23.2 C
Karnataka
Thursday, May 21, 2026
    Home Blog Page 160

    ನಿವೃತ್ತಿ ಜೀವನಕ್ಕೆ ಹೂಡಿಕೆ : ಯಾವುದಕ್ಕೂ ಇರಲಿ ಮತ್ತೊಂದು ಪ್ಲಾನ್

    ಕಥೆ ಹೇಳುವುದು , ಕೇಳುವುದು ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ನಮ್ಮ ಕಥೆಗಳನ್ನು ಜಗತ್ತಿಗೆ ಹೇಳುವುದೆಂದರೆ ಇನ್ನೂ ಖುಷಿ. ಈ ಕಥೆಗಳಲ್ಲಿ ನಮ್ಮ ಸಾಧನೆ   ಅಡಗಿದೆ ಅಂದರಂತೂ ಅದನ್ನು ವರ್ಣಿಸಿದ್ದೇ ವರ್ಣಿಸಿದ್ದು. ಕೇಳುವವರಿದ್ದರೆ ಹೇಳುವವರಿಗೇನು ಅಲ್ಲವೆ? ಅದೇ ರೀತಿ  ಹಣಕಾಸು ವಿಷಯಕ್ಕೆ ಬಂದರೆ ಹೇಳುವವರ ಉತ್ಸಾಹ ಇನ್ನಷ್ಚು ಹೆಚ್ಚುತ್ತದೆ.  ತಮ್ಮ ಬೆನ್ನನ್ನು ತಾವೇ ತಟ್ಟಿ ಕೊಳ್ಳುತ್ತ ತಮ್ಮ ಹೂಡಿಕೆಯ ಕಥೆಗಳನ್ನು ಹೇಳಿದ್ದೇ ಹೇಳಿದ್ದು. ಕೇಳಿದವರು ಅಬ್ಬಾ ಇವರೆಷ್ಟು ಬುದ್ಧಿವಂತರು ಅಂತ ಅಂದು ಕೊಂಡಿದ್ದೇ ಅಂದು ಕೊಂಡಿದ್ದು.

    ನಿಮಗೂ ಇಂಥದ್ದು  ಅನುಭವಕ್ಕೆ ಬಂದೇ ಇರುತ್ತದೆ. ಅವತ್ತು  ಜೆಪಿ ನಗರ ಏನೂ ಇರಲಿಲ್ಲ ಕಂಣ್ರೀ… ನಾನು ಅಲ್ಲಿ ಸೈಟ್ ತಗೊಂಡಾಗ ನನ್ನ ಕಲೀಗ್ಸ್ ಎಲ್ಲಾ ಆ ಕಾಡಲ್ಲಿ ಯಾಕಪ್ಪ ಸೈಟು ತಗೊತೀಯ  ಅಂದ್ರು. ಅದೇನೋ ಗೊತ್ತಿಲ್ಲ ಅವತ್ತು ಬರೇ ನಲವತ್ತು ಸಾವಿರ . 60 × 40 ತಗೊಂಡು ಬಿಟ್ಟೆ . ಬಿಡಿಎ ನೂ ಅಲ್ಲ. ಇವತ್ತು ನೋಡಿ.. ಕೋಟಿ.. ಕೋಟಿ ರೀ ಅಂತ ಈಗಷ್ಟೆ ರಿಟೈರ್ ಆಗಿರುವ ದಿವಾಕರ ಹೇಳುತ್ತಿದ್ದರೆ ಪಕ್ಕದಲ್ಲಿದ್ದ ನಾಗೇಶ, ಮಂಜುನಾಥ, ಸುರೇಶ ಅವರುಗಳು ದಿವಾಕರನ  ದೂರದೃಷ್ಟಿಯನ್ನು ಹೊಗಳಿದ್ದೆ ಹೊಗಳಿದ್ದು.

    ಅದೇ ರೀತಿ ಪಕ್ಕದ್ಮನೆ ಕಮಲಮ್ಮ ತಮ್ಮ ಮದುವೆ ಆದ    ಕೂಡಲೆ ಮಲ್ಲೇಶ್ವರಂ ನ ಎಂಟನೇ ಕ್ರಾಸ್ ನ ಚಿನ್ನದ ಅಂಗಡಿಯಲ್ಲಿ  ಚೀಟಿ  ಹಾಕಿದ್ದು ಅದರಿಂದ ವರ್ಷಕ್ಕೊಂದರಂತೆ ಬಂಗಾರ ಕೊಂಡದ್ದನ್ನು ಹೇಳುತ್ತಿದ್ದರೆ… ಕಮಲಮ್ಮನ ಬುದ್ಧಿ ನಮಗೆ ಯಾಕೆ ಬರಲಿಲ್ಲ ಅಂತ ನೆರೆದ ಮಹಿಳೆಯರು ಮರುಗಿದ್ದೇ ಮರುಗಿದ್ದು. ಅವತ್ತು ಚಿನ್ನ ತೊಗೊಂಡಿದ್ದಕ್ಕೆ ಆಯಿತು. ಈಗಿನ ಬೆಲೆಯಲ್ಲಿ ಬಂಗಾರ ಕೊಳ್ಳೋಕೆ ಆಗುತ್ತಾ ಅಂತ ಕಮಲಮ್ಮ ತಮ್ಮ ಬುದ್ಧಿವಂತಿಕೆಗೆ ತಾವೇ ಬೀಗಿದ್ದೇ ಬೀಗಿದ್ದು.

    ಅದೇ ರೀತಿ ಸ್ಟಾಕ್ ಗಳು. ಅವತ್ತು ಇನ್ಫೋಸಿಸ್ ಶೇರು ಕೇಳೋರೇ ಇರಲಿಲ್ಲ. ನನಗೆ ಗೊತ್ತಿತ್ತು ಲಾಂಗ್ ಟೈಮ್ ಗೆ ಇರಲಿ ಅಂತ ಐವತ್ತು ಷೇರು ಹಾಕಿದೆ. ಇವತ್ತು ನೋಡಿ ಆ ಐವತ್ತು ಷೇರು ಎಷ್ಟಾಗಿದೆ ಅಂತ ಶಂಕರಪ್ಪ ಹೇಳುತ್ತಿದ್ದರೆ ಉಳಿದವರು ನಮಗೆ ‌ಅದು ಹೊಳೀಲಿಲ್ಲವಲ್ಲ ಅಂತ ಮರುಗುವವರೆ. ಮಗು ಹುಟ್ಟಿದ ಕೂಡಲೇ ಆರ್ ಡಿ ತೆಗೆದು ಆಕೆಯ ವಿದ್ಯಾಭ್ಯಾಸಕ್ಕೆ ಕೂಡಿಡಲು ಶುರುಮಾಡಿದ ಆನಂದ, ಮನಿ ಬ್ಯಾಕ್ ಪಾಲಿಸಿ ಕೊಂಡ ಅರುಣ್ ಇವರೆಲ್ಲ ಇಂಥದ್ದೇನೂ ಮಾಡದವರ ಕಣ್ಣಲ್ಲಿ ಹೀರೋಗಳು.

    ಹೂಡಿಕೆ ವಿಚಾರಕ್ಕೆ ಬಂದಾಗ ಸಕ್ಸೆಸ್ ಸ್ಟೋರಿಗಳನ್ನು ಹೇಳಿಕೊಳ್ಳುವಾಗಿನ ಆನಂದ ಫೇಲ್ಯೂರ್ ಗಳನ್ನು ಹೇಳಿಕೊಳ್ಳುವಾಗ ಇರುವುದಿಲ್ಲ.  ದಶಕಗಳ ಹಿಂದೆ ನಾವು ಹೆಮ್ಮೆಯಿಂದ ಪ್ರೀಮಿಯಮ್ ಕೊಟ್ಟು ಖರೀದಿಸಿದ ಟೆಲಿಕಾಮ್ ಸ್ಟಾಕ್ ಗಳು ಇವತ್ತು ಅಸಲಿಗೂ ಸಂಚಕಾರ ತಂದಿರುವ ಸಂಗತಿಯನ್ನು ನಾವು ಬಹಿರಂಗ ಪಡಿಸುವುದೇ ಇಲ್ಲ.  ಬಹು ಬೇಡಿಕೆಯ ಐಪಿಒ ಸಿಕ್ಕ ಅದೃಷ್ಟಶಾಲಿ ನಾವೆಂದು ಊರೆಲ್ಲಾ ಹೇಳಿಕೊಂಡು ಬಂದವರು ಆ ಷೇರು ಇವತ್ತು ಮಾರಿದರೆ ಸ್ಟಾಕ್ ಬ್ರೋಕರ್ ಕಮಿಷನ್ ಕೂಡ ಹುಟ್ಟುವುದಿಲ್ಲ ಎನ್ನುವುದನ್ನು ಅಪ್ಪಿ ತಪ್ಪಿಯೂ ಬಾಯಿ ಬಿಡುವುದಿಲ್ಲ. ಯಾರದರೂ ಆ ಬಗ್ಗೆ ಏನಾದರು ಕೇಳಿದರೆ ಓ ಅದಾ ಅಂತ ಏನೋ ವಿವರ ಕೊಟ್ಟು ತಮ್ಮ ತಪ್ಪೇನು ಅದರಲ್ಲಿ ಆಗಿಲ್ಲ ಎನ್ನುವಂತೆ ಇರುತ್ತೇವೆ.

    ಹತ್ತು ವರುಷಗಳ ಹಿಂದೆ ಯಲಹಂಕದ ಹತ್ತಿರ  ಕೊಂಡ ಎರಡು ರೂಮಿನ ಪುಟ್ಟ ಫ್ಲಾಟಿಗೆ ಹೋಗಲು ಆಗದೆ ಇತ್ತ  ಬಾಡಿಗೆಗೆ ಬಿಡೋಣ ಅಂದರೆ ಜನರು ಬರದೆ ಇರುವ ಸಂಗತಿಯನ್ನು ಬಾಯಿ ಬಿಡುವುದಿಲ್ಲ.  ಈಗ ಮಾರಿದರೂ ಅಸಲು ಬಂದೇ ಬರುತ್ತದೆ ಎಂದು ಜಂಭ ಕೊಚ್ಚಿ ಕೊಳ್ಳುತ್ತೇವೆಯೇ ವಿನ: ವಾಸ್ತವ ಸ್ಥಿತಿಯನ್ನು ಮನಸ್ಸು ಒಪ್ಪಿಕೊಳ್ಳುವುದಿಲ್ಲ.

    ಕೆಲವೊಮ್ಮೆ ಕೆಲವರು ಹೂಡಿಕೆ ವಿಚಾರಗಳಿಗೆ ಸಂಬಂಧಿಸಿದಂತೆ ಟೀವಿ  ಶೋಗಳಿಂದ, ವಾಟ್ಸಪ್ ಫಾರ್ವರ್ಡ್ ಗಳಿಂದ ಪ್ರೇರಿತರಾಗಿ ತಮ್ಮದೆ  ಆದ ಥಿಯರಿ ಹೇಳುವುದನ್ನು ಕೇಳಿದಾಗ ನನಗೆ ಅಚ್ಚರಿಯಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸುವಾಗ ಆ ಕ್ಷಣವಷ್ಟೆ ಮುಖ್ಯ ಅನ್ನುವುದನ್ನು ಹಲವರು ಮರತೇ ಬಿಡುತ್ತಾರೆ. ಷೇರು ಒಂದರ ಬೆಲೆ ಕಳೆದ 52 ವಾರಗಳಲ್ಲಿ ಶೇಕಡ 70ರಷ್ಟು ಕುಸಿತ ಆದ  ಬಗ್ಗೆ ತಮ್ಮದೆ ವ್ಯಾಖ್ಯಾನ ನೀಡುವ ಕೆಲವರು ಅದು ಮತ್ತೆ ಏರಲು ಕಾರಣವೇ ಉಳಿದಿಲ್ಲ ಎಂಬುದನ್ನು ಮರೆತು ತಮ್ಮದೇ ವಾದಕ್ಕೆ ಕಟ್ಟು ಬೀಳುತ್ತಾರೆ.

    ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ  ಪ್ರತಿಫಲ ಪಡೆಯುವಲ್ಲಿ ಹೂಡಿಕೆ ದಾರರ ಪಾತ್ರ ಗೌಣ. ತಮ್ಮದಲ್ಲದ ತಪ್ಪಿಗೆ ಬೆಲೆಗಳು ಇಳಿದರೂ ಅವರೇನೂ ಮಾಡುವ ಹಾಗಿಲ್ಲ. ಅಂದರೆ ತಮ್ಮ ಹಣವನ್ನು ನಮ್ಮದು ಎಂದು ಕೊಳ್ಳುತ್ತಲೆ ಇನ್ನೊಬ್ಬರ ಕೈಗೆ ನೀಡುವುದು. ವಾಸ್ತವವಾಗಿ ಇವುಗಳ ಬೆಲೆಯನ್ನು ನಿರ್ಧರಿಸಿರುವವರು ನೀವು ಆಗಿರುವುದೇ ಇಲ್ಲ.  ಹೀಗಾಗಿ ಸಕ್ಸೆಸ್ ಸ್ಟೋರಿಗಳನ್ನು ಕೇಳುವಾಗ ಇದರಲ್ಲಿ ಇವರ ಪಾತ್ರವೇನು ಎಂದು ನನಗೆ ಅನುಮಾನ ಬರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪಾಲಕರು ಮಾಡಿದ ತ್ಯಾಗ ಪ್ರಮುಖ ಕಾರಣವಾಗಿರುತ್ತದೆಯೇ ಹೊರತು ಅವರು ಯಾವುದೋ ಪಾಲಿಸಿಯಲ್ಲಿ ಹೂಡಿದ್ದಲ್ಲ. ಅದೇ ರೀತಿ ಯಾವದೋ ಸಿಸ್ಟಮ್ಯಾಟಿಕ್ ಹೂಡಿಕೆಯೂ ಅಲ್ಲ.

    ಆದ್ದರಿಂದ ಸಕ್ಸೆಸ್ ಸ್ಟೋರಿಗಳನ್ನಷ್ಟೇ ಕೇಳಿ  ಅದೇ ಹಾದಿಯಲ್ಲಿ ಮುನ್ನುಗ್ಗಬಾರದು. ಯಾವುದೇ ಹೂಡಿಕೆ ಎಲ್ಲಾ ಸಮಯದಲ್ಲೂ ಕೈ ಹಿಡಿಯುವುದಿಲ್ಲ ಎಂಬುದು ಗೊತ್ತಿರಬೇಕು. ಉದಾಹರಣೆಗೆ ಬ್ಯಾಂಕ್ ಬಡ್ಡಿ ದರ ಈ ಪಾಟಿ ಇಳಿಯಬಹದು ಎಂದು ಯಾರು ಊಹಿಸಿದ್ದರು? ನಂಬಿದ ಬ್ಯಾಂಕುಗಳೇ ಕೈ ಕೊಟ್ಟ ಉದಾಹರಣೆಗಳು ಇವೆ.  ಆದ್ದರಿಂದ  ಹೂಡಿಕೆ ಮಾಡಿ, ಆದರೆ ಅದು  ಕೈ ಕೊಟ್ಟಾಗ ಹೆದರದೆ ಪ್ಲಾನ್ ಬಿ ಯತ್ತ ಯೋಚಿಸಿ.

    Photo by Markus Spiske on Unsplash

    ಸ್ವಾತಂತ್ರ್ಯದಿನದಂದು ಮನೆಗೆ ಬಂದ ವಿಶೇಷ ಅತಿಥಿ!

    ಮುಂಜಾನೆ ಎದ್ದು ಬಾಗಿಲು ತೆರೆದಾಗ ಎದುರುಗೊಂಡ ಅಪರೂಪದ ಆ ಅತಿಥಿ ಯಾರು? ಅವರು ಮನೆಯೊಳಗೆ ಸದ್ದಿಲದೇ ಪ್ರವೇಶಿಸಿದ್ದು ಯಾಕಿರಬಹುದು? ಅವರ ಪೂರ್ವಪರವನ್ನು ವಿಚಾರಿಸಿದಾಗ ಸಿಕ್ಕಿದ ಮಾಹಿತಿಯಾದರು ಏನು..?

    ಬೆಳ್ಳಂಬೆಳಿಗ್ಗೆ, ಹೊರಗೆ ಚಿಟಿಪಿಟಿ ಮಳೆ ಹನಿಯುತಿತ್ತು. ಬಾಗಿಲು ತೆರೆದಾಗ ದ್ವಾರದ ಬಳಿ ಅಪರೂಪದ ವಿಶೇಷ ಅತಿಥಿಯೊಬ್ಬರು ಎದುರಾದರು. ಬಾಗಿಲು ತೆರೆಯುತ್ತಿದ್ದಂತ್ತೆ ಸೀದಾ ಮನೆಯೊಳಗೆ ತಮ್ಮ ಪಾದವನ್ನು ಇಟ್ಟರು. ನೋಡೋಣ ಇವರು ಎಲ್ಲಿಗೆ ಹೋಗುತ್ತಾರೆಂದು ಸುಮ್ಮನೆ ಗಮನಿಸುತ್ತಾ ನಿಂತೆ. ಪಕ್ಕದಲ್ಲಿ ನಿಂತಿದ್ದರೂ ಅತಿಥಿಗೆ ನನ್ನ ಕಡೆ ಗಮನವೇ ಇರಲಿಲ್ಲ. ಅವರ ಪಾಡಿಗೆ ಅವರು ನಿಧಾ…….ನವಾಗಿ ಒಳಗೆ ಬರುವುದರಲ್ಲೇ ಇದ್ದರು. ಮನೆಗೆ ವಿಶೇಷ ಅತಿಥಿ ಬಂದಿದ್ದರಿಂದ ಯಾವುದಕ್ಕೂ ಇರಲಿ ಎಂದು ಅಲ್ಲೇ ಇದ್ದ ಮೊಬೈಲ್ ಫೋನ್ ತೆಗೆದುಕೊಂಡು ಒಂದೆರೆಡು ಫೋಟೊ ಕ್ಲಿಕ್ ಮಾಡಿದೆ. ನನ್ನ ಫೋಕಸ್ ಗೆ ಅತಿಥಿ ಒಂದು ಪೋಸ್ ಕೊಡಬಹುದಾ ಅಂದುಕೊಂಡೆ. ಇಲ್ಲ, ಅವರು ಅವರ ಪಾಡಿಗೆ ಸಾಗುವುದರಲ್ಲೇ ಮಗ್ನರಾಗಿದ್ದರು. “ಅಲ್ಲಾ, ಇವರು ಮನೆಯ ಹೊರಗೆ ಅಲ್ಲಿ ಇಲ್ಲಿ ಇರಬೇಕಾದವರು, ಒಳಗೆ ಏಕೆ ಬರುತ್ತಿದ್ದಾರೆಂದು” ಅರ್ಥವಾಗಲಿಲ್ಲ. ರಾತ್ರಿ ಇಡೀ ಮಳೆ ಸುರಿದಿದ್ದರಿಂದ ಹೊರಗೆ ತುಂಬಾ ತಂಡಿ ಇತ್ತು; ಮನೆಯೊಳಗೆ ಸ್ವಲ್ಪ ಹೊತ್ತು ಬೆಚ್ಚಗೆ ಇದ್ದು ಹೋಗೋಣ ಎಂದು ಆಗಮಿಸಿರಹುದೇ? ಕೊರೊನಾ ಹಾವಳಿ ತುಂಬಾ ಮಿತಿಮೀರಿದೆ. ‘ಯಾವುದಕ್ಕೂ ಮನೆ ಒಳಗಡೆ ಸೇಫ್ ಆಗಿ ಇರೋಣ’ ಎಂದು ಬಂದಿರಹುದೇ? ಅಥವಾ, ಇಂದು ಸ್ವಾತಂತ್ರ್ಯ ದಿನಾಚರಣೆ, ಶುಭಾಶಯ ಕೋರಲು ಬಂದಿರಲೂಬಹುದು.!

