27.2 C
Karnataka
Thursday, August 20, 2026
    Home Blog Page 161

    ಕಾವೇರಿ ಕೂಗು ಅಭಿಯಾನಕ್ಕೆ ಅಡ್ಡಿಯಾಗದ ಕರೋನಾ

    ಕಾವೇರಿ ನದಿ ಬತ್ತಿ ಹೋಗುತ್ತಿದೆ ಎಂಬ ಕೂಗು ಇಂದು, ನಿನ್ನೆಯದಲ್ಲ, ಕಳೆದ ಅನೇಕ ವರ್ಷಗಳಿಂದ ಇಂತಹ ಕೂಗು ಎದ್ದಿದೆ. ಇಂತಹ ಮಯದಲ್ಲಿಕಾವೇರಿ ನದಿಯನ್ನು ಪುನರುಜ್ಜೀವಗೊಳಿಸಲು ಎಲ್ಲರ ಬೆಂಬಲದೊಂದಿಗೆ ಧೃಡ ಸಂಕಲ್ಪದಿಂದ ಹೊರಟಿದ್ದಾರೆ ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು.

    ಸದ್ಗುರು ಅವರ ನೇತೃತ್ವದಲ್ಲಿ ಕಾವೇರಿ ನದಿ ಪಾತ್ರದ ಕರ್ನಾಟಕ ಮತ್ತು ತಮಿಳುನಾಡು ಎರಡೂ ಕಡೆಗಳಲ್ಲಿಕಳೆದ ವರ್ಷ ಕಾವೇರಿ ಕೂಗು ಅಭಿಯಾನ ಆರಂಭವಾಗಿದೆ. ಸರಕಾರಗಳು, ಸಾಧು ಸಂತರು, ರೈತರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

    ಕಾವೇರಿ ಕೂಗು ಅಭಿಯಾನ ಕಾವೇರಿ ನದಿಯನ್ನು ಉಳಿಸುವುದರ ಜೊತೆಗೇ ರೈತರಿಗೂ ಆರ್ಥಿಕವಾಗಿ ಆದಾಯ ತಂದುಕೊಡುವ ಯೋಜನೆಯಾಗಿದೆ. ಮರ ವ್ಯವಸಾಯದ ಈ ಅಭಿಯಾನದಲ್ಲಿರೈತರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕಾವೇರಿ ಕೂಗು ಪರಿಸರದ ಸಮಸ್ಯೆಗೆ ಆರ್ಥಿಕ ಪರಿಹಾರವಾಗಿದೆ.
    ಇದು ಕಾವೇರಿ ಜಲಾನಯನ ಪ್ರದೇಶದಲ್ಲಿಮರ ವ್ಯವಸಾಯವನ್ನು ಉತ್ತೇಜಿಸುತ್ತದೆ. ಹೆಚ್ಚಿನ ಮೌಲ್ಯವಿರುವ 242 ಕೋಟಿ ಮರಗಳನ್ನು ಬೆಳೆಸಲು 50 ಲಕ್ಷ ರೈತರ ಕೈಗಳನ್ನು ಬಲಪಡಿಸುವ ಗುರಿ ಹೊಂದಿದೆ. ಇದು ಜಲಾನಯನ ಪ್ರದೇಶದ ಮೂರನೇ ಒಂದು ಭಾಗವನ್ನು ನೆರಳಿನಡಿಯಲ್ಲಿತಂದು ಮಣ್ಣಿನ ಆರೋಗ್ಯ ಮತ್ತು ಅಂತರ್ಜಲದ ಮಟ್ಟವನ್ನು ಮುಖ್ಯವಾಗಿ ಸುಧಾರಿಸುತ್ತದೆ. ಇದು ರೈತರ ಆದಾಯವನ್ನು 5 ರಿಂದ 7 ವರ್ಷಗಳಲ್ಲಿ3 ರಿಂದ 8 ಪಟ್ಟು ಹೆಚ್ಚಿಸಲಿದೆ . ಇದು ಈ ಅಭಿಯಾನದ ಪ್ರಮುಖ ಅಂಶಗಳು.


    ನಿರೀಕ್ಷೆಯ ಪ್ರಕಾರ ಇದು 12 ಲಕ್ಷ ಕೋಟಿ ಲೀಟರ್‌ಗಳಷ್ಟು ನೀರನ್ನು ಜಲಾನಯನ ಪ್ರದೇಶದಲ್ಲಿಯೇ ಹಿಡಿದಿಟ್ಟುಕೊಂಡು ನೀರಿನ ಸ್ಥಾವರ ಹಾಗೂ ಕಾವೇರಿ ನದಿಯ ಹರಿವಿನ ಮೂಲವನ್ನು ವೃದ್ಧಿಸಲಿದೆ.

    ಸದ್ಗುರು ಇತ್ತೀಚೆಗೆ ವೆಬಿನಾರ್‌ನಲ್ಲಿ ಕಾವೇರಿ ಕೂಗುವಿನ ಒಂದು ವರ್ಷದ ಪ್ರಗತಿಯ ಸಂಕ್ಷಿಪ್ತ ವಿವರವನ್ನು ನೀಡಿದರು. ರಾಜ್ಯ ಅರಣ್ಯ ಇಲಾಖೆ, ರೈತರು, ಕಾವೇರಿ ಕೂಗಿನ ಸ್ವಯಂ ಸೇವಕರು ಹಾಗೂ ಮಾಧ್ಯಮದವರಿಂದ ದೊರೆತ ಬೆಂಬಲದಿಂದ ಕರೋನಾ ಮಹಾಮಾರಿಯ ನಿರ್ಬಂಧಗಳ ಹೊರತಾಗಿಯೂ ಯೋಜನೆಯು ಸರಿಯಾದ ಮಾರ್ಗದಲ್ಲಿಸಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಕೃಷಿ ಇಲಾಖೆ ಸಿಬ್ಬಂದಿ ತುಂಬಾ ಉತ್ಸಾಹದಿಂದ ಈ ಅಭಿಯಾನವನ್ನು ಬೆಂಬಲಿಸಿದ್ದಾರೆ ಎಂದರು.ಕರ್ನಾಟಕ ಮತ್ತು ತಮಿಳುನಾಡಿನ ರೈತರಿಗೆ ಕಳೆದ ಎರಡು ತಿಂಗಳಿನಲ್ಲಿ61 ಲಕ್ಷ ಸಸಿಗಳನ್ನು ವಿತರಿಸಲಾಗಿದೆ. ಕರ್ನಾಟಕದಲ್ಲಿಯೇ 50 ಲಕ್ಷ ಸಸಿಗಳನ್ನು ವಿತರಿಸಲಾಗಿದೆ. ಕೊರೊನಾದಿಂದಾಗಿ ನಿರೀಕ್ಷಿಸಿದಷ್ಟು ಸಸಿಗಳನ್ನು ನೆಡೆಸಲು ಸಾಧ್ಯವಾಗಿಲ್ಲ. ಮಣ್ಣಿನ ಫಲವತ್ತತೆ ಉಳಿದು ಬೆಳೆಯಬೇಕೆಂದರೆ ಮರ ಸಸಿಗಳನ್ನು ನೆಡಬೇಕು. ರೈತರಿಗೆ ಮರ ವ್ಯವಸಾಯದಲ್ಲಿಆಸಕ್ತಿ ಕಂಡು ಬಂದಿದೆ ಎಂದು ವಿವರಿಸಿದರು ಸದ್ಗುರು.

    ಕಾವೇರಿ ಕೂಗು ಯೋಜನೆಯು ವಿಶ್ವದ ಎಲ್ಲಉಷ್ಣವಲಯ ಪ್ರದೇಶಗಳ ನದಿಗಳ ಪುನರುಜ್ಜೀವನಕ್ಕೆ ಜಾಗತಿಕ ನೀಲನಕ್ಷೆ ತಯಾರಿಸುವ ಅವಕಾಶ. ಇದು ಅಲ್ಲಿವಾಸಿಸುವ 4.7 ಶತಕೋಟಿ ಜನರ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎಂದರು.

    ಮುಂದಿನ 12 ವರ್ಷಗಳಲ್ಲಿಕಾವೇರಿಯನ್ನು ತನ್ನ ನಿಜವಾದ ವೈಭವದಲ್ಲಿಪುನರ್‌ ಸ್ಥಾಪಿಸುವುದು ಈ ಇಡೀ ತಲೆಮಾರಿನ ಜವಾಬ್ದಾರಿಯಾಗಿದೆ ಎಂದರು ಸದ್ಗುರು.

    ಕರೋನಾದಂತಹ ಮಹಾ ಮಾರಿಗೂ ನಮ್ಮ ಅಡುಗೆ ಮನೆ ಡಬ್ಬಗಳಲ್ಲಿ ಅಡಗಿದೆ ರಾಮ ಬಾಣ

    ಅಡುಗೆ ಮನೆ ಗಂಡಸರದ್ದಾ ಇಲ್ಲ ಹೆಂಗಸರದ್ದ? ಹೀಗಂತ ಯಾರನ್ನೇ ಕೇಳಿದ್ರು ಇವನೆಂತ ಅಸಂಬದ್ಧ ಪ್ರಶ್ನೆ ಕೇಳ್ತಾನೆ ಅಂತ ನಕ್ಕುಬಿಡ್ತಾರೆನೋ ಆದ್ರೆ ಉತ್ತರ ಗಂಡಸರದ್ದು ಅಂದು ಬಿಟ್ಟರಂತೂ ಇವನಿಗೆ ತಲೆ ಕೆಟ್ಟಿದೆ ಅಂತ ತೀರ್ಮಾನಿಸಿಬಿಡ್ತಾರೆ. ಅಷ್ಟೊಂದು ನಮ್ಮ ಅಡುಗೆಮನೆಗಳು ಹೆಣ್ಮಕ್ಕಳ ಅಸ್ತಿತ್ವದ, ಹಕ್ಕುಗಳ ಆಸ್ತಿಗಳಾಗಿ ಬಿಟ್ಟಿವೆ. ಹಬ್ಬ, ಹರಿದಿನಗಳಲ್ಲಂತೂ ಕೇಳಲೇ ಬೇಡಿ. ಹೆಣ್ಮಕ್ಕಳು ಎಲ್ಲರಿಗಿಂತ ಮುಂಚೆ ಎದ್ದು,ಸ್ನಾನ ಮಾಡಿ, ಹಸಿ ಹೆರಳನ್ನು ಬಟ್ಟೆಯಲ್ಲಿ ಕೂದಲಿನ ಆಕಾರದಲ್ಲಿ ಕಟ್ಟಿ, ಸಡಗರದಿಂದ ಕೈಬಳೆ ಸದ್ದು ಮಾಡುತ್ತಾ ವಿಧ,ವಿಧ ಅಡುಗೆಗಳ ಪರಿಮಳಗಳೊಂದಿಗೆ ಅಡುಗೆಮನೆಯಲ್ಲಿ ಸ್ಥಾಪಿತರಾದರು ಅಂದ್ರೆ ಹಬ್ಬದ ಸಂಭ್ರಮ ಮುಗಿಲು ಮುಟ್ಟುವುದೇ ಆಗ.  ಸಾಧಾರಣ ದಿನಗಳಲ್ಲೂ ಹೆಣ್ಮಕ್ಕಳು ಇಲ್ಲದ ಅಡುಗೆ ಮನೆಗಳು ಭಣ, ಭಣ. ಅಷ್ಟೊಂದು ನಮ್ಮ ಅಡುಗೆಮನೆಗಳು ಹೆಣ್ಮಕ್ಕಳ ಕಾರ್ಯ ಸ್ಥಾನಗಳಾಗಿ,ಇಡೀ ಮನೆಯನ್ನು, ಕುಟುಂಬವನ್ನು ಹಿಡಿದಿಟ್ಟಿವೆ.

    ಇಂಥ ಅಡುಗೆ ಅಥವಾ ಅಡುಗೆ ಮನೆಗಳು ಮೊದಲಿಗೆ ಗಂಡಸರದ್ದಾಗಿತ್ತು ಅಂತ ಅನ್ನಿಸೋದೇ ನಳ ಪಾಕ, ಭೀಮಪಾಕ ಎನ್ನುವಂತಹ ಶಬ್ದಗಳನ್ನು ಕೇಳುವಾಗ. ಎಲ್ಲೂ ಸೀತೆ ಪಾಕ, ದ್ರೌಪದಿ ಪಾಕ,ದಮಯಂತಿ ಪಾಕ ಅಂತ ಕೇಳುವುದೇ ಇಲ್ಲ!  ಅಲ್ಲದೆ ಬಾಣಸಿಗ ಎನ್ನುವ ಶಬ್ದ ಕೇಳ್ತೇವೆ ಬಿಟ್ಟರೆ ಬಾಣಸಿಗಿತ್ತಿ ಅಂತ ಕೇಳಿಲ್ಲ ಅನ್ಸುತ್ತೆ. ಇವತ್ತಿಗೂ ಸಾಮೂಹಿಕ ಅಡುಗೆಗಳಲ್ಲಿ ಬಾಣಸಿಗರೇ ಕಾಣುತ್ತಾರೆ,ಬಿಟ್ಟರೆ ಬಾಣಸಿಗಿತ್ತಿಯರು ಕಾಣಲ್ಲ. ಇದನ್ನೆಲ್ಲ ನೋಡಿದಾಗ, ಅಡುಗೆ ಮನೇನೂ ಒಂದೊಮ್ಮೆ ಪುರುಷ ಪ್ರಧಾನ ಕೇಂದ್ರ ಆಗಿದ್ದಿರಬಹುದು ಅನ್ನುವ ಅನ್ನಿಸಿಕೆಯನ್ನ ಮಾತ್ರ ಹೊರಹಾಕಿ,ಮುಂದಿನ ಅದರ ವಿಶ್ಲೇಷಣೆಗೆ ಕೈ ಹಾಕಲ್ಲ. ಹಾಗೇನಾದ್ರು ಕೈ ಹಾಕಿ ಮಾತಾಡಿದೆ ಅಂದ್ರೆ, ನನಗೂ ಸೇರಿ ಬಹುತೇಕ ಗಂಡಸರು ಅಡುಗೆ ಮನೆಯಲ್ಲಿ ನಾಳೆಯಿಂದ ಸ್ಥಾಪಿತರಾಗಬೇಕಾಗುತ್ತೆ.

