23.6 C
Karnataka
Thursday, May 21, 2026
    Home Blog Page 162

    ಒಂದು ಕಡೆ ನಾವು ಆತ್ಮ ನಿರ್ಭರರಾಗಬೇಕು. ಇನ್ನೊಂದು ಕಡೆ ಜಾಗತೀಕರಣದ ಹೊಡೆತಕ್ಕೆ ಪಕ್ಕಾಗಬೇಕು

    ನೂತನ

    ಡ್ರ್ಯಾಗನ್ ಫ್ರುಟ್ ಎಂಬ ಹಣ್ಣು  ಆಕಾರದಲ್ಲೇನು ಅಂಥಾ ದೊಡ್ಡದಲ್ಲ.  ಗುಲಾಬಿ ಬಣ್ದದ  ದೇಹದ  ಮೇಲೆ  ಹಳದಿಯ ಪಕಳೆಗಳು. ಹೊರನೋಟಕ್ಕೆ ಸುಂದರವಾಗಿ ಕಾಣುತ್ತದೆ. ಇಂಥ ಹಣ್ಣಿನ ರುಚಿಯನ್ನು  ಒಮ್ಮೆ ನೋಡಬೇಕೆನ್ನಿಸಿತು.ಮಾರ್ಟಗಳಿಗೋ ಮಾಲ್ ಗಳಿಗೋ ಹೋದರೆ ಅಲ್ಲಿನ ಅಂಗಡಿಗಳಲ್ಲಿ ಇಂಥ ಬಣ್ಣ ಬಣ್ಣದ ತರಹೆವಾರು ಹಣ್ಣು- ತರಕಾರಿಗಳಿರುತ್ತವೆ. ಅವು ಬಣ್ಣದಿಂದಲೇ ಆಕರ್ಷಿಸುತ್ತವೆ. ಹಾಗೆ  ಸಾಲಾಗಿ ಜೋಡಿಸಿಟ್ಟ ನೂರಾರು ಟ್ರೇಗಳಲ್ಲಿ ಡ್ರ್ಯಾಗನ್ ಫ್ರುಟ್ ಭಿನ್ನವಾಗಿ ಕಾಣುತ್ತದೆ. ಅದರ ಹೆಸರು ಕೇಳಿ ಚೀನಾದ್ದೇ ಎಂದು ಕಣ್ಣಗಲಿಸುತ್ತಿರುವಾಗಲೇ ಅದು ಅಮೇರಿಕಾದ ಹಣ್ಣು ಎಂದು ತಿಳಿದು ಕೊಂಚ ನಿರಾಳವಾಯಿತು.

    ಸಾವಿರಾರು ಮೈಲಿ ದಾಟಿ ಬರುವ ಇಂಥ ಹಣ್ಣುಗಳು ಹೊತ್ತು ಬರುವ ಬ್ಯಾಕ್ಟೀರಿಯಾಗಳ ಬಗ್ಗೆ ನನಗೆ ಸದಾ ಎಚ್ಚರ. ಏಕೆಂದರೆ ಅವು ಬಂದು ಬೀಳುತ್ತಿರುವುದು ಭಾರತದಂಥ ಕ್ವಾಲಿಟಿ ಮಾಪಕಗಳೇ ಇಲ್ಲದ ಬ್ರಹತ್ ಮಾರುಕಟ್ಟೆಗೆ. ಒಮ್ಮೆ ಸೇಬು ಹಣ್ಣಿನ ಬಗ್ಗೆ ಓದುತ್ತಿದ್ದಾಗ ಯಾವ ಸೇಬಿನಲ್ಲಿ ಎಷ್ಟೆಷ್ಟು ಬ್ಯಾಕ್ಟೀರಿಯಾಗಳಿರುತ್ತವೆ ಎಂದು ನೋಡಿದರೆ ನಮ್ಮ ಕಾಶ್ಮೀರದ ಅಥವಾ ಶಿಮ್ಲಾದ ಸೇಬಿನಲ್ಲೇ ಕಡಿಮೆ ಇರುವುದು ತಿಳಿದಿತ್ತು. ಆಗಿನಿಂದ ದುಪ್ಪಟ್ಟು ಬೆಲೆಯ, ಆಕರ್ಷಕ ಹೊಳಪಿನ ‘ಗಾಲಾ’ ಇತ್ಯಾದಿ ಲೇಬಲ್ ಹಚ್ಚಿದ ಹಣ್ಣುಗಳನ್ನು ಮುಟ್ಟುವುದೇ ಇಲ್ಲ. ಆದರೂ ಡ್ರ್ಯಾಗನ್ ಫ್ರುಟ್ ಸೆಳೆತದಿಂದ ಅದನ್ನು ತರಿಸಿದ್ದಾಯಿತು. ಅದೂ ಸ್ಯಾಂಪಲ್ಲಿಗಾಗಿ ಒಂದೇ ಹಣ್ಣು! ಅದರ ಮೇಲಿನ ಸಿಪ್ಪೆ ತೆಗೆಯಲು ಆರಂಭಿಸಿದಂತೆ ಪಕ್ಕದಲ್ಲಿದ್ದ ಮಗ  ‘ಅದು ನಮಗಲ್ಲ’ ಎಂದು ನಗಲು ಆರಂಭಿಸಿದ.

    ಆ ಹಣ್ಣು ಕಾಣಲು ಮಾತ್ರ ಡ್ರ್ಯಾಗನ್ ಹಾಗೆ ಕಠಿಣ. ಮೇಲಿನ ಸಿಪ್ಪೆ ಸುಲಿದು ಹಣ್ಣನ್ನು ಕತ್ತರಿಸಿದರೆ ಒಳಗೆ  ಜೆಲ್ಲಿಯ ಹಾಗೆ ಇರುವ  ಬಿಳಿ ತಿರುಳಲ್ಲಿ ಸಾಲಾಗಿ ಜೋಡಿಸಿಟ್ಟ ಪುಟ್ಟ ಪುಟ್ಟ ಕರಿಮಣಿಗಳು. ನೋಡಲಂತೂ ಚಂದವೇ. ಒಂದು ಚೂರು ಕತ್ತರಿಸಿ ಮಗನ ಎದುರು ಹಿಡಿದರೆ ನನಗೆ ಬೇಡ ಎಂತಲೇ ಹೇಳಿದ. ಈಗ ಮಾಡಿದ್ದುಣ್ಣೋ ಮಾರಾಯ ಸರದಿ. ಒಂದು ಚೂರು ತಿನ್ನುವಷ್ಟರಲ್ಲೇ ಆಸ್ವಾದನೆಯ ಮಂದಹಾಸ ಮೂಡದಿದ್ದುದ ನೋಡಿ ಪಕ್ಕದಲ್ಲಿ ನಗು ಶುರುವಾಯಿತು.ಅದಕ್ಕೇ ನಾನು ಹೇಳಿದ್ದು ಅದು ನಮಗಲ್ಲ ಅಂತಾ. ಅದೇನಿದ್ದರೂ ಒಂದೊಂದು ಚೂರು ಹಣ್ಣು ತಿನ್ತಾರೆ ನೋಡು ಅವರಿಗೆ ಅಂದ. ಅಲ್ಲಿಗೆ ಡ್ರ್ಯಾಗನ್ ಫ್ರುಟ್ ಕತೆ ಮುಗಿಯಿತು.

    ನಮ್ಮೂರ ಹಣ್ಣು

    ಆ ಕ್ಷಣಕ್ಕೆ ನಮ್ಮ ಊರಲ್ಲಿ ಗೆಳತಿಯ ಮನೆಯ ಹಿತ್ತಲಲ್ಲಿದ್ದ ಪನ್ನೀರ ಹಣ್ಣಿನ. ಮರ ನೆನಪಾಯಿತು. ಹಸಿರು ಮೋದಕಗಳು ತೂಗಿದಂತೆ ಕಾಣುವ ಈ ಹಣ್ಣಿಗೆ ಇರುವ ಘಮ ಬೇರಾವ ಹಣ್ಣಿಗೂ ಇಲ್ಲ. ತಿಂದರೆ ಮನಸ್ಸೆಲ್ಲಾ ಆ ಘಮದಿಂದಲೇ ಉಲ್ಲಸಿತವಾಗುತ್ತಿತ್ತು. ಆ ಮರಕ್ಕೆ ನಮ್ಮ ಲಗ್ಗೆ ಮಧ್ಯಾನ್ಹ ಮೂರಕ್ಕೆ. ಅವಳ ಮನೆಯಲ್ಲಿ ಎಲ್ಲರೂ ಊಟ ಮಾಡಿ ಮಲಗಿದ ಮೇಲೆ ಗೆಳೆತಿಯರೆಲ್ಲ ಸೇರಿ ಅವಳ ಮನೆಯಲ್ಲಿ ಅವಳ ಜೊತೆಯೇ ಹಣ್ಣು ಕದಿಯುತ್ತಿದ್ದೆವು. ಮರದ ಹಣ್ಣುಗಳನ್ನೆಲ್ಲ ಖಾಲಿ ಮಾಡದೇ ಕದಲುತ್ತಿರಲಿಲ್ಲವಾದ್ದರಿಂದ ಕದಿಯುವುದು ಅನಿವಾರ್ಯವಾಗಿತ್ತು. ಆ ಹಣ್ಣಿನ ಕಂಪಿನಿಂದ ಸೇರಿದ ಸವಿ ಈಗಲೂ ನಾಲಿಗೆಗೆ ನೆನಪಿದೆ.

    ಮಾವಿನ ಹಣ್ಣನ್ನು ಕತ್ತರಿಸಿ ತಿಂದ ಬಾಲ್ಯವೇ ಅಲ್ಲ ನಮ್ಮದು. ಎಲ್ಲರ ಮನೆಗಳಲ್ಲೂ ಮರಗಳಿರುತ್ತಿದ್ದವು. ಲೆಕ್ಕ ಮಾಡಿ  ಕಲ್ಲು ಹೊಡೆದು ಹಣ್ಣು ಬೀಳಿಸಿ ಎಲ್ಲರೂ ಒಂದೊಂದು ಹಣ್ಣು ಹಿಡಿದು ಮುಂಗೈವರೆಗೆ ರಸ ವಸರಿ ತಿಂದರೇ ಆ ಹಣ್ಣಿಗೆ ಗೌರವ.  ಆಗ ಹಣ್ಣುಗಳಿಗೆ ಕೆಜಿಯ ಲೆಕ್ಕ ಇರಲಿಲ್ಲ. ಅದೇನಿದ್ದರೂ‌ ಬುಟ್ಟಿಗಳ ಲೆಕ್ಕದಲ್ಲಿ ಮಾರಾಟವಾಗುತ್ತಿದ್ದ ಕಾಲ. ಹಣ್ಣಿನಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಮಕ್ಕಳು ನಾವಾಗಿದ್ದೆವು.

    ಹಲಸಿನ ರಾಜ ಚಂದ್ರಬಕ್ಕೆ ಹಣ್ಣು. ಕೆಂಡಸಂಪಿಗೆಯ ಬಣ್ಣದ ಈ ಹಣ್ಣಿನಲ್ಲೇ ಜೇನುತುಪ್ಪದ ಸವಿ. ಮನೆಯ ಹಿರಿಯರ ಜೊತೆ ಸೇರಿ ಹಲಸಿನ ಹಣ್ಣು ಕತ್ತರಿಸುವುದನ್ನೂ ಕಲಿತಿದ್ದೆವು. ಅದರಲ್ಲಿ ಬಿಳಿಯ   ಅಂಟು ದ್ರವ ಸೋರುವುದರಿಂದ ಕೈಗೆ ಎಣ್ಣೆ ಹಚ್ಚಿಕೊಂಡು ತೊಟ್ಟಿನ ಭಾಗದಲ್ಲಿ ಕತ್ತಿಯನ್ನು ತೂರಿ ಸ್ವಲ್ಪ ಸಡಿಲಿಸಿಕೊಂಡು ತೊಟ್ಟನ್ನು ತಿರುಗಿಸಿದರೆ ಒಳಗೆ ಹಣ್ಣಿಗೆ ಅಂಟಿಕೊಂಡಿರುವ ಆ ಭಾಗ ಪೂರ್ಣವಾಗಿ ಬಿಟ್ಟು ಹಣ್ಣು ಬಾಯಿಬಿಟ್ಟು ಭಾಗವಾಗುತ್ತದೆ. ತಿನ್ನಲು ಆರಂಭಿಸುವುದು ಮಾತ್ರ ಗೊತ್ತಾಗುತ್ತಿತ್ತು. ಕೊನೆಗೆ ಅಂದಿನ ಊಟವೂ ಅದೇ.

    ಪೇರಲೇ ಮರದಲ್ಲಿ ಗಿಳಿಗಳಿಂದ ಹಣ್ಣುಗಳನ್ನು ರಕ್ಷಿಸಿ ತಿನ್ನುವುದಕ್ಕೆ ಉಳಿಸಿಕೊಳ್ಳುವುದು ಬಹಳ ಕಷ್ಟದ ಕೆಲಸ. ಮರದ ಮೇಲೆ ಕುಳಿತೇ ಹಣ್ಣನ್ನು ತಿನ್ನುವುದು ಪೇರಲೇ ಹಣ್ಣಿನ ಗಮ್ಮತ್ತು. ತೀರ ಎತ್ತರವಲ್ಲದ, ಸುಲಭವಾಗಿ ಹತ್ತಬಹುದಾದ  ಹಾಗೂ ಸಾಕಷ್ಟು ಟಿಸಿಲುಗಳು ಇರುವುದರಿಂದ ಅಲ್ಲೇ ಕುಳಿತು ತಿಂದರೇನೇ ಪೇರಲೆ ಹಣ್ಣು ತಿಂದಂತೆ. 

    ಇನ್ನು ಕಾಡು ಹಣ್ಣುಗಳ ಸ್ವಾರಸ್ಯವೇ ಬೇರೆ. ಕವಳೆ ಹಣ್ಣು , ಮುಳ್ಹಣ್ಣು, ಸಂಪಿಗೆ ಹಣ್ಣು … ಅದೆಷ್ಟು ಬಗೆಯ ಹಣ್ಣುಗಳು. ಅವೆಲ್ಲ ಪಟ್ಟಣಗಳಿಗೆ ತಲುಪಿಯೇ ಇಲ್ಲ. ಮಲೆನಾಡ ಊರುಗಳಲ್ಲಿ ಇವೆಲ್ಲ ಈಗಲೂ ಸಿಗುತ್ತವೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕುಮಟಾ ಬಸ್ ಸ್ಟ್ಯಾಂಡಿನಲ್ಲಿ  ಹಾಲಕ್ಕಿ ಹೆಂಗಸರು ಹಲಸಿನ ಎಲೆಗೆ ಕಡ್ಡಿ ಚುಚ್ಚಿ ದೊನ್ನೆ ಮಾಡಿ‌ ಮಾರುತ್ತಾರೆ. ಅವರ   ಬುಟ್ಟಿಗಳಲ್ಲಿ ತುಂಬಿರುವ ಕಂಡು ಬಣ್ಣಗಳ, ಸಹಜ ಹೊಳಪಿನ,  ಯಾವುದೇ ರಾಸಾಯನಿಕವಿಲ್ಲದೆ ಕಾಡಲ್ಲಿ ಹಾಯಾಗಿ ಬೆಳೆದ ಮರಗಳು ನೀಡುವ ಈ ಹಣ್ಣುಗಳನ್ನು ತಿನ್ನುವ ಆನಂದವೇ ಬೇರೆ.

    ನಮ್ಮ ಹಣ್ಣುಗಳೇ ನಮಗ ಪಾಡ

    ಹೀಗೆ ಒಂದೊಂದು ಹಣ್ಣಿಗೂ ಒಂದೊಂದು ಕತೆ ತೆರೆದುಕೊಳ್ಳುತ್ತದೆ. ಅದಕ್ಕಾಗಿಯೇ ಅವನು ಹೇಳಿದ್ದು ಅದು ನಮಗಲ್ಲ ಎಂದು. ಏನಿದ್ದರೂ ನಮ್ಮ ಹಣ್ಣುಗಳೇ ನಮಗ ಪಾಡ. ಅಂದ ಹಾಗೆ ಅವನು ಚಿಕ್ಕವನಿದ್ದಾಗ ಹೇವರ್ಡ್ಸ್ 5000 ಜಾಹಿರಾತು ಆಗಷ್ಟೇ ಶುರುವಾಗಿತ್ತು. ಇದನ್ನೊಂದು ನಾನು ಕುಡಿದಿಲ್ಲ. ಒಮ್ಮೆ ಕುಡಿದು ನೋಡಬೇಕು ಎಂದಿದ್ದ. ಆಗ ನಾನು ಗಾಬರಿಯಾಗಿದ್ದೆ. ಅದೇ ಅವನು ಈಗ  ಈ ಹಣ್ಣು  ನಮಗಲ್ಲ ಎಂದು ಹೇಳಿದ್ದ. ಎಲ್ಲವೂ ಬಂದು ಬಂದು ಬೀಳುತ್ತಿರುವ ನಮ್ಮ ಮಾರುಕಟ್ಟೆಗಳಲ್ಲಿ ಈಗ ಆಯ್ಕೆಯೇ ಬಹಳ ಕಷ್ಟವಾಗಿದೆ. ಸಿಕ್ಕಿದ್ದನ್ನೆಲ್ಲ ಬಾಚಿಕೊಳ್ಳುವವರನ್ನು ಕಂಡಾಗ ದಿಗಿಲಾಗುತ್ತದೆ. ಒಂದು ಕಡೆ ನಾವು ಆತ್ಮ ನಿರ್ಭರರಾಗಬೇಕು. ಇನ್ನೊಂದು ಕಡೆ ಜಾಗತೀಕರಣದ ಹೊಡೆತಕ್ಕೆ ಪಕ್ಕಾಗಬೇಕು. ಎರಡೂ ಒಟ್ಟಿಗೇ ಹೇಗೆ ಸಾಧ್ಯ?

    Photo by Heather Ford on Unsplash

    ‘ಗ್ರಹಣ’ದ ಭೈರಪ್ಪ ಒಬ್ಬ ಪುರೋಗಾಮಿ ಲೇಖಕ

    ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪನವರ ಮೇಲೆ ವಿಮರ್ಶಕರ ಮತ್ತು ಚಿಂತಕರ ಹಲವು ಆಕ್ಷೇಪಗಳಿವೆ. ಅವರೊಬ್ಬ ಪ್ರತಿಗಾಮಿ ಲೇಖಕ, ಸ್ತ್ರೀಪಾತ್ರಗಳನ್ನು ಗೌಣವಾಗಿ ತೋರಿಸುತ್ತಾರೆ, ಜೀವವಿರೋಧಿ ಧೋರಣೆ ಅವರದು ಎಂದೆಲ್ಲ ಹೇಳುತ್ತಾರೆ. ಆದರೆ ಈ ಆಕ್ಷೇಪಗಳಿಗೆಲ್ಲ ಉತ್ತರ ಎನ್ನುವಂತೆ ಇದೆ ಅವರ `ಗ್ರಹಣ’ ಕಾದಂಬರಿ.

    -ಸತ್ಯಪ್ರಿಯ

    ನಮ್ಮ ಕಾಲದಲ್ಲಿ ಓದುಗರನ್ನು ದೊಡ್ಡ ಸಂಖ್ಯೆಯಲ್ಲಿ ಹಿಡಿದಿಟ್ಟುಕೊಂಡಿರುವ ಲೇಖಕರಲ್ಲಿ ಎಸ್‌.ಎಲ್‌. ಭೈರಪ್ಪನವರು ಒಬ್ಬರು. ವಿಮರ್ಶಕರಿಂದ ಮೆಚ್ಚುಗೆ ಮತ್ತು ಟೀಕೆಗಳನ್ನು ಹೆಚ್ಚಾಗಿ ಪಡೆದ ಲೇಖಕರೂ ಹೌದು. ಅವರೊಬ್ಬ ಬಲಪಂಥೀಯ ಲೇಖಕ. ತಮ್ಮ ಸಿದ್ಧ ಸೂತ್ರಗಳಿಗೆ ಘಟನೆಗಳನ್ನು ಜೋಡಿಸುತ್ತ ಕತೆಯನ್ನು ಹೆಣೆಯುತ್ತಾರೆ ಎಂದು ಎಡಪಂಥೀಯ ಚಿಂತಕರು ದೂರುತ್ತಾರೆ. ಭೈರಪ್ಪನವರು ತಮ್ಮ ಸ್ತ್ರೀ ಪಾತ್ರಗಳಿಗೂ ಸರಿಯಾದ ನ್ಯಾಯವನ್ನು ಒದಗಿಸಿಲ್ಲ ಎಂಬ ಇನ್ನೊಂದು ಆರೋಪವೂ ಸ್ತ್ರೀವಾದಿ ಚಿಂತಕರಿಂದ ಕೇಳಿ ಬಂದಿದೆ. ಅದಕ್ಕೆ ಭೈರಪ್ಪನವರು ವಿವಿಧ ವೇದಿಕೆಗಳಲ್ಲಿ ತಮ್ಮ ಸಮಜಾಯಿಷಿಯನ್ನು ನೀಡಿದ್ದಾರೆ.
    ಆದರೆ ಈ ಎಲ್ಲ ಟೀಕೆಗಳಿಗೂ ಸೃಜನಾತ್ಮಕ ಉತ್ತರವನ್ನು ನಾವು ಅವರ `ಗ್ರಹಣ’ ಕಾದಂಬರಿಯಲ್ಲಿ ನೋಡಬಹುದಾಗಿದೆ.

