಳ್ಳುವ ಸಾಧ್ಯತೆಯಿದೆ.

    ಇನ್ನು ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಹಾಗೂ ಪ್ರಮಾಣವಚನ ಸುಗಮವಾಗಿ ನಡೆದಿರುವುದರಿಂದ ಉಪಮುಖ್ಯಮಂತ್ರಿ ಹಾಗೂ ಸಚಿವರು ಯಾರಾಗಬೇಕು ಎಂಬುದರ ಬಗ್ಗೆ ವರಿಷ್ಠರು ರಾಜ್ಯ ನಾಯಕರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

    ಪಕ್ಷ ನಿಷ್ಠೆ, ತಾಳ್ಮೆ & ಜ್ಞಾನಕ್ಕೆ ಮನ್ನಣೆ; ಬಸವರಾಜ ಬೊಮ್ಮಾಯಿ ಹೊಸ ಸಿಎಂ


    BENGALURU JULY 27

    ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಆಗಿದ್ದು ಮುಖ್ಯಮಂತ್ರಿಯಾಗಿ ನಾಳೆಯೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶಿಗ್ಗಾಂವ್ ಮತಕ್ಷೇತ್ರವನ್ನು ಪ್ರತಿನಿಧಿಸುವ ಬೊಮ್ಮಾಯಿ ಎಂಜಿನಿಯರಿಂಗ್ ಪದವೀಧರರು.

    ಬೆಂಗಳೂರಿನ ಕ್ಯಾಪಿಟಲ್‌ ಹೋಟೆಲ್‌ನಲ್ಲಿ ನಡೆ ಹೈವೋಲ್ಟೇಜ್‌ ಸಭೆಯಲ್ಲಿ ದಿಲ್ಲಿಯಿಂದ ಬಂದಿದ್ದ ವೀಕ್ಷಕರ ಸಮ್ಮುಖದಲ್ಲಿ ಬೊಮ್ಮಾಯಿ ಅವರ ಆಯ್ಕೆಯನ್ನು ಘೋಷಣೆ ಮಾಡಲಾಯಿತು. ದಿಲ್ಲಿಯಿಂದ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಹಾಗೂ ಕಿಶನ್‌ ರೆಡ್ಡಿ ಅವರು ವೀಕ್ಷಕರಾಗಿ ಬಂದಿದ್ದರು. ಜತೆಗೆ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಕೂಡ ಇದ್ದರು. ಜತೆಗೆ, ಸಹ ಉಸ್ತುವಾರಿ ಡಿ.ಕೆ.ಅರುಣಾ ಅವರು ಇದ್ದರು.

    ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಪುತ್ರರಾಗಿರುವ ಬಸವರಾಜ ಬೊಮ್ಮಾಯಿ, ಕಳೆದ ಎರಡು ವರ್ಷಗಳಿಂದ ಗೃಹ ಸಚಿವರಾಗಿ ಕೆಲಸ ಮಾಡಿದ್ದರು. ಕೆಲ ದಿನಗಳ ಹಿಂದೆ ಸಂಪುಟ ವಿಸ್ತರಣೆ ಮಾಡಿದಾಗ ಖಾತೆಗಳ ಮರು ಹಂಚಿಕೆಯಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನೂ ಬೊಮ್ಮಾಯಿ ಅವರಿಗೆ ವಹಿಸಲಾಗಿತ್ತು.

    ಬಿ.ಎಸ್.‌ಯಡಿಯೂರಪ್ಪ ಅವರು ಸೋಮವಾರ ರಾಜೀನಾಮೆ ನೀಡಿದ ಹಿನ್ನೆಲೆ ಉತ್ತರ ಕರ್ನಾಟಕದ ಲಿಂಗಾಯತ ನಾಯಕನಿಗೆ ಅದೃಷ್ಟ ಖುಲಾಯಿಸಿದ್ದು, ಅವರು ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ.

    ಬೊಮ್ಮಾಯಿ ಅವರು ಬುಧವಾರ ಮಧ್ಯಾಹ್ನ ಪ್ರಮಾಣ ಸೀಕಾರ ಮಾಡುವ ಸಾಧ್ಯತೆ ಇದ್ದು. ಒಂದು ವರ್ಷ ಹತ್ತು ತಿಂಗಳ ಕಾಲ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

    ಅಂದಹಾಗೆ ಬೊಮ್ಮಾಯಿ ಅವರ ತಂದೆ ಎಸ್.‌ಆರ್.‌ಬೊಮ್ಮಾಯಿ ಅವರು 13 ಆಗಸ್ಟ್ 1988 ರಿಂದ 21 ಏಪ್ರಿಲ್ 1989ರವರೆಗೆ ರಾಜ್ಯದ 11ನೇ ಮುಖ್ಯಮಂತ್ರಿ ಆಗಿದ್ದರು. ಆದರೆ ಅವರ ಸರಕಾರಕ್ಕೆ ಕೆಲ ಶಾಸಕರು ಶಾಸಕರು ಕೈಕೊಟ್ಟರು. ನಂತರ ರಾಜ್ಯಪಾಲರು ಅವರ ಸರಕಾರವನ್ನು ವಜಾ ಮಾಡಿದ್ದರು

    ಬೊಮ್ಮಾಯಿ ಆಯ್ಕೆ ಐತಿಹಾಸಿಕ

    ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದವರೊಬ್ಬರ ಪುತ್ರರು ಸಿಎಂ ಆಗಿದ್ದು ದೇವೇಗೌಡ ಕುಟುಂಬದಲ್ಲಿ ಮಾತ್ರ ನಡೆದಿದೆ. 1994ರಲ್ಲಿ ದೇವೇಗೌಡರು ಮತ್ತು 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಮೂಲಕ ತಂದೆ-ಮಗ ಇಬ್ಬರು ರಾಜ್ಯದ ಸಿಎಂಗಳಾದ ದಾಖಲೆ ಇತ್ತು. ಈಗ ಆ ಸಾಲಿಗೆ ಬಸವರಾಜ ಬೊಮ್ಮಾಯಿ ಅವರು ಸೇರ್ಪಡೆಯಾಗುತ್ತಿದ್ದಾರೆ. ಇದೊಂದು ಐತಿಹಾಸಿಕ ಘಟನೆಯಾಗಿದೆ.