    ನಮ್ಮ ಸಂಸ್ಕೃತಿಯಲ್ಲಿ ಅಡುಗೆ ಮನೆಗೆ ತುಂಬಾ ಪವಿತ್ರ ಸ್ಥಾನ ಕೊಟ್ಟಿದ್ದೇವೆ. ದೇವರ ಮನೆ ಆದ ನಂತರ, ಅಡುಗೆ ಮನೆಗೇ ಪ್ರಾಶಸ್ತ್ಯ. ಯಾಕೆಂದರೆ, ಅಡುಗೆ ಮನೆ ನಮ್ಮ ಆರೋಗ್ಯ ಕಾಪಾಡುವ ಔಷಧಾಲಯವೂ ಹೌದು. ನಮ್ಮ ಅಡುಗೆಯೇ ಔಷಧ! ಅಡುಗೆ ಮನೆಯಲ್ಲಿನ ಸಣ್ಣ ಸಣ್ಣ ಬಾಟಲು ಗಳಲ್ಲಿ ತುಂಬಿಟ್ಟಿರುವ ಅಡುಗೆಗೆ ಅಂತ ಉಪಯೋಗಿಸುವ ಸಾಮಾನು ನೋಡಿದ್ರೆ, ನನಗಂತೂ ಹಾಗೇ ಅನ್ಸುತ್ತೆ. ಅದು ನಿಜವೂ ಹೌದು. ನಮ್ಮ ವೈದ್ಯಕೀಯ ಶಾಸ್ತ್ರವಾದ ಆಯುರ್ವೇದದ ಹಲವಾರು ಸಾಮಾನುಗಳು ನಮಗೆ ಅಡುಗೆ ಮನೆಯಲ್ಲಿ ದೊರೆಯುತ್ತವೆ,ಅವುಗಳನ್ನು ದಿನ ನಿತ್ಯ ಉಪಯೋಗಿಸಲು ನಮ್ಮ ಆಹಾರ ಪದ್ಧತಿಗಳಲ್ಲಿ ಅಳವಡಿಸಿ ಕೊಂಡಿದ್ದೇವೆ ಕೂಡಾ. ಹಾಗೆಯೇ ನಾವು ಪಾಲಿಸುವ ಋತುಮಾನಗಳಿಗೆ ತಕ್ಕಂತೆ ಬರುವ ಹಬ್ಬ,ಹರಿದಿನಗಳ ನಿರ್ದಿಷ್ಟ ಆಹಾರ ಪದ್ಧತಿ ಇದಕ್ಕೆ ಬೆಂಬಲವಾಗಿ ನಿಲ್ಲುತ್ತೆ. ಋತುಮಾನ, ಆಹಾರ ಧರ್ಮಾತೀತವಾದ್ದರಿಂದ ಇದು ಎಲ್ಲರಿಗೂ ಅನ್ವಯಿಸುವ ವಿಷಯವೇ. ಆದರೆ, ಈಗಿನ ಕೆಲವು ಬೆಳವಣಿಗೆಗಳು ಇವುಗಳನ್ನೂ ಧರ್ಮದ ಪರಿಧಿಗೆ ತಂದು ಇವುಗಳಿಗೂ ಧರ್ಮದ ಸೋಂಕನ್ನು ಹಚ್ಚಿಬಿಟ್ಟಿವೆ.

    ನಮ್ಮಲ್ಲಿಯ ಔಷಧಿ ಗುಣಗಳನ್ನು ಒಳಗೊಂಡಿರುವ ಸಾಂಬಾರು ಪದಾರ್ಥಗಳು ಪ್ರಪಂಚದ ಬೇರೆ ಎಲ್ಲೂ ಸಿಕ್ಕಲ್ಲ, ಅಷ್ಟೇ ಅಲ್ಲ ಇವುಗಳಿಗಾಗಿಯೇ ಡಚ್ಚರು, ಪೋರ್ಚ್ಗೀಸರು, ಅರಬ್ಬಿಗಳೂ ಭಾರತದ ವಾಯುವ್ಯ ಮೂಲೆಯಿಂದ ದಾಳಿ ಮಾಡುವ ಎಷ್ಟೋ ಶತಮಾನಗಳ ಮುಂಚೆಯೇ ದಕ್ಷಿಣ ರಾಜ್ಯಗಳ ರಾಜರೊಂದಿಗೆ ವ್ಯಾಪಾರ ಮಾಡಿರುವುದು ಇತಿಹಾಸ ಆಗಿದೆ.

    ಪ್ರತಿ ನೂರು ಚದರ ಮೈಲಿಗೆ ನಮ್ಮ ದೇಶದ ಹವಾಗುಣ ಬದಲಾಗುವ ಲಕ್ಷಣ ಇದೆಯಲ್ಲ, ಇದು ನಮ್ಮ ಸಂಸ್ಕೃತಿ, ಭಾಷೆ, ಆಚಾರ ವಿಚಾರದ ಮೇಲೆ ಬೀರಿರುವ ಪ್ರಭಾವ ನಮ್ಮ ಆಹಾರ ಪದ್ಧತಿಗಳ ಮೇಲೂ ಬೀರಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಅಂಶವೂ ನಮ್ಮ ಆಹಾರ ಪದ್ಧತಿ,ಔಷಧ ಅನ್ನುವುದನ್ನು ಹೆಚ್ಚು ಸ್ಪಷ್ಟಪಡಿಸುತ್ತದೆ. ಈ ಕಾರಣದಿಂದ ನಮ್ಮ ಕರ್ನಾಟಕದಲ್ಲಿ ಉತ್ತರ ಕರ್ನಾಟಕ ಆಹಾರ,ದಕ್ಷಿಣ ಕರ್ನಾಟಕ ಆಹಾರ ಪದ್ಧತಿಗಳನ್ನೂ ಕಾಣುತ್ತೇವೆ.

    ಬಳ್ಳಾರಿಯವರಾದ ನಾವು ಮಧ್ಯೆ ಕರ್ನಾಟಕದವರು,ಆದರೂ ಉತ್ತರ ಕರ್ನಾಟಕಕ್ಕೆ ಸೇರಿಸಿಬಿಟ್ಟಿದ್ದಾರೆ. ನಮ್ಮಲ್ಲಿ ಎರಡೂ ಪದ್ಧತಿಗಳ ಜೊತೆ,ಆಂಧ್ರ ಆಹಾರ ಪದ್ಧತಿಯೂ ಸೇರಿಕೊಂಡಿದೆ. ದಕ್ಷಿಣ ಕರ್ನಾಟಕದ ಮುದ್ದೆ,ಸೊಪ್ಪು ಸಾರು, ಉತ್ತರ ಕರ್ನಾಟಕದ ಜೋಳದ ರೊಟ್ಟಿ, ತರಕಾರಿ, ಕಾಳುಗಳು,ಆಂಧ್ರದ ಪಪ್ಪು,ಅನ್ನ ಎಲ್ಲವೂ ನಮ್ಮಲ್ಲಿ ಆಹಾರ ಪದ್ಧತಿಗಳಾಗಿವೆ. ಏಕದಳ ಧಾನ್ಯಗಳನ್ನು ದ್ವಿದಳ ಧಾನ್ಯಗಳ ಜೊತೆ  ವರ್ಷ ಇಡೀ ಸಾಂಬಾರು ದಿನಿಸುಗಳ ಜೊತೆಯಾಗಿ ತಿನ್ನುವ ಆಹಾರ ಪದ್ಧತಿ ದಕ್ಷಿಣ ಭಾರತದಲ್ಲೇ ಸಾಮಾನ್ಯ.

    ಬರುವ ಗೌರೀ ಹುಣ್ಣಿಮೆಯ ಕುಂತೀ ರೊಟ್ಟಿಎಂಬ ಸಾಯಂಕಾಲದ ಊಟದ  ಕಾರ್ಯಕ್ರಮದಲ್ಲಿ ನಮ್ಮ ಜೋಳದ,ಸಜ್ಜೆಯ ರೊಟ್ಟಿ ಊಟ, ವಿಧ ವಿಧ ತರಕಾರಿ, ಸೊಪ್ಪು,ಕಾಳುಗಳ ಊಟ ಸವಿಯಬೇಕು ಕಣ್ರೀ, ಆಗಲೇ ನನಗೆ ಅನ್ನಿಸಿದ್ದು, ನಮ್ಮ ಪೂರ್ವಿಕರು ಎಷ್ಟೊಂದು ಸಂಶೋಧನೆ ಈ ವಿಷಯದಲ್ಲಿ ಮಾಡಿ ಇದಕ್ಕೆ ಪಾಕ ಶಾಸ್ತ್ರ ಅಂತ ಹೆಸರಿಟ್ಟಿದ್ದಾರಲ್ಲ ಅಂತ.

    ಇನ್ನು ಹೋಳಿಗೆ ಊಟದ ಸಂಭ್ರಮವಂತೂ ಪ್ರತಿ ಹಬ್ಬಕ್ಕೂ ನಮಗೆ ಇರುತ್ತದೆ. ಪಂಚಮಿಯ ಉಂಡೆಗಳು, ಯುಗಾದಿಯ,ದಸರಾದ ಹೋಳಿಗೆ, ಸಂಕ್ರಮಣದ ರೊಟ್ಟಿ, ದೀಪಾವಳಿಯ ಸಿಹಿತಿನಿಸುಗಳು, ಶಿವರಾತ್ರಿ ಜಾಗರಣೆ ಮಂಡಕ್ಕಿ ಒಗ್ಗರಣೆ, ಮೆಣಸಿನಕಾಯಿ…. ವರ್ಷವಿಡೀ ಅಂತ್ಯವಿಲ್ಲದ ಹಬ್ಬಗಳು,ಆಹಾರ ಪದ್ಧತಿಗಳು…ವಾವ್…ಬಿಸಿಲಲ್ಲಿ,ಚಳಿಯಲ್ಲಿ,ಮಳೆಯಲ್ಲಿ ಯಾವಾಗಲೂ ಮೆಲ್ಲುವ ನಮ್ಮ ಇಷ್ಟವಾದ ಖಾದ್ಯವೆಂದರೆ ಅದು ಮಂಡಕ್ಕಿ,ಮೆಣಸಿನಕಾಯಿ. ಮೆಣಸಿನಕಾಯಿ ಹೊಟ್ಟೆ ಬಗೆದು, ಉಪ್ಪು ಜೀರಿಗೆ ತುಂಬಿದರಂತೂ ಹ ಹಾ ಅನ್ನುತ್ತಾ, ಬೆವರು ಬರುತ್ತಿದ್ದರೂ ಬಿಡುವುದಿಲ್ಲ ನಾವು ತಿನ್ನುವುದನ್ನು. ಗ್ರಾಮೀಣ ಭಾಗಗಳಲ್ಲಂತೂ ನೀವು,ನಾವು ಕಂಡು ಕೇಳರಿಯದ ಆಹಾರ ಪದ್ಧತಿ ನಮಗೆ ದೇಶದ ಎಲ್ಲ ಭಾಗಗಳಲ್ಲೂ ಸಿಗುತ್ತದೆ. 
    ಸಸ್ಯ ಆಹಾರದಲ್ಲಿ ಭಾರತದ ಆಹಾರ ಪದ್ಧತಿ,ಇಡೀ ವಿಶ್ವಕ್ಕೆ ಮೊದಲನೆಯದು ಮತ್ತು ತುಂಬಾ ಶಾಸ್ತ್ರೀಯವಾದುದು ಅಂತ ಹೇಳಬಹುದು.

    ಇದನ್ನು ಇಷ್ಟೊಂದು ಆಳವಾಗಿ ನೈಸರ್ಗಿಕವಾಗಿ ಸಿಗುವ ಸೊಪ್ಪು,ಕಾಳುಗಳಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಅಂಶಗಳನ್ನು ಗುರುತಿಸಿ, ಅವುಗಳನ್ನು ಉಪಯೋಗಿಸುವ ಕ್ರಮ ಹೇಳಿಕೊಟ್ಟು, ಮನೆ ಮನೆಗಳಲ್ಲೂ ಆಯುರ್ವೇದದ ಸಾರವನ್ನು ಅಡುಗೆ ರೂಪದಲ್ಲಿ ಅಡುಗೆ ಮನೆಯಲ್ಲಿಟ್ಟಿರುವುದರಿಂದ ಏನೋ ನನ್ನ ಅಮ್ಮ ಬೆಳಿಗ್ಗೆ ಎದ್ದ ತಕ್ಷಣ ಒಲೆಯ ಬೂದಿ ತೆಗೆದು,ಸ್ವಚ್ಛಗೊಳಿಸಿ, ಒಲೆ ಪೂಜೆ ಮಾಡಿಯೇ, ಅಂಗಳ,ಹೊಸ್ತಿಲು ಪೂಜೆ ಮಾಡುತ್ತಿದ್ದದ್ದು. ಒಲೆಗಳೂ,ಬೂದಿಯೂ ಕಾಣದಿರುವ ಈ ದಿನಗಳಲ್ಲಿ, ಅಡುಗೆ ಮನೆ ತನ್ನ ಸಂಭ್ರಮವನ್ನಂತೂ ನಮ್ಮ ಹೆಣ್ಣುಮಕ್ಕಳ ಮುಖಾಂತರ ಉಳಿಸಿಕೊಂಡು ಬಂದಿರುವುದು ಸಂತೋಷವೇ.

    ನಳ ಪಾಕ, ಬಾಣಸಿಗ, ಅಡುಗೆ ಭಟ್ಟ ಅಂತ ಪುರುಷ ಪ್ರಧಾನ ಶಬ್ದಗಳನ್ನು ಹೊಂದಿದ್ದರೂ ನಮ್ಮ ಅಡುಗೆ ಮನೆಗಳಿಗೆ ನಮ್ಮ ಅನ್ನಪೂರ್ಣೇಶ್ವರಿಯರೇ ಭೂಷಣ.ಕರೋನಾದಂತಹ ಮಹಾ ಮಾರಿಗೂ  ನಮ್ಮ ಅಡುಗೆ ಮನೆ ಡಬ್ಬಗಳಲ್ಲಿ ರಾಮ ಬಾಣಗಳು ಅಡಗಿರುವ ಅಂಶ ,ಮತ್ತೊಮ್ಮೆ ನಮ್ಮ ಅಡುಗೆ ಮನೆಗಳು ಔಷಧ ಕೇಂದ್ರಗಳು ಅಂತ ಸಾಬೀತು ಮಾಡಿವೆ.

