23.6 C
Karnataka
Thursday, May 21, 2026
    Home Blog Page 163

    ಆಪತ್ಕಾಲದಲ್ಲಿ ನೆರವಿಗೆ ಬರುವ ಆರೋಗ್ಯ ವಿಮೆ

    ಜೀವನದಲ್ಲಿ ಫೈನಾನ್ಷಿಯಲ್ ಪ್ಲಾನಿಂಗ್ ಎನ್ನುವುದು ತುಂಬಾ ಮುಖ್ಯ. ದುಡಿಯುವ ಸಮಯದಲ್ಲಿ ಇಂಥ ಪ್ಲಾನಿಂಗ್ ಇದ್ದರೆ ದುಡಿಮೆ ಇಲ್ಲದ ಸಮಯದಲ್ಲಿ ಆತಂಕದ ಸ್ಥಿತಿ ಇರುವುದಿಲ್ಲ. ಕನ್ನಡಿಗರಿಗೆ ಹಲವಾರು ವಿಷಯಗಳನ್ನು ಸರಳ ಭಾಷೆಯಲ್ಲಿ ತಿಳಿಸಿಕೊಡುತ್ತಿರುವ ಕನ್ನಡಪ್ರೆಸ್ .ಕಾಮ್ ಪರ್ಸನಲ್ ಫೈನಾನ್ಸ್ ಕುರಿತ ಸರಣಿ ಲೇಖನ ಮಾಲೆ ಆರಂಭಿಸುತ್ತಿದೆ. ಕೋವಿಡ್ ಕಾಲದಲ್ಲಿ ಅನಿವಾರ್ಯವಾಗಿರುವ ಆರೋಗ್ಯ ವಿಮೆಯ ಮಾಹಿತಿಯೊಂದಿಗೆ ಸರಣಿ ಆರಂಭ.

    ಇಂದಿನ ದಿನಗಳಲ್ಲಿ ಆರೋಗ್ಯ ಸೇವೆ ತುಂಬಾ ದುಬಾರಿಯಾಗುತ್ತಿದೆ.  ಸರಕಾರಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿದ್ದರೂ ಖಾಸಗಿ ಆಸ್ಪತ್ರೆಗಳ ಮೇಲಿನ ಅವಲಂಬನೆ  ತಪ್ಪಿಲ್ಲ. ವಿಶ್ವ ದರ್ಜೆಯ  ಆಸ್ಪತ್ರೆಗಳು ನಮ್ಮ ರಾಜ್ಯದಲ್ಲಿ ಆರಂಭವಾದ ಮೇಲಂತೂ  ಹುಷಾರು ತಪ್ಪಿದಾಗ ಅಲ್ಲಿ ಚಿಕಿತ್ಸೆ ಪಡೆದರೆ ರೋಗ ಗುಣಮುಖವಾಗಬಹುದೆಂಬ ನಂಬಿಕೆ. ಆದರೆ ಅಲ್ಲಿನ ದುಬಾರಿ ಬಿಲ್ಲು ಅಂಥ ಆಸ್ಪತ್ರೆಗಳತ್ತ ನೋಡದಂತೆ ಮಾಡುತ್ತದೆ. ಹೀಗಾಗಿ ಮಧ್ಯಮ ವರ್ಗದವರು ಮಧ್ಯಮ ದರ್ಜೆಯ ನರ್ಸಿಂಗ್ ಹೋಮ್ ಅಥವಾ ಸರಕಾರಿ ಆಸ್ಪತ್ರೆಯ ಆಸರೆ ಪಡೆಯುತ್ತಾರೆ. ಇಂಥ ಸಮಯದಲ್ಲಿ ಅವರ ನೆರವಿಗೆ ಬರುವುದೇ ಆರೋಗ್ಯ ವಿಮೆ.

    ಪಾಶ್ಚಿಮಾತ್ಯ ದೇಶಗಳಲ್ಲಿ ಆರೋಗ್ಯ ವಿಮೆ ಇಲ್ಲದೆ ಬದುಕು ಸಾಗಿಸುವುದೆ ಕಷ್ಟ. ಅಲ್ಲಿನ ದುಬಾರಿ ವೈದ್ಯಕೀಯ ಬಿಲ್ಲನ್ನು ವಿಮೆ ಇಲ್ಲದೆ ಭರಿಸುವುದು ಮಧ್ಯಮ ವರ್ಗದವರಿಗೆ ಆಸಾಧ್ಯ. ಭಾರತೀಯರಿಗೆ ಆರೋಗ್ಯ ವಿಮೆ ಅಂದರೆ ಹೆಲ್ತ್ ಇನ್ಶುರೆನ್ಸ್ ಬಗ್ಗೆ ಅಷ್ಟಾಗಿ  ಅರಿವಿಲ್ಲ. ಎಂದೋ ಬರಬಹುದಾದ  ರೋಗಕ್ಕೆ ಈಗಲೇ ಏಕೆ ವಿಮೆ ಮಾಡಿಸಬೇಕು. ಬಂದಾಗ ನೋಡಿಕೊಳ್ಳೋಣ ಎಂಬ ಭಾವನೆ. ಆದರೆ ಸಂಕಟ ಬಂದಾಗ ವೆಂಕಟರಮಣನೆ ಗತಿ. ಆಸ್ಪತ್ರೆ ಬಿಲ್ ತುಂಬಲು ಮೇಲೂ ಕೆಳಗೂ ನೋಡಬೇಕಾದ ಪರಿಸ್ಥಿತಿ. ಅಂಥ ಸ್ಥಿತಿ ಬರದಂತೆ ಇರಲು ಈಗಲೇ ವಿಮೆ ಪಡೆದರೆ ಕಷ್ಟ ಕಾಲದಲ್ಲಿ ನೆಮ್ಮದಿಯಿಂದ ಇರಬಹುದು.

    ವಿಮೆ ಪಡೆಯುವ ಮುನ್ನ ಗಮನಿಸಬೇಕಾದ ಅಂಶಗಳು

    ಮೊದಲು ನಿಮ್ಮ ಕುಟುಂಬದವರ ಸಂಖ್ಯೆ ,ವಯಸ್ಸು ಮತ್ತು ಅದಕ್ಕೆ ತಗುಲ ಬೇಕಾದ ವಿಮಾ ಕಂತನ್ನು ಲೆಕ್ಕ ಹಾಕಬೇಕು. ವಿಮಾ ಕಂತನ್ನು ನಿಮ್ಮ ಸಂಪಾದನೆಗೆ ತಕ್ಕಂತೆ ನಿರ್ಧರಿಸಿಕೊಳ್ಳಬೇಕು. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕಾಯಿಲೆ ಬೀಳುವ ಸಾಧ್ಯತೆ ತೀರಾ ವಿರಳವಾಗಿರುವುದರಿಂದ 2 ಲಕ್ಷ ದಿಂದ 4 ಲಕ್ಷ ರೂಪಾಯಿಯಷ್ಟು ವೆಚ್ಚವನ್ನು ಭರಿಸಲು ಅನುಕೂಲವಾಗುವಂಥ ಪಾಲಿಸಿ ಆಯ್ಕೆ ಮಾಡಿಕೊಳ್ಳಬಹುದು.ಆಗ ಇಡೀ ಕುಟುಂಬದ ವಿಮೆಗೆ ವರ್ಷಕ್ಕೆ 8 ರಿಂದ 10 ಸಾವಿರ ರೂ .ಗಳಷ್ಟು ವಿಮಾ ಕಂತು ಬರಬಹುದು.

    ವಿಮೆ ಹೊಂದುವದರಿಂದ ಲಾಭಗಳು

    1 ಆರೋಗ್ಯವೇ ಭಾಗ್ಯವಾಗುವುದರಿಂದ ದುರದೃಷ್ಟವಶಾತ್ ಆರೋಗ್ಯ ಏರು ಪೇರಾದರೆ ವಿಮೆ ಹೊಂದಿದ್ದರೆ ಉತ್ತಮ ಆಸ್ಪತ್ರೆಯಲ್ಲಿ ಗುಣ ಮಟ್ಟದ ಚಿಕಿತ್ಸೆ ಪಡೆಯಲು ಸಾಧ್ಯ. ಆಪತ್ತಿನ ಸಂದರ್ಭದಲ್ಲಿ ಇನ್ನೊಬ್ಬರ ಮುಂದೆ ಕೈ ಚಾಚುವುದು ತಪ್ಪುತ್ತದೆ.

    2 ತುರ್ತು ಸಂದರ್ಭದಲ್ಲಿ ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದರೆ ನಗದು ರಹಿತ ಚಿಕಿತ್ಸೆ ದೊರೆಯುತ್ತದೆ. ಹೀಗಾಗಿ ಆಂತಕ ತಪ್ಪುತ್ತದೆ.

    3 ಕೆಲವು ಪಾಲಿಸಿಗಳು ವರ್ಷಕೊಮ್ಮೆ ಉಚಿತ ಆರೋಗ್ಯ ತಪಾಸಣೆಯ ವೆಚ್ಚವನ್ನು ಮರುಪಾವತಿಸುವ ಅವಕಾಶವನ್ನು ಕಲ್ಪಿಸುತ್ತದೆ. ಹೀಗಾಗಿ  ಯಾವುದೆ ಹೆಚ್ಚಿನ  ಖರ್ಚಿಲ್ಲದೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಹೆಲ್ದೀ ಜೀವನ ನಡೆಸಬಹುದು.

    4 ಎಲ್ಲಾ ವಿಮೆ ಗಳಲ್ಲಿರುವುಂತೆ ಇಲ್ಲೂ ನೋ ಕ್ಲೇಮ್ ಬೋನಸ್ ಇರುತ್ತದೆ. ಹೀಗಾಗಿ ಈ ಮೊತ್ತದಿಂದ   ವರ್ಷದಿಂದ ವರ್ಷಕ್ಕೆ ವಿಮೆ ಮೊತ್ತವನ್ನು ಹೆಚ್ಚಿಸಿಕೊಳ್ಳಬಹುದು.

    5 ಕೆಲವು ಪಾಲಿಸಿಗಳು ಆಸ್ಪತ್ರೆಯ ಖರ್ಚಿನ ಜೊತೆ 2000ರೂ ವರೆಗೆ ಡೈಲಿ ಹಾಸ್ಪಿಟಲ್ ಖರ್ಚನ್ನು ನೀಡುತ್ತವೆ.ಇದು ಆಸ್ಪತ್ರೆ ವಾಸದ ಸಮಯದಲ್ಲಿ ಕೆಲವು ಖರ್ಚುಗಳನ್ನು ನಿಭಾಯಿಸಲು ಅನುಕೂಲ ಮಾಡಿಕೊಡುತ್ತವೆ.

    6 ಕೆಲವು ಪಾಲಿಸಿಗಳು ಅಂಗಾಂಗ ಕಸಿಯ ವೆಚ್ಚವನ್ನು ಕೂಡ ಭರಿಸುತ್ತವೆ.

    7  ಇದರ ಜೊತೆಗೆ ನೀವು ಕಟ್ಟುವ ವಿಮಾ ಮೊತ್ತಕ್ಕೆ ತೆರಿಗೆ ವಿನಾಯ್ತಿಯೂ ಇದೆ.

    ಹೀಗಾಗಿ ಸಂಕಟ ಬಂದಾಗ ಆತಂಕ ಪಡುವುದರ ಬದಲು ವಿಮೆ ಹೊಂದುವುದು ಜಾಣತನವಾಗುತ್ತದೆ.