    ಮೆಕಾನಿಕಲ್‌ ಎಂಜಿನಿಯರ್‌, ಲಾ ಎಕ್ಸ್‌ಪರ್ಟ್‌

    ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿ ಅವರ ಪುತ್ರರಾಗಿರುವ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಶಾಸಕರು. ಹುಟ್ಟಿದ್ದು 28 ಜನವರಿ 1960ರಂದು. ಮೂಲತಃ ಮೆಕಾನಿಕಲ್‌ ಎಂಜಿನಿಯರ್‌ ಆಗಿರುವ ಅವರು ಜನತಾದಳ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. 1998 ಮತ್ತು 2004ರಲ್ಲಿ ಎರಡು ಅವಧಿಗಳಿಗೆ ಅವರು ಸಂಯುಕ್ತ ಜನತಾದಳದಿಂದ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಮಾಜಿ ಮುಖ್ಯಮಂತ್ರಿ ಜೆ.ಎಚ್.‌ಪಟೇಲರ ರಾಜಕೀಯ ಕಾರ್ಯದರ್ಶಿಯಾಗಿಯೂ ಅವರು ಕೆಲಸ ಮಾಡಿದ್ದರು. 2008ರಲ್ಲಿ ಬಿಜೆಪಿ ಸೇರಿದ ಅವರು ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು. ಬಳಿಕ ಅವರು ಬಿಜೆಪಿ ಸರಕಾರದಲ್ಲಿ ಜಲ ಸಂಪನ್ಮೂಲ ಹಾಗೂ ಸಹಕಾರ ಖಾತೆಗಳನ್ನು ನಿಭಾಯಿಸಿದ್ದರು. ಈವೆರೆಗೆ ಗೃಹ ಸಚಿವರಾಗಿದ್ದ ಅವರು ಹಾವೇರಿ ಮತ್ತು ಉಡುಪಿ ಜಿಲ್ಲೆಗಳ ಉಸ್ತುವಾರಿ ಸಚಿವರೂ ಆಗಿದ್ದರು.

    ಮಾಧ್ಯಮ ಅಕಾಡೆಮಿಗೆ ಸದಾಶಿವ ಶೆಣೈ, ಕೂಡ್ಲಿ ಗುರುರಾಜ ,ಗೋಪಾಲ್ ಯಡಗೆರೆ ನೇಮಕ

    ಕೊನೆಗೂ ರಾಜ್ಯ ಸರಕಾರ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಇಂದು ಆದೇಶ ಹೊರಡಿಸಿದೆ. ಹಿರಿಯ ಪತ್ರಕರ್ತ ಹಾಗೂ ಪ್ರೆಸ್ ಕ್ಲಬ್ ಅಧ್ಯಕ್ಷರೂ ಆಗಿರುವ ಸದಾಶಿವ ಶೆಣೈ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಆದೇಶ ಹೊರಬಿದ್ದ ಬೆನ್ನಲ್ಲೆ ಸದಾಶಿವ ಶೆಣೈ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.

    ನಾಡಿನ ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ಮತ್ತು ಮಲೆನಾಡು ಭಾಗದ ಸೂಕ್ಷ್ಮ ಸಂವೇದನೆಯ ವರದಿಗಾರ, ಲೇಖಕ ಗೋಪಾಲ್ ಯಡಗೆರೆ ಅಕಾಡೆಮಿಯ ಸದಸ್ಯರಾಗಿ ನೇಮಕವಾಗಿರುವರಲ್ಲಿ ಪ್ರಮುಖರಾಗಿದ್ದಾರೆ.

    ಮತ್ತೊಬ್ಬ ಹಿರಿಯ ಪತ್ರಕರ್ತ ಮಲೆನಾಡು ಭಾಗದ ಕೆ ಕೆ ಮೂರ್ತಿ ಮತ್ತು ಶಿವಕುಮಾರ ಬೆಳ್ಳಿತಟ್ಟೆ ಸದಸ್ಯರಾಗಿ ನೇಮಕವಾಗಿದ್ದಾರೆ.

    ಕೆಯುಡಬ್ಲುಜೆ ಪ್ರತಿನಿಧಿಗಳಾಗಿ ಅಧ್ಯಕ್ಷರಾದ ಶಿವಾನಂದ ತಗಡೂರು, ಮೈಸೂರಿನ ಸಿ. ಕೆ ಮಹೇಂದರ್,ಮಂಗಳೂರಿನ ಜಗನ್ನಾಥ ಬಾಳ, ಕಲಬುರ್ಗಿಯ ದೇವೇಂದ್ರಪ್ಪ ಕಪನೂರು ಮತ್ತು ಶಿವಮೊಗ್ಗದ ಕೆ.ವಿ ಶಿವಕುಮಾರ್ ನೇಮಕವಾಗಿದ್ದಾರೆ.

    error: Content is protected !!