    ಕಿರಣ್ ಮಾಡಾಳು

    ಇಲ್ಲಿ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

    ಜನ್ಮಾಷ್ಟಮಿ: ಇಸ್ಕಾನ್ ನಿಂದ ಲೈವ್ ಪ್ರಸಾರ

    ಬೆಂಗಳೂರಿನ ಇಸ್ಕಾನ್ ನಲ್ಲಿ ಸ್ವಾಗತಂ ಕೃಷ್ಣ ಹೆಸರಿನಲ್ಲಿ ಭಗವಂತನ ಆರಾಧನೆ ನಡೆಯುತ್ತಿದೆ. ಈ ಬಾರಿ ಎಲ್ಲವೂ ಡಿಜಿಟಲ್. ಅದರ ನೇರ ಪ್ರಸಾರ ಇಲ್ಲಿದೆ. ವೀಕ್ಷಿಸಿ ನೀವು ಕೃಷ್ಣಾಷ್ಟಮಿ ಸಡಗರದಲ್ಲಿ ಭಾಗಿಯಾಗಿ.

    ಸ್ವಾಗತಂ ಕೃಷ್ಣ: ಇಸ್ಕಾನ್ ನಿಂದ ಲೈವ್ ಪ್ರಸಾರ

    ಬೆಂಗಳೂರಿನ ಇಸ್ಕಾನ್ ನಲ್ಲಿ ಸ್ವಾಗತಂ ಕೃಷ್ಣ ಹೆಸರಿನಲ್ಲಿ ಭಗವಂತನ ಆರಾಧನೆ ನಡೆಯುತ್ತಿದೆ. ಈ ಬಾರಿ ಎಲ್ಲವೂ ಡಿಜಿಟಲ್. ಅದರ ನೇರ ಪ್ರಸಾರ ಇಲ್ಲಿದೆ. ವೀಕ್ಷಿಸಿ ನೀವು ಕೃಷ್ಣಾಷ್ಟಮಿ ಸಡಗರದಲ್ಲಿ ಭಾಗಿಯಾಗಿ.

    ಆಡ ಪೋಗೋಣ ಬಾರೋ ರಂಗ

    ಇಂದು ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರ. ಕೋವಿಡ್ ಕಾರಣದಿಂದ ಈ ಬಾರಿ ಮನೆಯಿಂದಲೆೇ ಜನ್ಮಾಷ್ಟಮಿ ಆಚರಿಸಬೇಕಾದ ಅನಿವಾರ್ಯತೆ.ಆದರೆ ಹಬ್ಬದ ಸಡಗರಕ್ಕೆ ಮನೆಯಾದರೇನು ಮಂದಿರವಾದರೇನು . ಎಲ್ಲಿ ನಿನ್ನ ಭಕ್ತರೋ ಅಲ್ಲೇ ದೇವಾಲಯ.

    ನಮ್ಮ ಕೃಷ್ಣ ಮಕ್ಕಳ ಪ್ರೀತಿಯ ದೇವರು. ಬಾಲ್ಯದಲ್ಲಿ ಎಲ್ಲರೂ ಒಮ್ಮೆಯಾದರು ಕೃಷ್ಣ ರಾಧೆಯಾಗಿ ಶಾಲೆಯ ಕಾರ್ಯಕ್ರಮದಲ್ಲಿ ನಲಿದವರೆ. ಇನ್ನೂ ಶ್ರೀಕೃಷ್ಣನ ಬಾಲ ಲೀಲೆಗಳನ್ನು ಮಕ್ಕಳ ಬಾಯಿಂದ ಕೇಳಿದರಂತೂ ಅದರ ಸೊಗಸೆ ಬೇರೆ. ಹೀಗಾಗಿ ನಮ್ಮಈ ಪಾಡ್ಕಾಸ್ಟ್ ನಲ್ಲಿ ಮಕ್ಕಳ ಕಲರವವನ್ನು ಕೇಳಿಸುತ್ತಿದ್ದೇವೆ. ಅವರ ತೊದಲ ನುಡಿಗಳಲ್ಲಿ ಶ್ರೀಕೃಷ್ಣ ಲೀಲಾಮೃತವನ್ನು ಕೇಳಿ ಆನಂದಿಸಿ.

    ಏಳು ವರ್ಷದ ರಾಮಪ್ರಿಯ ನ ಕೃಷ್ಣಾಷ್ಟಕಂ ನಿಂದ ಆರಂಭವಾದ ಈ ಪಾಡ್ಕಾಸ್ಟ್ ನಲ್ಲಿ ಮುಂದೆ ನಾಲ್ಕು ವರ್ಷದ ಮಿಹಿರಾ ಜಯ ಜನಾರ್ದನ ಎಂದು ಕೃಷ್ಣನ ಗುಣಗಾನ ಮಾಡಿದ್ದಾಳೆ.ಮುಂದೆ ರಾಧೆ ಗೋವಿಂದ ಎನ್ನುವ ಮೂಲಕ ಎಂಟು ವರ್ಷದ ಶ್ರೀಯಾ ರಾಧಾ ಕೃಷ್ಣರ ಪ್ರೀತಿಯನ್ನು ಭಕ್ತಿ ತುಂಬಿ ಹಾಡಿದ್ದಾಳೆ. ದೂರದ ಅಮೆರಿಕಾದಿಂದ ದನಿಗೂಡಿಸಿರುವ ಐದು ವರ್ಷದ ಶ್ರೀಯಶ್ ಅಚ್ಯುತಂ ಕೇಶವಂ ಎಂದು ಅಲ್ಲಿನ ಶೈಲಿಯಲ್ಲೇ ಕೃಷ್ಣನನ್ನು ಪಠಿಸುತ್ತಾನೆ. ಆಡ ಪೋಗೋಣ ಬಾರೋ ರಂಗ ಎಂದು ಸಿಂಗಾಪುರದಿಂದ ಕೃಷ್ಣನನ್ನುಆಟಕ್ಕೆ ಕರೆದಿದ್ದಾಳೆ ಮೂರು ವರ್ಷದ ಸಾನ್ವಿ. ಮುಂದೆ ಒಂಭತ್ತು ವರ್ಷದ ನಿತ್ಯಶ್ರೀ ಕಾಳಿಂಗ ಮರ್ಧನದ ಕಥೆ ಹೇಳಿದ್ದಾಳೆ. ಎಲ್ಲಾಡಿ ಬಂದೆ ಎಂದು ಕೃಷ್ಣನನ್ನು ಕೇಳಿದ್ದಾಳೆ ಹತ್ತು ವರುಷದ ಮಾನ್ಯಾ. ನನ್ನನ್ನು ಎತ್ತಿಕೊಳ್ಳಮ್ಮಎಂದು ಯಶೋದೆಯನ್ನು ಕೇಳುತ್ತಾಳೆ ಮೈಸೂರಿನಿಂದ ಆರು ವರ್ಷದ ಅವನಿ. ಕೊನೆಯಲ್ಲಿ ಎಂಟು ವರ್ಷದ ಧನ್ಯಶ್ರೀ ಲಾಲಿ ಹಾಡಿದ್ದಾಳೆ. ಕಾರ್ಯಕ್ರಮದ ಮಧ್ಯದಲ್ಲೇ ಬರುವ ಕವಿ ಎಚ್. ಎಸ್ .ವಿ ಅವರ ಅಮ್ಮಾ ನಾನು ದೇವರಣೆ ಬೆಣ್ಣೆ ಕದ್ದಿಲ್ಲಮ್ಮ.. ಹಾಡಿದ್ದು ಪ್ರಿಯಾಂಕ. ನಿರೂಪಣೆ ಭಾರತಿ .

    ಆಲಿಸಿ, ಪ್ರತಿಕ್ರಿಯಿಸಿ.

    ಕೃಷ್ಣನೆಂದರೆ ‘ಪ್ರೀತಿ’ ರಾಧೆಗಷ್ಟೇ ಅಲ್ಲ

    ಭಗವಾನ್ ವಿಷ್ಣುವಿನ ಎಂಟನೇ ಅವತಾರ ಶ್ರೀಕೃಷ್ಣ ಪರಮಾತ್ಮ. ಧರ್ಮ ಸಂಸ್ಥಾಪನೆಗಾಗಿ ಜನ್ಮವೆತ್ತಿದ್ದು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು. ಶ್ರೀಕೃಷ್ಣ ಜನ್ಮಾಷ್ಟಮಿ ಹಿಂದೂ ಹಬ್ಬಗಳಲ್ಲಿ ಅತ್ಯಂತ ವಿಶಿಷ್ಟವಾದ ಹಬ್ಬ. ಕೃಷ್ಣನ ಜನ್ಮದಿನವನ್ನು ದೇಶಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಮಥುರಾ ಶ್ರೀಕೃಷ್ಣನ ಜನ್ಮಭೂಮಿ. ಇಲ್ಲಿ ಬಹಳ ಸಂಭ್ರಮದಿಂದ ಅಷ್ಟಮಿಯನ್ನು ಆಚರಿಸುತ್ತಾರೆ. ತನ್ನ ಬಾಲಲೀಲೆಗಳನ್ನು ತೋರಿದ ಬೃಂದಾವನದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಇರುತ್ತದೆ. ಅಷ್ಟೇ ಅಲ್ಲ ದೇಶದೆಲ್ಲೆಡೆ ಜನ್ಮಾಷ್ಟಮಿಯ ವಿಶೇಷ ಆಚರಣೆಗಳು  ಕಂಡು ಬರುತ್ತವೆ. ಎಲ್ಲವೂ ಅಂದುಕೊಂಡಂತೆ ಇರುತ್ತಿದ್ದಿದ್ದರೆ ಇಷ್ಟೊತ್ತಿಗಾಗಲೇ ಆಚರಣೆ ಕಳೆಗಟ್ಟುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಹಬ್ಬದ ಸಂಭ್ರಮ ಮನೆಮನ, ಆನ್‍ಲೈನ್ ಕಾರ್ಯಕ್ರಮಗಳಿಗಷ್ಟೇ ಸೀಮಿತಗೊಂಡಿದೆ. ಏನೇ ಇರಲಿ, ಭಗವಾನ್ ಶ್ರೀಕೃಷ್ಣನ ಬಾಲಲೀಲೆ, ಬದುಕು, ಸಂದೇಶಗಳು ಎಂದೆಂದಿಗೂ ಪ್ರಸ್ತುತವೇ.

    ಆಡಿಸಿದಳೆಶೋಧೆ…

    ಮುದ್ದು ಕೃಷ್ಣ, ಬಾಲಕೃಷ್ಣ, ಗೋಪಕೃಷ್ಣ ಎಂದೆಲ್ಲಾ ಕರೆಸಿಕೊಳ್ಳುವ ದೇವಕಿ ನಂದ ಶ್ರೀಕೃಷ್ಣ ಎಂದರೆ ಎಲ್ಲರಿಗೂ ಪ್ರೀತಿಯ ಭಾವ. ಹಾಗೆಯೇ ಶ್ರೀಕೃಷ್ಣನ ಬಾಲಲೀಲೆಗಳು ಇಂದಿಗೂ ಪ್ರಸ್ತುತ. ಜನ್ಮಾಷ್ಟಮಿಯಂದು ಮಕ್ಕಳು ಶ್ರೀಕೃಷ್ಣನ ವೇಷ ಹಾಕಿ ಸಂಭ್ರಮಿಸುವ ಪರಿ ಇದಕ್ಕೆ ಸಾಕ್ಷಿ. ಮನೆಯಲ್ಲಿ ತೊಟ್ಟಿಲಲ್ಲಿ ತೂಗುವ, ಇನ್ನೂ ಅಂಬೆಗಾಲಿಡುವ ಮುದ್ದುಮೊಗದ ಮಗುವಿಗೂ ನಂದಕಿಶೋರನ ವೇಷ ಹಾಕಿ, ತಾನೇ ಯಶೋಧೆಯಾಗಿ ತನ್ನ ಕಂದನನ್ನು ಮುದ್ದುಕೃಷ್ಣನನ್ನಾಗಿ ಕಾಣುವ ಸಂಭ್ರಮ ಎಲ್ಲ ಅಮ್ಮಂದಿರಿಗೆ. ಮಗುವಿದ್ದಾಗ ಒಮ್ಮೆಯಾದರೂ ತನ್ನ ಕಂದನಿಗೆ ಶ್ರೀಕೃಷ್ಣನ ವೇಷ ಹಾಕಿ ಸಂಭ್ರಮಿಸದೇ ಇರುವವರು ಸಿಗುವುದು ವಿರಳ.