    (ಮುಂದಿನ ಕಂತಿನಲ್ಲಿ ನಾನಾ ಆರೋಗ್ಯ ಪಾಲಿಸಿಗಳ ಬಗ್ಗೆ ಅರಿಯೋಣ)

    ಅಯೋಧ್ಯೆ ಮತ್ತು ಸೋಮನಾಥ ಮಂದಿರಗಳ ಸುತ್ತ

    ಸ್ವಾತಂತ್ರ್ಯೋತ್ತರ ಭಾರತದಲ್ಲಿ ಎರಡು ಮಂದಿರ ವಿವಾದಗಳು ಚಾರಿತ್ರಿಕ ಮಹತ್ವ ಪಡೆದಿವೆ. ಒಂದು ಸೋಮನಾಥ ದೇವಾಲಯದ ಪುನರುಜ್ಜೀವನ, ಇನ್ನೊಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ. ಈ ಎರಡನ್ನೂ ದೇಶವ್ಯಾಪಿ ಹಿಂದೂಗಳ ಆಸ್ಮಿತೆಯ ಸಂಕೇತವಾಗಿ ಪ್ರಚುರ ಪಡಿಸಿದ ಇಬ್ಬರು ನಾಯಕರು ಕೂಡ ಉಪ ಪ್ರಧಾನಿಗಳಾಗಿದ್ದವರು ಎಂಬುದು ಇಲ್ಲಿ ವಿಶೇಷ. ಒಬ್ಬರು ಸರ್ದಾರ್ ವಲ್ಲಭಭಾಯಿ ಪಟೇಲ್, ಇನ್ನೊಬ್ಬರು ಎಲ್. ಕೆ. ಅಡ್ವಾಣಿ.

    ಸೋಮನಾಥ ದೇಗುಲ ಪುನರುತ್ಥಾನ ಕಾರ್ಯ ಪೂರ್ಣಗೊಳ್ಳುವ ಮೊದಲೇ ಪಟೇಲ್ ನಿಧನರಾದರು. ಈಗ ರಾಮ ಮಂದಿರಕ್ಕೆ ಶಿಲಾನ್ಯಾಸ ಆಗುತ್ತಿರುವ ಸಂದರ್ಭದಲ್ಲಿ ರಥಯಾತ್ರೆ ಖ್ಯಾತಿಯ ಎಲ್. ಕೆ. ಅಡ್ವಾಣಿ ಒಂದು ರೀತಿಯಲ್ಲಿ ರಾಜಕೀಯ ಸನ್ಯಾಸದಲ್ಲಿದ್ದಾರೆ. ಗುಜರಾತಿನ ಸೌರಾಷ್ಟ್ರ ವಲಯದ ಸೋಮನಾಥ ದೇವಾಲಯ. ಘಜ್ನಿ ಮಹಮ್ಮದ್ ನಿಂದ ಏಳಕ್ಕೂ ಹೆಚ್ಚು ಬಾರಿ ಸೂರೆಗೊಂಡಿತ್ತು. ಸ್ವಾತಂತ್ರ್ಯ ಬಂದ ಬೆನ್ನಲ್ಲೇ ನಡೆದ ರಕ್ತಸಿಕ್ತ ಇತಿಹಾಸ, ಸಹಜವಾಗಿಯೇ ಹಿಂದೂಗಳಲ್ಲಿ ಸಾಂಸ್ಕೃತಿಕ ರಾಷ್ಟ್ರೀಯತೆ ಪರಿಕಲ್ಪನೆಯನ್ನು ಬಲಗೊಳಿಸಿತು. ಆಗ ಅವರ ಮನಸ್ಸಿನಲ್ಲಿ ಬಂದಿದ್ದೇ ಸೋಮನಾಥ ದೇವಾಲಯ.ಇದನ್ನು ಮನಗಂಡ ಸರ್ದಾರ್ ಪಟೇಲರು, ಸೋಮನಾಥ ದೇವಾಲಯ ಪುನರುತ್ಥಾನಕ್ಕೆ ಕಟಿಬದ್ಧರಾಗಿ ನಿಂತರು.

    ಜಾತ್ಯತೀತರೆಂಬ ಕರೆಸಿಕೊಳ್ಳುವ ತವಕದಲ್ಲಿದ್ದ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನೇ ಎದುರು ಹಾಕಿಕೊಂಡು ಸೋಮನಾಥ ದೇವಾಲಯವನ್ನು ಪುನರ್ ನಿರ್ಮಿಸಲು ಮುಂದಾದರು. ದೇವಾಲಯವಿದ್ದ ಜುನಾಗಢ ಪ್ರಾಂತ್ಯವನ್ನು ಭಾರತದ ಜತೆಗೆ ವಿಲೀನಗೊಳಿಸುವ ಮೂಲಕ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟ ಪಟೇಲ್, 1947 ನವೆಂಬರ್ 9ರಂದು ಅಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸೋಮನಾಥ ದೇವಾಲಯ ಮರು ನಿರ್ಮಾಣ ಮತ್ತು ಜ್ಯೋತಿರ್ಲಿಂಗದ ಮರು ಪ್ರತಿಷ್ಠಾಪನೆಯ ಘೋಷಣೆ ಮಾಡಿದರು.

    ಆಗ ನೆಹರು ಸಂಪುಟ ಸದಸ್ಯರಲ್ಲಿ ಕೆಲವರು ಅದನ್ನು ರಾಷ್ಟ್ರೀಯ ಸ್ಮಾರಕವಾಗಿ ಮಾತ್ರ ಘೋಷಿಸಬೇಕು ಎಂದು ಸಲಹೆ ನೀಡಿದರಾದರೂ, ಪಟೇಲ್ ದೃಢಮನಸ್ಕರಾಗಿ ದೇವಾಲಯ ಮರು ನಿರ್ಮಾಣ ಶತಸ್ಸಿದ್ಧ ಎಂದು ಹೇಳಿದರು. ಅಂತಿಮವಾಗಿ ನೆಹರು ಸಚಿವ ಸಂಪುಟದ ಅನುಮತಿಯನ್ನೂ ಇದಕ್ಕೆ ಪಡೆಯುವಲ್ಲಿ ಸಮರ್ಥರಾದ ಪಟೇಲ್, ಗಾಂಧೀಜಿಯವರನ್ನೂ ಮನವೊಲಿಸಿರುವುದು ಈಗ ಇತಿಹಾಸ. ಆದರೆ 1950ರಲ್ಲಿ ಪಟೇಲ್ ನಿಧನರಾದರು. ಈ ಹಂತದಲ್ಲಿ ಚಿಂತಕರ ಚಾವಡಿ ಎಂದು ಕರೆಸಿಕೊಳ್ಳುವವರಿಂದ ಒಂದಿಷ್ಟು ವಿರೋಧ ಎದುರಾಯಿತು. ಆದರೆ, ಪಟೇಲ್ ಕನಸನ್ನು ಕೇಂದ್ರ ಸಚಿವರಾಗಿದ್ದ ಕೆ. ಎಂ. ಮುನ್ಶಿಯವರು ಸಾಕಾರಗೊಳಿಸಲು ದೃಢ ಸಂಕಲ್ಪ ಮಾಡಿ ಅದರಲ್ಲಿ ಯಶಸ್ವಿಯಾದರು.

    ಈಗ ಎಲ್. ಕೆ. ಅಡ್ವಾಣಿಯವರ ವಿಷಯಕ್ಕೆ ಬರೋಣ. ಸೋಮನಾಥ ದೇವಾಲಯದ ಮಾದರಿಯಲ್ಲಿ ಈ ಪ್ರಕರಣವಲ್ಲ. ಬದಲಾಗಿ ನ್ಯಾಯಾಲಯದ ಮೆಟ್ಟಿಲೇರಿದ ವಿವಾದ ಇದು. ಆದಾಗ್ಯೂ, ರಾಮ ರಥಯಾತ್ರೆಯ ಮೂಲಕ ದೇಶಾದ್ಯಂತ ಸಂಚಲನ ಮೂಡಿಸುವಲ್ಲಿ ಎಲ್. ಕೆ. ಅಡ್ವಾಣಿ ಯಶಸ್ವಿಯಾದರು. ಪ್ರಖರ ಭಾಷಣಗಳ ಮೂಲಕ ಜನರಲ್ಲಿ ರಾಮ ಭಕ್ತಿಯನ್ನು ಉದ್ಧೀಪನಗೊಳಿಸಿ ಅವರನ್ನು ರಾಮ ಮಂದಿರ ನಿರ್ಮಾಣದ ಆಂದೋಲನದಲ್ಲಿ ಭಾಗಿಯಾಗುವಂತೆ ಮಾಡಿದರು. ಈಗೇನೋ ರಾಮ ಮಂದಿರ ನಿರ್ಮಾಣ ಸಾಕಾರವಾಗುತ್ತಿದೆ. ತಮ್ಮ ಮೈ ಲೈಫ್ ಮೈ ನೇಶನ್ ಪುಸ್ತಕದಲ್ಲಿ ಅವರು ಬರೆದಂತೆ ಸೋಮನಾಥ ದೇವಾಲಯದ ಪುನರುತ್ಥಾನದ ರೀತಿಯಲ್ಲೇ ಅಯೋಧ್ಯೆಯು ಹಿಂದೂಗಳ ಆಸ್ಮಿತೆಯ ಬಹುದೊಡ್ಡ ಸಂಕೇತ. ಇದಕ್ಕಾಗಿಯೇ ರಾಮ ರಥಯಾತ್ರೆಯನ್ನು ಸೋಮನಾಥದಿಂದಲೇ ಆರಂಭಿಸಿದೆ. ಆದರೆ ಒಂದು ಕಾಲದ ಫೈರ್ ಬ್ರಾಂಡ್ ನಾಯಕ ಈಗ ಅಧಿಕಾರದಲ್ಲಿದಲ್ಲಿಲ್ಲ.
    

    ಯೋಗಿಗೆ ಒಲಿಯಿತು ಶ್ರೀರಾಮನ ಕೃಪೆ

    ರಾಮ ಜನ್ಮಭೂಮಿ ಇತಿಹಾಸವನ್ನು ಕೆದಕುತ್ತಾ ಹೋದರೆ ಹತ್ತು ಹಲವು ಕುತೂಹಲಕಾರಿ ವಿದ್ಯಮಾನಗಳು ಸಿಗುತ್ತಲೇ ಹೋಗುತ್ತವೆ. ಇವುಗಳ ಪೈಕಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಮ ಮಂದಿರಕ್ಕಿರುವ ಸಂಬಂಧವೂ ಒಂದು.

    ಅಯೋಧ್ಯೆಯಿಂದ ಪೂರ್ವಕ್ಕೆ 137 ಕಿ.ಮೀ. ದೂರದಲ್ಲಿರುವ ಗೋರಖ್ ನಾಥ ಮಠ, ರಾಮಂದಿರ ನಿರ್ಮಾಣಕ್ಕೆ ಬ್ರಿಟಿಷರ ಆಡಳಿತ ಕಾಲದಲ್ಲೇ ಜನರನ್ನು ಸಂಘಟಿಸಲು ಆರಂಭಿಸಿತ್ತು. ಮಠದ ಮೂವರು ಮಹಾಂತರಾದ ದಿಗ್ವಿಜಯ ನಾಥ್, ಅವೈದ್ಯನಾಥ್ ಮತ್ತು ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಮಂದಿರ ನಿರ್ಮಾಣ ಆಂದೋಲನದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈಗ ಯೋಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲೇ ಮಂದಿರಕ್ಕೆ ಶಿಲಾನ್ಯಾಸ. ಇದನ್ನೇ ಶ್ರೀರಾಮ ಕೃಪೆ ಎನ್ನಬಹುದೇ ?

    1935ರಲ್ಲಿ ಗೋರಖ್ ನಾಥ ಮಠದ ಆಗಿನ ಮಹಾಂತರಾಗಿದ್ದ ದಿಗ್ವಿಜಯ ನಾಥ್, ಹಿಂದೂ ಮಹಾಸಭಾವನ್ನು ಸೇರಿ ಮಂದಿರ ನಿರ್ಮಾಣಕ್ಕಾಗಿ ಹಿಂದೂಗಳನ್ನು ಒಗ್ಗೂಡಿಸಲು ಆರಂಭಿಸಿದ್ದರು. 1949ರಲ್ಲಿ ಆಗ ಬರ್ಲಾಪುರದ ರಾಜನಾಗಿದ್ದ ಪಟೇಶ್ವರಿ ಪ್ರಸಾದ್ ಸಿಂಗ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಸ್ವಯಂ ಸೇವಕರ ನಿಯೋಗದೊಂದಿಗೆ ಭೇಟಿಯಾಗಿದ್ದರು. ಆದೇ ಸಂದರ್ಭದಲ್ಲೇ ಅಖಿಲ ಭಾರತೀಯ ರಾಮ ರಾಜ್ಯ ಪರಿಷತ್ ಪಕ್ಷ ಹುಟ್ಟಿಕೊಂಡಿತು.