    `ಗ್ರಹಣ’ದ ಕಥಾ ವಸ್ತು ಮೈತಳೆಯುವುದು ದಕ್ಷಿಣ ಕರ್ನಾಟಕದಲ್ಲಿ. ಹಿಮವತೀ ನದಿಯ ದಡದಲ್ಲಿರುವ ಹಿಮಗರಿ ಎನ್ನುವ ಊರಿನಲ್ಲಿ. ಗ್ರಹಣದ ವೈಜ್ಞಾನಿಕ ವಿವರಣೆಯ ಉಪನ್ಯಾಸದೊಂದಿಗೇ ಕಾದಂಬರಿ ಆರಂಭವಾಗುವುದು. ಅತ್ತ ಹಳ್ಳಿಯೂ ಅಲ್ಲದ ಇತ್ತ ದೊಡ್ಡ ಪಟ್ಟಣವೂ ಅಲ್ಲದ ಊರು ಹಿಮಗಿರಿ. ಅಲ್ಲೊಂದು ನದಿ ಹಿಮವತಿ. ಅಲ್ಲಿ ಹಿಮಗಿರೀಶ್ವರ ಎಂಬ ಒಂದು ಮಠವಿದೆ. ಹೈಸ್ಕೂಲು, ಕಾಲೇಜು, ಆಸ್ಪತ್ರೆ, ಪ್ರಸೂತಿಗೃಹ ಮೊದಲಾದವು ಅಲ್ಲಿವೆ. ಆ ಊರಲ್ಲಿಯ ಮಠ ಅನಾದಿ ಕಾಲದ್ದು. ಐದು ತಲೆಮಾರಿನ ಹಿಂದೆ ಅದರ ಸ್ವಾಮೀಜಿ ಇದ್ದಕ್ಕಿದ್ದ ಹಾಗೆ ಮಠವನ್ನು ಬಿಟ್ಟು ಹೋಗುತ್ತಾರೆ. ಅವರು ತಮ್ಮ ಉತ್ತರಾಧಿಕಾರಿಯನ್ನೂ ನೇಮಿಸದೇ ಹೋಗಿದ್ದರು. ಇದರಿಂದಾಗಿ ಮಠ ಹಾಳುಬಿದ್ದಿತ್ತು. ಇಪ್ಪತ್ತು ವರ್ಷಗಳ ಹಿಂದೆ ಈಗಿನ ಸ್ವಾಮಿಗಳು ಹಿಮಾಲಯದಿಂದ ಬಂದರು. ಊರಿನ ಹಿರಿಯರ ಅಪೇಕ್ಷೆಯ ಮೇರಗೆ, ತಾಮ್ಮದೇ ಕೆಲವು ಷರತ್ತುಗಳನ್ನು ವಿಧಿಸಿ ಈ ಊರಿನಲ್ಲಿ ಉಳಿಯುವುದಕ್ಕೆ ಅವರು ಒಪ್ಪುತ್ತಾರೆ. ಅವರು ಮಠಕ್ಕೆ ಕಟ್ಟಡ ಕಟ್ಟಿಸಲಿಲ್ಲ. ಬದಲಿಗೆ ಹಿಮಗಿರೀಶ್ವರ ಕಲ್ಯಾಣ ಸಮಿತಿಯನ್ನು ಸ್ಥಾಪಿಸಿದರು. ಈ ಸಮಿತಿಯ ಆಶ್ರಯದಲ್ಲಿಯೇ ಸುತ್ತ ಹತ್ತೂರಿನಲ್ಲಿ ಹೈಸ್ಕೂಲುಗಳು, ಈ ಊರಿನಲ್ಲಿ ಕಾಲೇಜು, ಪ್ರಸೂತಿಗೃಹ, ಆಸ್ಪತ್ರೆ ಎಲ್ಲವೂ ಬಂದವು. ಸ್ವಾಮೀಜಿ ಮಠಕ್ಕೆ ಹೋಗದೆ ಇದ್ದರೂ ಅವರ ಮೇಲೆ ಜನರಿಗೆ ಭಕ್ತಿ ಹುಟ್ಟಿತು. ಸಮಿತಿಯು ಅವರನ್ನು ಮುಂದೆ ಇಟ್ಟುಕೊಂಡು ಹಣ ಸಂಗ್ರಹ ಮಾಡಿತು. ಜನಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿತು.

    ಕಾದಂಬರಿಯ ಇನ್ನೊಂದು ಮುಖ್ಯ ಪಾತ್ರ ಕಾಲೇಜಿನ ಪ್ರಿನ್ಸಿಪಾಲರು. ತಮ್ಮ ಬಡತನದ ಆರಂಭಿಕ ಜೀವನ, ಕಾಲೇಜಿನ ಪ್ರಿನ್ಸಿಪಾಲರಾಗುವಲ್ಲಿ ಸಮಿತಿಯ ಮತ್ತು ಸ್ವಾಮೀಜಿಯ ಕೃಪೆಯಿಂದಾಗಿ ತುಂಬ ವಿನೀತ ಸ್ವಭಾವದವರು. ಯಾವುದೇ ಸ್ವಂತದ ದೃಢ ನಿರ್ಧಾರ ಇಲ್ಲದವರು. ಆದರೆ ನ್ಯಾಯಯುತವಾಗಿ ಬದುಕಬೇಕು ಎನ್ನುವವರು. ಭೌತ ವಿಜ್ಞಾನದ ಪ್ರೊಫೆಸರ್‌ ಆಗಿದ್ದರೂ ಅವರ ಒಲವು ವೇದಾಂತದ ಕಡೆ ಇತ್ತು. ಪ್ರಿನ್ಸಿಪಾಲರು ಕಾಲೇಜಿನಲ್ಲಿ ಗ್ರಹಣದ ವೈಜ್ಞಾನಿಕ ವಿವರಣೆಯನ್ನು ನೀಡಿದರೆ ಅವರ ಗರ್ಭಿಣಿ ಪತ್ನಿ ಎಂ.ಎಸ್ಸಿ. ಪದವೀಧರೆ ಲಲಿತಮ್ಮ ಮನೆಯಲ್ಲಿ ಗ್ರಹಣದ ಕುರಿತ ಸಾಂಪ್ರದಾಯಿಕ ನಂಬಿಕೆಯನ್ನು ಪಾಲಿಸಿದ್ದರು. ಅದೇ ಕಾಲೇಜಿನಲ್ಲೆ ರಸಾಯನ ಶಾಸ್ತ್ರದ ಲೆಕ್ಚರರ್‌ ಆಗಿದ್ದ ಅವರು ಪ್ರಿನ್ಸಿಪಾಲರನ್ನು ಪ್ರೀತಿಸಿ ಮದುವೆಯಾದ ಮೇಲೆ ಕೆಲಸವನ್ನು ಬಿಟ್ಟಿದ್ದರು.

    ಸ್ವಾಮೀಜಿಯವರು ಅಧ್ಯಕ್ಷರಾಗಿದ್ದ ಸಮಿತಿಗೆ ಪ್ರಿನ್ಸಿಪಾಲರು ಕಾರ್ಯದರ್ಶಿಯಾಗಿದ್ದರು. ಕಾಲೇಜಿಗೆ ಹಣ ಕೂಡಿದ ಬಳಿಕ ಅದರ ಅಧ್ಯಕ್ಷತೆಯನ್ನು ಸ್ವಾಮೀಜಿ ಬಿಟ್ಟುಬಿಡುತ್ತಾರೆ. ತಾವಿಲ್ಲದೆ ಸಮಿತಿಯು ಮುಂದೆ ನಡೆಯುವುದನ್ನು ಕಲಿಯಬೇಕು ಎಂಬುದು ಅವರ ಇಚ್ಛೆಯಾಗಿತ್ತು. ಸ್ವಾಮೀಜಿಯವರ ಬಳಿಕ ಚಂದ್ರಣ್ಣ ಎಂಬ ಸ್ಥಳೀಯ ಎಂಎಲ್‌ಎ ಸಮಿತಿಯ ಅಧ್ಯಕ್ಷರಾಗುತ್ತಾರೆ.

    ಈ ಕಾದಂಬರಿಯ ಮತ್ತೊಂದು ಪಾತ್ರ ಯಜ್ಞೇಶ್ವರ ಶಾಸ್ತ್ರಿ. ಪುರೋಹಿತ ಮನೆತನವಾದರೂ ಪೌರೋಹಿತ್ಯದಿಂದ ಜೀವನ ಸಾಗಿಸಬೇಕಾದ ರಿಕ್ತ ಸ್ಥಿತಿ ಅವರದಲ್ಲ. ಸಾಕಷ್ಟು ಆಸ್ತಿ ಇತ್ತು.  ಶಾಸ್ತ್ರದಲ್ಲಿ ಸುತ್ತ ನಾಲ್ಕೂರಿಗೆ ಅವರು ಪ್ರಸಿದ್ಧರಾಗಿದ್ದರು. ಹಿಮಗಿರಿಯ ಕಲ್ಯಾಣ ಸಮಿತಿಯಲ್ಲಿ ಅವರೂ ಒಬ್ಬ ಸದಸ್ಯರಾಗಿದ್ದರು. ಸ್ವಾಮೀಜಿ ಊರಲ್ಲಿ ನೆಲೆಯಾಗುವುದಕ್ಕೆ ಅವರೂ ಒಬ್ಬ ಕಾರಣಪುರುಷ. ತಮ್ಮ ಮೂವತ್ತೊಂಬತ್ತನೆಯ ವಯಸ್ಸಿನ ತನಕ ಬ್ರಹ್ಮಚಾರಿಯೇ ಆಗಿದ್ದ ಪ್ರಿನ್ಸಿಪಾಲರು ಗೃಹಸ್ಥಾಶ್ರಮ ಪ್ರವೇಶಿಸುವುದಕ್ಕೆ ಶಾಸ್ತ್ರಿಗಳು ಮೊದಲು ವಿರೋಧಿಸಿದ್ದರು. ನಂತರ ಸ್ವಾಮಿಗಳೇ ಒಪ್ಪಿಗೆ ಕೊಟ್ಟಮೇಲೆ ಇವರು ಸುಮ್ಮನಾಗಿದ್ದರು. ನಂತರ ಪ್ರಿನ್ಸಿಪಾಲ್‌ ದಂಪತಿಯನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು.

    ಊರ ಯಜಮಾನ ಅಪ್ಪೇಗೌಡರು ದಾನ ಮಾಡುವುದರಲ್ಲಿ ಎತ್ತಿದ ಕೈ. ಅವರ ಮಾತಿಗೆ ಸುತ್ತ ಮೂವತ್ತು ಹಳ್ಳಿಯಲ್ಲಿ ಗೌರವವಿದೆ. ಎಪ್ಪತ್ತೈದು ವರ್ಷದ ಇವರ ದಾನ ಗುಣದಿಂದಲೇ ಊರಲ್ಲಿ ಹೈಸ್ಕೂಲು, ಕಾಲೇಜು, ಆಸ್ಪತ್ರೆ ಎಲ್ಲ ಬಂದದ್ದು. ಇವರ ಕನಸಿನಲ್ಲಿಯೇ ಮತ್ತೊಬ್ಬ ಸ್ವಾಮೀಜಿ ಬರುತ್ತಾರೆ ಎಂದು ಗೊತ್ತಾದದ್ದು ಮತ್ತು ಆ ಕಾರಣಕ್ಕಾಗಿಯೇ ಈಗಿನ ಸ್ವಾಮೀಜಿಯವರನ್ನು ಒತ್ತಾಯ ಮಾಡಿ ಉಳಿಸಿಕೊಂಡವರು ಅವರು.

    ಊರಿನ ಸ್ವಾಮೀಜಿ ಮಠಕ್ಕೆ ಹೋಗದೆ ಇದ್ದರೂ ತಮ್ಮದೇ ಒಂದು ಗುಡಿಸಲು ಕಟ್ಟಿಕೊಂಡು, ಒಂದು ಆಕಳನ್ನು ಸಾಕಿಕೊಂಡು ತಮ್ಮ ಅಡುಗೆಯನ್ನು ತಾವೇ ಮಾಡಿಕೊಂಡು ಒಪ್ಪತ್ತು ಊಟ ಮಾಡಿ ಬದುಕುತ್ತಿದ್ದರು. ಈ ಸ್ವಾಮೀಜಿಯ ನಿಜವಾದ ಹೆಸರು ಯಾರಿಗೂ ಗೊತ್ತಿಲ್ಲ. ಅದನ್ನು ಕೇಳಿ ತಿಳಿಯುವ ಅಗತ್ಯವೂ ಊರವರಿಗೆ ಬಂದಿರಲಿಲ್ಲ.

    ಊರಿನ ಆಸ್ಪತ್ರೆಯ ಡಾಕ್ಟರ್‌ ಸರೋಜಮ್ಮನನ್ನು ತಾವು ಮದುವೆಯಾಗುವುದಾಗಿ  ಸ್ವಾಮೀಜಿ ಅಪ್ಪೇಗೌಡರ ಬಳಿ ಒಂದು ದಿನ ಹೇಳಿದಾಗ ಅದನ್ನು ತಡೆಯುವುದಕ್ಕೆ  ನಡೆಯುವ ಹುನ್ನಾರಗಳೇ ಈ ಕಾದಂಬರಿಯ ವಸ್ತು. ಗ್ರಹಣದ ಕಾರಣದಿಂದಲೇ ಸ್ವಾಮೀಜಿಯವರ ಮನಸ್ಸು ಕಲುಷಿತಗೊಂಡಿದೆ ಎನ್ನುವುದು ಶಾಸ್ತ್ರಿಗಳ ಅಭಿಮತವಾಗಿತ್ತು. ಅದನ್ನೇ ಅವರು ಅಪ್ಪೇಗೌಡರಿಗೂ ಹೇಳುತ್ತಾರೆ. ಸ್ವಾಮೀಜಿಗಳು ಸನ್ಯಾಸವನ್ನು ತ್ಯಜಿಸಿ ಮದುವೆಯಾಗಿಬಿಟ್ಟರೆ ಇಡೀ ಊರಿನ ಅಧ್ಯಾತ್ಮಶಕ್ತಿ ಕುಸಿದುಬೀಳುತ್ತದೆ. ಅಧ್ಯಾತ್ಮ ಹೋದಮೇಲೆ ದಾನ ಹೇಗೆ ನಡೆದೀತು? ದಯೆ ಎಲ್ಲಿ ಉಳಿದೀತು? ಈ ಆತಂಕ ಅಪ್ಪೇಗೌಡರಿಗೆ ಮತ್ತು ಶಾಸ್ತ್ರಿಗಳಿಗೆ.

    ಸ್ವಾಮೀಜಿಯನ್ನು ಮದುವೆಯಾಗುವುದರಿಂದ ವಿಮುಖಗೊಳಿಸಬೇಕು ಎಂದು ಅಪ್ಪೇಗೌಡರು, ಶಾಸ್ತ್ರಿಗಳು,, ಎಂಎಲ್‌ಎ ಚಂದ್ರಣ್ಣ ಎಲ್ಲರೂ ಪ್ರಯತ್ನಿಸುತ್ತಾರೆ. ಅಲ್ಲದೇ ಡಾಕ್ಟರ್‌ ಸರೋಜಮ್ಮನ ಮನವೊಲಿಸಲೂ ನೋಡುತ್ತಾರೆ. ಯಾವುದೂ ನಡೆಯುವುದಿಲ್ಲ. ಈ ಸಂದಿಗ್ಧದ ಸಮಯದಲ್ಲಿಯೇ ಭಾರೀ ಮಳೆ ಸುರಿಯುತ್ತಿದ್ದ ಒಂದು ದಿನ ಸ್ವಾಮೀಜಿಯ ಗುಡಿಸಲಿನಲ್ಲಿ ಸರೋಜಮ್ಮ ಇದ್ದಾಗ ಇಬ್ಬರೂ ತಕ್ಷಣವೇ ಮದುವೆಯಾಗಿಬಿಡಬೇಕು. ಆ ಮೂಲಕ ಊರವರ ಒತ್ತಡದಿಂದ ತಪ್ಪಿಸಿಕೊಳ್ಳಬಹುದು. ಕೆಲವು ದಿನ ಆಡಿಕೊಳ್ಳುತ್ತಾರೆ, ನಂತರ ಸುಮ್ಮನಾಗಿ ಬಿಡುತ್ತಾರೆ ಎಂದು ನಿರ್ಧಾರ ಮಾಡುತ್ತಾರೆ. ಗಂಡು ಹೆಣ್ಣು ಪರಸ್ಪರ ಒಪ್ಪಿಕೊಂಡ ಮೇಲೆ ಮದುವೆ ಎನ್ನುವುದು ಕೇವಲ ಲೋಕಾರೂಢಿ. ಅದರ ಅಗತ್ಯವೂ ಇಲ್ಲ ಎಂಬ ಸ್ವಾಮೀಜಿಯ ಮಾತಿಗೆ ಡಾಕ್ಟರ್‌ ಸಮ್ಮತಿಸುತ್ತಾರೆ. ಅಲ್ಲಿ ಅವರಿಬ್ಬರ ದೈಹಿಕ ಮಿಲನವಾಗಿಬಿಡುತ್ತದೆ. ಅದೇ ಮಳೆಯಲ್ಲಿ ಗುಡಿಸಲು ಬಿದ್ದುಹೋಗುತ್ತಿರುತ್ತದೆ. ನಾಳೆ ನಿಮ್ಮ ಮನೆಗೇ ಬಂದುಬಿಡುತ್ತೇನೆ ಎಂದು ಡಾಕ್ಟರ್‌ಗೆ ಸ್ವಾಮೀಜಿ ಹೇಳುತ್ತಾರೆ. ಅದಕ್ಕೆ ಡಾಕ್ಟರ್‌ ಸಮ್ಮತಿಸುತ್ತಾರೆ.

    ಸನ್ಯಾಸವನ್ನು ತೊರೆದುದಕ್ಕಾಗಿ ಬಿಳಿ ಬಟ್ಟೆಯನ್ನು ಧರಿಸಿಕೊಂಡು, ಒಂದು ಟ್ರಂಕು ಹಿಡಿದು, ಆಕಳನ್ನು ಕರೆದುಕೊಂಡು ಬಂದ ಸ್ವಾಮೀಜಿಗೆ ಡಾಕ್ಟರ್‌ ಮನೆಯ ಎದುರು ದೊಡ್ಡ ನಾಟಕವನ್ನು ಎದುರಿಸಬೇಕಾಗುತ್ತದೆ. ಸ್ವಾಮೀಜಿ ಗೃಹಸ್ಥರಾಗುವುದರಿಂದ ಮನೋರೋಗಕ್ಕೆ ಒಳಗಾದ ಅಪ್ಪೇಗೌಡರು ಸಾಯುವ ಸ್ಥಿತಿಯನ್ನು ಮುಟ್ಟಿದ್ದರಿಂದ ಅವರನ್ನು ಮಂಚದಮೇಲೆ ಮಲಗಿಸಿಕೊಂಡು ಅಲ್ಲಿಗೆ ತಂದಿರುತ್ತಾರೆ. ಊರವರೆಲ್ಲ ಅಲ್ಲಿ ಸೇರಿರುತ್ತಾರೆ. ಸ್ವಾಮೀಜಿ ಜನರಿಗೆ ತಮ್ಮದು ಮತ್ತು ಡಾಕ್ಟ್ರಮ್ಮನದು ನಿನ್ನೆಯೇ ಮದುವೆ ಆಯಿತೆಂದೂ, ಜೊತೆಗೆ ಶೋಭನವೂ ಆಗಿದೆ ಎಂದೂ ಹೇಳುತ್ತಾರೆ. ಸರೋಜಮ್ಮನಿಗೆ ಊರವರ ಮುಂದೆ ಇದನ್ನು ಒಪ್ಪಿಕೊಳ್ಳುವಂತೆ ಹೇಳುತ್ತಾರೆ. ಯಾರೂ ನೋಡದೆ ಇದ್ದಾಗ ಅದೆಂಥ ಮದುವೆ ಎಂದು ಶಾಸ್ತ್ರಿಗಳು ಪ್ರಶ್ನಿಸುತ್ತಾರೆ. ಡಾಕ್ಟರ್‌ಗೆ ಉಭಯ ಸಂಕಟ. ತಾನು ಹೌದೆಂದರೆ ಮನೋರೋಗದಿಂದ ಅಪ್ಪೇಗೌಡ ಸತ್ತುಹೋಗುತ್ತಾರೆ. ಸ್ವಾಮೀಜಿಯನ್ನು ಉಳಿಸಿಕೊಳ್ಳುವುದೋ ಸಾಯುತ್ತಿರುವ ರೋಗಿಯನ್ನು ಉಳಿಸಿಕೊಳ್ಳುವುದೋ ಎಂಬ ತೊಳಲಾಟದಲ್ಲಿ ತಮ್ಮ ವೃತ್ತಿಧರ್ಮವಾದ ರೋಗಿಯನ್ನು ಉಳಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ. ಕೋಪಗೊಂಡ ಸ್ವಾಮೀಜಿ ಅವರ ಸೊಂಟಕ್ಕೆ ಒದೆದು ಇಲ್ಲೇ ಸಾಯಿ ಎಂದು ಹೇಳಿ ಊರುಬಿಟ್ಟು ಹೊರಡುತ್ತಾರೆ.