    ಪ್ರೀತಿಯ ಕಣ್ಣುಭಗವಾನ್ ಶ್ರೀಕೃಷ್ಣ ಪ್ರೀತಿಯ ದ್ಯೋತಕವಾಗಿ ಕಾಣಿಸುತ್ತಾನೆ.  ಕೃಷ್ಣನಿಲ್ಲದೆ ರಾಧೆ ಅಪೂರ್ಣ, ರಾಧೆಯಿಲ್ಲದೆ ಕೃಷ್ಣ ಪೂರ್ಣವಾಗುವುದೆಂಟೇನೋ? ಎರಡು ದೇಹ ಒಂದೇ ಉಸಿರಿನಂತಿದ್ದವರು ಅವರು. ನಿಷ್ಕಲ್ಮಶ ಪ್ರೀತಿಯದು.ರುಕ್ಮಿಣಿ, ರಾಧೆ ಎಲ್ಲರೂ ಶ್ರೀಕೃಷ್ಣನ ಲೀಲೆಗೆ ಒಳಗಾದವರೇ. ಅವನೇ ನನ್ನ ಸರ್ವಸ್ವ ಎಂದು ಭಾವಿಸಿ ತನ್ನೊಳಗೊಬ್ಬ ಸಖನನ್ನು ಕಂಡವರೂ ಇದ್ದಾರೆ. ಶ್ರೀಕೃಷ್ಣನನ್ನೇ ಧ್ಯಾನಿಸಿ ಅಮರಳಾದ ರಾಜಕುವರಿ ಮೀರಾ ಇದಕ್ಕೊಂದು ನಿದರ್ಶನ.  ಆಕೆ ಕೃಷ್ಣನೆಡೆಗೆ ತೋರಿದ ಭಕ್ತಿಯ ಪ್ರೀತಿಯದು. ಅದು ದೇವಪ್ರೀತಿ. ಶ್ರೀಕೃಷ್ಣನಿಗೆ ಹದಿನಾರು ಸಾವಿರ ಮಡದಿಯರು ಎಂಬುದಾಗಿಯೂ ಪುರಾಣ ಕಥೆಗಳಿಂದ ತಿಳಿದು ಬರುತ್ತದೆ. ಶ್ರೀಕೃಷ್ಣನ ಕುರಿತಾದ ಕಥೆಗಳನ್ನು ಕೇಳಿದರೆ ಜಗದೋದ್ಧಾರ ಇಡೀ ಜಗತ್ತಿಗೇ ಪ್ರೀತಿಯ ದ್ಯೋತಕ ಎಂಬುದು ಅರಿವಾಗುತ್ತದೆ. ಹೆಚ್.ಎಸ್. ವೆಂಕಟೇಶ ಮೂರ್ತಿ ಅವರು ಬರೆದ ಈ ಹಾಡು ಪ್ರಸಿದ್ಧಿ. “ಲೋಕದ ಕಣ್ಣಿಗೆ ರಾಧೆಯು ಕೂಡಾ ಎಲ್ಲರಂತೆ ಒಂದು ಹೆಣ್ಣು, ನನಗೂ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು’.

    ಜಗತ್ತಿಗೆ ಸಾರಿದ ಸಂದೇಶ

    ಭಗವಾನ್ ಶ್ರೀಕೃಷ್ಣ ಹುಟ್ಟಿದ್ದು ದೇವಕಿ ಹಾಗೂ ವಾಸುದೇವನ ಕಂದನಾಗಿ, ಬೆಳೆದದ್ದು ಯಶೋಧೆಯ ಮಡಿಲಲ್ಲಿ. ಹೆತ್ತವರು, ಪೋಷಕರು, ಸ್ನೇಹಿತ, ಎಲ್ಲರೆಡೆಗೂ ವಿಶೇಷ ಗೌರವ ಆದರಗಳನ್ನು ಹೊಂದಿದ್ದ ಶ್ರೀಕೃಷ್ಣ ದೈವತ್ವಕ್ಕೇರಿದ್ದು ತನ್ನ ಗುಣಗಳಿಂದಲೇ. ತನ್ನ ಹೆತ್ತವರು, ಪೋಷಕರೆಡೆಗೂ ತನ್ನ ಕರ್ತವ್ಯಗಳನ್ನು ಮಾಡುವ ಮೂಲಕ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ. ಎಂದಿಗೂ ಫಲದ ನಿರೀಕ್ಷೆ ಹೊಂದಿರಲಿಲ್ಲ. ಭಗವದ್ಗೀತೆಯಲ್ಲಿ ಹೇಳಿದಂತೆ “ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶು ಕದಾಚನ, ಮಾ ಕರ್ಮಫಲ ಹೇತುರ್ಭೂಮಾ ತೇ ಸಂಗೋಸ್ತ್ವ ಕರ್ಮಣಿ// ಫಲದ ಚಿಂತೆ ಬಿಟ್ಟು ನಿನ್ನ ಕರ್ತವ್ಯವನ್ನು ಮನಸ್ಸಿಟ್ಟು ಮಾಡು. ಕರ್ತವ್ಯವನ್ನು ಮಾಡದೆ ತಪ್ಪಿಸಿಕೊಳ್ಳುವ ವಿಚಾರ ನಿನ್ನಲ್ಲಿ ಮೂಡದಿರಲಿ ಎಂದು.

    ಶ್ರೀಕೃಷ್ಣ ಎಂದಿಗೂ ಪ್ರೀತಿ ಮತ್ತು ನ್ಯಾಯದ ಪರವಾಗಿದ್ದ. ಹಾಗಾಗಿಯೇ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರ ವಹಿಸುತ್ತಾನೆ. ಧರ್ಮ ಸಂಸ್ಥಾಪನೆಗಾಗಿ ತನ್ನವರ ವಿರುದ್ಧವೇ ಹೋರಾಟ ನಡೆಸುತ್ತಾನೆ. ಇದರರ್ಥ ಮನುಷ್ಯ ತನ್ನವರೆಂಬ ಬಂಧಗಳನ್ನು ಕಳಚಿಕೊಂಡು ಕಾಲದೊಂದಿಗೆ ಹೆಜ್ಜೆಹಾಕಬೇಕು.ಈ ಕ್ಷಣದಲ್ಲಿ ಬದುಕುವುದು ಎಷ್ಟು ಮುಖ್ಯ ಎಂಬುದನ್ನು ಸಾರಿದ್ದಾನೆ. ಈ ಕ್ಷಣ ಅನ್ನುವುದು ನಿನ್ನದು, ಹಿಂದೆ ಕಳೆದ ಹೋದ ಸಮಯ ಮತ್ತೆಂದೂ ಬಾರದು. ಕಳೆದುಹೋದುದರ ಬಗ್ಗೆ ಚಿಂತಿಸುವುದು ಅನಗತ್ಯ. ನಿನ್ನೆ ಎಂಬುದು ಇಂದು ಇಲ್ಲ, ನಾಳೆ ಏನಿರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ, ಹಾಗಾಗಿ ಈ ಕ್ಷಣಕ್ಕೆ ಮಹತ್ವ ನೀಡಬೇಕು ಎಂದು.

    ಭಗವಾನ್ ಶ್ರೀಕೃಷ್ಣನ ಪ್ರಸಿದ್ಧ ಸಂದೇಶಗಳಲ್ಲಿ ಒಂದು  ‘ಬದಲಾವಣೆ ಜಗದ ನಿಯಮ’. ಆದುದೆಲ್ಲಾ ಒಳ್ಳೆಯದಕ್ಕಾಗಿ, ಆಗುವುದೆಲ್ಲವೂ ಒಳ್ಳೆಯದಕ್ಕಾಗಿ. ಕಳೆದುಕೊಂಡುದುದರ ಬಗ್ಗೆ ದುಃಖಿಸಲು ನೀನು ಪಡೆದುಕೊಂಡು ಬಂದುದಾದರೂ ಏನನ್ನು. ಏನೇ ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ, ಇಂದು ನಿನ್ನಲ್ಲಿರುವುದು ನಿನ್ನೆ ಮತ್ಯಾರದೋ ಆಗಿತ್ತು, ನಾಳೆ ಇನ್ಯಾರದ್ದೋ ಆಗಲಿದೆ. ಹೀಗೆ ಭಗವಾನ್ ಶ್ರೀಕೃಷ್ಣ ಮನುಕುಲಕ್ಕೆ ಸಾರಿದ ಸಂದೇಶಗಳು ಅನೇಕ. ಅದರಂತೆ ನಡೆದರೆ ಬಾಳು ಬಹುತೇಕ ಸುಂದರ.ಭಗವಾನ್ ಶ್ರೀಕೃಷ್ಣ ಇಡೀ ವಿಶ್ವಕ್ಕೆ ಸಾರಿದ ಸಂದೇಶ ನಂಬಿಕೆ ಇರುವವರಿಗೆ ದಾರಿದೀಪದಂತೆ ತೋರುತ್ತಿದೆ, ಕಾಲಕಾಲಕ್ಕೆ ಮನುಕುಲಕ್ಕೆ ಎಚ್ಚರಿಕೆಯನ್ನೂ ನೀಡುತ್ತಿದೆ.

    ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.

    ಪರೀಕ್ಷಾ ಫಲಿತಾಂಶ; ಅನುತ್ತೀರ್ಣತೆ ಶಾಪವಲ್ಲ ಸಾಧನೆಗೆ ರಹದಾರಿ…

    ಇದೀಗ ಅಷ್ಟೇ  ಎಸ್.ಎಸ್.ಎಲ್.ಸಿ.  ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ.  ಉತ್ತೀರ್ಣರಾದ, ಅದರಲ್ಲೂ ಡಿಸ್ಟಿಂಕ್ಷನ್, ಪ್ರಥಮ ದರ್ಜೆಯಲ್ಲಿ  ಉತ್ತೀರ್ಣರಾದ   ವಿದ್ಯಾರ್ಥಿಗಳು   ಮತ್ತು ಅವರ ಹೆತ್ತವರು   ಸಂಭ್ರಮದಲ್ಲಿದ್ದರೆ,  ಅನುತ್ತೀರ್ಣರಾದ ಮಕ್ಕಳು ಮನೆಯಲ್ಲಿ ತಮ್ಮ ಅಪ್ಪ ಅಮ್ಮನ ಹತ್ತಿರ  ‘ಅವನನ್ನು  ನೋಡು ಅಷ್ಟು   ತೆಗೆದಿದ್ದಾನೆ, ಇವಳು  ನೋಡು ಇಷ್ಟು ತೆಗೆದಿದ್ದಾಳೆ,  ನೀನು ಇದ್ದೀಯಾ….”  ಅಂತ ಬೈಗುಳ ಕೇಳುತ್ತಾ  ಹ್ಯಾಪು ಮೊರೆ ಹಾಕಿಕೊಂಡು ಕುಳಿತಿರಬಹುದು. ‘ತಾನು ಫೇಲ್ ಆದೇ’ ಅಂತ  ದುಖ:ದುಮ್ಮಾನದಲ್ಲಿ    ಕುಳಿತಿರುವ ವಿದ್ಯಾರ್ಥಿಗಳು   ಹಾಗೂ   ತಮ್ಮ  ಮಗ / ಮಗಳು ಫೇಲ್ ಎಂದು ಬೇಜಾರು   ಕೋಪದಲ್ಲಿ  ಬುಸುಬುಸು ಅನ್ನುತ್ತಿರುವ   ತಂದೆ ತಾಯಿಗಳು  ಕೆಲವು  ಮಹಾನ್ ಸಾಧಕರ ಬಗ್ಗೆ  ತಿಳಿಯಲೇ ಬೇಕು.

    ಸರ್ ಜಾನ್ ಬಿ. ಗುರ್ಡಾನ್, ಆರ್. ಕೆ. ನಾರಾಯಣ್ ಮತ್ತು ಶ್ರೀನಿವಾಸ ರಾಮಾನುಜನ್

    ಇಲ್ಲಿ ನೀಡಿರುವ ಮೊದಲ ವ್ಯಕ್ತಿಯ ಛಾಯಚಿತ್ರವನ್ನು ನೋಡಿ. ಮಂದಹಾಸ  ಬೀರುತ್ತಿರುವ ಈ ವ್ಯಕ್ತಿ  ಬೇರೆ  ಯಾರೂ  ಅಲ್ಲ. ೨೦೧೨ ರಲ್ಲಿ ಜೀವ-ವೈದ್ಯಕೀಯ ಕ್ಷೇತ್ರದಲ್ಲಿ  ನೊಬೆಲ್   ಪಾರಿತೋಷಕ ಪಡೆದ ವಿಜ್ಞಾನಿ ಸರ್ ಜಾನ್ ಬಿ. ಗುರ್ಡಾನ್. ಕಾಂಡಕೋಶ (ಸ್ಟೆಮ್ ಸೆಲ್) ಮತ್ತು ತದ್ರೂಪಿ  ಸೃಷ್ಟಿ   (ಕ್ಲೋನಿಂಗ್)  ಮೇಲೆ ನಡೆಸಿದ  ಉನ್ನತ (ಪ್ರಬುದ್ಧ ಕೋಶಗಳನ್ನು ಕಾಂಡಕೋಶಗಳಾಗಿ ಪರಿವರ್ತನೆ) ಸಂಶೋಧನೆಗಾಗಿ  ಶಿನ್ಯಾ ಯಮನಕ ಎಂಬ ಇನ್ನೊಬ್ಬ  ವಿಜ್ಞಾನಿಯೊಂದಿಗೆ ಜಗತ್ತಿನ ಅತ್ಯುನ್ನತ  ಪ್ರಶಸ್ತಿಯಾದ ನೊಬೆಲ್ ಪಾರಿತೋಷಕವನ್ನು ಗಳಿಸಿರುವ  ಒಬ್ಬ ಶ್ರೇಷ್ಠ ವಿಜ್ಞಾನಿ.   ಅಷ್ಟು ಮಾತ್ರವಲ್ಲದೇ,  ವಿಲಿಯಂ ಬೇಟ್ ಹಾರ್ಡಿ ಪ್ರಶಸ್ತಿ (1984), ರಾಯಲ್ ಮೆಡಲ್ (1985), ಜೀವಶಾಸ್ತ್ರಕ್ಕಾಗಿ ಅಂತರರಾಷ್ಟ್ರೀಯ ಪ್ರಶಸ್ತಿ (1987) ಮೆಡಿಸಿನ್ ವುಲ್ಫ್ ಪ್ರಶಸ್ತಿ (1989) ಎಡ್ವಿನ್ ಗ್ರಾಂಟ್ ಕಾಂಕ್ಲಿನ್ ಪದಕ (2001), ಆಲ್ಬರ್ಟ್ ಲಾಸ್ಕರ್ ಮೂಲ ವೈದ್ಯಕೀಯ ಸಂಶೋಧನಾ ಪ್ರಶಸ್ತಿ (2009), ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ತನ್ನ   ಮುಡಿಗೇರಿಸಿಕೊಂಡಿದ್ದರು. ಇಂತಹ ಶ್ರೇಷ್ಠ ಸಾಧನೆ ಮಾಡಿರುವ ಸರ್ ಜಾನ್ ಬಿ. ಗುರ್ಡಾನ್ ಅವರು ಕೂಡ ಅನುತ್ತೀರ್ಣರಾಗಿದ್ದರು.

