23.1 C
Karnataka
Sunday, May 24, 2026
    Home Blog Page 73

    ಕೌದಿಗೊಂದು ಆಧುನಿಕ ಕಲಾ ಸ್ಪರ್ಶ

    ತುಂತುರು ಮಳೆಯ ಮಳೆಗಾಲಕ್ಕೆ ಮುಂಜಾನೆಯ ಮಂಜಿನ ಚಳಿಗಾಲಕ್ಕೆ ಹಾಯ್ ಎನ್ನಿಸುವುದು ಬಿಸಿಬಿಸಿ ಕಾಫಿ,  ಟೀ ಮತ್ತು ಬೆಚ್ಚನೆಯ, ಮೆತ್ತನೆಯ ಕೌದಿ.  ಇದು ಬರೀ ಸಾಮಾನ್ಯ ಹೊದಿಕೆಯಾಗಿರದೆ ಅಲಂಕಾರಿಕವಾಗಿಯೂ, ಕಲಾತ್ಮಕವಾಗಿಯೂ ಮತ್ತು ಕೈ ಕಸೂತಿಯಿಂದ ಮಾಡಿರುವ ತನ್ನದೇ ಆಯ್ಕೆಯಾಗಿದ್ದರೆ ಮನಕ್ಕೊಂದು ಮುದ.ಈ ಕೌದಿಗಳು ಪಶ್ಚಿಮ ಘಟ್ಟದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಸುತ್ತಮುತ್ತ ಇರುವ ಸಿದ್ಧಿ ಜನಾಂಗದವರು ಮಾಡುವ ಕುಲ ಕಸುಬುಗಳಲ್ಲಿ ಒಂದಾಗಿದೆ. 

    ಹಿನ್ನೆಲೆ:ಈ ಸಿದ್ಧಿ ಜನಾಂಗದ ಮೂಲ ಆಫ್ರಿಕಾ. ಸುಮಾರು ನಾನೂರು ವರ್ಷಗಳ ಹಿಂದೆ ಆಫ್ರಿಕಾದ ಕೀನ್ಯಾ ಮತ್ತು ಇಥಿಯೋಪಿಯಾದಿಂದ ಸಿದ್ಧಿ ಜನಾಂಗದ ಪೂರ್ವಜರನ್ನು ಪೋರ್ಚುಗೀಸರು ಭಾರತದ ಗೋವಾಕ್ಕೆ ಕರೆತಂದರು.  ಅಲ್ಲಿಂದ ಕೆಲವರು ವಲಸೆ ಹೋಗಿ ಉತ್ತರಕನ್ನಡ ಜಿಲ್ಲೆಯ ಕಾಡುಗಳಲ್ಲಿ ಮತ್ತು ಭಾರತದ ಬೇರೆ ಕೆಲವು ಭಾಗಗಳಲ್ಲಿ ನೆಲೆಸತೊಡಗಿದರು.  ನಂತರದಲ್ಲಿ ಅವರು ಭಾರತದವರಾಗಿಯೇ ಉಳಿದು ಬಿಟ್ಟರು.  ಇವರು ಕನ್ನಡ, ಕೊಂಕಣಿ ಭಾಷೆಯನ್ನು ಮತ್ತೆ ಕೆಲವರು ಉರ್ದುವನ್ನು ಸರಾಗವಾಗಿ ಮಾತನಾಡುತ್ತಾರೆ. 

    ಈ ಜನಾಂಗದವರು ಈ ನೆಲದಲ್ಲಿ ಉಳಿದರೂ ತಮ್ಮದೇ ಆದ ಸಂಸ್ಕೃತಿ ,ಆಚಾರ ,ವಿಚಾರ ,ಸಾಂಪ್ರದಾಯಿಕ ಪದ್ಧತಿ ಉಳಿಸಿಕೊಂಡಿದ್ದಾರೆ . ಹಾಗೂ ತಮ್ಮ ಮೂಲ ಕಸುಬುಗಳಲ್ಲಿ ಒಂದಾದ ಕೌದಿಯ ನೇಯ್ಗೆಯನ್ನು ತಲೆತಲಾಂತರಗಳಿಂದ ಮುಂದುವರಿಸಿಕೊಂಡು ಬಂದಿದ್ದಾರೆ.

    ವರ್ಣರಂಜಿತ ಕೌದಿ

    ಈ ಜನಾಂಗದ ಮಹಿಳೆಯರಿಂದಲೇ ತಯಾರಾಗುತ್ತಿರುವ ಕೌದಿಗಳು ಹೆಚ್ಚು ವರ್ಣರಂಜಿತವೂ ಮತ್ತು ಕಡು ಬಣ್ಣಗಳಿಂದ ಕೂಡಿರುತ್ತವೆ. ಮದುವೆಯಾಗುವ ಹೆಣ್ಣು ಮಕ್ಕಳಿಗೆ ತವರು ಮನೆಯ ಉಡುಗೊರೆಯಾಗಿಯೂ ಇದನ್ನು ಪ್ರಮುಖವಾಗಿ ಕೊಡುತ್ತಾರೆ ಮತ್ತು ತಮ್ಮ ಜನಾಂಗದವರಲ್ಲಿ ಒಬ್ಬರಿಗೊಬ್ಬರು ಉಡುಗೊರೆಯಾಗಿ
    ಕೊಡುವ ಪದ್ಧತಿಯನ್ನು ಇಟ್ಟುಕೊಂಡಿದ್ದಾರೆ.   ಮದುವೆಯಾದ  ಹೆಣ್ಣು  ಮಕ್ಕಳೂ ಅತ್ತೆ ಮನೆಯಲ್ಲಿ ತಾಯಿಂದ ಕಲಿತ ಕೌದಿಯ ನೇಯ್ಗೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ.  ಇದು ಅವರ ಹವ್ಯಾಸಕ್ಕಿಂತ ಹೆಚ್ಚಾಗಿ ಅವಶ್ಯಕತೆಗೋಸ್ಕರ ತಯಾರಿಸಿಕೊಳ್ಳುತ್ತಿದ್ದರು. ಮಳೆಗಾಲ , ಚಳಿಗಾಲಕ್ಕೆದಲ್ಲಿ ಹೊದಿಕೆಯಾದರೆ ಬೇಸಿಗೆಯಲ್ಲಿ ಚಾಪೆಯಾಗಿ ಉಪಯೋಗಿಸಿಕೊಳ್ಳುತ್ತಾರೆ.

    ಕೌದಿ ತಯಾರಿಸುವ ಬಗೆ

    ಮೊದಲೆಲ್ಲ ಮನೆಯಲ್ಲಿ ಉಪಯೋಗಕ್ಕೆ ಬಾರದ ಬಣ್ಣ ಬಣ್ಣದ ಬಟ್ಟೆಗಳನ್ನು ಉಪಯೋಗಿಸಿಕೊಂಡು ಮಾಡುತ್ತಿದ್ದರು. ಅಂದರೆ 3 ಅಥವಾ 4 ಲೇಯರ್ ನಲ್ಲಿ ತಳಭಾಗದ ಗಟ್ಟಿ ಬಟ್ಟೆಯನ್ನು (ಕಾಟನ್ ಸೀರೆಗಳು, ಪಂಚೆಗಳು) ಸಿದ್ಧ ಮಾಡಿಕೊಂಡು ಅದರ ಮೇಲೆ ಈ ಬಣ್ಣ ಬಣ್ಣದ ವಿವಿಧ ಆಕಾರಗಳಲ್ಲಿರುವ ಬಟ್ಟೆಗಳನ್ನು  ಹೊಂದಿಸುತ್ತಾ ಸೂಜಿದಾರದಲ್ಲಿ ದಪ್ಪ ಹೊಲಿಗೆಯಲ್ಲಿ ಹೊಲಿಯುತ್ತಾ ಹೋಗುತ್ತಾರೆ.ನಂತರ ಸಣ್ಣ 3D ತ್ರಿಕೋನ ಮೋಟಿಫ್ ಗಳೊಂದಿಗೆ ಅಂಚುಗಳನ್ನು ಹೊಲಿಯುತ್ತಾ ಕೌದಿಗಳನ್ನು ಪೂರ್ಣ ಗೊಳಿಸುತ್ತಾರೆ. ಇದಕ್ಕೆ ಯಾವುದೇ ಚೌಕಟ್ಟಿಲ್ಲ. ಹೀಗೆ ಮಾಡಬೇಕೆಂಬ ನಿಯಮವೂ ಇಲ್ಲ. ಇನ್ನು ಬಣ್ಣ ಬಣ್ಣದ ಬಟ್ಟೆಗಳನ್ನು ಹೊಂದಿಸುವುದು  ಅವರವರ ಸ್ವಂತದ ಅಭಿರುಚಿ ಮತ್ತು ತಿಳಿವಳಿಕೆಯನ್ನು ಅವಲಂಬಿಸಿರುತ್ತದೆ. ಆದ್ದರಿಂದಲೇ ಒಂದೊಂದು ಕೌದಿಯೂ ವಿಭಿನ್ನವಾಗಿರುವುದಲ್ಲದೆ ಅನನ್ಯವಾಗಿರುತ್ತದೆ. . ಅವರು ಅದರಲ್ಲಿ ಬಳಸುವ ವಸ್ತು ವಿನ್ಯಾಸ ಅವರ ಬದುಕಿಗೆ, ಜೀವನಶೈಲಿಗೆ, ಅಲ್ಲಿನ ಸಂದರ್ಭಕ್ಕೆ ಸಂಬಂಧ ಪಟ್ಟಿರುತ್ತದೆ.

    ಕುಲ ಕಸುಬಿಗೆ ಆಧುನಿಕತೆಯ ಸ್ಪರ್ಷ

    ಕಲೆಯ ನಾನಾ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಕಲಾವಿದೆ ಬೆಂಗಳೂರಿನ ಅನಿತಾ ಎನ್ ಒಮ್ಮೆ ನೀನಾಸಂ ನಲ್ಲಿನ ಸ್ನೇಹಿತ ಸಿದ್ಧಿ ಜನಾಂಗದ ಗಿರಿಜಾ ಎಂಬ ಹೆಣ್ಣುಮಗಳನ್ನು ಮದುವೆ ಆಗುವ ಸಂದರ್ಭದಲ್ಲಿ ಅಲ್ಲಿಗೆ ಹೋಗಿದ್ದರು. ಅಲ್ಲಿ ಈ  ಕೌದಿ ಕಲೆಯನ್ನು ಕಂಡು ಅದರ ಬಗ್ಗೆ ತಿಳಿದುಕೊಳ್ಳುತ್ತಾರೆ. ಮತ್ತೊಮ್ಮೆ ಅಲ್ಲಿಗೆ ಹೋದಾಗ ಈ ಕೌದಿಗಳನ್ನು ಸಿದ್ಧ ಮಾಡುವವರು ಮತ್ತು ಇನ್ನಿತರ ವಿಷಯಗಳ ಬಗ್ಗೆ ಹುಡುಕಾಟ ನಡೆಸಿ ವಿವರ ಪಡೆಯುತ್ತಾರೆ.

    ಇಷ್ಟು ಕಲಾತ್ಮಕವಾದ,  ಆಕರ್ಷಕವಾದ ಕೌದಿಗಳು ಹೆಚ್ಚು ಜನಪ್ರಿಯವಾಗಿಲ್ಲ ಅದರ ಬೆಲೆಯೂ ಹೊರಜಗತ್ತಿಗೆ ತಿಳಿದಿಲ್ಲವಲ್ಲ ಎಂದು ಅನಿತಾ ಅವರಿಗೆ ಅಚ್ಚರಿಯಾಗುತ್ತದೆ. ಮುನ್ನೆಲೆಯಲ್ಲಿರುವ ಇತರ ಕಲೆಗಳಂತೆ ಇದು ಹೆಚ್ಚು ಪ್ರಚಲಿತವಾಗಿಲ್ಲವೇಕೆ ಎಂಬುದು ಅನಿತಾ ಅವರನ್ನು ಬಹುವಾಗಿ ಕಾಡುತ್ತದೆ.

    ಆಗ ಅನಿತಾ ಈ ಕಲಾತ್ಮಕ ಕೌದಿಗೆ ಮಾರುಕಟ್ಟೆ ಒದಗಿಸುವ ಸಾಹಸಕ್ಕೆ ಮುಂದಾಗುತ್ತಾರೆ. ಉತ್ತರ ಕನ್ನಡ ಜಿಲ್ಲೆಯ  ನಾಲ್ಕು, ಐದು ಹಳ್ಳಿಗಳ ಆಸಕ್ತ ಮಹಿಳೆಯರನ್ನು ಒಗ್ಗೂಡಿಸಿ ಅನೇಕ ಶಿಬಿರಗಳನ್ನು ಆಯೋಜಿಸಿತ್ತಾರೆ. ಕೌದಿ ತಯಾರಿಸಲು ಬೇಕಾದ ಆರಿಸಿದ ಕಾಟನ್ ಬಟ್ಟೆಗಳನ್ನು ಮತ್ತು ಇತರ ಸಾಮಗ್ರಿಗಳನ್ನು ಅವರಿಗೆ ಒದಗಿಸುತ್ತಾರೆ. ಅವರಿಗೆ ವ್ಯಾಪಾರಕ್ಕೆ ಬೇಕಾದ ಕೆಲವು ಸಲಹೆಗಳನ್ನು ಕೊಡುವುದರ ಜೊತಗೆ ಪ್ರದರ್ಶನಗಳನ್ನು ಆಯೋಜಿಸಿ ಕೌದಿಗೆ ಆಧುನಿಕ ಜಗತ್ತಿನಲ್ಲಿ ಬೇಡಿಕೆ ಬರುವಂತೆ ಮಾಡುತ್ತಿದ್ದಾರೆ.

