27.6 C
Karnataka
Monday, May 13, 2024

    ಸ್ಮಾಲ್‌ ಕ್ಯಾಪ್‌, ಮಿಡ್‌ ಕ್ಯಾಪ್‌ ಗಳಲ್ಲಿ ಹೂಡಿಕೆಗೆ ಮುನ್ನ ಹೆಚ್ಚಿನ ಚಿಂತನೆ ಅಗತ್ಯ

    Must read

    ಮುಂಜಾನೆ ಪ್ರಭಾತೇ ಕರದರ್ಶನಂ ಎಂದು ಜಾಗೃತಗೊಂಡಾಗಲಿಂದಲೂ ನಮ್ಮ ಗೊಂದಲಮಯ ಶೈಲಿ ಜೀವನ ಆರಂಭವಾಗುವುದೇ ಮೊದಲಿಗೆ ಪೆಪ್ಸೋಡೆಂಟ್‌ ಬಳಸಲೋ ಅಥವಾ ಕ್ಲೋಸ್‌ ಅಪ್‌ ಬಳಸಲೋ ಎಂದು .ನಂತರ ಅಡುಗೆ ಮನೆಯತ್ತ ಧಾವಿಸಿದಾಗ ಅಲ್ಲಿಯೂ ನಿರ್ಧರಿಸಲಸಾಧ್ಯವಾದ ಆಯ್ಕೆಗಳು, ಮುಂಜಾನೆ ಉಲ್ಲಾಸಭರಿತರಾಗಿರಲು ತಾಜಾ ಟೀ ರೂಬಿ ಟೀ, ರೆಡ್‌ ಲೇಬಲ್‌, 3 ರೋಸಸ್‌, ತಾಜ್‌ ಮಹಲ್‌ ಟೀ, ಬ್ರೂ, ಬೂಸ್ಟ್‌, ಹಾರ್ಲಿಕ್ಸ್‌ ಲೈಟ್‌, ಹಾರ್ಲಿಕ್ಸ್‌ ವುಮನ್‌ ( ಪುಟಾಣಿಗಳಿಗೆ ಹಾರ್ಲಿಕ್ಸ್‌ ಜೂನಿಯರ್) ಗಳಲ್ಲಿ ಆಯ್ಕೆ ಮಾಡಿ ಕುಡಿದು ಹೊರಬರುವಷ್ಠರಲ್ಲಿ ಸಮಯದ ಅಭಾವದ ಕಾರಣ ಪತ್ರಿಕೆಗಳತ್ತ ಕಣ್ಣಾಯಿಸಿ ಮುಂದಿನ ದಿನಚರಿಯತ್ತ ಸಾಗುವುದು.

    ಬಾತ್‌ ರೂಂ ನತ್ತ ಸಾಗಿದಾಗ ಅಲ್ಲಿ ಕ್ಲಿನಿಕ್‌ ಪ್ಲಸ್‌, ಡೋವ್‌ ಶಾಂಪೂ, ಸನ್‌ ಸಿಲ್ಕ್‌, ಗಳಲ್ಲಿ ಯಾವುದಾದರೊಂದು ಆಯ್ಕೆ ಮಾಡಿಕೊಂಡ ನಂತರ ಲಿರಿಲ್‌, ಪಿಯರ್ಸ್‌, ಹಮಾಮ್‌, ರೆಕ್ಸೊನಾ, ಲಕ್ಸ್‌, ಡೋವ್‌, ಲೈಫ್‌ ಬಾಯ್‌ ಗಳಲ್ಲಿ ಆಯ್ಕೆ ಮಾಡಿಕೊಳ್ಳುವುದು. ಬಾತ್‌ ರೂಂ ನಿಂದ ಹೊರಬಂದಮೇಲೆ ಪಾಂಡ್ಸ್‌ ಡ್ರೀಂ ಫ್ಲೋ ಪೌಡರ್‌, ಗ್ಲೋ ಅಂಡ್‌ ಲೌಲಿ, ಲ್ಯಾಕ್ಮೆ ಪರ್ಫೆಕ್ಟ್‌, ಆಕ್ಸೆ ಸಿಗ್ನೇಚರ್‌ , ವ್ಯಾಸಲೀನ್‌ ಗಳನ್ನು ಬಳಸಿ ಟ್ರಿಂ ಆಗಿ ಮನೆಯ ಸಭಾಂಗಣದಲ್ಲಿ ಕುಳಿತು ಟಿ ವಿ ನೋಡೋಣ ಎಂದು ಆನ್‌ ಮಾಡಿದಾಗ ಲಿರಿಲ್‌, ಹಾರ್ಲಿಕ್ಸ್‌, ಗ್ಲೋ ಅಂಡ್‌ ಲೌಲಿಗಳೊಂದಿಗೆ ಕಲೆ ಹೋಗಲಾಡಿಸಲು ಸರ್ಫ್‌ , ಹೊಸ ವಿಚಾರದ ವೀಲ್‌, ರಿನ್‌ ನ ಜಾಹಿರಾತು ಹೀಗೆ ಸಾಗಿದ ಲಾಕ್‌ ಡೌನ್‌ ದಿನಚರಿಯಲ್ಲಿ ಮಧ್ಯೆ ಮಧ್ಯೆ ಬೇಸರವೆನಿಸಿದಾಗ knorr noodles ಅಥವಾ kwality walls ಐಸ್‌ ಕ್ರೀಂ, ಸವಿಯುವ ಮೂಲಕ ದಿನ ಕಳೆಯುವುದೇ ಮನೆಯಲ್ಲಿಯೇ ಇರಿ ಮನರಂಜನೆ ತೆಗೊಳ್ಳಿ ಎಂದಂತಾಗಿದೆ.