    ಅಕ್ಕಪಕ್ಕದ ಊರುಗಳಲ್ಲಿ ಸುತ್ತಾಡುತ್ತಿದ್ದಾಗ ತಾವೇ ಸ್ಥಾಪಿಸಿದ ಶಾಲೆಯ ಮಕ್ಕಳು ಎದುರಾದಾಗ ಅವರನ್ನು ಕೂಡಿಸಿಕೊಂಡು ತಮ್ಮ ಮನದ ತೊಳಲಾಟವನ್ನು ವಿವರಿಸುತ್ತಾರೆ. ಆ ಮೂಲಕ ತಮಗೇ ಒಂದು ಸ್ಪಷ್ಟತೆಯನ್ನು ತಂದುಕೊಳ್ಳಲು ಪ್ರಯತ್ನಿಸುತ್ತಾರೆ. ಈ ನಡುವೆ ಸ್ವಾಮೀಜಿಯವರೊಂದಿಗೆ ದೈಹಿಕ ಮಿಲನ ಸಾಧಿಸಿದ್ದರಿಂದ ಡಾಕ್ಟ್ರಮ್ಮ ಬಸುರಿಯಾಗುತ್ತಾಳೆ. ತನ್ನ ಗರ್ಭವನ್ನು ತೆಗೆಸಿಕೊಳ್ಳಬೇಕು ಎಂದು ಆಲೋಚಿಸಿದ್ದ ಅವರಿಗೆ ವಿದ್ಯಾರ್ಥಿಗಳೊಂದಿಗೆ ನಡೆದ ಮುಖಾಮುಖಿಯಲ್ಲಿ ಸ್ವಾಮೀಜಿಯದು ತಪ್ಪಿಲ್ಲ ಎನ್ನಿಸುತ್ತದೆ. ವಿದ್ಯಾರ್ಥಿಗಳ ಗುಂಪಿನ ಮುಂದೆ ತನಗೂ ಸ್ವಾಮೀಜಿಗೂ ಮದುವೆಯಾಗಿದೆ. ಅವರ ಮಗುವಿಗೆ ತಾನು ತಾಯಿಯಾಗುತ್ತಿದ್ದೇನೆ ಎಂದು ಕೂಗಿ ಹೇಳುತ್ತಾರೆ. ಗರ್ಭ ತೆಗೆಸಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ.

    ಮಠ, ಪೀಠ, ಸ್ವಾಮೀಜಿ ಇವುಗಳ ಮೂಲಕ ಜನಸಾಮಾನ್ಯರ ಧಾರ್ಮಿಕ ನಂಬಿಕೆಯನ್ನು ಶೋಷಣೆ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕೆನ್ನುವ ಜನರು ಒಂದು ಕಡೆ, ಒಳ್ಳೆಯ ಕಾರ್ಯವನ್ನು ಮಾಡುವುದಕ್ಕೆ ಇವು ಯಾವುದರ ಅಗತ್ಯವೂ ಇಲ್ಲ, ಅಂಥ ಅಗತ್ಯ ಕಂಡು ಬಂದರೆ ಅದು ಯಶಸ್ವಿಯಾಗುವುದಿಲ್ಲ, ಅಂಥದ್ದು ಇರಬೇಕಾಗಿಯೇ ಇಲ್ಲ ಎಂದು ನಂಬುವ ಸ್ವಾಮೀಜಿ ಇನ್ನೊಂದು ಕಡೆ. ಸ್ವಾಮೀಜಿಯ ನಂಬಿಕೆಗೆ ಅಪ್ಪೇಗೌಡರು, ಶಾಸ್ತ್ರಿಗಳು, ಚಂದ್ರಣ್ಣ ಇವರೆಲ್ಲರೂ ಅಡ್ಡಿಯಾಗುತ್ತಾರೆ. `ನಿನ್ನನ್ನು ರಕ್ಷಿಸ್ತೀನಿ ಅನ್ನೂ ಅಹಂಕಾರ ನನಗಿಲ್ಲ. ಆದರೆ ಅಕಸ್ಮಾತ್‌ ಸಾಯಬೇಕಾಗಿ ಬಂದರೆ ನಿನ್ನನ್ನು ಬಿಟ್ಟುಕೊಟ್ಟು ನಾನು ಉಳಿಯೂದಿಲ್ಲ’ ಎಂಬ ಭರವಸೆಯನ್ನು ನೀಡಿದ್ದ ಸ್ವಾಮೀಜಿಗೆ ಮಹತ್ವದ ಕ್ಷಣದಲ್ಲಿ ಕೈಕೊಟ್ಟ ಸರೋಜಮ್ಮ, ಅವರನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ.
    ಕಾದಂಬರಿಯಲ್ಲಿ ಸ್ವಾಮೀಜಿ ಮತ್ತು ಸರೋಜಮ್ಮನ ಪಾತ್ರವನ್ನು ಅತ್ಯಂತ ಗಟ್ಟಿಯಾಗಿ, ಜೀವಪರವಾಗಿ, ನ್ಯಾಯಪರವಾಗಿ ಭೈರಪ್ಪನವರು ಕಟ್ಟಿಕೊಟ್ಟಿದ್ದಾರೆ. ಮದುವೆಯೆಂಬ ತೋರಿಕೆಯ ಆಡಂಬರದ ಆಚರಣೆಗಿಂತಲೂ ಪರಸ್ಪರರ ನಂಬಿಕೆ ಮುಖ್ಯ ಎಂದು ಅವರು ಹೇಳುತ್ತಾರೆ. ಕೊನೆಯಲ್ಲಿ ಶಾಲೆಯ ಮಕ್ಕಳೇ ಸ್ವಾಮೀಜಿಗಳಿಗೆ ಭಾಸ್ಕರ ಎಂಬ ಹೆಸರನ್ನು ನೀಡುತ್ತಾರೆ. ಭಾಸ್ಕರ ಎಂಬುದು ಸೂರ್ಯನ ಪರ್ಯಾಯ ನಾಮ. ಸನ್ಯಾಸವೆಂಬ ಗ್ರಹಣದಿಂದ ಮುಕ್ತರಾದ ಸ್ವಾಮೀಜಿ ಭಾಸ್ಕರನಾಗಿ ಹೊಳೆಯುತ್ತಾರೆ ಎಂದು ಸಾಂಕೇತಿಕವಾಗಿ ಹೇಳುತ್ತಾರೆ.

    `ಗ್ರಹಣ’ ಕಾದಂಬರಿ ಮೊದಲ ಮುದ್ರಣವನ್ನು ಕಂಡಿದ್ದು 1972ರ ಜುಲೈನಲ್ಲಿ. ಆದರೆ ಅದಕ್ಕಿಂತ ನಾಲ್ಕು ವರ್ಷ ಮೊದಲೇ ಈ ಕಾದಂಬರಿಯನ್ನು ಅವರು ಬರೆದದ್ದು. ಈ ಮಾಹಿತಿ ಅವರ ಆ ಕೃತಿಯಲ್ಲಿಯ ಕೃತಜ್ಞತೆ ಮಾತುಗಳಲ್ಲಿ ಇದೆ. ಈ ಕಾದಂಬರಿಯಲ್ಲಿ ಅವರು ಅಪ್ಪಟ ಪುರೋಗಾಮಿ, ಸ್ತ್ರೀಪರ ನಿಲವು ಹೊಂದಿದವರು ಮತ್ತು ವೈಜ್ಞಾನಿಕ ಮನೋಭಾವದವರು, ಸ್ಥಾಪಿತ ಮೌಲ್ಯಗಳ ವಿರುದ್ಧ ಜೀವಪರ ಧೋರಣೆ ಹೊಂದಿದವರು ಎನ್ನುವುದು ತಿಳಿಯುತ್ತದೆ. ನಂತರದ ದಿನಗಳಲ್ಲಿ ಅವರ ವೈಚಾರಿಕ ನಿಲವಿನಲ್ಲಿ ಆಗಿರುವ ಬದಲಾವಣೆಗೆ ಕಾರಣಗಳೇನು, ಪ್ರತಿಗಾಮಿ ಎನ್ನುವುದಾದರೆ ಯಾವ ಕಾರಣಗಳಿಗಾಗಿ ಎನ್ನುವುದು ಒಂದು ಅಧ್ಯಯನಯೋಗ್ಯ ವಿಷಯವಾಗಿದೆ.

    ಮೊಬೈಲಿನೊಳಗೆ ಲಾಕ್ ಆಗುತ್ತಿರುವ ನಾವು!

    ನಯನ್ ಕುಮಾರ್

    ನಾವು ನಮ್ಮ ಕಾಲೇಜು, ಕ್ಲಾಸ್‌, ಕ್ಲಾಸ್‌ಬಂಕ್, ಒಂದಷ್ಟು ಕಿರಿಕ್‌, ಪರೀಕ್ಷೆ ತಯಾರಿ ಅಂತೆಲ್ಲಾ ಬ್ಯುಸಿಯಾದ್ದ ನಮ್ಮ ವೇಗಕ್ಕೆ ಕೊರೋನಾ ಎಂಬ ಕ್ರಿಮಿ ಪೂರ್ಣವಿರಾಮವಿಟ್ಟಿತು. ಬೇಕು ಬೇಕು ಅಂತ ಕಾಯ್ತಿದ್ದ ರಜಾ ದಿನಗಳು ಈಗ ಜಡಿಮಳೆಯಂತೆ ನಿಲ್ಲುತ್ತಲೇ ಇಲ್ಲ. ಕಾಲೇಜು ದಿನಗಳಲ್ಲಿ ಪರೀಕ್ಷೆಗೆ ಹೆದರಿ ಅಲ್ಪಸ್ವಲ್ಪ ಓದುತ್ತಿದ್ದವರಿಗೆಲ್ಲ ಈಗ, “ಏನೇ ಆದ್ರು ಈ ಕೊರೋನಾ ಈ ವರ್ಷ ಕಡಿಮೆ ಆಗಲ್ಲ ”  ಅನ್ನೊ ದೈರ್ಯ ಬಂದಿದೆ.

    ಕಾಲೇಜು ನಡಿತಾ ಇದ್ದಾಗ ನಮ್ಮ ಕೈಯಲ್ಲಿರೋ ಮೊಬೈಲಿಗೆ ಉಸಿರಾಡೊದಕ್ಕಾದರೂ ಸ್ವಲ್ಪ ಸಮಯ ಸಿಗ್ತಾ ಇತ್ತು. ಆದ್ರೆ‌ ಈಗ ಹಾಗಿಲ್ಲ. ಇಡೀ ದೇಶ ಕೊರೋನಾದಿಂದ ನರಳಾಡುತ್ತಿದೆ, ನಮಗೂ ಬೇಡದ ವಿರಾಮ ಸಿಕ್ಕಿದೆ, ಆದ್ರೆ ಮೂಬೈಲಿಗೆ ಮಾತ್ರ ಇಪ್ಪತ್ತನಾಲ್ಕು ಗಂಟೆ ಕೆಲಸಾನೆ. ಮೊದಲೇ ಪುಸ್ತಕಗಳನ್ನ ಓದುವುದು ಅಷ್ಟಕ್ಕಷ್ಟೆ, ಈಗಂತು ಅವುಗಳ ನೆನಪೇ‌ ಇಲ್ಲ. ವಾಟ್ಸಾಪ್ , ಫೇಸ್ ಬುಕ್, ಯೂಟ್ಯೂಬ್ ಅಂತಲೇ ದಿನ ಕಳೆದು ಹೋಗುತ್ತಿದೆ.

    ದಿನ ಆರಂಭವಾಗೋದೆ ತಡ ಕೈಯಲ್ಲಿ ಮೊಬೈಲ್ ಕುಣಿಯುತ್ತಿರುತ್ತದೆ. ಅನಂತರ ರಾತ್ರಿ ಮಲಗುವವರೆಗೆ ನಾವು ಮತ್ತು ನಮ್ಮ ಮೊಬೈಲ್ ಮಾತ್ರವೆ ನಮ್ಮೊಳಗೆ. ಸುತ್ತಮುತ್ತ ಏನಾಗುತ್ತಿದೆ, ಯಾವಾಗ ಪರೀಕ್ಷೆ ನಡೆಸ್ತಾರೆ, ಪರೀಕ್ಷೆ ಆಗುವುದಿದ್ದರೆ ಅದಕ್ಕೆ ನಾವೇನು ತಯಾರಿ ಮಾಡಬೇಕು ಇದ್ಯಾವುದೂ ನಮ್ಮ ತಲೆಯಲ್ಲಿಲ್ಲ. ನಾವು ಪ್ರಸ್ತುತ ಯೋಚಿಸುತ್ತಿರುವುದು ಕೇವಲ ನಾಳೆಯ ಉಚಿತ ಡೇಟಾ ಹೇಗೆ ಖಾಲಿ ಮಾಡುವುದು ಎಂಬುದನ್ನಷ್ಟೆ!

    ಒಂದಷ್ಟು ಬುದ್ದಿವಂತ ಎನಿಸಿಕೊಂಡವನೂ ಈ ಕೊರೋನಾ ರಜೆಯಿಂದಾಗಿ ದಡ್ಡನಾಗುತ್ತಿದ್ದಾನೆ. ಮೊಬೈಲ್ ಎಂಬ ಮಾಯಾಲೋಕದಲ್ಲಿ ಬಿದ್ದು ತನ್ನನ್ನು ತಾನೇ ಮರೆಯುತ್ತಿದ್ದಾನೆ. ನಾವದನ್ನು ಬಿಟ್ಟಿರಲಾರದಷ್ಟು ಅಂಟಿಕೊಂಡಿದ್ದೆವೆ. “ಊಟ ಇಲ್ಲದಿದ್ದರೂ ಪರವಾಗಿಲ್ಲ, ಮೊಬೈಲ್ ಡೇಟಾ ಇಲ್ಲದಿದ್ದರೆ ಬದುಕಲಾರೆ” ಎಂಬಷ್ಟು ಅದಕ್ಕೆ ಜೋತುಬಿದ್ದಿದೇವೆ. ಪ್ರಸ್ತುತ ಯುವ ಸಮುದಾಯವನ್ನು ಕೊರೋನಾಗಿಂತಲು ಪ್ರಬಲವಾಗಿ ಲಾಕ್ ಮಾಡಿರುವುದು ಮೊಬೈಲ್. ಅದರೊಳಗೆಯೇ ನಮಗೆ ಲಾಕ್ ಡೌನ್…

    ಈಗಲೇ‌ ಇದರಿಂದ ನಾವು ನಮ್ಮನ್ನು ಬಿಡುಗಡೆ ಮಾಡಿಕೊಳ್ಳದೇ ಹೋದರೆ ನಮ್ಮನ್ನೇ ನಾವೆಲ್ಲೋ ಕಳೆದುಕೊಳ್ಳಬಹುದು.

    ನಯನ್‌ ಕುಮಾರ್‌ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿ ಅಂತಿಮ ಪದವಿ ಓದುತ್ತಿದ್ದಾರೆ.‌ ಎನ್‌ಎಸ್‌ಎಸ್‌ ಮೂಲಕ ನಟನೆ, ಮಿಮಿಕ್ರಿ, ಏಕಪಾತ್ರಾಭಿನಯ, ಹಾಡು, ಬರವಣಿಗೆಗಳಲ್ಲಿ ಪಳಗಿದ್ದಾರೆ. ಕಿರುಚಿತ್ರಗಳ ನಟನಾಗಿ, ಸಾಹಿತ್ಯಕಾರನಾಗಿ ಬಹುಮಾನ ಗೆದ್ದವರು. ಆರ್ಥಿಕ ಬೆಂಬಲವೇನೂ ಇಲ್ಲದಿದ್ದರೂ ಪ್ರತಿಭೆಯಿಂದಲೇ ತನ್ನಂತಹ ಹಲವರಿಗೆ ಮಾದರಿಯಾಗಿದ್ದಾರೆ.

    ಕಿರಣ್ ಮಾಡಾಳು

    ಇಲ್ಲಿ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    ಎಷ್ಟೇ ಚಪ್ಪಲಿ ಸವೆದರೂ ಬಾಲ್ಯದ ನೆನಪು ಸವೆಯಲ್ಲ

    ಪ್ರತೀ ಮಗುವಿನ ಮುದ್ದಾದ ಚಟುವಟಿಕೆ ಅಂದ್ರೆ ಅದು ಬಾಗಿಲಲ್ಲಿ ಬಿಟ್ಟ ದೊಡ್ಡವರ ಚಪ್ಪಲಿಯಲ್ಲಿ ತನ್ನ ಪುಟ್ಟ ಪಾದಗಳನ್ನಿಟ್ಟು ನಡೆಯಲು ಪ್ರಯತ್ನಿಸುವುದು .

    ಬಾಲ್ಯದಲ್ಲಿ ನಾವುಗಳು ಚಪ್ಪಲಿ ಇಲ್ಲದೇ ತುಂಬಾ ದಿನಗಳನ್ನ ಕಳೆದಿದೀವಿ.ಹೊಸ ಚಪ್ಪಲಿಗಳನ್ನ ಕೊಂಡು ಆನಂದಿಸಿದೀವಿ.ಅನುಭವಿಸಿದೀವಿ ಹಾಗೇ ಕಳ್ಕೊಂಡು ದುಖ್ಹಿಸಿದೀವಿ .

    ಆಗೆಲ್ಲಾ ಚಪ್ಪಲಿ ತಗೋಬೇಕು ಅನ್ನೋದೇ ಒಂದು ದೊಡ್ ಸುದ್ದಿ .ಮನೆಯವರು, ಅಕ್ಕಪಕ್ಕದ ಮನೆಯವರು, ಫ್ರೆಂಡ್ಸು ಎಲ್ಲಾ ಯಾವ್ ಚಪ್ಪಲಿ ತಗೋತೀಯಾ ? ಕಂಪನಿ ಚಪ್ಪಲಿ ತಗೋ ಒಳ್ಳೇ ಬಾಳಿಕೆ ಬರುತ್ತೆ , ಅದು ಕಚ್ಚಲ್ಲ , ಕಿತ್ತೋದ್ರೆ ಪಟ್ಟೀ ಹಾಕಿಸ್ಕೋಬಹುದು ಅಂತೆಲ್ಲಾ ಸಲಹೆ ಸೂಚನೆಗಳನ್ನ ಕೊಡುತ್ತಿದ್ದರು.

    ಬ್ರಾಂಡೆಡ್ ಚಪ್ಪಲಿ ಕಚ್ಚಲ್ಲ ಅನ್ನೋ ಬಲವಾದ ನಂಬಿಕೆ ಅವರಲ್ಲಿತ್ತು . ಮನೆಯವರು ನಮಗೆ ಕೊಡಿಸ್ತಿದ್ದಿದ್ದೇ ರಬ್ಬರಿನ ಹವಾಯಿ ಚಪ್ಪಲಿ. ಅದರಲ್ಲಿ ಕಲರಿನ ಅಯ್ಕೆಗೆ ಇದ್ದದ್ದು ಎರಡೇ ಆಪ್ಷನ್ ಒಂದು ನೀಲಿ ಬಣ್ಣದ್ದು ಮತ್ತೊಂದು ಕ್ರೀಂ ಬಣ್ಣದ್ದು.ಹೊಸತರಲ್ಲಿ ಅದೊಂಥರ ಮಜವಾದ ವಾಸನೆ ಇರೋದು.

    ಅಪ್ಪ ಅಂಗಡೀಗೆ ಕರ್ಕೊಂಡೋಗಿ ಸೈಜ್ ಆಗುತ್ತಾ ನೋಡು ಎರಡೂ ಒಂದೇ ನಂಬರ್ರಾ ನೋಡು…. ಎಂದು ಚೆಕ್ ಮಾಡಿ ಕೊಡುಸ್ತಾಯಿದ್ರು. ಕಳಕೋಬೇಡ ಅಂತ ಎಚ್ಚರಿಸ್ತಾಯಿದ್ರು .ಅಕಸ್ಮಾತ್ ಚಪ್ಪಲಿ ಏನಾದ್ರೂ ಕಳ್ಕೊಂಡ್ ಮನೇಗ್ ಬಂದ್ರೆ ನಮಗಿರೋದು ಹಬ್ಬ ….ಇನ್ನೂ ಸ್ಟಿಕ್ಕರ್ರೇ ಕಿತ್ತಿರ್ಲಿಲ್ಲ ಆಗಲೇ ಕಳದಾಕ್ಕೊಂಡವ್ನೆ , ನಿಮ್ಮಪ್ಪ ಬರಲಿ ಇರು ನಿನಗೈತೆ , ಎಷ್ಟು ಧೈರ್ಯ ಇದ್ರೆ ಹೊಸಾ ಚಪ್ಪಲಿ ಕಳ್ಕೊಂಡು ಬರ್ತೀಯ , ಮೈಗೆ ಎಣ್ಣೆ ಹಚ್ಕೋ , ಇವತ್ತು ಎಡಗಡೆ ಎದ್ದಿದೀಯಾ ಅನ್ಸುತ್ತೆ……. ಹಿಂಗೆಲ್ಲಾ ಹೆದರಿಸಿ ಇಟ್ಬಿಡೋವ್ರು.

    ಮನೆಗೆ ಅಪ್ಪ ಬಂದ್ ತಕ್ಷಣ ಅವರಿಗೆ ಸುದ್ದೀ ಮುಟ್ಸವ್ರು. ಅಪ್ಪ ಮನೆಯವರ ಮಾತಿನಂತೆ ಭಾರಿಸಿ ಕೆಡವವ್ರು. ನಮ್ಮ ನೋವು ಅಳುವಿನ ಆಕ್ರಂದನ ಅಕ್ಕಪಕ್ಕದ ಮನೆಯವರಿಗೂ ಮುಟ್ಟೋದು. ಅವರೂ ಹೊಸ ಚಪ್ಪಲಿ ಕಳದಾಕ್ಕೊಂಡಿರೋದಕ್ಕೆ ಹೊಡೀತಿರೋದು ಅಂತ ಮಾತಾಡ್ಕೋಳೋವ್ರು .

    ಅತ್ತು ಸುರಿದು ಮಲಗಿ ಬೆಳಿಗ್ಗೆ ಎದ್ದು ಮುಖ ಗಂಟಾಕ್ಕೊಂಡು ಮೂಲೆಯಲ್ಲಿ ಕುಂತಿದ್ದಾಗ ” ಗೋಪಿ ಮನೇಲಿ ಬಿಟ್ಟಿದ್ನಂತೆ ಅಂತ ಯಾರೋ ಮಾತನಾಡಿಕೊಳ್ಳುವ ವಾಯ್ಸ್ ಕಿವಿಗೆ ಬೀಳೋದು , ಅದನ್ನ ಕೇಳ್ತಾಇದ್ದಂಗೆ ಮುಖ ಅರಳೋಗೋದು , ಗೋಪಿ ತಗೊಂಡು ಬಂದು ಕೊಡೋವ್ನು .ಗೋಪಿಯನ್ನು ಧನ್ಯತಾಭಾವದಿಂದ ನೋಡಿ ಅವನಿಂದ ಚಪ್ಪಲಿ ಈಸ್ಕೊತಾ ಇದ್ವಿ.