    ವಿಶೇಷವೊ, ಅಪರೂಪವೋ, ಅತಿಥಿ, ಅತಿಥಿಯೇ; ಸತ್ಕಾರ ಮಾಡಲೇ ಬೇಕು. ಆದರೆ ಅವರು ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ, ಅವರ ಪಾಡಿಗೆ ಅವರು ಮನೆಯ ಹೊಸ್ತಿಲನ್ನು ದಾಟಿ ಒಳಗೆ ಧಾವಿಸುದರಲ್ಲೇ ಇದ್ದರು. ಬರುವಾಗ ಹಾಗೇ ‘ಕೈ ಬೀಸಿಕೊಂಡು’ ಬರಲಿಲ್ಲ. ಬೆನ್ನ ಮೇಲೆ ತನ್ನ ‘ಮನೆ’ಯನ್ನೇ ಹೊತ್ತು ಬಂದಿದ್ದರು..! ಇದು ಯಾವ ಅತಿಥಿಯಪ್ಪಾ ಮನೆಯನ್ನೇ ಹೊತ್ತು ತಂದಿರುವುದು? ಈ ಕೊರೊನಾ ಜೊತೆ ಕೆಲವು ಕಡೆ ನೆರೆ ಹಾವಳಿಯಿಂದಾಗಿ ಮನೆ ಮಠವೆಲ್ಲಾ ಮುಳುಗುತ್ತಿದೆ. ಅಯ್ಯೋ ಪಾಪಾ, ಮುಳುಗುತ್ತಿರುವ ಮನೆಯನ್ನೇ ಹೊತ್ತು ತಂದರೇ….!?

    ‘ಅತಿಥಿ’ಯನ್ನು ಗೌರವದಿಂದ ಕಳುಹಿಸಿ ಕೊಡಬೇಕಾದುದು ನಮ್ಮ ಧರ್ಮ. ಒಂದು ದಪ್ಪ ಪೇಪರ್ ಪೀಸೊಂದನ್ನು ತೆಗೆದುಕೊಂಡು ಅತಿಥಿಯ ಮೂತಿಯ ಹತ್ತಿರ ಇಟ್ಟೆ. “ತನ್ನನ್ನು ಕರೆದೊಯ್ಯಲು ಪಲ್ಲಕಿ ತಂದಿದ್ದಾರೆ” ಎಂದೆನಿಸಿಕೊಂಡಿತೊ ಏನೋ, ನಿರಾಕರಿಸದೇ ‘ಪಲ್ಲಕಿ’ಯನ್ನು ಹತ್ತಿದರು. ‘ಪಲ್ಲಕಿ’ಯನ್ನು ಅಲಂಕರಿಸಿದ ಮೇಲೆ ಅಂಗಳಕ್ಕೆ ತಂದೆ. ಅವರನ್ನು ನೆಲ್ಲಕ್ಕಿಳಿಸಲು ಒಂದೆರೆಡು ಬಾರಿ ‘ಪಲ್ಲಕಿ’ಯನ್ನು ಕೊಡವಿದೆ. ‘ಪಲ್ಲಕಿ’ಯಿಂದ ಇಳಿಯುವಂತೆ ಕಾಣಲಿಲ್ಲ. ಬದಲಾಗಿ ‘ನಾಚಿಕೆ’ಯಿಂದ ಮುದುಡಿಕೊಂಡು ತನ್ನ ‘ಅರಮನೆ’ಯೊಳಗೆ ಸೇರಿಕೊಂಡು ಅಲ್ಲಿಯೇ ಸ್ಥಬ್ಧವಾದರು. ‘ಪಲ್ಲಕಿ’ಯನ್ನು ಅಲ್ಲಿಯೇ ಅಂಗಳದಲ್ಲಿ ಬಿಟ್ಟುಬಂದೆ. ‘ಅತಿಥಿ ಏನು ಮಾಡುತ್ತಿರಬಹುದು’ ಎಂಬ ಕುತೂಹಲದಲ್ಲಿ ಹದಿನೈದು ನಿಮಿಷ ಬಿಟ್ಟು ಹೋಗಿ ನೋಡಿದೆ. ಆಗಲೇ ‘ಪಲ್ಲಕ್ಕಿ’ಯನ್ನಿಳಿದು ನೆಲದ ಮೇಲೆ ಒಂದು ಟ್ರ್ಯಾಕ್ ಎಳೆಯುತ್ತಾ ಮುಂದೆ ಸಾಗುತ್ತಿದ್ದರು. “ಸಾಕಪ್ಪ ಸಾಕು, ನೀನು ಬೇಡ, ನಿನ್ನ ಮನೆಯೂ ಬೇಡ, ನಿನ್ನ ಪಲ್ಲಕಿಯಂತೂ ಬೇಡವೇ ಬೇಡ, ನಾನು ನನ್ನ ಆವಾಸಸ್ಥಾನದಲ್ಲೇ ಸ್ವತಂತ್ರವಾಗಿ ಬದುಕುವೆ” ಎಂದು ಭಾಸವಾಗುವಂತೆ ಅತಿಥಿಯು ಹಿತ್ತಲ ಕಡೆ ಮುಖ ಮಾಡಿ ತೆವಳುತ್ತಾ ಸಾಗಿದರು.

    ಈ ದಿನ ಮನೆಗೆ ಬಂದಿರುವ ಅತಿಥಿ ಬೇರೆ ಯಾರೂ ಅಲ್ಲ. ನಮ್ಮ ಬಸವ. ಐ ಮೀನ್, ಬಸವನ ಹುಳು. ಮುಂಗಾರು ಶುರುವಾದ ಮೇಲೆ ಪಶ್ಚಿಮ ಘಟ್ಟದ ತಪ್ಪಲಿನ ನಮ್ಮ ಸುತ್ತಲಿನ ಪರಿಸರದಲ್ಲಿ ಆಗಮಿಸುವ ಅತಿಥಿಗಳಲ್ಲಿ ಇವರೂ ಒಬ್ಬರು. ಹಿತ್ತಲಲ್ಲಿ ಇರಬೇಕಾದ ಬಸವನ ಹುಳು ಈ ದಿನ ಬೆಳಿಗ್ಗೆ ದಾರಿ ತಪ್ಪಿ ನಮ್ಮ ಮನೆಯೊಳಗೆ ಬಂದಿರಬೇಕು.

    ಇಂತಿಪ್ಪ ವಿಶೇಷ ಅತಿಥಿಯ ವಿವರಗಳನ್ನು ಕಲೆಹಾಕಲು ಅಂತರ್ಜಾಲದೊಳಗೆ ಇಣುಕಿದಾಗ ಸಿಕ್ಕ ಮಾಹಿತಿಯಲ್ಲಿ ಕೆಲವು ಆಸಕ್ತಿದಾಯಕ ಅಂಶಗಳು ಇಂತಿವೆ.

     ಈ ವರೆಗೆ ಗುರುತಿಸಲ್ಪಟ್ಟ ಸುಮಾರು 1.5 ಲಕ್ಷ ಸಾಗರ, ಸಿಹಿನೀರು ಮತ್ತು ನೆಲ ಮೃದ್ವಂಗಿ ಪ್ರಭೇಧಗಳಲ್ಲಿ ಬಸವನ ಹುಳುಗಳು ಕೂಡ ಸೇರಿವೆ.

     ನೆಲದ ಮೇಲೆ ಜೀವಿಸುವುದರಿಂದ ಇದನ್ನು ಭೂ ಬಸವನ ಎಂಬ ಹೆಸರಿನಿಂದಲೂ ರೆಯಲಾಗುತ್ತದೆ.

     ಇಲಿ, ಹೆಗ್ಗಣ, ಪಕ್ಷಿಗಳು, ಹಾವು ಮತ್ತು ಇತರ ಸರೀಸೃಪಗಳಿಗೆ ಹಾಗೂ ಕೆಲವು ಅಕಶೇರುಕಗಳಿಗೆ ಭೂ ಬಸವನಗಳು ಆಹಾರ. ಈ ಪ್ರಾಣಿಗಳಿಗೆ ಇತರ ಪೋಷಕಾಂಶಗಳ ಜೊತೆಗೆ ಸಮೃದ್ಧವಾಗಿ ಕ್ಯಾಲ್ಸಿಯಂ ಪಡೆಯಲು ಬಸವನಹುಳು ಒಳ್ಳೆಯ ಆಹಾರ.

     ಇವುಗಳು ಉಭಯಲಿಂಗಿ, ಅರ್ಥಾತ್ ಗಂಡು ಮತ್ತು ಹೆಣ್ಣು ಎರಡೂ ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿವೆ. ಆದರೆ, ಅವುಗಳು ಸ್ವತಂತ್ರವಾಗಿ ಸಂತಾನೋತ್ಪತ್ತಿ ಮಾಡುವುದು ವಿರಳ. ಒಂದು ಬಸವನ ತನ್ನ ಸಂಗಾತಿಯೊಂದಿಗೆ ಪ್ರಣಯವನ್ನು ಹೂಡುತ್ತದೆ. ನಂತರ ಅವೆರೆಡೂ ಮೊಟ್ಟೆಗಳನ್ನು ಇಡುತ್ತವೆ.

     ಬಸವನ ಹುಳುಗಳು ತಮ್ಮ ಮೃದುವಾದ ದೇಹವನ್ನು ಒಣಗದಂತೆ ನೋಡಿಕೊಳ್ಳಲು ಲೋಳೆಯನ್ನು ಸ್ರವಿಸುತ್ತಾ ಇರುತ್ತವೆ. ಪಾದದಿಂದಲೂ ಲೋಳೆಯನ್ನೂ ಸ್ರವಿಸುತ್ತಾ ತಾನು ನಡೆಯುವ ಹಾದಿ ಎಷ್ಟೇ ಒರಟು ಅಥವಾ ಹರಿತವಾಗಿದ್ದರೂ ಮುಂದೆ ಸಾಗಬಲ್ಲವು.

     ಪಶ್ಚಿಮ ಘಟ್ಟಗಳು ಮತ್ತು ಈಶಾನ್ಯ ಭಾರತದಲ್ಲಿ ಈ ವರೆಗೆ ಸುಮಾರು 1129 ಬಸವನ ಹುಳುವಿನ ಪ್ರಭೇದಗಳನ್ನು ಗುರುತಿಸಲಾಗಿವೆ. ಅವುಗಳಲ್ಲಿ ಹೆಚ್ಚಿನವು ಸ್ಥಳೀಯ ಪ್ರಭೇದಗಳಾಗಿವೆ.

     ಬಸವನ ಹುಳು ತುಂಬಾ ಸಂವೇದನಾಶೀಲ ಪ್ರಾಣಿಯಾಗಿದ್ದು ಹವಾಮಾನ ಮತ್ತು ಪರಿಸರದಲ್ಲಿ ಉಂಟಾಗುವ ಬದಲಾವಣೆಗಳನ್ನು (ವೈಪರೀತ್ಯ) ತಿಳಿಯಲು ಒಂದು ಸೂಚಕವಾಗಿ (Ecological indicator) ಜೀವ-ಪರಿಸರ ವಿಜ್ಞಾನಿಗಳಿಗೆ ನೆರವಾಗುತ್ತವೆ.

     ಭೂ ಬಸವನಗಳಲ್ಲಿ ಕೆಲವು ಪ್ರಭೇದಗಳು, ಡೆರೋಸೆರಸ್ ಲೇವ್, ಲಾವಿಕೌಲಿ ಸಾಲ್ಟ್, ಮ್ಯಾಕೊಕ್ಲೈಮಸ್ ಇಂಡಿಕಾ, ಬೆಳೆಗಳನ್ನು ತಿಂದು ಹಾಳು ಮಾಡುವುದರಿಂದ ಅವುಗಳ ನಿಯಂತ್ರಣ ರೈತರಿಗೆ ಒಂದು ತಲೆನೋವು.

     ಬಸವನವು ಪಾಲಿಫಾಗಸ್ (ಬಹುಭಕ್ಷಕ), ಅಂದರೆ ಅವುಗಳು ನಾನಾ ತರದ ಸಸ್ಯಗಳ ಎಲೆಗಳು ಮತ್ತು ಹಣ್ಣುಗಳನ್ನು ತಿನ್ನುತ್ತವೆ, ಹಾಗೆಯೇ ಕೊಳೆಯುತ್ತಿರುವ ಸಾವಯವ ಪದಾರ್ಥಗಳನ್ನೂ ಜೀರ್ಣಿಸುತ್ತವೆ.

     ಭೂ ಬಸವನಗಳು ಆಹಾರ ಜಾಲದಲ್ಲಿ ಒಂದು ಪ್ರಮುಖ ಕೊಂಡಿಯಾಗಿದ್ದು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ.

    Photo by Krzysztof Niewolny on Unsplash

    ಯಾವುದರಿಂದ ಸ್ವಾತಂತ್ರ್ಯ ಇನ್ನೂ ಸಿಗಬೇಕಿದೆ

    ಕೊರೋನಾ ನಡುವೆಯೇ 74ನೇ ಸ್ವಾತಂತ್ರ್ಯ ದಿನದ ಸಂಭ್ರಮದ ಆಚರಣೆ ನಡೆದಿದೆ. ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ಯಾವುದರಿಂದ ‌ಸ್ವಾತಂತ್ರ್ಯಇನ್ನೂ ಸಿಕ್ಕಿಲ್ಲ ಎಂದು ನೀವು ಭಾವಿಸಿದ್ದೀರಿ ಎಂಬ ಪ್ರಶ್ನೆಯನ್ನು ನಾಡಿನ ಪ್ರಜ್ಞಾವಂತರ ಮುಂದೆ ಕನ್ನಡ ಪ್ರೆಸ್.ಕಾಮ್ ಇಟ್ಟಿತು. ನಮಗೆ ಸಿಕ್ಕ ಸ್ವಾರಸ್ಯಕರ ಉತ್ತರವನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ.

    ನಾಳೆ ಎನ್ನುವ ಯೋಜನೆಗಳಿಂದ ಮುಕ್ತಿಬೇಕಿದೆ

    ನಂದಿನಿ ಹೆದ್ದುರ್ಗ,ಕವಯಿತ್ರಿ, ಲೇಖಕಿ ಮತ್ತು ಕೃಷಿ ಮಹಿಳೆ

    ದೇಶ ಎಪ್ಪತ್ನಾಲ್ಕನೇ ಸ್ವತಂತ್ರ ದಿವಸ ವನ್ನು ಅತ್ಯಂತ ಸಂಭ್ರಮದಿಂದ ಆಚರಿಸ್ತಿದೆ.
    ಕೆಂಪುಕೋಟೆಯ ಧ್ಜಜಾರೋಹಣವನ್ನು ಮನೆಮನೆಯಲ್ಲೂ ಕಣ್ಣು ತುಂಬಿಕೊಂಡು ಮಾನನೀಯ ಪ್ರಧಾನಮಂತ್ರಿಗಳು ದೇಶವನ್ನು ಉದ್ದೇಶಿಸಿ ಆಡಿದ ಮಾತು ನಮ್ಮೆಲ್ಲರಲ್ಲೂ ದೇಶಭಕ್ತಿಯ ಭಾವವನ್ನು ಇನ್ನಷ್ಟು ಮತ್ತಷ್ಟು ಉದ್ದೀಪಿಸಿದೆ.

    ಮುಂದುವರೆಯುತ್ತಿರುವ ರಾಷ್ಟ್ರಗಳಿಗೆ ಅದರದ್ದೇ ಆದ ಇತಿಮಿತಿಗಳಿರುತ್ತವೆ.ಅದೆಲ್ಲವನ್ನೂ ಮೀರುವತ್ತ ದೇಶ ದೃಢವಾದ ಹೆಜ್ಜೆ ಇಡುತ್ತಿರುವುದು “ಭಾರತ ಬೆಳಗುತ್ತಿದೆ” ಎನ್ನುವ ಮಾತನ್ನು ಮತ್ತೊಮ್ಮೆ ಮೊಳಗುವಂತೆ ಮಾಡುತ್ತಿದೆ.

    ಇದೆಲ್ಲದರ ಜೊತೆಗೆ ಭ್ರಷ್ಟಾಚಾರ, ನಿರುದ್ಯೋಗ, ಧರ್ಮ ವರ್ಗಗಳ ನಡುವಿನ ಭಿನ್ನಮತ ,ಗಡಿ ವಿವಾದಗಳು, ಪ್ರಾಕೃತಿಕ ವಿಕೋಪ, ರಾಜಕೀಯ ಕುಟಿಲತೆಯಿಂದ ಪ್ರಾಣ_ ಆಸ್ತಿಪಾಸ್ತಿ ನಷ್ಟ ಇವೇ ಮುಂತಾದವುಗಳು ಕೈಮೀರಿ ಸಂಭವಿಸುತ್ತಲೆ ದೇಶದ ಬೆಳವಣಿಗೆಯನ್ನು ಹಿಂಜರಿಸುತ್ತದೆ.
    ಇವುಗಳಲ್ಲಿ ಕೆಲವನ್ನಾದರೂ ಇಚ್ಚಾಶಕ್ತಿಯಿಂದ ಮೀರುವ ಎಲ್ಲ ಸಾಧ್ಯತೆಗಳೂ ಇದೆ. ಮುಖ್ಯ ಬೇಕಿರುವುದು ರಾಷ್ಟ್ರಭಕ್ತಿ. “ತಾಯ್ನಾಡಿನ ರಕ್ಷಣೆ ನಮ್ಮೆಲ್ಲರ ಹೊಣೆ “ಎನ್ನುವ ಮನಸ್ಥಿತಿ.ರಕ್ಷಣೆ ಎನ್ನುವುದಕ್ಕೆ ಯಾವುದೇ ವಿಶೇಷ ಅರ್ಥ ಬೇಕಿಲ್ಲ.
    ದೇಶದ ಪ್ರತಿ ನಾಗರಿಕ ತನ್ನ ಕರ್ತವ್ಯವನ್ನು ಮನಃಪೂರ್ವಕವಾಗಿ ಮಾಡಿದರೆ ಒಳಗಿಂದ ದೇಶ ಬಲಿಷ್ಠವಾಗುತ್ತದೆ.ಆಗ ಮಾತ್ರ ಹೊರಗಿನ ಆಘಾತಗಳನ್ನು ಎದುರಿಸಲು ದೇಶ ಸಮರ್ಥವಾಗುತ್ತದೆ.ಸಶಕ್ತವಾಗುತ್ತದೆ.

    ಬಹುತೇಕ ನಮ್ಮೆಲ್ಲರಿಗೂ ಈ ವಿಚಾರದಲ್ಲಿ ಪ್ರಜ್ಞೆ ಜಾಗ್ರತವಾಗಿದೆ ಎನ್ನುವ ಆಶಯ ನನ್ನದು. ಆದರೂ ಈ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ನಮ್ಮದೇ ವ್ಯಕ್ತಿತ್ವ ಕೆಲವೊಮ್ಮೆ ಅಡೆತಡೆಗಳನ್ನು ಒಡುತ್ತದೆ.

    ನಾನೊಬ್ಬ ಗೃಹಿಣಿ.ತಾಯಿ.ಕೃಷಿ ಮಹಿಳೆ,ಒಂದಷ್ಟು ಸಂಘಸಂಸ್ಥೆಗಳಲ್ಲಿ ಸಕ್ರಿಯಳಾಗಿರುವವಳು.ಅದೆಲ್ಲಕ್ಕೂ ಮಿಗಿಲಾಗಿ ನಾನು ಕವಯಿತ್ರಿ, ಲೇಖಕಿ.ಹೀಗಿದ್ದಾಗ ನನ್ನೊಳಗೆ ಸದಾ ಒಂದು ಎಚ್ಚರದ ನಡೆ ಇರಲೇ ಬೇಕಾಗುತ್ತದೆ.

    ಅದರಲ್ಲೂ ಅಕ್ಷರದ ಸಖ್ಯ ಬೆಳೆಸಿಕೊಂಡವರಿಗೆ ಘಟನೆಗಳನ್ನು ಹೊರಗಿನಿಂದ ಗಮನಿಸಬೇಕಾದ ಅನಿವಾರ್ಯತೆ ಅವಶ್ಯಕತೆ ಎರಡೂ ಅಗತ್ಯವಿದೆ.