    ಅದೇ ವರ್ಷದ ಡಿ. 22-23 ರಾತ್ರಿ ವಿವಾದಿತ ಸ್ಥಳದಲ್ಲಿ ರಾಮಲಲ್ಲಾನ ವಿಗ್ರಹ ಕಾಣಿಸಿಕೊಂಡಿತು. ಅಂದು ದಿಗ್ವಿಜಯ ನಾಥ್ ಅಯೋಧ್ಯೆಯಲ್ಲೇ ಇದ್ದರು. ರಾಮ ಭಜನೆ ಮಾಡುವಂತೆ ಅವರು ತಮ್ಮೊಂದಿಗೆ ಬಂದಿದ್ದ ನಿಯೋಗ ಸದಸ್ಯರಿಗೆ ನಿರ್ದೇಶನ ನೀಡಿದ್ದರು. 1969ರಲ್ಲಿ ತಾವು ಸಾಯುವವರೆಗೂ ರಾಮ ಜನ್ಮಭೂಮಿ ಆಂದೋಲನ ಕಿಚ್ಚು ಆರದಂತೆ ನೋಡಿಕೊಂಡಿದ್ದರು ದಿಗ್ವಿಜಯ ನಾಥ್.

    ಬಳಿಕ ಮಹಾಂತ ಪಟ್ಟವೇರಿದ ಅವೈದ್ಯನಾಥ್, ಆಂದೋಲನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಶ್ರೀ ರಾಮ ಜನ್ಮಭೂಮಿ ಮುಕ್ತಿ ಯಜ್ಞ ಸಮಿತಿ ಸ್ಥಾಪಿಸುವ ಮೂಲಕ ಹಿಂದೂ ಸಂಘಟನೆಗಳು, ಸಾಧು-ಸಂತರ ಒಕ್ಕೂಟಗಳನ್ನು ಒಂದೇ ವೇದಿಕೆಯಲ್ಲಿ ತಂದರು. ಮಂದಿರ ನಿರ್ಮಾಣಕ್ಕಾಗಿ ಬಿಹಾರದಿಂದ ಅಯೋಧ್ಯೆಗೆ ಬೃಹತ್ ಜಾಥಾವನ್ನು ಕೂಡ ಸಂಘಟಿಸಿದ್ದರು. 1986ರಲ್ಲಿ ವಿವಾದ ಕಟ್ಟಡದ ಬೀಗ ತೆರೆಯಲು ಫೈಜಾಬಾದ್ ಜಿಲ್ಲಾಡಳಿತ ಅನುವು ಮಾಡಿಕೊಟ್ಟ ದಿನವಾದ ಫೆ. 1ರಂದು ಅವೈದ್ಯನಾಥ್ ಕೂಡ ಅಯೋಧ್ಯೆಯಲ್ಲಿ ಹಾಜರಿದ್ದರು. 1989ರ ನವೆಂಬರ್ 9ರಂದು ಅಯೋಧ್ಯೆಯಲ್ಲಿ ಮಂದಿರದ ಶಿಲಾನ್ಯಾಸದ ಘೋಷಣೆಯನ್ನು ಕೂಡ ಮಾಡಿದವರು ಅವರೇ. ಬಳಿಕ ಉ.ಪ್ರ.ದ ಆಗಿನ ಮುಖ್ಯಮಂತ್ರಿ ನಾರಾಯಣ ದತ್ತ ತಿವಾರಿಯವರ ಮನವಿಯ ಮೇರೆಗೆ ಕಾರ್ಯಕ್ರಮವನ್ನು ಮುಂದೂಡಿದರೂ, ಮುಂದೆ ದೆಹಲಿಯಲ್ಲಿ ಆಗಿನ ಪ್ರಧಾನಿ ಪಿ. ವಿ. ನರಸಿಂಹ ರಾವ್ ಅವರನ್ನು ಭೇಟಿಯಾಗಿ ಮಂದಿರ ನಿರ್ಮಾಣಕ್ಕೆ ಮುಂದಾಗುವಂತೆ ಒತ್ತಡ ಹೇರಿದರು.

    ಬಳಿಕದ ಸರದಿ ಯೋಗಿ ಆದಿತ್ಯನಾಥ್ ಅವರದ್ದು. ಅಜಯ್ ಸಿಂಗ್ ಭಿಶ್ಟ್ ಹೆಸರಿನ ಯುವ ಪದವೀಧರ 1992ರಲ್ಲಿ ಗೋರಖನಾಥ ಮಠಕ್ಕೆ ಭೇಟಿ ನೀಡುತ್ತಾನೆ. ಅವೈಧ್ಯನಾಥರ ಜತೆ ನಡೆಸಿದ ಮಾತುಕತೆಯಿಂದ ಪ್ರಭಾವಿತರಾಗಿ ಸನ್ಯಾಸಿಯಾಗಿ ಯೋಗಿ ಆದಿತ್ಯನಾಥ್ ಆಗುತ್ತಾರೆ. ರಾಮ ಮಂದಿರ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಯುವ ಸನ್ಯಾಸಿ, ಸಾಧು-ಸಂತರು, ಹಿಂದೂ ಸಂಘಟನೆಗಳ ಮುಖ್ಯಸ್ಥರ ಜತೆ ನಿರಂತರವಾಗಿ ಸಭೆ ನಡೆಸಿದರು. ಇವರ ಸಾಮರ್ಥ್ಯವನ್ನು ಕಂಡ ಅವೈದ್ಯನಾಥ್ 1996ರಲ್ಲಿ ತನ್ನ ಉತ್ತರಾಧಿಕಾರಿಯಾಗಿ ನೇಮಿಸುತ್ತಾರೆ.

    ಆ ಸಂದರ್ಭದಲ್ಲಿ ಉತ್ತರ ಪ್ರದೇಶದ ಬಹುತೇಕ ಭಾಗಗಳಲ್ಲಿ ಆಂದೋಲನ ಕಾವು ಕಳೆದುಕೊಳ್ಳಲಾರಂಭಿಸಿತ್ತು. ಇದರ ಸೂಚನೆ ಸಿಕ್ಕ ಯೋಗಿ, 970 ಹಿಂದೂ ಸಂಘಟನೆಗಳು, 10,000 ಸಾಧುಗಳ ಬೃಹತ್ ಸಭೆ ನಡೆಸಿದರು. ವಿಶ್ವ ಹಿಂದೂ ಪರಿಷತ್ ನ ಆಗಿನ ಅಧ್ಯಕ್ಷರಾಗಿದ್ದ ಅಶೋಕ್ ಸಿಂಘಾಲ್ ಕೂಡ ಇದರಲ್ಲಿ ಭಾಗವಹಿಸಿದ್ದರು. ಬಳಿಕ ರಾಜಕಾರಣ ಪ್ರವೇಶಿಸಿ, ನಾಲ್ಕು ಬಾರಿ ಸಂಸದರಾದರು. ಈ ಮೂಲಕ ಅಯೋಧ್ಯೆ ಆಂದೋಲನಕ್ಕೆ ಹೊಸ ರೂಪ ನೀಡಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ.

    ಒಟ್ಟಿನಲ್ಲಿ ವಿವಾದಿತ ಸ್ಥಳದಲ್ಲಿ ರಾಮಲಲ್ಲಾ ವಿಗ್ರಹ ಪ್ರತ್ಯಕ್ಷವಾಗುವಾಗ ಗೋರಖ್ ನಾಥ ಮಠದ ಆಗಿನ ಮುಖ್ಯಸ್ಥ ಮಹಾಂತ ದಿಗ್ವಿಜಯ ನಾಥ್ ಅಯೋಧ್ಯೆಯಲ್ಲಿದ್ದರೆ, ವಿವಾದ ಸ್ಥಳದ ಗೇಟ್ ತೆರೆಯುವ ಸಂದರ್ಭದಲ್ಲಿ ಅವೈದ್ಯನಾಥ್ ರಾಮ ಜನ್ಮಭೂಮಿಯಲ್ಲಿದ್ದರು. ಈಗ ಶಿಲಾನ್ಯಾಸ ಸಂದರ್ಭದಲ್ಲಿ ಅದೇ ಮಠದ ಮುಖ್ಯಸ್ಥರಾಗಿರುವ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ !

    ಶಿವಗಂಗೆ ಕೋತಿ ಉಳಿಸುವ ಅಭಿಯಾನ: ಕನ್ನಡಪ್ರೆಸ್ ವರದಿಗೆ ಉತ್ತಮ ಸ್ಪಂದನೆ

    ಕನ್ನಡ ಪ್ರೆಸ್.ಕಾಮ್ ನಲ್ಲಿ ನಿನ್ನೆ ಪ್ರಕಟವಾದ ಶಿವಗಂಗೆ ಕೋತಿ ಉಳಿಸುವ ಟೆಕ್ಕಿಗಳ ಅಭಿಯಾನ ವರದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಹಲವಾರು ಮಂದಿ ತಾವು ಕೂಡ ಈ ಅಭಿಯಾನದ ಭಾಗವಾಗುವುದಕ್ಕೆ ಮುಂದೆ ಬಂದಿದ್ದಾರೆ.

    ಕೋತಿಗಳ ಆಹಾರದ ಕೊರತೆ ನೀಗಿಸಲು ಟೆಕ್ಕಿಗಳ ರಚನಾತ್ಮಕ ಯೋಜನೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧನ ಸಹಾಯ ನೀಡಲು ಮುಂದಾಗಿರುವುದು ಶ್ಲಾಘನೀಯ. ವನ್ಯ ಜೀವಿಗಳ ಸಂರಕ್ಷಣೆಗೆ ಕಾಳಜಿ ವಹಿಸಿರುವುದು ಗಮನಾರ್ಹ.

    ಹಲವು ಪರಿಸರ ಪ್ರೇಮಿಗಳು ಹಾಗೂ ಪ್ರಾಣಿ ಪ್ರಿಯರು ವಿವಿಧ ಸ್ಥಳಗಳಿಂದ ಪ್ರೇರಣೆ ನೀಡಿದ್ದಾರೆ. ಅಭಿನಂದನಗಳನ್ನು ಸಲ್ಲಿಸಿದ್ದಾರೆ ಎಂದು ಖಡ್ಗ ಸಂಘದ ರಾಜ್ಯಾಧ್ಯಕ್ಷ ರಘು ಮಾಹಿತಿ ನೀಡಿದರು. ಇದಕ್ಕೆ ಕಾರಣವಾದ ಕನ್ನಡಪ್ರೆಸ್.ಕಾಮ್ ಗೆ ಅವರು ಧನ್ಯವಾದ ತಿಳಿಸಿದರು.

    ಇದನ್ನೂ ಓದಿ : ಕೋತಿ ಉಳಿಸಲು ಟೆಕ್ಕಿಗಳ ಅಭಿಯಾನ

    ಹೆಚ್ಚು ಬುದ್ಧಿವಂತರಾದ ಹೆಣ್ಣುಮಕ್ಕಳಿಗೆ ವಿವಾಹ ಎಂಬುದು ಒಂದು ಬಂಧನವಾಗಿ ಹೋಗುತ್ತದೆ

    ಕನ್ನಡಪ್ರೆಸ್.ಕಾಮ್ ನಲ್ಲಿ ಶಕುಂತಲಾದೇವಿಯವರ ಚರಿತ್ರೆಯ ಚಲನಚಿತ್ರದ ಬಗ್ಗೆ ಓದಿದ ನಂತರ ಅದನ್ನು ನೋಡಿದೆ. ಅಪ್ರತಿಮ ಪ್ರತಿಭೆಯ ಶಕುಂತಲಾದೇವಿಯವರ ಜೀವನಗಾಥೆಯನ್ನು ಬಹಳ ಸೊಗಸಾಗಿ ತೆರೆಯಮೇಲೆ ತಂದಿದ್ದಾರೆ.