    ಕೌಟುಂಬಿಕ ಉಪಯೋಗಕ್ಕೆ  ಮತ್ತು ತಮ್ಮ ತಮ್ಮವರಿಗೆ ಉಡುಗೊರೆಗೆ ಸೀಮಿತವಾಗಿದ್ದ ಕೌದಿಗಳಿಗೆ ಅನಿತಾ ಗೃಹ ಕೈಗಾರಿಕೆಯ ರೂಪ ಕೊಟ್ಟಿದ್ದಾರೆ. ಈ ಕೌದಿಗಳು ವಿವಿಧ ಅಳತೆಯ ಬೆಡ್ ಶೀಟ್ ಗಳು, ದಿಂಬಿನ ಕವರ್ ಗಳು ಮತ್ತು ಮನೆಯ  ವಾಲ್ ಹ್ಯಾಂಗಿಂಗ್,  ಟೇಬಲ್ ಮ್ಯಾಟ್ ಗಳಾಗಿಯೂ ತಯಾರಾಗುತ್ತಿವೆ. 

    Anitha N |Community and Socially engaged Art practitioner

    ಈ ಕೌದಿಗಳು ಒಂದೊಂದೂ ವಿಭಿನ್ನವಾಗಿಯೂ, ಆಕರ್ಷಕವಾಗಿಯೂ ಕಡುಬಣ್ಣಗಳ  ಸೊಗಡನ್ನು ಎಲ್ಲೂ ಬಿಡದೆ ತಯಾರಾಗುತ್ತಿವೆ. ಇದರ ಸೌಂದರ್ಯವನ್ನು ಆನಂದಿಸಲು,  ಅರ್ಥೈಸಿಕೊಳ್ಳಲು ದೊಡ್ಡದೊಡ್ಡ ಗ್ಯಾಲರಿಯ ಗೋಡೆಗಳು, ಆವರಣಗಳು  ಅಲ್ಲಿನ ಲೈಟ್ ಗಳು ಮತ್ತಷ್ಟು ಬೆಂಬಲ ನೀಡಿವೆ. ಇದೆಲ್ಲದರ ಮೂಲ ಉದ್ದೇಶವೇ ನಶಿಸುತ್ತಿರುವ ಈ ಸಿದ್ಧಿ ಜನಾಂಗ ಮತ್ತು ಕೌದಿ ಎಂಬ ಕಲೆಯನ್ನು ಉಳಿಸುವುದು ಮತ್ತು ಸಮಾಜದ ಮುನ್ನೆಲೆಗೆ ತರುವುದು ಎಂದು ಅನಿತಾ ಹೇಳುತ್ತಾರೆ. 

    ಮಂತ್ರಿಗಿರಿಗಾಗಿ ಕ್ಷೇತ್ರ ಬಿಟ್ಟು ಬೆಂಗಳೂರಲ್ಲಿ ಶಾಸಕರ ಠಿಕಾಣಿ :ಮೂರನೇ ಅಲೆ ಎದುರಿಸಲು ಸಿದ್ಧವಾಗದ ಸರಕಾರ

    KARAWARA AUG 2

    ಕೊರೊನಾ ಮೂರನೆ ಅಲೆ ನಮ್ಮ ರಾಜ್ಯಕ್ಕೆ ಬರದಂತೆ ತಡೆಯುವುದು ರಾಜ್ಯ ಸರ್ಕಾರದ ಪ್ರಾಥಮಿಕ ಕೆಲಸವಾಗಬೇಕು.ಅಕ್ಕ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಮೂರನೆ ಅಲೆ ಈಗಾಗಲೇ ಬಂದಿದ್ದು ಸೋಂಕು ಪ್ರಮಾಣ ಹೆಚ್ಚಾಗಿದೆ. ಈ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುವವರ ಪ್ರಮಾಣ ಹೆಚ್ಚಾಗಿರುತ್ತದೆ ಹಾಗಾಗಿ ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಪ್ರತಿ ಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹ ಪಡಿಸಿದ್ದಾರೆ.ಕಾರವಾರದದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ಕೇರಳದಿಂದ ರಾಜ್ಯದ ಕರಾವಳಿ, ಚಾಮರಾಜನಗರ, ಕೊಡಗು ಜಿಲ್ಲೆಗಳಿಗೆ ಹೆಚ್ಚು ಜನ ಬರುತ್ತಾರೆ, ರಾಜ್ಯದ ಗಡಿಗಳಲ್ಲಿ ಅವರನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ, ಎರಡು ಡೋಸ್ ಲಸಿಕೆ ಪಡೆಯದವರನ್ನು ಗಡಿ ಒಳಗೆ ಬಿಡಬಾರದು ಹಾಗೂ ಪರೀಕ್ಷೆ ನಡೆಸಿ ನೆಗೆಟಿವ್ ಬಂದವರನ್ನು ಮಾತ್ರ ಒಳಗೆ ಬಿಡಬೇಕು.

    ಈಗಾಗಲೇ ನಾವು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಸೂಕ್ತ ಆಸ್ಪತ್ರೆ, ಹಾಸಿಗೆಗಳು, ವೆಂಟಿಲೇಟರ್, ಆಕ್ಸಿಜನ್ ಇಲ್ಲದೆ ಸಾವಿರಾರು ಜನ ಸಾವಿಗೀಡಾಗಿದ್ದಾರೆ, ಇದು ಮತ್ತೆ ಮರುಕಳಿಸದಂತೆ ತಡೆಯಬೇಕು. ಇದನ್ನು ಬಿಟ್ಟು ಮುಖ್ಯಮಂತ್ರಿಗಳು ಮಂತ್ರಿಮಂಡಲ ರಚನೆಗೆ ಓಡಾಡುತ್ತಿದ್ದಾರೆ. ಒಮ್ಮೆ ದೆಹಲಿಗೆ ಹೋಗಲಿ, ಪದೇ ಪದೇ ಹೋಗುವ ಅಗತ್ಯವೇನಿದೆ? ಬಿಜೆಪಿ ಹೈಕಮಾಂಡ್ ಕೂಡ ರಾಜ್ಯದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು ಎಂದರು.

    ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಠಿಕಾಣಿ ಹೂಡಿ, ಮಂತ್ರಿ ಪದವಿಗಾಗಿ ಲಾಬಿ ಮಾಡುತ್ತಿದ್ದಾರೆ. ಒಬ್ಬ ಶಾಸಕನು ತನ್ನ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡುತ್ತಿಲ್ಲ. ಇವರಿಗೆ ಜನರ ಜೀವಕ್ಕಿಂತ ಮಂತ್ರಿಯಾಗುವುದು ಮುಖ್ಯವಾಗಿದೆ.

    ಬಸವರಾಜ ಬೊಮ್ಮಾಯಿಯವರು ಈಗಷ್ಟೇ ಮುಖ್ಯಮಂತ್ರಿಗಳಾಗಿದ್ದಾರೆ. ಅವರ ಬಗ್ಗೆ ಟೀಕೆ ಮಾಡುವುದಿಲ್ಲ.‌ ಆದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಕೊಡಬೇಕು ಎಂದು ಒತ್ತಾಯಿಸುತ್ತೇನೆ.

    ಲಾಕ್ ಡೌನ್ ಹೇರುವಂತ ಪರಿಸ್ಥಿತಿ ನಿರ್ಮಾಣವಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಕಳೆದೆರಡು ದಿನಗಳಿಂದ ಸೋಂಕಿನ ಪ್ರಮಾಣ ಎರಡು ಸಾವಿರ ಸಮೀಪದಲ್ಲಿದೆ. ಇದು ಎರಡು ಸಾವಿರದ ಗಡಿ ದಾಟಿದರೆ ಮೂರನೆ ಅಲೆ ಶುರುವಾಗಿದೆ ಎಂದರ್ಥ ಎಂದು ಸಿದ್ಧರಾಮಯ್ಯ ಹೇಿಳಿದರು.

    ಟಾಟಾ ಸ್ಟೀಲ್‌ ಷೇರು ದಶಕದ ಏರುಪೇರು

    ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್‌ ಜುಲೈ 16 ರಂದು 53,290 ಪಾಯಿಂಟುಗಳ ಮಟ್ಟಕ್ಕೆ ಜಿಗಿತ ಕಂಡು ಸರ್ವಕಾಲೀನ ಗರಿಷ್ಠದ ದಾಖಲೆ ನಿರ್ಮಿಸಿದೆ. ಇದರೊಂದಿಗೆ ಅಂದಿನ ಪೇಟೆಯ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌, ರೂ.234.46 ಲಕ್ಷ ಕೋಟಿಗೆ ತಲುಪಿಸಿತು. ನಂತರದ ಚಟುವಟಿಕೆಯಲ್ಲಿ ಜುಲೈ 30 ರಂದು ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.235.49 ಲಕ್ಷ ಕೋಟಿಗೆ ಜಿಗಿತ ಕಂಡಿತಾದರೂ, ಸೆನ್ಸೆಕ್ಸ್‌ ಸುಮಾರು 550 ಪಾಯಿಂಟುಗಳಷ್ಠು ಕುಸಿತಕ್ಕೊಳಗಾಗಿದೆ. ಅಂದರೆ ಈ ಅಂತರವನ್ನು ಮಧ್ಯಮ ಮತ್ತು ಕೆಳಮಧ್ಯಮ ವಲಯದ ಷೇರುಗಳು ಆಕ್ರಮಿಸಿವೆ ಎಂದಾಯಿತು.

    sensex July 30

    ಇತ್ತೀಚಿನ ದಿನಗಳಲ್ಲಿ ಪ್ರಮುಖ ಕಂಪನಿಗಳಾದ ಏಶಿಯನ್‌ ಪೇಂಟ್ಸ್‌, ಬಜಾಜ್‌ ಆಟೋ, ಎಚ್‌ ಡಿ ಎಫ್‌ ಸಿ, ಎಚ್‌ ಡಿ ಎಫ್‌ ಸಿ ಬ್ಯಾಂಕ್‌, ಲಾರ್ಸನ್‌ ಅಂಡ್‌ ಟೋಬ್ರೋ, ಕೋಟಕ್‌ ಮಹೀಂದ್ರ ಬ್ಯಾಂಕ್‌, ಇನ್‌ ಫೋಸಿಸ್‌, ಬಜಾಜ್‌ ಫೈನಾನ್ಸ್, ಬಜಾಜ್‌ ಫಿನ್‌ ಸರ್ವ್‌, ಐಸಿಐಸಿಐ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌ , ಟೈಟಾನ್‌ ಕಂಪನಿ, ಟೆಕ್‌ ಮಹೀಂದ್ರ, ಅಲ್ಟ್ರಾಟೆಕ್‌ ಸಿಮೆಂಟ್‌ ನಂತಹ ಕಂಪನಿಗಳು ಭಾರಿ ಏರಿಕೆ ಕಂಡು ಪಕ್ವತಾ ಹಂತದಲ್ಲಿವೆ. ಈ ಕಾರಣದಿಂದಾಗಿ ಸೆನ್ಸೆಕ್ಸ್‌ ನ ಇತರೆ ಕಂಪನಿಗಳಾದ ಎಸ್‌ ಬಿ ಐ, ಟಾಟಾ ಸ್ಟೀಲ್‌ ಗಳು ಚಟುವಟಿಕೆ ಭರಿತವಾಗಿ ಏರಿಕೆ ಕಂಡು ಸೆನ್ಸೆಕ್ಸ್‌ ನಲ್ಲಿ ಸ್ಥಿರತೆ ಮೂಡಿಸಿವೆ.

    ಈ ಮಧ್ಯೆ ಕಂಪನಿಯ ಸಾಧನೆಯು ತೃಪ್ತಿಕರವಾಗಿಲ್ಲವೆಂಬ ಕಾರಣಕ್ಕಾಗಿ ಡಾ.ರೆಡ್ಡಿ ಲ್ಯಾಬ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಗಳು ಮಾರಾಟದ ಒತ್ತಡದಲ್ಲಿವೆ. ಒಟ್ಟಾರೆ ಮಂಥನ ಕ್ರಿಯೆಯಲ್ಲಿ ಕೆಲವು ಕಂಪನಿಗಳು ಏರಿಕೆ ಕಾಣುತ್ತವೆ ಮತ್ತೆ ಕೆಲವು ಕುಸಿಯುತ್ತವೆ. ಈ ರೀತಿಯ ಚಟುವಟಿಕೆಯು ಸೆನ್ಸೆಕ್ಸ್ ನ್ನು ಸ್ಥಿರತೆ ಕಾಣುವಂತೆ ಮಾಡಲಾಗುತ್ತಿದೆ. ಅಂದರೆ ಈಗಿನ ಪೇಟೆಗಳು ಪೂರ್ಣವಾಗಿ ಪಕ್ವವಾಗಿರುವುದರ ಕಾರಣ ಒಂದು ರೀತಿಯ ಮ್ಯೂಸಿಕಲ್ ಚೇರ್‌ ರೀತಿ ಏರಿಕೆ ಇಳಿಕೆ ಪ್ರದರ್ಶಿಸುತ್ತಿವೆ. ಈ ಸಂದರ್ಭದಲ್ಲಿ ಅಗ್ರಮಾನ್ಯ ಕಂಪನಿಗಳಲ್ಲಿ ಚಟುವಟಿಕೆ ನಡೆಸುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ.