    ಎಡ್ಜ್ಬರೋದಲ್ಲಿರುವ  ಎಟನ್ ಕಾಲೇಜಿನಲ್ಲಿ ಓದುತ್ತಿರುವಾಗ   ಅಂಕ ಗಳಿಕೆಯಲ್ಲಿ ಇವರೇ ಕೊನೆಯವರಾಗಿದ್ದರು.   ಅವರ ಅಧ್ಯಾಪಕರೊಬ್ಬರು  “ಈತ ವಿಜ್ಞಾನಿ ಆಗಬೇಕೆಂಬ ಕನಸು ಕಾಣುತ್ತಿದ್ದಾನೆ,  ಆದರೆ ಇವನು ತೆಗೆದಿರುವ ಅಂಕಗಳನ್ನು ನೋಡಿದರೆ ಹಾಸ್ಯಾಸ್ಪದವಾಗಿದೆ”   ಎಂಬ ವರದಿಯನ್ನು ಬರೆದಿದ್ದರು.  ಅಂಕ ಗಳಿಕೆಯಲ್ಲಿ   ಕಟ್ಟಕಡೆಯ ವಿದ್ಯಾರ್ಥಿಯಾಗಿದ್ದು ಹಾಸ್ಯಾಸ್ಪದಕ್ಕೆ ಒಳಗಾಗಿದ್ದ ಹುಡುಗನೊಬ್ಬ ಭವಿಷ್ಯದಲ್ಲಿ ನೊಬೆಲ್  ಪಾರಿತೋಷಕ ಪಡೆಯುವಂತಹ ಸಾಧನೆ ಮಾಡುತ್ತಾನೆಂದು ಯಾರೂ  ಊಹಿಸಿರಲಿಲ್ಲ.

    ಶ್ರೀನಿವಾಸ ರಾಮಾನುಜನ್ ಹೆಸರು ಕೇಳದವರಿಲ್ಲ.  ಗಣಿತದಲ್ಲಿ ಇವರು ಮಾಡಿದ ಸಾಧನೆ ಅಸಾಮಾನ್ಯ.  ಆದರೆ, ಶಾಲೆಯಲ್ಲಿ ಗಣಿತ ವಿಷಯ ಬಿಟ್ಟು ಬೇರೆ ವಿಷಯಗಳಲ್ಲಿ ನಪಾಸಾಗಿದ್ದರು.  ವಿದ್ಯಾರ್ಥಿವೇತನಕ್ಕಾಗಿ   ಎರಡು ಸಲ  ‘ಫೆಲೋ ಆಫ್  ಆರ್ಟ್ಸ್’ ಪರೀಕ್ಷೆಗೆ  ಕುಳಿತುಕೊಂಡರೂ    ಅನುತ್ತೀರ್ಣರಾಗಿದ್ದರು.  ಆದರೆ, ಅದೇ ವ್ಯಕ್ತಿ ಮುಂದೆ ಜಗತ್ತನ್ನೇ ಬೆರಗುಗೊಳಿಸುವ ಒಬ್ಬ ಶ್ರೇಷ್ಠ ಗಣಿತಜ್ಞರಾದರು. ಅವರು ಅಂದು   ಕಂಡುಹಿಡಿದ ಗಣಿತದ ಪ್ರಮೇಯ, ಸೂತ್ರಗಳು ಇಂದಿಗೂ  ವಿಶ್ವದ  ಎಲ್ಲಾ ಕಾಲೇಜು,  ವಿಶ್ವವಿದ್ಯಾನಿಲಯಗಳಲ್ಲೂ ಅಧ್ಯಯನ  ಮಾಡಲಾಗುತ್ತದೆ. ಬದುಕಿರುವ  ಕೇವಲ ೩೩ ವರ್ಷಗಳಲ್ಲಿ ಗಣಿತ ಕ್ಷೇತ್ರದಲ್ಲಿ  ಶ್ರೀನಿವಾಸ ರಾಮಾನುಜನ್ ನೀಡಿರುವ   ಕೊಡುಗೆ ಜಗತ್ತಿನಲ್ಲಿ ಇಂದಿಗೂ ವಿಸ್ಮಯ.

    ಮಾಲ್ಗುಡಿ ಡೇಸ್ ಹೆಸರು ಕೇಳಿದ ತಕ್ಷಣ ಇಬ್ಬರು ಮಹಾನ್ ವ್ಯಕ್ತಿಗಳ ಹೆಸರು ಮನದಲ್ಲಿ ಮೂಡುತ್ತದೆ.  ನಟ, ನಿರ್ದೇಶಕ  ಶಂಕರನಾಗ್ ಮತ್ತು ಮಾಲ್ಗುಡಿ  ಎಂಬ  ಕಾಲ್ಪನಿಕ ಪಟ್ಟಣದ   ಸೃಷ್ಟಿಕರ್ತ  ಆರ್. ಕೆ. ನಾರಾಯಣ್. ತಮ್ಮ ಅದ್ಭುತ ಸಾಹಿತ್ಯ ಕೃತಿಗಳ ಮೂಲಕ  ಪದ್ಮವಿಭೂಷಣ, ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಬೆನ್ಸನ್ ಪದಕ, ಅತ್ಯುತ್ತಮ ಕಥೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ,  ಲೀಡ್ಸ್ ವಿಶ್ವವಿದ್ಯಾಲಯ,  ದೆಹಲಿ ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್,   ಹೀಗೆ ಹತ್ತಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ  ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದ  ಆರ್. ಕೆ. ನಾರಾಯಣ್ ಅವರು ಕೂಡ ವಿದ್ಯಾರ್ಥಿ ಜೀವನದಲ್ಲಿ ವೈಫಲ್ಯವನ್ನು  ಅನುಭವಿಸಿ ಉತ್ತುಂಗಕ್ಕೆ ಏರಿದವರು.

      
    
    ಪ್ರೌಢ ಶಾಲಾ ವ್ಯಾಸಂಗವನ್ನು    ಮುಗಿಸಿದ ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ  ಶಿಕ್ಷಣವನ್ನು ಮುಂದುವರಿಸಲು   ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು.    ಒಂದು ವರ್ಷ ಮನೆಯಲ್ಲೇ  ಕುಳಿತು ಓದಿ   ಪರೀಕ್ಷೆಯಲ್ಲಿ ಉತ್ತೀರ್ಣರಾಗಿ  ವ್ಯಾಸಂಗವನ್ನು ಮುಂದುವರಿಸಿದರು. ಮೂರು   ವರ್ಷದ ಪದವಿ ವ್ಯಾಸಂಗವನ್ನು ಮುಗಿಸಲು ನಾಲ್ಕು ವರ್ಷ ತೆಗೆದುಕೊಂಡರು. ವಿದ್ಯಾರ್ಥಿ ಜೀವನದಲ್ಲಿ   ಇಂಗ್ಲೀಷ್  ಭಾಷಾ ವಿಷಯದಲ್ಲಿ ಅನುತ್ತೀರ್ಣರಾಗಿ ಮುಂದೆ  ಆದೇ  ಭಾಷೆಯಲ್ಲಿ  ಅಪೂರ್ವವಾದ ಸಾಹಿತ್ಯ ಕೃತಿಗಳನ್ನು  ರಚಿಸಿ ಜಗದ್ವಿಖ್ಯಾತರಾದರು.  ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಗೂ ಸಹ  ಹಲವು ಬಾರಿ ಅವರ ಹೆಸರು ನಾಮನಿರ್ದೇಶನಗೊಂಡಿತ್ತು.  

    ಇವುಗಳು ಮಹಾಸಾಧಕರ  ಕೆಲವು ಉದಾಹರಣೆಗಳಷ್ಟೇ.  ತಮ್ಮ ವಿದ್ಯಾರ್ಥಿ ಜೀವನದಲ್ಲಿ   ಅನುತ್ತೀರ್ಣರಾಗಿ  ಭವಿಷ್ಯದಲ್ಲಿ  ಅಪ್ರತಿಮ  ಸಾಧನೆ ಮಾಡಿರುವ, ಮಾಡುತ್ತಿರುವ ಎಷ್ಟೋ ಸಾಧಕರು ಜಗತ್ತಿನಾದ್ಯಂತ  ಇದ್ದಾರೆ; ವಿಶ್ವ ಪ್ರಸಿದ್ಧ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್, ಮಹಾನ್ ಸಂಶೋಧಕ    ಥಾಮಸ್ ಅಲ್ವಾ ಎಡಿಸನ್,  ಹೈಸ್ಕೂಲ್ ಶಿಕ್ಷಣವನ್ನು ಪೂರೈಸದ   ರೈಟ್ ಸಹೋದರರು, ಮೈಕ್ರೋಸಾಫ್ಟ್ ಕಾರ್ಪೊರೇಶನ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಆಪಲ್ ಇಂಕ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್,  ಫೇಸ್ಬುಕ್   ಸಹ-ಸಂಸ್ಥಾಪಕ  ಮಾರ್ಕ್ ಜುಕರ್ಬರ್ಗ್,     ಡೆಲ್ ಟೆಕ್ನಾಲಜೀಸ್ ಸಂಸ್ಥಾಪಕ  ಮೈಕೆಲ್ ಡೆಲ್, ವಿಶ್ವ ಹವ್ಯಾಸಿ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್,  ಕ್ರಿಕೆಟ್ ತಂಡದ ನಾಯಕನಾಗಿ  ಭಾರತಕ್ಕೆ ಮೊದಲ  ವಿಶ್ವಕಪ್ ಗೆದ್ದುಕೊಟ್ಟ  ಕಪಿಲ್ ದೇವ್, ವಿಪ್ರೋ ಲಿಮಿಟೆಡ್  ಅಧ್ಯಕ್ಷ ಅಜೀಮ್ ಪ್ರೇಮ್ ಜಿ,  ಇನ್ನೂ ಅನೇಕರು ತಮ್ಮ ವೈಫಲ್ಯವನ್ನೇ  ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತುಂಗಕ್ಕೇರಿದವರು. ತಮ್ಮ ಶಾಲಾ ಕಾಲೇಜು ವ್ಯಾಸಂಗದ  ಸಮಯದಲ್ಲಿ ಅನುತ್ತೀರ್ಣರಾದರೂ  ಮುಂದೆ ಐಎಎಸ್ ಅಧಿಕಾರಿಗಳು, ವಿಜ್ಞಾನಿಗಳು, ಎಂಜಿನಿಯರ್‌ಗಳು, ವೈದ್ಯರು, ಉದ್ಯಮಿಗಳು,  ನ್ಯಾಯವಾದಿಗಳು, ಮಂತ್ರಿಗಳಾದ ಅನೇಕ ವ್ಯಕ್ತಿಗಳು  ನಮ್ಮ ನಡುವೆ ಇದ್ದಾರೆ.

    ಆದ್ದರಿಂದ,  ಯಾವ ವಿದ್ಯಾರ್ಥಿಯೂ   ಪರೀಕ್ಷೆಯಲ್ಲಿ ಅನುತ್ತೀರ್ಣನಾದಾಗ,   ಅದನ್ನು  ಹಿನ್ನಡೆ ಅಥವಾ ಅವಮಾನ ಎಂದು ಪರಿಗಣಿಸಬಾರದು. 1940 ರಿಂದ 1945 ರಲ್ಲಿ ಯುನೈಟೆಡ್ ಕಿಂಗ್ಡಮ್ ನ ಪ್ರಧಾನಿ  ಆಗಿದ್ದ   ಸರ್ ವಿನ್ಸ್ಟನ್ ಚರ್ಚಿಲ್ ಅವರು ಹೇಳಿರುವ   “ಯಶಸ್ಸು ಅಂತಿಮವಲ್ಲ, ವೈಫಲ್ಯವು ಮಾರಕವಲ್ಲ: ಸಾಧನೆಯ ಮೆಟ್ಟಿಲನ್ನು ಏರಲು   ಧೈರ್ಯ ಇದು”  ಎಂಬ ಮಾತು ವಿದ್ಯಾರ್ಥಿಗಳಿಗೆ  ಸ್ಥೈರ್ಯ ತುಂಬುವಂಥದ್ದು.  “ವೈಫಲ್ಯಗಳು ಜೀವನದ ಒಂದು ಭಾಗ. ವಿಫಲರಾಗದಿದ್ದರೆ ನೀವು ಕಲಿಯುವುದಿಲ್ಲ. ನೀವು ಕಲಿಯದಿದ್ದರೆ ಎಂದಿಗೂ ಯಶಸ್ವಿಯಾಗಲು  ಸಾಧ್ಯವಿಲ್ಲ” ಗೌತಮ ಬುದ್ಧ ಅಂದು ಹೇಳಿದ  ಮಾತು  ಇಂದಿಗೂ ಮಾರ್ಗದರ್ಶಿ.

    ಸಹಜವಾಗಿ, ಫೇಲ್  ಪದವು ನಿರಾಶಾದಾಯಕವಾಗಿದೆ. ಆದರೆ ಯಾವುದೇ ವಿದ್ಯಾರ್ಥಿಯು  ಅದರಿಂದ  ಧೃತಿಗೆಡಬಾರದು.  ಫಲಿತಾಂಶ ಪ್ರಕಟವಾದ ನಂತರ ಅನುತ್ತೀರ್ಣರಾದ  ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುವ  ಕಹಿ  ಘಟನೆಗಳು  ನಡೆಯುತ್ತಿವೆ.  ಕಳೆದ ತಿಂಗಳು   ಪಿ.ಯು.ಸಿ.   ಫಲಿತಾಂಶ ಪ್ರಕಟವಾದಾಗ  ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಕೆಲವು ವಿದ್ಯಾರ್ಥಿಗಳ ಪ್ರಬುದ್ಧತೆಯ ಮಟ್ಟ ಕಡಿಮೆ ಇದ್ದು  ಹೆಚ್ಚು ಭಾವನಾತ್ಮಕರಾಗಿರಬಹುದು. ಅಂತಹ  ಕೆಲವು  ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ  ವಿಫಲರಾದಾಗ     ದೊಡ್ಡ ಅವಮಾನವೆಂದು ಪರಿಗಣಿಸಿ   ಅಥವಾ  ಪೋಷಕರ ಭಯದಿಂದಾಗಿ  ಆತ್ಮಹತ್ಯೆಗೆ ಪ್ರಯತ್ನಿಸುವ ಸಾಧ್ಯತೆಗಳಿವೆ. ಫೇಲ್ ಅಥವಾ ಕಡಿಮೆ ಅಂಕ ಬಂದಿದೆ ಎಂದು ಧೈರ್ಯಗುಂದಿದ ವಿದ್ಯಾರ್ಥಿಗಳನ್ನು  ಪೋಷಕರು, ಬಂಧುಮಿತ್ರರು  ಹಾಗೂ  ಶಿಕ್ಷಕರು ಸಾಂತ್ವನದ ಮಾತುಗಳನ್ನಾಡಿ  ಅವರಲ್ಲಿ  ಆತ್ಮವಿಶ್ವಾಸವನ್ನು ತುಂಬುವುದು  ನೈತಿಕ ಕರ್ತವ್ಯವಾಗಿದೆ. ಉತ್ತಮ ಅಂಕದೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸುವುದರ ಜೊತೆಗೆ  ಕಡಿಮೆ ಅಂಕ ಪಡೆದಿರುವ ಅಥವಾ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂತೈಸುವುದು ಅಷ್ಟೇ ಮುಖ್ಯವಾದದ್ದು.