    ಅತ್ಯಂತ ಪ್ರಬಲವಾದ ವ್ಯಕ್ತಿತ್ವ ಮತ್ತು ಅತಿ ಬುದ್ಧಿವಂತರಾದ ಹೆಣ್ಣುಮಕ್ಕಳಿಗೆ ವಿವಾಹ ಎಂಬುದು ಒಂದು ಬಂಧನವಾಗಿ ಹೋಗುತ್ತದೆ. ಅತ್ಯಂತ ಒಳ್ಳೆಯವನಾದ ಬ್ಯಾನರ್ಜಿ ಜೀವನದಲ್ಲಿ ತನ್ನ ಹೆಂಡತಿಯಿಂದಲೂ ಹಾಗೂ ಪ್ರೀತಿಯಿಂದ  ನೋಡುತ್ತಿದ್ದ ಮಗಳಿಂದಲೂ ದೂರವಾಗಿ ಜೀವನವನ್ನು ದುರ್ಭರವಾಗಿ ಕಳೆಯಬೇಕಾಯಿತು. 

    ಶಕುಂತಲಾ ದೇವಿಯ ಸಾಮರ್ಥ್ಯ ಆಕೆಗೆ ದೇವರಿಂದ ಸಿಕ್ಕಿದ್ದು. ಇಂಗ್ಲಿಷ್ ನಲ್ಲಿ ಗಾಡ್ ಗಿಫ್ಟ್ ಅನ್ನುತ್ತಾರಲ್ಲ ಹಾಗೆ. ಇಂಥ ವ್ಯಕ್ತಿಯನ್ನು ನಾನು ನೋಡಲಿಲ್ಲ ಅಥವಾ ಕೇಳಿಯೂ ಇಲ್ಲ.  ತಾಯಿ ಮಕ್ಕಳ ಬಾಂಧವ್ಯಕ್ಕಿಂತ ಜಗತ್ತಿನಲ್ಲಿ ಅಮೂಲ್ಯವಾದುದು ಮತ್ತೇನೂ ಇಲ್ಲ.

    ತನ್ನ ಮಗಳ ಪ್ರೀತಿಗಾಗಿ ಹಂಬಲಿಸುವ ಶಕುಂತಲಾದೇವಿಯವರ ಮಾನಸಿಕ ಹೋರಾಟ,ತ್ಯಾಗ ಮೆಚ್ಚುಗೆಗೆ ಪಾತ್ರವಾಗಿದೆ. ಕ್ರೂರವಾದ ಹುಲಿ, ಸಿಂಹಗಳು ತನ್ನ ಮಕ್ಕಳನ್ನು ಕಾಪಾಡಿ ಆಹಾರ ಕೊಟ್ಟು ಪ್ರೀತಿಯಿಂದ ನೋಡುತ್ತವೆ .ಬುದ್ಧಿ ಮತ್ತು ಸಂವೇದನೆಯಿರುವ ಮನುಷ್ಯ ತನ್ನ ಸಂತತಿಯನ್ನು ಜೀವನ ಪಣಕ್ಕಿಟ್ಟು ಸಂರಕ್ಷಿಸುವುದಿಲ್ಲವೇ ?.

    ಈ ಚಿತ್ರ ನೋಡುತ್ತಿದ್ದಂತೆ ಶಕುಂತಲಾದೇವಿಯವರೊಂದಿಗೆ ನನ್ನ ಒಡನಾಟ ನೆನಪಿಗೆ ಬಂತು . ನಾನು ಅವರನ್ನು ನೋಡಿದ್ದು  ಬಹಳ ಚಿಕ್ಕವಳಿದ್ದಾಗ. ಎಲ್ಲರೂ ಶಕುಂತಲಾದೇವಿ ನಮ್ಮ ಸ್ಕೂಲಿಗೆ ಬರುತ್ತಿದ್ದಾರೆ ಎಂದು ಸಂಭ್ರಮದಲ್ಲಿಇದ್ದರು. ನಾನು ಭಾಗಾಕಾರ ಕಲಿಯುತ್ತಿದ್ದಾಗ ಅವರು  cube, cube  ಎನ್ನುತ್ತಿದ್ದರು. ಅವರನ್ನು ನೋಡಿದ ನೆನಪು ಮಾತ್ರ ಅಷ್ಟೆ .

    ಮತ್ತೊಮ್ಮೆ ನನಗೆ ಮಹಾಪ್ರತಿಭಾಶಾಲಿ ಆದ ಶಕುಂತಲಾದೇವಿಯವರನ್ನು  ನೋಡುವ ಸದಾವಕಾಶ ಅಮೇರಿಕಾದಲ್ಲಿ ದೊರೆಯಿತು.ನಮ್ಮ ಮಗಳ ಮನೆ ನ್ಯೂಜೆರ್ಸಿಯಲ್ಲಿದೆ. ದೊಡ್ಡ ಮನೆಗಳು ,ಚೆಂದವಿರುವ ಹೂತೋಟ ,ಎಲ್ಲವೂ ನೋಡಲು ಸಂತೋಷವಾಗುತ್ತದೆ. ನಿಜವೆಂದರೆ ನಾವು ಯಾವುದೋ ಬೇರೆ ಪ್ಲಾನೆಟ್ ನಲ್ಲಿ ಇರುವಂತೆ ಭಾಸವಾಗುತ್ತದೆ. ನಮಗೆ ಇಲ್ಲಿ ಮನೆ ಮುಂದೆ ನೂರಾರು ವಾಹನ ಸಂಚಾರ, ಹೂ ,ತರಕಾರಿ ಮಾರುವವರ ಕೂಗು ಎಲ್ಲವೂ ಜೀವನಕ್ಕೆ ಒಗ್ಗಿ ಹೋಗಿದೆ.ಯಾರಾದರೂ ಮಾತನಾಡುವುದಕ್ಕೆ ಏನು ಸಮಾಚಾರವಿಲ್ಲದಿದ್ದರೂ ಸಿಗುತ್ತಾರೆ .ಆದರೆ ಅಲ್ಲಿ ಒಂದಿಬ್ಬರು ಸಿಕ್ಕರೂ ಮುಗುಳ್ನಗೆಯಷ್ಟೆ.

    ನೂರಾರು ದೇಶಗಳಿಂದ ಬಂದಿರುವ ಅವರಿಗೆ ಇಂಗ್ಲಿಷ್ ಬರುತ್ತೆ ಅಂತ ತಿಳಿಯಬಾರದು.ಲ್ಯಾಟಿನ್ ಸ್ಪ್ಯಾನಿಷ್ ರಷ್ಯಾದಿಂದ ಬಂದವರಾಗಿರುತ್ತಾರೆ .ಅವರಿಗೆ ಇಂಗ್ಲಿಷ್ ಬರುವುದೇ ಇಲ್ಲ.ಅಲ್ಲಿ ಆಂಧ್ರಪ್ರದೇಶದಿಂದ ಬಂದಿದ್ದ ಯುವತಿಯೊಬ್ಬಳಿಗೆ ಪಕ್ಕದ ಮನೆಯ ಇಂಗ್ಲಿಷ್ ಬಲ್ಲ ಚೀನಿಯವಳೊಬ್ಬಳು ಲಾರೆನ್ಸ್ ವಿಲ್ಲಾದಲ್ಲಿ ವರ್ಲ್ಡ್ ಫೇಮಸ್ mathamatician ಬಂದಿದ್ದಾರೆ ,ಅದೂ ನಿಮ್ಮ ಇಂಡಿಯಾದಿಂದ ಎಂದು ಹೇಳಿದಳಂತೆ .ಈ ಮಾತನ್ನು ತನ್ನ  ಹಿಂದಿ ಸ್ನೇಹಿತೆಯೊಬ್ಬಳಿಗೆ ಹಿಂದಿಯಲ್ಲಿ  ಹೇಳುತ್ತಿದ್ದಳು.  ನಾನು ತಕ್ಷಣ ನಾನೂ ಸಹ India, that too from Bangalore   ಎಲ್ಲಿದೆ ಮನೆ ಎಂದಾಗ ಇಂಥ ಕಡೆ ಎಂದು ಹೇಳಿದರು. ಇಂತಹ ಜಗದ್ವಿಖ್ಯಾತ ದೇವಿಯವರನ್ನು ನೋಡಲು ನಾನು ಹೊರಟೇಬಿಟ್ಟೆ.

    ಬೆಲ್ ಒತ್ತಿದ ತಕ್ಷಣ ಸ್ಫುರದ್ರೂಪಿಯಾದ ಯುವತಿಯೊಬ್ಬಳು ಬಾಗಿಲು ತೆಗೆದು ಕುಳಿತುಕೊಳ್ಳಲು ಹೇಳಿದಳು.  ನಾನು ಸಂಕೋಚದಿಂದ ಶಕುಂತಲಾ ದೇವಿಯವರನ್ನು ನೋಡಲು ಬಂದಿದ್ದೇನೆ ಎಂದೆ. ಒಳಗೆ ಹೋಗಿ ಶಕುಂತಲಾದೇವಿಯವರನ್ನು ಶಾಲುಹೊದಿಸಿ ಕರೆದುಕೊಂಡು ಬಂದಳು. ನಾನು ಅವರಿಗೆ ನಮಸ್ಕಾರ ಮಾಡಿದೆ ಪ್ರೀತಿಯಿಂದ  you are from south India  ಎಂದು ಕೇಳಿದರು. ನಾನು ಬೆಂಗಳೂರು ಎಂದೊಡನೆ ಕನ್ನಡದಲ್ಲಿ ಮಾತನಾಡಲು ಶುರುಮಾಡಿದರು.

    ಬೆಂಗಳೂರಿನವರಿಗೆ ಕಾಫಿ ಎಂದರೆ ಪಂಚಪ್ರಾಣ ಮೊದಲು ಎರಡು ಕಾಫಿ ತೆಗೆದುಕೊಂಡು ಬಾ ಎಂದು ಆ ಯುವತಿಗೆ ಹೇಳಿದರು .ಬೆಂಗಳೂರಿನ ರಾಜಕೀಯ ಹವಾಗುಣ ಸಂಸ್ಕೃತಿ ಸಂಪ್ರದಾಯ ಎಲ್ಲವನ್ನೂ ಪ್ರೀತಿಯಿಂದ ಮಾತನಾಡಿದರು ನಾನು ನೀವು ನಮ್ಮ ದೇಶದ ಅದೂ ನಮ್ಮ ಕರ್ನಾಟಕದ ಜನತೆಯ ಹೆಮ್ಮೆ, ನಾನು ಇನ್ನೂ ಹಾಗೇ ಹೀಗೆ ಎಂದು ಬಡಬಡಿಸಿದೆ.  ಆದರೆ ಒಂದು ಬಾರಿಯಾದರೂ ತಮ್ಮನ್ನು ಅವರು ವಿಶೇಷ ವ್ಯಕ್ತಿ ಎನ್ನುವಂತೆ ಮಾತನಾಡಲಿಲ್ಲ ಬಾಗಿಲತನಕ ಬಂದು ಪ್ರೀತಿಯಿಂದ ಬೀಳ್ಕೊಟ್ಟರು .

    ಇದನ್ನೂ ಓದಿ : ಗಣಿತ ಮತ್ತು ತಾಯ್ತನದ ಸಂಗಮ

    ರಾಮ ಮಂದಿರ ನಿರ್ಮಾಣ ಹಲವು ಆಯಾಮ

    ರಾಮ ಜನ್ಮ ಭೂಮಿ ವಿವಾದ ತಾರ್ಕಿತ ಅಂತ್ಯ ಕಾಣುತ್ತಿದೆ.ಇದೇ 5ರಂದು ಭವ್ಯ ಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಯಲಿದೆ. ಈ ಹಿನ್ನೆಲೆಯಲ್ಲಿನ ವಿವಿಧ ಆಯಾಮಗಳನ್ನು ಇಂದಿನಿಂದ ಪ್ರತಿದಿನವೂ ಕನ್ನಡಪ್ರೆಸ್.ಕಾಮ್ ಅವಲೋಕಿಸಲಿದೆ.

    ರಾಮಜನ್ಮಭೂಮಿ ವಿವಾದ ಈಗ ಒಂದು ಹಂತದಲ್ಲಿ ತಾರ್ಕಿತ ಅಂತ್ಯ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅದನ್ನು ಎರಡು ಆಯಾಮಗಳಿಂದ ನೋಡಬಹುದಾಗಿದೆ. ಒಂದು ರಾಜಕೀಯ ನೆಲೆಯಾದರೆ ಇನ್ನೊಂದು ಧಾರ್ಮಿಕ ನಂಬಿಕೆ.

