25 C
Karnataka
Monday, May 13, 2024

    ಅವಕಾಶಗಳನ್ನು ಬಳಸಿಕೊಂಡವನೆ ಜಾಣ

    Must read

    ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್‌ ಈ ವರ್ಷದ ಆರಂಭದಲ್ಲಿ 47,700 ರ ಮಟ್ಟದಲ್ಲಿದ್ದು, ಆಗಿನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ಮೊತ್ತವು ರೂ.189 ಲಕ್ಷ ಕೋಟಿಯ ಸಮೀಪವಿತ್ತು. ಆ ಸಂದರ್ಭದಲ್ಲಿ ನೋಂದಾಯಿಸಿಕೊಂಡಿದ್ದ ರೀಟೇಲ್‌ ಗ್ರಾಹಕರ ಸಂಖೈ ಮಾತ್ರ ಕೇವಲ 5.89 ಕೋಟಿಯಷ್ಠೆ. ಇದು ಷೇರುಪೇಟೆಯ ಚಟುವಟಿಕೆಯಲ್ಲಿ ಸಾಂಸ್ಥಿಕ ವಲಯದ ಪಾತ್ರವೇ ಹೆಚ್ಚಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಸಾಂಸ್ಥಿಕ ವಲಯ ಎಂದರೆ ವಿದೇಶಿ ಸಂಸ್ಥೆಗಳಾಗಿರಬಹುದು, ಸ್ವದೇಶಿ ಸಂಸ್ಥೆಗಳಾಗಿರಬಹುದು, ಮ್ಯುಚುಯಲ್‌ ಫಂಡ್‌ ಗಳಾಗಿರಲೂಬಹುದು.

    ವಿಶ್ವವೆಂದೂ ಕಾಣದ ರೀತಿಯ ಕರೋನಾ ಸಾಂಕ್ರಾಮಿಕವು ಜನಜೀವನದ ಶೈಲಿಗಳನ್ನೇ ಬದಲಿಸಿದೆ. ಷೇರುಪೇಟೆಯ ವ್ಯವಹಾರವು ಅತ್ಯಂತ ಸುಲಭವಾಗಿ ನಿರ್ವಹಿಸಬಹುದಾಗಿದ್ದು, ಕೈಲಿರುವ ಮೊಬೈಲ್‌ ನಲ್ಲಿಯೂ ಸಹ ಕಾರ್ಯ ನಿರ್ವಹಿಸಬಹುದಾದ ಮಟ್ಟದಲ್ಲಿರುವುದರಿಂದ ಈಗಿನ ಲಾಕ್‌ ಡೌನ್‌ ಸಮಯದಲ್ಲಿ ಮನಸ್ಸು ಮತ್ತು ಚಿಂತನೆಗಳನ್ನು ಸಕಾರಾತ್ಮಕವಾಗಿರುವಂತೆ ಮಾಡಲು, ರಚನಾತ್ಮಕತೆಯತ್ತ ತೊಡಗಿಸುವುದರೊಂದಿಗೆ ಮಿತವಾದ ಸಂಪಾದನೆ ಗಳಿಸಲು ಸಹ ಸಾಧ್ಯವಿರುವ ಸುಲಭ ಮಾರ್ಗ ಎಂದರೆ ಷೇರುಪೇಟೆ.

    ಷೇರುಪೇಟೆಯ ಚಟುವಟಿಕೆಗೆ ತೊಡಗಿಸಿಕೊಂಡವರಲ್ಲಿ ಸಾಮಾನ್ಯವಾಗಿ ನಕಾರಾತ್ಮಕವಾದ ಅಭಿಪ್ರಾಯ ಹೊರಬರುವುದು. ಕಾರಣ ನಡೆಸುವ ಚಟುವಟಿಕೆ ಕೇವಲ ಭಾವನಾತ್ಮಕವಾಗಿದ್ದು, ವಾಸ್ತವಿಕತೆಯಿಂದ ದೂರವಿರುವುದಾಗಿದೆ. ಷೇರುಪೇಟೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು, ಹಿರಿಯ ನಾಗರಿಕರೂ ಸೇರಿ, ಸೀಮಿತವಾದ, ನಿಯಂತ್ರಿತ ರೀತಿಯಲ್ಲಿ, ಯಾವುದೇ ವ್ಯಾಮೋಹಕ್ಕೊಳಗಾಗದೆ ಕೇವಲ ಉತ್ತಮ ಕಂಪನಿಗಳಲ್ಲಿ ಹೂಡಿಕೆ ಮಾಡಿ ಆಕರ್ಷಕ ಲಾಭ ಪಡೆಯುವ ಮೂಲಕ ತಮ್ಮ ದೈಹಿಕ, ಮಾನಸಿಕ, ಬಾಧೆಗಳನ್ನು ಮರೆತು ಆರೋಗ್ಯವನ್ನಯ ವೃದ್ಧಿಸಿಕೊಂಡ ಹಲವಾರು ಉದಾಹರಣೆಗಳುಂಟು.