    ನನ್ನ ಮಟ್ಟಿಗೆ ನನ್ನ ಮೊದಲ ಬಲಹೀನತೆ ಭಾವನೆಗಳನ್ನು ಅತಿಯಾಗಿ ಬದುಕುವದು.
    ಈ ನನ್ನ ಬಗೆಯಿಂದ ಮುಕ್ತಿ ಬೇಕು ಎನಿಸುತ್ತದೆ. ಯಾವುದೇ ಸಮಯ ಸಂದರ್ಭ,ಘಟನೆ ,ವ್ಯಕ್ತಿ,ವಸ್ತು, ನೆನಪುಗಳೊಂದಿಗೆ ವಿಪರೀತ ಭಾವನಾತ್ಮಕವಾಗಿ ವರ್ತಿಸುವುದು ನನ್ನ ವ್ಯಕ್ತಿತ್ವ.
    ಈ ಬಗೆಯಿಂದಾಗಿ ಬಹಳಷ್ಟು ಬಾರಿ ಮುಕ್ತ ನಿರ್ಧಾರ ತೆಗೆದು ಕೊಳ್ಳಲು,ಧೃಡ ಮನಸ್ಸಿನಿಂದ ಮುಂದಡಿ ಇಡಲು ತಡೆಯಾಗುತ್ತದೆ.
    ಅಪನಂಬಿಕೆ ನನ್ನ ಆತ್ಮವಿಶ್ವಾಸದ ಎದಿರು ಮೇಲುಗೈ ಸಾಧಿಸದಂತೆ ನನ್ನನ್ನು ನಾನು ಮರುರೂಪಿಸಿಕೊಳ್ಳುತ್ತಲೇ ಇರಬೇಕಾಗಿದೆ.

    ಜೊತೆಗೆ ನನ್ನ “ನಾಳೆ ಮಾಡುವ” ಯೋಜನೆಗಳಿಂದ ಮುಕ್ತಿಬೇಕಿದೆ.
    ಅಲಸಿತನ ಮೈಯನ್ನೂ ಮನಸ್ಸನ್ನೂ ಹೊಕ್ಕು ಅಧಿಪತ್ಯ ಸಾಧಿಸುವುದನ್ನು ಮೀರಬೇಕಿದೆ.
    ಮೂಲದಿಂದ ಸದಾ ಚಟುವಟಿಕೆಯಿಂದಿರುವ ನನ್ನ ಮನಸ್ಸು ಕೆಲವೊಮ್ಮೆ ಈ ಯಾವುದೋ ಮೋಹದೊಳಗೆ ಬಂಧಿಯಾಗಿ ದಿನಗಟ್ಟಲೇ ಸಮಯ ಕೊಲ್ಲುತ್ತದೆ. ಮುಖ್ಯ ಈ ಅಲಸಿತನದಿಂದ ನನಗೆ ಮುಕ್ತಿ ಬೇಕಿದೆ.

    ಪಿತೃ ಸಂಸ್ಕ್ರತಿ ಹೇರಿರುವ ಬಹಳಷ್ಟು ಅನಗತ್ಯ ವಿಷಯಗಳನ್ನು ಇನ್ನಿಲ್ಲದಂತೆ ಆವಾಹಿಸಿಕೊಂಡಿರುವ ನಮ್ಮ ಹೆಣ್ಣುಮಕ್ಕಳು ತಮ್ಮೊಳಗಿನ ಶಕ್ತಿಯನ್ನು ಸ್ವಯಂ ಅರಿಯುವ ಅವಶ್ಯಕತೆ ಇದೆ.

    ಅರಿಯುವ ಯತ್ನದಲ್ಲೂ ಅದದೇ ಹಳೆಯ ವಿಚಾರಗಳನ್ನು ಪೊರೆಯುವ ಬಗೆಯಿಂದ ನಮಗೆ ಮುಕ್ತಿಬೇಕಿದೆ.

    ಸ್ವತಂತ್ರ ದಿನದ ಈ ಶುಭ ಸಂದರ್ಭ ನಿಜ ಅರ್ಥದಲ್ಲಿ ಸಂಪನ್ನ ಗೊಳ್ಳಬೇಕೆಂದರೆ ನನ್ನ ಮಟ್ಟಿಗೆ ಈ ಮೂರು ವಿಚಾರಗಳಿಂದ ಮುಕ್ತಿ ಬೇಕಿದೆ.ಸ್ವತಂತ್ರ ಬೇಕಿದೆ.

    ಮತ್ತು ಅದೆಲ್ಲವನ್ನೂ ಕೇವಲ ನಾನೇ ನನ್ನ ಆತ್ಮವಿಶ್ವಾಸದಿಂದ ರೂಢಿಸಿಕೊಳ್ಳಬೇಕಿದೆ.

    ಮತ್ತೊಮ್ಮೆ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.

    “ಭಾರತ ಮಾತೆ” ಎನ್ನುವಾಗ ಮೈಮನ ಸದಾ ಪುಳಕಗೊಳ್ಳಲಿ.
    ಮಾತೃಪ್ರೇಮ ಸದಾ ಜಾಗೃತವಾಗಿರಲಿ.

    ನಿಜವಾಗಿಯೂ ಬೇಕಿರೋದು ಮಾನಸಿಕ ಸ್ವಾತಂತ್ರ್ಯ

    ಮಂಜುನಾಥ ಬೊಮ್ಮಘಟ್ಟ, ಎಂಜಿನಿಯರ್ ಮತ್ತು ಬರಹಗಾರ

    ಇಂದು ಯಾರಿಗೂ ದೈಹಿಕ ಸ್ವಾತಂತ್ರದ ಕೊರತೆ ಇಲ್ಲ. ಒಂದು ಕಾಲದಲ್ಲಿ ನಮಗೆ ಅದು ತುಂಬಾ ಅವಶ್ಯವಾಗಿತ್ತು. ಈಗ ಯಾರನ್ನು ಯಾರೂ ದೈಹಿಕವಾಗಿ ಹಿಡಿದಿಡಲ್ಲ, ಅದು ಸಾಧ್ಯವೂ ಅಲ್ಲ,ಸಿಂಧುವೂ ಅಲ್ಲ ಬಿಡಿ.

    ಇನ್ನು ಮುಂದುವರೆದ ನಾಗರಿಕತೆಯ ಅಂಗವಾಗಿರುವ ನಮಗೆಲ್ಲರಿಗೂ ನಿಜವಾಗಿಯೂ ಬೇಕಿರೋದು ಮಾನಸಿಕ ಸ್ವಾತಂತ್ರ್ಯ. ಅದೇ ನಿಜವಾದ ಆನಂದ ಕೂಡಾ. ಟ್ಯಾಗೋರರ where mind is free without worries? ಎನ್ನುವ ಕವನದ ಸಾಲುಗಳು ಮಾನಸಿಕ ಸ್ವಾತಂತ್ಯದ ಅನಂದವನ್ನ,ಆವಶ್ಯಕತೆಯನ್ನ ಹೇಳುತ್ತವೆ. ಭೌತಿಕ ಸ್ತರದ ಎಲ್ಲ ಅನಂದಗಳನ್ನು ಇಂದು ಮಾನವ,ಹಿಂದೆಂದಿಗಿಂತಲೂ ಹೆಚ್ಚು ಮತ್ತು ಅನಾಯಾಸವಾಗಿ ಅನುಭವಿಸುತ್ತಿದ್ದಾನೆ. ಇಂದಿನ ಸಾಮಾನ್ಯ ಮನುಷ್ಯ,ಹಿಂದಿನ ರಾಜರುಗಳು ಅನುಭವಿಸಿರಬಹುದಾದಂತಹ ಸುಖ ಅನುಭವಿಸುತ್ತಿದ್ದಾನೆ. ರಾಜನಾದರೊ ಕುದುರೆ ಮೇಲೆ,ರಥದ ಮೇಲೆ ಮೈಯೆಲ್ಲ ನೋವು ಮಾಡಿಕೊಂಡು ಹೋದದ್ದನ್ನೇ ಸುಖ ಎನ್ನುವುದಾದರೆ,ಇಂದು ರಾಜಹಂಸ ಬಸ್ಸುಗಳಲ್ಲಿ ಓಡಾಡುವವರನ್ನು ಏನನ್ನುತ್ತೀರಿ? ಆದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದರೆ ,ಇದು ಪರಮಾನಂದ ಅಲ್ಲ ಅನ್ನುವುದನ್ನು ಸಿದ್ಧಮಾಡುತ್ತದೆ. ಹಾಗಾಗಿ ನಿಜವಾದ ಆನಂದ ಇರುವುದು ಮನಸ್ಸಲ್ಲಿ. ಅದು ಯಾವಾಗಲೂ ನಮ್ಮಲ್ಲಿ ಹುಟ್ಟಿದಾಗಿನಿಂದ ಇರುವ default setting ಎಲ್ಲರಿಗೂ. ನಾವು ಅದನ್ನು ಉಪಯೋಗಿಸಿಕೊಳ್ಳಲು ಕಲಿತಿಲ್ಲ. ಇದಲ್ಲದೆ,ನಾನಾ ಮಾರ್ಗಗಳಲ್ಲಿ ಮನಸ್ಸಿನ ಆನಂದ ಹೊಂದಬಹುದು. ಅದರಲ್ಲಿ ಪ್ರಾಮಾಣಿಕತೆಯ ಜೀವನ ಮಾರ್ಗ ಒಂದು. ಇನ್ನು ವಿಧ,ವಿಧ ಸಾಧನೆಗಳಿಂದ ಈ ಮನಶ್ಯಾoತಿಯ ಉತ್ತುಂಗ ತಲುಪಬಹುದು,ಅದನ್ನು ಬ್ರಹ್ಮಾನಂದ ಅನ್ನುತ್ತಾರೆ ಅಂತ ನಮ್ಮ ಪೂರ್ವಜರು,ಮಾರ್ಗದರ್ಶಕರು ಸಾಧಿಸಿಕೊಂಡು ಹೇಳಿಹೋಗಿದ್ದಾರೆ.

    ಜಾತಿ ಸಂಕೋಲೆಯಿಂದ ಮುಕ್ತಿ

    ವಿ.ಜಯರಾಮ್, ಬಿಜೆಪಿ ಯುವ ನಾಯಕ

    ನಾವು ಎಷ್ಟೇ ಪ್ರಗತಿ ಪರ, ಜಾತ್ಯತೀತ ಮನೋಧರ್ಮದ ಮಾತಾಡಿದರೂ ನಮ್ಮ ನಡತೆ ಮತ್ತು ನೆನಪುಗಳು ಪರಂಪರೆಯ ಜಡ ಧೋರಣೆಗಳಿಂದ ಪ್ರೇರಿತವಾಗಿವೆ. ಇದರಿಂದಲೇ ಜಾತಿ ಮತ್ತು ಬಣ್ಣ ಇವತ್ತಿಗೂ ನಮ್ಮ ಸಾಮಾಜಿಕ ಸ್ಥಾನಮಾನ ಅಳೆಯುವ ಬಹುಮುಖ್ಯ ಮಾನದಂಡವಾಗಿ ಬಳಕೆಯಾಗುತ್ತಿವೆ. ಅಂಬೇಡ್ಕರ್ ಅವರಂಥ ಮಹಾನೀಯರು ತಮ್ಮ ಜೀವನ ಪೂರ್ತಿ ಈ ತಾರತಮ್ಯಗಳನ್ನು ತೊಲಗಿಸಲು ಹೋರಾಡಿದರು. ಆದರೂ ಜಾತಿ ಅನಿಷ್ಠ ತೊಲಗಲಿಲ್ಲ. ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಗಾಗಿ ಅದು ಇನ್ನಷ್ಟು ಕ್ಲಿಷ್ಟ ಸಂಕೋಲೆಯಾಗಿ ಮಾರ್ಪಡುತ್ತಲೇ ಸಾಗಿರುವುದು ವಿಪರ್ಯಾಸ. ಈ ದುಸ್ಥಿತಿಯ ಬಗ್ಗೆ ನನ್ನಲ್ಲಿ ಕಳವಳದ ಜತೆಗೆ ಕನಿಕರವೂ ಇದೆ.
    ಜಾತಿಯ ಈ ಸಂಕೋಲೆ ಕೊನೆಗೊಳ್ಳದ ಹೊರತು ಸ್ವಾತಂತ್ರ್ಯದ ಪರಿಕಲ್ಪನೆಗೆ ಅರ್ಥ ಇಲ್ಲ. ಹಿಂದುತ್ವದ ಮಾತಿಗೂ ಬೆಲೆ ಇಲ್ಲ. ಹಾಗೆಂದ ಮಾತ್ರಕ್ಕೆ ನಾನು ನಿರಾಶಾವಾದಿಯಲ್ಲ. ಇಂದಲ್ಲ ನಾಳೆ ಅಂಬೇಡ್ಕರ್ ಕನಸಿನ ಮಾನವೀಯವಾದ ಸಮತಾ ಸಮಾಜ ನಿರ್ಮಾಣಗೊಳ್ಳುತ್ತದೆ ಎಂಬ ಆಶಾ ಭಾವನೆ ನನ್ನದು. ಈ ಹಿನ್ನೆಲೆಯಲ್ಲಿ ಜಾತಿ ಸಂಕೋಲೆಯಿಂದ ಮುಕ್ತಿ ದೊರಕುವುದು ಅಥವಾ ಮುಕ್ತಿ ಹೊಂದುವುದು ನನ್ನ ಪಾಲಿಗೆ ನಿಜವಾದ ಸ್ವಾತಂತ್ರ್ಯ.

    ದಮನಗಳಿಂದ ಸ್ವಾತಂತ್ರ್ಯ ಬೇಕು

    ಎಂ.ಪಿ.ಗುರುರಾಜ್. ಹಿರಿಯ ಸಾಹಿತಿ ಹಾಗೂ ರಂಗಕರ್ಮಿ

    ಸ್ವಾತಂತ್ರ್ಯ ಬಂದ ನಂತರ ಸಂವಿಧಾನದಲ್ಲಿ ಭಾರತೀಯ ನಾಗರಿಕರಿಗೆ ಮೂಲಭೂತ ಹಕ್ಕು, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ನೀಡುವ ಮೂಲಕ ರಾಮರಾಜ್ಯದ ಕನಸು ಕಾಣಲಾಗಿದೆ. ಇಂದು ಅದರ ನೆರಳಲ್ಲಿಯೇ ಕಾಣದ ಕೈಗಳ ಕಪಿಮುಷ್ಟಿಯ ಬಿಗಿಹಿಡಿತದಿಂದ ಉಸಿರುಗಟ್ಟಿದ ವಾತಾವರಣ ಇದೆ. ಇವುಗಳಿಂದ ಸ್ವಾತಂತ್ರ್ಯ ಪಡೆಯಲು ಮುಕ್ತ ರಹದಾರಿ ಕಾಣದೆ ಗೊಂದಲದಲ್ಲಿದ್ದೇವೆ.

    ಸರ್ವ ಧರ್ಮಿಯರು ತಮ್ಮ ಹಕ್ಕುಗಳನ್ನು ಪಡೆಯಲು ಸುಲಭ ಮಾರ್ಗಗಳಿರಬೇಕು. ಸಾಮಾನ್ಯರಿಗೆ ಹಕ್ಕುಗಳ ಬಗ್ಗೆ ಮಾತಾಡಲು ಭಯದ ವಾತಾವರಣ ಸೃಷ್ಟಿಸಿಲಾಗಿದೆ. ಪಟ್ಟ ಭದ್ರರ ಕರಿನೆರಳು ಸಮಾಜವನ್ನು ಆವರಿಸುತ್ತಿದೆ. ಅನ್ಯಾಯ, ಭ್ರಷ್ಟಚಾರ, ಅಕ್ರಮಗಳ ಬಗ್ಗೆ ಸಾರ್ವಜನಿಕರು ಧ್ವನಿ ಎತ್ತದಂತೆ ವ್ಯವಸ್ಥೆ ಸೃಷ್ಟಯಾಗಿದೆ. ಸಮಾಜ ಘಾತುಕರೇ ಆಯಕಟ್ಟಿನ ಸ್ಥಾನಗಳಲ್ಲಿದ್ದು ದೇಶ ಲೂಟಿ ಮಾಡಿದರೂ ಸುಮ್ಮನಿರುವ ಸ್ಥಿತಿಯಲ್ಲಿದ್ದೇವೆ. ದಟ್ಟ, ನೇರ ಮಾತನಾಡುವು ಸ್ವಾತಂತ್ರ್ಯಬೇಕು. ಮಾತನಾಡುವವರಿಗೆ ಸೂಕ್ತ ರಕ್ಷಣೆ ಬೇಕು. ರಕ್ಷಣೆ ಕೊರತೆಯಿಂದ ಜೀವ ಕೈಯಲ್ಲಿಟ್ಟುಕೊಂಡು ಮಾತನಾಡಬೇಕಾಗಿದೆ.ಪತ್ರಿಕಾ ಸ್ವಾತಂತ್ರ್ಯವೂ ಈಗೀಗ ಕಡಿವಾಣಗೊಳ್ಳುವಂತೆ ತೋಚುತ್ತಿದೆ. ಸಾಕ್ಷ್ಯಧಾರಗಳ ಕೊರತೆಯಿಂದ ಸಮಾಜ ಘಾತಕರ ವಿರುದ್ಧ ಸೆಣಸಾಡುವ ಆತ್ಮವಿಶ್ವಾಸ ಹುಡುಗಿದೆ. ನಿರ್ಭೀಡೆಯಿಂದ ಹೋರಾಟ ನಡೆಸಿ ಸಮಾಜ ತಿದ್ದುವ ಸ್ವಾತಂತ್ರ್ಯ ಬೇಕಾಗಿದೆ. ಕಣ್ಣು ಮುಚ್ಚಿ ಬೆಕ್ಕು ಹಾಲು ಕುಡಿದರೂ ಯಾರು ನೋಡುವುದಿಲ್ಲ ಎನ್ನವಂತೆ ಪಟ್ಟಭದ್ರರು ಸಮಾಜಕ್ಕೆ ತಿಳಿದೇ ಭ್ರಷ್ಟಾಚಾರ ಮಾಡುತ್ತ ಸಾತ್ವಿಕ ಮಾತನಾಡುತ್ತಿದ್ದಾರೆ. ಇಂತಹ ಸೋಗಲಾಡಿತನ ತೊಲಗಬೇಕು ಶ್ರೀ ಸಾಮಾನ್ಯ ಸತ್ಯ ದರ್ಶನ ಮಾಡುವ ಸ್ವಾತಂತ್ರ್ಯ ಬೇಕು.

    ಮೂಲಭೂತ ವಾದದಿಂದ ಸ್ವಾತಂತ್ರ್ಯ

    ಪ್ರಕಾಶ್‌ ರಾವಂದೂರು, ಉದ್ಯಮಿ

    ಯಾವುದೇ ಮೂಲಭೂತ ವಾದದಿಂದ ನಮಗೆ ಮುಕ್ತಿ ಸಿಗಬೇಕು. ಮೂಲಭೂತವಾದ ಹೆಚ್ಚಾದಾಗ ಮಾನವ ಹಕ್ಕುಗಳು ಕಡಿಮೆಯಾಗುತ್ತದೆ. ಇದು ಒಂದು ರೀತಿ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ. ಹೀಗಾಗಿ, ಯಾವುದೇ ಮೂಲಭೂತವಾಗಿರಲಿ ಅದರಿಂದ ಮುಕ್ತಿ ಸಿಗಬೇಕು. ಭ್ರಷ್ಟಾಚಾರ ಹೆಚ್ಚಾಗಿದೆ. ಈ ಭ್ರಷ್ಟತೆಯಿಂದ ಸ್ವಾತಂತ್ರ್ಯ ಸಿಗಬೇಕು.

    ಭ್ರಷ್ಟತೆಯಿಂದ ಸ್ವಾತಂತ್ರ್ಯ ಸಿಗಬೇಕು

    ಭಾರ್ಗವ್‌ ಎ.ವಿ., ಐಟಿ ಉದ್ಯೋಗಿ

    ಜಾತ್ಯತೀತತೆ ಹೆಸರಿನಲ್ಲಿಜಾತಿ ಮಾಡುವುದು ಹೋಗಬೇಕು. ಜಾತಿ ಬಿಟ್ಟು ಪ್ರತಿಭೆಗೆ ಎಲ್ಲೆಡೆ ಅವಕಾಶ ಇರಬೇಕು. ಜಾತಿ ವ್ಯವಸ್ಥೆಯಿಂದ ನಮಗೆ ಸ್ವತಂತ್ರ ಸಿಗಬೇಕು.