    1528 ಆಗಿನ ಮೊಘಲ್ ದೊರೆ ಬಾಬರ್ ಇಲ್ಲಿದ್ದ ರಾಮ ಮಂದಿರವನ್ನು ಕೆಡವಿ ಮಸೀದಿ ನಿರ್ಮಾಣ ಮಾಡಿದ್ದ ಎನ್ನುವುದರಿಂದ ಇದು ಆರಂಭವಾಗಿ 1885ರಲ್ಲಿ ಮಹಾಂತ ರಘುವೀರ ದಾಸ್, ಶ್ರೀರಾಮನಿಗಾಗಿ ಅದೇ ಆವರಣದಲ್ಲಿ ಒಂದು ಕಟ್ಟಡ ನಿರ್ಮಿಸಲು (ಸೂರು) ಅನುಮತಿ ಕೋರಿ ಫೈಜಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವವರೆಗೆ ಹೋಗುತ್ತದೆ. ಬಳಿಕ ನಡೆದಿದ್ದು ಎಲ್ಲರಿಗೂ ತಿಳಿದ ಇತಿಹಾಸ.

    ರಾಜಕೀಯ ಆಯಾಮ

    ಭಾರತಕ್ಕೆ ಸ್ವಾತಂತ್ರ್ಯ ಬಂದ ಕೂಡಲೇ ಗುಜರಾತಿನಲ್ಲಿರುವ ಸೋಮನಾಥ ದೇವಾಲಯ ಪುನರ್ ನಿರ್ಮಾಣದ ನಿಟ್ಟಿನಲ್ಲಿ ಪ್ರಬಲ ವಾದ ಮಂಡಿಸಿದವರು ಆಗಿನ ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲ್. ಅವರಿಗೆ ಬೆನ್ನೆಲುಬಾಗಿ ನಿಂತವರು ಆಗಿನ ಕೇಂದ್ರ ಸಚಿವ ಪಂಡಿತ ಮುನ್ಶಿ. ಪ್ರಧಾನಿ ಪಂಡಿತ ನೆಹರು ವಿರೋಧವನ್ನೂ ಲೆಕ್ಕಿಸದೆ ಸೋಮನಾಥ ದೇವಾಲಯ ಪುನರ್ ನಿರ್ಮಾಣ, ಜ್ಯೋತಿರ್ಲಿಂಗ ಸ್ಥಾಪನೆಯ ಕೆಲಸ ಯಶಸ್ವಿಯಾಗಿ ನಡೆಯಿತು. ಆದರೆ ಆಗ ಅಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಲಿಲ್ಲ. ಅಯೋಧ್ಯೆ ವಿವಾದ ನ್ಯಾಯಾಲಯದ ಕದ ತಟ್ಟಿದ್ದರಿಂದಲೇ ವಿಳಂಬವಾಗಲು ಆರಂಭವಾಯಿತು.

    ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಾರುಣ ಹತ್ಯೆಯ ಬಳಿಕ ನಡೆದ ಚುನಾವಣೆಯಲ್ಲಿ ಪುತ್ರ ರಾಜೀವ್ ಗಾಂಧಿ ಅಭೂತಪೂರ್ವ ಬಹುಮತದೊಂದಿಗೆ ಪ್ರಧಾನಿಯಾದರು. ಆಗ ಅವರಿಗೆ ಎದುರಾದ ಸವಾಲೆಂದರೆ ಶಾ ಬಾನು ಪ್ರಕರಣ. ಆಗಲೆ ಬಹುಸಂಖ್ಯಾತ ಹಿಂದೂಗಳು, ಕಾಂಗ್ರೆಸ್ ನ ತುಷ್ಟೀಕರಣ ನೀತಿಯ ವಿರುದ್ಧ ಮನಸ್ಸಿನಲ್ಲೇ ಕತ್ತಿ ಮಸೆಯುತ್ತಿದ್ದರು. ಶಾ ಬಾನು ಪ್ರಕರಣದ ತೀರ್ಪಿನ ವಿರುದ್ಧ ಸಂಖ್ಯಾಬಲದಿಂದಾಗಿ ಸಂಸತ್ತಿನಲ್ಲಿ ಹೊಸ ಕಾನೂನು ರೂಪಿಸಿದ್ದು, ಹಿಂದೂಗಳ ಆಕ್ರೋಶವನ್ನು ಹೆಚ್ಚಿಸಲು ಕಾರಣವಾಯಿತು. ಇದಕ್ಕೆ ತುಪ್ಪ ಸುರಿಯುವಂತೆ, ಸ್ವಯಂ ಘೋಷಿತ ಚಿಂತಕರ ಚಾವಡಿಯು ಜಾತ್ಯತೀತ ತತ್ವಗಳ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ಮಾಡುತ್ತಾ, ಆಡಳಿತ ಪಕ್ಷದಿಂದಾಗುವ ಲಾಭವನ್ನು ಪಡೆಯಲು ಆರಂಭಿಸಿತು. ಇದು ಹಿಂದೂಗಳ ಸಹಜ ಭಾವನೆಯ ವಿರುದ್ಧವಾಗಿತ್ತು. ಇದರ ಒಂದಿಷ್ಟು ಸುಳಿವು ಸಿಕ್ಕ ರಾಜೀವ್ ಗಾಂಧಿ, ತಕ್ಷಣವೇ ಹಿಂದೂಗಳ ಮನವೊಲಿಸಲು, ಅದುವರೆಗೆ ಮುಚ್ಚಿದ್ದ ರಾಮ ಮಂದಿರದ ಬಾಗಿಲು ತೆರೆದು ಹಿಂದೂಗಳಿಗೂ ಪೂಜಿಸಲು ಅವಕಾಶ ಕಲ್ಪಿಸಿಕೊಟ್ಟರು.

    ಟಿವಿ ಪ್ರಭಾವ

    ಆಗಷ್ಟೇ ದೂರದರ್ಶನದಲ್ಲಿ ರಮಾನಂದ್ ಸಾಗರ್ ಅವರ ರಾಮಾಯಣ ಧಾರಾವಾಹಿ ಪ್ರಸಾರವಾಗಲಾರಂಭಿಸಿ, ಶ್ರೀರಾಮ ಪಾತ್ರಧಾರಿ ಅರುಣ್ ಗೋವಿಲ್ ಅವರು ಬಹಿರಂಗವಾಗಿ ಕಾಣಿಸಿದ ಕಡೆಯಲ್ಲಾ ಪಾದ ಪೂಜೆ ನಡೆಯುತ್ತಿತ್ತು. ಅಲ್ಲಿಗೆ ಶ್ರೀ ರಾಮ ಭಾರತದ ಜನ ಮಾನಸದಲ್ಲಿ ಸ್ಥಾಪಿತನಾಗಿಬಿಟ್ಟ.

    ಆಗಲೇ ಆರಂಭವಾಯಿತು, ರಾಜಕೀಯದ ತಂತ್ರ ಮತ್ತು ಪ್ರತಿತಂತ್ರ. ಅದುವರೆಗೆ ತಾನೇ ರಾಜ ಎಂದು ಮೆರೆಯುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಹೊಸ ಪ್ರತಿ ರಾಜ ಹುಟ್ಟಿಕೊಂಡ. ಭಾರತೀಯ ಜನತಾ ಪಕ್ಷ (ಒಟ್ಟಾಗಿ ಸಂಘ ಪರಿವಾರ) ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ರಾಷ್ಟ್ರವ್ಯಾಪಿ ಆಂದೋಲನವನ್ನೇ ಆರಂಭಿಸಿತು. ಪ್ರಾಯಶಃ ಸ್ವಾತಂತ್ರ್ಯ ಹೋರಾಟದ ಬಳಿಕ ನಡೆದ ರಾಷ್ಟ್ರವ್ಯಾಪಿ ಹೋರಾಟ ಇದೆಂದೇ ಹೇಳಬಹುದು. ಅಂತಿಮವಾಗಿ ನ್ಯಾಯಾಲಯಗಳಿಂದ ನ್ಯಾಯಾಲಯಗಳಿಗೆ ಹಾದು ಹೋದ ಪ್ರಕರಣದಲ್ಲಿ ಅಂತಿಮ ತೀರ್ಪು ಹೊರ ಬಂದಿದ್ದು, ಈಗ ಭವ್ಯ ರಾಮ ಮಂದಿರ ನಿರ್ಮಾಣ ಸಾಕಾರವಾಗುವ ಕಾಲ ಸನ್ನಿಹಿತವಾಗಿದೆ.

    ಧಾರ್ಮಿಕ ನೆಲೆ

    ಹಾಗೆಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಪರೋಕ್ಷ ಆಂದೋಲನ ಈ ಶತಮಾನದಲ್ಲೇ ಆರಂಭವಾಗಿರಲಿಲ್ಲ. ಸಂತ ತುಳಸೀದಾಸರು  (1497-1532ರ ನಡುವೆ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ಅವರ ಜನ್ಮದಿನ ಎಂದು ನಂಬಲಾಗಿದೆ). 16ನೇ ಶತಮಾನದಲ್ಲಿ ಶ್ರೀ ರಾಮ ಚರಿತ ಮಾನಸದ ಮೂಲಕ ಶ್ರೀ ರಾಮನನ್ನು ಜನರ ಮನೆ ಮನಕ್ಕೆ ತಲುಪಿಸುವ ಕೆಲಸ ಮಾಡಿದ್ದರು. ಅದುವರೆಗೆ ಉತ್ತರ ಭಾರತದಲ್ಲಿ ವಾಲ್ಮೀಕಿ ರಾಮಾಯಣ ಕೇವಲ ಸಂಸ್ಕೃತ ಭಾಷೆಗೆ ಸೀಮಿತವಾಗಿತ್ತು. ಆದರೆ ಸ್ವತಃ ಸಂಸ್ಕೃತ ವಿದ್ವಾಂಸರಾಗಿದ್ದ ತುಳಸೀದಾಸರು ಇದನ್ನು ಅವಧಿ ಭಾಷೆಯಲ್ಲಿ ಬರೆದರು ಅಥವಾ ಅನುವಾದ ಮಾಡಿದರು. ಅವರ ಇನ್ನೊಂದು ಕೃತಿಯೆಂದರೆ ಹನುಮಾನ್ ಚಾಲೀಸಾ.

    ಇಷ್ಟಕ್ಕೆ ಅವರ ಕೆಲಸ ನಿಲ್ಲಲಿಲ್ಲ. ಶ್ರೀ ರಾಮನ ಕುರಿತು ರಾಮಲೀಲಾ ಕಾರ್ಯಕ್ರಮವನ್ನೂ ಆಯೋಜಿಸಿದ್ದರು. ರಂಗಭೂಮಿಯಲ್ಲಿ ರಾಮನ ನಾನಾ ವಿವರಗಳನ್ನು ನೀಡುವ ನಾಟಕವು ಇದಾಗಿತ್ತು. ಆ ಬಳಿಕವೇ ವಿಜಯ ದಶಮಿಯ ಮುನ್ನ ಒಂಬತ್ತು ದಿನಗಳ ಕಾಲ ರಾಮ ಲೀಲಾ ಉತ್ತರ ಭಾರತದೆಲ್ಲೆಡೆ ಆಚರಿಸಲ್ಪಡುತ್ತದೆ ಎಂಬುದು ಗಮನಾರ್ಹ.

    ಭಾರತೀಯ ಸಂಸ್ಕೃತಿ ಅಧ್ಯಯನ ಮಾಡಿದ್ದ, ಹಿಂದಿ ಭಾಷೆಯ ವಿದ್ವಾಂಸನಾಗಿದ್ದ ಅಮೆರಿಕದ ಫಿಲಿಪ್ ಲ್ಯುಟೆಡೆಡ್ರಾಫ್ ಮಾತಿನಲ್ಲೇ ಹೇಳುವುದಾದರೆ, 16ನೇ ಶತಮಾನದಲ್ಲಿ ತುಳಸೀದಾಸರು ರಾಮಾಯಣ ಮಹಾಕಾವ್ಯವನ್ನು ಜನರಿಗೆ ನೇರವಾಗಿ ತಲುಪಿಸಿದರು. ಭಾರತೀಯ ಸಂಸ್ಕೃತಿಯ ಒಟ್ಟು ಮೊತ್ತವು ರಾಮಚರಿತ ಮಾನಸದಲ್ಲಿದೆ. ಮಹಾತ್ಮಾ ಗಾಂಧೀಜಿಯವರು ಕೂಡ ರಾಮಚರಿತ ಮಾನಸವು ಧಾರ್ಮಿಕ ಸಾಹಿತ್ಯದ ಅತಿ ಮಹತ್ವದ ಪುಸ್ತಕ ಎಂದು ಹೇಳಿರುವುದು ಇದಕ್ಕೆ ಸಾಕ್ಷಿ.