    ನಾಲ್ಕೈದು ತಿಂಗಳಲ್ಲಿ ಒಂದು ಕೋಟಿ ರೀಟೇಲ್‌ ಹೂಡಿಕೆದಾರರು:

    ಮನೆಯಲ್ಲಿಯೇ ಇರಿ, ಮನಸ್ಸಿನ ಹತೋಟಿಯೊಂದಿಗೆ ಸುಲಭ ಸೀಮಿತ ರೀತಿಯಲ್ಲಿ ಸಂಪಾದನೆಮಾಡಿ ಎಂಬುದಕ್ಕೆ ಷೇರುಪೇಟೆ ಉತ್ತಮ ವೇದಿಕೆಯನ್ನೊದಗಿಸುತ್ತದೆ. ಈಗಿನ ದಿನಗಳಲ್ಲಿ ಹೆಚ್ಚು ಹೆಚ್ಚು ರೀಟೇಲ್‌ ಗ್ರಾಹಕರು, ಗೃಹಿಣಿಯರೂ ಸೇರಿದಂತೆ, ಷೇರುಪೇಟೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

    ಈ ವರ್ಷದ ಆರಂಭದಲ್ಲಿದ್ದ 5.89 ಕೋಟಿ ರೀಟೇಲ್‌ ಗ್ರಾಹಕರ ಸಂಖ್ಯೆಯು ಈಗ ಸುಮಾರು 6.88 ಕೋಟಿಗೆ ಏರಿಕೆಯಾಗಿದೆ. ಚಟುವಟಿಕೆಯ ಗಾತ್ರವೂ ಸಹ ಹೆಚ್ಚಾಗಿರುವುದರಿಂದ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ಮೊತ್ತವೂ ಸಹ ರೂ.218 ಲಕ್ಷ ಕೋಟಿಯನ್ನು ದಾಟಿದೆ. ಅಂದರೆ ಸುಮಾರು ನಾಲ್ಕೈದು ತಿಂಗಳಲ್ಲಿ ಸೆನ್ಸೆಕ್ಸ್‌ 2,800 ಪಾಯಿಂಟುಗಳ ಏರಿಕೆಯೊಂದಿಗೆ ಮಾರ್ಕೆಟ್‌ ಕ್ಯಾಪಿಟಲೈಸೇಷನ್ನನ್ನು ರೂ.29 ಲಕ್ಷ ಕೋಟಿಯಷ್ಠು ಏರಿಕೆ ಕಾಣುವಂತಾಗಲು ಸುಮಾರು ಒಂದು ಕೋಟಿ ಹೊಸ ಹೂಡಿಕೆದಾರರ ಕೊಡುಗೆಯೂ ಅಪಾರವಾಗಿರುತ್ತದೆ.

    ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸೆನ್ಸೆಕ್ಸ್‌ 16 ನೇ ಫೆಬ್ರವರಿಯಂದು ಸರ್ವಕಾಲೀನ ಗರಿಷ್ಠ 52,516 ಪಾಯಿಂಟುಗಳನ್ನು ತಲುಪಿದ ದಿನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.205.80 ಲಕ್ಷ ಕೋಟಿಯಲ್ಲಿತ್ತು. ಆದರೆ ಈಗ ಇನ್ನೂ ಎರಡು ಸಾವಿರ ಪಾಯಿಂಟುಗಳ ಹಿಂದಿರುವಾಗ ಅಂದರೆ 52,540 ರಲ್ಲಿರುವಾಗ ಆಗಲೇ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.218 ಲಕ್ಷ ಕೋಟಿ ದಾಟಿರುವುದು ಪೇಟೆಯಲ್ಲಿ ಹೆಚ್ಚುತ್ತಿರುವ ಆಸಕ್ತಿಯೇ ಕಾರಣವಾಗಿದೆ. ವಿವಿಧ ಅಂತರ ರಾಷ್ಟ್ರೀಯ ವಿತ್ತೀಯ ಸಂಸ್ಥೆಗಳು ಈಗಿನ ಕರೋನಾ ಸಾಂಕ್ರಾಮಿಕ ಪ್ರಭಾವದಿಂದ ಭಾರತದ ಜಿ ಡಿ ಪಿ ಭಾರಿ ಕುಸಿತ ಕಾಣುತ್ತದೆ ಎಂದು ವರದಿ ಪ್ರಕಟಿಸಿದ ನಂತರವೂ ಷೇರುಪೇಟೆ ಉತ್ಸಾಹಭರಿತವಾಗಿರುವುದು ಹೆಚ್ಚು ಗಮನಾರ್ಹವಾಗಿದೆ.

    ಉತ್ತಮ ಬಲಶಾಲಿಯಾಗುವುದು ಹೇಗೆ?

    ಇದಕ್ಕೆ ಸುಲಭವಾದ ಉತ್ತರವೆಂದರೆ ʼದುರ್ಬಲತೆಯ ಅರಿವು ಸಬಲತೆಗೆ ಒಲವುʼ. ಅಂದರೆ ನಮ್ಮ ವೀಕ್ನೆಸ್‌ ಏನೆಂದು ಅರಿತರೆ ಅಂತಹುವುಗಳಿಂದ ನಾವು ದೂರ ಉಳಿಯಲೆತ್ನಿಸುತ್ತೇವೆ, ಫಲಿತಾಂಶ ಸಮಾಧಾನಕರವಾಗಿಯೇ ಇರುತ್ತದೆ. ಮಗುವು ಬೆಂಕಿಯ ಬಿಸಿಯನ್ನು ಒಮ್ಮೆ ಅನುಭವಿಸಿದ್ದರೆ, ಅದರಿಂದ ಸದಾ ದೂರವಿರಲು ಇಚ್ಚಿಸುತ್ತದೆ. ಅದೇ ರೀತಿಯ ವಿರಾಟ್‌ ಸ್ವರೂಪವು ಹಿರಿಯರಲ್ಲಿರುತ್ತದೆ. ಈಗಿನ ತಾಂತ್ರಿಕ ಯುಗದಲ್ಲಿ ಹೆಚ್ಚಿನವರನ್ನು ದಾರಿತಪ್ಪಿಸುವುದು ಅವರಲ್ಲಿರುವ ಡಿಸ್ಕೌಂಟ್‌ , ರಿಬೇಟ್‌, ಉಚಿತ, ಕೊಡುಗೆಗಳ ವ್ಯಾಮೋಹದಿಂದ. ಭಾರಿ ಡಿಸ್ಕೌಂಟ್‌, ಉಚಿತ ಕೊಡುಗೆಗಳನ್ನು ನೀಡುವ ವಿಧವನ್ನು ನಾವು ಮೈಗೂಡಿಸಿಕೊಂಡಲ್ಲಿ, ನಮ್ಮ ವ್ಯವಹಾರಿಕ ಚಿಂತನೆಗಳ ಫಲವೂ ಸಹ ಇದೇ ರೀತಿ, ಪರೋಕ್ಷವಾಗಿ ಕೊಡುಗೆ ನೀಡುವ ರೀತಿಯಿರುತ್ತದೆ. ಜೀವಿಸು, ಜೀವಿಸಲು ಬಿಡು ಎಂಬ ತತ್ವವನ್ನಾಧರಿಸಿ ಚಟುವಟಿಕೆ ನಡೆಸಿದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