    ಸ್ವಾತಂತ್ರ್ರ್ಯ ಎಂಬ ಆಲೋಚನೆಯಿಂದಲೆ ಸ್ವಾತಂತ್ರ್ಯ

    ಕಿರಣ್ ಮಾಡಾಳು, ಕಲಾವಿದ

    ತಮ್ಮ ಭಾವನೆಯನ್ನು ಈ ಕೆಳಗಿನ ಚಿತ್ರದಿಂದ ಅಭಿವ್ಯಕ್ತಿಸಿರುವ ಕಲಾವಿದ ಕಿರಣ್ ಮಾಡಾಳು ಸ್ವಾತಂತ್ರ್ಯ ಎಂಬ ಆಲೋಚನೆಯಿಂದಲೇ ಮನಸ್ಸಿಗೆ ಸ್ವಾತಂತ್ರ್ಯ ಬೇಕು ಎನ್ನುತ್ತಾರೆ.

    ವರ್ಕ್ ಫ್ರಮ್ ಹೋಂ ನಿಂದ ಸ್ವಾತಂತ್ರ್ಯ ಬೇಕಾಗಿದೆ

     
    ಚಿಕ್ಕವರಾಗಿದ್ದಾಗ ಸ್ವಾತಂತ್ರ್ಯ ದಿನಾಚರಣೆ ಎಂದರೆ ಅದೇನೋ ಸಂಭ್ರಮ.  ರಜಾದಿನ ಮಜಾ ರಮಾಡಬೇಕು ಎಂದಿನಿಸುತ್ತಲೇ ಇರಲಿಲ್ಲ.  ನಮ್ಮ ಊರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ  ಹಿಂದಿನ ದಿನ ಶಾಲೆಯಲ್ಲಿ  ತಳಿರು, ತೋರಣ ಕಟ್ಟಿ,  ಎನ್ ಸಿ ಸಿ, ಸ್ಕೌಟ್ಸ್  ವಿದ್ಯಾರ್ಥಿಗಳು  ಧ್ವಜ ವಂದನೆಗೆ ಬೇಕಾದ ತಾಲೀಮಿನಲ್ಲಿ ನಿರತರಾಗಿದ್ದಾರೆ, ನಾನು ನನ್ನ ತಾಯಿಯ ಹತ್ತಿರ ಭಾಷಣ ಸ್ಪರ್ಧೆಗೆ ಬೇಕಾದ ವಿಷಯಗಳನ್ನು ಸಂಗ್ರಹಿಸಿ  ಬರೆಸಿಕೊಂಡು ಬಾಯಿಪಾಠ ಮಾಡಿ ತಯಾರಾಗುತ್ತಿದ್ದೆ.

     ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ಮುಂಜಾನೆ ಇಸ್ತ್ರಿ ಮಾಡಿದ ಶಾಲಾ ಸಮವಸ್ತ್ರ ಧರಿಸಿ, ನಮ್ಮ ನಮ್ಮ ಶಾಲೆಗಳಲ್ಲಿ ಧ್ವಜ ಹಾರಿಸಿ, ನಂತರ  ಡ್ರಮ್ಸ್, ತುತ್ತೂರಿ, ಲೇಜಿಮ್ಸ್  ಹಿಡಿದು, ಊರಿನಲ್ಲೆಲ್ಲಾ ಹಲವಾರು ಟ್ರ್ಯಾಕ್ಟರ್ ಗಳಲ್ಲಿ ವಿವಿಧ ಸ್ವತಂತ್ರ ಸೇನಾನಿಗಳ ವಿವಿಧ ವೇಷಭೂಷಣಗಳನ್ನು ಹಾಕಿಕೊಂಡ ಗೆಳೆಯರೊಡನೆ  ಮೆರವಣಿಗೆ ಮುಖಾಂತರ ಸಾಗುತ್ತಿದ್ದೆವು. ಅನಂತರ ಕಾಲೇಜಿನ ದೊಡ್ಡ ಪ್ರಾಂಗಣದಲ್ಲಿ ಸೇರಿ  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಮ್ಮ ಸಂಗಿತ ಮೇಸ್ಟ್ರು ಹೇಳಿ ಕೊಟ್ಟ ಪ್ರಾರ್ಥನಾ ಗೀತೆಯನ್ನು  ಹಾಡುತ್ತಿದ್ದೆವು.  ಬಂದ ಅತಿಥಿ ಗಳ ಭಾಷಣ ಕೇಳುವುದಕ್ಕಿಂತ ನನ್ನ ಹಾಗು ಸಹಪಾಠಿಗಳಲ್ಲಿ ಯಾರು ಚನ್ನಾಗಿ ವಿಷಯ ಪ್ರಸ್ತಾವನೆ ಮಾಡುತ್ತಾರೆ ಯಾರು ಸ್ಪರ್ಧೆಯಲ್ಲಿ ಗೆದ್ದು ಪದಕ ಪಡಿಯುತ್ತಾರೆ ಎನ್ನುವ ಕಾತುರದಲ್ಲಿ ಇರುತ್ತಿದ್ದೆವು.   ನಂತರ ವಿವಿಧ  ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಂಚುವುದು ನಂತರ ವಿವಿಧ  ಶಾಲೆಯಲ್ಲಿ ಓದುವ ಗೆಳೆಯರೆಲ್ಲ ಒಂದೆಡೆ ಸೇರಿ  ಗುಂಪು ಗುಂಪಾಗಿ ಆಟವಾಡುತ್ತಾ ಸಂಭ್ರಮದಿಂದ  ಮನೆ ಸೇರುವ ಹೊತ್ತಿಗೆ ಮಧ್ಯಾಹ್ನ ಮೀರಿರುತ್ತಿತು. ಹೌದು, ಆ ದಿನಗಳೇ ಮೆಲಕು ಹಾಕುವುದೇ ವಿಶೇಷ. 

    ಕಾಲೇಜು ಓದಲು ಊರಿನಿಂದ ಬೆಂಗಳೂರು ಸೇರಿ, ಪದವಿ, ಸ್ನಾತಕೋತ್ತರ ಮುಗಿಸಿ ಐಟಿ ಕೆಲಸ ದಲ್ಲಿ ನಿರತರಾದಮೇಲೆ  ಸ್ವಾತಂತ್ರ್ಯೋತ್ಸವದ   ಅಭಿಮಾನಕ್ಕೆ ಕೊರತೆ ಇಲ್ಲದಿದ್ದರೂ, ಸಂಭ್ರಮ ಕಡಿಮೆಯಾಗಿದೆ ಎಂದೇ ಹೇಳಬಹುದು. 

    ಈಗೀಗ ಅನ್ನಿಸುವುದು, ದೇಶ ಸುರಕ್ಷಿತವಾಗಿ ಮುನ್ನೆಡೆಯುತ್ತಿದ್ದರೂ   ನಮಗೆ ಹಲವಾರು ವಿಷಯಗಳಲ್ಲಿ ಇನ್ನು ಸ್ವತಂತ್ರ ಬೇಕು ಎಂದೆನಿಸುತ್ತಿದೆ.  ಇತ್ತೀಚಿಗೆ ಐಟಿ ಕಂಪೆನಿಗಳಲ್ಲಿ ಸ್ವಾತಂತ್ರ್ಯೋತ್ಸವದ   ಹಿಂದಿನ ದಿನ ಸಾಂಕೇತಿಕವಾಗಿ ನಮ್ಮ ಡೆಸ್ಕ್ ಗಳಲ್ಲಿ ಧ್ವಜ ತ್ರಿವರ್ಣ ರಂಗುಗಳಿಂದ ಅಲಂಕರಿಸಿ happy independence  day  ಎಂದು  ವಾಟ್ಸ್ ಪ್ ಸ್ಟೇಟಸ್ ಹಾಕಿ, ಕೈಕುಲುಕಿದರೂ ಒಂದು ದಿನ ರಜಾ ಸಿಗುವುದರಿಂದ  ದಿನಕ್ಕೆ ಹನ್ನೆರೆಡು ಗಂಟೆ ಮಾಡುವ ಕೆಲಸದಿಂದ ಒಂದು ದಿನ ಮಟ್ಟಿಗಾದರೂ ಯಾವುದೇ ಮೀಟಿಂಗ್ಸ್, ಕಾನ್ಫೆರನ್ಸೆ ಕಾಲ್ ಗಳು ಇಲ್ಲದೆ ಇರುವ  ಸ್ವತಂತ್ರಸಿಗುತ್ತದೆ  ಎಂದು ಕಾಯುವ ಪ್ರಸಂಗ ಬಂದಿದೆ. 

    ಅದರಂತೆ ದಿನ ಬೆಂಗಳೂರಿನ ಅದೇ ವಾಯು ಮಾಲಿನ್ಯದಿಂದ, ಟ್ರಾಫಿಕ್ ನಿಂದ  ಬಿಡುಗಡೆ ಗೊಂಡು ಯಾವುದಾದರೂ  ಹಸಿರು ತುಂಬಿದ ಬೆಟ್ಟ ಗುಡ್ಡ ಸುತ್ತುವ ಸ್ವತಂತ್ರ ಮನಸ್ಸಿಗೆ ಬೇಕನಿಸುತ್ತದೆ.  ಬರುವ ಸಂಬಳದ ಅರ್ಧ ಭಾಗ  ಇಎಂಐ  ಕಟ್ಟುವುದರಿಂದ ಆದಷ್ಟು ಬೇಗ ಅದರಿಂದ ಸ್ವತಂತ್ರ ಬೇಕೆನಿಸುತ್ತದೆ.

      
    ಅದರಂತೆ ಈ ಸಾರಿ ಸ್ವತಂತ್ರ ಇನ್ನು ವಿಚಿತ್ರ,  ಕರೋನ ಹೊರಗೆ  ಕುಣಿಯುತ್ತಿದೆ ಮನೆಯಲ್ಲಿಂದಲೇ ಕೆಲಸ ಮಾಡುತ್ತಾ ಮಾಡುತ್ತಾ ಹೊರ ಪ್ರಪಂಚದ ಬೆಳಕು ಸರಿಯಾಗಿ ನೋಡದಂತೆ ನಮಗೆ ಗೊತ್ತಿಲ್ಲದಂತೆ ನಾವು ಬಂಧಿಯಾಗಿದ್ದೇವೆ.  ಇದರಿಂದ ಬಿಡುಗಡೆ ಹೊಂದಿ ಮುಂಚಿನಂತೆ ಆರಾಮಾಗಿ  ಸುತ್ತಾಡುವ ಸ್ವತಂತ್ರ ಬೇಕಾಗಿದೆ.  ಮಕ್ಕಳಿಗೆ ಮನೆಬಿಟ್ಟು ಪಾರ್ಕ್ ಗಳಲ್ಲಿ  ಆಟವಾಡುವ ಸ್ವಾತಂತ್ರ್ಯ ಬೇಕಾಗಿದೆ.   ಮನೆಯಲ್ಲಿ ಇರುವ ಹೆಂಗಸರಿಗೆ ಮಕ್ಕಳು ಯಾವಾಗ ಶಾಲೆಗೆ ಹೋಗುತ್ತಾರೆ, ಗಂಡಸರು ಯಾವಾಗಾದರೂ ಆಫೀಸ್ ಹೋಗುತ್ತಾರೋ ಕಾಫಿ ತಿಂಡಿ ಮಾಡುವದರಿಂದ ಯಾವಾಗ  ಸ್ವತಂತ್ರ ಸಿಗುತ್ತದೆಯೋ ಎಂದು ಕಾಯುತ್ತಿದ್ದಾರೆ.

     ಏನೆ ಆಗಲಿ ಈಬಾರಿ   ನಮ್ಮ ದೇಶಕ್ಕೆ ಸ್ವಾತಂತ್ರ್ಯ  ತಂದುಕೊಟ್ಟ ಸೇನಾನಿಗಳನ್ನ ನೆನೆಯುತ್ತಾ ನಮ್ಮ ನಮ್ಮ ಮನೆಗಳ ಮಹಡಿ ಮೇಲೆ  ರಾಷ್ಟ್ರ ಧ್ವಜ ಹಾರಿಸಿ, ರಾಷ್ಟ್ರ ಗೀತೆ  ಹಾಡಿ, ಸಿಹಿ ತಿಂದು ಸ್ವಾತಂತ್ರ್ಯೋತ್ಸವದ   ಆಚರಿಸೋಣ.   ಮುಂದಿನ ಸ್ವಾತಂತ್ರ್ಯೋತ್ಸವದ   ಹೊತ್ತಿಗೆ ಎಲ್ಲರೂ ಒಟ್ಟಿಗೆ ಕೂಡಿ ಆಚರಿಸುವಂತಾಗಲಿ  ಒಟ್ಟಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ನಲಿಯುವಂತಾಗಲಿ ಎಂದು ಆಶಿಸೋಣ.

    ಬಿಜೆಪಿಯ ಮುಂದಿನ ಅಸ್ತ್ರ ಏನಾಗಬಹುದು ?

    ಶ್ರೀ ರಾಮಜನ್ಮಭೂಮಿ ವಿವಾದ ತಾರ್ಕಿಕ ಅಂತ್ಯ ಕಂಡಿದೆ. ಮಂದಿರಕ್ಕೆ ಶಿಲಾನ್ಯಾಸ ಆಗಿ ಹೋಗಿದೆ. ಕಾಂಗ್ರೆಸ್ ಸೇರಿದಂತೆ ಯಾವುದೇ ಜಾತ್ಯತೀತ ಎಂದು ಕರೆಸಿಕೊಳ್ಳುತ್ತಿರುವ ಪಕ್ಷಗಳು ಕೂಡ ಶಿಲಾನ್ಯಾಸವನ್ನು ಸ್ವಾಗತಿಸಿವೆ. ಹೀಗಾಗಿ ಬಿಜೆಪಿಯ ಪಾಲಿಗೆ ಮುಂದೆ ಏನು ವಿಷಯ ?

    ಭವಿಷ್ಯವನ್ನು ಬಗೆದು ನೋಡಲು ಯಾರಿಗೂ ಸಾಧ್ಯವಿಲ್ಲ. ಆದಾಗ್ಯೂ, ಒಂದಿಷ್ಟು ರೀತಿಯಲ್ಲಿ ಈಗಿನ ಪರಿಸ್ಥಿತಿಯೇ ಮುಂದುವರಿದರೆ ಏನಾಗಬಹುದು ಎಂದು ಯೋಚನೆ ಮಾಡಲು ಸಾಧ್ಯವಿದೆ.

    ಬತ್ತಳಿಕೆ ಖಾಲಿ ?

    ಲೋಕಸಭಾ ಚುನಾವಣೆಗೆ ಇನ್ನೂ ಬಹುತೇಕ ಮೂರು ವರ್ಷಗಳು ಬಾಕಿ ಇವೆ. ಪ್ರಧಾನಿ ನರೇಂದ್ರ ಮೋದಿಯ ವರ್ಚಸ್ಸು, ಅಮಿತ್ ಶಾ ಅವರ ಕಾರ್ಯತಂತ್ರ ಇವೆರಡರಿಂದಲೇ ಪಕ್ಷ ಮತ್ತೊಮ್ಮೆ ಅಂದರೆ ಮೂರನೇ ಬಾರಿಗೆ ಅಧಿಕಾರಕ್ಕೆ ಏರಲು ಸಾಧ್ಯ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಆಡಳಿತ ವಿರೋಧಿ ಅಲೆ ಎಂಬುದು ಭಾರತದಲ್ಲಿ ಸಾಮಾನ್ಯ. ಆದರೆ, ಸಧ್ಯದ ಸ್ಥಿತಿಯಲ್ಲಿ ಪರ್ಯಾಯ ಸಮೂಹ ನಾಯಕ ಇಲ್ಲದಿರುವುದೇ ಬಿಜೆಪಿಯ ಪಾಲಿಗೆ ಬಹುದೊಡ್ಡ ಲಾಭ.

    ಹಾಗೆಂದು ಅದು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಈಗಾಗಲೇ ಜಮ್ಮು-ಕಾಶ್ಮೀರದ ಕುರಿತಾಗಿ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದೆ. ದೊಡ್ಡ ಮುಖಬೆಲೆಯ ನೋಟು ಅಮಾನ್ಯದ ಮೂಲಕ ಸುದ್ದಿ ಮಾಡಿದೆ. ತ್ರಿವಳಿ ತಲ್ಲಾಕ್ ಅದರ ಮತ್ತೊಂದು ಅಸ್ತ್ರ. ಆದರೆ ಮುಂದೇನು ?

    ಇನ್ನೂ ಇದೆ

    ಹಾಗೆಂದು ಬಿಜೆಪಿಯ ಬತ್ತಳಿಕೆ ಖಾಲಿಯಾಗಿದೆ ಎಂದು ಹೇಳುವ ಹಾಗಿಲ್ಲ. ಮುಂದಿನ ಲೋಕಸಭಾ ಚುನಾವಣೆಯ ಕಾಲದಲ್ಲೇ ರಾಮ ಮಂದಿರದ ಉದ್ಘಾಟನೆಯನ್ನು ಹಮ್ಮಿಕೊಳ್ಳುವ ಎಲ್ಲಾ ಸಾಧ್ಯತೆಯಿದೆ. ಈ ಮೂಲಕ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಯುಗ ಪುರುಷ ಎಂದು ಬಿಂಬಿಸಿ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಇದರ ಜತೆಗೆ ಏಕರೂಪ ನಾಗರಿಕ ಸಂಹಿತೆ (ಕಾಮನ್ ಸಿವಿಲ್ ಕೋಡ್)ಯ ವಿಷಯ ಮುನ್ನಲೆಗೆ ತರುವ ಸಾಧ್ಯತೆಗಳಿವೆ.

    ಈಗಂತೂ ಇಂಟರ್ ನೆಟ್ ಯುಗ. ಬಿಜೆಪಿಯಲ್ಲಿ ಅದರಲ್ಲಿ ಪರಿಣತರಾದ ಬಹುದೊಡ್ಡ ತಂಡವೇ ಇದೆ. ತಮ್ಮ ಭಾವನೆಗಳನ್ನು ಜನರ ಮನಸ್ಸಿಗೆ ತಾಕುವ ಹಾಗೆ ಹೇಳುವ ಪೋಸ್ಟ್ ಗಳನ್ನು ಅವರು ಹಾಕಿಯೇ ಹಾಕುತ್ತಾರೆ. ಆದರೆ ಕಾಂಗ್ರೆಸ್ ನಲ್ಲಿ ಅಂತಹ ಒಂದು ತಂಡ ಸದ್ಯದ ಮಟ್ಟಿಗೆ ಇಲ್ಲ. ಸೋನಿಯಾ ಗಾಂಧಿಯವರು ಕಾಂಗ್ರೆಸ್ ಪಕ್ಷಾಧ್ಯರಾಗಿ ಪಕ್ಷವನ್ನು ಮುನ್ನಡೆಸಿದ್ದಾರೆಯೇ ಹೊರತು ಸ್ವಯಂ ಆಗಿ ಅಲ್ಲ ಎಂದು ಹೇಳಿದರೆ ತಪ್ಪಿಲ್ಲ. ಜತೆಗೆ ಶತಮಾನದ ಹಳೆಯ ಪಕ್ಷದಲ್ಲಿ ಹೊಸ ಚಿಂತನೆಗಳೂ ಹುಟ್ಟುತ್ತಿಲ್ಲ. ಹಳೆಬರ ಆಡಂಬೋಲವಾಗಿರುವ ಕಾಂಗ್ರೆಸ್, ಚೇತನವಿಲ್ಲದೆ ಬಳಲುತ್ತಿದೆ. ಹೀಗಾಗಿ ಬಿಜೆಪಿಗೆ ಮತ್ತೊಂದು ಅವಕಾಶ ಬಂದರೂ ಬಂದಿತು ಎಂದೇ ಹೇಳಬೇಕಾಗುತ್ತದೆ. ಆದರೆ, ಮೂರು ವರ್ಷಗಳು ಅಂದರೆ ದೀರ್ಘಕಾಲ. ಆಗ ಏನು ಬೇಕಾದರೂ ಬದಲಾವಣೆಯಾಗಬಹುದು ಅಲ್ಲವೇ ?