    ಜುಲೈ 27ರಂದು ತುಳಸೀದಾಸರ ಜನ್ಮ ದಿನ. ಅಂದೇ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ದಿನ ಘೋಷಣೆಯಾಗಿತ್ತು. ಬ್ರಿಟಿಷರ ದೌರ್ಜನ್ಯದಿಂದಾಗಿ ಮಾರಿಷಸ್, ಫಿಜಿ ಸೇರಿದಂತೆ ಅನೇಕ ದೇಶಗಳಿಗೆ ವಲಸೆ ಹೋದ ಕಾರ್ಮಿಕರು ತಮ್ಮ ಜತೆ ರಾಮಚರಿತ ಮಾನಸವನ್ನು ಕೊಂಡೊಯ್ದಿರುವುದು ಮಾತ್ರವಲ್ಲ ಈಗಲೂ ರಾಮಲೀಲಾ ವಿಧಿಯನ್ನು ನೆರವೇರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭವ್ಯ ಶ್ರೀ ರಾಮ ಮಂದಿರದ ಕನಸನ್ನು ಮೊದಲ ಬಾರಿಗೆ ಕಂಡ ತುಳಸೀದಾಸರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದೇ ಹೇಳಬಹುದು.

    ಶಿವಗಂಗೆ ಕೋತಿ ಉಳಿಸಲು ಟೆಕ್ಕಿಗಳ ಅಭಿಯಾನ

    ಶಿವಗಂಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಗಿರಿಕ್ಷೇತ್ರ. ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ ಡಾಬಸ್ ಪೇಟೆಯಿಂದ ದಕ್ಷಿಣಕ್ಕೆ ಹತ್ತು ಕಿ.ಮೀ ಸಾಗಿದರೆ ತಲುಪಬಹುದು. ಬೆಂಗಳೂರಿನಿಂದ ಒಟ್ಟು 50 ಕಿ.ಮೀ. ದೂರದಲ್ಲಿದೆ. ಹೆಸರೇ ಸೂಚಿಸುವಂತೆ ಒಳಕಲ್ ತೀರ್ಥದಲ್ಲಿ ಗಂಗೆಯನ್ನು ಸ್ಪರ್ಶಿಸಲು ನಿತ್ಯ ಸಾವಿರಾರು ಭಕ್ತರ ಸಮಾಗಮ. ಹೊನ್ನದೇವಿಯ ಆವಾಸಸ್ಥಾನ. ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ.

    ಬೆಟ್ಟದ ತಪ್ಪಲಲ್ಲಿರುವ ಪುಟ್ಟಗ್ರಾಮ ಶಿವಗಂಗೆ. ಬೆಟ್ಟದ ತುದಿ ತಲುಪಲು 1500 ಅಡಿ ಮೆಟ್ಟಿಲೇರಬೇಕು. ಗವಿ, ಕಲ್ಯಾಣಿ, ಕಾಡು ಮೇಡುಗಳಿಂದ ಆವೃತ ಕಡಿದಾದ ಬೆಟ್ಟ. ಈಚೆಗೆ ಖಡ್ಗ ಸಂಘದ ಟೆಕ್ಕಿಗಳು ಪವಿತ್ರ ಸ್ಥಳ ಭೇಟಿಗೆ ತೆರಳಿದ್ದರು. ಅವರ ಗಮನ ಸೆಳೆದಿದ್ದು ಅಲ್ಲಿದ್ದ ನೂರಾರು ಕೋತಿಗಳು. ಅವುಗಳ ಸ್ಥಿತಿ-ಗತಿ ಬಗ್ಗೆ ಗಮನ ಅವಲೋಕನ. ಅವುಗಳ ರಕ್ಷಣೆಗಾಗಿ ಯೋಜನೆ ರೂಪಿಸುವ ಸಂಕಲ್ಪ ಅವರಲ್ಲಿ ಮೊಳಕೆಯೊಡೆಯಿತು.

    ಬೋಳು ಬೆಟ್ಟದ ತುದಿಯಲ್ಲಿ ಕೋತಿಗಳಿಗೆ ನಿತ್ಯ ಬೇಟಿ ನೀಡುವ ಪ್ರವಾಸಿಗರ ಕೈಯನ್ನೆ ಎದುರು ನೋಡುತ್ತಿರುತ್ತವೆ. ಭಯದಿಂದ ಹತ್ತಿರ ಬಾರದೆ. ಏನಾದರೂ ಎಸೆದರಷ್ಟೆ ಹೊಟ್ಟೆ ಪಾಡು. ಇಲ್ಲವಾದರೆ ಹಸಿವೆಯಿಂದ ಬಡಕಲಾದ ದೇಹದಲ್ಲಿ ಬಳುಕುವ ದಂಡು ಎಲ್ಲೆಲ್ಲೂ ಕಾಣ ಸಿಗುತ್ತವೆ. ಪ್ರವಾಸಿಗರಿಂದ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಷ್ಟು ಸಿಕ್ಕರೆ ಪುಣ್ಯ. ವನ್ಯಾಧಾರಿತ ಆಹಾರದ ಗಣಿಯೂ ಅಲ್ಲಿಲ್ಲ. ಹಾಗಾಗಿ ಸೊಪ್ಪು, ಸೆದೆಯಲ್ಲಿಯೇ ಹೊಟ್ಟೆ ತುಂಬಿಸಿಕೊಂಡ ಬದುಕುವ ಹೊಣೆ.

    ಈ ಚಿತ್ರಣ ಟೆಕ್ಕಿಗಳ ಮನ ತಲ್ಲಣಗೊಳಿಸಿತು. ಅಲ್ಲಿಯೇ ಕೋತಿಗಳಿಗೆ ನಿತ್ಯ ಆಹಾರ ಒದಗಿಸಲು ಯೋಜನೆ ರೂಪಿಸಲು ದೃಢ ನಿರ್ಧಾರ ಮಾಡಿದರು. ಬೆಂಗಳೂರಿಗೆ ಹಿಂತಿರುಗಿ ‘SAVE MONKEYS SHIVAGANGE’ ಎಂಬ ವ್ಯಾಟ್ಸಪ್ ಗ್ರೂಪ್ ತಯಾರಿಸಿದರು. ಸದಸ್ಯರಿಗೆ ಲಿಂಕ್ ಮೂಲಕ ಸದಸ್ಯತ್ವಕ್ಕೆ ಆಹ್ವಾನಿಸಿದರು. ಈಗಾಗಲೇ ಸಾಕಷ್ಟು ಸದಸ್ಯರು ಗ್ರೂಪ್ ಸೇರಿದ್ದಾರೆ. ಉದ್ದೇಶ ಇಷ್ಟೆ ತಿಂಗಳಲ್ಲಿ ಒಂದು ದಿನ ಶಿವಗಂಗೆ ಬೆಟ್ಟದ ಕೋತಿಗಳಿಗೆ ಆಹಾರಕ್ಕಾಗಿ ಧನಸಹಾಯ ಮಾಡಲು ಘೋಷಿಸುವುದು. ಖಡ್ಗ ಸಂಘದ ರಘು ಪ್ರತಿ ತಿಂಗಳ 1 ನೇ ದಿನ ಕೋತಿಗಳ ಆಹಾರಕ್ಕಾಗಿ ಹಣ ಒದಗಿಸಲು ಘೋಷಣೆ ಮಾಡಿದ್ದಾರೆ. ನಿತಿನ್ ದೇವರಾಜ್ 2ನೇ ದಿನ, ಸಂತೋಷ ಕುಮಾರ್ ಶಿಕ್ಷಕ 3ನೇ ದಿನ… ಹೀಗೆ ಅನೇಕರು ಕೋತಿಗಳಿಗೆ ಆಹಾರ ನೀಡಲು ಧನ ಸಹಾಯಕ್ಕೆ ನೊಂದಾಯಿಸಿಕೊಂಡಿದ್ದಾರೆ. ತಿಂಗಳ ಅಂತ್ಯದವರೆಗೆ ಆಹಾರ ಒದಗಿಸಲು ನೊಂದಾಯಿಸಲಾಗುತ್ತಿದೆ.

    ಸದ್ಯ ರೂ.100 ನ್ನು ಕೋತಿಗಳ ಆಹಾರಕ್ಕೆ ಕೊಡಲು ನಿಗದಿಗೊಳಿಸಲಾಗಿದೆ. ಸದಸ್ಯರ ಸಂಖ್ಯೆ ಹೆಚ್ಚಾದಲ್ಲಿ ಹೆಚ್ಚು ಆಹಾರ ಒದಗಿಸಲು ಸಾಧ್ಯವಾಗಲಿದೆ. ಅಲ್ಲಿನ ಅರ್ಚಕರೊಬ್ಬರಿಗೆ ಖಾತೆಗೆ ಪ್ರತಿ ದಿನ ಹಣವನ್ನು ಪೇಟಿಎಂ ಮೂಲಕ ಹಾಕಲಾಗುವುದು. ಅವರು ಆ ಹಣದಿಂದ ಕೋತಿಗಳಿಗೆ ನಿತ್ಯ ಆಹಾರ ನೀಡಲು ಒಪ್ಪಿದ್ದಾರೆ. ಭಕ್ತರು ಕೋತಿಗಳಿಗೆ ಒಂದಿಷ್ಟು ಆಹಾರ ನೀಡಿದರೆ. ಮೂಕ ಪ್ರಾಣಿಗಳ ಹೊಟ್ಟೆ ತುಂಬಲು ಸಹಾಯವಾಗಲಿದೆ ಎಂಬುದು ಟೆಕ್ಕಿಗಳ ಮನವಿ.

    ಮುಂದಿನ ದಿನಗಳಲ್ಲಿ ಹೆಚ್ಚು ಸದಸ್ಯರಾದಲ್ಲಿ ಹೆಚ್ಚಿನ ಆಹಾರ ನೀಡಲು ಗುರಿ ಹೊಂದಲಾಗಿದೆ. ಈಗಾಗಲೇ ಖಡ್ಗ ಸಂಘ ಚನ್ನಗಿರಿ ತಾಲ್ಲೂಕಿನ ಏಷ್ಯಾ ಖಂಡದ ಎರಡನೇ ದೊಡ್ಡ ಕೆರೆ ಉಳಿಸಲು ಸಾಕಷ್ಟು ಹೋರಾಟ ನಡೆಸಿದೆ. ಸಾಮಾಜಿಕ ಕಳಕಳಿಯುಳ್ಳ ಸಂಘದ ಸದಸ್ಯರಿಗೆ ಸಾಧ್ಯವಾದಷ್ಟು ಸಾಥ್ ನೀಡಿದಲ್ಲಿ ಸಮಾಜದ ಋಣ ತೀರಿಸಲು ಸಣ್ಣ ಕೋಡುಗೆ ನೀಡಿದಂತಾಗುವುದು.

    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ರಘು ಖಡ್ಗ ಸಂಘ: ಮೊಬೈಲ್ ನಂ: 9972414251

    ಅರ್ಥಪೂರ್ಣವಾಗಿರಲಿ ರಕ್ಷಾಬಂಧನ

    ಇಂದು ನಾಡಿನಾದ್ಯಂತ ರಕ್ಷಾ ಬಂಧನದ ಸಡಗರ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲೂ ಈ ಹಬ್ಬ ಜನಪ್ರಿಯವಾಗುತ್ತಿದೆ. ಈ ಪದ್ಧತಿ ಆರಂಭವಾದ ಬಗೆ, ಅದರ ಪೌರಾಣಿಕ ಹಿನ್ನಲೆ, ಐತಿಹಾಸಿಕ ಕಾರಣ ಮತ್ತು ಈಗಿನ ದಿನ ಮಾನದಲ್ಲಿ ಅದನ್ನುಆಚರಿಸುತ್ತಿರುವ ಬಗೆಯನ್ನು ಕುರಿತು ಕನ್ನಡಪ್ರೆಸ್.ಕಾಮ್ ನ ಜನಪ್ರಿಯ ಬರಹಗಾರ ಹಾಗೂ ಚಿಂತಕ ಮಂಜುನಾಥ ಬೊಮ್ಮಘಟ್ಟ ತಮ್ಮ ಅಭಿಪ್ರಾಯವನ್ನು ಈ ಪಾಡ್ಕಾಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಆಲಿಸಿ , ಪ್ರಕಿಕ್ರಿಯಿಸಿ ಮತ್ತು ಹಂಚಿ.