    ಇತ್ತೀಚೆಗೆ ಪ್ರಚಲಿತದಲ್ಲಿರುವುದು ಮೆಟಲ್ಸ್‌ ವಿಭಾಗ. ಈ ವಿಭಾಗದಲ್ಲಿ ಹೆಚ್ಚಿನ ಚಟುವಟಿಕೆಗೆ ಕಾರಣ ಚೀನಾದಲ್ಲಿನ ಬದಲಾವಣೆಯ ಕಾರಣ ಭಾರತೀಯ ಲೋಹಗಳಿಗೆ ಹೆಚ್ಚು ಅನುಕೂಲಕರ ಎಂಬುದಾಗಿದೆ. ಈ ವಾತಾವರಣದಲ್ಲಿ ಪ್ರಮುಖ ಕಂಪನಿಗಳಾದ ಟಾಟಾ ಸ್ಟೀಲ್‌, ಸ್ಟೀಲ್‌ ಅಥಾರಿಟೀಸ್‌ ಆಫ್‌ ಇಂಡಿಯಾ, ಜಿಂದಾಲ್‌ ಸ್ಟೀಲ್‌ ಅಂಡ್‌ ಪವರ್‌, ವೇದಾಂತದಂತಹ ಅನೇಕ ಕಂಪನಿಗಳು ರಭಸದ ಏರಿಕೆಯನ್ನು ಕಂಡಿವೆ. ಈ ಸಂದರ್ಭವನ್ನು ಲಾಭದ ನಗದೀಕರಣಕ್ಕೆ ಆದ್ಯತೆ ನೀಡುವುದು ಒಳಿತು. ಪೂರ್ಣವಾಗಿಯಲ್ಲದಿದ್ದರೆ ಭಾಗಶ: ವಾಗಿಯಾದರೂ ಮಾಡುವುದು ಸೂಕ್ತ. ಈ ಸಂದರ್ಭದಲ್ಲಿ ಸೆನ್ಸೆಕ್ಸ್‌ ನ ಅಂಗವಾಗಿರುವ ಟಾಟಾ ಸ್ಟೀಲ್‌ ಕಂಪನಿಯ ಕಳೆದ ಒಂದು ದಶಕದಿಂದ ಯಾವ ರೀತಿ ಏರಿಳಿತ ಪ್ರದರ್ಶಿಸಿದೆ ಎಂಬುದನ್ನು ತಿಳಿಸಬಯಸುತ್ತೇನೆ.

    ಟಾಟಾ ಸ್ಟೀಲ್‌ ಲಿಮಿಟೆಡ್‌ :

    Tata Steel Kalinganagar starts Robotic system for its Wagon Tippler operation

    ಟಾಟಾ ಸ್ಟೀಲ್‌ ಕಂಪನಿಯ ಷೇರು ಸೆನ್ಸೆಕ್ಸ್‌ ನ 30 ಕಂಪನಿಗಳಲ್ಲಿ ಒಂದು ಪ್ರಮುಖ ಕಂಪನಿಯಾಗಿದೆ. ಕಳೆದ ಒಂದು ತಿಂಗಳಲ್ಲಿ ರೂ.1,130 ರ ಸಮೀಪದಿಂದ ರೂ.1,480 ರವರೆಗೂ ಏರಿಕೆ ಕಂಡಿದೆ. ಈ ಕಂಪನಿಯ ಷೇರು ಕಳೆದ ಒಂದು ವರ್ಷದಲ್ಲಿ ರೂ.343 ರಿಂದ ರೂ.1,481 ರ ಸರ್ವಕಾಲೀನ ಗರಿಷ್ಠದವರೆಗೂ ಜಿಗಿತ ಕಂಡು ಸಧ್ಯ ರೂ.1,433 ರಲ್ಲಿ ಕೊನೆಗೊಂಡಿದೆ. ಈ ಕಂಪನಿಯು ಜೂನ್‌ ತಿಂಗಳಲ್ಲಿ ಪ್ರತಿ ಷೇರಿಗೆ ರೂ.25 ರಂತೆ ಡಿವಿಡೆಂಡನ್ನು ವಿತರಿಸಿದೆ. ಈ ಷೇರಿನ ಏರಿಕೆ ಹೇಗಿದೆ ಎಂದರೆ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ರೂ. 600 ರ ಸಮೀಪವಿದ್ದು ಮಾರ್ಚ್‌ ನಲ್ಲಿ ರೂ.823 ರವರೆಗೂ, ಏಪ್ರಿಲ್‌ ನಲ್ಲಿ ರೂ.1,050 ರವರೆಗೂ, ಮೇ ತಿಂಗಳಲ್ಲಿ ರೂ.1,246 ರವರೆಗೂ ಏರಿಕೆ ಕಂಡು ಜುಲೈ ತಿಂಗಳಲ್ಲಿ ರೂ.1,481 ರ ಸರ್ವಕಾಲೀನ ಗರಿಷ್ಠಕ್ಕೆ ತಲುಪಿದ್ದು ದಾಖಲೆಯಾಗಿದೆ.

    ಸೆನ್ಸೆಕ್ಸ್‌ ನಲ್ಲಿ ಮರು ಸ್ಥಾನ:

    ಟಾಟಾ ಸ್ಟೀಲ್‌ ಕಂಪನಿಯು ನಿರಂತರವಾಗಿ ಸೆನ್ಸೆಕ್ಸ್‌ ನ ಅಂಗವಾಗಿತ್ತಾದರೂ ಡಿಸೆಂಬರ್‌ 2020 ರಲ್ಲಿ ಸೆನ್ಸೆಕ್ಸ್‌ ನಿಂದ ಹೊರಬಂದು ಡಾ.ರೆಡ್ಡೀಸ್‌ ಲ್ಯಾಬ್‌ ಗೆ ಅವಕಾಶ ಮಾಡಿಕೊಟ್ಟಿತು. ಸುಮಾರು ಒಂದೂವರೆ ವರ್ಷದ ನಂತರ ಮತ್ತೆ ಜೂನ್‌ 2021 ರಲ್ಲಿ ಎನ್‌ ಜಿ ಸಿ ಯನ್ನು ಹೊರಕಳಿಸಿ ಸೆನ್ಸೆಕ್ಸ್‌ ನಲ್ಲಿ ತನ್ನ ಸ್ಥಾನ ಬಲಪಡಿಸಿಕೊಂಡಿತು.

    ಷೇರಿನ ಬೆಲೆ ನಡೆದು ಬಂದ ದಾರಿ:

    2013 ರಲ್ಲಿ ಈ ಷೇರಿನ ಬೆಲೆ ರೂ.195 ರ ಸಮೀಪವಿತ್ತು. ನಂತರ 2017 ರವರೆಗೂ ರೂ.200 ರಿಂದ ರೂ.440 ರವರೆಗೂ ಏರಿಳಿತ ಕಂಡು 2017 ರಲ್ಲಿ ರೂ.744 ರವರೆಗೂ ಏರಿಕೆ ಕಂಡು, 2018 ರ ಆರಂಭಿಕ ದಿನಗಳಲ್ಲಿ ರೂ.790 ರ ಗಡಿಯನ್ನು ದಾಟಿತು. ಈ ಕಂಪನಿ 2010 ರಲ್ಲಿ ಪ್ರತಿ ಷೇರಿಗೆ ರೂ.610 ರಂತೆ ವಿತರಿಸಿದ್ದ ಬೆಲೆಯನ್ನು 2017 ರಲ್ಲಿ ಮತ್ತೆ ತಲುಪಿತು. 2018 ರಲ್ಲಿ ಮತ್ತೊಮ್ಮೆ ರೂ.510 ರಂತೆ ಮತ್ತು ಪಾರ್ಟ್‌ ಪೇಮೆಂಟ್‌ ಆಧಾರದಲ್ಲಿ ಪ್ರತಿ ಷೇರಿಗೆ ರೂ.615 ರಂತೆ ಹಕ್ಕಿನ ಷೇರು ವಿತರಿಸಿತು. ಈ ವಿತರಣೆ ನಂತರ ಷೇರಿನ ಬೆಲೆ 2019 ರಲ್ಲಿ ರೂ.320 ರ ಸಮೀಪಕ್ಕೂ, 2020 ರಲ್ಲಿ ರೂ.250 ರ ಸಮೀಪಕ್ಕೂ ಜಾರಿ 2021 ರಲ್ಲಿ ರೂ.1,480 ರವರೆಗೂ ಜಿಗಿತ ಕಂಡಿದೆ.

    ಡಿವಿಡೆಂಡ್‌ ವಿತರಣೆ:

    ಷೇರುದಾರರಿಗೆ ವಿತರಿಸಿದ ಡಿವಿಡೆಂಡ್‌ ಪ್ರಮಾಣ ಹೇಗಿತ್ತೆಂದರೆ 2018 ರಲ್ಲಿ ಪ್ರತಿ ಷೇರಿಗೆ ರೂ.10, 2019 ರಲ್ಲಿ ಪ್ರತಿ ಷೇರಿಗೆ ರೂ.13, 2020 ರಲ್ಲಿ ಪ್ರತಿ ಷೇರಿಗೆ ರೂ.10 ಮತ್ತು 2021 ರಲ್ಲಿ ಪ್ರತಿ ಷೇರಿಗೆ ರೂ.25 ರಂತೆ ಡಿವಿಡೆಂಡ್‌ ನ್ನು ಘೋಷಿಸಿ ವಿತರಿಸಿ, ಹೂಡಿಕೆದಾರರನ್ನು ತನ್ನ ಏರಿಳಿತಗಳ ಜಾಲದಿಂದ ಲಾಭಗಳಿಕೆಗೆ ಅವಕಾಶ ಕಲ್ಪಿಸುವುದರೊಂದಿಗೆ ಆಕರ್ಷಕ ಡಿವಿಡೆಂಡ್‌ ವಿತರಿಸಿದೆ.

    ಎಲ್ಲಾ ಹೆಚ್ಚಿನ ಬೆಲೆಯ ಷೇರುಗಳೂ ಹೂಡಿಕೆಗೆ ಯೋಗ್ಯವೇ?

    ಹೂಡಿಕೆಗೆ ಕಂಪನಿಗಳನ್ನು ಆಯ್ಕೆ ಮಾಡುವಾಗ ಕಂಪನಿಗಳ ಚಟುವಟಿಕೆ, ಸಾಧನೆ, ಆಡಳಿತ ಮಂಡಳಿಗಳ ಸ್ನೇಹಪರತೆ, ಪೇಟೆಯಲ್ಲಿ ಆ ಷೇರಿನ ಪರಿಸ್ಥಿತಿ, ಮೌಲ್ಯಾಧಾರಿತವೇ ಎಂಬ ಅಂಶಗಳನ್ನಾಧರಿಸಿ ನಿರ್ಧರಿಸಬೇಕು. ಸಧ್ಯ ಪೇಟೆಗಳಲ್ಲಿ ಷೇರಿನ ಬೆಲೆಗಳು ಗಗನದಲ್ಲಿ ತೇಲಾಡುತ್ತಿರುವ ಸಂದರ್ಭವಾಗಿದ್ದು, ವಿದೇಶಿ ವಿತ್ತೀಯ ಹೂಡಿಕೆದಾರರು ಮಾರಾಟಕ್ಕೆ ಹೆಚ್ಚು ಒಲವು ತೋರುತ್ತಿದ್ದು, ಸ್ಥಳೀಯ ವಿತ್ತೀಯ ಸಂಸ್ಥೆಗಳು ಚಟುವಟಿಕೆಭರಿತವಾಗಿರುವ ಕಾರಣ, ಸಣ್ಣ ಹೂಡಿಕೆದಾರರು ಸಹ ಲಾಭದ ನಗದೀಕರಣಕ್ಕೆ ಆದ್ಯತೆ ನೀಡುವುದು ಒಳಿತು. ಕೈಲಿ ಹಣ ಸಿದ್ಧವಿದ್ದಲ್ಲಿ ಅವಕಾಶಗಳು ಅಗಾಧವಾಗಿ ಸೃಷ್ಠಿಯಾಗುತ್ತವೆ ಎನ್ನುವುದಕ್ಕೆ ಹಿಂದಿನ ವಾರದಲ್ಲಿ ಫಾರ್ಮಾ ವಲಯದ ಡಾ.ರೆಡ್ಡೀಸ್‌ ಲ್ಯಾಬ್‌, ಸಿಪ್ಲಾ, ಗ್ಲೆನ್‌ ಮಾರ್ಕ್‌ ಫಾರ್ಮಾ, ಅಲೆಂಬಿಕ್‌ ಫಾರ್ಮ, ಲೌರಸ್‌ ಲ್ಯಾಬ್‌, ಕ್ಲಾರಿಯಂಟ್‌ ಕೆಮಿಕಲ್ಸ್‌, ಬ್ಯಾಂಕಿಂಗ್‌ ವಲಯದ ಕೆನರಾ ಬ್ಯಾಂಕ್‌ ಅಲ್ಲದೆ ಎನ್‌ ಎಂಡಿ ಸಿ, ಹಿಂದೂಸ್ಥಾನ್‌ ಕಾಪರ್‌, ಒರ್ಯಾಕಲ್‌, ಭಾರತ್‌ ಡೈನಾಮಿಕ್ಸ್ ಮುಂತಾದ ಕಂಪನಿಗಳು ದೊರಕಿಸಿಕೊಟ್ಟ ಅವಕಾಶಗಳೇ ನಿದರ್ಶನ.