    ಎಷ್ಟೋ ತಂದೆ ತಾಯಂದಿರು ತಮ್ಮ ಮಕ್ಕಳ ನ್ಯೂನತೆ, ಆಸಕ್ತಿ, ಪ್ರತಿಭೆಯನ್ನು ಗುರುತಿಸದೆ ತಮ್ಮ ಕನಸಿನ ಮತ್ತು  ಪ್ರತಿಷ್ಠೆಯ  ಗೋಪುರವನ್ನು ಮಕ್ಕಳ ತಲೆಯ ಮೇಲೆ ಕಟ್ಟುತ್ತಾರೆ.  ಪರೀಕ್ಷೆ ಫಲಿತಾಂಶ ಹೊರಬಿದ್ದ ಸಂದರ್ಭದಲ್ಲಿ ಒಂದು ವೇಳೆ  ಆ ಗೋಪುರವು ಒಡೆದು ಹೋದರೆ, ಇದರ ಅರಿವಿರುವ ಮಕ್ಕಳು  ತಮ್ಮ ಪೋಷಕರನ್ನು ಎದುರಿಸುವ  ಧೈರ್ಯ ಸಾಲದೇ  ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಹುದು.

    ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಮಾತ್ರ ಬುದ್ಧಿವಂತರು, ಉಳಿದವರು ದಡ್ಡರು ಎಂದು ಎಲ್ಲಿಯೂ ಯಾವ ಪುರಾಣ, ಶಾಸನದಲ್ಲಿಯೂ ಬರೆದಿಲ್ಲ. ಅನುತ್ತೀರ್ಣರಾದಾಗ  ವಿದ್ಯಾರ್ಥಿಗಳು ನಿರಾಶೆಗೊಳ್ಳುವ ಬದಲು ಅದನ್ನೇ ಒಂದು ಸವಾಲಾಗಿ ತೆಗೆದುಕೊಂಡು  ಮುಂದಿನ ಅವಕಾಶಗಳಲ್ಲಿ   ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಾಧಿಸುವ ಸಂಕಲ್ಪ ಮಾಡಬೇಕು. ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಅವರನ್ನು ಹುರಿದುಂಬಿಸಬೇಕು.  ಜಗತ್ತು ವಿಶಾಲವಾಗಿದೆ,  ಪ್ರತಿಯೊಬ್ಬರಿಗೂ  ತಮ್ಮ  ಪ್ರತಿಭೆಯನ್ನು ಅನ್ವೇಷಿಸಲು ಮತ್ತು ಉತ್ಕೃಷ್ಟಗೊಳಿಸಲು ಅಪಾರ ಅವಕಾಶಗಳಿವೆ. 

    ಒಬ್ಬ ವ್ಯಕ್ತಿಯ ಬುದ್ಧಿಮತ್ತೆಯ ಪ್ರಮಾಣ (Intelligence Quotient; I.Q.) ಎಷ್ಟು ಮುಖ್ಯವೋ,  ಅಷ್ಟೇ ಅಥವಾ ಅದಕ್ಕಿಂತಲೂ ಪ್ರಾಮುಖ್ಯವಾದದ್ದು ಭಾವನಾತ್ಮಕ ಅಂಶ (Emotional Quotient; E.Q). ಜೀವನದ ಏನೇ ಎಡರು ತೊಡರುಗಳನ್ನು ಸ್ಥೈರ್ಯದಿಂದ  ನಿಭಾಯಿಸಲು ಮಕ್ಕಳ  ಭಾವನಾತ್ಮಕ ಅಂಶವನ್ನು  (E.Q.) ಹೆಚ್ಚಿಸುವುದು ಕೂಡ  ಮುಖ್ಯ.   ಈ ನಿಟ್ಟಿನಲ್ಲಿ, ಪೋಷಕರು, ಶಿಕ್ಷಕರು ಮತ್ತು ಸಮಾಜದ ಪಾತ್ರ ಬಹಳ ಮುಖ್ಯ. 

    ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಸಂಭ್ರಮದಲ್ಲಿರುವರು. ಅನುತ್ತೀರ್ಣರಾದವರೂ  ಸಂಭ್ರಮಿಸಿ, ‘ತಾನು ಫೇಲ್  ಆದೆ’ ಅಂತ ಅಲ್ಲ;  ‘ತನ್ನ ಪರಿಪೂರ್ಣತೆಯನ್ನು  ಹೆಚ್ಚಿಸಲು, ಒಳ್ಳೆಯ  ಅಂಕಗಳನ್ನು ಗಳಿಸಲು  ಇನ್ನೂ ಒಂದು ಅವಕಾಶವಿದೆ’ ಎಂಬ ಆತ್ಮವಿಶ್ವಾಸದೊಂದಿಗೆ.  ಯಾರಿಗೆ ಗೊತ್ತು..? ನಾಳೆ ನೀವು ಸಹ    ಸರ್ ಜಾನ್ ಬಿ. ಗುರ್ಡಾನ್, ಶ್ರೀನಿವಾಸ ರಾಮಾನುಜನ್, ಆರ್. ಕೆ. ನಾರಾಯಣ್  ಮುಂತಾದ ಮಹಾನ್  ಸಾಧಕರಂತೆ  ಜಗದ್ವಿಖ್ಯಾತರಾಗಬಹುದು.  ಇದೇನಿದ್ದರೂ ಸಮಯದ ವಿಷಯ. ಕಾಲಚಕ್ರದಲ್ಲಿ ಕೆಟ್ಟ ಸಮಯ ಉರುಳಿದಂತೆ ಒಳ್ಳೆಯ ಸಮಯ ಬಂದೇ ಬರುತ್ತದೆ.  ಆಲ್  ದಿ  ಬೆಸ್ಟ್

    Photo by Belle Co from Pexels

    ಕರೋನ ಜೊತೆಗಿನ ಜೀವನ, ವೈದ್ಯರು ಏನು ಹೇಳ್ತಾರೆ ಕೇಳೋಣ

    ಕೊರೋನಾದ ಜೊತೆಗೆ ಜೆೊತೆ ಜೊತೆಗೆ ಜೀವನ ನಡೆಸಬೇಕಾದುದು ಅನಿವಾರ್ಯವಾಗಿದೆ. ಇಂಥ ಸಮಯದಲ್ಲಿ ಜನರಲ್ಲಿ ಹಲವಾರು ಪ್ರಶ್ನೆಗಳು ಏಳುತ್ತಿವೆ. ಮಾಸ್ಕ್ ಹೇಗೆ ಧರಿಸಬೇಕು, ಎಂಥ ಮಾಸ್ಕ್ ಧರಿಸಬೇಕು, ಅದನ್ನು ಹೇಗೆ ವಾಷ್ ಮಾಡಬೇಕು ಎಂಬ ಪ್ರಶ್ನೆಗಳಿಂದ ಹಿಡಿದು ತರಕಾರಿಯನ್ನು ಹೇಗೆ ಶುಚಿ ಗೊಳಿಸಬೇಕು, ವೈರಸ್ ಗೂ ಬ್ಯಾಕ್ಟೀರಿಯಾಗೂ ವ್ಯತ್ಯಾಸ, ಲಸಿಕೆ ಯಾವಾಗ ಬರುತ್ತದೆ ಎಂಬ ಹಲವಾರು ಪ್ರಶ್ನೆಗಳು ಏಳುತ್ತವೆ.

    ಈ ಸಂದೇಹಗಳನ್ನು ದೂರ ಮಾಡಲು ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಅರಿವಿನ ಅಂಗಳ ಸಮೂಹ ಪ್ರಖ್ಯಾತ ವೈದ್ಯ ಡಾ. ಪ್ರಹ್ಲಾದರಾವ್ ಸಿ.ಜಿ ಅವರೊಂದಿಗೆ ಕರೋನ ಜೊತೆಗಿನ ಜೀವನ, ವೈದ್ಯರು ಏನು ಹೇಳ್ತಾರೆ ಕೇಳೋಣ ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು.

    ಈ ಕಾರ್ಯಕ್ರಮದಲ್ಲಿ ಡಾ. ಪ್ರಹ್ಲಾದರಾವ್ ಜನಸಾಮಾನ್ಯರಲ್ಲಿ ಹುಟ್ಟುವ ಅನೇಕ ಪ್ರಶ್ನೆಗಳಿಗೆ ಸರಳವಾಗಿ ಉತ್ತರ ನೀಡುವ ಮೂಲಕ ಕರೋನಾ ಬಗೆಗಿನ ಅನಗತ್ಯ ಭಯವನ್ನು ದೂರ ಮಾಡಿದರು. ಕಾಲೇಜಿನ ಡಾ. ಶಿಲ್ಪಾ ಆರ್ ಮತ್ತು ಎ ಪಿ ಕಾವ್ಯ ಅವರು ಕಾರ್ಯಕ್ರಮನ್ನು ನಡೆಸಿಕೊಟ್ಟರು.

    ಈ ಆಸಕ್ತಿದಾಯಕ ಕಾರ್ಯಕ್ರಮದ ವಿಡಿಯೋ ಇಲ್ಲಿದೆ. ಆಲಿಸಿ ಪ್ರತಿಕ್ರಿಯಿಸಿ. ಕರೋನಾ ಬಗ್ಗೆ ತಿಳಿದುಕೊಳ್ಳಿ.

    ವಿಮಾನ ಅಪಘಾತಕ್ಕೆ ಅಸಲಿ ಕಾರಣಗಳಾದರು ಏನು

    ಮೊನ್ನೆ ಶುಕ್ರವಾರ ರಾತ್ರಿ 9 ಗಂಟೆ. ದಿನದ ಆಗು ಹೋಗುಗಳನ್ನು ಅರಿಯಲು ಪ್ರೈಮ್ ಟೈಮ್ ನ್ಯೂಸ್ ನೋಡಲು ಕುಳಿತವರಿಗೊಂದು ಆಘಾತಕಾರಿ ಸುದ್ದಿ. ದುಬೈನಿಂದ ಬಂದು ಇನ್ನೇನು ಕೇರಳದ ಕೋಜಿಕ್ಕೋಡು ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ಇಂಡಿಯನ್ ಏರ್ ಲೈನ್ ಎಕ್ಸಪ್ರೆಸ್ ಗೆ ಸೇರಿದ ವಿಮಾನ ರನ್ ವೇ ನಲ್ಲಿ ನೆಲಕ್ಕಪ್ಪಳಿಸಿ ಎರಡು ಹೋಳಾಯಿತು.ಪೈಲಟ್ ಸೇರಿ ಹಲವು ಪ್ರಯಾಣಿಕರು ಮೃತಪಟ್ಟರು. ವಿಮಾನ ಕೆಳಗೆ ಬಿದ್ದಾಗ ಬೆಂಕಿ ಹೊತ್ತದ ಕಾರಣ ಅನೇಕರ ಜೀವ ಉಳಿಯಿತು.

    ಆಗಸಕ್ಕೆ ಹಾರಿದ ಕ್ಷಣದಿಂದ ಇಳಿಯುವರೆಗೆ ರಾಡರ್ ನ ಕಣ್ಗಾವನಲ್ಲೇ ಇರುವ ವಿಮಾನಗಳು ಅಪಘಾತಕ್ಕೆ ಈಡಾದಾಗ ಜನಮಾನಸದಲ್ಲಿ ಹೆಚ್ಚಿನ ಆತಂಕ. ಬಸ್ಸು , ರೇಲು ಅಫಘಾತಗಳಿಗಿಂತ ಹೆಚ್ಚಾಗಿ ವಿಮಾನ ಅಪಘಾತದ ಸುದ್ದಿ ವಿಮಾನದಲ್ಲಿ ಒಂದು ಬಾರಿಯೂ ಪ್ರಯಾಣಿಸದವರಿಗೂ ಆತಂಕ ತರುವ ಸಮಾಚಾರವಾಗುತ್ತದೆ. ಹಲವಾರು ಪರೀಕ್ಷೆಗೆ ಒಳಗಾಗಿ, ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡುರೂ ವಿಮಾನಗಳು ಅಪಘಾತಕ್ಕೆ ಈಡಾಗವುದಾದರು ಏಕೆ- ಇದು ಅನೇಕರನ್ನು ಕಾಡುವ ಪ್ರಶ್ನೆ.

    ಸುಮಾರು 25-30 ವರುಷದ ಹಿಂದೆ ವಿಮಾನ ಪ್ರಯಾಣ ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು. ಮಧ್ಯಮ ವರ್ಗದವರು ವಿಮಾನಗಳು ಹಾರಾಡುವುದನ್ನು ನೋಡುತ್ತಾ ಹಕ್ಕಿಯಂತೆ ಹಾರುವುದು ತಮಗೊಂದು ಕನಸೇ ಎಂದು ಭಾವಿಸಿದ್ದರು. ಆದರೆ ಖಾಸಗಿ ಆಪರೇಟರ್ ಗಳಿಗೂ ವಿಮಾನ ಯಾನದ ಅವಕಾಶ ಸಿಕ್ಕಮೇಲೆ ಸಹಜವಾಗಿಯೇ ಬೆಲೆಗಳು ಇಳಿದು ಹೆಚ್ಚೆಚ್ಚು ಪ್ರಯಾಣಿಕರು ವಿಮಾನದ ಪ್ರಯಾಣದ ಸುಖ ಅನುಭವಿಸುವಂತೆ ಆಯಿತು. ಪರಿಣಾಮ ವಿಮಾನಗಳು ಹೆಚ್ಚಿದವು, ಪ್ರಯಾಣಿಕರು ಹೆಚ್ಚಿದರು ಜೊತೆಗೆ ಅಪಘಾತಗಳು ಹೆಚ್ಚಿದವು.