    ಈ ಡಿಸ್ಕೌಂಟ್‌ , ರಿಬೇಟ್‌, ಉಚಿತ, ಕೊಡುಗೆಗಳ ಚಿಂತನೆಗಳು ನಮ್ಮಲ್ಲಿ ದುರಾಸೆಯನ್ನು ಬಿತ್ತುತ್ತದೆ. ಇದು ಮುಂದೆ ನಿರಾಸೆಯತ್ತ ಕೊಂಡೊಯ್ಯುತ್ತದೆ. ಹಾಗಾಗಿ ಈ ಡಿಸ್ಕೌಂಟ್‌ , ರಿಬೇಟ್‌, ಉಚಿತ, ಕೊಡುಗೆಗಳ ವ್ಯಾಮೋಹದಿಂದ ಹೊರಬಂದು ಸಹಜತೆಯತ್ತ ಹೊರಳಿದಲ್ಲಿ ಬೇರೆ ಲೋಕವೇ ಗೋಚರಿಸುವುದು. ಮಾಲ್‌ ಗಳಡಿಸ್ಕೌಂಟ್‌ , ರಿಬೇಟ್‌, ಉಚಿತ, ಕೊಡುಗೆಗಳು, ಕ್ರೆಡಿಟ್‌ ಕಾರ್ಡ್‌ ಗಳ, ಬ್ಯಾಂಕಿಂಗ್‌, ನಾನ್‌ ಬ್ಯಾಂಕಿಂಗ್‌ ವಲಯದ ಕಂಪನಿಗಳ ಆಫರ್‌, ʼ ಪ್ರಿ ಅಪ್ರೂವ್ಡ್‌ʼ ಲಗತ್ತಿಸಿದ ಶಬ್ಧಗಳ ಪ್ರಭಾವದಿಂದ ಹೊರಬಂದು. ಸಹಜ ಚಿಂತನೆಗಳನ್ನಳವಳಿಡಿಸಿಕೊಳ್ಳುವುದು ಉತ್ತಮ. ಈ ಕ್ರಮವು ಆರ್ಥಿಕ ಸಾಕ್ಷರತೆ ಬೆಳೆಸುವುದಲ್ಲದೆ, ಸಬತೆಯನ್ನೂ ಜೊತೆಗೂಡಿಸುವುದು. ಕೆಲವು ಬ್ಯಾಂಕಿಂಗ್‌ ಸಂಸ್ಥೆಗಳು ಈ ಪ್ರಿ ಅಪ್ರೂವ್ಡ್‌ ನೆಪದಲ್ಲಿ ನಾನ್‌ ರೀಫಂಡಬಲ್ ಪ್ರೊಸೆಸಿಂಗ್‌ ಚಾರ್ಜ್‌ ಗಳನ್ನು ಸಂಗ್ರಹಿಸಿ‌, ಮುಂದೆ ಸವಲತ್ತು ಒದಗಿಸದೆ, ನಾನ್‌ ರೀಫಂಡಬಲ್ ಪ್ರೊಸೆಸಿಂಗ್‌ ಚಾರ್ಜ್‌ ಹಿಂದಿರುಗಿಸದೆ ಇರುವ ಉದಾಹರಣೆಗಳುಂಟು. ಕೆ ವೈ ಸಿ ಒದಗಿಸಿ ಹಲವಾರು ವರ್ಷಗಳು ಆ ಬ್ಯಾಂಕ್‌ ನ ಗ್ರಾಹಕರಾಗಿದ್ದರೂ ಸರಿ, ವೃತ್ತಿಯಾಧಾರಿತ ನೆಪಗಳ ಮೂಲಕ ತಿರಸ್ಕರಿಸಿ, ನಾನ್‌ ರೀಫಂಡಬಲ್ ಪ್ರೊಸೆಸಿಂಗ್‌ ಚಾರ್ಜ್‌ ಗಳನ್ನು ತನ್ನ ಬುಟ್ಟಿಗೆ ಸೇರಿಸಿಕೊಳ್ಳುವುದೂ ಉಂಟು.