    ಮಳೆಯೊಂದು ಬಾಲ್ಯದ ಆಶ್ಚರ್ಯ , ಯೌವನದ ಅನುಭವ , ಬದುಕಿನ ಸಂಭ್ರಮ

    ನಿನ್ನಿಂದ ಬೇಸಾಯ . ನಿನ್ನಿಂದ ಕೊಯ್ಲು .ನಿನ್ನಿಂದ ಸುಗ್ಗಿ .ನೀನೇ ಫಲ, ನೀನೇ ದವಸ , ನೀನೇ ಧಾನ್ಯ . ನೀನು ಬರ್ತೀಯ ಅಂದ್ರೇನೆ ಕಾರ್ಮೋಡಗಳು ಜೊತೆಯಾಗುತ್ತವೆ . ಭಾನು ಗುಡುಗುತ್ತಾ ಬಹುಪರಾಕನ್ನ ತಿಳಿಸುತ್ತೆ ‌. ಮಿಂಚು ಸಂಚರಿಸಿ ಸಂಚಲವನ್ನೇ ಸೃಷ್ಟಿಸುತ್ತೆ . ಕೃಷಿಕರು ಕನಸಿನಲ್ಲಿ ನಿನ್ನ ಭ್ರಮಿಸುತ್ತಾರೆ , ಜೊತೆಗೆ ರಮಿಸುತ್ತಾರೆ , ಕೈಎತ್ತಿ ನಮಿಸುತ್ತಾರೆ .

    ಕೆರೆಗಳು ಜಾಗ ಹುಡುಕಿದ್ರೇ ನದಿಗಳು ದಾರಿ ಹುಡುಕುತ್ತವೆ . ನಿನ್ನತ್ರ ಹೆಚ್ಚು ಕಡಿಮೆ ಎಂಬೆರಡು ಪದಕ್ಕೆ ತುಂಬಾನೇ ಒಳ ಅರ್ಥ ಇದೆ . ನೀನು ಅಳತೆ ಮೀರಿದರೂ ಅಪಾಯ , ಅಳತೆಗೆ ಬಾರದಿದ್ದರೂ ಅಪಾಯ. ನಿನದೊಂದು ಸ್ವಾದದ ಸುವಾಸನೆಯಿದೆ . ನಿನ್ನದೇ ಆದ ನಿರ್ಧಿಷ್ಟ ಕಾಲವಿದೆ . ನಿನ್ನನ್ನಳಿಯಲು ಹವಾಮಾನ ಇಲಾಖೆಯಿದೆ .

    ಅನ್ನದಾತರಿಗೆ ನೀನು ಅನ್ನವೂ ಹೌದು ಕನ್ನವೂ ಹೌದು . ನಿನ್ನ ಮನಸ್ಥಿತಿ ಚೆನ್ನಾಗಿದ್ರೆ ಸೂರ್ಯನೊಂದಿಗೆ ಬೆರೆತು ಸೊಗಸಾದ ಕಾಮನಬಿಲ್ಲನ್ನು ಸೃಷ್ಟಿಸ್ತೀಯ. ಅದೇ ನಿನ್ನ ಮೂಡು ಸರಿ ಇಲ್ಲದಾಗ ಅದೇ ಸೂರ್ಯನ ಹುಟ್ಟಡಗಿಸ್ತೀಯ . ನಿನ್ನ ಗೈರುಹಾಜರಿಯಿಂದ ಪ್ರಕೃತಿ ಕೋಪಗೊಂಡ್ರೆ ನಿನ್ನ ಜೋರುಹಾಜರಿಯಿಂದ ಪ್ರಕೃತಿ ವಿಕೋಪಗೊಳ್ಳುತ್ತೆ.

    ಕವಿಗಳು ನಿನ್ನನ್ನು ಜಲಧಾರೆ, ವರ್ಷಧಾರೆ, ವರುಣ, ತುಂತುರುಮಳೆ , ಸೋನೇಮಳೆ , ಜೋರುಮಳೆ , ಮುಂಗಾರುಮಳೆ , ಜಡಿಮಳೆ , ಆಲೀಕಲ್ಲು ಮಳೆ, ಧಾರಾಕಾರಮಳೆ ಎಂದು ವಿಧವಿಧವಾಗಿ ವರ್ಣಿಸುತ್ತಾರೆ.

    ನಿನ್ನ ಹನಿಗಳದ್ದು ಒಮ್ಮೊಮ್ಮೆ ನರ್ತನವಾದರೆ ಒಮ್ಮೊಮ್ಮೆ ರುದ್ರನರ್ತನ . ನೀನು ಪ್ರೇಮಿಗಳಿಗೆ ಸಿಹಿ ಭಗ್ನಪ್ರೇಮಿಗಳಿಗೆ ಕಹಿ . ನಿನ್ನ ಆಗಮನಕ್ಕೆ ಕೃತಕ ಛತ್ರಿಗಳು ಅರಳಿದರೆ , ನಿರ್ಗಮನದ ನಂತರ ಜೀವಂತ ಅಣಬೆಗಳೇ ಅರಳುತ್ತವೆ .

    ಕಾಲಕಾಲಕ್ಕೆ ನಿನ್ನಿಂದ ಗಿಡ ಮರ ಕಾಡು ನಿಸರ್ಗ ಬೆಳೆಯುತ್ತವೆ , ಅದೇ ನೀನು ಮುನಿಸಿಕೊಂಡರೆ ಬೃಹತ್ ಮರಗಳು ತಲೆಕೆಳಗಾಗಿ ಉರುಳುತ್ತವೆ , ಅಷ್ಟೇ ಯಾಕೇ ಸರ್ಕಾರಗಳೇ ಉರುಳಿದರೂ ಆಶ್ಚರ್ಯವಿಲ್ಲ . ಎಷ್ಟೇ ಆಗಲಿ ನೀನು “ವರುಣದೇವ” ನಲ್ಲವೇ.

    ಹಳ್ಳಿಗಳಲ್ಲಿ ಮೊದಲೆಲ್ಲಾ ಪರ ಊರಿನವರು ಯಾರೇ ಕಂಡರೂ ಅವರು ಕೇಳುತ್ತಿದ್ದ ಮೊದಲ ಪ್ರಶ್ನೆ ನಿಮ್ ಕಡೆ ಮಳೆ ಆಯ್ತಾ ಅಂತ . ಅವರು ವಾತಾವರಣ ಮತ್ತು ವಾಸನೆ ಗ್ರಹಿಸಿಯೇ ಮಳೆ ಬರುತ್ತಾ ಬರಲ್ವಾ ಅಂತ ಊಹಿಸುತ್ತಿದ್ದರು . ಮಳೆಗೆ ಹಳ್ಳಿಗರ ಮುಖ ಮಾತ್ರ ಅರಳುತ್ತಿರಲಿಲ್ಲ , ಹೊಲ ಗದ್ದೆ ತೋಟ ಪ್ರತಿಯೊಂದೂ ಸಂಪೂರ್ಣವಾಗಿ ಹಸಿರಿನಿಂದ ನಳನಳಿಸುತ್ತಿತ್ತು .

    ಮಳೆ ಅನ್ನುವುದು ಕಣ್ಣಿಗೆ ಹನಿಯಾಗಿ ಕಾಣಿಸಿದರೆ, ಕಿವಿಗೆ ಧ್ವನಿಯಾಗಿ ಕೇಳಿಸುತ್ತದೆ .
    ಮಳೆಯೊಂದು ಬಾಲ್ಯದ ಆಶ್ಚರ್ಯ , ಯೌವನದ ಅನುಭವ , ಬದುಕಿನ ಸಂಭ್ರಮ ,ಜಲಚರಗಳ ಜೀವಜಲ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಕೋವಿಡ್ -19 ಲಸಿಕೆಯ ಶೀತಲ ಸಮರದಲ್ಲಿ ರಷ್ಯಾ ಗೆದ್ದು ಬಿಟ್ಟಿತೇ ?

    ಮಹಾಯುದ್ಧಗಳ ಕಾಲ ಮುಗಿದಿದೆ. ಈಗೇನಿದ್ದರೂ ಸೈಬರ್, ಜೈವಿಕ, ವೈರಸ್ ಸಮರಗಳ ಯುಗ. ಸದ್ಯ ರಷ್ಯಾವು ಕೋವಿಡ್ -19 ವಿರುದ್ಧ ಮೊದಲ ಲಸಿಕೆಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದಕ್ಕೆ ಅಲ್ಲಿನ ಸರಕಾರದ ಅನುಮೋದನೆಯೂ ಸಿಕ್ಕಿದೆ. ಸ್ವತಃ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ತಮ್ಮ ಇಬ್ಬರು ಪುತ್ರಿಯರ ಪೈಕಿ ಒಬ್ಬಳ ಮೇಲೆ ಇದರ ಪ್ರಯೋಗವನ್ನು ಯಶಸ್ವಿಯಾಗಿ ಮಾಡಲಾಗಿದೆ. ಆಕೆ ಕೊರೊನಾ ವೈರಸ್ ವಿರುದ್ಧ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿದ್ದು ಸಾಬೀತಾಗಿದೆ ಎಂದು ಘೋಷಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಇದರ ಪರಿಣಾಮದ ದೃಢೀಕರಣ (ವೆರಿಫಿಕೇಶನ್) ಇನ್ನೂ ಆಗಿಲ್ಲ.

    ಆದರೆ, ಈ ಸಂದರ್ಭದಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ, ಸ್ಪುಟ್ನಿಕ್ –ವಿ ಹೆಸರಿನ ಈ ಲಸಿಕೆ ಮತ್ತೊಂದು ಶೀತಲ ಸಮರದ ಮುನ್ಸೂಚನೆಯೇ ಎಂಬುದು. ಇಲ್ಲಿ ಸ್ಪುಟ್ನಿಕ್ ಹೆಸರಿನ ಬಗ್ಗೆಯೇ ವಿಶ್ಲೇಷಣೆ ನಡೆಸದೆ ಮುಂದುವರಿಯುವಂತಿಲ್ಲ.

    ರಷ್ಯಾದ ತಂತ್ರಜ್ಞಾನದ ಪ್ರತೀಕ

    1957ರಲ್ಲಿ ರಷ್ಯಾ (ಆಗ ರಷ್ಯಾ ಯುಎಸ್ಎಸ್ಆರ್ ಆಗಿತ್ತು) ಸ್ಪುಟ್ನಿಕ್ ಎಂಬ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾಯಿಸಿತು. ಬಳಿಕ ಸ್ಪುಟ್ನಿಕ್ -2 (ಅದರ ಹೆಸರನ್ನು ಬಳಿಕ ಸ್ಪುಟ್ನಿಕ್ -3) ಎಂದು ಬದಲಾಯಿಸಲಾಯಿತು. ಅದರಲ್ಲಿ ಬಾಹ್ಯಾಕಾಶಕ್ಕೆ ಲೈಕಾ ಎಂಬ ನಾಯಿಯನ್ನು ರಷ್ಯಾ ಕಳುಹಿಸಿತು. ಇದಕ್ಕಾಗಿ  ರಷ್ಯಾದ ಬಾಹ್ಯಾಕಾಶ ಸಂಸ್ಥೆ ಬೀದಿ ನಾಯಿಯನ್ನೇ ಆರಿಸಿಕೊಂಡಿತ್ತು. ಇದರಲ್ಲಿ ಚಳಿ, ಬಿಸಿಲು, ಹಸಿವು ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೆಚ್ಚಿದೆ ಎಂಬುದು ಅದರ ನಿರ್ಣಯವಾಗಿತ್ತು. ಬಳಿಕ ಲೈಕಾ ಬಾಹ್ಯಾಕಾಶ ಪ್ರವಾಸ ಮುಗಿಸಿ ಯಶಸ್ವಿಯಾಗಿ ಭೂಮಿಗೆ ಇಳಿದಿದ್ದು ಇತಿಹಾಸ.

    ಆ ಸಂದರ್ಭದಲ್ಲೇ ವಿಶ್ವದ ದೊಡ್ಡಣ್ಣ ಎಂದು ಹೊಗಳಲ್ಪಡುತ್ತಿದ್ದ ಅಥವಾ ಗುರುತಿಸಿಕೊಂಡಿದ್ದ ಅಮೆರಿಕಗೆ ಹೊಟ್ಟೆ ಉರಿ ಆರಂಭವಾಯಿತು. ಇದರ ಪರಿಣಾಮವಾಗಿಯೇ ಚಂದ್ರನ ಅಂಗಳದಲ್ಲಿ ನೀಲ್ ಆರ್ಮ ಸ್ಟ್ರಾಂಗ್ ಇಳಿದಿದ್ದು. ಇದರ ಕುರಿತು ಸಾಕಷ್ಟು ವಿವಾದಗಳು ಇವೆ ಎಂಬುದು ನಿಜ. ಆದರೂ ಸ್ಪರ್ಧೆಗೆ ಬಿದ್ದಿದ್ದು ಅಂತೂ ಸುಳ್ಳಲ್ಲವಲ್ಲ ? ಹೀಗಾಗಿಯೇ ಲಸಿಕೆಗೆ ಸ್ಪುಟ್ನಿಕ್ –ವಿ ಎಂದು ರಷ್ಯಾ ಹೆಸರಿಟ್ಟಿರುವುದು ಕುತೂಹಲ ಮೂಡಿಸಿದೆ.

    ಲಸಿಕೆ ರಾಜಕೀಯ

    ಈಗ ಕೊರೊನಾ ಎಂಬ ಮಹಾಮಾರಿ (ಘೋಷಿತ) ವಿಶ್ವದೆಲ್ಲೆಡೆ ಹಾವಳಿ ಎಬ್ಬಿಸುತ್ತಿರುವ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷರು ತಾವು ಜಗತ್ತಿನ ಮೊದಲ ಲಸಿಕೆ ಸಿದ್ಧ ಪಡಿಸಿದ್ದೇವೆ. ಮಾತ್ರವಲ್ಲ ಅದನ್ನು ಸ್ವತಃ ತಮ್ಮ ಮಗಳ ಮೇಲೆಯೇ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ ಎಂದು ಘೋಷಿಸಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಾಕೆ ಮರಿಯಾ ಪುಟಿನ್ ಇನ್ನೊಬ್ಬಾಕೆ ಯೆಕಟೆರಿನಾ ಪುಟಿನ್. ಇವರ ಪೈಕಿ ಯಾರ ಮೇಲೆ ಇದರ ಪ್ರಯೋಗ ಆಗಿದೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲವೇ ಇಲ್ಲ. ಆದರೆ, ಸ್ಪುಟ್ನಿಕ್ –ವಿ ಎಂದು ಹೆಸರಿಡುವ ಮೂಲಕ ಮತ್ತೊಂದು ಸುತ್ತಿನ ಪರೋಕ್ಷ ಶೀತಲ ಸಮರಕ್ಕೆ ನಾಂದಿ ಹಾಡಿದ್ದಾರೆಯೇ ಎಂಬ ಅನುಮಾನ ಉದ್ಭವ ಆಗದಿರುವುದಿಲ್ಲ.

    ಏನೇ ಆಗಲಿ, ಸದ್ಯದ ಮಟ್ಟಿಗೆ ಮನುಕುಲಕ್ಕೆ ಶಾಪವಾಗಿ ದೇಶ, ವಿಶ್ವದ ಆರ್ಥಿಕತೆಯನ್ನೇ ಹದಗೆಡುವಂತೆ ಮಾಡಿದ ಕೋವಿಡ್ -19 ಸಾಂಕ್ರಾಮಿಕವನ್ನು ತಡೆಯುವ ನಿಟ್ಟಿನಲ್ಲಿ ಮೊದಲ ಪ್ರಯತ್ನವಂತೂ ಆಗಿದೆ. ಆದರೆ, ಇದರ ನಡುವೆ ಇನ್ನೆಷ್ಟು ರಾಜಕಾರಣ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

    ಕೊರೋನ ಕಾಲದಲ್ಲಿ ಕನ್ನಡ ಸಾಹಿತ್ಯ ತೆಗೆದುಕೊಂಡ ತಿರುವು

    ಕಾಲ ಅಥವಾ ಸಮಯದ ಬಗ್ಗೆ ಜನರಲ್ಲಿ ಇರುವ ಹಲವು ಅಭಿಪ್ರಾಯಗಳನ್ನು 2020 ಬದಲಿಸಿದೆ.
    ಕರೋನ ಕಾಟದಿಂದ ಜನರ ಓಡಾಟ ನಿಂತಿತೇನೋ ನಿಜ. ಆದರೆ ಅವರ ಆಲೋಚನೆಗಳ, ಕಲ್ಪನೆಗಳ, ಚಿಂತನೆಗಳ ಓಘವನ್ನು ನಿಲ್ಲಿಸಲು ಸಾಧ್ಯವೇ?

    ಈ ಸಮಯದಲ್ಲಿ ಬ್ರೇಕಿಂಗ್ ನ್ಯೂಸ್ ಗಳು, ವಾಣಿಜ್ಯ, ಕೃಷಿ, ಸಿನಿಮಾ, ಶಿಕ್ಷಣ, ಟೆಕ್ನಾಲಜಿ, ಆರೋಗ್ಯದ ಕುರಿತಾದ ಎಲ್ಲ ವರ್ತಮಾನಗಳೂ ಕರೋನ ವಿಚಾರದ ಸುತ್ತಲೇ ತಿರುಗುತ್ತಿರುವುದು ನಿಜ. ಹಾಗಾದರೆ ಸೃಜನಶೀಲ ಸಾಹಿತ್ಯ?

    ಸಾಹಿತ್ಯಕ್ಕೆ ಪ್ರೇರೇಪಣೆ ಬೇಕು. ಅದು ಸುತ್ತ ಮುತ್ತಲಿನ ಆಗು-ಹೋಗುಗಳಿಂದ, ಮಾನಸಿಕ ಪ್ರಪಂಚದ ಕಲ್ಪನೆಗಳಿಂದ ಅಥವಾ ವೈಯಕ್ತಿಕ ಚಿಂತನೆಯ ಗರಡಿಯ ಪಟ್ಟುಗಳಿಂದ ಹುಟ್ಟುವಂತದ್ದು. ಆಂತರ್ಯಕ್ಕೂ ಬಾಹ್ಯಕ್ಕೂ ಮುರಿಯಲಾರದ ಸಂಬಂಧವಿದೆ. ಅಂತಹ ಸಾಹಿತ್ಯಕ್ಕೆ ಏನಾಯಿತು?

    ಸಾಹಿತ್ಯ ಮತ್ತು ಕಲೆಗಳಿಗೆ ಬೇಡಿಕೆಯಿರುವುದು, ಹೊಟ್ಟೆ-ಬಟ್ಟೆಗಳ ಚಿಂತೆ ಮುಗಿದ ನಂತರ. ಕೋವಿಡ್ ನ ಕಾರಣ ಪ್ರಪಂಚವೇ ನಲುಗುತ್ತಿದೆ ಎಂದಾದಾಗ ಈ ಎರಡೂ ವಿಚಾರಗಳು ಮೂಲೆಗೆ ಸೇರಿದ್ದುಸಹಜ.ಆದರೆ, ಮನೆಯಿಂದ ಹೊರಬರಲಾಗದ ಜನರಿಗೆ ಚೆನ್ನಾದ ಮನರಂಜನೆ ನೀಡಿ ಅವರ ಮಾನಸಿಕ ಆರೋಗ್ಯವನ್ನು ಕಾಪಾಡಿದ್ದು ಕೂಡ ಇವೇ ಸಾಹಿತ್ಯ ಮತ್ತು ಕಲಾ ಮಾಧ್ಯಮಗಳು!