    ಅಯ್ಯೋ ಮಗನನ್ನು ಅನ್ಯಾಯವಾಗಿ ಹೊಡೆದುಬಿಟ್ವಲ್ಲ ಅನ್ನೋ ಸಣ್ಣ ಪಶ್ಚಾತ್ತಾಪಾನೂ ಮನೆಯವರ ಮುಖದಲ್ಲಿ ಕಾಣ್ತಿರಲಿಲ್ಲ.ಬದಲಾಗಿ ಇನ್ನೊಂದ್ಸಲಾ ಯಾರ ಮನೇಲಾದ್ರೂ ಬಿಟ್ಟುಬಾ ಅದರಲ್ಲೇ ಬೀಳ್ತಾವೇ ಅಂತಾನೇ ಹೇಳೋವ್ರು . ಕೆಲವೊಮ್ಮೆ ರಾತ್ರಿ ಕನಸಿನಲ್ಲಿ ಚಪ್ಪಲಿ ಕಳೆದುಕೊಂಡ ಕೆಟ್ಟ ಕನಸು ಬೇರೇ ಬೀಳೋದು .

    ಭಾನುವಾರಾನೋ ರಜಾದಿನಾನೋ ಅದನ್ನ ತೊಳೆದು ಬಿಸಿಲಲ್ಲಿ ಗೋಡೆಗೆ ಒರಗಿಸಿ ನಿಲ್ಲಿಸ್ತಾಇದ್ವಿ . ಕಿತ್ತೋದ್ರೆ ರಿಪೇರಿ ಮಾಡಿಸ್ಕೋತಾ ಇದ್ವಿ. . ಪಟ್ಟಿ ಕಿತ್ತು ಹೊಲಿಸಲಿಕ್ಕೆ ಆಗುವುದಿಲ್ಲ ಅನ್ನೊ ಸಂದರ್ಭದಲ್ಲಿ ಹೊಸ ಪಟ್ಟೀನ ಹಾಕಿಸ್ಕೋತಿದ್ವಿ .ಐದಾರು ಜನ ಫ್ರೆಂಡ್ಸು ಹೊಗ್ತಿದ್ರೆ ಹಿಂದ್ಗಡೆಯಿಂದ ತುಳಿದೋ , ಕಲ್ಲಿಗೆ ಎಡವೋ, ಗುಂಪಿನಲ್ಲಿ ಒಬ್ಬನ್ದಾದ್ರೂ ಚಪ್ಲಿ ಕಿತ್ತೋಗ್ತಿರೋದು ಉಳಿದವರು ಅವನಿಗೆ ಪಿನ್ ಹಾಕೋ , ಪಟ್ಟಿ ಸಿಕ್ಸು , ಹಿಂಗ್ ನಡೀ, ಹಿಂಗೆಲ್ಲಾ ಐಡಿಯಾ ಕೊಡ್ತಿರೋವ್ರು .ಸ್ಕೂಲಿಗೆ ಹೊಸಾ ಚಪ್ಪಲಿ ಹಾಕ್ಕೊಂಡೋದ್ರೆ ಮೇಷ್ಟ್ರು ಸಹ ಎಷ್ಟೋ ಚಪ್ಲಿ ? ಎಲ್ಲಿ ತಗೊಂಡೆ ಅಂತ ಕೇಳೋವ್ರು .

    ಅಗೆಲ್ಲಾ ಮನೆಗಳಲ್ಲಿ ಚಪ್ಪಲಿ ಸ್ಟ್ಯಾಂಡ್ ಅಂತ ಇರ್ತಿರಲಿಲ್ಲ ಯಾಕಂದ್ರೆ ಮನೇಲಿ ಎಷ್ಟು ಜನ ಇರ್ತಿದ್ರೋ ಅಷ್ಟೇ ಜೊತೆ ಚಪ್ಪಲಿಗಳು ಇರ್ತಿದ್ವು , ಒಂದು ಜೊತೆ ಹಾಳಾಗೋವರೆಗೂ ಇನ್ನೊಂದ್ ಜೊತೆ ತಗೋತಿರ್ಲಿಲ್ಲ .
    ಅಪ್ಪ ಮನೇಗೆ ಬಂದಿದಾರ ಇಲ್ವಾ ಅನ್ನೋದನ್ನ ಅವರ ಚಪ್ಪಲಿಯಿಂದ ಕಂಡುಹಿಡೀತಿದ್ವಿ . ಸಾಮಾನ್ಯವಾಗಿ ಅಪ್ಪನದ್ದು ಚರ್ಮದ ಚಪ್ಪಲಿಯಾಗಿರೋದು ಸಂಸಾರದ ಭಾರ ಹೊತ್ತು ತಿರುಗುತ್ತಿದ್ದಕ್ಕೊ ಏನೋ ಅವರ ಚಪ್ಪಲಿ ನನಗೆ ನೆನಪಿರುವಂತೆ ಸದಾ ಸವೆದಂತೆಯೇ ಕಾಣುತ್ತಿತ್ತು .ಅದಕ್ಕವರು ಸೋಲ್ ಹಾಕಿಸುತ್ತಿದ್ದರು . ಮಳೆ ಬಂದ್ರೆ ನೆಂದೋಗುತ್ತೆ ಅಂತ ಓಡೋಗಿ ಚಪ್ಪಲಿಗಳನ್ನ ಮನೆ ಒಳಗೆ ಇಡ್ತಾಇದ್ವಿ .

    ಆಗೆಲ್ಲಾ ಬಸ್ ಸ್ಟ್ಯಾಂಡಿನ ಸಮೀಪ ಫುಟ್ ಪಾತಿನ ಮೇಲೆ ಚಪ್ಪಲಿ ರಿಪೇರಿ ಮಾಡುವವರು ತುಂಬಾ ಮಂದಿ ಕಾಣುತ್ತಿದ್ದರು . ಅವರ ಬಳಿ ನಾವು ಹೋಗಿ ಎಷ್ಟಾಗುತ್ತೆ ಅಂತ ಮುಂಚೆಯೇ ಮಾತಾಡಿ ಬಾರ್ಗೇಯ್ನ್ ಮಾಡತ್ತಿದ್ವಿ.ರಿಪೇರಿ ಮಾಡಿಕೊಟ್ಟ ಮೇಲೆ ಎಷ್ಟು ದಿನ ಬರುತ್ತೆ ಅಂತ ಕೇಳ್ತಿದ್ವಿ.

    ಈಗೆಲ್ಲಾ ಬದಲಾಗಿದೆ …. ಮನೆ ಮನೇಗೆ ಚಪ್ಪಲಿ ಗೂಡು ಶೂ ಸ್ಟ್ಯಾಂಡ್ ಗಳಿವೆ .ನೂರಾರು ಬ್ರಾಂಡ್ ಗಳಿವೆ . ಮನೆ ಒಳಗೆ ಉಪಯೋಗಿಸಕ್ಕೇ ಚಪ್ಪಲಿಗಳಿವೆ . ಯಾವ್ ಶೂ ಹಾಕ್ಕೋಬೇಕು ಅಂತ ಕನ್ಫೂಸ್ ಆಗೋ ಅಷ್ಟು ಜೊತೆ ಷೂಗಳಿರುತ್ತವೆ. ಕಳದೋದ್ರೆ ತಲೇನೇ ಕೆಡಸ್ಕೋಳಲ್ಲ ದರಿದ್ರ ಹೋಯ್ತು ಅಂದ್ಕೋತಾರೆ .

    ಏನೇ ಹೇಳಿ….. ಬದುಕಲ್ಲಿ ಎಷ್ಟೇ ಚಪ್ಪಲಿ ಸವೆದರೂ …..ಬದುಕು ಸವೆದರೂ ….ಬಾಲ್ಯದ ನೆನಪುಗಳು ಮಾತ್ರ ಯಾವುದೇ ಕಾರಣಕ್ಕೂ ಸವೆಯಲ್ಲ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಪಲ್ಲಟದ ಹಾದಿಯಲ್ಲಿ ಕಾಫಿ ಉದ್ಯಮ

    ಕೋವಿಡ್ ಕಾರಣಕ್ಕೆ ಜಗತ್ತು ಶತಮಾನದಷ್ಟು ಹಿಂದೆ ಸರಿದಂತೆ ಎನಿಸುತ್ತಿರುವ ಈ ಹೊತ್ತಿನಲ್ಲಿ ವ್ಯವಸ್ಥೆಯ ಎಲ್ಲ ಕ್ಷೇತ್ರಗಳಲ್ಲೂ ಆರ್ಥಿಕ ಹಿಂಜರಿತ ಕಾಣಿಸಿದ್ದರೆ ಕೆಲವು ಕ್ಷೇತ್ರಗಳಂತೂ ಭಾರಿ ಹೊಡೆತ ಅನುಭವಿಸುತ್ತಿವೆ.
    ತತ್ಕಾಲದ ,ಮಧ್ಯಮ ಕಾಲದ ಮತ್ತು ದೀರ್ಘಕಾಲೀನ ಸಮಸ್ಯೆಗಳು ಬೇರೆ ಬೇರೆ ಕ್ಷೇತ್ರಗಳನ್ನು ಭಾದಿಸುತ್ತಿವೆ.ಕೃಷಿ ಮತ್ತು ತೋಟಗಾರಿಕಾ ವಲಯ ಕೂಡ ಇದಕ್ಕೆ ಹೊರತಾಗಿಲ್ಲ.ಹಣ್ಣು ತರಕಾರಿ,ಹೈನೋದ್ಯಮ ,ಪುಷ್ಪೋದ್ಯಮ ತತ್ಕಾಲದ ಸಮಸ್ಯೆಯನ್ನೂ ಅನುಭವಿಸಿದರೆ ಬೇಳೆಕಾಳು,ಆಹಾರಧಾನ್ಯಗಳ ಕೃಷಿ ಸ್ವಲ್ಪ ತಡೆದು ಹೊಡೆತ ಅನುಭವಿಸಿತು.ಇನ್ನೂ ತೋಟಗಾರಿಕೆಯ ಬೆಳೆಗಳು ದೀರ್ಘಕಾಲೀನ ಮತ್ತು ಬಹುದೊಡ್ಡ ಆಘಾತವನ್ನು ಎದುರಿಸಲಿಕ್ಕೆ ತಯಾರಾಗಬೇಕಿದೆ.

    ಅದರಲ್ಲೂ ನಮ್ಮ ಕಾಫಿ ಉದ್ಯಮ ಕೋವಿಡ್ ಕಾರಣಕ್ಕೆ ಒಂದು ಪಲ್ಲಟದ ಹಾದಿಯನ್ನು ಇದಿರು ನೋಡ್ತಿದೆ ಎನ್ನಬಹುದು.ತೊಂಬತ್ತರ ದಶಕದ ಮುಕ್ತ ಮಾರುಕಟ್ಟೆಯ ಪ್ರಭಾವದಿಂದ  ದೊರಕಿದ ಉತ್ತಮ ಬೆಲೆಯಿಂದಾಗಿ ಸಕಲೇಶಪುರ, ಆಲೂರು,ಅರಕಲಗೂಡು,ಚಿಕ್ಕಮಗಳೂರು, ಮಡಿಕೇರಿಯ ಬಹುತೇಕ ಕೃಷಿಭೂಮಿ ಕಾಫಿತೋಟವಾಗಿ ಪರಿವರ್ತನೆಯಾಯ್ತು. ಮತ್ತು ಆ ಪರಿವರ್ತನೆಯ ಪ್ರಕ್ರಿಯೆ ಇಂದಿಗೂ ಕೂಡ ಮುಂದುವರೆದಿದೆ.(ಇದರಿಂದ ಈ ಭಾಗದಲ್ಲಿ ಅರಣ್ಯದ ಶೇಕಡಾವಾರು ಪ್ರಮಾಣ ಬಹಳ ಉತ್ತಮ ಮಟ್ಟದಲ್ಲಿ ಇದೆಯೆಂಬುದು ಒಂದು ಹೆಮ್ಮೆ.)

    ಬೆಲೆ ಕುಸಿತ, ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ, ರೋಗ ಕೀಟಗಳ ಬಾಧೆ,ರಸಗೊಬ್ಬರ ಹಾಗು ಸಿಂಪರಣೆಗಳ ಬೆಲೆಯೇರಿಕೆ, ಕಾರ್ಮಿಕರ ತಗ್ಗಿದ ಕೆಲಸದ ಗುಣಮಟ್ಟ ,ಉದ್ಯಮ ಬೇಡುವ ಅತಿಯಾದ ಇನ್ಫ್ರಾಸ್ಟ್ರಕ್ಚರ್  ಇವೆಲ್ಲವೂ ಕಾಫಿ ಉದ್ಯಮ ಎದುರಿಸ್ತಿರುವ ಸಮಸ್ಯೆಗಳ ಪಟ್ಟಿ. ಅದರ ಜೊತೆಗೆ ಕಳೆದ ಎರಡೂವರೆ ದಶಕಗಳಿಂದ ಭಯಾನಕವೆನಿಸುವಂತೆ ಹೆಚ್ಚಿರುವ ಮಾನವ ವನ್ಯ ಜೀವಿ ಸಂಘರ್ಷ.ಅದರಲ್ಲೂ ಕಾಫಿತೋಟಗಳಿಗೆ ಆನೆಯಿಂದಾಗುವ ನಿರಂತರ ಬೆಳೆಹಾನಿ ,ವ್ಯವಸ್ಥೆಯ ಹಾನಿ ಹಾಗೂ ಪ್ರಾಣಹಾನಿ ಬೆಳೆಗಾರರ ಬದುಕನ್ನು ಮೂರಾಬಟ್ಟೆ ಮಾಡಿದೆ. ಇನ್ನೀಗ ಕೋವಿಡನ ಆಗಮನ.

    ತೋರಿಕೆಯ ನೆಮ್ಮದಿಗೂ ಸಂಚಕಾರ

    ಇಡೀ ಜಗತ್ತಿಗೆ ಕೋವಿಡ್ ಬಂದಿದೆ.ಬಳಲುತ್ತಿದೆ.ನಮ್ಮದೇನು ವಿಶೇಷ ಅಂತ ಅಂದುಕೊಂಡು ಸಮಾಧಾನ ಮಾಡಿಕೊಂಡರೂ ಕಾಫಿ ಬೆಳೆಗಾರ ತನ್ನ ಎಂದಿನ ತೋರಿಕೆಯ ನೆಮ್ಮದಿಯನ್ನು,ಸಂತೋಷವನ್ನು ಇನ್ನು ತೋರಿಸಿಕೊಳ್ಳುವುದು ತ್ರಾಸಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
    ಕಳೆದೆರಡು ದಶಕಗಳಿಂದ ಮೇಲೆ ಹೇಳಿದ ಸಮಸ್ಯೆಗಳಿಂದಾಗಿ ಬಹುತೇಕ ಕಾಫಿ ಬೆಳೆಗಾರರ ಮಕ್ಕಳು  ಉನ್ನತ ವಿದ್ಯಾಭ್ಯಾಸ ಪಡೆದು ಉದ್ಯೋಗ ಹಿಡಿದು ಮಹಾನಗರದಲ್ಲೋ,ವಿದೇಶದಲ್ಲೋ ನೆಲೆ ಕಂಡುಕೊಂಡಿದ್ದರು.

    ನಗರಗಳಲ್ಲಿ ಸಣ್ಣಪುಟ್ಟ ಉದ್ಯೋಗ ಮಾಡಿ ಮನೆಗೆ ಆದಷ್ಟೂ ಹಣಕಾಸಿನ ನೆರವು ನೀಡುತ್ತಾ ತೋಟವನ್ನು ಅಭಿವೃದ್ಧಿ ಮಾಡಲಿಕ್ಕೆ ನೆರವಾಗ್ತಿದ್ದ  ಯುವಪೀಳಿಗೆಯು ಇನ್ನೊಂದು ದೊಡ್ಡ ಸಮೂಹವೂ ಕೊರೊನಾ ಕಾರಣದಿಂದ ಮನೆಗೆ ಬಂದು‌ ಕುಳಿತಿದೆ. ಇದರಲ್ಲಿ ಅರ್ಧ ಮಂದಿ  ವರ್ಕಫ್ರಮ್ ಹೋಮ್ ಮಾಡ್ತಿದ್ರೆ ಉಳಿದವರು ಕೆಲಸ ಕಳೆದುಕೊಂಡವರೋ,ಆ ಭೀತಿಯಲ್ಲಿರುವವರೋ ಒತ್ತಾಯದ ರಜೆಯಲ್ಲಿರುವವರೋ  ಆಗಿದ್ದಾರೆ.

    ಇಬ್ಬರು ಗಂಡು ಮಕ್ಕಳ ಕುಟುಂಬದಲ್ಲಿ ಒಬ್ಬ ಮಗ ಆಚೆ ದುಡಿಯುತ್ತಿದ್ದರೆ ಇನ್ನೊಬ್ಬನಿಗೆ ಇರುವ ಸಣ್ಣ ತೋಟ ಸಾಕಾಗುತ್ತದೆ ಎಂಬ ಲೆಕ್ಕಾಚಾರ ತಲೆಕೆಳಗಾದ ಆಘಾತದಲ್ಲಿ ತಂದೆತಾಯಂದಿರಿದ್ದರೆ ಇಲ್ಲಿವರೆಗೆ ಎರಡು ದೇಹ ಒಂದು ಜೀವದಂತಿದ್ದ ಅಣ್ಣತಮ್ಮಂದಿರ ನಡುವೆ ದಾಯಾದಿ ಮತ್ಸರ  ಆರಂಭವಾಗುತ್ತಿರುವ ಘಟನೆಗಳು ಅಲ್ಲಲ್ಲಿ ಕಾಣುತ್ತಿವೆ. ಕೊರೊನಾ ಕಾರಣದಿಂದ ಹಳ್ಳಿಗಳು ಹೆಚ್ಚಾಗಿಯೇ ತುಂಬಿಕೊಂಡಿವೆ.ಎಸಿ ಕೋಣೆಯ ಕೆಲಸ ಅಭ್ಯಾಸವಿದ್ದವರೂ ಗಮ್ ಬೂಟು ತೊಟ್ಟು ಹ್ಯಾಟ್ ಧರಿಸಿ ಕೈಯಲ್ಲಿ ಒಂದು ಕತ್ತಿಯೋ ಚಾಕೋ ಹಿಡಿದು ತೋಟಕ್ಕೆ ಹೋಗ್ತಿದ್ರೆ ನೋಡಲಿಕ್ಕೆ ಆಹ್ಲಾದವೆನಿಸ್ತದೆ.

    ಆದರೂ..ಇದಾವುದೂ ಸರಿಯೆನಿಸುವುದಿಲ್ಲ.

    ಕಾಫಿತೋಟದ ಪ್ರಮುಖ ಅದಾಯವಾದ ಕಾಳುಮೆಣಸು ಕಳೆದೆರಡು ವರ್ಷಗಳ ಮಹಾ ಮಳೆಯಿಂದಾಗಿ ರೋಗಕ್ಕೆ ತುತ್ತಾಗಿದೆ.ಕಾಫಿಗೆ ಸಿಗುತ್ತಿರುವ ಬೆಲೆ  ಅದರ ಖರ್ಚು ವೆಚ್ಚ ನಿಭಾಯಿಸಲೇ ಕಷ್ಟವಾಗಿರುವಾಗ ನಗರದಿಂದ ಹಣದ ಹರಿವು ನಿಲ್ಲುವುದು ಪರೋಕ್ಷವಾಗಿ ಅಪಾಯದ ಮುನ್ಸೂಚನೆ.ಇದು ಕಾಫಿಯ ಮೇಲೆ  ಕೋವಿಡ್ ಪರಿಣಾಮದ ಒಂದು ಮುಖ.ಇನ್ನೂ ಕಾಫಿಯ ಬೆಲೆ ಈಗಾಗಲೇ ‌ನೆಲ ಕಚ್ಚಿದೆ.

    ಹೋಟೆಲ್ ,ಮಾಲ್ ,ರೆಸಾರ್ಟ್ ಗಳು ಮುಚ್ಚಿದ ಕಾರಣ ಕಾಫಿಯ ಬಳಕೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮದುವೆ ಮುಂತಾದ ಅದ್ದೂರಿ  ಕಾರ್ಯಕ್ರಮಗಳು,ಸಭೆ ಸಮಾರಂಭ ಗಳು ಪೂರ್ಣ ಪ್ರಮಾಣದಲ್ಲಿ ನಿಂತು ಹೋದದ್ದರಿಂದ ಕಾಫಿಯ ಆಂತರಿಕ ಬಳಕೆ ಮುಕ್ಕಾಲು ಶೇಕಡಾ ಕ್ಷೀಣಿಸಿದೆ.ನಗರ ಜೀವನದಲ್ಲಿ ಅಚಾನಕ್ಕು ತಗ್ಗಿದ ಕುಟುಂಬದ ಆರ್ಥಿಕತೆಯಿಂದಾಗಿ ಕೂಡ ಕಾಫಿ ಸೇವನೆ ಇಳಿಮುಖವಾಗುತ್ತಿದೆಯಂತೆ.ಕಾಫಿ ಉದ್ಯಮ ಒಂದು ಹಂತಕ್ಕೆ ತನ್ನ ಬೆಲೆಗಾಗಿ ನೆಚ್ಚಿರುವ ಆಂತರಿಕ ಬಳಕೆ ಪ್ರತ್ಯಕ್ಷವಾಗಿ ಇಷ್ಟೆಲ್ಲಾ ಇಳಿಗತಿಯನ್ನು ಕಂಡಿದೆ, ಕಾಣುತ್ತಿದೆ. 
    ಜೊತೆಗೆ ಉತ್ಪಾದನೆ ಮತ್ತು ಬಳಕೆದಾರರ ನಡುವಿನ ಸರಪಳಿ ತುಂಡಾಗಿದ್ದು ಕೂಡ ಕಾಫಿ ಬಳಕೆ ಇಳಿಯಲು ಕಾರಣವಾಗಿದೆ.