    ಒಂದೇ ಒಂದು ನಿರ್ದಿಷ್ಟ ಕಾರಣದಿಂದ ವಿಮಾನ ಅಪಘಾತಗಳು ಎಂದಿಗೂ ಸಂಭವಿಸುವುದಿಲ್ಲ. ವಿಮಾನ ಅಪಘಾತ ಅಥವಾ ಘಟನೆಗೆ ಕಾರಣವಾಗುವ ಅನೇಕ ಅಂಶಗಳು ಯಾವಾಗಲೂ ಇರುತ್ತವೆ. ಕೆಟ್ಟ ಹವಾಮಾನ ಮತ್ತು ತಾಂತ್ರಿಕ ಸಮಸ್ಯೆ, ಮಾನವ ಸಹಜ ತಪ್ಪುಗಳು ಇದಕ್ಕೆ ಕಾರಣವಾಗುತ್ತವೆ.

    ವಿಮಾನಗಳು ಹಾರುವ ಮೊದಲು ಮತ್ತು ಇಳಿದ ನಂತರವೂ ತಪಾಸಣೆ ನಡಸಲಾಗುತ್ತದೆ. ಒಮ್ಮೊಮ್ಮೆ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದೆ ಎಂದು ನಂಬಿ ಹಾರಾಟಕ್ಕೆ ಅನುಮತಿ ಕೊಟ್ಟಾಗ ಅವು ಇಳಿಯುವ ಸಮಯದಲ್ಲಿ ಕೈ ಕೊಟ್ಟರೆ ಅಪಘಾತ ನಿಶ್ಛಿತ.ಇನ್ನೊಮ್ಮೆ ಪೈಲಟ್ ಗಳು ಹೊರಗಿನ ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸುವುದು , ಇಂಥದ್ದು ನಾನೆಷ್ಟು ನೋಡಿಲ್ಲ ಎಂದು ತೆಗೆದುಕೊಳ್ಳುವ ರಿಸ್ಕೂ ಅಪಘಾತಕ್ಕೆ ಕಾರಣವಾಗುತ್ತದೆ.

    ನೀರು ನಿಲ್ಲುವುದು ತುಂಬಾ ಅಪಾಯಕಾರಿ

    ರನ್‌ ವೇ ನಲ್ಲಿ ನೀರು ನಿಲ್ಲುವುದು ತುಂಬಾ ಅಪಾಯಕಾರಿ.ನೀರು ನಿಲ್ಲದೆ ಹರಿದು ಹೋಗುವಂಥ ವ್ಯವಸ್ಥೆ ಇರಬೇಕು. ವಿಮಾನಗಳು ಇಳಿಯುವ ಹಂತದಲ್ಲಿ ವಿಮಾನದ ಚಕ್ರಗಳು ಲಾಕ್ ಆಗಿರುತ್ತವೆ. ಭೂ ಸ್ಪರ್ಶ ಆಗುತ್ತಿದ್ದಂತೆ ಅವು ರಿಲೀಸ್ ಆಗಬೇಕು. ಅಂಥ ಸಮಯದಲ್ಲಿ ರನ್ ವೇ ನಲ್ಲಿ ನಿಗದಿತ ಮಟ್ಟಕ್ಕಿಂತ ನೀರಿದ್ದರೆ ಅವು ವಿಮಾನವನ್ನು ಯಾವುದೇ ದಿಕ್ಕಿಗೂ ಎಳೆಯಬಹುದು ಎಂದು 2010 ರ ಮಂಗಳೂರು ವಿಮಾನ ದುರಂತವನ್ನು ತನಿಖೆ ಮಾಡಿದ್ದ ಏರ್ ಮಾರ್ಷಲ್ (ನಿವೃತ್ತ) ಭೂಷಣ್ ಗೋಖಲೆ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಮೊನ್ನೆ ಅಪಘಾತ ನಡೆದದ್ದು ಟೇಬಲ್ ಟಾಪ್ ವಿಮಾನ ನಿಲ್ದಾಣ. ಹಾಗೆಂದು ಟೇಬಲ್ ಟಾಪ್ ವಿಮಾನ ನಿಲ್ದಾಣಗಳ ಬಗ್ಗೆ ಭಯ ಪಡುವ ಅಗತ್ಯವಿಲ್ಲ . ಆದರೆ ಇಂಥ ನಿಲ್ದಾಣಗಳು ಅನುಭವಿ ಪೈಲಟ್ ಗಳನ್ನು ಬಯಸುತ್ತವೆ. ಭಾರತದಲ್ಲಿ ಐದು ಟೇಬಲ್ ಟಾಪ್ ರನ್ ವೇ ಗಳಿವೆ .ಮಂಗಳೂರು, ಕೋಝಿಕ್ಕೋಡ್, ಶಿಮ್ಲಾ , ಪಕ್ಯಾಂಗ್ (ಸಿಕ್ಕಿಂ) ಮತ್ತು ಮಿಜೋರಾಮ್ ನ ಲಿಂಫು.

    ಮೊನ್ನೆ ವಿಸಿಬಿಲಿಟಿ ಕಡಿಮೆ ಇದ್ದರೂ ಪೈಲಟ್ ಅಲ್ಲಿ ವಿಮಾನ ಇಳಿಸುವ ನಿರ್ಧಾರ ಮಾಡಿದರೆ ? ಇತ್ಯಾದಿ ವಿವರಗಳು ತನಿಖೆಯಿಂದ ಗೊತ್ತಾಗಬೇಕಿದೆ. ಅಪಾಯದ ವಾಸನೆ ಅರಿತು ಬೆಂಕಿ ಹತ್ತದಂತೆ ವಿಮಾನ ಇಳಿಸದ ಪೈಲಟ್ ದೀಪಕ್ ಸೇಥಿಗೆ ಪ್ರಶಂಸೆ ವ್ಯಕ್ತವಾಗಿದೆ.

    ಪೈಲಟ್‌ಗಳು ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿದಾಗ, ಹವಾಮಾನ ಪರಿಸ್ಥಿತಿಗಳನ್ನು ತಪ್ಪಾಗಿ ಗ್ರಹಿಸಿದಾಗ ಅಥವಾ ಯಾಂತ್ರಿಕ ದೋಷಗಳನ್ನು ಸರಿಯಾಗಿ ಪರಿಹರಿಸಲು ವಿಫಲವಾದಾಗ ಅನೇಕ ವಾಯುಯಾನ ಅಪಘಾತಗಳು ಸಂಭವಿಸುತ್ತವೆ. ವಿಮಾನಗಳು ಅಪಘಾತಕ್ಕೀಡಾಗಲು ಪೈಲಟ್ ದೋಷವನ್ನು ಪ್ರಥಮ ಕಾರಣವೆಂದು ಪರಿಗಣಿಸಲಾಗುತ್ತದೆ.

    ಅನುಭವಿ ಪೈಲಟ್

    ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಿಂದ ಭಾರತಕ್ಕೆ ಬಂದ ಈ ವಿಮಾನ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ 1344 ಹದಿಮೂರು ವರ್ಷಗಳಿಗಿಂತಲೂ ಹಳೆಯದಾಗಿತ್ತು.ವಿಂಗ್ ಕಮಾಂಡರ್ ದೀಪಕ್ ಸಾಥೆ (ಏಪ್ರಿಲ್ 24, 1961 – ಆಗಸ್ಟ್ 7, 2020) ಈ ನತದೃಷ್ಟ ವಿಮಾನದ ಕ್ಯಾಪ್ಟನ್ . ಮಾಜಿ ಭಾರತೀಯ ವಾಯುಪಡೆಯ ಅಧಿಕಾರಿಯಾಗಿದ್ದು, 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮಿಗ್ -21 ಸೂಪರ್ಸಾನಿಕ್ ಜೆಟ್ ಫೈಟರ್ ಅನ್ನು ಹಾರಿಸುವ ಮೂಲಕ ಭಾರತೀಯ ವಾಯುಸೇನೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ವಿಂಗ್ ಕಮಾಂಡರ್ ಆಗಿ 2003 ರಲ್ಲಿ ನಿವೃತ್ತರಾದರು ಮತ್ತು 2005 ರಲ್ಲಿ ಏರ್ ಇಂಡಿಯಾ ಸೇರಿದರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು ಮತ್ತು ಅವರ ತರಬೇತಿ ಕೋರ್ಸ್‌ನಲ್ಲಿ ಸ್ವೋರ್ಡ್ ಆಫ್ ಆನರ್ ಪ್ರಶಸ್ತಿಯನ್ನು ಪಡೆದಿದ್ದರು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಪರೀಕ್ಷಾ ಪೈಲಟ್ ಕೂಡ ಆಗಿದ್ದರು ಮತ್ತು ಬೋಯಿಂಗ್ 737 ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತಿದ್ದರು.

    .ಆಗಸ್ಟ್ 7, 2020 ರಂದು, ಭಾರೀ ಗಾಳಿಯಿಂದಾಗಿ ಅನೇಕ ಸ್ಥಗಿತಗೊಂಡ ಲ್ಯಾಂಡಿಂಗ್ ಪ್ರಯತ್ನಗಳ ನಂತರ, ವಿಮಾನವು ಕೋಝಿಕ್ಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ರನ್ ವೇ ಕೊನೆಯಲ್ಲಿ 9–10.5 ಮೀ (30–35 ಅಡಿ) ಕಮರಿಗೆ ಇಳಿಯಿತು.

    ತಪ್ಪು ಆಗಿದ್ದೆಲ್ಲಿ ಎಂಬುದು ತನಿಖೆಯಿಂದಷ್ಟೆ ಗೊತ್ತಾಗಬೇಕು. ಹಾಗೆಂದು ಜೀವನದ ಪ್ರಯಾಣ ಸಾಗಲೇ ಬೇಕು. ವಿಮಾನಗಳು ಹಾರಾಡಲೇ ಬೇಕು. ಮುಂದಿನ ದಿನಗಳಲ್ಲಿ ಇಂಥ ಅಪಘಾತಗಳು ಮರುಕಳಿಸದಿರಲಿ.

    happy takeoff and happy landing

    ಮತ್ತೆ ಮಳೆ ಸುರಿಯುತಿದೆ ಕೊಡೆಗಳು ನೆನಪಾಗುತಿವೆ

    ಜಯಶ್ರೀ ಅಬ್ಬೀಗೇರಿ

    ಮೊದಲೆಲ್ಲ ಕೊಡೆಗಳೆಂದರೆ ಸಾಕು ಬಣ್ಣದಲ್ಲಿ ಕಪ್ಪು, ಗಾತ್ರದಲ್ಲಿ ದೊಡ್ಡದು ಹಿಡಿಕೆಯೊಂದು ಹಿಡಿಯಲು ಇರಲೇ ಬೇಕು. ಕೊಡೆ ಎಂದರೆ ಸಾಕು ಇವೆಲ್ಲವುಗಳ ಸಮಾಗಮವಿರುವ ಚಿತ್ರ ನಮ್ಮ ಕಣ್ಮುಂದೆ ಬರುತ್ತಿತ್ತು. ಹಳ್ಳಿಯಲ್ಲಿಯ ಪ್ರತಿಷ್ಠಿತರಿಗೆ ಶ್ರೀಮಂತರಿಗೆ ಬೇಸಿಗೆಯಲ್ಲಿ ಕೊಡೆ ಹಿಡಿಯಲೆಂದೇ ಕೆಲವರು ಇರುತ್ತಿದ್ದರು. ಸಿರಿವಂತರಿಗೆ ಕೊಡೆ ಹಿಡಿಯುವುದೇ ಅವರ ಕೆಲಸವಾಗಿತ್ತು. ಬಿಸಿಲಿನ ಧಗೆಗೆ ಮನೆಯ ಯಜಮಾನರು ಹಿರಿಯ ಜೀವಗಳು ಬಿಳಿ ಅಂಗಿ ಬಿಳಿ ಧೋತರವನ್ನುಟ್ಟುಕೊಂಡು ಕಪ್ಪು ಕೊಡೆ ಹಿಡಿದು ಬರುವ ಗತ್ತು, ಗಾಂಭಿರ್ಯ ನೋಡುಗರ ಕಣ್ಮನ ಸೆಳೆಯುತ್ತಿತ್ತು.

    ಉಳ್ಳವರು ಮಾತ್ರ ಕೊಡೆ ಹಿಡಿದು ನಡೆಯುತ್ತಿದ್ದರು. ಗೋಣಿಚೀಲದ ಮೂಲೆಗಳು ತಲೆಯನ್ನಾವರಿಸಿಕೊಳ್ಳುವುದೇ ಇಲ್ಲದವರ ಕೊಡೆಗಳು.ಅವುಗಳನ್ನು ಎಳೆಯ ಕಣ್ಣುಗಳು ಜಗದ ಅಚ್ಚರಿಯನ್ನು ನೋಡಿದಂತೆ ಕಣ್ಣು ಪಿಳಿ ಪಿಳಿ ಬಿಟ್ಟು ನೊಡುತ್ತ ನಗುತ್ತಿದ್ದವು. ಗೋಣಿಚೀಲದ ಕೊಡೆಗಳಿಗೆ ಕೈಗಳ ಅವಶ್ಯಕತೆಯಿಲ್ಲ. ಹೆಗಲಿಗೆ ಹಾಕುವ ಚೀಲದಂತೆ ತಲೆಗೆ ಹಾಕಿಕೊಂಡು ನಡೆದರಾಯಿತು.