    ಬೆಂಗಳೂರಿನಲ್ಲಿರುವ ಹಿಂದೂಸ್ಥಾನ್‌ ಯುನಿಲೀವರ್‌ ನ ಸಂಶೋಧನ ಕೇಂದ್ರ

    ಇದೇನು ಇಷ್ಚು ಐಟಂಗಳ ಪ್ರಚಾರ ಮಾಡುತ್ತಿರುವೆನೆಂದು ಭಾವಿಸಬೇಡಿ. ಇದು ನಮ್ಮ ನಿತ್ಯದಲ್ಲಿ ಪ್ರತಿಯೊಂದು ಕ್ರಿಯೆಗಳಲ್ಲಿ ತೇಲಿಬಿಡಲಾಗುತ್ತಿರುವ ವ್ಯವಹಾರಿಕ ಪ್ರಕ್ರಿಯೆಗಳು. ಮೇಲೆ ಹೆಸರಿಸಿದ ಎಲ್ಲಾ ಉತ್ಪನ್ನಗಳೂ ಅಂತಾರಾಷ್ಟ್ರೀಯ ದೈತ್ಯ ಕಂಪನಿ ಹಿಂದೂಸ್ಥಾನ್‌ ಯುನಿಲೀವರ್‌ ನ ಉತ್ಪನ್ನಗಳಾಗಿವೆ. ಇವುಗಳೊಂದಿಗೆ ಅನ್ನಪೂರ್ಣ, ಡೊಮೆಕ್ಸ್‌, ಮುಂತಾದ ದಿನಬಳಕೆಯ ಸಾಮಾಗ್ರಿಗಳು ಸಹ ಈ ಕಂಪನಿಯ ಉತ್ಪನ್ನಗಳಾಗಿವೆ. ಸಾಮಾನ್ಯವಾಗಿ ಒಂದು ಕಂಪನಿ ಒಂದೇ ಬ್ರಾಂಡನ್ನು ಅಳವಡಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಒಂದೇ ಕಂಪನಿ ಗ್ರಾಹಕರ ಚಿಂತನೆಗಳನ್ನೇ ಬಂಡವಾಳವಾಗಿಸಿಕೊಂಡು, ತನ್ನದೇ ಉತ್ಪನ್ನಗಳ ಮೇಲೆ ಸ್ಪರ್ಧಾತ್ಮಕ ವಾತಾವರಣ ನಿರ್ಮಿಸಿ ಜಯಶಾಲಿಯಾಗುತ್ತಿದೆ. ಇದು ಒಂದು ಮಾರ್ಕೆಟಿಂಗ್‌ ತಂತ್ರವಾಗಿದೆ. ಈ ಕಂಪನಿಯಲ್ಲಿ ಕಳೆದ ಮೂರು ನಾಲ್ಕು ದಶಕಗಳಲ್ಲಿ ವಿವಿಧ ವಲಯದ ಕಂಪನಿಗಳು ವಿಲೀನಗೊಂಡಿವೆ. ಕೆಲವು ಕಂಪನಿಗಳು ಸ್ವಾಧೀನಗೊಳಿಸಿಕೊಳ್ಳಲಾಗಿದೆ. ಹಾಗಾಗಿ ಈ ಮಟ್ಟದ ಬೆಳವಣಿಗೆ ಸಾಧ್ಯವಾಗಿದೆ. ಗ್ರಾಹಕರ ದಿನಬಳಕೆಯ ಸಾಮಾಗ್ರಿ ವಲಯದಲ್ಲಿ ಅಗ್ರಮಾನ್ಯ ಸ್ಥಾನದಲ್ಲಿದೆ.