    ಈಗಿನ ಪೇಟೆಗಳಲ್ಲಿ ವ್ಯವಹರಿಸಬೇಕೆ ಹೊರತು ದೀರ್ಘಕಾಲೀನ ಹೂಡಿಕೆಗೆ ಎಂದು ದೊರೆತಂತಹ ಅವಕಾಶಗಳನ್ನು ಕೈಚೆಲ್ಲುವುದು ಸರಿಯಲ್ಲವೆಂದೆನಿಸುತ್ತದೆ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕಂಚಿನ ಪದಕ ಗೆದ್ದ ಸಿಂಧೂ

    ಶನಿವಾರದ ಸೋಲನ್ನು ಸವಾಲಾಗಿ ಸ್ವೀಕರಿಸಿ ಭಾವನೆಗಳ ಹೊಯ್ದಾಟವನ್ನು ಬದಿಗಿಟ್ಟು ದೃಢ ಮನಸ್ಸಿನಿಂದ ಸೆಣಸಿದ ಹೈದರಾಬಾದಿನ ಪಿ ವಿ ಸಿಂಧೂ ಟೋಕಿಯೋ ಒಲಂಪಿಕ್ಸ್ ನ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಭಾನುವಾರ ಭಾರತಕ್ಕೆ ಕಂಚಿನ ಪದಕವನ್ನು ಸಂಪಾದಿಸಿ ಕೊಡುವಲ್ಲಿ ಸಫಲರಾದರು.

    ರಿಯೋ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಸಿಂಧೂ ಮೇಲೆ ಇದ್ದ ಭರವಸೆ ಆಕೆ ತೀವ್ರ ಒತ್ತಡಕ್ಕೆ ಸಿಲುಕುವಂತೆ ಮಾಡಿತ್ತು. ಶನಿವಾರ ಪಂದ್ಯ ಸೋತಾಗ ನಿರಾಸೆಯ ಕಾರ್ಮೋಡ ಆವರಿಸಿದ್ದರೂ ಸಿಂಧೂ ಭರವಸೆಯನ್ನು ಹುಸಿ ಮಾಡಲಿಲ್ಲ. ನಿರಾಸೆಯನ್ನು ಬದಿಗೊತ್ತಿ ಚೀನಾದ ಹೆ ಬಿಂಜಿಯೋ ಅವರನ್ನು ನೇರ ಪಂದ್ಯದಲ್ಲಿ ಸೋಲಿಸಿ ಕಂಚಿನ ಪದಕ ಪಡೆದರು.

    ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಪಡೆದದಕ್ಕಿಂತ ಹೆಚ್ಚಿನ ಸಂತೋಷ ಈಗ ಆಯಿತು ಎಂದು ಸಿಂಧೂ ಹೇಳಿದ್ದಾರೆ. ಈ ಪದಕ ಪಡೆಯುವ ಮೂಲಕ ಒಲಂಪಿಕ್ಸ್ ನ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಎರಡು ಪದಕ ಗೆದ್ದ ನಾಲ್ಕನೇ ಮಹಿಳಾ ಆಟಗಾರ್ತಿ ಎಂಬ ಗೌರವಕ್ಕೂ ಪಾತ್ರರಾದರು.

    ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆನೇಕ ಗಣ್ಯರು ಸಿಂಧೂಗೆ ಅಭಿನಂದನೆ ತಿಳಿಸಿದ್ದಾರೆ.

    ಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲದಿದ್ದರೆ ಏನು ಫಲ

    ಸುಮಾವೀಣಾ

    ಪಾವಾಗಿ ಪುಟ್ಟಿ ಧನಮಂ ಕಾವಂತುಟೆ -ನೇಮಿಚಂದ್ರನ  ‘ಲೀಲಾವತಿ ಪ್ರಬಂಧ’ದಲ್ಲಿ ಉಲ್ಲೇಖವಾಗಿರುವ  ಶ್ರಮದ ಮೌಲ್ಯವನ್ನು ಕುರಿತು ಆಡುವ ಮಾತಿದು. ಯಾವುದೇ ಕೆಲಸ   ಮಾಡಿದರು ಅದು ತನಗೆ ಉಪಯೋಗವಾಗುವಂತಿರಬೇಕು ಇಲ್ಲವಾದರೆ ಅದಕ್ಕೆ ಅರ್ಥವಿಲ್ಲ  ಎಂಬ ವಾಸ್ತವ ಸತ್ಯ ತಿಳಿಸುವಂಥ  ಮಾತು.

    ಸರೀಸೃಪಗಳೆ ಆಗಲಿ, ಪ್ರಾಣಿ ಪಕ್ಷಿಗಳೇ ಆಗಲಿ ಅವುಗಳು ಮನುಷ್ಯ ತೊಡುವಂಥ ವಿನಿಯೋಗಿಸುವಂಥ ಬಂಗಾರವನ್ನು , ಹಣವನ್ನು  ಜೋಪಾನ ಮಾಡಿದರೆ ಅದರಿಂದ  ಎಳ್ಳಷ್ಟೂ ಪ್ರಯೋಜನವಾಗುವುದಿಲ್ಲ. “ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗೆ”  ಅನ್ನುತ್ತಾರಲ್ಲ ಹಾಗೆ ಮಾಣಿಕ್ಯದ ಬೆಲೆಯೂ  ಆ ಮಂಗಕ್ಕೆ ತಿಳಿದಿರುವುದಿಲ್ಲ. ಅದು ಉಪಯೋಗಿಸಿದರೂ   ಕಂಡೂ ಕಾಣದ ಹಾಗೆ ಮಾಡುತ್ತೇವೆ  ಇನ್ನೂ ಹೆಚ್ಚಿಗೆ ಅಂದರೆ ಛೇಡಿಸುತ್ತೇವೆ ಅದರಲ್ಲಿ ಅಂಥ ಗಹನತೆ ಏನೂ ಇರುವುದಿಲ್ಲ .

    ನಿಧಿ ಇದ್ದಲ್ಲಿ ಸರ್ಪವಿರುತ್ತದೆ, ನಿಧಿಯನ್ನು ಅದು ಕಾಯುತ್ತದೆ,  ಹುತ್ತದಲ್ಲಿ ನಿಧಿ ಇರುತ್ತದೆ ಇತ್ಯಾದಿ ಇತ್ಯಾದಿ ಮಾತುಗಳು ಬರುತ್ತವೆ.  ಇನ್ನು ಜಾನಪದ ಕತೆಗಳಲ್ಲೂ ಹಾವಿಗೆ   ಇನ್ನಿಲ್ಲದ ಸ್ಥಾನಮಾನ  ಏಳುಹೆಡೆ ಸರ್ಪ, ನಾಗಮಣಿ ಹೋಂದಿರುವ ಸರ್ಪ,  ಮಾಯಾವಿ ಸರ್ಪ, ಕಪಾಲಗುರ ಆಗಿದ್ದ  (ಕಿವಿಯಬಳಿ ಬಾವು ಇರುವುದು)  ಸರ್ಪ ಇತ್ಯಾದಿ ಇತ್ಯಾದಿ.  ನಿಧಿಯನ್ನು ತನಗೆ ಸಹಾಯ ಮಾಡಿದವರಿಗೆ ಕೊಡುತ್ತದೆ   ಎಂಬ ಕತೆಗಳಿವೆ.

    ‘ನಿಧಿ’ ಎಂದರೆ ಸಂಪತ್ತು, ಭಂಡಾರ , ಖಜಾನೆ ,  ಬೊಕ್ಕಸ ಮುಂತಾದ   ಅರ್ಥವಿದೆ.    ಅಂತಹ ನಿಧಿಯನ್ನು ಕಾಯುವುದು ಹಾವು . ಅದೆಷ್ಟೇ ಕಾಯ್ದರೂ ಪ್ರಯೋಜನ ಮಾತ್ರ ಶೂನ್ಯ. ಅದು ಕಾಯುವುದಷ್ಟೇ ಲಾಭ. “ನೀನು ಇಷ್ಟು ದಿನ ಕಾಯ್ದಿರುವೆ ತಗೊ  ಸಂಬಳ” ಎಂದಾಗಲೀ “ತಗೋ ಈ ಆಭರಣ  ಧರಿಸು” ಎಂದು ಯಾರೂ ಹೇಳುವುದಿಲ್ಲ.  ಯಾರೇ ಆಗಲಿ ತಮ್ಮ ಹುಟ್ಟಿಗೆ, ಬದುಕಿಗೆ ತಕ್ಕಂತೆ  ಕೆಲಸವನ್ನು ಉದ್ಯೋಗವನ್ನು ಮಾಡಬೇಕಾಗುತ್ತದೆ ಇಲ್ಲವಾದರೆ ವ್ಯರ್ಥ ಎಂದು “ಪಾವಾಗಿ ಪುಟ್ಟಿ ಧನಮಂ ಕಾವಂತುಟೆ” ಎಂಬ ಮಾತಿನ ಮೂಲಕ ತಿಳಿಯುತ್ತದೆ.

    ಬಸವಣ್ಣನವರ ವಚನದಲ್ಲಿಯೂ   ಇದೇ ಅರ್ಥವನ್ನು ಕೊಡುವಂಥ “ನಿಧಾನವ ಕಾಯ್ದಿರ್ದ ಬೆಂತರನಂತೆ” ಎಂಬ ಮಾತಿದೆ.ಅದೇ  ರೀತಿ  ಕುಮಾರವ್ಯಾಸನ ‘ಉದ್ಯೋಗಪರ್ವ’ದಲ್ಲಿಯೂ “ತಾನು ಭಕ್ಷಿಸದಹಿನಿಧಾನವನುಒಸೆದು ಕಾದಿಪ್ಪಂತೆ” ಎಂಬ ಮಾತು  ಬರುತ್ತದೆ. ‘ತಾನು’ ಎಂದರೆ  ಯಾರು ಕಾಯುತ್ತಾರೊ ಅವರು  ಭಕ್ಷಿಸದ ಎಂದರೆ ಅನುಭವಿಸದ   ‘ಅಹಿ’ ಎಂದರೆ ಸರ್ಪ  ಎಂಬ ಅರ್ಥವಿದೆ.

    ಕುಮಾರವ್ಯಾಸನ ಕಾವ್ಯದಲ್ಲಿ  ಪ್ರಸ್ತುತ ಮಾತನ್ನು ಭಂಢಾರವನ್ನು  ಕಾಯುವಂತಹ ವ್ಯಕ್ತಿಯ ಲಕ್ಷಣಗಳೇನು ಇರಬೇಕು ಎನ್ನುವಲ್ಲಿ ಹೇಳಿದ್ದಾರೆ.  ಅಂದರೆ ಬಹಳ ಅಮೂಲ್ಯವಾದ  ರತ್ನ, ವಜ್ರ, ವೈಢೂರ್ಯವನ್ನು  ಅದರ ಮೌಲ್ಯವನ್ನು ನಿಖರವಾಗಿ ಊಹೆ ಮಾಡಬಲ್ಲವನಾಗಿರಬೇಕು ಜೊತೆಗೆ ಹಾವಿನ ಹಾಗೆ ನಿಧಿಯನ್ನು ಜೋಪಾನ ಮಾಡಬೇಕು .ಯಾವಾಗಲು  ಸತ್ಯವನ್ನೇ ನುಡಿಯುವವನನ್ನು ಭಂಢಾರದ ರಕ್ಷಣೆಗೆ ನೇಮಿಸಬೇಕು ಎನ್ನುತ್ತಾರೆ.  ಜೋಪಾನ ಮಾಡಬೇಕು ಆದರೆ ಅನುಭವಿಸಬಾರದು ಎಂಬ  ಅರ್ಥದಲ್ಲಿ.

    ಏನೇ ಇರಲಿ ನೇಮಿಚಂದ್ರನ ಪ್ರಕಾರ ಯಾವುದೇ ಕೆಲಸವನ್ನು ಮಾಡಿ ಅದರಿಂದ ನಿಮಗೆ ಉಪಯೋಗವಾಗುವಂತಿರಲಿ ಬಹಳ  ಜೋಪಾನದಿಂದ ನಿಧಿಯನ್ನು ಕಾಯ್ದರೂ  ಕಿಂಚಿತ್ ಲಾಭವನ್ನು ಗಳಿಸದೆ ಸುಮ್ಮನೆ ಉಳಿಯುವ ಹಾವಿನಂತಾಗಬಾರದು ಶ್ರಮಿಕರ  ಶ್ರಮ ಎನ್ನುತ್ತಾರೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ವಿಭಿನ್ನ ಪ್ರಯೋಗದ `ಇಕ್ಕಟ್’

    ಒಂದು ಲಾಕ್ ಡೌನ್, ಒಂದು ಕರೋನಾ, ಒಂದು ಟಿಕ್ ಟಾಕ್ ಸಂಸಾರವೊಂದರಲ್ಲಿ ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಬಹುದು ಎಂಬುದನ್ನು ನವಿರು ಹಾಸ್ಯದೊಂದಿಗೆ ಹೇಳಿರುವ ಇಕ್ಕಟ್ ಎಂಬ ಸಿನಿಮಾ ತನ್ನ ಹಲವು ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತದೆ. ಇದೇ ಇಪ್ಪತ್ತೊಂದರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಮಿಸ್ ಮಾಡದೇ ನೋಡಬೇಕಾದ ಚಿತ್ರಗಳ ಸಾಲಿಗೆ ಸೇರಬಲ್ಲದು.

    ಇಶಾಮ್ ಹಾಗೂ ಹಸೀನ್ ಖಾನ್ ಸಹೋದರರು ನಿರ್ದೇಶಿಸಿರುವ ಈ ಚಿತ್ರ ಲವಲವಿಕೆಯಿಂದ ಕೂಡಿದೆ. ಹೊಸ ಹುಡುಗರಾದರೂ ತಮ್ಮಲ್ಲಿನ ಆಲೋಚನೆಗಳನ್ನು ದೃಶ್ಯರೂಪಕ್ಕೆ ತಂದು ನೋಡುಗರನ್ನು ಹಿಡಿದಿಟ್ಟಿದ್ದಾರೆ.