    ಕಾಫಿ ಟೂರಿಸಮ್ ಗೂ ಹೊಡೆತ

    ಇದಲ್ಲದೇ ಕಾಫಿ ಟೂರಿಸಮ್ ಎನ್ನುವ ಕಾನ್ಸೆಪ್ಟ ಅಡಿ ಬೆಳೆಗಾರರು ತಮ್ಮ ತೋಟಗಳಲ್ಲಿ  ನಡೆಸುತ್ತಿದ್ದ ರೆಸಾರ್ಟುಗಳು ,ಹೋಮ್ ಸ್ಟೇ ಗಳು ಸಂಪೂರ್ಣವಾಗಿ ಬಂದ್ ಆಗಿ ಹಣದ ಹರಿವಿಗೆ ದೊಡ್ಡ ಅಡಚಣೆ ಮಾಡಿದೆ.ಅಷ್ಟೇ ಅಲ್ಲ.ಈ ಹಾಸ್ಪಿಟಾಲಿಟಿ ಉದ್ಯಮವನ್ನು ಆರಂಭಿಸಲು ಪಡೆದ ಬ್ಯಾಂಕ್ ಸಾಲ ಬಡ್ಡಿ ಚಕ್ರಬಡ್ಡಿಗಳ ಲೆಕ್ಕದಲ್ಲಿ ಬೆಳೆದು ಬೃಹದಾಕಾರ ಪಡೆಯುತ್ತಿದೆ.ಕೊರೊನಾ  ಕಾರಣಕ್ಕೆ ಬ್ಯಾಂಕುಗಳು ಯಾವುದೇ ಬಗೆಯ  ಕನ್ಸಿಷನ್ನ್ ನೀಡುವ ಸುಳಿವನ್ನು ಇಲ್ಲೀವರೆಗೂ ಕೊಟ್ಟಿಲ್ಲ. ಅಲ್ಲಿಯೂ ಅಳಿವು ಉಳಿವಿನ ಸವಾಲು.

    ಇದು ಕಾಫಿಯ ಆಂತರಿಕ ಮಾರುಕಟ್ಟೆಯ ವಿಚಾರವಾದರೆ ಜಾಗತಿಕವಾಗಿ ಮಹಾ ಹೊಡೆತ ಮುಂದಿನ ಒಂದೆರಡು ವರ್ಷದಲ್ಲಿ ಎದುರಾಗಲಿದೆ.
    ಕೋವಿಡ್ ಕಾರಣದಿಂದ ಯುರೋಪ್‌ನ  ಪ್ರಮುಖ ರಾಷ್ಟ್ರಗಳ ಆರ್ಥಿಕ ಹಿನ್ನಡೆ ಬಹುಶ: ಮುಂದಿನ ವರುಷದ ಭಾರತೀಯ ಕಾಫಿಗೆ ಬೇಡಿಕೆ ಕುಸಿಯಲು ಕಾರಣವಾಗಬಹುದು ಎನ್ನುತ್ತಿದ್ದಾರೆ ತಜ್ಞರು.ಇದು ಕಾಫಿ ಉದ್ಯಮದ ಅಧೋಗತಿಗೆ ಕಾರಣವೂ ಆಗಬಹುದು.ಜಾಗತಿಕವಾಗಿ ‌ಕೂಡ ಕಾಫಿಯ ಬೇಡಿಕೆ ಇಳಿಮುಖವಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು ಎನ್ನುತ್ತದೆ ವರದಿಯೊಂದು.

    ವಲಸೆ ಕಾರ್ಮಿಕರ ಕೊರತೆ

    ಈ ಎಲ್ಲಾ ಸಮಸ್ಯೆಗಳ ನಡುವೆ ಈ ಸಾಲಿನಲ್ಲಿ ಕಾಫಿ ಕ್ಷೇತ್ರ ಕಾರ್ಮಿಕರ ಕೊರತೆಯನ್ನು ಬಹಳ ದೊಡ್ಡ ಮಟ್ಟದಲ್ಲಿ ಎದುರಿಸಬೇಕಾಗುತ್ತದೆ.ಬಹುತೇಕ ಕಾಫಿತೋಟಗಳಲ್ಲಿ ಅಸ್ಸಾಂ ಕಡೆಯ ವಲಸೆ ಕಾರ್ಮಿಕರು ಕೆಲಸವನ್ನು ನಿಭಾಯಿಸುತ್ತಿದ್ದರು.ವರ್ಷವಿಡೀ ಕೆಲಸ ಬೇಡುವ ಬೆಳೆ ಕಾಫಿಯಾದ್ದರಿಂದ ಮತ್ತು ಕಾರ್ಮಿಕರೇ ನಿಭಾಯಿಸಬೇಕಾದ ಮುಕ್ಕಾಲು ಕೆಲಸಗಳಿರುವುದರಿಂದ ಕಾರ್ಮಿಕ ಕೊರತೆ ಇದಿರಾದರೆ  ಬೆಳೆಗಾರ ನೆಲ ಕಚ್ಚಿದಂತೆ.

    ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹತ್ತು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸಿರುವ ಕಾಫಿ ಬೆಳೆಗಾರ ಸರ್ಕಾರ ಕೊಡಬಹುದಾದ ಎಲ್ಲಾ ಸವಲತ್ತುಗಳನ್ನು ತನ್ನ ಕಾರ್ಮಿಕರಿಗೆ ಮುಫತ್ತಿನಲ್ಲಿ ನೀಡುತ್ತಾನೆ.
    ಕೊರೊನಾ ಕಾರಣದಿಂದ ಈ ಬಾರಿ ಫೆಬ್ರವರಿ ಮಧ್ಯಭಾಗದಲ್ಲಿಯೇ ವಲಸೆ ಕಾರ್ಮಿಕರು ತಮ್ಮ ಊರು ಸೇರಿಕೊಂಡಿದ್ದಾರೆ.ಅವರನ್ನು ಸುರಕ್ಷಿತವಾಗಿ ಊರು ಸೇರಿಸುವ ಕೆಲಸವನ್ನು ಸ್ವತಃ ಬೆಳೆಗಾರರೇ ಮಾಡಿದ್ದಾರೆ.ಆದರೆ..ಕಾಫಿ ಕೊಯ್ಲು ಡಿಸೆಂಬರ ನಿಂದ ಆರಂಭವಾಗುತ್ತದೆ.ಕೊಯ್ಲು ಮತ್ತು ಕೊಯ್ಲೊತ್ತರ ಕೆಲಸಗಳಿಗೆ ಕಾಫಿ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಮಿಕರನ್ನುಬೇಡುತ್ತದೆ.ಬಹುಶಃ ಈ ಸಾಲಿನಲ್ಲಿ ಬೆಳೆದ ಬೆಳೆಯನ್ನು ಕಣಕ್ಕೆ ತರುವುದೇ ಹರಸಾಹಸವಾಗುವ ಎಲ್ಲ ಸಾಧ್ಯತೆಗಳೂ ಗೋಚರಿಸುತ್ತಿವೆ. ನೋಡೋಣಾ.ಹೋಪ್ ಫಾರ್ ದಿ ಬೆಸ್ಟ್ ಅಂದುಕೊಂಡು ಮುಂದಡಿ ಇಡಲೇ ಬೇಕಿದೆ.  

    ಈ ಎಲ್ಲದರ ನಡುವೆ ಮತ್ತೊಂದು ಪಲ್ಲಟ ವನ್ನು ಕಾಫಿ ನಾಡು ನೋಡುವ ಸಾಕಷ್ಟು ಮುನ್ಸೂಚನೆ ಕಾಣುತ್ತಿದೆ. ಬಹುತೇಕ ನಗರದ ಹಣವಂತರಿಗೆ  ಒಂದು ಸಣ್ಣ ಕಾಫಿತೋಟದ ಒಡೆಯರಾಗುವ ಆಸೆ ಕೋವಿಡನ ದಯೆಯಿಂದ ಗರಿಗೆದರಿದೆ.ಐದು ಎಕರೆ ಒಳಗಿನ ಕಾಫಿ ತೋಟಗಳು ಅತ್ಯುತ್ತಮ ಬೆಲೆಯಲ್ಲಿ ಮಾರಾಟವಾಗುತ್ತಿದೆ.ಯಾವಯಾವುದೋ ಕಾರಣಕ್ಕೆ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡಿದ್ದ ಬೆಳೆಗಾರ ಅಚಾನಕ್ಕು ಬಂದ ಒಳ್ಳೆಯ ಬೆಲೆಗೆ ತೋಟ ಮಾರಾಟ ಮಾಡಿ ಸಾಲದಿಂದ ಮುಕ್ತನಾಗಲು ಹವಣಿಸ್ತಿದ್ದಾನೆ.ತೋಟಕ್ಕೆ ಉತ್ತಮ ಬೆಲೆ ಬರುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆಯಾದರೂ “ಭೂಮಿ‌ ಮಾರಿ ಗೆದ್ದೋರಿಲ್ಲ” ಎನ್ನುವ ಮಾತು ಅಷ್ಟೇ ಸತ್ಯ .ಕಾಫಿ ‘ಕರೆಯೋ ಕಾಮಧೇನು’ಅಲ್ಲದಿದ್ರೂ ತೋಟದ ಒಡೆಯ ಎಂದಿಗೂ ಸ್ಥಿತಿವಂತನೇ.
    ಕೊರೊನಾ ಕಾರಣದಿಂದ ಗ್ರಾಮೀಣ ಭಾಗದ ಬದುಕು ಅದರಲ್ಲೂ ಮಲೆನಾಡಿನ ಕಾಫಿ ನಾಡಿನ ದಿನಚರಿ ಬಹಳ ಬದಲಾಗಿಲ್ಲ.ಕಾಫಿ ತನ್ನ ಕೆಲಸಗಳನ್ನು ಕರಾರುವಕ್ಕಾಗಿ ಕೇಳುವುದರಿಂದ ಬೆಳೆಗಾರ ಮಾಮೂಲಾಗೇ ಇದ್ದಾನೆ.

    ವಲಸೆ ಕಾರ್ಮಿಕರು ಹೋದ ನಂತರದ ಉಳಿದಿರುವ ಸ್ಥಳೀಯ ಕಾರ್ಮಿಕರು ದಿನಕ್ಕೆ ಎರಡ ಕೆಲಸಗಳನ್ನು ಮೀರಿ ಮಾಡುತ್ತಾ ದುಪ್ಪಟ್ಟು ,ಮೂರು ಪಟ್ಟು ಆದಾಯ ಪಡೆಯುತ್ತಿದ್ದಾರೆ.ಸರ್ಕಾರದ ಆಹಾರ ಭಾಗ್ಯ ಯೋಜನೆಯಲ್ಲಿ ಮಾಮುಲಿಗಿಂತ ಹೆಚ್ಚು ಪಡಿತರ ದೊರಕ್ತಿದೆ.ಆ ವರ್ಗ ಎಂದಿಗಿಂತಲೂ ಸುಖವಾಗಿದೆ.ಇರಲಿ. ಸದ್ಯ.ಬಹಳ ಬೇಗಎಲ್ಲವೂ ಇತ್ಯರ್ಥವಾಗಿ, ಕೊರೊನಾ ದೂರಾಗಿ  ಬದುಕು ಸಹಜ ಸ್ಥಿತಿಗೆ ಬರುವುದನ್ನು ಎಲ್ಲರಂತೆ ಕಾಫಿ ಬೆಳೆಗಾರನೂ ಎದುರು ನೋಡ್ತಿದ್ದಾನೆ. ಹದಗೆಟ್ಟ ಪರಿಸ್ಥಿತಿಯಲ್ಲಿ ಯಾವುದಾದರೊಂದು ಬೆಳಕಿನ ಕಿರಣ ಕಾಣಬಹುದಾದ ಸಾಧ್ಯತೆಯನ್ನು ಇಲ್ಲಿನ ಯುವ ಸಮೂಹ ಅರಸುತ್ತಿರುವ ಕುರುಹುಗಳೂ ಅಲ್ಲಲ್ಲಿ ಕಾಣುತ್ತಿವೆ.

    ತನ್ನ ಗತವೈಭವದ ದಿನಗಳು ಕಾಫಿ ಬೆಳೆಗಾರನಿಗೆ ಶೀಘ್ರ ಮರುಕಳಿಸುತ್ತವೆ ಎನ್ನುವ ಆಶಾವಾದವಂತೂ ಇದೆ.

    ಐದು ತಿಂಗಳಿಂದ ಮನೆಯಲ್ಲೇ ಇರುವ ಮಕ್ಕಳನ್ನು ಹೇಗೆ ಸಂಭಾಳಿಸುವುದು

    ಕೋವಿಡ್ ನಿಂದ ಉಳಿದ ದೇಶಗಳೆಲ್ಲ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಳ್ಳುತ್ತಾ ಮೊದಲಿನಂತೆಯೇ ನಡೆಯುವ ಹಂತಕ್ಕೆ ನಿಧಾನವಾಗಿ ಬರುತ್ತಿದೆ.ಆದರೆ ಭಾರತದಲ್ಲಿ ಪರಿಸ್ಥಿತಿ ಇನ್ನೂ ಅಷ್ಟೊಂದು ಸುಧಾರಿಸಿಲ್. ಶಾಲೆಗಳು ಇನ್ನು ತೆರೆದಿಲ್ಲ. ಹೀಗಾಗಿ ಐದು ತಿಂಗಳಿನಿಂದ ಆಟವಾಡಲು ಕೂಡ ಮನೆಯಿಂದ ಹೊರಹೋಗದ ಸ್ಥಿತಿ ಇರುವ ಮಕ್ಕಳ ಬಗ್ಗೆ ಸ್ವಲ್ಪ ಯೋಚಿಸಿ. ಬೆಳೆಯುವ ಮಕ್ಕಳು ದಿನವಿಡೀ ನಾಲ್ಕು ಗೋಡೆಯ ಮಧ್ಯೆ ಇರಬೇಕು ಎಂದರೆ ಮಕ್ಕಳ ಮಾನಸಿಕ ತೊಳಲಾಟ ಏನಿರಬಹುದು ?. 

    ಕರೋನದಿಂದಾಗಿ ಮಕ್ಕಳೆಲ್ಲ ಮನೆಯಲ್ಲಿಯೇ ಕುಳಿತು ಕನಿಷ್ಠ ಐದು ತಿಂಗಳುಗಳಾಗಿವೆ ಎಂದರೆ ಖೇದವೆನಿಸುತ್ತದೆ. ಹಾಗೆಯೇ ಅವರನ್ನು ಇಡೀ ದಿನ ಸಂಬಾಳಿಸಲು ಪೋಷಕರು ಕೂಡ ಸಾಕಷ್ಟು ಪ್ರಯತ್ನಪಡುತ್ತಿರುತ್ತಾರೆ ಎಂಬುದರಲ್ಲಿ ಆಶ್ಚರ್ಯವಿಲ್ಲ. ಮಕ್ಕಳು ಹಳ್ಳಿಗಳಲ್ಲಿದ್ದರೆ ತೋಟ ,ಕಾಡುಮೇಡು ಸುತ್ತಬಹುದು ,ಅಜ್ಜ ಅಜ್ಜಿಯ ಜೊತೆ ಸಮಯ ಕಳೆಯಬಹುದು ಪ್ರತಿ ಬೇಸಿಗೆ ರಜೆಯನ್ನು ಕಳೆಯುವಂತೆ ಈ ಬಾರಿ ಇನ್ನಷ್ಟು ಮಜವಾಗಿ ಕಳೆಯಬಹುದು. ಆದರೆ ನಗರಗಳ ಅಪಾರ್ಟ್ಮೆಂಟ್ ಗಳಲ್ಲಿ, ಸಣ್ಣ ಸಣ್ಣ ಮನೆಗಳಲ್ಲಿ ಮನೆಯ ಒಳಗೇ ಕುಳಿತು ದಿನವಿಡೀ ಕಳೆಯಬೇಕು ಎಂದಾದಲ್ಲಿ ಮಕ್ಕಳ ಮಾನಸಿಕ ಸ್ಥಿತಿಯ ಬಗ್ಗೆ ಯೋಚಿಸಿ. ಇದು ಒಂದು ಎರಡು ದಿನವಲ್ಲ ಕಳೆದ ಐದು ತಿಂಗಳಿಂದ ಎಲ್ಲೂ ಹೊರಹೋಗದೇ ಮನೆಯೊಳಗೇ ಇರುವ ಮಕ್ಕಳ ಪರಿಸ್ಥಿತಿ ನಿಜಕ್ಕೂ ಆತಂಕ ತರಿಸುವಂತದ್ದು. ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ ಪೋಷಕರಿಗೂ  ಸಹನೆ ಪರೀಕ್ಷಿಸುವ ಸಂದರ್ಭವಾಗಿರಬಹುದು. ಅದರಲ್ಲೂ ತಂದೆತಾಯಿ ಇಬ್ಬರೂ ಕೆಲಸ ಮಾಡುತ್ತಿದ್ದಲ್ಲಿ ಅವರ ಪರಿಸ್ಥಿತಿ ಇನ್ನೂ ಕಷ್ಟ. ಹಾಗಾದರೆ ನಮ್ಮ ಮಕ್ಕಳನ್ನು ಹೇಗೆ ದಿನವಿಡೀ ಉಲ್ಲಾಸಿತವಾಗಿ ಇಡಬಹುದು? 

    ಒಂದು ವರ್ಷಅಥವಾ ಎರಡು ವರ್ಷದೊಳಗಿನ ಮಗುವಾಗಿದ್ದಲ್ಲಿ ಈ ಲಾಕ್ಡೌನ್ ಅನುಕೂಲವೇ ಆಗಿರುತ್ತದೆ .ಆದರೆ ಮೂರರಿಂದ ಆರು ವರ್ಷದ ಮಕ್ಕಳಿಗೆ ಮನೆಯಲ್ಲಿಯೇ ಇರುವುದು ಕಷ್ಟದ ಕೆಲಸ. ಆರರ ನಂತರದ ಮಕ್ಕಳಿಗೆ ಶಾಲೆಯಿಂದಲೇ ಆನ್ಲೈನ್ ತರಗತಿಗಳು ನಡೆಯುವುದರಿಂದ ಸ್ವಲ್ಪ ಸಮಯ ಹೋಂ ವರ್ಕ್ ,ತರಗತಿಗಳಿಗೆ ತಯಾರಿ ಹೀಗೆ ಸಮಯ ಸರಿಹೊಂದಬಹುದು.  ಹಾಗಿದ್ದರೆ ನಿಮ್ಮ ಮಗು ಮೂರರಿಂದ ಆರು ವರ್ಷದವರಾದರೆ ಹೀಗೆ ಕೆಲವು ಟಿಪ್ಸ್ ಪಾಲಿಸಿ ನೋಡಿ. 