    ಹಿಂದೂಸ್ಥಾನ್‌ ಯುನಿಲೀವರ್‌ ಕಂಪನಿಯು ಈ ಮಟ್ಟದ ಗಜಗಾತ್ರಕ್ಕೆ ಬೆಳೆಯಲು ಅದರಲ್ಲಿ ವಿಲೀನಗೊಂಡಿರುವ ಬ್ರೂಕ್‌ ಬಾಂಡ್‌, ಲಿಪ್ಟನ್‌, ಲ್ಯಾಕ್ಮೆ,ಪಾಂಡ್ಸ್, ಇಂದುಲೇಖ, ಕಿಸಾನ್‌, ಕ್ವಾಲಿಟಿ ವಾಲ್ಸ್‌, ಗ್ಲಾಕ್ಸೋ ಸ್ಮಿತ್‌ ಕ್ಲೈನ್‌ ಕನ್ಸೂಮರ್ಸ್‌ ಕಂಪನಿಗಳ ಕೊಡುಗೆಯೂ ಅಪಾರವಾಗಿದೆ.

    ಭಾರತದ ಶ್ರೀಮಂತರ ಪಟ್ಟಿಯಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್‌ ಕಂಪನಿಯ ರೂ.10 ರ ಮುಖಬೆಲೆ ಷೇರು ರೂ.2,100 ರ ಸಮೀಪದಲ್ಲಿ ವಹಿವಾಟಾಗುತ್ತಿದೆ. ಆದರೆ ರೂ.1 ರ ಮುಖಬೆಲೆಯ ಹಿಂದೂಸ್ಥಾನ್‌ ಯುನಿಲೀವರ್‌ ಷೇರಿನ ಬೆಲೆ ರೂ.2,300 ನ್ನು ದಾಟಿರುವುದು ಈ ಕಂಪನಿಯ ಮಟ್ಟವನ್ನು ತೋರಿಸುತ್ತದೆ. ಅಲ್ಲದೆ ಈ ಕಂಪನಿಯು ಈ ತಿಂಗಳ 14 ರಂದು ನಿಗದಿಪಡಿಸಿರುವ ಡಿವಿಡೆಂಡ್‌ ರೂ.17.00 ಸೇರಿ ಒಟ್ಟು ರೂ.40.50 ಪೈಸೆಯಷ್ಠು ಡಿವಿಡೆಂಡ್‌ ವಿತರಿಸಿದಂತಾಗುತ್ತದೆ.

    ಸಾಮಾನ್ಯವಾಗಿ ಷೇರುಪೇಟೆಯ ಹೂಡಿಕೆಗೆ ತೊಡಗಿಸಿಕೊಂಡವರಲ್ಲಿ ತಮ್ಮ ಹೂಡಿಕೆ ಗುಚ್ಚದಲ್ಲಿ ಕೆಲವೇ ಕೆಲವು ಆಯ್ದ ಕಂಪನಿಗಳಿರಲಿ ಎಂಬ ಭಾವನೆ ಇರುತ್ತದೆ. ಇದರಿಂದ ಅಪಾಯವು ಹೆಚ್ಚಾಗುವ ಸಾಧ್ಯತೆಯಿದೆ. ಕಾರಣ ಸೀಮಿತ ವಲಯದ ಹೂಡಿಕೆಯಾದ್ದರಿಂದ ಅಲ್ಲಿ ಉಂಟಾಗುವ ಏರುಪೇರುಗಳು ಭಾರಿ ಪ್ರಮಾಣದಲ್ಲಿ ಪ್ರಭಾವಿಯಾಗುತ್ತದೆ. ಆದರೆ ಹೂಡಿಕೆ ಗುಚ್ಚದಲ್ಲಿ ಅನೇಕ ಕಂಪನಿಗಳ ಷೇರುಗಳಿದ್ದರೆ, ವಲಯವಾರು ಬದಲಾವಣೆಗಳು ಸೀಮಿತವಾದ್ದರಿಂದ ಅಪಾಯದ ಮಟ್ಟ ಕಡಿಮೆಯಾಗಿರುತ್ತದೆ. ಬಹುಕಂಪನಿಗಳ ಹೂಡಿಕೆಗುಚ್ಚವು ಗೊಂದಲಗಳ ಸಮಯದಲ್ಲಿ ಒಂದು ರೀತಿಯ ಷಾಕ್‌ ಅಬ್ಸಾರ್ಬರ್‌ ರೀತಿ ಕೆಲಸ ಮಾಡುತ್ತದೆ.