    ಒಂದೇ ಒಂದು ಮನೆಯ ಒಳಗೆ ಇಡೀ ಚಿತ್ರವನ್ನು ಚಿತ್ರಿಸಿದ್ದಾರೆ. ಚಿತ್ರದಲ್ಲಿ ಬೆರಳಿಣಿಕೆಯ ಪಾತ್ರಗಳಷ್ಟೇ ಜೀವಿಸಿವೆ. ಮನೆಯ ಒಳಗೇ ಇಡಿ ಚಿತ್ರವನ್ನು ದೃಶ್ಯೀಕರಿಸಿರುವ ರೀತಿ ಹಾಗೂ ಅದನ್ನು ಬೋರಾಗದಂತೆ ಕಟ್ಟಿಕೊಟ್ಟದ್ದು ನಿರ್ದೇಶಕರ ಜಾಣ್ಮೆಗೆ ಸಾಕ್ಷಿ.

    ಮನೆಯ ಕೋನಗಳನ್ನು ತಮ್ಮ ಕತೆಯ ಬೆಳವಣಿಗೆಗೆ ಹೇಗೆಲ್ಲಾ ದೃಶ್ಯ ರೂಪಕ್ಕೆ ತರಬಹುದೆಂದು ಸರಿಯಾಗಿಯೇ ಯೋಚಿಸಿ ಆಗು ಮಾಡಿಸಿದ್ದಾರೆ.ಹೊರಗಿನ ಜಗತ್ತಿನ ಬಗ್ಗೆ ಮಾತಲ್ಲೇ ಕಟ್ಟಿಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ನೋಡುಗನಿಗೆ ತಲುಪಿಸುತ್ತಾರೆ. ಮನೆಯಲ್ಲಿನ ಟೀವಿಯನ್ನೂ ಒಂದು ಪಾತ್ರವನ್ನಾಗಿಸಿದ್ದಾರೆ. ಅದನ್ನು ಕತೆಯ ಓಟಕ್ಕೆ ಬಳಸಿಕೊಂಡಿದ್ದಾರೆ.

    ಇಲ್ಲಿ ಪಾತ್ರಗಳ ನಡುವಿನ ಜಿದ್ದಾ-ಜಿದ್ದಿ, ಒಳ ತುಮುಲಗಳ ತಾಕಲಾಟ, ಪ್ರೀತಿ-ದ್ವೇಷ, ಬಂಧು-ಬಳಗದವರ ಆಕ್ರಮಣ, ಅಕ್ಕ-ಪಕ್ಕದವರ ಕಿರಿಕಿರಿ ಹಾಗೂ ಕುಚೋದ್ಯ ಹೀಗೆ ಎಲ್ಲವನ್ನೂ ಸಂದರ್ಭೋಚಿತವಾಗಿ ಹೆಣೆಯಲಾಗಿದೆ.

    ಮುಖ್ಯ ಪಾತ್ರಗಳಲ್ಲಿನ ನಾಗಭೂಷಣ್ ಎನ್ನೆಸ್, ಭೂಮಿಕಾ ಶೆಟ್ಟಿ, ಸುಂದರ್, ಆರ್ಜೆ ವಿಕ್ಕಿ ಹಾಗೂ ಆನಂದ್ ನೀನಾಸಮ್ ಹಾಗೂ ಜೇಡ ಹಿಡಿಯಲು ಬರುವ ಹುಡುಗ ಎಲ್ಲರ ಟೈಮಿಂಗ್ ಹಾಗೂ ಸಹಜ ನಟನೆ ಪ್ಲಸ್ ಆಗಿದೆ.

    ಸಿನಿಮಾಟೋಗ್ರಫಿಯ ಹೊಣೆಯನ್ನು ಯುವ ಪ್ರತಿಭೆ ಲವಿತ್ ಅವರು ನಿರ್ವಹಿಸಿದ್ದಾರೆ. ತಮ್ಮ ಮೊದಲ ಸಿನಿಮಾ ‘ ರಾಮ ರಾಮ ರೇ’ ಯಲ್ಲಿ ಚಿತ್ರದ ಬಹುಪಾಲು ಭಾಗವನ್ನು ಬಯಲಲ್ಲಿ ಚಿತ್ರೀಕರಿಸಿದ್ದರು. ಕಳ್ಬೆಟ್ಟದ ದರೋಡೆಕೋರರು’ ಚಿತ್ರದಲ್ಲಿ ಹಳ್ಳಿಯ ಪರಿಸರ ಹಾಗೂ ಅಲ್ಲಿನ ಗಲ್ಲಿಗಳನ್ನೂ ಹಿಡಿದಿಟ್ಟಿದ್ದ ಲವಿತ್ ಈ ಚಿತ್ರದಲ್ಲಿ ಇಡೀ ಚಿತ್ರವನ್ನು ಗೋಡೆಗಳ ನಡುವೆಯೇ ಚಿತ್ರಿಸಿ ದಾಖಲೆ ಮಾಡಿದ್ದಾರೆ. ಹೊರಾಂಗಣವೇ ಇಲ್ಲದೇ ಎಲ್ಲವನ್ನೂ ಇಂಡೋರ್ ನಲ್ಲೇ ಚಿತ್ರಿಸಿ `ಸೈ’ ಎನಿಸಿಕೊಂಡಿದ್ದಾರೆ.

    ನಿರ್ದೇಶಕರೇ ಈ ಚಿತ್ರದ ಎಡಿಟರ್ ಕೂಡ ಆಗಿರುವುದರಿಂದ ಫ್ರೇಮ್ ಅನ್ನು ಇಡುವಾಗಲೇ ಎಲ್ಲಿ ಎಷ್ಟಿದ್ದರೆ ಸೂಕ್ತ ಎಂದು ನಿರ್ಧರಿಸಿದಂತೆ ಕಾಣುತ್ತದೆ. ನಿರ್ದೇಶನದಷ್ಟೇ ಸಂಕಲನದ ಕೆಲಸದಲ್ಲೂ ಸಾಕಷ್ಟು ನುರಿತವರಷ್ಟೇ ಚೆನ್ನಾಗಿ ಕೆಲಸ ಮಾಡಿದ್ದಾರೆ. ಡಾಸ್ಮೋಡೆ ಅವರ ಬೀಟ್ ಹಾಗೂ ಹಿನ್ನೆಲೆಯ ಸಂಗೀತ ಪೂರಕವಾಗಿದೆ.

    ಸಣ್ಣ ಸಣ್ಣ ಸಂಗತಿಗಳನ್ನೂ ಸೂಕ್ತವಾಗಿ ದೃಶ್ಯೀಕರಿಸಿದ್ದಾರೆ. ಬರೀ ಮಾತಲ್ಲೇ ದೃಶ್ಯಗಳನ್ನು ಕಟ್ಟದೇ ಚಿತ್ರಭಾಷೆಯನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಕರೋನಾ ಸಂದಿಗ್ಧದಲ್ಲಿ ಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಸವಿವರವಾಗಿ ಹಿಡಿದಿಟ್ಟಿದ್ದಾರೆ.

    ಚೈನ್ ಕಟ್’ ಮಾಡಬೇಕು ಎನ್ನುವ ಡೈಲಾಗಿಗೆ ನಾಯಕಿಯು ಕತ್ತಿನ ಚೈನ್ ಮುಟ್ಟಿಕೊಳ್ಳುವುದು, ಸರೀ ರಾತ್ರಿಯಲ್ಲಿ ಆಗಂತುಕ ಮನೆಯ ಒಳಗೆ ಬಂದು ಏನೆಲ್ಲಾ ದಾಂದಲೆ ಮಾಡಿರಬಹುದೆಂಬ ಕಲ್ಪನೆ,ಅತಿಥಿಗೆ ಕಾಫಿ ಮಾಡು ಎನ್ನುವುದನ್ನು ಕಣ್ಸನ್ನೆಯಲ್ಲೇ ಹೇಳುವುದು,ಮಂಚದ ಕೆಳಗೇ ಅವಿತ ಆಗಂತುಕ ಅಲ್ಲಿನ ಜಿರಳೆಯನ್ನೇ ಪ್ರೆಂಡ್ ಮಾಡಿಕೊಂಡು ಅದರೊಂದಿಗೆ ಮಾತಾಡುವುದು, ಚೈನಾ ಆಸಾಮಿಯು ಕೊಟ್ಟಿದ್ದ ಎನ್ನುವ ಮೊಬೈಲ್ ಅನ್ನು ಮುಟ್ಟಲು ಹೆಣಗಾಡುವುದು, ಅತಿಥಿಯ ಸೀನು ಹೆಚ್ಚಾದಾಗ ಅವರಿಗೆ ಕೋವಿಡ್ ರೋಗ ಬಂದಿರಬಹುದೆಂದು ಅನುಮಾನಿಸಿ ಪರಿಪಾಟಲು ಅನುಭವಿಸುವುದು ನೋಡುಗರಿಗೆ ಸಾಕಷ್ಟು ರಂಜನೆ ನೀಡುತ್ತದೆ.

    ಪಕ್ಕದ ಮನೆಯವನ ಕೀಟಲೆ-ಕಿರಿಕಿರಿಯು ಚಿತ್ರಕ್ಕೆ ಹೊಸ ತಿರುವು ಕೊಡುವುದು. ಟಿಕ್ ಟಾಕ್ ಗೀಳು ಹಾಗೂ ಅದರ ಪರಿಣಾಮಗಳನ್ನು ಸೂಕ್ಷ್ಮವಾಗಿ ಬಿತ್ತರಿಸುವ ಪರಿ ವಿಭಿನ್ನವಾಗಿದೆ.

    ನಗಿಸಲು ಸಾಕಷ್ಟು ಸೀನ್ ಗಳು/ಸೀನುಗಳಿವೆ. ಯುವ ಗಂಡ-ಹೆಂಡತಿ ಇಬ್ಬರೇ ಇರುವ ದೃಶ್ಯಗಳಲ್ಲೂ ಇತಿ-ಮಿತಿಯನ್ನು ಕಾಯ್ದುಕೊಂಡೇ ಚಿತ್ರಿಸಿ ಸಕುಟುಂಬ ಪರಿವಾರವಾಗಿ ಮನೆಯಲ್ಲಿನ ಎಲ್ಲರೂ ನೋಡುವಂತಹ ಚಿತ್ರವನ್ನಾಗಿಸಿದ್ದಾರೆ. ಪಕ್ಕಾ ಫ್ಯಾಮಿಲಿಯ ನವಿರು ಹಾಸ್ಯದ ಚಿತ್ರ ಎನ್ನಲಡ್ಡಿಯಿಲ್ಲ.

    ನಾಗಭೂಷಣ್ ಅವರ ನಟನೆಯು ಮತ್ತೊಬ್ಬ ಅಚ್ಯುತ್ ಕುಮಾರ್ ಅವರನ್ನು ಹುಟ್ಟು ಹಾಕಲಿದೆ. ಅಷ್ಟು ಸಹಜಾಭಿನಯ ಅವರಲ್ಲಿದೆ. ಈ ದಿನಮಾನದ ಹುಡುಗಿಯರಲ್ಲಿರುವ ಹಾವಭಾವವನ್ನು ಯಥಾವತ್ತಾಗಿ ಭೂಮಿಕಾ ಶೆಟ್ಟಿ ಪ್ರತಿಬಿಂಬಿಸಿದ್ದಾರೆ. ಸುಂದರ್ ಅವರ ಪಳಗಿದ ಅನುಭವವು ದೃಶ್ಯಗಳಲ್ಲಿ ಗೋಚರಿಸುತ್ತದೆ. ಆಗಂತುಕ ಪಾತ್ರದಲ್ಲಿ ವಿಕ್ಕಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

    ಆನಂದ್ ನೀನಾಸಂ ಆಗಾಗ ಬಂದು ಚಟಾಕಿ ಹಾರಿಸಿ ದೃಶ್ಯಗಳಿಗೆ ತಿರುವು ನೀಡುತ್ತಾರೆ. ಚಿತ್ರದ ಆರಂಭದಲ್ಲಿ ಬರುವ ಪುಟ್ಟ ಪಾತ್ರಧಾರಿ ಕೂಡ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎನ್ನುವುದೂ ಗಮನಾರ್ಹ.

    ಜೇಡವನ್ನು ಸಂಶೋಧಿಸುವ ದೃಶ್ಯದಿಂದ ಆರಂಭವಾದ ಚಿತ್ರ, ಅದೇ ಚಿತ್ರದ ತಿರುವಿಗೆ ಸಹಕಾರಿಯಾಗುತ್ತೆ. ಮತ್ತೆ ಚಿತ್ರದ ಕೊನೆಯಲ್ಲೂ ಕಾಣಿಸಿಕೊಂಡು ಚಿತ್ರದ `ಶುಭಂ’ ವರೆಗೂ ಕಾಡುತ್ತೆ! ಜೇಡವೂ ಒಂದು ಪಾತ್ರದಂತೆಯೇ ಅಡಕವಾಗಿದೆ.

