35.8 C
Karnataka
Sunday, May 12, 2024

    ಆಪತ್ಕಾಲದಲ್ಲಿ ನೆರವಿಗೆ ಬರುವ ಆರೋಗ್ಯ ವಿಮೆ

    Must read

    ಜೀವನದಲ್ಲಿ ಫೈನಾನ್ಷಿಯಲ್ ಪ್ಲಾನಿಂಗ್ ಎನ್ನುವುದು ತುಂಬಾ ಮುಖ್ಯ. ದುಡಿಯುವ ಸಮಯದಲ್ಲಿ ಇಂಥ ಪ್ಲಾನಿಂಗ್ ಇದ್ದರೆ ದುಡಿಮೆ ಇಲ್ಲದ ಸಮಯದಲ್ಲಿ ಆತಂಕದ ಸ್ಥಿತಿ ಇರುವುದಿಲ್ಲ. ಕನ್ನಡಿಗರಿಗೆ ಹಲವಾರು ವಿಷಯಗಳನ್ನು ಸರಳ ಭಾಷೆಯಲ್ಲಿ ತಿಳಿಸಿಕೊಡುತ್ತಿರುವ ಕನ್ನಡಪ್ರೆಸ್ .ಕಾಮ್ ಪರ್ಸನಲ್ ಫೈನಾನ್ಸ್ ಕುರಿತ ಸರಣಿ ಲೇಖನ ಮಾಲೆ ಆರಂಭಿಸುತ್ತಿದೆ. ಕೋವಿಡ್ ಕಾಲದಲ್ಲಿ ಅನಿವಾರ್ಯವಾಗಿರುವ ಆರೋಗ್ಯ ವಿಮೆಯ ಮಾಹಿತಿಯೊಂದಿಗೆ ಸರಣಿ ಆರಂಭ.

    ಇಂದಿನ ದಿನಗಳಲ್ಲಿ ಆರೋಗ್ಯ ಸೇವೆ ತುಂಬಾ ದುಬಾರಿಯಾಗುತ್ತಿದೆ.  ಸರಕಾರಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿದ್ದರೂ ಖಾಸಗಿ ಆಸ್ಪತ್ರೆಗಳ ಮೇಲಿನ ಅವಲಂಬನೆ  ತಪ್ಪಿಲ್ಲ. ವಿಶ್ವ ದರ್ಜೆಯ  ಆಸ್ಪತ್ರೆಗಳು ನಮ್ಮ ರಾಜ್ಯದಲ್ಲಿ ಆರಂಭವಾದ ಮೇಲಂತೂ  ಹುಷಾರು ತಪ್ಪಿದಾಗ ಅಲ್ಲಿ ಚಿಕಿತ್ಸೆ ಪಡೆದರೆ ರೋಗ ಗುಣಮುಖವಾಗಬಹುದೆಂಬ ನಂಬಿಕೆ. ಆದರೆ ಅಲ್ಲಿನ ದುಬಾರಿ ಬಿಲ್ಲು ಅಂಥ ಆಸ್ಪತ್ರೆಗಳತ್ತ ನೋಡದಂತೆ ಮಾಡುತ್ತದೆ. ಹೀಗಾಗಿ ಮಧ್ಯಮ ವರ್ಗದವರು ಮಧ್ಯಮ ದರ್ಜೆಯ ನರ್ಸಿಂಗ್ ಹೋಮ್ ಅಥವಾ ಸರಕಾರಿ ಆಸ್ಪತ್ರೆಯ ಆಸರೆ ಪಡೆಯುತ್ತಾರೆ. ಇಂಥ ಸಮಯದಲ್ಲಿ ಅವರ ನೆರವಿಗೆ ಬರುವುದೇ ಆರೋಗ್ಯ ವಿಮೆ.