    ಟೈಮ್ ಟೇಬಲ್ ನಿರ್ಮಿಸಿಕೊಳ್ಳಿ :
    ಮಕ್ಕಳನ್ನು ದಿನವಿಡೀ ಬ್ಯುಸಿಯಾಗಿ ಇಡಲು ಒಂದರ ನಂತರ ಒಂದು ಎಂದು ಮೊದಲೇ ಟೈಂಟೇಬಲ್ ಮಾಡಿಕೊಂಡರೆ ಇಬ್ಬರೂ ಕೆಲಸ ಮಾಡುವ ಪೋಷಕರಿಗೆ ಬಹಳ ಅನುಕೂಲವಾಗುತ್ತದೆ. ಪ್ರತಿದಿನ ಈ ಟೈಮ್ ಟೇಬಲ್ ಜೊತೆ ಇರುವುದರಿಂದ ಮಕ್ಕಳಿಗೂ ಒಂದಲ್ಲ ಒಂದು ಟಾಸ್ಕ್ ಆಯ್ಕೆ ಮಾಡಿಕೊಂಡು ತಮ್ಮಷ್ಟಕ್ಕೆ ತಾವೇ ಸ್ವಲ್ಪ ಸಮಯ ಕಳೆಯಲು ಪ್ರಾರಂಭಿಸುತ್ತಾರೆ.
    ಮನೆ ಕೆಲಸದಲ್ಲಿ ತೊಡಗಿಸಿ:ಎಲ್ಲರೂ ಮನೆಯಲ್ಲಿಯೇ ಇದ್ದು ಕೆಲಸಕ್ಕೂ ಯಾರನ್ನೂ ಕರೆಯುವಂತಿಲ್ಲ ಎನ್ನುವ ಇಂತಹ ಸಂದರ್ಭದಲ್ಲಿ  ಮನೆಯ ಕೆಲಸ ಎಂದಿಗಿಂತ ದುಪ್ಪಟ್ಟು . ಮಕ್ಕಳು ಮನೆಯಲ್ಲಿಯೇ ಇರುವುದರಿಂದ ಸಾಕಷ್ಟು ಸಮಯವಿರುತ್ತದೆ , ಮನೆಯಲ್ಲಿ ಮಕ್ಕಳು ಮಾಡಬಹುದಾದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸಿ.ಉದಾಹರಣೆಗೆ ಬೆಳಗ್ಗೆ ಎದ್ದ ತಕ್ಷಣ ಹಾಸಿಗೆಯನ್ನು ಸರಿಯಾಗಿ ಹಾಸಿಡುವುದು.ವಾಷಿಂಗ್ ಮಷಿನ್ ಗೆ ಕೊಳೆಯಾದ ಬಟ್ಟೆಗಳನ್ನು ತೊಳೆಯಲು ಹಾಕುವುದು, ಬೆಳಗಿನ ತಿಂಡಿ ಊಟಗಳಾದ ತಕ್ಷಣ ಎಲ್ಲಾ ತಟ್ಟೆಗಳನ್ನು ತೆಗೆದುಕೊಂಡು ಹೋಗಿ ಸಿಂಕ್ ಗೆ ಹಾಕುವುದು,ಊಟಕ್ಕೆ ಮೊದಲು ತಟ್ಟೆ , ಲೋಟ ಗಳನ್ನು ತಂದು ತಯಾರುಮಾಡಿಡುವುದು . ಮನೆಯಿಂದಲೇ ಕೆಲಸ ಮಾಡುವ ಅಪ್ಪನಿಗೆ ಅಮ್ಮ ಮಾಡಿಕೊಟ್ಟ ಕಾಫಿ,ಟೀ ಅಥವಾ ಸ್ನಾಕ್ಸ್ ತೆಗೆದುಕೊಂಡು ಹೋಗಿ ನೀಡುವುದು.ಇನ್ನೂ ಆಸಕ್ತಿ ಇದ್ದರೆ ಕಿಟಕಿ ಬಾಗಿಲುಗಳನ್ನು ಒದ್ದೆ ಬಟ್ಟೆಯಲ್ಲಿ ಒರೆಸುವುದು ಹೀಗೆ ಸ್ವಲ್ಪ ಸಮಯವನ್ನು ಮನೆ ಕೆಲಸದಲ್ಲಿ ಕಳೆಯುವಂತೆ ಮಾಡಿ.ಮಕ್ಕಳಿಗೆ ಅಡುಗೆಯಲ್ಲಿ ಆಸಕ್ತಿಯನ್ನು ಕೂಡ ಬೆಳೆಸಬಹುದು ಸರಳವಾದ ಒಲೆಯನ್ನು,ಚಾಕುವನ್ನು ಬಹಳಸದ ಸುಲಭ ವಿಧಾನದ ,ಚಪಾತಿ ಉಂಡೆಗಳನ್ನು ಮಾಡುವುದು ಇನ್ನಿತರ ಕೆಲಸಗಳಿಗೆ ಕೆಲವು ಸಹಾಯವನ್ನು ಮಕ್ಕಳಿಂದ ಮಾಡಿಸಿಕೊಳ್ಳಿ.ತಾವು ಆಟವಾಡಿದ ಅಥವಾ ತಮ್ಮ ರೂಂ ಅನ್ನು ತಾವೇ ಸೇರಿಸಿ ಇಟ್ಟುಕೊಳ್ಳುವುದು. ಎಲ್ಲವನ್ನೂ ಒಂದೇ ದಿನವಲ್ಲದಿದ್ದರೂ ಒಂದೊಂದು ದಿನ ಒಂದೊಂದು ಟಾಸ್ಕ್ ಕೊಟ್ಟು ಸಮಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಾಡಬಹುದು.ಹೀಗೆ ಅವರು ಹೇಳಿದ್ದನ್ನೆಲ್ಲ ಮಾಡಿದಾಗ ಪ್ರಶಂಸಿಸಿ ಪ್ರೋತ್ಸಾಹಿಸಲು ಮರೆಯಬೇಡಿ.
    ಆಟವಾಡಲು ಬಿಡಿ :ಮಕ್ಕಳನ್ನು ಸ್ವಲ್ಪ ಹೊತ್ತು ಮನೆಯೊಗಳೇ ಅವರಿಷ್ಟದ ಆಟವಾಡಲು ಬಿಡಿ. ಉದಾಹರಣೆಗೆ ಮೂರರಿಂದ ಆರುವರ್ಷದ ಮಕ್ಕಳಿಗೆ ಪಝಲ್ ಗಳನ್ನು ಮಾಡುವುದರಲ್ಲಿ ಅಥವಾ ಲೆಗೋ ಗಳಲ್ಲಿ ವಿವಿಧ ರೀತಿಯ ಮನೆ ಕಟ್ಟುವುದು,ಮನೆಯಲ್ಲಿಯೇ ಪ್ಲೇ ಡೋವ್ ಮಾಡಿ ಅದರಿಂದ ವಿವಿಧ ರೀತಿಯ ತಮಗಿಷ್ಟವಾದ ಪ್ರಾಣಿ, ಅಥವಾ ಶೇಪ್ ಗಳನ್ನು ಮಾಡುವುದು,ಈ ರೀತಿಯ ಆಟಗಳು ಆಸಕ್ತಿಕರವಾಗಿರುತ್ತವೆ. ಅವರಷ್ಟಕ್ಕೆ ಅವರು ಸುಮಾರು ಅರ್ಧ ಮುಕ್ಕಾಲು ಗಂಟೆ ಸಮಯ ಕಳೆಯಲು ಇದು ಸಹಾಯಮಾಡುತ್ತದೆ. ಹೀಗೆ ಮಾಡುವುದರಿಂದ ಮಕ್ಕಳ ಯೋಚನಾಶಕ್ತಿ ಹೆಚ್ಚುತ್ತದೆ ಮತ್ತು ಕ್ರಿಯಾಶೀಲರಾಗಲು ಕೂಡ ಇದು ಸಹಕರಿಸುತ್ತದೆ.ಸಂಜೆಯ ಸಮಯ ಮನೆಯವರೆಲ್ಲರೂ ಕುಳಿತು ಬೋರ್ಡ್ ಗೇಮ್ ಗಳನ್ನಾಡಬಹುದು.ಇದರಿಂದ ಮಕ್ಕಳಿಗೆ ಪೋಷಕರು ತಮ್ಮ ಜೊತೆ ಸಮಯ ಕಳೆಯುತ್ತಿದ್ದಾರೆ ಎಂಬುದು ಸಂತೋಷ ನೀಡುತ್ತದೆ. ಬಹುಶಃ ಈ ರೀತಿ ಪೋಷಕರ ಜೊತೆ ಕಳೆದ ಸಮಯ ಅವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬಹುದು.  
    ಅಪಾರ್ಟ್ಮೆಂಟ್ ಗಳಲ್ಲಿ ಏನಿಲ್ಲವೆಂದರೂ ಬಾಲ್ಕನಿ ಅಥವಾ ಯುಟಿಲಿಟಿ ಜಾಗ ಇದ್ದೇ ಇರುತ್ತದೆ. ಮಕ್ಕಳನ್ನು ಬೆಳಗಿನ ಎಳೆ ಬಿಸಿಲಿನಲ್ಲಿ ಅಥವಾ ಸಂಜೆಯ ತಂಗಾಳಿ ಬೀಸುವ ಸೂರ್ಯಾಸ್ತದ ಸಮಯದಲ್ಲಿ ಸ್ವಲ್ಪ ಹೊತ್ತು ಅಲ್ಲಿ ಬಿಡಿ. ಹಾಗೆಯೇ ಕೈಗೊಂದು ಪೆನ್ಸಿಲ್ ಪೇಪರ್ ಕೊಟ್ಟು ತಾವು ಹೊರಗೆ ಏನೆಲ್ಲಾ ನೋಡುತ್ತಿದ್ದಾರೆ ಮತ್ತು ಅದು ಯಾವ ಬಣ್ಣದಲ್ಲಿದೆ ಹೀಗೆ ಎಲ್ಲವನ್ನು ಬರೆಯಲು ಹೇಳಿ.ಹಾಗೆ ಬರೆಯಲು ಇನ್ನೂ ಪ್ರಾರಂಭಿಸಿರದ ಮಕ್ಕಳಿಗೆ ಚಿತ್ರ ಬಿಡಿಸುವ ಪ್ರಯತ್ನ ಮಾಡಲು ಹೇಳಬಹುದು. ಇದರಿಂದ ಮಕ್ಕಳು ಏಕಾಗ್ರತೆ,ಪ್ರಕೃತಿಯ ಬಗ್ಗೆ ಆಸಕ್ತಿ ಮತ್ತು ಕ್ರಿಯಾಶೀಲರಾಗಿ ಯೋಚಿಸುವುದನ್ನು (ಕ್ರಿಯೇಟಿವ್ ಥಿಂಕಿಂಗ್ ) ಬೆಳೆಸಿಕೊಳ್ಳುತ್ತಾರೆ.ಹೊರಗೆ ತಾವು ನೋಡಿದ ಸುಂದರ ದೃಶ್ಯಗಳ ಬಗ್ಗೆ ತಾವೇ ಕಥೆ ಕಟ್ಟಿ ಹೇಳುವಂತೆ ಪ್ರೋತ್ಸಾಹಿಸಿ. ಅಥವಾ ಬೈನಾಕ್ಯೂಲರ್ ಕೊಟ್ಟು ದೂರದ ಪ್ರಕೃತಿ, ಆಕಾಶ, ಹಕ್ಕಿ ಹೀಗೆ ಎಲ್ಲವನ್ನು ನೋಡುತ್ತಾ ಸಮಯ ಕಳೆಯಲು ಸಹಕರಿಸಿ. ರಾತ್ರಿಗಳಲ್ಲಿ ಆಕಾಶ ,ನಕ್ಷತ್ರ ,ಚಂದ್ರ , ಸಪ್ತರ್ಷಿ ಮಂಡಲಗಳನ್ನು ತೋರಿಸಿ ಅಂತರಿಕ್ಷದ  ಬಗ್ಗೆ ತಿಳಿಯುವ ತಿಳಿಯುವ ಕುತೂಹಲ ಹೆಚ್ಚಿಸಿ. ಇದು ಮಗುವಿನ ವಿಕಸನಕ್ಕೂ ಅನುಕೂಲವಾಗುತ್ತದೆ.
      ಚಿತ್ರಕಲೆ  :
    ಮಕ್ಕಳಿಗೆ ಬಣ್ಣ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿ: ದಿನಕ್ಕೊಂದು ಚಿತ್ರ ಬಿಡಿಸುವುದನ್ನು ಹೇಳಿಕೊಡಿ, ಸರಳವಾಗಿ ತಮಗೆ ಸಾಧ್ಯವಾದ ರೀತಿಯಲ್ಲಿ ಹೇಳಿಕೊಟ್ಟ ಚಿತ್ರ ಬಿಡಿಸಿ ಅದಕ್ಕೆ ಬಣ್ಣ ತುಂಬುವಂತೆ ಮಾಡಿ ಇದರಿಂದ ಮಕ್ಕಳಿಗೆ ಬಣ್ಣಗಳ ಬಗ್ಗೆ ಮಾಹಿತಿ ಮತ್ತು ಆಸಕ್ತಿ ಬೆಳೆಯುತ್ತದೆ. ಸಣ್ಣ ಮಕ್ಕಳಿಗೆ ಸ್ಕ್ರಬ್ ಮಾಡುವುದರಿಂದ ಬೆರಳು ಮತ್ತು ಕೈಯ ಮೇಲೆ ಹಿಡಿತ ಸಿಗುತ್ತದೆ ಇದು ಮುಂದೆ ಅವರ ಅಕ್ಷರ ಸುಂದರವಾಗಲು ಅನುಕೂಲವಾಗುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಲು, ಏಕಾಗ್ರತೆಯನ್ನು ಹೆಚ್ಚಿಸಲು ಅಷ್ಟೇ ಅಲ್ಲ ಮಕ್ಕಳ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು  ಕೂಡ ಡ್ರಾಯಿಂಗ್ ಮತ್ತು ಕಲರಿಂಗ್ ಸಹಕರಿಸುತ್ತದೆ. 
    ವಿಶ್ರಾಂತಿಯೂ ಅಷ್ಟೇ ಮುಖ್ಯ :ಮಧ್ಯಾಹ್ನದ ಸಮಯದಲ್ಲಿ ಮಕ್ಕಳಿಗೆ ವಿಶ್ರಾಂತಿಸಿಗಲಿ ,ಊಟದ ನಂತರ ಸ್ವಲ್ಪ ಹೊತ್ತು ಮಲಗುವಂತೆ ಪ್ರೋತ್ಸಾಹಿಸಿ ಬೆಳೆಯುವ ಮಕ್ಕಳಿಗೆ ಆಟ ಪಾಠದ ಜೊತೆಗೆ ವಿಶ್ರಾಂತಿ ಕೂಡ ಅಷ್ಟೇ ಅವಶ್ಯಕ. ಮಧ್ಯಾನ್ಹ ಒಂದೆರಡು ಗಂಟೆ ಮಲಗಿದರೆ ಮನಸ್ಸು ಉಲ್ಲಾಸಗೊಂಡು ಉತ್ಸಾಹ ಹೆಚ್ಚುತ್ತದೆ. 
    ಮಕ್ಕಳ ಮಾನಸಿಕ ಬೆಳವಣಿಗೆಯ ಜೊತೆಗೆ ದೈಹಿಕ ಬೆಳವಣಿಗೆ ಕೂಡ ಮುಖ್ಯವಾಗುತ್ತದೆ ಸಮಯಕ್ಕೆ ಸರಿಯಾಗಿ ಊಟ,ನಿದ್ದೆ ಇವುಗಳ ಜೊತೆಗೆ ದೈಹಿಕ ಶ್ರಮ ಕೂಡ ಬೇಕು. ಸಂಜೆಯ ಸಮಯವನ್ನು ಕುಟುಂಬ ಸಮೇತ ವ್ಯಾಯಾಮ, ಯೋಗ ಇವುಗಳನ್ನು ಮಾಡಿ ಸಮಯ ಕಳೆಯಿರಿ. ದೈಹಿಕ ವ್ಯಾಯಾಮಗಳು ಮಕ್ಕಳ ರಾತ್ರಿ ನಿದ್ದೆಗೆ ಅನುಕೂಲಮಾಡಿಕೊಡುತ್ತದೆ. 
    ಹಾಗೆಯೆ ಸಂಜೆಯ ಸಮಯದಲ್ಲಿ ಮಕ್ಕಳಿಗೆ ನೀತಿ ಕಥೆಗಳು , ರಾಮಾಯಣ ಮಹಾಭಾರತ ಕಥೆಗಳು ಇವುಗಳನ್ನು ಹೇಳುವುದನ್ನು ರೂಢಿಸಿಕೊಂಡರೆ ಮಕ್ಕಳಲ್ಲಿ ಸಂಸ್ಕೃತಿಯ ತಿಳಿವು ಹೆಚ್ಚುತ್ತದೆ. ಒಂದು ಅಧ್ಯಯನದ ಪ್ರಕಾರ ಮಕ್ಕಳಿಗೆ ಪ್ರತಿದಿನ ಮಲಗುವ ಮೊದಲು ಹೇಳುವ ಕಥೆ ಅವರ ಮನಸ್ಸಿಗೆ ಪರಿಣಾಮವನ್ನು ಬೀರುತ್ತದೆ ಇದು ಅವರ ಬದುಕನ್ನೇ ಬದಲಿಸಬಹುದು. ಹಾಗೆಯೇ ಪ್ರತಿದಿನ ಒತ್ತಡವನ್ನು ಕಡಿಮೆ ಮಾಡಲು,ಶಾಲೆಗೇ ಹೋಗದ ಮಕ್ಕಳಿಗೆ ಶೈಕ್ಷಣಿಕ ಆಸಕ್ತಿ ಉಳಿಸಲು  ದಿನದ  ಅರ್ಧ ಗಂಟೆ ಕಥೆ ಓದುವುದು,ಹೇಳುವುದು ಮಾಡಿದಲ್ಲಿ ಅವರಲ್ಲಿ ಯೋಚನಾಶಕ್ತಿ,ತಿಳಿವಳಿಕೆ ಹೆಚ್ಚುತ್ತದೆ.ಅಥವಾ ನಿಮ್ಮ ಮಗುವಿಗೆ ಅಕ್ಷರಗಳನ್ನು ಕೂಡಿಸಿ ಓದಲು ಹುರಿದುಂಬಿಸಿ. ಇವೆಲ್ಲವುಗಳನ್ನು ಒಟ್ಟಿಗೆ ಮಾಡಲು ಮಕ್ಕಳಲ್ಲಿ ಒತ್ತಡಹೇರಬೇಕಾಗಿಲ್ಲ. ಮಕ್ಕಳಿಗೆ ಆಯ್ಕೆಯನ್ನು ಕೊಡಿ. ಉದಾಹರಣೆಗೆ ಚಿತ್ರ ಬಿಡಿಸುತ್ತೀಯಾ ಅಥವಾ ನಿನ್ನ ರೂಮ್ ಅನ್ನು ಸೇರಿಸಿ ಇಟ್ಟುಕೊಳ್ಳುತ್ತೀಯ ? ಹೀಗೆ ಅವರಿಗಿಷ್ಟವಾದುದನ್ನು ಆಯ್ದುಕೊಳ್ಳಲು ಬಿಡಿ.ಈ ಕೊರೋನಾ ಬಂದನಂತರ ಎಲ್ಲವೂ ಆನ್ಲೈನ್ ನಲ್ಲೇ ಆಗಿರುವುದರಿಂದ ಈಗ ಸಂಗೀತ,ಡ್ರಾಯಿಂಗ್, ಮ್ಯೂಸಿಕಲ್ ಇನ್ಸ್ಟ್ರುಮೆಂಟ್ ಇವೆಲ್ಲವುಗಳನ್ನು ಆನ್ಲೈನ್ ನಲ್ಲಿಯೇ ಮನೆಯಲ್ಲಿಯೇ ಕುಳಿತು ಕಲಿಯುವ ಅವಕಾಶವಿದೆ.ಮಕ್ಕಳ ಆಸಕ್ತಿಯನ್ನು ಗಮನಿಸಿ ಅವರಿಷ್ಟದ ಯಾವುದಾದರೂ ಒಂದು ತರಗತಿಯನ್ನು ವಾರದಲ್ಲೆರಡು ದಿನ ಕಲಿಯಲು ಅವಕಾಶ ಒದಗಿಸಿಕೊಟ್ಟಲ್ಲಿ ಮಕ್ಕಳು ಶಾಲೆಗೆ ಹಿಂತಿರುಗುವಷ್ಟರಲ್ಲಿ ಸಾಕಷ್ಟು ಶಿಕ್ಷಿತರಾಗುವುದರಲ್ಲಿ ಅನುಮಾನವಿಲ್ಲ.ಇವೆಲ್ಲದರ ಜೊತೆಗೆ ಮಕ್ಕಳ ಕುತೂಹಲಕ್ಕೆ ಸಣ್ಣಪುಟ್ಟ ಪ್ರಶ್ನೆಗಳಿಗೆ ಸಹನೆ ಕಳೆದುಕೊಳ್ಳದೆ ತಾಳ್ಮೆಯಿಂದ ಉತ್ತರಿಸುವುದು ಕೂಡ ಅಷ್ಟೇ ಮುಖ್ಯ.ನಾಲ್ಕು ಗೋಡೆಯ ಒಳಗೆ ಕುಳಿತಿರುವ ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಈ ಸಮಯದಲ್ಲಿ ಪ್ರೋತ್ಸಾಹ ,ಉತ್ತೇಜನ ಎಲ್ಲವನ್ನು ಪೋಷಕರೇ ನೀಡಬೇಕಾದ ಅನಿವಾರ್ಯತೆ ಇದೆ ಅಲ್ಲವೇ ?

    Photo by Aleks Marinkovic on Unsplash

    ಇಂಗ್ಲಿಷರ ಸ್ಕೂಲೂ, ನಮ್ಮ ಶಾಲೆ ಎಂಬ ಗುಡಿಯೂ…

    ಕೇಳು ಜನಮೇಜಯ ರಾಜ ಧರಿತ್ರೀ ಪಾಲ ……. ಅಂತ ನಮ್ಮ ತಾತ ಬೆಳಗಿನ ಜಾವದ ಒಂದು ಹೊತ್ತಿನಲ್ಲಿ ರಾಗದಲ್ಲಿ ಹಾಡಲು ಶುರು ಮಾಡಿದನೆಂದರೆ, ಓಣಿಯ ಜನರೆಲ್ಲ ರಾಮಜ್ಜನಿಗೆ ರಾತ್ರಿಯೆಲ್ಲಾ ನಿದ್ದೆ ಬಂದಿಲ್ಲ ಬಿಡು ಅಂತ ಮಾತಾಡ್ತಾ ಮತ್ತೆ ಧ್ವನಿ ಕೇಳಿಸದ ಹಾಗೆ ಹೊದಿಕೆ ಹೊದ್ದು,ಮೊಗ್ಗಲು ಬದಲಿಸಿ ಮಲಗುತ್ತಿದ್ದರು. ಹರೆಯದ ಜೋಡಿಗಳನ್ನು ಬಿಟ್ಟರೆ,ಊರೆಲ್ಲ ಮಲಗುತ್ತಿದ್ದುದು ಅವರವರ ಮನೆಯ ಕಟ್ಟೆಗಳ ಮೇಲೆಯೇ…ಅದಕ್ಕೆ ನಮ್ಮ ಕಡೆಯ ಒಣ ಹವೆಯ ವಾತಾವರಣವೂ ಒಂದು ಕಾರಣ. ಓಣಿಗಳೆಂದರೆ ಅಳೆ ದರೆ ಆರು ಅಡಿಗಳು. ನಮ್ಮಜ್ಜಿಗಂತೂ ನಮ್ಮಜ್ಜನಿಂದ ಸಾಕಾಗಿಹೋಗಿತ್ತು ಅಂತ ಮತ್ತೆ ಹೇಳುವುದೇ ಬೇಡ. ಪೌರಾಣಿಕ ಹಿನ್ನೆಲೆಯುಳ್ಳ, ಪಂಪ ಭಾರತದ, ವಾಲ್ಮೀಕಿ ರಾಮಾಯಣದ ಸಾಲುಗಳನ್ನು, ಸೀಸ,ಕಂದ ಪದ್ಯಗಳನ್ನು ಹಳೆಗನ್ನಡಲ್ಲಿರುತ್ತಿದ್ದ ಇನ್ನು ಹಲವಾರು ಪದ್ಯ,ಗದ್ಯಗಳನ್ನು ರಾಗವಾಗಿ ಹಾಡುವುದು ನೋಡಿ,ಮನೆಯವರೂ,ಓಣಿಯವರೂ ಬೇಸರಿಸಿದರೆ ನನಗೆ ಆಶ್ಚರ್ಯ!