    ಒಟ್ಟಿನಲ್ಲಿ ಎಲ್ಲಾ ಹೊಸ ನಿರ್ದೇಶಕರಲ್ಲಿ ಇರಬಹುದಾದ ಸಿನಿಮಾ ಪ್ರೀತಿ ಹಾಗೂ ಎಲ್ಲಾ ಫ್ರೇಮ್ಗಳನ್ನೂ, ಸಂಬಾಷಣೆಗಳನ್ನೂ ವಿಭಿನ್ನವಾಗಿಸುವ ಕ್ರಮವು ಇಲ್ಲೂ ಅಭಿವ್ಯಕ್ತವಾಗಿದೆ. ಈ ಹೊಸ ಪ್ರಯತ್ನವೇ ಈ ತಂಡಕ್ಕೆ ಹೆಚ್ಚು ಬಲ ತರಲಿ, ಹಾಗೂ ಮತ್ತಷ್ಟು ಇಂತಹ ಉತ್ತಮ ಅಭಿರುಚಿಯ ಚಿತ್ರಗಳನ್ನು ಕನ್ನಡಕ್ಕೆ ತರಲೆಂದು ಆಶಿಸೋಣ.ಕನ್ನಡದ ಖ್ಯಾತ ನಿರ್ದೇಶಕ ಪವನ್ ಕುಮಾರ್ ಅವರು ಈ ಚಿತ್ರಕ್ಕೆ ನಿರ್ಮಾಪಕರಾಗಿರುವುದು ಚಿತ್ರಕ್ಕೆ ಮತ್ತಷ್ಟು ಬೆಂಬಲವಾಗಿದೆ.


    ಅಮೇಜಾನ್ ಪ್ರೈಮ್ ನಲ್ಲಿ ಇಂಥ ಅನೇಕ ಸದುಭಿರುಚಿಯ ಚಿತ್ರಗಳಿವೆ. ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪ್ರೈಮ್ ನ ಸದಸ್ಯತ್ವ ಪಡೆಯಿರಿ.

    ಕೋವಿಡ್ ಕಂಟ್ರೋಲ್ ಗೆ ಕಟ್ಟು ನಿಟ್ಟಿನ ಕ್ರಮ: ಸಿ ಎಂ ಸೂಚನೆ

    BENGALURU JULY 31

    ಕೇರಳದಲ್ಲಿ ಕೋವಿಡ್ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶನಿವಾರದಂದು ದಿಲ್ಲಿಯಿಂದ ವಾಪಸ್ ಬಂದ ಕೂಡಲೇ ಏಳು ಜಿಲ್ಲೆಗಳ ಪರಿಸ್ಥಿತಿಯನ್ನು ತುರ್ತು ಅವಲೋಕನ ನಡೆಸಿದರು.

    ಕೇರಳ ಗಡಿಗೆ ಹೊಂದಿರುವ ಜಿಲ್ಲೆಗಳು ಸೇರಿ, ಪಾಸಿಟಿವಿಟಿ ದರ ಕಂಡು ಬರುತ್ತಿರುವ ಇನ್ನೂ ಕೆಲ ಜಿಲ್ಲೆಗಳ ಕೋವಿಡ್ ಸ್ಥಿತಿಗತಿಯ ಬಗ್ಗೆ ಆಯಾ ಜಿಲ್ಲೆಗಳ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.

    ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚತ್ತಿರುವ ಹಿನ್ನೆಲೆಯಲ್ಲಿ ಕೇರಳ ಗಡಿಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದ ಸಿಎಂ ಅವರು; ಆಕ್ಸಿಜನ್ ಪೂರೈಕೆ, ಔಷಧಿ ಲಭ್ಯತೆ, ಮುನ್ನೆಚ್ಚರಿಕೆ ಕ್ರಮ, ಗಡಿ ಭಾಗಗಳಲ್ಲಿ ತಪಾಸಣೆ ಮೊದಲಾದ ವಿಷಯಗಳ ಕುರಿತು ವಿವರವಾಗಿ ಚರ್ಚೆ ನಡೆಸಿದರು.

    ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಅವರು ಪರಿಸ್ಥಿತಿಯ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.

    ಕೋವಿಡ್ ಎರಡನೇ ಅಲೆಯನ್ನು ಕಠಿಣ ಪರಿಶ್ರಮದಿಂದ ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ನಿಯಂತ್ರಿಸಲಾಗಿದೆ. ಈಗ ಮತ್ತೆ ಪ್ರಕರಣಗಳು ಹೆಚ್ಚಳವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಎಲ್ಲ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಅಂತಾರಾಜ್ಯ ಗಡಿ ಚೆಕ್ ಪೋಸ್ಟ್ʼಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಆರ್.ಟಿ.ಪಿ.ಸಿ.ಆರ್. ನೆಗೆಟಿವ್, ಎರಡೂ ಡೋಸ್ ವ್ಯಾಕ್ಸಿನ್ ಕಡ್ಡಾಯ ಮಾಡುವುದು ಸೇರಿ ಚೆಕ್ ಪೋಸ್ಟ್ʼಗಳಲ್ಲಿ ಬಿಗಿ ಮಾಡಿ. ಹಿರಿಯ ಅಧಿಕಾರಿಗಳನ್ನು ನಿಯೋಜಿಸಿ. ಡಿವೈಎಸ್ಪಿ, ಉಪ ವಿಭಾಗಾಧಿಕಾರಿ, ವೈದ್ಯರು ಮತ್ತು ಇತರೆ ಸಿಬ್ಬಂದಿ ದಿನದ 24 ಗಂಟೆಯೂ ಅಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಿಎಂ ಸೂಚನೆ ನೀಡಿದರು.

    ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿ ಎರಡು ದಿನಕ್ಕೊಮ್ಮೆ ಆಯಾ ಚೆಕ್ ಪೋಸ್ಟುಗಳಿಗೆ ಭೇಟಿ ಪರಿಶೀಲಿಸಿ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡಬೇಕು ಎಂದು ಸೂಚಿಸಿದ ಮುಖ್ಯಮಂತ್ರಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕದ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಜತೆಗೆ ರೈಲು ನಿಲ್ದಾಣಗಳಲ್ಲೂ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಅವರು ಸೂಚಿಸಿದರಲ್ಲದೆ, ಬಂದರುಗಳಲ್ಲಿಯೂ ಕಟ್ಟೆಚ್ಚರ ವಹಿಸಬೇಕು ಎಂದು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದರು.

    ಕೇರಳದಿಂದ ಶಿಕ್ಷಣ, ಉದ್ಯೋಗಕ್ಕೆಂದು ಪ್ರತಿದಿನ ಪ್ರಯಾಣಿಸುವವರಿಗೆ ಒಂದು ವಾರದ ಅವಧಿಗೆ ಪಾಸ್ ನೀಡುವ ವ್ಯವಸ್ಥೆ ಹಾಗೂ ಅವರಿಗೆ ಪ್ರತೀವಾರ ಪರೀಕ್ಷೆ ಮಾಡಿಕೊಳ್ಳುವುದು ಕಡ್ಡಾಯ ಮಾಡುವಂತೆ ಸಿಎಂ ಸೂಚಿಸಿದರು. ಈ ಕುರಿತು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು.

    ಹೊರ ರಾಜ್ಯಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಲ್ಲಿಯೇ ಕ್ವಾರಂಟೈನ್ ಮಾಡುವಂತೆ ಸೂಚಿಸಲಾಗಿದೆ. ಚಿಕಿತ್ಸಾ ಸೌಲಭ್ಯದಲ್ಲಿ, ಆಮ್ಲಜನಕ, ಔಷಧ ಪೂರೈಕೆಯಲ್ಲಿ ಯಾವುದೇ ಕೊರತೆ ಆಗದಂತೆ ಎಲ್ಲ ಜಿಲ್ಲೆಗಳಲ್ಲೂ ಎಚ್ಚರಿಕೆ ವಹಿಸಬೇಕು ಎಂದು ಸಿಎಂ ಕಟ್ಟಪ್ಪಣೆ ಮಾಡಿದರು.

    ಆರೋಗ್ಯ ಸೌಲಭ್ಯಕ್ಕೆ ಅಗತ್ಯವಿರುವ ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಯಿತು. ಅವುಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಜಿಲ್ಲೆಗಳಿಗೆ ಹಂಚಿಕೆ ಮಾಡಿರುವ ಪಿಎಸ್ಎ ಘಟಕಗಳನ್ನು ತ್ವರಿತವಾಗಿ ಅಳವಡಿಸಲು ಸೂಚಿಸಲಾಯಿತಲ್ಲದೆ, ಪಿ.ಎಸ್.ಎ ಘಟಕಗಳಿಗೆ ಅಗತ್ಯ ಸಾಮರ್ಥ್ಯದ ವಿದ್ಯುತ್ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿಗಳು ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

    ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿ ಪಿಎಸ್ಎ ಘಟಕ ಒಂದು ವಾರದೊಳಗೆ ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಲು ಬೊಮ್ಮಾಯಿ ಅವರು ಸೂಚಿಸಿದರು.

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳ ಪ್ರಮಾಣ ಹೆಚ್ಚಿಸುವಂತೆ ಸೂಚಿಸಿದ ಸಿಎಂ, ಪ್ರವಾಸಿಗರು ಹೆಚ್ಚಾಗಿ ಆಗಮಿಸುವ ಕಾರಣ, ಹೋಮ್ ಸ್ಟೇಗಳು, ರೆಸಾರ್ಟ್ʼಗಳಲ್ಲಿ ಪರೀಕ್ಷೆ ನಡೆಸುವಂತೆ ತಿಳಿಸಿದರು. ಇದರ ಜತೆಗೆ; ಎಲ್ಲ ಜಿಲ್ಲೆಗಳಲ್ಲಿ ಲಸಿಕೆ ನೀಡಿಕೆ ತೀವ್ರಗೊಳಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

    ಇದಲ್ಲದೆ, ಸಂಪರ್ಕಿತರ ಪತ್ತೆ ತೀವ್ರಗೊಳಿವುದು, ಗಡಿ ಪ್ರದೇಶದಲ್ಲಿ RAT ಪರೀಕ್ಷೆ ಹೆಚ್ಚಿಸುವುದು, ಮೈಕ್ರೋ ಕಂಟೈನ್ಮೆಂಟ್ ಝೋನ್ʼಗಳನ್ನು ಮಾಡಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು, ಮಾಸ್ಕ್ ಕಡ್ಡಾಯಗೊಳಿಸುವುದು, ರೆಸಾರ್ಟ್ʼಗಳಲ್ಲಿ ಅತಿಥಿಗಳಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷಾ ವರದಿ ಕಡ್ಡಾಯಗೊಳಿಸುವುದು, ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಜನ ಗುಂಪುಗೂಡದಂತೆ ನಿಯಂತ್ರಿಸುವಂತೆ ಸಿಎಂ ಸೂಚಿಸಿದರು.

    ಮಲ್ಲೇಶ್ವರ ಮಾರುಕಟ್ಟೆ : ಮುಂದಿನ ಮೇ ನಲ್ಲಿ ಪೂರ್ಣ-ಪಾರ್ಕಿಂಗ್ ಗೂ ಅವಕಾಶ


    BENGALURU JULY 31
    ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಮಲ್ಲೇಶ್ವರ ಮಾರುಕಟ್ಟೆ ನಿರ್ಮಾಣ ಯೋಜನೆ ಮುಂದಿನ ವರ್ಷದ ಮೇ ತಿಂಗಳ ಒಳಗಾಗಿ ಪೂರ್ಣವಾಗುತ್ತದೆ ಎಂದು ಕ್ಷೇತ್ರದ ಶಾಸಕರೂ ಆದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

    ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಡಿಎ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ಯೋಜನೆಗಳ ಬಗ್ಗೆ ಇಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಆಯುಕ್ತ ರಾಜೇಶ್ ಗೌಡ ಹಾಗೂ ಇನ್ನಿತರೆ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಅವರು ಈ ವಿಷಯ ತಿಳಿಸಿದರು.

    ಮಲ್ಲೇಶ್ವರ ಜನತೆಗೆ ಈ ಮಾರುಕಟ್ಟೆ ಬಹಳ ಮುಖ್ಯವಾದದ್ದು. ಕಾರಣಾಂತರಗಳಿಂದ ಯೋಜನೆ ವಿಳಂಬವಾಗಿದೆ. ಅತ್ಯಂತ ವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿರುವ ಈ ಮಾರುಕಟ್ಟೆ ಸಂಕೀರ್ಣದ ಬೆೇಸ್ ಮೆಂಟ್ ಮತ್ತು ಐದನೇ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದ್ದು, 421 ಕಾರು ಮತ್ತು 350 ದ್ವಿಚಕ್ರ ವಾಹನಗಳನ್ನು ನಿಲ್ಲಿಸುವಷ್ಟು ಜಾಗ ಮೀಸಲಿಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

    ವಿಳಂಬವಾಗಿರುವ ಈ ಯೋಜನೆಯನ್ನು ಮುಂದಿನ ಮೇ ತಿಂಗಳೊಳಗೆ ಮುಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮುಂದಿನ ವಾರ ಬಿಡಿಎ ಅಧ್ಯಕ್ಷರ ಜತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಯೋಜನೆಗೆ ವೇಗ ನೀಡಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಸದಾಶಿವನಗರ ಬಿಡಿಎ ಸಂಕೀರ್ಣಕ್ಕೆ ಹೊಸ ಯೋಜನೆ:

    ಸದಾಶಿವನಗರದ ಆಯಕಟ್ಟಿನ ಜಾಗದಲ್ಲಿರುವ ಹಳೆಯ ಬಿಡಿಎ ಕಾಂಪ್ಲೆಕ್ಸ್ ಅನ್ನು ತೆರವುಗೊಳಿಸಿ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಆತ್ಯಾಧುನಿಕವಾಗಿ ಹೊಸ ಸಂಕೀರ್ಣವನ್ನು ಮರು ನಿರ್ಮಾಣ ಮಾಡುವ ಬಗ್ಗೆ ಇದೇ ವೇಳೆ ಚರ್ಚೆ ನಡೆಸಲಾಯಿತು. 1958ರಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದಲ್ಲಿ ಸದ್ಯಕ್ಕೆ 21 ಮಳಿಗೆಗಳಿದ್ದು, ಮಾಸಿಕ ಕೇವಲ 5 ಲಕ್ಷ ರೂ. ಆದಾಯ ಬರುತ್ತಿದೆ. ನಗರದ ಹೃದಯ ಬಾಗದಲ್ಲಿರುವ ಈ ಜಾಗದಿಂದ ಇನ್ನೂ ಹೆಚ್ಚಿನ ಆದಾಯ ಬರುವಂತೆ ಮಾಡಬೇಕು ಎಂದು ಮಾಜಿ ಡಿಸಿಎಂ ತಿಳಿಸಿದರು.