    ಕೆಲವು ಬ್ಯಾಂಕ್‌ ಗಳಲ್ಲಿ ಮಾರ್ಕೆಟಿಂಗ್‌ ಟೀಂ ನ ಮೋಹಕ ಪದಗಳಿಗೆ ಮರುಳಾಗಿ, ಸೇವಿಂಗ್ಸ್‌ ಖಾತೆಯನ್ನು ತೆರೆದು, ನಂತರ ಮಿನಿಮಮ್‌ ಬ್ಯಾಲನ್ಸ್‌ ಮುಂತಾದ ಕಾರಣಗಳಿಂದ ಗ್ರಾಹಕರಿಗೆ ಹೊರೆ ಮಾಡಿರುವುದೂ ಉಂಟು. ಹೀಗೆ ಅಗೋಚರವಾದ ರೀತಿಯಲ್ಲಿ ನಮ್ಮ ಹಣವನ್ನು ಹೀರಿಕೊಳ್ಳುವ ವಿಧಗಳೇ ಹೆಚ್ಚಾಗಿ ಸೃಷ್ಟಿಯಾಗುತ್ತಿರುವುದು ಖೇದದ ಸಂಗತಿಯಾಗಿದೆ.

    ಅವಕಾಶಗಳ ಆಗರ- ಷೇರುಪೇಟೆ: ಫಲಿತಾಂಶಧಾರಿತ ಅವಕಾಶಗಳು:

    ಷೇರುಪೇಟೆಯಲ್ಲಿ ಅವಕಾಶಗಳು ಹೇಗೆ ಸೃಷ್ಠಿಯಾಗುತ್ತವೆ ಎಂಬುದನ್ನು ವೈವಿಧ್ಯಮಯ ಕೋನಗಳಿಂದ ಅರಿಯಬೇಕಾಗುತ್ತದೆ. ಇಲ್ಲಿ ಸಕಾರಾತ್ಮಕವಾದ , ನಕಾರಾತ್ಮಕವಾದ ಬೆಳವಣಿಗೆಗಳು ಸಾಕಷ್ಠಿವೆ. ವಿಶ್ಲೇಷಕರು ಯಾವ ರೀತಿ ಬೇಕಾದರೂ ವಿವರಿಸಬಹುದು. ಆದರೆ ಮುಖ್ಯವಾಗಿ ನಮ್ಮ ಅಗತ್ಯತೆ, ಸಾಮರ್ಥ್ಯವನ್ನು ನಾವು ಅರಿತು ನಡೆಸಿದಲ್ಲಿ ಮಾತ್ರ ಚಟುವಟಿಕೆ ಉತ್ತಮ ಫಲ ಕೊಡಬಹುದು. ಕೆಲವು ಉದಾಹರಣೆಗಳನ್ನು ಪರಿಶೀಲಿಸೋಣ;

    The State Bank of India headquarters at Nariman Point in Mumbai/ Wikipedia

    ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ :ಈ ಷೇರು ಸೆನ್ಸೆಕ್ಸ್‌ ನ ಅಂಗವಾಗಿದ್ದು ಬ್ಯಾಂಕಿಂಗ್‌ ಕ್ಷೇತ್ರದ ಸರ್ಕಾರಿ ವಲಯದ ಅಗ್ರಮಾನ್ಯ ಬ್ಯಾಂಕ್‌ ಆಗಿದೆ. ಈ ಬ್ಯಾಂಕಿನ ಷೇರು ಕಳೆದ ಒಂದು ವರ್ಷದಲ್ಲಿ ರೂ.150 ಸಮೀಪವಿದ್ದು ಸೆಪ್ಟೆಂಬರ್‌ ಮಾಸಾಂತ್ಯದ ಫಲಿತಾಂಶ ಬಂದ ಸಮಯದಲ್ಲಿ ವಿವಿಧ ಬ್ರೋಕಿಂಗ್‌ ಸಂಸ್ಥೆಗಳು ರೇಟಿಂಗ್‌ ನೀಡಿದವು. ಆಗ ಆಂಬಿಟ್‌ ಸಂಸ್ಥೆಯು ಈ ಷೇರಿಗೆ ರೂ.402 ರ ಟಾರ್ಗೆಟ್‌ ನೀಡಿತು. ಉಳಿದಂತೆ ಕೋಟಕ್‌ ಮಹೀಂದ್ರ ರೂ.340 ರ, ಸಿ ಎಲ್‌ ಎಸ್‌ ಎ ರೂ.330 ರ ಟಾರ್ಗೆಟ್‌ ನೀಡಿದ್ದವು. ಕ್ರೆಡಿಟ್‌ ಸೂಸ್ಸೆ ರೂ.270 ರ, ಮಾರ್ಗನ್‌ ಸ್ಟಾನ್ಲೆ ರೂ.280 ರ ಟಾರ್ಗೆಟ್‌ ನೀಡಿದ್ದವು. ಸೋಜಿಗವೆಂದರೆ ಈ ಎಲ್ಲಾ ಟಾರ್ಗೆಟ್‌ ಗಳನ್ನು ಈ ಷೇರು ಫೆಬ್ರವರಿಯಲ್ಲಿಯೇ ನೀಡಿ ರೂ.426 ರವರೆಗೂ ಜಿಗಿದು ವಾರ್ಷಿಕ ದಾಖಲೆಯನ್ನು ನಿರ್ಮಿಸಿತು. ಆದರೆ ಈ ಬೆಲೆ ಸ್ಥಿರತೆ ಕಾಣದೆ ಏಪ್ರಿಲ್‌ ನಲ್ಲಿ ರೂ.321 ರವರೆಗೂ ಜಾರಿತು.