    ಕಾಲ ಬದಲಾದಂತೆ ಪ್ಲಾಸ್ಟಿಕ್ ಚೀಲಗಳನ್ನು ಕೊಡೆಯಂತೆ ಉಪಯೋಗಿಸಿದ್ದೂ ಉಂಟು.’ಹೊಸ ಬಾಟಲಿಯಲ್ಲಿ ಹಳೆಯ ಮದ್ಯದಂತೆ.’ ಅದೇ ಬಣ್ಣ ಬಣ್ಣದ ಪ್ಲಾಸ್ಟಿಕ್ ಚೀಲಗಳನ್ನು ಹೊಲಿದು ರೇನ್ ಕೋಟ್ ಎಂಬ ಹೆಸರಿನೊಂದಿಗೆ ಸೃಜನಶೀಲ ಮಾರ್ಕೆಟ್ ತಲೆಯುಳ್ಳವರು ಮಾರುಕಟ್ಟೆಯಲ್ಲಿ ಬಿಟ್ಟರು. ಸಣ್ಣ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಇವು ವರದಾನವಾದವು. ಆಲ್ ಇನ್ ಒನ್ ಎಂಬಂತಿದ್ದ ಕೊಡೆಗಳು ಹೋಗಿ ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಒಂದೊಂದು ಅವರದೇ ಅಳತೆಯ ರೇನ್ ಕೋಟ್ ಕೊಳ್ಳುವುದು ಚಾಲ್ತಿಗೆ ಬಂತು.

    ಜೋರಾಗಿ ಸುರಿಯುವ ಮಳೆಗೆ ರೇನ್ ಕೋಟ್ ಒಂದೇ ಸಾಲದು ಎಂದು ಕೈಯಲ್ಲಿ ಕೊಡೆ ಹಿಡಿದು ಅದರ ಮುಖ ಅರಳಿಸಿ ನಡೆಯುವವರನ್ನು ನೋಡುವುದೇ ಒಂದು ಅಂದ. ಮೈಗಂಟಿದ ರೇನ್ ಕೋಟ್ ಒಂದು ಬಣ್ಣ ತಲೆ ಮೇಲಿನ ಕೊಡೆ ಒಂದು ಬಣ್ಣ. ಹೀಗೆ ವಿವಿಧ ರಂಗು ಕಂಡ ಕಣ್ಣಿಗೆ ಮಳೆಯಲ್ಲಿ ನಡೆದು ಬರುವವರು ಪಕ್ಕ ಬಿಚ್ಚಿ ಹಾರಿ ಬರುವ ಚಿಟ್ಟೆಯಂತೆ ಕಾಣುತ್ತಾರೆ.

    ಮನಸ್ಸನ್ನು ಮತ್ತೆ ಹಳೆಯ ಕಪ್ಪು ಕೊಡೆಗಳಿಗೆ ಮರಳಿ ಕರೆದೊಯ್ದರೆ ಅಲ್ಲಿ ಕೊಡೆಗೆ ಕಪ್ಪು ಬಣ್ಣ ಬಿಟ್ಟು ಬೇರಾವ ಬಣ್ಣವೂ ಒಪ್ಪದು. ಅಷ್ಟೊಂದು ಛಾಪನ್ನು ನಮ್ಮ ತಲೆಯಲ್ಲಿ ಒತ್ತಿ ಬಿಟ್ಟಿತ್ತು. ಮಳೆಗಾಲ ಸಂಸ್ಕೃತಿಯ ಪ್ರತೀಕವಾಗಿ ಬಿಟ್ಟಿದ್ದವು. ಸಿರಿವಂತರು ಮಳೆ ಮತ್ತು ಬೇಸಿಗೆಯೆನ್ನದೇ ಸದಾ ಒಂದು ಸಂಗಾತಿಯಂತೆ ಗಾಂಭೀರ್ಯದಿಂದ ಕೊಡೆಯ ಹಿಡಿಕೆಯನ್ನು ಅಂಗಿಯ ಬೆನ್ನಿಗೆ ಸಿಕ್ಕಿಸಿಕೊಂಡು ಬಲು ಠೀವಿಯಿಂದ ನಡೆಯುವ ಪರಿಯು ಚೆಂದವೆನಿಸುತ್ತಿತ್ತು. ಸಮಯ ಸರಿದಂತೆ ಇಲ್ಲದವರ ತಲೆಯ ಮೇಲೂ ಮಳೆಗಾಲದಲ್ಲಿ ತಲೆಯ ಮೇಲೆ ಕಪ್ಪು ಕೊಡೆ ಕಂಗೊಳಿಸಹತ್ತಿತು.

    ಈಗ ಕಾಲ ಬದಲಾಗಿದೆ. ಕೊಡೆ ಕೇವಲ ಮಳೆಗಾಲಕ್ಕೆ ಅಷ್ಟೇ ಅಲ್ಲ ಬೇಸಿಗೆಗೂ ತನ್ನ ರಂಗು ರಂಗಿನ ಮೈ ಅರಳಿಸಿಕೊಂಡು ರಸ್ತೆಯಲ್ಲಿ ನಮ್ಮ ಕಣ್ಮನ ಸೆಳೆಯುತ್ತದೆ. ವಿವಿಧ ವಿನ್ಯಾಸಗಳ ರಂಗು ರಂಗಿನ ಕೊಡೆಗಳನ್ನು ಕಣ್ತುಂಬಿಸಿಕೊಳ್ಳುವುದೇ ಚೆಂದ.

    ತುಂತುರು ಮಳೆಯಲ್ಲಿ ಅಗ ತಾನೆ ಅರಳಿದ ತಾಜಾ ಹೂಗಳಂತೆ ನಳನಳಿಸುತ್ತವೆ ಕೊಡೆಗಳು. ಕೊಂಡುಕೊಳ್ಳುವ ಪ್ರತಿಯೊಂದು ವಸ್ತುಗಳಲ್ಲಿ ನಾವೀನ್ಯತೆಯನ್ನು ವೈವಿಧ್ಯತೆಯನ್ನು ಬಯಸುವವರು ನಾವೆಲ್ಲ. ಕೆಲವರಂತೂ ತಮ್ಮ ಉಡುಗೆ ತೊಡುಗೆಗಳಿಗೆ ಹೊಂದಿಕೆಯಾಗುವಂಥ ಕೊಡೆಗಳ ಹುಡುಕಾಟದಲ್ಲಿ ಇರುತ್ತಾರೆ. ಇನ್ನೂ ಕೆಲವು ಯುವತಿಯರಂತೂ ಟ್ರೆಂಡಿಯಾಗಿರಬೇಕು. ಸ್ಟೈಲಿಷ್ ಆಗಿರಬೇಕೆಂಬ ಹಟ ಹೊಂದಿರುತ್ತಾರೆ. ಇಂಥವರು ಅನೇಕ ಅಂಗಡಿಗಳನ್ನು ಹೊಕ್ಕು ತಮಗಿಷ್ಟವಾದುದನ್ನೇ ಹೆಕ್ಕಿ ತರುತ್ತಾರೆ. ಉದ್ಯೋಗಸ್ಥ ಮಹಿಳೆಯರು ತಮ್ಮ ವೆನಿಟಿ ಬ್ಯಾಗಿನಲ್ಲಿ ಕೂಡ್ರುವಂಥ ಥ್ರೀ ಫೋಲ್ಡ್ ಛತ್ರಿಗಳಿಗೆ ಹೆಚ್ಚಾಗಿ ಆದ್ಯತೆ ನೀಡುತ್ತಾರೆ.

    ಕೊಡೆಗಳು ನಮ್ಮ ದಿನ ನಿತ್ಯ ಜೀವನದ ಅತ್ಯವಶ್ಯಕ ವಸ್ತುಗಳಾಗಿ ಬದಲಾಗಿವೆ. ನಾವು ಹೋದಲೆಲ್ಲ ನಮ್ಮೊಂದಿಗೆ ಅವೂ ಕಾಲು ಹಾಕುತ್ತಿವೆ.ತಲೆಗೆ ಮೈಗೆ ರಕ್ಷಣೆ ಕೊಡುತ್ತಿವೆ. ಹಾಗಂತ ಇವುಗಳ ಆಯ್ಕೆಯಲ್ಲಿ ಹೆಂಗಳೆಯರು ಕೈಗೆ ಸಿಕ್ಕದ್ದನ್ನು ಕಣ್ಣಿಗೆ ಕಂಡದ್ದನ್ನು ಸುಲಭವಾಗಿ ಕೊಳ್ಳುತ್ತಾರೆ ಅಂತಿಲ್ಲ. ಆಕರ್ಷಕವಾದ ಚಿತ್ತಾರ, ವಿಭಿನ್ನ ಬಣ್ಣ, ಗಾತ್ರಗಳನ್ನು ಹೊಂದಿದ ತಮ್ಮ ಧಿರಿಸಿಗೆ ಹೊಂದಿಕೆಯಾಗುವಂಥ ಎಲ್ಲ ರಂಗುಗಗಳನ್ನು ಹೊಂದಿದ ಕಾಮನ ಬಿಲ್ಲಿನ ಕೊಡೆಗಳನ್ನು ಕೊಳ್ಳೋಕೆ ಮನಸ್ಸು ಮಾಡುತ್ತಾರೆ. ಪುಸ್ತಕಗಳಂತೆ ತಮ್ಮ ಮೈ ಮೇಲೆ ಅಕ್ಷರಗಳನ್ನು ಬರೆಸಿಕೊಂಡ ಛತ್ರಿಗಳು ಲಭ್ಯವಿವೆ. ಶಾಲೆ ಕಾಲೇಜಿಗೆ ಹೋಗುವ ಹುಡುಗಿರೆಲ್ಲ ಇವುಗಳಿಗೆ ಮನಸೋತು ಖರೀದಿಸುತ್ತಾರೆ.

    ಸಮಯ ಕಳೆದಂತೆ ಕೊಡೆಗಳ ಬೇಡಿಕೆ ಹೆಚ್ಚುತ್ತಿರುವುದನ್ನು ಕಂಡ ತಯಾರಕರು ಗ್ರಾಹಕರ ಉಪಯೋಗಕ್ಕೆ ತಕ್ಕಂತೆ ವಿವಿಧ ನಮೂನೆಯ ಕೊಡೆಗಳನ್ನು ತಯಾರಿಸುತ್ತಿದ್ದಾರೆ. ಅವುಗಳಲ್ಲಿ ಮಳೆಗಳಲ್ಲೂ ಓಡಾಡಿ ಕೆಲಸ ಮಾಡುವಂತವರಿಗೆ ಫುಲ್ ಬಾಡಿ ಅಂಬ್ರೆಲಾ, ಹಿಡಿಕೆಗಳಿಲ್ಲದ (ಹ್ಯಾಂಡ್ಸ್ ಫ್ರೀ) ಅಂಬ್ರೆಲಾ ಆಟಗಾರರಿಗೆ ಉಪಯುಕ್ತವಾಗುವಂಥ ಟೊಪ್ಪಿಗೆ ಹೊಂದಿರುವ ಕೊಡೆಗಳನ್ನೂ ನಿರ್ಮಿಸಿದ್ದಾರೆ. ಈ ವಿಷಯದಲ್ಲಿ ಚಿಕ್ಕ ಮಕ್ಕಳಂತೂ ಬಣ್ಣ ಬಣ್ಣದ ಚಿತ್ತಾರಗಳನ್ನು ಹೊಂದಿದ ನಾನಾ ನಮೂನೆಯ ಕೊಡೆಗಳನ್ನು ಕಂಡು ಮನೆಯಲ್ಲಿ ಹಳೆ ಛತ್ರಿಯಿದ್ದರೂ ಹೊಸ ಛತ್ರಿ ಖರೀದಿಸದೇ ಮಾರ್ಕೆಟಿನಿಂದ ಮರಳಿ ಮನೆಗೆ ಬರಲು ಬಿಡುವುದಿಲ್ಲ. ಅಂದರೆ ಪುಟ್ಟ ಪುಟಾಣಿಗಳಿಗೂ ಹೊಸ ಫ್ಯಾಷನ್ನಿನ ಕೊಡೆಗಳನ್ನು ಮಳೆಯುಲ್ಲಿ ಹಿಡಿದು ಓಡಾಡೋದು ಅಷ್ಟು ಇಷ್ಟ.


    ಬಿಟ್ಟೂ ಬಿಡದೇ ಸುರಿಯುವ ಮಳೆಗೆ ಭೂತಾಯಿ ಹೊಸ ಹಸಿರು ಸೀರೆಯನ್ನುಟ್ಟು ತನ್ನ ಸೌಂದರ್ಯ ಹೆಚ್ಚಿಸಿಕೊಳ್ಳುತ್ತಾಳೆ. ಮನಮೋಹಕ ಕೊಡೆಗಳನ್ನು ಹಿಡಿದು ಆನಂದಿಸಲು ಇದೇ ಸಕಾಲ ಎಂದು ಇಷ್ಟವಾದ ಕೊಡೆಗಳನ್ನು ಅರಳಿಸಿಕೊಂಡು ಸುರಿಯುವ ಮಳೆಯಲ್ಲಿ ವಯ್ಯಾರದಿಂದ ಹೆಜ್ಜೆ ಹಾಕುವವರನ್ನು ನೋಡುವುದೂ ಚೆಂದಕಿಂತ ಚೆಂದ. ಹೀಗೆ ರಂಗು ರಂಗಿನ ಕೊಡೆಗಳು ಮಳೆಯ ಸೊಬಗಿನ ರಂಗನ್ನು ಇನ್ನಷ್ಟು ಹೆಚ್ಚಿಸುತ್ತವೆ. ನಾವೆಲ್ಲ ಮಳೆಗಾಲದ ಖುಷಿಯ ಹೂಮಳೆಯನ್ನು ಹೆಚ್ಚಿಸಿಕೊಳ್ಳಲು ಕೊಡೆಯ ಕಡೆ ಆಕರ್ಷಿತರಾಗುತ್ತಿರುವುದಂತೂ ಸುಳ್ಳಲ್ಲ. ಸಂಜೆ ಮಳೆಯಲ್ಲಿ ರಂಗು ರಂಗಿನ ಚಿತ್ತಾರದ ಚಿತ್ತಾಕರ್ಷಕ ಕೊಡೆ ಹಿಡಿದು ಹೆಜ್ಜೆ ಹಾಕಿ ಮಳೆಯ ಸವಿ ಸವಿಯೋಣವಲ್ಲವೇ?

    Photo by Bozhidar Petkov on Unsplash

    error: Content is protected !!