    ತಾತಾ ನೀನೆಷ್ಟರ ವರೆಗೆ ಓದಿದ್ದಿಯಾ ಅಂತ ಕೇಳಿದರೆ, ಮೂರನೇ ತರಗತಿ ಅಂತ ಕೈಯ ಮೂರು ಬೆರಳುಗಳನ್ನು ತೋರಿಸುತ್ತಾ ಒಂದು ಥರಾ ನಗುತ್ತಿದ್ದರು. ಆ ನಗು ಹೇಗಿರುತ್ತಿತ್ತು ಅಂದ್ರೆ, ನೀವೆಲ್ಲ ಈಗ ಓದೋ ಹತ್ತಿಪ್ಪತ್ತು ವರ್ಷದ್ದು ಕೆಲಸಕ್ಕೆ ಬಾರದ್ದು ಅನ್ನುವ ರೀತಿಯಲ್ಲಿ ಇರುತ್ತಿತ್ತು. ಇಂಗ್ಲಿಷ್ ಬರ್ತಿರಲಿಲ್ಲ, ಸ್ವಚ್ಚ ಕನ್ನಡ ಓದಲು,ಬರೆಯಲು ಬರುತ್ತಿತ್ತು. ಹಾಗಾಗಿ ಏನೋ ಅಪ್ಪನನ್ನು ನಮ್ಮೂರಿನಿಂದ ಸುಮಾರು 100 ಕಿ.ಮೀ ದೂರ ಇರುವ ಜಗಳೂರಲ್ಲಿ (ಇದೇ ಹತ್ತಿರದ ಹೈಸ್ಕೂಲ್ ಅಂತೆ ಆಗ!) ಆಗ್ಗೇ ಸೈಕಲ್ ಮೇಲೆಯೇ ಕೂಡಿಸಿಕೊಂಡು ಹೋಗಿ  ಮೆಟ್ರಿಕ್ ಮಾಡಿಸಿದ್ದರು.

    ತಾತನ ಬಹು ಇಷ್ಟವಾದ ವಸ್ತುಗಳೆಂದರೆ ಈ ಕೂದಲು ಕತ್ತರಿಸಲು ಮತ್ತು ಗಡ್ಡ ತೆಗೆಯಲು ಬೇಕಾದ ಪರಿಕಗಳ ಒಂದು ಪೆಟ್ಟಿಗೆ ಮತ್ತು ಒಂದು ಹಳೆಯ ಸೈಕಲ್. ಮುಂದೆ ಒಂದು ಕನ್ನಡಿ ಇಟ್ಟುಕೊಂಡು ಕೂದಲು ಕತ್ತರಿಸುತ್ತ ಕುಳಿತ ನನ್ನ ತಾತನನ್ನು ಆಗಾಗ ಮಾತಾಡಿಸುವುದು ನನ್ನ ಬಲು ನೆಚ್ಚಿನ ಹವ್ಯಾಸ ಆಗ. ತನ್ನ ಯವ್ವನದ ದಿನಗಳನ್ನು,ಅಪ್ಪನ ಬಾಲ್ಯದ ದಿನಗಳನ್ನು ತಾತನಿಂದ  ಅಜ್ಜಿಯ ಹತ್ತಿರ ಕುಳಿತು ಕೇಳುವ ಸಂಭ್ರಮವೇ ಮುದ ನೀಡುತ್ತಿತ್ತು. ತಾತನ ಹರಕತ್ತುಗಳಿಂದ ದರಿದ್ರದ ಅಂಚಿಗೆ ಬಂದಿದ್ದ ವಿಷಯ ಅಜ್ಜಿ ಹೇಳುತ್ತಿದ್ದರು ಬಿಟ್ಟರೆ,ತಾತ ಒಂದು ದಿನವೂ ಹೇಳಲಿಲ್ಲ. ಹಾಗೆ ಸೈಕಲ್ ವಿಷಯ ತೆಗೆದುಬಿಟ್ಟರೆ,ತಾತ ನನ್ನ ಜೊತೆ ಹುಡುಗನಾಗಿ  ಸಂಭ್ರಮಿಸುತ್ತ ಹೇಳುವ ಯಶೋಗಾಥೆಗಳು ಒಂದೆರಡಲ್ಲ.

    ಅಯ್ಯೋ ಈ ಮುರುಕಲು ಸೈಕಲ್ಲದು ಏನು ಕೇಳ್ತೀಯಾ ನನ್ನ ಕುದುರೆ ಲಕ್ಷ್ಮಿ ಅದು ಕೇಳು. ಅದನ್ನ ಈಗ ನಿನ್ನಪ್ಪ ಹೊಸಮನೆ ಅಂತ  ಬಸ್ಟ್ಯಾಂಡ್ ಹತ್ತಿರ ಕಟ್ಟಿಸಿಕೊಂಡು ಇದಾನಲ್ಲ,ಅಲ್ಲಿ ನಡುಮನೆಯ ಕಂಬಗಳ ಹತ್ತಿರವೇ ಅದನ್ನು ಹೂಳಿಟ್ಟಿ ರೋದು. ಅದು ಸತ್ತ ನಂತರ ಹುಟ್ಟಿದ ನಿಮ್ಮ ದೊಡ್ಡ ಅತ್ತೆಗೆ(ಗುಡೆಕೋಟೆ ಹನುಮೇಗೌಡರ ಧರ್ಮಪತ್ನಿ) ಅದೇ ಹೆಸರು ಇಟ್ಟಿವಿ. (ನಮ್ಮ ಮನೆಗಳಲ್ಲಿ ದುಡಿದು ಸತ್ತ ಎತ್ತುಗಳಿಗೂ ನಮ್ಮ ಹೊಲಗಳಲ್ಲೇ ಹೂಳಿಟ್ಟಿರುವುದು) ಕೇಳು ಅಂತ ಶುರು ಮಾಡಿದ್ರು ಅಂದ್ರೆ,ನಾನು,ತಾತ ಬೇರೆ ಲೋಕದಲ್ಲಿರುತ್ತಿದ್ದೆವು.

    ಒಂದು ಸಾರಿ ಏನಾಯ್ತು ಅಂದ್ರೆ ಹೂಲೆಪ್ಪನ(ಹುಲಿಕುಂಟೆರಾಯನ) ಜಾತ್ರೆಗೆ ಹೆಂಡದ ಅಂಗಡಿ ಹಾಕಿದ್ವಾ, ಒಬ್ಬ ಬ್ರಿಟಿಷನವನು, ಅಮಾಲ್ಡಾರ ಜಕಾತಿಗೆ ಅಂತ ಬಂದವನು  ಹೆಂಡದ ಗಡಿಗೆಯನ್ನು ಇದು  ತುಂಬಿದ್ಯಾ,ಇದು ಖಾಲಿ ಆಗಿದ್ಯಾ ಅಂತ ಲೆಕ್ಕ ಕೇಳುತ್ತ ಬೂಟಿನ ಕಾಲಿನಿಂದ ತುಂಬಿದ ಗಡಿಗೆಯನ್ನು ತಾಕಿಸಿಬಿಟ್ಟ. ಅದೆಲ್ಲಿತ್ತೋ ಸಿಟ್ಟು ನನಗೆ ನೆತ್ತಿಗೇರಿ, ಗಲ್ಲದಿಂದ ಎದ್ದು ಬಂದವನೇ ಅವನನ್ನು ಕೆಡವಿಕೊಂಡು ನಮ್ಮ ಅಮ್ಮನ್ನ ಬೂಟು ಕಾಲಿನಿಂದ ಒದ್ದೆಯಲ್ಲಲೇ ನಾಯಿ ಅಂತ ಚಪ್ಪಲಿ ಕಾಲಿನಿಂದ ಒದ್ದು ಬಿಟ್ಟೆ. ಜಾತ್ರೆಯ ಜನ ನೋಡ್ತಿದ್ದರು. ಅವನನ್ನು ಬಿಡಿಸಿಕೊಳ್ಳುವವರೇ ಇರಲಿಲ್ಲ. ಅಲ್ಲಿಯ ತನಕ ವಸೂಲಿ ಮಾಡಿದ್ದ ಜಕಾತಿ ದುಡ್ಡು ಅಲ್ಲಿ,ಇಲ್ಲಿ ಬಿತ್ತು. ಅವನಿಗೆ ಜೀವ ಉಳಿದರೆ ಸಾಕು ಅಂತ ಓಡಿ ಹೋದ….ಅಂತ ಮೀಸೆ ಮೇಲೆ ಕೈ ಇಟ್ಟು ಹೇಳುತ್ತಿದ್ದರೆ,ನನಗೆ ಸ್ವಾತಂತ್ರ ವೀರನ ಮುಂದೆ ಕುಳಿತ ಅನುಭವ.

    ಅಷ್ಟರಲ್ಲೇ ಅಜ್ಜಿ ಮುಂದಕ್ಕೆ ಹೇಳು ಅಲ್ಲೇ ನಗಬೇಡ ಅಂದಮೇಲೆ, ಸಾಯಂಕಾಲ ನಿಮ್ಮ ಪಕ್ಕೀರಪ್ಪ ತಾತ ಬಂದು ಸರೀ ಬೈದು,ಊರಲ್ಲಿರಬೇಡ, ಅವರು ಸುಮ್ಮನಿರಲ್ಲ, ನಾನು ಸಂಭಾಳಿಸುತ್ತೇನೆ ಅಂತ ಹೇಳಿದರು. ನಾನು ಗಿಡಗಳ ಮೇಲೆ ಅಂತ ಅಡವಿ ಸುತ್ತುತ್ತಾ ಇದ್ದೆ. ಎರಡು ದಿನ ಆಗಿರಬಹುದು, ಗುಳ್ಳೆ ಲಕ್ಕಮ್ಮನ ಹಳ್ಳದ ಹತ್ತಿರ ಕುದುರೆ ಬಿಟ್ಟುಕೊಂಡು ಹಾಗೇ ಮಲಗಿದ್ದೆ. ಸಾಯಂಕಾಲ ಆಗಿತ್ತು. ಬೇರೆ ಕುದುರೆ ಕೆನೆಯುವುದು ಕೇಳಿ ತಿರುಗಿ ನೋಡಿದೆ. ಒಬ್ಬ ಬ್ರಿಟಿಷಿನವನ ಕುದುರೆ ಹಳ್ಳ ದಾಟದೆ ಒದರುತ್ತಿತ್ತು. ಅವನು ಇಳಿದು ನೀರಲ್ಲಿ ಬರಲು ಒಪ್ಪುತ್ತಿಲ್ಲ,ಕುದುರೆ ದಾಟಲು ಒಪ್ಪುತ್ತಿಲ್ಲ…ನನಗೆ ನೋಡಿ ನಗು ಬಂತು. ನಕ್ಕ ನನ್ನನ್ನು ಕರೆದು, ನಿಂದೋ ಆ ಕುದುರೆ, ನಗ್ತಿಯಲ್ಲ, ಹಾರಿಸು ಈ ಹಳ್ಳವನ್ನ ನೋಡ್ತೀನಿ ಅಂದ. ಲಕ್ಷ್ಮೀ ಅಂದೆ, ಎಗರುತ್ತ ಬಂತು ನೋಡು ನನ್ನ ಕುದುರೆ,ಹಾಗೇ ಎಗರಿ ಕುಳಿತು,ಒಂದುಸಾರಿ ಕಾಲಿನಿಂದ ಅದರ ಹೊಟ್ಟೆ ಭಾಗಕ್ಕೆ ಮೆಲ್ಲಗೆ ಸವರಿ,ಹ ಹಾ ಎಂದೆ. ಹಿಂದಕ್ಕೆ ಎರಡು ಹೆಜ್ಜೆ ಇಟ್ಟ ನನ್ನ ಕುದುರೆ,ಒಮ್ಮೆಲೇ ಕೆನೆಯುತ್ತ ಒಂದೇ ಜಿಗಿತಕ್ಕೆ ಹಳ್ಳವನ್ನ ಜಿಗಿದಾಗ ಆ ಕೆಂಪು ಮೂತಿ ನೋಡಬೇಕಿತ್ತು ಅಂತ ತಾತನ ವಿಜಯದ ನಗೆ ನನ್ನಲ್ಲಿ ಭಯಂಕರ ಕುತೂಹಲ ಹುಟ್ಟಿಸುತ್ತಿತ್ತು. ಆಮೇಲೆ ಅಂದ ನನಗೆ, ಇನ್ನೇನು ಇಳಿದು, ಬೂಟುಕಾಲಿನಲ್ಲಿ ನೀರಲ್ಲಿ ನೆನಸಿಕೊಂಡು ನನ್ನ ಹತ್ತಿರ ಬಂದ. ತೆಗೆದು ಬೀಡಿ ಕೊಟ್ಟೆ. ಸೇದಿಕೊಳ್ತಾ ಏನು ಈ ಕಡೆ ಬರ್ತಿರೋದು ಅಂದೆ. ಬೊಮ್ಮಘಟ್ಟದಲ್ಲಿ ಈಡಿಗರ ಪಕ್ಕಿರಪ್ಪನ ಮಗ ರಾಮಪ್ಪ ಅಂತ ಒಬ್ಬ ಇದ್ದಾನಂತೆ,ಅವನು ನಮ್ಮ ಅಮಾಲ್ಡಾರ ನನ್ನು ಹೊಡೆದು,ಹಣ ಕಿತ್ತುಕೊಂಡಿದ್ದಾನೆ,ಅದರ ವಿಚಾರಣೆಗೆ ಬಂದಿದ್ದೇನೆ ಅಂದುಬಿಡೋದಾ?!! ಅಂತ ನನ್ನ ಮುಂದೆ ಬೀಡಿ ಹಚ್ಚಿದ ನಮ್ಮ ತಾತ.

    ಎರಡು ಧಂ ಎಳೆದು, ನೋಡಪ್ಪಾ,ನೀನ್ಯಾರೋ …ಆದ್ರೆ ಬೊಮ್ಮಘಟ್ಟ ಈಡಿಗರು ಹಾಗೆ ದುಡ್ಡು ಗಿಡ್ಡು ಕಸಕೊಳಲ್ಲ ಬಿಡು,ಅವನು ಸುಳ್ಳು ಹೇಳಿರಬೇಕು ಅಂದೆ. ಸರಿ ಬೊಮ್ಮಘಟ್ಟ ದಾರಿ ಇದೇನಾ ಅಂದ…ಹೂ ಹಿಂಗೆ ಉತ್ತರಕ್ಕೆ ನೆಟ್ಟಗೆ ಹೋಗ್ರಿ ಅಂದೆ. ಬಂದು ನನ್ನ ಕುದುರೆ ನೋಡಿ, ಕೈ ಆಡಿಸಿ ಇಂತಹ ಬಹದ್ದೂರ್ ಕುದುರೆ ಇಟ್ಟಿಯಲ್ಲಾ, ನೀ ಏನು ಮಾಡ್ತಿ ಅಂತ ಕೇಳಿದ. ನಾನು ಈಚಲು ಗಿಡದಿಂದ ಹೆಂಡ ತೆಗೆಸ್ತೀನಿ, ಅಂದೆ. ಶಹಬ್ಬಾಸ್, ನಿನ್ನಂತಹ ಕುದುರೇನ ನಮ್ಮ ಬ್ರಿಟಿಷರ ಕಂಪೆನಿನೂ ನಮ್ಮಂತ ಅಧಿಕಾರಿಗಳಿಗೆ ಕೊಟ್ಟಿಲ್ಲ ನೋಡು, ಸಖತ್ತಾಗಿ ಮೇಯಿಸಿದಿಯ, ನನಗೆ ಖುಷಿ ಆಯ್ತು,ಒಂದು ಸಾರಿ ಸವಾರಿ ಮಾಡ್ಲಾ ಅಂದ…ಏ ಹಂಗೆಲ್ಲ ನನ್ನ ಕುದುರೆ ಬೇರೆ ಯಾವನೂ ಏರಕ್ಕೆ ಬಿಟ್ಟಿಲ್ಲ ಬಿಡ್ರಿ,ನೀವು ಹೋಗ್ರಿ ಬೊಮ್ಮಘಟ್ಟಕ್ಕೆ ಅಂದೆ.

    ಮದ್ರಾಸ್ ಪ್ರಾಂತ್ಯದ, ಚಿತ್ರದುರ್ಗ ಜಿಲ್ಲೆಯ, ಮೊಳಕಾಲ್ಮುರು ತಾಲೂಕಿನಲ್ಲಿತ್ತು ನನ್ನೂರು ಆಗ. ಮೊಳಕಾಲ್ಮುರು ಆಗ ಆಡಳಿತ ಕೇಂದ್ರ. ಬ್ರಿಟಿಷರ ಪೊಲೀಸ್,ರೆವೆನ್ಯೂ,ಅಬಕಾರಿ ಎಲ್ಲ ಅಲ್ಲೇ ಇತ್ತಂತೆ. ತಾತನ ಬಾಯಲ್ಲಿ ಚಿತ್ರದುರ್ಗ , ಚಿತ್ಳದುರ್ಗ ಆಗಿರುತ್ತಿತ್ತು. ಹಾಗೆ ಬಂದ ವಿಚಾರಣಾಧಿಕಾರಿಯನ್ನು ಊರ ಶಾನುಭೋಗರನ್ನೊಳಗೊಂಡ ಪಂಚರು ( ಊರ ನ್ಯಾಯಾಧೀಶರು) ಏನೇನೋ ಸಾಬೂಬು ಹೇಳಿ, ಅವನು ಕಳೆದುಕೊಂಡಿದ್ದ ಜಕಾತಿ ಹಣವನ್ನ ನಮ್ಮ ಮುತ್ತಜ್ಜನಿಂದ ಕಟ್ಟಿಸಿಕೊಂಡು ಕಳಿಸಿಕೊಟ್ಟಿದ್ದರಂತೆ, ಪೊಲೀಸ್,ಕೇಸ್ ಅಂತ ಆಗದ ರೀತಿಯಲ್ಲಿ. ನಮ್ಮೂರಲ್ಲಿ ಬಹಳ ದಿನಗಳವರೆಗೆ,ನನ್ನ ನೆನಪಲ್ಲು ಪೊಲೀಸ್,ಕೇಸ್ ಇರುತ್ತಿರಲಿಲ್ಲ. ಊರ ಪ್ರಮುಖರೇ ಎಲ್ಲ ತೀರ್ಮಾನಿಸುತ್ತಿದ್ದರು.

    ಸುತ್ತ ಆರೆಂಟು ಹಳ್ಳಿಗಳಲ್ಲಿ ನಮ್ಮೂರಲ್ಲಿ ಬಹಳ ಹಿಂದಿನಿಂದಲೂ ಓದು,ಬರಹ ಎನ್ನುವುದು ಇದೆ. ಹೀಗೆ ಒಂದು ಸಾರಿ ವಿದ್ಯಾಭ್ಯಾಸದ ವಿಷಯ ಬಂದಾಗ …ಏ ಆಗ ಎಲ್ಲ ಶಾಲೆ ಇಲ್ಲಪ್ಪ…ಐನಾರ ಶಾಲೆ ಇತ್ತು, ನಾವೆಲ್ಲ ಮರಳಲ್ಲಿ ಅಕ್ಷರ ಕಲಿತಿದ್ದು, ನಿಮ್ಮಪ್ಪನ ಕಾಲಕ್ಕೆ ದೊಡ್ಡ ಮೇಷ್ಟ್ರ ಗುರುಕುಲದಂತಹ ಶಾಲೆ ಬಂತು. ಮನೆಯಲ್ಲೇ ಇಟ್ಟುಕೊಂಡು ಓದಿಸಿ, 7ನೇ ಕ್ಲಾಸ್ ಪರೀಕ್ಷೆ ಬರೆಯಲು ಮೊಳಕಾಲ್ಮುರಿಗೆ ಅವರೇ ಹುಡುಗರನ್ನು ಕರೆದುಕೊಂಡು ಹೋಗಿ, ವಾರಗಟ್ಟಲೆ ಅಲ್ಲಿದ್ದು ಪರೀಕ್ಷೆ ಬರೆಯಿಸಿ, ಕರೆತರುತ್ತಿದ್ದರು ಅಂತ ಹೇಳುತ್ತಿದ್ದರು.

    ಆಗ ನಮ್ಮೂರಲ್ಲಿ 7ನೇ ತರಗತಿ ಪಾಸಾದವರು ಭಯಂಕರ ವಿದ್ಯಾವಂತರು, ಹೈಸ್ಕೂಲ್ ಅಂತ ಅನಂತಪುರ,ಹಿಂದೂಪುರ,ಅಪ್ಪನಂತೆ ಜಗಳೂರಿಗೆ ಹೋದವರು ವಿದೇಶಕ್ಕೆ ಹೋಗಿ ಕಲಿತಂತೆ!ಅಂದು ಸಾಯಂಕಾಲ ದೊಡ್ಡ ಮೇಷ್ಟ್ರ   ಮನೆಗೆ ನಾನು  ಏನಾದ್ರು ಸಾಮಾನು ಕೊಡಲು ಹೋದಾಗ ಅವರಿಗೆ ಇನ್ನೂ ಹೆಚ್ಚಿನ ಗೌರವದೊಂದಿಗೆ ನಮಸ್ಕಾರ ಮಾಡಿ ಬರ್ತಿದ್ದೆ…ಏನೋ ನಿಮ್ಮಪ್ಪ ಎರಡು ದಿನ ಆಯ್ತು ಬರ್ಲಿಲ್ಲ, ಬರಲು ಹೇಳು ಅಂತ ಅವರ ಮಡದಿ ಸರೋಜಕ್ಕ ಅವಲಕ್ಕಿ,ಬೆಲ್ಲ ಕೊಡ್ತಿದ್ದರು. ನಾನು ತಿಂತಾ ಇದ್ದರೆ, ಮೇಷ್ಟ್ರು ನಿನ್ನೆ ಹೇಳಿಕೊಟ್ಟಿದ್ದ ರಾಮ ರಾಮಾಯ,ರಾಮ ಭದ್ರಾಯ ವೇದಸೆ….  ಪೂರ್ತಿ ಹೇಳು ಕೇಳ್ತೀನಿ ಅಂತಿದ್ರು. ನಾನು ….. ಪತಯೇನ್ನಮಹಾ  ಅಂತ ಮುಗಿಸಿಬಿಟ್ಟರೆ, ಸರೋಜಕ್ಕನಿಗೆ ಎಲ್ಲಿಲ್ಲದ ಖುಷಿಯಿಂದ ಕುಡಿಯಲು ನೀರು ಕೊಡ್ತಿದ್ದರು.