    ಇದನ್ನೂ ಓದಿ : ಕರೋನದಿಂದಾಗಿ ತವರಿಗೆ ಹೋಗಲಾರದಿದ್ದರೇನಂತೆ ಆನ್ಲೈನ್ ನಲ್ಲೇ ರಾಖಿ ಕಳಿಸಿ

    ಕರೋನದಿಂದಾಗಿ ತವರಿಗೆ ಹೋಗಲಾರದಿದ್ದರೇನಂತೆ ಆನ್ಲೈನ್ ನಲ್ಲೇ ರಾಖಿ ಕಳಿಸಿ

    ‘ಹೆಣ್ಣಿನ ಜನುಮಕ್ಕೆ ಅಣ್ಣ ತಮ್ಮರು ಬೇಕು ಬೆನ್ನು ತಟ್ಟುವರು ಸಭೆಯೊಳಗೆ ‘ ಹೀಗೊಂದು ಜಾನಪದ ಗೀತೆ ಹಿಂದೆ ಮನೆಮನೆಯ ಹೆಣ್ಣು ಮಕ್ಕಳು ಹಾಡುತ್ತಿದ್ದರು . ಬಹುತೇಕ ಕನ್ನಡಿಗರರಿಗೆ ಇದರ ಬಗ್ಗೆ ಅರಿವಿರದೇ ಇಲ್ಲ. ಹಾಗೆ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ತನ್ನ ರಕ್ಷೆಗೆ ಸಹೋದರನಿದ್ದಾನೆ ಎಂದು ಹೆಮ್ಮೆ ಪಡುತ್ತಾಳೆ. ಹಾಗೆಯೆ ಗಂಡಿಗೆ ಛೇಡಿಸಲು ,ಜೊತೆಗೆ ಬೆಳೆಯಲು ಪ್ರೀತಿಯ ತಂಗಿ ತಾಯಿಯಂತಹ ಅಕ್ಕನ ಅವಶ್ಯಕತೆ ಇದೆ. ಇಂತಹ ಒಂದು ಅದ್ಬುತ ಸಂಬಂಧವನ್ನು ಬಿಂಬಿಸುವ ಅದಕ್ಕಾಗಿ ಕೃತಜ್ಞತೆ ತೋರಿಸುವ ಹಬ್ಬವೇ ರಾಖಿ ಹಬ್ಬ ಅಥವಾ ರಕ್ಷಾಬಂಧನ ಎಂದೇ ಕರೆಸಿಕೊಳ್ಳುವ ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯುವ ಹಬ್ಬ. ರಕ್ಷಾ ಬಂಧನವನ್ನು ರಾಖಿ ಹಬ್ಬ , ರಾಖಿ ಪೂರ್ಣಿಮಾ ಎಂದು ಕೂಡ ಕರೆಯಲಾಗುತ್ತದೆ .

    ಶ್ರಾವಣ ಮಾಸದ ಮೊದಲ ಹುಣ್ಣಿಮೆಯ  ದಿನ ಹಿಂದೂಗಳು ಆಚರಿಸುವ ಈ ಹಬ್ಬ ಭಾರತ ಮತ್ತು ನೇಪಾಳಗಳಲ್ಲಿ ಆಚರಿಸಲಾಗುತ್ತದೆ. ಕೊಲ್ಕತ್ತಾದಲ್ಲಿ ಇದನ್ನು ಹಿಂದೂ ಮುಸ್ಲಿಂಗಳು ಒಬ್ಬರಿಗೊಬ್ಬರು ರಾಖಿ ಕಟ್ಟುವುದರ ಮೂಲಕ ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂದು ಆಚರಿಸುತ್ತಾರೆ. ಇಂತಹದ್ದೊಂದು ಆಚರಣೆಯನ್ನು ರವೀಂದ್ರನಾಥ್ ಟ್ಯಾಗೋರ್ ಅವರು 1905 ರಲ್ಲಿ ಕೋಲ್ಕತ್ತಾದಲ್ಲಿ ಪ್ರಾರಂಭಿಸಿದರು ಎಂಬುದು ಈಗ ಇತಿಹಾಸ. ರಾಖಿ ಕೇವಲ ಒಡಹುಟ್ಟಿದ ಅಣ್ಣ ತಂಗಿಯ ಮಧ್ಯೆ ಮಾತ್ರವಲ್ಲದೇ ಸಾಕಷ್ಟು ಜನರು ಮನೆಯ ಹೊರಗೆ ಕೂಡ ಸಾಕಷ್ಟು ಅಣ್ಣ ತಮ್ಮಂದಿರನ್ನು ಹುಡುಕಿಕೊಂಡು ರಾಖಿ ಕಟ್ಟಿ ರಕ್ಷಣೆಯ ಭರವಸೆಯನ್ನು ಕಂಡು ಕೊಂಡಿದ್ದಾರೆ.

    ರಕ್ಷಾಬಂಧನದ ದಿನ ಸಹೋದರಿಯರು ತಮ್ಮ ಸಹೋದರಿಗೆ ರಾಖಿಯನ್ನು ಕಟ್ಟಿ ಸಿಹಿ ತಿನಿಸಿ ಸಂಭ್ರಮಿಸಿದರೆ ಸಹೋದರರು ರಾಖಿ ಕಟ್ಟಿದ ತಂಗಿ ಅಥವಾ ಅಕ್ಕಂದಿರಿಗೆ ತಮ್ಮ ಕೈಲಾದ ಉಡುಗೊರೆಯನ್ನು ನೀಡುವುದು ಸಾಮನ್ಯವಾಗಿ ಮೊದಲಿನಿಂದ ನಡೆದುಕೊಂಡು ಬಂದಿರುವ ಹಬ್ಬದ ಪದ್ಧತಿಯಾಗಿದೆ.

    ಈ ರಾಖಿ ಹಬ್ಬ ಈಗಿನದಲ್ಲ ಪುರಾಣದಿಂದಲೂ ನಡೆದುಕೊಂಡು ಬಂದಿದೆ ಎಂಬುದಕ್ಕೆ ದ್ರೌಪದಿ ಮತ್ತು ಕೃಷ್ಣ ರ ಅಣ್ಣ ತಂಗಿಯ ದ್ರೌಪದಿ ವಸ್ತ್ರಾಪಹರಣವೇ ಸಾಕ್ಷಿ  ಎಂಬುದನ್ನು ತಿಳಿಯದವರಿಲ್ಲ. ದ್ರೌಪದಿಯ ವಸ್ತ್ರಾಪಹರಣ ಮಾಡುವ ಸಂದರ್ಭದಲ್ಲಿ ಆಕೆ ಕೃಷ್ಣನನ್ನು ತನ್ನ ರಕ್ಷಿಸುವಂತೆ ಮೊರೆ ಹೋಗುವುದು ಮತ್ತು ಶ್ರೀ ಕೃಷ್ಣ ಆಕೆಯನ್ನು ರಕ್ಷಿಸುವುದನ್ನು ಕೂಡ ರಕ್ಷಾ ಬಂಧನದ ಸಂಕೇತವಾಗಿ ಪರಿಗಣಿಸಲಾಗಿದೆ.
    ಹಾಗೆಯೇ ಇನ್ನೊಂದು ಸಂದರ್ಭದಲ್ಲಿ ಶಿಶುಪಾಲನನ್ನು ಕೊಳ್ಳಲು ಕೃಷ್ಣನು ಸುದರ್ಶನ ಚಕ್ರವನ್ನು ಬೀಸುತ್ತಾನೆ ಆಗ ಕೃಷ್ಣನ ಕೈಬೆರಳಿಗೆ ಸ್ವಲ್ಪ ತಾಗಿ ರಕ್ತ ಸುರಿಯಲಾರಂಭಿಸುತ್ತದೆ ಈ ಸಂದರ್ಭದಲ್ಲಿ ದ್ರೌಪದಿಯು ತನ್ನ ಸೀರೆಯ ಅಂಚನ್ನು ಹರಿದು ಕೃಷ್ಣ ಕೈಬೆರಳಿಗೆ ಸುತ್ತಿ ರಕ್ತ ಸುರಿಯುವುದನ್ನು ನಿಲ್ಲಿಸುತ್ತಾಳೆ. ಹೀಗೆ ರಕ್ಷಾ ಬಂಧನ ಎಂದರೆ ಕೇವಲ ಅಣ್ಣ ತಂಗಿಯನ್ನು ರಕ್ಷಿಸುವುದು ಮಾತ್ರವಲ್ಲ ಸಮಯ ಬಂದಲ್ಲಿ ಸಹೋದರಿಯರು ಕೂಡ ಸಹೋದರರ ಜೊತೆಗೂಡಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿ ನಿಲ್ಲುತ್ತದೆ.

    ಇತಿಹಾಸದಲ್ಲೂ ರಕ್ಷಾಬಂಧನ

    ಪುರಾಣಗಳಲ್ಲಿ ಮಾತ್ರವಲ್ಲ ಇತಿಹಾಸದಲ್ಲೂ ರಕ್ಷಾಬಂಧನವನ್ನು ಉಪಯೋಗಿಸಿಕೊಂಡ ಉದಾಹರಣೆಗಳು ಉಲ್ಲೇಖವಾಗಿವೆ . ವಿಧವೆಯಾದ ಚಿತ್ತೂರಿನ ರಾಣಿ ಕರ್ಣಾವತಿಯು ತನ್ನ ರಾಜ್ಯವನ್ನು ರಕ್ಷಿಸಿಕೊಳ್ಳಲು ಮೊಘಲರ ರಾಜ ಹುಮಾಯೂನ್ ನಿಗೆ ರಾಖಿಯನ್ನು ಕಳಿಸಿ ರಕ್ಷಣೆಯ ಮೊರೆಹೋಗುತ್ತಾಳೆ ಮತ್ತು ಇದಕ್ಕೆ ಒಪ್ಪಿದ ಹುಮಾಯುನ್ ರಾಣಿ ಕರ್ಣಾವತಿಯ ಬೆಂಬಲಕ್ಕೆ ಬರುತ್ತಾನೆ ಎಂಬುದು ಇತಿಹಾಸದಲ್ಲೂ ದಾಖಲಿಸಲಾಗಿದೆ.   

    ಮದಿಂದ ಆಚರಿಸುವ ಈ ಹಬ್ಬ ಹೊರ ದೇಶಗಳಲ್ಲಿ ಕೂಡ ಭಾರತೀಯರು ತಪ್ಪದೆ ಆಚರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ರಾಖಿಯನ್ನು ಆನ್ಲೈನ್ ಮೂಲಕ ಸ್ವಂತ ಅಣ್ಣ ತಮ್ಮಂದಿರಿಗೆ ಮನೆಗೇ ಕಳಿಸುವ ಅವಕಾಶವಿದೆ. ಅಷ್ಟೇ ಅಲ್ಲದೆ ರಾಖಿಯನ್ನು ಚಿಕ್ಕ ಮಕ್ಕಳು ಕೂಡ ಆಚರಿಸಿ ನಮ್ಮ ಸಂಪ್ರದಾಯವನ್ನು ಮುಂದುವರಿಸುತ್ತಿದ್ದಾರೆ. 