    ಎಲ್ಲ ರಂಗಗಳಂತೆ ಸಾಹಿತ್ಯವೂ ಒಂದು ದೊಡ್ಡ ಉದ್ಯಮ. ಪುಸ್ತಕ ಮಳಿಗೆಗಳು, ಪ್ರಿಂಟಿಂಗ್ ಪ್ರೆಸ್
    ಗಳು,ಸಾಹಿತ್ಯಕ ಸಂಘಟನೆಗಳು, ಪ್ರಕಾಶಕರ ಚಟುವಟಿಕೆಗಳು ಮತ್ತು ಸಾಹಿತ್ಯಮಂದಿರಗಳನ್ನೇ
    ನೆಚ್ಚಿಕೊಂಡು ಜೀವನ ಸಾಗಿಸುವ ಸಾವಿರಾರು ಜನರಿದ್ದಾರೆ. ಅವರಿಗೆ ವಸ್ತುಗಳನ್ನು, ಒದಗಿಸುವ,
    ಮಾರಾಟ ಮಾಡುವ ಸರಪಳಿಯನ್ನು ನಂಬಿ ಬದುಕುವ ದೊಡ್ಡ ಸಮುದಾಯವೇ ಇದೆ.ಕೊರೊನಾ ಕಾಲದಲ್ಲಿ ಇವರೆಲ್ಲರ ದುಡಿತ ಮತ್ತು ಹೊಟ್ಟೆಪಾಡಿಗೆ ಹೊಡೆತ ಬಿದ್ದದ್ದೂ ನಿಜ. ಆದರೆ ಮೂಲ ಸಾಹಿತ್ಯ ಮತ್ತು ಕಲೆಗಳ ಒರತೆಗಳು ಬತ್ತಲಿಲ್ಲ. ಬದಲಿಗೆ ಅವು ಬೇರೊಂದು ಮಾರ್ಗವನ್ನು ಹುಡುಕಿಕೊಂಡಿವೆ.

    ಲಾಕ್ ಡೌನಿನ ಈ ಸಮಯದಲ್ಲಿ ಸಾಹಿತ್ಯ ಮತ್ತು ಕಲೆಯ ವಿಚಾರವಾಗಿ ಅಂತರ್ಜಾಲ ಮತ್ತು
    ಸಾಮಾಜಿಕ ಜಾಲತಾಣಗಳು ಇದೀಗ ಮುಂಚೂಣಿಗೆ ಬಂದು ಹಿಂದೆಂದಿಗಿಂತಲೂ ಹೆಚ್ಚು
    ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿವೆ.
    ಲಾಕ್ ಡೌನ್ ಸಾಹಿತ್ಯ ಲಾಕ್ ಡೌನಿನಲ್ಲಿ ಮುದ್ರಿತ ಪುಸ್ತಕ ಸಾಹಿತ್ಯ ಕ್ವಾರಂಟೈನಿನಲ್ಲಿ ವಿರಮಿಸಿದ್ದು ನಿಜ.ಉದಾಹರಣೆಗೆ ತರಂಗದಂತಹ ವಾರಪತ್ರಿಕೆ ಮೂರುವಾರಗಳ ಕಾಲ ನಿಂತೇ ಹೋಗಿತ್ತು.ಕೋವಿಡ್ ನ ಕಾರಣ ಹಲವು
    ಹಬ್ಬಗಳ ಸಾಮೂಹಿಕ ಆಚರಣೆ ರದ್ದಾದವು. ಅಂಗಡಿಗಳು ಬಾಗಿಲು ಮುಚ್ಚಿದವು. ದಿನಪತ್ರಿಕೆ,
    ವಾರಪತ್ರಿಕೆಗಳಂತ ನಿಯತಕಾಲಿಕಗಳಿಗೆ ಬರುವ ಜಾಹೀರಾತಿನ ಹಣ ಬಹುತೇಕ
    ಇಲ್ಲವಾಯಿತು.ಪತ್ರಿಕೆಗಳು ತೆಳ್ಳಗಾದವು. ಪತ್ರಿಕೆಗಳಲ್ಲಿ ಕೆಲಸಮಾಡುತ್ತಿದ್ದ ಹಲವರ ಕೆಲಸಗಳು ಇಲ್ಲವಾದವು. ಕೆಲಸವನ್ನು ಉಳಿಸಿಕೊಂಡ ಇತರರ ಮೇಲೆ ಒತ್ತಡ ಇನ್ನೂ ಹೆಚ್ಚಾಯಿತು. ಅವುಗಳ ಮುದ್ರಣ, ಸಾಗಾಣಿಕೆ ಮತ್ತು ವಿತರಣೆಗಳು ದುಸ್ತರವಾದವು. ಪುಸ್ತಕ ಮುದ್ರಣ,ಸಾಹಿತ್ಯ ಸಮ್ಮೇಳನಗಳು,ಪುಸ್ತಕ ಬಿಡುಗಡೆಯ ಸಮಾರಂಭ, ಮಾರಾಟ ವ್ಯವಸ್ಥೆ ಮತ್ತು ಮಳಿಗೆಗಳು, ಸಾಹಿತ್ಯ ಸ್ಪರ್ಧೆಗಳು, ಕವಿ
    ಸಮ್ಮೇಳನಗಳು, ಅಭಿನಂದನಾ ಸಮಾರಂಭಗಳು, ವಿಚಾರ ಸಂಕಿರಣಗಳು ಎಲ್ಲವೂ ಈ ವರ್ಷ ಹಿನ್ನಡೆ ಪಡೆದವು.

    ಹಲವು ಆಯೋಜನೆಗಳು, ಹೊಸ ಯೋಜನೆಗಳು ಬಹುತೇಕ ನೆಲಕಚ್ಚಿದವು. ಮುದ್ರಣದ ಬಹುತೇಕ
    ಕೆಲಸಗಳು ನಿಂತವು. ಈ -ಪುಸ್ತಕಗಳ ಹೊರತಾಗಿ ಇತರೆ ಪುಸ್ತಕಗಳನ್ನು ಹೊರತರುವ ಹಲವು
    ಆಲೋಚನೆಗಳು ಇವತ್ತಿಗೂ ಅರ್ಧದಲ್ಲಿಯೇ ನಿಂತಿವೆ. ಬಹುತೇಕ ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ನಿಲ್ಲದೆ ಬರುತ್ತಿವೆಯಾದರೂ ಅವುಗಳ ತಳಹದಿಯೂ ಒಮ್ಮೆ ಕಂಪಿಸಿದ್ದು ಸುಳ್ಳಲ್ಲ.ಶಾಸ್ತ್ರೀಯವಾದ ದಾರಿಯಲ್ಲಿ ಸಾಗುತ್ತಿದ್ದ ಮುದ್ರಿತ ಸಾಹಿತ್ಯದ ಹಾದಿಯಲ್ಲಿ ದೊಡ್ಡದೊಂದು ಕಲ್ಲುಬಂಡೆ ಬಿದ್ದಂತಾಗಿ ಮುಂದಿನ ದಾರಿಗಳು ಹಲವು ರೀತಿಯಲ್ಲಿ ಮುಚ್ಚಿಹೋಗಿವೆ. ಆದರೆ ಸಾಹಿತ್ಯ ರಂಗಕ್ಕೆ ಎಲ್ಲವೂ ನಿರಾಸೆ ತರುವ ವಿಚಾರಗಳಾಗಲಿಲ್ಲ.ಬದಲಿಗೆ ಕನ್ನಡ ಸಾಹಿತ್ಯ ರಂಗ ಈಗಾಗಲೇ ಕ್ರಮಿಸಬೇಕೆಂದಿದ್ದ ಆದರೆ ಮೀನ -ಮೇಷ ಎಣಿಸುತ್ತಿದ್ದ ದಾರಿಗಳು ಹಠಾತ್ತನೆ
    ತೆರೆದುಕೊಂಡಿವೆ.

    ಸಾಹಿತ್ಯಕ್ಕೆ ಕೋವಿಡ್ ಪ್ರೇರಣೆ

    ವಿರಾಮವೇ ಇಲ್ಲ, ರಾಮ ರಾಮ
    ಎಂದವರಿಗೆಲ್ಲ ಆರಾಮ
    ಏನೆಂದು ತೋರಿದ ಲಾಕ್ ಡೌನ್
    ಹದುಳಗೊಳಿಸಿದೆ ಕಾಲವನ್ನ

    ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ಗಿಂಡಿ ತೆರೆದುಕೊಳ್ಳುತ್ತದಂತೆ. ಕರೋನದ ಕಾಲದಲ್ಲಿಯೂ ಇದೇ ನಡೆದಿದೆ.ಸಾಹಿತ್ಯವನ್ನು ಓದಲು ಸಮಯವೇ ಇಲ್ಲ ಎನ್ನುತ್ತಿದ್ದವರಿಗೂ ಸಮಯ ದೊರೆತು ಸಾಹಿತ್ಯಕ್ಕೆ ಹೊಸ ಜಿಗಿತವನ್ನು ನೀಡಿದೆಯೆಂದರೆ ತಪ್ಪಾಗಲಾರದು.ಅಂತೆಯೇ ಸಾಹಿತ್ಯ ಸೆಲೆಯ ಹರಿವು ತನ್ನ ಎಂದಿನ ಮಾರ್ಗದಿಂದ ತಿರುವನ್ನು ತೆಗೆದುಕೊಂಡು
    ಬೇರೊಂದು ಮಾರ್ಗದಲ್ಲಿ ಸಾಹಿತ್ಯ ಪ್ರಿಯರ ಕಣ್ಣಿಗೆ ಬೆಳಕನ್ನು ತರಲು ತವಕಿಸುತ್ತಿರುವುದನ್ನು
    ಕಾಣಬಹುದು. ವ್ಯಕ್ತಿತಃ ಭೇಟಿಯಾಗಿ ಆಗಬೇಕಿದ್ದ ಸಮಾರಂಭಗಳೆಲ್ಲ ಇದೀಗ ವರ್ಚುಯಲ್ ಮೀಟ್
    ಗಳಾಗಿ ಬದಲಾಗಿವೆ.ಎಲ್ಲ ಭೇಟಿಗಳು ಅಂತರ್ಜಾಲದ ಮೂಲಕವೇ ನಡೆದಿವೆಯೇ ಹೊರತುನಿಂತುಹೋಗಲಿಲ್ಲ. ಬದಲಾಗಿ ಇ- ಪುಸ್ತಕಗಳು, ವರ್ಚುಯಲ್ ಬಿಡುಗಡೆಗಳು ಹೆಚ್ಚಾಗಿವೆ. ಹಿಂದೆಲ್ಲಇಂತಹ ಪ್ರಯತ್ನಗಳ ಬಗ್ಗೆ ಮೂಗು ಮುರಿಯುತ್ತಿದ್ದ ಜನ ಇದೀಗ ಅವುಗಳ ನಾನಾ ಉಪಯೋಗಗಳನ್ನು ಮನಗಾಣಲು ಶುರುಮಾಡಿದ್ದಾರೆ. ಅದಕ್ಕೆ ಸಹಾಯ ಮಾಡಲು ಈ ರಂಗದಲ್ಲಿ ಆಸಕ್ತಿಯಿರುವ ಎಲ್ಲ ಓದುಗರು, ಪ್ರಕಾಶಕರು, ಆಯೋಜಕರು, ಸಂಘ ಸಂಸ್ಥೆಗಳು ಶ್ರಮಿಸಿದ್ದಾರೆ. ಬರಹಗಾರರು ವಾಟ್ಸಾಪ್ಪಿನಲ್ಲಿಯೇ ಹಲವು ಕವಿತೆ, ಕಥೆ, ಜೋಕ್ ಗಳನ್ನು ಬರೆದು ಹರಿಬಿಟ್ಟರು.ಫೇಸ್ಬುಕ್ ಬರಹಗಳು, ಆಡಿಯೋ ಮತ್ತು ವೀಡಿಯೋ ಓದುಗಳು ಹೆಚ್ಚಾದವು.ಇನ್ನು ಆನ್ಲೈನ್ ಮೀಟ್ ಗಳಂತೂಅತ್ಯಧಿಕ ಸಂಖ್ಯೆಯಲ್ಲಿ ನಡೆದವು. ಆಗೆಲ್ಲ ಕರೋನ ತಂದ ಬದಲಾವಣೆಗಳ ವಿಚಾರವೇ ಅವರಿಗೆ
    ವಸ್ತುವಾಯಿತು. ಲಾಕ್ ಡೌನ್ ಸಮಯ ವೇದಿಕೆಯನ್ನೊದಗಿಸಿತು. ಮನೆಯಲ್ಲಿ ಕುಳಿತು ತಮ್ಮಮಿದುಳಿಗೆ ವ್ಯಾಯಾಮ ನೀಡಬಯಸಿದ ಜನರು ಪ್ರೇಕ್ಷಕರಾದರು.

    ಕೋವಿಡ್ 19 ತಂದ ಸಾವು, ನೋವು, ಆರ್ಥಿಕ ನಷ್ಟ, ಕಷ್ಟಗಳು, ಹಣದಿಂದಲೇ ನಿರ್ಧಾರವಾದ ಶ್ರಮಿಕ ವಲಸೆ ಕೆಲಸಗಾರರ ಜೀವದ ಬೆಲೆಗಳು, ರೈತಾಪಿ ಜನರ ಆಕ್ರಂದನಗಳು ಬಹಳಷ್ಟು ಕವಿಗಳನ್ನು,ಅಂಕಣಗಾರರ ಬರಹಗಳನ್ನು ಪ್ರಭಾವಿಸಿದವು.

    ಬೆಳಗಾದರೆ ಮುಗೀತು ರಾತ್ರಿ ಬರುತ್ತೆ ಎಂದವರು ಮತ್ತೊಂದು ಬೆಳಗಾಯಿತೆ?
    ನಾಳೆನ ಭವಿಷ್ಯ ಉಳಿದೀತೆ ?
    ಎಂದು ಚಿಂತಿಸಿದ್ದಾರೆ ನಿದ್ರೆ ಬರದೆ…..

    ಲಾಕ್ ಡೌನಿನ ಸಮಯದಲ್ಲಿ ಚಿಂತನೆಕಾರರು ಸಮಯದ ಮೌಲ್ಯದ ಮರುಪರೀಶೀಲನೆಗೆ ಸಾಹಿತ್ಯ ಮುಖೇನ ಕರೆನೀಡಿದರು. ಮೊದಲೆಲ್ಲ ಸಂಸಾರದ ಜಂಜಾಟದಲ್ಲಿ ಸಮಯವಿಲ್ಲದೆ ಕೈಬಿಟ್ಟಿದ್ದ ಹವ್ಯಾಸಗಳನ್ನು ಜನರು ಮತ್ತೆ ಮೈ ಗೂಡಿಸಿಕೊಂಡರು. ಇಂತಹ ಸಮಯದಲ್ಲಿ ತಮ್ಮ ಬದುಕಿನ ಹಲವು ಹಳೆಯ ನೆನಪುಗಳಿಗೆ ಮತ್ತೆ ಭೇಟಿ ನೀಡಿದರು.ಮಕ್ಕಳ ಜೊತೆ ಒಂದಷ್ಟು ಹೆಚ್ಚಿನ ಸಮಯವನ್ನುಕಳೆದರು. ಜೊತೆಗೆ ಒಳಗೊಳಗೇ ಹುಟ್ಟಿದ ಆತಂಕಗಳಿಗೂ ಸಾಹಿತ್ಯ ರೂಪ ಕೊಟ್ಟು, ಅಬ್ಬಾ. ಕಾಲ ಏನೇನನ್ನೆಲ್ಲ ಬದಲಿಸಬಲ್ಲದು ಎಂದು ಉದ್ಗರಿಸಿದರು.

    ಏರುತ್ತದೆ ಬಿಸಿ ಕಡಿಮೆಯಾದರೆ ಕಾಲ
    ತುಸು ಹೆಚ್ಚೇ ಆದರೆ ಪಾದಕ್ಕೆ ಚಳಿ
    ತಟಸ್ಥವಾದರೆ ಉಡುಗಿ ಬಿಡುತ್ತದೆ ಬಲ
    ಎಲ್ಲವೂ ಕರೋನ ಕಾಲದ ಮಹಿಮೆ…

    ದೊರಕಿರುವ ಸಮಯವನ್ನು ತಮ್ಮ ವಯಕ್ತಿಕ ಆಸಕ್ತಿಗಳಲ್ಲಿ ತೊಡಗಿಸಿಕೊಂಡು ಹೊಸ
    ಭರವಸೆಗಳೊಂದಿಗೆ ಹೊರಬರಲು ಕರೆನೀಡಿದರು. ಪರಿಣಾಮವಾಗಿ ಅದೆಷ್ಟು ಸಾಹಿತ್ಯ ಚಟುವಟಿಕೆಗಳು ನಡೆದವೆಂದರೆ, ಸಮಾಜ ಸಹಜವಾಗಿದ್ದ ಸಮಯದಲ್ಲೇ ಹೆಚ್ಚು ಬಿಡುವು ಸಿಗುತ್ತಿತ್ತು ಎನ್ನುವ ಲೆಕ್ಕಕ್ಕೆ ಇಂದು ಬರಹಗಾರರು ಮತ್ತು ಓದುಗರು ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    ಪುರುಸೊತ್ತೇ ಇಲ್ಲ ಸ್ವಂತ ಕೆಲಸಕ್ಕೆ
    ಎಂದು ಮರುಗಿದ್ದ ಜನರು
    ಕೆಲಸದಲ್ಲಾದರು ಸಿಗುತ್ತಿತ್ತು ಸ್ವಲ್ಪ ಬಿಡುವು
    ಎನ್ನುತ್ತಿದ್ದಾರೆ ಬೇಸತ್ತು ದಾರಿ ತೋರದಲ್ಲ?

    ಸತ್ಯನಾರಾಯಣ ಎನ್ನುವವರು ’ ಕರೋನ ಕಥೆಗಳು ’ ಎನ್ನವ ಪುಸ್ತಕವನ್ನೇ ಹೊರತಂದರು.
    ಡುಂಡಿರಾಜ್ ರವರು “ ಕೊರೊನಾರೀ..ಸಹೋದರ. “ ಎನ್ನುವ ಹನಿಗವನಗಳ ಹೊಸದೊಂದು
    ಪುಸ್ತಕವನ್ನು ಹೊರತಂದರು. ಇನ್ನು ಅಮೆರಿಕದಲ್ಲಿ ವೈದ್ಯ ಬರಹಗಾರರಾಗಿರುವ ಗುರುರಾಜ ಕಾಗಿನೆಲೆಯವರು ವೈದ್ಯಕೀಯ ಕರೋನಾ ಸ್ಟೋರೀಸ್ ಗೆ ತಯಾರಾಗುತ್ತಿದ್ದಾರೆ. ಬಿಡಿ ಕಥೆ ಮತ್ತುಕವನಗಳಂತೂ ಯಥೇಚ್ಛವಾಗಿ ಪ್ರಕಟಗೊಂಡಿವೆ. ಬರಹಗಾರರು ಕರೋನದ ಸುತ್ತ ನಡೆದಘಟನೆಗಳು,ಬದಲಾದ ಪರಿಸ್ಥಿತಿಗಳು,ಸಾವು-ನೋವು, ಆರ್ಥಿಕ ನಷ್ಟಗಳು, ಅನುಭವಗಳು ಮತ್ತು ತಮ್ಮಕಲ್ಪನೆಗಳನ್ನು ಬೆರೆಸಿ ತಮ್ಮ ಸೃಜನಶೀಲತೆಯನ್ನು ಮೆರೆದರು. ಕೊರೊನಾ ಡೈರಿ ಎನ್ನುವ ಹೆಸರಿನಲ್ಲಿಈ ಒಂದು ಅಂಕಣ ಬರುತ್ತಿರುವುದು ಕೂಡ ಮತ್ತೊಂದು ಉದಾಹರಣೆ. ಕೆಲವರು ಪುಸ್ತಕ ಬಿಡುಗಡೆಯನ್ನು
    ತಮ್ಮ ಸಂಸಾರದವರ ಜೊತೆ ದೇವರ ಎದುರಿನಲ್ಲಿ ಮುಗಿಸಿ ಮುನ್ನೆಡೆದರು.ಪುಸ್ತಕ ಮಳಿಗೆಗಳು
    ವರ್ಚುಯಲ್ ವೇದಿಕೆಗಳ ಮೂಲಕ ಮಾರಾಟಕ್ಕೆ ಒತ್ತುಕೊಟ್ಟರು. ಒಟ್ಟಿನಲ್ಲಿ ಕೊರೊನಾದ ಪ್ರಸ್ತುತಿ
    ಇಲ್ಲದೆ ದೈನಂದಿನ ಆಗು-ಹೋಗುಗಳನ್ನು ಅವಲೋಕಿಸಬಹುದಾದ ವಿಚಾರಗಳು ಅತ್ಯಂತ ವಿರಳ

    ಎನ್ನಬಹುದಾದ ಕಾಲವಿದು.ಭವಿಷ್ಯದಲ್ಲಿ ಇನ್ನೂ ಬಹುಕಾಲ ಕರೋನ ವಿಷಯವಿರುವ ಸಾಹಿತ್ಯವನ್ನು,ಕಲಾ ವಿಚಾರಗಳನ್ನು ನಾವು ನೋಡತ್ತೇವೆ ಎನ್ನುವುದರಲ್ಲಿ ಅನುಮಾನವಿಲ್ಲ.
    ಕರೋನ ಪೀಡಿತ ಕಾಲದಲ್ಲಿ ದೊರೆತ ಬಿಡುವಿನ ಸಮಯವೂ ಇದಕ್ಕೆ ಇಂಬಾಗಿ ನಿಂತದ್ದು ದೊಡ್ಡ
    ಕೊಡುಗೆಯಾಯಿತು.