    ಈಗ ಬ್ಯಾಂಕ್‌ ತನ್ನ ಸಾಧನೆಯ ಅಂಕಿ ಅಂಶಗಳನ್ನು ಪ್ರಕಟಿಸಿದ ನಂತರ ರೂ.404 ರವರೆಗೂ ಪುಟಿದೆದ್ದು ರೂ.401 ರ ಸಮೀಪ ಕೊನಗೊಂಡಿದೆ. ವಿವಿಧ ಬ್ರೋಕಿಂಗ್‌ ಸಂಸ್ಥೆಗಳು ವೈವಿಧ್ಯಮಯ ರೇಟಿಂಗ್‌ ಮತ್ತು ಟಾರ್ಗೆಟ್‌ ಗಳನ್ನು ನೀಡಿದರೂ ಪೇಟೆಯಲ್ಲಿ ಷೇರಿನ ಬೆಲೆ ತನ್ನ ಘನತೆ, ಗಾಂಭೀರ್ಯಕ್ಕೆ ತಕ್ಕಂತೆ, ಬೇಡಿಕೆ ಪೂರೈಕೆಗಳನ್ನು ಸಮತೋಲನಗೊಳಿಸಿ, ಸಂದರ್ಭಕ್ಕೆ ತಕ್ಕಂತೆ ಸ್ಪಂದಿಸಿ ಏರಿಳಿತಗಳನ್ನು ಪ್ರದರ್ಶಿಸಿದೆ.

    ಪಿರಮಲ್‌ ಎಂಟರ್‌ ಪ್ರೈಸಸ್‌ : ಹಿಂದಿನವಾರ ಪ್ರಮುಖ ಕಂಪನಿಯಾದ ಪಿರಮಲ್‌ ಎಂಟರ್‌ ಪ್ರೈಸಸ್‌ ತನ್ನ ಮಾರ್ಚ್‌ ಅಂತ್ಯದ ಅಂಕಿ ಅಂಶಗಳನ್ನು ಪ್ರಕಟಿಸಿ, ಷೇರುದಾರರಿಗೆ ಪ್ರತಿ ಷೇರಿಗೆ ರೂ.33 ರಂತೆ ಡಿವಿಡೆಂಡ್‌ ಪ್ರಕಟಿಸಿತು. ಆ ಸಮಯದಲ್ಲಿ ಷೇರಿನ ಬೆಲೆ ರೂ.1,625 ರವರೆಗೂ ಕುಸಿಯಿತು. ಆದರೆ ಅಲ್ಲಿಂದ ಒಂದೇ ವಾರದಲ್ಲಿ ರೂ.1,748 ರವರೆಗೂ ಪುಟಿದೆದ್ದಿದೆ. ಇನ್ನೂ ಡಿವಿಡೆಂಡ್‌ ವಿತರಿಸಲು ನಿಗದಿತ ದಿನ ಗೊತ್ತುಪಡಿಸದ ಕಾರಣ ಈ ಷೇರಿನಲ್ಲಿ ಚಟುವಟಿಕೆಯು ಚುರುಕಾಗಿರುವ ಸಾಧ್ಯತೆಯೇ ಹೆಚ್ಚು.