    ಸಧ್ಯ ಪೇಟೆಗಳು ಗರಿಷ್ಠದಲ್ಲಿರುವ ಕಾರಣ ಸಣ್ಣ ಸಣ್ಣ ಕಾರಣಗಳಿಗೂ ಭಾರಿ ಏರುಪೇರು ಪ್ರದರ್ಶಿತವಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹ್ಯಾಪಿಯೆಸ್ಟ್‌ ಮೈಂಡ್ಸ್‌ ‌ ಟೆಕ್ನಾಲಜೀಸ್ ‌ ಷೇರಿನ ಇತ್ತೀಚಿನ ಚಲನೆಯಾಗಿದೆ.

    ಈ ಕಂಪನಿಯು ಈ ತಿಂಗಳ ಎರಡನೇ ವಾರದಲ್ಲಿ ಪ್ರಕಟಿಸಿದ ತನ್ನ ಫಲಿತಾಂಶದ ಸಮಯದಲ್ಲಿ ರೂ.860 ರ ಸಮೀಪದಲ್ಲಿದ್ದು, ಪ್ರಕಟವಾದ ನಂತರ ರೂ.740 ರ ಸಮೀಪಕ್ಕೆ ಕುಸಿಯಿತು. 26 ರಂದು ರೂ.770 ರ ಸಮೀಪದಿಂದ ರೂ.809 ಕ್ಕೆ ಜಿಗಿಯಿತು, 27 ರಂದು ರೂ.873 ಕ್ಕೆ ಜಿಗಿಯಿತು. 28 ರಂದು ರೂ.910 ನ್ನು ತಲುಪಿ ರೂ.873 ರಲ್ಲಿ ಕೊನೆಗೊಂಡಿದೆ.

    ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಷೇರಿನ ಬೆಲೆ ಗರಿಷ್ಠ ಹಂತದಲ್ಲಿದ್ದಾಗ ಪ್ರದರ್ಶಿತವಾದ ವಹಿವಾಟಿನ ಗಾತ್ರ ಮಾತ್ರ ಅಸಹಜ ಪ್ರಮಾಣದ್ದಾಗಿದೆ. ಈ ಕಂಪನಿ ಘೋಷಿಸಿದ ಫಲಿತಾಂಶದಲ್ಲಿ ಪ್ರತಿ ಷೇರಿಗೆ ರೂ.3 ರ ಡಿವಿಡೆಂಡ್‌ ಗೆ ಜೂನ್‌ ಅಂತ್ಯದಲ್ಲಿ ನಿಗದಿತ ದಿನವಾಗಿದ್ದರೂ ಕೇವಲ ಮೂರುದಿನಗಳಲ್ಲಿ ರೂ.140ರಷ್ಠು ಏರಿಕೆ ಕಂಡಿರುವುದು ಅಸಹಜವಲವೇ? ಈ ಪರಿಸ್ಥಿತಿಯ ಲಾಭಪಡೆದುಕೊಳ್ಳುವುದು ಕರಗತ ಮಾಡಿಕೊಂಡಲ್ಲಿ ಮಾತ್ರ ಷೇರುಪೇಟೆಯಲ್ಲಿ ಯಶಸ್ಸು ಕಾಣಲು ಸಾಧ್ಯ.