    ಈ ಸಂಕೀರ್ಣ ಅಭಿವೃದ್ಧಿಗೆ ಈ ಹಿಂದೆಯೇ ಪ್ರಯತ್ನ ನಡೆದಿತ್ತು. ಒಪ್ಪಂದವೂ ಆಗಿತ್ತಲ್ಲದೆ, ಅದು ಜಾರಿಗೆ ಬರಲಿಲ್ಲ. ಈಗ ಹೊಸದಾಗಿ ಯೋಜನೆಯನ್ನು ರೂಪಿಸಿ ಇವತ್ತಿನ ಮಾನದಂಡಗಳಿಗೆ ತಕ್ಕಂತೆ ಆಧುನಿಕವಾಗಿ  ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ವಿಶ್ವನಾಥ ತಿಳಿಸಿದರು.

    ಜಿಎಸ್ ಟಿ ಪರಿಹಾರ ಬಿಡುಗಡೆಗೆ ಮನವಿ

    NEW DELHI JULY 31

    ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

    ಕಳೆದ ವರ್ಷ ಕೇಂದ್ರ ಸರ್ಕಾರವು 12 ಸಾವಿರ ಕೋಟಿ ರೂ. ಜಿ.ಎಸ್.ಟಿ ಪರಿಹಾರ ನೀಡಿದ್ದು, ಇನ್ನು 11 ಸಾವಿರ ಕೋಟಿ ರೂ. ಗಳಷ್ಟು ಪರಿಹಾರ ಬಿಡುಗಡೆಯಾಗಬೇಕಿದೆ. ಈ ಪರಿಹಾರದ ಬಿಡುಗಡೆ ಕುರಿತು ಚರ್ಚಿಸಿದರು.

    ಈ ವರ್ಷ ಸುಮಾರು 18 ಸಾವಿರ ಕೋಟಿ ಪರಿಹಾರವನ್ನು ಸಾಲ ರೂಪದಲ್ಲಿ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಅಡಚಣೆ ಎದುರಾಗಿರುವುದರಿಂದ ಇದನ್ನು ಕೂಡಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

    ಇದಲ್ಲದೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅಗತ್ಯವಿರುವ ಅನುದಾನ ಬಿಡುಗಡೆಯ ಕುರಿತೂ ಸಹ ಕೇಂದ್ರ ಸಚಿವರ ಗಮನಸೆಳೆದರು

    ಗುರುತ್ವವನ್ನು ಅಡಗಿಸಿಕೊಂಡಿರುವ ಲಘು ಬರೆಹಗಳು


    ಇಲ್ಲಿಯ ಬರೆಹಗಳು ಪ್ರಸ್ತಾಪಿಸಲ್ಪಟ್ಟ ವ್ಯಕ್ತಿಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಈ ವ್ಯಕ್ತಿಗಳು, ಅವರ ಸ್ವಭಾವಗಳು ಕೆ.ಸತ್ಯನಾರಾಯಣ ಎಂಬ ವ್ಯಕ್ತಿಯ ಒಳಗಿದ್ದ ಒಬ್ಬ ಲೇಖಕನನ್ನು ಹೇಗೆ ರೂಪಿಸಿದವು, ಮಾಗಿಸಿದವು ಎಂಬುದನ್ನೂ ನಾವು ಕಂಡುಕೊಳ್ಳಬಹುದು. ಇತರರ ಸ್ವಭಾವಚಿತ್ರಗಳನ್ನು ಬರೆಯುತ್ತ ಲೇಖಕರು ತಮ್ಮ ಸ್ವಭಾವಚಿತ್ರವನ್ನೂ ಈ ಕೃತಿಯ ಒಡಲಲ್ಲಿ ಅಯಾಚಿತವಾಗಿ ನಮಗೆ ಒದಗಿಸಿದ್ದಾರೆ.


    ತಮ್ಮ ನಿರಂತರ ಬರೆಹಗಳಿಂದ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಶ್ರೀಮಂತಗೊಳಿಸುತ್ತಿರುವ ಕೆ.ಸತ್ಯನಾರಾಯಣ ಅವರು ಇದೀಗ `ಕಪಾಳಮೋಕ್ಷ ಪ್ರವೀಣ’ ಎಂಬ ನೂತನ  ಕೃತಿಯಲ್ಲಿ ಕೆಲವು ಸ್ವಭಾವ  ಚಿತ್ರಗಳನ್ನು ನೀಡಿದ್ದಾರೆ. ತಮ್ಮ ಈ  ಬರೆಹಗಳ ಹೊಳಹು ಹೊಳೆದದ್ದು ಡಿವಿಜಿಯವರ `ಜ್ಞಾಪಕ ಚಿತ್ರಶಾಲೆ’ ಎಂಬ ಕೃತಿಯಿಂದ ಎಂದು ಲೇಖಕರು ಹೇಳಿಕೊಂಡಿದ್ದಾರೆ. ಹಾಗೆಯೇ ಜಾರ್ಜ್‌ ಆರ್ವೆಲ್ಲರ ಬರೆಹಗಳೂ ಅವರ ಮೇಲೆ ಪ್ರಭಾವ ಬೀರಿರಬಹುದು. `ತುದಿವಾದಿಗಳು’ ಬರೆಹದಲ್ಲಿ ಅವರು ಆರ್ವೆಲ್‌ರ, `ಒಬ್ಬ ಮನುಷ್ಯ ನಮಗೆ ವೈಯಕ್ತಿಕ ಸ್ತರದಲ್ಲಿ ಪರಿಚಯವಾದಮೇಲೆ, ಆತ್ಮೀಯತೆ ಮೂಡಿದ ಮೇಲೆ, ಅವನ ವಿಚಾರಗಳನ್ನು ಕಟ್ಟಿಕೊಂಡು ಏನಾಗಬೇಕು? ಮನುಷ್ಯರನ್ನು ನಾವು ಪ್ರೀತಿಸುವುದು ಅವರ ಓರೆ ಕೋರೆಗಳಿಗೆ, ವಕ್ರತೆಗೆ, ವಿಶಿಷ್ಟತೆಗೆ, ನಿರ್ದಿಷ್ಟ ಸ್ವಭಾವಕ್ಕೇ ಹೊರತು ಕೇವಲ ವಿಚಾರಗಳಿಗಲ್ಲ’ ಎಂಬ ಮಾತನ್ನು ಉಲ್ಲೇಖಿಸುತ್ತಾರೆ. ಸ್ವಭಾವಚಿತ್ರಗಳನ್ನು ರೇಖಿಸುವ ಸೃಷ್ಟಿಕ್ರಿಯೆಯ ಹಿಂದೆ ಈ ವಿಚಾರ ತಳಹದಿಯಾಗಿರುವುದನ್ನು ಇಲ್ಲಿ ನಾವು ಗುರುತಿಸ ಬಹುದಾಗಿದೆ.`ಯಾವ ಮನುಷ್ಯನಿಗೂ ಅವನ ಸ್ವಭಾವದಿಂದ ಎಂದೂ ಬಿಡುಗಡೆಯಾಗುವುದಿಲ್ಲ. ಕೊನೆಗೂ ಈ ಭೀತಿಯಿಂದ ವಿಸರ್ಜನೆಗೆ ಒಳಗಾಗುವುದು ಮನುಷ್ಯನೇ ಹೊರತು, ಮನುಷ್ಯನ ಸ್ವಭಾವವಲ್ಲ ಎಂಬ ತಿಳಿವಳಿಕೆ’ಯ ಸಹಜ ಅರಿವಿನೊಂದಿಗೆ ಬರೆದಿರುವ ಕೃತಿ ಇದು.

    ಸ್ವಭಾವ ಚಿತ್ರಗಳಂಥ ಬರೆಹಗಳನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರರೂ ಬರೆದಿದ್ದರು. `ನಮ್ಮ ಹಳ್ಳಿಯ ಚಿತ್ರಗಳು’ ಅವರ ಅಂಥ ಒಂದು ಕೃತಿ. ಅದರಲ್ಲಿಯ `ಸಾಲು ಸಾಬಿ’ ಎಂಬ ಒಂದು ಪಾಠ ನಮಗೆ ಹೈಸ್ಕೂಲಿನಲ್ಲಿ ಇತ್ತು. ಹಾಗೆಯೇ ಎಚ್‌.ಎಲ್‌.ನಾಗೇಗೌಡರ `ನನ್ನೂರು’ ಕೃತಿಯಲ್ಲೂ ಇಂಥ ವ್ಯಕ್ತಿಗಳ ಪರಿಚಯ ನಮಗಾಗುತ್ತದೆ. ಆದರೆ ಸತ್ಯನಾರಾಯಣ ಅವರ ಈ ಕೃತಿಯ ವಿಶೇಷವೆಂದರೆ ಅವರು ಇಂಥ ಸ್ವಭಾವಗಳ ಮೀಮಾಂಸೆಯನ್ನು ನಡೆಸುವುದು.

    ಅದಕ್ಕೊಂದು ಉದಾಹರಣೆ ಇಲ್ಲಿದೆ. `ಮಿತಿ ಮೀರಿದವರು’ ಎಂಬ ಬರೆಹದಲ್ಲಿ ಮಿತಿ ಮೀರುವಿಕೆಯನ್ನು ಅವರು ಹೀಗೆ ಹಿಂಜಿ ನೋಡುತ್ತಾರೆ. `ಯವ್ವನದಲ್ಲಿ ಉಕ್ಕುವ ಚೈತನ್ಯ ಕಾಣಿಸಿಕೊಳ್ಳುವ ಒಂದು ಬಗೆಯೆಂದರೆ ಮಿತಿಯನ್ನು ಮೀರಿ ಮಾತನಾಡುವುದು. ಮಾತನಾಡುವುದು ಮಾತ್ರವಲ್ಲ, ಕೃತಿಯಲ್ಲಿ, ಕ್ರಿಯೆಯಯಲ್ಲಿ ಕೂಡ ಮಿತಿಯನ್ನು ಮೀರುವುದು, ದಾಟುವುದು. ಆದರೆ ಉಕ್ಕುವ ಚೈತನ್ಯವನ್ನು ಪಳಗಿಸಬೇಕಕಾಗುತ್ತದೆ, ಮಾಗಿಸಬೇಕಾಗುತ್ತದೆ. ಒಂದು ಹದಕ್ಕೆ ತರಬೇಕಾಗುತ್ತದೆ’ ಎಂದು ಈ ವಿದ್ಯಮಾನಕ್ಕೆ ಮನಶ್ಶಾಸ್ತ್ರೀಯವಾದ ಆಯಾಮವನ್ನು ಗುರುತಿಸುತ್ತ ಅದನ್ನು ಸಾಹಿತ್ಯದ ಪರಿಭಾಷೆಯಲ್ಲಿ ಅರ್ಥೈಸಲು ಯತ್ನಿಸುತ್ತಾರೆ. `ಕಲೆ, ಸಾಹಿತ್ಯದಲ್ಲಿ ಪಳಗುವುದು, ಮಾಗುವುದು ಎಂದರೆ, ಮಿತಿ ಮೀರಿ ಉಕ್ಕುತ್ತಿರುವ ಚೈತನ್ಯದ ರಭಸವನ್ನು ಒಂದು ಪ್ರಶಾಂತಿಯ, ಅರ್ಥವಂತಿಕೆ ನೆಲೆಗೆ ತರುವುದೇ ಆಗಿರುತ್ತದೆ’ ಎಂದು ಹೇಳುತ್ತಾರೆ. ಇದಕ್ಕೆ ಉದಾಹರಣೆಯಾಗಿ ಬೇಂದ್ರೆಯವರು ಅಡಿಗರ ಮೊದಲ ಕವನ ಸಂಕಲನಕ್ಕೆ ಬರೆದ ಮುನ್ನುಡಿ ಮತ್ತು ಸ್ವತಃ ಅಡಿಗರು ಲಂಕೇಶರ ಕಥಾ ಸಂಕಲನಕ್ಕೆ ಬರೆದ ಮುನ್ನುಡಿಗಳನ್ನು ಉದಾಹರಿಸುತ್ತಾರೆ. ಈ ಮಿತಿಮೀರುವಿಕೆಯನ್ನು ಸ್ತ್ರೀವಾದಿ ನೆಲೆಯಲ್ಲಿ ನೋಡುತ್ತ ಲಕ್ಷ್ಮಣ ರೇಖೆ ಎಂಬ ಪದ ಹುಟ್ಟಿದ್ದೇ ಹೆಂಗಸಾದ ಸೀತಾ ಮಾತೆಯ ಸಂದರ್ಭದಲ್ಲಿ. ದ್ರೌಪದಿಯೇ ವಾಸಿ. ಗಂಡಸರ  ಮಿತಿಯನ್ನು ಆಗಾಗ್ಗೆ ಪ್ರಶ್ನಿಸುತ್ತಿದ್ದಳು. ತನ್ನ ಮಿತಿಗಳನು ಮೀರುತ್ತಿದ್ದಳು. ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದಳು ಎಂದು ವ್ಯಾಖ್ಯಾನಿಸುತ್ತ ನಮ್ಮ ಮಹಾಕಾವ್ಯಗಳನ್ನು ನೋಡುವುದಕ್ಕೆ ಒಂದು ಹೊಸ ದೃಷ್ಟಿಕೋನವನ್ನು ಒದಗಿಸಿದ್ದಾರೆ. ಈ ಕಾರಣಕ್ಕಾಗಿಯೇ ಇವು ಲಘು ಬರೆಹಗಳು ಎನಿಸಿಕೊಂಡೂ ಓದುಗರನ್ನು ಗಾಢವಾದ ಚಿಂತನೆಗೆ ದೂಡುತ್ತವೆ. ಅದು ಇಲ್ಲಿಯ ಬರೆಹಗಳ ಗುರುತ್ವದ ಲಕ್ಷಣವಾಗಿದೆ.