    ಇಂಡಿಯಾ ಬುಲ್‌ ಹೌಸಿಂಗ್‌ ಫೈನಾನ್ಸ್:‌ಬುಧವಾರದಂದು ಈ ಕಂಪನಿ ತನ್ನ ಫಲಿತಾಂಶವನ್ನು ಪ್ರಕಟಿಸಿತು. ಕಂಪನಿ ಆಕರ್ಷಕವಾದ ಅಂಕಿ ಅಂಶಗಳೊಂದಿಗೆ ಪ್ರತಿ ಷೇರಿಗೆ ರೂ.9 ರಂತೆ ಡಿವಿಡೆಂಡ್‌ ಪ್ರಕಟಿಸಿತು. ಈ ಎರಡೂ ಅಂಶಗಳು ಗುರುವಾರದಂದು ಷೇರಿನ ಬೆಲೆ ರೂ.193 ರ ಸಮೀಪದಿಂದ ರೂ.215 ರವರೆಗೂ ಜಿಗಿತ ಕಾಣುವಂತೆ ಮಾಡಿತು. ಈ ಕಂಪನಿಯು ಲಕ್ಷ್ಮೀವಿಲಾಸ್‌ ಬ್ಯಾಂಕನ್ನು ತನ್ನ ಸಮೂಹಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿತ್ತು. ಈ ಕಂಪನಿಯು ಹಿಂದಿನ ವರ್ಷದವರೆಗೂ ನಿರಂತರವಾಗಿ ಪ್ರತಿ ತ್ರೈಮಾಸಿಕದಲ್ಲೂ ಆಕರ್ಷಕ ಡಿವಿಡೆಂಡ್‌ ವಿತರಿಸಿದ ದಾಖಲೆ ಹೊಂದಿದೆ.

    ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್:ಈ ಕಂಪನಿಯು ಗುರುವಾರದಂದು ಉತ್ತಮ ಫಲಿತಾಂಶದೊಂದಿಗೆ ಪ್ರತಿ ಷೇರಿಗೆ, ದಾಖಲೆಯ ರೂ.22.75 ರಂತೆ ಡಿವಿಡೆಂಡ್‌ ಪ್ರಕಟಿಸಿದ ಕಾರಣ ಷೇರಿನ ಬೆಲೆ ಶುಕ್ರವಾರ ವಾರ್ಷಿಕ ಗರಿಷ್ಠ ರೂ.288 ರ ದಾಖಲೆ ನಿರ್ಮಿಸಿತು. ನಂತರ ರೂ.275 ರ ಸಮೀಪಕ್ಕೆ ಕೊನೆಗೊಂಡಿತು.

    ಕ್ಲಾರಿಯಂಟ್‌ ಇಂಡಿಯಾ:ಈ ಕಂಪನಿ ತನ್ನ ಷೇರುದಾರರಿಗೆ ಆಕರ್ಷಕವಾದ ಪ್ರಮಾಣದಲ್ಲಿ ಡಿವಿಡೆಂಡನ್ನು ವಿತರಿಸುವ ದಾಖಲೆ ಹೊಂದಿದೆ. ಹಿಂದಿನ ವರ್ಷ ಜುಲೈ ನಲ್ಲಿ ಪ್ರತಿ ಷೇರಿಗೆ ರೂ.140 ರಂತೆ ವಿಶೇಷ ಡಿವಿಡೆಂಡನ್ನು ವಿತರಿಸಿತು, ನಂತರ ಆಗಸ್ಟ್‌ ತಿಂಗಳಲ್ಲಿ ಪ್ರತಿ ಷೇರಿಗೆ ರೂ.11 ರಂತೆ ಡಿವಿಡೆಂಡನ್ನು ವಿತರಿಸಿತು. ಈ ವರ್ಷ ಫೆಬ್ರವರಿಯಲ್ಲಿ ಪ್ರತಿ ಷೇರಿಗೆ ರೂ.50 ರಂತೆ ಮತ್ತೊಮ್ಮೆ ಡಿವಿಡೆಂಡನ್ನು ವಿತರಿಸಿದ ದಾಖಲೆ ಹೊಂದಿದೆ.