    ಈ ಹಂತದಲ್ಲಿ ಕೆಳ ಮಧ್ಯಮ ಮತ್ತು ಮಧ್ಯಮ ವಲಯದ ಕಂಪನಿಗಳನೇಕವು ಕಂಡರಿಯದ ರೀತಿಯಲ್ಲಿ ಏರಿಕೆ ಪ್ರದರ್ಶಿಸಿವೆ. ಈ ಸಮಯದಲ್ಲಿ ಅಂತಹವುಗಳಿಂದ ದೂರವಿದ್ದಲ್ಲಿ ಮಾತ್ರ ಬಂಡವಾಳ ಸುರಕ್ಷಿತ. HIL Ltd ಕಂಪನಿಯು ಕಳೆದ ಒಂದೇ ತಿಂಗಳಲ್ಲಿ ರೂ.3,380 ರಿಂದ ರೂ.5,049 ರವರೆಗೂ ಏರಿಕ ಕಂಡಿದೆ. ಕಂಪನಿ ಸಾಧನೆಯು ಉತ್ತಮವಾಗಿದ್ದರೂ ಈ ಪ್ರಮಾಣದ ಏರಿಕೆ ಸಹಜವೆನಿಸದು. ರೂ.825 ರ ವಾರ್ಷಿಕ ಕನಿಷ್ಠದಲ್ಲಿದ್ದ ಈ ಷೇರು ರೂ.5,000 ದ ಗಡಿಯನ್ನು ದಾಟಿರುವುದು ಅಸಹಜವಲ್ಲವೇ? Praj Industries ಷೇರಿನ ಬೆಲೆ 2020 ರಲ್ಲಿ ರೂ.43 ರ ಕನಿಷ್ಠದಲ್ಲಿದ್ದ ಷೇರು ರೂ.398 ರವರೆಗೂ ಜಿಗಿದು ರೂ.334 ರ ಸಮೀಪವಿದೆ. ಈ ರೀತಿ ಅಸಹಜ ರೀತಿಯ ಚಟುವಟಿಕೆಗಳಲ್ಲಿರುವ ಅನೇಕ ಕಂಪನಿಗಳಿಂದ ದೂರವಿರುವುದೇ ಒಳಿತು. ಇಲ್ಲವಾದಲ್ಲಿ ದೀರ್ಘಕಾಲೀನ ಹೂಡಿಕೆದಾರರಾಗದೆ, ಶಾಶ್ವತ ಹೂಡಿಕೆದಾರರಾಗಬಹುದು.

    Angel Broking ಕಂಪನಿಯ ಷೇರು ರೂ.306 ರಲ್ಲಿ ವಿತರಣೆಯಾಗಿದ್ದು, ಅಕ್ಟೋಬರ್‌ ತಿಂಗಳಲ್ಲಿ ವಿತರಣೆಬೆಲೆಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿದ್ದ ಈ ಷೇರು ಕಳೆದ ಒಂದೇ ತಿಂಗಳಲ್ಲಿ ರೂ.355 ರ ಸಮೀಪದಿಂದ ರೂ.788 ರವರೆಗೂ ಜಿಗಿದು ರೂ.745 ರ ಸಮೀಪ ಕೊನೆಗೊಂಡಿದೆ. ಕೇವಲ ಒಂದೇ ತಿಂಗಳಲ್ಲಿ ದ್ವಿಗುಣಗೊಂಡಿರುವ ಈ ಸ್ಮಾಲ್‌ ಕ್ಯಾಪ್‌ ಲಾಭದ ನಗದೀಕರಣಕ್ಕೆ ಉತ್ತಮ ಅವಕಾಶ ಕಲ್ಪಿಸಿದೆ.