     ದೊಡ್ಡ ಮೇಷ್ಟ್ರು ಅಂತ ಈಗಲೂ ನಮ್ಮೂರಲ್ಲಿ ಕರೆಯಿಸಿಕೊಳ್ಳುವ ಲಕ್ಷ್ಮೀನಾರಾಯಣಾಚಾರ್ ಗುರುಕುಲವನ್ನಿಟ್ಟುಕೊಂಡು ಜಾತಿ,ಮತಗಳ ಭೇದವಿಲ್ಲದೆ,ಮಕ್ಕಳಿಲ್ಲದ ಅವರು ತನ್ನ ವಿದ್ಯಾರ್ಥಿಗಳನ್ನೇ ಮಕ್ಕಳೆಂದು ಭಾವಿಸಿ ವಿದ್ಯೆಯನ್ನು ಧಾರೆ ಎರೆದವರು. ನನ್ನೂರಲ್ಲಿ ಅವರು ಭಿತ್ತಿದ ಅಕ್ಷರಗಳಿಂದ ನನ್ನನ್ನೂ ಸೇರಿಸಿ ಸಾವಿರ ಸಾವಿರ ಜೀವಿಗಳಿಗೆ ಇಂದಿಗೂ ಅಕ್ಷರ ಸಿಗುತ್ತಿದೆ. ಅಷ್ಟೇ ಅಲ್ಲ, ನಮ್ಮೂರ ಸಂಸ್ಕೃತಿಯೇ ಭಿನ್ನ ಎನ್ನುವ ರೀತಿ ಬುನಾದಿ ಹಾಕಿದ್ದಾರೆ.

    ಅಪ್ಪ ಇವರ ಅತ್ಯಂತ ಪ್ರೀತಿಯ ಶಿಷ್ಯರಲ್ಲಿ ಒಬ್ಬರು. ಸಾಯುವ ತನಕ ಅವರ ಸೇವೆಯನ್ನು ಮಗನಿಗಿಂತಲೂ ಹೆಚ್ಚಾಗಿ ಮಾಡಿ, ನನ್ನ ಒಬ್ಬ ತಮ್ಮನಿಗೆ ಲಕ್ಷೀ ನಾರಾಯಣ ಅಂತ ಹೆಸರಿಸಿ, ಅವರು ಬದುಕಿದ್ದ ಅಷ್ಟೂ ದಿನ ಪಿತೃಮಾಸದಲ್ಲಿ ಪಿಂಡ ಪ್ರಧಾನ ಮಾಡಿದ್ದಾರೆ, ಅವರ ಇಚ್ಛೆಯಂತೆ. ಅಷ್ಟೇ ಅಲ್ಲ,ನನಗೂ ಪಾಲಿಸಲು ಹೇಳಿದ್ದಾರೆ. ಅಪ್ಪನಷ್ಟು ಶ್ರದ್ಧೆಯಿಂದ ಮಾಡಲಾಗಲ್ಲ, ನೆನೆಸಿಕೊಂಡು ಹೊಸಬಟ್ಟೆ ಇಡುತ್ತೇನೆ. ಈಗಲೂ ನಮ್ಮ ಮನೆಯಲ್ಲಿ ಅವರ ಫೋಟೋ ದಿನವೂ ಪೂಜೆಗೊಳ್ಳುತ್ತದೆ.
    ನಾನು ಊರು ಅಂದ ತಕ್ಷಣ ಮುಗಿಯದ ನೆನಪುಗಳಲ್ಲಿ ಕೊಚ್ಚಿಹೋಗಿಬಿಡುತ್ತೇನೆ…

    ಈಗ ಇದೆಲ್ಲ ಏಕೆ ನೆನಪಾಯ್ತು ಅಂದ್ರೆ, ಬ್ರಿಟಿಷರು ನಮ್ಮಲ್ಲಿಯ ಶಿಕ್ಷಣ ಪದ್ದತಿ, ಅದರಲ್ಲಿ ದೇವಾಲಯಗಳ ಪಾತ್ರ ಇವುಗಳ ಬಗ್ಗೆ ಸರ್ ಥಾಮಸ್ ಮನ್ರೋ ಎನ್ನುವ ಮದ್ರಾಸ್ ಪ್ರಾಂತ್ಯದ ಕಲೆಕ್ಟರ್ ನಿಂದ 1826 ರಲ್ಲಿ ಸರ್ವೇ ಮಾಡಿಸಿ ವರದಿ ಕೇಳುತ್ತದೆ. ಆಗ ಸುಮಾರು 1.30 ಕೋಟಿಯಷ್ಟಿದ್ದ ಮದ್ರಾಸ್ ಪ್ರಾಂತ್ಯದ ಜನಸಂಖ್ಯೆಯಲ್ಲಿ, ಸುಮಾರು 28,500 ಅಂದ್ರೆ ಸುಮಾರು ಸಾವಿರಕ್ಕೆ ಒಂದು ಗುರುಕುಲಗಳು,ವಿದ್ಯಾಕೇಂದ್ರಗಳಾಗಿ ಕೆಲಸ ಮಾಡುವ ದೇವಸ್ಥಾನಗಳೂ ಇವೆ. ಇವು ಯಾವ ಸರ್ಕಾರದಿಂದ,ಸಂಘ ಸಂಸ್ಥೆಗಳಿಂದ ನಡೆಯುವುದಿಲ್ಲ,ಬದಲಾಗಿ ದಾನಿಗಳಿಂದ, ಇವಕ್ಕೆ ಅಂತ ಇರುವ ಭೂಮಿಯಿಂದ ನಡೆಯುತ್ತಿವೆ  ಅಂತ ಥಾಮಸ್ ಮನ್ರೋ ಕೊಟ್ಟ ದಿ ಬ್ಯುವಟಿಫುಲ್ ಟ್ರೀ ಅಂತ ಹೆಸರಿಟ್ಟ ವರದಿಯನ್ನು ಅಂದಿನ ಬ್ರಿಟಿಷ್ ಸರ್ಕಾರ ಮತ್ತು ಇಂಗ್ಲೆಂಡಿನ ರಾಣಿ ನೋಡಿ ಬೆರಗಾಗಿ ರಹಸ್ಯವಾಗಿ ಇಟ್ಟುಬಿಟ್ಟಿತಂತೆ! 

    ಅದಕ್ಕೇ ಏನೋ ನಾವು ನಮ್ಮೂರಲ್ಲಿ ಶಾಲೆಯನ್ನು ಶಾಲೆ ಗುಡಿ ಅಂತ ಇವತ್ತಿಗೂ ಕರೆಯುತ್ತಿರುವುದು. ಕಾರ್ಖಾನೆಯಲ್ಲಿ ಕೆಲಸ ಮಾಡುವವರ ಮಕ್ಕಳನ್ನು ಒಂದು ಗೋದಾಮಿನ ರೀತಿ ಇದ್ದ ಕಟ್ಟಡಗಳಲ್ಲಿ ಇಡುವ ವ್ಯವಸ್ಥೆ ಇದ್ದ ಇಂಗ್ಲೆಂಡ್ ನಲ್ಲಿ ಅವುಗಳನ್ನು school  ಅಂತ ಆಗ ಕರೆಯುತ್ತಿದ್ದರಂತೆ. ನಮ್ಮಲ್ಲಿ ಆಗಲೇ ಗುರುಕುಲಗಳೂ,ದೇವಸ್ಥಾನಗಳೂ ಸಮಾಜದ ಎಲ್ಲ ವರ್ಗದವರಿಗೂ ವಿದ್ಯೆ ಕೊಡುವ ಕೆಲಸದಲ್ಲಿ ತೊಡಗಿದ್ದ ವ್ಯವಸ್ಥೆ ಕಂಡು ಅವರಿಗೆ ಹೇಗಾಗಿರಬೇಡ ಹೇಳಿ?! ತಾತಾ, ನೀನೇಕೆ ಜಾಸ್ತಿ ಓದಲಿಲ್ಲ ಅಂತ ಕೇಳಿದ್ದ ನನ್ನ ಪ್ರೆಶ್ನೆಗೆ ಅಂದು ಕೊಟ್ಟಿದ್ದ ನನ್ನ ತಾತನ ಉತ್ತರ ಏನು ಗೊತ್ತಾ?….ನಾನೇಕೆ ಜಾಸ್ತಿ ಓದಲಿ, ನನ್ನ ಮನೆ ಕಸುಬಾದ ಹೆಂಡದ ವ್ಯವಹಾರ ಮಾಡಲು ಆಗಿನ ಕಡ್ಡಾಯದ ಮೂರನೇ ತರಗತಿಯ ಶಿಕ್ಷಣ ಸಾಕಾಗುತ್ತಿತ್ತು. ಅಷ್ಟರಲ್ಲಿಯೇ ನಾವು ಮನುಷ್ಯರಾಗಿ ಸಮಾಜದಲ್ಲಿ ಬಾಳಲು ಬೇಕಾದ ಜ್ಞಾನ ಸಿಕ್ತಿತ್ತು. ಜ್ಞಾನದಿಂದಲೇ ಬದುಕಬೇಕೆನ್ನುವರು ಮುಂದೆ ಓದುತ್ತಿದ್ದರು…. ಅಂದಿದ್ದರು.

    ಸರ್ ಥಾಮಸ್ ಮನ್ರೋ ವರದಿಯಲ್ಲಿಯೂ ಇದೇ ಅಂಶ ನಮೂದಾಗಿರುವುದು ನನಗೆ ಆಶ್ಚರ್ಯ ತರಿಸಿತು. ಶಾಲೆ ಗಣತಿಯ ಪ್ರತಿಶತ 65 ರಷ್ಟು ಶೂದ್ರರು, ಕಡ್ಡಾಯ ಶಿಕ್ಷಣದ ಮೂರು ವರ್ಷ ಮುಗಿಸಿ,ತಮ್ಮ,ತಮ್ಮ ವೃತ್ತಿಗಳಿಗೆ ತೊಡಗುತ್ತಿದ್ದರು. ಉಳಿದ 35 ಪ್ರತಿಶತ ಮೇಲ್ವರ್ಗ ಎನ್ನಿಸಿಕೊಂಡವರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೊಡಗಿಸಿಕೊಳ್ಳುತ್ತಿದ್ದರು ಎನ್ನುವ ಅಂಶ ನನ್ನನ್ನು ಈ ಲೇಖನಕ್ಕೆ ಪ್ರೇರೇಪಿಸಿತು.

    ಅಲ್ಲದೆ ಮೊದಲನೇ ದುಂಡು ಮೇಜಿನ ಪರಿಷತ್ತಿನಲ್ಲಿ ಗಾಂಧೀಜಿಯವರು ಈ ವಿಷಯ ಇಂಗ್ಲೆಂಡಿನಲ್ಲೇ ಪ್ರಸ್ತಾಪಿಸಿ, ನೀವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿ,ನಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದೀರಿ ಎನ್ನುವ ಅಂಶವೂ ಒತ್ತು ನೀಡಿತು.ಇದನ್ನು ನೋಡುವಾಗ ನಮ್ಮ ಶಿಕ್ಷಣದ ವ್ಯವಸ್ಥೆ ಬ್ರಿಟಿಷರಿಗೆ ಹೊಟ್ಟೆಕಿಚ್ಚು ತರಿಸಿತ್ತಾ?ಇದನ್ನೇ ತಮ್ಮ ಒಡೆದು ಆಳುವ ನೀತಿಗೆ ಎಷ್ಟು ಸಮರ್ಥವಾಗಿ ಬಳಸಿಕೊಂಡು ನಮ್ಮನ್ನು ಮೂರ್ಖರನ್ನಾಗಿ ಮಾಡಿಬಿಟ್ಟಿದ್ದಾರಲ್ಲ ಅಂತ ವ್ಯಥೆಯೂ ಆಯ್ತು. ಅಷ್ಟೇ ಅಲ್ಲ ವರದಿಯಲ್ಲಿರುವಂತೆ ಸಾಂಸ್ಕೃತಿಕ ಕೇಂದ್ರಗಳೂ,ವಿದ್ಯಾಕೇಂದ್ರಗಳೂ ಆಗಿದ್ದ ನಮ್ಮ ದೇವಾಲಯಗಳಿಗೆ ತಮ್ಮದೇ ಆದ ಊರಿನ 35 ಪ್ರತಿಶತ ಭೂಮಿ, ನಮ್ಮೂರ ಹುಲಿಕುಂಟೆರಾಯನಿಗೂ (ದೇವಸ್ಥಾನ)ಇತ್ತು ಎನ್ನುವ ಅಂಶಕ್ಕೆ ನಾನೇ ಸಾಕ್ಷಿ. 35 ಪ್ರತಿಶತ ಇದ್ದ ತೆರಿಗೆ ವಿನಾಯಿತಿ ದೇವಸ್ಥಾನಗಳ ಭೂಮಿಯನ್ನು ಪ್ರತಿಶತ 5 ಕ್ಕೆ ಇಳಿಸಿದ್ದು ಈ ವ್ಯವಸ್ಥೆಯನ್ನು ಕೊಂದು ಹಾಕಲು ಮಾಡಿದ ಮೊದಲ ಹೆಜ್ಜೆ ಅಂತ ಅನ್ನಿಸ್ತಿದೆ.

    ಬ್ರಿಟನ್ನಿನ ಮಕ್ಕಳು ಗೋದಾಮುಗಳಂತಾ,ತಂದೆ ತಾಯಿಯರ ಕೆಲಸಗಳಿಗೆ ಅಡ್ಡಿ ಬಾರದೇ ಇರಲಿ ಎನ್ನುವ ಉದ್ದೇಶಕ್ಕೆ ಸ್ಕೂಲ್ ನಲ್ಲಿ ಇರುತ್ತಿರಬೇಕಾದಾಗ, ನಮ್ಮ ತಾತಂದಿರು ಗುರುಕುಲಗಳಲ್ಲಿ ವಿದ್ಯಾಭ್ಯಾಸಕ್ಕೆಂದೇ ತೊಡಗಿದ್ದರು ಎನ್ನುವ ಅಂಶ ನನಗಂತೂ ಭಯಂಕರ ಗೌರವ ತರುವಂತಾದ್ದು ಅನ್ನಿಸ್ತಿದೆ….. ಇಂಗ್ಲೆಂಡಿನ  ಮ್ಯೂಜಿಯಂ ನಲ್ಲಿ ಸಿಕ್ಕಿರುವ ಸರ್ ಥಾಮಸ್ ಮನ್ರೋ ತಯಾರಿಸಿ ಕೊಟ್ಟಿದ್ದ, ದಿ ಬ್ಯುಟಿಫುಲ್ ಟ್ರೀ ಎಂಬ ವರದಿಯನ್ನು ಭಾರತ ಸರ್ಕಾರ  ರಾಜ ತಾಂತ್ರಿಕ ಮಾರ್ಗದಿಂದ ಪ್ರತಿಯೊಂದನ್ನು ತರಿಸಿ ನಮಗೆ ತಿಳಿಸುವ ಕೆಲಸ ಮಾಡಬೇಕು ಅನ್ನಿಸುತ್ತದೆ.

    ಕಿರಣ್ ಮಾಡಾಳು

    ಇಲ್ಲಿ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    ರಾಮಜನ್ಮಭೂಮಿಯ ಆಳದಲ್ಲಿ ತಾಮ್ರ ಶಾಸನ

    ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಕುರಿತಂತೆ ಭವಿಷ್ಯದಲ್ಲಿ ಯಾವುದೇ ವಿವಾದ ಎದುರಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಶ್ರೀ ರಾಮಜನ್ಮಭೂಮಿ  ತೀರ್ಥ ಕ್ಷೇತ್ರ ಟ್ರಸ್ಟ್ ಕ್ರಮ ಕೈಗೊಂಡಿದೆ. ಇದರ ಅಂಗವಾಗಿಯೇ ಇಡೀ ವಿಷಯದ ಕುರಿತು ಸಮಗ್ರ ವಿವರ ಇರುವ ತಾಮ್ರ ಫಲಕವನ್ನು ಜನ್ಮಭೂಮಿ ಆವರಣದಲ್ಲಿ ಎರಡು ಸಾವಿರ ಅಡಿಗಳ ಆಳದಲ್ಲಿ ಹುದುಗಿಸಿಡಲು ಅದು ತೀರ್ಮಾನಿಸಿದೆ. ಈ ವಿಷಯವನ್ನು ಟ್ರಸ್ಟ್ ನ ಸದಸ್ಯ ಕಾಮೇಶ್ವರ ಚೌಪಾಲ್ ತಿಳಿಸಿದ್ದಾರೆ.

    ಜನ್ಮಭೂಮಿಯ ಕುರಿತ ಐತಿಹಾಸಿಕ ಅಂಶಗಳು ಈ ತಾಮ್ರದ ಫಲಕದಲ್ಲಿ ಇರಲಿವೆ. ರಾಮ ಜನ್ಮಭೂಮಿ ಕುರಿತ ಸುದೀರ್ಘ ಆಂದೋಲನ, ನ್ಯಾಯಾಲಯದಲ್ಲಿ ನಡೆದ ಹೋರಾಟ, ಸುಪ್ರೀಂ ಕೋರ್ಟ್ ತೀರ್ಪು ಇತ್ಯಾದಿ ವಿವರಗಳನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ಉದ್ದೇಶ ಇದರ ಹಿಂದಿದೆ. ಜತೆಗೆ ಮುಂದೇನಾದರೂ ವಿವಾದ ಮತ್ತೆ ಸೃಷ್ಟಿಯಾದರೂ ಅದರ ಪರಿಹಾರಕ್ಕೆ ಈ ತಾಮ್ರ ಶಾಸನ-ಫಲಕ ನೆರವಾಗಲಿದೆ ಎಂದು ಚೌಪಾಲ್ ಹೇಳಿದ್ದಾರೆ. 

    ಭವಿಷ್ಯದಲ್ಲಿ ಯಾರೊಬ್ಬರೂ ಶ್ರೀ ರಾಮ ಮಂದಿರ ನಿರ್ಮಾಣದ ಇತಿಹಾಸವನ್ನು ಅಧ್ಯಯನ ಮಾಡಲು ಇಚ್ಚೆ ಪಟ್ಟರೆ ಆಗ ಶಾಸನದ ಮೂಲಕ ಸಂಪೂರ್ಣ ಮಾಹಿತಿ ಸಿಗಲಿದೆ. ಆ ಮೂಲಕ ಮತ್ತೊಂದು ವಿವಾದ ಸೃಷ್ಟಿಯಾಗುವ ಸಾಧ್ಯತೆಯಿಲ್ಲ ಎಂದವರು ಹೇಳಿದ್ದಾರೆ.

     ಇದೊಂದು ರೀತಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಂದೆ ಬರುವ ಕಂಟಕವನ್ನು ಅಥವಾ ನಿರ್ಮಾಣದ ಬಳಿಕ ಎದುರಾಗಬಹುದಾದ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಮುಂಜಾಗ್ರತಾ ಕ್ರಮವೆಂದೇ ಪರಿಗಣಿಸಲಾಗುತ್ತಿದೆ. ಮುಂದೆ ವಿವಾದ ಮತ್ತೆ ಭುಗಿಲೆದ್ದರೆ ತಾಮ್ರ ಶಾಸನವೇ ಅತಿ ಮುಖ್ಯ ಸಾಕ್ಷಿಯಾಗಿ ಪರಿಗಣಿತವಾಗಲಿದ್ದು, ಅದನ್ನು ಅವಲಂಬಿಸಿಯೇ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಇದರಲ್ಲಿ ಅಯೋಧ್ಯಾ, ಭಗವಾನ್ ಶ್ರೀರಾಮನ ಕುರಿತ ವಿವರಗಳಿರುತ್ತವೆ. ನಾನಾ ತಜ್ಞರನ್ನು ಸಂಪರ್ಕಿಸಿ ಅವರು ನೀಡುವ ಮಾಹಿತಿಯನ್ನು ಆಧರಿಸಿ, ಅಂತಿಮವಾಗಿ ಕನಿಷ್ಠ ಪದಗಳಲ್ಲಿ ಅದನ್ನು ವಿವರಿಸಲಾಗುತ್ತದೆ. ಸುಮಾರು ನೂರು ವರ್ಷಗಳಿಂದಲೇ ಇಂತಹ ಪ್ರಯತ್ನ ನಡೆದಿದ್ದು, ಈಗ ಮಂದಿರ ನಿರ್ಮಾಣ ಸಾಕಾರವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಾಮ್ರ ಫಲಕದಲ್ಲಿ ಅಕ್ಷರ ರೂಪಕ್ಕೆ ಇಳಿಸಲಾಗುತ್ತಿದೆ.

    ಮಂತ್ರಾಲಯದಿಂದ ಆರಾಧನೆ ಲೈವ್ ಪ್ರಸಾರ

    ಇಂದು ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 349 ನೇ ಆರಾಧನೆಯ ಸಂಭ್ರಮ. ಕರೆೋನಾ ಕಾರಣದಿಂದ ಕೆಲವೇ ಭಕ್ತರ ಸಮ್ಮುಖದಲ್ಲಿ ಆಚರಣೆ. ಮಂತ್ರಾಲಯ ವಾಹಿನಿಯ ಮೂಲಕ ಅಲ್ಲಿನ ಕಾರ್ಯಕ್ರಮಗಳ ನೇರ ಪ್ರಸಾರ. ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ಧನ್ಯರಾಗಿ

    error: Content is protected !!