    ಪಾಶ್ಚಿಮಾತ್ಯ ದೇಶಗಳಲ್ಲಿ ಆರೋಗ್ಯ ವಿಮೆ ಇಲ್ಲದೆ ಬದುಕು ಸಾಗಿಸುವುದೆ ಕಷ್ಟ. ಅಲ್ಲಿನ ದುಬಾರಿ ವೈದ್ಯಕೀಯ ಬಿಲ್ಲನ್ನು ವಿಮೆ ಇಲ್ಲದೆ ಭರಿಸುವುದು ಮಧ್ಯಮ ವರ್ಗದವರಿಗೆ ಆಸಾಧ್ಯ. ಭಾರತೀಯರಿಗೆ ಆರೋಗ್ಯ ವಿಮೆ ಅಂದರೆ ಹೆಲ್ತ್ ಇನ್ಶುರೆನ್ಸ್ ಬಗ್ಗೆ ಅಷ್ಟಾಗಿ  ಅರಿವಿಲ್ಲ. ಎಂದೋ ಬರಬಹುದಾದ  ರೋಗಕ್ಕೆ ಈಗಲೇ ಏಕೆ ವಿಮೆ ಮಾಡಿಸಬೇಕು. ಬಂದಾಗ ನೋಡಿಕೊಳ್ಳೋಣ ಎಂಬ ಭಾವನೆ. ಆದರೆ ಸಂಕಟ ಬಂದಾಗ ವೆಂಕಟರಮಣನೆ ಗತಿ. ಆಸ್ಪತ್ರೆ ಬಿಲ್ ತುಂಬಲು ಮೇಲೂ ಕೆಳಗೂ ನೋಡಬೇಕಾದ ಪರಿಸ್ಥಿತಿ. ಅಂಥ ಸ್ಥಿತಿ ಬರದಂತೆ ಇರಲು ಈಗಲೇ ವಿಮೆ ಪಡೆದರೆ ಕಷ್ಟ ಕಾಲದಲ್ಲಿ ನೆಮ್ಮದಿಯಿಂದ ಇರಬಹುದು.

    ವಿಮೆ ಪಡೆಯುವ ಮುನ್ನ ಗಮನಿಸಬೇಕಾದ ಅಂಶಗಳು

    ಮೊದಲು ನಿಮ್ಮ ಕುಟುಂಬದವರ ಸಂಖ್ಯೆ ,ವಯಸ್ಸು ಮತ್ತು ಅದಕ್ಕೆ ತಗುಲ ಬೇಕಾದ ವಿಮಾ ಕಂತನ್ನು ಲೆಕ್ಕ ಹಾಕಬೇಕು. ವಿಮಾ ಕಂತನ್ನು ನಿಮ್ಮ ಸಂಪಾದನೆಗೆ ತಕ್ಕಂತೆ ನಿರ್ಧರಿಸಿಕೊಳ್ಳಬೇಕು. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕಾಯಿಲೆ ಬೀಳುವ ಸಾಧ್ಯತೆ ತೀರಾ ವಿರಳವಾಗಿರುವುದರಿಂದ 2 ಲಕ್ಷ ದಿಂದ 4 ಲಕ್ಷ ರೂಪಾಯಿಯಷ್ಟು ವೆಚ್ಚವನ್ನು ಭರಿಸಲು ಅನುಕೂಲವಾಗುವಂಥ ಪಾಲಿಸಿ ಆಯ್ಕೆ ಮಾಡಿಕೊಳ್ಳಬಹುದು.ಆಗ ಇಡೀ ಕುಟುಂಬದ ವಿಮೆಗೆ ವರ್ಷಕ್ಕೆ 8 ರಿಂದ 10 ಸಾವಿರ ರೂ .ಗಳಷ್ಟು ವಿಮಾ ಕಂತು ಬರಬಹುದು.

    ವಿಮೆ ಹೊಂದುವದರಿಂದ ಲಾಭಗಳು

    1 ಆರೋಗ್ಯವೇ ಭಾಗ್ಯವಾಗುವುದರಿಂದ ದುರದೃಷ್ಟವಶಾತ್ ಆರೋಗ್ಯ ಏರು ಪೇರಾದರೆ ವಿಮೆ ಹೊಂದಿದ್ದರೆ ಉತ್ತಮ ಆಸ್ಪತ್ರೆಯಲ್ಲಿ ಗುಣ ಮಟ್ಟದ ಚಿಕಿತ್ಸೆ ಪಡೆಯಲು ಸಾಧ್ಯ. ಆಪತ್ತಿನ ಸಂದರ್ಭದಲ್ಲಿ ಇನ್ನೊಬ್ಬರ ಮುಂದೆ ಕೈ ಚಾಚುವುದು ತಪ್ಪುತ್ತದೆ.