    ಈಗಂತೂ ರಾಖಿ ಹಲವಾರು ಬಗೆಗಳಲ್ಲಿ ಲಭ್ಯ. ಚಿಕ್ಕ ಮಕ್ಕಳು ಒಬ್ಬರಿಗೊಬ್ಬರು ರಾಖಿ ಕಟ್ಟಿ ಸಂತೋಷ ಪಡಲು ಕಾರ್ಟೂನ್ ಗಳನ್ನು ಒಳಗೊಂಡ ರಾಖಿಗಳು , ಹಾಗೆಯೇ  ಪರಿಸರಕ್ಕೆ ಹೊರೆಯಾಗದಂತ ಭೂಮಿಯಲ್ಲಿ ಕರಗುವ ಪರಿಸರಸ್ನೇಹಿ ರಾಖಿಗಳು , ಪೊಂ ಪೊಂ ರಾಖಿ , ವುಲ್ಲನ್ ನಲ್ಲಿ , ಬಟ್ಟೆಯಲ್ಲಿ ಮಾಡಿದ ರಾಖಿಗಳು , ಇನ್ನು ಫೋಟೋ ರಾಖಿಗಳು , ಸಂಗೀತ ಹೊಮ್ಮಿಸುವ ರಾಖಿಗಳು . ಅಷ್ಟೇ ಏಕೆ ಬ್ರೇಸ್ ಲೈಟ್ ನಂತಹ ಬಂಗಾರ ಬೆಳ್ಳಿಗಳ್ಲಲೂ ಕೂಡ ರಾಖಿ ಮಾಡಿಸಿ ಕೊಡಬಹುದು.

    ಹೀಗೆ ರಾಖಿ ಪೂರ್ಣಿಮೆಗೆ ತನ್ನದೇ ಆದ ವಿಶೇಷತೆ ಇದೆ . ಇದೇ ಆಗಸ್ಟ್ ಮೂರರಂದು ರಾಖಿ ಹಬ್ಬ . ಕರೋನದಿಂದಾಗಿ ತವರೂರಿಗೆ ಹೋಗಲಾರದಿದ್ದರೇನಂತೆ ಈಗಂತೂ ಆನ್ಲೈನ್ ವ್ಯವಸ್ಥೆ ಇದೆ . ಇನ್ನೇಕೆ  ತಡ ಈಗಲೇ ನಿಮ್ಮ ಸಹೋದರರಿಗೆ ರಾಖಿ ಕಳಿಸಿ ಸಂಭ್ರಮ ಆಚರಿಸಿ. 

    Image by Shantanu Kashyap from Pixabay

    ಬಂಗಾರದ ಹೊಸ ನೀತಿ ಭಯ ಬೇಡ

    ಚಿನ್ನ ಖರೀದಿಯ ಬಗ್ಗೆ ಹೊಸ ನೀತಿಯ ಘೋಷಣೆ ಆಗುತ್ತಿದೆ ಎನ್ನುವ ಸುಳಿವು ಸಿಕ್ಕಿದ ಕೂಡಲೇ ನಮ್ಮಲ್ಲಿ ಅದರ ಬಗ್ಗೆ ವಿಶ್ಲೇಷಣೆ ಮಾಡುವವರು, ಅದರ ಕುರಿತು ಅತಿಯಾಗಿ ತಜ್ಞರಾಗಿ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.ಸರಕಾರ ಈ ಬಗ್ಗೆ ಇನ್ನು ಏನನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.ಅಕ್ರಮ ಚಿನ್ನವನ್ನು ಸಕ್ರಮಗೊಳಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಅಷ್ಟೆ.

    ಕೋವಿಡ್-19 ರೀತಿಯಲ್ಲೇ ಜನರಲ್ಲಿ ಮತ್ತೆ ಭಯ-ಭೀತಿಯನ್ನು ಹುಟ್ಟಿಸುವ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಜನರಿಗೆ ನಿಜ ವಿಷಯವನ್ನು ತಿಳಿಸುವ ಕೆಲಸ ಆಗುತ್ತಿಲ್ಲ. ಚಾನಲ್ ಗಳಲ್ಲಿ ಒಂದು ಗಂಟೆ ಕಾರ್ಯಕ್ರಮದಲ್ಲಿ ತಮಗೆ ಬೇಕಾದ ರೀತಿಯಲ್ಲಿ ಬಂಗಾರದ ಕುರಿತ ಹೊಸ ನೀತಿಯ ಬಗ್ಗೆ ಚರ್ಚೆಗಳು, ತಜ್ಞರು ಎನ್ನುವವರಿಂದ ಅಭಿಪ್ರಾಯಗಳು, ಸಾರ್ವಜನಿಕರ ಆತಂಕಗಳು ಪ್ರಸಾರವಾಗುತ್ತಲೇ ಇದೆ.

    ಹಾಗಾದರೆ ನಿಜವಾಗಿ ಚಿನ್ನದ ಹೊಸ ನೀತಿ ಏನು ? ಅದರಲ್ಲಿ ಅಡಕವಾಗಿರುವ ಅಂಶಗಳಾವುದಾದರೂ ಯಾವುದು ? ಅದು ಸಾಮಾನ್ಯ ಚಿನ್ನ ಖರೀದಿದಾರರಿಗೆ ಅಂದರೆ ಮಧ್ಯಮ ವರ್ಗ ಮತ್ತು ಬಡವರ ಜೀವನಾಡಿಯಾದ ಬಂಗಾರದ ಖರೀದಿಯ ಮೇಲೆ ಬೀಳಬಹುದಾದ ಪರಿಣಾಮಗಳೇನು ? ಎಂಬ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ.

    ಭಾರತವು ಸುಮಾರು 25 ಸಾವಿರ ಟನ್ ಚಿನ್ನವನ್ನು ವಾರ್ಷಿಕವಾಗಿ ಆಮದು ಮಾಡಿಕೊಳ್ಳುತ್ತಿದೆ. ಅದರಲ್ಲಿ ಅನ್ ಅಕೌಂಟೆಡ್ ಅಂದರೆ ಲೆಕ್ಕಕ್ಕೆ ಸಿಕ್ಕದ (ರಾಮನ ಲೆಕ್ಕ-ಕೃಷ್ಣನ ಲೆಕ್ಕ) ಬಂಗಾರವೇ ಹೆಚ್ಚು. ಹೀಗಾಗಿ ಇದನ್ನು ನಿಯಂತ್ರಿಸಲು 2015ರಲ್ಲೇ ಕೇಂದ್ರ ಸರಕಾರ ಒಂದು ಸಮಿತಿಯನ್ನು ರೂಪಿಸಿ, ಇದನ್ನು ನಿಯಂತ್ರಿಸಲು ಯೋಜನೆ ಮಾಡಿ ಎಂದು ನಿರ್ದೇಶಿಸಿತ್ತು. ಇದರ ಉದ್ದೇಶ ಉತ್ತಮವಾಗಿತ್ತು. ಕಪ್ಪು ಹಣವನ್ನು ನಿಯಂತ್ರಿಸಲು ನಿರ್ದಿಷ್ಟ ಮುಖ ಬೆಲೆಯ ನೋಟು ಅಮಾನ್ಯ ಮಾಡಿದಂತೆ ಚಿನ್ನದ ಖರೀದಿಯ ಮೇಲೆಯೂ ನಿಯಂತ್ರಣ ಹೇರಬೇಕು ಎಂದಾಗಿತ್ತು. ಅದರಲ್ಲೂ ಮುಖ್ಯವಾಗಿ ನೋಟು ಅಮಾನ್ಯದ ಬಳಿಕ ಅನಿಯಂತ್ರಿತವಾಗಿಯೇ ಸಾಗುತ್ತಿದ್ದ ಚಿನ್ನ ಖರೀದಿಗೆ ಒಂದು ಕಡಿವಾಣ ಬೇಕಾಗಿತ್ತು.

    ಆದರೆ ನಮ್ಮ ಜನರು ತುಂಬಾ ಬುದ್ಧಿವಂತರು. ಅದರಲ್ಲೂ ಶ್ರೀಮಂತ ವರ್ಗಕ್ಕೆ ಸೇರಿದ್ದ ಜನರು ತಮ್ಮ ಕೋಟ್ಯಂತರ ರೂಪಾಯಿಯನ್ನು ಭೂಮಿ, ಶೇರು ಮಾರುಕಟ್ಟೆಯ ಬದಲಿಗೆ ಚಿನ್ನದ ಮೇಲೆ ಹೂಡಿಕೆ ಮಾಡಿದರು. ಇದರಿಂದಾಗಿ ಅವರಿಗೆ ಸಾಕಷ್ಟು ಲಾಭವಿತ್ತು. ಎಷ್ಟು ಚಿನ್ನವಿದೆ ಎಂಬ ಬಗ್ಗೆ ಸರಕಾರಕ್ಕೆ ಲೆಕ್ಕ ಕೊಡುವ ಅಗತ್ಯವೇ ಇರಲಿಲ್ಲ. ಆದರೆ ಹೊಸ ನೀತಿಯೇನಾದರೂ ಜಾರಿಗೆ ಬಂದರೆ (ಇದು ಕಷ್ಟ) ಆಗ ಅವರು ತಮ್ಮಲ್ಲಿರುವ ಚಿನ್ನಕ್ಕೆ ಉತ್ತರದಾಯಿಗಳು ಆಗಲೇಬೇಕಾಗುತ್ತದೆ.

    ಸಾಮಾನ್ಯರಿಗೆ ಯಾವುದೇ ಸಮಸ್ಯೆಯಿಲ್ಲ

    ಸಾಮಾನ್ಯ ಜನರಿಗೆ ಈ ಹೊಸ ನೀತಿಯಿಂದ ಯಾವುದೇ ಸಮಸ್ಯೆಯಿಲ್ಲ ಎಂಬುದನ್ನು ಇಲ್ಲಿ ಸ್ಪಷ್ಟ ಪಡಿಸಲೇಬೇಕಾಗುತ್ತದೆ. ಸುಮಾರು ಎರಡು ಕೆಜಿವರೆಗೆ ಅಂದರೆ 2,000 ಗ್ರಾಂ.ವರೆಗೆ ಚಿನ್ನವನ್ನು ಮನೆಯಲ್ಲಿ ಹೊಂದಿರುವವರು (ಉಡುಗೊರೆ, ತಂದೆ-ತಾಯಿ ಸೇರಿದಂತೆ ಪಾರಂಪರಿಕವಾಗಿ ಬಂದ ಬಳುವಳಿ ಅಥವಾ ವರ್ಗಾವಣೆ) ಯಾವುದೇ ತೊಂದರೆಗೆ ಸಿಲುಕುವುದಿಲ್ಲ.  ಆಮೇಲೆ ಇನ್ನು ಮುಂದೆ ತೆಗೆದುಕೊಂಡ ಪ್ರತಿಯೊಂದು ಗ್ರಾಂ ಚಿನ್ನಕ್ಕೂ ಅಂಗಡಿಯಲ್ಲಿ ಬಿಲ್ ತೆಗೆದುಕೊಂಡರೆ ಸಾಕಾಗುತ್ತದೆ. ಇದುವರೆಗೆ ಮನೆಯಲ್ಲಿ ಇರುವ ಚಿನ್ನಕ್ಕೆ ಇದು ಅನ್ವಯವಾಗುವುದಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಆದ್ದರಿಂದ ಜನ ಸಾಮಾನ್ಯರು ಏನಪ್ಪ ಇದು ಹೊಸ ಚಿನ್ನದ ನೀತಿ ಎಂದು ಭಯ ಪಡುವ ಅಗತ್ಯವಿಲ್ಲ. ಅಲ್ಲದೆ ವಿವಾಹಿತ ಮಹಿಳೆ, ಅವಿವಾಹಿತ ಪುರುಷ ಹೀಗೆ ನಾನಾ ವಿಭಾಗಗಳಲ್ಲಿ ನಾನಾ ಮಿತಿಗಳನ್ನು ನೀಡಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಕೇವಲ ಕಪ್ಪು ಹಣವನ್ನು ಕೆಜಿಗಟ್ಟಲೆ ಚಿನ್ನಕ್ಕೆ ಹೂಡಿ ಮನೆಯಲ್ಲಿ ಕೂಡಿ ಹಾಕಿಕೊಳ್ಳುವವರಷ್ಟೇ ಭೀತಿ ಪಡಬೇಕು ಅಷ್ಚೇ, ಭೂಮಿ ಇರಲಿ, ಇನ್ಯಾವುದೇ ರೀತಿಯಲ್ಲಿ ಅಕ್ರಮ ಸಂಪಾದನೆ ಮಾಡಿರಲಿ ಅವರಿಗಷ್ಟೇ ತೆರಿಗೆ ಪಾವತಿಯ ಭಯ ಇದ್ದೇ ಇರುತ್ತದೆ.

    Photo by Sayak Bala on Unsplash

    error: Content is protected !!