    `ಸದಾ ಸರಿಯಪ್ಪಂದಿರು’ ಬರೆಹದಲ್ಲಿ, … ತಪ್ಪು ಮಾಡಬಾರದು ಎಂಬ ಆರೋಗ್ಯಕರವಾದ ಧೋರಣೆ, ತಪ್ಪು ಮಾಡಲೇ ಬಾರದು ಎಂಬ ಹಠವಾಗಿ, ನಂತರ ತಪ್ಪು ಮಾಡುವುದೇ ಇಲ್ಲ ಎಂಬ ನೈತಿಕ ಗರ್ವವಾಗಿ ಪರಿವರ್ತನೆ ಹೊಂದುತ್ತದೆ. ನೈತಿಕ ಗರ್ವದ ಚೂಪಾದ ಮೊನೆಯಿಂದ ಸದಾ ನಮ್ಮನ್ನು ತಿವಿಯುತ್ತಲೇ ಇರುತ್ತಾರೆ ಎಂದು ಹೇಳುತ್ತ ಸದಾ ಸರಿಯಪ್ಪಂದಿರುಗಳಿಲ್ಲದ ನೆರೆ ಹೊರೆಗೆ, ಕಛೇರಿ, ಕಾರ್ಖಾನೆಗಳಿಗೆ, ನೃತ್ಯಶಾಲೆ, ಕ್ರೀಡಾಂಗಣಗಳಿಗೆ, ಸಮಾಜ ದೇಶಗಳಿಗೆ ಹಾತೊರೆಯುತ್ತೇನೆ ಎಂದು ಹೇಳುತ್ತ ಮುಗಿಸುತ್ತಾರೆ. ಇದನ್ನು ಓದುತ್ತ ಹೋದ ಹಾಗೆ ನಮ್ಮ ಬದುಕಿನಲ್ಲೂ ಎದುರಾದ ಇಂಥ ಸರಿಯಪ್ಪಂದಿರುಗಳು ನೆನಪಾಗುತ್ತಾರೆ. ಈ ಕಾರಣಕ್ಕೆ ಬರೆಹದೊಂದಿದೆ ಓದುಗನಿಗೆ ತಾದಾತ್ಮ್ಯ ಸಾಧ್ಯವಾಗುತ್ತದೆ. ಉತ್ತಮ ಬರೆಹವೊಂದರ ಮೂಲ ಲಕ್ಷಣಗಳಲ್ಲಿ ಇದೂ ಒಂದು. `ನಾವು ಕಾಣುವುದು ಕೂಡ ಬಯಸಿದ್ದನ್ನು ಮಾತ್ರವೋ? ಗೊತ್ತಿಲ್ಲ!’ (ಪುಟ148) ಎಂಬ ಮಾತು ಇಲ್ಲಿಯ ಬರೆಹಗಳ ಮಿತಿಯನ್ನೂ ಹೇಳುತ್ತದೆ.

    ಇಲ್ಲಿಯ ಬರೆಹಗಳು ಪ್ರಸ್ತಾಪಿಸಲ್ಪಟ್ಟ ವ್ಯಕ್ತಿಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಈ ವ್ಯಕ್ತಿಗಳು, ಅವರ ಸ್ವಭಾವಗಳು ಕೆ.ಸತ್ಯನಾರಾಯಣ ಎಂಬ ವ್ಯಕ್ತಿಯ ಒಳಗಿದ್ದ ಒಬ್ಬ ಲೇಖಕನನ್ನು ಹೇಗೆ ರೂಪಿಸಿದವು, ಮಾಗಿಸಿದವು ಎಂಬುದನ್ನೂ ನಾವು ಕಂಡುಕೊಳ್ಳಬಹುದು. ಇತರರ ಸ್ವಭಾವಚಿತ್ರಗಳನ್ನು ಬರೆಯುತ್ತ ಲೇಖಕರು ತಮ್ಮ ಸ್ವಭಾವಚಿತ್ರವನ್ನೂ ಈ ಕೃತಿಯ ಒಡಲಲ್ಲಿ ಅಯಾಚಿತವಾಗಿ ನಮಗೆ ಒದಗಿಸಿದ್ದಾರೆ. ಕಸ್ತೂರಿ ಸುಬ್ಬರಾಯರ ಕುರಿತ ಬರೆಹದಲ್ಲಿ, ಶಾಲೆಯ ದಿನಗಳಲ್ಲಿ ಶಿಕ್ಷಕ ಸುಬ್ಬರಾಯರು ಕಸ್ತೂರಿ ಪತ್ರಿಕೆಯನ್ನು ಓದಿಸುತ್ತಿದ್ದ ರೀತಿ, ಆ ಮೂಲಕ ಓದಿನ ಗೀಳನ್ನು ಹಚ್ಚಿದ್ದು ಎಲ್ಲವನ್ನೂ ಹೇಳುತ್ತ, `ಮುಂದೆ ನನ್ನ ಬದುಕಿನಲ್ಲಿ ಯಾವ ರೂಪದಲ್ಲಿ ಎಲ್ಲಿ ಪ್ರಕಟವಾಗಬಲ್ಲರು ಎಂದು ನಾನಾದರೂ ಹೇಗೆ ಹೇಳಲಿ, ಅವರು ಯಾವಾಗಲೂ ಒಳಗೇ ಇದ್ದಾರೆ, ಇರುತ್ತಾರೆ. ಸಮಯ ಸಂದರ್ಭ ನೋಡಿ ಮುನ್ನೆಲೆಗೆ ಬಂದು ಪ್ರಕಟವಾಗಿ ಆಶೀರ್ವದಿಸುತ್ತಾರೆ’ ಎಂದು ಹೇಳಿದ್ದಾರೆ. `ತುದಿವಾದಿಗಳು’ ಬರೆಹದಲ್ಲಿ ಬರುವ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಜವಾನರಾಗಿದ್ದ ಚೌಡಪ್ಪನವರು ಅಲ್ಲಿಗೆ ಓದಲು ಬರುತ್ತಿದ್ದ ಲೇಖಕರಿಗೆ ಪತ್ರಿಕೆಗಳನ್ನು, ಸರ್ಕಾರಿ ಪುಸ್ತಕಗಳನ್ನು ತಂದು ಮುಂದಿಡುತ್ತಿದ್ದರು. ಈ ಕುರಿತು ಲೇಖಕರು ಹೇಳುವುದು ಹೀಗೆ.. `ಒಂದೇ ಸಂಗತಿಯನ್ನು ಒಂದೇ ಕಾಲದಲ್ಲಿ ಬೇರೆಬೇರೆ ರೀತಿಯಲ್ಲಿ ಬರೆಯುತ್ತಿದ್ದರು.. ಒಂದೇ ಸಂಗತಿಯನ್ನು ಒಂದೇ ಕಾಲದಲ್ಲಿ ಬೇರೆಬೇರೆ ರೀತಿಯಲ್ಲಿ ನೋಡಬಹುದು ಎಂಬ ಮುಖ್ಯವಾದ ಪಾಠವನ್ನು ತಮಗೆ ಗೊತ್ತಿಲ್ಲದೆಯೇ ಮಾನ್ಯರು ನನಗೆ ಹೇಳಿಕೊಟ್ಟಿದ್ದರು.’ ನಿಜ, ಈ ನಿಟ್ಟಿನಲ್ಲಿ ನೋಡಿದಾಗ ಇದು ಲೇಖಕರ ಆತ್ಮಕಥನದ ಮುಂದುವರಿದ ಭಾಗವಾಗಿಯೂ ಭಾಸವಾಗುವುದು.

    `ಶನಿವಾರದ ಸ್ವರ್ಣಾಂಬ’ ಗ್ರಾಮೀಣ ಭಾಗದ ಒಂದು ವಿಫಲ ದಾಂಪತ್ಯವನ್ನು ಹೃದಯ ಮಿಡಿಯುವ ಹಾಗೆ ಹೇಳುತ್ತದೆ. ಒಂದು ಕತೆ ಎಂಬಷ್ಟು ಇದು ಸಶಕ್ತವಾಗಿದೆ. `ಶನಿವಾರದ ಸ್ವರ್ಣಾಂಬ, ಬಂದನೇನಮ್ಮ ಬಸಪ್ಪ, ಬಂದನೇನಮ್ಮ ಸರದಾರ ಅಂತ ರಾಗವಾಗಿ ಕಿರುಚಿ, ಕಿಚಾಯಿಸಿ, ಓಡಿಹೋಗುತ್ತಿದ್ದೆವು. ನಮ್ಮ ಕಿಚಾಯಿಸುವಿಕೆ ಕೂಡ ದಣಿಯಿತು, ಕ್ರಮೇಣ ನಿಂತುಹೋಯಿತು’ ಎನ್ನುವ ಸಾಲುಗಳು ಎದೆಯ ಮೇಲೆ ಮಂಜುಗಡ್ಡೆಯನ್ನು ಇರಿಸಿದಹಾಗೆ ಆಗುತ್ತದೆ. ಕೆಲವು ಬರೆಹಗಳು ಇನ್ನೂ ಇದೆಯೇನೋ ಎನ್ನುವಾಗಲೇ ಮುಗಿದುಬಿಟ್ಟಿವೆ. ಲೇಖಕರು ಈ ಕೃತಿಯ ಕುರಿತು, `ಈ ಬರವಣಿಗೆಗಳು ವ್ಯಕ್ತಿಚಿತ್ರಗಳಲ್ಲ, ಪಾತ್ರಗಳಿದ್ದರೂ ಕತೆಯಲ್ಲ. ನೆನಪಿನ ಲಹರಿ, ಸನ್ನಿವೇಶಗಳಿದ್ದರೂ ಪ್ರಬಂಧವಲ್ಲ. ಆದರೆ ಬೇಡವೆಂದರೂ ಕತೆ ಮತ್ತು ಪ್ರಬಂಧದ ಅಂಶಗಳು ನನ್ನ ಎಲ್ಲ ಬರವಣಿಗೆಯಲ್ಲೂ ಬಂದೇ ಬರುತ್ತದೆ’ ಎಂದು ಸ್ಪಷ್ಟತೆಯನ್ನು ನೀಡಿದ್ದಾರೆ.

    ಇಲ್ಲಿಯ ಬರೆಹಗಳಲ್ಲಿರುವ ವ್ಯಕ್ತಿಗಳು ನಿಮಗೂ ಎದುರಾಗಬಹುದು. ನೀವು ನೋಡಿರಲೂ ಬಹುದು. ಇಲ್ಲಿಯ ಪಾತ್ರಗಳು ಯಾವುದೂ ಅಸಂಗತ ಎಂದು ತೋರುವುದಿಲ್ಲ. ನಮ್ಮ ಅಕ್ಕಪಕ್ಕದಲ್ಲಿ ಅಡ್ಡಾಡುತ್ತಿದ್ದವರನ್ನು ಪುಟ್ಟದೊಂದು ಟಿಪ್ಪಣಿಯೊಂದಿಗೆ ಸತ್ಯನಾರಾಯಣ ಅವರು ನಮ್ಮ ಮುಂದೆ ನಿಲ್ಲಿಸಿದ್ದಾರೆ. ಆ ಕಾರಣಕ್ಕೆ ಪುಟಪುಟಗಳಲ್ಲಿಯೂ ಜೀವಂತಿಕೆಯನ್ನು ನಾವು ಗುರುತಿಸಬಹುದು. ಇದೇ ಹುಮ್ಮಸ್ಸಿನಲ್ಲಿ ಅವರು ಇನ್ನಷ್ಟು ವೈವಿಧ್ಯಮಯ ಕೃತಿಗಳನ್ನು ನೀಡಲಿ ಎಂದು ಹಾರೈಸೋಣ.

    ಇದನ್ನೂ ಓದಿ :ಶಾಸಕರ ಸ್ವಭಾವ


    ಕನ್ನಡದ ಪ್ರಮುಖ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ 1954ರ ಏಪ್ರಿಲ್‌ 21ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸುವರ್ಣ ಪದಕದೊಂದಿಗೆ ಪದವಿ ಪಡೆದು, ಅಲ್ಲಿಯೇ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್‌ ರೆವಿನ್ಯೂ ಸರ್ವಿಸ್‌ಗೆ ಸೇರಿದ ಅವರು ಆದಾಯ ತೆರಿಗೆ ಇಲಾಖೆಯಿಂದ ನಿವೃತ್ತರಾಗುವಾಗ ಕರ್ನಾಟಕ ಮತ್ತು ಗೋವಾ ವಲಯದ ಮುಖ್ಯ ಆಯುಕ್ತರಾಗಿದ್ದರು. ಸಣ್ಣಕತೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣ ಬರೆಹ, ವಿಮರ್ಶೆ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಬಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯ ಅವರಿಗೆ 2013ರಲ್ಲಿ ಗೌರವ ಡಾಕ್ಟರೇಟ್‌ ನೀಡಿದೆ.


    error: Content is protected !!