    2 ತುರ್ತು ಸಂದರ್ಭದಲ್ಲಿ ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದರೆ ನಗದು ರಹಿತ ಚಿಕಿತ್ಸೆ ದೊರೆಯುತ್ತದೆ. ಹೀಗಾಗಿ ಆಂತಕ ತಪ್ಪುತ್ತದೆ.

    3 ಕೆಲವು ಪಾಲಿಸಿಗಳು ವರ್ಷಕೊಮ್ಮೆ ಉಚಿತ ಆರೋಗ್ಯ ತಪಾಸಣೆಯ ವೆಚ್ಚವನ್ನು ಮರುಪಾವತಿಸುವ ಅವಕಾಶವನ್ನು ಕಲ್ಪಿಸುತ್ತದೆ. ಹೀಗಾಗಿ  ಯಾವುದೆ ಹೆಚ್ಚಿನ  ಖರ್ಚಿಲ್ಲದೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಹೆಲ್ದೀ ಜೀವನ ನಡೆಸಬಹುದು.

    4 ಎಲ್ಲಾ ವಿಮೆ ಗಳಲ್ಲಿರುವುಂತೆ ಇಲ್ಲೂ ನೋ ಕ್ಲೇಮ್ ಬೋನಸ್ ಇರುತ್ತದೆ. ಹೀಗಾಗಿ ಈ ಮೊತ್ತದಿಂದ   ವರ್ಷದಿಂದ ವರ್ಷಕ್ಕೆ ವಿಮೆ ಮೊತ್ತವನ್ನು ಹೆಚ್ಚಿಸಿಕೊಳ್ಳಬಹುದು.

    5 ಕೆಲವು ಪಾಲಿಸಿಗಳು ಆಸ್ಪತ್ರೆಯ ಖರ್ಚಿನ ಜೊತೆ 2000ರೂ ವರೆಗೆ ಡೈಲಿ ಹಾಸ್ಪಿಟಲ್ ಖರ್ಚನ್ನು ನೀಡುತ್ತವೆ.ಇದು ಆಸ್ಪತ್ರೆ ವಾಸದ ಸಮಯದಲ್ಲಿ ಕೆಲವು ಖರ್ಚುಗಳನ್ನು ನಿಭಾಯಿಸಲು ಅನುಕೂಲ ಮಾಡಿಕೊಡುತ್ತವೆ.

    6 ಕೆಲವು ಪಾಲಿಸಿಗಳು ಅಂಗಾಂಗ ಕಸಿಯ ವೆಚ್ಚವನ್ನು ಕೂಡ ಭರಿಸುತ್ತವೆ.

    7  ಇದರ ಜೊತೆಗೆ ನೀವು ಕಟ್ಟುವ ವಿಮಾ ಮೊತ್ತಕ್ಕೆ ತೆರಿಗೆ ವಿನಾಯ್ತಿಯೂ ಇದೆ.

    ಹೀಗಾಗಿ ಸಂಕಟ ಬಂದಾಗ ಆತಂಕ ಪಡುವುದರ ಬದಲು ವಿಮೆ ಹೊಂದುವುದು ಜಾಣತನವಾಗುತ್ತದೆ.

    (ಮುಂದಿನ ಕಂತಿನಲ್ಲಿ ನಾನಾ ಆರೋಗ್ಯ ಪಾಲಿಸಿಗಳ ಬಗ್ಗೆ ಅರಿಯೋಣ)

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    1 COMMENT

    1. ಸಾಮಾನ್ಯ ಜನರಿಗೆ ಆರೋಗ್ಯ ವಿಮೆ ಕುರಿತು ಮಾಹಿತಿ ಅಗತ್ಯವಾಗಿತ್ತು. ಉತ್ತಮ ಕೆಲಸ ಮಾಡುತ್ತಿದ್ದೀರಿ..

    LEAVE A REPLY

    Please enter your comment!
    Please enter your name here

    Latest article

    error: Content is protected !!