    ಮೂರು ವರ್ಷಗಳ ಹಿಂದೆ ರೂ.98 ರಂತೆ ಖರೀದಿಸಿದ ಅರವಿಂದ್‌ ಲಿಮಿಟೆಡ್‌,ರೂ.90 ರಂತೆ ಖರೀದಿಸಿದ ಗುಜರಾತ್‌ ಮಿನರಲ್ ಡೆವೆಲಪ್ಮೆಂಟ್‌ ಕಾರ್ಪೊರೇಷನ್‌,ರೂ.1,030 ರಲ್ಲಿ ಖರೀದಿಸಿದ ಗೋವಾ ಕಾರ್ಬನ್‌, ರೂ.93 ರಲ್ಲಿ ಖರೀದಿಸಿದ ಕೇಸೋರಾಂ ಇಂಡಸ್ಟ್ರೀಸ್‌, ರೂ.290 ರಂತೆ ಖರೀದಿಸಿದ ಲಾ ಓಪಾಲ ಆರ್‌ ಜಿ,ರೂ.315 ರಲ್ಲಿ ಖರೀದಿಸಿದ ರೇನ್‌ ಇಂಡಸ್ಟ್ರೀಸ್‌, ರೂ.800 ರಲ್ಲಿ ಖರೀದಿಸಿದ ಅಪೆಕ್ಸ್‌ ಫ್ರೋಜನ್‌, ಮುಂತಾದವು ಖರೀದಿಸಿದ ಬೆಲೆಯನ್ನು ಇದುವರೆಗೂ ತಲುಪದೆ, ಹೂಡಿಕೆದಾರರು ಕಾಯುತ್ತಿರುವುದು ಸಾಮಾನ್ಯವಾಗಿದೆ. ಈ ಪಟ್ಟಿಗೆ ಹೆಲ್ತ್‌ ಕೇರ್‌ ಗ್ಲೋಬಲ್‌, ಯೂನಿಕೆಂ ಲ್ಯಾಬೊರೆಟರೀಸ್‌, ಆದಿತ್ಯ ಬಿರ್ಲಾ ಕ್ಯಾಪಿಟಲ್‌, ಓರಿಯಂಟಲ್‌ ಕಾರ್ಬನ್‌, ಈಕ್ವಿಟಾಸ್‌ ಹೋಲ್ಡಿಂಗ್ಸ್‌, ಮುಂತಾದ ದೊಡ್ಡ ಪಟ್ಟಿಯೇ ಇದೆ. ಹಾಗಾಗಿ ಈ ಹಂತದಲ್ಲಿ ಅಗ್ರಮಾನ್ಯ ಕಂಪನಿಗಳನ್ನು ಹೊರತು ಪಡಿಸಿ ಸ್ಮಾಲ್‌ ಕ್ಯಾಪ್‌, ಮಿಡ್‌ ಕ್ಯಾಪ್‌ ಗಳಲ್ಲಿ ಹೂಡಿಕೆಗೆ ಮುನ್ನ ಹೆಚ್ಚಿನ ಚಿಂತನೆ ಅಗತ್ಯ.

    ಹೆಚ್ಚಿನ ಕಂಪನಿಗಳು ವಾರ್ಷಿಕ ಗರಿಷ್ಠದಲ್ಲಿರುವ ಸಮಯದಲ್ಲಿ ಕೈಲಿರುವ ಹಣವನ್ನು ಯಾವ ರೀತಿ ಹೂಡಿಕೆ ಮಾಡಬಹುದು ಎಂಬುದೇ ಸಮಸ್ಯೆಯಾಗಿದೆ. ಹರಿದಾಡುವ ಹಣ ಹೆಚ್ಚಿದೆ. ಹೂಡಿಕೆಗೆ ಕೇವಲ ಕೆಲವೇ ಕಂಪನಿಗಳಿವೆ. ಹೇಗೆ ನಿರ್ಧರಿಸುವುದು. ಪ್ರತಿ ತಿಂಗಳೂ ಮಾಸಾಂತ್ಯದಲ್ಲಿ ಬರುವ ಚುಕ್ತಾ ಚಕ್ರದ ಕಾರಣ ಷೇರಿನ ಬೆಲೆಗಳು ಭಾರಿ ಕುಸಿತ ಅಥವಾ ಅಸ್ವಾಭಾವಿಕ ಏರಿಕೆ ಪ್ರದರ್ಶಿಸುತ್ತವೆ. ಇದಕ್ಕೆ ಪೂರ್ವಾಬಾವಿಯಾಗಿ ಆ ತಿಂಗಳಲ್ಲಿ ಅತಿಯಾದ ಚಟುವಟಿಕೆಯಿಂದ ಕುಸಿದಿರುತ್ತವೆ ಅಥವಾ ಏರಿಕೆ ಕಂಡಿರುತ್ತವೆ. ಆ ತಿಂಗಳಲ್ಲಿ ಬ್ಯಾಂಕಿಂಗ್‌ ವಲಯದ ಷೇರುಗಳು, ವಿಶೇಷವಾಗಿ ಸೆನ್ಸೆಕ್ಸ್‌ ನಲ್ಲಿರುವ ಷೇರುಗಳು ಭಾರಿ ಕುಸಿತಕ್ಕೊಳಗಾದಾಗ ಖರೀದಿಸಿದಲ್ಲಿ, ಚುಕ್ತಾ ಚಕ್ರದೊಳಗೆ ಅಥವಾ ನಂತರದಲ್ಲಿ ಭಾರಿ ಚೇತರಿಕೆ ಕಾಣುವುದು ಈಗಿನ ವಹಿವಾಟಿನ ವಿಧವಾಗಿದೆ.