    ಇದೇ ಸಮಯದಲ್ಲಿ ಕನ್ನಡಪ್ರೆಸ್.ಕಾಂ ಜಾಲತಾಣ ಅಸ್ತಿತ್ವಕ್ಕೆ ಬಂದಿತು.ಅಲ್ಪಕಾಲದಲ್ಲಿಯೇ ಅತ್ಯುದ್ಭತವಾಗಿ ಜನಪ್ರಿಯವಾಗಿದ್ದನ್ನು ನಾವಿಲ್ಲಿ
    ನೆನೆಯಬಹುದು.

    ಬೆಂಗಳೂರು ರಾಮನಗರ ಗ್ರಾಮಾಂತರ ಶಾಖೆಯ ಕನ್ನಡ ಸಾಹಿತ್ಯ ಪರಿಷತ್ತಿನ ದಾಸರಹಳ್ಳಿ ವಿಭಾಗದ
    ಪದಾಧಿಕಾರಗಳು ಹೊರಬಂದು ಪುಸ್ತಕ ಕೊಳ್ಳಲಾಗದ ಸಾಹಿತ್ಯಾಭಿಮಾನಿಗಳ ಮನೆ ಮನೆಯ ಬಾಗಿಲು ತಟ್ಟಿ 10,500 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ಹಂಚಿದ್ದಾರೆ. ಅಕ್ಕಿ-ಬೇಳೆಯನ್ನು ಸರ್ಕಾರ ಒದಗಿಸುತ್ತಿದೆ ಆದರೆ ಸಾಹಿತ್ಯದ ಹಸಿವನ್ನು ತೀರಿಸಲು ಯಾರಿದ್ದಾರೆ ಹೇಳಿ ?- ಎನ್ನುವ ಇವರ ಕಾಳಜಿ
    ಮನೆ ಮನೆ ಮಾತಾಯಿತು. ಸ್ವತಃ ಬರಹಗಾರರೂ, ಕಸಾಪ ಅಧ್ಯಕ್ಷರೂ ಆದ
    ವೈ.ಜಿ.ಹೆಚ್.ಜಯದೇವರದು “ ಲಾಕ್ ಡೌನಿನ ಕಾಲದಲ್ಲಿ ಜನರಿಗೆ ಸಮಯ ಸಿಕ್ಕಿರುವುದರಿಂದ ಜನರು ಖಂಡಿತ ಸಾಹಿತ್ಯ ಓದುತ್ತಾರೆ “ ಎನ್ನುವ ಸಮಯೋಚಿತ ವಿವೇಕ ಮತ್ತು ಉತ್ಸಾಹವನ್ನು ತೋರಿ ಮಾದರಿಯಾದರು.

    ಕಹಳೆ, ಮುದ್ದಣ, ಛಂದ ಇತ್ಯಾದಿ ಸಂಸ್ಥೆಗಳು ಕರೋನ ಪಿಡುಗನ್ನು ಕಾರಣವನ್ನಾಗಿ ನೀಡಿ ಕೈ ಚೆಲ್ಲಿ ಕೂರದೆ ಬರಹಗಾರರನ್ನು ಉತ್ತೇಜಿಸಲು ಎಂದಿನಂತೆ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿಉತ್ತೇಜಿಸಿದ್ದಾರೆ. ಬರಹಗಾರರು ಹಿಂದೆಂದಿಗಿಂತಲೂ ಹೆಚ್ಚು ಬ್ಯುಸಿಯಾಗಿ ದೇಸೀಯ ಮತ್ತು ಅಂತರರಾಷ್ಟ್ರೀಯ ಕನ್ನಡಿಗರನ್ನು ಅಂತರ್ಜಾಲದ ಮೂಲಕ ತಲುಪಿದ್ದಾರೆ. ಅನಿವಾಸಿ ಕನ್ನಡಿಗರಾದ ನಮಗೆ ಹಿಂದೆಲ್ಲ ವರ್ಷಕ್ಕೆ ಎರಡೋ-ಮೂರೋ ಎನ್ನುವಂತೆ ಸಾಹಿತಿಗಳೊಂದಿಗೆ ಬೆರೆಯುವ ಅವಕಾಶಗಳಿರುತ್ತಿದ್ದವು. ಆದರೆ ಇದೀಗ ಬಹುತೇಕ ಪ್ರತಿ ವಾರಾಂತ್ಯದಲ್ಲಿ ಎಲ್ಲ ಬಗೆಯ ಬರಹಗಾರರು ಮತ್ತು ಕಲಾಕಾರರ ಜೊತೆ ಬೆರೆಯುವ ಅವಕಾಶಗಳು ದೊರೆಯುತ್ತಿವೆ. ಯಾವ ಮೀಟ್ ಅನ್ನು ಆಯ್ಕೆಮಾಡಿಕೊಳ್ಳುವುದು ಅಥವಾ ಬಿಡುವುದು ಎನ್ನುವಂತಾಗಿದೆ!

    ಸಾಹಿತ್ಯಕ್ಕೆ ದೊರೆತ ಹೊಸ ಸ್ವರೂಪಗಳು
    ಕರೋನ ಕಾಲದಲ್ಲಿ ಅಂತರ್ಜಾಲ ಮೂಲದಲ್ಲಿ ಸಾಹಿತ್ಯದ ಹೊಸ ಚೈತನ್ಯವನ್ನು ಪಡೆದಿದೆ. ಇ-
    ಪುಸ್ತಕಗಳು, ಆಡಿಯೋ ಪುಸ್ತಕಗಳು, ಫೇಸ್ಬುಕ್ಕಿನ ಕವನ-ಕಥಾ ವಾಚನಗಳು ಇತ್ಯಾದಿ ಹೊಸ
    ಪರಿಪಾಠಗಳು ದಿಡೀರನೆ ಹೆಚ್ಚಾಗಿವೆ. ತಮ್ಮ ತಮ್ಮ ಊರೋ, ಕೇರಿಯಲ್ಲೋ ನಡೆಯುತ್ತಿದ್ದ ಸಾಹಿತ್ಯ
    ಚಟುವಟಿಕೆಗಳು ಅಂತರ್ಜಾಲದ ಮೂಲಕ ಹಲವು ಪರಿಧಿಗಳನ್ನು ದಾಟಿವೆ.
    ಝೂಮ್,ಗೂಗಲ್ ಅಥವಾ ಏರ್ ಮೀಟ್ ಗಳು ಸಾಹಿತಿ-ಕಲಾವಿದರನ್ನು ಅಭಿಮಾನಿಗಳ
    ಮನೆಯೊಳಕ್ಕೇ ಕರೆತಂದವು. ಈ ರೀತಿಯ ಭೇಟಿಗಳ ಬಗ್ಗೆ ಮುಜುಗರವಿದ್ದ ಜನರು, ಹಳೆಯ ಮತ್ತು ಹೊಸತಲೆಮಾರಿನವರು ಎಲ್ಲ ಒಟ್ಟುಗೂಡಿ ಈ ಕಾರ್ಯದಲ್ಲಿ ಭಾಗವಹಿಸಿದರು. ಸಾಮಾಜಿಕ
    ಜಾಲತಾಣಗಳು ಸಾಹಿತ್ಯದ ಗಂಧವನ್ನು ಹರಡಲು ಸಹಕಾರಿಯಾದವು.

    ಆಶ್ಚರ್ಯ ಎಂಬಂತೆ ಹೊಸದರ ಜತೆ ಹಳೆಯ ಸಾಹಿತ್ಯವೂ ಮತ್ತೆ ಹೊಸ ಮಾಧ್ಯಮಗಳಲ್ಲಿ ಮರುಹುಟ್ಟು ಪಡೆಯಿತು. ’ರೂಪ ಯಾವುದಾದರೇನು, ಭಾವ ನವ ನವೀನ …’ ಎನ್ನುವಂತೆ ಒಟ್ಟಾರೆ ಸಾಹಿತ್ಯ
    ಸೊರಗಲಿಲ್ಲ. ಮತ್ತೆ ಬರುವ ಸಹಜ ಬದುಕಿನಲ್ಲಿ ಏನನ್ನು ಮಾಡಬಹುದ ಎಂಬ ಹೊಸ
    ಯೋಜನೆಗಳೊಂದಿಗೆ ಸಧ್ಯದ ಟೆಕ್ನಾಲಜಿಯ ಲಾಭವನ್ನು ಎಲ್ಲ ಸಾಹತ್ಯ ಪ್ರಿಯರೂ ಅನುಭವಿಸಿದರು.ಇವೆಲ್ಲ ಮನುಷ್ಯನ ಸೃಜನಶೀಲತೆಗಿರುವ ಸ್ಥಿತಿಸ್ಥಾಪಕತ್ವ ಗುಣಗಳನ್ನು (Resilience)
    ತೋರಿಸುವ ವಿಚಾರಗಳ ದಿಟ್ಟಪ್ರದರ್ಶನಗಳಾಗಿವೆ.

    ಡಿಜಿಟಲ್ ಲೋಕದಲ್ಲಿ ಕನ್ನಡ ಸಾಹಿತ್ಯದ ಭವಿಷ್ಯ?

    ಲಾಕ್ಡೌನ್ ಸಮಯ ಓದುವುದನ್ನು ನಿಲ್ಲಿಸಿಯೇ ಬಿಟ್ಟಿದ್ದ ಹಲವರನ್ನು ಮತ್ತೆ ಓದುವತ್ತ ಕರೆತಂದದ್ದು ನಿಜ.ಅದರಿಂದ ಸಾಹಿತ್ಯಕ್ಕೆ ಲಾಭವೇ ಆಗಿದೆ. ಓದುವ ಕಾಲ ಹೆಚ್ಚಾದ ಕಾರಣ, ಸ್ವತಃ ತಾವು ಬರೆದ ಅಥವಾ ಇತರರು ಬರೆದ ಸಾಹಿತ್ಯ ವಿಮರ್ಶೆಗಳು ಕೂಡ ಹೆಚ್ಚಾದವು. ಡಿಜಿಟಲ್ ಲೋಕದಲ್ಲಿ ಕನ್ನಡ
    ಸಾಹಿತ್ಯದ ಭವಿಷ್ಯಕ್ಕಾಗಿ ದುಡಿಯುತ್ತಿರುವ ಋತುಮಾನ, ಬುಕ್ ಬ್ರಮ್ಹ, ವಿವಿಡ್ಲಿಪಿ, ಮೈ ಲ್ಯಾಂಗ್, ಪ್ರತಿಲಿಪಿ ಮತ್ತಿತರ ಹತ್ತಾರು ಅಂತರ್ಜಾಲ ವೇದಿಕೆಗಳು, ಇನ್ನಿತರ ತಾಂತ್ರಿಕ ಪತ್ರಿಕೆಗಳು ಕನ್ನಡದ ಜನರಿಗೆ ಸಾಹಿತ್ಯವನ್ನು ಒದಗಿಸಲು ಶ್ರಮಪಡುತ್ತಿರುವ ಯುವಕ ಯುವತಿಯರು ಮತ್ತು ಇವರೊಡನೆ
    ತಮ್ಮ ಸಾಮರಸ್ಯವನ್ನು ಬೆಸೆದುಕೊಂಡಿರುವ ಪ್ರಕಾಶಕರು ಹಲವು ಕಾರ್ಯಕ್ರಮಗಳನ್ನು ಸಾಹಿತ್ಯ

    ಪ್ರಿಯರಿಗಾಗಿ ಯೋಜಿಸಿದರು. ಪುಸ್ತಕಗಳ ಡಿಜಿಟಲ್ ಬಿಡುಗಡೆ ಮತ್ತು ನೇರ ಪ್ರಸಾರವೂ ಇತ್ತೀಚೆಗೆ
    ಜನಪ್ರಿಯವಾಗುತ್ತಿವೆ. ವಿವಿಡ್ಲಿಪಿ “ಥಟ್ಟಂತ ಹೇಳಿ… ’ ಯಂತ ಕ್ವಿಝ್ ಕಾರ್ಯಕ್ರಮವನ್ನು ಅಂತರ್ಜಾಲದ ಫೇಸ್ಬುಕ್ ಮತ್ತು
    ಯೂಟ್ಯೂಬ್ ಗಳ ಮೂಲಕ ಅಮೆರಿಕಾದ ಶರಾವತಿ ಕನ್ನಡ ಕೂಟಕ್ಕೂ, ಇಂಗ್ಲೆಂಡಿನ ಸಾಹಿತ್ಯ ಪ್ರೇಮಿಗಳ ವೇದಿಕೆಯಾದ ಅನಿವಾಸಿ.ಕಾಂ ನ ಮೂಲಕ ಅಲ್ಲಿನ ಕನ್ನಡಿಗರಿಗೂ ತಲುಪಿಸಿತು. ಇಂಗ್ಲೆಂಡಿಗೇ ಬಂದು ಮಾತನಾಡಬೇಕಿದ್ದ ಜಯಂತ ಕಾಯ್ಕಿಣಿಯವರ ಪ್ರವಾಸ ಸಾಧ್ಯವಾಗದೆ ಕೊನೆಗೆ ಝೂಮ್ ವೇದಿಕೆಯ ಮೂಲಕ ಇಲ್ಲಿನ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆಗಳ ಬಗ್ಗೆ ಉಪನ್ಯಾಸ ನೀಡಿದರು.
    ಪ್ರಸಿದ್ದ ಚಲನಚಿತ್ರ ತಾರೆಯರು, ಹಾಡು ಬರೆಯುವವರು, ನಿರ್ದೇಶಕರು, ಸಂಗೀತಕಾರರು,
    ವಾದ್ಯವೃಂದದವರು,ಮೈಸೂರಿನ ಮಹಾರಾಜರು ಕೊನೆಗೆ ಹಲವು ಮಠಾಧಿಪತಿಗಳು ಮನೆಯಲ್ಲಿ
    ಬಂಧಿಗಳಾದ ಕನ್ನಡಿಗರನ್ನು ತಲುಪಿ ಸಮುದಾಯ ಭಾವವನ್ನು ಜೀವಂತವಾಗಿಟ್ಟುಕೊಳ್ಳುವ ಜೊತೆ
    ಜೊತೆಯಲ್ಲೆ ಜನರ ಮನಸ್ಸಿನಲ್ಲಿ ತಾವು ಮರೆತುಹೋಗದಂತೆ ಉಳಿಯಲು ಪ್ರಯತ್ನಿಸಿದ್ದಾರೆ. ತಮ್ಮ ಅಭಿಮಾನಿಗಳ ಕೋರಿಕೆಗಳಿಗೆ ಸ್ಪಂದಿಸಿದ್ದಾರೆ. ಕರ್ನಾಟಕದ ಪ್ರತಿ ಪ್ರಸಿದ್ದ ಸಾಹಿತ್ಯ ತಾರೆಯರು ತಮ್ಮ
    ಅಭಿಮಾನಿಗಳೊಂದಿಗೆ ಡಿಜಿಟಲ್ ದರ್ಶನ ನೀಡಿದ್ದಾರೆ.

    ಕನ್ನಡ ಸಾಹಿತ್ಯ ತೆಗೆದುಕೊಂಡಿರುವ ಈ ಹೊಸ ತಿರುವು ತಾತ್ಕಾಲಿಕವಾಗದೆ ಇನ್ನು ಮುಂದೆ ಹೆಚ್ಚು
    ಹೆಚ್ಚಾಗಿ ಡಿಜಿಟಲ್ ಮಾಧ್ಯಮವನ್ನೇ ಅನುಸರಿಸಬಹುದು ಎನ್ನುವ ಅಭಿಪ್ರಾಯಗಳನ್ನು ಹಲವರಲ್ಲಿ ಇದೀಗ ನೋಡಬಹುದಾಗಿದೆ.
    ಪ್ರಕಾಶಕರು ಕೂಡ ಪುಸ್ತಕಗಳನ್ನು ಮುದ್ರಿಸಲು ತಗಲುವ ಖರ್ಚುಗಳು, ಅವನ್ನು ಸಾಗಿಸುವ,
    ಉದ್ಘಾಟಿಸುವ, ಮಾರಾಟಮಾಡಲು ನಡೆಸುವ ಮಳಿಗೆಗಳ. ಸಂಭಾವನೆಗಳ ಇತ್ಯಾದಿ ಖರ್ಚುಗಳ
    ಗೊಂದಲದಿಂದ ಹೊರಬರಲು ಕಾಯುತ್ತಿದ್ದರು. ಈ -ಮಾರುಕಟ್ಟೆಯ ಉಪಯೋಗವನ್ನು ಅವರುಗಳು ಕರೋನ ಕಾಲದಲ್ಲಿ ಪ್ರಯೋಗಕ್ಕೆ ಒರೆ ಮಾಡಿ ನೋಡಲು ಸಾಧ್ಯವಾಯಿತು.
    ಸೀಮಿತ ಮಾರುಕಟ್ಟೆಯನ್ನು ಹೊಂದಿರುವ ಕಾರಣ ಮತ್ತು ಸಂಪ್ರದಾಯಬದ್ದವಾಗಿ ಮುದ್ರಿತ
    ಪುಸ್ತಕಗಳನ್ನು ಓದಲು ಇಷ್ಟಪಡುವ ಕನ್ನಡ ಓದುಗರ ಕಾರಣ ಇ- ಪುಸ್ತಕಗಳು ರ್ಯಾಯವಾದ
    ಮಾರುಕಟ್ಟೆಯನ್ನಷ್ಟೇ ಸೃಷ್ಟಿಸಲು ಸಾಧ್ಯವಾಗುವುದು ಎನ್ನುವುದನ್ನು ಅವರು ಅರಿತರು. ಆದರೆ ಇದೊಂದು ಪರ್ಯಾಯ ಮಾರುಕಟ್ಟೆಯಾಗಬಲ್ಲದು ಎಂಬ ಹೊಸ ಭರವಸೆಯನ್ನು ಕರೋನ ಕಾಲ
    ಅವರಲ್ಲಿ ಮೂಡಿಸಿದೆ ಎಂದರೆ ತಪ್ಪಾಗಲಾರದು.

    ಮಗಳ ಆಸೆಗೆ ಅಪ್ಪನ ಬೆಂಬಲ

    ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣೊಬ್ಬಳು ಅದನ್ನು ಮೀರಿ ಸಾಧನೆ ಮಾಡಿದ ಕಥೆಯನ್ನು ಸಾರುವ ಅನೇಕ ಸಿನಿಮಾಗಳು ಬಂದಿವೆ ಹೋಗಿವೆ. ಆದರೆ ಹತ್ತರಲ್ಲಿ ಒಂದಾಗುವ ಸಿನಿಮಾಗಳೇ ಹೆಚ್ಚು. ಆದರೆ ಬುಧವಾರ ನೆಟ್ ಪ್ಲಿಕ್ಸ್ ನಲ್ಲಿ ಬಿಡುಗಡೆಯಾಗಿರುವ   ಗುಂಜನ್ ಸಕ್ಸೇನಾ ಕಾರ್ಗಿಲ್ ಗರ್ಲ್  ಆ ಸಾಲಿಗೆ ಸೇರದಂತೆ  ನಿರ್ದೇಶಕ  ಶರಣ್ ಶರ್ಮಾ ಎಚ್ಚರ ವಹಿಸಿದ್ದಾರೆ. ಇತ್ತೀಚೆಗೆ ಬರುತ್ತಿರುವ ವಾರ್ ಸಿನಿಮಾಗಳ ಸಾಲಿಗೂ ಇದು ಸೇರುವುದಿಲ್ಲ. ಬದಲಾಗಿ ಅಪ್ಪನೊಬ್ಬ ಮಗಳ ಆಸೆ ಈಡೇರಿಸಲು ಬಂಡೆಗಲ್ಲಿನಂತೆ ನಿಂತು ಬೆಂಬಲ ನೀಡುವ ಚಿತ್ರವಾಗಿ ಗಮನಸೆಳೆಯುತ್ತದೆ.