    ಈ ಹಿನ್ನೆಲೆಯಲ್ಲಿ ಈ ಕಂಪನಿ ತನ್ನ ಫಲಿತಾಂಶವನ್ನು ಪ್ರಕಟಿಸುವ ದಿನದವರೆಗೂ ಚುರುಕಾದ ವಹಿವಾಟು ಪ್ರದರ್ಶಿಸಿ, ಗರಿಷ್ಠ ರೂ.530 ನ್ನು ತಲುಪಿತು. ಆದರೆ ಕಂಪನಿ ಪ್ರತಿ ಷೇರಿಗೆ ರೂ.15 ರಂತೆ ಡಿವಿಡೆಂಡ್‌ ಪ್ರಕಟಿಸಿದ್ದು ಪೇಟೆಗೆ ಸಮಾಧಾನವಾಗದ ಕಾರಣ ಷೇರಿನ ಬೆಲೆ ರೂ.476 ರವರೆಗೂ ಜಾರಿತು.

    ಆಯ್ಕೆ ಮಾಡಬೇಕಾಗಿರುವ ಕಂಪನಿ ಉತ್ತಮವಾಗಿದ್ದರೂ ಖರೀದಿಸುವ ಸಮಯದಲ್ಲಿ ಅದು ಇಳಿಕೆಯಲ್ಲಿದ್ದು ಉತ್ತಮ ಮೌಲ್ಯಾದಾರಿತವಾಗಿರಬೇಕು. ಈ ರೀತಿಯ ಅವಕಾಶಗಳನ್ನು ಆಗಿಂದಾಗ್ಗೆ ಪ್ರದರ್ಶಿಸುವ ಪೇಟೆಯಲ್ಲಿ ಸುರಕ್ಷಿತ ಮಟ್ಟದಲ್ಲಿರಬೇಕಾದಲ್ಲಿ ವಿಶೇಷವಾದ ಅರಿವು, ಅಧ್ಯಯನ, ಮಾಹಿತಿ, ಅನುಭವ, ಮಾರ್ಗದರ್ಶನಗಳ ಅವಶ್ಯಕ. ಈ ಕಾರಣದಿಂದಾಗಿ ಹೂಡಿಕೆದಾರರು ಆಯ್ಕೆ ಮಾಡಿಕೊಳ್ಳಬೇಕಾದ ಬ್ರೋಕಿಂಗ್‌ ಸಂಸ್ಥೆಯು ಆ ರೀತಿಯ ಸೇವೆಗಳನ್ನು ಒದಗಿಸುವಂತಿದ್ದರೆ ಅವರಿಗೆ ನೀಡಬಹುದಾದ ವೃತ್ತಿಪರ ಶುಲ್ಕವನ್ನು ಚೌಕಾಶಿ ಮಾಡದೆ ಪಾವತಿಸಿ ಯೋಗ್ಯವಾದ ಸೇವೆ ಪಡೆದುಕೊಂಡಲ್ಲಿ ನ್ಯಾಯಸಮ್ಮತವಾಗಿರುತ್ತದೆ.

    ಹೊಸದಾಗಿ ಪೇಟೆ ಪ್ರವೇಶಿಸುವವರು ಆರಂಭದಲ್ಲಿ ಸಣ್ಣ ಗಾತ್ರದ ಚಟುವಟಿಕೆ ನಡೆಸಿ ಅನುಭವ ಪಡೆದು ನಂತರ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೆಚ್ಚಿಸಿಕೊಳ್ಳುವುದು ಸೂಕ್ತ. ಈಗಿನ ಪೇಟೆಯಲ್ಲಿ ಆರಂಭದಲ್ಲಿ ಹೂಡಿಕೆಯಾಗಿ ಪ್ರವೇಶಿಸಿದರೂ, ನಂತರದಲ್ಲಿ ವ್ಯವಹಾರದಂತೆ ದೊರೆತ ಅವಕಾಶಗಳನ್ನು ತಮ್ಮದಾಗಿಸಿಕೊಂಡಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂಬುದು ಸದಾ ನೆನಪಿನಲ್ಲಿಡಬೇಕಾದ ಅಂಶ.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!