    ಅದೇ ರೀತಿ ಟೆಕ್ನಾಲಜಿ ವಲಯದ ಕಂಪನಿಗಳು, ಫಾರ್ಮಾ ವಲಯದ ಕಂಪನಿಗಳು ಸಹ ಭಾರಿ ಏರಿಳಿತಗಳನ್ನು ಪ್ರದರ್ಶಿಸುತ್ತಿವೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ನಿರ್ಧರಿಸುವುದು ಸಾಧ್ಯವಿಲ್ಲದಿದ್ದಲ್ಲಿ ಪ್ರತಿ ಷೇರಿಗೆ ರೂ.58 ರ ಡಿವಿಡೆಂಡ್‌ ಘೋಷಿಸಿರುವ BPCL, ಪ್ರತಿ ಷೇರಿಗೆ ರೂ.22.75 ರಂತೆ ಡಿವಿಡೆಂಡ್‌ ವಿತರಿಸಲಿರುವ Hindustan Petroleum Corporation Ltd, ಕಂಪನಿಗಳಲ್ಲಿ ಹೂಡಿಕೆ ಮಾಡಿದಲ್ಲಿ ಡಿವಿಡೆಂಡೂ ಸಿಗುತ್ತದೆ ಜೊತೆಗೆ ಷೇರಿನ ಬೆಲೆ ಹೆಚ್ಚಳಕ್ಕೆ ಅವಕಾಶವಿದ್ದು, ಅಧಿಕ ಲಾಭವನ್ನೂ ಪಡೆಯಬಹುದಾಗಿದೆ.

    ಕಂಪನಿಗಳು ಆಕರ್ಷಕ ಲಾಭಗಳಿಸಿದರೂ ಅದಕ್ಕೆ ತಕ್ಕಂತೆ ಡಿವಿಡೆಂಡ್‌ ಗಳನ್ನು ವಿತರಿಸುವಲ್ಲಿ ವಿಫಲವಾಗುತ್ತಿವೆ. ಅಂದರೆ ಷೇರುಪೇಟೆಯಲ್ಲಿ ಹೂಡಿಕೆಯ ಹಣ ವೃದ್ಧಿ ಕಾಣಬೇಕಾದರೆ, ಖರೀದಿಸಿದ ಷೇರನ್ನು ಲಾಭಕ್ಕೆ ಮಾರಾಟಮಾಡಿದಲ್ಲಿ ಮಾತ್ರ ಸಾಧ್ಯ. ಮ್ಯುಚುಯಲ್‌ ಫಂಡ್‌, ವಿತ್ತೀಯ ಸಂಸ್ಥೆಗಳು, ವೆಂಚರ್‌ ಕ್ಯಾಪಟಲಿಸ್ಟ್‌, ಪ್ರೈವೇಟ್‌ ಈಕ್ವಿಟಿ ಇನ್ವೆಸ್ಟರ್‌ ಗಳ ಈ ದಿನಗಳಲ್ಲಿ ಯಾವುದೇ ಷೇರಿನ ಬಗ್ಗೆ ಭಾವನಾತ್ಮಕ ನಂಟು ಬೇಡ. ವಹಿವಾಟನ್ನು ಸಣ್ಣ ಪ್ರಮಾಣದ ಅಂದರೆ 50, 100 ರ ಸಂಖ್ಯೆಯ ಷೇರುಗಳಲ್ಲಿ ನಡೆಸಿದಲ್ಲಿ ಅಪಾಯದ ಮಟ್ಟ ಕಡಿಮೆಯಾಗಿರುತ್ತದೆ. ಚಟುವಟಿಕೆಯಲ್ಲಿ ಚಿಂತನೆ, ವಿಶ್ಲೇಷಣೆಗಳಿಗೆ ತೆರೆದಿಡು ಮನ, ಸ್ವಾವಲಂಭಿ ನಿರ್ಧಾರದಮೇಲಿರಲಿ ಸದಾ ನಿಮ್ಮ ಗಮನ.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!