    ಕಾರ್ಗಿಲ್ ವಿಜಯಕ್ಕೆ ಕಾರಣಕರ್ತರೊಬ್ಬಳಾಗಿ ಶೌರ್ಯ ಚಕ್ರ ಪ್ರಶಸ್ತಿ ಪಡೆದ ಮೊದಲ ಮಹಿಳೆಯೆಂಬ  ಗೌರವಕ್ಕೂ ಪಾತ್ರಳಾದ ವಾಯು ಪಡೆಯ ಅಧಿಕಾರಿ ಗುಂಜನ್ ಸಕ್ಸೇನಾ ಅವರ ಬಯೋಪಿಕ್ ಇದು.

    1994ರಲ್ಲಿ ವಾಯು ಪಡೆ ಸೇರಿದ ಮೊದಲ ಮಹಿಳೆ ಗುಂಜನ್. ಅಲ್ಲಿ ಆಕೆ ತಂಡದ ಏಕೈಕ ಮಹಿಳೆಯಾಗಿ ಎದುರಿಸುವ ಸವಾಲುಗಳು ನಂತರ ಅದನ್ನು ಎದುರಿಸಿ  ಯಶಸ್ವಿಯಾಗುವ ಹಾದಿಯೆ ಚಿತ್ರದ ವಸ್ತು. ಈಗ  ವಾಯುಪಡೆಯಲ್ಲಿ ಸ್ಥಿತಿ  ಹಾಗಿಲ್ಲ.ಸುಮಾರು 1625  ಮಂದಿ ಮಹಿಳಾ ಆಫೀಸರ್ಸ್ ಇದ್ದಾರೆ.

    ಬಾಲ್ಯದಿಂದಲೇ  ಗುಂಜನ್ ಗೆ ಪೈಲಟ್ ಆಗುವ ಕನಸು. ಹುಡುಗಿಯೊಬ್ಬಳು ಪೈಲಟ್ ಆಗುವುದೆ ಎನ್ನುವವರೆ ಅನೇಕ. ಆಕೆಯ ಅಣ್ಣ  ಮೇಜರ್ ಅನ್ಷುಮಾನ್ (ಅಂಗದ್ ಬೇಡಿ) ಸೇರಿದಂತೆ ಎಲ್ಲರದು ಇದೇ ಅಭಿಪ್ರಾಯ. ಆದರೆ ಆಕೆಗೆ ಬೆಂಬಲವಾಗಿ ನಿಲ್ಲುವುದು ತಂದೆ ಕರ್ನಲ್ ಅಶೋಕ್ ಕುಮಾರ್ ಸಕ್ಸೇನಾ (ಪಂಕಜ್ ತ್ರಿಪಾಠಿ). ದುಬಾರಿ ಪೈಲಟ್ ತರಬೇತಿಗೆ ಮನೆಯವರಿಂದಲೇ ವಿರೋಧ ಬಂದಾಗ ಆಕೆಗೆ ವರದಾನವಾಗಿ ಬುರುವುದು ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ವಾಯುಪಡೆ ಹೊರಡಿಸಿದ ಜಾಹೀರಾತು.

    ಅಪ್ಪನ ಬೆಂಬಲದೊಂದಿಗೆ ವಾಯುಪಡೆಗೆ ಆಯ್ಕೆಯೂ ಆಗುತ್ತಾಳೆ. ತರಬೇತಿಯ ಅವಧಿಯಲ್ಲೇ  ಆಕೆಗೆ ಪುರುಷ ಪ್ರಧಾನ ವ್ಯವಸ್ಥೆಯ ಪರಿಚಯಾಗುತ್ತದೆ. ಎಲ್ಲಿ ಹೆಣ್ಣೊಬ್ಬಳು ಮುಂದೆ ಬಂದು ನಾವೆಲ್ಲಾ ಆಕೆಯನ್ನು ಬಾಸ್ ಎಂದು ಒಪ್ಪಿಕೊಳ್ಳಬೇಕಾದೀತೋ ಎಂಬ ಪುರುಷ ಮನಸುಗಳು ಸದಾ ಆಕೆಯನ್ನು ಹಿಂದಕ್ಕೆ ಎಳೆಯಲು ಕಾತರಿಸುತ್ತಿರುತ್ತವೆ.

    ಡ್ರೆಸ್ ಚೇಂಜ್ ಮಾಡಲು ದೂರದಲ್ಲಿರುವ ತನ್ನು ರೂಮಿಗೆ ಹೋಗಬೇಕಾದ ಅನಿವಾರ್ಯತೆ, ಪುರುಷ  ಟಾಯ್ಲೆಟ್ ಗಳನ್ನು ಬಳಸಬೇಕಾದ ಸ್ಥಿತಿ . ಏಕೆಂದರೆ ಇಡೀ ತರಬೇತಿಯೊಬ್ಬಳೆ ಈಕೆ ಒಬ್ಬಳೆ ಹೆಣ್ಣು. ಆದರೆ ಇದಾವುದು ಆಕೆಗೆ ಅಡ್ಡಿ ಮಾಡುವುದಿಲ್ಲ. ಆದರೆ ದೈಹಿಕ ಶಕ್ತಿಯಲ್ಲೂ ಆಕೆಗೆ ಪುರುಷನಿಗ ಸರಿಸಮಾನವಾಗಿ ಇರಬೇಕೆಂಬ ಹೀಯಾಳಿಕೆ ಬಂದಾಗ ಕೊನೆಗೆ ರೋಸಿ ಹೋಗುತ್ತಾಳೆ. ನಾನಿಲ್ಲಿ ವಿಮಾನ ಓಡಿಸಲು ಬಂದಿದ್ದೇನೆ ಹೊರತು ಅದನ್ನು ಎತ್ತಲು  ಅಲ್ಲ ಎಂದು ಪುರುಷ ಸಮಾಜಕ್ಕೆ ಹೇಳಿ ವಾಪಸ್ಸು ಮನೆಗೆ ಹೋಗಿ ಮದುವೆ, ಗಂಡ ಮಕ್ಕಳು ಎಂಬ  ನಿರ್ಧಾರಕ್ಕೆ ಬಂದು ಬಿಡುತ್ತಾಳೆ.

    ಆದರೆ ಅಪ್ಪ ಅವಳ ಆಸೆ  ಕಮರುವುದಕ್ಕೆ ಬಿಡುವುದಿಲ್ಲ. ನೀನು ರೆಕ್ಕೆ ಬಿಚ್ಚಿ ಹಾರಬೇಕೆ ಹೊರತು ಮುದುಡಿ ಕುಳಿತುಕೊಳ್ಳುವುದಕ್ಕಲ್ಲ ಎಂದು ಉತ್ಸಾಹ ತುಂಬುತ್ತಾನೆ. ಮನಸ್ಸು ಬದಲಿಸಿದ   ಆಕೆ ರಜೆ ಮುಂದುವರಿಸದೆ  ವಾಪಸ್ಸು ವಾಯುಪಡೆ ಸೇರುತ್ತಾಳೆ. ಅದೇ ಸಮಯದಲ್ಲಿ ಕಾರ್ಗಿಲ್ ಯುದ್ಧ ಆರಂಭ. ಸಮರ ಭೂಮಿಗೆ ಈಕೆಯನ್ನು ಕಳುಹಿಸಲು ಹಿಂದೆ ಮುಂದೆ ನೋಡುವ ಸೀನಿಯರ್ ಆಫೀಸರ್ ಗಳೆ  ಬೆರಗಾಗುವಂತೆ ಯುದ್ಧ ಭೂಮಿಯಲ್ಲಿ ಗಾಯಗೊಂಡ ಯೋಧರನ್ನು ರಕ್ಷಿಸುತ್ತಾಳೆ. ಅಂದು ಹೆಣ್ಣೆಂದು ಜರಿದವರೆ ಇದು ಚಪ್ಪಾಳೆ ತಟ್ಟುತ್ತಾರೆ. ಯುದ್ದ ಭೂಮಿ ಹೆಣ್ಣು ಮಕ್ಕಳೆಗೆ ಅಲ್ಲ ಎನ್ನುತ್ತಿದ್ದ ಆಕೆ ಅಣ್ಣನೆ ಕೊನೆಗೆ  ಜೈಹಿಂದ್ ಆಫೀಸರ್  ಸಕ್ಸೇನಾ ಎಂದು ಹೇಳುವ ಮೂಲಕ ಆಕೆಯ ಸಾಧನೆ ಒಪ್ಪಿಕೊಳ್ಳುತ್ತಾನೆ.

    ವಾರ್ ಮೂವಿಗಳಂತೆ  ಕೇವಲ ಯುದ್ಧಕ್ಕೆ ಸೀಮಿತವಾಗದೆ ಹೆಣ್ಣೊಬ್ಬಳ ಮನಸನ್ನು ತೆರೆದಿಡುವಲ್ಲಿ ನಿರ್ದೇಶಕರು  ಯಶಸ್ವಿ ಯಾಗಿದ್ದಾರೆ. ಒಮ್ಮೊಮ್ಮೆ ಉರಿ ಸಿನಿಮಾದ ವಾರ್ ಭೂಮಿ ನೆನಪಿಗೂ ತಂದರೂ ಇಲ್ಲಿ ಯುದ್ಧ ವಿಜೃಂಭಿಸುವುದಿಲ್ಲ. ಬದಲಾಗಿ ಗುರಿ ಸಾಧಿಸುವ ಹೆಣ್ಣೊಬ್ಬಳ ಬದ್ಧತೆಯೇ ಪ್ರಮುಖವಾಗುತ್ತದೆ.

    ಗುಂಜನ್ ಆಗಿ ಜಾಹ್ನವಿ ಕಪೂರ್ ಇಡೀ ಚಿತ್ರ ಆಕ್ರಮಿಸಿದ್ದಾರೆ. ಹಲವು ಕಡೆ ಸಹಜ ಅಭಿನಯ ಎಂದು ಎನಿಸಿದರೂ ಭಾವ ತೀವ್ರತೆಯ ಸನ್ನಿವೇಶದಲ್ಲಿ ಇನ್ನು ಪಳಗ ಬೇಕು ಎಂದು ಅನ್ನಿಸುತ್ತದೆ. ತಮಗೆ ಒಪ್ಪಿಸಿದ ಪಾತ್ರವನ್ನು ಅಚ್ಚು ಕಟ್ಟಾಗಿ ಒಪ್ಪಿಸುವ ಪಂಕಜ್ ತ್ರಿಪಾಠಿಯದು ಇಲ್ಲಿಯೂ ಅದೇ ಗಾಂಭೀರ್ಯದ ನಟನೆ.

    ಮೊದಲು ನಾಲ್ಕು ನಿಮಿಷ ಬಿಟ್ಟರೆ ಉಳಿದಂತೆ ಇಡೀ ಸಿನಿಮಾ 1994ಕ್ಕೆ ಕರೆದೊಯ್ಯುತ್ತದೆ.  ಇಡೀ 1ಗಂಟೆ 52 ನಿಮಿಷದ ಸಿನಿಮಾ ಎಲ್ಲೂ ಬೋರ್ ಆಗದೆ ಚಕ ಚಕನೆ ಸಾಗುತ್ತದೆ. ಹಿನ್ನಲೆ ಸಂಗೀತವೂ ಕಥೆಗೆ ಪೂರಕ. ಹೀಗಾಗಿ ಮನೆ ಮಂದಿಯೆಲ್ಲಾ ನೋಡಬಹುದಾದ ಚಿತ್ರವಾಗಿ ಮೂಡಿ ಬಂದಿದೆ.

    ಕಾವೇರಿ ಕೂಗು ಅಭಿಯಾನಕ್ಕೆ ಅಡ್ಡಿಯಾಗದ ಕರೋನಾ

    ಕಾವೇರಿ ನದಿ ಬತ್ತಿ ಹೋಗುತ್ತಿದೆ ಎಂಬ ಕೂಗು ಇಂದು, ನಿನ್ನೆಯದಲ್ಲ, ಕಳೆದ ಅನೇಕ ವರ್ಷಗಳಿಂದ ಇಂತಹ ಕೂಗು ಎದ್ದಿದೆ. ಇಂತಹ ಮಯದಲ್ಲಿಕಾವೇರಿ ನದಿಯನ್ನು ಪುನರುಜ್ಜೀವಗೊಳಿಸಲು ಎಲ್ಲರ ಬೆಂಬಲದೊಂದಿಗೆ ಧೃಡ ಸಂಕಲ್ಪದಿಂದ ಹೊರಟಿದ್ದಾರೆ ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು.

    ಸದ್ಗುರು ಅವರ ನೇತೃತ್ವದಲ್ಲಿ ಕಾವೇರಿ ನದಿ ಪಾತ್ರದ ಕರ್ನಾಟಕ ಮತ್ತು ತಮಿಳುನಾಡು ಎರಡೂ ಕಡೆಗಳಲ್ಲಿಕಳೆದ ವರ್ಷ ಕಾವೇರಿ ಕೂಗು ಅಭಿಯಾನ ಆರಂಭವಾಗಿದೆ. ಸರಕಾರಗಳು, ಸಾಧು ಸಂತರು, ರೈತರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

    ಕಾವೇರಿ ಕೂಗು ಅಭಿಯಾನ ಕಾವೇರಿ ನದಿಯನ್ನು ಉಳಿಸುವುದರ ಜೊತೆಗೇ ರೈತರಿಗೂ ಆರ್ಥಿಕವಾಗಿ ಆದಾಯ ತಂದುಕೊಡುವ ಯೋಜನೆಯಾಗಿದೆ. ಮರ ವ್ಯವಸಾಯದ ಈ ಅಭಿಯಾನದಲ್ಲಿರೈತರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕಾವೇರಿ ಕೂಗು ಪರಿಸರದ ಸಮಸ್ಯೆಗೆ ಆರ್ಥಿಕ ಪರಿಹಾರವಾಗಿದೆ.
    ಇದು ಕಾವೇರಿ ಜಲಾನಯನ ಪ್ರದೇಶದಲ್ಲಿಮರ ವ್ಯವಸಾಯವನ್ನು ಉತ್ತೇಜಿಸುತ್ತದೆ. ಹೆಚ್ಚಿನ ಮೌಲ್ಯವಿರುವ 242 ಕೋಟಿ ಮರಗಳನ್ನು ಬೆಳೆಸಲು 50 ಲಕ್ಷ ರೈತರ ಕೈಗಳನ್ನು ಬಲಪಡಿಸುವ ಗುರಿ ಹೊಂದಿದೆ. ಇದು ಜಲಾನಯನ ಪ್ರದೇಶದ ಮೂರನೇ ಒಂದು ಭಾಗವನ್ನು ನೆರಳಿನಡಿಯಲ್ಲಿತಂದು ಮಣ್ಣಿನ ಆರೋಗ್ಯ ಮತ್ತು ಅಂತರ್ಜಲದ ಮಟ್ಟವನ್ನು ಮುಖ್ಯವಾಗಿ ಸುಧಾರಿಸುತ್ತದೆ. ಇದು ರೈತರ ಆದಾಯವನ್ನು 5 ರಿಂದ 7 ವರ್ಷಗಳಲ್ಲಿ3 ರಿಂದ 8 ಪಟ್ಟು ಹೆಚ್ಚಿಸಲಿದೆ . ಇದು ಈ ಅಭಿಯಾನದ ಪ್ರಮುಖ ಅಂಶಗಳು.


    ನಿರೀಕ್ಷೆಯ ಪ್ರಕಾರ ಇದು 12 ಲಕ್ಷ ಕೋಟಿ ಲೀಟರ್‌ಗಳಷ್ಟು ನೀರನ್ನು ಜಲಾನಯನ ಪ್ರದೇಶದಲ್ಲಿಯೇ ಹಿಡಿದಿಟ್ಟುಕೊಂಡು ನೀರಿನ ಸ್ಥಾವರ ಹಾಗೂ ಕಾವೇರಿ ನದಿಯ ಹರಿವಿನ ಮೂಲವನ್ನು ವೃದ್ಧಿಸಲಿದೆ.

    ಸದ್ಗುರು ಇತ್ತೀಚೆಗೆ ವೆಬಿನಾರ್‌ನಲ್ಲಿ ಕಾವೇರಿ ಕೂಗುವಿನ ಒಂದು ವರ್ಷದ ಪ್ರಗತಿಯ ಸಂಕ್ಷಿಪ್ತ ವಿವರವನ್ನು ನೀಡಿದರು. ರಾಜ್ಯ ಅರಣ್ಯ ಇಲಾಖೆ, ರೈತರು, ಕಾವೇರಿ ಕೂಗಿನ ಸ್ವಯಂ ಸೇವಕರು ಹಾಗೂ ಮಾಧ್ಯಮದವರಿಂದ ದೊರೆತ ಬೆಂಬಲದಿಂದ ಕರೋನಾ ಮಹಾಮಾರಿಯ ನಿರ್ಬಂಧಗಳ ಹೊರತಾಗಿಯೂ ಯೋಜನೆಯು ಸರಿಯಾದ ಮಾರ್ಗದಲ್ಲಿಸಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಕೃಷಿ ಇಲಾಖೆ ಸಿಬ್ಬಂದಿ ತುಂಬಾ ಉತ್ಸಾಹದಿಂದ ಈ ಅಭಿಯಾನವನ್ನು ಬೆಂಬಲಿಸಿದ್ದಾರೆ ಎಂದರು.ಕರ್ನಾಟಕ ಮತ್ತು ತಮಿಳುನಾಡಿನ ರೈತರಿಗೆ ಕಳೆದ ಎರಡು ತಿಂಗಳಿನಲ್ಲಿ61 ಲಕ್ಷ ಸಸಿಗಳನ್ನು ವಿತರಿಸಲಾಗಿದೆ. ಕರ್ನಾಟಕದಲ್ಲಿಯೇ 50 ಲಕ್ಷ ಸಸಿಗಳನ್ನು ವಿತರಿಸಲಾಗಿದೆ. ಕೊರೊನಾದಿಂದಾಗಿ ನಿರೀಕ್ಷಿಸಿದಷ್ಟು ಸಸಿಗಳನ್ನು ನೆಡೆಸಲು ಸಾಧ್ಯವಾಗಿಲ್ಲ. ಮಣ್ಣಿನ ಫಲವತ್ತತೆ ಉಳಿದು ಬೆಳೆಯಬೇಕೆಂದರೆ ಮರ ಸಸಿಗಳನ್ನು ನೆಡಬೇಕು. ರೈತರಿಗೆ ಮರ ವ್ಯವಸಾಯದಲ್ಲಿಆಸಕ್ತಿ ಕಂಡು ಬಂದಿದೆ ಎಂದು ವಿವರಿಸಿದರು ಸದ್ಗುರು.

    ಕಾವೇರಿ ಕೂಗು ಯೋಜನೆಯು ವಿಶ್ವದ ಎಲ್ಲಉಷ್ಣವಲಯ ಪ್ರದೇಶಗಳ ನದಿಗಳ ಪುನರುಜ್ಜೀವನಕ್ಕೆ ಜಾಗತಿಕ ನೀಲನಕ್ಷೆ ತಯಾರಿಸುವ ಅವಕಾಶ. ಇದು ಅಲ್ಲಿವಾಸಿಸುವ 4.7 ಶತಕೋಟಿ ಜನರ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎಂದರು.

    ಮುಂದಿನ 12 ವರ್ಷಗಳಲ್ಲಿಕಾವೇರಿಯನ್ನು ತನ್ನ ನಿಜವಾದ ವೈಭವದಲ್ಲಿಪುನರ್‌ ಸ್ಥಾಪಿಸುವುದು ಈ ಇಡೀ ತಲೆಮಾರಿನ ಜವಾಬ್ದಾರಿಯಾಗಿದೆ ಎಂದರು ಸದ್ಗುರು.

    error: Content is protected !!